ವಚನ ಸಾಹಿತ್ಯ ಮೌಲ್ಯಗಳ ಒಂದು ಸಂಕೀರ್ಣ; ಅದು ಹಲವಾರು ಶ್ರೇಯಸ್ಕರ ಮೌಲ್ಯಗಳನ್ನು ಗರ್ಭೀಕರಿಸಿಕೊಂಡಿದೆ ಮಾತ್ರವಲ್ಲ, ತನಗೆ ತಾನೆ ಒಂದು ಮಹತ್ವದ ಮೌಲ್ಯವಾಗಿದೆ. ಈ ಮೌಲ್ಯ ಸಮುಚ್ಚಯದ ಅನುಸಂಧಾನ ಇಂದಿಗೂ ಅತ್ಯಂತ ಪ್ರಸ್ತುತ ಮತ್ತು ಪ್ರಯೋಜನಕರ.

ಹನ್ನೆರಡನೆಯ ಶತಮಾನದಲ್ಲಿ ಸಂಘಟಿಸಿದ ಶರಣಕ್ರಾಂತಿಯ ಮಾಧ್ಯಮವೂ ಹೌದು, ಫಲವೂ ಹೌದು ವಚನ ವಾಙ್ಮಯ. ಆದ್ದರಿಂದ ವಚನ ವಿವೇಚನೆಯೆಂದರೆ ಶರಣರ ಪರಿಕಲ್ಪನೆಯ ಬದುಕಿನ ವಿವೇಚನೆಯೆ ಸರಿ. ಸಾಹಿತ್ಯ ಪ್ರಜ್ಞೆಯಲ್ಲ, ಜೀವನ ಪ್ರಜ್ಞೆ – ಅದರಲ್ಲೂ ಸಮಷ್ಟಿ ಜೀವನದ ಪ್ರಜ್ಞೆ-ವಚನ ಸಮುದಾಯದ ಮೂಲ ಪ್ರೇರಣೆಯಾಗಿದೆ. ಶಬ್ದಾರ್ಥಗಳ ಸಂಯೋಗ ಎಂಬ ನಿಷ್ಪತ್ತಿಯಷ್ಟೇ ಅಲ್ಲದೆ, ಸಹಿತ- ಎಂದರೆ ಹಿತದಿಂದ ಕೂಡಿದ್ದು -ಎಂಬ ನಿಷ್ಪತ್ತಿಯೂ ನಿಲ್ಲುತ್ತದೆ, ವಚನ ಸಾಹಿತ್ಯ ಸಂದರ್ಭದಲ್ಲಿ.

ನಾವು ನೆನಪಿಡಬೇಕು, ಅಂದು ನಡೆದದ್ದು ಕೇವಲ ಒಂದು ಸುಧಾರಣೆಯಲ್ಲ, ಚಳವಳಿಯಲ್ಲ, ಒಂದು ಕ್ರಾಂತಿ ಎಂಬುದನ್ನು. ಶರಣರು ತಮ್ಮ ಕಾಲಕ್ಕಿಂತ ಮುಂದೆ ಹೋಗಿ ಆಲೋಚಿಸಿದ್ದರಿಂದ ಮತ್ತು ಅನುಷ್ಠಾನಕ್ಕೂ ಇಳಿಸಿದ್ದರಿಂದ, ಅದಕ್ಕೆಲ್ಲ ಆ ಯುಗ ಇನ್ನೂ ಪಕ್ವವಾಗಿಲ್ಲದ್ದರಿಂದ ಆ ಕ್ರಾಂತಿಯ ಯಶಸ್ಸು ಅಲ್ಪಾವಧಿಯದಾಗುವುದು ಅನಿವಾರ್ಯವಾಯಿತು. ಆದರೆ ಈ ಹೊತ್ತು ನಾವು ಶರಣರ ವಿಚಾರಧಾರೆಯನ್ನು ಕಡೆಯಪಕ್ಷ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದೇವೆ. ಹಾಗೆ ನೋಡಿದರೆ, ಅವರು ಇಂದಿಗೂ ಮುಂದಿದ್ದಾರೆ ಎನಿಸದಿರದು.

ಒಂದು ಕಡೆ ಪುರೋಹಿತಶಾಹಿಯನ್ನು ಪ್ರತಿಭಟಿಸಿ, ಇನ್ನೊಂದು ಕಡೆ ರಾಜಶಾಹಿಯನ್ನು ಧಿಕ್ಕರಿಸಿ, ಅನಿಷ್ಟ ಜಡ ವ್ಯವಸ್ಥೆಯನ್ನು ಛಿದ್ರಗೊಳಿಸುವ, ತನ್ಮೂಲಕ ಜನಶೋಷಣೆಯ ಸರ್ವ ಪ್ರಕಾರಗಳಿಗೂ ಪೂರ್ಣ ವಿರಾಮ ಹಾಕಿ ಸಕಲ ಜೀವಾತ್ಮರ ಲೇಸನ್ನು, ಸರ್ವೋದಯವನ್ನು ಸಾಧಿಸುವ ಆಶಯ ವಚನಕಾರರದಾಗಿತ್ತು. ಸಮಾನತೆಯ ಅಡಿಪಾಯದ ಮೇಲೆ ನಿಂತ ನವಸಮಾಜವೊಂದರ ನಿರ್ಮಾಣ ಅವರ ಗುರಿಯಾಗಿತ್ತು; ಒಂದು ತೆರನಾದ ಪ್ರಜಾಪ್ರಭುತ್ವದ ಸ್ಥಾಪನೆ ಆ ಜನಪರ ಆಂದೋಲನದ ಧ್ಯೇಯವಾಗಿತ್ತು. ‘ತಮಂಧಘನ’ವಾಗಿದ್ದ ಸಮಾಜಕ್ಕೆ ‘ಶಿವನ ಪ್ರಕಾಶ’ವನ್ನು ಹಾಯಿಸುವ ಕಾಯಕವನ್ನು ಕೈಗೊಂಡರು, ಶರಣರು.

‘‘ಆನು ಒಲಿದಂತೆ ಹಾಡುವೆ’’ ಎಂಬ ಬಸವಣ್ಣನವರ ಮಾತು ವಚನ ವೈಶಿಷ್ಟ್ಯವನ್ನು ಸೂಚಿಸುವುದಷ್ಟೆ ಅಲ್ಲದೆ, ಸಂಪ್ರದಾಯ ವಿರೋಧಿ ಧೋರಣೆಯನ್ನು ಸಮರ್ಥವಾಗಿ ಸಂಕೇತಿಸುತ್ತದೆ. ವೇದ ಶಾಸ್ತ್ರಾಗಮನಿಷ್ಠವಾದ ಪುರೋಹಿತ ಶಾಹಿಯನ್ನು ಶರಣರು ನೇರವಾಗಿಯೇ ಖಂಡಿಸಿ ನಿರಾಕರಿಸಿದರು. ಆದರೆ ಅವರ ರಾಜತ್ವನಿರಾಕಾರಣ ಅಷ್ಟು ಪ್ರಖರವಾಗಿರದೆ, ಪರೋಕ್ಷವಾದದ್ದು. ರಾಜಪ್ರಭುತ್ವ ಪ್ರೋತ್ಸಾಹಿಸುವ ಎಲ್ಲ ಮೌಲ್ಯಗಳನ್ನು ಅಥವಾ ಅಪಮೌಲ್ಯಗಳನ್ನು ಶರಣರು ಅಲ್ಲಗಳೆದರೆಂಬುದನ್ನು ಗಮನಿಸಬೇಕು. ‘‘ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೇ?’’ ಎಂಬ ಆಯ್ದಕ್ಕಿ ಲಕ್ಕಮ್ಮನ ಉಕ್ತಿಯಲ್ಲಿ, ‘‘ಬಿಜ್ಜಳನ ಭಂಡಾರ ಎಮಗೇಕಯ್ಯ?’’ ಎಂಬ ಬಸವಣ್ಣನವರ ಉಕ್ತಿಯಲ್ಲಿ ರಾಜತ್ವವಿರೋಧಿ ನಿಲುವು ಇಂಗಿತವಾಗಿದೆ. ಶರಣರಾದರೊ ‘ನಿರಾಶಾ ಮಹಾತ್ಮ’ರು. ಕಲ್ಯಾಣದ ಕ್ರಾಂತಿ ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನಗೊಂಡಿತೆಂದು ಹೇಳುತ್ತಾರೆ. ಅದು ಎಷ್ಟರಮಟ್ಟಿಗೆ ಐತಿಹಾಸಿಕ ಸತ್ಯವೋ, ಆ ಕೊಲೆಗೆ ಯಾರು ಕಾರಣರೋ ಖಚಿತವಾಗಿ ತಿಳಿಯದು. ಆದರೆ ರಾಜಶಾಹಿಯ ನಿರಾಕಾರಣ, ನಿರಸನಗಳಿಗೆ ಅದೊಂದು ಸಂಕೇತವೆಂದು ಭಾವಿಸಬಹುದು.

ಕಲ್ಯಾಣದ ಸಂಕ್ರಾಂತಿ ನಮಗೆ ಸ್ವಲ್ಪ ಮಟ್ಟಿಗೆ ಈಚಿನ ಫ್ರೆಂಚ್ ಮಹಾಕ್ರಾಂತಿಯನ್ನು ನೆನಪಿಸುತ್ತದೆ. ಫ್ರಾನ್ಸಿನ ಕ್ರಾಂತಿ ಕೇವಲ ರಾಜಕೀಯವಾದುದಲ್ಲ, ಮೂಲತಃ ಅದು ಬೌದ್ದಿಕವಾಗಿದ್ದು, ಸ್ಥಗಿತ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ವಿರುದ್ಧ ನಡೆದದ್ದು ಎಂದು ಚರಿತ್ರಕಾರರು ಹೇಳುತ್ತಾರೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ (Liberty, Equality, Fratarnity)ಗಳು ಅದರ ಮಾರ್ಗದರ್ಶಕ ಸೂತ್ರಗಳಾಗಿದ್ದುವು. ವೀರಶೈವ ಕ್ರಾಂತಿಯ ಸ್ವರೂಪವೂ ಇಂಥದೇ. ಮೂಲಭೂತವಾಗಿ ಅದು ವೈಚಾರಿಕವಾದುದು.

ಒಂದು ದೃಷ್ಟಿಯಿಂದ ವಚನಕಾರರ ಕ್ರಾಂತಿಗೆ ಸದೃಶವಾದದ್ದು ಪ್ರಾಯಶಃ ಜಗತ್ತಿನ ಇತಿಹಾಸದಲ್ಲಿ ಇನ್ನೊಂದು ಕಂಡುಬರುವುದಿಲ್ಲ ಎಂದರೆ ಉತ್ಪ್ರೇಕ್ಷೆಯಾಗಲಾರದು. ವಚನ ಕಾರರು ಸಾರತಃ ಅಧ್ಯಾತ್ಮಜೀವಿಗಳು; ಅವರ ಆಂದೋಲನ ಪ್ರಧಾನವಾಗಿ ಧಾರ್ಮಿಕವಾದದ್ದು. ಆದರೆ ಅದು ಅಪ್ರತ್ಯಕ್ಷವೆಂಬಂತೆ ಸಾಮಾಜಿಕ, ಆರ್ಥಿಕ ಆಯಾಮಗಳನ್ನೂ ಮೈಗೂಡಿಸಿಕೊಂಡಿದೆಯೆಂಬುದು ಅದರ ಅನನ್ಯತೆ. ಎಂತಲೇ ಅದು ಬಹುಮುಖ ಕ್ರಾಂತಿ, ಸಮಗ್ರಕ್ರಾಂತಿ.

ಶರಣರು ಇಹ ಪರಗಳನ್ನು, ಲೌಕಿಕ ಪಾರಲೌಕಿಕಗಳನ್ನು ಬೇರೆ ಬೇರೆ ಘಟಕಗಳನ್ನಾಗಿ ಬಗೆಯಲಿಲ್ಲ, ಎರಡನ್ನೂ ಏಕಾಖಂಡವಾಗಿ ತೆಗೆದುಕೊಂಡರು ಎಂಬುದು ಮುಖ್ಯ. ಸ್ವರ್ಗ ಮರ್ತ್ಯಗಳು ಬೇರೆ ಬೇರೆ ಎಂಬ ನಂಬಿಕೆಯೇ ಎಲ್ಲ ಅನರ್ಥ, ಅನಾಚಾರಗಳ ಬೇರು. ಶರಣರಲ್ಲಿ ಅದಕ್ಕೆ ಅವಕಾಶವಿಲ್ಲ. ‘‘ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿ ಭೋ’’ ಎಂದು ಘೋಷಿಸುತ್ತಾರೆ, ಬಸವಣ್ಣ. ‘‘ಆಚಾರವೇ ಸ್ವರ್ಗ, ಅನಾಚಾರವೇ ನರಕ’’ ಇತ್ಯಾದಿಯಾಗಿ ಪುನರ್ ಮೌಲ್ಯಮಾಪನ ಮಾಡುತ್ತಾರೆ. ಈ ನೆಲದ ಮೇಲೆಯೆ ಸ್ವರ್ಗವನ್ನು ಅರಳಿಸುವುದು, ಮರ್ತ್ಯವನ್ನು ಕೈಲಾಸವನ್ನಾಗಿಸುವುದು ಶರಣರ ಆದರ್ಶವಾಗಿತ್ತು. ಸ್ವರ್ಗವೆಂಬುದು ಎಲ್ಲೋ ಇದೆ ಎಂದು ನಂಬಿದರೂ, ಅದರ ಕೀಲಿಕೈ ಮರ್ತ್ಯದಲ್ಲಿದೆಯೆಂಬುದನ್ನು ಮರೆಯಬಾರದು. ಸ್ವರ್ಗ ಪ್ರವೇಶದ ಅರ್ಹತೆಯನ್ನು ಭೂಮಿಯಲ್ಲೆ ಸಂಪಾದಿಸಬೇಕು. ‘‘ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು’’. ವಚನಕಾರರ ದೃಷ್ಟಿಯಲ್ಲಿ ಮುಕ್ತಿ ಎಂಬುದು ಸತ್ತು ಪಡೆಯತಕ್ಕದ್ದಲ್ಲ, ಬದುಕಿರುವಾಗಲೆ ಗಳಿಸಬೇಕಾದದ್ದು. ಅದು ಅಂಧಶ್ರದ್ಧೆ ಕಂದಾಚಾರಗಳಿಂದ ಬಿಡುಗಡೆ, ಶೋಷಣೆಯಿಂದ ಬಿಡುಗಡೆ, ಬಡತನದಿಂದ ಬಿಡುಗಡೆ ಮತ್ತು ಸಾಮಾಜಿಕ ಅಶಿವದಿಂದ ಎಂತೋ ಅಂತೆ ಮಾನಸಿಕ ಅಶಿವದಿಂದ ಬಿಡುಗಡೆ. ಅವರ ದೃಷ್ಟಿ ಆಶ್ಚರ್ಯಕರವಾಗಿ ವೈಜ್ಞಾನಿಕವಾದದ್ದು. ಶುದ್ಧ ಅಧ್ಯಾತ್ಮಕ್ಕೂ ವೈಜ್ಞಾನಿಕತೆಗೂ ವಿರೋಧವಿಲ್ಲ.

ವಚನಕಾರರ ಆಧ್ಯಾತ್ಮಿಕ ಅಭೀಪ್ಸೆ ಎಷ್ಟು ತೀವ್ರವಾದುದೊ ಅಷ್ಟೇ ಪ್ರಗಾಢವಾದುದು ಅವರ ಸಾಮಾಜಿಕ ಪ್ರಜ್ಞೆ; ಅದಕ್ಕೂ ಬೆನ್ನೆಲುಬಾಗಿರತಕ್ಕದ್ದು ಅವರ ಅತೀವ ಮಾನವೀಯ ಧೋರಣೆ ಮತ್ತು ಜೀವ ಪ್ರೇಮ. ಅವರು ಎಲ್ಲವನ್ನೂ ಆಧ್ಯಾತ್ಮೀಕರಿಸಿದರು, ಆದರೆ ಏನೊಂದನ್ನೂ ಅಮಾನವೀಯಗೊಳಿಸಲಿಲ್ಲ. ಸಾಮಾನ್ಯ ಮನುಷ್ಯ ಶರಣರ ಲಕ್ಷ್ಯ; ಅವನ ಉದ್ಧಾರದ ಬಗ್ಗೆ ಅವರ ಕಳಕಳಿ. ವಾಸ್ತವವಾಗಿ, ವೀರಶೈವ ಧರ್ಮ ದೇವರನ್ನು ನೆಮ್ಮಿಯೂ ಮಾನವ ಕೇಂದ್ರಿತವಾದ ಧರ್ಮ, ಮಾನವೀಯ ಧರ್ಮ. ಹಾಗಲ್ಲದೆ, ಧರ್ಮ ದೈವಕೇಂದ್ರಿತವಾದಾಗಲೇ ಎಲ್ಲ ಕೆಡುಕುಗಳು ತಲೆಯೆತ್ತುವುದು, ಶೋಷಣೆಗೆ ಆಸ್ಪದವಾಗುವುದು, ಯಜ್ಞಯಾಗಾದಿ ಕರ್ಮಕಾಂಡ ವಿಜೃಂಭಿಸುವುದು. ಶರಣರು ಶ್ರೀ ಸಾಮಾನ್ಯನ ಘನತೆಗೆ ಒತ್ತು ಕೊಟ್ಟರು. ಅವನಿಗೆ ಒಂದರ್ಥದಲ್ಲಿ ಆತ್ಮವನ್ನು, ಜೊತೆಗೆ ಆತ್ಮ ಪ್ರತ್ಯಯವನ್ನು ತಂದುಕೊಟ್ಟರು; ಇದು ಸಾಮಾನ್ಯ ಸಂಗತಿಯಲ್ಲ.

ಜನಸಾಮಾನ್ಯರ ಪಾಲಿಗೆ ಧರ್ಮವನ್ನು ಸ್ಪಷ್ಟೀಕರಿಸಿ ಗ್ರಾಹ್ಯವನ್ನಾಗಿ ಮಾಡಿದ್ದು ವಚನಕಾರರ ಒಂದು ದೊಡ್ಡ ಸಾಧನೆ. ಅವರ ಧರ್ಮದ ಪರಿಕಲ್ಪನೆ ಸರಳವಾದುದು ಮತ್ತು ಯಥಾರ್ಥವಾದುದು. ‘‘ದಯವೇ ಧರ್ಮದ ಮೂಲವಯ್ಯ’’ ಎಂದು ಸಾರುತ್ತಾರೆ ಬಸವಣ್ಣ. ಜೀವಕಾರುಣ್ಯ, ಅಹಿಂಸೆ, ಸದಾಚಾರಗಳು ಧರ್ಮದ ತಳಹದಿ. ಧರ್ಮ ಬೇರೆ, ಮತ ಬೇರೆ. ಮತ ವಿಧಿಗಳನ್ನು,ಆಚರಣೆ(Rituals)ಗಳನ್ನು ಪುರಸ್ಕರಿಸುತ್ತದೆ. ಅವುಗಳಿಂದ ಪ್ರಯೋಜನವಿಲ್ಲ. ‘‘ಆಚಾರವೆಂಬುದು ಹಾವಸೆಗಲ್ಲು’’ ಎನ್ನುತ್ತಾರೆ, ಬಸವಣ್ಣ. ಹೀಗಾಗಿ ಧರ್ಮದ ನೈಜ ಸ್ವರೂಪವನ್ನು ವಚನಕಾರರು ಅನಾವರಣಗೊಳಿಸಿದರು; ಅದು ಎಲ್ಲರೂ ಅವಲಂಬಿಸಬಹುದಾದ್ದು, ಅನುಸರಿಸಬಹುದಾದ್ದು ಎಂದು ತೋರಿಸಿಕೊಟ್ಟರು.

ಮಾನವೀಯ ದೌರ್ಬಲ್ಯಗಳನ್ನು ಒಪ್ಪಿಕೊಂಡವರು ವಚನಕಾರರು. ಮನುಷ್ಯ ಹುಟ್ಟಿನಿಂದಲೇ ಪರಿಪೂರ್ಣ ಎಂಬುದು ಅವರ ತಿಳುವಳಿಕೆಯಲ್ಲ. ಆದರೆ ವಿಕಾಸದಲ್ಲಿ ಅವರಿಗೆ ವಿಶ್ವಾಸ; ಸಾಧನೆಯಿಂದ ನರ ಹರನಾಗಬಲ್ಲ ಎಂಬುದವರ ನಂಬಿಕೆ. ಎಲ್ಲರಿಗೂ ವೈರಾಗ್ಯವನ್ನು ವಿಧಿಸಬಯಸಲಿಲ್ಲ, ಶರಣರು; ಏಕೆಂದರೆ ‘‘ಒಲಿವೆನೆಂಬುದು ಕಾಯಗುಣ’’ ಎಂಬುದನ್ನು ಅವರು ಬಲ್ಲವರಾಗಿದ್ದರು. ‘ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ… ನೀನೆನ್ನಂತೊಮ್ಮೆ ಒಡಲಗೊಂಡು ನೋಡಾ’’ ಎಂದು ಶಿವನಿಗೆ ಸವಾಲು ಹಾಕುತ್ತಾನೆ, ಜೇಡರ ದಾಸಿಮಯ್ಯ. ಒಟ್ಟಿನಲ್ಲಿ, ತಪ್ಪು ಮಾಡುವುದು ಮನುಷ್ಯ ಸ್ವಭಾವ. ಆದರೆ ತಿದ್ದಿಕೊಳ್ಳಬೇಕು, ಗೆದ್ದುನಿಲ್ಲಬೇಕು ಎಂಬುದು ಶರಣರ ಮತ. ನಾನಾ ಪ್ರಲೋಭನೆಗಳ ಕಾಟದ ಹಾಗೂ ಅವುಗಳ ವಿರುದ್ಧ ನಡೆದ ಉಗ್ರವಾದ ಹೋರಾಟದ ಜ್ವಲಂತ ದಾಖಲೆಗಳೆ ಆಗಿವೆ, ಬಹುಪಾಲು ವಚನಗಳು.

ಶರಣರ ಜೀವನ ಪ್ರೀತಿಯೂ ಮಹತ್ವದ್ದು. ಸಂಸಾರ ತ್ಯಾಗವನ್ನು ಅವರು ಬೋಧಿ ಸಲಿಲ್ಲ; ಸಂಸಾರದಲ್ಲಿದ್ದುಕೊಂಡೆ ಧರ್ಮವನ್ನಾಚರಿಸಿ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳ ಬಹುದು, ದೇವರನ್ನು ಮೆಚ್ಚಿಸಬಹುದು ಎಂಬುದು ಅವರ ನಿಲುವಾಗಿತ್ತು. ಹೆಣ್ಣನ್ನು ಅವರು ಮಾಯೆಯೆಂದು ದೂರಲಿಲ್ಲ; ದೂರೀಕರಿಸಲಿಲ್ಲ. ‘‘ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ’’ ಎಂಬ ಸಿದ್ಧರಾಮನ ನುಡಿ ಅರ್ಥವತ್ತಾದುದು. ‘’ಭಕ್ತನ ಮನ ಹೆಣ್ಣಿಗೊಳಗಾದೊಡೆ, ಮದುವೆಯಾಗಿ ಕೂಡುವುದು’’ ಎಂದು ಅವನು ಅನುಮತಿ ಕೊಡುತ್ತನೆ. ‘‘ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’’ ಎಂದು ದಾಸಿಮಯ್ಯನ ಮಾತು ದಾಂಪತ್ಯಕ್ಕೆ ಶರಣರು ಕೊಟ್ಟ ಮನ್ನಣೆಯನ್ನು ಅಭಿವ್ಯಕ್ತಿಸುತ್ತದೆ. ಇಹದ ಬಾಳ್ವೆಯಲ್ಲಿ ಸವಿಯಿದೆ. ಅದನ್ನು ಧರ್ಮಕ್ಕೆ ಅವಿರುದ್ಧವಾಗಿ ಆಸ್ವಾದಿಸಬೇಕು ಎಂಬುದು ವಚನಕಾರರ ಒಟ್ಟಿನ ಧೋರಣೆ. ಅಂತೆಯೆ, ಲೋಕದ ಜವಾಬ್ದಾರಿಯಿಂದ ನುಣುಚಿಕೊಂಡು ಪಲಾಯನ ಮಾಡುವುದನ್ನು ಅದು ಒಪ್ಪುವುದಿಲ್ಲ; ‘ಶಿವಲೋಕಭ್ರಮೆ’ಗೆ ಉತ್ತೇಜನ ಕೊಡುವುದಿಲ್ಲ.

ದೇಹವನ್ನು ಶರಣರು ಹೇಯವೆನ್ನಲಿಲ್ಲ ಎಂಬುದು ಗಮನಾರ್ಹ. ದೇಹವೇ ದೇಗುಲ ಎಂದು ಬಸವಣ್ಣ, ಅಲ್ಲಮಪ್ರಭು ಇಬ್ಬರೂ ಘೋಷಿಸುತ್ತಾರೆ. ಈ ನಿಲುವಿನಿಂದಾಗಿ ದೇವಾಲಯ ನಿರ್ಮಿತಿಯ ಅನಗತ್ಯತೆ ಸ್ಥಾಪಿತವಾಯಿತು ಹಾಗೂ ತಮ್ಮೂಲಕ, ಪುರೋಹಿತ ಶಾಯಿಯ ಅನಾಹುತಗಳನ್ನು ತಪ್ಪಿಸಿದಂತಾಯಿತು.

ಶರಣರು ಪ್ರಾಣಿ ಬಲಿಯನ್ನು ವಿರೋಧಿಸಿದರು, ಸಮಾಜದಲ್ಲಿ ನೆಲೆಗೊಂಡಿದ್ದ ಮೌಢ್ಯದ ವಿವಿಧ ಪ್ರಕಾರಗಳಿಗೆ ಕೊಡಲಿ ಪೆಟ್ಟು ಕೊಟ್ಟರು; ಕರ್ಮತತ್ತ್ವವನ್ನು ತಿರಸ್ಕರಿಸಿದರು; ಎಲ್ಲಕ್ಕಿಂತ ಮುಖ್ಯವಾಗಿ, ಸಾಮಾನ್ಯ ಜನತೆಯನ್ನು ಸುಲಿಯುವ ಪ್ರಬಲ ಸಾಧನವಾಗಿರುವ ಜ್ಯೋತಿಷವನ್ನು ಖಂಡಿಸಿದರು. ದೇವರು ಧರ್ಮಗಳ ಹೆಸರಿನಲ್ಲಿ ರೂಢಮೂಲವಾಗಿದ್ದ ಎಲ್ಲ ಅನಿಷ್ಟಗಳನ್ನು ಬೇರು ಸಹಿತ ಕಿತ್ತೊಗೆಯುವುದು ಅವರ ಉದ್ದೇಶವಾಗಿತ್ತು. ಒಂದರ್ಥದಲ್ಲಿ ಅವರು ಮೊದಲು ಮಾಡಿದ್ದು ಧರ್ಮದ ಶುದ್ದೀಕರಣ; ಅನಂತರ, ವ್ಯಕ್ತಿಯ ಹಾಗೂ ಸಮಾಜದ ಶುದ್ದೀಕರಣ; ಉದ್ಧಾರ.

‘‘ವಿಪ್ರ ಮೊದಲಾಗಿ, ಅಂತ್ಯಜ ಕಡೆಯಾಗಿ’’ ಸರ್ವರೂ ಸಮಾನರು, ತಾರತಮ್ಯ ಹುರುಳಿಲ್ಲದ್ದು ಎಂಬುದನ್ನು ಶರಣರು ಸಾರಿದರು ಮಾತ್ರವಲ್ಲ. ಆಚರಣೆಗೂ ತಂದು ತೋರಿದರು. ಜಾತಿ ಭೇದಗಳನ್ನು, ಅಸ್ಪೃಶ್ಯತೆಯ ಕಳಂಕವನ್ನು ಅವರು ತತ್ಕಾಲಕ್ಕಾದರೂ ತೊಡೆದು ಹಾಕಿದರು. ಅವರು ಪ್ರಾಧಾನ್ಯವಿತ್ತದ್ದು ಜಾತಿಗಲ್ಲ, ನೀತಿಗೆ, ಸಾಮಾಜಿಕ ಸ್ತರದಲ್ಲಿ ಮಾತ್ರವಲ್ಲದೆ, ಧಾರ್ಮಿಕ ಸ್ತರದಲ್ಲೂ ಸಮಾನತೆ ಅದರಿಂದ ಊರ್ಜಿತವಾಯಿತು; ಎಲ್ಲರಿಗೂ ಅಧ್ಯಾತ್ಮ ಸಾಧನೆಯ ಹಕ್ಕುಗಳು ಪ್ರಾಪ್ತವಾದುವು.

ಪುರುಷರ ಸ್ಥಾನಮಾನವನ್ನೇ ವಚನಕಾರರು ಸ್ತ್ರೀಯರಿಗೂ ನೀಡಿದರೆನ್ನುವುದು ಅತ್ಯಂತ ಪ್ರಾಮುಖ್ಯದ ವಿಚಾರ. ಲಿಂಗವನ್ನು ಪತಿ ಸ್ಥಾನದಲ್ಲಿರಿಸಿ ತಾವು ಸತಿ ಸ್ಥಾನದಲ್ಲಿ ನಿಂತ ಶರಣರು ಹೆಣ್ಣನ್ನು ಕೀಳಾಗಿ ಕಾಣುವುದು ಶಕ್ಯವಿರಲಿಲ್ಲ. ಅಂತೂ ಮಹಿಳೆಯರು ಮತ್ತು ಸಮಾಜದ ನಿಮ್ನ ವರ್ಗಗಳಿಂದ ಬಂದ ಸಾಮಾನ್ಯರು ಕೂಡ ಎಂತಹ ಬೌದ್ದಿಕ, ಆಧ್ಯಾತ್ಮಿಕ ಎತ್ತರಕ್ಕೇರಬಲ್ಲರೆಂಬುದನ್ನು ಹನ್ನೆರಡನೆಯ ಶತಮಾನದ ಕ್ರಾಂತಿ ನಿಚ್ಚಳವಾಗಿ ನಿದರ್ಶಿಸಿತು. ಹೆಣ್ಣು ಗಂಡಿನ ಪಾಲಿಗೆ ಕೇವಲ ಕಾಮದ ಗೊಂಬೆಯಲ್ಲ ಅಥವಾ ಸಹಧರ್ಮಿಣಿ ಮಾತ್ರವಲ್ಲ, ಅವಳು ಅವನ ಬದುಕಿನಲ್ಲಿ ಬೌದ್ದಿಕವಾಗಿ ಭಾಗವಹಿಸುವ ‘ವಿಚಾರ ಪತ್ನಿ’ ಕೂಡ ಆಗಬಲ್ಲಳು, ಆಗಬೇಕು ಎಂಬುದು ಅಂದು ಸಿದ್ಧವಾದ ಸತ್ಯ.

ವಚನಕಾರರು ಕೊಟ್ಟ ಒಂದು ಚಿರಂತನ ಮಹಾಮೌಲ್ಯವೆಂದರೆ, ಕಾಯಕ. ಅದೊಂದು ಸಂಕೀರ್ಣ ತತ್ತ್ವ. ಅದು ಏಕಕಾಲದಲ್ಲಿ ಅಧ್ಯಾತ್ಮಿಕವೂ ಹೌದು, ಸಾಮಾಜಿಕವೂ ಹೌದು. ‘‘ಕಾಯಕವೇ ಕೈಲಾಸ’’ ಎಂಬ ಸೂಕ್ತಿ ಇದನ್ನೆ ಸೂಚಿಸುತ್ತದೆ. ‘‘ಲಿಂಗವಾದರೂ ಕಾಯಕದೊಳಗು’’ ಎಂಬ ಆಯ್ದಕ್ಕಿ ಮಾರಯ್ಯನ ಮಾತು ವಿಸ್ತಾರವಾದ ವ್ಯಾಖ್ಯಾನವನ್ನು ಬಯಸುವಂಥದು. ‘‘ಕಾಯದ ಕಳವಳ’’ ಕಾಯಕದಿಂದ ಹರಿಯುತ್ತದೆ ಎನ್ನುತ್ತಾರೆ ಬಸವಣ್ಣ. ಎಂದರೆ, ಅದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಕ್ಷೇಮ ಸಿದ್ದಿಸುತ್ತದೆ. ವ್ಯಕ್ತಿಯ ಮತ್ತು ಸಮಾಜದ ಉತ್ಥಾನಕ್ಕೆ ಕಾಯಕವೇ ಶ್ರೇಷ್ಠ ಸಾಧನ. ಅದು ಜಾತಿ ವಿನಾಶಕ್ಕೂ ಸಮಾನತೆಗೂ ನೆರವಾಗಬಲ್ಲುದು; ಅರ್ಥವ್ಯವಸ್ಥೆಗಂತೂ ದೊಡ್ಡ ಕೊಡುಗೆಯಾಗಬಲ್ಲುದು.

ಕಾಯಕದಂತೆಯೆ ಜಂಗಮ ಎಂಬುದೂ ಶರಣರಿತ್ತ ಒಂದು ಘನವಾದ ಮೌಲ್ಯ. ಎರಡೂ ಒಟ್ಟಿಗೇ ಹೋಗುತ್ತವೆ. ಜಂಗಮ ದಾಸೋಹವೆ ಕಾಯಕದ ಮುಖ್ಯ ಧ್ಯೇಯವಾಗಿತ್ತು ಎಂಬುದನ್ನು ನೆನೆಯಬಹುದು. ಈಗ ಜಂಗಮ ಎಂಬುದನ್ನು ಇನ್ನೂ ವ್ಯಾಪಕವಾದ ಅರ್ಥದಲ್ಲಿ ಸಂಭಾವಿಸಬೇಕಾಗುತ್ತದೆ. ‘‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’’ ಎಂಬ ಬಸವಣ್ಣನವರ ಸೂತ್ರ ಈ ದಿಶೆಯಲ್ಲಿ ಪೂರಕವಾಗಬಲ್ಲುದು. ಸ್ಥಾವರ ಎಂದರೆ ಜಡವಾದದ್ದು; ಜಂಗಮವಾದರೊ ಚೈತನ್ಯದ, ಚಲನಶೀಲತೆಯ, ಬೆಳವಣಿಗೆಯ, ನಿರಂತರತೆಯ ದ್ಯೋತಕ. ಈ ದೃಷ್ಟಿಯಿಂದ ಜಂಗಮತೆ ಸಮಾಜದ ಲಕ್ಷಣವಾಗಬೇಕು. ಎಲ್ಲ ಬಂಡಾಯಗಳು, ಕ್ರಾಂತಿಗಳು ದುಡಿಯುವುದು ಅದನ್ನು ಸಾಧಿಸುವುದಕ್ಕಾಗಿಯೆ.

ಶರಣರು ವೀರಶೈವಧರ್ಮ ಪ್ರಚಾರಕ್ಕಾಗಿ, ಜನಜಾಗೃತಿಗಾಗಿ, ಸಮಾಜ ಪರಿವರ್ತನೆಗಾಗಿ ಹೊಸ ಮಾಧ್ಯಮವೊಂದನ್ನು ಕಂಡುಕೊಂಡರು; ಅದೇ ವಚನ. ತಿರುಳಿನಂತೆ ವಾಹಕವೂ ನೂತನವಾಗುವುದು ಅನಿವಾರ್ಯವಾಗಿತ್ತು. ಅದು ಇತ್ತ ಗದ್ಯವೂ ಅಲ್ಲದ, ಅತ್ತ ಪದ್ಯವೂ ಅಲ್ಲದ, ಆದರೆ ಪದ್ಯಗಂಧಿಯಾದ ಪ್ರಕಾರ. ಗದ್ಯ, ಪದ್ಯಗಳ ಸಮನ್ವಯ ಎನ್ನಬಹುದಾದ ಈ ಪ್ರಕಾರ ವಚನಕಾರರ ಸಮನ್ವಯ ದೃಷ್ಟಿಗೆ ಅನುರೂಪವಾದದ್ದು.

ವಚನವೊಂದು ಅಚ್ಚಗನ್ನಡದ ಮಾಧ್ಯಮ. ಅದರಲ್ಲಿರುವುದು ಜನ ಭಾಷೆ. ಸಂಸ್ಕೃತ ಅಲ್ಲಿ ಇಲ್ಲವೆಂದಲ್ಲ; ಆದರೆ ಅದು ಕೂಡ ಕನ್ನಡವೇ ಎನಿಸುವಷ್ಟು ಪರಿಚಿತವಾದದ್ದು. ಕನ್ನಡ ಭಾಷೆಯ ಸಮಸ್ತ ಸುಪ್ತ ಶಕ್ತಿಯನ್ನು ವಚನಕಾರರು ಎಚ್ಚರಿಸಿ, ಅದ್ಭುತ ರೀತಿಯಲ್ಲಿ ಬಳಸಿಕೊಂಡರು. ಅಷ್ಟೆ ಅಲ್ಲ, ಅದಕ್ಕೆ ಹೊಸ ಆಯಾಮಗಳನ್ನು ಅಳವಡಿಸಿದರು. ಅವರ ಆದಾನ ಪ್ರದಾನ ಸಾಮರ್ಥ್ಯ ವಚನರಚನೆಯಲ್ಲಿ ಸುವ್ಯಕ್ತವಾಗಿದೆ.

ಮಾತಿಗೆ ಮೀರಿದ ಸೂಕ್ಷ್ಮವಾದ ಅನುಭವಗಳು ಕೂಡ-ಅವುಗಳನ್ನು ಅನುಭಾವ ಎನ್ನುವುದೆ ಯುಕ್ತ-ಕನ್ನಡದಲ್ಲಿ ಮೈ ಪಡೆದುಕೊಳ್ಳುವ ಸೋಜಿಗದ ಸಿದ್ದಿಯನ್ನು ವಚನಗಳಲ್ಲಿ ಕಾಣುತ್ತೇವೆ. ಅತೀಂದ್ರಿಯವಾದ ಅಧ್ಯಾತ್ಮದ ಅಭಿವೃಕ್ತಿ ಕನ್ನಡದಲ್ಲಿ ಸಾಧ್ಯ ಎಂದು ವಚನಕಾರರು ಪ್ರತ್ಯಕ್ಷೀಕರಿಸಿರುವಾಗ, ವೈಜ್ಞಾನಿಕ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಸಂವಹನಗೊಳಿಸುವುದು ಕಷ್ಟವೆಂದು ಇಂದು ಹಲವರು ಹೇಳುವುದು ವ್ಯರ್ಥಾಲಾಪ ಎನಿಸುವುದಿಲ್ಲವೆ?

ಪ್ರತಿಯೊಂದು ವಚನದ ಅಂತ್ಯದಲ್ಳೂ ಆಯಾ ವಚನಕಾರನ ಅಥವಾ ವಚನಕಾರ್ತಿಯ ಅಂಕಿತವಿರುವುದೊಂದು ವಿಶೇಷ. ತನ್ನ ಇಷ್ಟದೈವಕ್ಕೆ, ಆತ್ಮಸಾಕ್ಷಿಗೆ ಮುಖಾಮುಖಿಯಾಗಿ ಆಯಾ ವ್ಯಕ್ತಿ ತನ್ನ ಅಂತರಂಗವನ್ನು ತೋಡಿಕೊಳ್ಳುವ ಪರಿ ಇಲ್ಲಿದೆ. ತಾವು ಹೇಳುವುದನ್ನು ಪ್ರಮಾಣೀಕರಿಸುವುದಕ್ಕಾಗಿ ಅವರು ಕಡೆಯಲ್ಲಿ ಲಿಂಗದಿವ್ಯ ಹಿಡಿಯುವ ಪ್ರಕ್ರಿಯೆ ವ್ಯಕ್ತಿಯ ಅಂಕಿತದಿಂದ ಸಂಕೇತಿಕವಾಗುತ್ತದೆ. ಎಂತಲೇ ಪ್ರತಿಯೊಂದು ವಚನವೂ ಪ್ರಾಮಾಣಿಕ, ಅಧಿಕೃತ. ಅದೊಂದು ಮೀಸಲು ಪ್ರಕಾರ; ಅಂದಿನ ವಚನಕಾರರ ಪಾಲಿಗೆ ಅನನ್ಯ ಪ್ರಣಾಳಿಕೆ. ಆದರೆ ಇಂದಿನ ವಚನಕಾರರಿಗೆ ಅದು ಅನಿವಾರ್ಯವಲ್ಲದ, ಅನುಕರಣೆಯ ವಸ್ತು ಮಾತ್ರ.

ವಚನಗಳು ಸಾಹಿತ್ಯವಾಗಬೇಕೆಂದು ಮೂಲತಃ ಉದ್ದಿಷ್ಟವಾದುವಲ್ಲ; ಆದರೂ ಅವುಗಳ ಕಾವ್ಯ ಸತ್ತ್ವ ಅಸಾಧಾರಣವಾದುದು. ಸಾಹಿತ್ಯ ರಚನೆಯ ನಿಲುವಿನಿಂದ ರಚಿತವಾದ ಅಸಂಖ್ಯ ಕೃತಿಗಳು ಸಾಹಿತ್ಯ ಚರಿತ್ರೆಯಲ್ಲಿ ನೀರಸವಾಗಿ ಸಾಲುಗಟ್ಟಿ ನಿಂತಿರುವಾಗ, ಈ ವಚನ ವಿದ್ಯಮಾನ ಸ್ವಾರಸ್ಯದ ಸಂಗತಿ; ವಿಸ್ಮಯದ್ದು ಕೂಡ. ಇದಕ್ಕೇನು ಕಾರಣ? ವಚನಕಾರರು ಸೌಂದರ್ಯ ಮೌಲ್ಯಕ್ಕೆ ಗುರಿಯಿಡದೆ, ಶಿವ ಮೌಲ್ಯವನ್ನು ಹಿಡಿದು ನುಡಿದರು; ಅವರ ನುಡಿಗೆ ಅಯಾಚಿತವಾಗಿ, ಸಹಜವಾಗಿ ಸೌಂದರ್ಯ ಒಲಿದು ಬಂತು.

ರಾಜಾಸ್ಥಾನದಲ್ಲಿ ಪ್ರಾಶಸ್ತ್ಯವಿದ್ದುದು ‘ಕವಿ, ಗಮಕಿ, ವಾದಿ, ವಾಗ್ಮಿ’ಗಳಿಗೆ. ವಚನಕಾರರು ಈ ವ್ಯವಸ್ಥೆಯನ್ನು ವಿರೋಧಿಸಿ, ಭಕ್ತಿಗೆ ಅಗ್ರಸ್ಥಾನ ಕೊಡುತ್ತಾರೆ; ಅದನ್ನು ಪರಮ ಮೌಲ್ಯವನ್ನಾಗಿ ಪ್ರತಿಪಾದಿಸುತ್ತಾರೆ. ಬಸವಣ್ಣನವರ ಈ ವಚನಗಳನ್ನು ಲಕ್ಷಿಸಬಹುದು:

ಮಾತು ಬಲ್ಲಾತ ಜಾಣನಲ್ಲ
ಗೀ
ತವ ಬಲ್ಲಾತ ಜಾಣನಲ್ಲ
ಲಿಂಗವ ನೆರೆ ನಂಬಿದಾತ, ಆತ ಜಾಣನು!
ಗೀ
ತವ ಹಾಡಿದೊಡೇನು?

ಶಾಸ್ತ್ರ ಪುರಾಣವ ಕೇಳಿದೊಡೇನು?
ವೇದ ವೇದಾಂತವನೋದಿದೊಡೇನು?…
ಭಕ್ತಿಯಿಲ್ಲದವರನೊಲ್ಲ ಕೂಡಲ ಸಂಗಮದೇವ.
ಆಡಿದರೇನೊ ಹಾಡಿದರೇನೊ ಓದಿದರೇನೊ

ತ್ರೀವಿಧ ದಾಸೋಹವಿಲ್ಲದನ್ನಕ್ಕ?
ಆಡದೇ ನವಿಲು, ಹಾಡದೇ ತಂತಿ? ಓದದೇ ಗಿಳಿ?
ಭಕ್ತಿಯಿಲ್ಲದವರನೊಲ್ಲ ಕೂಡಲ ಸಂಗಮದೇವ.

ಕಾವ್ಯ, ಸಂಗೀತ, ನೃತ್ಯಾದಿ ಕಲೆಗಳಲ್ಲಿನ ಪರಿಣತಿಯಾಗಲಿ ಶಾಸ್ತ್ರಜ್ಞಾನ ಪಾಂಡಿತ್ಯಗಳಾಗಲಿ ನಿಷ್ಪ್ರಯೋಜಕ; ಭಕ್ತಿಯೊಂದೆ ಶ್ರೇಷ್ಠ ಮತ್ತು ತಾರಕ ಎಂಬುದು ಬಸವಣ್ಣನವರ ನಿಲುವು. ‘‘ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು’’, ‘‘ಕೂಡಲ ಸಂಗನ ಶರಣರು ಮನತೆರೆದು ಮಾತನಾಡಿದರೆ ಲಿಂಗವ ಕಾಣಬಹುದು’’ ಎಂಬ ಮಾತುಗಳನ್ನು ಗಮನಿಸಬೇಕು. ಆದರೆ ಕಲಾ ಮೌಲ್ಯಗಳನ್ನು ಭಕ್ತಿ, ಅನುಭಾವಗಳ ಮೌಲ್ಯ ನಿರಾಕರಿಸಬೇಕೆಂದೇನೂ ಇಲ್ಲ; ಅದು ಅವುಗಳನ್ನೊಳಗೊಂಡು, ಅವುಗಳಿಂದ ಕಪ್ಪ ಒಪ್ಪಿಸಿಕೊಂಡು ಸಾರ್ವಭೌಮ ಭಂಗಿಯಲ್ಲಿ ನಿಲ್ಲಬಹುದು. ಶರಣರ ವಚನಗಳು ಇದಕ್ಕೆ ಸಾಕ್ಷಿ.

ಈ ದೃಷ್ಟಿಯಿಂದ ಅಕ್ಕಮಹಾದೇವಿಯ ಈ ಉದ್ಗಾರವನ್ನು ಲೆಕ್ಕಿಸಬಹುದು : ‘‘ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗಾನೊಲಿದೆನವ್ವಾ’’! ಭಗವತ್ ಸ್ವರೂಪವನ್ನು ಅಕ್ಕ ಇಲ್ಲಿ ನಿರೂಪಿಸಿದ್ದಾಳೆ. ಶಬ್ದ ಕ್ರಮವನ್ನು ಎಚ್ಚರಿಕೆಯಿಂದ ಲಕ್ಷಿಸಬೇಕು. ದೇವನಿಗೆ ಸಾವಿಲ್ಲ, ಕೇಡಿಲ್ಲ, ರೂಹಿಲ್ಲ; ಆದ್ದರಿಂದಲೇ ಅವನು ಚೆಲುವನೂ ಹೌದು. ಇದು ಸಾಮಾನ್ಯ ಕಲ್ಪನೆಗೆ ವಿರುದ್ಧವಾದ ಮಾತು. ಚೆಲುವುಳ್ಳ ವಸ್ತು ಸಾವಿಲ್ಲದ್ದು, ಕೇಡಿಲ್ಲದ್ದು ಎಂಬುದು ಸಾಮಾನ್ಯರ ಭ್ರಮೆ. ಆದರೆ ಹಾಗಲ್ಲ. ಶಿವವಿದ್ದಲ್ಲಿ ಸೌಂದರ್ಯವಿರುತ್ತದೆ, ಶಿವದಿಂದಲೇ ಸೌಂದರ್ಯ ನಿಷ್ಪನ್ನವಾಗುತ್ತದೆ, ಸೌಂದರ್ಯದಿಂದ ಶಿವವಲ್ಲ. ಅಕ್ಕನ ವಿಶೇಷಣಗಳನ್ನು ಹಿಂದೆ ಮುಂದೆ ಮಾಡುವಂತಿಲ್ಲ.ಅವು ‘‘Best words in the best order’’.

ಪ್ರಾಚೀನ ಕಾವ್ಯಮೀಮಾಂಸೆಯಾಗಬಹುದು, ಆಧುನಿಕ ಕಾವ್ಯತತ್ತ್ವವಾಗಬಹುದು ಯಾವ ಒರೆಗಲ್ಲಿನ ಮೇಲಾದರೂ ತಮ್ಮ ಸಾಚಾತನವನ್ನು ವಚನಗಳು ಅನಾಯಾಸವಾಗಿ, ಅಸಂದಿಗ್ಧವಾಗಿ ಸಾಬೀತುಪಡಿಸಿಕೊಳ್ಳುತ್ತವೆ. ಪ್ರಾಚೀನ ಸಾಹಿತ್ಯವನ್ನು ಅನುಮಾನದ ಕಣ್ಣಿನಿಂದ ನೋಡುವವರೂ ವಚನಗಳ ಉತ್ಕೃಷ್ಟತೆಯನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.

ಪ್ರಾಚೀನ ಕಾವ್ಯತತ್ತ್ವ ಪುರಸ್ಕರಿಸುವ ವಿವಿಧ ಅರ್ಥಾಲಂಕಾರ ಶಬ್ದಾಲಂಕಾರಗಳು, ರಸ ಧ್ವನಿಗಳು, ಅಷ್ಟೇ ಅಲ್ಲ, ಚಿತ್ರಕಾವ್ಯದ ಕೆಲವು ಮಾದರಿಗಳು ಕೂಡ ವಚನಗಳಲ್ಲಿ ಗೋಚರಿಸುತ್ತವೆ![1] ಹಾಗೆಯೆ, ಆರ್ವಾಚೀನ ಕಾವ್ಯವಿಮರ್ಶೆಯಲ್ಲಿ ಪ್ರಚಲಿತವಾದ ಸಂಕೀರ್ಣತೆ, ಪ್ರತಿಮಾ ಸಂಕೇತ ವಿಧಾನಗಳು, ನಾಟಕೀಯತೆ, ಭಾಷೆಯಲ್ಲಿ ಭಾವಾಭಿನಯ, ಆಡುಮಾತಿನ ಲಯ ಇತ್ಯಾದಿಗಳೂ ಅಲ್ಲಿ ನಿದರ್ಶಿತವಾಗುತ್ತವೆ. ತಮಗಿಂತ ಹಿಂದೆ ಸಾಹಿತ್ಯ ಪ್ರಪಂಚದ ಮುಖವನ್ನೇ ಕಂಡರಿಯದಿದ್ದ ವಸ್ತುಗಳನ್ನು, ಪ್ರಾಣಿಗಳನ್ನು ವಚನಕಾರರು ಉಪಮೆ, ರೂಪಕ, ಪ್ರತಿಮೆಗಳನ್ನಾಗಿ ದುಡಿಸಿಕೊಳ್ಳುತ್ತಾರೆ. ಅದೊಂದು ಅನಂತ ವೈವಿಧ್ಯಪೂರ್ಣ ಲೋಕ. ತಮ್ಮ ತಮ್ಮ ವೃತ್ತಿಗಳನ್ನೇ ರೂಪಕ ಮಾಡಿಕೊಂಡು ತಮ್ಮ ಅಂತರಂಗಕ್ಕೆ ಅಭಿವ್ಯಕ್ತಿ ಕೊಟ್ಟಿರುವ ವಚನಕಾರರೂ ಉಂಟು. ಈ ಎಲ್ಲ ಕಾರಣಗಳಿಂದ ವಚನಗಳು ಇಂದಿಗೂ ಅತ್ಯಂತ ನವ್ಯವಾಗಿ ಜೀವ ಸಂಪನ್ನವಾಗಿ ಕಂಗೊಳಿಸುತ್ತಿವೆ.

ಅಮೂರ್ತವನ್ನು ಮೂರ್ತಗೊಳಿಸುವುದರಲ್ಲಿ, ಬಯಲನ್ನು ರೂಪ ಮಾಡುವುದರಲ್ಲಿ ವಚನಕಾರರ ದಕ್ಷತೆ ದೊಡ್ಡದು. ಒಂದು ಸಣ್ಣ ಉದಾಹರಣೆಯನ್ನಷ್ಟೆ ಇಲ್ಲಿ ಗಣಿಸಬಹುದು. ‘‘ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಎನಗಾಯಿತ್ತಯ್ಯಾ’’ ಎಂಬ ಬಸವಣ್ಣನವರ ವಚನದಲ್ಲಿ ಹೇಗೆ ಮೃತ್ಯುವಿನ ಘೋರ ಭೀಕರತೆ ಒಂದು ಸುಮೂರ್ತ ಚಿತ್ರದ ಮೂಲಕ ಧ್ವನಿತವಾಗುತ್ತದೆಂಬುದನ್ನು ಪರಿಭಾವಿಸಬೇಕು. ಕಪ್ಪೆ, ನೆರಳು, ಸರ್ಪಗಳ ರೂಪಕಗಳಲ್ಲಿ ಇಡೀ ಬದುಕನ್ನೆ ಅಡಗಿಸಿದೆ, ಬಸವ ಪ್ರತಿಭೆ. ಒಂದು ಕಡೆ ‘‘ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ’’ ಎನ್ನುವಲ್ಲಿ ಅವರು ಕೊಡುವ ಹೇಸರಕತ್ತೆಯ ಹೋಲಿಕೆ ಎಷ್ಟು ನವೀನ ಮತ್ತು ಅರ್ಥಪೂರ್ಣ!

ಇನ್ನು ಸಂಕೀರ್ಣತೆಯನ್ನು ತೆಗೆದುಕೊಂಡರೆ, ಜೇಡರ ದಾಸಿಮಯ್ಯನ ‘‘ಸತಿ ಪತಿಗಳೊಂದಾಗದವರ ಭಕ್ತಿ ಅಮೃತದೊಳಗೆ ವಿಷ ಬೆರೆದಂತೆ ಕಾಣಾ’’ ಎಂಬುದೊಂದು ಮಾತು ಇಲ್ಲಿ ಸಾಕು. ಅಮೃತಾಂಶವಿರುವುದರಿಂದ ಸಾಯುವಂತಿಲ್ಲ, ವಿಷಾಂಶವಿರುವುದರಿಂದ ಬದುಕುವುದೂ ಶಕ್ಯವಿಲ್ಲ! ವಿರಸ ದಾಂಪತ್ಯದ ಭಯಂಕರ ದುರಂತಸ್ಥಿತಿ ಯಶಸ್ವಿಯಾಗಿ ಪ್ರತೀತವಾಗುತ್ತದೆ.

‘ಮೂರ್ತಿಯಾದುದಕ್ಕೆ ಪ್ರಳಯ ತಪ್ಪದು’’ ಎಂಬುದು ಅಲ್ಲಮನ ಉಕ್ತಿ, ‘‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’’ ಎಂಬ ಬಸವೋಕ್ತಿಗೆ ಸಂವಾದಿಯಾದದ್ದು. ಆದರೆ ಸಾಹಿತ್ಯಕ್ಕೆ ಇದು ಅನ್ವಯಿಸುವುದಿಲ್ಲ; ಏಕೆಂದರೆ ರೂಪವಿಲ್ಲದೆ ಸಾಹಿತ್ಯ ಸಿದ್ದಿಸದು. ಶರಣರು ತಮ್ಮ ಅನಿಸಿಕೆಗಳಿಗೆ ವಾಗ್ರೂಪ ಕೊಟ್ಟಿದ್ದಾರೆ. ಆದರೂ ಅವರ ಅಭಿವ್ಯಕ್ತಿ ‘‘ಶಬ್ದದೊಳಗಣ ನಿಶ್ಶಬ್ದ’’ಕ್ಕೆ ನಿಷ್ಠವಾದದ್ದು; ‘‘ನುಡಿಯಿಲ್ಲದ ನಿಸ್ಸೀಮಗ್ರಾಮ’’ ದತ್ತ ತುಡಿಯುವಂಥದು. ವಚನಗಳು ರೂಪಸಹಿತವಾಗಿಯೂ ಜಂಗಮ ಶಕ್ತಿಯಾಗಿವೆ ಎಂಬುದನ್ನು ಗಮನಿಸಬೇಕು. ಪ್ರಾಯಃ ರೂಪ ಅರೂಪಗಳ ಸಾಮರಸ್ಯದಲ್ಲಿದೆ, ಶರಣರ ಸಿದ್ದಿ. ಅವರು ಮಾತನ್ನು ಜ್ಯೋತಿರ್ಲಿಗವಾಗಿಸಿದರು.

ಅಲ್ಲಮ ಪ್ರಭುವಿನ ವಚನವೊಂದರಿಂದ ಮುಗಿಸಬಹುದು:

ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು,
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು,
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು,
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು,
ಗುಹೇಶ್ವರಲಿಂಗ ತಾನಾಗಿರಬೇಕು.

ಪ್ರಭುವಾಣಿ ಲೌಕಿಕಕ್ಕೂ ಅನ್ವಯಿಸುತ್ತದೆ, ಪಾರಮಾರ್ಥಿಕಕ್ಕೂ ಅನ್ವಯಿಸುತ್ತದೆ. ಇದು ಅದ್ವೈತದ ಔನ್ನತ್ಯದಲ್ಲಿ ನಿಂತು ಆಡಿದ ಮಾತಾದರೂ, ಸಾಮಾನ್ಯರಿಗೆ ಕೂಡ ಅತ್ಯುಪಯುಕ್ತ. ಬದುಕಿಗೆ ಕೆಚ್ಚು ನೆಚ್ಚು ನಂಬಿಕೆಗಳನ್ನು ತುಂಬುವ, ಜೀವನ ಸಂಗ್ರಾಮಕ್ಕೆ ವ್ಯಕ್ತಿಯನ್ನು ಅಣಿಗೊಳಿಸುವ ಪ್ರಚಂಡ ತೂರ್ಯನಿನಾದ ಇಲ್ಲಿದೆ. ಇದಕ್ಕಿಂದ ಮಿಗಿಲಾದ ಮೌಲ್ಯವಾಗಲಿ ಸಂದೇಶವಾಗಲಿ ಇನ್ನೊಂದಿರಲಾರದು. ಇದು ಲೋಕಕ್ಕೆ ಶರಣರ ಕೊಡುಗೆ.

[1] ಚಿತ್ರಕಾವ್ಯ ಪ್ರಸಕ್ತಿ ಶ್ಲೇಷೆ ಹಾಗೂ ಬೆಡಗಿನ ವಚನಗಳಲ್ಲಿದೆ. ಅನೇಕ ವಚನಕಾರರು ಅನುಭಾವಕ್ಕೆ ಬೆಡಗಿನ ರೂಪ ತೊಡಿಸಿದ್ದಾರೆ. ‘‘ಅಂದಿನ ಸಮಾಜದ ಕೆಳಗಿನ ಸ್ತರದಿಂದ ಬಂದ ವಚನಕಾರರಲ್ಲೇ ಯಾಕೆ ಇಂಥ ಬೆಡಗಿನ ವಚನಗಳು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ?’’ ಎಂಬ ಪ್ರಶ್ನೆಯನ್ನು ಜಿ.ಎಸ್ .ಶಿವರುದ್ರಪ್ಪನವರು ಒಂದೆಡೆ ಎತ್ತಿದ್ದಾರೆ. ಕಾರಣ ಸ್ಪಷ್ಟ. ಅಂಥ ವಚನಕಾರರು ಜಾನಪದಕ್ಕೆ ನಿಕಟವಾಗಿದ್ದವರು. ಜನಪದ ಸಾಹಿತ್ಯದಲ್ಲಿ ಒಗಟುಗಳ ಪ್ರಾಚುರ್ಯ ಮಿಗಿಲು; ಅವುಗಳ ಮಾದರಿಯಲ್ಲಿ ಬೆಡಗಿನ ವಚನಗಳು ರಚಿತವಾಗಿವೆ, ಆದರೂ ತಮ್ಮತನವನ್ನುಳಿಸಿಕೊಂಡಿವೆ.