೩. ‘ವೇಣೀ ಸಂಹಾರ’ದಲ್ಲಿ ಚಾರ್ವಾಕನೆಂಬ ರಾಕ್ಷಸ ಋಷಿವೇಷದಿಂದ ಯುಧಿಷ್ಠಿರನಲ್ಲಿಗೆ ಬಂದು, ಭೀಮನು ದುರ್ಯೋಧನನಿಂದ ಹತನಾದನೆಂದು ತಿಳಿಸುತ್ತಾನೆ. ಆಗ ಯುಧಿಷ್ಠಿರ ಹೀಗೆ ಭೀಮನನ್ನು ನೆನೆದು ದುಃಖಿಸುತ್ತಾನೆ :

ಮಯಾ ಪೀತಂ ಪೀತಂ ತದನು ಭವತಾಂಬಾ ಸ್ತನಯುಗಂ
ಮದುಚ್ಛಿಷ್ಟೈರ್ವೃತ್ತಿಂ ಜನಯಸಿ ರಸೈರ್ವತ್ಸಲತಯಾ
ವಿತಾನೇಷ್ವಪ್ಯೇವಂ ತವ ಮಮ ಸೋಮೇ ವಿಧಿರಭೂ
ನ್ನಿವಾಪಾಂಭಃ ಪೂರ್ವಂ ಪಿಬಸಿ ಕಥಮೇವಂ ತ್ವಮಧುನಾ (.೩೧)

ರನ್ನ ಈ ಪದ್ಯವನ್ನು ಭಾಷಾಂತರಿಸಿ, ದುರ್ಯೋಧನ ಮಡಿದ ದುಶ್ಯಾಸನನನ್ನು ಕಂಡು ಪ್ರಲಾಪಿಸುವ ಸಂದರ್ಭಕ್ಕೆ ವರ್ಗಾಯಿಸಿದ್ದಾನೆ; ‘ಗದಾಯುದ್ಧ’ದ ಈ ಪದ್ಯ ಹೆಸರಾದುದು:

ಜನನೀ ಸ್ತನ್ಯಮನುಂಡೆನಾಂ ಬೞಿಕೆ ನೀಂ ಸೋಮಾಮೃತಂ ದಿವ್ಯ ಭೋ
ಜನಮೆಂಬಿಂತವನುಂಡೆನಾಂ ಬೞಿಕೆ ನೀಂ ಬಾಲತ್ವದಿಂದೆಲ್ಲಿಯುಂ
ವಿನಯೋಲ್ಲಂಘನಮಾದುದಿಲ್ಲ ಮರಣಕ್ಕೆನ್ನಿಂದೆ ನೀಂ ಮುಂಚಿದಯ್
ಮೊನೆಯೊಳ್ ಸೂೞ್ ತಡಮಾಯ್ತಿದೊಂದೆಡೆಯೊಳಂ ಹಾ ವತ್ಸೊದುಶ್ಶಾಸನಾ  (.)

‘‘ಈ ಎರಡು ಪದ್ಯಗಳಿಗೂ ಭಾವಸಾಮ್ಯವಿದೆ. ಧರ್ಮರಾಯನ ಬಾಯಿಂದ ಭಟ್ಟನಾರಾಯಣನು ಹೇಳಿರುವುದನ್ನೇ ರನ್ನನು ಇನ್ನೂ ಉಚಿತವಾಗುವಂತೆ ದುರ್ಯೋಧನನಿಗೆ ಆರೋಪಿಸಿ ರಸಪುಷ್ಟಿಯನ್ನುಂಟು ಮಾಡಿದ್ದಾನೆ.’’[1]

೪. ವತ್ಸೊಯದಿ ತ್ವಮಪ್ಯಸ್ಮಾನ್ನಾಲಪಸಿ ತತ್ ಕಿಂ ಸಾಂಪ್ರತಂ ವತ್ಸೋ ದುಶ್ಶಾಸನ ಆಲಪತು ದುರ್ಮರ್ಷಣೋ ವಾಥಾನ್ಯೋ ವಾ (೫.೧ ಗದ್ಯ)

ಮಡಿದೀ ದುಶ್ಶಾಸನನೇಂ
ನುಡಿಯಿಸುವನೊ ಕುರುನರೇಂದ್ರ ದುರ್ಮರ್ಷಣನೇಂ
ನುಡಿಯಿಸುವನೊ ದುಷ್ಕರ್ಣಂ
ನುಡಿಯಿಸುವನೊ ನೀನುಮುಸಿರದಿರ್ಪುದು ಮಗನೇ (.೮೧)

. ಕರ್ಣಾನನೇಂದು ಸ್ಮರಣಾತ್ ಕ್ಷುಭಿತಃ ಶೋಕಸಾಗರಃ
ಬಾಡವೇನೇವ ಶಿಖಿನಾ ಪೀಯತೇ ಕ್ರೋಧಜೇನ ಮೇ (.೧೯)
ತರಣಿ ತನಯನ ಗುಣೌಘ
ಸ್ಮರಣದೆ ಕಯ್ಗಣ್ಮುವೆನ್ನ ಶೋಕಮಹಾಸಾ
ಗರಮಂ ತವೆ ಪೀರ್ದುದು ಭೀ
ಕರ ಮತ್ಕೋಪಾಗ್ನಿ ಬಾಡಬಾಗ್ನಿಯ ತೆಱದಿಂ (.೩೭)

ರನ್ನನಲ್ಲಿ ಬರುವ ‘‘ಆನುಂ ವಿಧೇಯನಲ್ಲಂ ನೀನುಂ ಗುರುವಲ್ಲಮಿಂದಿನೊಂದೆವಸಂ’’ (೬.೨೬) ಎಂಬ ಭೀಮನ ಮಾತು ಭಟ್ಟನಾರಾಯಣನ ‘‘ಅದ್ಯೈಕ ದಿವಸಂ ಮಮಾಸಿನ ಗುರುಃ ನಾಹಂ ವಿಧೇಯಸ್ತವ’’ (೧.೧೭) ಎಂಬುದರ ಅನುವಾದ. ‘‘ವೀರಶತಜನನಿಗೀ ಗಾಂಧಾರಿಗೆ ದುಃಖಶತಜನನಿವೆಸರಾಯ್ತೀಗಳ್ ’’ (೪.೫) ಎಂಬುದು. ‘‘ಹಾ ವೀರ ಶತ ಪ್ರಸವಿನೀ ಹತ ಗಾಂಧಾರೀ ದುಃಖಶತಃ ಪ್ರಸೂತಾ ನ ಪುನಃ ಸುತ ಶತಃ’’ ಎಂಬುದರ ಛಾಯೆ. ‘‘ಕುರು ಭೂಭೃದ್ಬಲ ತೂಲಕಾಲಪವನಂ’’ (೧.೫೨) ಎಂಬ ಭೀಮನನ್ನು ಕುರಿತ ಉಕ್ತಿ, ‘‘ಪಾಂಡು ಪಾಂಚಾಲ ಸೇನಾ ತೂಲೋತೇಪಪ್ರಲಯ ಪವನಃ’’(೩.೨೨) ಎಂಬ ಅಶ್ವತ್ಥಾಮ ವರ್ಣನೆಯ ಮಾರ್ದನಿ.

ಒಟ್ಟಿನಲ್ಲಿ, ಪಂಪ ರನ್ನರ ಕಾವ್ಯಗಳಿಗೂ ‘ವೇಣೀಸಂಹಾರ’ಕ್ಕೂ ಇರುವ ಸಂಬಂಧದ ಬಗ್ಗೆ ಎ.ಆರ್.ಕೃಷ್ಣಶಾಸ್ತ್ರಿಗಳ ವಿಮರ್ಶೆಯಿದು : ‘‘ವೇಣೀಸಂಹಾರದ ವಸ್ತು ರಸ ಮಾತುಕತೆಗಳನ್ನು ಪಂಪ ರನ್ನರು ಪೂರ್ತಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಆದ್ದರಿಂದ ಪಂಪ ಭಾರತದ ಹದಿಮೂರನೆಯ ಆಶ್ವಾಸವೂ ‘ಗದಾಯುದ್ಧ’ದ ಬಹುಭಾಗವೂ ಕಳೆಗಟ್ಟಿವೆ.’’[2]

ನೇಮಿಚಂದ್ರನ ‘ಲೀಲಾವತಿ’ ಕಾವ್ಯದಲ್ಲಿ ಬರುವ ಮಾಯಾ ಭುಜಂಗನ ಪ್ರಕರಣ, ರಾಜಶೇಖರನ ‘ಕರ್ಪೂರಮಂಜರಿ’ ಎಂಬ ಪ್ರಾಕೃತ ನಾಟಕದಲ್ಲಿ ಕಾಣಿಸಿಕೊಳ್ಳುವ ಭೈರವಾನಂದನ ಪ್ರಸಂಗದಿಂದ ಪ್ರೇರಿತವಾಗಿದೆ. ಆದರೆ ಮೂಲವನ್ನು ಸೊಗಸಾಗಿ ವಿಸ್ತರಿಸಿದ್ದಾನೆ, ನೇಮಿಚಂದ್ರ :

ಕ.ಮಂ : ಅವತಾರಿಸಿಂದುವುಮನುರ್ವಿಗೆ ತೋರಲಪ್ಪೆಂ
            ದಿವಮಧ್ಯದೊಳ್ ರಥಮುಮಂ ರವಿಯಾ ನಿಲಿಪ್ಪೆಂ
            ದಿವಿಜಾತ ಯಕ್ಷಗಣಸಿದ್ಧರ ಪೆಣ್ಗಳಂ ಸಾ
            ರ್ಚುವೆನಪ್ಪುದಿಲ್ಲಮಿಳೆಯೋಳೆನಗೊಂದಸಾಧ್ಯಂ (೨೫)[3]

ಲೀಲಾವತಿ : ಉರಿಪುವುದೋ ಪೊದೞ್ದುರಿಗಳಿಂ ಜಳಮಂ ತಿಮಿರಂಗಳಿಂ ದಿವಾ
            ಕರನನಡುರ್ತು ಬೆಂಕೊಳಿಪುದೋ ಮಣಿದರ್ಪಣಮಾಗೆ ಮಾೞ್ಪುದೋ
            ಪರಿಣತ ಚಂದ್ರನಂ ನಿನಗೆ ತಾರಗೆಯಂ ತಳದಿಂದೆ ಕೋದಳಂ
            ಕರಿಪುದೊ ದೇವ ನಿನ್ನ ವನಿತಾಜನ ಪೀನ ಪಯೋಧರಂಗಳಂ

            ಜಳನಿಧಿಯನೆೞೆದು ತರ್ಪುದೊ
            ಕುಲಗಿರಿಯನುರುಳ್ಚಿ ತರ್ಪುದೋ ನಭಕೆ ಮಹೀ
            ತಳಮಂ ನೆಗೆಪುವುದೊ ನಭ
            ಸ್ಥಳಮುಮನಿೞಪುವುದೊ ಮಹಿಗಿದರ್ಕೇವೇೞ್ಕುಂ (೮೩, ೮೪)

ರಾಜಶೇಖರನ ನಾಟಕದಲ್ಲಿ ಭೈರವಾನಂದ ತನ್ನ ಯೋಗಶಕ್ತಿಯಿಂದ ಕರ್ಪೂರ ಮಂಜರಿ ರಾಜ ರಾಣಿಯರ ಮುಂದೆ ಬರುವಂತೆ ಮಾಡುತ್ತಾನೆ; ‘ಲೀಲಾವತಿ’ಯಲ್ಲಿ ಮಾಯಭುಜಂಗನ ಜೋಗಿಣಿ, ಕಂದರ್ಪದೇವ ಸ್ವಪ್ನದಲ್ಲಿ ಕಂಡ ಕನ್ಯೆಯನ್ನು ಆಕಾಶದಲ್ಲಿ ತೋರಿಸುತ್ತಾಳೆ. ಕಾಳಿದಾಸನ ‘ವಿಕ್ರಮೋರ್ವಶೀಯ’ವನ್ನೂ ‘ಲೀಲಾವತಿ’ ನೆನಪಿಗೆ ತರುತ್ತದೆ. ‘‘ವಿಕ್ರಮೋರ್ವಶೀಯದಂತೆ ಇಲ್ಲಿಯ ಪ್ರಣಯಿಗಳೂ ಮೂರು ಸಾರಿ ಅಗಲುತ್ತಾರೆ; ಅಲ್ಲಿರುವಂತೆ ಇಲ್ಲಿಯೂ ರಾಣಿ ಗಂಡ ಪರಾಂಗನಾರತನೆಂಬ ತಪ್ಪೆಣಿಕೆಯಿಂದ, ವಿವೇಕ ಸಹನೆಗಳಿಲ್ಲದೆ, ಕುಪಿತೆಯಾಗಿ ಲತೆಯಾಗುತ್ತಾಳೆ; ಗಂಡ ತಬ್ಬಿಕೊಂಡಾಗ ಮತ್ತೆ ಮಾನವಿಯಾಗುತ್ತಾಳೆ. ಹೀಗೆಯೇ ರತ್ನಾವಳಿ ನಾಟಕವೂ ಕನ್ನಡ ಕಾವ್ಯದ ಮೇಲೆ ಪ್ರಭಾವ ಬೀರದೆ ಹೋಗಿಲ್ಲ.’’[4]

ಕುಮಾರವ್ಯಾಸ ಭಾರತದಕ್ಕೆ ವ್ಯಾಸಭಾರತವೆ ಆಧಾರವಾದರೂ, ಅಲ್ಲಿ ಇಲ್ಲಿ ಇತರ ಸಂಸ್ಕೃತ ಕೃತಿಗಳ ಪ್ರಭಾವವನ್ನು ಗುರುತಿಸಬಹುದು. ನಿದರ್ಶನಕ್ಕೆ, ಉದ್ಯೋಗ ಪರ್ವದಲ್ಲಿ ಕುಮಾರವ್ಯಾಸ ಭಾಸನ ‘ದೂತವಾಕ್ಯ’ದಿಂದ ಪ್ರಭಾವಿತನಾಗಿರುವುದು ಕಂಡುಬರುತ್ತದೆ.

ಕೃಷ್ಣ ಸಂಧಿಗಾಗಿ ಬಂದಾಗ ದುರ್ಯೋಧನ ಸಿಂಹಾಸನದಿಂದ ಇಳಿಯಲಿಲ್ಲವೆಂದೂ ಕೃಷ್ಣನ ಮಹಿಮೆಯಿಂದ ಅವನ ಪಾದದ ಮೇಲೆ ಉರುಳಿಬಿದ್ದನೆಂದೂ ಕುಮಾರವ್ಯಾಸನ ನಿರೂಪಣೆ.[5] ಇದಕ್ಕೆ ಪ್ರೇರಣೆ ಬಂದಿರುವುದು ‘ದೂತವಾಕ್ಯ’ದಿಂದ.

ದೂತವಾಕ್ಯ:

ವಾಸುದೇವ – ಏನಯ್ಯ ಸುಯೋಧನ ಕುಳಿತುಕೊಂಡೆ?

ಸುಯೋಧನ – (ಆಸನದಿಂದ ಬಿದ್ದು, ತನ್ನಲ್ಲಿ ತಾನೆ) ಕೇಶವನು ಬಂದು ಬಿಟ್ಟನೆಂಬುದು ಚೆನ್ನಾಗಿ ವ್ಯಕ್ತವಾಯಿತು.

ಉತ್ಸಾಹದಿಂದೆನ್ನ ಬುದ್ದಿಯನು ನೆಲೆಗೊಳಿಸಿ
ಕುಳಿತಿದ್ದೆನಾದರೂ ಕೇಶವನ ಮಹಿಮೆಯಿಂ
ದಾಸನದ ಮೇಲಿಂದ ಕೆಳಗುರುಳಿ ಬಿದ್ದೆನಿಂದು.[6]

ಕುಮಾರವ್ಯಾಸ:

ಸೆಣಸು ಸೇರದ ದೇವನಿದಿರಲಿ
ಮಣಿಯದಾತನ ಕಾಣುತವೆ ಧಾ
ರಿಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತೆ
ಮಣಿಖಚಿತ ಕಾಂಚನದ ಪೀಠದ
ಗೊಣಸು ಮುರಿದುದು ನಭದಿ ಸುರಸಂ
ದಣಿಗಳಾ ಎನೆ ಕೆಡೆದುಬಿದ್ದನು ಹರಿಯ ಚರಣದಲಿ (.೬೪)

ದುರ್ಯೋಧನ ಕೃಷ್ಣನನ್ನು ಕಟ್ಟಿಹಾಕಲು ಪ್ರಯತ್ನಿಸಿದನೆಂದು ಕುಮಾರವ್ಯಾಸ ಭಾರತದಲ್ಲಿ ಬರುತ್ತದೆ. ವ್ಯಾಸಭಾರತದಲ್ಲಿ ಅವನು ಹಾಗೆ ಯೋಚಿಸುತ್ತಾನಷ್ಟೆ. ಈ ಸನ್ನಿವೇಶದಲ್ಲಿ ಕುಮಾರವ್ಯಾಸ ಭಾಸನನ್ನು ಹಿಂಬಾಲಿಸಿದ್ದಾನೆ.

ದೂತವಾಕ್ಯ

ದುರ್ಯೋಧನ – ಏನು, ಕೇಶವನು ಹೋಗುತ್ತಾನಂತೋ? ದುಶ್ಶಾಸನ, ದುರ್ಮರ್ಷಣ, ದುರ್ಮುಖ, ದುರ್ಬುದ್ದಿ, ದುಷ್ಟೇಶ್ವರ, ದೂತಸಮುದಾಚಾರವನ್ನು ಮೀರಿರುವ ಕೇಶವನನ್ನು ಕಟ್ಟಿಬಿಡಿ. ಏನು, ನಿಮಗೆ ಶಕ್ತಿಯಿಲ್ಲವೆ… ಆಗಲಿ, ನಾನೇ ಹಗ್ಗಗಳಿಂದ ಕಟ್ಟಿ ಹಾಕುತ್ತೇನೆ… ಏನು, ಕೇಶವನು ಕಾಣಿಸನಲ್ಲಾ. ಇವನೇ ಕೇಶವನು. ಆಹಾ ಕೇಶವನು ಎಷ್ಟು ಕುಳ್ಳಾಗಿರುವನು! ಏನು, ಕೇಶವನು ಕಾಣಿಸನಲ್ಲಾ. ಇವನೇ ಕೇಶವನು. ಅಬ್ಬಾ! ಕೇಶವನು ಎಷ್ಟು ಎತ್ತರವಾಗಿರುವನು! ಏನು, ಕೇಶವನು ಕಾಣುವುದಿಲ್ಲವಲ್ಲಾ. ಇವನು ಕೇಶವನು. ಮಂತ್ರಶಾಲೆಯಲ್ಲಿ ಎಲ್ಲ ಕಡೆಯಲ್ಲಿಯೂ ಕೇಶವರೇ ಇರುವರು. ಈಗೇನು ಮಾಡಲಿ? ಆಗಲಿ, ತಿಳಿಯಿತು. ಎಲೆ ಎಲೈ ರಾಜರೇ, ನೀವು ಪ್ರತಿಯೊಬ್ಬರೂ ಒಬ್ಬೊಬ್ಬ ಕೇಶವನನ್ನು ಕಟ್ಟಿಬಿಡಿ, ಏನು, ತಮ್ಮನ್ನು ತಾವೇ ಹಗ್ಗಗಳಿಂದ ಬಿಗಿದುಕೊಂಡು ರಾಜರೆಲ್ಲರೂ ಬೀಳುತ್ತಿದ್ದಾರೆ.[7]

ಕುಮಾರವ್ಯಾಸ:

ಒಳಗೆ ಹೊಳೆದನು ಬಾಹ್ಯದಲಿ ಪ್ರ
            ಜ್ವಲಿಸಿದನು ತಾನಲ್ಲದನ್ಯರ
            ಬಳಕೆ ಬೇರೊಂದಿಲ್ಲದಂತಿರೆ ಕೂಡೆ ತೋರಿದನು
            ಒಳಗೆ ಬಿಗಿವೆವೊ ಹೊರಗೆ ಕೃಷ್ಣನ
            ಸಿಲುಕಿಸುವೆವೋ ತಿಳಿಯೆ ಕೃಷ್ಣರು
            ಹಲಬರಾಗಿಹರಾರ ಕಟ್ಟುವೆವೆಂದರಾ ಖಳರು (೬೬)

ಈ ಭಾಗಗಳಲ್ಲಿರುವ ಅಭಿಪ್ರಾಯಸೌಮ್ಯವನ್ನೂ ಲಕ್ಷಿಸಬಹುದು.

ದೂತವಾಕ್ಯ:

ದುರ್ಯೋಧನಕಾಡಿನಲಿ ಚಿಕ್ಕಪ್ಪ ಬೇಟೆಯಾಡುತಲಿರಲು
ತಪ್ಪೆಸಗಿ ಮುನಿಯ ಶಾಪಕೆ ತಾನು ಸಿಲ್ಕಿದನು
ಅಂದಿನಿಂದಲು ತನ್ನ ಹೆಂಡಿರನು ತೊರೆದವನು
ಹೆರರ ಮಕ್ಕಳಿಗೆಂತು ತಂದೆಯಾಗುವನು?[8]

ಕುಮಾರವ್ಯಾಸ :

ಬೇಡುವರೆ ಪಾರ್ಥಿವರು ತಾವದ
ನಾಡಬಾರದು ತಮ್ಮ ಜನನವ
ನೋಡಿ ನುಡಿಯಲಿ ಪಾಂಡುಸುತರಲ್ಲೆಂದು ಹೇಳೆಂದ (.೩೮)

ಸಂಸ್ಕೃತ ನಾಟಕ ತನ್ನ ಪ್ರಭಾವಹಸ್ತವನ್ನು ಈ ಇಪ್ಪತ್ತನೆಯ ಶತಮಾನದವರೆಗೂ ಚಾಚಿದೆಯೆಂಬುದು ಸ್ವಾರಸ್ಯಕರ ಸಂಗತಿ. ಮಹಾಕವಿ ಕುವೆಂಪು ಅವರು ತಮ್ಮ ‘ಶ್ರೀ ರಾಮಾಯಣದರ್ಶನ’ದಲ್ಲಿ ಭಾಸನ ‘ಪ್ರತಿಮಾ ನಾಟಕ’ದಿಂದ ಕೆಲವು ಸೂಚನೆಗಳನ್ನು ಗ್ರಹಿಸಿದ್ದಾರೆ. ಇದನ್ನು ಕೈಕೆಯ ಪಾತ್ರ ಚಿತ್ರಣದಲ್ಲಿ ಕಾಣಬಹುದು.

ಭಾಸ ‘ಊರುಭಂಗ’ದಲ್ಲಿ ದುರ್ಯೋಧನನನ್ನು ಹೇಗೋ ಹಾಗೆ ‘ಪ್ರತಿಮಾ ನಾಟಕ’ದಲ್ಲಿ ಕೈಕೆಯನ್ನು ಹೊಸ ಬೆಳಕಿನಲ್ಲಿ ಕಂಡು ಕಂಡರಿಸಿದ್ದಾನೆ. ಅವನ ಕೈಕೆ ದುಷ್ಟೆಯಲ್ಲ, ಪಾಪಿಯಲ್ಲ; ದಶರಥ ವಚನಭ್ರಷ್ಟನಾಗದಂತೆ, ರಾಮನಿಗೆ ಕೇಡಡಸದಂತೆ ಮಾಡುವುದಕ್ಕಾಗಿ ಅವಳು ವಸಿಷ್ಠ ವಾಮದೇವಾದಿಗಳ ಮಾತಿನ ಪ್ರಕಾರ ‘‘ರಾಮನನ್ನು ಕಾಡಿಗೆ ಹದಿನಾಲ್ಕು ದಿನ ಕಳುಹಿಸು, ನನ್ನ ಮಗನಿಗೆ ಪಟ್ಟವಾಗಲಿ’’ ಎಂದು ದಶರಥನನ್ನು ಕೇಳಿಕೊಳ್ಳಬೇಕಾಗುತ್ತದೆ. ಆದರೆ ವಿಧಿ ಅವಳ ಬಾಯಿಂದ ‘ಹದಿನಾಲ್ಕು ದಿವಸ’ ಎಂಬುದರ ಬದಲು ‘ಹದಿನಾಲ್ಕು ವರುಷ’ ಎಂದಾಡಿಸುತ್ತದೆ. ಹೀಗಾಗಿ ಕೈಕೆ ರಾಮನ ವನವಾಸಕ್ಕೆ ಕಾರಣಳಾಗದೆ ಬರಿಯ ಕರಣವಾಗುತ್ತಾಳೆ.

ಕುವೆಂಪು ಅವರದೂ ಬೇರೊಂದು ರೀತಿಯಲ್ಲಿ ಇದೇ ನಿಲುವು. ಅವರ ರಾಮಾಯಣದಲ್ಲಿ ಕೈಕೆ ಮಂಥರೆಯರು ನಡೆದ ಘಟನಾವಳಿಗೆ ನಿಮಿತ್ತ ಮಾತ್ರರೆ ಹೊರತು ಸ್ವಯಂಕರ್ತೃಗಳಲ್ಲ. ಕೈಕೆಯ ಪಾತ್ರವನ್ನು ಸಹಾನುಭೂತಿ ತೀರ್ಥದಿಂದ ಅಭಿಷೇಕಿಸಿರುವ ಮಹಾಕವಿ ಪ್ರತಿಭೆ ಹೀಗೆ ಹಾಡುತ್ತದೆ:

            ಕೇಡುಂಟೆಪೇಳ್
ತಿರೆಯೊಳ್ಪಿಗಿಂಬಾದ ರಾಮನನುಜನ ತಾಯ್ಗೆ?
ಕಣ್ಗೆಡದಿರಂಜದಿರ್, ಪಾಪಿಗುದ್ಧಾರಮಿಹುದೌ
ಸೃಷ್ಟಿಯ ಮಹದ್ ವ್ಯೂಹ ರಚನೆಯೊಳ್, ಕೇಳ್, ತಾಯಿ;
ಬೆರಳಿಚದ ಕೂರ್ಮೊನೆಯ ಮಿಡಿವ ಹಿಂಸೆಗೆ ತಂತಿ ತಾಂ
ಬೀಣೆಯಿಂಚರವೀಯುವಂತೆ, ನೀನುಗುರಾಗಲಾ
ವೈಣಿಕ ವಿಧಿಯ ಕೈಗೆ, ಪೊಣ್ಮಿದತ್ತಿಂಪಾಯ್ತು ಮೇಣ್
ಭಗವದ್ ರಸಧಿಯಾಯ್ತು ರಾಮಾಯಣ ಬೃಹದ್ ಗೀತೆ!
                                    (ಶ್ರೀ ರಾ.., ಪು.೧೧೧)

ವಾಲ್ಮೀಕಿ ರಾಮಾಯಣದಲ್ಲಿ ದಶರಥನ ಸಾವಿನ ಸುದ್ದಿ ಭರತನಿಗೆ ಕೈಕೆಯಿಂದಲೆ ತಿಳಿಯುತ್ತದೆ; ‘ಪ್ರತಿಮಾ ನಾಟಕ’ದಲ್ಲಾದರೆ ಅದು ಊರ ಹೊರಗೆ, ಪ್ರತಿಮಾಗೃಹದಲ್ಲಿ ಪೂಜಾರಿಯಿಂದ ತಿಳಿಯುತ್ತದೆ. ಭಾಸ ಈ ಸನ್ನಿವೇಶವನ್ನು ಮನೋವೈಜ್ಞಾನಿಕವಾಗಿ ಕುಶಲತೆಯಿಂದ ಯೋಜಿಸಿದ್ದಾನೆ. ಕುವೆಂಪು ಅದನ್ನು ಸ್ವೀಕರಿಸಿದ್ದರೂ, ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ; ಮೂಲದ ನಾಟಕೀಯತೆ ಇಲ್ಲಿಲ್ಲ. ಅಯೋಧ್ಯೆಯ ಹೊರಗಿರುವ ದೇವಾಲಯವನ್ನು ಭರತ ಶತ್ರುಘ್ನರು ಹೊಗುತ್ತಾರೆ. ಮುಂದೆ-

ಪೊಕ್ಕುದೆ ತಡಂ, ಬೆಕ್ಕಸಂ
ಬಡಿದಂತೆವೊಲ್, ನಿಂದರಾಯಿರ್ವರುಂ ನಟ್ಟು
ಮುಂದಕೆವೆಯಿಕ್ಕದಾ ದಿಟ್ಟಿ. ವಿಗ್ರಹಗೃಹದಿ
ಕೀರ್ತಿಶೇಷ ದಿನೇಶ ವಂಶದ ನೃಪಾಲರಾ
ಪ್ರತಿಮೆಗಳೊಡನೆ ತುತ್ತತುದಿ ಮೂರ್ತಿ ತಾನಾಗಿ
ಮೆರೆದುದದೊ ದಶರಥಪ್ರತಿಮೆ ! ಓರೊರ್ವರಂ
ಮೊಗಂ ನೋಡಿದರ್ ಸೋದರರ್, ಮಾತುದೋರದಾ
ಭೀತಿ ಸಂಶಯ ದಗ್ಧಹೃದಯ ಸಂದಿಗ್ಧತೆಯ
ಮೌನ ಮುದ್ರೆಯಲಿ. (ಪು.೧೦೬)

ಕಡೆಯದಾಗಿ, ಒಂದು ವಿಷಯವನ್ನು ಮರೆಯಬಾರದು. ಪ್ರತಿಭಾಶಾಲಿಗಳ ಮೇಲೆ ಹಿಂದಿನವರ ಪ್ರಭಾವ ಬಿದ್ದರೆ ಅದು ವಂದ್ಯವೇ ಹೊರತು ನಿಂದ್ಯವಲ್ಲ. ಅವರು ಪೂರ್ವ ಸೂರಿಗಳ ಕೃತಿಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳುತ್ತಾರೆ; ಪ್ರಭಾವವನ್ನು ಅರಗಿಸಿಕೊಂಡು ಸ್ವಭಾವವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ. ‘‘ಅತ್ಯುನ್ನತ ಪ್ರತಿಭಾಶಾಲಿ ಅತ್ಯಂತ ಋಣಿಯಾದ ವ್ಯಕ್ತಿ’’ ಎಂಬ ಎಮರ್ಸನ್ನನ ಸೂಕ್ತಿಯನ್ನಿಲ್ಲಿ ನೆನೆಯಬಹುದು.[9]

ಯಾವುದೇ ಸಾಹಿತ್ಯದಲ್ಲಿ ನವೋದಯವುಂಟಾಗುವಾಗ, ಭಾಷಾಂತರಗಳು ಅದಕ್ಕೆ ನಾಂದಿಯಾಗುವಂತೆ ತೋರುತ್ತದೆ. ‘‘A great age of literature is perhaps always a great age of translation or follows it’’ ಎಂಬ ಎಜ್ರಾ ಪೌಂಡನ ಹೇಳಿಕೆ ಅರ್ಥವತ್ತಾಗಿದೆ. ಕನ್ನಡ ಸಾಹಿತ್ಯ ಇದಕ್ಕೆ ಅಪವಾದವಲ್ಲ. ಆಧುನಿಕ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳೂ ಅನುವಾದಗಳಿಂದಲೇ ಪ್ರಾರಂಭಗೊಂಡುವೆಂಬುದನ್ನು ಗಮನಿಸಬೇಕು. ನಾಟಕ ಸಾಹಿತ್ಯಕ್ಕೂ ಭಾಷಾಂತರ ಕೃತಿಗಳೆ ಹರಿಕಾರರಾದುವು. ಒಂದು ಕಡೆ ಸಂಸ್ಕೃತದಿಂದ, ಇನ್ನೊಂದು ಕಡೆ ಇಂಗ್ಲಿಷಿನಿಂದ ನಾಟಕಗಳನ್ನು ಭಾಷಾಂತರಿಸಲಾಯಿತು. ಪ್ರಕೃತ, ಸಂಸ್ಕೃತದಿಂದ ಕನ್ನಡಕ್ಕೆ ಇಳಿದುಬಂದ ನಾಟಕಗಳತ್ತ ಸ್ಥೂಲವಾಗಿ ದೃಷ್ಟಿ ಹರಿಸಬಹುದು. ಕನ್ನಡ ಸಾಹಿತ್ಯದ ಐಶ್ವರ್ಯವನ್ನು ಹೆಚ್ಚಿಸುವಲ್ಲಿ ಇವುಗಳ ಪಾತ್ರ ಸಣ್ಣದಲ್ಲ.

ಕನ್ನಡದ ಮೊಟ್ಟಮೊದಲ ಉಪಲಬ್ಧ ನಾಟಕ ‘ಮಿತ್ರವಿಂದಾ ಗೋವಿಂದ’; ಹದಿನೇಳನೆಯ ಶತಮಾನದಲ್ಲಿ ಸಿಂಗರಾರ್ಯ ರಚಿಸಿದ್ದು. ಇದು ಸ್ವತಂತ್ರನಾಟಕವಲ್ಲ, ಶ್ರೀ ಹರ್ಷನ ‘ರತ್ನಾವಳಿ’ಯ ರೂಪಾಂತರ. ಕವಿ ಶ್ರೀ ವೈಷ್ಣವನಾದುದರಿಂದ ವತ್ಸರಾಜನ ಕತೆ ಕೃಷ್ಣನ ಕತೆಯಾಗುವಂತೆ ಮಾಡಿದ್ದಾನೆ.

ಶ್ರೀ ಹರ್ಷೋ ನಿಪುಣಃ ಕವಿಃ ಪರಿಷದಪ್ಯೇಷಾ ಗುಣಗ್ರಾಹಿಣೀ
ಲೋಕೇ ಹಾರಿ ವತ್ಸರಾಜಚರಿತಂ ನಾಟ್ಯೇ ದಕ್ಷಾ ವಯಂ
ವಸ್ತ್ವೇಕೈಕಮಪೀಹ ವಾಂಛಿತಫಲಪ್ರಾಪ್ತೇಃ ಪದಂ ಕಿ ಪುನ
ರ್ಮದ್ಭಾಗ್ಯೋಪಚಯಾದಯಂ ಸಮುದಿತಃ ಸರ್ವೋ ಗುಣಾನಾಂ ಗಣಃ

ಎಂಬ ಪ್ರಸ್ತಾವನಾ ಪದ್ಯವನ್ನು

ಸರಸಂ ಶ್ರೀ ಸಿಂಗರಾರ್ಯಂ ಕವಿ ಸಭೆಯನಿತುಂ ಸದ್ಗುಣಗ್ರಾಹಿ ಕಟ್ಟ
ಚ್ಚರಿವೆತ್ತೀ ವಾಸುದೇವಂ ಕೃತಿಗಮರ್ದೊಡೆಯಂ ನಾಟ್ಯದೊಳ್ದಕ್ಷರಾಮುಂ
ಬೆರೆದಿಲ್ಲೀ ವಸ್ತುವೊಂದೊಂದೆಳಸಿದ ಪುರುಳಂ ಬೀಱುವೊಳ್ದಾಣಮಿನ್ನೇ
ನೊರೆವೆಂ ಭಾಪೆನ್ನ ಪುಣ್ಯೋದಯದೆ ಶುಭಗುಣಗ್ರಾಮಮೇ ಪೊಣ್ಮಿತೆಲ್ಲಂ

ಎಂದು ಮಾರ್ಪಡಿಸಿರುವುದನ್ನು ನೋಡಿದರೆ ಸಾಕು, ಸಿಂಗರಾರ್ಯನ ಉದ್ದೇಶ ಸುವಿದಿತವಾಗುತ್ತದೆ.

ಸಿಂಗರಾರ್ಯನ ತರ್ಜುಮೆ ತಕ್ಕಮಟ್ಟಿಗೆ ಚೆನ್ನಾಗಿಯೆ ಇದೆ. ದೃಷ್ಟಾಂತವಾಗಿ ಕೆಳಗಿನ ಪದ್ಯಗಳನ್ನು ನೋಡಬಹುದು :

ವಿಧಾಯಾಪೂರ್ವಪೂರ್ಣೇದುಮಸ್ಯಾ ಮುಖಮಭೂದ್ಧ್ರುವಂ
ಧಾತಾ ನಿಜಾಸನಾಂಭೋಜವಿನಿಮೀಲನ ದುಃಸ್ಥಿತಃ (.)

ಅರಲಿಚನಿವಳಾನನ ಹಿಮ
ಕರನಂ ವಿರಚಿಸೆ ಬೞಿಕ್ಕೆ ಮುಗುಳಾದುದು ತಾ
ವರೆಯದರೊತ್ತುವ ಮೊನೆಯೊಳ್
ಪಿರಿದಾಯಸಗೊಂಡು ಮಂಡಿಸಿರ್ಕು ಸತ್ಯಂ

ಪ್ರತ್ಯಗ್ರ ಮಜ್ಜನ ವಿಶೇಷ ವಿವಿಕ್ತ ಕಾಂತಿಃ
ಕೌಸುಂಭರಾಗರುಚಿರಸ್ಛುರದಂಶುಕಾನ್ತಾ
ವಿಭ್ರಾಜಸೇ ಮಕರ ಕೇತನಮರ್ಚಯನ್ತೀ
ಬಾಲಪ್ರವಾಲವಿಟಪಿಪ್ರಭವಾ ಲತೇವ (.೨೦)

ಕೆಂಗಾವಿಯಂಶುಕದಿನುಜ್ವಲಮಾಗಿಯಾಗಳ್
ತಾಂ ಗೆಯ್ದ ನೀರೆರೆತದಿಂ ಸ್ಫುಟಮಾಗಿ ಕಾಣಿ
ಪ್ಪಂಗಂಗಳಿಂ ಪವಳವಳ್ಳಿಯ ಬೊಂಬೆವೊಲ್ ಸಾ
ರಂಗಾಕ್ಷಿಯಂಗಜನನನರ್ಚನೆಗೆಯ್ದುಮೀಗಳ್

ದ್ವೀಪಾದನ್ಯಸ್ಮಾದಪಿಮಧ್ಯಾದಪಿ ಜಲನಿಧೇರ್ದಿಶೋಪ್ಯನ್ತಾತ್
ಆನೀಯ ಝಟಿತಿ ಘಟಯತಿ ವಿಧಿರಭಿಮತಮಭಿಮುಖೀಭೂತಃ (.)
ಕಡಲ ನಡುವಾದೊಡಂ ದೆಸೆ
ಗಡೆಯಾದೊಡಮಕ್ಕೆ ದಿವಮದಾದೊಡಮೇಂ ತಾಂ
ಪಡಿಮೊಗಮಾದಾ ಬಿದಿಯಾ
ಯೆಡೆಯಿಂ ತಂದೀಗುಮೆಳಸಿದರ್ಥಮನುರದಿಂ

ಮುಂದೆ, ೧೯ನೆಯ ಶತಮಾನದ ಕಡೆಯ ಪಾದದಲ್ಲಿ ಸಂಸ್ಕೃತ ನಾಟಕವಾಹಿನಿ ಕನ್ನಡಕ್ಕೆ ಹರಿಯತೊಡಗಿತು. ಮೈಸೂರರಸರಾದ ಚಾಮರಾಜ ಒಡೆಯರ ಪ್ರೋತ್ಸಾಹದಿಂದ ‘ಚಾಮರಾಜೇಂಧ್ರ ಕರ್ಣಾಟಕ ನಾಟಕ ಸಭಾ’ ೧೮೮೨ರಲ್ಲಿ ಸ್ಥಾಪನೆಗೊಂಡಿತು; ಇಂಗ್ಲಿಷಿನಿಂದ, ಸಂಸ್ಕೃತದಿಂದ ಹಲವಾರು ನಾಟಕಗಳು ಅನುವಾದಿತವಾದುವು. ಬಸವಪ್ಪಶಾಸ್ತ್ರಿಗಳು ಸಂಸ್ಕೃತದಿಂದ ಅನೇಕ ನಾಟಕಗಳನ್ನು ತಂದರು; ಅವುಗಳಲ್ಲಿ ಮೌಳಿಭೂತವಾಗಿ ನಿಲ್ಲತಕ್ಕದ್ದು ಅವರ ‘ಅಭಿಜ್ಞಾನ ಶಾಕುಂತಲ’ ನಾಟಕದ ಅನುವಾದ.

‘ಕರ್ಣಾಟಕ ಶಾಕುಂತಲ ನಾಟಕಂ’ ಬಸವಪ್ಪಶಾಸ್ತ್ರಿಗಳಿಗೆ ‘ಅಭಿನವ ಕಾಳಿದಾಸ’ ಎಂಬ ಸಾರ್ಥಕವಾದ ಬಿರುದನ್ನು ತಂದುಕೊಟ್ಟ ಉತ್ಕೃಷ್ಟವಾದ ಅನುವಾದ; ಅದರಲ್ಲಿ ಅನುವಾದದ ಆದರ್ಶ ಪೂರ್ತಿಯಾಗಿ ಸಾಧಿತವಾಗಿದೆ. ಅದು ಬರಿಯ Translation ಅಲ್ಲ. Transcreation ಎನ್ನಬಹುದು. ‘ಶಾಕುಂತಲ’ ನಾಟಕದ ಚತುರ್ಥಾಂಕದಲ್ಲಿ ಬರುವ ಪ್ರಸಿದ್ಧವಾದ ‘ಶ್ಲೋಕ ಚತುಷ್ಟಯ’ವನ್ನು ಬಸವಪ್ಪಶಾಸ್ತ್ರಿಗಳು ಹೇಗೆ ಭಾಷಾಂತರಿಸಿದ್ದಾರೆಂಬುದನ್ನು ಪರಿಭಾವಿಸಿದರೆ ಅವರ ಭಾಷಾಂತರ ದಕ್ಷತೆ ವ್ಯಕ್ತವಾಗುತ್ತದೆ.

.        ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ ಸಂಸ್ಪೃಷ್ಟಮುತ್ಕಂಠಯಾ
            ಕಂಠ ಸ್ತಂಭಿತ ಬಾಷ್ಪವೃತ್ತಿ ಕಲುಷಶ್ಚಿಂತಾಜಡಂ ದರ್ಶನಂ
            ವೈಕ್ಲವ್ಯಂ ಮಮ ತಾವದೀದೃಶಮಿದಂ ಸ್ನೇಹಾದರಣ್ಯೌಕಸಃ
            ಪೀಡ್ಯಂತೇ ಗೃಹಿಣಃ ಕಥಂ ನು ತನಯಾ ವಿಶ್ಲೇಷದುಃಖೈರ್ನವೈಃ

            ಕಳವಳವಾಂತುದೆನ್ನೆರ್ದೆ ಶಕುಂತಳೆ ಪೋದಪಳೆಂದು ಕಂಠಮು
            ಮ್ಮಳಿಸುವುದೊತ್ತುವುದಶ್ರು ಭರದಿಂ ಜಡಮಾದುದು ದೃಷ್ಟಿ ಚಿಂತೆಯಿಂ
            ದಳಲಿನಿತಾಗೆ ಕಾಡ ಮನುಜಂಗೆನಗಂ ಕಡುನೇಹದಿಂದಮಿ
            ನ್ನುಳಿದ ಗೃಹಸ್ಥರಾತ್ಮಭವೆಯಂ ಕಳುಪುತ್ತಕಟೆಂತಳಲ್ವರೋ[10]

.        ಪಾತುಂನ ಪ್ರಥಮಂ ವ್ಯವಸ್ಯತಿ ಜಲಂ ಯುಷ್ಮಾಸ್ವಪೀತೇಷು ಯಾ
            ನಾಧತ್ತೇ ಪ್ರಿಯ ಮಂಡನಾಪಿ ಭವತಾಂ ಸ್ನೇಹೇನ ಯಾ ಪಲ್ಲವಂ
            ಆದ್ಯೇ ವಃ ಕುಸುಮಪ್ರಸೂತಿಸಮಯೇ ಯಸ್ಯಾ ಭವತ್ಯುತ್ಸವಃ
            ಸೇಯಂ ಯಾತಿ ಶಕುಂತಲಾ ಪತಿಗೃಹಂ ಸರ್ವೈರನುಜ್ಞಾಯತಾಂ
            ಜಲವನದಾವಳೀಂಟಳೆರೆದಲ್ಲದೆ ನಿಮ್ಮಯ ಪಾತೆಗಂಬುವಂ
            ತಳಿರ್ಗಳ ಕೊಯ್ಯಳಾವಳೊಲವಿಂ ಮಿಗೆ ಸಿಂಗರದಾಸೆಯುಳ್ಳೊಡಂ
            ಅಲರ್ಗಳ ತಾಳೆ ನೀವು ಮೊದಲುತ್ಸವವಾಂತಪಳಾವಳಾ ಶಕುಂ
            ತಳೆ ಪತಿಸದ್ಮಕ್ಕೆದಿದಪಳಾಕೆಗನುಜ್ಞೆಯನೀವುದೆಲ್ಲರುಂ

.        ಅಸ್ಮಾನ್ ಸಾಧು ವಿಚಿಂತ್ಯ ಸಂಯಮಧನಾನುಚ್ಚೈಃ ಕುಲಂ ಚಾತ್ಮನ
            ಸ್ತ್ವಯ್ಯಸ್ಯಾಃ ಕಥಮಪ್ಯಬಾಂಧವಕೃತಾಂ ಸ್ನೇಹಪ್ರವೃತ್ತಿಂ ಚೊತಾಂ
            ಸಾಮಾನ್ಯ ಪ್ರತಿಪತ್ತಿಪೂರ್ವಕಮಿಯಂ ದಾರೇಷು ದೃಶ್ಯಾ ತ್ವಯಾ
            ಭಾಗ್ಯಾಯತ್ತಮತಃಪರಂ ಖಲು ತದ್ವಾಚ್ಯಂ ವಧೂಬಂಧುಭಿಃ
            ಪಿರಿದುಂ ಚಿಂತಿಸಿ ಸಂಯಮಾರ್ಥರೆನಿಪೆಮ್ಮಂ ಮೇಣ್ ಭವದ್ವಂಶದೆ
            ಳ್ತರಮಂ ನಿನ್ನೊಳಗೀಕೆ ತಾನೆಯೊಲವೆತ್ತಾ ಪಾಂಗುಮಂ ಪೆಂಡಿರೊಳ್
            ಸರಿಗಂಡೀಕೆಯ ನೀಂ ಬರ್ದುಕಿಪುದು ಭಾಗ್ಯಾಧೀನಮಿನ್ನಿಂತರಿಂ
            ಪೆರತೆಲ್ಲಂ ಬಗೆಯಲ್ಕದಂ ನುಡಿವುದಲ್ಲಂ ದಲ್ ವಧೂಬಂಧುಗಳ್

.        ಶುಶ್ರೂಷಸ್ವ ಗುರೂನ್ ಕುರು ಪ್ರಿಯಸಖೀ ವೃತ್ತಿಂ ಸಪತ್ನೀಜನೇ
            ಭತುರ್ವಿಪ್ರಕೃತಾಪಿ ರೋಷಣತಯಾ ಮಾಸ್ಮ ಪ್ರತೀಪಂ ಗಮಃ
            ಭೂಯಿಷ್ಠಂ ತವ ದಕ್ಷಿಣಾಪರಿಜನೇ ಭಾಗ್ಯೇಷ್ವನುತ್ಸೇಕಿನೀ
            ಯಾಂತ್ಯೇವಂ ಗೃಹಿಣೀಪದಂ ಯುವತಯೋ ವಾಮಾ ಕುಲಸ್ಯಾಧಯಃ

            ಪಿರಿಯರ ಸೇವೆಗೆಯ್ ಸವತಿಯರ್ಕರೊಳಿಷ್ಟ ವಯಸ್ಯೆಯಂದದಿಂ
            ದಿರು ಪತಿಯೊರ್ಮೆ ಹೇವಗೊಳಿಸಲ್ ಮುಳಿಸಿಂ ಪ್ರತಿಕೂಲೆಯಾಗದಿರ್
            ಪರಿಜನವಂ ಕರಂ ಸಲಹು ಭಾಗ್ಯದೆ ಬಾಗಿರು ಪೆಣ್ಗಳಿಂತಿರಲ್
            ಗರತಿಯರಪ್ಪರಿಂತಿರದರನ್ವಯಕಾಧಿಯನುಂಟುಮಾಳ್ಪರೌ

[1] ಅದೇ, ಪು.೭

[2] ‘ಸಂಸ್ಕೃತ ನಾಟಕ’, ಪು.೨೧೮

[3] ಎಸ್.ಎನ್.ನರಹರಯ್ಯನವರ ಅನುವಾದ

[4] ದೇಜಗೌ, ಲೀಲಾವತೀ ಪ್ರಬಂಧಂ, ಪೀಠಿಕೆ, ಪು.XXX

[5] ಇದು ವ್ಯಾಸಭಾರತದಲ್ಲಿಲ್ಲ.

[6] ಎಲ್. ಗುಂಡಪ್ಪ, ‘ಭಾಸನ ಏಕಾಂಕ ನಾಟಕಗಳು’, ಪು.೩೩

[7] ಅದೇ, ಪು.೩೮-೩೯

[8] ಅದೇ, ಪು.೩೪-೩೫

[9] ಮೊದಲೇ ಹೇಳಿದಂತೆ, ಕನ್ನಡ ಕಾವ್ಯಗಳ ಮೇಲೆ ಸಂಸ್ಕೃತ ರೂಪಕಗಳ ಪ್ರಭಾವಕ್ಕೆ ಇಲ್ಲಿ ಕೆಲವೇ ಕೆಲವು ನಿದರ್ಶನಗಳನ್ನು ಎತ್ತಿಕೊಡಲಾಗಿದೆ. ಈ ದಿಶೆಯಲ್ಲಿ ನಡೆಯಬೇಕಾದ ಕೆಲಸ ದೊಡ್ಡದು. ಉದಾಹರಣೆಗೆ, ಕ್ಷೇಮೀಶ್ವರನ ‘ಚಂಡಕೌಶಿಕ’ದ ಪ್ರಭಾವ ರಾಘವಾಂಕನ ‘ಹರಿಶ್ಚಂದ್ರಕಾವ್ಯ’ದ ಮೇಲೆ, ವಿಶಾಖದತ್ತನ ‘ಮುದ್ರಾರಾಕ್ಷಸ’ದ ಪ್ರಭಾವ ಕೆಂಪು ನಾರಾಯಣನ ‘ಮುದ್ರಾಮಂಜೂಷ’ದ ಮೇಲೆ, ಭವಭೂತಿಯ ‘ಉತ್ತರರಾಮಚರಿತ’ದ ಪ್ರಭಾವ ಜೈಮಿನಿ ಭಾರತದ ಸೀತಾವನವಾಸ ಪ್ರಕರಣದ ಮೇಲೆ ಮತ್ತು ಮುದ್ದಣದ ‘ರಾಮಾಶ್ವಮೇಧ’ದ ಮೇಲೆ ಹೇಗೆ ಪ್ರವರ್ತಿಸಿದೆಯೆಂಬುದು ಅಧ್ಯಯನ ಯೋಗ್ಯ.

[10] ಮೂಲದಲ್ಲಿರುವ ‘ಅದ್ಯ’ (ಇಂದು) ಎಂಬ ಮುಖ್ಯವಾದ ಮಾತು ಅನುವಾದದಲ್ಲಿಲ್ಲ. ಶಕುಂತಳೆ ಇಂದು ಹೋಗುತ್ತಿದ್ದಾಳೆ ಎಂಬುದರಿಂದ ಕಣ್ವರಿಗೆ ಇಷ್ಟು ದುಃಖ; ಅವಳು ಎಂದೋ ಹೋಗುವುದಾದರೆ ಆಗ ಇಷ್ಟು ವ್ಯಥೆಯುಂಟಾಗಲಾರದು. ಎಷ್ಟೇ ಶ್ರೇಷ್ಠ ಭಾಷಾಂತರವಾದರೂ ಮೂಲದ ಪರಿಪೂರ್ಣತೆಯನ್ನು ದಕ್ಕಿಸಿಕೊಳ್ಳಲಾರದೆನಿಸುತ್ತದೆ. ಈ ದೃಷ್ಟಿಯಿಂದ ಭಾಷಾಂತರಗಳೆಲ್ಲ ಅಂಶಾವತಾರಗಳೇ ಹೊರತು ಪೂರ್ಣಾವತಾರ ಗಳಲ್ಲ.