ಪ್ರತಿಭಾಸಂಪತ್ತಿಯಿದ್ದರೂ ಅದನ್ನು ದುರ್ವಿನಿಯೋಗಿಸುವ ಅಥವಾ ಪೂರ್ಣವಾಗಿ ಉಪಯೋಗಿಸಿಕೊಳ್ಳದ ದುರದೃಷ್ಟ ಕೆಲವರು ಕವಿಗಳದು. ನೇಮಿಚಂದ್ರ ಅಂಥವರಲ್ಲೊಬ್ಬ. ಕನ್ನಡದಲ್ಲಿ ಅವನಂತಹ ದುರಂತಕವಿ ಮತ್ತೊಬ್ಬನಿಲ್ಲ ಎಂದರೂ ತಡೆಯುತ್ತದೆ. ಆಪಾರವಾದ ಶಕ್ತಿಯಿದ್ದೂ ಗಂಭೀರೋದಾತ್ತವಾದ ಜೀವನದರ್ಶನವಿಲ್ಲದೆ ತನ್ನ ಮಹತ್ವವನ್ನು ತನ್ನ ‘ನೇಮಿನಾಥಪುರಾಣ’ದಂತೆ ಮುಕ್ಕು ಮಾಡಿಕೊಂಡ ಕವಿಯೀತ. ‘ಶೃಂಗಾರ ಕಾರಾಗೃಹ’ನೆಂಬ ಬಿರುದು ಹಚ್ಚಿಕೊಂಡು ‘‘ಸ್ತ್ರೀರೂಪಮೆ ರೂಪಂ, ಶೃಂಗಾರಮೆ ರಸಂ’’, ‘‘ಪೆಂಡಿರೊಳಲ್ಲದಿಲ್ಲ ಸುಖಮೆಲ್ಲಿಯುಂ’’ ಎಂಬ ಕುಸಿದ್ಧಾಂತಕ್ಕೆ ಜೋತುಬಿದ್ದು ತನ್ನ ಕೃತಿಗಳಲ್ಲಿ ಮೇಲಿಂದ ಮೇಲೆ ಔಚಿತ್ಯ ಪ್ರಜ್ಞೆಗೆ ಎರವಾಗುತ್ತಾನೆ; ಲಘುವಾಗುತ್ತಾನೆ. ಕೆಲವಂಶಗಳಲ್ಲಿ ಪಂಪನಿಗೆ ಹೆಗಲೆಣೆಯಾಗಿ ನಿಲ್ಲುವ ಬಲ್ಮೆ ನೇಮಿಗಿದ್ದರೂ, ಪಂಪನ ವ್ಯಕ್ತಿತ್ವದ ಅಖಂಡತೆ ಅವನ ವ್ಯಕ್ತಿತ್ವಕ್ಕಿಲ್ಲ[1]; ಅದು ಬಿರುಕುಗೊಂಡದ್ದು. ಎಂತಲೇ ಅವನ ಕಾವ್ಯಗಳಲ್ಲಿ ಕಂಡುಬರುವ ಸಿದ್ದಿ ಆಂಶಿಕವಾದುದೆ ಹೊರತು ಸಮಗ್ರವಾದುದಲ್ಲ.

‘ಲೀಲಾವತಿ’ಯಲ್ಲಿ ಹಗುರವೂ ತೆಳುವೂ ಆದ ವಸ್ತುವನ್ನಾರಿಸಿಕೊಂಡದ್ದೆ ನೇಮಿಚಂದ್ರನ ಮೊದಲನೆಯ ತಪ್ಪು ; ಅದರ ನಿರ್ವಹಣೆಯಲ್ಲಿ ಅವನು ಮುಗಿಲುಮುಟ್ಟುವುದು ಸಾಧ್ಯವೆ ಇಲ್ಲ. ಅಲ್ಲದೆ indecent, savage ಎಂದು ವಿಮರ್ಶಕರಿಂದ ಬಯ್ಸಿಕೊಂಡಿರುವ ಸುಬಂಧುವಿನ ಕಾವ್ಯ ‘ಲೀಲಾವತಿ’ಗೆ ಆದರ್ಶ. ಹೀಗಾಗಿ ಅದು ‘‘ರಾಗಿಗಳೋದಲ್ ತಕ್ಕ ಕೃತಿ’’ಯಾಯಿತು. ‘ನೇಮಿನಾಥಪುರಾಣ’ ಅದಕ್ಕಿಂತ ಹತ್ತುಪಟ್ಟು ಪರಿಣತವಾದ ಕೃತಿ; ಕವಿ ತನ್ನ ಪರಿಣತ ವಯಸ್ಸಿನಲ್ಲಿ, ಮನಸ್ಸಿನಲ್ಲಿ ರಚಿಸಿರಬಹುದಾದ್ದು. ಅದರಲ್ಲೂ ನೇಮಿಯ ಪೂರ್ವವಾಸನೆ ಅಲ್ಲಲ್ಲಿ ದಾಳಿ ಮಾಡಿ ಕಾಲುಷ್ಯಕ್ಕೆಡೆಗೊಟ್ಟರೂ ಒಟ್ಟಿನಲ್ಲಿ ಅದು ಕನ್ನಡದ ಸತ್ ಕಾವ್ಯಗಳಲ್ಲೊಂದು. ದುರ್ದೈವದಿಂದ ಅದು ಅರ್ಧಕ್ಕೇ ನಿಂತಿದೆ; ಕವಿ ಪೂರ್ತಿಗೊಳಿಸಿದ್ದರೆ, ಕುರುವಂಶದ ಕಥೆಯನ್ನು ಪೂರ್ತಿ ಬಿತ್ತಿರಿಸಿದ್ದರೆ ಅವನ ಸಾಮರ್ಥ್ಯಕ್ಕದು ಮತ್ತೂ ಉತ್ತಮವಾದ ಒರೆಗಲ್ಲಾಗಬಹುದಿತ್ತು. ಅಂತೂ ನೇಮಿ ಮಹಾಕವಿಯಾಗದೆ, ‘‘ವರ್ಣನಾಸಕ್ತಿ ಕಡಿಮೆಯಾಗಿ ಪ್ರಮಾಣಜ್ಞಾನ ಹೆಚ್ಚಾಗಿ ಜೀವನದರ್ಶನ ಗಂಭೀರವಾಗಿದ್ದರೆ ನೇಮಿ ಮಹಾಕವಿಯಾಗುತ್ತಿದ್ದನು’’[2] ಎಂಬ ಊಹಾ ವಿಮರ್ಶೆಗೆ ಅವಕಾಶಮಾಡಿಕೊಟ್ಟಿ ದ್ದಾನೆ. ಆದರೂ ಆಸನ್ನಮಹಾಕವಿಯಾಗಿ, ಆ ಮಟ್ಟದ ಸತ್ವವನ್ನು ಅಲ್ಲಲ್ಲಿ ಮೆರೆದಿದ್ದಾನೆ ಎಂಬುದು ಸಾಮಾನ್ಯ ಸಂಗತಿಯಲ್ಲ.

ನೇಮಿಚಂದ್ರನಲ್ಲಿ ಪಾಂಡಿತ್ಯ, ಪ್ರತಿಭೆ ಎರಡೂ ಸಮಪರಿಮಾಣದಲ್ಲಿ ಬೆರೆತಿವೆ. ಪಾಂಡಿತ್ಯದ ಉಬ್ಬರ, ಚಮತ್ಕಾರಜಾಲ, ಅನುಕರಣ ಪರಂಪರೆ ಅವನಲ್ಲಿ ವಿಶೇಷವಾಗಿ ಸಿಕ್ಕುತ್ತವೆ. ಆದರೆ ಅವನ್ನೆಲ್ಲ ನಿವಾರಿಸಿ ನೋಡಿದಾಗ, ತನ್ನ ಅತ್ಯುತ್ತಮವಾದುದನ್ನು, ಸಾರಭೂತವಾದುದನ್ನು ನೇಮಿಚಂದ್ರ ಸಾಕಷ್ಟು ಕೊಟ್ಟಿದ್ದಾನೆಂಬುದು ವ್ಯಕ್ತವಾಗುತ್ತದೆ. ಅವನು ವಕ್ರೋಕ್ತಿ, ಸ್ವಭಾವೋಕ್ತಿ ಎರಡರಲ್ಲೂ ಗಟ್ಟಿಗ; ಕಲ್ಪನೆ, ವಾಸ್ತವಿಕತೆ ಎರಡರಲ್ಲೂ ದಕ್ಷ. ಅವನ ಚಿತ್ರಣ ಕೆಲವೆಡೆಗಳಲ್ಲಿ ಭವ್ಯತಾಸಂಸ್ಪರ್ಶಿಯಾಗಿ, ಅವನು ಮಹಾಕವಿಯೋಗ್ಯತೆಯುಳ್ಳವನೆಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ. ಕವಿಯಾಗಿ ಅವನ ಯೋಗ್ಯತೆ ನಿಸ್ಸಂದೇಹವಾದದ್ದು; ವ್ಯಕ್ತಿಯಾಗಿ ಮಾತ್ರ ಅವನು ಆಗಾಗ ಅಸಭ್ಯನಂತೆ ತೋರುತ್ತಾನೆ, ಅದರಲ್ಲೂ ತಾರುಣ್ಯದ ಸೃಷ್ಟಿಯಾಗಿರಬಹುದಾದ ‘ಲೀಲಾವತಿ’ಯಲ್ಲಿ. ಆದ್ದರಿಂದಲೇ ಅವನೊಬ್ಬ ದುರಂತಕವಿ ಎಂದದ್ದು.

ನೇಮಿಚಂದ್ರನ ಕೆಲವು ವರ್ಣನೆಗಳ ಉಜ್ವಲತೆಯನ್ನು ಗುರುತಿಸುವುದು ಪ್ರಕೃತ ವಿವಕ್ಷೆ. ವರ್ಣನೆಗಳು ಕಾವ್ಯದ ಒಂದು ಗಣ್ಯವಾದ ಮುಖವಾದುದರಿಂದ ಅವು ಕವಿಯ ಸಿದ್ದಿಗೆ ಅಥವಾ ಅಸಿದ್ದಿಗೆ ತೋರ್ ಬೆರಳಾಗಬಲ್ಲುವು.

ಸೀತೋದಾ ನದಿಯ ಈ ವರ್ಣನೆ ಕಲ್ಪನೆಯ ಎತ್ತರಕ್ಕೆ ನಿದರ್ಶನವಾಗಿದ್ದರೂ ಬುದ್ದಿಪೂರ್ವಕ ಸಮೀಕರಣಕ್ಕೆಳಸಿ ತನ್ನ ಔತ್ತಮ್ಯಕ್ಕೆ ಭಂಗ ತಂದುಕೊಂಡಿದೆ:

ಮೇದಿನಿ ಬೆಂಗೆ ಬಿಟ್ಟ ಮುಡಿಯಂತೆಸೆದಿರ್ಪುದು ಪುಷ್ಪಿತಂ ತಟೀ
ಪಾದಪವೀಥಿ ಪಂತಿಗುರುಳಂತಿರೆ ಸಂಚಳ ಮೀನ ಸಂಚಯಂ
ಪೂದುಱುಗಲ್ ತಡಂ ತೊಡರ್ದು ತೋರ್ಪವೊಲೊಪ್ಪಿರೆ ಕೊಂಕುವೆತ್ತ ಸೀ
ತೋದೆ ಸಡಿಲ್ದು ನೀಳ್ದ ಶರದಿಂ ನಿಱಿಗೊಂಡು ಬಳಲ್ದ ಭಂಗಿಯಿಂ

ನದಿ ಭೂದೇವಿಯ ಬೆನ್ನ ಮೇಲಿಳಿದ ಮುಡಿ ಎಂಬ ಭಾವನೆ ಬಹು ಮನೋಜ್ಞವಾದುದು. ಉಳಿದುದೆಲ್ಲ ಅದಕ್ಕೆ ಮಾಡಿದ ತಾರ್ಕಿಕ ವ್ಯಾಖ್ಯಾನ.

ನೇಮಿಚಂದ್ರ ಒಂದೆಡೆ ನಕ್ಷತ್ರಗಳನ್ನೂ ಚಂದ್ರನನ್ನೂ ತನ್ನ ಸ್ವಭಾವಕ್ಕ ತಕ್ಕಂತೆ ಅತ್ಯಂತ ವಿಶಿಷ್ಟವಾಗಿ ವರ್ಣಿಸಿದ್ದಾನೆ:

ಕುವಲಯ ದೀರ್ಘನೇತ್ರಮಲರುತ್ತಿರೆ ಮೂಡುವ ಮೀಂಗಳಾಕೆಯೊ
ಪ್ಪುವ ಮುಖಪದ್ಮದೊಳ್ ಮೊಡವಿ ಮೂಡಿದವೊಲಿರೆ ಕಾಲಮೆಂಬ ಶಂ
ಭುವಿನ ಶರೀರದೊಳ್ ಪುದಿದ ಗೌರಿಗೆ ರಾಗಮನೊಟ್ಟಿಕೊಂಡು ಮೂ
ಡುವ ಮೊಲೆಯಂತಿರೆ ಮೂಡಿದುದು ಮೂಡಣ ದಿಕ್ಕಿನೊಳಿಂದುಮಂಡಲಂ

ನಕ್ಷತ್ರಗಳು ಅಗಸದ ಮೊಡವೆಗಳು ಎಂಬ ಅನುಭವ ಯಾವ ನವ್ಯಕಾವ್ಯಕ್ಕೆ ಕಡಿಮೆಯಾಗಿದೆ?

ತಾರೆಗಳನ್ನು ವರ್ಣಿಸುವ ಈ ಇನ್ನೊಂದು ಪದ್ಯದಲ್ಲಿ ಪಂಪನ ಮಾತಿನ ಛಾಯೆಯಿದ್ದರೂ ನೇಮಿಯ ಸ್ವೋಪಜ್ಞತೆಗೆ ಬಾಧಕವಿಲ್ಲ;

ಓಸರಿಸೆ ಸಂಜೆ ಜವನಿಕೆ
ಯೋಸರಿಸಿದ ತೆರದೆ ರಾತ್ರಿ ನರ್ತಕಿ ಪುಗುತುಂ
ಸೂಸಿದ ಪುಷ್ಪಾಂಜಲಿಯೆನೆ
ಭಾಸಿಸಿದುವು ಗಗನರಂಗದೊಳ್ ತಾರಗೆಗಳ್

ಸಂಧ್ಯಾರಾಗದ ವರ್ಣನೆ ಈ ಪದ್ಯದಲ್ಲಿ ಅಪೂರ್ವವಾಗಿ ಮೈವೆತ್ತಿದೆ:

ದೂಸರಮಾದುದು ಗಗನಂ
ಮಾಸಿದುದಮರೇಂದ್ರದಿಙ್ಮುಖಂ ಮೃತಮಾದಾ
ವಾಸರದ ದೆಸೆಗೆ ಚುರ್ಚಿದ
ಕೇಸುರಿಯೆನೆ ನೆಗೆದುದಪರ ಸಂಧ್ಯಾರಾಗಂ

ಬೆಳದಿಂಗಳ ಕಣ್ಮರೆಯನ್ನು ಕುರಿತ ಕವಿಯ ಕಲ್ಪನೆ ಬಂಧುರವಾದುದು:

ಭುವನಮನಾವಗಂ ಪುದಿದು ತೀವಿದ ತಣ್ಗದಿರ್ಗಳ್ ಪೊದೞ್ದ ಕೈ
ರವವನಮಾದುವೆಯ್ದೆ ಪೊಸ ಮಲ್ಲಿಗೆಯಾದುವು ಮೌಕ್ತಿಕಂಗಳಾ
ದುವು ಸುರಸಿಂಧುವಾದುವು ಸುಧಾರ್ಣವಮಾದುವು ಚಂದ್ರಕಾಂತಮಾ
ದುವು ಹಿಮಮಾದುವಲ್ಲದೊಡೆ ಚಂದ್ರನ ಚಂದ್ರಿಕೆ ಮಾಯವಾದುವೇ

ಶರತ್ ಕಾಲದ ಆಗಸದಲ್ಲಿ ಹಾರುವ ಗಿಳಿವಿಂಡನ್ನು ಕವಿ ಕಾಮನಬಿಲ್ಲಿಗೆ ಉಪಮಿಸುತ್ತಾನೆ; ಆ ಗಿಳಿವಿಂಡಿನಲ್ಲಿ ಕಾಮನಬಿಲ್ಲಿನ ಕೆಲವು ಬಣ್ಣಗಳಿವೆ- ಆದರೆ ಅದನ್ನು ವಾಚ್ಯ ಮಾಡಿಲ್ಲ:

ಅರಗಿಳಿಯ ಪಿಂಡು ಬಂದುಗೆ
ಯರಲಂದದ ಚಂಚುವಿಂದೆ ಕೞಮೆಯ ತೆನೆಯಂ
ಬರೆ ಕರ್ಚಿ ಪಾಱುತಿರ್ದುವು
ಶರದಂ ಪುಗೆ ಪಾಱಿಪೋಪ ಸುರಚಾಪದವೋಲ್

ಹೇಮಂತ ಋತುವಿನ ಸೂರ್ಯಬಿಂಬವನ್ನು ನೇಮಿಚಂದ್ರ ವರ್ಣಿಸಿರುವ ಬಗೆ ಅನನ್ಯವಾದುದೆನ್ನಬೇಕು; ಅದು ಚಂದ್ರನ ಮರಿಯಂತೆ ತಣ್ಣಗಿತ್ತಂತೆ:

ಮಾಸಱಮೆನೆ ಪಾರದದಿಂ
ಪೂಸಿದವೋಲ್ ಪೊನ್ನ ಮುಕುರಮಂ ಹಿಮಲಿಪ್ತಂ
ನೇಸಱ ಬಿಂಬಂ ತಿಂಗಳ
ಕೂಸಿನವೋಲ್ ಕೋಡುತಿರ್ದುದಂದಿನ ದಿನದೊಳ್[3]

ಕಾಡಿನ ದಟ್ಟಕತ್ತಲೆಯನ್ನು ಕವಿ ಶಕ್ತವಾದ ರೀತಿಯಲ್ಲಿ ಬಣ್ಣಿಸುತ್ತಾನೆ:

ಅರ್ಕಾಂಶುಗೆ ಹುಗಲಿಲ್ಲದೆ
ಸಿರ್ಕರಡಿಯ ಕಡುಪಿನಂದದಡವಿಯ ತಮಮಂ
ಮಾರ್ಕೊಡು ಸುಱೆವ ಕಾಡೆಳ
ವೆರ್ಕಿನ ಕಣ್ನಡೆವ ಸೊಡರ್ಗಳೆನೆ ಜಲಜಲಿಕುಂ

ಉಲ್ಕಾಪಾತದ ಚಿತ್ರ ಹೀಗೆ ಪರಿಣಾಮಕಾರಿಯಾಗಿ ಮೂಡಿದೆ:

ಬಿರಿವನ್ನಂ ತಮವೆಂಬ ನೀಳಗಿರಿಯಂ ತಾರಾಸಹಸ್ರಾಕ್ಷನುಂ
ಬರೆ ಗೋತ್ರಾಂತಕನಿಟ್ಟ ವಜ್ರವೆನಸುಂ ಬೀೞ್ವಂತೆ ಕಣ್ಗುಕ್ಕೆ
ಣ್ಮರಲಂ ಪೆಣ್ಬಡೆ ಮುಚ್ಚೆ ಭೂಪವರನೆಂಬೊಳ್ವುಲ್ವ ಮೇಲೊಂದು
ಳ್ಳುರಿ ಬೀೞ್ವಂತೆವೊಲುಳ್ಕು ಬಿರ್ದುದು ನೃಪಂ ಬೆಂಬೀೞ ನಿರ್ವೇಗದಿಂ

ಇದು ಪ್ರಕೃತಿಲೋಕದ ಕಂಡರಣೆಯಾಯಿತು. ಮಾನುಷ ಪ್ರಪಂಚವನ್ನು ಚಿತ್ರಿಸುವಲ್ಲಿ ನೇಮಿಚಂದ್ರ ಹಿಂದೆ ಬಿದ್ದಿಲ್ಲ. ವಸುದೇವನ ರೂಪ ವಿಲಾಸದ ನಿರೂಪಣೆಯಿದು:

ಪೊಸ ದೇಶಿ ಪೊಂಗು ಪೊಂಗೆಸೆ
ವೆಸಕಂ ಕಡುಗಾಡಿ ಗರುಡಿಯೆಂಬಿವಱಿಂದಂ
ವಸುಧೇಶನಣುಗದಮ್ಮಂ
ವಸುದೇವಂ ಧರೆಗೆ ಕಣ್ಣು ಮುಳ್ಳಾಗಿರ್ದಂ

‘ಕಣ್ಣು ಮುಳ್ಳಾಗಿರ್ದಂ’ ಎಂಬ ದೇಸಿಮಾತಿನ ಕಸುವು ಅಷ್ಟಿಷ್ಟಲ್ಲ. ವಸುದೇವನ ಮೋಹಕ ರೂಪವನ್ನು ನೋಡಿ ನೋಡಿ ಸ್ತ್ರೀಯರೆಲ್ಲ ಅವನನ್ನೆ ಹೋಲುವ ಮಕ್ಕಳನ್ನು ಪಡೆದರೆಂಬ ಮನೋವೈಜ್ಞಾನಿಕ ಸತ್ಯವನ್ನು ನೇಮಿಚಂದ್ರ ಹೇಳುವ ವೈಖರಿಯಿದು : ‘‘ವಸುದೇವನ ದೇಹಮನಗೆವೊಯ್ದಂತೆಯುಂ ಪಱಿದು ಪತ್ತಿಸಿದಂತೆಯುಂ… ವಸುದೇವನ ರೂಪು ಗರ್ಭದೊಳ್ ಬಿಂಬಿಸಿ ಬಿತ್ತಾದಂತೆಯಮಚ್ಚೊತ್ತಿದಂತೆಯುಂ…’’

ಸ್ತ್ರೀಯೊಬ್ಬಳ ಬಿಳಿಯ ದುಕೂಲವನ್ನು ಕವಿ ವರ್ಣಿಸುವಲ್ಲಿ ಚಮತ್ಕೃತಿ ಪ್ರಧಾನವಾಗಿದ್ದರೂ, ಅದು ನಮ್ಮನ್ನು ಅಕರ್ಷಿಸುವಂಥದು:

ಸುದತಿಯ ದಿವ್ಯಗಂಧತನುಚಂದನಶಾಖೆಯೊಳಂಗಜಾಹಿಯಿ
ಕ್ಕಿದ ಹೆರೆಯಂತಿರುಟ್ಟ ದುಗುಲಂ…..

ಗರ್ಭಿಣಿಯ ಸ್ತನದ್ವಯವನ್ನು ನೇಮಿಚಂದ್ರ ಕಂಡ ಪರಿ ತುಂಬಾ ವಿಶಿಷ್ಟ ಸುಂದರವಾಗಿದೆ:

ನೆಗೆದ ಪಯೋಧರದ್ವಯದೊಳಾಕೆಯ ಗರ್ಭದ ರಾಜಪುತ್ರನಾ
ರೊಗಿಸುವ ಪಾಲ್ಗಳಂ ಮಡಗಿ ಮುದ್ರಿಸಿದಂತೆ ವಿಧಾತ್ರನೊಯ್ಯನೊ
ಯ್ಯಗೆ ಕುಚಚೂಚಕಂಗಳೊಳೆ ಕಣ್ಗಳೊಳಂಗನೆಯೆಚ್ಚಿಕೊಳ್ವ ಕಾ
ಡಿಗೆಯುದಿರ್ದತೆ ಕರ್ಪು ಕವದಿಂದಡಿಯಿಟ್ಟುದು ಭೃಂಗಭಾಸುರಂ

ಇಲ್ಲಿ ಯಾವ ಅನೌಚಿತ್ಯವೂ ಇಲ್ಲ. ಕವಿಯ ಕಲ್ಪನೆ ಮೆಚ್ಚುಕೆಗೆ, ಗೌರವಕ್ಕೆ ಪಾತ್ರವಾಗುತ್ತದೆ.

ಐಂದ್ರಜಾಲಿಗನಾದ ಮಾಯಾಭುಜಂಗನ ಚಿತ್ರ ಈ ಪದ್ಯಗಳಲ್ಲಿ ಪ್ರಚಂಡವಾಗಿ ನಿರ್ಮಿತವಾಗಿದೆ:

ಆದಿತ್ಯನ ಮಂಡಲದೊಳ್
ತೇದರುಣನನಮರೆ ಬೊಟ್ಟನಿಟ್ಟಂತೆ ಬೆಡಂ
ಗಾದುದು ಜೋಗಿಯ ನೊಸಲೊಳ್
ಮೂದೆರೆಗೊಂಡೊಪ್ಪುವರುಣಚಂದನಗಂಧಂ

ಸಿಡಿಲಂ ಕಿಱಿಕಿಱಿದಾಗಿರೆ
ಕಡಿದು ತೊಡರ್ಚಿದವೊಲಾತನೆಡಗಾಲೊಳ್ ಪೊಂ
ದೊಡರಲೆದು ಘಣ್ಮುಘಳಿಲೆಂ
ದೊಡನಲೆದುದು ಮಲೆವ ರಿಪುಚಮತ್ಕಾರಿಗಳಂ

ಕವಿಕಲ್ಪನೆಯ ಉತ್ತುಂಗತೆ ಇಲ್ಲಿ ಚೆನ್ನಾಗಿ ನಿದರ್ಶಿತವಾಗಿದೆ.

ನೇಮಿಚಂದ್ರನ ವಕ್ರೋಕ್ತಿ ವೈಭವವನ್ನು ಇದುವರೆಗೆ ನೋಡಿದೆವು; ಅವನ ಸ್ವಭಾವೋಕ್ತಿ ಸ್ವಾರಸ್ಯವನ್ನು ಈಗ ಅವಲೋಕಿಸಬಹುದು. ಅಭಿಸಾರಿಕೆಯೊಬ್ಬಳ ಶ್ವೇತ ಚಿತ್ರವಿದು:

ದುಗುಲಮನುಟ್ಟು ತೊಟ್ಟು ಪೊಸ ಮುತ್ತನೆ ಚಂದನದಣ್ಪನಿಕ್ಕಿ
ಲ್ಲಿಗೆಯ ಸರಂಗಳಂ ಮುಡಿದು ಚಂಪಕಮಾಲೆಯನೆತ್ತಿ ಮೇಲೆ ತುಂ
ಬಿಗಳೊಲೆದಾಡಲಱಿಯಲಾಗದವೋಲ್ ನವಚಂದ್ರಿಕಾಚ್ಛವೀ
ಚಿಗಳೊಡಗೂಡಿ ಪೋದಳಭಿಸಾರಿಕೆ ಮುತ್ತಿನ ಬೊಂಬೆಯೆಂಬಿನಂ

ಹೀಗೆಯೆ ಚಂದ್ರಪ್ರಭ ಮೂರ್ತಿಯ ಧವಳಿಮೆಯನ್ನು ಕವಿ ಬಣ್ಣಿಸುವುದರ ಸೊಗಸು ನೋಡುವಂತಿದೆ, ಕೇಳುವಂತೆಯೂ ಇದೆ:

ಎಳವೆಳಗಿನ ತಣ್ಬೆಳಗಿನ
ತಳಿರ್ವೆಳಗಿನ ಬೆಳ್ಳಿವೆಳಗಿನೊಳ್ವೆಳಗಿನ
ಲ್ವೆಳಗಿನ ಬಳಗದ ಬಳಸೆನೆ
ತೊಳತೊಳತೊಳಗಿದುದು ಮೂರ್ತಿ ಚಂದ್ರಪ್ರಭನಾ

ಬೆಳಗಿನಲ್ಲಿ ಎಷ್ಟೊಂದು ವೈವಿಧ್ಯವನ್ನು ಗುರುತಿಸಿದ್ದಾನೆ ಕವಿ! ಹಿತವಾದ ಶಬ್ದಾಲಂಕಾರ ಪದ್ಯಕ್ಕೆ ಶೋಭೆಯನ್ನಿತ್ತಿದೆ. ‘ಳ’ ಕಾರ ಪ್ರಾಸಾನುಪ್ರಾಸಗಳು ಜಿನಮೂರ್ತಿಯ ದೇವೀಪ್ಯಮಾನ ಸ್ವರೂಪವನ್ನು ಅನುಭವಕ್ಕೆ ತರುತ್ತವೆ.

ಶ್ಮಶಾನದಲ್ಲಿ ಕವಿ ಚಿತಾಗ್ನಿಯ ಎಷ್ಟೊಂದು ವಿನ್ಯಾಸಗಳನ್ನು ಪರಿಸೀಲಿಸಿದ್ದಾನೆಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ:

ಪೊಗೆವ ಚಿತಾಗ್ನಿ ಪೊತ್ತುವ ಚಿತಾಗ್ನಿ ಪೊದೞ್ವ ಚಿತಾಗ್ನಿ ಬಾಂಬರಂ
ನೆಗೆವ ಚಿತಾಗ್ನಿ ನಂದುವ ಚಿತಾಗ್ನಿ ಕನಲ್ವ ಚಿತಾಗ್ನಿ ಗಾಳಿಯಿಂ
ಮಗುಳ್ವ ಚಿತಾಗ್ನಿ ಮಗ್ಗುವ ಚಿತಾಗ್ನಿ ಕನಲ್ವ ಚಿತಾಗ್ನಿಯಲ್ಲಿಗ
ಲ್ಲಿಗೆ ಪುದಿದಿರ್ದುವಾ ಮಸಣದೊಳ್ ವಿಳಯಾಗ್ನಿಯ ಬಿಟ್ಟ ಬೀಡುವೊಲ್

ಇತರರಿಗೆ ಒಂದಾಗಿ ಕಾಣತಕ್ಕದ್ದು ಕವಿ ಮನೋಧರ್ಮಕ್ಕೆ ಹಲವಾಗಿ ಕಾಣುತ್ತದೆ, ಸೂಕ್ಷ್ಮ ದೃಷ್ಟಿಯಿಂದಾಗಿ; ಇತರರಿಗೆ ಹಲವಾಗಿ ಕಾಣತಕದ್ದು ಕವಿಗೆ ಒಂದಾಗಿ ಕಾನುತ್ತದೆ, ಸಮನ್ವಯ ದೃಷ್ಟಿಯಿಂದಾಗಿ. ಇಲ್ಲೆಲ್ಲ ನೇಮಿಯ ಸೂಕ್ಷ್ಮದೃಷ್ಟಿ ಪ್ರಕಟವಾಗಿದೆ.

ಕೃಷ್ಣನ ಬಾಲಲೀಲೆಗಳನ್ನು ನೇಮಿಚಂದ್ರ ಅತ್ಯಂತ ಚೇತೋಹಾರಿಯಾಗಿ ಆವಿಷ್ಕರಿಸಿ ದ್ದಾನೆ, ಆ ತುಂಟ ಬಾಲಕನ ಕುಚೇಷ್ಟೆ ಉಪದ್ರವಗಳನ್ನು ಮಾತ್ರವಲ್ಲದೆ ಶೌರ್ಯ ಧೈರ್ಯ ಪರಾಕ್ರಮಗಳನ್ನು ಪ್ರಭಾವಶಾಲಿಯಾದ ರೀತಿಯಲ್ಲಿ ಚಿತ್ರಿಸುತ್ತಾನೆ:

ಇಡುವಂ ಗುರ್ದುವನುರ್ದುವಂ ಕೆಡಪುವಂ ಮೇಲಿಕ್ಕುವಂ ಕುಕ್ಕುವಂ
ಬಡಿವಂ ಬಯ್ದು ಚಿವುಂಟುವಂ ಕಿನಿಸುವಂ ಪಾಯ್ದೊತ್ತುವಂ ಕುತ್ತುವಂ
ಜಡಿವಂ ಜತ್ತುಕುರಾಡುವಂ ಬಳಸುವಂ ಬೆನ್ನಟ್ಟುವಂ ಮುಟ್ಟುವಂ
ಪಿಡಿವಂ ಮಕ್ಕಳನೇಂ ಕರಂ ವಿಕಾರಿಯೋ ಕೂಸಾಟದೊಳ್ ಕೇಶವಂ

ಉರಗಾನೀಕಮನೆತ್ತಿ ತರ್ಪನಿದು ಬಲ್ನೇಣೆಂದು ತನ್ನಂದ ಸುಂ
ದರಿಯೋವೋವೆನುತೋಡೆ ಕಾಡ ಪುಲಿಯಂ ಬೆಕ್ಕೆಂದು ತರ್ಪಂ ಮಹಾ
ಕರಿಯಂ ಕೊರ್ವಿದ ದಂಷ್ಟ್ರಿಯೆಂದು ಪಿಡಿತರ್ಪಂ ನೋಡ ನಾಯೆಂದು ಕೇ
ಸರಿಯಂ ಪಾಸದೊಳಿಕ್ಕಿ ತರ್ಪನಿದು ಬಾಲಕ್ರೀಡೆ ಗೋಪಾಳನಾ

ಇದು ಕಂಸನ ಚಿತ್ರ, ಸುಮೂರ್ತವಾಗಿದ್ದು ಕಣ್ಣಿಗೆ ಒತ್ತಿ ನಿಲ್ಲುವಂಥದು:

ಬಿಡುದಲೆ ಬಿಟ್ಟ ಕಣ್ ಕಲಿಮೊಗಂ ಕಡಿಗೊಂಡುಡೆ ಬೆಟ್ಟಿತಪ್ಪ ಕೈ
ಯಿಡಿದು ಪೊರೞ್ಚಿ ಮಾಡಿದವೊಳಿಪ್ಪೊಡಲೊಪ್ಪುವ ರೂಪು ತುಪ್ಪಮಂ
ತೊಡೆದವೊಲಪ್ಪ ಮೀಸೆ ಮಿಸುಗುತ್ತಿರೆ ಬಂದನದೊರ್ವನಂದು ಬಿ
ಲ್ವಿಡಿದು ಯುವಾನನಲ್ಲಿಗೆ ವೀ ವೀರನದೋತ್ಕಟಂ ಭಟಂ
ಒಬ್ಬ ವಿಪ್ರನ ಚಿತ್ರವೂ ಅಷ್ಟೇ ಸ್ಫುಟವಾಗಿ ಮೂಡಿದೆ:
ಪೊಕ್ಕ ಕದಂಪು ಪತ್ತಿ ಪೆಡೆಗೊಂಡ ಕೊರಲ್ ಪುಣಿಚೆರ್ದ ಕೀನಿವಲ್
ಪೊಕ್ಕಡಗಿರ್ದ ಕಣ್ಕುರುಳಿಗೊಂಡರೆಬತ್ತಿದ ಬಾಯ್ ಬಳಲ್ದ ಮೆ
ಯ್ಯಕ್ಕುೞಿಸಿರ್ದ ಪೆರ್ಬಸಿಱಗುರ್ವಿಸೆ ಬಂದನದೊರ್ವ ಪಾರ್ವನ
ಲ್ಲೊಕ್ಕಿೞಿತಪ ಕೈಪೆವೆಮರಂ ತುದಿನಾಲಗೆಯಿಂದೆ ನೆಕ್ಕುತಂ

ವಾಮನವಾಗಿ ಬಲಿಯಲ್ಲಿಗೆ ಬಂದ ವಿಷ್ಣುಕುಮಾರನ ವರ್ಣನೆಯಲ್ಲಿ ಕೂಡ ಇದೇ ತೆರನಾದ ವಾಸ್ತವಿಕತೆಯಿದೆ:

ಬಗೆಯೆ ಕವಲ್ತ ಕಾಸೆ ಪೊಸ ಜನ್ನಿವರಂ ಶಿಖೆ ಕೋವಣಂ ಕರಂ
ಡಗೆ ಕಿಸುವೊನ್ನ ಬಟ್ಟುಗೊಡೆ ಭಾಸುರನಾಮದ ಬೊಟ್ಟು ಕೊಪ್ಪಿನೊಳ್
ನೆಗೆದ ಕುಶಾಂಕುರಂ ಮಿಸುಪ ಮುಂಜಿ ಪಲಾಶದ ದಂಟು ಕುಂಡಳಂ
ಬಗೆವುಗೆ ಬಂದನಂದು ಬಲಿಯಲ್ಲಿಗೆ ವಾಮನನಾಗಿ ಕಾಮದಂ

ನೇಮಿಚಂದ್ರನ ಪರಿಭಾವನೆಯಲ್ಲಿ ಭವ್ಯತಾಗುಣ ಹೇಗೆ ನೆಲೆಗೊಂಡಿದೆಯೆಂಬುದು ಮಹತ್ವದ ಸಂಗತಿ. ಈ ಸೂರ್ಯೋದಯ ವರ್ಣನೆಯಲ್ಲಿ ಅದನ್ನು ಕಾಣಬಹುದು:

ಜಳದಿ ಚಳೋವೀಚಾಮರಚಯಂಗೆ ದಿಶಾಧಿಪದಿಗ್ಗಜೇಂದ್ರ ಸಂ
ಕುಳ ಪರಿವಾರಭಾಗಿಗೆ ನಭೋಮಣಿ ಮಂಡಪಮಂಡನಂಗೆ
ಣ್ಗೊಳಿಸೆ ಜಗನ್ಮಹಾಪ್ರಭುಗಭೀಕ್ಷಿಸಲೆತ್ತಿದ ಸುಪ್ರಭಾತಮಂ
ಗಳ ಮಣಿದರ್ಪಣಕ್ಕೆ ದೊರೆಯಾಯ್ತುದಯಾದ್ರಿಯೊಳರ್ಕಮಂಡಲಂ

ಭಾವ ಭಾಷೆಗಳೆರಡೂ ಇಲ್ಲಿ ಉದಾತ್ತವಾಗಿದ್ದು ನಮ್ಮ ಹೃದಯವನ್ನು ಗೆದ್ದುಕೊಳ್ಳುತ್ತವೆ; ಬೆರಗಿನಲ್ಲಿ ಅದ್ದುತ್ತವೆ.

‘ನೇಮನಾಥಪುರಾಣ’ದಲ್ಲಿ ಬರುವ ವಾಮನಾವತಾರದ ವರ್ಣನೆಯಂತೂ ಭವ್ಯತೆಯ ಪರಾಕಾಷ್ಠೆಯಾಗಿದ್ದು, ಸಾಹಿತ್ಯ ಜಗತ್ತಿನ ಮಹೋನ್ನತ ಸ್ಥಾನಗಳಲ್ಲಿ ಒಂದಾಗಿದೆ. ವಾಮನವಾಗಿ ಬಂದ ವಿಷ್ಣು ಮನೋವೇಗದಲ್ಲಿ ಬೆಳೆಬೆಳೆದು ತ್ರಿವಿಕ್ರಮನಾಗಿ ವಿರಾಡ್ರೂಪಿಯಾಗಿ ವಿಜೃಂಭಿಸಿದ ಅದ್ಭುತವನ್ನು ನೇಮಿಚಂದ್ರ ನಮಗೆ ಕಾಣಿಸುತ್ತಾನೆ. ವಾಮನ ವಿಕಾಸವನ್ನು ಕುರಿತ ಕವಿಯ ವಿಸ್ಮಯದ ಪ್ರತಿಕ್ರಿಯೆ ತುಂಬ ಸಹಜವಾಗಿ ಜೀವಂತವಾಗಿ ನಾಟಕೀಯವಾಗಿ ಅಭಿವ್ಯಕ್ತವಾಗಿದೆ. ‘ಕಾದಂಬರಿ’ ಕಾವ್ಯದ ಅಚ್ಛೋದ ಸರೋವರದ ವರ್ಣನೆಯನ್ನು ಇದರ ಒಂದು ಭಾಗದೊಡನೆ ಹೋಲಿಸಬಹುದು. ಇಲ್ಲಿ ದೃಶ್ಯ ಸ್ಥಿರವಾದದ್ದು; ಪ್ರೇಕ್ಷಕ ದೂರದಿಂದ ಹತ್ತಿರ ಹತ್ತಿರ ಬಂದಂತೆ ಏನು ಅನುಭವವಾಯಿತೆಂಬುದನ್ನು ಕವಿ ಅಮೋಘವಾಗಿ ನಿರೂಪಿಸಿದ್ದಾನೆ; ಅಲ್ಲಿ ದೃಶ್ಯ ಚಲನಶೀಲವಾದುದು, ಪ್ರೇಕ್ಷಕ ಸ್ಥಾಯಿ. ಅಲ್ಲಿನ ಅನುಭವ ಸರ್ವೇಂದ್ರಿಯ ಗಮ್ಯವಾದದ್ದು, ಇಲ್ಲಿನದು ನೇತ್ರಗಮ್ಯವಷ್ಟೆ. ಎರಡು ಕಡೆಯಲ್ಲೂ ಅಚ್ಚರಿಯಿದೆ; ಅಭಿವ್ಯಕ್ತಿಯೂ ಮೇಲುನೋಟಕ್ಕೆ ಒಂದೇ ಬಗೆಯಾಗಿದೆ. ನಾಗವರ್ಮ ‘ಅಲ್ತು’ ಎಂಬ ಉದ್ಗಾರದ ಪುನರಾವೃತ್ತಿಯಿಂದ ಹಿಂದಿನ ಒಂದೊಂದು ಭಾವನೆಯನ್ನೂ ಅಲ್ಲಗಳೆಯುತ್ತ ಹೋದರೆ, ನೇಮಿಚಂದ್ರ ನಿಷೇದಾರ್ಧಾಕ ಅವ್ಯಯಗಳಿಂದ ಹಿಂದಿನ ಒಂದೊಂದು ದೃಶ್ಯವನ್ನೂ ಅತಿಕ್ರಮಿಸುತ್ತ ಹೋಗುತ್ತಾನೆ. ‘ಅಲ್ತು’, ‘ಇಲ್ಲ’, ‘ಅಲ್ಲದು’ಗಳ ಅರ್ಥ ಒಂದೇ ಆದರೂ, ಸಂದರ್ಭಾನುಗುಣವಾಗಿ ಅವುಗಳ ಭಾವವ್ಯಂಜನೆ ವಿಭಿನ್ನವಾಗುತ್ತದೆ. ನೇಮಿಚಂದ್ರನ ಮನಸ್ಸಿನಲ್ಲಿ ನಾಗವರ್ಮನ ವರ್ಣನೆ ಇದ್ದಿರಬಹುದು; ಆದರೆ ಈ ವಾಮನಾವತಾರವರ್ಣನೆ ಅದರ ಪಡಿಯಚ್ಚಲ್ಲ. ಮೂಲತಃ ವರ್ಣಿತವಸ್ತು ಮತ್ತು ಸನ್ನಿವೇಶದಲ್ಲೆ ಬಹಳ ಅಂತರವಿದೆಯಾದ್ದರಿಂದ, ಇಲ್ಲಿ ನೇಮಿ ಅನನ್ಯ ಪರತಂತ್ರ ಪ್ರಭುವಾಗಿದ್ದಾನೆಯೆ ಹೊರತು ಸಾಮಂತನಾಗಿಲ್ಲ; ಅವನ ಸ್ವತಂತ್ರ ಪ್ರತಿಭಾನದ ಚೊಕ್ಕ ಮುದ್ರೆಯೆ ಇದರ ಮೇಲಿರತಕ್ಕದ್ದು.

ನೆಲದಿಂದ ಮುಗಿಲತನಕ ವಿಷ್ಣು ಶೀಘ್ರಾತಿಶೀಘ್ರವಾಗಿ ಬೆಳೆದು ವಿಗುರ್ವಿಸಿದ ಪರಿಯನ್ನು ಮೊದಲು ನೇಮಿಚಂದ್ರ ವರ್ಣಿಸುತ್ತಾನೆ:

ವಟು ಮರದುದ್ದವಾದನನಿತಲ್ಲದೊಡಿತ್ತಲೆಯುದ್ದವಾದನ
ಕ್ಕಟ ಮದಿಲುದ್ದವಾದನಿವನಾವನೊ ಪೆರ್ಮರದುದ್ದವಾದನಿಂ
ತುಟು ಗಿರಿಯುದ್ದವಾದನಿದು ವಿಸ್ಮಯಮಾ ಮುಗಿಲುದ್ದವಾದನೋ
ವಟಮಟಿಗಂ ದಿಟಕ್ಕೆನೆ ಕರಂ ಬಳೆದಂ ಮನದಂತೆ ವಾಮನಂ

ಮರನಂ ಮುಟ್ಟಿದನಿಲ್ಲ ಮೇಘ ಘಟೆಯೊಳ್ ಕಾಲ್ಕೋದನಿಲ್ಲಿಲ್ಲ ಭೂ
ಧರಮಂ ದಾಂಟಿದನಿಲ್ಲ ಬಾಂದೊಱೆಯೊಳಿಟ್ಟಂ ಕಾಲನಿಲ್ಲಿಲ್ಲ ಭಾ
ಸ್ಕರನಂ ಮಾಯದ ಮಾಣಿ ಸೆಂಡೊದೆದನಾ ಇಲ್ಲೆಂಬಿನಂ ನೀಡಿದಂ
ತರದಿಂ ಪಾದಮನುರ್ವಿ ಕೊರ್ವಿ ಬಲಿಯಂ ಗೆಲ್ವಾ ಮನಂ ವಾಮನಂ

ಮುಂದೆ ಸೂರ್ಯಬಿಂಬವನ್ನೆ ಮಾನದಂಡವಾಗಿಟ್ಟುಕೊಂಡು, ತ್ರಿವಿಕ್ರಮನ ಇನ್ನೂ ಮುಂದಿನ ಬೆಳವಣಿಗೆಯನ್ನು ಚಿತ್ರಿಸುವ ರೀತಿ ರೋಮಾಂಚಕಾರಿಯಾಗಿದೆ:

ಅದೆ ಪೊಸ ಪೊನ್ನ ಸತ್ತಿಗೆಯದಲ್ಲದು ರತ್ನಹಟತ್ಕಿರೀಟವ
ಲ್ಲದು ವರವಜ್ರಕುಂಡಳವದಲ್ಲದು ಕೌಸ್ತುಭ ರತ್ನಮಂತದ
ಲ್ಲದು ಕರಚಕ್ರವಲ್ಲದದು ನಾಭಿಸರೋಜಮೆನಲ್ ದಿನೇಶಬಿಂ
ಬದ ನೆಲೆ ತರ್ಗಿತಪ್ಪಿನವುನುಕ್ರಮದಿಂ ಬಳೆದಂ ತ್ರಿವಿಕ್ರಮಂ

ವಿಷ್ಣು ಬೆಳೆಯುತ್ತಲೇ ಹೋಗುತ್ತಾನೆ. ಕವಿಯ ಕಲ್ಪನಾಶ್ರೀ ಸೋಲದೆ ತ್ರಿವಿಕ್ರಮ ಸಮಸ್ಪರ್ಧಿಯಾಗಿ ಬೆಳೆಬೆಳೆದು, ನಮಗೆ ಆ ತ್ರಿವಿಕ್ರಮನ ಲೋಕೋತ್ತರ ದರ್ಶನವನ್ನು ಮಾಡಿಸುವಲ್ಲಿ ಸಫಲವಾಗುತ್ತದೆ:

ಇದು ಲೀಲಾಧೃತಭೂಕರೇಣು ಕರಮಲ್ತಭ್ರೋತ್ಪಟೀ ಕೇತುವ
ಲ್ತಿದು ಸೂರ್ಯಾಂಬುಜನಾಳಮಲ್ತು ಶಶಿಲೋಕಾದೀಪಿಕಾಸ್ತಂಭಮ
ಲ್ತಿದೆನಲ್ ತಾರಾಕುಸುಮಾವಳೀ ವಿಟಪಮಲ್ತಭ್ರಾವನೀ ಶೇಷಮ
ಲ್ತಿದೆನಲ್ ತಾಂ ಬಳೆಯಿತ್ತನುಕ್ರಮದಿನಾ ಪಾದಂ ಪಯೋಜಾಕ್ಷನಾ

ತರುವಿಂದತ್ತತ್ತ ನೀಳ್ದಂ ಘನಪಟಲದಿನತ್ತತ್ತ ಮಿಕ್ಕಂ ಹಿಮೋವೀ
ಧರದಿಂದತ್ತತ್ತ ಪೋದಂ ರವಿಯ ರಥದಿನತ್ತತ್ತ ಮೆಯ್ವೆರ್ಚಿದಂ ಸು
ಟ್ಟುರೆಯಿಂದತ್ತತ್ತ ಮತ್ತಂ ನಿಮಿರದಿರನಿದೇನೆಂದು ಜಾತಾದ್ಭುತಂ ನೋ
ೞ್ಪರ ಕಣ್ಣುಂ ಚೇತಮುಂ ಕಾಲ್ಗಿಡೆ ಕಡುಜವದಿಂ ವಿಷ್ಣು ವರ್ಧಿಷ್ಣುವಾದಂ

ವಟುವಿಂಗೆ ಮಿಂಚುವೆಳಮಿಂಚಿನ ವಾರಿದಲೇಖೆ ಮೌಂಜಿಯುಂ
ಕೋವಣಮಾಯ್ತು ಮುಟ್ಟಿ ರವಿಗರ್ಘ್ಯಮನೀವ ಪೊಡರ್ಪು ಮಾಯ್ದ ಮಾ
ಯಾವಿಗ ತನ್ನ ಗುಂಡಿಗೆಯಿನಾಗಸಗಂಗೆಯ ದಿವ್ಯ ತೋಯಮುಂ
ತೀವುವ ಬುದ್ದಿಯೊಳ್ ಬಗೆದನಕ್ಕಟ ಮಾಣನವಪ್ರಮಾಣಮಂ

ಅಂಬರ ತಳಕ್ಕೆ ಬಳೆದು ತೆ
ಱಂಬೊಳೆವಚ್ಯುತನ ಚರಣದಂಡಂ ನಕ್ಷ
ತ್ರಂ ಬಳಸಿ ದೀಪಮಾಲೆಯ
ಕಂಬದವೋಲ್ ತೊಳಗಿ ಬೆಳಗುತಿರ್ದತ್ತಾಗಳ್

ನಮ್ಮ ಚೇತನವನ್ನು ಅಲ್ಪದಿಂದ ಭೂಮಕ್ಕೆ, ಮಹತೋಮಹೀಯಕ್ಕೆ ವರ್ಗಾಯಿಸ ಬಲ್ಲವು ಇಂತ ವರ್ಣನೆಗಳು. ಮೊದಲು ನಮ್ಮನ್ನು ಆಶ್ಚರ್ಯೋನ್ಮುಖರನ್ನಾಗಿ ಮಾಡಿ ಕಡೆಗೆ ನತಮಸ್ತಕರನ್ನಾಗಿಸುತ್ತಾನೆ ನೇಮಿಚಂದ್ರ. ದೊಡ್ಡದು ಈ ಸಾಧನೆ.

‘‘ನೇಮಿ ಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್’’ ಎಂದೊಬ್ಬ ಕವಿ ಪ್ರಶಂಸೋಕ್ತಿಯನ್ನಾಡಿದ್ದಾನೆ. ಏನಿದರ ಅರ್ಥ? ಪಂಪನಂತಹ ಕವಿಯನ್ನು ಲೆಕ್ಕಿಸದೆ ನೇಮಿಜನ್ನರಿಗೆ ಸೀಮಾಪುರುಷಪಟ್ಟವನ್ನು ಕಟ್ಟುವುದರಲ್ಲಿ ಏನು ಔಚಿತ್ಯ? ಈ ಪ್ರಶ್ನೆ ಅನಿವಾರ್ಯವಾಗುತ್ತದೆ ಮತ್ತು ಯಾವುದೊ ವಿಶಿಷ್ಟಾರ್ಥದಲ್ಲಿ ಮಧುರನ ಮಾತನ್ನು ತೆಗೆದುಕೊಳ್ಳದಿದ್ದರೆ ಅದು ಅತಿಶಯೋಕ್ತಿಯಾಗುತ್ತದೆ. ‘ಸೀಮಾಪುರುಷರ್ ’ ಎಂಬ ಮಾತಿಗೆ ಹಿಂದಿರುವ ‘ಕರ್ಣಾಟಕೃತಿಗೆ’ ಎಂಬುದರ ಮೇಲೆ ಒತ್ತು ಹಾಕಿ ನೋಡಬೇಕು. ಕನ್ನಡದ ಎಷ್ಟೋ ಕೃತಿಗಳು ಹೆಸರಿಗೆ ಕನ್ನಡವಾದರೂ ವಾಸ್ತವವಾಗಿ ಸಂಸ್ಕೃತ ಕೃತಿಗಳೇ ಆಗಿವೆ! ಆದರೆ ನೇಮಿಜನ್ನರ ಕಾವ್ಯಗಳು ಮಾತ್ರ ‘ಕರ್ಣಾಟಕೃತಿ’ಗಳ ಪಂಕ್ತಿಗೆ ಸೇರುತ್ತವೆ, ಆ ವರ್ಗದಲ್ಲಿ ಅಗ್ರಗಣ್ಯವಾಗುತ್ತವೆ. ಎಂದರೆ, ಅಚ್ಚಗನ್ನಡದಲ್ಲಿ, ದೇಸಿಯಲ್ಲಿ ಈ ಇಬ್ಬರು ಕವಿಗಳನ್ನು ಮೀರಿಸಿದವರಿಲ್ಲ ಎಂಬುದು ಮಧುರನ ಅಭಿಪ್ರಾಯವಿದ್ದೀತು. ‘ಯಶೋಧರ ಚರಿತೆ’ಯಂತಹ ಪುಟ್ಟ ಕಾವ್ಯದ ಪರಿಮಿತಿಯಲ್ಲಿ ಜನ್ನ ಸೂರೆಮಾಡಿರುವ ದೇಸಿಯ ಪ್ರಮಾಣ ಅನ್ಯಕವಿ ದುರ್ಲಭವಾದದ್ದು. ನೇಮಿಚಂದ್ರನ ದೇಸಿಯಾದರೊ ಬಹಳ ವ್ಯಾಪಕ ಮತ್ತು ವೈವಿಧ್ಯಪೂರ್ಣ. ಪಂಪ ಕೂಡ ನೇಮಿಯಷ್ಟು ಸಲೀಸಾಗಿ, ಸ್ವಚ್ಛಂದವಾಗಿ ದೇಸಿಯನ್ನು ಬಳಸಲಾರ ಎನಿಸುತ್ತದೆ : ರಾಜಾಸ್ಥಾನದ ಮತ್ತು ವ್ಯಕ್ತಿತ್ವದ ಗಾಂಭೀರ್ಯ ಅವನಿಗೆ ಅಡ್ಡಿಯಾಗಿತ್ತು. ನೇಮಿಗೆ ಅಂತಹ ಗಾಂಭೀರ್ಯವಾಗಲಿ ಸಂಕೋಚ ಸಂಯಮಗಳಾಗಲಿ ಇರಬೇಕಾಗಿಲ್ಲ. ಈ ದೇಸಿಯೆ ಅವನ ಯಶಸ್ಸಿಗೆ ಒಂದು ಮುಖ್ಯ ಕಾರಣವಾಗಿದೆ. ವರ್ಣನೆ ಸಾಮಾನ್ಯವಾಗಿದ್ದೆಡೆಯಲ್ಲೂ ದೇಸಿಯ ಸೊಗಡು, ಸವಿ ಅದನ್ನು ಕಳೆಗಟ್ಟಿಸುವುದುಂಟು. ಇನ್ನು ಸಂಭಾಷಣೆ, ಪಾತ್ರ ನಿರ್ಮಿತಿಗಳಲ್ಲಿ ಅದರ ಪಾತ್ರ ಹಿರಿದೆಂದು ಹೇಳಬೇಕಾಗಿಲ್ಲ. ಈ ದೃಷ್ಟಿಯಿಂದ ನೇಮಿಚಂದ್ರನನ್ನು ಸೀಮಾಪುರುಷ ಎನ್ನಬಹುದೆ ಹೊರತು ಮಹಾಕವಿ ಎಂದರ್ಥದಲ್ಲಲ್ಲ.

ಆದರೆ ಯಾವೊಂದು ದಿಶೆಯಲ್ಲೆ ಆಗಲಿ ಸೀಮಾಪುರುಷ ಎನಿಸಿಕೊಳ್ಳುವುದೇನು ಸಣ್ಣ ಮಾತೆ?

[1] ಕುಮಾರವ್ಯಾಸನಂಥ ಕವಿಯೊಡನೆ ತುಲನೆ ಮಾಡಿದಾಗ ಪಂಪನ ವ್ಯಕ್ತಿತ್ವವೂ ಕವಲಾಗಿರುವುದು ಕಾಣುತ್ತದೆ.

[2] ರಂ.ಶ್ರೀ. ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’ (ಪ್ರಥಮ ಮುದ್ರಣ), ಪು.೧೯೧. ನೇಮಿರುದ್ರರನ್ನು ಮುಗಳಿ ಯವರು ಸಮಾನಸ್ಕಂಧರನ್ನಾಗಿ ಗಣಿಸಿರುವುದು ಸರಿದೋರುವುದಿಲ್ಲ. ರುದ್ರನಿಗಿಂತ ನೇಮಿ ಶಕ್ತನಾದ ಕವಿ.

[3] ‘ನಿಶ್ವಾಸಾಂಧ ಇವಾದರ್ಶಶ್ಚಂದ್ರಮಾ ನ ಪ್ರಕಾಶತೇ’ (ಉಸಿರು ತಾಕಿದ ಕನ್ನಡಿಯಂತೆ ಚಂದ್ರ ಮಂಕಾಗಿದ್ದಾನೆ) ಎಂಬ ರಾಮಾಯಣದ ವರ್ಣನೆ ನೆನಪಾಗುತ್ತದೆ.