ಕನ್ನಡ ಸಾಹಿತ್ಯಕ್ಕೆ ಇ.ಪಿ.ರೈಸ್[1] ಮಾತ್ರವಲ್ಲ, ಇನ್ನೂ ಅನೇಕ ಪಾಶ್ಚಾತ್ಯ ವಿದ್ವಾಂಸರು ಅನ್ಯಾಯ ಮಾಡಿದ್ದಾರೆ. ಅವರಲ್ಲಿ ಜಿ.ಎ.ಗ್ರಿಯರ್ಸನ್ ಒಬ್ಬರು. ಕನ್ನಡ ಸಾಹಿತ್ಯವನ್ನು ಸ್ವತಃ ಪರಾಮರ್ಶಿಸದೆ ಅವರು ಕೊಟ್ಟಿರುವ ಒಂದು ಬೇಜವಾಬ್ದಾರಿಯುತವಾದ ಹೇಳಿಕೆ ಹೀಗಿದೆ : ‘‘Nearly all the works which have been described seem to be either translations from or imitations of Sanskrif.’’[2] ಕನ್ನಡ ಕವಿಗಳಿಗೆ ಸಂಸ್ಕೃತ ‘ಕೈವೊಕ್ಕ ವಿಧಿ’ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಕಾವ್ಯಗಳಿಗೆ ಸಂಸ್ಕೃತದಿಂದ, ಪ್ರಾಕೃತದಿಂದ ಕೂಡ ವಸ್ತುವನ್ನು ಸ್ವೀಕರಿಸುವುದು ದಿಟ; ಎಷ್ಟೋ ಕಡೆ ಸಂಸ್ಕೃತ ಕಾವ್ಯಗಳಿಂದ ಭಾಷಾಂತರ ಮಾಡಿರುವುದೂ ದಿಟ. ಆದರೆ ಕನ್ನಡ ಸಾಹಿತ್ಯವೆಲ್ಲ ಸಂಸ್ಕೃತದ ಅನುವಾದ ಇಲ್ಲವೆ ಅನುಕರಣ ಎನ್ನುವ ಸಗಟು ಹೇಳಿಕೆ ಅಜ್ಞಾನಜನ್ಯವೆನ್ನಬೇಕಾಗುತ್ತದೆ. ಸಂಸ್ಕೃತ ಕೃತಿಗಳನ್ನು ಕನ್ನಡ ಕವಿಗಳು ತಮ್ಮ ಕಣ್ಣ ಮುಂದಿರಿಸಿಕೊಂಡಿದ್ದರೂ ಅವುಗಳನ್ನು ಯಥಾವತ್ತಾಗಿ ನಕಲುಮಾಡಿ ಕೈತೊಳೆದುಕೊಳ್ಳುವುದಿಲ್ಲ. ಮುಟ್ಟಿದ್ದನ್ನೆಲ್ಲ ಅವರು ಚಿನ್ನಮಾಡಲು ಪ್ರಯತ್ನಿಸುತ್ತಾರೆ; ತಮ್ಮ ಕನ್ನಡ ಕೃತಿಗಳಲ್ಲಿ ಸ್ವೋಪಜ್ಞತೆಯನ್ನು ಅಳವಡಿಸುತ್ತಾರೆ; ತಮ್ಮತನವನ್ನು ಚಾಚುತ್ತಾರೆ; ಮೂಲ ಕೃತಿಯನ್ನು ಮೀರಿ ಬೆಳೆಯುವ ಅವಕಾಶಗಳನ್ನೆಲ್ಲ ಬಳಸಿಕೊಳ್ಳುತ್ತಾರೆ. ಹೀಗಾಗಿ, ಮೇಲುನೋಟಕ್ಕೆ ಅಥವಾ ತೇಲುನೋಟಕ್ಕೆ ಅನುವಾದವೆಂದೊ ಅನುಕರಣವೆಂದೊ ತೋರತಕ್ಕದ್ದು ಆಳ ನೋಟಕ್ಕೆ ಸ್ವತಂತ್ರ ಕಾವ್ಯವಾಗಿ ಕಂಡುಬರುವುದು ಸಾಧ್ಯ. ಕನ್ನಡ ಸಾಹಿತ್ಯ ಸಂಸ್ಕೃತ ಪ್ರಾಕೃತಗಳನ್ನು ಅವಲಂಬಿಸಿಯೂ ಒಟ್ಟಿನಲ್ಲಿ ಅನನ್ಯ ಪರತಂತ್ರವಾದ ಸತ್ವ, ಕಳೆಗಳನ್ನು ತಳೆದಿರುವುದು ನಿರ್ವಿಕಾರ ದೃಷ್ಟಿಗೆ ಸುಲಭವೇದ್ಯ.

ಕನ್ನಡದ ಆದಿಕವಿಯೆನಿಸಿದ ಪಂಪನ ‘ಆದಿಪುರಾಣ’ವನ್ನೇ ತೆಗೆದುಕೊಳ್ಳೋಣ. ಇದು ಧಾರ್ಮಿಕ ಕಾವ್ಯವಾದುದರಿಂದ ಪಂಪನಿಗೆ ಇಲ್ಲಿ ಗರಿಷ್ಠ ಪ್ರಮಾಣದ ಸ್ವಾತಂತ್ರ್ಯವಿಲ್ಲ ವೆಂಬುದು ಸ್ಪಷ್ಟ.[3] ಆದರೂ ಪುರಾಣ ಪ್ರಜ್ಞೆಯೆ ಸ್ಥಾಯಿಯಾಗಿರುವಂಥ ತನ್ನ ಆಕರವನ್ನು-ಭಗವಜ್ಜಿನಸೇನಾಚಾರ್ಯರ ‘ಪೂರ್ವಪುರಾಣ’ -ಅವನು ಕಾವ್ಯಪ್ರಜ್ಞಾಪೂರ್ವಕವಾಗಿ ಕನ್ನಡಿಸಿದ್ದಾನೆಂಬುದು ಮಹತ್ವದ ಸಂಗತಿ. ಅವನೇ ಹೇಳಿಕೊಂಡಿರುವಂತೆ ಧರ್ಮ-ಕಾವ್ಯಧರ್ಮಗಳ ಸಮನ್ವಯದಲ್ಲಿ ಅವನ ಕೃತಿಯ ವೈಶಿಷ್ಟ್ಯವಿದೆ, ಸ್ವತಂತ್ರ ಗುಣವಿದೆ.

ಇಲ್ಲಿ ನಾವು ಒಂದು ಮುಖ್ಯಾಂಶವನ್ನು ನೆನಪಿಡಬೇಕು. ಜಿನಸೇನಾಚಾರ್ಯರ ‘ಪೂರ್ವಪುರಾಣ’ ಹೆಸರಿಗೆ ಪುರಾಣವಾದರೂ ಆಮೂಲಾಗ್ರವಾಗಿ ಶುಷ್ಕಗ್ರಂಥವೇನಲ್ಲ; ಪುರಾಣವಾಗಿಯೂ ಅದು ಇತಿಹಾಸ-ರಾಮಾಯಣ, ಭಾರತ-ಗಳಂತೆ ಕಾವ್ಯಾತ್ಮಕವೂ ಎಷ್ಟೋ ಕಡೆ ರಸಸ್ಯಂದಿಯೂ ಆಗಿರುವ ಗ್ರಂಥರತ್ನ. ಜಿನಸೇನಾಚಾರ್ಯರು ಮೇಲಿಂದ ಮೇಲೆ ಕೊಡುವ ಚೇತೋಹಾರಿಯಾದ ಉಪಮಾನಗಳು ಅವರ ಆರ್ದ್ರವಾದ ಕವಿ ಹೃದಯವನ್ನು ಪ್ರತಿಫಲಿಸುತ್ತವೆ.*] ‘‘ಕವಿತ್ವೇ ಕಾ ದರಿದ್ರತಾ?’’ (ಕವಿತ್ವದಲ್ಲೇನು ಬಡತನ?) ಎಂದು ಕೇಳುವ ಆಚಾರ್ಯರು ತಮ್ಮ ಕೃತಿಯಲ್ಲಿ ಧರ್ಮ, ಕಾವ್ಯಧರ್ಮಗಳನ್ನು ಕೂಡಿಸಿದ್ದಾರೆಂದೇ ಹೇಳಬೇಕು. ಆದರೂ ಅದು ಪ್ರಧಾನವಾಗಿ ಒಂದು ಪುರಾಣ; ಪಂಪನ ಕೃತಿಯಾದರೋ ಪುರಾಣಾಂಶಗಳನ್ನೊಳಗೊಂಡರೂ ಮುಖ್ಯವಾಗಿ ಒಂದು ಕಾವ್ಯ, ಉತ್ಕೃಷ್ಟವಾದ ಕಾವ್ಯ. ಎರಡಕ್ಕೂ ವ್ಯತ್ಯಾಸವಿರತಕ್ಕದ್ದು ಜಾತಿ(Kind)ಯಲ್ಲಲ್ಲ, ಪರಿಮಾಣ(Degree)ದಲ್ಲಿ.

‘ಪೂರ್ವ ಪುರಾಣ’ದಲ್ಲಿ ನೀರಸವಾಗಿರುವುದನ್ನು ಪಂಪ ಹೇಗೆ ಸರಸಗೊಳಿಸಬಲ್ಲ. ಮೂಲದಲ್ಲಿ ಸುಂದರವಾಗಿರತಕ್ಕದ್ದನ್ನು ಹೇಗೆ ಮತ್ತೂ ಪುಷ್ಟಿಗೊಳಿಸಬಲ್ಲ, ಮೂಲದಲ್ಲಿಲ್ಲದ ಭಾಗಗಳನ್ನು ಸ್ವತಃ ಸೃಷ್ಟಿಸಿ ಸ್ವಪ್ರತಿಭೆಯನ್ನು ಹೇಗೆ ಮೆರೆಯಬಲ್ಲ ಎಂಬುದಕ್ಕೆ ಕೆಲವು ದೃಷ್ಟಾಂತಗಳನ್ನು ಪ್ರಕೃತ ಲಕ್ಷಿಸಬಹುದು. ಜಿನಸೇನಾಚಾರ್ಯರು ಎಷ್ಟೋ ಕಡೆ ಪುರಾಣಕಾರರಾಗಿ ಕಂಡರೆ ಪಂಪ ಕವಿಯಾಗಿ ಕಾಣುತ್ತಾನೆ ಎಂಬುದನ್ನು ಇವು ಸಮರ್ಥವಾಗಿ ತೋರಿಕೊಡುತ್ತವೆ.

ಮಹಾಬಲರಾಜನಿಗೆ ಸ್ವಯಂಬುದ್ಧ ಮಾಡಿದ ಬೋಧೆ ಜಿನಸೇನರಲ್ಲಿ ಹೀಗೆ ನಿರೂಪಿತವಾಗಿದೆ:

ದಯಾಮೂಲೋ ಭವೇದ್ಧರ್ಮೋ ದಯಾ ಪ್ರಾಣಾನುಕಂಪನಂ
ದಯಾಯಾಃ ಪರಿರಕ್ಷಾರ್ಥಗುಣಾಃ ಶೇಷಾಃ ಪ್ರಕೀರ್ತಿತಿತಾಃ
ಧರ್ಮಸ್ಯ ತಸ್ಯ ಲಿಂಗಾನಿ ದಮಃ ಕ್ಷಾಂತಿರಹಿಂಸತಾ
ತಪೋ ದಾ ನಂ ಶೀಲಂ ಯೋಗೋ ವೈರಾಗ್ಯಮೇವ
ಅಹಿಂಸಾ ಸತ್ಯವಾದಿತ್ವಮಚೌರ್ಯಂ ತ್ಯಕ್ತಕಾಮತಾ
ನಿಷ್ಪರಿಗ್ರಹತಾ ಚೇತಿ ಪ್ರೋಕ್ತೋ ಧರ್ಮಃ ಸನಾತನಃ
ತಸ್ಮಾದ್ಧರ್ಮಫಲಂ ಜ್ಞಾತ್ವಾ ಸರ್ವ ರಾಜ್ಯಾದಿ ಲಕ್ಷಣಂ
ತದರ್ಥಿನಾ ಮಹಾಭಾಗ ಧರ್ಮೇ ಕಾರ್ಯಾ ಮತಿಃ ಸ್ಥಿರಾ ( ೨೧೨೪)

(ಧರ್ಮವು ದಯಾಮೂಲವಾದುದು. ಪ್ರಾಣಿಗಳಲ್ಲಿ ಕೃಪೆಯನ್ನಿಡುವುದು ದಯೆಯು. ದಯೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರವೇ ಬೇರೆ ಗುಣಗಳು ಹೇಳಲ್ಪಟ್ಟಿವೆ. ಈ ದಯಾಮೂಲ ಧರ್ಮಕ್ಕೆ ಇಂದ್ರಿಯ ನಿಗ್ರಹವೂ ಕ್ಷಮೆಯೂ ಹಿಂಸೆಯನ್ನು ಮಾಡದಿರುವಿಕೆಯೂ ತಪಸ್ಸೂ ದಾನವೂ ಶೀಲವೂ ಧ್ಯಾನವೂ ವೈರಾಗ್ಯವೂ ಚಿಹ್ನೆಗಳು. ಹಿಂಸೆಯನ್ನು ಮಾಡದಿರುವಿಕೆಯೂ ಸತ್ಯವನ್ನು ಮಾತನಾಡುವಿಕೆಯೂ ಕಳ್ಳತನವನ್ನು ಮಾಡದಿರುವಿಕೆಯೂ ಸ್ತ್ರೀ ವಿಷಯಾಸಕ್ತಿಯನ್ನು ಬಿಡುವಿಕೆಯೂ ಪರಿಗ್ರಹಗಳಿಲ್ಲ ದಿರುವಿಕೆಯೂ ಧರ್ಮಗಳೆಂದು ಅನಾದಿಕಾಲದಿಂದಲೂ ಹೇಳಲ್ಪಟ್ಟಿವೆ. ಆದುದರಿಂದ ಈ ರಾಜ್ಯ ಮೊದಲಾದುದೆಲ್ಲವೂ ಧರ್ಮದ ಫಲವೆಂದು ತಿಳಿದು, ಭಾಗ್ಯಶಾಲಿಯೇ, ಆ ಫಲವನ್ನಿಚ್ಛಿಸುವ ನೀನು ಧರ್ಮದಲ್ಲಿ ಸ್ಥಿರವಾದ ಬುದ್ದಿಯನ್ನಿಡು.)

ಕೇವಲ ಹೇಳಿಕೆಗಳ ರೂಪದಲ್ಲಿರುವ ಈ ಭಾಗವನ್ನು ಪಂಪ ಹೇಗೆ ರೂಪಕವಿಧಾನದಿಂದ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾನೆಂಬುದನ್ನು ನೋಡಬಹುದು:

ಲಾವಣ್ಯಾಬ್ಧಿ ತರಂಗಭಂಗಲಲಿತ ಭ್ರೂಭಂಗ ದಿವ್ಯಾಂಗನಾ
ಭಾವಾಪಾಂಗ ನಿರೀಕ್ಷಣಾಮೃತ ಕೃತಾನಂಗೋತ್ಸವಂ ಚೋದ್ಯವಿ
ದ್ಯಾವಷ್ಟಂಭ ವಿಜೃಂಭಿತಾಂಬರ ಚರೇಶಾರಾಧ್ಯನಾಗಿರ್ದ ನಿ
ನ್ನೀ ವಿದ್ಯಾಧರಲಕ್ಷ್ಮಿ ಪುಣ್ಯಜನಿತಂ ವಿದ್ಯಾಧರಾಧೀಶ್ವರಾ

ಭವವಾರಾಶಿನಿಮಗ್ನರಂ ದಯೆ ದಮಂ ದಾನಂ ತಪಂ ಶೀಲಮೆಂ
ಬಿವೆ ಮೆಯ್ಯಾಗಿರೆ ಸಂದ ಧರ್ಮಮೆ ವಲಂ ಪೊತ್ತೆತ್ತುಗುಂ ಮುಕ್ತಿ
ರ್ಯವಸಾನಂಬರಮಾನುಷಂಗಿಕಫಲಂ ಭೂಪೇಂದ್ರದೇವೇಂದ್ರ ರಾ
ಜ್ಯ ವಿಳಾಸಂ ಪೆಱತಲ್ತು ನಂಬು ಖಚರಕ್ಷ್ಮಾಪಾಲ ಚೂಡಾಮಣೀ (. , )

ಪಂಪ ಹೊಸತನವನ್ನಿಲ್ಲಿ ಸಾಧಿಸಿರುವುದು ವಿಷಯದಲ್ಲಲ್ಲ; ಅದನ್ನು ಹೇಳುವ ರೀತಿಯಲ್ಲಿ.

ಲಲಿತಾಂಗನಿಗೆ ಪ್ರಿಯೆಯಾದ ಸ್ವಯಂಪ್ರಭೆಯ ಸೌಂದರ್ಯದ ವರ್ಣನೆ ‘ಪೂರ್ವ ಪುರಾಣ’ದಲ್ಲಿ ಅತ್ಯಲ್ಪ:

ಅಥ ಸಾ ಕೃತನೇಪಥ್ಯಾ ಪ್ರಭಾತರಲ ವಿಗ್ರಹಾ
ಪತ್ಯುರಂಕಗತಾ ರೇಜೇ ಕಲ್ಪಶ್ರೀರಿವ ರೂಪಿಣೀ

(ಕಾಂತಿಯಿಂದ ಚಲಿಸುತ್ತಿರುವ ಶರೀರವುಳ್ಳ ಆ ಸ್ವಯಂಪ್ರಭಾದೇವಿಯು ಅಲಂಕಾರ ಮಾಡಿಕೊಂಡು ಪತಿಯ ತೊಡೆಯ ಮೇಲೆ ಕುಳಿತು, ಸ್ತ್ರೀ ರೂಪವನ್ನು ಧರಿಸಿದ ಈಶಾನಕಲ್ಪದ ಲಕ್ಷ್ಮೀದೇವಿಯೋ ಎಂಬಂತೆ ಶೋಭಿಸಿದಳು.) ಎಂದು ಏಕೈಕ ಶ್ಲೋಕದಲ್ಲಿ (೫.೨೮೭) ಹೇಳಿದ್ದಾರೆ, ಜಿನಸೇನಾಚಾರ್ಯರು. ಪಂಪ ಇದನ್ನು ಐದು ರೋಚಕವಾದ ವೃತ್ತಗಳನ್ನಾಗಿ ವಿಸ್ತರಿಸುತ್ತಾನೆ:

ಅಭಿನವ ಪಾರಿಜಾತ ಕುಸುಮಾಸವಮೊರ್ಮೊದಲುಣ್ಮೆ ದೇವ ದುಂ
ದುಭಿ ನಭದೊಲ್ ಪೊದೞ್ದೆಸೆಯೆ ಕಣ್ಗಸೆದಿರ್ಪ ನಿಜಾಂಗ ಸಂಗತ
ಪ್ರಭೆ ಸುರಲೋಕಮಂ ಬೆಳಗೆ ವಿಸ್ಮಯಮಪ್ಪಿನಮಾಗಳಾ ಸ್ವಯಂ
ಪ್ರಭೆ ಲಲಿತಾಂಗನಳ್ಳೆರ್ದೆಗೆ ತೊಟ್ಟನೆ ಬೇಂಟಮೆ ಪುಟ್ಟೆ ಪುಟ್ಟಿದಳ್

ಅದು ಸುಖದೊಂದು ಪಿಂಡಮದು ಪುಣ್ಯದ ಪುಂಜಮದಂಗಜಂಗೆ ಬಾ
ೞ್ಮೊದಲದು ಚಿತ್ತಜಂಗೆ ಕುಲದೈವಮದಂಗಜ ಚಕ್ರವರ್ತಿಗೆ
ತ್ತಿದ ಪೊಸವಟ್ಟಮಂತದು ಮನೋಜನ ಕೈಪಿಡಿಯೆಂದು ಮಾಣ್ದೆನಾ
ಸುದತಿಯ ರೂಪನಿಂ ಪೆಱತನೆಂದೊಡೆ ಚಿಃ ಕರಮೆಗ್ಗನಾಗೆನೇ
ನೆಗೞ್ದಮರಾಂಗನಾಜನದ ರೂಪುಗಳೆಲ್ಲಮದೀಕೆಯೊಂದು ದೇ
ಸೆಗೆ ನಿಮಿರ್ವೊಂದು ಪುರ್ವಿನ ನಯಕ್ಕಮರ್ವೊಂದದಗುಂತಿಗೊಂದು ಭಂ
ಗಿಗೆ ನೆಗೞ್ವೊಂದು ಮೆಲ್ಪಿನ ತೊದಳ್ನುಡಿಗಪ್ಪೊಡಮೆಯ್ದೆ ವಾರವೇ
ನೊಗಸುಗಮೆಂದು ತಳ್ತಗಲನಾಕೆಯನಾ ಲಲಿತಾಂಗವಲ್ಲಭಂ

ಬ್ರತದಿಂದಂ ಪಡೆದಿಂದ್ರ ಲೋಕವಿಭವಂ ಮುನ್ನಾದ ದೇವಾಂಗನಾ
ತತಿಯಿಂದಂದಿನಿತಿಂಪನೀಯ ಮನಕ್ಕಾಹ್ಲಾದಮಂ ಮಾತ
ತ್ಸತಿಯಿಂ ನೆಟ್ಟನೆ ಸಾರಮಾದುದು ಗಡಂ ತಕ್ಕಲ್ಪಜಂಗೆಂದೊಡಾ
ಜಿತವಿದ್ಯುತ್ಪ್ರಭೆಯಂ ಸ್ವಯಂ ಪ್ರಭೆಯನಿನ್ನೇವಣ್ಣೆಪೆಂ ಬಣ್ಣಿಪೆಂ

ಎಸೆದೆರ್ದೆಯೊಳ್ ಪಳಂಚುವ ಕಲಧ್ವನಿಯಿಂ ಪೊಸತೊಂದು ರಾಗಮಂ
ಪೊಸಯಿಸಿ ಸೋಂಕಿ ಸೋಂಕಿದೊಡೆ ಬಂದಿರೆ ನಿಂದಧರೋತ್ತರಂಗಳೊಳ್
ಮಿಸುಪ ರಸಾಂತರಂಗಳಿನೊಡಂಬಡನಾಗದೆ ತನ್ನೊಳಿಂತು ಪೋ
ಲಿಸುವೊಡೆ ಪೋಲಿಸಲ್ಕೆ ದೊರೆ ವೀಣೆಯನಾ ಸುರತಪ್ರವೀಣೆಯಂ(, ೭೩೭೭)

ತನ್ನ ಅವಸಾನ ಕಾಲವನ್ನರಿತ ಲಲಿತಾಂಗನ ಈ ಹೃದಯ ವಿದ್ರಾವಕವಾದ ಪ್ರಲಾಪ ‘ಪೂರ್ವಪುರಾಣ’ದಲ್ಲಿ ಇಲ್ಲವೇ ಇಲ್ಲವೆಂಬುದು ಗಮನಾರ್ಹ:

ಸುರತರುನಂದನಂಗಳಿರ ರತ್ನಪಿನದ್ಧ ವಿಮಾನ ಕುಟ್ಟಿಮಾಂ
ತರ ಸುರತಾಲಯಂಗಳಿರ ಚಾರುವಿಲೋಲ ಕಟಾಕ್ಷಪಾತ ಸೌಂ
ದರ ಪರಿವಾರ ದೇವಿಯರಿರಾ ಕಡುಕಯ್ದು ಕೃತಾಂತನಿಂತು ನಿ
ರ್ನೆರತೆೞದಯ್ಯೆ ಬಾರಿಸದೆ ಕೆಮ್ಮನುಪೇಕ್ಷಿಸಿ ನೋಡುತಿರ್ಪಿರೇ
ಸಂತಸದಂತನೆಯ್ದಿ ಸುರತಾಮೃತದೊಳ್ ತಣಿದಳ್ಕಱಂ ಜಿಗಿ
ಲ್ತಂತಿರೆ ಪತ್ತಿ ಮೆಯ್ಗಳೆರಡಾದೊಡಮೇನಸುವೊಂದೆ ನೋಡೆಂ
ಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನು
ಯ್ವಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇೞ್ ಸ್ವಯಂಪ್ರಭೇ(. , )

ಮೃತ್ಯುಭೀತ ಚೇತನವೊಂದರ ತಳಮಳ, ಯಾತನೆ, ಯಾಚನೆಗಳನ್ನು ಪಂಪ ಇಲ್ಲಿ ಅನ್ಯಾದೃಶವಾಗಿ, ಅರ್ಥಪೂರ್ಣವಾಗಿ ಚಿತ್ರಿಸಿದ್ದಾನೆ. ಇಂಥ ಸ್ವೋಪಜ್ಞತೆಯಿಂದಲೇ ಅವನ ಕಾವ್ಯ ಮೂಲದಲ್ಲಿಲ್ಲದ ವಿಶಿಷ್ಟ ಶ್ರೀಮಂತಿಕೆಯನ್ನು ಆರ್ಜಿಸಿಕೊಂಡಿರುವುದು.

ದುಃಖಾರ್ತನಾದ ಲಲಿತಾಂಗನಿಗೆ ಸಾಮಾನಿಕ ದೇವತೆಗಳು ಸಮಾಧಾನ ಹೇಳುವ ಪರಿ ಪಂಪನಲ್ಲಿ ಮೂಲಕ್ಕಿಂತ ಮನಃಸ್ಪರ್ಶಿಯಾಗಿದೆ:

ಜಿನಸೇನ :

ಭೋ ಧೀರ ಧೀರತಾಮೇವ ಭಾವಯಾದ್ಯ ಶುಚಂ ತ್ಯಜ
ಜನ್ಮಮೃತ್ಯು ಜರಾತಂಕ ಭಯಾನಾಂ ಕೋ ಗೋಚರಃ
ಸಾಧಾರಣೀಮಿಮಾಂ ವಿದ್ದಿ ಸರ್ವೇಷಾಂ ಪ್ರಚ್ಯುತಿಂ ದಿವಃ
ದ್ಯೌರಾಯುಷಿ ಪರಿಕ್ಷೀಣೇ ನವೋಢುಂ ಕ್ಷಮತೇ ಕ್ಷಣಂ (. ೧೦, ೧೧)

(ಎಲೈ ಧೀರನೇ ! ಈಗ ದುಃಖವನ್ನು ಬಿಟ್ಟು ಧೀರತ್ವವನ್ನೇ ಭಾವಿಸು. ಜನ್ಮ ಮರಣ ಮುಪ್ಪು ರೋಗ ಭಯ ಮೊದಲಾದ ದುಃಖಗಳಿಗೆ ಯಾರು ವಿಷಯರಲ್ಲ? ಸ್ವರ್ಗದಿಂದ ಚ್ಯುತಿಯಾಗುವುದು ಎಲ್ಲಾ ದೇವತೆಗಳಿಗೂ ಸಮಾನವಾಗಿದೆಯೆಂದು ತಿಳಿ. ಆಯುಷ್ಯವು ತೀರಿಹೋದ ಮೇಲೆ ಸ್ವರ್ಗವೂ ಒಂದು ಕ್ಷಣಕಾಲದವರೆಗೂ ಪ್ರಾಣಿಯನ್ನು ಧರಿಸಿಕೊಳ್ಳು ವುದಕ್ಕೆ ಸಮರ್ಥವಾಗುವುದಿಲ್ಲ.)

ಪಂಪ    :

ನಿನಗೊರ್ವಂಗಲ್ಲವಸ್ಥಾಂತರಮಮರ ಜನಕ್ಕೆಲ್ಲಮೀ ಪಾಂಗೆ ಕಾರು
ಣ್ಯನಿನಾದಂ ನಿನ್ನನಾದಂ ನಗಿಸುಗುವೈೞೆದುಯ್ವಂತಕಂಗಿಲ್ಲಿ ದೇವಾಂ
ಗನೆಯರ್ ಮಾೞಾಂಪರೇ ಪೇೞ್ ಜನನ ಮೃತಿ ಜರಾತಂಕ                             
ಶೋಕಾಗ್ನಿಯಿಂದಾವನುಮಿ ಸಂಸಾರದೊಳ್ ಬೇಯದನೊಳನೆ ಶರಣ್                           
ಧರ್ಮದಿಂದೊಂದು ಮುಂಟೇ          (, ೪೬)

‘‘ಕಾರುಣ್ಯನಿನಾದಂ ನಿನ್ನನಾದಂ ನಗಿಸುಗುಂ, ಎೞದುಯ್ವಂತಕಂಗಿಲ್ಲಿ ದೇವಾಂಗನೆಯರ್ ಮಾಱಂಪರೇ’’ ಎಂಬುವು ಮೂಲದಲ್ಲಿಲ್ಲದ ಸೊಗಸಾದ ಮಾತುಗಳು. ಶ್ರೀಮತಿ ವಜ್ರಜಂಘರ ಸಹಮರಣಪ್ರಸಂಗ ಪೂರ್ವ ಪುರಾಣದಲ್ಲಿ ಹೀಗೆ ಚಿತ್ರಿತವಾಗಿದೆ:

ತತ್ರ ವಾತಾಯನದ್ವಾರ ಪಿಧಾನಾರುದ್ಧ ಧೂಮಕೇ
ಕೇಶಸಂಸ್ಕಾರ ಧೂಪೋದ್ಯದ್ಧೊಮೇನ ಕ್ಷಣಮೂರ್ಛಿತೌ
ನಿರುದ್ಧೋಚ್ಛ್ವಾಸದೌ ಸ್ಥಿತ್ಯಾದಂತಃ ಕಿಂಚಿದಿವಾಕುಲೌ
ದಂಪತೀ ತೌ ನಿಶಾಮಧ್ಯೇ ದೀರ್ಘ ನಿದ್ರಾಮುಪೇಯತುಃ
ಜೀವಾಪಾಯೇ ತಯೋರ್ದೇಹೌ ಕ್ಷಣಾದ್ವಿಚ್ಛಾಯತಾಂ ಗತೌ
ಪ್ರದೀಪಾಪಾಯ ಸಂರುದ್ಧ ತಮಸ್ಕಂಧೌ ಯಥಾ ಗೃಹೌ
ಭೋಗಾಂಗೇನಾಪಿ ಧೂಪೇನ ತಯೋರಾಸೀತ್ಪರಾಸುತಾ
ಧಿಗಿಮಾನ್ ಭೋಗಿಭೋಗಾಭಾನ್ ಭೋಗಾನ್ಪ್ರಾಣಾಪಹಾರಿಣಃ (, ೨೬, ೩೦)

(ಕಿಟಕಿಗಳನ್ನು ಮುಚ್ಚಿದ್ದುದರಿಂದ ಹೊಗೆಯು ತುಂಬಿಕೊಂಡಿದ್ದ ಆ ಶಯನಗೃಹದಲ್ಲಿ ಕೂದಲುಗಳು ಸುವಾಸನೆಯಾಗುವುದಕ್ಕೋಸ್ಕರ ಮಾಡಿದ್ದ ಹೊಗೆಯಿಂದ ಸ್ವಲ್ಪ ತೊಂದರೆಪಡುತ್ತಿದ್ದ ಆ ಶ್ರೀಮತೀ ವಜ್ರಜಂಘರಿಗೆ ಶ್ವಾಸವು ಕಟ್ಟಿಕೊಂಡು ಸ್ವಲ್ಪ ಹೊತ್ತು ಮೂರ್ಛಿತರಾಗಿ ಮಧ್ಯರಾತ್ರಿಯಲ್ಲಿ ದೀರ್ಘನಿದ್ರೆ-ಮರಣ-ಯನ್ನು ಹೊಂದಿದರು. ದೀಪವು ನೊಂದಿ ಹೋದೊಡನೆ ಕತ್ತಲೆಯು ಕವಿದುಕೊಂಡ ಮನೆಗಳು ಮೊಬ್ಬಾಗುವಂತೆ ಜೀವವು ತೊಲಗಿಹೋದ ಕೂಡಲೇ ಆ ಶ್ರೀಮತೀ ವಜ್ರಜಂಘರ ಶರೀರಗಳು ಕಳೆಗುಂದಿದುವು…. ಧೂಪವು ಭೋಗಕ್ಕೆ ಕಾರಣವಾಗಿದ್ದರೂ ಅದರಿಂದ ಆ ಶ್ರೀಮತಿ ವಜ್ರಜಂಘರಿಗೆ ಮರಣವು ಸಂಭವಿಸಿತು. ಆದುದರಿಂದ ಸರ್ಪದ ಹೆಡೆಯಂತೆ ಪ್ರಾಣಾಪಹಾರಿಗಳಾದ ಈ ಭೋಗಗಳನ್ನು ಸುಡು.)

ಇದನ್ನೇ ಪಂಪ ಹೀಗೆ ಉತ್ತಮಪಡಿಸುತ್ತಾನೆ :

ಮೊದಲೊಳ್ ನೀಳ್ದು ಪೊದೞ್ದು ಪರ್ಬಿ ಪರಪಂ ಕೈಗೊಂಡು ಮುಂದೈಸಿ ಮಾ
ಣದೆ ತನ್ನಂದದೊಳೇೞ್ಗೆಗುಂದೆ ನಿರುದ್ಧೋಚ್ಛ್ವಾಸಮಪ್ಪನ್ನೆಗಂ
ಪುದಿದಾ ದಂಪತಿಯಂ ಪುದುಂಗೊಳಿಸಿ ಲೋಕಾಶ್ವರ್ಯಮಂ ಮಾಡಿ ಕೊಂ
ದುದು ಕೃಷ್ಣಾಗರು ಧೂಪಧೂಮನಿವಹಂ ಕೃಷ್ಣೋರಗಂ ಕೊಲ್ವವೊಲ್

ಬಿಡದೆ ಪೊಗೆ ಸುತ್ತೆ ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ
ದೊಡಗಳೆದರೋಪರೋಪರೊ
ಳೊಡಸಾಯಲ್ಪಡೆದರಿನ್ನವೇಂ ಸೈಪೊಳವೇ
ಭೋಗಾಂಗಮಾಗಿಯುಂ ಕೃ
ಷ್ಣಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ
ಭೋಗಿಗಳನಿಂತು ಸಂಸತಿ
ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್
ಬೆಳಗುವ ಸೊಡರ್ಗುಡಿ ಕಿಡೆ ಮನೆ
ಯೊಳಗೆ ತಮಂ ಪರ್ಬುವಂತೆ ಜೀವಂ ತನುವಿಂ
ತಳರಲೊಡಂ ವಿಚ್ಛಾಯತೆ
ಗೊಳಗಾದುವು ತೊಳಗುವವರ ಸೌಂದರತನುಗಳ್ (. ೨೩೨೭)

ಕೃಷ್ಣೋರಗದ ಉಪಮಾನವಾಗಲಿ ಧೂಪಧೂಮ ಕ್ರಮವಾಗಿ ಹಬ್ಬಿದ್ದರ ವರ್ಣನೆ ಯಾಗಲಿ ಅದಕ್ಕೆ ತಕ್ಕ ಛಂದಸ್ಸಿನ ಸರ್ಪದೀರ್ಘವಿನ್ಯಾಸವಾಗಲಿ ಮೂಲದಲ್ಲಿಲ್ಲ. ‘‘ಬಿಡದೆ ಪೊಗೆ ಸುತ್ತೆ…’’ ಎಂಬ ಪದ್ಯವಂತೂ ಸಂಪೂರ್ಣವಾಗಿ ಪಂಪನದೇ ಆಗಿದ್ದು ಅವನ ‘ದರ್ಶನ’ವನ್ನು ಪ್ರಕಟಿಸುತ್ತದೆ : ಆ ದಂಪತಿಯ ಮರಣದಲ್ಲೂ ಕವಿ ಒಂದು ಅಮೃತರೇಖೆಯನ್ನು ಗುರುತಿಸಿದ್ದಾನೆ. ಜಿನಸೇನಾಚಾರ್ಯರು ‘‘ಭೋಗಿ ಭೋಗಾಭಾನ್’’ (ಭೋಗಗಳು ಹಾವಿನ ಹೆಡೆಗಳಂತೆ) ಎಂದಷ್ಟೇ ಹೇಳಿದರೆ, ಪಂಪ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘‘ಭೋಗಂಗಳ್ ಭೋಗಿ ಭೋಗದಿಂ ವಿಷಮಂಗಳ್’’ ಎನ್ನುತ್ತಾನೆ. ಹಾವಿನ ವಿಷಕ್ಕೆ ಚಿಕಿತ್ಸೆಯಾದರೂ ಇದೆ, ಸಂಸಾರ ಸರ್ಪದ ವಿಷ ಅಪರಿಹಾರ್ಯವಾದುದು ಎಂಬುದು ಇದರಿಂದ ಸೂಚಿತವಾಗುತ್ತದೆ. ಕಡೆಯ ಪದ್ಯ ಮೂಲ ಶ್ಲೋಕದ ನೇರವಾದ ಅನುವಾದ.

ಇನ್ನೊಂದು ಅಂಶವನ್ನು ಇಲ್ಲಿ ಲೆಕ್ಕಿಸಬಹುದು. ‘‘ಧಿಗಿಮಾನ್ ಭೋಗಿಭೋಗಾಭಾನ್ …’’ ಎನ್ನುವಲ್ಲಿ ಜಿನಸೇನರು ಭೋಗಗಳಿಗೆ ಧಿಕ್ಕಾರ ಹಾಕಿದ್ದಾರೆ; ಇನ್ನೂ ಅನೇಕ ಕಡೆ ಅವರು ಹೀಗೆ ಮಾಡುವುದುಂಟು.[4] ಈ ಬಗೆಯ ಧಿಕ್ಕಾರ, ಘೋಷಣೆ, ಪ್ರಚಾರಗಳು ಧರ್ಮಕ್ಕೆ ಉಚಿತವಾದರೂ ಕವಿಧರ್ಮಕ್ಕೆ, ಕಾವ್ಯದ ಸ್ವಧರ್ಮಕ್ಕೆ ಅಷ್ಟೇನೂ ಸಂಗತವಾಗಲಾರವು. ಎಂತಲೇ ಪಂಪನಲ್ಲಿ ಇಂಥವಕ್ಕೆ ಸ್ಥಾನವಿಲ್ಲ. ವಿಶೇಷತಃ ಪುರಾಣ ದೃಷ್ಟಿಯುಳ್ಳ ಜಿನಸೇನಾಚಾರ್ಯರು ನೇರವಾದ ಉಪದೇಶದಲ್ಲಿ, ಜಾಹೀರಾತಿನಲ್ಲಿ ತೊಡಗುವುದು ತಪ್ಪಲ್ಲ; ನಿದರ್ಶನಕ್ಕೆ ಈ ಭಾಗವನ್ನು ನೋಡಿ: ‘‘ಧರ್ಮವನ್ನು ಸಂಪಾದಿಸ ಬೇಕು. ಸಜ್ಜನರೇ ! ನೀವು ಭೋಗಾಭಿಲಾಷೆಯನ್ನು ತೊರೆದು ತಪಸ್ಸಿನಲ್ಲಿ ಇಚ್ಛೆಯನ್ನು ಮಾಡಿ. ಅಧಿಕವಾದ ಸಂಪತ್ತನ್ನು ಇಚ್ಛಿಸುವುದಾದರೆ ಪಾಪರಹಿತನಾದ ಜಿನೇಶ್ವರನನ್ನು ಪೂಜಿಸಿರಿ. ಆ ಜಿನೇಶ್ವರನ ವಚನವನ್ನು ನಂಬಿರಿ. ಮಿಥ್ಯಾಕವಿಗಳು ಹೇಳಿದ ಬೇರೆ ಉಪದೇಶವನ್ನು ಗ್ರಹಣ ಮಾಡಬೇಡಿರಿ. ವಿದ್ವಾಂಸರೇ! ನೀವು ಸುಖವನ್ನಿಚ್ಛಿಸುವುದಾದರೆ ಹೀಗೆ ಅತ್ಯಂತ ಶ್ಲಾಘ್ಯವಾದ ಧರ್ಮ ಅರ್ಥ ಕಾಮಮೋಕ್ಷ ಪುರಾಷಾರ್ಥಗಳನ್ನುಂಟು ಮಾಡುವುದೂ ದುಷ್ಕರ್ಮವೆಂಬ ಅಡವಿಗೆ ಒಳ್ಳೆಯ ಕೊಡಲಿಯೂ ಆದ ಧರ್ಮವನ್ನು ಸೇವಿಸುವುದಕ್ಕೆ ಪ್ರಯತ್ನಮಾಡಿರಿ. ದುರ್ಬುದ್ದಿಯನ್ನು ನಾಶಮಾಡುವ ಜೈನ ಮತದಲ್ಲಿ ದೃಢಚಿತ್ತರಾಗಿರಿ’’ (೫. ೨೯೪-೨೯೬). ಪಂಪಕವಿ ಹೀಗೆ ಮಾಡುವುದಿಲ್ಲ ವೆಂಬುದು ಅವನ ಕಾವ್ಯ ಧರ್ಮಕ್ಕೆ ತಕ್ಕುದಾಗಿದೆ.

‘ಆದಿಪುರಾಣ’ದಲ್ಲಿ ಸುಮಾರು ಇಪ್ಪತ್ತು ಪದ್ಯಗಳಷ್ಟು (೯.೧೯-೩೯) ಸವಿಸ್ತಾರವಾಗಿ, ಸರಸಬಂಧುರವಾಗಿ ಬಂದಿರುವ ನೀಲಾಂಜನಾ ನೃತ್ಯವರ್ಣನೆ ಪ್ರಸಿದ್ಧವಾಗಿದೆಯಷ್ಟೆ. ಆದರೆ ‘ಪೂರ್ವ ಪುರಾಣ’ದಲ್ಲಿ ಇದಕ್ಕಿರುವ ಮೂಲವಾದರೂ ಎಷ್ಟು?-

ತತೋ ನೀಲಾಂಜನಾ ನಾನು ಲಲಿತಾ ಸುರನರ್ತಕೀ
ರಸಭಾವಲಯೋಪೇತಂ ನಟಂತೀ ಸಪರಿಕ್ರಮಂ… (೧೭. )

ಮುಗಿಯಿತು.[5] ಬಿಂದು ಮಾತ್ರವಾಗಿ ಬಂದಿರುವ ‘ರಸಭಾವಲಯೋ ಪೇತಂ’ ಎಂಬ ಉಕ್ತಿಯನ್ನು ಪಂಪ ಹಿಗ್ಗಿಸಿರುವ ಪರಿ ಅವನ ಪ್ರತಿಭೆಗೆ ನಿಜಕ್ಕೂ ಗೌರವ ತರುವಂಥದ್ದು.

ಈ ಸಂದರ್ಭದಲ್ಲೂ ಪಂಪ ‘ಪೂರ್ವ ಪುರಾಣ’ದ ಶ್ಲೋಕವೊಂದನ್ನು ಅನುವಾದಿಸಿದ್ದಾನೆ:

ತನ್ನೃತ್ಯಂ ಸುರನಾರೀಣಾಂ ಮನೋಸ್ಯಾರಂಜಯತ್ಪ್ರಭೋಃ
ಸ್ಫಾಟಿಕೋ ಹಿ ಮಣಿಃ ಶುದ್ಧೋಪ್ಯಾಧತ್ತೇ ರಾಗಮನ್ಯತಃ(೧೭. )

ಸುರಗಣಿಕಾ ನಾಟ್ಯರಸಂ
ಪರಮನ ಚಿತ್ತಮುಮನೆಯ್ದೆ ರಂಜಿಸಿದುದು ವಿ
ಸ್ಫುರಿತ ಸ್ಫಟಿಕಂ ಶುದ್ಧಾಂ
ತರಂಗಮೇನನ್ಯರಾಗದಿಂ ರಂಜಿಸದೇ(. ೪೦)

ನೀಲಾಂಜನೆಯ ಆಯುಷ್ಯ ಮುಗಿದುದನ್ನರಿತ ಪುರುದೇವನ ಮನದಲ್ಲುಂಟಾದ ಆಲೋಚನೆಗಳನ್ನು ನಿರೂಪಿಸುವಲ್ಲಿ ಪಂಪ ಜಿನಸೇನಾಚಾರ್ಯರ ಕೆಲವು ಪದ್ಯಗಳನ್ನು ಭಾಷಾಂತರಿಸುತ್ತಾನೆ. ಉದಾಹರಣೆಗೆ

ಜಿನಸೇನ:

ಅಹೋ ಜಗದಿದಂ ಭಂಗಿ ಶ್ರೀಸ್ತಟಿದ್ವಲ್ಲರೀಚಲಾ
ಯೌವನಂ ವಪುರಾರೋಗ್ಯಮೈಶ್ವರ್ಯ ಚಲಾಚಲಂ
ರೂಪಯೌವನ ಸೌಭಾಗ್ಯ ಮದೋನ್ಮತ್ತಃ ಪೃಥಗ್ಜನಃ
ಬಧ್ನಾತಿ ಸ್ಥಾಯಿನೀಂ ಬುದ್ದಿಂ ಕಿಂನ್ವತ್ರ ವಿನಶ್ವರಂ
ಸಂಧ್ಯಾರಾಗನಿಭಾ ರೂಪಶೋಭಾ ತಾರುಣ್ಯಮುಜ್ಜ್ವಲಂ
ಪಲ್ಲವಚ್ಛವಿವತ್ಸದ್ಯಃ ಪರಿಮ್ಲಾನಿಮುಪಾಶ್ನುತೇ (೧೭. ೧೨೧೪)

ಪಂಪ :

ತನುರೂಪವಿಭವ ಯೌವನ
ಧನಸೌಭಾಗ್ಯಾಯುರಾದಿಗಳ್ಗೆಣೆ ಕುಡುಮಿಂ
ಚಿನ ಪೊಳಪು ಮುಗಿಲ ನೆಳಲಿಂ
ದ್ರನ ಬಿಲ್ ಬೊಬ್ಬುಳಿಕೆಯುರ್ಬು ಪರ್ಬಿದ ಭೋಗಂ[6](. ೪೬)

ಜಿನಸೇನ :

ನಾರೀರೂಪಮಯಂ ಯಂತ್ರವಿದಮತ್ಯಂತ ಪೇಲವಂ
ಪಶ್ಯತಾಮೇವ ನಃ ಸಾಕ್ಷಾತ್ಕಥಮೇತದಗಾಲ್ಲಯಂ (೧೭. ೩೬)

ಪಂಪ :

ನಾರೀರೂಪದ ಯಂತ್ರಂ
ಚಾರುತರಂ ನೋಡೆ ನೋಡೆ ಕರಗಿದುದೀ ಸಂ
ಸಾರದನಿತ್ಯತೆ ಮನದೊಳ್
ಬೇರೂರಿದುದೀಗಳಿಂತಿದಂ ಕಡೆಗಣಿಪೆಂ (.೪೪)

ಜಿನಸೇನ :

ಕಿಂ ಕಿಲಾಭರಣೈರ್ಭಾರೈಃ ಕಿಂ ಮಲೈರನುಲೇಪನೈಃ
ಉನ್ಮತ್ತಚೇಷ್ಟಿತೈರ್ನೃತ್ತೈರಲಂ ಗೀತೈಶ್ಚ ಶೋಚಿತೈಃ (೧೭.೪೦)

ಪಂಪ :

ತನುಗೆ ಪೊಱೆ ತುಡುಗೆ ನವಲೇ
ಪನಮೆ ಮಳಂ ಗೀತಮಳ್ಕೆ ನೃತ್ಯಂ ಬಗೆಯ
ಲ್ಕೆನಗೆ ದಲುನ್ಮತ್ತವಿಳಾ
ಸನಮಿಂತಿನಿತಱೊಳಮೊಂದಱೊಳ್ ಪುರುಳುಂಟೇ(. ೫೫)

ಆದರೆ ಈ ಪ್ರಕರಣದಲ್ಲಿ, ಜೀನಸೇನಾಚಾರ್ಯರಲ್ಲಿಲ್ಲದ ಕೆಲವು ರಮ್ಯವಾದ ಭಾವಗಳು ಪಂಪನಲ್ಲಿ ಕಂಡುಬರುತ್ತವೆ. ನಿದರ್ಶನಕ್ಕೆ:

ಕೋಟಿ ತೆಱದಿಂದಮೆಸೆವೀ
ನಾಟಕಮಂ ತೋಱಿ ಮಾಣ್ದಳಿಲ್ಲಳ್ ಬಗೆಯೊಳ್
ನಾಟುವಿನಮಮರಿ ಸಂಸೃತಿ
ನಾಟಕಮಮನೆನಗೆ ನೆೞಿಯೆ ತೋಱದಳೀಗಳ್

ಎನಿತಾನುಮಂಬುನಿಧಿಗಳ
ನನೇಕನಾಕಂಗಳಲ್ಲಿ ಕುಡಿದುಂ ಪೋಯ್ತಿ
ಲ್ಲೆನಗೆ ನರಭೋಗಮೆಂಬೀ
ಪನಿಪುಲ್ಲಂ ನಕ್ಕೆ ತೃಷ್ಣೆ ಪೇೞ್ ಪೋದಪುದೇ(. ೫೭)

ವಿದತಂ ಮೂರ್ಧಾಭಿಷಿಕ್ತರ್ ಪಲಬರರಸುಗಳ್ ಪ್ರಾಜ್ಯ ಸಾಮ್ರಾಜ್ಯಲಕ್ಷ್ಮೀ ಪದಮಂ ಕೈಕೊಂಡು ತಮ್ಮಂ ಮಱದು ವಿಷಯ ಭೋಗಾಸವಾತ್ಯಂತ ಸೇವಾ

ಮದದಿಂದಂ ಧರ್ಮಪೋತಚ್ಯುತರನವಧಿ ಸಂಸಾರ ವಾರಾಶಿಮಧ್ಯಾ
ಸ್ಪದ ಸರ್ವಗ್ರಾಸಿ ಭೀಮಾಂತಕ ವದನಮಹಾಗರ್ತದೊಳ್ ಮಗ್ನರಾದರ್  (. ೫೮)

‘‘ಎನಿತಾನುಮಂಬುನಿಧಿಗಳ…’’ ಎಂಬ ಪದ್ಯವಂತೂ ಪರಮಸುಂದರವೂ ಅಪೂರ್ವವೂ ಆದುದು.

ವೃಷಭಾದ್ರಿಯ ತಪ್ಪಲಿನಲ್ಲಿ ತನ್ನ ಪ್ರಶಸ್ತಿಯನ್ನು ಕೆತ್ತಿಸಲೆಂದು ಹೋದ ಭರತನಿಗುಂಟಾದ ಅವಸ್ಥೆ ಜಿನಸೇನ, ಪಂಪರಲ್ಲಿ ಹೀಗೆ ಚಿತ್ರಣಗೊಂಡಿದೆ:

ಜಿನಸೇನ :

ಕಾಕಿಣೀರತ್ನಮಾದಾಯ ಯದಾ ಲಿಲಿಖಿಷತ್ಯಯಂ
ತದಾ ರಾಜಸಹಸ್ರಾಣಾಂ ನಾಮಾನ್ಯತ್ರೈಕ್ಷತಾಧಿರಾಟ್
ಅಸಂಖ್ಯ ಕಲ್ಪಕೋಟೀಷು ಯೇsತಿಕ್ರಾಂತಾ ಧರಾಭುಜಾಃ
ತೇಷಾಂ ನಾಮಭಿರಾಕೀರ್ಣ ತಂ ಪಶ್ಯನ್ಸ ವಿಸಿಷ್ಮಯ
ತತಃ ಕಿಂಚಿತ್ಸ್ಖಲದ್ಗರ್ವೋ ವಿಲಕ್ಷೀಭೂಯ ಚಕ್ರಿರಾಟ್
ಅನನ್ಯ ಶಾಸನಾಮೇನಾಂ ಮೇನೇ ಭರತಾವನಿಂ (೩೨, ೧೪೧೪೩)

(ಭರತಚಕ್ರೇಶ್ವರನು ಕಾಕಿಣೀರತ್ನವನ್ನು ತೆಗೆದುಕೊಂಡು ಬರೆಯುವುದಕ್ಕೆ ಇಚ್ಛಿಸಿದಾಗ ಅಲ್ಲಿ ಅಪರಿಮಿತ ರಾಜರುಗಳ ಹೆಸರುಗಳನ್ನು ನೋಡಿದನು. ಭರತೇಶ್ವರನು ಅಸಂಖ್ಯಾತಕೋಟಿ ಕಲ್ಪ ಕಾಲಗಳಲ್ಲಿ ಎಷ್ಟು ಮಂದಿ ರಾಜರುಗಳು ಕಳೆದು ಹೋಗಿದ್ದರೋ ಅವರುಗಳ ಹೆಸರುಗಳಿಂದ ವ್ಯಾಪ್ತವಾದ ಆ ವೃಷಭಾದ್ರಿಯನ್ನು ನೋಡಿ ಆಶ್ಚರ್ಯಪಟ್ಟನು. ತರುವಾಯ ಚಕ್ರೇಶ್ವರನ ಗರ್ವವು ಸ್ವಲ್ಪ ನಷ್ಟವಾಗಲು ಅವನು ಆಶ್ಚರ್ಯಪಟ್ಟನು, ಈ ಭಾರತ ಭೂಮಿಯು ಬೇರೆಯವರಿಂದ ಆಳಲ್ಪಟ್ಟುದೆಂದು ತಿಳಿದನು:

ಪಂಪ :

ಆದಱೊಳನೇಕ ಕಲ್ಪಶತ ಕೋಟಿಗಳೊಳ್ ಸಲೆ ಸಂದ ಚಕ್ರಿವೃಂ
ದದ ಚಲದಾಯದಾಯತಿಯ ಬೀರದ ಜಾಗದ ಮಾತುಗಳ್ ಪೊದ
ದವಿರೆ ತತ್ಪ್ರಶಸ್ತಿಗಳೊಳಂತವನೊಯ್ಯನೆ ನೋಡಿ ನೋಡಿ ಸೋ
ರ್ದುದು ಕೊಳಗೊಂಡ ಗರ್ವರಸಮಾ ಭರತೇಶ್ವರ ಚಕ್ರವರ್ತಿಯಾ (೧೩. ೬೧)

ಪಂಪನ ಪದ್ಯ ಮೂಲಕ್ಕಿಂತ ಪರಿಣಾಮಕಾರಿಯಾಗಿರುವುದು ಸ್ಪಷ್ಟ. ‘‘ಒಯ್ಯನೆ ನೋಡಿ ನೋಡಿ’’ ಎಂಬ ಉಕ್ತಿಯಲ್ಲಿರುವ ನಾಟಕೀಯತೆ, ವಿಸ್ಮಯಭಂಗಿ ಮೂಲದಲ್ಲಿಲ್ಲ. ‘‘ಕಿಂಚಿತ್ ಸ್ಖಲದ್ಗರ್ವಃ’’ ಎಂದು ಜಿನ ಸೇನರು ಹೇಳಿದರೆ, ಪಂಪ ಮತ್ತೂ ಮುಂದುವರಿದು ‘‘ಸೋರ್ದುದು ಕೊಳಗೊಂಡ ಗರ್ವರಸಂ’’ ಎಂದು ಪೂರ್ಣ ರೂಪಕವೊಂದನ್ನು ಕೊಡುತ್ತಾನೆ.[7]

ಮೂಲಕ್ಕೆ ಪಂಪಮಹಾಕವಿ ಹೇಗೆ ಮೆರುಗು ಕೊಡುತ್ತಾನೆ, ಅದನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ ಎಂಬುದನ್ನು ನಿದರ್ಶಿಸಲು ಇಷ್ಟು ಸಾಕು. ಪಂಪನ ಕಾವ್ಯ ಪ್ರಾತಿನಿಧಿಕವಷ್ಟೆ : ಬಹುಪಾಲು ಕನ್ನಡ ಸಾಹಿತ್ಯದ ಕತೆಯನ್ನು ಅದು ಹೇಳುತ್ತದೆ.[8]

[1] ‘Kanarese Literature’ ಗ್ರಂಥದಲ್ಲಿ. ನೋಡಿ : ರಂ.ಶ್ರೀ.ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’(೧೯೫೩), ಪು. ೩೮೭-೯೧

[2] ‘Imperial Gazetteer of India’, Vol. II, pp. ೪೩-೩೭

[3] ‘‘ಆದಿಪುರಾಣ ರಚನೆಯಲ್ಲಿ ಪಂಪನು ಕೈಕಟ್ಟಿಸಿಕೊಂಡು ಪಟ್ಟುಗಳನ್ನು ತೋರಿಸುವ ಗರಡಿಯಾಳಿನಂತೆ ಕಾಣಿಸುತ್ತಾನೆ’’- ತೀ.ನಂ.ಶ್ರೀ., ‘ಪಂಪ’, ಪು.೧೪

* ಆರಂಭದಲ್ಲಿ ಬರುವ ಈ ಕೆಲವು ಉಕ್ತಿಗಳನ್ನು ನಿದರ್ಶನಾರ್ಥವಾಗಿ ಪರಿಭಾವಿಸಬಹುದು: ‘‘ನಾನು ಅಲ್ಪನಾಗಿದ್ದರೂ ಶಕ್ತ್ಯನುಸಾರವಾಗಿ ಪುರಾಣವನ್ನು ಮಾಡುತ್ತೇನೆ. ಇದು ನ್ಯಾಯವಾಗಿದೆ. ಕತ್ತರಿಸಲ್ಪಟ್ಟ ಬಾಲವುಳ್ಳ ಎತ್ತು ಕೂಡ ತನ್ನ ಮೋಟು ಬಾಲವನ್ನು ಮೇಲಕ್ಕೆತ್ತುವುದಿಲ್ಲವೇ? ಈ ಪುರಾಣವು ಗಣ ಧರ ಪರಮೇಷ್ಠಿಗಳಿಂದ ಹೇಳಲ್ಪಟ್ಟಿದ್ದರೂ ನಾನು ಇದರಲ್ಲಿ ಯತ್ನವನ್ನು ಮಾಡುತ್ತೇನೆ. ಸಿಂಹಗಳಿಂದ ಸಂಚರಿಸಲ್ಪಟ್ಟ ಮಾರ್ಗದಲ್ಲಿ ಬೇರೆ ಮೃಗವು ಹೋದರೆ ಯಾರು ತಡೆಯುತ್ತಾರೆ?’’(೧. ೨೯, ೩೦); ‘‘ಬೇರೆ ಅಂಗಡಿಗಳಿಂದ ಬಟ್ಟೆಗಳನ್ನು ತಂದಿಟ್ಟುಕೊಂಡು ಮಾರುವವರು ತಾವು ವರ್ತಕರೆಂದು ಹೇಳಿಸಿಕೊಳ್ಳುವಂತೆ’’ ತಾವೂ ಕವಿಗಳೆಂದು ಅಹಂಕಾರಪಡುವ ಕೆಲವರು ಬೇರೆಯವರ ಕವಿತೆಯ ಸ್ವಲ್ಪ ಭಾಗವನ್ನು ತೆಗೆದುಕೊಂಡು ಬೇರೆ ತಾತ್ಪರ್ಯವನ್ನು ಕಲ್ಪಿಸುತ್ತಾರೆ. ಕೆಲವರು ಸ್ವಸಾಮರ್ಥ್ಯದಿಂದ ಕವಿತೆಯೆಂಬ ಕಾಮಿನಿಯನ್ನು ಸಂಭೋಗಿಸಲ ಸಮರ್ಥರಾಗಿ ರೋಗಿಗಳಾದ ಅಥವಾ ಪುಂಸ್ತ್ವರಹಿತರಾದ ಕಾಮುಕರಂತೆ ಅನ್ಯರ ಸಹಾಯವನ್ನಿಚ್ಛಿಸುತ್ತಾರೆ’’(೧. ೬೬, ೬೭); ‘‘ಕೆಲವು ಕವಿಗಳು ಕವಿತೆಯನ್ನು ಯಥೇಚ್ಛವಾಗಿ ಪ್ರಾರಂಭಿಸಿ ನಿರ್ವಹಿಸಲಸಮರ್ಥರಾಗಿ, ಕೃಷೀವಲನು ಕಂದಾಯವನ್ನು ಕೊಡಲಾರದೆ ದುಃಖಪಡುವಂತೆ ದುಃಖಪಡುತ್ತಾರೆ.’’(೧.೭೦)

[4] ಉದಾಹರಣೆಗೆ:
ಆಪಾತರಮ್ಯಾ ಧಿಗಿಮಾನನಿಷ್ಟಫಲದಾಯಿನಃ
ಅಹೋ ಧಿಗಸ್ತು ಭೋಗಾಂಗಮಿದಮಂಗಂ ಶರೀರಿಣಾಂ (೮.೬೭)

[5] ಈ ಸಂಕ್ಷಿಪ್ತತೆಗೆ ಕಾರಣ ಜಿನಸೇನರ ಅರಸಿಕತೆಯಲ್ಲ. ‘‘ಯಾವ ಕಾವ್ಯದಲ್ಲಿ ಪದ ಲಾಲಿತ್ಯವೂ (ಶೃಂಗಾರಾದಿ) ರಸಗಳೂ ಇಲ್ಲವೋ, ಅತ್ಯಂತ ಗ್ರಾಮ್ಯವಾದ ಅದು ಕಾವ್ಯವಲ್ಲ, ಕಿವಿಗಳಿಗೆ ಮಾತ್ರ ಕಠೋರವಾದುದು’’ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ(೧. ೯೭). ಶ್ರೀಮತಿ ವಜ್ರಜಂಘರ ದಾಂಪತ್ಯ ಸುಖದ ವರ್ಣನೆ ‘ಪೂರ್ವ ಪುರಾಣ’ದಲ್ಲಿ ರಸವತ್ತಾಗಿ ಬಂದಿರುವುದನ್ನು ನೆನೆಯಬಹುದು.

[6] ಮೂಲದ ಕೆಲವು ಹೋಲಿಕೆಗಳು ಇಲ್ಲಿ ಬಿಟ್ಟು ಹೋಗಿರುವುದನ್ನೂ ಕೆಲವು ಹೊಸದಾಗಿ ಸೇರಿರುವುದನ್ನೂ ಗಮನಿಸಬಹುದು.

[7] ‘‘ಕಿಂಚಿತ್ ಸ್ಖಲದ್ಗರ್ವಃ’’ ಎಂಬುದು ಒಂದು ದೃಷ್ಟಿಯಿಂದ ಚೆನ್ನಾಗಿದೆ. ಭರತನ ಗರ್ವ ಪೂರ್ತಿ ನಷ್ಟವಾಗಲಿಲ್ಲ; ಹಾಗಾಗಿದ್ದರೆ ಅವನು ಮುಂದೆ ಬಾಹುಬಲಿಯನ್ನು ಕೆಣಕುತ್ತಿದ್ದನೊ ಇಲ್ಲವೊ!

[8] ಇಲ್ಲಿ ಉದ್ಧೃತವಾಗಿರುವ ಪದ್ಯಗಳ ಅನುವಾದ ಎ.ಶಾಂತಿರಾಜಶಾಸ್ತ್ರೀಯವರದು.