ಕರ್ಣಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಅವಲೋಕಿಸಿದರೆ, ಎರಡು ಸರ್ವೋದಯ ಚಳವಳಿಗಳು ಕಣ್ಣಿಗೆ ಬೀಳುತ್ತವೆ : ಒಂದು ಶಿವಶರಣರದು, ಹನ್ನೆರಡನೆಯ ಶತಮಾನದಲ್ಲಿ ಘಟಿಸಿದ್ದು; ಇನ್ನೊಂದು ಹರಿದಾಸರದು, ೧೫-೧೬ನೆಯ ಶತಮಾನದಲ್ಲಿ ಎದ್ದು ಕಾಣುವಂಥದು. ಶಿವಶರಣರ ವಚನ ವಾಙ್ಮಯಕ್ಕೆ ವೀರಶೈವ ಧರ್ಮ ಹಿನ್ನೆಲೆಯಾದರೆ, ಹರಿದಾಸರ ಕೀರ್ತನ ಸಾಹಿತ್ಯಕ್ಕೆ ಮಧ್ವಾಚಾರ್ಯ ಪ್ರಣೀತ ದ್ವೈತಸಿದ್ಧಾಂತ ಹಿನ್ನೆಲೆಯಾಗಿದೆ. ವಚನಕಾರರೂ ಹರಿದಾಸರೂ ಸಂಸ್ಕೃತದಲ್ಲಿ ನಿಕ್ಷಿಪ್ತವಾಗಿ ಸಾಮಾನ್ಯ ಜನತೆಗೆ ಅಗಮ್ಯವಾಗಿದ್ದ ವಿಷಯಗಳನ್ನು ತಿಳಿಗನ್ನಡದಲ್ಲಿ ತಿಳಿಸಿಕೊಟ್ಟರು; ಜನತೆಗೆ ಅರ್ಥವಾಗುವ ಭಾಷೆಯಲ್ಲಿ, ಕೆಲವೊಮ್ಮೆ ಆಡು ನುಡಿಯಲ್ಲಿ ಜ್ಞಾನ ಪ್ರಜ್ಞಾನಗಳನ್ನು ಸಂವಹನಗೊಳಿಸಿ ಉಪಕರಿಸಿದರು; ಗಂಡು ಹೆಣ್ಣು. ಬ್ರಾಹ್ಮಣ-ಶೂದ್ರ, ಅಗ್ರಜ-ಅಂತ್ಯಜ ಎಂಬ ಭೇದವಿಲ್ಲದೆ ಎಲ್ಲರೂ ಉದ್ಧಾರಗೊಳ್ಳಲು ಅನುವು ಮಾಡಿಕೊಟ್ಟರು. ಈ ಸಾಹಿತ್ಯವನ್ನು ‘ಸಾಮಾನ್ಯರ ವೇದ’ ಎಂದು ಕರೆಯಬಹುದು. ‘ವೇದ’ ಶಬ್ದಕ್ಕೆ ಜ್ಞಾನವೆಂಬ ವ್ಯಾಪಕವಾದ ಮೂಲಾರ್ಥವಿರುವುದನ್ನು ಲಕ್ಷಿಸಬೇಕು. (‘‘ಅನಂತಾ ಹಿ ವೈ ವೇದಾಃ’’ ಎಂಬ ಮಾತನ್ನು ನೆನೆಯಬಹುದು). ಜ್ಞಾನ, ಭಕ್ತಿ, ವೈರಾಗ್ಯಗಳ ಉಪದೇಶ ಪಾಮರರಿಗೆ ಅವರ ಭಾಷೆಯಲ್ಲಿ ಲಭ್ಯವಾಯಿತೆನ್ನುವುದು ಅಪೂರ್ವ ಸಂಗತಿ.

‘‘ಸಾಮಾನ್ಯರ ವೇದ’ ಎಂಬ ಮಾತು ಹರಿದಾಸರ ಹಾಡುಗಳಿಗೆ ಹೆಚ್ಚು ಸಮಂಜಸವಾಗಿ ಒಪ್ಪುತ್ತದೆ, ‘ವೇದ’ ಶಬ್ದದ ಸಾಮಾನ್ಯಾರ್ಥದಲ್ಲಿ. ದಾಸರ ಮಾಧ್ಯಮ ಕನ್ನಡವಾದರೂ, ಅವರದು ಶುದ್ಧ ವೈದಿಕ ಪರಂಪರೆಯೇ. ವಚನಕಾರರ ಬಗೆಗೆ ಹೇಗೆ ಹೇಳುವುದು ಕಷ್ಟ. ಅವರು ವೇದೋಪನಿಷತ್ತುಗಳನ್ನು ಸಂಪೂರ್ಣವಾಗಿ ಅಲ್ಲಗಳೆಯದಿದ್ದರೂ, ವೈದಿಕ ಪರಂಪರೆಯನ್ನು ಕುರಿತು ಅವರದು ಮುಖ್ಯವಾಗಿ ಪ್ರತಿಭಟನೆಯ ನಿಲುವು. ವೇದದ ಜ್ಞಾನಕಾಂಡವನ್ನಷ್ಟೆ ವಚನಕಾರರು ಪುರಸ್ಕರಿಸಿದರು; ಕರ್ಮಕಾಂಡವನ್ನು ಖಂಡಿಸಿದರು. ಹರಿದಾಸರೆಲ್ಲ ವೇದದ ಕರ್ಮಕಾಂಡವನ್ನು ತಕ್ಕಮಟ್ಟಿಗೆ ಒಪ್ಪುತ್ತಾರೆ; ವರ್ಣಾಶ್ರಮ ಧರ್ಮವನ್ನು ವಿರೋಧಿಸುವುದಿಲ್ಲ. (ಶಿವಶರಣರಿಗೂ ಹರಿದಾಸರಿಗೂ ಸಮಾನವಾದ ಭಕ್ತಿಗೆ ವೇದದಲ್ಲಿ ಪ್ರಾಧಾನ್ಯವಿಲ್ಲ.)

ಹರಿದಾಸರ ಕೀರ್ತನ ವಾಙ್ಮಯ ವೇದೋಪನಿಷತ್ತುಗಳ ತಿರುಳನ್ನು ಕನ್ನಡದಲ್ಲಿ ಪ್ರತಿಪಾದಿಸುತ್ತದೆ; ಅಲ್ಲಿನ ಗಹನ ತತ್ತ್ವಗಳನ್ನು, ಅಧ್ಯಾತ್ಯ ರಹಸ್ಯಗಳನ್ನು ಸರಳ ಸುಲಭ ರೀತಿಯಲ್ಲಿ ಜನಸಾಮಾನ್ಯರಿಗೆ ಅನಾವರಣಗೊಳಿಸುತ್ತದೆ. ದಾಸಶ್ರೇಷ್ಠರೆನಿಸಿದ ಪುರಂದರದಾಸರ ಕೀರ್ತನೆಗಳಿಗೆ ‘ಪುರಂದರೋಪನಿಷತ್ ’ ಎಂಬ ಅಭಿಧಾನ ಸಂದಿರುವುದನ್ನು ಗಮನಿಸಬಹುದು. ಇದು ಸಮಗ್ರ ದಾಸಸಾಹಿತ್ಯಕ್ಕೇ ಅನ್ವಯಿಸುತ್ತದೆ. ‘‘ಕಲ್ಲು ಸಕ್ಕರೆ ಕೊಳ್ಳಿರೋ’’ ಎಂದು ದಾಸರು ಮನೆಮನೆಯ ಬಾಗಿಲಿಗೆ ಹೋಗಿ, ವೇದಶಾಸ್ತ್ರಾದಿಗಳ ಸಂದೇಶವನ್ನು ಹೃದ್ಯವಾಗಿ ಬಿತ್ತರಿಸಿದರು. ಅವರ ರಚನೆಗಳಲ್ಲಿ ಒಂದು ಕಡೆ ಮಾಧ್ವಸಿದ್ಧಾಂತ ಪ್ರಮೇಯಗಳಿದ್ದರೆ, ಮತ್ತೊಂದು ಕಡೆ ಎಲ್ಲ ಮತ ಧರ್ಮಗಳಿಗೂ ಸಮಾನವಾದ ಸದಾಚಾರಸಂಹಿತೆಯಿದೆ. ಸಾಮಾನ್ಯರ ದೃಷ್ಟಿಯಲ್ಲಿ ಎರಡನೆಯದೇ ಮುಖ್ಯ.

ಹರಿದಾಸ ದರ್ಶನದ ಆಕರಗಳೆಂದರೆ, ಮಧ್ವಾಚಾರ್ಯರೂ ಅವರ ಅನುಯಾಯಿಗಳೂ ವ್ಯಾಖ್ಯಾನಿಸಿದಂತೆ ವೇದೋಪನಿಷತ್ತುಗಳು, ಸ್ಮೃತಿಗಳು, ಬ್ರಹ್ಮಸೂತ್ರಗಳು, ಭಾಗವತಾದಿ ಪುರಾಣಗಳು, ರಾಮಾಯಣ ಮಹಾಭಾರತಗಳು, ‘ನ್ಯಾಯಸುಧಾ’ ದಂತಹ ಕೃತಿಗಳು ಮುಂತಾದವು. ಎಷ್ಟೋ ಕಡೆ, ಇವುಗಳಿಂದ ಆಯ್ದ ಭಾಗಗಳನ್ನು ದಾಸರು ಕನ್ನಡಕ್ಕೆ ಅನುವಾದಿಸುವುದುಂಟು.

ಮಧ್ವಮತವನ್ನು ಶ್ರೀಪಾದರಾಜರು ಹೀಗೆ ಸೂತ್ರೀಕರಿಸಿದ್ದಾರೆ:
ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ತ್ವತೋ
ಭೇದೋ ಜೀವಗಣಾ ಹರೇರನುಚರಾಃ ನೀಚೋಚ್ಚ ಭಾವಂಗತಾಃ
ಮುಕ್ತಿರ್ನೈಜಸುಖಾನುಭೂತಿರಮಲಾ ಭಕ್ತಿಶ್ಚ ತತ್ಸಾಧನಂ
ಹ್ಯಕ್ಷಾದಿ ತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ

ದಾಸರು ತಮ್ಮ ಅನೇಕ ಹಾಡುಗಳನ್ನು ಈ ಸೂತ್ರಗಳಿಗೆ ಭಾಷ್ಯವನ್ನಾಗಿಸಿದ್ದಾರೆ. ಹರಿದಾಸರಲ್ಲಿ ‘‘ವೇದಾಂತ ಗ್ರಂಥಗಳಂತೆ ಸಾಧಕ ಬಾಧಕ ಪ್ರಮಾಣಗಳನ್ನು ಸಾಲಾಗಿ ಕೊಟ್ಟು ಪ್ರಮೇಯವನ್ನು ಪ್ರತಿಷ್ಠೆಗೊಳಿಸುವ ಕ್ರಮವು ಅನುಸರಿಸಲ್ಪಟ್ಟಿಲ್ಲ. ಪ್ರಮಾಣಗಳನ್ನು ಬುಡಕಟ್ಟನ್ನಾಗಿ ಇಟ್ಟುಕೊಂಡು ಜನಸಾಮಾನ್ಯರ ಅನುಭವವನ್ನು ವಿವೇಚಿಸಿ ಪ್ರತ್ಯಕ್ಷ ಅನುಮಾನಗಳಿಗೆ ನಿಲುಕದ ವೇದ್ಯೆಕವೇದ್ಯನಾದ ಶ್ರೀಹರಿಯ ಮಹಿಮೆಯನ್ನು ಕೊಂಡಾಡುತ್ತ ಜ್ಞಾನಿಗಳಾದ ಪ್ರಹ್ಲಾದ-ನಾರದಾದಿಗಳ ಪ್ರತ್ಯಕ್ಷವನ್ನು ಉದಾಹರಿಸಿ ಎಲ್ಲರಿಗೂ ಮನದಟ್ಟಾಗುವಂತೆ ಗುಹ್ಯ ಪ್ರಮೇಯಗಳನ್ನು ವಿವರಿಸಿದ್ದಾರೆ.’’[1]

ಪುರಂದರದಾಸರು ದ್ವೈತಸಿದ್ಧಾಂತವನ್ನು ಹೀಗೆ ಸಂಕ್ಷಿಪ್ತವಾಗಿ ತಿಳಿಸುತ್ತಾರೆ

ಸತ್ಯ ಜಗಕಿದು ಪಂಚಭೇದವು
ನಿತ್ಯ ಶ್ರೀ ಗೋವಿಂದನ
ಕೃತ್ಯವನಾಂತು ತಾರತಮ್ಯದಿ
ಕೃಷ್ಣನಧಿಕೆಂದು ಸಾರಿರೆ

ಅಷ್ಟೆ ಅಲ್ಲ, ಹೀಗೆ ಎಚ್ಚರಿಸುತ್ತಾರೆ:

ಬಿಡಬೇಡಿ ಬಿಡಬೇಡಿ
ಮಧ್ವಮತದ ಸಿದ್ಧಾಂತದ ಪದ್ಧತಿ
ಬಿಡಬೇಡಿ ಬಿಟ್ಟು ಕೆಡಬೇಡಿ

ಪುರಂದರದಾಸರ ಈ ಕೀರ್ತನೆಯೂ ಗಮನಾರ್ಹ, ವೈದಿಕ ಪರಂಪರೆಯ ದೃಷ್ಟಿಯಿಂದ:

ಒಬ್ಬ ಆಚಾರಿಯನ್ನು ದೈವವೇ ಇಲ್ಲವೆಂದ
ಒಬ್ಬಾಚಾರಿಯನು ದೈವಕೆಂಟೇ ಗುಣವೆಂದ
ಒಬ್ಬಾಚಾರಿಯನು ನಿರ್ಗುಣ ನಿರಾಕಾರ
ನಿರವಯವನೆಂದಾ ಕಡೆಯಲಿ ತಾನೇ ದೈವವೆಂದಾ
ಒಬ್ಬರು ವೇದಾರ್ಥವರಿತು ಅರಿಯರು
ಒಬ್ಬ ಮಧ್ವಾಚಾರಿಯರೆ ಪುರಂದರ ವಿಠ್ಠಲ
ನೊಬ್ಬನೆ ದೈವವೆಂದು ತೋರಿಸಿಕೊಟ್ಟರಾಗಿ
ವೈದಿಕ ಮತದಲ್ಲಿ ನಡೆದೇವೆಂದು ತಾವು
ವೈಷ್ಣವವಂ ಬಿಟ್ಟುಕೊಟ್ಟರು ಕೆಲರು
ವೈದಿಕವಂ ಬಿಟ್ಟುಕೊಟ್ಟರು ಕೆಲರು
ವೈದಿಕ ವೈಷ್ಣವವೊಂದೆಂದು ಮಧ್ವಮುನಿ
ಪ್ರತಿಪಾದಿಸಿದ ಪುರಂದರವಿಠಲ ಮೆಚ್ಚೆ

ಭಕ್ತಿಯ ಸ್ವರೂಪವನ್ನು, ಅದರ ಸಾಧನೆಗೆ ಮಾಡಬೇಕಾದ ಉಪಾಯವನ್ನು ಪುರಂದರರು ಒಂದು ಪರಿಚಿತ ರೂಪಕದ ಮೂಲಕ ವಿವರಿಸುತ್ತಾರೆ:

ಅನುಭವದಡುಗೆಯ ಮಾಡಿ ಅದ
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ||||
ತನುವೆಂಬ ಭಾಂಡವ ತೊಳೆದು, ಕೇಳುವ
ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳೆದು, ಅಲ್ಲಿ
ಮಿನುಗುವ ತ್ರಿಗುಣದ ಒಲೆಗುಂಡ ನಡೆದು (?)           

ವಿರಕ್ತಿಯೆಂಬುವ ಮಡಿಯುಟ್ಟು, ಪೂರ್ಣ
ಹರಿಭಕ್ತಿಯೆಂಬ ನೀರನ್ನೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ
ಮರೆಯೆಂಬ ಕಾಷ್ಠವ ಮುದದಿಂದ ಸುಟ್ಟು      

ಕರುಣೆಂಬ ಸಾಮಗ್ರಿ ಹೂಡಿ ಮೋಕ್ಷ
ಪರಿಕರವಾದಂಥ ಪಾಕವ ಮಾಡಿ
ಗುರುಶರಣರು ಸವಿದಾಡಿ ನಮ್ಮ
ಪುರಂದರವಿಠಲನ್ನ ಬಿಡದೆ ಕೊಂಡಾಡಿ         

ಹರಿಸರ್ವೋತ್ತಮತ್ವವನ್ನು ಹೇಳುವ ಪುರಂದರದಾಸರ ಈ ಹಾಡು, ಭಗವನ್ಮಹಿಮೆಯನ್ನು ಅಮೋಘವಾಗಿ ಸ್ಥಾಪಿಸುತ್ತದೆ:

ಸಕಲ ಗ್ರಹಬಲ ನೀನೆ ಸರಸಿಜಾಕ್ಷಾ
ನಿಖಿಳರಕ್ಷಕ ನೀನೆ ವಿಶ್ವವ್ಯಾಪಕನೆ
ಜಿತವಾಗಿ ಎನ್ನೊಡೆಯ ಪುರಂದರ ವಿಠಲನೆ
ಶ್ರುತಿಗೆ ನಿಲುಕದ ಅಪ್ರತಿಮಮಹಿಮ ನೀನೆ

ಒಳಗಣ್ಣಿಗೆ ಹರಿ ತೋರುವ ಪರಿಯನ್ನು ಹೀಗೆ ತಾಂತ್ರಿಕವಾಗಿ ಬಣ್ಣಿಸುತ್ತಾರೆ ಪುರಂದರದಾಸರು:

ಆಧಾರ ಮೊದಲಾದ ಆರು ಚಕ್ರ
ಶೋಧಿಸಿ ಬಿಡಬೇಕು ಈಷಣ ಮೂರು
ಸಾಧಿಸಿ ಸುಷುಮ್ನ ತಿರು ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು

ಎವೆಹಾಕದೆ ಮೇಲೆ ನೋಡು ಮುಂದೆ
ತವಕದಿಂದಲಿ ವಾಯುಬಂಧನ ಮಾಡು
ಸವಿದು ನಾದವ ಪಾನಮಾಡು ಅಲ್ಲಿ
ನವವಿಧ ಭಕ್ತಿಲಿ ನಲಿನಲಿದಾಡು
ಅದರೊಳಗೆ ಆಡುತಾನೆ ಭಾನು
ಮಂಡಲ ನಾರಾಯಣನೆಂಬುವನೆ
ಕುಂಡಲ ತುದಿಯೊಳಿದ್ದಾನೆ ನಮ್ಮ
ಪುರಂದರ ವಿಠಲನು ಪಾಲಿಸುತ್ತಾನೆ

ಸಾತ್ವಿಕ ಜೀವರ ಮುಕ್ತಿಯಲ್ಲಿ ಐದು ಬಗೆ; ಅದರ ವಿವರಣೆ ಪುರಂದರರಲ್ಲಿ ಹೀಗೆ ಬರುತ್ತದೆ:

ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಸಾರಿಷ್ಣಿಯಂಗಳು
ಯೋಗ್ಯ ಜೀವರಿಗೆ ಲೋಕದಲ್ಲಿಪ್ಪುದು ಸಾಲೋಕ್ಯಮೆಂಬುದು
ಪಟ್ಟಣ ಸಮೀಪದಲ್ಲಿಪ್ಪುದು ಸಾಮೀಪ್ಯಮೆಂಬುದು
ಶಂಖ ಚಕ್ರಗದ ಪದುಮಧರರಾಗಿ ಸರ್ವರು ಸಾರೂಪ್ಯವೆಂಬ ಮುಕುತಿಯೆಸೆವುವು
ಹರಿವಾಯುಗಳಲ್ಲಿ ತತ್ತ್ವಾಭಿಮಾನಿ ದೇವತೆಗಳಿಗೆ ಸಾಯುಜ್ಯವೆಂಬ ಮುಕುತಿ ನೋಡಯ್ಯ

ಎಂಬುವುದು ಪಂಚವಿಧ ಮುಕುತಿಯೆಂಬುವರು

ಹರಿಸ್ಮರಣೆಯೊಂದೆ ಮೋಕ್ಷದಾಯಕವೆನ್ನುತ್ತಾರೆ ಪುರಂದರರು:
ಸ್ಮರಣೆಯೊಂದೇ ಸಾಲದೆ ಗೋವಿಂದನ
ಸ್ಮರಣೆಯೊಂದೆ ಸಾಲದೆ
ಪರಿ ಪರಿ ವಿಧವೆಲ್ಲ ಭ್ರಾಂತಿಯೆಂದು ತಿಳಿದು
ಪರಮ ಪುರುಷ ಹರಿಯ ನೆರೆ ನಂಬಿದವರಿಗೆ

ದೇಹದ ಅನಿತ್ಯತೆಯನ್ನು ಪುರಂದರದಾಸರು ಸಾರುವುದು ಹೀಗೆ:

ನಂಬದಿರು ದೇಹ ನಿತ್ಯವಲ್ಲ
ಅಂಬುಜಾಕ್ಷನ ಭಜಿಸಿ ಸುಖಿಯಾಗೊ ಮನವೆ
ಎಲುಬು ರಕ್ತಮಾಂಸಗಳ ಮೇಲೆ ಚರ್ಮದ ಹೊದಿಕೆ
ಒಳಗೆ ಮಲಮೂತ್ರ ಕ್ರಿಮಿರಾಶಿ ಇಹವು
ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು
ಬಲುಹು ದೇಹವ ನೆಚ್ಚಿ ಕೆಡಬೇಡ ಮನವೆ

ವೈರಾಗ್ಯಬೋಧಕವಾದ ಪುರಂದರದಾಸರ ಹಾಡುಗಳಲ್ಲಿ ಇದು ಪ್ರಸಿದ್ಧವಾದುದು:

ಆರು ಹಿತವರು ನಿನಗೆ ಮೂವರೊಳಗೆ
ನಾರಿಯೋ ಧಾರಿಣಿಯೋ ಬಲುಧನದ ಸಿರಿಯೋ
ಅನ್ಯರಲಿ ಜನಿಸಿದ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿ ಎನಿಸಿ
ಭಿನ್ನವಿಲ್ಲದೆಯರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ….

ಈ ಸಂಸಾರ ಹೇಯವೆಂದೇನೂ ಹೇಳುವುದಿಲ್ಲ ದಾಸರು. ಬದುಕಬೇಕು, ಆದರೆ ಭಗವಂತನನ್ನು ಮರೆಯದೆ, ಅಹಂಕಾರ ಮಮಕಾರಗಳನ್ನು ಬಿಟ್ಟು, ಅನಾಸಕ್ತಿಯಿಂದ ಬದುಕಬೇಕು ಎಂಬುದು ಅವರ ಹಿತವಚನ. ಇದು ಪುರಂದರವಾಣಿ:

ಈಸಬೇಕು ಇದ್ದು ಜೈಸಬೇಕು
ಹೇಸಿಕೆ ಸಂಸಾರದಲ್ಲಿ ಆಶಾ ಲೇಸ ಮಾಡದ್ಹಾಂಗೆ
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು[2]

‘‘ಷಟ್ಕರ್ಮ ಮಾಡಬೇಕು’’ ಎಂದು ಹೇಳುತ್ತಾರೆ ಪುರಂದರದಾಸರು. ಒಟ್ಟಿನಲ್ಲಿ ಅವರ ಕೀರ್ತನೆಗಳ ವಿಷಯಗಳು ಇವು : ‘‘ಸಂಸಾರಕ್ಕೆ ಬೇಕಾಗುವ ನೀತಿಯ ಉಪದೇಶ, ಲೋಕದ ಜನರ ಸ್ವರೂಪ ಸಾಧನೆ ಯೋಗ್ಯತೆಗನುಸರಿಸಿ ಉಪಯುಕ್ತವಾದ ಉಪಾಸನೆಯ ಕ್ರಮ, ವಿಷ್ಣುಶಕ್ತಿಯನ್ನು ಉದ್ರೇಕಿಸುವ ತಾರತಮ್ಯ ಪಂಚಭೇದ ಜ್ಞಾನ, ಶ್ರೀಹರಿಯ ಕಾರುಣ್ಯ, ಜೀವನ ಪರಾಧೀನತೆ, ಶ್ರೀ ಹರಿಯ ಸ್ವಾತಂತ್ರ್ಯ, ಸಚ್ಚಿದಾನಂದಾತ್ಮನಾದ ನಾರಾಯಣನ ಅಚಿಂತ್ಯಾದ್ಭುತ ಶಕ್ತಿಯನ್ನು ಪ್ರಕಟಿಸುವ ಅವತಾರಲೀಲೆಗಳು, ಹರಿ ಸಂಕಲ್ಪದ ಅಪ್ರತಿಹತಿ, ಕರ್ಮತ್ರಯದಿಂದ- ಸಂಚಿತ, ಪ್ರಾರಬ್ಧ, ಆಗಾಮಿಗಳಿಂದ- ಸಂಸಾರದ ಸಂಕೋಲೆಯಲ್ಲಿ ಸಿಕ್ಕಿ ಗತಿಗಾಣದ ಜೀವನು ಈ ಸಂಸಾರದಲ್ಲಿಯೇ ಇದ್ದು ಅವುಗಳ ಬಾಧೆಯನ್ನು ತಪ್ಪಿಸಿಕೊಳ್ಳುವ ಉಪಾಯವಾದ ಶ್ರೀಹರಿಯೇ ಶರಣು ಎಂಬ ಭಾವನೆ, ಅವನ ಕಾರುಣ್ಯದಿಂದ ಯಥಾಯೋಗ್ಯವಾಗಿ ಅಪರೋಕ್ಷ ಜ್ಞಾನವನ್ನು ಹೊಂದಿ, ಜ್ಞಾನಾನಲದಿಂದ ಸಂಚಿತಾಗಾಮಿಗಳನ್ನು ಸುಟ್ಟು ಪ್ರಾರಬ್ಧವನ್ನು ತಗ್ಗಿಸುವುದು’’ ಇತ್ಯಾದಿ.

ಮುಕ್ತಿಯ ಸಾಧನವನ್ನು ಕುರಿತು ಶ್ರೀಪಾದರಾಜರು ಹೀಗೆ ಹೇಳುತ್ತಾರೆ:

ಭಕ್ತಿ ಬೇಕು ವಿರಕ್ತಿ ಬೇಕು
ಶಕ್ತಿ ಬೇಕು ಮುಂದೆ
ಮುಕ್ತಿಯ ಬಯಸುವಗೆ

ಶ್ರೀಹರಿಯ ಸ್ವರೂಪವನ್ನು ವ್ಯಾಸತೀರ್ಥರು ಹೀಗೆ ಸಂಗ್ರಹಿಸುತ್ತಾರೆ:

ಜಿಜ್ಞಾಸುವಿಗೆ ಜ್ಞಾನಕಾರಣ
ಜ್ಞಾನಿಗೆ ಅಪರೋಕ್ಷ ಕಾರಣ
ಅಪರೋಕ್ಷಿಗೆ ಅಧಿಕಾನಂದ ಕಾರಣ
ಮುಕ್ತಿಗೆ ತಾನೆ ಫಲರೂಪ

ವಾದಿರಾಜ ತೀರ್ಥರು ಅಷ್ಟಾದಶಪುರಾಣಗಳ ಸಾರಾಂಶವನ್ನು ತಿಳಿಯಪಡಿಸುವ ಹಲವಾರು ಪದ್ಯಗಳನ್ನೂ ಗದ್ಯ ಪದ್ಯ ಗ್ರಂಥಗಳನ್ನೂ ರಚಿಸಿದ್ದಾರೆ; ಅಷ್ಟೆ ಅಲ್ಲ, ಉಪನಿಷತ್ತು, ಮಂತ್ರ, ಬ್ರಾಹ್ಮಣಗಳು, ಬ್ರಹ್ಮಸೂತ್ರಗಳು, ಪಾಂಚರಾತ್ರಾಗಮ ಮೊದಲಾದ ಮೂಲಭೂತ ಪ್ರಮಾಣಗಳನ್ನು ತಮ್ಮ ಕೃತಿಗಳಲ್ಲಿ ಸಮಾವೇಶಗೊಳಿಸಿದ್ದಾರೆ. ಶಾಸ್ತ್ರಜ್ಞಾನವಿಲ್ಲದವರಿಗೆ ಇವು ತುಂಬ ಉಪಾದೇಯವಾಗಿವೆ. ವಿಜಯದಾಸರ ಹಾಡುಗಳಲ್ಲಿ ಪರಾಪರತತ್ತ್ವ, ಹರಿವಾಯುಗಳು, ತೀರ್ಥಕ್ಷೇತ್ರಗಳು ಮುಂತಾದುವನ್ನು ಕುರಿತ ವಿಚಾರಗಳೂ ಅಭಿಮಾನಿ ದೇವತೆಗಳ ಸ್ತೋತ್ರಗಳೂ ಕಂಡುಬರುತ್ತವೆ. ಗೋಪಾಲದಾಸರು ಭಾರತ-ಭಾಗವತ, ರಾಮಾಯಣಗಳ ಕಥೆಗಳನ್ನು ತಮ್ಮ ಕೃತಿಗಳಲ್ಲಿ ನಿರೂಪಿಸಿ, ಶ್ರೀ ಹರಿಯ ಮಾಹಾತ್ಮ್ಯ ಮತ್ತು ಸ್ವಾತಂತ್ರ್ಯಾದಿ ಗುಣಗಳನ್ನು ಸ್ತುತಿಸಿದ್ದಾರೆ; ಉಪನಿಷತ್ತತ್ತ್ವಗಳೂ ಅವರಲ್ಲಿ ಉಕ್ತವಾಗಿವೆ. ಜಗನ್ನಾಥದಾಸರ ರಚನೆಗಳಲ್ಲಿ ಶ್ರುತಿ, ಪುರಾಣ, ಇತಿಹಾಸ, ಶ್ರೀ ಮಧ್ವಾಚಾರ್ಯರ ೩೭ ಗ್ರಂಥಗಳು ಮೊದಲಾದುವುಗಳ ಹುರುಳು ಕ್ರೋಡೀಕೃತವಾಗಿದೆ.

ಒಟ್ಟಿನಮೇಲೆ ‘‘೧೬-೧೭ನೆಯ ಶತಮಾನದಲ್ಲಿ ಶ್ರೀ ವ್ಯಾಸತೀರ್ಥ, ಪುರಂದರದಾಸ, ವಾದಿರಾಜತೀರ್ಥ, ಕನಕದಾಸ ಮುಂತಾದ ತತ್ವಜ್ಞಾನಿಗಳು ಜನತೆಯ ಎಲ್ಲ ಪಂಗಡದ ಜನರಿಗೆ, ಬ್ರಾಹ್ಮಣರೂ ಶಾಸ್ತ್ರಾಭಿಜ್ಞರೂ ಇವರಿಂದ ಆರಂಭವಾಗಿ ಶೂದ್ರರೂ ಶಾಸ್ತಜ್ಞಾನವಿಲ್ಲದವರ ಪರ್ಯಂತ ತತ್ತ್ವಜ್ಞಾನದ ಸವಿಯೂಟವನ್ನು ಭಕ್ತಿಯ ದ್ರಾಕ್ಷಾಪಾಕದಿಂದ ಕೂಡಿಸಿ ಒದಗಿಸಿಕೊಟ್ಟರು.’’[3] ಜಟಿಲ ಆಧ್ಯಾತ್ಮಿಕ ತಾತ್ತ್ವಿಕ ವಿಚಾರಗಳನ್ನು, ವೇದಾಂತ ಪ್ರಮೇಯಗಳನ್ನು ಅವರು ಜನಭಾಷೆಯಲ್ಲಿ ಅಂಗೈನೆಲ್ಲಿ ಮಾಡಿಕೊಟ್ಟರು.[4]

ಹರಿದಾಸರ ಉಪದೇಶ ‘ಸಾಮಾನ್ಯರ ವೇದ’ ಮಾತ್ರವಲ್ಲ, ‘ಅಸಾಮಾನ್ಯ’ರಿಗೂ ಅದರಿಂದ ಪ್ರಯೋಜನ ಉಂಟು. ವಚನಸಾಹಿತ್ಯ ಮತ್ತು ದಾಸಸಾಹಿತ್ಯ ‘ಕಲಿಯದವರ ಕಾಮಧೇನು’ ಮಾತ್ರವಲ್ಲ, ‘ಕಲಿತವರ ಕಲ್ಪವೃಕ್ಷ’ವೂ ಹೌದು. ಅದರ ಗುರಿ ಎಲ್ಲರ ಏಳ್ಗೆ, ಕಲ್ಯಾಣ. ಅದಕ್ಕಾಗಿ ಶರಣರು ಮತ್ತು ದಾಸರು ಸಂಸ್ಕೃತದಲ್ಲಿದ್ದ ದೇವಗಂಗೆಯನ್ನು ಕನ್ನಡದ ನೆಲಕ್ಕೆ ಕರೆತಂದರು; ಭಗೀರಥರಾದರು. ಅವರಿಗೆ ನಾಡು ಋಣಿ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ರಾ.ಸ್ವಾ.ಪಂಚಮುಖಿ, ‘ಕರ್ನಾಟಕ ಹರಿದಾಸ ಸಾಹಿತ್ಯ’, ಪು.೯೯

[2] ‘‘ಪದ್ಮಪತ್ರಮಿವಾಂಭಸಾ’’ ಎಂಬ ಭಗವದ್ಗೀತೆಯ ಹೋಲಿಕೆಯಿದು.

[3] ರಾ. ಸ್ವಾ. ಪಂಚಮುಖಿ, ಪೂರ್ವೋಕ್ತ, ಪು.೭

[4] ಅವರು ಬಳಸುವ ದೇಸಿಯ ವಿನ್ಯಾಸ, ಗ್ರಾಮ್ಯ ಪ್ರಯೋಗಗಳು ಹಾಗೂ ಜನಜೀವನದಿಂದೆತ್ತಿಕೊಂಡ ಉಪಮೆ. ರೂಪಕ, ದೃಷ್ಟಾಂತಗಳು ಕೂಡ ಈ ದಿಶೆಯಲ್ಲಿ ಗಮನಿಸಬೇಕಾದವು.