ಕರ್ತೃಕೇಂದ್ರಿತ ವಿಮರ್ಶೆ 

. ಕರ್ತೃನಿಷ್ಠವಿಮರ್ಶೆ (Biographical Criticism):

ಕರ್ತೃನಿಷ್ಠ ವಿಮರ್ಶೆ ಪರಂಪರಾಗತ ವಿಮರ್ಶಾ ಮಾರ್ಗಗಳಲ್ಲಿ ಒಂದಾದರೂ ಇದು ಇಪ್ಪತ್ತನೆಯ ಶತಮಾನದಲ್ಲಿ ಮನೋವೈಜ್ಞಾನಿಕ ಸಂಶೋಧನೆಗಳ ಆಧಾರದಲ್ಲಿ ಹೊಸ ರೂಪವನ್ನು ಪಡೆದುಕೊಂಡಿದೆ. ಕರ್ತೃನಿಷ್ಠ ವಿಮರ್ಶೆಯ ಮುಖ್ಯ ವೈಚಾರಿಕ ನಿಲುವುಗಳನ್ನು ಹೀಗೆ ಗುರುತಿಸಬಹುದು :

೧. ಪ್ರತಿಯೊಬ್ಬ ಲೇಖಕನ ವ್ಯಕ್ತಿತ್ವವೂ ಭಿನ್ನ ಹಾಗೂ ವಿಶಿಷ್ಟ.

೨. ಸಾಹಿತ್ಯಕ್ಕೂ ಮತ್ತು ಲೇಖಕನ ವ್ಯಕ್ತಿತ್ವಕ್ಕೂ ಅತ್ಯಂತ ಘನಿಷ್ಠ ಸಂಬಂಧವಿದೆ.

೩. ಯಾವುದೇ ಸಾಹಿತ್ಯಕೃತಿಯೂ ಸಮಾಜ ಹಾಗೂ ಮಾನವ ಸಂಬಂಧಗಳನ್ನು ಕುರಿತು ಲೇಖಕನಿಗಿರುವ ವೈಯಕ್ತಿಕ ವಿಚಾರಗಳ, ಆಸೆ-ಆಕಾಂಕ್ಷೆಗಳ, ಅನುಭವಗಳ ದಾಖಲೆಯಾಗಿರುತ್ತದೆ.

೪. ಒಂದು ಸಾಹಿತ್ಯಕೃತಿ ಲೇಖಕನೊಬ್ಬನು ಪ್ರಜ್ಞಾಪೂರ್ವಕವಾಗಿ, ನಿರ್ದಿಷ್ಟ ಉದ್ದೇಶದಿಂದ ರೂಪಿಸಿದ ಒಂದು ರಚನೆ.

೫. ಆದ್ದರಿಂದ ಲೇಖಕನ ವ್ಯಕ್ತಿತ್ವದ, ಅವನ ಜೀವನದ ಸಂಪೂರ್ಣ ಅರಿವಿಲ್ಲದ ಹೊರತು ಮತ್ತು ಕೃತಿಯ ಹಿಂದಿರುವ ಅವನ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಹೊರತು ಅವನು ರಚಿಸಿದ ಕೃತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕರ್ತೃನಿಷ್ಠ ವಿಮರ್ಶೆಗೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಯಾವ ಕಾಲದಲ್ಲಿಯೂ ಸ್ಥಾನವಿಲ್ಲದಿದ್ದರೂ, ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಇಂತಹ ವಿಮರ್ಶೆಗೆ ಕನಿಷ್ಠ ಪಕ್ಷ ೩೦೦ ವರ್ಷಗಳ ಇತಿಹಾಸವಿದೆ. ೧೭ನೆಯ ಶತಮಾನದ ಪ್ರಮುಖ ಆಂಗ್ಲ ವಿಮರ್ಶಕ ಡ್ರೈಡನ್, ೧೮ನೆಯ ಶತಮಾನದ ಸ್ಯಾಮ್ಯುಯಲ್ ಜಾನ್‌ಸನ್ ಮುಂತಾದವರು ಲೇಖಕನ ವೈಯಕ್ತಿಕ ಜೀವನದ ಆಧಾರದ ಮೇಲೆ ಅವನ ಕೃತಿಗಳನ್ನು ಅರ್ಥೈಸುವ ಪ್ರಯತ್ನ ಮಾಡಿದರು.  ಈ ದಿಕ್ಕಿನಲ್ಲಿ ಜಾನ್‌ಸನ್ನನ “ಕವಿಗಳ ಜೀವನ ಚರಿತ್ರೆಗಳು” (Lives of Poets, 1781) ಗ್ರಂಥ ಅತ್ಯಂತ ಪ್ರಸಿದ್ಧ. ಒಟ್ಟು ೫೭ ಇಂಗ್ಲಿಷ್ ಕವಿಗಳ ಬಗ್ಗೆ ಇರುವ ಈ ಗ್ರಂಥದಲ್ಲಿ ಪ್ರತಿಯೊಂದು ಕವಿಯ ಬಗ್ಗೆ ಇರುವ ಲೇಖನದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಕವಿಯ ಬದುಕು ಮತ್ತು ಅವನ ಸಾಹಿತ್ಯ ಇವೆರಡರ ನಡುವೆ ಅವಿನಾ ಸಂಬಂಧವಿದೆಯೆಂದು ಜಾನ್‌ಸನ್‌ನಂಬುತ್ತಾನೆ. ಆದ್ದರಿಂದಲೇ ಅವನು ಪೋಪ್- ಡ್ರೈಡನ್ ಇವರ ಕಾವ್ಯದ ಬಗ್ಗೆ ಸೂಕ್ಷ್ಮವಾಗಿ, ಧನಾತ್ಮಕವಾಗಿ ಬರೆದ ಹಾಗೆ ಮಿಲ್ಟನ್ ಬಗ್ಗೆ ಬರೆಯಲಾಗುವುದಿಲ್ಲ. ಕಾರಣ, ಧರ್ಮದಲ್ಲಿ, ರಾಜಕೀಯ ಸಿದ್ಧಾಂತಗಳಲ್ಲಿ ಮತ್ತು ಕಾವ್ಯಮಾರ್ಗಗಳಲ್ಲಿ ಜಾನ್‌ಸನ್ ಮತ್ತು ಮಿಲ್ಟನ್ ಪರಸ್ಪರ ವಿರುದ್ಧ ಧ್ರುವಗಳು.

ಈ ವಿಮರ್ಶಾಮಾರ್ಗದ ಪ್ರಮುಖ ವಕ್ತಾರ ಹಾಗೂ ವಿಮರ್ಶಕನೆಂದರೆ ೧೯ನೆಯ ಶತಮಾನದ ಸಾಂತ್‌ಬೊವ್ (Sainte Beuvve). ಈ ಫ್ರೆಂಚ್ ವಿಮರ್ಶಕನ ಪ್ರಮುಖ ಲೇಖನಗಳು ೧೮೨೪-೧೮೬೯ ರ ಅವಧಿಯಲ್ಲಿ ಬೆಳಕು ಕಂಡವು. ಅವನ ಪ್ರಕಾರ ಸಾಹಿತ್ಯ ವಿಮರ್ಶೆಯೆಂದರೆ ಲೇಖಕನೊಬ್ಬನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಆ ಜ್ಞಾನವನ್ನು ಇತರರಿಗೆ ಕಲಿಸಿಕೊಡುವುದು. “ಸಾಹಿತ್ಯ ಮತ್ತು ಸಾಹಿತ್ಯದ ಉತ್ಪಾದನೆ ನನ್ನ ದೃಷ್ಟಿಯಲ್ಲಿ ಲೇಖಕನಿಗಿಂತ ಅಥವಾ ಮಾನವ – ಸಂಸ್ಥೆಗಳಿಗಿಂತ ಯಾವ ರೀತಿಯಲ್ಲಿಯೂ ಭಿನ್ನವಾದವುಗಳಲ್ಲ. ನಾನೊಂದು ಕೃತಿಯನ್ನು ಆಸ್ವಾದಿಸಬಲ್ಲೆ; ಆದರೆ ಲೇಖಕನನ್ನು ಕುರಿತು ನನಗಿರುವ ಜ್ಞಾನವನ್ನು ಬದಿಗಿಟ್ಟು ಸ್ವತಂತ್ರವಾಗಿ ಅವನ ಕೃತಿಯ ಮೌಲ್ಯನಿರ್ಣಯ ಮಾಡುವುದು ನನಗೆ ಅಸಾಧ್ಯ” ಎಂದು ಸಾಂತ್ ಬೊವ್ ಹೇಳುತ್ತಾನೆ.

ಲೇಖಕನ ವ್ಯಕ್ತಿತ್ವವನ್ನು ಅವನ ಜೀವನದಲ್ಲಾದ ‘ಏಳುಬೀಳುಗಳನ್ನು ಅವನ ವೈಯಕ್ತಿಕ ಅಭ್ಯಾಸ, ಆಚರಣೆಗಳನ್ನು ನಾವು ಸಂಪೂರ್ಣ ಅರಿತುಕೊಳ್ಳದೆ ಅವನು ರಚಿಸಿದ ಕೃತಿಯನ್ನು ಅರ್ಥೈಸುವುದು ಅಸಾಧ್ಯ – ಎಂಬ ನಲುವಿನಿಂದುಂಟಾದ ವಿಮರ್ಶಾಮಾರ್ಗದಲ್ಲಿನ ಒಂದು ಮೈಲಿಗಲ್ಲೆಂದರೆ ಜಾನ್ ಲಿವಿಂಗ್‌ಸ್ಟನ್ ಲೋಜ್ (John Livingstone Lowes) ಬರೆದ ‘ಜನಡು ಮಾರ್ಗ’ (The Road to Xanadu). ಅವಿರತ ಸಂಶೋಧನೆಯ ಫಲವಾದ ಈ ಗ್ರಂಥದಲ್ಲಿ ಇವನು ಕೊಲ್‌ರಿಜ್ ತನ್ನ ಕೃತಿಗಳನ್ನು ರಚಿಸುವಾಗ ಯಾವ ಯಾವ ಭಾಷೆಯ, ಯಾವ ಯಾವ ವಿಷಯದ ಮೇಲಿನ ಗ್ರಂಥಗಳನ್ನು ಮತ್ತು ಲೇಖನಗಳನ್ನು ಓದುತ್ತಿದ್ದನೆಂದು ಗುರುತುಹಚ್ಚಿ ಕೋಲ್‌ರಿಜ್‌ನ ಕಾವ್ಯದಲ್ಲಿ ಬರುವ ಪ್ರತಿಯೊಂದು ವಿಚಾರ – ಪ್ರತಿಮೆಗಳ ಆಧಾರ – ಆಕರಗಳನ್ನು ಶೋಧಿಸುತ್ತಾನೆ.

೨೦ನೆಯ ಶತಮಾನದ ಮೊದಲ ಭಾಗದಲ್ಲಿ ಬಂದ ಎಲಿಯಟ್, ಲೀವಿಸ್ ಮುಂತಾದವರು ಮತ್ತು ನವ್ಯ ವಿಮರ್ಶಕರು ಕರ್ತೃನಿಷ್ಠ ವಿಮರ್ಶೆಯನ್ನು ಬಲವಾಗಿ ವಿರೋಧಿಸಿ, ತಮ್ಮ ಸಾಹಿತ್ಯಿಕ ವಿಮರ್ಶೆಯಲ್ಲಿ ಲೇಖಕನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯವನ್ನೆಲ್ಲಾ ಸಂಪೂರ್ಣವಾಗಿ ಕಡೆಗಾಣಿಸಿದರು. ತಾತ್ವಿಕ ಪಾತಳಿಯಲ್ಲಿ ಎಲಿಯಟ್ “ಕಾವ್ಯವೆಂದರೆ ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲ, ವ್ಯಕ್ತಿತ್ವದಿಂದ ಮುಕ್ತನಾಗುವುದು” ಎಂದು ಘೋಷಿಸಿ ಕವಿಯ ವ್ಯಕ್ತಿತ್ವ ಮತ್ತು ಅವನ ಕಾವ್ಯಗಳ ಮಧ್ಯೆ ಇರಬಹುದಾದ ಸಂಬಂಧವನ್ನೇ ಅಲ್ಲಗಳೆದರೆ, ಲೀವಿಸ್ “(ಲೇಖಕನ) ಉದ್ದೇಶಗಳು ಕಲಾಕೃತಿಯಲ್ಲಿ ಒಡಮೂಡದ ಹೊರತು ಅವುಗಳಿಗೇನೂ ಅರ್ಥವಿಲ್ಲ’’ ಎಂದು ಸಾರಿ ವಿಮರ್ಶೆಯಲ್ಲಿ ಕೃತಿನಿಷ್ಠತೆಯನ್ನು ತಂದನು. ಸಾಹಿತ್ಯಕೃತಿಯ ಸ್ವಯಂಪೂರ್ಣತೆಯನ್ನು ಮಾನ್ಯ ಮಾಡಿದ ನವ್ಯ ವಿಮರ್ಶಕರಲ್ಲಿ ಒಬ್ಬನಾದ ವಿಮ್‌ಸ್ಯಾಟ್ (Wimsat) ‘ಉದ್ದೇಶ ಭ್ರಮೆ’ (intentional Fallay) ಎಂಬ ಕಲ್ಪನೆಯನ್ನು ಚಲಾವಣೆಗೆ ತಂದು ಸಾಹಿತ್ಯ ವಿಮರ್ಶೆಯಲ್ಲಿ ‘ಲೇಖಕನ ಉದ್ದೇಶವೇನು?’ ಎಂಬ ಪ್ರಶ್ನೆಯೇ ಸಲ್ಲದು ಎಂದು ತೀರ್ಮಾನಿಸಿದರು.

ಕರ್ತೃನಿಷ್ಠ ವಿಮರ್ಶೆಯ ಒಂದು ದೊಡ್ಡ ದೌರ್ಬಲ್ಯವೆಂದರೆ, ‘ಕೃತಿ ಉದ್ದೇಶಪೂರ್ವಕವಾಗಿ ರೂಪಿಸಲ್ಪಟ್ಟ ರಚನೆ’ ಎಂಬ ತಾತ್ವಿಕ ನಂಬಿಕೆಯೇ. ಏಕೆಂದರೆ ಇಂದು ಸಾಮಾನ್ಯವಾಗಿ ಎಲ್ಲರೂ ಒಪ್ಪುವಂತೆ, ಸೃಜನಶೀಲ ಕಾರ್ಯದಲ್ಲಿ ಲೇಖಕನ ಜಾಗ್ರತಪ್ರಜ್ಞೆಗಿಂತ ಸುಪ್ತಪ್ರಜ್ಞೆಯ ಪ್ರಭಾವವೇ ಹೆಚ್ಚು. ಆದ್ದರಿಂದ ಒಂದು ಉತ್ತಮ ಕೃತಿ ಲೇಖಕನ ಉದ್ದೇಶವನ್ನು ಮೀರಿ ಬೇರೆಯೇ ರೂಪ, ಅರ್ಥಗಳನ್ನು ಪಡೆಯಬಹುದು. ಅಲ್ಲದೆ ‘ಲೇಖಕನ ಉದ್ದೇಶವು ಇದೇ; ಬೇರೆ ಅಲ್ಲ’ ಎಂದು ನಾವು ತಿಳಿಯುವುದು ಹೇಗೆ? ಲೇಖಕನೇ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದರೂ ಕೃತಿಯಲ್ಲಿ ಆ ಉದ್ದೇಶ ಸಾರ್ಥಕವಾಗದೇ ಇರಬಹುದು. ಈ ಎಲ್ಲಾ ಕಾರಣಗಳಿಂದ ಕರ್ತೃನಿಷ್ಠ ವಿಮರ್ಶೆಯಿಂದ ಒಂದು ಕೃತಿಯ ಅಭ್ಯಾಸಕ್ಕೆ ಮತ್ತು ವ್ಯಾಖ್ಯಾನಕ್ಕೆ ಅಷ್ಟೇನೂ ಪ್ರಯೋಜನವಾಗುವುದಿಲ್ಲವೆಂದು ತೋರುತ್ತದೆ.*

. ಮನೋವೈಜ್ಞಾನಿಕವಿಮರ್ಶೆ :

ಅರಿಸ್ಟಾಟಲ್‌ನ ‘ಶೋಧನೆ’ (Catharsisi) ಪರಿಕಲ್ಪನೆಯೇ ಸಾಹಿತ್ಯ ವಿಮರ್ಶೆ ಮತ್ತು ಮನಶ್ಯಾಸ್ತ್ರಗಳಿಗೆ ಸಂಬಂಧ ಕಲ್ಪಿಸಿದರೂ, ಇಂದು ಪ್ರಚಲಿತವಾಗಿರುವ ಮನೋವೈಜ್ಞಾನಿಕ ವಿಮರ್ಶೆ ೨೦ನೆಯ ಶತಮಾನದ ಕೊಡುಗೆ. ವಿಶೇಷವಾಗಿ ಸಿಗ್ಮಂಡ್ ಫ್ರಾಯ್ಡ್, ಯಾಂಗ್, ಆಡ್ಲರ್‌ಇತ್ಯಾದಿ ಮನೋವಿಜ್ಞಾನಿಗಳ ತತ್ವಗಳನ್ನು ಮತ್ತು ಸಿದ್ಧಾಂತಗಳನ್ನು ಆಧರಿಸಿ, ಅವುಗಳ ನೆಲೆಯಲ್ಲಿ ಸಾಹಿತ್ಯ ಕೃತಿಗಳನ್ನು ಅರ್ತೈಸುವ ವಿಧಾನ ಫ್ರಾಯ್ಡ್‌ವಾದಿ ವಿಮರ್ಶೆ, ನವಫ್ರಾಯ್ಡ್‌ವಾದಿ ವಿಮರ್ಶೆ, ಯೂಂಗ್‌ವಾದಿ ವಿಮರ್ಶೆ, ಚಿರಂತನ ಪ್ರತೀಕ ವಿಮರ್ಶೆ (Archetypal) ಇತ್ಯಾದಿ ಅನೇಕ ಕವಲುಗಳಲ್ಲಿ ಸಮೃದ್ಧವಾಗಿ ಬೆಳೆದಿದೆ. ಈ ವಿಮರ್ಶೆಯ ಒಂದು ಕವಲು ಕರ್ತೃನಿಷ್ಠ ವಿಮರ್ಶೆಯಾದರೆ ಮತ್ತೊಂದು ಕೃತಿನಿಷ್ಠವಾಗಿರುತ್ತದೆ. ಚಿರಂತನ ಪ್ರತೀಕ ವಿಮರ್ಶೆಯನ್ನು ಸ್ವತಂತ್ರವಾಗಿಯೇ ಚರ್ಚಿಸಬಹುದು.

ಮನೋವೈಜ್ಞಾನಿಕ ವಿಮರ್ಶೆಯ ಎಲ್ಲಾ ಪ್ರಕಾರಗಳೂ ಸಮಾನವಾಗಿರುವ ಸೈದ್ಧಾಂತಿಕ ನೆಲೆಗಳನ್ನು ಹೀಗೆ ಗುರುತಿಸಬಹುದು :

೧. ಕೃತಿ ನಿರ್ಮಾಣದಲ್ಲಿ ಲೇಖಕನ ಜಾಗ್ರತಪ್ರಜ್ಞೆಗಿಂತ ಸುಪ್ತಪ್ರಜ್ಞೆಯ ಪ್ರಭಾವ ಹೆಚ್ಚು.

೨. ಲೇಖಕನಿಗೂ ಮತ್ತು ಅವನಿಂದ ರಚಿಸಲ್ಪಟ್ಟ ಕೃತಿಗೂ ಘನಿಷ್ಠ ಸಂಬಂಧವಿದೆ.

೩. ಅಗಾಧವಾದ ಮಾನವ ಚಟುವಟಿಕೆಯ ಒಂದು ಭಾಗ ಸಾಹಿತ್ಯಿಕ ಚಟುವಟಿಕೆ. ಎಂದರೆ ಲೇಖಕನಿಂದ ನಿರ್ದೇಶಿಸಲ್ಪಟ್ಟ ಶಾಬ್ದಿಕ ವರ್ತನೆಯೂ ಒಂದು ವಿಧದ ಮಾನವ ವರ್ತನೆಯೇ. ಆದ್ದರಿಂದ ಮಾನವ ವರ್ತನೆಯನ್ನು ಅರ್ಥೈಸಲು ಉಪಯೋಗಿಸುವ ಜ್ಞಾನ ಹಾಗೂ ತಂತ್ರಗಳನ್ನು ಸಾಹಿತ್ಯ ವಿಮರ್ಶೆಯಲ್ಲಿಯೂ ಉಪಯೋಗಿಸಬಹುದು.

೪. (ಮೇಲೆ ಹೇಳಿದ ಕಾರಣಗಳಿಂದಾಗಿ) ಸಾಹಿತ್ಯ ವಿಮರ್ಶೆಯನ್ನೂ ವರ್ತನ ಶಾಸ್ತ್ರಗಳ (Behavioural Sciences) ಒಂದು ಭಾಗವೆಂದೇ ಪರಿಗಣಿಸಬೇಕು.

ಮನೋವೈಜ್ಞಾನಿಕ ವಿಮರ್ಶೆಯಲ್ಲಿ ನಾವು ಮೂರು ಸ್ವತಂತ್ರ ಮಾರ್ಗಗಳನ್ನು ಗುರುತಿಸಬಹುದು. i. ಸೃಷ್ಟಿಕ್ರಿಯೆಯನ್ನು ಮನಃಶಾಸ್ತ್ರೀಯ ಆಧಾರದಲ್ಲಿ ವ್ಯಾಖ್ಯಾನಿಸುವ ವಿಮರ್ಶೆ; ii. ಲೇಖಕನ ವ್ಯಕ್ತಿತ್ವದ ವಿಶ್ಲೇಷಣೆಯ ಆಧಾರದ ಮೇಲೆ ಅವನ ಕೃತಿಯನ್ನು ಅರ್ಥೈಸುವ ವಿಮರ್ಶೆ; iii. ಒಂದು ಕೃತಿಯಲ್ಲಿ ಕಂಡುಬರುವ ಘಟನೆಗಳನ್ನು ಮತ್ತು ಪಾತ್ರಗಳನ್ನು ಆಧುನಿಕ ಮನೋವೈಜ್ಞಾನಿಕ ಸಿದ್ಧಾಂತಗಳ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ವಿವರಿಸುವ ವಿಮರ್ಶೆ.

i. ಸೃಷ್ಟಿಕ್ರಿಯೆಯ ವ್ಯಾಖ್ಯಾನ :

ಈ ವರ್ಗದಲ್ಲಿ ನಾವು ಫ್ರಾಯ್ಡ್, ಯೂಂಗ್, ಐ.ಎ. ರಿಚರ್ಡ್ಸ್ ಮುಂತಾದವರ ವಿಚಾರಗಳನ್ನು ಕಾಣುತ್ತೇವೆ

ಕಲೆ ಮತ್ತು ಕಲಾಸೃಷ್ಟಿಯನ್ನು ಕುರಿತಾದ ಸಿಗ್ಮಂಡ್ ಫ್ರಾಯ್ಡ್‌ನ ವಿಚಾರಗಳು ಸರಳ ಹಾಗೂ ಸೀಮಿತವಾಗಿವೆ. ಅವನ ದೃಷ್ಟಿಯಲ್ಲಿ ಕಲಾವಿದನಿಗೂ ಮನೋರೋಗಿಗೂ (neurotic) ಮೂಲಭೂತ ವ್ಯತ್ಯಾಸವೇನೂ ಇಲ್ಲ. ಇಬ್ಬರೂ ಹಗಲುಗನಸು ಕಾಣುವವರು, ಮತ್ತು ನಿಜ ಜೀವನದಲ್ಲಿ ತಮಗೆ ದೊರಕದ ತೃಪ್ತಿಯನ್ನು ತಮ್ಮ ಭ್ರಮಾಲೋಕ (World of Fantasy)ದಲ್ಲಿ ಪಡೆಯುತ್ತಾರೆ. ಎಂದರೆ ಕಲಾಸೃಷ್ಟಿ ಇಚ್ಛಾಪೂರ್ತಿ (Wish fulfillment)ಯ ಒಂದು ಪ್ರಕಾರ. ಕಲೆಯ ಉಗಮವನ್ನು ಫ್ರಾಯ್ಡ್ ಕಲಾವಿದನಲ್ಲಿರುವ ಮಾನವ ಸಹಜ ಆಸೆ-ಆಕಾಂಕ್ಷೆಗಳು ಮತ್ತು ಅವನ ಮೇಲಿರುವ ಸಾಮಾಜಿಕ – ನೈತಿಕ ನಿಯಂತ್ರಣ ಇವುಗಳ ಮಧ್ಯೆ ಉದ್ಭವಿಸುವ ಕರ್ಷಣದಲ್ಲಿ ಗುರುತಿಸುತ್ತಾನೆ. (ಆಡ್ಲರ್‌ಕೂಡ ಭಿನ್ನವಾದ ವೈಚಾರಿಕ ನೆಲೆಯಿಂದ ಹೊರಟರೂ ಕೊನೆಯಲ್ಲಿ ಕಲಾವಿದನಲ್ಲಿ ಅನಿವಾರ್ಯವಾಗುವ ಕರ್ಷಣವೇ ಕಲಾಸೃಷ್ಟಿಗೆ ಕಾರಣವೆಂದು ತೀರ್ಮಾನಿಸುತ್ತಾನೆ.)

ಆದರೆ ಮನೋರೋಗಿಗೂ ಮತ್ತು ಕಲಾವಿದನಿಗೂ ಒಂದು ಮುಖ್ಯ ವ್ಯತ್ಯಾಸವಿದೆ. ಮನೋರೋಗಿಯ ಭ್ರಮಾತ್ಮಕ ಕಲ್ಪನೆಗಳು ವೈಯಕ್ತಿಕ ನೆಲೆಯಲ್ಲಿಯೇ ಉಳಿದರೆ, ಕಲಾವಿದನು ತನ್ನ ವೈಯಕ್ತಿಕ ತುಡಿತದಿಂದಲೇ ಉಂಟಾದ ಭ್ರಮಾತ್ಮಕ ಕಲ್ಪನೆಗಳಿಗೆ ಸಾರ್ವತ್ರಿಕ ಪ್ರಸ್ತುತತೆಯನ್ನು ಕೊಡಲು ಶಕ್ತನಾಗುತ್ತಾನೆ. ಎಂದರೆ, ಕಲಾಸೃಷ್ಟಿಯ ಮೂಲಕ ಕಲಾವಿದ ತನ್ನ ಭ್ರಮಾಲೋಕವನ್ನು ಮೀರಿ ವಾಸ್ತವತೆಯೊಡನೆ ಸಂಪರ್ಕ ಸಾಧಿಸುತ್ತಾನೆ.

ಕಲೆಯ ಸ್ವರೂಪ, ಕಲಾಭಿವ್ಯಕ್ತಿಯ ರೀತಿ ಮತ್ತು ಕಲಾಕೃತಿಯ ಮಹತ್ವ – ಇವುಗಳನ್ನು ಕುರಿತಾದ ಕಾರ್ಲ್‌ಯೂಂಗ್‌ನ ವಿಚಾರಗಳು ಅತ್ಯಂತ ಮೌಲಿಕವಾಗಿವೆ. ಅವನ ಪ್ರಕಾರ ಪ್ರತಿಯೊಬ್ಬನ ಮಾನಸಿಕ ವ್ಯಕ್ತಿತ್ವವೂ (Self) ಪರಸ್ಪರ ವಿರುದ್ಧವಾದ ಎರಡು ‘ಮನಃಪ್ರವೃತ್ತಿ’ಗಳಿಂದ (attitude) ರೂಪಿಸಲ್ಪಟ್ಟಿದೆ. ಇವೆರಡು ವಿರುದ್ಧ ಪ್ರವೃತ್ತಿಗಳನ್ನು ಯೂಂಗ್‌‘ಅಂತರ್ಮುಖತೆ’ (Introversion) ಮತ್ತು ‘ಬಹಿರ್ಮುಖತೆ’ (Extroversion) ಎಂದು ಗುರುತಿಸುತ್ತಾನೆ. ಈ ಜಗತ್ತಿನ ಮಾನವ ವ್ಯಾಪಾರಗಳಲ್ಲಿ ಕಂಡುಬರುವ ‘ಜ್ಞಾತೃ x ಜ್ಞೇಯ’, ‘ವಿಚಾರ x ವಸ್ತು’, ‘ಆಲೋಚನೆ x ಅನುಭವ’ ಇತ್ಯಾದಿ ದ್ವಂದ್ವಗಳ ಮೂಲ ಈ ಮನಃಪ್ರವೃತ್ತಿಗಳೇ. ಈ ಸಂದರ್ಭದಲ್ಲಿ ಯೂಂಗ್‌ನ ಮುಖ್ಯ ಸಿದ್ಧಾಂತವೇನೆಂದರೆ, ನಾವು ಯಾವುದನ್ನು ‘ಚಿರಸತ್ಯ’ (living reality) ಎಂದು ಗುರುತಿಸುತ್ತೇವೆಯೋ ಅದು ಮೇಲೆ ಹೇಳಿದ ಪರಸ್ಪರ ವಿರುದ್ಧ ಹಾಗೂ ದ್ವಂದ್ವಾತ್ಮಕ ಮನಃಪ್ರವತ್ತಿಗಳನ್ನು ಒಂದಾಗಿ ಬೆಸೆಯುವ, ಅವುಗಳ ನಡುವೆ ಇರುವ ವ್ಯತ್ಯಾವನ್ನು ಇಲ್ಲವಾಗಿಸುವ ಚೈತನ್ಯಪೂರ್ಣ ಕ್ರಿಯೆಯ ಫಲ. ಸದಾ ಸೃಜನಶೀಲವಾದ ಇಂತಹ ಚೈತನ್ಯಪೂರ್ಣ ಕ್ರಿಯೆಯನ್ನು ಯೂಂಗ್‌‘ಫ್ಯಾಂಟಸಿ’ ಎಂದು ಕರೆಯುತ್ತಾನೆ; ಮತ್ತು ಅದರಲ್ಲಿ ‘ಕ್ರಿಯಾಶೀಲ’ (active) ಮತ್ತು ‘ಜಡ’ (passive) ಎಂದು ಎರಡು ಪ್ರಕಾರಗಳನ್ನು ಗುರುತಿಸುತ್ತಾನೆ.

ಕಲಾಸೃಷ್ಟಿಯ ಉಗಮವಾಗುವುದು ಕ್ರಿಯಾಶೀಲ ಫ್ಯಾಂಟಸಿಯಲ್ಲಿ. ಈ ಪ್ರಕಾರದ ಫ್ಯಾಂಟಸಿಯ ಮೂಲಕ ವೈಯಕ್ತಿಕತೆಯನ್ನು ಮೀರಿ ಸಾರ್ವತ್ರಿಕತೆ ಹಾಗೂ ಸಾರ್ವಕಾಲಿಕತೆಗಳನ್ನು ಸಾಧಿಸಲು ಕಲಾವಿದನಿಗೆ ಸಾಧ್ಯವಾಗುತ್ತದೆ. ಹೇಗೆಂದರೆ, ವೈಯಕ್ತಿಕ ನೆಲೆಯಲ್ಲಿರುವ ಆದಿಮ ಪ್ರತಿಮೆಗಳನ್ನು (Primordial Images) ಹಾಗೂ ಸಹಜ ಭಾವನೆಗಳನ್ನು (instinctive feeings) ಮತ್ತು ಹೊರಜಗತ್ತಿನ ಸಂಪರ್ಕದಿಂದುದ್ಭವಿಸಿದ ಅನುಭವಗಳನ್ನು ಒಂದುಗೂಡಿಸಿ ಅವುಗಳಿಗೆ ಒಂದು ವಿಶಿಷ್ಟ ರೂಪವನ್ನು ಕೊಡುವುದೇ ಕಲೆಯ ಕಾರ್ಯ. ವೈಯಕ್ತಿಕ ತುಡಿತಗಳಿಂದುದ್ಭವಿಸಿದ ಒಂದು ಕಲಾಕೃತಿಗೆ ಸಾರ್ವತ್ರಿಕ ಪ್ರಾಮುಖ್ಯ ಬರುವುದು ಆ ಕಲಾಕೃತಿಯು ಒಳಗೊಂಡಿರುವ ಧ್ವನಿಶಕ್ತಿ ಮತ್ತು ಸಾಂಕೇತಿಕತೆಯಿಂದ. ಆದ್ದರಿಂದ ಯೂಂಗ್‌ನ ದೃಷ್ಟಿಯಲ್ಲಿ ಆದಿಮ ಪ್ರತಿಮೆ ಮತ್ತು ಪ್ರತೀಕಗಳು ಹಾಗೂ ನಾನಾ ಸ್ತರಗಳಲ್ಲಿರುವ ರೂಪಕಗಳು ಮತ್ತು ಸಂಕೇತಗಳು ಒಂದು ಉತ್ತಮ ಕಲಾಕೃತಿಯ ಅವಿಭಾಜ್ಯ ಅಂಗಗಳು.

ಮನೋವೈಜ್ಞಾನಿಕ ನೆಲೆಯಲ್ಲಿ ಕಲಾನುಭವವನ್ನು ಐ.ಎ. ರಿಚರ್ಡ್ಸ್ ಅತ್ಯಂತ ಸಮರ್ಥವಾಗಿ ವರ್ಣಿಸುತ್ತಾನೆ. ಈ ಸಂದರ್ಭದಲ್ಲಿ ರಿಚರ್ಡ್ಸ್ ರೂಪಿಸುವ ‘ಸೈನೀಸ್ಥೆಸಿಸ್’ (synaesthesis) ಪರಿಕಲ್ಪನೆಯನ್ನು ಹೀಗೆ ವಿವರಿಸಬಹುದು. ನಮ್ಮ ಬದುಕಿನಲ್ಲಿ ಉಂಟಾಗುವ ಪ್ರತಿಯೊಂದು ಅನುಭವವೂ ಭಿನ್ನ ಭಿನ್ನ ಆವೇಗ (impulse) ಗಳನ್ನು ಒಳಗೊಂಡಿರುತ್ತದೆ ಮತ್ತು ಅವುಗಳನ್ನು ಪ್ರಚೋದಿಸುತ್ತದೆ. ಆದರೆ ಕಲಾಕೃತಿಯಿಂದುಂಟಾದ ಸೌಂದರ್ಯಾನುಭೂತಿಯಲ್ಲಿ ಇಂತಹ ಪರಸ್ಪರ ವಿರುದ್ಧ ಹಾಗೂ ಭಿನ್ನ ಭಿನ್ನ ಆವೇಗಗಳು ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜಿಸ್ಲಪಟ್ಟಿರುತ್ತವೆ. ಇಂತಹ ಸಂಯೋಜನೆಯಲ್ಲಿ ವಿರುದ್ಧ ಆವೇಗಗಳು ದಮನಗೊಳ್ಳುವ ಬದಲು ತಮ್ಮ ಪೂರ್ಣ ಪ್ರಮಾಣದಲ್ಲಿ ಪ್ರಚೋದಿಸಲ್ಪಟ್ಟಿರುತ್ತವೆ; ಮತ್ತು ಅವುಗಳ ಪ್ರಚೋದನೆಯಿಂದಲೇ ಮಾನಸಿಕವಾಗಿ ಒಂದು ವಿಧದ ಸಮತೋಲನ ಸ್ಥಿತಿ ಓದುಗರಿಗೆ, ಪ್ರೇಕ್ಷಕರಿಗೆ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ನಮ್ಮ ಪ್ರವೃತ್ತಿ ಒಂದೇ ದಿಕ್ಕಿನಲ್ಲಿ ಪ್ರವಹಿಸುವುದಿಲ್ಲ ಮತ್ತು ನಮ್ಮಲ್ಲಿ ಒಂದು ವಿಧದ ‘ಅನಾಸಕ್ತಿ’ ಅಥವಾ ‘ನಿರ್ಲಿಪ್ತ’ (detachment) ಭಾವನೆಯಿರುತ್ತದೆ. ಇಂತಹ ನಿರ್ಲಿಪ್ತ ಸಮತೋಲನ ಸ್ಥಿತಿಯೇ ನಮ್ಮಲ್ಲಿ ಸೌಂದರ್ಯಾನುಭೂತಿಯನ್ನುಂಟುಮಾಡಿ ವಿಶಿಷ್ಟ ಆನಂದವನ್ನು ನಮಗೆ ಕೊಡುತ್ತದೆ (೧೯೨೬ : ೨೪೯-೫೧). ರೇನಿಯರ್ ನೋಲಿ (Gnoli, 1956) ಎಂಬ ಇಟಾಲಿಯನ್ ವಿಮರ್ಶಕರು ಅಭಿನವ ಗುಪ್ತನ ‘ರಸಾನುಭವ’ದ ಕಲ್ಪನೆಯನ್ನು ಹೆಚ್ಚು ಕಮ್ಮಿ ಇದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾನೆ.

ii. ಲೇಖಕನ ವ್ಯಕ್ತಿತ್ವ ವಿಶ್ಲೇಷಣೆ :

ಇಂತಹ ವಿಮರ್ಶೆ ಲೇಖಕನ ವ್ಯಕ್ತಿತ್ವಕ್ಕೂ ಮತ್ತು ಅವನಿಂದ ರಚಿಸಲ್ಪಟ್ಟ ಕೃತಿಗಳಿಗೂ ಘನಿಷ್ಠ ಸಂಬಂಧವಿದೆಯೆಂಬ ವೈಚಾರಿಕ ನೆಲೆಯಲ್ಲಿ ಕೆಲಸ ಮಾಡುತ್ತದೆ. ಕರ್ತೃನಿಷ್ಠ ವಿಮರ್ಶೆ ಇದೇ ನೆಲೆಯಿಂದ ಹೊರಟರೂ ಅದು ಲೇಖಕನ ಬಾಹ್ಯ ಸಾಮಾಜಿಕ ವ್ಯಕ್ತಿತ್ವವನ್ನು ವಿಶ್ಲೇಷಿಸಿದರೆ, ಮನೋವೈಜ್ಞಾನಿಕ ವಿಮರ್ಶೆ ಲೇಖಕನ ಆಂತರಿಕ ಮಾನಸಿಕ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತದೆ. ಕರ್ತೃನಿಷ್ಠ ವಿಮರ್ಶೆ ಲೇಖಕನಿಂದ ಕೃತಿಗೆ ನಡೆದರೆ ಮನೋವೈಜ್ಞಾನಿಕ ವಿಮರ್ಶೆ ಕೃತಿಯ ಮೂಲಕ ಕೃತಿಕಾರನನ್ನು ಅರ್ಥೈಸುತ್ತದೆ.

ಇಂತಹ ಮನೋವೈಜ್ಞಾನಿಕ ವಿಮರ್ಶೆ ಕೃತಿಕಾರನಿಗೂ ಕೃತಿಗೂ ಇರುವ ಸಂಬಂಧವನ್ನು ಒಬ್ಬ ಮನೋರೋಗಿಗೂ ಅವನ ಸ್ವಪ್ನಗಳಿಗೂ ಇರುವ ಸಂಬಂಧಕ್ಕೆ ಸಮಾನವೆಂದು ಪರಿಗಣಿಸುತ್ತದೆ. ಈ ಸಂದರ್ಭದಲ್ಲಿ ವಿಮರ್ಶಕನು ಮನೋ ವಿಜ್ಞಾನಿಯ ಪಾತ್ರ ವಹಿಸುತ್ತಾನೆ. ಸ್ವಪ್ನ ವಿಶ್ಲೇಷಣೆಯಲ್ಲಿ ಫ್ರಾಯ್ಡ್ ಬಳಸುವ ‘ವರ್ಗಾವಣೆ’ (Transference), ‘ಸಾಂದ್ರೀಕರಣ’ (Condensation), ‘ಸಾಂಕೇತಿಕತೆ’ (Symbolism) ಮುಂತಾದ ತತ್ವಗಳನ್ನು ವಿಮರ್ಶಕ ಕೃತಿಗೆ ಅನ್ವಯಿಸಿ, ಆ ಮೂಲಕ ಕೃತಿಕಾರನ ಸುಪ್ತಚಿತ್ತದಲ್ಲಿ ಹುದುಗಿರಬಹುದಾದ ನಾರ್ಸಿಸಸ್ ಕಾಂಪ್ಲೆಕ್ಸ್, ಈಡಿಪಸ್ ಕಾಂಪ್ಲೆಕ್ಸ್ ಇತ್ಯಾದಿ ಮನೋವಿಕಾರಗಳನ್ನು ಗುರುತಿಸುತ್ತಾನೆ. ಇಂತಹ ವಿಶ್ಲೇಷಣೆಯಲ್ಲಿ ವಿಮರ್ಶಕನ ಒತ್ತು ಸಹಜವಾಗಿಯೇ ಕೃತಿಕಾರನ ಬಾಲ್ಯ ಹಾಗೂ ಶೈಶವಾವಸ್ಥೆಗಳ ಮೇಲೆ ಬೀಳುತ್ತದೆ. ವಿಶ್ಲೇಷಣೆಯಿಂದ ದೊರಕಿದ ಜ್ಞಾನದ ಆಧಾರದ ಮೇಲೆ ಮತ್ತೆ ವಿಮರ್ಶಕ ಕೃತಿಕಾರನ ಕೃತಿಗಳನ್ನು ಅರ್ಥೈಸುತ್ತಾನೆ.

ಇಂತರ ಕರ್ತೃಕೇಂದ್ರಿತ ಮನೋವೈಜ್ಞಾನಿಕ ವಿಮರ್ಶೆಯ ಪ್ರಾರಂಭವಾದದ್ದು ಫ್ರಾಯ್ಡ್‌ನ ‘ಲೆನಾರ್ಡೊ ಡ ವಿಂಚಿ’ (೧೯೧೦) ಕೃತಿಯಿಂದ. ಹಾಗೆಯೇ, ಶೇಕ್ಸ್‌ಇಯರ್ ಮತ್ತು ದೊಸ್ತೋವ್‌ಸ್ಕಿಯವರ ಕೃತಿಗಳಲ್ಲಿ ಅತೃಪ್ತ ಕಾಮ, ನಿಷಿದ್ಧ ಲೈಂಗಿಕ ಪ್ರವೃತ್ತಿಗಳ ಅಭಿವ್ಯಕ್ತಿಯನ್ನೂ ಅವನು ಗುರುತಿಸಿದ್ದಾನೆ. ಅವನ ನಂತರ ಈ ಕ್ಷೇತ್ರದಲ್ಲಿ ಬಂದ ಪ್ರಮುಖ ವಿಮರ್ಶಕರೆಂದರೆ ವ್ಯಾನ್ ವಿಕ್‌ಬ್ರೂನ್ಸ್ (The Ordeal of Mark Twain ಮತ್ತು The Pilgrimage of Henry James), ಹರ್ಬರ್ಟ್‌‌ರೀಡ್ (Wordsworth : The Man and The Mask), ಎಡ್ಮಂಡ್ ವಿಲ್ಸನ್ (The Wound and the Bow)  ಇತ್ಯಾದಿ. ಅಮೇರಿಕದ ಭೌತಿಕವಾದದಿಂದ ಹೇಗೆ ಟ್ವೇನ್‌ನ ಕಲಾಪ್ರತಿಭೆ ಸೊರಗಿತೆಂದೂ, ಮೇಳುವರ್ಗದ ಮೌಲ್ಯಗಳನ್ನು ಅವನ ಮೇಲೆ ಹೇರಿದ ಅವನ ತಾಯಿ ಮತ್ತು ಅವನ ಪತ್ನಿ ಅವರ ಪ್ರಭಾವದಿಂದ ಹೇಗೆ ಟ್ವೇನ್ ಹತಾಶೆಯ ಅಂಚಿಗೆ ದೂಡಲ್ಪಟ್ಟು ಸಿನಿಕನಾದನೆಂದೂ ಅವನ ವ್ಯಕ್ತಿತ್ವವನ್ನು ಬ್ರೂಕ್ಸ್ ವಿಶ್ಲೇಷಿಸುತ್ತಾನೆ. ಹರ್ಬರ್ಟ್ ರೀಡ್ ತನ್ನ ವರ್ಡ್ಸ್‌ವರ್ತ್‌ನ ಅಧ್ಯಯನದಲ್ಲಿ ವರ್ಡ್ಸ್‌ವರ್ತ್ ಮತ್ತು ಫ್ರೆಂಚ್ ಹುಡುಗಿಯೊಬ್ಬಳ (Annette Vallon) ನಡುವಿನ ವಿಫಲ ಪ್ರೇಮಕ್ಕೆ ಮಹತ್ವ ಕೊಟ್ಟು ಆ ವಿಫಲ ಪ್ರೇಮದ ಹಿನ್ನೆಲೆಯಲ್ಲಿ ವರ್ಡ್ಸ್‌ವರ್ತ್‌ನ ಲೂಸಿ ಪದ್ಯಗಳ ಮೇಲೆ ವಿಶೇಷ ಬೆಳಕು ಚೆಲ್ಲುತ್ತಾನೆ. ಜಾನ್ ಮಿಡ್ಲ್‌ಟನ್ ಮರಿಯು ಡಿ.ಎಚ್. ಲಾರೆನ್ಸ್‌ನನ್ನು ಕುರಿತು ಬರೆದ ‘ತಾಯಿಯ ಮಗ’ (The Son of Woman – The Story of D.H. Lawrence) ಎಂಬ ಕೃತಿಯೂ ಈ ದೃಷ್ಟಿಯಿಂದ ಕುತೂಹಲಕರವಾಗಿದೆ.

iii. ಪಾತ್ರ ವಿಶ್ಲೇಷಣೆ :

ಈ ವಿಮರ್ಶಾ ಕ್ರಮದಲ್ಲಿ ವಿಮರ್ಶಕನು ನಿಜಜೀವನದ ವ್ಯಕ್ತಿಗಳನ್ನು ವಿಶ್ಲೇಷಿಸುವಂತೆಯೇ ಒಂದು ಸಾಹಿತ್ಯ ಕೃತಿಯಲ್ಲಿ ಬರುವ ಪಾತ್ರಗಳನ್ನು ಮತ್ತು ಅವುಗಳ ವರ್ತನೆಯನ್ನು ಆಧುನಿಕ ಮನೋವೈಜ್ಞಾನಿಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುತ್ತಾನೆ. ಇಂತಹ ವಿಮರ್ಶಾ ಮಾರ್ಗದ ಅತಿ ಪ್ರಸಿದ್ಧ ಉದಾಹರಣೆಯೆಂದರೆ ೧೯೧೦ ರಲ್ಲಿ ಅರ್ನೆಸ್ಟ್ ಜೋನ್ಸ್ ಮಂಡಿಸಿದ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ಪಾತ್ರದ ವಿಶ್ಲೇಷಣೆ (Handy and Westbrokk, 1974). ಹ್ಯಾಮ್ಲೆಟ್ ತನ್ನ ಕರ್ತವ್ಯದಲ್ಲಿ ಮತ್ತೆ ಮತ್ತೆ ಏಕೆ ಹಿಂಜರಿಯುತ್ತಾನೆ – ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಜೋನ್ಸ್‌ಆ ತನಕ ಸಾಹಿತ್ಯ ವಿಮರ್ಶಕರು ದಾಖಲಿಸಿದ ಉತ್ತರಗಳನ್ನೆಲ್ಲ ತಿರಸ್ಕರಿಸಿ, ಹ್ಯಾಮ್ಲೆಟ್‌ನ ಕರ್ತವ್ಯ ವಿಮುಖತೆಗೆ ಕಾರಣ ಅವನ ಸುಪ್ತಚಿತ್ತದಲ್ಲಿರುವ ಈಡಿಪಸ್ ಮನೋವಿಕಾರ ಎಂದು ವಾದಿಸುತ್ತ, ಅವನ ಮಾನಸಿಕ ಸ್ಥಿತಯನ್ನು “manic depressive hysteria combined with an ‘abulia’ traceable to repressed Oedipal feellings” ಎಂದು ತೀರ್ಮಾನಿಸುತ್ತಾನೆ.

ಜೋನ್ಸ್ ತನ್ನ ವಿಶ್ಲೇಷಣೆಗೆ ಫ್ರಾಯ್ಡ್‌ನ ಮಾದರಿಯನ್ನು ಅನುಸರಿಸಿದರೂ, ಈ ಮಾರ್ಗಕ್ಕೆ ಸೇರುವ ಇಂದಿನ ಅನೇಕ ವಿಮರ್ಶಕರು ವಿಶೇಷವಾಗಿ ಯೂಂಗ್‌ನ ಹಾಗೂ ನವಫ್ರಾಯ್ಡ್‌ವಾದಿಗಳೆಂದು ಕರೆಯಲ್ಪಡುವ ಎರಿಕ್‌ಫ್ರಾಮ್, ಎರಿಕ್ ಎರಿಕ್‌ಸನ್ ಮುಂತಾದವರ ಸಿದ್ಧಾಂತಗಳನ್ನು ತಮ್ಮ ಪಾತ್ರ ವಿಶ್ಲೇಷಣೆಯಲ್ಲಿ ಉಪಯೋಗಿಸಿಕೊಂಡಿದ್ದಾರೆ. ಇಂತಹ ಸಿದ್ಧಾಂತಗಳಲ್ಲಿ ಯೂಂಗ್ ರೂಪಿಸಿದ ‘ಮುಖವಾಡ’ (Persona), ‘ಪ್ರೇಕ್ಷೇಪಣ’ (Projection), ‘ಛಾಯೆ’ (Shadow), ‘ಅನಿಮಾ’ (ಗಂಡಿನಲ್ಲಿಯ ಹೆಣ್ತನ), ‘ಅನಿಮಸ್’ (ಹೆಣ್ಣಿನಲ್ಲಿಯ ಗಂಡುತನ), ‘ಪ್ರತಿರೂಪ) (the Double) ಮುಂತಾದವು ಮತ್ತು ನವಫ್ರಾಯ್ಡ್‌ವಾದಿಗಳು ರೂಪಿಸಿದ ‘ದೀಕ್ಷೆ’ (Initiation), ‘ವ್ಯಕ್ತೀಕರಣ’ (Individuation), ‘ಪ್ರಮಾಣ ನಿರಾಕರಣ’ (Rejection of Authority), ‘ನೈಚ್ಯತಾ ಮನೋವಿಕಾರ’ (Inferiority complex) ಇತ್ಯಾದಿಗಳು ಪ್ರಮುಖ ಪರಿಕಲ್ಪನೆಗಳು. ಈ ಪರಿಕಲ್ಪನೆಗಳ ಆಧಾರದ ಮೇಲೆ ನಾರ್ಮನ್ ಹಾಲಂಡ್, ಹಾಫ್‌ಮನ್, ಸೈಮನ್ ಲೆಸರ್ ಮುಂತಾದವರು ಛಾಸರ್‌ನ ‘ಕ್ಯಾಂಟರ್‌ಬರಿ ಟೇಲ್ಸ್’ ಕೃತಿಯಿಂದ ಹಿಡಿದು ಈ ಶತಮಾನದ ಹಾಥಾರ್ನ್‌ನ ಕಥೆಗಳವರೆಗೆ ಸಾಹಿತ್ಯಿಕ ಪಾತ್ರಗಳನ್ನು ಮತ್ತು ಅವುಗಳ ವರ್ತನೆಯನ್ನು ವಿಫುಲವಾಗಿ ಚರ್ಚಿಸಿದ್ದಾರೆ.

ಆದರೆ, ಒಟ್ಟಿನಲ್ಲಿ ಸಾಹಿತ್ಯ ವಿಮರ್ಶೆಗೆ ಆಧುನಿಕ ಮನೋವೈಜ್ಞಾನಿಕ ಕೊಡುಗೆಯನ್ನು ಪರೀಕ್ಷಿಸಿದರೆ ಆ ವಿಮರ್ಶಾಕ್ರಮದ ಸಾಧನೆಗಳಿಗಿಂತ ಮಿತಿಗಳೇ ಹೆಚ್ಚಾಗಿ ಕಂಡುಬರುತ್ತವೆ. ಅದರ ಮಿತಿಗಳಿಗೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ, ಇಂತಹ ವಿಮರ್ಶೆಗೆ ಆಧುನಿಕ ಮನೋವಿಜ್ಞಾನದಲ್ಲಿ ಮಾತ್ರವಲ್ಲ, ಸಾಹಿತ್ಯ ಕ್ಷೇತ್ರದಲ್ಲಿಯೂ ವಿಮರ್ಶಕನಿಗೆ ಅಪಾರ ಪಾಂಡಿತ್ಯವಿರಬೇಕಾಗುತ್ತದೆ. ಇವೆರಡೂ ಒಬ್ಬ ವ್ಯಕ್ತಿಯಲ್ಲಿ ಒಂದುಗೂಡುವುದು ಅಪರೂಪ. ಈ ವಿಷಯದಲ್ಲಿ ನಾರ್ಮನ್ ಹಾಲಂಡ್, ಎಡ್ಮಂಡ್ ವಿಲ್ಸನ್‌ರಂಥವರು ವಿರಳ. ಆದ್ದರಿಂದ ಸಾಧಾರಣವಾಗಿ ಮನೋವೈಜ್ಞಾನಿಕ ಸಿದ್ಧಾಂತಗಳಿಗೆ ಕೃತಿಕಾರ ಹಾಗೂ ಕೃತಿಗಳು ಕೇವಲ ನಿದರ್ಶನಗಳಾಗಿಬಿಡುವ ಸಂದರ್ಭವೇ ಹೆಚ್ಚು.

ಎರಡನೆಯದಾಗಿ, ಸ್ವತಃ ಹರ್ಬರ್ಟ್ ರೀಡ್ ಒಪ್ಪುವಂತ, ಮನೋವಿಜ್ಞಾನದ ಗುರಿ ಮಾನಸಿಕ ಕ್ರಿಯೆಗಳ ಪ್ರಕ್ರಿಯೆಯಾಗಿದ್ದರೆ, ಸಾಹಿತ್ಯ ವಿಮರ್ಶೆಯ ಗುರಿ ಮಾನಸಿಕ ಕ್ರಿಯೆಗಳ ಫಲ. ಮನೋವಿಜ್ಞಾನಿಗೆ ಸಾಹಿತ್ಯ ಕ್ರಿಯೆಯೂ ಇತರ ಮಾನಸಿಕ ಕ್ರಿಯೆಗಳಲ್ಲಿ ಒಂದು; ಅದಕ್ಕೆ ಅವನು ಹೆಚ್ಚೇನೂ ಮಹತ್ವ ಕೊಡುವುದಿಲ್ಲ. ಅಲ್ಲದೆ ಮನೋವಿಜ್ಞಾನಿಕ ಸಾಹಿತ್ಯ ಕೃತಿಗಳಲ್ಲಿ ತರ-ತಮ ವ್ಯತ್ಯಾಸವನ್ನಾಗಲೀ, ಮೌಲ್ಯಮಾಪನೆಯನ್ನಾಗಲೀ ಒಪ್ಪುವುದಿಲ್ಲ. ಆದ್ದರಿಂದ ಮನೋವೈಜ್ಞಾನಿಕ ವಿಮರ್ಶಕ ಶೇಕ್ಸ್‌ಪಿಯರ್‌ನ ನಾಟಕಗಳನ್ನು ಇತರ ಸಾಮಾನ್ಯ ದರ್ಜೆಯ ನಾಟಕಗಳಂತೆಯೇ ವಿಶ್ಲೇಷಿಸುತ್ತಾನೆ.

ಮೂರನೆಯದಾಗಿ, ಮನೋವೈಜ್ಞಾನಿಕ ವಿಮರ್ಶೆಯಲ್ಲಿ ಸಾಹಿತ್ಯಕೃತಿಗಳಿಗೇ ವಿಶಿಷ್ಟವಾದ, ಅರ್ಥಪೂರ್ಣ ಶಿಲ್ಪ ಹಾಗೂ ವಿನ್ಯಾಸಗಳಿಗೆ ಏನೂ ಸ್ಥಾನವಿಲ್ಲ. ಎಂದರೆ ಮನೋವೈಜ್ಞಾನಿಕ ವಿಮರ್ಶಕನಿಗೆ ಸಾಹಿತ್ಯ ಕೃತಿಗಳೆಲ್ಲವೂ ‘ಕೇಸ್ ಹಿಸ್ಟರಿ’ಗಳಾಗಿ ಬಿಡುವ ಅಪಾಯವಿದೆ. ಆಡ್ಲರ್ ಒಂದು ಕಡೆ ಹೀಗೆ ಹೇಳುತ್ತಾನೆ ; “ಒಂದು ಕಲಾಕೃತಿಯ ಆಕರ್ಷಣೆ ಅದರ ಸಂಯೋಜನೆಯಲ್ಲಿರುತ್ತದೆ. ಆದರೆ ಮನೋವೈಜ್ಞಾನಿಕ ವಿಶ್ಲೇಷಣೆ ಅಂತಹ ವಿಶಿಷ್ಟ ಸಂಯೋಜನೆಯನ್ನೇ ನಷ್ಟಗೊಳಿಸುತ್ತದೆ”.

ಇಂತಹ ಮಿತಿಗಳನ್ನ ಒಪ್ಪಿಕೊಂಡೂ, ನಾವೂ ಆಧುನಿಕ ಮನೋವಿಜ್ಞಾನವು ಸಾಹಿತ್ಯಕ್ಷೇತ್ರಕ್ಕೆ ಅನೇಕ ಅಮೂಲ್ಯ ಒಳನೋಟಗಳನ್ನು ಕೊಟ್ಟಿದೆ ಮತ್ತು ಕೊಡಬಲ್ಲದು ಎಂದು ಮಾನ್ಯ ಮಾಡಬಹುದು. ಸಾಹಿತ್ಯಾಭಿವ್ಯಕ್ತಿಯೂ ಒಂದು ಮಾನಸಿಕ ವ್ಯಾಪಾರವಾದುದರಿಂದ ಮನೋವೈಜ್ಞಾನಿಕ ವಿಶ್ಲೇಷಣೆಗೆ ಸಾಹಿತ್ಯ ವಿಮರ್ಶೆಯಲ್ಲಿ ಯಾವಾಗಲೂ ಸ್ಥಾನವಿದ್ದೇ ಇದೆ. ಸಾಹಿತ್ಯಸೃಷ್ಟಿ ಹಾಗೂ ಅಭಿವ್ಯಕ್ತಿಯನ್ನು ಕುರಿತು ಯೂಂಗ್, ಐ.ಎ. ರಿಚರ್ಡ್ಸ್ ಮುಂತಾದವರು ಮಂಡಿಸಿರುವ ವಿಚಾರಗಳು ಮತ್ತು ಅನೇಕ ಕೃತಿಗಳಲ್ಲಿ ಕಂಡುಬರುವ ಅಸ್ಪಷ್ಟ ಸಂಗತಿಗಳಿಗೆ ಹಾಗೂ ಪ್ರತಿಮೆಗಳಿಗೆ ಹರ್ಬರ್ಟ್ ರೀಡ್, ಎಡ್ಮಂಡ್ ವಿಲ್ಸನ್‌, ಲೆಸರ್ ಮೊದಲಾದವರು ಮಾಡಿರುವ ವ್ಯಾಖ್ಯಾನಗಳು ಮೌಲಿಕವಾಗಿವೆ.

* * *

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


* ಈ ಬಗೆಯ ಕರ್ತೃನಿಷ್ಠ ಅಥವಾ ಜೀವನಚರಿತ್ರಾತ್ಮಕ ವಿಮರ್ಶೆಯ ಒಂದು ವಿಧಾನ ‘ವಿದ್ಯಮಾನವಾದಿ ವಿಮರ್ಶೆ’ (Phenomenological Criticism) ಎಂಬ ಹೆಸರಿನಲ್ಲಿ ಬಂದಿದೆ. ಇದನ್ನು ಆರಂಭಿಸಿದವನು ಹುಸರ್ಲ್‌ಎಂಬ ಜರ್ಮನ್ ತತ್ವಜ್ಞಾನಿ. ಸಾಹಿತ್ಯ ವಿಮರ್ಶೆಯ ಮಾರ್ಗವೆಂದು ವಿದ್ಯಮಾನವಾದ ಜಿನೇವಾ ಪಂಥದ ವಿಮರ್ಶಕರೊಂದಿಗೆ – ವಿಶೇಷವಾಗಿ ಚಾರ್ಜಿಸ್ ಪೌಲೆಟ್‌ನ ಹೆಸರಿನೊಂದಿಗೆ – ಸೇರಿಕೊಂಡಿದೆ. ಇದರ ಮುಖ್ಯ ಗ್ರಹಿಕೆಯೆಂದರೆ, ವಿಮರ್ಶಕ ಎಲ್ಲ ಪೂರ್ವಾಗ್ರಹಗಳಿಂದ ಮುಕ್ತವಾಗಿ ಕೃತಿಯನ್ನು ಓದಬೇಕು, ಮತ್ತು ಅದರಲ್ಲಿ ಲೇಖಕನ ವಿಶಿಷ್ಟ ಪ್ರಜ್ಞೆಯ ಸ್ವರೂಪವನ್ನು ಗುರುತಿಸಬೇಕು ಎಂಬುದು. ಲೇಖಕನ ಮನಸ್ಸಿನಲ್ಲಿ ಅಡಗಿರುವ ಮತ್ತು ಸುಲಭವಾಗಿ ಗ್ರಾಹ್ಯವಾಗದ ದ್ರವ್ಯದ ಮೇಲೆಯೇ ಇದರ ಒತ್ತು. ಇದು ಸಾಂಪ್ರದಾಯಿಕ ಜೀವನಚರಿತ್ರಾತ್ಮಕ ವಿಮರ್ಶೆ ಮತ್ತು ಮನೋವೈಜ್ಞಾನಿಕ ವಿಮರ್ಶೆಗಳೆರಡರಿಂದಲೂ ಭಿನ್ನವಾಗಿದೆ. ಯುರೋಪಿನ ಹೊರಗೆ, ಇಂಗ್ಲೆಂಡ್, ಅಮೇರಿಕೆಗಳಲ್ಲಿ ಇದು ಅಷ್ಟಾಗಿ ಪ್ರಚಾರಕ್ಕೆ ಬರಲಿಲ್ಲ. ಜೆ. ಹಿಲಿಸ್ ಮಿಲರ್ ಆರಂಭದಲ್ಲಿ ಈ ಬಗೆಯ ವಿಮರ್ಶೆ ಬರೆದ ಅಮೆರಿಕನ್ ವಿಮರ್ಶಕ.
– ಸಂ.