ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗಾನೊಲಿದೆನವ್ವ!
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ!
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ!
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ !
ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ !
ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ !

ಅಕ್ಕಮಹಾದೇವಿ ತನ್ನ ಜೀವನಕಥೆಯ ಒಂದು ಮುಖ್ಯವಾದ ಪುಟವನ್ನು ಈ ವಚನದಲ್ಲಿ ತೆರೆದಿರಿಸಿರುವುದಲ್ಲದೆ, ಭಗವಂತನ ಸ್ವರೂಪವನ್ನು ಅನನ್ಯ ರೀತಿಯಲ್ಲಿ ಸಂಗ್ರಹಿಸಿದ್ದಾಳೆ. ಅವನಿಗೆ ಸಾವಿಲ್ಲ, ಕೇಡಿಲ್ಲ; ಆದ್ದರಿಂದಲೇ ಅವನು ಚೆಲುವನೂ ಅಹುದು. ಇದು ಸಾಮಾನ್ಯ ಕಲ್ಪನೆಗೆ ವಿರುದ್ಧವಾದ ಮಾತು. ಚೆಲುವುಳ್ಳ ವಸ್ತು ಸಾವಿಲ್ಲದ್ದು, ಕೇಡಿಲ್ಲದ್ದು ಎಂಬುದು ಸಾಮಾನ್ಯರ ಭ್ರಮೆ. ಆದರೆ ಹಾಗಲ್ಲ. ಶಿವ ಇದ್ದಲ್ಲಿ ಸೌಂದರ್ಯವಿರುತ್ತದೆ, ಶಿವದಿಂದಲೆ ಸೌಂದರ್ಯ ನಿಷ್ಪನ್ನವಾಗುತ್ತದೆ; ಸೌಂದರ್ಯದಿಂದ ಶಿವವಲ್ಲ. ಅಂತಹ ಸಾವಿಲ್ಲದ, ಕೇಡಿಲ್ಲದ ‘ಚೆನ್ನ’ ಮಲ್ಲಿಕಾರ್ಜುನನನ್ನು ಒಲಿದುದರಿಂದಲೇ ಅಕ್ಕ ದೊಡ್ಡವಳಾದಳು; ಆ ಒಲವನ್ನು ಕುರಿತು ಹಾಡಿದುದರಿಂದಲೆ ಅವಳ ವಚನಗಳೂ ಸಾವಿಲ್ಲದ,ಕೇಡಿಲ್ಲದ ಚೆಲುವನ್ನು ತಳೆದು ಕಳಕಳಿಸುತ್ತಿವೆ. (ರೂಹು ಮಾತ್ರ ಅವಕ್ಕುಂಟು, ಇಲ್ಲದಿದ್ದರೆ ಅವು ಸಾಹಿತ್ಯವೆ ಆಗುತ್ತಿರಲಿಲ್ಲ!)

ಚೆನ್ನಬಸವಣ್ಣ ವಚನ ವಾಙ್ಮಯವನ್ನು ಕುರಿತು ಆಡಿರುವ ಒಂದು ಉಕ್ತಿ ಕುತೂಹಲಕಾರಿಯಾಗಿದೆ:

ಆದ್ಯರ ಅರುವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ,
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ,
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ,
ಅಜಗಣ್ಣನ ಐದು ವಚನಕ್ಕೆ ಕೂಡಲ ಚೆನ್ನಸಂಗಯ್ಯನಲ್ಲಿ
ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನ

ಯಾವ ಅರ್ಥದಲ್ಲಿ ಚೆನ್ನಬಸವಣ್ಣ ಈ ಲೆಕ್ಕಾಚಾರ ಹಾಕಿದನೋ ಸ್ಪಷ್ಟವಾಗುವುದಿಲ್ಲ ವಾದರೂ, ಅಕ್ಕನ ವಚನಗಳ ಮೇಲ್ಮೆಯನ್ನು ಅವನು ಎತ್ತಿಹಿಡಿದಿರುವುದರಲ್ಲಿ ಸಂಶಯವಿಲ್ಲ. ಈ ಮೇಲ್ಮೆ ಕಾವ್ಯಗುಣಕ್ಕೆ ಸಂಬಂಧಿಸಿದ್ದು ಎಂದಿಟ್ಟುಕೊಂಡರೂ ತಪ್ಪಾಗಲಾರದು. ವಚನ ಸಾಹಿತ್ಯದಲ್ಲಿ ಅಕ್ಕನ ವಚನಗಳೆ ಅತ್ಯುತ್ತಮವಾದುವು ಎಂದೇನೂ ನಾವು ವಾದಿಸಬೇಕಾಗಿಲ್ಲ; ಆದರೆ ಅತ್ಯುತ್ತಮವಾದುವುಗಳ ಶ್ರೇಣಿಯಲ್ಲಿ ಅವು ನಿಲ್ಲುತ್ತವೆ ಎಂಬುದು ಅಸಂದಿಗ್ಧವಾದ ಸಂಗತಿ. ಚೆನ್ನಬಸವಣ್ಣನವರ ಉಕ್ತಿಯಲ್ಲಿ ಒಂದು ಬಗೆಯ ನಿರ್ಣಾಯಕ ವಿಮರ್ಶೆ(Judicial criticism) ವ್ಯಕ್ತವಾಗುತ್ತದೆ. ಅಕ್ಕ ಹೆಣ್ಣಾದುದರಿಂದ ಅವಳ ಬಗ್ಗೆ ಒಂದಷ್ಟು ರಿಯಾಯಿತಿ ತೋರೋಣವೆಂದು ಧಾರಾಳವಾಗಿ ಆಡಿದ ಮಾತಲ್ಲ ಅದು; ಅದರಲ್ಲಿ ಸತ್ಯ ಸಾಕಷ್ಟಿದೆ. ಅಂತೂ ನಮ್ಮಲ್ಲಿ ಹಿಂದೆ ಆನ್ವಯಿಕ ವಿಮರ್ಶೆ ಇರಲೇ ಇಲ್ಲವೆಂಬ ಆರೋಪಕ್ಕೆ ಉತ್ತರ ಕೊಡುತ್ತವೆ ಇಂತಹ ಹೇಳಿಕೆಗಳು.

ಬಸವಣ್ಣನವರ ಬದುಕಿನಂತೆ ಬಹುಮುಖವೂ ಸಂಕೀರ್ಣವೂ ಆದುದಲ್ಲ ಅಕ್ಕನ ಬದುಕು. ಎಂತಲೇ ಬಸವ ವಚನಗಳಲ್ಲಿ ಗೋಚರಿಸುವ ಸಂಕೀರ್ಣತೆ ಅಕ್ಕನ ವಚನಗಳಲ್ಲಿ ಅಷ್ಟಾಗಿ ಕಂಡುಬರದಿರಬಹುದು. ಆದರೆ ಭಾವತೀವ್ರತೆಯಲ್ಲಿ ಅವಳು ಯಾರಿಗೂ ಎರಡನೆಯವಳಾಗಲಿಕ್ಕಿಲ್ಲ. ಅವಳ ಕೆಲವು ವಚನಗಳಲ್ಲಿರುವ ಕವಿತೆ ಪ್ರಥಮ ವರ್ಗದ್ದು.

ಅಕ್ಕನ ಬಹುಪಾಲು ವಚನಗಳಲ್ಲಿ ಒಂದು ವೈಶಿಷ್ಟ್ಯ ಸ್ಫುಟವಾಗುತ್ತದೆ : ಅವುಗಳನ್ನು ರಚಿಸಿದವಳು ಸ್ತ್ರೀ ಎಂಬುದನ್ನು ಸಾಬೀತುಪಡಿಸುವ ಅವುಗಳ ಭಂಗಿ. ಎದುರಿಗಿರುವ ಹೆಣ್ಣೊಬ್ಬಳನ್ನು ಸಂಬೋಧಿಸಿ ಹೇಳಿದಂತೆ ಅವುಗಳಲ್ಲಿ ನಾಟಕೀಯತೆ ಒಡೆದು ಕಾಣುತ್ತದೆ. ಚೆಲುವಂಗಾನೊಲಿದೆನವ್ವ, ಬಾರದ ಭವಂಗಳಲ್ಲಿ ಬಂದೆನವ್ವ, ಚೆನ್ನಮಲ್ಲಿಕಾರ್ಜುನನಿಗೆ ಎರಡರ ಮುನಿಸವ್ವ, ನಡೆಸಲು ಬಾರದವ್ವ, ಒಲೆಯೊಳಗಿಕ್ಕು ತಾಯೆ, ಕೇಳಿರೇ ಕೆಳದಿಯರಿರಾ- ಮುಂತಾದುವನ್ನು ಗಮನಿಸಬಹುದು. ‘‘ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು’’ ಎಂಬುದು ಹೆಣ್ಣಾದವಳು ಮಾತ್ರ ಆಡಬಹುದಾದ ಮಾತು. ಒಲೆಯ ಪರಿಚಯ, ಸಂಪರ್ಕ ಅವಳಿಗೆ ತಾನೆ ಇರತಕ್ಕದ್ದು! ಗಂಡಾಗಿದ್ದರೆ ಮಾತಿನ ಧಾಟಿ ಬೇರೆಯಾಗಬಹುದಿತ್ತು.

ದೈವದ ನಿಲುವಿನ ಬಣ್ಣನೆಗೇ ಮತ್ತೆ ಬರೋಣ. ಈ ವಚನವನ್ನು ಆಸ್ವಾದಿಸಬಹುದು:

ಈಳೆ ನಿಂಬೆ ಮಾವು ಮಾದಲಕ್ಕೆ
ಹುಳಿನೀರನೆರೆದವರಾರಯ್ಯ?!
ಕಬ್ಬು ಬಾಳೆ ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯ?!
ಮರುಗ ಮಲ್ಲಿಗೆ ಪಚ್ಚೆ ಮಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?!
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ;
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು

ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!

ಎರಡು ಸ್ತರಗಳಿವೆ ಈ ವಚನದಲ್ಲಿ. ಮೊದಲನೆಯ ಸ್ತರದಲ್ಲಿ ಭಗವಂತನ ಸೃಷ್ಟಿ ವೈಚಿತ್ರ್ಯಕ್ಕೆ ಪ್ರತಿಕ್ರಿಯೆಯಾಗಿ ಶುದ್ಧವಿಸ್ಮಯಭಾವದ ಅಭಿನಯವನ್ನು ನೋಡುತ್ತೇವೆ. ಅದು ಸ್ವಯಂ ಪೂರ್ಣವಾಗಿ ನಿಲ್ಲದೆ-ಅಷ್ಟಕ್ಕೇ ನಿಂತಿದ್ದರೂ ಸುಂದರ ಕವಿತೆಯಾಗುತ್ತಿತ್ತು -ಮುಂದೆ ಜಿಜ್ಞಾಸೆಗೆ ಎಡೆಗೊಡುತ್ತದೆ; ಎಂತಲೇ ಎರಡನೆಯ ಮಜಲಿನಲ್ಲಿ ಬುದ್ದಿಯ ಕೆಲಸವಿದೆ. ಒಂದೇ ಜಲ ಬೇರೆ ಬೇರೆ ದ್ರವ್ಯಗಳೊಡನೆ ಬೆರೆತು ಒಮ್ಮೆ ಹುಳಿಯಾಗುತ್ತದೆ ಮತ್ತೊಮ್ಮೆ ಸಿಹಿಯಾಗುತ್ತದೆ, ಮಗುದೊಮ್ಮೆ ಪರಿಮಳಿತವಾಗುತ್ತದೆ, ಆದರೆ ಅದರ ಶುದ್ಧ ರೂಪವೊಂದು ಉಂಟೇ ಉಂಟು. ಹಾಗೆಯೇ ಭಗವಂತ ಸ್ವಸ್ವರೂಪದಲ್ಲಿ ನಿರ್ಗುಣನಾಗಿರುತ್ತಾನೆ; ಆದರೆ ಲೀಲಾರ್ಥವಾಗಿ ಜಗತ್ತಿನಲ್ಲಿ ಒಂದಾಗಿ, ಪರಿಪರಿಯ ರೂಪವರ್ಣಾದಿಗಳನ್ನು ತಾಳುತ್ತಾನೆ. ಇಲ್ಲಿ ಅಕ್ಕ ಭಗವಂತನನ್ನು ಜಲಕ್ಕೆ ಹೋಲಿಸಿದ್ದಾಳೆ. ಆ ಶುದ್ಧ ಜಲವನ್ನು ವಿಜ್ಞಾನ colourless, odourless, tastless ಎಂದು ಬಣ್ಣಿಸುತ್ತದೆ; ದೇವರೂ ಅಂತೆಯೆ. ಇಡೀ ವಚನದ ಶಿಲ್ಪ ಬುದ್ದಿ-ಭಾವಗಳ ಅದ್ಭುತ ಸಮನ್ವಯವಾಗಿದ್ದು, ವಚನ ಸಾಹಿತ್ಯದ ಒಂದು ವೈಶಿಷ್ಟ್ಯವಾದ ವೈಚಾರಿಕ ಅಥವಾ ವೈಜ್ಞಾನಿಕ ಮನೋಧರ್ಮಕ್ಕೆ ಉಜ್ವಲ ನಿದರ್ಶನವಾಗಿದೆ.

ಭಗವನ್ನಿಷ್ಠೆಯಿಂದ ಹೇಗೆ ಅದ್ವೈತವನ್ನು ಸಾಧಿಸಬಹುದೆಂಬುದನ್ನು ಅಕ್ಕ ಸೊಗಸಾಗಿ ತಿಳಿಸುತ್ತಾಳೆ:

ಆವುದು ಕರ್ತೃ, ಅವುದು ಭೃತ್ಯನೆಂದರಿಯೆನು;
ಆವುದು ಘನ, ಆವುದು ಕಿರಿದೆಂದರಿಯೆನು
ಚೆನ್ನಮಲ್ಲಿಕಾರ್ಜುನಯ್ಯ, ನಿನ್ನನೊಲಿದು ಕೊಂಡಾಡಿದರೆ
ಇರುಹೆ ರುದ್ರನಾಗದೆ ಹೇಳಯ್ಯ!

‘ಇರುಹೆ’ ಎಂಬಲ್ಲಿ ಬಂಧುರವಾದ ಶ್ಲೇಷೆಯಿದೆ; ಇರುವೆ ಎಂಬ ಕ್ಷುದ್ರ ಜಂತು, ಇರುವು ಅಥವಾ ಅಸ್ತಿತ್ವ ಎಂಬ ಎರಡೂ ಅರ್ಥಗಳು ಅದರಿಂದ ಹೊರಡುತ್ತವೆ. ಭಕ್ತಿಯಿಂದ ಇರುವೆಯೂ ರುದ್ರನಾಗಬಲ್ಲದು; ನಮ್ಮ ಸಮಸ್ತ ಅಸ್ತಿತ್ವವೂ ರುದ್ರನಾಗ ಬಲ್ಲದು. ‘ಇರುಹೆ’ ಅಣೋರಣೀಯಕ್ಕೂ ‘ರುದ್ರ’ ಮಹತೋಮಹೀಯಕ್ಕೂ ಸಂಕೇತ ವಾಗಿವೆ(‘ರುದ್ರ’ ಎಂಬುದಕ್ಕೆ ಬದಲಾಗಿ ಇನ್ನಾವುದೇ ಶಬ್ದವನ್ನು ಬಳಸಿದ್ದರೂ ಇಷ್ಟೊಂದು ಶಕ್ತಿವತ್ತಾಗುತ್ತಿರಲಿಲ್ಲ).

ಶರಣರ ಪರಿಯನ್ನು ಕೆಲವು ವಚನಗಳಲ್ಲಿ ಚಿತ್ರಿಸಿದ್ದಾಳೆ ಅಕ್ಕ. ದೇವರತ್ತ ತಿರುಗಿದವರು ಮತ್ತೆ ಸಂಸಾರಕ್ಕೆ ಬರಲಾರರು ಎಂಬುದನ್ನರುಹುವ ಈ ವಚನ ಅವಳ ಬಾಳಿನ ಹಿನ್ನೆಲೆಯಲ್ಲೆ ಮೂಡಿರಬಹುದು:

ಕಟ್ಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ?
ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ?
ತೊಟ್ಟು ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ?
ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದರೆ
ನಿಷ್ಠೆಯುಳ್ಳ ಶರಣರು ಮರಳಿ ಮರ್ತ್ಯಕ್ಕೆ ಬಪ್ಪರೆ
ಚೆನ್ನ ಮಲ್ಲಿಕಾರ್ಜುನ?

ಇಲ್ಲಿ ಬಂದಿರುವ ದೃಷ್ಟಾಂತಗಳೆಲ್ಲ ಪಕ್ವತೆಯನ್ನು ಸೂಚಿಸುತ್ತವೆ. ನಿಜವಾದ ಶರಣರದು ಮರ್ತ್ಯದಿಂದ ಪಲಾಯನವಲ್ಲ; ಮರ್ತ್ಯದಲ್ಲೆ ಪಾಕಗೊಂಡು ಬೇರೆಯಾಗಿ, ಅತೀತವಾಗಿ ನಿಲ್ಲುವ ಒಂದು ಸ್ಥಿತಿ. ಮರ್ತ್ಯವಿಲ್ಲದಿದ್ದರೆ ಅವರು ಹಣ್ಣಾಗುತ್ತಿರಲಿಲ್ಲ; ಹಣ್ಣಾದ ಮೇಲೆ ಮರ್ತ್ಯದ ಹಂಗು ಅವರಿಗೆ ಬೇಕಿಲ್ಲ. ಮರ್ತ್ಯದ ವಿಷಯದಲ್ಲಿ ಯಾವ ಅನಾದರ, ತಿರಸ್ಕಾರಗಳೂ ಇಲ್ಲಿಲ್ಲವೆಂಬುದನ್ನು ಲಕ್ಷಿಸಬೇಕು; ವಚನಕಾರರ ದೃಷ್ಟಿಯಲ್ಲಿ ಅದು ಎಂದೂ ನಿಂದ್ಯವಲ್ಲ.

ಶರಣರ ಸಂಗದಿಂದಾಗುವ ಲಾಭವನ್ನು ಹೀಗೆ ಹೇಳಲಾಗಿದೆ:

ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ!
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ!
ಚೆನ್ನ ಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ
ಕರ್ಪೂರಗಿರಿಯ ಉರಿ ಕೊಂಡಂತೆ!

ಇಲ್ಲಿ ಜನರನ್ನು ಮೂರು ವರ್ಗ ಮಾಡಿದ್ದಾಳೆ ಅಕ್ಕ: ಅಜ್ಞಾನಿಗಳು, ಜ್ಞಾನಿಗಳು ಮತ್ತು ಶರಣರು; ಶರಣರದೇ ಶ್ರೇಷ್ಠತಮವಾದ ದರ್ಜೆ. ಅಜ್ಞಾನಿಗಳ ಸಂಗದಿಂದ ಕೇಡು; ಜ್ಞಾನಿಗಳ ಸಂಗದಿಂದ ಲೌಕಿಕವಾದ ಲಾಭ; ಶರಣರ ಸಂಗದಿಂದಾದರೋ ‘ಶೂನ್ಯ ಸಂಪಾದನೆ’. ಲೌಕಿಕವಾಗಿ ಯಾವ ಪ್ರಯೋಜನವೂ ಶರಣಸಹವಾಸದಿಂದ ಸಿಕ್ಕದಿದ್ದರೂ, ಸಕಲ ಪ್ರಯೋಜನ ಮೌಲಿಭೂತವಾದ ಪಾರಮಾರ್ಥಿಕ ಪ್ರಯೋಜನ-ನಮ್ಮ ಅಸ್ತಿತ್ವದ, ವ್ಯಕ್ತಿತ್ವದ ಅಳಿವು-ಸಿದ್ದಿಸುತ್ತದೆ.‘‘ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ’’ ಮತ್ತು ‘‘ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ’’ ಎನ್ನುವಲ್ಲಿ ನಮ್ಮ ಪಾಲಿನ ಪ್ರಯತ್ನವೂ ಸೂಚಿತವಾಗಿದೆ; ಆದರೆ ಕರ್ಪೂರಗಿರಿಯನ್ನು ಉರಿಕೊಳ್ಳುವ ಕ್ರಿಯೆಯಲ್ಲಿ ನಮ್ಮ ಪ್ರಯತ್ನವೇನೂ ಇಲ್ಲ; ಅದು ತನಗೆ ತಾನೆ ಅತ್ಯಲ್ಪ ಕಾಲದಲ್ಲಿ ನಡೆದುಹೋಗುವ ವ್ಯಾಪಾರ, ಶರಣರ ಸಂಗ ಆ ತೆರನಾದ್ದು.

ಅಕ್ಕನ ಬದುಕಿನ ಕೆಲವು ಹೆಜ್ಜೆಗಳು ಅವಳ ವಚನಗಳಲ್ಲಿ ಮೂಡಿ ನಿಂತಿವೆ. ಅಂತಹ ವಚನಗಳನ್ನು ನೋಡಿ ಊಹಿಸಿಬಹುದು, ತನ್ನ ಜೀವನದ ಇಂಥಿಂಥ ಘಟ್ಟಗಳಲ್ಲೆ ಅವುಗಳನ್ನವಳು ರಚಿಸಿರಬೇಕೆಂದು. ಅಷ್ಟರಮಟ್ಟಿಗೆ ಅವು ಅತ್ಮವೃತ್ತಾತ್ಮಕವಾಗಿವೆ. (ಈ ವಿಷಯದಲ್ಲಿ ಅವಕ್ಕೂ ಬಸವಣ್ಣನವರ ವಚನಗಳಿಗೂ ಸಾಮ್ಯವಿದೆ).

ಸಿದ್ದಿಪೂರ್ವದ ತನ್ನ ಒಳತೋಟಿಯನ್ನು ಅಲ್ಲಲ್ಲಿ ತೋಡಿಕೊಂಡಿದ್ದಾಳೆ ಅಕ್ಕ. ಮನಸ್ಸಿನ ಅಧೋಮುಖತೆಯನ್ನು ಈ ವಚನದಲ್ಲಿ ನಿವೇದಿಸುತ್ತಾಳೆ:

ಆವಾಗಳೂ ಎನ್ನ ಮನ ಉದರಕ್ಕೆ ಹರಿವುದು!
ಕಾಣಲಾರೆನಯ್ಯ ನಿಮ್ಮುವನು!

ಹೊಟ್ಟೆಯ ಚಿಂತೆಯೇ ಪ್ರಧಾನವಾದುದನ್ನು ಈ ವಚನದ ವಾಚ್ಯಸ್ತರ ಪ್ರಕಟಿಸುತ್ತದೆ; ಆದರೆ ಅದರ ಧ್ವನಿ ಇನ್ನೂ ಮುಂದೆ ಹೋಗುತ್ತದೆ. ‘ಹರಿವುದು’ ಎಂಬ ಕ್ರಿಯೆಯಲ್ಲಿ ಮನಸ್ಸಿನ ದ್ರವಸ್ಥಿತಿ, ಚಾಂಚಲ್ಯ ಧ್ವನಿತವಾಗಿದೆ; ಉದರಕ್ಕೆ ಹರಿದ ಮನ ಅಲ್ಲಿಯೇ ನಿಲ್ಲುವುದಿಲ್ಲ, ಮತ್ತೂ ಕೆಳಕ್ಕೆ ಹರಿಯುತ್ತದೆ : ಹೊಟ್ಟೆ ತುಂಬಿದ ಮೇಲೆ ಲೈಂಗಿಕತೃಷೆ ಕೆರಳುತ್ತದೆ. ಹೀಗಾಗಿ, ಯಾವುದೋ ಹಂತದಲ್ಲಿ ತನ್ನನ್ನು ಕಾಡಿರಬಹುದಾದ ಕ್ಷುಲ್ಲಕ ಆಸೆ ಆಮಿಷಗಳನ್ನು ಅಕ್ಕ ಈ ವಚನದಲ್ಲಿ ಪ್ರಾಮಾಣಿಕವಾಗಿ, ಸೂಚ್ಯವಾಗಿ ಅಭಿವ್ಯಕ್ತಿಸಿದ್ದಾಳೆ.

ಲೌಕಿಕವಾದ ಬಯಕೆ ಬಾಂಧವ್ಯಗಳಿಂದ ಆಗುವ ದುರಂತವನ್ನು ಈ ವಚನ ಅನ್ಯಾದೃಶವಾದ ಉಪಮಾನವೊಂದರ ಮೂಲಕ ಚಿತ್ರಿಸುತ್ತದೆ:

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ,
ತನ್ನ ನೂಲು ತನ್ನನ್ನೇ ಸುತ್ತಿಸುತ್ತಿ ಸಾವ ತೆರನಂತೆ
ಮನಬಂದುದ ಬಯಸಿಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ!

ರೇಷ್ಮೆಯ ಹುಳು ತನ್ನ ಒಡಲಿನಿಂದ ಸುಂದರವಾದ ನೂಲೆಳೆಗಳನ್ನು ಹೊಮ್ಮಿಸಿ ಅದರಿಂದ ಗೂಡು ಕಟ್ಟಿಕೊಳ್ಳುತ್ತದೆ; ಆ ನೂಲೆ ಅದಕ್ಕೆ ಮೃತ್ಯುವಾಗುತ್ತದೆ. ರೇಷ್ಮೆಗಾಗಿ ಜನ ಆ ಹುಳುಗಳನ್ನು ಬೇಯಿಸುತ್ತಾರೆ. ಆ ನೂಲು ಎಷ್ಟು ನುಣುಪೋ ಅಷ್ಟೇ ಬಲಿಷ್ಠವಾದುದು. ಸಂಸಾರ ಬಂಧನ ಈ ರೇಷ್ಮೆಯಂತೆ ಮೋಹಕವಾದರೂ ಅತ್ಯಂತ ಅಪಾಯಕಾರಿ; ಅದರಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ. ನಮ್ಮ ಚಿತ್ತದ ಬಣ್ಣ ಬಣ್ಣದ ಬಯಕೆಗಳೆ ನಮಗೆ ಮಾರಕವೆಂಬುದನ್ನು ಅಕ್ಕ ಎಷ್ಟು ಪರಿಣಾಮಕಾರಿಯಾಗಿ ಹೇಳಿದ್ದಾಳೆ! ‘ಸ್ನೇಹ’ ಎಂಬು ಮಾತು, ‘ಬೇವುತ್ತಿದ್ದೇನೆ’ ಎಂಬ ಮಾತು ಉಪಮಾನೋಪಮೇಯ ವೆರಡಕ್ಕೂ ಸಮಾನವಾಗಿದ್ದು, ಅವುಗಳ ಬೆಸುಗೆಯನ್ನು ಸುಲಭವಾಗಿ ಸಾಧಿಸಿದೆ. (‘ಸ್ನೇಹ, ಎಂದರೆ ಹುಳುವಿನ ಪರವಾಗಿ ಜಿಡ್ಡು, ಅಂಟು ಎಂದೂ ಸಂಸಾರಿ ಮನುಜನ ಪರವಾಗಿ ಬಾಂಧವ್ಯ, ನಂಟಸ್ತನ ಎಂದೂ ಅರ್ಥವಾಗುತ್ತದೆ).

ಅಕ್ಕನ ಭಗವದನುರಾಗದ ತೀವ್ರತೆ ಒತ್ತಡಗಳನ್ನು ಈ ವಚನ ಸಮರ್ಥವಾಗಿ ನಿರೂಪಿಸುತ್ತದೆ:

ಅಯ್ಯ, ನೀ ಕೇಳಿದರೆ ಕೇಳು, ಕೇಳದಿದ್ದರೆ ಮಾಣು
ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ!
ಅಯ್ಯ, ನೀನೊಲಿದರೆ ಒಲಿ, ಒಲಿಯದಿದ್ದರೆ ಮಾಣು;
ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯ!
ಅಯ್ಯ ನೀ ಮೆಚ್ಚಿದರೆ ಮೆಚ್ಚು, ಮೆಚ್ಚದಿದ್ದರೆ ಮಾಣು;
ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯ!
ಅಯ್ಯ ನೀ ನೋಡಿದರೆ ನೋಡು, ನೋಡದಿದ್ದರೆ ಮಾಣು;
ನಾ ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯ!
ಚೆನ್ನಮಲ್ಲಿಕಾರ್ಜುನಯ್ಯ, ನಾ ನಿಮ್ಮ ಪೂಜಿಸಿ
ಹರುಷದಲೋಲಾಡುವೆನಯ್ಯ!

ಪ್ರಾಮಾಣಿಕವಾದ, ಉತ್ಕಟವಾದ ಭಾವ ಅಭಿವ್ಯಕ್ತಿಗಾಗಿ ಹಾತೊರೆಯುತ್ತದೆ. ಅಕ್ಕ ಹಾಡುವುದು, ಪೂಜಿಸುವುದು ಇತರರನ್ನು ಮೆಚ್ಚಿಸುವುದಕ್ಕಾಗಿಯಲ್ಲ, ಪ್ರದರ್ಶನಕ್ಕಾಗಿಯಲ್ಲ; ತನ್ನ ಅಂತರಂಗದ ವೇದನೆ ಸಂವೇದನೆಗಳಿಗೆ ಅಭಿವ್ಯಕ್ತಿ ದೊರಕಿಸಿ ಹಗುರವಾಗುವುದಕ್ಕಾಗಿ. ‘ಸೈರಿಸಲಾರೆನಯ್ಯ’ ಎನ್ನುವಲ್ಲಿ ಆ ಅಭಿವ್ಯಕ್ತಿ ಎಷ್ಟು ಅನಿವಾರ್ಯ ಎಂಬುದು ವೇದ್ಯವಾಗುತ್ತದೆ; ಅಂಥ ಅಭಿವ್ಯಕ್ತಿಯೆ ಶ್ರೇಷ್ಠ ಕಲೆಯಾಗತಕ್ಕದ್ದು. ಅಕ್ಕನ ಈ ವಚನ ಭಕ್ತಿಮೀಮಾಂಸೆಯ ದೃಷ್ಟಿಯಿಂದ ಮಾತ್ರವಲ್ಲ, ಕಾವ್ಯಮೀಮಾಂಸೆಯ ದೃಷ್ಟಿಯಿಂದಲೂ ಬಹಳ ಉಪಾದೇಯವಾಗಿದೆ.

ಭಗವದ್ವಿರಹದ ಉತ್ಕಂಠೆಯನ್ನು ಈ ವಚನದಲ್ಲಿ ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಲಾಗಿದೆ:

ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವ!
ಏರಿಲ್ಲದ ಗಾಯದಲಿ ನೊಂದೆನವ್ವ!
ಸುಖವಿಲ್ಲದೆ ಧಾವತಿಗೊಂಡೆನವ್ವ!
ಚೆನ್ನ ಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲಿ ಬಂದೆನವ್ವ!

ಮುಂದಿನ ವಚನದಲ್ಲೂ ಅಂಥದೇ ಅನುಭವವಿದೆ; ಆದರೆ ಇದನ್ನು ವಚನ ಎನ್ನುವುದಕ್ಕಿಂತ ಪ್ರಾಸಾನುಪ್ರಾಸಯುಕ್ತವಾದ ಒಂದು ಪದ್ಯ ಎಂದೇ ಕರೆಯಬೇಕು:

ಕಳಿವರಿದ ಮನವು ತಲೆಕೆಳಕಾದುದವ್ವ!
ಸುಳಿದು ಬೀಸುವ ಗಾಳಿ ಉರಿಯಾಯಿತ್ತವ್ವ!
ಬೆಳದಿಂಗಳು ಬಿಸಿಲಾಯಿತ್ತು ಕೆಳದಿ!
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವ!
ತಿಳುಹೌ ಬುದ್ದಿಯ, ಹೇಳಿ ಕರೆತಾರೆಲೆಗವ್ವ,
ಚೆನ್ನ ಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ!

‘ಳ’ ಕಾರದ ಪ್ರಾಚುರ್ಯ ಎದ್ದು ಕಾಣುತ್ತದೆ. ‘ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವ’ ಎಂಬ ಹೋಲಿಕೆಯಲ್ಲಿ ಸಮಕಾಲೀನ ಜನಜೀವನದ ಚಿತ್ರವೊಂದು ಪ್ರಣೀತವಾಗಿದೆ. ಸುಂಕಿಗ ಬಿಸಿಲು ಮಳೆ ಗಾಳಿ ಎನ್ನದೆ, ಹಗಲು ರಾತ್ರಿಯೆನ್ನದೆ ಎಲ್ಲೆಂದರಲ್ಲಿ ಊರೆಲ್ಲ ಅಲೆಯುತ್ತಿರುತ್ತಾನೆ; ತನ್ನದೂ ಅಂತಹ ಅವಸ್ಥೆ ಎನ್ನುತ್ತಾಳೆ ಅಕ್ಕ. ಆದರೆ ಅದು ನಿರರ್ಥಕವಾದ ತೊಳಲಾಟವಲ್ಲ; ಸದುದ್ದೇಶವುಳ್ಳದ್ದು.

ಭಗವಂತನ ಒಲುಮೆಗೆ ಪಾತ್ರಳಾದ ಮೇಲೆ ತನ್ನ ಪರಿವರ್ತನೆಯನ್ನು ಅಕ್ಕ ಘೋಷಿಸುವ ರೀತಿ ಇದು:

ಕೆಂಡದ ಶವದಂತೆ
ಸೂತ್ರ ತಪ್ಪಿದ ಬೊಂಬೆಯಂತೆ
ಜಲವರತ ತಟಾಕದಂತೆ
ಬೆಂದ ನುಲಿಯಂತೆ
ಮತ್ತೆ ಹಿಂದಣಂಗ ಉಂಟೇ ಅಣ್ಣ,
ಚನ್ನಮಲ್ಲಿಕಾರ್ಜುನನಂಗವೇ ಆಶ್ರಯವಾದವಳಿಗೆ!

ಆಕಾರವೇನೊ ಹಿಂದಿನದೇ; ಆದರೆ ಸಾರ ಮಾತ್ರ ಲುಪ್ತ. ಇದ್ದಲನ್ನು ಬಣ್ಣಿಸುವ ‘ಕೆಂಡದ ಶವ’ ಎಂಬ ರೂಪಕ ಬಹಳ ಸೊಗಸಾಗಿದೆ. ಈಗ ತನ್ನ ಶರೀರಕ್ಕೆ ಯಾವ ಬೆಲೆಯೂ ಇಲ್ಲ ಎಂಬುದು ಅಕ್ಕನ ಅಭಿಪ್ರಾಯ. ಈ ಸಂದರ್ಭದಲ್ಲಿ ‘‘ಚೆನ್ನಮಲ್ಲಿಕಾರ್ಜುನನ ಅರಿತ ಬಳಿಕ ಆ ಕಾಯವ ನಾಯಿ ತಿಂದರೇನು, ನೀರ ಕುಡಿದರೇನು?’’ ಎಂದು ಬೇರೊಂದೆಡೆ ದೇಸಿಯ ಗತ್ತಿನಲ್ಲಿ ಹೇಳಿರುವುದನ್ನು ನೆನೆಯಬಹುದು.

ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನ ಮುಂದೆ ನಿಂತು, ಅವನು ಕೇಳಿದ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರವೆಂದು ತೋರುತ್ತದೆ ಈ ವಚನ:

ಫಲ ಒಳಗೆ ಪಕ್ವವಾಗಿಯಲ್ಲದೆ,
ಹೊರಗಣ ಸಿಪ್ಪೆ ಒಪ್ಪಗೆಡದು,!
ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು
ಭಾವದಿಂದ ಮುಚ್ಚಿದೆ!
ಇದಕೆ ನೋವೇಕೆ?
ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನ ದೇವನ ಒಳಗಾದವಳ!

ಅಕ್ಕ ತನ್ನ ನಗ್ನತೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾಳೆ. ಒಳಗಣ ಪಕ್ವತೆಯ ಫಲವೆ ಈ ಹೊರಗಣ ಬತ್ತಲೆ ಎಂಬುದನ್ನು ಸಾರ್ಥಕ ದೃಷ್ಟಾಂತವೊಂದರಿಂದ ಮನಗಾಣಿಸುತ್ತಾಳೆ. ಆದರೆ ಅಪಕ್ವತೆಯೂ ನಗ್ನತೆಗೆ ಕಾರಣವಾಗಬಹುದಲ್ಲ! ಇದು ಅಂಥ ನಗ್ನತೆಯಲ್ಲ; ವಾಸ್ತವವಾಗಿ ಇದು ದಿಗಂಬರತ್ವ. ಇಷ್ಟಕ್ಕೂ ಆಕೆಯಲ್ಲಿ ನಗ್ನತೆಯಾದರೂ ಎಲ್ಲಿದೆ? ಚೆನ್ನಮಲ್ಲಿಕಾರ್ಜುನ ಅವಳನ್ನು ಒಳಗೊಂಡು ಆವರಿಸಿದ್ದಾನೆ. ಲೋಕದ ಕಣ್ಣಿಗೆ ಅದು ಕಾಣದಿರಬಹುದಷ್ಟೆ. ‘‘ದಿಗಂಬರವೇ ದಿವ್ಯಾಂಬರವೆನಗೆ’’ ಎಂಬ ಉಕ್ತಿಯೂ ಈ ದೃಷ್ಟಿಯಿಂದ ಅರ್ಥವತ್ತಾಗುತ್ತದೆ.

ಅಕ್ಕಮಹಾದೇವಿ ಹೆಣ್ಣಾದರೂ ಅಬಲೆಯಲ್ಲ; ಅವಳು ವೀರವಿರಾಗಿಣಿ. ತನ್ನ ಅದಮ್ಯವಾದ ಕೆಚ್ಚು ಕಸುವುಗಳ ಚಂಡಚಿತ್ರವೊಂದನ್ನು ಕೊಟ್ಟಿದ್ದಾಳೆ ಈ ವಚನದಲ್ಲಿ:

ಕಿಡಿಕಿಡಿ ಕೆದರಿದರೆ
ಎನಗೆ ಹಸಿವು ತೃಷೆ ಅಡಗಿತೆಂಬೆನು!
ಮುಗಿಲು ಹರಿದು ಬಿದ್ದರೆ
ಎನಗೆ ಮಜ್ಜನಕ್ಕೆರೆದರೆಂಬೆನು!
ಗಿರಿ ಮೇಲೆ ಬಿದ್ದರೆ ಎನಗೆ ಪುಷ್ಪವೆಂಬೆನು!
ಚೆನ್ನಮಲ್ಲಿಕಾರ್ಜುನಯ್ಯ, ಶಿರ ಹರಿದು ಬಿದ್ದರೆ
ಪ್ರಾಣ ನಿಮಗರ್ಪಿತವೆಂಬೆನು!

ವೀರವ್ಯಕ್ತಿತ್ವ ಹಾಗೂ ವ್ರತವನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಸಾರುವುದು ಸಾಧ್ಯವಿಲ್ಲ. ‘‘ಕಿಡಿಕಿಡಿ ಕೆದರಿದರೆ’’ ಎನ್ನುವಲ್ಲಿ ಬರಿಯ ಲಘ್ವಕ್ಷರಗಳೆ ಬಂದು ಬಿಡಿಬಿಡಿಯಾಗಿ ಹಾರುವ ಕಿಡಿಗಳ ಚಿತ್ರವನ್ನು ಸಹಜವಾಗಿ ನಿರ್ಮಿಸುತ್ತವೆ.[1]

ಚೆನ್ನಮಲ್ಲಿಕಾರ್ಜುನ ತನಗೆ ಒಲಿದಾನೊ, ಒಲಿಯನೊ ಎಂಬ ಚಿಂತೆಯೆ ಅಕ್ಕನಿಗೆ ಹಾಸಲು, ಹೊದೆಯಲು ಸಾಕಷ್ಟಿತ್ತು. ಆದ್ದರಿಂದ ಅವಳ ವಚನಗಳಲ್ಲಿ ವಿಡಂಬನ, ಉಪದೇಶಗಳು ಹೆಚ್ಚಾಗಿಲ್ಲ. ಒಂದೆರಡನ್ನು ಇಲ್ಲಿ ನೋಡಬಹುದು.

ಅರಿವಿಲ್ಲದೆ ಬರಿಯ ಆಚಾರಗಳಲ್ಲಿ ತೊಡಗುವವರನ್ನು ಅಕ್ಕ ಈ ವಚನದಲ್ಲಿ ಟೀಕಿಸಿದ್ದಾಳೆ:

ಅಕ್ಕಿಯಿಲ್ಲದ ತುಷಕ್ಕೆ ಅಗ್ಘವಣಿಯನೆರೆದರೆ
ಅದೆಂದಿಂಗೆ ಬೆಳೆದು ಫಲವಪ್ಪುದಯ್ಯ?
ಅರಿವಿಲ್ಲದವರಿಗೆ ಆಚಾರವಿದ್ದರೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯ?
ಹಾರದ ಪರಿಮಳವು ಸ್ಥಿರವಾಗಬಲ್ಲುದೆ?

ಎನ್ನ ದೇವ ಚೆನ್ನ ಮಲ್ಲಿಕಾರ್ಜುನನರಿಯದವರಿಗೆ ಆಚಾರವಿಲ್ಲ ಕಾಣಿರಣ್ಣ!

ಅಕ್ಕಿಯಿಲ್ಲದ ಹೊಟ್ಟು ಮೊಳೆಯಲಾರದು, ಬೆಳೆಯಲಾರದು; ಶುಷ್ಕಾಚಾರಗಳು ಬರಿಯ ಹೊಟ್ಟಿನಂತೆ. ಉಪಮಾನ ನೂತನವಾಗಿದೆ.[2] ಅಂತರಂಗದಲ್ಲಿ ಶ್ರದ್ಧೆ, ಭಕ್ತಿಗಳಿಲ್ಲದೆ ಬಾಹ್ಯಾಚರಣೆಗಳಲ್ಲಿ ಸಂತೃಪ್ತರಾಗುವವರನ್ನು ವಿಡಂಬಿಸುತ್ತದೆ ಈ ವಚನ:

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು!
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು!

ಸ್ವತಃ ಆರ್ದ್ರರಾಗದವರು ಭಗವಂತನಿಗೆ ಮಜ್ಜನ ಮಾಡಿಸಿ ಏನು ಪ್ರಯೋಜನ? ಯಾರು ತಮ್ಮ ಮನವನ್ನೆ ಪುಷ್ಪವಾಗಿ ಸಮರ್ಪಿಸಲಾರರೊ ಅಂಥವರು ಹೊರಗೆ ಪುಷ್ಪವನ್ನರ್ಪಿಸಿ ಏನು ಫಲ? ಅಕ್ಕನ ವಿಡಂಬನವೂ ಮನೋಜ್ಞವಾಗಿದೆ.

ಸಿದ್ದಿ ದೊರಕಿದಮೇಲಂತೂ ಬಾಹ್ಯಾಚಾರಗಳು, ಜಪತಪ ಸಮಾಧಿಗಳು ಅನವಶ್ಯಕವೆಂಬುದನ್ನು ಅವಳು ಹೃದಯಂಗಮವಾಗಿ ಹೇಳುತ್ತಾಳೆ:

ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯ?
ಕ್ಷಮೆ ದಯೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯ?
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ,
ಚೆನ್ನಮಲ್ಲಿಕಾರ್ಜುನ?

ಅಕ್ಕನ ಲೋಕಸಂದೇಶಗಳಲ್ಲಿ ಇದು ಬಹಳ ಪ್ರಸಿದ್ಧವಾಗಿದೆ:

ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಂಗಳಿಗಂಜಿದಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ,
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು!

ಲೋಕವನ್ನು ತೊರೆದು ಓಡಿಹೋಗಬೇಕಾಗಿಲ್ಲ, ಇದರಲ್ಲಿದ್ದುಕೊಂಡೇ ಇದನ್ನು ಮೆಟ್ಟಿ ನಿಲ್ಲಬೇಕು ಎಂಬುದು ಅಕ್ಕನ ಉಪದೇಶ. ಇದು ಪಾರಲೌಕಿಕರಿಗೆ ಮಾತ್ರವಲ್ಲ, ಪ್ರಾಪಂಚಿಕರಿಗೂ ಉಪಯುಕ್ತವಾದ ಮಾತು. ಇಲ್ಲಿ ಕವಿತೆಯಿದೆ, ತರ್ಕವಿದೆ; ಹೃದಯ ಬುದ್ದಿ ಎರಡಕ್ಕೂ ತೃಪ್ತಿ ಸಿಗುತ್ತದೆ. ಹಾಗೆಯೆ ಈ ವಚನವೂ ಅತ್ಯಂತ ಸ್ವೋಪಜ್ಞವಾದುದು:

ಹಾವಿನ ಬಾಯ ಹಲ್ಲ ಕಳೆದು
ಹಾವನಾಡಿಸಬಲ್ಲಡೆ
ಹಾವಿನ ಸಂಗವೇ ಲೇಸು ಕಂಡಯ್ಯ!
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೇ ಲೇಸು ಕಂಡಯ್ಯ!
ತಾಯಿ ರಕ್ಕಸಿಯಾದಂತೆ ಕಾಯವಿಕಾರವು!
ಚೆನ್ನಮಲ್ಲಿಕಾರ್ಜುನಯ್ಯ
ನೀನೊಲಿದವರು ಕಾಯಗೊಂಡಿದ್ದರೆನಬೇಡ!

ಕಾಯದ ಸಂಗವಿರಲಿ, ಆದರೆ ಕಾಯವಿಕಾರಗಳನ್ನು ಗೆಲ್ಲಬೇಕು-ಹಾವಾಡಿಗ ಹಾವಿನ ವಿಷದ ಹಲ್ಲನ್ನು ಮುರಿದು ಅದನ್ನಾಡಿಸುವಂತೆ. ದೇಹ ತ್ಯಾಜ್ಯವೇನೂ ಅಲ್ಲ; ವಿಕಾರವಶವಾಗಲು ಅದನ್ನು ಬಿಟ್ಟರೆ ಮಾತ್ರ ತಾಯಿ ರಕ್ಕಸಿಯಾದಂತೆ ಅಪಾಯಕಾರಿಯಾಗುತ್ತದೆ. ಶರಣರು ಕಾಯಸಹಿತರಾದರೂ ಕಾಯರಹಿತರೇ, ಅದನ್ನವರು ಪಳಗಿಸುವುದರಿಂದ. ವಚನಕಾರರು ದೇಹವನ್ನು ಹಳಿದವರಲ್ಲ, ಮರ್ತ್ಯವನ್ನು ಹಳಿದವರಲ್ಲ; ಅವುಗಳನ್ನು ಗೌರವಿಸಿಯೆ ಅವಕ್ಕೆ ಇತಿಮಿತಿಗಳನ್ನು ಕಲ್ಪಿಸುತ್ತಾರೆ. ಇಲ್ಲಿ ದೇಹವನ್ನು ತಾಯಿ ಎಂದೇ ಅಕ್ಕ ಭಾವಿಸಿರುವುದನ್ನು ಲಕ್ಷಿಸಬಹುದು; ‘‘ಶರೀರಮಾದ್ಯಂ ಖಲು ಧರ್ಮಸಾಧನಂ’’ ಎಂಬುದು ಅವಳಿಗೂ ಒಪ್ಪಿಗೆ.

ಐಹಿಕ, ಪಾರಮಾರ್ಥಿಕ ಎರಡನ್ನೂ ಒಟ್ಟಿಗೆ ಸಮಾನಪ್ರಾಶಸ್ತ್ಯದಿಂದ ನಡೆಸುವುದು ಸಾಧ್ಯವಿಲ್ಲವೆಂಬುದನ್ನು ಅಕ್ಕ ನಿರ್ದಾಕ್ಷಿಣ್ಯವಾಗಿ, ನಿಸ್ಸಂಕೋಚವಾಗಿ, ಕಟುವಾಗಿ ತಿಳಿಸುತ್ತಾಳೆ:

ಒಳಗಣ ಗಂಡನವ್ವಾ, ಹೊರಗಣ ಮಿಂಡನವ್ವಾ
ಎರಡನೂ ನಡೆಸಲು ಬಾರದವ್ವಾ!
ಲೌಕಿಕಪಾರಮಾರ್ಥಿಕವೆಂಬೆರಡನೂ ನಡೆಸಲು ಬಾರದವ್ವ!

ನಿಜವಾದ ಗರತಿಗೆ ಗಂಡನೊಬ್ಬ (‘‘ಪರಮಪತಿವ್ರತೆಗೆ ಗಂಡನೊಬ್ಬ ಕಾಣಿರೋ’’ -ಬಸವಣ್ಣ); ಅಂತೆಯೆ ನಿಷ್ಠೆಯುಳ್ಳ ಶರಣರು ಲೌಕಿಕದಲ್ಲಿ ಬೆರೆಯಬಾರದು; ಅದರಲ್ಲಿ ಇದ್ದೂ ಇಲ್ಲದಂತಿರಬೇಕು.

ಆಯುಷ್ಯ ತೀರಿಹೋಗದ ಮುನ್ನ ಭಗವಂತನನ್ನು ನೆನೆದು ಬದುಕನ್ನು ಸಾರ್ಥಕಪಡಿಸಿಕೊಳ್ಳುವಂತೆ ಕರೆ ಕೊಡುತ್ತಾಳೆ ಅಕ್ಕ.

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ
ಶಿವನ ನೆನೆಯಿರೇ, ಶಿವನ ನೆನೆಯಿರೇ!
ಜನ್ಮ ಬಳಿಕಿಲ್ಲ!

ಇಲ್ಲಿ ಆಯುಷ್ಯವನ್ನು ಧಾನ್ಯರಾಶಿಯೆಂದೂ ಉದಯಾಸ್ತಮಾನಗಳನ್ನು ಕೊಳಗಗಳೆಂದೂ ಕಲ್ಪಿಸಿಕೊಂಡಿರುವುದು ಅತ್ಯಂತ ನವೀನವೆನ್ನಬೇಕು. ಸೂರ್ಯನೆ ಕೊಳಗವೆಂಬುದೂ ಅವಳ ಮನಸ್ಸಿನಲ್ಲಿದ್ದೀತು.[3] ಅಂತೂ ಕೊಳಗದಲ್ಲಿ ಧಾನ್ಯವನ್ನಳೆಯುವ ಕ್ರಿಯೆ ನಮ್ಮ ಕಣ್ಣಿಗೆ ಕಟ್ಟಿ ನಿಲ್ಲುತ್ತದೆ; ಜನಜೀವನದ ಚಿತ್ರವೊಂದು ತೆರೆದುಕೊಳ್ಳುತ್ತದೆ.

ಉದಯಾಸ್ತಮಾನಗಳ ಕೊಳಗ ಮಾನವನ ಆಯುಷ್ಯರಾಶಿಯನ್ನು ಅಳೆದು ಬರಿದು ಮಾಡುತ್ತಲೇ ಇದೆ; ಆದರೆ ಕಲೆಯ ಅರ್ಥಸಂಪತ್ತನ್ನು ಅಳೆದು ತೀರಿಸುವುದು ಮಾತ್ರ ಅದಕ್ಕೆ ಶಕ್ಯವಿಲ್ಲ. ಅದರಲ್ಲೂ ಶಿವನನ್ನು, ಮೃತ್ಯುಂಜಯನನ್ನು ನೆನೆದವರ ಕಲೆ ಉದಯಾಸ್ತಮಾನಗಳ ಹಿಡಿತಕ್ಕೆ ಎಂತು ಸಿಕ್ಕೀತು? ಅಕ್ಕನ ವಚನಗಳ ಕಲೆ ಅಂಥದು.

[1] ಪು.ತಿ.ನ. ಅವರ ‘ಅಹಲ್ಯೆ’ ನಾಟಕದ ‘‘ಬಯಸುವೆ ನಾ ಗಂಗೆಯ ತೆರ ಪದದಿ ಕರಗಿ ಹರಿಯೆ, ಇಲ್ಲದಿರಲು ಕಂಪಿನಂತೆ ಹಗುರವಾಗಿ ಸರಿಯೆ’’ ಎಂಬ ಪಂಕ್ತಿಗಳಲ್ಲಿ ಲಘುಗಳೆ ವಿಶೇಷವಾಗಿದ್ದು, ಉಲ್ಲಾಸವನ್ನು ದ್ಯೋತಿಸುವುದನ್ನು ಸ್ಮರಿಸಬಹುದು.

[2] ಆಚಾರಗಳು ತಕ್ಕಮಟ್ಟಿಗೆ ಅಗತ್ಯವೆಂಬ ಅರ್ಥದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರು ‘‘ಹೊಟ್ಟಿಲ್ಲದ ಅಕ್ಕಿ ಬೆಳೆಯಲಾರದು’’ ಎಂಬ ಸಾವುತಿಯನ್ನು ಕೊಡುತ್ತಾರೆ.

[3] ಮಾಘ ಸೂರ್ಯಚಂದ್ರರನ್ನು ‘ಘಂಟೆ’ಗಳೆಂದು ಕಲ್ಪಿಸಿಕೊಂಡಿರುವುದನ್ನು ನೆನೆಯಬಹುದು.