ಸಂಸ್ಕತದಲ್ಲಿರತಕ್ಕದ್ದು ಒಂದೇ ಮಹಾಭಾರತ : ವ್ಯಾಸರದು (ಉಳಿದವು ಅಗಣ್ಯ) ; ಕನ್ನಡದಲ್ಲಾದರೋ ಎರಡು : ಪಂಪಭಾರತ ಮತ್ತು ಕುಮಾರವ್ಯಾಸ ಭಾರತ. ಕನ್ನಡ ಸಾಹಿತ್ಯ ಸಂಸ್ಕೃತ ಸಾಹಿತ್ಯಕ್ಕೆ ಕೃತಜ್ಞವಾಗಿಯೂ ಕೃತಕವಾಗದೆ, ಅದನ್ನು ಮೀರಿ ಬೆಳೆದು ಕೃತಕೃತ್ಯವಾಗಿದೆ ಎಂಬುದಕ್ಕೆ ಈ ಎರಡು ಮಹಾಕಾವ್ಯಗಳೆ ಪ್ರಾತಿಭ ಸಾಕ್ಷಿ. ಆದರೂ ವಿಶ್ವವಾಙ್ಮಯದಲ್ಲಿ ಅನನ್ಯವೆನ್ನಬಹುದಾದ ವ್ಯಾಸಭಾರತದ ಸೂಕ್ಷ್ಮತೆ, ಸಂಕೀರ್ಣತೆ, ಸಮಗ್ರತೆಗಳನ್ನು ಪಂಪನಾಗಲಿ ಕುಮಾರವ್ಯಾಸನಾಗಲಿ ದಕ್ಕಿಸಿಕೊಳ್ಳುವುದಾಗಿಲ್ಲ. ವ್ಯಾಸರದು ಶುದ್ಧವಾಗಿ ವಸ್ತುನಿಷ್ಠವಾದ ಮಹಾಕಾವ್ಯಶಿಲ್ಪ; ಪಂಪ, ಕುಮಾರವ್ಯಾಸರ ಕೃತಿಗಳು ಮಹಾಕಾವ್ಯಗಳಾಗಿಯೂ ಬಹಳ ಕಡೆ ಭಾವಗೀತ ವಿನ್ಯಾಸವುಳ್ಳವು. ಕನ್ನಡ ಭಾರತಗಳು ಅಭಿವ್ಯಕ್ತಿಸುವ ಉತ್ಕಟತೆಯನ್ನು ಮೆಚ್ಚಿಕೊಳ್ಳುವಾಗ, ಸಂಸ್ಕೃತ ಮಹಾಭಾರತದ ಮಾರ್ಮಿಕತೆಯನ್ನು ಮರೆಯಬಾರದು. ಒಟ್ಟಿನಲ್ಲಿ ಒಂದೊಂದರದೂ ಒಂದೊಂದು ಸೌಂದರ್ಯ ಮತ್ತು ಸ್ವಾರಸ್ಯ; ಜೊತೆಗೆ ಛಂದೋವೈವಿಧ್ಯ.

ಭಾರತದ ಪಾಂಡು-ಮಾದ್ರೀ ಪ್ರಸಂಗವನ್ನು, ಅರ್ಥಾತ್ ಪಾಂಡು ಮರಣ ಪ್ರಕರಣವನ್ನು ತೆಗೆದುಕೊಂಡು, ಸ್ವಲ್ಪ ಮಟ್ಟಿಗೆ ತೌಲನಿಕವಾಗಿ ವಿವೇಚಿಸುವುದು ಈ ಬರಹದ ಗುರಿ.

ಪಾಂಡು ತನ್ನಿಬ್ಬರು ಪತ್ನಿಯರಾದ ಕುಂತಿ, ಮಾದ್ರಿಯರೊಡನೆ ಶತಶೃಂಗ ಪರ್ವತದ ತಪ್ಪಲಿನಲ್ಲಿ ವಾಸಿಸುತ್ತಿರುವಾಗ, ಒಮ್ಮೆ ವಸಂತಮಾಸ ಬರುತ್ತದೆ. ಅದರ ವರ್ಣನೆ ವ್ಯಾಸರಲ್ಲಿ ಯಾವುದೇ ಅಲಂಕಾರ, ಚಮತ್ಕಾರವಿಲ್ಲದೆ ಸರಳ ಸಹಜವಾಗಿ ಮತ್ತು ಮನೋಜ್ಞವಾಗಿ ಮೂಡಿದೆ:

ಸುಪುಷ್ಪಿತ ವನೇ ಕಾಲೇ ಕದಾಚಿನ್ಮಧು ಮಾಧವೇ
ಭೂತಸಂಮೋಹನೇ ರಾಜಾ ಸಭಾರ್ಯೋ ವ್ಯಚರದ್ವನಮ್

(ರಮ್ಯವಾದ ವಸಂತ ಋತುವಿನ ಕಾಲದಲ್ಲಿ, ಒಮ್ಮೆ ಕಾಡೆಲ್ಲ ಚೆನ್ನಾಗಿ ಹೂಬಿಟ್ಟಿದ್ದು ಪ್ರಾಣಿಗಳನ್ನು ಮೋಹಗೊಳಿಸುತ್ತಿದ್ದಾಗ, ಪಾಂಡು ತನ್ನ ಹೆಂಡತಿಯರೊಡನೆ ವನದಲ್ಲಿ ಸಂಚರಿಸುತ್ತಿದ್ದನು.)

ಇಡೀ ಕಾಡು ಹೂ ಬಿಟ್ಟಿತ್ತು ಎಂಬ ಮಾತನ್ನು ಗಮನಿಸಬೇಕು. ವನೌಕಸನಾಗಿದ್ದ ಪಾಂಡು ಅದಕ್ಕೆ ಹೊರತಾಗುವುದು ಶಕ್ಯವಿರಲಿಲ್ಲ. ಇದುತನಕ ತಾಪಸವೃತ್ತಿಯಲ್ಲಿ ಬರಡಾಗಿದ್ದ ಅವನ ಮನಸ್ಸಿನಲ್ಲೂ ಈಗ ವಸಂತೋದಯವಾಗುತ್ತದೆ.

ವಸಂತವರ್ಣನೆಯನ್ನು ಮುಂದುವರಿಸುತ್ತಾರೆ ವ್ಯಾಸರು : ‘‘ಮುತ್ತುಗ ತಿಲಕ ಮಾವು ಸಂಪಗೆ ಪಾರಿಭದ್ರಕ ಮತ್ತು ಇನ್ನೂ ಬೇರೆ ಅನೇಕ ವೃಕ್ಷಗಳು ಹಣ್ಣುಗಳಿಂದಲೂ ಹೂವುಗಳಿಂದಲೂ ತುಂಬಿಹೋಗಿದ್ದುವು. ನಾನಾ ವಿಧವಾದ ಜಲಾಶಯಗಳೂ ತಾವರೆಕೊಳಗಳೂ ಶೋಭಿಸುತ್ತಿದ್ದುವು.’’ ಅಂತಹ ಅರಣ್ಯವನ್ನು ನೋಡಿಯೇ ಪಾಂಡುವಿನ ಮನಸ್ಸಿನಲ್ಲಿ ಕಾಮ ಹುಟ್ಟುತ್ತದೆ. ಅವನ ರತಿಗೆ ಆಲಂಬನ ವಿಭಾವವಿಲ್ಲದಿದ್ದರೆ, ಅದು ಕ್ರಮೇಣ ಕುಗ್ಗಿ ಅಳಿದುಹೋಗುತ್ತಿತ್ತೇನೊ. ಆದರೆ ಮಾದ್ರಿ ಅಲ್ಲಿದ್ದಾಳೆ. ಹರ್ಷದಿಂದ ವಿಹರಿಸುತ್ತಿದ್ದ ಪಾಂಡುವನ್ನು ಅವಳೊಬ್ಬಳೆ ಹಿಂಬಾಲಿಸಿ ಹೋಗುತ್ತಾಳೆ. ‘‘ಉತ್ತಮವಾದ… ತೆಳ್ಳನೆಯ ಉಡುಗೆಯನ್ನುಟ್ಟಿದ್ದ ಆ ತರುಣಿಯನ್ನು ನೋಡುತ್ತಿರುವಂತೆಯೆ ಅವನ ಕಾಮ ಕಾಡಿನಲ್ಲಿನ ಕಿಚ್ಚಿನಂತೆ ಮೇಲೆದ್ದು ಅತಿಯಾಗಿ ಬೆಳೆಯಿತು.’’(ಕಾಮಃ ಪ್ರವವೃಧೇ ಗಹನೇsಗ್ನಿರಿವೋತ್ಥಿತಃ). ‘ಉತ್ತಮವಾದ’, ‘ತೆಳ್ಳನೆಯ’ ಎಂಬು ವಿಶೇಷಣಗಳ ಔಚಿತ್ಯವನ್ನು ಪರಿಭಾವಿಸಬೇಕು. ಪಾಂಡುವಿನ ಕಾಮವನ್ನು ಕಾಳ್ಗಿಚ್ಚಿಗೆ ಹೋಲಿಸಿರುವುದು ಸಮುಚಿತವೇ: ಅದು ಹೂತ ಕಾಡಿನಲ್ಲಿ ಹುಟ್ಟಿದ ಬೆಂಕಿ ಮಾತ್ರವಲ್ಲ, ಕಾಡಿನಿಂದಲೇ ಬೆಳೆದದ್ದು; ಘೋರವಾದದ್ದು.

ಏಕಾಂತದಲ್ಲಿ ತನ್ನ ಜೊತೆಯಲ್ಲಿದ್ದ ಆ ‘ಕಮಲಲೋಚನೆ’ಯನ್ನು ಕಂಡು ಕಾಮಪರವಶನಾದ ಪಾಂಡು ಅವಳನ್ನು ಹಿಡಿದುಕೊಳ್ಳುತ್ತಾನೆ. ಮಾದ್ರಿ ಸುಮ್ಮನಿದ್ದಳೆ? ಅವಳು ‘‘ತನ್ನ ಸಾಮರ್ಥ್ಯವಿದ್ದಷ್ಟು ತಡೆಯುತ್ತಿದ್ದರೂ’’, ಪಾಂಡು ಮುನಿಶಾಪವನ್ನು ಮರೆತು, ಅವಳನ್ನು ಬಲಾತ್ಕಾರದಿಂದ ಕೂಡಿ, ಮೃತ್ಯುವಶನಾಗುತ್ತಾನೆ.

ನಾವಿಲ್ಲಿ ಸೂಕ್ಷ್ಮವೊಂದನ್ನು ಗಮನಿಸಬೇಕು. ಮಾದ್ರಿ ಪ್ರಾಮಾಣಿಕವಾಗಿ ಪಾಂಡುವನ್ನು ಹೊರಗೆ ಎಷ್ಟೇ ತಡೆದರೂ ಅವಳ ಒಳಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಆ ಕೂಟ ಇಷ್ಟವಾಗಿದ್ದಂತೆ ತೋರುತ್ತದೆ : ಅವಳೂ ವಿರಹತಪ್ತೆಯಲ್ಲವೆ? ‘‘ಆಸೆಗಳು ನನಗಿನ್ನೂ ತಣಿದಿಲ್ಲ’’ ಎಂದು ಮುಂದೆ ಅವಳಾಡುವ ಮಾತು ಇದನ್ನೆ ಸೂಚಿಸುವಂತಿದೆ. ಈ ಒಳನೋಟ ಪಂಪ, ಕುಮಾರವ್ಯಾಸರಲ್ಲಿಲ್ಲ.

‘‘ಪರಮ ಧರ್ಮಾತ್ಮನಾದ ಆ ಪಾಂಡು… ಮರಣ ಹೊಂದಿದನು’’ ಎನ್ನುತ್ತಾರೆ. ವ್ಯಾಸರು, ಇಲ್ಲಿ ‘‘ಪರಮಧರ್ಮಾತ್ಮ’ ಎಂಬ ವಿಶೇಷಣ ಪಾಂಡುವಿಗೆ ಹೇಗೆ ಒಪ್ಪುತ್ತದೆ? ವಾಸ್ತವವಾಗಿ ಕಾಮದಿಂದ ಅವನು ಸಾಯುತ್ತಾನೆ; ಧರ್ಮದ ಪ್ರಸಕ್ತಿ ಇಲ್ಲಿಲ್ಲ. (‘‘ಕಾಮಮೋಹಿತನಾಗಿ ನೀನು ನಿನ್ನ ಪ್ರಿಯೆಯೊಡನೆ ಸಮಾಗಮವನ್ನು ಮಾಡಿ… ಸಾಯುವೆ’’ ಎಂಬುದು ಋಷಿಶಾಪವಾಗಿತ್ತು). ಆದಿ ಮಹಾಕಾವ್ಯಗಳಲ್ಲಿ ಬರುವ ವಿಶೇಷಣಗಳ ಬಗೆಗೆ ನಾವು ಜಾಗರೂಕರಾಗಿರಬೇಕು : ಎಷ್ಟೋ ಕಡೆ ಅವು ಸಿದ್ಧ ವಿಶೇಷಣಗಳಾಗಿದ್ದು, ಪಾದಪೂರಣಕ್ಕಾಗಿಯಷ್ಟೆ ಬಳಕಗೊಳ್ಳುತ್ತವೆ.

ಮಾದ್ರಿ ಚೀರಿದ್ದನ್ನು ಕೇಳಿ, ಕುಂತಿ ಮಕ್ಕಳೊಡನೆ ಓಡಿಬಂದಾಗ, ಮಾದ್ರಿ ಹೇಳುತ್ತಾಳೆ: ‘‘ನೀನೊಬ್ಬಳೇ ಇಲ್ಲಿಗೆ ಬಾ! ಮಕ್ಕಳು ಅಲ್ಲಿಯೇ ನಿಂತಿರಲಿ!’’ ಇದು ಎಷ್ಟು ಲೋಕಸಹಜವಾಗಿದೆ! ಪಾಂಡುವಿನ ಆಗಿನ ಅವಸ್ಥೆ ಮಕ್ಕಳು ನೋಡುವಂಥದಲ್ಲ. ಅಲ್ಲದೆ ಕುಂತಿ-ಮಾದ್ರಿಯರ ಸಂಭಾಷಣೆ ಅವರು ಕೇಳಿಸಿಕೊಳ್ಳುವಂಥದಲ್ಲ. ಪಂಪ ‘‘ಬೆಳಗುವೆನಿಲ್ಲಿ ಲೌಕಿಕಮಂ’’ ಎನ್ನುತ್ತಾನೆ ತನ್ನ ಭಾರತದಲ್ಲಿ, ಆದರೆ ಅವನು ಕೂಡ ವ್ಯಾಸರಂತೆ ಲೌಕಿಕವನ್ನು ಬೆಳಗಲಾರ. ಅವನಲ್ಲಾಗಲಿ ಕುಮಾರವ್ಯಾಸನಲ್ಲಾಗಲಿ ಈ ಅಂಶವಿಲ್ಲ.

‘‘ನೀನೊಬ್ಬಳೇ ಇಲ್ಲಿಗೆ ಬಾ!’’ ಎಂಬ ಮಾತನ್ನಷ್ಟೆ ಕೇಳಿದ ಕೂಡಲೆ, ಏನೊ ಅನರ್ಥವಾಗಿದೆ ಎಂದು ಕುಂತಿ ಊಹಿಸಿ-ಇದು ವಾಚ್ಯವಾಗಿಲ್ಲ-, ‘‘ಅಯ್ಯೋ! ನಾನು ಸತ್ತೆ!’’ ಎಂದು ಕಿರುಚಿಕೊಂಡು ಹತ್ತಿರ ಹೋಗುತ್ತಾಳೆ; ವಿಷಯವನ್ನರಿತು, ‘‘ನೀನು ರಾಜನನ್ನು ರಕ್ಷಿಸಬೇಕಾಗಿತ್ತಲ್ಲವೆ?’’ ಇತ್ಯಾದಿಯಾಗಿ ಮಾದ್ರಿಯಾನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇದು ತುಂಬ ನೈಜವಾಗಿದೆ. ತಾನು ಬಾರಿಬಾರಿಗೂ ತಡೆಯುತ್ತಿದ್ದರೂ ಪಾಂಡು ತನ್ನನ್ನು ‘‘ಲೋಭಗೊಳಿಸಿ’’- ಈ ನುಡಿ ಗಮನಾರ್ಹ-ಕೂಡಿದುದಾಗಿ ತಿಳಿಸುತ್ತಾಳೆ, ಮಾದ್ರಿ. ಮುಂದೆ ಕುಂತಿಯಾಡುವ ಒಂದು ಉಕ್ತಿ ಮಾನವ ಸ್ವಭಾವವನ್ನು ಚೆನ್ನಾಗಿ ದ್ಯೋತಿಸುತ್ತದೆ : ‘‘ನೀನೇ ನನಗಿಂತಲೂ ಹೆಚ್ಚು ಭಾಗ್ಯವುಳ್ಳವಳು : ಏಕೆಂದರೆ, ಸಂತೋಷಗೊಂಡಿದ್ದ ಪತಿಯ ಮುಖವನ್ನು ನೀನು ತಾನೆ ನೋಡಿದೆ!’’ ತನಗಿಲ್ಲದ ಸಮಾಗಮ ಭಾಗ್ಯವನ್ನು ಮಾದ್ರಿ ಪಡೆದಳೆಂಬ ಸ್ತ್ರೀ ಸಹಜವಾದ ಅಸೂಯೆಯ ಎಳೆಯೊಂದು ಕುಂತಿಯ ಎದೆಯಲ್ಲಿ ಸುಳಿದುದನ್ನು ಇಲ್ಲಿ ಧ್ವನಿಸಿರುವುದು ಮಹಾಕವಿ ಪ್ರತಿಭೆಗೆ ಮಾತ್ರ ಸಾಧ್ಯ. ಈ ಸಂಕೀರ್ಣ ಚಿತ್ರಣವನ್ನು ಪಂಪ, ಕುಮಾರವ್ಯಾಸರಲ್ಲಿ ಕಾಣಲಾರೆವು.

ಪಾಂಡುವಿನ ಮತ್ತು ತನ್ನ ಪ್ರಮಾದದಿಂದ ಘಟಿಸಿದ ದುರಂತದ ಹಿನ್ನೆಲೆಯಲ್ಲಿ ಮಾದ್ರಿ ಕುಂತಿಗಾಡುವ ಈ ಎಚ್ಚರಿಕೆಯ ಮಾತು ಸ್ವಾಭಾವಿಕವಾಗಿದೆ : ‘‘ಮಕ್ಕಳ ವಿಚಾರದಲ್ಲಿ ಪ್ರಮಾದವಿಲ್ಲದವಳಾಗಿರು.’’

ಪಾಂಡುವಿನ ಶ್ರಾದ್ಧವಾದ ಬಳಿಕ, ದುಃಖಿಸುತ್ತಿದ್ದ ಸತ್ಯವತಿಗೆ ವ್ಯಾಸರು ಹೇಳುವ ಮಾತು ಪ್ರಸಿದ್ಧವಾದುದು

ಅತಿಕ್ರಾಂತಸುಖಾಃ ಕಾಲಾಃ ಪ್ರತ್ಯುಪಸ್ಥಿತ ದಾರುಣಾಃ
ಶ್ವಃ ಶ್ವಃ ಪಾಪೀಯದಿವಸಾಃ ಪೃಥಿವೀ ಗತಯೌವನಾ

(ಸುಖದ ಕಾಲಗಳು ಕಳೆದುಹೋದುವು. ದಾರುಣದುಃಖಗಳು ಪ್ರಾಪ್ತವಾಗಿವೆ. ಮುಂದೆ ದಿನದಿನಕ್ಕೂ ಪಾಪ ಹೆಚ್ಚುತ್ತದೆ. ಭೂಮಿಗೆ ತಾರುಣ್ಯ ಕಳೆದುಹೋಯಿತು).

ಯೌವನದ ಪ್ರತೀಕವಾಗಿದ್ದ ಪಾಂಡು, ಮಾದ್ರಿಯರು ಗತಿಸಿದರು, ಆದ್ದರಿಂದ ಭೂಮಿಯ ಯೌವನವೂ ಗತಿಸಿತು ಎಂದು ಭಾವಿಸಬೇಕೆ? ಅಂತೂ ಕಾಲ ಕೆಟ್ಟು ಹೋಯಿತು ಎಂಬು ಗೊಣಗು ಇಂದಿನದಲ್ಲ; ವ್ಯಾಸಭಾರತದಷ್ಟು ಹಳೆಯದು!

ವ್ಯಾಸರ ನಿರೂಪಣೆ ಮೇಲುನೋಟಕ್ಕೆ ಸರಳ, ಸಾಧಾರಣವಾಗಿ ಕಂಡರೂ ವಾಸ್ತವವಾಗಿ ಆಳವಾಗಿದೆ, ಅನುತ್ತರವಾಗಿದೆ.

ಪ್ರಕೃತ ಪ್ರಸಂಗವನ್ನು ಪಂಪ ಬೆಳೆಸಿದ್ದಾನೆ; ಇನ್ನೊಂದಿಷ್ಟು ಕುಸುರಿ ಕೆಲಸ ಮಾಡಿದ್ದಾನೆ. ಬಹುತೇಕ ಸಂಕ್ಷಿಪ್ತವಾಗಿ ಬರೆಯುವ ಪಂಪನ ಪ್ರತಿಭೆ ಇಂತಹುದೊಂದು ಮಹತ್ವದ ಮತ್ತು ಸಾಧ್ಯತೆಗಳಿಂದ ಕೂಡಿದ ಸಂದರ್ಭದ ಚಿತ್ರಣದಲ್ಲಿ ಕೃಪಣವಾಗುವುದು ಸಾಧ್ಯವಿಲ್ಲ.

ನಿಸರ್ಗಾರಾಧಕ, ಸೌಂದರ್ಯಪ್ರೇಮಿ ಪಂಪ ವಸಂತಮಾಸವನ್ನು ಚೇತೋಹಾರಿಯಾಗಿ, ಸಾಕಷ್ಟು ನಿಡಿದಾಗಿಯೆ ಪದ್ಯಗದ್ಯಗಳಲ್ಲಿ ಬಣ್ಣಿಸಿದ್ದಾನೆ. ಇಲ್ಲಿ ಋತುವರ್ಣನೆ ಬರಿಯ ಹೊರಗಿನ ಸರಕಾಗಿ ಬರದೆ, ಕತೆಯೊಡನೆ ಮತ್ತು ಪಾತ್ರಗಳೊಡನೆ ನಿಕಟ ಸಂಬಂಧವನ್ನು ಸ್ಥಾಪಿಸಿಕೊಳ್ಳುತ್ತದೆ. ಇವು ಪಂಪನ ಪದ್ಯಗಳು:

ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಕಂಪನವುಂಕುತಿರ್ಪ ತೆಂ
ಬೆಲರು[ಮಿದಂ] ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ
ಗಿಲೆ ನನೆದೋಱಿ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್[1]

ಬಿರಯಿಯ ಮಿಳ್ತು (ವೆ) ಮಿದಿದೊಡಲ್ಲದಣಂ ಮುಳಿಸಾರದೆಂದು
ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂ ಗಡಿಮೆಂದು ಬೇಟಕಾ
ರರನಿರದೂಱಿ ಸಾಱಿ ಜಡಿವಂತೆಸೆಗುಂ ಸಹಕಾರ ಕೋಮಳಾಂ
ಕುರ ಪರಿತುಷ್ಟ ಪುಷ್ಟ ಪರಪುಷ್ಟಗಳ ಧ್ವನಿ ನಂದನಂಗಳೊಳ್

ಕವಿವ ಮದಾಳಿಯಿಂ ಮಸುಳನಾಗಿ ಪಯೋಜರಜಂಗಳೊಳ್ ಕವಿ
ಲ್ಗವಿಲನುಮಾಗಿ ಬಂದ ಮಲಯಾನಿಲನೂದೆ ತೆರಳ್ವ ಚೂತ
ಲ್ಲವದ ತೆರಳ್ಕೆ ತದ್ವನ ವಿಳಾಸಿನಿಯುಟ್ಟ ದುಕೂಲದೊಂದು
ಲ್ಲವದ ತೆರಳ್ಕೆಯಂತೆಸೆಯೆ ಕಣ್ಗೆಸೆದಿರ್ದುವು ನಂದನಾಳಿಗಳ್

ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ
ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ (. ೧೨೧೫)

ಇಲ್ಲಿ ಸ್ವಭಾವೋಕ್ತಿ, ವಕ್ರೋಕ್ತಿ ಎರಡೂ ಉಂಟು. ಕಡೆಯ ಪದ್ಯದಲ್ಲಿರುವ ಆನೆಯ ರೂಪಕ ಲಕ್ಷಿಸಬೇಕಾದುದು. ನಮ್ಮ ಚಂಪೂ ಕಾವ್ಯಗಳಲ್ಲಿ ಇಂಥ ಚಿತ್ರಗಳು ಸಾಂಪ್ರದಾಯಿಕವಾದರೂ ಇಲ್ಲಿ ‘‘ಪರಿದತ್ತು ವಸಂತಗಜಂ ವಿಯೋಗಿಯಂ’’ ಎಂಬುದು ತುಂಬ ಸಾರ್ಥಕವಾಗಿದೆ. ಗದ್ಯದಲ್ಲಿ ‘ಬಸಂತರಾಜ’ನ ಚಿತ್ರವನ್ನು ಬೇರೆ ಕೊಟ್ಟಿದ್ದಾನೆ. ಪಂಪ.

‘ಕ್ರೀಡಾನುಶೀಲೆ’ಯಾದ ಮಾದ್ರಿ ‘ವನಕ್ರೀಡಾ ನಿಮಿತ್ತದಿಂ’ ಹೂಗಳನ್ನೆ ಆಭರಣಗಳನ್ನಾಗಿ ಮಾಡಿಕೊಳ್ಳುತ್ತಾಳೆ. (ಇದು ವ್ಯಾಸರಲ್ಲಿಲ್ಲದ ಆಯಾಮ). ಹೆಣ್ಣಿನ ಅಲಂಕಾರಪ್ರಿಯತೆ ಇಲ್ಲಿ ಸುವ್ಯಕ್ತ; ಅಡವಿಯಲ್ಲಿದ್ದರೂ ಅವಳಿಗೆ ಒಡವೆಗಳ ಆಸೆ. ಮಾದ್ರಿಯ ಈ ಚಿತ್ರ ವಿಶಿಷ್ಟವಾದುದು:

ವನಕುಸುಮಂಗಳಂ ಬಗೆಗೆವಂದುವನೞ್ತಿಯೊಳಾಯ್ದು ಕೊಯ್ದು ಮೆ
ಲ್ಲನೆ ವಕುಳಾಳವಾಳ ತಳದೊಳ್ ಸುರಿದಂಬುಜಸೂತ್ರದಿಂದೆ
ತ್ತನಿತಱಳಂ ಮುಗುಳ್ಸರಿಗೆ ತೋಳ್ವಳೆ ಕಂಕಣವಾರಮೆಂದು ಬೇ
ಳ್ಪನಿತನೆ ಮಾಡಿ ತೊಟ್ಟು ಕರಮೊಪ್ಪಿದಳಾಕೆ ಬಸಂತಕಾಂತೆವೋಲ್ (. ೧೬)

ಹೂಬಿಟ್ಟಂತಿದ್ದ ಮಾದ್ರಿಗೂ ಮಧುಮಾಸಕ್ಕೂ ಇಲ್ಲಿ ಅಭೇದವಿದೆ. ‘‘ಅಂತು ತೊಟ್ಟ ಪೂದುಡುಗೆ ಮದನನ ತೊಟ್ಟ ಪೂಗಣೆಗೆಣೆಯಾಗಿರೆ’’ ಎಂಬ ಹೋಲಿಕೆಯಲ್ಲಿ ಚಮತ್ಕೃತಿಯಿದ್ದರೂ ಔಚಿತ್ಯವಿಲ್ಲದಿಲ್ಲ. ಪಾಂಡುವಿನ ಕಾಮ ಅಪ್ರತಿಹತವಾಗಿ ಕೆರಳಿದ್ದಕ್ಕೆ ಸಮರ್ಥನೆ ಇಲ್ಲಿ ವ್ಯಾಸರಲ್ಲಿರುವುದಕ್ಕಿಂತ ಮಿಗಿಲಾಗಿದೆ; ಇಲ್ಲಿನ ವಸಂತದುರಂತ ಅಲ್ಲಿನದಕ್ಕಿಂತ ತೀವ್ರವಾದುದು:

‘‘ಸೊರ್ಕಿದಂಗಜ ಮತಂಗಜದಂತೆ ಬರ್ಪ ಮಾದ್ರಿಯಂ ಕಂಡು’’ ಪಾಂಡುವಿನ ಮೇಲಾದ ಪರಿಣಾಮವಿದು

ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ
ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ
ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ
ಬಗೆಯದೆ ಮಿೞ್ತು ದೇವತೆಯನೞ್ಕಱಳುರ್ಕೆಯಿನಪ್ಪುವಂತೆವೊಲ್ (.೧೮)

‘‘ನೋಡಿ ನೋಡಿ’’ ಎಂಬ ದ್ವಿರುಕ್ತಿಯ ಸೊಗಸನ್ನು ಬಗೆಯಬೇಕು. ‘‘ಮೇಲೆ ಪಾಯ್ದವಳನಪ್ಪಿದನಾ ವಿಭು’’ ಎಂಬ ಮಾತಿನಲ್ಲಿ ಪಾಂಡುವಿನ ಮೋಹದ ಪ್ರಗಾಢತೆ ಸುವಿದಿತವಾದರೂ ಮಾದ್ರಿ ಅವನನ್ನು ತಡೆಯಲು ಮಾಡಿದ ಪ್ರಯತ್ನಗಳ ಪ್ರಸ್ತಾಪವೆ ಪಂಪನಲ್ಲಿಲ್ಲದಿರುವುದೊಂದು ಕೊರತೆ. ಮೃತ್ಯುದೇವತೆಯನ್ನಪ್ಪುವಂತೆ ಪಾಂಡು ಮಾದ್ರಿಯನ್ನಪ್ಪಿದ ಎಂದು ಹೇಳುವಲ್ಲಿ, ‘‘ಸಾಕ್ಷಾತ್ ಯಮನೇ ಕಾಮವಶನಾದ ಅವನ ಇಂದ್ರಿಯಗಳನ್ನು ಚೆನ್ನಾಗಿ ಕಲಕಿ… ನಾಶಪಡಿಸಿದನು’’ ಎಂಬ ವ್ಯಾಸೋಕ್ತಿ ಪ್ರೇರಕವಾಗಿದ್ದಿರ ಬಹುದು. ಆದರೆ ‘‘ವಿಷಯ ವಿಷವಲ್ಲಿಯನಪ್ಪಿದಂತೆ’’ ಎಂಬ ಪಂಪನ ಹೋಲಿಕೆ ಹೊಸದು.

ಪಾಂಡುವಿನ ಮುಂದಿನ ಅವಸ್ಥೆಯ ಚಿತ್ರಣ ಅತೀವ ಸಹಜವಾಗಿದೆ:

ಬಿಗಿದಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊ
ಯ್ಯಗೆ ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ ಸುಯ್ಯಡಂಗೆ ಮೆ
ಲ್ಲಗೆ ಮರಸೊಂದಿದಂದದೊಳೆ ಜೋಲ್ದ… (. ೧೯)

ಮೊದಲು ‘‘ಇನಿಯಂ ಮಱಸೊಂದಿದನೋ ಬೞಲ್ದನೋ’’ ಎಂದು ಯಥಾರ್ಥವಾಗಿ ಶಂಕಿಸಿದ ಮಾದ್ರಿ, ಅವನು ನಿಧನನಾದುದನ್ನು ಅರಿತ ಬಳಿಕ, ಗೋಳಾಡುತ್ತಾಳೆ:

ತಾಪಸನ ಶಾಪವೆಂಬುದು
ಪಾಪದ ರೂಪಱಿತುಮಱಯದಂತೇಕೆ ಮನಂ
ಗಾಪಱಿದು ಬಂದು ಮುಟ್ಟಿದೆ

ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ (೨. ೨೦)

ಈ ಆತ್ಮಭರ್ತ್ಸನೆ ನವೀನ.

ಮಾದ್ರಿಯ ಆಕ್ರಂದನವನ್ನು ಕೇಳಿದ ಕುಂತಿ ಭೀತಳಾಗಿ, ಯೋಚಿಸುತ್ತಾಳೆ:

ದೆಸೆಯೊಳ್ ಭೂಭುಜನೋ
ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ
ತಾ ದೆಸೆಯೊೞ್ ಭೂಪತಿಗೇ
ನಾದುದೊ ಪೇೞ್ ಬಿದಿಯೆ ಕೆಟ್ಟೆನೞಿದೆನ್ …. (. ೨೩)

ಇಂಥ ಅನಾಹುತ ನಡೆಯಬಹುದೆಂಬ ಅನುಮಾನ ಕುಂತಿಗೆ ಇದ್ದೇ ಇತ್ತೆಂಬುದು ಇದರಿಂದ ತಿಳಿದುಬರುತ್ತದೆ. ಅವಳು ಪಾಂಡು, ಮಾದ್ರಿಯರ ಮೇಲೆ ಸದಾ ಕಣ್ಣಿಟ್ಟಿದ್ದಿರ ಬೇಕು. (ವ್ಯಾಸರಲ್ಲಿ, ಗತಾಸುವಾದ ಪಾಂಡುವನ್ನು ಕುರಿತು ಕುಂತಿ ‘‘ನಿತ್ಯವೂ ನನ್ನಿಂದ ರಕ್ಷಿತನಾಗಿದ್ದ….’’ ಎನ್ನುವುದು ಗಮನಾರ್ಹ). ಆದರೂ ಆಗಬಾರದ್ದು ಆಗಿಹೋಯಿತು. ಮುಂದೆ ಅವಳು ಮಾದ್ರಿಯನ್ನು ಸ್ವಲ್ಪವೂ ಆಕ್ಷೇಪಿಸದೆ, ನೇರವಾಗಿ ಸಹಗಮನದ ಮಾತನ್ನಾಡುವುದು ಅಸಹಜವಾಗಿ ತೋರುತ್ತದೆ. ಇನ್ನು, ಮಾದ್ರಿ ಅವಳಿಗೆ ಉತ್ತರ ಕೊಡುವ ಪ್ರಮೇಯವೆ ಬರುವುದಿಲ್ಲ. ವ್ಯಾಸಭಾರತದಲ್ಲಾದರೆ ಪಾಂಡು, ಮಾದ್ರಿ ಇಬ್ಬರೂ ಕುಂತಿಯ ಆಕ್ಷೇಪಣೆಗೆ ಗುರಿಯಾಗುತ್ತಾರೆ; ಅದು ಸರಿಯೇ.

ಮೊತ್ತದಲ್ಲಿ ಹೇಳುವುದಾದರೆ, ಪಂಪನಲ್ಲಿ ತೀವ್ರತೆಯಿದ್ದರೂ ವ್ಯಾಸರ ಪೂರ್ಣತೆಯಿಲ್ಲ.

ಕುಮಾರವ್ಯಾಸನ ನಿರ್ವಹಣೆ ಮತ್ತೂ ವಿಶದವಾಗಿದೆ, ಉಜ್ವಲವಾಗಿದೆ. ಅವನು ವಿಶೇಷವಾಗಿ ವ್ಯಾಸರನ್ನು ಅನುಸರಿಸುತ್ತಾನಾದರೂ ಪಂಪನ ಪ್ರಭಾವಕ್ಕೆ ತಕ್ಕಮಟ್ಟಿಗೆ ಪಕ್ಕಾಗಿದ್ದಾನೆ. ಅವನ ವಸಂತವರ್ಣನೆಯಲ್ಲಿ ಕವಿಸಮಯವಿರುವಂತೆ ಸ್ವೋಪಜ್ಞವಾದ ಎಷ್ಟೋ ಅಂಶಗಳಿವೆ. ‘ಕುಸುಮಮಯ ಸಮಯ’ ಎಂಬ ಮಾತಿನಲ್ಲಿ ಚಮತ್ಕಾರ, ಸತ್ಯ ಎರಡೂ ಉಂಟು. ಆದರೂ ಪಂಪನ ನಿಸರ್ಗಾನುಭೂತಿ ನಾರಣಪ್ಪನದಕ್ಕಿಂತ ಹಿರಿದು.

ಈ ಚಿತ್ರದ ಚೆಲುವು ಆಸ್ವಾದನೀಯ:

ತೆಗೆದುದಗ್ಗದ ತಂಪು ನದಿಸರ
ಸಿಗಳ ತಡಿಯಲಿ ಹಜ್ಜೆಯಾದುದು
ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ
ಸೊಗಸಿದವು ನೆಳಲುಗಳು ದೂರಕೆ
ಸೆಗಳಿಕೆಗಳೇರಿದವು ತಂಗಾ
ಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನನಿಕರ

‘‘ವಸಂತನೃಪಾಲ ನಡೆದನು ಪಾಂಡುವಿನ ಮೇಲೆ’’ ಎನ್ನುತ್ತಾನೆ, ಕುಮಾರವ್ಯಾಸ. (ಅದಕ್ಕೆ ಮುನ್ನ ಬರುವ ‘‘ಮೊರೆವ ತುಂಬಿಯ ಗಾಯಕರ ನಯಸರದ ಕೋಕಿಲ ಪಾಠಕರ….’’ ಮುಂತಾದ ವಿವರಗಳಲ್ಲಿ ಕೇವಲ ಸಮೀಕರಣ ಕೌಶಲವಿದೆ). ರಾಜರೂಪಕ ಪಂಪನಲ್ಲೆ ಬಂದಿರುವುದನ್ನು ನೆನೆಯಬಹುದು. ಆದರೆ ವಸಂತರಾಜ ಪಾಂಡುವಿನ ಮೇಲೆ ದಾಳಿ ನಡೆಸಿದನೆಂಬ ಕಲ್ಪನೆ ನೂತನವಾದುದು. ಇಲ್ಲಿ ನಾವು ನೋಡುವುದು ಇಬ್ಬರು ರಾಜರ ಹೋರಾಟವನ್ನು; ಕಡೆಗೆ ಪಾಂಡುವಿನ ಸೋಲನ್ನು.

‘‘ತಾವರೆಯೆಸಳ ದೋಣಿಯ ಮೇಲೆ ಹಾಯ್ದವು ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು’’, ‘‘ವನವೀಧಿಗಳ ವಳಯವ ಹೊಕ್ಕು ಮರಳಿದುದಿಲ್ಲ ವಿರಹಿಗಳು’’ ಮುಂತಾದ ಉಕ್ತಿಗಳು ಪರಿಭಾವನಾಯೋಗ್ಯ.

ವಸಂತದೊಳೊಮ್ಮೆ ಮಾದ್ರೀ
ದೇವಿ ವನದೊಳಗಾಡುತಿರ್ದಳು
ಹೂವಿನಲಿ ಸರ್ವಾಂಗ ಶೃಂಗಾರದ ವಿಳಾಸದಲಿ

ಎಂಬುದಕ್ಕೆ ಪಂಪ ಭಾರತವೆ ಆಕರ. (ಮಾದ್ರಿಯ ಕುಸಮವಿಲಾಸಕ್ಕೂ ‘ಕುಸುಮಮಯ ಸಮಯ’ಕ್ಕೂ ಅವಿನಾಭಾವ ಸಂಬಂಧವೇರ್ಪಟ್ಟಿದೆ). ಆದರೆ,

ಆವಳಿವಳೂರ್ವಶಿಯೊ ರಂಭೆಯೊ
ದೇವವಧುಗಳ ಸುಳಿವೊ ತಾನೆನ
ಲಾವ ಚೆಲುವಿಕೆ ಶಿವಶಿವಾಯೆಂದರಸ ಬೆರಗಾದ

ಎಂಬ ಸಂಗತಿ ಹೊಸತು. ಪಾಂಡುವಿಗೆ ಚಿರಪರಿಚಿತೆಯಾದ ಮಾದ್ರಿ ಅಲಂಕರಣದ ಮತ್ತು ಆವರಣದ ಪ್ರಭಾವದಿಂದ ನವಲಾವಣ್ಯವನ್ನು ತಳೆದು, ಅಪ್ಸರೆಯೋ ಎಂಬಂತೆ ಅವನಿಗೆ ಬೆರಗನ್ನುಂಟುಮಾಡುವುದು ಅಸಹಜವಲ್ಲ. ದೀರ್ಘಕಾಲದ ವಿರಹವೂ ಅವನ ಭ್ರಮೆಗೆ ಕಾರಣ.

‘‘ಹೂಗಣೆಗಳೈದಲ್ಲ ರೋಮಗಳೆಂಟು ಕೋಟಿಯಲಿ ತೂಗಿ ನೆಟ್ಟವು ಕಣೆಗಳು’’ ಎಂಬ ನುಡಿ ಪಾಂಡುವಿನ ಕಾಮದ ಜ್ವಲಂತ ತೀಕ್ಷ್ಣತೆಯನ್ನು ಮನಗಾಣಿಸುತ್ತದೆ. ಮುಂದಿನ ರೂಪಕ ಕುಮಾರವ್ಯಾಸನಿಗೇ ವಿಶಿಷ್ಟವಾದುದು : ‘‘ಪ್ರಜ್ಞಾಸಾಗರಂಗಳು ಮಧ್ಯಕಟಿ ಜಾನ್ವಂಘ್ರಿಮಿತವಾಯ್ತು’’. ಪಾಂಡುವಿನ ವಿವೇಕ ಕ್ರಮೇಣ ಇಳಿದು, ಅಳಿದು ಹೋದುದನ್ನು ಕವಿ ನಾಲ್ಕೇ ಮಾತುಗಳಲ್ಲಿ ಸಮರ್ಥವಾಗಿ ಧ್ವನಿಸಿದ್ದಾನೆ. ಸ್ವಾರಸ್ಯವೆಂದರೆ, ಪಾಂಡುಪ್ರಜ್ಞೆ ಮೊದಲಾದದ್ದೆ ಮಧ್ಯಕಟಿಯಿಂದ, ತಲೆಯಿಂದಲ್ಲ! ಆಮೇಲೆ ಅದು ಸುಲಭವಾಗಿ ಅವನತವಾಗುತ್ತ ಹೋಗುತ್ತದೆ.

‘‘ಕುಂತಿಯನರಿಯಲೀಯದೆ’’ ಪಾಂಡು ಮಾದ್ರಿಯ ಬಳಿ ಸಾರುತ್ತಾನೆ.(ಇದಕ್ಕೆ ಸೂಚನೆ ವ್ಯಾಸರಲ್ಲೆ ಇದೆ). ಅವನು ತನ್ನ ಸೆರಗು ಹಿಡಿದಾಗ, ಮೊದಲು ಮಾದ್ರಿ ಬೇಡವೆಂದು ಕಾಲಿಗೆ ಬಿದ್ದು ಬೇಡುತ್ತಾಳೆ. ಆಮೇಲೆ ‘‘ಕೊಂದೆಲಾ ಕಡುಪಾಪಿ’’ ಎಂದು ಬೈಯುತ್ತಾಳೆ. (ಕುಮಾರವ್ಯಾಸನ ಪ್ರತಿಭೆ ಒರಟು). ಕಡೆಗೆ, ‘‘ನಿನ್ನಯ ನಂದನರಿಗಾರುಂಟು’’ ಎಂದು ಮಕ್ಕಳ ಭವಿಷ್ಯದತ್ತ ಗಮನ ಸೆಳೆಯಲೆಳಸುತ್ತಾಳೆ. ಎಲ್ಲ ವಿಫಲ. ಇದೆಲ್ಲ ಕುಮಾರವ್ಯಾಸನವೇ ನೈಜ ಚಿತ್ರಣ.

ಮಾದ್ರಿಯನ್ನು ಕೂಡಿದ ಪಾಂಡು ‘‘ರಾಣೀವಾಸದುರದಲಿ ಕದಪನಿಟ್ಟು’’ -ಈ ವಿವರ ಅಪೂರ್ವ-ಗತಪ್ರಾಣನಾಗುತ್ತಾನೆ. ಆಗ ಮಾದ್ರಿ ಚೀರುತ್ತಾಳೆ : ‘‘ಅಕಟ ಪಾಂಡುಮಹೀಶ ವಿಷಕನ್ನಿಕೆಯನೆನ್ನನು ಮುಟ್ಟಿದೈ.’’ ಈ ಸ್ವನಿಂದೆ ಪಂಪನಲ್ಲೆ ಇದೆ; ಅಲ್ಲದೆ, ಈ ‘ವಿಷಕನ್ನಿಕೆ’ ಪಂಪನ ‘ವಿಷವಲ್ಲಿ’ಯಿಂದ ಉದ್ಭವಿಸಿದವಳೇ.

ಮಾದ್ರಿಯ ಹಾಹಾಕಾರವನ್ನು ಕೇಳಿದ ಕುಂತಿ ‘‘ಹಾನಿ ಹಿರಿದುಂಟರಿವೆನಂಗಸ್ಫುರಿತ ಶಕುನದಲಿ. ಏನು ಮಾರಿಯೊ’’ ಎಂದುಕೊಂಡು ಧಾವಿಸಿ ಬರುತ್ತಾಳೆ. ಇಲ್ಲಿ ಶಕುನದ ಅಗತ್ಯವಿರಲಿಲ್ಲ. ಆದರೆ ಕುಮಾರವ್ಯಾಸನಿಗೆ ಶಕುನಗಳಲ್ಲಿ ನಂಬಿಕೆ. ಇನ್ನೂ ಮುಖ್ಯವಾದ ಮಾತೆಂದರೆ, ಪಂಪನ ಕುಂತಿಯಂತೆ ಈ ಕುಂತಿಯೂ ಮಾದ್ರಿಯನ್ನು ದೂರುವುದಿಲ್ಲ ವೆಂಬುದು. ವ್ಯಾಸರನ್ನಿಲ್ಲಿ ಮರೆತೇಬಿಡುತ್ತಾನೆ ಕುಮಾರವ್ಯಾಸ ಎನ್ನುವುದು ಆಶ್ಚರ್ಯಕರ.

ಮುಂದೆ ವ್ಯಾಸರು ಸತ್ಯವತಿಗೆ ನುಡಿಯುತ್ತಾರೆ:

ಹೇಳಬಾರದು ಮುಂದಿನದು ದು
ಷ್ಕಾಲವಿಲ್ಲಿಗೆ ನಾಳೆ ನಾಳೆಗೆ
ನಾಳೆ ಬೆಟ್ಟಿತು ವರ್ಣಧರ್ಮಾಶ್ರಮದ ನೆಲೆ ಹೋಯ್ತು

ದುಷ್ಕಾಲದ ವಿಚಾರ ವ್ಯಾಸರಲ್ಲೆ ಇದೆ. ಆದರೆ ‘‘ವರ್ಣಧರ್ಮಾಶ್ರಮದ ನೆಲೆ ಹೋಯ್ತು’’ ಎಂಬುದು ಕುಮಾರವ್ಯಾಸನ ಕಾಲದ ಅನಿಸಿಕೆ ಮಾತ್ರ. ಇತ್ಯಾತ್ಮಕ, ನೇತ್ಯಾತ್ಮಕ ಎರಡೂ ಮುಖಗಳಲ್ಲಿ ಮಹಾಕಾವ್ಯ ಯುಗಧರ್ಮದ ಅಭಿವ್ಯಂಜನೆ.

ಪಾಂಡುಮರಣ ವೃತ್ತಾಂತದ ನಿರೂಪಣೆಯಲ್ಲಿ ಕುಮಾರವ್ಯಾಸ ಪಂಪನಿಗಿಂತ ಬಹಳ ಮುಂದೆ ಹೋಗಿದ್ದಾನೆಂದು ಹೇಳುವುದು ಕಷ್ಟ. ವ್ಯಾಸರಿಗೆ ಹೋಲಿಸಿದಾಗಂತೂ ಅವನ ಚಿತ್ರಣ ಅತೃಪ್ತಿಕರವಾಗಿಯೇ ತೋರುತ್ತದೆ. ವ್ಯಾಸರು ಸಂದರ್ಭವನ್ನು ಎಷ್ಟು ಸಂಗ್ರಹವಾಗಿ, ಆದರೂ ಸರ್ವಂಕಷವಾಗಿ ರೇಖಿಸಿದ್ದಾರೆಂಬುದನ್ನು ನೋಡಿದಾಗ, ವಿಸ್ಮಯವಾಗದಿರದು. ‘ವಿಶಾಲಬುದ್ದಿ’ ಎಂದು ಅವರನ್ನು ಸಕಾರಣವಾಗಿ ಕರೆಯಲಾಗಿದೆ. ಆದರೆ ಕನ್ನಡ ಮಹಾಕವಿಗಳ ಸಾಧನೆಯ ಸ್ವಂತಿಕೆ ಅಲ್ಲಗಳೆಯುವಂಥದಲ್ಲ; ಅಭಿನಂದನೀಯವಾದದ್ದೆ.

[1] ವ್ಯಾಸರಲ್ಲಿ ಮರಗಳ ಪಟ್ಟಿ ಮಾತ್ರವಿದ್ದರೆ, ಪಂಪ ತಂಗಾಳಿ, ತುಂಬಿ, ಕೋಗಿಲೆಗಳನ್ನು ಹೇಳುತ್ತಾನೆ. ಕರ್ನಾಟಕದ ಪ್ರಕೃತಿಯ ಮತ್ತು ಸಂಸ್ಕೃತಿಯ ಅವಿಭಾಜ್ಯಾಂಗಗಳಾದ ಮಾವು, ಮಲ್ಲಿಗೆಗಳ ಉಲ್ಲೇಖವೂ ಗಮನಾರ್ಹ. ವ್ಯಾಸಭಾರತವನ್ನು ‘ಕನ್ನಡಿಸಿ’ದ್ದಾನೆ, ಪಂಪ. (ಇನ್ನೊಂದು ರೀತಿಯಲ್ಲಿ ಕುಮಾರವ್ಯಾಸ ಮಾಡಿರುವುದೂ ಅದನ್ನೆ).