‘‘ಹಳಗನ್ನಡದಲ್ಲಿರುವ ಅಲಂಕಾರ ಗ್ರಂಥಗಳೆಲ್ಲಾ ಸಂಸ್ಕೃತ ಗ್ರಂಥಗಳನ್ನು ಅನುಸರಿಸಿ ಬರೆಯಲ್ಪಟ್ಟವು. ಕನ್ನಡ ಆಲಂಕಾರಿಕರು ಪ್ರಾಯಶಃ ತಮ್ಮ ಗ್ರಂಥಗಳಲ್ಲಿ ಯಾವ ಹೊಸ ಸಂಗತಿಯನ್ನು ಎತ್ತಿಯಾಗಲಿ ವಿಚಾರ ಮಾಡಿಯಾಗಲಿ ಹೇಳಿಲ್ಲ’’ ಎಂದು ದಿವಂಗತ ಎ.ಆರ್. ಕೃಷ್ಣಶಾಸ್ತ್ರಿಗಳು ಅಭಿಪ್ರಾಯಿಸಿದ್ದಾರೆ.[1] ಈ ಮಾತಿನಲ್ಲಿ ಸತ್ಯವೇನೋ ಉಂಟು; ಆದರೆ ಅದು ಪೂರ್ಣ ಸತ್ಯವಲ್ಲ. ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡಿಗರ ಸ್ವತಂತ್ರವಾದ ಕೊಡುಗೆ ಏನೂ ಇಲ್ಲವೆ? ಈ ಪ್ರಶ್ನೆಗೆ ನಕಾರಾತ್ಮಕವಾಗಿಯೆ ಉತ್ತರ ಕೊಡುವುದು ಆಳವಾದ ವಿವೇಚನೆಯ ಅಭಾವವನ್ನು ವ್ಯಕ್ತಪಡಿಸುತ್ತದಷ್ಟೆ. ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಕನ್ನಡಿಗರ ಸ್ವೋಪಜ್ಞತೆಯನ್ನು ಕಾಣಬೇಕಾದರೆ, ಕನ್ನಡ ಅಲಂಕಾರ ಗ್ರಂಥಗಳಿಗಿಂತ ಹೆಚ್ಚಾಗಿ ಪ್ರಸಿದ್ಧ ಕನ್ನಡ ಕವಿಗಳು ತಮ್ಮ ಕಾವ್ಯಗಳ ಪೀಠಿಕಾ ಭಾಗಗಳಲ್ಲಿ ಅಥವಾ ಅನ್ಯತ್ರ ಹೇಳುವ ಮಾತುಗಳನ್ನು ಅವಲಂಬಿಸುವುದು ಮೇಲು. ಅಲ್ಲಿ, ಸಂಸ್ಕೃತ ಆಲಂಕಾರಿಕರು ಹೇಳದ ಎಷ್ಟೋ ವಿಚಾರಗಳು ನಮ್ಮ ಕವಿಗಳಿಂದ ಪ್ರಣೀತವಾಗಿರುವುದು ಕಂಡುಬರುತ್ತದೆ. ನಾಗಚಂದ್ರ ಶಾಂತವೊಂದೇ ರಸವೆಂಬ ಅರ್ಥ ಬರುವಂತೆ ಜಿನಸ್ತವನ ಮಾಡಿರುವುದನ್ನು ನೆನೆಯಬಹುದು. ಕನ್ನಡ ಅಲಂಕಾರ ಗ್ರಂಥಗಳನ್ನು ತೆಗೆದುಕೊಂಡರೂ ಕೂಡ, ಅವೆಲ್ಲ ಚರ್ವಿತ ಚರ್ವಣವೆಂದು ಅವಸರದಿಂದ ನಿರ್ಣಯಿಸುವುದು ಅಸಾಧುವಾಗುತ್ತದೆ. ನಮ್ಮ ಆಲಂಕಾರಿಕರಲ್ಲಿ ಎಷ್ಟೋ ವಿನೂತನವಾದ ಕಾವ್ಯತತ್ತ್ವಗಳು ಪ್ರಕಟವಾಗಿವೆ. ಉದಾಹರಣೆಗೆ, ಕವಿರಾಜಮಾರ್ಗಕಾರ ‘‘ಧ್ವನಿಯೆಂಬುದಳಂ ಕಾರಂ’’ ಎಂದು ಹೇಳುವಲ್ಲಿ,ನಾಗವರ್ಮ ‘‘ರೀತಿ ವಿನೂತ ವಸ್ತುಕೃತಿ ಗೊಪ್ಪುವ ಮೆಯ್’’ ಎಂದು ನಿರೂಪಿಸುವಲ್ಲಿ ಸಂಸ್ಕೃತ ಅಲಂಕಾರ ಗ್ರಂಥಗಳಲ್ಲಿಲ್ಲದ ವಿಶಿಷ್ಟವಾದ ಮತ್ತು ಆಧುನಿಕ ದೃಷ್ಟಿಸಮ್ಮತವಾದ ಆಲೋಚನೆಗಳನ್ನು ಗುರುತಿಸುತ್ತೇವೆ.

ಸದ್ಯಕ್ಕೆ ‘ಕವಿರಾಜಮಾರ್ಗ’ದಲ್ಲಿ ಬರುವ ಒಂದು ಭಾಗವನ್ನು ಈ ವಾದಕ್ಕೆ ಸಮರ್ಥನೆಯಾಗಿ ವಿವೇಚಿಸಬಹುದು. ‘ಕವಿರಾಜಮಾರ್ಗ’ ದಂಡಿ ಭಾಮಹರನ್ನು ಅನುಸರಿಸಿದ ಒಂದು ಅಲಂಕಾರ ಗ್ರಂಥವೆಂದು ಸಾಂಪ್ರದಾಯಿಕವಾಗಿ ಪರಿಗಣಿತವಾಗಿದ್ದರೂ, ವಸ್ತುತಃ ಅದೊಂದು ಸ್ವತಂತ್ರ ಮೌಲ್ಯವುಳ್ಳ ಸಂಕೀರ್ಣ ಸ್ವರೂಪದ ಕೃತಿ. ಕನ್ನಡನಾಡಿನ ಮೇರೆಗಳು, ಕನ್ನಡಿಗರ ಸಂಸ್ಕೃತಿ, ಕನ್ನಡ ಸಾಹಿತ್ಯದ ಹರಹು ಮುಂತಾದ ವಿಷಯಗಳ ಮೇಲೆ ಅಪೂರ್ವವಾದ ಬೆಳಕು ಚೆಲ್ಲುವ ಈ ಗ್ರಂಥ ಕನ್ನಡಿಗರ ಕೈಪಿಡಿಯೇ ಆಗಿದೆ. ಅದರಲ್ಲಿ ಬರುವ ಅಲಂಕಾರ ಭಾಗದಲ್ಲೂ ಕವಿರಾಜಮಾರ್ಗಕಾರನ ಸ್ವತಂತ್ರ ಪರಿಭಾವನೆ ಸುಷ್ಠುವಾಗಿ ವ್ಯಕ್ತವಾಗಿದೆ.

‘ಕವಿರಾಜಮಾರ್ಗ’ದ ಪ್ರಥಮ ಪರಿಚ್ಛೇದದ ಕೇವಲ ನಾಲ್ಕು ಪದ್ಯಗಳು(೧೫-೧೮) ನಮಗಿಲ್ಲಿ ಪ್ರಕೃತ. ಈ ಭಾಗದಲ್ಲಿ ಕವಿರಾಜಮಾರ್ಗಕಾರ ಕವಿಗಳ ಬೇರೆ ಬೇರೆ ಸ್ತರಗಳನ್ನು ಅನುಕ್ರಮವಾಗಿ ವ್ಯಾವರ್ಣಸಿದ್ದಾನೆ; ಈ ಸ್ತರನಿರೂಪಣೆ ಯಾವ ಸಂಸ್ಕೃತ ಅಲಂಕಾರ ಗ್ರಂಥದಲ್ಲೂ ನಮಗೆ ಸಿಕ್ಕುವುದಿಲ್ಲ. ಕವಿಗಳೆಲ್ಲ ಸನಾಮರಾದರೂ ಸಮಾನರಲ್ಲ. ಅವರಲ್ಲಿ ತರತಮ ಭೇದಗಳುಂಟು, ವರ್ಗಗಳುಂಟು; ಅದಕ್ಕನುಸಾರವಾಗಿ ಕಾವ್ಯಪ್ರಯೋಜನಗಳಲ್ಲೂ ವಿಭಿನ್ನತೆಯುಂಟು ಎಂಬುದಿಲ್ಲಿ ಸೊಗಸಾಗಿ ವಿದಿತವಾಗುತ್ತದೆ.

ಕವಿಲೋಕದ ಮೊದಲನೆಯ ಎರಡು ಸ್ತರಗಳು ಈ ಪದ್ಯದಲ್ಲಿ ಪ್ರಸ್ತಾಪಗೊಂಡಿವೆ:

ಕುಱಿತಂತು ಪೆಱರ ಬಗೆಯಂ
ತೆಱೆದಿರೆ ಪೆಱರ್ಗಱಿಪಲಾರ್ಪವಂ ಮಾತಱಿವಂ
ಕಿಱಿದರೊಳೆ ಪಿರಿದುಮರ್ಥಮ
ನಱಿಪಲ್ ನೆಱೆವಾತನಾತನಿಂದಂ ನಿಪುಣಂ

‘ತನ್ನ ಮನಸ್ಸಿನಲ್ಲಿ ಮೂಡಿದ ಎಲ್ಲ ಭಾವಾಲೋಚನೆಗಳನ್ನು ಕೇಳುವವರ ಚಿತ್ತಕ್ಕೆ ನಾಟುವಂತೆ ಪರಿಣಾಮಕಾರಿಯಾಗಿ ಮಾತಿನಲ್ಲಿ ಅಭಿವ್ಯಕ್ತಿಗೊಳಿಸಲು ಸಮರ್ಥನಾದವನು ಮಾತು ಬಲ್ಲವ‘(ಮಾತಱಿವಂ). ಇದು ಕವಿಯ ಮೊದಲನೆಯ ಹಂತ. ಸಾಮಾನ್ಯರಲ್ಲೂ ಭಾವಗಳಿರುತ್ತವೆ, ತೀವ್ರವಾಗಿಯೆ ಇರುತ್ತವೆ; ಆದರೆ ಅವರು ಅವುಗಳನ್ನು ನುಡಿಯಲ್ಲಿ ಯಶಸ್ವಿಯಾಗಿ ಪ್ರಕಟಿಸಲಾರರು. ಅವರು ಒಂದು ರೀತಿಯಲ್ಲಿ ಮೂಕರು; ಕವಿಯಾದರೊ ವಾಚಾಲ. ಆದ್ದರಿಂದ ನಿವೇದನ ಶಕ್ತಿಯೇ(Communication)ಕಾವ್ಯದ ಪ್ರಥಮ ಲಕ್ಷಣ. ಇದನ್ನು ಪಡೆದಿದ್ದರೆ ಅಷ್ಟೇ ಸಾಕು, ವ್ಯಕ್ತಿ ಕವಿನಾಮಧೇಯಕ್ಕೆ ಯೋಗ್ಯ.

ಆದರೆ ಮಾತಿನ ಬಲ್ಮೆಯೊಂದೆ ಸಾಲದು. ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ ಹೇಳುವುದು ಮುಖ್ಯ; ಅದು ಬೇರೆಯೇ ಒಂದು ಶಕ್ತಿ; ಅದರಿಂದ ಮೂಂದಿನ ಹಂತವೇರ್ಪಡುತ್ತದೆ. ಕಿರಿದರಲ್ಲಿ ಹಿರಿದಾದ ಅರ್ಥವನ್ನು ತುಂಬಿ ಹೇಳಬಲ್ಲವನು ಮಾತರಿವವನಿಗಿಂತ ನಿಪುಣ ಎನ್ನುವಲ್ಲಿ ಕವಿರಾಜಮಾರ್ಗಕಾರ ಧ್ವನಿಸಾಮರ್ಥ್ಯವನ್ನು ಸೂಚಿಸಿದ್ದಾನೆ. ಮನಸ್ಸಿನಲ್ಲಿ ಹುಟ್ಟಿದ್ದನ್ನು ಇತರರು ಗ್ರಹಿಸುವಂತೆ ನುಡಿಯಲ್ಲಿ ಹೊಮ್ಮಿಸುವುದು ಸಾಧಾರಣ ಗುಣವೇನಲ್ಲ; ಆದರೆ ಅದನ್ನೆ ಧ್ವನಿಪೂರ್ಣವಾಗಿ ಹೇಳಿದಾಗ ಅರ್ಥ ರಮಣೀಯಾರ್ಥವಾಗಿ ಪರಿಣಮಿಸಿ ಕೇಳುವವರಿಗೆ ಸಂತೋಷ ಕೊಡುತ್ತದೆ. ಇದು ಮೊದಲನೆಯದಕ್ಕಿಂತ ಶ್ರೇಷ್ಠವಾದ ಗುಣ, ನಿಸ್ಸಂದೇಹವಾಗಿ.

ಈ ಧ್ವನಿಪೂರ್ಣವಾದ ಅಭಿವ್ಯಕ್ತಿ ಗದ್ಯದಲ್ಲಿ ಇರುವುದೂ ಸಾಧ್ಯ; ಗದ್ಯದಲ್ಲಿ ಕಾವ್ಯ ಇರಬಾರದೆಂದಿಲ್ಲ. ಆದರೆ ಕಾವ್ಯ ಇನ್ನೂ ಉತ್ತಮವಾಗುವುದು ಯಾವಾಗ ಎಂದರೆ ಅದು ಛಂದೋಬದ್ಧವಾದಾಗ. ಆದ್ದರಿಂದಲೇ ಕವಿರಾಜಮಾರ್ಗಕಾರ ಹೇಳುತ್ತಾನೆ: ‘‘ನುಡಿಯಂ ಛಂದದೊಳೊಂದಿರೆ ತೋಡರ್ಚಲಱುವಾತನಾತನಿಂದಂ ಜಾಣಂ’’ ಎಂದು. ಕಿರಿದರಲ್ಲಿ ಹಿರಿದರ್ಥವನ್ನು ಹೇಳುವವನಿಗಿಂತ ಅದನ್ನು ಛಂದಸ್ಸಿನಲ್ಲಿ ಹೇಳುವವನ ಹಂತ ಮತ್ತೂ ಮುಂದಿನದು. ಛಂದಸ್ಸು ಕಾವ್ಯದ ಅನಿವಾರ‍್ಯಾಂಗ; ಮ್ಯಾಥ್ಯೂ ಅರ್ನಾಲ್ಡ್ ಹೇಳುವಂತೆ, ಅದರ ‘ಪರಿಪೂರ್ಣತೆಯ ಭಾಗ’. ಛಂದೋರಾಹಿತ್ಯದಿಂದ ಕಾವ್ಯತ್ವ ಅಷ್ಟರಮಟ್ಟಿಗೆ ಊನವಾಗುತ್ತದೆ.[2] ಆದ್ದರಿಂದ ಛಂದೋಬದ್ದವಾಗಿ ಕಾವ್ಯರಚನೆ ಮಾಡುವ ಕವಿ ಹಿಂದಿನವರಿಗಿಂತ ಎತ್ತರವಾಗಿ ತೃತೀಯ ಸ್ತರದಲ್ಲಿ ನಿಲ್ಲುತ್ತಾನೆ.

ಇನ್ನೂ ಮುಂದಿನ ಪರಮಸ್ತರವೊಂದಿದೆ; ಅದನ್ನು ಮುಟ್ಟಿದವರು ಮಹಾಕವಿಗಳು; ಕವಿರಾಜಮಾರ್ಗಕಾರನ ಮಾತಿನಲ್ಲಿ ಹೇಳುವುದಾದರೆ ‘ಮಹಾಧ್ವಕೃತಿ’ ನಿರ್ಮಾಪಕರು, ‘ಪರಮಕವಿವೃಷಭರು’, ‘ಪರಮಕವಿ ಪ್ರಧಾನರು’. ಇವರು ಎಲ್ಲರಿಗಿಂತ ದೊಡ್ಡವರು. ‘‘ತಡೆಯದೆ ಮಹಾಧ್ವಕೃತಿಗಳನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲ’’.

ಕಾವ್ಯದಲ್ಲಿ ಕವಿ ಉನ್ನತವಾದ ಅಭಿವ್ಯಕ್ತಿ ಸತ್ವವನ್ನು ಮೆರೆದಿರಬಹುದು, ಧ್ವನಿಮಹಿಮೆಯನ್ನು ತೋರ್ಪಡಿಸಿರಬಹುದು; ಅವನ ಛಂದಸ್ಸು ಲೋಕಮೋಹಕವಾಗಿರ ಬಹುದು. ಇಷ್ಟೆಲ್ಲ ಇದ್ದೂ ಅದು ಕಲೆಗಾಗಿ ಕಲೆ ಎಂಬ ಸೂತ್ರಕ್ಕೆ ಮಾತ್ರ ನಿದರ್ಶನವಾಗಿ ಪರಿಣಮಿಸಿ, ಅತ್ಯುದಾತ್ತವಾಗದಿರುವುದು ಸಾಧ್ಯ. ಆದರೆ ಪರಮ ಕವಿವೃಷಭರು, ಪರಮ ಕವಿ ಪ್ರಧಾನರು ಕಟ್ಟುವ ಕಾವ್ಯ ಈ ಎಲ್ಲ ಗುಣಗಳನ್ನೂ ಮೈಗೂಡಿಸಿಕೊಂಡು ಮತ್ತೂ ಮುಂದೆ ಹೋಗುತ್ತದೆ; ‘ಮಹಾಧ್ವಕೃತಿ’ಯಾಗುತ್ತದೆ. ಅದು ಮುಂದೆ ಬರುವ ಕವಿಗಳಿಗೆ ‘ಮಹಾಧ್ವ’ವೊಂದನ್ನು ತೆರೆಯುತ್ತದೆ. ಅದಕ್ಕಿಂತ ಮಿಗಿಲಾಗಿ ಜನಜೀವನಕ್ಕೆ ‘ಮಹಾಧ್ವ’ವನ್ನು ತೋರುತ್ತದೆ. ಅಷ್ಟೇ ಅಲ್ಲ, ಪ್ರಾಚೀನ ಮಹಾಕವಿಗಳ ‘ಮಹಾಧ್ವ’ವನ್ನೆ ಅದು ಅನುಸರಿಸುತ್ತದೆ. ಯಾವ ಅರ್ಥದಲ್ಲಿ ಭಾವಿಸಿದರೂ ಅದು ಮಾರ್ಗಕೃತಿಯೇ.

ಕವಿ-ಕಾವ್ಯದ ಈ ನಾಲ್ಕನೆಯ ಸ್ತರವನ್ನು ಕವಿರಾಜಮಾರ್ಗಕಾರ ಹೀಗೆ ನಿರೂಪಿಸುತ್ತಾನೆ:

ಮಾತಱಿವರ್ಕೆಲಬರ್ ಜಗ
ತೀತಳಗತ ಮನುಜರೊಳಗೆ ಮಾತಱಿವವರೊಳ್
ನೀತಿವಿದರಮಳ ಕವಿತಾ
ನೀತಿಯುತರ್ ಕೆಲರೆ ಪರಮಕವಿ ವೃಷಭರ್ಕಳ್

ಪಾಪಮಿದು ಪುಣ್ಯಮಿದು ಹಿತ
ರೂಪಮಿದಹಿತ ಪ್ರಕಾರಮಿದು ಸುಖಮಿದು ದುಃ
ಖೋಪಾತ್ತಮಿದೆಂದಱಿಪುಗು
ಮಾ ಪರಮ ಕವಿಪ್ರಧಾನರಾ ಕಾವ್ಯಂಗಳ್

ನಿವೇದನ ಶಕ್ತಿ, ಧ್ವನಿಶಕ್ತಿಗಳು ಸಿದ್ದಿಸಿದರೆ ಕವಿಗೆ ಕವಿತಾನೀತಿ ವಶವಾದಂತೆಯೇ; ಆದರೆ ಜೀವನನೀತಿಯನ್ನು ಅವನು ಚಿತ್ರಿಸದಿದ್ದಲ್ಲಿ ಅದು ಉಚ್ಚವರ್ಗದ ಕಾವ್ಯವಾಗದು. ನೀತಿ- ಕವಿತಾನೀತಿಗಳ ಸಮನ್ವಯದಿಂದ ಮಹಾಕಾವ್ಯ ಅವಿರ್ಭವಿಸುತ್ತದೆ.[3] ಕಾವ್ಯಮೌಲ್ಯಗಳೇ ಸರ್ವಸ್ವವೆಂದು ತಿಳಿದುಕೊಂಡು ವಿರಚಿಸಿದ ಕಾವ್ಯದಿಂದ ಬದುಕಿಗೆ ಪ್ರಯೋಜನವಿಲ್ಲ; ಜೀವನ ಮೌಲ್ಯಗಳನ್ನೂ ಕವಿ ಪ್ರತಿಪಾದಿಸಬೇಕು. ಪಾಪ-ಪುಣ್ಯ, ಹಿತ-ಅಹಿತ, ಸುಖ-ದುಃಖ ಇವುಗಳ ಅರಿವು, ವಿವೇಚನೆ ಕಾವ್ಯಾನುಶೀಲನದಿಂದ ಉಂಟಾಗಬೇಕು.[4] ಅಂಥ ಕಾವ್ಯ ಲೋಕತಾರಕವಾಗುತ್ತದೆ; ಕೇವಲ ಮನೋರಂಜನದಲ್ಲಿ ವಿರಮಿಸದೆ ಬಾಳಿಗೆ ತುಷ್ಟಿಪುಷ್ಟಿಗಳನ್ನು ದಾನಮಾಡುತ್ತದೆ. ರಾಮಾಯಣ ಭಾರತ ಭಾಗವತ ಮಹಾಪುರಾಣ ಗಳಂತಹ ಕಾವ್ಯಗಳು ಈ ವರ್ಗದವು; ಇವುಗಳನ್ನು ಬರೆದವರು ಪರಮಕವಿವೃಷಭರು, ಪರಮಕವಿ ಪ್ರಧಾನರು. ಕವಿರಾಜಮಾರ್ಗಕಾರ ಹೇಳುವ ಈ ಚತುರ್ಥವರ್ಗದ ಕಾವ್ಯ ಚತುರ್ಥವರ್ಗದ ಪುರುಷಾರ್ಥಕ್ಕೆ ಸಾಧಕವಾಗುವಂಥದು. ಕವಿಯ ಗುರಿ ಈ ಬಗೆಯ ಕಾವ್ಯಗಳ ರಚನೆಯ ಕಡೆಗಿರಬೇಕು.

ಕಾವ್ಯನಿರ್ಮಿತಿಯಲ್ಲಿ ಮೂಲಭೂತವಾದುದು ನುಡಿಬಲ್ಮೆ. ಮಾತು ಬಂದವರೆಲ್ಲ ಮಾತು ಬಲ್ಲವರೆಂದು ಅರ್ಥವಲ್ಲ ಎಂಬುದನ್ನು ಕವಿರಾಜಮಾರ್ಗಕಾರ ಸ್ಪಷ್ಟಪಡಿಸಿದ್ದಾನೆ. ಎಲ್ಲ ಜಡಜನಕ್ಕೂ ಮಾತು ಬರುತ್ತದೆ; ಹೇಳಿಕೊಟ್ಟರೆ ಗಿಳಿಗಳೂ ಪುರುಳಿಗಳೂ ಮಾತು ಕಲಿಯುತ್ತವೆ. ಆದರಲ್ಲೇನಿದೆ ಮಹತ್ವ? ಮಾತು ಬಲ್ಲವನು ಮಾತ್ರ ಕವಿಯಾಗುತ್ತಾನೆ; ಮುಂದೆ ಮುಂದೆ ಹೋಗಿ ಮಹಾಕವಿಯಾಗುತ್ತಾನೆ. ನುಡಿ, ನುಡಿಬಲ್ಮೆ, ಕಿರಿದರಲ್ಲಿ ಹಿರಿದನ್ನಡಗಿಸುವಿಕೆ, ನುಡಿಗೆ ಛಂದಸ್ಸನ್ನು ಅಳವಡಿಸುವಿಕೆ, ಮಹಾಧ್ವಕೃತಿಗಳ ವಿರಚನೆ-ಹೀಗೆ ಮಾತಿನ ನಾನಾ ಹಂತಗಳನ್ನು ಕವಿರಾಜಮಾರ್ಗಕಾರ ಎಚ್ಚರಿಕೆಯಿಂದ ಗಮನಿಸಿ ವಿಶದಪಡಿಸಿದ್ದಾನೆ.

ಅವನು ಹೇಳುವ ಮತ್ತೊಂದಂಶ ಗಮನಾರ್ಹವಾಗಿದೆ. ಯಾವ ಸ್ತರದ ಕವಿಯೇ ಆಗಿರಲಿ, ಅನ್ಯರ ಮಾತುಗಳನ್ನು ನೆನೆದು ತನ್ನ ಕೃತಿಯಲ್ಲಿಟ್ಟರೆ ಅದು ನಗದ ಗುಹಾಧ್ವನಿಯಂತಾಗುತ್ತದೆ; ಕವಿಗೆ ಸ್ವೋಪಜ್ಞತೆ ಅತ್ಯಗತ್ಯ; ಅವನು ಅನುಕರಣವನ್ನು ವರ್ಜಿಸುವುದು ಶ್ರೇಯಸ್ಕರ ಎಂದು ಕವಿರಾಜಮಾರ್ಗಕಾರನ ಅಭಿಮತ:

ನೆನೆನೆನೆದು ಪೆಱರ ಮಾತುಗ
ಳನೆ ನೆಗೞ್ದಿರೆ ಕೃತಿಯೊಳಿಡುವವಂ ನಗದ ಗುಹಾ
ಧ್ವನಿಯವೊಲನರ್ಥವಚನಂ
ತನಗಾಗಿಸಲಱಿಯನುಚಿತ ವಾಕ್ಚತುರತೆಯಂ

ಹೀಗೆ ಕವಿರಾಜಮಾರ್ಗಕಾರನ ಕವಿಸ್ತರ ವಿವೇಚನೆ ಔಚಿತ್ಯಪೂರ್ಣವೂ ಉಪಾದೇಯವೂ ಆಗಿದೆ. ದುರ್ಗಸಿಂಹ ‘ಕವಿಗಳ್ಗಿದು ಕೈಗನ್ನಡಿ’ ಎಂದು ಕವಿರಾಜಮಾರ್ಗವನ್ನು ಕೊಂಡಾಡಿದ್ದು ಅತ್ಯುಕ್ತಿಯಲ್ಲ.

[1] ‘ಕನ್ನಡ ಕೈಪಿಡಿ’, ಪು.೧೬೭

[2] ‘Poetry Can Communicate before it is understood’ ಎಂಬ ಟಿ.ಎಸ್.ಎಲಿಯಟ್ಟನ ಪ್ರಸಿದ್ಧ ವಾಕ್ಯದಲ್ಲಿ ಸೂಚಿತವಾಗಿರುವುದು ಲಯದ ಪ್ರಾಧಾನ್ಯವೇ. ಕಾವ್ಯಾನುಭವವನ್ನು ತಂದುಕೊಡುವಲ್ಲಿ ಲಯದ ಪಾತ್ರ ವಿಶೇಷವಾದುದು.

[3] ಪಂಪಕವಿ ಇದೇ ಅಭಿಪ್ರಾಯವನ್ನು ಧರ್ಮ ಮತ್ತು ಕಾವ್ಯಧರ್ಮವನ್ನು ಕುರಿತ ತನ್ನ ಪ್ರಸ್ತಾಪದಲ್ಲಿ ವ್ಯಕ್ತಪಡಿಸಿದ್ದಾನೆ.

[4] ಅರ್ನಾಲ್ಡನ ಹೇಳಿಕೆ ನೆನಪಾಗುತ್ತದೆ : ‘‘Poetry is at the bottom Criticism of Life’’