ಕಥಾಸಾರ : ಹಿಮಾಲಯದ ಉತ್ತರಭಾಗದಲ್ಲಿ ಗಿರಿರಾಜನ ದೇಶವಿತ್ತು. ಅದರ ರಾಜಧಾನಿ ಓಷಧಿಪ್ರಸ್ಥಪುರ. ಪಿತೃಗಳ ಮನದಲ್ಲಿ ಹುಟ್ಟಿದ ಮೇನಾದೇವಿ ಗಿರಿರಾಜನ ಪತ್ನಿ. ಅವರ ಮಗ ಮೈನಾಕ. ಒಮ್ಮೆ, ಶಿವನಿಗೆ ವಧುವಾಗಲು ತಕ್ಕ ಮಗಳನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡಬೇಕೆಂಬ ಬಯಕೆ ಮೇನೆಗುಂಟಾಯಿತು. ಗಿರಿರಾಜ ಅದಕ್ಕೆ ಸಮ್ಮತಿಸಿದ. ಮೇನೆಯ ತಪವನ್ನು ದಾಕ್ಷಾಯಿಣಿ ಮೆಚ್ಚಿದಳು, ಅತ್ತ, ದಕ್ಷನ ಯಜ್ಞವನ್ನು ನೋಡುವುದಕ್ಕೆ ಹೋಗಿ ಅವಮಾನಗೊಂಡು, ಪತಿನಿಂದೆಯನ್ನು ಕೇಳಿದ ದಾಕ್ಷಾಯಿಣಿ ಅದನ್ನು ಸಹಿಸಲಾರದೆ ಯೋಗಾಗ್ನಿಯಲ್ಲಿ ದೇಹವನ್ನು ತ್ಯಜಿಸಿ, ಮೇನಾ ದೇವಿಯ ಹೃತ್ಕಮಲದಲ್ಲಿ ನೆಲಸಿದಳು. ಅದನ್ನರಿತ ಮೇನೆ ಹರ್ಷಿಸಿ, ಮನೆಗೆ ಬಂದು, ತನ್ನ ಇಷ್ಟಾರ್ಥ ಕೈಗೂಡಿದುದನ್ನು ಪತಿಗರುಹಿದಳು.

ಕಾಲಕ್ರಮದಲ್ಲಿ ಮೇನೆಯ ಗರ್ಭದಿಂದ ಗೌರಿ ಜನಿಸಿದಳು. ಅವಳು ಶಿವನಲ್ಲೆ ತನ್ಮಯಳಾಗಿ ಕಣ್ಣು ಬಿಡದಿರಲು, ಶೈವಾಚಾರ್ಯರ ಸಲಹೆಯಂತೆ ಅವಳಿಗೆ ಶಿವಲಿಂಗವನ್ನು ತೋರಿಸಲಾಯಿತು. ಆಗ ಅವಳು ಕಣ್ತೆರೆದಳು. ಅವಳಿಗೆ ‘ಗಿರಿಜೆ’ ಎಂದು ನಾಮಕರಣವಾಯಿತು. ಬಾಲ್ಯದಲ್ಲಿ ಅವಳು ಶಿವನನ್ನೆ ಧ್ಯೇಯವಾಗಿಟ್ಟುಕೊಂಡಿದ್ದಳು. ಗಿರಿಜೆಗೆ ಯೌವನೋದಯವಾದಾಗ, ಅವಳು ದಾಕ್ಷಾಯಿಣಿಯೆಂಬುದನ್ನು ಮರೆತ ತಂದೆ ತಾಯಿಗಳು, ಅವಳಿಗೆ ಯಾರು ವರನಾಗುತ್ತಾನೋ ಎಂದು ಚಿಂತಿಸುತ್ತಿದ್ದರು. ಒಂದು ದಿನ ಅರಮನೆಗೆ ಬಂದ ನಾರದಮಹರ್ಷಿ ಗಿರಿಜೆಗೆರಗಿ, ಅವಳು ಭವಾನಿಯೆಂದೂ ಈಶ್ವರನೇ ಅವಳಿಗೆ ತಕ್ಕ ವರನೆಂದೂ ಹೇಮಕೂಟದಲ್ಲಿ ತಪೋಮಗ್ನನಾಗಿರುವ ಶಿವನೆಡೆಗೆ ಅವಳನ್ನು ಕಳುಹಬೇಕೆಂದೂ ಗಿರಿರಾಜ ಮೇನೆಯರಿಗೆ ಹೇಳಿಹೋದನು. ಹೇಮಕೂಟದಲ್ಲಿ ಉಗ್ರ ತಪೋನಿರತನಾಗಿದ್ದ ಶಿವನಲ್ಲಿಗೆ ಗಿರಿರಾಜ ಮಗಳನ್ನು ಕರೆದೊಯ್ದನು. ತಂದೆಯನ್ನು ಬೀಳ್ಕೊಟ್ಟ ಗಿರಿಜೆ ಭಕ್ತಿಯಿಂದ ಶಿವನನ್ನು ಅನವರತ ಆರಾಧಿಸಿದಳು.

ಅತ್ತ, ಲೋಕಕಂಟಕನಾದ ತಾರಕಾಸುರನ ಕೋಟಲೆಗೆ ಅಂಜಿದ ದೇವತೆಗಳು, ಅವನೊಡನೆ ಸಂಧಿಗಾಗಿ ಬೃಹಸ್ಪತಿಯನ್ನು ಕಳುಹಿಸಿದರು. ಬೃಹಸ್ಪತಿಯ ರಾಯಭಾರ ವಿಫಲವಾಗಿ, ದೇವತೆಗಳಿಗೂ ತಾರಕನಿಗೂ ಯುದ್ಧ ನಡೆಯಿತು. ದೇವತೆಗಳು ಪರಾಭವಗೊಂಡು, ತಾರಕನಿಗೆ ಮರೆಯಾಗಿ ಅಡಗಿಕೊಂಡರು. ಅನಂತರ ಅವರು ಬ್ರಹ್ಮ ಇಂದ್ರರೊಡನೆ, ವಿಷ್ಣುವಿದ್ದೆಡೆಗೆ ಮಂತ್ರಾಲೋಚನೆಗಾಗಿ ಹೋದರು. ಹರನಿಗೆ ಮಗನಾಗಿ ಹುಟ್ಟುವ ಏಳು ದಿನಗಳ ಷಣ್ಮುಖನಿಂದಲ್ಲದೆ ತಾರಕನಿಗೆ ಅಳಿವಿಲ್ಲವೆಂದೂ ಈಶ್ವರನ ತಪಸ್ಸನ್ನು ಕೆಡಿಸಬೇಕೆಂದೂ ವಿಷ್ಣು ಹೇಳಿದನು. ಆ ಕೆಲಸಕ್ಕೆ ಮನ್ಮಥನೇ ಸಮರ್ಥನೆಂದು ದೇವತೆಗಳು ನಿರ್ಧರಿಸಿದರು. ಬೃಹಸ್ಪತಿ ಹೋಗಿ ಕಾಮನನ್ನು ಕರೆತಂದನು; ಅವನು ಮಾಡಬೇಕಾದ ಕಾರ್ಯವನ್ನು ವಿಷ್ಣು ತಿಳಿಸಿದನು. ಮೊದಲು ಹಿಂಜರಿದ ಮನ್ಮಥ ಕಡೆಗೆ ಒಪ್ಪಿಕೊಂಡು, ಶಿವನನ್ನು ಗೆಲ್ಲಲು ಹೇಮಕೂಟದತ್ತ ಸಪರಿವಾರನಾಗಿ ನಡೆದನು.

ಮನ್ಮಥನ ಪ್ರಭಾವದಿಂದ ನಂದಿಯ ಚಿತ್ತ ತುಸು ಕದಡಿತು. ಅವನು ಕೂಡಲೇ ಎಚ್ಚತ್ತು ಮದನನ ಸೈನ್ಯದತ್ತ ಕಣ್ಣು ಹಾಯಿಸಿದೊಡನೆಯೆ ಅದು ನಾಶಗೊಂಡಿತು. ಮದನ ಬೆದರಿದನು. ಅಷ್ಟರಲ್ಲಿ ಗಿರಿಜೆ ಅಲ್ಲಿಗೆ ಬಂದಳು. ಮನ್ಮಥನಿಗೆ ಧೈರ್ಯ ಬಂತು. ತನ್ನನ್ನು ಕಾಯುವಂತೆ ಅವನು ಅವಳನ್ನು ಬೇಡಿದನು. ಅವಳಿಂದ ಅಭಯ ಪಡೆದು, ಅವಳ ಪುಷ್ಪಕದ ನೆರಳಿನಲ್ಲಿ ತಪೋವನವನ್ನು ಹೊಕ್ಕು, ಶಿವನ ಮೇಲೆ ಬಾಣಪ್ರಯೋಗ ಮಾಡಿದನು. ಅದು ವಿಫಲವಾಯಿತು. ಗಿರಿಜೆ ಬಂದು ಶಿವಪೂಜೆಯಲ್ಲಿ ತೊಡಗಿದಾಗ, ಕಾಮ ಮತ್ತೆ ಧೈರ್ಯಗೊಂಡು ಪಂಚಬಾಣಗಳನ್ನು ಒಟ್ಟಿಗೇ ಶಿವನ ಮೇಲೆ ಹೂಡಿದನು. ಆಗ ಶಿವನ ಸಮಾಧಿ ಸಡಿಲಿ, ಅವನು ಕೋಪದಿಂದ ಕಣ್ಣುಬಿಟ್ಟು ಕಾಮನನ್ನು ನೋಡಿದಾಗ, ಅವನ ಹಣೆಗಣ್ಣುರಿ ಮನ್ಮಥನನ್ನು ಬೂದಿಮಾಡಿತು. ಮುಂದೆ ನಿಂತಿದ್ದ ಗಿರಿಜೆಯನ್ನು ನೋಡದೆ ಶಿವ ಹೊರಟುಹೋದನು.

ಪತಿವಿಹೀನೆಯಾದ ರತಿ ಶೋಕಾರ್ತಳಾದಳು. ಅವಳನ್ನು ಗಿರಿಜೆ ಸಂತೈಸಿ, ಅವಳ ಪತಿಯನ್ನು ಮರಳಿ ಬದುಕಿಸಿಕೊಡುವುದಾಗಿ ಅಭಯವಿತ್ತಳು. ತಾನಿರುವಲ್ಲಿಗೇ ಶಿವ ಬರುವಂತೆ ಮಾಡುವುದಾಗಿ ಪ್ರತಿಜ್ಞೆ ಕೈಕೊಂಡು ಹೇಮಕೂಟಾಗ್ರದಲ್ಲಿ ಪಂಚಾಗ್ನಿಯ ನಡುವೆ ಘೋರತಪದಲ್ಲಿ ತೊಡಗಿದಳು. ಅವಳ ಉಗ್ರತಪ ಶಿವನ ಬಗೆಯನ್ನು ಕರಗಿಸಿತು. ಅವನು ಗಿರಿಜೆಯನ್ನು ಪರೀಕ್ಷಿಸಬೇಕೆಂದು ವಟುವೇಷದಿಂದ ಬಂದು, ಏತಕ್ಕಾಗಿ ಅವಳ ತಪವೆಂದು ವಿಚಾರಿಸಿದನು. ಶೂಲಿಯ ಕರುಣೆಗಾಗಿ ತಪಗೈಯುತ್ತಿರುವುದಾಗಿ ಅವಳು ಉತ್ತರಿಸಿದಾಗ, ಆ ಕಪಟವಟು ಶಿವನನ್ನು ನಿಂದಿಸಿದನು. ಅದರಿಂದ ಗಿರಿಜೆ ಕೆರಳಿ, ವಿಭೂತಿಯಿಂದ ಅವನನ್ನು ಹೊಡೆದಳು. ಆಗ ಶಿವ ವಟುವೇಷವನ್ನು ತೊರೆದು ಪ್ರತ್ಯಕ್ಷನಾಗಿ, ಗಿರಿಜೆಯ ಕೈಹಿಡಿದು ಕೈಲಾಸಕ್ಕೆ ತನ್ನೊಡನೆ ಬರುವಂತೆ ಹೇಳಿದನು. ತನ್ನ ತಂದೆಯ ಅನುಮತಿ ಪಡೆದು ತನ್ನನ್ನು ಮದುವೆಯಾಗುವಂತೆ ಅವಳು ಕೋರಿದಳು. ಶಿವ ಒಪ್ಪಿದನು.

ಅಷ್ಟರಲ್ಲಿ ರತಿ ಅಲ್ಲಿಗೆ ಬಂದಳು, ಅವಳಿಗೆ ತಾನು ಅಭಯವಿತ್ತಿರುವುದನ್ನು ಗಿರಿಜೆ ಈಶ್ವರನಿಗೆ ತಿಳಿಸಿದಳು. ಮನ್ಮಥ ಅನಂಗನಾಗಿ ರತಿಗೆ ಸುಖವೀಯುತ್ತಿರಲಿ ಎಂದು ಹರಸಿ, ಶಿವ ಕೈಲಾಸಕ್ಕೆ ತೆರಳಿದನು. ಗಿರಿಜೆ ತೌರುಮನೆಗೆ ಹೋದಳು.

ಒಂದು ದಿನ ಸಪ್ತರ್ಷಿಗಳು ಗಿರಿರಾಜನಲ್ಲಿಗೆ ಹೋಗಿ, ಗಿರಿಜೆಯನ್ನು ಶಿವನಿಗೆ ವಿವಾಹ ಮಾಡಿಕೊಡಬೇಕೆಂದು ಕೇಳಿಕೊಂಡರು. ಗಿರಿರಾಜ ಒಪ್ಪಿದನು. ಮದುವೆಗೆ ಎಲ್ಲ ಸಿದ್ಧತೆಗಳಾದುವು. ಪರಮೇಶ್ವರ ತನ್ನ ಉಗ್ರರೂಪವನ್ನು ತೊರೆದು ಸೌಮ್ಯರೂಪಿಯಾದನು. ಪಾರ್ವತೀಪರಮೇಶ್ವರರ ಮದುವೆ ಸಂಭ್ರಮದಿಂದ ನಡೆಯಿತು. ಮುಂದೆ ಅವರಿಗೆ ಮಗನಾಗಿ ಹುಟ್ಟಿದ ಸ್ಕಂದ ತಾರಕಾಸುರನನ್ನು ಸಂಹರಿಸಿ, ಲೋಕವನ್ನು ಕಾಪಾಡಿದನು.

ಹಿನ್ನೆಲೆ : ಹಲವಾರು ರಗಳೆಗಳ ಕರ್ತೃವಾದ ಹರಿಹರನ ಏಕೈಕ ಚಂಪೂ ಕಾವ್ಯ ‘ಗಿರಿಜಾಕಲ್ಯಾಣ’; ಹತ್ತು ಆಶ್ವಾಸಗಳ ‘ಮಹಾಪ್ರಬಂಧ’. ಹರಿಹರನ ಯಶಸ್ಸಿನ ದೀಪ್ತಿ ವ್ಯಾಪ್ತಿಗಳಿಗೆ ಕಾರಣ ಮುಖ್ಯವಾಗಿ ಅವನ ರಗಳೆಗಳು : ಅವುಗಳಿಂದಲೇ ಅವನಿಗೆ ‘ಕ್ರಾಂತಿಕವಿ’ ಎಂಬ ಅಭಿಧಾನ ಸಂದಿರುವುದು. ಆದರೆ ಅವನ ‘ಗಿರಿಜಾಕಲ್ಯಾಣ’ ಅಲ್ಪ ಕೃತಿಯೇನೂ ಅಲ್ಲ. ‘ರಗಳೆಯ ಕವಿ’ ಎಂಬ ಅಪಪ್ರಥೆಯನ್ನು ನೀಗಿಕೊಳ್ಳುವುದಕ್ಕಾಗಿ ಅವನು ‘ಗಿರಿಜಾಕಲ್ಯಾಣ’ವನ್ನು ಬರೆದನೆಂಬ ಪ್ರವಾದ ನಿಜವಲ್ಲದಿರಬಹುದು; ಆದರೂ ಅವನು ಬರಿಯ ರಗಳೆಯ ಕವಿಯಲ್ಲ ಎಂಬುದು ದೃಢವಾದ ಸಂಗತಿ.

ವಾಸ್ತವವಾಗಿ ‘ಗಿರಿಜಾಕಲ್ಯಾಣ’ ಹರಿಹರನ ಚೊಚ್ಚಲು ಕಾವ್ಯವೆಂಬುದು ಸ್ಪಷ್ಪ.[1] ಕೃತಿಯ ರೂಪ ಸ್ವರೂಪಗಳು, ವಾಚ್ಯವಾದ ಅಥವಾ ಸೂಚ್ಯವಾದ ಕೆಲವು ಆಂತರಿಕ ಸಾಕ್ಷ್ಯಗಳು ಈ ನಿರ್ಣಯಕ್ಕೆ ಉಪಷ್ಟಂಭಕವಾಗುತ್ತವೆ. ಕವಿ ರಾಜಾಶ್ರಯದಲ್ಲಿದ್ದು, ಆಸ್ಥಾನ ಪಂಡಿತರ ಮೆಚ್ಚುಗೆಗಾಗಿ ‘ಗಿರಿಜಾ ಕಲ್ಯಾಣ’ವನ್ನು ರಚಿಸಿದಂತೆ ತೋರುತ್ತದೆ. ಅವನು ರಾಜಾಶ್ರಯದಲ್ಲಿದ್ದಿರಲಿ ಬಿಡಲಿ, ಆಸ್ಥಾನ ಕವಿಯ ಠೀವಿ ಧೋರಣೆಗಳಂತೂ ಈ ಕಾವ್ಯದಲ್ಲಿ ಮಿಡಿಯುತ್ತಿವೆ; ಅಷ್ಟಾಗಿ ‘ಜನತಾಂತರ್ ದೃಷ್ಟಿ’ ವ್ಯಕ್ತವಾಗಿಲ್ಲ. ತನ್ನ ಕಾವ್ಯ ‘‘ರಾಜಸಭೆ ಬ್ರಹ್ಮಸಭೆ ದೇವಸಭೆಗೆಸೆದಿರ್ಕು’’(೧-೧೫) ಎಂದು ಹೆಮ್ಮೆಯಿಂದ ಹೇಳುವುದಲ್ಲದೆ ‘‘ನೀರಸರಱವಂತೇನಿದು ತಾರೆಲೆಯೇ ಬೀದಿವಾಡೆ ನೆರವಿಯ ತುಮುಕೇ’’(೧-೩೦) ಎಂದು ಬೀಗಿ ಕೇಳುತ್ತಾನೆ ಹರಿಹರ. ಅಲ್ಲದೆ, ‘‘ಪೋದರ ಕೃತಿಯೊಳ್ಳಿತನ್ಯ ಕೃತಿ ಪೊಲ್ಲದಿದೆಣ್ಣೆಗೆ ಬೆಣ್ಣೆ ಸಣ್ಣದೆಂಬರ ನುಡಿಬೇಡ’’(೧-೧೯) ಎಂಬಲ್ಲಿ ಕಂಡುಬರುವ ಆತ್ಮಪ್ರತ್ಯಯದ ಅಭಾವವೂ ತಿಳಿಸುತ್ತದೆ, ‘ಗಿರಿಜಾಕಲ್ಯಾಣ’ ಹರಿಹರನ ಪ್ರಥಮ ನಿರ್ಮಿತಿಯೆಂಬುದನ್ನು.

ಆದರೆ ಇಲ್ಲಿ ಒಂದಂಶವನ್ನು ಅಗತ್ಯವಾಗಿ ಲಕ್ಷಿಸಬೇಕು : ಹರಿಹರನ ಕಾವ್ಯಕ್ರಾಂತಿಯ ಕೆಲವು ಮುಂಗುರುಹುಗಳು ‘ಗಿರಿಜಾಕಲ್ಯಾಣ’ದಲ್ಲೇ ಗೋಚರಿಸುತ್ತವೆ. ಕವಿ ಅದನ್ನು ‘ನವ್ಯ’ ಎಂದೆ ಕರೆದುಕೊಂಡಿದ್ದಾನೆ (೧-೧೪, ೧೭). ಚಂಪೂ ಸಂಪ್ರದಾಯದ ಎಲ್ಲ ಗುಣದೋಷಗಳನ್ನು ಮೈಗೂಡಿಸಿಕೊಂಡೂ ‘ಗಿರಿಜಾಕಲ್ಯಾಣ’ ಇತರ ಚಂಪೂಕಾವ್ಯಗಳಿಗಿಂತ ಸ್ವಲ್ಪಮಟ್ಟಿಗೆ ಭಿನ್ನವಾಗಿ, ವಿಶಿಷ್ಟವಾಗಿ ನಿಲ್ಲುತ್ತದೆ. ಅದು ಪೂರ್ತಿ ನವೀನವಲ್ಲದಿದ್ದರೂ ‘‘ನವೀನ ಕಾವ್ಯಾರಂಭಂ’’(೧-೨೬) ಎಂಬುದನ್ನು ಒಂದರ್ಥದಲ್ಲಿ ಒಪ್ಪಬಹುದು. (ಹರಿಹರನ ನವ್ಯತೆಯ ಹಂಬಲ ಸಂಪೂರ್ಣವಾಗಿ ಈಡೇರಿದ್ದು ಅವನ ರಗಳೆಗಳಲ್ಲಿ). ‘‘ವಿಚಾರಿಸ ಬೇಡದಱೆಂ ರಳಕುಳಕ್ಷಳಂಗಳನಿದಱೊಳ್’’ (೧.೩೨) ಎಂಬ ನಿಲುವೆ ಕುಂತಿದ್ಯೋತಕವೆನ್ನ ಬೇಕು. ವೃತ್ತಗಳಿಗಿಂತ ಕಂದಗಳ ಅಧಿಕ ಪ್ರಾಚುರ್ಯ ‘ಗಿರಿಜಾಕಲ್ಯಾಣ’ದ ಒಂದು ವೈಶಿಷ್ಟ್ಯ. ಅದರ ವಸ್ತುಶೈಲಿಗಳೂ ಅದನ್ನು ಅನ್ಯ ಚಂಪೂಗ್ರಂಥಗಳಿಂದ ತಕ್ಕಮಟ್ಟಿಗೆ ಪ್ರತ್ಯೇಕಿಸುವಂತಿವೆ. ಅಂತೂ ‘‘ಕರ್ನಾಟಕ ಕವಿ ಪ್ರಪಂಚದಲ್ಲಿ ಹರಿಹರನು ಅಪೂರ್ವಶಕ್ತಿಯ ಮತ್ತು ಪರಸ್ಪರ ವಿರುದ್ಧ ಗುಣೋಪೇತನಾದ ಕವಿಯಾಗಿರುತ್ತಾನೆ’’ ಎಂದು ವಿಮರ್ಶಕ ರೊಬ್ಬರು ಒಟ್ಟಿನಲ್ಲಿ ಆಡಿರುವ ಮಾತು[2] ನಿರ್ದಿಷ್ಟವಾಗಿ ಅವನ ‘ಗಿರಿಜಾಕಲ್ಯಾಣ’ಕ್ಕೂ ಅನ್ವಯಿಸುತ್ತದೆ.

ಒಟ್ಟಾರೆ ‘ಗಿರಿಜಾಕಲ್ಯಾಣ’ ತನ್ನ ಚೌಕಟ್ಟಿನಲ್ಲಿ ಹಾಗೂ ಬಹಳಷ್ಟು ವಿವರಗಳಲ್ಲಿ ಪೂರ್ವಸಿದ್ಧವಾದ ರಾಜಮಾರ್ಗವನ್ನೆ ಹಿಡಿದಿದೆ, ದಿಟ. ಆದರೆ ಹರಿಹರ ಆ ಮಜಲಿನಲ್ಲೆ ತೃಪ್ತನಾಗಿ ನಿಲ್ಲದೆ ಮುಂದೆ ಹೋಗಿ, ಹೊಸತೊಂದು ಮಾರ್ಗವನ್ನು ತೆರೆದು, ಕನ್ನಡ ಸಾಹಿತ್ಯಕ್ಕೊಂದು ತಿರುವನ್ನು ಕೊಟ್ಟ. ಇದು ಅಭಿನಂದನಾರ್ಹ. ಹಾಗೆ ಪ್ರಸ್ಥಾನ ನಿರ್ಮಾಣ ಮಾಡುವುದಕ್ಕೆ ಮುನ್ನ ಅವನು ‘ಗಿರಿಜಾಕಲ್ಯಾಣ’ದ ಮೂಲಕ ಪರಂಪರೆಯನ್ನು ಗೌರವಿಸಿದುದಕ್ಕಾಗಿಯೂ ಅವನಿಗೆ ಅಭಿನಂದನೆ ಸಲ್ಲಬೇಕು. ಪ್ರಯೋಗಗಳೂ ಕ್ರಾಂತಿಗಳೂ ಪರಂಪರೆಯ ತಳಪಾಯದ ಮೇಲೆಯೆ ಜರುಗಬೇಕು ಅಥವಾ ಜರುಗುತ್ತವೆ, ಪರಂಪರೆಯ ಸಂಬಂಧವನ್ನು ಕಡಿದುಕೊಳ್ಳುವುದೆ ನವ್ಯತೆಯಲ್ಲ ಎಂಬ ಸತ್ಯವನ್ನು ಬೋಧಪ್ರದವಾಗಿ ಸಾರುತ್ತಿದೆ, ಹರಿಹರನ ದ್ವಿದಲ ಕಾವ್ರೋ

ಆಕರ : ‘ಗಿರಿಜಾಕಲ್ಯಾಣ’ದ ವಸ್ತು, ಹೆಸರೇ ಸೂಚಿಸುವಂತೆ, ಶಿವ ಪಾರ್ವತಿಯರ ವಿವಾಹ. ಶಿವನ ಪಂಚವಿಂಶತಿ ಲೀಲೆಗಳಲ್ಲಿ ವೈವಾಹಿಕ ಲೀಲೆಯೂ ಒಂದು; ಅದನ್ನು ಬಣ್ಣಿಸುವುದು ಹರಿಹರನ ಉದ್ದೇಶ. ‘ಗಿರಿಜಾ ಕಲ್ಯಾಣ’ ಎಂಬ ಶೀರ್ಷಿಕೆಯಿಂದ ಕವಿ ಗಿರಿಜೆಗೇ ಪ್ರಾಧಾನ್ಯ ಕೊಟ್ಟಂತೆ ಭಾಸವಾಗುತ್ತದೆ. ಆದರೆ ವಸ್ತುತಃ ಹಾಗೇನಿಲ್ಲ. ಶಿವಪಾರ್ವತಿಯರನ್ನು ಬೇರ್ಪಡಿಸುವುದೆಂತು? ಪಾರ್ವತಿ ಹೇಗೆ ಕಾವ್ಯದ ನಾಯಿಕೆಯೊ ಶಿವ ಹಾಗೆ ನಾಯಕ; ಇಬ್ಬರಿಗೂ ಸಮಾನ ಪ್ರಾಶಸ್ತ್ಯ, ಪೂಜೆ. ‘‘ಕಥಾಸಂಗತಿ ಗಿರಿಜೋದ್ವಾಹ’’(೧-೩೩) ಎಂದು ಹೇಳುವ ಕವಿ, ಅದೇ ಉಸಿರಿನಲ್ಲಿ ‘‘ಕಾವ್ಯನಾಥಂ ಗಿರಿಜಾನಾಥಂ’’(೧-೩೩) ಎಂದೂ ‘‘ಶಿವನ ವಿವಾಹೋನ್ನತಿಯೀ ಕೃತಿ’’(೧-೯) ಎಂದೂ ಹೇಳುತ್ತಾನೆ.

‘ಗಿರಿಜಾಕಲ್ಯಾಣದ’ ಕತೆ ಸಂಸ್ಕೃತ ಸಾಹಿತ್ಯದಲ್ಲಿ ಮೊದಲ ಬಾರಿಗೆ ಕಂಡುಬರುವುದು ಕಾಳಿದಾಸನ ‘ಕುಮಾರಸಂಭವ’ದಲ್ಲಿ ಎನ್ನಲಾಗಿದೆ.[3] ಪದ್ಮಪುರಾಣ, ಲಿಂಗಪುರಾಣ, ಸ್ಕಾಂದಪುರಾಣ, ಸೌರಪುರಾಣ, ಶಿವಪುರಾಣ ಮುಂತಾದ ಪುರಾಣಗಳಲ್ಲೂ ಅದು ಉಕ್ತವಾಗಿದೆ.[4] (ಎಲ್ಲೆಡೆಯೂ ಏಕರೀತಿಯಾಗಿಲ್ಲ). ಆದರೆ ಈ ಪುರಾಣಗಳೆಲ್ಲ ಕಾಳಿದಾಸನಿಗಿಂತ ಈಚಿನವು ಎಂಬ ವಾದವೊಂದಿದೆ. ಕೆಲವು ಪುರಾಣಗಳಾದರೂ ಅವನಿಗಿಂತ ಹಿಂದಿನವಾಗಿರುವುದು ಸಾಧ್ಯ, ಯಾವ ಆಕರವೂ ಇಲ್ಲದೆ ಕಾಳಿದಾಸ ಹರಪಾರ್ವತೀ ಪರಿಣಯದ ಕತೆಯನ್ನು ಕಲ್ಪಿಸಿ ನಿರೂಪಿಸಿರುವುದು ಅಸಂಭಾವ್ಯ ಎಂದು ಹೇಳಬಹುದು. ನಮಗೆ ಪ್ರಕೃತವಾದುದು, ಹರಿಹರನಿಗೆ ಆಕರ ಯಾವುದು ಎಂಬ ಪ್ರಶ್ನೆ. ‘‘ಕವಿ ಕಾವ್ಯವಸ್ತುವನ್ನು ಇಂಥದೇ ಗ್ರಂಥದಿಂದ ತೆಗೆದುಕೊಂಡಿರುವನೆಂದು ಹೇಳಬರುವುದಿಲ್ಲ’’ ಎಂಬುದು ಸಾಮಾನ್ಯಾಭಿಪ್ರಾಯ.[5] ಆದರೆ ‘ಕುಮಾರಸಂಭವ’ವೆ ‘ಗಿರಿಜಾಕಲ್ಯಾಣ’ಕ್ಕೆ ಪ್ರಮುಖವಾದ ಆಕರವೆಂದಿಟ್ಟುಕೊಂಡರೆ ತಪ್ಪಾಗುವುದಿಲ್ಲ, ಅದೊಂದೇ ಆಧಾರವಲ್ಲದಿದ್ದರೂ.[6] ‘ಕುಮಾರಸಂಭವ’ವಿಲ್ಲದಿದ್ದರೆ ‘ಗಿರಿಜಾ ಕಲ್ಯಾಣ’ ಹುಟ್ಟುತ್ತಿತ್ತೆಂಬುದು ಸಂಶಯಾಸ್ಪದ. ಆದರೆ ಅದನ್ನವನು ಸುಮ್ಮನೆ ಅನುವಾದಿಸಿ ವಿರಮಿಸಿಲ್ಲ; ಕತೆ, ಕಲೆ ಎರಡರಲ್ಲೂ ಸಾಕಷ್ಟು ಸ್ವೋಪಜ್ಞತೆಯನ್ನು ಸಾಧಿಸಿದ್ದಾನೆ, ತಾನು ‘ಶಿವಕವಿ’ಯೆಂಬುದನ್ನು ತೋರ್ಪಡಿಸಿದ್ದಾನೆ. ಕತೆಗೆ ಸಂಬಂಧಿಸಿದಂತೆ, ಮೂಲದಲ್ಲಿಲ್ಲದ ಕೆಲವು ಸನ್ನಿವೇಶಗಳನ್ನು ಅವನು ಅಳವಡಿಸಿದ್ದಾನೆ; ಮೂಲದ ಕೆಲವಂಶಗಳನ್ನು ಮಾರ್ಪಡಿಸಿದ್ದಾನೆ. ಹೀಗೆ ಮಾಡುವಲ್ಲಿ, ಪುರಾಣಗಳ ಪ್ರಭಾವವೂ ಅವನ ಮೇಲಾಗಿದೆ. ಒಟ್ಟಿನಲ್ಲಿ ‘ಗಿರಿಜಾಕಲ್ಯಾಣ’ವೊಂದು ಸ್ವತಂತ್ರ ವರ್ಚಸ್ಸನ್ನುಳ್ಳ ಕಾವ್ಯ; ಭಾಗಶಃ ಕೂಡ ಅದು ಭಾಷಾಂತರವಾಗಿಲ್ಲ. ‘ಕುಮಾರ ಸುಭವ’ಕ್ಕೆ ಋಣಿಯಾಗಿಯೂ ಅದು ತನ್ನತನವನ್ನುಳಿಸಿಕೊಂಡಿದೆ.[7]

ಕಥಾವಿನ್ಯಾಸದಲ್ಲಿ ‘ಕುಮಾರಸಂಭವ’ಕ್ಕೂ ‘ಗಿರಿಜಾಕಲ್ಯಾಣ’ಕ್ಕೂ ಇರುವ ಕೆಲವು ಪ್ರಮುಖ ವ್ಯತ್ಯಾಸಗಳನ್ನು ಈಗ ಗುರುತಿಸಬಹುದು. ಹರಿಹರನ ಪ್ರಕಾರ, ಪಾರ್ವತಿ ಮೇನಾದೇವಿಯ ತಪಸ್ಸಿನ ಫಲವಾಗಿ ಹುಟ್ಟಿದವಳು; ‘ಕುಮಾರಸಂಭವ’ದಲ್ಲಿ ಮೇನೆಯ ತಪವಿಲ್ಲ. ಗಿರಿಜೆ ಹುಟ್ಟಿದಾಗ ಶಿವಲಿಂಗ ದರ್ಶನದಿಂದ ಕಣ್ಣು ತೆರೆದಳೆಂದು ಹರಿಹರ ಹೇಳುತ್ತಾನೆ; ಕಾಳಿದಾಸನಲ್ಲಿ ಈ ಸಂಗತಿಯಿಲ್ಲ. ‘ಕುಮಾರಸಂಭವ’ದಲ್ಲಿ ದೇವತೆಗಳು ತಾರಕಾಸುರನ ಪೀಡಗೊಳಗಾದರೆಂದಷ್ಟೆ ಉಕ್ತವಾಗಿದ್ದರೆ, ದೇವಾಸುರ ಯುದ್ಧವನ್ನೂ ದೇವತೆಗಳ ಪರಾಭವವನ್ನೂ ಹರಿಹರ ವರ್ಣಿಸುತ್ತಾನೆ. ಅದಕ್ಕೆ ಮುನ್ನ ಬೃಹಸ್ಪತಿಯ ದೌತ್ಯ ಹರಿಹರನಲ್ಲಿ ಮಾತ್ರ ನಿರೂಪಿತವಾಗಿದೆ. ‘ಕುಮಾರಸಂಭವ’ದಲ್ಲಿ ದೇವತೆಗಳಿಗೆ ಪರಿಹಾರ ಸೂಚಿಸುವವನು ಬ್ರಹ್ಮನಾದರೆ, ‘ಗಿರಿಜಾಕಲ್ಯಾಣ’ದಲ್ಲಿ ವಿಷ್ಣು. ‘ಕುಮಾರಸಂಭವ’ದಲ್ಲಿ ಇಂದ್ರ-ಮನ್ಮಥರ ಸಂಭಾಷಣೆಯಿದ್ದರೆ ‘ಗಿರಿಜಾಕಲ್ಯಾಣ’ದಲ್ಲಿ ವಿಷ್ಣು-ಮನ್ಮಥರ ಸಂವಾದವಿದೆ. ಕಾಳಿದಾಸನ ಪ್ರಕಾರ. ಮನ್ಮಥ ನಂದಿಯ ಕಣ್ತಪ್ಪಿಸಿ ಶಿವನ ತಪೋವನವನ್ನು ಪ್ರವೇಶಿಸುತ್ತಾನೆ; ಹರಿಹರನ ಪ್ರಕಾರ, ನಂದಿಯ ನೋಟದಿಂದ ಕಾಮಸೈನ್ಯ ನಾಶವಾಗಲು ಅವನು ಪಾರ್ವತಿಯಿಂದ ಅಭಯಗೊಂಡು ಅವಳ ಪುಷ್ಪಕದ ನೆರಳಿನಲ್ಲಿ ಆಶ್ರಮವನ್ನು ಹೊಗುತ್ತಾನೆ. ಶಿವ ದಗ್ಧನಾದ ಮನ್ಮಥನ ಬೂದಿಯನ್ನು ಮೈಗೆ ಬಳಿದುಕೊಳ್ಳುವಂತೆ ಮಾಡಿದ್ದಾನೆ ಹರಿಹರ; ಕಾಳಿದಾಸನಲ್ಲಿ ಇದಿಲ್ಲ. ‘ಕುಮಾರಸಂಭವ’ದಲ್ಲಿ ಕಾಮ ದಹನವಾದ ಮೇಲೆ ಮೂರ್ಛೆಗೊಂಡು ಎಚ್ಚತ್ತ ರತಿಯನ್ನು ಆಕಾಶವಾಣಿ ಸಂತೈಸಿದರೆ, ‘ಗಿರಿಜಾಕಲ್ಯಾಣ’ದಲ್ಲಿ ಪಾರ್ವತಿಯೆ ರತಿಗೆ ಅಭಯವಿತ್ತು ಸಾಂತ್ವನ  ಗೊಳಿಸುತ್ತಾಳೆ. ಕಾಳಿದಾಸನ ಪಾರ್ವತಿ ಶಿವನಿಂದೆಯನ್ನು ಸೈರಿಸಲಾರದೆ ಬೇರೆ ಕಡೆಗೆ ಹೊರಟರೆ, ಹರಿಹರನ ಪಾರ್ವತಿ ಕಪಟ ವಿಪ್ರನನ್ನು ವಿಭೂತಿಯಿಂದ ಪ್ರಹರಿಸುತ್ತಾಳೆ. ಮನ್ಮಥ ಅನಂಗನಾಗಿ ಸುಖ ಕೊಡುತ್ತಿರಲೆಂದು ‘ಗಿರಿಜಾಕಲ್ಯಾಣ’ದಲ್ಲಿ ಶಿವ ರತಿಗೆ ನೀಡುವ ವರ ‘ಕುಮಾರಸಂಭವ’ದಲ್ಲಿಲ್ಲ; ಅಲ್ಲಿ, ಮತ್ತೆ ಸಶರೀರನಾದ ಕಾಮ ತನ್ನ ಮೇಲೂ ಬಾಣಪ್ರಯೋಗ ಮಾಡಲು ಶಿವ ಅನುಮತಿ ಕೊಡುತ್ತಾನೆ. ಬೃಹಸ್ಪತಿಯ ದೌತ್ಯ, ಪಾರ್ವತಿ ವಟುವಿನತ್ತ ಭಸಿತವನ್ನೆಸೆಯುವುದು ಮುಂತಾದುವು ಬೇರೆಲ್ಲೂ ದೊರೆಯದ, ಹರಿಹರ ಕಪೋಲಕಲ್ಪಿತವಾದ ಸಂಗತಿಗಳೆನ್ನಲಾಗಿದೆ. ಇಂಥ ಹಲವಾರು ಮಾರ್ಪಡೆ ಸೇರ್ಪಡೆಗಳು ಉಚಿತವಾಗಿದ್ದು ಹರಿಹರನ ಪ್ರತಿಭೆ ಕೌಶಲಗಳಿಗೆ ಕನ್ನಡಿ ಹಿಡಿಯುತ್ತವೆ; ಆದರೆ ಕೆಲವು ಉಚಿತವಾಗಿಲ್ಲ ಎಂಬುದನ್ನೂ ಜ್ಞಾಪಕದಲ್ಲಿಡಬೇಕು, ಒಟ್ಟಿನಮೇಲೆ ಪಾರ್ವತೀ ಪರಿಣಯದ ಕಥೆ ಹರಿಹರನ ಕೈಯಲ್ಲಿ ಒಂದು ಹೊಸ ಪಾಕವನ್ನು ಪಡೆದುಕೊಂಡಿದೆ ಎನ್ನಬಹುದು.

‘ಕುಮಾರಸಂಭವ’ದ ಕತೆ ಹಿಮವತ್ ಪ್ರಾಂತದಲ್ಲಿ ನಡೆದರೆ, ‘ಗಿರಿಜಾ ಕಲ್ಯಾಣ’ದಲ್ಲಿ ಅದು ಪಂಪಾಕ್ಷೇತ್ರಕ್ಕೆ ವರ್ಗಾವಣೆಗೊಂಡಿರುವುದು ಹರಿಹರನ ಉಜ್ವಲವಾದ ನಾಡಕ್ಕರೆಗೆ ನಿದರ್ಶನ; ಅವನ ಸ್ವಾತಂತ್ರ್ಯ ಪ್ರೀತಿಗೂ ಸಾಕ್ಷಿ.

ಹರಿಹರನಲ್ಲಿ ಕತೆ ಶಿವಪಾರ್ವತಿಯರ ಮದುವೆಗೇ ಮುಕ್ತಾಯಗೊಂಡರೆ ಕಾಳಿದಾಸನಲ್ಲಿ ಕುಮಾರನ ಜನನ ಮತ್ತು ತಾರಕಾಸುರವಧೆಯವರೆಗೂ ಅದು ಮುಂದುವರಿದಿದೆಯೆಂದೂ ಹರಿಹರನ ಗುರಿ ಗಿರಿಜಾ ಕಲ್ಯಾಣವಾಗಿದ್ದರೆ ಕಾಳಿದಾಸನ ಗಮ್ಯ ಕುಮಾರಸಂಭವವೆಂದೂ ಆದ್ದರಿಂದ ಇಬ್ಬರು ಕವಿಗಳ ದೃಷ್ಟಿಯಲ್ಲಿ ಮೂಲತಃ ಭೇದವಿದೆಯೆಂದೂ ಸಾಮಾನ್ಯವಾಗಿ ತಿಳಿಯಲಾಗುತ್ತದೆ. ಇಂತಹ ತಿಳಿವಳಿಕೆ ಸಾಧುವಲ್ಲ ಎನ್ನಬೇಕು. ವಾಸ್ತವವಾಗಿ ಕಾಳಿದಾಸ, ಹರಿಹರರಿಬ್ಬರ ದರ್ಶನವೂ ಮೂಲಭೂತವಾಗಿ ಒಂದೇ ಆಗಿದೆ; ‘ಗಿರಿಜಾ ಕಲ್ಯಾಣ’ ಮತ್ತು ಕುಮಾರಸಂಭವ’ ಸಮಾನಾರ್ಥಕವೆಂದು ಭಾವಿಸಬೇಕು. ‘ಗಿರಿಜಾಕಲ್ಯಾಣ’ ಎನ್ನುವಲ್ಲಿಯೆ ಲೋಕಕಲ್ಯಾಣವೂ ಧ್ವನಿತವಾಗುತ್ತದೆ. ಅದು ಸಾಧಿತವಾಗಬೇಕಾದರೆ ಕುಮಾರಜನನವಾಗಲೇಬೇಕಷ್ಟೆ. ಅಲ್ಲದೆ, ಹರಿಹರ ಕಾವ್ಯಾಂತ್ಯದಲ್ಲಿ ‘‘…ತತ್ಸುಖದಿಂದಮಿರ್ದುದಯಿಸಿರ್ದಾ ಸ್ಕಂದನಿಂ ತಾರಕಾ ಸುರನಂ ತೀರ್ಚಿ ಸಮಸ್ತ ಲೋಕಜನತಾ ಸಂತುಷ್ಟಿಯಂ ಮಾಡಿ ಶಂಕರನೊಪ್ಪಿರ್ದನ್ ’’(೧೦-೧೧೧) ಎಂದು ಹೇಳಿ, ತನ್ಮೂಲಕ ಕುಮಾರಸಂಭವ, ತಾರಕ ಸಂಹಾರಗಳನ್ನು ಸ್ಪಷ್ಟವಾಗಿ ಸೂಚಿಸಿರುವುದನ್ನು ಯಾರೂ ಗಮನಿಸಿದಂತಿಲ್ಲ. ಆದ್ದರಿಂದಲೆ, ‘‘ಅವರ ಕಲ್ಯಾಣದ ತರುವಾಯ ಕವಿ ಉಳಿದ ಕಥೆಯನ್ನು ಕೈಬಿಟ್ಟ. ಕುಮಾರ ಜನನ, ತಾರಕವಧೆಗಳು ತಾನಾಗಿಯೇ ಆಗುವುವೆಂಬ ಭರವಸೆ ಅವನದು’’[8] ಎಂಬಂತಹ ಮಾತುಗಳಿಗೆ ಅವಕಾಶವಾಗಿದೆ. ಹರಿಹರ ಏನನ್ನೂ ಕೈಬಿಟ್ಟಿಲ್ಲ; ಶಿವನ ವೈವಾಹಿಕ ಲೀಲೆಯಷ್ಟನ್ನೆ ವಿಸ್ತೃತವಾಗಿ ಹೇಳಿ, ಉಳಿದುದನ್ನು ಧ್ವನಿಸಿದ್ದಾನೆ, ಅಷ್ಟೆ. ಇದರಿಂದ ಕಾವ್ಯದಲ್ಲಿ ಐಕ್ಯ ಸಿದ್ದಿಸಿದೆ.[9]

ಪಾತ್ರಚಿತ್ರಣ : ‘ಗಿರಿಜಾಕಲ್ಯಾಣ’ದಲ್ಲಿರುವುದು ‘‘ಶಿವಲೀಲೆಯ, ದೇವಾಸುರ ಸಂಘರ್ಷದ ದೈವೀಕಥೆ. ಒಂದರ್ಥದಲ್ಲಿ ಇದು ಸಾಂಕೇತಿಕಾರ್ಥವುಳ್ಳ ರೂಪಿಕಕವೂ ಹೌದು. ಮಾನವ ಪಾತ್ರಗಳ ನಿರೀಕ್ಷೆ ಇಲ್ಲಿರಬೇಕಾಗಿಲ್ಲ. ಆದರೆ ಗಿರಿಜೆ ಮಾನವ ಅಂಶಗಳಿಂದ ಕೂಡಿದ ದೈವೀ ಪಾತ್ರವಾಗಿದ್ದಾಳೆ.’’[10] ಒಂದು ರೀತಿಯಲ್ಲಿ ಪಾರ್ವತೀ ಪಾತ್ರವೆ ಕಾವ್ಯದ ತಳ ಹಾಗೂ ಕಳಸ. ಅದರ ಮೇಲೆ ಹರಿಹರ ತನ್ನ ಪ್ರತಿಭೆ ಕಲ್ಪನೆ ಭಕ್ತಿಗಳನ್ನೆಲ್ಲ ವರ್ಷಿಸಿದ್ದಾನೆ. ಗಿರಿಜೆಯ ಶಿವನಿಷ್ಠೆಯನ್ನು ಚಿತ್ರಿಸುವಲ್ಲಿ ಕವಿ ತನ್ನನ್ನೆ ತಾನು ಚಿತ್ರಿಸಿಕೊಂಡಿದ್ದಾನೆ ಎನಿಸುತ್ತದೆ. ಅವಳ ಶಿವಾರಾಧನೆಯನ್ನು ಕುರಿತ ಈ ವಿಮರ್ಶೋಕ್ತಿಯನ್ನು ಲಕ್ಷಿಸಬಹುದು: ‘‘…ಇಲ್ಲೆಲ್ಲ ಭಕ್ತನು ಭಗವಂತನನ್ನು ಭಜಿಸುವಲ್ಲಿ ಎಂತಹ ಭಾವಗಳೆಲ್ಲ ಅವನ ಮನಸ್ಸಿನಲ್ಲಿ ಮೂಡುತ್ತವೆ ಎಂಬುದನ್ನು ಕಾಣಿಸಲಾಗಿದೆ. ಆದುದರಿಂದಲೇ ‘ಲಿಂಗಪತಿ ಶರಣಸತಿ’ ಎಂಬ ಮಾತು ಉದಾಹೃತವಾಗಿದೆ ಎನ್ನುವುದು.’’[11]

ಹರಿಹರನ ಗಿರಿಜೆ ಕಾಳಿದಾಸನ ಗಿರಿಜೆಯ ನಕಲಲ್ಲ. ‘ಕುಮಾರಸಂಭವ’ದ ಗಿರಿಜೆಯಲ್ಲಿರುವುದಕ್ಕಿಂತ ಹೆಚ್ಚಿನ ಸ್ವಾಭಿಮಾನ, ಚಲ, ದಿಟ್ಟತನಗಳು ಹರಿಹರನ ಗಿರಿಜೆಯಲ್ಲಿ ಎದ್ದುಕಾಣುತ್ತವೆ, ಹರಿಹರ ಆರಂಭದಲ್ಲೆ ಗಿರಿಜೆಗೆ ಹಲವು ವಿಶೇಷಣಗಳ ಮಾಲಿಕೆಯನ್ನೆ ತೊಡಿಸುತ್ತಾನೆ : ‘‘ಮಂಗಳಮೂರ್ತಿ ಮಾನಿನಿ ಮಹೋಜ್ವಲೆ ಮಾನ್ಯೆ…ಮಹಾ ವಿರಾಜಿತೆ ಮಹಾ ಶಿವಭಕ್ತೆ ಮಹಾಪತಿವ್ರತೋತ್ತುಂಗೆ’’ ಇತ್ಯಾದಿ. (ಮುಂದೆಯೂ ಇಂತಹ ವಿಶೇಷಣಗಳು ವಿಪುಲವಾಗಿ ಬರುತ್ತವೆ.) ಈ ಸೂತ್ರಗಳಿಗೆ ಭಾಷ್ಯವಾಗಿದೆ ಸಮಗ್ರ ಕಾವ್ಯ. ಗಿರಿಜೆಯ ವ್ಯಕ್ತಿತ್ವದ ಅಸಾಧಾರಣತೆ ಅವಳ ಹುಟ್ಟಿನಲ್ಲೆ ಇದೆ : ಮೇನಾದೇವಿಯ ಯೋಗಧ್ಯಾನದಿಂದ, ಶಿವನ ಕೈ ಹಿಡಿಯಲೆಂದು ಉದ್ದಿಷ್ಟಳಾಗಿಯೆ ಜನಿಸಿದವಳು ಆಕೆ. (ಎಂತಲೇ ಕವಿ ಮೊದಲಿನಿಂದಲೂ ಅವಳನ್ನು ಶಿವಸತಿಯೆಂದೇ ಕರೆಯುತ್ತಾನೆ). ಅವಳು ಹುಟ್ಟಿದಾಗ ‘‘ಕಳೆಯೇಱದನಿಂದು ಜೊನ್ನಮಲರ್ದುದು ಕಾಮಂ ತಳೆದಂ ನಿಜಭುಜಬಲಮಂ ಪುಳಕಿತಮಾಯ್ತಿಂದುಧರನ ವಾಮಾಂಗಂ.’’ ಆ ‘‘ಶಿವೋತ್ಸವೆ ಶಿವಪುಣ್ಯಾಂಭೋನಿಧಿ’’ ಶಿವನನ್ನು ನಚ್ಚಿ ಮುಚ್ಚಿ ಕಣ್ಮುಚ್ಚಿದ್ದಳು. ಅವಳಿಗೆ ‘‘ಪುಣ್ಯಕ್ಕೆ ಮುಕ್ತಿಯಂ ತೋರ್ಪತೆ’’ ಶಿವಲಿಂಗವನ್ನು ತೋರಿದಾಗ ಅವಳು ಕಣ್ಣುಬಿಟ್ಟಳೆಂಬುದು ಅರ್ಥವತ್ತಾಗಿದೆ. ಮುಂದೆ ಅವಳು ‘‘ಅಭವನೊಳಗೆ ಬೇರೂಱಿದಳಂಕುರಿಸಿ ಪಲ್ಲವಿಸಿ ಫಲವಾದಳ್’’. ಅವಳು ಅಭವನ ತೊಡೆಯ ಮೇಲೆ ಕುಳ್ಳಿರುವುದನ್ನು ಅನುಕರಿಸುವಂತೆ ಕುಳಿತುಕೊಳ್ಳುವುದನ್ನು ಕಲಿತಳು. ಭುಜಲತೆ ಶಿವಾಲಿಂಗನವನ್ನು ಸೂಚಿಸುವಂತೆ ತೋಳಾಡಿಸಿದಳು, ಮೊಲೆಯುಣ್ಣು ವುದನ್ನು ಮರೆತು ಶಿವನಾಟದಲ್ಲಿ ತೊಡಗಿದಳು. ಆ ‘‘ಹೊಂಗಡಗದ ಲಿಂಗವಂತೆ ಭಕ್ತಿಯ ಭಾವ ಶಿವಜ್ಞಾನದ ಸೀಮೆ ವೈರಾಗ್ಯದ ಮೇರೆ ಪರಮೈಶ್ವರ್ಯದ ಪುಣ್ಯ’’ ಎಲ್ಲೆಲ್ಲಿಯೂ ಶಿವಪೂಜಾನಿರತೆ:

ಎಲ್ಲಿ ಸರೋಜಮೆಲ್ಲಿ ವಿಮಳೋತ್ಪಳಮೆಲ್ಲಿ ಲತಾವಿತಾನದೊ
ಳ್ಪೆಲ್ಲಿ ವನಂಗಳೆಲ್ಲಿ ಕೃತಕಾಚಳಮೆಲ್ಲಿ ವಿಶಾಲಮಪ್ಪ
ಣ್ಪೆಲ್ಲಿ ತಟಾಕಮೆಲ್ಲಿ ಪುಳಿನಸ್ಥಳಮೆಲ್ಲಿ ನದೀನದಾಳಿ ತಾ
ನೆಲ್ಲಿ ಭವಾನಿ ಭಕ್ತಿ ಮಿಗೆ ಭಾವಿಸಿ ಭರ್ಗನನೊಲ್ದು ಪೂಜಿಪಳ್ (೯೨)

ಹೀಗೆ ಅವಳ ಬಾಲಲೀಲೆಯೆಲ್ಲ ಶಿವಲೀಲೆ. ಮುಂದೆ, ಹೇಮಕೂಟದಲ್ಲಿ ತಪೋಮಗ್ನ ನಾಗಿದ್ದ ವಿರೂಪಾಕ್ಷನ ಸೇವೆಯಲ್ಲಿ ‘‘ಸಾತ್ತ್ವಿಕ ಭಾವೋನತ್ತೆ’’ಯಾಗಿ ತೊಡಗುತ್ತಾಳೆ ಗಿರಿಜೆ. ಕುಸುಮಬಾಣಗಳಂತೆ ಪುಷ್ಪಾಂಜಲಿಯನ್ನು ಅಭವಾಂಘ್ರಿಗೆ ಎರಚುತ್ತಾಳೆ. ಶಿವನ ಸುಂದರ ಶರೀರವನ್ನು ನೋಡಿ ಅವಳಿಗೆ ನಲಿವು; ಅಂತೆಯೆ ಅವನ ಉಗ್ರವೈರಾಗ್ಯವನ್ನು ಕಂಡು ಹೆದರಿಕೆ. ನಾನಾ ಭಾವಾಂದೋಲನಕ್ಕೆ ಪಕ್ಕಾಗುತ್ತದೆ ಅವಳ ಮನಸ್ಸು. ಮನ್ಮಥನಿಗೆ ಅವಳು ಅಭಯಪ್ರದಾನ ಮಾಡುತ್ತಾಳೆ. ಕಾಮದಹನದ ಬಳಿಕ ತನ್ನನ್ನು ನೋಡದೆ ನುಡಿಸದೆ ರಜತಗಿರಿಗೆ ಹೋದ ಶಿವ ‘ನಿಕೃಷ್ಟಾತ್ಮನಾದಂ’ ಎಂದುಕೊಂಡ ಗಿರಿಜೆ ನಿರ್ಧರಿಸುತ್ತಾಳೆ:

ತಾನಿರ್ದಲ್ಲಿಗೆ ನಡೆತಂ
ದಾನರ್ಚಿಸೆ ಕಾಮವೈರಿ ನುಡಿಯಿಸದಂತ
ರ್ಧಾನಕ್ಕೆ ಸಂದನದಱಿಂ
ದಾನಿರ್ದಲ್ಲಿಗೆ ಸಮಂತು ತನ್ನನೆ ತರ್ಪೆ (೮೫)

ಈ ನಿಲುವಿನಲ್ಲಿ ಅವಳು ‘‘ಚಲದ ಲಲನೆ ಬಲ್ಪಿನ ಭಾವಕಿ.’’ ಮುಂದೆ ಅವಳು ಬಿಸಿಲು, ಮಳೆ ಚಳಿಗಳನ್ನು ಲೆಕ್ಕಿಸದೆ ಘೋರ ತಪವನ್ನೆಸಗುತ್ತಾಳೆ. ಈ ಅವಸ್ಥೆಯಲ್ಲಿ ಅವಳು ‘‘ಜಡೆಗಳ ಬೆಡಂಗಿ ಭಸಿತದ ಭಾಳಲೋಚನೆ ರುದ್ರಾಕ್ಷಿಯ ಭದ್ರಾಂಗಿ ನಾರ    ಸೀಱೆಯ ಧೀರೆ ಗಿರಿಶಿಖರದ ಗರುವೆ ಉಗ್ರತಪದ ವ್ಯಗ್ರೆ.’’ ಅವಳ ಮನವನ್ನು ಒರೆದು ನೋಡುವುದಕ್ಕಾಗಿ ಶಿವ ವಿಪ್ರವೇಷದಿಂದ ಬಂದಾಗ ‘‘ಅಗಜೆಗಾದುದತಿಹರ್ಷಮುಖಂ’’. ‘‘ಈ ಲಲನೆಯದಾರ್ ತಪವಗಣ್ಯವಾವನ ಪುಣ್ಯಂ’’ ಎಂಬ ಅವನ ಪ್ರಶ್ನೆಗೆ ‘‘ಭವಾನಿ ಮಾನಿ’’ ಉತ್ತರಿಸುತ್ತಾಳೆ : ‘‘ಧೂರ್ತ ವಿಪ್ರನೆ ಕೇಳ್ ಶಂಭುಗೆ ಕಾರುಣ್ಯಾಬ್ಧಿಗೆ ಶೂಲಿಗೆ ಕರುಣಂ ಪುಟ್ಟುವಂತೆ ತಪದಿಂದಿರ್ಪೆಂ.’’ ವಿಪ್ರ ಶಿವನನ್ನು ಹಳಿದಾಗ ಅವಳಿಗೆ ‘‘ಶಂಭುವಂ ನಿಂದಿಪುದಂ ಕೇಳ್ವೊಂದು ಪಾಪಮಿಂದೆನಗಾಯ್ತೇ’’ ಎಂದು ವ್ಯಥೆಯಾಗುತ್ತದೆ; ಕೋಪವೂ ಬಂದು ಭಸಿತದಿಂದ ಆ ವಿಪ್ರನನ್ನು ಹೊಡೆಯುತ್ತಾಳೆ. ಆಗ ಶಿವನ ಹುಸಿವೇಷದ ತೆರೆ ಸರಿಯುತ್ತದೆ. ಆಗ ಗಿರಿಜೆ,

ಅವಳೋಕನದಿಂ ಸೆಳೆದಳ್
ಶಿವನಂ ಮನದಿಂದ ತೆಗೆದಳಪ್ಪಿದಳತ್ಯು
ತ್ಪವದಿಂ ಚಿತ್ತದೊಳೆಳಸುತೆ
ತವಕಂ ಮಿಗೆ ಚುಂಬಿಸಿದಳಹಂಕಾರದೊಳಂ (೧೦)

ತನ್ನೊಡನೆ ಕೈಲಾಸಕ್ಕೆ ಬರುವಂತೆ ಶಿವ ಕರೆದಾಗ ಅವಳು ಬೇಡುತ್ತಾಳೆ : ‘‘ದೇವ ಗಿರೀಶ್ವರನಲ್ಲಿಯೆನ್ನನಾದರದೊಳಗೆ ಬೇಡಿಯೂರ್ಜಿತ ವಿವಾಹಮದಚ್ಚರಿಯಪ್ಪ ಮಾಳ್ಕೆಯಿಂ ಕರುಣಿಪುದು.’’ ಶಿವ ಅಂತೆಯೆ ನಡೆದುಕೊಳ್ಳುತ್ತಾನೆ; ಇಬ್ಬರಿಗೂ ಮದುವೆಯಾಗುತ್ತದೆ.

ಅಂತೂ ಕಥಾನಾಯಿಕೆ ಗಿರಿಜೆ. ‘‘ಇದು ಗಿರಿಜೆಯ ಬಾಳ ಕಥೆ. ಉಳಿದ ಪಾತ್ರಗಳೆಲ್ಲ ಆಕೆಯ ಪಾತ್ರಪೋಷಣೆಗೆ ಸಹಾಯಕ’’.[12] ಹೀಗೆ ಹೇಳುವಾಗ ಶಿವನ ಪಾತ್ರ ಕೇವಲ ಸಹಾಯಕವಲ್ಲ ಎಂಬುದನ್ನು ಮರೆಯಬಾರದು. ಗಿರಿಜೆ ಉತ್ಸವಮೂರ್ತಿಯಾದರೆ ಶಿವ ಮೂಲಮೂರ್ತಿ. ‘‘ಶಿವನು ಪಾರ್ವತಿಯಷ್ಟು ಪ್ರಧಾನವಾಗಿ ಕಂಡುಬರುವುದಿಲ್ಲ. ಆದರೂ ಅವನ ಈ ಲೀಲೆಯನ್ನು ಅವಳ ನೆಪದಿಂದ ವರ್ಣಿಸಬೇಕೆಂಬ ಇಚ್ಛೆ ಹರಿಹರನಿಗಿದೆ. ಅದನ್ನು ಅವನು ನೆರವೇರಿಸಿಯೂ ಇದ್ದಾನೆ.’’[13]

ಶಿವ ‘‘ಸ್ವತಂತ್ರಪ್ರಭು’’ ಆದರೆ ಸಾತ್ತ್ವಿಕ ಪ್ರೇಮಕ್ಕೆ, ಭಕ್ತಿಗೆ ಅವನು ವಶನಾಗುತ್ತಾನೆ; ಗಿರಿಜೆಯ ತಪಕ್ಕೆ ಮೆಚ್ಚಿ ಅವಳ ಪಾಣಿಗ್ರಹಣ ಮಾಡುತ್ತಾನೆ. ಎಂತಲೇ ಅವನು ‘‘ಅಗಜೆಯ ಗಂಡ’’; ಸ್ವತಂತ್ರನಾಗಿಯೂ ಪರತಂತ್ರ.

ಹೇಮಕೂಟದಲ್ಲಿ ತಪಗೈಯುತ್ತಿರುವ ‘‘ಪರಂಜ್ಯೋತಿಃ ಸ್ವರೂಪನಪ್ಪ’’ ಹರನೆಡೆಗೆ ಮಗಳನ್ನು ಕರೆತಂದ ಗಿರಿರಾಜ ಅವಳಿಗೆ ಹೇಳುವ ಮಾತುಗಳಲ್ಲಿ ಶಿವನ ಹಿರಿಮೆಯ ಚಿತ್ರವಿದೆ:

ಅನುಪಮನಿರ್ದನಿರ್ದನೆ ಶರಣ್ಬುಗು ಶಾಶ್ವತಮೂರ್ತಿಯಿರ್ದನಿ
ರ್ದನೆ ನಡೆ ನೋಡು ಚಂದ್ರಧರನಿರ್ದನೆ ನಂಬು ನಿಜೇಶನಿ
ರ್ದನೆ ಪರಿಭಾವಿಸಪ್ರತಿಮನಿರ್ದನೆ ಕೀರ್ತಿಸು ಶಂಭುವಿರ್ದನಿ
ರ್ದನೆ ಪಡೆದರ್ಚಿಸರ್ಚಿಸೊಲವಿಂದಮೆ ಪಾರ್ವತಿ ಹಂಪೆಯಾಳ್ದನಂ (೪೦)

ಪಾರ್ವತಿಯ ಸೇವೆಯನ್ನು ಸ್ವೀಕರಿಸುತ್ತಾನೆ ಶಿವ. ಆದರೆ ಅವಳನ್ನು ಮುಂದೆ ಮಾಡಿಕೊಂಡು ಮದನ ತನ್ನ ಮೇಲೆ ಶರಪ್ರಯೋಗ ಮಾಡಿದಾಗ ಅವನನ್ನು ಸುಟ್ಟುರುಹುತ್ತಾನೆ. ಅನಂತರ ಪಾರ್ವತಿಯನ್ನು ‘‘ಈಕ್ಷಿಸದೆ ನುಡಿಯಿಸದೆ ಸೋಂಕದೆ ನಿಶ್ಚಿಂತಂ’’ ಅಂತರ್ಧಾನನಾಗುತ್ತಾನೆ. ಗಿರಿಜೆ ‘‘ಚಲದಿಂದೆ ತಂದಪೆಂ’’ ಎಂದು ಕಡುತಪವನ್ನೆಸಗಿದಾಗ ವಟುವೇಷದಲ್ಲಿ ಅವಳೆಡೆಗೆ ಬರುತ್ತಾನೆ: ‘‘ಸೂರ್ಯಂ ಸರಸೀಜದಲ್ಲಿಗೆ ವರಪ್ರಾಣಾನಿಳಂ ದೇಹದಲ್ಲಿಗೆ ಮರಾಳಂ ಪೂರ್ಣಕಾಸಾರದಲ್ಲಿಗೆ ಬರ್ಪತೆ.’’ ಆಗ, ಅದು ವಸಂತವಲ್ಲದಿದ್ದರೂ ಮಾವು ಅಂಕುರಿಸುತ್ತದೆ, ಅಶೋಕೆ ಪಲ್ಲವಿಸುತ್ತದೆ, ದಕ್ಷಿಣಾನಿಲ ತೀಡುತ್ತದೆ : ‘‘ಪುಣ್ಯ ತಪಃ ಪ್ರಭಾವಕಾರಣಮಲ್ತೇ?’’ ಗಿರಿಜೆಯ ಮಧುರದೃಷ್ಟಿ ಶಿವನಿಗೆ ತಾಗಿದಾಗ, ಅವನು ಆತುರ, ಪುಳಕವನ್ನು ಹೇಗೊ ಸಂಯಮಿಸಿಕೊಂಡು, ಶಿವನಿಂದೆ ಮಾಡುತ್ತಾನೆ. ಅದನ್ನು ಕೇಳಲಾರದ ಗಿರಿಜೆ ವಿಭೂತಿಯಿಂದ ಹೊಡೆದಾಗ ಅವನ ವಟುವೇಷ ಹಾರಿಹೋಗುತ್ತದೆ. ‘‘ಪುಸಿ ದಿಟಕ್ಕೆ ನಿಲ್ವುದೆ ಜಗದೊಳ್?’’ ಎಂಬ ಕವಿಯ ಪ್ರಶ್ನೆ ಈ ಸಂದರ್ಭದಲ್ಲಿ ಬಹಳ ಅರ್ಥಪೂರ್ಣವಾದುದು. ಶಿವ ಸತ್ಯಸ್ವರೂಪಿ; ಅವನಲ್ಲಿಯೆ ಮಿಥ್ಯೆ ನೆಲೆಗೊಳ್ಳುವುದೆಂತು? ಮುಂದೆ, ಗಿರಿಜೆಯ ಪ್ರಾರ್ಥನೆಯಂತೆ ಅವನು ಹಿಮವಂತನನ್ನು ಸಪ್ತರ್ಷಿಗಳ ಮೂಲಕ ಬೇಡಿ ಅವಳನ್ನು ಅರ್ಧಾಗಿಯಾಗಿ ಪಡೆಯುತ್ತಾನೆ.

ಮೇನಾದೇವಿಗೆ ಕವಿ ಒಟ್ಟಿರುವ ವಿಶೇಷಣ ಸಮೂಹವಿದು : ‘‘ಪೂಜ್ಯೆ ಪರಾಪರೈಕ ವಿಖ್ಯಾತೆ ಪತಿವ್ರತಾಗುಣವಿಭೂಷಣೆ ಸಲ್ಲಲಿತಾಂಗಿ ಸತ್ಯೆ ಶೈವಾತುರೆ ಶಾಂತೆ ಶಾಶ್ವತೆ ಶುಭಾಚರಣಾನ್ವಿತೆ ಮಾನ್ಯೆ ಸದ್ಗುಣವ್ರಾತೆ ವಿಳಾಸವಿಭ್ರಮಕಳಾನಿಧಿ.’’ ಅವಳು ‘‘ಅಭವಂಗೆ ವಧುವೆನಿಪ್ಪಳನಾನವ್ಯಗ್ರದೆ ಪಡೆವೆಂ’’ ಎಂದು ಸಂಕಲ್ಪಿಸಿ, ಮಹಾದೇವಿಯ ನಿರ್ಮಲ ರೂಪವನ್ನು ಹೃದಯಕಮಲದಲ್ಲಿ ತಳೆಯುತ್ತಾಳೆ. ಅನಂತರ ದಾಕ್ಷಾಯಿಣಿ ‘‘ವಿಮಳ ಯೋಗದಿಂ’’ ನಡೆತಂದು ಅವಳ ಬಸಿರಿನಲ್ಲಿ ನೆಲಸುತ್ತಾಳೆ. ಮುಂದೆ ಗಿರಿಜೆ ಹುಟ್ಟಿ ಮೇನೆಯ ಸರ್ವಸ್ವವಾಗುತ್ತಾಳೆ. ಹೇಮಕೂಟಕ್ಕೆ ಹೊರಟು ನಿಂತ ಮಗಳಿಗೆ ಅವಳು ‘‘ಪುಲಿ ಕರಡಿ ಮಹಾಸರ್ಪ… ಬಿದಿರ್ ಬೆತ್ತವುಂಟಲ್ಲಿ ತಾಯೇ ಪದುಳಂ ಪೋಗವ್ವ’’ ಎಂದು ಬುದ್ದಿ ಹೇಳುತ್ತಾಳೆ. ಗಿರಿಜೆ ತಪಸ್ಸಿನಿಂದ ಮರಳಿದಾಗ, ‘‘ತಾಯೆ ತಪೋನಿರೋಧದೊಳೆ ಮೆಯ್ ಬಡವಾದುದು… ಕಚಂ ಜಡೆಗಟ್ಟಿತಿಂತಿದನ್ಯಾಯಮಿದೇಕೆ ಪೋದೆ ಸುತೆ ಎಂತಳವಟ್ಟುದರಣ್ಯ ವಿಭ್ರಮಂ’’ ಎಂದು ಕೊರಗುತ್ತದೆ, ಮೇನೆಯ ಮಾತೃವಾತ್ಸಲ್ಯ. ತಾಯ್ತನದ ಪ್ರತೀಕವನ್ನಾಗಿ, ಮಾನವೀಯ ಪಾತ್ರವನ್ನಾಗಿ ಮೇನೆಯನ್ನು ಚಿತ್ರಿಸಿದ್ದಾನೆ ಹರಿಹರ.

ಹಿಮವಂತ ವಾತ್ಸಲ್ಯಪೂರ್ಣ ಪಿತನಾಗಿ ಚಿತ್ರಿತನಾಗಿದ್ದಾನೆ. (ತಮ್ಮ ಮಗಳು ಹರನಿಗಾಗಿ ಹುಟ್ಟಿದವಳೆಂಬುದನ್ನು ಆ ದಂಪತಿಗಳು ಮರೆತೇಬಿಟ್ಟಿದ್ದರೆಂಬುದೂ ನಾರದ ಬಂದು ಜ್ಞಾಪಿಸಬೇಕಾಯಿತೆಂಬುದೂ ಅಸಹಜವಾಗಿ ತೋರುತ್ತದೆ.) ಅವರು ಕಡೆಯಲ್ಲಿ ಮಗಳಿಗೆ ಹೇಳುವ ‘‘ಶಿವಂ ಶಿವಂ ನಿನಗೆ ಚಿಂತಿಸದಿರ್ ಮಱದೆಮ್ಮನೊರ್ಮೆಯುಂ’’ ಎಂಬ ಮಾತು ಲೋಕಸ್ವಾಭಾವಿಕವಾದುದು; ಮನ ಮುಟ್ಟುವಂಥದು.

ನಾರದನನ್ನು ಕವಿ ‘ಸಂಗ್ರಾಮಲಂಪಟ’ನೆಂದಿದ್ದಾನೆ; ಆದರೆ ಅವನಿಂದ ಯಾವ ಅನಾಹುತವನ್ನೂ ಮಾಡಿಸಿಲ್ಲ. ಪ್ರತಿಯಾಗಿ, ಅವನು ಗಿರಿಜೆಯನ್ನು ಕಂಡಾಗ ಪೊಡಮಟ್ಟು ‘‘ತಾಯೇ ತವರೇ ತ್ರಿಭುವನದಾಯುವೆ ಜಗದುಸಿರೆ’’ ಎಂದು ಸ್ತುತಿಸುವಂತೆ ಮಾಡಿದ್ದಾನೆ. ಆದರೆ ಒಮ್ಮೆ ಸೂಳೆಗೇರಿಯಲ್ಲಿ ಅಲೆಯುವ ದುರವಸ್ಥೆಗೆ ದೂಡಿದ್ದಾನೆ.

ಬೃಹಸ್ಪತಿಯ ಹಾಗೂ ಮನ್ಮಥನ ಪಾತ್ರಗಳಿಗೆ ಕವಿ ಅಪಚಾರವೆಸಗಿದ್ದಾನೆ; ಅವುಗಳ ಚಿತ್ರಣದಲ್ಲಿ ಅಸಹಜತೆ, ವಿಸಂಗತಿಗಳನ್ನು ಕಾಣುತ್ತೇವೆ. ಮನ್ಮಥನನ್ನು ಕರೆತರುವುದಕ್ಕಾಗಿ ಅವನ ಅರಮನೆಗೆ ಹೋದ ಬೃಹಸ್ಪತಿ ಅಲ್ಲಿನ ಸ್ತ್ರೀಯರ ‘‘ನಿರತಿಶಯ ಸ್ವಭಾವ ಸೌಂದರ್ಯ ಸೌಕುಮಾರ್ಯಂಗಳಂ ಕಂಡು ಮನದೊಳಳಿಪುತ್ತುಂ ಬುದ್ದಿಯೊಳ್      ಬೆದಱುತ್ತುಂ ಚಿತ್ತದೊಳ್ ಕೌತುಕಂ ಬಡುತ್ತುಂ’’ ನಡೆತಂದನೆಂದೂ ‘‘ಕಾಮರಸದ ತೆರೆಯೊಳ್ ತೇಂಕಾಡುತಿರ್ದಂ ತಾನುಮೆಳ್ಚತ್ತ’’ನೆಂದೂ ಹೇಳಿರುವುದು ಬೃಹಸ್ಪತಿಯ ಘನತೆಗೆ ತಕ್ಕುದಾಗಿರದೆ ಹಾಸ್ಯಾಸ್ಪದವಾಗಿದೆ. ಮನ್ಮಥನಿಗೆ ವಿಷ್ಣು ‘‘ವರಗಿರಿಸುತೆಯೊಳ್ ನೆರಪಲ್ಲಿಗೆ ನೀನೆ ಬಲ್ಲೆ ನೀನೆ ಸಮರ್ಥಂ’’ ಎಂದು ಆದೇಶಿಸಿದಾಗ, ಅವನು ‘‘ಹೆರರ ಮಕ್ಕಳನಿಕ್ಕಿ ನೆಲೆಯನಱವುದನಿಳೆಯೊಳಗೆನ್ನಲ್ಲಿ ಮಾಳ್ಪರೇ ಕಮಲಾಕ್ಷಾ’’ ಎನ್ನುವುದು ತೀರ ವಿಚಿತ್ರವೆನಿಸದಿರದು, ಅವನು ಮತ್ತೂ ಗೋಗರೆಯುತ್ತಾನೆ:

ಹರಿಯಲ್ಲಿಗೆ ತಮಮಂ ಕೇ
ಸರಿಯಲ್ಲಿಗೆ ಕರಿಯನಭ್ರಶಿಖಿಯಲ್ಲಿಗೆ ಕೇ
ಳುರಗನನಟ್ಟುವ ತೆರದಿಂ
ಹರನಲ್ಲಿಗೆ ತಂದೆ ಕಳಿಪುವರೆ ನೀನೆನ್ನಂ (೩೧)

ಆದರೆ, ಲೋಕಹಿತಕ್ಕಾಗಿ ಶಿವನ ತಪವನ್ನು ಕೆಡಿಸಬೇಕೆಂದು ವಿಷ್ಣು ಹೇಳಿದಾಗ ಮನ್ಮಥ ಕೂಡಲೆ ‘‘ಎನ್ನ ಹರಣಂ ಘನವೇ ತೆಗೆಯಿಂದೆ ನೂಱು ತೀವಿತ್ತೆಂದಂ.’’ ಈ ಹಟಾತ್ ಪರಿವರ್ತನೆ ಕೃತಕವಾಗಿ ಕಾಣುತ್ತದೆ. ಅಂತೂ ‘‘ತಂದೆ ಮಕ್ಕಳ ಮಾತಿನಲ್ಲಿ ಒರಟುತನ ಇದೆ.’’[14] ಹರಿಹರನ ಕಾಮ ಮೆಚ್ಚುಗೆಗಿಂತ ಕನಿಕರಕ್ಕೆ ಪಾತ್ರನಾಗುತ್ತಾನೆ.

[1] ಆದರೆ ‘‘ಇದು ಖಂಡಿತ ಆರಂಭ ಕೃತಿಯಲ್ಲ, ಕೆಲವಾದರೂ ರಗಳೆಗಳನ್ನು ಬರೆದು ರಗಳೆಯ ಕವಿ ಎಂಬ ಅಣಕಕ್ಕೆ ಪಕ್ಕಾದನಂತರ ಇದನ್ನು ರಚಿಸಿರಬೇಕೆಂದು ಧೈರ್ಯವಾಗಿ ಹೇಳಬಹುದು’’ ಎನ್ನುತ್ತಾರೆ. ಎಚ್.ದೇವೀರಪ್ಪ ಮತ್ತು ದೇ. ಜವರೇಗೌಡ : ‘ಗಿರಿಜಾ ಕಲ್ಯಾಣ ಮಹಾಪ್ರಬಂಧ’ (ಸಂಗ್ರಹ), ಪೀಠಿಕೆ, ಪು.xvi-xvii. ಈ ಅಭಿಪ್ರಾಯ ವಿಚಾರಾರ್ಹವಾಗಿದ್ದರೂ ನಿಲ್ಲತಕ್ಕದ್ದಲ್ಲ.

[2] ಎಂ.ಆರ್. ಶ್ರೀನಿವಾಸ ಮೂರ್ತಿ, ಹರಿಹರನ ಗಿರಿಜಾಕಲ್ಯಾಣ : ಶೈಲಿ, ‘ಸಾಹಿತ್ಯಾ ಲೋಕ’, ಪು. ೧೩೬.

[3] ಎಚ್. ದೇವೀರಪ್ಪ ಮತ್ತು ದೇಜಗೌ, ಪೂರ್ವೋಕ್ತ, ಪು. xxi-xxx

[4] ರಾಮಾಯಣ, ಮಹಾಭಾರತಗಳಲ್ಲೂ ಅದು ಬರುತ್ತದೆ ಎನ್ನುತ್ತಾರೆ,ಶಿ.ಚೆ.ನಂದಿಮಠ(ಸಂ); ‘ಗಿರಿಜಾ ಕಲ್ಯಾಣ ಪ್ರಬಂಧ’, ಪ್ರಸ್ತಾವನೆ, ಪು.೪೨.

[5] ಎಂ.ಜಿ. ನಂಜುಂಡಾರಾಧ್ಯ, ‘ಗಿರಿಜಾ ಕಲ್ಯಾಣ ಮಹಾಪ್ರಬಂಧ’ (ಗದ್ಯಾನುವಾದ), ಉಪೋದ್ಘಾತ, ಪು.೪

[6] ‘‘ಹರಿಹರನು ಕಾಳಿದಾಸನ ಕುಮಾರಸಂಭವವನ್ನು ಆಧಾರವಾಗಿಟ್ಟುಕೊಂಡು ಗಿರಿಜಾ ಕಲ್ಯಾಣವನ್ನು ರಚಿಸಿರಬಹುದೇ? ಎಂದು ಸಂದೇಹ’’ ಎಂಬ ನಂದೀಮಠದ ಉಕ್ತಿಯನ್ನು ಗಮನಿಸಬಹುದು: ಪೂರ್ವೋಕ್ತ, ಪು.೪೩. ಅವರ ಸಂದೇಹ ಸತ್ಯದೂರವಲ್ಲ. ‘ಗಿರಿಜಾ ಕಲ್ಯಾಣ’ದ ಮೇಲೆ ‘ಕುಮಾರಸಂಭವ’ದ ಮುದ್ರೆ ಹೇಗೆ ಕಂಡುಬರುತ್ತದೆಂಬುದಕ್ಕೆ ಉದಾಹರಣೆಯಾಗಿ ಈ ಪದ್ಯಗಳನ್ನು ಹೋಲಿಸಿ : ‘‘ಕರೆಯವು ಕೋಗಿಲೆ ಮಧುಪಂ | ಮೊರೆಯವು…’’(೫-೨೫) : ‘‘ನಿಷ್ಕಂಪವೃಕ್ಷಂ ನಿಭೃತದ್ವಿರೇಫಮ್ | ಮೂಕಾಂಡಜಂ ಶಾಂತಮೃಗಪ್ರಚಾರಮ್ …’’ (೩, ೪೨) : ‘‘ಗಗನದ ಹರಿ ಸುರಪತಿಗಳ್ | ಜಗದ್ದಿತಾರ್ಥ…’’ (೮.೪೯) : ‘‘ಕ್ರೋಧಂ ಪ್ರಭೋ ಸಂಹರ ಸಂಹರೇತಿ | ಯಾವದ್ಗಿರಃ ಖೇ ಮರುತಾಂ ಚರಂತಿ…’’ (೩.೭೩)

[7] ‘ಕುಮಾರಸಂಭವ’, ‘ಗಿರಿಜಾ ಕಲ್ಯಾಣ’ಗಳ ತೌಲನಿಕ ಅಧ್ಯಯನ ಸ್ವಾರಸ್ಯಪೂರ್ಣವಾಗಿರುವುದಾದರೂ, ಅದು ಅವುಗಳ ನಡುವೆ ತಾರತಮ್ಯ ಭೇದ ಕಲ್ಪನೆಗೆ ಆಸ್ಪದವೀಯಬಾರದು. ‘ಕುಮಾರಸಂಭವ’ಕ್ಕಿಂತ ‘ಗಿರಿಜಾ ಕಲ್ಯಾಣ’ ಪ್ರತ್ಯಂಶದಲ್ಲೂ ಮೇಲಾದ ಕಾವ್ಯವೆಂದು ಸುಜನಾ ಅವರ ವಾದ. ನೋಡಿ : ಹರಿಹರನ ಗಿರಿಜಾ ಕಲ್ಯಾಣ, ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ೩., ಪು.೩೨೦. ‘ಕುಮಾರಸಂಭವ’, ‘ಗಿರಿಜಾ ಕಲ್ಯಾಣ’ ಎರಡಲ್ಲೂ ದೋಷಗಳಿವೆ; ಆದರೆ ಎರಡೂ ತಮ್ಮ ತಮ್ಮ ಬಗೆಯಲ್ಲಿ ಒಳ್ಳೆಯ ಕಾವ್ಯಗಳು. ‘ಕುಮಾರಸಂಭವ’ ಕಲೆಯ ದೃಷ್ಟಿಯಿಂದ ಗಣ್ಯವಾಗಿದ್ದರೂ ‘ಗಿರಿಜಾ ಕಲ್ಯಾಣ’ ದರ್ಶನದ ದೃಷ್ಟಿಯಿಂದ ಅದಕ್ಕಿಂತ ಅಗ್ಗಳವಾದುದೆಂದು ಸುಜನಾ ಅವರ ನಿಲುವು. ಕಲೆ, ದರ್ಶನ ಎರಡು ಕೃತಿಗಳಲ್ಲೂ ಉಂಟು; ಅವುಗಳ ಪ್ರಮಾಣ ಹೆಚ್ಚು ಕಡಿಮೆಯಾಗಬಹುದಷ್ಟೆ.

[8] ಎಂ.ಜಿ. ನಂಜುಂಡಾರಾಧ್ಯ, ಪೂರ್ವೋಕ್ತ, ಪು.೪

[9] ಕಾಳಿದಾಸನಾದರೂ ಗೌರೀ ವಿವಾಹದಿಂದ ಮುಂದಕ್ಕೆ ಕತೆಯನ್ನು ಬೆಳೆಸಿದ್ದನೆಂಬುದು ಶಂಕಾಸ್ಪದ. ‘ಕುಮಾರಸಂಭವ’ದ ಏಳು ಅಥವಾ ಎಂಟನೆಯ ಸರ್ಗಕ್ಕಿಂತ ಮುಂದಿನ ಭಾಗ ಲುಪ್ತವಾಗಿದೆಯೆಂದು ಕೆಲವರು ವಿದ್ವಾಂಸರ ಊಹೆ. ಬಹುಶಃ ಹಾಗಾಗಿರಲಿಕ್ಕಿಲ್ಲ; ವಸ್ತುಸ್ಥಿತಿ ಬೇರೆ ಇದ್ದಿತು; ತಾರಕವಧೆಯವರೆಗೂ ಕಾವ್ಯ ಬರೆಯಬೇಕೆಂದುಕೊಂಡಿದ್ದ ಕಾಳಿದಾಸ- ಕಾವ್ಯದ ಶೀರ್ಷಿಕೆ ಈ ಉದ್ದೇಶವನ್ನು ಸೂಚಿಸುತ್ತದೆ-ಶಿವಪಾರ್ವತೀ ವಿವಾಹದ ಘಟ್ಟಕ್ಕೆ ಬಂದಾಗ, ಮುಂದಿನದು ಅನಗತ್ಯವೆಂದು ಭಾವಿಸಿ ಅಷ್ಟಕ್ಕೇ ನಿಲ್ಲಿಸಿರಬೇಕು. ಅವನನ್ನು ಅನುಸರಿಸಿದ ಹರಿಹರನೂ ಆ ಹಂತಕ್ಕೆ ಕಾವ್ಯವನ್ನು ನಿಲ್ಲಿಸುವುದು ಅನಿವಾರ್ಯವಾಯಿತು; ಅದಕ್ಕೆ ತಕ್ಕಂತೆ ತನ್ನ ಕೃತಿಯ ಹೆಸರನ್ನು ಅವನು ಬದಲಿಸಿದ. ಕಾಳಿದಾಸ ಕತೆಯನ್ನು ಮುಂದುವರಿಸಿದ್ದರೆ ಹರಿಹರನೂ ಮುಂದುವರಿಸುತ್ತಿದ್ದುದರಲ್ಲಿ ಅನುಮಾನವಿಲ್ಲ.

[10] ರಂ.ಶ್ರೀ. ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’, ೧೯೫೩, ಪು.೧೭೩

[11] ತೆಕ್ಕುಂಜ ಗೋಪಾಲಕೃಷ್ಣ ಭಟ್ಟ, ಹರಿಹರನ ಗಿರಿಜಾ ಕಲ್ಯಾಣ, ‘ಹರಿಹರ ದೇವ’ (ಸಂ.ವಿ.ಸೀ)., ಪು.೫೮

[12] ತ. ಸು. ಶಾಮರಾಯ ಮತ್ತು ಮೇ. ರಾಜೇಶ್ವರಯ್ಯ, ‘ಜನಪ್ರಿಯ ಕನ್ನಡ ಸಾಹಿತ್ಯಚರಿತ್ರೆ’, ಪು. ೧೭೦-೭೧

[13] ಡಿ.ಎಲ್. ನರಸಿಂಹಾಚಾರ್, ಹಂಪೆಯ ಹರಿಹರ, ‘ಪೀಠಿಕೆಗಳು ಮತ್ತು ಲೇಖನಗಳು’, ಪು.೨೪೧

[14] ಡಿ.ಎಲ್. ನರಸಿಂಹಾಚಾರ್, ಪು.೨೪೮-೪೯