ಕನ್ನಡ ಸಾಹಿತ್ಯವನ್ನು ಜೈನ, ವೀರಶೈವ, ಬ್ರಾಹ್ಮಣ ಎಂದು ವಿಭಜಿಸುವ ಕ್ರಮವೊಂದುಂಟಷ್ಟೆ. ಇದು ಅರ್ವಾಚೀನ ದೃಷ್ಟಿಗೆ ತುಸು ವಿಲಕ್ಷಣವಾಗಿ ತೋರಬಹುದಾದರೂ, ಅರ್ಥರಹಿತವಾದುದೇನಲ್ಲ. ಕಾಲಕಾಲಕ್ಕೆ ಕನ್ನಡ ಸಾಹಿತ್ಯ ಸೃಷ್ಟಿಗೆ ಪ್ರೇರಕವಾಗಿ ನಿಂತ ಶಕ್ತಿಗಳನ್ನು ಇದು ನಿರ್ದೇಶಿಸುತ್ತದೆ ಮಾತ್ರವಲ್ಲದೆ, ಈ ಮೂರು ಧರ್ಮಗಳಿಗೆ ಸೇರಿದ ಉಚ್ಚ ವರ್ಗದವರ ವಿನಾ ಮತ್ತಾರೂ ಕನ್ನಡ ಸಾಹಿತ್ಯ ವ್ಯವಸಾಯದಲ್ಲಿ ಪಾಲ್ಗೊಳ್ಳಲಿಲ್ಲ, ಹಾಗೆ ಪಾಲ್ಗೊಳ್ಳುವ ಅವಕಾಶಗಳೂ ಅವರಿಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. (ವಚನಕಾರರು ಈ ಹೇಳಿಕೆಗೆ ಹೊರತು ಎಂದರೂ, ಅವರ ಸಾಹಿತ್ಯ ನಿರ್ಮಿತಿ ಪ್ರಜ್ಞಾಪೂರ್ವಕವಾದುದಲ್ಲ ಎಂಬುದನ್ನು ನೆನೆಯಬೇಕು). ವಿದ್ಯಾಭ್ಯಾಸ ವಂಚಿತವಾಗಿದ್ದ ಶೂದ್ರವರ್ಗಕ್ಕೂ ಸಾಹಿತ್ಯಕ್ಕೂ ಧ್ರುವಗಳಷ್ಟು ಅಂತರವಿದ್ದುದರಲ್ಲಿ ಆಶ್ಚರ್ಯವಿಲ್ಲ. ಕನ್ನಡ ಸಾಹಿತ್ಯ ಪರಂಪರೆಯ ಈ ವಿದ್ಯಮಾನಕ್ಕೆ ಪ್ರಾಯಃ ಏಕೈಕ ಅಪವಾದವಾಗಿ ಕಂಡುಬರುತ್ತಾರೆ ಕನಕದಾಸರು. ಅವರು ಕುರುಬ ಜನಾಂಗದಿಂದ ಬಂದವರೆಂದು ಸಾಮಾನ್ಯವಾಗಿ ನಂಬಲಾಗಿದೆ. ಸಹಜ ಪ್ರತಿಭೆಯ ಜೊತೆಗೆ ಹೇಗೊ ಏನೊ ಅವರು ಪಾಂಡಿತ್ಯವನ್ನೂ ಆರ್ಜಿಸಿ, ಕೃತಿ ರಚನೆ ಮಾಡಿದ್ದೊಂದು ಸೋಜಿಗ. ಅವರೊಳಗಿನ ಶೂದ್ರ ಸತ್ತ್ವವೂ ಅವರ ಕವಿತೆಯ ಮೇಲ್ಮೆಗೆ ಖಂಡಿತ ನೆರವಾಗಿದೆ. ಅಂತೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೇಲುಜಾತಿಯವರ ಗುತ್ತಿಗೆಯನ್ನು ಮುರಿದ ಕೀರ್ತಿ ಕನಕದಾಸರದು.

ಈಗ ಜಾತಿಯ ಮಾತನ್ನು ಬಿಟ್ಟು ನೋಡೋಣ, ಕನಕದಾಸರ ವೈಶಿಷ್ಟ್ಯವೇನೆಂಬುದನ್ನು. ಕನಕದಾಸರು ಸಂತರೂ ಹೌದು, ಕವಿಯೂ ಹೌದು; ಈ ಸಮನ್ವಯದಲ್ಲಿ ಅವರ ಹಿರಿಮೆಯಿದೆ, ಅವರ ಕೊಡುಗೆಯ ಮಹತ್ತ್ವವಿದೆ. ವಚನಕಾರರಂತೆ ಮತ್ತು ಇತರ ದಾಸರಂತೆ ಕನಕದಾಸರು ಕಾವ್ರೋಹಲವಾರು ಭಾವಗೀತಾತ್ಮಕ ಕೃತಿಗಳನ್ನು ಕೊಟ್ಟಿದ್ದಾರೆ. ಆದರೆ ವಚನಕಾರರಿಂದ ಮತ್ತು ಇತರ ದಾಸರಿಂದ ವಿಭಿನ್ನವಾಗಿ, ಕಾವ್ಯ ನಿರ್ಮಾಣ ಪ್ರಜ್ಞೆಯಿಂದಲೇ ಕೆಲವು ವಸ್ತುನಿಷ್ಠ ಕೃತಿಗಳನ್ನೂ ಕೊಟ್ಟಿದ್ದಾರೆ. ‘ಋಷಿಯಲ್ಲ ದವನು ಕವಿಯಲ್ಲ’ ಎನ್ನುವುದು ವಾಡಿಕೆಯ ನುಡಿ. ಆದರೆ ಋಷಿ ಮತ್ತು ಕವಿ ಯಾವಾಗಲೂ ಅಭಿನ್ನರಲ್ಲ. ಕನಕದಾಸರಂಥ ಮಹನೀಯರಲ್ಲಿ ಮಾತ್ರ ಋಷಿ-ಕವಿಗಳ ಅಭೇದವನ್ನು ಗುರುತಿಸುತ್ತೇವೆ.

‘ನಳ ಚರಿತ್ರೆ’, ‘ಮೋಹನತರಂಗಿಣಿ’ ‘ರಾಮಧಾನ್ಯಚರಿತೆ’ ಇವು ಕನಕ ದಾಸರ ವಸ್ತುನಿಷ್ಠ ರಚನೆಗಳು. ‘ನಳಚರಿತ್ರೆ’ಯಂತಹ ಸರಳ ಸುಭಗವಾದ ಕಾವ್ಯ ಕನ್ನಡದಲ್ಲಿ ಇನ್ನೊಂದಿಲ್ಲ. ‘ಮೋಹನ ತರಂಗಿಣಿ’ ಸಂಪ್ರದಾಯದ ಚಿನ್ನದ ಚೌಕಟ್ಟಿನಲ್ಲೇ ಲಲಿತ ಶೃಂಗಾರ ಗುಣವನ್ನು ಅತಿಶಯವಾಗಿ ಮೆರೆದಿದೆ. ‘ರಾಮಧಾನ್ಯಚರಿತೆ’ಯಂತೂ, ವಿದ್ವಾಂಸರು ಈಗಾಗಲೆ ಗುರುತಿಸಿರುವಂತೆ, ಪ್ರಾಚೀನಸಾಹಿತ್ಯದ ಒಂದು ಅನನ್ಯಕೃತಿ; ಅದರಲ್ಲಿ ವ್ಯಕ್ತವಾಗಿರುವ ಸಾಮಾಜಿಕ ಪ್ರಜ್ಞೆ ಮತ್ತು ವೈಚಾರಿಕತೆ ಬೆರಗುಗೊಳಿಸುವಂಥವು. ವೈಚಾರಿಕತೆಯನ್ನು ಕತೆಯನ್ನಾಗಿ ಮತ್ತು ಕಲೆಯನ್ನಾಗಿ ಮಾರ್ಪಡಿಸುವುದು ಹೇಗೆ ಎಂಬುದಕ್ಕೂ ‘ರಾಮಧಾನ್ಯ ಚರಿತೆ’ಯೊಂದು ಉತ್ಕೃಷ್ಟ ನಿದರ್ಶನ.

‘ಹರಿಭಕ್ತಿಸಾರ’ ಮತ್ತು ಕೀರ್ತನೆಗಳು ಕನಕದಾಸರ ಭಾವಗೀತಸೃಷ್ಟಿ. ‘ಹರಿಭಕ್ತಿಸಾರ’ ವೊಂದು ಪ್ರಸನ್ನ ಸುಂದರವಾದ ಭಕ್ತಿನಿರ್ಭರ ಭಾವಗೀತೆ; ಕವಿಯ ಅಂತರಂಗದಿಂದ ಸ್ಫುರಿಸಿ, ನೇರವಾಗಿ ಬಂದು ಓದುಗರ ಹೃದಯದ ಕದ ತಟ್ಟುವಂಥದು. ಅದರಲ್ಲಿ ಯಾವ ಚಮತ್ಕಾರವೂ ಇಲ್ಲದ, ಅಕೃತಕವೂ ಅಯತ್ನಪೂರ್ವಕವೂ ಆದ ಕವಿತ್ವವಿದೆ. ಒಂದೆರಡು ಪದ್ಯಗಳನ್ನು ನೋಡಬಹುದು.

ಕನಕದಾಸರ ಸಮರ್ಪಣ, ಶರಣಾಗತಿಗಳ ನಿಲುವು ‘ರಕ್ಷಿಸು ನಮ್ಮನನವರತ’ ಎಂದು ಸ್ಥಾಯಿಯಾಗಿ, ಪಲ್ಲವಿಯಾಗಿ ಪರಿಣಮಿಸಿ, ಈ ಶತಕದ ಪ್ರತಿ ಪದ್ಯದಲ್ಲೂ ಹೊಳಲು ಗೊಡುತ್ತಿರುವುದು ಗಮನಾರ್ಹವಾಗಿದೆ. (‘ನನ್ನನನವರತ’ ಎನ್ನದೆ ‘ನಮ್ಮನನವರತ’ ಎನ್ನುವಲ್ಲಿ ದಾಸರ ಸರ್ವೋದಯದೃಷ್ಟಿ ಪ್ರಕಟವಾಗುತ್ತದೆ). ದೇವನ ಅನಂತಾದ್ಭುತ ಮಹಿಮೆಯನ್ನೂ ಜೀವನ ಕ್ಷುಲ್ಲಕತೆಯನ್ನೂ ಅಭಿವ್ಯಕ್ತಿಸುವ ಮುಂದಿನ ಪದ್ಯದಲ್ಲಿ ಕನಕದಾಸರ ವಿನಯಾತಿಶಯ, ಸರಳವಾದರೂ ಮನಮುಟ್ಟುವ ರೀತಿಯಲ್ಲಿ ಆವಿಷ್ಕಾರಗೊಂಡಿದೆ:

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನಮೂರುತಿ ನೀನು ನಿನ್ನ
ಮಾನರುಂಟೇ ದೇವ ರಕ್ಷಿಸು ನಮ್ಮನನವರತ

ಇಲ್ಲಿ ದೀನ, ದಾನಿ, ಹೀನ ಮುಂತಾದ ಮಾತುಗಳು ಪ್ರಾಸಸ್ಥಾನಗಳಲ್ಲಿದ್ದರೂ, ಪ್ರಾಸಕ್ಕಾಗಿಯೇ ಎಳೆದು ತಂದು ಹಾಕಿದವಾಗಿರದೆ, ಬಹು ಸಹಜವಾಗಿ, ಅರ್ಥಗೌರವಸಹಿತ ಮೂಡಿ ಬಂದಿರುವುದನ್ನು ಲಕ್ಷಿಸಬೇಕು.

‘ಏನ ಬಲ್ಲೆನು ನಾನು?’ ಎಂದು ಹೇಳಿಕೊಂಡ ವ್ಯಕ್ತಿ ಭಗವಂತನನ್ನು ಹೊಗಳತೊಡಗಿದರೆ ‘ಶಬ್ದಗಳನ್ನು ನಾನು ಬಲ್ಲೆ’ ಎಂದು ಅಹಂಕಾರಪಟ್ಟಂತಾಗುತ್ತದೆ. ಕನಕದಾಸರಿಗೆ ಆ ಗರ್ವವೂ ಇಲ್ಲ. ತಾವು ಆಡುವ ಮಾತು ತಮ್ಮದಲ್ಲ, ದೇವರು ಕಲಿಸಿದ್ದು, ಆ ಭಗವದ್ವಾಣಿಗೆ ತಮ್ಮ ನಾಲಗೆ ನಿಮಿತ್ತ ಮಾತ್ರ -ಎಂಬ ಪ್ರಜ್ಞೆ ಅವರಿಗುಂಟು. ಅದು ಕೆಳಗಿನ ಪದ್ಯದಲ್ಲಿ ಒಂದು ಸೊಗಸಾದ ಉಪಮೆಯ ಮೂಲಕ ಅಭಿವ್ಯಕ್ತವಾಗಿದೆ:

ಗಿಳಿಯ ಮರಿಯನು ತಂದು ಪಂಜರ
ದೊಳಗೆ ಪೋಷಿಸಿ ಕಲಿಸಿ ಮೃದು ನುಡಿ
ಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ
ತಿಳುಹಿ ಮತಿಯನು ಎನ್ನ ಜಿಹ್ವೆಗೆ
ಮೊಳಗುವಂದದಿ ನಿನ್ನ ನಾಮಾ
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ

ಗಿಳಿ ಏನನ್ನು ಹೇಳಿಕೊಟ್ಟರೂ ಕಲಿಯುತ್ತದೆ. ಆದರೆ ಭಗವನ್ನಾಮ ಸಂಕೀರ್ತನೆಯನ್ನು ಮಾತ್ರ ಅದಕ್ಕೆ ಕಲಿಸಬೇಕು. ಅಂತೆಯೇ ತಮ್ಮ ಮಾತು ವಿನಿಯೋಗವಾಗಬೇಕು ಎಂಬ ದಾಸರ ಹಾರೈಕೆ ಔಚಿತ್ಯಪೂರ್ಣವಾಗಿದೆ. ಇಲ್ಲಿ ಗಿಳಿಯ ರೂಪಕ ಬಳಕೆಗೊಂಡಿರುವ ರೀತಿ ಹೊಸದು ಎನಿಸುತ್ತದೆ. ಕೇವಲ ಅನುಕರಣಪಾಂಡಿತ್ಯ ಎನ್ನುವಾಗ ಗಿಳಿಯ ಹೋಲಿಕೆ ಕೊಡುವುದು ಪದ್ಧತಿ. ಆದರೆ ಇಲ್ಲಿ ಅದರ ಸ್ಥಾನ ಬೇರೆಯಾಗಿದೆ, ಉದಾತ್ತವಾಗಿದೆ.

ಕನಕದಾಸರ ಕೀರ್ತನಸಮುದಾಯದಲ್ಲಿ ಅಪೂರ್ವವಾದ ಕಾವ್ಯಶಕ್ತಿ ಗೋಚರಿಸುತ್ತದೆ ಇಲ್ಲಿ ಕೆಲವು ಉದಾಹರಣೆಗಳನ್ನು ಮಾತ್ರ ಲಕ್ಷಿಸಬಹುದು. ಅದಕ್ಕೆ ಮುನ್ನ ಒಂದಂಶವನ್ನು ಗಮನಿಸಬೇಕು. ದಾಸಸಾಹಿತ್ಯದ ಹಿನ್ನೆಲೆಯಲ್ಲಿರತಕ್ಕದ್ದು ಮಧ್ವಪ್ರಣೀತವಾದ ದ್ವೈತಮತ. ಆದರೆ ಇತರ ದಾಸರ ಕೀರ್ತನೆಗಳಲ್ಲಿರುವಂತೆ ದ್ವೈತದ ಯಾವ ಪ್ರಸ್ತಾಪವೂ ಕನಕದಾಸರ ಹಾಡುಗಳಲ್ಲಿಲ್ಲ. ಅವರಲ್ಲಿ ಶಾಸ್ತ್ರಪ್ರಜ್ಞೆ ಅಥವಾ ಮತಪ್ರಜ್ಞೆಗಿಂತ ಕಾವ್ಯ ಪ್ರಜ್ಞೆ ಮೇಲುಗೈಯಾಗಿದೆ, ಪ್ರಧಾನವಾಗಿದೆ ಎಂಬುದಕ್ಕೆ, ಅವರ ಸ್ವತಂತ್ರ ಮನೋಧರ್ಮಕ್ಕೆ ಇದು ದ್ಯೋತಕವಾಗಿದೆ. ಅವರು ಸಮಾಜದ ಕೆಳಹಂತದಿಂದ ಬಂದದ್ದೂ ಇದಕ್ಕೆ ಕಾರಣವಿದ್ದೀತು.

ಒಂದೆಡೆ ಕನಕದಾಸರು ‘‘ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು’’ ಎಂದು ಎಚ್ಚರಿಸಿದ್ದಾರೆ. ಈ ಮಾತಿಗೆ ಹಲವು ಸ್ತರಗಳಲ್ಲಿ ಅರ್ಥ ಮಾಡಬಹುದು. ವರಕವಿಗೂ ನರಕವಿಗೂ ಭೇದಮಾಡಲಾಗಿದೆ ಈ ವಾಕ್ಯದಲ್ಲಿ. ವರಕವಿಗಳು ಎಂದರೆ ದೇವರಾಗಬಹುದು; ದೊಡ್ಡವರಾಗಬಹುದು. ನರಕವಿಗಳೆಂದರೆ ಸಾಮಾನ್ಯರು, ಅಲ್ಪರು. ಭೂಮದ ಮುಂದೆ ಅಲ್ಪವು ಅಹಂಕಾರದಿಂದ ವಿಜೃಂಭಿಸಬಾರದು ಎಂದು ವಿನಯಮಂತ್ರವನ್ನು ದಾಸರು ಇಲ್ಲಿ ಸೊಗಸಾಗಿ ಕಲಿಸುತ್ತಾರೆ.

ದೇವರು ಎಲ್ಲಿದ್ದಾನೆ ಎಂದು ಕೇಳುವ ಸಂಶಯ ಗ್ರಸ್ತರಿಗೆ ಕನಕದಾಸರು ಉತ್ತರ ಕೊಡುತ್ತಾರೆ : ಅವನು ಎಲ್ಲೆಲ್ಲಿಯೂ ಇದ್ದಾನೆ; ನಂಬಿಕೆಯಿಟ್ಟು ಕರೆದರೆ ತತ್ ಕ್ಷಣವೆ ಪ್ರತ್ಯಕ್ಷನಾಗುತ್ತಾನೆ. ‘‘ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ; ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು!’’ ಅವನು ಸರ್ವವ್ಯಾಪಿ ಎಂಬುದನ್ನರಿಯದೆ ಕೇವಲ ಕಲ್ಲಿನಲ್ಲಿದ್ದಾನೆಂದು ತಿಳಿದು ಪೂಜಿಸುವ ಮೌಢ್ಯವನ್ನು ಕನಕದಾಸರು ತಿದ್ದುತ್ತಾರೆ : ‘‘ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು.’’ ವಿಗ್ರಹಾರಾಧನೆಯೆ ಸರ್ವಸ್ವ ಎಂದು ಭಾವಿಸುವವರಿಗೆ ಹೀಗೆ ಹೇಳುವುದು ಅನಿವಾರ್ಯ. ಕನಕದಾಸರ ವಿಚಾರಶೀಲ ಧೋರಣೆ ಇಲ್ಲಿ ಬೆಳಗಿದೆ.

ಕನಕದಾಸರು ಲೋಕಕ್ಕೆ ನೀಡಿರುವ ಅಮೋಘ ಸಂದೇಶವೆಂದು ಕರೆಯಬಹುದಾದ ಅವರದೊಂದು ಕೀರ್ತನೆ ಬಹುಮುಖ್ಯವಾಗಿದೆ : ‘‘ತಲ್ಲಣಿಸದಿರು ಕಂಡ್ಯ ತಾಳು ಮನವೆ; ಎಲ್ಲರನು ಸಲಹುವನು, ಇದಕೆ ಸಂಶಯವಿಲ್ಲ!’’ ಎಂದು ಪಲ್ಲವಿಯಿಂದ ಅದು ಪ್ರಾರಂಭವಾಗುತ್ತದೆ. ನಿರ್ಭೀತಿ, ಆಶಾವಾದಗಳ ತೂರ್ಯವನ್ನಿಲ್ಲಿ ಮೊಳಗಿಸಿದ್ದಾರೆ ದಾಸರು. ‘‘ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ? ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು, ಗಟ್ಟಿಯಾಗಿ ರಕ್ಷಿಪನು ಇದಕೆ ಸಂಶಯ ಬೇಡ’’ ಇತ್ಯಾದಿಯಾಗಿ ಅವರು ತಮ್ಮ ವಾದಕ್ಕೆ ದೃಷ್ಟಾಂತಗಳನ್ನು ಹೇಳಿ, ಭೀತ ಜಗತ್ತನ್ನು ಸಂತೈಸಿದ್ದಾರೆ; ದೈವೀರಕ್ಷೆಯ ಭರವಸೆಯಿತ್ತಿದ್ದಾರೆ.

ಪಶ್ಚಿಮ ರಂಗನಾಥನನ್ನು ಒಂದೆಡೆ ದಾಸರು ‘‘ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ, ಜಗದೇಕ ವಿಖ್ಯಾತ ಪಶ್ಚಿಮ ರಂಗನಾಥ?’’ ಎಂದು ವಿಸ್ಮಯದಿಂದ ಕೇಳುತ್ತಾರೆ. ‘‘ತಮದೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತು ರಮಣಿ ಭೂಮಿಯನು ತಂದಾಯಾಸವೋ?’’ ಇತ್ಯಾದಿಯಾಗಿ ಕಾರಣಗಳನ್ನು ಅನುಮಾನಿಸುತ್ತಾರೆ. ಇದು ತುಂಬ ಮನೋಜ್ಞವಾಗಿದೆ. ಇಡೀ ಕೀರ್ತನೆಗೆ ದಾಸರು ಕಡೆಯಲ್ಲಿ ಕೊಡುವ ತಿರುವು ಅತ್ಯಂತ ಪರಿಣಾಮಕಾರಿ:

ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ
ನಿನ್ನನೆಬ್ಬಿಸುವರೊಬ್ಬರನು ಕಾಣೆ!

ಇಲ್ಲಿ ವಿಷಾದಪೂರ್ಣ ವಿಡಂಬನದ ಝಳಪಿದೆ; ಅದರ ಧ್ವನಿ ಈ ಹೊತ್ತಿನವರೆಗೂ ಚಾಚಿಕೊಳ್ಳುತ್ತದೆ; ಮಾತ್ರವಲ್ಲ, ಇಂದಿಗೆ ಹೆಚ್ಚು ಅನ್ವಿತವಾಗುತ್ತದೆ. ಭಗವಂತ ನಿದ್ದೆಹೋಗಿದ್ದಾನೆ; ಎಂತಲೇ ಲೋಕದಲ್ಲಿ ಇಷ್ಟೊಂದು ಅರಾಜಕತೆ. ಅವನನ್ನು ಎಬ್ಬಿಸಬೇಕೆಂಬ ಕಳಕಳಿಯಾಗಲಿ, ಎಬ್ಬಿಸುವ ಸಾಮರ್ಥ್ಯವಾಗಲಿ ಯಾರಿಗೂ ಇಲ್ಲ. ಅವನು ಮಲಗಿಯೇ ಇರಲಿ, ಎದ್ದರೆ ತಮಗೆ ತೊಂದರೆ ಎಂಬುದೇ ಎಲ್ಲರ ಭಾವನೆ. ಅಂದು ಮಲಗಿದ ಭಗವಂತ ಇನ್ನೆಂದೂ ಎಚ್ಚರಗೊಳ್ಳುವುದಿಲ್ಲವೆ? ಏನಾದರಿರಲಿ, ಕನಕದಾಸರದು ಪ್ರವಾದಿವಾಣಿಯಾಗಿ ತೋರುತ್ತದೆ.

ತಮ್ಮ ಕೀರ್ತನೆಯೊಂದರಲ್ಲಿ ಭೂಕಂಪಕ್ಕೆ ದಾಸರು ಪ್ರತಿಕ್ರಿಯಿಸಿರುವುದು ಕುತೂಹಲ ಕಾರವಾಗಿದೆ : ‘‘ಏಕೆ ನಡುಗಿದೆ ತಾಯಿ ಭೂಮಿ, ನಡುರಾತ್ರಿಯೊಳು?’’ ಎಂದು ಪ್ರಶ್ನಿಸಿ, ‘‘ಧರೆಯೊಳಗೆ ಕರ್ಮಿಗಳು ಹೆಚ್ಚಿ… ನರಕುರಿಗಳೆಲ್ಲ ನಡೆಗೆಟ್ಟರೆಂದು!’’ ಇತ್ಯಾದಿಯಾಗಿ ಕಾರಣಗಳನ್ನೂ ಹೇಳುತ್ತಾರೆ. ಪ್ರಕೃತಿ ವ್ಯಾಪಾರಗಳನ್ನು ಹೀಗೆ ಗಮನಿಸಿ, ಕಾವ್ಯಕ್ಕೆ ಬಳಸಿಕೊಂಡ ಕವಿಗಳು ನಮ್ಮಲ್ಲಿ ವಿರಳ. ಯಾವುದೇ ನೇರ ಉಪದೇಶವಿಲ್ಲದ ಈ ಕೀರ್ತನೆ ತೀರ ವಿಶಿಷ್ಟವಾದುದು.

ಕನಕದಾಸರ ಕೀರ್ತನೆಗಳಲ್ಲಿ ನಮ್ಮ ಗಮನ ಸೆಳೆಯತಕ್ಕ ಒಂದು ಮುಖ್ಯ ಸಂಗತಿಯೆಂದರೆ, ಅವರ ಕೆಲವು ಸಮಗ್ರರೂಪಕಗಳು. ಅವು ಸಾಂಪ್ರದಾಯಿಕವಲ್ಲ, ಬಹುಮಟ್ಟಿಗೆ ವಿನೂತನ. ನಿತ್ಯ ಜೀವನದ ಸುಪರಿಚಿತ ವಸ್ತು, ವಿಷಯಗಳನ್ನು ಅವರು ತಮ್ಮ ಭಾವಾನುಭವಗಳಿಗೆ ರೂಪಕ ಮಾಡಿಕೊಳ್ಳುತ್ತಾರೆ.

ಕಳ್ಳರು ಪ್ರಯಾಣಿಕರ ದಾರಿಯನ್ನು ಅಡ್ಡಗಟ್ಟಿ ಸುಲಿಗೆ ಮಾಡುವ ಸಂಗತಿಯನ್ನು ದಾಸರು ಇಂದ್ರಿಯಗಳ ಕೋಟಲೆಗೊಂದು ರೂಪಕವಾಗಿ ಅಳವಡಿಸಿ ಹಾಡಿದ್ದಾರೆ : ‘‘ಪಥ ನಡೆಯದಯ್ಯ ಪರಲೋಕಸಾಧನಕೆ, ಮನ್ಮಥನೆಂಬ ಖಳನು ದಾರಿಯ ಕಟ್ಟಿ ಸುಲಿಯುತಿರೆ!’’ ಎಂದು ಮೊದಲಾಗುವ ಈ ರೂಪಕ ‘‘ಹೇಳಲಿನ್ನೇನು ಬಿಡದಾದಿ ಕೇಶವರಾಯನಾಳ ಸಂಗಡ ಹೋದರಾವ ಭಯವಿಲ್ಲ’’ ಎಂದು ಕೊನೆಮುಟ್ಟಿ ಪೂರ್ಣವಾಗುತ್ತದೆ.

ಒಂದು ಕಡೆ ಕನಕದಾಸರು ರೂಪಕದ ಮೂಲಕ ತಮ್ಮನ್ನು ಕುರುಬರೆಂದು ಕರೆದುಕೊಂಡಿದ್ದಾರೆ : ‘‘ನಾವು ಕುರುಬರು, ನಮ್ಮ ದೇವರೋ ಬೀರಯ್ಯ; ಕಾವ ನಮ್ಮಜ್ಜ ನರಕುರಿಹಿಂಡುಗಳನು!’’ ನಿಜ, ಕನಕದಾಸರು ಕುರುಬರು. ಹಾಗೆ ನೋಡಿದರೆ, ಎಲ್ಲ ಮಹಾಪುರುಷರೂ ಕುರುಬರೇ – ನರಕುರಿಗಳನ್ನು ರಕ್ಷಿಸುವ, ಹಾದಿ ತಪ್ಪದಂತೆ ನೋಡಿಕೊಳ್ಳುವ ದೊಡ್ಡ ಕುರುಬರು! ಅಷ್ಟಮದ ಮತ್ಸರಗಳೇ ಟಗರುಗಳು, ಶಾಸ್ತ್ರ ಪುರಾಣಗಳೇ ಶ್ವಾನಗಳು- ಹೀಗೆ ಈ ಕುರುಬನ ರೂಪಕ ಬೆಳೆಯುತ್ತ ಹೋಗುತ್ತದೆ.

‘‘ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ, ನಾಲಗೆಯ ಕೂರಿಗೆ ಮಾಡಿ ಬಿತ್ತಿರಯ್ಯ’ ಎಂಬಲ್ಲಿ ಕೃಷಿರೂಪಕ ತಲೆಯಿಕ್ಕಿದೆ. ‘‘ಅಡಿಗೆಯನ್ನು ಮಾಡಬೇಕಣ್ಣ, ನಾನೀಗ ಜ್ಞಾನದಡಿಗೆಯನ್ನು ಮಾಡಬೇಕಣ್ಣ’’ ಎಂಬ ಅಡಿಗೆಯ ರೂಪಕವನ್ನು ಇನ್ನೊಂದೆಡೆ ನೋಡುತ್ತೇವೆ. ವಸ್ತ್ರಪ್ರಕ್ಷಾಳನದ ರೂಪಕ ಮತ್ತೊಂದೆಡೆ ನಾಟಕೀಯವಾಗಿ ಹೀಗೆ ಬರುತ್ತದೆ : ‘‘ನನ್ನವ್ವ ಕಲ್ಲ ಬಿಡೆ, ಈ ಧೋತ್ರವನು ಚೆನ್ನಾಗಿ ಒಗೆಯಬೇಕು; ಮುನ್ನ ಮಾಡಿದ ಪಾಪಕರ್ಮ ಹೋರುವ ಹಾಗೆ ಚೆನ್ನಕೇಶವನ ಪಾದಕ್ಕೊದಗಬೇಕು.’’ ದಾಸರ ಭಾಷೆ ಇಲ್ಲಿ ಎಷ್ಟು ಸಜೀವವಾಗಿ, ಆತ್ಮೀಯವಾಗಿ ಮಿಡಿಯುತ್ತಿದೆ!

ಭಗವಂತನನ್ನು ಹೊಗಳುವಾಗ ಬೊಂಬೆಯಾಟದ ರೂಪಕವೊಂದು ಮೂಡಿದೆ:

ಬೊಂಬೆಯಾಟವನಾಡಿಸಿದೆ ಮಹಾಭಾರತದ
ಅಂಬುಜಭವಾದಿ ಅಮರರು ನೋಡುತಿರಲು
ಕುರುಭೂಮಿಯೆಂಬ ಪುರವೀಧಿಯನು ರಚಿಸಿ
ಮರೆಯ ಮಾಯದ ಐದು ತೆರೆಯ ಹಾಕಿ
ಧರಣೀಶರೆಂಬ ನರ ಪ್ರತಿಮೆಗಳನಳವಡಿಸಿ
ನರನ ರಥವಾಜಿಯ ಸೂತ್ರವನು ಪಿಡಿದು

ಮಹಾಭಾರತವನ್ನು ಇದು ಕುರಿತುದಾದರೂ, ಇಡೀ ಲೋಕಜೀವನಕ್ಕೆ ಅನ್ವಯಿಸು ವಂಥದು. ಬೇರೆ ಪ್ರಕಾರದ ನಾಟಕಗಳಲ್ಲಾದರೆ ಜೀವಂತ ವ್ಯಕ್ತಿಗಳು ಪಾತ್ರವಹಿಸುತ್ತಾರೆ. ಬೊಂಬೆಯಾಟದಲ್ಲಾದರೋ ನಿರ್ಜೀವ ಬೊಂಬೆಗಳು ಸೂತ್ರಧಾರನ ಇಚ್ಛೆಗೆ ತಕ್ಕಂತೆ ಕುಣಿಯುತ್ತವೆ. ಭಗವತ್ ಶಕ್ತಿಯ ಮಹಿಮೆಯೂ ನರಲೋಕದ ಅಸಹಾಯಕತೆಯೂ ಈ ರೂಪಕದಲ್ಲಿ ಚೆನ್ನಾಗಿ ಧ್ವನಿತವಾಗಿದೆ. ಇನ್ನು, ಈ ಬೊಂಬೆಯಾಟದಲ್ಲಿ ಅನುಭವಗಮ್ಯ ವಾಗುವ ರಸವಾದರೂ ಯಾವುದು? ‘‘ಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸ!’’ ಎನ್ನುತ್ತಾರೆ ದಾಸರು, ಹೌದು, ನಮ್ಮ ವೀರಶೃಂಗಾರಾದಿ ರಸಗಳೆಲ್ಲ ಅಂತಕನ ಪಾಲಿಗೆ ಕೇವಲ ಹಾಸ್ಯರಸ. ನಮ್ಮ ವ್ಯಾಪಾರ, ವ್ಯವಹಾರಗಳೆಲ್ಲ ವಿಡಂಬನಕ್ಕೆ, ಹಾಸ್ಯಕ್ಕೆ ವಸ್ತುವಲ್ಲವೆ?

ಕನಕದಾಸರ ಈ ಎಲ್ಲ ಸ್ವೋಪಜ್ಞ ಸಾಧನೆ, ಸಿದ್ದಿಗಳನ್ನು ಪರಿಭಾವಿಸಿದಾಗ, ಕನ್ನಡ ಸಾಹಿತ್ಯದಲ್ಲಿ ಅವರ ಸ್ಥಾನ ಹತ್ತರೊಡನೆ ಹನ್ನೊಂದನೆಯದಲ್ಲ ಎಂಬುದು ಗೊತ್ತಾಗುತ್ತದೆ.