ಯಾವ ಕವಿ ಪ್ರತಿಭಾವಂತನಾಗಿರುವುದು ಮಾತ್ರವಲ್ಲದೆ ತನ್ನ ಕಾವ್ಯದಲ್ಲಿ ಒಂದು ಜನಾಂಗದ ಸಮಷ್ಟಿಮೌಲ್ಯಗಳನ್ನು ಅಭಿವ್ಯಕ್ತಿಗೊಳಿಸುತ್ತಾನೊ, ಪರಂಪರೆಯಿಂದ ಬಂದ ಸಂಸ್ಕೃತಿ ಶ್ರೀಯನ್ನು ಚಿತ್ರಿಸುತ್ತಾನೊ ಅವನಿಗೆ ಮಹಾಕವಿ ಪದವಿ ಅನಾಯಾಸವಾಗಿ ಸಂಪ್ರಾಪ್ತವಾಗುತ್ತದೆ. ವ್ಯಾಸ ವಾಲ್ಮೀಕಿಗಳು ಭರತಖಂಡದ ಅಗ್ರಗಣ್ಯ ಮಹಾಕವಿಗಳು; ಅವರ ಮೇರು ಮಂದರ ಕಾವ್ಯಗಳಲ್ಲಿ ಈ ರಾಷ್ಟ್ರದ ಸಾಮೂಹಿಕ ಆಚಾರ ವಿಚಾರ ನಂಬಿಕೆ, ಅಭೀಪ್ಸೆ ನಿರೀಕ್ಷೆಗಳು, ಸಾಧನೆ ಸಿದ್ದಿಗಳು ಅಮೋಘವಾಗಿ ಕಂಡರಣೆಗೊಂಡಿವೆ. ರಾಮಾಯಣ ಮಹಾಭಾರತಗಳು ಇತಿಹಾಸಗಳು; ವಾಡಿಕೆಯ ಅರ್ಥದಲ್ಲಲ್ಲ-ಬೇರೊಂದು ವಿಶಿಷ್ಟಾರ್ಥದಲ್ಲಿ. ಅವುಗಳಲ್ಲಿ ನಿರೂಪಿತವಾಗಿರುವುದು ದೇಶದ ಬಾಹ್ಯ ಚರಿತ್ರೆಯಲ್ಲ, ಆತ್ಮ ಚರಿತ್ರೆ; ಭರತ ಖಂಡದ ಹೃದಯವೆ ಅವುಗಳಲ್ಲಿ ಗೂಡುಗೊಂಡಿದೆ.

ಈ ಕಾರಣದಿಂದ, ರಾಮಾಯಣ ಭಾರತಗಳನ್ನು ಆಕರವಾಗಿಟ್ಟುಕೊಂಡು ಕೃತಿರಚನೆ ಮಾಡುವ ಈಚಿನ ಕವಿಗಳು ಅವುಗಳ ‘ಕತೆಯ ಮೆಯ್ ಕಿಡಲೀಯದೆ’ ಅಲ್ಲಿ ಪ್ರಣೀತವಾದ ಮೌಲ್ಯಗಳನ್ನೆ ತಾವೂ ಎತ್ತಿಹಿಡಿದು, ತನ್ಮೂಲಕ ದೊಡ್ಡವರಾಗಬೇಕಾದುದು ಅನಿವಾರ್ಯ. ಕನ್ನಡದ ಆದಿಕವಿ ಪಂಪ ಹಾಗೆ ದೊಡ್ಡವರಾದ ಕವಿಗಳಲ್ಲೊಬ್ಬ. ಅವನು ಭಾರತೀಯ ಜನಜೀವನದ ಚಿರಂತನ ಮೌಲ್ಯಗಳಿಗೆ ಕಂಠ ಕೊಟ್ಟಿದ್ದಾನೆ; ‘‘ವ್ಯಾಸ ಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆನ್, ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ’’ ಎಂಬ ಅವನ ಹೇಳಿಕೆಯಲ್ಲಿ ವ್ಯಕ್ತವಾಗುತ್ತದೆ, ಮಹರ್ಷಿ ವ್ಯಾಸರನ್ನು ಶ್ರದ್ಧೆಯಿಂದ ಅನುವರ್ತಿಸಬೇಕೆಂಬ ಅವನ ಉದ್ದೇಶ. ಹಾಗಾದರೆ, ಪಂಪನ ವೈಶಿಷ್ಟ್ಯವೇನು ಎಂಬ ಪ್ರಶ್ನೆಯೇಳುತ್ತದೆ; ಅದನ್ನು ಅವನ ಕಲೆಯಲ್ಲಿ ಕಾಣಬೇಕು. ಪಂಪ ಭಾರತದ ಮೌಲ್ಯ ಸಮುದಾಯ ವ್ಯಾಸಭಾರತದಿಂದ ಬಂದದ್ದು; ಅದಕ್ಕೆ ಅನನ್ಯವಾಗಿ ಅಭಿವ್ಯಕ್ತಿ ನೀಡಿದ ಕಲೆ ಪಂಪನದು- ಈ ಎರಡೂ ಸಂಗತಿಗಳು ಅವನನ್ನು ಕನ್ನಡದ ಮಹಾಕವಿಯನ್ನಾಗಿ ಮಾಡಿವೆ.

ಪಂಪ ಜೈನನಾದರೂ ಅವನ ಪೂರ್ವಿಕರು ವೈದಿಕರಾದುದರಿಂದ, ಅವನ ರಕ್ತದಲ್ಲಿ ವೈದಿಕಧರ್ಮ ಸೇರಿಕೊಂಡಿದ್ದು, ಪರಂಪರೆಯ ಉತ್ತಮಾಂಶಗಳನ್ನು ಅವನಲ್ಲಿ ನಾಟಿಹಾಕಿತ್ತು. ವೈದಿಕ-ಜೈನಧರ್ಮಗಳ ಸಮನ್ವಯದಿಂದ ಅವನ ದೃಷ್ಟಿ ಉದಾರವಾಯಿತೇ ಹೊರತು ಸಂಕುಚಿತವಾಗಲಿಲ್ಲ. ಆದ್ದರಿಂದಲೇ ಅವನು ವ್ಯಾಸಭಾರತವನ್ನು ಅತಿ ವಿಕಾರವಶನಾಗದೆ ಬಿಂಬಿಸುವುದು ಸಾಧ್ಯವಾಯಿತು. ಪಂಪನಲ್ಲದೆ ಮತ್ತಾವ ಜೈನಕವಿಯಾಗಿದ್ದರೂ ಮಹಾ ಭಾರತವನ್ನು ಕುಲಗೆಡಿಸುವ ಸಾಧ್ಯತೆಯಿತ್ತು; ಪಂಪ ತನ್ನ ಜೈನತ್ವದ ಕಾರಣದಿಂದ ಕೆಲವೆಡೆಗಳಲ್ಲಿ ಚೆನ್ನಾಗಿಯೇ ಎಡವಿದ್ದರೂ, ಒಟ್ಟಿನ ಮೇಲೆ ಮೂಲಭಾರತವನ್ನು ಗೌರವಪೂರ್ವಕವಾಗಿ ಕನ್ನಡಿಸಿ ಗೆದ್ದಿದ್ದಾನೆ.

ಮಹಾಭಾರತದ ಆರಂಭದಲ್ಲೆ ಬರುವ ಸನ್ನಿವೇಶವೊಂದನ್ನು-ಶಂತನು ಸತ್ಯವತಿಯರ ಅನುರಕ್ತಿಪ್ರಸಂಗ-ತೆಗೆದುಕೊಂಡು, ಅಲ್ಲಿ ವ್ಯಕ್ತವಾಗುವ ಮೌಲ್ಯ ಎಂತಹುದು. ಪಂಪ ವ್ಯಾಸರನ್ನು ಅನುಸರಿಸಿಯೂ ಹೇಗೆ ತನ್ನ ವಿಶೇಷ ಕಲಾಪರಿಣತಿಯನ್ನು ಮೆರೆದಿದ್ದಾನೆ ಎಂಬುದನ್ನು ವಿವೇಚಿಸಬಹುದು.

ಸತ್ಯವತಿ ಪರಮಪೂಜ್ಯರಾದ ವ್ಯಾಸರ ತಾಯಿ : ಶಂತನು ಭಾರತೀಯ ಸಂಸ್ಕೃತಿಯ ಆಧಾರಸ್ತಂಭಗಳಲ್ಲೊಬ್ಬರೆನಿಸುವ ಭೀಷ್ಮರ ತಂದೆ. ಇಬ್ಬರೂ ಅನುರಕ್ತರಾಗುವ ವೇಳೆಗೆ ವ್ಯಾಸರನ್ನೂ ಭೀಷ್ಮರನ್ನೂ ಪಡೆದಿದ್ದವರು. ಈ ಮಹಾವ್ಯಕ್ತಿಗಳನ್ನು ವ್ಯಾಸ ಮತ್ತು ಪಂಪ ಹೇಗೆ ಚಿತ್ರಿಸಿದ್ದಾರೆಂಬುದು ಕುತೂಹಲಕರವಾದ ವಿಷಯ.

ಭಾರತೀಯ ದೃಷ್ಟಿಯಿಂದ ಕಾಮ ಧರ್ಮಕ್ಕೆ ಅಧೀನವಾದುದು; ಗಂಡು ಹೆಣ್ಣಿನ ಪ್ರೇಮ ಸಂತಾನಾಪೇಕ್ಷೆಯಿಂದಲ್ಲದೆ ಕೇವಲ ದೈಹಿಕ ಆಕರ್ಷಣೆಯಿಂದ ಚೋದಿತವಾಗಿದ್ದಲ್ಲಿ ಅದು ಧರ್ಮವಿರುದ್ಧವಾಗುತ್ತದೆ. ಧರ್ಮಬದ್ಧವಲ್ಲದ ಕಾಮ ಪಾಪವೆಂದೂ ಅದರಿಂದ ಕಾಮಿಗಳು ಶಿಕ್ಷೆಗೊಳಗಾಗುವರೆಂದೂ ಭಾರತೀಯ ಪರಂಪರೆಯ ನಿಲುವು. ಆದ್ದರಿಂದ ಧರ್ಮವಿರುದ್ಧವಲ್ಲದ ಕಾಮ-ವಿರಕ್ತಿಯಲ್ಲ-ಭಾರತೀಯ ಜನಜೀವನದ ಒಂದು ಪ್ರಮುಖವಾದ ಮೌಲ್ಯ. ಇದು ಶಂತನು-ಸತ್ಯವತಿಯರ ಪ್ರಥಮ ಸಂದರ್ಶನದಲ್ಲೇ ವ್ಯಕ್ತವಾಗುವುದನ್ನು ನೋಡುತ್ತೇವೆ.

ಶಂತನು-ಸತ್ಯವತಿಯರ ಪ್ರಣಯಸಂದರ್ಭದ ನಿರೂಪಣೆ ವ್ಯಾಸ ಭಾರತದಲ್ಲಿ ಹೀಗೆ ಬರುತ್ತದೆ:

ಕದಾಚಿದ್ವನಂ ಯಾತೋ ಯಮುನಾಮಭಿತೋ ನದೀಂ
ಮಹೀಪತಿರನಿರ್ದೇಶ್ಯಮಾಜಿಘ್ರದ್ಗಂಧಮುತ್ತಮಂ
ತಸ್ಯ ಪ್ರಭವಮನ್ವಿಚ್ಛನ್ವಿಚಚಾರ ಸಮಂತತಃ
ದದರ್ಶ ತದಾ ಕನ್ಯಾಂ ದಾಶಾನಾಂ ದೇವರೂಪಿಣೀಂ
ತಾಮಪೃಚ್ಛತ್ಸ ದೃಷ್ಟ್ವೈವ ಕನ್ಯಾಮಸಿತಲೋಚನಾಂ
ಕಸ್ಯ ತ್ವಮಸಿ ಕಾ ಚಾಸಿ ಕಿಂ ಭೀರು ಚಿಕೀರ್ಷಸಿ
ಸಾಬ್ರವೀದ್ದಾಶಕನ್ಯಾಸ್ಮಿ ಧರ್ಮಾರ್ಥಂ ವಾಹಯೇ ತರೀಂ
ಪಿತುರ್ನಿಯೋಗಾದ್ಭದ್ರಂ ತೇ ದಾಶರಾಜ್ಞೇ ಮಹಾತ್ಮನಃ
ರೂಪ ಮಾಧುರ್ಯಗಂಧೈಸ್ತಾಂ ಸಂಯುಕ್ತಾಂ ದೇವರೂಪಿಣೀಂ
ಸಮೀಕ್ಷ್ಯ ರಾಜಾ ದಾಶೇಯೀಂ ಕಾಮಯಾಮಾಸ ಶಂತನುಃ

(ಒಂದು ದಿನ ಶಂತನುವು ಯಮುನಾನದಿಯ ಹತ್ತಿರ ಕಾಡಿನಲ್ಲಿ ಸಂಚಿರಿಸುತ್ತಿದ್ದಾಗ ಒಂದು ಅಪೂರ್ವವಾದ ಸುವಾಸನೆ ಸುಳಿದುಬಂತು. ಅದು ಯಾತರದ್ದು ಎಂದು ಹುಡುಕುತ್ತ ಹೋಗಲು, ದಿವ್ಯಸುಂದರಿಯಾಗಿದ್ದ ಒಬ್ಬ ಬೆಸ್ತರ ಹುಡುಗಿಯನ್ನು ಕಂಡು ಅವಳು ಯಾರು, ಅಲ್ಲಿ ಏನು ಮಾಡುತ್ತಿದ್ದಳು ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಅವಳು ‘ನಾನು ಬೆಸ್ತರರಸನ ಮಗಳು; ಧರ್ಮಾರ್ಥವಾಗಿ ದೋಣಿ ನಡೆಸುತ್ತೇನೆ; ಇದು ನಮ್ಮ ತಂದೆ ನನಗೆ ವಹಿಸಿಕೊಟ್ಟಿರುವ ಕೆಲಸ’ ಎಂದಳು. ರೂಪ ಮಾಧುರ್ಯ ಪರಿಮಳಗಳಿಂದೊಡಗೂಡಿ ದೇವಸುಂದರಿಯಂತಿದ್ದ ಆ ಬೆಸ್ತರ ಹುಡುಗಿಯ ಮೇಲೆ ಶಂತನುವಿಗೆ ಆಸೆಯಾಯಿತು. ಆದ್ದರಿಂದ ಆ ಹುಡುಗಿಯ ತಂದೆಯನ್ನು ಕಂಡು ಅವಳನ್ನು ನನಗೆ ಕೊಡಬೇಕೆಂದು ಕೇಳಿದನು)[1]

ಇಲ್ಲಿ ಶಂತನು-ಸತ್ಯವತಿಯರ ಘನತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ. ‘ಶಾಕುಂತಲ’ದಲ್ಲಿ ಬರುವ ದುಷ್ಯಂತ-ಶಕುಂತಲೆಯರ ಪ್ರಣಯ ಪ್ರಸಂಗದೊಡನೆ ಇದನ್ನು ಹೋಲಿಸಿ ನೋಡಬೇಕು. ಎರಡು ಸಂದರ್ಭಗಳಿಗೂ ಬಾಹ್ಯದಲ್ಲಿ ಹೋಲಿಕೆಯಿದೆ; ಆದರೆ ಪಾತ್ರಗಳ ಸ್ವಭಾವದಲ್ಲಿ ಅಜಗಜಾಂತರ. ದುಷ್ಯಂತ, ಶಂತನು ಇಬ್ಬರೂ ಬೇಟೆಗಾಗಿ ಬಂದವರು (ಹಿಂದಿನ ಕಾಲದಲ್ಲಿ ರಾಜರಿಗೆ ಬೇಟೆ, ಬೇಟ ಒಟ್ಟೊಟ್ಟಿಗೇ ಈಡೇರುತ್ತಿದ್ದುವೇನೊ!) ಎರಡೂ ಕಡೆಗಳಲ್ಲೂ ಆವರಣ ಪ್ರಣಯಕ್ಕೆ ಅನುಕೂಲವಾದದ್ದು. ಆದರೆ ‘ಶಾಕುಂತಲ’ದಲ್ಲಿ ಕಾಣತಕ್ಕದ್ದು ಧರ್ಮಬಾಹಿರವಾದ ಅಂಧಕಾಮ; ಕಣ್ವರು ಬರುವವರೆಗೂ ಕಾಯಲಾರದ ಚಪಲಚಿತ್ತರಾದ ಗಂಡು ಹೆಣ್ಣಿನ ದೈಹಿಕ ಸಮಾಗಮ.

ಶಂತನು-ಸತ್ಯವತಿಯರ ಪ್ರಣಯದಲ್ಲಿ ಈ ಉಚ್ಛೃಂಖಲತೆಯಿಲ್ಲ; ಅದರ ಸ್ತರವೇ ಬೇರೆ. ಶಂತನು ಸತ್ಯವತಿಯನ್ನು ನೋಡಿದೊಡನೆಯೆ ಅವನಿಗೆ ಬಯಕೆಯಾಯಿತು (‘ಕಾಮಯಾಮಾಸ’), ದಿಟ. ಆದರೆ ಅವನು ದುಷ್ಯಂತನಂತೆ ಅವಳನ್ನು ಒಲಿಸಿಕೊಂಡು ಕೂಡಲಿಲ್ಲ; ಅವಳನ್ನು ವಿವಾಹವಾಗುವ ಉದ್ದೇಶದಿಂದ ನೇರವಾಗಿ ಅವಳ ತಂದೆಯ ಹತ್ತಿರಕ್ಕೆ ನಡೆದ; ಸತ್ಯವತಿಯ ಮನಸ್ಸಂತೂ ಚಂಚಲವಾಗಲೇ ಇಲ್ಲ. ಈ ಸಂಯಮ ಅದ್ಭುತವಾದದ್ದು; ದುಷ್ಯಂತ-ಶಕುಂತಲೆಯರಲ್ಲಿ ದುರ್ಲಭವಾದದ್ದು. ‘ಧರ್ಮಾರ್ಥಂ ವಾಹಯೇ ತರೀಂ’ ಎಂಬ ಸತ್ಯವತಿಯ ಮಾತು, ಅದರಲ್ಲೂ ‘ಧರ್ಮಾರ್ಥಂ’ ಎಂಬುದು ಈ ಪ್ರಸಂಗದ ಔನ್ನತ್ಯಕ್ಕೆ, ಪಾತ್ರಗಳ ಮನೋಭಾವಕ್ಕೆ ದ್ಯೋತಕವಾಗಿ ತೋರುತ್ತದೆ. ‘ಧರ್ಮಾರ್ಥಂ’ ಎಂಬುದಾದ ಮೇಲೆ ಕಾಮಯಾಮಾಸ ಎಂಬುದು ಬರುತ್ತದೆ. ಧರ್ಮ ಮೊದಲು, ಕಾಮ ಅನಂತರ.

ಇಷ್ಟಾದರೂ ವ್ಯಾಸರ ಚಿತ್ರಣ ಸ್ವಲ್ಪ ಬೋಳಾಗಿಯೇ ಕಾಣುತ್ತದೆ. ‘ದೇವರೂಪಿಣಿ’ ಯಾದ, ರೂಪಮಾಧುರ‍್ಯಗಂಧಯುಕ್ತಳಾದ ಹೆಣ್ಣನ್ನು ನೋಡಿದಾಗ ಶಂತನುವಿನ ಮನದಲ್ಲಿ ಭಾವಾಂದೋಲನವಾಗಲಿಲ್ಲವೆ? ಅವನು ಮರುಮಾತಾಡದೆ ದಾಶರಾಜನ ಬಳಿಗೆ ಹೊರಟು ಹೋದನೆ? ಇನ್ನು ಸತ್ಯವತಿಯ ಪ್ರತಿಕ್ರಿಯೆಯೇನು? ಅವರಿಬ್ಬರ ಮನಸ್ಸುಗಳು ಧರ್ಮದಲ್ಲಿ ಪ್ರತಿಷ್ಠಿತವಾಗಿದ್ದು ಕೂಡ ಹೇಗೆ ಹೊಯ್ದಾಡಿದುವು ಎಂಬುದನ್ನು ಮತ್ತಷ್ಟು ಸಂಕೀರ್ಣವಾಗಿ, ಮಾನವೀಯವಾಗಿ ಚಿತ್ರಿಸಬಹುದಿತ್ತು ಎನಿಸುತ್ತದೆ. ಆ ಕೆಲಸವನ್ನು ಪಂಪ ಸೊಗಸಾಗಿ ಮಾಡಿದ್ದಾನೆ. ವ್ಯಾಸರಲ್ಲಿ ಅತಿ ಸೂಚ್ಯವಾಗಿದ್ದುದನ್ನು ಅವನು ಪ್ರಸ್ಫುಟಗೊಳಿಸಿದ್ದಾನೆ ಎಂದರೂ ಸಲ್ಲುತ್ತದೆ. ಅಂತೂ ಪಂಪನ ಪ್ರತಿಭೆ ಈ ಪ್ರಸಂಗ ನಿರೂಪಣೆಯಲ್ಲಿ ಚೆನ್ನಾಗಿ ಪ್ರಕಟವಾಗುತ್ತದೆ. ಪ್ರಕೃತ ಸಂದರ್ಭದಲ್ಲಿ ಬರುವ ಪಂಪನ ಸುಪ್ರಸಿದ್ಧ ಪದ್ಯವಿದು:

ಮೃಗಯಾವ್ಯಾಜದಿನೊರ್ಮೆ ಶಂತನು ತೊಳಲ್ತರ್ಪಂ ಪಳಂಚಲ್ಕೆ ತ
ಜ್ಮೃಗಶಾಬಾಕ್ಷಿಯ ಕಂಪು ತಟ್ಟಿ ಮಧುಪಂಬೋಲ್ ಸೋಲ್ತು ಕಂಡೊಲ್ದು ನ
ಲ್ಮೆಗೆ ದಿಬ್ಯಂಬಿಡಿವಂತೆವೋಲ್ ಪಿಡಿದು ನೀಂ ಬಾ ಪೋಪಮೆಂದಂಗೆ ಮೆ
ಲ್ಲಗೆ ತತ್ಕನ್ಯಕೆ ನಾಣ್ಜಿ ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ

ಪಂಪ ಮೂಲದ ಮೌಲ್ಯವನ್ನು ಅತ್ಯಂತ ನಾಟಕೀಯವಾಗಿ, ಮಾರ್ಮಿಕವಾಗಿ ದೇಸಿಯಲ್ಲಿ ಬೆಳಗಿದ್ದಾನೆ. ಸತ್ಯವತಿಯನ್ನು ಕಂಡು ಮಧುಪದಂತೆ ಮನಸೋತ ಶಂತನು ನೆಟ್ಟಗೆ ಅವಳ ತಂದೆಯ ಬಳಿಗೆ ಹೋಗುವುದಿಲ್ಲ; ಅನುರಾಗಾರ್ದ್ರ ಹೃದಯನಾಗಿ ಅವಳನ್ನು ಆಲಿಂಗಿಸಿಕೊಂಡು ಅಥವಾ ಕೈ ಹಿಡಿದು ‘‘ನೀಂ ಬಾ ಪೋಪಂ’’ ಎನ್ನುತ್ತಾನೆ. ‘ಹೋಗೋಣ ಬಾ’ ಎಂಬ ಈ ಮಾತಿನಲ್ಲಿ ಇರತಕ್ಕದ್ದು ಭೋಗೇಚ್ಛೆಯಲ್ಲ; ಅರಮನೆಗೆ ಅವಳನ್ನು ಕರೆದೊಯ್ದು ಮದುವೆಯಾಗಿ ರಾಣಿಯನ್ನಾಗಿ ಮಾಡಿಕೊಳ್ಳುವ ಹಂಬಲ. ಅವಳ ತಂದೆಯ ಅನುಮತಿಯನ್ನು ಪಡೆಯಬಾರದೆಂದಿಲ್ಲ; ಅದಕ್ಕೆ ಮೊದಲು ಅವಳ ಸಮ್ಮತಿಯನ್ನವನು ಪಡೆಯಬೇಕಾಗಿದೆ. ಅದಕ್ಕಾಗಿ ‘‘ನೀಂ ಬಾ ಪೋಪಂ’’ ಎಂಬ ಬೇಡಿಕೆ. ‘ಶಾಕುಂತಲ’ದ ದುಷ್ಯಂತನಾದರೋ ಹಾಗೆ ಕೇಳಿದವನೇ ಅಲ್ಲ; ಅವಳನ್ನು ಮದುವೆ ಮಾಡಿಕೊಳ್ಳುವ ಅಭಿಪ್ರಾಯವಾದರೂ ಅವನಿಗೆಲ್ಲಿತ್ತು? ಭೋಗವಷ್ಟೆ ಅವನ ಗುರಿ. ಕರೆಯಿಸಿಕೊಳ್ಳುತ್ತೇನೆಂದು ಹೇಳಿ ಹೋದವನು ಅವಳನ್ನು ಮರೆತೇಬಿಡುತ್ತಾನೆ. ಶಂತನುವಿನದು ತೀರ ಭಿನ್ನವಾದ ವರ್ತನೆ. ಶಕುಂತಲೆಯಾದರೂ ಕಣ್ವರ ಅನುಮತಿಗಾಗಿ ಕಾಯಲಿಲ್ಲ; ಮೋಹಾವಿಷ್ಟಳಾಗಿ ದುಷ್ಯಂತನಿಗೆ ತನ್ನನ್ನು ಅರ್ಪಿಸಿಕೊಂಡಳು. ಆದರೆ ಇಲ್ಲಿ ಸತ್ಯವತಿ ‘‘ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ?’’ ಎಂದು ಹಿರಿಯರತ್ತ ಕೈ ತೋರಿಸಿ ಧರ್ಮವನ್ನು ಪಾಲಿಸುತ್ತಾಳೆ.

ಪಂಪನ ಶಂತನು ಸತ್ಯವತಿಯರಲ್ಲಿ ಧರ್ಮದ ಎಚ್ಚರವಿದೆ: ಅದಕ್ಕೆ ಅಧೀನವಾಗಿ ಸಹಜವಾದ ಮಾನವಭಾವಗಳೂ ಇವೆ. ಶಂತನು ಸತ್ಯವತಿಯನ್ನು ಹಿಡಿಯುವುದರಲ್ಲಿ ಆ ಹಿಡಿತ ಅವಳಿಗೆ ಅಪ್ರಿಯವಾಗದೆ ಅವಳು ನಾಚಿ ಮೆಲ್ಲಗೆ ಉಲಿಯುವುದರಲ್ಲಿ ಅವು ಯಶಸ್ವಿಯಾಗಿ ಅಭಿವ್ಯಕ್ತವಾಗಿವೆ. ಆದರೆ ‘ತತ್ಕನ್ಯಕೆ ನಾಣ್ಚಿ’ ಎಂಬುದನ್ನು ಮೂಲದಲ್ಲಿರುವ ‘ಭೀರು’ ಎಂಬ ಮಾತು, ‘‘ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ’’ ಎಂಬುದನ್ನು ಮೂಲದ ‘ಪಿತುರ್ನಿಯೋಗಾತ್’ ಎಂಬ ಮಾತು ಪ್ರೇರಿಸಿದಂತೆ ತೋರುವುದಿಲ್ಲವೆ?

ಪಂಪನ ಕಾವ್ಯದಲ್ಲಿ ವಿಶಿಷ್ಟವಾಗಿರತಕ್ಕದ್ದು, ಅವನದೇ ಆದ ಕೊಡುಗೆ ‘‘ನಲ್ಮೆಗೆ ದಿಬ್ಯಂಬಿಡಿವಂತೆವೋಲ್’’ ಎಂಬ ಉಪಮಾನ. ಇದು ಅತ್ಯಂತ ಧ್ವನಿಪೂರ್ಣವಾದುದು. ಶಂತನು ಸತ್ಯವತಿಯರ ಪ್ರೇಮ ಪವಿತ್ರವಾದದ್ದು, ಅಧರ್ಮಕಲುಷಿತವಾದುದಲ್ಲ ಎಂಬುದನ್ನು ಪಂಪ ಇಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾನೆ. ದೋಷಿಗಳು, ಆಪ್ರಾಮಾಣಿಕರು ‘ದಿವ್ಯ’ವನ್ನು ಹಿಡಿದರೆ ಅದು ಅವರಿಗೆ ಮಾರಕವಾಗುತ್ತದೆ; ನಿರ್ದೋಷಿಗಳಿಗೆ ಅದರಿಂದೇನೂ ಬಾಧಕವಿಲ್ಲ. ಶಂತನು ‘ದಿವ್ಯ’ವನ್ನು ಹಿಡಿಯುವಂತೆ ಸತ್ಯವತಿಯನ್ನು ಹಿಡಿದ; ಅವರ ಪ್ರೇಮ ಶುದ್ಧವಾಗಿದ್ದುದರಿಂದ ಅವರು ಆ ಕ್ಷಣದಲ್ಲಾಗಲಿ ಮುಂದಾಗಲಿ ಯಾವ ಅಪಾಯಗಳಿಗೂ ತುತ್ತಾಗಲಿಲ್ಲ. ದುಷ್ಯಂತ ಶಕುಂತಲೆಯನ್ನು ಹಿಡಿದ; ಆದರೆ ಅವರ ಪ್ರೇಮ ಅಪ್ರಾಮಾಣಿಕವೂ ಅಶುದ್ಧವೂ ಆಗಿದ್ದುದರಿಂದ ‘ದಿವ್ಯ’ ಇಬ್ಬರನ್ನೂ ಮುಂದೆ ಸುಟ್ಟು, ಶುದ್ದೀಕರಿಸಬೇಕಾಯಿತು. ಆ ಶುದ್ದೀಕರಣದ ಕತೆಯೆ ‘ಶಾಕುಂತಲ’ದ ಉತ್ತರ ಭಾಗ.

ಪಂಪ ಒಂದೇ ಒಂದು ಪದ್ಯದಲ್ಲಿ ಏನೆಲ್ಲವನ್ನೂ ಸಮಾವೇಶಗೊಳಿಸಿದ್ದಾನೆಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಶಂತನು ಬೇಟೆಗೆ ಹೋದದು, ಸತ್ಯವತಿಯ ಕಂಪು ಸುಳಿದದ್ದು, ಅವಳ ರೂಪಾತಿಶಯ, ಅವನ ಚಿತ್ತ ಮರುಳಾದದ್ದು, ಅವನು ತನ್ನನ್ನು ಮದುವೆಯಾಗುವಂತೆ ಕೇಳಿದ್ದು, ಅವಳು ನಾಚಿ ತನ್ನ ತಂದೆಯನ್ನು ಕೇಳುವಂತೆ ಮೆಲ್ಲಗೆ ಹೇಳಿದ್ದು, ಇಬ್ಬರ ಮನಸ್ಸಿನಲ್ಲೂ ಧರ್ಮ ಮೇಲುಗೈಯಾಗಿರತಕ್ಕದ್ದು ಹೀಗೆ ಎಷ್ಟೋ ಅಂಶಗಳನ್ನು ಪಂಪ ಏಕೈಕ ವೃತ್ತದಲ್ಲಿ ಕಟ್ಟಿಕೊಟ್ಟಿದ್ದಾನೆ. ಪಂಪನ ‘ಹಿತಮಿತ’ ಗುಣ-ಅರ್ಥಾತ್ ಧ್ವನಿಶಕ್ತಿ-ಇದಕ್ಕೆ ಕಾರಣ. ‘ಹಿತಮಿತವಚನ’ವೆಂದರೆ ಹತ್ತು ಮಾತುಗಳಲ್ಲಿ ಅರನ್ನು ತೆಗೆದು ನಾಲ್ಕನ್ನು ಉಳಿಸಿಕೊಳ್ಳುವ ಸಂಗ್ರಹ ಕಾರ‍್ಯವಲ್ಲ; ಹತ್ತೂ ಮಾತಿನ ಅರ್ಥ ಬರುವಂತೆ ನಾಲ್ಕು ಮಾತುಗಳನ್ನು ಬಳಸುವ ಜಾಣ್ಮೆ; ಅದು ಪಂಪನಲ್ಲಿದೆ. ವೃತ್ತದ ಚೌಕಟ್ಟಿನಲ್ಲಿ ಅವನು ಆಡುಮಾತಿನ ವಿನ್ಯಾಸವನ್ನು ಪರಿಣಾಮಕಾರಿಯಾಗಿ ತಂದಿರುವುದು ಗಮನಿಸಬೇಕಾದ ಅಂಶ. ಪಂಪ ಸಮರ್ಥಕವಿ; ಅಲ್ಲದೆ ಅವನು ಕಾಲದಲ್ಲಿ ಕಂದವೃತ್ತ ಗಳು ಜೀವಂತವಾಗಿದ್ದುವು. ಆದ್ದರಿಂದಲೇ ಅವನನ್ನು ಸರಿಗಟ್ಟುವ ಚಂಪೂ ಕವಿ ಮತ್ತೊಬ್ಬನಿಲ್ಲ. ‘‘ಪಸರಿಪ ಚಂಪೂ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ’’ ಎನ್ನಬಹುದು, ಬೇಕಾದರೆ.

ಶಂತನು-ಸತ್ಯವತೀ ಪ್ರಸಂಗವನ್ನು ದುಷ್ಯಂತ-ಶಕುಂತಲೆಯರ ಪ್ರಸಂಗದೊಡನೆ ಹೋಲಿಸಿದೆಯಷ್ಟೆ. ವ್ಯಾಸ-ಪಂಪರು ಈ ಪ್ರಕರಣದಲ್ಲಿ ಯಾವ ಮೌಲ್ಯವನ್ನು ಚಿತ್ರಿಸಿದ್ದಾರೊ ಅದನ್ನೆ ಕಾಳಿದಾಸ ‘ಶಾಕುಂತಲ’ದಲ್ಲಿ ಚಿತ್ರಿಸಿರತಕ್ಕದ್ದು. ಆದರೆ ಅವನು ಪ್ರಾರಂಭದಲ್ಲಿ ಅದನ್ನು ನೇತ್ಯಾತ್ಮಕವಾಗಿ ಚಿತ್ರಿಸಿದ್ದಾನೆ; ಶಂತನು-ಸತ್ಯವತಿಯರಲ್ಲಿ ಅದು ಇತ್ಯಾತ್ಮಕವಾಗಿ ಬಂದಿದೆ. ಶಂತನು-ಸತ್ಯವತಿಯರು ದುಷ್ಯಂತ-ಶಕುಂತಲೆಯರಂತೆ ಎಂದೂ ನಡೆದುಕೊಳ್ಳಲಾರರು. ಇಲ್ಲಿ ಹೋಲಿಕೆ ಪಾತ್ರಗಳ ಸ್ವಭಾವಭಿನ್ನತೆಗೆ ಸಂಬಂಧಿಸಿದ್ದೇ ಹೊರತು ಕವಿಪ್ರತಿಭೆಯ ತಾರತಮ್ಯಕ್ಕಲ್ಲ.

ಈ ಸಂದರ್ಭದಲ್ಲಿ ಒಂದು ಆಕ್ಷೇಪಣೆ ಉದ್ಭವಿಸಬಹುದು. ಸತ್ಯವತಿ ಹಿಂದೆ ಪರಾಶರರನ್ನು ಕೂಡಿದ್ದವಳಲ್ಲವೆ? ಅವಳ ಆಗಿನ ವರ್ತನೆಗೆ ಸಮಾಧಾನವೇನು? ‘‘ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ’’ ಎಂದು ಆಗ ಏತಕ್ಕೆ ಹೇಳಲಿಲ್ಲ? ಇದಕ್ಕೆ ಉತ್ತರವಿದೆ. ಪರಾಶರರನ್ನು ಅವಳು ಸ್ವೇಚ್ಛೆಯಿಂದ ಕೂಡಲಿಲ್ಲ. ನಡೆದುದನ್ನು ಅವಳ ಬಾಯಿಂದಲೇ ಕೇಳೋಣ: ‘‘ಒಂದು ದಿನ ಪರಾಶರ ಋಷಿಯು ಯಮುನಾ ನದಿಯನ್ನು ದಾಟಬೇಕಾಯಿತು. ನಾನು ಆತನನ್ನು ಹಾಯಿಸುತ್ತಿದ್ದಾಗ ಆತನು ನನ್ನನ್ನು ನೋಡಿ ಕಾಮವಶನಾಗಿ ಸವಿಮಾತುಗಳಿಂದ ಅನುನಯಗೊಳಿಸಿದನು. ನನಗೆ ಒಂದು ಕಡೆ ಶಾಪದ ಹೆದರಿಕೆ, ಇನ್ನೊಂದು ಕಡೆ ತಂದೆಯ ಹೆದರಿಕೆ; ಮತ್ತೊಂದು ಕಡೆ ಅವನು ಆಸೆ ತೋರಿಸಿದ ವರಗಳ ಮೇಲೆ ಮನಸ್ಸು; ಹೀಗಿರಲು ಇನ್ನೂ ಹುಡುಗಿಯಾದ ನನ್ನನ್ನು ಆತನು ತನ್ನ ತೇಜಸ್ಸಿನಿಂದ ವಶಪಡಿಸಿಕೊಂಡನು(ವ.ಭಾ). ಪರಾಶರ ಸತ್ಯವತಿಗೆ ಮರಳಿ ಕನ್ನೆತನವನ್ನು ಅನುಗ್ರಹಿಸಿದುದರಿಂದ ಅದು ಒಂದು ರೀತಿಯಲ್ಲಿ ಅವಳ ಪೂರ್ವಭವ; ಅದನ್ನಿಲ್ಲಿಗೆ ಎಳೆದು ತರಬೇಕಾದ ಅಗತ್ಯ ಕಾಣುವುದಿಲ್ಲ. ಶಂತನು ತನ್ನ ಪ್ರಥಮ ಪತ್ನಿಯಾದ ಗಂಗೆಯನ್ನು ಮೊದಲ ಸಲ ಕಂಡಾಗ, ‘‘ನೀನು ಯಾರು ಸುಂದರಿ? ದೇವಿಯೋ ದಾನವಿಯೋ ಗಂಧರ್ವಳೋ ಅಪ್ಸರಳೋ ಯಕ್ಷಿಯೋ ಮಾನುಷಿಯೋ? ಯಾರಾದರೂ ಆಗಿರು, ನನ್ನ ಹೆಂಡತಿಯಾಗು!’’ ಎಂದಿದ್ದನೆಂಬುದೂ ಗಮನಾರ್ಹ.

ಭಾರತೀಯ ಸಂಸ್ಕೃತಿಗೆ ಒಂದು ಸಣ್ಣದಾದರೂ ಗಣ್ಯವಾದ ನಿದರ್ಶನವಾಗಿರುವ, ಒಂದು ದೃಷ್ಟಿಯಿಂದ ಮಹಾಭಾರತಕ್ಕಾದಿಯಾದ ಈ ಶಂತನು ಸತ್ಯವತೀಪ್ರಣಯ ಪ್ರಕರಣವನ್ನು ಪಂಪ ವ್ಯಾಸರಿಗೆ ಹೊಯ್‌ಕಯ್ಯಾಗಿ ಚಿತ್ರಿಸಿದ್ದಾನೆ; ವ್ಯಾಸಮಾರ್ಗದಲ್ಲಿ ನಡೆದೂ ತನ್ನತನವನ್ನು, ಕನ್ನಡತನವನ್ನು ಉಳಿಸಿಕೊಂಡಿದ್ದಾನೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ‘ದಿವ್ಯ’ವನ್ನು ಹಿಡಿದವನು ಶಂತನು ಮಾತ್ರವಲ್ಲ- ಕವಿ ಪಂಪ ಕೂಡ. ಅದರಲ್ಲಿ ಅವನು ಉತ್ತೀರ್ಣನಾಗಿದ್ದಾನೆ.

[1] ಎ.ಆರ್.ಕೃ. ಅವರ ಅನುವಾದ, ‘ವಚನಭಾರತ’, ಪು.೩