. ವಿಮರ್ಶೆಯ ಸ್ವರೂಪ

ಇಂದು ಕನ್ನಡದಲ್ಲಿ ಇಂಗ್ಲಿಷ್‌ನ ‘ಕ್ರಿಟಿಸಿಸಂ’ ಶಬ್ದಕ್ಕೆ ಸಂವಾದಿಯಾಗಿ ಬಳಸುತ್ತಿರುವ ಶಬ್ದ ‘ವಿಮರ್ಶೆ’ ತೀರಾ ಇತ್ತೀಚೆಗೆ ರೂಢಿಗೆ ಬಂದಿರುವಂತಹುದು. ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಾಗಲೀ ಪ್ರಾಚೀನ ಕನ್ನಡ ಸಾಹಿತ್ಯದಲ್ಲಾಗಲೀ ‘ವಿಮರ್ಶೆ’, ‘ವಿಮರ್ಶಕ’ ಶಬ್ದಗಳು ನಾವು ಇಂದು ಉಪಯೋಗಿಸುವ ಅರ್ಥದಲ್ಲಿ ಕಂಡುಬರುವುದಿಲ್ಲ. ಅವುಗಳಿಗೆ ಬದಲು ಸಂಸ್ಕೃತ-ಕನ್ನಡಗಳೆರಡರಲ್ಲೂ ಬರುವ ‘ಸಹೃದಯ’, ‘ಲಾಕ್ಷಣಿಕ’ ಶಬ್ದಗಳು ಇಂದು ನಾವು ‘ಕ್ರಿಟಿಕ್’ (Critic)  ಶಬ್ದಕ್ಕೆ ಕೊಡುವ ಅರ್ಥಗಳನ್ನು ಹೊಂದಿದ್ದವು; ಮತ್ತು ‘ಕ್ರಿಟಿಸಿಸಂ’ ಶಬ್ದಕ್ಕೆ ಸಂವಾದಿಯಾಗಿ ‘ಕಾವ್ಯ ಮೀಮಾಂಸೆ’ ಶಬ್ದವು ಬಳಕೆಯಲ್ಲಿತ್ತು. ಎಚ್. ತಿಪ್ಪೇರುದ್ರಸ್ವಾಮಿಯವರು ‘ವಿಮರ್ಶ ಶಕ್ತಿ’ ಪ್ರಯೋಗವನ್ನು ಶಕ್ತಿ ವಿಶಿಷ್ಟಾದ್ವೈತ ಶಾಖೆಯು ಸೃಷ್ಟಿಕ್ರಮವನ್ನು ವಿವರಿಸಲು ಉಪಯೋಗಿಸಿರುವುದನ್ನು ಗುರುತಿಸುತ್ತಾರೆ. ಅವರು ‘ವಿಮರ್ಶೆ’ ಶಬ್ದವನ್ನು ‘ವಿ+ಮೃಶ್’ ಎಂದು ಒಡೆದು, “ಮೃಶ್ ಎಂದರೆ ತೀಡು, ಉಜ್ಜು, ಬಡಿ ಎಂಬರ್ಥದ ಧಾತುವಿಗೆ ವಿ ಎಂಬ ಉಪಸರ್ಗ ಸೇರಿ ನಿಷ್ಪನ್ನವಾಗಿದೆ; ವಿಶೇಷವಾಗಿ ಉಜ್ಜಿ ನೋಡುವುದು, ಒರೆಗೆ ಹಚ್ಚುವುದು ಎಂಬ ಅರ್ಥವನ್ನು ಈ ಮಾರು ಕೊಡುತ್ತದೆ” ಎಂದು ಅಭಿಪ್ರಾಯಪಡುತ್ತಾರೆ (೧೯೭೦:೨-೩).

ಇಂಗ್ಲಿಷ್‌ನ ‘ಕ್ರಿಟಿಕ್’ ಶಬ್ದವು ಗ್ರೀಕ್ ಭಾಷೆಯ ‘ಕ್ರಿಟಿಕೋಸ್’ (Kritikos) ಶಬ್ದದಿಂದ ಬಂದಿದೆ. ‘Kritikos’ ಎಂದರೆ ‘Jugde’ ‘ಮೌಲ್ಯಮಾಪನ’, ಗುಣದೋಷ ವಿವೇಚನೆ ಎಂದರ್ಥ. ಈ ಕಾರಣದಿಂದಾಗಿ ವಿಮರ್ಶೆಯೆಂದರೆ ಕೇವಲ ಮೌಲ್ಯಮಾಪನವೆಂಬ ಭಾವನೆಯು ಸ್ವಾಭಾವಿಕವಾಗಿಯೇ ನಮಗೆ ಬರುತ್ತದೆ. ಆದರೆ ಇಂದು, ವಿಶೇಷವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ‘ವಿಮರ್ಶೆ’ಯ ಪರಿಕಲ್ಪನೆ ಸಾಹಿತ್ಯ ಅಥವಾ ಕಲೆಯನ್ನು ಕುರಿತಾದ ಯಾವುದೇ ಕಾರ್ಯವನ್ನೂ ಒಳಗೊಂಡಿದೆ : ಅದು ಕೃತಿಸಂಪಾದನಾ ಕಾರ್ಯವಾಗಬಹುದು (editing); ಕೃತಿಯನ್ನು ಕುರಿತು ಬರೆದ ಭಾಷ್ಯವಾಗಬಹುದು (explication and commentary); ಅರ್ಥ ವಿವರಣೆಯಿರಬಹುದು (interpretation); ಮೌಲ್ಯಮಾಪನವಿರಬಹುದು (evaluation); ಅಥವಾ ಸಾಹಿತ್ಯ – ಸ್ವರೂಪವನ್ನು ಕುರಿತು ಮಾಡುವ ಕಾವ್ಯ ಮೀಮಾಂಸೆಯಾಗಬಹುದು (theoretical criticism). ಅಷ್ಟೆ ಅಲ್ಲದೆ ಒಬ್ಬನ ವಿಮರ್ಶೆಯನ್ನು ಅರ್ಥೈಸುವ/ಖಂಡಿಸುವ, ವಿಮರ್ಶೆಯೂ ಆಗಬಹುದು. ಸ್ಥೂಲವಾಗಿ, ಕೇವಲ ನಮ್ಮ ಅನುಕೂಲಕ್ಕಾಗಿ ವಿಮರ್ಶೆಯನ್ನು ಎರಡು ಭಾಗಗಳಲ್ಲಿ ವಿಂಗಡಿಸಬಹುದು : ನೇರವಾಗಿ ಒಂದು ಕೃತಿಯನ್ನು ಲಕ್ಷ್ಯದಲ್ಲಿಡದೆ ಸಾಹಿತ್ಯದ ಸ್ವರೂಪ, ಸಾಹಿತ್ಯ ಮತ್ತು ಸಮಾಜ, ಸಾಹಿತ್ಯ ಮತ್ತು ಇತರ ಜ್ಞಾನಮಾರ್ಗಗಳು ಇವುಗಳ ಚಿಂತನೆಯನ್ನು ನಾವು ‘ಕಾವ್ಯಮೀಮಾಂಸೆ’ ಎಂದು ಕರೆಯಬಹುದು (Poetics ಅಥವಾ theoretical criticism); ಮತ್ತು ವಿಶ್ಲೇಷಣೆ, ವ್ಯಾಖ್ಯಾನೇತ್ಯಾದಿ ಇತರ ಕಾರ್ಯಗಳನ್ನೊಳಗೊಂಡದ್ದನ್ನು ‘ಸಾಹಿತ್ಯ ವಿಮರ್ಶೆ’ (literary criticism ಅಥವಾ practical criticism) ಎಂದು ಕರೆಯಬಹುದು.

ಪಾಶ್ಚಾತ್ಯರಲ್ಲಿ ಅಭಿಜಾತ ಯುಗದಲ್ಲಿ ಮುಖ್ಯವಾಗಿದ್ದುದು ಕಾವ್ಯ ಮೀಮಾಂಸೆ. ಅರಿಸ್ಟಾಟಲ್, ಲಾಂಜೈನಸ್, ಹೊರಸ್ ಇವರೆಲ್ರೂ ಕೃತಿ ವಿಮರ್ಶೆಗಿಂತ ಹೆಚ್ಚಾಗಿ ಸಾಹಿತ್ಯದ ಸತ್ವ, ಸ್ವರೂಪ ಇವುಗಳನ್ನು ಕುರಿತು ಚಿಂತಿಸಿದವರು. ಇವರೆಲ್ಲರಿಗೂ – ವಿಶೇಷತಃ ಅರಿಸ್ಟಾಟಲ್‌ನಲ್ಲಿ – ಕೃತಿ ಪರೀಕ್ಷೆಯೂ ಮುಖ್ಯವಾಗಿದ್ದಿತು. ಗ್ರೀಕ್ ರುದ್ರ ನಾಟಕಗಳಲ್ಲೆಲ್ಲಾ ಸೊಫಕ್ಲೀಸನ ‘ಈಡಿಪಸ್’ ನಾಟಕ ಶ್ರೇಷ್ಠವೆಂದು ಅರಿಸ್ಟಾಟಲ್ ಅಭಿಪ್ರಾಯಪಡುತ್ತಾನೆ. ಅನಂತರ ಹದಿನೈದನೆಯ ಶತಮಾನದಿಂದೀಚೆಗೆ, ಅಂದರೆ ‘ರೆನಸೆನ್ಸ್‌’ ಕಾಲದಲ್ಲಿ ಕಾವ್ಯ ಮೀಮಾಂಸೆಯ ಜೊತೆಗೆ ಅಭಿಜಾತ ವಿಮರ್ಶೆಯ ತತ್ವಗಳ ಆಧಾರದ ಮೇಲೆ ನಡೆಸಿದ ಸಾಹಿತ್ಯ ವಿಮರ್ಶೆಯೂ ಬೆಳೆಯುತ್ತಾ ಬಂದು ೧೭-೧೮ನೆಯ ಶತಮಾನಗಳಲ್ಲಿ ಸಾಹಿತ್ಯ ವಿಮರ್ಶೆಯೇ ಪ್ರಮುಖವಾಯಿತು; ಮತ್ತು ಅಂತಹ ವಿಮರ್ಶೆಯಲ್ಲಿ ‘ನಿರ್ಣಾಯಕ ವಿಮರ್ಶಾಕ್ರಮ’ವೇ (judicial criticism) ಮೇಲುಗೈ ಪಡೆಯಿತು. ಅಂದರೆ ಈ ಕಾಲದ ಪ್ರಮುಖ ವಿಮರ್ಶಕರಾದ ಡಿಡೆರೋ (Diderot), ಬೊಲೊ (Boileau), ಆಡಿಸನ್, ಸ್ಯಾಮ್ಯುಯಲ್ ಜಾನ್ಸನ್‌ಮುಂತಾದವರುಗಳಿಗೆ ವಿಮರ್ಶೆಯಲ್ಲಿ ಕೃತಿಪರೀಕ್ಷೆ ಮತ್ತು ಮೌಲ್ಯಮಾಪನ ಅತಿಮುಖ್ಯವಾಗಿದ್ದುವು. ೧೯ನೆಯ ಶತಮಾನದಲ್ಲಿ ರಮ್ಯ ವಿಮರ್ಶಕರಾದ ಲೆಸಿಂಗ್, ವರ್ಡ್ಸ್‌ವರ್ತ್, ಕೋಲ್‌ರಿಚ್, ಹ್ಯೂಗೊ ಮುಂತಾದವರು ತಮ್ಮ ವಿಮರ್ಶೆಯಲ್ಲಿ ಕಾವ್ಯಮೀಮಾಂಸೆ ಮತ್ತು ಕೃತಿ ಪರೀಕ್ಷೆಗಳನ್ನು ಸಮಾನವಾಗಿ ಬೆರೆಸಿದರು.

ಇಂದಿನ ಶತಮಾನದಲ್ಲಾದರೋ, ಪಾಶ್ಚಾತ್ಯರಲ್ಲಿ ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ ಇವೆರಡು ಕ್ಷೇತ್ರಗಳಲ್ಲಿಯೂ ಅದ್ಭುತ ಕೆಲಸ ನಡೆದಿರುವುದನ್ನು ನಾವು ಕಾಣುತ್ತೇವೆ. ಅಲ್ಲದೆ ಸಾಹಿತ್ಯ ವಿಮರ್ಶೆಯಲ್ಲಿ ಮೌಲ್ಯಮಾಪನವು ಅತ್ಯಂತ ಗೌಣವಾಗಿ, ಕೃತಿ ಸಂಪಾದನೆ, ವ್ಯಾಖ್ಯಾನ ಮತ್ತು ಭಾಷ್ಯ, ವಿಶ್ಲೇಷಣೆ ಇವುಗಳಿಗೆ ವಿಮರ್ಶಕರು ಮಹತ್ವ ಕೊಡುವುದನ್ನು ಕಾಣುತ್ತೇವೆ. ‘ನವ್ಯ ವಿಮರ್ಶೆ’, ‘ರಾಚನಿಕ ವಿಮರ್ಶೆ’ ಮತ್ತು ‘ಮನೋವೈಜ್ಞಾನಿಕ ವಿಮರ್ಶೆ’ ಈ ಮಾರ್ಗಗಳಲ್ಲಿ ತೀರ್ಮಾನ ಮತ್ತು ಮೌಲ್ಯಮಾಪನ ಇಲ್ಲವೇ ಎಲ್ಲ ಎನ್ನಬಹುದು; ಇತರ ಪ್ರಮುಖ ವಿಮರ್ಶಾ ಮಾರ್ಗಗಳಲ್ಲಿಯೂ (ಮಾರ್ಕ್ಸ್‌‌ವಾದಿ ವಿಮರ್ಶೆ, ಚಿರಂತನ ಪ್ರತೀಕ ವಿಮರ್ಶೆ, ನಿರಚನ ವಿಮರ್ಶೆ ಇತ್ಯಾದಿ) ವ್ಯಾಖ್ಯಾನ ಮತ್ತು ವಿಶ್ಲೇಷಣೆಗಳೇ ಪ್ರಮುಖವಾಗುತ್ತವೆ.

ಭಾರತೀಯ ಸಂದರ್ಭವನ್ನು ತೆಗೆದುಕೊಂಡರೆ ನಮಗೆ ಕಾಣುವುದು ಯಾವಾಗಲೂ ಕಾವ್ಯಮೀಮಾಂಸೆಯೇ ಹೊರತು ಸಾಹಿತ್ಯ ವಿಮರ್ಶೆಯಲ್ಲ. ಸುಮಾರು ಮೂರನೆಯ ಶತಮಾನದ ಭರತನಿಂದ ಹಿಡಿದು ಹದಿನೈದನೆಯ ಶತಮಾನದ ವಿಶ್ವನಾಥನ ತನಕ, ಅಂದರೆ ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚಾಗ ಕಾಲದಲ್ಲಿ ನಮಗೆ ಸಾಹಿತ್ಯ ಚಿಂತಕರು ಹಾಗೂ ಲಾಕ್ಷಣಿಕರು ಕಾಣುತ್ತಾರೆಯೇ ಹೊರತು ಸಾಹಿತ್ಯ ವಿಮರ್ಶಕರಲ್ಲ. ಒಂದು ಕೃತಿಯ ಕೆಲವು ಭಾಗಗಳು ಮಾತ್ರ ನಿದರ್ಶನಾರ್ಥವಾಗಿ ಎಲ್ಲರಲ್ಲಿಯೂ ಚರ್ಚಿಸಲ್ಪಡುತ್ತವೆ. ಅಲ್ಲದೆ ಯಾವುದೇ ಪ್ರಾಚೀನ ವಿಮರ್ಶಕನಿಗೂ (ಆನಂದವರ್ಧನ, ಕುಂತಕ ಇವರುಗಳನ್ನೊಳಗೊಂಡಂತೆ) ಒಂದು ಕೃತಿಯ ‘ಸಮಗ್ರತೆ’ಯ ಪರಿಕಲ್ಪನೆಯೇ ಇದ್ದಿಲ್ಲವೆಂದು ತೋರುತ್ತದೆ. ಖಂಡನೆಯಾಗಲೀ ಮಂಡನೆಯಾಗಲೀ ಇವರುಗಳು ಉದಾಹರಿಸುವುದು ಕೃತಿಗಳ ಕೆಲವು ಶ್ಲೋಕಗಳನ್ನೇ ಹೊರತು, ವಿಶ್ಲೇಷಿಸಿರುವುದು ಕೃತಿಗಳ ಕೆಲವು ಬಿಡಿ ಭಾಗಗಳನ್ನೇ ಹೊರತು ಸಮಗ್ರ ಕೃತಿಯನ್ನಲ್ಲವೇ ಅಲ್ಲ. ಸಾಹಿತ್ಯ ಕೃತಿಯ ‘ಸಾವಯವ’ ಪರಿಕಲ್ಪನೆ (Organic concept) ಭಾರತೀಯ ಕಾವ್ಯ ಮೀಮಾಂಸೆಗೆ ಹೊರತಾದುದೆಂದೇ ತೋರುತ್ತದೆ.

ಹೀಗೆ ಹೇಳುವಾಗ ಒಂದು ಎಚ್ಚರಿಕೆಯ ಮಾತು ಅಗತ್ಯ. ಮೇಲಿನ ಅಭಿಪ್ರಾಯ ಇಲ್ಲಿ ವರ್ಣನಾತ್ಮಕವಾಗಿ ಬಂದಿದೆಯೇ ಹೊರತು ಮೌಲ್ಯಾತ್ಮಕವಾಗಿ ಅಲ್ಲ. ಏಕೆಂದರೆ, ಬೇರೊಂದು ದಿಕ್ಕಿನಿಂದ ನೋಡಿದರೆ, ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಕಂಡುಬರುವ ಮಹತ್ತರ ಸಿದ್ಧಾಂತಗಳು, ಆಲೋಚನಾ ಕ್ರಮಗಳಲ್ಲಿರುವ ಶಿಸ್ತು, ತಾರ್ಕಿಕ ಶುದ್ಧತೆ, ಭಾಷಾಜ್ಞಾನ ಇವುಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ. ಪ್ರತಿಯೊಂದು ರಾಷ್ಟ್ರಕ್ಕೂ, ಜನಾಂಗಕ್ಕೂ ತನ್ನದೇ ಆದ ವಿಶಿಷ್ಟ ಪ್ರತಿಭೆ ಇರುತ್ತದೆಂಬುದನ್ನು ನಾವು ಒಪ್ಪುವುದಾದರೆ, ಭಾರತೀಯ ಪ್ರತಿಭೆ ಇರುವುದು ಕಾವ್ಯಮೀಮಾಂಸೆಯಲ್ಲಿ, ಸಾಹಿತ್ಯ – ಕಲೆ ಇವುಗಳನ್ನು ಕುರಿತಾದ ತಾತ್ವಿಕ ಚಿಂತನೆಯಲ್ಲಿ ಎನ್ನಬೇಕು. ಹಾಗೆಯೇ ಅತ್ಯಂತ ಸ್ಥೂಲವಾಗಿ ಹೇಳುವುದಾದರೆ – ಫ್ರಾನ್ಸ್ ಮತ್ತು ಜರ್ಮನಿಗಳಲ್ಲಿ ಮೌಲಿಕ ಸಾಹಿತ್ಯ ಚಿಂತನೆ ಬಂದಂತೆ ಇಂಗ್ಲೆಂಡ್‌ನಲ್ಲಿ ಬಂದಿಲ್ಲ. (ಕೊಲ್‌ರಿಜ್ ಈ ಮಾತಿಗೆ ಅಪವಾದವೆನ್ನಬಹುದು.) ಆಂಗ್ಲ ವಿಮರ್ಶಕರು (ಎಫ್.ಆರ್.ಲೀವಿಸ್‌ನಂತೆ) ಪ್ರಾಯೋಗಿಕ ವಿಮರ್ಶೆಗೆ (Practical criticism) ಹೆಸರುವಾಸಿಯಾದರೆ ಅಮೇರಿಕಾದ ಆಧುನಿಕ ವಿಮರ್ಶಾ ಕ್ರಮಗಳೆಲ್ಲಾ ಹೆಚ್ಚು-ಕಮ್ಮಿ ಕೃತಿವಿಶ್ಲೇಷಣೆಗೆ ಮತ್ತು ಕೃತಿವ್ಯಾಖ್ಯಾನಕ್ಕೆ (analysis interpretation) ಪ್ರಸಿದ್ಧವಾಗಿದೆ. ಈ ವಿಧದ ಜಾನಾಂಗಿಕ ಪ್ರತಿಭಾ ವಿಶೇಷಕ್ಕೆ ಆ ಜನಾಂಗದ ಸಾಮಾಜಿಕ ಚಿಂತನೆ ಕಾರಣವೇ ಅಥವಾ ಧಾರ್ಮಿಕ -ನೈತಿಕ ಸಿದ್ಧಾಂತಗಳೇ ಎಂಬ ವಿಷಯ ಪ್ರಾಯಶಃ ಸಮಾಜಶಾಸ್ತ್ರಜ್ಞರ ಕ್ಷೇತ್ರಕ್ಕೆ ಸೇರಿದ್ದು.

ಸಾಹಿತ್ಯ ವಿಮರ್ಶೆಯಲ್ಲಿ ಇಂದು ‘ನಿರ್ಣಾಯಕ ಕ್ರಿಯೆ’ ಅಥವಾ ‘ಮೌಲ್ಯಮಾಪನ ಕ್ರಿಯೆ’ ಗೌಣವಾಗಿದೆಯೆಂದು ಹೇಳಿದ ಮಾತಿಗೆ ಒಂದು ಮುಖ್ಯ ತಿದ್ದುಪಡಿಯನ್ನು ಸೇರಿಸಬೇಕು. ಅದೆಂದರೆ ಮೌಲ್ಯಮಾಪಕ ಕ್ರಿಯೆ (evaluation) ಒಂದು ಕೃತಿಯನ್ನು ಬೆಲೆಗಟ್ಟಿ ಅದರ ಸಾಧನೆಯನ್ನು ತೀಮಾನಿಸುವ ರೂಪದಲ್ಲಿಯೇ ಇರಬೇಕಾದ್ದಿಲ್ಲ; ಮತ್ತು ಸಾಮಾನ್ಯವಾಗಿ ಹಾಗೆ ಇರುವುದಿಲ್ಲ. ಹೆಚ್ಚಾಗಿ ಅದು ಅವ್ಯಕ್ತವಾಗಿ ಇತರ ವಿಮರ್ಶಾ ಕಾರ್ಯಗಳಲ್ಲೆಲ್ಲಾ ಹಾಸುಹೊಕ್ಕಾಗಿರುತ್ತದೆ. ನಾನು ವ್ಯಾಖ್ಯಾನಕ್ಕೆಂದು ಒಂದು ಕೃತಿಯನ್ನು ಆರಿಸುವಾಗಲೇ ಆ ಕೃತಿಯನ್ನು ಇತರ ಕೃತಿಗಳೊಡನೆ ಹೋಲಿಸಿ ಒಂದು ವಿಧದ ತೀರ್ಮಾನಕ್ಕೆ – ಈ ಕೃತಿ ವ್ಯಾಖ್ಯಾನಕ್ಕೆ ಯೋಗ್ಯವಾಗಿದೆ ಎಂಬ ತೀರ್ಮಾನಕ್ಕೆ – ಬಂದಿರುತ್ತೆನೆ. ಇನ್ನೂ ಮಹತ್ವದ ಸಂಗತಿಯೆಂದರೆ, ನಾನು ಒಂದು ಕೃತಿಯಲ್ಲಿ ವ್ಯಾಖ್ಯಾನಕ್ಕೆ, ಅರ್ಥೈಸುವುದಕ್ಕೆ, ಟೀಕೆಗೆ ಆಯ್ದುಕೊಳ್ಳುವ ಕೃತಿಯ ವಿವರಗಳೂ ಒಂದು ರೀತಿಯ ತೀರ್ಮಾನದ ಪರಿಣಾಮವೇ. ಒಂದು ಕೃತಿಯ ಮುಖ್ಯ ಅಂಗಗಳು, ವಿವರಗಳು ಯಾವುವು ಎಂಬುದು ವಿಮರ್ಶಕನಿಂದ ವಿಮರ್ಶಕನಿಗೆ, ಒಂದು ವಿಮರ್ಶಾ ಮಾರ್ಗದಿಂದ ಮತ್ತೊಂದು ವಿಮರ್ಶಾ ಮಾರ್ಗಕ್ಕೆ ಬದಲಾಗುತ್ತಾ ಹೋಗುತ್ತವೆ. “ವಿಮರ್ಶಕನ ಗುರಿ ಕೃತಿಯಲ್ಲಿ ತನ್ನ ಗಮನ ಸೆಳೆಯುವ ವಿಶಿಷ್ಟ ಗುಣವನ್ನು ಸಾಧ್ಯವಾದಷ್ಟೂ ಸೂಕ್ಷ್ಮವಾಗಿ ಮೊದಲು ಗ್ರಹಿಸುವುದು; ಈ ಗ್ರಹಿಕೆಯಲ್ಲಿಯೇ ಒಂದು ವಿಧದ ಅವ್ಯಕ್ತ ಮೌಲ್ಯಮಾಪನವಿದೆ” ಎಂದು ಲೀವಿಸ್ (೧೯೬೨:೨೧೩) ಹೇಳುತ್ತಾನೆ. ಅರ್ಥೈಸುವಿಕೆ ಮತ್ತು ಮೌಲ್ಯಮಾಪನ ಇವೆರಡು ಕಾರ್ಯಗಳನ್ನು ಬೇರೆ ಬೇರೆಯಾಗಿ ನೋಡುವುದೇ ಸರಿಯಲ್ಲವೆಂದು ಹೆಲನ್ ಗಾರ್ಡನರ್ ಹೇಳುತ್ತಾಳೆ. ಈ ವಿಮರ್ಶಕಿಯ ಪ್ರಕಾರ “ಒಂದು ಕೃತಿಯನ್ನು ಅರ್ಥ ಮಾಡಿಕೊಳ್ಳದೆ ಅದರ ಶ್ರೇಷ್ಠತೆಯ ಬಗ್ಗೆ ತೀರ್ಮಾನಿಸುವುದು ಸಾಧ್ಯವೇ ಇಲ್ಲ; ಮತ್ತು ಅರ್ಥೈಸುವಿಕೆಯೇ ಮೂಲತಃ ನಮ್ಮಲ್ಲಾದ ತೀರ್ಮಾನದ ಪರಿಣಾಮ” (೧೯೬೩:೮೧)

ಸಾಹಿತ್ಯ ವಿಮರ್ಶಕನ ಮುಖ್ಯ ಕರ್ತವ್ಯಗಳೆಂದರೆ ಸಾಹಿತ್ಯಕೃತಿಗಳ ಅಧ್ಯಯನ, ವಿವರಣೆ, ವ್ಯಾಖ್ಯಾನ ಮತ್ತು ಮೌಲ್ಯಮಾಪನ. ಇದು ಎಲ್ಲಾ ಕಾಲದಲ್ಲಿಯೂ ವಿಮರ್ಶಕರೆಲ್ಲರೂ (ಭಿನ್ನ ಭಿನ್ನ ಕರ್ತವ್ಯಕ್ಕೆ ಒತ್ತು ಕೊಟ್ಟರೂ) ಒಪ್ಪುವ ಮಾತು. ಆದರೆ ಕೆಲವು ವಿಮರ್ಶಕರು ಮತ್ತೂ ಒಂದು ಕರ್ತವ್ಯವನ್ನು ವಿಮರ್ಶೆಗೆ ಜೋಡಿಸುತ್ತಾರೆ. ಅದೆಂದರೆ ವಿಮರ್ಶಕನ ಸಾಮಾಜಿಕ ಹೊಣೆಗಾರಿಕೆ. ತನ್ನ ಸುಪ್ರಸಿದ್ಧ ವಿಮರ್ಶೆಯ ವ್ಯಾಖ್ಯೆಯಲ್ಲಿ ಆರ್ನಲ್ಡ್ ಹೀಗೆ ಹೇಳುತ್ತಾನೆ : “ವಿಮರ್ಶಕನ ಕರ್ತವ್ಯವೆಂದರೆ ಜಗತ್ತಿನ ಅತ್ಯಂತ ಶ್ರೇಷ್ಠ ಜ್ಞಾನ ಹಾಗೂ ವಿಚಾರಗಳನ್ನು ಅರಿತುಕೊಳ್ಳುವುದು ಮತ್ತು ತನ್ನ ಅರಿವಿಗೆ ಬಂದದ್ದನ್ನು ಇತರರಿಗೆ ತಿಳಿಯಪಡಿಸುವುದು; ಮತ್ತು ಆ ಮೂಲಕ (ಸಮಾಜದಲ್ಲಿ) ಸತ್ಯ. ಹಾಗೂ ನವೀನ ವಿಚಾರಗಳ ಪ್ರಚಲನೆಯನ್ನು  ನಿರ್ಮಿಸಿವುದು”. “ಇಂದಿನ ಕಾಲದಲ್ಲಿ ವಿಮರ್ಶೆಯ ಕಾರ್ಯ” (The Function of Criticism at the Present Time)  ಎಂಬ ಅವನ ಲೇಖನದಲ್ಲಿ ಬರುವ ಈ ವ್ಯಾಖ್ಯೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ನಾವು ಆರ್ನಲ್ಡ್‌ನ ಇಡೀ ವೈಚಾರಿಕೆಯನ್ನು ಗಮನಿಸಬೇಕು. ಆರ್ನಲ್ಡ್‌ನ ದೃಷ್ಟಿಯಲ್ಲಿ ಉತ್ತಮ ಕಾವ್ಯ (ಸಾಹಿತ್ಯ) ಸೃಷ್ಟಿಯಾಗಲು ಸಮಾಜದಲ್ಲಿ ನೂತನ ಹಾಗೂ ಮೌಲಿಕ ವೈಚಾರಿಕತೆಯ ವಾತಾವರಣ ಅವಶ್ಯಕ. ಅದಿಲ್ಲದಿದ್ದರೆ ಕವಿ ಎಷ್ಟೇ ಸಮರ್ಥನಾಗಿದ್ದರೂ ಶ್ರೇಷ್ಠ ಕಾವ್ಯವನ್ನು ರಚಿಸಲಾರ. ಇಂಗ್ಲೆಂಡ್‌ನಲ್ಲಿ ಮೌಲಿಕ ವಿಚಾರಗಳ ಕೊರತೆ ೧೯ನೆಯ ಶತಮಾನದ ಪ್ರಾರಂಭದಲ್ಲಿ ಇದ್ದುದರಿಂದಲೇ ಆರ್ನಲ್ಡ್‌ನ ದೃಷ್ಟಿಯಲ್ಲಿ, ವರ್ಡ್ಸ್‌ವರ್ತ್ ಇತ್ಯಾದಿ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು ಜರ್ಮನ್, ಫ್ರೆಂಚ್, ಇಟಾಲಿಯನ್ ಕವಿಗಳಿಗೆ ಹೋಲಿಸಿದರೆ ಹೆಚ್ಚಿನದೇನನ್ನೂ ಸಾಧಿಸಲಾರದೇ ಹೋದರು. ಉತ್ತಮ ಕಾವ್ಯಸೃಷ್ಟಿಗೆ ಪೂರಕವಾದ ಮೌಲಿಕ ವೈಚಾರಿಕತೆಯ ವಾತಾವರಣವನ್ನು ನಿರ್ಮಿಸುವುದು ಉತ್ತಮ ವಿಮರ್ಶಕನ ಜವಾಬ್ದಾರಿ.

ಎಂದರೆ, ಆರ್ನಲ್ಡ್‌ನ ದೃಷ್ಟಿಯಲ್ಲಿ ವಿಮರ್ಶಕ ಗಂಭೀರ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಮತ್ತು ಉತ್ತಮ ಮೌಲ್ಯಗಳ ಹಾಗೂ ಸಂಸ್ಕೃತಿಯ  ರಕ್ಷಕ. ಆರ್ನಲ್ಡ್ ‘ಸಂಸ್ಕೃತಿ’ ಶಬ್ದವನ್ನು ಅತ್ಯಂತ ವ್ಯಾಪಕಾರ್ಥದಲ್ಲಿ ಉಪಯೋಗಿ ಸುತ್ತಾನೆ. ಅವನಿಗೆ ಸಂಸ್ಕೃತಿಯೆಂದರೆ ಸಾಹಿತ್ಯಿಕ – ಧಾರ್ಮಿಕ – ವೈಜ್ಞಾನಿಕ ವಿಚಾರಗಳ ಹಾಗೂ ಮೌಲ್ಯಗಳ ಒಟ್ಟು ಮೊತ್ತ. ಇಂತಹ ಸಂಸ್ಕೃತಿಯನ್ನು ಇಂದಿನ ಸಮಾಜದಲ್ಲಿ ಅರಸಿಕರಿಂದ, ಅನಾಗರಿಕರಿಂದ ಮತ್ತು ಅವಿದ್ಯಾವಂತ ಜಂಗುಳಿಯಿಂದ (philistines, barbarians and populace) ಹೇಗೆ ರಕ್ಷಿಸಬೇಕೆಂಬುದೇ ವಿಚಾರವಂತರೆಲ್ಲರ ಮುಖ್ಯ ಕಾಳಜಿ ಎಂದು ಆರ್ನಲ್ಡ್ ತನ್ನ ‘ಸಂಸ್ಕೃತಿ ಮತ್ತು ಆರಾಜಕತೆ’ (Culture and Anarchy) ಎಂಬ ಗ್ರಂಥದಲ್ಲಿ ವಾದಿಸುತ್ತಾನೆ. ಅವನ ದೃಷ್ಟಿಯಲ್ಲಿ ವಿಚಾರವಂತರ ಮುಂಚೂಣಿಯಲ್ಲಿರುವವನು ಸಾಹಿತ್ಯ ವಿಮರ್ಶಕ.’

ಅನೇಕರು ಆರ್ನಲ್ಡ್‌ಚಿತ್ರಿಸುವ ವಿಮರ್ಶಕ ಒಬ್ಬ ಸಂಸ್ಕರತಿ ಪ್ರಚಾರಕ, ಕೀರ್ತನಕಾರ ಎಂದು ಹೀಯಾಳಿಸಿದ್ದಾರೆ. ಆದರೆ ಸ್ವಲ್ಪ ಆಳವಾಗಿ ವಿಚಾರ ಮಾಡಿದರೆ ಇಂತಹ ಹೀಯಾಳಿಕೆ ಅನಗತ್ಯವೆಂದು ಮತ್ತು ಶ್ರೇಷ್ಠ ಸಾಹಿತ್ಯ ವಿಮರ್ಶೆ ಕೊನೆಯಲ್ಲಿ ಮಾನವ ಮೌಲ್ಯಗಳ ವಿಮರ್ಶೆಯೇ ಆಗುತ್ತದೆಂದೂ ನಮಗೆ ತೋರುತ್ತದೆ. ಈ ಅರ್ಥದಲ್ಲಿಯೇ ಐ.ಎ. ರಿಚರ್ಡ್ಸ್ ಹೇಳುತ್ತಾನೆ : “ನನ್ನ ದೃಷ್ಟಿಯಲ್ಲಿ ವಿಮರ್ಶೆಯೆಂದರೆ ಅನುಭವಗಳ ಮಧ್ಯೆ ಸೂಕ್ಷ್ಮ ಭೇದಗಳನ್ನು ಗುರುತಿಸಿ ಅವುಗಳ ಬೆಲೆ ಕಟ್ಟುವ ಒಂದು ಪ್ರಯತ್ನ” (೧೯೨೬:೨). ಓರ್ವ ಸಾಹಿತಿ ತನ್ನ ಕೃತಿಗಳಲ್ಲಿ ಅಭಿವ್ಯಕ್ತಿಸಿದ ಅನುಭವಗಳ ಬೆಲೆ ಕಟ್ಟುವುದು ಸಾಮಾಜಿಕ – ನೈತಿಕ – ಮಾನದಂಡಗಳ ಮೇಲೆ ತಾನೆ? ರಿಚರ್ಡ್ಸ್ ಇನ್ನೂ ಮುಂದೆ ಹೋಗಿ ಕಲೆಗೂ ನೈತಿಕತೆಗೂ ಏನೂ ಸಂಬಂಧವಿಲ್ಲವೆಂದು ವಾದಿಸುವುದು ದುರದೃಷ್ಟಕರವೆಂದು ಹೇಳುತ್ತಾ “ವೈದ್ಯನು ದೇಹದ ಆರೋಗ್ಯವನ್ನು ಲಕ್ಷಿಸುವಂತೆಯೇ ವಿಮರ್ಶಕನ ಲಕ್ಷ್ಯ. ಯಾವಾಗಲೂ ಬುದ್ಧಿಯ (mind) ಆರೋಗ್ಯದ ಕಡೆಗಿರುತ್ತದೆ” (p.35) ಎನ್ನುತ್ತಾನೆ. “ವಿಮರ್ಶಕನು ಮೌಲ್ಯಗಳನ್ನು ಕುರಿತು ತನಗಿರುವ ವಿಚಾರಗಳನ್ನು (ವಿಮರ್ಶೆಯಲ್ಲಿ) ಉಪಯೋಗಿಸದೆ ಇರಲು ಸಾಧ್ಯವೇ ಇಲ್ಲ… ನೈತಿಕ ಕಾಳಜಿಗಳನ್ನು ತನ್ನ ಕಾರ್ಯದಲ್ಲಿ ವಿಮರ್ಶಕನು ಅವಗಣಿಸಿದರೆ ಅವನು ತನ್ನ ಜವಾಬ್ದಾರಿಯನ್ನು ತಿರಸ್ಕರಿಸಿದಂತೆಯೇ” (p.೩೫) ಎಂದು ರಿಚರ್ಡ್ಸ್ ವಾದಿಸುತ್ತಾನೆ.

ವಿಮರ್ಶೆಯನ್ನು ಕುರಿತಾದ ಆರ್ನಲ್ಡ್‌ನ ವಿಚಾರಗಳನ್ನೇ ಇನ್ನೂ ಅನೇಕ ಪ್ರಮುಖ ವಿಮರ್ಶಕರು ಎತ್ತಿ ಹಿಡಿಯುತ್ತಾರೆ. ಟಿ.ಎಸ್. ಎಲಿಯಟ್‌ನ ಅಭಿಪ್ರಾಯದಲ್ಲಿ “ವಿಮರ್ಶೆಯ ಕರ್ತವ್ಯಗಳೆಂದರೆ ಎರಡು : ಕಲಾಕೃತಿಗಳನ್ನು ಅರ್ಥೈಸುವುದು ಮತ್ತು ಅಭಿರುಚಿಯನ್ನು ತಿದ್ದುವುದು” (೧೯೫೩:೧೮). ತನ್ನ ವಿಮರ್ಶೆಯ ಆಧಾರವಾದ ಮಾನದಂಡಗಳನ್ನು ಉದ್ದೇಶತಃ ಎಲ್ಲಿಯೂ ಸ್ಪಷ್ಟವಾಗಿ ನಿರೂಪಿಸದ ಲೀವಿಸ್‌ನ ಸಾಹಿತ್ಯಿಕ ತೀರ್ಮಾನಗಳೆಲ್ಲಾ ‘ಉಚ್ಚ ನೈತಿಕ ಪ್ರಜ್ಞೆ’ಯ (high moral seriousness) ಆಧಾರದ ಮೇಲೇ ನಿಂತಿರುವುದು. ಪ್ರತಿಯೊಂದು ಕೃತಿಯನ್ನು ಪರೀಕ್ಷಿಸುವಾಗಲೂ ಲೀವಿಸ್ ಮೊದಲಿಗೆ ಎತ್ತುವ ಪ್ರಶ್ನೆ ಎಂದರೆ, “ಈ ಕೃತಿಯು ಸಾಹಿತ್ಯಿಕವಾಗಿ ಅಭಿವ್ಯಕ್ತಿಸುವ ಮೌಲ್ಯಗಳು ಬದುಕಿನ ಪರವಾಗಿವೆಯೇ ಅಥವಾ ಬದುಕನ್ನು ವಿರೋಧಿಸುತ್ತವೆಯೇ” ಎಂಬುದು. ಫ್ರಾಂಕ್‌ಫರ್ಟ್ ಮಾರ್ಕ್ಸ್‌ವಾದಿಗಳು ಜನಪ್ರಿಯ ಸಾಹಿತ್ಯ ಮತ್ತು ಸಮೂಹ ಮಾಧ್ಯಮಗಳು ಹೇಗೆ ಜೀವನದ ಉತ್ತಮ ಮೌಲ್ಯಗಳನ್ನು ಕಡೆಗಣಿಸಿ, ಆ ಕಾರಣದಿಂದ ಅಸಮಾನತೆ ಮತ್ತು ಶೋಷಣೆಯ ಆಧಾರದ ಮೇಲೆ ನಿಂತಿರುವ ‘ವ್ಯವಸ್ಥೆ’ಯನ್ನು ಅವ್ಯಕ್ತವಾಗಿ ಎತ್ತಿ ಹಿಡಿಯುತ್ತವೆ ಎಂದು ವಾದಿಸುತ್ತಾರೆ.

ಒಟ್ಟಿನಲ್ಲಿ, ಉತ್ತಮ ಸಾಹಿತ್ಯ ವಿಮರ್ಶೆ ಉತ್ತಮ ಸಾಂಸ್ಕೃತಿಕ – ಸಾಮಾಜಿಕ – ನೈತಿಕ ವಿಮರ್ಶೆಯೂ ಆಗಿರುತ್ತದೆ. ಸಾಹಿತ್ಯ ವಿಮರ್ಶಕ ಬದುಕಿನಿಂದ ಹೊರಗುಳಿದು ತನ್ನ ಕರ್ತವ್ಯವನ್ನು ನೆರವೇರಿಸಲು ಸಾಧ್ಯವೇ ಇಲ್ಲ. ಈ ವಿಧದ ಸಾಮಾಜಿಕ ಜವಾಬ್ದಾರಿ ಎಲ್ಲಾ ವಿಮರ್ಶಾ ಮಾರ್ಗಗಳಲ್ಲಿಯೂ ವ್ಯಕ್ತವಾಗುತ್ತದೆ, ಕೃತಿನಿಷ್ಠ ನವ್ಯ. ವಿಮರ್ಶೆಯಲ್ಲೂ ಕೂಡ.

. ವಿಮರ್ಶಾತ್ಮಕ ವಾದಗಳ ಸ್ವರೂಪ

ವಿಮರ್ಶೆ ‘ಸತ್ಯವಾದ ನಿರ್ಣಯಗಳಿಗಾಗಿ ನಡೆಸುವ ಸಾಮೂಹಿಕ ಶೋಧ’ ಎಂದಾದರೆ, ವಿಮರ್ಶಕರನು ಪೂರ್ವಾಗ್ರಹ ಮುಕ್ತನಾಗಿರಬೇಕೆಂದಾದರೆ, ವಿಮರ್ಶಕರಲ್ಲಿ ಭಿನ್ನ ಭಿನ್ನ ವಿಚಾರಗಳನ್ನು ನಾವು ಏಕೆ ಕಾಣುತ್ತೇವೆ? ಒಂದೇ ಕೃತಿಯನ್ನು ಕುರಿತೂ ವಿಮರ್ಶಕರಲ್ಲಿ ಪರಸ್ಪರ ವಿರುದ್ಧ ವಿಚಾರಗಳು ಮತ್ತು ತೀರ್ಮಾನಗಳು ಹೇಗೆ ಉದ್ಭವಿಸುತ್ತವೆ? ಅಥವಾ ವಿಮರ್ಶೆಯೆಂದರೆ ಪ್ರತಿಯೊಬ್ಬ ಓದುಗನೂ ಕೃತಿಯನ್ನು ಕುರಿತು ತನಗೆ ತೋಚಿದುದನ್ನು ಹೇಳುವುದೇ? ವಿಮರ್ಶಕರಿಗೆಲ್ಲಾ ಸಮಾನ ಮಾನದಂಡಗಳು ಏಕಿರಬಾರದು? ಸಾಹಿತ್ಯಾಸಕ್ತರೆಲ್ಲರಿಗೂ ಸಹಜವಾಗಿಯೇ ಏಳುವ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೊರಟಾಗ ‘ವಿಮರ್ಶಾತ್ಮಕ ವಾದಗಳು’ ಎಷ್ಟು ಜಟಿಲ ಹಾಗೂ ಸಂಕೀರ್ಣವಾಗಿರುತ್ತವೆಂಬುದು ನಮಗರಿವಾಗುತ್ತದೆ.

ವಿಮರ್ಶಾತ್ಮಕ ವಾದಗಳ ಭಿನ್ನತೆಗೆ ಅನೇಕ ಕಾರಣಗಳಿವೆ. ಗೌಣ ಕಾರಣಗಳೆಂದರೆ ವೈಯಕ್ತಿಕ ವಿಕ್ಷಿಪ್ತತೆ, ಅಸೂಯೆ, ಅಜ್ಞಾನ ಮುಂತಾದವುಗಳು. ಇವುಗಳನ್ನು ನಾವು ಹೊರತುಪಡಿಸಿದಾಗ ಉಳಿಯುವ ಮುಖ್ಯ ಕಾರಣಗಳಲ್ಲಿ ಒಂದೆಂದರೆ ಸಾಹಿತ್ಯಿಕ ವಾದಗಳಿಗೂ ವೈಜ್ಞಾನಿಕ ವಾದಗಳಿಗೂ ಇರುವ ಅಗಾಧ ಅಂತರ. ವೈಜ್ಞಾನಿಕ ವಾದಗಳು ಅನುಮತಿಯ (Deduction) ಆಧಾರದ ಮೇಲೆ ರೂಪಿತವಾಗಿರುತ್ತವೆ; ಮತ್ತು ನಿರ್ಣಯಗಳನ್ನು ಸಮರ್ಥಿಸುವ ಅನುಮತಿಗಳು ಸಾರ್ವತ್ರಿಕ ಸತ್ಯಗಳನ್ನು ಒಳಗೊಂಡಿರುತ್ತವೆ. ಆದರೆ ಸಾಹಿತ್ಯಿಕ ವಾದಗಳಲ್ಲಿ ಅನೇಕ ಸಲ ಸಾರ್ವತ್ರಿಕ ಸತ್ಯಗಳನ್ನು ಮತ್ತು ಸಾಮಾನ್ಯ ಸೂತ್ರ ನಿರೂಪಣೆಗಳನ್ನು ಕೊಡಲು ಆಗುವುದಿಲ್ಲ; ಅಥವಾ ಅವುಗಳನ್ನು ಕಡೆಗಣಿಸಲಾಗುತ್ತದೆ. ಪ್ರತಿ ವಿಮರ್ಶಕನಿಗೂ ತನ್ನ ತೀರ್ಮಾನಗಳಿಗೆ ಬೇಕಾದ ಸಾಕ್ಷ್ಯ. ಕೃತಿಯಲ್ಲಿಯೇ ಇರುತ್ತದೆ. ಆದರೆ ಸಾಹಿತ್ಯಕೃತಿ ಒಂದರ್ಥದಲ್ಲಿ ‘ಸಂಕೇತಗಳ ಜಟಿಲ ವ್ಯವಸ್ಥೆ’ಯಾದುದರಿಂದ ವಿಮರ್ಶಕನ ತೀರ್ಮಾನವನ್ನೊಪ್ಪದ ಓದುಗನಿಗೆ ಅಥವಾ ಇನ್ನೊಬ್ಬ ವಿಮರ್ಶಕನಿಗೆ ಕೃತಿಯಲ್ಲಿ ಕಂಡುಬರುವ ಸಾಕ್ಷ್ಯ. ಬೇರೆಯೇ ಆಗಿರುತ್ತದೆ. ವಿಮರ್ಶೆಯಲ್ಲಿ ಕೊಡಲ್ಪಡುವ ಸಾಕ್ಷ್ಯ- ಕೃತಿಯಲ್ಲಿನ ಘಟನೆಗಳು, ಪಾತ್ರಗಳು, ಸಂಕೇತಗಳು ಇತ್ಯಾದಿ – ವಿಮರ್ಶಕನಿಂದ ರೂಪಿಸಲ್ಪಡುತ್ತವೆಯೇ ಹೊರತು, ಅದು ಎಲ್ಲರಿಗೂ ಒಂದೇ ಆದ ಸೈಂಟಿಫಿಕ್ ಡೇಟಾ ಅಲ್ಲ. ನಾರ್ಥ್‌ರಪ್ ಫ್ರಾಯ್ ಒಂದು ಕಡೆ ವಿನೋದವಾಗಿ ಹೇಳುತ್ತಾನೆ: “ಲೀವಿಸ್ ಯಾವಾಗಲೂ ತನ್ನ ತೀರ್ಮಾನಗಳಿಗೆ ಬೇಕಾದ ಸಾಕ್ಷ್ಯ ‘ಇಲ್ಲೇ ಇದೆ’ ಎಂದು ಕೃತಿಯನ್ನು ತೋರಿಸುತ್ತಾನೆ. ಆದರೆ ನಾವು ಅದೇ ಕೃತಿಯನ್ನು ನೋಡಿದಾಗ ಅದೆಲ್ಲಿದೆಯೋ ಕಾಣುವುದೇ ಇಲ್ಲ.” ಎಂದರೆ ಸಾಹಿತ್ಯ ಸ್ವರೂಪದ ಕಾರಣದಿಂದಾಗಿಯೇ, ಸಾಹಿತ್ಯಿಕ ವಾದಗಳಲ್ಲಿ ಭಿನ್ನತೆ ಕಂಡುಬರುವುದು ಅನಿವಾರ್ಯ (ವಿವರಗಳಿಗೆ ನೋಡಿರಿ Redford and Minogue, 1981).

ವಿಮರ್ಶೆಯಲ್ಲಿ ಭಿನ್ನತೆಗೆ ಎರಡನೆಯ ಕಾರಣವೆಂದರೆ ವಿಮರ್ಶಕರ ಸಂವೇದನಾ ಶಕ್ತಿಯ ತಾರತಮ್ಯ ಮತ್ತು ವೈವಿಧ್ಯ. ಪ್ರತಿಯೊಬ್ಬ ವಿಮರ್ಶಕನ ‘ಮನೋಮುಕುರ’ವೂ ಬೇರೆ ಬೇರೆಯಾಗಿರುತ್ತದೆ. ಅವನ ವಿದ್ವತ್ತು, ಅನುಭವ ಸಂಪತ್ತು, ಭಾಷೆಯನ್ನು ಕುರಿತು ಅವನಿಗಿರುವ ಸ್ಪಂದನಶಕ್ತಿ ಇವುಗಳು ಅವನ ಸಂವೇದನ ಶಕ್ತಿಯನ್ನು ನಿರ್ಧರಿಸುತ್ತವೆ. ಆದರೆ ಇಲ್ಲಿ ಬರುವ ಸಮಸ್ಯೆ ಎಂದರೆ, ಸಾಹಿತ್ಯ ಪ್ರಥಮತಃ ಇಂದ್ರಿಯಗಮ್ಯ ಅನುಭವವಾಗಿ, ಅನಂತರ ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸಲ್ಪಡುತ್ತದೆ. ಆದ್ದರಿಂದ ಯಾವ ಇಂದ್ರಿಯಗಮ್ಯ ಅನುಭವ ಸರಿ ಅಥವಾ ತಪ್ಪು ಎಂದು ಹೇಗೆ ನಿರ್ಧರಿಸುವುದು?

ಈ ಸಮಸ್ಯೆ ಹೆಚ್ಚಾಗಿ ಕಾವ್ಯದ ಧ್ವನಿಸ್ತರದಲ್ಲಿ ಕಂಡುಬರುತ್ತದೆ. ಉದಾಹರಣೆಗೆ, ನಾವು ಅಡಿಗರ ‘ಭೂಮಿಗೀತ’ದ ಮೊದಲ ಎರಡು ಸಾಲುಗಳನ್ನು ನೋಡಬಹುದು:

ಮಲೆಘಟ್ಟ ಸೋಪಾನಕೆಳಪಟ್ಟಿಯಲ್ಲಿ:
ಉರುಳು – ಮೂರೇ ಉರುಳು – ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ (‘ಭೂಮಿಗೀತೆ’)

ಇಲ್ಲಿ ಒಬ್ಬ ವಿಮರ್ಶಕನಿಗೆ ‘ಕುದಿತದ ಎಣ್ಣೆ ಕಪ್ಪರಿಗೆ’ ಸಮುದ್ರದ ರೌದ್ರವನ್ನು ಕಣ್ಣಿಗೆ ಕಟ್ಟುವಂತೆ ನಿರ್ಮಿಸುವ ಅತ್ಯಂತ ಸಫಲ ಪ್ರತಿಮೆಯಾಗಬಹುದು. ಅವನು ಈ ಪ್ರತಿಮೆಯನ್ನು ಅದರ ಹಿಂದೆ ಬರುವ ಶಬ್ದಲಯಕ್ಕೆ ಜೋಡಿಸಿ (‘ರ’ ‘ಳ’ ‘ಉ’ಗಳ ಪುನರಾವರ್ತನೆ) ಸಮುದ್ರ ಕವಿಗೆ ಎಷ್ಟು ಹತ್ತಿರದಲ್ಲಿದೆಯೆಂದರೆ ಮೂರೇ ಉರುಳುಗಳಷ್ಟು ಹತ್ತಿರ ಎಂದು ವ್ಯಾಖ್ಯಾನಿಸಬಹುದು. ಮತ್ತೊಬ್ಬ ವಿಮರ್ಶಕ ‘ಕುದಿತದ ಎಣ್ಣೆ ಕೊಪ್ಪರಿಗೆ’ಯನ್ನು ‘ಹಿಂಸೆ’ಯ ಪ್ರತಿಮೆಯೆಂದು ನೋಡಬಹುದು. ಏಕೆಂದರೆ ಅವನಿಗೆ ರಾಜಮಹಾರಾಜರ ಕಾಲದಲ್ಲಿ ಶತ್ರುಗಳನ್ನು ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಮುಳುಗಿಸಿ ಸಾಯಿಸುತ್ತಿದ್ದುದು ನೆನಪಿಗೆ ಬರಬಹುದು. ಹೀಗೆಯೇ ಆ ವಿಮರ್ಶಕ ಈ ಪ್ರತಿಮೆಯನ್ನು ಕವಿತೆಯಲ್ಲಿ ಮುಂದೆ ಬರುವ ‘ಹಕ್ಕಿ ಕೊರಳನು ಹಿಚುಕಿ’ ಮತ್ತು ‘ಸಸಿಕೊರಳ ಕೊಯ್ದು’ ಪಂಕ್ತಿಗಳೊಡನೆ ಒಟ್ಟಾರೆ ಅರ್ಥೈಸಿ ‘ಭೂಮಿಗೀತ’ದಲ್ಲಿ ಉದ್ದಕ್ಕೂ ‘ಹಿಂಸೆ’ಯಿಂದುಂಟಾಗುವ ಆನಂದದ ‘ಸೇಡಿಸ್ಟಿಕ್’ ಅನುಭವವಿದೆ ಎಂದು ತೀರ್ಮಾನಿಸಬಹುದು.

ಈ ಎರಡು ವ್ಯಾಖ್ಯಾನಗಳಲ್ಲಿ ಯಾವುದು ಸರಿ? ಎರಡಕ್ಕೂ ಕವಿತೆಯ ಪಂಕ್ತಿಗಳೇ ಆಧಾರ; ಮತ್ತು ಇಬ್ಬರು ವಿಮರ್ಶಕರೂ ಧ್ವನಿಶಕ್ತಿಯನ್ನೇ ಆಧರಿಸಿದ್ದಾರೆ. ಯಾವ  ವ್ಯಾಖ್ಯಾನ ಒಟ್ಟು ಕವಿತೆಯ ಅರ್ಥವನ್ನು ಪುಷ್ಟಿಗೊಳಿಸುತ್ತದೆಯೋ ಅದು ಹೆಚ್ಚು ಸಮರ್ಪಕ ಎನ್ನೋಣವೇ ಎಂದರೆ ಅದೂ ಅಷ್ಟು ಸುಲಭವಲ್ಲ. ಏಕೆಂದರೆ ಕವಿತೆಯ ಒಟ್ಟಾರೆ ಅರ್ಥ ಅದರ ಬಿಡಿಬಿಡಿ ಭಾಗಗಳ ಅರ್ಥದ ಮೊತ್ತ ತಾನೆ? ತಾರ್ಕಿಕವಾಗಿ ಈ ಎರಡು ವ್ಯಾಖ್ಯಾನಗಳಲ್ಲಿ ಯಾವುದೂ ತಪ್ಪು ಎಂದು ಹೇಳಲಾಗುವುದಿಲ್ಲ. ಅಥವಾ ಯಾವ ವ್ಯಾಖ್ಯಾನ ಒಂದು ಕವಿತೆಗೆ ಧನಾತ್ಮಕವಾಗಿ ಸ್ಪಂದಿಸುತ್ತದೆಯೋ ಅದನ್ನು ಒಪ್ಪುವುದು ಪ್ರಾಯಶಃ ಸೂಕ್ತ ಎನ್ನಬಹುದೇನೋ. ಆದರೆ ಇಲ್ಲೂ ‘ಧನಾತ್ಮಕವಾಗಿ ಎಲ್ಲಾ ಕವಿತೆಗಳಿಗೂ ಏಕೆ ಸ್ಪಂದಿಸಬೇಕು?’ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.

ಎಲ್ಲದಕ್ಕಿಂತ ಮುಖ್ಯವಾಗಿ ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಮುಖ್ಯ ವಿಷಯವೆಂದರೆ ವಿಮರ್ಶೆಯಲ್ಲಿ ‘ಕೃತಿವಿವರಗಳು – ತೀರ್ಮಾನ’ ಎಂಬಂತೆ ಸರಳ ಸಮೀಕರಣವಿರುವುದಿಲ್ಲ. ತೀರ್ಮಾನಕ್ಕೂ ಕೃತಿಯ ವಿವರಗಳಿಗೂ ಒಂದು ತಾರ್ಕಿಕ ಸಂಬಂಧವನ್ನು ಕಲ್ಪಿಸುವ ವೈಚಾರಿಕ ಕೊಂಡಿಯೊಂದಿರುತ್ತದೆ. ಪ್ರಖ್ಯಾತ ಅಮೆರಿಕನ್ ಲಾಕ್ಷಣಿಕ ಎಹ್‌ನಿಂಜರ್ (Ehninger) ಈ ಸಂದರ್ಭದಲ್ಲಿ ‘ಸಾಕ್ಷ್ಯ’, (Data), ‘ತೀರ್ಮಾನ’ (Claim) ಮತ್ತು ‘ಸಿದ್ಧಾಂತ’ (Warrant) ಎನ್ನುವ ಶಬ್ದಗಳನ್ನು ಉಪಯೋಗಿಸುತ್ತಾನೆ (೧೯೭೪). ‘ಸಾಕ್ಷ್ಯ’ ಎಂದರೆ ಕೃತಿಯ ವಿವರಗಳು (ಘಟನೆಗಳು, ಪಾತ್ರಗಳು, ಭಾಷೆ, ಧ್ವನಿ ಇತ್ಯಾದಿ); ‘ತೀಮಾನ’ ಎಂದರೆ ಕೃತಿಯನ್ನು ಅಥವಾ ಕೃತಿಯ ಒಂದು ಭಾಗವನ್ನು ಕುರಿತು ನಾವು ಕೈಗೊಳ್ಳುವ ತೀರ್ಮಾನ (ಇದು ದುಷ್ಟಪಾತ್ರ; ಈ ಘಟನೆ ಸಾಂಕೇತಿಕ ಇತ್ಯಾದಿ.) ‘ಸಿದ್ಧಾಂತ’ ಎಂದರೆ ಸಾಹಿತ್ಯ – ಲೇಖಕ – ಸಮಾಜ – ವಿಶ್ವ. ಇವುಗಳ ಪರಸ್ಪರ ಸಂಬಂಧಗಳನ್ನು ಕುರಿತು ನಮ್ಮಲ್ಲಿರುವ ವಿಚಾರಗಳ, ನಂಬಿಕೆಗಳ ಮೊತ್ತ. ಎಹ್‌ನಿಂಜರ್‌ನ ಮುಖ್ಯ ವಾದವೇನೆಂದರೆ, ವಿಮರ್ಶೆಯಲ್ಲಿ ಸಾಕ್ಷ್ಯ ಮತ್ತು ತೀರ್ಮಾನ ಇವೆರಡನ್ನೂ ನಿರ್ಧರಿಸುವುದು ನಮ್ಮ ವೈಚಾರಿಕ ನೆಲೆ ಮತ್ತು ಸಿದ್ಧಾಂತ. ಕೆಲ ಸಲ ವಿಮರ್ಶಕರು ತಮ್ಮ ವೈಚಾರಿಕ ನೆಲೆಯನ್ನು ಸ್ಪಷ್ಟಪಡಿಸಬಹುದು (ಆರ್ನಲ್ಡ್, ರಿಚರ್ಡ್ಸ್‌ರಂತೆ). ಆದರೆ ಬಹಳ ಸಲ ಇದು ಅವ್ಯಕ್ತವಾಗಿಯೇ ಇರುತ್ತದೆ.

ಈ ವಿಚಾರಗಳ ಉಪಯುಕ್ತತೆಯನ್ನು ವ್ಯಕ್ತಪಡಿಸುವ ಒಂದೆರಡು ಉದಾಹರಣೆಗಳನ್ನು ತೆಗೆದುಕೊಳ್ಳೋಣ. ‘ಮೈಸೂರು ಮಲ್ಲಿಗೆ’ ಪ್ರೇಮ ಕವಿತೆಗಳ ಸಂಗ್ರಹ – ಇದೊಂದು ಅತ್ಯಂತ ನೀರಸ ಹೇಳಿಕೆಯಂತೆ ತೋರುತ್ತದೆ. ಆದರೆ ಈ ಹೇಳಿಕೆಯ ಹಿಂದೆ ಇರುವ ನಂಬಿಕೆಗಳ, ವಿಚಾರ ಮೊತ್ತವೆಷ್ಟು? ದಿ|| ಪ್ರೊಫೆಸರ್ ರಾಮರಾವ್ ಅವರು ಒಂದು ಸಲ ಪಾಠ ಮಾಡುವಾಗ ಇವುಗಳು ಏನಾದರೂ, ಪ್ರೇಮಕವಿತೆಗಳಲ್ಲ, ಏಕೆಂದರೆ ಇವುಗಳ ವರ್ಣಿಸುವುದು ದಾಂಪತ್ಯ ಜೀವನವನ್ನು – ಪ್ರೇಮವನ್ನಲ್ಲ ಎಂದು ವಾದಿಸಿದ್ದರು. ಅಂದರೆ, ಅವರ ಹೇಳಿಕೆಯ ಹಿಂದೆ ‘ಪ್ರೇಮ’ದ ಬಗ್ಗೆ ವಿಶಿಷ್ಟ ಕಲ್ಪನೆಯಿದೆ ಮತ್ತು ಆ ಕಲ್ಪನೆ ಸಾಂಸ್ಕೃತಿಕ – ಸಾಮಾಜಿಕ ಕಲ್ಪನೆಯಾಗಿದೆ.

ಈಗ ಮೌಲ್ಯಾತ್ಮಕ ಹೇಳಿಕೆಯೊಂದನ್ನು ನೋಡೋಣ. “ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರಂ’ ನಾಟಕ ನಮ್ಮ ಮನ ಕಲಕುತ್ತದೆ’ – ಈ ಹೇಳಿಕೆ ಸತ್ಯವಾಗುವುದು, ಬಿಡುವುದು ಓದುಗರನ್ನವಲಂಬಿಸಿದೆ; ಅದರಲ್ಲಿರುವ ‘ರಾಜಮಹಾರಾಜರ ಸ್ವಾಥ್ದ ಹೋರಾಟದಲ್ಲಿ ನಿರರ್ಥಕವಾಗಿ ಬಡಸೈನಿಕರು ಆಕಾರಣವಾಗಿ ಜೀವ ತೆತ್ತಿದ್ದಾರೆ’ ಎನ್ನುವ ವಿಚಾರದ ಮೇಲೆ ನಿಂತಿದೆ. ಅಂದರೆ ‘ಯುದ್ಧ ಯಾವಾಗಲೂ ಅಧಿಕಾರದಲ್ಲಿರುವವರು ತಮ್ಮ ಸ್ವಾರ್ಥ ಸಾಧನೆಗೆ ನಡೆಸುವ ಪ್ರಯತ್ನ’ ಎಂಬಂತಹ ಸಾಮಾಜಿಕ – ತಾತ್ವಿಕ ತಳಹದಿಯ ಮೇಲೆ ನಿಂತಿದೆ. ಮುಂದೊಂದು ದಿನ, ರಾಜಮಹಾರಾಜರು ಹಾಗೂ ಯುದ್ಧಗಳು ಕೇವಲ ಕಟ್ಟುಕಥೆಯಾಗುತ್ತವೆಂದು ಇಟ್ಟುಕೊಳ್ಳೋಣ. ಆಗ ‘ಸ್ಮಶಾನ ಕುರುಕ್ಷೇತ್ರಂ’ ಓದುಗರ/ ಸಭಿಕರ ಮನ ತಟ್ಟದೇ ಇರಬಹುದು; ಅಥವಾ ತಟ್ಟಿದರೂ ಸಾಮಾಜಿಕ ತಳಹದಿಯಲ್ಲಲ್ಲದೆ ಬೇರೊಂದು ಸ್ತರದಲ್ಲಿ (ಧಾರ್ಮಿಕ? ಸ್ವಾಮಿ -ಭೃತ್ಯ ಸಂಬಂಧ?) ಪರಿಣಾಮಕಾರಿಯಾಗಬಹುದು. ಸ್ವಲ್ಪದರಲ್ಲಿ ಹೇಳಬೇಕಾದರೆ, ನಾವು ಕಾಣುವ ಕೃತಿಯ ಸ್ವರೂಪ ಮತ್ತು ಕೃತಿಯನ್ನು ಕುರಿತು ನಾವು ಕೈಗೊಳ್ಳುವ ತೀರ್ಮಾನಗಳು – ಇವೆರಡೂ ನಮ್ಮ ಸಾಹಿತ್ಯಿಕ – ನೈತಿಕ – ಸಾಮಾಜಿಕ ಇತ್ಯಾದಿ ನಂಬಿಕೆಗಳು ಬದಲಾದಂತೆ ಬದಲಾಗುತ್ತಾ ಹೋಗುತ್ತವೆ. ಈ ಹೇಳಿಕೆಗೆ ಒಂದು ಉತ್ತಮ ನಿದರ್ಶನವೆಂದರೆ ಕಾಲಕ್ರಮದಲ್ಲಿ ಬದಲಾಗುತ್ತಾ ಹೋದ ಭರತನ ‘ರಸ’ ಸಿದ್ಧಾಂತದ ವ್ಯಾಖ್ಯಾನಗಳು. ಅಭಿನವ ಗುಪ್ತನು ಸಂಗ್ರಹಿಸುವಂತೆ ಇವು ಮುಖ್ಯವಾಗಿ ‘ಅನುಮಿತಿವಾದ’, ‘ಉತ್ಪತ್ತಿವಾದ’, ‘ಭುಕ್ತಿವಾದ’ ಮತ್ತು ‘ವ್ಯಕ್ತಿವಾದ’. ‘ರಸ’ ಪರಿಕಲ್ಪನೆಯನ್ನು ಕರ್ತೃವಿನ, ಕೃತಿಯ ಅಥವಾ ಸಭಿಕರ ದೃಷ್ಟಿಕೋನದಿಂದ ನೋಡುತ್ತಾ ಹೋದಂತೆ ಭಿನ್ನ ಭಿನ್ನ ವ್ಯಾಖ್ಯಾನಗಳು ಬಂದುವು. (ನೋಡಿ ಶ್ರೀಕಂಠಯ್ಯ , ೧೯೭೩). ಈ ಕಾರಣದಿಂದಲೇ ಒಂದು ಉತ್ತಮ ಸಾಹಿತ್ಯ ಕೃತಿ ಯಾವಾಗಲೂ ‘ಸಮಕಾಲೀನ’ವೇ, ಅದರ ಪ್ರತಿಭೆ ‘ನವನವೋನ್ಮೇಷ ಶಾಲಿನಿ’.

ಈ ಚರ್ಚೆಯನ್ನು ಹೀಗೇ ಮುಂದುವರಿಸಿದಾಗ ನಮಗೆ ಈ ಕೆಳಗಿನ ಕೆಲವು ವಿಚಾರಗಳು ಗ್ರಾಹ್ಯವೆಂದು ಕಂಡುಬರುತ್ತವೆ :

೧. ಒಂದು ಕೃತಿಯನ್ನು ಕುರಿತು ನಾವು ಕೈಗೊಳ್ಳುವ ತೀರ್ಮಾನಕ್ಕೆ ಆಧಾರವಾಗಿ ಬಳಸುವ ಕೃತಿ ವಿವರಗಳು ವೈಜ್ಞಾನಿಕ ಚರ್ಚೆಯಲ್ಲಿರುವಂತೆ ‘ನಿಮಿತ್ತ’ ಅಥವಾ ‘ಕಾರಣ’ಗಳಲ್ಲ. ಕೇವಲ ಸಮರ್ಥನೆಗಳು. (ನೋಡಿ : Redford and Minogue, 1981:48-50).

೨. ಪ್ರತಿಯೊಂದು ಸಾಹಿತ್ಯಿಕ ತೀರ್ಮಾನದ ಹಿಂದೆಯೂ – ಅದು ಎಷ್ಟೇ ಸರಳ ತೀರ್ಮಾನವಿರಲಿ – ಒಂದು ವೈಚಾರಿಕ ಪ್ರಣಾಳಿ ಇದ್ದೇ ಇರುತ್ತದೆ. ಆದ್ದರಿಂದ ‘ಇದು ಕೇವಲ ಅಕಡೆಮಿಕ್ ವಿಮರ್ಶೆ’, ‘ಇದು ಸಮಾಜಬದ್ಧ ವಿಮರ್ಶೆ’ ಎಂಬ ಹೇಳಿಕೆಗಳು ಬಾಲಿಶ.

೩. ಕೃತಿಯ ಸ್ವೋಪಜ್ಞತೆ ಹೆಚ್ಚಾದಷ್ಟೂ ಅದನ್ನು ಕುರಿತ ವಿಮರ್ಶಾ ಭಿನ್ನತೆಗಳು ಹೆಚ್ಚಾಗುತ್ತವೆ.

೪. ಒಂದು ಕೃತಿಯನ್ನು ಕುರಿತು, ಕೃತಿಯ ಅರ್ಥವನ್ನು ಕುರಿತು ‘ಇದಮಿತ್ಥಂ’ ಎಂದು ಸಾರ್ವಕಾಲಿಕ ತೀರ್ಮಾನವನ್ನು ಯಾವುದೇ ವಿಮರ್ಶಕನೂ ಅಥವಾ ವಿಮರ್ಶಾ ಮಾರ್ಗವೂ ಕೊಡುವುದು ಸೂಕ್ತವಲ್ಲ. ಕೃತಿಯನ್ನು ಆಧರಿಸಿದ, ಸತಾರ್ಕಿಕವಾದ ಯಾವುದೇ ವ್ಯಾಖ್ಯಾನವಾಗಲಿ, ತೀರ್ಮಾನವಾಗಲಿ ಗ್ರಾಹ್ಯ. (ಹೆಚ್ಚಿನ ಚರ್ಚೆಗೆ ನೋಡಿ Booth : 1970.)

* * *