ಯಾವುದೇ ಕಾವ್ಯ ತನ್ನ ಪರಿಸರದ ಪ್ರಭಾವಕ್ಕೆ ಒಳಗಾಗುವುದು, ಸಮಕಾಲೀನ ಪ್ರಜ್ಞೆಯನ್ನು ಪ್ರಕಟಿಸುವುದು ಅನಿವಾರ್ಯ; ಹಾಗಿಲ್ಲದ ಪಕ್ಷದಲ್ಲಿ ಅದು ಒಳ್ಳೆಯ ಕಾವ್ಯವಾಗಲಾರದು. ನಾಗಚಂದ್ರ ಬರೆದಿರುವ ಎರಡು ಜೈನ ಧಾರ್ಮಿಕ ಕಾವ್ಯಗಳಲ್ಲಿ – ‘ಮಲ್ಲಿನಾಥ ಪುರಾಣ’ ಮತ್ತು ರಾಮಚಂದ್ರ ಚರಿತ ಪುರಾಣ’ -ಅಂದಿನ ಯುಗಧರ್ಮದ ಹೊಳಹು ಹೇಗೆ ವ್ಯಕ್ತವಾಗಿದೆಯೆಂಬುದನ್ನು ಮೊದಲು ಸೂಚಿಸಬಹುದು.

ನಾಗಚಂದ್ರನ ಕಾಲವನ್ನು ಕುರಿತ ಚರ್ಚೆಯನ್ನಿಲ್ಲಿ ತುಸು ಗಮನಿಸಬೇಕು. ಅದು ಸು.೧೧೦೦ರೊಎಂಬುದು ಒಂದು ಪಕ್ಷದ ನಿಲುವಾದರೆ, ಸು.೧೧೪೦ ಎಂಬುದು ಇನ್ನೊಂದು ಪಕ್ಷದ ನಿಲುವಾಗಿತ್ತು. ಈಚೆಗೆ ಈ ಚರ್ಚೆ ಒಂದು ನಿಲುಗಡೆಯನ್ನು ಕಂಡಿದೆ: ನಾಗಚಂದ್ರನ ಕಾಲ ಸು.೧೧೦೦ ಎಂದು ಸಾಧಾರವಾಗಿ ನಿರ್ಣಯಿಸಲಾಗಿದೆ.[1]

ರಂ.ಶ್ರೀ.ಮುಗಳಿಯವರು ನಾಗಚಂದ್ರನನ್ನು ‘ಪಂಪಯುಗ’ಕ್ಕೆ ಸೇರಿಸಿದ್ದಾರೆ.(ಅವನು ಸು.೧೧೦೦ ಕವಿ ಎಂದು ಅವರು ಹಿಂದೆಯೇ ಗ್ರಹಿಸಿದ್ದರು). ವಾಸ್ತವವಾಗಿ ‘ಬಸವಯುಗ’ ಅಥವಾ ‘ಸ್ವಾತಂತ್ರ್ಯ ಯುಗ’ಕ್ಕೂ ಸೇರುವ ಕವಿ, ನಾಗಚಂದ್ರ ; ಕಾಲಧರ್ಮ ಹಾಗೂ ಕಾವ್ಯಧೋರಣೆಯ ದೃಷ್ಟಿಯಿಂದ ಹೀಗೆ ಹೇಳಬೇಕಾಗುತ್ತದೆ.

ಹತ್ತನೆಯ ಶತಮಾನ ಜೈನಧರ್ಮದ ಅಭ್ಯುದಯದ ಅವಧಿ : ಆಗಿನ ಜೈನ ಕವಿಗಳು ಒಂದೊಂದು ಲೌಕಿಕ ಕಾವ್ಯ ಮತ್ತು ಒಂದೊಂದು ಆಗಮಿಕ ಕಾವ್ಯವನ್ನು ರಚಿಸಿದರು. ಆದರೆ ಹನ್ನೆರಡನೆಯ ಶತಮಾನದ ಚಿತ್ರವೇ ಬೇರೆ. ಅದು ವೀರಶೈವಧರ್ಮದ ಏಳ್ಗೆಯನ್ನು, ಜೈನಧರ್ಮದ ಅವನತಿಯನ್ನು ತೋರುತ್ತದೆ.[2] ಆಗ ವೀರಶೈವನಿಮಿತ್ತದಿಂದ ಭಾಷೆ ಸಾಹಿತ್ಯಗಳಲ್ಲಿ ಕ್ರಾಂತಿಯೊಂದು ಘಟಿಸಿದ್ದನ್ನು ಕಾಣುತ್ತೇವೆ. ಈ ಬದಲಾವಣೆಗೆ ಜೈನ ಕವಿಗಳು ಕಣ್ಣು ಮುಚ್ಚಿಕೊಂಡಿರುವುದು ಶಕ್ಯವಿರಲಿಲ್ಲ. ನೂತನ ಪ್ರವೃತ್ತಿಗಳನ್ನು ತಮ್ಮ ಕೃತಿಗಳಲ್ಲಿ ಅವರು ಅಳವಡಿಸಿಕೊಳ್ಳಬೇಕಾಯಿತು. ಜೈನಧರ್ಮವನ್ನು ಮುನ್ನಿನಂತೆ ಜನಪ್ರಿಯಗೊಳಿಸುವುದು ಅವರ ಹಂಬಲವಾದುದರಿಂದ, ಧರ್ಮಪ್ರಸಾರಕ್ಕೆ ವಚನಕಾರರಂತೆ ಸರಳ ಸುಲಭ ವಿಧಾನಗಳನ್ನು ಅವರು ಅವಲಂಬಿಸಿದರು. ಚಂಪುವನ್ನು ಅವರು ಬಿಡಲಿಲ್ಲ, ನಿಜ; ಆದರೆ ಅವರ ಕೈಯಲ್ಲಿ ಚಂಪುವಿನ ಬಿಗಿ ತಕ್ಕಮಟ್ಟಿಗಾದರೂ ಸಡಿಲವಾಯಿತು. (ಇಲ್ಲಿ ನಯಸೇನ, ಜನ್ನರನ್ನೂ ಸ್ಮರಿಸಬೇಕು). ಅಂದಿನ ಜೈನ ಕವಿಗಳು ಲೌಕಿಕ ಕಾವ್ಯಗಳ ರಚನೆಗೆ ಮನಸ್ಸು ಕೊಡದೆ, ಕೇವಲ ಧಾರ್ಮಿಕ ಕಾವ್ಯಗಳನ್ನೆ ರಚಿಸಿದರೆಂಬುದೂ ಗಮನಾರ್ಹ.

ನಾಗಚಂದ್ರನಲ್ಲಿ ಗಾಢವಾದ ಧರ್ಮಾನುರಾಗವನ್ನೂ ಜಿನಭಕ್ತಿಯನ್ನೂ ನೋಡುತ್ತೇವೆ. ಈ ಬಗೆಗೆ ‘ಶ್ರೀ’ಯವರ ಮಾತು ಉಲ್ಲೇಖನೀಯ : ‘‘ನಾಗಚಂದ್ರನ ಆತ್ಮದಲ್ಲಿ ಧರ್ಮ ಮುಂದು; ಅವಳಿ ಜವಳಿಯಾಗಿ ಕವಿತೆ ಅದರ ಹಿಂದು’’. ಅವನಿಗೆ ರಾಜಾಶ್ರಯವಿದ್ದಂತೆ ತೋರದು; ಕುಮಾರ ವ್ಯಾಸನಂತೆ ಅವನು ಸ್ವತಂತ್ರ ಮನೋಭಾವದ ಕವಿಯಾಗಿ ಕಾಣುತ್ತಾನೆ. ಅವನಿಗೆ ಪೂಜ್ಯರೆಂದರೆ ಇಬ್ಬರೇ; ಗುರು ಬಾಲಚಂದ್ರನೊಬ್ಬ, ಜಿನೇಂದ್ರ ಮತ್ತೊಬ್ಬ. ವ್ಯಕ್ತಿಗತ ಸಂಗತಿಗಳೇನನ್ನೂ ನಾಗಚಂದ್ರ ಹೇಳಿಕೊಂಡಿಲ್ಲ. ಅವನ ಈ ಪ್ರತಿಜ್ಞೆ ಲಕ್ಷಿಸತಕ್ಕದ್ದು:

ಜಿನಪತಿಗಂ ಜಿನಮುನಿಗಂ
ಜಿನಾಗಮಕ್ಕಂ ಜಿನಾಧಿಪತಿಭವನಕ್ಕಂ
ಜಿನಗುಣ ಸಂಪತ್ತಿಗಮೆಱ
ಪನೆಱಗನುೞಿದವರ್ಗೆ ನಾಗಚಂದ್ರ ವೀಂದ್ರಂ (. ಪು. .೪೦)

ಇಂತಹ ಪ್ರತಿಜ್ಞೆಯ ಅಗತ್ಯವಿದ್ದುದು ವೀರಶೈವ ಧರ್ಮದ ಉಚ್ಛ್ರಾಯ ಕಾಲದಲ್ಲಿ.[3]

ನಾಗಚಂದ್ರ ಶಾಂತರಸದ ಉಪಾಸಕನೆಂಬುದಕ್ಕೆ ಪ್ರೋಜ್ವಲ ಸಾಕ್ಷಿಯಾಗಿದೆ ಈ ಪದ್ಯ:

ನಿನಗೆ ರಸವೊಂದೆ ಶಾಂತಮೆ
ಜಿನೇಂದ್ರ ಮನಮಾ ರಸಾಂಬುನಿಧಿಯೊಳಗವಗಾ
ಹನಮಿರ್ದು ಮಿಕ್ಕ ರಸಮಂ
ಕನಸಿನೊಳಂ ನೆನೆಯದಂತು ಮಾಡೆನಗರ್ಹಾ (.ಪು.೧೦.೮೨)

ಇದು ಪಾತ್ರವೊಂದರ ಬಾಯಲ್ಲಿ ಬರುವ ಜಿನಸ್ತವನವಾದರೂ, ಕವಿಯ ಹೃದಯಾಂತರಾಳದ ಮೊರೆಯೇ ಸರಿ. ನಾಗಮಂದ್ರನ ಎರಡೂ ಕಾವ್ಯಗಳಲ್ಲಿ ಶಾಂತರಸದ ಪ್ರಾಚುರ್ಯವುಂಟು.

ಕಾವ್ಯ ಮೀಮಾಂಸೆಗೆ ಸಂಬಂಧಿಸಿದ ನಾಗಚಂದ್ರನ ಕೆಲವು ಉಕ್ತಿಗಳು ಪರಿಭಾವನಾರ್ಹವಾಗಿವೆ. ಅವನ ದೃಷ್ಟಿಯಲ್ಲಿ ಕಲೆಗಾಗಿ ಕಲೆಯಲ್ಲ, ಧರ್ಮಕ್ಕಾಗಿ ಕಲೆ:  ‘‘ಉಪದೇಶಂಗೆಯ್ದು ಕಾವ್ಯಚ್ಛಲದಿನಖಿಳ ಧರ್ಮಂಗಳಂ’’ ಎಂಬ ಮಾತಿನಲ್ಲಿ ಇದು ಸ್ಪಷ್ಟ. ಮನೋರಂಜನವನ್ನಷ್ಟೆ ಗುರಿಯಾಗಿಟ್ಟುಕೊಂಡು, ರಾಗದ್ವೇಷಪೂರ್ವಕವಾಗಿ ಕೃತಿ ರಚನೆ ಮಾಡಿದರೆ ಅದು ‘‘ಬಿತ್ತಿ ಬೆಳವಂತಕ್ಕುಂ ವಿಷೋದ್ಯಾನಮಂ’’ ಎನ್ನುತ್ತಾನೆ, ನಾಗಚಂದ್ರ. ರೀತಿಗಿಂತ ವಸ್ತುವಿಗೆ ಅವನು ಹೆಚ್ಚು ಪ್ರಾಶಸ್ತ್ಯ ಕೊಡುತ್ತಾನೆ : ‘‘ವಿಷಯಮೊಪ್ಪ ದೊಡಾವುದುಮೊಪ್ಪಲಾರ್ಕುಮೇ?’’ ಎಂಬುದು, ‘‘ಕಾಲಾಯಸದಿಂ ವಿನಿರ್ಮಿಸಿದ ಕಂಠಿಕೆ ಕಾಂಚನಮಾಲೆಯಂತುಪಾದೇಯಮೇನಕ್ಕುಮೇ?’’ ಎಂಬುದು ಅವನ ಅರ್ಥಪೂರ್ಣವಾದ ಪ್ರಶ್ನೆಗಳು. ತನ್ನ ‘ರಾಮಚಂದ್ರಚರಿತ ಪುರಾಣ’ವನ್ನು ಅವನು ‘ಉದಾತ್ತರಾಘವ’ನ ಕಥೆಯೆಂದು ಕರೆದು ಸಮರ್ಥಿಸಿಕೊಳ್ಳುತ್ತಾನೆ. ಒಂದು ಕಡೆ ನಾಗಚಂದ್ರ ಪ್ರಸ್ತಾಪಿಸುವ ‘ಜನತಾಂತರ್ ದೃಷ್ಟಿ’ ಎಂಬುದು ಸರ್ವೋದಯ ಸೂಚಕವಾಗಿದ್ದು, ಹನ್ನೆರಡನೆಯ ಶತಮಾನದ ಯುಗಮೌಲ್ಯವನ್ನು ಧ್ವನಿಸುತ್ತದೆ.

ನಾಗಚಂದ್ರನ ‘ಮಲ್ಲಿನಾಥ ಪುರಾಣ’ ಹತ್ತೊಂಬತ್ತನೆಯ ತೀರ್ಥಕರನ ಚರಿತವನ್ನು ಬಿತ್ತರಿಸುವ ಕೃತಿ. ‘‘ಜೀವಕ್ಕೆ ಶರಣ್ಯಮೊಂದೆ ನಿರ್ಮಲ ಧರ್ಮಂ’’, ‘‘ಭಾವಿಪೊಡಸಾರಮೀ ಸಂಸಾರಂ’’ ಎಂಬ ಸಂದೇಶವನ್ನು ಅದು ಸಾರುತ್ತದೆ. ಗುಣಭದ್ರಾಚಾರ್ಯರ ‘ಉತ್ತರ ಪುರಾಣ’ ಈ ಕೃತಿಗೆ ಆಕರ. ಅಲ್ಲಿ ತೀರ್ಥಕರ ಸಂಬಂಧಿಯಾದ ಶ್ಲೋಕಗಳು ೧೨೫ ಮಾತ್ರ. ಚಕ್ರವರ್ತಿ, ಬಲದೇವ, ವಾಸುದೇವ, ಪ್ರತಿವಾಸುದೇವರ ಕಥೆಯನ್ನು ನಾಗಚಂದ್ರ, ಪೂರ್ತಿಯಾಗಿ ಬಿಟ್ಟಿದ್ದಾನೆ. (ಪುರಾಣವೊಂದರ ನಿರ್ವಹಣೆಯಲ್ಲಿ ಅವನು ಈ ಸ್ವಾತಂತ್ರ್ಯ ವಹಿಸಿರುವುದು ಆಶ್ಚರ್ಯಕರ).

‘ಮಲ್ಲಿನಾಥಪುರಾಣ’ದ ಕತೆ ಬಹಳ ತೆಳು ; ಅದನ್ನು ನಾಗಚಂದ್ರ ಹದಿನಾಲ್ಕು ಆಶ್ವಾಸಗಳ ಹರಹಿಗೆ ವಿಸ್ತರಿಸಿದ್ದಾನೆ. ‘‘ಕಿಱದೀ ಕಥಾಪರಿಸ್ಪಂದಮಿದಂ ನಿಮಿರ್ಚಿ….’’ ಎಂದು ಅವನೇ ಈ ವಿಸ್ತರಣದ ಬಗ್ಗೆ ಹೇಳಿಕೊಂಡಿದ್ದಾನೆ. ಹೀಗೆ ಹಿಗ್ಗಲಿಸುವ ಪ್ರಕ್ರಿಯೆ ಸಹಜವಾಗಿಯೇ ವರ್ಣನಾಭೂಯಿಷ್ಠತೆಗೆ ಎಡೆಗೊಟ್ಟಿದೆ. ಇದರಿಂದಾಗಿ ಇಡೀ ಕಾವ್ಯ ವರ್ಣನೆಗಳ ಸರಣಿಯಾಗಿ, ಭಾವಗೀತ ಪರಂಪರೆಯಾಗಿ ಪರಿಣಮಿಸಿದೆ. ನಾಗಚಂದ್ರನ ಶಕ್ತಿ, ದೌರ್ಬಲ್ಯ ಎರಡನ್ನೂ ಮುಖ್ಯವಾಗಿ ಈ ವರ್ಣನೆಗಳಲ್ಲೆ ಕಾಣಬೇಕಾಗಿದೆ. ಅಂತೂ ‘ಮಲ್ಲಿನಾಥ ಪುರಾಣ’ದ ಬಂಧ ಶಿಥಿಲವಾಗಿದ್ದು, ‘‘ನೂಲು ಸ್ವಲ್ಪ, ಮಗ್ಗ ದೊಡ್ಡದು, ವಸ್ತ್ರ ಜಾಳು ಜಾಳು’’ ಎಂಬ ಟೀಕೆಗೆ ಅವಕಾಶ ಮಾಡಿಕೊಟ್ಟಿದೆ.

ತಾನು ಈ ಕೃತಿಯನ್ನು ‘‘ಪ್ರಸಿದ್ಧ ಕವಿ ಪದ್ಧತಿಯಿಂ’’ ನಿರೂಪಿಸುವುದಾಗಿ ಕವಿಯೇ ಹೇಳಿಕೊಂಡಿರುವುದೂ ಗಮನಾರ್ಹ. ‘ಮಲ್ಲಿನಾಥ ಪುರಾಣ’ದಲ್ಲಿ ಬಹುತೇಕ ಸಂಪ್ರದಾಯಬದ್ಧತೆಯ ವಿಜೃಂಭಣೆಯನ್ನು ನೋಡುತ್ತೇವೆ. ಸ್ವೋಪಜ್ಞತೆಯ ಪರಿಮಾಣ ಕಡಿಮೆ. ತನ್ನ ಕೃತಿ ‘ಪುರಾಣ’ವಾಗಬೇಕೆಂಬ ವಿವಕ್ಷೆ ಕವಿಗಿದ್ದರೆ ಅದು ಅಕ್ಷೇಪಣೀಯವೇನೂ ಅಲ್ಲ. ಆದರೆ ‘‘ವೀತರಾಗನ ಚರಿತದೊಳಳವಡಿಸಿ ಸಕಲ ರಸಮಂ’’ ಕತೆ ಹೇಳಬೇಕೆಂಬ ಚಾಪಲ್ಯವನ್ನು ನಾವು ಮೆಚ್ಚುವಂತಿಲ್ಲ. ಈ ಸಂಕಲ್ಪದಿಂದಾಗಿ ಕಾವ್ಯದ ಪೂರ್ವಾರ್ಧದಲ್ಲಿ ಶೃಂಗಾರ-ಬಹಳ ಸಲ ಅನುಚಿತ ಶೃಂಗಾರ-ಮೇರೆ ಮೀರಿ ಬರುತ್ತದೆ.

ಭವಾವಳಿಯ ಗೊಂದಲಕ್ಕೆ ‘ಮಲ್ಲಿನಾಥ ಪುರಾಣ’ದಲ್ಲಿ ಆಸ್ಪದವಿಲ್ಲದಿರುವುದೊಂದು ವಿಶೇಷ. ಇಲ್ಲಿರತಕ್ಕವು ಎರಡೇ ಭವ; ಒಂದರಲ್ಲಿ ಭೋಗ, ಇನ್ನೊಂದರಲ್ಲಿ ಯೋಗ ಪ್ರತಿಪಾದಿತವಾಗಿದೆ. ಕೆಲವು ಶ್ರೇಷ್ಠವಾದ ವರ್ಣನೆಗಳೂ ಒಂದೆರಡು ಗಣ್ಯ ಪ್ರಸಂಗಗಳೂ ಈ ಕೃತಿಯಲ್ಲಿ ಎದುರಾಗುತ್ತವೆ.

ಲಕ್ಷ್ಮೀಮಹಾದೇವಿಯ ಪುತ್ರದೋಹದ ಪ್ರಸಂಗದ ಚಿತ್ರಣ ತಕ್ಕಮಟ್ಟಿಗೆ ಚಿತ್ತಸ್ಪರ್ಶಿಯಾಗಿದೆ. ಈ ಪದ್ಯ-ಲಕ್ಷ್ಮಿಯ ಆಳಲನ್ನು ಹೇಳುವಂಥದದು- ಮಾರ್ಮಿಕವಾದದ್ದು:

ಋತುಸಮಯಮೆನಗಿದಸ್ಪೃ
ಶ್ಯತೆಯಂ ಸಮನಿಸಲೆ ಹೇತುವಾದತ್ತಾದಂ
ಸುತಹೇತುವಾದುದಿಲ್ಲೆಂ
ದು ತನೂದರಿ ನೆನೆದು ನೆನೆದು ವಿಹ್ವಲೆಯಾದಳ್ (. ೮೯)

ಶೈಶ್ರವಣನ ವೈರಾಗ್ಯೋದಯದ ಪ್ರಕರಣ ಕವಿಪ್ರತಿಭೆಗೆ ಚೆನ್ನಾಗಿ ಕನ್ನಡಿ ಹಿಡಿಯುತ್ತದೆ. ವೈಶ್ರವಣ ಸಿಡಿಲಿಗೆ ಕೆಡೆದ ಆಲದ ಮರವೊಂದನ್ನು ನೋಡುತ್ತಾನೆ. ಅದರ ವರ್ಣನೆ ತುಂಬ ಪರಿಣಾಮಕಾರಿಯಾಗಿದೆ:

ಸಿಡಿಲೆಂಬ ಜವನ ಕೊಡಲಿಯ
ಕಡುವೊಯ್ಲಿಂ ನೆಗೆದ ಬೇರ್ಗಳೊಡನೆ ನೆಲಂ ಬಾ
ಯ್ವಿಡೆ ಬೆಟ್ಟು ಕೆಡೆವ ತೆರದಿಂ
ಕೆಡೆದಾಲಮನಿದಿರೊಳವನಿಪಾಲಂ ಕಂಡಂ (.೩೮)

ದೇಹದ ಮತ್ತು ಸಂಸಾರದ ಅನಿತ್ಯತೆ ವೈಶ್ರವಣನಿಗೆ ಮನದಟ್ಟಾಗುತ್ತದೆ. ಅದನ್ನು ಕವಿ ರೂಪಕಶ್ರೇಣಿಯ ಮೂಲಕ ಸಹೃದಯರಿಗೂ ಯಶಸ್ವಿಯಾಗಿ ಸಂವಹನಗೊಳಿಸುತ್ತಾನೆ:

ಯುವಸಪ್ತಚ್ಛದಮಂ ವಯಃ ಪರಿಣತ ಶ್ರೀಖಂಡಮಂ ಬಾಳಶಾ
ಳಿವನಶ್ರೇಣಿಗಳಂ ಪಡಲ್ವಡಿಸಿ ನಾನಾ ದೇಹಭೂಜಂಗಳಂ
ಕವಳಂಗೊಂಡು ಕಲಂಕಿದತ್ತು ಪಲವುಂ ಪಾತಾಳಕಾಸಾರಮಂ
ಭವಕಾಂತಾರದೊಳದ್ಭುತಂ ವಿಧಿಮದೋನ್ಮತ್ತೇಭವಿಕ್ರೀಡಿತಂ (.೫೪)

‘ಉತ್ತರ ಪುರಾಣ’ದಲ್ಲಿ ಈ ಪ್ರಸಂಗ ತುಸು ಭಿನ್ನವಾಗಿದೆ. ಅಲ್ಲಿ ವೈಶ್ರವಣ ಆಲದ ಮರದ ವೈಭವವನ್ನು ನೋಡಿ, ‘‘ಈ ಮರವು ನನ್ನನ್ನು ಅನುಸರಿಸುತ್ತದೆ’’ ಎಂದುಕೊಂಡು ಹೋಗುತ್ತಾನೆ; ಅವನು ಮರಳುವಷ್ಟರಲ್ಲಿ ಮರ ಉರುಳಿಬಿದ್ದಿರುತ್ತದೆ. ನಾಗಚಂದ್ರನ ಲ್ಲಾದರೊ ಮರದ ವೈಭವದ ಚಿತ್ರವಿಲ್ಲ; ಅದು ಉಡಿದುಬಿದ್ದಿರುವುದರ ಚಿತ್ರವಷ್ಟೆ ಇದೆ. ಆದ್ದರಿಂದ ಮೂಲದಲ್ಲಿ ವಿಸ್ಮಯದ ಆಘಾತಕ್ಕಿರುವ ಅವಕಾಶ ಇಲ್ಲಿಲ್ಲ.[4]

ವೈಶ್ರವಣ ವಿರಕ್ತನಾದ ಬಳಿಕ ಉಂಟಾದ ಪ್ರಭಾತದ ವರ್ಣನೆ ಉನ್ನತ ಮಟ್ಟದ್ದಾಗಿದ್ದು, ಅವನ ಬದಲಾದ ಮನಃಸ್ಥಿತಿಗೆ ಪ್ರತಿಮೆಯಾಗಿದೆ:

ಮೂಡಣ ಸಂಜೆ ಕೆಂದಳಿರ ಕಾವಣದಂತಿರೆ ಚಂದ್ರಮಂಡಳಂ
ಬಾಡಿದ ಮಾಧವೀ ಮಧುರ ಮಂಜರಿಯಂತಿರೆ ತಾರಕಾಳಿ ನೀ
ರೋಡಿ ಕೞಲ್ದು ಬೀಳ್ವ ಕಳಿವೂಗೆಣೆಯಾಗಿರೆ ತಣ್ಣನಪ್ಪೆಲರ್
ತೀಡೆ ತಪೋವನಂಬೊಲತಿ ಪಾವನಮಾಯ್ತು ನಭಂ ಪ್ರಭಾತದೊಳ್ (೧೦.೧೧)

ಶರತ್ಕಾಲದಲ್ಲಿ ತಲೆದೋರಿದ ಬಗೆಬಗೆಯ ಹಸುರುಗಳ ಈ ಚಿತ್ರ ನಾಗಚಂದ್ರನ ವರ್ಣ ಪ್ರಜ್ಞೆಗೆ, ಸೌಂದರ್ಯೋಪಾಸನೆಗೆ ನಿದರ್ಶನವಾಗಿದೆ:

ಕಳವೆಯ ಕೆಯ್ವೊಲಂಗಳ ಪಸುರ್ಪು ದಿಶಾಪಟಳಕ್ಕೆ ಪದ್ಮಿನೀ
ದಳದ ಪಸುರ್ಪು ಪೆರ್ಗೆಱೆಗೆ ತೞ್ತೆಳೆವುಲ್ಲ ಪಸುರ್ಪು ಶೈಳಮೇ
ಖಳೆಗೆ ಶುಕ ಪ್ರತಾನದ ಪಸುರ್ಪು ವಿಯದ್ವಳಯಕ್ಕೆ ಪಚ್ಚೆಯಂ
ವಿಳಸನಮನಿಕ್ಕಿದಂತೆಸೆಯೆ ಭೂಪತಿ ಮೆಚ್ಚಿ ಶರದ್ವಿಳಾಸಮಂ(. ೧೦೦)

‘ಮಲ್ಲಿನಾಥ ಪುರಾಣ’ದ ಕಾಮದಹನ ಪ್ರಸಂಗ ಕಾವ್ಯದ ಅತ್ಯುತ್ತಮ ಭಾಗವೆನ್ನಬೇಕು. ಸ್ವಾರಸ್ಯದ ಸಂಗತಿಯೆಂದರೆ, ಇದು ಮೂಲದಲ್ಲಿಲ್ಲ. ನಾಗಚಂದ್ರ ಇಲ್ಲಿ ಕಾಮದಹನದ ವೈದಿಕ ಕಥೆಗೆ ಜೈನಧರ್ಮೀಯವಾದ ತಿರುವು ಕೊಟ್ಟಿದ್ದಾನೆ. ಜಿನಮುನಿಯ ಮೇಲೆ ಬಾಣಪ್ರಯೋಗಕ್ಕೆಳಸಿದ ಮನ್ಮಥ ತನ್ನ ಕೋಪಾಗ್ನಿಯಿಂದಲೇ ಸುಟ್ಟುಹೋದನೆಂಬುದು ನಾಗಚಂದ್ರನ ಮಾರ್ಪಾಟು. ಈ ಪದ್ಯ ತುಂಬ ಕಸುವುಳ್ಳದ್ದು:

ಬಿದಿರೊಳ್ಪುಟ್ಟಿದ ಕಿಚ್ಚಿನಂತೆ ಸುಡೆ ತನ್ನಂ ತನ್ನ ಕೋಪಾನಳಂ
ಮದನಂ ಮುನ್ನಮೆ ಬೆಂದು ತನ್ಮುನಿಯ ಬೋಧಾಳೋಕ ಸೌಧಾಂಬುವಾ
ಹದಯಾ ವರ್ಷಣದಿಂ ಕ್ಷಣಂ ತಡೆದನೇ ತಣ್ಣೀರ್ಗಳಿಂ ಬೇವ ಸು
ಣ್ಣದ ಕಲ್ಲಂತಿರೆ ಬೆಂದನುಣ್ಮೆ ಸುರಪುಷ್ಪಾಸಾರ ಭೇರೀರವಂ (೧೪.೨೯)

ಇಲ್ಲಿ ಜೈನಧರ್ಮದ ಸಾರವಾದ ದಯೆ, ಅಹಿಂಸೆಗಳ ಅನುಸಂಧಾನವಿದೆ. ಆದರೆ ಮನ್ಮಥನನ್ನು ಮುನಿ ಸುಟ್ಟನೆಂದೇ ಮುಂದೆ ಕವಿ ಹೇಳುವುದರಿಂದ ಪೂರ್ವಾಪರ ವಿರೋಧ ಏರ್ಪಡುತ್ತದೆ. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟಂದ ಇಲ್ಲವಾಗಿದೆ. ಈ ಬಗೆಯ ಬಿರುಕು ನಾಗಚಂದ್ರನ ಸ್ವಭಾವದಲ್ಲೆ ಇದೆಯೆನ್ನಬೇಕು.

‘ಮಲ್ಲಿನಾಥ ಪುರಾಣ’ವೊಂದು ಮಹಾಕಾವ್ಯವಲ್ಲ; ‘ಮಹಾಪುರಾಣವೂ’ ಅಲ್ಲ. ಕವಿ ಪ್ರತಿಭೆಯ ಪೂರ್ಣಾವಿಷ್ಕಾರಕ್ಕೆ ಅದರಲ್ಲಿ ಅವಕಾಶ ಸಾಲದು. ಅದೊಂದು ಸತ್ಕೃತಿ.

‘ರಾಮಚಂದ್ರ ಚರಿತ ಪುರಾಣ’ (ಅಥವಾ ಪಂಪ ರಾಮಾಯಣ)ವೂ ಒಂದು ಪುರಾಣವೇ; ಆದರೆ ತೀರ್ಥಂಕರ ಚರಿತವಲ್ಲ. ಇದೊಂದು ಜೈನ ರಾಮಾಯಣ; ಇದರ ತುಂಬ ಜೈನ ವಾತಾವರಣ. ಇಲ್ಲಿ ರಾಮಲಕ್ಷ್ಮಣರು ಬಲದೇವ ವಾಸುದೇವರು; ರಾವಣ ಪ್ರತಿವಾಸುದೇವ.

ಕಥೆ, ಕ್ರಿಯೆ, ಪಾತ್ರ, ಸನ್ನಿವೇಶಗಳಿಂದ ಕಿಕ್ಕಿರಿದ ಕೃತಿ ಪಂಪರಾಮಾಯಣ. ‘ಮಲ್ಲಿನಾಥ ಪುರಾಣ’ದಲ್ಲಿ ಮೂಲವನ್ನು ಹಿಗ್ಗಲಿಸುವುದು ನಾಗಚಂದ್ರನ ಸಮಸ್ಯೆಯಾದರೆ ಇಲ್ಲಿ ಸಂಗ್ರಹಿಸುವುದು ಅವನ ತೊಡಕಾಗಿದೆ. ‘‘ಪಿರಿದೆನಿಸಿರ್ದ ರಾಮ ಕಥೆಯಂ ಕಿಱಿದಾಗಿರೆ’’ ಹೇಳುವುದು ಕವಿಯ ಉದ್ದೇಶ.

ಜೈನ ರಾಮಾಯಣದ ಪರಂಪರೆಯಲ್ಲಿ ಎರಡು ಶಾಖೆಗಳುಂಟು : ಒಂದು ವಿಮಲ ಸೂರಿಯದು, ಮತ್ತೊಂದು ಗುಣಭದ್ರನದು. ನಾಗಚಂದ್ರನ ಕೃತಿ ವಿಮಲಸೂರಿಯ ಸಂಪ್ರದಾಯವನ್ನು ಹಿಡಿದದ್ದು. ವಿಮಲಸೂರಿಯ ಪ್ರಾಕೃತ ಕೃತಿ ‘ಪಉಮ ಚರಿಯ’(ಪದ್ಮ ಚರಿತ). ಇದನ್ನೆ ಅನುಸರಿಸಿದೆ, ರವಿಷೇಣ ಸಂಸ್ಕೃತದಲ್ಲಿ ಬರೆದಿರುವ ‘ಪದ್ಮಪುರಾಣ’ ; ನಾಚಂದ್ರನಿಗೆ ನೇರವಾದ ಆಕರ ಯಾವುದು -ವಿಮಲಸೂರಿಯ ಕೃತಿಯೋ ಅಥವಾ ರವಿಷೇಣನ ಕೃತಿಯೋ-ಹೇಳುವುದು ಕಷ್ಟ. ಎರಡನ್ನೂ ಕವಿ ಬಳಸಿಕೊಂಡಿರಬೇಕು.

‘‘ಅಪೂರ್ವವೆನೆ ರಾಮಕಥೆಯನಭಿವರ್ಣಿಸುವೆಂ’’ ಎಂದು ಹೇಳಿಕೊಂಡಿದ್ದಾನೆ ನಾಗಚಂದ್ರ. ಯಾವುದು ಅವನ ಅಪೂರ್ವತೆ? ಅವನ ‘ರಾಮಚಂದ್ರ ಚರಿತ ಪುರಾಣ’ವೊಂದು ಜೈನ ರಾಮಾಯಣ; ಮಾತ್ರವಲ್ಲ, ಕನ್ನಡದ ಪ್ರಥಮ ಉಪಲಬ್ಧ ರಾಮಾಯಣ. ಇದು ಅದರ ಮೊದಲ ವೈಶಿಷ್ಟ್ಯ; ಇತರ ಅಪೂರ್ವಾಂಶಗಳೂ ಅದರಲ್ಲಿವೆ.

ಪಂಪರಾಮಾಯಣ ವಿಮಲಸೂರಿಯ ಅಥವಾ ರವಿಷೇಣನ ಕೃತಿಯ ಪಡಿಯಚ್ಚಲ್ಲ. ಇದರಲ್ಲಿ ನಾಗಚಂದ್ರನ ಪ್ರತಿಭೆಯ ಪ್ರದರ್ಶನಕ್ಕೆ ಸಾಕಷ್ಟು ಅವಕಾಶವುಂಟು. ಮೂಲದ ಗೊಂಡಾರಣ್ಯವನ್ನು ಉಪವನವನ್ನಾಗಿಸುವ ಕಠಿಣವಾದ ಕೆಲಸ ಅವನದಾಯಿತು, ಅದರಲ್ಲಿ ಅವನು ಗಣನೀಯವಾದ ಗೆಲವು ಗಳಿಸಿದ್ದಾನೆ. ಅವನ ಸಂಗ್ರಹಕೌಶಲ ಒಟ್ಟಿನ ಮೇಲೆ ಸ್ತುತ್ಯವಾದುದು. ಆದರೂ ಪುರಾಣದ ಅಂಶಗಳು ಪಂಪರಾಮಾಯಣದಲ್ಲಿ ಸಾಕಷ್ಟು ಉಳಿದಿವೆ. ಉಪದೇಶ ಸಾಮಗ್ರಿಗೂ ಕೊರತೆಯಿಲ್ಲ, ನಾಗಚಂದ್ರನ ನಿರ್ವಹಣೆಯಲ್ಲಿ. ಮೂಲವನ್ನು ಬೆಳಗಿರುವ ಪ್ರಕ್ರಿಯೆಯೂ ಉಂಟು; ಮೂಲದ ಸೌಂದರ್ಯವನ್ನು ಲೋಪಗೊಳಿಸಿರುವುದೂ ಉಂಟು. ಅಂತೂ ನಾಗಚಂದ್ರನಿಗೆ ಸಲ್ಲುವ ಕೀರ್ತಿಯ ಬಹುಭಾಗ ವಿಮಲಸೂರಿಗೊ ರವಿಷೇಣನಿಗೊ ಹೋಗಬೇಕಾಗುತ್ತದೆ; ಏಕೆಂದರೆ ಕಾವ್ಯದ ದರ್ಶನ ಮೂಲಕವಿಯದಷ್ಟೆ.

ವೈದಿಕ ರಾಮಾಯಣದ ಕತೆಗೂ ಪಂಪರಾಮಾಯಣದ ಕತೆಗೂ ಹಲವು ವ್ಯತ್ಯಾಸಗಳಿವೆ. ಪಂಪರಾಮಾಯಣದಲ್ಲಿ ಲಕ್ಷ್ಮಣನಿಗೇ ಪ್ರಾಧಾನ್ಯ; ಅವನೇ ರಾವಣನನ್ನು ಕೊಲ್ಲುವವನು. ರಾಮ ಇಲ್ಲಿ ಅಹಿಂಸಾವ್ರತಿ, ಸೀತೆ ಇಲ್ಲಿ ಅಯೋ ನಿಜೆಯಲ್ಲ. ರಾಮ ಏಕಪತ್ನೀವ್ರತನಲ್ಲ. ರಾಮಲಕ್ಷ್ಮಣರಿಗೆ ಅನೇಕ ಮದುವೆಗಳಾಗುತ್ತವೆ. ಆಂಜನೇಯ ಕೂಡ ಇಲ್ಲಿ ವಿವಾಹಿತ; ಅವನು ರಾವಣನ ತಂಗಿಯ ಅಳಿಯ. ಶಂಬುಕನ ವೃತ್ತಾಂತ ಪಂಪರಾಮಾಯಣದಲ್ಲಿ ವಿಭಿನ್ನ ರೀತಿಯಲ್ಲಿದೆ. ಕತೆಯ ಕಡೆಯಲ್ಲಿ ಸೀತೆ ಕಂತಿಯಾಗುತ್ತಾಳೆ.

ಪಂಪರಾಮಾಯಣದ ಪಾತ್ರಾವಳಿಯಲ್ಲಿ ಬಹು ಮುಖ್ಯವಾದುದು ರಾವಣ ಪಾತ್ರ. ಅದೊಂದು ಸ್ವಾರಸ್ಯಮಯ ಸೃಷ್ಟಿ; ‘ದುರಂತ ರಾವಣ’ ಎಂಬ ಖ್ಯಾತಿ ಪಡೆದಿರುವಂಥದು. ರಾವಣ ಮೂಲತಃ ಉದಾತ್ತ ವ್ಯಕ್ತಿ, ಪರಾಂಗನಾ ವಿರತಿವ್ರತಧಾರಿ. ಯಾವುದೋ ಒಂದು ಸಣ್ಣ ಆಕಸ್ಮಿಕ ದೌರ್ಬಲ್ಯದಿಂದ ಅವನು ಪತನಗೊಳ್ಳುತ್ತಾನೆ. ಆದರೆ ಅಂತ್ಯದಲ್ಲಿ ಅವನ ಮನಸ್ಸು ಪರಿವರ್ತಿತವಾಗುತ್ತದೆ. ಕ್ಷತ್ರಧರ್ಮಕ್ಕೊಪ್ಪುವಂತೆ ರಾಮನನ್ನು ರಣದಲ್ಲಿ ಹಿಡಿದುತಂದು ಸೀತೆಗೊಪ್ಪಿಸುತ್ತೇನೆ ಎಂಬ ಸಂಕಲ್ಪದಿಂದ ಅವನು ಹೊರಟು ರಾಮನಿಂದ ಹತನಾಗುತ್ತಾನೆ.

ಈ ರಾವಣನನ್ನು ದುರಂತಪಾತ್ರವೆಂದು ಕರೆಯುವುದು ಉಚಿತವಾಗದು. ಏಕೆಂದರೆ ಅವನು ಕಡೆಯಲ್ಲಿ ಪುನರುತ್ಥಾನಗೊಳ್ಳುತ್ತಾನೆ. ಮೂಲದಲ್ಲಿ ಕಂಡುಬರುವ ರಾವಣನ ಉದಾತ್ತತೆ ನಾಗಚಂದ್ರನಲ್ಲಿ ಏಕಪ್ರಕಾರವಾಗಿ ಪರಿಪೋಷಿತವಾಗಿಲ್ಲ ಎಂಬುದೊಂದು ಕೊರತೆ. ಒಮ್ಮೊಮ್ಮೆ ಕವಿಯೆ ಅವನನ್ನು ನಿಂದಿಸುತ್ತಾನೆ; ಅವನ ಪರಿವರ್ತನೆಯನ್ನು ಕುರಿತು ಶಂಕೆಯುಂಟಾಗುವಂತೆ ಬರೆಯುತ್ತಾನೆ. ಪರಿಣಾಮ ಸಮಗ್ರತೆಯ ಬಗೆಗೆ ನಾಗಚಂದ್ರ ಸಾಕಷ್ಟು ಎಚ್ಚರಿಕೆ ವಹಿಸುವುದಿಲ್ಲ ಎಂಬುದನ್ನು ಹಿಂದೆಯೆ ಗಮನಿಸಲಾಗಿದೆ. ‘‘ರಾವಣನ ಪಾತ್ರ ದುರಂತವೂ ಅಗದೆ ಮಂಗಳಾಂತವೂ ಆಗದೇ ವಿಚಿತ್ರಾಂತ್ಯವಾಗಿದೆಯೆಂದು ತೋರುತ್ತದೆ.’’[5] ,‘‘ದುರಂತವಾಗದೆ ಭಾವುಕತೆಯಾಗುತ್ತದೆ’’[6] ಎಂಬ ಅಭಿಪ್ರಾಯಗಳೂ ಉಂಟು.

ಇಲ್ಲಿ ಸೀತಾಪಹರಣ ಸನ್ನಿವೇಶವನ್ನು ತುಸು ನೋಡಬಹುದು. ಸೀತೆಯ ರೂಪವನ್ನು ನೋಡಿ ರಾವಣನ ಮನಸ್ಸು ಇದ್ದಕ್ಕಿದ್ದಂತೆ ಮುಗ್ಗರಿಸಿದ ಪರಿ ಇಂತು ಚಿತ್ರಿತವಾಗಿದೆ:

ಬಲೆ ದೃಷ್ಟಿಗೆ ವಜ್ರದ ಸಂ
ಕಲೆ ಹೃದಯಕ್ಕೆನಿಪ ರೂಪವತಿ ಜಾನಕಿ
ಣ್ಬೊಲದೊಳಿರೆ ಪದ್ಮಪತ್ರದ
ಜಲಬಿಂದುವಿನಂತೆ ಚಲಿತಮಾದುದು ಚಿತ್ತಂ (.೭೬)

‘‘(ಪದ್ಮ) ಪತ್ರದ ಮೇಲಿನ ಜಲಬಿಂದುವಿನ ಚಲಿಸುವಿಕೆ ಸಾವಕಾಶವಾಗಿ ನಿರಂತರವಾಗಿ ಅಗುವಂಥದಲ್ಲ. ಒಂದು ಕ್ಷಣದಲ್ಲಿ ಪಳಕ್ಕನೆ ಜಾರುವಂಥದು. ರಾವಣನ ಚಿತ್ತದ ಚಲಿಸುವಿಕೆಗೆ ಇದು ಶಕ್ತ ಹೋಲಿಕೆ’’.[7] ಇದು ಸೀತೆಯ ಚೆಲುವಿನ ವರ್ಣನೆ:

ಹಾರಮರೀಚಿಮಂಜರಿ ಸುಧಾರಸಧಾರೆ ಸುಧಾಂಶುಲೇಖೆ
ರ್ಪೂರ ಶಲಾಕೆ ನೇತ್ರಸುಖದಾಯಕಮೀ ದೊರೆತಲ್ಲವೀಕೆ ಶೃಂ
ಗಾರ ಸಮುದ್ರಮಂ ಕಡೆಯೆ ಹೃದ್ಭವನುದ್ಭವೆಯಾದಳೆಂದು
ಣ್ಣಾರೆ ದಶಾಸ್ಯನೀಕ್ಷಿಸಿದನೀಕ್ಷಿಸಿ ಕಣ್ಣಱಿದಾರೆ ಮನ್ಮಥಂ (.೮೨)

ರಾವಣನಂಥವನೂ ಜಾರಿದ್ದನ್ನು ಕುರಿತು ಕವಿ ಉದ್ಗರಿಸುತ್ತಾನೆ : ‘‘ಅಬ್ಧಿಯು ಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ?’’ ಅವಲೋಕಿನೀ ವಿದ್ಯೆ ರಾವಣನಿಗೆ ವಿವೇಕ ಹೇಳುತ್ತದೆ : ‘‘ಮುನ್ನೀರ್ ಬೆನ್ನೀರೆನೆ ಬೆರಸಲಣ್ಣ ತಣ್ಣೀರೊಳವೇ?’’ ಇವೆರಡೂ ಅತ್ಯಂತ ಧ್ವನಿಪೂರ್ಣವಾದ ಉಕ್ತಿಗಳು. ಮೇರೆ ಮೀರಿದ ಸಮುದ್ರ ಪ್ರಳಯಕಾರಿಯಾಗುತ್ತದೆ; ಅದು ತಾನಾಗಿಯೆ ಹಿಂದೆಗೆಯಬೇಕು. ಸಮುದ್ರವೆ ಬಿಸಿನೀರಾದರೆ ಅದಕ್ಕೆ ತಣ್ಣೀರನ್ನು ತರುವುದೆಲ್ಲಿಂದ? ಅದೇ ಕ್ರಮೇಣ ಆರಿಹೋಗಬೇಕು. ರಾವಣಚೇತನ ತಾತ್ಕಾಲಿಕವಾಗಿ ಉಚ್ಛೃಂಖಲವಾದರೂ, ಕ್ರಮೇಣ ಸ್ವಸ್ವರೂಪಕ್ಕೆ ಮರಳುತ್ತದೆ.

ರಾವಣನಿಂದ ಅಪಹೃತಳಾದ ಸೀತೆಯ ಅವಸ್ಥೆಯ ದಾರುಣ್ಯತೆಯನ್ನು, ಅಂತೆಯೇ ಅವರ ರಾಮನಿಷ್ಠೆಯನ್ನು ಈ ಪದ್ಯ ಸೊಗಸಾಗಿ ಅರುಹುತ್ತದೆ.

ಬಲೆಗೊಳಗಾದ ಸೋಗೆ ನವಿಲಂತೆ ಭಯಾಕುಲೆ ತನ್ನ ಚಿತ್ತದೊಳ್
ನೆಲಸಿದ ರಾಮನಂ ಬಯಸಿ ನೋಡಲಪೇಕ್ಷಿಸಿ ಬಾಹ್ಯದರ್ಶನ
ಕ್ಕಲಸಿದಳೆಂಬಿನಂ ಮುಗಿಯೆ ಕಣ್ಮಲರ್ಗಳ್ ನಸುಮುಚ್ಚೆವೋಗಿ
ಣ್ಣೆಲರಲೆಪಿಂದೆ ಮೂರ್ಛೆದಿಳಿದಳ್ ಮಗುಳ್ದುಂ ಪೊರಪೊಣ್ಮೆ ಹಾ ರವಂ (.೧೦೧)

ಸೀತೆಯನ್ನು ಕಳೆದುಕೊಂಡ ರಾಮನ ಅಳಲನ್ನು ಚಿತ್ರಿಸುವ ಈ ಪದ್ಯ ಕರುಣಪೂರ್ಣವಾಗಿದ್ದು, ರಸೋಚಿತ ಛಂದೋವಿನ್ಯಾಸವನ್ನು ತಳೆದಿದೆ:

ಕಳಹಂಸಾಲಸಯಾನೆಯಂ ಮೃಗಮದಾಮೋದಾಸ್ಯನಿಶ್ವಾಸೆಯಂ
ತಳಿರೇ ತಾವರೆಯೇ ಮದಾಳಿಕುಲಮೇ ಕರ್ನೆಯ್ದಿಲೇ ಮತ್ತಕೋ
ಕಿಳಮೇ ಕಂಡಿರೆ ಪಲ್ಲವಾಧರೆಯನಂಭೋಜಾಸ್ಯೆಯಂ ಭೃಂಗಕುಂ
ತಳೆಯಂ ಕೈರವನೇತ್ರೆಯಂ ಪಿಕರವಪ್ರಖ್ಯಾತೆಯಂ ಸೀತೆಯಂ (.೧೧೮)

ರಾವಣನ ಮಾನಸಪರಿವರ್ತನೆಯ ಚಿತ್ರವಿದು:

ಕದಡಿದ ಸಲಿಲಂ ತಿಳಿವಂ
ದದೆ ತನ್ನಿಂ ತಾನೆ ತಿಳಿದ ದಶವದನಂಗಾ
ದುದು ವೈರಾಗ್ಯಂ ಸೀತೆಯೊ
ಳುದಾತ್ತನೊಳ್ ಪುಟ್ಟದಲ್ತೆ ನೀಲೀರಾಗಂ (೧೪೧೧೨)

ಇಲ್ಲಿ ಬಂದಿರುವ ಉಪಮಾನವನ್ನು ಕುರಿತು ಒಂದು ವಿಮರ್ಶೋಕ್ತಿ ಹೀಗಿದೆ : ‘‘ನೀರು ತಿಳಿಯಾಗುವ ಪ್ರಕ್ರಿಯೆಯಲ್ಲಿ ರಾಡಿ ನೀರಿನಿಂದಾಚೆಗೆ ಹೋಗದೆ ನೀರಿನ ಕೆಳಭಾಗಕ್ಕೆ ಹೋಗಿ ಶೇಖರವಾಗುತ್ತದೆ ಎಂಬುದನ್ನು ನೆನೆದರೆ ರಾವಣನಲ್ಲಾದ ಪರಿವರ್ತನೆ ಆಮೂಲಾಗ್ರವಾದದ್ದೇನಲ್ಲ ಎನ್ನಬೇಕಾಗುತ್ತದೆ.’’[8] ಇದು ಅತಿ ಬುದ್ದಿವಂತಿಕೆಯ ಮಾತಾಗಿ ತೋರುತ್ತದೆ. ತಳದಲ್ಲಿ ರಾಡಿಯಿಲ್ಲದ ಮನಸ್ಸು ಯಾವುದಾದರೂ ಉಂಟೆ? ಸ್ಥಾಯಿಭಾವಗಳು ಯಾರಲ್ಲಿಲ್ಲ?

ನಾಗಚಂದ್ರನ ಶೈಲಿಯಲ್ಲಿ ಸರಳತೆ, ಮಾರ್ದವ, ಗೇಯತೆಗಳಿವೆ. ಅದರಲ್ಲಿ ಕ್ಲಿಷ್ಟತೆ ಇಲ್ಲವೆಂದಲ್ಲ; ಆದರೆ ವಿರಳ. ನಾಗಚಂದ್ರನದು ಸೌಮ್ಯ ಶಿಷ್ಟ ಶೀಲ; ಶೀಲದಂತೆ ಶೈಲಿ. ಆದರೆ ಅದು ಮೃದು ಲಲಿತಭಾವಗಳ ವ್ಯಂಜನೆಗೆ ಉಚಿತವಾಗುವಂತೆ, ವೀರರೌದ್ರಗಳ ಅಭಿವ್ಯಕ್ತಿಗೆ ಸಮರ್ಥವಾಗುವುದಿಲ್ಲ ಎಂಬುದನ್ನು ನೆನಪಿಡಬೇಕು. ತನ್ನ ಶೈಲಿಯನ್ನು ನಾಗಚಂದ್ರನೆ ಹೀಗೆ ಸಮರ್ಪಕವಾಗಿ ಬಣ್ಣಿಸಿಕೊಂಡಿದ್ದಾನೆ:

ಪದರಚನೆ ಸಜ್ಜನಶ್ರವ
ಣದೊಳಂಚೆಯ ತುಪ್ಪುೞಂಚೆಯಂ ತೀವಿದವೊಲ್
ಮೃದುವೆನೆ ಪೊಸ ಬಗೆ ರಸಭಾ
ವದೊಳೋಕುಳಿಯಾಡುವಂತೆ ಪೇೞ್ದನಭಿನವಪಂಪಂ (.ಪು..೪೨)

ಅರ್ಥಾಂತರನ್ಯಾಸಗಳ ಬಳಕೆಯಲ್ಲಿ ನಾಗಚಂದ್ರ ಎತ್ತಿದ ಕೈ. ಆದರೆ ಅವನ ಅರ್ಥಾಂತರ ನ್ಯಾಸಗಳೆಲ್ಲ ಒಂದೇ ಮಟ್ಟದವಲ್ಲ; ಕೆಲವು ಉಜ್ವಲವಾಗಿದ್ದರೆ, ಕೆಲವು ಪೇಲವ. ಈ ಹೇಳಿಕೆಯನ್ನು ಗಮನಿಸಬಹುದು: ‘‘ಕೆಲವೆಡೆ ಸಂದರ್ಭೋಚಿತವಾದ ಬಳಕೆಯಲ್ಲಿ ಕವಿಯ ಜಾಣ್ಮೆ, ಔಚಿತ್ಯಪ್ರಜ್ಞೆ ಇದೆ. ನಾಗಚಂದ್ರ ಆಪಾರವಾಗಿ ಈ ಅರ್ಥಾಂತರ ನ್ಯಾಸಗಳನ್ನು ಬಳಸುವುದರಿಂದ ತನ್ನ ಕಾವ್ಯದ ಪರಿಣಾಮವನ್ನು ತಾನಾಗಿಯೆ ಕೆಡಿಸಿದ್ದಾನೆ. ಅನೇಕ ಸಂದರ್ಭಗಳಲ್ಲಿ ಸಂದರ್ಭದ ಸಂಕೀರ್ಣತೆಯನ್ನೇ ಕೆಡಿಸಿ ಎಲ್ಲ ಪ್ರಶ್ನೆಗಳಿಗೂ ಒಂದು ಸಾಮಾನ್ಯ ಉತ್ತರವನ್ನು ಈ ಅರ್ಥಾಂತರನ್ಯಾಸದ ಮೂಲಕ ಸೂಚಿಸಿ ತೃಪ್ತನಾಗುವುದುಂಟು.’’[9]

‘ಮಲ್ಲಿನಾಥಪುರಾಣ’ಕ್ಕಿಂತ ‘ರಾಮಚಂದ್ರ ಚರಿತ ಪುರಾಣ’ ಎತ್ತರದ ಕಾವ್ಯ. ‘‘ಮಲ್ಲಿನಾಥ ಪುರಾಣವು ಹತ್ತೆಂಟು ಎಸಳಿನ ಹೂವು ಅರಳಿದಂತೆ. ರಾಮಚಂದ್ರಚರಿತ ಪುರಾಣವು ಸಾವಿರ ಕಂಬದ ಬಸ್ತಿಯನ್ನು ಕಟ್ಟಿದಂತೆ’’ ಎಂಬ ಬೇಂದ್ರೆಯವರ ಕಾವ್ಯಾತ್ಮಕ ಉಕ್ತಿ ಸರಿಯಾಗಿದೆ.

ತನ್ನನ್ನು ಅಭಿನವಪಂಪ ಎಂದು ಕರೆದುಕೊಂಡ ನಾಗಚಂದ್ರ ಆದಿಪಂಪನ ಸತ್ತ್ವವುಳ್ಳವನೇನಲ್ಲ; ಆದರೆ ಅವನು ತನ್ನತನವುಳ್ಳ ಉತ್ತಮಕವಿ ಎಂಬುದರಲ್ಲಿ ಅನುಮಾನವಿಲ್ಲ.

[1] ನೋಡಿ : ವಿಜಯಾ ದಬ್ಬೆ, ‘ನಾಗಚಂದ್ರ : ಒಂದು ಅಧ್ಯಯನ’, ಪು.೩-೧೭

[2] ವೀರಶೈವ ಧರ್ಮ ಹನ್ನೊಂದನೆಯ ಶತಮಾನದಲ್ಲೆ ಉದಿಸಿ ವರ್ಧಿಸುತ್ತಿತ್ತೆಂಬುದನ್ನು ನೆನೆಯಬೇಕು.

[3] ನಾಗಚಂದ್ರನಿಗಿದ್ದುದು ವೀರಶೈವದ ಹಿನ್ನೆಲೆಯಲ್ಲ, ಶೈವಧರ್ಮದ ಹಿನ್ನೆಲೆ ಎಂದು ವಿಜಯಾದಬ್ಬೆ ಅವರ ಅಭಿಮತ(ಪೂರ್ವೋಕ್ತ ಗ್ರಂಥ). ಇದನ್ನೊಪ್ಪುವುದು ಕಷ್ಟ. ಶೈವ ಧರ್ಮಕ್ಕೂ ಜೈನಧರ್ಮಕ್ಕೂ ಘರ್ಷಣೆ ಬಹುಶಃ ಎಂದೂ ಸಂಭವಿಸಲಿಲ್ಲ. ಜೈನಧರ್ಮಕ್ಕೆ ನಿಜವಾದ ಪ್ರತಿಸ್ಪರ್ಧಿಯಾದುದು ವೀರಶೈವ ಧರ್ಮ.

[4] ಮೂಲದಲ್ಲಿ ವೈಶ್ರವಣ ಹೋದ ದಾರಿಯಲ್ಲೆ ಮರಳುತ್ತಾನೆ; ನಾಗಚಂದ್ರನಾದರೊ ಅವನನ್ನು ಬೇರೆ ದಾರಿಯಲ್ಲಿ ಮರಳಿಸಿದ್ದಾನೆ. ಆದ್ದರಿಂದ ವ್ಯತ್ಯಾಸಕ್ಕೆ ಕಾರಣವಿದೆ. ಆದರೂ ಮೂಲದ ನಿರೂಪಣೆಯಲ್ಲಿ ಸೊಗಸು ಹೆಚ್ಚು.

[5] ವಿಜಯಾದಬ್ಬೆ, ಪೂರ್ವೋಕ್ತ, ಪು.೧೯೩

[6] ಚಂದ್ರಶೇಖರ ಕಂಬಾರ, ಉದ್ಧೃತ, ಅಲ್ಲೆ.

[7] ವಿಜಯಾದಬ್ಬೆ, ಅದೇ, ಪು.೧೪೨

[8] ಅದೇ, ಪು.೧೫೧

[9] ಅದೇ, ಪು.೨೯೭-೮