ಯಾವುದೇ ದೇಶದಲ್ಲಿ, ಯಾವುದೇ ಕಾಲದಲ್ಲಿ ಹಲವರು ಮಹದ್ ವ್ಯಕ್ತಿಗಳು ಒಟ್ಟಿಗೇ ಆವಿರ್ಭವಿಸುವುದು ವಿರಳ. ಇಂಥದೊಂದು ವಿರಳ ಸಂಗಮವನ್ನು ನೋಡುತ್ತೇವೆ, ೧೨ನೆಯ ಶತಮಾನದ ಕರ್ಣಾಟಕದಲ್ಲಿ. ಅದೊಂದು ಅಸಂಖ್ಯ ತಾರಾಖಚಿತವಾದ, ಜ್ಯೋತಿಷ್ಮತಿಯಾದ ಕ್ಷೀರಪಥ; ಆಕಾಶಗಂಗೆ. ಆ ದಿವೋಮಂಡಲದಲ್ಲಿ ಅಧ್ಯಕ್ಷ ನಕ್ಷತ್ರವಾಗಿ ಶೋಭಿಸುತ್ತಿದ್ದಾನೆ ಪ್ರಭುದೇವ. ಆ ಪ್ರಭುಪ್ರಭೆಯ ಕೆಲವು ಕಿರಣಗಳನ್ನು ಇಲ್ಲಿ ಲಕ್ಷಿಸಬಹುದು.

ಕಲ್ಯಾಣವೆಂಬ ಪ್ರಣತೆಯಲ್ಲಿ
ಭಕ್ತಿರಸವೆಂಬ ತೈಲವನೆಱೆದು
ಆಚಾರವೆಂಬ ಬತ್ತಿಯಲ್ಲಿ
ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿರ್ದುದಯ್ಯ ಶಿವನ ಪ್ರಕಾಶ !
ಬೆಳಗಿನೊಳಗೊಪ್ಪುತ್ತಿರ್ದರಯ್ಯ
ಅಸಂಖ್ಯಾತ ಭಕ್ತಮಹಾಗಣಂಗಳು !

ಅಲ್ಲಮಪ್ರಭು ಈ ವಚನದಲ್ಲಿ ತನ್ನನ್ನು ತಾನೆ ಬಣ್ಣಿಸಿಕೊಂಡಿರುವಂತೆ ತೋರುವುದಿಲ್ಲವೇ? ‘‘ನಾ ದೇವನಲ್ಲದೆ ನೀ ದೇವನೆ?’’ ಎಂದು ಶಿವನಿಗೇ ಸವಾಲು ಹಾಕಿ, ‘‘ನಾ ದೇವ ಕಾಣಾ!’’ ಎಂದು ಉದ್ಘೋಷಿಸಬಲ್ಲ ಅದ್ವೈತದ ನಿಲುವಿನಲ್ಲಿ ಜ್ವಲಿಸುವ ಅಲ್ಲಮನ ವ್ಯಕ್ತಿತ್ವಶ್ರೀ ‘ಶಿವನ ಪ್ರಕಾಶ’ವೇ ಸರಿ. ಇಂಥ ಮಹಾನುಭಾವನ ಮಾತಾದರೂ ಎಂಥದು? ಅದರ ಸ್ವರೂಪ, ‘‘ಮಾತೆಂಬುದು ಜ್ಯೋತಿರ್ಲಿಂಗ’’ ಎಂಬ ಅವನ ಉಕ್ತಿ ಯಲ್ಲೆ ಸೂತ್ರೀಕೃತವಾಗಿದೆ.[1] ಅನುಭವದ ಪ್ರಖರತೆ ಪ್ರಗಾಢತೆಗಳ ಆಳದಿಂದ, ಅನುಭಾವದ ಶಿಖರಾಗ್ರದಿಂದ ಹೊಮ್ಮಿ ಬರುವ ಅವನ ವಾಣಿಯಲ್ಲಿ ಜ್ಯೋತಿರ್ಲಿಗವನ್ನು ಕಾಣಬಹುದು. ಬರಿಯ ಭಾವಜೀವಿಯಲ್ಲ ಅಲ್ಲಮ : ಭಾವಕ್ಕಿಂತ ಮಿಗಿಲಾಗಿ ಬುದ್ದಿಯ ಕ್ಷುರಧಾರಾನಿಶಿತತೆ ಅಥವಾ ‘ಬುದ್ದಿಭಾವಗಳ ವಿದ್ಯುದಾಲಿಂಗನ’ ಅವನ ವಚನಪುಂಜದಲ್ಲಿ ಗೋಚರಿಸುತ್ತದೆ. (ಅವುಗಳಲ್ಲಿ ಕೆಲವು ಸಾಮಾನ್ಯ ಚೇತನಗಳಿಗೆ ದುರವಗಾಹ್ಯವಾಗಿದ್ದು, ‘ಬೆಡಗಿನ ವಚನಗಳು’ ಎಂಬ ಅನುಚಿತ ಅಭಿಧಾನಕ್ಕೆ ಪಾತ್ರವಾಗಿವೆ. ಅಲ್ಲಮನ ವಚನಗಳಲ್ಲಿ ಕಾಣುವುದು ಬೆಡಗು ಬಿನ್ನಾಣಗಳಲ್ಲ. ವಾಸ್ತವವಾಗಿ, ‘ಬಿನ್ನಾಣ’ಕ್ಕೆ ಮೂಲವಾದ ‘ವಿಜ್ಞಾನ’ ಅವುಗಳಲ್ಲಿರತಕ್ಕದ್ದು). ಆ ಸೂಳ್ನುಡಿಗಳಲ್ಲಿ ಅಧ್ಯಾತ್ಮವಿದೆ-ಕಾವ್ಯವಿದೆ, ವಿಚಾರವಿದೆ-ವಿಹಾರವಿದೆ; ಪರಮಾರ್ಥ ಪುರುಷಾರ್ಥ ವ್ಯಂಗ್ಯಾರ್ಥ ಪೂರ್ಣತೆಯಿದೆ.

ತನ್ನ ಅನೇಕ ವಚನಗಳಲ್ಲಿ ಸ್ವವಿಷಯವನ್ನು ಹೇಳಿಕೊಂಡಿದ್ದಾನೆ ಅಲ್ಲಮ. ಅವನ ಸಾಧಕ ಜೀವನಕ್ಕೆ ಸಂಬಂಧಿಸಿದ ವಚನಗಳಿಗಿಂತ ಸಿದ್ಧಜೀವನಕ್ಕೆ ಸಂಬಂಧಿಸಿದ ವಚನಗಳೇ ಅಧಿಕ. ತನಗೂ ಭಗವಂತನಿಗೂ ಬಾಂಧವ್ಯವುಂಟಾದ ಪರಿಯನ್ನು ಕುರಿತ ಅವನ ಸೋಜಿಗ ಈ ವಚನದಲ್ಲಿ ಯಶಸ್ವಿಯಾಗಿ ಅಭಿನಯಗೊಂಡಿದೆ:

ಎತ್ತಣ ಮಾಮರ, ಎತ್ತಣ ಕೋಗಿಲೆ?!
ಎತ್ತಣಿಂದೆತ್ತ ಸಂಬಂಧವಯ್ಯ?!
ಬೆಟ್ಟದ ನೆಲ್ಲಿಯ ಕಾಯಿ, ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯ?!
ಗುಹೇಶ್ವರಲಿಂಗಕ್ಕೆಯೂ ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ?!

ಇಲ್ಲಿನ ವಿಸ್ಮಯ ಪ್ರಶ್ನೆಗಳ ನಾಟಕೀಯ ಭಂಗಿಯಲ್ಲೆ ಕಾವ್ಯದ ಅನನ್ಯತೆಯಿದೆ; ಉತ್ತರ ರೂಪದ ವಾಚ್ಯವಾದ ಹೇಳಿಕೆಯಾಗಿ ಬಂದಿದ್ದರೆ ಇದರ ಪರಿಣಾಮ ಊನವಾಗುತ್ತಿತ್ತು. ಮೇಲುನೋಟಕ್ಕೆ ಮಾವಿನಮರ-ಕೋಗಿಲೆಗಳಿಗೆ, ನೆಲ್ಲಿಯಕಾಯಿ-ಉಪ್ಪುಗಳಿಗೆ ಯಾವ ಆಂತರಿಕ ಸಂಬಂಧವೂ ಇಲ್ಲ. (ಬೆಟ್ಟದ ಎತ್ತರಕ್ಕೂ ಸಮುದ್ರದ ತಗ್ಗಿಗೂ ಎಷ್ಟು ಅಂತರ!) ಆದರೆ ಹೇಗೋ ಅವುಗಳಿಗೆ ಅವಿನಾಭಾವ ಸಂಬಂಧ ಏರ್ಪಡುತ್ತದೆ; ಅವು ಪರಸ್ಪರ ಪೂರಕವಾಗುತ್ತವೆ. ಹೀಗೆಯೆ, ಜೀವಾತ್ಮ ಮತ್ತು ಪರಮಾತ್ಮ ಮೇಲು ನೋಟಕ್ಕೆ ಸಂಪೂರ್ಣ ಬೇರೆ ಬೇರೆಯಾದರೂ ಅವುಗಳಲ್ಲಿ ಆಂತರಿಕ ಸಂಬಂಧವಿದೆ; ಪರಮಾತ್ಮನಿಂದ ಸಿಡಿದುಬಂದ ಜೀವಾತ್ಮ ಸಾಧನೆಯಿಂದ ಮೇಲುಮೇಲಕ್ಕೇರಿ ಕಡೆಗೆ ಪರಮಾತ್ಮನಲ್ಲಿ ವಿಲೀನವಾಗಿ, ಎರಡೂ ಒಂದೇ ಆಗುತ್ತವೆ. ಇಲ್ಲಿ ಮಾಮರ-ಕೋಗಿಲೆಗಳ ಸಂಬಂಧ ಆವಾಸ್ತವವಲ್ಲದಿದ್ದರೂ ಸಾಂಪ್ರದಾಯಿಕವಾದುದು; ಆದರೆ ನೆಲ್ಲಿಯ ಕಾಯಿ-ಉಪ್ಪುಗಳ ಸಂಬಂಧದ ಹೋಲಿಕೆ ಹೊಚ್ಚ ಹೊಸತು. ವಚನಕಾರರ ಸರ್ವತೋಮುಖ ದೃಷ್ಟಿಗೆ ಉಪ್ಪಿನಕಾಯಿ ಹೊರತಲ್ಲ.(ವಚನಗಳಲ್ಲಿರುವುದೂ ಉಪ್ಪಿನ ಕಾಯ ದೇಸಿರುಚಿಯೇ!) ಅಂತೂ ಅಲ್ಲಮ ಲೀಲಾಭೂವಿಕೆಯ ದ್ವೈತ ಸ್ಥಿತಿಯನ್ನೂ ನಿತ್ಯಭೂಮಿಕೆಯ ಅದ್ವೈತಸ್ಥಿತಿಯನ್ನೂ ಈ ವಚನದಲ್ಲಿ ಬಹು ಪರಿಣಾಮಕಾರಿಯಾಗಿ ಧ್ವನಿಸಿದ್ದಾನೆ.

ಮಾಯಾಧೀನವಾದ ಚೇತನ ಮೊದಮೊದಲು ಹತ್ತೂ ಕಡೆಗೆ ಕಣ್ಣು ಹಾಯಿಸುತ್ತಿದ್ದು. ಕಡೆಗೆ ಪರಿಣತಾವಸ್ಥೆಯಲ್ಲಿ ಭಗವಂತನಲ್ಲೆ ದೃಷ್ಟಿ ನೆಟ್ಟಾಗ ಕಂಡುಬರುವ ದೃಶ್ಯವಿದು:

ಪಂಚಮಹಾಪಾತಕಗಳು ಬೇವ ಠಾವ ಕಂಡೆ
ಸರ್ವದುಃಖಂಗಳು ಹೋಹ ಠಾವ ಕಂಡೆ
ಕಾಮನ ಕೈಯ ಕೊಯ್ವ ಠಾವ ಕಂಡೆ
ಮಾಯೆಯ ಬಾಯ ಕಟ್ಟುವ ಠಾವ ಕಂಡೆ
ಗುಹೇಶ್ವಲಿಂಗದಲ್ಲಿ ಕಣ್ಣುತುಂಬಿ!

ಇಲ್ಲಿ ಅರ್ಥವಂತಿಕೆಯ ಜೊತೆಗೆ ಅಯತ್ನಪೂರ್ವಕವಾಗಿ ಬಂದಿರುವ ಪ್ರಾಸ ಪ್ರಚುರತೆಯೂ ಗಮನಾರ್ಹ.

ಕಾಮನನ್ನು ನಾಟಕೀಯವಾಗಿ ಮೂದಲಿಸುವ ಮುಂದಿನ ವಚನದಲ್ಲಿ ಅಲ್ಲಮನ ಇಂದಿನ ಪರಿಪಾಕವೂ ಹಿಂದಿನ ಪರಿತಾಪವೂ ಕೂಡಿಯೆ ಅಭಿವ್ಯಕ್ತವಾಗುತ್ತವೆ:

ಎಸೆಯದಿರು, ಎಸೆಯದಿರು ಕಾಮ,
ನಿನ್ನ ಬಾಣ ಹುಸಿಯಲೇಕೋ?
ಲೋಭ ಮೋಹ ಮದ ಮತ್ಸರ
ಇವು ಸಾಲದೇ ನಿನಗೆ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೆ, ಮರುಳು ಕಾಮ?

ಭಗವದ್ವಿರಹದ ಹಂತವೊಂದಿತ್ತು ಅಲ್ಲಮನ ಬದುಕಿನಲ್ಲಿ. ಅದರಲ್ಲಿ ಬೆಂದು ಈಗ ಗಟ್ಟಿಯಾಗಿದೆ ಅವನ ಚಿತ್ತ. ಮತ್ತೆ ಅದನ್ನು ಭೇದಿಸುವುದಾಗಲಿ ಸುಡುವುದಾಗಲಿ ಸಾಧ್ಯವಿಲ್ಲ. ತನ್ನ ಸಿದ್ದಿಪೂರ್ವ ಸ್ಥಿತಿಯನ್ನೂ ಅದರ ಫಲವಾಗಿಯೆ ಈಗ ಲಭಿಸಿರುವ ಅಜೇಯತೆಯನ್ನೂ ಅಲ್ಲಮ ಇಲ್ಲಿ ಹೇಳಿಕೊಂಡಿದ್ದಾನೆ; ತನ್ನ ಪೂರ್ವೇತಿಹಾಸವನ್ನು ನಾಲ್ಕೇ ಮಾತುಗಳಲ್ಲಿ ವ್ಯಂಜಿಸಿದ್ದಾನೆ. ಹಂಬಲ, ಹೋರಾಟಗಳಿಲ್ಲದೆ ಭಗವತ್ ಕೃಪೆ ಒದಗದೆಂಬುದೂ ಇಲ್ಲಿ ಇಂಗಿತವಾಗಿದೆ. (ಇಲ್ಲಿಯೂ ಪ್ರಾಸವಿಲಾಸ ಗಣನೀಯ. ಮುಂದೆಯೂ ಎಷ್ಟೋ ವಚನಗಳಲ್ಲಿ ಇದು ಕಂಡುಬರುತ್ತದೆ.)

ಭಗವದ್ದರ್ಶನ ಸುಲಭಶಕ್ಯವಲ್ಲದಿದ್ದರೂ, ಅದು ದೊರೆತಾಗ ಭಕ್ತನಿಗೆ ಹಿಂದಿನ ಕ್ಲೇಶಗಳೆಲ್ಲ ಮರೆತುಹೋಗಿ, ಅದು ತನಗೆ ಸುಲಭವಾಗಿ ಸಿಕ್ಕಿತೆಂದೇ ಅವನು ಉದ್ಗರಿಸುತ್ತಾನೆ:

ಅಱಸುವ ಬಳ್ಳಿ ಕಾಲ ಸುತ್ತಿತೆಂಬಂತೆ
ಬಯಸುವ ಬಯಕೆ ಕೈಸಾರಿದಂತೆ
ಬಡವ ನಿಧಾನವನೆಡಹಿ ಕಂಡಂತೆ
ನಾನಱಸುತ್ತಲಱಸುತ್ತ ಬಂದು
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ!

ಇಲ್ಲಿ ನಾಣ್ಣುಡಿಗಳನ್ನೆ ಬಳಸಿಕೊಂಡಿದ್ದರೂ ದೈವೀ ಕಾಣ್ಕೆಯ ಹಿಗ್ಗು, ಸಂತೃಪ್ತಿಗಳು ಸುಪ್ರಕಟವಾಗಿವೆ.

ದೈವ ಕಾರುಣ್ಯದಿಂದ ಸಂಸಾರ ನಿಶ್ಶೇಷವಾಗಿ ನಾಶಗೊಳ್ಳುವ ಪರಿಯನ್ನು ಪ್ರಭು ಹೀಗೆ ಅನೇಕ ಹೋಲಿಕೆಗಳಿಂದ ಬಣ್ಣಿಸುತ್ತಾನೆ:

ಮರದೊಳಗಣ ಮರದ ಕಿಚ್ಚು ಮರನ ಸುಟ್ಟಂತಾದೆನಯ್ಯಾ
ಬಯಲ ಗಾಳಿಯ ಪರಿಮಳ ನಾಸಿಕವನಪ್ಪಿದಂತಾದೆನಯ್ಯಾ
ಕರುವಿನ ಬೊಂಬೆಯನುರಿ ಕೊಂಡಂತಾದೆನಯ್ಯಾ
ಗುಹೇಶ್ವರಲಿಂಗವ ಪೂಜಿಸಿ ಭವಗೆಟ್ಟೆನಯ್ಯಾ|

ಇವುಗಳಲ್ಲಿ ಮೊದಲನೆಯ ಉಪಮಾನ ಅರ್ಥವತ್ತಾಗಿದೆ. ಮರವನ್ನು ಸುಡುವ ಬೆಂಕಿ ಹೊರಗಿನದಲ್ಲ. ಅಂತೆಯೆ ವ್ಯಕ್ತಿಯ ಭವಭಗ್ನತೆಗೆ ಕಾರಣವಾದ ಶಕ್ತಿ ಅವನೊಳಗೇ ಸುಪ್ತ ವಾಗಿರುತ್ತದೆ; ಪ್ರಬುದ್ಧವಾದಾಗ ಅವನ ಸರ್ವಸ್ವವನ್ನೂ ಕಬಳಿಸುತ್ತದೆ.

ಅದ್ವೈತದ ಭಂಗಿ ಎಂತಹುದೆಂಬುದನ್ನು ಹೇಳುತ್ತಾನೆ ಅಲ್ಲಮ; ಅದು ಆ ಅಸಾಂಪ್ರದಾಯಿಕ ಪೂಜಾವಿಧಾನದಲ್ಲಿದೆ:

ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ;
ಆಕಾಶಗಂಗೆಯಲ್ಲಿ ಮಜ್ಜನ;
ಹೂವಿಲ್ಲದ ಪರಿಮಳದ ಪೂಜೆ;
ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ
ಇದು ಅದ್ವೈತ ಕಾಣಾ ಗುಹೇಶ್ವರ!

ದೇವರ ನಿಲುವು ಒಲವುಗಳನ್ನು ಎಷ್ಟೋ ವಚನಗಳಲ್ಲಿ ನಿರೂಪಿಸಿದ್ದಾನೆ ಅಲ್ಲಮ. ದೇವರು ಇರುವುದು ಹೀಗೆ:

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ!

ಶಿಲೆಯೊಳಗಿನ ಬೆಂಕಿ, ಬೀಜದೊಳಗಿನ ವೃಕ್ಷ ಮುಂತಾದುವು ಅಗೋಚರ, ಅಗಮ್ಯ. ಆದರೆ ಪ್ರಯತ್ನದಿಂದ ಕಾಲವಶತೆಯಿಂದ ಅವು ದೃಗ್ಗೋಚರವೂ ಗ್ರಾಹ್ಯವೂ ಆಗುತ್ತವೆ. ಹಾಗೆಯೆ, ಶರಣರಲ್ಲಿ ಅಡಗಿರುವ ಪರಮಾತ್ಮನನ್ನು ಸಾಧನೆಯಿಂದ ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯ. (‘‘ಶಬ್ದದೊಳಗಣ ನಿಶ್ಶಬ್ದದಂತೆ’’ ಎಂಬ ಮಾತು ಕಾವ್ಯಮೀಮಾಂಸೆಯ ದೃಷ್ಟಿಯಿಂದಲೂ ಉಪಾದೇಯ : ‘ಧ್ವನಿ’ಯನ್ನು ‘ಶಬ್ದದೊಳಗಣ ನಿಶ್ಶಬ್ದ’ವೆಂದು ಲಕ್ಷಣೀಕರಿಸಬಹುದು) ಮತ್ತೊಂದು ವಚನದಲ್ಲಿ, ‘‘ಜಲದೊಳಗಿದ್ದ ಕಿಚ್ಚು ಜಲವ ಸುಡದೆ, ಜಲವು ತಾನಾಗಿದ್ದಿತ್ತು ನೋಡಾ!’’ ಎಂದು ಭಗವತ್ ಸ್ವರೂಪವನ್ನು ತಿಳಿಸಲಾಗಿದೆ. ಈ ಸಾದೃಶ್ಯ ಕವಿಸಮಯವಷ್ಟೆ.

ಭಗವಂತ ಮಿಥ್ಯೆಯಲ್ಲ : ಅವನನ್ನು ಕಾಣಬಹುದು; ಆದರೆ ಇತರರಿಗೆ ಕಾಣಿಸುವುದು ಕಷ್ಟ. ಇದನ್ನು ‘‘ಶಿಶು ಕಂಡ ಕನಸಿನಂತೆ ಗುಹೇಶ್ವರನು ಹೆಸರಿಲ್ಲದ ಬಯಲು’’ ಎಂಬ ಉಪಮೆಯಿಂದ ನಿರವಿಸಲಾಗಿದೆ. ‘ಹೆಸರಿಲ್ಲದ ಬಯಲು’ ಎಂಬಲ್ಲಿ ಆ ಪರವಸ್ತು ನಾಮರೂಪ ಗುಣಾತೀತವಾದುದು ಎಂಬುದು ಸೂಚಿತವಾಗುತ್ತದೆ; ಆ ಪರಮನ ಮುಂದೆ ಎಲ್ಲರೂ ಹಸುಳೆಗಳು ಎಂಬುದು ಕೂಡ. ಭಕ್ತ-ಭಗವಂತರ ಸಂಬಂಧವನ್ನು, ಅರ್ಥಾತ್ ಅಭಿನ್ನತೆಯನ್ನು ಸಾರುತ್ತಿದೆ ಈ ವಚನ:

ತಾಯಿಗಾದ ಸುಖದುಃಖಂಗಳು
ಬಸಿಱ ಶಿಶುವಿಂಗೆ ನೋಡಯ್ಯ.
ಶಿವಶರಣರಿಗೆ ಮಾಡಿದ ಸುಖದುಃಖಗಳು
ಶಿವನ ತಾಗುವುವು!
ಕರಣವುಳ್ಳವರು ಮರಣವಿಲ್ಲದವಂಗೆ ಮುನಿದರೆ
ತನುವುಳ್ಳವರ ಮುಟ್ಟುವುದಲ್ಲದೆ
ಒಡಲಿಲ್ಲದಾತನ ಮುಟ್ಟಬಲ್ಲುದೆ?
ಗುಹೇಶ್ವರ, ಕೆಂಡವನೊರಲೆ ಮುಟ್ಟಬಲ್ಲುದೆ?

ತಾಯಿಯ ಸುಖದುಃಖಗಳು ಗರ್ಭದಲ್ಲಿರುವ ಮಗುವಿಗೂ ತಟ್ಟುತ್ತವೆ ಎಂಬುದು ವೈಜ್ಞಾನಿಕವೂ ಮನೋವೈಜ್ಞಾನಿಕವೂ ಆದ ಸತ್ಯ. ಎಂತಲೇ ಶಿವಶರಣರ ಸುಖದುಃಖಗಳು ಅವರ ಅಂತರಂಗದಲ್ಲಿ ನೆಲೆಗೊಂಡಿರುವ ಶಿವನಿಗೂ ತಟ್ಟುತ್ತವೆ. ಇಷ್ಟು ವಚನದ ಪೂರ್ವಾರ್ಧ. ಇನ್ನು ಉತ್ತರಾರ್ಧ ಬೇರೆಯೇ ತಿರುವು ಪಡೆದುಕೊಳ್ಳುತ್ತದೆ. ತಾಯಿಗೆ ಹಾನಿ ಮಾಡಬಹುದೇ ಹೊರತು ನೇರವಾಗಿ ಶಿಶುವಿಗೆ ಹಾನಿ ಮಾಡುವುದು ಸಾಧ್ಯವಿಲ್ಲ; ಶಿಶುವಿನ ಸುತ್ತ ಭದ್ರಕೋಟೆಯಿರುತ್ತದೆ. ಆದ್ದರಿಂದ ಶರಣರನ್ನು ಗಾಸಿಗೊಳಿಸಬಹುದೇ ವಿನಾ ಶಿವನನ್ನಲ್ಲ : ಅವನು ಕೆಂಡವಿದ್ದಂತೆ (ಉರಿಗಣ್ಣನಲ್ಲವೆ?); ಒರಲೆಗಳು ಅದನ್ನು ಮುತ್ತಲಾರವು. ಮರಕ್ಕೆ ಒರಲೆ ಹಿಡಿಯಬಹುದೇ ಹೊರತು ಬೆಂಕಿಗಲ್ಲ. ಏನಿದ್ದರೂ ಪರೋಕ್ಷವಾಗಿ ಶಿವನನ್ನು ನೋಯಿಸಬಹುದಷ್ಟೆ. ಸಂಕೀರ್ಣವಾದ ವಚನಶಿಲ್ಪವಿದು.

ಮಾನವ ಅನಿತ್ಯ, ದೇವರು ನಿತ್ಯ. ಆದರೂ ಮಾನವ ದೇವನಾಗಬಹುದು, ಇಬ್ಬರಿಗೂ ಅಂತರವಿಲ್ಲ ಎಂದು ಭರವಸೆ ಕೊಡುತ್ತದೆ ಪ್ರಭುವಾಣಿ:

ಆಗ ಹುಟ್ಟಿ ಬೇಗ ಸಾವ
ಕಾಯಗೊಂಡ ಮಾನವ
ನೀ ದೇವರೆನಿಸಿಕೊಂಬುದಾವುದಂತರ ಹೇಳಾ!
ದೇವರು ಸಾವರೆ?
ದೇವರಿಗೂ ಸಾವರಿಗೂ ಆವುದಂತರ ಹೇಳಾ!

‘ದೇವರು’, ‘ಸಾವರು’ ಎಂಬ ಶಬ್ದಗಳಲ್ಲಿ ಅಂತರ ಅಲ್ಪ; ಅವುಗಳ ಅರ್ಥದಲ್ಲಿ ಧ್ರುವಗಳಷ್ಟು ಅಂತರ. ಅದನ್ನು ಅಳಿಸಹಾಕಬಹುದು, ಸಾಧನೆಯಿಂದ. ‘‘ಆಗ ಹುಟ್ಟಿ ಬೇಗ ಸಾವ…’’ ಎಂಬಲ್ಲಿರುವ ನಿಯತ ಪದ್ಯಲಯವನ್ನು ಲಕ್ಷಿಸಬಹುದು. ಶರಣರ ಸ್ವರೂಪವನ್ನು ಅಲ್ಲಮ ವರ್ಣಿಸುವ ರೀತಿ ಅತ್ಯಂತ ವಿಶಿಷ್ಟ:

ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈ
ಇದು ಕಾರಣ, ಗುಹೇಶ್ವರ,
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯ!

ನೀರು ಬೆಂಕಿ, ಗಾಳಿಗಳನ್ನು ಇಲ್ಲಿ ವ್ಯಕ್ತೀಕರಿಸಲಾಗಿದೆ. (ಈ ಚಿತ್ರಗಳು ತಮ್ಮಷ್ಟಕ್ಕೆ ತಾವೆ ಸ್ವೋಪಜ್ಞವಾಗಿದ್ದು, ಬೆರಗುಗೊಳಿಸುತ್ತವೆ). ನದಿಗೆ ಮೈಯೆಲ್ಲ ಕಾಲಾದುದರಿಂದ ಅದು ಎಷ್ಟುದೂರ ಬೇಕಾದರೂ ಓಡುತ್ತದೆ; ಬೆಂಕಿಗೆ ಮೈಯೆಲ್ಲ ಬಾಯಾದುದರಿಂದ ಅದು ಏನನ್ನು ಬೇಕಾದರೂ ನುಂಗಿ ನೊಣೆಯತ್ತದೆ; ಗಾಳಿಗೆ ಮೈಯೆಲ್ಲ ಕೈಯಾದುದರಿಂದ ಅದು ಎಲ್ಲವನ್ನೂ ಸೋಂಕುತ್ತದೆ. ಅಂತೆಯೆ ಶರಣ ಸರ್ವಾಗಲಿಂಗಿಯಾದುದರಿಂದ ಅವನ ಶಿವಪ್ರಭಾವ ಸರ್ವಗ್ರಾಸಿ, ಪಂಚಭೂತಗಳಂತೆ. ಭಕ್ತ-ಭಗವಂತರ ಐಕ್ಯದ ಅರೂಪ ಸ್ಥಿತಿ ಇಲ್ಲಿ ಉಕ್ತವಾಗಿದೆ:

ಕರ್ಪುರದ ಗಿರಿಯ ಉರಿಯು ಹಿಡಿದಡೆ ಇದ್ದಿಲುಂಟೆ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶವುಂಟೆ?
ಕೆಂಡದ ಗಿರಿಯನರಗಿನ ಬಾಣದಲೆಚ್ಚಡೆ
ಮರಳಿ ಬಾಣವನಱಸಲುಂಟೆ?
ಗುಹೇಶ್ವರನೆಂಬ ಲಿಂಗವನಱೆದು
ಮರಳಿ ನೆನೆಯಲುಂಟೆ?

ಕರ್ಪೂರದ ಗಿರಿ-ಉರಿ, ಮಂಜಿನ ಶಿವಾಲಯ-ಬಿಸಿಲ ಕಳಶ, ಕೆಂಡದೊಗಿರಿ-ಅರಗಿನ ಬಾಣ ಪ್ರತ್ಯೇಕವಾಗಿರುವುದು ಸಾಧ್ಯವಿಲ್ಲ; ಒಂದರಲ್ಲಿ ಮತ್ತೊಂದು ಐಕ್ಯಗೊಂಡು ಎರಡೂ ಅದೃಶ್ಯವಾಗುತ್ತವೆ. ಹಾಗೆಯೆ ಭಕ್ತ-ಭಗವಂತರ ವಿಲೀನತೆ. (ಮಂಜಿನ ಆಲಯ, ಬಿಸಿಲ ಕಳಶಗಳ ಕಲ್ಪನೆ ತುಂಬ ನವುರಾದುದು, ನವೀನವಾದುದು).

ಭಕ್ತನ ಸ್ವಭಾವವನ್ನು ಈ ವಚನದಲ್ಲಿ ಅತ್ಯಂತ ಸ್ವೋಪಜ್ಞವಾಗಿ ಅದ್ಭುತವಾದ ಚಿತ್ರಗಳ ಮೂಲಕ ವ್ಯಕ್ತಪಡಿಸಲಾಗಿದೆ:

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ!
ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ?
ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ
ಗುಹೇಶ್ವರ?!

ಬೆಟ್ಟಕ್ಕೆ ಚಳಿಯಾಗುವುದೇ ಇಲ್ಲ; ಆದ ಪಕ್ಷದಲ್ಲಿ ಏನು ಹೊದಿಸುವುದು? ಬಯಲು ಬತ್ತಲಾಗುವ ಪ್ರಶ್ನೆಯೆ ಇಲ್ಲ; ಹಾಗಾದಲ್ಲಿ ಏನನ್ನುಡಿಸುವುದು? ಭಕ್ತನು ಮತ್ತೆ ಭವಿಯಾಗುವುದು ಶಕ್ಯವೆ ಇಲ್ಲ; ಹಾಗಾದಲ್ಲಿ ಏನು ಹೋಲಿಕೆ ಕೊಡುವುದು?(ಭಕ್ತ ಬೆಟ್ಟದಂತೆ, ಬಯಲಿನಂತೆ ಎಂಬುದೂ ಇಲ್ಲಿ ಧ್ವನಿತ.[2]

ಭಕ್ತಿಪಥದಲ್ಲಿ ಸಹಜ ವಿಕಾಸ ಬೇಕು, ಬಲಾತ್ಕಾರ ಅನಪೇಕ್ಷಣೀಯ ಎಂಬುದು ಪ್ರಭುವಿನ ಅಭಿಮತ. ಅದನ್ನವನು ಒಳ್ಳೆಯ ದೃಷ್ಟಾಂತ ಕೊಟ್ಟು, ಹೇಳುವುದು ಹೀಗೆ:

ಒತ್ತಿ ಹಣ್ಣ ಮಾಡಿದೊಡೆ ಅದೆತ್ತಣ ರುಚಿಯಪ್ಪುದೋ?
ಕಾಮಿಸಿ ಕಲ್ಪಿಸಿ ಭಾವಿಸಿದಡೆ ಅದೇ ಭಂಗ!
ಭಾವಿಸುವ ಭಾವನೆಗಿಂತ ಸಾವುದೇ ಲೇಸು ಕಾಣಾ ಗುಹೇಶ್ವರ!

ಪೂಜ್ಯರು ಯಾರು ಎಂಬುದನ್ನು ಅಲ್ಲಮ ತನ್ನದೇ ಆದ ಮಾನದಂಡಗಳಿಂದ ನಿರ್ಧರಿಸುತ್ತಾನೆ:

ಕಾಮನ ಸುಟ್ಟು ಹೋಮವನುರುಹಿ
ತ್ರಿಪುರಸಂಹಾರದ ಕೀಲ ಬಲ್ಲಡೆ
ಯೋಗಿಯಾದಡೇನು ಭೋಗಿಯಾದಡೇನು?
ಶೈವನಾದಡೇನು ಸನ್ಯಾಸಿಯಾದಡೇನು?
ಆಶನವ ತೊಱೆದಾತ, ವ್ಯಸನವ ಮಱೆದಾತ
ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು.

‘ಅಶನವ ತೊಱೆದಾತ, ವ್ಯಸನವ ಮಱೆದಾತ’ ಎಂಬುದು ಎಷ್ಟು ಸೂತ್ರವತ್ತಾಗಿದೆ! ಇಲ್ಲಿ ಅಲ್ಲಮನ ಉದಾರ ಮನೋಭಾವವೂ ಅಭಿವ್ಯಕ್ತವಾಗಿದೆ. ತನ್ನ ‘ಪಂಥ’ಕ್ಕೆ ಸೇರಿದವರು ಮಾತ್ರ ಭಕ್ತರು, ಅನ್ಯರು ಅಲ್ಲ ಎಂಬ ಸಂಕುಚಿತ ದೃಷ್ಟಿ ಅವನದಲ್ಲ. ಅವನು ಜಾತಿಮತಪಂಥಗಳನ್ನು ಮೀರಿ ನಿಂತ ಮಹಾಂತ.

ಹೊನ್ನು ಹೆಣ್ಣು ಮಣ್ಣುಗಳು ಮಾಯೆ ಎಂಬುದು ಸಾಮಾನ್ಯವಾದ ತಿಳಿವಳಿಕೆ. ಆದರೆ ಅದಕ್ಕೆ ಅಲ್ಲಮ ಬಲವಾದ ತಿದ್ದುಪಡಿ ಸೂಚಿಸುತ್ತಾನೆ:

ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ;
ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ;
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ,
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ!

ಇಲ್ಲಿ ದ್ವಿರುಕ್ತಿಯ ಮೂಲಕ ಒತ್ತುಕೊಟ್ಟು ಹೇಳಿರುವುದು ಪ್ರಭಾವಶಾಲಿಯಾಗಿದೆ. ಎಲ್ಲಕ್ಕೂ ಮನವೇ ಕಾರಣ, ಒಳ್ಳೆಯದು ಕೆಟ್ಟದ್ದು ಎಂಬುದು ವ್ಯಕ್ತಿನಿಷ್ಠವೇ ಹೊರತು ವಸ್ತುನಿಷ್ಠವಲ್ಲ, ಸೃಷ್ಟಿಯಲ್ಲಿ ಮೂಲತಃ ಯಾವುದೂ ಅನಿಷ್ಟವಲ್ಲ ಎಂಬ ಗಹನ ಸತ್ಯ ಇಲ್ಲಿ ಹೃದ್ಯವಾಗಿ ಪ್ರತಿಪಾದಿತವಾಗಿದೆ.

ಭಗವಂತನಿಗಾಗಿ ಹಂಬಲಿಸುವವರು ಯಾರೂ ಇಲ್ಲವಲ್ಲ. ಎಲ್ಲರೂ ಅನ್ಯವಸ್ತುಗಳಿಗಾಗಿ ಹಂಬಲಿಸಿ ಹಾಳಾಗುತ್ತಿದ್ದಾರೆ ಎಂಬ ಅಲ್ಲಮನ ವ್ಯಥೆ ಮೂರ್ತವಾಗಿದೆ ಈ ವಚನದಲ್ಲಿ:

ದೇಶ ಗುಱಿಯಾಗಿ ಲಯವಾಗಿ ಹೋದವರ ಕಂಡೆ !
ತಮಂಧ ಗುಱಿಯಾಗಿ ಲಯವಾಗಿ ಹೋದವರ ಕಂಡೆ!
ಕಾಮ ಗುಱಿಯಾಗಿ ಬೆಂದುಹೋದವರ ಕಂಡೆ !
ನೀ ಗುಱಿಯಾಗಿ ಲಯವಾಗಿ ಹೋದವರನಾರನೂ ಕಾಣೆ,
ಗುಹೇಶ್ವರ!

ದೇಶ, ತಮಂಧ, ಕಾಮ ಗುರಿಯಾದವರ ‘ಲಯ’ದ ಅರ್ಥವೇ ಬೇರೆ, ಗುಹೇಶ್ವರ ಗುರಿಯಾದವರ ‘ಲಯ’ದ ಅರ್ಥವೇ ಬೇರೆ; ಎರಡನೆಯ ಬಗೆಯ ಲಯವನ್ನು ಯಾರೂ ಬಯಸುವುದಿಲ್ಲ, ಈ ವಚನಕ್ಕೇ ಪೂರಕವಾಗಿದೆ ಮುಂದಿನ ವಚನ:

ಆಸೆಗೆ ಸತ್ತುದು ಕೋಟಿ
ಆಮಿಷಕ್ಕೆ ಸತ್ತುದು ಕೋಟಿ
ಹೊನ್ನುಹೆಣ್ಣುಮಣ್ಣಿಂಗೆ ಸತ್ತುದು ಕೋಟಿ
ನಿನಗಾಗಿ ಸತ್ತವರನಾರನೂ ಕಾಣೆ ಗುಹೇಶ್ವರ!

ಎರಡು ವಚನಗಳ ರಚನಾವಿನ್ಯಾಸವೂ ಒಂದೇ. ಎರಡನೆಯ ವಚನ ಮೊದಲನೆಯದಕ್ಕಿಂತ ಸಂಕ್ಷಿಪ್ತವೂ ಸೂತ್ರಪ್ರಾಯವೂ ಆಗಿದೆ. ಗುಹೇಶ್ವರನನ್ನೆ ಕನಿಕರಿಸುವ ಧಾಟಿ ಅಲ್ಲಮನ ಮಾತಿನಲ್ಲಿರುವುದು ಗಮನಾರ್ಹ.

ಪಂಚೇಂದ್ರಿಯ ಸಾಮರಸ್ಯವನ್ನು, ಅದರ ಅಭಾವದಿಂದಾಗುವ ಅನಾಹುತವನ್ನು ಬಂಡಿಯ ರೂಪಕದಿಂದ ಅರುಹಿದ್ದಾನೆ ಅಲ್ಲಮ:

ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ;
ಬಂಡಿಯ ಹೊಡೆವರೈವರು ಮಾನಿಸರು :
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದಱಿಚ್ಚೆಯನಱಿದು ಹೊಡೆಯದಿದ್ದರೆ
ಅದರಚ್ಚು ಮುಱಯಿತ್ತು ಗುಹೇಶ್ವರ!

ಮೃತ್ಯುವಿನ ಅನಿವಾರ್ಯತೆಯನ್ನು ವಿಷಾದದಿಂದ ಮನಗಾಣಿಸುತ್ತಾನೆ ಅಲ್ಲಮ:

ತೋಟವ ಬಿತ್ತಿದರೆಮ್ಮವರು,
ಕಾಹ ಕೊಟ್ಟರು ಜವನವರು
ನಿತ್ಯವಲ್ಲದ ಸಂಸಾರ ವ್ಯಥಾ ಹೋಯಿತ್ತಲ್ಲಾ!

ಮೃತ್ಯುವಿಗೇ ಸಂಬಂಧಿಸಿದಂತೆ ಈ ವಚನದ ಆಶ್ಚರ್ಯಭಂಗಿ ಲಕ್ಷಿಸತಕ್ಕುದು:

ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದೆನೆಂದರೆ ಅದ ಕಂಡು ಬೆರಗಾದೆ!
ರಕ್ಕಸಿಯ ಮನೆಗೆ ಹೋಗಿ
ನಿದ್ರೆಗೆಯ್ದು ಬಂದೆನೆಂದರೆ ಅದ ಕಂಡು ಬೆರಗಾದೆ!
ಜವನ ಮನೆಗೆ ಹೋಗಿ
ಸಾಯದೆ ಬದುಕಿ ಬಂದೆನೆಂದರೆ ಅದ ಕಂಡು ಬೆರಗಾದೆ
ಗುಹೇಶ್ವರ!

ಅಲ್ಲಮನ ವಚನಗಳಲ್ಲಿ ನಾನಾ ಮುಖವಾದ ತೀವ್ರ ವಿಡಂಬನವನ್ನು ಕಾಣುತ್ತೇವೆ. ದೇವರು ಧರ್ಮಗಳ ಹೆಸರಿನಲ್ಲಿ ಕಂಡುಬರುತಿದ್ದ ಡಾಂಭಿಕತೆ, ಅಜ್ಞಾನ, ಅನಾಚಾರಗಳಿಗೆ ಕಶಾಘಾತದಂತಿವೆ ಅವನ ಬಹುಪಾಲು ವಚನಗಳು.

ಮಾಯೆಯ ಬಲೆಯಲ್ಲಿ ಬಿದ್ದ ಸಂಸಾರಿಗಳನ್ನು ಹೆಗ್ಗಣದ ಹೋಲಿಕೆಯಿಂದ ಟೀಕಿಸುವ ಮುಂದಿನ ವಚನದಲ್ಲಿ ಆಕ್ರೋಶವೂ ಇದೆ, ಅನುಕಂಪವೂ ಇದೆ:

ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ
ಅಡಿಗಲ್ಲನೊಡ್ಡಿ ಹೋದಬಳಿಕ
ಸೂಸಲ ಕಂಪಿಂಗೆ ಹೆಗ್ಗಣ ಬಂದು ಬಿದ್ದಂತೆ
ಬಿದ್ದಿರಲ್ಲಾ ಮಾಯದ ಬಲೆಯಲ್ಲಿ!

ಅಂತರಂಗ ಶುದ್ದಿಯಿಲ್ಲದೆ ಬಾಹ್ಯಾಚಾರ ನಿರತರಾದವರನ್ನು ಕುರಿತ ವಿಡಂಬನ ಈ ವಚನಗಳಲ್ಲಿ ಶಕ್ತವಾಗಿ ಮೂಡಿದೆ:

ಒಳಗ ತೊಳೆಯಲಱಿಯದೆ
ಹೊಱಗ ತೊಳೆದು ಕುಡಿಯುತ್ತಿದ್ದರಯ್ಯ!
ಪಾದೋದಕಪ್ರಸಾದವನಱಿಯದೆ
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರ!

ತನು ಬತ್ತಲೆಯಿದ್ದಡೇನೋ ಮನ ಶುಚಿಯಾಗದನ್ನಕ್ಕರ?
ಮಂಡೆ ಬೋಳಾದಡೇನೋ ಭಾವ ಬಯಲಾಗದನ್ನಕ್ಕರ?
ಭಸ್ಮವ ಪೂಸಿದಡೇನೋ ಕರಣಾದಿ ಗುಣಂಗಳನೊತ್ತಿ
ಮೆಟ್ಟಿ ಸುಡದನ್ನಕ್ಕರ?
ಇಂತೀ ಆಶೆಯವೇಷದ ಭಾಷೆಗೆ
ಗುಹೇಶ್ವರ ನೀ ಸಾಕ್ಷಿಯಾಗಿ ಛೀಯೆಂಬನು!

ನಿಜವಾದ ಬ್ರಹ್ಮಚಾರಿಯ ಲಕ್ಷಣವನ್ನು ಅಲ್ಲಮ ಹೀಗೆ ಸೊಗಸಾಗಿ ಹೇಳುತ್ತಾನೆ:

ಭಸ್ಮವ ಪೂಸಿ ಬತ್ತಲೆ ಇದ್ದಡೇನು ಬ್ರಹ್ಮಚಾರಿಯೆ?
ಅಶವನವನುಂಡು ವ್ಯಸನವ ಮಱೆದಡೇನು ಬ್ರಹ್ಮಚಾರಿಯೆ?
ಭಾವ ಬತ್ತಲೆಯಿದ್ದು ಮನ ದಿಗಂಬರವಾದಡೆ
ಅದು ಸಹಜ ನಿರ್ವಾಣ ಕಾಣಾ ಗುಹೇಶ್ವರ!

ಮುಖ್ಯವಾದುದು ಹೊರಗಿನ ನಗ್ನತೆಯಲ್ಲ (ಅದರಿಂದ ಅಪಾಯವೆ ಆಗಬಹುದು) ಒಳಗಿನ ದಿಗಂಬರತೆ. ಅಂತೆಯೇ ಮುಖ್ಯವಾದುದು ಒಳಗಿನ ಮಡಿ, ಹೊರಗಿನದಲ್ಲ. ಹೊರಗೆ ಮಾತ್ರ ಮೀಯುವವರನ್ನು ಹೀಗೆ ತರಾಟೆಗೆ ತೆಗೆದುಕೊಳ್ಳುತ್ತಾನೆ ಪ್ರಭು:

ಮಿಂದು ದೇವರ ಪೂಜಿಸಿಹೆನೆಂಬ
ಸಂದೇಹಿ ಮಾನವ ನೀ ಕೇಳಾ!
ಮೀಯದೇ ಮೀನು? ಮೀಯದೇ ಮೊಸಳೆ?
ತಾ ಮಿಂದು, ತನ್ನ ಮನ ಮೀಯದನ್ನಕ್ಕರ
ಬೆಡಗಿನ ಮಾತ ಮೆಚ್ಚುವನೆ
ನಮ್ಮ ಗುಹೇಶ್ವರ ಲಿಂಗವು?

ಮುಕ್ತಿಯೆಂಬುದು ಸತ್ತ ಮೇಲೆ ಬಯಸುವಂಥದಲ್ಲ; ಬದುಕಿರುವಾಗಲೇ ಗಳಿಸಬೇಕಾ ದುದು:

ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು
ಪೂಜಿಸಹೋದರೆ ದೇವರೇನ ಕೊಡುವರೋ?
ಸಾಯದೆ, ನೋಯದೆ, ಸ್ವತಂತ್ರನಾಗಿ,
ಸಂದುಭೇದವಿಲ್ಲದಿಪ್ಪ, ಗುಹೇಶ್ವರ, ನಿಮ್ಮ ಶರಣ.

‘ಸಾಯದೆ, ನೋಯದೆ’ ಎಂಬ ಮಾತು ಅರ್ಥ ಶ್ರೀಮಂತವಾಗಿದೆ. ದೇಹ ದಂಡನೆಗೆ ಬೆಲೆ ಕೊಟ್ಟವರಲ್ಲ ವಚನಕಾರರು; ‘ಸ್ವಾತಂತ್ರ್ಯ’ಕ್ಕೆ ಅವರು ಪ್ರಾಶಸ್ತ್ಯವಿತ್ತವರು. ಅವರದು ಸಮನ್ವಯದೃಷ್ಟಿ. ‘‘ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು’’ ಎಂದೂ ‘‘ಕಾಯಗುಣವಳಿದು ಭಕ್ತಿಯ ಮಾಡಬಲ್ಲವನೇ ದೇವ’’ ಎಂದೂ ಏಕತ್ರ ಹೇಳುತ್ತಾನೆ ಅಲ್ಲಮ. ‘‘ಶಿಲೆಯ ಮೇಲಣ ಭೋಗಿಗಳುಂಟು, ಮೊಲೆಯ ಮೇಲಣ ಯೋಗಿಗಳುಂಟು’’ ಎಂಬ ಅವನ ಸೂಕ್ತಿ ಎಷ್ಟೊಂದು ಅರ್ಥಗರ್ಭಿತ!

[1] ಮಾತೆಂಬುದು ಜ್ಯೋತಿಯೆಂಬ ಹೇಳಿಕೆ ಹೊಸದಲ್ಲ, ‘‘ಮಾತೆಂಬ ಜ್ಯೋತಿ ಸಂಸಾರದ ಉದ್ದಕ್ಕೂ ಬೆಳಗದೆ ಇದ್ದರೆ ಅಶೇಷ ಭುವನತ್ರಯವೂ ಕಗ್ಗತ್ತಲಾಗಿಬಿಟ್ಟೀತು’’ ಎಂಬ ದಂಡಿಯ ಹೇಳಿಕೆಯನ್ನು (‘ಕಾವ್ಯಾದರ್ಶ’, ೧.೪) ಸ್ಮರಿಸಬಹುದು. ಆದರೆ ‘ಜ್ಯೋತಿರ್ಲಿಗ’ ಎಂಬ ಉಕ್ತಿ, ಅದರ ಅರ್ಥವ್ಯಾಪ್ತಿ ವಿನೂತನ. ಅಲ್ಲಮನಲ್ಲಿ ಮಾತು ಲೌಕಿಕ ಸ್ತರದಿಂದ ಅಲೌಕಿಕ ಸ್ತರಕ್ಕೇರಿದೆ.

[2] ಈ ವಚನದ ಬಗ್ಗೆ ಎಂ. ಚಿದಾನಂದಮೂರ್ತಿಯವರು ಹೀಗೆ ಬರೆಯುತ್ತಾರೆ: ‘‘ಕಡೆಯ ಮಾತಿಗೂ ಮೊದಲ ಎರಡು ಚಿತ್ರಗಳಿಗೂ ಸಂಬಂಧ ಕಲ್ಪನೆಯಾಗುವುದಿಲ್ಲ.’’ (‘ವಚನ ಸಾಹಿತ್ಯ’, ಸಾಮಾನ್ಯರಿಗೆ ಸಾಹಿತ್ಯಚರಿತ್ರೆ ೫, ಪು.೮೦). ಇಲ್ಲಿ ಸಂಬಂಧ ಸ್ಪಷ್ಟವಾಗಿದೆ. ಬೆಟ್ಟಕ್ಕೆ ಚಳಿಯಾಗುವುದಾಗಲಿ ಬಯಲು ಬತ್ತಲೆಯಾಗುವುದಾಗಲಿ ಭಕ್ತ ಭವಿಯಾಗುವುದಾಗಲಿ ಎಂದಿಗೂ ಅಸಾಧ್ಯ ಎಂಬುದು ಒಟ್ಟು ವಚನದ ಭಾವ. (‘ಸೂರ್ಯ ಪಶ್ಚಿಮದಲ್ಲಿ ಹುಟ್ಟುವುದೂ ಒಂದೆ, ಅವನು ಬುದ್ದಿ ಕಲಿಯುವುದೂ ಒಂದೆ’ಎಂದ ಹಾಗೆ). ತರ್ಕತೀಕ್ಷ್ಣವಾದ ಅಲ್ಲಮನ ಮತಿ ಅಸಂಬದ್ಧತೆಗೆ ಎಡೆಗೊಡುತ್ತದೆಯೆ? ಆದರೆ ಎಷ್ಟೋ ಕಡೆ ಹೊಂದಾಣಿಕೆ ಸುಲಭವಲ್ಲವೆಂಬುದು ದಿಟ. ವಾಸ್ತವವಾಗಿ, ಅಲ್ಲಮನದೇ ಆದ ಒಂದು ವಿಶಿಷ್ಟ ಅಭಿವ್ಯಕ್ತಿ ವಿನ್ಯಾಸವಿದೆ: ಅದು ಅಭ್ಯಾಸಯೋಗ್ಯ.