‘‘ಕನ್ನಡ ಸಾಹಿತ್ಯಕ್ಕೆ ಸಂಸ್ಕೃತ ಸಾಹಿತ್ಯವೇ ಪ್ರೇರಕ, ಪೋಷಕ, ಗುರು’’[1] ಎಂಬ ಮಾತಿನಲ್ಲಿ ತಥ್ಯವಿದೆ. ಆದರೆ ‘ಶಿಷ್ಯಾದಿಚ್ಛೇತ್ ಪರಾಜಯಂ’ ಎಂಬ ತನ್ನ ಸೂತ್ರವನ್ನು ಸಂಸ್ಕೃತ ತನಗೇ ಅನ್ವಯಿಸಿಕೊಳ್ಳಬೇಕು, ಹಾಗೆ ಭರ್ಜರಿಯಾಗಿ ಬೆಳೆದಿದೆ ಕನ್ನಡ ಸಾಹಿತ್ಯ. ಸಂಸ್ಕೃತದ ಸಾಲವನ್ನು ಅದು ಬಡಿಸಹಿತ ಮರಳಿಸಿ ಋಣಮುಕ್ತವಾಗಿದೆ; ಅನ್ಯ ಋಣಕ್ಕಿಂತ ಸ್ವಂತ ಗುಣ ಅದರಲ್ಲಿ ಮಿಗಿಲು; ಅದು ಕಡ ಪಡೆದುದಕ್ಕಿಂತ ಕಡೆದು ಪಡೆದುದೇ ಹೆಚ್ಚು. ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ ವಾಙ್ಮಯದ ಪ್ರಭಾವವನ್ನು ಕುರಿತು ಯೋಚಿಸುವಾಗ ಈ ಸಂಗತಿಯನ್ನು ಎಳ್ಳಷ್ಟೂ ಮರೆಯಲಾಗದು.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನಾಟಕಗಳು ಏಕಿಲ್ಲ ಎಂಬುದಕ್ಕೆ ವಿವರಣೆ ಕೊಡುವುದು ಸುಲಭಸಾಧ್ಯವಲ್ಲ. ಕನ್ನಡದಲ್ಲಿ ಕಾವ್ಯರಚನೆ ಮೊದಲಾಗುವುದಕ್ಕೆ ಹಿಂದೆಯೆ ಸಂಸ್ಕೃತದಲ್ಲಿ ನಾಟಕೊಪರಂಪರೆ ಶ್ರೀಮಂತವಾಗಿ ಕಣ್ಣು ಕೋರೈಸುವಂತೆ ಬೆಳೆದಿತ್ತು; ‘‘ಕಾವ್ಯೇಷು ನಾಟಕಂ ರಮ್ಯಂ’’ ಎಂಬ ಉಕ್ತಿ ಬೇರೆ ಪ್ರಸಿದ್ಧವಾಗಿತ್ತು. ಆದರೂ, ಸಂಸ್ಕೃತ ಕಾವ್ಯಗಳನ್ನು ಅನುಕರಿಸಿದ, ಅನುಸರಿಸಿದ, ಭಾಷಾಂತರಿಸಿದ ಕನ್ನಡ ಕವಿಗಳು ಸಂಸ್ಕೃತ ನಾಟಕಗಳನ್ನೇಕೆ ಭಾಷಾಂತರಿಸಲಿಲ್ಲ ಅಥವಾ ಅವುಗಳನ್ನು ಆಧರಿಸಿ, ಮಾದರಿಯಾಗಿಟ್ಟು ಕೊಂಡು ಸ್ವತಂತ್ರ ನಾಟಕಗಳನ್ನೇಕೆ ಕಟ್ಟಲಿಲ್ಲ ಎಂಬ ಪ್ರಶ್ನೆ ಬಹುಮಟ್ಟಿಗೆ ನಿರುತ್ತರವಾಗಿ ನಿಲ್ಲುತ್ತದೆ.

ನಾಟಕ ರಚನೆಯ ಕಡೆಗೆ ಕನ್ನಡ ಕವಿಗಳು ಮನಸ್ಸು ಕೊಡದುದಕ್ಕೆ ಒಂದು ಕಾರಣವನ್ನು ಇಲ್ಲಿ ಊಹಿಸಬಹುದು. ನಾಟಕೊರಚನೆ ಕಾವ್ಯರಚನೆಯಂತಲ್ಲ; ಕವಿಯ ಮೇಲೆ ಅನೇಕ ನಿರ್ಬಂಧಗಳನ್ನದು ವಿಧಿಸುತ್ತದೆ; ಪ್ರತಿಭೆಯ ಮುಕ್ತ ವಿಲಾಸಕ್ಕೆ ಅವಕಾಶ ಕೊಡುವುದಿಲ್ಲ. ಆದ್ದರಿಂದ, ನಮ್ಮವರು ಸೀಮಿತವಾದ ಅವಕಾಶಗಳನ್ನುಳ್ಳ ನಾಟಕ ಪ್ರಕಾರದ ಗೊಡವೆಗೇ ಹೋಗದೆ, ಪ್ರತಿಭೆ ಪಾಂಡಿತ್ಯಗಳ ಪ್ರದರ್ಶನಕ್ಕೆ ಪರಮಾವಧಿ ಆಸ್ಪದವಿರುವ ಕಾವ್ಯಪ್ರಕಾರವನ್ನೇ ಪಟ್ಟಾಗಿ ಹಿಡಿದುಕೊಂಡಂತೆ ತೋರುತ್ತದೆ. ಬರೆದರೆ ಬೃಹತ್ತಾದ ‘ಮಹಾಕಾವ್ಯ’ವನ್ನೆ ಬರೆಯಬೇಕು ಎಂಬ ಮಹತ್ವಾಕಾಂಕ್ಷೆ (ambition) ಕನ್ನಡ ಕವಿಗಳದು. ಅದರೊಳಗೇ ಅವರು ಸಾಧ್ಯವಾದಮಟ್ಟಿಗೆ ನಾಟಕೀಯತೆಯನ್ನು ಮೆರೆಯುತ್ತಾರೆ. ‘ಮಹಾಕಾವ್ಯ’ವೆ ಅವರಿಗೆ ಅತ್ಯುಚಿತ ಮಾಧ್ಯಮವಾಗಿ ತೋರಿದ್ದಿರಬೇಕು; ಅದು ನಾಟಕವನ್ನೂ ಒಳಗೊಂಡು ಮುಂದೆ ಹೋಗುವ ವ್ಯಾಪಕವಾದ, ಸರ್ವಮಾನ್ಯವಾದ ಪ್ರಕಾರ ಎಂಬುದು ಬಹುಶಃ ಅವರ ನಿಲುವು.[2] ಹೀಗಾಗಿ, ನಾಟಕಗಳನ್ನು ರಚಿಸದಿದ್ದುದು ಅವರ ಪಾಲಿಗೆ ಒಂದು ಕೊರತೆಯಾಗಿ ಕಂಡಿರಲಿಕ್ಕಿಲ್ಲ.[3]

ಕಾರಣ ಏನೇ ಇರಲಿ, ಕನ್ನಡದಲ್ಲಿ ಹಿಂದೆ ಸ್ವತಂತ್ರ ನಾಟಕಗಳು ಹುಟ್ಟಲಿಲ್ಲ; ಸಂಸ್ಕೃತ ನಾಟಕಗಳು ಅನುವಾದಗೊಳ್ಳಲೂ ಇಲ್ಲ.[4] ಆದರೆ ಅನೇಕ ಕನ್ನಡ ಕಾವ್ಯಗಳ ಮೇಲೆ ಸಂಸ್ಕೃತ ನಾಟಕಗಳ ಪ್ರಭಾವ ನಿಚ್ಚಳವಾಗಿ ಮೂಡಿ ಮುದ್ರೆಯೊತ್ತಿರುವುದು ಕುತೂಹಲಕರವಾದ ವಿಚಾರ. ಆ ಪ್ರಭಾವಶ್ರೀ ವಿಸ್ತೃತ ಸಂಶೋಧನೆಗೆ ಯೋಗ್ಯವಾದ ವಿಷಯ. ಇಲ್ಲಿ ಅದರ ಕೂಲಂಕಷ ಪರಿಶೀಲನೆಗೆ ಕೈಹಾಕದೆ ದಿಗ್ದರ್ಶನಪ್ರಾಯವಾಗಿ ಕೆಲವಂಶಗಳನ್ನು ಅವಲೋಕಿಸುವ ಪ್ರಯತ್ನವಿದೆ.

ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ ನಾಟಕಗಳ ಪ್ರಭಾವ ಎರಡು ಮೂರು ಬಗೆಗಳಲ್ಲಿ ಆಗಿದೆ. ಸಂಸ್ಕೃತ ನಾಟಕದ ಮತ್ತು ಕನ್ನಡ ಕಾವ್ಯದ ವಸ್ತು ಒಂದೇ ಆಗಿದ್ದಲ್ಲಿ ಕಥಾಸಂವಿಧಾನದ ಮೇಲೆ ಮತ್ತು ಪಾತ್ರ ಚಿತ್ರಣದ ಮೇಲೆ ಮೂಲದ ನೆರಳು ಅನಿವಾರ್ಯವಾಗಿ ಬಿದ್ದಿರುತ್ತದೆ; ಮೂಲದ ಕೆಲಭಾಗಗಳ ಯಥಾವತ್ತಾದ ಅನುವಾದವೊ ಭಾವಾನುವಾದವೊ ಕಂಡುಬರುವುದೂ ಉಂಟು. ಎರಡರ ವಸ್ತುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿದ್ದಾಗ, ಮೂಲದ ವರ್ಣನಾತ್ಮಕವಾದ ಅಥವಾ ಕಥಾ ಪ್ರಸಕ್ತಿಯಿಲ್ಲದ ಬಿಡಿಪದ್ಯಗಳ ಭಾವವನ್ನು ಕನ್ನಡ ಕವಿ ಸ್ವೀಕರಿಸಿರಬಹುದು. ಇಂಥ ಕಡೆಗಳಲ್ಲೆಲ್ಲ ಸ್ವೀಕರಣ ಪ್ರತಿಜ್ಞಾಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ನಡೆದಿರುತ್ತದೆಂದು ಹೇಳುವುದು ಕಷ್ಟ; ಸಂಸ್ಕೃತ ಕೃತಿಗಳ ಪ್ರಭಾವ ಅಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿರಲೂಬಹುದು. ಈಚೆಗೆ, ಮುಖ್ಯವಾದ ಸಂಸ್ಕೃತ ನಾಟಕಗಳೆಲ್ಲ ಕನ್ನಡಕ್ಕೆ ನೇರವಾಗಿ ಅನುವಾದಗೊಂಡಿವೆ; ಈ ಅನುವಾದ ಪರಂಪರೆಯನ್ನೂ ವಿಶಾಲಾರ್ಥದಲ್ಲಿ ಪ್ರಭಾವಪ್ರಕ್ರಿಯೆಗೆ ನಿದರ್ಶನವಾಗಿ ಒಡ್ಡಬಹುದು.

ಮೊದಲು ಆದಿಕವಿಯಾದ ಪಂಪನ ಕಾವ್ಯಗಳನ್ನೆ ನೋಡೋಣ. ಅವನ ಭಾರತದ ಮೇಲೆ ಭಾಸನ ‘ಊರುಭಂಗ’ದ ಹಾಗೂ ಭಟ್ಟ ನಾರಾಯಣನ ‘ವೇಣೀಸಂಹಾರ’ದ ಪ್ರಭಾವ ತಕ್ಕಮಟ್ಟಿಗಿದೆ.

ದುರ್ಯೋಧನನ ಬಾಳಿನ ಅಂತ್ಯವನ್ನು ‘ಊರುಭಂಗ’ದ ವಸ್ತುವನ್ನಾಗಿ ಮಾಡಿಕೊಂಡಿರುವ ಭಾಸ, ಅವನ ಪಾತ್ರವನ್ನು ಉದಾತ್ತೀಕರಿಸಲು ಯತ್ನಿಸಿದ್ದಾನೆ. ಇಂತಹವನು ಭಾಸನ ದುರ್ಯೋಧನ :

ವೀರ್ಯಕಾಲಯನಿವನು, ವಿವಿಧ ರತ್ನ ವಿಚಿತ್ರ
ಮೌಲಿಯುತನಭಿಮಾನಿ, ತೇಜಸ್ವಿ, ಸಾಹಸಿಯು,
ವಿನಯವಂತನು….[5]

ಸಾಯುವ ಮುನ್ನ ಅವನು ಪಾಂಡವರ ಮೇಲಿನ ವೈರವನ್ನು ಮರೆತು, ತಾನು ಹಿಂದೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ; ತನಗೊದಗಿದ ಗತಿ ಧರ್ಮಸಮ್ಮತವೆಂದು ಭಾವಿಸುತ್ತಾನೆ. ಅಶ್ವತ್ಥಾಮನಿಗೆ ಅವನು ಹೇಳುವ ಮಾತುಗಳಿವು:

ಸ್ಮರಿಸು ಜೂಜಿನಲಂದು ದ್ರೌಪದಿಯ ಮುಡಿವಿಡಿದು
ಸಭೆಗೆಳಸಿ ತಂದುದನು. ಬಳಿಕ ಚಿಕ್ಕವನೆಂದು
ನೋಡದಭಿಮನ್ಯುವನು ರಣದಿ ಕೊಂದುದನು.
ಸ್ಮರಿಸು ಪಾಂಡವರೊಡನೆ ಪಗಡೆಯಾಟವನಾಡಿ
ಸೋಲಿಸುತ ನಾವವರ ಕಾಡಿಗಟ್ಟಿದುದ;
ಸ್ಮರಿಸು ವನಮೃಗಗಳಂತವರು ಬಾಳಿದುದ.
ಅವರೆನಗೆ ಮಾಡಿದುದನಿದರೊಡನೆ ಹೋಲಿಸಲು
ಅತ್ಯಲ್ಪವೆನಿಸುವುದು. ಗುರುಪುತ್ರ, ಮನ್ನಿಸವರ[6]

ತನ್ನನ್ನು ಕೊಂದವನು ಭೀಮನಲ್ಲ, ಅವನ ಗದೆಯಲ್ಲಿ ಅಡಗಿದ್ದ ಶ್ರೀಹರಿ ಎಂಬುದು ಅವನ ನಂಬಿಕೆ. ಈ ದುರ್ಯೋಧನ ಕಡೆಗೆ ವೀರಸ್ವರ್ಗವನ್ನಡರಿದಂತೆ ಭಾಸನ ನಿರೂಪಣೆ.

ದುರ್ಯೋಧನನನ್ನು ಹುಡುಕಿಕೊಂಡು ಅವನ ತಂದೆತಾಯಿಯರು ರಣರಂಗಕ್ಕೆ ಬರುವ ಸಂಗತಿ ವ್ಯಾಸಭಾರತದಲ್ಲಿಲ್ಲ; ‘ಊರುಭಂಗ’ದಲ್ಲಿ ಹೊಸದಾಗಿ ಕಲ್ಪಿತವಾಗಿದೆ. ಇದನ್ನು ಭಟ್ಟನಾರಾಯಣ, ಪಂಪ, ರನ್ನರು ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ.[7] ಈ ಸಂದರ್ಭದಲ್ಲಿ ಕರುಣ ರಸದ ಆವಿಷ್ಕಾರಕ್ಕೆ ಎಲ್ಲರಿಗೂ ಸದವಕಾಶ ಸಿಕ್ಕಿದೆ.

‘ಊರುಭಂಗ’ದಿಂದ ಪ್ರೇರಿತನಾದ ಭಟ್ಟನಾರಾಯಣ ‘ವೇಣೀ ಸಂಹಾರ’ದಲ್ಲಿ ದುರ್ಯೋಧನನ ಕ್ಷಾತ್ರ, ಚಲ, ಅಭಿಮಾನ, ಸೋದರಬಂಧುಬಾಂಧವರ ವಿಷಯದಲ್ಲಿ ಅವನಿಗಿರುವ ಪ್ರೀತಿ, ಜೀವಿತನಿರಪೇಕ್ಷೆ ಇವುಗಳನ್ನು ಚೆನ್ನಾಗಿ ಪ್ರಕಟಗೊಳಿಸಿದ್ದಾನೆ. ಕೌರವನ ಮಾತುಗಳಲ್ಲಿ ಆತ್ಮಧಿಕ್ಕಾರದ, ಪಶ್ಚಾತ್ತಾಪದ ಎಳೆಯೂ ಸೇರಿಕೊಂಡಿದೆ. ಆದರೂ ಅವನು ಸಂಧಿಗೊಪ್ಪದ ಅಭಿಮಾನಿ :

ಸೋದರ್ಯಂ ಹತನಾದೊಡೊರ್ವನಳಿಯಲ್ ಪಾರ್ಥಂ ಪವಣ್ಗೆಯ್ದಿಹಂ
ಖೇದಂಗೊಳ್ಳದೆ ಸಾಯೆ ನೂರ್ವರನುಜರ್ದುರ್ಯೋಧನಂ ಬಾಳ್ದಿಹಂ
ದುಶ್ಶಾಸನ ರಕ್ತವೀಂಟಿದರಿಯಂ ಸೀಳ್ದೀ ಗದಾಘಾತದಿಂ
ದಾದಂ ದಿಗ್ಬಲಿಯೀಯದೇ ಕೃಪಣನಂತೀ ಸಂಧಿಯಂ ಗೆಯ್ವೆನೇಂ(.)[8]

ಭಾಸ, ಭಟ್ಟನಾರಾಯಣ ಇಬ್ಬರಿಂದಲೂ ಪ್ರಭಾವಿತನಾಗಿರುವ ಪಂಪ ದುರ್ಯೋಧನ ಪಾತ್ರವನ್ನು ಹೆಚ್ಚು ಸಂಕೀರ್ಣವಾಗಿ ಕಂಡರಿಸಿದ್ದಾನೆ; ಭಾಸನಲ್ಲಿ ಕಂಡುಬರುವ ಸರಳತೆ ಅವನಲ್ಲಿಲ್ಲವೆಂಬುದು ಗಮನಾರ್ಹ. ಪಂಪನ ದುರ್ಯೋಧನನೂ ‘ಅಭಿಮಾನಧನ’ (೧೩.೯೭); ಮೂಲತಃ ಅವನು ದುಷ್ಟನೇ ಆದರೂ ಕಡೆಕಡೆಗೆ ಸತ್ವಗುಣದ ಸ್ಪರ್ಶವನ್ನು ಪಡೆದುಕೊಳ್ಳುತ್ತಾನೆ, ಪರಿಪಾಕ ತೋರುತ್ತಾನೆ. ಊರುಭಂಗ, ವೇಣೀಸಂಹಾರಗಳಲ್ಲಿರುವ ದುರ್ಯೋಧನನ ಪಶ್ಚಾತ್ತಾಪದ ಗೆರೆ ಪಂಪಭಾರತದಲ್ಲಿ ದಟ್ಟವಾಗಿ ಪರಿಣಮಿಸಿದೆ. ಭಟ್ಟನಾರಾಯಣನ ದುರ್ಯೋಧನನಿಗೆ ಭೀಮನ ಮೇಲೆ ಸೇಡು ತೀರಿಸಿಕೊಳ್ಳ ಬೇಕೆಂಬ ಚಲ; ಪಂಪನ ದುರ‍್ಯೋಧನನ ಚಲಕ್ಕಾದರೆ ಭೀಮಾರ್ಜುನರಿಬ್ಬರೂ ಗುರಿ. ಪಂಪನ ದುರ್ಯೋಧನ ಯುಧಿಷ್ಠಿರನ ವಿಷಯದಲ್ಲಿ ಸೌಹಾರ್ದವನ್ನು ವ್ಯಕ್ತಪಡಿಸಿ, ಅಷ್ಟರಮಟ್ಟಿಗೆ ಉದಾತ್ತ ವ್ಯಕ್ತಿಯಾಗಿ ಕಂಡುಬರುತ್ತಾನೆ. ಭೀಮ ಪಾರ್ಥರನ್ನು ಕೊಂದ ಬಳಿಕ ಯುಧಿಷ್ಠಿರನೊಡನೆ ಕೂಡಿ ಬಾಳಲು ಅವನು ಸಿದ್ಧ. ಅವರಿಬ್ಬರನ್ನು ಬಿಟ್ಟರೆ ಉಳಿದವರು ಅವನ ಪಾಲಿಗೆ ನಿರ್ದೋಷಿಗಳು. ಕರ್ಣನನ್ನು ನುಂಗಿದ ಈ ದ್ರೋಹಿ ನೆಲದಲ್ಲಿ ಅವನಿಗೆ ಆಸೆಯಿಲ್ಲ; ಒಂದು ವೇಳೆ ಗೆದ್ದರೂ ಇದನ್ನು ನಾನು ಆಳುವುದಿಲ್ಲ ಎಂದು ಅವನಾಡುವ ಮಾತು ಅವನ ವ್ಯಕ್ತಿತ್ವಕ್ಕೆ ಹೊಸ ಆಯಾಮವೊಂದನ್ನು ತಂದುಕೊಡುತ್ತದೆ.

ಪಂಪನ ದುರ್ಯೋಧನನಲ್ಲಿ ಕ್ಷಾತ್ರಾಭಿಮಾನದ ಜೊತೆಜೊತೆಯಲ್ಲೆ ವಿರಕ್ತಿಯೂ ಹುರಿಗೊಳ್ಳುವುದನ್ನು ನೋಡಬಹುದು; ಅವನು ಅದೃಷ್ಟವಾದಿಯೂ ಆಗಿದ್ದಾನೆ. ಪಂಪ ಸ್ಪಷ್ಟವಾಗಿಯೇ ಹೇಳಿದ್ದಾನೆ, ದುರ್ಯೋಧನ ‘‘ಸಂಸಾರಾಸಾರತೆಯನಱಿದ’’ವನೆಂದು. ಕುರುಕ್ಷೇತ್ರದ ಯುದ್ಧಕ್ಕೆ, ನಡೆದ ಎಲ್ಲ ದುರಂತಕ್ಕೆ ತಾನೇ ಕಾರಣನೆಂದು ತನ್ನನ್ನು ಹಳಿದುಕೊಳ್ಳುತ್ತಾನೆ ಈ ಕೌರವ. ಆದರೆ ಅವನು ಸಂಧಿಗೆ ಸಿದ್ಧನಿಲ್ಲ. ‘‘ಕರ್ಣ ಸತ್ತ ಮೇಲೆ ಸಂಧಿಯ ಮಾತೇಕೆ? ಅವನಿಲ್ಲದೆ ಈ ರಾಜ್ಯದಿಂದ ಪ್ರಯೋಜನವೇನು? ಈ ಗದೆಯೂ ಭುಜಾದಂಡವೂ ಇರುವತನಕ ಶತ್ರುಗಳಿಗೆ ಏಳಿಗೆಯಿಲ್ಲ. ಅಂಜುವುದೇಕೆ?’’ ಎಂಬುದು ಅವನ ವೀರೋಚಿತವಾದ ನಿಲುವು:

ತಪ್ಪದು ಕರ್ಣನಿಂ ಬೞಿಕೆ ಸಂಧಿಯ ಮಾತೆನಗಾತನಿಲ್ಲದೆಂ
ತಪ್ಪುದೊ ರಾಜ್ಯಮೀ ಗದೆಯುಮೀ ಭುಜದಂಡಮುಮುಳ್ಳಿನಂ ಕೊನ
ರ್ತಪ್ಪುದೇ ಪೇೞಿಮೆನ್ನ ಪಗೆ ನೋವಱಿದಂಜುವುದೇಕೆ ನಿಂದರೇಂ
ತಪ್ಪುದೊ ಪೇೞಿಮಯ್ಯ ನೊಸಲೊಳ್ ಬರೆದಕ್ಕರಮಾ ವಿಧಾತ್ರನಾ (೧೩.೧೯)

‘ಊರುಭಂಗ’ದಲ್ಲಿ, ಪಾಂಡವರನ್ನು ನಿರ್ಮೂಲ ಮಾಡುತ್ತೇನೆಂದು ಹೇಳಿದ ಅಶ್ವತ್ಥಾಮನನ್ನು ಬೇಡವೆಂದು ತಡೆಯಲು ಪ್ರಯತ್ನಿಸುತ್ತಾನೆ, ದುರ್ಯೋಧನ; ‘ಗುರುಪುತ್ರ, ಮನ್ನಿಸವರ’ ಎನ್ನುತ್ತಾನೆ.[9] ಇದು ಪಂಪನ ಮನಸ್ಸನ್ನು ಸೆಳೆದಿದೆ. ಈ ಸಂದರ್ಭದಲ್ಲಿ ಪಂಪನ ಸುಯೋಧನ ಆಡುವ ನುಡಿಗಳಿವು:

ಎನಗಿನಿತೊಂದವಸ್ಥೆ ವಿಧಿಯೋಗದಿನಾದುದಿದರ್ಕೆ ನೀನೞ
ಲ್ದಿನಿತು ಮನಃಕ್ಷತಂಬಡದಿರಾಗದು ಪಾಂಡವರಂ ಗೆಲಲ್ ಪುರಾ
ತನ ಪುರುಷಂ ಮುರಾರಿ ಕೆಲದೊಳ್ ನಿಲೆ ನೀಂ ಕೊಲಲಾರ್ಪೊಡಾಗದೆಂ
ಬೆನೆ ತಱಿದೊಟ್ಟಿ ವೈರಿಗಳನೆನ್ನಸುವುಳ್ಳಿನಮೆಯ್ದೆವಾ ಗಡಾ (೧೩.೧೦೫)

ಇಲ್ಲಿ ದುರ್ಯೋಧನನ ಮನಸ್ಸು ಸಂಕೀರ್ಣವಾಗಿರುವುದನ್ನು ನೋಡುತ್ತೇವೆ. ಅವನು ಅಶ್ವತ್ಥಾಮನಿಗೆ ಅರೆಮನಸ್ಸಿನಿಂದ ಅನುಮತಿ ಕೊಡುತ್ತಿದ್ದಾನೆ. ಕೃಷ್ಣನ ಸಹಾಯವುಳ್ಳ ಪಾಂಡವರನ್ನು ಗೆಲ್ಲುವುದು ಅಸಾಧ್ಯವೆಂದು ಈಗ ಅವನಿಗೆ ಮನವರಿಕೆಯಾಗಿದೆ. ಆದರೆ ಅಶ್ವತ್ಥಾಮನ ಮನಸ್ಸನ್ನು ನೋಯಿಸಲಾರದೆ ‘‘ನೀಂ ಕೊಲಲಾರ್ಪೊಡೆ ಆಗದೆಂಬೆನೇ’’ ಎನ್ನುತ್ತಾನೆ.(ಮಾತಿನ ನೇತ್ಯಾತ್ಮಕ ವಿನ್ಯಾಸವನ್ನು ಗಮನಿಸಬೇಕು.) ಒಂದು ವೇಳೆ ಅಶ್ವತ್ಥಾಮ ಪಾಂಡವರನ್ನು ಕೊಂದು ಬರುವುದಾದರೆ ದುರ್ಯೋಧನನಿಗೆ ಅದು ಅಪ್ರಿಯವೇನಲ್ಲ. ಆದರೆ ಆ ಬಗ್ಗೆ ಅವನಿಗೆ ನಂಬಿಕೆಯೂ ಇಲ್ಲ, ಪ್ರಬಲವಾದ ಆಸೆಯೂ ಇದ್ದಂತಿಲ್ಲ. ಮುಂದೆ ಅಶ್ವತ್ಥಾಮ ಉಪಪಾಂಡವರ ತಲೆಗಳನ್ನು ತಂದು ಮುಂದಿಕ್ಕಿದಾಗ ದುರ್ಯೋಧನ ‘‘ಬಾಲಕವಧದೋಷಮೆಂತು ನೀಂ ನೀಗಿದಪಯ್ ’’ (೧೩.೧೦೭) ಎಂದು ಆಕ್ಷೇಪಿಸಿ, ‘‘ಹಿಮವತ್ಪರ್ವತದೊಳ್ ತಪಶ್ಚರಣ ಪರಾಯಣರಾಗಿಂ’’ ಎಂದು ಕರ್ತವ್ಯವನ್ನು ಸೂಚಿಸಿ ಪ್ರಾಣಬಿಡುತ್ತಾನೆ.[10]

ಅಂತೂ ಪಂಪನ ದುರ್ಯೋಧನಪಾತ್ರ ಭಾಸ ಭಟ್ಟನಾರಾಯಣರ ಚಿತ್ರಣಕ್ಕೆ ಋಣಿಯಾಗಿದ್ದರೂ ವಿಶಿಷ್ಟವಾದ ನಿಲುವಿನಲ್ಲಿ ಕಾಣಿಸುತ್ತದೆ.

ಪಂಪಭಾರತದ ದ್ವಾದಶಾಶ್ವಾಸದಲ್ಲಿ ಕರ್ಣಾಶ್ವತ್ಥಾಮರ ನಡುವೆ ನಡೆಯುವ ಕಲಹಕ್ಕೆ ಆಕರ ‘ವೇಣೀಸಂಹಾರ’ದ ತೃತೀಯಾಂಕ. ತಂದೆಯ ಮರಣದಿಂದ ದುಃಖಿತನಾಗಿದ್ದ ಕರ್ಣನನ್ನು ದುರ್ಯೋಧನ ಸಮಾಧಾನಗೊಳಿಸುವಲ್ಲಿ ಬರುವ ‘ವೇಣೀಸಂಹಾರ’ದ ಪದ್ಯವೊಂದನ್ನು ಪಂಪ ಮೂಲದ ಭಾವಕ್ಕೆ ಪುಷ್ಟಿಯೊದಗುವಂತೆ ಅನುವಾದಿಸಿರುವುದನ್ನು ಲಕ್ಷಿಸಬಹುದು :

ತಾತಸ್ತವ ಪ್ರಣಯವಾನ್ ಪಿತುಃ ಸಖಾ ಮೇ
ಶಸ್ತ್ರೇ ಯಥಾ ತವ ಗುರುಃ ತಥಾ ಮಮಾಪಿ
ಕಿಂ ತಸ್ಯ ದೇಹನಿಧನೇ ಕಥಯಾಮಿ ದುಃಖಂ
ಜಾನೀಹಿ ತದ್ಗುರುಶುಚಾ ಮನಸಾ ತ್ವಮೇವ (ವೇ.ಸಂ..೨೯)

ಎನಗೆ ಕೂರ್ಪುದನಾ ಘಟಸಂಭವಂ
ನಿನಗೆ ಕೂರನೞಲ್ ನಿನತಲ್ತು ಕೇ
ಳೆನತುಮಾಱದ ಶೋಕಮನಿರ್ವೆಮುಂ
ಮುನಿವರಂ ತವೆ ಕೊಂದೊಡನೀಗುವಂ (ಪಂ.ಭಾ.೧೨.೩೬)

ಅಂತೆಯೆ ಈ ಪದ್ಯಗಳಲ್ಲಿರುವ ಹೋಲಿಕೆಯನ್ನು ನೋಡಬಹುದು:

ಮಹಾಪ್ರಲಯ ಮಾರುತ ಕ್ಷುಭಿತ ಪುಷ್ಕಲಾವರ್ತಕ
ಪ್ರಚಂಡ ಘನಗರ್ಜಿತ ಪ್ರತಿರವಾನುಕಾರೀ ಮುಹುಃ
ರವಃ ಶ್ರವಣಭೈರವಃ ಸ್ಥಗಿತ ರೋದಸೀ ಕಂದರಃ
ಕುತೋದ್ಯ ಸಮರೋದಧೇರಯಮಭೂತಪೂರ್ವೋದಯಃ (ವೇ. ಸಂ. )

ಮಹಾಪ್ರಳಯ ಭೈರವ ಕ್ಷುಭಿತ ಪುಷ್ಕಳಾವರ್ತಮಾ
ಮಹೋಗ್ರರಿಪುಭೂಭುಜ ಶ್ರವಣ ಭೈರವಾಡಂಬರಂ
ಗುಹಾಗಹನ ಗಹ್ವರೋದರ ವಿಶೀರ್ಣಮಾದುದದೇಂ
ಮುಹುಃ ಪ್ರಕಟಮಾದುದಾ ರವಿತನೂಭವಜ್ಯಾರವಂ (ಪಂ.ಭಾ. ೧೨.೧೩೬)

ವೈಶಂಪಾಯನ ಸರೋವರದಿಂದ ಮೇಲೆದ್ದು ಬಂದ ದುರ್ಯೋಧನನನ್ನು ಕುರಿತ ‘‘ಭೀಮ ಭುಜಮಂದರ ಘಟ್ಟನೆಯಿಂದಮಲ್ಲಿ ತೊಟ್ಟಗೆ ಕೊಳೆ ಕಾಳಕೂಟಮೊಗೆವಂತೊಗೆದಂ ಫಣಿರಾಜಕೇತನಂ’’ (೧೩.೮೨) ಎಂಬ ಪಂಪನ ವರ್ಣನೆಗೆ[11] ಭಟ್ಟನಾರಾಯಣನ ಈ ಪದ್ಯವೆ ಮೂಲ

ಆಯಸ್ತ ಭೀಮಭುಜಮಂದರವೇಲ್ಲನಾಭೀಃ
ಕ್ಷೀರೋದಧೇಃ ಸುಮಥಿತಾದಿವ ಕಾಲಕೂಟಃ (.)

‘‘ಹಾವೀರಶತೊಪ್ರಸವಿನೀ ಹತಗಾಂಧಾರೀ ದುಃಖಶತಃ ಪ್ರಸೂತಾನ ಪುನಃ ಸುತಶತಂ’’ ಎಂಬ ‘ವೇಣೀಸಂಹಾರ’ದ ಮಾತು ಪಂಪನಲ್ಲಿ ‘‘ತನಯ ಶತಮಾದುದಲ್ತೆನಗನಿವಾರಿತ ದುಃಖಶತಮೆ ತಾನಾದುವು’’ (೧೪.೮) ಎಂದು ಅನುವಾದಗೊಂಡಿದೆ.

ಸುಭದ್ರೆಯ ವರ್ಣನೆಯ ಸಂದರ್ಭದಲ್ಲಿ ಪಂಪ ಕಾಳಿದಾಸನ ‘ವಿಕ್ರಮೋರ್ವಶೀಯ’ದಲ್ಲಿ ಬರುವ ಊರ್ವಶೀವರ್ಣನೆಗೆ ಸಂಬಂಧಿಸಿದ ಪದ್ಯವೊಂದನ್ನು ಉಪಯೋಗಿಸಿಕೊಂಡಿರುವುದು ಕುತೂಹಲಕರವಾಗಿದೆ:

ಅಸ್ಯಾಸ್ಸರ್ಗವಿಧೌ ಪ್ರಜಾಪತಿರಭೂತ್ ಚಂದ್ರೋ ನು ಕಾಂತಿಪ್ರಭಃ
ಶೃಂಗಾರೈಕರಸಃ ಸ್ವಯಂ ನು ಮದನೋ ಮಾಸೋ ನು ಪುಷ್ಪಾಕರಃ
ವೇದಾಭ್ಯಾಸಜಡಃ ಕಥಂ ವಿಷಯವ್ಯಾವೃತ್ತ ಕೌತೂಹಲೋ
ನಿರ್ಮಾತುಂ ಪ್ರಭವೇತ್ ಮನೋಹರಮಿದಂ ರೂಪಂ ಪುರಾಣೋ ಮುನಿಃ(.)

ಜಗಮಂ ಮಾಡಿದ ಪದ್ಮಜಂ ಪಡೆದನಲ್ಲೀ ಕನ್ನೆಯಂ ಮಾಡುವ
ಲ್ಲಿಗೆ ಚಂದ್ರಂ ಮಳಯಾನಿಳಂ ಮಳಯಜಂ ನೀರೇಜವಿಮ್ಮಾವು
ಲ್ಲಿಗೆಯೆಂದಿಂತಿವನಳ್ಕಱಿಂದಮರ್ದಿನೊಳ್ ತಾನೞ್ತಿಯಿಂ ತೊಯ್ದು ಮೆ
ಲ್ಲಗೆ ಸಂದಂಗಜನೆಂಬಜಂ ಪಡೆದನಂತಾ ಕಾಂತಿಯಿಂ ಕಾಂತೆಯಂ (.೭೫)

ತನ್ನ ‘ಆದಿಪುರಾಣ’ದ ಶ್ರೀಮತೀ ವಜ್ರಜಂಘ ಪ್ರಕರಣದಲ್ಲಿ ಪಂಪ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ದ ಎರಡು ಪದ್ಯಗಳ ಅಭಿಪ್ರಾಯವನ್ನು ಸ್ವೀಕರಿಸಿರುವುದು ಕಂಡುಬರುತ್ತದೆ :

ಅಸ್ಮಾನ್ಸಾಧು ವಿಚಿಂತ್ಯ ಸಂಯಮಧನಾನುಚ್ಚೈಃ ಕುಲಂ ಚಾತ್ಮನ
ಸ್ತ್ವಯ್ಯಸ್ಯಾಃ ಕಥಮಪ್ಯಬಾಂಧವಕೃತಾಂ ಸ್ನೇಹಪ್ರವೃತ್ತಿಂ ತಾಂ
ಸಾಮಾನ್ಯ ಪ್ರತಿಪತ್ತಿ ಪೂರ್ವಕಮಿಯಂ ದಾರೇಷು ದೃಶ್ಯಾ ತ್ವಯಾ
ಭಾಗ್ಯಾಯತ್ತಮತಃಪರಂ ಖಲು ತದ್ವಾಚ್ಯಂ ವಧೂಬಂಧುಭಿಃ

ಶುಶ್ರೂಷಸ್ವ ಗುರೂನ್ಕುರು ಪ್ರಿಯಸಖೀವೃತ್ತಿಂ ಸಪತ್ನೀ ಜನೇ
ಭರ್ತುರ್ವಿಪ್ರಕೃತಾಪಿ ರೋಷಣತಯಾ ಮಾ ಸ್ಮ ಪ್ರತೀಪಂ ಗಮಃ
ಭೂಯಿಷ್ಠಂ ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ವನುತ್ಸೇಕಿನೀ
ಯಾಂತ್ಯೇವಂ ಗೃಹಿಣೀಪದಂ ಯುವತಯೋ ವಾಮಾ ಕುಲಸ್ಯಾಧಯಃ (.೧೮, ೧೯)

ಬಗೆದುಂ ನಿನ್ನನ್ವಯಾಯೋನ್ನತಿಯನಿವಳತಿ ಸ್ನೇಹಸಂಬಂಧಮಂ ನೀಂ
ಬಗೆದುಂ ಸಂದೆಮ್ಮ ನಣ್ಪಂ ಬಗೆದುಮಱಿಯದೇನಾನುಮೆಂದಾಗಳುಂ ಮೆ
ಲ್ಲಗೆ ನೀಂ ಕಲ್ಪಿಪ್ಪುದೆಮ್ಮಂ ನೆನೆದೆರ್ದೆಗಿಡದಂತಾಗೆ ಪಾಲಿಪ್ಪುದಿಂತೀ
ಮೃಗಶಾಬೇಕ್ಷಾಕ್ಷಿಯಂ ಮನ್ನಿಸುವುದಿನಿತನಾಂ ಬೇಡಿದೆಂ ವಜ್ರಜಂಘಾ

ಮನಮಱಿದಂಜಿ ಬೆರ್ಚಿ ಬೆಸಕಯ್ ನಿಜವಲ್ಲಭನೇನನೆಂದೊಡಂ
ಕಿನಿಸದಿರೊಂದಿದಗ್ರಮಹಿಷೀ ಪದದಲ್ಲಿ ಪದಸ್ಥೆಯಾಗು ನಂ
ದನರನಗಣ್ಯ ಪುಣ್ಯಧನರಂ ಪಡೆಯೆಂದಮರ್ದಪ್ಪಿಕೊಂಡು
ತ್ತನುಜೆಯಗಲ್ಕೆಯೊಳ್ ನೆಗಪಿದರ್ ಬಸಮಲ್ಲದ ಬಾಷ್ಪವಾರಿಯಂ (.೫೫, ೫೬)

ಪಂಪಭಾರತ ‘ವೇಣೀಸಂಹಾರ’ದಿಂದ ಪರಿಮಿತವಾಗಿ ಪ್ರಭಾವಿತವಾಗಿದ್ದರೆ, ರನ್ನನ ‘ಗದಾಯುದ್ಧ’ ಆಮೂಲಾಗ್ರವಾಗಿ ಅದರ ಪ್ರಭಾವ ಪರಿವೇಷಕ್ಕೆ ಒಳಪಟ್ಟಿದೆ. ಅಂತೆಯೇ ಭಾಸನ ‘ಊರುಭಂಗ’ದಿಂದಲೂ ಅದು ಉಪಕೃತ. ‘ಗದಾಯುದ್ಧ’ದಲ್ಲಿ ‘ವೇಣೀಸಂಹಾರ’ ಎಂಬ ಮಾತು ಎರಡು ಸಲ, ‘ಊರುಭಂಗ’ ಎಂಬ ಮಾತು ಒಮ್ಮೆ ಪ್ರಯುಕ್ತವಾಗಿರುವುದು ಆಕಸ್ಮಿಕವಲ್ಲ. ಪಂಪನಲ್ಲಿರುವಷ್ಟು ಸ್ವೋಪಜ್ಞತೆಯ ಭಾಗ್ಯವಿಲ್ಲದ ರನ್ನ ಹೀಗೆ ಅನ್ಯಕವಿಗಳಿಗೆ- ಅವರಲ್ಲಿ ಪಂಪನನ್ನೂ ಮುಖ್ಯವಾಗಿ ಹೆಸರಿಸಬೇಕು- ವಿಶೇಷವಾಗಿ ಋಣಿಯಾಗಿರುವುದು ಸಹಜ. ‘ಗದಾಯುದ್ಧ’ದಲ್ಲಿ ಅವನು ತನ್ನತನವನ್ನು ವ್ಯಕ್ತಪಡಿಸಿಯೇ ಇಲ್ಲವೆಂದು ಇದರ ಅರ್ಥವಲ್ಲ. ಅವನ ಹರಣ, ಸ್ವೀಕರಣಗಳ ಪ್ರಮಾಣ, ಪ್ರಾಯಃ ಮತ್ತಾವ ಕನ್ನಡ ಕೃತಿಯಲ್ಲೂ ಕಂಡುಬರದಷ್ಟು ಅತ್ಯಧಿಕ ಎಂಬುದಷ್ಟೆ ಇದರ ತಾತ್ಪರ್ಯ.[12] ರನ್ನ ಶಕ್ತನಾದ ಕವಿ, ಸಂಶಯವಿಲ್ಲ; ಅವನು ಮುಟ್ಟಿದ್ದು ಎಷ್ಟೋ ಕಡೆ ವಜ್ರವಾಗಿ ಜ್ವಲಿಸುತ್ತದೆ ಎಂದೊಪ್ಪಬೇಕು.

‘ಗದಾಯುದ್ಧ’ದಲ್ಲಿ ‘ವೇಣೀಸಂಹಾರ’ದ ಪ್ರಭಾವ ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆ ಯೆಂದರೆ, ಅದನ್ನು ಪ್ರತ್ಯೇಕಿಸಿ ಎತ್ತಿ ತೋರಿಸುವುದೆ ಕಷ್ಟಕರ.[13] ‘ಗದಾಯುದ್ಧ’ದ ಪ್ರಧಾನ ಲಕ್ಷಣಗಳೆ-ನಾಟಕೀಯತೆ ಮತ್ತು ಓಜಸ್ಸು-‘ವೇಣೀಸಂಹಾರ’ದ ಕೊಡುಗೆಯೆಂದರೆ ತಪ್ಪಾಗುವುದಿಲ್ಲ. ರನ್ನನ ಕಾವ್ಯದ ವಿದೂಷಕನಂತೂ ಸಂಸ್ಕೃತ ನಾಟಕಗಳಿಂದ ಬಂದವನೇ.

ದುರ್ಯೋಧನ ಪತನದ ಬಳಿಕ ಭೀಮ ದ್ರೌಪದಿಯ ಮುಡಿ ಕಟ್ಟಿದ ಪ್ರಸಂಗ ವ್ಯಾಸ ಭಾರತದಲ್ಲಾಗಲಿ ಪಂಪಭಾರತದಲ್ಲಾಗಲಿ ಬರುವುದಿಲ್ಲ. ವ್ಯಾಸಭಾರತದಲ್ಲಿ ವೇಣೀ ಸಂಹಾರದ ಪ್ರತಿಜ್ಞೆಯೇ ಇಲ್ಲ; ಅಲ್ಲಿ ಭೀಮ ದುರ್ಯೋಧನನ ತೊಡೆ ಮುರಿಯುವುದಾಗಿ ಮಾತ್ರ ಪ್ರತಿಜ್ಞೆ ಮಾಡಿರುತ್ತಾನೆ. ಪಂಪಭಾರತದಲ್ಲಾದರೆ, ಭೀಮ ದುಶ್ಶಾಸನನನ್ನು ಕೊಂದು ಅವನ ಕರುಳನ್ನು ಕೃಷ್ಣೆಗೆ ಮುಡಿಸುವುದಾಗಿ ಪ್ರತಿಜ್ಞೆ ಕೈಗೊಂಡಿದ್ದು, ಅದನ್ನು ದುಶ್ಯಾಸನವಧೆಯ ಸಂದರ್ಭದಲ್ಲಿ ಪೂರೈಸುತ್ತಾನೆ. ‘ಗದಾಯುದ್ಧ’ದಲ್ಲಿ ಕಾವ್ಯ ಪ್ರಾರಂಭವಾಗುವ ವೇಳೆಗೆ ದುಶ್ಯಾಸನವಧೆ ಆಗಿ ಹೋಗಿದೆ; ಆದರೆ ವೇಣೀಸಂಹಾರ ಪ್ರತಿಜ್ಞೆ ತೀರಿಲ್ಲ. ಅದು ಕಾವ್ಯದ ಪ್ರಾರಂಭದಲ್ಲಿ ಮೊಳಗಿ, ದುರ್ಯೋಧನನ ಊರುಭಂಗದ ಸಂದರ್ಭದಲ್ಲಿ ತಣಿಯುತ್ತದೆ. ದುರ್ಯೋಧನ ಬೀಳುವವರೆಗೂ ದ್ರೌಪದಿಯ ಮುಡಿ ಬಿಚ್ಚಿಕೊಂಡೇ ಇತ್ತು ಎಂಬ ಕಲ್ಪನೆ ಚೆನ್ನಾಗಿದೆ, ಔಚಿತ್ಯದಿಂದ ಕೂಡಿದೆ. ಹಗೆ ನಿಶ್ಶೇಷವಾಗದೆ ಅವಳಿಗೆಲ್ಲಿಯ ತೃಪ್ತಿ? ಎಲ್ಲ ಪರಿಭವಕ್ಕೂ ದುರ್ಯೋಧನನೆ ಮೂಲ ಹೇತುವಲ್ಲವೆ? ಅವನು ನೆಲ ಕಚ್ಚಿದಮೇಲೆಯೆ ಅವಳ ವೇಣೀಸಂಹಾರ. ಆದರೆ ಈ ಬದಲಾವಣೆ ಮೂಲತಃ ಭಟ್ಟನಾರಾಯಣನದು; ರನ್ನ ಅದನ್ನು ಅನುಸರಿಸಿದ್ದಾನೆ.

‘ಗದಾಯುದ್ಧ’ದ ಪ್ರಥಮಾಶ್ವಾಸ ಮತ್ತು ದ್ವಿತೀಯಾಶ್ವಾಸದ ಹತ್ತು ಪದ್ಯಗಳು-ಭೀಮ ದ್ರೌಪದಿಯರ ಸಂವಾದ ಹಾಗೂ ಭೀಮನ ಪ್ರತಿಜ್ಞೆಯನ್ನೊಳಗೊಂಡವು- ‘ವೇಣೀ ಸಂಹಾರ’ದ ಪ್ರಥಮಾಂಕದಿಂದ ಚೋದಿತವಾಗಿದೆ. ವ್ಯತ್ಯಾಸವಿಷ್ಟೆ : ‘ವೇಣೀಸಂಹಾರ’ದಲ್ಲಿ ಭೀಮ ಪ್ರತಿಜ್ಞೆ ಮಾಡುವಾಗ ಕುರುಕ್ಷೇತ್ರಯುದ್ಧ ಇನ್ನೂ ಆರಂಭವಾಗಿರುವುದಿಲ್ಲ; ಅದು ಕೃಷ್ಣರಾಯಭಾರದ ಸಂದರ್ಭ. ‘ಗದಾಯುದ್ಧ’ದಲ್ಲಾದರೆ ಭೀಮ ಪ್ರತಿಜ್ಞೆ ಮಾಡುವ ಹೊತ್ತಿಗೆ ಕುರುಕ್ಷೇತ್ರ ಸಮರ ನಡೆದು, ಕೌರವ ಪಕ್ಷದ ವೀರಾಧಿವೀರರೆಲ್ಲ ಹತರಾಗಿ, ದುರ್ಯೋಧನನೊಬ್ಬನೆ ಉಳಿದಿರುತ್ತಾನೆ. ಅವನನ್ನು ಕೊಂದು ದ್ರೌಪದಿಯ ಮುಡಿ ಕಟ್ಟುವುದಾಗಿ ಭೀಮನ ಪೂಣ್ಕೆ. ಭೀಮ-ದುರ್ಯೋಧನರ ಗದಾಯುದ್ಧವೆ ಕಾವ್ಯದ ಕ್ರಿಯಾಕೇಂದ್ರವಾದುದರಿಂದ, ರನ್ನ ಮಾಡಿಕೊಂಡಿರುವ ಮಾರ್ಪಾಡು ಕೃತಿಯ ಐಕ್ಯಕ್ಕೆ ಪೋಷಕವಾಗಿದೆ, ಭೀಮ ದುರ್ಯೋಧನರಿಬ್ಬರ ಮೇಲೆಯೇ ಲಕ್ಷ್ಯವನ್ನು ಕೇಂದ್ರೀಕರಿಸಲು ಸಹಕಾರಿಯಾಗಿದೆ. ಕವಿಯ ಉದ್ದೇಶವೆ ಅದು.

ದುರ್ಯೋಧನ ಪಾತ್ರನಿರ್ಮಿತಿಯಲ್ಲಿ ರನ್ನ ಊರುಭಂಗ, ವೇಣೀ ಸಂಹಾರ, ಪಂಪ ಭಾರತಗಳ ಜಾಡಿನಲ್ಲೆ ನಡೆದಿದ್ದಾನೆ. ಆದರೆ ಪಂಪನಲ್ಲಿರುವ ಮಾರ್ಮಿಕತೆಯನ್ನು ಅವನು ಎಟುಕಿಸಿಕೊಂಡಿಲ್ಲ. ಅವನ ಸುಯೋಧನ ಕ್ಷಾತ್ರ ಸ್ವಾಭಿಮಾನ ಚಲಗಳ ರಾಜಸಮೂರ್ತಿಯಾಗಿ ವಿಜೃಂಭಿಸುತ್ತಾನೆಯೆ ವಿನಾ ಪಂಪನ ದುರ್ಯೋಧನನಂತೆ ವೈರಾಗ್ಯ ಪಶ್ಚಾತ್ತಾಪಗಳನ್ನು ಅಷ್ಟಾಗಿ ಪ್ರಕಟಿಸುವುದಿಲ್ಲ. ಅವನ ಉತ್ಕಟವಾದ ಅಭಿಮಾನ ಪ್ರವೃತ್ತಿಯಿಂದಲೆ ಅವನಿಗೆ ಗೌರವಾದರಗಳನ್ನು ಗಳಿಸಿಕೊಡಲು ಯತ್ನಿಸಿರುವಂತಿದೆ, ರನ್ನ.

ಆದರೆ ದುರ್ಯೋಧನ ಅಂತ್ಯಕಾಲದಲ್ಲಿ ‘ಪರಮ ನಿರ್ವೇಗ ಪರಾಯಣ’ನಾದಂತೆ ನಿರೂಪಿಸುತ್ತಾನೆ ರನ್ನ. ಮೋಕ್ಷ ಹಾಗೂ ಸದ್ಗತಿಯನ್ನು ಸಾಧಿಸುವುದಾಗಿ ಹೇಳುತ್ತಾನೆ ಕೌರವ. ಅಶ್ವತ್ಥಾಮ ಉಪಪಾಂಡವರ ತಲೆಗಳನ್ನು ತಂದಿಟ್ಟಾಗ ‘‘ಆ ಮಹಾನುಭಾವನಾ ತಲೆಗಳಂ ನೀಡುಂ ಭಾವಿಸಿ ನೋಡಿ’’, ‘‘ದೊರೆಕೊಂಡುದು ನಿನಗೆ ಪಾತಕಂ ಬಾಲವಧಂ’’ (೯.೩೪) ಎನ್ನುತ್ತಾನೆ. ಕಡೆಗೆ ಅಜಿತನನ್ನು ಸ್ಮರಿಸಿ, ‘‘ಸುರಲೋಕಮಂ ಸಾಧಿಸುವೆಂ’’ ಎಂದು ನಿಶ್ಚಯಿಸಿ ಪ್ರಾಣವಿಸರ್ಜನೆಗೆ ಸಿದ್ಧನಾಗುತ್ತಾನೆ. ಇಲ್ಲೆಲ್ಲ ‘ಊರುಭಂಗ’ದ ಪ್ರಭಾವ ಕೆಲಸಮಾಡಿರುವುದು ಸುಸ್ಪಷ್ಟ. ಆದರೆ ರನ್ನನ ಚಿತ್ರಣದಲ್ಲಿ ವಿರೋಧಾಭಾಸಗಳಿವೆ; ದುರ್ಯೋಧನನ ಮಾತುಗಳು ಸ್ವಾಭಾವಿಕವೆನಿಸುವುದಿಲ್ಲ.

ರಣರಂಗದಲ್ಲಿ ಅಭಿಮನ್ಯುವಿನ ಮೃತದೇಹವನ್ನು ಕಂಡ ದುರ್ಯೋಧನ ಅವನನ್ನು ಮೆಚ್ಚಿ ಮನಃಪೂರ್ವಕವಾಗಿ ಕೊಂಡಾಡುವಲ್ಲಿನ ಪದ್ಯಗಳು ಪ್ರಸಿದ್ಧವಾಗಿವೆ. ಆದರೆ ಅಭಿಮನ್ಯುವನ್ನು ದುರ್ಯೋಧನ ಮೆಚ್ಚಿಕೊಳ್ಳುವುದನ್ನು ಪಂಪಭಾರತದಲ್ಲೆ (೧೧-೧೦೯) ನೋಡುತ್ತೇವೆ. ಪಂಪನಿಗೆ ಸೂಚನೆ ‘ಊರುಭಂಗ’ದಿಂದ ಬಂದಿರಬಹುದು. ಅಲ್ಲಿ ದುರ್ಯೋಧನ ಕರ್ಣನ ಹಾಗೂ ನೂರ್ವರು ತಮ್ಮಂದಿರ ಜೊತೆಯಲ್ಲಿ ಅಭಿಮನ್ಯುವನ್ನೂ ಹೆಸರಿಸುತ್ತಾನೆ.

‘ಗದಾಯುದ್ಧ’ದ ಹಲವಾರು ಪದ್ಯಗಳು ಹೇಗೆ ಭಟ್ಟನಾರಾಯಣನ ಗದ್ಯಪದ್ಯಗಳ ಸ್ಥೂಲಾನುವಾದವಾಗಿವೆ ಎಂಬುದನ್ನೀಗ ನೋಡಬಹುದು.

. ಚತ್ವಾರೋ ವಯಮೃತ್ವಿಜಃ ಭಗವಾನ್ ಕರ್ಮೋಪದೇಷ್ಟಾ ಹರಿಃ
ಸಂಗ್ರಾಮಾಧ್ವರ ದೀಕ್ಷಿತೋ ನರಪತಿಃ ಪತ್ನೀ ಗೃಹೀತವ್ರತಾ
ಕೌರವ್ಯಾ ಪಶವಃ ಪ್ರಿಯಾ ಪರಿಭವ ಕ್ಷೇಶೋಪಶಾಂತಿಃ ಫಲಂ
ರಾಜನ್ಯೋಪನಿಮಂತ್ರಣಾಯ ರಸತಿ ಸ್ಫೀತಂ ಯಶೋದುಂದುಭಿಃ (.೨೫)

ಅರಸಂ ದೀಕ್ಷಿತನಿಲ್ಲಿ ಋತ್ವಿಜರುಮೆಮ್ಮೀ ನಾಲ್ವರುಂ ಸಂಗರಾ
ಧ್ವರದೊಳ್ ತಾನುಪದೇಶಕಂ ಮುರಹರಂ ನೀನುಂ ಗೃಹೀತವ್ರತಾ
ಚರಣವ್ಯಾಪಿಕೆಯುಂ ಭವತ್ಪರಿಭವಂ ಸಂಹಾರಕಂ ಕೌರವೇ
ಶ್ವರನೀತಂ ಪಶುವಾಗೆ ಬೇಳ್ದೆನಿವನಂ ಕೋಪಾಗ್ನಿಯಿಂದಗ್ನಿಜೇ (.೪೬)

ತೀ.ನಂ.ಶ್ರೀ. ಅವರು ಹೇಳಿರುವಂತೆ, ‘‘ರನ್ನನು ಜೈನನು; ಯಜ್ಞವೆಂದರೆ ಅವನಿಗೆ ಸೈರಿಸದು. ಅದುದರಿಂದ ಈ ಯಜ್ಞವರ್ಣನೆಯ ಉತ್ಕೃಷ್ಟವಾದ ಕಲ್ಪನೆಯನ್ನು ಅವನು ‘ವೇಣೀಸಂಹಾರ’ದಿಂದಲೇ ಸ್ವೀಕರಿಸಿರಬೇಕೆನ್ನುವುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.’’[14]

೨. ಅಥವಾ ಕಿಮತ್ರ ದೈವಮುಪಾಲಭೇ. ತಸ್ಯ ಖಲ್ವಿದಂ ನಿರ್ಭರ್ತ್ಸಿತ ವಿದುರ ವಚನ ಬೀಜಸ್ಯ ಅವಧೀರಿತ ಪಿತಾಮಹ ಹಿತೋಪದೇಶಾಂಕುರಸ್ಯ ಶಕುನಿ ಪ್ರೋತ್ಸಾಹನಾದಿ ವಿರೂಢಮೂಲಸ್ಯ ಜತುಗೃಹದ್ಯೂತ ವಿಷಶಾಖಿನಃ ಸಂಭೂತ ಚಿರಕಾಲ ಸಂಬದ್ಧ ವೈರಾಲವಾಲಸ್ಯ ಪಾಂಚಾಲಿಕೇಶಗ್ರಹಣ ಕುಸುಮಸ್ಯ ಫಲಂ ಪರಿಣಮಿತಿ (೪.೯ ಗದ್ಯ)

ಜತುಗೇಹಾನಲ ಬೀಜಮುಗ್ರವಿಷಸಂಜಾತಾಂಕುರಂ ಕ್ರೀಡನೋ
ದ್ಧತಿ ಕೃದ್ದ್ಯೂತ ವಿನೋದ ಪಲ್ಲವಚಯಂ ಪಾಂಚಾಲರಾಜಾತ್ಮಜಾ
ಯತ ಕೇಶಗ್ರಹಪುಷ್ಪಮುಂ ಬಳೆದುದಾ ವೈರದ್ರುಮಂ ಕೌರವ
ಕ್ಷಿತಿಪಾಲೋರು ಕಿರೀಟಭಂಗಭಯಮಂ ಪೇೞ್ ಮಾಡದೇಂ ಪೋಕುಮೇ (.೫೭)

ತೀ.ನಂ.ಶ್ರೀ. ಅವರು ಹೇಳುವಂತೆ, ‘‘ಇಲ್ಲಿ ವರ್ಣನೆಯಲ್ಲಿ ವ್ಯತ್ಯಾಸಗಳಿದ್ದರೂ ರನ್ನನ ‘ವೈರದ್ರುಮ’ವು ಭಟ್ಟನಾರಾಯಣನ ‘ವಿಷಶಾಖಿ’ಯ ಅಡಿಯಲ್ಲೇ ಬೆಳೆಯಿತೆಂದು ಹೇಳಬಹುದು. ಪುಷ್ಪವು ಎರಡರಲ್ಲಿಯೂ ಒಂದೇ ಆಗಿದೆ.‘ವೇಣೀಸಂಹಾರ’ದಲ್ಲಿ ರುವುದಕ್ಕಿಂತ ರನ್ನನ ವರ್ಣನೆಯಲ್ಲಿ ಸ್ವಾರಸ್ಯವು ಹೆಚ್ಚಾಗಿದೆ; ಅವನ ವಿವರಣೆ ಹೆಚ್ಚು ಸಮರ್ಪಕವಾಗಿದೆ. ಅಲ್ಲಿಯ ಭಾವವನ್ನು ರನ್ನನು ತನಗೆ ಬೇಕಾದಂತೆ ತಿದ್ದಿ ತನ್ನದಾಗಿ ಮಾಡಿಕೊಂಡಿದ್ದಾನೆ.’’[15]

[1] ಬಿ.ಎಂ.ಶ್ರೀ., ‘ಕನ್ನಡ ಕೈಪಿಡಿ’, ಸಂ.೨, ಪು.೪೭೨

[2] ‘‘ನಾಟ್ಯಂ ಭಿನ್ನ ರುಚೇರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಂ’’ ಎಂಬುದು ಕನ್ನಡಿಗರಿಗೆ ಸಮ್ಮತವಾಗಿದ್ದಿರಲಿಕ್ಕಿಲ್ಲ; ಅವರಿಗೆ ನಾಟ್ಯದ ಬದಲು ಕಾವ್ಯವೆ ಇಷ್ಟವಾಗಿದ್ದಿರಬೇಕು. ಅಲ್ಲದೆ, ಎಷ್ಟೇ ಶ್ರೇಷ್ಠವಾದ ನಾಟಕವಾಗಲಿ, ಮಹಾಕಾವ್ಯದ (epic) ಎತ್ತರಕ್ಕೇರಲಾರದು, ಆಳಕ್ಕಿಳಿಯಲಾರದು. ಪಂಪ ಕುಮಾರವ್ಯಾಸರಂತಹ ಮಹಾಕವಿಗಳ ದುರ್ದಮ್ಯ ಮಹೋನ್ನತ ಪ್ರತಿಭೆ ನಾಟಕದ ಇಕ್ಕಟ್ಟಿಗೆ ಸಿಲುಕಿದ್ದರೆ ಪ್ರಾಯಃ ಕುಬ್ಜವಾಗಿಬಿಡುತ್ತಿತ್ತು.

[3] ನಾಟಕಕ್ಕೂ ಕಾವ್ಯಕ್ಕೂ ಹಿಂದೆ ಅಷ್ಟಾಗಿ ಭೇದ ಕಲ್ಪಿಸುತ್ತಿರಲಿಲ್ಲವೆಂಬುದೂ ಗಮನಾರ್ಹ; ಅದು ದೃಶ್ಯ ಕಾವ್ಯವಾದರೆ ಇದು ಶ್ರವ್ಯ ಕಾವ್ಯ.

[4] ಕನ್ನಮಯ್ಯನ ‘ಮಾಳತೀ ಮಾಧವ’ ಸಿಕ್ಕಿಲ್ಲ. ಅದು ಭವಭೂತಿಯ ‘ಮಾಲತೀ ಮಾಧವ’ದ ಭಾಷಾಂತರವಾಗಿದ್ದಿರಬಹುದೆ? (ಅದು ನಾಟಕವಲ್ಲ, ಕಾವ್ಯ ಎಂದು ಕೆಲವರ ಊಹೆ). ಅಂತೆಯೇ ಕನ್ನಡದಲ್ಲಿ ಇನ್ನೂ ಕೆಲವು ನಾಟಕಗಳಿದ್ದು, ನಾಟಕಪ್ರಕಾರಕ್ಕೆ ಪ್ರಾಶಸ್ತ್ಯ ಮನ್ನಣೆಗಳಿಲ್ಲದ ಕಾರಣದಿಂದ ಅಳಿದುಹೋಗಿರಬಹುದೆ? ಕಾಲಪುರುಷನೊಬ್ಬನಿಗೇ ಗೊತ್ತು.

[5] ಎಲ್. ಗುಂಡಪ್ಪ, ‘ಭಾಸನ ಏಕಾಂಕ ನಾಟಕಗಳು’, ಪು.೯೨

[6] ಅದೇ, ಪು.೧೦೯

[7]  ‘ಊರುಭಂಗ’ದಲ್ಲಿ ಗದಾಯುದ್ಧವಾದನಂತರ ಧೃತರಾಷ್ಟ್ರ ಗಾಂಧಾರಿಯರು ಬರುತ್ತಾರೆ; ಉಳಿದ ಕೃತಿಗಳಲ್ಲಿ ಅದಕ್ಕೆ ಮುನ್ನವೇ ಅವರ ಆಗಮನವಾಗುತ್ತದೆ. ಅವರು ಪಾಂಡವರೊಡನೆ ಸಂಧಿಮಾಡಿಕೊಳ್ಳುವಂತೆ ದುರ್ಯೋಧನನನ್ನು ಕೇಳಿಕೊಳ್ಳುತ್ತಾರೆ.

[8] ಪಂಡಿತ ಜಯರಾಯಾಚಾರ್ಯ, ‘ಕನ್ನಡ ವೇಣೀಸಂಹಾರ ನಾಟಕ’, ಪು.೨೨

[9] ವ್ಯಾಸಭಾರತದಲ್ಲಿ ಪಾಂಡವರನ್ನು ವಧಿಸಲು ಅಶ್ವತ್ಥಾಮ ದುರ್ಯೋಧನನ ಅನುಮತಿಯನ್ನೇನೂ ಕೇಳುವುದಿಲ್ಲ.

[10] ವ್ಯಾಸಭಾರತದಲ್ಲಿ ಅಶ್ವತ್ಥಾಮ ‘‘ದ್ರೌಪದಿಯ ಮಕ್ಕಳೂ ಧೃಷ್ಟದ್ಯುಮನ ಮಕ್ಕಳೂ ಕಳೆದುಳಿದ ಮತ್ಸ್ಯರೂ ಪಾಂಚಾಲರೂ ಎಲ್ಲರೂ ನಿರ್ನಾಮರಾದರು’’ ಎಂದಾಗ ಕೌರವನಿಗೆ ಸ್ವಲ್ಪ ಸಂತೋಷವಾಗುತ್ತದೆ.

[11] ಈ ಸಂದರ್ಭದಲ್ಲಿ ‘‘ರಸೆಯಿಂ ಕಾಲಾಗ್ನಿರುದ್ರಂ…. ನಿಜಭುಜಗದೆಯಂ ತೂಗಿದಂ ಧಾರ್ತರಾಷ್ಟ್ರಂ’’(೭.೩೦) ಎಂಬುದು ರನ್ನನ ಖ್ಯಾತ ವರ್ಣನೆ. ‘‘ಮಥಿಸಿದೊಡೆ ಕಾಳಕೂಟಮೊಗೆವಂತಿರೊಗೆದನುರಗಪತಾಕಂ’’ ಎಂದೂ ಅವನು ವರ್ಣಿಸಿರುವಂತೆ ‘ಗದಾಯುದ್ಧ’ದ ಕೆ.ವಿ.ಕೃಷ್ಣಭಟ್ಟರ ಆವೃತ್ತಿಯಿಂದ(೭.೨೯) ತಿಳಿದು ಬರುತ್ತದೆ. ಈ ಪದ್ಯ ಪ್ರಕ್ಷಿಪ್ತವಿರಬಹುದೆ?

[12] ಈ ಬಗ್ಗೆ ತೀ.ನಂ.ಶ್ರೀ. ಅವರು ‘‘ಇದೆಲ್ಲವೂ ಕೃತಿಚೋರರು ಮಾಡುವ ಕೆಲಸವೇ? ..ಕಳ್ಳರು ಇಷ್ಟು ಬಹಿರಂಗವಾಗಿ ಕದಿಯುವುದಿಲ್ಲ’’ ಎಂದು ರನ್ನನನ್ನು ಸಮರ್ಥಿಸುತ್ತಾರೆ (‘ಕಾವ್ಯಾನುಭವ’, ಪು.೨೩). ಆದರೆ ಈ ಸಮರ್ಥನೆ ಪೂರ್ತಿ ಊರ್ಜಿತವಾಗಲಾರದು.

[13] ‘‘ವೇಣೀಸಂಹಾರದಿಂದ ರನ್ನನು ಐದಾರು ಪದ್ಯಗಳನ್ನು ತೆಗೆದುಕೊಂಡಿದ್ದರೆ ಹೆಚ್ಚಾಯಿತು. ಅಲ್ಲಿಗೆ ಅವನ ಋಣಸಂಬಂಧವು ಹರಿಯಿತು’’ (ಕಾವ್ಯಾನುಭವ, ಪು.೯) ಎಂಬ ತೀ.ನಂ.ಶ್ರೀ. ಅವರ ಮಾತನ್ನೊಪ್ಪುವುದು ಶಕ್ಯವಿಲ್ಲ.

[14] ಅದೇ, ಪು. ೭

[15] ಅದೇ, ಪು.೯