. ಸ್ತ್ರೀನಿಷ್ಠವಿಮರ್ಶೆ:

ಕಳೆದ ಶತಕದ ಉತ್ತರಾರ್ಧದಲ್ಲಿ ಹೆಚ್ಚಾಗಿ ಅಮೆರಿಕಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಬೆಳೆದು ಬಂದ ‘ಸ್ತ್ರೀ ಸ್ವಾತಂತ್ರ್ಯ ಚಳುವಳಿ’ಯ ಒಂದು ಮುಖ ‘ಸ್ತ್ರೀನಿಷ್ಠ ವಿಮರ್ಶೆ’ (Feminist Criticism). ಇಂತಹ ವಿಮರ್ಶೆ ಸಮಾಜಕೇಂದ್ರಿತ ವಿಮರ್ಶೆಯ ಒಂದು ಮುಖ್ಯ ಕವಲಾಗಿದ್ದು ಮನೋವೈಜ್ಞಾನಿಕ ವಿಮರ್ಶೆ ಮತ್ತು ಮಾರ್ಕ್ಸ್‌ವಾದಿ ವಿಮರ್ಶೆ ಇವೆರಡಕ್ಕೂ ಸಮೀಪವಾಗಿದೆ.

ಸ್ತ್ರೀನಿಷ್ಠ ವಿಮರ್ಶೆಯ ಸೈದ್ಧಾಂತಿಕ ನೆಲೆಗಳನ್ನು ಗುರುತಿಸುವುದು ಕಷ್ಟ ಏಕೆಂದರೆ ಮಾರ್ಕ್ಸ್‌ವಾದಿ ವಿಮರ್ಶೆಯಂತೆಯೇ ಇದು ನಾನಾ ರೂಪಗಳಲ್ಲಿ – ಕೆಲ ಸಂದರ್ಭಗಳಲ್ಲಿ ಪರಸ್ಪರ ವಿರೋಧೀ ರೂಪಗಳಲ್ಲಿ ಕೂಡಾ – ಬೆಳೆಯುತ್ತದೆ. ಎರಡನೆಯದಾಗಿ, ಸ್ತ್ರೀನಿಷ್ಠ ವಿಮರ್ಶೆಗೆ ಒಂದು ಸೈದ್ಧಾಂತಿಕ ನೆಲೆಯನ್ನು ಮಂಡಿಸುವ ಪ್ರಯತ್ನವನ್ನೇ ಕೆಲವು ವಿಮರ್ಶಕಿಯರು ವಿರೋಧಿಸುತ್ತಾರೆ. ಕಾರಣ ಅವರ ದೃಷ್ಟಿಯಲ್ಲಿ ಎಲ್ಲಾ ಸಿದ್ಧಾಂತಗಳ ಮತ್ತು ತತ್ವ ಪ್ರಣಾಲಿಗಳ ಹಿಂದಿರುವ ಮನೋಭಾವ ‘ಪುರುಷತ್ವ’ (male principle). ಅವರು ಸ್ತ್ರೀತ್ವವನ್ನು ಯಾವ ಒಂದು ಸಿದ್ಧಾಂತಕ್ಕೂ ಕಟ್ಟುಬೀಳದ, ವಿವಿಧ ಕ್ಷೇತ್ರಗಳಲ್ಲಿ ಸರಾಗವಾಗಿ ಹರಿಯುವ ಪ್ರಜ್ಞೆಯೆಂದೇ ಪರಿಗಣಿಸುತ್ತಾರೆ. ಆದರೂ ಸ್ಥೂಲವಾಗಿ ಈ ವಿಮರ್ಶಾ ಮಾರ್ಗದ ನೆಲೆಯನ್ನು ಸ್ತ್ರೀ ಚಳುವಳಿಯ ಮುಖ್ಯ ವಕ್ತಾರರಾದ ಸಿಮೋನ್ ದ ಬೋವಾ, ಜೂಲಿಯ ಕ್ರಿಸ್ಟೇವ ಮತ್ತು ಕೇಟ್ ಮಿಲೆಟ್ ಅವರ ಗ್ರಂಥಗಳಲ್ಲಿ ಕಾಣಬಹುದು.

ಸ್ತ್ರೀನಿಷ್ಠ ಚಿಂತನೆಯ ಪ್ರಾರಂಭವನ್ನು ಸಾಹಿತ್ಯಕ ಇತಿಹಾಸಕಾರರು ೧೮ನೆಯ ಶತಮಾನದ ಲೇಡಿ ಮೇರಿ ವರ್ಟ್‌ಲಿ ಮಾಂಟೆಗೊ (Lady Mary Wortly Mantagu  1689 – 1772) ಮತ್ತು ಮೇರಿ ವುಲ್‌ಸ್ಟನ್ ಕ್ರಾಫ್ಟ್ (Mary Wollstone Craft, 1759 – 1797) ಇವರಲ್ಲಿ ಗುರುತಿಸುತ್ತಾರೆ. ಹೆಚ್ಚಿನ ಶ್ರೀಮಂತ ಮಹಿಳೆಯರು ಉನ್ನತ ಶಿಕ್ಷಣದಿಂದ ದೂರವಿರುತ್ತಿದ್ದ ಕಾಲದಲ್ಲಿ ಲೇಡಿ ಮೇರಿ ಉನ್ನತ ಶಿಕ್ಷಣವನ್ನು ಪಡೆದ ಅಪರೂಪದ ಬುದ್ಧಿಜೀವಿಯಾಗಿದ್ದಳು. ಅವಳ ‘ಪತ್ರಗಳು’ (Letters, 1763) ಅಂದು ಅತ್ಯಂತ ಪ್ರಸಿದ್ಧವಾಗಿದ್ದುವು. ಅಂತಹ ಪತ್ರಗಳಲ್ಲಿ ಮುಖ್ಯವಾದವುಗಳು ಅಂದಿನ ಟರ್ಕಿಯ ಮುಸ್ಲಿಂ ಸಮಾಜದ ಮಹಿಳೆಯ ಬಗ್ಗೆ ಬರೆದ ಪತ್ರಗಳು. ಅವುಗಳಲ್ಲಿ ಅಂದು ಪಾಶ್ಚಾತ್ಯ ಸಮಾಜಗಳಲ್ಲಿ ಟರ್ಕಿಯ ಸಮಾಜದ ಬಗ್ಗೆ ಬೇರೂರಿದ್ದ ಪೂರ್ವಗ್ರಹಗಳನ್ನು ಲೇಡಿ ಮೇರಿ ದೂರಮಾಡಿ, ಅಂದಿನ ಮುಸ್ಲಿಂ ಸಮಾಜದ ಮಹಿಳೆಯ ಮತ್ತು ಕ್ರಿಶ್ಚಿಯನ್ ಸಮಾಜದ ಮಹಿಳೆಯ ಸ್ಥಿತಿಗತಿಯ ಬಗ್ಗೆ ಅರ್ಥಪೂರ್ಣ ಟಿಪ್ಪಣಿಗಳನ್ನು ಕೊಡುತ್ತಾಳೆ. ಮೇರಿ ವುಲ್‌ಸ್ಟನ್ ಕ್ರಾಫ್ಟ್ ೧೭೯೨ ರಲ್ಲಿ ಬರೆದ ‘ಸ್ತ್ರೀಯರ ಹಕ್ಕುಗಳ ಸಮರ್ಥನೆ’ (Vindication of the Rights of Women) ಇಂದಿಗೂ ಸ್ತ್ರೀನಿಷ್ಠ ಚಿಂತನೆಯ ಪ್ರಪ್ರಥಮ ಮತ್ತು ಅತಮುಖ್ಯ ಅಭಿವ್ಯಕ್ತಿಯೊಂದು ಮಾನ್ಯ ಮಾಡಲ್ಪಟ್ಟಿದೆ. ಮೇರಿ ಆಗ್ರಹಿಸುವ ಹಕ್ಕುಗಳು ಎಲ್ಲಾ ಸ್ತ್ರೀಯರಿಗೆ ಸಮಾನವಾಗಿ ಇರುವಂತಹವುಗಳು; ಕೇವಲ ಕುಲೀನ, ಶ್ರೀಮಂತ ಸ್ತ್ರೀಯರ ಅವಶ್ಯಕತೆಗಳಲ್ಲ. ಅವಳ ಅಭಿಪ್ರಾಯದಲ್ಲಿ ಸ್ತ್ರೀಯರು ಸ್ತ್ರೀತ್ವವನ್ನು ಬೆಳೆಸಿಕೊಳ್ಳಬೇಕೇ ಹೊರತು ಸ್ಕರ್ಟ್ ತೊಟ್ಟ ಪುರುಷರಂತಾಗುವುದಲ್ಲ. ಸಹಶಿಕ್ಷಣ ಮತ್ತು ಸಮಾನ ಶಿಕ್ಷಣಾವಕಾಶಗಳಿಗೆ ಆಗ್ರಹಿಸುವ ವುಲ್‌ಸ್ಟನ್ ಕ್ರಾಫ್ಟ್ ಪುರುಷನ ಆಧಾರವನ್ನು ಸದಾ ಬಯಸುವ ಸ್ತ್ರೀ – ಮಾದರಿಯನ್ನು (ಮರವನ್ನು ತಬ್ಬಿ ಬೆಳೆಯುವ ಲತೆಯ ಮಾದರಿ) ‘ಪುರುಷನಿರ್ಮಿತ ಮಾದರಿ’ ಎಂದು ತಿರಸ್ಕರಿಸುತ್ತಾಳೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಮೊದಲು ದಾಖಲಿಸಬೇಕಾದ ಹೆಸರೆಂದರೆ ಪ್ರಸಿದ್ಧ ಕಾದಂಬರಿಕಾರ್ತಿ ವರ್ಜೀನಿಯಾ ವುಲ್ಫ್ (೧೮೮೨ – ೧೯೪೧). ಸ್ತ್ರೀಯ ಆಂತರಂಗಿಕ ವಿಶ್ವವೇ ಕೇಂದ್ರದಲ್ಲಿರುವ ‘ಮಿಸಿಸ್ ಡ್ಯಾಲೋವೇ’, ‘ಟು ದ ಲೈಟ್‌ಹೌಸ್’ ಇತ್ಯಾದಿ ಅಸಾಮಾನ್ಯ ಕಾದಂಬರಿಗಳನ್ನು ರಚಿಸಿರುವ ವುಲ್ಫ್ “ತನ್ನದೇ ಆದ ಸ್ವತಂತ್ರ ಕೊಠಡಿ” (A Room of One’s Own, 1929) ಎಂಬ ದೀರ್ಘ ಪ್ರಬಂಧದಲ್ಲಿ ಆಧುನಿಕ ಸ್ತ್ರೀವಾದದ ಮುಖ್ಯಾಂಶಗಳೆಲ್ಲವನ್ನೂ ಮಂಡಿಸುತ್ತಾಳೆ. “ಓರ್ವ ಸ್ತ್ರೀ ಉತ್ತಮ ಸಾಹಿತ್ಯವನ್ನು ರಚಿಸಬೇಕಾದರೆ ಅವಳಿಗೆ ತನ್ನದೇ ಆದ ಕೊಠಡಿ/ ಸ್ವತಂತ್ರ ಸ್ಥಳ ಮತ್ತು ಸ್ವಂತ ಆದಾಯಗಳಿರಬೇಕು” ಎಂದು ವಾದಿಸುವ ಈ ಕೃತಿಯ ‘ಸ್ವಂತ ಕೊಠಡಿ /ಸ್ಥಳ’ ಇಡೀ ಆಧುನಿಕ ಸ್ತ್ರೀವಾದದ ಕೇಂದ್ರ ರೂಪಕವಾಗಿದೆ. ಮುಂದೆ ಸಿಮೋನ್ ದ ಬೊವಾ ಮತ್ತಿತರರು ವ್ಯಾಪಕವಾಗಿ ಚರ್ಚಿಸಲಿದ್ದ ‘ಪುರುಷನು ಸ್ತ್ರೀಯನ್ನು ಅನ್ಯಳಾಗಿಸುವಿಕೆ’, ‘ಸ್ತ್ರೀ-ಪುರುಷ ಸ್ಥಾನಮಾನಗಳು’ ಇತ್ಯಾದಿ ಒಂದು ನಿರ್ದಿಷ್ಟಜ ಕಾಲಮಾನದ ಸಾಮಾಜಿಕ ನಿರ್ಮಿತಿಗಳೇ ಹೊರತು ಜನ್ಮಜಾತವಲ್ಲ’ ಎಂಬಂತಹ ಮೌಲಿಕ ವಿಚಾರಗಳನ್ನು ವುಲ್ಫ್ ಈ ಲೇಖನದಲ್ಲಿ ಚರ್ಚಿಸುತ್ತಾಳೆ.

ವ್ಯಾಪಕವಾಗಿ, ಶಾಸ್ತ್ರೀಯವಾಗಿ ಮತ್ತು ಪ್ರಭಾವಶಾಲಿಯಾಗಿ ಸ್ತ್ರೀಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಸಿಮೋನ್ ದ ಬೋವಾ (Simone de Beauvoir, 1908-86). ೧೯೦೮ ರಲ್ಲಿ ಪ್ಯಾರಿಸ್‌ನಲ್ಲಿ ಜನಿಸಿದ ಬೋವಾ ಪ್ರಸಿದ್ಧ ಸೋರ್‌ಬಾನ್ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ ಪದವಿ ಪಡೆದಳು. ಪ್ರಸಿದ್ಧ ಕ್ರಾಂತಿಕಾರಿ – ತತ್ವಶಾಸ್ತ್ರಜ್ಞ – ಸಾಹಿತಿ ಜ.ಪಾ. ಸಾರ್ತ್ (Jean Paul Sartre) ಇಲ್ಲಿ ಸಿಮೋನ್‌ಳ ಸಹಪಾಠಿಯಾಗಿದ್ದ. ಮೂರು ಕಾದಂಬರಿಗಳು, ನಾಟಕಗಳು ಮತ್ತು ವೈಚಾರಿಕ ಕೃತಿಗಳನ್ನು ರಚಿಸಿರುವ ಬೋವಾ ಸ್ತ್ರೀಪರ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಳು. ಇವಳ ಪ್ರಸಿದ್ಧ ಸ್ತ್ರೀವಾದಿ ಕೃತಿ ‘ದ್ವಿತೀಯ ಲಿಂಗ’ (The Second Sex) ಫ್ರೆಂಚ್ ಭಾಷೆಯಲ್ಲಿ ೧೯೪೯ ರಲ್ಲಿ ಪ್ರಕಟವಾಯಿತು. (ಇಂಗ್ಲಿಷ್ ಅನುವಾದ ೧೯೫೩). ೭೪೧ ಪುಟಗಳಿರುವ ಈ ಬೃಹತ್ ಕೃತಿಯಲ್ಲಿ ಮನಃಶಾಸ್ತ್ರ, ಮತ- ಧರ್ಮಗಳು, ಚರಿತ್ರೆ, ಸಾಹಿತ್ಯ – ಇವೆಲ್ಲವುಗಳ ನೆಲೆಯಲ್ಲಿ ಪ್ರಾಚೀನ ಕಾಲದಿಂದಲೂ ಎಲ್ಲಾ ಸಮಾಜಗಳಲ್ಲಿ ಸ್ತ್ರೀ ಹೇಗೆ ‘ಎರಡನೆಯ ದರ್ಜೆಯ ಪ್ರಜೆ’ಯಾಗಿಯೇ ಉಳಿದಿದ್ದಾಳೆಂದು ಮತ್ತು ಇಂತಹ ಲಿಂಗಭೇದ ಹೇಗೆ ಸ್ತ್ರೀಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಹಾನಿಕಾರಕವೆಂದು ಸಿಮೋನ್ ಆಗ್ರಹಪೂರ್ವಕವಾಗಿ ವಾದಿಸುತ್ತಾಳೆ.

‘ದ್ವಿತೀಯ ಲಿಂಗ’ ಕೃತಿಯಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ‘ಸತ್ಯ ಮತ್ತು ಕಟ್ಟುಕಥೆಗಳು’ (Facts and Myths) ಎಂಬ ಮೊದಲನೆಯ ಭಾಗದಲ್ಲಿ ಹೇಗೆ ಪ್ರಾಚೀನ ಕಾಲದಿಂದಲೂ ಪುರುಷರು ಸ್ತ್ರೀಯನ್ನು ಸ್ವತಂತ್ರ ವ್ಯಕ್ತಿಯಂತಲ್ಲದೆ, ಪುರುಷತ್ವಕ್ಕೆ ಪೂರಕವಾಗುವ ‘ತಾಯಿ’, ‘ಪತ್ನಿ’, ‘ವೇಶ್ಯೆ’ ಇತ್ಯಾದಿ ಸಿದ್ದ ಪಡಿಯಚ್ಚುಗಳಲ್ಲ ಕಂಡಿದ್ದಾರೆಂಬುದನ್ನು ಸಾಧಾರವಾಗಿ ಸಿಮೋನ್ ದಾಖಲಿಸುತ್ತಾಳೆ. ‘ಇಂದು ಸ್ತ್ರೀಯ ಬದುಕು’ ಎಂಬ ಎರಡನೆಯ ಭಾಗದಲ್ಲಿ ಸ್ತ್ರೀಯ ಪಾಲನೆ, ಅವಳಿಗೆ ನೀಡುವ ಶಿಕ್ಷಣ, ಅವಳ ಸಾಮಾಜಿಕ ಪರಿಸ್ಥಿತಿ ಇವೆಲ್ಲವೂ ಹೇಗೆ ಸ್ತ್ರೀಯನ್ನು ಒಂದು ಪೂರ್ವನಿರ್ಧಾರಿತ ಪ್ರಕಾರದಲ್ಲಿ ನಿಯಂತ್ರಿಸಿ ಸ್ವತಃ ಅವಳೇ ತನ್ನ ಪರಾಧೀನ ಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ವಿವರಿಸುತ್ತಾಳೆ. ‘ವಿಮುಕ್ತಿಯುತ್ತ’ ಎಂಬ ಕೃತಿಯ ಕೊನೆಯ ಭಾಗದಲ್ಲಿ ತನ್ನ ಪರಾಧೀನ ಪರಿಸ್ಥಿತಿಯಿಂದ ಸ್ತ್ರೀ ಹೊರಬರಬೇಕಾದರೆ ಆಗಬೇಕಾದ ಸಾಮಾಜಿಕ – ವೈಚಾರಿಕ ಪರಿವರ್ತನೆಗಳ ಚರ್ಚೆಯಿದೆ. ಸಿಮೋನ್ ದ ಬೋವಾ ಮಂಡಿಸುವ ವಾದಗಳ ಕೆಲವು ಮುಖ್ಯ ಎಳೆಗಳನ್ನು ಹೀಗೆ ಸಂಗ್ರಹಿಸಬಹುದು :

ಅನ್ಯವಾಗಿಸುವಿಕೆ (Othering) : ಅನಾದಿ ಕಾಲದಿಂದ ಸ್ತ್ರೀ – ಪುರುಷರು ಸಮಾನ ಸಂಖ್ಯೆಯಲ್ಲಿದ್ದರೂ ಮತ್ತು ಸಮಾನವಾಗಿ ಮಾನವ ಕುಲದ ಮುಂದುವರಿಕೆಗೆ ಕಾರಣವಾಗಿದ್ದರೂ, ಸ್ತ್ರೀ ಮಾತ್ರ ಮೊದಲಿಗೆ ‘ನಾನು ಹೆಣ್ಣು’ ಎಂದು ಹೇಳಿಯೇ ಮುಂದುವರಿಯಬೇಕು. ಪುರುಷನಾದರೋ ತನ್ನನ್ನು ‘ಮಾನವ’ನೆಂದು ಮಾತ್ರ ಗುರುತಿಸಿಕೊಳ್ಳುತ್ತಾನೆ. ಪ್ರಾಚೀನ ಕಾಲದಲ್ಲಿ ಗಣಿತಜ್ಞರು ಮೊದಲು ಒಂದು ಸ್ವಯಂಪೂರ್ಣ ಲಂಬರೇಖೆಯನ್ನು ಸ್ಥಾಪಿಸಿ, ಅದಕ್ಕೆ ಸಂಬಂಧಿಸಿದಂತೆ ಇತರ ರೇಖೆಗಳನ್ನು ಗುರುತಿಸುತ್ತಿದ್ದರು. ಹಾಗೆಯೇ ಪುರುಷನನ್ನು ಮಾನವತೆಯ ಸ್ವಯಂಪೂರ್ಣ ಪ್ರತಿನಿಧಿಯೆಂದು ಒಪ್ಪಿಕೊಂಡು, ಆ ‘ಪುರುಷ ತತ್ವ’ದ ಆಧಾರದ ಮೇಲೆ ಸ್ತ್ರೀ ತನ್ನನ್ನು ಎಂದರೆ ತನ್ನ ‘ಮಿತಿ’ಗಳನ್ನು ಕೊರತೆಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಗ್ರೀಕ್ ದಾರ್ಶನಿಕ ಅರಿಸ್ಟಾಟಲ್ ಹೇಳುತ್ತಾನೆ : “ಹೆಣ್ಣು ತನ್ನಲ್ಲಿರುವ ಕೆಲವು ಕೊರತೆಗಳಿಂದಾಗಿ ಹೆಣ್ಣಾಗಿದ್ದಾಳೆ. ಮತ್ತು ಹೆಣ್ಣಿನ ಸ್ವಭಾವವು ಕೆಲವು ನಿಸರ್ಗದತ್ತ ಮಿತಿಗಳಿಂದ ರೂಪಿಸಲ್ಪಟ್ಟಿದೆ”. ಹೆಣ್ಣಿಗಿರುವಂತೆ ಗಂಡಿಗೂ ವಿಶಿಷ್ಟ ದೈಹಿಕ ಅಂಗಗಳಿವೆಯೆಂದು, ದೈಹಿಕ ಮಿತಿಗಳಿವೆಯೆಂದು ಪುರುಷನಿಗೆ ತೋಚುವುದೇ ಇಲ್ಲ.

“ಅರ್ಥಾತ್, ಮಾನವ ಜಾತಿಯೆಂದರೆ ಪುರುಷ; ಸ್ತ್ರೀಯನ್ನು ‘ಪುರುಷನಲ್ಲದವಳು’ ಎಂದೇ ಪುರುಷರು ಅವಳನ್ನು ವ್ಯಾಖ್ಯಾನಿಸುತ್ತಾನೆ. ಸ್ತ್ರೀಯೆಂದರೆ ಹೀಗೆ ಸ್ವತಂತ್ರ ಅಸ್ತಿತ್ವವಿಲ್ಲದಿರುವವಳು. ಪುರುಷನು ಅನಿವಾರ್ಯ ಮೂಲಭೂತ ವಸ್ತು; ಸ್ತ್ರೀ ಅನಾವಶ್ಯಕ ಅನುಬಂಧ. ಅವನು ಸ್ವಯಂಪೂರ್ಣ, ಕರ್ತೃ; ಅವಳು ಅಪೂರ್ಣ, ಅನ್ಯಳು (the other)” (ಪು. ೧೬).

ಮುಂದೆ, ಎಲ್ಲಾ ಸಮಾಜರಚನೆಗಳಲ್ಲಿಯೂ ಮತ್ತು ಪುರಾಣಗಳಲ್ಲಿಯೂ ‘ತಾನು – ಅನ್ಯರು’ (the self – the other) ಎಂಬ ಪರಿಕಲ್ಪನೆ ಹೇಗೆ ಅನಿವಾರ್ಯವಾಗುತ್ತದೆಂದು ಬೋವಾ ಚರ್ಚಿಸುತ್ತಾಳೆ; ‘ಹೆಣ್ಣು ಹೇಗೆ ಅನ್ಯಳು, ಹೊರಗಿನವಳು ಆದಳು?’ ಎಂಬ ಪ್ರಶ್ನೆಯನ್ನೆತ್ತಿ, ಉತ್ತರಗಳನ್ನು ಇತಿಹಾಸ, ಧರ್ಮಶಾಸ್ತ್ರ, ಪುರಾಣಗಳು ಇವೆಲ್ಲವನ್ನೂ ವಿಶ್ಲೇಷಿಸುತ್ತಾಳೆ. ಇಂತಹ ವಿಶ್ಲೇಷಣೆಯಿಂದ ಬೋವಾ ತೀರ್ಮಾನಿಸುವುದೇನೆಂದರೆ, ಇತಿಹಾಸದ ಪ್ರಾರಂಭಿಕ ಘಟ್ಟದಿಂದಲೂ ಪುರುಷರ ಮಧ್ಯೆ ಹಂಚಿಹೋಗಿರುವ ಸ್ತ್ರೀಗೆ ಪ್ರತ್ಯೇಕ ಚರಿತ್ರೆಯಿಲ್ಲ, ಪ್ರತ್ಯೇಕ ಸಂಘಟನೆಯಿಲ್ಲ, ಪ್ರತ್ಯೇಕ ಅಸ್ತಿತ್ವವೂ ಇಲ್ಲ. ಇತಿಹಾಸದುದ್ದಕ್ಕೂ ಅವಳು ಪುರುಷನ ನೆರಳಾಗಿ ಬದುಕುತ್ತಾ ಬಂದಿದ್ದಾಳೆ.

ಲಿಂಗಭೇದ ಮತ್ತು ಲಿಂಗಾಧಾರಿತ ಅಸಮಾನತೆ : ಸ್ತ್ರೀಯನ್ನು ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅಂಚಿಗೆ ತಳ್ಳಿದ ನಂತರ ಅವಳ ಅಂತಹ ‘ಪರಿಧೀಯ ಅವಸ್ಥೆ’ಯನ್ನು ಶಾಸಕರು, ದಾರ್ಶನಿಕರು, ಲೇಖಕರು, ವಿಜ್ಞಾನಿಗಳು ಮುಂತಾದವರು ‘ಸ್ತ್ರೀಯ ಪರಾಧೀನ ಸ್ಥಿತಿ ದೈವಮಾನ್ಯವಾಗಿದೆ ಮತ್ತು ಈ ಪ್ರಪಂಚದಲ್ಲಿ ಉಪಯುಕ್ತವಾಗಿದೆ’ ಎಂದು ಸಮರ್ಥಿಸುತ್ತಾ ಬಂದಿದ್ದಾರೆ. ತಮ್ಮ ಸಮರ್ಥನೆಯನ್ನು ಬಲಗೊಳಿಸಲು ಅವರು ಜೈವಿಕಶಾಸ್ತ್ರ, ಸಂವಹನ, ಮನೋವಿಜ್ಞಾನ ಇತ್ಯಾದಿ ಎಲ್ಲಾ ಕ್ಷೇತ್ರಗಳಿಂದಲೂ ‘ಸಾಕ್ಷ್ಯ’ವನ್ನು ಶೋಧಿಸಿದ್ದಾರೆ (ಸ್ತ್ರೀಗೆ ಗರ್ಭಕೋಶವಿರುವುದರ ಅರ್ಥ ಅವಳ ಬದುಕಿನ ಮುಖ್ಯ ಉದ್ದೇಶ ಸಂತಾನವೃದ್ಧಿ; ಸ್ತ್ರೀ ಮುಖ್ಯವಾಗಿ ಭಾವನಾಜೀವಿ; ಸ್ತ್ರೀಗೆ ಪುರುಷನಷ್ಟು ದೈಹಿಕ ಶಕ್ತಿ ಇಲ್ಲ; ಇತ್ಯಾದಿ.)

ಇಂತಹ ಸ್ತ್ರೀ-ಪುರುಷ ಭಿನ್ನತೆಯನ್ನು ಬೋವಾ ಒಪ್ಪಿಕೊಂಡು ಹೀಗೆ ಹೇಳುತ್ತಾಳೆ : “ಒಟ್ಟಿನಲ್ಲಿ ಜೈವಿಕವಾಗಿ ಸ್ತ್ರೀ ನಿಸರ್ಗ ಶಪಿತಳೇ ಹೌದು. ಮಾಸಿಕ ಋತುಸ್ರಾವ, ಗರ್ಭಧಾರಣೆ, ಪ್ರಸವ ವೇದನೆ, ಪ್ರಸವ ಇತ್ಯಾದಿ ಅವ್ಯಾಹತ ಸಂಕಟಗಳನ್ನು ಸ್ತ್ರೀ ಸದಾ ಎದುರಿಸಬೇಕಾಗುತ್ತದೆ. ಸ್ತ್ರೀ ಪುರುಷರಂತೆ ವೇಗವಾಗಿ ಓಡಲಾರಳು; ಅವನಷ್ಟೇ ಭಾರ ಎತ್ತಲಾರಳು; ದುರ್ಬಲಳು ಮತ್ತು ಮಾನಸಿಕವಾಗಿ ಅವಳಿಗೆ ಪುರುಷನಿಗಿರುವಷ್ಟು ಸಂಕಲ್ಪ ಶಕ್ತಿಯಿಲ್ಲ” (ಪು. ೬೬).

ಬೋವಾ ವಾದಿಸುವುದೇನೆಂದರೆ ಇಂತಹ ಜೈವಿಕ ಸಾಕ್ಷ್ಯ ಸ್ತ್ರೀಯನ್ನು ಪುರುಷನಿಗಿಂತ ಭಿನ್ನಳೆಂದು ಸ್ಥಾಪಿಸುತ್ತದೆಯೇ ಹೊರತು ಅವನಿಗಿಂತ ಕೀಳು ಎಂದಲ್ಲ. ಎಂದರೆ ಲಿಂಗಭೇದ ಒಂದು ಶ್ರೇಣೀಕೃತ ಮೌಲ್ಯವಲ್ಲ. ಈ ಸಂದರ್ಭದಲ್ಲಿ ಬೋವಾ ನಮ್ಮ ಗಮನಕ್ಕೆ ತರುವ ಅತಿ ಮುಖ್ಯ ಅಂಶವೆಂದರೆ “ಜೈವಿಕ ಸಂಗತಿಗಳಿಗೆ ಒಂದು ಮೌಲ್ಯ ಬರುವುದು ಸಾಮಾಜಿಕ ಕಟ್ಟುಪಾಡುಗಳಿಂದ, ವಿಧಿ ನಿಷೇಧಗಳಿಂದ”. ವಿಶಿಷ್ಟ ಸಾಮಾಜಿಕ ಮೌಲ್ಯ ವ್ಯವಸ್ಥೆಯನ್ನು ಮರೆತು ಯಾವುದೇ ವಿಧದ ದೈಹಿಕ – ಮಾನಸಿಕ ಲಕ್ಷಣಗಳನ್ನು ತರ – ತಮ ವ್ಯವಸ್ಥೆಗೆ ಆಧಾರವೆಂದು ಪರಿಗಣಿಸಲು ಸಾಧ್ಯವಿಲ್ಲ.

ಸ್ತ್ರೀಗೆ ತನ್ನ ಸ್ತ್ರೀತ್ವವನ್ನು ಕುರಿತಾದ ವಿಶಿಷ್ಟ ಪ್ರಜ್ಞೆ (ನೈಚ್ಯ ಮನೋಭಾವ) ಮಾನವ ಇತಿಹಾಸದ ಒಂದು ಘಟ್ಟದಲ್ಲಿ ಒಂದು ಸಮಾಜ ನಿರ್ಮಿಸಿದ ಆರ್ಥಿಕ ವ್ಯವಸ್ಥೆಯಿಂದ ರೂಪಿಸಲ್ಪಡುತ್ತದೆ – ಎಂಬ ಚಾರಿತ್ರಿಕ – ಭೌತವಾದಿಗಳ (ಮುಖ್ಯವಾಗಿ ಎಂಗೆಲ್ಸ್ ತನ್ನ “ರಾಷ್ಟ್ರ, ವೈಯಕ್ತಿಕ ಸಂಪತ್ತು ಮತ್ತು ಕುಟುಂಬ : ಇವುಗಳ ಉಗಮ” ಎಂಬ ಗ್ರಂಥದಲ್ಲಿ ಮಂಡಿಸುವ) ವಾದವನ್ನು ಬೋವಾ ಪೂರ್ಣವಾಗಿ ಒಪ್ಪುವುದಿಲ್ಲ. ಆರ್ಥಿಕ ಪರಾವಲಂಬನೆ ಸ್ತ್ರೀಯ ಸಾಮಾಜಿಕ – ಕೌಟುಂಬಿಕ ಸ್ಥಾನಮಾನಗಳನ್ನು ನಿಕೃಷ್ಟವಾಗಿಸಿದೆ ನಿಜ. ಆದರೆ ಆರ್ಥಿಕ ಸ್ವಾತಂತ್ರ್ಯವೊಂದೇ ಸ್ತ್ರೀಗೆ ತನ್ನತನವನ್ನು ಕೊಡಲಾರದು ಎಂದು ಬೋವಾ ವಾದಿಸುತ್ತಾಳೆ (ಪು. ೭೩೪). ಅವಳ ಅಭಿಪ್ರಾಯದಲ್ಲಿ, ಎಂದಿನವರೆಗೆ ಪುರುಷ ನಿರ್ಮಿತ ಮಾನಸಿಕ – ವೈಚಾರಿಕ ಚೌಕಟ್ಟು ಗಳಲ್ಲಿಯೇ ಸ್ತ್ರೀ ಬದುಕಬೇಕಾಗುತ್ತದೋ ಅಲ್ಲಿಯವರೆಗೆ ನಿಜವಾದ ಅರ್ಥದಲ್ಲಿ ಸ್ತ್ರೀ ಸ್ವತಂತ್ರಳಾಗುವುದಿಲ್ಲ. ಸಂಪೂರ್ಣ ಸ್ತ್ರೀ ಸ್ವಾತಂತ್ರ್ಯವನ್ನು ಬೋವಾ ಹೀಗೆ ಗುರುತಿಸುತ್ತಾಳೆ, ಅಸ್ತಿತ್ವವಾದದ ನೆಲೆಯಲ್ಲಿ : “ವಿವಿಧ ಸ್ವಾತಂತ್ರ್ಯಗಳನ್ನು ಸತತವಾಗಿ ಶೋಧಿಸುವುದರ ಮೂಲಕವೇ ಪ್ರತಿಯೊಬ್ಬನೂ ಸ್ವತಂತ್ರನಾಗುತ್ತಾನೆ. ಅಜ್ಞಾತ, ಅಪಾರ ಭವಿಷ್ಯದತ್ತ ಗರಿಗೆದರಿ ಹಾರುವ ಸಾಧ್ಯತೆಯೊಂದೇ ನಮ್ಮ ಅಸ್ತಿತ್ವಕ್ಕೆ ಸಮರ್ಥನೆ. ಪ್ರತಿಯೊಬ್ಬಳ/ನ ಅಸ್ತಿತ್ವವು ಅರ್ಥಪೂರ್ಣವಾಗುವುದು ತನ್ನ ಮಿತಿಗಳನ್ನು ಮೀರಿ ಹೊರಬರುವ, ಸ್ವತಂತ್ರವಾಗಿ ಆಯ್ಕೆ ಮಾಡಿಕೊಂಡ ಯೋಜನೆಗಳನ್ನು ತನ್ನನ್ನು ತೊಡಗಿಸಿಕೊಳ್ಳುವ ಅದಮ್ಯ ಬಯಕೆಯಲ್ಲಿ ಮಾತ್ರ” (ಹೆಚ್ಚಿನ ವಿವರಗಳಿಗೆ ನೋಡಿ : ಸಿ.ಎನ್. ರಾಮಚಂದ್ರನ್, ಆಶಯ – ಆಕೃತಿ, ಪು. ೯೮-೧೦೯).

ಹೀಗೆ ಸ್ತ್ರೀಕೇಂದ್ರಿತ ಚಿಂತನೆಗೆ ಒಂದು ಸೈದ್ಧಾಂತಿಕ ಹಾಗೂ ವ್ಯಾಪಕ ತಳಹದಿ ಬೋವಾಳ ‘ದ್ವಿತೀಯ ಲಿಂಗ’ ಕೃತಿಯಿಂದ ದೊರಕಿದ ನಂತರ, ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ವಿಶೇಷತಃ ಅಮೇರಿಕಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಸ್ತ್ರೀವಾದ ಶ್ರೀಮಂತವಾಗಿ, ಬಹುಮುಖಿಯಾಗಿ ಬೆಳೆಯಿತು. ಈ ದಿಕ್ಕಿನಲ್ಲಿ ಕೇಟ್ ಮಿಲೆಟ್‌ಳ ‘ಲೈಂಗಿಕ ರಾಜಕೀಯ’ (Kate Miller, Sexual Politics, 1970) ಕೃತಿಯನ್ನು ಒಂದು ಮುಖ್ಯ ಮೈಲಿಗಲ್ಲೆಂದು ಗುರುತಿಸಬಹುದು. ಈ ಕೃತಿಯಲ್ಲಿ ಸ್ತ್ರೀಯರ ಪಾರತಂತ್ರ್ಯಕ್ಕೆ ಕಾರಣ ‘ಪಿತೃಪ್ರಧಾನ ವ್ಯವಸ್ಥೆ’ (patriarchy) ಎಂದು ವಾದಿಸುತ್ತಾ ಮಿಲೆಟ್ ‘ರಾಜಕೀಯ’ ಶಬ್ದಕ್ಕೆ ಒಂದು ನೂತನ ವ್ಯಾಖ್ಯಾನವನ್ನು ನೀಡುತ್ತಾಳೆ. “ಎರಡು ಸಮುದಾಯಗಳ ನಡುವಿನ ಅಸಮಾನ ಅಧಿಕಾರಾಧಾರಿತ ಸಂಬಂಧವನ್ನು ನಾವು ರಾಜಕೀಯವೆಂದು ಕರೆಯಬಹುದು”. ಈ ನೆಲೆಯಲ್ಲಿ ಸ್ತ್ರೀಯರು ಪುರುಷರ ‘ಲೈಂಗಿಕ ರಾಜಕೀಯ’ದ ಬಲಿಪಶುಗಳಾಗಿ, ಅನಾದಿ ಕಾಲದಿಂದಲೂ ತಮ್ಮದೆಂದು ಪುರುಷರಿಂದ ನಿರ್ಧರಿಸಲ್ಪಟ್ಟಿದ್ದ ಸಿದ್ಧ ಪಡಿಯಚ್ಚುಗಳ ಒಳಗೇ ಬದುಕುತ್ತಿದ್ದಾರೆ, ಎಂದು ಮಿಲೆಟ್ ತೀರ್ಮಾನಿಸುತ್ತಾಳೆ. ಬೋವಾ ವಾದವನ್ನು ಮುಂದುವರಿಸುತ್ತಾ ಮಿಲೆಟ್ ‘ಲಿಂಗಭೇದ’ಕ್ಕೂ ‘ಲಿಂಗಪ್ರಜ್ಞೆ’ಗೂ (Sex ಮತ್ತು Gender) ಇರುವ ವ್ಯತ್ಯಾಸವನ್ನು ಪ್ರಬಲವಾಗಿ ಮಂಡಿಸುತ್ತಾಳೆ. ಲಿಂಗಭೇದವು ಜೈವಿಕವಾಗಿ ನಿರ್ಧರಿಸಲ್ಪಟ್ಟಿದ್ದರೆ, ಲಿಂಗಪ್ರಜ್ಞೆಯನ್ನು ಶಿಕ್ಷಣ, ಸಂಸ್ಕೃತಿ, ಮತ – ಧರ್ಮಾಚರಣೆಗಳು ಮತ್ತು ನಂಬಿಕೆಗಳು ರೂಪಿಸುತ್ತವೆ. ತನ್ನ ವಾದದ ಸಮರ್ಥನೆಗಾಗಿ ‘ಸಾಕ್ಷ್ಯ’ದಂತೆ ಮಿಲೆಟ್ ೨೦ನೆಯ ಶತಮಾನದ ಪ್ರಸಿದ್ಧ ಕಾದಂಬರಿಕಾರರಾದ ಹೆನ್ರಿ ಮಿಲರ್, ಡಿ.ಎಚ್. ಲಾರೆನ್ಸ್, ನಾರ್ಮನ್ ಮೇಲರ್ ಮುಂತಾದವರ ಕಾದಂಬರಿಗಳನ್ನು ವಿಶ್ಲೇಷಿಸುತ್ತಾ, ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸುವ ಸ್ತ್ರೀ ಪಾತ್ರಗಳು ಮತ್ತು ಸ್ತ್ರೀ-ಪುರುಷ ಸಂಬಂಧಗಳು ಹೇಗೆ ಕೆಲವೊಮ್ಮೆ ನೇರವಾಗಿ ಕೆಲವೊಮ್ಮೆ ಪರೋಕ್ಷವಾಗಿ, ‘ಲೈಂಗಿಕ ರಾಜಕೀಯ’ದಿಂದ ಪ್ರಭಾವಿತವಾಗಿವೆ ಎಂಬುದನ್ನು ದಾಖಲಿಸುತ್ತಾಳೆ.

ಸಿಮೋನ್ ದ ಬೋವಾ, ಕೇಟ್ ಮಿಲೆಟ್, ಜರ್ಮೇನ್ ಗ್ರಿಯರ್‌ಮುಂತಾದವರು ಸ್ತ್ರೀ ಚಿಂತನೆಯಲ್ಲಿ ಮಾತ್ರವಲ್ಲದೆ, ಸಾಮಾಜಿಕ – ರಾಜಕೀಯ ಚಳುವಳಿಗಳಲ್ಲಿಯೂ ಸ್ತ್ರೀಯರು ನೇರವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ವಾದಿಸುತ್ತಾರೆ. ಇವರುಗಳ ದೃಷ್ಟಿಯಲ್ಲಿ ಸ್ತ್ರೀಯರು ಅಲ್ಪಸಂಖ್ಯಾತರಲ್ಲ (Minorities); ಆದರೂ ಇತರ ಧಾರ್ಮಿಕ – ಭಾಷಿಕ – ವರ್ಣೀಯ ಅಲ್ಪ ಸಂಖ್ಯಾತರಂತೆ ಸಮಾಜದಲ್ಲಿ ಶೋಷಣೆಗೊಳಪಟ್ಟಿದ್ದಾರೆ; ಅಧಿಕಾರ – ಶಿಕ್ಷಣ – ಸಮೂಹ ಮಾಧ್ಯಮ ಕ್ಷೇತ್ರಗಳಲ್ಲಿ ಪರಿಧೀಯ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ (Marginalised). ಆದ್ದರಿಂದ, ಇತರ ಅಲ್ಪಸಂಖ್ಯಾತರಂತೆ ಸ್ತ್ರೀಯರೂ ಸಂಘಟಿತರಾಗಿ, ಸಾಂಘಿಕವಾಗಿ ತಮ್ಮ ಹಕ್ಕು ಬಾಧ್ಯತೆಗಳಿಗಾಗಿ ಹೋರಾಟ ಮಾಡಬೇಕು.

ಹೀಗೆ, ರಾಜಕೀಯ – ಸಾಮಾಜಿಕ – ಸಾಂಸ್ಕೃತಿಕ ಆಯಾಮಗಳನ್ನುಳ್ಳ ಸ್ತ್ರೀನಿಷ್ಠ ಚಿಂತನೆಯ ಸಾಹಿತ್ಯಕ ದಿಕ್ಕುಗಳನ್ನು ಶಾರನ್ ಸ್ಪೆನ್ಸರ್ (Sharon Spencer) ಹೀಗೆ ಗುರುತಿಸುತ್ತಾಳೆ :

(೧) ಇಂದು ಅಲಭ್ಯವಾಗಿರುವ ಅಥವಾ ವಿನಾಕಾರಣ ದುರ್ಲಕ್ಷಿಸಲ್ಪಟ್ಟಿರುವ ಸ್ತ್ರೀಯರಿಂದ ಬರೆಯಲ್ಪಟ್ಟ ಸೃಜನಶೀಲ ಹಾಗೂ ವೈಚಾರಿಕ ಕೃತಿಗಳನ್ನು ಶೋಧಿಸಿ ಬೆಳಕಿಗೆ ತರುವುದು. (ಕನ್ನಡದಲ್ಲಿ ಚಿ.ನ. ಮಂಗಳಾ ಅವರು ತಿರುಮಲಾಂಬಾ ಅವರ ಕೃತಿಗಳನ್ನು ಗುರುತಿಸಿ ಬೆಳಕಿಗೆ ತಂದಂತೆ; ಇಂಗ್ಲಿಷ್‌ನಲ್ಲಿ ಸೂಸಿ ತಾರು ಮತ್ತು ಲಲಿತಾ ಭಾರತದ ವಿವಿಧ ಭಾಷೆಗಳಲ್ಲಿ ‘ಕೇಳಿಸಿಕೊಳ್ಳದಿದ್ದ’ ಬಗೆ ಬಗೆಯ ಸ್ತ್ರೀಯರ ಧ್ವನಿಗಳನ್ನು ದಾಖಲಿಸಿದಂತೆ (Women Writing in India, 2 vols., 1991).

(೨) ಪ್ರಾಚೀನ ಹಾಗೂ ಅರ್ವಾಚೀನ ಸಾಹಿತ್ಯಗಳಲ್ಲಿ ಮೂಡಿಬಂದಿರುವ ಸ್ತ್ರೀಯರ ಮತ್ತು ಸ್ತ್ರೀ – ಪುರುಷ ಸಂಬಂಧಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾ.

(೩) ಲೇಖಕಿಯರನ್ನು ಮತ್ತು ಅವರ ಕೃತಿಗಳನ್ನು ಕುರಿತು ಪುರುಷ ಲೇಖಕ / ವಿಮರ್ಶಕರಿಂದ ಬಂದಿರುವ ವಿಮರ್ಶೆ – ವ್ಯಾಖ್ಯಾನಗಳ ವಿಶ್ಲೇಷಣೆ.

(೪) ಸ್ತ್ರೀ ಕೇಂದ್ರಿತ ವೈಚಾರಿಕ ನೆಲೆಯಲ್ಲಿ ಸೃಜನಶೀಲ ಮತ್ತು ವೈಚಾರಿಕ ಕೃತಿಗಳನ್ನು ವಿಫುಲವಾಗಿ ರಚಿಸಿ, ‘ಸ್ತ್ರೀ ವಿಶಿಷ್ಟ ಪ್ರಜ್ಞೆ’ಗೆ ಅಭಿವ್ಯಕ್ತಿ ಮತ್ತು ಪ್ರಸಾರ ಕೊಡುವುದು. (Spencer, 1982).

ಸರಿಸುಮಾರು ಇದೇ ನಾಲ್ಕು ಅಂಶಗಳನ್ನು ಹೆಚ್ಚು ಸೈದ್ಧಾಂತಿಕವಾಗಿ ಮತ್ತು ವಿದ್ವತ್ಪೂರ್ಣವಾಗಿ ಇಲೇನ್ ಶೋವಾಲ್ಟರ್ ತನ್ನ ‘ಸ್ತ್ರೀ ಕಾವ್ಯಮೀಮಾಂಸೆಯ ಬಗ್ಗೆ (Towards A Feminist Poetics, 1979) ಎಂಬ ಒಂದು ಮುಖ್ಯ ಲೇಖನದಲ್ಲಿ ಚರ್ಚಿಸುತ್ತಾಳೆ. ಶೋವಾಲ್ಟರ್ ಆಧುನಿಕ ಸ್ತ್ರೀವಾದವನ್ನು (ಸಾಹಿತ್ಯಕ ನೆಲೆಯಲ್ಲಿ ಎರಡು ವರ್ಗಗಳಲ್ಲಿ ವಿಂಗಡಿಸುತ್ತಾಳೆ. ಅವಳ ಅಭಿಪ್ರಾಯದಲ್ಲಿ ಮೊದಲನೆಯ ವರ್ಗವು, ‘ಸ್ತ್ರೀಯನ್ನು ಓದುಗಳಾಗಿ’ (Woman as Reader) ಪರಿಗಣಿಸುತ್ತದೆ. ಎಂದರೆ ಪುರುಷ ನಿರ್ಮಿತ ವಾಙ್ಮಯವನ್ನು ಸ್ತ್ರೀ ಓದುವಾಗ ಅದರಲ್ಲಿ ಕಂಡುಬರುವ ನೈತಿಕ – ಲೈಂಗಿಕ ಸಂಹಿತೆಗಳಿಗೆ ಪ್ರತಿಕ್ರಿಯಿಸುತ್ತಾ, ಸಾಹಿತ್ಯಕ ಸಂಗತಿಗಳ ಆಳದಲ್ಲಿರುವ ತಾತ್ವಿಕ ಗೃಹೀತಗಳನ್ನು ಬೆಳಕಿಗೆ ತರುವುದು. ಇಂತಹ ವಿಮರ್ಶೆಯನ್ನು ಶೋವಾಲ್ಟರ್ ‘ಸ್ತ್ರೀವಾದೀ ವಿಮರ್ಶೆ’ (Feminist Critique) ಎಂದು ಹೆಸರಿಸುತ್ತಾಳೆ. ಎರಡನೆಯ ವರ್ಗ ‘ಸ್ತ್ರೀಯನ್ನು ಲೇಖಕಿ’ಯಂತೆ (Woman as writer) ನೋಡುತ್ತದೆ. ಎಂದರೆ ಸ್ತ್ರೀಯರಿಂದ ರಚಿಸಲ್ಪಟ್ಟ ಸಾಹಿತ್ಯ, ಅದರ ವಸ್ತು ಮತ್ತು ವಿನ್ಯಾಸಗಳು, ಇತಿಹಾಸ ಇವುಗಳನ್ನು ವ್ಯಾಖ್ಯಾನಿಸುವುದು. ಈ ವರ್ಗದ ಆಸಕ್ತಿ ಸ್ತ್ರೀಯ ಸೃಜನಶೀಲತೆಯ ಒತ್ತಡಗಳು, ಸ್ತ್ರೀ ವಿಶಿಷ್ಟ ಸಂವೇದನೆ ಮತ್ತು ಭಾಷಿಕ ವಿನ್ಯಾಸಗಳು ಇವುಗಳತ್ತ ಇರುತ್ತದೆ. ಈ ವರ್ಗದಲ್ಲಿ ಬರುವ (ಅಥವಾ ಬರಬೇಕಾದ) ವಿಮರ್ಶೆಗೆ ಶೋವಾಲ್ಟರ್ ‘ಸ್ತ್ರೀನಿಷ್ಠ ವಿಮರ್ಶೆ’ (Gynocriticism) ಎಂಬ ತಾನೇ ರೂಪಿಸಿದ ಹೆಸರನ್ನು ಕೊಡುತ್ತಾಳೆ.

ಶೋವಾಲ್ಟರ್ ಮಂಡಿಸುವ ವಾದವೇನೆಂದರೆ, ಮೊದಲನೆಯ ವರ್ಗದ ‘ಸ್ತ್ರೀವಾದಿ ವಿಮರ್ಶೆ’ಯ ಕಾಳಜಿಗಳು ಮೂಲತಃ ರಾಜಕೀಯ ಕಾಳಜಿಗಳು; ಮತ್ತು ಅಂತಹ ವಿಮರ್ಶೆ ಮಾರ್ಕ್ಸಿಸ್ಟ್ ಸಾಮಾಜಿಕ – ಸೌಂದರ್ಯಾತ್ಮಕ ಚಿಂತನೆಗೆ ಹತ್ತಿರ ಬರುತ್ತದೆ. ಆದರೆ ‘ಸ್ತ್ರೀನಿಷ್ಠ ವಿಮರ್ಶೆ’ ಅಥವಾ ‘ಗೈನೋಕ್ರಿಟಿಸಿಸಂ’ ಹೆಚ್ಚು ಸ್ವತಂತ್ರವಾಗಿ ಪ್ರಯೋಗಾತ್ಮಕವಾಗಿ ನಡೆಯುತ್ತಿರುವ ಸ್ತ್ರೀಪರ ಸಂಶೋಧನೆಗಳೊಡನೆ ಸಂಲಗ್ನಗೊಂಡಿರುತ್ತದೆ. ಇಂದು ನಮಗೆ ಬೇಕಾದುದು ಇಂತಹ ಸ್ತ್ರೀ ವಿಶಿಷ್ಟ ಚಿಂತನಾಕ್ರಮ; ಮತ್ತು ಇದರ ಲಕ್ಷ್ಯ ಚರಿತ್ರೆಯಲ್ಲಿ, ಮಾನವ ಶಾಸ್ತ್ರದಲ್ಲಿ, ಮನೋವಿಜ್ಞಾನದಲ್ಲಿ ದಮನಿಸಲ್ಪಟ್ಟಿರುವ ಸ್ತ್ರೀಯರ ದನಿಗಳನ್ನು ಶೋಧಿಸುವುದು; ಮತ್ತು ಸ್ತ್ರೀಗೆ ‘ಹೇಳಲು ಸಾಧ್ಯವಾಗದ’ (feminine not-said) ಅಂಶಗಳನ್ನು ಹಾಗೂ ವಿಚಾರಗಳನ್ನು ಗುರುತಿಸುವುದು.

ಮೇಲೆ ಹೇಳಿದ ನಾಲ್ಕೂ ದಿಕ್ಕುಗಳಲ್ಲಿ ಇಂದು ಪಾಶ್ಚಾತ್ಯ ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಕಾರ್ಯವಾಗುತ್ತಿದೆ. ಪ್ರಾಚೀನ ಹಾಗೂ ಅರ್ವಾಚೀನ ಸಾಹಿತ್ಯದಲ್ಲಿ ಹೇಗೆ ಸ್ತ್ರೀಯರು ‘ಅಕ್ಷತ ಕನ್ಯೆ’ ಅಥವಾ ‘ವೇಶ್ಯೆ’, ‘ದೇವತೆ ಅಥವಾ ರಾಕ್ಷಸಿ’, ‘ಪತಿವ್ರತೆ ಅಥವಾ ಚಂಡಿ’, ‘ತಾಯಿ ಅಥವಾ ಮೋಹಿನಿ’ – ಹೀಗೆ ಕೆಲವೇ ಕೆಲವು ಸೀಮಿತ ಪಡಿಯಚ್ಚುಗಳಲ್ಲಿ ಚಿತ್ರಿಸಲ್ಪಟ್ಟಿದ್ದಾರೆಂದು ಸಫಲವಾಗಿ ಮೇರಿ ಫರ್ಗುಸನ್ ಮುಂತಾದವರು ವಿಶ್ಲೇಷಿಸಿದ್ದಾರೆ. ಹಾಗೆಯೇ ಪುರುಷರಿಂದ ಮಾಡಲ್ಪಟ್ಟ ವಿಮರ್ಶೆ ಹೇಗೆ ‘ಎಲ್ಲಾ ಉತ್ತಮ ಸಾಹಿತ್ಯವೂ ಪುರುಷ ರಚಿತ ಸಾಹಿತ್ಯದ ಮಾದರಿಯನ್ನೇ ಆದರ್ಶವಾಗಿ ಎತ್ತಿ ಹಿಡಿದು ಸ್ತ್ರೀ – ರಚಿತ ಸಾಹಿತ್ಯವನ್ನು ಕಡೆಗಾಣಿಸುತ್ತದೆ’ – ಎಂದು ಆಧಾರಪೂರ್ವಕವಾಗಿ ಆನೆಟ್ ಕೋಲೋಡ್ನಿ (Annette Kolodny) ಮುಂತಾದವರು ಚರ್ಚಿಸಿದ್ದಾರೆ. ಇವರುಗಳ ದೃಷ್ಟಿಯಲ್ಲಿ ವಿಮರ್ಶೆ ನಿರಪೇಕ್ಷವಾಗಿ ನಿಷ್ಪಕ್ಷಪಾತವಾಗಿ ಇರಲು ಸಾಧ್ಯವೇ ಇಲ್ಲ.

ಸ್ತ್ರೀನಿಷ್ಠ ವಿಮರ್ಶೆ ‘ಕೃತಿನಿಷ್ಠ’ವಾಗಿಯೂ ಮತ್ತು ‘ಸಂದರ್ಭನಿಷ್ಠ’ವಾಗಿಯೂ ಇರಬೇಕೆಂದು ಆನಿಸ್ ಪ್ರ್ಯಾಟ್ (Annis Pratt) ವಾದಿಸುತ್ತಾಳೆ. ಸಾಹಿತ್ಯಿಕವಾಗಿ ಒಂದು ಕೃತಿ ಯಶಸ್ವಿಯಾಗಿದೆಯೇ ಇಲ್ಲವೇ ಎಂದು ನೋಡಲು ಕೃತಿನಿಷ್ಠ ನವ್ಯವಿಮರ್ಶೆ ಮತ್ತು ಒಂದು ಕೃತಿ ಅಷ್ಟು ಸಫಲವಾಗಿರದಿದ್ದರೂ ಏಕೆ ಮತ್ತು ಯಾವ ಚಾರಿತ್ರಿಕ ಕಾರಣಗಳಿಂದ ಸಫಲವಾಗಿಲ್ಲವೆಂದು ತಿಳಿಯಲು ಆ ಕೃತಿಯ ಸಾಮಾಜಿಕ – ಸಾಂಸ್ಕೃತಿಕ ಸಂದರ್ಭದ ವಿಮರ್ಶೆ ಇವೆರಡೂ ಮುಖ್ಯವೆಂದು ಪ್ರ್ಯಾಟ್ ವಾದಿಸುತ್ತಾಳೆ.

ಇನ್ನೂ ಕೇವಲ ಮೂರು – ನಾಲ್ಕು ದಶಕಗಳ ಇತಿಹಾಸವಿರುವ ‘ಸ್ತ್ರೀನಿಷ್ಠ’ ವಿಮರ್ಶೆಯ ಇಂದಿನ ಸಂಧಿಕಾಲದಲ್ಲಿ ಸಹಜವಾಗಿಯೇ ಆಂತರಿಕ ವಿರೋಧಗಳು ಹಾಗೂ ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಮುಖ್ಯವಾಗಿ ಮಾರ್ಕ್ಸ್‌ವಾದಿ ಧೋರಣೆಯನ್ನುಳ್ಳ ಮಿಶೆಲ್ ಬ್ಯಾರಟ್, ಜೂಲಿಯ ಕ್ರಿಸ್ಟೇವ ಮುಂತಾದವರು ಒಂದು ಪ್ರಮುಖ ಕವಲನ್ನು ಪ್ರತಿನಿಧಿಸಿದರೆ, ಜೇನ್ ಗ್ಯಾಲಪ್ ಮುಂತಾದವರು ಮತ್ತೊಂದು ವರ್ಗವನ್ನು ಪ್ರತಿನಿಧಿಸುತ್ತಾರೆ. ಸ್ತ್ರೀಕೇಂದ್ರಿತ ವಿಚಾರ ಪ್ರಣಾಲಿಯ ಮೂಲದಲ್ಲಿರುವ ಸಮಸ್ಯೆಯೆಂದರೆ : ಸ್ತ್ರೀಯು ಪುರುಷನಿಗಿಂತ ಯಾವ ರೀತಿಯಲ್ಲೂ ಭಿನ್ನಳ್ಳ ಎಂದು ನಂಬಿ ಪುರುಷರೊಡನೆ ಸಮಾನತೆಗೆ ಹೋರಾಡಬೇಕೇ; ಅಥವಾ ಪುರುಷನಿಗಿಂತ ಪ್ರಜ್ಞೆಯಲ್ಲಿ, ಪ್ರತಿಸ್ಪಂದನೆಯಲ್ಲಿ ಸ್ತ್ರೀ ಭಿನ್ನಳು, ಮತ್ತು ಈ ಭಿನ್ನತೆಯೇ ಸ್ತ್ರೀಯ ವಿಶಿಷ್ಟ ಶಕ್ತಿ ಎಂದು ಮುಂದುವರಿಯಬೇಕೇ ಎಂಬುದು. ಮೊದಲಿನ ಪೀಳಿಗೆಯ ಕೇಟ್ ಮಿಲೆಟ್ ಮುಂತಾದವರು ಪುರುಷ – ಸಮಾನತೆಗೆ ಒತ್ತುಕೊಟ್ಟರೆ ಇತ್ತೀಚೆಗಿನ ಜೂಲಿಯ ಕ್ರಿಸ್ಟೇವ್ ಮುಂತಾದವರು ಸ್ತ್ರೀಯ ವಿಶಿಷ್ಟ ಭಿನ್ನತೆಯನ್ನು ಎತ್ತಿಹಿಡಿಯುತ್ತಾರೆ. ಪುರುಷಕಲ್ಪಿತ ‘ನಿಯತಗಳು ಮತ್ತು ನಿಶ್ಚಿತಗಳು’ (fixities and difinities) ಇವುಗಳನ್ನು ಮೀರಿ ಸ್ತ್ರೀ – ಸಂವಹನ (feminist discourse) ನಾನಾ ಸಾಧ್ಯತೆಗಳುಳ್ಳ ಹಾಗೂ ಯಾವುದೇ ರೀತಿಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಟ್ಟುಪಾಡುಗಳಿಗೆ ಒಳಪಡದ ಮುಕ್ತ ಪ್ರಜ್ಞೆಯೇ ಸ್ತ್ರೀಸಾಹಿತ್ಯದ ಸ್ವೋಪಜ್ಞ ಕೊಡುಗೆಯಾಗಬಲ್ಲದೆಂದು ಜೂಲಿಯಾ ಕ್ರಿಸ್ಟೇವಾ ವಾದಿಸುತ್ತಾಳೆ.

ಅಖಿಲ ಭಾರತ ವ್ಯಾಪ್ತಿಯಲ್ಲಾದಂತೆ, ಕನ್ನಡದಲ್ಲೂ ಕಳೆದೆರಡು ದಶಕಗಳಿಂದ ಸ್ತ್ರೀವಾದ ಮತ್ತು ಸ್ತ್ರೀನಿಷ್ಠ ಚಿಂತನೆ ಸಾಕಷ್ಟು ಅರ್ಥಪೂರ್ಣವಾಗಿ ಬೆಳೆದಿದೆ, ಬೆಳೆಯುತ್ತಿದೆ. ಆದರೆ ಭಾರತೀಯ ಸ್ತ್ರೀವಾದಿಗಳು ಪಾಶ್ಚಿಮಾತ್ಯ ಸ್ತ್ರೀವಾದಿಗಳಿಗಿಂತ ಭಿನ್ನವಾದ ಕೆಲವು ವೈಚಾರಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ, ಭಾರತ, ಇಂಗ್ಲೆಂಡ್ – ಫ್ರಾನ್ಸ್‌ಗಳಂತಲ್ಲದೆ ಬಹುಧರ್ಮೀಯ, ಬಹುಧಾರ್ಮಿಕ, ಬಹುಭಾಷಿಕ ರಾಷ್ಟ್ರ. ಆದ್ದರಿಂದ ಡಿ. ಆರ್. ನಾಗರಾಜ್ ಮತ್ತು ಮನು ಚಕ್ರವರ್ತಿ ವಾದಿಸುವಂತೆ, ಭಾರತೀಯ ಸ್ತ್ರೀವಾದ ಪಾಶ್ಚಿಮಾತ್ಯ ಸ್ತ್ರೀವಾದದ ಸಾರಾಸಗಟು ಆಮದು ಆಗಬಾರದು ; ಮತ್ತು ಬಹು ಆಕೃತಿಯ ಭಾರತೀಯ ಸಮಾಜ – ಸಂಸ್ಕೃತಿಗಳಿಗೆ ತಕ್ಕದಾಗುವಂತೆ ನಮ್ಮದೇ ಆದ ಸ್ತ್ರೀವಾದವನ್ನು ಬೆಳೆಸಬೇಕು. (ವಿವರಗಳಿಗೆ ನೋಡಿ : ಮನು ಚಕ್ರವರ್ತಿ (ಸಂ.), ‘ಭಾರತೀಯ ಸ್ತ್ರೀವಾದ’, ೧೯೯೩).

ಭಾರತೀಯವಾದ ಸ್ತ್ರೀವಾದವನ್ನು ಬೆಳೆಸಲು ಪ್ರಯತ್ನಿಸುವಾಗ ಭಾರತೀಯ/ ಕನ್ನಡದ ಸ್ತ್ರೀವಾದಿಗಳು ಒಂದು ಬಗೆಯ ವೈಚಾರಿಕತೆಯ ದ್ವಂದ್ವದಲ್ಲಿ ಸಿಕ್ಕಿ ಬೀಳುತ್ತಾರೆ. ಈ ದ್ವಂದ್ವವನ್ನು ವಸಾಹತೋತ್ತರ ಸಾಂಸ್ಕೃತಿಕ – ವೈಚಾರಿಕ ಒತ್ತಡಗಳು ಮತ್ತು ಸ್ತ್ರೀ ಸ್ವಾತಂತ್ರ್ಯದ ಜರೂರು ಇವುಗಳ ನಡುವಿನ ಸಂಘರ್ಷವೆಂದು ಗುರುತಿಸಬಹುದು. ಒಂದೆಡೆ, ಭಾರತೀಯ ಸ್ತ್ರೀ (ಹಿಂದೂ / ಮುಸ್ಲಿಂ / ಸಿಖ್/ ಕ್ರಿಶ್ಚಿಯನ್…) ಧಾರ್ಮಿಕ – ಸಾಮಾಜಿಕ ನಿರ್ಬಂಧಗಳಲ್ಲಿ, ಸಿದ್ಧ ಪಡಿಯಚ್ಚುಗಳಲ್ಲಿ, ತನ್ನ ಅಸ್ತಿತ್ವವನ್ನೇ ನಷ್ಟಗೊಳಿಸಿಕೊಂಡಿದ್ದಾಳೆ ಎಂಬ ಸತ್ಯಕ್ಕೆ ಒತ್ತುಕೊಟ್ಟರೆ ವಸಾಹತುವಾದವನ್ನು (ವಸಾಹತುಶಾಹಿ ನೂತನ ಶಿಕ್ಷಣ ಪ್ರಣಾಲಿ, ಶಾಸನ ವ್ಯವಸ್ಥೆ ಇತ್ಯಾದಿಗಳಿಂದ ಭಾರತದಂತಹ ‘ಹಿಂದುಳಿದ’ ರಾಷ್ಟ್ರಗಳಿಗೆ ಪ್ರಗತಿಪರ ವೈಚಾರಿಕತೆಯನ್ನು ಕೊಟ್ಟಿತು ಎಂಬ ವಾದವನ್ನು) ಬಲಪಡಿಸಿದಂತಾಗುತ್ತದೆ. ಇದರ ವಿರುದ್ಧವಾಗಿ, ಭಾರತೀಯ ಸಾಂಸ್ಕೃತಿಕ – ಸಾಮಾಜಿಕ ಅನನ್ಯತೆಗೆ ಒತ್ತುಕೊಟ್ಟರೆ ಭಾರತೀಯ ಸ್ತ್ರೀಯ ಪಾರತಂತ್ರ್ಯವನ್ನೇ ವೈಭವೀಕರಿಸಿದಂತಾಗುತ್ತದೆ. ಇವೆರಡೂ ಸಾಧ್ಯತೆಗಳನ್ನು ನಾವಿಂದು ಭಾರತೀಯ / ಕನ್ನಡ ಸ್ತ್ರೀವಾದಿಗಳಲ್ಲಿ ನೋಡುತ್ತಿದ್ದೇವೆ. ವಸಾಹತುಶಾಹಿ ವಾದವನ್ನು ತೀವ್ರವಾಗಿ ವಿರೋಧಿಸುತ್ತಾ, ಭಾರತದಲ್ಲಿ ವೇದಕಾಲದಿಂದಲೂ ಸ್ತ್ರೀಗೆ ಸಮಾನ ಸ್ಥಾನಮಾನಗಳು ಮತ್ತು ಗೌರವಾದರಗಳು ಇದ್ದುವೆಂದು ಚಿ. ನ. ಮಂಗಳ ತಮ್ಮ ‘ಭಾರತೀಯ ಸ್ತ್ರೀ’ ಎಂಬ ಲೇಖನ ಮಾಲೆಯಲ್ಲಿ ವಾದಿಸುತ್ತಾರೆ. ಹಾಗೆಯೇ, ಮಹಾಭಾರತದಲ್ಲೇ ದಾಖಲಾಗಿರುವ ಮತ್ತು ಎರಡು ಸಾವಿರ ವರ್ಷಗಳಿಂದ ಹಿಂದೂ ಸಮಾಜದ ಮೇಲ್ವರ್ಗದ ಸ್ತ್ರೀಯರಿಗೆ ಶಾಪವಾಗಿ ಕಾಡಿದ್ದ ‘ಸತಿ’ ಪದ್ಧತಿಯ ಬಗ್ಗೆಯೂ ಮಧು ಕಿಶ್ವರ್, ಲತಾ ಮಣಿ ಮುಂತಾದವರು ಒಂದು ಬಗೆಯ ದ್ವಂದ್ವಾತ್ಮಕ ನಿಲುವನ್ನು ತಾಳುತ್ತಾರೆ. ಬ್ರಿಟಿಷರು ಬರುವವರೆಗೆ ಭಾರತದಲ್ಲಿ ‘ಸತಿ’ ಆಚರಣೆ ಗಣನೀಯವಾಗಿರಲಿಲ್ಲವೆಂದೂ, ‘ಸತಿ ನಿರ್ಮೂಲನ ಶಾಸನ’ವಾದ ನಂತರವೇ ಸತಿಯಾದ ಸ್ತ್ರೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತೆಂದೂ, ಮತ್ತು ಈ ವೃದ್ಧಿಗೆ ಕಾರಣ ವಸಾಹತುಶಾಹಿಗೆ ಪ್ರತಿರೋಧವಾಗಿ ಮೂಡಿಬಂದ ಅಸ್ಮಿತೆಯ ಒತ್ತಡವೆಂದೂ ಅವರು ವಾದಿಸುತ್ತಾರೆ. (ವಿವರಗಳಿಗೆ ನೋಡಿ : ಲತಾ ಮಣಿ, ೧೯೮೯, ಮಧು ಕಿಶ್ವರ್, ೧೯೯೯ ಇತ್ಯಾದಿ.)

ಭಾರತದಲ್ಲಿ ಸ್ತ್ರೀವಾದವನ್ನು ಮತ್ತಷ್ಟು ಗೊಂದಲಗೊಳಿಸುವ ಸಂಗತಿಯೆಂದರೆ ಇಲ್ಲಿಯ ಬಹುಸಂಖ್ಯಾತ ಧರ್ಮವಾದ ಹಿಂದೂ ಧರ್ಮವು ನಿರ್ಮಿಸಿರುವ ಜಾತಿಪದ್ಧತಿ. ಜಾತಿ – ಉಪಜಾತಿ – ಉಪ ಉಪಜಾತಿಗಳಾಗಿ ಸೀಳು ಸೀಳಾಗಿರುವ ಹಿಂದೂ ಸಮಾಜದಲ್ಲಿ, ಪ್ರಾಯಃ ಸ್ತ್ರೀಯರ ಬಗ್ಗೆ ಸಾಧಾರಣೀಕೃತ ಹೇಳಿಕೆ ಕೊಡಲು ಸಾಧ್ಯವೇ ಇಲ್ಲ. ಒಂದು ಜಾತಿಯ / ಕಸುಬಿನ ಸ್ತ್ರೀಯರ ಸಮಸ್ಯೆಗು ಹಾಗೂ ಆತಂಕಗಳು ಮತ್ತೊಂದು ಜಾತಿಯ / ಕಸುಬಿನ ಸ್ತ್ರೀಯರಿಗೆ ಅಪ್ರಸ್ತುತವಾಗುತ್ತವೆ. ಹಾಗೆಯೇ, ಜಾತಿಯ ಆಧಾರದ ಮೇಲೆ ನಿರ್ಮಿಸಲ್ಪಟ್ಟ ಶ್ರೇಣೀಕೃತ ಹಿಂದೂ ಸಮಾಜದಲ್ಲಿ ಮೇಲು ಮೇಲಕ್ಕೆ ಹೋದಂತೆ ಸ್ತ್ರೀಯ ಪಾರತಂತ್ರ್ಯ ಹೆಚ್ಚಾಗುತ್ತಾ ಹೋಗುತ್ತದಲ್ಲದೆ, ಮುಖ್ಯವಾದಿ ಅದು ಆ ಜಾತಿಯ ‘ವಿಶಿಷ್ಟತೆ’ಯಂತೆ ಭಾವಿಸಲಾಗುತ್ತದೆ. ಉತ್ತರ ಭಾರತದಲ್ಲಿ ಕುಲೀನ ಸ್ತ್ರೀಯರು ಮುಖಕ್ಕೆ ಹಾಕುವ ಘೋಷಾ ಅವರ ಕುಲೀನತೆಯ ಸಾಕ್ಷ್ಯವಾಗುತ್ತದೆ; ದಕ್ಷಿಣ ಭಾರತದಲ್ಲಿ ಬ್ರಾಹ್ಮಣ ಸ್ತ್ರೀಯರು ಮಡಿ – ಮೈಲಿಗೆ – ವ್ರತಾಚರಣೆಗಳಲ್ಲಿ ತಮ್ಮನ್ನು ದಂಡಿಸಿಕೊಳ್ಳುವುದೇ ಅವರ ‘ಬ್ರಾಹ್ಮಣ್ಯ’ದ ನಿದರ್ಶನವಾಗುತ್ತದೆ. ತೀವ್ರ ಆಲರ್ಜಿಯಿಂದ ಒದ್ದಾಡುತ್ತಿದ್ದರೂ ಕುಂಕುಮ ಹಾಕುವುದು ಸಾಂಸ್ಕೃತಿಕ ಕುರುಹಾಗುತ್ತದೆ. ಇಂತಹ ವಿಚಿತ್ರ ಪರಿಸ್ಥಿತಿಯಲ್ಲಿ ಭಾರತೀಯ ಸ್ತ್ರೀವಾದಿಗಳು ಏನೇ ಮಾಡಿದರೂ / ಮಾಡದಿದ್ದರೂ ಒಂದಲ್ಲ ಒಂದು ಬಗೆಯ ಬಿಕ್ಕಟ್ಟಿನಲ್ಲಿ ಸಿಕ್ಕಿ ಬೀಳುವ ಸಾಧ್ಯತೆಯಿದೆ.

ಕಳೆದೆರಡು ದಶಕಗಳಲ್ಲಿ ಕನ್ನಡದಲ್ಲಿ ಸಾಕಷ್ಟು ಸ್ತ್ರೀವಾದೀ ಚಿಂತನೆ ಬೆಳೆದಿದೆ. ಕನ್ನಡದ ಪ್ರಮುಖ ಸ್ತ್ರೀವಾದೀ ವಿಮರ್ಶಕಿಯರೆಂದರೆ ತೇಜಸ್ವಿನಿ ನಿರಂಜನ, ವಿಜಯಾ ದಬ್ಬೆ, ಬಿ.ಎನ್. ಸುಮಿತ್ರಾಬಾಯಿ, ನೇಮಿಚಂದ್ರ, ಎನ್. ಗಾಯತ್ರಿ, ಬಿ.ಎಂ. ರೋಹಿಣಿ ಮುಂತಾದವರು. ಹೆಚ್ಚಿನ ವಿವರಗಳಿಗೆ ನೋಡಿ : ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ (ಸಂ.) ಸ್ತ್ರೀವಾದಿ ಸಾಹಿತ್ಯ ವಿಮರ್ಶೆ (೧೯೯೪); ಬಿ.ಎನ್. ಸುಮಿತ್ರಾಬಾಯಿ ಮತ್ತು ಎನ್. ಗಾಯತ್ರಿ (ಸಂ.), ಸ್ತ್ರೀವಾದಿ  ಪ್ರವೇಶಿಕೆ (೧೯೯೫); ಬರಗೂರು ರಾಮಚಂದ್ರಪ್ಪ (ಸಂ.), ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆ (೧೯೯೩) ಇತ್ಯಾದಿ.

ಒಟ್ಟಾರೆಯಾಗಿ ಹೇಳಬೇಕಾದರೆ, ಸ್ತ್ರೀನಿಷ್ಠ ಚಿಂತನೆಯನ್ನು ‘ಜೈವಿಕ ನಿಯತಿವಾದ’ದ (Biological Determinism) ವಿರುದ್ಧ ವಿಶ್ವಾದ್ಯಂತ ನಡೆದಿರುವ ಹೋರಾಟವೆಂದು ನೋಡಬಹುದು. ಮಾರ್ಕ್ಸ್ ಹೇಳುವಂತೆ “ಒಂದು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸ್ತ್ರೀ ಪುರುಷ ಸಂಬಂಧದ ಸ್ವರೂಪವು ಮಾನವ ತನ್ನ ಪಶುಸ್ಥಿತಿಯಿಂದ ಮಾನವತೆಯ ದಿಕ್ಕಿನಲ್ಲಿ ಎಷ್ಟು ದೂರ ಒಂದು ಕಾಲಘಟ್ಟದಲ್ಲಿ ಸಾಗಿದ್ದಾನೆಂಬುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ” (ಸಿಮೋನ್ ದ ಬೋವಾ ಉದಾಹರಿಸಿದಂತೆ).

* * *