ಸುಪ್ರತೀಕವೆಂದಕೂಡಲೆ ನಮ್ಮ ಮನೋರಂಗದಲ್ಲಿ ಪ್ರತ್ಯಕ್ಷವಾದತಕ್ಕದ್ದು ಕುಮಾರವ್ಯಾಸ ಕವೀಂದ್ರನ ಸುಪ್ರತೀಕಗಜ. ಅದರ ವರ್ಣನೆ ಕುಮಾರವ್ಯಾಸಭಾರತದ ಶಕ್ತಿ ಸ್ಥಾನಗಳಲ್ಲೊಂದು; ಕನ್ನಡ ಸಾಹಿತ್ಯದ ಭವ್ಯಾದ್ಭುತಗಳಲ್ಲೊಂದು. ಬೃಹತ್ತು ಮಹತ್ತುಗಳಲ್ಲಿ ಕುಮಾರವ್ಯಾಸನ ಸುಪ್ರತೀಕ ಪ್ರಸಂಗಕ್ಕೆ ಹೆಗಲೆಣೆಯಾಗಿ ನಿಲ್ಲಬಲ್ಲ ಪ್ರಸಂಗಗಳು ಸಾಹಿತ್ಯ ಲೋಕದಲ್ಲಿ ವಿರಳವೆನ್ನಬಹುದು; ಅಲ್ಲಿ ಅನುಭವಕ್ಕೆ ಬರುವ ಮಹಾಕವಿ ಪ್ರತಿಭೆಯ ತ್ರಿವಿಕ್ರಮಸತ್ವ ರೋಮಹರ್ಷಣಕಾರಿಯಾದುದು. ಕುಮಾರ ವ್ಯಾಸನಿಗಿಂತ ಹಿಂದೆಯೆ ಕನ್ನಡದಲ್ಲಿ ಸಮಸ್ತ ಭಾರತವನ್ನು ರಚಿಸಿದ ಪಂಪನಲ್ಲಿ ಕೂಡ ಈ ಸುಪ್ರತೀಕ ಪ್ರಸಂಗ ಸಂಕ್ಷಿಪ್ತವಾಗಿಯಾದರೂ ಅದ್ಭುತವಾಗಿ ಮೈದೋರಿದೆ; ಆದರೆ ಅದು ಕುಮಾರವ್ಯಾಸನ ಚಿತ್ರಣದ ಔನ್ನತ್ಯಕ್ಕೇರಲಾರದು. ಇದಕ್ಕೆ ಕಾರಣ, ಪಂಪ-ಕುಮಾರವ್ಯಾಸರಲ್ಲಿರುವ ಮಹದಂತರ. ಇಬ್ಬರೂ ಕನ್ನಡದ ಮಹಾ ಕವಿಗಳಾದರೂ ಅವರ ಪ್ರತಿಭೆಯಲ್ಲಿ ತರತಮ ಭೇದವಿದೆ – ಶೇಕಡ ಐವತ್ತಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳೆಲ್ಲ ಪ್ರಥಮ ವರ್ಗದವರೆ ಆದರೂ, ಅವರಲ್ಲಿ ಅಂಕಾನುಸಾರವಾಗಿ ವರ್ಗ ಭೇದವಿರುವಂತೆ! ಕುಮಾರವ್ಯಾಸನ ಪ್ರತಿಭೆ ಅನನ್ಯಪರತಂತ್ರವಾಗಿದ್ದರೆ, ಪಂಪನ ಪ್ರತಿಭೆಗೆ ಸಹಜವಾದ ಮತ್ತು ಸ್ವಕಲ್ಪಿತವಾದ ಕೆಲವು ಪರಿಮಿತಿಗಳಿವೆ. ಕನ್ನಡ ಸಾಹಿತ್ಯಚರಿತ್ರೆಯ ವಿದ್ಯಾರ್ಥಿಗಳಿಗೆಲ್ಲ ಅವು ಸುಪರಿಚಿತವೇ.

ಪಂಪನದು ಜೈನದೃಷ್ಟಿ; ಪಂಚಮವೇದವೆನಿಸಿದ ಮಹಾಭಾರತ ಅವನ ಪಾಲಿಗೆ ಕೇವಲ ಲೌಕಿಕಕೃತಿ. ಕುಮಾರವ್ಯಾಸನಾದರೆ ಯಾವ ಮತಕ್ಕೂ ಸೀಮಿತವಾಗದ ಭಾಗವತಚೇತನ. ಅವನ ಗಗನೋದಾರವಾದ ದೃಷ್ಟಿಗೆ ಮಹಾ ಭಾರತವೆಂದರೆ ‘ಅರಸುಗಳಿಗೆ ವೀರ’, ‘ಯೋಗಿಗಳ ತತ್ವವಿಚಾರ’, ‘ವಿರಹಿಗಳ ಶೃಂಗಾರ’ ಎಲ್ಲವೂ ಅಹುದು : ಅದು ಅವನ ಪಾಲಿಗೆ ಸಕಲ ಪುರುಷಾರ್ಥ ಕೋಶ. ‘‘ತಿಳಿಯ ಹೇಳುವೆ ಕೃಷ್ಣಕಥೆಯನು’’ ಎಂದು ಕುಮಾರವ್ಯಾಸ ಉದ್ಘೋಷಿಸಿದರೆ, ಪಂಪ ಅರ್ಜುನನನ್ನು ಕಥಾನಾಯಕನ್ನಾಗಿ ಮಾಡಿಕೊಂಡು ‘‘ಈ ಕಥೆಯೊಳ್ ತಗುಳ್ಚಿ ಪೋಲಿಪೂಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್’’ ಎಂದು ಬುದ್ದಿಪೂರ್ವಕವಾದ ಸಮೀಕರಣಕ್ಕೆ ತೊಡಗುತ್ತಾನೆ. ಕುಮಾರವ್ಯಾಸನ ಪ್ರಜ್ಞೆ ಅನಿಕೇತನವಾದುದು; ಅಕೇತನವಾದುದು ಎಂದು ಕೂಡ ಹೇಳಬಹುದು. ಯಾವುದೇ ವಿಶಿಷ್ಟ ಧ್ವಜ ಅಥವಾ ಲಾಂಛನ ಅದಕ್ಕಿಲ್ಲ. ಆದರೆ ಪಂಪನ ಪ್ರಜ್ಞೆ ಅನ್ಯಕೇತನವಾದುದು : ಅವನ ಕಾವ್ಯದ ಉದ್ದಕ್ಕೂ ಪಟಪಟ ಹಾರುತ್ತಿದೆ ಅರಿಕೇಸರಿಯ ಬಾವುಟ!

‘‘ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’’ ಎಂದು ನಾರಣಪ್ಪ ಹೇಳುವಲ್ಲಿ ಅವನು ಭಗವದ್ವಾಣಿಗೆ ತನ್ನನ್ನು ಜಿಹ್ವಾ ಮಾತ್ರವನ್ನಾಗಿ ಮಾಡಿಕೊಂಡಿರುವುದು ವ್ಯಕ್ತವಾಗುತ್ತದೆ. ಅವನು ಭುವನ ಕವಿಗೆ ಲಿಪಿಕಾರನಾದ ಮಹಾನುಭಾವ -ಸಾಮಾನ್ಯ ಲಿಪಿಕಾರನಲ್ಲ, ವ್ಯಾಸರಿಗೆ ಸಿಕ್ಕಿದ ಗಣೇಶನಂಥ ದಿವ್ಯ ಲಿಪಿಕಾರ! ‘‘ನಾವು ನಮ್ಮನ್ನು ದಿವ್ಯಾಶ್ವಕ್ಕೆ ಸಮರ್ಪಿಸಿಕೊಂಡು ಅದು ಕರೆದೊಯ್ದತ್ತ ಹೋಗಬೇಕು’’ ಎನ್ನುತ್ತಾನೆ ಎಮರ್ಸನ್ ಎಂಬ ದಾರ್ಶನಿಕ. ಹಾಗೆ ದಿವ್ಯಾಶ್ವವನ್ನೇರಿ ಅದನ್ನೆ ಸಂಪೂರ್ಣವಾಗಿ ನಂಬಿ ಹೊರಟ ವರಕವಿ ಕುಮಾರವ್ಯಾಸ. ಪಂಪನಲ್ಲಿ ಈ ಸಮರ್ಪಣಕ್ರಿಯೆಯನ್ನು ನಾವು ಕಾಣುವುದಿಲ್ಲ; ಅವನು ದಿವ್ಯಾಶ್ವವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾನೆ ಮಾತ್ರವಲ್ಲ, ತಾನೆ ಕಡಿವಾಣಗೊಂಡ ಕುದುರೆಯಂತೆ ಕಾಣುತ್ತಾನೆ. ಕುಮಾರವ್ಯಾಸ ಕಾವ್ಯರಚನೆಯಿಂದ ಮೆಚ್ಚಿಸಬೇಕಾಗಿದ್ದುದು ಅಂತರಾತ್ಮನನ್ನು; ಆದರೆ ಪಂಪ ಕಾವ್ಯ ಬರೆದದ್ದು ವಿದ್ವದ್ಗೋಷ್ಠಿಯ ಮತ್ತು ಅರಿಕೇಸರಿಯ ತೃಪ್ತ್ಯರ್ಥವಾಗಿ.

ಕುಮಾರವ್ಯಾಸ ತನ್ನ ಬಗ್ಗೆ ಹೇಳಿಕೊಂಡಿರುವ ‘ಲಿಪಿಕಾರ’, ‘ಯೋಗೀಂದ್ರ’ ‘‘ಶುಕರೂಪ’’ ‘ವೀರನಾರಾಯಣನ ಕಿಂಕರ’ -ಮುಂತಾದ ಮಾತುಗಳಲ್ಲಿ ವ್ಯಕ್ತವಾಗತಕ್ಕದ್ದು ವ್ಯಾವಹಾರಿಕವಲ್ಲದ, ಅಲೌಕಿಕವಾದ ಒಂದು ಅಖಂಡ ವ್ಯಕ್ತಿತ್ವ; ಅದರ ಪರಿಣಾಮವಾಗಿ ಮೂಡಿದ್ದು ಗದುಗಿನ ಭಾರತದಂಥ ಕೈಲಾಸಕೃತಿ. ಪಂಪನ ವ್ಯಕ್ತಿತ್ವ ಹೀಗೆ ಅಖಂಡವಾದದ್ದಲ್ಲ; ಅದಕ್ಕೆ ನಾನಾ ಮುಖಗಳು : ಕಲಿ, ಸತ್ಕವಿ, ಚತುರಂಗಬಲಭಯಂಕರಣ, ಲಲಿತಾಲಂಕರಣ, ಅಪಗತಪಾಪ, ವನಿತಾಕಟಾಕ್ಷಕುವಲಯಚಂದ್ರ ಮುಂತಾದ ಮಾತುಗಳಲ್ಲಿ ಈ ವೈವಿಧ್ಯ ಎದ್ದು ಕಾಣುತ್ತದೆ. ಅವನ ಧರ್ಮಾನುರಕ್ತಿ ‘ಆದಿಪುರಾಣ’ದ ಪಾತ್ರದಲ್ಲಿ ಹರಿದುಹೋಯಿತು; ಪಂಪಭಾರತದಲ್ಲಿ ಅದಕ್ಕೆ ಇಂಬು ದೊರೆಯಲಿಲ್ಲ. ‘ಹಿತಮಿತ ಮೃದುವಚನ’ದ ಬಿಗುಮಾನವೂ ಪಂಪನ ಒಂದು ನ್ಯೂನತೆಯಾಗಿ ಕಾಣುತ್ತದೆ. ಭಾರತದಂತಹ ಬೃಹತ್ಕಥೆಯನ್ನು ಕೇವಲ ಆರು ತಿಂಗಳಲ್ಲಿ ಸಂಗ್ರಹಿಸಿದ ಪಂಪನ ಚಲ, ಸಾಹಸಗಳು ಅಭಿನಂದನೀಯವಾದರೂ ಆ ಆತುರ ಕೂಡ ಪಂಪನ ಕೃತಿಗೆ ಬಹಳ ನಷ್ಟಮಾಡಿತೆಂದೆ ಹೇಳಬೇಕು. ಅಲ್ಲದೆ ಅವನ ಕಾವ್ಯಶಕ್ತಿ ಕೇಂದ್ರೀಕೃತವಾಗದೆ ಎರಡು ಕಾವ್ಯಗಳಲ್ಲಿ ಹಂಚಿಹೋಯಿತು. ಈ ಎಲ್ಲ ಕಾರಣಗಳಿಂದ ಪಂಪಭಾರತ ಕುಮಾರವ್ಯಾಸಭಾರತದಂತೆ ‘ಬ್ರಾಹ್ಮಭೂಮ’ವಾದ ಕೃತಿಯಾಗಲಿಲ್ಲ.

ಪಂಪನಿಗೂ ಕುಮಾರವ್ಯಾಸನಿಗೂ ಬಹಳ ಮುಖ್ಯವಾದ ವ್ಯತ್ಯಾಸವೊಂದಿದೆ. ಕುಮಾರವ್ಯಾಸ ಪ್ರಥಮತಃ ಯೋಗಿ, ದ್ರಷ್ಟಾರ; ಆದುದರಿಂದಲೆ ಅವನು ಸಹಜವಾಗಿ, ಅನಾಯಾಸವಾಗಿ ಮಹಾಕವಿ, ಜಗತ್ಕವಿ. ಪಂಪನಾದರೆ ಪ್ರಥಮತಃ ಕವಿ; ಆ ಮಿತಿಯಲ್ಲಿ ಎಷ್ಟರಮಟ್ಟಿಗೆ ಸಾಧ್ಯವೊ ಅಷ್ಟರಮಟ್ಟಿಗೆ ಅವನು ದ್ರಷ್ಟಾರ; ಆದ್ದರಿಂದಲೆ ಕುಮಾರವ್ಯಾಸನ ದಿವ್ಯ ದರ್ಶನದೀಪ್ತ ದೃಷ್ಟಿಯ ಸೌಭಾಗ್ಯ ಪಂಪನಿಗಿಲ್ಲ. ‘‘ಬಹುಮುಖ್ಯವಾಗಿ ಅವನ (ಕುಮಾರವ್ಯಾಸನ) ಮಹಿಮೆಗೆ ಕಾರಣ ಆತನ ಧರ್ಮದೃಷ್ಟಿ, ಆತನ ಭಗವದ್ಭಕ್ತಿ, ಅತನ ಋಷಿದರ್ಶನ’’; ‘‘ಸರ್ವವನ್ನೂ… ಭಗವದ್ಭಕ್ತಿಯ ಶ್ರೀಮಂತ ಕಾಂತಿಯ ಕಣ್ಣಿನಿಂದಲೆ ಕಾಣುವ ‘ವಿರಾಡ್ ದರ್ಶನ’ದಲ್ಲಿ… ಆತ್ಮಶ್ರೀಯ ದಿವ್ಯಾಗ್ನಿಯಲ್ಲಿ ಆದಿಕವಿ ಪಂಪನಿಗೂ ಅದ್ವಿತೀಯನಾಗಿ ಆತನನ್ನೂ ದ್ವಿತೀಯನನ್ನಾಗಿ ಮಾಡುವ ಯೋಗಿಕವಿ ಪೂಜ್ಯ ನಾರಣಪ್ಪ’’[1] ಎಂಬ ಕುವೆಂಪು ಅವರ ಮಹಾವಿಮರ್ಶೆಯನ್ನಿಲ್ಲಿ ನೆನೆಯಬೇಕು. ಮತ್ತೇನಿದ್ದರೂ ಇದಕ್ಕೆ ವ್ಯಾಖ್ಯಾನವಾಗಬಹುದು.

ಕೆಲವು ಗುಣಗಳಲ್ಲಿ ಪಂಪ, ಕುಮಾರವ್ಯಾಸರು ಪರಸ್ಪರ ಸ್ಪರ್ಧಿಸುವಂತೆ ತೋರಿಬಂದರೂ, ಒಟ್ಟಿನಲ್ಲಿ ಪಂಪನದು ಪರಮ ಪ್ರತಿಭೆಯ ಉಪಾಂತ ಸ್ಥಿತಿಯೆಂದೇ ನಿರ್ಣಯಿಸಬೇಕಾಗುತ್ತದೆ. ಕುಮಾರವ್ಯಾಸನದಾದರೆ ಶಿಖರಸ್ಥವಾದ ಪ್ರತಿಭೆ; ಕವಿಯಾದವನು ಮುಟ್ಟಬಹುದಾದ ಸ್ತರಗಳು ಅಲ್ಲಿಂದಾಚೆಗೆ ಬಹಳವಿಲ್ಲವೆಂದು ತೋರುತ್ತದೆ. ಆದರೆ ಪಂಪಕವಿ ಸಾನುಪ್ರದೇಶದ ಎಷ್ಟೋ ಚೆಲುವುಗಳನ್ನೂ ಅನುಭವಗಳನ್ನೂ ಕುಮಾರವ್ಯಾಸನಿಗಿಂತ ಸಮರ್ಥವಾದ ರೀತಿಯಲ್ಲಿ ಅನ್ಯಾದೃಶವಾಗಿ ಕೊಟ್ಟಿದ್ದಾನೆಂಬುದರಲ್ಲಿ ಸಂಶಯವಿಲ್ಲ.

ಪಂಪ-ಕುಮಾರವ್ಯಾಸರನ್ನು ಕುರಿತು ತೌಲನಿಕವಾಗಿ ಹೇಳಿದ್ದು ಇಷ್ಟೆಲ್ಲ ಮಾತು. ಆದರೆ ವಾಸ್ತವವಾಗಿ ಆದಿಕವಿಯೊಬ್ಬನನ್ನು ಅನಂತರದ ಕವಿಯೊಡನೆ ಹೋಲಿಸಿ ನೋಡುವುದು ಅನಿವಾರ್ಯವೇನಲ್ಲ. ಆದರೆ ಕುಮಾರವ್ಯಾಸ ಯೋಗೀಂದ್ರನೊಡನೆ ಯಾವ ಕವಿಯನ್ನೂ ಹೋಲಿಸಲೇಬಾರದು. ‘‘ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ?’’ ಆದ್ದರಿಂದ, ಪಂಪನನ್ನು ಪ್ರತ್ಯೇಕವಾಗಿಯೇ ವಿವೇಚಿಸಿ ಅವನ ವೈಶಿಷ್ಟ್ಯ ಸಾಧನೆ ಸಿದ್ದಿಗಳನ್ನು ಅರಿತು ಕೊಳ್ಳುವುದು ಲೇಸು. ಈ ದೃಷ್ಟಿಯಿಂದ ನೋಡಿದಾಗ ಪಂಪನಲ್ಲಿ ಮಹಾಕವಿಯ ಯೋಗ್ಯತೆ ಸತ್ತ್ವ ಸಾಮರ್ಥ್ಯಗಳೆಲ್ಲ ಪುಷ್ಕಳವಾಗಿವೆಯೆಂಬುದು ಸುವಿದಿತವಾಗುತ್ತದೆ; ಅವನು ಕನ್ನಡದಲ್ಲಿ ಮಾತ್ರವಲ್ಲದೆ, ಜಗತ್ತಿನ ಮಹಾ ಕವಿ ಶ್ರೇಣಿಯಲ್ಲಿ ಗೌರವಾನ್ವಿತ ಸ್ಥಾನ ಪಡೆಯುತ್ತಾನೆ.

ಹಿಂದೆ ಹೇಳಿದ ಹಲವು ಪರಿಮಿತಿಗಳು ಪಂಪನಿಗಿದ್ದರೂ ಅವನು ಆ ಆವರಣಗಳನ್ನು ಕಳಚಿಕೊಂಡು ಅಲ್ಲಲ್ಲಿ ತಲೆಯೆತ್ತಿ ನಿಂತಾಗ, ಅವನ ಚೇತನ ಗರಿಗೆದರಿ ವ್ರೋ; ಸ್ವರ್ಗದ ಗಾಳಿಯನ್ನೆ ಉಸಿರಾಡುತ್ತದೆ, ರುಂದ್ರ ಸತ್ತ್ವ ಗರ್ಭಿತವಾಗುತ್ತದೆ. ಅಂಥ ಕಡೆಗಳಲ್ಲಿ ಅವನು ಲೋಕೋತ್ತರವಾದ ಕವಿತೆಯನ್ನೆ ಸೃಜಿಸಿದ್ದಾನೆ. ಕುಮಾರವ್ಯಾಸನಂತೆ ಅವನು ವ್ಯಾಸರನ್ನು ನಿಕಟವಾಗಿ ಅನುಸರಿಸದಿದ್ದರೂ, ವ್ಯಾಸರಿಂದ ದೂರ ಸಿಡಿದು ನಿಂತಿಲ್ಲ. ‘‘ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿ ಯನೀಸುವೆನ್ ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ’’ ಎಂದು ಅವನು ಹೇಳುವಲ್ಲಿ ಆತ್ಮಪ್ರತ್ಯಯ ಪೂರ್ವಕವಾದ ನಮ್ರತೆ ಗೋಚರಿಸುತ್ತದೆ. ಪಂಪನ ಪೂರ್ವಿಕರು ವೈದಿಕರಾಗಿದ್ದುದರಿಂದ, ಆರ್ಷೇಯ ವೈದಿಕ ಸಂಸ್ಕೃತಿಯ ಸಾರ ಜೈನ ಸಂಸ್ಕೃತಿಯ ತಿರುಳಿನೊಡನೆ ಸಮರಸಗೊಂಡು ಅವನ ಮನೋಧರ್ಮವನ್ನು ಪರಿಪೋಷಿಸಿತ್ತೆಂಬುದನ್ನು ಲಕ್ಷಿಸಬೇಕು. ಅಂತಿಲ್ಲದಿದ್ದರೆ, ಪಂಪಭಾರತವೊಂದು ಜೈನಭಾರತವಾಗಿ ವಿಕೃತವಾಗ ಬಹುದಿತ್ತು, ಜೈನರಾಮಾಯಣದಂತೆ. (ಈಗ ಅದರಲ್ಲಿ ಅಲ್ಪಸ್ವಲ್ಪ ವಿಕೃತಿಯಿದ್ದರೂ ಒಟ್ಟಿನ ಮೇಲೆ ಕಾವ್ಯ ವಿರೂಪಗೊಂಡಿಲ್ಲ). ಉಳಿದ ಜೈನ ಕವಿಗಳೊಡನೆ ಹೋಲಿಸಿದಾಗ ಪಂಪನ ವೈಶಿಷ್ಟ್ಯ ಸ್ಫುಟವಾಗುತ್ತದೆ. ಉಳಿದವರು ಯಾರೂ ಜೈನೇತರ ಧಾರ್ಮಿಕ ಕತೆಗಳನ್ನು ತಮ್ಮ ಕಾವ್ಯಕ್ಕೆ ವಸ್ತುವಾಗಿ ತೆಗೆದುಕೊಳ್ಳಲಿಲ್ಲ; ಶುದ್ಧ ಲೌಕಿಕ ಕಥೆಗಳನ್ನು ತೆಗೆದುಕೊಂಡು ಅವಕ್ಕೆ ಜೈನಧರ್ಮದ ಬಣ್ಣ ಕಟ್ಟಿದರು ಅಥವಾ ರಾಮಾಯಣ ಭಾರತ ಕಥೆಗಳ ಜೈನ ರೂಪಾಂತರಗಳನ್ನು ಅವಲಂಬಿಸಿದರು. ಆದರೆ ಪಂಪ ನೇರವಾಗಿ ವೈದಿಕ ಮಹಾಭಾರತವನ್ನೆ ಆಶ್ರಯಿಸಿ ಅಲ್ಲಿನ ಮೌಲ್ಯಗಳನ್ನು ತನ್ನ ಕಾವ್ಯದಲ್ಲಿ ಕಂಡರಿಸಿದ; ‘‘ಬೆಳಗುವೆನಿಲ್ಲಿ ಲೌಕಿಕಮಂ’’ ಎಂದು ಹೇಳಿಕೊಂಡರೂ ಬಹುಮಟ್ಟಿಗೆ ‘‘ಭಾರತಂ ಲೋಕ ಪೂಜ್ಯಂ’’ ಎನಿಸುವಂತೆಯೆ ಅದನ್ನು ನಿರ್ವಹಿಸಿದ. ಇದರಿಂದ ಅವನೂ ಧನ್ಯನಾದ, ನಾಡೂ ಧನ್ಯವಾಯಿತು. ಅಂತೂ ಕನ್ನಡ ಸಾಹಿತ್ಯದ ಪ್ರಾರಂಭದಲ್ಲಿಯೇ ಇಂತಹ ಮಹಾಕವಿಯೊಬ್ಬನ ಉದಯವಾದುದು ಸಾಮಾನ್ಯ ಘಟನೆಯೇನಲ್ಲ.

ಪಂಪ ಕುಮಾರವ್ಯಾಸರಿಗೆ ವ್ಯಾಸಭಾರತವೇ ಆಕರವಾದರೂ, ಅವರ ಭಾರತಗಳು ಮೂಲಭಾರತದ ಪ್ರತಿಕೃತಿಗಳಾಗಿಲ್ಲ. ಈ ಕನ್ನಡ ಕವಿಗಳು ವ್ಯಾಸ ಭಾರತದ ಕತೆಯನ್ನು ಭಿತ್ತಿರೂಪವಾಗಿ ಮಾತ್ರ ಸ್ವೀಕರಿಸಿ, ಅದರ ಮೇಲೆ ಸ್ವೋಪಜ್ಞತೆಯಿಂದ ಚಿತ್ರಗಳನ್ನು ನಿರ್ಮಿಸಿದ್ದಾರೆ; ತಮ್ಮ ತಮ್ಮ ದೃಷ್ಟಿಗನುಸಾರವಾಗಿ ವಿಶಿಷ್ಟ ಸೃಷ್ಟಿಗಳನ್ನೆಸಗಿದ್ದಾರೆ. ವ್ಯಾಸವಟವೃಕ್ಷದ ಆಶ್ರಯದಲ್ಲಿದ್ದುಕೊಂಡೂ ತಮ್ಮನ್ನು ಕಿರಿದುಮಾಡಿಕೊಳ್ಳದೆ ಮಹೋನ್ನತವಾಗಿ ಗಗನಚುಂಬಿಗಳಾಗಿ ನಿಂತವರು ಪಂಪ ಮತ್ತು ನಾರಣಪ್ಪ. ಆದರೆ ಪಂಪನಿಗೂ ನಾರಣಪ್ಪನಿಗೂ ಅಂತರ ವಿಶೇಷವಾಗಿದೆ: ನಾರಣಪ್ಪನ ಕಾವ್ಯ ವನಶ್ರೀಸದೃಶವಾದುದು; ಪಂಪನದಾದರೊ ಉಪ-ವನಶ್ರೀ! ಎರಡೂ ರಮಣೀಯವೆ.

ಈ ಕವಿಗಳಿಬ್ಬರೂ ಎಷ್ಟೋ ಕಡೆ ವ್ಯಾಸಭಾರತದ ಸನ್ನಿವೇಶಗಳನ್ನು ಸ್ವಪ್ರತಿಭೆಯಿಂದ ಅಪೂರ್ವವೆಂಬಂತೆ ಪುನರ್ನಿರ್ಮಾಣ ಮಾಡಿದ್ದಾರೆ ಪರಿಷ್ಕರಿಸಿದ್ದಾರೆ; ಮೂಲದಲ್ಲಿಲ್ಲದ ಸೌಂದರ್ಯವನ್ನು ತುಂಬಿ ಉಜ್ವಲಗೊಳಿಸಿದ್ದಾರೆ. ಇಂತಹ ಹಲವು ಪ್ರಸಂಗಗಳಲ್ಲಿ ಭಗದತ್ತನ ಸುಪ್ರತೀಕ ಪ್ರಸಂಗವೂ ಒಂದು: ಅದು ಪಂಪ-ಕುಮಾರವ್ಯಾಸರ ಕಲಾಕೌಶಲ ಕ್ಕೊಂದು ಒಳ್ಳೆಯ ನಿಕಷವಾಗಿದೆ. ವ್ಯಾಸ, ಪಂಪ, ನಾರಣಪ್ಪರಲ್ಲಿ ಬರುವ ಮೂರೂ ಚಿತ್ರಗಳನ್ನು ಕುತೂಹಲಕ್ಕಾಗಿ ತುಲನೆ ಮಾಡಬಹುದು.

ವ್ಯಾಸಮಹಾಭಾರತದ ಮಹಾರ್ಣವ ವಿಸ್ತಾರದಲ್ಲಿ ಬಿಂದು ಮಾತ್ರವಾಗಿ ಕಣ್ಣಿಗೆ ಬೀಳುತ್ತದೆ ಸುಪ್ರತೀಕ ಪ್ರಸಂಗ. ಆದರೆ ಅದನ್ನು ವ್ಯಾಸರು ಅವಜ್ಞೆಗೈದಿಲ್ಲ; ಸರಳವಾದರೂ ಸುಂದರವಾಗಿಯೆ ಮಹಾದ್ಭುತವಾಗಿಯೆ ಎರಡು ಸಂಧಿಗಳಷ್ಟು ವಿಸ್ತಾರವಾಗಿ ಚಿತ್ರಿಸಿದ್ದಾರೆ; ಆದಿ ಮಹಾಕಾವ್ಯಗಳಲ್ಲಿ ಗೋಚರಿಸುವ ಲೆಕ್ಕಾಚಾರ ವಿವರ್ಜಿತವಾದ, ಸಮೀಕರಣಾತ್ಮಕ ವಲ್ಲದ ‘ಮಹೋಪಮೆ’ಗಳಿಂದ ಸುಪ್ರತೀಕವನ್ನು ಅಲಂಕರಿಸಿದ್ದಾರೆ. ಇತಿಹಾಸ ಕಾವ್ಯ ಪುರಾಣಕಾವ್ಯಗಳಲ್ಲಿ ಎಲ್ಲ ಭಾಗಗಳೂ ಏಕಪ್ರಕಾರವಾಗಿ ಅಸಾಧಾರಣ ರೀತಿಯಲ್ಲಿ ನಿರೂಪಣಗೊಳ್ಳುವುದಿಲ್ಲವೆಂಬುದನ್ನು ನೆನೆದಾಗ, ವ್ಯಾಸರು ಸುಪ್ರತೀಕಕ್ಕೆ ಇಷ್ಟು ಸ್ಥಾನೊಕೊಟ್ಟದ್ದೆ ಆಶ್ಚರ್ಯವೆನ್ನಬೇಕಾಗುತ್ತದೆ. ಮೂಲ ಭಾರತದಲ್ಲಿ ಬರುವ ತತ್ಸಂಬಂಧ ವಾದ ಕೆಲವು ಆಯ್ದ ಶ್ಲೋಕಗಳನ್ನೂ ಅವುಗಳ ಕನ್ನಡ ಅನುವಾದವನ್ನೂ ಇಲ್ಲಿ ನೋಡಬಹುದು:

ಚರಣಾಭ್ಯಾಮಥೋ ದ್ವಾಭ್ಯಾಂ ಸಂಹತೇನ ಕರೇಣ ಚ
ವ್ಯಾವೃತ್ತನಯನಃ ಕ್ರುದ್ಧಃ ಪ್ರಮಥನ್ನಿವ ಪಾಂಡವಂ

ಕುಲಾಲಚಕ್ರವನ್ನಾಗಸ್ತದಾ ತೂರ್ಣಮಥಾಭ್ರಮತ್
ಭೀಮಂ ಕರೇಣಾವನಮ್ಯ ಜಾನುಭ್ಯಾಮಭ್ಯತಾಡಯತ್

ಗ್ರೀವಾಯಾಂ ವೇಷ್ಪಯಿತ್ವೈನಂ ಸ ಗಜೋ ಹಂತುಮೈಹತ
ಸಕುಂಜರಸ್ಥೋ ರಥಿಭಿಃ ಶುಶುಭೇ ಸರ್ವತೋವೃತಃ

ಪರ್ವತಂ ವನಮಧ್ಯಸ್ಥೋ ಜ್ವಲನ್ನಿವ ಹುತಾಶನಃ
ಪ್ರಾಗ್ಜೋತಿಷಮಭಿಕ್ರುದ್ಧಃ ಪುನರ್ಭೀಮಃ ಸಮಭ್ಯಯಾತ್

ತಸ್ಯಾಭಿದ್ರವತೋ ವಾಹನ್ ಹಸ್ತಮುಕ್ತೇನ ವಾರಿಣಾ
ಸಿಕ್ತ್ವಾ ವ್ಯತ್ರಾಸಯನ್ನಾಗಸ್ತೇ ಪಾರ್ಥಮಹರಂಸ್ತತಃ

ಚೇಕಿತಾನೋ ಧೃಷ್ಟಕೇತುರ್ಯುಯುತ್ಸಾಶ್ಚಾರ್ದಯನ್ ದ್ವಿಪಃ
ತ ಏನಂ ಶರಧಾರಾಭಿರ್ಧಾರಾಭಿರಿವ ತೋಯದಾಃ

ಸ ಕುಂಜರಸ್ಥೋ ವಿಸೃಜನ್ನಿಷೂನರಿಷು ಪಾರ್ಥಿವಃ
ಬಭೌ ರಶ್ಮೀನಿವಾದಿತ್ಯೋ ಭುವನೇಷು ಸಮುತ್ಸಜನ್

ಸೋತಿಯತ್ನಾರ್ಪಿತೈರ್ಬಾಣೈರಾಚಿತೋ ದ್ವಿರದೋ ಬಭೌ
ಸಂಸ್ಯೂತ ಇವ ಸೂರ್ಯಸ್ಯ ರಶ್ಮಿಭಿರ್ಜಲದೋ ಮಹಾನ್

ಸ ನಾಗರಾಜಃ ಪ್ರವರಾಂಕುಶಾಹತಃ
ಪುರಾ ಸಪಕ್ಷೋದ್ರಿವರೋ ಯಥಾ ನೃಪ
ಭಯಂ ತದಾ ರಿಪುಷು ಸಮಾಧದಭೃಶಂ
ವಣಿಗ್ಜನಾನಾಂ ಕ್ಷುಭಿತೋ ಯಥಾರ್ಣವಃ
ತಮೇಕನಾಗಂ ಗಣಶೋ ಯಥಾ ಗಜಾನ್
ಸಮಂತತೋ ದ್ರುತಮಥ ಮೇನಿರೇ ಜನಾಃ
ಸ ಸಮಾಸಾದ್ಯ ತಂ ನಾಗಂ ಬಾಣೋ ವಜ್ರ ಇವಾಚಲಂ
ಅಭ್ಯಗಾತ್ ಸಹ ಪುಂಖೇನ ವಲ್ಮೀಕಮಿವ ಪನ್ನಗಃ

ಸತು ವಿಷ್ಟಭ್ಯ ಗಾತ್ರಾಣಿ ದಂತಾಭ್ಯಾಮವನೀಂ ಯಯೌ
ನದನ್ನಾರ್ತಸ್ವನಃ ಪ್ರಾಣಾನುತ್ಸಸರ್ಜೇ ಮಹಾದ್ವಿಪಃ

ಸ ಹೇಮಮಾಲೀ ತಪನೀಯ ಭಾಂಡಾತ್
ಪಪಾತ ನಾಗಾದ್ಗಿರಿ ಸನ್ನಿಕಾಶಾತ್
ಸುಪುಷ್ಪಿತೋ ಮಾರುತ ವೇಗರುಗ್ಣೋ
ಮಹಿಧರಾಗ್ರಾದಿವ ಕರ್ಣಿಕಾರಃ

(ಕ್ರುದ್ಧವಾದ ಆ ಗಜವು ಸೊಂಡಿಲನ್ನು ಸಂಕೋಚಗೊಳಿಸಿಕೊಂಡು, ಕಣ್ಣು ಹೊರಳಿಸುತ್ತ ಪಾಂಡುಪುತ್ರನನ್ನು ಮಥಿಸಿಬಿಡುವಂತೆ ತೋರಿತು… ಬಳಿಕ ಅದು ಕುಲಾಲ ಚಕ್ರದಂತೆ ವೇಗವಾಗಿ ತಿರುಗತೊಡಗಿತು. ಭೀಮನನ್ನು ಸೊಂಡಿಲಿನಿಂದ ಹಿಡಿದುಕೊಂಡು, ಮೊಳಕಾಲುಗಳಿಂದ ಕೆಳಕ್ಕೆ ಎತ್ತಿ ಹಾಕಿ, ಕೊರಳು ಹಿಸುಕಿ ಕೊಲ್ಲ ಬಯಸಿತು… ಸುಪ್ರತೀಕವನ್ನೇರಿದ ಭಗದತ್ತ ರಥಿಕರಿಂದ ಸುತ್ತುವರಿಯಲ್ಪಟ್ಟು ವನಮಧ್ಯದ ಪರ್ವತಶಿಖರದ ಮೇಲೆ ಜ್ವಲಿಸುವ ಅಗ್ನಿಯಂತಿದ್ದನು… ಅವನು ಕ್ರುದ್ಧನಾಗಿ ಮತ್ತೆ ಭೀಮನನ್ನೆದುರಿಸಿದನು…. ಅವನ ಆನೆ ಸೊಂಡಿಲಿನಿಂದ ನೀರನ್ನು ತೂರಿ ಭೀಮನ ಕುದುರೆಗಳನ್ನು ಹೆದರಿಸಿತು; ಅವು ನೀರಿನಲ್ಲಿ ತೊಯ್ದು ಚೆಲ್ಲಾಪಿಲ್ಲಿಯಾದವು. ಚೇಕಿತಾನ ದೃಷ್ಟಕೇತು ಯುಯುತ್ಸು ಮೊದಲಾದವರು ಆನೆಯನ್ನು ಶರಧಾರೆಯಿಂದ ನಾದಿದರು, ಮೋಡಗಳು ಜಲಧಾರೆಯಿಂದೆಂತೂ ಅಂತೆ… ಗಜಾರೂಢನಾದ ಭಗದತ್ತ ವೈರಿಗಳತ್ತ ಬಾಣಗಳನ್ನು ತೂರುತ್ತ, ಭೂಮಿಯ ಮೇಲೆ ಕಿರಣಗಳನ್ನು ಚೆಲ್ಲುವ ಸೂರ್ಯನಂತೆ ಕಂಗೊಳಿಸುತ್ತಿದ್ದನು… ಬಾಣಗಳು ನಾಟಿಕೊಂಡ ಆ ಮಹಾಗಜ ಸೂರ್ಯಕಿರಣಗಳಿಂದ ಭೇದಿತವಾದ ಮಹಾಮೇಘದಂತೆ ಹೊಳೆಯುತ್ತಿತ್ತು…ಅಂಕುಶದಿಂದ ತಿವಿತಗೊಂಡ ಆ ಗಜರಾಜ ಹಿಂದಿನ ಕಾಲದ ರೆಕ್ಕೆಯುಳ್ಳ ಪರ್ವತವನ್ನು ಹೋಲುತ್ತಿತ್ತು ಮತ್ತು ವ್ಯಾಪಾರಿಗಳು ಪ್ರಕ್ಷುಬ್ಧ ಸಾಗರವನ್ನು ಕಂಡಾಗ ಹೇಗೊ ಹಾಗೆ ರಿಪು ಹೃದಯದಲ್ಲಿ ಭೀತಿಯನ್ನುಂಟು ಮಾಡಿತು. ಒಂದೇ ಒಂದಾದ ಆ ಗಜ ಹಲವು ಗಜಗಳಾಗಿ ಪರಿಣಮಿಸುತ್ತ ಬೀದಿವರಿಯುತ್ತಿದೆಯೆಂದೇ ಜನ ಭ್ರಮಿಸಿದರು… ಅರ್ಜುನನ ಬಾಣ ಪರ್ವತವನ್ನು ಸೀಳುವ ವಜ್ರದಂತೆ ಸುಪ್ರತೀಕವನ್ನು ಸೀಳಿ, ಹುತ್ತವನ್ನು ಹೊಗುವ ಸರ್ಪದಂತೆ ಪುಂಖದೊಡನೆ ಒಳಹೊಕ್ಕಿತು… ಆ ಮಹಾದ್ವೀಪ ನಿಸ್ಸತ್ತ್ವಗೊಂಡು ದಾಡೆಯೂರಿ ನೆಲಕ್ಕೆ ಕೆಡೆಯಿತು; ಆರ್ತನಾದ ಮಾಡಿ ಪ್ರಾಣ ಬಿಟ್ಟಿತು. ಚಿನ್ನದ ಅಂಬಾರಿಗಳಿಂದ ಅಲಂಕೃತವಾದ ಪರ್ವತೋಪಮವಾದ ಆನೆಯ ಮೇಲೆ ಮಂಡಿಸಿದ್ದ ಹೇಮ ಮಾಲಾ ಧಾರಿಯಾದ ಭಗದತ್ತನು ಬಿರುಗಾಳಿಯಿಂದ ಭಗ್ನವಾದ ಕುಸುಮಿತ ಕರ್ಣಿಕಾರ ವೃಕ್ಷ ಪರ್ವತಾಗ್ರದಿಂದ ಕೆಳಗುರುಳುವಂತೆ ಉರುಳಿಬಿದ್ದನು.)

ಸುಪ್ರತೀಕ ವರ್ಣನೆ ಪಂಪನಲ್ಲಿ ಸಂಕ್ಷಿಪ್ತವಾಗಿ, ಆದರೆ ವ್ಯಾಸರಲ್ಲಿರುವುದಕ್ಕಿಂತ ವಿಭಿನ್ನವಾಗಿ ಬಂದಿದೆ. ಈ ಪ್ರಸಂಗದಲ್ಲಿ ಪಂಪ ವ್ಯಾಸರಿಗಿಂತ ಕೆಲವು ಹೆಜ್ಜೆ ಮುಂದೆ ಹೋಗುತ್ತಾನೆನ್ನಬಹುದು. ಆದರೆ ಅವನ ಉತ್ಸಾಹಾಸಕ್ತಿಗಳು ಕಡೆತನಕ ಉಳಿಯುವುದಿಲ್ಲ. ಕತೆಯನ್ನು ಸಂಗ್ರಹಿಸುವಲ್ಲಿಯೆ ಅವನದು ನೆಟ್ಟ ದೃಷ್ಟಿ; ಅದು ಅವನ ಕಾವ್ಯದ ಮುಖ್ಯ ಗುಣದಂತೆ ದೋಷವೂ ಹೌದು. ಅಂತೂ ಪಂಪಭಾರತದ ಅತ್ಯುತ್ಕೃಷ್ಟವಾದ ಸಮರ ವರ್ಣನೆಗಳಲ್ಲೊಂದು ಸುಪ್ರತೀಕ ಪ್ರಸಂಗ; ಅಲ್ಲಿ ಪಂಪನ ಪ್ರತಿಭೆ ತನ್ನ ಅತ್ಯುನ್ನತಸ್ತರದಲ್ಲಿ ಗೋಚರಿಸುತ್ತದೆ.

ಭೀಮಸೇನ ಕಳಿಂಗರಾಜನ ಗಜಘಟೆಯನ್ನು ಧ್ವಂಸಮಾಡಿದಾಗ ಕೌರವ ಬಲವೆಲ್ಲ ‘ಒಲ್ಲನುಲಿನೋಡಿ’ ಭಗದತ್ತನ ಆನೆಯನ್ನು ಮರೆಹೊಗುತ್ತದೆ. ಆಗ ‘‘ಭಗವತ್ತಂ ಸುಪ್ರತೀಕ ದ್ವಿಪಮನುಪಚಿತೋತ್ಸಾಹದಿಂ ತೋಱಿಕೊಟ್ಟಂ!’’ ಆ ದಿಗ್ಗಜದಿಂದ ಪಾಂಡವರ ಚತುರಂಗಬಲವೆಲ್ಲ ಹೇಗೆ ಚಲ್ಲಾಪಿಲ್ಲಿಯಾಯಿತೆಂಬುದನ್ನು ತಿಳಿಸುವಾಗ ಪಂಪ ಈ ಅಪೂರ್ವ ಚಿತ್ರವೊಂದನ್ನು ಕೊಡುತ್ತಾನೆ:

ಮದಕರಿಯ ಪರಿವ ಭರದಿಂ
ದದಿರ್ದೊಡೆ ನೆಲನೊಡ್ಡಿನಿಂದ ಚತುರಂಗಮುಮೊ
ರ್ಮೊದಲೆ ನಡುಗಿದುದು ಕೂಡಿದ
ಚದುರಂಗದ ಮಣೆಯನಲ್ಗಿದಂತಪ್ಪಿನೆಗಂ

ಇದು ಸಂಪೂರ್ಣವಾಗಿ ಸಂಪ್ರದಾಯ ಭಿನ್ನವಾದ, ಸ್ವಾನುಭವಜನ್ಯವಾದ ವರ್ಣನೆ (ಚತುರಂಗ-ಚದುರಂಗಗಳ ಸಮೀಕರಣ ವಾಚ್ಯವಾಗದಿದ್ದರೆ ಚೆನ್ನಾಗಿತ್ತು). ಪಂಪ ಚದುರಂಗದಾಟವನ್ನು ಕಂಡವನು, ಆಡಿದವನು; ಚದುರಂಗದ ಮಣೆಯನ್ನು ಅಲುಗಿಸಿದಾಗ ಏನಾಗುತ್ತದೆಂದು ಅವನಿಗೆ ಗೊತ್ತು. ತನ್ನ ಅನುಭವ ವಲಯದಿಂದಾಚೆಗೆ ಹೋಗದೆಯೆ ಕಲ್ಪನೆಯನ್ನು ಆಶ್ರಯಿಸದೆಯೆ ಸಹಜವಾದ ಮತ್ತು ಪರಿಣಾಮಕಾರಿಯಾದ ಚಿತ್ರವನ್ನು ಇಲ್ಲಿ ಆತ ಕೊಟ್ಟಿದ್ದಾನೆ.

ಆದರೆ ಕೇವಲ ಸ್ವಭಾವೋಕ್ತಿಗಳಿಂದ, ಬಾಹ್ಯಾನುಭವಮಿತವಾದ ಚಿತ್ರಗಳಿಂದ ಮಹತ್ತಾದುದನ್ನು ವರ್ಣಿಸುವುದು ಸಾಧ್ಯವಿಲ್ಲ. ಅಂಥ ಕಡೆ ಕವಿ ಕಲ್ಪನೆಗೆ ಶರಣಾಗಬೇಕಾಗುತ್ತದೆ. ಮುಂದಿನ ಪದ್ಯದಲ್ಲಿ ಪಂಪನ ಪ್ರೋತ್ತುಂಗ ಕಲ್ಪನಾಶಕ್ತಿ ಸುಪ್ರತೀಕದ ಜಂಗಮ ಹಿಮಾಚಲ ಸ್ವರೂಪವನ್ನು ನಮ್ಮ ಬಗೆಗಣ್ಣಿನ ಮುಂದೆ ನಿಲ್ಲಿಸುವ ಅಚ್ಚರಿಯನ್ನು ನೋಡಬಹುದು:

ತಳರ್ದುದು ಕರ್ಣತಾಳ ಪವನಾಹತಿಯಂ ಜಳರಾಶಿ ಕೆಯ್ಯ
ಳ್ವಳಿಕೆಗೆ ದಿಗ್ಗಜಂ ದೆಸೆಯಿನತ್ತ ತೆರಳ್ದುವು ಕಾಯ್ಪಿನಿಂ ದಿಶಾ
ವಳಿವೆರಸಂಬರಂ ಪೊಗೆದು ಪೊತ್ತಿದುದಾದ ಮದಾಂಬುವಿಂ ಜಗಂ
ಜಳಧಿವೊಲಾಯ್ತದಂ ನೆಱೆಯೆ ಬಣ್ಣಿಪರಾರ್ ಗಳ ಸುಪ್ರತೀಕಮಂ

‘‘ತಳರ್ದುದು ಕರ್ಣತಾಳ ಪವನಾಹತಿಯಿಂ ಜಳರಾಶಿ’’ ಎಂಬ ಚಿತ್ರವಂತೂ ಅದ್ಭುತವಾದುದು; ಇದು ಮಹಾಕವಿಯ ಮಹಾವರ್ಣನೆ. ಆ ದಿಗ್ಗಜದ ಕಿವಿಯ ಬೀಸುಗಾಳಿಗೆ ಸಮುದ್ರ ಹಿಂತೆರಳಿತೆಂದು ಹೇಳಿ, ಅದರ ಬೃಹತ್ತು ಮಹತ್ತುಗಳನ್ನು ಸಹೃದಯರ ಊಹೆಗೇ ಬಿಡುತ್ತಾನೆ ಕವಿ, ಧ್ವನಿಯ ಮೂಲಕ.

‘‘ಆಗಳಸುರನುಯ್ದ ನೆಲನನಾದಿ ವರಾಹನಱಸಲೆಂದು ಸಕಳ ಜಲಚರ ಕಳಿತ ಜಲನಿಧಿಗಳಂ ಕಲಂಕುವಂತೆ ಪಾಂಡವಬಳಜಳನಿಧಿಯನಳಿಕುಳಝೆಂಕಾರ ಮುಖರಿತ ವಿಶಾಳ ಕರಟತಟಮಾ ದಿಶಾಗಜೇಂದ್ರಂ ಕಲಂಕೆ’’ ಎಂಬ ಗದ್ಯ ಭಾಗದಲ್ಲಿ ಆದಿವರಾಹನ ಪೌರಾಣಿಕ ಚಿತ್ರ ಕೊಡುತ್ತಾನೆ ಪಂಪ. ಸುಪ್ರತೀಕದ ಅಪ್ರಾಕೃತ ಅಸಾಧಾರಣ ರೀತಿಯನ್ನು ಧ್ವನಿಸುವ ಭವ್ರೋಪಂಪ ಜೈನ ಧರ್ಮೀಯನಾದರೂ, ವೈದಿಕ ಪುರಾಣೇತಿಹಾಸ ಪರಂಪರೆ ಅವನಲ್ಲಿ ರಕ್ತಗತವಾಗಿತ್ತೆಂಬುದನ್ನು ಮರೆಯಬಾರದು; ಆದ್ದರಿಂದಲೇ ವೈದಿಕ ಪುರಾಣ ಪ್ರತಿಮೆಗಳು ಪಂಪಭಾರತದಲ್ಲಿ ಹೇರಳವಾಗಿ ಕಾಣಿಸಿಕೊಳ್ಳುತ್ತವೆ.[2]

ಪಂಪ ಪೌರಾಣಿಕ ಪ್ರಪಂಚವನ್ನು ಆಶ್ರಯಿಸಿ, ಆದಿವರಾಹನ ಹೋಲಿಕೆಯನ್ನು ಕೊಡುವುದು ಮಾತ್ರವಲ್ಲದೆ ವಾಸ್ತವಿಕ ಪ್ರಪಂಚವನ್ನೆ ಆಧಾರವಾಗಿಟ್ಟುಕೊಂಡು ಮಹಾಮಕರದ ಚಿತ್ರವೊಂದನ್ನು ಅತ್ಯಂತ ಪ್ರಭಾವಶಾಲಿಯಾಗಿ ನೀಡುತ್ತಾನೆ ಈ ಪದ್ಯದಲ್ಲಿ:

ಕರನಖದಂತ ಘಾತದಿನುರುಳ್ವ ಚತುರ್ಬಲದಿಂ ತೆರಳ್ವೊನೆ
ತ್ತರ ಕಡಲಾ ಕಡಲ್ವರೆಗಮೆಯ್ದೆ ಮಹಾಮಕರಂ ಸಮುದ್ರದೊಳ್
ಪರಿವವೊಲಿಂತಗುರ್ವುವೆರಸಾ ಭಗದತ್ತನ ಕಾಲೊಳಂತದೇಂ
ಪರಿದುದೊ ಸುಪ್ರತೀಕ ಗಜಮಚ್ಚರಿಯಪ್ಪಿನಮಾಜಿರಂಗದೋಳ್

ಸಾಗರ ಗರ್ಭದಲ್ಲಿ ಅಪ್ರತಿಹತವಾಗಿ ಸಂಚರಿಸುವ ದೈತ್ಯ ಘೋರಾಕಾರದ ತಿಮಿಂಗಿಲದ ಚಿತ್ರವನ್ನು ಪಂಪನಂತೆ ನಮ್ಮಲ್ಲಿ ಕಂಡ, ಕಂಡರಿಸಿದ ಕವಿಗಳು ಬಹಳ ವಿರಳವೆನ್ನಬಹುದು; ಪಾಶ್ಚಿಮಾತ್ಯ ಸಾಹಿತ್ಯ ಕೃತಿಗಳಲ್ಲಿ ಇಂಥ ಪ್ರತಿಮೆಗಳನ್ನು ನೋಡಬೇಕಷ್ಟೆ. ಹೀಗೆ ನವೀನ ಪ್ರತಿಮೆಗಳನ್ನು ಸೃಷ್ಟಿಸುವಲ್ಲಿ ಮಹಾಕವಿಯ ಪ್ರತಿಭೆ ಪ್ರಕಾಶಗೊಳ್ಳುತ್ತದೆ.

ಮತ್ತೆ ಗದ್ಯದಲ್ಲಿ ವರ್ಣನೆಯನ್ನು ಮುಂದುವರಿಸುತ್ತಾನೆ ಪಂಪ : ‘‘ಅಂತು ಪರಿದ ಬೀದಿಗಳೊಳೆಲ್ಲಂ ನೆತ್ತರ ತೊಱಗಳ್ ಪರಿಯೆ ಕೆಂಡದ ತೊಱೆಯಂತೆ ಪರಿದ ಸುಪ್ರತೀಕಂ ಕೆಯ್ಯ ಕಾಲ ಕೋಡೇಱನೊಳ್ ಬಲಮನೆಲ್ಲಂ ಜವನೆ ಜಿವುಳಿದುೞಿವಂತೆ ತೊತ್ತುೞಿದುೞಿದು….’’

ಇಲ್ಲಿ ‘ಕೆಂಡದ ತೊರೆಯಂತೆ’ ಎಂಬ ಹೋಲಿಕೆಯ ಧ್ವನಿಶಕ್ತಿಯನ್ನು ಪರಿಭಾವಿಸಬೇಕು. ಆನೆಯ ದೇಹವೆಲ್ಲ ರಕ್ತಮಯವಾಗಿ ಕೆಂಡದ ತೊರೆಯಂತೆ ಕೆಂಪಗೆ ಕಾಣುತ್ತಿದೆ; ಅಷ್ಟೆ ಅಲ್ಲ, ಕೆಂಡದ ತೊರೆಯಂತೆ ಅದು ಸರ್ವ ಪ್ರಳಯಕಾರಿಯಾಗಿದೆ; ‘ಜಿವುಳಿದುೞಿವಂತೆ’ ಎಂಬ ದೇಸಿ ಮಾತು ಎಷ್ಟು ಶಕ್ತಿವತ್ತಾಗಿದೆ! ಅದರಲ್ಲಿ ಮೂರ್ತವಾಗಿರುವ ಅನುಭವ ಅತ್ಯಂತ ಸಹಜವಾದುದು. ಪ್ರಾಮಾಣಿಕವಾದುದು. ಮೂಲದ ಅನುಭವ ಕನ್ನಡದಲ್ಲಿ ಪುನರನುಭವಗೊಂಡು ನೂತನವಾಗಿ ಆವಿರ್ಭವಿಸಿರುವ ಪರಿಯನ್ನಿಲ್ಲಿ ಕಾಣುತ್ತೇವೆ.

‘‘ಈ ಕರಿ ಸೂಕರಿಯಲ್ತೆ ಪತ್ತಿ ಗಂಟಲನೊಡೆಯೊತ್ತಿ ಕೊಂದಪೆನಿದಲ್ತಿ ದರಮ್ಮನುಮೆನ್ನನಾಂಪುದೇ’’ ಎಂದು ಭೀಮ ಸುಪ್ರತೀಕವನ್ನು ಎದುರಿಸುತ್ತಾನೆ, ‘‘ಇದಲ್ತು, ಇದರ ಅಮ್ಮನುಂ ಎನ್ನನಾಂಪುದೇ’’ ಎಂಬ ಸಹಸ್ರ ವರ್ಷಗಳ ಹಿಂದಿನ ನುಡಿಗೂ, ‘‘ಇದಲ್ಲ, ಇದರ ಅಪ್ಪ ಬಂದರೂ ನನ್ನನ್ನು ಎದುರಿಸಲಾರದು!’’ ಎಂಬ ಈ ಹೊತ್ತಿನ ನುಡಿಗೂ ಅಂತಹ ಬಹಳವಿಲ್ಲ. ದೇಸಿಯ ವಿನ್ಯಾಸ ಅಂದಿನಿಂದ ಇಂದಿನವರೆಗೂ ಒಂದೇ ಆಗಿರುವುದನ್ನು ಮನಗಾಣಬಹುದು; ಅದನ್ನು ಪಂಪ ಸೊಗಸಾಗಿ ಮಿಡಿದಿದ್ದಾನೆ.

ಸುಪ್ರತೀಕಕ್ಕೂ ಭೀಮನಿಗೂ ನಡೆದ ಹೋರಾಟವನ್ನೂ ಕವಿ ಅಷ್ಟೇನೂ ಉತ್ಸಾಹದಿಂದ ವರ್ಣಿಸುವುದಿಲ್ಲ; ಪ್ರಸಂಗವನ್ನು ಬೇಗ ಮುಗಿಸುವುದು ಅವನ ಉದ್ದೇಶವಾಗಿರುವಂತೆ ತೋರುತ್ತದೆ. ಮುಂದೆ ಅರ್ಜುನ ಬಂದ ಮೇಲೆ ಸುಪ್ರತೀಕವನ್ನು ಪಂಪ ಮರೆತೇ ಬಿಡುತ್ತಾನೆ; ಅವನ ದೃಷ್ಟಿ ಭಗದತ್ತ ಕೃಷ್ಣಾರ್ಜುನರಲ್ಲಿ ಕೇಂದ್ರೀಕೃತವಾಗುತ್ತದೆ. ಕೃಷ್ಣನ ಸಲಹೆಯಂತೆ ಅರ್ಜುನ ಬಾಣಪ್ರಯೋಗ ಮಾಡಿದಾಗ ‘‘ದಿಕ್ಕರಿಯ ತಲೆಯುಮಾತನ (ಭಗದತ್ತನ) ತಲೆಯುಂ ಪಚ್ಚಿಕ್ಕಿದಂತೆ ಒಡನುರುಳ್ದವು ಧರೆಯೊಳ್ ’’ ಎಂದು ಹೇಳಿ ಅವಸರದಿಂದ ಮುಂದಿನ ಕತೆಗೆ ಓಡಿಬಿಡುತ್ತಾನೆ ಪಂಪ, ಸುಪ್ರತೀಕದ ಬಳಿ ಇಷ್ಟು ಹೊತ್ತು ನಿಂತದ್ದೇ ಹೆಚ್ಚಾಯಿತು ಎನ್ನುವಂತೆ!

ಹೀಗೆ ಪಂಪನ ಸುಪ್ರತೀಕ ವರ್ಣನೆ ಚುಟುಕಾಗಿದ್ದರೂ ಸಾಕಷ್ಟು ಶಕ್ತಿಯುತವಾಗಿದೆ; ಕವಿಯ ವರ್ಣನಾ ಸಾಮರ್ಥ್ಯಕ್ಕೆ ಕನ್ನಡಿಯಾಗಿದೆ. ಪಂಪನ ಒಂದು ಹಿರಿಯ ವೈಶಿಷ್ಟ್ಯವೆಂದರೆ, ವೀರಾದ್ಭುತ ರಸಗಳನ್ನು ಪ್ರತಿಪಾದಿಸುವಾಗಲೂ ದೇಸಿ ಪ್ರಧಾನವಾದ ಶೈಲಿಯನ್ನು ಬಳಸತಕ್ಕದ್ದು.ಕೆಲವು ವೇಳೆ ಇದರಿಂದ ಸಹೃದಯದ ಮೇಲೆ ಆಗಬೇಕಾದಷ್ಟು ಪರಿಣಾಮ ಆಗದಿದ್ದರೂ ಪಂಪನ ಸಾಹಸವನ್ನು ಮಾತ್ರ ಮೆಚ್ಚಲೇಬೇಕು. ಸಂಸ್ಕೃತ ಪ್ರಚುರವಾದ ಶೈಲಿಯನ್ನು ಪ್ರಯೋಗಿಸಿ ಓಜಸ್ಸನ್ನು ತರುವುದು ಸುಲಭ; ಆದರೆ ದೇಸಿಯನ್ನು ಮುಂದಿಟ್ಟುಕೊಂಡು ವೀರಾದ್ಭುತಗಳನ್ನು ಚಿತ್ರಿಸುವುದು ಕಷ್ಟ ಸಾಧ್ಯ. ಈ ವಿಷಯದಲ್ಲಿ ಪಂಪನಂತೆ ಪ್ರಯೋಗ ನಡೆಸಿ ಯಶಸ್ವಿಯಾದ ಚಂಪೂಕವಿ ಬೇರೊಬ್ಬನಿಲ್ಲ. ಸುಪ್ರತೀಕ ವರ್ಣನೆಯೂ ಇದಕ್ಕೆ ಸಾಕ್ಷಿ.

ವ್ಯಾಸರಲ್ಲಿ ಮತ್ತು ಪಂಪನಲ್ಲಿ ಕೇವಲ ‘ಅಂಶಚಿತ್ರ’ (trailor)ವಾಗಿ ತೋರಿಬರುವ ಸುಪ್ರತೀಕವನ್ನು ಕುಮಾರವ್ಯಾಸ ಮಹಾಕವಿ ಪರಿಪೂರ್ಣ ಚಿತ್ರವನ್ನಾಗಿಸಿದ್ದಾನೆ : ಭವ್ಯತೆಯ ಪರಮಾವಧಿ, ಅದ್ಭುತ ರಸದ ಪರಾಕಾಷ್ಠೆ ಎನ್ನುವಂತೆ ಆ ಪ್ರಸಂಗವನ್ನು ನಿರೂಪಿಸಿದ್ದಾನೆ; ವ್ಯಾಸರನ್ನು ಹೆಜ್ಜೆ ಹೆಜ್ಜೆಗೂ ಅನುಸರಿಸಿದ್ದರೂ, ಅಲ್ಲಿಲ್ಲದ ವಿಕಾಸ ಸಿದ್ದಿಗಳನ್ನು ಪಡೆದುಕೊಂಡಿದ್ದಾನೆ. ಅವನ ಮೇರು ವರ್ಣನೆಗಳ ಮುಂದೆ ಪಂಪನ ಸಂಕ್ಷಿಪ್ತ ವರ್ಣನೆಗಳು ಕುಸಿದು ಬಿಡುತ್ತವೆ. ಪಂಪನದು ಪರಿಷ್ಕಾರವಾದ ರೀತಿ, ಮಾತುಗಳನ್ನು ತೂಕ ಮಾಡಿ ಹಾಕುವ ಕೃಪಣ ಪ್ರತಿಭೆ; ಅದಕ್ಕೆ ಬಹಳ ಆತುರ. ಕುಮಾರವ್ಯಾಸನದಾದರೆ ಯಾರ ಹಂಗಿಗೂ ಒಳಗಾಗದ, ರುಂದ್ರರೂಕ್ಷವಾದ ಪರಿವ್ರಾಜಕ ಪ್ರತಿಭೆ. ಅದು ಎಲ್ಲವನ್ನೂ ವಿವರವಾಗಿ ನೋಡಿಕೊಂಡು ಸಾವಧಾನವಾಗಿ ಮುಂದುವರಿಯುತ್ತದೆ. ಈ ಕಾರಣದಿಂದಲೆ ಅನ್ಯತ್ರ ದೊರಕದ ಸುಪ್ರತೀಕದ ವಿರಾಡ್ದರ್ಶನ ಕುಮಾರವ್ಯಾಸನಲ್ಲಿ ನಮಗೆ ಸಿಕ್ಕತಕ್ಕದ್ದು.

ವ್ಯಾಸ, ಪಂಪರಲ್ಲಿ ಸುಪ್ರತೀಕ ಹಟಾತ್ತಾಗಿ ಯುದ್ಧರಂಗದಲ್ಲಿ ಕಾಣಿಸಿಕೊಳ್ಳುತ್ತದೆ; ಅದರ ಪ್ರಚಂಡ ಸ್ವರೂಪ ಸತ್ತ್ವ ಸಾಹಸಗಳನ್ನು ಬಣ್ಣಿಸಲು ಆ ಕವಿಗಳು ನೇರವಾಗಿ ಹೊರಟುಬಿಡುತ್ತಾರೆ; ಅದರ ಆದ್ಯಂತಗಳನ್ನು ಅವರು ಆಸಕ್ತಿಯಿಂದ ನೋಡಿದಂತಿಲ್ಲ. ಕುಮಾರವ್ಯಾಸನಾದರೆ ಆ ಗಜದ ಸಮಗ್ರ ಚಿತ್ರವನ್ನು ಮೊದಲಿಂದ ಕಡೆತನಕ ಅತ್ಯಂತ ಶ್ರದ್ಧೆ ಆಸಕ್ತಿ ಉತ್ಸಾಹಗಳಿಂದ ಕೊಟ್ಟಿದ್ದಾನೆ. ಇದು ಅವನ ಪೂರ್ಣದೃಷ್ಟಿಯ ದ್ಯೋತಕವೆನ್ನಬಹುದು. ಅಲ್ಲಿ ಅವನ ಪ್ರಖರ ರೂಪಕಶಕ್ತಿ, ಗೌರೀಶಂಕರೋನ್ನತವಾದ ಕಲ್ಪನಾವೈಭವ, ಭಾಷಾ ಶ್ರೀಮಂತಿಕೆ, ‘ಸಿಡಿಲು ಗುಡುಗಿನ ಡಮರು ಡಿಂಡಿಮಗಳನ್ನೆ ಹಿಡಿದು ಬಡಿದು ಕುಣಿಯುವ ನಾದ ತಾಂಡವನಂತಹ ರುಂದ್ರ ನೃತ್ಯಶೈಲಿ’ -ಇವೆಲ್ಲ ಸಹೃದಯನಿಗೆ ಗಾಢವಾಗಿ ಅನುಭೂತವಾಗುತ್ತವೆ. ಈ ಸುಪ್ರತೀಕ ಪ್ರಸಂಗ ಅಲ್ಪಚೇತನವನ್ನು ಭೂಮಕ್ಕೆ ಎತ್ತಿ ಬೀಸಾಡುತ್ತದೆ; ಜಡಮತಿಯಲ್ಲಿ ವಿದ್ಯುತ್ ಪ್ರವಾಹವನ್ನೆ ಹರಿಸುತ್ತದೆ; ಅದರ ದಿವ್ಯಾಘಾತಕ್ಕೆ ಶಿರವೊಡ್ಡುವ ಯಾವೊಂದು ಚೇತನವೂ ರಸಾನುಭವದೀಪ್ತವಾಗದಿರದು.

ಕುಮಾರವ್ಯಾಸನ ಸುಪ್ರತೀಕವೊಂದು ಪ್ರಾಣಿ ಮಾತ್ರವಲ್ಲ; ಅದೊಂದು ಮಹಾಶಕ್ತಿ. ಕವಿ ಆನೆಯ ಸ್ವಭಾವ ಚರ್ಯೆಗಳನ್ನು ಯಥಾರ್ಥವಾಗಿ, ಲೋಕ ಸಹಜವಾಗಿ ಚಿತ್ರಿಸುತ್ತಲೆ ಸುಪ್ರತೀಕದ ಅಲೌಕಿಕ ಸ್ವರೂಪವನ್ನು ಅನನ್ಯವಾಗಿ ಕಂಡರಿಸುತ್ತಾನೆ. ಕುಮಾರವ್ಯಾಸ ಭಾರತದಲ್ಲಿ ಉಳಿದ ಮಹಾಪಾತ್ರಗಳಂತೆ ಈ ಸುಪ್ರತೀಕವೂ ತನ್ನತನವುಳ್ಳ ಒಂದು ಪಾತ್ರವಾಗಿ ಘನೀಭವಿಸಿದೆ. ಈ ಸ್ಥಾನಮಾನಗಳು ವ್ಯಾಸ, ಪಂಪರ ಸುಪ್ರತೀಕಗಳಿಗಿಲ್ಲ. ಪಂಪನಂತೆ ‘ಇವರ್ಗಳಿನೀ ಭಾರತಂ ಲೋಕಪೂಜ್ಯಂ’ ಎಂದು ನಾರಣಪ್ಪ ಪಾತ್ರಗಳನ್ನು ಪಟ್ಟಿ ಮಾಡಿದ್ದ ಪಕ್ಷದಲ್ಲಿ ಸುಪ್ರತೀಕವನ್ನು ಪ್ರಾಯೇಣ ಸೇರಿಸುತ್ತಿದ್ದನೇನೋ!

ಸುಪ್ರತೀಕವನ್ನು ಸಮರಕ್ಕೆ ಸಿದ್ಧಗೊಳಿಸುವ ಪರಿಯನ್ನೆ ಕುಮಾರವ್ಯಾಸ ರೋಮಾಂಚಕಾರಿಯಾಗಿ ವರ್ಣಿಸುತ್ತಾನೆ; ಒಂದೊಂದು ವಿವರವನ್ನೂ ಮರೆಯದೆ ಚಿತ್ರಿಸುತ್ತಾನೆ:

ಬಲವೊರಚೆ ಎಡವೊರಜೆ ಬೆನ್ನಿನ
ಮಿಳಿಯ ಜಾಳಿಗೆವೊರಜೆ ತಳಸಂ
ಕಲೆಯ ತೊಡರಂಕಣಿಯ ಕೊಂಡೆಯ ಪಕ್ಕ ಗಂಟೆಗಳ
ತಳುಗಿನುಗ್ಗಡಣೆಗಳ ಹಿಣಿಲಿನ
ಬಲವೊರಜೆಗಳ ಬಾರ ಸಂಕಲೆ
ಗಳನು ಬಿಗಿದರು ಜೋಡಿಸಿದರುಬ್ಬರದ ಮದಗಜವ

ಮುಗಿಲ ಹೊದರಿನೊಳೆಳೆಯ ರವಿರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾ ನದಿಯ ಕಾಲುವೆ
ತೆಗೆದರೆನೆ ಟೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ

ಎಲ್ಲಕ್ಕಿಂತ ಮುಖ್ಯವಾಗಿ ‘‘ಒತ್ತಿ ಕಿವಿಗಳನೊದೆದು ಶಿರದಲಿ ತೆತ್ತಿಸಿದರಂಕುಶವನು’’ ಎಂದು ಹೇಳಿರುವುದು ಕುಮಾರವ್ಯಾಸನ ಸೂಕ್ಷ್ಮ ದೃಷ್ಟಿಗೆ ಸಾಕ್ಷಿ. ಆನೆಯೆಂದರೆ ಅಂಕುಶವಿರಬೇಡವೆ? ಇದನ್ನು ಕವಿ ಲಕ್ಷಿಸಿದ್ದಾನೆ.

ಮದಕರಿಯ ದಾಡೆಗಳನ್ನೂ ಮದೋದಕವನ್ನೂ ಕವಿ ಪೌರಾಣಿಕ ಉಪಮೆಗಳ ಮೂಲಕ ರುದ್ರ ರಮಣೀಯವಾಗಿ ಚಿತ್ರಿಸುತ್ತಾನೆ:

ಸುರಪ ಕಡಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ

ಈ ಪೌರಾಣಿಕ ಪ್ರತಿಮೆಗಳು ಸುಪ್ರತೀಕದ ಒಂದೊಂದು ಅಂಶವನ್ನು ಮಾತ್ರ ಮನಗಾಣಿಸಬಲ್ಲವು. ಆದರೆ ಇಡೀ ಆನೆಯ ಚಿತ್ರವನ್ನು ಯಾವುದು ಧ್ವನಿಸಬಲ್ಲದು? ಸಮರ್ಪಕವಾದ ಯಾವ ಪೌರಾಣಿಕ ಪ್ರತಿಮೆಯೂ ಇಲ್ಲವೆಂದು ಕುಮಾರವ್ಯಾಸನಿಗನಿಸಿರ ಬೇಕು. ಆದ್ದರಿಂದಲೆ ಸಂಪೂರ್ಣವಾಗಿ ನವೀನವಾದ, ವಿಶ್ವಭೂಮವಾದ ‘‘ಕೈ ಕಾಲ್ ಮೂಡಿತೋ ನಭಕೆ!’’ ಎಂಬ ಪ್ರತಿಮೆಯನ್ನು ನಿರ್ಮಿಸಿದ್ದಾನೆ ಈ ಪದ್ಯದಲ್ಲಿ:

ಜಗದ ನಿಡುನಿದ್ರೆಯಲಿ ಮೋಹರ
ತೆಗೆದ ಮುಗಿಲೋ ಮೇಣಖಿಳ ಕುಲ
ದಿಗಿಭವೆಂಟೊಂದಾಯ್ತೊ ಕೈಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾಗಜವೈದಿತಾಹವವ

ಇಲ್ಲಿನ ಪ್ರತಿಮೆಗಳಲ್ಲಿ ಒಂದು ಕ್ರಮವಿದೆ. ‘‘ಜಗದ ನಿಡುನಿದ್ರೆಯಲಿ ಮೋಹರದೆಗೆದ ಮುಗಿಲೋ’’ ಎಂಬುದು ಕವಿಗೆ ಮೊದಲು ಹೊಳೆದ ಪ್ರತಿಮೆ; ಆದರೆ ಅದು ಸಾಕಾಗದೆನ್ನಿಸಿತು. ಆ ಮೇಲೆ ಮೂಡಿದ್ದು ಅದಕ್ಕಿಂತ ಅದ್ಭುತವಾದ ‘‘ಕುಲದಿಗಿ ಭವೆಂಟೊಂದಾಯ್ತೊ’’ ಎಂಬ ಪ್ರತಿಮೆ; ಅದೂ ಅಸಮರ್ಪಕವೆನಿಸಿದಾಗ ಕಡೆಯದಾಗಿ ಮೈದೋರಿದ್ದು ‘‘ಕೈಕಾಲ್ ಮೂಡಿತೋ ನಭಕೆ’’ ಎನ್ನುವ ಪರಮ ಪ್ರತಿಮೆ. ಅದು ಕವಿ ಪ್ರತಿಭೆಯ ಚರಮಸೀಮೆ- ಅಲ್ಲಿಂದಾಚೆಗೆ ಮತ್ತೇನನ್ನು ತಾನೆ ಕಾಣಬಹುದು? ಆ ಆನೆ ಒಂದು ದಿಕ್ಕಿನಲ್ಲಿ ಕಾಲಿಟ್ಟರೆ ಭೂಮಿ ಮತ್ತೊಂದು ದಿಕ್ಕಿನಲ್ಲಿ ಮೇಲಕ್ಕೆ ನೆಗೆಯುತ್ತಿತ್ತೆಂಬ ಕಲ್ಪನೆಗೆ ಎಣೆಯೇ ಇಲ್ಲ. ಈ ಸಂದರ್ಭದಲ್ಲಿ ಪಂಪನ ‘‘ಚದುರಂಗದ ಮಣೆಯನಲ್ಗಿದಂತಪ್ಪಿನೆಗಂ’’ ಎಂಬ ಚಿತ್ರವನ್ನು ನೆನೆಯಬಹುದು; ಅದು ಸೀಮಿತವಾದ, ನಾಗರಿಕವಾದ ಚಿತ್ರ. ಕುಮಾರವ್ಯಾಸನ ನಿಸ್ಸೀಮ ಭೀಮಬಂಧುರ ಕಲ್ಪನೆಗಳ ಮುಂದೆ ನಯನಾಜೂಕಿನಿಂದ ಕೂಡಿದ ಪಂಪನ ಚಿತ್ರಗಳು ಕುಬ್ಜವಾಗಿ ಕಾಣುತ್ತವೆ.

ಸುಪ್ರತೀಕಸಂತ್ರಸ್ತವಾಗಿ ದಿಕ್ಕಾಪಾಲಾದ ಶತ್ರುಸೈನ್ಯವನ್ನು ಕವಿ ‘‘ಸೂರೆಗೊಂಡುದು ಬಲ ಪಲಾಯನವ’’ ಎಂಬ ಸುಂದರವಾದ, ವಿನೋದಾತ್ಮಕವಾದ ರೂಪಕದಿಂದ ಬಣ್ಣಿಸುತ್ತಾನೆ. ಆ ಬಲ ನ್ಯಾಯವಾಗಿ ಪರಬಲದ ಹರಣವನ್ನು ಸೂರೆಗೊಳ್ಳಬೇಕಿತ್ತು; ಆದರೆ, ಪಾಪ, ಪಲಾಯನವನ್ನು ಸೂರೆ ಮಾಡಬೇಕಾಗಿ ಬಂತು! ಎಂತಹ ವಿಪರ್ಯಾಸ! ಆ ಮಹಾಗಜದ ಮುಖವಾಡವನ್ನು ತೆಗೆದು ನೆತ್ತಿಯನ್ನು ಕೂರಂಕುಶದಿಂದ ತಿವಿದು ಬೆಗಡುಗೊಳಿಸಿದಾಗ ಅದರಿಂದಾಗುವ ವಿನಾಶವನ್ನು ‘‘ಚಿಗುಳಿದುಳಿದುದು ತಲೆಗಳನು’’ ಎಂಬ ದೇಸಿ ಮಾತು ಅತ್ಯಂತ ಯಶಸ್ವಿಯಾಗಿ, ಬೀಭತ್ಸದ ಪ್ರತೀತಿಯೆ ಉಂಟಾಗದಂತೆ ನಿರೂಪಿಸುತ್ತದೆ.[3] ಸುಪ್ರತೀಕ ತನ್ನ ನೆಳಲನ್ನು ದಂತಿಯೆಂದು ತಿಳಿದು ಅಪ್ಪಳಿಸಿದಾಗ ವಾಸುಕಿ ನೊಂದನಂತೆ! ಅಂಬುಧಿ ತುಳುಕಿದುವಂತೆ! ‘‘ಮದಕರಿ ಕೇಣಿಗೊಂಡುದು ವೈರಿಮೋಹರವ!’’, ‘‘ಕಾಲನ ಗೂಳೆಯಕ್ಕುಪಕಾರಿಯಾದುದು ಸುಪ್ರತೀಕ ಗಜ’’ ಎನ್ನುತ್ತಾನೆ ಕವಿ. ಮುಂದಿನ ಪದ್ಯದಲ್ಲಂತೂ ರೂಪಕಗಳನ್ನು ಒಂದರ ಮೇಲೊಂದು ಎರಚುತ್ತ ಹೋಗುತ್ತಾನೆ.

ಅರೆದುದೋ ಪರಬಲವ ಕಾಲನ
ಪೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈನೆಗಹಿ

ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರು
ಹರೆದುದೋ ಹವಣಿಲ್ಲ ದಂತಿಯ ಸಮರ ಸೌರಂಭ

ಮಂದರಗಿರಿ ಪಯೋಧಿಯ ತೆರೆಗಳನ್ನು ತುಳಿದಂತೆ, ವಾಯಸಕುಲವನ್ನು ಒಂದೇ ಗೂಗೆ ಹೊಯ್ದು ಅರೆಯಟ್ಟುವಂತೆ ಸುಪ್ರತೀಕ ಮಹಾರಥರನ್ನು ಬಲಿಗೊಳ್ಳುತ್ತದೆ, ಅರೆಯಟ್ಟುತ್ತದೆ.

‘ಮಂದರಗಿರಿ’ ಎಂಬ ಮಾತಿನಲ್ಲಿ ಧ್ವನಿ ಪರಂಪರೆಯೆ ಉಣ್ಮುತ್ತದೆ. ದೇವಾಸುರರಿಂದ ಸಮುದ್ರಮಥನವಾದ ಪೌರಾಣಿಕ ಘಟನೆಯನ್ನು ನೆನಪಿಗೆ ತರುವ ಆ ನುಡಿ ಪಾಂಡವ ಕೌರವರ ಸತ್ ಮತ್ತು ಅಸತ್ ಪಕ್ಷಗಳನ್ನು ನಮ್ಮ ಕಣ್ಮುಂದೆ ಚಿತ್ರಿಸಿ, ಅಸತ್ ಪಕ್ಷ ಮುಂದೆ ನಷ್ಟಗೊಳ್ಳುವುದನ್ನು ಈಗಲೇ ಧ್ವನಿಸುತ್ತದೆ.

ಮಹಾವೀರರೆಲ್ಲ ಆನೆಯ ಮೇಲೆ ಬಾಣಗಳನ್ನು ಸುರಿದಾಗ ಅದು ಹೇಗೆ ಕಾಣುತ್ತಿತ್ತೆಂಬುದನ್ನು ಕವಿ ‘‘ಗಿರಿಯ ಮುತ್ತಿದ ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ ಸರಳು ಮೆರೆದುವು’’ ಎಂಬ ಸುಮನೋಹರವಾದ ಉಪಮೆಯ ಮೂಲಕ ಚಿತ್ರಿಸುತ್ತಾನೆ. ‘‘ಹಡಗು ಜಲಧಿಯಳೋಡಿ ಗಿರಿಗಳನೆಡಹಿ ನುಗ್ಗಾದಂತೆ’’ ಸುಭಟರು ಸುಪ್ರತೀಕವನ್ನು ತಾಗಿ ತಾಗಿ ನೊಂದರೆಂದು ಬಣ್ಣಿಸುವಲ್ಲಿ ಪ್ರಚಂಡತಮವಾದ ಚಿತ್ರವೊಂದು ಆವಿರ್ಭವಿಸಿದೆ. ಜಲಧಿಯ ಹೋಲಿಕೆ ಇಲ್ಲಿ ಕೇವಲ ಔಪಚಾರಿಕವಲ್ಲ : ರಣರಂಗವೆಲ್ಲ ರಕ್ತದ ಸಮುದ್ರವೇ ಆಗಿದೆ; ಅದರಲ್ಲಿ ನಿಷ್ಕಂಪ ದ್ವಿಪೋಪಮವಾಗಿ, ಪರ್ವತ ಸಮಾನವಾಗಿ ನಿಂತಿದೆ ಸುಪ್ರತೀಕ; ಶತ್ರುಪಡೆಗಳೆಂಬ ಹಡಗುಗಳು ಅದಕ್ಕೆ ಡಿಕ್ಕಿ ಹೊಡೆದು ಚೂರು ಚೂರಾಗುತ್ತವೆ.

ಸುಪ್ರತೀಕಪರಾಜಯ ಯಾರಿಂದಲೂ ಸಾಧ್ಯವಾಗದೆ ‘‘ಸಿಂಹನಾದದ ವಿಜಯ ವಿಗ್ರಹವೀರ’’ ಭೀಮಸೇನನೆ ಅದನ್ನು ಮಾರಾಂತು ನಿಲ್ಲಬೇಕಾಗುತ್ತದೆ. ‘‘ತ್ರಿಜಗ ತಲೆಕೆಳಕಾಗೆ ದಿವಿಜವ್ರಜಂ ಭಯಂಗೊಳೆ’’ ಸುಪ್ರತೀಕ ಭೀಮನೊಡನೆ ಹೆಣಗುತ್ತದೆ. ದ್ವಾಪರ ಯುಗದ ಎರಡು ಮಹಾಶಕ್ತಿಗಳ ಈ ಸಂಘಟ್ಟಣೆ ಅತ್ಯಂತ ಕೌತುಕಾವಹವಾದುದು; ಲೋಕಾಲೋಕ ಭಯಂಕರವೂ ಜಗನ್ನೇತ್ರಲಕ್ಷ್ಯವೂ ಆದ ಆ ಪ್ರಾಣಿ-ಮಾನುಷ ಸಮರವನ್ನು ವರಕವಿ ಅತೀವ ರೋಮಾಂಚನಕಾರಿಯಾಗಿ ಚಿತ್ರಿಸುತ್ತಾನೆ:

ಜಿಗಿದು ಹರಿಸುತ ಹಳಚಿದರೆ ಕುಲ
ದಿಗಿಭವೆದೆಯೊಡೆದುವು ನಗಂಗಳ
ಬಿಗುವು ಸಡಲಿತು ಧರಣಿ ನೆಗ್ಗಿತು ಚರಣಹತಿಗಳಲಿ
ಜಿಗಿದ ರಕುತದ ಗದೆಯ ಬಿರುವೊ
ಯ್ಲುಗಳೊಳಗೆ ಕಿಡಿ ಮಸಗಿ ಕಬ್ಬೊಗೆ
ನೆಗೆಯೆ ಹೊಯ್ದನು ಭೀಮ ಲಂಘಿಸಿ ಗಜದ ಮಸ್ತಕವ

ಭೀಮನೇನೋ ಇಲ್ಲಿ ರೌದ್ರ ಮೂರ್ತಿಯಾಗಿದ್ದಾನೆ; ಆದರೆ ಸುಪ್ರತೀಕ ಶಾಂತವಾಗಿಯೇ ಇದೆ. ಭೀಮ ಅದರ ಪಾಲಿಗೆ ಕ್ರೋಧಕರನಾಗುವುದಕ್ಕಿಂತ ಹೆಚ್ಚಾಗಿ ಕುತೂಹಲದ ವಸ್ತುವಾದನೆಂದು ತೋರುತ್ತದೆ; ಇಂತಹ ಬೃಹದ್ವಿಗ್ರಹವನ್ನದು ಹಿಂದೆ ಕಂಡೆ ಇರಲಿಲ್ಲವೇನೊ! ಎಂತಲೇ,

ನೆಳಲುಗಂಡವ್ವಳಿಸುವುದು ಸೊಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗ ನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲು ಬಿಡುವುದು
ಬಲುಕಣಿಯ ಹಿಡಿ ಹಿಂಗೆ ಲಾಗಿಸುತಿರ್ದುದಾ ದಂತಿ

ಇಲ್ಲಿ ಕುಮಾರವ್ಯಾಸ ಆನೆಯ ಸ್ವಾಭಾವಿಕ ವ್ಯಾಪಾರಗಳನ್ನು ಸ್ವೋಪಜ್ಞತಾಪುರಸ್ಸರವಾಗಿ ಸಹಜ ಮನೋಜ್ಞವಾಗಿ ಮೂಡಿಸಿದ್ದಾನೆ. ಹಾಗೆಯೇ ಕರಿಯ ವಿನೋದ ಕೃತ್ಯದ ವರ್ಣನೆ ಕೂಡ ಎಷ್ಟು ನೈಜವಾಗಿದೆ, ಹಾಸ್ಯಾತ್ಮಕವಾಗಿದೆ:

ಕರಿ ವಿನೋದದಿ ಕುಡಿದ ಜಲವನು
ಕರಿಣಿಯಲಿ ತೆಗೆತೆಗೆದು ರಿಪುವೋ
ಹರಕೆ ಚೆಲ್ಲಿತು ಕಲ್ಪಮೇಘದ ಬಸುರ ಬಗಿದಂತೆ
ಕರತುಷಾರದಲಿವರು ಮೋರೆಯ
ತಿರುಹೆ ನೆನೆದವು ಬಾಹುರಕೆ
ಕ್ಕರಿಕೆ ಹಲ್ಲಣ ಜೋಡು ಸೀಸಕ ಛತ್ರಚಮರಿಗಳು[4]

ಈ ಸಂದರ್ಭದಲ್ಲಿ ಕವಿ ಮೈತುಂಬ ಕಣೆ ಮೆತ್ತಿಕೊಂಡ ಪ್ರತೀಕವನ್ನು ‘‘ಬೆತ್ತ ಬೆಳೆದದ್ರಿಯವೊಲಿದ್ದುದು’’ ಎಂದು ಭವ್ಯಾದ್ಭುತವಾಗಿ ಕಂಡರಿಸುತ್ತಾನೆ.

ಕರಿಯ ಮುಂದೆ ಭೀಮನ ಆಟ ಸಾಗದೆ, ಕಡೆಗೆ ಅರ್ಜುನನೆ ಬಂದು ಅದನ್ನು ನಿಗ್ರಹಿಸಬೇಕಾಗುತ್ತದೆ. ಅವನು ಪ್ರಯೋಗಿಸಿದ ದಿವ್ಯಾಸ್ತ್ರಕ್ಕೆ ತುತ್ತಾಗಿ ಸುಪ್ರತೀಕ ನೆಲಕ್ಕೊರಗುತ್ತದೆ; ‘‘ದಿಕ್ಕರಿ ನೆಲಕೆ ದಾಡೆಯನೂರಿ ಕೆಡೆದುದು’’ ಎಂದು ಕವಿ ಅದು ಬಿದ್ದ ಕ್ರಮವನ್ನು ಎಚ್ಚರಿಕೆಯಿಂದ ಯಥಾರ್ಥವಾಗಿ ನಿರೂಪಿಸುತ್ತಾನೆ.[5] ಅನಂತರ, ಪೌರಾಣಿಕ ಭವ್ರೋಅ ಮಹಾಗಜದ ಚರಮಪ್ರಗಾಥವನ್ನು ದಿಕ್ತಟಸ್ಪರ್ಶಿಯಾಗಿ ಮೊಳಗಿಸುತ್ತಾನೆ:

ಸುತ್ತಿದುರಗನ ಮಂದರಾಚಲ
ಕಿತ್ತು ಬೀಳ್ವಂದದಲಿ ಬರಿಕೈ
ಸುತ್ತಿ ಮಗ್ಗುಲನೂರಿ ಕೆಡೆದುದು ಸುಪ್ರತೀಕಗಜ

ಸೇನಾಸಾಗರವನ್ನು ಭೀಷಣವಾಗಿ ಮಥಿಸಿದ ಸುಪ್ರತೀಕಕ್ಕೆ ಮಂದರ ಪರ್ವತದ ಹೋಲಿಕೆ ಸಮುಚಿತವಾಗಿಯೆ ಇದೆ. ಅದು ಹೇಗೆ ಬಿದ್ದಿತೆಂಬುದರ ವಿವರಗಳನ್ನು ಲಕ್ಷಿಸಿದ್ದಾನೆ ಕುಮಾರವ್ಯಾಸದ್ರಷ್ಟಾರ : ಅದನ್ನು ಯುದ್ಧಕ್ಕೆ ಸಿದ್ಧಗೊಳಿಸಿದ ಗಳಿಗೆಯಿಂದ ಹಿಡಿದು ಅದರ ಅವಸಾನದ ತನಕ ಪೂರ್ಣ ಚಿತ್ರವೊಂದನ್ನು ನಮಗೆ ಕೊಟ್ಟಿದ್ದಾನೆ; ಬದುಕಿದ್ದಾಗ ಎಂತೊ ಅಂತೆ ಸಾಯುವಾಗ ಕೂಡ ಆ ಮಹಾಪ್ರಾಣಿಯ ಘನತೆ ಗೌರವ ಗಳಿಗೆ ಚ್ಯುತಿ ಬರದಂತೆ ನಿರ್ವಹಿಸಿದ್ದಾನೆ, ಮಂದರ ಸಾದೃಶ್ಯದ ಮೂಲಕ. ಅವನಿಗೆ ಪಂಪನ ಆತುರವಿಲ್ಲ; ವ್ಯಾಸರ ಕರ್ತವ್ಯಬಾಹುಳ್ಯವೂ ಇಲ್ಲ; ಮಧ್ಯಸ್ಥನಾದುದರಿಂದ ಇಂಥ ಸಮಗ್ರ ಶಿಲ್ಪಗಳನ್ನು ಕೊಡುವುದು ಸಾಧ್ಯವಾಯಿತು.

ಅರ್ಜುನನ ಬಾಣಘಾತಕ್ಕೀಡಾದ ಭಗದತ್ತ ಸುಪ್ರತೀಕದಿಂದ ಕೆಳಗುರುಳಿದುದನ್ನು ‘‘ಗಿರಿಯ ಶಿರದಲಿ ಹೂತ ಕಕ್ಕೆಯ ಮರ ಮುರಿದು ಬೀಳ್ವಂತೆ’’ ಎಂದು ಸೊಗಸಾಗಿ ವರ್ಣಿಸುತ್ತಾನೆ ನಾರಣಪ್ಪ.[6]

ಒಟ್ಟಿನಲ್ಲಿ, ‘‘ಮೊದಲ ನೋಟದಲ್ಲೆ ಸಹೃದಯರ ಕುತೂಹಲಾಸಕ್ತಿಗಳನ್ನು ಪ್ರಚೋದಿಸಿ, ವೀರಾದ್ಭುತ ರೌದ್ರಗಳ ಭೂಮಾನುಭೂತಿಯನ್ನುಂಟು ಮಾಡುತ್ತ ಮುಂಬರಿದು, ಅಂತಿಮವಾಗಿ ಕರುಣದಲ್ಲಿ ಪರ್ಯವಸಾನವಾಗುತ್ತದೆ, ಸುಪ್ರತೀಕದ ಈ ಅನ್ಯಾದೃಶ ಪ್ರಕರಣ.’’

* * * *

ಇದುವರೆಗೆ ನೋಡಿದಂತೆ ಪಂಪ, ಕುಮಾರವ್ಯಾಸರು ವ್ಯಾಸಭಟ್ಟಾರಕರಿಗೆ ಹಣೆ ಮಣಿದು ಆ ಸೂರ್ಯಚಂದ್ರಾನಲ ಸಮಪ್ರಭರಿಂದ ಸಂಸ್ಫೂರ್ತಿ ಸಂಪುಷ್ಟಿಗಳನ್ನು ಸಮೃದ್ಧವಾಗಿ ಸ್ವೀಕರಿಸಿ ಹೀರಿಕೊಂಡಿದ್ದರೂ, ತಮ್ಮದೇ ಆದ ಸ್ವತಂತ್ರವಾದ ರೀತಿಯಲ್ಲಿ ಬೆಳೆದಿದ್ದಾರೆ; ‘‘ವ್ಯಾಸಮುನೀಂದ್ರರುಂದ್ರ ವಚನಾಮೃತವಾರ್ಧಿ’’ಯನ್ನು ಸ್ವವಿಶಿಷ್ಟ ರೀತಿಯಲ್ಲಿ ಉತ್ತರಿಸಿದ್ದಾರೆ ಎಂಬುದಕ್ಕೆ ಸುಪ್ರತೀಕ ಪ್ರಸಂಗವೊಂದು ಜ್ವಲಂತ ಪ್ರಮಾಣ. ಪಂಪನದು ಬಹುಮಟ್ಟಿಗೆ ಭೂಸ್ತರದಲ್ಲಿ ಅಥವಾ ಹೆಚ್ಚೆಂದರೆ ವಾತಾವರಣಸ್ತರದಲ್ಲಿ ವಿಹರಿಸುವ ಪ್ರತಿಭೆ; ಕುಮಾರವ್ಯಾಸನದಾದರೋ ವಿಯತ್ತಲ ಸಂಚಾರಿ. ಒಂದು ಶ್ರೀಮಂತ ರತ್ನಾಕರ, ಮತ್ತೊಂದು ಗ್ರಹತಾರಾಖಚಿತ ನೀಲಾಕಾಶ -ಅದಕ್ಕದೇ ಸಾಟಿ. ಕನ್ನಡದ ಭಾಗ್ಯ, ಭುವನದ ಭಾಗ್ಯ ಈ ಇಬ್ಬರೂ.

[1] ‘ವಿಭೂತಿ ಪೂಜೆ’, ಪು.೧೫ ಮತ್ತು ‘ತಪೋನಂದನ’, ಪು.೮೫. (‘ದ್ರೌಪದಿಯ ಶ್ರೀಮುಡಿ’ಯಲ್ಲಿ ೩-೪ನೆಯ ಪುಟಗಳನ್ನೂ ನೋಡಿ). ಸುಜನಾ ಅವರು ತಮ್ಮ ‘ಭಾರತ ಕಥಾಮಂಜರಿ’ಗೆ ಬರೆದಿರುವ ಪೀಠಿಕೆಯನ್ನೂ ಗಮನಿಸಬಹುದು.

[2] ವೈದಿಕ ತತ್ತ್ವಗಳನ್ನೂ ಕಲ್ಪನೆಗಳನ್ನೂ ಪಂಪ ವಿಕೃತಿಗೊಳಿಸಿಲ್ಲ ಅಥವಾ ಚ್ಯುತಿಗೊಳಿಸಿಲ್ಲ; ಅವುಗಳನ್ನು ಸಂಕ್ಷೇಪಿಸಿದ್ದಾನೆ, ಕೆಲವೊಮ್ಮೆ ಅವುಗಳ ಅತಿಮಾನುಷ ಸ್ವರೂಪವನ್ನು ತಗ್ಗಿಸಿದ್ದಾನೆ, ಅಷ್ಟೆ. ಜೈನನಾದ ಪಂಪನಿಗೆ ಶ್ರೀ ಕೃಷ್ಣನ ಬಗ್ಗೆ ಪೂಜ್ಯಭಾವನೆಯಿಲ್ಲವೆಂಬ ಅಭಿಪ್ರಾಯವುಂಟು… ಆದರೆ ಕೃಷ್ಣನ ಅವತಾರದ ಕಲ್ಪನೆಗೆ ಪಂಪಭಾರತದಲ್ಲಿ ಸ್ವಲ್ಪವೂ ಊನ ಬಂದಿಲ್ಲವೆಂಬುದನ್ನು ಗಮನಿಸಬೇಕು.

[3] ಪಂಪನಲ್ಲೆ ‘ಜಿವುಳಿದುೞಿವಂತೆ’ ಎಂದು ಬಂದಿರುವುದನ್ನು ನೆನೆಯಬಹುದು. ಪ್ರಾಯಃ ಪಂಪನಿಂದ ಕುಮಾರವ್ಯಾಸ ಈ ಉಪಮೆಯನ್ನು ಸ್ವೀಕರಿಸಿರಬಹುದು. ಈ ಸಾದೃಶ್ಯ ಆಕಸ್ಮಿಕವೆಂದು ವಾದಿಸಬೇಕಾಗಿಲ್ಲವೆನಿಸುತ್ತದೆ. ಕುಮಾರವ್ಯಾಸ ಪಂಪನನ್ನು ಶ್ರದ್ಧೆಯಿಂದ ಓದಿದ್ದಾನೆ; ಅವನ ಮೇಲೆ ಪಂಪನ ಋಣ ಹೆಚ್ಚಾಗಿಲ್ಲವಾದರೂ ಅಲ್ಲಿ ಇಲ್ಲಿ ಆದಿಕವಿಯ ಪ್ರಭಾವ ಬಿದ್ದಿರುವುದು ಸಹಜ. ಎಂತಹ ಮಹಾಕವಿಯಾದರೂ ಹಿಂದಿನವರಿಂದ -ಅದರಲ್ಲೂ ಶ್ರೇಷ್ಠ ಕವಿಗಳಿಂದ-ಅಪ್ರಜ್ಞಾಪೂರ್ವಕವಾಗಿಯಾದರೂ ಪ್ರಭಾವಿತನಾಗದೆ ಇರಲಾರ.

[4] ಇವುಗಳಿಗೆ ಸೂಚನೆ ವ್ಯಾಸಭಾರತದಲ್ಲೆ ಇದೆ.

[5] ಇವುಗಳಿಗೆ ಸೂಚನೆ ವ್ಯಾಸಭಾರತದಲ್ಲೆ ಇದೆ.

[6] ಇದರ ಮೂಲವೂ ವ್ಯಾಸರದೆ.