ಕೃತಿ ಕೇಂದ್ರಿತ ವಿಮರ್ಶೆ

ಇಪ್ಪತ್ತನೆಯ ಶತಮಾನದ ಪಾಶ್ಚಾತ್ಯ ವಿಮರ್ಶಾಪ್ರಸ್ಥಾನಗಳಲ್ಲೆಲ್ಲಾ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ವಿಮರ್ಶಾ ಪ್ರಸ್ಥಾನವೆಂದರೆ ‘ಕೃತಿ-ಕೇಂದ್ರಿತ ವಿಮರ್ಶೆ’ (Textual Criticism) ಎನ್ನಬಹುದು. ವಿಮರ್ಶೆಯ ಕೇಂದ್ರವನ್ನು ಕೃತಿಕಾರನಿಂದ ಹಾಗೂ ಕೃತಿ ಸಂದರ್ಭಗಳಿಂದ ಬೇರ್ಪಡಿಸಿ ಕೃತಿಯೆಡೆಗೆ ತಂದುದೇ ಈ ಶತಮಾನದ ಮಹತ್ಸಾಧನೆ. ಎಲಿಯಟ್ – ರಿಚರ್ಡ್ಸ್ ಇವರುಗಳಿಂದ ಹಿಡಿದು ಇತ್ತೀಚೆಗಿನ ಡೆರಿಡಾ ತನಕ ಅನೇಕ ವಿಧಗಳಲ್ಲಿ ಅನೇಕ ಸಿದ್ಧಾಂತಗಳ ಪಾತಳಿಯಲ್ಲಿ ಕೃತಿಕೇಂದ್ರಿತ ವಿಮರ್ಶೆ ಸಮೃದ್ಧವಾಗಿ ಬೆಳೆದುಬಂದಿದೆ.

ಕೃತಿಕೇಂದ್ರಿತ ವಿಮರ್ಶೆಯ ಮುಖ್ಯ ಕವಲುಗಳನ್ನು ಇಲ್ಲಿ ಸ್ಥೂಲವಾಗಿ ಚರ್ಚಿಸಲಾಗಿದೆ.

. ಪ್ರಕಾರವಿಮರ್ಶೆ

‘ಪ್ರಕಾರ ವಿಮರ್ಶೆ’ (Genre Criticism) ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆಗಳಲ್ಲಿ ಅತ್ಯಂತ ಪುರಾತನವಾದುದು; ಅಷ್ಟೇ ಆಧುನಿಕವಾದುದೂ ಹೌದು. ಒಂದು ದೃಷ್ಟಿಯಲ್ಲಿ ಭರತನಿಂದ ಮಮ್ಮಟನವರೆಗೆ ಬೆಳೆದು ಬಂದ ಅಗಾಧ ಸಂಸ್ಕೃತ ಕಾವ್ಯ ಮೀಮಾಂಸೆಯ ಅಡಿಗಲ್ಲು ಪ್ರಕಾರ ವಿಮರ್ಶೆಯೇ ಆಗಿದೆ. ಭರತನು ವಸ್ತು – ನಾಯಕ – ನಾಯಿಕಾ – ನಾಟಕ ಶಿಲ್ಪ ಇವುಗಳ ಆಧಾರದ ಮೇಲೆ ಕಲ್ಪಿಸುವ ಹತ್ತು ರೂಪಕ ಪ್ರಕಾರಗಳು ಮತ್ತು ಅವನು ಪ್ರತಿ ರೂಪಕಕ್ಕೂ ಇರಲೇಬೇಕೆಂದು ತಿಳಿಸುವ ಲಕ್ಷಣಗಳು; ಗುಣ – ರೀತಿಗಳ ಭಿನ್ನತೆಯ ಆಧಾರದ ಮೇಲೆ ದಂಡಿ – ವಾಮನರು ನಿರ್ಮಿಸುವ ಕಾವ್ಯ ಪ್ರಭೇದಗಳು; ನಾಲ್ಕು ಧ್ವನಿ ಪ್ರಕಾರಗಳು ಮತ್ತು ಅವುಗಳ ಆಧಾರದ ಮೇಲೆ ಆನಂದವರ್ಧನನು ನಿರ್ಮಿಸುವ ಕಾವ್ಯ ಪ್ರಭೇದಗಳು; ವಿಶ್ವನಾಥನು ಭರತನಿಗಿಂತ ಮುಂದೆ ಹೋಗಿ ಕಲ್ಪಿಸುವ ಹತ್ತು ಪ್ರಮುಖ ರೂಪಕಗಳು ಮತ್ತು ಹದಿನೆಂಟು ಉಪರೂಪಕಗಳು – ಇವೆಲ್ಲವೂ ಪ್ರಕಾರ ವಿಮರ್ಶೆಯ ನಿದರ್ಶನಗಳೇ. ನಿಜವಾಗಿ ನೋಡಿದರೆ, ಪ್ರಕಾರ ವಿಮರ್ಶೆ ಮತ್ತು ಅದರ ಅವಿಭಾಜ್ಯ ಅಂಗವಾದ ವರ್ಗೀಕರಣ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಎಷ್ಟು ಅತಿರೇಕಕ್ಕೆ ಹೋಗುತ್ತದೆಂದರೆ, ವಿಶ್ವನಾಥನು ತನ್ನ ‘ಸಾಹಿತ್ಯದರ್ಪಣ’ ದಲ್ಲಿ ಮುನ್ನೂರಕ್ಕೂ ಹೆಚ್ಚು ನಾಯಿಕಾಭೇದಗಳನ್ನು ಗುರುತಿಸುತ್ತಾನೆ. ಅಪ್ಪಯ್ಯ ದೀಕ್ಷಿತರು ನೂರಾ ಇಪ್ಪತ್ತು ಅಲಂಕಾರಗಳನ್ನು ಗುರುತಿಸುತ್ತಾರೆ.

ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿಯೂ ಪ್ರಕಾರ ವಿಮರ್ಶೆ ಅರಿಸ್ಟಾಟಲ್‌ನಷ್ಟು ಪ್ರಾಚೀನ. ಆದರೆ ಅದಕ್ಕೆ ಹೊಸ ರೂಪವನ್ನು ಕೊಟ್ಟು ಅದು ಹೊಸ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದವರು ತೀರಾ ಇತ್ತೀಚಿನವರಾದ ಅಮೇರಿಕನ್ ವಿಮರ್ಶಕರು. ಇದರಲ್ಲಿ ನಾರ್ಥ್‌‌ರಪ್ ಫ್ರಾಯ್ (Northrop Frye), ತಾದಾರೊವ್‌(Todorov), ಜಾನಥನ್ ಕಲರ್ (Jonathan Culler) ಮುಂತಾದವರು ಮುಖ್ಯರಾದವರು. ಫ್ರಾಯ್ ಪ್ರಕಾರ ವಿಮರ್ಶೆಯನ್ನು ‘ಪುರಾಣ – ಚಿರಂತನ ಪ್ರತೀಕ ವಿಮರ್ಶೆ’ಯೊಂದಿಗೆ ಒಂದುಗೂಡಿಸಿದರೆ, ಕಲರ್ ಪ್ರಕಾರ ವಿಮರ್ಶೆ, ರಾಚನಿಕ ವಿಮರ್ಶೆ ಮತ್ತು ವಾಚಕಾಭಿಮುಖ ವಿಮರ್ಶೆ ಇವೆಲ್ಲವುಗಳ ಸಂಗಮವನ್ನು ಸೃಜಿಸಲು ಪ್ರಯತ್ನಿಸುತ್ತಾನೆ.

ಪ್ರಕಾರ ವಿಮರ್ಶೆಯ ವ್ಯಾಖ್ಯೆಯೇನು? ಒಂದು ಕೃತಿಯ ಪ್ರಕಾರದ ಸ್ವರೂಪವನ್ನು ನಾವು ಹೇಗೆ ಗುರುತಿಸಬಹುದು? ಈ ಎರಡೂ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವುದು ಅಸಾಧ್ಯ. ಅಸಾಧ್ಯವೇಕೆಂದರೆ, ಒಂದು ಕೃತಿಯ ಪ್ರಕಾರವನ್ನು ಗುರುತಿಸಲು ನಮಗೆ ಆ ಕೃತಿಯನ್ನು ಒಳಗೊಳ್ಳುವ ವರ್ಗ (Category) ದ ಅರಿವಿರಬೇಕು; ಮತ್ತು ಆ ಸರಿಯಾದ ವರ್ಗದ ಅರಿವಿರಲು ನಮಗೆ ಕೃತಿಯ ಪ್ರಕಾರದ ಅರಿವಿರಲೇಬೇಕು. ಈ ಸನ್ನಿವೇಶವನ್ನು ಆಲನ್‌ರಾಡ್‌ವೇ ‘ಹರ್ಮೆನ್ಯೂಟಿಕಲ್ ಸಮಸ್ಯೆ’ (Hermeneutical dilemma) ಎಂದು ಕರೆಯುತ್ತಾನೆ. (Bradbury and Palmer, 1970:94). ಆದುದರಿಂದ ಪ್ರಕಾರ ವಿಮರ್ಶೆಯ ವ್ಯಾಖ್ಯಾನಕ್ಕೆ ಕೈಹಾಕದೆ ಈ ವಿಮರ್ಶಾ ವಿಧಾನದ ಗೊತ್ತು – ಗುರಿಗಳನ್ನು ಕುರಿತು ಈಗ ನೋಡೋಣ.

ಪ್ರಕಾರ ವಿಮರ್ಶೆಯ ಇತಿಹಾಸವನ್ನು ನೋಡಿದರೆ – ಭಾರತದಲ್ಲಾಗಲೀ, ಯುರೋಪಿನಲ್ಲಾಗಲೀ – ಅದು ಸೃಜನಾತ್ಮಕ ಸಾಹಿತ್ಯಕ್ಕೆ ಮಿತ್ರನಾಗುವುದಕ್ಕಿಂತ ಹೆಚ್ಚು ಶತ್ರುವಾಗಿರುವುದೇ ಕಂಡುಬರುತ್ತದೆ. ಸಾಹಿತ್ಯವನ್ನು ಅನೇಕ ಪ್ರಕಾರಗಳಲ್ಲಿ ವಿಭಜಿಸಿ ಅವುಗಳ ಭಿನ್ನ ಭಿನ್ನ ಲಕ್ಷಣಗಳನ್ನು ಗುರುತಿಸುವಾಗ ಭರತ – ಅರಿಸ್ಟಾಟಲ್ ಮುಂತಾದ ಆದಿ ವಿಮರ್ಶಕರು ತಾವು ನಿರೂಪಿಸಿದುದನ್ನು ಇತರರು ಆದೇಶದಂತೆ ಕಾಣಬೇಕೆಂದು ಪ್ರಾಯಶಃ ಭಾವಿಸಿರಲಿಲ್ಲ. ತಮ್ಮ ಮುಂದಿದ್ದ ಅಪಾರ ಸಾಹಿತ್ಯಕೃತಿಗಳನ್ನು ಓದುಗ – ಪ್ರೇಕ್ಷಕ – ವಿಮರ್ಶಕರ ರಸಾಸ್ವಾದನೆಯ ಅನುಕೂಲಕ್ಕಾಗಿ ಅವರುಗಳು ಕೆಲವು ಸಮಾನ ಲಕ್ಷಣಗಳನ್ನುಳ್ಳ ಕೃತಿಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಿ ಆಯಾ ವರ್ಗಲಕ್ಷಣಗಳನ್ನು ದಾಖಲಿಸಿದರೆಂದು ತೋರುತ್ತದೆ. ಆದರೆ ಅವರ ನಂತರ ಬಂದ ಲಾಕ್ಷಣಿಕರು ಹಾಗೂ ವಿಮರ್ಶಕರು ಅವರ ವಿಚಾರಗಳನ್ನು ‘ಆದೇಶ’ಗಳಂತೆ ಕಂಡು, ಯಾಂತ್ರಿಕವಾಗಿ ‘ಈ ಕೃತಿಯಲ್ಲಿ ಈ ಲಕ್ಷಣಗಳಿಲ್ಲದಿದ್ದರೆ ಇದು ಉತ್ತಮ ಕೃತಿಯಲ್ಲ’ ಎಂಬಂತಹ ಧೋರಣೆಗಳನ್ನು ತಳೆದರು. ಮತ್ತು ಇಂತಹ ಯಾಂತ್ರಿಕ ಹಾಗೂ ಅನುಚಿತ ಶಾಸನಪ್ರವೃತ್ತಿಯ ವಿರುದ್ಧ ಸೃಜನಾತ್ಮಕ ಲೇಖಕರು ಪ್ರತಿಭಟಿಸಿದುದು ನಮಗೆ ಮತ್ತೆ ಮತ್ತೆ ಸಾಹಿತ್ಯ ಚರಿತ್ರೆಯಲ್ಲಿ ಕಂಡುಬರುತ್ತದೆ. ಕಾಳಿದಾಸನು ‘ಪುರಾಣಮಿತ್ಯೇವ ನ ಸಾಧುಸರ್ವಂ’ ಎಂದು ಪರಂಪರಾಗತ ದೃಷ್ಟಿಕೋನವನ್ನು ಖಂಡಿಸಿದರೆ, ಭವಭೂತಿ ‘ಕಾಲೋಹ್ಯಯಂ ನಿರವಧಿಃ ವಿಪುಲಾ ಚ ಪೃಥ್ವೀ’ (ನಾನು ಬರೆದುದನ್ನು ಅರ್ಥ ಮಾಡಿಕೊಳ್ಳಬಲ್ಲ ರಸಿಕರು ಇಂದಲ್ಲದಿದ್ದರೆ ನಾಳೆ, ಈ ದೇಶದಲ್ಲಿಲ್ಲದಿದ್ದರೆ ಮತ್ತೊಂದು ದೇಶದಲ್ಲಿ ಇದ್ದೇ ಇರುತ್ತಾರೆ) ಎಂದು ಸಮಾಧಾನ ಮಾಡಿಕೊಂಡನು. ಹಾಗೆಯೇ ಇಂಗ್ಲೆಂಡಿನಲ್ಲಿ ಅರಿಸ್ಟಾಟಲ್‌ನ ವಿಚಾರಗಳಿಗೆ ವಿರೋಧವಾಗಿವೆ ಎಂಬ ಕಾರಣದಿಂದ ಶೇಕ್ಸ್‌ಪಿಯರ್‌ನ ನಾಟಕಗಳನ್ನು ಖಂಡಿಸುವವರು ಮತ್ತು ಅವನ ಪ್ರತಿಭೆಯನ್ನು ಮೆಚ್ಚುವವರು ಇವರುಗಳ ಮಧ್ಯೆ ನೂರಾರು ವರ್ಷಗಳವರೆಗೂ ವಾಗ್ಯುದ್ಧ, ಮಂಡನೆ – ಖಂಡನೆಗಳು ನಡೆದುವು.

ಪ್ರಾಯಶಃ ಈ ಕಾರಣಕ್ಕಾಗಿಯೇ, ಅಂದರೆ ಪ್ರಕಾರವಿಮರ್ಶೆ ಶಾಸನ ಪ್ರವೃತ್ತಿಯನ್ನು ತಾಳುತ್ತದೆ ಮತ್ತು ಸೃಜನಾತ್ಮಕ ಸಾಹಿತಿಗಳ ಮಾರ್ಗಗಳಲ್ಲಿ ಅಡ್ಡ ಬರುತ್ತದೆ ಎಂಬ ಕಾರಣಕ್ಕಾಗಿಯೇ ಅಭಿಜಾತ ಯುಗದಲ್ಲಿ ಮತ್ತು ಅನಂತರ ೧೭-೧೮ನೆಯ ಶತಮಾನಗಳಲ್ಲಿ ಅತ್ಯಂತ ಮಹತ್ವವನ್ನು ಪಡೆದಿದ್ದ ಪ್ರಕಾರ – ಪ್ರಶ್ನೆ ೧೯ನೆಯ ಶತಮಾನದ ರೊಮ್ಯಾಂಟಿಕ್  ಯುಗದಲ್ಲಿ  ಅಮುಖ್ಯವೆಂದು ತಿರಸ್ಕೃತವಾಯಿತು. ಫ್ರಾನ್ಸ್‌ನಲ್ಲಿ ವಿಕ್ಟರ್‌ಹ್ಯೂಗೊ, ಇಂಗ್ಲೆಂಡ್‌ನಲ್ಲಿ ವರ್ಡ್ಸ್‌ವರ್ತ್, ಕೋಲ್‌ರಿಜ್ ಮುಂತಾದವರುಗಳು ಪ್ರಕಾರನಿಷ್ಠ ವಿಮರ್ಶೆ ಮತ್ತು ಸಾಹಿತ್ಯಕೃತಿಗಳ ವರ್ಗೀಕರಣವನ್ನು ಪ್ರಬಲವಾಗಿ ವಿರೋಧಿಸಿದರು. ಅದರಲ್ಲೂ ಇಟಲಿಯ ಕ್ರೋಚಿ (Croce) ಕೆಲವು ಸಮಾನ ಲಕ್ಷಣಗಳ ಮೇಲೆ ಪ್ರತಿಯೊಂದು ಸಾಹಿತ್ಯ ಕೃತಿಗೂ ಒಂದು ಹಣೆಪಟ್ಟಿ ಹಚ್ಚುವುದು ಆ ಕೃತಿಗೂ ವಿಮರ್ಶಕನಿಗೂ ಕೂಡಿಯೇ ಆಗುವ ಅನ್ಯಾಯ ಎಂದು ಈ ವಿಧದ ವಿಮರ್ಶೆಯನ್ನು ತಿರಸ್ಕರಿಸಿದನು. ಇಪ್ಪತ್ತನೆಯ ಶತಮಾನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ‘ನವ್ಯ’ ವಿಮರ್ಶಕರಿಗೆ ಕೃತಿಯ ಪ್ರಕಾರದ ಪ್ರಶ್ನೆ ಒಂದು ಪ್ರಶ್ನೆಯೆಂದೇ ಅನಿಸಲಿಲ್ಲ. (Genre question is a pseudo question). ಆದರೆ ೧೯೫೮ ರಲ್ಲಿ ಪ್ರಕಟವಾದ ನಾರ್ಥರಪ್ ಫ್ರಾಯ್‌ನ ‘ವಿಮರ್ಶೆಯ ಅಂಗರಚನೆ’ (Anatomy of Criticism) ಪ್ರಕಾರ ವಿಮರ್ಶೆಗೆ ಹೊಸ ಚಾಲನೆಯನ್ನು ಕೊಟ್ಟಿತು. ಹರ್ಶ್‌(Hirish, 1967) ಮತ್ತು ಕಲರ್ (Culler, 1975) ಅವರ ಗ್ರಂಥಗಳು ಪ್ರಕಾರವಿಮರ್ಶೆಗೆ ನೂತನ ಮಾರ್ಗಗಳನ್ನು ಕಲ್ಪಿಸಿದುವು.

ಪ್ರಕಾರವಿಮರ್ಶೆಯ ಅಗತ್ಯವೇನೆಂದರೆ, ಅದು ವಿಮರ್ಶಕ ನಿರಾಕರಿಸಿದರೂ ಉಳಿಯುವ, ಮಾನವನ ವೈಚಾರಿಕ ಕ್ರಮದಲ್ಲಿಯೇ ಜನ್ಮತಾಳಿದೆ. ನಮ್ಮೆದುರಿಗಿರುವ ವಿಶಾಲ ವಿಶ್ವವನ್ನೂ, ನಮ್ಮ ನಾನಾ ವಿಧದ ಅನುಭವಗಳನ್ನೂ ನಾನಾ ವಿಧದ ಜನರನ್ನೂ ಮತ್ತು ಜನ ಬಾಹುಳ್ಯಗಳನ್ನೂ ನಾವು ಅರ್ಥೈಸಿಕೊಳ್ಳುವುದೇ ಅವುಗಳಿಗೊಂದು ರೂಪು ಕೊಡುವುದರ ಮೂಲಕ ಮತ್ತು ಅವುಗಳನ್ನು ವರ್ಗೀಕರಿಸುವುದರ ಮೂಲಕ. ಸಮಾನ ಲಕ್ಷಣಗಳನ್ನು ಆಧರಿಸಿದ ವರ್ಗೀಕರಣ ಪ್ರವೃತ್ತಿ ಇಲ್ಲದಿದ್ದರೆ ಪ್ರತಿಯೊಂದು ವ್ಯಕ್ತಿಯ ಅನುಭವವೂ ಸ್ವಯಂ ವಿಶಿಷ್ಟವಾಗಿಯೇ ಉಳಿಯುವುದರಿಂದ ವ್ಯವಸ್ಥಿತ ಜ್ಞಾನಾರ್ಜನೆ ಮತ್ತು ಅರ್ಥೈಸುವಿಕೆ ನಮಗೆ ಪ್ರಪಂಚದಲ್ಲಿ ಸಾಧ್ಯವಾಗುತ್ತಲೇ ಇರುತ್ತಿರಲಿಲ್ಲ. ಹಾಗೆ ವರ್ಗೀಕರಣವು ಜೀವನದಲ್ಲಿ ಅನಿವಾರ್ಯವಾದರೆ, ಸಾಹಿತ್ಯ ವಿಮರ್ಶೆಯಲ್ಲಿಯೂ ಅನಿವಾರ್ಯವಾಗುವುದು ಸಹಜವೇ.

ಅಷ್ಟೇ ಅಲ್ಲದೆ ಪ್ರಕಾರ ವಿಮರ್ಶೆಯ ಪ್ರಯೋಜನಗಳು ಅನೇಕವಿವೆ. ಮೊದಲನೆಯದಾಗಿ, ವಿಮರ್ಶೆಗೆ ಅನಿವಾರ್ಯವಾಗಿರುವ ತೌಲನಿಕ ಅಧ್ಯಯನಕ್ಕೆ ಈ ವಿಮರ್ಶೆ ಒಂದು ಕ್ರಮಯುಕ್ತ ಮತ್ತು ಸಹಜ ಸನ್ನಿವೇಶವನ್ನು ನಿರ್ಮಿಸುತ್ತದೆ. ಯಾವುದೇ ಕೃತಿಯ ಮೌಲ್ಯವನ್ನು ನಾವು ಗುರುತಿಸಬೇಕಾದರೂ ಆ ಕೃತಿಯನ್ನು ಸಮಾನಗುಣಗಳುಳ್ಳ ಇತರ ಕೃತಿಗಳೊಡನೆ ಹೋಲಿಸಲೇಬೇಕು. “ಮೌಲಿಕತೆಯನ್ನು ಅರಿಯಲು ಸಮಾನವೆಂದು ತೋರುವ ಕೃತಿಗಳ ತುಲನೆಯ ಹೊರತು ಬೇರೆ ಮಾರ್ಗವೇ ಇಲ್ಲ” ಎಂದು ಆಲನ್ ರಾಡ್‌ವೇ ಹೇಳುತ್ತಾನೆ (Bradbury and Palmer,  1970, 101). ಉದಾಹರಣೆಗೆ, ‘ಜೈಮಿನಿ ಭಾರತ’ದ ಮೌಲಿಕತೆ (ಅಥವಾ ಅದರ ಕೊರತೆ) ಅದನ್ನು ಮಹಾಕಾವ್ಯವೆಂದು ಪರಿಗಣಿಸಿ ಇತರ ಮಹಾಕಾವ್ಯಗಳೊಡನೆ ಹೋಲಿಸಿದಾಗ ತಾನೆ ನಮಗೆ ಕಂಡುಬರುವುದು? ಅಂದರೆ ಪ್ರಕಾರ ವಿಮರ್ಶೆ ಸಹಜವಾಗಿ ನಿರ್ಮಿಸುವ ತೌಲನಿಕ ವಿಮರ್ಶೆ ಒಂದು ಕೃತಿ ಇತರ ಕೃತಿಗಳಿಗೆ ಅಥವಾ ಆ ಸಾಹಿತ್ಯ ಪರಂಪರೆಗೆ ಎಷ್ಟು ಸಮಾನವಾಗಿದೆ ಎನ್ನುವುದಕ್ಕಿಂತ ಎಷ್ಟು ಭಿನ್ನವಾಗಿದೆ ಎಂಬುದರ ಮೇಲೆ ಒತ್ತು ಕೊಡುತ್ತದೆ.

ಎರಡನೆಯದಾಗಿ, ಹರ್ಶ್ (೧೯೬೭) ವಾದಿಸುವಂತೆ, ಕೃತಿಕಾರನಿಗೂ, ಕೃತಿಗೂ ಅತ್ಯಂತ ಘನಿಷ್ಠ ಸಂಬಂಧವಿದೆಯೆಂದಾದರೆ, ಕೃತಿರಚನೆಯಲ್ಲಿ ಕೃತಿಕಾರನಿಗಿರುವ ಉದ್ದೇಶ ಅವನು ಆಯ್ದುಕೊಳ್ಳುವ ಸಾಹಿತ್ಯ ಪ್ರಕಾರದಲ್ಲಿಯೇ ಕಂಡುಬರುತ್ತದೆ. ನಮ್ಮ ಪ್ರಜ್ಞೆ, ಪ್ರಭೇದಗಳಲ್ಲಿಯೇ (types) ಕೆಲಸ ಮಾಡುತ್ತದೆ ಎಂದು ಹರ್ಶ್ ಹೇಳುತ್ತಾನೆ. ಮತ್ತು ಆ ದೃಷ್ಟಿಯಿಂದ ತನಗಿರುವ ಅನೇಕ ಸಾಧ್ಯತೆಗಳಲ್ಲಿ ಒಂದು ಸಾಹಿತ್ಯ ಪ್ರಕಾರವನ್ನು ಆರಿಸುವ ಕೃತಿಕಾರನ ಆಯ್ಕೆಯೇ ಅವನ ಸಾಹಿತ್ಯಕ ಬಲವನ್ನೂ ಉದ್ದೇಶವನ್ನೂ, ಮೌಲ್ಯಗಳನ್ನೂ ಖಚಿತವಾಗಿ ಸೂಚಿಸುತ್ತದೆಂದು ವ್ಯಾಖ್ಯಾನಿಸುತ್ತಾನೆ. ಉದಾಹರಣೆಗೆ, ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಯನ್ನು ತೆಗೆದುಕೊಳ್ಳಬಹುದು. ಮಹಾಕಾವ್ಯ ಪರಂಪರೆ ಅಷ್ಟೇನೂ ಪ್ರಬಲವಾಗಿಲ್ಲದೆ ಆಧುನಿಕ ಕಾಲದಲ್ಲಿ ಕುವೆಂಪುರವರು ತಮ್ಮ ವಿಶಿಷ್ಟ ದರ್ಶನವನ್ನು ಸಾಕಾರಪಡಿಸಲು ಮಹಾಕಾವ್ಯ ಪ್ರಕಾರವನ್ನೇ ಆಯ್ಕೆ ಮಾಡಿದುದು ಸಾಹಿತ್ಯಿಕವಾಗಿ ಅವರು ಮಹಾಕಾವ್ಯಗಳಿಗೆ ಕೊಡುವ ಮಹತ್ವವನ್ನು ಮತ್ತು ಮಹಾಕಾವ್ಯ ಪರಂಪರೆಯಲ್ಲಿ ಅಂತರ್ಗತವಾಗಿರುವ ಮೌಲ್ಯಗಳ ಸ್ವೀಕಾರವನ್ನೂ ಸೂಚಿಸಬಹುದು.

ಅಥವಾ, ಅವರ ಆಯ್ಕೆ ಮಹಾಕಾವ್ಯ ಪರಂಪರೆ ಪ್ರತಿನಿಧಿಸುವ ಮೌಲ್ಯಗಳ ತಿರಸ್ಕಾರವೂ ಇರಬಹುದು. ಹೇಗೆಂದರೆ, ಕೃತಿಕಾರ ಒಂದು ಸಾಹಿತ್ಯ ಪ್ರಕಾರವನ್ನು ಆಯ್ಕೆ ಮಾಡಿದಾಗ ಅವನ ಉದ್ದೇಶ ಆ ಸಾಹಿತ್ಯ ಪರಂಪರೆಯನ್ನು ಮುಂದುವರಿಸುವುದು ಅಥವಾ ವಿರೋಧಿಸುವುದು ಯಾವುದಾದರೂ ಆಗಬಹುದು. ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಬರುವ ರಾವಣ, ಮಂಥರೆ, ಶಬರಿ ಮುಂತಾದವರ ಪಾತ್ರಗಳನ್ನು ಲಕ್ಷಿಸಿದಾಗ, ಅವರು ಪರಂಪರಾಗತ ಕಲ್ಪನೆಗಳಿಂದ ಎಷ್ಟು ಭಿನ್ನರಾಗಿದ್ದಾರೆಂದು ವಿಚಾರಿಸಿದಾಗ, ನಮಗೆ ಕುವೆಂಪುರವರು ಮಹಾಕಾವ್ಯ ಪರಂಪರೆಯಲ್ಲಿ ಅಂತರ್ಗತವಾದ ಮೌಲ್ಯಗಳನ್ನು ಮತ್ತು ಜೀವನದೃಷ್ಟಿಯನ್ನು ಎಷ್ಟು ದೂರ ಮಾಡಿದ್ದಾರೆಂದು ಗೊತ್ತಾಗುತ್ತದೆ (ಪುರಷೋತ್ತಮ ರಾಮ – ದುಷ್ಟ ರಾವಣ; ಮಾತ್ಸರ್ಯದಿಂದ ಕೂಡಿದ ಕಪಟ ಮಂಥರೆ – ಹೀನ ಕುಲದ ಶಬರಿ – ಇತ್ಯಾದಿ ರಚನೆಗಳನ್ನೇ ಅಲ್ಲದೆ ಶಿಷ್ಟ – ದುಷ್ಟ – ಉತ್ತಮ – ಹೀನ ಹೀಗೆ ಜೀವನವನ್ನು ನೋಡುವ ದ್ವಂದ್ವಾತ್ಮಕ ದೃಷ್ಟಿಯನ್ನೂ ಈ ಕೃತಿಯಲ್ಲಿ ಕವಿ ದೂರ ಮಾಡುತ್ತಾರೆ.)

ಈ ದೃಷ್ಟಿಕೋನದಿಂದ ನೋಡಿದಾಗ ಪ್ರಕಾರ ವಿಮರ್ಶೆ ಅನೇಕ ಸಾಧ್ಯತೆಗಳುಳ್ಳ ಒಂದು ವಿಶಾಲ ಕ್ಷೇತ್ರವನ್ನೇ ನಮ್ಮದಾಗಿಸುತ್ತದೆ. ಕೃತಿಕಾರ ತನ್ನ ಕೃತಿಯಲ್ಲಿ ಒಂದು ಸಾಹಿತ್ಯ ಪ್ರಕಾರದ ಜೊತೆಗೇ ಇತರ ಸಾಹಿತ್ಯ ಪ್ರಕಾರಗಳನ್ನೂ ಆರಿಸಿಕೊಳ್ಳಬಹುದು; ಮತ್ತು ತನ್ನ ಕೃತಿಯಲ್ಲಿ ಆ ಪ್ರಕಾರಗಳನ್ನು ಎದುರು ಬದುರಾಗಿಸಿ ಆ ಮೂಲಕ ಒಂದು ವಿಶಿಷ್ಟ ಶಿಲ್ಪವನ್ನೂ, ಅರ್ಥವನ್ನೂ ಓದುಗರಿಗೆ ಕೊಡಬಹುದು. ಉದಾಹರಣೆಗೆ, ದಂಡಿಯ ‘ದಶಕುಮಾರ ಚರಿತೆ’, ಕನ್ನಡದ ‘ಜೈಮಿನಿ ಭಾರತ’ ಹಾಗೂ ಇಂಗ್ಲಿಷ್‌ನಲ್ಲಿ ಛಾಸರ್ ಕವಿಯ ‘ಕ್ಯಾಂಟರ್‌ಬರಿ ಟೇಲ್ಸ್‌’ – ಇಂತಹ ಕೃತಿಗಳಲ್ಲೆಲ್ಲಾ ಕೃತಿಕಾರ ಒಂದು ಪ್ರಕಾರವನ್ನು (ಮತ್ತದರ ಮೌಲ್ಯಗಳನ್ನು) ಮೊದಲು ಎತ್ತಿಹಿಡಿದು, ಅದನ್ನು ಮತ್ತೊಂದು ಪ್ರಕಾರದ ಮೂಲಕ ಖಂಡಿಸಿ, ಮತ್ತೆ ಇನ್ನೊಂದು ಪ್ರಕಾರದ ಮೂಲಕ ಖಂಡನೆಯನ್ನು ಖಂಡಿಸಿ – ಹೀಗೆ ಅನ್ಯಾದೃಶವಾದ ಒಂದು ವಿಶಿಷ್ಟ ಶಿಲ್ಪವಿನ್ಯಾಸವನ್ನು ರಚಿಸುತ್ತಾನೆ. ಈ ಶಿಲ್ಪ ವಿನ್ಯಾಸದ ಅರಿವು ಮತ್ತು ಅದರಿಂದುಂಟಾಗುವ ರಸಾನಂದ ನಮಗೆ ಪ್ರಕಾರ ವಿಮರ್ಶೆಯಲ್ಲಿ ಮಾತ್ರ ಸಾಧ್ಯವಾಗುತ್ತದೆ.

ಜರ್ಮನ್ ಚಿಂತಕ ವುಲ್ಫ್‌ಗಾಂಗ್ ಇಜರ್‌(Wolfgang Iser, 1978) ನ ಅಭಿಪ್ರಾಯದಲ್ಲಿ ಓದುಗರು ತಮ್ಮ ಅನುಭವ, ಅಭ್ಯಾಸ ಇವುಗಳ ಆಧಾರದ ಮೇಲೆ ಸಹಜವಾಗಿಯೇ ಸಾಹಿತ್ಯಕೃತಿಗಳನ್ನು ವರ್ಗೀಕರಿಸುತ್ತಾರೆ; ಅಲ್ಲದೆ ಆ ವರ್ಗೀಕರಣದ ಅರಿವಿನಲ್ಲಿ ತಾವು ಯಾವುದೇ ಒಂದು ನೂತನ ಕೃತಿಯನ್ನು ಪ್ರವೇಶಿಸುವಾಗಲೂ ತಮ್ಮದೇ ಆದ ‘ನಿರೀಕ್ಷೆ’ಗಳನ್ನು ತರುತ್ತಾರೆ. ಆ ಕೃತಿ ಅಂತಹ ಓದುಗರ ‘ನಿರೀಕ್ಷೆ’ಗಳನ್ನು ಸಂಪೂರ್ಣ ತೃಪ್ತಿಗೊಳಿಸಬಹುದು (ಜನಪ್ರಿಯ ಕೃತಿಗಳನ್ನು ಈ ವರ್ಗಕ್ಕೆ ಸೇರಿಸಬಹುದು); ಅಥವಾ ಅವನ್ನು ಆಂಶಿಕವಾಗಿ ಅಥವಾ ಪೂರ್ಣವಾಗಿ ಭಂಗಗೊಳಿಸಬಹುದು; ಅಥವಾ ಓದುಗರ ಪರಂಪರಾಗತ ನಿರೀಕ್ಷೆಗಳಿಗೆ ಬದಲಾಗಿ ನೂತನ ನಿರೀಕ್ಷೆಗಳನ್ನೇ ಸೃಷ್ಟಿಸಬಹುದು (ಕ್ರಾಂತಿಕಾರಕ ಕೃತಿಗಳಂತೆ). ಏನೇ ಆದರೂ ನಿರೀಕ್ಷೆಗಳಿರುವುದು ನಿಜ; ಮತ್ತು  ಈ ನಿರೀಕ್ಷೆಗಳು ಮುಖ್ಯವಾಗಿ ಕೃತಿ – ಪ್ರಕಾರದಿಂದಲೇ ಉದ್ಭವಿಸಿರುತ್ತವೆ ಎನ್ನುವುದು ನಿಜ. ಕೃತಿ – ಪ್ರಕಾರದಿಂದ (ಅಂದರೆ ಒಂದು ಕೃತಿ ಆ ಸಾಹಿತ್ಯ ಪ್ರಕಾರಕ್ಕೆ ಸೇರಿಸಬಹುದು ಎಂದು ಊಹೆಯಿಂದ) ಜನ್ಮಿಸುವ ‘ನಿರೀಕ್ಷೆ’ಗಳು ಹೇಗೆ ಒಂದು ಕೃತಿಯ ಅರ್ಥಗ್ರಹಿಕೆಯನ್ನು ನಿರ್ಣಯಿಸುತ್ತವೆ ಎಂದು ತೋರಿಸಲು ಹೀದರ್ ಡುಬ್ರೋ (Heather Dubrow) ಎಂಬ ವಿಮರ್ಶಕನು ತನ್ನ ‘ಪ್ರಕಾರ’ (Genre, 1982) ಎಂಬ ಗ್ರಂಥದಲ್ಲಿ ಈ ಉದಾಹರಣೆಯನ್ನು ಕೊಡುತ್ತಾನೆ. ಈ ಒಂದು ವಾಕ್ಯವೃಂದವನ್ನು ನೋಡಿ :

“ಆಗ ಗಡಿಯಾರವು ೧೦-೩೦ ನ್ನು ತೋರಿಸುತ್ತಿತ್ತು. ಆದರೆ ಆ ಗಡಿಯಾರವು ಈಗೀಗ ಸರಿಯಾಗಿ ನಡೆಯುತ್ತಿಲ್ಲವೆಂದು ಕೆಲವರು ಸೂಚಿಸಿದ್ದರು. ಮುಂದಿನ ಕೊಠಡಿಯ ಹಾಸಿಗೆಯ ಮೇಲೆ ಸ್ತ್ರೀಯೊಬ್ಬಳ ಮೃತದೇಹವು ಸ್ತಬ್ಧವಾಗಿ ಬಿದ್ದಿದ್ದಿತು. ಅಷ್ಟೇ ನಿಶ್ಯಬದ್ಧವಾಗಿ ಒಬ್ಬನ ಆಕೃತಿಯು ಆ ಕೊಠಡಿಯಿಂದ ಹೊರಕ್ಕೆ ನಡೆಯಿತು. ಆ ಪರಿಸರದಲ್ಲೆಲ್ಲಾ ಕೇಳಿಬರುತ್ತಿದ್ದ ಶಬ್ದಗಳೆಂದರೆ ಎರಡೇ : ಗಡಿಯಾರದ ಟಿಕ್‌ಟಿಕ್ ಚಲನೆಯ ಶಬ್ದ ಮತ್ತು ಒಂದು ಶಿಶುವಿನ ಆಕ್ರಂದನದ ಶಬ್ದ” (ಪು. ೧).

ಹೀಗೆ ಪ್ರಾರಂಭವಾಗುವ ಒಂದು ಕೃತಿಯನ್ನು ನಾವು ಸಾಮಾಜಿಕ ಕಾದಂಬರಿಯೆಂದು ಭಾವಿಸಿ ಓದಲು ತೊಡಗಿದರೆ ಪ್ರತಿಯೊಂದು ವಿವರವೂ ನಮಗೆ ಒಂದು ಬಗೆಯ ಅರ್ಥವನ್ನು ಕೊಡುತ್ತದೆ : ಮೃತ ಸ್ತ್ರೀ ಅಳುತ್ತಿರುವ ಮಗುವಿನ ತಾಯಿಯಿರಬಹುದು; ಹೊರಗೆ ಹೋಗುತ್ತಿರುವ ವ್ಯಕ್ತಿ ಡಾಕ್ಟರ್ ಅಥವಾ ಆ ಸ್ತ್ರೀಯ ಪತಿಯಿರಬಹುದು, ಇತ್ಯಾದಿ. ಅಲ್ಲದೆ ಮುಖ್ಯವಾಗಿ ನಾವು ಪ್ರತಿಯೊಂದು ವಿವರವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಮೃತ ಸ್ತ್ರೀಯನ್ನು ಮತ್ತು ಆ ನವಜಾತ ಶಿಶುವನ್ನು ಕುರಿತು ನಮಗೆ ಕರುಣೆ ಉಂಟಾಗುತ್ತದೆ. ಸರಿಯಾಗಿ ನಡೆಯದೇ ಇರುವ ಗಡಿಯಾರವು ಅಕಾಲಿಕ ಮೃತ್ಯುವನ್ನು ಮತ್ತು ಕಾಲವೈಪರೀತ್ಯವನ್ನು ಸೂಚಿಸುವ ಸಂಕೇತವಾಗುತ್ತದೆ.

ಹಾಗಲ್ಲದೆ ಆ ಕೃತಿಯನ್ನು ನಾವು ಒಂದು ರಹಸ್ಯಮಯ ಪತ್ತೇದಾರಿ ಕಾದಂಬರಿಯಂತೆ ಓದಿದರೆ, ಎಲ್ಲಾ ವಿವರಗಳೂ ಬೇರೆಯೇ ಆದ ಅರ್ಥವನ್ನು ನಮಗೆ ಕೊಡುತ್ತವೆ. ಸತ್ತು ಬಿದ್ದಿರುವ ಸ್ತ್ರೀ ಕೊಲೆಯಾಗಿರಬಹುದು ಮತ್ತು ಹೊರಗೆ ಹೋಗುತ್ತಿರುವ ವ್ಯಕ್ತಿಯೇ ಅವಳ ಕೊಲೆಗಾರನಿರಬಹುದು. ಅವನೋ ಅಥವಾ ಅವನ ಗುಂಪಿನವರೋ ಆ ಗಡಿಯಾರವನ್ನೂ ಕೆಡಿಸಿರಬಹುದು. ಅಲ್ಲದೆ, ಮುಖ್ಯವಾಗಿ ನಮ್ಮ ಹೃದಯದಲ್ಲಿ ಆ ಮೃತ ಸ್ತ್ರೀಯ ಬಗ್ಗೆ ಹಾಗೂ ಆ ಮಗುವಿನ ಬಗ್ಗೆ ಯಾವುದೇ ವಿಧದ ಅನುಕಂಪ ಉಂಟಾಗುವುದಿಲ್ಲ. ಏಕೆಂದರೆ ಪತ್ತೇದಾರಿ ಕಥೆಗಳಲ್ಲಿ ನಾವು ಒಂದು ವಿಧದ ‘ಬೌದ್ಧಿಕ ಆಟ’ವನ್ನು ನಿರೀಕ್ಷಿಸುತ್ತವೆಯೇ ವಿನಹ ಸಾಚಾ ಜೀವನಾನುಭವಗಳನ್ನಲ್ಲ.

ಆಧುನಿಕ ಅಮೇರಿಕನ್ ವಿಮರ್ಶಕ ನಾರ್ಥ್‌‌ರಪ್ ಫ್ರಾಯ್ ‘ಪ್ರಕಾರ ವಿಮರ್ಶೆ’ಯನ್ನು ತನ್ನದೇ ಆದ ರೀತಿಯಲ್ಲಿ ಬೆಳೆಸುತ್ತಾನೆ. ಅವನದು ಮೂಲತಃ ತಾತ್ವಿಕ ಸಾಹಿತ್ಯ ಪ್ರಭೇದಗಳು (Theoretical genres). ಸಾಹಿತ್ಯವನ್ನು ಅವನು ಒಂದು ನೆಲೆಯಲ್ಲಿ ಕೃತಿಯ ನಾಯಕನಿಗೂ, ಅವನ ಪರಿಸರ ಹಾಗೂ ಇತರ ಮಾನವರಿಗೂ ಇರುವ ಸಂಬಂಧವನ್ನು ಆಧರಿಸಿ ಐದು ವರ್ಗಗಳಾಗಿ ವಿಂಗಡಿಸುತ್ತಾನೆ : ೧) ನಾಯಕ ಅವರಿಗಿಂತ ಮೂಲ ಸ್ಥಿತಿಯಲ್ಲಿಯೇ ಶ್ರೇಷ್ಠನಾಗಿರಬಹುದು (ಪುರಾಣಗಳಲ್ಲಿ ಬರುವ ದೇವ – ದೇವತೆಗಳಂತೆ) ; ೨) ಅವರಿಗಿಂತ ಆಂಶಿಕವಾಗಿ ಶ್ರೇಷ್ಠನಾಗಿರಬಹುದು (ಅದ್ಭುತ – ರಮ್ಯ – ಕಥಾನಕಗಳ ನಾಯಕರಂತೆ); ೩) ಅವನು ತನ್ನ ಪರಿಸರಕ್ಕಿಂತ ಶ್ರೇಷ್ಠನಲ್ಲದಿದ್ದರೂ ಇತರ ಮಾನವರಿಗಿಂತ ಆಂಶಿಕವಾಗಿ ಶ್ರೇಷ್ಠನಿರಬಹುದು (ಮಹಾಕಾವ್ಯಗಳ ಮತ್ತು ರುದ್ರನಾಟಕಗಳ ನಾಯಕರಂತೆ) – ಈ ಪ್ರಕಾರವನ್ನು ಫ್ರಾಯ್‌’High nimetic mode’ ಎಂದು ಕರೆಯುತ್ತಾನೆ; ೪) ಅವನು ತನ್ನ ಪರಿಸರ ಮತ್ತು ಸಹಮಾನವರಿಗಿಂತ ಶ್ರೇಷ್ಠನಲ್ಲದಿರಬಹುದು – ಅಂದರೆ ಅವನೂ ನಮ್ಮ ನಿಮ್ಮಂತೆ ಸಾಧಾರಣ ಮಾನವನಿರಬಹುದು (ಸುಖಾಂತ ನಾಟಕಗಳ ಮತ್ತು ವಾಸ್ತವಿಕ ಕಾದಂಬರಿಗಳ ನಾಯಕರಂತೆ). ‘Low mimetic mode’ ಎಂದು ಈ ಪ್ರಕಾರವನ್ನು ಫ್ರಾಯ್ ಗುರುತಿಸುತ್ತಾನೆ; ಮತ್ತು ೫) ಅವನು ತನ್ನ ಪರಿಸರ ಮತ್ತು ಮಾನವರಿಗಿಂತ ಗುಣದಲ್ಲಿ ಕೀಳಾಗಿರಬಹುದು (ಅಣಕು ಕೃತಿಗಳ ಹಾಗೂ ವ್ಯಂಗ್ಯಾತ್ಮಕ ಕೃತಿಗಳ ನಾಯಕರಂತೆ) – ಫ್ರಾಯ್‌ನ ವರ್ಗೀಕರಣದಲ್ಲಿ ಇದು ‘Ironic Mode’ (೧೯೫೮ – ೩೩-೩೪). ಈ ರೀತಿ ಸಮಗ್ರ ಸಾಹಿತ್ಯವನ್ನು ಒಟ್ಟು ಐದು ವರ್ಗಗಳಲ್ಲಿ ವಿಂಗಡಿಸಿ (ಒಂದು ವರ್ಗದಲ್ಲಿ ನಾಟಕ, ಕಾವ್ಯ, ಕಾದಂಬರಿ ಇತ್ಯಾದಿ ವಿಭಿನ್ನ ಸಾಹಿತ್ಯ ಪ್ರಕಾರಗಳು ಸೇರಬಹುದು). ಅನಂತರ ಪ್ರತಿಯೊಂದು ವರ್ಗಕ್ಕೆ ಸೇರಬಹುದಾದ ಕೃತಿಗಳ ತೌಲನಿಕ ಅಭ್ಯಾಸವನ್ನು ಫ್ರಾಯ್ ಮಾಡುತ್ತಾನೆ.

ನೋಮ್ ಚೋಮ್‌ಸ್ಕಿ (Noam Chomsky) ಎಂಬ ಭಾಷಾಶಾಸ್ತ್ರಜ್ಞ ಭಾಷೆಯಲ್ಲಿ ‘ಆಂತರಿಕ ರಚನೆ’ (Deep Structure) ಮತ್ತು ‘ಬಾಹ್ಯರಚನೆ’ (Surface Structure) ಗಳೆಂದು ಗುರುತಿಸುವಂತೆ ಒಂದು ಸಾಹಿತ್ಯ ಕೃತಿಯಲ್ಲಿಯೂ ನಾವು ಎರಡು ವಿಧದ ರಚನೆಗಳನ್ನು ಗುರುತಿಸಬಹುದು. ಉದಾಹರಣೆಗೆ, ನಾವು ಕನ್ನಡ ಕಾದಂಬರಿ ‘ಸಂಸ್ಕಾರ’ವನ್ನು ತೆಗೆದುಕೊಳ್ಳೋಣ. ಈ ಕೃತಿಯ ಬಾಹ್ಯರಚನೆಯೆಂದರೆ ನಾರಣಪ್ಪನ ಸಾವು. ಚಂದ್ರಿ – ಆಚಾರ್ಯರ ಸಮಾಗಮ ಇತ್ಯಾದಿ ಘಟನೆಗಳ, ವಿವರಗಳ ಮೂಲಕ ನಾವು ಗ್ರಹಿಸುವ ವಿನ್ಯಾಸ. ಹಾಗೆಯೇ ಈ ಘಟನೆಗಳು – ವಿವರಗಳು – ಇವುಗಳನ್ನೆಲ್ಲಾ ಮರೆತು ಅವುಗಳ ಆಳದಲ್ಲಿರುವ ಮೂಲಭೂತ ವಿನ್ಯಾಸವನ್ನು ನೋಡಿದರೆ ಅದನ್ನು ‘ತನ್ನ ಸ್ವಂತಿಕೆಗಾಗಿ ವ್ಯಕ್ತಿ ನಡೆಸುವ ಶೋಧ’ ಎನ್ನಬಹುದು. ಈ ನೆಲೆಯಲ್ಲಿ ಜರ್ಮನ್ ವಿಮರ್ಶಕರು, ಕೃತಿಯ ಆಂತರಿಕ ವಸ್ತು ವಿನ್ಯಾಸದ ಆಧಾರದ ಮೇಲೆ ಅನೇಕ ಸಾಹಿತ್ಯ ಪ್ರಭೇದಗಳನ್ನು ಗುರುತಿಸುತ್ತಾರೆ. ಬಿಲ್ಡುಂಗ್ಸ್ ರೋಮಾನ್ (Bildungs Roman) – ಬೆಳವಣಿಗೆಯನ್ನು ಮುಖ್ಯ ವಸ್ತುವನ್ನಾಗುಳ್ಳ ನಾಯಕನ ಜನ್ಮದಿಂದ ಪ್ರಾರಂಭಿಸಿ ಅವನ ಪ್ರಬುದ್ಧಾವಸ್ಥೆಯಲ್ಲಿ ಕೊನೆಗೊಳ್ಳುವ ಕೃತಿಗಳು : ಲಾರೆನ್ಸ್‌ನ ‘ಸನ್ಸ್‌ಅಂಡ್ ಲವರ್ಸ್’, ಡಿಕನ್ಸ್‌ನ ‘ಡೇವಿಡ್ ಕಾಪರ್‌ಫೀಲ್ಡ್’ ಇತ್ಯಾದಿ; ಕುನ್‌ಸ್ಟ್ಲರ್‌ರೋಮಾನ್ (Kunstler Roman) ಕಲಾವಿದರನ್ನು ಮುಖ್ಯವಸ್ತುವನ್ನಾಗುಳ್ಳ ಮತ್ತು ಅವನ ಕಲೆಯ ಬೆಳವಣಿಗೆಯನ್ನು ಚಿತ್ರಿಸುವ ಕೃತಿಗಳು ; ಜಾಯ್ಸ್‌ನ ‘ಕಲಾವಿದನೊಬ್ಬನ ಚಿತ್ರ’ (The Portrait of an Artist as a Young Man), ಕಾರಂತರ ‘ಮೊಗ ಪಡೆದ ಮನ’ ಇತ್ಯಾದಿ; ರೋಮನ್ ಎ ಕ್ಲೆಫ್ (Roamn a clef) – ನಿಜಜೀವನದ ವ್ಯಕ್ತಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಚಿತ್ರಿಸಿ ಅವರನ್ನು ವಿಡಂಬಿಸುವ ಕೃತಿಗಳು : ಪೋಪ್ ಕವಿಯ ವಿಡಂಬನ ಚಿತ್ರಗಳು, ಗ್ರೀಕ್ ನಾಟಕಕಾರ ಅರಿಸ್ಟೋಫನೀಸ್‌ನ ‘ಮೋಡಗಳು’ ಇತ್ಯಾದಿ. ಈ ವೈಚಾರಿಕ ಕ್ರಮವನ್ನೇ ಮುಂದುವರಿಸಿ ನಾವು ‘ರಾಜಕೀಯ ಕಾದಂಬರಿ’, ‘ಸಾಂಸಾರಿಕ ಕಾದಂಬರಿ’ ಎಂದೆಲ್ಲಾ ವಿಶ್ಲೇಷಿಸುತ್ತಾ ಹೋಗಬಹುದು.

ಜಾನಥನ್ ಕಲರ್ ತನ್ನ ‘ರಾಚನಿಕ ಕಾವ್ಯಮೀಮಾಂಸೆ’ (Structuralist Poetics, 1975) ಗ್ರಂಥದಲ್ಲಿ ಪ್ರಕಾರವಿಮರ್ಶೆಗೆ ಮತ್ತೊಂದು ನೂತನ ಆಯಾಮವನ್ನು ಕಲ್ಪಿಸುತ್ತಾನೆ. ಅವನ ದೃಷ್ಟಿಯಲ್ಲಿ ನಾವು ಪ್ರಕಾರ ವಿಮರ್ಶೆಯನ್ನು ಎರಡು ಬಗೆಗಳಲ್ಲಿ ಮಾಡಬಹುದು : ‘ಚಾರಿತ್ರಿಕ ಅಧ್ಯಯನ’ ಮತ್ತು ‘ಸದ್ಯಸ್ಥಿತಿ ಅಧ್ಯಯನ’ (Diachronic and Synchronic). ಚಾರಿತ್ರಿಕ ಅಧ್ಯಯನವೆಂದರೆ ಒಂದು ಸಾಹಿತ್ಯ ಪ್ರಕಾರ ಪ್ರಾರಂಭವಾದಾಗಿನಿಂದ ಇಂದಿನವರೆಗೆ ಕಾಲಾನುಕಾಲಕ್ಕೆ ಹೇಗೆ ಹೇಗೆ ಬದಲಾಗುತ್ತಾ ಬಂದಿದೆ ಎಂದು ಗುರುತಿಸುವುದು. ಉದಾಹರಣೆಗೆ, ಪಾಶ್ಚಿಮಾತ್ಯ ಭಾಷೆಗಳಲ್ಲಿ ‘ಮಹಾಕಾವ್ಯ’ದ ಚಾರಿತ್ರಿಕ ಅಧ್ಯಯನ ಹೋಮರ್‌ನ ಕೃತಿಗಳಿಂದ ಪ್ರಾರಂಭವಾಗಿ, ವರ್ಜಿಲ್, ಡಾಂಟೆ, ಟಾಸೋ, ಎರಿಯೋಸ್ಟೋ, ಸ್ಟೆನ್ಸರ್‌ಮತ್ತು ಮಿಲ್ಟನ್ ಇವರುಗಳು ‘ಮಹಾಕಾವ್ಯ’ ಪ್ರಕಾರವನ್ನು ಹೇಗೆ ಉಪಯೋಗಿಸಿ ಕೊಂಡಿದ್ದಾರೆ ಮತ್ತು ಆ ಪ್ರಕಾರದ ‘ಸ್ವರೂಪ’ ಮತ್ತು ‘ವಿಷಯ’ ಇವುಗಳಲ್ಲಿ ಯಾವ ಯಾವ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎಂದು ಗುರುತಿಸಬಹುದು. ಕಲರ್‌ನ ಅಭಿಪ್ರಾಯದಲ್ಲಿ ಇಂತಹ ಅಧ್ಯಯನ ಯಾಂತ್ರಿಕ.

ಚಾರಿತ್ರಿಕ ಅಧ್ಯಯನಕ್ಕಿಂತ ‘ಸದ್ಯಸ್ಥಿತಿ ಅಧ್ಯಯನ’ ಹೆಚ್ಚು ಕುತೂಹಲಕಾರಿ ಮತ್ತು ಉಪಯುಕ್ತವೆಂದು ಕಲರ್ ಹೇಳುತ್ತಾನೆ. ಈ ಮಾರ್ಗದಲ್ಲಿ ಕಾಲದೇಶ ಭಿನ್ನತೆಗಳನ್ನು ಬದಿಗಿರಿಸಿ ಒಂದು ಸಾಹಿತ್ಯಪ್ರಭೇದವೆಂದು ನಾವು ಗುರುತಿಸುವ ಎಲ್ಲಾ ಕೃತಿಗಳನ್ನೂ ಒಟ್ಟಿಗೆ ತಂದು ಅವುಗಳ ಸಮಾನ ಘಟಕಗಳ ತೌಲನಿಕ ಅಧ್ಯಯನ ಮಾಡುತ್ತೇವೆ. ಉದಾಹರಣೆಗೆ, ನಾವು ‘ಕಲಾವಿದ ಕಾದಂಬರಿ’ ಪ್ರಕಾರವನ್ನು ತೆಗೆದುಕೊಳ್ಳೋಣ. ಈ ಪ್ರಕಾರದಲ್ಲಿ ನಾವು ನಾಯಕನ ಪರಿಸರ, ತನ್ನಲ್ಲಿ ಕಲೆಯಿದೆಯೆಂಬ ಅರಿವು ನಾಯಕನಿಗೆ ಆಗುವಿಕೆ, ಕಲೆಯ ಸಾಧನೆ ಮತ್ತು ಆ ಸಾಧನೆಯ ಮಾರ್ಗದಲ್ಲಿ ಅವನಿಗೆ ಬರುವ ಎಡರು ತೊಡರುಗಳು, ವೈಯಕ್ತಿಕ ಜೀವನ – ಕಲೆ ಇವುಗಳ ತಿಕ್ಕಾಟ, ನಾಯಕನ ಅಂತಿಮ ಆಯ್ಕೆ – ಹೀಗೆ ಅನೇಕ ಘಟಕಗಳನ್ನು ಮೊದಲು ಗುರುತಿಸುತ್ತೇವೆ. ಅನಂತರ ಯಾವುದಾದರೂ ಒಂದು ಘಟಕವನ್ನು ತೆಗೆದುಕೊಂಡು ಅದು ವಿವಿಧ ಕೃತಿಗಳಲ್ಲಿ ಹೇಗೆ ಮೂಡಿದೆ, ಆ ಭಿನ್ನತೆಗಳು ನಮಗೆ ಆ ಕೃತಿಯ ಬಗ್ಗೆ ಲೇಖಕನ ಬಗ್ಗೆ ಮತ್ತು ಸಮಾಜದ ಬಗ್ಗೆ ಏನನ್ನು ಸೂಚಿಸುತ್ತವೆ ಎಂದು ವಿಚಾರ ಮಾಡಬಹುದು.

ಒಟ್ಟಿನಲ್ಲಿ ಪ್ರಕಾರವಿಮರ್ಶೆಯ ಮಾರ್ಗ, ಗೊತ್ತುಗುರಿಗಳು ಇಂದು ಸಂಪೂರ್ಣ ಬದಲಾಗಿವೆ. ಯಾಂತ್ರಿಕ ವರ್ಗೀಕರಣ ಮತ್ತು ಶಾಸನ – ಧೋರಣೆ ಇವುಗಳ ಬದಲು ನಾವು ಸೃಜನಾತ್ಮಕ ವರ್ಗೀಕರಣ ಮತ್ತು ಶೋಧಕ – ಧೋರಣೆಯನ್ನು ಕಾಣುತ್ತೇವೆ. ಇಷ್ಟಾಗಿಯೂ ಈ ವಿಮರ್ಶೆಯು ಇತರ ವಿಮರ್ಶಾ ಮಾರ್ಗಗಳಂತೆ ಅಲ್ಲಲ್ಲಿ ಎಡವುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ. ಏಕೆಂದರೆ ಯಾವುದೇ ಮಾನದಂಡವನ್ನು ನಾವು ಉಪಯೋಗಿಸಿದರೂ ಸಾಹಿತ್ಯಕೃತಿಗಳನ್ನು ಅಂಗಡಿಯಲ್ಲಿ ಹೆಸರು ಹಚ್ಚಿ ಕ್ರಮವಾಗಿ ಜೋಡಿಸಲ್ಪಟ್ಟಿರುವ ರಟ್ಟಿನ ಪೆಟ್ಟಿಗೆಗಳಂತೆ ವರ್ಗೀಕರಿಸಿ ಜೋಡಿಸಲಾಗುವುದಿಲ್ಲ. ಆದರೆ ಜೋಡಣೆ ಕೊನೆಗೆ ಹೇಗಾದರೂ ಆಗಲಿ, ಜೋಡಣೆಯ ಮಾರ್ಗ ನಮಗೆ ಮುಖ್ಯವಾಗುತ್ತದೆ. ಆಲನ್ ರಾಡ್‌ವೇ ಹೇಳುವಂತೆ “ಈ ಘಟ್ಟದಲ್ಲಿ ಈ ಕೃತಿಯನ್ನು ಹೇಗೆ ವರ್ಗೀಕರಿಸಬೇಕು? ಯಾವುದರ ಜೊತೆ ಜೋಡಿಸಬೇಕು? ಎಂಬ ಜಿಜ್ಞಾಸೆಯ ಕೊನೆಯಲ್ಲಿ ನಮಗೆ ಒಂದು ಕವಿತೆಯನ್ನು ಯಾವ ವರ್ಗದಲ್ಲಿ ಜೋಡಿಸಿದೆವು ಎಂಬುದು ಗೌಣವಾಗುತ್ತದೆ. ವರ್ಗೀಕರಣದ ಪ್ರಯತ್ನ – ಅದೆಷ್ಟೇ ಒರಟಾಗಿರಲಿ – ನಮ್ಮನ್ನು ಕೃತಿಯ ಮೌಲಿಕ ಗುಣಗಳ ಹತ್ತಿರ, ಅದರ ವೈಶಿಷ್ಟ್ಯದ ಹತ್ತಿರ ತಂದಿರುತ್ತದೆ ಮತ್ತು ಅಲ್ಲಿಂದ ಮುಂದೆ ಮತ್ತೂ ಅರ್ಥವತ್ತಾದ ವಿಶ್ಲೇಷಣೆಗೆ ದಾರಿ ಮಾಡಿಕೊಡುತ್ತದೆ” (Bradbury and Palmer, 1970:91).

. ಚಿರಂತನಪ್ರತೀಕವಿಮರ್ಶೆ

ಚಿರಂತನ ಪ್ರತೀಕ ವಿಮರ್ಶೆ (Archetypal Critism)ಗೆ ಮೂಲ ಕಾರಣವಾದ ಕಾರ್ಲ್ ಗಸ್ಟಾವ್ ಯೂಂಗ್‌ನ  (Carl Gustav Jung) ವಿಚಾರಗಳು ಇಂದಿನ ಪಾಶ್ಚಾತ್ಯ – ಪೌರ‍್ವಾತ್ಯ ಸಂಸ್ಕೃತಿಗಳ ಘರ್ಷಣೆಯ ಸಂದರ್ಭದಲ್ಲಿ ಅತ್ಯಂತ ಮೌಲಿಕವೂ ವಿಚಾರಪ್ರಚೋದಕವೂ ಆಗಿವೆ. ಪಾಶ್ಚಾತ್ಯ ನಾಗರಿಕತೆ ಮಾನವನ ತಾರ್ಕಿಕ ಹಾಗೂ ಬೌದ್ಧಿಕ ಶಕ್ತಿಗೆ ಮೊದಲಿನಿಂದಲೂ ಅತಿ ಪ್ರಾಧಾನ್ಯ ಕೊಡುತ್ತಾ ಮಾನವನ ಆಂತರಿಕ ಜ್ಞಾನಶಕ್ತಿಯನ್ನು ತೀರಾ ಕಡೆಗಾಣಿಸಿದೆಯೆಂದು ಯೂಂಗ್ ಅಭಿಪ್ರಾಯ ಪಡುತ್ತಾನೆ. ಈ ಕಾರಣದಿಂದ ಪಾಶ್ಚಾತ್ಯ ನಾಗರಿಕತೆ ಮನುಷ್ಯನ ಭಾವನಾತ್ಮಕ ಶಕ್ತಿಯನ್ನು ಮತ್ತು ಭಾವನೆಗಳನ್ನು ಮೌಲ್ಯಹೀನವಾಗಿ ಕಂಡಿದೆ; ಮತ್ತು ಆ ಕಾರಣದಿಂದ ತನ್ನ ‘ಪ್ರತಿಮಾಶಕ್ತಿ’ ಯನ್ನೇ ಕಳೆದುಕೊಂಡಿದೆ. ಈ ವಿಚಾರಕ್ರಮಕ್ಕೆ ವಿರುದ್ಧವಾಗಿ, ನಾವು ನಮ್ಮನ್ನು ಮತ್ತು ನಮ್ಮ ಸುತ್ತಲಿನ ಜಗತ್ತನ್ನು ಅರಿಯುವುದರಲ್ಲಿ ಮಹತ್ವದ ಪಾತ್ರ ವಹಿಸುವ ನಮ್ಮ ಆಂತರಿಕ ಜ್ಞಾನ ಮತ್ತು ಸೃಜನಾತ್ಮಕ ಭಾವುಕತೆಗಳಿಗೆ ಒತ್ತುಕೊಟ್ಟು ಸಂಸ್ಕೃತಿಯಲ್ಲಿ ಅವುಗಳಿಗೆ ಖಚಿತ ಸ್ಥಾನವನ್ನು ಕೊಡುವುದು ಯೂಂಗ್‌ನ ಪ್ರಮುಖ ಕಾಳಜಿಯಾಗಿದ್ದಿತು. ಈ ಜಗತ್ತೆಲ್ಲವೂ ನಮಗೆ ಬುದ್ಧಿಯ ಮೂಲಕ ಅರಿವಾಗುವ ವಸ್ತುಗಳಿಂದ ತುಂಬಿದೆಯೆಂಬ ಬಾಲಿಶ ಭ್ರಮೆಯಿಂದ ದೂರವಾಗಿ ಆಜ್ಞೇಯ ವಿಶ್ವಸತ್ಯದ ಸಾಂಕೇತಿಕ ಅಭಿವ್ಯಕ್ತಿಯಂತೆ ನಮ್ಮ ಜಗತ್ತನ್ನು ಕಾಣಬೇಕೆಂದು ಯೂಂಗ್‌ವಾದಿಸುತ್ತಾನೆ. ಯೂಂಗ್‌ನ ಪ್ರಮುಖ ಪರಿಕಲ್ಪನೆಗಳೆಲ್ಲವೂ ಈ ನೆಲೆಯಲ್ಲಿಯೇ ಹುಟ್ಟಿಕೊಳ್ಳುತ್ತವೆ.

ಪ್ರಾರಂಭದಲ್ಲಿ ಸಿಗ್ಮಂಡ್ ಫ್ರಾಯ್ಡ್‌ನ ಶಿಷ್ಯರಲ್ಲೊಬ್ಬನಾಗಿದ್ದ ಯೂಂಗ್ ಅನಂತರ ತೀವ್ರ ವಿಚಾರ ಭೇದಗಳ ಕಾರಣದಿಂದ ಫ್ರಾಯ್ಡ್‌ನಿಂದ ದೂರಸರಿದು ತನ್ನದೇ ಆದ ಮನೋವೈಜ್ಞಾನಿಕ ಪ್ರಸ್ಥಾನವನ್ನು ಪ್ರಾರಂಭಿಸಿದನು. ಫ್ರಾಯ್ಡ್‌ನ ನೆಲೆಗೆ ವಿರುದ್ಧವಾಗಿ ಬರುವ ಯೂಂ‌ಗ್‌ನ ಪರಿಕಲ್ಪನೆಗಳಲ್ಲಿ ಸಾಹಿತ್ಯವಿಮರ್ಶೆಯ ಸಂದರ್ಭದಲ್ಲಿ ಮುಖ್ಯವಾದುವು. ೧) ಸಾಮೂಹಿಕ ಸುಪ್ತ ಪ್ರಜ್ಞೆ ೨) ಪುರಾಣಗಳ ಸ್ವರೂಪ ಮತ್ತು ೩) ಚಿರಂತನ ಪ್ರತೀಕ.

ಫ್ರಾಯ್ಡ್ ಮತ್ತು ಮನಸ್ಸಿನ ಸ್ತರಗಳನ್ನು ಜಾಗೃತ ಪ್ರಜ್ಞೆ (Conscious), ಸುಪ್ತಪ್ರಜ್ಞೆ, (Unconscious) ಮತ್ತು ಉಪಪ್ರಜ್ಞೆ (Subconscious)  ಎಂದು ಗುರುತಿಸುತ್ತಾನಷ್ಟೆ ಯೂಂಗ್ ಇನ್ನೂ ಮುಂದೆ ಹೋಗಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವೈಯಕ್ತಿಕ ಸುಪ್ತಪ್ರಜ್ಞೆಯ ತಳದಲ್ಲಿ ಸಾಮೂಹಿಕ ಸುಪ್ತಪ್ರಜ್ಞೆಯೂ (Collective unconscious) ಇರುತ್ತದೆಂದು ಗುರುತಿಸುತ್ತಾನೆ. ಈ ಸಾಮೂಹಿಕ ಸುಪ್ತಪ್ರಜ್ಞೆ ವ್ಯಕ್ತಿಯ ಸ್ವಾನುಭವಗಳನ್ನು ಆಧರಿಸಿದೆ, ಅವನಿಗೆ ಆನುವಂಶಿಕವಾಗಿ ಬಂದಿರುತ್ತದೆ; ಮತ್ತು ಅಂತಹ ಪ್ರಜ್ಞೆ ಮಾನವನ ಚರಿತ್ರಾತೀತ ಹಾಗೂ ಗಾಢ ಮೂಲ ಅನುಭವಗಳಿಂದ ಬಂದಿರುತ್ತದೆ. ಇಡಿಯ ಜನಾಂಗದ ಸಂಚಿತ ಅನುಭವವೆಲ್ಲ ಅದರಲ್ಲಿ ಸುಪ್ತವಾಗಿ ಹುದುಗಿರುತ್ತದೆ. ಸಾಮೂಹಿಕ ಸುಪ್ತಪ್ರಜ್ಞೆಯ ಅಭಿವ್ಯಕ್ತಿ ಸಾಧನವೆಂದರೆ ಚಿರಂತನ ಪ್ರತೀಕಗಳು (Archetypes). ‘ಅರ್ಕಿಟೈಪ್’ ಶಬ್ದದ ಮೂಲವನ್ನು ಯೂಂಗ್‌ಪ್ರಾಚೀನ ಲ್ಯಾಟಿನ್ ಲೇಖಕರಿಂದ ಪಡೆದುಕೊಂಡರೂ, ಆ ಶಬ್ದವನ್ನು ಅತ್ಯಂತ ವಿಶಾಲ ಅರ್ಥದಲ್ಲಿ ಉಪಯೋಗಿಸುತ್ತಾನೆ. ಪುರಾಣಗಳು (Myths) ಹಾಗೂ ಕಿನ್ನರ ಕಥೆಗಳು (Fairy tales) ಸಾಮೂಹಿಕ ಸುಪ್ತಪ್ರಜ್ಞೆಯಿಂದ ರೂಪಿಸಲ್ಪಟ್ಟ ಆದಿಮ ಪ್ರತಿಮೆಗಳ (Primordial Images) ಅಥವಾ ಚಿರಂತನ ಪ್ರತೀಕಗಳ ಸಾಂಕೇತಿಕ ರಚನೆಗಳೆಂದು ಯೂಂಗ್ ಅಭಿಪ್ರಾಯಪಡುತ್ತಾನೆ. ಆದ್ದರಿಂದ ಒಂದು ಜನಾಂಗದ ಸಂಸ್ಕೃತಿಯ ತಿರುಳನ್ನು ಅರಿಯಬೇಕಾದೆ ಆ ಜನಾಂಗದಿಂದ ರಚಿಸಲ್ಪಟ್ಟ ಪುರಾಣಗಳನ್ನು ಮತ್ತು ಜನಪದ ಕಥೆಗಳನ್ನು ಸಾಂಕೇತಿಕವಾಗಿ ಅರ್ಥೈಸುವುದು ತುಂಬಾ ಮುಖ್ಯವಾಗುತ್ತದೆ. ಎಂದರೆ, ಒಂದು ಜನಾಂಗದ ಮೂಲಭೂತ ಆದರ್ಶಗಳು, ಆಶೆ-ಆಕಾಂಕ್ಷೆಗಳು, ಭಯ -ನೀತಿಗಳು ಮತ್ತು ಕರ್ತವ್ಯಾಕರ್ತವ್ಯಗಳ ಕಲ್ಪನೆ ಇತ್ಯಾದಿಗಳೆಲ್ಲ ಅದರ ಪುರಾಣಗಳಲ್ಲಿ ಹಾಗೂ ಜಾನಪದದಲ್ಲಿ ರೂಪಕಾತ್ಮಕವಾಗಿ ಅಭಿವ್ಯಕ್ತಿಗೊಂಡಿರುತ್ತವೆ.

ಒಂದು ಜನಾಂಗಕ್ಕೆ ಸೀಮಿತವಾಗದೆ, ಮಾನವಕುಲಕ್ಕೆ ಸಮಾನವಾದ ಅನೇಕ ಪೌರಾಣಿಕ ವಿನ್ಯಾಸಗಳನ್ನು (Mythical Patterns) ಯೂಂಗ್ ಗುರುತಿಸಿದ್ದಾನೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ – ‘ಸಾವು ಮತ್ತು ಪುನರ್ಜನ್ಮ’, ‘ಪರಿಭ್ರಮಣ ಮತ್ತು ಶೋಧ’, ‘ಆಕಾಶ ತಂದೆ ಮತ್ತು ಭೂಮಿ ತಾಯಿ’, ‘ಕತ್ತಲೆ – ಬೆಳಕುಗಳ ದ್ವಂದ್ವ’ ಇತ್ಯಾದಿ. ಒಂದು ಕೃತಿಯ ಆಂತರಿಕ ರಚನೆಯಲ್ಲಿ ಕಂಡುಬರುವ ಇಂತಹ ರೂಪಕ ವಿನ್ಯಾಸಗಳೇ ಅಲ್ಲದೆ, ಯೂಂಗ್‌ಗುರುತಿಸುವ ಇತರ ಪ್ರತೀಕಗಳೆಂದರೆ – ‘ವೃದ್ಧಜ್ಞಾನಿ’, ‘ಮೋಹಿನಿ’, ‘ದೈವಿಕ ಶಿಶು’, ‘ತಂತ್ರಗಾರ’ (Trickster) ಇತ್ಯಾದಿ. ಇವಲ್ಲದೆ ವೈಯಕ್ತಿಕ ಮಾನಸಸ್ತರದಲ್ಲಿಯೂ ಯೂಂಗ್‌’ ಮುಖವಾಡ’ (Persona : ವ್ಯಕ್ತಿತ್ವದ ಸಾಮಾಜಿಕ ಮುಖ), ‘ಅನಿಮಾ’ (Anima : ಗಂಡಿನಲ್ಲಿಯ ಹೆಣ್ಣುತನ), ‘ಅನಿಮಸ್’ (Animus : ಹೆಣ್ಣಿನಲ್ಲಿಯ ಗಂಡುತನ), ‘ಪ್ರತಿರೂಪ’ (The Double : ಪರಸ್ಪರ ಪೂರಕ ವ್ಯಕ್ತಿತ್ವಗಳು), ‘ಛಾಯೆ’ (Shadow : ಸುಪ್ತಪ್ರಜ್ಞೆಯಲ್ಲಿ ಹುದುಗಿಸಲ್ಪಟ್ಟ ಪಾಶವೀ ಸ್ವಭಾವ ಲಕ್ಷಣಗಳು) ಇತ್ಯಾದಿ ಪರಿಕಲ್ಪನೆಗಳನ್ನು ಸೃಷ್ಟಿಸಿದ್ದಾನೆ. ಮೊದಲಿಗೆ ಯೂಂಗ್ ಚಿರಂತನ ಪ್ರತೀಕದ ಪರಿಕಲ್ಪನೆಯನ್ನು ಪ್ರತಿಮೆಗಳ ಮೂಲಕ ಅಭಿವ್ಯಕ್ತಗೊಳಿಸುವ ಮಾನಸಿಕ ಆಶಯ (Psychic motifs) ಗಳಿಗೆ ಮಾತ್ರ ಸೀಮಿತಗೊಳಿಸಿದ್ದ. ನಂತರ ಎಲ್ಲ ವಿಧದ ವಿನ್ಯಾಸಗಳಿಗೂ, ಘಟನೆಗಳಿಗೂ, ಜಡ ಹಾಗೂ ಚೈತನ್ಯಶೀಲ ಪ್ರಕ್ರಿಯೆಗಳಿಗೂ ಅದನ್ನು ವಿಸ್ತರಿಸಿದ.

ಯೂಂಗ್‌ನ ಈ ಪರಿಕಲ್ಪನೆಗಳು ಸಾಹಿತ್ಯ ವಿಮರ್ಶೆಯಲ್ಲಿ ಹೇಗೆ ಉಪಯೋಗಿಸಲ್ಪಡುತ್ತವೆಯೆಂದು ಈಗ ನೋಡೋಣ. ಚಿರಂತನ ಪ್ರತೀಕ ವಿಮರ್ಶೆಯ ಮೂಲಭೂತ ತಾತ್ವಿಕ ನೆಲೆಯೆಂದರೆ, ವರ್ತಮಾನದ ಈ ಒಂದು ಕ್ಷಣ ಭೂತಕಾಲದ ಸಹಸ್ರಾರು ಕ್ಷಣಗಳ ಇತ್ತೀಚಿನ ಕೊಂಡಿ; ಈ ಕ್ಷಣದ ಒಂದು ಸಾವಿನ ಹಿಂದೆ, ಅದಕ್ಕೆ ನಮ್ಮಿಂದ ಬರುವ ಪ್ರತಿಕ್ರಿಯೆಯ ಹಿಂದೆ, ಭೂತದ ಅಸಂಖ್ಯ ಸಾವುಗಳ ಮತ್ತು ಪ್ರತಿಕ್ರಿಯೆಗಳ ಪುನರಾವರ್ತನೆಯಿದೆ. ಆದ್ದರಿಂದ ಭೂತ-ವರ್ತಮಾನಗಳೆರಡನ್ನೂ ಒಂದಾಗಿ ಬೆಸೆಯುವ, ಕಾಲಾತೀತವಾದ, ಮಾನವ ಸ್ವಭಾವ ಹಾಗೂ ಅನುಭವಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ನಿರೂಪಣಾ ವಿನ್ಯಾಸಗಳನ್ನು ಪ್ರತಿಮೆಗಳ ಜೋಡಣೆಯನ್ನು ಸಂಕೇತಗಳ ಹಾಗೂ ಆಶಯಗಳ ಹರಹನ್ನು ಸಾಹಿತ್ಯಕೃತಿಗಳಲ್ಲಿ ಗುರುತಿಸಿ, ಅವುಗಳ ಮೂಲಕ ಒಂದು ಸಂಸ್ಕೃತಿಯನ್ನು ಹಾಗೂ ಮಾನವ ಸ್ವಭಾವವನ್ನು ಅಭ್ಯಸಿಸುವುದು ಸಾಹಿತ್ಯ ವಿಮರ್ಶಕನ ಮುಖ್ಯ ಕರ್ತವ್ಯವಾಗುತ್ತದೆ. ಇಂತಹ ಅಭ್ಯಾದಲ್ಲಿ ಹಾಗೂ ವಿಶ್ಲೇಷಣೆಯಲ್ಲಿ ಕೃತಿಕಾರ, ಕೃತಿಯ ವಿಶಿಷ್ಟ ಕಾಲಘಟ್ಟ ಹಾಗೂ ಸಾಹಿತ್ಯ ಪ್ರಭೇದಗಳ ಕಲ್ಪನೆ – ಇವೆಲ್ಲವು ಅಗಣ್ಯವಾಗಿ ಎಲ್ಲಾ ಕೃತಿಗಳೂ ಇಂದಿನ ನೆಲೆಯಲ್ಲಿ ಅರ್ಥೈಸಲ್ಪಡುತ್ತವೆ. ಅರ್ಥಾತ್‌’ಚಿರಂತನಪ್ರತೀಕ ವಿಮರ್ಶೆ’ ಚಾರಿತ್ರಿಕ ವಿಮರ್ಶೆಯ ವಿರುದ್ಧ ತುದಿಯಲ್ಲಿದೆ; ಮತ್ತು ಇಂತಹ ವಿಮರ್ಶೆ ಮಾನವಶಾಸ್ತ್ರ ಜಾನಪದ ಅಧ್ಯಯನ ಮತ್ತು ಭಾಷಾ ವಿಜ್ಞಾನ ಈ ಕ್ಷೇತ್ರಗಳಲ್ಲಿ ಸಿಗುವ ಒಳನೋಟಗಳನ್ನು ಉಪಯೋಗಿಸಿಕೊಳ್ಳುತ್ತದೆ. ಇಂಗ್ಲೆಂಡ್, ಅಮೇರಿಕಾಗಳಲ್ಲಿ ಈ ವಿಮರ್ಶಾಮಾರ್ಗವನ್ನು ಬೆಳೆಸಿದವರಲ್ಲಿ ಮುಖ್ಯರಾದವರೆಂದರೆ : ಜೋಸೆಫ್ ಕ್ಯಾಂಬೆಲ್ (A Hero with Thousand Faces, 1949), ಮಾಡ್‌ಬಾಡಕಿನ್ (Archetypal Patterns in Poetry, 1958), ಲೆಸ್ಲಿ ಫೀಡ್ಲರ್ (Life and Death in Americal Fiction, 1960), ಫಿಲಿಫ್‌ವೀಲ್‌ರೈಟ್ (Metaphor and Reality, 1962), ಫ್ರಾನ್ಸಿಸ್ ಫರ್ಗುಸನ್ (The Idea of a Theatre, 1949), ನಾರ್ಥ್‌ರಪ್ ಫ್ರಾಯ್ (Anatomy of Criticism, 1957) ಮುಂತಾದವರು.

ಇಂತಹ ವಿಮರ್ಶೆಯ ಸ್ವರೂಪವನ್ನು ನಾರ್ಥ್‌ರಪ್ ಫ್ರಾಯ್ ಹೀಗೆ ಸ್ಪಷ್ಟಪಡಿಸುತ್ತಾನೆ : “ಹ್ಯಮ್‌ಲೆಟ್” ನಾಟಕದ ‘ಗೋರಿ ತೋಡುವವರ’ ದೃಶ್ಯವನ್ನು ತೆಗೆದುಕೊಳ್ಳೋಣ. ಈ ದೃಶ್ಯವನ್ನು ಒಂದು ತೈಲ ಚಿತ್ರದಂತೆ ಭಾವಿಸಿದರೆ, ಅದಕ್ಕೆ ಅತ್ಯಂತ ಸಮೀಪದಲ್ಲಿ ನಾವಿರುವಾಗ ಅದರಲ್ಲಿ ಶ್ಲೇಷೆ ಮುಂತಾದ ಶಾಬ್ದಿಕ ಜಾಲವನ್ನು ನೋಡುತ್ತೇವೆ. ಒಂದು ಹೆಜ್ಜೆ ಹಿಂದೆ ಸರಿದರೆ ಈ ದೃಶ್ಯ ಒಟ್ಟಾರೆ ನಾಟಕವನ್ನು ಮತ್ತು ನಾಟಕದ ಪಾತ್ರಗಳ ಮಾನಸಿಕ ಒತ್ತಡಗಳನ್ನು ನಮಗೆ ಕಾಣಿಸುತ್ತದೆ. ಇನ್ನೂ ಹಿಂದೆ ಸರಿದರೆ ಪ್ರೇಮ – ಭೀತಿ – ಆತ್ಮಜ್ಞಾನಗಳ ಪ್ರತೀಕ ವಿನ್ಯಾಸಗಳುಳ್ಳ ಇತರ ರುದ್ರನಾಟಕಗಳ ಸಾಲಿನಲ್ಲಿ ‘ಹ್ಯಾಮ್ಲೆಟ್’ ನಮಗೆ ಕಾಣಿಸುತ್ತದೆ. ಈ ಪ್ರತಿಯೊಂದು ಹೆಜ್ಜೆಯೂ ವಿಮರ್ಶಕನಿಗೂ ಅಗತ್ಯ.

ಚಿರಂತನಪ್ರತೀಕ ವಿಮರ್ಶೆ ಅನೇಕ ಕೃತಿಗಳನ್ನು ಒಂದೆಡೆ ತಂದು ಅವುಗಳನ್ನು ತೌಲನಿಕವಾಗಿ ಅಭ್ಯಸಿಸಬಹುದು, ಅಥವಾ ಅಂತಹ ಅಭ್ಯಾಸ ಒಂದೇ ಕೃತಿಗೆ ಸೀಮಿತವಾಗಿರಬಹುದು. ಉದಾಹರಣೆಗೆ : ಕ್ಯಾಂಬೆಲ್ (೧೯೪೯) ಅನೇಕ ದೇಶಗಳ ಕಥಾನಕಗಳನ್ನು (ಜಾನಪದೀಯ ಹಾಗೂ ಸಾಹಿತ್ಯಿಕ) ಒಟ್ಟಾಗಿ ವಿಶ್ಲೇಷಿಸುತ್ತಾ ‘ನಾಯಕ’ನ ಪರಿಕಲ್ಪನೆಯ ಪರಿವರ್ತನೆಗಳನ್ನು ಗುರುತಿಸುತ್ತಾನೆ. ‘ನಾಯಕ’ನನ್ನು ಕುರಿತಿರುವ ಪ್ರತಿಯೊಂದು ಕಥಾನಕದಲ್ಲಿಯೂ ಮುಖ್ಯವಾಗಿ ಮೂರು ಘಟಕಗಳಿರುತ್ತವೆ : ದೀಕ್ಷಾ ಪ್ರಾರಂಭ -ಶೋಧ – ಅಂತಿಮ ಮುಖಾಮುಖಿ (Initiation – Quest – Final encounter). ಕ್ಯಾಂಬೆಲ್ ಪ್ರತಿಯೊಂದು ಕೃತಿಯಲ್ಲಿಯೂ ಈ ಮೂರೂ ಘಟಕಗಳ ಸ್ವರೂಪವನ್ನು ಹಾಗೂ ಪರಿವರ್ತನೆಗಳನ್ನು (Nature and variations) ವಿಶ್ಲೇಷಿಸುತ್ತಾನೆ. ಅನಂತರ ಈ ಒಂದೊಂದು ಘಟಕದ ಅಂಗಗಳನ್ನೂ (ಮತ್ತು ಅವುಗಳಲ್ಲಿ ಕಂಡುಬರುವ ಮಾರ್ಪಾಡುಗಳನ್ನೂ) ಅಭ್ಯಸಿಸುತ್ತಾನೆ. ಇಂತಹ ಅಧ್ಯಯನದಿಂದ ಸಾಹಿತ್ಯಕೃತಿಗಳ ಸಾರ್ವಕಾಲೀನತೆಯಲ್ಲದೇ ‘ನಾಯಕ’ನ ಪರಿಕಲ್ಪನೆಯ ಸಮಾಜದಿಂದ ಸಮಾಜಕ್ಕೆ ಹೇಗೆ ಬದಲಾಗುತ್ತಾ ಬಂದಿದೆಯೆಂಬ ಒಳನೋಟವೂ ನಮಗೆ ದೊರಕುತ್ತದೆ. ಹಾಗೆಯೇ ‘ಪರಿಭ್ರಮಣ’ (Journey) ಪ್ರತೀಕದ ಆಧಾರದ ಮೇಲೆ ನಾವು ಹೋಮರ್‌ನ ‘ಒಡಿಸ್ಸಿ’, ವರ್ಜಿಲ್‌ನ ‘ಈನಿಯಡ್’, ವಾಲ್ಮೀಕಿಯ ‘ರಾಮಾಯಣ’ ಈ ಮಹಾಕಾವ್ಯಗಳನ್ನು ಒಂದೆಡೆ ತಂದು ‘ಪರಿಭ್ರಮಣ’ ಪ್ರತೀಕ ಈ ಕೃತಿಗಳಲ್ಲಿ ಹೇಗೆ ಮಾರ್ಪಾಡು ಹೊಂದಿದೆ ಮತ್ತು ಯಾವ ಯಾವ ಉದ್ದೇಶಗಳಿಗಾಗಿ ಬಳಕೆಯಾಗಿದೆ ಎಂದು ಅಧ್ಯಯನ ಮಾಡಬಹುದು.

ಒಂದೇ ಕೃತಿಯ ಪ್ರತೀಕಾತ್ಮಕ ಅಧ್ಯಯನವೂ ಸಾಧ್ಯ. ಎಲಿಯಟ್‌ನ ಪ್ರಸಿದ್ಧ ‘ಬಂಜರುಭೂಮಿ’ (The Waste Land) ಕೃತಿಯಲ್ಲಿ ‘ಶೋಧ’, ‘ನೀರು’, ‘ಜೀರ್ಣಮಂದಿರ’ ಇತ್ಯಾದಿ ಪ್ರತೀಕಗಳು ಎಷ್ಟು ಬಗೆಯಲ್ಲಿ ಅರ್ಥಪೂರ್ಣವಾಗಿವೆಯೆಂದು ನಾವು ನೋಡಬಹುದು. ‘ನೀರು’ ಜ್ಞಾನ ಹಾಗೂ ಸುಪ್ತಪ್ರಜ್ಞೆಗಳಿಗೆ ಅನಾದಿಯಿಂದ ಸಮಕೇತವಾಗಿ ಉಪಯೋಗಿಸಲ್ಪಟ್ಟಿದೆ. ನೀರು ಕುಡಿಯುವುದಕ್ಕೆ ಮೊದಲು ಯಕ್ಷಪ್ರಶ್ನೆಗೆ ಉತ್ತರಿಸುವ ಜ್ಞಾನವಿರಬೇಕೆಂಬ ಸಂಗತಿ ನಮಗೆ  ಮಹಾಭಾರತದಲ್ಲಿ ಕಾಣಸಿಗುತ್ತದೆ. ‘ಬಂಜರುಭೂಮಿ’ ಕಾವ್ಯದಲ್ಲಿಯೂ ನೀರು ಸುರಿಸುವ ಮೋಡಗಳು ‘ದಾನ – ದಮನ – ದಯೆ’ ಈ ಗುಣಗಳಿಂದ ಕೂಡಿದ ಜ್ಞಾನವನ್ನು ಸೂಚಿಸುತ್ತವೆ. ತನ್ನ ಗೊತ್ತುಗುರಿಯಿಲ್ಲದೆ ಅಲೆದಾಟದಲ್ಲಿ ಕೊಟ್ಟ ಕೊನೆಗೆ ಒಂದು ಪುರಾತನ ಭಗ್ನಮಂದಿರವನ್ನು ತಲಪಿ, ಅಲ್ಲಿ ತನ್ನ ಯಾತ್ರೆಯನ್ನು ಹಾಗೂ ಶೋಧವನ್ನು ಪೂರ್ಣಗೊಳಿಸುವ ಕಥಾನಾಯಕನು ನಮಗೆ ಅನೇಕಾನೇಕ ದಂತಕಥೆಗಳಲ್ಲಿ ಹಾಗೂ ಕಥಾನಾಯಕನು ನಮಗೆ ಅನೇಕಾನೇಕ ದಂತಕಥೆಗಳಲ್ಲಿ ಹಾಗೂ ಕಥಾನಾಕಗಳಲ್ಲಿ ಕಾಣಬರುತ್ತಾನೆ. ಅಂತಹ ‘ಪುರಾತನ ಭಗ್ನಮಂದಿರ’ದ ಒಂದು ರೂಪಾಂತರವೇ ಕವಿತೆಯಲ್ಲಿ ಬರುವ ‘ruined chapel’.

ಯೂಂಗ್‌ನ ಇತರ ಪರಿಕಲ್ಪನೆಗಳನ್ನು ಸಾಹಿತ್ಯದಲ್ಲಿ ಹೇಗೆ ಗುರುತಿಸ ಬಹುದೆನ್ನುವುದನ್ನು ಸಂಕ್ಷೇಪವಾಗಿ ಈ ರೀತಿ ಹೇಳಬಹುದು : ಕನ್ನಡ ಕಾದಂಬರಿ ‘ಸಂಸ್ಕಾರ’ದಲ್ಲಿ ಬರುವ ನಾರಣಪ್ಪನನ್ನು ಆಚಾರ್ಯರ ‘ಛಾಯೆ’ (Shadow) ಎಂದು ವಿಶ್ಲೇಷಿಸಬಹುದು. ಎಂದರೆ, ಆಚಾರ್ಯರ ವ್ಯಕ್ತಿತ್ವದ ಆಳದಲ್ಲಿಯೇ ಇರುವ, ಆದರೆ ವೈದಿಕ ಸಂಸ್ಕಾರದ ಕಾರಣದಿಂದ ಬಲವಂತವಾಗಿ ಅವರಿಂದ ನಿಗ್ರಹಿಸಲ್ಪಟ್ಟ ಅವರ ಸುಪ್ತಚಿತ್ತದಲ್ಲಿ ಹುದುಗಿರುವ ಗುಣಗಳನ್ನೇ ನಾರಣಪ್ಪ ಪ್ರತಿನಿಧಿಸುತ್ತಾನೆ. ಯೂಂಗ್‌ನ ‘ಮುಖವಾಡ’ ಪರಿಕಲ್ಪನೆಯ ಅತ್ಯಂತ ಸಮರ್ಥ ಅಭಿವ್ಯಕ್ತಿಯನ್ನು ನಾವು ಲಂಕೇಶರ ‘ಬಿರುಕು’ ಕಾದಂಬರಿಯಲ್ಲಿ ನೋಡಬಹುದು. ಆ ಕಾದಂಬರಿಯ ನಾಯಕ ಕೃತಿಯಲ್ಲಿ ಅನೇಕ ಬಾರಿ ತನ್ನ ಪ್ಯಾಂಟು – ಶರಟುಗಳಿಗಾಗಿ ತಡಕಾಡುತ್ತಾನೆ. ಹೆಚ್ಚು ಸಲ ಇನ್ನೊಬ್ಬರ ಬಟ್ಟೆಯನ್ನೇ ತೊಟ್ಟಿರುತ್ತಾನೆ. ಈ ಸಂಗತಿ – ಅಂದರೆ ನಾಯಕ ವಸ್ತ್ರಹೀನವಾಗಿರುವುದು ಅಥವಾ ಇನ್ನೊಬ್ಬರ ವಸ್ತ್ರಗಳನ್ನು ತೊಡುವುದು – ಅವನು ಸ್ವಂತ ವ್ಯಕ್ತಿತ್ವಕ್ಕಾಗಿ ನಡೆಸುವ ಹೋರಾಟವನ್ನು ಮತ್ತು ಅವನ ಸುಪ್ತಚಿತ್ತದಲ್ಲಿ ನಡೆಯುತ್ತಿರುವ ಸಾಮಾಜಿಕ ಮುಖ – ವೈಯಕ್ತಿಕ ಮುಖ ಇವುಗಳ ಘರ್ಷಣೆಯನ್ನು ಪ್ರತಿಮಾವಿಧಾನದಲ್ಲಿ ಚಿತ್ರಿಸುತ್ತದೆ. ಹಾಗೆಯೇ ಕುವೆಂಪು ಕಾದಂಬರಿಗಳಲ್ಲಿ ಬರುವ ನಿಗೂಢ ಅರಣ್ಯ. ‘ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿ ಬರುವ ನಾಯಿಗುತ್ತಿಯ ನಾಯಿ, ಕಾರಂತರ ಕಾದಂಬರಿಗಳಲ್ಲೆಲ್ಲಾ ಬರುವ ‘ಅಜ್ಜಿ’ – ಇವೆಲ್ಲವನ್ನೂ ನಾವು ಚಿರಂತನ ಪ್ರತೀಕಗಳೆಂದು ಗ್ರಹಿಸಬಹುದು.

ಚಿರಂತನ ಪ್ರತೀಕ ವಿಮರ್ಶಾ ಮಾರ್ಗದ ಒಂದು ಮುಖ್ಯ ಅಪಾಯವೆಂದರೆ, ಕೃತಿಯ ಸಾಂಕೇತಿಕತೆಗೇ ಒತ್ತುಕೊಟ್ಟು ಎಲ್ಲಾ ಕೃತಿಗಳನ್ನು ಅನ್ಯೋಕ್ತಿ ಕಥೆಗಳಂತೆ (ಆಲಿಗರಿಗಳಂತೆ) ಕಾಣುವ ಸಾಧ್ಯತೆ. ಎಂದರೆ ಒಂದು ಸಾಹಿತ್ಯ ಕೃತಿಯ ವಿಶಿಷ್ಟ ವಿವರಗಳನ್ನು ಮತ್ತು ಅದರ ಸಾಹಿತ್ಯಕತೆಯನ್ನೇ ಕಡೆಗಾಣಿಸುವ ಅಪಾಯ. ಮತ್ತು ಇಂತಹ ವಿಮರ್ಶೆ ಒಟ್ಟಾರೆ ವಿವರಣಾತ್ಮಕವಾಗಿದ್ದು ಮೌಲ್ಯಮಾಪನವನ್ನು ಅಸಾಧ್ಯವಾಗಿಸುತ್ತದೆ. ಮುಖ್ಯವಾಗಿ ಚಿರಂತನ ಪ್ರತೀಕ ವಿಮರ್ಶೆ ಕೃತಿಗಳು ಜನ್ಮತಾಳಿದ ವಿಶಿಷ್ಟ ಭಾಷೆ, ಸಮಾಜ ರಚನೆ ಮತ್ತು ವೈಚಾರಿಕ ಸನ್ನಿವೇಶ ಇವೆಲ್ಲವನ್ನೂ ನಿರ್ಲಕ್ಷಿಸುವುದರಿಂದ ಕೃತಿಗಳ ಸಾಮಾಜಿಕ ಪ್ರಸ್ತುತತೆಯನ್ನೇ ಇಲ್ಲವಾಗಿಸುತ್ತದೆಂಬುದು ಈ ವಿಮರ್ಶಾ ಮಾರ್ಗದ ಮೇಲೆ ಎತ್ತಬಹುದಾದ ಮತ್ತೊಂದು ಆಕ್ಷೇಪ.

ಆದರೂ ಉತ್ತಮ ಸಾಹಿತ್ಯಕೃತಿಗಳ ಸಾರ್ವಕಾಲಿಕತೆಯನ್ನು ಮತ್ತು ಸಾರ್ವಕಾಲಿಕ ಕಾಳಜಿಗಳನ್ನು ಗುರುತಿಸಲು ಇತರ ವಿಮರ್ಶಾ ಮಾರ್ಗಗಳು ಯಾವುವೂ ಇಷ್ಟು ಉಪಯುಕ್ತವಾಗುವುದಿಲ್ಲ. ಅಲ್ಲದೆ, ಉತ್ತಮ ಸಂವೇದನೆಯ ಸ್ಪಂದನಶೀಲ  ವಿಮರ್ಶಕ ಈ ಮಾರ್ಗದಲ್ಲಿಯೂ ಕೃತಿಯ ವೈಶಿಷ್ಟ್ಯ ಮತ್ತು ಸಮಾನತೆ, ಕೃತಿಯ ಸಾಹಿತ್ಯಿಕ ಮತ್ತು ಸಾಂಕೇತಿಕ ವಿನ್ಯಾಸಗಳು, ಮತ್ತು ಕೃತಿಯ ಸಮಕಾಲೀನತೆ ಹಾಗೂ ಸಾರ್ವಕಾಲೀನತೆ ಇವೆರಡನ್ನೂ ಸಮರ್ಥವಾಗಿ ದಾಖಲಿಸಬಹುದೆಂದು ಮಾಡ್‌ಬಾಡ್‌ಕಿನ್, ಫ್ರಾಯ್ ಮುಂತಾದ ವಿಮರ್ಶಕರ ಚಿಂತನೆಯಲ್ಲಿ ನಾವು ಕಾಣಬಹುದು.*


* ಕನ್ನಡದಲ್ಲಿ ಚಿರಂತನ ಪ್ರತೀಕ ವಿಮರ್ಶೆಯ ಮಾದರಿಗಳು ಅಷ್ಟಾಗಿ ಬಂದಿಲ್ಲ. ಈ ಪುಸ್ತಕದ ಲೇಖಕರಾದ ಸಿ.ಎನ್.ರಾಮಚಂದ್ರನ್ ಅವರೇ ಈ ಬಗೆಯ ಎರಡು ಲೇಖಕನ ಬರೆದಿದ್ದಾನೆ. ನೋಡಿರಿ : ‘ವೈಶಾಖದ ಕೆಲವು ಒಳದನಿಗಳು’, ‘ಶಿಲ್ಪವಿನ್ಯಾಸ’ (೧೯೮೬), ಕನ್ನಡ ಸಂಘ, ಪುತ್ತೂರು ಮತ್ತು ‘ಪರಿಭ್ರಮಣ ಮತ್ತು ಶೋಧ’, ‘ಸ್ವರೂಪ; (೧೯೮೮), ಕನ್ನಡ ಅಧ್ಯಯನ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ

– ಸಂ.)