ಲಿಂಗಧಾರಣೆಗೆ ಅಲ್ಲಮನ ವಿರೋಧವಿದೆ. ಅವನ ಪಾಲಿಗೆ ಲಿಂಗವೆಂದರೆ ಚಿನ್ಮಯ ಶಿವ. ಒಂದು ಭೌತಿಕ ವಸ್ತುವಾಗಿ, ಚಿಹ್ನೆಯಾಗಿ ಲಿಂಗ ಎಷ್ಟು ಅಲ್ಪವಾದುದು ಎಂಬುದನ್ನು ಈ ವಚನದಲ್ಲಿ ಸ್ವಾರಸ್ಯಕರವಾಗಿ ತಿಳಿಸಲಾಗಿದೆ:

ಸಿಡಿಲೊಡನೆ ಕಾದುವಂಗೆ ಕೊಡೆಯೊಂದು ಮಱೆಯೆ?
ಪರ್ವತವ ಹೋಱುವಂಗೆ ಸಿಂಬೆಯೊಂದು ಸಹಾಯವೆ?
ಸಕ್ಕರೆಯ ಸವಿವುದಕ್ಕೆ ಬೇವೊಂದು ಪದಾರ್ಥವೆ?
ಗುಹೇಶ್ವರನಱಿವುದಕ್ಕೆ ಕುಱುಹು ಮುನ್ನೇಕೆ?

ಪೂರ್ವಾರ್ಧದಲ್ಲಿ ಬಂದಿರುವ ಚಿತ್ರಗಳು ಘನವಾಗಿದ್ದು, ಸ್ವಯಂ ಪೂರ್ಣವಾಗಿ ನಿಲ್ಲಬಲ್ಲ ಸತ್ತ್ವ ಪಡೆದಿವೆ. ಹಿಂದಿನ ವಚನದ ಆಶಯವೇ ಈ ವಚನದಲ್ಲೂ ಸಮರ್ಥವಾಗಿ ಬಿಂಬಿತವಾಗಿದೆ:

ಚಿನ್ನವನೊರೆಯಬಹುದಲ್ಲದೆ, ಬಣ್ಣವನೊರೆಯಬಹುದೇ?
ಹೂವ ಮುಡಿಯಬಹುದಲ್ಲದೆ, ಗಂಧವ ಮುಡಿಯಬಹುದೇ?
ಕರ್ಮವ ಮಾಡಬಹುದಲ್ಲದೆ, ವಸ್ತುವನಱಿಯಬಹುದೇ?
ಗುಹೇಶ್ವರನ ನೆನೆಯಬಹುದಲ್ಲದೆ, ಲಿಂಗವು ತಾನಾಗಬಾರದು!

ಲಿಂಗವೇ ದೇರಲ್ಲ; ದೇವರು ಬೇರೆಯಿದ್ದಾನೆ-ಚಿನ್ನದಿಂದ ಬಣ್ಣ, ಹೂವಿನಿಂದ ಗಂಧ, ಕರ್ಮದಿಂದ ವಸ್ತು ಪ್ರತ್ಯೇಕವಾಗಿರುವಂತೆ. (ಇಲ್ಲಿ ಲಿಂಗ ತಿರಸ್ಕಾರ್ಯವೆಂದಲ್ಲ ಚಿನ್ನದಂತೆ, ಹೂವಿನಂತೆ ಅದೂ ಇರಬಹುದು; ಆದರೆ ಅದೇ ಸರ್ವಸ್ವವಲ್ಲ; ಅದು ಸಂಕೇತಿಸುವ ಶಿವ ಮುಖ್ಯ).

ದೇವಾಲಯ, ವಿಗ್ರಹಾರಾಧನೆ, ಲಿಂಗಪೂಜೆ-ಇವೆಲ್ಲ ಹುರುಳಿಲ್ಲದವು, ಅಲ್ಲಮನ ಪಾಲಿಗೆ. ಎಂತಲೆ ಅವನು ಮರುಕದಿಂದಲೆ ವಿಡಂಬಿಸುತ್ತಾನೆ:

ಅಗ್ಘವಣಿ ಪತ್ರೆ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ!
ಏನೆಂದಱಿಯರು! ಎಂತೆಂದಱಿಯರು!
ಜನ ಮರುಳೊ ಜಾತ್ರೆ ಮರುಳೋ
ಎಂಬಂತೆ ಎಲ್ಲರೂ ಪೂಜಿಸಿ ಏನನೂ ಕಾಣದೆ
ಲಯವಾಗಿ ಹೋದರು, ಗುಹೇಶ್ವರ.

ಈ ದಿಶೆಯಲ್ಲಿ ಅತ್ಯಂತ ಕಟುವಾದದ್ದು ಈ ವಚನ:

ಮಜ್ಜನಕೆಱೆದು ಫಲವ ಬೇಡುವರಯ್ಯ
ತಮಗೆಲ್ಲಿಯದೋ ಫಲವು ಸೀತಾಳಕ್ಕಲ್ಲದೆ?
ಪತ್ರೆಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯ
ತಮಗೆಲ್ಲಿಯದೋ ಫಲವು ಗಿಡುಗಳಿಗಲ್ಲದೆ?-
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು
ಫಲವ ಬೇಡುವ ಸರ್ವಾನ್ಯಾಯಿಗಳನೇನೆಂಬೆ, ಗುಹೇಶ್ವರ?

ಲಿಂಗರಾಧನೆಯನ್ನು ಅಲ್ಲಗಳೆಯುವ ಈ ಪರಿ ಯುಕ್ತಿಯುಕ್ತವಾಗಿದೆ, ಮನಂಬುಗು ವಂತಿದೆ.

ದೇಹವೇ ದೇವಾಲಯವಾಗಿರುವಾಗ, ಅನ್ಯದೇವಾಲಯದ ಅಗತ್ಯವೇನು?-

ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವವರಿಗೆ
ಏನ ಹೇಳುವೆನಯ್ಯ?
ಗುಹೇಶ್ವರ, ನೀ ಕಲ್ಲಾದಡೆ ನಾನೇನಪ್ಪೆನು?

ಸ್ವಾರಸ್ಯವಿರುವುದು ಕಡೆಯ ಮಾತಿನಲ್ಲಿ. ದೇವರೇ ಕಲ್ಲಾದರೆ ಮನುಷ್ಯ ಏನಾಗಬೇಕು? ‘‘ಮರ್ತ್ಯಲೋಕದ ಮಾನವರು ದೇಗುಲದೊಳಗೊಂದು ದೇವರ ಮಾಡಿದರೆ ಆನು ಬೆರಗಾದೆನಯ್ಯ!’’ ಎಂದೂ ಉದ್ಗರಿಸುತ್ತಾನೆ ಅಲ್ಲಮ. ಎಲ್ಲೆಲ್ಲಿ ನೋಡಿದರೂ ಲಿಂಗಗಳು : ಅಲ್ಲಮನ ಮನಸ್ಸು ರೋಸಿಹೋಗುತ್ತದೆ. ಕೆಡೆನುಡಿಯುತ್ತಾನೆ:

ಎನಗೊಂದು ಲಿಂಗ, ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು:
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಉಳಿ ಮುಟ್ಟಿದ ಲಿಂಗವ ಮನ ಮುಟ್ಟಬಲ್ಲುದೇ,
ಗುಹೇಶ್ವರ?

‘‘ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ’’ ಎಂಬ ಮಾತಿನ ಧಾಟಿಯನ್ನು ಗಮನಿಸಬೇಕು. ಅದರಲ್ಲಿ ವಿಷಾದವಿದೆ, ವ್ಯಗ್ರತೆಯಿದೆ. ‘ಉಳಿ ಮುಟ್ಟಿದ ಲಿಂಗ’ ಅಸ್ಪೃಶ್ಯವಾದುದು; ಅದು ಯಾರಿಗೆ ಬೇಕು? ಲಿಂಗಧಾರಣದಿಂದಲೆ ಯಾರೂ ಭಕ್ತರಾಗುವುದಿಲ್ಲ ಎಂಬುದನ್ನು ಅಲ್ಲಮ ಮನವರಿಕೆ ಮಾಡಿಕೊಡುವ ಬಗೆ ಯಾರನ್ನೂ ಒಪ್ಪಿಸುವಂಥದು, ಮೆಚ್ಚಿಸುವಂಥದು:

ಹೊಟ್ಟೆಯ ಮೇಲೆ ಕಟ್ಟೋಗರದ
ಮೊಟ್ಟೆಯ ಕಟ್ಟಿದರೇನು? ಹಸಿವು ಹೋಹುದೇ?
ಅಂಗದ ಮೇಲೆ ಲಿಂಗ ಸ್ವಾಯತವಾದರೇನು?
ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಕಲ್ಲು ಲಿಂಗವೆ? ಮೆಳೆ ಭಕ್ತನೆ?
ಇಟ್ಟಾತ ಗುರುವೇ? ಇಂತಪ್ಪವರ ಕಂಡಡೆ ನಾಚುವೆನಯ್ಯ,
ಗುಹೇಶ್ವರ!

ಈ ನಿಷ್ಠುರ ನಿರ್ಣಾಯಕವಾದ ನುಡಿಗಳಲ್ಲಿ ಅಲ್ಲಮನ ಅಸಹನೆ ಕೋಪ ತಾಪಗಳೆಲ್ಲ ಸ್ಫೋಟಿಸಿವೆ:

ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ,
ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ !
ಲಿಂಗಪ್ರತಿಷ್ಠೆಯ ಮಾಡಿದವನಿಗೆ
ನಾಯಕ ನರಕ, ಗುಹೇಶ್ವರ!

ಸಾಧನೆ ಬೇಕು; ಆದರೆ ಸದಾ ಅದರಲ್ಲೇ ತೊಡಗಿದ್ದರೆ ಏನು ಪ್ರಯೋಜನ ಎಂಬ ಅಲ್ಲಮನ ಪ್ರಶ್ನೆ ಪರಿಣಾಮಕರವಾಗಿದೆ:

ಸಾವನ್ನಕ್ಕರ ಸಾಧನೆಯ ಮಾಡಿದಡೆ
ಕಾದುವ ದಿನವಾವುದಯ್ಯ, ಬಸವಣ್ಣ?
ಬಾಳುವನ್ನಕ್ಕರ ಭಜನೆಯ ಮಾಡಿದಡೆ
ತಾನಹ ದಿನವಾವುದಯ್ಯ, ಬಸವಣ್ಣ?[1]

ಕಾಯಗುಣ ಹೇಗೆ ದೈವ ಸಾಕ್ಷಾತ್ಕಾರಕ್ಕೆ ಆತಂಕವಾಗುತ್ತದೆ ಎಂಬುದನ್ನು ದೃಷ್ಟಾಂತ ಪುರಸ್ಸರವಾಗಿ ಮನಗಾಣಿಸಲಾಗಿದೆ ಈ ವಚನದಲ್ಲಿ:

ಓಟೆಯಿದ್ದಂತೆ ಕಾಯ ಮೆದ್ದವರುಂಟೆ?
ಕಾಯದ ಗುಣವಿದ್ದಂತೆ ಲಿಂಗವನಱದವರುಂಟೆ?
ಕಾಯಶಬ್ದದಲ್ಲಿ ಶ್ಲೇಷೆಯಿರುವುದನ್ನು ಗಮನಿಸಬಹುದು.

ಸಮಯಸಾಧಕರ ಕಪಟಭಕ್ತಿಯನ್ನೂ ಅದರ ದುರಂತವನ್ನೂ ಕುರಿತ ವಿಡಂಬನ ಇಲ್ಲಿದೆ:

ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿನ್ನದೆ ಮಾಬುದೇ?
ಹುಲಿಗಂಜಿ ಹುತ್ತವ ಹೊಕ್ಕಡೆ ಸರ್ಪ ತಿನ್ನದೆ ಮಾಬುದೇ?
ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರನೇನೆಂಬೆ, ಗುಹೇಶ್ವರ?

ಸಹಜ ಭಕ್ತಿ ಬೇಕು; ಅದರಿಂದ ಮೃತ್ಯುವನ್ನು ಗೆಲ್ಲಬಹುದು. ಮೃತ್ಯುಭಯದಿಂದ ಭಕ್ತಿಯ ಸೋಗು ಹಾಕಿದರೆ ಮೃತ್ಯು ತಪ್ಪದು.

ವೇದ, ಶಾಸ್ತ್ರ, ಪುರಾಣ, ತರ್ಕ, ಭಕ್ತಿಗಳನ್ನು ಪ್ರಾಸಪೂರ್ವಕವಾಗಿ ಗೇಲಿಮಾಡಿ, ಭಗವಂತ ಇವೆಲ್ಲಕ್ಕೂ ಅತೀತನಾದವನು ಎಂಬುದನ್ನು ಹೇಳುವ ಮುಂದಿನ ವಚನ ಅದ್ವೈತದ ನಿಲುಮೆಯಿಂದ ಮಾತ್ರ ಮೂಡಬಲ್ಲುದು:

ವೇದವೆಂಬುದು ಓದಿನ ಮಾತು,
ಶಾಸ್ತ್ರವೆಂಬುದು ಸಂತೆಯ ಸುದ್ದಿ,
ಪುರಾಣವೆಂಬುದು ಪುಂಡರ ಗೋಷ್ಠಿ,
ತರ್ಕವೆಂಬುದು ತಗರ ಹೋರಟೆ,
ಭಕ್ತಿಯೆಂಬುದು ತೋಱುಂಬ ಲಾಭ;
ಗುಹೇಶ್ವರನೆಂಬುದು ಮೀಱಿದ ಘನವು.

‘‘ಭಕ್ತಿ ಎಂಬುದು ತೋಱಿ ಉಂಬ ಲಾಭ’’ ಎಂಬ ನುಡಿಯಲ್ಲಿ ಎಂತಹ ಕಟು ಸತ್ಯವಿದೆ! ಇಂಥ ಮಾತುಗಳನ್ನಾಡುವುದು ಸಾಮಾನ್ಯರಿಗೆ-ಭಕ್ತರಿಗೆ ಕೂಡ-ಸಾಧ್ಯವಿಲ್ಲ.

ಭಕ್ತಿನಿಷ್ಠೆಗಳಿಲ್ಲದೆ ಪುರಾತನರನ್ನು ಸ್ಮರಿಸಿ ಸಂತೃಪ್ತರಾಗುವವರ ಮೇಲೆ ಇದು ಅಲ್ಲಮಾಸ್ತ್ರ:

ಕುರೂಪಿ ಸುರೂಪಿಯ ನೆನೆದಡೆ
ಸುರೂಪಿಯಪ್ಪನೆ?
ಸುರೂಪಿ ಕುರೂಪಿಯ ನೆನೆದಡೆ
ಕುರೂಪಿಯಪ್ಪನೆ?
ಧನವುಳ್ಳವರ ನೆನೆದಡೆ ದರಿದ್ರ ಹೋಹುದೆ?
ಪುರಾತನರ ನೆನೆದು ಕೃತಾರ್ಥರಾದೆವೆಂಬರು!
ತಮ್ಮಲ್ಲಿ ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ
ಮೆಚ್ಚನು ಗುಹೇಶ್ವರನು.

ಸ್ಮರಣೆಯೊಂದೇ ಸಾಲದು, ಸಾಧನೆಯೂ ಅತ್ಯವಶ್ಯ.

ಭವನಾಶವಾಗದಿದ್ದರೆ ಅದೆಂತಹ ಭಕ್ತಿ | ನಿಷ್ಪ್ರಯೋಜಕವಾದ ಕೆಲವು ಉದ್ಯಮಗಳ ಪಟ್ಟಿಗೆ ಅದನ್ನು ಸೇರಿಸಿ, ಕಡೆಗೆ ‘ಶಾಪ’ ಹಾಕುತ್ತಾನೆ ಅಲ್ಲಮ:

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತವಿಲ್ಲದಿದ್ದರೆ
ಬೆವಸಾಯದ ಗೊಡವೇತಕ್ಕಯ್ಯ?
ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ
ಕ್ರಯವಿಕ್ರಯದ ಗೊಡವೇತಕ್ಕಯ್ಯ?
ಭಕ್ತನಾಗಿ ಭವಂ ನಾಸ್ತಿಯಾಗದಿದ್ದರೆ
ಉಪದೇಶವ ಕೊಟ್ಟ ಗುರು, ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ!
ಗುಹೇಶ್ವರಲಿಂಗವತ್ತಲೇ ಇರಲಿ!

ಬತ್ತಕ್ಕಾಗಿ ಬೇಸಾಯ ; ಅದೇ ಇಲ್ಲದಿದ್ದರೆ? ಸಂಸಾರ ದಾಟುವುದಕ್ಕಾಗಿ ಭಕ್ತಿ; ಆ ಉದ್ದೇಶವೇ ಈಡೇರದಿದ್ದರೆ? ಅಲ್ಲಮನ ಭಾವತೀವ್ರತೆ, ಬೇಸರ ಕಡೆಯ ಮಾತುಗಳಲ್ಲಿ ಎದ್ದು ಕಾಣುತ್ತವೆ.

ಮದುವೆಯ ದಿಬ್ಬಣದ ಈ ಚಿತ್ರ ಹಾಸ್ಯಪೂರಿತವಾದುದು:

ಮೋಟರ ಮದುವೆಗೆ ಭಂಡರು ಹಱೆಯ ಹೊಯ್ದು
ಮೂಕೊಱೆಯರೆಲ್ಲ ಕಳಶವ ಹೊತ್ತರಲ್ಲಾ!
ಉಘೇ ಚಾಂಗು ಭಲಾ ಎಂದು ನಿಬ್ಬಣ ನೆರೆದು
ಹೂದಂಬುಲಕ್ಕೆ ಮುನಿವರಿದೇನಯ್ಯ?
ತ್ರಿಜಗವೆಲ್ಲಾ ನಿಬ್ಬಣ ಹೋಯಿತ್ತು!
ಗುಹೇಶ್ವರನನಱಿಯದ ಹಗರಣವೋ?!

ದೇವರ ಹೆಸರಿನಲ್ಲಿ ನಡೆಯುವ ಜಾತ್ರೆ, ಉತ್ಸವಾದಿಗಳನ್ನು ಇಲ್ಲಿ ಟೀಕೆಗೆ ಗುರಿಪಡಿಸಿದಂತಿದೆ.

ಮದ್ಯಮಾಂಸಗಳಿಗೆ ಪ್ರಭು ಕಲ್ಪಿಸಿದ ನೂತನಾರ್ಥ ಈ ವಚನದಲ್ಲಿದೆ:

ಮದ್ಯಮಾಂಸಾದಿಗಳ ಮುಟ್ಟೆವೆಂದೆಂಬಿರಿ
ನೀವು ಕೇಳಿರೇ
ಮದ್ಯವಲ್ಲವೇನು ಅಷ್ಟಮದಂಗಳು?
ಮಾಂಸವಲ್ಲವೇನು ಸಂಸಾರಸಂಗ?
ಉಭಯವನತಿಗಳೆದಾತನೇ
ಗುಹೇಶ್ವರ ಲಿಂಗದಲ್ಲಿ ಲಿಂಗೈಕ್ಯನು

ಮದವನ್ನುಂಟುಮಾಡತಕ್ಕದ್ದೆಲ್ಲ ಮದ್ಯ ; ದೇಹಗಳ ಕೂಟ ಮಾಂಸಲೋಭವಲ್ಲವೇ? ಇವು ವರ್ಜ್ಯ.

ಮಾಡಬಲ್ಲವನು ಯಾವ ಕೆಲಸವನ್ನು ಕೊಟ್ಟರೂ ಮಾಡುತ್ತಾನೆ; ಹೇಡಿಯಾದವನು ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾನೆ. (‘ಕುಣಿಯಲಾರದ ಸೂಳೆ ನೆಲ ಡೊಂಕು ಎಂದಳು’ ಎಂಬ ಗಾದೆಯಂತೆ). ಅಂಥವರನ್ನು ಕುರಿತ ಮಾರ್ಮಿಕ ವಿಡಂಬನವನ್ನಿಲ್ಲಿ ಕಾಣುತ್ತೇವೆ:

ಕೊಟ್ಟ ಕುದುರೆಯನೇರಲಱಯದೆ
ಮತ್ತೊಂದು ಕುದುರೆಯ ಬಯಸುವವರು
ವೀ
ರರೂ ಅಲ್ಲ, ಧೀರರೂ ಅಲ್ಲ!
ಇದು ಕಾರಣ, ನೆಱೆ ಮೂಱು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರವೆಂಬ ಲಿಂಗವನವರೆತ್ತ ಬಲ್ಲರೋ?

ಇಂಥ ಜನ ಎಲ್ಲ ಕ್ಷೇತ್ರಗಳಲ್ಲೂ ಉಂಟು; ಅಂಥವರಿಗೆ ಇದು ಕಹಿಗುಳಿಗೆ. ಮುಂದಿನ ವಚನದಲ್ಲಿ ಎಂತಹ ವಿಷಾದನೀಯ ಸತ್ಯದ ಸಿಡಿಗುಂಡು ಹುದುಗಿದೆ!-

ಹಾಲ ನೇಮ, ಹಾಲ ಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ
ಅಂಬಲಿಯ ನೇಮದವರನಾರನೂ ಕಾಣೆ!

‘‘ಮುಂದಲೂರಿಗೆ ಬಟ್ಟೆಯಿದೇ ಹೋಗೆಂದರೆ ಅಂಧಕನೇನು ಬಲ್ಲನು ಹೇಳಾ?’’, ‘‘ಅಂಗಜೀವಿಗಳಿಲ್ಲ ಆಶನಕ್ಕೆ ನೆರೆದು ಲಿಂಗವಾರ್ತೆಯ ನುಡಿವರಯ್ಯ’’, ‘‘ಇಷ್ಟಲಿಂಗಕೆ ತೋಱ ಮೃಷ್ಟಾನ್ನವ ಹೊಡೆವವರಿಗೆ ನಿಮಗೆಲ್ಲಿಯದೋ ಇಷ್ಟಾರ್ಥಸಿದ್ದಿ’’, ‘‘ಕಲ್ಲು ದೇವರೆಂದು ಪೂಜಿಸುವರು… ಮುಂದೆ ಹುಟ್ಟುವ ಕೂಸಿಂಗೆ ಇಂದು ಮೊಲೆಯ ಕೊಡುವಂತೆ’’ -ಮೊದಲಾದ ವಚನ ಭಾಗಗಳಲ್ಲೂ ವಿಡಂಬನ ಕೂರ್ಪು, ಸೊಗಸುಗಳು ಸೂಸುತ್ತಿವೆ.

ಈ ಉಪದೇಶ ಪರಿಭಾವನಾರ್ಹವಾದುದು:

ಮಣಿಯನೆಣಿಸಿ ಕಾಲವ ಕಳೆಯಬೇಡ,
ಕಣಿಯ ಪೂಜಿಸಿ ಕಾಲವ ಕಳೆಯಬೇಡ;
ಕ್ಷಣವಾದಡೆಯೂ ಆಗಲಿ ನಿಜದ ನೆನಹೇ ಸಾಕು,
ಕ್ಷಣಾರ್ಧವಾದಡೆಯೂ ಆಗಲಿ ನಿಜದ ನೆನಹೇ ಸಾಕು
ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೆ, ಗುಹೇಶ್ವರ?

‘‘ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೆ?’’ ಎಂಬುದು ಅಪೂರ್ವವಾದ ಉಕ್ತಿ. ಬಿಸಿ ನೀರೂ ಸುಡುತ್ತದೆ, ನಿಜ; ಆದರೆ ಅದರಿಂದ ಏನನ್ನೂ ಹೊತ್ತಿಸುವುದು, ಸುಟ್ಟು ಬೂದಿ ಮಾಡುವುದು ಸಾಧ್ಯವಿಲ್ಲ. ಯಾಂತ್ರಿಕ ಪೂಜೆಗಿಂತ, ಮರವೆಗಿಂತ ದೇವರ ನೆನಹು ಯಾವಾಗಲೂ ಮೇಲು; ಲಾಭದಾಯಕ.

ಅಲ್ಲಮ ಕೊಡುವ ಕೆರೆಯ ರೂಪಕ ಚೆನ್ನಾಗಿದೆ :
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ,
ಬಲಿಯ ಷಡ್ವಿಧ ಭಕ್ತಿಯೆಂಬ ಸೋಪಾನದಿಂದ,
ಪರಮಾನಂದ ಜಲವ ತುಂಬಿ
ಕೆಱೆಯ ಕಟ್ಟಬಲ್ಲವರನಾರನೂ ಕಾಣೆ!
ನಾನು ಕಟ್ಟಿದ ಕೆಱೆ ಸ್ಥಿರವಾಯಿತ್ತು, ಗುಹೇಶ್ವರ, ನಿಮ್ಮಾಣೆ!

‘‘ಸಾಸವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ’’, ‘‘ತನ್ನ ತಾನಱದವಗೆ ಅಱೆವೆ ಗುರು’’, ‘‘ಆಯಿತ್ತೆ ಉದಯಮಾನ, ಹೋಯಿತ್ತೆ ಅಸ್ತಮಾನ’’, ‘‘ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ’’, ‘‘ಒಳಗಣ ರಣರಂಗ, ಹೊರಗಣ ಶೃಂಗಾರ’’, ‘‘ಘನತರ ಚಿತ್ರದ ರೂಹ ಬರೆಯಬಹುದಲ್ಲದೆ ಪ್ರಾಣವ ಬರೆಯಬಹುದೇ’’, ‘‘ಒಂದರ ಮೋಱೆಯನೊಂದು ಮೂಸಿ ನೋಡಿ ಮತ್ತೊಚ್ಚಿ ಹೊತ್ತಿಂಗೆ ಕಚ್ಚಿಯಾಡಿ ಹೋದಂತೆ’’ ಇತ್ಯಾದಿ ಸೂತ್ರಸದೃಶವಾದ ಹ್ರಸ್ವೋಕ್ತಿಗಳು ಗಹನವಾದ ಅರ್ಥವನ್ನು ತುಂಬಿಕೊಂಡು ವಿಚಾರ ಚೋದಕವೂ ಸಂತೋಷಪ್ರದವೂ ಆಗುತ್ತವೆ.

ಅಂಗೈಯೊಳಗೆ ಅರಳ್ದ ತಲೆಯ ಹಿಡಿದುಕೊಂಡು
ಕಂಗಳ ಮುತ್ತು ಪೋಣಿಸುವಾಕೆ ನೀನಾರು, ಹೇಳಾ?

ಎಂಬ ಚಿತ್ರ ಹೃದಯಂಗಮವಾದುದು. ಕಣ್ಣೀರು ಧಾರೆಯಾಗಿ ಸುರಿಯುವಿಕೆ, ‘ಕಂಗಳ ಮುತ್ತು ಪೋಣಿಸುವ’ ಕ್ರಿಯೆಯಾಗಿ ಕಂಡಿರುವುದು ಎಷ್ಟು ಸಹಜ ಹಾಗೂ ಸುಂದರ! ಇದಲ್ಲವೆ ಕವಿತೆ?

ಕಡೆಯದಾಗಿ, ಅಲ್ಲಮಪ್ರಭು ಲೋಕಕ್ಕೆ ಕೊಟ್ಟಿರುವ ಅಮೋಘ ಸಂದೇಶವೊಂದನ್ನು ಗ್ರಹಿಸಬಹುದು. ಅದ್ವೈತದ ಔನ್ನತ್ಯದಲ್ಲಿ ನಿಂತು ಆಡಿದ ಮಾತಾದರೂ, ಸಾಮಾನ್ಯರಿಗೂ ಇದು ಅತ್ಯುಪಯುಕ್ತ. ಬದುಕಿಗೆ ಕೆಚ್ಚು, ನೆಚ್ಚು, ಶ್ರದ್ಧೆ, ನಂಬಿಕೆಗಳನ್ನು ತುಂಬುವ ಪ್ರಚಂಡವಾದ ತೂರ್ಯ ನಿನಾದವಿದು:

ಕೆಂಡದ ಮಳೆ ಕಱೆವಲ್ಲಿ ಉದಕವಾಗಿರಬೇಕು;
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು;
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು,
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು,
ಗುಹೇಶ್ವರಲಿಂಗ ತಾನಾಗಿರಬೇಕು.

ಜೀವನ ಸಂಗ್ರಾಮಕ್ಕೆ ವ್ಯಕ್ತಿಯನ್ನು ಅಣಿಗೊಳಿಸುವ ಈ ಕೆಲಸವನ್ನೆ ತಾನೆ ಕಲೆ, ಧರ್ಮ, ವಿಜ್ಞಾನ ಎಲ್ಲವೂ ಮಾಡುವುದು! ಸ್ವತ್ಯಾಗದಿಂದ ಗುಹೇಶ್ವರ ಲಿಂಗವಾಗುವುದು ಎಲ್ಲರಿಗೂ ಸಾಧ್ಯವಿಲ್ಲ; ಆದರೆ ಏನೇ ಬರಲಿ, ಎದುರಿಸಿ ಗೆಲ್ಲುತ್ತೇನೆ ಎಂಬ ಚಲಬಲಗಳು ಎಲ್ಲರಿಗೂ ಸಾಧ್ಯ. ಅದನ್ನೆ ಅಲ್ಲಮ ಹೇಳಿರುವುದು.

ಅಲ್ಲಮಪ್ರಭು ಎಷ್ಟು ದೊಡ್ಡ ಅನುಭಾವಿಯೋ ಅಷ್ಟೇ ದೊಡ್ಡ ಕವಿ. ಪ್ರಸಾದ, ಮಾಧುರ್ಯಗಳಿಗಿಂತ ಓಜಸ್ಸು ಅವನ ವಾಣಿಯಲ್ಲಿ ಅತಿಶಯವಾಗಿದೆ. ಅವನ ದರ್ಶನದೀಪ್ತ ವಚನಗಳಲ್ಲಿ ಭವ್ಯತೆಯಿದೆ, ಚಾರುತ್ವವಿದೆ, ಚಮತ್ಕಾರವೂ ಇದೆ; ಕಾವ್ಯದಿಂದ ನಿರೀಕ್ಷಿಸತಕ್ಕದ್ದೆಲ್ಲ ಇದೆ; ಅದನ್ನು ಮೀರಿದ ಮಹತ್ತು ಕೂಡ ಇದೆ. ಅವನದು ‘ಅಧಿಕಾರವಾಣಿ’. ಇತರರ ವಚನಗಳಲ್ಲಿ ಕಾಣದ ಅಸಾಧಾರಣವಾದ ಆತ್ಮಪ್ರತ್ಯಯ, ಅಭೀತಿ, ‘ಶಿವೋಹಂ’ ಭಾವ, ಒಟ್ಟಿನಲ್ಲಿ ಒಂದು ಉತ್ತುಂಗ ಲೋಕೋತ್ತರವಾದ ನಿಲುವು ಅವನ ಉಕ್ತಿ ಸಮುಚ್ಚಯದಲ್ಲಿ ಮೆರೆಯುತ್ತಿವೆ. ‘‘ಪ್ರಭು ಶಿವಶರಣರ ಮಧ್ಯದಲ್ಲಿ ಹಿಮಾಲಯದ ಗೌರೀಶಂಕರದಂತೆ ಅತ್ಯುನ್ನತನಾಗಿ ಕಾಣಿಸುತ್ತಾನೆ.’’[2] ಅವನ ‘‘ವ್ಯಕ್ತಿತ್ವ ಮತ್ತು ವಚನ ರಚನೆ ಕನ್ನಡ ವಾಙ್ಮಯಕ್ಕಲ್ಲದೆ ಭಾರತೀಯ ಹಾಗೂ ಜಾಗತಿಕ ಸಾಹಿತ್ಯಕ್ಕೆ ಅಸಾಧಾರಣವಾದ ತೇಜಸ್ಸುಳ್ಳ ಕಾಣಿಕೆಯಾಗಿರುತ್ತದೆ.’’[3] ಲೋಕವನ್ನು ಮೀರಿಯೂ ಅದನ್ನು ದೂರೀಕರಿಸದ, ಆಗಾಗ ದೂರಿದರೂ ತಾರಕವಾಗಿ ನುಡಿದ, ನಡೆದ ಜಂಗಮ ಶಿವಶಕ್ತಿ ಅವನು.

‘‘ನಿಮ್ಮ ತೇಜವ ನೋಡಲೆಂದು ಹೆರಸಾರಿ ನೋಡುತ್ತಿರಲು ಶತಕೋಟಿ ಸೂರ್ಯರು ಮೂಡಿದಂತೆ ಇದ್ದುದಯ್ಯ!’’ ಎಂಬುದು ಗುಹೇಶ್ವರಲಿಂಗವನ್ನು ಕುರಿತ ಅಲ್ಲಮನ ಆಶ್ಚರ್ಯೋದ್ಗಾರ. ಅವನೂ ಸೇರಿದಂತೆ ಶರಣಸಮುದಾಯ ಆ ತೇಜದ ಒಂದು ಅಂಗವಾಗಿದೆ. ಆ ಅಂಗ, ಲಿಂಗ ಎರಡೂ ವಂದ್ಯ.

[1] ‘‘ಬೆರಣಿಯನಾಯಲಲ್ಲದೆ ಅಟ್ಟುಣ್ಣತೆರಹಿಲ್ಲೆನಗೆ’’ ಎಂಬ ಬಸವಣ್ಣನ ಮಾತು ಇಲ್ಲಿ ನೆನಪಾಗುತ್ತದೆ.

[2] ಎಂ. ಆರ್. ಶ್ರೀನಿವಾಸಮೂರ್ತಿ, ‘ವಚನ ಧರ್ಮಸಾರ’ ೧೯೫೬, ಪು.೮೫

[3] ರಂ. ಶ್ರೀ. ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’, ೧೯೫೩, ಪು.೧೫೩