ಕಲೆಯ ಮೂಲದ್ರವ್ಯ ಬದುಕು : ಅದು ಭೂತದ್ದಾಗಬಹುದು, ವರ್ತಮಾನದ್ದಾಗಬಹುದು ಅಥವಾ ಭವಿಷ್ಯದ್ದಾಗಬಹುದು; ಅಂತರಂಗದ್ದಾಗಬಹುದು ಇಲ್ಲವೆ ಬಹಿರಂಗದ್ದಾಗಬಹುದು. ಅದರಲ್ಲಿ ಚಿರಂತನ ಮೌಲ್ಯಗಳನ್ನು ಕಲಾವಿದ ಅಭಿವ್ಯಕ್ತಿಗೊಳಿಸಿದ್ದರೆ ಸಾಕು. ಆದರೆ ಕಲೆ ಯಾವಾಗಲೂ ನೇರವಾಗಿ ಬದುಕನ್ನೇ ಅವಲಂಬಿಸಿ ರೂಪುಗೊಳ್ಳಬೇಕೆಂಬ ನಿಯಮವೇನೂ ಇಲ್ಲ; ಎಷ್ಟೋ ವೇಳೆ ಒಂದು ಕಲಾಪ್ರಕಾರ ಮತ್ತೊಂದು ಕಲಾಪ್ರಕಾರದಿಂದ ಸ್ಫೂರ್ತಿಗೊಂಡು ಮೈದಾಳಬಹುದು. ಎಂದರೆ ಕಲೆಯನ್ನೆ ವಸ್ತುವನ್ನಾಗಿ ಮಾಡಿಕೊಂಡ ಕಲೆಗೆ ಅವಕಾಶವುಂಟು ಎಂದಂತಾಯಿತು. ಕಾವ್ಯ ಪ್ರಣೀತವಾದ ಪ್ರಸಂಗ ಸನ್ನಿವೇಶಾದಿಗಳನ್ನು ಶಿಲ್ಪದಲ್ಲಿ ಕಡೆಯಬಹುದು. ಚಿತ್ರದಲ್ಲಿ ಅರಳಿಸಬಹುದು, ಸಂಗೀತದಲ್ಲಿ ಮೂಡಿಸಬಹುದು, ನಾಟಕಕ್ಕೆ ಅಳವಡಿಸಬಹುದು. ಅಂತೆಯೆ ಚಿತ್ರ, ಶಿಲ್ಪ, ಸಂಗೀತಾದಿಗಳ ಭಾವಾವಿಷ್ಕಾರವನ್ನು ಕಾವ್ಯದಲ್ಲಿ ಸೆರೆ ಹಿಡಿಯಬಹುದು. ವಿವಿಧ ಲಲಿತಕಲೆಗಳ ಈ ಪರಸ್ಪರ ಆಲಂಬನ, ಪ್ರೇರಣೆ, ಪ್ರಚೋದನೆಗಳಿಗೆ ನಿದರ್ಶನಗಳನ್ನು ಎಲ್ಲ ದೇಶಗಳಲ್ಲೂ ಕಾಣುತ್ತೇವೆ.

ಕನ್ನಡದಲ್ಲಿ ಇಂಥ ನಿದರ್ಶನಗಳು ವಿರಳವೆಂದೆ ಹೇಳಬೇಕು. ಶಿಲ್ಪ, ನೃತ್ಯ, ಸಂಗೀತ ಕಲೆಗಳನ್ನು ಆಧರಿಸಿದ ಕವಿತೆ ನಮ್ಮಲ್ಲಿ ತಕ್ಕಮಟ್ಟಿಗೆ ಹುಟ್ಟಿದೆಯಾದರೂ ಉಳಿದ ಬಗೆಯ ಕಲಾಸಂಬಂಧಗಳು ಹೆಚ್ಚಿನ ಪರಿಮಾಣದಲ್ಲಿ ಗೋಚರಿಸುವುದಿಲ್ಲ. ಕಾವ್ಯವನ್ನು ಇತರ ಕಲೆಗಳಿಗೆ ವಸ್ತುವನ್ನಾಗಿ ಮಾಡಿಕೊಳ್ಳುವ ಪ್ರಯತ್ನಗಳಂತೂ ನಡೆದೇ ಇಲ್ಲ. ಪ್ರಾಚೀನ ಕಾಲದಲ್ಲಾಗಲಿ ಆಧುನಿಕ ಕಾಲದಲ್ಲಾಗಲಿ ಇದೇ ಪರಿಸ್ಥಿತಿ ಎನ್ನಬಹುದು.

ಪ್ರಾಯಃ ಶಿಲ್ಪವನ್ನು ಕುರಿತು ಕನ್ನಡದಲ್ಲಿ ರಚಿತವಾಗಿರುವಷ್ಟು ಕಾವ್ಯ ಮತ್ತಾವ ಕಲಾಪ್ರಕಾರವನ್ನೂ ಕುರಿತು ಆಗಿಲ್ಲ. ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯನ್ನು ಕುರಿತೆ ಎಷ್ಟೋ ಮಂದಿ ಕವಿಗಳು ಭಾವ ತನ್ಮಯತೆಯಿಂದ, ವಿಸ್ಮಯದಿಂದ ಹಾಡಿದ್ದಾರೆ. ಈ ಮಾಲಿಕೆಯಲ್ಲಿ ಬೊಪ್ಪಣ ರಚಿತ ‘ಗೊಮ್ಮಟಸ್ತುತಿ’ಯೊಂದು ಭಕ್ತಿಪ್ರಪೂರ್ಣವಾದ ಮನೋಹರ ಭಾವಗೀತವಾಗಿದೆ; ಪ್ರಾಚೀನ ಗೊಮ್ಮಟಗೀತಗಳಲ್ಲಿ ಅದು ಅಗ್ರಗಣ್ಯವಾದುದು -ಕಾಲದ ದೃಷ್ಟಿಯಿಂದಲೂ ಹೌದು, ಕಲ್ಪನೆಯ ದೃಷ್ಟಿಯಿಂದಲೂ ಹೌದು.

ಬೊಪ್ಪಣನ ‘ಗೊಮ್ಮಟಸ್ತುತಿ’ಯಲ್ಲಿ ಬರುವ ಒಂದು ಪದ್ಯವನ್ನಷ್ಟೆ ಇಲ್ಲಿ ಅವಲೋಕಿಸಬೇಕಾಗಿದೆ. ಇದೋ:

ಅತಿ ತುಂಗಾಕೃತಿಯಾದೊಡಾಗದದಱಳ್ ಸೌಂದರ್ಯಮೌನ್ನತ್ಯಮುಂ
ನುತ ಸೌಂದರ್ಯಮುಮಾಗೆ ಮತ್ತತಿಶಯಂ ತಾನಾಗದೌನ್ನತ್ಯಮುಂ
ನುತ ಸೌಂದರ್ಯಮುಮೂರ್ಜಿತಾತಿಶಯಮುಂ ತನ್ನಲ್ಲಿ ನಿಂದಿರ್ದುವೇಂ
ಕ್ಷಿತಿ ಸಂಪೂಜ್ಯಮೊ ಗೊಮ್ಮಟೇಶ್ವರ ಜಿನಶ್ರೀರೂಪಮಾತ್ಮೋಪಮಂ

ಈ ಪದ್ಯ ಸಾಕಷ್ಟು ಪ್ರಸಿದ್ಧವಾದುದೇ. ಇದರಲ್ಲಿ ವ್ಯಕ್ತವಾಗತಕ್ಕದ್ದು ಭಕ್ತಿಯ ಆರ್ದ್ರತೆ, ಆವೇಶ ಮಾತ್ರವಲ್ಲ; ಗೊಮ್ಮಟ ವಿಗ್ರಹವನ್ನು ಕುರಿತ ಹೃದ್ಯವಾದ ವಿಮರ್ಶೆ ಕೂಟ. ಇದರಲ್ಲಿ ಕವಿ ಬಾಹುಬಲಿಯ ಭವ್ಯ ಲೋಕೋತ್ತರ ವ್ಯಕ್ತಿತ್ವವನ್ನು ಬಹಳ ಸೊಗಸಾಗಿ ಗ್ರಹಿಸಿದ್ದಾನೆ; ಪರಮ ಕಲೆಯ ಸ್ವರೂಪವೇನೆಂಬುದನ್ನು ವಿಶದಪಡಿಸಿದ್ದಾನೆ. ಎಂತಲೇ ಈ ಪದ್ಯದ ಒಂದೊಂದು ಮಾತೂ ಅರ್ಥವತ್ತಾಗಿದೆ, ದ್ವನಿಯುಕ್ತವಾಗಿದೆ.

ಬೊಪ್ಪಣಕವಿ ಪ್ರಕೃತ ಕಲೆಯ ಮೂರು ಸ್ತರಗಳನ್ನು ಹೇಳುತ್ತಿದ್ದಾನೆ : ಕಲೆ, ಸುಂದರಕಲೆ ಹಾಗೂ ದಿವ್ಯಕಲೆ. (ಕಲೆಯಲ್ಲದ ಅಥವಾ ಈಷತ್ ಕಲಾಸ್ಪರ್ಶವುಳ್ಳ ಅವಸ್ಥೆ, ಕಲಾವಸ್ಥೆ ಮತ್ತು ದಿವ್ಯಕಲಾವಸ್ಥೆ ಎಂದು ಬೇಕಾದರೂ ಹೇಳಬಹುದು). ಗೊಮ್ಮಟ ಶಿಲ್ಪದಲ್ಲಿ ಗೋಚರವಾಗತಕ್ಕದ್ದು ಉಳಿದೆರಡನ್ನೂ ಒಳಗೊಳ್ಳುವ ಮೂರನೆಯ ಅತ್ಯುನ್ನತ ಕಲಾಪ್ರಕಾರ; ಅದಕ್ಕೆ ಪ್ರೇರಣೆ ಮೂಲತಃ ಬಾಹುಬಲಿಯಲ್ಲಿದ್ದ ದಿವ್ಯ, ಜಗತ್ಸೇವ್ಯ ವ್ಯಕ್ತಿತ್ವ. ಅದನ್ನು ಶಿಲ್ಪಿ ಲೋಕಾಶ್ಚರ್ಯಕರವಾಗಿ ಕಂಡರಿಸಿದ್ದಾನೆ; ಕವಿ ಸರಿಯಾಗಿ ಗುರುತಿಸಿದ್ದಾನೆ.

ಗೊಮ್ಮಟೇಶ್ವರ ವಿಗ್ರಹವನ್ನು ನೋಡಿದ ಕೂಡಲೆ ಮೊದಲು ಮನ ಸೆಳೆಯತಕ್ಕದ್ದು ಅದರ ಔನ್ನತ್ಯ. ಆದರೆ ಔನ್ನತ್ಯವೊಂದರಿಂದಲೆ ಮಹಾಶಿಲ್ಪ ಸಿದ್ದಿಸುವುದಿಲ್ಲ. ‘‘ಅತಿ ತುಂಗಾಕೃತಿಯಾದೊಡಾಗದದಱೊಳ್ ಸೌಂದರ್ಯ’’ ಎನ್ನುತ್ತಾನೆ ಬೊಪ್ಪಣ. ದೈತ್ಯಶಿಲೆಯೊಂದರಿಂದ ಐವತ್ತೇಳು ಆಡಿ ಎತ್ತರದ ಬೃಹತ್ ಶಿಲ್ಪವೊಂದನ್ನು ಮೂಡಿಸುವುದು ಸಾಮಾನ್ಯ ಸಾಧನೆಯೇನಲ್ಲ; ಅದರಲ್ಲಿ ಸೌಂದರ್ಯವಿಲ್ಲದಿದ್ದರೂ ತಕ್ಕಮಟ್ಟಿಗೆ ಕಲೆ ಎನ್ನಿಸಿಕೊಳ್ಳಬಹುದಿತ್ತು. ಅಸ್ಪಷ್ಟವಾದ ಆಕಾರದಿಂದ ಸ್ಪಷ್ಟವಾದ ಪ್ರಕಾರವೊಂದನ್ನು ಹೊರಗೆಳೆದರೆ ಸಾಕು, ಅದಕ್ಕೆ ಆಂಶಿಕವಾಗಿಯಾದರೂ ಕಲಾಪದವಿ ಪ್ರಾಪ್ತವಾಗುತ್ತದೆ ತಾನೆ. ಆದರೆ ಏನು ಪ್ರಯೋಜನ? ಅದು ಪ್ರಾಕೃತಿಕವಾದ, ರೂಕ್ಷವಾದ ರಾಕ್ಷಸಶಿಲ್ಪವಾಗಿ ಬೆರಗುಗೊಳಿಸಬಹುದಿತ್ತಷ್ಟೆ; ಹೃತ್ ಸ್ಪರ್ಶಿಯಾಗುತ್ತಿರಲಿಲ್ಲ. ಆದರೂ ಭವ್ಯತೆಯ ಮೂಲಾಂಶ ಮೈದೋರುತ್ತಿತ್ತು.

ಶಿಲ್ಪ ನಿಜವಾಗಿಯೂ ಹೃತ್ ಸ್ಪರ್ಶಿಯಾಗಬೇಕಾದರೆ, ಭವ್ಯತಾಪರಿಪೂರ್ಣವಾಗ ಬೇಕಾದರೆ ಉತ್ತುಂಗತೆಯೊಡನೆ ಸೌಂದರ್ಯ ಮೇಳವಿಸಬೇಕು. ಸೌಂದರ್ಯ ಕಲೆಯ ಅನಿವಾರ್ಯಾಂಶ. ಐವತ್ತೇಳು ಅಡಿಗಳಷ್ಟು ಉತ್ತುಂಗವಾದ ಕೃತಿಗೆ ಪ್ರಮಾಣಬದ್ಧತೆ ಯನ್ನಿತ್ತು, ಸರ್ವಾವಯವಗಳಲ್ಲೂ ಸೌಂದರ್ಯವನ್ನು ತುಂಬುವ ಕೆಲಸ ಅತ್ಯಂತ ದುಷ್ಕರವಾದುದು; ಮಹಾ ಪ್ರತಿಭಾಶಾಲಿಗೆ ಮಾತ್ರ ಶಕ್ಯವಾದುದು. ಗೊಮ್ಮಟನನ್ನು ನಿರ್ಮಿಸಿದ್ದ ಶಿಲ್ಪಿ ಅಂಥ ಪ್ರತಿಭಾಶಾಲಿ ಕಲಾವಿದ. ಅವನು ಅತಿತುಂಗಾಕೃತಿಯನ್ನು ಸಮೆದು, ಅದಕ್ಕೆ ಸೌಂದರ್ಯವನ್ನು ದಾನ ಮಾಡಿದ್ದಾನೆ. ತತ್ಪರಿಣಾಮವಾಗಿ, ಔನ್ನತ್ಯ ಸೌಂದರ್ಯಗಳೆರಡೂ ಗೊಮ್ಮಟಮೂರ್ತಿಯಲ್ಲಿ ಪರಸ್ಪರ ಪೂರಕವಾಗಿ ನಿಂತು ಅದನ್ನೊಂದು ವಿಸ್ಮಯಕಾರಿಯಾದ ಭವ್ಯ ಬಂಧುರ ಶಿಲ್ಪ ಕೃತಿಯನ್ನಾಗಿಸಿವೆ. ಇಷ್ಟಾದರೆ ಒಂದು ಮಿತಿಯಲ್ಲಿ ದಿಟವಾದ ಕಲೆ ಸಿದ್ದಿಸಿತೆಂದು ಹೇಳಬಹುದು.

ಆದರೆ ಇದೇ ಕಲೆಯ ವಿರಾಮಸ್ಥಾನವಲ್ಲ, ಚರಮಸಿದ್ದಿಯಲ್ಲ. ಅದರಲ್ಲೂ ಭಾರತೀಯ ಜನಜೀವನ ಅಥವಾ ಕಲೆ ಔನ್ನತ್ಯ ಸೌಂದರ್ಯಗಳ ಕಲ್ಪನೆಯಲ್ಲೆ ಪರ್ಯ ವಸಾನವಾಗುವುದಿಲ್ಲ; ಈ ಮೌಲ್ಯಗಳಿಗೆ ಮಕುಟ ಮಣಿಯಂತಿರುವ ಶಿವದಲ್ಲಿ ಅದು ತನ್ನ ಸಾರ್ಥಕ್ಯವನ್ನು ಕಂಡುಕೊಳ್ಳುತ್ತದೆ. ಶಿವಾಂಶವಿಹೀನವಾದ ಕಲೆ ಎಷ್ಟೇ ಸ್ವಾದುವಾಗಿದ್ದರೂ ನಿಜವಾದ ಭಾರತೀಯ ಮನೋಧರ್ಮಕ್ಕೆ ಅಗ್ರಾಹ್ಯವಾಗುತ್ತದೆ. ಆದರೆ ಔನ್ನತ್ಯ ಸೌಂದರ್ಯಗಳೊಡನೆ ಶಿವವನ್ನು ಸಮರಸಗೊಳಿಸುವುದು ಸುಲಭವಲ್ಲ; ಏಕೆಂದರೆ ಎಷ್ಟೋ ವೇಳೆ ಸೌಂದರ್ಯ ಶಿವಗಳು ಪರಸ್ಪರ ವಿರುದ್ಧವಾಗಿರುವುದು ಸಂಭವನೀಯ. ಆದ್ದರಿಂದಲೆ ಬೊಪ್ಪಣ ‘‘ಔನ್ನತ್ಯಮುಂ ನುತ ಸೌಂದರ್ಯಮುಮಾಗೆ ಮತ್ತತಿಶಯಂ ತಾನಾಗದು’’ ಎಂದಿದ್ದಾನೆ. ಆದರೆ ಗೊಮ್ಮಟೇಶಮೂರ್ತಿಯಲ್ಲಿ ಈ ‘ಅತಿಶಯ’ ಗುಣ ಔನ್ನತ್ಯ ಸೌಂದರ್ಯಗಳೊಡನೆ ಅಭಿನ್ನವಾಗಿ ಮಿಳಿತವಾಗಿದೆ. ಇಲ್ಲಿ ‘ಅತಿಶಯ’ವೆಂದರೆ ಶಿವಾಂಶವಲ್ಲದೆ ಮತ್ತೇನಲ್ಲ; ಅದು ಲೋಕಾತಿಕ್ರಾಂತವಾದ ಒಂದು ಗುಣ, ಉತ್ತುಂಗತೆ ರಮ್ಯತೆಗಳನ್ನು ಮೀರಿದ್ದು. ಅದರಿಂದಲೇ ಕಲೆಗೆ ದಿವ್ಯತೆ, ಗೌರವ.

ಗೊಮ್ಮಟೇಶ್ವರನ ಮೂರ್ತಿ ಅತ್ಯಂತ ಮೋಹಕವಾದುದು; ಅಲ್ಲದೆ ಸಂಪೂರ್ಣ ನಗ್ನವಾದುದು. ಆದರೆ ಅದು ಚಿತ್ತವನ್ನು ಕ್ಷೋಭೆಗೊಳಿಸುವ ರಾಗೋದ್ದೀಪಕ ಸೌಂದರ್ಯವಲ್ಲ; ಇಂದ್ರಿಯಗಳನ್ನು ಪ್ರಶಮನಾವಸ್ಥೆಗೆ ತರುವ ಪ್ರಸನ್ನ ನಿರ್ಮಲ ಸೌಂದರ್ಯ. ಆ ಗೊಮ್ಮಟನ ದಿಗಂಬರಯೋಗ, ದಿವ್ಯ ಶಿಶುಮುಗ್ಧತೆ ನಿಜಕ್ಕೂ ‘ಅತಿಶಯ’. ಬೇರಾವುದಾದರೂ ನಗ್ನಶಿಲ್ಪವನ್ನು ನೋಡಿದಾಗ ಉಂಟಾಗುವ ಸಹಜ ಭಾವನೆಗಳು ಗೊಮ್ಮಟನ ಮುಂದೆ ನಿಂತಾಗ ಉಡುಗಿ ಹೋಗುತ್ತವೆ; ಅಭೂತಪೂರ್ವವಾದ, ಪ್ರಾಯೇಣ ಜಗತ್ತಿನ ಮತ್ತಾವುದೇ ಕಲಾಕೃತಿಯಲ್ಲಿ ದುರ್ಲಭವಾದ ಅನುಭವವೊಂದು ಹೃದಯಕ್ಕಾಗುತ್ತದೆ. ಇದಕ್ಕೆ ಕಾರಣ ವಿಗ್ರಹದಲ್ಲಿ ಸಮನ್ವಯಗೊಂಡಿರುವ ಔನ್ನತ್ಯ, ಸೌಂದರ್ಯ ಮತ್ತು ಮುಖ್ಯವಾಗಿ ‘ಅತಿಶಯತೆ’.

ಮೂರ್ತಿಯ ಈ ಮೂರೂ ಗುಣಗಳು ಮೂಲಪುರುಷನಾದ ಮಹಾತ್ಮ ಬಾಹುಬಲಿ ಯಲ್ಲಿದ್ದುವು. ಎಂಥವನು ಆತ? ‘‘ಜಿನಶ್ರೀರೂಪಂ’’ ಎಂದು ಬೊಪ್ಪಣನ ನುಡಿ ವಿವರಿಸುತ್ತದೆ. ಬಾಹುಬಲಿ ಜಿನ, ಇಂದ್ರಿಯಗಳನ್ನು ಗೆದ್ದವನು; ಅವನ ವ್ಯಕ್ತಿತ್ವದಲ್ಲಿ ‘ಅತಿಶಯ’ ಮನೆ ಮಾಡಿತ್ತು. ಅವನು ಸುಂದರಾಂಗನೂ ಹೌದು; ತನ್ನ ಕಾಲದ ಕಾಮದೇವನಾಗಿದ್ದನೆಂದು ಕೇಳಿದ್ದೇವೆ. ‘ಶ್ರೀರೂಪ’ ಅವನದು. ಅದುದರಿಂದ ಅವನ ವಿಗ್ರಹದಲ್ಲಿ ಶಿಲ್ಪಿ ಮನೋಜ್ಞ ಸೌಂದರ್ಯವನ್ನೂ ಅದಕ್ಕೆ ಕಳಸವಿಡುವಂತೆ ಜಿನತೇಜವನ್ನೂ ಅದ್ಭುತವಾಗಿ ಹೊಮ್ಮಿಸಿದ್ದಾನೆ. ಈ ಗುಣಗಳಲ್ಲಿ ಬಾಹುಬಲಿ ಎಲ್ಲರಿಗಿಂತಲೂ ಮೇಲಾದವನಾದ್ದರಿಂದ ಅವನು ಮಹೋತ್ತುಂಗನಾಗಿ ಚಿತ್ರಿತನಾಗಿರುವುದೂ ಸಹಜವೇ.

ಗೊಮ್ಮಟೇಶ್ವರ ಏತಕ್ಕೆ ‘ಕ್ಷಿತಿಸಂಪೂಜ್ಯ’ನೆಂಬುದು ನಮಗೀಗ ಅರ್ಥವಾಗುತ್ತದೆ. ಕೇವಲ ಔನ್ನತ್ಯವಿದ್ದರೆ ಅಥವಾ ಕೇವಲ ಸೌಂದರ್ಯವಿದ್ದರೆ ಅವನಿಗೆ ಪೂಜ್ಯತೆ ಒದಗುತ್ತಿರಲಿಲ್ಲ; ಅಥವಾ ಕೇವಲ ಶಿವಾಂಶವಷ್ಟೆ ಇದ್ದು ಒಂದು ಸಾಮಾನ್ಯ ದೇವತಾ ವಿಗ್ರಹವಾಗಿದ್ದರೆ ಈ ಸಮ್ಮೋಹನಶಕ್ತಿ ಲೋಪವಾಗುತ್ತಿತ್ತು. ಈ ಮೂರು ಗುಣಗಳೂ ಮುಪ್ಪುರಿಗೊಂಡಿರುವುದರಿಂದಲೆ ಗೊಮ್ಮಟ ಲೋಕಸಂಪೂಜ್ಯನಾಗಿದ್ದಾನೆ, ಸಕಲಜನ ಹೃದಯಾಪಹಾರಿಯಾಗಿದ್ದಾನೆ.

ಇನ್ನು ಬೊಪ್ಪಣನ ಸ್ತುತಿಯಲ್ಲಿರುವ ‘ಅತ್ಮೋಪಮಂ’ ಎಂಬ ವಿಶೇಷಣವೂ ವಿಚಾರಾರ್ಹವಾಗಿದೆ. ‘ಆತ್ಮೋಪಮಂ’ ಎಂದರೆ ತನಗೆ ತಾನೆ ಸಮಾನವಾದ, ಅನುಪಮನಾದ ಎಂಬುದು ವಾಚ್ಯಾರ್ಥ. ಆದರೆ ಇಲ್ಲಿ ಧ್ವನಿಯನ್ನೂ ಅರಸಬಹುದೆಂದು ತೋರುತ್ತದೆ. ಗೊಮ್ಮಟನ ಮೂರ್ತಿ ಆತ್ಮಸದೃಶವಾದುದೆಂದನಲ್ಲವೆ ಕವಿ? ಹೌದು, ಅದು ಆತ್ಮತತ್ತ್ವ ಜಿನತತ್ತ್ವಗಳಿಗೆ ಸಮೆದ ಒಂದು ಮಹೋನ್ನತ ಪ್ರತಿಮೆಯೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಪ್ರತಿಕೃತಿಯಲ್ಲ. ಹಾಗೆ ಪ್ರತಿಕೃತಿಯನ್ನು ನಿರ್ಮಿಸುವ ಆಲೋಚನೆ ಶಿಲ್ಪಿಗಿದ್ದರೆ ಕೇವಲ ಐದು ಅಥವಾ ಆರು ಅಡಿಗಳ ಮೂರ್ತಿ ಸಾಕಾಗುತ್ತಿತ್ತು. ಆದರೆ ದೇಹ ಇಂದ್ರಿಯಗಳಿಗೆ ಅತೀತನಾಗಿ, ಲೋಕವನ್ನು ಮೆಟ್ಟಿ ನಿಲ್ಲುವ ತ್ರಿವಿಕ್ರಮಸತ್ತ್ವವುಳ್ಳ ಆತ್ಮನನ್ನು ಇಷ್ಟೆ ಎತ್ತರ ಎಂದು ಬಣ್ಣಿಸಬಹುದೆ? ಕಂಡರಿಸಬಹುದೆ? ಸಲ್ಲದು. ಆದರೆ ಶಿಲ್ಪಿ ಮಾನವ ಸಾಮರ್ಥ್ಯಕ್ಕೆ ಮತ್ತು ಆರಿಸಿಕೊಂಡ ಮಾಧ್ಯಮಕ್ಕೆ ಸಾಧ್ಯವಾಗುವನಿತು ಎತ್ತರವಾಗಿ ಈ ತತ್ತ್ವವನ್ನು, ಶಕ್ತಿಯನ್ನು ಕಂಡರಿಸಲು ಪ್ರಯತ್ನಿಸಿದ್ದಾನೆ. ಇದಕ್ಕಿಂತಲೂ ಬೃಹತ್ತಾದ ಶಿಲೆ ಸಿಕ್ಕಿದ್ದರೆ ಮತ್ತೂ ಉತ್ತುಂಗವಾದ ಮೂರ್ತಿಯನ್ನು ಕಡೆಯುತ್ತಿದ್ದನೇನೊ. ಸದ್ಯಕ್ಕೆ ಐವತ್ತೇಳು ಅಡಿಯ ಬೃಹದ್ವಿಗ್ರಹವೇ ಸಾಕು, ಹುಲುಮಾನವರ ಮಾನವನ್ನು ಸ್ತಂಭಿಸಿ ನಿಬ್ಬೆರಗುಗೊಳಿಸುವುದಕ್ಕೆ.

ಗೊಮ್ಮಟ ಶಿಲ್ಪ ನಿರುಪಾಧಿಕವಾದ, ನಿರಾವರಣವಾದ ಆತ್ಮದ ಪ್ರತೀಕವೇ ಸರಿ. ಬಾಹುಬಲಿ ಎಂಬೊಬ್ಬ ವ್ಯಕ್ತಿ ವಾಸ್ತವವಾಗಿ ಇದ್ದನೊ ಇಲ್ಲವೊ ನಮಗೆ ತಿಳಿಯದು; ಆದರೆ ಅವನ ಕಥೆಯಲ್ಲಿ ಪ್ರತಿಮಿತವಾಗಿರುವ ಜಿನತತ್ತ್ವ ಆತ್ಮತತ್ತ್ವಗಳು ಆಚಂದ್ರಾರ್ಕ ವೆಂಬಂತೆ ಇಂದಿಗೂ ಗೊಮ್ಮಟ ರೂಪದಲ್ಲಿ ಬೆಳಗೊಳದ ಬೆಟ್ಟದ ಮೇಲೆ ನೆಲಸಿವೆ. ‘‘ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ, ನ ಚೈನಂ ಕ್ಲೇದಯಂತ್ಯಾಪೋ, ನ ಶೋಷಯತಿ ಮಾರುತಃ’’ ಎಂದು ಗೀತೆಯಲ್ಲಿ ಉಕ್ತವಾಗಿರುವ ಆತ್ಮನ ಲಕ್ಷಣಗಳನ್ನು ಇಲ್ಲಿ ಸ್ಮರಿಸಬಹುದು. ಅಂತೆಯೆ ಗೊಮ್ಮಟ ವಿಗ್ರಹ ಶೀತೋಷ್ಣಬಾಧೆಗೆ ಅತೀತವಾಗಿ, ಉಪಸರ್ಗ ದೂರವಾಗಿ, ದರಹಾಸಾಮೃತವನ್ನು ವರ್ಷಿಸುತ್ತ, ಮಂಗಳ ಸಂದೇಶವನ್ನು ಮೌನವಾಗಿ ಮೊಳಗಿಸುತ್ತ ನಭಶ್ಚುಂಬಿಯಾಗಿ ನಿಂತಿದೆ; ಎಂದೆಂದಿಗೂ ನಿಂತಿರುತ್ತದೆ.

ಆ ಮಹಾದ್ಭುತವನ್ನು ಸೃಷ್ಟಿಸಿದ ಶಿಲ್ಪಿವರ್ಯ ನಮ್ಮ ಪಾಲಿಗೆ ಅಜ್ಞಾತನಾಗಿದ್ದಾನೆ; ಆದರೆ ಅವನ ಪ್ರತಿಭೆಯನ್ನು ಬೊಪ್ಪಣ ಸುಂದರವಾಗಿ ಪರಿಚಯ ಮಾಡಿಕೊಟ್ಟಿದ್ದಾನೆ. ಎಂತಲೆ ಅವನ ಗೊಮ್ಮಟ ಸ್ತೋತ್ರ ಸಾರ್ಥಕವಾಗಿದೆ. ನಾವೂ ಅವನೊಡನೆ ಕೊರಳುಗೂಡಿಸಬಹುದು: ‘‘ಏಂ ಕ್ಷಿತಿ ಸಂಪೂಜ್ಯಮೊ ಗೊಮ್ಮಟೇಶ್ವರ ಜನಶ್ರೀರೂಪ ಮಾತ್ಮೋಪಮಂ!’’

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)