ಭವ ಭವಗಳಲ್ಲಿ ಬೆಂದು ಹದಗೊಂಡ ಪುರುದೇವನ ಆತ್ಮ ತನ್ನ ಮಾಲಿನ್ಯವನ್ನು ನೀಗಿಕೊಂಡಿದೆ; ಮೋಹಾವರಣವನ್ನು ಕಳಚಿ ಹಾಕಿ ಅರ್ಹತ್ ಪದವಿಗೆ ಸಿದ್ಧವಾಗುತ್ತಿದೆ; ತೋರಿಕೆಗೆ ಮಾತ್ರ ಸಂಸಾರದಲ್ಲಿ ನೆಲಸಿದೆ. ಅದರ ಪರಿಣತಿಯನ್ನು ಪರಿಪೂರ್ಣಗೊಳಿಸುವ ಸಂದರ್ಭವೊಂದು ಈ ಭವದಲ್ಲಿ ಒದಗಿಬರುತ್ತದೆ. ಅದೇ ನೀಲಾಂಜನೆಯ ನೃತ್ಯ ಪ್ರಸಂಗ; ‘‘ಆದಿಪುರಾಣದ ಸಾರವೇ ಇದೆಂದು ಬೇಕಾದರೂ ಹೇಳಬಹುದು’’.[1] ಈಗಾಗಲೆ ಪರಿಶುದ್ಧವಾಗಿರುವ ಜೀವದಲ್ಲಿ ವೈರಾಗ್ಯೋದಯವಾಗಲು ಅದೊಂದು ನಿಮಿತ್ತವಾಗುತ್ತದೆ. ನಿಮಿತ್ತವೆಂದ ಮಾತ್ರಕ್ಕೆ ಅಮುಖ್ಯವೆಂದೇನೂ ಅಲ್ಲ.

ನೀಲಾಂಜನೆಯ ನೃತ್ಯಪ್ರಕರಣ ‘ಆದಿಪುರಾಣ’ದ ಅತ್ಯಂತ ರುಚಿರಚೇತೋಹಾರಿಯಾದ ಭಾಗ; ಇಂತಹ ಉತ್ಕೃಷ್ಟವಾದ ನೃತ್ಯವರ್ಣನೆ ಕನ್ನಡ ಸಾಹಿತ್ಯದಲ್ಲಿ ಅನ್ಯಾದೃಶವೆಂದರೂ ತಪ್ಪಾಗದು.[2] ಪಂಪನ ಸೌಂದರ್ಯ ದೃಷ್ಟಿ ಇಲ್ಲಿ ಅನುಪಮವಾಗಿ ಪ್ರಕಟವಾಗಿದೆ. ಆದರೆ ಈ ಪ್ರಸಂಗಕ್ಕೆ ಕಾವ್ರೋದೃಷ್ಟಿಯಿಂದ ಸ್ವತಂತ್ರ ಅಸ್ವಿತ್ವವಿಲ್ಲ; ಮುಂದಿನ ಪರಿ ನಿಷ್ಕ್ರಮಣಕ್ಕೆ ಇದೊಂದು ಉಜ್ವಲವಾದ ಹಿನ್ನೆಲೆಯಾಗುತ್ತದೆ; ಸಂಸಾರದ ಅಧ್ರುವ ನಿಸ್ಸಾರ ಸ್ವರೂಪವನ್ನು ನಿರ್ದೇಶಿಸಿ ವಿರತಿಭಾವವನ್ನು ಮನದಲ್ಲಿ ಆಳವಾಗಿ ಬೇರೂರಿಸುತ್ತದೆ.

ಸುರಾಂಗನೆಯ ಕಡು ಚೆಲುವನ್ನೂ ಅವಳ ನಾಟ್ಯದ ಬೆಡಗು ಬಿನ್ನಾಣಗಳನ್ನೂ ಕವಿಯೆ ಬಣ್ಣಿಸಲಿ :

ಎನಿಸಿದ ನೀಳಾಂಜನೆ
ರ್ಬಿನ ಬಿಲ್ಲಿಂ ಮಸೆದ ಮದನನಲರ್ಗಣೆ ಬರ್ದುಕಿ
ತ್ತೆನಿಸುತ್ತೊಳಪೊಕ್ಕಳ್ ಭೋಂ
ಕನೆ ನಿಖಿಳಜನಾಂತರಂಗಮಂ ರಂಗಮುಮಂ

ಓಸರಿಸಿದ ಜವನಿಕೆಯೊಡ
ನೋಸರಿಸಿದನಿಸಲೆ ಕಂತು ಪುಷ್ಪಾಂಜಳಿಯಂ
ಸೂಸಿದ ಪದದೊಳೆ ಸಭೆಗಂ
ಸೂಸಿದನೊಡನೊಡನೆ ನನೆಯ ಮೊನೆಯಂಬುಗಳಂ

ರಸಭಾವಾಭಿನಯಂಗಳ್
ಪೊಸವೆ ಪುಗಿಲ್ ಪೊಸವೆ ಚಲ್ಲಿಗಳ್ ಪೊಸವೆ ನಯಂ
ಪೊಸವೆ ಕರಣಂಗಳುಂ ನಿ
ಪ್ಪೊಸವೆನೆ ಪೊಸಯಿಸಿದಳಾಕೆ ನಾಟ್ಯಾಗಮಮಂ

ಪುಗುವ ಪೊಱಮಡುವ ತೆರನೆರ್ದೆ
ವುಗುವಳ್ ಪೊರಮಡುವಳೆನಿಸೆ ಪೊಸತಮರ್ದ ಮೇ
ಗುಗುೞ್ದಪಳೆನಿಸೆ ಮುಗುಳ್ನಗೆ
ನಗೆಮೊಗದ ಬೆಡಂಗವಳ್ಗದೇನೊಪ್ಪಿದುದೋ

ಕುಡುಪುಂ ಕಯ್ಯುಂ ಜತಿಯೊಳ್
ತಡತಡವರೆ ವಾದಕಂಗೆ ಪುರ್ವಿನ ಜತಿಯಂ
ತೊಡರದೆ ನಡೆಯಿಸಿ ಪುರ್ವದೆ
ಕುಡುಪೆನೆ ನರ್ತಕಿಯೆ ಸಭೆಗೆ ವಾದಕಿಯಾದಳ್

ಪೊಸವೆಳ್ದಿಂಗಳ್ ದೆಸೆದೆಸೆ
ಗೆಸೆದುದು ಕುಮುದವನಮಲರ್ದುದೆಂಬಂತಿರದೇ
ನೆಸೆದುದೊ ಕಟಾಕ್ಷಮಾಲಾ
ಪ್ರಸರಂ ಭ್ರೂಲಾಸ್ಯ ಸೌಂದರಂ ನರ್ತಕಿಯಾ

ಎವೆಯಿಕ್ಕದೆ ನೋಡುವ ನರ
ರಮರರ ಕಣ್ಗಳೊಳನಂಗರಾಜನ ಬಯ್ತಿ
ಟ್ಟಮರ್ದಂ ಕೊಳೆ ತಳಿದುದು ನಾ
ಭಿಮೂಲಮುಂ ಬಾಹುಮೂಲಮುಂ ಸುರವಧುವಾ

ಅವಯವದಿಂದಮೆ ದೇವಾಂ
ಗವಸ್ತ್ರದುಳ್ಳುಡೆಯನಾಕೆಯೋಸರಿಸುವ ಸೂ
ಸುವ ಹಾರಲತೆಯನಳವಡಿ
ಸುವ ಭಂಗಿಯೆ ಮದನ ರಾಜರಾಜ್ಯವಿಳಾಸಂ

ಸುರಗಣಿಕಾ ನಾಟ್ಯರಸಂ
ಪರಮನ ಚಿತ್ತಮುಮನೆಯ್ದೆ ರಂಜಿಸಿದುದು ವಿ
ಸ್ಫುರಿತ ಸ್ಫಟಿಕಂ ಶುದ್ಧಾಂ
ತರಂಗಮೇನನ್ಯರಾಗದಿಂ ರಂಜಿಸದೇ

ಹೀಗೆ ನರ್ತಿಸುತ್ತಿರುವಾಗಲೆ ನೀಲಾಂಜನೆಗೆ ಅವಸಾನವೊದಗಿ ಅವಳು ಕಣ್ಮರೆಯಾಗು ತ್ತಾಳೆ. ಇಂದ್ರ ರಸಭಂಗಭಯದಿಂದ ಅಂತಹುದೇ ಮತ್ತೊಂದು ಪಾತ್ರವನ್ನು ಸೃಜಿಸಿ, ನಾಟ್ಯೊಮುಂದುವರಿಯುವಂತೆ ಮಾಡುತ್ತಾನೆ. ಈ ರಹಸ್ಯ ಪುರುದೇವನಿಗಲ್ಲದೆ ಮತ್ತಾರಿಗೂ ಅರಿವಾಗುವುದಿಲ್ಲ. ಏಕೆ? ಅವನಾಗಲೆ ಭವ್ಯನಾಗಿದ್ದಾನೆ; ವೀತರಾಗನಾಗಿದ್ದಾನೆ. ಆದ್ದರಿಂದಲೆ ಅವನು ನೀಲಾಂಜನೆಯ ನರ್ತನವನ್ನು ಕೇವಲ ರಸಾನುಭವದ ಸ್ತರದಲ್ಲಿ ನಿಂತು ನೋಡಬಲ್ಲ.[3] ಶುದ್ಧವಾದ ಸ್ಫಟಿಕದಲ್ಲಿ ಬೇರೊಂದು ವಸ್ತುವಿನ ಕಾಂತಿ ರಂಜಿಸುವಂತೆ ನರ್ತಕಿಯ ನಾಟ್ಯದ ಸೊಗಸು ಪರಮನ ಚಿತ್ತವನ್ನು ರಂಜಿಸಿತೆಂಬ ಮಾತು ಅವನ ಅಲಿಪ್ತತೆಯನ್ನು ಧ್ವನಿಸುತ್ತದೆ. ನೀಲಾಂಜನೆಯ ಅವಸಾನ ಪುರುದೇವನ ಗಮನಕ್ಕೆ ಬಂದದ್ದು ಅವನ ಈ ರಸೈಕ ದೃಷ್ಟಿಯಿಂದಲೆ. ಆದರೆ ಉಳಿದ ಪ್ರೇಕ್ಷಕರು ಕೇವಲ ಭಾವೋದ್ರೇಕದ ಅವಸ್ಥೆಯಲ್ಲೆ ಇದ್ದುದರಿಂದ, ಮಿಂಚಿನಂತೆ ನಡೆದ ಘಟನೆಗಳು ಅವರಿಗೆ ಅರಿವಾಗಲೇ ಇಲ್ಲ.

ನೀಲಾಂಜನೆಯ ಅಳಿವನ್ನು ಕಂಡ ಪುರುದೇವ ಚೋದ್ಯಗೊಂಡು, ‘‘ನಾರೀರೂಪದ ಯಂತ್ರಂ ಚಾರುತರಂ ನೋಡೆ ನೋಡೆ ಕರಗಿದುದು, ಈ ಸಂಸಾರದ ಅನಿತ್ಯತೆ ಮನದೊಳ್ ಬೇರೂರಿದುದು, ಈಗಳಿಂತಿದಂ ಕಡೆ ಗಣಿಪೆಂ’’ ಎಂದು ಯೋಚಿಸುತ್ತಾನೆ. ಅವನು ಅಮರಿಯ ನಾಟ್ಯದಲ್ಲಿ ಕಂಡದ್ದು ವಿಷಮವಿಚಿತ್ರವಾದ ಸಂಸಾರನಾಟಕವನ್ನು:

ಕೋಟಿ ತೆಱದಿಂದಮೆಸೆವೀ
ನಾಟಕಮಂ ತೋಱಿ ಮಾಣ್ದಳಿಲ್ಲಳ್ ಬಗೆಯೊಳ್
ನಾಟುವಿನಮಮರಿ ಸಂಸೃತಿ
ನಾಟಕಮುಮನೆನಗೆ ನೆಱೆಯೆ ತೋಱಿದಳೀಗಳ್

ಈ ಸಂಸಾರದ ಅಂಗಗಳೆಲ್ಲ ಎಷ್ಟು ಅಚಿರ !-

ತನುರೂಪವಿಭವಯೌವನ
ಧನ ಸೌಭಾಗ್ಯಾಯುರಾದಿಗಳ್ಗೆಣೆ ಕುಡುಮಿಂ
ಚಿನ ಪೊಳಪು ಮುಗಿಲ ನೆೞಲಿಂ
ದ್ರನ ಬಿಲ್ ಬೊಬ್ಬುಳಿಕೆಯುರ್ಬು ಪರ್ಬಿದ ಭೋಗಂ

ಕೆಲವೇ ಚಣಗಳ ಹಿಂದೆ ಅವನು ಅನುಭವಿಸಿದ ಸರಸ ನೃತ್ಯ, ಸಂಗೀತಗಳು ಇದೀಗ ಹೊಳೆದ ಸತ್ಯದ ಬೆಳಕಿನಲ್ಲಿ ವಿಕೃತ ಬೀಭತ್ಸವಾಗಿ ತೋರುತ್ತವೆ; ನರಲೋಕದ ವಿಲಾಸಗಳೆಲ್ಲ ಅಷ್ಟೆ:

ತನುಗೆ ಪೊಱೆ ತುಡುಗೆ ನವಲೇ
ಪನಮೆ ಮಲಂ ಗೀತಮೞ್ಕೆ ನೃತ್ಯಂ ಬಗೆಯ
ಲ್ಕೆನಗೆ ದಲುನ್ಮತ್ತವಿಲಾ
ಸನಮಿಂತಿನಿತಱೊಳಮೊಂದಱೆಳ್ ಪುರುಳುಂಟೇ

ಭೋಗಗಳೇನೊ ನಶ್ವರ ; ಆದರೆ ಭೋಗತೃಷ್ಣೆಯೊ ಸದೈವ ಜ್ವಲಂತ. ಅದಕ್ಕೆ ಕಡೆಯಿಲ್ಲ, ತಡೆಯಿಲ್ಲ. ನಾಕಸುಖ ಸಾಗರವನ್ನೆ ಮೊಗೆಮೊಗೆದೀಂಟಿದರೂ ಪುರುದೇವನ ಭೋಗದಾಹ ಇಂಗಲಿಲ್ಲ:

ಎನಿತಾನುಮಂಬುನಿಧಿಗಳ
ನನೇಕನಾಕಂಗಳಲ್ಲಿ ಕುಡಿದುಂ ಪೋಯ್ತಿ
ಲ್ಲೆನಗೆ ನರಭೋಗಮೆಂಬೀ
ಪನಿಪುಲ್ಲಂ ನಕ್ಕೆ ತೃಷ್ಣೆ ಪೇೞ್ ಪೋದಪುದೇ

ಉಪಭೋಗದಿಂದ ಕಾಮವನ್ನು ಶಮನಗೊಳಿಸುತ್ತೇವೆ ಎನ್ನುವುದು ಹುಸಿ; ಭೋಗಾನುಭವದಿಂದ ತೃಷ್ಣೆ ಮತ್ತೂ ತೀಕ್ಷ್ಣವಾಗಿ ಉರಿದೇಳುತ್ತದೆ- ಆಜ್ಯಾಹುತಿಗೊಂಡ ಅಗ್ನಿಯಂತೆ.[4] ಆದ್ದರಿಂದ, ಕಾಮದಾವಾಗ್ನಿ ಜ್ವಾಲೆಯನ್ನು ಧರ್ಮಜಲಧಾರೆಯಿಂದಲೇ ನಂದಿಸಬೇಕು. ಒಮ್ಮೆ ನಿದ್ದೆ ಬರಲಿಲ್ಲವೆಂದು ನಿದ್ರೆಯ ಗುಳಿಗೆಯನ್ನು ಸೇವಿಸಿದರೆ ಏನಾಗುತ್ತದೆ? ಮುಂದೆ ಗುಳಿಗೆಯಿಲ್ಲದೆ ನಿದ್ದೆ ಬರುವುದೇ ಇಲ್ಲ; ಕಡೆಗೆ ಅದೇ ಮೃತ್ಯುವಾಗುತ್ತದೆ. ಕಾಮವೂ ಹೀಗೆಯೆ; ಅದನ್ನು ತೃಪ್ತಿಪಡಿಸುವುದು ಅಶಕ್ಯ, ಅಪಾಯಕರ; ನಿಗ್ರಹಿಸುವುದೇ ವಿಹಿತ.

ವಿಷಯಲಂಪಟರಾಗಿ, ಧರ್ಮಬಾಹಿರವಾಗಿ ಬದುಕಿದ ಎಷ್ಟು ಜನ ಮಹಾ ಚಕ್ರವರ್ತಿಗಳು ಕಾಲಜಠರದಲ್ಲಿ ನಿಶ್ಶೇಷವಾಗಿ ಜೀರ್ಣರಾಗಿ ಹೋಗಿದ್ದಾರೆ ಎಂಬುದನ್ನು ಚಿಂತಿಸುತ್ತಾನೆ ಪುರುದೇವ:

ವಿದಿತಂ ಮೂರ್ಧಾಭಿಷಿಕ್ತರ್ ಪಲಬರರಸುಗಳ್ ಪ್ರಾಜ್ಯಸಾಮ್ರಾಜ್ಯಲಕ್ಷ್ಮೀ
ಪದಮಂ ಕೈಕೊಂಡು ತಮ್ಮಂ ಮಱದು ವಿಷಯಭೋಗಾಸವಾತ್ಯಂತ ಸೇವಾ
ಮದದಿಂದಂ ಧರ್ಮ ಪೋತಚ್ಯುತರನವಧಿ ಸಂಸಾರವಾರಾಶಿ ಮಧ್ಯಾ
ಸ್ಪದಸರ್ವಗ್ರಾಸಿಭೀಮಾಂತಕ ವದನಮಹಾಗರ್ತದೊಳ್ ಮಗ್ನರಾದರ್[5]

ಹೀಗೆಲ್ಲ ಮನನ ಮಾಡಿದ ಪುರುದೇವ ಸಂಸಾರವನ್ನು ತ್ಯಜಿಸಿ, ಉಗ್ರತಪೋನಿರತನಾಗಿ, ಕೇವಲಜ್ಞಾನವನ್ನು ಸಂಪಾದಿಸುತ್ತಾನೆ; ತೀರ್ಥಂಕರ ಪದವಿಯನ್ನು ಪಡೆದು, ಧರ್ಮಚಕ್ರವರ್ತಿಯಾಗಿ ಧರ್ಮ ದಿಗ್ವಿಜಯವನ್ನು ಕೈಕೊಂಡು ಲೋಕವಿಹಾರಮಾಡಿ, ಅಮೃತವನ್ನು ಕರೆಯುತ್ತಾನೆ. ‘‘ಮಿಳಿರೆ ದಯಾಧ್ವಜಂ, ಉನ್ನತಿಗೊಳಗಾಗಿರೆ ಧರ್ಮಚಕ್ರಂ, ಆಯತಿಯಂ ಕೈಕೊಳೆ ಭವ್ಯವರೂಥಿನಿ’’, ಅವನ ವಿಹಾರ ಲೋಕ ಸಮಸ್ತವನ್ನು ಎರಗಿಸುತ್ತದೆ.

ಆದಿ ತೀರ್ಥಕರಚರಿತ ‘ಆದಿಪುರಾಣ’ದ ಒಂದು ಮುಖವಾದರೆ, ಭರತಚಕ್ರವರ್ತಿಚರಿತ ಅದರ ಇನ್ನೊಂದು ಮುಖ; ಎರಡೂ ಪರಸ್ಪರ ಪೂರಕ. ಆದಿನಾಥನದು ಧಾರ್ಮಿಕ ದಿಗ್ವಿಜಯವಾದರೆ, ಅವನ ಹಿರಿಯ ಮಗನಾದ ಭರತನದು ಲೌಕಿಕ ದಿಗ್ವಿಜಯ. ಭರತನ ಈ ಬಾಹ್ಯ ವಿಜಯ ಆದಿ ದೇವನ ಆತ್ಮ ವಿಜಯದ ಹಿರಿಮೆಯನ್ನು ವೈಷಮ್ಯತತ್ತ್ವ (contrast)ದ ಮೂಲಕ ಬಹಳ ಚೆನ್ನಾಗಿ ಮನವರಿಕೆ ಮಾಡಿಕೊಡುತ್ತದೆ; ಕಡೆಗೆ ಅದೊಂದು ಅಪಸ್ವರವಾಗಿ ಉಳಿಯದೆ, ಕಥೆಯ ಅಲೌಕಿಕ ಸ್ವರ ಮೇಳದಲ್ಲಿ ಲೀನವಾಗಿ ಸಾಮರಸ್ಯ ಪೋಷಕವಾಗುತ್ತದೆ. ‘‘ಇಲ್ಲಿ ಬರುವ ಬೇರೆ ಬೇರೆ ಕಥೆಗಳೆಲ್ಲ ಒಂದು ಮುಖ್ಯೋದ್ದೇಶಕ್ಕೆ ಅಧೀನವಾಗಿ ಹೆಣೆದುಕೊಂಡು, ಕಾವ್ಯದ ಜೀವವಾದ ರಸೈಕ್ಯವನ್ನು ಸಾಧಿಸುತ್ತವೆ.’’[6]

ಆದಿ ತೀರ್ಥಕರ ಚರಿತೆಯಲ್ಲಿ ಸಂಸಾರದ ಅನಿತ್ಯತೆ ಅಸಾರತೆಗಳು ಧ್ವನಿತವಾದರೆ, ಭರತಚಕ್ರಿಯ ಕತೆಯಲ್ಲಿ ಕೀರ್ತಿ, ಪದವಿ, ಪ್ರತಿಷ್ಠೆ, ವಿಭವಾದಿಗಳು ಹುರುಳಿಲ್ಲವೆಂಬುದು ವ್ಯಕ್ತವಾಗುತ್ತದೆ. ಅಲ್ಲಿ ವಿಷಯ ತೃಷ್ಣೆಗೆ ಆಘಾತವಾದರೆ ಇಲ್ಲಿ ಅಹಂಕಾರಕ್ಕೆ ಅಪೋಹವೊದಗುತ್ತದೆ. ‘‘ಆದಿನಾಥನ ಕಥೆಯಲ್ಲಿ ಕಾಮತ್ಯಾಗ, ಭರತನ ಕಥೆಯಲ್ಲಿ ಅಹಂಕಾರ ತ್ಯಾಗ- ಇವು ಸಮ್ಯಕ್ತ್ವ ಸಿದ್ದಿಗೆ ಪೂರ್ವಭಾವಿಗಳೆಂದು ತೋರಲಾಗಿದೆ’’.[7] ಕಾಮ, ಅಹಂಕಾರಗಳೆರಡೂ ಲಯವಾದಾಗಲೇ ವೈರಾಗ್ಯವು ಪೂರ್ಣವಾಗುವುದು. ಏಕೆಂದರೆ ಮನುಷ್ಯಲೋಕದ ಚೇಷ್ಟೆ ಚರ್ಯೆಗಳಿಗೆಲ್ಲ ಕಾಮದಂತೆ ಅಹಂಕಾರ ಪ್ರವೃತ್ತಿಯೂ ಮೂಲಕಾರಣ. ಪ್ರಾಯಶಃ ಕಾಮಕ್ಕಿಂತ ವ್ಯಾಪಕವಾದುದು ಅಹಂಕಾರ; ಅದಕ್ಕೆ ನಾನಾ ಮುಖಗಳುಂಟು. ಕಾಮವನ್ನು ವರ್ಜಿಸಿದ ಜಿತೇಂದ್ರಿಯನಲ್ಲೂ ಅಹಂಕಾರ ಮಮಕಾರಗಳು ಒಂದಲ್ಲ ಒಂದು ರೂಪದಲ್ಲಿ ಸುಪ್ತವಾಗಿ, ಸೂಕ್ಷ್ಮವಾಗಿ ಉಳಿದಿರುವುದು ಸಾಧ್ಯ. ಅವುಗಳನ್ನು ನಿಗ್ರಹಿಸಿದಲ್ಲದೆ ಯಾರೂ ಮಹಾತ್ಮರಾಗಲಾರರು. ಆದ್ದರಿಂದಲೇ ‘ಆದಿಪುರಾಣ’ವು ಭರತೇಶ್ವರ ಚರಿತೆಯಲ್ಲಿ- ಇಲ್ಲಿ ಭರತ ಬಾಹುಬಲಿಗಳಿಬ್ಬರ ಕತೆಯೂ ಉಂಟು – ಅಹಂಕಾರನಿವೃತ್ತಿಯನ್ನು ಪ್ರತಿಪಾದಿಸಿರುವುದು. ಭರತನಿಗೆ ಹೊರಗಿನ ಆಘಾತದಿಂದ ಅಹಂಕಾರ ನಿರಸನವಾಗುತ್ತದೆ; ಬಾಹುಬಲಿಯಾದರೆ ಸ್ವಪ್ರೇರಣೆಯಿಂದಲೆ ಅಹಂಕಾರ ತ್ಯಾಗ ಮಾಡುತ್ತಾನೆ. ಪಂಪಕವಿ ಈ ಪ್ರಸಂಗವನ್ನು ಪ್ರೋಜ್ವಲವಾಗಿ ನಿರೂಪಿಸಿದ್ದಾನೆ.

ಆದಿದೇವನ ದಿಗ್ವಿಜಯ ಅಹಿಂಸಾವಿಧಾನದಿಂದ ನಡೆದು ಜಗತ್ತನ್ನು ಪರಿವರ್ತಿಸಿದರೆ, ಭರತನದು ಹಿಂಸಾಪುರಸ್ಸರವಾಗಿ ನಡೆದು ಲೋಕವನ್ನು ಮಣಿಸುತ್ತದೆ; ಅವನು ರತ್ನತ್ರಯವನ್ನು ಸಾಧಿಸಿದರೆ ಇವನು ಚಕ್ರರತ್ನವನ್ನು ಸಾಧಿಸುತ್ತಾನೆ. ಆಯುಧಾಗಾರದಲ್ಲಿ ಹುಟ್ಟಿದ ಈ ಅಜೇಯ ಭಯಂಕರವಾದ ಚಕ್ರವನ್ನು ಮುಂದಿಟ್ಟುಕೊಂಡು ಭರತ ಷಟ್ಖಂಡ ಭೂಮಂಡಲವನ್ನು ಪಾದಾಕ್ರಾಂತಗೊಳಿಸಲುದ್ಯುಕ್ತನಾಗುತ್ತಾನೆ; ಎರಡನೆಯ ಗಂಗೆ ನಡೆಯುವಂತೆ ಅವನ ಪಡೆ ನಡೆಯುತ್ತದೆ; ಅವನ ಶೌರ್ಯಾಟೋಪಕ್ಕೆ ತಲ್ಲಣಿಸಿ ಭೂಪತಿಗಳೆಲ್ಲ ಶರಣಾಗತರಾಗುತ್ತಾರೆ; ಮಲೆತುನಿಂತವರನ್ನು ಅವನು ಬಗ್ಗುಬಡಿದು ಅವನತಮಕುಟರನ್ನಾಗಿ ಮಾಡುತ್ತಾನೆ. ಅವನ ಅಬ್ಬರ ಅಹಂಕಾರ ಔದ್ಧತ್ಯ ಆತ್ಮವಿಶ್ವಾಸ ಗಳೆಷ್ಟು! ‘‘ಈಂಟುವೆನೋ ದಾಂಟುವೆನೋ ಲವಣಾಂಬುರಾಶಿಯಂ’’ ಎಂದು ಉಗ್ಗಡಿಸು ತ್ತಾನೆ! ಭೂಮಂಡಲವನ್ನೆಲ್ಲ ಗೆದ್ದು ವಿಜಯೋತ್ಸವವನ್ನಾಚರಿಸುತ್ತ ತನ್ನ ಪ್ರಶಸ್ತಿಯನ್ನು ವೃಷಭಾಚಲದಲ್ಲಿ ಕೆತ್ತಿಸಬೇಕೆಂದು ಅಲ್ಲಿಗೆ ಹೋಗುತ್ತಾನೆ; ವೃಷಭಾಚಲವನ್ನು ನೋಡುತ್ತಾನೆ. ಮತ್ತೆ ಕಣ್ಣರಳಿಸಿ ನೋಡುತ್ತಾನೆ…. ಅಶನಿಘಾತವಾದಂತಾಗುತ್ತದೆ. ಅವನು ಕಂಡದ್ದೇನು, ಅವನಿಗೆ ಆದದ್ದೇನು?-

ಅದಱೊಳನೇಕ ಕಲ್ಪಶತಕೋಟಿಗಳೊಳ್ ಸಲೆ ಸಂದ ಚಕ್ರಿವೃಂ
ದದ ಚಲದಾಯದಾಯತಿಯ ಬೀರದ ಜಾಗದ ಮಾತುಗಳ್ ಪೊದ
ೞ್ದೊದವಿರೆ ತತ್ಪ್ರಶಸ್ತಿಗಳೊಳಂತವನೊಯ್ಯನೆ ನೋಡಿ ನೋಡಿ ಸೋ
ರ್ದುದು ಕೊಳಗೊಂಡ ಗರ್ವರಸಮಾ ಭರತೇಶ್ವರ ಚಕ್ರವರ್ತಿಯಾ

ವೃಷಭಾಚಲದ ತಪ್ಪಲೆಲ್ಲ ಹಿಂದಿನ ಅಸಂಖ್ಯಾತ ಧರಣೀಶರ ಪ್ರಶಸ್ತಿಗಳನ್ನು ಹೊತ್ತು ಮೆರೆಯುತ್ತಿದೆ; ಭರತನ ಜಯಪ್ರಶಸ್ತಿಗೆ ಜಾಗವೆ ಇಲ್ಲ! ವಿಶ್ವವಿಜಯಿಯಾದವನು ಭರತನೊಬ್ಬನೇ ಅಲ್ಲ; ಹಿಂದೆ ತಿರೆಯನ್ನಾಳಿದ ಕೋಟ್ಯಂತರ ಮಂದಿ ದೊರೆಗಳು ಭರತನಂತೆ ದಿಗ್ವಿಜಯ ಮಾಡಿ ವಿಜೃಂಭಿಸಿ ಇಂದು ಹೇಳ ಹೆಸರಿಲ್ಲದಂತೆ ಮಣ್ಣಾಗಿದ್ದಾರೆ. ಅವರ ಸಾಧನೆಗಳ ನಿಷ್ಫಲತೆಯನ್ನು ಲೋಕಕ್ಕೆ ಸಾರುವಂತೆ ಎದುರಿಗೆ ನಿಂತಿದೆ ವೃಷಭಾದ್ರಿ. ಅದನ್ನು ಕಂಡು ಭರತ ಸಿಗ್ಗಾಗುತ್ತಾನೆ. ಆದರೆ ಸುಮ್ಮನೆ ಹಿಂದಕ್ಕೆ ಹೋಗುವುದುಂಟೇ? ಯಾರೊ ಒಬ್ಬ ರಾಜನ ಪ್ರಶಸ್ತಿಯನ್ನು ದಂಡರತ್ನದಿಂದ ಸೀಟಿ, ತನ್ನ ಪ್ರಶಸ್ತಿಗೆ ಎಡೆ ಮಾಡಿಕೊಂಡು ಹೀಗ ಬರೆಯಿಸುತ್ತಾನೆ:

ದೇವಾಂಗನೆಯರ್ ಪಾಡುವ
ರಾವನ ಜಸಮಾ ಕುಳಾಚಳಾವಳಿಯೊಳಾ ಶೌ
ರ್ಯಾವಷ್ಟಂಭದಿನಾಳ್ದವ
ನಾವಂ ಷಟ್ಖಂಡಮಂಡಿತಕ್ಷಿತಿತಳಮಂ

ಆತಂ ಭರತೇಶ್ವರನಿಂ
ತೀ ತೆರದಿಂ ನೆಗೞ್ದ ತನ್ನ ಕೀರ್ತಿಯನೀ ವಿ
ಖ್ಯಾತ ವೃಷಭಾದ್ರಿಯೊಳ್ ಸುರ
ಗೀ
ತಯಶಂ ನಿಱಸಿದಂ ನೆಲಂ ನಿಲ್ವಿನೆಗಂ

ಶಾಲೆಯ ಹುಡುಗರು ಡೆಸ್ಕುಗಳ ಮೇಲೆ ತಮ್ಮ ತಮ್ಮ ಹೆಸರುಗಳನ್ನು ಆಯಾ ಜಾಗದಲ್ಲಿ ಕೊರೆಯುವುದಿಲ್ಲವೆ? ಅದಕ್ಕಿಂತ ಉತ್ತಮವಾದದ್ದೇನೂ ಅಲ್ಲ, ಈ ಪ್ರಶಸ್ತಿಲೇಖನಕಾರ್ಯ. ‘‘ನೆಲಂ ನಿಲ್ವಿನೆಗಂ !’’ ಹೌದೆ? ಎಂತಹ ವ್ಯಂಗ್ಯ ತುಂಬಿ ತುಳುಕುತ್ತಿದೆ ಈ ಮಾತಿನಲ್ಲಿ! ಭರತೇಶನ ಕೀರ್ತಿ ಆಚಂದ್ರಾರ್ಕವಾಗಿ ಉಳಿಯಬಲ್ಲುದೆ? ಅವನಂತೆ ಮೆರೆದ ಎಷ್ಟು ಜನರ ಕೀರ್ತಿ ಹಾಗೆ ನಿಂತಿದೆ? ಅವನೇ ಈಗ ಒಬ್ಬ ದೊರೆಯ ಪ್ರಶಸ್ತಿಯನ್ನು ಅಳಿಸಿ ಹಾಕಿದನಲ್ಲ! ಹಿಂದೆಷ್ಟು ಪ್ರಶಸ್ತಿಗಳು ಹಾಗೆ ನಿರ್ನಾಮವಾಗಿ ಹೊಸಬರಿಗೆ ಜಾಗ ಮಾಡಿಕೊಟ್ಟಿವೆಯೊ! ಭರತನ ಪ್ರಶಸ್ತಿಗೂ ಅದೇ ಗತಿ ಬರಲಿಕ್ಕಿಲ್ಲವೆಂದೇನು ಭರವಸೆ? ಈ ಕಟುಸತ್ಯ ಅವನಿಗೆ ಅರಿವಾಗಲಿಲ್ಲವೆಂದಲ್ಲ; ಆದರೂ ಸಂಪ್ರದಾಯದಂತೆ ತನ್ನ ಪ್ರಶಸ್ತಿಯನ್ನು ಆ ಹೆಸರುಗಳ ಸಂತೆಯಲ್ಲಿ ಕೆತ್ತಿಸುತ್ತಾನೆ. ಅಲ್ಲದೆ, ಅವನ ಅಹಂಕಾರ ಸಂಪೂರ್ಣವಾಗಿ ಕರಗಿಲ್ಲ; ಆ ವೇಳೆ ಸದ್ಯದಲ್ಲೆ ಒದಗಿಬರಲಿದೆ. ಅಂತೂ ‘Pride goes forth on horseback grand and gay, but cometh back on foot and begs its way’ ಎಂಬಂತಾಯಿತು ಭರತನ ಅವಸ್ಥೆ.[8]

ಅವನು ತನ್ನ ನಗರಕ್ಕೆ ಹಿಂದಿರುಗುವಾಗ, ಚಕ್ರರತ್ನ ಒಳಹೊಗದೆ ಪುರದ ಬಾಗಿಲಲ್ಲೆ ನಿಂತುಬಿಡುತ್ತದೆ. ರಾಜಧಾನಿಯಲ್ಲಿ ತಾನು ಗೆಲ್ಲಬೇಕಾದವರಿದ್ದಾರೆ ಎಂಬುದು ಅದರ ಸೂಚನೆ. ಹಗೆಗಳು ಹೊರಗಿಲ್ಲ, ಒಳಗೇ ಇದ್ದಾರೆ. ಬಾಹುಬಲಿ ಮುಂತಾದ ಭರತನ ಸಹೋದರರು ಅಣ್ಣನನ್ನು ಚಕ್ರವರ್ತಿಯೆಂದು ಒಪ್ಪಿ ಗೌರವಿಸಲು ಸಿದ್ಧರಿಲ್ಲ; ಅವರನ್ನು ತಲೆ ಬಾಗಿಸಬೇಕೆಂಬುದು ಭರತನ ಚಲ. ತಂದೆ ಎಲ್ಲರಿಗೂ ಕೊಟ್ಟಿರುವ ರಾಜ್ಯದಲ್ಲಿ ಭರತನಿಗೇನು ವಿಶೇಷವಾದ ಹಕ್ಕು? ಇವನ ಅಧೀನದಲ್ಲೇಕಿರಬೇಕು? ಈ ಕೋಟಲೆಯೇ ಬೇಡ ಎಂದು ಅಲೋಚಿಸಿ ಭರತನ ನೂರು ಮಂದಿ ತಮ್ಮಂದಿರು ನಿರ್ವೇಗ ಪರಾಯಣರಾಗಿ ತಂದೆಯ ಬಳಿ ಹೋಗಿ ತಪವನ್ನು ಕೈಕೊಳ್ಳುತ್ತಾರೆ.

ಆದರೆ ಸ್ವಾಭಿಮಾನಿಯಾದ ಬಾಹುಬಲಿಯೊಬ್ಬ ಮಾರ್ಮಲೆತು ನಿಲ್ಲುತ್ತಾನೆ. ಅಣ್ಣನಿಗೆ ಮಣಿಯುವುದೇನೂ ಅಪಮಾನವಲ್ಲ; ಆದರೆ ಭರತ ಹಿಡಿದಿರುವ ಮಾರ್ಗ ಮಾತ್ರ ಅನುಚಿತವೆಂಬುದು ಬಾಹುಬಲಿಯ ಅಭಿಪ್ರಾಯ:

ಪಿರಿಯಣ್ಣಂಗೆಱಗುವುದೇಂ
ಪರಿಭವಮೇ ಕೀಱಿ ನೆತ್ತಿಯೊಳ್ ಬಾಳಂ ನಿ
ರ್ನೆರಮೂಱಿ ಚಲದಿನೆರಗಿಸ
ಲಿರೆ ಭರತಂಗೆಱಗುವೆಱಕಮಂಜಮೆಯಲ್ತೇ

ಆದ್ದರಿಂದಲೇ ಅವನು ಭರತನನ್ನು ಯುದ್ಧಕ್ಕೆ ಕರೆಯುತ್ತಾನೆ. ಇಬ್ಬರಿಗೂ ಕೈಗಟ್ಟಿದ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ಭರತ ಚಕ್ರವರ್ತಿ ಪರಾಜಿತನಾಗುತ್ತಾನೆ. ಅವನು ರೋಷದಿಂದ ಪ್ರಯೋಗಿಸಿದ ಚಕ್ರ ಬಾಹುಬಲಿಯನ್ನು ಘಾತಿಸದೆ ಅವನಿಗೆ ಪ್ರದಕ್ಷಿಣೆ ಮಾಡಿ ನಿಲ್ಲುತ್ತದೆ. ಭರತ ನಾಚಿ ತಲೆ ತಗ್ಗಿಸುತ್ತಾನೆ.

ಆದರೆ ಬಾಹುಬಲಿಯಲ್ಲಿ ಅದೇನು ಪರಿವರ್ತನೆ ಸ್ಫುರಿಸಿತೊ, ಅವನು ಇದ್ದಕ್ಕಿದ್ದಂತೆ ವೈರಾಗ್ಯದೀಪ್ತನಾಗುತ್ತಾನೆ. ಛೆ, ಈ ರಾಜ್ಯಮೋಹ ಎಷ್ಟು ಕೆಟ್ಟದ್ದು ! ಸೋದರರಲ್ಲಿ ವೈರವನ್ನು ಬಿತ್ತುತ್ತದೆ; ತಂದೆ ಮಕ್ಕಳಿಗೆ ವಿರಸವನ್ನು ತಂದೊಡ್ಡುತ್ತದೆ; ಈ ಒಡಲು, ಈ ರಾಜ್ಯ ಯಾವುದೂ ಶಾಶ್ವತವಲ್ಲ; ವಿಷಯ ಸುಖಗಳಿಂದ ದುರಂತ ತಪ್ಪಿದ್ದಲ್ಲ; ಇವುಗಳನ್ನು ನಂಬುವುದೆಂತು ಎಂದು ಅವನು ಆಲೋಚಿಸುತ್ತಾನೆ.

ಇನಿಯವು ಮೊದಲೊಳ್ ನಂಜಿನ
ಪನಿವೊಲ್ ಬಖ಼ಉಕೆಯ್ದೆ ಮುಳಿದು ಕೊಂದಿಕ್ಕುವುವಿಂ
ತೆನೆಯೆನೆ ವಿಷಯಸುಖಾಸ್ವಾ
ದನದೊಳ್ ಲಂಪಟರಿದೇಕೆಯೋ ನರಪಶುಗಳ್

ಎಂದು ವಿಸ್ಮಿತನಾಗಿ, ‘‘ಅತೀಂದ್ರಿಯಮೆ ಸುಖಂ’’ ಎಂದು ನಿರ್ಣಯಿಸುತ್ತಾನೆ. ‘‘ಜೈನ ದೀಕ್ಷೆಯಂ ಕೈಕೊಂಡು, ಅಡಿಗೆಱಗಿಸುವೆಂ ಸಮಸ್ತ ಸುರಸಮುದಯಮಂ’’ ಎಂದು ಅಧ್ಯಾತ್ಮ ದಿಗ್ವಿಜಯವನ್ನು ನಿಶ್ಚಯಿಸುತ್ತಾನೆ. ‘‘ಚಕ್ರೇಶ, ಸಿಗ್ಗನುೞ, ಮುಳಿಸಂ ನೀನ್ ಎಂದಿಂಗಂ ಬಿಸುಡು, ಈ ತಮ್ಮಂದಿರೊಳ್ ಇಂತು ಕಡ್ಡರಪ್ಪುದು ಪೆಂಪೇ’’ ಎಂದು ಭರತನಿಗೆ ನುಡಿಯುತ್ತಾನೆ. ಅವನ ಶ್ರೀಕಂಠದಿಂದ ಜಗದ್ರೋಮಾಂಚನಕಾರಿಯಾಗಿ ಮೊಳಗಿ ಬರುತ್ತದೆ, ಧೀರೋದಾತ್ತ ಗಂಭೀರವಾಣಿ:

ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಂ ಭಟಖಡ್ಗಮಂಡಲೋ
ತ್ಪಲವನ ವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ[9] ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗೞ್ತೆ ಮಾಸದೇ

‘‘ಮರೆವುದೆನ್ನ ದುರ್ವಿಳಸನಮಂ’’ ಎಂದ ಬಾಹುಬಲಿಯ ಕ್ಷಮಾ ಪ್ರಾರ್ಥನೆಯನ್ನೂ ಅವನ ತಪೋನಿರ್ಧಾರವನ್ನೂ ಕೇಳಿದ ಭರತನ ಹೃದಯದಲ್ಲಿ ಪಶ್ಚಾತ್ತಾಪ ಉಕ್ಕಿಬರುತ್ತದೆ. ‘ನನ್ನ ಪಾಲಿಗೆ ಉಳಿದಿರುವವನು ನೀನೊಬ್ಬನೆ ತಮ್ಮ; ತಪಸ್ಸಿಗೆ ಹೋಗಬೇಡ’ ಎಂದು ಗೋಗರೆದು ಕೇಳಿಕೊಳ್ಳುತ್ತಾನೆ:

ಮನದೊಳ್ ಮುನ್ ಪುದಿದಿರ್ದ ಕೋಪಮನಿತುಂ ತೂಳ್ದಾಗಳೆತ್ತೆತ್ತ ಗೆ
ಯ್ದೆನಿದಂ ತಮ್ಮನೊಳೆಂಬುದೊಂದುಪಶಮಂ ಕೈಗಣ್ಮಿ ನೀನೊರ್ಬನಯ್
ಮನುವಂಶಕ್ಕೆ ಲಲಾಮನಪ್ಪನುಜನಯ್ ಬೇಡಮ್ಮ ನೀನುಂ ತಪೋ
ವನಮಂ ಸಾರ್ವುದುಮಾನದಾರ್ಗೆ ಮೆಱೆವೆಂ ಮತ್ಪ್ರಾಜ್ಯ ಸಾಮ್ರಾಜ್ಯಮಂ

ಆದರೆ ಬಾಹುಬಲಿ ಅವನನ್ನು ಹೇಗೊ ಒಡಂಬಡಿಸಿ, ಆದಿದೇವನಲ್ಲಿ ದೀಕ್ಷೆ ಪಡೆದು ತಪೋರಾಜ್ಯರತನಾಗುತ್ತಾನೆ; ಮುಂದೆ ಕೇವಲ ಜ್ಞಾನ ಸಂಪಾದಿಸುತ್ತಾನೆ.[10]

ತಮ್ಮನಿಂದ ಒಳ್ಳೆಯ ಪಾಠ ಕಲಿತ ಭರತ ಧರ್ಮದಿಂದ ರಾಜ್ಯಭಾರ ಮಾಡಿ, ಆದಿ ತೀರ್ಥಕರನ ಪರಿನಿರ್ವಾಣವಾದ ಮೇಲೆ ದೀಕ್ಷೆ ವಹಿಸಿ, ತಪಸ್ಸಿನಿಂದ ಮುಕ್ತಿ ಪಡೆಯುತ್ತಾನೆ.

ಈ ಪ್ರಸಂಗದಲ್ಲಿ ನಾವು ನೋಡುವುದು ಬಾಹುಬಲಿಯ ಲೋಕಾಶ್ಚರ್ಯಕರವಾದ ತ್ಯಾಗ, ವಿರಾಗ, ಔದಾರ್ಯ, ಕ್ಷಮೆಗಳನ್ನು; ಅವನ ವ್ಯಕ್ತಿತ್ವ ಭರತನನ್ನು ಪರಿವರ್ತಿಸಿದ ಬಗೆಯನ್ನು. ವಿಜಯೋನ್ಮತ್ತನಾಗಬೇಕಾದ ಗಳಿಗೆಯಲ್ಲಿ ಬಾಹುಬಲಿ ಮೆರೆಯುವ ತ್ಯಾಗಕ್ಕೆ ಮೂರು ಲೋಕಗಳ ಬೆಲೆಯುಂಟು. ಇಲ್ಲಿ ಒಂದು ಜಾಗೃತ ಚೇತನ ‘‘ವಿಜಯದ ತುತ್ತತುದಿಯಲ್ಲೇ ಆ ವೈಭವದ ಸುವರ್ಣಮಂದಿರವನ್ನೆ ತನ್ನ ತ್ಯಾಗದ ತ್ರಿವಿಕ್ರಮ ಪಾದದಿಂದ ಪುಡಿಗೈದು ಮುಗಿಲೆತ್ತರ ನಗ್ನಯೋಗದಲ್ಲಿ ನಿಲ್ಲುವ ಶಾಂತ ದಿವ್ಯ ದೃಶ್ಯವನ್ನು ಕಾಣುತ್ತೇವೆ.’’[11] ಬಾಹುಬಲಿಯ ಈ ವಿಯಚ್ಚುಂಬಿಯಾದ ವ್ಯಕ್ತಿತ್ವದ ಮುಂದೆ ಭರತನ ಲೌಕಿಕ ಸಿದ್ದಿ ಗಜದೆದುರು ನಿಂತು ಅಜದಂತೆ ಕ್ಷುದ್ರವಾಗಿ, ನಿಷ್ಪ್ರಭವಾಗಿ ತೋರುತ್ತದೆ.

ಬಾಹುಬಲಿಯ ತ್ಯಾಗ ದೌರ್ಬಲ್ಯಮೂಲವಾದುದಲ್ಲ; ಅವನದು ಹೇಡಿಯ ಕ್ಷಮೆಯಲ್ಲ. ನಿಜವಾದ ಅಹಿಂಸೆಯನ್ನು ಅವನ ಅಪೂರ್ವ ವರ್ತನೆಯಲ್ಲಿ ಕಾಣುತ್ತೇವೆ. ವೈರವು ವೈರದಿಂದ ಶಾಂತವಾಗುವುದಿಲ್ಲ, ಆವೈರದಿಂದ ಮಾತ್ರವೇ ಶಾಂತವಾಗುತ್ತದೆ ಎಂಬ ಸೂಕ್ತಿಯಂತೆ ಅವನು ದ್ವೇಷಾಸೂಯೆಗಳನ್ನು ಪ್ರೀತಿ ಅಹಿಂಸೆಗಳಿಂದ ಚಣ ಮಾತ್ರದಲ್ಲಿಗೆದ್ದುಬಿಡುತ್ತಾನೆ. ಭರತನಂತೆ ಅವನೂ ಚಲವನ್ನೆ ಮುಂದೊಡ್ಡಿ, ಕಡೆತನಕ ಹಗೆ ತನವನ್ನೆ ಸಾಧಿಸಲು ಹೊರಟಿದ್ದರೆ ಏನೆಲ್ಲ ಅನರ್ಥಪರಂಪರೆಗೆ ಅದರಿಂದ ಎಡೆಯಾಗುತ್ತಿತ್ತೊ! ಅಣ್ಣ ತಮ್ಮಂದಿರ ವೈರದ ಸೂತ್ರ ಭವಭವಗಳಲ್ಲಿ ಅನುಸ್ಯೂತವಾಗಿ ಹರಿದು ಅವರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಬಾಹುಬಲಿ ಅದಕ್ಕೆ ಆಸ್ಪದ ಕೊಡದೆ, ಹಿಂಸೆಯ ದುರಂತವನ್ನು ತಪ್ಪಿಸಿ ಅಹಿಂಸೆಯಿಂದ ಆತ್ಮಕಲ್ಯಾಣವನ್ನೂ ಜಗತ್ಕಲ್ಯಾಣವನ್ನು ಸಾಧಿಸುತ್ತಾನೆ. ಈರ್ಷ್ಯಾ ತಪ್ತವಾದ ಎರಡು ಪಕ್ಷಗಳಲ್ಲಿ ಯಾವುದಾದರೊಂದು ಪಕ್ಷ ಸ್ಪರ್ಧೆಯಿಂದ ಹಿಂದೆಗೆದರೆ ಎಂತಹ ಶುಭೋದಯವಾಗಬಲ್ಲುದೆಂಬುದನ್ನು ಸ್ಪಷ್ಟೀಕರಿಸುತ್ತದೆ, ಬಾಹುಬಲಿಯ ಚಾರಿತ್ರ. ‘‘ರಾಜಿಕ ಆರ್ಥಿಕ ಸಾಮಾಜಿಕ ಕ್ಷೇತ್ರಗಳಲ್ಲಿ… ಕ್ಷಣಕ್ಷಣಕ್ಕೂ ಹುಟ್ಟುತ್ತಿರುವ ಸಹಸ್ರ ಸಹಸ್ರ ವಿಷಮ ವಿರೋಧಗಳಿಗೆ ಏಕೈಕ ಬೀಜ ಮದ್ದು ತ್ಯಾಗವೀರನಾದ ಬಾಹುಬಲಿಯ ಚರಿತ್ರ ಪಠಣ… ನಮಗೆ ಬಾಹುಬಲಿಯಂತಹ ವ್ಯಕ್ತಿ ಆರಾಧ್ಯ ದೈವವಾಗಬೇಕು…. ಧರ್ಮಕಲಿಯಾಗಿ ಅಹಿಂಸಾವೀರನಾಗಿ ಮನಃಕಷಾಯಗಳನ್ನು ತೊಳೆದುಕೊಂಡ ತಪೋಮೂರ್ತಿಯಾಗಿ ರಾರಾಜಿಸುವ ಪೂಜ್ಯ ಬಾಹುಬಲಿಯ ಆದರ್ಶ ಇಂದು ಜನಕ್ಕೆ ಬೇಕಾಗಿದೆ.’’[12]

ಅಹಿಂಸೆ ಎಂತಹ ಅದ್ಭುತ ಪರಿವರ್ತನೆಯನ್ನು ಸಾಧಿಸಬಲ್ಲುದು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾನೆ, ಭರತ. ಅವನು ವೃಷಭಾದ್ರಿಯ ಪ್ರಶಸ್ತಿ ಪ್ರಪಂಚವನ್ನು ನೋಡಿದಾಗ ಗತಗರ್ವನಾದರೂ, ಆ ಸಿಗ್ಗು ವೈರಾಗ್ಯ ಪ್ರೇರಕವಾಗಲಿಲ್ಲ; ಹಾಗಾಗಿದ್ದ ಪಕ್ಷದಲ್ಲಿ ತಮ್ಮಂದಿರನ್ನು ಕೆಣಕುವ ಪ್ರಸಂಗವೆಲ್ಲಿ ಬರುತ್ತಿತ್ತು? ಬಾಹುಬಲಿಯ ಎತ್ತರವನ್ನು ಕಂಡು ಮಧುರ ವಿಸ್ಮಯಾಘಾತವನ್ನು ಅನುಭವಿಸಿದ ಮೇಲೆಯೇ ಅವನಲ್ಲಿ ವೈರಾಗ್ಯಂಕುರವಾಗುವುದು(ಮುಂದೆ ಅದು ಫಲಿಸುತ್ತದೆ).

ಆದಿದೇವನ ವಿರಕ್ತಿ ಮನಃಪರಿಪಾಕಗಳು ದೀರ್ಘಾವಧಿಯ ಸಾಧನೆಯಿಂದ ಕ್ರಮಶಃ ಲಬ್ಧವಾದ ಫಲಗಳು. ಆದರೆ ಬಾಹುಬಲಿಯ ವಿಷಯ ಹಾಗಲ್ಲ. ಅವನದು ಪ್ರಬುದ್ಧ ಪರಿಣತ ಚೇತನ; ಅವನು ಇದಕ್ಕಿದ್ದಂತೆಯೆ ವೈರಾಗ್ಯಪರನಾಗಿ, ಉಟ್ಟ ಬಟ್ಟೆಯನ್ನು ಕಿತ್ತೆಸೆಯುವಷ್ಟು ಸುಲಭವಾಗಿ ಸಲೀಸಾಗಿ ವಿಜಯವನ್ನು ತೃಣೀಕರಿಸುತ್ತಾನೆ. ಭರತನಾದರೊ ಇವರಿಬ್ಬರಿಗಿಂತ ಭಿನ್ನನಾದ ವ್ಯಕ್ತಿ; ಅವನಿಗುಂಟಾಗುವ ವೈರಾಗ್ಯಸ್ಪರ್ಶ ಪರೋಕ್ಷವಾದದ್ದು, ಬಾಹುಬಲಿಯ ಮಹಿಮೆ ಔನ್ನತ್ಯಗಳ ಸಂದರ್ಶನದಿಂದ ಬಂದದ್ದು. ಹೀಗೆ ವೈರಾಗ್ಯದ ಮೂರು ಪರಿಗಳನ್ನು ಪಂಪ ‘ಆದಿಪುರಾಣ’ದಲ್ಲಿ ನಿರೂಪಿಸುವಂತೆ ತೋರುತ್ತದೆ. ಈ ಯಾವೊಂದು ಮಾರ್ಗದಿಂದಲಾದರೂ ಜೀವ ಉದ್ಧಾರಗೊಳ್ಳಬಹುದು.

ಈ ವೈರಾಗ್ಯನಿರೂಪಣೆಯ ಮೂಲಕ ಪಂಪ ಆಧುನಿಕ ಜಗತ್ತಿಗೆ ನೀಡಿರುವ ಸಂದೇಶವಾದರೂ ಏನು? ಅವನು ಹೇಳಿರುವುದು ‘ಸಂಸಾರದಲ್ಲಿ ಬಿದ್ದ ಜೀವನು ಸಂಸಾರವನ್ನೇ ಹಿಡಿದು ಮೇಲೆದ್ದು’ ಸಿದ್ಧನಾದ ಕಥೆಯನ್ನು ಎಂಬುದು ಮನನಯೋಗ್ಯವಾಗಿದೆ. ಸಂಸಾರದ ಜಾಲದಲ್ಲಿ ಒಂದಿನಿತೂ ಸಿಕ್ಕಿಹಾಕಿಕೊಳ್ಳದೆ ಉದ್ಧಾರ ಪಡೆದುಕೊಳ್ಳುವ ಸತ್ತ್ವ ಸಾಮರ್ಥ್ಯಗಳು ಎಲ್ಲರಿಗೂ ಉಂಟೆ? ಸಹಜ ವಿರಕ್ತಿಯೆಂಬುದು ಸಾಮಾನ್ಯರಿಗೆಲ್ಲ ಸಾಧ್ಯವೇ ಅಥವಾ ಸಾಧುವೆ? ಎಂಬ ಪ್ರಶ್ನೆಗಳನ್ನು ಆಧುನಿಕ ಮತಿ ಮುಂದೊಡ್ಡಬಹುದು. ‘ಆದಿಪುರಾಣ’ದಲ್ಲಿ ಇದಕ್ಕೆ ಉತ್ತರಗಳು ದುರ್ಲಭವಲ್ಲ. ಸಂಸಾರಸುಖಗಳು ಹೇಯವೆಂದಾಗಲಿ ಶರೀರಸೌಂದರ್ಯ ದೂಷ್ಯವೆಂದಾಗಲಿ ಪಂಪನ ಆಶಯವಲ್ಲ.[13] ಸಂಸಾರದಲ್ಲಿ ಚೆಲುವು ನಲಿವುಗಳುಂಟು; ಅವುಗಳನ್ನು ಜೀವ ಚೆನ್ನಾಗಿ ಆಸ್ವಾದಿಸಬಹುದು. ಏಕೆಂದರೆ ಶ್ರೀಮತಿ-ವಜ್ರಜಂಘರ ಕತೆ ಇದಕ್ಕೆ ಒಳ್ಳೆಯ ದೃಷ್ಟಾಂತ. ಸ್ವಯಂ ಪ್ರಭೆ ತನ್ನ ಪ್ರಿಯನನ್ನು ಮತ್ತೆ ಮರುಭವದಲ್ಲಿ ಪಡೆದುದು ಜಿನಾರ್ಚನೆಯ ಪ್ರಭಾವದಿಂದ; ಶ್ರೀಮತಿ-ವಜ್ರಜಂಘರ ಸಹಮರಣ ಅವರ ಸೈಪಿನ ಫಲ. ಸಂಸೃತಿಸುಖಗಳು ಅನಿತ್ಯ, ಅಸಾರ ಎಂದು ಅರಿಯುವುದಕ್ಕಾದರೂ ಅವುಗಳ ಸಹವಾಸ ಬೇಕಲ್ಲವೆ? ಸ್ವತಃ ಅನುಭವಿಸಿ ನೋಡಿದಾಗಲೇ ಅವುಗಳ ಇತಿಮಿತಿ ತಿಳಿದುಬರುವುದು. ಆದ್ದರಿಂದ, ಸಂಸಾರ ಸಂಪೂರ್ಣವಾಗಿ ತ್ಯಾಜ್ಯವಲ್ಲ; ಆದರೆ ಅದೇ ನಿಲ್ದಾಣವಾಗಬಾರದಷ್ಟೆ. ಇಹದಲ್ಲಿ ಅಂಟಿಯೂ ಅಂಟದಂತೆ ಬದುಕುವ ಅನಾಸಕ್ತಿಯೋಗವನ್ನು ಕಲಿಯಬೇಕು.[14] ಬೇಡವೆನಿಸಿದಾಗ ಲೌಕಿಕ ಭೋಗ ವೈಭವಗಳನ್ನೆಲ್ಲ ವಿಸರ್ಜಿಸಿ ದಿಗಂಬರನಾಗುವ ಸಂಸ್ಕಾರವನ್ನು ಸಂಪಾದಿಸಬೇಕು. ಪುರುದೇವ ಮತ್ತು ಬಾಹುಬಲಿ ಈ ಆದರ್ಶಗಳನ್ನು ಜ್ವಲಂತವಾಗಿ ಪ್ರತಿನಿಧಿಸುತ್ತಾರೆ.

ಸಂಸಾರಸುಖೋಪಭೋಗದಲ್ಲಿ ಮಿತಿಯಿರಬೇಕು; ಔಚಿತ್ಯ ಪ್ರಜ್ಞೆಯಿರಬೇಕು. ಅದು ಮಿತಿ ಮೀರಿದಾಗ, ಔಚಿತ್ಯಬಾಹಿರವಾದಾಗ ‘‘ಹೂವೆಂದುದೆ ಹಾವಾಯಿತು, ಕಾವುದೆ ನನ್ನಂ ಕೊಂದಿತು!’’[15] ಎಂದು ಜೀವ ಪಶ್ಚಾತ್ತಪಿಸಬೇಕಾದೀತು. ಭೋಗಗಳು ಏನಿದ್ದರೂ ರೋಗಕ್ಕೆ ಔಷಧವಿದ್ದಂತೆ; ಆದರೆ ಔಷಧ ಅತಿಯಾದರೆ ವಿಷಪ್ರಾಯವಾಗಿ ಪ್ರಾಣ ತಿನ್ನಬಹುದಲ್ಲವೆ? ಹಾಗಾಗದಿರಬೇಕಾದರೆ ಸಂಸಾರಕ್ಕೆ, ಅರ್ಥ ಕಾಮಗಳಿಗೆ ಧರ್ಮದ ವಜ್ರರಕ್ಷೆ ಬೇಕು; ಬದುಕಿನ ಎಲ್ಲ ಪ್ರವೃತ್ತಿಗಳೂ ಧರ್ಮಾವಿರುದ್ಧವಾಗಿ ಸಾಗಿ, ಕಡೆಯಲ್ಲಿ ಧರ್ಮಮೋಕ್ಷಗಳಲ್ಲಿ ನಿಷ್ಠಿತವಾಗಬೇಕು. ಹೀಗೆ ಭೋಗ-ತ್ಯಾಗಗಳ, ಭವ-ಶಿವಗಳ ಸಮನ್ವಯವನ್ನು ಪಂಪ ಹೃದಯಂಗಮವಾಗಿ ಸಾರಿದ್ದಾನೆ. ‘‘ಧರ್ಮಂ ಪ್ರಧಾನಂ, ಅರ್ಥಂ ಧರ್ಮಾಂಘ್ರಿಪಫಳಂ, ಅದರ್ಕೆ ರಸಮದು ಕಾಮಂ’’.

ಒಟ್ಟಿನಲ್ಲಿ ಭವಸಂತಪ್ತವೂ ತೃಷ್ಣೋಪಹತವೂ ದ್ವೇಷಜರ್ಜರಿತವೂ ಆಗಿರುವ ನವೀನ ಜಗತ್ತಿನ ಕುರುಡಿಗೆ ‘ಆದಿಪುರಾಣ’ವೊಂದು ಜ್ಞಾನಾಂಜನ ಶಲಾಕೆಯಾಗಬಲ್ಲುದು. ಅದು ಬೆಂಕಿ ಬೆಳಕು ಬೆಳದಿಂಗಳು ಎಲ್ಲವೂ ಅಹುದು.

[1] ತೀ.ನಂ.ಶ್ರೀಕಂಠಯ್ಯ, ‘ಪಂಪ’, ಪು.೨೧

[2] ಕುಮಾರವ್ಯಾಸ ಭಾರತದ ಅರಣ್ಯಪರ್ವದಲ್ಲಿ ಬರುವ ಊರ್ವಶೀನರ್ತನ ಪ್ರಸಂಗ ನೀಲಾಂಜನಾ ಪ್ರಸಂಗದ ಮಟ್ಟಕ್ಕೇರದಿದ್ದರೂ ಸಂಗ್ರಹವಾಗಿ ಸೊಗಸಾಗಿದೆ.

[3] ಕುಮಾರವ್ಯಾಸನ ಅರ್ಜುನ ಕೂಡ ಊರ್ವಶಿಯ ನೃತ್ಯವನ್ನು ರಸಸ್ಥಿತಿಯಲ್ಲಿದ್ದು ಮೆಚ್ಚಿಕೊಳ್ಳುತ್ತಾನೆ : ‘‘ಈಯಮಾನುಷ ನೃತ್ಯವಾದ್ಯ ಸುಗೇಯ ರಸದಲಿ ಮುಳುಗಿ ಕರಣದ ಲಾಯ ತೊಡಕದೆ ಪಾರ್ಥನಿದ್ದನು ಧೈರ್ಯಶಿಖರದಲಿ.’’ ನೋಡಿ : ‘ಕುಮಾರವ್ಯಾಸನ ಅರ್ಜುನ ಊರ್ವಶೀ ಪ್ರಸಂಗ’ – ಸುಜನಾ (‘ಹೃದಯಸಂವಾದ’, ಪು.೭೩-೭೪)

[4] ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ
ಹವಿಷಾ ಕೃಷ್ಣವರ್ತ್ಮೇವ ಭೂಯೋ ಏವಾಭಿವರ್ಧತೇ – ಮನುಸ್ಮೃತಿ (೨.೯೪)

[5] ಭರ್ತೃಹರಿಯ ಈ ಸುಭಾಷಿತದೊಡನೆ ಹೋಲಿಸಿ :
ಸಾ ರಮ್ಯಾ ನಗರೀ ಮಹಾನ್ಸ ನೃಪತಿಸ್ಸಾಮಂತ ಚಕ್ರಂ ಚ ತತ್
ಪಾರ್ಶ್ವೇ ತಸ್ಯ ಚ ಸಾ ವಿದಗ್ಧಪರಿಷತ್ತಾಶ್ಚಂದ್ರ ಬಿಂಬಾನನಾ
ಉದ್ವೃತ್ತಸ್ಸ ಚ ರಾಜಪುತ್ರನಿವಹಸ್ತೇ ಬಂದಿನಸ್ತಾ ಕಥಾಃ
ಸರ್ವಂ ಯಸ್ಯ ವಶಾದಗಾತ್ ಸ್ಮೃತಿಪಥಂ ಕಾಲಾಯ ತಸ್ಮೈ ನಮಃ

[6] ತೀ.ನಂ.ಶ್ರೀ., ‘ಪಂಪ’, ಪು.೧೫

[7] ರಂ. ಶ್ರೀ ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’ (ಮೊದಲ ಮುದ್ರಣ), ಪು.೯೧

[8] ಭರತನ ಈ ಪ್ರಶಸ್ತಿಪ್ರಸಂಗ ಷೆಲ್ಲಿಯ ‘Ozymandias of Egypt’ ಎಂಬ ಕವನವನ್ನು ನೆನಪಿಗೆ ತರುತ್ತದೆ; ಎರಡಕ್ಕೂ ತಿರುಳಿನಲ್ಲಿ ಬಹುಮಟ್ಟಿಗೆ ಸಾಮ್ಯವಿದೆ. ಷೆಲ್ಲಿಯ ಕವಿತೆಯ ಸಾರಾಂಶವಿದು : ಒಂದು ಮರಳುಗಾಡಿನಲ್ಲಿ ಮುಂಡವಿಲ್ಲದ ಎರಡು ಬೃಹದಾಕಾರದ ಶಿಲಾಪಾದಗಳು ಬಿದ್ದಿವೆ. ಹತ್ತಿರದಲ್ಲಿ ಅರೆಹೂತ ಭಗ್ನಮುಖವೊಂದಿದೆ; ಅದರಲ್ಲಿ ಕೋಪದ ಭಾವ, ಕಠಿಣ ಶಾಸನದ ದರ್ಪದ ಮುದ್ರೆ ಕಾಣುತ್ತಿವೆ. ಅಲ್ಲಿಯೇ ಇರುವ ಪೀಠವೊಂದರಲ್ಲಿ ಈ ಬರಹವಿದೆ : ‘‘ನಾನು ರಾಜಾಧಿರಾಜ, ಓಜಿಮಾಂಡಿಯ. ಓ ಶಕ್ತಿಸಂಪನ್ನರೇ! ನನ್ನ ಕೃತಿಗಳನ್ನು ನೋಡಿ, ನಿರಾಶರಾಗಿ!’’ ಅಲ್ಲಿ ಮತ್ತೇನೂ ಇಲ್ಲ; ಸುತ್ತಲೂ ಶೂನ್ಯ ಘೋರ ಭಗ್ನತೆ; ಪಾರವಿಲ್ಲದ ಮರಳ ಹರಹು.

ಆ ರಾಜ ಏನೆಲ್ಲ ದಿಗ್ವಿಜಯ ಮಾಡಿದ್ದನೊ! ಅವನ ವಿಭವವನ್ನು ಕಂಡು ಎಂತಹ ಶಕ್ತರೂ ಬೆರಳು ಕಚ್ಚಬೇಕಿತ್ತೇನೋ! ‘‘ನನ್ನ ಸಾಧನೆಗಳನ್ನು ಕಂಡು ನಿರಾಶರಾಗಿ. ನಿಮ್ಮಂತಹ ಕುರಿಗಳಿಗೆ ನಿಲುಕುವಂಥದಲ್ಲ ಈ ವಿಜಯ’’ ಎಂಬುದು ಅವನ ಪ್ರಶಸ್ತಿಯ ಆಶಯ. ‘ನಿರಾಶರಾಗಿ’ ಎಂದ ಅವನ ಮಾತು ಸುಳ್ಳಲ್ಲ; ಅದು ಧ್ವನಿಪೂರ್ಣವಾಗಿದೆ. ಏಕೆಂದರೆ ಇಂದು ಅವನ ಕಿಂಚಿದವಶೇಷವನ್ನು ಕಂಡು ನಮಗಾಗುವುದು ನಿರಾಶೆಯೇ. ‘ನೆಲಂ ನಿಲ್ವಿನೆಗಂ’ ಎಂದು ಭರತ ಕೆತ್ತಿಸಿದ್ದಕ್ಕೂ ‘Look on my works ye mighty and despair!’ ಎಂದು ಈ ಓಜಿಮಾಂಡಿಯ ಬರೆಸಿದ್ದಕ್ಕೂ ಭೇದವೇನಿಲ್ಲ; ಎರಡೂ ಭ್ರಮಾಜನ್ಯ, ಹಾಸ್ಯಾಸ್ಪದ, ನಿರಾಶಾದಾಯಕ.

[9] ಈ ಮಾತಿನಲ್ಲಿ ಬಾಹುಬಲಿ ಉದ್ದೇಶಿಸದಿದ್ದರೂ, ವ್ಯಂಗ್ಯವಿರುವಂತೆ ತೋರದಿರದು. ‘ರಾಜ್ಯ ಲಕ್ಷ್ಮಿ ನಿನ್ನ ವಕ್ಷದಲ್ಲಿ ಶಾಶ್ವತವಾಗಿ ನೆಲಸಲಿ’ ಎಂಬುದು ಅವನ ಹೇಳಿಕೆ. ಆದರೆ ರಾಜ್ಯಲಕ್ಷ್ಮಿಯದು ಚಿರವಾಗಿ ನೆಲಸುವ ಸ್ವಭಾವವೆ? ಯಾರ ವಕ್ಷದಲ್ಲಿ ತಾನೆ ಅವಳು ಚಿರವಾಗಿ ನೆಲೆಗೊಂಡಳು? ಯಾವೊಂದು ಸುದೃಢಶಾಶ್ವತವಾದ ಆವಾಸವೂ ಇಲ್ಲದೆ ಸದಾ ‘ಭಟಖಡ್ಗಮಂಡಲೋತ್ಪಲವನ’ದಲ್ಲಿ ಭ್ರಮಿಸುವ ಈ ಭ್ರಮರಿ ಭರತನಲ್ಲಿ ಕೂಡ ಕಡೆತನಕ ಇರುವುದುಂಟೆ? ಅಲ್ಲದೆ, ಖಡ್ಗವಿಹಾರಿಣಿಯಾದ ಈ ರಣಶೀಲೆ, ಹಿಂಸಾಲೋಲೆ ಒಳಿತನ್ನೆಸಗುತ್ತಾಳೆಯೆ? ಆದ್ದರಿಂದಲೆ, ‘ಇವಳನ್ನು ನೆಚ್ಚಿಕೊಂಡಿರಬೇಡ; ಧರ್ಮಪರನಾಗು’ ಎಂದು ಭರತನಿಗೆ ಬಾಹುಬಲಿ ಸೂಚಿಸುವಂತೆ ಕಾಣುತ್ತದೆ. ಅವನ ಇಂಗಿತ ಭರತನಿಗೂ ಅರಿವಾಗಿರಬೇಕು.

[10] ಶ್ರವಣಬೆಳಗೊಳದ ಬೆಟ್ಟದ ಮೇಲೆ ನಿಂತಿರುವ ಜಗದ್ಭವ್ಯ ಸುಂದರ ಮೂರ್ತಿ ಈ ಬಾಹುಬಲಿಯದೇ. ‘ನೆಲಂ ನಿಲ್ವಿನೆಗಂ’ ನಿಂತಿರುವುದು ಯಾವುದು? ಭರತನ ಪ್ರಶಸ್ತಿಯೊ ಅಥವಾ ಬಾಹುಬಲಿಯ ಆದರ್ಶವೊ? ಉತ್ತರ ಸುಸ್ಪಷ್ಟ.

[11] ಜಿ.ಎಸ್ .ಶಿವರುದ್ರಪ್ಪ, ಪೂರ್ವೋಕ್ತ

[12] ಕುವೆಂಪು, ‘ಆದಿಪುರಾಣ ಸಂಗ್ರಹ’ದ ಮುನ್ನುಡಿಯಲ್ಲಿ.

[13] ನೋಡಿ : ತೀ.ನಂ.ಶ್ರೀ., ‘ಪಂಪ’, ಪು.೩೦

[14] ಕಾಳಿದಾಸ ‘ರಘುವಂಶ’ದಲ್ಲಿ ಚಿತ್ರಿಸಿರುವ ದಿಲೀಪನ ಆದರ್ಶ ಇಂತಹುದು. ‘‘ಅಸಕ್ತಃ ಸುಖಮನ್ವಭೂತ್’’ ಎನ್ನುತ್ತಾನೆ ಕವಿ.

[15] ಪು.ತಿ.ನ. ಅವರ ‘ಅಹಲ್ಯೆ’ ನಾಟಕದಲ್ಲಿ ಅಹಲ್ಯೆಯ ಮಾತು.