ಬಸವಣ್ಣನವರ ಕಾವ್ಯಶಕ್ತಿ ಬಹಳ ಎತ್ತರದ್ದು; ಯಾವ ಒರೆಗಲ್ಲಿನ ಮೇಲೂ ತನ್ನ ಮೇಲ್ಮೆಯನ್ನು ಸ್ಥಾಪಿಸಿಕೊಳ್ಳಬಲ್ಲದ್ದು. ಒಬ್ಬ ಲೇಖಕನಲ್ಲಿ ಸಾಹಿತ್ಯಕವಾಗಿ, ಸಾಹಿತ್ಯೇತರವಾಗಿ ಏನೇನನ್ನು ನಿರೀಕ್ಷಿಸಬಹುದೊ ಅದನ್ನೆಲ್ಲ ಒಂದು ಸಾಮರಸ್ಯದಲ್ಲಿ ಒಳಗೊಂಡಿದೆ ಬಸವಣ್ಣನವರ ವಚನ ಸಮುದಾಯ. ಒಂದು ನಿರ್ದಿಷ್ಟ ಸಂದರ್ಭದಲ್ಲಿ ಪ್ರತಿಕ್ರಿಯೆ, ಕ್ರಿಯೆ ಎರಡೂ ಆಗಿ ಮೂಡಿದ ಈ ವಚನಗಳು, ಅಂಥದೇ ಪರಿಸ್ಥಿತಿಯಿರುವ ಇಂದಿನ ದಿನಗಳಲ್ಲಿ ಮತ್ತಾವುದೇ ಹಿಂದಿನ ಕಾವ್ಯಕ್ಕಿಂತ ಪ್ರಸ್ತುತವೂ ಮಹತ್ವಪೂರ್ಣವೂ ಆಗಿರುವುದು ಆಶ್ಚರ್ಯದ ಸಂಗತಿಯಲ್ಲ. ನಿಜವಾದ ಆಶ್ಚರ್ಯ ಎಂದರೆ, ಆ ಹಿನ್ನೆಲೆಯನ್ನು ಮರೆಮಾಡಿ ನೋಡಿದಾಗಲೂ ಹಿಂದಿಲ್ಲ ಮುಂದಿಲ್ಲ ಎನ್ನುವಂತೆ ಈ ವಚನಗಳಲ್ಲಿ ಕಂಡುಬರುವ ವಿಶೇಷ ಸತ್ವ; ಈ ಹೊತ್ತು ನಾವು ಹೇಳುವುದೆಲ್ಲ ಹಳೆಯದು ಎನಿಸಿಬಿಡುವ ಸಮಗ್ರತೆ ಮತ್ತು ವ್ಯಾಪಕತೆ. ಹೊಸಗನ್ನಡದ ರೊಮ್ಯಾಂಟಿಕ್ , ಪ್ರಗತಿಶೀಲ, ನವ್ಯ, ನವ್ರೋಅಥವ ದಲಿತ ಎಲ್ಲ ಪ್ರಸ್ಥಾನಗಳೂ ಬಸವಣ್ಣನವರ ವಚನಗಳಲ್ಲಿ ತಮ್ಮ ಮುಖಗಳನ್ನು ಕಂಡುಕೊಳ್ಳಬಹುದು.

ಈ ವಚನಗಳು ಕವನ ಪ್ರಜ್ಞೆಯಿಂದ ಹುಟ್ಟಿದವಲ್ಲ, ಜೀವನಪ್ರಜ್ಞೆಯಿಂದ ಹುಟ್ಟಿದವು. ಆದರೂ, ಅಥವಾ ಆ ಕಾರಣದಿಂದಲೇ, ಅವು ಶ್ರೇಷ್ಠತಮ ಕಾವ್ಯವಾಗಿ ಪರಿಣಮಿಸಿವೆ. ಜೀವನ ಮತ್ತು ಕಾವ್ಯದ ಸಂಬಂಧವನ್ನು ಕುರಿತು ಯೋಚಿಸುವಾಗ, ಮೂರು ಬಗೆಯ ಕವಿಗಳು ಕಂಡುಬರುತ್ತಾರೆ : ಜೀವನದೊಡನೆ ಸಂಬಂಧವೇ ಇಲ್ಲದಂತೆ ಕಾವ್ಯವನ್ನು ಅಕಾಶದಲ್ಲಿ ಹಾರಿಸಿಕೊಂಡು ಹೋಗುವವರು ಒಂದು ವರ್ಗ; ನಮ್ಮ ಬಹುಮಂದಿ ಪ್ರಾಚೀನ ಕವಿಗಳು ಇಂಥವರು. ಕಾವ್ಯವನ್ನು ಬದುಕಿನ ಮಟ್ಟಕ್ಕೆ ಇಳಿಸಿ ಬಿಡುವವರು ಇನ್ನೊಂದು ವರ್ಗ; ಉದಾಹರಣೆಗೆ, ನಮ್ಮ ನವ್ಯ ಕವಿಗಳು. ಬದುಕನ್ನೆ ಕಾವ್ಯದ ಮಟ್ಟಕ್ಕೇರಿಸುವವರು ಅಥವಾ ಬದುಕನ್ನು ಎತ್ತರಿಸಿಕೊಂಡು, ಅದರ ಹಂತಕ್ಕೆ ಕಾವ್ಯವನ್ನು ಒಯ್ಯುವವರು ವಿರಳ ವರ್ಗ.

ಇವರೇ ಅತ್ಯುತ್ತಮ ಕವಿಗಳು. ಈ ವರ್ಗಕ್ಕೆ ಬಸವಣ್ಣನವರಿಗಿಂತ ಒಳ್ಳೆಯ ಪ್ರತಿನಿಧಿ ಸಿಕ್ಕುವುದು ಕಷ್ಟ. ಕುವೆಂಪು ಅವರಂಥವರು ಇದೇ ವಲಯದ ಒಂದು ಉಪವರ್ಗದಲ್ಲಿ ಸ್ಥಾನ ಪಡೆಯುತ್ತಾರೆ.

ಬಸವಣ್ಣನವರು ‘ಕೇವಲ ಕಾವ್ಯೇತರ ಮನೋಧರ್ಮದಿಂದ’ ಕಾವ್ಯರಚನೆ ಮಾಡಿದರು ಎಂದು ವಿಮರ್ಶಕರೊಬ್ಬರು ಹೇಳುತ್ತಾರೆ.[1] ಇಲ್ಲಿ ‘ಕೇವಲ’ ಎಂಬ ಮಾತನ್ನು ಬಿಡಬಹುದೆನಿಸುತ್ತದೆ. ಬಸವಣ್ಣನವರಲ್ಲಿ ಕಾವ್ಯ ಮನೋಧರ್ಮ ಇರಲೇ ಇಲ್ಲವೆಂದು ಸಾಧಿಸಬೇಕಾಗಿಲ್ಲ. ಅಸ್ತಿತ್ವದಲ್ಲೆ ಇಲ್ಲದ ಚಕೋರವನ್ನು ಅವರೂ ಬಿಟ್ಟಿಲ್ಲ. ಹೋಗಲಿ, ‘‘ಆನು ಒಲಿದಂತೆ ಹಾಡುವೆ’’ ಎಂಬ ಮಾತಿನಲ್ಲಿ, ಹಾಡುವುದು ಏನನ್ನು ಸುಚಿಸುತ್ತದೆ? ಇಲ್ಲಿ ವ್ಯಕ್ತವಾಗುವುದು ಅವರ ಸ್ವತಂತ್ರ ಮನೋಧರ್ಮವೆ ಹೊರತು ಕಾವ್ಯ ಮನೋಧರ್ಮದ ಅಭಾವವಲ್ಲ.

ಆದರೆ ಈ ಸ್ವಾತಂತ್ರ್ಯ ಎಲ್ಲ ಕಟ್ಟುಗಳನ್ನೂ ಹರಿದುಕೊಂಡು ಸ್ವೈರ ಪ್ರವೃತ್ತಿಯಾಗಿಲ್ಲ. ‘‘ಆನು ಒಲಿದಂತೆ ಹಾಡುವೆ’’ ಎಂಬುದಕ್ಕೆ ಮೊದಲು ‘‘ನಿನಗೆ ಕೇಡಿಲ್ಲವಾಗಿ’’ ಎಂಬ ಮಾತೊಂದನ್ನು ಸೇರಿಸಿದ್ದಾರೆ ಬಸವಣ್ಣ. ಶಿವಕ್ಕೆ ಅವರು ಕೊಟ್ಟಿರುವ ಪ್ರಾಧಾನ್ಯವನ್ನು ಇದು ಸೂಚಿಸುತ್ತದೆ : ಅವರ ಜಗತ್ತು ಅನನ್ಯ ಪರತಂತ್ರವಲ್ಲ, ಶಿವಪರತಂತ್ರವಾದದ್ದು. ಸೌಂದರ್ಯವನ್ನು ಅವರು ಅಲಕ್ಷಿಸಿದವರಲ್ಲ; ಶಿವವಿದ್ದಲ್ಲಿ ಸೌಂದರ್ಯವೂ ಇರುತ್ತದೆ ಎಂದು ನಂಬಿದವರು. ಅವರ ಈ ಶಿವನಿಷ್ಠೆಯಿಂದಲೆ ನಿಷ್ಪನ್ನವಾಗುತ್ತದೆ. ಅವರ ಜೀವನನಿಷ್ಠೆ ಹಾಗೂ ಸಮಾಜನಿಷ್ಠೆ. ಅಂತೂ, ಕನ್ನಡದ ಪ್ರಪ್ರಥಮ ‘ಕಮಿಟೆಡ್’ ಸಾಹಿತಿ ಬಸವಣ್ಣನವರು.

ಒಂದು ಮೂಲಭೂತ ಅಂಶವನ್ನಿಲ್ಲಿ ಗಮನಿಸಬೇಕು. ಬಸವಣ್ಣನವರು ಪ್ರೌಢಕವಿಗಳ ಪಂಕ್ತಿಗೇನೂ ಸೇರುವುದಿಲ್ಲ; ಆದರೆ ಅವರು ಒಂದು ಕಡೆ ಇತರ ವಚನಕಾರರಿಗಿಂತ, ಇನ್ನೊಂದು ಕಡೆ ಜನಪದ ಕವಿಗಳಿಗಿಂತ ಬೇರೆಯಾಗಿ ನಿಲ್ಲುತ್ತಾರೆ, ಅವರೆಲ್ಲರ ಗುಣಲಕ್ಷಣಗಳನುಮೈಗೂಡಿಸಿಕೊಂಡೂಕೂಡ.ಅವರುಸಾಂಪ್ರದಾಯಿಕವಾಗಿ ವಿದ್ಯಾಭ್ಯಾಸ ಮಾಡಿದವರು; ಸಂಸ್ಕೃತ ಕಲಿತು, ವೇದೋಪನಿಷತ್ತು ಪುರಾಣಾಗಮ ಕಾವ್ಯಾದಿಗಳನ್ನೆಲ್ಲ ಕರತಲಾಮಲಕ ಮಾಡಿಕೊಂಡವರು. ಪರಂಪರೆಯ ಈ ಅನುಸಂಧಾನದಿಂದ ಅವರಿಗೆ ತುಂಬ ಲಾಭವಾಗಿದೆ. ಅವರು ‘ಅಕೆಡೆಮಿಕ್’ ಕೂಡ ಹೌದು, ಆ ಸೀಮೆಯನ್ನು ಮೀರಿದವರೂ ಹೌದು. ಅವರ ವಚನಗಳಲ್ಲಿ ‘ಅಕೆಡೆಮಿಕ್’ ಅಂಶಗಳೂ ಇವೆ, ಅತೀತವಾದ ಅಂಶಗಳೂ ಇವೆ; ಎರಡನೆಯವೇ ಹೆಚ್ಚು ಎನ್ನುವುದು ಮುಖ್ಯ. ಉಪಮೆ ರೂಪಕ ಶ್ಲೇಷೆ ಪ್ರಾಸಾನುಪ್ರಾಸ ಕವಿಸಮಯಾದಿಗಳ ಪ್ರಾಚೀನ ದೃಷ್ಟಿಕೋನ, ವೈಚಾರಿಕತೆ, ಪ್ರತಿಮೆ, ಭಾಷೆಯಲ್ಲಿ ಭಾವಾಭಿನಯ, ಆಡು ಮಾತಿನ ಲಯ ಇತ್ಯಾದಿಗಳ ಆಧುನಿಕ ದೃಷ್ಟಿಕೋನ -ಯಾವುದರಿಂದ ಬೇಕಾದರೂ ಬಸವಣ್ಣನವರ ವಚನಗಳನ್ನು ಪರಿಶೀಲಿಸಬಹುದು.

ಯಾವುದೇ ನಿಜವಾದ, ಶ್ರೇಯಸ್ಕರವಾದ ಕ್ರಾಂತಿ ಒಂದು ಸಮನ್ವಯವಾಗಿರುತ್ತದೆ. ಬಸವಣ್ಣನವರು ಪ್ರಜ್ಞಾಪೂರ್ವಕವಾಗಿ ಮತ್ತು ಪ್ರತಿಜ್ಞಾ ಪೂರ್ವಕವಾಗಿ ಸಾಧಿಸಿದ ಸಾಮಾಜಿಕ, ಧಾರ್ಮಿಕ ಕ್ರಾಂತಿಯೆಂತೊ ಅಂತೆ, ಬಹುಮಟ್ಟಿಗೆ ಅಪ್ರಜ್ಞಾಪೂರ್ವಕವಾಗಿ ಸಾಧಿಸಿದ ಸಾಹಿತ್ಯಕ ಕ್ರಾಂತಿಯೂ ಒಂದು ಸಮನ್ವಯದ ಫಲವೇ ಆಗಿದೆ.

‘‘ಬಸವಣ್ಣನವರ ವಚನಗಳಿಗೆ ಶಾಸ್ತ್ರಪುರಾಣ – ಆಗಮ ಪರಂಪರೆಯ ಹಿನ್ನೆಲೆಯಿದ್ದರೂ, ಅವರು ತಮಗಿಂತ ಹಿಂದೆ ಹರಹಿರುವ ಕನ್ನಡ ಕಾವ್ಯ ಪರಂಪರೆಯ ಅರಿವೇ ಇಲ್ಲವೆಂಬಂತೆ ವರ್ತಿಸಿರುವುದು ಆಶ್ಚರ್ಯದ ವಿಷಯವಾಗಿದೆ’’[2] ಎಂಬುದೊಂದು ವಿಮರ್ಶೋಕ್ತಿ. ಅದು ಅಷ್ಟೇನೂ ಆಶ್ಚರ್ಯವನ್ನುಂಟುಮಾಡಬೇಕಾಗಿಲ್ಲ. ಬಸವಣ್ಣನವರ ಅಭಿವ್ಯಕ್ತಿ ಮಾಧ್ಯಮದಲ್ಲಿ- ಭಾವಗೀತೆಯಲ್ಲಿ -ಪ್ರೌಢಕಾವ್ಯಗಳ ಸಾಂಪ್ರದಾಯಿಕ ಲಕ್ಷಣಗಳಿಗೆ ಅವಕಾಶವೇ ಇಲ್ಲವೆಂಬುದನ್ನು ಲಕ್ಷಿಸಬೇಕು. ‘‘ಬಸವಣ್ಣನವರು ಭಕ್ತರಾಗಿದ್ದೂ ಅದೇಕೋ ಪ್ರಕೃತಿಯ ಚೆಲುವಿನ ಕಡೆ ಗಮನ ಕೊಡಲಾರದೇ ಹೋದರು’’[3] ಎಂಬುದೂ ಸರಿಯಲ್ಲ. ಬಾಹ್ಯ ಪ್ರಕೃತಿ, ಪ್ರಾಣಿಪ್ರಕೃತಿ ಎಲ್ಲವನ್ನೂ ಅವರು ಅಂತರಂಗ ಪ್ರಕೃತಿಯ ಪ್ರಕಾಶನಕ್ಕೆ ಬಳಸಿಕೊಂಡಿದ್ದಾರೆ.

ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರನೆರೆದರೆ
ಮೇಲೆ ಪಲ್ಲವಿಸಿತ್ತು ನೋಡಾ!

ಎಂಬಲ್ಲಿ ಎಂಥ ವಿಸ್ಮಯದ ಅಭಿನಯವಿದೆ! ಆದರೆ ಇದು ಸ್ವಯಂಪೂರ್ಣವಾಗಿ ನಿಲ್ಲದೆ ಲಿಂಗ-ಜಂಗಮ ಸಂಬಂಧಕ್ಕೆ ದ್ಯೋತಕವಾಗುತ್ತದೆ. ಹಾಗೆ ನೋಡಿದರೆ, ಪ್ರಕೃತಿಗಾಗಿ ಪ್ರಕೃತಿಯ ನಿಲುವು ಬೇರೆ ವಚನಕಾರರಲ್ಲೂ ಇಲ್ಲ.

ಮೂಲಭೂತ ವಿಷಯವೇನೆಂದರೆ, ಕಾವ್ಯಕ್ಕಾಗಿ ಕಾವ್ಯ ಎಂಬ ಧೋರಣೆ ಬಸವಣ್ಣನವರದಲ್ಲ. ಅವರ ರಚನೆ ಅಪರಿಮಿತ ಸಂತೋಷ ಕೊಡುತ್ತದೆ. ಇಲ್ಲದಿದ್ದರೆ ಅದು ಕಾವ್ಯವೆ ಆಗುತ್ತಿರಲಿಲ್ಲ. ಆದರೆ ಕೇವಲ ಸಂತೋಷ ಅದರ ಗಮ್ಯವಲ್ಲ. ಅದು ಬರಿಯ ‘ಚಾರುಕವಿತೆ’ಯಲ್ಲ, ಹಿಡಿತಕ್ಕೇ ಸಿಕ್ಕದ ನವ್ಯಕಾವ್ಯದಂಥ ಜಾರುಕವಿತೆಯೂ ಅಲ್ಲ; ಸರಳವಾಗಿ ಹೇಳುವುದಾದರೆ ಅದು ಅಪ್ಪಟ ಕವಿತೆ. ಅದಕ್ಕೆ ಅನ್ವಯಿಸುತ್ತದೆ ಅರ್ನೆಸ್ಟ್ ರೇಮಂಡ್ ನ ಈ ಮಾತು : ‘‘(ಸಾಹಿತ್ಯ) ಸಿಡಿಮದ್ದಾಗುವ, ಹಳೆಯ ನಂಬಿಕೆ, ಜಡತ್ವಗಳಿಗೆ ದ್ರಾವಕವಾಗುವ, ವಿನಾಶಕ ಶಕ್ತಿಯಾಗುವ ಕಾಲಗಳಿರುತ್ತವೆ, ಇರಬೇಕಾದ್ದೇ. ಆದ್ದರಿಂದ ನಿರೀಕ್ಷಿಸುವ ಮೊದಲನೆಯ ಸಂಗತಿ ಮನೋರಂಜನೆಯಲ್ಲ; ಅಂತೆಯೇ ಸಾಂತ್ವನ ಸಮಾಧಾನಗಳಲ್ಲ.’’[4]

ಸಾಹಿತ್ಯ ರೂಪದ ದೃಷ್ಟಿಯಿಂದ ಬಸವಣ್ಣನವರ ವಚನಗಳು ಭಾವ ಗೀತೆಯ ಪ್ರಕಾರಕ್ಕೆ ಸೇರುತ್ತವೆ. ಆದರೆ ಅಂಥ ಗಟ್ಟಿಯಾದ ಭಾವಗೀತೆಗಳನ್ನು ಅವರಿಗಿಂತ ಹಿಂದೆ ಕನ್ನಡದಲ್ಲಾಗಲಿ ಸಂಸ್ಕೃತದಲ್ಲಾಗಲಿ ಯಾರೂ ರಚಿಸಿರಲಿಲ್ಲ. ಅವು ಬರಿಯ ಭಾವಗೀತೆಗಳೂ ಅಲ್ಲ ಅಥವಾ ಕೇವಲ ಬುದ್ದಿ ಗೀತೆಗಳೂ ಅಲ್ಲ; ‘ಬುದ್ದಿ ಭಾವಗಳ ವಿದ್ಯುದಾಲಿಂಗನ’ವನ್ನು ಅವು ವರಿಷ್ಠ ಪ್ರಮಾಣದಲ್ಲಿ ತೋರಿಕೊಡುತ್ತವೆ. ಹೀಗೆ ಹೇಳುವಾಗ, ವಿಚಾರಗಳು  ಸ್ವಸ್ವರೂಪದಲ್ಲಿ ಕಾವ್ಯವಾಗಿಬಿಡುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ‘‘ದಯವೇ ಧರ್ಮದ ಮೂಲವಯ್ಯ’’, ‘‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’’ ಮುಂತಾದ ಹೇಳಿಕೆಗಳು, ಎಷ್ಟೇ ಸೂತ್ರಪ್ರಾಯವಾಗಿದ್ದರೂ, ಅಕಾವ್ಯವಾಗಿಯೇ ನಿಲ್ಲುತ್ತವೆ; ಇಂಥವನ್ನು ಬಿಡಬಹುದು. ಇನ್ನು, ಎಷ್ಟೋ ವಚನಗಳು ಕಾಂತಾಸಂಮಿತಕ್ಕೆ ನಿದರ್ಶನವಾಗುತ್ತವೆ. ಇವುಗಳಿಗಿಂತಲೂ ಉತ್ಕೃಷ್ಟವಾದ ವಚನಗಳೆಂದರೆ, ವಿಚಾರಗಳನ್ನು ಕರಗಿಸಿ, ಅರಗಿಸಿ, ರಕ್ತವಾಗಿಸಿಕೊಂಡು, ಒಡಲಿನಲ್ಲಿ ಒಳಗೊಂಡಿರುವಂಥವು.

ಮೇಲುನೋಟಕ್ಕೆ ಸರಳ ಗೇಯ ಭಾವಾಲಾಪ ಎನಿಸುವ ಈ ವಚನವನ್ನೆ ತೆಗೆದುಕೊಳ್ಳೋಣ:

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ,
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ
ಇರಿಸು ಕೂಡಲಸಂಗಮದೇವ

ಇದರಲ್ಲೊಂದು ಸೂಕ್ಷ್ಮ ತಾರ್ಕಿಕ ಕ್ರಮವನ್ನು ಗುರುತಿಸಬಹುದು. ವಿಷಯ ಪ್ರಲೋಭನದಲ್ಲಿ ಕಿವಿಯ ಪಾತ್ರ ಕಡೆಯದು; ಅದಕ್ಕಿಂತ ಮುಖ್ಯವಾದುದು ಕಣ್ಣಿನ ಪಾತ್ರ; ಕಿವಿ, ಕಣ್ಣುಗಳನ್ನೊಯ್ದು ವೈವಿಧ್ಯವನ್ನು ಪೂರೈಸತಕ್ಕ ಕಾಲುಗಳ ಪಾತ್ರ ಎಲ್ಲಕ್ಕಿಂತ ಹಿರಿದು. ಆದ್ದರಿಂದಲೇ ಬಸವಣ್ಣನವರು ‘ಹೆಳವನ ಮಾಡಯ್ಯಾ ತಂದೆ’ ಎಂದು ಮೊದಲಿಗೇ ಮೊರೆಯಿಟ್ಟಿರುವುದು. ‘‘(ಬಸವಣ್ಣನ) ವಚನಗಳಿಗೆ ಕಾವ್ಯತ್ವ ಪ್ರಾಪ್ತವಾಗುವುದು ಇದರಿಂದಲೇ, ಈ ಭಾವುಕತನದಿಂದಲೇ’’[5] ಎಂಬ ವಿಮರ್ಶಕರೊಬ್ಬರ ನುಡಿ ಪೂರ್ಣಸತ್ಯವಲ್ಲ. ಅದನ್ನು ‘ಭಾವುಕತೆ’ ಎನ್ನುವುದಕ್ಕಿಂತ ಭಾವ ತೀವ್ರತೆ ಎನ್ನುವುದು ಯುಕ್ತ; ಮಹತ್ವದ ಸಂಗತಿಯೆಂದರೆ ಬಸವಣ್ಣನವರು ಭಾವ ಮಗ್ನರಾದಾಗಲೂ ಬೌದ್ದಿಕ ಎಚ್ಚರವನ್ನು ಕಳೆದುಕೊಳ್ಳುವುದಿಲ್ಲ ಎಂಬುದು.

ಬಸವ ವಚನಗಳಲ್ಲಿ ವ್ಯಕ್ತಿನಿಷ್ಠತೆಯಷ್ಟೇ ಇದ್ದಿದ್ದರೆ ಅವು ಇಷ್ಟು ಗಣ್ಯವಾಗುತ್ತಿರಲಿಲ್ಲ. ಅವುಗಳಲ್ಲಿ ವಸ್ತುನಿಷ್ಠೆಯೂ ಸಮಪ್ರಮಾಣದಲ್ಲಿದೆ. ದಟ್ಟವಾದ ಸಾಮಾಜಿಕ ಪ್ರಜ್ಞೆ, ಸಮಕಾಲೀನ ಪ್ರಜ್ಞೆ ಮತ್ತು ಪರಿಸರ ಪ್ರಜ್ಞೆ ಅವರ ವಚನಗಳನ್ನು ಇತರರ ಕಾವ್ಯಗಳಿಂದ ಬೇರ್ಪಡಿಸುತ್ತವೆ. ಅವುಗಳಲ್ಲಿ ಅನುಸ್ಯೂತವಾದ ಒಂದು ದರ್ಶನವಿದೆ, ತಾತ್ತ್ವಿಕ ನಿಲುವಿದೆ, ಯುಗಧರ್ಮದ ಆವಿಷ್ಕಾರವಿದೆ; ಅವರ ಬಹುಮುಖ ವ್ಯಕ್ತಿತ್ವದಿಂದುಂಟಾದ, ಭಾವಗೀತೆಗಳಲ್ಲಿ ಸುಲಭಸಾಧ್ಯವಲ್ಲದ ಸಂಕೀರ್ಣತೆಯಿದೆ. ಈ ಎಲ್ಲ ಅಂಶಗಳು ಅವರ ವಚನಸಮೂಹವನ್ನು ಭಾವಗೀತ ಪರಿಧಿಯಿಂದ ಪಾರು ಮಾಡಿ ಮಹಾಕಾವ್ಯದ ಹತ್ತಿರಕ್ಕೊಯ್ಯಲು ಹವಣಿಸುತ್ತವೆ. ಆದ್ದರಿಂದ, ಬಸವಣ್ಣನವರದೂ ಭಾವಗೀತೆ, ದಾಸರದೂ ಭಾವಗೀತೆ, ಸರ್ವಜ್ಞನದೂ ಭಾವಗೀತೆ ಎಂದು ಎಲ್ಲರಿಗೂ ಒಂದೇ ಮಣೆ ಹಾಕುವುದರಲ್ಲಿ ಅರ್ಥವಿಲ್ಲವೆನಿಸುತ್ತದೆ. ಬಸವಣ್ಣನವರ ವಚನಗಳು ಭಾವಗೀತವಾಗಿಯೂ, ‘ಮಹಾ’ ಎಂಬ ವಿಶೇಷಣಕ್ಕೆ ಯೋಗ್ಯವಾಗುತ್ತವೆ.

ಧರ್ಮ, ಕಾವ್ಯಧರ್ಮಗಳ ಸಮನ್ವಯದ ಆದರ್ಶವನ್ನು ಮೊದಲು ಪ್ರತಿಪಾದಿಸಿದವನು ಪಂಪ. ಅದರಲ್ಲಿ ಅವನು ಸಂಪೂರ್ಣ ಯಶಸ್ವಿಯಾಗಿದ್ದಾನೆಂದು ಹೇಳುವಂತಿಲ್ಲ. ಪಂಪಾದಿ ಕವಿಗಳಲ್ಲಿ ಧರ್ಮ ಕಾವ್ಯಧರ್ಮಗಳಿಗಿಂತ ವಿದ್ವತ್ತೆ ಎದ್ದು ಕಾಣುತ್ತದೆ. ನಿಜವಾಗಿ ಎರಡನ್ನೂ ಒಂದು ಮಾಡಿದವರು ಬಸವಣ್ಣನವರು. ಅವರ ವಚನಗಳಲ್ಲಿ ‘‘religious essence’’ ಇದೆ; ಅದಕ್ಕೆ ಅಭಿನ್ನವಾಗಿ ‘‘Poetic essence’’ ಇದೆ.[6]

ಈ ವಚನಗಳಲ್ಲಿ ಆತ್ಮಪರೀಕ್ಷೆ, ಧರ್ಮಪರೀಕ್ಷೆ, ಸಮಾಜ ಪರೀಕ್ಷೆಗಳ ಮುಕ್ಕಣ್ಣ ನೋಟವಿದೆ. ವಾಸ್ತವವಾಗಿ, ಇವು ಪರಸ್ಪರ ಪೂರಕ. ಇವುಗಳಲ್ಲಿ, ಆತ್ಮಪರೀಕ್ಷೆ ನಿರೀಕ್ಷೆಗಳಿಗೆ ಸಂಬಂಧಿಸಿದ ವಚನಗಳೇ ಸಾಹಿತ್ಯಕವಾಗಿ ಅತ್ಯುನ್ನತ ಸ್ತರದವು. ಆದರೆ ಇಲ್ಲಿಯೂ ಬಸವಣ್ಣನವರ ದೃಷ್ಟಿ ಸಮಾಜ ಸಂಮುಖವಾಗಿಯೇ ಇದೆಯೆಂಬುದನ್ನು ಮರೆಯಬಾರದು. ಅವರ ಮಾತು ತೀರ ವೈಯಕ್ತಿಕವಾಗಿ ಕಾಣುವಾಗಲೂ ವ್ಯಕ್ತಿಯಾಚೆಗೆ ಚಾಚಿರುತ್ತದೆ. ಸಮಾಜವನ್ನು ಸುಧಾರಿಸುವುದಕ್ಕೆ ಮುನ್ನ ತಮ್ಮನ್ನು ತಾವು ಸುಧಾರಿಸಿಕೊಳ್ಳಬೇಕು ಎಂಬುದು ಬಸವಣ್ಣನವರ ಉದ್ದೇಶವಾಗಿತ್ತು. ಆ ಆತ್ಮಸುಧಾರಣೆಯ ಹಾದಿಯಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟ ಪಾಡು ಪರಿತಾಪಗಳನ್ನು ಅವರ ವಚನಗಳು ಅಸಾಧಾರಣ ರೀತಿಯಲ್ಲಿ ಹಿಡಿದಿಟ್ಟಿವೆ.

ಅಮೂರ್ತವಾದುದನ್ನು ಮೂರ್ತವಾಗಿಸುವುದರಲ್ಲಿ ಬಸವಣ್ಣನವರ ಕಲೆಗೆ ತುಂಬಾ ಆಸಕ್ತಿ; ಅದೇ ಅವರ ಅಗ್ಗಳಿಕೆ. ಏನನ್ನೇ ಆಗಲಿ ಅದು ಒಂದು ಘನವಾದ ಅನುಭೂತಿಯನ್ನಾಗಿ ಮಾಡಿಕೊಡಬಲ್ಲುದು. ಸಂಸಾರದ ಭಯಂಕರತೆಯನ್ನು ‘‘ಕಪ್ಪೆ ಸರ್ಪನ ನೆಳಲಲ್ಲಿ ಇಪ್ಪಂತೆ ಎನಗಾಯಿತ್ತಯ್ಯಾ’’ ಎಂಬುದಕ್ಕಿಂತ ಪರಿಣಾಮಕಾರಿಯಾಗಿ ಮೂರ್ತೀಕರಿಸಿ ಹೇಳುವುದು ಹೇಗೆ ಸಾಧ್ಯ? ಇಂಥ ಕಡೆ ಬಸವಣ್ಣನವರು ಕವಿ, ಚಿತ್ರಕಾರ ಇಬ್ಬರೂ ಆಗಿ ಕಾಣುತ್ತಾರೆ. ಸಾಹಿತ್ಯ ಇತರ ಕಲೆಗಳ ಗುಣಗಳನ್ನು ಮೈಗೂಡಿಸಿಕೊಂಡಷ್ಟೂ ದೊಡ್ಡದಾಗುತ್ತದೆ.

ಪ್ರಾಚೀನ ಕಾವ್ಯ ಪದ್ಧತಿಗೆ ಅಪರಿಚಿತವಾದ ಪ್ರಜ್ಞಾಪೂರ್ವಕ ಪ್ರತಿಮಾ ನಿರ್ಮಾಣ ಬಸವಣ್ಣನವರ ವೈಶಿಷ್ಟ್ಯಗಳಲ್ಲೊಂದು. ಪಂಪನ ವೈಶಂಪಾಯನ ಸರೋವರ ವರ್ಣನೆಯಲ್ಲಿ ಪ್ರತಿಮೆಯನ್ನು ನೋಡುತ್ತೇವೆ; ಆದರೆ ಅದು ಕವಿಯ ಅರಿವಿಲ್ಲದೆಯೆ ಉದ್ಭವಿಸಿದ್ದು; ಧ್ವನಿಯನ್ನು ಗಮನಿಸದಿದ್ದರೂ ವಾಚ್ಯಾರ್ಥ ಸ್ತರದಲ್ಲೆ ಸಂಗತವಾಗತಕ್ಕದ್ದು. ಆದರೆ ಬಸವಣ್ಣನವರ ಈ ಪ್ರತಿಮೆ ಹಾಗಲ್ಲ:

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ಹೊಸ್ತಿಲೊಳಗೆ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿತುಂಬಿ, ಮನದಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!

ಇದನ್ನು ವಾಚ್ಯಾರ್ಥದಲ್ಲಿ ತೆಗೆದುಕೊಂಡರೆ, ಗ್ರಾಹ್ಯವಾಗುವುದೆ ಇಲ್ಲ. ಏಕೆಂದರೆ ಮನೆಯ ವರ್ಣನೆಗೆ ಇಲ್ಲೇನೂ ಕೆಲಸವಿಲ್ಲ. ಬಸವಣ್ಣನವರು ಉದ್ದೇಶಪೂರ್ವಕವಾಗಿಯೆ ಯೋಜಿಸಿದ ಪ್ರತಿಮೆ ಇದೆಂಬುದು ಸ್ಪಷ್ಟ.

ಇದರಲ್ಲಿ ಬಂದಿರುವ ‘‘ತನುವಿನೊಳಗೆ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ’’ ಎಂಬುದು ಪ್ರತಿಮೆಯ ಧ್ವನಿಯನ್ನು ವಾಚ್ಯಗೊಳಿಸಿದಂತೆ ತೋರುತ್ತದೆ. ಆದರೆ ಇಂಥ ವಾಚ್ಯತೆ ದೋಷವೇನೂ ಆಗಲಾರದು. ಏಕೆಂದರೆ ಕವಿ ಇಂತಹ ಕೀಲಿಕೈಗಳನ್ನು ಕೊಡದಿದ್ದರೆ ಅವನ ವಿವಕ್ಷೆ ಏನೆಂಬುದೇ ಅರ್ಥವಾಗದಿರಬಹುದು. ಬಸವಣ್ಣನವರು ಎಷ್ಟೋ ಕಡೆ ಹೀಗೆ ಮಾಡುತ್ತಾರೆ. ಅವರು ಮೂಲತಃ ಕವಿಯಲ್ಲ, ಸಾಮಾನ್ಯರನ್ನು ಅವರು ಉದ್ದೇಶಿಸಿದ್ದಾರೆ ಮುಂತಾದ ವಿವರಣೆಗಳು ಅನಗತ್ಯ ಎನಿಸುತ್ತದೆ. ಕಾವ್ಯದಲ್ಲಿ ವಾಚ್ಯತೆ ಬೇಡವೇ ಬೇಡ ಎಂದು ನಿಯಮ ಮಾಡುವಂತಿಲ್ಲ. ಕೆಲವು ಸಂದರ್ಭಗಳಲ್ಲಿ ಅದು ಬೇಕು; ಎಷ್ಟರಮಟ್ಟಿಗೆ ಎಂಬುದು ಔಚಿತ್ಯಕ್ಕೆ ಬಿಟ್ಟದ್ದು.

ಬಸವಣ್ಣನವರು ವೇದೋಪನಿಷತ್ತುಗಳಿಂದ ಕೆಲವೊಂದು ಅಭಿಪ್ರಾಯವನ್ನು ಸ್ವೀಕರಿಸಿರುವುದುಂಟು. ಆದರೆ ಅದನ್ನು ಅವರು ಹೇಗೆ ಸ್ವೋಪಜ್ಞತೆಯುಳ್ಳ ಕಾವ್ಯ ಮಾಡುತ್ತಾರೆ ಎಂಬುದಕ್ಕೆ ಈ ವಚನ ಭಾಗವೊಂದು ಉದಾಹರಣೆ:

ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಸವಯ್ಯ!

‘‘ದೇಹೋ ದೇವಾಲಯಃ ಪ್ರೋಕ್ತಃ’’ ಎಂಬ ಭಾವ ಉಪನಿಷತ್ತಿನದು, ದಿಟ. ಆದರೆ ಅದರ ಭಂಗಿ ಬಸವಣ್ಣನವರದು. ಮಣಿಯದ ತಲೆ, ದಣಿಯದ ಕಾಲು, ಸೆಟೆದ ಎದೆಗಳ ಒಬ್ಬ ವ್ಯಕ್ತಿಯ ಧೀರೋನ್ನತ ಚಿತ್ರ ಇಲ್ಲಿ ಮೂಡಿ ನಿಂತಿದೆ. ಮುದುಡಿ ಬಿದ್ದುಕೊಂಡವನೂ ‘ನನ್ನ ದೇಹವೆ ದೇವಾಲಯ’ ಎನ್ನಬಹುದು; ಆದರೆ ‘ಕಾಲೇ ಕಂಬ, ಶಿರವೇ ಹೊನ್ನ ಕಳಸ’ ಎನ್ನಲಾರ.

ಯಾವುದೇ ಕಾವ್ಯ ನಮ್ಮ ಮನಸ್ಸುಗಳಲ್ಲಿ ಎಷ್ಟರಮಟ್ಟಿಗೆ ಕೆಲವು ಹಳಿಗಳನ್ನು ನಿರ್ಮಿಸುತ್ತದೆ, ನಾಲೆಗಳನ್ನು ತೋಡುತ್ತದೆ. ಎಂಬುದರ ಮೇಲೆ ಅದರ ಯಶಸ್ಸು ನಿಂತಿರುತ್ತದೆ. ಗಾದೆಗಳು ಈ ಕೆಲಸವನ್ನು ಚೆನ್ನಾಗಿ ಮಾಡುವುದರಿಂದಲೇ ಅವು ಅಷ್ಟೊಂದು ಜನಪ್ರಿಯವಾಗಿರತಕ್ಕದ್ದು. ಬಸವ, ಕುಮಾರವ್ಯಾಸರಂಥವರ ಉಕ್ತಿಗಳಿಗೂ ಈ ಶಕ್ತಿಯುಂಟು. ಅವು ಅವರ ಭಾವಾಲೋಚನೆಗಳ ಫಲವಾಗಿ ಹೊಮ್ಮಿ, ನಮ್ಮ ಭಾವಾಲೋಚನೆಗಳಿಗೆ ಸಿದ್ಧ ಪ್ರಣಾಳಿಕೆಗಳಾಗಿಬಿಡುತ್ತವೆ. ನಮ್ಮ ಅನಿಸಿಕೆಗಳನ್ನು, ಲೋಕದ ಬಗೆಗಿನ ನಮ್ಮ ಪ್ರತಿಕ್ರಿಯೆಗಳನ್ನು ಅವರ ಮಾತುಗಳಲ್ಲಿಯೇ ನಾವು ಅಭಿವ್ಯಕ್ತಿಸುತ್ತೇವೆ.

ಈ ಮಾನದಂಡವನ್ನು ಅನ್ವಯಿಸಿ ನೋಡಿದರೂ ಬಸವಣ್ಣನವರ ವಚನಗಳ ಕಸುವು ವೇದ್ಯವಾಗುತ್ತದೆ. ಅವರ ಸೂಳ್ನುಡಿಗಳು ನಮ್ಮ ಬದುಕಿನ ಒಂದು ಭಾಗವೆ ಆಗಿಹೋಗಿವೆ.

‘‘ಮರಕ್ಕೆ ಎಲೆ ಮೂಡುವಷ್ಟೆ ಸಹಜವಾಗಿ ಮೂಡಬೇಕು ಕವಿತೆ’’ ಎಂಬುದು ಕೀಟ್ಸ್ ಕವಿಯ ನುಡಿ. ಬಸವಣ್ಣನವರ ಬದುಕು ಒಂದು ಕಲ್ಪವೃಕ್ಷ; ಅದರ ಎಲೆಗಳು ಅವರ ವಚನಗಳು. ಇಡೀ ವಚನ ವಾಙ್ಮಯ ಒಂದು evergreen forest.

ಬಸವಣ್ಣನವರು ಸ್ವಪ್ನಲೋಲರಲ್ಲ; ಅವರದು ಸ್ವ-ರತಿಯಲ್ಲ. ಈ ನೆಲದ ಮೇಲೆಯೆ ಒಂದು ಸ್ವರ್ಗವನ್ನು ಕಟ್ಟುವುದಕ್ಕಾಗಿ ಅವರು ಹೋರಾಡಿದರು. ಆ ಹೋರಾಟದ ವ್ಯಥೆ, ಕಥೆಗಳಿವೆ ಅವರ ವಚನಗಳಲ್ಲಿ. ‘‘The work of art is an act as well’’ ಎಂಬ ಸಾರ್ತ್ರೆಯ ಉಕ್ತಿ ಅವುಗಳಿಗೆ ಒಪ್ಪುತ್ತದೆ. ಬಸವೇಶ್ವರರ ಮಾತು ಬೇರೆಯಲ್ಲ, ಕೃತಿ ಬೇರೆಯಲ್ಲ.

‘‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’’ ಎಂದರು ಬಸವಣ್ಣ. ಸ್ಥಾವರಗಳೆಷ್ಟೋ ಅಳಿದು ಹೋಗಿವೆ, ಅಳಿಯುತ್ತಿವೆ; ಆದರೆ ಲಿಂಗ-ಜಂಗಮಗಳ ತೇಜವನ್ನು ತಾಳಿಕೊಂಡಿರುವ ಬಸವಣ್ಣನವರ ವಾಣಿಗೆ ಅಳಿವಿಲ್ಲ. ಅವರು ನಿರ್ಜೀವ ಸಂಗೀತವನ್ನು ಹಾಡಬಯಸಲಿಲ್ಲ; ‘‘ಎನ್ನ ಕಾಯವ ದಂಡಿಗೆಯ ಮಾಡಯ್ಯ’’ ಇತ್ಯಾದಿಯಾಗಿ ಬೇಡಿಕೊಂಡು, ತಾವೇ ಜೀವ ಸಂಗೀತವಾಗಬಯಸಿದರು. ಪರಿಣಾಮವಾಗಿ ಕನ್ನಡಕ್ಕೆ ಲಭಿಸಿದ್ದು ದೇವ ಸಂಗೀತ!

ಇಂದು ದಲಿತ ಚಳುವಳಿಯೊಂದು ನಾಡಿನಾದ್ಯಂತ ಮೈಚಾಚಿದೆ; ಸಾಹಿತ್ಯರಂಗದಲ್ಲೂ ಪ್ರತಿಫಲಿಸಿದೆ. ಈ ತಿರುವಿನಲ್ಲಿ ಬಸವ ವಚನಗಳನ್ನು ಮೆಚ್ಚಿಕೊಂಡರೆ ಸಾಲದು; ಅವುಗಳಿಂದ ಕಲಿಯಬೇಕಾದ್ದೂ ಬಹಳಷ್ಟಿದೆ.

[1] ಜಿ.ಎಸ್.ಶಿವರುದ್ರಪ್ಪ, ‘ಅನುರಣನ’, ಪು.೨೬

[2] ಅಲ್ಲೇ

[3] ಅದೇ, ಪು.೨೩

[4] ‘Through Literature to Life’, Pp.23 ‘‘Art is not a Pleasure, a solace, or an amusement, Art is a great matter’’ಎಂಬ ಟಾಲ್‌ಸ್ಟಾಯ್ ಅವರ ಮಾತನ್ನೂ ನೆನೆಯಬಹುದು.

[5] ಎಂ.ಚಿದಾನಂದಮೂರ್ತಿ, ‘ವಚನ ಸಾಹಿತ್ಯ’, ಪು.೬೮

[6] ಮೊದಲನೆಯ ಮಾತು ಟಾಲ್‌ಸ್ಟಾಯ್ ಅವರದು; ಎರಡನೆಯದು ಸಿ.ಡೇ.ಲೂಯಿಯದು.