. ನಿರಚನ ವಿಮರ್ಶೆ (Deconstruction)

ನಿರಚನ ವಿಮರ್ಶೆಯನ್ನು ಒಂದು ನೆಲೆಯಲ್ಲಿ ಅಮೇರಿಕನ್ ನವ್ಯ ವಿಮರ್ಶೆಯ ತಾರ್ಕಿಕ ತುದಿಯೆಂದೂ ಮತ್ತೊಂದು ನೆಲೆಯಲ್ಲಿ ನವ್ಯ ವಿಮರ್ಶೆಯ ಅತ್ಯಂತ ಪ್ರಬಲ ಟೀಕೆಯೆಂದೂ ಪರಿಗಣಿಸಬಹುದು. ಕಳೆದ ಶತಮಾನದ ಏಳನೆಯ ದಶಕದಿಂದ ಫ್ರಾನ್ಸ್ ಮತ್ತು ಅಮೇರಿಕಾಗಳಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಈ ಪ್ರಭಾವಶಾಲಿ ಚಿಂತನಾಮಾರ್ಗ ‘ರಾಚನಿಕೋತ್ತರ’ ವಿಮರ್ಶಾ ಮಾರ್ಗಗಳಲ್ಲಿ ಒಂದೆಂದು ಗುರುತಿಸಲ್ಪಡುತ್ತದೆ.

ಇನ್ನೂ ಮುಂದುವರಿಯುವ ಮೊದಲೇ ಒಂದೆರಡು ಅಂಶಗಳನ್ನು ಸ್ಪಷ್ಟಪಡಿಸಬೇಕು. ಇಂಗ್ಲಿಷ್‌ನ ‘Deconstruction’ ಶಬ್ದಕ್ಕೆ ಸಂವಾದಿಯಾಗಿ ನಾನು ‘ನಿರಚನ ವಿಮರ್ಶೆ’ ಎಂದು ಬಳಸಿದ್ದೇನಾದರೂ, ನಿರಚನ ಚಿಂತನೆ / ವಿಶ್ಲೇಷಣೆ ಮೂಲತಃ ಸಾಹಿತ್ಯೇತರ – ಮುಖ್ಯವಾಗಿ ತತ್ವಶಾಸ್ತ್ರದ ಕ್ಷೇತ್ರಕ್ಕೆ ಸಂಬಂಧಿಸಿದುದು; ಸಾಹಿತ್ಯ ವಿಮರ್ಶಕರು ಈ ಚಿಂತನೆಯನ್ನು ಅಥವಾ ಇಂತಹ ಚಿಂತನಾ ಮಾರ್ಗವನ್ನು ಸಾಹಿತ್ಯ ಕೃತಿಗಳ ಅಧ್ಯಯನಕ್ಕೆ ಅಳವಡಿಸಿಕೊಂಡಿದ್ದಾರೆ; ಅಷ್ಟೇ. ಎರಡನೆಯದಾಗಿ, ‘ಡಿಕನ್‌ಸ್ಟ್ರಕ್ಷನ್’ ಎನ್ನುವುದು ಒಂದು ಪ್ರಸ್ಥಾನವಲ್ಲ, ಒಂದು ವಿಧದ ವೈಚಾರಿಕತೆ. ಆದ್ದರಿಂದ ಸಾಹಿತ್ಯವೂ ಸೇರಿದಂತೆ ತತ್ವಶಾಸ್ತ್ರ ಇತಿಹಾಸ, ಸಮಾಜಶಾಸ್ತ್ರ ಇವೇ ಮುಂತಾದ ಯಾವ ಕ್ಷೇತ್ರದಲ್ಲಿಯೂ ನಾವು ‘ನಿರಚನ ಚಿಂತನೆ’ಯನ್ನು ಕಾಣಬಹುದು. (ಇಂದು ಪ್ರಖ್ಯಾತ ನಿರಚನ ಇತಿಹಾಸಜ್ಞರು, ನಿರಚನ ರಾಜಕೀಯ ಶಾಸ್ತ್ರಜ್ಞರು ಇದ್ದಾರೆ.) ಅಲ್ಲದೆ, ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಅತಿಮುಖ್ಯವಾದ ಅಂಶವೆಂದರೆ ನಿರಚನ ವಿಮರ್ಶೆ ಸಾಹಿತ್ಯದ ಅನನ್ಯತೆಯನ್ನೇ ನಿರಾಕರಿಸುತ್ತದೆ. ಭಾಷೆಯನ್ನು ಉಪಯೋಗಿಸುವ, ದುಡಿಸಿಕೊಳ್ಳುವ ಮತ್ತು ಭಾಷೆಯ ವ್ಯವಸ್ಥೆಯಿಂದ ನಿಯಂತ್ರಿತಗೊಳ್ಳುವ ಎಲ್ಲವೂ (ತತ್ವಶಾಸ್ತ್ರ ಇತಿಹಾಸ, ರಾಜಕೀಯ ಶಾಸ್ತ್ರ ಇತ್ಯಾದಿ) ಕೃತಿಗಳ (Texts). ಸಾಹಿತ್ಯಿಕ ಕೃತಿಗಳನ್ನು ಓದುವ ವಿಧಾನಗಳೇ ಸಾಹಿತ್ಯೇತರ ಕರತಿಗಳಿಗೂ ಅನ್ವಯವಾಗುತ್ತವೆ.

ನಿರಚನ ಚಿಂತನೆಯನ್ನು ಅಮೆರಿಕಾಕ್ಕೆ ಮೊಟ್ಟಮೊದಲು ಪರಿಚಯಿಸಿದ್ದು ಫ್ರೆಂಚ್ ತತ್ವಶಾಸ್ತ್ರಜ್ಞ ಜೆ. ಡೆರಿಡಾ. ೧೯೬೩ ರಲ್ಲಿ ಜಾನ್‌ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಡೆರಿಡಾ ಮಂಡಿಸಿದ ‘ಸಂಕಥನದಲ್ಲಿ ಮಾನವಶಾಸ್ತ್ರಗಳ ರಚನೆ, ಸಂಜ್ಞೆ ಮತ್ತು ಕಾರ್ಯ’ (‘Structure, Sign and Play in the Discourse of Human Sciences’) ಎಂಬ ಪ್ರಬಂಧ ಅಮೇರಿಕಾದ ಬೌದ್ಧಿಕ ವಾತಾವರಣವನ್ನೇ ಬದಲಾಯಿಸಿತು. ಅಲ್ಲಿಯ ತನಕ ರೂಢಿಗತವಾಗಿದ್ದ ನವ್ಯ ವಿಮರ್ಶೆಯ ಹಾಗೂ ರಾಚನಿಕ ವಿಮರ್ಶೆಯ ಎಲ್ಲಾ ಮೂಲಭೂತ ಪರಿಕಲ್ಪನೆಗಳನ್ನೂ ಹಾಗೂ ನಿರ್ಣಯಗಳನ್ನೂ ವಿರೋಧಿಸಿ ಅವುಗಳನ್ನು ತಿರಸ್ಕರಿಸಿ, ಹೊಸ ಚಿಂತನಾಕ್ರಮದ ದಿಕ್ಕುಗಳನ್ನು ಈ ಪ್ರಬಂಧ ತೆರೆಯಿತು. ಆದ್ದರಿಂದ ಈ ಪ್ರಬಂಧವನ್ನು ನಿರಚನ ಚಿಂತನೆಯ ‘ಘೋಷಣಾ ಪತ್ರ’ (Manifesto) ಎಂದು ವಿಮರ್ಶಕರು ಗುರುತಿಸುತ್ತಾರೆ. ಅನಂತರ ಗಾಯತ್ರೀ ಸ್ಟಿವಕ್ ಡೆರಿಡಾನ ಮೌಲಿಕ ಗ್ರಂಥ ‘ಆಫ್ ಗ್ರ‍್ಯಮಟಾಲಜಿ’ಯನ್ನು ಇಂಗ್ಲಿಷಿಗೆ ೧೯೭೬ ರಲ್ಲಿ ಭಾಷಾಂತರಿಸಿ (ವಿಸ್ತೃತ ಮುನ್ನುಡಿಯೊಡನೆ) ನಿರಚನ ಚಿಂತನೆಗೆ ಅಧಿಕೃತ ಬುನಾದಿಯನ್ನು ಹಾಕಿಕೊಟ್ಟರು. ಕಳೆದೆರಡು ದಶಕಗಳಲ್ಲಿ ನಿರಚನ ಚಿಂತನೆ, ವಿಶ್ಲೇಷಣೆ ಮತ್ತು ವ್ಯಾಖ್ಯಾನ ಸಾಹಿತ್ಯವೂ ಸೇರಿದಂತೆ ಇತರ ಎಲ್ಲಾ ಮಾನವಿಕ ಶಾಸ್ತ್ರಗಳ ಕ್ಷೇತ್ರದಲ್ಲಿ ವ್ಯಾಪಕವಾಗಿ ಅತ್ಯಂತ ಪ್ರಭಾವಶಾಲಿಯಾಗಿ ಬೆಳೆದಿದೆ.

‘ನಿರಚನ’ ಯೆಂದರೇನು? ಒಂದು ರಚನೆಯ ಒಳಹೊಕ್ಕು, ಆ ರಚನೆಯ ಒಂದೊಂದೇ ಅಂಗಗಳನ್ನು ಸಂಬಂಧಗಳನ್ನು ನಿರಾವರಣಗೊಳಿಸುತ್ತ, ಪರೀಕ್ಷಿಸುತ್ತ, ರಚನೆಯೆಂಬುದು ಹೇಗೆ ಒಂದು ಭ್ರಮೆ, ಹೇಗೆ ಸಂಪೂರ್ಣವಾಗಿ ಸಂಯೋಜಿತ ರಚನೆಯೆಂದು ನಮಗೆ ತೋರುವುದರ ಆಳದಲ್ಲಿಯೇ ಸಂಯೋಜನೆಗೆ ಒಳಪಡದ, ಸಂಯೋಜನೆಯನ್ನು ಮೀರುವ, ಪರಸ್ಪರ ವಿರೋಧಿ ಅಂಶಗಳಿವೆ ಎಂಬುದನ್ನು ಅರಿಯುವ, ವೈಚಾರಿಕ ಕ್ರಮ. ಅನೇಕ ವಿದ್ವಾಂಸರು ಡೆರಿಡಾ ರೂಪಿಸಿದ ‘ಡಿಕನ್‌ಸ್ಟ್ರಕ್ಷನ್’ ಪರಿಕಲ್ಪನೆಯನ್ನು ಹೈಡೆಗರ್‌ನ ‘ಡಿಸ್ಟ್ರಕ್ಷನ್’ (Destruction) – ಪರಿಕಲ್ಪನೆಗೆ ಸಮಾನವೆಂದು ಭಾವಿಸುತ್ತಾರೆ. ಹೈಡೆಗರ್ ಒಂದೆಡೆ ಹೀಗ ಹೇಳುತ್ತಾನೆ : “ಚಿಂತನೆಯ ಆಚೆಗಿರುವ ಅಚಿಂತ್ಯ ‘ಇರುವಿಕೆ’ಯ ಬಗ್ಗೆ ಚಿಂತಿಸಲು ನಾವು ತತ್ವಶಾಸ್ತ್ರವನ್ನು ನಿರಚಿಸಬೇಕು” (”In order to think of ‘Being’, which is the unthought of thought, we must ‘destruckt’ metaphysics”). ಹೈಡೆಗರ್ ‘destrukt’ ಶಬ್ದವನ್ನು ‘ಬೇರ್ಪಡಿಸುವುದು’ ಅಥವಾ ‘ನಿಯೋಜಿಸುವುದು’, ಎಂದರೆ ಒಂದು ಸಂಯೋಜನೆಯನ್ನು ಒಡೆಯುವುದು ಎಂಬ ಅರ್ಥದಲ್ಲಿ ಉಪಯೋಗಿಸುತ್ತಾನೆ.

ಜೆ. ಡೆರಿಡಾ ನಿರಚನ ಚಿಂತನೆಯ ಜನಕನಾದುದರಿಂದ ಹಾಗೂ ಅವನ ವಿಚಾರಗಳನ್ನು ಮತ್ತು ಚಿಂತನಾ ಮಾರ್ಗಗಳನ್ನು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ನಿರಚನ ಚಿಂತಕರೆಲ್ಲರೂ ಅನುಸರಿಸುವುದರಿಂದ, ಈಗ ಡೆರಿಡಾನ ಮುಖ್ಯ ವಿಚಾರಗಳನ್ನು ಸ್ಥೂಲವಾಗಿ ನೋಡೋಣ. (ಇಲ್ಲಿ ಒತ್ತಿ ಹೇಳಬೇಕಾದ ಅಂಶವೆಂದರೆ ಯಾವುದೇ ಒಂದು ಪ್ರಬಂಧದಲ್ಲಿ, ಗ್ರಂಥದಲ್ಲಿ ಡೆರಿಡಾ ತನ್ನೆಲ್ಲಾ ವಿಚಾರಗಳನ್ನು ಕ್ರಮವಾಗಿ ಮಂಡಿಸುವುದಿಲ್ಲ. ಅವನ ಗ್ರಂಥಗಳಲ್ಲಿ, ಲೇಖನಗಳಲ್ಲಿ ಅಲ್ಲಲ್ಲಿ ನೇರವಾಗಿ ಅಥವಾ ಸೂಚ್ಯವಾಗಿ ಬರುವ ವಿಚಾರಗಳನ್ನು ಕ್ರೋಢೀಕರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ಇಂತಹ ಪ್ರಯತ್ನದಲ್ಲಿ ಅತ್ಯಂತ ಸಂಕೀರ್ಣ ವಿಚಾರಗಳು ಸರಳೀಕೃತವಾಗುವ ಅಪಾಯವಿದ್ದೇ ಇದೆ. ಅಲ್ಲದೆ, ಡೆರಿಡಾನ ಚಿಂತನೆ ಇಂತಹ ಯಾವುದೇ ವಿಧದ ಕ್ರೋಢೀಕರಣವನ್ನು ವಿರೋಧಿಸುತ್ತದೆ.)

. ಭಾಷೆಯ ಸ್ವರೂಪ :

ಡೆರಿಡಾನ ವ್ಯಾಪಕ ಚಿಂತನೆ, ಮಂಡನೆ, ಖಂಡನೆ ಎಲ್ಲವೂ ಮೂಲಭೂತವಾಗಿ ಭಾಷೆಯ ಸ್ವರೂಪವನ್ನು ಕುರಿತಾದ ಅವನ ವ್ಯಾಖ್ಯಾನವನ್ನು ಆಧರಿಸಿವೆ. ಮುಖ್ಯವಾಗಿ ಡೆರಿಡಾ ಭಾಷೆಯನ್ನು ಕುರಿತಾದ ಭಾಷಾಶಾಸ್ತ್ರಜ್ಞ ಸೋಸ್ಯೋನ ರಾಚನಿಕ ಸಿದ್ಧಾಂತವನ್ನು ಖಂಡಿಸುತ್ತಾನೆ. (ಆದ್ದರಿಂದಲೇ ನಿರಚನ ಚಿಂತನೆ ‘ರಾಚನಿಕೋತ್ತರ ವಾದ’ಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.)

ಸೋಸ್ಯೋ ಭಾಷೆಯನ್ನು ಒಂದು ‘ವ್ಯವಸ್ಥೆ’ ಮತ್ತು ‘ವ್ಯವಸ್ಥೆಗಳ ವ್ಯವಸ್ಥೆ’ ಎಂದು ಕಾಣುತ್ತಾನೆ. ಎಂದರೆ ಭಾಷೆಯ ಶಬ್ದ, ಪದ, ವಾಕ್ಯ, ಅರ್ಥ ಈ ಎಲ್ಲಾ ನೆಲೆಗಳಲ್ಲಿಯೂ ಅಮೂರ್ತ ಸ್ವರೂಪದ ಒಂದು ಸುವ್ಯವಸ್ಥಿತ ರಚನೆಯಿದೆ. ಇಂತಹ ರಚನೆ ‘ಪರಿಪೂರ್ಣ’, ‘ಪರಿವರ್ತನಶೀಲ’ ಹಾಗೂ ‘ಸ್ವಯಂ ನಿಯಮಿತ’ ವಾಗಿರುತ್ತದೆ. ಭಾಷಿಕ ಸಂಜ್ಞೆಯ (linguistic sing)  ಎರಡು ಮುಖಗಳೆಂದರೆ ಪರಿಕಲ್ಪನೆ ಹಾಗೂ ಧ್ವನಿಬಿಂಬ. ಧ್ವನಿಬಿಂಬವು ‘ಸೂಚಕ’ವಾದರೆ (signifier) ಪರಿಕಲ್ಪನೆ ‘ಸೂಚಿತ’ (signfied). ಇವೆರಡರ ಮಧ್ಯೆ ಯಾವುದೇ ತಾರ್ಕಿಕ ಸಂಬಂಧವಿಲ್ಲದಿದ್ದರೂ ಇವೆರಡೂ ಒಂದಾದಾಗ ‘ಸೂಚಕ ಪ್ರಕ್ರಿಯೆ’  ಸಾಧ್ಯವಾಗುತ್ತದೆ. ಈ ವಿಧದ ವಿಶ್ಲೇಷಣೆಯನ್ನೇ ನಾವು ಇತರ ಕ್ಷೇತ್ರಗಳಿಗೂ ಅನ್ವಯಿಸಬಹುದು. ಎಂದರೆ ಪುರಾಣಗಳು, ಸಾಮಾಜಿಕ ಆಚರಣೆಗಳು, ಧಾರ್ಮಿಕ ವಿಧಿ – ನಿಷೇಧಗಳು ಇತ್ಯಾದಿಗಳೆಲ್ಲವೂ ‘ರಚನೆ’ಗಳೇ; ಅವುಗಳ ಆಳದಲ್ಲಿ ನಾವು ವಿಶಿಷ್ಟ ಸಂಯೋಜನೆ ಅಥವಾ ವ್ಯವಸ್ಥೆಯನ್ನು ಕಾಣಬಹುದು.

ಭಾಷಿಕ ಸಂಜ್ಞೆಯನ್ನು ಕುರಿತಾದ ಸೋಸ್ಯೋನ ಈ ಪರಿಕಲ್ಪನೆಗಳನ್ನೇ ಉಪಯೋಗಿಸಿಕೊಂಡು ಡೆರಿಡಾ ರಾಚನಿಕ ಸಿದ್ಧಾಂತವನ್ನು ಖಂಡಿಸುತ್ತಾನೆ. ಸೋಸ್ಯೋ ಭಾಷಾ ರಚನೆಯ ಬಗ್ಗೆ ಕೊಡುವ ಒಂದು ಮುಖ್ಯ ಒಳನೋಟವೆಂದರೆ ಈ ರಚನೆ ಕೇವಲ ಭಿನ್ನತೆಗಳನ್ನಾಧರಿಸಿದೆ ಎಂಬುದು. ಎಂದರೆ, ಶಾಬ್ದಿಕ ನೆಲೆಯಲ್ಲಿ, ‘ಅ’ ಎಂಬ ಸ್ವರ ಸಿದ್ಧವಾಗುವುದು ಅದು ‘ಆ’ ಅಲ್ಲ ‘ಬ’ ಅಲ್ಲ ಎಂಬುದರಿಂದ. ಈ ಚಿಂತನೆಯನ್ನೇ ಡೆರಿಡಾ ಮುಂದುವರಿಸುತ್ತಾನೆ. ‘ಅ’ ಸ್ವರ ಅದು ‘ಆ’ ಅಲ್ಲ. ‘ಇ’ ಅಲ್ಲ. ‘ಈ’ ಅಲ್ಲ…. ಹೀಗೆಯೇ ಮುಂದುವರಿಯುತ್ತಲೇ ಇರುತ್ತದೆ. ಮತ್ತೆ ‘ಆ’ ಎನ್ನುವುದು ‘ಬ’ ಅಲ್ಲ ಎಂದಾಬ ‘ಬ’ ಎಂದರೇನು? – ಅದು ‘ಆ’ ಅಲ್ಲ ‘ಕ’ ಅಲ್ಲ ‘ಸ’ ಅಲ್ಲ… ಹಿಗೆ ಪ್ರತಿಯೊಂದು ಘಟಕವೂ ಅಸ್ತಿತ್ವಕ್ಕೆ ಬರುವುದು ಇತರ ಘಟಕಗಳಿಂದ ಭಿನ್ನವಾಗಿರುವುದರಿಂದ ಮಾತ್ರ. ಹಾಗೆಯೇ ಅರ್ಥದ ನೆಲೆಯಲ್ಲಿಯೂ ನಾವು ‘ಭಿನ್ನತೆ’ಯಿಂದ ಮಾತ್ರ ಒಂದು ಪದದ ಅರ್ಥವನ್ನು ಗ್ರಹಿಸಬೇಕಾಗುತ್ತದೆ. ಕೋಶಗಳಲ್ಲಿ ಹೇಳುವಂತೆ ‘ಗೃಹ’ ಎಂದರೇನು? – ಮನೆ; ‘ಮನೆ’ಯೆಂದರೇನು? ‘ವಾಸಸ್ಥಳ’; ‘ವಾಸಸ್ಥಳ’ವೆಂದರೇನು? ಹೀಗೆ ಒಂದು ಸೂಚಕದ ‘ಅರ್ಥ’ವೆಂದರೆ ಮತ್ತೊಂದು ಸೂಚಕವೇ ಹೊರತು ‘ಸತ್ಯ’ವಲ್ಲ. ‘ಅಂತಿಮ’ ‘ಅರ್ಥ’ವನ್ನು (Ultimate meaning) ಕೊಡುವ ಭಾಷಿಕ ಸಂಜ್ಞೆಯಾಗಲೀ, ‘ಅಂತಿಮ ಸಂಜ್ಞೆ’ಯಾಗಲೀ ಸಾಧ್ಯವಿಲ್ಲ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಭಾಷೆ ಕೊನೆಯಿಲ್ಲದ, ಕೇವಲ ಭಿನ್ನತೆಗಳನ್ನು ಆಧರಿಸಿದ (’ಇದಲ್ಲ’, ‘ಅದಲ್ಲ’ – ಎಂಬ ನೇತಿ ವಾದದಂತೆ), ಸೂಚಕಗಳ ಸಂಕೀರ್ಣ ಜಾಲ. ಸೂಚಕಗಳಂತೆ ಸೂಚಿತಗಳೂ (ಎಂದರೆ ಅರ್ಥ) ಪರಸ್ಪರ ಭಿನ್ನತೆಗಳನ್ನು ಮಾತ್ರ ಆಧರಿಸಿವೆ. ‘ಮನೆ’ಯೆಂಬುದರ ‘ಅರ್ಥ’ ನಿಷ್ಪನ್ನವಾಗುವುದು ಅದು ಶಾಲೆಯಲ್ಲ. ರಸ್ತೆಯಲ್ಲ, ಮರವಲ್ಲ ಎಂಬಂತಹ ವ್ಯತ್ಯಾಸವನ್ನವಲಂಬಿಸಿದೆ. ಅಂತಿಮ ‘ಸತ್ಯ’ವನ್ನು ನಿರ್ದೇಶಿಸುವ ಸೂಚಕವೂ ಇಲ್ಲ. ಸೂಚಿತವೂ ಇಲ್ಲ. ಇರುವುದು ಕೇವಲ ಸೂಚನಾಪ್ರಕ್ರಿಯೆಯ (Signification) ಅನಂತ ಲೀಲೆ.

ಈ ಸಂದರ್ಭದಲ್ಲಿ ಡೆರಿಡಾ ‘differance’ – ಎಂಬ ಸ್ವಯಂ ಕಲ್ಪಿತ ಶಬ್ದವನ್ನು ಉಪಯೋಗಿಸುತ್ತಾನೆ. ಫ್ರೆಂಚ್ ಭಾಷೆಯಲ್ಲಿ ‘differance’ ಹಾಗೂ ‘difference’ ಉಚ್ಚರಿಸಲ್ಪಟ್ಟಾಗ ಒಂದೇ ರೀತಿ ಕೇಳಿಸುತ್ತದೆ. ಅಲ್ಲದೆ ‘differer’ ಎಂಬ ಕ್ರಿಯಾರೂಪ ‘ಭಿನ್ನವಾಗಿರುವುದು’ (to differ) ಮತ್ತು ‘ಮುಂದೂಡುವುದು’ (to defer) ಎಂಬ ಎರಡೂ ಅರ್ಥಗಳನ್ನು ಕೊಡುತ್ತದೆ. ‘ಭಿನ್ನವಾಗಿರುವುದು’ ಎಂಬ ಸ್ಥಳ ನಿರ್ದೇಶಕ ಶಬ್ದ ಮತ್ತು ‘ಮುಂದೂಡುವುದು’ ಎಂಬ ಕಾಲ ನಿರ್ದೇಶಕ ಶಬ್ದ ಇವೆರಡನ್ನೂ ‘differance’ ಪ್ರಯೋಗ ಒಂದೆಡೆ ತರುತ್ತದೆ. ಆದರೆ ‘differance’ ಒಂದು ಪರಿಕಲ್ಪನೆಯಲ್ಲ – ಪಾರಿಭಾಷಿಕ ಶಬ್ದವಲ್ಲ. ಅದು :

“ಒಂದು ರಚನೆ, ಒಂದು ಗತಿ; ಇದನ್ನು ಇರುವಿಕೆ, ಇಲ್ಲದಿರುವಿಕೆ ಎಂಬ ದ್ವಂದ್ವದ ಆಧಾರದ ಮೇಲೆ ಅರಿಯಲಾಗುವುದಿಲ್ಲ. ‘differance’ ಎಂಬುದು ಭಿನ್ನತೆಗಳ ವ್ಯವಸ್ಥಿತ ಲಾಸ್ಯ – ಭಿನ್ನತೆಗಳ ಅಂಶಗಳ ಆಟ” (ಡೆರಿಡಾ, Position – ೧೯೮೧). ಈ ಪ್ರಯೋಗದ ಮೂಲಕ ಡೆರಿಡಾ ಏನು ಹೇಳುತ್ತಾನೆಂದರೆ ಒಂದು ಭಾಷೆ ಸೂಚಕ – ಸೂಚಿತ – ರೂಪಿತ ಭಾಷಿಕ ಸಂಜ್ಞೆಗಳ ಒಂದು ಸಂಯೋಜಿತ ರಚನೆಯಲ್ಲ – ಕೇವಲ ‘differance’ – ಕಂಡುಬರುವ ವಿನ್ಯಾಸ.

. ಶ್ರೇಣೀಕೃತ ದ್ವಂದ್ವಗಳು ಮತ್ತು ಅವಕೇಂದ್ರೀಕರಣ :

ರಾಚನಿಕ ಸಿದ್ಧಾಂತವೂ ಸೇರಿದಂತೆ ಪ್ರತಿಯೊಂದು ವೈಚಾರಿಕ ಪ್ರಣಾಲಿಯೂ ಶ್ರೇಣೀಕೃತ ದ್ವಂದ್ವ ಪರಿಕಲ್ಪನೆಗಳನ್ನು ಸೃಜಿಸುತ್ತದೆ. ಉದಾಹರಣೆಗಾಗಿ : ಭಾಷೆಯ ನೆಲೆಯಲ್ಲಿ ವಾಕ್ – ಲೇಖನ, ನೈತಿಕ ನೆಲೆಯಲ್ಲಿ ಒಳ್ಳೆಯದು – ಕೆಟ್ಟದು, ಸಾಮಾಜಿಕ ನೆಲೆಯಲ್ಲಿ ಗಂಡು – ಹೆಣ್ಣು ಇತ್ಯಾದಿ. ಇಂತಹ ದ್ವಂದ್ವ ಪರಿಕಲ್ಪನೆಗಳಲ್ಲಿ ಒಂದು ಮತ್ತೊಂದಕ್ಕಿಂತ ಶ್ರೇಷ್ಠ ಎಂಬಂತಹ ಶ್ರೇಣೀಕೃತ ವ್ಯವಸ್ಥೆಯೇ ಎಲ್ಲಾ ವೈಚಾರಿಕ ಪ್ರಣಾಲಿಗಳ ಬುನಾದಿ – ಆಧಾರ.

ಯಾವುದೇ ಒಂದು ರಚನೆಯಲ್ಲಿ, ವ್ಯವಸ್ಥೆಯಲ್ಲಿ ಮೇಲೆ ಹೇಳಿದಂತಹ ಶ್ರೇಣೀಕೃತ ದ್ವಂದ್ವಗಳು ಅನಿವಾರ್ಯವಾಗುವುದು ಮಾನವರಿಗಿರುವ ಮೂಲಭೂತ ‘ಕೇಂದ್ರ’ದ ಅವಶ್ಯಕತೆಯಿಂದ. ಯಾವುದಾದರೂ ಒಂದು ಸರ್ವಮಾನ್ಯ ‘ಕೇಂದ್ರ’ವಿಲ್ಲದಿದ್ದರೆ, ಎಂದರೆ ಶ್ರದ್ಧೆಗೆ, ವಾದಕ್ಕೆ, ಇರುವಿಕೆಗೆ ಕಾರಣ ಸ್ಥಾನವಿಲ್ಲದಿದ್ದರೆ ಬದುಕು ಹಾಗೂ ಮಾನವ ಚಟುವಟಿಕೆಗಳು ಅಸಾಧ್ಯ. ಒಂದು ವೈಚಾರಿಕ ರಚನೆಯನ್ನು / ವ್ಯವಸ್ಥೆಯನ್ನು ನಿಯಂತ್ರಿಸುವ ಆದರೆ ಸ್ವತಃ ಅನಿಯಂತ್ರಿತವಾದ (ಎಂದರೆ ಪ್ರಶ್ನಾತೀತವಾದ) ಇಂತಹ ‘ಕೇಂದ್ರ’ ವಿಶಿಷ್ಟ ಕ್ಷೇತ್ರಕ್ಕನುಸಾರವಾಗಿ ‘ಸತ್ವ’, ‘ಸತ್ಯ’, ‘ಸ್ವರೂಪ’, ‘ಚೇತನ’, ‘ದೇವರು’ (essence, truth, form, consciousness, God) ಇತ್ಯಾದಿ ಯಾವುದೂ ಆಗಬಹುದು. ಪಾಶ್ಚಿಮಾತ್ಯ, ಪೌರ್ವಾತ್ಯ ಚಿಂತನೆಯೆಲ್ಲವೂ ಆರ್ಷೇಯವಾಗಿ ಇಂತಹ ಒಂದು ‘ಕೇಂದ್ರ’ವನ್ನು ಆಧರಿಸಿಯೇ ಬೆಳೆದಿದೆ.

ಕೇಂದ್ರಸ್ಥಿತ ಅಥವಾ ಕೇಂದ್ರಾಧಾರಿತ ಚಿಂತನೆಯನ್ನು ಡೆರಿಡಾ ‘ಲೋಗೋಸೆಂಟ್ರಿಸಂ’ ಎಂದು ಕರೆಯುತ್ತಾನೆ. ಗ್ರೀಕ್ ಭಾಷೆಯಲ್ಲಿ ‘ಲೋಗೋಸ್’ (Logos) ಎಂದರೆ ‘ವಾಕ್’ ಮತ್ತು ವಾಕ್‌ಗೆ ಬೈಬಲ್ಲಿನ ‘ಹೊಸ ಒಡಂಬಡಿಕೆ’ಯಲ್ಲಿ ಅತ್ಯಂತ ಮಹತ್ವವಿದೆ. ‘ಮೊಟ್ಟ ಮೊದಲು ಅಲ್ಲಿದ್ದಿತು ವಾಕ್’ (In the begining was the Word). ಎಂದರೆ ‘ವಾಕ್’ ಸತ್ವದ (ದೇವರ, ವ್ಯವಸ್ಥೆಯ, ರಚನೆಯ) ಅಸ್ತಿತ್ವವನ್ನು, ನಮಗೆ ದೃಢೀಕರಿಸುತ್ತದೆ. ಆದ್ದರಿಂದ ‘ವಾಕ್‌’ಗೆ ಪ್ರಥಮ ಸ್ಥಾನವಿದೆ – ಬರವಣಿಗೆಗೆ (ಲಿಖಿತ ರೂಪಕ್ಕೆ) ಎರಡನೆಯ ಸ್ಥಾನ. ವಾಚ್ಯರೂಪ ನೇರವಾಗಿ ಶೋತೃವನ್ನು ತಲುಪುವುದರಿಂದ, ಮತ್ತು ಅದನ್ನು ಪುನರಾವರ್ತಿಸಲು ಅಸಾಧ್ಯವಾದುದರಿಂದ (ಬಾಯಿಯಿಂದ ಹೊರಟ ಕೂಡಲೇ ಶಬ್ದಗಳೂ ಗಾಳಿಯಲ್ಲಿ ಮಾಯವಾಗುತ್ತವೆ) ಅದು ಶುದ್ಧ ಹಾಗೂ ಸತ್ಯ; ಲಿಖಿತ – ರೂಪ ವಕ್ತಾರ ಹಾಗೂ ಶೋತೃ ಇವರಿಬ್ಬರಿಂದಲೂ ದೂರವಿರುವುದರಿಂದ (ಯಾರೋ ಯಾವಾಗಲೋ ಬರೆದುದನ್ನು ಇನ್ನು ಯಾರ‍್ಯಾರೋ ಮತ್ತಾವಾಗಲೋ ಓದುವುದು) ಅದು ಕೃತ್ರಿಮ ಹಾಗೂ ದೋಷಪೂರ್ಣ. ದೋಷಪೂರ್ಣ ಏಕೆಂದರೆ ವಕ್ತಾರನು ಯಾವ ಅರ್ಥದಲ್ಲಿ ಅಥವಾ ಯಾವ ಉದ್ದೇಶದಿಂದ ಶಬ್ದಗಳನ್ನು ಉಪಯೋಗಿಸಿದ್ದನೋ ಅದೇ ಅರ್ಥ ಅಥವಾ ಉದ್ದೇಶ ವಾಚಕನನ್ನು ತಲುಪಬೇಕಿಂದಲ್ಲ. (ಪ್ರಾಯಃ ಈ ಕಾರಣದಿಂದಲೇ ಭಾರತೀಯ ಪರಂಪರೆಯಲ್ಲಿ ‘ಶೃತಿ’ಗೆ ಇರುವ ಮಹತ್ವದ ಸ್ಥಾನ ಬೇರಾವುದಕ್ಕೂ ಇಲ್ಲ. ವೇದಗಳು ‘ಶೃತಿ’ – ಯಾವುದೊಂದು ಮಾಧ್ಯಮದ ಅಡ್ಡಿಯೂ ಇಲ್ಲದೆ ನೇರವಾಗಿ ದೇವರಿಂದ, ಆದಿಶಕ್ತಿಯಿಂದ ‘ಕೇಳಿಸಿಕೊಂಡ’ ಸತ್ಯ. ವೇದಗಳನ್ನು ಮಿಕ್ಕು ಉಳಿದವು ಗಳೆಲ್ಲವೂ ‘ಸ್ಮೃತಿ’ – ಸತ್ಯ ದೂರ.)

ಈ ಕಾರಣಗಳಿಂದಾಗಿ ವಾಕ್ – ಲೇಖನ ದ್ವಂದ್ವ ಶ್ರೇಣಿಯಲ್ಲಿ ವಾಕ್‌ಗೆ ಪ್ರಥಮ ಸ್ಥಾನ ಕೊಟ್ಟು, ಲೇಖನಕ್ಕೆ (ಲಿಖಿತ ರೂಪಕ್ಕೆ) ದ್ವಿತೀಯ ಸ್ಥಾನವನ್ನು ತತ್ವಶಾಸ್ತ್ರಜ್ಞರಲ್ಲದೆ ಸೋಸ್ಯೋ ಮುಂತಾದ ರಾಚನಿಕ ಭಾಷಾ ಶಾಸ್ತ್ರಜ್ಞರೂ ಕೊಡುತ್ತಾರೆ. ಇಂತಹ ಚಿಂತನೆಯನ್ನು ಡೆರಿಡಾ ‘ವಾಕ್ – ಕೇಂದ್ರಿತ ಚಿಂತನೆ’ಯೆಂದು (Phonocentrism) ಕರೆಯುತ್ತಾನೆ; ಮತ್ತು ‘ಕೇಂದ್ರಸ್ಥಿತ ಚಿಂತನೆ’ ಹಾಗೂ ‘ವಾಕ್ ಕೇಂದ್ರಿತ ಚಿಂತನೆ’ ಇವೆರಡೂ ಭ್ರಮಾಧಾರಿತ ಕಲ್ಪನೆಗಳೆಂದು ಡೆರಿಡಾ ವಾದಿಸುತ್ತಾನೆ.

ಈ ಸಂದರ್ಭದಲ್ಲಿ ಕಂಡುಬರುವ ಡೆರಿಡಾನ ವೈಚಾರಿಕತೆಯನ್ನು ಹಾಗೂ ಅದರ ಗುರಿಯನ್ನು ‘ಅವಕೇಂದ್ರೀಕರಣ’ (decentering) ಎಂದು ಗುರುತಿಸಬಹುದು. ಎಂದರೆ, ಕೇಂದ್ರಸ್ಥಿತ ವೈಚಾರಿಕತೆಯ ಅಡಿಗಲ್ಲಾದ ಶ್ರೇಣೀಕೃತ ದ್ವಂದ್ವಗಳನ್ನು ಮುರಿಯುವುದು. ‘ವಾಕ್-ಲೇಖನ’ (speech & writing) ದ್ವಂದ್ವವನ್ನು ಕುರಿತಾದ ಡೆರಿಡಾನ ವಾದ ಹೀಗೆ ಸಾಗುತ್ತದೆ.

ವಾಕ್ ಎಂದರೇನು? ಒಂದು ಅಮೂರ್ತ ಚಿಂತನೆ ಶಾಬ್ದಿಕ ರೂಫವನ್ನು ಪಡೆಯುವ ಪ್ರಕ್ರಿಯೆ. (ಹಿಂದೆಯೇ ಚರ್ಚಿಸಿದಂತೆ). ಶಬ್ದ ಹಾಗೂ ಅರ್ಥಗಳ ಸಂಬಂಧ ಯಾದೃಚ್ಛಿಕ. ಆದ್ದರಿಂದ ವಾಕ್ ರೂಪವೂ ಲಿಖಿತ ರೂಪದಂತೆ ಸತ್ಯದೂರವಾಗಿದೆ. ಅಲ್ಲದೆ, ಒಬ್ಬನು ಮಾತನಾಡುವಾಗ ನಾವು ಅವನ ಬಾಯಿಯಿಂದ ಬರುವ ಶಬ್ದಗಳನ್ನು ಹೇಗೆ ಗ್ರಹಿಸುತ್ತೇವೆ? ಮಾತನಾಡುವಾಗ ಒಬ್ಬನ ಉಚ್ಚಾರ ತಪ್ಪಾಗಬಹುದು; ಒಂದು ಪದದ ಬದಲು ಇನ್ನೊಂದು ಪದದ ಉಪಯೋಗವಾಗಬಹುದು; ವಾಕ್ಯಗಳು ಸಂಪೂರ್ಣವಾಗದಿರಬಹುದು. ಆದರೂ ಇವೆಲ್ಲಾ ನ್ಯೂನತೆಗಳನ್ನೂ ನಾವು ಅಲಕ್ಷಿಸಿ ಒಬ್ಬನ ಮಾತನ್ನು ಹೇಗೆ ಸರಿಯಾಗಿ ಗ್ರಹಿಸುತ್ತೇವೆಂದರೆ, ಮಾತಿನ ಹಿಂದಿರುವ ಒಂದು ರೂಪ ನಮ್ಮಲ್ಲಿರುತ್ತದೆ. ಆದ್ದರಿಂದ ಹೇಳುವವನು ‘ನನ್ನಗೆ ಇನ್ನಷ್ಟು ಚಕಲೆಟ್ ಕೊಡ್ಡು’ ಎಂದು ಹೇಳಿದರೂ ನಾವು ಅದನ್ನು ಸರಿಯಾಗಿ ಗ್ರಹಿಸುತ್ತೇವೆ. ಎಂದರೆ ಶಬ್ದಗಳಿಗೆ ಅವು ಬಾಯಿಯಿಂದ ಹೊರಡುವ ಮೊದಲೇ ಒಂದು ರೂಪವಿರುತ್ತದೆ ಮತ್ತು ಮಾತು ಆ ರೂಪವನ್ನು ಅನುಕರಿಸುತ್ತದೆ. ಈ ಕಾರಣಕ್ಕಾಗಿಯೇ ಡೆರಿಡಾ ‘ಮಾತು ಮೊದಲೇ ಬರೆಯಲ್ಪಟ್ಟಾಗಿದೆ’ (Speech is already written) ಎಂದು ಹೇಳುತ್ತಾನೆ.

ಅಲ್ಲದೆ, ಲಿಖಿತ ರೂಪದಲ್ಲಿ ಅಲಂಕಾರಿಕತೆ ಬಂದು ಸತ್ಯವು ಮುಚ್ಚಲ್ಪಡುತ್ತದೆ ಎಂದು ಭಾವಿಸುವುದಾದರೆ, ಅಂತಹ ಅಲಂಕಾರಿಕತೆಯನ್ನು ಮೊದಲು ಬೆಳೆಸಿದವರು ಯಾರು? – ಮಾತುಗಾರರು. ‘ವಾಗ್ಝರಿ’, ‘ವಾಕ್ಚಾತುರ್ಯ’ ಇವೇ ಮುಂತಾದ ಶಬ್ದಗಳು ಅಲಂಕರಿಕತೆ ಮಾತಿನಲ್ಲಿ ಮೊದಲು ಪ್ರಾರಂಭವಾಯಿತು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಹೀಗೆಯೇ ಎಲ್ಲಾ ದ್ವಂದ್ವ ಶ್ರೇಣಿಗಳನ್ನು ಡೆರಿಡಾ ಮುರಿಯುತ್ತಾನೆ. ‘ಪುರುಷ ಮತ್ತು ಸ್ತ್ರೀ’ ಶ್ರೇಣಿಯನ್ನು ನೋಡೋಣ. ಈ ಶ್ರೇಣಿಯಲ್ಲಿ ಪುರುಷನು ಕೇಂದ್ರವಾಗಿದ್ದು ಸ್ತ್ರೀ ಅವನಿಗಿಂತ ಕೆಳಗೆ, ಅವನ ಛಾಯೆ ಎಂಬ ಸಾಮಾಜಿಕ ಚಿಂತನೆಯಿದೆ. ಆದರೆ ಪುರುಷನ ‘ಪುರುಷತ್ವ’ ಸ್ಥಾಪನೆಯಾಗುವುದು ಹೇಗೆ? ಅವನು ಸ್ತ್ರೀಯಲ್ಲ; ಸ್ತ್ರೀಯ ಲಕ್ಷಣಗಳು – ಗುಣಗಳು ಅವನಲ್ಲಿಲ್ಲ ಎಂಬುದರಿಂದ. ಎಂದರೆ, ಸ್ತ್ರೀಯೇ ಇಲ್ಲದಿದ್ದರೆ ಪುರುಷನು ತನ್ನನ್ನು ಗುರುತಿಸಿಕೊಳ್ಳುವುದು ಸಾಧ್ಯವಿಲ್ಲ. ಹೀಗೆಯೇ ಈಗ ಧಾರ್ಮಿಕ ನೆಲೆಯ ‘ಪುಣ್ಯ-ಪಾಪ’ ಶ್ರೇಣಿಯನ್ನು ನೋಡೋಣ. ಹಿರಣ್ಯಕಶಿಪು, ರಾವಣ ಮುಂತಾದ ರಾಕ್ಷಸರು ಪಾಪಿಗಳು, ಅವರನ್ನು ಸಂಹರಿಸಿ ‘ಪುಣ್ಯ ಕೆಲಸ’ವನ್ನು ಮಾಡಲು ವಿಷ್ಣು ಅನೇಕ ಅವತಾರಗಳನ್ನು ಎತ್ತಿದನಷ್ಟೇ. ಎಂದರೆ ರಾವಣನೇ ಮುಂತಾದ ಪಾಪಿಗಳಿದ್ದುದರಿಂದಲೇ ಭಗವಂತನು ಭೂಮಿಯಲ್ಲಿ ಅವತರಿಸುವ ಕಾರ್ಯ ಸಾಧ್ಯವಾಯಿತು. ಭಗವಂತನ ಅವತಾರಕ್ಕೆ ಕಾರಣವಾಗುವ ಕಾರ್ಯ ‘ಪಾಪ’ ಹೇಗೆ? ಪಾಪದ ಕಾರಣದಿಂದಲೇ ಸಾಧ್ಯವಾಗುವ ಕಾರ್ಯ ‘ಪುಣ್ಯ’ ಹೇಗೆ? ಇಂತಹ ಚಿಂತನೆಯಿಂದಲೇ ಕ್ರಿಶ್ಚಿಯನ್ ಧರ್ಮದಲ್ಲಿ ಜೀಸಸ್ ಕ್ರಿಸ್ತನ ಜನ್ಮಕ್ಕೆ ಕಾರಣವಾಗುವ ಆಡಮ್‌ನ ಅಧಃಪತನವನ್ನು ‘Felix Culpa’ ಪುಣ್ಯಕರವಾದ ಪಾಪ ಎಂದು ಪರಿಗಣಿಸುತ್ತಾರೆ. ಆಡಮ್ ಮತ್ತು ಈವ್ ದೇವರ ಆಜ್ಞೆಯನ್ನು ಉಲ್ಲಂಘಿಸುವ ‘ಪಾಪ’ವನ್ನು ಮಾಡದಿದ್ದರೆ ಜೀಸಸ್ (ದೇವರ ಮಗ) ಈ ಭೂಮಿಯಲ್ಲಿ ಹುಟ್ಟುತ್ತಲೇ ಇರಲಿಲ್ಲ.

ಡೆರಿಡಾನ ಇಂತಹ ವಾದದ ಅರ್ಥ ಈಗಿರುವ ದ್ವಂದ್ವ ಶ್ರೇಣಿಗಳನ್ನು ಬದಲಾಯಿಸುವುದು ಎಂದಲ್ಲ. ‘ವಾಕ್ ಮತ್ತು ಲೇಖನ’ಕ್ಕೆ ಬದಲಾಗಿ ‘ಲೇಖನ ಮತ್ತು ವಾಕ್’, ‘ಪುರುಷ ಮತ್ತು ಸ್ತ್ರೀ’ಗೆ ಬದಲಾಗಿ ‘ಸ್ತ್ರೀ ಮತ್ತು ಪುರುಷ’ ಇತ್ಯಾದಿ ಶ್ರೇಣಿಗಳನ್ನು ನಾವು ಒಪ್ಪಿಕೊಂಡರೆ, ಒಂದು ಕೇಂದ್ರವನ್ನು ತಿರಸ್ಕರಿಸಿ ಮತ್ತೊಂದು ಕೇಂದ್ರವನ್ನು ಒಪ್ಪಿಕೊಂಡಂತಾಗುತ್ತದೆ; ಅಷ್ಟೇ. ಡೆರಿಡಾನ ವಾದದ ಗುರಿ ಪ್ರತಿಯೊಂದು ಜ್ಞಾನಕ್ಷೇತ್ರದಲ್ಲಿಯೂ ‘ಅವಕೇಂದ್ರೀಕರಣ’ವೇ ಹೊರತು ಪ್ರತಿಕೇಂದ್ರ ಸ್ಥಾಪನೆಯಲ್ಲ.

. ಸಂಕಥನದ ಸ್ವರೂಪ :

ಇಲ್ಲಿ ಪ್ರಾರಂಭದಲ್ಲಿಯೇ ಪುನರುಚ್ಚರಿಸಬೇಕಾದ ವಿಷಯವೆಂದರೆ, ಡೆರಿಡಾನ ಚಿಂತನೆಯ ಪ್ರಕಾರ ‘ಸಾಹಿತ್ಯಿಕ – ಸಾಹಿತ್ಯೇತರ’ ಎಂಬ ವ್ಯತ್ಯಾಸವಿಲ್ಲ. ಸಾಹಿತ್ಯ, ತತ್ವಶಾಸ್ತ್ರ, ಸಮಾಜಶಾಸ್ತ್ರ ಎಲ್ಲವೂ ಭಾಷೆಯನ್ನೇ ಉಪಯೋಗಿಸಿ ಕೊಳ್ಳುವುದರಿಂದ, ಮತ್ತು ಭಾಷೆಯಲ್ಲಿ ಶಬ್ದವೇ ಆಗಲಿ, ಅರ್ಥವೇ ಆಗಲಿ ಯಾವುದೂ ಸ್ಥಿರವಲ್ಲದೆ ಕೇವಲ ಸೂಚನಾಕ್ರಮದ ಕೊನೆಯಿಲ್ಲದ ಆಟವಾಗಿರುವುದರಿಂದ, ಭಾಷೆಯ ಮೂಲಕ ನಡೆಯುವುದೆಲ್ಲವೂ ಕೇವಲ ಸಂಕಥನ (discourse) ಮಾತ್ರ. ಈ ಸಂಕಥನದ ಲಕ್ಷಣಗಳು ಎಲ್ಲಾ ಕ್ಷೇತ್ರಗಳಿಗೂ ಸಮಾನ.

ಯಾವ ಕ್ಷೇತ್ರಕ್ಕೆ ಸಂಬಂಧಿಸಿದ ಸಂಕಥನವಾದರೂ (ಈ ಹಿಂದೆ ಚರ್ಚಿಸಿದಂತಹ) ಶ್ರೇಣೀಕೃತ ದ್ವಂದ್ವ ಪರಿಕಲ್ಪನೆಗಳನ್ನು ಆಧರಿಸಬೇಕಾಗುತ್ತದೆ. ಆದರೆ ನಾವು ಈಗಾಗಲೇ ನೋಡಿರುವಂತೆ ಶ್ರೇಣೀಕೃತ ದ್ವಂದ್ವಗಳೇ ಸ್ಥಿರವಲ್ಲ, ಅಚಲವಲ್ಲ. ಆದ್ದರಿಂದ ಅವುಗಳನ್ನು ಆಧರಿಸಿದ ಯಾವುದೇ ಕಥನವೂ ಅನಿವಾರ್ಯವಾಗಿ ಆಂತರಿಕ ವೈರುಧ್ಯದಿಂದ ಕೂಡಿರುತ್ತದೆ; ಮತ್ತು ಇಂತಹ ವೈರುಧ್ಯವನ್ನು (ನವ್ಯ ವಿಮರ್ಶಕರು ನಂಬುವಂತೆ) ನಿವಾರಿಸಲು ಸಾಧ್ಯವೇ ಇಲ್ಲ. ಎಂದರೆ ಪ್ರತಿಯೊಂದು ಪಠ್ಯವೂ (text) (ಎಲ್ಲಾ ಕ್ಷೇತ್ರಗಳ ವಾದವನ್ನೂ ಚಿಂತನೆಯನ್ನೂ ಡೆರಿಡಾ ಸಮಾನವಾಗಿ (Text) ಎಂದು ಕರೆಯುತ್ತಾನೆ) ತನ್ನನ್ನೇ ತಾನು ನಿರಚನಗೊಳಿಸುತ್ತಿರುತ್ತದೆ. ಪಠ್ಯದಲ್ಲಿ ಅಂತಸ್ಥವಾಗಿರುವ ಇಂತಹ ನಿರಚನ ಪ್ರಕ್ರಿಯೆಯನ್ನು ಗುರುತಿಸುವುದು ಮತ್ತು ಬಯಲು ಮಾಡುವುದು ವಿಮರ್ಶಕನ ಕಾರ್ಯ.

ಹೀಗೆ ಎಲ್ಲ ಸಿದ್ಧಾಂತಗಳನ್ನು ಪ್ರಶ್ನಿಸುವ (ಆದರೆ ತನ್ನದೇ ಆದ ಹೊಸ ಸಿದ್ಧಾಂತವನ್ನು ಯಾವ ಕಾರಣದಿಂದಲೂ ಮಂಡಿಸದ) ಡೆರಿಡಾನ ವೈಚಾರಿಕತೆಯಿಂದ ಪ್ರಭಾವಿತವಾದ ನಿರಚನ ವಾದದ (ಅಥವಾ ನಿರಚನ ವಿಮರ್ಶೆಯ) ಮಾರ್ಗಗಳೇನು? ಗುರಿಗಳೇನು? ತನ್ನ ‘ನಿರಚನದ ಬಗ್ಗೆ’ (On Deconstruction, 1982) ಎಂಬ ಗ್ರಂಥದಲ್ಲಿ ಜೋನಥನ್ ಕಲರ್ ನಿರಚನ ವಾದದ ಮೂರು ಮಾರ್ಗಗಳನ್ನು / ಗುರಿಗಳನ್ನು ಹೀಗೆ ಗುರುತಿಸುತ್ತಾನೆ :

ಅ. ಒಂದು ಕಾಲಘಟ್ಟದಲ್ಲಿ ನೆಲೆಗೊಂಡಿರುವ ದ್ವಂದ್ವ ಪರಿಕಲ್ಪನೆಗಳ ಶ್ರೇಣಿಯನ್ನು ಒಡೆಯುವುದು (To deconstruct the opposition is abovel all at a particular moment, to reverse the hierarchy. ಇದು ಡೆರಿಡಾನ ಹೇಳಿಕೆ.)

ಆ. ತತ್ವಶಾಸ್ತ್ರವನ್ನು ನಿರಚನಗೊಳಿಸುವುದೆಂದರೆ, ಅದರ ಪರಿಕಲ್ಪನೆಗಳ ರಾಚನಿಕ ಇತಿಹಾಸವನ್ನು – ಆ ಇತಿಹಾಸ ಏನನ್ನು ಅಡಗಿಸಿದೆ, ತಿರಸ್ಕರಿಸಿದೆ ಎಂದು ಅರಿಯಲು – ಕೂಲಂಕಶವಾಗಿ, ಆಮೂಲಾಗ್ರವಾಗಿ ಪರಿಶೀಲಿಸುವುದು. ಇದೂ ಡೆರಿಡಾನ ಹೇಳಿಕೆಯೇ. (”To deconstruct philosophy is thus to work through the structured geneology of its concepts in the most scrupulous and immanent fashion… to determine… what this history may have concealed or excluded”).

ಇ. ಸಂಕಥನವನ್ನು ನಿರಚನಗೊಳಿಸುವುದೆಂದರೆ ಆ ಸಂಕಥನವು ಪ್ರತಿಪಾದಿಸುವ ತಾತ್ವಿಕತೆಯನ್ನು ಸ್ವತಃ ಅದು ಹೇಗೆ ಅಲ್ಲಗಳೆಯುತ್ತದೆ ಎಂದು ನಿದರ್ಶಿಸುವುದು. (”To deconstruct a discourse is to show how it undermines the philosophy it asserts”).

ಕಳೆದೆರಡು ದಶಕಗಳಲ್ಲಿ ಮುಖ್ಯವಾಗಿ ಅಮೇರಿಕಾ ಹಾಗೂ ಫ್ರಾನ್ಸ್ ದೇಶಗಳಲ್ಲಿ ನಿರಚನ ಚಿಂತನೆ ಸಾಹಿತ್ಯಿಕ ಹಾಗೂ ಸಾಹಿತ್ಯೇತರ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಪ್ರಭಾವಶಾಲಿಯಾಗಿ ಬೆಳೆದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಮೇರಿಕಾದ ನಿರಚನ ವಿಮರ್ಶಕರಲ್ಲಿ ಮುಖ್ಯರಾದವರೆಂದರೆ ಪಾಲ್ ದ ಮಾನ್ (Paul de Man), ಜೆ. ಹಿಲಿಸ್ ಮಿಲರ್ (J. Hillis Miller), ಜಿ. ಹಾರ್ಟ್‌ಮನ್ (Geoffrey Hartman), ಹ್ಯರಲ್ಡ್ ಬ್ಲೂಮ್ (Harold Bloom) ಮುಂತಾದವರು. ಮುಖ್ಯವಾಗಿ ನವ್ಯವಿಮರ್ಶೆ ಮತ್ತು ರಾಚನಿಕ ವಿಮರ್ಶೆಯನ್ನು ವಿರೋಧಿಸುವ ಇವರುಗಳು ತಮ್ಮ ಅಪಾರ ಭಾಷಿಕ ಪಾಂಡಿತ್ಯ (Philological Scholarship), ತಾತ್ವಿಕತೆ ಹಾಗೂ ತೀಕ್ಷ್ಣ ತಾರ್ಕಿಕತೆ ಇವುಗಳ ಆಧಾರದ ಮೇಲೆ ಪ್ರತಿಯೊಂದು ಕೃತಿಯನ್ನೂ ವಿಶ್ಲೇಷಿಸುತ್ತಾ ಅದರ ಅಂತಸ್ಥ ವೈರುಧ್ಯಗಳನ್ನು ಮತ್ತು ಅರ್ಥ ಜಾಲವನ್ನು ಬೆಳಕಿಗೆ ತರುತ್ತಾರೆ. ಸರ್ವೇಸಾಧಾರಣವಾಗಿ ಇವರೆಲ್ಲರ ಆಸಕ್ತಿಯ, ವಿಶ್ಲೇಷಣೆಯ ಕ್ಷೇತ್ರವೆಂದರೆ ೧೯ನೆಯ ಶತಮಾನದ ಇಂಗ್ಲಿಷ್ ರಮ್ಯಕಾವ್ಯ. (ಮಿಲರ್ ಅದೇ ಶತಮಾನದ ಜಾರ್ಜ್ ಎಲಿಯಟ್, ಡಿಕಿನ್ಸ್ ಮುಂತಾದ ಕಾದಂಬರಿಕಾರರನ್ನು ವಿಶ್ಲೇಷಿಸುತ್ತಾನೆ.) ಇದಕ್ಕೆ ಕಾರಣವೇನೆಂದರೆ ವರ್ಡ್ಸ್‌ವರ್ತ್, ಕೋಲ್‌ರಿಜ್, ಶೆಲಿ ಮುಂತಾದ ರಮ್ಯ ಕವಿಗಳು ಒಂದೆಡೆ ‘ಕಾಲಾತೀತ ಕಾಣ್ಕೆ’ಯ (Timeless illumination) ಅನುಭವಗಳನ್ನು ದಾಖಲಿಸುವ ಪ್ರಯತ್ನ ಮಾಡಿದರೆ, ಮತ್ತೊಂದೆಡೆ ಅದೇ ‘ಕಾಣ್ಕೆ’ಯು ಕಾಣೆಯಾದುದರ ಬಗ್ಗೆ, ಆ ‘ಕಾಣ್ಕೆ’ಯನ್ನು ಲಭ್ಯವಾಗಿಸುವ ದೈವಿಕ ಪ್ರತಿಭೆಯ (divine imagination) ನಷ್ಟದ ಬಗ್ಗೆ ವ್ಯಾಕುಲಿತರಾಗುತ್ತಾರೆ. ಅರ್ಥಾತ್ ಅಂತಸ್ಥ ಪರಸ್ಪರ ವೈರುಧ್ಯಗಳಲ್ಲೇ ಆಸಕ್ತರಾಗಿರುವ ನಿರಚನ ವಿಮರ್ಶಕರಿಗೆ ಇಂತಹ ರಮ್ಯಕಾವ್ಯ ಹೇಳಿ ಮಾಡಿಸಿದಂತಹ ಕ್ಷೇತ್ರ. (ಆದರೆ ಇಲ್ಲಿ ಮತ್ತೊಮ್ಮೆ ಹೇಳಬೇಕಾದ ಅಂಶವೆಂದರೆ ನಿರಚನ ವಿಮರ್ಶಕರ ದೃಷ್ಟಿಯಲ್ಲಿ ಕೇವಲ ರಮ್ಯಕಾವ್ಯವೊಂದೇ ಅಲ್ಲ, ಎಲ್ಲಾ ಬಗೆಯ ಕಾವ್ಯವೂ, ಸಾಹಿತ್ಯವೂ ಮತ್ತು ಸಾಹಿತ್ಯೇತರ ಕೃತಿಗಳೂ ಅಂತಸ್ಥ ವೈರುಧ್ಯದಿಂದ ಕೂಡಿರುತ್ತವೆ ಎಂಬ ಅಂಶ.)

ನಿರಚನ ವಿಮರ್ಶಕರಲ್ಲೆಲ್ಲಾ ಅತ್ಯಂತ ಪ್ರಮುಖನಾದ ಪಾಲ್ ದ ಮಾನ್ ಡೆರಿಡಾ – ವೈಚಾರಿಕತೆಯಿಂದ ಅತ್ಯಂತ ಪ್ರಭಾವಿತನಾಗಿದ್ದರೂ ತನ್ನದೇ ಆದ ಚಿಂತನೆಯನ್ನು ಪರಿಕಲ್ಪನೆಗಳನ್ನು ಬೆಳೆಸಿದ್ದಾನೆ. ದ ಮಾನ್ ತನ್ನ ‘ಕುರುಡು ಮತ್ತು ಒಳನೋಟ’ ಗ್ರಂಥದಲ್ಲಿ ಸೃಷ್ಟಿಸುವ ಒಂದು ಮುಖ್ಯ ಪರಿಕಲ್ಪನೆಯೆಂದರೆ ‘ವಿಮರ್ಶಕರು ತಮ್ಮ ಕುರುಡಿನ ಮೂಲಕವೇ ಒಳನೋಟಗಳನ್ನು ಪಡೆಯುತ್ತಾರೆ’ ಎಂಬುದು (Blindness and Insight, 1971). ಎಂದರೆ ವಿಮರ್ಶಕರು ಯಾವ ಒಂದು ಮಾರ್ಗವನ್ನು ಅಥವಾ ತಾತ್ವಿಕತೆಯನ್ನು ಒಪ್ಪಿಕೊಂಡು ಅದನ್ನನುಸರಿಸಿ ಕೃತಿವಿಮರ್ಶೆಗೆ ತೊಡಗುತ್ತಾರೋ ಅಂತಹ ಮಾರ್ಗಕ್ಕೆ / ತಾತ್ವಿಕತೆಗೆ ವಿರುದ್ಧವಾಗಿರುತ್ತವೆ ಅವರು ಕಾಣಿಸುವ ಒಳನೋಟಗಳು

“ತಮ್ಮ ಉದ್ದೇಶಕ್ಕೆ ವಿರುದ್ಧವಾದದ್ದನ್ನು ಹೇಳುವುದೇ ಈ ವಿಮರ್ಶಕರೆಲ್ಲರ ಹಣೆಯ ಬರಹವೆಂದು ಕಾಣುತ್ತದೆ” ಎಂದು ಒಂದೆಡೆ ದ ಮಾನ್ ಹೇಳುತ್ತಾನೆ. (All these critics become curiously doomed to say something different from what they want to say). ಉದಾಹರಣೆಗಾಗಿ : ಅಮೆರಿಕನ್ ನವ್ಯ ವಿಮರ್ಶಕರು ಕೃತಿಯ ಸಾವಯವ ಸಂಬಂಧ, ಕೃತಿಯ ಸ್ವಯಂ ಪರಿಪೂರ್ಣತೆ, ಇತ್ಯಾದಿಗಳನ್ನು ಒಪ್ಪಿಕೊಂಡು ತೊಡಗುವ ವಿಮರ್ಶೆಯಲ್ಲಿ ಅವರು ಯಾವಾಗಲೂ ಪ್ರದರ್ಶಿಸಿದ್ದು ಕೃತಿಯೊಳಗಿರುವ ಕರ್ಷಣ, ವ್ಯಂಗ್ಯ, ಸಂದೇಹ ಅಂತಹುದೇ ಗುಣಗಳನ್ನು.

‘ಓದುವಿಕೆಯ ರೂಪಕಗಳು’ (Allegories of Reading, 1979)  ಎಂಬ ತನ್ನ ಇನ್ನೊಂದು ಮುಖ್ಯ ಗ್ರಂಥದಲ್ಲಿ ದ ಮಾನ್ “ಎಲ್ಲಾ ಓದುವಿಕೆಯೂ ತಪ್ಪು ಓದುವಿಕೆ” (All Reading is misreading) ಎಂಬ ವಿಚಾರವನ್ನು ನಮ್ಮ ಮುಂದಿಡುತ್ತಾನೆ. ಆ ಗ್ರಂಥದಲ್ಲಿ ದ ಮಾನ್ ಹೀಗೆ ವಾದಿಸುತ್ತಾನೆ : ಅಲಂಕಾರಗಳು (ರೂಪಕ, ವ್ಯಂಗ್ಯ ಇತ್ಯಾದಿ) ಭಾಷೆಯಲ್ಲಿ ಹಾಸುಹೊಕ್ಕಾಗಿವೆ. ಭಾಷೆಯ ಎಲ್ಲಾ ಸ್ತರಗಳ ಉಪಯೋಗವೂ ಅಲಂಕಾರಿಕವೇ. ದೈನಂದಿನ ಕಾರ್ಯಗಳಿಗೆ ಸಂವಹನ ಮಾಧ್ಯಮವಾಗುವ ಭಾಷೆ ನಮಗೆ ಅಲಂಕಾರಿಕವಲ್ಲವೆಂದು ಕೇವಲ ಸಂದೇಶವಾಹಕವೆಂದು ಭಾಸವಾಗುವುದೇಕೆಂದರೆ ನಾವು ರೂಢಿಯಿಂದಾಗಿ ಅದರ ಅಲಂಕಾರಿಕತೆಯನ್ನು ಮರೆತಿರುತ್ತೇವೆ. ಅಲಂಕಾರಿಕತೆಯು ತಾರ್ಕಿಕತೆಯನ್ನು ಪಕ್ವಗೊಳಿಸಿ ಭಾಷೆಯ ಸರಳ ಹಾಗೂ ಅನ್ವಯಾತ್ಮಕ (referntial) ಶಕ್ತಿಯನ್ನು ಕ್ಷೀಣಗೊಳಿಸುತ್ತದೆ. ಈ ಕಾರಣದಿಂದ ಓದುಗನ ಮತ್ತು ಕೃತಿಯ ಮಧ್ಯೆ ಬಿರುಕುಂಟಾಗಿ ಎಲ್ಲಾ ಓದುವಿಕೆಯೂ ಅನಿವಾರ್ಯವಾಗಿ ತಪ್ಪು ಓದುವಿಕೆಯಾಗುತ್ತದೆ; ವಿಮರ್ಶೆ ಅನ್ಯೋಕ್ತಿ ಕಥನದ (allogory) ಸ್ವರೂಪವನ್ನು ಪಡೆಯುತ್ತದೆ. ದ ಮಾನ್‌ನ ಒಟ್ಟು ವಾದವೇನೆಂದರೆ ಯಾವ ವಿಧದ, ಮಾರ್ಗದ, ಪಂಥದ ವಿಮರ್ಶೆಯೂ ಕೃತಿಯೊಡನೆ ತನ್ನನ್ನು ನೇರವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ; ಏಕೆಂದರೆ ಸಾಹಿತ್ಯ ಹಾಗೂ ವಿಮರ್ಶೆ ಇವೆರಡೂ ಭಾಷಿಕ ಸಂಜ್ಞೆಗಳ ಅನಿಯಂತ್ರಿತ ವಿನ್ಯಾಸಗಳೇ. ಆದ್ದರಿಂದ ಸಾಹಿತ್ಯ ವಿಮರ್ಶೆಯೆಂದರೆ ಒಂದು ಸಂಜ್ಞಾ ವಿನ್ಯಾಸಕ್ಕೆ ಪ್ರತಿಯಾಗಿ ಬರುವ ಮತ್ತೊಂದು ಸಂಜ್ಞಾವಿನ್ಯಸ.

ಪರಂಪರೆ ಮತ್ತು ವ್ಯಕ್ತಿಪ್ರತಿಭೆಗಳ ನಡುವಿನ ಸಂಕೀರ್ಣ ಸಂಬಂಧವನ್ನು ಪರಂಪರೆಗೆ ಒತ್ತು ಕೊಡುವ ಒಂದು ದಿಕ್ಕಿನಿಂದ ವಿಶ್ಲೇಷಿಸುವ ಎಲಿಯಟ್‌ನ ಪ್ರಬಂಧ ಪ್ರಸಿದ್ಧವಷ್ಟೆ. ಅದೇ ವಿಷಯವನ್ನು ಮತ್ತೊಂದು ದಿಕ್ಕಿನಿಂದ (ವೈಯಕ್ತಿಕ ಪ್ರತಿಭೆಗೆ ಒತ್ತು ಕೊಡುತ್ತಾ) ವಿಶ್ಲೇಷಿಸುವ ಒಂದು ಮುಖ್ಯ ರಾಚನಿಕೋತ್ತರ ಗ್ರಂಥವೆಂದರೆ ಹ್ಯರಲ್ಡ್ ಬ್ಲೂಮ್‌ನ ‘ಪ್ರಭಾವದ ಆತಂಕ’ (Anxiety of Influence, 1973). ಈ ಗ್ರಂಥದಲ್ಲಿ ಫ್ರಾಯ್ಡ್‌ನ ಪ್ರಖ್ಯಾತ ‘ಈಡಿಪಸ್ ಕಾಂಪ್ಲೆಕ್ಸ್’ ಪರಿಕಲ್ಪನೆಯನ್ನು ನೂತನ ರೀತಿಯಲ್ಲಿ ಕಾವ್ಯ ಸೃಷ್ಟಿಯ ಬಗ್ಗೆ ಬ್ಲೂಮ್ ಬಳಸುತ್ತಾನೆ. ಬ್ಲೂಮ್‌ನ ವಾದವೇನೆಂದರೆ, ಒಬ್ಬ ಶ್ರೇಷ್ಠ ಮೌಲಿಕ ಕವಿಯ ನಂತರ ಬರುವ ಕವಿಗಳು, (ಇಂಗ್ಲಿಷ್‌ನಲ್ಲಿ ಮಿಲ್ಟನ್ ನಂತರ ಬಂದ ೧೮ನೆಯ – ೧೯ನೆಯ ಶತಕದ ಕವಿಗಳು, ಎಲಿಯಟ್ ನಂತರದ ಕವಿಗಳು..) ಆ ಹಿರಿಯ ಕವಿಯ ಪ್ರಭಾವದಿಂದ ಹೊರಬರಲು ಮತ್ತು ತಮ್ಮದೇ ಆದ ಅನನ್ಯತೆಯನ್ನು ಸ್ಥಾಪಿಸಲು ಹೆಣಗಾಡುತ್ತಾರೆ. ಈ ಹೆಣಗಾಟದ, ಹೋರಾಟದ ಒಂದು ರೂಪ ‘ಪಿತೃದ್ವೇಷ’ವಾಗಿರುತ್ತದೆ. ಎಂದರೆ ತಮ್ಮ ಹಿಂದಿನ ಹಿರಿಯ ಕವಿಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸುವ ಮೂಲಕ ಅವನನ್ನು ‘ವಧಿಸಿ’ ಅವನ ಪ್ರಭಾವದಿಂದ ಹೊರಬರಲು ಯತ್ನಿಸುತ್ತಾರೆ. ಪ್ರತಿಯೊಂದು ಕಾಲಘಟ್ಟದಲ್ಲಿಯೂ ಪ್ರತಿಭಾನ್ವಿತ ಕವಿ, ಲೇಖಕ ತನ್ನ ಹಿಂದಿನ ಪರಂಪರೆಯನ್ನು ತಪ್ಪಾಗಿ ಅರ್ಥೈಸದೆ ತನ್ನ ಅನನ್ಯತೆಯನ್ನು ಸ್ಥಾಪಿಸಲು ಸಾಧ್ಯವೇ ಅಲ್ಲ – ಎಂದು ಬ್ಲೂಮ್ ವಾದಿಸುತ್ತಾನೆ.

೧೯೭೦ ರಿಂದೀಚಿಗೆ ನಿರಚನ ವಿಮರ್ಶೆಗೆ ಒಲಿದಿರುವ ಹಿಲಿಸ್ ಮಿಲರ್ ವಿಶೇಷತಃ ೧೯ನೆಯ ಶತಮಾನದ ಉತ್ತರಾರ್ಧದ ಕಾದಂಬರಿಗಳತ್ತ ಲಕ್ಷ್ಯ ಕೊಡುತ್ತಾನೆ. “ಕಾದಂಬರಿ ಮತ್ತು ಪುನರಾರ್ತನೆ’ (Fiction and Repetion, 1982) ಇವನ ಪ್ರಸಿದ್ಧ ವಿಮರ್ಶಾಗ್ರಂಥ. ಮಿಲರ್‌ನ ನಿರಚನ ವಿಮರ್ಶೆಯ ಪ್ರಾತಿನಿಧಿಕ ಪ್ರಬಂಧವೆಂದರೆ ‘ಆತಿಥೇಯನಂತೆ ವಿಮರ್ಶಕ’ (The Critic as Host, 1977). ಈ ಪ್ರಬಂಧದಲ್ಲಿ ‘Host’ ಮತ್ತು  ‘Parasite’ ಶಬ್ದಗಳ ಪೂರ್ವೇತಿಹಾಸವನ್ನು ಅವುಗಳ ನಾನಾರ್ಥಗಳನ್ನು ದೀರ್ಘವಾಗಿ ವಿಶ್ಲೇಷಿಸುತ್ತಾ, (Parasite, ‘ಅನ್ಯೋಪಜೀವಿ – ಶಬ್ದದ ೧೨ ವಿವಿಧ ಅರ್ಥಗಳು ಮತ್ತು ‘Host’ ಅತಿಥೇಯ – ಶಬ್ದದ ನಾನಾರ್ಥಗಳು) ಎರಡೂ ಶಬ್ದಗಳೂ ಹೇಗೆ ಸಮಾನ ಅರ್ಥಗಳನ್ನು ಕೊಡುತ್ತವೆ ಎಂದು ನಿದರ್ಶಿಸುತ್ತಾನೆ. (ಇಂತಹ ವಿಮರ್ಶೆಗೂ ಒಂದು ಶತಮಾನದ ಹಿಂದೆ ಪ್ರಖ್ಯಾತವಾಗಿದ್ದ ಪಂಡಿತಮನ್ಯ ಭಾಷಾ ಶಾಸ್ತ್ರದ – Philology – ಅಧ್ಯಯನಕ್ಕೂ ವ್ಯತ್ಯಾಸವೇನು ಎಂದು ಓದುಗರಿಗೆ ಅನಿಸಿದರೆ ಅದು ಸಹಜ.) ಈ ಪ್ರಬಂಧದಲ್ಲಿ ಮಿಲರ್‌ನ ವಾದವೇನೆಂದರೆ ಕೃತಿ (ಅತಿಥೇಯ, host) ವಿಮರ್ಶಕನಷ್ಟೇ ಅನ್ಯೋಪಜೀವಿ; ವಿಮರ್ಶೆ ಹಾಗೂ ಕೃತಿ ಎರಡೂ ಕೃತಿಪೂರ್ವ ಭಾಷೆಯನ್ನು ಮತ್ತು ಭಾಷೆಯ ‘ಜಾರುವ ಅರ್ಥವಿನ್ಯಾಸ’ವನ್ನು ಆಧರಿಸಿವೆ.

ನಿರಚನ ಚಿಂತನೆಯ ಕೊಡುಗೆಯೇನು? ಅದರ ಪ್ರಾಮುಖ್ಯತೆ ಪ್ರಸ್ತುತತೆಗಳೇನು?

ನಿರಚನ ಚಿಂತನೆ ಒಂದು ಪ್ರಸ್ಥಾನವಲ್ಲ, ಒಂದು ಪಂಥವಲ್ಲ. ನಿರಚನ ಯಾವುದನ್ನೂ ಸುಲಭವಾಗಿ ನಂಬದ, ಎಲ್ಲವನ್ನೂ ಸಂಶಯದಿಂದ ನೋಡುವ, ಪ್ರಶ್ನಿಸುವ, ಒಂದು ವಿಧದ ‘ನಾಸ್ತಿಕ’ ವೈಚಾರಿಕತೆ (Scepticism) ಇಂತಹ ವೈಚಾರಿಕತೆ ಒಂದು ಕಾಲಘಟ್ಟದಲ್ಲಿ ನೆಲೆಗೊಂಡಿರುವ ‘ಶ್ರೇಣೀಕೃತ ದ್ವಂದ್ವ’ಗಳನ್ನು ಬುಡಮೇಲು ಮಾಡುವ ವಿಧಾನದ ಕಾರಣದಿಂದ ನಮ್ಮ ಆಚರಣೆಗಳು, ಮಿತಿ – ಸಾಮರ್ಥ್ಯಗಳು ಹಾಗೂ ಕಾರ್ಯಗಳು ಇವುಗಳನ್ನು ನಿಯಂತ್ರಿಸುವ ಎಲ್ಲಾ ವಿಧದ ಧಾರ್ಮಿಕ – ರಾಜಕೀಯ – ಸಾಹಿತ್ಯಿಕ ಸಂಸ್ಥೆಗಳ ರಚನೆಗಳನ್ನು ಪ್ರಶ್ನಿಸಿ, ಪರೀಕ್ಷಿಸಿ ಅವುಗಳಲ್ಲಡಗಿರುವ ವೈರುಧ್ಯಗಳನ್ನು ಬೆಳಕಿಗೆ ತರುತ್ತದೆ. ಎಂದರೆ ರೂಢಿಗತ ವೈಚಾರಿಕತೆಯನ್ನು ಮತ್ತು ಸಂಪ್ರದಾಯಗಳನ್ನು ಹೊಸ ದಿಕ್ಕಿನಿಂದ ನೋಡುವ, ಪರೀಕ್ಷಿಸುವ ಜಿಜ್ಞಾಸು ದೃಷ್ಟಿಕೋನವನ್ನು ನಿರಚನ ನಮಗೆ ಕೊಡುತ್ತದೆ. ಡೆರಿಡಾ ಹೇಳುವಂತೆ, “ನಿರಚನ ರಾಜಕೀಯ, ಸಾಂಸ್ಥಿಕ ಪ್ರಶ್ನೆಗಳಿಂದ ದೂರವಾಗಿರಬಾರದು : ಅದೊಂದು ನೂತನ ಶೋಧವಾಗಬೇಕು – ರಾಜಕೀಯ ಹಾಗೂ ಧರ್ಮಶಾಸ್ತ್ರಗಳಿಂದ ನಾವು ಪಡೆದಿರುವ ಸಂಹಿತೆಗಳನ್ನು ಪ್ರಶ್ನಿಸುವ ಶೋಧ” (ಕಲರ್, ೧೯೮೩).

ಒಂದು ಸಮಾಜದಲ್ಲಿ ರೂಢಿಗತವಾಗಿರುವ ವೈಚಾರಿಕ ಸಂಹಿತೆಗಳನ್ನು ಪ್ರಶ್ನಿಸುವುದರಿಂದ ನಿರಚನ ಚಿಂತನೆ ವಿವಿಧ ಕ್ಷೇತ್ರಗಳನ್ನು, ಪಂಥಗಳನ್ನು ಪ್ರಭಾವಿಸಿದೆ. ಮಾರ್ಕ್ಸಿಸ್ಟ್ ಚಿಂತನೆ ಮತ್ತು ನಿರಚನೆಯನ್ನು ಒಂದೆಡೆ ತರುವ ಪ್ರಯತ್ನವನ್ನು ಮೈಕಲ್ ರಿಯನ್ ಮುಂತಾದವರು ಮಾಡಿದರೆ (Marxim and Deconstruction). ಸ್ತ್ರೀನಿಷ್ಠ ಸಾಹಿತ್ಯ, ವಿಮರ್ಶೆ, ಚಳುವಳಿಗಳು ನಿರಚನ ಚಿಂತನೆಯಿಂದ ಹೊಸ ಹೊಸ ಆಯಾಮಗಳನ್ನು ಪಡೆಯುತ್ತವೆ. (ಶೋಷಾನ ಫೆಲ್‌ಮನ್, ಹೆಲೇನ್ ಸಿಯೋಸ್ ಇತ್ಯಾದಿ). ಮುಖ್ಯವಾಗಿ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್‌ನ ವಿಚಾರಗಳನ್ನು ಪರಿಕಲ್ಪನೆಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ, ಅರ್ಥೈಸುವ ಪ್ರವೃತ್ತಿಯನ್ನು ನಿರಚನ ಚಿಂತನೆ ಬೆಳೆಸಿದೆ; ಮತ್ತು ಅದು ಅನಿರೀಕ್ಷಿತವಲ್ಲ. ಏಕೆಂದರೆ ಸ್ತ್ರೀ-ಪುರುಷ, ಜ್ಞಾನ-ಅಜ್ಞಾನ, ಮಾನಸಿಕ ಸ್ವಾಸ್ಥ್ಯ – ರೋಗ – ಇಂತಹ ದ್ವಂದ್ವಗಳನ್ನು ಪ್ರಶ್ನಿಸಿ ಅವುಗಳ ನಡುವಿನ ವ್ಯತ್ಯಾಸದ ಗೆರೆಗಳನ್ನೇ ಅಳಿಸಿದವನು ಫ್ರಾಯ್ಡ್.

ಒಟ್ಟಿನಲ್ಲಿ ನಿರಚನ ಚಿಂತನೆಯ ಪ್ರಭಾವವನ್ನು ಹಾಗೂ ಮೌಲಿಕತೆಯನ್ನು (‘ಆಫ್ ಗ್ರಮಟಾಲಜಿ’ ಅನುವಾದಕಿ ಮತ್ತು ಪ್ರಸಿದ್ಧ ಸ್ತ್ರೀ ನಿಷ್ಠ ನಿರಚನವಾದಿ) ಗಾಯತ್ರಿ ಸ್ಟಿವಕ್ ಇವರ ಮಾತುಗಳಲ್ಲಿ ಸಂಗ್ರಹಿಸಬಹುದು :

‘‘ನಿರಚನ ಚಿಂತನೆಯಲ್ಲಿ ನನಗೆ ಮುಖ್ಯವೆಂದು ಕಾಣುವುದೇನೆಂದರೆ ಎಲ್ಲಾ ವಿಧದ ಶೋಧನೆಯಲ್ಲಿಯೂ ಇರುವ ತಾತ್ಕಾಲಿಕ ಹಾಗೂ ನಿಶ್ಚಿತ ಪ್ರಾರಂಭಿಕ ಅಂಶಗಳನ್ನು ಅಂತಹ ಚಿಂತನೆ ಗುರುತಿಸುತ್ತದೆ ಎಂದು; ಇಚ್ಛಾಶಕ್ತಿ ಸ್ವವಿರೋಧಗಳನ್ನು ಸೃಷ್ಟಿಸುವೆಡೆಯಲ್ಲಿ ಅದು (ನಿರಚನ ಚಿಂತನೆ) ಸಹಭಾಗಿತ್ವವನ್ನು ಬೆಳಕಿಗೆ ತರುತ್ತದೆ ಎಂದು… ಅಂತಹ ಸಹಭಾಗಿತ್ವದ ಗುರುತುಗಳೇ ‘ಚರಿತ್ರೆ’ ಮತ್ತು ನೈತಿಕ – ರಾಜಕೀಯ ಸಂಹಿತೆಗಳು ಎಂದು ಅದು ಒತ್ತೊತ್ತಿ ಹೇಳುವುದರಿಂದ… ಮತ್ತು ತನ್ನ ಸಂಕಥನ ತನ್ನದೇ ಉದಾಹರಣೆಗೆ ಎಂದೂ ಸರಿಸಮನಾಗುವುದಿಲ್ಲ ಎಂದು ಅದು ಒಪ್ಪಿಕೊಳ್ಳುವುದರಿಂದ” (‘ದ್ರೌಪದಿ’, ಕಲರ್ ಉಲ್ಲೇಖಿಸುವಂತೆ, ೧೯೮೩, ಪು. ೨೨೪ – ೨೨೫).

ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿಯೂ ನಿರಚನ ಚಿಂತನೆ ಅನೇಕ ರೂಢಿಗತ ವಿಚಾರಗಳನ್ನು ನಂಬಿಕೆಗಳನ್ನು ವಿರೋಧಿಸಿ ವಿಮರ್ಶೆಗೆ ಹೊಸ ಆಯಾಮಗಳನ್ನು ನೀಡಿದೆ.

ಅ. ಮೊದಲನೆಯದಾಗಿ, ‘ಸಾಹಿತ್ಯ’ ಮತ್ತು ‘ಸಾಹಿತ್ಯ ವಿಮರ್ಶೆ’ ಇವೆರಡರ ಅಂತರವನ್ನೇ ನಿರಚನ ನಿರಾಕರಿಸಿ, ವಿಮರ್ಶಕನಿಗೆ ಅದ್ವಿತೀಯ ಸ್ವಾತಂತ್ರ್ಯವನ್ನು ಹಾಗೂ ಸ್ಥಾನವನ್ನು ಕೊಡುತ್ತದೆ. ಸಿ. ನಾರಿಸ್ ಹೇಳುವಂತೆ “ಅದೊಂದು ಅರ್ಥಪೂರ್ಣ ಸಾಹಿತ್ಯ ಕೃತಿ. ಅದರ ಸರಿಯಾದ ಅರ್ಥವನ್ನು ವಿಮರ್ಶಕನು ಶೋಧಿಸುತ್ತಾನೆ” ಎಂಬಂತಹ ಸಾಹಿತ್ಯಾಭ್ಯಾಸದ ಮೂಲಭೂತ ನಂಬಿಕೆಯನ್ನೇ ನಿರಚನವಾದ ಅಲ್ಲಗಳೆಯುತ್ತದೆ. (Deconstruction, p. xii) ‘ಸಾಹಿತ್ಯ’ ಮತ್ತು ‘ವಿಮರ್ಶೆ’ ಇವೆರಡೂ ಅಲಂಕಾರಿಕ ಭಾಷೆಯಿಂದ ನಿಯಂತ್ರಿತವಾದ ‘ರೂಪಕ ವೃತ್ತಾಂತಗಳು’ ಎಂದು ದ ಮಾನ್ ಹೇಳುವಂತೆ, ಮತ್ತು ಸಾಹಿತ್ಯ ಕೃತಿ ಹಾಗೂ ವಿಮರ್ಶೆ ಇವೆರಡೂ ಪರಸ್ಪರ ಅನ್ಯೋಪಜೀವಿಗಳು ಎಂದು ಮಿಲರ್ ಹೇಳುವಂತೆ.

ಪರಿಣಾಮತಃ ವಿಮರ್ಶೆಗೂ ಸಾಹಿತ್ಯದಂತೆಯೇ ಒಂದು ಅಧ್ಯಯನ ಯೋಗ್ಯ ಶಿಸ್ತಿನ ಗೌರವ ದೊರಕುತ್ತದಲ್ಲದೆ, ಅರ್ನಲ್ಡ್ – ಎಲಿಯಟ್ ಪಂಥದ ‘ಸೃಜನಶೀಲ ಸಾಹಿತಿ ಪ್ರಥಮ – ವಿಮರ್ಶಕನಿಗೆ ಎರಡನೆಯ ಸ್ಥಾನ’ ಎಂಬ ಶ್ರೇಣಿ ಅಲ್ಲಗಳೆಯಲ್ಪಡುತ್ತದೆ. ನವ್ಯ ವಿಮರ್ಶೆ ಸ್ಥಾಪಿಸಿದ ‘ಕೃತಿ ಹಾಗೂ ಕೃತಿಯ ವಿವರಗಳು ಹೊರತು ಬೇರೇನೂ ವಿಮರ್ಶೆ ಸ್ಥಾಪಿಸಿದ ‘ಕೃತಿ ಹಾಗೂ ಕೃತಿಯ ವಿವರಗಳು ಹೊರತು ಬೇರೇನೂ ವಿಮರ್ಶೆಗೆ ಸಂಬಂಧಿಸಿದುದಲ್ಲ’ ಎಂಬ ಕಠಿಣ ಚೌಕಟ್ಟಿನಿಂದ ಹೊರಬಂದು ನಿರಚನ ವಿಮರ್ಶಕ ಕೃತಯನ್ನು ಕುರಿತಂತೆ ತನಗೆ ಯೋಗ್ಯವೆನಿಸಿದ ಕೃತಿಕಾರ, ತಾತ್ವಿಕತೆ, ರಾಜಕೀಯ ಮುಂತಾದ ಎಲ್ಲಾ ನೆಲೆಗಳಲ್ಲಿಯೂ ‘ಸಂವಾದ’ವನ್ನು ನಡೆಸುತ್ತಾನೆ. ತನಗಿರುವ ಕೀಳರಿಮೆಯನ್ನು ತ್ಯಜಿಸಿ ಈಗ ವಿಮರ್ಶಕ ‘ಅರ್ಥಲೀಲೆ’ಯ (‘dance of meaning’) ಕ್ಷೇತ್ರಕ್ಕೆ ತನ್ನ ಮುಕ್ತ ಲಕ್ಷ್ಯವನ್ನು ಕೊಡಬೇಕು ಎಂದು ಹೇಳುತ್ತಾ ಜಫ್ರಿ ಹಾರ್ಟಮನ್ ಹೀಗೆ ಘೋಷಿಸುತ್ತಾನೆ “ಈಗ ನಾವು ಸಾಹಿತ್ಯ ಕೃತಿಗಳ ಹಿರಿಮೆಯನ್ನು ವಿಮರ್ಶೆಯ ಕೃತಿಗಳು ಪ್ರಶ್ನಿಸುವ ಯುಗದಲ್ಲಿ ಇದ್ದೇವೆ. ರೂಸೋವಿನ ಕೃತಿಗಳನ್ನು ಹಾಗೂ ಲಾಂಜೈನಸ್ ವಿಶ್ಲೇಷಿಸುವ ಮಹತ್ಕೃತಿಗಳನ್ನು ಓದುವಷ್ಟೇ ಆಸಕ್ತಿ ಹಾಗೂ ಗಾಂಭೀರ್ಯದಿಂದ (ರೂಸೋವಿನ ಕೃತಿಗಳ ಬಗ್ಗೆ ಬರೆದಿರುವ) ಡೆರಿಡಾನನ್ನು ಹಾಗೂ ಲಾಂಜೈನಸ್‌ನನ್ನೂ ಓದುವ ಕಾಲದಲ್ಲಿದ್ದೇವೆ” (ಸಿ. ನಾರಿಸ್, ಪು. ೩೨).

ಆ. ಡೆರಿಡಾನ ‘ಅವಕೇಂದ್ರೀಕರಣ’ ವಾದದ ಕಾರಣದಿಂದ ಈ ಕೃತಿಯ ಸರಿಯಾದ ಹಾಗೂ ನಿಜವಾದ ಅರ್ಥ ಇದಲ್ಲೆ ಮತ್ತೊಂದಲ್ಲ. ಇದು ಸರಿಯಾದ, ತಪ್ಪಾದ ಅರ್ಥೈಸುವಿಕೆ ಎಂಬ ನವ್ಯ ವಿಮರ್ಶೆಯ ಅದ್ವೈತ ನಿಲುವು ಅಲ್ಲಗಳೆಯಲ್ಪಟ್ಟು ಈ ಕೃತಿಯ ‘ಅರ್ಥಗಳು’ ಇವಿರಬಹುದು – ಬೇರೆಯೂ ಆಗಿರಬಹುದು – ಎಂಬಂತಹ ದ್ವೈತ ನಿಲುವು ವಿಮರ್ಶಾ ಕ್ಷೇತ್ರದಲ್ಲಿ ಬೇರುಬಿಡುತ್ತಿದೆ. ವಿಮರ್ಶೆ ನಿಷ್ಠುರ ವಸ್ತುನಿಷ್ಠತೆಯಿಂದ ವ್ಯಕ್ತಿನಿಷ್ಠತೆಯತ್ತ ವಾಲುತ್ತಿದೆ.

ಕೂಡಲೇ ಇಲ್ಲಿ ಒಂದು ಅಂಶವನ್ನು ಪ್ರಸ್ತಾಪಿಸಬೇಕು. ನಿರಚನವಾದ ಮಂಡಿಸುವ, ಒಪ್ಪುವ ಅರ್ಥದ ‘ಅವಕೇಂದ್ರೀಕರಣ’ಕ್ಕೂ ವೇನ್ ಭೂತ್ ಮುಂತಾದವರು ಮಂಡಿಸುವ ‘ವಿಮರ್ಶಾ ಬಾಹುಳ್ಯ’ (Critical Pluralism)ಕ್ಕೂ ವ್ಯತ್ಯಾಸವಿದೆ. ಹೇಗೆಂದರೆ ಬೂತ್‌ನ ದೃಷ್ಟಿಯಲ್ಲಿ ಕೃತಿಯ ಅಂತರ್ಗತ ‘ಅರ್ಥ’ ಖಚಿತವಾಗಿದೆ ಮತ್ತು ಅದು ಒಂದೇ – ಆದರೆ ಆ ಅರ್ಥವನ್ನು ವಿವಿಧ ಮಾರ್ಗಗಳಿಂದ ಪಡೆಯಬಹುದು. ಆದರೆ, ನಿರಚನ ವಿಮರ್ಶಕರ ದೃಷ್ಟಿಯಲ್ಲಿ ಕೃತಿಯಲ್ಲಿ ಖಚಿತ, ನಿರ್ದಿಷ್ಟ ‘ಅರ್ಥ’ವೆಂಬುದೇ ಇಲ್ಲ. ಒಂದು ಕೃತಿಯ ‘ಅರ್ಥ’ ಓದುಗನನ್ನು / ವಿಮರ್ಶಕನನ್ನು ಅವಲಂಬಿಸಿದೆ.

ಹಾಗಾದರೆ ಈ ನಿಲುವು ವಿಮರ್ಶೆಯ ಕ್ಷೇತ್ರದಲ್ಲಿ ಸಂಪೂರ್ಣ ಅರಾಜಕತೆಯನ್ನು ಮತ್ತು ಅಶಿಸ್ತನ್ನು ಬೆಳೆಸುವುದಿಲ್ಲವೇ? ‘ಏನು ಹೇಳಿದರೂ ಸರಿ’ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲವೆ? ಇಲ್ಲ – ಎಂದು ಮಾನ್ ಮುಂತಾದವರು ವಾದಿಸುತ್ತಾರೆ.

ಇ. ಕೊನೆಯದಾಗಿ, ರಾಚನಿಕೋತ್ತರ ವಾದಗಳಲ್ಲಿ ಒಂದಾದ ನಿರಚನ ವಾದ ರಾಚನಿಕ ಚಿಂತನೆಯ ‘ವ್ಯವಸ್ಥಿತ ವಿಶ್ಲೇಷಣ ಮಾರ್ಗ’ಗಳನ್ನು ಮತ್ತು ‘ವೈಜ್ಞಾನಿಕ ಯೋಜನೆ’ಗಳನ್ನು ತಿರಸ್ಕರಿಸುತ್ತದೆ. ಕೃತಿಗಳ ಅತಾರ್ಕಿಕತೆಯನ್ನು (Irrationality) ಮತ್ತು ಕೃತಿ ಒಳಗೊಂಡಿದೆಯೆಂದು ಭಾವಿಸಲಾಗುವ ಎಲ್ಲಾ ವಿಧದ ವೈಚಾರಿಕ ನಿಲುವುಗಳ ಆಂತರಿಕ ವೈರುಧ್ಯಗಳನ್ನು ಗುರುತಿಸುವುದರ ಮೂಲ ರಾಚನಿಕ ಸಿದ್ಧಾಂತಗಳ ನಂಬಿಕೆಯನ್ನು ನಿರಚನವಾದ ಸುಳ್ಳಾಗಿಸುತ್ತದೆ. ಸಾಹಿತ್ಯ ಹಾಗೂ ಸಾಹಿತ್ಯ ನಿರಚನವಾದ ಹಿಂದಿನಂತೆ ಅರ್ಥೈಸುವಿಕೆಯನ್ನು (Interpretation) ವಿಮರ್ಶೆಯ ಪ್ರಮುಖ ಕಾರ್ಯವೆಂದು ಸ್ಥಾಪಿಸುತ್ತದೆ (ಕಲರ್, ೨೧೯ – ೨೨೦).

ಸಂಪೂರ್ಣ ಅಸಾಂಪ್ರದಾಯಿಕ ಹಾಗೂ ನೂತನ ಸ್ವರೂಪದ ನಿರಚನ ವಾದಕ್ಕೆ ಅನೇಕ ನೆಲೆಗಳಿಂದ ಪ್ರತಿರೋಧವಿರುವುದು ಸಹಜವೇ. ನಿರಚನ ಚಿಂತನೆ ಇಂದು ಅಮೇರಿಕಾದಲ್ಲಿ ಎಷ್ಟು ವ್ಯಾಪಕವಾಗಿ ಬೆಳೆದಿದೆಯೋ ಅಷ್ಟೇ ವ್ಯಾಪಕವಾಗಿ ಇದಕ್ಕೆ ವಿರೋಧ ತತ್ವಶಾಸ್ತ್ರಜ್ಞರಿಂದ, ಮಾರ್ಕ್ಸಿಸ್ಟ್ ಚಿಂತಕರಿಂದ ಹಾಗೂ ಸಾಹಿತ್ಯ ವಿಮರ್ಶಕರಿಂದ ಬಂದಿದೆ. ಈ ವಿರೋಧದ ಕೆಲವು ಮುಖ್ಯ ಅಂಶಗಳನ್ನು ಈಗ ನೋಡೋಣ :

೧. ತತ್ವಶಾಸ್ತ್ರದ ನೆಲೆಯಲ್ಲಿ ನಿರಚನ ವಾದವನ್ನು ವಿರೋಧಿಸುವವರು ಮುಖ್ಯವಾಗಿ ಸುಪ್ರಸಿದ್ಧ ತತ್ವಶಾಸ್ತ್ರಜ್ಞ ವಿಟ್‌ಗೆನ್‌‌ಸ್ಟೈನ್‌ನ ಹೇಳಿಕೆಯನ್ನು ಉದಾಹರಿಸುತ್ತಾರೆ : “ನಾವು ಎಲ್ಲವನ್ನೂ ಸಂದೇಹಿಸಲು, ಪ್ರಶ್ನಿಸಲು ತೊಡಗಿದರೆ ನಾವು ಏನನ್ನೂ ಸಂದೇಹಿಸಲು, ಪ್ರಶ್ನಿಸಲು ಸಾಧ್ಯವಾಗದಂತಹ ಸ್ಥಿತಿಗೆ ಬಂದು ಇಲ್ಲುತ್ತೇವೆ”. ವಿಟ್‌ಗೆನ್‌ಸ್ಟೈನ್ ಇನ್ನೊಂದು ಸಂದರ್ಭದಲ್ಲಿ ಹೇಳುವುದೇನೆಂದರೆ, ನಾವು ನಮ್ಮ ಹಾಗೂ ವಿಶ್ವದ ಬಗ್ಗೆ ವ್ಯಾಖ್ಯಾನಿಸುವ ವಿಧಾನಗಳ ಅಧಾರ ನಾವೆಲ್ಲರೂ ಒಪ್ಪಿಕೊಂಡಿರುವ ಒಂದು ಸಂಪ್ರದಾಯ. ಎಂದ ಮೇಲೆ ಈ ಸಂದರ್ಭದಲ್ಲಿ ಸಂದೇಹ ಪ್ರವೃತ್ತಿಗೆ (Scepticism) ಸ್ಥಾನವೇ ಇಲ್ಲ. ರಾಚನಿಕೋತ್ತರ ಚಿಂತಕರು ‘ಸೂಚಕ’ ಹಾಗೂ ‘ಸೂಚಿತ’ಗಳ ನಡುವೆ ಸಹಜವಾಗಿಯೇ ಇರುವ ಬಿರುಕನ್ನು ಉತ್ಪ್ರೇಕ್ಷಿಸುತ್ತಾರೇಕೆಂದರೆ ಮೂಲತಃ ಅವರೆಲ್ಲರೂ ಭಾಷೆಗೂ ವಸ್ತುವಿಗೂ / ವಿಚಾರಗಳಿಗೂ ನಿಕಟ ಸಂಬಂಧವಿರಬೇಕೆಂದು ನಿರೀಕ್ಷಿಸುತ್ತಾರೆ. ಮತ್ತು ತಮ್ಮ ನಿರೀಕ್ಷೆ ತಪ್ಪಾದಾಗ ಅವರು ಏನನ್ನೋ ಹೊಸತನ್ನು ಕಂಡಂತೆ ಚಕಿತರಾಗುತ್ತಾರೆ, ಗೊಂದಲದಲ್ಲಿ ಬೀಳುತ್ತಾರೆ. ಭಾಷೆ, ತರ್ಕ ಹಾಗೂ ವಾಸ್ತವತೆಗಳ ನಡುವೆ ಒಂದಲ್ಲ – ಅನೇಕ ರೀತಿಗಳ ನಂಟಿರುತ್ತದೆ (ನಾರಿಸ್, ೧೨೯ – ೧೩೦).

೨. ನಿರಚನ ವಾದವನ್ನು ಅತ್ಯಂತ ಉಗ್ರವಾಗಿ ಮಾರ್ಕ್ಸಿಸ್ಟ್ ಮತ್ತು ಇತರ ಎಡಪಂಥದ ವೈಚಾರಿಕರು ವಿರೋಧಿಸುತ್ತಾರೆ; ಮತ್ತು ಈ ನಿಲುವು ಸಹಜವೇ (ಮೈಕಲ್ ರಿಯನ್ ಮುಂತಾದವರು ಈ ಹೇಳಿಕೆಗೆ ಅಪವಾದ ಅಷ್ಟೇ.) ಏಕೆಂದರೆ ಕೃತಿಯ ಎಲ್ಲಾ ತಾತ್ವಿಕ ನಿಲುವುಗಳನ್ನೂ ಅಲ್ಲಗಳೆಯುವ, ತತ್ವಶಾಸ್ತ್ರವನ್ನೂ ಒಳಗೊಂಡಂತೆ ಎಲ್ಲಾ ಶಿಸ್ತುಗಳನ್ನೂ ‘ವಾಸ್ತವದೂರ, ಸತ್ಯದೂರ’ (Fictions) ಎಂದು ಪರಿಗಣಿಸುವ, ಎಲ್ಲಾ ವಿಧದ ವಿಮರ್ಶೆಯನ್ನೂ ಸಾಹಿತ್ಯವನ್ನೂ ‘ಸೂಚನಾ ಪ್ರಕ್ರಿಯೆಯ ಅನಂತಲೀಲೆ’ (endless play of signification) ಎಂದು ಪರಿಗಣಿಸುವ ನಿರಚನ ಚಿಂತನೆ ‘ಬೌದ್ಧಿಕ ಪಲಾಯನ’ದಂತೆ ಅವರಿಗೆ ಕಾಣಿಸುವುದು ಆಶ್ಚರ್ಯವೇನಲ್ಲ. ತನ್ನ ‘ಲಿಟರರಿ ಥಿಯರಿ’ ಗ್ರಂಥದಲ್ಲಿ (೧೯೮೩) ಟೆರಿ ಈಗಲ್‌ಟನ್ ನಿರಚನ ವಾದವನ್ನು ಕುರಿತು ಹೀಗೆ ತೀರ್ಮಾನಿಸುತ್ತಾನೆ : “ರಾಚನಿಕೋತ್ತರ ಚಿಂತನೆ ತನ್ನ ಒಂದು ಸ್ವರೂಪದಲ್ಲೇ ರಾಜಕೀಯ ಪ್ರಶ್ನೆಗಳನ್ನೆಲ್ಲಾ ಪರಿಪೂರ್ಣವಾಗಿ ಬದಿಗೊತ್ತುವ ಸುಲಭೋಪಾಯವಾಗಿ ಬೆಳೆಯಿತು… ನಾವು ನಮ್ಮದೇ ಸಂಕಥನದ ಬಂದಿಗಳೆಂದು ನಂಬುವ ವಾದದ ಒಂದು ಪ್ರಯೋಜನವೆಂದರೆ.. ಉಳಿದವರೆಲ್ಲರ ನಂಬಿಕೆಗಳನ್ನೂ ನಾವು ನಿರ್ದಯೆಯಿಂದ ಕಾಲಡಿಯಲ್ಲಿ ತುಳಿಯಬಹುದು. ಮತ್ತು ನಮ್ಮದೇ ಆದ ನಂಬಿಕೆಗಳ ಜವಾಬ್ದಾರಿಯೂ ನಮಗಿರುವುದಿಲ್ಲ…. ಇಂತಹ ವಾದ ಸುಲಭವಾಗಿ ಯಾವ ಒಂದು ಮುಖ್ಯ ಸಮಸ್ಯೆಯನ್ನೂ ಕುರಿತು ಒಂದು ಖಚಿತ ನಿಲುವು ತಾಳುವುದರಿಂದ ನಮ್ಮನ್ನು ಮುಕ್ತರನ್ನಾಗಿಸುತ್ತದೆ” (ಪು. ೧೪೩ – ೧೪೫).

ಇಂತಹುದೇ ತೀರ್ಮಾನಗಳನ್ನು ಜೆರಲ್ಡ್ ಗ್ರಾಫ್ ಕೂಡ ಕೊಡುತ್ತಾನೆ. ಅವನ ದೃಷ್ಟಿಯಲ್ಲಿ ನಿರಚನ ವಾದವೆಂದರೆ ಆಧುನಿಕ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಬೆನ್ನು ಹಾಕುವುದು. ನವ್ಯ ವಿಮರ್ಶೆಯಂತೆ ನಿರಚನ ಚಿಂತನೆಯೂ ಸಾಹಿತ್ಯಕ್ಕೂ ವಾಸ್ತವತೆಗೂ ಇರುವ ಘನಿಷ್ಠ ಸಂಬಂಧವನ್ನೇ ನಿರಾಕರಿಸಿ ಒಂದು ವಿಧದ ‘ಶಿಷ್ಟ ಪಲಾಯನ’ದ (Sophisticated escapism) ಮಾರ್ಗವಾಗುತ್ತದೆ (ನಾರಿಸ್, ೧೩೧).

೩. ಇನ್ನು ಏಬ್ರಮ್ಸ್, ಬೂತ್ ಮುಂತಾದ ಸಾಹಿತ್ಯ ವಿಮರ್ಶಕರು ಸಾಹಿತ್ಯದ – ಸಾಹಿತ್ಯ ವಿಮರ್ಶೆಯ ಅನನ್ಯತೆಯನ್ನೇ ನಿರಾಕರಿಸುವ ನಿರಚನ ಚಿಂತನೆಯನ್ನು ಸಹಜವಾಗಿಯೇ ಖಂಡಿಸುತ್ತಾರೆ. ‘ಇತಿಹಾಸವೂ ಸೇರಿದಂತೆ ಎಲ್ಲಾ ಕೃತಿ ವಿಮರ್ಶೆಯ, ವ್ಯಾಖ್ಯಾನದ ಗೊಡವೆಗೇಕೆ ನಾವು ಹೋಗಬೇಕು?’ ಎಂದು ಏಬ್ರಮ್ಸ್ ಪ್ರಶ್ನಿಸುತ್ತಾನೆ. ಮತ್ತೆ ಇವರೆಲ್ಲರ ವೈಚಾರಿಕತೆಯನ್ನು ಪ್ರಶ್ನಿಸುವ, – ತಿರಸ್ಕರಿಸುವ ನಿರಚನ ಚಿಂತನೆಯೂ ಪ್ರಶ್ನಾರ್ಹ – ತಿರಸ್ಕಾರಾರ್ಹ ತಾನೆ? ನಿರಚನ ಚಿಂತನೆಯನ್ನೂ ಇತರರು ‘ನಿರಚನ’ ಗೊಳಿಸಬಹುದು. ರಾಚನಿಕೋತ್ತರ ವಾದಗಳನ್ನು ಇತ್ಯಾತ್ಮಕವಾಗಿ ಕಾಣುವ ಜಾನಥನ್ ಕಲರ್ ಕೂಡ ಇಂತಹುದೇ ಸಂದೇಹಗಳನ್ನು ವ್ಯಕ್ತಪಡಿಸುತ್ತಾನೆ : “ನಿರಚನ ಚಿಂತನೆಯ ಅತಿ ಮುಖ್ಯ ಸಮಸ್ಯೆಯೆಂದರೆ ಯಾವ ಕೃತಿಗಳು ಭಾಷೆ – ಕೃತಿ – ಶ್ರೇಣಿ – ಅಧಿಕಾರಿಗಳ ಬಗ್ಗೆ ಯಾವ ವಿಧದ ‘ಸತ್ಯ’ವನ್ನು ಹೇಳುತ್ತವೆ ಎಂದು ಗುರುತಿಸುವುದು. ಶೆಲಿಯ ಕವನವೊಂದು ‘(ಈ ವಿಶ್ವದಲ್ಲಿ) ಯಾವುದೂ ಇನ್ನೊಂದಕ್ಕೆ ಸಂಬಂಧಿಸಿರುವುದಿಲ್ಲ’ ಎಂದು ಹೇಳಿದ ಮಾತ್ರಕ್ಕೆ ಅದನ್ನು ಸತ್ಯವೆಂದು ನಾವು ಮಾನ್ಯ ಮಾಡಬೇಕಾದ ಕಾರಣಗಳೇನು?” (ಪು. ೨೭೩).

* * *