ತರುಣ ಮಿತ್ರರಲ್ಲಿ ವಿಜ್ಞಾಪನೆ,

ವಯಸ್ಸಿನಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿ ತರುಣರಾಗಿರುವವರಿಗೂ ನನ್ನ ಸಂಬೋಧನೆ ಸಲ್ಲುತ್ತದೆ. ನಿಜವಾದ ತಾರುಣ್ಯ ಬರಿಯ ಸಂವತ್ಸರಗಳಿಂದ ನಿರ್ಣಯವಾಗುವ ವಸ್ತುವಲ್ಲ. ಅದು ಆಂತರಿಕವಾದುದು. ಅದರ ಉಸಿರಿರುವುದು ಹೃದಯದಲ್ಲಿ. ಅದು ಆತ್ಮಕ್ಕೆ ಸೇರಿದ ಒಂದು ರಸದಶೆ.

ಇಪ್ಪತ್ತು ವರ್ಷದ ಹೃದಯದಲ್ಲಿ ಎಪ್ಪತ್ತರ ಮುಪ್ಪು ಮೂಲೆ ಹಿಡಿದು ತಲೆದೂಗಿಯಾಗಿರಬಹುದು. ಎಪ್ಪತ್ತು ವರ್ಷದ ಹೃದಯದಲ್ಲಿ ಇಪ್ಪತ್ತರ ತಾರುಣ್ಯ ತೂಗುಯ್ಯಾಲೆಯಾಡುತ್ತಿರಬಹುದು.

ತರುಣತೆ, ನೂತನತೆ, ನವೀನತೆ, ಆಧುನಿಕತೆ ಈ ಪದಗಳು ಹೃದಯದ ಲಕ್ಷಣಗಳನ್ನು ವರ್ಣಿಸುತ್ತವೆ; ದೇಹದ ವಯಸ್ಸನ್ನು ಮಾತ್ರವೆ ನಿರ್ಣಯಿಸುವುದಿಲ್ಲ. ಹೊಸತು ಎನ್ನುವ ಮಾತು ಕಾಲಕ್ಕೆ ಮಾತ್ರವಲ್ಲದೆ ಆತ್ಮಕ್ಕೂ ಅನ್ವಯಿಸುತ್ತದೆ.

ಅಷ್ಟೇ ಅಲ್ಲ; ವ್ಯಕ್ತಿಗಳಿಗೆ ಮಾತ್ರವೆ ಅಲ್ಲದೆ ತತ್ತ್ವಗಳಿಗೂ ಅನ್ವಯಿಸುತ್ತದೆ. ಕೆಲವು ಆಲೋಚನೆ ಅಭಿಪ್ರಾಯಗಳಿವೆ; ಅವು ಅತ್ಯಂತ ಪುರಾತನವಾದರೂ ಸರ್ವದಾ ನೂತನವಾಗಿರುತ್ತವೆ. ಮತ್ತೆ ಕೆಲವು ಮೊನ್ನೆ ಮೊನ್ನೆ ಹುಟ್ಟಿದ ಹೊಸ ಸಿದ್ಧಾಂತಗಳಾದರೂ ಜಗತ್ತಿನ ಬದುಕಿನ ನೆಮ್ಮದಿಯ ದೃಷ್ಟಿಯಿಂದ, ಸಂಸ್ಕೃತಿಯ ಏಳ್ಗೆಯ ದೃಷ್ಟಿಯಿಂದ, ಕಳಚಿ ಬಿಸಾಡಲು ಯೋಗ್ಯವಾದ ಹಳೆಯ ಚಿಂದಿ ಬೊಂತೆಗಳಾಗಿರುತ್ತವೆ. ಆದ್ದರಿಂದ ಈ ಉಪನ್ಯಾಸದಲ್ಲಿ ಹೊಸತು, ಆಧುನಿಕ ಇತ್ಯಾದಿ ಪದಗಳಿಗೆ ಮೇಲೆ ವಿವರಿಸಿದಂತೆ ಜೀವಪೂರ್ಣವಾದ ವಿಶಾಲಾರ್ಥವನ್ನಿಟ್ಟುಕೊಂಡು ಮುಂದುವರಿಯುತ್ತೇನೆ. ತಾಳ್ಮೆಯಿಂದ ಕಿವಿಗೊಡಬೇಕೆಂದು ಪ್ರಾರ್ಥನೆ.

ಹೊಸತು ಎಂದರೇನು? ಆಧುನಿಕ ಎನ್ನುವ ಮಾತು ಯಾವುದಕ್ಕೆ ಸಲ್ಲುತ್ತದೆ? ಎಂಥವನನ್ನು ನವೀನ ಮಾನವ ಎಂದು ಕರೆಯಬಹುದು? ಸ್ಥೂಲವಾಗಿ ಹೇಳುವುದಾದರೆ, ಹೊಸತಾಗಿ ಹುಟ್ಟಿದುದೆಲ್ಲ ಹೊಸತು; ಈಗಿರುವವರೆಲ್ಲ ಆಧುನಿಕರು; ಹೊಚ್ಚಹೊಸ ವೇಷಭೂಷಣಗಳಿಂದ ವಿರಾಜಿಸುವ ಸೊಗಸುಗಾರರೆಲ್ಲ ನವೀನ ಮಾನವರು. ಆದರೆ, ನಾವು ಈಗಾಗಲೆ ಈ ಉಪನ್ಯಾಸದ ಮಟ್ಟಿಗಾದರೂ, ಆ ಅರ್ಥವನ್ನು ನಿರಾಕರಿಸಿದ್ದೇವೆ. ನಿರಾಕರಿಸದಿದ್ದರೆ ನಟ ನವೀನರನ್ನೂ ನಿಜವಾದ ನವೀನರ ಗುಂಪಿಗೆ ಸೇರಿಸಬೇಕಾಗುತ್ತದೆ.

ಬಹಳ ಮಂದಿ ತರುಣರಲ್ಲಿ ಹುರುಡು ನಡೆಯುತ್ತಿದೆ, ನವೀನವಾಗುವುದರಲ್ಲಿ ನಾ ಮುಂದೆ ತಾ ಮುಂದೆ ಎಂದು. ಅವರ ಕಣ್ಣು ಸದಾ ಸೊಗಸುಗಾರಿಕೆಯ ಹೊಸ ಹೊಸ ಹವ್ಯಾಸಗಳ ಮೇಲಿರುತ್ತದೆ. ಯಾವ ಗುರುತಿನ ಸಿಗರೇಟು ಸೇದಬೇಕು? ಸಿನಿಮಾಕ್ಕೆ ಎಷ್ಟು ಸಾರಿ ಹೋಗಬೇಕು? ಹೋಟಲಿಗೆ ಎಷ್ಟು ದುಡ್ಡು ಹಾಕಬೇಕು? ಕ್ರಾಪು ಕತ್ತರಿಸುವುದರಲ್ಲಿ ಅತ್ಯಂತ ನವೀನ ರೀತಿಯೇನು? ಕೋಟನ್ನು ಎಷ್ಟು ಗಿಡ್ಡವಾಗಿ ಕತ್ತರಿಸಿದರೆ ಅಷ್ಟೂ ನವೀನವಾಗುತ್ತದೆ? ಪಾಯಿಜಾಮೆಗಳನ್ನು ಎಷ್ಟು ಹೆಚ್ಚು ಅಗಲ ಮಾಡಿ ಉದ್ದವಾಗಿ ನೆಲಗುಡಿಸುವಂತೆ ಹೊಲಿಸಿದರೆ ಸಮಾನಮಿತ್ರರಲ್ಲಿ ಮಾನವುಳಿಯುತ್ತದೆ? ಇತ್ಯಾದಿ. ಮತ್ತೆ ಕೆಲವರಲ್ಲಿ ನಗ್ನತೆ ಹೆಚ್ಚಿದಷ್ಟೂ ನವೀನತೆ ಹೆಚ್ಚುತ್ತದೆ ಎಂಬ ಭ್ರಾಂತಿ ಮೂಡುತ್ತಿದೆ! ವಿಜ್ಞಾನ ಕಂಡುಹಿಡಿದಿರುವ ಹೊಸ ಹೊಸ ಭೋಗೋಪಕರಣಗಳನ್ನೆಲ್ಲ ಒದಗಿಸಿಕೊಳ್ಳುವುದರಲ್ಲಿ ಕೆಲವರಿಗೆ ನವೀನತೆ ಕಾಣುತ್ತಿದೆ. ಜುಟ್ಟು ಬಿಟ್ಟು ಕಚ್ಚೆಪಂಚೆಯುಟ್ಟು ಶಾಲು ಹೊದೆದಿರುವವರನ್ನು ಯಾರಾದರೂ ನವೀನರು ಎನ್ನುತ್ತಾರೆಯೆ? ಹ್ಯಾಟು ಬೂಟು ಹಾಕಿಕೊಂಡಿರುವವರನ್ನು, ಅವನು ಸಂಪೂರ್ಣವಾಗಿ ಸಂಸ್ಕೃತಿ ಬಾಹಿರನಾಗಿದ್ದರೂ, ಅನಾಗರಿಕನಾಗಿದ್ದರೂ, ಯಾರಾದರೂ ನವೀನನಲ್ಲ ಎಂದು ಹೇಳುತ್ತಾರೆಯೆ? ಆದರೂ, ನೂತನವೇಷಗಳನ್ನು ಹಾಕಿಕೊಂಡ ಮಾತ್ರಕ್ಕೆ ನವೀನ ಮಾನವನಾಗುವುದಿಲ್ಲ. ಸೊನ್ನೆಗೆ ಚಿನ್ನದ ಕಟ್ಟು ಹಾಕಿದ ಮಾತ್ರಕ್ಕೆ ಅದರ ಬೆಲೆ ಏರುವುದಿಲ್ಲವೆಂದು ಗಣಿತ ಶಾಸ್ತ್ರಜ್ಞನಿಗೆ ಗೊತ್ತು. ಷೋಕಿಯ ಟೊಳ್ಳುಗಳು ನವೀನ ಮಾನವರಲ್ಲ.

ಗಿಡದ ಪ್ರಾಣಸರ್ವಸ್ವದ ಸಾರಶಿಶುವಾಗಿ ಹೊಮ್ಮುತ್ತದೆ ಹೂವು. ಅದು ಗಿಡದ ಮಹೋದ್ದೇಶದ ಮನೋಹರಮೂರ್ತಿ. ಅದನ್ನು ಗಿಡದ ಬಾಳಿನ ಸಾರಸರ್ವದ ಚಾರುನಿಧಿ ಎಂದೂ ಕರೆಯಬಹುದು. ಏಕೆಂದರೆ ಗಿಡ ಮಡಿದ ಮೇಲೆಯೂ ಅದರ ಪ್ರಕೃತಿಯನ್ನು ಅನಂತವಾಗಿ ಮುಂದೆ ಸಾಗಿಸುವ ಬೀಜ ಆ ಹೂವಿನಿಂದ ಉಂಟಾಗುತ್ತದೆ. ಆ ಬೀಜದ ಅಂತರಾಳದಲ್ಲಿ, ಜೀವದ ಪರಿಣಾಮಪಥದಲ್ಲಿ ಗಣನೆಯಿಲ್ಲದ ಗಿಡಗಳು ಕಲಿತ ವಿದ್ಯೆ ಮತ್ತು ಪಡೆದ ಅನುಭವಗಳೆಲ್ಲ, ನಮ್ಮ ಬುದ್ಧಿಗೆ ಅಗೋಚರವಾದ ರೀತಿಯಲ್ಲಿ, ಪ್ರಚ್ಛನ್ನ ಸ್ಮೃತಿರೂಪದಲ್ಲಿ ಅವ್ಯಕ್ತವಾಗಿರುತ್ತವೆ. ನಿಜವಾದ ನವೀನ ಮಾನವನು ಆ ಹೂವಿನಂತಿರಬೇಕು: ಮಾನವನ ಪ್ರಾಚೀನ ಸಂಸ್ಕೃತಿಯ ಸಾರಸರ್ವಸ್ವಕ್ಕೂ ಚಿರನಿಧಿಯಾಗಿ, ಆಗಾಮಿಕ ಸಂಸ್ಕೃತಿಗೆ ಬೀಜರೂಪನಾಗಿ, ಅದ್ಯತನ ಜೀವನದ ವಿದ್ಯೆ ಕಲೆ ಸಂಸ್ಕೃತಿಗಳಲ್ಲಿ ಸಿದ್ಧಿಹೊಂದಿ ಅದರ ತುಂಗಶಿಖರದಲ್ಲಿ ನಿಂತಿರಬೇಕು. ಎಂದರೆ ಕವಿ ಅಥವಾ ರಸಋಷಿಯಾಗಿರಬೇಕು.

ಪ್ರಕೃತಿ ನಮ್ಮ ಹುಟ್ಟಿನೊಡನೆ ಸಿದ್ಧವಾಗಿ ಬರುತ್ತದೆ. ಸಂಸ್ಕೃತಿ ನಮ್ಮ ದುಡಿಮೆಯಿಂದ ಮಾತ್ರ ಸಿದ್ಧವಾಗುತ್ತದೆ.

ಬರಿಯ ಪ್ರಕೃತಿಯ ದೃಷ್ಟಿಯಿಂದ ಅದ್ಯತನವಾದುದೆಲ್ಲ ಆಧುನಿಕ. ಎಂದರೆ ಪ್ರಾಚೀನವಲ್ಲದಿರುವುದು ಎಂಬರ್ಥದಲ್ಲಿಯೆ ಹೊರತು ಪ್ರಾಚೀನವಿಲ್ಲದಿರುವುದು ಎಂಬರ್ಥದಲ್ಲಲ್ಲ.

ಹೇಗೆಂದರೆ ಪ್ರಕೃತಿಯೂ ನವೀನ ಮಾನವನಂತೆ, ಮೊನೆಯಲ್ಲಿ ಕ್ರಾಂತಿಕಾರಿಣಿ ಯಾದರೂ ಬುಡದಲ್ಲಿ ಸಂಪ್ರದಾಯಶೀಲೆ. ಹಳೆಯದರ ಸಾರವನ್ನೆಲ್ಲ ಸಂಗ್ರಹಿಸುವುದರಲ್ಲಿ ಆಕೆ ಅದ್ವಿತೀಯೆ. ಹಿಂದೆ ಕಲಿತುದನ್ನು ಆಕೆ ಎಂದೂ ಮರೆಯುವುದಿಲ್ಲ. ಕೋಟ್ಯಂತರ ವರ್ಷಗಳ ಪೂರ್ವಾನುಭವಗಳ ಮುದ್ರೆಯನ್ನು ನಾಳೆ ಹುಟ್ಟುವ ಹಸುಳೆಯ ಮೇಲೆಯೂ ಸಂಗ್ರಹಿಸಿ ಒತ್ತುತ್ತಾಳೆ.

ತಾಯಿಯ ಗರ್ಭಕೋಶದಲ್ಲಿ ಶಿಶು, ಕೇವಲ ಒಂಬತ್ತು ತಿಂಗಳ ಅಂತರದಲ್ಲಿ, ಸಹಸ್ರಾರು ಶತಮಾನಗಳ ಕಾಲದಲ್ಲಿ ಪೃಥ್ವಿಯ ಮಹಾರಂಗದಲ್ಲಿ ಜೀವವು ಆಡಿದ ವಿಚಿತ್ರವಾದ ಭವ್ಯ ನಾಟಕವನ್ನೆಲ್ಲ ಪುನರಭಿನಯಿಸಿ, ಅದರಲ್ಲಿ ತೇರ್ಗಡೆ ಹೊಂದಿದ ಮೇಲೆಯೆ ಆಧುನಿಕವಾಗಿ ಹುಟ್ಟಲು ಅರ್ಹವಾಗುತ್ತದಂತೆ. ಪ್ರಕೃತಿಯೇ ಅಷ್ಟು ಕಠೋರ ಪರೀಕ್ಷಕಳಾಗಿದ್ದಾಳೆ ಎಂದ ಮೇಲೆ ಸಂಸ್ಕೃತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಿಜವಾಗಿಯೂ ನವೀನ ಮಾನವರಾಗುವುದು ಅಷ್ಟೇನು ಸುಲಭದ ಮಾತಲ್ಲ. ಏಕೆಂದರೆ, ಹಿಂದೆ ಸೂಚಿಸಿದಂತೆ ಸಂಸ್ಕೃತಿ ಬುದ್ಧಿಪೂರ್ವಕವಾದ ಪ್ರಯತ್ನ ಸಾಹಸ ಮಹದಾಕಾಂಕ್ಷೆ ಮತ್ತು ತ್ಯಾಗಪೂರ್ಣ ತಪಸ್ಸುಗಳಿಲ್ಲದೆ ಕೈಸೇರುವುದಿಲ್ಲ.

ಸಮುದ್ರದ ಮೇಲೆ ಈಜುವವರೆಲ್ಲರೂ ಸಮಾನರೇ, ನಗ್ನ ದಾರಿದ್ರ್ಯದಲ್ಲಿ! ಆದರೆ ಅವರಲ್ಲಿ ಕೆಲವು ಸಾಹಸಿಗಳು ಅದರ ತಳಕ್ಕೆ ಮುಳುಗಿ ಮೇಲೇಳುತ್ತಾರೆ. ಮುಳುಗುವಾಗ ದರಿದ್ರರಾಗಿದ್ದವರು ಶ್ರೀಮಂತರಾಗಿ ಮೇಲೇಳುತ್ತಾರೆ. ಏಕೆಂದರೆ ಆಗ ಅವರ ವಶದಲ್ಲಿ ಅನರ್ಘ್ಯವಾದ ಮುತ್ತು ರತ್ನಗಳಿರುತ್ತವೆ.

ಯಾವಾತನು ಸಂಸ್ಕೃತಿಯ ಸಮುದ್ರದ ಮೇಲೆಮೇಲೆಯೆ ತೇಲುತ್ತಾ, ಮುತ್ತುಗಳನ್ನು ನಟಿಸುವ ಅದರ ನೊರೆಯೊಡನೆ ಸರಸವಾಡುವುದರಲ್ಲಿಯೆ ತೃಪ್ತನಾಗದೆ, ಆಳಕ್ಕೆ ಮುಳುಗಿ, ಅವಶ್ಯಬಿದ್ದರೆ ಸಾಮಾನ್ಯ ಸುಖಗಳನ್ನೂ ತೊರೆದು, ಅಪಾಯಗಳನ್ನೂ ಎದುರಿಸಿ, ಪ್ರಾಚೀನ ಕವಿಗಳಿಂದಲೂ ಋಷಿಗಳಿಂದಲೂ ದಾರ್ಶನಿಕರಿಂದಲೂ ಬ್ರಹ್ಮದರ್ಶಿಗಳಿಂದಲೂ ಕಲಾಕೋವಿದರಿಂದಲೂ ಸಕಲ ವಿಬುಧವರೇಣ್ಯರಿಂದಲೂ ಅಮೂಲ್ಯ ರತ್ನವರಗಳನ್ನು ವರವಾಗಿ ಪಡೆದು ವಿವಿಧ ವರ್ಣಕಿರಣ ದೇದೀಪ್ಯನಾಗಿ ಮೂಡುತ್ತಾನೆಯೋ ಆತನೇ ನವೀನ ಮಾನವ ಎಂಬ ಹೆಸರಿಗೆ ಯೋಗ್ಯವಾಗುತ್ತಾನೆ; ಉಳಿದವರಲ್ಲ.

ಜೀವನವು ಸಜೀವವಾಗಿರಬೇಕಾದರೆ ಅದು ಕ್ಷಣಕ್ಷಣಕ್ಕೂ ಪುರಾತನದ ಸತ್ತ್ವಸಾರವನ್ನು ಸಂಗ್ರಹಿಸುತ್ತಾ ನೂತನಕ್ಕೆ ಹರಿಯುತ್ತಿರಬೇಕು. ತನ್ನನ್ನು ತಾನೇ ಮೀರುತ್ತಿರಬೇಕು. ತಮ್ಮ ಅಂತರಾತ್ಮದಲ್ಲಿ ನಿರಂತವೂ ಅಂತಹ ಯೋಗಸಾಧನೆ ಮಾಡುತ್ತಿರುವ ನವೀನ ಮಾನವರೆಲ್ಲರೂ ಕವಿಗಳಾಗಿದ್ದಾರೆ. ಸಾಹಿತಿಯಾದ ಕವಿಯಂತೂ ನವೀನ ಮಾನವನಾಗಿರಲೇಬೇಕು. ಹಾಗಿಲ್ಲದಿದ್ದರೆ ಮುಖಸ್ತುತಿಯನ್ನು ಛಂದಸ್ಸಿಗೆ ತಿರುಗಿಸುವ ಪದ್ಯರಚಕನಾಗುತ್ತಾನೆ.

ರಸಋಷಿಯಾದ ಕವಿ ಅರ್ವಾಚೀನದ ಶಿಖರೇಶ್ವರದಲ್ಲಿ ನಿಂತು, ತನ್ನೊಂದು ಕೈಯನ್ನು ಮಸುಗುಗತ್ತಲೆ ಕವಿದ ಪ್ರಾಚೀನದ ಗೋರಿಯೊಳಗೆ ನೀಡಿ ಹುಡುಕುತ್ತಿರುತ್ತಾನೆ; ಮತ್ತೊಂದು ಕೈಯನ್ನು ಅನಂತತೆಯ ಗಗನ ನೀಲಿಮೆ ತುಂಬಿರುವ ಭವಿಷ್ಯತ್ತಿನ ಅವ್ಯಕ್ತಗರ್ಭದ ಕಡೆಗೆ ಬಾಚಿ ತಡವುತ್ತಿರುತ್ತಾನೆ.

ಅಂತಹ ಕವಿಯಿಂದ ಕಾವ್ಯರಚನೆಯೇ ಆಗಬೇಕೆಂದಿಲ್ಲ; ರಾಷ್ಟ್ರ ನಿರ್ಮಾಣವೂ ಆಗಬಹುದು. ಅವನಿಂದ ಮತಸ್ಥಾಪನೆಯಾಗಬಹುದು; ಅಥವಾ ಅತಿ ಗಹನವಾದ ವಿಜ್ಞಾನ ಸಂಶೋಧನೆಯಾಗಬಹುದು. ಅಂಥ ಕವಿ ಸಾಕ್ರೆಟೀಸ್ ಆಗುತ್ತಾನೆ; ತಪ್ಪಿದರೆ, ಬುದ್ಧದೇವನಾಗುತ್ತಾನೆ, ಅಶೋಕ ಚಕ್ರವರ್ತಿಯಾಗುತ್ತಾನೆ; ಅಥವಾ ಪಂಪನಾಗುತ್ತಾನೆ. ಅವನು ಐನ್‌ಸ್ಟೀನ್ ಬೇಕಾದರೂ ಆಗಬಹುದು; ಅಥವಾ ಯೇಸುಕ್ರಿಸ್ತನಾದರೂ ಆಗಬಹುದು. ಆ ಸೃಷ್ಟಿಶಕ್ತಿಯಿಂದಲೇ ತ್ಯಾಗರಾಜರಂತಹ ಗಾನಯೋಗಿಗಳೂ ಮಹಾತ್ಮಾಗಾಂಧಿಯವರಂತಹ ಕರ್ಮಯೋಗಿಗಳೂ ಸಂಭವಿಸುತ್ತಾರೆ. ಆ ಪ್ರತಿಭೆಯ ಪ್ರಕಾಶನ ವಿಧಾನಕ್ಕೆ ಇತಿಮಿತಿಗಳಿಲ್ಲ.

ಒಬ್ಬೊಬ್ಬ ವ್ಯಕ್ತಿಗೂ ಮನಸ್ಸಿರುವಂತೆ ಒಂದೊಂದು ಸಮೂಹಕ್ಕೂ ಮನಸ್ಸಿದೆ. ಮೊದಲನೆಯದು ವ್ಯಷ್ಟಿಮನಸ್ಸು; ಎರಡನೆಯದು ಸಮಷ್ಟಿಮನಸ್ಸು ದೇಶದೇಶಕ್ಕೂ ಬದಲಾಯಿಸುವಂತೆ ಕಾಲಕಾಲಕ್ಕೂ ಬದಲಾಯಿಸುತ್ತದೆ. ಅದನ್ನು ಯುಗಶಕ್ತಿ, ಯುಗಮನಸ್ಸು, ಯುಗದೇವತೆ ಎಂದು ನಾನಾವಿಧವಾಗಿ ಕರೆಯುತ್ತಾರೆ. ಅದನ್ನು ಪರ್ವತದಂತೆ ಭಾವಿಸಿದರೆ ಕವಿ ಅದರ ಶಿಖರವಾಗುತ್ತಾನೆ. ಅಥವಾ ಅದನ್ನು ಈಟಿ ಎಂದು ಚಿತ್ರಿಸಿದರೆ ಕವಿ ಅದರ ಮೊನೆಯಾಗುತ್ತಾನೆ. ಎಂದರೆ, ಕವಿಯ ಮನಸ್ಸು ಜನಮನಸ್ಸಿಗೆ ನಿಧಿಯೂ ಹೌದು ಪ್ರತಿನಿಧಿಯೂ ಹೌದು.

ಹಾಗೆಂದ ಮಾತ್ರಕ್ಕೆ ಕವಿ ಜನರು ಆಲೋಚಿಸುವುದನ್ನೆ ತನ್ನ ಕೃತಿಗಳಲ್ಲಿ ಪ್ರತಿಬಿಂಬಿಸುತ್ತಾನೆ ಎಂದಾಗಲಿ, ಜನರು ಕವಿ ಆಲೋಚಿಸುವುದನ್ನೆಲ್ಲ ಆಲೋಚಿಸುತ್ತಾರೆ ಎಂದಾಗಲಿ ಊಹಿಸಬಾರದು.

ಈಟಿಯೆಲ್ಲವೂ ಅದರ ಮೊನೆಯಲ್ಲ; ಮೊನೆಯಿಲ್ಲದಿದ್ದರೆ ಈಟಿಯಾಗುವುದೂ ಇಲ್ಲ. ಮೊನೆ ಮಾತ್ರಕ್ಕೆ ಗುರಿ ಭೇದಿಸುವ ಶಕ್ತಿ ಬರುವದಿಲ್ಲ. ಅದಕ್ಕೆ ಈಟಿಯ ಗಾತ್ರದ ಸಹಾಯ ಬೇಕು. ಹಾಗೆಯೆ ಮೊನೆಯಿಲ್ಲದಿದ್ದರೆ ಈಟಿಯ ಗಾತ್ರದಿಂದೇನು ಪ್ರಯೋಜನ?

ಈಟಿಯಲ್ಲಿ ಮೊನೆಗೆ ಮುಖ್ಯ ಪಾತ್ರ ಸಿಕ್ಕಿರುವುದು ಅದರ ಪ್ರಧಾನ ಗಾತ್ರದಿಂದಲ್ಲ, ಅದರ ಕರ್ತವ್ಯ ಮಹಿಮೆಯಿಂದ.

ಈಟಿ ಚುಚ್ಚಿ ಮುಂದೆ ನುಗ್ಗುತ್ತಿರುವಾಗ ಅದರ ಮೂಲ ಅದರ ಮೊನೆಯಿಂದ ದೂರವಿರುತ್ತದೆ. ಹಾಗೆಯೆ, ಕವಿಮನಸ್ಸಿನ ಆಲೋಚನೆಯ ಮೊನೆ ಭವಿಷ್ಯತ್ತನ್ನು ಕ್ರಾಂತಿಕಾರಕವಾಗಿ ಭೇದಿಸಿಕೊಂಡು ಮುಂದುವರಿಯುತ್ತಿರುವಾಗ ಸಾಮಾನ್ಯ ಜನಮನಸ್ಸು ಆ ಸಾಹಸದಿಂದ ಬಹು ದೂರವಾಗಿರುತ್ತದೆ. ಆದರೂ ತಾನರಿಯದಿದ್ದರೂ ಜನಮನಸ್ಸು ಕವಿಮನಸ್ಸಿಗೆ ಬೆಂಬಲವಾಗುತ್ತದೆ, ಈಟಿಯ ಮೈ ಅದರ ಮೊನೆಗೆ ಬೆಂಬಲವಾಗಿರುವಂತೆ. ಕವಿಮನಸ್ಸೂ ಜನಮನಸ್ಸಿನ ಪ್ರಗತಿಗೆ ದಾರಿಮಾಡಿಕೊಡುತ್ತದೆ, ಈಟಿಯ ಮೊನೆಯಂತೆ.

ಆದ್ದರಿಂದ ಕ್ರಾಂತದರ್ಶಿಯಾದ ಕವಿಮನಸ್ಸಿನ ಆಕಾಂಕ್ಷೆ, ಆಲೋಚನೆ, ಅನುಭವ ಇವುಗಳು ಸಾಮಾನ್ಯರ ಮಂದಗಾಮಿಯಾದ ದೃಷ್ಟಿಗೆ ಅತಿ ಪರಕೀಯವಾಗಿ ಕಾಣುತ್ತವೆ. ಒಮ್ಮೊಮ್ಮೆ ತಮ್ಮ ಮನಸ್ಸಿಗೂ ಕವಿಮನಸ್ಸಿಗೂ ಏನೇನೂ ಸಂಬಂಧವಿರದಂತೆಯೂ ತೋರಬಹುದು. ಜನತೆ ಕವಿಕೃತಿಯನ್ನು ವಿದೇಶೀಯ ವಾದುದೆಂದೂ ವಿನೂತನವಾದುದೆಂದೂ ಅಲ್ಲಗಳೆಯಲೂ ಹಿಂಜರಿಯುವುದಿಲ್ಲ. ಬಹು ಜನರು ಹಾಗೆ ಆಲೋಚಿಸುವುದಿಲ್ಲ, ಇವನೊಬ್ಬನು ಆಲೋಚಿಸಿದರೇನಂತೆ ಎಂದು ತಿರಸ್ಕರಿಸಬಹುದು. ವಿರುದ್ಧವಾಗಿ ಬೊಬ್ಬೆಯೆಬ್ಬಿಸಲೂಬಹುದು.

ಅಲ್ಪಸಂಖ್ಯೆಯ ವಿವೇಕದ ಕಿರುದನಿಯನ್ನು ಬಹುಸಂಖ್ಯೆ ತನ್ನ ಬೊಬ್ಬೆಯಬ್ಬರದಿಂದ ಮುಳುಗಿಸಲು ಪ್ರಯತ್ನಿಸಿದರೆ, ಈಟಿಯನ್ನು ಹಿಂದೆಮುಂದಾಗಿ ಹಿಡಿದು ವೈರಿಯನ್ನಿರಿಯುವುದಕ್ಕೆ ರಭಸದಿಂದ ನುಗ್ಗುವ ಗಾಂಪನಿಗಾಗುವಂತೆ ಸರ್ವನಾಶವಾಗುತ್ತದೆ. ಅವನು ತನ್ನ ರಭಸದಿಂದಲೇ ತಾನು ಹತನಾಗುತ್ತಾನೆ. ಬಹುಜನರು ಹೇಳಿದುದೇ ಬಹಳ ಸತ್ಯವಾಗುವುದಿಲ್ಲ. ಗಾತ್ರಪ್ರಾಧಾನ್ಯವೇ ಪಾತ್ರಪ್ರಾಧಾನ್ಯವಲ್ಲ. ಅಂಬಾರಿಯ ಮೇಲೆ ಕುಳಿತಿರುವ ಅರಸನು ಅದನ್ನು ಹೊತ್ತಿರುವ ಆನೆಗಿಂತಲೂ ಬಹಳ ಪಾಲು ಸಣ್ಣವಸ್ತು. ಆದರೂ ತಿಳಿದವರು ಯಾರೂ ಆನೆಗೆ ಕೈಮುಗಿಯುವುದಿಲ್ಲ.

ಶ್ರೇಷ್ಠವಾದುದೆಲ್ಲ ಸ್ವಲ್ಪವಾಗಿರುತ್ತದೆ. ಬಹುಗಾತ್ರದ ಅಥವಾ ಸ್ಥೂಲದ ವಿಜಯವನ್ನು ಬಯಸುವವರು ಗುಂಪು ಹೆಚ್ಚಾಗಿ ನೆರೆದೆಡೆಗೆ ನುಗ್ಗುತ್ತಾರೆ. ಸಂಸ್ಕೃತಿಯ ಅಮೂಲ್ಯ ಸೂಕ್ಷ್ಮದ ಗೆಲುವಿಗೆ ನೆರವಾಗಲು ಎಳಸುವವರು, ಜನರು ತಮ್ಮ ದಾರಿಗೆ ಬರುವ ವರೆಗೂ ಅವರನ್ನು ಕೂಗಿ ಕರೆಯುತ್ತಾ, ಪ್ರತ್ಯೇಕವಾಗಿ ಮುಂದುವರಿಯಬೇಕಾಗುತ್ತದೆ.

ನವೀನ ಮಾನವನೆಂದರೆ ವರ್ತಮಾನಕಾಲದಲ್ಲಿ ಜೀವಿಸುತ್ತಿರುವಾತನು ಎಂದು ಮಾತ್ರ ಅರ್ಥವಲ್ಲ. ಯಾರ ಪ್ರಜ್ಞೆಯ ಎತ್ತರ, ಬಿತ್ತರ ಮತ್ತು ಆಳಗಳು ಪರಮಾವಧಿ ಮುಟ್ಟಿರುತ್ತವೆಯೋ; ಯಾರ ಅಪ್ರಜ್ಞೆ ಅತ್ಯಂತ ಕಡಿಮೆಯಾಗಿರುತ್ತದೆಯೋ; ಯಾರು ಸಮಷ್ಟಿ ಮನಸ್ಸಿನ ನಿಧಿಯೂ ಪ್ರತಿನಿಧಿಯೂ ಆಗಿ, ಪ್ರಾಚೀನತೆಯ ಸಾರಸತ್ತ್ವವನ್ನೂ ಹೀರಿಕೊಂಡು, ಅರ್ವಾಚೀನತೆಯ ಪ್ರಾಣರಸವನ್ನು ನಿರಂತರವೂ ಸಂಗ್ರಹಿಸಿ ಬೆಳೆಯುತ್ತಾ, ಭೂತವರ್ತಮಾನಕಾಲಗಳ ತುದಿಯಂಚಿನಲ್ಲಿ ನಿಂತು ಬರಲಿರುವ ಕಾಲದ ಗಭೀರ ಪಾತಾಳದ ಕಡೆಗೆ ದೃಷ್ಟಿಯಿಡುತ್ತಾನೆಯೋ ಅಂಥವನೇ ನವೀನ ಮಾನವ ಪಟ್ಟಕ್ಕೆ ಯೋಗ್ಯನಾಗುತ್ತಾನೆ ಎಂದು ನಿರ್ಣಯಿಸಿದ್ದೇವೆ. ಅಂಥವರು ಬಹಳಮಂದಿ ಇರಲಾರರು. ಆದ್ದರಿಂದಲೆ, ಜನಸಂದಣಿಯ ಮಧ್ಯೆ ಇದ್ದರೂ, ನವೀನ ಮಾನವನು ಏಕಾಂತಜೀವಿ: ಬೆಟ್ಟಗಳ ನಡುವೆಯಿದ್ದರೂ ಮೇಘಚುಂಬಿಯಾದ ಶಿಖರತಪಸ್ವಿ ನೀಲಶೂನ್ಯದ ವಿಜನಸೀಮೆಯಲ್ಲಿ ಏಕಾಂಗಿಯಾಗಿರುವಂತೆ.

ಹೊಸದೃಷ್ಟಿ ಎಂಬುದು ಮೇಲೆ ವರ್ಣಿಸಿದ ನವೀನ ಮಾನವನ ‘ದರ್ಶನ’ ದೃಷ್ಟಿಯಂತೆ ಸೃಷ್ಟಿಯಾಗುವುದರಿಂದ ಆ ‘ದರ್ಶನ’ದಿಂದ ಪ್ರೇರಿತವಾಗಿ, ಪೋಷಿತವಾಗಿ ಹೊಸ ಸಾಹಿತ್ಯ ಹೊಮ್ಮುತ್ತದೆ.

ಕವಿ ಜನಮನಸ್ಸಿನ ನಿಧಿಯಾಗಿ, ಪ್ರತಿನಿಧಿಯಾಗಿ, ಪಾರದರ್ಶಿಯಾಗಿರುವುದರಿಂದ ಕವಿಸೃಷ್ಟಿಯಾದ ಸಾಹಿತ್ಯವೂ ಜನಜೀವನದ ನಿಧಿಯೂ ಪ್ರತಿನಿಧಿಯೂ ಆಗುವುದಲ್ಲದೆ ಭವಿಷ್ಯತ್ತಿನ ಮಾರ್ಗದರ್ಶಿಯೂ ಆಗುತ್ತದೆ. ಲಕ್ಷೋಪಲಕ್ಷ ಹೃದಯಗಳ ಆಶೆಯ ಭಯದ ಆಕಾಂಕ್ಷೆಯ ಆನಂದದ ಕಷ್ಟ ಸಂಕಟದ ಸಾಹಸ ಪ್ರಯತ್ನದ ಸೋಲುಗೆಲುವಿನ ಮೂಕಮೌನಕ್ಕೆ ಕವಿ ವಾಣಿಯಾಗುತ್ತಾನೆ. ಆ ವಾಣಿಯನ್ನು ಆಲಿಸಿದ ಜನಜೀವನದಲ್ಲಿ ಅದಕ್ಕೆ ಪ್ರತಿಕ್ರಿಯೆಯಾಗಿ ಮತ್ತೆ ಹೊಸ ಹೊಸ ಆಶೆ ಭಯ ಆಕಾಂಕ್ಷೆ ಸಾಹಸ ಪ್ರಯತ್ನಗಳು ಮೈದೋರುತ್ತವೆ. ಏಕೆಂದರೆ, ಸಾಹಿತ್ಯಕ್ಕೆ ಜನಜೀವನ ಪ್ರೇರಕಶಕ್ತಿಯಾಗುವಂತೆ ಜನಜೀವನಕ್ಕೆ ಸಾಹಿತ್ಯ ಪ್ರಚೋದಕಶಕ್ತಿಯಾಗುತ್ತದೆ.

ಸಾಹಿತ್ಯದ ಕ್ಷೇತ್ರ ಪರಮ ಭೂಮವಾಗಿದೆ. ಏಕೆಂದರೆ ವಿಶ್ವಜೀವನವೆಲ್ಲ ಅದರ ಜೀವನಕ್ಕೆ ತುತ್ತು. ವಿಜ್ಞಾನ, ಅಧ್ಯಾತ್ಮ, ಮತ, ರಾಜಕೀಯ ಇತ್ಯಾದಿ ಪ್ರಪಂಚಗಳೆಲ್ಲವೂ ಅದಕ್ಕೆ ಸೊತ್ತು. ಆದ್ದರಿಂದ ಉತ್ತಮ ಸಾಹಿತಿಗೆ ಆ ಎಲ್ಲ ಪ್ರಪಂಚಗಳ ಅರಿವೂ ತಕ್ಕಮಟ್ಟಿಗೆ ಚೆನ್ನಾಗಿರಬೇಕು. ಪ್ರತಿಯೊಂದು ಶಾಸ್ತ್ರದಲ್ಲಿಯೂ ವಿವರಜ್ಞಾನವಿರುವ ಪ್ರವೀಣನಾಗಬೇಕೆಂದಲ್ಲ; ಅದರ ಸಾರವನ್ನು ಹೀರಿಕೊಂಡಿದ್ದರೆ ಸಾಕು. ಹಾಗಿರದಿದ್ದರೆ ಅವನು ನವೀನ ಮಾನವನಾಗುವುದಿಲ್ಲ. ಅವನಿಗೆ ಹೊಸ ದೃಷ್ಟಿ ಬರುವುದಿಲ್ಲ. ಅವನಿಂದ ನಿಜವಾದ ಹೊಸ ಸಾಹಿತ್ಯ ಸೃಷ್ಟಿಯಾಗುವುದಿಲ್ಲ.

ಈ ವಿಮರ್ಶೆ ಸೃಷ್ಟಿಕಾರಿಯಾದ ಕವಿಗೆ ಮಾತ್ರ ಅನ್ವಯಿಸುವುದಿಲ್ಲ. ಕಲಾಸೃಷ್ಟಿಯನ್ನು ಸವಿಯಲೆಳಸುವ ಸಹೃದಯರಿಗೂ ಮುಟ್ಟುತ್ತದೆ. ಏಕೆಂದರೆ, ಕಾವ್ಯ ರಚನೆಯಂತೆಯೆ ನಿಜವಾದ ಕಾವ್ಯರಸಾಸ್ವಾದನೆಯೂ ಒಂದು ಸೃಷ್ಟಿಕಾರ್ಯ.

ಆಧುನಿಕ ಮಾನವನ ನವೀನದೃಷ್ಟಿಯ ರಚನೆಯಲ್ಲಿ ವಿಜ್ಞಾನದ ಪ್ರಭಾವ ಬಹು ಮುಖ್ಯವಾದ ಭಾಗ ವಹಿಸಿಕೊಂಡಿದೆ. ಭೌತಶಾಸ್ತ್ರ, ಖಗೋಲಶಾಸ್ತ್ರ, ಜೀವಶಾಸ್ತ್ರ, ಮನಃಶಾಸ್ತ್ರ ಮೊದಲಾದ ಶಾಸ್ತ್ರಗಳೂ; ಪರಿಣಾಮವಾದ ಅಥವಾ ವಿಕಾಸವಾದ, ಪ್ರಜಾಸ್ವಾತಂತ್ರ್ಯವಾದ ಮತ್ತು ಸಮತಾವಾದ ಮೊದಲಾದ ವಾದಗಳೂ; ವೈಜ್ಞಾನಿಕ ಸಂಶೋಧನೆಯ ಉಪಲಭ್ಯಗಳಾಗಿ ದೊರೆಕೊಂಡಿರುವ ಸೌಕರ್ಯಗಳೂ ಮನುಷ್ಯನ ದೃಷ್ಟಿಯನ್ನು ಎಷ್ಟರಮಟ್ಟಿಗೆ ಬದಲಾಯಿಸಿವೆ ಎಂದರೆ, ಒಂದು ಶತಮಾನದ ಹಿಂದಿನ ವ್ಯಕ್ತಿಗಳಲ್ಲಿ ಯಾರಾದರೂ ಈಗ ಭೂಮಿಗೆ ಇಳಿದುಬಂದರೆ, ಅದನ್ನೂ ಅದರಲ್ಲಿ ವಾಸಿಸುವವರನ್ನೂ ಗುರುತಿಸಲಾರದೆ ನಿಬ್ಬೆರಗಾಗಬಹುದೆಂದು ತೋರುತ್ತದೆ!

ವಿಜ್ಞಾನದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅನೇಕ ಸವಿಯಾದ ಕುರುಡುನಂಬುಗೆಗಳೆಲ್ಲ ಬಿರಿದುಹೋಗಿವೆ. ಶ್ರದ್ಧೆಗಿಂತಲೂ ಬುದ್ಧಿಗೆ ಪ್ರಧಾನ್ಯಸ್ಥಾನ ದೊರಕಿದೆ. ಶ್ರುತಿಪ್ರಮಾಣಕ್ಕಿಂತಲೂ ಮತಿಯ ಸಂಶೋಧನೆಗೆ ಹೆಚ್ಚು ಮನ್ನಣೆ ಸಿಕ್ಕಿದೆ. ದೇವ ದೇವತೆಗಳೂ ಸ್ವರ್ಗ ನರಕಗಳೂ ಅಷ್ಟದಿಗ್ಗಜಗಳೂ ಮಾಯವಾಗಿದ್ದಾರೆ. ಅವಕ್ಕೆ ಬದಲಾಗಿ ಪ್ರಕೃತಿ ನಿಯಮಗಳು ಪಟ್ಟಕ್ಕೇರಿವೆ. ಪೂಜೆ ಆರಾಧನೆ ಪ್ರಾರ್ಥನೆಗಳಿಗೆ ಬದಲಾಗಿ ಮನುಷ್ಯಪೌರುಷದಲ್ಲಿ ನೆಚ್ಚು ಹೆಚ್ಚಿದೆ. ಮತಿಯ ಒರೆಗಲ್ಲಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದದೆ ಯಾವ ನಂಬುಗೆಯೂ ಬದುಕುವಂತಿಲ್ಲ.

ಭೂಮಿ ಕಿರಿದಾದರೂ ವಿಶ್ವವು ಭಯಂಕರ ವಿಸ್ತೃತವಾಗಿದೆ. ದೇವತೆಗಳು ಅಳಿದರೂ ಪ್ರಕೃತಿನಿಯಮಗಳು ಅವರಿಗಿಂತಲೂ ಮಿಗಿಲು ಅದ್ಭುತವಾಗಿವೆ. ಈಶ್ವರಸೃಷ್ಟಿವಾದಕ್ಕಿಂತಲೂ ಪರಿಣಾಮವಾದ ಮತ್ತಷ್ಟು ಮನೋಹರವಾಗಿದೆ; ಅದಕ್ಕಿಂತಲೂ ಹೆಚ್ಚು ವಿಸ್ಮಯಕಾರಿಯಾಗಿದೆ. ಯೋಗಸಿದ್ಧಿಗಳಲ್ಲಿ ನಂಬುಗೆ ಕಳಚಿ ಬಿದ್ದಿದ್ದರೂ ಆಶುವಾರ್ತಾಯಂತ್ರವಾದ ರೇಡಿಯೋ ಮುಂದೆ ಕುಳಿತು ಅಮಿತ ಸಂಖ್ಯೆ ಚದರಮೈಲಿಗಳ ವಿಸ್ತೀರ್ಣದ ಭೂಮಿಯನ್ನೆಲ್ಲ ಒಂದಂಗುಲ ಜಾಗದೊಳಗೆ ಆಲಿಸುತ್ತಿರುವಾಗ ಉಂಟಾಗುವ ಆಶ್ಚರ್ಯವು ಯೋಗಸಿದ್ಧಿಗಳನ್ನು ಸಂಧಿಸಿದಾಗ ಮೊಳೆದೋರಬಹುದಾದ ಪೂಜ್ಯಭಾವಕ್ಕೇನೂ ಕೀಳಾಗಿಲ್ಲ. ಅಂತೂ ಕವಿತಾ ದೃಷ್ಟಿಯಿಂದ ನೋಡಿದರೆ ವಿಜ್ಞಾನವು, ವಿಶ್ವದ ಮತ್ತು ಅದರಲ್ಲಿ ನಡೆಯುವ ವ್ಯಾಪಾರಗಳ ವಿಷಯದಲ್ಲಿ, ನಮಗೆ ಮೊದಲಿಗಿಂತಲೂ ಹೆಚ್ಚು ಕೌತುಕವನ್ನೂ ಗೌರವವನ್ನೂ ಉಂಟುಮಾಡುತ್ತಿದೆ. ಶ್ರೇಷ್ಠಮತಿಯಾದವನಿಗೆ ವಿಜ್ಞಾನವು ಬಿಚ್ಚಿ ತೋರಿಸುತ್ತಿರುವ ಅದ್ಭುತವಾದ ವಿಶ್ವವು ಅತ್ಯಂತ ಕಾವ್ಯಪೂರ್ಣವಾಗಿದೆ; ರಸಮಯವಾಗಿದೆ. ವಿಜ್ಞಾನ ವಿದ್ಯೆಯಿಂದ ರಸಪ್ರಪಂಚದಲ್ಲಿ ಏನಾದರೂ ಹಾಳಾಗಿದ್ದರೆ ಅದು ಉಳಿಯಲು ಅರ್ಹವಾಗಿರಲಿಲ್ಲವೆಂದೇ ಹೇಳಬೇಕಾಗುತ್ತದೆ.

ಯಾವಾಗ ವಿಜ್ಞಾನದ ನಿರ್ದಾಕ್ಷಿಣ್ಯವಾದ ಸಂಶೋಧಕ ಕಾಂತಿ ಮತದ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿತೋ ಆಗ ಅದುವರೆಗೂ ಪವಿತ್ರವಾಗಿದ್ದ ಗುಟ್ಟುಗಳೆಲ್ಲ ರಟ್ಟಾದುವು. ಕಾರಣವೇನೆಂದರೆ ಅವು ಗುಟ್ಟಾಗಿದ್ದುದರಿಂದಲ್ಲದೆ ಬೇರೆ ಯಾವ ಸತ್ಕಾರಣದಿಂದಲೂ ಪವಿತ್ರತೆಗೆ ಯೋಗ್ಯವಾಗಿರಲಿಲ್ಲ. ಮತದ ಠಕ್ಕುಗಳೆಲ್ಲ ಬಯಲಿಗೆ ಬಂದೊಡನೆ ಪುರೋಹಿತರ ಮೇಲೆ ಉಂಟಾದ ಆಕ್ರೋಶವು ದೇವರ ಮೇಲಣ ಅಪನಂಬಿಕೆಗೂ ಕಾರಣವಾಯಿತು. ಪರಲೋಕದಲ್ಲಿ ಸಂದೇಹ ಹೆಚ್ಚಿದಂತೆ ಇಹಲೋಕದ ಬಾಳಿನಲ್ಲಿ ಕೆಚ್ಚೂ ಕೆಚ್ಚಿನೊಡನೆ ಮಾನಸಿಕ ತುಮುಲವೂ ಹುಟ್ಟಿ, ಅದರ ಮುದ್ರೆ ಸಾಹಿತ್ಯದ ಮೇಲೆಯೂ ಬಿದ್ದಿತು. ಆಂಗ್ಲೇಯರು ನಮ್ಮಲ್ಲಿಗೆ ಬಂದ ಮೇಲೆ ಅವರ ಆ ಸಾಹಿತ್ಯ ಮತ್ತು ನಾಗರಿಕತೆಯ ಸಂಪರ್ಕದಿಂದ ನಮ್ಮ ಸಂಸ್ಕೃತಿಯಲ್ಲಿಯೂ ಆ ಹೋರಾಟ ತಲೆಹಾಕಿತು.

ನಮ್ಮ ಪ್ರಾಚೀನ ತತ್ತ್ವಶಾಸ್ತ್ರಗಳಿಗೆ ವಿಚಾರದೃಷ್ಟಿಯಾಗಲಿ ನಾಸ್ತಿಕತೆಯಾಗಲಿ ಚಾರ್ವಾಕತೆಯಾಗಲಿ ಹೊಸತಲ್ಲ. ಆದರೆ ಸಾಹಿತ್ಯಪ್ರಪಂಚದಲ್ಲಿ ಕಥೆ ಬೇರೆಯಾಗಿತ್ತು. ಅಲ್ಲಿ ವಿಶೇಷವಾಗಿ ಧಾರ್ಮಿಕಭಾವನೆ ತುಂಬಿರುವುದನ್ನು ಕಾಣುತ್ತೇವೆ. ನಮ್ಮ ರಾಮಾಯಣ ಮಹಾಭಾರತಗಳು ಬರಿಯ ಸಾಹಿತ್ಯಗ್ರಂಥಗಳಲ್ಲ; ಪವಿತ್ರ ಪುರಾಣಗಳೂ ಹೌದು. ಅವುಗಳನ್ನು ಓದಿದರೆ ಕಾವ್ಯಾನಂದದ ಜೊತೆಗೆ ಪುಣ್ಯಲಾಭವೂ ಪಾಪನಾಶವೂ ಆಗುತ್ತವೆ ಎಂದು ನಂಬುಗೆಯಿದೆ. ಶ್ರೀರಾಮ ಶ್ರೀಕೃಷ್ಣ ಮೊದಲಾದ ವ್ಯಕ್ತಿಗಳು ಅಕಿಲೀಸ್, ಯೂಲೀಸಿಸ್ ಮೊದಲಾದವರಂತೆ ಪ್ರಾಕೃತರಲ್ಲ; ಅವತಾರಪುರುಷರು. ಅಂತಹ ಮನೋಧರ್ಮದ ಸಂಪ್ರದಾಯದಲ್ಲಿ ಬೆಳೆದ ದೇಶಭಾಷೆಗಳ ಸಾಹಿತ್ಯವೂ ಅದೇ ಧಾರ್ಮಿಕಛಾಯೆಯಿಂದ ಮುದ್ರಿತವಾಗಿದೆ. ನಮ್ಮ ಕವಿಗಳು ಇಹಲೋಕದ ಕೀರ್ತಿ ಸಂಪತ್ತುಗಳಿಗಾಗಿ ಲೌಕಿಕ ಕಾವ್ಯಗಳನ್ನು ಬರೆದಿದ್ದರೂ. ಪರಲೋಕದ ಶ್ರೇಯಸ್ಸಿಗಾಗಿ, ತಪ್ಪದೆ, ಪವಿತ್ರ ಪುರಾಣಗಳನ್ನೂ ಬರೆದಿದ್ದಾರೆ.

ಆದರೆ ಹೊಸ ಸಾಹಿತ್ಯದಲ್ಲಿ ಹಳೆಯ ಸಾಹಿತ್ಯದಲ್ಲಿದ್ದಂತೆ ಮತದೃಷ್ಟಿ ಪ್ರಧಾನವಾಗಿಲ್ಲ. ಹೊಸ ಸಾಹಿತ್ಯವು ಇತರ ಜೀವನ ವಿಷಯಗಳನ್ನು ಕಲಾಸಾಮಗ್ರಿಯನ್ನಾಗಿ ಸ್ವೀಕರಿಸುವಂತೆ ಮತವನ್ನೂ ಸ್ವೀಕರಿಸುತ್ತದೆ. ಮತದೃಷ್ಟಿ ಇರುವೆಡೆಯಲ್ಲಿಯೂ ಅದು ಹಿಂದಿನಂತೆ ಪ್ರಚಾರಶೀಲವಾಗಿರದೆ ವಿಚಾರಾತ್ಮಕವಾಗಿರುತ್ತದೆ. ವಿಶಾಲ ಭಾವನೆಯೂ ಸಮನ್ವಯಭಾವವೂ ಹೆಚ್ಚು ಹೆಚ್ಚು ವ್ಯಕ್ತವಾಗುತ್ತಿವೆ. ಯಾವುದಾದರೂ ಒಂದು ಪಂಥದ ಅಥವಾ ಒಂದು ಮತದ ಸಂಪಸ್ರದಾಯಸತ್ಯಗಳೇ ಪರಮಸತ್ಯಗಳೆಂಬ ಶಠವಾದ ಮರೆಯಾಗುತ್ತಿದೆ. ಮತಗಳೆಲ್ಲವೂ ಭಿನ್ನ ಭಿನ್ನ ಮನೋಧರ್ಮದ ಸಾಧಕರನ್ನು ದೇವರೆಡೆಗೆ ಒಯ್ಯುವ ಬೇರೆ ಬೇರೆಯ ಪಥಗಳೆಂಬ ಉದಾರಬುದ್ಧಿ ಸಾಮಾನ್ಯವಾಗುತ್ತಿದೆ.

ದೇವರು, ಆತ್ಮ, ಪರಲೋಕ ಈ ವಿಚಾರಗಳಲ್ಲಿ ಕವಿ ತನ್ನ ಸ್ವಂತ ಅನುಭವಗಳಿಗೆ ಹೆಚ್ಚು ಗಮನ ಕೊಡುತ್ತಾನೆ. ದೇವರ, ಆತ್ಮದ ಮತ್ತು ಅಮೃತತ್ವದ ನಿಜಾಂಶವನ್ನು ವಾದದಿಂದಾಗಲಿ ಶ್ರುತಿಪ್ರಾಮಾಣ್ಯದಿಂದಾಗಲಿ ಸಮರ್ಥಿಸಲು ಹೋಗದೆ ಅವುಗಳನ್ನು ಕುರಿತು ತನಗುಂಟಾಗುವ ಅನುಭವಗಳನ್ನು ಭಾವಗೀತೆಗಳನ್ನಾಗಿ ಹಾಡುತ್ತಾನೆ. ಆ ಗೀತೆಗಳಲ್ಲಿ ಯಾವಾಗಲೂ ಶ್ರದ್ಧೆಯೇ ಇರುತ್ತದೆಯೆಂದು ಹೇಳಲಾಗುವುದಿಲ್ಲ. ಸಂದೇಹವೂ ಸುಳಿಯಬಹುದು. ಕೆಲವು ಸಾರಿ ಅಶ್ರದ್ಧೆಯೂ ತೋರಬಹುದು. ಮತ್ತೆ ಕೆಲವು ಸಾರಿ ‘ದೇವರುಗೀವರುಗಳನ್ನು ಕಟ್ಟಿಕೊಂಡು ಕೆಟ್ಟಿದ್ದೇವೆ: ಇನ್ನು ಆ ಮೂಢ ಭ್ರಾಂತಿಗಳನ್ನೆಲ್ಲ ಹೊರತಳ್ಳಿ, ಮನುಷ್ಯ ಪೌರುಷವನ್ನೆ ನೆಚ್ಚಿ, ಉದ್ಧಾರವಾಗೋಣ’ ಎಂಬ ರಭಸಧ್ವನಿಯೂ ಹೊಮ್ಮಬಹುದು. ಒಟ್ಟು ಒಂದು ಮಾತಿನಲ್ಲಿ ಹೇಳುವುದಾದರೆ, ಪರಿಣಾಮವಾದ ಮತ್ತು ಮನಶ್ಯಾಸ್ತ್ರಗಳ ಪ್ರಭಾವ ಹೊಸ ಸಾಹಿತ್ಯದ ಮತದೃಷ್ಟಿಯಲ್ಲಿ ವಿಶೇಷವಾಗಿ ವ್ಯಕ್ತವಾಗುತ್ತಿದೆ.

ವಿಜ್ಞಾನದ ಅನ್ವೇಷಣೆ ಮತ್ತು ಆವಿಷ್ಕಾರಗಳಿಂದ ಜನರಲ್ಲಿ ಉಂಟಾಗಿರುವ ದೃಷ್ಟಿಬದಲಾವಣೆಯ ಪರಿಣಾಮವಾಗಿಯೂ ಮತ್ತು ಅದು ಸೃಷ್ಟಿಸಿದ ಯಂತ್ರೋಪಕರಣಗಳ ಪರಿಣಾಮವಾಗಿಯೂ ಸಾಮಾಜಿಕ ಪ್ರಪಂಚದಲ್ಲಿ ಅನೇಕ ಪರಿವರ್ತನೆಗಳಾಗಿವೆ. ಹಿಂದಿದ್ದ ದೂರಗಳೆಲ್ಲ ಹತ್ತಿರಗಳಾಗಿವೆ. ಹಿಂದಿದ್ದ ಭೇದದ ಗೋಡೆಗಳೆಲ್ಲ ಕಳಚಿಬಿದ್ದು ಒಂದು ರೀತಿಯ- ಒಗ್ಗಟ್ಟಿಲ್ಲದಿದ್ದರೂ- ಒಟ್ಟುಗೂಡುವಿಕೆ ಸಂಭವಿಸಿದೆ. ಮೇಲು ಕೀಳು, ಹಿರಿದು ಕಿರಿದು, ಉತ್ತಮ ಅಧಮ, ಈ ಭಾವನೆಗಳೆಲ್ಲ ತಲೆಕೆಳಗಾಗುವಷ್ಟರ ಮಟ್ಟಿಗೆ ಬುಡಮುಟ್ಟ ಅಲ್ಲಾಡಿ ಹೋಗಿವೆ. ಮತಪ್ರಪಂಚದಲ್ಲಿ ನಡೆದಂತೆ ಸಾಮಾಜಿಕದಲ್ಲಿಯೂ ಪರಿಣಾಮವಾದದ ಮತ್ತು ಮನಃಶಾಸ್ತ್ರದ ಸಹಾಯದಿಂದ ಸಮಾಜದ ಹುಟ್ಟುಕಟ್ಟುಗಳೂ ಬೆಳವಣಿಗೆ ಬದಲಾವಣೆಗಳೂ ವಿಧಿನಿಷೇಧ ನಿಯಮನಿಷ್ಠೆಗಳೂ ಅನುಸರಿಸುವ ತತ್ತ್ವಕ್ರಮಗಳೆಲ್ಲ ಕಂಡುಹಿಡಿಯಲ್ಪಟ್ಟು ಸಮಾಜಶಾಸ್ತ್ರ ಬೆಳೆದು ನಿಂತಿದೆ. ಮತದಲ್ಲಿ ಪರಲೋಕದಿಂದ ಇಹಲೋಕಕ್ಕೆ ತಿರುಗಿದ ದೃಷ್ಟಿ ಸಾಮಾಜಿಕ ಲೋಕದಲ್ಲಿ ಪೃಥಿವೀಶ್ವರರಿಂದ ಸಾಮಾನ್ಯರ ಕಡೆಗೆ ತಿರುಗಿದೆ. ಅದರ ಪ್ರತಿಫಲವಾಗಿ ಹೊಸ ಸಾಹಿತ್ಯದಲ್ಲಿ ಸಾಮಾಜಿಕ ವಿಷಯಗಳಿಗೆ ಬಹಳ ಪ್ರಶಸ್ತಿ ದೊರೆಯುತ್ತಿದೆ. ಸಣ್ಣಸಣ್ಣ ಕವನಗಳಲ್ಲಿ, ನಾಟಕಗಳಲ್ಲಿ, ಪ್ರಬಂಧಗಳಲ್ಲಿ, ಸಣ್ಣ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಸಾಮಾಜಿಕ ಜೀವನ ಹೆಚ್ಚು ಹೆಚ್ಚಾಗಿ ಚಿತ್ರಿತವಾಗುತ್ತಿದೆ. ಧನಿಕರು ದರಿದ್ರರೆನ್ನದೆ, ವಿದ್ಯಾವಂತರು ಅವಿದ್ಯಾವಂತರೆನ್ನದೆ, ಪುರಾತನಿ ನೂತನಿಗಳೆನ್ನದೆ, ಆಳರಸರೆನ್ನದೆ, ಪುರೋಹಿತರು ಬೀದಿಗುಡಿಸುವವರೆನ್ನದೆ ಸಮಾಜದ ಎಲ್ಲ ಮಟ್ಟಗಳನ್ನೂ ಹೊಸಸಾಹಿತ್ಯ ತನ್ನ ಕಲಾಸಾಮಾಗ್ರಿಯನ್ನಾಗಿ ತೆಗೆದುಕೊಳ್ಳುತ್ತಿದೆ.

ಆಧುನಿಕ ಜಗಜ್ಜೀವನ ರಾಜಕೀಯಾಗ್ನಿಯಿಂದ ಕುದಿಯುತ್ತಿರುವಂತೆ ಮತ್ತಾವುದರಿಂದಲೂ ಕುದಿಯುತ್ತಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ತಾವೂ ಸ್ವತಂತ್ರವಾಗಿದ್ದುಕೊಂಡು, ವಿಸ್ತಾರವಾದ ಸಾಮ್ರಾಜ್ಯವನ್ನೂ ಕಟ್ಟಿಕೊಂಡು ಹೊಟ್ಟೆ ತುಂಬಿರುವ ದೇಶಗಳು ಕಟ್ಟಿದ ಬುತ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಕಾತರತೆಯಿಂದ ಕತ್ತಿ ಮಸೆಯುತ್ತಿವೆ. ಸ್ವತಂತ್ರವಾಗಿದ್ದರೂ ಹಿಂದಿದ್ದ ಸಾಮ್ರಾಜ್ಯವನ್ನು ಕಳೆದುಕೊಂಡಿರುವ ದೇಶಗಳು ಮಾತ್ಸರ್ಯ, ಸ್ಪರ್ಧೆ ಮತ್ತು ಲಾಭದೃಷ್ಟಿ ಇವುಗಳಿಂದ ಪ್ರೇರಿತವಾಗಿ ಪುನಃ ಸಾಮ್ರಾಜ್ಯ ನಿರ್ಮಾಣಮಾಡಲೆಂದು ತೋಳುತಟ್ಟಿ ಕಾಲುಕೆರೆಯುತ್ತಿವೆ. ಬಂಡವಾಳದ ಜಿಗಣೆಯಿಂದ ನೆತ್ತರು ಹೀರಿಸಿಕೊಂಡು ಬಿಳಿಚಿಹೋಗಿರುವ ಸ್ವತಂತ್ರ ದೇಶಗಳು ಕೆಲಸಮಾಡುವವರಿಗೆ ಹೊಟ್ಟೆಗೆ ಹಿಟ್ಟು ಮೈಗೆ ಬಟ್ಟೆ ದೊರೆಯುವಂತೆ ಮಾಡುವ ಸರಕಾರದ ಸ್ಥಾಪನೆಗಾಗಿ ಹಲ್ಲು ಕಚ್ಚಿಕೊಂಡು ಹೋರಾಡುತ್ತಿವೆ. ಸ್ವಾತಂತ್ರ್ಯವನ್ನು ಕಳೆದುಕೊಂಡು, ಪ್ರಬಲವಾದ ಪರಕೀಯರ ಪದಾಘಾತಕ್ಕೆ ಸಿಕ್ಕಿ, ನರಳುತ್ತಿರುವ ದೇಶಗಳು ಸ್ವಾತಂತ್ರ್ಯ ಸಂಪಾದನೆಗಾಗಿ ಹಗಲಿರುಳೂ ಹಾರೈಸಿ ದುಡಿಯುತ್ತಿವೆ. ಅಂತೂ ಭೂಗೋಳದ ಯಾವ ಸ್ಥಾನದ ಮೇಲೆ ಬೆರಳಿಟ್ಟರೂ ಕೈ ಸುಡುತ್ತಿವೆ! ಕಡಲು ಬಾನುಗಳೂ ಹೊರತಾಗಿಲ್ಲ! ಭೂಗರ್ಭದಲ್ಲಿರುವ ಬೆಂಕಿ ಭೂನಿವಾಸಿಗಳ ಎದೆಗೆ ಏರಿದಂತಿದೆ!

ರಾಷ್ಟ್ರೀಯತೆಯಂತೆ ಅಂತರರಾಷ್ಟ್ರೀಯತೆಯಂತೆ; ಸಾಮ್ರಾಜ್ಯವಾದವಂತೆ ಸಮತಾವಾದವಂತೆ; ಫ್ಯಾಸಿಸಂ ಅಂತೆ ನಾಜಿಸಂ ಅಂತೆ; ಬಂಡವಾಳಗಾರರಂತೆ ಕೆಲಸಗಾರರಂತೆ! ನೂರಾರು ಪಕ್ಷಪ್ರತಿಪಕ್ಷಗಳಿಗೆ ಹಣಾಹಣಿಯಾಗುತ್ತಿದೆ.

ನಮ್ಮ ಹೊಸ ಸಾಹಿತ್ಯಕ್ಕೆ ಪ್ರಕೃತವಾದುದು ಭರತ ಖಂಡದ ರಾಜಕೀಯ ಪರಿಸ್ಥಿತಿ. ಇಲ್ಲಿ ಬಹು ಮುಖ್ಯವಾದುದೆಂದರೆ ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ತಪಸ್ಸು. ಅಷ್ಟು ಮುಖ್ಯವಾಗಿ ತೋರದಿದ್ದರೂ ತಕ್ಕಮಟ್ಟಿಗೆ ಮುಖ್ಯವಾಗಿರುವ ಇತರ ಸಮಸ್ಯೆಗಳೂ ಇವೆ. ಅವುಗಳಲ್ಲಿ ಎಲ್ಲವೂ ರಾಜಕೀಯವಾಗಿ ತೋರುತ್ತಿಲ್ಲ. ಕೆಲವು ಸಮಾಜಸುಧಾರಣೆಗೆ ಸಂಬಂಧಿಸಿದಂತೆ, ಮತ್ತೆ ಕೆಲವು ಅರ್ಥಜೀವನಕ್ಕೆ ಹೊಂದಿಕೊಂಡಂತೆ, ಇನ್ನು ಕೆಲವು ಕಲಾಪ್ರಪಂಚಕ್ಕೂ ಸಾಹಿತ್ಯ ಮತ್ತು ವಾಙ್ಮಯಪ್ರಪಂಚಕ್ಕೂ ಸೇರಿದಂತೆ ವೇಷಾಂತರ ರೂಪಾಂತರಗಳನ್ನೆಲ್ಲ ತಾಳಿವೆ. ಆದರೆ ಅವುಗಳೆಲ್ಲಕ್ಕೂ ಮೂಲವಾದ ಪ್ರಚೋದನೆ ರಾಜಕೀಯಾಸಕ್ತಿಯಿಂದ ಬಂದಿದೆ: ಎಂದರೆ, ನಾವೆಲ್ಲರೂ ಭೇದಭಾವವನ್ನುಳಿದು ಒಗ್ಗಟ್ಟಾಗಬೇಕು; ಎಲ್ಲರೂ ಕೆಲಸಮಾಡಿ ಸ್ವಾತಂತ್ರ್ಯಸಂಪಾದನೆ ಮಾಡಬೇಕು; ಬಡತನದಿಂದ ಪಾರಾಗಿ ಎಲ್ಲರೂ ಸುಖಿಗಳಾಗಬೇಕು; ಉತ್ಪತ್ತಿಗೂ ಅನುಭವಕ್ಕೂ ಸರ್ವರೂ ಸಮಾನ ಕಾರಣರೂ ಸಮಾನ ಪಾಲುದಾರರೂ ಆಗಬೇಕು; ಅನ್ಯಾಯವಾದ ಮತ್ತು ಅಧರ್ಮವಾದ ಭಿನ್ನಭಾವಗಳನ್ನೆಲ್ಲ ತೊಡೆದುಹಾಕಿ ಸರ್ವ ಸ್ವತಂತ್ರತೆ ಸರ್ವಸಮಾನತೆ ಸರ್ವ ಸೋದರತೆ ಇವುಗಳು ಮೂಡುವಂತೆ ಮಾಡಬೇಕು-ಎಂಬ ಸದುದ್ದೇಶದಿಂದ ಪ್ರೇರಿತವಾಗಿದೆ. ಆ ಮಹೋದ್ದೇಶದ ಪರಿಣಾಮವಾಗಿ ಹೊಸ ಸಾಹಿತ್ಯದಲ್ಲಿ ದೇಶಭಕ್ತಿಯೂ ಸಮಾಜ ಸುಧಾರಣಾಸಕ್ತಿಯೂ ಹೆಚ್ಚಿವೆ. ದೇಶಭಾಷೆಗಳ ಪುನರುಜ್ಜೀವನ ಪ್ರಯತ್ನವೂ ಆ ಮಹದಾಕಾಂಕ್ಷೆಯ ಒಂದು ಸುಳಿ. ಇಂದು ಇಲ್ಲಿ ನೆರೆದಿರುವವರೆಲ್ಲರೂ ಆ ಸುಳಿಯ ಬಲ್ಮೆಗೆ ಸಿಕ್ಕಿದಲ್ಲದೆ ಕನ್ನಡದ ಸೇವೆಗೆ ಸೇರುತ್ತಿರಲಿಲ್ಲ. ಆ ಮಹಾಸೇವೆಗೆ ಕನ್ನಡದ ಮಕ್ಕಳಾಗಿರುವ ನಮ್ಮಿಂದ ಉಪಕಾರವಾಗಲಿ! ಅಪಕಾರವಾಗದಿರಲಿ ಎಂದು ಬೇಡುವ ಪರಿಸ್ಥಿತಿ ಬರದಿರಲಿ!

ತರುಣ ಮಿತ್ರರೆ, ನನ್ನ ಕೈಯಲ್ಲಾದ ಮಟ್ಟಿಗೆ ಪ್ರಯತ್ನ ಪೂರ್ವಕವಾದ ಸಂಕ್ಷೇಪತೆಯಿಂದ ಹೊಸ ಸಾಹಿತ್ಯವನ್ನು ಪ್ರೇರಿಸುತ್ತಿರುವ ಹೊಸ ದೃಷ್ಟಿಯ ರೂಪು ರೇಖೆಗಳನ್ನು ನಿಮ್ಮ ಮುಂದೆ ಚಿತ್ರಿಸಲು ಪ್ರಯತ್ನಿಸಿದ್ದೇನೆ. ಹೆಸರುಗಳನ್ನು ಹೇಳಿ, ದೃಷ್ಟಾಂತಗಳನ್ನು ಕೊಟ್ಟು, ನಿರ್ದೇಶಿಸುವ ಸಾಹಸಕ್ಕೆ ಕೈಹಾಕಿಲ್ಲ. ಕಾರಣಗಳನ್ನು ಹೇಳಬಹುದಾಗಿತ್ತು. ಆ ಗೋಜಿಗೆ ಹೋಗದೆ ಸುಮ್ಮನೆ ಕ್ಷಮೆ ಬೇಡುತ್ತೇನೆ.

ಆದರೂ ನಾನು ಮಾಡದೆ ಬಿಟ್ಟಿರುವ ಕಾರ್ಯವನ್ನು ನೀವು ಮಾಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ಹಾಗೆ ಮಾಡುವುದರಿಂದ ನಮ್ಮ ದೃಷ್ಟಿ ಜಗದಗಲಕ್ಕೆ ಹಬ್ಬುತ್ತದೆ; ಆಕಾಂಕ್ಷೆ ಗಗನದೆತ್ತರಕ್ಕೆ ಏರುತ್ತದೆ; ಕನ್ನಡ ನಾಡಿಗೂ ನುಡಿಗೂ ಅಭ್ಯುದಯವಾಗುತ್ತದೆ. ಜ್ಞಾನೋದಯವಾಗಿ ಬಾಳಿನಲ್ಲಿ ಉತ್ಸಾಹ ಉಲ್ಲಾಸ ಆನಂದ ಶಾಂತಿಗಳು ಮೈದೋರಿ ನಾವೆಲ್ಲರೂ ನಿಜವಾದ ನವೀನ ಮಾನವರಾಗುತ್ತೇವೆ.

ಎಲ್ಲರೂ ನಿರಂಕುಶ ಮತಿಗಳಾಗಲಿ!
ಎಲ್ಲರೂ ಸ್ವತಂತ್ರ ಮತಿಗಳಾಗಲಿ!
ಎಲ್ಲರೂ ಮುಕ್ತ ಮತಿಗಳಾಗಲಿ!

ಓಂ ಶಾಂತಿಃ ಶಾಂತಿಃ ಶಾಂತಿಃ* ಮೈಸೂರಿನ ಸಾಹಿತ್ಯ ಸಂಘವೊಂದರಲ್ಲಿ (೩೧.೩.೧೯೩೭)ರಲ್ಲಿ ಮಾಡಿದ ಭಾಷಣ.