ಕುಮಾರವ್ಯಾಸ ಮಹಾಕವಿ ವ್ಯಾಸಮಹರ್ಷಿಗಳೂ ವಿಸ್ಮಯದಿಂದ ಕಣ್ಣೆತ್ತಿ ನೋಡುವಂತೆ ಬರೆಯಬಲ್ಲ ಪ್ರತಿಭಾಸಂಪನ್ನನೆಂಬುದರಲ್ಲಿ ಸಂದೇಹವಿಲ್ಲ. ಆದರೆ ಇಂಥ ಕುಮಾರವ್ಯಾಸನೂ ಒಮ್ಮೊಮ್ಮೆ ತೂಕಡಿಸುತ್ತಾನೆ. ವ್ಯಾಸರ ಚಿತ್ರಣದ ಎತ್ತರವನ್ನು ಮುಟ್ಟದಿರುವ ಅಥವಾ ವ್ಯಾಸರ ಚಿತ್ರವನ್ನು ಪಲ್ಲಟಿಸಿರುವ ಎಷ್ಟೋ ಪ್ರಸಂಗಗಳು ಕುಮಾರವ್ಯಾಸ ಭಾರತದಲ್ಲಿವೆ. ಉತ್ತರಕುಮಾರನ ಪ್ರಕರಣ ಇದಕ್ಕೊಂದು ಗಣ್ಯವಾದ ಉದಾಹರಣೆಯಾಗಿದೆ. ಎಷ್ಟೇ ಶಕ್ತನಾದರೂ ನಾರಣಪ್ಪ ಕುಮಾರವ್ಯಾಸನೇ ಹೊರತು ವ್ಯಾಸನಲ್ಲ ಎಂಬುದನ್ನು ಇದು ಮನವರಿಕೆ ಮಾಡಿಕೊಡುವಂತಿದೆ.

ಕುಮಾರವ್ಯಾಸನ ಉತ್ತರ ಪ್ರಸಂಗ ಬಹಳ ಪ್ರಸಿದ್ಧವಾದುದು; ಹಾಸ್ಯ ಚಿತ್ರಣದಲ್ಲಿ ಅದನ್ನು ಸರಿಗಟ್ಟುವ ಸಂದರ್ಭ ಪ್ರಾಯಶಃ ಸಾಹಿತ್ಯಲೋಕದಲ್ಲಿ ಇನ್ನೊಂದಿಲ್ಲ. ಉತ್ತರನನ್ನು ಅದು ಮನೆಮಾತು ಮಾಡಿ, ಅವನಿಗೂ ಹೇಡಿತನಕ್ಕೂ ಅಭೇದವನ್ನೆ ಕಲ್ಪಿಸಿದೆ. ತನ್ನಷ್ಟಕ್ಕೆ ಅದು ವಿಪುಲ ಸ್ವಾರಸ್ಯವುಳ್ಳದ್ದೆಂಬುದರ ಬಗೆಗೆ ಭಿನ್ನಾಭಿಪ್ರಾಯವಿರ ಲಾರದು. ಆದರೆ ಈ ಉತ್ತರನ ಪಾತ್ರ ಕುಮಾರವ್ಯಾಸನ ಸ್ವಂತ ಸೃಷ್ಟಿಯಲ್ಲ. ಅದು ವ್ಯಾಸಭಾರತದಿಂದ ಬಂದದ್ದು ಎಂಬುದನ್ನು ನಾವು ನೆನಪಿಡಬೇಕು. ಹೀಗೆ ಅನ್ಯಮೂಲದಿಂದ ಸ್ವೀಕರಿಸಿದ ಪಾತ್ರವನ್ನೊ ಸನ್ನಿವೇಶವನ್ನೊ ಒಬ್ಬ ಕವಿ ನಿರ್ವಹಿಸುವಾಗ ಅವನು ವಹಿಸಬಹುದಾದ ಸ್ವಾತಂತ್ರ್ಯದಲ್ಲಿ ಔಚಿತ್ಯವಿರಬೇಕಾಗುತ್ತದೆ. ಕುಮಾರವ್ಯಾಸ ಇಂಥ ಔಚಿತ್ಯವನ್ನು ಪಾಲಿಸಿದ್ದಾನೆಯೇ ಎಂಬುದು ಪ್ರಶ್ನೆ. ವ್ಯಾಸ- ಕುಮಾರವ್ಯಾಸರ ಉತ್ತರ ಪಾತ್ರಗಳನ್ನು ತೌಲನಿಕವಾಗಿ ಪರಿಭಾವಿಸಿದಾಗ ನಮಗೆ ಕಂಡುಬರುವುದಾದರೂ ಏನು?

ಕುಮಾರವ್ಯಾಸನಲ್ಲಿ ಹೇಗೊ ಹಾಗೆ ವ್ಯಾಸರಲ್ಲೂ ಉತ್ತರನ ಹೇಡಿತನ, ಅದರಿಂದ ಹೊಮ್ಮುವ ಹಾಸ್ಯ ಉಂಟೇ ಉಂಟು; ಆದರೆ ಅದು ಕುಮಾರವ್ಯಾಸನ ಚಿತ್ರಣದಲ್ಲಿರುವಷ್ಟು ಉಲ್ಬಣಾವಸ್ಥೆಯಲ್ಲಿಲ್ಲ ಎಂಬುದು ಇಲ್ಲಿ ಮುಖ್ಯವಾದ ಸಂಗತಿ. ವ್ಯಾಸರ ಸಂಯಮ, ಮಾರ್ಮಿಕತೆ ಕುಮಾರವ್ಯಾಸನಿಗೆ ಬರಲಾರದು. ಅವನ ಕಲೆ ಒರಟು; ಅದು ಅಬ್ಬರಿಸಬಲ್ಲುದೇ ಹೊರತು ಪಿಸು ನುಡಿಯಲಾರದು ಎನಿಸುತ್ತದೆ. ವ್ಯಾಸರು ಉತ್ತರನ ಪಾತ್ರವನ್ನು ಸಾಕಷ್ಟು ಸಹಾನುಭೂತಿ, ಗಾಂಭೀರ್ಯಗಳಿಂದ ನಡೆಸಿಕೊಂಡಿದ್ದಾರೆ. ಕುಮಾರವ್ಯಾಸನಲ್ಲಿ ಆ ಗುಣಗಳು ಲೋಪಗೊಂಡಿದ್ದು, ಉತ್ತರ ಅತ್ಯಂತ ಹಾಸ್ಯಾಸ್ಪದ ವ್ಯಕ್ತಿಯಾಗಿ, ಹೇಡಿತನದ ಮೂರ್ತರೂಪವಾಗಿ ಕೆಳಗಿಳಿದಿದ್ದಾನೆ. ವ್ಯಾಸರದು ಸ್ಮಿತವಾದರೆ ಕುಮಾರವ್ಯಾಸನದು ಅಪಹಸಿತದ ಗಹಗಹಿಕೆ; ವ್ಯಾಸರ ನಗೆಯ ತಿಳಿ ಕುಮಾರವ್ಯಾಸನಲ್ಲಿ ಹುಳಿಹಿಡಿದು ಮಾದಕವಾಗಿ ಪರಿಣಮಿಸಿದೆ.[1]

ವಿಮರ್ಶಕರೊಬ್ಬರು ಕುಮಾರವ್ಯಾಸನ ಉತ್ತರ ಪ್ರಕರಣವನ್ನು ಕುರಿತು ಹೀಗೆ ಹೇಳಿದ್ದಾರೆ. ‘‘ಹಾಸ್ಯ ಮತ್ತು ಗಭೀರತೆಯನ್ನು, ಹೇಡಿತನ ಕಲಿಗೊಳ್ಳುವುದನ್ನು ಕವಿ ಅವನ ಜೀವನದಲ್ಲಿ ಚಿತ್ರಿಸಿದ್ದಾನೆ.’’[2] ಈ ವಿಮರ್ಶೆ ಕುಮಾರವ್ಯಾಸನ ಉತ್ತರನ ವಿಷಯದಲ್ಲಿ ಪೂರ್ಣಸತ್ಯವಲ್ಲ; ಅದು ವಾಸ್ತವವಾಗಿ ಅನ್ವಯಿಸಬೇಕಾದದ್ದು ವ್ಯಾಸರ ಚಿತ್ರಣಕ್ಕೆ. ಕುಮಾರವ್ಯಾಸನ ಉತ್ತರ ಪ್ರಸಂಗದ ಉತ್ತರಭಾಗವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಮರ್ಶಕರು ‘ಗಂಭೀರತೆ’ ಎಂಬ ಮಾತನ್ನು ಬಳಸಿದ್ದಾರೆ. ವ್ಯಾಸರಲ್ಲಾದರೆ ಗಂಭೀರತೆ ಮೊದಲಿಂದ ಕಡೆಯತನಕವೂ ಸುವ್ಯಕ್ತವಾಗಿದೆ; ಆದ್ದರಿಂದಲೇ ಅಲ್ಲಿ ಉತ್ತರನ ಭೀರುತ್ವ ಪೌರುಷಕ್ಕೆ ಸಹಜವಾಗಿ ಸಂಕ್ರಮಿಸುತ್ತದೆ. ಆ ಸಮತೋಲನ ಕುಮಾರವ್ಯಾಸನಲ್ಲಿ ಇಲ್ಲವಾದ್ದರಿಂದ, ಅವನ ಉತ್ತರ ಪಾತ್ರದ ಪೂರ್ವೋತ್ತರಗಳ ನಡುವೆ ಸಾಂಗತ್ಯ ಉಂಟಾಗಿಲ್ಲವೆನಿಸುತ್ತದೆ. ಅಲ್ಲದೆ, ಕುಮಾರವ್ಯಾಸನ ಉತ್ತರ ಕಡೆಗಾದರೂ ಕಲಿಯಾಗಿ ಪರಿಣಮಿಸಿದನೇ ಎಂಬ ಸಂಶಯಕ್ಕೂ ಆಸ್ಪದವುಂಟು; ಹೇಡಿತನದ ಕಳಂಕ ಅವನಿಂದ ತೊಲಗಲೇ ಇಲ್ಲವೇನೊ ಎನಿಸಿದರೆ ಆಶ್ಚರ್ಯವಿಲ್ಲ.

ಕುಮಾರವ್ಯಾಸನ ಉತ್ತರ ಎಲ್ಲೆಯಿಲ್ಲದ ಬಡಾಯಿ ಕೊಚ್ಚಿ, ಮಾತಿಗೆ ತಕ್ಕಂತೆ ನಡೆದುಕೊಳ್ಳದ ವಿಪರ್ಯಾಸದಲ್ಲಿ ಹಾಸ್ಯದ ಹುಚ್ಚು ಹೊಳೆಯಿರತಕ್ಕದ್ದು. ಈ ಮುಖ್ಯವಾದ ಅಂಶದಲ್ಲೆ ವ್ಯಾಸರಿಗೂ ಕುಮಾರವ್ಯಾಸನಿಗೂ ಅಂತರವಿದೆ. ವ್ಯಾಸರ ಉತ್ತರ ‘ಬಾಯ್ಗೆ ಬಂದುದ ಗಳಹು’ವ ಅವಿವೇಕಿಯಾಗಿ, ಜಂಬದ ಕೋಳಿಯಾಗಿ ತೋರುವುದಿಲ್ಲ; ಅವನಾಡುವ ಕೆಲವೇ ಮಾತುಗಳಲ್ಲಿ ಜಂಬಕ್ಕಿಂತ ಹೆಚ್ಚಾಗಿ ಆತ್ಮಪ್ರತ್ಯಯ ಪ್ರಕಟವಾಗುತ್ತದೆ. ವಾಸ್ತವವಾಗಿ ಅವನು ಹಿಂದೆ ಹಲವು ಯುದ್ಧಗಳಲ್ಲಿ ಭಾಗವಹಿಸಿದ್ದವನು; ಆದರೆ ಅವೆಲ್ಲ ಸಣ್ಣ ಪುಟ್ಟ ಕದನಗಳಾಗಿದ್ದು, ಕೌರವಸೈನ್ಯದಂಥ ಪ್ರಚಂಡ ಸೈನ್ಯದ ಕಲ್ಪನೆ ಅವನಿಗಿರಲಿಲ್ಲ. ಎಂತಲೆ, ಕುರುವಾಹಿನಿಯ ಘೋರ ಭಯಂಕರ ದೃಶ್ಯವನ್ನು ಕಂಡಾಗ ಅವನು ಹೆದರುತ್ತಾನೆ. ಅಲ್ಲದೆ, ‘ನಾನಿನ್ನೂ ಹುಡುಗ, ರಣಶಿಕ್ಷಣವಿಲ್ಲದವನು’’ ಎಂದು ಅರ್ಜುನನೊಡನೆ ಅವನಾಡುವ ಮಾತುಗಳನ್ನು ಅಗತ್ಯವಾಗಿ ಗಮಿನಿಸಬೇಕು. ಉತ್ತರನ ಅಂಜುಕುಳಿತನಕ್ಕೆ ಇಂಥದೊಂದು ಸಮರ್ಥನೆ ವ್ಯಾಸರಲ್ಲಿದೆ. ಈ ಯಾವ ಹಿನ್ನೆಲೆಯೂ ಕುಮಾರವ್ಯಾಸನಲ್ಲಿಲ್ಲವಾದ್ದರಿಂದ, ಅವನ ಉತ್ತರ ಬರಿಯ ಬಡಾಯಿಕೋರನಾಗಿ, ಶುದ್ಧ ಹೆಂಬೇಡಿಯಾಗಿ ನಗೆಪಾಟಲಾಗುತ್ತಾನೆ. ಅವನ ಬಡಾಯಿ ಏನೂ ಬಂಡವಾಳವಿಲ್ಲದ್ದು. ವ್ಯಾಸರ ಉತ್ತರ ಹಾಗಲ್ಲ.

ವ್ಯಾಸಭಾರತದಲ್ಲಿ ಅರ್ಜುನ ಉತ್ತರವನ್ನು ಅನುಕಂಪ ಆತ್ಮೀಯತೆ ಗೌರವಗಳಿಂದ ಕಾಣುತ್ತ, ಹುರಿದುಂಬಿಸುತ್ತ, ಅವನ ಸುಪ್ತ ಪೌರುಷವನ್ನು ಎಚ್ಚರಿಸಿಬಿಡುತ್ತಾನೆ. ಕುಮಾರವ್ಯಾಸನಲ್ಲಾದರೋ ಅರ್ಜುನ ಉತ್ತರನನ್ನು ಉದ್ದಕ್ಕೂ ಲಘುವಾಗಿ ಕಾಣುತ್ತ, ಸಿಡುಕಿನಿಂದ ಬೈದು ಭಂಗಿಸುತ್ತ, ನಿರುತ್ಸಾಹಗೊಳಿಸುವ ರೀತಿ ಗೋಚರಿಸುತ್ತದೆ. ಗೀತೋಪದೇಶ ಸಂದರ್ಭದಲ್ಲಿ ಕೃಷ್ಣ ತನ್ನನ್ನು ನಡೆಸಿಕೊಂಡಂತೆಯೇ ಅರ್ಜುನ ಉತ್ತರನನ್ನು ನಡೆಸಿಕೊಳ್ಳುತ್ತಾನೆ, ವ್ಯಾಸಕೃತಿಯಲ್ಲಿ.

ಕೌರವಸೈನ್ಯ ತುರುಗಳನ್ನು ಹಿಡಿದಿದೆಯೆಂದು ದೂತ ಬಂದು ಬಿನ್ನವಿಸಿದಾಗ ಉತ್ತರ ಹೆಂಗಸರ ನಡುವೆ ಇದ್ದನೆಂದು ವ್ಯಾಸರೇ ಹೇಳಿದ್ದಾರೆ. (‘‘ಸ್ತ್ರೀ ಮಧ್ಯ ಉಕ್ತಸ್ತೇನಾಸೌ’’). ಆದರೆ ಕುಮಾರವ್ಯಾಸ ಅವನನ್ನು ‘‘ಮೇಳದ ಗಣಿಕೆಯರ ಮಧ್ಯದಲಿ’’ ಇರಿಸಿದ್ದಾನೆ. ಸ್ತ್ರೀಯರನ್ನು ಗಣಿಕೆಯರನ್ನಾಗಿ ಮಾಡಿದ್ದೆ ಸೂಚಿಸುತ್ತದೆ, ಕುಮಾರವ್ಯಾಸನ ನಿರೂಪಣೆ ಭಿನ್ನವಾದೀತು ಮಾತ್ರವಲ್ಲ, ಹಗುರವಾಗಲೂಬಹುದು ಎಂಬುದನ್ನು. ಅವನ ಉತ್ತರ ಮಾತು ಮಾತಿಗೂ ಕೆಲಬಲದ ಇಂದುಮುಖಿಯರ ಮುಖ ನೋಡುತ್ತ ‘ಬಾಲಭಾಷೆ’ಯಲ್ಲಿ ತನ್ನ ಪೌರುಷವನ್ನು ಹೇಳಿಕೊಳ್ಳುತ್ತಾನೆ; ಲಂಗುಲಗಾಮಿಲ್ಲದೆ ಬುರುಡೆ ಬಿಡುತ್ತಾನೆ. ‘‘ತಾನುದ್ರೇಕಿಸಿಯೆ ಸಮರದಲಿ ನಿಲಲು ಪಿನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ.’’

ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ

ಎಂದು ಕೌರವನ ಆಚಾತುರ್ಯವನ್ನು ಟೀಕಿಸುತ್ತಾನೆ. ಅಷ್ಟೇ ಅಲ್ಲ,

ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮಕುಲದಲಿ ಸಂದು ಬಂದವರು

ಎಂದು ಕೌರವಪಕ್ಷದ ವೀರರನ್ನೆಲ್ಲ ತೆಗಳಿ ತೆಗೆದುಹಾಕುತ್ತಾನೆ. ಈ ಶೌರ್ಯದ ಉಗ್ಗಡಿಕೆಯ ನಡುವೆಯೂ, ‘‘ಬರಿ ತುರುವ ಹಿಡಿದೊಡೆ ತನ್ನ ಹೆಂಡಿರ ಸೆರೆಯ ತಾರದೆ ಮಾಣೆ’’ ಎಂದು ತನ್ನ ಸ್ತ್ರೈಣಬುದ್ದಿಯನ್ನು ಮೆರೆಯುತ್ತಾನೆ. ತನಗೆ ತಕ್ಕ ಸಾರಥಿಯಿಲ್ಲವೆಂಬುದು ಅವನ ಕೊರಗು. ಸಾರಥಿ ಸಿಕ್ಕಿದರೆ ಆಗುವ ಪರಿಣಾಮಗಳನ್ನು ಘೋಷಿಸುತ್ತಾನೆ:

ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ಡೊಳ್ಳು ನೂಕದೆ ರಣಪಿಶಾಚರಿಗೆ
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ

ಅವನ ಬಡಾಯಿಯ ಹಿನ್ನೆಲೆಯಲ್ಲಿ, ಸಾರಥಿಯಿಲ್ಲವೆಂಬ ಮಾತು ಬರಿಯ ಕುಂಟುನೆಪವಿರಬೇಕು ಎನಿಸುತ್ತದೆ.

ವ್ಯಾಸರು ಪ್ರಾರಂಭದಲ್ಲೆ ಉತ್ತರನ ಒಂದು ಒಳ್ಳೆಯ ಚಿತ್ರವನ್ನು ಕೊಡುತ್ತಾರೆ. ದೂತ ಬಂದು ಉತ್ತರನಿಗೆ ಹೇಳುವಾಗ, ವಿರಾಟ ತನ್ನ ಮಗನನ್ನು ಕುರಿತು ಏನು ಭಾವನೆಗಳನ್ನಿಟ್ಟುಕೊಂಡಿದ್ದಾನೆ ಎಂಬುದನ್ನು ಗಮನಕ್ಕೆ ತರುತ್ತಾನೆ:

ಪುತ್ರೋ ಮಮಾನುರೂಪಶ್ಚ ಶೂರಶ್ಚೇತಿ ಕುಲೋದ್ವಹಃ
ಇಷ್ವಸ್ತ್ರೇ ನಿಪುಣೋ ಯೋಧಃ ಸದಾ ವೀರಶ್ಚ ಮೇ ಸುತಃ

(ನನ್ನ ಮಗ ನನಗೆ ತಕ್ಕವನು; ಶೂರ, ಧೀರ, ಕುಲೋದ್ಧಾರಕ, ಶಸ್ತ್ರಾಸ್ತ್ರಕುಶಲನಾದ ಯೋಧ). ವಿರಾಟನ ಈ ಭಾವನೆ ಬರಿಯ ಮುದ್ದಿನಿಂದ ಹುಟ್ಟಿದ ಕಲ್ಪನೆಯಾಗಿರಲಿಕ್ಕಿಲ್ಲ. ವ್ಯಾಸರ ಈ ವಿಶೇಷಣಗಳಲ್ಲಿ ತಕ್ಕಮಟ್ಟಿಗಾದರೂ ಹುರುಳಿರಬೇಕು. ಮುಂದೆ ಉತ್ತರ ಸ್ತ್ರೀಯರ ನಡುವೆ ಮಾತನಾಡುತ್ತಾನಾದರೂ (‘‘ತಸ್ಯ ತದ್ವಚನಂ ಸ್ತ್ರೀಷು ಭಾಷತಃ ಸ್ಮ’’), ಪದೇ ಪದೇ ಅವರ ಮುಖವನ್ನೇನೂ ನೋಡುವುದಿಲ್ಲ. ತನ್ನ ಪೌರುಷವನ್ನು ಕುರಿತು ಅವನಾಡುವ ನುಡಿಗಳಾದರೂ ಮಾನುಷದ ಮಿತಿಯನ್ನು ದಾಟಿ ಹೋಗುವುದಿಲ್ಲ; ಕುಮಾರವ್ಯಾಸನಲ್ಲಿರುವಂತೆ ಉತ್ಪ್ರೇಕ್ಷೆಯ ಗಾಳಿಮಾತುಗಳಾಗುವುದಿಲ್ಲ. ಕೌರವ ಪಕ್ಷದವರನ್ನು ಅವನು ನಿಂದಿಸುವುದೂ ಇಲ್ಲ. ಅವನು ಹೇಳುವುದಿಷ್ಟೆ:

ದ್ರೋಣಂ ಸಹ ಪುತ್ರೇಣ ಮಹೇಶ್ವಾಸಾನ್ ಸಮಾಗತಾನ್
ವಿತ್ರಾಸಯಿತ್ವಾ ಸಂಗ್ರಾಮೇ ದಾನವಾನಿವ ವಜ್ರಭೃತ್
ಪಶ್ಯೇಯುರದ್ಯ ಮೇ ವೀರ್ಯಂ ಕುರವಸ್ತೇ ಸಮಾಗತಾಃ
ಕಿಂ ನು ಪಾರ್ಥೋರ್ಜುನಃ ಸಾಕ್ಷಾದಯಮಸ್ಮಾನ್ ಪ್ರಬಾಧತೇ

(ದ್ರೋಣಾಶ್ವತ್ಥಾಮರನ್ನೂ ಮಹಾವೀರರನ್ನೂ, ಇಂದ್ರನು ರಾಕ್ಷಸರನ್ನು ಹೇಗೋ ಹಾಗೆ ಹೆದರಿಸಿ ಅಟ್ಟಿಬಿಡುತ್ತಿದ್ದೆ. ‘ಇವನು ಯಾರು ಹೀಗೆ ಅಸ್ತ್ರ ಪ್ರಯೋಗ ಮಾಡುವವನು? ಸಾಕ್ಷಾತ್ ಅರ್ಜುನನೇಯೋ?’ ಎಂದು ಕೌರವರು ನನ್ನ ವೀರ್ಯವನ್ನು ನೋಡುತ್ತಿದ್ದರು). ಅರ್ಜುನ ಹತ್ತಿರದಲ್ಲೇ ಇದ್ದಾನೆಂಬುದು ಉತ್ತರನಿಗೂ ಗೊತ್ತಿಲ್ಲ ಎಂಬುದು ಇಲ್ಲಿನ ಸ್ವಾರಸ್ಯ. ಅವನ ಮಾತು ಒಂದು ರೀತಿಯಲ್ಲಿ ನಿಜವಾಗುತ್ತದೆ : ಮುಂದೆ ಕೌರವರು ಉತ್ತರನ ವಿಷಯಕ್ಕಲ್ಲದಿದ್ದರೂ ಬೃಹನ್ನಳೆಯ ವಿಷಯದಲ್ಲಿ ‘‘ಇವನು ಅರ್ಜುನನೇಯೋ?’’ ಎಂದು ಶಂಕಿಸುತ್ತಾರೆ. ಈ ಉತ್ತರನಿಗೂ ಸಾರಥಿಯದೇ ಚಿಂತೆ. ‘‘ಇಪ್ಪತ್ತೆರಡು ದಿನ ನಡೆಯಿತಲ್ಲಾ ದೊಡ್ಡ ಯುದ್ಧ, ಅವರಲ್ಲಿ ನನ್ನ ಸಾರಥಿ ಹತನಾಗಿಬಿಟ್ಟ’’ ಎಂದು ಅವನು ವಿಷಾದಿಸುತ್ತಾನೆ. ದಿಟವಿರಬೇಕು ಎನಿಸುತ್ತದೆ.

ದ್ರೌಪದಿಯಿಂದ ಉತ್ತರನಿಗಿದ್ದ ಸಾರಥಿಯ ಸಮಸ್ಯೆ ಪರಿಹೃತವಾಗುತ್ತದೆ. ಬೃಹನ್ನಳೆ ಕವಚ ಧರಿಸುವುದನ್ನರಿಯದಂತೆ ನಟಿಸಿದ್ದೂ ಉತ್ತರ ತಾನೇ ತೊಡಿಸಿದ್ದೂ ಸಂಸ್ಕೃತ ಕನ್ನಡ ಭಾರತಗಳೆರಡರಲ್ಲೂ ಬರುತ್ತದೆ. ಉತ್ತರ ಸಮರಸಿದ್ಧತೆಯನ್ನಾಗಲಿ ಸಮರವನ್ನಾಗಲಿ ಅರಿಯದವನಲ್ಲ ಎಂಬುದನ್ನು ಈ ಕವಚಪ್ರಸಂಗ ತಿಳಿಸುತ್ತದೆ.

ಕುರುಸೇನೆಯನ್ನು ಕಂಡ ಕುಮಾರವ್ಯಾಸನ ಉತ್ತರನ ಸ್ಥಿತಿ ಶೋಚನೀಯವಾದದ್ದು. ‘‘ತಾಳಿಗೆ ನೀರುದೆಗೆದುದು, ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ.’’ ಅವನು ‘‘ಬಲಕೆ ನಮೋ’’ ಎನ್ನುತ್ತಾನೆ; ‘‘ರಥವ ಮರಳಿಚು ಜಾಳಿಸುವೆ’’ ಎಂದು ಬೃಹನ್ನಳೆಯನ್ನು ಬೇಡುತ್ತಾನೆ; ‘‘ಹಸಿದ ಮಾರಿಯ ಮಂದೆಯಲಿ ಕುರಿ ನುಸುಳಿದಂತಾದೆನು’’ ಎಂದು ಪೇಚಾಡುತ್ತಾನೆ. ಬೃಹನ್ನಳೆ ತನ್ನ ಮಾತನ್ನು ಲಕ್ಷಿಸದಿರಲು, ಅವನು ಮೆಲ್ಲನೆ ರಥದ ಹಿಂದಕ್ಕೆ ಬಂದು ಧುಮ್ಮಿಕ್ಕಿ ಓಡುತ್ತಾನೆ. ಅರ್ಜುನ ಅವನನ್ನು ಹಿಂಬಾಲಿಸುತ್ತಾನೆ.

ವ್ಯಾಸರ ಉತ್ತರನಿಗೂ ಕುರುಸೇನೆಯನ್ನು ಕಂಡು ಹೆದರಿಕೆಯಾಗುತ್ತದೆ : ‘‘ಹೃಷ್ಟರೋಮಾ ಭಯೋದ್ವಿಗ್ನಃ’’ ಎಂದು ಅವನನ್ನು ವರ್ಣಿಸಿದ್ದಾರೆ ವ್ಯಾಸರು. ಆದರೆ ಅವನು ಗಂಭೀರವಾಗಿಯೆ ಅರ್ಜುನನಿಗೆ ಹೇಳುತ್ತಾನೆ:

ನೋತ್ಸಹೇ ಕುರುಭಿರ್ಯೋದ್ಧುಂ ರೋಮಹರ್ಷಂ ಹಿ ಪಶ್ಯ ಮೇ
ಬಹುಪ್ರವೀರಮತ್ಯುಗ್ರಂ ದೇವೈರಪಿ ದುರಾಸದಂ
ಪ್ರತಿಯೋದ್ಧುಂ ಶಕ್ಷ್ಯಾಮಿ ಕುರುಸೈನ್ಯಮನಂತಕಂ
ಹೃಷಿತಾನಿ ರೋಮಾಣಿ ಕಶ್ಮಲಂ ಚಾಗತಂ ಮಮ
ಸೋಹಮೇಕೋ ಬಹೂನ್ ಬಾಲಃ ಕೃತಾಸ್ತ್ರಾನಕೃತಶ್ರಮಃ
ಪ್ರತಿಯೋದ್ಧುಂ ಶಕ್ಷ್ಯಾಮಿ ನಿವರ್ತಸ್ವ ಬೃಹನ್ನಡೇ

(ನನಗೆ ಕೌರವರ ಮೇಲೆ ಯುದ್ಧ ಮಾಡಲು ಮನಸ್ಸಿಲ್ಲ. ಬಹುವೀರರಿಂದ ಕೂಡಿ ಭಯಾನಕವಾಗಿರುವ, ದೇವತೆಗಳಿಗೂ ಅಸಾಧ್ಯವಾದ ಕುರುಸೈನ್ಯದೊಡನೆ ನಾನು ಕಾದಲಾರೆ, ನನ್ನ ರೋಮಗಳು ನಿಮಿರಿ ನಿಂತಿವೆ; ಮನಸ್ಸಿಗೆ ಬೇಸರವುಂಟಾಗಿದೆ. ನನಗೆ ಸೈನ್ಯವಿಲ್ಲ; ಸಾಲದ್ದಕ್ಕೆ ನಾನು ಇನ್ನೂ ಹುಡುಗ, ರಣಶಿಕ್ಷಣವಿಲ್ಲದವನು. ಯುದ್ಧಮಾಡಲು ನನ್ನ ಕೈಲಾಗುವುದಿಲ್ಲ. ರಥವನ್ನು ಹಿಂದಿರುಗಿಸಿಬಿಡು). ಇಲ್ಲಿ ನೋತ್ಸಹೇ, ಕಶ್ಮಲ ಎಂಬ ಮಾತುಗಳು ಮುಖ್ಯವಾಗಿವೆ. ಉತ್ತರನಿಗಾದುದು ಶುದ್ಧವಾಗಿ ಭೀತಿಯಷ್ಟೇ ಎಂದು ಹೇಳಲುಬಾರದು; ಒಂದು ಬಗೆಯ ನಿರುತ್ಸಾಹ, ನಿರ್ವಿಣ್ಣತೆ ಅವನನ್ನು ಕವಿಯುತ್ತವೆ : ಅದೊಂದು ಸಂಕೀರ್ಣ ಮನಃಸ್ಥಿತಿ. ಮನಸ್ಸು ಮಾಡಿದ್ದರೆ ಅವನು ಯುದ್ಧ ಮಾಡಬಹುದಿತ್ತೇನೊ; ಆದರೆ ‘ಕಶ್ಮಲ’ ಅವಕಾಶವೀಯಲಿಲ್ಲ.[3]

ಬಳಿಕ ಅರ್ಜುನ ಉತ್ತರನಿಗೆ ಹೇಳುತ್ತಾನೆ : ‘‘ಹೆಂಗಸರ ಮುಂದೆಯೂ ಗಂಡಸರ ಮುಂದೆಯೂ ಹಾಗೆ ಪೌರುಷವನ್ನು ಕೊಚ್ಚಿಕೊಂಡು ಬಂದು ಈಗ ಯುದ್ಧ ಮಾಡುವುದಿಲ್ಲವೆಂದರೇನು? ಗೋವುಗಳನ್ನು ಬಿಡಿಸಿ ಹಿಂದಕ್ಕೆ ತೆಗೆದುಕೊಂಡುಹೋಗದೆ ಹೋದರೆ ಎಲ್ಲರೂ ನಗುತ್ತಾರೆ. ಆದ್ದರಿಂದ ಸಿದ್ಧನಾಗು’’. ಇದಕ್ಕೆ ಉತ್ತರನ ಉತ್ತರ:

ಕಾಮಂ ಹರನ್ತು ಮತ್ಸ್ಯಾನಾಂ ಭೂಯಾಂಸಾಂ ಕುರವೋ ಧನಂ
ಪ್ರಹಸನ್ತು ಮಾಂ ನಾರ್ಯೋ ನರಾ ವಾಪಿ ಬೃಹನ್ನಡೇ

(ಕೌರವರು ಎಷ್ಟು ಬೇಕಾದರೂ ಅಷ್ಟು ನಮ್ಮ ದನಗಳನ್ನು ಅಟ್ಟಿಕೊಂಡು ಹೋಗಲಿ; ಹೆಂಗಸರೂ ಗಂಡಸರೂ ನನ್ನನ್ನು ನೋಡಿ ಬೇಕಾದಷ್ಟು ನಗಲಿ; ನನ್ನಿಂದಂತೂ ಯುದ್ಧ ಮಾಡಲಾಗುವುದಿಲ್ಲ). ಇಷ್ಟು ಹೇಳಿ ಅವನು ರಥದಿಂದ ನೆಗೆದು ಓಡತೊಡಗುತ್ತಾನೆ. ಅರ್ಜುನ ಅದನ್ನು ಕಂಡು,

ನೈಷಪೂರ್ವೈಃ ಸ್ಮೃತೋ ಧರ್ಮಃ ಕ್ಷತ್ರಿಯಸ್ಯ ಪಲಾಯನಂ
ಶ್ರೇಯಸ್ತೇ ಮರಣಂ ಯುದ್ಧೇ ಭೀತಸ್ಯ ಪಲಾಯನಂ

(ಕ್ಷತ್ರಿಯನಿಗೆ ಪಲಾಯನವು ಧರ್ಮವಲ್ಲ; ಹೆದರಿ ಓಡಿಹೋಗುವುದಕ್ಕಿಂತ ಯುದ್ಧದಲ್ಲಿ ಮಡಿಯುವುದೇ ಶ್ರೇಯಸ್ಸು) ಎನ್ನುತ್ತ ಉತ್ತರನನ್ನು ಬೆನ್ನಟ್ಟುತ್ತಾನೆ. ಅಂತೂ ಪಲಾಯನದಲ್ಲಿ ವ್ಯಾಸ, ಕುಮಾರವ್ಯಾಸರ ಉತ್ತರರಿಬ್ಬರೂ ಒಂದೇ.

ಕುಮಾರವ್ಯಾಸನ ಅರ್ಜುನ ಉತ್ತರನನ್ನು ಹಿಡಿದ ಮೇಲೆ ಅವರಿಬ್ಬರಿಗೂ ನಡೆಯುವ ಸಂಭಾಷಣೆಯಲ್ಲಿ ಗ್ರಾಮ್ಯತೆ ತಾನೇ ತಾನಾಗಿದೆ. ‘‘ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು’’ ಎಂದೂ ‘‘ದುರಾತ್ಮ, ಮುರಿದೆ ವಿರಾಟನನ್ವಯವ’’ ಎಂದೂ ಅರ್ಜುನ ಉತ್ತರನನ್ನು ಬೈಯುತ್ತಾನೆ. ಇವುಗಳಲ್ಲಿ ಮೊದಲನೆಯ ಬೈಗುಳವಂತೂ ಎಳ್ಳಷ್ಟೂ ಗಾಂಭೀರ್ಯವಿಲ್ಲದ್ದು. ಮುಂದೆಯೂ ಅವನ ಬಾಯಿಂದ ನಾಡನರಿ, ನರಗುರಿ, ಪಾಪಿ ಎಂಬ ಮಾತುಗಳು ಧಾರಾಳವಾಗಿ ಉದುರುತ್ತವೆ. ಉತ್ತರನಾದರೋ ಕಂಗಾಲಾಗಿ ಹಲ್ಲುಕಿರಿಯುತ್ತ, ‘‘ಸಾರಥಿ, ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು’’ ಎಂದು ಗೋಗರೆಯುತ್ತಾನೆ; ‘‘ಲೋಗರಿಂದವೆ ಕೊಲಿಸದಿರು, ನೀ ಕುತ್ತಿ ಕೆಡಹು’’ ಎಂದು ಬಡಬಡಿಸುತ್ತಾನೆ. ಅರ್ಜುನ ತನ್ನನ್ನು ಜೀವಗಳ್ಳನೆಂದಾಗ ‘‘ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹು’’ ಎಂದು ನಿರ್ಲಜ್ಜನಾಗಿ ಒರಲುತ್ತಾನೆ. ದೇವಲೋಕದ ಮತ್ತು ಅಪ್ಸರೆಯರ ಪ್ರಸ್ತಾಪವನ್ನು ಅರ್ಜುನ ಎತ್ತಿದಾಗ, ‘‘ಸುರರ ಸತಿಯರನೊಲ್ಲೆವೆ ಮಗೆಮ್ಮರಮನೆಯ ನಾರಿಯರೆ ಸಾಕು’’ ಎನ್ನುತ್ತಾನೆ. ಅರ್ಜುನನನ್ನು ಸ್ವಾಮಿದ್ರೋಹಿಯೆಂದು ದೂಷಿಸುತ್ತಾನೆ. ‘‘ನಿನಗೆ ಬೇಡಿದನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹು’’ ಎಂದು ಯಾಚಿಸುತ್ತಾನೆ. ಆಗ ಅರ್ಜುನ ‘‘ಎಲವೊ ಸಾರಥಿಯಾಗು ನಡೆ, ನೀಗಳಹಿದೊಡೆ ಕಟವಾಯ ಕೊಯ್ವೆನು’’ ಎಂದು ಬೆದರಿಕೆ ಹಾಕಿ, ಬಲಾತ್ಕಾರದಿಂದ ಉತ್ತರನ ‘ಹೆಡೆತಲೆಯ ಹದರಿನೊಳೌಕಿ ತಂದನು ರಥವನೇರಿಸಿದ.’’ ಅನಂತರ ಅವನಿಗೆ ಧೈರ್ಯ ಹೇಳಿ, ‘‘ಕಲಿ ಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ.’’ ‘ಕಲಿಮಾಡಿ’ ಎಂಬುದು ಕವಿಯ ಉಕ್ತಿಯಾಯಿತು; ಉತ್ತರ ಕಲಿಯಾದನೇ ಎಂಬುದಕ್ಕೆ ಸ್ವತಃ ಅವನಿಂದ ಯಾವ ಪುರಾವೆಯೂ ನಮಗೆ ಸಿಗುವುದಿಲ್ಲ.

ವ್ಯಾಸರ ಅರ್ಜುನ ಉತ್ತರನ ವಿಷಯದಲ್ಲಿ ವರ್ತಿಸುವ ರೀತಿಯೇ ಬೇರೆ. ಓಡಿ ಹೋದ ಉತ್ತರನನ್ನು ಹಿಡಿದು ನಿಲ್ಲಿಸಿದಾಗ ಅವನು ದುಃಖಿಸುತ್ತ ‘‘ನಿನಗೆ ಅಚ್ಚ ಬಂಗಾರದ ನಿಷ್ಕಗಳನ್ನು ಕೊಡುತ್ತೇನೆ, ಚಿನ್ನದಲ್ಲಿ ಕೂರಿಸಿದ ವೈಡೂರ್ಯಗಳನ್ನು ಕೊಡುತ್ತೇನೆ, ಹತ್ತು ಮದದಾನೆಗಳನ್ನು ಕೊಡುತ್ತೇನೆ. ನನ್ನನ್ನು ಬಿಟ್ಟುಬಿಡು, ಬೃಹನ್ನಳೆ’’ ಎಂದು ಅಂಗಲಾಚುತ್ತಾನೆ. ಅದನ್ನು ಕೇಳಿ ಅರ್ಜುನ ನಗುತ್ತ, ರಥದ ಹತ್ತಿರಕ್ಕೆ ಕರೆತಂದು ‘‘ರಾಜಪುತ್ರ, ನಿನಗೆ ಶತ್ರುಗಳೊಡನೆ ಯುದ್ಧ ಮಾಡುವುದಕ್ಕೆ ಮನಸ್ಸಿಲ್ಲದಿದ್ದರೆ, ಯುದ್ಧ ಮಾಡುವವನಿಗೆ ಸಾರಥ್ಯವನ್ನಾದರೂ ಮಾಡು. ಹೆದರಬೇಡ, ನೀನು ಕ್ಷತ್ರಿಯನಲ್ಲವೆ!’’ ಎಂದು ಉತ್ತರನಿಗೆ ಒಂದು ಗಳಿಗೆ ಸಮಾಧಾನ ಹೇಳಿ, ಅವನನ್ನು ರಥದ ಮೇಲೆ ಕೂರುವಂತೆ ಮಾಡುತ್ತಾನೆ. ಇಲ್ಲಿ ಬಲಾತ್ಕಾರದ ಅಂಶವೇನೂ ಇಲ್ಲ. ‘‘ಹುಟ್ಟಿದೆಯೊ ಹಾದರಕೆ…’’ ಎನ್ನುವ ಅರ್ಜುನನೆಲ್ಲಿ, ಸುಮ್ಮನೆ ನಕ್ಕು ಸಮಾಧಾನ ಹೇಳುವ ಅರ್ಜುನನೆಲ್ಲಿ?

ಮುಂದಿನದು ಉತ್ತರನ ಪರಿವರ್ತನೆಯ ಕಥೆ. ಅರ್ಜುನನ ಸಂಗ ಮಹಿಮೆಯಿಂದ, ಅವನ ದಶನಾಮಗಳ ಆಕರ್ಣನದಿಂದ, ಅಪೂರ್ವ ಶಸ್ತ್ರಾಸ್ತ್ರ ದರ್ಶನದಿಂದ ಉತ್ತರನಲ್ಲಿ ವೀರ್ಯ ಸ್ಫುರಿಸುತ್ತದೆ; ಅವನ ಭಯ ಜಗುಳುತ್ತದೆ. ಬರಿಯ ಬಾಯುಪದೇಶಕ್ಕಿಂತ ವ್ಯಕ್ತಿತ್ವ ಪರಿಣಾಮಕಾರಿಯಾದದ್ದು ಎಂಬುದನ್ನು ಈ ಪ್ರಸಂಗದಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಇಲ್ಲಿಯೂ ವ್ಯಾಸ, ಕುಮಾರವ್ಯಾಸರು ಅಭಿನ್ನವಲ್ಲ.

ಕುಮಾರವ್ಯಾಸನಲ್ಲಿ, ಅರ್ಜುನನ ಆಣತಿಯಂತೆ ಬನ್ನಿ ಮರವನ್ನೇರಿ ಕೈದುಗಳ ಕಟ್ಟುಬಿಚ್ಚುವ ಉತ್ತರ ಅವುಗಳನ್ನು ಕಂಡು ತಲ್ಲಣಿಸುತ್ತಾನೆ; ‘‘ನೋಡಿದಡಾಲಿಯುರೆ ಬೆಂದುವು ಬೃಹನ್ನಡೆ, ಕಾಳು ಮಾಡಿದೆ ಕೊಂದೆ’’ ಎಂದು ಹಲುಬುತ್ತಾನೆ. ‘‘ಕೈಯಿಕ್ಕಲಂಜುವೆನು’’ ಎಂದು ನಡುಗುತ್ತಲೇ ಆ ಶಸ್ತ್ರಗಳನ್ನು ಅರ್ಜುನನಿಗೆ ಕೊಡುತ್ತಾನೆ. ಇದು ಪಾಂಡವರ ಆಯುಧಗಳೆಂದೂ ತಾನೆ ಅರ್ಜುನನೆಂದೂ ಬೃಹನ್ನಡೆಯ ವೇಷದ ಅರ್ಜುನ ಹೇಳುತ್ತಾನೆ. ಆಗ ತನ್ನ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಳ್ಳುತ್ತಾನೆ ಉತ್ತರ. ದಶನಾಮಾವಳಿಯನ್ನು ತಿಳಿಸುವಂತೆ ಕೇಳಿ, ಅದನ್ನರಿಯುತ್ತಾನೆ. ಆಮೇಲೆ ಉತ್ತರನನ್ನು ಸೂತನನ್ನಾಗಿ ಮಾಡಿಕೊಂಡು ಅರ್ಜುನ ಶತ್ರುಸೈನ್ಯಕ್ಕೆದುರಾಗುತ್ತಾನೆ. ತುರಗಗರ್ಜನೆ, ರಥಚೀತ್ಕಾರ, ಧನುಷ್ಟಂಕಾರ, ಕಪಿಯಬ್ಬರಣೆ, ಪಾರ್ಥನ ಬೊಬ್ಬೆ, ನಿಷ್ಠುರ ದೇವದತ್ತರವ ಇವುಗಳಿಂದಾಗಿ ಉತ್ತರನ ಸ್ಥಿತಿ ಮತ್ತೆ ಚಿಂತಾಜನಕವಾಗುತ್ತದೆ : ‘‘ಶಿರವ ಸಿಡಿಲೆರಗಿದವೊಲುತ್ತರ ತಿರುಗಿಬಿದ್ದನು ಮೂರ್ಛೆಯಲಿ ಹೊಡೆ ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳ.’’ ಆಗ ಅರ್ಜುನ ‘‘ಪಾಪಿ ಸೈರಿಸಲರಿಯ’’ ಎಂದು ಬೈದು ಕೊಳ್ಳುತ್ತ ಸೆರಗಿನಿಂದ ಬೀಸುತ್ತಾನೆ. ಉತ್ತರ ಎಚ್ಚತ್ತು ‘‘ಆನಲಾಪೆನೆ ನಿನ್ನ ಬಹಳ ಧ್ವಾನವನು, ಸಾಕೆನ್ನ ಕಳುಹು’’ ಎಂದು ಪಲ್ಲವಿಗೇ ಮತ್ತೆ ಬರುತ್ತಾನೆ. ಅರ್ಜುನ ಅವನನ್ನು ಸಂತೈಸಿ, ಮುಂದಿನ ಕಾರ್ಯಕ್ಕೆ ತೊಡಗುತ್ತಾನೆ.

ವ್ಯಾಸರ ಉತ್ತರ ನಿಜವಾಗಿಯೂ ಬದಲಾಗುವುದನ್ನು ಕಾಣುತ್ತೇವೆ. ಆ ಬದಲಾವಣೆಯ ಚಿತ್ರವನ್ನು ವ್ಯಾಸರು ಬಹು ಮಾರ್ಮಿಕವಾಗಿ ನೆಯ್ದಿದ್ದಾರೆ. ಪಾಂಡವರ ಆಯುಧಗಳ ಕಟ್ಟನ್ನು ಉತ್ತರ ಬಿಚ್ಚಿದಾಗ, ಒಳಗೆ ಗಾಂಡಿವ ಧನುಸ್ಸೂ ಇನ್ನು ನಾಲ್ಕು ಬಿಲ್ಲುಗಳೂ ಬಾಣಗಳೂ ಕತ್ತಿಗಳ ಗೋಚರಿಸುತ್ತವೆ. ಆಗ ಉತ್ತರನ ಪ್ರತಿಕ್ರಿಯೆಯಿದು:

ತೇಷಾಂ ರೂಪಮಾಲೋಕ್ಯ ಭೋಗಿನಾಮಿವ ಜೃಂಭತಾಮ್
ಹೃಷ್ಟರೋಮಾ ಭಯೋದ್ವಿಗ್ನಃ ಕ್ಷಣೇನ ಸಮಪದ್ಯತ
ಸಂಸ್ಪೃಶ್ಯ ತಾನಿ ಚಾಪಾನಿ ಭಾನುಮಂತಿ ವೃಹಂತಿ
ವೈರಾಟಿರರ್ಜುನಂ ರಾಜನ್ನಿದಂ ವಚನಮಬ್ರವೀತ್

(ಹೆಡೆಬಿಟ್ಟ ಹಾವುಗಳಂತಿದ್ದ ಆ ಬಿಲ್ಲುಗಳನ್ನು ನೋಡಿ ಉತ್ತರನು ಭಯ ಚಕಿತನಾಗಿ, ರೋಮಾಂಚವೇರಿ ಅವುಗಳನ್ನು ಮುಟ್ಟಿ ಮುಟ್ಟಿ ನೋಡುತ್ತ, ಅವುಗಳ ತೂಕವನ್ನೂ ತೇಜಸ್ಸನ್ನೂ ನೋಡಿ ಬೆರಗುವಟ್ಟು, ಇದು ಯಾರ ಬಿಲ್ಲು, ಇದು ಯಾರ ಬಾಣ, ಇದು ಯಾರ ಕತ್ತಿ ಎಂದು ಅವುಗಳನ್ನು ವರ್ಣಿಸಿ ವರ್ಣಿಸಿ ಕುತೂಹಲದಿಂದ ಕೇಳುತ್ತ ಬಂದನು). ಅವುಗಳನ್ನು ಮಗುವಿನಂತೆ ಮುಟ್ಟಿ ಮುಟ್ಟಿ ನೋಡಿದನೆಂಬುದೆಷ್ಟು ಸಹಜ ಸುಂದರವಾಗಿದೆ! ಅವನು ಆಯುಧಗಳನ್ನು ಕಾಣದವನಲ್ಲ; ಆದರೆ ಇಂಥವನ್ನು ಕಂಡಿರಲಿಲ್ಲ. ಈ ಕುತೂಹಲ, ವಿಸ್ಮಯ ಕುಮಾರವ್ಯಾಸನ ಉತ್ತರನಿಗಿಲ್ಲ; ಅವನದೇನಿದ್ದರೂ ಭಯ ಮಾತ್ರ.

ಕಡೆಗೆ ಬೃಹನ್ನಡೆಯೇ ಅರ್ಜುನನೆಂಬುದು ಉತ್ತರನಿಗೆ ಗೊತ್ತಾಗುತ್ತದೆ. ಆಗ ಅವನು ನಡೆದುಕೊಳ್ಳುವ ಪರಿ ಅವನ ಪರಿವರ್ತನೆಗೆ ದ್ಯೋತಕವಾಗಿದೆ. ಅವನು ಅರ್ಜುನನ ಬಳಿ ಬಂದು, ‘‘ಎಲೈ ಧನಂಜಯನೇ, ಭೂಮಿಂಜಯ ಉತ್ತರ ಎಂದು ಹೆಸರುಳ್ಳ ನಾನು ನಿನ್ನನ್ನು ವಂದಿಸುತ್ತೇನೆ’’ ಎಂದು ತನ್ನ ಪರಿಚಯ ಹೇಳಿಕೊಳ್ಳುತ್ತಾನೆ. ಅವನ ನೈಚ್ಯಾನುಸಂಧಾನ ತೊಲಗಿ, ಆತ್ಮಗೌರವ ಮೂಡಿರುವುದನ್ನು ಇದಕ್ಕಿಂತ ಚೆನ್ನಾಗಿ ಹೇಳುವುದು ಸಾಧ್ಯವೇ? ‘‘ಪುಣ್ಯದಿಂದ ನಿನ್ನ ದರ್ಶನ ಲಭಿಸಿತು. ನಿನಗೆ ಸ್ವಾಗತ. ಎಲೈ ಮಹಾಬಾಹುವೇ, ಅಜ್ಞಾನದಿಂದ ನಾನು ಆಡಿದ ಮಾತುಗಳನ್ನು ಕ್ಷಮಿಸು. ನೀನು ಅಗಾಧವಾದ ಕಾರ್ಯಗಳನ್ನು ಮಾಡಿದವನು. ಆದ್ದರಿಂದ ನನಗೆ ಭಯ ಹೋಯಿತು(ಭಯಂ ವ್ಯತೀತಂ ಮೇ)’’ ಎಂದು ಹೇಳಿ ಅವನು ತನ್ನ ಸಂತೋಷ ಪ್ರೀತಿಗಳನ್ನು ವ್ಯಕ್ತಪಡಿಸುತ್ತಾನೆ. ಇದಕ್ಕೆ ಮುನ್ನ, ಅರ್ಜುನನ ದಶನಾಮಗಳನ್ನು ಕೇಳಿ, ಅವು ಯಾವ ಯಾವ ಕಾರಣದಿಂದ ಬಂದುವೆಂಬುದನ್ನು ವಿಚಾರಿಸುತ್ತಾನೆ. ವ್ಯಾಸರು ಅ ಕಾರಣಗಳನ್ನೆಲ್ಲ ವಿವರಿಸಿದ್ದಾರೆ; ಕುಮಾರವ್ಯಾಸನಾದರೆ ‘‘ಪೆಸರನು ತಿಳುಹಿ ಪುನರಪಿ ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ’’ ಎಂದಷ್ಟೆ ಹೇಳಿ ಹಾರಿಸಿದ್ದಾನೆ. ವ್ಯಾಸರ ವಿವರಣೆಯಲ್ಲಿ ಔಚಿತ್ಯವಿದೆ. ಉಳಿದ ಕಡೆ ವಿಸ್ತಾರವಾಗಿ ಬರೆಯುವ ಕುಮಾರವ್ಯಾಸ ಇದನ್ನು ಚುಟುಕು ಮಾಡಬೇಕಾಗಿರಲಿಲ್ಲ.

ಅನಂತರ ಅರ್ಜುನ ಉತ್ತರನನ್ನು ‘ಪುರುಷ ವ್ಯಾಘ್ರ’ ಎಂದು ಸಂಬೋಧಿಸಿ, ‘‘ನಾನು ಸಂಪ್ರೀತನಾದೆ, ನಿನಗೆ ಭಯವೇನೂ ಇಲ್ಲ’’ ಎಂದು ಮೆಚ್ಚಿಕೊಳ್ಳುತ್ತಾನೆ. ಉತ್ತರ,

ಸಹಾಯವಾನಸ್ಮಿ ರಣೇ ಯುದ್ಧ್ಯೇಯಮಮರೈರಪಿ
ಸಾಧ್ವಸಂ ತತ್ಪ್ರನಷ್ಟಾ ಮೇ ಕಿಂ ಕರೋಮಿ ಬ್ರವೀಹಿ ಮೇ

(ಯುದ್ಧದಲ್ಲಿ ನಿನಗೆ ಬೆಂಬಲನಾಗಿದ್ದು ದೇವತೆಗಳ ಮೇಲೆ ಬೇಕಾದರೂ ಯುದ್ಧ ಮಾಡಬಲ್ಲೆ, ಧೈರ್ಯ ಬಂತು, ಏನು ಮಾಡಬೇಕು ಹೇಳು) ಎಂದು ಕೆಚ್ಚಿನಿಂದ ನುಡಿಯುತ್ತಾನೆ. ಆದರೆ, ಉತ್ತರನನ್ನು ಸಾರಥಿಯಾಗಿ ಮಾಡಿಕೊಂಡು ಹೊರಟ ಅರ್ಜುನ ತನ್ನ ಶಂಖವನ್ನು ಒಂದು ಸಲ ಊದಿದಾಗ, ಉತ್ತರ ಅಂಜಿ ರಥದಲ್ಲಿ ನಿಬ್ಬೆರಗಾಗಿ ಕುಳಿತುಬಿಡುತ್ತಾನೆ. (ಉತ್ತರಶ್ಚಾಪಿ ಸಂತ್ರಸ್ತೋ ರಥೋಪಸ್ಥ ಉಪಾವಿಶತ್ ). ಕುಮಾರವ್ಯಾಸನ ಉತ್ತರ ಎಲ್ಲ ಶಬ್ದಗಳನ್ನೂ ಕೇಳಿ ಬೆದರಿ ಮೂರ್ಛಿತನಾದರೆ, ವ್ಯಾಸರ ಉತ್ತರ ದೇವದತ್ತದ ಧ್ವನಿಗಷ್ಟೇ ಅಂಜುತ್ತಾನೆ; ಏಕೆಂದರೆ ಅವನು ಹಿಂದೆ ಕೇಳಿಯರಿಯದ ಘೋಷವದು. ಆಗ ಅರ್ಜುನ ಲಗಾಮು ಹಿಡಿದೆಳೆದು, ಕುದುರೆಗಳನ್ನು ನಿಲ್ಲಿಸಿ, ಉತ್ತರನನ್ನು ತಬ್ಬಿಕೊಂಡು ‘ಪುರುಷಶಾರ್ದೂಲ’ ಎಂದು ಸಂಬೋಧಿಸಿ, ‘‘ನೀನು ಕ್ಷತ್ರಿಯನಾಗಿದ್ದು ಶತ್ರುಮಧ್ಯದಲ್ಲಿ ಹೀಗೆ ಕೈಕಾಲುಗೆಡಬಹುದೇ? ವ್ಯೂಹ ರಚಿತವಾದ ಸೇನೆಯಲ್ಲಿ ನೀನು ಎಷ್ಟೋ ಶಂಖ ಶಬ್ದಗಳನ್ನೂ ಭೇರಿನಾದಗಳನ್ನೂ ಆನೆಗಳ ಘೀಳನ್ನೂ ಕೇಳಿದ್ದೀಯೆ. ಹಾಗಿದ್ದರೂ ಈ ಶಂಖ ಧ್ವನಿಯನ್ನು ಕೇಳಿ ಸಾಮಾನ್ಯರಂತೆ ಹೆದರಿ ಕೂತುಕೊಂಡೆಯಲ್ಲಾ!’’ ಎಂದು ಸಂತವಿಸುತ್ತಾನೆ. ಉತ್ತರ ‘‘ನಾನು ಬೇಕಾದಷ್ಟು ಶಂಖ ಶಬ್ದಗಳನ್ನೂ ಭೇರಿನಾದಗಳನ್ನೂ ಆನೆಗಳ ಘೀಳನ್ನೂ ಕೇಳಿದ್ದೇನೆ. ಆದರೆ ಇಂಥ ಶಂಖಶಬ್ದವನ್ನು ಹಿಂದೆಂದೂ ಕೇಳಿರಲಿಲ್ಲ… ಮನಸ್ಸು ಕಳವಳಗೊಂಡು ದಿಕ್ಕುಗಳೇ ಗೋಚರಿಸದಂತಾಗಿಬಿಟ್ಟಿವೆ’’ ಎನ್ನುತ್ತಾನೆ. ಆಗ ಅರ್ಜುನ ‘‘ಈಗ ರಥದಲ್ಲಿ ಒಂದು ಕಡೆ ಹೆಜ್ಜೆಯನ್ನೂರಿ ಭದ್ರವಾಗಿ ಕುಳಿತುಕೋ; ಲಗಾಮುಗಳನ್ನು ಭದ್ರವಾಗಿ ಎಳೆದು ಹಿಡಿದುಕೋ; ಇನ್ನೊಂದು ಸಲ ಶಂಖವನ್ನು ಊದುತ್ತೇನೆ’’ ಎಂದು ಮುಂದಾಗಿ ಎಚ್ಚರಿಕೆ ಕೊಟ್ಟು ಪುನಃ ಶಂಖಧ್ವನಿ ಮಾಡುತ್ತಾನೆ. ಉತ್ತರ ಈ ಸಲ ವಿಚಲಿತನಾಗುವುದಿಲ್ಲ.

ಉತ್ತರನ ಪೌರುಷವೀಗ ಪೂರ್ಣವಾಯಿತು. ಈ ಪೂರ್ಣತೆ ಕುಮಾರವ್ಯಾಸನಲ್ಲಿ ಗೋಚರಿಸದೆ, ಏನೊ ಅರಕೆಯೆ ಎದ್ದ ಕಾಣುತ್ತದೆ. ಆಯುಧಗಳನ್ನು ಮುಟ್ಟುವಾಗ ‘‘ತುಡುಕಬಹುದೇ ದೋಷಿ ಹಾವಿನ ಕೊಡವ’’ ಎಂದು ಒದ್ದಾಡುತ್ತಾನೆ ಕುಮಾರವ್ಯಾಸನ ಉತ್ತರ. ವ್ಯಾಸರ ಉತ್ತರ ಆ ದಿವ್ಯವನ್ನು ಅಳುಕದೆ ಹಿಡಿದು ಗೆಲ್ಲುತ್ತಾನೆ. ವ್ಯಾಸರ ಅರ್ಜುನನಂತೂ ಒಬ್ಬ ಆದರ್ಶ ಶಿಕ್ಷಕನಾಗಿ ಕಾಣುತ್ತಾನೆ; ಅವನ ಸಹಾನುಭೂತಿ, ಪ್ರೀತಿ, ‘ಪುರುಷ ವ್ಯಾಘ್ರ, ಪುರುಷಶಾರ್ದೂಲ’ ಎಂಬ ವಿಶ್ವಾಸದ ಮಾತುಗಳು ಉತ್ತರನಲ್ಲಿ ಆತ್ಮವಿಶ್ವಾಸವನ್ನು ತುಂಬಿ ಶೌರ್ಯ ಪ್ರತಿಷ್ಠಾಪನೆ ಮಾಡಿದುದರಲ್ಲಿ ಸೋಜಿಗವಿಲ್ಲ. ಈ ವಿಧಾನ ಕುಮಾರವ್ಯಾಸನಲ್ಲಿ ಕಂಡುಬರುವುದಿಲ್ಲ.

ಒಟ್ಟಿನಲ್ಲಿ, ಕುಮಾರವ್ಯಾಸ ಉತ್ತರಕುಮಾರನನ್ನು ಒಬ್ಬ ವಿದೂಷಕನಂತೆ ಸರಳವಾಗಿ ಚಿತ್ರಿಸಿದ್ದಾನೆ ಎನ್ನದೆ ವಿಧಿಯಿಲ್ಲ. ಅವನಲ್ಲಿ ಸ್ವೋಪಜ್ಞತೆ ಬೇಕಾದಷ್ಟಿದ್ದರೂ ಅದರಿಂದ ಉತ್ತರನಿಗೆ ಅನ್ಯಾಯವಾಗಿದೆಯೆಂದೇ ಹೇಳಬೇಕು. ಮೂಲದಲ್ಲಿ ಒಂದು ಪಾತ್ರ ನಿಮ್ನವಾಗಿದ್ದರೆ ಅದನ್ನು ಉದ್ಧರಿಸುವ ಕೆಲಸವನ್ನು ಈಚಿನ ಕವಿ ಮಾಡಬೇಕು; ಆದರೆ ಕುಮಾರವ್ಯಾಸ ಮಾಡಿರುವುದು ತದ್ವಿರುದ್ಧ.

ಇಂತಹ ತೌಲನಿಕ ವಿವೇಚನೆಗಳಿಂದ, ವ್ಯಾಸ ವಾಲ್ಮೀಕಿಗಳಂಥ ಆದಿ ಕವಿಗಳಿಗೂ ಈಚಿನ ಕವಿಗಳಿಗೂ ಇರುವ ಒಂದು ಮೂಲಭೂತ ವ್ಯತ್ಯಾಸ ಸುವ್ಯಕ್ತವಾಗುತ್ತದೆ. ಆ ಋಷಿಕವಿಗಳ ಸಂಯಮ, ನಿರ್ಲಿಪ್ತತೆ ಈಚಿನವರಿಗೆ ಬರುವುದು ಶಕ್ಯವಿಲ್ಲ. ವ್ಯಾಸ ವಾಲ್ಮೀಕಿಗಳು ಪಾತ್ರಗಳ ರಾಗ ದ್ವೇಷಗಳನ್ನು ನಿರ್ಲಿಪ್ತರಾಗಿ, ವಸ್ತುನಿಷ್ಠವಾಗಿ ಚಿತ್ರಿಸುತ್ತಾರೆ ವಿನಾ, ಅವುಗಳಲ್ಲಿ ತಾವು ತಾದಾತ್ಮ್ಯಗೊಳ್ಳುವುದಿಲ್ಲ. ಈಚಿನ ಕವಿಗಳಾದರೆ ಪಾತ್ರಗಳಲ್ಲಿ ಒಂದಾಗಿ ಬಿಡುತ್ತಾರೆ. ಆ ಅಂತರ ಛಂದಸ್ಸಿನಲ್ಲೂ ಪ್ರಮಾಣೀಕೃತವಾಗುತ್ತದೆ. ವ್ಯಾಸ ವಾಲ್ಮೀಕಿಗಳು ಆಮೂಲಾಗ್ರವಾಗಿ ಬಳಸಿಕೊಂಡಿದ್ದು ಶ್ಲೋಕವನ್ನು. ಅದು ಏರಿಳಿತಗಳಿಲ್ಲದ ಸಮತಲ ಛಂದಸ್ಸು; ಅವರ ಅನುದ್ವಿಗ್ನ ಮನೋಧರ್ಮಕ್ಕೆ ಹೇಳಿ ಮಾಡಿಸಿದ್ದು. ಪಾತ್ರಗಳ ಭಾವಕ್ಕೆ ತಕ್ಕಂತೆ ಕವಿ ಅದರಲ್ಲಿ ಲಯವೈವಿಧ್ಯವನ್ನು ತರುವುದು ಅಸಾಧ್ಯ; ವ್ಯಾಸ ವಾಲ್ಮೀಕಿಗಳಿಗೆ ಆ ವೈವಿಧ್ಯ ಉದ್ದಿಷ್ಟವೂ ಅಲ್ಲ. ಅನಂತರದ ಕವಿಗಳಾದರೆ ವಿವಿಧ ಛಂದಸ್ಸುಗಳಲ್ಲಿ ಪಾತ್ರಗಳ ಭಾವಕ್ಕನುಸಾರವಾಗಿ ಲಯದ ಏರಿಳಿತಗಳನ್ನು ಸಾಧಿಸುತ್ತಾರೆ; ಅಲ್ಲಿ ಪಾತ್ರದ ಸಂವೇದನೆ ಕವಿಯ ಸಂವೇದನೆಯೂ ಆಗಿಬಿಡುತ್ತದೆ. ಹೀಗಾಗಿ, ವ್ಯಾಸ ವಾಲ್ಮೀಕಿಗಳ ಋಷಿವ್ಯಕ್ತಿತ್ವ ಮತ್ತು ಅದರಿಂದುಂಟಾಗಿರುವ ನಿರ್ಲಿಪ್ತತೆಯಿಂದ ಅವರ ಕಾವ್ಯಗಳಿಗೆ ವಿಶೇಷ ಲಾಭವಾಗಿದೆ. ಆಮೇಲಿನ ಕವಿಗಳಿಗೆ ಆ ಭಾಗ್ಯವಿಲ್ಲದೆ, ಪ್ರತಿಯಾಗಿ ಇತರ ಸ್ವಾರಸ್ಯಗಳು ಸಿದ್ದಿಸಿವೆ.

ಕುಮಾರವ್ಯಾಸನ ವ್ಯಕ್ತಿತ್ವದಲ್ಲಿ ಯೋಗಾಂಶವಿದೆಯೆಂದೇ ಅವನು ಮಹಾಕವಿಯಾಗಿದ್ದಾನೆ; ಆದರೆ ಅದು ವ್ಯಾಸರ ಮಟ್ಟದ್ದಾಗಲಾರದು.

(ಸೂ : ವ್ಯಾಸಭಾರತದ ಉದ್ಧೃತಿಗಳನ್ನು ಕೊಡುವಲ್ಲಿ ಕೆಲವೆಡೆ ಎ.ಆರ್ .ಕೃ. ಅವರ ಅನುವಾದವನ್ನು ಬಳಸಿಕೊಳ್ಳಲಾಗಿದೆ).

[1] ಪಂಪನಲ್ಲಿ ಈ ಪ್ರಸಂಗ ಬಹಳ ಸಂಕ್ಷಿಪ್ತವಾಗಿ, ಬರಿಯ ವರದಿಯಾಗಿ ಬಂದಿದೆ.

[2] ‘ಕರ್ಣಾಟಕ ಭಾರತ ಕಥಾಮಂಜರಿ’ (ಸರ್ಕಾರದ ಪ್ರಕಟಣೆ)ಯ ‘ತೋರಣನಾಂದಿ’, ಪು.೨೩

[3] ಈ ‘ಕಶ್ಮಲ’ ಎಂಬ ಮಾತು ಭಗವದ್ಗೀತೆಯನ್ನು ನಮ್ಮ ನೆನಪಿಗೆ ತರುತ್ತದೆ. ಅಲ್ಲಿ ಕೃಷ್ಣ ಅರ್ಜುನನನ್ನು ಕುರಿತು ‘‘ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಂ’’(೨.೨) ಎಂದು ಕೇಳುತ್ತಾನೆ. ವಸ್ತುತಃ ಉತ್ತರನ ಪ್ರಕರಣಕ್ಕೂ ಭಗವದ್ಗೀತಾ ಪ್ರಕರಣಕ್ಕೂ ಬಹಳ ಸಾಮ್ಯವಿದೆ. ಉತ್ತರ, ಅರ್ಜುನ ಇಬ್ಬರಿಗೂ ಕಶ್ಮಲವುಂಟಾಗುತ್ತದೆ; ಅದರ ಸ್ವರೂಪ ಮಾತ್ರ ಬೇರೆ ಬೇರೆ. ಎರಡು ಕಡೆಯಲ್ಲೂ ಕ್ಷತ್ರಿಯನ ಸ್ವಧರ್ಮದ ಉಪದೇಶವಿದೆ. ಕೃಷ್ಣ ಅರ್ಜುನನಿಗೆ ವಿಶ್ವರೂಪ ತೋರಿಸಿ ಅವನ ವ್ಯಾಮೋಹವನ್ನು ಕಳೆದರೆ, ಅರ್ಜುನ ಉತ್ತರನಿಗೆ ಪಾಂಡವರ ಶಸ್ತ್ರಾಸ್ತ್ರಗಳನ್ನು ತೋರಿಸಿ, ತನ್ನ ದಶನಾಮಾವಳಿಯನ್ನು ಬಿತ್ತರಿಸಿ ಅವನ ಅಂಜಿಕೆಯನ್ನು ಹೋಗಲಾಡಿಸುತ್ತಾನೆ. ಸ್ವಾರಸ್ಯವೆಂದರೆ, ಉತ್ತರನಿಗೆ ಗುರುವಾದ ಅರ್ಜುನನೆ ಮುಂದೆ ಕೃಷ್ಣನ ಶಿಷ್ಯತ್ವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಬ್ಬರಿಗೆ ಕಲಿಸಬಲ್ಲ ವ್ಯಕ್ತಿ ಇನ್ನೊಬ್ಬರಿಂದ ಕಲಿಯುವುದೂ ಇರುತ್ತದೆ, ಸಂದರ್ಭಾನುಸಾರವಾಗಿ. ‘‘ನಿಡಿಯರ್ಗಂ ನಿಡಿಯರೊಳರ್’’; ಗುರುಗಳಿಗೂ ಗುರುಗಳಿರುತ್ತಾರೆ. ಇದೂ ಮಹಾಭಾರತದ ಪಾಠ.