ಕನ್ನಡ ಸಾಹಿತ್ಯದಲ್ಲಿ ಹರಿಹರ ಒಬ್ಬ ಕ್ರಾಂತಿಕಾರ ಕವಿ, ಅನೇಕ ಅರ್ಥಗಳಲ್ಲಿ. ಅವನು ‘ರಗಳೆಯ ಕವಿ’ ಎಂಬ ಕಾರಣದಿಂದ ಮಾತ್ರ ದೊಡ್ಡವನಾಗಿಲ್ಲ. ಆ ಮಾತಿನಲ್ಲಿರಬಹುದಾದ ಅಪಹಾಸ್ಯದ ಛಾಯೆಯನ್ನು ನಿವಾರಿಸಿ ನೋಡಿದಾಗ, ಹರಿಹರನ ಕ್ರಾಂತಿಯ ಒಂದು ಮುಖವನ್ನದು ಸೂಚಿಸುವುದೇನೋ ನಿಜ. ಆದರೆ ಹರಿಹರನ ಹಿರಿಮೆ ಅಷ್ಟೇ ಅಲ್ಲ; ಛಂದಸ್ಸಿನಲ್ಲಿ ಮಾತ್ರವಲ್ಲದೆ ವಸ್ತು, ಭಾಷೆ, ಶೈಲಿಗಳಲ್ಲಿ ಅವನು ತೆರೆದ ಹಾದಿ ಕನ್ನಡದಲ್ಲಿ ಹೊಸದು. ಅವನು ಬರೆದ ಶಿವಶರಣರ ರಗಳೆಗಳು ಈ ಹೊಸ ಹಾದಿಯ ಹಲವು ಮೈಲಿಗಲ್ಲುಗಳು.

ಒಂದು ದೃಷ್ಟಿಯಿಂದ ಹರಿಹರನ್ನು ನಡುಗನ್ನಡದ, ಅರ್ಥಾತ್ ಹೊಸಗನ್ನಡದ ಆದಿಪುರುಷನೆಂದು ಕರೆದರೂ ತಪ್ಪಾಗಲಾರದು. ವಾಸ್ತವವಾಗಿ ಈ ಕೀರ್ತಿ ಸಲ್ಲಬೇಕಾದುದು ಬಸವೇಶ್ವರ ಮುಂತಾದ ವಚನಕಾರರಿಗೆ. ಆದರೆ ವಚನಕಾರರು ಗುಡಿಯ ಮೂಲ ವಿಗ್ರಹವಿದ್ದಂತೆ; ಹರಿಹರ ಕವಿಯಾದರೋ ಉತ್ಸವಮೂರ್ತಿ. ಅಲ್ಲದೆ, ವಚನಕಾರರ ಕ್ಷೇತ್ರ ಸಾಹಿತ್ಯವಲ್ಲ; ಹರಿಹರನಾದರೆ ಪ್ರಧಾನವಾಗಿ ಕವಿ. ಈ ದೃಷ್ಟಿಯಿಂದ ನೋಡಿದಾಗ ಹರಿಹರನ ಅಪೂರ್ವತೆಯನ್ನು ಗುರುತಿಸುವುದು ಸುಲಭವೆಂದು ಕಾಣುತ್ತದೆ. ಅವನು ಕವಿಯೆಂತೊ ಅಂತೆ ಭಕ್ತನೂ ಹೌದು. ಭಗವದ್ ಭಕ್ತರ ಜೀವನ ಕಥೆಗಳನ್ನು ರಚಿಸಲು ಅಷ್ಟೇ ಭಕ್ತಿಯುಳ್ಳ ಕವಿಯೊಬ್ಬ ದೊರಕಿದ್ದು ಸಾಹಿತ್ಯಲೋಕದಲ್ಲಿ ಅಪರೂಪದ ಸಂಗತಿ.  ಇದರಿಂದ ಕವಿಗೂ ಕಾವ್ಯಕ್ಕೂ ಅಭೇದವೇರ್ಪಟ್ಟಿದೆ ಎನ್ನಬಹುದು. ಶಿವಶರಣರನ್ನು ಹರಿಹರ ಎಷ್ಟರಮಟ್ಟಿಗೆ ಚಿತ್ರಿಸಿದ್ದಾನೊ ಅಷ್ಟರಮಟ್ಟಿಗೆ ತನ್ನನ್ನೆ ಚಿತ್ರಿಸಿಕೊಂಡಿದ್ದಾನೆ ಎಂದರೆ ತಪ್ಪಲ್ಲ.

ಇದು ಶಿವಶರಣರ ರಗಳೆಗಳ ಮಹತ್ವವನ್ನು ಕುರಿತು ಮಾತಾಯಿತು. ಇವುಗಳಲ್ಲದೆ ಹರಿಹರ ಉತ್ತಮವಾದ ಒಂದು ಚಂಪೂ ಕಾವ್ಯ ಬರೆದಿದ್ದಾನೆ; ಆತ್ಮವೃತ್ತಪ್ರಧಾನವಾದ ಎರಡು ವಿಶಿಷ್ಟ ಶತಕಗಳನ್ನು ಬರೆದಿದ್ದಾನೆ. ಅವನು ರಚಿಸಿರುವ ವಿಭೂತಿ, ರುದ್ರಾಕ್ಷಿ ಮುಂತಾದ ಅಷ್ಟಾವರಣ ಸಂಬಂಧವಾದ ರಗಳೆಗಳೂ ಗಮನಾರ್ಹವಾಗಿವೆ. ಈ ಸಾಲಿನಲ್ಲಿ ಬರುತ್ತದೆ ಅವನ ‘ಪುಷ್ಪರಗಳೆ’. ಭಕ್ತಿಯನ್ನು ಮಾತ್ರವಲ್ಲ, ಅದರ ಸಾಧನ ಪರಿಕರಗಳನ್ನು ಕೂಡ ಹರಿಹರ ಚಿತ್ರಿಸಿರುವುದು ಲಕ್ಷಿಸಬೇಕಾದ ವಿಷಯ. ಪುಷ್ಪರಗಳೆಯು ವಿಭೂತಿರಗಳೆ, ರುದ್ರಾಕ್ಷಿಯ ರಗಳೆಗಳ ವರ್ಗಕ್ಕೇ ಸೇರುವುದಾದರೂ, ಅವುಗಳಿಗಿಂತ ತಿರುಳಿನಲ್ಲಿ ತೀರ ಭಿನ್ನವಾದುದು. ಏಕೆಂದರೆ ಅವುಗಳಲ್ಲಿರುವ ಶುದ್ಧ ಧಾರ್ಮಿಕ ಅಥವಾ ಆಧ್ಯಾತ್ಮಿಕ ಆವರಣ ‘ಪುಷ್ಪರಗಳೆ’ಯಲ್ಲಿಲ್ಲ; ಇದು ಬಹುಮಟ್ಟಿಗೆ ಲೌಕಿಕವಾದ ಕಾವ್ಯಕೃತಿ. ‘ಶುದ್ಧವಾದ ಭಾವಗೀತೆ’ ಎಂಬ ಒಂದು ಮಾತಿನಲ್ಲಿ ಪುಷ್ಪರಗಳೆಯನ್ನು ಸಮರ್ಪಕವಾಗಿ ವರ್ಣಿಸಬಹುದು.

ಭಾವಗೀತೆ (lyric) ಎಂದು ನಾವು ಕರೆಯುವ ಕಾವ್ಯಪ್ರಕಾರದ ಎಲ್ಲ ಲಕ್ಷಣಗಳೂ ‘ಪುಷ್ಪರಗಳೆ’ಯಲ್ಲಿ ಗೋಚರಿಸುತ್ತವೆ. ಭಾವಗೀತೆಯಾಗಿರುವುದಷ್ಟೆ ಅಲ್ಲದೆ, ಈ ರಗಳೆ ಉನ್ನತವಾದ ದರ್ಶನವೊಂದನ್ನು ಗರ್ಭೀಕರಿಸಿಕೊಂಡಿದೆ. ಈ ಕಾರಣಗಳಿಂದ ‘ಪುಷ್ಪರಗಳೆ’ ಕನ್ನಡ ವಾಙ್ಮಯದಲ್ಲಿ ಒಂದು ಅಪೂರ್ವ ಕೃತಿ ಎನ್ನಲಡ್ಡಿಯಿಲ್ಲ. ಇದು ಹೊಸ ಬಗೆಯ ಒಂದು ಕೃತಿ ಎಂಬ ಪ್ರಜ್ಞೆ ಕವಿಗೇ ಇದ್ದಂತೆ ಕಾಣುತ್ತದೆ. ಆದ್ದರಿಂದಲೇ ಅವನು ಅದನ್ನು ‘ಪೊಸ ಪೂಮಾಲೆ’ ಎಂದು ಕರೆದಿದ್ದಾನೆ, ರಗಳೆಯ ಪ್ರಾರಂಭದಲ್ಲಿ ಬರುವ ಈ ಕಂದಪದ್ಯದಲ್ಲಿ:

ಲೀಲೆಯೊಳೋಲೈಪೆಂ ಮಧು
ರಾಲಾಪದಿ ಪುಷ್ಪರಗಳೆಯೆಂಬೀ ಪೊಸಪೂ
ಮಾಲೆಯನವಧರಿಸಗಜಾ
ಲೋಲ ಮಹಾಶೀಲ ಹಂಪೆಯ ವಿರೂಪಾಕ್ಷಾ

ಇಲ್ಲಿ ಒಂದು ಸ್ಪಷ್ಟೀಕರಣ ಅನುಚಿತವಾಗಲಾರದು. ಏಕೆಂದರೆ ಭಾವಗೀತೆ ಎಂಬ ಪ್ರಕಾರ ಇತ್ತೀಚೆಗೆ, ಪಾಶ್ಚಾತ್ಯ ಸಾಹಿತ್ಯದ ಸಂಪರ್ಕದಿಂದ ಬಂದುದಲ್ಲವೆ, ನಮ್ಮ ಹಿಂದಿನ ಸಾಹಿತ್ಯದಲ್ಲಿ ಇದು ಎಲ್ಲಿತ್ತು ಎಂಬ ಪ್ರಶ್ನೆಯ ಉದ್ಭವಕ್ಕೆ ಅವಕಾಶವಿದೆ.

ಭಾವಗೀತೆ, ಕಾದಂಬರಿ, ಸಣ್ಣಕತೆ ಮುಂತಾದ ಪ್ರಕಾರಗಳು ಇಂಗ್ಲಿಷಿನಿಂದ ಬಂದವು ಎಂದು ನಾವು ಸಾಮಾನ್ಯವಾಗಿ ಹೇಳುವಾಗ, ಆ ಮಾತಿಗೆ ಒಂದು ಪರಿಮಿತಿಯಿರಬೇಕೆಂದು ತೋರುತ್ತದೆ. ಏಕೆಂದರೆ ಈ ಯಾವುದೊಂದು ಪ್ರಕಾರವೂ ನಮಗೆ ಸಂಪೂರ್ಣ ಹೊಸದಲ್ಲ. ಇವು ಭಾರತೀಯ ಸಾಹಿತ್ಯಗಳಲ್ಲಿ ಹಿಂದಿನಿಂದಲೂ ಅಸ್ಫುಟವಾಗಿದ್ದುವು; ಆದರೆ ಇವಕ್ಕೆ ನಿಶ್ಚಿತವಾದ ರೂಪರೇಖೆಗಳುಂಟಾದುದು ಇಂಗ್ಲಿಷಿನ ಪ್ರಭಾವದಿಂದ. ಎಂದರೆ, ಉಸಿರು ನಮ್ಮಲ್ಲೇ ಇತ್ತು, ಹೆಸರು ಮಾತ್ರ ಹೊರಗಿನಿಂದ ಬಂತು ಎಂದು ಹೇಳಿದರೆ ಸರಿಯಾದೀತು. ಕಾದಂಬರಿ ನಮ್ಮಲ್ಲಿ ಹಿಂದೆ ಇರಲಿಲ್ಲವೆ? ಇತ್ತೆನ್ನುವುದನ್ನು ಅ ಹೆಸರೇ ಎತ್ತಿ ಹೇಳುತ್ತದೆ, ಬಾಣಭಟ್ಟನ ‘ಕಾದಂಬರಿ’ಯ ನೆನಪು ಮಾಡುವುದರಿಂದ. ಕಥೆಗಳಿಗಂತೂ ಭಾರತೀಯ ಸಾಹಿತ್ಯ ತವರು ಮನೆ. ಭಾವಗೀತೆಯ ಪ್ರಕಾರಕ್ಕೆ ಸೇರುವ ಭಾಗಗಳು ನಮ್ಮ ಮಹಾಕಾವ್ಯ, ಖಂಡಕಾವ್ಯಗಳಲ್ಲಿ ಯಥೇಷ್ಟವಾಗಿ ಸಿಕ್ಕುತ್ತವೆ. ಕಾವ್ಯಗಳಲ್ಲಿ ಅಂತರ್ಗತವಾದ ಭಾವಗೀತಾತ್ಮಕ ಭಾಗಗಳು ಹಾಗಿರಲಿ, ತನಿಯಾದ ಭಾವಗೀತೆಗಳೇ ಪ್ರತ್ಯೇಕವಾಗಿ ರಚಿತವಾಗಿರುವುದೂ ಉಂಟು, ವಿರಳ ಎನ್ನಬಹುದಾದರೂ. ಸದ್ಯಕ್ಕೆ ಒಂದೊಂದೇ ನಿದರ್ಶನ ಕೊಡುವುದಾದರೆ, ಸಂಸ್ಕೃತದಲ್ಲಿ ಕಾಳಿದಾಸನ ‘ಋತುಸಂಹಾರ’ ಸೊಗಸಾದ ಭಾವಗೀತೆಗಳ ಗೊಂಚಲು; ಕನ್ನಡದಲ್ಲಿ ಹರೀಶ್ವರನ ‘ಪುಷ್ಪರಗಳೆ’ಯೊಂದು ಸುಂದರ ಭಾವಗೀತೆ.

ಇದರ ತಾತ್ಪರ್ಯವಿಷ್ಟು : ಈ ಸಾಹಿತ್ಯಪ್ರಕಾರಗಳು ಮಾನವ ಹೃದಯದ ವಿವಿಧ ಆವಿಷ್ಕಾರಗಳು ; ಅವು ಯಾವುದೇ ಸಾಹಿತ್ಯದಲ್ಲಿ ಸಹಜ, ಸ್ವಾಭಾವಿಕ. ಏಕೆಂದರೆ ಕಲೆಯ ಸತ್ವ ತನ್ನದೇ ಆದ ರೂಪವನ್ನು ನಿರ್ಮಿಸಿಕೊಳ್ಳುತ್ತದೆ; ಅದರ ಮೂಲ ಅಂತಃಸ್ಫೂರ್ತಿಯೆ ಹೊರತು ಅನುಕರಣವಲ್ಲ. ಆತ್ಮ ನಮ್ಮದಾಗಿ ಮೈ ಹೊರಗಿನಿಂದ ಬರುವುದು ಸಾಧ್ಯವಿಲ್ಲ. ಆದ್ದರಿಂದ, ಭಾವಗೀತೆ ಇತ್ಯಾದಿ ಪ್ರಕಾರಗಳು ನಮ್ಮಲ್ಲಿ ಮೊದಲು ಇರಲೇ ಇಲ್ಲ, ಅವು ಪಡುವಣ ಕಡಲು ಕಳುಹಿಸಿದ ತರಂಗಗಳು ಎಂದು ಪ್ರತಿಪಾದಿಸುವುದು ಅಸಮಂಜಸವಾಗುತ್ತದೆ.

ಇನ್ನು, ಭಾವಗೀತೆ ಎಂದರೇನು? ಕವಿಯ ವೈಯಕ್ತಿಕ ಭಾವದ ನೇರ ಅಭಿವ್ಯಕ್ತಿ; ಕತೆಯ ಹಂಗಿಗೆ ಒಳಗಾಗದ ಸ್ವತಂತ್ರ ವ್ಯಕ್ತಿನಿಷ್ಠರಚನೆ. ಒಂದು ಕ್ಷಣದ ಭಾವ, ಅನುಭವ, ಸಂವೇದನೆ ಅದರಲ್ಲಿ ಮೂರ್ತವಾಗಿರುತ್ತದೆ. ಆದ್ದರಿಂದಲೇ ಭಾವಗೀತೆ ‘‘ಒಂದು ಚಣದ ಸ್ಮಾರಕ’’ (‘‘A moment’s monument’’). ಭಾವತೀವ್ರತೆ, ಸಂಕ್ಷಿಪ್ತತೆ ಮತ್ತು ಗೇಯತೆ -ಇವು ಅದರ ಮೂರು ಪ್ರಮುಖ ಲಕ್ಷಣಗಳೆಂದು ಒತ್ತಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ವಿವೇಚಿಸಿದಾಗ ಹರಿಹರನ ‘ಪುಷ್ಪರಗಳೆ’ ಭಾವಗೀತೆಯ ಒಂದು ಉಜ್ವಲ ನಿದರ್ಶನವಾಗಿ ತೋರದಿರದು.

ಭಕ್ತಕವಿ ಹರಿಹರನ ದಿನಚರಿಯ ಒಂದು ಪುಟ ‘ಪುಷ್ಪರಗಳೆ’ಯಲ್ಲಿ ಪ್ರಕಟವಾಗಿದೆ. ಪ್ರಾತಃಕಾಲದಲ್ಲಿ ಶಿವಪೂಜೆಗೆ ಹೂವು ತರಲು ತೋಟಕ್ಕೆ ನಡೆದಾಗ, ಅಲ್ಲಿ ತನಗುಂಟಾದ ಭಾವಗಳನ್ನು ಕವಿ ಮೂಡಿಸಿದ್ದಾನೆ ಇಲ್ಲಿ. ಹರಿಹರನ ಭಕ್ತಿಯ ಉತ್ಸಾಹ, ಪುಷ್ಪಗಳನ್ನು ಕಂಡು ಅವನಿಗಾದ ಅಮಿತಾನಂದ, ಆ ಹೂಗಳ ಬಗ್ಗೆ ಅವನ ಆತ್ಮೀಯ ಮನೋಭಾವ -ಇವು ಮೂರೂ ಅವಿರುದ್ಧವಾಗಿ ಸೇರಿ ಒಂದು ವಿಶಿಷ್ಟ ಅನುಭವವನ್ನು ಹರಿಹರನಲ್ಲಿ ಪ್ರಚೋದಿಸುವ ಪರಿಯನ್ನಿಲ್ಲಿ ಕಾಣುತ್ತೇವೆ. ಈ ಅನುಭವ ‘ಪುಷ್ಪರಗಳೆ’ಯಲ್ಲಿ ನೇರವಾಗಿ ಒಂದಿನಿತೂ ವಿಚಲಿತವಾಗದಂತೆ ಅಭಿವ್ಯಕ್ತವಾಗಿದೆ.

ಕುಸುಮಗಳ ವರ್ಣನೆಯಲ್ಲಂತೂ ಹರಿಹರನ ಸೌಂದರ್ಯದೃಷ್ಟಿ ಅನುಪಮವಾಗಿ ಎದ್ದುಕಾಣುತ್ತದೆ. ಈ ರಗಳೆ ಒಂದು ತೆರನಾದ ಪುಷ್ಪವಿಮರ್ಶೆ ಎನ್ನಬಹುದು. ತೋಟದಲ್ಲಿ ಬಗೆಬಗೆಯ ಹೂಗಳಿರುತ್ತವೆ; ಒಂದರಂತೆ ಮತ್ತೊಂದಿರುವುದಿಲ್ಲ; ಒಂದರ ಸೌರಭ ಮತ್ತೊಂದರದಲ್ಲ. ಹರಿಹರ ಒಂದೊಂದು ಹೂವಿನ ವೈಶಿಷ್ಟ್ಯವನ್ನೂ ಸೂಚಿಸಿ, ಅದರ ಪರಿಮಳದ ಪರಿಯನ್ನು ನಿರೂಪಿಸಿದ್ದಾನೆ. ವಸ್ತು ಸ್ವರೂಪದ ಬಗ್ಗೆ ಅವನಿಗಿರುವ ಸೂಕ್ಷ್ಮ ಖಚಿತ ಪರಿಜ್ಞಾನ ಇಲ್ಲಿ ಗಮನಕ್ಕೆ ಬರುತ್ತದೆ.

ಹರಿಹರ ಒಂದೊಂದು ಹೂಗಿಡದ ಬಳಿಗೂ ತೆರಳಿ ಶಿವನ ಮುಡಿಗೆ ಹೂಗಳನ್ನು ಕರುಣಿಸುವಂತೆ ಬೇಡುತ್ತ ನಡೆಯುವ ದೃಶ್ಯ ಪುಳಕಗೊಳಿಸುವಂಥದು. ದೇವರ ಪೂಜೆಯನ್ನು ಎಷ್ಟೋ ಕವಿಗಳು ತನ್ಮಯತೆಯಿಂದ ವರ್ಣಿಸಿದ್ದಾರೆ; ಆದರೆ ಅದಕ್ಕೆ ಪೂರ್ವಭಾವಿಯಾಗಿ ಪುಷ್ಪಸಂಚಯನದ ಪೂಜೆಯನ್ನು-ಹರಿಹರನ ಪಾಲಿಗೆ ಅದು ಪೂಜೆಯಲ್ಲದೆ ಬೇರೆಯಲ್ಲ- ವರ್ಣಿಸಿದ ಕವಿಗಳು ಇಲ್ಲವೆಂದರೆ ಉತ್ಪ್ರೇಕ್ಷೆಯಲ್ಲ.

ಬೆಳಗಿನ ಜಾವದಲ್ಲೆ ಎದ್ದು ಹರಿಹರ ವಿಭೂತಿ ಧರಿಸಿಕೊಳ್ಳುತ್ತಾನೆ; ಪರಿಮಳ ಸೋರಿಹೋಗದಂತೆ ಬಿಗಿಯಾಗಿ ಹೆಣೆದ ಕರಡಿಗೆಯೊಂದನ್ನು ಹಿಡಿದು ಭಕ್ತಿಗೀತೆಗಳನ್ನು ಹಾಡುತ್ತ ಹೊರಟು

ಪರಿಮಳದ ಸುಗ್ಗಿ ಸೌರಭದ ಸಂದಣಿಯೆನಿಪ
ಸುರುಚಿರಾಮೋದದ ರಸಾಂಭೋಧಿಯೆಂದೆನಿಪ

ಹೂದೋಟವನ್ನು ದೂರದಿಂದಲೆ ಕಂಡು ಹರ್ಷಿಸುತ್ತಾನೆ; ಉತ್ಸಾಹದ ಭರದಲ್ಲಿ ‘ನಟನಂತೆ ಕುಣಿದು’ ಕೂಗಾಡುತ್ತಾನೆ; ಬೆಲ್ಲವತ್ತ, ಕಕ್ಕೆ ಮುಂತಾದ ಪತ್ರಾಳಿಗಳನ್ನು ಕಂಡು ‘ಶರಣು’, ‘ನಮೋ’ ಎನ್ನುತ್ತ ಮುನ್ನಡೆಯುತ್ತಾನೆ. ಬರಬರುತ್ತ ಹೂದೋಟದ ಕಂಪು ತೀಡುತ್ತದೆ.

ಮನದಿಂದೆ ಕೈಕೊಳ್ವ ಮುನ್ನಮೀ ಗಂಧಮಂ
ನಿನಗೆ ಬಳಿಕೀವೆನುತ್ತಮ ಕುಸುಮ ವೃಂದಮಂ

ಎಂದು ಹರನಿಗೆ ಸಮರ್ಪಿಸುತ್ತ ತೋಟವನ್ನು ಹೊಕ್ಕು ರೋಮಾಂಚಗೊಳ್ಳುತ್ತಾನೆ; ತೂಗಾಡುತ್ತ ತೊನೆದಾಡುತ್ತ ‘ಆಹಾ ವಿರೂಪಾಕ್ಷ!’ ಎಂದು ಮತ್ತೆ ಮತ್ತೆ ಉಗ್ಗಡಿಸುತ್ತ ಹಿಗ್ಗುತ್ತಾನೆ. ಭಕ್ತಿಯ ಉದ್ರೇಕದಲ್ಲಿ ಮಾತು ಸೋತು, ‘ಆಹಾ’, ‘ಓಹೋ’ ಮುಂತಾದ ಆಶ್ಚರ್ಯೋದ್ಗಾರಗಳನ್ನು ಸೂಸುವುದು ಅಥವಾ ‘ನಟನಂತೆ’ ಕುಣಿದು ಕುಪ್ಪಳಿಸುವುದು ಹರಿಹರನಲ್ಲಿ ಸಾಮಾನ್ಯ.

ಹರಿಹರ ಈ ರೀತಿ ಬರುತ್ತಿರಲು, ‘‘ಅಳಿಯೆಱಗದನಿಲನಲುಗದ ರವಿಕರಂ ಪುಗದ’’[1], ‘‘ಬೆಳೆಬೆಳೆದು ನಳನಳಿಸಿ ಮಘಮಘಿಸಿ ಕವಲಿಡಿದ’’ ಸೇವಂತಿಗೆ ಕಾಣಿಸುತ್ತದೆ. ‘‘ಪರಶಿವಂಗೋಲೈಪ ಪೂವ ನೀಡೌ’’ ಎಂದು ಬೇಡಿ ಆ ಹೂವುಗಳನ್ನು ತೆಗೆದುಕೊಳ್ಳುತ್ತಾನೆ. ಮುಂದೆ ತೋರುವುದು ಸಂಪಿಗೆ. ಅದನ್ನು ಯಾಚಿಸುವುದೇ ಒಂದು ಚಂದ:

ಏನವ್ವ ಸಂಪಿಗೆಯೆ ಶಿವನ ಸಿರಿಮುಡಿಗಿಂದು
ನೀನೀವ ಪೊಸ ಕುಸುಮಮಂ ನೀಡು ನೀಡೆಂದು

ಕೇಳುತ್ತಾನೆ. ಅನಂತರ ‘ಕುಂಕುಮದ ತಾರಗೆ’ಯಂತಿರುವ ಸೇವಂತಿಯಲ್ಲಿಗೆ ಬಂದು

ಎಲೆಲೆ ಪರಿಮಳದ ತಣ್ಪಂಗಱೆಯ ಬಾರವ್ವ
ಕುಲಪತಿಯ ಜಡೆಗಳ್ಗೆ ಪೂಗಳಂ ತಾರವ್ವ

ಎಂದು ಕೈಯೊಡ್ಡಿ ಹೂ ಕೊಳ್ಳುತ್ತಾನೆ.

ಇನ್ನು ಮಲ್ಲಿಗೆಯ ಸರದಿ. ಅದನ್ನು ಕವಿ ‘ಕಂಪಿನ ನಿಧಿ’ ಎಂಬ ಮಾತಿನಲ್ಲಿ ಸಮರ್ಪಕವಾಗಿ ಬಣ್ಣಿಸಿದ್ದಾನೆ. ಅದರ ಹೂವುಗಳನ್ನು ಮನಸಾರೆ ಕೊಂಡು, ಕೊಂಡಾಡುತ್ತ ಜಾತಿ (ಜಾಜಿ)ಯ ಬಳಿಗೈದುತ್ತಾನೆ.

ಜಾತಿ ನೀನೇ ಸಕಲ ಪುಷ್ಪಜಾತಿಗೆ ಜಾತಿ
ಭೂತೇಶ್ವರನ ಜಡೆಯ ಮುಡಿಗೇಱಿದೊಡೆ ಜಾತಿ

ಎಂದು ಹೊಗಳುತ್ತ ಅದರ ಕುಸುಮಗಳನ್ನು ಕೈಕೊಳ್ಳುತ್ತಾನೆ.

ಆಮೇಲೆ ಕಾಣಿಸುವುದು ಕೇದಗೆ. ಇದು ಸೌರಭಸಾಂದ್ರವಾದ ಹೂವು; ಬೇರೆ ಹೂಗಳಿಗಿಂತ ಭಿನ್ನವಾದುದು. ಆದ್ದರಿಂದಲೇ ಕವಿ ಅದನ್ನು

ಆಹ ದೆಸೆದೆಸೆಗೆ ಬೀಱುವ ಸುಗಂಧದ ಸೂಱೆ
ಆಹ ಕೇತಕಿ ನಿನ್ನ ಪರಿಮಳದ ಪರಿ ಬೇಱೆ
ಪರಿಮಳಂ ಸುಳಿಗೊಂದು ಬೆಳೆದು ಕವಲಿಱಿಯಿತ್ತೊ
ಉರವಣಿಸಿ ಬಳೆದ ಪರಿಮಳಕೆ ಗಱಿ ಮೂಡಿತ್ತೊ

ಎಂದು ಸ್ವೋಪಜ್ಞವಾಗಿ ವರ್ಣಿಸುತ್ತಾನೆ. ಕೇದಗೆ ಹೂವಿಗೆ ಹೊರಗೆ ಮುಳ್ಳಿರುತ್ತದೆ; ಒಳಗೆ ಪರಿಮಳವಿರುತ್ತದೆ. ಆದ್ದರಿಂದ ಅದನ್ನು ಈಶ್ವರನ ಗುಪ್ತ ಭಕ್ತನಿಗೆ ಕವಿ ಹೋಲಿಸುತ್ತಾನೆ.

ಮುಂದೆ ‘ತಾರೆಗಳ ಮೊಳೆ’ಗಳಂತಿರುವ ಕಣಿಗಲೆ ಸಿಗುತ್ತದೆ; ಮರುಗ, ಮಡಿವಾಳ ಇವೆಲ್ಲ ದೊರಕುತ್ತವೆ. ಅದನ್ನು ಕೊಂಡ ಕವಿ ಪರಿಪರಿಯ ಕಂಪಿನಲ್ಲಿ ಮೂಡುತ್ತ ಮುಳುಗುತ್ತ ಬರುವಾಗ ದವನ ಕಂಗೊಳಿಸುತ್ತದೆ.

ದವನವೇ ಶಿವನ ಪರಿಮಳದ ಹಬ್ಬವೆ ಬಾರ
ಭುವನದೊಳ್ನಿನಗೆ ಸರಿಯಿಲ್ಲ ಸೌರಭಸಾರ

ಎಂದು ಅದನ್ನು ಕವಿ ಕೈವಾರಿಸುತ್ತಾನೆ. ದವನದ ವಿಶಿಷ್ಟ ಸೌರಭವನ್ನು ಉಂಡವರಿಗೆ ಈ ಮೆಚ್ಚುಗೆಯಲ್ಲಿರುವ ಸತ್ಯ ಮನಮುಟ್ಟದಿರದು. ಅನಂತರ ಹೊನ್ನೆಯನ್ನು ಹರಿಹರ ‘‘ಏನೆನ್ನ ಹೊನ್ನೆ ಸುರಹೊನ್ನೆ ಪರಿಮಳದರಸಿ’’ ಎಂದು ಶ್ಲೇಷೆಯಿಂದ ಪ್ರಶಂಸಿಸುತ್ತಾನೆ; ಕಮಲ, ನೈದಿಲೆ, ಚೆಂಗಣಿಗಲೆಯ ಪುಷ್ಪಗಳನ್ನು ಅಂತೆಯೆ ಸಂಗ್ರಹಿಸುತ್ತಾನೆ.

ಇಷ್ಟಾದ ಮೇಲೆ ಒಂದು ನಿರ್ಮಲ ಸ್ಥಾನವನ್ನು ನೋಡಿ, ಎಳೆಯ ಮಾವಿನ ಮರದ ಕೆಳಗಿನ ಒಂದು ಶಿಲಾತಲದಲ್ಲಿ ಕಮಲ ಪತ್ರಗಳನ್ನೂ ಬಾಳೆಯೆಲೆಗಳನ್ನು ಹಾಸಿ[2] ಹೂಗಳನ್ನು ಮೆಲ್ಲಮೆಲ್ಲನೆ ಸುರಿಯುತ್ತಾನೆ. ಅವುಗಳನ್ನು ಕೈಯಲ್ಲಿ ಮುಟ್ಟದೆ, ಮನಸ್ಸಿ ನಲ್ಲೆ ಮುಟ್ಟುತ್ತಾ ಪೂಜಿಸುತ್ತಾನೆ. ಕೈತಪ್ಪಿ ಒಂದು ಹೂ ಕೆಳಗೆ ಬಿದ್ದರೆ ಸತ್ತು ಹುಟ್ಟು ತ್ತಾನೆ. ನೋಡಿದರೆ ಹೂ ಬಾಡುವುದೆಂದು ಕಣ್ಮುಚ್ಚುತ್ತಾನೆ. ಹೀಗೆ ಭಕ್ತಿಪರವಶನಾಗಿ ಹೂಗಳನ್ನು ಕಟ್ಟಿ ಅರಮನೆಗೆ ಬೇಗ ಸಾಗಿ ಬರುತ್ತಾನೆ. ಅನಂತರ ಶಿವನ ಪುಷ್ಪಾಲಂಕಾರ, ಪೂಜಾವೈಭವ ಮೊದಲಾಗುತ್ತವೆ.

ಸೇವಂತಿಗೆ ಹೂವಿನ ಪನ್ನೀರಿನಿಂದ ಕವಿ ಶಿವನಿಗೆ ಮುಖಮಜ್ಜನ ಮಾಡಿಸುತ್ತಾನೆ; ಪರಾಗದ ವಿಭೂತಿಯಿಂದ ತಿಲಕವಿಕ್ಕುತ್ತಾನೆ; ದೇವನ ಸಿರಿಮುಡಿಯನ್ನು ಸಡಿಲಿಸಿ ನಯದಿಂದ ಬಿಡಿಸಿ ಕೆಂಜೆಡೆಗಳನ್ನು ಅಲಂಕರಿಸುತ್ತಾನೆ. ಹೊಸ ಪಡ್ಡಳಿಯ ಪರಿಮಳದಿಂದ ಕತ್ತುರಿಯಿಕ್ಕಿ, ಇರವಂತಿಯನ್ನು ಮುಡಿಗೆ ಸೂಡುತ್ತಾನೆ. ಮಲ್ಲಿಗೆಯ ಸುಗಂಧವೇ ಚಂದನ, ಮೊಲ್ಲೆಯ ಹೂಗಳೆ ನಾಗಕುಂಡಲ, ಜಾಜಿಯ ಸೌರಭವೆ ಮೃಗಮದ, ಮರುಗವೆ ಗಜ ಚರ್ಮ, ಸಂಪಗೆಗಳೆ ಪುಲಿದೊಗಲು, ಸುರಹೊನ್ನೆಗಳೆ ಉರಗಕಂಕಣ -ಹೀಗೆ ಪುಷ್ಪಗಳೆ ಶಿವನಿಗೆ ಉಡುಗೆತೊಡುಗೆಗಳಾಗುತ್ತವೆ. ದವನ ಸೀಗುರಿಯಾಗುತ್ತದೆ; ಕಂಪಿನ ಮಡಿವಾಳವೆ ಚಾಮರವಾಗುತ್ತದೆ.

ಅನಂತರ ಆರತಿಯೆತ್ತಿ, ಆರೋಗಣೆಯಿತ್ತು, ಪ್ರಸಾದವನ್ನು ಕೊಂಡು, ಕವಿ ಶಿವನನ್ನು ಹಾಡಿ ಹೊಗಳುತ್ತಾನೆ. ಇಲ್ಲಿ ಹರಿಹರನ ಭಕ್ತಿಯ ಆಧಿಕ್ಯ ತೀವ್ರವಾಗಿ ಪ್ರಕಾಶಗೊಂಡಿದೆ.

ದೇವ ಸುಕುಮಾರ ಶಶಿಶೇಖರ ವಿರೂಪಾಕ್ಷ
ದೇವ ಪರಿಮಳವೃಂದಸೇವಿತ ವಿರೂಪಾಕ್ಷ

ಇತ್ಯಾದಿಯಾಗಿ ಹಾಡುತ್ತ, ನಲಿದಾಡುತ್ತ, ಮುದ್ದಿಸುತ್ತ, ಪುಳಕಿಸುತ್ತ ಭಕ್ತಿ ಪರವಶನಾಗುತ್ತಾನೆ.

ಭಕ್ತಿ ಸುಖದಿಂದಿತರ ಸುಖವದೆಲ್ಲಿಯದೆನಿಸಿ
ಮುಕ್ತಿಸುಖದಿಂದಧಿಕಮಿದಕೆ ಪಡಿಯಿಲ್ಲೆನಿಸಿ
ಉರವಣಿಸಿ ಪರಮಭಕುತಿಯ ಸುಖದ ಸೊಕ್ಕೇಱಿ
ಪರಮಪದದಾನಂದಸುಖದ ಸುಧೆ ತಲೆಗೇಱಿ

ಅವನು ಮೈಮರೆಯುತ್ತಾನೆ ; ಈ ತಲ್ಲೀನತೆಯಲ್ಲಿ ‘ವೀವೀರೂರುಪಾಕ್ಷಕ್ಷಾ’ ಎಂದು ನುಡಿ ತೊದಲುತ್ತದೆ; ಅವನ ಸರ್ವಾಗವೂ ಶಿವಮಯವಾಗುತ್ತದೆ.

ಎನಗೆ ಹೊನ್ನುಂ ನೀನೆ ಎನಗೆ ಬಲವುಂ ನೀನೆ
ಎನಗೆ ಸರ್ವಂ ನೀನೆ ಎನಗೆ ಗರ್ವಂ ನೀನೆ
ಎನಗೆ ಮಾತೆಯು ನೀನೆ ಎನಗೆ ಪಿತನುಂ ನೀನೆ
ರಕ್ಷಿಸು ವಿರೂಪಾಕ್ಷ ವೀಕ್ಷಿಸು ವಿರೂಪಾಕ್ಷ
ಕರುಣಿಸು ವಿರೂಪಾಕ್ಷ ಪರಿಕಿಸು ನಿರೂಪಾಕ್ಷ

ಎಂದು ಹರಿಹರ ದೇವನಿಗೆ ಸಂಪೂರ್ಣ ಶರಣಾಗತನಾಗಿ, ಶಿವನ ನೆಲೆಯಲ್ಲಿ ವಿರಮಿಸುತ್ತಾನೆ.[3] ‘ಪುಷ್ಪರಗಳೆ’ ಹೇಗೆ ಒಂದೇ ನಿಟ್ಟಿನಲ್ಲಿ ಸಾಗಿ ಮುಗಿದಿದೆಯೆಂಬುದು ಈ ಪರಿಚಯದಿಂದ ವಿದಿತವಾಗುತ್ತದೆ. ಅದರಲ್ಲಿ ಯಾವುದೂ ಅತಿಯಾಗಿಲ್ಲ, ಔಚಿತ್ಯದ ಸೀಮೆಯನ್ನು ದಾಟಿಲ್ಲ. ಎಷ್ಟು ಬೇಕೋ ಅಷ್ಟೇ ಮಾತು; ‘ಅರ್ಥಮುಕ್ತ, ಭಾವದೀಪ್ತ, ಧ್ವನಿಪ್ರಚುರ’ ಎನ್ನಬಹುದಾದ ರೀತಿ. ಇದು ಭಾವಗೀತೆಯ ಗುಣವಿಶೇಷ.

ಪುಷ್ಪಸಂಚಯವಾದ ಮೇಲೆ ಬರುವ ಶಿವಪೂಜೆಯ ಭಾಗ ಪ್ರತ್ಯೇಕವಾಗಬಹುದಿತ್ತು, ಹಾಗಾಗದಂತೆ ಕವಿ ನೋಡಿಕೊಂಡಿದ್ದಾನೆ. ಶಿವನ ಎಲ್ಲ ಸಿಂಗರವೂ ಪುಷ್ಪಗಳಿಂದಲೇ ನಡೆಯುತ್ತದೆ; ಕಸ್ತೂರಿ, ಚಂದನ, ವಿಭೂತಿ ಎಲ್ಲವೂ ಹೂಗಳಿಂದಲೇ. ಶಿವ ‘ಪರಿಮಳವೃಂದಸೇವಿತ’ನಾಗಿದ್ದಾನೆ. ಹೀಗಾಗಿ ‘ಪುಷ್ಪರಗಳೆ’ ಎಂಬ ಹೆಸರು ಸಾರ್ಥಕವಾಗಿದೆ; ಉದ್ದಕ್ಕೂ ಒಂದೇ ಸೂತ್ರ ಉಳಿದು ಬಂದಿದೆ.

ಇನ್ನು, ಹರಿಹರ ಈ ರಗಳೆಯಲ್ಲಿ ಕಂಡು ವ್ಯಕ್ತಗೊಳಿಸಿರುವ ದರ್ಶನ ಯಾವುದು? ಈ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಉತ್ತರಗಳು ಸಿಕ್ಕುತ್ತವೆ.

ಪೂಜೆ ಎಷ್ಟು ಮುಖ್ಯವೊ ಪೂಜಾ ಸಾಮಗ್ರಿಯೂ ಅಷ್ಟೇ ಮುಖ್ಯ; ಗುರಿ ಪೂಜ್ಯ ವಾದಂತೆ ದಾರಿಯೂ ಪೂಜ್ಯ -ಎಂಬ ಕಾಣ್ಕೆ ಹರಿಹರನ ಈ ರಗಳೆಯಲ್ಲಿ ಮೈವೆತ್ತಿದೆ. ಹೂವುಗಳ ಬಗ್ಗೆ ಅವನು ಅದೆಷ್ಟು ಮೃದುವಾಗಿ ವರ್ತಿಸುತ್ತಾನೆ! ಎಂತಹ ಆತ್ಮೀಯತೆ! ಬಾರವ್ವ, ನೀಡವ್ವ ಮುಂತಾದ ಮಾತುಗಳಲ್ಲಿ ಹುದುಗಿರುವ ಪ್ರೀತಿ, ಅನುಕಂಪಗಳು ವಿಸ್ಮಯ ಹುಟ್ಟಿಸುತ್ತವೆ. ಹೂವು ನೆಲಕ್ಕೆ ಬಿದ್ದೀತೆಂದು ಅವನು ವಹಿಸುವ ಎಚ್ಚರ, ಅದರ ಬಗ್ಗೆ ಅವನಿಗಿರುವ ಗೌರವಭಾವನೆಗೆ ಸಾಕ್ಷಿ. ಎಷ್ಟು ಜನರಲ್ಲಿ ಇದು ಕಂಡುಬರುತ್ತದೆ? ಹೂಗಳನ್ನು ಯಾಂತ್ರಿಕವಾಗಿ ತರಿದು ತರುವವರೇ ಬಹುಮಂದಿ; ತರಿಯುವ ಪ್ರವೃತ್ತಿಗೂ ಹರಿಹರನ ತಿರಿಯುವ ಪ್ರವೃತ್ತಿಗೂ ಎಷ್ಟೊಂದು ಅಂತರ! ಅವನದು ದಾನಸ್ವೀಕಾರವೇ ಹೊರತು ಅಪಹಾರವಲ್ಲ.

ಹೂವು ಒಂದು ನಿರ್ಜೀವ ವಸ್ತು ಎಂಬ ಭಾವನೆ ಕವಿಗಿದ್ದಿದ್ದರೆ ಈ ಪ್ರೀತಿ ಗೌರವಗಳಿರುತ್ತಿರಲಿಲ್ಲ. ಹೂವಿಗೂ ತನ್ನಂತೆಯೇ ಜೀವವುಂಟು, ಅದರಲ್ಲೂ ಶಿವನಿದ್ದಾನೆ ಎಂಬುದು ಕವಿಯ ನಂಬಿಕೆ. ಆದ್ದರಿಂದಲೇ ಅವನು ಪ್ರತಿಯೊಂದು ಹೂಬಳ್ಳಿಯನ್ನೂ ಮಾತನಾಡಿಸಿ ಬೇಡುವುದು. ಸಸ್ಯಗಳಿಗೂ ಪ್ರಾಣವುಂಟೆಂಬುದು ಇತ್ತೀಚಿನ ವೈಜ್ಞಾನಿಕ ಸಿದ್ಧಾಂತ. ಆದರೆ ಅದು ಕವಿಹೃದಯಕ್ಕೆ ಎಂದೋ ಅರಿವಾಗಿದ್ದ ಸತ್ಯ. ಎಂತಲೇ ಹರಿಹರ ಹೂಗಳಿಗೆ ನೋವಾಗದಂತೆ ನಡೆದುಕೊಳ್ಳುತ್ತಾನೆ; ಸಕಲ ಜೀವರಾಶಿಗೂ ಲೇಸನ್ನೇ ಬಯಸುವ ಮನೋಧರ್ಮವನ್ನು ತೋರುತ್ತಾನೆ; ‘ಸರ್ವಭೂತ ಹಿತೇ ರತಃ’ ಎಂಬ ಗೀತಾವಾಕ್ಯಕ್ಕೆ ವ್ಯಾಖ್ಯಾನವಾಗುತ್ತಾನೆ. (ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾನೆ). ಈ ಪ್ರವೃತ್ತಿಯನ್ನು ‘ಅಹಿಂಸೆ’ ಎಂಬ ಒಂದು ಮಾತಿನಲ್ಲಿ-ಅದರ ವ್ಯಾಪಕಾರ್ಥವನ್ನಿಟ್ಟುಕೊಂಡು -ಸಂಗ್ರಹಿಸಬಹುದೆನಿಸುತ್ತದೆ.

ಹರಿಹರ ಹೂ ಕೊಯ್ಯುವುದು ಸ್ವಾರ್ಥಕ್ಕಲ್ಲ; ಶಿವನ ಆರಾಧನೆಗಾಗಿ. ಇದನ್ನವನು ಪದೇ ಪದೇ ನೆನಪು ಮಾಡುತ್ತಾನೆ; ಒಂದೊಂದು ಹೂಗಿಡದ ಹತ್ತಿರ ಹೋದಾಗಲೂ ಈ ಸಂಗತಿಯನ್ನು ತಿಳಿಸುತ್ತಾನೆ. ‘ನನಗಲ್ಲ, ಶಿವನಿಗೆ’ ಎಂಬುದೇ ಅವನ ಪಲ್ಲವಿ. ಭವದಲ್ಲಿ ನಾವು ಮಾಡುವ ಕರ್ಮಗಳೆಲ್ಲ ಶಿವನಿಗೆ ಸಮರ್ಪಿತವಾಗಬೇಕು. ನಾವು ನಿಮಿತ್ತಮಾತ್ರರಾಗ ಬೇಕು ಎನ್ನುವ ದೊಡ್ಡ ಜೀವನತತ್ತ್ವವನ್ನು ಹರಿಹರ ಕವಿ ಈ ಮೂಲಕ ಶ್ರುತಪಡಿಸಿದ್ದಾನೆ ಎನ್ನಬಹುದಲ್ಲವೆ?

ಹೀಗೆ ‘ಪುಷ್ಪರಗಳೆ’ ಕವಿತಯೂ ಆಗಿದೆ, ಕಾಣ್ಕೆಯೂ ಆಗಿದೆ ; ಸತ್ಯ, ಶಿವ, ಸೌಂದರ್ಯದ ಅಂಶಗಳು ಅದರಲ್ಲಿ ಮುಪ್ಪುರಿಗೊಂಡಿವೆ; ಸೌಂದರ್ಯ ಶಿವಕ್ಕೆ ನಿವೇದಿತವಾಗಿದೆ. ಯೋಚಿಸಿದಷ್ಟೂ ಆಳವಾಗುವ ಅರ್ಥದ ಪದರಗಳನ್ನುಳ್ಳದ್ದು ಈ ಕೃತಿ. ಇದು ಕನ್ನಡ ವಾಗ್ದೇವಿಯ ಅನರ್ಘ್ಯ ರತ್ನಾಭರವಣವಲ್ಲದಿರಬಹುದು; ಆದರೆ ಅವಳ ‘ಪೊಸಪೂಮಾಲೆ’ಯಂತೂ ಅಹುದು. ಅಷ್ಟು ಸಾಕು; ಹೂ ಮುಡಿಯದೆ ಸುಮಂಗಲಿ ಶೋಭಿಸುವುದುಂಟೆ?

[1] ಅನಾಘ್ರಾತ ಮೀಸಲು ಪುಷ್ಪ ಹರಿಹರನಿಗೆ ಬಹು ಪ್ರಿಯವೆಂದು ತೋರುತ್ತದೆ : ‘ಬಸವರಾಜದೇವರ ರಗಳೆ’ಯಲ್ಲೂ (ಮೂರನೆಯ ಸ್ಥಲ) ‘‘ಅಳಿಯೆಱಗದನಿಲನಲುಗದ ರವಿಕರಂ ಪುಗದ’’ ಎಂಬ ಮಾತು ಬರುತ್ತದೆ; ಆ ಭಾಗ ಪುಷ್ಪರಗಳೆಯನ್ನೆ ಹೋಲುವಂತಿದೆ.

[2] ಇಲ್ಲಿ ಕವಿ ಆ ಪತ್ರಗಳನ್ನು ‘ಪರಿಮಳದ ಭಾಜನ’ಗಳೆಂದು ಕರೆದಿದ್ದಾನೆ. ಇದು ಸೊಗಸಾದ ರೂಪಕ, ನಿಜ. ಆದರೆ ಕುಸುಮಗಳನ್ನೆ ಪರಿಮಳದ ಭಾಜನಗಳೆಂದು ವರ್ಣಿಸಿದ್ದರೆ, ಅದು ಇನ್ನೂ ಸುಂದರವಾದ ಕಲ್ಪನೆಯಾಗುತ್ತಿತ್ತು ಎನಿಸುತ್ತದೆ.

[3] ೩.ಕಡೆಯಲ್ಲಿ ಬರುವ ಈ ‘ಪರಿಕಿಸು ವಿರೂಪಾಕ್ಷ’ ಎಂಬ ಮಾತು ವಿಶೇಷ ಗಮನಾರ್ಹವಾಗಿದೆ. ಕೃಪಾಯಾಚನೆಯನ್ನಷ್ಟೆ ಹರಿಹರ ಮಾಡಿಲ್ಲ; ‘ಬೇಕಾದರೆ ನನ್ನನ್ನು ಪರೀಕ್ಷಿಸು’ ಎಂದು ಭಗವಂತನಿಗೆ ಸವಾಲು ಹಾಕಿದ್ದಾನೆ. ಈ ನೈತಿಕ ಧೈರ್ಯ ಸಾಮಾನ್ಯರಿಗೆ, ಅಳಿಮನದ ಭಕ್ತರಿಗೆ ಸಾಧ್ಯವಿಲ್ಲ. ಮೊದಲು ಆತ್ಮಪರೀಕ್ಷೆ ಮಾಡಿಕೊಂಡು ಶುದ್ಧವಾಗಿ ಪರಿಣಮಿಸಿದ ಚೇತನ ಮಾತ್ರ ಕೆಚ್ಚಿನಿಂದ ಇಂತಹ ಮಾತುಗಳನ್ನಾಡಬಲ್ಲುದು. ಬಸವಣ್ಣನವರು ಅಂಥ ಒಂದು ಮಹಿಮಾನ್ವಿತ ಚೇತನ; ಅವರ ವಚನಗಳು ಆತ್ಮಪರೀಕ್ಷೆಯ ಪರಂಪರೆ.