ಆರ್ಯಮಹಿಳೆಯರೆ, ಆರ್ಯಮಹನೀಯರೆ, ನನ್ನ ಮೋಹದ ಮಲೆನಾಡಿಗರೆ,

ಆತ್ಯಲ್ಪ ಗಣ್ಯನಾದ ನನ್ನ ಮೇಲೆ ವಿಶ್ವಾಸದಿಂದ ತಾವು ತೋರಿಸಿರುವ ಈ ಗೌರವಕ್ಕಾಗಿ ನಾನು ಎದೆತುಂಬಿ ತಲೆಬಾಗಿ ನಿಮಗೆ ವಂದಿಸುತ್ತೇನೆ. ಮಲೆನಾಡಿನ ಮಹಾನಗರ ಎಂದೆನಿಸಿಕೊಳ್ಳಲು ಅರ್ಹವಾಗಿರುವ ಈ ಶಿವಮೊಗ್ಗೆಯಲ್ಲಿ ಕರ್ಣಾಟಕ ಸಂಘವೊಂದನ್ನು ಸ್ಥಾಪಿಸಲು ತಾವುಗಳು ಮಾಡಿರುವ ಪ್ರಯತ್ನಕ್ಕಾಗಿ ನಿಮಗೆ ನನ್ನ ಹೃತ್ಪೂರ್ವಕವಾದ ಅಭಿನಂದನೆಗಳಿರಲಿ. ಕೆಲವು ದಿನಗಳ ಹಿಂದೆ ಈ ವಿಷಯವನ್ನು ಕುರಿತು ನನ್ನ ಮಿತ್ರರು ನನಗೆ ಕಾಗದ ಬರೆದಾಗ ನನ್ನ ಎದೆಯಲ್ಲಿ ಚಿಮ್ಮಿದ ಆನಂದವನ್ನು ನಿಮಗೊರೆಯಲಾರೆ. ಆದರೂ ಈ ಸಂದರ್ಭದಲ್ಲಿ ಒಂದೆರಡು ಮಾತುಗಳನ್ನು ಆಡದಿರಲಾರೆ. ನೀವೆಲ್ಲ ನನ್ನವರು ಎಂಬ ಭಾವನೆಯಿಂದ ನನಗಿಂದು ಎದೆದೆರೆದು ಮಾತಾಡಲು ಕೆಚ್ಚು ಮೂಡಿದೆ. ಮೊನೆಯಿಲ್ಲದ ಆ ನುಡಿಗಳನ್ನು ತಾವು ಮನ್ನಿಸುವಿರೆಂದು ನಂಬಿದ್ದೇನೆ.

“ಶಿವಮೊಗ್ಗೆಯಲ್ಲಿ ಕರ್ಣಾಟಕ ಸಂಘ ಸ್ಥಾಪನೆಯಾಗುವುದು; ನೀವು ಪ್ರಾರಂಭೋತ್ಸವದಲ್ಲಿ ಉಪಕ್ರಮ ಭಾಷಣ ಮಾಡಬೇಕು; ಇಲ್ಲಿಯ ಜನರು ನಿಮ್ಮನ್ನು ಎದುರುಗೊಳ್ಳಲು ಕುತೂಹಲಿಗಳಾಗಿದ್ದಾರೆ: ನೀವು ಇದನ್ನು ವಿನೋದ ಮಾತ್ರವೆಂದು ಪರಿಗಣಿಸದೆ ಖಂಡಿತ ಬರಲೇಬೇಕು; ನಿಮ್ಮಿಂದ ನಮ್ಮ ಆಕಾಂಕ್ಷೆಗೆ ವಿರುದ್ಧವಾದ ಪ್ರತ್ಯುತ್ತರವನ್ನು ನಾವು ಬಯಸುವುದೇ ಇಲ್ಲ” ಎಂದು ನನ್ನ ಗೆಳೆಯರು ಕಾಗದ ಬರೆದರು! ನಾನು ಹೆಮ್ಮೆಯಿಂದಲೂ ದೈನ್ಯದಿಂದಲೂ ಒಪ್ಪಿಕೊಂಡೆ. ಏಕೆಂದರೆ ನನ್ನ ಮಿತ್ರರ ವಾಣಿಯಲ್ಲಿ, ನಾನು ಯಾವ ಕನ್ನಡದೇವಿಯ ಆರಾಧನೆಗೆಂದು ಇತರ ನನ್ನ ಗುರುಮಿತ್ರರಂತೆ ದೀಕ್ಷಾಜೀವಿಯಾಗಿದ್ದೇನೆಯೋ ಆ ಪುಣ್ಯಮಾತೆಯ ವಾಣಿ ಕೇಳಿಬಂದಿತು. ಮಿತ್ರರ ವಾಣಿಯ ವೇಷದಿಂದ ನನ್ನೆಡೆಗೆ ಬಂದ ಕರ್ಣಾಟಕ ಸಾಹಿತ್ಯದೇವಿಯ ಅನುಜ್ಞೆಯನ್ನು ಮೀರಲು ಎದೆ ಬರದೆ ಒಪ್ಪಿಕೊಂಡೆ.

ಎರಡನೆಯದಾಗಿ, ನಾನು ಮಲೆನಾಡಿಗನು. ಮಲೆನಾಡಮ್ಮನ ಹೊಟ್ಟೆಯಲ್ಲಿ ಹುಟ್ಟಿ, ಮಡಿಲಲ್ಲಿ ಬೆಳೆದು, ತೊಡೆಯ ಮೇಲೆ ನಲಿದು, ಆ ತಾಯಿಯ ಮೊಲೆಹಾಲು ಕುಡಿದು ಬೆಳೆದು ಬಂದವನು. ಮಲೆನಾಡೆಂದರೆ ನನಗೆ ಬಹಳ ಮಮತೆ. ಒಂದು ವಿಧವಾದ ಕುರುಡುಮೋಹ ಎಂದರೂ ಎನ್ನಬಹುದು. ಮಲೆನಾಡು ಸೊಬಗಿನ ಬೀಡು; ಸಿಡಿಲು ಮಿಂಚುಗಳ ನಾಡು; ಸಾಲುಸಾಲಾಗಿ ಎದ್ದಿರುವ ಬೆಟ್ಟಗಳು; ಮಾಲೆಮಾಲೆಯಾಗಿ ಬೆಳೆದಿರುವ ಕಾಡುಗಳು; ಅಲ್ಲಲ್ಲಿ ಬನ ಬೆಟ್ಟಗಳ ನಡುವೆ ಹರಿಯುವ ಹೊಳೆ ತೊರೆಗಳು; ಕಾಡಿನ ಮೇಲೆ ಮಲಗುವ ಬಿಸಿಲು ಬೆಳ್ದಿಂಗಳು; ವಿಧವಿಧವಾಗಿ ಇಂಚರಗೈವ ಸಾವಿರಾರು ಬಣ್ಣಬಣ್ಣದ ಹಕ್ಕಿಗಳು; ಅನವರತಶ್ಯಾಮಲ ವನಶ್ರೇಣಿಗಳಿಂದ ಆವೃತವಾದ ಧೀರ ಸಹ್ಯಾದ್ರಿ ಪರ್ವತಗಳ ಕಂದರಮಾರ್ಗಗಳಲ್ಲಿ ಮಂಜುಳನಾದದಿಂದ ಪ್ರವಹಿಸುವ ತುಂಗೆ, ಭದ್ರೆ, ಶರಾವತಿಯರು; ಶೃಂಗೇರಿ ಮೊದಲಾದ ಪುರಾತನ ಪವಿತ್ರ ಕ್ಷೇತ್ರಗಳು; ಗೇರುಸೊಪ್ಪೆ ಮೊದಲಾದ ದರ್ಶನೀಯ ಪ್ರಕೃತಿ ಸೌಂದರ್ಯ ಸ್ಥಾನಗಳು; ಇವೆಲ್ಲವುಗಳಿಂದ ಮೋಹಿತನಾದ ನನಗೆ ಮಲೆನಾಡೆಂದರೆ ಬಹಳ ಮಮತೆ.

ಶಿವಮೊಗ್ಗೆ ಮಲೆನಾಡಿನ ಮಹಾನಗರವಾದ್ದರಿಂದ ಇಲ್ಲಿ ಸ್ಥಾಪಿತವಾಗುವ ಕರ್ಣಾಟಕ ಸಂಘದ ಪ್ರಾರಂಭೋತ್ಸವದಲ್ಲಿ ನಾನು ಭಾಗಿಯಾಗಲು ಒಪ್ಪದಿರುವುದಾದರೂ ಹೇಗೆ? ನಾನು ಒಪ್ಪಿದ್ದಕ್ಕೆ ಇನ್ನೊಂದು ಕಾರಣವನ್ನೂ ಹೇಳಿಬಿಡುತ್ತೇನೆ. ನನಗೆ ನಿಮ್ಮ ಅಭಿಮಾನವೇ ಒಂದು ರಕ್ಷೆ. ನಾನು ನಮ್ಮೂರಿಂದ ಮೈಸೂರಿಗೆ ಹೋಗುವಾಗ ಶಿವಮೊಗ್ಗೆಯಲ್ಲಿ ಎರಡು ದಿನ ನಿಲ್ಲುವುದು ವಾಡಿಕೆ. ಅದಕ್ಕೆ ಇಲ್ಲಿರುವ ನನ್ನ ಕೆಲವು ಗೆಳೆಯರೇ ಕಾರಣ. ಅವರು ಯಾವಾಗಲೂ ಅಪ್ಪಣೆ ಮಾಡುವರೇ ಹೊರತು ಬೇಡುವ ಪದ್ಧತಿಯನ್ನು ಇಟ್ಟುಕೊಂಡೇ ಇಲ್ಲ. ಹಾರಿಹೋಗುವ ನಾನು ಅವರ ಮೈತ್ರಿಯ ಪಂಜರದಲ್ಲಿ, ಕೆಲವು ಸಾರಿ ಏಳೆಂಟು ದಿನಗಳು ಕೂಡ ಸಿಕ್ಕಿಬಿಟ್ಟಿದ್ದೇನೆ. ನನಗೆ ಯಾವಾಗಲೂ ಶಿವಮೊಗ್ಗೆಯ ಸುತ್ತಣ ಸನ್ನಿವೇಶ ಮನೋಹರವಾಗಿ ಕಂಡುಬಂದಿದೆ. ಬಳಿಯಲ್ಲಿಯೆ ಹರಿಯುವ ತುಂಗೆ, ಸುತ್ತಲೂ ಹೆಚ್ಚು ಎತ್ತರವಿಲ್ಲದ ಹಸುರಾದ ಗುಡ್ಡಗಳು; ಹೊಸ ರೈಲ್ವೆ ಸ್ಟೇಷನ್ನಿನ ಸುಂದರವಾದ ದೃಶ್ಯ; ಹೊಳೆಯ ಮರಳುಗುಡ್ಡೆಯಲ್ಲಿ ಬೆಳೆಯುವ ಶೀತಲ ರಸಪೂರ್ಣವಾದ ಕಲ್ಲಂಗಡಿ ಹಣ್ಣಿನ ಫಲಾಹಾರ; ಇವುಗಳೆಲ್ಲ ನನ್ನ ಮಿತ್ರರೊಡ್ಡುವ ಮೈತ್ರಿಪಂಜರದ ಸರಳುಗಳು!

ಇಷ್ಟು ಸೌಂದರ್ಯವಿದ್ದರೂ ಕೂಡ ಶಿವಮೊಗ್ಗೆ ನನ್ನ ಕಣ್ಣಿಗೆ ಮಾಂಗಲ್ಯವಿಲ್ಲದ ಸುಂದರಿಯಂತೆ ತೋರುತ್ತಿತ್ತು. ಅದು ನನಗೆ ಬರಿಯ ಕಾಂಚನಾಭಿಲಾಷಿಯಾದ ವ್ಯಾಪಾರಗಾರನ ದೊಡ್ಡ ಮಳಿಗೆಯಂತೆ ತೋರುತ್ತಿತ್ತೇ ಹೊರತು, ರಸಜೀವಿಗಳ ಆತ್ಮಕಲ್ಯಾಣಕ್ಕೆ ಸಾಧನರಂಗವಾದ ಪುಣ್ಯಾಶ್ರಮದಂತೆ ತೋರುತ್ತಿರಲಿಲ್ಲ. ಏಕೆಂದರೆ ಇಲ್ಲಿ ಸಾಹಿತ್ಯ, ಚಿತ್ರಕಲೆ, ತತ್ತ್ವಜಿಜ್ಞಾಸೆ ಮೊದಲಾದ ಉದಾತ್ತ ಕಾರ್ಯಗಳಿಗೆ ಸಾಕಾದಷ್ಟು ಆರಾಧನೆ ದೊರೆಯುತ್ತಿರಲಿಲ್ಲ ಎಂದು ನನ್ನ ಭಾವನೆಯಾಗಿತ್ತು. ಈ ಭಾವನೆ ತಪ್ಪಾಗಿದ್ದ ಪಕ್ಷದಲ್ಲಿ ನನಗೇನೋ ಬಹಳ ಸಂತೋಷವೆ. ಅಂತೂ ನನಗೆ ಹಾಗೆ ತೋರುತ್ತಿತ್ತು. ಅಂತಹ ಉದಾತ್ತ ಕಾರ್ಯಗಳು ಇರಲೇ ಇಲ್ಲವೆಂದು ನನ್ನ ಅಭಿಪ್ರಾಯವಲ್ಲ. ಶಿವಮೊಗ್ಗೆಯಂತಹ ದೊಡ್ಡ ಪಟ್ಟಣಕ್ಕೆ ಹೆಸರಾದ ಊರಿಗೆ, ತಕ್ಕಷ್ಟು ಇರಲಿಲ್ಲವೆಂದು ನನ್ನ ಭಾವನೆಯಾಗಿತ್ತು. ಆದ್ದರಿಂದ ನನ್ನ ಸ್ನೇಹಿತರು, ನನ್ನ ಮಾನ್ಯಮಿತ್ರರಾದ ಶ್ರೀಮಾನ್ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಮತ್ತು ಶ್ರೀಯುತ ಬೇಂದ್ರೆಯವರು ಇಲ್ಲಿಗೆ ಬಂದುದರ ಫಲವಾಗಿ ಕರ್ಣಾಟಕ ಸಂಘ ಸ್ಥಾಪಿತವಾಗುತ್ತದೆಂದು ಕಾಗದ ಬರೆದಾಗ ನನಗೆ ಮಹಾದಾನಂದವಾಯಿತು. ಆದ್ದರಿಂದಲೇ ನನ್ನನ್ನು ಉತ್ಸವದಲ್ಲಿ ಭಾಗಿಯಾಗಬೇಕೆಂದು ಕೇಳಿಕೊಂಡಾಗ ಹೆಮ್ಮೆಯಿಂದ ಸಮ್ಮತಿಸಿದೆ. ನನಗಿಂದು ಶಿವಮೊಗ್ಗೆಯಲ್ಲಿ ಎಂದಿಗಿಂತಲೂ ಹೆಚ್ಚಾದ ಮೋಹ ಜನಿಸಿದೆ. ಇನ್ನು ಮೇಲೆ ಇಲ್ಲಿಯ ರಸಜೀವನ ತುಂಬಿ ತುಳುಕಿ ಉಕ್ಕಿ ಹರಿಯುವುದೆಂದು ನನಗೆ ಸಂಪೂರ್ಣವಾಗಿ ಭರವಸೆಯಿದೆ.

ಈಗ ಭರತಖಂಡಕ್ಕೊಂದು ಪರಿವರ್ತನೆಯ ಕಾಲ ಒದಗಿದೆ. ಮಹಾ ವ್ಯಕ್ತಿಗಳು ಮಹಾ ಶಕ್ತಿವಾಹಿನಿಯನ್ನು ದೇಶದ ಮೇಲೆ ಹರಿಯಲು ಬಿಟ್ಟಿದ್ದಾರೆ. ಅದೇನು ಸಾಮಾನ್ಯವಾದ ಪ್ರವಾಹವಲ್ಲ; ಪ್ರಚಂಡ ಪ್ರವಾಹ. ಆ ಬಲ್ಮೆಯ ಹೊನಲು ದೇಶದ ಮೂಲೆಮೂಲೆಗಳಲ್ಲೂ ನುಗ್ಗಿ ಜಡಜೀವನವನ್ನು ಕೊಚ್ಚುತ್ತಿದೆ. ಅದರ ವೈದ್ಯುತ ಸ್ಪರ್ಶದಿಂದ ನಿರ್ಜೀವವಾಗಿದ್ದ ಅಸ್ಥಿಪಂಜರಗಳೂ ಕೂಡ ಸಚೇತನವಾಗಿ ಕಾರ್ಯೋನ್ಮುಖವಾಗಲಾರಂಭಿಸಿವೆ. ಮಲಗಿದ್ದ ನಾಡು ಎಚ್ಚತ್ತಿದೆ. ಕುರಿಗಳಂತೆ ಅರಚುತ್ತಿದ್ದವರು ಸಿಂಹಗಳಂತೆ ಗರ್ಜಿಸುತ್ತಿದ್ದಾರೆ. ಬೀಸುವ ಬಿರುಗಾಳಿ ಬೂದಿ ಮುಚ್ಚಿದ ಕೆಂಡಗಳನ್ನು ಊದಿ ಊದಿ ನುಗ್ಗುತ್ತಿದೆ! ಇದ್ದಲಿನಂತಿದ್ದವರು ಈಗ ಕೆಂಗೆಂಡಗಳಂತೆ ದೇದೀಪ್ಯಮಾನರಾಗಿದ್ದಾರೆ. ಮೂಕರಾಗಿದ್ದವರು ವಾಗ್ಮಿಗಳಾಗಿದ್ದಾರೆ. ಕುರುಡರಿಗೆ ಕಣ್ಣು ಬಂದಿದೆ. ದುರ್ಬಲರಂತಿದ್ದವರಿಗೆ ಭೀಮಬಲ ಬಂದಿದೆ. ಕ್ಲೈಬ್ಯ ಮಾಯವಾಗಿ ಎದೆಯಲ್ಲಿ ಕೆಚ್ಚುದಿಸಿದೆ. ಬಗೆಯಲ್ಲಿ ನೆಚ್ಚು ಮೂಡಿದೆ.

ಇದು ರಾಜಕೀಯ ಪ್ರಪಂಚದ ಮಾತಾಯಿತು. ಇನ್ನು ಸಾಹಿತ್ಯಪ್ರಪಂಚದಲ್ಲಿಯೋ ಎಂದರೆ ಅಲ್ಲಿಯೂ ಅದೇ ರೀತಿಯ ನೂತನ ಚೇತನೋತ್ಪತ್ತಿ ತೋರಿ ಬಂದಿದೆ. ಸಾಹಿತ್ಯ ಜನಜೀವನದ ವಾಣಿ. ಬರೆಯುವವರು ಬರೆಯಲಾರದಿರುವ ಸಾವಿರಾರು ಜನರಿಗೆ ಪ್ರತಿನಿಧಿಗಳು. ಕವಿಗಳೆಂದರೆ ನಾಡಿನ ನಾಡಿಗಳು. ಸಹಸ್ರ ಸಹಸ್ರ ಹೃದಯಗಳಲ್ಲಿ ಸುಳಿಯುವ ಭಾವಗಳಿಗೆ ಕವಿಹೃದಯ ಕನ್ನಡಿಯಂತೆ. ಸಾಹಿತ್ಯ ಸಂಸ್ಕೃತಿಯ ಪುರೋಗಮನಕ್ಕೆ ಸೋಪಾನಮಾರ್ಗ. ಜ್ಞಾನಾಮೃತಪಾನದಿಂದ ಸಂಸ್ಕೃತಿ ಅಭ್ಯುದಯವನ್ನೈದುವುದು. ಸಾಹಿತ್ಯ ಜ್ಞಾನಧೇನುವಿನ ಕೆಚ್ಚಲು; ಎಂದ ಮೇಲೆ, ಸಾಹಿತ್ಯದ ಮೇಲ್ಮೆಯಿಂದ ಜನಜೀವನದ ಮೇಲ್ಮೆಯುಂಟಾಗುತ್ತದೆ. ರಾಜಕೀಯ ಪ್ರಪಂಚದಲ್ಲಿ ನವಜೀವನ ವುಂಟಾದರೆ ಜನ ಜೀವನದಲ್ಲಿಯೂ ಅದು ಪ್ರವಹಿಸಿಯೇ ಪ್ರವಹಿಸುವುದು. ಬೀಜವೃಕ್ಷ ನ್ಯಾಯದಂತೆ ಆ ಹೊಸ ಹುರುಪು ಸಾಹಿತ್ಯದಲ್ಲಿ ಕನ್ನಡಿಸುವುದು. ಅದರಿಂದ ಈಗ ಎಲ್ಲೆಲ್ಲಿಯೂ ಎಲ್ಲ ದೇಶಭಾಷೆಗಳಲ್ಲಿಯೂ ಹೊಸ ಕಳೆ ಹೊರಹೊಮ್ಮುತ್ತಿದೆ.

ಅಂತೆಯೆ ನಮ್ಮ ಕನ್ನಡ ಸಾಹಿತ್ಯದಲ್ಲಿಯೂ ನವಚೈತನ್ಯದ ಚಿಲುಮೆ ಚಿಮ್ಮತೊಡಗಿದೆ. ಕನ್ನಡನಾಡು ಕಣ್ದೆರೆಯುತ್ತಿದೆ. ಉನ್ನಿದ್ರಾವಸ್ಥೆಯ ಸೂಚನೆಗಳು ತೋರಿಬರುತ್ತಿವೆ. ಸಾಹಿತ್ಯಪ್ರಪಂಚದ ಸನಾತನ ಪುಣ್ಯಕಾಶದಲ್ಲಿ ತುಂಬಿದ್ದ ಕತ್ತಲೂ ಮೌನವೂ ಮೆಲ್ಲಮೆಲ್ಲನೆ ಸರಿಯತೊಡಗಿವೆ. ಅದರ ಪೂರ್ವದಿಗಂತದಲ್ಲಿ ನೂತನ ಚೇತನದ ಪಾವನವಾದ ಬಾಲಾರುಣಜ್ಯೋತಿ ಮೊಳೆದೋರಿದೆ. ಅಲ್ಲಲ್ಲಿ, ನಿಶಾಸಾಮ್ರಾಜ್ಯದ ತಾಮಸ ವೈಭವವನ್ನು ಬಹುಕಾಲದಿಂದಲೂ ಸವಿದು, ಈಗ ಮೂಡುತ್ತಿರುವ ಮುಂಬೆಳಕಿನ ಧೀರಶ್ರೀಯನ್ನು ನೋಡಲಾರದೆ ಹಲಕೆಲವು ಗೂಬೆಗಳು “ಗೂ! ಗೂ!” ಎಂದು ಕೂಗುತ್ತಿದ್ದರೂ, ಅದನ್ನು ಗಣನೆಗೆ ತಾರದೆ ಅರುಣೋದಯದ ಮಂಗಳಕಾಂತಿಗೆ ಸುಖಾಗಮನವನ್ನು ಬಯಸಲು ಅನೇಕಾನೇಕ ಮಧುರಕಂಠದ ವಿಹಂಗಮಗಳು ಉಲಿಯಲು ತೊಡಗಿವೆ. ಆ ತುಮುಲಸ್ವರಮೇಳ ಸಮುದ್ರದಲ್ಲಿ ಪೇಚಕಪಕ್ಷಿಗಳ ಅಪಶಕುನಸೂಚಕವಾದ ವಿಕಟಧ್ವನಿಗಳು ಮುಳುಗಿಹೋಗುತ್ತಿವೆ. ಈ ನವೋದಯದಲ್ಲಿ ನಮ್ಮ ನಾಡಿನ ಜನರ ಎದೆದಾವರೆಗಳು ಹಿಗ್ಗಿ ಅರಳುತ್ತಿವೆ.

ಕನ್ನಡನಾಡಿನ ಎಲ್ಲ ಭಾಗಗಳಲ್ಲಿಯೂ ಜನರು ಸಾಹಿತ್ಯಸೇವೆಗೆ ಹೊರಟಿದ್ದಾರೆ. ಮೈಸೂರು ದೇಶ, ಉತ್ತರ ಕರ್ಣಾಟಕ, ನಿಜಾಂ ಕರ್ಣಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಎಲ್ಲ ಕಡೆಗಳಿಂದಲೂ ಸಾಹಿತ್ಯದೇವಿಯ ಪವಿತ್ರ ಮಂದಿರದಲ್ಲಿ ನಡೆಯುವ ಪೂಜೆಯ ಘಂಟಾನಾದವೂ ಎತ್ತುವ ಮಂಗಳಾರತಿಯ ಪೂತಜ್ಯೋತಿಯೂ ಕರ್ಣನಯನ ಮನೋಹರವಾಗಿವೆ. ಬರೆಯುವವರೂ ಓದುವವರೂ ಹೆಚ್ಚುತ್ತಿದ್ದಾರೆ. ಹಿಂದೆ ಕನ್ನಡ ನುಡಿಯಲ್ಲಿದ್ದ ಓದಾಸೀನ್ಯವೂ ತಿರಸ್ಕಾರಭಾವವೂ ಈಗ ದೂರವಾಗುತ್ತಿವೆ. ನಮ್ಮ ನುಡಿ ಎಂಬ ಹೆಮ್ಮೆ ನಮ್ಮ ನಾಡು ಎಂಬ ಹೆಚ್ಚೆಯೊಡೆನೆಯೆ ಬೆಳೆಯುತ್ತಿದೆ. ದೊಡ್ಡ ದೊಡ್ಡ ಅಧಿಕಾರಿಗಳೂ ಆಂಗ್ಲೇಯ ಭಾಷಾಪಂಡಿತರೂ ಉತ್ತಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಯುವಕರೂ ಇನ್ನೂ ಓದುತ್ತಿರುವ ತರುಣರೂ ತಾಯ್ನುಡಿಯ ಸೇವೆಗೆ ತೊಡಗಿದ್ದಾರೆ. ಕರ್ಣಾಟಕ ದೇಶದಲ್ಲಿ ಎಲ್ಲೆಲ್ಲಿಯೂ ಕರ್ಣಾಟಕ ಸಂಘಗಳು ಮೂಡುತ್ತಿವೆ. ಅಷ್ಟೇ ಅಲ್ಲ. ದೂರದ ನಾಡುಗಳಲ್ಲಿಯೂ ಕೂಡ, ಅಲ್ಲಿಯ ಕನ್ನಡಿಗರು ಸಂಘಗಳನ್ನು ಸ್ಥಾಪಿಸಿದ್ದಾರೆ. ಪುಣೆ, ಮುಂಬಯಿ, ಮದ್ರಾಸು, ಕಲ್ಕತ್ತಗಳಲ್ಲಿ ಕರ್ಣಾಟಕ ಸಂಘಗಳು ಬೇರೆ ಬೇರೆ ಹೆಸರುಗಳಿಂದ ಸ್ಥಾಪಿತವಾಗಿವೆ. ಅನೇಕಾನೇಕ ವೃತ್ತಪತ್ರಿಕೆಗಳೂ ಮಾಸಪತ್ರಿಕೆಗಳೂ ತ್ರೈಮಾಸಿಕಗಳೂ ನಾಡಿನ ಮೇಲೆಲ್ಲ ಸಂಚರಿಸುತ್ತಿವೆ. ಎಲ್ಲಕ್ಕೂ ಹೆಚ್ಚಾಗಿ, ಮೈಸೂರು ವಿಶ್ವವಿದ್ಯಾಪೀಠವು ಕನ್ನಡದಲ್ಲಿ ಎಂ.ಎ. ತರಗತಿಯನ್ನು ತೆರೆದಿದೆ. ಅಲ್ಲದೆ ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯಕೊಟ್ಟು ಮುಂದೆ ಎಂದಾದರೊಂದು ದಿನ, ಎಲ್ಲ ವಿಷಯಗಳನ್ನೂ ಕನ್ನಡದಲ್ಲಿಯೇ ಪಾಠ ಹೇಳಬೇಕೆಂಬ ಉಚ್ಚಧ್ಯೇಯವನ್ನೂ ಮನದಲ್ಲಿಟ್ಟುಕೊಂಡಿದೆ. ವಿದ್ವಾಂಸರು ಹಳೆಯ ಉದ್ಗ್ರಂಥಗಳನ್ನು ಮುದ್ರಿಸಿ ಬೆಳಕಿಗೆ ತರುತ್ತಿದ್ದಾರೆ. ಸಾಹಿತ್ಯಪ್ರೇಮಿಗಳು ಜನಪದಸಾಹಿತ್ಯವನ್ನು ಒಟ್ಟುಗೂಡಿಸುತ್ತಿದ್ದಾರೆ.

ಇಷ್ಟೆಲ್ಲ ಸರ್ವಸಾಮಾನ್ಯ ವಿಷಯವಾಯಿತು. ಇನ್ನು ವಿಶೇಷವನ್ನು ಕುರಿತು ಪರಿಶೀಲಿಸೋಣ.

ಕನ್ನಡ ಸಾಹಿತ್ಯದೇವಿ ನವಾರುಣೋದಯದ ಹೊಸ ಕಳೆಯಿಂದ ತುಂಬಲ್ಪಟ್ಟ ಹೊಂಗಳಸವನ್ನು ಕೈಲಿ ಹಿಡಿದು ಹೊಸ ದಾರಿಯಲ್ಲಿ ಹೊರಟಿದ್ದಾಳೆ. ಅಲಂಕಾರದ ಮುಚ್ಚುಮರೆಯನ್ನು ಬಿಚ್ಚಿ ಹೇಳುವುದಾದರೆ ಪಾಶ್ಚಾತ್ಯ ಸಂಸ್ಕೃತಿಯ ಮತ್ತು ಸಾಹಿತ್ಯದ ಸಂದರ್ಭದಿಂದ ಕನ್ನಡನುಡಿಯಲ್ಲಿ ಹೊಸ ಹೊಸ ರೂಪಗಳು ಹೊರಹೊಮ್ಮುತ್ತಿವೆ. ಪಾಶ್ಚಾತ್ಯ ಸಾಹಿತ್ಯದ ಆತ್ಮಜ್ಯೋತಿಗೂ ಆತ್ಮವೈಭವಕ್ಕೂ ಮನಸೋತ ನಮ್ಮವರು ಅದರ ಶ್ರೇಷ್ಠಾಂಶಗಳನ್ನು ಹೀರಿಕೊಂಡು, ಸುಪುಷ್ಟರಾಗಿ, ನಮ್ಮವರಿಗೂ ಆ ಬೆಳಕಿನ ಮೈಮೆಯನ್ನು ಒಂದಿನಿತು ತೋರಲು ಹೊರಟಿದ್ದಾರೆ. ಆ ಉದ್ಯಮದ ಫಲರೂಪವಾಗಿ ಗದ್ಯ, ಪದ್ಯ, ನಾಟಕ, ಕಾದಂಬರಿ, ಪ್ರಬಂಧ, ಲಘುಪ್ರಬಂಧ, ಸಣ್ಣಕಥೆ, ವಿಮರ್ಶೆ, ಜೀವನಚರಿತ್ರೆ ಇತ್ಯಾದಿಗಳು ಹೊರಬೀಳುತ್ತಿವೆ.

ಇವುಗಳನ್ನು ಪರಿಶೀಲಿಸಲು ನಾಲ್ಕು ಕೇಂದ್ರಸ್ಥಾನಗಳನ್ನು ನಾವು ಆರಿಸಿಕೊಳ್ಳಬಹುದು:-ಮೈಸೂರು, ಬೆಂಗಳೂರು, ಧಾರವಾಡ, ಮಂಗಳೂರು. ಈ ನಗರಗಳಲ್ಲಿ ಸಂಘಗಳಿಂದಲೂ ಗುಂಪುಗಳಿಂದಲೂ ಸಾಹಿತ್ಯಮಂಡಲಗಳಿಂದಲೂ ಗ್ರಂಥಾಲಯಗಳಿಂದಲೂ ಪ್ರಕಟವಾಗಿರುವ ಗ್ರಂಥಗಳನ್ನು ತೆಗೆದುಕೊಂಡರೆ ಈಗ ನಮ್ಮ ಸಾಹಿತ್ಯದಲ್ಲಿ ಆಗುತ್ತಿರುವ ಚಳವಳಿ ನಮಗೆ ಸ್ವಲ್ಪಮಟ್ಟಿಗೆ ಗೊತ್ತಾಗುತ್ತದೆ. ಮೊದಲು ಕವಿತೆ. ಈಗ ಅಲ್ಲಲ್ಲಿ ಪ್ರಕಟವಾಗುತ್ತಿರುವ ಕವನಗಳು ರೂಪದಲ್ಲಿ ಬಹಳಮಟ್ಟಿಗೂ ಆತ್ಮದಲ್ಲಿ ಸ್ವಲ್ಪಮಟ್ಟಿಗೂ, ಆಂಗ್ಲೇಯ ಸಾಹಿತ್ಯವನ್ನೇ ಅನುಸರಿಸುತ್ತಿವೆಯೆಂಬುದು ನಿರ್ವಿವಾದವಾದ ಮಾತಾಗಿದೆ. ರೂಪ ಬದಲಾಯಿಸಿದರೂ ಕೂಡ ಅದು ನಮಗೆ ಸಂಪೂರ್ಣವಾಗಿ ಹೊಸತಲ್ಲ. ಇನ್ನೂ ಸ್ವಲ್ಪ ಮುಂದೆ ಹೋಗಿ, ಧೈರ್ಯವಾಗಿ ಹೇಳುವುದಾದರೆ, ಹೊಸತೇ ಅಲ್ಲ ಎಂದೂ ಹೇಳಿಬಿಡಬಹುದು. ಏಕೆಂದರೆ, ಛಂದಶ್ಯಾಸ್ತ್ರವನ್ನು ಓದಿದ ಯಾರಿಗಾದರೂ ಈಗಿನ ಹೊಸರೂಪಗಳು ಹಳೆಯ ಷಟ್ಪದಿ ರಗಳೆಗಳ ರೂಪಾಂತರಗಳೆಂದು ತೋರದೆ ಇರುವುದಿಲ್ಲ. ಈಗಿನ ಹೊಸ ಕವನಗಳಿಗೆ ಆಧಾರ ಆದಿಪಂಪನಲ್ಲಿಯೇ ದೊರಕುತ್ತದೆ. ನಮ್ಮ ಕನ್ನಡಕ್ಕೆ ಹೆಚ್ಚು ಹೊಂದಿಕೊಳ್ಳದಿರುವ, ‘ವೃತ್ತ’ ಗಳೆಂದು ನಾವು ಕರೆಯುವ, ಸಂಸ್ಕೃತ ಛಂದಸ್ಸು ಮಾತ್ರ ಬಿದ್ದುಹೋಗುತ್ತಿದೆ. ಏಕೆಂದರೆ ಅಕ್ಷರ ಛಂದಸ್ಸು ನಮ್ಮ ನುಡಿಗೆ ಎರವು ತಂದ ವೇಷ. ಮಾತ್ರಾ ಛಂದಸ್ಸೇ ನಮಗೆ ಸಹಜವಾದುದು. ನಮ್ಮ ಪೂರ್ವಿಕರಾದ ಹರಿಹರ ರಾಘವಾಂಕರು ಇದನ್ನು ಅರಿತೆ ರಗಳೆಗಳನ್ನೂ ಷಟ್ಪದಿಗಳನ್ನೂ ರಚಿಸಿದರು. ಅವರ ತರುವಾಯ ಬಂದವರು ಯಾರಾರು ಜನಸಾಮಾನ್ಯಕ್ಕೆ ಜೀವನಜ್ಯೋತಿಯನ್ನು ದಯಪಾಲಿಸಬೇಕೆಂದು ಬಯಸಿದರೋ ಅವರೆಲ್ಲರೂ ಮಾತ್ರಾ ಛಂದಸ್ಸಿನಲ್ಲಿಯೇ ಕಾವ್ಯಗಳನ್ನು ಬರೆದಿದ್ದಾರೆ. ನಮ್ಮ ಭಾರತ, ಭಾಗವತ, ರಾಮಾಯಣಗಳು ಷಟ್ಪದಿಗಳಲ್ಲಿವೆ. ಶಿವಶರಣರ ಜೀವನಚರಿತ್ರೆಗಳನ್ನು ಹರಿಹರಕವಿ ರಗಳೆಯ ರೂಪದಲ್ಲಿಯೆ ಬರೆದಿದ್ದಾನೆ. ಆತನ ಅತ್ಯುತ್ತಮ ಕೃತಿಯಾದ, ಶ್ರೀಮಾನ್ ವೆಂಕಣ್ಣಯ್ಯನವರಿಂದ ಸಂಪಾದಿತವಾಗಿರುವ, ‘ಬಸವರಾಜದೇವರ ರಗಳೆ’ಯನ್ನು ಓದಿನೋಡಿದರೆ ಮಾತ್ರಾ ಛಂದಸ್ಸಿನ ಮಹಿಮೆ ಗೊತ್ತಾಗುತ್ತದೆ. ನಾಡಿನ ಜನರ ಎದೆಯನ್ನು ಸೇರಲೆಳಸಿದ ಸರ್ವಜ್ಞ ಮೊದಲಾದ ಕವಿಗಳು ತ್ರಿಪದಿ ಮೊದಲಾದ ಪದ್ಯರೂಪಗಳನ್ನು ಬಳಕೆಗೆ ತಂದರು. ಆದ್ದರಿಂದ ಜನಜೀವನದಿಂದ ಪ್ರೇರಿತವಾದ ಸಾಹಿತ್ಯವು ಜನಜೀವನಕ್ಕೆ ಉಪಯೋಗವಾಗಬೇಕಾದರೆ ಜನಜೀವನದ ವಾಣಿಯ ವೇಷವನ್ನು ಧರಿಸಬೇಕು; ಅಂದರೆ ಮಾತ್ರಾ ಛಂದೋನಿಯಮವನ್ನು ನಾವು ಬಳಕೆಗೆ ತರಬೇಕು. ಪಂಪ, ರನ್ನ ಮೊದಲಾದ ಕವಿಗಳ ಮಹಾಕಾವ್ಯಗಳು ಏಕೆ ಉದ್ಗ್ರಂಥಗಳಾಗಿ ಮೇಲೆ ದೂರದಲ್ಲಿಯೆ ನಿಂತುಬಿಟ್ಟುವು? ಕುಮಾರವ್ಯಾಸ, ಲಕ್ಷ್ಮೀಶ, ಸರ್ವಜ್ಞ ಮೊದಲಾದ ಕವಿಗಳ ರಸಕೃತಿಗಳು ಏಕೆ ಜನಜೀವನವನ್ನು ಪ್ರವೇಶಿಸಿದುವು? ಆಲೋಚಿಸಿ ನೋಡಿ. ಮೇಲೆ ಹೇಳಿದ ಕಾರಣ ನಿಮಗೆ ಹೊಳೆಯುತ್ತದೆ.

ಆದ್ದರಿಂದ ಈಗಿನ ಕವಿಗಳ ಉದ್ಯಮ ಒಂದು ದೃಷ್ಟಿಯಿಂದ ಸಂಪೂರ್ಣವಾಗಿ ನೂತನವಾದುದಲ್ಲ ಎಂದು ಹೇಳಿದಂತಾಯಿತು. ನಾವು ಮುಂಜುಟ್ಟು ಬೈತಲೆಗಳನ್ನು ಬಿಟ್ಟಮಾತ್ರಕ್ಕೆ ಹೇಗೆ ಇಂಗ್ಲೀಷಿನವರಾಗಲಾರೆವೋ ಹಾಗೆಯೇ ನವವೇಷಧಾರಣೆ ಮಾಡಿದ ಮಾತ್ರಕ್ಕೆ ಆಧುನಿಕ ಕವನಗಳು ವಿದೇಶೀಯವಾಗಲಾರವು. ಹಿಂದಿನವರು ಸ್ವಲ್ಪವಾಗಿ ಉಪಯೋಗಿಸಿಕೊಂಡದ್ದನ್ನು ನಾವೀಗ ಹೆಚ್ಚಾಗಿ ಬಳಕೆಗೆ ತರುತ್ತಿದ್ದೇವೆ. ಪೂರ್ವಿಕರು ಕಬ್ಬಿಣವನ್ನು ಆಯುಧಗಳಿಗಾಗಿ ಉಪಯೋಗಿಸುತ್ತಿದ್ದರು. ಆದರೆ ಈಗ ಪಾಶ್ಚಾತ್ಯ ವಿಜ್ಞಾನಶಾಸ್ತ್ರಗಳ ಮಹಿಮೆಯಿಂದ ನಾವು ಕಬ್ಬಿಣದ ಕಾರ್ಖಾನೆಗಳನ್ನು ಸೃಜಿಸಿ ನಾನಾವಿಧವಾದ ಆಯುಧಗಳನ್ನು ತಯಾರಿಸುತ್ತಿದ್ದೇವೆ. ಅವುಗಳನ್ನೆಲ್ಲ ವಿದೇಶೀಯವೆಂದು ಹಳಿಯುವುದು ಮೂರ್ಖತೆಗೊಂದು ಹೆಗ್ಗುರುತು.

ಕವನಗಳ ಮಾತಾಯಿತು. ಇನ್ನು ನಾಟಕಗಳು. ಈಗೀಗ ನಾಟಕಗಳಲ್ಲಿ ಸರಳ ರಗಳೆ (Blank Verse)ಯನ್ನು ಉಪಯೋಗಿಸುತ್ತಿದ್ದೇವೆ. ಸರಳ ರಗಳೆಯ ಶ್ರೀಮಂತಶೈಲಿಯ ಧೀರವೈಖರಿ ನನ್ನನ್ನಂತೂ ಮುಗ್ಧನನ್ನಾಗಿ ಮಾಡಿಬಿಟ್ಟಿದೆ. ರಾಮಾಯಣ, ಭಾರತ ಮುಂತಾದ ಪುರಾಣ ಕಾವ್ಯಗಳಿಗೆ ಸರಳ ರಗಳೆಯ ಮಾರ್ಗ ಒಪ್ಪುತ್ತದೆಯೊ ಇಲ್ಲವೊ ನನಗಿನ್ನೂ ಸಂದೇಹ. ನಾನಿನ್ನೂ ಪರೀಕ್ಷಿಸಿಲ್ಲ.* ಆದರೆ ನಾಟಕಕ್ಕೆ ಸರಳ ರಗಳೆಯಿಂದ ಮಹದುಪಕಾರವಾಗುವುದು ಎಂಬುದರಲ್ಲಿ ಸಂದೇಹವಿಲ್ಲ. ಪಾಶ್ಚಾತ್ಯ ರುದ್ರನಾಟಕಗಳ ಬಲವತ್ತಾದ ಭಯಂಕರವಾದ ಶೈಲಿ ನಮ್ಮಲ್ಲಿಗೆ ಬರಬೇಕಾದರೆ ಸರಳ ರಗಳೆಯೊಂದರಿಂದಲೇ ಸಾಧ್ಯ. ಈಗಾಗಲೆ ಅಂತಹ ಏಳೆಂಟು ನಾಟಕಗಳು ಹೊರಬಿದ್ದಿವೆ. ಅವುಗಳನ್ನು ಓದಿ ನೋಡಿ ಅಥವಾ ನಾಟಕೀಯವಾಗಿ ಓದಲು ಬಲ್ಲವರಿಂದ ಓದಿಸಿ ಕೇಳಿನೋಡಿ. ನಿಮ್ಮೆದೆ ಹಿಗ್ಗುವುದೆಂದೇ ನನ್ನ ಭಾವನೆ.

ಕವಿತೆ, ನಾಟಕ ಇವುಗಳ ವಿಷಯವಾಗಿ ಇರುವಷ್ಟು ಉಗ್ರವಾದ ಭಿನ್ನಾಭಿಪ್ರಾಯ ಬಹುಶಃ ಸಣ್ಣ ಕಥೆ, ಕಾದಂಬರಿ, ವಿಮರ್ಶೆ ಮೊದಲಾದವುಗಳ ವಿಚಾರವಾಗಿ ಇಲ್ಲವೆಂದು ಹೇಳಬಹುದು. ಕಾರಣವೇನೆಂದರೆ, ಸಣ್ಣ ಕಥೆ ಮೊದಲಾದುವುಗಳು ನಮಗೆ ಹೊಸತು. ಅಂತು ಅಭಿಪ್ರಾಯಗಳು ಎಷ್ಟೇ ಭಿನ್ನವಾಗಿದ್ದರೂ ನಮ್ಮ ಸಾಹಿತ್ಯಪ್ರಪಂಚದಲ್ಲೇನೋ ಹೊಸ ಯುಗ ಕಾಲಿಟ್ಟಾಗಿದೆ. ಆ ಮಿಂಚಿನ ಪ್ರವಾಹ ಯಾರ ಪ್ರತಿಭಟನೆಗೂ ತರಹರಿಸುವುದಿಲ್ಲ. ಹಣ್ಣೆಲೆಗಳು ಎಷ್ಟೆ ಗೌರವಾರ್ಹವಾಗಿದ್ದರೂ ಸಕಾಲವೊದಗಿದಾಗ ಹೊಸ ತಳಿರಿಗೆ ಎಡೆಗೊಟ್ಟು, ಮಾತಿಲ್ಲದೆ ಕೆಳಗುದುರಲೇಬೇಕು. ಅದು ಪ್ರಕೃತಿ ನಿಯಮ. ಎಲೆಗಳಿಗಾಗಿ ಮರವಿರುವುದಿಲ್ಲ; ಮರಕ್ಕಾಗಿ ಎಲೆಗಳಿರುವುದು. ಆದ್ದರಿಂದ ಮರದ ಕಲ್ಯಾಣಕ್ಕಾಗಿ ಹಣ್ಣೆಲೆಗಳುದುರಿ ಹೊಸ ತಳಿರು ಚಿಗುರುವಂತೆ ನಾಡಿನ ಮೇಲ್ಮೆಗಾಗಿ ಹಳೆಯದೆಲ್ಲ ಹೊಸದಾದುದಕ್ಕೆ ತಲೆಬಾಗಲೇಬೇಕು. ಹಾಗೆಯೇ, ಸಾಹಿತ್ಯದಲ್ಲಿಯೂ ಹೊಸ ಮಾರ್ಗಗಳಿಗೆ ಹಳೆಯಮಾರ್ಗ ಶರಣಾಗಲೇಬೇಕು. ಅದಾಗಲೇ ಪ್ರಾರಂಭವಾಗಿದೆ. ಹೊಸದರ ದಿಗ್ವಿಜಯವೇ ಅದಕ್ಕೆ ಸಾಕ್ಷಿ. ಜನರು ಆದರದಿಂದ ಹೊಸ ಸಾಹಿತ್ಯವನ್ನು ಸ್ವೀಕರಿಸುತ್ತಿದ್ದಾರೆ. ನೂರಾರು ಜನರು ಎರಡು ಮೂರು ಗಂಟೆಗಳ ಹೊತ್ತು ಮೌನವಾಗಿ ಕುಳಿತು ಹೊಸ ಪದ್ಯಪಠನವನ್ನು ಕುತೂಹಲದಿಂದ ಕಿವಿದೆರೆದು ಕೇಳುವ ಕಾಲ ಬಂದಿದೆ. ಶಾಶ್ವತವಾದ ಶ್ರೇಷ್ಠಸಾಹಿತ್ಯಕ್ಕೆ ರಸಿಕರೂ ಸುಸಂಸ್ಕೃತರೂ ಆದ ಜನಗಳ ಮೆಚ್ಚುಗೆಯ ವಾಣಿಯೆ ನಿಜವಾದ ಯೋಗ್ಯತಾಪತ್ರಿಕೆ, ಶುಷ್ಕವೈದುಷ್ಯದ ಗೊಣಗು ದನಿಯಲ್ಲ.

ಹೊಸತೆಂಬುದು ಹಳೆಯದನ್ನು ತ್ಯಜಿಸಿ ನಿಲ್ಲುವುದೆಂದು ಯಾರೂ ತಿಳಿಯಬಾರದು. ಶಿಶು ತಾಯಿಯನ್ನು ಅಲ್ಲಗಳೆದು ಹೇಗೆ ಬದುಕಲಾರದೊ, ಮನೆ ತಳಹದಿಯನ್ನು ತಿರಸ್ಕರಿಸಿ ಹೇಗೆ ಬಹುಕಾಲ ನಿಲ್ಲಲಾರದೊ, ಹಾಗೆಯೆ ಅರ್ವಾಚೀನ ಪ್ರಾಚೀನವನ್ನು ಅಸಡ್ಡೆಮಾಡಿ ಬಾಳಲಾರದು. ಸನಾತನದ ಸಾರವನ್ನು ಹೀರಿಕೊಂಡೇ ನೂತನ ಬೆಳೆಯಬೇಕು. ವರ್ತಮಾನಕಾಲ ಭೂತಕಾಲದ ನೆಲೆಗಟ್ಟಿನ ಮೇಲೆ ನಿಂತಿದೆ. ಇಂದು ನಿನ್ನೆಗೆ ಋಣಿ; ನಾಳೆ ಇಂದಿಗೆ ಋಣಿ. ಒಂದನ್ನೊಂದು ಎಂದಿಗೂ ಸಂಪೂರ್ಣವಾಗಿ ತ್ಯಜಿಸಲಾರವು. ಹಾಗೆಯೆ ಇಂದಿನ ಸಾಹಿತ್ಯ ಹಿಂದಿನ ಸಾಹಿತ್ಯವನ್ನು ಎಷ್ಟುಮಾತ್ರಕ್ಕೂ ಅಲ್ಲಗಳೆಯುವುದಿಲ್ಲ. ಅಷ್ಟೇ ಏಕೆ, ಶಿಷ್ಯವೃತ್ತಿಯನ್ನವಲಂಬಿಸಿ ಅದನ್ನು ಗುರುವಿನಂತೆ ಆರಾಧಿಸುತ್ತದೆ. ಪ್ರಸಿದ್ಧರಾದ ಆಧುನಿಕ ಲೇಖಕರೆಲ್ಲರೂ ಹಳಗನ್ನಡ ಸಾಹಿತ್ಯದಲ್ಲಿ ಪಾಂಡಿತ್ಯವನ್ನು ಸಂಪಾದಿಸಿದವರೇ. ಉತ್ತಮವಾದ ನಮ್ಮ ಪೂರ್ವಕವಿಗಳಲ್ಲಿ ಅವರಿಗೆ ಬಲು ಮಮತೆ. ಪೂರ್ವಕವಿಗಳ ಶ್ರೇಷ್ಠವಾದ ರಸಕೃತಿಗಳನ್ನು ಬಯಲಿಗೆ ಬೀರಲು ಅವರುಗಳು ನಾನಾವಿಧವಾಗಿ ಪ್ರಯತ್ನಪಡುತ್ತಿದ್ದಾಗೆ. ಕವಿಗಳ ಜನ್ಮದಿನವನ್ನು ಆಚರಿಸುವುದು, ಅಂತಹ ಸಮಯಗಳಲ್ಲಿ ಅವರ ಕೃತಿಗಳನ್ನು ಜನರಿಗೆ ಹೃದಯಂಗಮವಾಗಿ ಓದಿ ತೋರಿಸುವುದು, ಹಳೆಯ ಗ್ರಂಥಗಳನ್ನು ಮುದ್ದಾಗಿ ಅಚ್ಚುಹಾಕಿಸುವುದು, ಸಾಧ್ಯವಾದಲ್ಲಿ ಅವುಗಳನ್ನೆ ನಾಟಕರೂಪಕ್ಕೆ ತಿರುಗಿಸಿ ಜನರೆದುರು ಅಭಿನಯಿಸುವುದು, ಹಳೆಯ ಕಾವ್ಯಗಳನ್ನು ವಿಮರ್ಶಿಸಿ ಕವಿಪ್ರಶಸ್ತಿಗಳನ್ನು ಮುದ್ರಿಸುವುದು, ದೊಡ್ಡ ದೊಡ್ಡ ಗ್ರಂಥಗಳಿಂದ ಸ್ವಾರಸ್ಯವಾದ ಭಾಗಗಳನ್ನು ಆಯ್ದು ಸಂಗ್ರಹಮಾಡುವುದು, ಕವಿಕಾವ್ಯಗಳನ್ನು ಕುರಿತು ಜನರಿಗೆ ಉಪನ್ಯಾಸ ಮಾಡುವುದು, ಇವೇ ಮೊದಲಾದ ಅನೇಕ ಪ್ರಶಂಸನೀಯ ಕಾರ್ಯಗಳಿಂದ ಪ್ರಾಚೀನ ಸಾಹಿತ್ಯದೇವಿಯ ಪೂಜೆಯನ್ನು ಅನವರತವೂ ಮಾಡುತ್ತಲೆ ಇದ್ದಾರೆ. ಇದರಿಂದ ಆಧುನಿಕ ಸಾಹಿತಿಗಳು ಹಳೆಯ ಸಾಹಿತ್ಯವನ್ನು ಬಿಟ್ಟು ಸ್ವಚ್ಛಂದ ವೃತ್ತಿಯಿಂದ ಹೊರಟಿಲ್ಲ ಎಂದು ಎಲ್ಲರೂ ಮನಗಾಣಬಹುದು.

ನಮ್ಮ ಸಾಹಿತ್ಯವೇನೋ ಬೆಳೆಯುತ್ತಿದೆ. ಅದರ ಭವಿಷ್ಯತ್ತು ವೈಭವದಿಂದ ಕೂಡಿದೆ. ಹೀಗೆಂದು ನಾವು ಸುಮ್ಮನೆ ಕುಳಿತರಾಗುವುದಿಲ್ಲ. ಬೆಳೆದುದನ್ನು ದೇಶದ ಮೇಲೆಲ್ಲ ಹರಡಲು ಪ್ರಯತ್ನಮಾಡಬೇಕು. ಹಾಗೆ ಹರಡುವುದರಿಂದಲೇ ಮುಂದಿನ ಬೆಳೆಗೆ ಬೀಜ ಬಿತ್ತಿದಂತಾಗುವುದು, ಈಗ ಬೆಳೆಯುವವರಿಗೂ ಪ್ರೋತ್ಸಾಹ ಕೊಟ್ಟಂತಾಗುವುದು. ಜನರಲ್ಲಿ ಸಾಹಿತ್ಯಕಲಾಭಿರುಚಿಯನ್ನು ಶುದ್ಧಿಗೊಳಿಸಬೇಕು. ಪೂರ್ವಕಾಲದಲ್ಲಿ ಸಾಹಿತ್ಯ ಶಿಲ್ಪ ಮೊದಲಾದ ಕಲೆಗಳು ರಾಜಾಶ್ರಯವನ್ನು ಹೊಂದಿ ಬೆಳೆದುವು. ಆ ಕಾಲ ಎಂದೋ ಮಾಯವಾಯಿತು. ಈಗ ಪ್ರಭುತ್ವ ಮೆಲ್ಲಮೆಲ್ಲಗೆ ಪ್ರಜಾ ಪ್ರಭುತ್ವವಾಗುತ್ತಿದೆ. ಪಂಡಿತವರ್ಗದಲ್ಲಿಯೂ ರಾಜಾಶ್ರಯದಲ್ಲಿಯೂ ಮಾತ್ರವೆ ನಲಿದಾಡುತ್ತಿದ್ದ ಕಲಾರಮಣಿ ಈಗ ತನ್ನ ಉತ್ತುಂಗಪೀಠದಿಂದ ಕೆಳಗಿಳಿದು ಜನಸಾಮಾನ್ಯರೊಡನೆ ಸಂಭಾಷಿಸುತ್ತಿದ್ದಾಳೆ. ಆದ್ದರಿಂದ ಲೇಖಕರು ತಮ್ಮ ಲೌಕಿಕ ಜೀವನಕ್ಕೆ ಬೇಕೇ ಬೇಕಾದ ಸಂಪತ್ತನ್ನು ರಾಜರಿಂದ ಪಡೆಯಲಾರರು. ಅವರ ಜೀವನಕ್ಕೆ ಅತ್ಯವಶ್ಯವಾದ ಮಿತಭೋಗವನ್ನು ಜನರೇ ಕಲ್ಪಿಸಿಕೊಡಬೇಕು. ಅವರ ಗ್ರಂಥಗಳು ಮಾರಾಟವಾಗಬೇಕು. ಅವರ ಮನಸ್ಸೆಲ್ಲ ಹೊಟ್ಟೆಯಲ್ಲೇ ಸುಳಿದಾಡದೆ ಉತ್ತಮ ಧ್ಯೇಯಗಳ ಗಗನ ಪ್ರಾಂತದಲ್ಲಿ ಹಾರಾಡುವಂತೆ ಮಾಡುವ ಕೆಲಸ ಜನರ ಕೈಯಲ್ಲಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಾಹಿತ್ಯ ಕಲೆಯೇ ಒಂದು ಜೀವನವೃತ್ತಿಯಾಗಿದೆ. ಅಲ್ಲಿಯ ಸಾಧಾರಣ ಲೇಖಕರೂ ಕೂಡ ಲಕ್ಷಾಧಿಕಾರಿಗಳಾಗಿದ್ದಾರೆ. ನಮ್ಮಲ್ಲಿ ಇನ್ನೂ ಆ ಕಾಲ ಬಂದಿಲ್ಲ. ನಾವೀಗ ಪ್ರಯತ್ನಪಟ್ಟರೆ ಮುಂದೆ ಶತಮಾನದ ಮೇಲಾದರೂ ಆ ಸ್ಥಿತಿ ಒದಗಬಹುದು. ಹಿಂದೆ ಪಾಶ್ಚಾತ್ಯ ದೇಶಗಳಲ್ಲಿಯೂ ಈಗ ನಮ್ಮಲ್ಲಿರುವ ಸ್ಥಿತಿಯೇ ಇತ್ತು. ಮಿಲ್ಟನ್ ಕವಿ ತನ್ನ ‘ಪ್ಯಾರಡೈಸ್ ಲಾಸ್ಟ್’ ಎಂಬ ಮಹಾ ಪುರಾಣ ಕಾವ್ಯವನ್ನು ಐದು ಪೌಂಡುಗಳಿಗೆ ಮಾರಿದನು. ಕಂತಿನ ಮೇಲೆ ಹಣವನ್ನು ತೆಗೆದುಕೊಂಡದ್ದರಿಂದ ಅವನ ಜೀವಮಾನದಲ್ಲಿಯೇ ಅವನಿಗೆ ಆ ಐದು ಪೌಂಡುಗಳು ದಕ್ಕಲಿಲ್ಲ. ಈಗ ಅದೇ ‘ಪ್ಯಾರಡೈಸ್ ಲಾಸ್ಟ್’ ಪುರಾಣಕಾವ್ಯ ಅನೇಕ ಕಂಪನಿಗಳಿಗೆ ಲಕ್ಷಾಂತರ ಧನವನ್ನು ತಂದುಕೊಡುತ್ತಿದೆ. ಆದ್ದರಿಂದ ನಮ್ಮ ಸ್ಥಿತಿ ನಮಗೆ ಮಾತ್ರವೇ ಸಂಭವಿಸಿಲ್ಲ. ಈಗ ನಾವು ವ್ಯವಸಾಯಮಾಡಿದರೆ ಮುಂದೆ ಬರುವ ನಮ್ಮ ಸಾಹಿತಿಗಳು ಪಯಿರು ಕೊಯ್ಯಬಹುದು.

ಸಾಹಿತ್ಯಪ್ರಚಾರ ಗ್ರಂಥಕರ್ತರೆ ಕಲ್ಯಾಣದೃಷ್ಟಿಯೊಂದರಿಂದಲೇ ಆವಶ್ಯಕವಾದುದೆಂದು ಯಾರೂ ತಿಳಿಯಬಾರದು. ಜನರಿಗೆ ನೂತನ ಸಂಸ್ಕೃತಿಯ ಜ್ಞಾನ ಉಂಟಾಗಬೇಕಾದರೆ ಆ ಸಂಸ್ಕೃತಿಯನ್ನೊಳಗೊಂಡ ಸಾಹಿತ್ಯ ಅವರಲ್ಲಿ ಹರಡಬೇಕು. ಅದರಿಂದಲೇ ದೇಶದ ಅಭ್ಯುದಯ ಸಾಧ್ಯ. ರಷ್ಯಾ ಚೀನಾ ದೇಶಗಳಲ್ಲಿಯೂ ಜಪಾನ್ ತುರ್ಕಿಸ್ಥಾನಗಳಲ್ಲಿಯೂ ಆಗಿರುವ ಪರಿವರ್ತನೆಗೆ ಅಲ್ಲಿಯ ನೂತನ ಸಾಹಿತಿಗಳೆ ಮುಖ್ಯ ಕಾರಣ. ಯಾವಾಗ ನವದೃಷ್ಟಿಯ ಸಾಹಿತ್ಯ ಜನಸಾಮಾನ್ಯದಲ್ಲಿ ಹೆಚ್ಚಾಗಿ ಪ್ರಚುರವಾಗುವುದೋ ಆಗಲೇ ದೇಶ ಕಣ್ದೆರೆಯುವುದು. ಬರಿಯ ವಿಶ್ವವಿದ್ಯಾನಿಲಯಗಳಿಂದಲೂ ನಗರದ ಉಪನ್ಯಾಸಮಂದಿರಗಳಿಂದಲೂ ಅದು ಸುಲಭಸಾಧ್ಯವಲ್ಲ. ನಮ್ಮ ದೇಶದ ಈಗನ ಅವಸ್ಥೆಯಲ್ಲಂತೂ ಋಜುದೃಷ್ಟಿಯ ಸಾಹಿತ್ಯಪ್ರಚಾರ ಅತ್ಯಾವಶ್ಯಕವಾದುದು. ದೇಶಾಭಿಮಾನಿಗಳೆಲ್ಲರೂ ಸಾಹಿತ್ಯಪ್ರಚಾರಕರಾಗಲೇಬೇಕು.

ಇನ್ನು ಸಾಹಿತ್ಯಪ್ರಚಾರ ಮಾರ್ಗಗಳಾವುವು ಎಂಬುದನ್ನು ಕುರಿತು ಸ್ವಲ್ಪ ವಿಚಾರಿಸೋಣ.

ಗಣಿಯನ್ನು ಅಗೆದು ಚಿನ್ನವನ್ನು ತೆಗೆಯಬೇಕಾದರೆ, ಮೊದಲ ಗಣಿ ಇರುವ ವಿಷಯ ಗೊತ್ತಾಗಬೇಕು. ನಮ್ಮಲ್ಲಿ ಅನೇಕರಿಗೆ ಆ ವಿಷಯ ಗೊತ್ತೇ ಇಲ್ಲ. ನಾನು ಕೊಡಗಿಗೆ ಹೋಗಿ ಅಲ್ಲಿ ಕೆಲವು ಕಡೆ ಹೊಸ ಸಾಹಿತ್ಯವನ್ನು ಓದಿದಾಗ ಅಲ್ಲಿ ಸೇರಿದ ಜನರು ನನ್ನಲ್ಲಿಗೆ ಬಂದು ತಮಗೆ ಇಂತಹ ಸಾಹಿತ್ಯವಿರುವ ಸಂಗತಿಯೇ ತಿಳಿದಿಲ್ಲವೆಂದೂ ಅವು ದೊರಕುವ ಸ್ಥಳಗಳನ್ನು ತಿಳಿಸಬೇಕೆಂದೂ ಕೇಳಿಕೊಂಡರು. ಜನರಿಗೆ ಸವಿಯುವ ಎದೆಯಿದೆ; ನೋಡುವ ಕಣ್ಣಿದೆ; ಕೆಲಸ ಮಾಡುವ ಶಕ್ತಿಯಿದೆ; ಮಾಡಲು ಉತ್ಸಾಹವಿದೆ; ಆದರೆ ಸಾಕಾದಷ್ಟು ತಿಳಿವಿಲ್ಲ, ಆ ತಿಳಿವನ್ನು ಪ್ರಚಾರಕರು ದಯಪಾಲಿಸಬೇಕು.

ಬರೆದುದನ್ನು ರಸವತ್ತಾಗಿ ಓದಲು ಕಲಿಯಬೇಕು. ಏಕೆಂದರೆ ಸರಿಯಾಗಿ ಓದಲು ಬಾರದಿದ್ದರೆ ಕಾವ್ಯದ ಅರ್ಧಸ್ವಾರಸ್ಯ ಓದುಗರಿಗೆ ದೊರಕುವುದೆ ಇಲ್ಲ. ಕವನಗಳಾಗಲಿ, ನಾಟಕಗಳಾಗಲಿ, ಬರಿಯ ಭಾವಗಳು ಮಾತ್ರವೇ ಅಲ್ಲ; ಭಾವ ಲಯಬದ್ಧವಾದ ಭಾಷೆಯಲ್ಲಿ ಮೈವೆತ್ತ ರಸಕಾರ್ಯಗಳು. ಹೇಳುವ ವಿಷಯ ಮಾತ್ರವಲ್ಲದೆ, ಹೇಳುವ ರೀತಿಯೂ ನಮ್ಮನ್ನು ಮೋಹಿಸುವುದು. ಕೆಲವು ಸಾರಿ ವಿಷಯ ಹೇಳುವ ರೀತಿಯಿಂದಲೇ ಮಹತ್ತಾಗಬಹುದು. ಆದ್ದರಿಂದ ಸಾಹಿತ್ಯ ಪ್ರೇಮಿಗಳು ಕಾವ್ಯವಾಚನಕಲೆಯನ್ನು ಅಭ್ಯಾಸಮಾಡಬೇಕು. ಉತ್ತಮ ಗಮಕಿಗಳು ಕನ್ನಡ ಮಹಾಭಾರತವನ್ನು ಓದಿದರೆ ಪಂಡಿತ ಪಾಮರರೆಲ್ಲರೂ ಮುಗ್ಧರಾಗಿ ಕೇಳುವರು. ವಾಣಿಯ ವೈಖರಿಯೇ ಭಾವದ ಮಹಿಮೆಯನ್ನೂ ಪದಗಳ ಅರ್ಥವನ್ನೂ ಎಲ್ಲರಿಗೂ ತಿಳಿಸಿಬಿಡುವುದು. ಸಾಹಿತ್ಯ ಪ್ರಚಾರಕರು ಆದಷ್ಟು ಮಟ್ಟಿಗೆ ಕಾವ್ಯವಾಚನಶಕ್ತಿಯನ್ನು ಸಂಪಾದಿಸಬೇಕು. ಇದು ಮೊದಲನೆಯ ಮೆಟ್ಟಲು.

ಅಲ್ಲಲ್ಲಿ ಕರ್ಣಾಟಕ ಸಂಘಗಳನ್ನು ಸ್ಥಾಪಿಸಿ ಜನರಿಗೆ ಸಾಹಿತ್ಯಪ್ರಪಂಚದಲ್ಲಿ ಈಗ ನಡೆಯುತ್ತಿರುವ ಕಾರ್ಯವನ್ನು ತಿಳಿಸಬೇಕು. ಹಳೆಯ ಸಾಹಿತ್ಯದಲ್ಲಿಯಾಗಲಿ ಹೊಸ ಸಾಹಿತ್ಯದಲ್ಲಿಯಾಗಲಿ ದೊರಕುವ ಉತ್ತಮ ಕಾವ್ಯಭಾಗಗಳನ್ನು ಓದಿ ಚರ್ಚೆಮಾಡಿ ಟೊಳ್ಳುಗಟ್ಟಿಗಳನ್ನು ಬೇರೆಬೇರೆ ಮಾಡಿ ತೋರಿಸಿ ಸದಸ್ಯರಲ್ಲಿ ವಿಮರ್ಶ ಬುದ್ಧಿಯೂ ರುಚಿಶುದ್ಧಿಯೂ ಉಂಟಾಗುವಂತೆ ಮಾಡಬೇಕು. ವಿಮರ್ಶಾತ್ಮಕವಾದ ಉಪನ್ಯಾಸಗಳನ್ನು ಕೊಡಬೇಕು. ಆತ್ಮಸಂಸ್ಕಾರಕ್ಕೆ ಸಾಹಿತ್ಯದಿಂದ ಆಗುವಷ್ಟು ಸಹಾಯ ಕೆಲವು ಸಾರಿ ಮತಾಚಾರದಿಂದಲೂ ಆಗುವುದಿಲ್ಲ. ಸೂರ್ಯೋದಯ ಚಂದ್ರೋದಯಗಳನ್ನೂ ಹಸುರಿನ ಮೇಲೆ ನಲಿಯುವ ಎಳಬಿಸಿಲನ್ನೂ ನೀಲಾಕಾಶವನ್ನೂ ಶ್ವೇತಶರನ್ಮೇಘ ಮಾಲೆಯನ್ನೂ ಕೋಗಿಲೆ ಕಾಜಾಣಗಳ ಇಂಚರವನ್ನೂ ನಿಬಿಡಾರಣ್ಯಗಳ ರುದ್ರರಮಣೀಯತೆಯನ್ನೂ ಗಗನಚುಂಬಿತ ಪರ್ವತಗಳ ಧೀರಗಾಂಭೀರ್ಯವನ್ನೂ ನೋಡಿ, ಅನುಭವಿಸಿ, ಸೌಂದರ್ಯದಲ್ಲಿ ತಲ್ಲೀನನಾಗುವ ರಸಜೀವಿ ಮೂಲೆಯಲ್ಲಿ ಕುಳಿತು ಮೂಗು ಹಿಡಿದುಕೊಂಡು ಹತ್ತು ಮಂತ್ರಗಳನ್ನು ಶಾಸ್ತ್ರಕ್ಕಾಗಿ ಗೊಣಗುವ ಧರ್ಮನಟನಿಗಿಂತಲೂ ಸಾವಿರಪಾಲು ಉತ್ತಮ. ಅವನು ಪರಮಾತ್ಮನ ಒಂದಂಶವಾದ ಸೌಂದರ್ಯವನ್ನು ಆರಾಧಿಸುವುದರಿಂದ ದೇವರಿಗೆ ಸಮೀಪದಲ್ಲಿರುತ್ತಾನೆ. ಜಗತ್ತಿಗಿಂತಲೂ ಮಹಿಮಾಮಯವಾದ ದೇವಸ್ಥಾನ ಮತ್ತೊಂದುಂಟೆ? ಶುದ್ಧವಾದ ಸೌಂದರ್ಯಾನುಭವಕ್ಕಿಂತಲೂ ಬೇರೊಂದು ಪೂಜೆಯುಂಟೆ? ಕೋಟ್ಯನುಕೋಟಿ ನಕ್ಷತ್ರಗಳಿಂದ ಖಚಿತವಾದ ಅನಂತವಾದ ಅಪಾರವಾದ ರಾತ್ರಿಯ ಅಂತರಿಕ್ಷವನ್ನು ಈಕ್ಷಿಸಿದಾಗ ಹೃದಯ ಮಂದಿರದಲ್ಲಿ ಆವಿರ್ಭವಿಸದ ಪರಮಾತ್ಮ ಅನಿಲಸಂಚಾರವಿಲ್ಲದ ಕತ್ತಲು ಕವಿದ ಗರ್ಭಗುಡಿಯಲ್ಲಿ ನಮಗೆ ಮೈದೋರುವನೆ? ಅದನ್ನರಿತೇ ಆಂಗ್ಲೇಯ ಮಹಾಕವಿಯೊಬ್ಬನು “ಸತ್ಯವೇ ಸೌಂದರ್ಯ, ಸೌಂದರ್ಯವೇ ಸತ್ಯ.” ಎಂಬ ಮಹಾಕಾವ್ಯವನ್ನು ಹಾಡಿದ್ದಾನೆ. ಆದ್ದರಿಂದ ಉತ್ತಮ ಕಾವ್ಯಪರಿಚಯವನ್ನು ಮಾಡಿಕೊಟ್ಟು, ಜನರಿಗೆ ರಸದೃಷ್ಟಿಯನ್ನು ದಾನಮಾಡಬೇಕು. ಇದು ಎರಡನೆಯ ಮೆಟ್ಟಲು.

ಸಂಘಗಳ ಸ್ಥಾಪನೆಯಾಗಲು ಅನುಕೂಲವಿಲ್ಲದ ಗ್ರಾಮಾಂತರಗಳಲ್ಲಿರುವ ನಮ್ಮ ಜನರಿಗೆ ಸಾಹಿತ್ಯಾಭಿರುಚಿಯುಂಟಾಗಬೇಕಾದರೆ ಸಾಹಿತ್ಯಪ್ರೇಮಿಗಳು ಹಳ್ಳಿಗಳಲ್ಲಿ ಆಗಾಗ್ಗೆ ಸಮಯ ದೊರೆತಾಗ ಸಂಚರಿಸಿ ಹಳ್ಳಿಗರು ಒಂದೆಡೆ ನೆರೆಯುವಂತೆ ಮಾಡಿ ಅವರಿಗೆ ಕಾವ್ಯಗಳನ್ನು ಓದಿ ಹೇಳಬೇಕು. ಶ್ರೀಮಾನ್ ಪಂಜೆ ಮಂಗೇಶರಾಯರು ಇದನ್ನು ಮಂಗಳೂರು ಪ್ರಾಂತ್ಯದಲ್ಲಿ ಬಹುಕಾಲದಿಂದ ಮಾಡುತ್ತಲಿರುವರು. ಸ್ವಲ್ಪಕಾಲ ಹಾಗೆ ಮಾಡಿದರೆ, ತರುವಾಯ ಹಳ್ಳಿಗರೇ ಸಾಹಿತ್ಯವನ್ನು ಹುಡುಕಿಕೊಂಡು ಹೋಗಿ ಓದುವರು ಅಥವಾ ಕೇಳುವರು. ಇದು ಮೂರನೆಯ ಮೆಟ್ಟಲು.

ಇದೇ ಸಮಯದಲ್ಲಿ ತಮಗೆ ಇನ್ನೊಂದು ವಿಷಯವನ್ನು ಸೂಚಿಸಿಬಿಡುತ್ತೇನೆ. ಅದೇನೆಂದರೆ, ಜನಪದಸಾಹಿತ್ಯಸಂಗ್ರಹ. ಜನಪದಸಾಹಿತ್ಯವನ್ನು ಒಟ್ಟುಗೂಡಿಸುವುದು ನಮ್ಮೆಲ್ಲರ ಕರ್ತವ್ಯ. ಹಳ್ಳಿಯ ಹಾಡುಗಳು, ಕೋಲಾಟದ ಪದಗಳು, ಲಾವಣಿಗಳು, ಮೊದಲಾದುವುಗಳಲ್ಲಿ ಸಾಮಾನ್ಯ ಜನರ ಮನೋಭಾವಗಳು ಬಿಚ್ಚಿತೋರುತ್ತವೆ. ಕೆಲವು ಸಾರಿ ಅವುಗಳಲ್ಲಿ ಉತ್ತಮ ಸಾಹಿತ್ಯವೂ ದೊರಕುತ್ತದೆ. ಈ ಭಾಗದ ಕೆಲಸಕ್ಕೆ ನಾವಿನ್ನೂ ಕೈಹಾಕಿಲ್ಲವೆಂದೇ ಹೇಳಬಹುದು. ಈಗೀಗ ಜಯಕರ್ಣಾಟಕ, ಪ್ರಬುದ್ಧ ಕರ್ಣಾಟಕ ಮೊದಲಾದ ಪತ್ರಿಕೆಗಳಲ್ಲಿ ಅಲ್ಪಸ್ವಲ್ಪ ಜನಪದಸಾಹಿತ್ಯ ಪ್ರಕಟವಾಗುತ್ತಿದೆ. ಆದರೆ ಅದು ಸಾಲದು. ಈ ಕೆಲಸವು ಒಬ್ಬಿಬ್ಬರಿಂದ ಸಾಧ್ಯವಲ್ಲ. ಅಡಿಕೆಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಹೋದಾಗ ಈ ಸಂಗ್ರಹಕಾರ್ಯವನ್ನು ಮಾಡಬಹುದು. ಅದರಿಂದ ನಮ್ಮ ಸಾಹಿತ್ಯಕ್ಕೊಂದು ಹೊಸ ಕೋಡು ಬಂದಂತಾಗುವುದು.

ನಾಲ್ಕನೆಯ ಮೆಟ್ಟಲೆಂದರೆ, ದೃಶ್ಯಕಾವ್ಯಗಳ ಅಭಿನಯ. ಹೊಸ ರೀತಿಯಿಂದ ಬರೆದ ನಾಟಕಗಳನ್ನು ಆಡಿ ತೋರಿಸುವುದರಿಂದ ಜನರಲ್ಲಿ ಸಾಹಿತ್ಯಾಭಿಮಾನ ಹೆಚ್ಚುವುದು. ಅಲ್ಲದೆ ನಾಟಕರಂಗ ಓದುಕಲಿತವರಿಗೂ ಓದುಕಲಿಯುವವರಿಗೂ ಎಲ್ಲರಿಗೂ ಆದರಣೀಯವಾಗಿರುತ್ತದೆ. ರಂಗದ ಸಹಾಯದಿಂದ ಯಾವ ತತ್ತ್ವಗಳನ್ನು ಬೇಕಾದರೂ ಜನರಲ್ಲಿ ಹರಡಬಹುದು. ಉದಾಹರಣೆಗಾಗಿ ಭಾಗವತರಾಟಗಳನ್ನು ತೆಗೆದುಕೊಳ್ಳೋಣ. ದಕ್ಷಿಣ ಕನ್ನಡ ಜಿಲ್ಲೆಯ ಸಾಮೀಪ್ಯದಿಂ ಮಲೆನಾಡಿಗರಿಗೆ ಒಂದು ಮಹದುಪಕಾರವಾಗಿದೆ. ಹಳ್ಳಿಗಳಲ್ಲಿ ಭಾಗವತರಾಟವೆಂದರೆ ಹದಿನೈದು ಇಪ್ಪತ್ತು ಮೈಲಿಗಳಿಂದಲೂ ಕೂಡ ಬರಲು ಹಿಂಜರಿಯುವುದಿಲ್ಲ. ಈ ಬಯಲಾಟಗಳನ್ನು ನೋಡಿ ನೋಡಿ ನಿರಕ್ಷರಕುಕ್ಷಿಗಳಾದ ಜನರೂ ಕೂಡ ಎಷ್ಟೋ ಜ್ಞಾನಸಂಪಾದನೆ ಮಾಡಿದ್ದಾರೆ. “ಭೀಷ್ಮವಿಜಯ”ವಾದರೆ ಭೀಷ್ಮಾಚಾರ್ಯನ ತತ್ತ್ವೋಪದೇಶ ಇದ್ದೇ ಇರುತ್ತದೆ. ಬರಿಯ ತತ್ತ್ವೋಪದೇಶವನ್ನು ಕೇಳಲಾರದ ಜನರು ಭಾಗವತರಾಟದಲ್ಲಿ ಒಂದು ಗಂಟೆಯ ಮೇಲಾದರೂ ಸುಮ್ಮನೆ ಕುಳಿತು ಅದನ್ನು ಸಂತೋಷದಿಂದ ಕೇಳುತ್ತಾರೆ. ಇದೀಗ ದೃಶ್ಯಕಾವ್ಯಗಳ ಮಹಿಮೆ. ಸಾಹಿತ್ಯಪ್ರಚಾರಕಾರ್ಯದಲ್ಲಿ ದೃಶ್ಯಕಾವ್ಯ ಪ್ರದರ್ಶನ ಒಂದು ಬಹು ಮುಖ್ಯವಾದ ಮಾರ್ಗ. ‘ಗದಾಯುದ್ಧ’ವನ್ನು ನನ್ನ ಪೂಜ್ಯಗುರುಗಳಾದ ಶ್ರೀಮಾನ್ ಬಿ.ಎಂ.ಶ್ರೀಕಂಠಯ್ಯನವರು ಅಸದೃಶಪ್ರತಿಭೆಯಿಂದಲೂ ಕುಶಾಗ್ರಬುದ್ಧಿಯಿಂದಲೂ ನಾಟಕರೂಪಕ್ಕೆ ತಿರುಗಿಸಿ, ರನ್ನನ ರತ್ನವನ್ನು ಕಡೆದು ಮೆರಗು ಕೊಟ್ಟು, ರನ್ನನ ಕೀರ್ತಿ ಕನ್ನಡನಾಡಿನಲ್ಲಿ ಮೊದಲಿಗಿಂತಲೂ ಇಮ್ಮಡಿಯಾಗಿ ಬೆಳಗುವಂತೆ ಮಾಡಿರುವ ವಿಷಯ ತಮಗೆ ತಿಳಿದಿರಬೇಕು. ‘ಗದಾಯುದ್ಧ’ ಹಳಗನ್ನಡದ ಕಾವ್ಯಭಾಷೆ. ಪಂಡಿತರಲ್ಲದವರಿಗೆ ಸ್ವಲ್ಪ ಕ್ಲಿಷ್ಟವಾದುದು. ಆದರೂ ಅದು ದೃಶ್ಯರೂಪಕ್ಕೆ ತಿರುಗಿದ ಮೇಲೆ ಇದನ್ನು ಅನೇಕಾವರ್ತಿ ಅಭಿನಯಿಸಿದ್ದಾರೆ. ಹಳಗನ್ನಡವನ್ನು ಅರಿಯದವರು, ರನ್ನನನ್ನೇ ಎಂದೂ ಓದದವರೂ ಕೂಡ, ನೋಡಿ ಹಿಗ್ಗಿ ಮೈಮರೆತಿದ್ದಾರೆ. ಅಷ್ಟೇ ಅಲ್ಲ. ‘ಗದಾಯುದ್ಧ ನಾಟಕ’ವನ್ನು ಓದುಬರುವ ಕನ್ನಡಿಗರು ಪಡೆಯದಿದ್ದರೆ ಅವರು ಸುಸಂಸ್ಕೃತರ ವರ್ಗಕ್ಕೆ ಸೇರಿದವರಲ್ಲ ಎಂಬ ಭಾವನೆಯೂ ಜನಿಸುತ್ತಿದೆ. ‘ಗದಾಯುದ್ಧ’ ನಾಟಕರೂಪಕ್ಕೆ ತಿರುಗಿದ ಮೇಲೆ ರನ್ನನು, ಎಲ್ಲಿಯೋ ಅಲ್ಪಸಂಖ್ಯೆಯ ನರೆತ ಪಂಡಿತ ವರ್ಗದವರ ಪುಸ್ತಕ ಭಂಡಾರದಲ್ಲಿ ಮೂಲೆ ಸೇರಿ ಗೋಳಿಡುತ್ತಿದ್ದ ಆರ್ಯ ರನ್ನನು, ಎಲ್ಲರ ಜಿಹ್ವಾಗ್ರಹದಲ್ಲಿಯೂ ಕುಣಿದು ನಲಿಯತೊಡಗಿದ್ದಾನೆ. ಅಷ್ಟೇ ಅಲ್ಲ. ರನ್ನ ಕವಿ ಸ್ಮಾರಕೋತ್ಸವವೂ ರನ್ನಕವಿ ಪ್ರಶಸ್ತಿಯೂ ನಾಟಕವನ್ನೇ ಹಿಂಬಾಲಿಸಿ ಹೆಸರುಗೊಂಡವು. ಈ ನಿದರ್ಶನದಿಂದ ದೃಶ್ಯಕಾವ್ಯಗಳ ಮಹಿಮೆ ನಿಮಗೆ ಇನಿತಾದರೂ ಗೊತ್ತಾಗಬಹುದು.

ನಮ್ಮ ಕಾರ್ಯ ಅಪಾರವಾಗಿದೆ. ಸಾಹಿತ್ಯದೇವಿಗೆ ಎಷ್ಟು ಜನ ದಾಸರಿದ್ದರೂ ಸಾಲದಾಗಿದೆ. ಆದರೆ ನಮ್ಮಲ್ಲಿ ಭಾಷಾಪ್ರೇಮಿಗಳು ಕಡಮೆಯಾಗಿಲ್ಲ. ಈಗಾಗಲೆ ಎಷ್ಟೋ ಜನರು ದೀಕ್ಷಿತರಾಗಿದ್ದಾರೆ. ಇನ್ನೂ ಅನೇಕ ತರುಣರು ಮುಂದೆ ಬರುತ್ತಿದ್ದಾರೆ. ಮುಂದೆ ಬರುವವರೂ ಬಹಳ ಮಂದಿ ಇದ್ದಾರೆ ಎಂಬ ನೆಚ್ಚಿದೆ. ಆದ್ದರಿಂದ ನಾವು ನಿರುತ್ಸಾಹಿಗಳಾಗಬೇಕಾಗಿಲ್ಲ. ಅದಕ್ಕೆ ನೀವಿಂದು ಕೈಗೊಂಡಿರುವ ರಸೋತ್ಸವವೆ ಒಂದು ದೊಡ್ಡ ಸಾಕ್ಷಿ.

ಸಿರಿಗನ್ನಡಂ ಗೆಲ್ಗೆ!* ಶಿವಮೊಗ್ಗೆಯ ಕರ್ಣಾಟಕ ಸಂಘದ ಆರಂಭೋತ್ಸವದಲ್ಲಿ (೮.೧೧.೩೦) ಮಾಡಿದ ಭಾಷಣ.

* ಈಗ (೧೯೪೫) ಆ ಸಂದೇಹವಿಲ್ಲ. ‘ಸರಳ ರಗಳೆ’ಯೆ ಮುಂಬರಿದು ‘ಚಿತ್ರಾಂಗದಾ’ ಕಾವ್ಯದಲ್ಲಿ ಮುನ್ನೆಡೆದು ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ‘ಮಹಾ ಛಂದಸ್’ ಆಗಿ ಪರಿಣಮಿಸಿದೆ.