ಕನ್ನಡ ನಾಡಿನ ಧರ್ಮ, ಸಾಹಿತ್ಯಗಳ ಬಾಂದಳದಲ್ಲಿ ಹೊಸ ಬೆಳಗೊಂದನ್ನು ಮೂಡಿಸಿದವರು ಹನ್ನೆರಡನೆಯ ಶತಮಾನದ ಶಿವಶರಣರು. ಅದರೆ ಈ ಬೆಳಗಿಗೆ ಮುನ್ನ ಉಷಃಕಾಲವೊಂದಿತ್ತು; ಅದನ್ನು ಪ್ರತಿನಿಧಿಸುತ್ತಾನೆ, ದೇವರ ದಾಸಿಮಯ್ಯ. ಅವನು ವೀರಶೈವಧರ್ಮ ಹಾಗೂ ವಚನ ಸಾಹಿತ್ಯದ ಹರಿಕಾರನಾಗಿ, ಮೂಲಪ್ರವರ್ತಕರಲ್ಲೊಬ್ಬನಾಗಿ ಅತ್ಯಂತ ಗಣ್ಯನಾಗಿದ್ದಾನೆ. ‘‘ಆದ್ಯರ ವಚನ ಪರುಷ ಕಂಡಯ್ಯ’’ ಎಂದರು ಬಸವಣ್ಣನವರು. ದಾಸಿಮಯ್ಯ ಅಂಥ ಒಬ್ಬ ಆದ್ಯ. ಅವನ ವಚನದ ಪರುಷ ಬಸವಣ್ಣನವರ ವಚನವನ್ನೂ ಸ್ಪರ್ಶಿಸಿದೆ.[1] ಅವನು ಮಹಾಸತ್ವನೆಂಬುದಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತ ಬೇಕಾಗಿಲ್ಲ.

ದೇವರ ದಾಸಿಮಯ್ಯನಿಗೆ ದೇವಾಂಗ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದೂ ಹೆಸರುಗಳುಂಟು. ಆದಿವಚನಕಾರನ ಈ ‘ದೇವಾಂಗ’, ‘ಜೇಡರ’ ಎಂಬ ವಿಶೇಷಣಗಳು ಅವನಿಗೆ ಮಾತ್ರವಲ್ಲದೆ ಇಡೀ ವಚನ ವಾಙ್ಮಯಕ್ಕೆ ಔಚಿತ್ಯ ಪೂರ್ಣವಾಗಿ ಅನ್ವಯಿಸುತ್ತವೆ. ವಚನ ಸಾಹಿತ್ಯ ಮರ್ತ್ಯವನ್ನು ತಿರಸ್ಕರಿಸದಿದ್ದರೂ ಅಮರ್ತ್ಯವನ್ನೆ ತನ್ನ ನಿಲುಬಿಂದು ವಾಗಿಟ್ಟುಕೊಂಡು ಹೊಮ್ಮಿದ ದೇವಾಂಗವಾಗಿದೆ; ಇತರ ಹಲವು ಕೃತಿಗಳಂತೆ ರಾಜನ ಹೊಗಳಿಕೆಗಾಗಿ ಹುಟ್ಟಿದ ರಾಜಾಂಗವಾಗಿಲ್ಲ ಅಥವಾ ರಾಗಾಂಗವೂ ಆಗಿಲ್ಲ. ವಸ್ತುವನ್ನಾಗಲಿ ಅನುಭವವನ್ನಾಗಲಿ ಬೇರೆಡೆಯಿಂದ ಕಡ ತರದೆ, ಜೇಡನಂತೆ ತಮ್ಮ ಒಡಲ ಧಾತು ದ್ರವ್ಯಗಳಿಂದಲೆ ಸಾಹಿತ್ಯ ನಿರ್ಮಾಣ ಮಾಡಿದವರು ವಚನಕಾರರು. ಈ ಸಾಹಿತ್ಯಪ್ರಕಾರದ ವಿಶಿಷ್ಟತೆ, ಮಹತ್ವಗಳನ್ನು ಈ ದೇವಾಂಗಸ್ವರೂಪ ಹಾಗೂ ಜೇಡತನದಲ್ಲಿ ಗುರುತಿಸ ಬಹುದೆನಿಸುತ್ತದೆ.

ದಾಸಿಮಯ್ಯನ ಉಪಲಬ್ಧ ವಚನಗಳ ಸಂಖ್ಯೆ ಕಡಿಮೆಯಾದರೂ, ಅವು ಅವನನ್ನೊಬ್ಬ ಉತ್ತಮ ಕವಿಯನ್ನಾಗಿ ತೋರಿಸುತ್ತವೆ. ಕಾವ್ಯಗುಣದ ದೃಷ್ಟಿಯಿಂದ ಮತ್ತಾವ ವಚನಕಾರನಿ ಗಾದರೂ ಅವನು ಸರಿದೊರೆಯಾಗಿ ನಿಲ್ಲುತ್ತಾನೆ. ಅವನ ವಚನಗಳಲ್ಲಿ ಸ್ವೋಪಜ್ಞವಾದ ಭಾವಾನುಭವಗಳು ವೈಚಾರಿಕತೆಯ ಬೆಂಬಲವನ್ನು ಕಳೆದುಕೊಳ್ಳದೆ ಸಮರ್ಥವಾದ ಭಾಷಾ ಮಾಧ್ಯಮದಲ್ಲಿ ಪ್ರಣೀತವಾಗಿವೆ. ಅವು ಮುಂದೆ ಹುಲುಸಾಗಿ ಫಲಿಸಿದ ವಚನವಾಙ್ಮಯಕ್ಕೆ ಮುನ್ನುಡಿಯೂ ಕನ್ನಡಿಯೂ ಆಗಿವೆಯೆಂದರೆ ತಪ್ಪಾಗಲಾರದು. ‘‘ದೇವರ ದಾಸಿಮಯ್ಯನ ವಚನಗಳು ಸಾಹಿತ್ಯದೃಷ್ಟಿಯಿಂದ ಬಹು ಉತ್ತಮ ವರ್ಗಕ್ಕೆ ಸೇರತಕ್ಕುವಾಗಿವೆ’’ ಎಂಬ ಡಿ.ಎಲ್.ಎನ್. ಅವರ ಮಾತನ್ನು ರಂ.ಶ್ರೀ. ಮುಗಳಿಯವರು ತಮ್ಮ ಸಾಹಿತ್ಯಚರಿತ್ರೆಯಲ್ಲಿ ಪ್ರತಿಭಟಿಸುವ ಅಗತ್ಯವಿರಲಿಲ್ಲ.

ಭಗವಂತನ ನಿಲುವನ್ನು ದಾಸಿಮಯ್ಯ ಹಲವಾರು ಉಪಮೆ ದೃಷ್ಟಾಂತಗಳಿಂದ ಬಣ್ಣಿಸಿದ್ದಾನೆ. ಆ ಪರತತ್ವ ಹೇಗೆ ಅವ್ಯಕ್ತವಾಗಿ ಅಗೋಚರವಾಗಿದೆ ಎಂಬುದನ್ನೂ ಸಾಧನೆ ಯಿಂದ ಅದರ ಸಾಕ್ಷಾತ್ಕಾರ ಶಕ್ಯ ಎಂಬುದನ್ನೂ ವಿಶೇಷ ಪರಿಣಾಮಕಾರಿಯಾಗಿ ನಿರೂಪಿಸುತ್ತವೆ ಈ ವಚನಗಳು:

ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆ,
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ,
ಶರೀರದೊಳಗೆ ಆತ್ಮವ ಆರು ಕಾಣದಂತಿರಿಸಿದೆ,
ನೀನು ಬೆರಸಿದ ಭೇದಕ್ಕೆ ಬೆರಗಾದೆನಯ್ಯ

ಸಣ್ಣ ನನೆಯೊಳಗಣ ಪರಿಮಳವ
ಹೊರಸೂಸಿ ಇದಿರಿಂಗರುಹಿಸಬಲ್ಲುದೆ ವಾಯು?
ಕೊಡಗೂಸಿನೊಳಗಣ ಮೊಲೆ ಮುಡಿಯ
ಹಡೆದ ತಾಯಿತಂದೆಗಳೆಂದರೆ
ಕಾಣಿಸಿಕೊಡಬಲ್ಲರೆ ಕಾಂಬವರ ಕಣ್ಣಿಂಗೆ?
ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು

ಎಣ್ಣೆಯಿದ್ದೂ ಎಳ್ಳು ನೆನೆಯದ ಭೇದವ
ಕಿಚ್ಚಿದ್ದೂ ಕಲ್ಲು ಸಿಡಿಯದ ಭೇದವ
ಕಾಮವಿದ್ದೂ ಕನ್ನೆಯನುಭವಿಸದ ಭೇದವ
ಪರವಿದ್ದೂ ಪ್ರಾಣನ ಪ್ರಕೃತಿಯ ಹರಿಯದ ಭೇದವ
ನರರೆತ್ತ ಬಲ್ಲರೈ

ಈ ಮೂರೂ ವಚನಗಳ ಭಾವ ಒಂದೇ ಆಗಿದ್ದರೂ ಭಂಗಿ ಬೇರೆ ಬೇರೆಯಾಗಿರುವುದನ್ನು ಗಮನಿಸಬಹುದು. ದೃಷ್ಟಾಂತಗಳ ಜೊತೆಗೆ ಅಭಿವ್ಯಕ್ತಿಯೂ ಭಿನ್ನ ಭಿನ್ನವಾಗಿರುವುದರಿಂದ, ಇವು ಪರಸ್ಪರ ನಕಲುಗಳಾಗದೆ ಪ್ರತಿಯೊಂದೂ ತನ್ನತನ ಪಡೆದುಕೊಂಡಿವೆ. ‘‘ಕೊಡಗೂಸಿನೊಳಗಣ ಮೊಲೆಮುಡಿಯ ಹಡೆದ ತಾಯಿತಂದೆಗಳೆಂದರೆ ಕಾಣಿಸಿಕೊಡ ಬಲ್ಲರೆ?’’ ಎಂಬುದಂತೂ ಅತ್ಯಂತ ನವೀನ ಸುಂದರವಾದ ದೃಷ್ಟಾಂತವಾಗಿದೆ. ಅಶ್ಲೀಲದ ಲವಲೇಶವೂ ಇಲ್ಲದಂತೆ ಮೊಲೆ ಮುಡಿಗಳನ್ನು ಭಾಗವತ ಸ್ವರೂಪದ ಬಣ್ಣನೆಗೆ ಬಳಸಿಕೊಂಡಿದ್ದಾನೆ, ದಾಸಿಮಯ್ಯ. ಈ ಉದಾತ್ತೀಕರಣ ಮುಂದಿನ ವಚನಕಾರರಲ್ಲೂ ಕಂಡುಬರುತ್ತದೆ. ‘‘ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು’’ ಎಂಬ ಮಾತು ವ್ಯಾಖ್ಯಾನಾತ್ಮಕ ವಾಯಿತು ಎನಿಸುತ್ತದೆ. ದಾಸಿಮಯ್ಯನಲ್ಲಿ ಹೀಗೆ ಧ್ವನಿಯನ್ನು ವಾಚ್ಯವಾಗಿಸುವ ಪ್ರವೃತ್ತಿ ಅಲ್ಲಲ್ಲಿ ಕಾಣುತ್ತದೆ. ಬಸವಣ್ಣನವರಲ್ಲಿ ಸಾಮಾನ್ಯವಾಗಿ ಹೀಗಾಗುವುದಿಲ್ಲ. ‘‘ಕನ್ನೆಯ ಸ್ನೇಹದಂತೆ ಇದ್ದಿತ್ತು’’ ಎಂಬ ಬಸವಣ್ಣನವರ ಉಕ್ತಿಯನ್ನೂ ‘‘ಕಾಮವಿದ್ದೂ ಕನ್ನೆಯನುಭವಿಸದ ಭೇದವ’’ ಎಂಬ ದಾಸಿಮಯ್ಯನ ಉಕ್ತಿಯನ್ನೂ ಹೋಲಿಸಿ ನೋಡಿದರೆ ಅಂತರ ಸ್ಪಷ್ಟವಾಗುತ್ತದೆ. ದಾಸಿಮಯ್ಯನಿಂದಲೇ ಬಸವಣ್ಣನವರು ಆ ದೃಷ್ಟಾಂತವನ್ನು ಸ್ವೀಕರಿಸಿದ್ದರೂ, ಅದನ್ನು ಮತ್ತೂ ಧ್ವನಿಪೂರ್ಣವಾಗಿ ಬಳಸಿಕೊಂಡಿದ್ದಾರೆ. ಆದರೆ ಧ್ವನಿಯನ್ನು ವಾಚ್ಯ ಮಾಡಿದಾಕ್ಷಣ ಕವಿತೆಯ ಶ್ರೇಷ್ಠತೆ ಹೋಗಿಬಿಡುವುದಿಲ್ಲ ಎಂಬುದನ್ನು ನೆನಪಿಡಬೇಕು.

ಭಕ್ತಿನಿಗೂ ಭಗವಂತನಿಗೂ ನಡುವೆ ಮಾಯಾಮೋಹದ ಪಟಲ ಹರಡಿ ನಿಂತಾಗ ಪರಸ್ಪರ ಅರಿವು ಹೇಗೆ ಇಲ್ಲವಾಗುತ್ತದೆ ಎಂಬುದನ್ನು ಬಿತ್ತರಿಸುವ ಈ ವಚನ ಅತ್ಯರ್ಪೂವಾದ, ಆದರೆ ಎಲ್ಲರ ಅನುಭವಕ್ಕೂ ತಿಳಿವಿಗೂ ಸುಲಭವಾಗಿ ನಿಲುಕುವಂಥ ದೃಷ್ಟಾಂತವನ್ನೊಳಗೊಂಡಿದ್ದು ನಮ್ಮನ್ನು ಆಶ್ಚರ್ಯಪುಲಕಿತರನ್ನಾಗಿ ಮಾಡುತ್ತದೆ:

ತಾಯ ಗರ್ಭದಲಿಪ್ಪ ಶಿಶು ತಾಯ ಕುರುಹನ್ನರಿಯದು;
ತಾಯಿ ಶಿಶುವಿನ ಕುರುಹನೆಂದೂ ಅರಿಯಳು,
ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು;
ದೇವರು ಭಕ್ತರನೆಂದೂ ಅರಿಯನು ಕಾಣಾ

ಹಿಂದಿನ ವಚನಗಳಂತೆ ಈ ವಚನದ ಅರ್ಥಪರಿಧಿಯೂ ಭವಿಷ್ಯಗ್ರಾಸಿಯಾದುದು. ಸದ್ಯಕ್ಕಲ್ಲದಿದ್ದರೂ ಮುಂದೆ ಆತ ವ್ಯಕ್ತವಾಗಲೇಬೇಕು, ಆಗುತ್ತಾನೆ; ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು-ಎಂಬ ಸತ್ಯವನ್ನು ಇಲ್ಲಿನ ದೃಷ್ಟಾಂತ ಎಂಥ ಪಾಮರನಿಗೂ ಮನದಟ್ಟು ಮಾಡಿಕೊಡುತ್ತದೆ.

ಭಗವನ್ಮಹಿಮೆಯನ್ನು ಕೊಂಡಾಡುವಾಗ ದಾಸಿಮಯ್ಯ ಆಡುವ ಮಾತುಗಳಲ್ಲಿ ವೈಜ್ಞಾನಿಕ ದೃಷ್ಟಿ ಮತ್ತು ಅದನ್ನು ಮೀರಿದ ಒಂದು ನೆಲೆಯಲ್ಲಿ ಉಂಟಾಗುವ ವಿಸ್ಮಯ ಎರಡೂ ವ್ಯಕ್ತವಾಗುತ್ತವೆ:

ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ,
ಅಂಬರಕ್ಕೆ ಗದ್ದುಗೆ ಬೋದಿಗೆ ಇಲ್ಲದಂತಿರಿಸಿದೆ,
ಎಲೆ ಮೃಡನೆ, ನೀನಲ್ಲದೆ ಉಳಿದ ದೈವಂಗಳಿಗಹುದೆ

‘‘ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ’’ ಎಂಬುದು ಬರಿಯ ಕಲ್ಪನೋಕ್ತಿಯಲ್ಲ; ಪ್ರಪಂಚ ಜ್ಞಾನದಿಂದ ಬಂದದ್ದು. ಭೂಮಿಯಲ್ಲಿ ಮೂರು ಪಾಲು ನೀರು, ಒಂದು ಪಾಲು ಮಾತ್ರ ನೆಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಲೋಕಸತ್ಯ ದಾಸಿಮಯ್ಯ ನಿಗೆ ದೈವೀಶಕ್ತಿಯ ಪಾರಮ್ಯವನ್ನು ಸ್ಥಾಪಿಸುವ ನಿದರ್ಶನವಾಗಿ ತೋರುತ್ತದೆ. ಮೂರು ಪಾಲು ನೀರಿನಲ್ಲಿ ಒಂದು ಪಾಲು ನೆಲ ಕರಗದೆ ಸ್ಥಿರವಾಗಿರುವುದಾದರೂ ಹೇಗೆ? ಯಾವುದೊ ಅವ್ಯಕ್ತ ಶಕ್ತಿ ಇದಕ್ಕೆ ಕಾರಣ. ವಿಜ್ಞಾನಿಗಳೂ ಆ ಶಕ್ತಿಯನ್ನು ಒಂದಿಲ್ಲೊಂದು ರೀತಿಯಲ್ಲಿ ಒಪ್ಪುತ್ತಾರೆ. ಅವರದು ಬುದ್ದಿಯ ಮಾರ್ಗವಾದರೆ ಕವಿಯದು ಭಾವದ ಮಾರ್ಗ. ಜ್ಞಾನ ವಿಜ್ಞಾನಗಳು ವಿಸ್ಮಯದಲ್ಲಿ ಪರ್ಯವಸಾನಗೊಂಡಾಗ ಕಾವ್ಯಾನುಭವಗಳಾಗುತ್ತವೆ ಎಂಬುದನ್ನು ದಾಸಿಮಯ್ಯನ ಈ ವಚನಗಳಲ್ಲಿ ನೋಡುತ್ತೇವೆ. ವಿಸ್ಮಯದೊಡನೆ ದೈವಪ್ರಜ್ಞೆ ಅಭಿನ್ನವಾಗಿ ಕಲೆತಿದೆ.

ದಾಸಿಮಯ್ಯನ ವೈಜ್ಞಾನಿಕ ಮನೋಧರ್ಮದ ದೃಷ್ಟಿಯಿಂದ ಇನ್ನೂ ಉತ್ತಮವಾದ ವಚನವೊಂದನ್ನು ಉದಾಹರಿಸಬಹುದು:

ಸರ್ಪನು ಕೂರ್ಮನು ದಿಕ್ಕರಿಗಳೆಂಟು
ಭೂಮಿಯ ಹೊತ್ತಿಹರೆಂಬುದು ಅಹರ್ನಿಶ
ಹೊತ್ತಿಪ್ಪವರಿಗೆ ಅತ್ತಲಾಧಾರವೇನು ಇತ್ತಲಾಧಾರವೇನು?
ಉತ್ತರಗೊಡುವವರಿಗೆ ಇಕ್ಕುವೆ ಮುಂಡಿಗೆಯ
ಎತ್ತುವರುಳ್ಳರೆ ತೋರಿರೈ

ಪುರಾಣಗಳಿಗೆ ಇಲ್ಲಿ ಸವಾಲು ಹಾಕಲಾಗಿದೆ. ಸರ್ಪ, ಕೂರ್ಮ, ದಿಗ್ಗಜ ಇವೆಲ್ಲ ಬರಿಯ ಕವಿಸಮಯಗಳು; ಕಲ್ಪನೆಗಳಾಗಿ ಅವುಗಳ ಮೌಲ್ಯ ಏನೇ ಇರಲಂತೆ, ವೈಜ್ಞಾನಿಕವಾಗಿ ಯಾವ ಅಸ್ತಿತ್ವವೂ ಅವಕ್ಕಿಲ್ಲ. ಅವುಗಳನ್ನು ದಾಸಿಮಯ್ಯ ನಿರಾಕರಿಸುವಲ್ಲಿ ಅವನ ಸ್ವತಂತ್ರ ವಿಚಾರಶಕ್ತಿ, ತರ್ಕಪ್ರವೃತ್ತಿಗಳು ಪ್ರಕಟವಾಗುತ್ತದೆ. ವಾಸ್ತವವಾಗಿ, ವೀರಶೈವ ಧರ್ಮದ ಮತ್ತು ವಚನ ಸಾಹಿತ್ಯದ ಧೀರ ಸ್ವತಂತ್ರ ನಿಲುವು ಹಾಗೂ ಗತಿಯನ್ನು ಆದ್ಯವಚನಕಾರ ಇಲ್ಲಿ ದ್ಯೋತಿಸಿದ್ದಾನೆ. ವೀರಶೈವ ಧರ್ಮ ವೈದಿಕಧರ್ಮದ ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿಯಿತ್ತುದು, ಅದರ ಅಂಗವಾಗಿ ಹುಟ್ಟಿದ ವಚನ ಸಾಹಿತ್ಯ ಪೂರ್ವಸಾಹಿತ್ಯದ ಕವಿಸಮಯಾದಿ ಹಳಸಲು ಮುಗ್ಗಲು ಸರಕನ್ನು ಬಳಿಸಾರಗೊಡದೆ, ವೈಚಾರಿಕತೆಯನ್ನು ಮುಂದಿಟ್ಟುಕೊಂಡು ರೂಪ ತಿರುಳು ಎರಡಲ್ಲೂ ತೇಜೋನ್ವಿತವಾದ ನೂತನ ಪಥವೊಂದನ್ನು ಸವೆದುದು ಎಲ್ಲರಿಗೂ ಗೊತ್ತು. ಆ ಹೊಸತನದ ನಾಂದಿಯಂತೆ ಭಾಸವಾಗುತ್ತದೆ ದಾಸಿಮಯ್ಯನ ಈ ಗಂಭೀರವಾದ ಸವಾಲು. ತನಗೆ ತಾನೆ ಉತ್ತಮ ಕವಿತೆಯಾಗದಿದ್ದರೂ, ವಚನಕಾರರಲ್ಲಿ ಅಷ್ಟೊಂದು ಮುಖ್ಯವಾಗಿರುವ ವೈಚಾರಿಕ ಹಾಗೂ ವೈಜ್ಞಾನಿಕ ಪ್ರವೃತ್ತಿಯ ಮೇಲೆ ಬೆಳಕು ಚೆಲ್ಲುವುದರಿಂದ ಈ ವಚನ ಮಹತ್ವ ಪೂರ್ಣವಾಗಿದೆ.

ದೇವರ ಕರುಣೆ ಎಷ್ಟು ದೊಡ್ಡದು, ಅವನು ನಮಗೇನು ಕೊಟ್ಟಿದ್ದಾನೆ ಎಂಬುದನ್ನು ದಾಸಿಮಯ್ಯ ತಿಳಿಸುವ ರೀತಿ ಅನನ್ಯ ವಿಶಿಷ್ಟವೂ ಪರಿಣಾಮಕಾರಿಯೂ ಆಗಿದೆ:

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ,
ಸುಳಿದು ಬೀಸುವ ಗಾಳಿ ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ

ಕಾಯ ನಿಮ್ಮ ದಾನ ಜೀವ ನಿಮ್ಮ ದಾನ
ಕಾಯ ಜೀವವುಳ್ಳಲ್ಲಿಯೆ ನಿಮ್ಮ ಪೂಜಿಸದ
ನಾಯಿಗಳನೇನೆಂಬೆ

ಎತ್ತು ನಿಮ್ಮ ದಾನ ಬಿತ್ತು ನಿಮ್ಮ ದಾನ,
ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ

ಸೃಷ್ಟಿ ಸಮಸ್ತವೂ ಭಗವಂತನ ಕೊಡುಗೆ ಎಂಬ ಸಾಮಾನ್ಯ ಸತ್ಯವಷ್ಟೆ ಇಲ್ಲಿದೆಯೆಂದು ಭಾವಿಸಿದರೆ ವಚನದ ಪೂರ್ತಿ ಸ್ವಾರಸ್ಯ ಸಿಕ್ಕುವುದಿಲ್ಲ. ದೇವರು ನಮಗೇನು ಕೊಟ್ಟಿದ್ದಾನೆ, ನಾವು ದರಿದ್ರರು ಎಂದು ಸದಾ ಕೊರತೆಗಳನ್ನು ಕಲ್ಪಿಸಿಕೊಂಡು ಕೊರಗುವ ಮಂದಿಯೇ ಹೆಚ್ಚು ಜಗತ್ತಿನಲ್ಲಿ. ಅಂಥವರಿಗೆ ದಾಸಿಮಯ್ಯ ಸೊಗಸಾಗಿ ಉತ್ತರವಿತ್ತಿದ್ದಾನೆ. ಏನು ಕೊಟ್ಟಿಲ್ಲ ಭಗವಂತ? ಇಡೀ ಭೂಮಂಡಲವನ್ನೆ ನಮಗೆ ಕೊಟ್ಟಿದ್ದಾನೆ, ವಾಯುಮಂಡಲವನ್ನೆ ಕೊಟ್ಟಿದ್ದಾನೆ, ರತ್ನೋದಾರ ಸಾಗರವನ್ನೆ ಕೊಟ್ಟಿದ್ದಾನೆ. ಇವನ್ನೆಲ್ಲ ಉಪಯೋಗಿಸಿ ಕೊಳ್ಳುವುದು ಅಥವಾ ವ್ಯರ್ಥಗೊಳಿಸುವುದು ನಮ್ಮ ಕೈಯಲ್ಲಿದೆ. ಇಷ್ಟೆಲ್ಲ ಆಸ್ತಿಯಿದ್ದೂ ನಾವು ಬಡವರೆ? ದಾಸಿಮಯ್ಯನ ವಚನದಿಂದ ಧ್ವನಿತವಾಗುವ ಈ ಸುಂದರವೂ ಶಕ್ತವೂ ಆದ ಭಾವವನ್ನು ಲಕ್ಷಿಸಿದವರಾರೂ ದೇವರನ್ನು ದೂಷಿಸಲಾರರು. ಎರಡನೆಯದಾಗಿ, ಇಂಥ ದಾತನಾದ ದೇವರನ್ನು ಹೊಗಳದೆ ಉದ್ಧಾರಕರ್ತರೆಂದು ಹುಲುಮನುಜರನ್ನು ಹೊಗಳುವವರಿಗೆ ಛೀಮಾರಿ ಹಾಕುತ್ತಾನೆ ದಾಸಿಮಯ್ಯ. ದೇವರ ಕೊಡುಗೆಯ ಮುಂದೆ ಮಾನವನ ಕೊಡುಗೆಯೆ? ಏನು ಕೊಟ್ಟಾರು ಲೋಕದ ಜನ? (‘‘ಮಂದೇನು ಕೊಟ್ಟೀತ ಮನವೇನು ದಣಿದೀತ….’’ ಎಂಬ ಜನಪದ ಗೀತೆ ನೆನಪಾಗುತ್ತದೆ).

ಈ ವಚನ ತನ್ನ ಭಾವಸಂಪತ್ತಿಯಿಂದ ಮಾತ್ರವಲ್ಲದೆ ಲಯದ ದೃಷ್ಟಿಯಿಂದಲೂ ಗಮನಾರ್ಹವಾಗಿದೆ. ಇದರಲ್ಲಿ ಎರಡು ಭಾಗ ಮಾಡಿಕೊಂಡು ಒಂದೊಂದರಲ್ಲೂ ಎರಡು ಸ್ತರಗಳನ್ನು ಗುರುತಿಸಬಹುದು. ‘‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ’’ ಎನ್ನುವಲ್ಲಿ ಲಯ ಭಾವಪರವಶತೆಯ ತಾದಾತ್ಮ್ಯವನ್ನು ಚಿತ್ರಿಸುತ್ತದೆ. ಆದರೆ ‘‘ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ’’ ಎನ್ನುವಲ್ಲಿ ಕವಿ ಭಾವಪಾರವಶ್ಯದಿಂದ ಬುದ್ದಿಸ್ತರಕ್ಕೆ ಎಚ್ಚತ್ತಿದ್ದಾನೆಂಬುದನ್ನು ತುಸು ಭಿನ್ನವಾದ ಗದ್ಯಾತ್ಮಕವಾದ ನಡೆ ಸೂಚಿಸುತ್ತದೆ. (ಭಿನ್ನತೆ ಸೂಕ್ಷ್ಮವಾದದ್ದು; ಶಾಸ್ತ್ರೀಯವಾಗಿ ನೋಡಿದರೆ ಎಲ್ಲ ಕಡೆಯಲ್ಲೂ ತ್ರಿಪದಿಯ ಲಯವೇ ಇದೆ.) ಕವಿ ಅನ್ಯರನ್ನು ವಿಡಂಬಿಸುತ್ತಿರುವುದರಿಂದ ಬುದ್ದಿಯ ಕೆಲಸ ಇಲ್ಲಿ ಕಾಣುವುದು ಸಹಜ. ಮತ್ತೆ ‘‘ಕಾಯ ನಿಮ್ಮ ದಾನ ಜೀವ ನಿಮ್ಮ ದಾನ’’ ಎನ್ನುವಲ್ಲಿ ಭಾವತನ್ಮಯತೆ; ‘‘ಕಾಯ ಜೀವವುಳ್ಳಲ್ಲಿಯೇ ನಿಮ್ಮ ಪೂಜಿಸದ ನಾಯಿಗಳನೇನೆಂಬೆ’’ ಎನ್ನುವಲ್ಲಿ ಪುನಃ ಅದೇ ಬೌದ್ದಿಕ ಎಚ್ಚರ. ಬುದ್ದಿ ಭಾವಗಳ ಸಮ್ಮಿಲನಕ್ಕೆ, ತದನುಸಾರವಾಗಿ ಸೂಕ್ಷ್ಮವ್ಯತ್ಯಾಸವುಳ್ಳ ಎರಡು ಲಯಗಳ ಸಂಯೋಗಕ್ಕೆ ಈ ವಚನ ಒಳ್ಳೆಯ ಉದಾಹರಣೆಯಾಗಿದೆ.

ಎಲ್ಲವೂ ಭಗವನ್ಮಯವಾಗಿದೆಯೆಂಬ ಅದ್ವೈತದ ನಿಲುವನ್ನು ಈ ವಚನ ಬಹಳ ಹೃದಯಸ್ಪರ್ಶಿಯಾಗಿ ಪ್ರತಿಪಾದಿಸುತ್ತದೆ:

ನಾನೊಂದು ಸುರಿಗೆಯನೇನೆಂದು ಹಿಡಿವೆನು
ಏನ ಕಿತ್ತೇನನಿರಿವೆನು ಜಗವೆಲ್ಲ
ನೀನಾಗಿ ಇಪ್ಪೆ

ಇರಿಯುವ ವಸ್ತುವೂ ದೈವ, ಇರಿಸಿಕೊಳ್ಳುವ ವಸ್ತುವೂ ದೈವ ಎಂಬ ತಥ್ಯ ಇಲ್ಲಿ ತತ್ವವಾಗಿ ಬರದೆ ಹೇಗೆ ಅನುಭವವಾಗಿ ಬಂದಿದೆಯೆಂಬುದನ್ನು ನೋಡಬೇಕು. ದ್ವೈತ ವನ್ನು ಬಗೆಯುವ ವ್ಯಕ್ತಿಯ ಅಸಹಾಯಕತೆ ಈ ಪ್ರಶ್ನೆಯಲ್ಲಿ ಚೆನ್ನಾಗಿ ಅಭಿನಯ ಗೊಂಡಿದೆ. ಇತ್ಯಾತ್ಮಕ ಹೇಳಿಕೆಯಾಗಿ ನೀರಸವಾಗಬಹುದಾಗಿದ್ದ ಸಂಗತಿಯನ್ನು ಪ್ರಶ್ನ ರೂಪದಲ್ಲಿ ಮಂಡಿಸುವಷ್ಟರಿಂದಲೇ ಕವಿತೆಯಾಗಿ ಮಾರ್ಪಡಿಸಿದ್ದಾನೆ ದಾಸಿಮಯ್ಯ; ಆದರದು ಚಮತ್ಕಾರವಲ್ಲ. ಇನ್ನು, ‘‘ಜಗವೆಲ್ಲ ನೀನಾಗಿ ಇಪ್ಪೆ’’ ಎಂಬ ನಿರ್ಣಯ ಅನವಶ್ಯಕವೆನಿಸಿದರೂ ಅದು ಸಂಪೂರ್ಣ ಅಸಮರ್ಥನೀಯವೆನಿಸದು.

ತಾನು ಭಕ್ತರ ಭಕ್ತನೆಂಬುದನ್ನು ದಾಸಿಮಯ್ಯ ಹೇಳಿಕೊಳ್ಳುವ ವಿಧಾನ ಹೃದ್ಯವಾಗಿದೆ; ಅದರಲ್ಲಿ ವಿನಯವಿದೆ, ಆತ್ಮಗೌರವವೂ ಇದೆ:

ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ,
ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲ
ಕಾದಿಪ್ಪ ಸೊಣಗನಪ್ಪೆ,
ಕರ್ತಾರ, ನಿನಗೆ ಕರವೆತ್ತಿ ಪೊಡಮಡುವ
ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯ

ಎತ್ತಾಗುವುದೇನು ಅವಮಾನವೇ? ಅದು ಶಿವನ ವಾಹನ ತಾನೆ. ಎಲ್ಲಕ್ಕಿಂತ ಧ್ವನಿಪೂರ್ಣವಾದುದು ‘‘ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆ’’ ಎಂಬ ಮಾತು. ಮನೆಯ ಮುಂದಿನ ‘ಕಾಂಪೌಂಡ್’ ಆಗುತ್ತೇನೆಂದು ಹೇಳುವುದು ಬಿಟ್ಟು ಹಿತ್ತಿಲ ಬೇಲಿಯಾಗುತ್ತೇನೆ ಎಂದೇಕೆ ಹೇಳುತ್ತಾನೆ ದಾಸಿಮಯ್ಯ? ಕಾಂಪೌಂಡ್ ಬರಿಯ ಅಲಂಕಾರಕ್ಕೆ, ರಕ್ಷಣೆಗಲ್ಲ. ಆದರೆ ಹಿತ್ತಿಲ ಬೇಲಿಯಿರುವುದು ರಕ್ಷಣೆಗಾಗಿ. ಕಳ್ಳಕಾಕರು ಬರುವುದು ಹಿತ್ತಿಲ ಕಡೆಯಿಂದ; ಅರಿಷಡ್ವರ್ಗ ನುಸುಳುವುದು ಹಿಂಬಾಗಿಲಿನಿಂದ. ಎಂತಲೇ ದಾಸಿಮಯ್ಯ ಭಕ್ತರ ಮನೆಯ ಮತ್ತು ಮನದ ಭದ್ರತೆಯ ದೃಷ್ಟಿಯಿಂದ ‘ಹಿತ್ತಲ ಬೇಲಿಯಾಗಿಪ್ಪೆ’ ಎಂದಿದ್ದಾನೆ. ಬರಿಯ ಪ್ರದರ್ಶನ ವಸ್ತುವಾಗುವುದು ಅವನಿಗೆ ಬೇಕಿಲ್ಲ; ಯಾರು ನೋಡದಿದ್ದರೂ ಚಿಂತೆಯಿಲ್ಲ. ಲೋಕಕ್ಕೆ ತನ್ನಿಂದ ಪ್ರಯೋಜನವಾಗಬೇಕು ಎಂಬುದು ಅವನ ಹಂಬಲ. ಇದು ನಿಜವಾದ ಭಕ್ತನ ಮತ್ತು ಕರ್ಮಯೋಗಿಯ ರೀತಿ.

ಭಗವಂತ ತನ್ನ ಭಕ್ತರನ್ನು ಪರೀಕ್ಷಿಸುವ ಪರಿ ಈ ವಚನದಲ್ಲಿ ಸುಂದರವಾಗಿ ಹೇಳಿಕೆಗೊಂಡಿದೆ:

ಹರ ತನ್ನ ಭಕ್ತರ ತಿರಿವಂತೆ ಮಾಡುವ,
ಒರೆದು ನೋಡುವ ಸುವರ್ಣದ ಚಿನ್ನದಂತೆ,
ಅರೆದು ನೋಡುವ ಚಂದನದಂತೆ,
ಅರಿದು ನೋಡುವ ಕಬ್ಬಿನ ಕೋಲಿನಂತೆ,
ಬೆದರದೆ ಬೆಚ್ಚದೆ ಇದ್ದಡೆ
ಕರವಿಡಿದೆತ್ತಿಕೊಂಬ

ಭಕ್ತರು ತಮ್ಮ ಗುಣಗಳನ್ನು ಬಿಡುವುದಿಲ್ಲ ಎಂಬುದು ಮಾತ್ರವಲ್ಲದೆ, ಅವರ ಗುಣ ಲೋಕಕ್ಕೆ ವ್ಯಕ್ತವಾಗುವುದು ಅವರು ಪರೀಕ್ಷಿತರಾದಾಗಲೇ ಎಂಬುದೂ ಇಲ್ಲಿನ ಅರ್ಥವಿಶೇಷ. ಚಿನ್ನವನ್ನು ಒರೆಗೆ ಹಚ್ಚಿದಾಗಲೇ ಅದರ ಶುದ್ಧತೆ ಪ್ರಕಟವಾಗುವುದು, ಚಂದನವನ್ನು ಅರೆದಾಗಲೇ ಅದರ ಸುಗಂಧ ಹೊಮ್ಮುವುದು, ಕಬ್ಬನ್ನು ಕತ್ತರಿಸಿದಾಗಲೇ ಅದರ ರಸ ಸೂಸುವುದು. ಹೀಗಾಗಿ, ಭಕ್ತನ ಪರೀಕ್ಷೆ ಭಗವಂತ-ಭಕ್ತ ಇಬ್ಬರ ದೃಷ್ಟಿಯಿಂದಲೂ ಅವಶ್ಯಕ ಮತ್ತು ಅನಿವಾರ್ಯ ಎಂಬುದು ದಾಸಿಮಯ್ಯನ ಇಂಗಿತವಾಗಿದೆ.

ಶಿವಶರಣರ ನುಡಿಯ ಮಹತ್ವವನ್ನು ಕೈವಾರಿಸುವಲ್ಲಿ ದಾಸಿಮಯ್ಯ ಕೊಡುವ ರೂಪಕ ಅತಿ ನವೀನವಾಗಿದೆ:

ಕಡೆಗೀಲಿಲ್ಲದ ಬಂಡಿ ಹೊಲಗೆಡುವುದು ಮಾಬುದೆ?
ಕಡೆಗೀಲು ಬಂಡಿಗಾಧಾರ.
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡಶರಣರ ನುಡಿಗಡಣವೆ ಕಡೆಗೀಲು ಕಾಣಾ

ಕಡೆಗೀಲು, ಬಂಡಿ ಮುಂತಾದುವೆಲ್ಲ ಪ್ರೌಢಸಾಹಿತ್ಯದಲ್ಲಿ ಅಪರಿಚಿತ ವಸ್ತುಗಳು. ಇಂಥವನ್ನೆಲ್ಲ ರೂಪಕಗಳಾಗಿ ಬಳಸಿಕೊಂಡದ್ದು ವಚನಕಾರರ ವಿಶಿಷ್ಟ ಸಾಧನೆ. ಈ ದೃಷ್ಟಿಯಿಂದ, ಸಾಮಾನ್ಯ ಬದುಕನ್ನೆಲ್ಲ ವಚನ ಸಾಹಿತ್ಯ ತನ್ನ ಗ್ರಾಸ ಮಾಡಿಕೊಂಡಿತು; ನೋಹನ ನೌಕೆಯಂತೆ ಎಲ್ಲ ಪಶುಪಕ್ಷಿ ಪದಾರ್ಥಗಳನ್ನೂ ತನ್ನಲ್ಲಿ ತುಂಬಿಕೊಂಡು ಹೊಸ ಹುಟ್ಟೊಂದಕ್ಕೆ ಕಾರಣವಾಯಿತು. ಈ ವಚನದಲ್ಲಿ ಬಂದಿರುವ ಕಡೆಗೀಲಿನ ರೂಪಕ ಸಾರ್ಥಕವಾಗಿದೆ. ಬಂಡಿಗೆ ಹೋಲಿಸಿದಾಗ ಕಡೆಗೀಲು ಬಹಳ ಸಣ್ಣದು, ನಿಜ. ಆದರೆ ಅದರ ಪ್ರಾಮುಖ್ಯ ಅಷ್ಟಿಷ್ಟಲ್ಲ. ಮೃಡಶರಣರ ನುಡಿಗಳು ಆಕೃತಿಯಲ್ಲಿ ಕಿರಿಯವಾದರೂ ಅರ್ಥದಲ್ಲಿ ಹಿರಿಯವಾಗಿದ್ದು ತಾರಕಸಾಮರ್ಥ್ಯ ಪಡೆದಿರುತ್ತವೆ.

ಹೀಗೆಯೆ ಜನಜೀವನದಿಂದೆತ್ತಿಕೊಂಡ, ಸುಪರಿಚಿತವಾದ ಅನೇಕ ಉಪಮಾ ರೂಪಕಾದಿಗಳು ದಾಸಿಮಯ್ಯನ ವಿಡಂಬನ ವಚನಗಳಲ್ಲಿ ಕಾಣಸಿಗುತ್ತವೆ. ಕಪಟಭಕ್ತಿಯನ್ನು ಹೀಗೆ ಟೀಕಿಸಲಾಗಿದೆ:

ಬರು ಶಠಗನ ಭಕ್ತಿ
ದಿಟವೆಂದು ನಚ್ಚಲು ಬೇಡ.
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯ್ತು ಕಾಣಾ

ಮಠದಲ್ಲಿದ್ದಾಕ್ಷಣ ಬೆಕ್ಕು ಯತಿಯಾಗುತ್ತದೆಯೆ? ಮಠದಲ್ಲಿದ್ದವರೆಲ್ಲ ಸಾಧುಗಳೇ? ಮಠದ ಬೆಕ್ಕನ್ನು ಮಾತ್ರವಲ್ಲ, ಮಠಾಧೀಶರನ್ನೆ ದಾಸಿಮಯ್ಯ ತರಾಟೆಗೆ ತೆಗೆದುಕೊಂಡಂತೆ ತೋರುತ್ತದೆ. ಏನೇ ಇರಲಿ, ಇಲಿಯನ್ನು ಕಂಡು ಬೆಕ್ಕು ಪುಟನೆಗೆಯುವ ಚಿತ್ರವನ್ನು ಅವನ ವಚನ ಯಶಸ್ವಿಯಾಗಿ ಕಣ್ಣೆದುರು ಮೂಡಿಸುತ್ತದೆ. ಉದ್ದಕ್ಕೂ ಬಂದಿರುವ ‘ಟ’ಕಾರಾನು ಪ್ರಾಸ ಪ್ರಭಾವಶಾಲಿಯಾಗಿದೆ.

ಸುಂಕಗಳ್ಳನ ರೂಪಕದಿಂದ ಅಳಿಮನದವನ ಭಕ್ತಿಯನ್ನು ಸ್ವಾರಸ್ಯಪೂರ್ಣವಾಗಿ ಬಣ್ಣಿಸಲಾಗಿದೆ:

ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ;
ಇರುಳೆಲ್ಲ ನಡೆದನಾ ಸುಂಕಕ್ಕಂಜಿ.
ಕಳವೆ ಎಲ್ಲ ಹೋಗಿ ಬರಿಯ ಗೋಣಿ ಉಳಿಯಿತ್ತು.
ಅಳಿಮನದವನ ಭಕ್ತಿ ಇಂತಾಯಿತ್ತು

ಸುಂಕಗಳ್ಳನ ಅವಸ್ಥೆ ಹಾಸ್ಯಾಸ್ಪದವಾಗಿದೆ. ದಾಸಿಮಯ್ಯ ಸಮಕಾಲೀನ ಜೀವನದ ಒಂದು ಯಥಾವತ್ತಾದ ಚಿತ್ರವನ್ನು ನೀಡಿದ್ದಾನೆ. ಸುಂಕ, ಸುಂಕಿಗ, ಸುಂಕಗಳ್ಳ ಮುಂತಾದವರ ರೂಪಕಗಳನ್ನು ಮುಂದೆ ಬಸವಣ್ಣನವರಲ್ಲಿ ವಿಶೇಷವಾಗಿ ನೋಡುತ್ತೇವೆ.

ಸಂಕಟ ಬಂದಾಗ ಶಂಕರನನ್ನು ನೆನೆದು, ಅದು ಪರಿಹಾರಗೊಂಡ ಮೇಲೆ ಅವನನ್ನು ಮರೆಯುವ ಜನರ ಸ್ವಭಾವವನ್ನು ಇಲ್ಲಿ ಗೇಲಿಮಾಡಲಾಗಿದೆ:

ಎಡರಡಸಿದಲ್ಲಿ ಮೃಡ ನಿಮ್ಮ ನೆನೆವರು,
ಎಡರಡಸಿದ ವಿಪತ್ತು ಕಡೆಯಾಗಲೊಡನೆ
ಮೃಡ ನಿಮ್ಮನೆಡಹಿಯೂ ಕಾಣರು

‘ನಿಮ್ಮನೆಡಹಿಯೂ ಕಾಣರು’ ಎಂಬ ಚುಚ್ಚುನುಡಿ ಎಷ್ಟು ಪರಿಣಾಮಕಾರಿ! ಎಡಹುವಲ್ಲಿ ಅವರ ಅಹಂಕಾರ ತಾತ್ಸಾರಗಳು ವ್ಯಂಗ್ಯವಾಗಿವೆ; ಎಡಹಿದ ಮೇಲೂ ಅವರಿಗೆ ಕಾಣಿಸುವುದಿಲ್ಲ: ಅಷ್ಟೊಂದು ಮರವೆ, ಅಲಕ್ಷ್ಯ!

ವಿಡಂಬನದ ದೃಷ್ಟಿಯಿಂದ ದಾಸಿಮಯ್ಯನ ಈ ವಚನಗಳನ್ನೂ ಗಮನಿಸಬಹುದು:

ಜ್ವರವಿಡಿದ ಬಾಯಿಗೆ ನೊರೆವಾಲು ಒಲಿವುದೆ?
ನರಕದಲ್ಲಿ ಬೀಳುವ ಮನುಜರಿಗೆ
ಹರಭಕ್ತಿಯೆಂಬುದು ಕರಗಹಿ ಕಾಣಾ
ಕತ್ತೆ ಬಲ್ಲುದೆ ಕತ್ತುರಿಯ ವಾಸನೆಯ?

ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ?
ಭಕ್ತಿಯನರಿಯದ ವ್ಯರ್ಥಜೀವಿಗಳು
ನಿಮ್ಮನೆತ್ತ ಬಲ್ಲರೈ

ಉಣ್ಣೆ ಕೆಚ್ಚಲು ಹತ್ತಿ ಉಂಬುದೆ ನೊರೆಹಾಲ?
ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು
ಉಣ್ಣೆಯಿಂದ ಕರಕಷ್ಟ[2]

ಶಬ್ದ ಚಮತ್ಕಾರವಿದ್ದರೂ ಅದು ಅರ್ಥಪುಷ್ಟಿಗೆ ನೆರವಾಗಿರುವಂಥ ಒಂದು ಬಂಧುರವಾದ ವಚನವಿದು:

ವೇಷವನು ವೇಶೆಯನು ಸರಿಯೆಂಬೆ
ವೇಷವು ಲೋಕವ ಹಾರುವುದು,
ವೇಶೆಯೂ ಲೋಕವ ಹಾರುವಳು,
ವೇಷವ ಹೊತ್ತು ಲೋಕವ ಹಾರದಿದ್ದರೆ ಆತನು
ಈಶ್ವರನೆಂಬೆ ಕಾಣಾ

‘ಲೋಕವ ಹಾರು’ ಎಂಬ ಮಾತಿನ ಶಕ್ತಿ, ಸ್ವಾರಸ್ಯಗಳು ಮನನಯೋಗ್ಯವಾಗಿವೆ.

ಭಕ್ತಿಯಲ್ಲಿ ಸತಿಪತಿಗಳು ಒಂದಾಗದಿದ್ದಾಗ ಎಂತಹ ಅನಾಹುತವಾಗುತ್ತದೆ ಎಂಬುದನ್ನು ದಾಸಿಮಯ್ಯ ಹೇಳುವ ರೀತಿ ಅತ್ಯಪೂರ್ವವಾಗಿದೆ:

ಸತಿಪತಿಗಳೊಂದಾದ ಭಕ್ತಿ
ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವರ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ

‘ಅಮೃತದೊಳು ವಿಷ ಬೆರೆದಂತೆ’ ಎಂಬ ಮಾತು ಒಂದು ಸಂಕೀರ್ಣಸ್ಥಿತಿಯ ಚಿತ್ರವನ್ನು ಅದ್ಭುತವಾಗಿ ನಿರ್ಮಿಸುತ್ತದೆ. ಅದು ಸಾವೂ ಅಲ್ಲದ ಬದುಕೂ ಅಲ್ಲದ ಅವಸ್ಥೆ. ಅಮೃತಾಂಶ ಇರುವುದರಿಂದ ಸಾಯುವುದು ಸಾಧ್ಯವಿಲ್ಲ. ವಿಷಾಂಶವಿರುವುದರಿಂದ ಬದುಕುವುದು ಸಾಧ್ಯವಿಲ್ಲ! ಹೀಗಾದಾಗ ಸಂಸಾರ ದುರಂತಭಯಂಕರವಾಗುತ್ತದೆ. ಭಕ್ತಿಯ ಮಾತು ಹಾಗಿರಲಿ, ಉಳಿದ ವಿಷಯಗಳಲ್ಲೂ ಎಷ್ಟೋ ಸಂಸಾರಗಳ ಕತೆ ಈ ತೆರನಾದ್ದು. ಬಸವಣ್ಣನವರು ಒಂದು ಸಂದರ್ಭದಲ್ಲಿ ‘‘ಕೊರಳಿಗೆ ಕಟ್ಟಿದ ಬೆಂಡು, ಕಾಲಿಗೆ ಕಟ್ಟಿದ ಗುಂಡು’’ಎಂದಿರುವಲ್ಲಿ ಇಂಥದೇ ಚಿತ್ರ ಒಡಮೂಡುತ್ತದೆ; ಆದರೆ ಅದು ಸುಮೂರ್ತವಾದುದು. ದಾಸಿಮಯ್ಯನ ರೂಪಕ ಅಮೂರ್ತವಾಗಿದ್ದರೂ ಹೆಚ್ಚು ಸಂಕೀರ್ಣವೂ ಕಸುವುಳ್ಳದ್ದೂ ಆಗಿದೆ.

ವಚನಕಾರರು ಅಧ್ಯಾತ್ಮದ ಗುಂಗಿನಲ್ಲಿ ಐಹಿಕವನ್ನು ಮರೆತವರಲ್ಲ; ಭೌತಪ್ರಪಂಚದ ಕನಿಷ್ಠ ಅಗತ್ಯಗಳು ಪೂರೈಕೆಗೊಂಡ ಮೇಲೆಯೆ ಅಧ್ಯಾತ್ಮ ಗ್ರಾಹ್ಯವಾಗತಕ್ಕದ್ದು ಎಂಬುದನ್ನವರು ಬಲ್ಲರು. ಬರಿಹೊಟ್ಟೆಯಲ್ಲಿ ಭಕ್ತಿಧ್ಯಾನಗಳು ಸಾಧ್ಯವಿಲ್ಲ. ಎಂತಲೇ ಮೊದಲು ಹೊಟ್ಟೆಗೆ ಅನ್ನ, ಆಮೇಲೆ ಧರ್ಮ, ವೇದಾಂತ; ಸಮಾಜದ ಸರ್ವತೋಮುಖ ಅಭ್ಯುದಯಕ್ಕೆ ಎರಡೂ ಅವಶ್ಯಕ. ವಚನಕಾರರಲ್ಲಿ, ಅವರ ಮೊದಲಿಗನಾದ ದಾಸಿಮಯ್ಯನಲ್ಲಿ ಈ ಸಾಮಾಜಿಕ ಪ್ರಜ್ಞೆ ಉತ್ಕಟವಾಗಿ ಕಂಡುಬರುತ್ತದೆ.

ಹಸಿವಿನ ಕೋಟಲೆಯನ್ನೂ ಅದರ ನಿರ್ವಹಣೆ ಆದ್ಯಕರ್ತವ್ಯವೆಂಬುದನ್ನೂ ದಾಸಿಮಯ್ಯ ಈ ವಚನದಲ್ಲಿ ಮನಮುಟ್ಟುವಂತೆ ಪ್ರತಿಪಾದಿಸುತ್ತಾನೆ:

ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ
ವಿಷವೇರಿತ್ತಯ್ಯ ಆಪಾದ ಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲರೆ
ವಸುಧೆಯೊಳಗಾತನೆ ಗಾರುಡಿಗ ಕಾಣಾ

ಹೆಬ್ಬಾವಿನ ಹಸಿವು ಪ್ರಸಿದ್ಧವಾದದ್ದು; ಇನ್ನು ಹೆಬ್ಬಾವೇ ಹಸಿವಾದಾಗ? ಅದೆಷ್ಟು ಘೋರವೆಂಬುದನ್ನು ಊಹಿಸಿಕೊಳ್ಳಬಹುದು. ಈ ಹಸಿವನ್ನು ತಣಿಸಬಲ್ಲವರೆ ಮಹಾತ್ಮರು.

ವಿರಕ್ತಿಯ ತುಟ್ಟತುದಿಯನ್ನು ತಲುಪಿ ಲೋಕವನ್ನು ತಿರಸ್ಕಾರದಿಂದ ಕಾಣುವುದಿಲ್ಲ ದಾಸಿಮಯ್ಯ : ಅವನಲ್ಲಿ ಜಗದ ಜನತೆಯ ಬಗ್ಗೆ ಅನುಕಂಪವಿದೆ. ಶರೀರದ ಉಪಾಧಿ ಹೇಗೆ ಆತ್ಮ ಪರಮಾತ್ಮರನ್ನು ಮರೆಸುತ್ತದೆ, ಎಂತೆಂತಹ ದೌರ್ಬಲ್ಯಗಳಿಗೆ ತುತ್ತಾಗುತ್ತದೆ ಎಂಬುದನ್ನು ಅವನು ಸಹಾನುಭೂತಿಪೂರ್ವಕವಾಗಿ ಗ್ರಹಿಸಿದ್ದಾನೆ. ಎಂತಲೇ ಲೋಕದ ಪರವಾಗಿ ಮತ್ತು ತನ್ನ ಪರವಾಗಿ ವಕಾಲತ್ತು ವಹಿಸಿ ಭಗವಂತನಲ್ಲಿ ಮೊರೆಯಿಡುತ್ತಾನೆ:

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೆನ್ನ
ಜಡಿದೊಮ್ಮೆ ನುಡಿಯದಿರಾ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ

‘ಒಡಲುಗೊಂಡೆನಾಗಿ ಮೃಡ ನಿಮಗೆ ಹಗೆಯಾದೆನಯ್ಯಾ’ ಎಂದು ಅವನು ತನ್ನನ್ನು ತಾನೆ ನಿಂದಿಸಿಕೊಂಡಿರುವುದೂ ಗಮನಾರ್ಹ. ಈ ವಚನದಲ್ಲಿ ಲೋಕಾನುಕಂಪದ ಜೊತೆಗೆ ಆತ್ಮಪರೀಕ್ಷೆಯೂ ಇದೆ. ಅಂತೂ ದೇಹದ ಪರಿಮಿತಿ, ದೌರ್ಬಲ್ಯಗಳನ್ನು ದಾಸಿಮಯ್ಯನಷ್ಟು ಸೊಗಸಾಗಿ ಯಾರೂ ಹೇಳಿಲ್ಲವೆನಿಸುತ್ತದೆ.

ವಚನಕಾರರು ಕಾಯಕಗಳನ್ನೆ ರೂಪಕ ಮಾಡಿಕೊಳ್ಳುತ್ತಾರೆ; ಅದರಿಂದ ಅವರ ಸಾಹಿತ್ಯಕ್ಕೆ ಲಾಭವಾಗಿದೆ. ದೇವರ ದಾಸಿಮಯ್ಯನಲ್ಲೆ ಇದು ಮೊದಲಾಗಿರುವುದನ್ನು ನೋಡಬಹುದು. ತನ್ನ ನೆಯ್ಗೆಯ ಕಸುಬನ್ನೆ ಅವನೊಂದು ರೂಪಕವಾಗಿ ಬಳಸಿಕೊಂಡು ದೇವನಿಗೆ ಬಿನ್ನವಿಸುತ್ತಾನೆ;

ಉಂಕಿಯ ನಿಗುಚಿ
ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೊಳು ಏಳ ಮೆಟ್ಟಿದೆ
ಹಿಡಿದ ಲಾಳಿಯ ಮುಳ್ಳು ಕಂಡಿಗೆಯ ನುಂಗಿತ್ತು
ಸೀರೆಯ ನೆಯ್ದವ ನಾನೋ ನೀನೋ

ಈ ಸವಾಲನ್ನು ಲೆಕ್ಕಿಸಬೇಕು. ಭಗವಂತನನ್ನು ಕುರಿತ ಆತ್ಮೀಯತೆ, ಸಲುಗೆ ಇಲ್ಲಿ ವ್ಯಕ್ತವಾಗುತ್ತದೆ. ದಾಸಿಮಯ್ಯ ಯಾವ ಅರ್ಥದಲ್ಲಿ ‘ಸೀರೆ’ ಎಂಬ ಮಾತನ್ನು ಬಳಸುತ್ತಾನೋ ನಮಗದು ಅಪ್ರಕೃತ; ಅವನ ವಚನಗಳಿಗೇ ನಾವದನ್ನು ಅನ್ವಯಿಸುವುದು ಸೂಕ್ತವಾಗಿ ಕಾಣುತ್ತದೆ. ಅವನು ನೆಯ್ದ ಸೀರೆ ಭಗವದರ್ಪಿತವಾಗಿ, ಕನ್ನಡ ತಾಯಿಗೆ ಹಬ್ಬದ ಹೊಸ ಉಡುಗೆಯಾಯಿತು.

ಕರಿಯನಿತ್ತಡೆ ಒಲ್ಲೆ
ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ;
ನಿಮ್ಮ ಶರಣರ ಸೂಳ್ನುಡಿಯನೊಂದರೆಗಳಿಗೆ ಇತ್ತಡೆ
ನಿಮ್ಮನಿತ್ತೆ ಕಾಣಾ ರಾಮನಾಥ

ಎಂದು ದಾಸಿಮಯ್ಯ ತನಗಿಂತ ಹಿಂದೆ ಇದ್ದಿರಬಹುದಾದ ವಚನಕಾರರ ನುಡಿ ಗಡಣವನ್ನು ಕುರಿತು ಪ್ರಶಂಸೋಕ್ತಿಯನ್ನಾಡಿದ್ದಾನೆ. ಕರಿ ಸಿರಿ ಸಾಮ್ರಾಜ್ಯಗಳ ಹಿನ್ನೆಲೆಯಲ್ಲಿ ಹುಟ್ಟಿದ್ದಲ್ಲ ವಚನಸಾಹಿತ್ಯ; ಹಾಗಿದ್ದಲ್ಲಿ ಅದರ ಬದಲು ಕರಿ ಸಿರಿ ರಾಜ್ಯಗಳನ್ನು ಸ್ವೀಕರಿಸಬಹುದಿತ್ತು. ಅದು ಭಾಗವತ ಕವಿತೆ; ಅದರ ಮೌಲ್ಯಕ್ಕೆ ಯಾವುದೂ ಸಾಟಿಯಾಗಲಾರದು, ಶಿವದ ವಿನಾ. ವಚನ ಸಾಹಿತ್ಯದ ನೆಲೆಬೆಲೆಗಳನ್ನು ಸಮರ್ಪಕವಾಗಿ ಗುರುತಿಸಿದ್ದಾನೆ ದಾಸಿಮಯ್ಯ. ಅವನ ವಚನಗಳ ಬಗೆಗೂ ನಾವು ‘‘ನಿಮ್ಮ ಶರಣರ ಸೂಳ್ನುಡಿಯನೊಂದರೆಗಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ’’ ಎಂಬ ಮಾತನ್ನಾಡಬಹುದು. ಆದರೆ ಶರಣರ ಸೂಳ್ನುಡಿಗೆ ಪ್ರತಿಯಾಗಿ ಶಿವನನ್ನು ಕೊಟ್ಟುಬಿಡಬಹುದೆಂಬ ಉಕ್ತಿಯಲ್ಲಿ ಶಿವವಿಮುಖತೆಯ ಅನೌಚಿತ್ಯವಿದೆಯೇ ಎಂಬ ಸಂದೇಹ ಬಂದೀತು; ಅದಕ್ಕೆ ಕಿಂಚಿತ್ತೂ ಅವಕಾಶವಿಲ್ಲ. ಏಕೆಂದರೆ, ಶರಣರ ಸೂಳ್ನುಡಿಯನ್ನು ಪಡೆದ ಮೇಲೆ ಶಿವನನ್ನೀಯುವ ಪ್ರಶ್ನೆಯೆ ಏಳುವುದಿಲ್ಲ : ಆ ಸೂಳ್ನುಡಿಯಲ್ಲಿ ಶಿವ ಇದ್ದೇ ಇರುತ್ತಾನೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಬಸವಣ್ಣನವರು ಹೇಗೆ ದಾಸಿಮಯ್ಯನಿಂದ ಪ್ರಭಾವಿತರಾಗಿದ್ದಾರೆ, ಅವನ ಭಾವಗಳನ್ನೂ ಮಾತುಗಳನ್ನೂ ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ವಿವರವಾಗಿ ತಿಳಿಯಲು ನೋಡಿ: ‘ಜೇಡರ ದಾಸಮಾರ್ಯಪ್ರಶಸ್ತಿ’, ಪು.೧೪೧-೧೪೫. ದಾಸಿಮಯ್ಯನಿಗೂ ಬಸವಣ್ಣನವರಿಗೂ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ, ಬಸವಣ್ಣನವರಲ್ಲಿ ಕಂಡುಬರುವ ಜ್ವಲಂತವಾದ ಆತ್ಮಶೋಧನೆ ದಾಸಿಮಯ್ಯನಲ್ಲಿಲ್ಲದಿರುವುದು. ಆ ಸ್ವಪರೀಕ್ಷೆಯೆ ಬಸವಣ್ಣನವರನ್ನು ವಚನಕಾರರ ತಲೆಯಾಳಾಗಿ ಮಾಡಿರತಕ್ಕದ್ದು.

[2] ಇಂತಹ ಕೆಲವಚನಗಳು ಸರ್ವಜ್ಞನ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟ.