ರತ್ನಾಕರವರ್ಣಿಯ ‘ಭರತೇಶ ವೈಭವ’ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಕೃತಿ. ಯೋಗಭೋಗ ಸಮನ್ವಯದ ಚಿತ್ರಣ ಅದರ ಅಗ್ಗಳಿಕೆಯೆನಿಸಿದೆ. (ಅದರಲ್ಲಿ ಕವಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾನೆ ಎಂಬ ಪ್ರಶ್ನೆ ಪ್ರತ್ಯೇಕ). ‘‘ನಿರಂಕುಶಾಃ ಕವಯಃ’’ (ಕವಿಗಳು ನಿರಂಕುಶರು), ‘‘ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ, ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ’’ (ಅಪಾರವಾದ ಕಾವ್ಯಜಗತ್ತಿನಲ್ಲಿ ಕವಿಯೇ ಬ್ರಹ್ಮ, ತನಗಿಷ್ಟ ಬಂದಂತೆ ಈ ವಿಶ್ವವನ್ನು ಅವನು ಪರಿವರ್ತಿಸುತ್ತಾನೆ) ಎಂಬ ಉಕ್ತಿಗಳಿಗನುಗುಣವಾಗಿ ರತ್ನಾಕರನಂತೆ ಸ್ವತಂತ್ರ ಮನೋಧರ್ಮವನ್ನು ಮೆರೆದ ಕವಿಗಳು ಬಹುಮಂದಿಯಿಲ್ಲ. ಮೂಲವಸ್ತುವಿನಲ್ಲಿ ಅವನು ಹೇಗೆ ಬದಲಾವಣೆಗಳನ್ನು ಮಾಡಿಕೊಳ್ಳಬಲ್ಲ ಎಂಬುದಕ್ಕೆ ಭರತ, ಬಾಹುಬಲಿ ಪ್ರಸಂಗವೊಂದು ಒಳ್ಳೆಯ ನಿದರ್ಶನ. ಆದರೆ ಔಚಿತ್ಯದ ಪ್ರಶ್ನೆಯೂ ಅನಿವಾರ್ಯ.

ತನ್ನ ಕೃತಿಗೆ ಭರತನನ್ನು ನಾಯಕನನ್ನಾಗಿ ಮಾಡಿಕೊಂಡಿದ್ದಾನೆ, ರತ್ನಾಕರ. ಈ ಅಂಶವೇ ಕಾವ್ಯದ ಎಲ್ಲ ಅಂಗಗಳನ್ನೂ ನಿಯಂತ್ರಿಸುತ್ತದೆ. ಭರತನ ಭೋಗಜೀವನಕ್ಕೆ ಪ್ರಾಧಾನ್ಯವಿತ್ತು, ಶೃಂಗಾರವನ್ನು ತೆರೆ ತೆರೆಯಾಗಿ ತರುವ ರತ್ನಾಕರ, ಬಾಹುಬಲಿಯನ್ನು ಅಕ್ಷರಶಃ (ವೈದಿಕ ಪುರಾಣದ) ಕಾಮದೇವನನ್ನಾಗಿಸಿ, ಅವನಿಗೆ ರತಿಯನ್ನು ಮಡದಿಯನ್ನಾಗಿಸಿದ್ದಾನೆ. ಇದು ಬಾಹುಬಲಿಯ ಶಿಲ್ಪಕ್ಕೆ ಬಿದ್ದ ಮೊದಲೊ(ಉಳಿ) ಪೆಟ್ಟು!

ರತ್ನಾಕರ ಬಾಹುಬಲಿಯ ಪಾತ್ರವನ್ನು ಹೇಗೆ ನಿರ್ವಹಿಸಿದ್ದಾನೆಂದು ನೋಡುವಲ್ಲಿ, ಭರತನ ಪಾತ್ರವನ್ನು ನಾವು ನೋಡಬೇಕು ಮತ್ತು ಜಿನಸೇನಾಚಾರ್ಯರ ಪೂರ್ವಪುರಾಣದಲ್ಲಿ (ಹಾಗೂ ಪಂಪನ ‘ಆದಿಪುರಾಣ’ದಲ್ಲಿ) ಬರುವ ಭರತ ಬಾಹುಬಲಿ ವ್ಯಾಯೋಗವನ್ನು ತೌಲನಿಕವಾಗಿ ಗಮನಿಸಲೇಬೇಕು.

ಭರತನ ಪಾತ್ರವನ್ನು ಉದಾತ್ತೀಕರಿಸುವ ಭರದಲ್ಲಿ ಬಾಹುಬಲಿಯ ಪಾತ್ರವನ್ನು ಕೆಳಗಿಳಿಸಿದ್ದಾನೆ ರತ್ನಾಕರ ಎನ್ನದೆ ವಿಧಿಯಿಲ್ಲ.[1] ಅವನು ಇನ್ನಷ್ಟು ಔಚಿತ್ಯಪ್ರಜ್ಞೆಯನ್ನು ತೋರಿ, ತಕ್ಕಮಟ್ಟಿಗಾದರೂ ಸಮತೋಲನವನ್ನು ಸಾಧಿಸಬಹುದಿತ್ತು.

‘ಭರತೇಶ ವೈಭವ’ದಲ್ಲಿ ಭರತ, ಬಾಹುಬಲಿಗಳ ಯುದ್ಧವೇ ನಡೆಯುವುದಿಲ್ಲ.[2] ‘‘ಅಹಿಂಸಾ ಪರಮೋ ಧರ್ಮಃ’’ ಎಂಬ ಜೈನಧರ್ಮದ ಘೋಷಣೆಗೆ ಇದು ಅನುರೂಪವಾಗಿದೆಯೆಂದು ಭಾವಿಸಬಹುದು. ಆದರೂ ಇಲ್ಲಿನ ಚಿತ್ರ ಮೂಲದಲ್ಲಿರುವಷ್ಟು ಸಂಕೀರ್ಣವಾಗಿಲ್ಲ. ಸರಳವಾಗಿದೆ ಎಂದೊಪ್ಪಬೇಕು. ರತ್ನಾಕರನ ಮಾರ್ಪಾಟುಗಳು ಅವನ ಕಾವ್ರೋಅಗತ್ಯವಿರಬಹುದು, ‘ಧರ್ಮ’ಕ್ಕೆ ಉಚಿತವಾಗಿರಬಹುದು, ಆದರೆ ‘ಕಾವ್ಯಧರ್ಮ’ದ ದೃಷ್ಟಿಯಿಂದ ಪೂರ್ತಿ ಸಮರ್ಥನೀಯವಲ್ಲ. ಬದುಕಿನ ಸಮಗ್ರತೆಗೆ, ಮಾನವ ಮನಸ್ಸಿನ ಜಟಿಲತೆಗೆ ಅವನ ಚಿತ್ರಣ ಎರವಾಗಿದೆ.

ರತ್ನಾಕರನ ಪ್ರಕಾರ ಭರತ ಬಾಹುಬಲಿಗೆ ಸೋಲುವುದಿಲ್ಲ; ಸೋಲುವುದು ಸಾಧ್ಯವಿಲ್ಲ. ‘‘ಚಕ್ರಿಯ ಗೆಲಸಮರ್ಥನೆ ಪುಷ್ಪಬಾಣ?’’,‘‘ಹಗಲಂತೆ ಬೆಳದಿಂಗಳಿಹುದೆನೆ ಸೂರ್ಯರಶ್ಮಿಗಳ ನೂಂಕುವ ಶಕ್ತಿಯುಂಟೆ?’’ ಎಂದು ಕವಿ ಕೇಳುತ್ತಾನೆ. ಭರತ ಪ್ರಯೋಗಿಸಿದ ಚಕ್ರ ಬಾಹುಬಲಿಗೆ ಪ್ರದಕ್ಷಿಣೆ ಹಾಕಿ ಅವನಿಗೆ ವಿಧೇಯವಾಗಿ ವರ್ತಿಸಿತೆನ್ನುವುದೂ ಕವಿಗೆ ಮಿಥ್ಯೆಯಾಗಿ ತೋರುತ್ತದೆ. ಭರತ ಬಾಹುಬಲಿಯನ್ನು ಸಾಮೋಪಾಯದಿಂದ ಗೆಲ್ಲುತ್ತಾನೆ.

ರಣಭಂಗವಾಗಬಾರದು ತಮ್ಮಗೆಂದು
ದ್ಗುಣವಚನದಿ ಜಯಿಸಿದನು
ಕ್ಷಣದಿ ಮುಕ್ತಿಯ ಕೊಂಬ ಮೃದುಹೃದಯಗೆ ಕ್ರೂರ
ಗುಣವುಂಟೆ….

ಪೂರ್ವ ಪುರಾಣದಲ್ಲಿ ಭರತ ಸೋತು ಗೆಲ್ಲುತ್ತಾನೆ; ಇಲ್ಲಾದರೊ ಗೆದ್ದೂ ಸೋಲುತ್ತಾನೆ! ಪೂರ್ವಪುರಾಣದಲ್ಲಿ ಬಾಹುಬಲಿಯದು ದಿವ್ಯವಾದ ವಿಜಯ; ಇಲ್ಲಿ ಅವನು ಗೆದ್ದನೇ ಎಂದು ಸಂಶಯಪಡಬೇಕಾಗುತ್ತದೆ!

ಪೂರ್ವಪುರಾಣದಲ್ಲಿ ಭರತ, ಬಾಹುಬಲಿ ಪ್ರಕರಣ ಹೇಗೆ ಮೂಡಿದೆಯೆಂಬುದನ್ನು ಸ್ಥೂಲವಾಗಿ ಲಕ್ಷಿಸಬಹುದು. ಆದಿತೀರ್ಥಕರನ ಹಿರಿಯ ಮಗನಾದ ಭರತ ಅಯೋಧ್ಯೆಯಲ್ಲೂ ಕಿರಿಯ ಮಗ ಬಾಹುಬಲಿ ಪೌದನಪುರದಲ್ಲೂ ರಾಜ್ಯವಾಳುತ್ತಿರುತ್ತಾರೆ. ಒಮ್ಮೆ ಭರತನ ಆಯುಧಾಗಾರದಲ್ಲಿ ಚಕ್ರರತ್ನವೊಂದು ಹುಟ್ಟುತ್ತದೆ. ಅದನ್ನು ಮುಂದಿಟ್ಟುಕೊಂಡು ಅವನು ಜಗತ್ತನ್ನೆಲ್ಲ ಜಯಿಸುತ್ತಾನೆ. ಅವನು ಮರಳಿ ರಾಜಧಾನಿಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಚಕ್ರರತ್ನ ನಿಂತುಬಿಡುತ್ತದೆ. ಬಾಹುಬಲಿ ಅಣ್ಣನ ಚಕ್ರವರ್ತಿತ್ವ ವನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎಂಬುದು ಅದರ ಸೂಚನೆ. ಸೋದರಯುದ್ಧ ಅನಿವಾರ್ಯವಾಗುತ್ತದೆ. ಆದರೆ ಅವರಿಬ್ಬರೇ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ತೊಡಗಬೇಕು, ಉಭಯಸೈನ್ಯಗಳೂ ತಟಸ್ಥವಾಗಿರಬೇಕು ಎಂದು ನಿಯಮಿಸಲಾಗುತ್ತದೆ. ಭರತ ಎಲ್ಲ ಯುದ್ಧಗಳಲ್ಲೂ ಪರಾಜಿತನಾಗುತ್ತಾನೆ. ಕಡೆಗೆ ಬಾಹುಬಲಿಯ ಮೇಲೆ ಚಕ್ರರತ್ನವನ್ನು ಪ್ರಯೋಗಿಸುತ್ತಾನೆ. ಅದು ಬಾಹುಬಲಿಯನ್ನು ಬಲವಂದು ನಿಲ್ಲುತ್ತದೆ. ಅವನು ಇದ್ದಕ್ಕಿದ್ದಂತೆ ವಿರಕ್ತನಾಗಿ ತನ್ನ ರಾಜ್ಯವನ್ನು ಅಣ್ಣನಿಗೇ ವಹಿಸಿ, ತಪಸ್ಸಿಗೆ ನಡೆಯುತ್ತಾನೆ.

ಇನ್ನು ‘ಭರತೇಶ ವೈಭವ’ದತ್ತ ಹೋಗಬಹುದು. ಅಲ್ಲಿಯೂ ಭರತ, ಬಾಹುಬಲಿ ಪ್ರಸಂಗದ ಆದ್ಯಂತಗಳು ಮೂಲದಲ್ಲಿರುವಂತೆಯೆ ಇವೆ. ನಡುವೆ ಮಾತ್ರ ರತ್ನಾಕರನ ಪರಿವರ್ತನ ಪ್ರತಿಭೆ ಪ್ರಖರವಾಗಿ ಗೋಚರಿಸುತ್ತದೆ.

ಬಾಹುಬಲಿಯ ವ್ಯಕ್ತಿತ್ವದ ಭವ್ಯತೆ ರತ್ನಾಕರನಲ್ಲಿ ಲಾಲಿತ್ಯವಾಗಿ ಪರಿಣಮಿಸಿದೆ. ಅವನು ಕೊಡುವ ಕಾಮದೇವನ ಕಮನೀಯ ಚಿತ್ರವಿದು:

ನರ ಸುರ ನಾಗಲೋಕದ ಮೋಹನಾಂಗವೆ
ಪುರುಷ ರೂಪಾಂತವೊಲಿರ್ದ
ಪಚ್ಚೆಯ ಪ್ರತಿಮೆ ಪ್ರಾಣಂಬೆತ್ತು ನವರತ್ನ
ದಚ್ಚದೊಡಿಗೆ ತೊಟ್ಟು ತೋರ್ಪ
ಮೆಚ್ಚಿನೊಳಿರ್ದನಾ ಕಾಮದೇವನು ನೋಳ್ಪ
ರಚ್ಚರಿಪಡುವ ಚೆಲ್ವಿನೊಳು

ಚಕ್ರರತ್ನ ಪೌದನಪುರದ ಹೊರಬಾಗಿಲಿನಲ್ಲಿ ನಿಂತಾಗ, ಬಾಹುಬಲಿ ತನ್ನ ಪ್ರಭುತ್ವವನ್ನು ಒಪ್ಪಿಕೊಳ್ಳುವುದಿಲ್ಲವೆಂದರಿತ ಭರತ ‘‘ಇಕ್ಷುಚಾಪನ ತಹುದು!’’ ಎಂದು ದಕ್ಷಿಣಾಂಕನಿಗೆ ಹೇಳುತ್ತಾನೆ. ಅವನು ತನ್ನ ಆಸ್ಥಾನಕ್ಕೆ ಬಂದಾಗ ಬಾಹುಬಲಿಯಿದ್ದ ಪರಿಯಿದು:

ಗಾನ ಕೇಳುತ ತನ್ನ ಸಖರೆಂಟು ಮಂದಿ ಸಂ
ಧಾನಿಪಾರ್ಥಕೆ ಮೆಚ್ಚಿ ನಗುತ
ಮೀನಾಂಕನಿದ್ದನು ಮಲಗ ತಾನೊರಗಿ ಸು
ಮ್ಮಾನದೊಳ್ನೀಡಿ ಪಾದಗಳ

‘‘ಚಿತ್ತಜನಲ್ಲವೆ ಓಲಗದೊಳು ತನ್ನ ಚಿತ್ತಕೆ ಬಂದವೊಲಿರ್ದ!’’ ಬಾಹುಬಲಿಯ ಈ ಚಿತ್ರ ಅಷ್ಟೇನೂ ಗೌರವಾಸ್ಪದವಾದುದಲ್ಲ. ಮುಂದೆಯೂ ಅವನು ಒರಟಾಗಿ ನಡೆದುಕೊಳ್ಳುತ್ತಾನೆ. ಶಕ್ತನೇನೊ ಹೌದು; ಆದರೆ ಗಾಂಭೀರ್ಯ ಸಾಲದು.

‘‘ಎತ್ತಣಿಂ ಬಂದೆ, ನಿನ್ನೊಡೆಯನನೆಲ್ಲೆಲ್ಲಿ ಸುತ್ತಿಸಿ ತಂದೆ?’’ ಎಂದು ವ್ಯಂಗ್ಯವಾಗಿ ಕೇಳುತ್ತಾನೆ, ಬಾಹುಬಲಿ. ‘‘ನಿಮ್ಮ ಅಣ್ಣ ಹತ್ತಿರದಲ್ಲೆ ಇದ್ದಾನೆ. ನೀನು ಬಂದು ಅವನಿಗೂ ಅವನ ಪಡೆಗೂ ಸಂತಸವನ್ನುಂಟುಮಾಡು!’’ ಎಂದು ದಕ್ಷಿಣಾಂಕ ಬಿನ್ನವಿಸಿದಾಗ, ಇದು ಬಾಹುಬಲಿಯ ಪ್ರತಿಕ್ರಿಯೆ : ‘‘ಅಣ್ಣನಲ್ಲೆಮಗಾತನೊಡೆಯನೈ!’’, ‘‘ಸೇನೆಯ ಮುಂದೆನ್ನನೆರಗಿಸಿಕೊಂಬ ಬಲ್ಮಾನಕೆ ನಾನೆಯ್ದಬೇಕೆ?’’ ಅಣ್ಣನೆಂದು ತಾನು ಗುಣಕ್ಕೆ ಎರಗುವುದಾಗಿಯೂ ಝಂಕಣೆಗೆ ಎರಗುವುದಿಲ್ಲವೆಂದೂ ಸ್ಪಷ್ಟಪಡಿಸುತ್ತಾನೆ, ಬಾಹುಬಲಿ. ತನ್ನ ಎದೆಯಲ್ಲಿ ಕೋಪ ಕುಣಿದಾಡುತ್ತಿರುವುದಾಗಿ ಹೇಳುತ್ತಾನೆ. ಆಗ ಮಂತ್ರಿ ‘‘ಅಣ್ಣ ತಮ್ಮಂದಿರು ಕೂಡಿರಬೇಕು’’ ಎಂದು ಹಿತವಚನ ನುಡಿಯುತ್ತಾನೆ; ಓಲಗದಲ್ಲಿದ್ದ ಎಲ್ಲರೂ, ಭರತನಿಗೆ ಪ್ರತಿಭಟನೆ ತೋರಬಾರದೆಂದು ಹೇಳುತ್ತಾರೆ. ವಾರಾಂಗನೆಯರು ಹಾಗೆಂದು ಹೇಳಿದಾಗ,

ಸುಮ್ಮಸುಮ್ಮನೆ ನೋಡುತಿರದೆ ಬುದ್ದಿ ಹೇಳ
ಲಿತ್ತಲಾರ್ಕರೆತಂದರಿವರ
ತೊತ್ತಿರ ಬಡಿಬಡಿಯೆಂದು ಮನ್ಮಥ ನೇಮ
ವಿತ್ತನು ಕಲಕಂಠಗೊಡನೆ

ಕಳಕಂಠ ಸ್ತ್ರೀಯರನ್ನು ಬಡಿಯುತ್ತಾನೆ.[3] ಬಾಹುಬಲಿಯಂಥ ಮಹಾನುಭಾವ ಹೀಗೆ ಅಕೃತ್ಯವೆಸಗಿದನೆಂದರೆ ನಂಬಬಹುದೆ? ಅವನು ಹಾಗೆ ಮಾಡಿದ್ದ ಪಕ್ಷದಲ್ಲಿ ಮಹಾನುಭಾವನಾಗಿ ಉಳಿಯುತ್ತಾನೆಯೆ? ಇಲ್ಲಿ ಅಹಿಂಸೆ ಏನಾಯಿತು?

ತಾಯಿ ಸುನಂದಾದೇವಿ ‘‘ಬಲ್ಲಿತುದೋರದಿರಣ್ಣನಿಗೆರಗು!’’ ಎಂದಾಗ, ‘‘ಶಿರಬಾಗಿ ಬಹೆನಣ್ಣಗೆ’’ ಎಂದು ಬಾಹುಬಲಿ ಸುಳ್ಳು ಬೇರೆ ಹೇಳುತ್ತಾನೆ.

ದಕ್ಷಿಣಾಂಕ ಹಿಂದಿರುಗಿ ಬಾಹುಬಲಿಯ ಅತಿವಿನಯವನ್ನು ತಿಳಿಸಿದಾಗ ಭರತ ಹೇಳುತ್ತಾನೆ:

ಮುನಿದೆನಾದರೆ ಚೆಂಡನಿಡುವಂತೆ ಹಿಡಿದೆತ್ತಿ
ವನಧಿಗಿಡುವ ಶಕ್ತಿಯುಂಟು
ಅನುಜನ ಮೇಲೆ ಶಕ್ತಿಯ ತೋರಬಹುದೆ ಮೇ
ದಿನಿ ಮೆಚ್ಚುವುದೆ ತೋರೆನ್ ….

ಭರತ ಮಾತಿನಲ್ಲಿ ವ್ಯವಹಾರ ಕುಶಲನಾಗಿ ತೋರುತ್ತಾನೆ. ಬಾಹುಬಲಿಯನ್ನು ನಿಗ್ರಹಿಸುವ ಸಾಮರ್ಥ್ಯ ನಿಜವಾಗಿಯೂ ಅವನಿಗಿತ್ತೆ? ಉಗ್ರಾಣ ಮಂಗೇಶರಾಯರ ಈ ಹೇಳಿಕೆಯನ್ನು ಗಮನಿಸಬಹುದು : ‘‘ಕವಿಯು ಕಥಾನಾಯಕನನ್ನು ಧೀರೋದಾತ್ತನಾಗಿ ವರ್ಣಿಸುವುದೇ ಧರ್ಮವೆಂದು ಕಥಾಕ್ರಮವನ್ನು ಸ್ವಲ್ಪ ಮಾರ್ಪಡಿಸಿ ಅಣ್ಣತಮ್ಮಂದಿರೊಳಗೆ ನಿಜವಾಗಿ ಯುದ್ಧವು ಜರುಗಲಿಲ್ಲವೆಂದೂ ಭರತನು ಭುಜಬಲಿಯನ್ನು ಮಾತಿನಿಂದಲೇ ಜಯಿಸಿದನೆಂದೂ ಚಮತ್ಕಾರ ಮಾಡಿರುವನು. ಆದರೂ ಭರತನು ಆಡಿದ ಕೆಲವು ಮಾತುಗಳಿಂದ ವಾಸ್ತವವಾಗಿ ಭರತನೇ ಸೋತಿರಬೇಕೆಂದು ವಾಚಕರು ಅನುಮಾನಿಸ ಬಹುದಾಗಿದೆ.’’[4]

ತನಗೆ ಎದುರಾದ ಬಾಹುಬಲಿಯನ್ನು ಕುರಿತು ಭರತನಾಡುವ ನಯವಾದ ಮಾತುಗಳಿವು: ‘‘ನಿನ್ನ ಒಡವೆಯನ್ನು ನಾನು ಕೊಂಡುದಿಲ್ಲಣ್ಣ! ಎನ್ನೊಡವೆಯನ್ನು ನೀನೂ ಕೊಂಡುದಿಲ್ಲ. ತಂದೆ ನಿಯೋಜಿಸಿದಂತೆ, ರಾಜ ಯುವರಾಜರ ಪದವಿಗಳಲ್ಲಿದ್ದೇವೆ. ಒಡಹುಟ್ಟಿದವನನ್ನು ನೋಡಬೇಕೆಂದು ಬರಹೇಳಿದರೆ, ಅದು ಹುಸಿಯೆನ್ನುತ್ತಾರೆಯೆ, ಅಪ್ಪ? ನಾನು ನಿನಗಿಂತ ತುಸು ಹಿರಿಯನಾದ್ದರಿಂದ, ನಿನ್ನನ್ನು ಬರಹೇಳಿದೆ. ನೀನೆ ಅಣ್ಣನಾಗಿದ್ದರೆ, ನಾನೆ ನಿನ್ನಲ್ಲಿಗೆ ಬರುತ್ತಿದ್ದೆ! ಕ್ಷುದ್ರರಂತೆ ಹೋರಾಡುವುದೇಕೆ? ನಿನ್ನದೆ ಗೆಲುವು, ನನ್ನದು ಸೋಲು, ಹೋಗು, ನಿನ್ನೊಡನೆ ದೃಷ್ಟಿಯುದ್ಧಮಾಡಿ, ಗೆಲ್ಲುವುದೆಂತು? ನನಗಿಂತ ನೀನು ಉದ್ದ! ಮಲ್ಲಗಾಳಗದಲ್ಲಿ ನಿನ್ನನ್ನು ಸೋಲಿಸುವುದೆಂತು? ಭುಜಬಲಿಯೆಂದಲ್ಲವೆ ಅಯ್ಯ ನಿನಗೆ ಹೆಸರಿಟ್ಟದ್ದು? ನೀನು ನನ್ನನ್ನು ಎತ್ತುವುದು ಖಂಡಿತ! ತಮ್ಮನಿಗೆ ಅಣ್ಣ ಸೋತನೆಂದಾಗ, ದಶದಿಕ್ಕುಗಳೂ ಕಪ್ಪಾಗುತ್ತವೆ! ನಾನು ಅಣ್ಣನೆಂಬ ಅಕ್ಕರೆ ನಿನಗಿಲ್ಲ; ಆದರೆ ನೀನು ತಮ್ಮನೆಂಬ ಅಕ್ಕರೆ ನನಗುಂಟಪ್ಪ! ನಿನ್ನ ಭಾಗ್ಯವನ್ನು ಕಣ್ಣು ತುಂಬ ನೋಡುತ್ತೇನೆ. ನೀನೇ ರಾಜನಾಗು, ಸುಖವಾಗಿ ಬಾಳು. ನನಗೊಂದು ದೇಶವನ್ನು ಕೊಟ್ಟು ಬೇರೆ ಇರಿಸು!’’

ಈ ಮಾತುಗಳನ್ನು ಕೇಳಿದ ಬಾಹುಬಲಿಯ ಚಿತ್ತ ಪರಿವರ್ತಿತವಾಗುತ್ತದೆ; ಅವನು ಪಶ್ಚಾತ್ತಾಪಡುತ್ತಾನೆ:

ಗರುಡಮಂತ್ರಕೆ ವಿಷವಿಳಿವಂತೆ ಭರತ ಭೂ
ವರನ ವಾಕ್ಯವ ಕೇಳಲಾಗಿ
ಜರಿ ಜರಿದಂಗಜಗೆತ್ತಿದ ಕೋಪ ಪೈ
ಸರಿಸಿತು ಹೃದಯ ತಂಪಾಯ್ತು

ಒಲೆವ ಮೋರೆಯ ತಿರುಹಿದನು ಸಮ್ಮುಖವಾಗಿ
ಕಳೆದನೊಯ್ಯನೆ ತೋಳ ತೊಡಕ
ಅಳುಕಾದುದಣ್ಣನ ಮೊಗವ ನೋಡದೆ ನಾಚಿ
ತಲೆಗುಸಿದಿರ್ದನಾ ಮದನ

ಪಾಪಿ ನಾನೆನ್ನಣ್ಣಗಿದಿರಾಗಿ ಕುಲಕೆ ಲೋ
ಕಾಪವಾದವ ತಂದೆನಕಟ
ಕೋಪ ಗರ್ವಗಳಾರ ಕೆಡಿಸವೆಂದಾ ಪುಷ್ಪ
ಚಾಪ ತನ್ನೊಳು ಮರುಗಿದನು

ಅವನು ಅಣ್ಣನಲ್ಲಿ ಕ್ಷಮಾಪಣೆ ಕೇಳಿಕೊಳ್ಳುತ್ತಾನೆ:

ದೇವರು ಕ್ಷಮಿಸುವುದೆನ್ನದು ತಪ್ಪೆಂದು
ಭಾವಶುದ್ದಿಯೊಳು ಕೈಮುಗಿದ.

ಬಾಹುಬಲಿಯಲ್ಲಾದ ಈ ಬದಲಾವಣೆ ಸಹಜವೆನಿಸುವುದಿಲ್ಲ. (ಹಿಂದೆ ತಾನೇ ಆಡಿದಂತೆ, ಭರತನದು ‘ಹುಸಿವಿನಯ’ ಎಂಬುದು ಅವನಿಗೇಕೆ ತಿಳಿಯಲಿಲ್ಲ?) ಅವನ ಮುನ್ನಿನ ಚಲಕ್ಕೂ ಈಗಿನ ನಿಲುವಿಗೂ ಸಾಂಗತ್ಯವೇರ್ಪಡುವುದಿಲ್ಲ. ಕವಿ ಎಲ್ಲವನ್ನೂ ಹೊರಗಿನಿಂದ ಪ್ರಕ್ಷೇಪಿಸುತ್ತಿದ್ದಾನೆ, ಯಾವುದೂ ಒಳಗಿನಿಂದ ಅರಳುತ್ತಿಲ್ಲ ಎಂಬ ಭಾವನೆ ನಮಗುಂಟಾಗುತ್ತದೆ.

ಬಾಹುಬಲಿ ಮುಖ್ಯವಾಗಿ ಮನ್ಮಥ; ಗಂಡು ಹೆಣ್ಣುಗಳ ಹೃದಯಗಳಲ್ಲಿ ಕೋಲಾಹಲ ವನ್ನೆಬ್ಬಿಸಿ, ಅವುಗಳನ್ನು ವಶಪಡಿಸಿಕೊಳ್ಳುವಲ್ಲಿ ಅವನಿಗಿರುವ ಬಲ್ಮೆ ಭರತನ ಮುಂದೆ ನಿರರ್ಥಕ ಎಂಬುದು ಕವಿಯ ಇಂಗಿತವಿರಬಹುದು. ಅದನ್ನು ನಾವು ನಂಬುವುದು ಕಷ್ಟ. ಏನೇ ಇರಲಿ, ರತ್ನಾಕರನ ನಿರೂಪಣೆಯಲ್ಲಿ ಒಟ್ಟಂದ ಕಾಣದು.

‘ಆತ್ಮೋಪಮ’ನಾದ ಐವತ್ತೆಂಟು ಅಡಿ ಎತ್ತರದ ಭುಜಬಲಿ ‘ಭರತೇಶ ವೈಭವ’ದಲ್ಲಿ ಸಾಕಷ್ಟು ಕುಬ್ಜನಾಗಿದ್ದಾನೆ! ಇವನು ಜನಮಾನಸದಲ್ಲಿ ಪ್ರತಿಷ್ಠಿತನಾದ ಪರಮಪೂಜ್ಯ ಬಾಹುಬಲಿಯಲ್ಲ ಎನ್ನಬೇಕಾಗುತ್ತದೆ. ರತ್ನಾಕರನ ಕೈವಾಡವನ್ನು ಕಂಡು ಆ ಜಗದ್ಭವ್ಯ ಮೂರ್ತಿ ನಸುನಗುತ್ತಿದೆಯೇನೊ!

ಪಂಪನ ‘ಆದಿಪುರಾಣ’ವನ್ನು ಅನುಲಕ್ಷಿಸಿ, ವಿಮರ್ಶಕರೊಬ್ಬರು ಆಡಿರುವ ಈ ಮಾತು ಮನನ ಯೋಗ್ಯ : ‘‘ಭರತೇಶವೈಭವದಲ್ಲಿ ವಿವೇಕಶಾಲಿಯೂ ಉದಾರಿಯೂ ಹಿರಿಯನೂ ಆದ ಅಣ್ಣನು ತಮ್ಮನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾನೆಂದು ಹೇಳಿ ಏಕತೆಯನ್ನು ಮಾರ್ಪಡಿಸಿದುದು ಈ ವೈಭವದ ಕತೆಯ ಚೌಕಟ್ಟಿಗೆ ಸಮಯಕ್ಕೆ ಸನ್ನಿವೇಶಕ್ಕೆ ಹೊಂದುವಂಥದು. ಹೋಲಿಕೆಗಳೂ ಸಮವಲ್ಲ. ಎರಡು ಮಹಾವ್ಯಕ್ತಿಗಳ ನಡುವೆ ಒಡ್ಡಿನಿಂತ ವಿರಸ ಹೇಗೆ ಮಾರ್ಪುಗೊಂಡಿತೆಂಬುದರ ವಿಧಾನ ಕ್ರಿಯೆ, ಅಲ್ಲಿನ ಮಹಾ ನಾಟಕೀಯತೆ, ಪರಿಣಾಮ ಸಾಹಿತ್ಯಕವಾಗಿ ರೋಮಹರ್ಷಕವಾದದ್ದು. ಪುರಾಣದ ಕಥೆಯನ್ನು ಲೆಕ್ಕಿಸದೆ ಸ್ವಾತಂತ್ರ್ಯ ವಹಿಸಿ ಭರತನನ್ನು ಎತ್ತಿದ್ದಾನೆ ಎಂಬುದೊಂದೇ ಮೌಲ್ಯಮಾಪಕವಾದಾಗ ಹೋಲಿಕೆಯ ತಳ ಭದ್ರವಾಗಿ ನಿಲ್ಲುವುದಿಲ್ಲ; ತುಲನೆ ನ್ಯಾಯವಾಗದು.’’[5]

[1] ‘‘ರತ್ನಾಕರವರ್ಣಿಯು ಧೀರೋದಾತ್ತನಾದ ತನ್ನ ಕಥಾನಾಯಕನಿಗೆ ಹೆಚ್ಚು ಮಹತ್ವವನ್ನು ಕಲ್ಪಿಸುವುದಕ್ಕಾಗಿ ಬಾಹುಬಲಿಯ ಪ್ರಭೆಯನ್ನು ತಗ್ಗಿಸಿರುತ್ತಾನೆ’’ ಎಂಬ ತ.ಸು.ಶಾಮರಾಯರ ಉಕ್ತಿಯನ್ನು ‘‘ಅರ್ಧಸತ್ಯ’’ವೆನ್ನುತ್ತಾರೆ, ರಂ.ಶ್ರೀ.ಮುಗಳಿ (‘ಕನ್ನಡಸಾಹಿತ್ಯ ಚರಿತ್ರೆ’, ೧೯೫೩, ಪು.೩೭೨). ಅರ್ಧವಾದರೂ ಸತ್ಯ ಸತ್ಯವೇ! ಭರತನನ್ನು ಮೇಲೆತ್ತುವಲ್ಲಿ ಶ್ವೇತಾಂಬರಪಂಥದ ಹೇಮಚಂದ್ರನಿಂದ ರತ್ನಾಕರ ಪ್ರಭಾವಿತನಾಗಿದ್ದಾನೆಂಬ ಅಭಿಪ್ರಾಯವುಂಟು.

[2] ಭಾಸ ತನ್ನ ‘ಪಂಚರಾತ್ರ’ದಲ್ಲಿ ಮಹಾಭಾರತ ಯುದ್ಧವನ್ನೆ ರದ್ದುಗೊಳಿಸಿರುವುದು ನೆನಪಾಗುತ್ತದೆ.

[3] ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ’ದಲ್ಲಿ, ಗಾಣರಾಣಿಯರನ್ನು ಹರಿಶ್ಚಂದ್ರ ಬಡಿದದ್ದು ನೆನಪಾಗುತ್ತದೆ.

[4] ಉದ್ಧೃತ. ವಿ. ಸೀ., ಸಮೀಕ್ಷೆ, ‘ರತ್ನಾಕರವರ್ಣಿ’, ಪು.೨೦೦

[5] ೫. ವಿ. ಸೀ., ಪೂರ್ವೋಕ್ತ, ಅಲ್ಲೇ. ‘ಆದಿಪುರಾಣ’ದ ‘‘ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಲಂ…’’ (೧೪, ೧೨೮)’’, ‘‘ನಿಜಪಾದಾಂಬುರುಹಕ್ಕೆ ಪಾದ್ಯವಿಧಿಯಂ’’ (೧೪, ೧೩೧) ಎಂಬ ಪದ್ಯಗಳಲ್ಲಿ ಎಂಥ ಲೋಕೋತ್ತರ ಚಿತ್ರಣವಿದೆ! ‘ಭರತೇಶ ವೈಭವ’ದಲ್ಲಿ ಇದಕ್ಕೆಲ್ಲ ಅವಕಾಶವೇ ಇಲ್ಲವಲ್ಲ! ರತ್ನಾಕರ ಬಿಸಿಲನ್ನು ಬೆಳದಿಂಗಳನ್ನಾಗಿ, ಕುಲಿಶವನ್ನು ಕುಸುಮಾಸ್ತ್ರವನ್ನಾಗಿ ಮಾರ್ಪಡಿಸಿದ್ದಾನೆ! ಅದು ಕೆಲವರಿಗೆ ಮೆಚ್ಚಾಗಬಹುದು.