ವರ್ಣನೆಗಳು, ರಸದೃಷ್ಟಿ : ಹರಿಹರ ವರ್ಣನಾಸಮರ್ಥ; ‘‘ಇಂದ್ರಿಯಗಳಿಗೆ ಗೋಚರವಾಗುವ ವಸ್ತುಗಳನ್ನೂ ಮನಸ್ಸಿನ ಭಾವೋದ್ರೇಕಗಳನ್ನೂ ಬಣ್ಣಿಸುವುದರಲ್ಲಿ ಚತುರ.’’[1] ವರ್ಣನೆಗಳಲ್ಲಿ ಸ್ವಭಾವೋಕ್ತಿಯನ್ನು ನೆಮ್ಮುವಂತೆಯೇ ಅವನು ವಕ್ರೋಕ್ತಿಯನ್ನೂ ಆಶ್ರಯಿಸುತ್ತಾನೆ. ಕೆಲವು ನಿದರ್ಶನಗಳನ್ನು ನೋಡಬಹುದು:

ಇದು ಬೇಡಿತಿಯರ ಸಹಜ ಚಿತ್ರ

ತಳಿರ್ಗಳ ಸೀರೆಯುಟ್ಟು ಗುರುಗುಂಜಿಯ ಹಾರಮನಾಂತು ಮುಂದೆ ಶೀ
ತಳ ಶಶಿಕಾಂತದಿಂ ಸಮೆದೊರಳ್ಗಳೊಳಂ ಬಿದಿರಕ್ಕಿಯಿಕ್ಕಿ ನಿ
ಚ್ಚಳಮನ ಸುವ್ವಿ ಕಾಡೊಡೆಯ ಸುವ್ವಿ ಮನೋಹರ ಸುವ್ವಿ ಸುವ್ವಿಯೆಂ
ದಳವಡೆ ರಾಗದಿಂ ತಳಿಸಿದರ್ ವನದಲ್ಲಿ ಪುಳಿಂದಕಾಂತೆಯರ್ (೧೨೩)

ಗಿರಿಜೆಯನ್ನು ದಾದಿಯರು ಜೋಗುಳ ಹಾಡಿ ತೂಗಿದ್ದು ಹೀಗೆ:

ಜೋ ಜೋ ಶಂಕರನರ್ಧಮಂ ಕವರ್ದುಕೊಳ್ವತ್ಯಂತ ರೂಪಾನ್ವಿತೇ
ಜೋ ಜೋ ಸರ್ವಜಗಚ್ಛಿಶುಪ್ರಕರಮಂ ರಕ್ಷಿಪ್ಪ ಮಾತಾಮಹೇ
ಜೋ ಜೋ ಶೈವಸಮುದ್ರವರ್ಧನಕರ ಪ್ರಖ್ಯಾತ ಚಂದ್ರಾನನೇ
ಜೋ ಜೋ ರಕ್ಷಿಸೆನುತ್ತೆ ತೂಗಿ ನಲಿದರ್ ಶರ್ವಾಣಿಯಂ ಜಾಣೆಯರ್(೬೯)

ಬಾಲೆ ಗಿರಿಜೆಯ ಸ್ವಭಾವೋಕ್ತಿ ಚಿತ್ರ ಇಲ್ಲಿದೆ:

ಅರಳೆಲೆ ಭಾಳದೊಳಾಡು
ತ್ತಿರೆ ಮಾಂಗಾಯ್ಗಂಡಯುಗಳಮಂ ಮುಂಡಾಡು
ತ್ತಿರೆ ಕುರುಳ್ಗಳ್ ಕುಣಿದಾಡು
ತ್ತಿರೆ ಸತಿಯರ ನಡುವೆ ಗಿರಿಜೆ ನಡೆತರುತಿರ್ದಳ್ (೩-೧೦೭)

ಕಪಿಯ ಸ್ವಾಭಾವಿಕ ಚರ್ಯೆಗಳನ್ನು ಕವಿ ಸೊಗಸಾಗಿ ಹಿಡಿದಿಡುವ ಪರಿಯಿದು:

ಪೞಿದೆಲೆಯಿಟ್ಟು ಪಲ್ಗಿಱಿದು ಹರ್ರೆನುತುರ್ಬುತೆ ಪುರ್ಬನೇಱಿಸು
ತ್ತುಱುಗಿಸಿ ನೋಡಿ ದಾಂಟಲನುಗೆಯ್ಯುತೆ ತೂಗುತೆ ಝಂಕಿಸುತ್ತೆ ಬಾ
ಯ್ದೆಱೆದೊಲೆಯುತ್ತೆ ಕಯ್ಗಳನೆ ಕೂನಿಸಿ ಕುರ್ಗುತೆ ಏಡಿಸುತ್ತೆ ತಾಂ
ನೆಱ ನಗಿಸಿತ್ತು ತಾಪಸಕುಮಾರರನಲ್ಲಿಯದೊಂದು ಮರ್ಕಟಂ (೫-೨೦)

ಹಣ್ಣನ್ನು ಸವಿಯುತ್ತಿರುವ ಗಿಳಿಯ ಯಥಾವತ್ತಾದ ಸುಂದರ ಚಿತ್ರ ಇಲ್ಲಿ ರಚಿತವಾಗಿದೆ:

ಬಿಗಿಯಪ್ಪಿ ಮೊಗಮನಿಟ್ಟಾ
ಲಿಗಳಂ ನಸು ಮುಚ್ಚಿ ಪಕ್ಷಯುಗವೆಳಲೆ ರಸಂ
ದೆಗೆವ ದನಿ ನಿಮಿರೆ ನಾಲಗೆ
ಚಿಗುರುತ್ತಿರೆ ಸವಿದುದೊಂದು ಗಿಳಿ ತನಿವಣ್ಣಂ (೩೯)

‘‘ದೀವಿಗೆಗಳ್ ಕಳ್ತಲೆ ಪೂತಂತೊಪ್ಪುತಿರ್ದುವಾ ಮನೆಮನೆಯೊಳ್ ’’ (೪-೭೯), ‘‘ಬೆಂದ ನುಲಿಯಂತೆ ಕಾಮಂ ನಿಂದಿರೆ’’ (೮.೫೨) ಮುಂತಾದ ವರ್ಣನೆಗಳಲ್ಲಿ ಮನೋಹರವಾದ ಕಲ್ಪನೆಯಿದೆ. ಅದರ ಲಘುವಿಲಾಸವನ್ನು ಕಾಣುತ್ತೇವೆ ಈ ಉದ್ಯಾನ ವರ್ಣನೆಯಲ್ಲಿ:

ಸಿರಿ ತಂದಿಕ್ಕಿದಶೋಕೆ ವಾಗ್ವನಿತೆಯಿಟ್ಟಾಮ್ರಂ ಶಚೀದೇವಿಯಿ
ಟ್ಟರನೇರಿಲ್ ಮಿಗೆ ರಂಭೆಯಿಟ್ಟ ಕದಳೀಷಂಡಂ ಸುರಸ್ತ್ರೀಯರಿ
ಟ್ಟರವಿಂದಾಕರಮೂರ್ವಶೀವಧು ಸರಾಗಂ ತಂದ ಪೂಗದ್ರುಮಂ
ತರದಿಂದಂ ರತಿಯಿಟ್ಟ ದಾಡಿಮಕುಲಂ ಸಾರ್ವರ್ತುಕೋದ್ಯಾನದೊಳ್ (೩೦)

ಹರನ ಹಣೆಗಣ್ಣಿನಿಂದ ಹೊಮ್ಮಿ ಕಂದರ್ಪನನ್ನು ಒಲಿತೆಗೆದುಕೊಂಡ ಬೆಂಕಿಯನ್ನು ಹರಿಹರ ಪುನರುಕ್ತಿ, ಅನುಕರಣವಾಚಕ ಮತ್ತು ಆಶ್ಚರ್ಯೋದ್ಗಾರ ಪ್ರಚುರವಾದ ಸ್ವವಿಶಿಷ್ಟ ಧಾಟಿಯಲ್ಲಿ ಆಸಕ್ತಿಕರವಾಗಿ ಬಣ್ಣಿಸಿದ್ದಾನೆ:

ಪೊಗೆದುದು ಪೊತ್ತಿದತ್ತು ಕಿಡಿಯಿಟ್ಟುದು ನಾಲ್ದೆಸೆದೋಱದತ್ತು ಬಾನ್
ಗೊಗೆದುದು ನಿಂದು ಪೊಂಬೆಳಗುಮಂ ಪರಪುತ್ತದು ಧಂ ಧಗಿಲ್ ಧಗಿಲ್
ಧಗಿಲೆನುತಟ್ಟಿ ತಟ್ಟಿದುದು ಮುಟ್ಟಿತು ಸುಟ್ಟಿತು ತಿಂದು ತೇಗಿದ
ತ್ತಗಿಯದೆ ನಿಂದ ಪೂಗಣೆಯನಂ ಪಣೆಗಣ್ಣುರಿ ಹಂಪೆಯಾಳ್ದನಾ (೪೭)

ಇಟ್ಟಣಿಸಿ ಘುಡುಘುಡಿಸಿ ಕಿಡಿ
ಗುಟ್ಟಿ ಕನಲ್ದಡಸಿ ಸಿಡಿಲ ಬಳಗದ ಮುಳಿಸಂ
ತೊಟ್ಟುದು ಬಿಸುಗಣ್ಣುರಿ ಪೊರ
ಮಟ್ಟುದು ಸುಟ್ಟುದು ರತೀಶನಂ ನಿಮಿಷಾಧಂ (೪೮)
ಅರರೇ ಭುರ್ಭುಗು ಭಾಪುರೇ ಭುಗುಭುಗು ಪ್ರಜ್ವಾಲೆ ಮಜ್ಜಯ್ಯ ದೇ
ವುರೆ ಮೇಘಾನಲ ವಿಸ್ಪುಲಿಂಗಮಮಮ ಪ್ರದ್ಯೋತವಯ್ಯಯ್ಯ ಭೀ
ಕರವಾಹಾ ಛಿಣಿಛಿಳ್ ಛಿಟಿಲ್ ಭಲರೆ ಭಾಳಾಭೀಳಮೆಂದೆಂದು ನಿ
ರ್ಜರಲೋಕಂ ಬೆರಗಾಗೆ ಸುಟ್ಟುದು ವಿರೂಪಾಕಾಕ್ಷಿ ಕಂದರ್ಪನಂ (೫೦)

‘‘ರುದ್ರನ ಉರಿಗಣ್ಣಿನಿಂದ ಹೊಮ್ಮಿದ ಭೀಕರ ಜ್ವಾಲಾಮಾಲೆಯನ್ನು ವರ್ಣಿಸುವ ಮೇಲಿನ ಪದ್ಯಗಳಲ್ಲಿ ಹರಿಹರನ ಕವಿತಾಶಕ್ತಿಯ ಉಗ್ರಕಾಂತಿ ಅನುಭವಕ್ಕೆ ಬರುತ್ತದೆ’’ ಎಂಬ ವಿಮರ್ಶೆಯಲ್ಲಿ[2] ತಕ್ಕಮಟ್ಟಿಗೆ ಹುರುಳಿದೆ. ಆದರೂ ಈ ವರ್ಣನೆ ಅತ್ಯಂತ ಪರಿಣಾಮಕಾರಿ ಎನ್ನುವಂತಿಲ್ಲ, ರುದ್ರ ನೇತ್ರಾಗ್ನಿಯ ಪ್ರಚಂಡತೆಗಿಂತ ಮಿಗಿಲಾಗಿ ಪ್ರೇಕ್ಷಕರ ಬೆರಗು ಭಯ ಸಂಭ್ರಮಗಳು ಇಲ್ಲಿ ಪ್ರತೀತವಾಗುತ್ತವೆ.

ಬೇಸಗೆ ಮಳೆಗಾಲ ಚಳಿಗಾಲಗಳ ವರ್ಣನೆಗಳು ‘ಗಿರಿಜಾ ಕಲ್ಯಾಣ’ದಲ್ಲಿ ಸಾರ್ಥಕವಾಗಿ ಬಂದಿವೆ. ಇತರ ಚಂಪೂ ಕಾವ್ಯಗಳಲ್ಲಿಯಂತೆ ಅವು ಬಿಡಿಯಾಗಿ, ಎಡಬಿಡಂಗಿಯಾಗಿ ನಿಲ್ಲದೆ ಕತೆಯೊಡನೆ ಸಾವಯವ ಸಂಬಂಧ ಪಡೆದುಕೊಳ್ಳುತ್ತವೆ; ಗಿರಿಜೆಯ ತಪಕ್ಕೆ ಸಂಗತವಾಗುತ್ತವೆ, ಅದರ ಒರೆಗಲ್ಲಾಗುವುದರ ಮೂಲಕ. ಸಂಪ್ರದಾಯವನ್ನೂ ಇಲ್ಲಿ ಲಾಭದಾಯಕವಾಗಿ ದುಡಿಸಿಕೊಂಡಿರುವ ಹರಿಹರನ ಪ್ರತಿಭೆ ನಿಜಕ್ಕೂ ಸ್ತುತ್ಯ.

ಭವಾನಿ ಬಿರುಬೇಸಗೆಯನ್ನು ‘‘ಗಂಗಾಧರನಂ ಶಶಿಧರನಂ ನೆನೆದು’’ ಕಳೆಯುತ್ತಾಳೆ. ಅನಂತರ ಮಳೆಗಾಲದ ಹಾವಳಿ. ಆ ಅವಧಿಯಲ್ಲಿ ‘‘ನಿರುದ್ಯೋಗಕ್ಕೆ ಪಕ್ಕಾದುದೀ ಜಗಂ’’ ಎಂದಿರುವುದು ತುಂಬ ಚೆನ್ನಾಗಿದೆ. ಬಳಿಕ ಚಳಿಗಾಲದ ವೈಭವ; ಅದನ್ನು ಅನನ್ಯವಾಗಿ ಚಿತ್ರಿಸುತ್ತಾನೆ ಕವಿ. ಶಿಶಿರನಟ ಲೋಕವನ್ನಾಡಿಸುವ ತೆರನಿದು:

ಪಲ್ಪಱೆಯೊಳೆ ಹುಹುಹೆಂಬಾ
ಚೆಲ್ವುಗ್ಗಡಣೆಯೊಳೆ ಹಸ್ತದಂಡಿಗೆಯೊಳ್ ತಾ
ನೊಲ್ವನ್ನಂ ಶಿಶಿರನಟಂ
ಸಲ್ವಿನಂ ಜಗವನಾಡಿಸಿದನುರ್ವರೆಯೊಳ್ (೭೫)

ಚಳಿಯ ಹಬ್ಬುಗೆಯನ್ನು ಕವಿ ಹೀಗೆ ನಿರೂಪಿಸುತ್ತಾನೆ:

ಪುಟ್ಟಿತು ಚಳಿ ಬಳೆದುದು ಚಳಿ
ಕೊಟ್ಟುದು ಚಳಿ ಕೊಂಡುದೆಲ್ಲಮುಂ ಚಳಿಚಳಿಯೆಂ
ದುಟ್ಟುದು ಚಳಿ ತೊಟ್ಟುದು ಚಳಿ
ಮೆಟ್ಟಿತು ಚಳಿ ಮುಟ್ಟಿತೆಲ್ಲ ಚಳಿ ಪೊಸ ಚಳಿಯೊಳ್ (೮೨)

‘‘ಒಡಲೇ ಪ್ರಾಣಂಗೆ ಚಳಿಯ ಕುಪ್ಪಸಮಾಯ್ತು’’ (೮-೭೬) ಎಂಬ ರೂಪಕ ಅತ್ಯಂತ ಸ್ವೋಪಜ್ಞವಾದುದು. ಈ ಚಳಿಯನ್ನು ‘ಭಾಳಲೋಚನನ ಭಾಮಿನಿ’’ ಸಹಿಸಿಕೊಳ್ಳುತ್ತಾಳೆ,

ಸಂಕೀರ್ಣಾನುಭವಗಳನ್ನು ಕೊಡುವ ಶಕ್ತಿ ಹರಿಹರಿನಿಗುಂಟು. ಗಿರಿಜೆಯ ಪಾತ್ರ ನಿರೂಪಣೆಯಲ್ಲಿ ಇದು ಅತಿಶಯವಾಗಿ ವ್ಯಕ್ತವಾಗುತ್ತದೆ. ಶಿವಪೂಜೆಯಲ್ಲಿ ತೊಡಗಿರುವಾಗ ಅವಳು ‘‘ಶೃಂಗಾರರಸಕ್ಕೆ ಮನದಂದು ವೈರಾಗ್ಯ ರಸಕ್ಕೆ ಮಯ್ದೆಗೆದು’’ ವರ್ತಿಸುತ್ತಾಳೆ. ಅವಳ ತನುಮನೋವ್ಯಾಪಾರಗಳ ಜಟಿಲತೆ ಹೀಗೆ ಮೂಡಿದೆ:

ಬೆಮರ್ವಳ್ ಬೆರ್ಚುವಳುರ್ಬುವ
ಳಮರ್ವಳ್ ಪೆರಸಾರ್ವಳಂಜಿ ನಿಲ್ವಳ್ ಸೋಂಕಲ್
ನಿಮಿರ್ವಳ್ ನೆನೆವಳ್ ಮುನಿವಳ್
ಸಮಸಲ್ವಳ್ ಗಿರಿಜೆ ಸೆಡೆದು ಸುಯ್ವಳ್ ಕಾಯ್ವಳ್ (.೮೭)

ಅವಳ ಕಣ್ಣಿನಲ್ಲೆ ಕವಿ ಅವಳ ಚಿತ್ತದ ವಿಲಾಸ ವಿಭ್ರಮ ಕ್ಷೋಭೆ ಕಾಮನೆಗಳನ್ನು ಪ್ರಕಟಿಸಿಬಿಡುತ್ತಾನೆ. ಅವಳ ದೃಷ್ಟಿಪ್ರಸಾರದ ಈ ಚಿತ್ರಣದಲ್ಲಿ ಪೂರ್ಣತೆ, ಧ್ವನಿಪೂರ್ಣತೆ, ಸಂಕೀರ್ಣತೆ ಎಲ್ಲ ಇವೆ:

ಪೊಸ ಜಡೆಯೊಳ್ ತೊಡಂಕಿ ನೊಸಲೊಳ್ ನಡೆದಾಡಿ ಕಪೋಲಭಾಗದೊಳ್
ಪಸರಿಸಿ ಲೋಚನಂಗಳೊಳಮರ್ಚಿ ತದಾಸ್ಯದೊಳೊಂದಿ ಕಂಠದೊಳ್
ಮಿಸುಗಿ ಭುಜಾಗ್ರದೊಳ್ ತೊಳಗಿ ವಕ್ಷದೊಳಾಳ್ದು ಕರಂಗಳೊಳ್ ವಿರಾ
ಜಿಸಿ ಪದದಲ್ಲಿ ಬಿಳ್ದುವು ಭವಾನಿಯ ಮಾನಿಯ ದೈನ್ಯದೃಷ್ಟಿಗಳ್ (೮೬)

ಶಿವನ ತಲೆಯಿಂದ ತೊಡಗಿ ಪಾದದಲ್ಲಿ ವಿರಮಿಸಿದ ಗಿರಿಜೆಯ ನೋಟ, ಅಹಂಕಾರದಿಂದ ವಿನಯಕ್ಕಿಳಿದ ಅವಳ ಮನಃಸ್ಥಿತಿಯನ್ನು ಪ್ರತಿಮಿಸುತ್ತದೆ. ಮಾನ, ದೈನ್ಯ ಎರಡೂ ಇಲ್ಲಿವೆ. ಆದರೆ ಕವಿ ಅವುಗಳನ್ನು ವಾಚ್ಯಗೊಳಿಸಿದ್ದಾನೆ:

ತಪೋನಿರತೆಯಾಗಿದ್ದ ಪಾರ್ವತಿಯೆಡೆಗೆ ರೂಪಾಂತರದಲ್ಲಿ ಬಂದ ಶಂಕರನ ಅವಸ್ಥೆಯನ್ನು ಈ ಪದ್ಯದಲ್ಲಿ ಸೊಗಸಾಗಿ ನಿರೂಪಿಸಲಾಗಿದೆ:

ನೆಗೆವ ಜಡೆಮುಡಿಯನೊತ್ತು
ತ್ತೊಗೆವ ಭುಜಾಳಿಯನಡಂಗಿಸುತ್ತೂರುಗಳಿಂ
ಮಿಗುವ ವೃಷೇಂದ್ರನನೌಂಕು
ತ್ತಗಲ್ಲದೆ ನಿಜಮೂರ್ತಿಯೊಳಗೆ ಗಜಬಜಿಸುತ್ತುಂ (೯೮)

ಅವನ ಸ್ವ-ರೂಪ ಹೊರಬರಲು ಹೊತೊರೆಯುತ್ತಿದೆ; ಅವನದನ್ನು ಅದುಮಿಡಲು ಯತ್ನಿಸುತ್ತಿದ್ದಾನೆ. ಇದೊಂದು ದ್ವಂದ್ವ.

ಕಾಮನ ದಾಳಿಯ ಫಲವಾಗಿ ನಂದೀಶ್ವರ ‘‘ಕಂಪಿಸಿ ಕರಣಂ ಕಲಂಕಿ ಕಿಂಚಿತ್ ಸಂಚಲಮನನಾಗಿ ಚೆಲ್ಲಿದ ಚಿತ್ತಮಂ ಮೆಲ್ಲಮೆಲ್ಲಗೆ ಸಂತಯ್ಸಿಕೊಂಡು ಶಿವಜ್ಞಾನದಿಂದೆಳ್ಚತ್ತು’’ ಕಣ್ದೆರೆಯುವ ಚಿತ್ರ ನೈಜ ಬಂಧುರವಾಗಿದೆ.

ಹೀಗೆ ಹರಿಹರನ ಬಹುಪಾಲು ವರ್ಣನೆಗಳು ಚಿತ್ರವತ್ತಾಗಿವೆ; ರಸೋತ್ಪಾದಕವಾಗಿವೆ. ಆದರೆ,

ಸುರರ ನಿವಾಸದಂತನಿಮಿಷಪ್ರಕರಂ ನಭದಂತಿರಬ್ಜಬಂ
ಧುರ ಮಧುಮಾಸದಂತೆ ಸಿತಪಕ್ಷಯುತಂ ರಥದಂತೆ ಶಕ್ರವಿ
ಸ್ತರಮುರುಪದ್ಮಜಾಂಡದವೊಲಾತ್ತಲಸದ್ಭುವನಾಶ್ರಯಂ ಧನು
ರ್ಧರರ ಕಳಾಪದಂತೆ ರಮಣೀಯ ಶಿಳೀಮುಖಂ ಕೊಳಂ (೫೪)

ಎಂಬಂತಹ ಅನೂಚಾನ ವೈಖರಿಯ ಶುಷ್ಕವರ್ಣನೆಗಳಿಗೇನೂ ಕೊರತೆಯಿಲ್ಲ, ‘ಗಿರಿಜಾ ಕಲ್ಯಾಣ’ದಲ್ಲಿ.

‘‘ಇತರ ಕೃತಿಗಳಲ್ಲಿ ಅದ್ವಿತೀಯ ಕಲೆಗಾರನೆನಿಸಿಕೊಂಡ ಹರಿಹರ ಇಲ್ಲಿ ಸಾಂಪ್ರದಾಯಿಕ ಲಕ್ಷಣಗಳ ಶೃಂಖಲೆ ಕಟ್ಟಿಕೊಂಡು ಮುಗ್ಗರಿಸುತ್ತಾನೆ.’’[3] ಎಂಬ ವಿಮರ್ಶೆ ಒಟ್ಟಿನಲ್ಲಿ ಸಮರ್ಪಕವಾದುದು. ಸಂಪ್ರದಾಯ, ಕವಿ ಸಮಯಗಳ ಈ ಒಲವರವೆ ಕವಿಯ ಔಚಿತ್ಯ ಪ್ರಜ್ಞೆಯನ್ನು ಮಂಕಾಗಿಸಿದೆ. ಎಷ್ಟೋ ಕಡೆ ಸ್ಫೂರ್ತಿ, ರಸಾವೇಶಗಳಿದ್ದರೂ ಅವಕ್ಕೆ ಮಾರಕ ವಾಗುವಂತಿದೆ, ಈ ಔಚಿತ್ಯಶೂನ್ಯತೆ, ಇದರಿಂದ ‘ಶಿವಕವಿ’, ‘‘ವಿವೇಕಿ ಹರಿಹರದೇವಂ’’ ಎಂಬ ಆತ್ಮಸ್ತವನವನ್ನು ಪ್ರಶ್ನಿಸುವಂತಾಗುತ್ತದೆ.

ಚತುರ್ಥಾಶ್ವಾಸದಲ್ಲಿ ಬರುವ ರಾತ್ರಿ ವಿಹಾರವರ್ಣನೆ, ವೇಶ್ಯಾವಾಟಿಕಾ ವರ್ಣನೆಗಳು ಅನೌಚಿತ್ಯಕ್ಕೆತ್ತಿದ ಮಂಗಳಾರತಿಯಾಗಿವೆ. ಹಾಗಲ್ಲದೆ ದೇವರ್ಷಿಯಾದ ನಾರದನನ್ನು ಹಿಮವಂತನೊಡನೆ ಸೂಳೆಗೇರಿಗಟ್ಟಿರುವ ಪರಿಗೆ ಬೇರೆ ಏನೆನ್ನಬೇಕು? ‘‘ಶಿವಕೀರ್ತಿರಸದೆ ಬೊಮ್ಮಂ ತವೆ ತೊಳೆದನೊ ಜಗಮನ್’’ ಎನ್ನುವ ಕವಿಯೆ, ಮರುಚಣದಲ್ಲಿ ‘‘ರತಿಮಯಮಾಯ್ತು ಪಣ್ಯವನಿತಾ ಪರಿವೀಧಿಯೊಳೆಲ್ಲಿ ನೋಳ್ಪೊಡಂ’’ ಎಂದು ತದ್ವಿರುದ್ಧವಾಗಿ ಬರೆದು ನಗೆಗೀಡಾಗುತ್ತಾನೆ.

‘‘ಶ್ರೀಮಚ್ಛೈಲೇಂದ್ರಪುತ್ರೀಗುರುತರಸುರತ ಕ್ಷೀರ ವಾರಾಶಿಚಂದ್ರಂ’’ ಎಂಬೊಂದು ಅನುಚಿತ ರೂಪಕದಿಂದಲೇ ಮೊದಲಾಗುತ್ತದೆ ‘ಗಿರಿಜಾಕಲ್ಯಾಣ’. ಮುಂದೆ ಹೋದಂತೆಲ್ಲ ಅನುಚಿತಾಂಶಗಳು ಮೇಲಿಂದ ಮೇಲೆ ಎದುರಾಗುತ್ತವೆ. ತನ್ನ ಕಾವ್ಯ ‘‘ಕೂರ್ತ ಮುಗ್ಧೆಯ ಕಡುನೇಹದಂತೆ’’ ಎಂದು ಹೇಳಿಕೊಳ್ಳುವ ಚಾಪಲ್ಯ ಕವಿಗೆ.

ಗಿರಿಜೆಯ ಹರಯ, ಚೆಲುವುಗಳ ವರ್ಣನೆ ಅವಳ ತಂದೆಯ ಬಾಯಲ್ಲಿ ಬಂದಿರುವುದೊಂದು ದೊಡ್ಡ ಅನೌಚಿತ್ಯ:

ಉರಮಿಂಬಿಲ್ಲ ಪಯೋಧರದ್ವಯದ ಕೊರ್ಬಿಂಗಾಸ್ಯಮಿಂಬಿಲ್ಲ ಭಾ
ಸುರ ನೇತ್ರದ್ವಿತಯಪ್ರಚುರತೆಗೆ ಬೆನ್ನಿಂಬಿಲ್ಲ ಧಮ್ಮಿಲ್ಲ ಬಂ
ಧುರ ಸೀಮಾವಳಯಕ್ಕೆ ನೋಡ ನೋಡ ನಡುವಿಂಬಿಲ್ಲೊಪ್ಪುವೀ ಬಾಸೆಗೀ
ಗಿರಿಜಾಯೌವನ ಸಂಪದಕ್ಕೆ ತನುವೆಂತೆಂತಿಪ್ಪುದೋ ರುದ್ರನಾ (೫೮)

ಈ ಬಗ್ಗೆ, ‘‘ಜಗದಂಬೆ ಪಾರ್ವತಿಯ ಅಂಗಾಂಗಳನ್ನು ವರ್ಣಿಸುವ ಕಾಳಿದಾಸನ ಔಚಿತ್ಯಪ್ರಜ್ಞೆ ಹರಿಹರನಿಗೆ ಹಿಡಿಸಿದಂತಿಲ್ಲ. ಅದಕ್ಕಾಗಿಯೇ ಆತ ಅದನ್ನು ವಾತ್ಸಲ್ಯವುಳ್ಳ ತಂದೆ ಹಿಮವಂತನಿಂದ ಮಾಡಿಸಿ ಪಾರಾಗಿದ್ದಾನೆ’’[4] ಎಂಬ ಸಮರ್ಥನೆ ಹುಸಿ. ಅಲ್ಲದೆ, ಪಾರ್ವತಿಯ ದೇಹಲಾವಣ್ಯವನ್ನು ಕವಿಯೆ ಉತ್ಸಾಹಿಸಿ ಬಣ್ಣಿಸಿರುವುದುಂಟು. (೫-೭೬ ವ.)

ತನ್ನ ಕೃತಿ ‘ನವರಸ ಸೇವ್ಯ’ ಎಂದು ಹೇಳಿಕೊಂಡಿದ್ದಾನೆ ಹರಿಹರ (೧-೧೪). ಅಗತ್ಯವಿರಲಿ ಇಲ್ಲದಿರಲಿ, ಔಚಿತ್ಯವಿರಲಿ ಇಲ್ಲದಿರಲಿ ನವರಸಗಳನ್ನೂ ಕಾವ್ಯದಲ್ಲಿ ತುಂಬಬೇಕು, ಹಾಗೆ ಮಾಡಿದರೇನೇ ಅದು ಮಹಾಪ್ರಬಂಧವಾಗುವುದು ಎಂಬ ಪೂರ್ವ ಗ್ರಹಕ್ಕೆ ಹರಿಹರನೂ ಹೊರತಾಗಿಲ್ಲ. ಎಂತಲೇ ಅವನ ಕಾವ್ಯದಲ್ಲಿ ಅಷ್ಟಾದಶವರ್ಣನೆಗಳೂ ನವರಸಗಳೂ ಎಡೆಗೊಂಡಿರುವುದು ಅಚ್ಚರಿಯಲ್ಲ. ‘ಗಿರಿಜಾಕಲ್ಯಾಣ’ದಲ್ಲಿ ಮುಖ್ಯವಾಗಿರು ವುದು ಭಕ್ತಿಸಂಬಂಧವಾದ ಶಾಂತರಸ; ಅದೇ ಕವಿಯ ಧ್ಯೇಯ. ಆದರೆ ಬಹುಮಟ್ಟಿಗೆ ಸಂಪ್ರದಾಯ ಬದ್ಧವಾದ ಶೃಂಗಾರಪ್ರಸಕ್ತಿ ಶಾಂತಕ್ಕೆ ಆಗಾಗ ಬಾಧಕವಾಗುತ್ತದೆ. ಇನ್ನು ಗಮನಾರ್ಹವಾದವು ಕರುಣ ಮತ್ತು ವೀರ, ರೌದ್ರಗಳು, ತಾರಕಾಸುರ ಯುದ್ಧ ಪ್ರಕರಣದಲ್ಲಿ ವೀರ ರೌದ್ರಗಳ ಅವಿಷ್ಕಾರವಿದ್ದರೆ, ರತಿವಿಲಾಪ ಪ್ರಸಂಗದಲ್ಲಿ ಕರುಣದ ಅಭಿವ್ಯಕ್ತಿಯಿದೆ.

ಎಳೆಯನೆ ಸುಕುಮಾರನೆ ಸದ
ಮಳನೆ ಸುಖಪ್ರದನೆ ಸೊಬಗೆ ಸುರತರುವೇ ತತ್
ಫಳಮೆ ಸುಧಾರಸಮೇ ನಿ
ನ್ನಳವಱಿಯದೆ ನೊಸಲ ಕಣ್ಣ ಮುಸುಕಂ ತೆಱೆದಯ್ (೫೮)

ಮೊದಲಾದ ರತಿಯ ಶೋಕವಚನಗಳಲ್ಲಿ ಕರುಣರಸದ ಜಿನುಗು ಮಿನುಗುತ್ತಿದೆ.

ದರ್ಶನ : ‘ಕುಮಾರಸಂಭವ’ವೆಂತೊ ಅಂತೆ ‘ಗಿರಿಜಾಕಲ್ಯಾಣ’ವೂ ದರ್ಶನ ಸಂಪನ್ನವಾದ ಕೃತಿ. ಇದರಲ್ಲಿರುವುದು ಜಗತ್ತಿನ ತಾಯಿತಂದೆಗಳಾದೊಪಾರ್ವತೀ ಪರಮೇಶ್ವರರ ಪ್ರಣಯ ಚರಿತ.‘‘ಮಹಾದೇವನು ಪ್ರಣಯ ಸ್ವರೂಪಿಯೂ ಹೌದು; ಪ್ರಣವ ಸ್ವರೂಪಿಯೂ ಹೌದು.’’[5] ಅವನು ದೈಹಿಕವಾದ ಕಾಮಕ್ಕೆ ಸೋಲುವುದಿಲ್ಲ; ‘‘ಸಾತ್ತ್ವಿಕ ಶಿವಭಕ್ತಿಗಲ್ಲ ದಭವಂ ಸಮಂತು ಸಿಲ್ಕಂ ನಿಲ್ಕಂ’’ (೫-೪೯). ಪಾರ್ವತಿ ನಿರುಪಮ ರೂಪಯೌವನಗಳ ಗಾಡಿಮೋಡಿಗಳಿಂದ ಅವನನ್ನು ಒಲಿಸಿಕೊಳ್ಳಲು ಯತ್ನಿಸಿ ವಿಫಲಳಾಗುತ್ತಾಳೆ. ಮನ್ಮಥ ಗರ್ವದಿಂದ ಅವನ ತಪಸ್ಸನ್ನು ಭಂಗಿಸಲು ಯತ್ನಿಸಿ ಭಸ್ಮೀಕೃತನಾಗುತ್ತಾನೆ. ಗಿರಿಜೆಯ ಅನುರಾಗ ತಪಸ್ಸಿನಿಂದ ಪರಿಶುದ್ಧವೂ ಪವಿತ್ರವೂ ಆದಾಗ ಮಾತ್ರ ಶಿವ ಅವಳನ್ನು ಪರಿಗ್ರಹಿಸುತ್ತಾನೆ. ಸಂಯಮರಹಿತವೂ ಧರ್ಮಬಾಹಿರವೂ ಆದ ಕಾಮ ವ್ಯಕ್ತಿಗಳಿಗೆ ಮತ್ತು ಸಮಾಜಕ್ಕೆ ಮಾರಕವಾದರೆ, ಸಂಯಮಶೀಲವೂ ಧರ್ಮನಿಬದ್ಧವೂ ಆದ ಕಾಮ ಸಾತ್ತ್ವೀಕಪ್ರೇಮವಾಗಿ ಪರಿಣಮಿಸಿ ಸರ್ವತಾರಕವಾಗುತ್ತದೆ. ಇದೇ ‘ಗಿರಿಜಾಕಲ್ಯಾಣ’ದ ತಿರುಳು. ಮದನ ಇಲ್ಲಿ ಸಂಪೂರ್ಣವಾಗಿ ಅಳಿದುಹೋಗುವುದಿಲ್ಲ; ಅನಂಗನಾಗುತ್ತಾನಷ್ಟೆ. ಶಾರೀರಕ ಲಾಲಸೆ ಲೋಲುಪತೆಗಳಿಗಿಂತ ಆತ್ಮಿಕ ಪ್ರೇಮ ಸುಖಗಳಿಗೆ ಕೊಟ್ಟ ಪ್ರಾಮುಖ್ಯಕ್ಕೆ ಇದು ಸಂಕೇತವಾಗಿದೆ. ಗಂಡು ಹೆಣ್ಣಿನ ಪ್ರೇಮ ಮಿಲನಗಳು ಸಾರ್ಥಕ ವಾಗುವುದು ಸಂತಾನಪ್ರಾಪ್ತಿಯಿಂದ; ತನ್ಮೂಲಕ ಜಗದ್ದಿತ ಸಾಧನೆಯಾಗುತ್ತದೆ. ಆದ್ದರಿಂದ ದಾಂಪತ್ಯಜೀವನದ ಗುರಿ ಕೇವಲ ಭೋಗವಲ್ಲ, ಸಮಷ್ಟಿಶುಭ. ಈ ಕಾಣ್ಕೆಯನ್ನು ಮಿಂಚಿಸುತ್ತದೆ, ಹರಪಾರ್ವತಿಯರ ಕತೆ. ಮೊತ್ತದಲ್ಲಿ, ತಪಸ್ಸು-ಗಾರ್ಹಸ್ಥ್ಯಗಳ ಸಾಮರಸ್ಯ ಇಲ್ಲಿ ಉಜ್ಜ್ವಲವಾಗಿ ಪ್ರತಿಪಾದಿತವಾಗಿದೆ.

‘ಕುಮಾರಸಂಭವ’, ‘ಶಾಕುಂತಲ’ಗಳ ಬಗ್ಗೆ ಠಾಕೂರರು ಆಡಿರುವ ನುಡಿಗಳು ‘ಗಿರಿಜಾಕಲ್ಯಾಣ’ಕ್ಕೂ ಅನ್ವಯಿಸುತ್ತವೆ : ‘‘ಮೋಹದಿಂದ ಯಾವುದು ನಿಷ್ಫಲವೋ ಅದು ಮಂಗಳದಿಂದ ಸಫಲವಾಗುತ್ತದೆಂದೂ, ಧರ್ಮವು ಧರಿಸುವ ಸೌಂದರ್ಯವೇ ಸ್ಥಿರವಾದುದೆಂದೂ, ಪ್ರೇಮದ ಶಾಂತ ಸಂಯುತ ಕಲ್ಯಾಣರೂಪವೇ ಶ್ರೇಷ್ಠವಾದ ರೂಪವೆಂದೂ, ಉಚ್ಛೃಂಖಲತೆಯಲ್ಲಿ ಸೌಂದ್ಯದ ಕ್ಷಿಪ್ರವಿಕಾರವೂ ಬಂಧನದಲ್ಲಿಯೇ ಯಥಾರ್ಥವಾದ ಮಂಗಳವೂ ಇರುವುದೆಂದೂ ಕವಿಯು ತೋರಿಸಿರುತ್ತಾನೆ… ಸ್ತ್ರೀಪುರುಷರ ಪ್ರೇಮವು ಬಂಜೆಯಾಗಿ ಕೇವಲ ತಮ್ಮ ತಮ್ಮಲ್ಲಿಯೇ ಸಂಕೀರ್ಣವಾಗಿದ್ದರೆ, ಮಂಗಳವನ್ನು ಪಡೆಯದೆ ಸಂಸಾರದಲ್ಲಿಯೂ ಮಕ್ಕಳು ಮರಿಗಳಲ್ಲಿಯೂ ಅತಿಥಿ ಅಭ್ಯಾಗತರಲ್ಲಿಯೂ ನೆರೆಹೊರೆಯವರಲ್ಲಿಯೂ ಅಪೂರ್ವ ಸೌಭಾಗ್ಯರೂಪವಾಗಿ ವ್ಯಾಪಿಸಿದ್ದರೆ, ಅಂತಹ ಪ್ರೇಮವು ಸುಂದರವೂ ಅಲ್ಲ, ಸ್ಥಾಯಿಯೂ ಅಲ್ಲ…’’[6]

ಶಿವ ತನ್ನೊಡನೆ ರಜತಗಿರಿಗೆ ಬರುವಂತೆ ಕರೆದಾಗ, ಗಿರಿಜೆ ತನ್ನ ತಂದೆಯ ಒಪ್ಪಿಗೆ ಪಡೆಯುವಂತೆ ಅವನನ್ನು ಕೇಳಿಕೊಳ್ಳುತ್ತಾಳೆ. ಮದುವೆಯೆಂಬುದು ಒಂದು ಗಂಡು, ಒಂದು ಹೆಣ್ಣಿನ ಖಾಸಗಿ ವ್ಯವಹಾರವಲ್ಲ; ಅದಕ್ಕೆ ಸಾಮಾಜಿಕ ಸ್ವರೂಪವಿರಬೇಕು, ಗುರುಹಿರಿಯರ ಅನುಮತಿ, ಆಶೀರ್ವಾದಗಳಿಂದ ಮಾತ್ರ ಅದಕ್ಕೆ ಧರ್ಮದ ಮುದ್ರೆ ಬೀಳುತ್ತದೆ. ಜಗತ್ತಿನ ಮಾತಾಪಿತರ ಮೇಲ್ಪಂಕ್ತಿಯನ್ನುಳ್ಳ ಭಾರತೀಯ ಪರಂಪರೆ ಸಂಸ್ಕೃತಿಗಳ ಎರಕವಿದೆ, ‘ಗಿರಿಜಾಕಲ್ಯಾಣ’ದ ಕಥೆಯಲ್ಲಿ.

ಭಾಷೆ, ಶೈಲಿ : ‘ಗಿರಿಜಾಕಲ್ಯಾಣ’ವನ್ನು ತಾನು ‘‘ಭಕ್ತಿಯಿಂದಂ ಗುರು ಕರುಣದಿನುತ್ಸಾಹದಿಂ’’ ನಿರೂಪಿಸುವುದಾಗಿ ಹೇಳಿಕೊಳ್ಳುತ್ತಾನೆ, ಹರಿಹರ (೧೦-೧೧೪). ಇಲ್ಲಿ ಬಂದಿರುವ ಭಕ್ತಿ, ಉತ್ಸಾಹ ಎಂಬ ಮಾತುಗಳಲ್ಲಿ ಅವನು ತನ್ನ ಶೈಲಿಯನ್ನು ತಾನೆ ಸೂತ್ರಿಸಿದ್ದಾನೆ ಎನ್ನಬಹುದು. ‘‘ಉತ್ಸಾಹಾಧಿಕ್ಯ ಹರಿಹರನ ಸ್ವಂತ ಸಲ್ಲಕ್ಷಣ.’’[7] ಈ ಅತ್ಯುತ್ಸಾಹ ಅವನ ಕಾವ್ಯದ ಬಲವೂ ಹೌದು, ದೌರ್ಬಲ್ಯವೂ ಹೌದು. ಅನುಕರಣ ಶಬ್ದಗಳು, ಪುನರುಕ್ತಿಗಳು, ಅಚ್ಚರಿ ಮೆಚ್ಚುಗೆಗಳನ್ನು ಸೂಚಿಸುವ ಮಾತುಗಳು ಅವನಲ್ಲಿ ಸಮೃದ್ಧ. ಇವುಗಳ ಮೂಲಕವೇ ಕ್ರಿಯೆಗಳ ಮತ್ತು ದೃಶ್ಯಗಳ ಸಾಕ್ಷಾತ್ಕಾರಕ್ಕೆ ಕವಿ ಯತ್ನಿಸುತ್ತಾನೆ. ಆ ಯತ್ನದಲ್ಲಿ ಸೋಲು ಗೆಲುವು ಎರಡೂ ಉಂಟು. ಮೇಲಿಂದ ಮೇಲೆ ಬರುವ ಈ ಬಗೆಯ ಶಬ್ದಗಳ ಪ್ರಯೋಗದಿಂದ, ‘ಗಿರಿಜಾಕಲ್ಯಾಣ’ದಲ್ಲಿ ಕಂಡುಬರುವ ‘‘ಹರಿಹರನ ಶೈಲಿಯನ್ನು ಒಂದು ರೀತಿಯಲ್ಲಿ ‘ರಗಳೆಯ ಶೈಲಿ’ಯೆಂದು ಹೇಳಬಹುದಾಗಿದೆ’’[8] ಎಂದು ಟೀಕೆಗೆ ಆಸ್ಪದವಾಗಿದೆ. ಏನೇ ಇರಲಿ. ಈ ದಿಶೆಯಲ್ಲಿ ಒಂದೆರಡು ಪದ್ಯಗಳನ್ನು ನೋಡಬಹುದು.

ಘುಳುಘುಳು ಘಳಘಳ ಘುಡುಘುಡು
ಘುಳು ಛಿಟಿಛಿಟಿ ಘಾರ್ಘಳಂ ಧಡಂ ಧಾಂಧಡಂ ಛಿಂ
ಛಿಳಿಛಿಳಿ ಭಿಂಭಿಂ ಘಡಘಡ
ಘಡಘಡಘಡಿಲೆಂದು ಮೊಳಗು ಮೊಳಗಿತು ನಭದೊಳ್ (೪೧)
ಸುರರ ಬಲಂ ಹರ ಹರ ಖೇ
ಚರರ ಬಲಂ ಭಾಪು ಕಿನ್ನರರ ಬಲವಾಹಾ
ಗರುಡರ ಬಲವರರೇ ಸಿ
ದ್ಧರ ಬಲವಮ್ಮಮ್ಮ ಭಲರೆ ಗಂಧರ್ವಬಲಂ (೧೦೭೨)

ಚಂಪೂ ಸಹಜವಾದ ಸಂಸ್ಕೃತ ನಿರ್ಭರವಾದ ಭಾಷೆಯಲ್ಲಿ ಲಿಖಿಸುವುದುಂಟು ಹರಿಹರ. ಅಂಥ ಕಡೆಗಳಲ್ಲಿ, ‘‘ಪೂರ್ವಕವಿಗಳಂತೆ ಅವನೂ ಒಬ್ಬ ಸಂಸ್ಕೃತ ನಿಲುವಂಗಿ ಸಂಸ್ಕೃತ ಧೋತ್ರ ಕನ್ನಡ ಉತ್ತರೀಯ ಕನ್ನಡ ರುಮಾಲಿನ ‘ಕನ್ನಡ’ ಕವಿ’’ ಎನಿಸಿಕೊಳ್ಳುತ್ತಾನೆ.[9] ಇದೊಂದು ದೃಷ್ಟಾಂತ:

ವಿಳಸತ್ಕಲ್ಲೋಲಮಾಲಾ ಪ್ರತಿಹತವಿತತ ಪ್ರೋಚ್ಛಲಚ್ಛೈಲ ಕೋಳಾ
ಹಳಿತೋದ್ಯತ್ಫೇನ ನಾನಾಕರಿಮಕರ ವಿಪುಚ್ಛ ಪ್ರಹಾರ ಪ್ರತಾಪೋ
ದ್ಗಳಿತಾನಂತ ಪ್ರರತ್ನ ಪ್ರಬಲ ಜಲಚರಾನೀಕ ಗಂಭೀರಭೀಮೋ
ಜ್ವ್ವಳ ರಾವಪ್ರಾದ್ಭುತ ಪ್ರೋನ್ಮಿಳಿತ ಘುಳುಘುಳು ಧ್ವಾನಮಂಭೋನಿಧಾನಂ  (೪೬)

ಆದರೆ ಎಲ್ಲ ಕಡೆಯಲ್ಲೂ ಇಂಥ ಆರ್ಭಟವಿಲ್ಲ. ‘ಗಿರಿಜಾಕಲ್ಯಾಣ’ ‘‘ಹಿಂದಣ ಚಂಪೂ ಕಾವ್ಯಗಳಷ್ಟು ಕ್ಲಿಷ್ಟವಾಗಿಲ್ಲ. ಸಂಸ್ಕೃತ ಶಬ್ದಗಳನ್ನು ಹೆಚ್ಚಾಗಿ ಉಪಯೋಗಿಸಿದ್ದರೂ ಅವುಗಳ ಉಪಯೋಗ ಯಥೋಚಿತವಾಗಿದೆ… ದೀರ್ಘ ಸಮಾಸಗಳನ್ನು ಬಹಳವಾಗಿ ಉಪಯೋಗಿಸಿಲ್ಲ. ವಾಕ್ಯಗಳು ಬಿಡಿಬಿಡಿಯಾಗಿವೆ, ಮಾತಾಡುವ ಸರಣಿಯನ್ನು ಹೋಲುತ್ತವೆ. ಗಿರಿಜಾಕಲ್ಯಾಣವು ಸಾಮಾನ್ಯ ಜನರಿಗೆ ಒಗ್ಗುವಂತಹ ಚಂಪೂಕಾವ್ಯವು’’[10] ಎಂಬ ಹೇಳಿಕೆ ಬಹುಮಟ್ಟಿಗೆ ದಿಟ. ಈ ದೃಷ್ಟಿಯಿಂದ ಹರಿಹರನ ಕಂದಗಳು ತುಂಬ ಗಮನಾರ್ಹವಾಗಿವೆ. ಅವುಗಳ ಉತ್ತಮಿಕೆಯನ್ನು ಕುರಿತು ಅವನೆ ಆಡಿರುವ ‘‘ಕಂದಂಗಳಮೃತಲತಿಕಾ ಕಂದಂಗಳ್’’ ಇತ್ಯಾದಿ ಮಾತುಗಳು(೧-೧೨) ಬರಿಯ ಬಡಾಯಿಯಲ್ಲ. ಚಂಪೂ ಕಾವ್ಯಗಳ ಕಂದಗಳಲ್ಲಿ ಹರಿಹರನ ಕಂದಗಳಿಗೊಂದು ವಿಶೇಷ ಸ್ಥಾನವಿದೆ. ಅಂತೂ, ‘‘ರಗಳೆಯ ಕವಿ ಎಂದು ಅವನನ್ನು ಕರೆದು ತಟಸ್ಥರಾಗುವುದು ಅಪೂರ್ಣ ವ್ಯವಸಾಯ, ಅನ್ಯಾಯಕರ್ಮ; ಕಂದವೃತ್ತಗದ್ಯಗಳಲ್ಲಿಯೂ ಅವನು ಸಮರ್ಥ.’’[11] ಅವನು ಹೇಗೆ ಆಡುಮಾತಿಗೆ ಸಮೀಪವಾದ ಧಾಟಿಯಲ್ಲಿ ನಾಟಕೀಯವಾಗಿ ಬರೆಯಬಲ್ಲನೆಂಬುದಕ್ಕೆ ಕಪಟವಟು-ಗಿರಿಜೆಯರ ಸಂಭಾಷಣೆ ಉತ್ಕೃಷ್ಟ ನಿದರ್ಶನ.

ಯಮಕ, ಅನುಪ್ರಾಸಾದಿ ಶಬ್ದಾಲಂಕಾರಗಳನ್ನು ಆಕರ್ಷಕವಾಗಿ ತರುವ ನೈಪುಣ್ಯವಿದೆ ಹರಿಹರನಿಗೆ. ಇವು ಪ್ರಸಿದ್ಧ ನಿದರ್ಶನಗಳು:

ಕೆಲದೊಳ್ ಪುಳಿಂದಿಯಿರೆ ಪೆ
ರ್ಬುಲಿ ಬಂದೊಡಮಂಜನಳ್ಕನೋಡಂ ನೋಡಂ
ಚಲದಿಂ ಕಾಡಂ ಕಾಡಂ
ಸಲೆ ಪಸಿವಂ ಮಱೆದು ತಣಿದು ಬೇಡಂ ಬೇಡಂ (೧೦೭)

ಕರಮೆಸೆದತ್ತು ಕೌಮುದಿಯ ಬಿತ್ತು ಚಕೋರಿಯ ತುತ್ತು ನೀರಜೋ
ತ್ಕರದ ವಿಪತ್ತು ತಾರೆಗಳ ತುತ್ತು ಸುಧಾಂಬುಧಿಯೊತ್ತು ಮತ್ತಮಂ
ಬರಪುಳಿಂದಿ ತಾಳ್ದೆಸೆವ ಮೂಗಿನ ಮುತ್ತು ಮಗುಳ್ದು ನೋಡಲ
ಚ್ಚರಿಯೆನಿಸಿತ್ತು ಮೂಡದೆಸೆಯಿಂದೊಗೆತರ್ಪ ಹಿಮಾಂಶುಮಂಡಲಂ (೯೫)

ಎಷ್ಟೇ ಚೆನ್ನಾಗಿದ್ದರೂ, ಅತಿಯಾಯಿತು ಎಂಬ ಆಕ್ಷೇಪಣೆಗೆ ಪದೇ ಪದೇ ಗುರಿಯಾಗುತ್ತದೆ ಹರಿಹರನ ಕವಿತ್ವ.

ಕನ್ನಡ ಗದ್ಯದ ಬೆಳವಣಿಗೆಗೆ ಹರಿಹರನ ಕೊಡುಗೆ ದೊಡ್ಡದು; ‘ಗಿರಿಜಾ ಕಲ್ಯಾಣ’ದ ಗದ್ಯವೂ ಅದರಲ್ಲಿ ಭಾಗವಹಿಸಿದೆ. ಮೇಲ್ಮಟ್ಟದ ಎಷ್ಟೋ ಗದ್ಯ ಭಾಗಗಳಿವೆ, ‘ಗಿರಿಜಾಕಲ್ಯಾಣ’ದಲ್ಲಿ. ಒಂದು ಸಣ್ಣ ಉದಾಹರಣೆ : ‘‘ಕಾಮ ಸುಖಕ್ಕೆ ಕಣ್ ಬಂದಂತೆ ಸೌಕುಮಾರ್ಯಕ್ಕೆ ಸವಿಯೇಱೆದಂತೆ ಆಲಿಂಗನಕ್ಕೆ ಅವಯವಂ ಬಂದಂತೆ ಚೆಲ್ವಿಂಗೆ ಮೊಲೆ ಮೂಡಿದಂತಲ್ಲಲ್ಲಿ ಕುಳ್ಳಿರ್ದ ಬಚ್ಚ ಬಱಯಚ್ಚ ಸುಖದ ಪಚ್ಚ ಪಸಿಯ ಪೊಚ್ಚ ಪೊಸ ಹರೆಯದ ಮುಗ್ಧಾಂಗನೆಯರೊಳಂ’’ ಎಂಬಲ್ಲಿ ರೂಪಕಸುಭಗತೆಯಿರುವಂತೆಯೇ ಗದ್ಯದ ಹೃದ್ಯತೆಯೂ ಇದೆ. ‘‘ಶೂಲಿಗೀಲಿಯ ತಪಂಗಿಪಮೊಡ್ಡಿಪುದೇ ರತೀಶನೊಳ್’’ ಎಂಬಂತಹ ಪ್ರಯೋಗಗಳೂ ಗಮನಾರ್ಹ.

ಹರಿಹರನ ಶೈಲಿ ಶೃಂಗಾರಕ್ಕೆ ಒಪ್ಪುವುದಿಲ್ಲವೆಂದೂ ವೀರರಸ ಭಕ್ತಿರಸಗಳಿಗೆ ಅದು ಸಮುಚಿತವೆಂದೂ ಎಂ.ಆರ್ .ಶ್ರೀನಿವಾಸಮೂರ್ತಿಗಳು ಹೇಳುತ್ತಾರೆ.[12] ಅವರದೇ ಆದ ಮುಂದಿನ ಉಕ್ತಿ ಸರ್ವಸಮ್ಮತವಾಗದಿದ್ದರೂ ವಿಚಾರಯೋಗ್ಯವಾಗಿದೆ : ‘‘ಹರಿಹರನಿಗೆ ಕವಿತಾಶಕ್ತಿಯೇ ಅಧಿಕವಾಗಿ, ನೈಪುಣ್ಯವೂ ಅಭ್ಯಾಸವೂ ಅಲ್ಪವಾಗಿರುವುದರ ಪರಿಣಾಮವನ್ನು ಅವನ ಶೈಲಿಯಲ್ಲಿ ಕಾಣಬಹುದು.’’[13]

ಸ್ಥಾನ ನಿರ್ದೇಶ : ಈಗ, ‘ಗಿರಿಜಾಕಲ್ಯಾಣ’ದ ಸ್ಥಾನಮಾನಗಳೇನು, ಇತಿಮಿತಿಗಳೇನು ಎಂಬುದನ್ನು ತುಸು ನೋಡಬಹುದು. ಇದರ ಮೌಲ್ಯ ಮಾಪನ ಸ್ವಲ್ಪ ಕಠಿಣವಾದ ಕೆಲಸ; ಆದರೆ ಅಸಾಧ್ಯವಾದುದೇನಲ್ಲ.

ಹರಿಹರ ‘‘ಮಹಾಕವಿ ಎಂಬ ಕೀರ್ತಿ ಅವನ ರಗಳೆಗಳನ್ನವಲಂಬಿಸಿದೆ’’ ಎನ್ನುತ್ತಾರೆ ಶಿ.ಚೆ.ನಂದೀಮಠರು.[14] ಎಂದರೆ, ‘ಗಿರಿಜಾಕಲ್ಯಾಣ’ ಮಹಾ ಕಾವ್ಯವಲ್ಲ ಎಂದಂತಾಯಿತು. ಇದನ್ನೊಪ್ಪಬೇಕು. (ರಗಳೆಗಳಿಗೂ ಮಹಾ ಕಾವ್ಯ ಪದವಿ ಸಿಕ್ಕುವುದಿಲ್ಲ). ಆದರೆ, ‘‘ಅವುಗಳ (ರಗಳೆಗಳ) ಸಮಷ್ಟಿಯನ್ನೇ ಒಂದು ಕೃತಿಯೆಂದು ಭಾವಿಸಿದಾಗ ‘ಗಿರಿಜಾ ಕಲ್ಯಾಣ’ಕ್ಕಿಂತ ಆ ಖಂಡಕಾವ್ಯಗಳು ಹೆಚ್ಚು ತೂಗುವುದು ಸಾಧ್ಯ. ಆದರೆ ಯಾವ ಒಂದು ರಗಳೆಯನ್ನೇ ತನಿಯಾಗಿ ವಿವೇಚನೆಗೆ ತೆಗೆದುಕೊಂಡಾಗ ಈ ಕೃತಿ ಕೆಲವೊಂದು ಕಾರಣದಿಂದ ಮಿಗಿಲಾಗಿ ನಿಲ್ಲುವುದು ಸಹಜ’’[15] ಎಂಬುದೂ ತಥ್ಯ.

‘ಗಿರಿಜಾಕಲ್ಯಾಣ’ದ ಪ್ರತಿಯೊಂದು ಆಶ್ವಾಸದ ಅಂತ್ಯದಲ್ಲೂ ಕವಿ ‘‘ಭಕ್ತಿ ಜ್ಞಾನ ವೈರಾಗ್ಯಮಂ ಕರುಣಂಗೆಯ್ಗೊಲವಿಂದೆ ಹಂಪೆಯ ವಿರೂಪಾಕ್ಷಂ ಶಿವಾವಲ್ಲಭಂ’’ ಎಂದು ಹಾರೈಸುತ್ತಾನೆ. ಅವನ ವ್ಯಕ್ತಿತ್ವದ ಮೇಲೆ ಇದು ಬೆಳಕು ಚೆಲ್ಲುತ್ತದೆ. ತಾನೆ ಕರೆದುಕೊಂಡಿರುವಂತೆ ಅವನು ‘ಶಿವಕವಿ’; ಮೊದಲು ಭಕ್ತ, ಆಮೇಲೆ ಕವಿ. ‘‘ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಎಲ್ಲರನ್ನೂ ಸಾಮಾನ್ಯವಾಗಿ ಕೇವಲ ಕವಿಗಳಂತೆಯೇ ಭಾವಿಸಬೇಕಾಗಿದ್ದರೂ ಹರಿಹರನ ವಿಷಯದಲ್ಲಿ ಕವಿಯ ಆತ್ಮಸ್ವರೂಪವನ್ನೂ ಭಾವಿಸಬೇಕಾಗಿದೆ. ಏಕೆಂದರೆ ಹರಿಹರನು ಕವಿಯಾಗಿರುವುದರಿಂದ ಸಾಹಿತ್ಯದಲ್ಲಿ ಎಷ್ಟರಮಟ್ಟಿಗೆ ಪ್ರಾಮುಖ್ಯತೆಯನ್ನು ಪಡೆದಿರುವನೋ ಅದಕ್ಕಿಂತ ಹೆಚ್ಚಾಗಿ ವ್ಯಕ್ತಿವೈಲಕ್ಷಣ್ಯದಿಂದ ಪಡೆದಿರುತ್ತಾನೆ.’’[16] ಅವನ ಪಾಲಿಗೆ ಕವಿತಾ ರಚನೆ ಶಿವಾನುಗ್ರಹಸಂಪಾದನ ಸಾಧನವೆ ಹೊರತು ‘‘ಎಂದಿಗೂ ಕೇವಲ ಹಲಗೆ ಬಳಪದ ಕರ್ಮವಲ್ಲ.’’[17] ಹರಿಹರನ ಶಿವೈಕಪರವಾದ ವ್ಯಕ್ತಿತ್ವ ‘ಗಿರಿಜಾಕಲ್ಯಾಣ’ವನ್ನು ಆಮೂಲಾಗ್ರವಾಗಿ ವ್ಯಾಪಿಸಿ, ಅದಕ್ಕೊಂದು ಬಂಧವನ್ನೊದಗಿಸಿದೆ ಮತ್ತು ಕವಿತೆ ಅದರಿಂದ ಎಷ್ಟೋ ಕಡೆ ಪುಟಗೊಂಡಿದೆ. ಭಕ್ತಿಯ ಜೋಡು ಪಡೆದು ಪ್ರತಿಭೆ ಔನ್ನತ್ಯಕ್ಕೇರಿರುವ ವಿದ್ಯಮಾನವುಂಟು ಅಲ್ಲಲ್ಲಿ. ಆದರೆ ಹರಿಹರನ ಭಕ್ತಿಯ ಉದ್ರೇಕವೆ ಅವನ ಕಾವ್ಯಕ್ಕೆ ಆತಂಕವಾಗಿದೆಯೆನ್ನುತ್ತಾರೆ ಎಂ.ಆರ್. ಶ್ರೀನಿವಾಸಮೂರ್ತಿ. ‘‘ಈ ಕವಿಯು ತಾನು ಪಂಡಿತನೆಂಬ ಭಾವನೆ ಅಷ್ಟೊಂದು ಇಲ್ಲದೆಯೂ ಅಷ್ಟೊಂದು ಉಜ್ವಲಾಭಿಮಾನಿಯಾಗಿ ಅಷ್ಟೊಂದು ಭಕ್ತಿರಸಲೋಲುಪನಾಗಿ ಇಲ್ಲದೆಯೂ ತನ್ನ ಕವಿಹೃದಯದಲ್ಲಿ ಸ್ವಲ್ಪ ನಯವೂ ನಾಗರಿಕಮಾರ್ಗವೂ ಉಳ್ಳವನಾಗಿದ್ದಿದ್ದರೆ ಅಸಾಧಾರಣ ಕವಿಯಾಗಿ ಸಾಹಿತ್ಯಾಕಾಶದಲ್ಲಿ ಪ್ರಕಾಶಿಸುತ್ತಿದ್ದನು’’ ಎಂಬ ಅವರ ಹೇಳಿಕೆ[18] ಬೆಲೆಯುಳ್ಳದ್ದು. ‘‘ಭಕ್ತಿರಸದ ವಿಚಾರದಲ್ಲಿ ಹರಿಹರನನ್ನು ಸೋಲಿಸುವ ಕರ್ಣಾಟಕ ಕವಿಗಳು ಬಹಳ ವಿರಳ’’ ಎಂದು ಅವರು ಹೇಳಿ, ಅದರಿಂದಾಗಿರುವ ತೊಂದರೆಯನ್ನೂ ಪ್ರಸ್ತಾಪಿಸಿದ್ದಾರೆ: ‘‘ಕವಿತಾನೈಪುಣ್ಯವನ್ನೆಲ್ಲ ಭಕ್ತಿರಸವು ಮುಳುಗಿಸಿಬಿಟ್ಟಿರುವುದು.’’ ಇದರಿಂದ ಕಾವ್ಯದಲ್ಲಿ ಒಂದು ಬಗೆಯ ‘ಹರಾತ್ಮಕ ತಾನ’ ಕಂಡುಬರುತ್ತದೆಂಬ ಅವರ ಉಕ್ತಿ[19] ಕುತೂಹಲಕಾರಿ.

ಹರಿಹರ ವಾಙ್ಮಯವನ್ನು ಕುರಿತು ವಿ. ಸೀತಾರಾಮಯ್ಯನವರು ಆಡಿರುವ ಈ ಮಾತುಗಳು ‘ಗಿರಿಜಾಕಲ್ಯಾಣ’ಕ್ಕೂ ಹೊಂದುತ್ತವೆ : ‘‘ಅದರಲ್ಲಿ ದೌರ್ಬಲ್ಯವಿದೆ; ಮಾತಿನ ಅಬ್ಬರ, ಪುನರುಕ್ತಿ ಇದೆ; ವಿಲಾಸವಿದೆ; ಬಲವಿದೆ; ಜಾಳಿದೆ; ಅತಿರೇಕಗಳಿವೆ; ಒರಟುತನವಿದೆ; ಉಗ್ರತೆಯಿದೆ. ಎಲ್ಲಿಯೇ ಆಗಲಿ, ಅದರ ಪ್ರಾಮಾಣಿಕತೆ ಮಾತ್ರ ಅಚ್ಚಳಿಯದ್ದು. ಅವನದೇ ವಾಣಿ ಎಂದ ಗುಣವನ್ನು ಸ್ಥಾಪಿಸುವ ಶಕ್ತಿ ಉಳ್ಳದ್ದು.’’[20] ಇದು ಬಂದುದು ಕವಿಯ ವಿಶಿಷ್ಟ ವ್ಯಕ್ತಿತ್ವದಿಂದ ಎನ್ನಬಹುದು.

ಹರಿಹರನಲ್ಲಿ ಅತಿಶಯವಾದ ವೇಗ ಅವೇಗ ರಭಸಗಳಿವೆ. ‘‘ಸವೇಗವಾದ ಕಥನಕಲೆ ಹರಿಹರನ ಹುಟ್ಟುಗುಣ’’[21]; ‘‘ಸಂತೋಷ ಸಂಭ್ರಮ, ಭಕ್ತಿ-ವೀರಗಳ ಸಂದರ್ಭ ಬಂದಾಗ ಈ ಕಲೆ ಅತ್ಯಂತ ಸಹಜ-ಸಮೃದ್ಧವಾಗುತ್ತದೆ : ಕವಿಯ ಎಲ್ಲ ಶಕ್ತಿಗಳು ಕಾವುಗೊಂಡು ನಿರ್ಮಾಣದ ಎತ್ತರಕ್ಕೆ ಹಾತೊರೆಯುತ್ತವೆ.’’[22] ಈ ಆವೇಶ ಉತ್ಸಾಹಗಳಷ್ಟೇ ಪ್ರಮಾಣದಲ್ಲಿ ಕವಿಗೆ ಔಚಿತ್ಯಪರಿಜ್ಞಾನವಿಲ್ಲವೆನ್ನುವುದನ್ನು ಗಮನಿಸಬೇಕು. ‘‘ಹರಿಹರನಲ್ಲಿ ಅತ್ಯಧಿಕವಾದ ಸ್ಫೂರ್ತಿಯುಂಟು; ಆದರೆ ಮೇಧಾಶಕ್ತಿಯಿಲ್ಲ. ಒಮ್ಮೊಮ್ಮೆ ಮೇಧಾಶಕ್ತಿಯು ಸಾಣೆ ಹಿಡಿದ ಅಲಗಿನಂತೆ ಹೊಳೆಯುತ್ತದೆ. ಆದರೆ ಅದರಲ್ಲಿ ಪಟುತ್ವವಿಲ್ಲ’’[23] ಎಂಬ ಹೇಳಿಕೆ ಪರಿಶೀಲನಯೋಗ್ಯ.

‘ಗಿರಿಜಾ ಕಲ್ಯಾಣ’ವನ್ನು ಹರಿಹರ ‘‘ಪೊಸತಿದು ಪಾವನಮಿದು’’ ಎಂದು ಕರೆದುಕೊಂಡಿ ದ್ದಾನೆ (೧-೧೫). ಕಾವ್ಯ ಪಾವನವೇನೊ ಹೌದು; ಎಷ್ಟರ ಮಟ್ಟಿಗೆ ಹೊಸದು ಎಂಬ ಪ್ರಶ್ನೆ ಏಳದಿರುವುದಿಲ್ಲ. ಅದಕ್ಕೆ ಹೀಗೆ ಉತ್ತರಿಸಲಾಗಿದೆ : ‘‘ಕಥಾವಿಷಯ, ವಸ್ತು ರಚನೆ, ವರ್ಣನೆ, ಶೈಲಿ ಇವುಗಳಲ್ಲಿ ಪೂರ್ವ ಪರಂಪರೆಯ ಅಂಶಗಳನ್ನು ಸ್ವೀಕರಿಸಿ ಸ್ವತಂತ್ರವಾದ ಕೆಲವನ್ನು ಸೇರಿಸಿ ವ್ಯಕ್ತಿತ್ವದ ಪ್ರಕ್ರಿಯೆಯಿಂದ ಅದಕ್ಕೆ ಕೊಟ್ಟ ಹುದುವಿನಲ್ಲಿ, ಮೆರುಗಿನಲ್ಲಿ ಈ ಗ್ರಂಥದ ಹೊಸತನವಿದೆ. ಈವರೆಗೆನ ಚಂಪೂಕಾವ್ಯಗಳಲ್ಲಿ ಕಾಣದೊರೆಯದ ಕಥಾವಿಷಯವು ಇದರಲ್ಲಿದೆ. ಇದರ ಹೊರತಾಗಿ ಇದರಲ್ಲಿ ಅಚ್ಚ ಹೊಸತನವಿಲ್ಲ, ಒಟ್ಟು ಹೆಣಿಕೆಯಲ್ಲಿ ತೋರುವ ಹೊಸತನವಿದೆ.’’[24]

‘ಮಹಾಪ್ರಬಂಧ’ವೆಂಬ ಅಭಿಧಾನವಿದೆ, ‘ಗಿರಿಜಾಕಲ್ಯಾಣ’ಕ್ಕೆ. ಆದರೆ ಅದು ಮಹಾ ಕಾವ್ಯವೆ? ಪ್ರಾಚೀನಾರ್ಥದಲ್ಲಿ ಹೌದು, ಆಧುನಿಕಾರ್ಥದಲ್ಲಿ ಅಲ್ಲ. ಪೌರಾಣಿಕ ಕತೆಯೊಂದರ ಹಂದರದ ಸುತ್ತ ಹಬ್ಬಿಸಿದ ಈ ಕಬ್ಬದಲ್ಲಿರುವ ಮಾನವೀಯ ಸ್ವಾರಸ್ಯದ ಕೊರತೆಯೆ ಅದನ್ನು ಮಹಾಕಾವ್ಯಸ್ತರಕ್ಕಿಂತ ಕೆಳಗಿರಿಸಿದೆ. ‘ಗಿರಿಜಾಕಲ್ಯಾಣ’ ಮಹಾಕಾವ್ಯವಾಗದಿರುವುದಕ್ಕೆ ರಂ.ಶ್ರೀ.ಮುಗಳಿಯವರು ಮೂರು ಕಾರಣಗಳನ್ನೊಡ್ಡಿದ್ದಾರೆ.[25] ೧. ಮಾರ್ಗಕಾವ್ಯದ ಸಂಪ್ರದಾಯಶರಣತೆ ಮತ್ತು ಸ್ವಂತ ಪ್ರತಿಭೆಯ ನವೀನತೆ ಇವುಗಳ ಸಂಘರ್ಷದಿಂದ ಈ ಕೃತಿಯಲ್ಲಿ ಅಪಕ್ವತೆ, ಅಸಂಗತಿ ತಲೆದೋರಿವೆ. ೨. ಪಾತ್ರಗಳ ದಿವ್ಯ-ಮಾನವ ಅಂಶಗಳ ಮೇಳವಿಕೆಯಲ್ಲಿ ಹೊಂದಿಕೆ ಕಡಿಮೆಯಾಗಿದೆ. ೩. ಗಿರಿಜಾಕಲ್ಯಾಣವೇ ಇದರ ಮುಖ್ಯ ವಿಷಯವಾದರೂ ತಾರಕಾಸುರ ಸಂಹಾರಕನಾದ ಕುಮಾರಜನ್ಮ ಸೂಚನೆಯೂ ಇಲ್ಲದೆ ಈ ಕೃತಿ ಅಪೂರ್ಣವಾಗಿದೆ. ಇವುಗಳಲ್ಲಿ ಕಡೆಯದನ್ನು ಬಿಟ್ಟು ಉಳಿದೆರಡು ಮುಖ್ಯವಾಗಿವೆ. ಇಷ್ಟಾದರೂ, ‘‘ಗಿರಿಜೆಯ ಪಾತ್ರ ಕಲ್ಪನೆಗನುಗುಣವಾಗಿ ಕಥಾರಚನೆ, ಕಾಮದಹನ, ರತಿ ವಿಲಾಸ, ವಟುವೇಷ ಸಂದರ್ಭ ಈ ಮುಂತಾದ್ದರ ರಸೋತ್ಕಟ ನಿರೂಪಣೆ, ನಿರರ್ಗಳವಾದ ವ್ಯಕ್ತಿ ವಿಶಿಷ್ಟವಾದ ಶೈಲಿ, ಅಸಾಧಾರಣ ಕಲ್ಪಕತೆ, ಶಿವಕವಿತ್ವವುಳ್ಳ ಪ್ರಸನ್ನ ಲಲಿತ ಚಂಪುವಿನ ಹೊಸ ನಿರ್ಮಾಣ ಈ ಗುಣಗಳಿಂದ ಹರಿಹರನು ಮಹಾಕವಿ ಸತ್ವವನ್ನು ತೋರ್ಪಡಿಸಿದ್ದಾನೆ.’’[26] ಮಹಾಕವಿಸತ್ತ್ವ ಸಮಗ್ರವಾಗಿಲ್ಲವೆಂಬುದೇ ಅತೃಪ್ತಿಗೆ ಕಾರಣ.

ಕವಿಯೆ ಸಮಂಜಸವಾಗಿ ಹೇಳಿಕೊಂಡಿರುವಂತೆ, ‘ಗಿರಿಜಾಕಲ್ಯಾಣ’ವೊಂದು ‘ಸತ್ಕೃತಿ’ (೧-೨೦, ೨೧). ಅದು ‘ಕಲ್ಪಾಂತರಸ್ಥಾಯಿ’ (೧-೧೬) ಎಂಬ ಪ್ರಶಂಸೆಗೂ ನಾವು ದನಿಗೂಡಿಸಬಹುದು. ನಿಸ್ಸಂದೇಹವಾಗಿ ಅದೊಂದು ‘ಶಿವಕಾವ್ಯ’, ಎಲ್ಲ ಅರ್ಥಗಳಲ್ಲಿ.

[1] ಡಿ.ಎಲ್.ಎನ್., ಅದೇ, ಪು.೨೪೯

[2] ಡಿ.ಎಲ್.ಎನ್., ಪು.೨೪೩

[3] ಎಚ್.ದೇವೀರಪ್ಪ ಮತ್ತು ದೇಜಗೌ, ಪೂರ್ವೋಕ್ತ, ಪು.xxxiii. ‘‘ಕವಿ ಸಮಯ ಮುದ್ರಿತವಾದ ಸಾಂಪ್ರದಾಯಿಕ ವಸ್ತುವಿಚಯ ಹೇರಳವಾಗಿದೆ ಹರಿಹರನಲ್ಲಿ’’ -ಎಂಬ ಎಸ್.ವಿ.ರಂಗಣ್ಣನವರ ಉಕ್ತಿಯನ್ನೂ ನೆನೆಯಬಹುದು. (‘ಶೈಲಿ’ ೨, ಪು.೯೯)

[4] ಎಂ.ಜಿ.ನಂಜುಂಡಾರಾಧ್ಯ, ಪೂರ್ವೋಕ್ತ, ಪು.೫

[5] ಎಸ್.ವಿ.ಪರಮೇಶ್ವರ ಭಟ್ಟ, ‘ಕನ್ನಡ ಕುಮಾರ ಸಂಭವ’, ಪೀಠಿಕೆ, ಪು.viii

[6] ರವೀಂದ್ರನಾಥ ಟಾಗೂರ್ , ‘ಪ್ರಾಚೀನ ಸಾಹಿತ್ಯ’ (ಅನು. ಟಿ.ಎಸ್ . ವೆಂಕಣ್ಣಯ್ಯ), ಪು.೩೦

[7] ಎಸ್ .ವಿ.ರಂಗಣ್ಣ, ಪೂರ್ವೋಕ್ತ, ಪು.೭೭

[8] ಎಂ.ಆರ್. ಶ್ರೀನಿವಾಸ ಮೂರ್ತಿ, ಪೂರ್ವೋಕ್ತ, ಪು.೧೪೮

[9] ಎಸ್.ವಿ. ರಂಗಣ್ಣ, ಪೂರ್ವೋಕ್ತ, ಪು.೯೨

[10] ಶಿ.ಚೆ. ನಂದೀಮಠ, ಪೂರ್ವೋಕ್ತ, ಪು.೪೮

[11] ಎಸ್.ವಿ. ರಂಗಣ್ಣ, ಪೂರ್ವೋಕ್ತ, ಪು.೭೭

[12] ಎಂ.ಆರ್. ಶ್ರೀನಿವಾಸ ಮೂರ್ತಿ, ಪೂರ್ವೋಕ್ತ, ಪು.೧೪೮

[13] ಎಂ.ಆರ್. ಶ್ರೀ., ಅದೇ, ಪು.೧೪೯

[14] ಶಿ.ಚೆ.ನಂದೀಮಠ, ಪೂರ್ವೋಕ್ತ, ಪು.೫೨

[15] ಸುಜನಾ, ಪೂರ್ವೋಕ್ತ, ಪು.೩೧೫

[16] ಎಂ.ಆರ್ .ಶ್ರೀ., ಹರಿಹರನ ಸ್ಥಾನನಿರ್ದೇಶ, ‘ಪ್ರಬುದ್ಧಕರ್ನಾಟಕ’, ೬. ೩, ಪು.೧

[17] ಎಸ್.ವಿ.ರಂಗಣ್ಣ ಪೂರ್ವೋಕ್ತ, ಪು.೮೪

[18] ಎಂ.ಆರ್.ಶ್ರೀ., ಪೂರ್ವೋಕ್ತ, ಪು.೧೧

[19] ಎಂ.ಆರ್.ಶ್ರೀ., ‘ಹರಿಹರನ ಗಿರಿಜಾಕಲ್ಯಾಣಂ’, ಶೈಲಿ, ‘ಸಾಹಿತ್ಯಾಲೋಕನ’, ಪು. ೧೪೮

[20] ವಿ.ಸೀತಾರಾಮಯ್ಯ (ಸಂ), ‘ಹರಿಹರ ದೇವ’, ಮುನ್ನುಡಿ, ಪು.iv

[21] ರಂ.ಶ್ರೀ. ಮುಗಳಿ, ಪೂರ್ವೋಕ್ತ, ಪು.೧೭೩

[22] ಅಲ್ಲೇ

[23] ಎಂ.ಆರ್ .ಶ್ರೀ., ಪೂರ್ವೋಕ್ತ, ಪು.೧೩೭

[24] ರಂ.ಶ್ರೀ. ಮುಗಳಿ, ಪೂರ್ವೋಕ್ತ, ಪು.೧೭೨

[25] ಅದೇ, ಪು. ೧೭೪

[26] ಅದೇ, ಪು.೧೭೪