ಅಮರೇಂದ್ರೋನ್ನತಿ ಖೇಚರೇಂದ್ರವಿಭವಂ ಭೋಗೀಂದ್ರಭೋಗಂ ಮಹೇಂ
ದ್ರಮಹೈಶ್ವರ್ಯಮಿವೆಲ್ಲಮಧ್ರುವಮಿವಂ ಬೇೞ್ಪಂತು ಬೆಳ್ಳಲ್ಲೆನು
ತ್ತಮ ದೀಕ್ಷಾವಿಧಿಯುಂ ಸಮಾಧಿಮರಣಂ ಕರ್ಮಕ್ಷಯಂ ಬೋಧಿಲಾ
ಭಮಮೋಘಂ ದೊರೆಕೊಳ್ವುದಕ್ಕೆಮಗೆ ಮುಕ್ತಿ ಶ್ರೀಮನೋವಲ್ಲಭಾ -‘ಆದಿಪುರಾಣ’ (೧೦. ೫೯)

ಪುರುದೇವನ ಆಸ್ಥಾನ. ವಿಖ್ಯಾತರಾದ ಸಾಮಂತರಾಜರೆಲ್ಲ ಸಭೆಯಲ್ಲಿ ಪೀಠಸ್ಥರಾಗಿ ದ್ದಾರೆ. ಆದಿದೇವನನ್ನು ಸಂಗೀತ ನಾಟ್ಯ ಪ್ರಸಂಗದಿಂದ ಓಲೈಸಲೆಂದು ದಿವಿಜಸಮೂಹ ದೊಡನೆ ಅಲ್ಲಿಗೆ ಬಂದಿರುವ ದೇವೇಂದ್ರ ತನ್ನ ಮನೋರಥವನ್ನು ಬಿನ್ನವಿಸುತ್ತಾನೆ. ಆಗ ಆದಿದೇವ ನಸುನಕ್ಕು ‘‘ಆವುದು ನಿಮಗಾನಂದಂ ಅದಕ್ಕೆ’’ ಎನ್ನುತ್ತಾನೆ. ಇಂದ್ರನ ಅಪ್ಪಣೆಯಂತೆ ದೇವತೆಗಳ ಗೀತವಾದನಗಳು ಪ್ರಾರಂಭವಾಗಿ ಸಭೆಯನ್ನು ರಸದಲ್ಲಿ ಹೂಳುತ್ತವೆ. ಅನಂತರ, ಮದನನ ಹೂಗಣೆ ಬದುಕಿತೆನಿಸುವಂತೆ ನೀಳಾಂಜನೆಯೆಂಬ ಸುರನರ್ತಕಿ ಭೋಂಕನೆ ಸಕಲ ಜನಾಂತರಂಗವನ್ನೂ ರಂಗವನ್ನೂ ಪ್ರವೇಶಿಸುತ್ತಾಳೆ. ಅನಂಗಜಂಗಮಲತೆಯಂತೆ ಜವನಿಕೆಯ ಮರೆಯಲ್ಲಿ ನಿಂತ ಆ ಅಪ್ಸರೆ ಮುಗಿಲ ಮರೆಯ ವಿದ್ಯುಲ್ಲತೆಯನ್ನು ಹೋಲುತ್ತಾಳೆ.

ತೆರೆ ಸರಿಯುತ್ತದೆ. ಮದನನೂ ಬಾಣಪ್ರಯೋಗಕ್ಕೆ ಅಣಿಯಾಗುತ್ತಾನೆ. ನೀಳಾಂಜನೆ ಪುಷ್ಪಾಂಜಲಿಯನ್ನು ಸೂಸಿದರೆ, ಮನ್ಮಥನೂ ಒಡನೊಡನೆ ಸಭೆಗೆ ನನೆಯ ಮೊನೆಯಂಬುಗಳನ್ನು ಸೂಸುತ್ತಾನೆ. ಅಮರಿಯ ನೃತ್ಯ ಮೊದಲಾಗುತ್ತದೆ.

ಅವಳ ನಿರಿ, ಮುಂಗುರುಳು ಮತ್ತು ಹಾರದ ಮುತ್ತುಗಳು ಕೂಡ ತಾಳದ ಲಯವನ್ನು ಕೈಕೊಳ್ಳುತ್ತವೆ. ಅವಳ ರಸಭಾವಾಭಿನಯಗಳು ಹೊಸವು; ನಾಟ್ಯಾಗಮವನ್ನು ಹೊಸಯಿಸುವಂತೆ ಅವಳು ನರ್ತಿಸುತ್ತಿದ್ದಾಳೆ. ಅವಳ ಮುಗುಳ್ನಗೆ ಅಮೃತವನ್ನು ಚೆಲ್ಲುವಂತಿದೆ. ಹುಬ್ಬಿನಿಂದಲೇ ಅವಳು ವಾದಕನಿಗೆ ಜತಿಯನ್ನು ಸೂಚಿಸುತ್ತಾಳೆ. ಅವಳ ಕಟಾಕ್ಷಮಾಲೆಯ ಪ್ರಸರದಿಂದ ದೆಸೆದೆಸೆಗೆ ಹೊಸ ಬೆಳದಿಂಗಳು ತುಳುಕಿದಂತಾಗುತ್ತದೆ. ಮದನ ರಾಜ ರಾಜ್ಯವಿಳಾಸವೆನಿಸುವ ತನ್ನ ಭಂಗಿಯಿಂದ ಅವಳು ನೋಟಕರನ್ನು ಮೋಹಿಸುತ್ತಿದ್ದಾಳೆ. ಆ ಸುರಗಣಿಕೆಯ ನಾಟ್ಯದ ರಸ ಪುರುದೇವನನ್ನೂ ರಂಜಿಸುತ್ತಿದೆ….

ಆದರೆ ಇದೇನು ಸೋಜಿಗ? ಆ ಸುರಕಾಮಿನಿ ಮಿಂಚಿನಂತೆ ಭೋಂಕನೆ ರಂಗದಿಂದ ಅದೃಶ್ಯೆಯಾದಳಲ್ಲ! ಏನು, ಅವಳ ಆಯುಸ್ಸು ಕೊನೆಗೊಂಡಿತೆ? ಆಃ ! ಸ್ಮರಶರೋಪಮಳಾದ ಇಂತಹ ಸುರಸುಂದರಿಗೂ ಮರಣವೇ? ಇಂತಹ ನಿರುಪಮ ಕಲಾಕೋವಿದೆಗೂ ಮೃತ್ಯುವಿನ ಕರಾಳ ಶೀತಲ ಹಸ್ತದ ಸ್ಪರ್ಶವೇ? ಇಂತಹ ಸುರಸ ಸುಮನೋಹರ ವಾತಾವರಣಕ್ಕೂ ಅಂತಕನ ನಿರ್ದಯ ಪ್ರವೇಶವೆ? ಏನಿದು ವೈಚಿತ್ರ್ಯ! ಸೌಂದರ್ಯ ಸಂಪತ್ತು ಕಲೆ ಭೋಗ ಯಾವುದಕ್ಕೂ ಕಾಲನ ಕ್ರೂರದಂಷ್ಟ್ರದಿಂದ ಮುಕ್ತಿಯಿಲ್ಲ! ಎಷ್ಟು ನಿಸ್ಸಾರ, ಎಷ್ಟು ನಶ್ವರ ಇಹಜೀವನದ ಸುಖ ಸೌಂದರ್ಯ ಭೋಗೋಪಭೋಗಗಳು!

ಪುರುದೇವ ಮೂಕವಿಸ್ಮಿತನಾಗಿ ಸಂಸಾರಸ್ವರೂಪದ ಚಿಂತನದಲ್ಲಿ ತೊಡಗುತ್ತಾನೆ. ನಮ್ಮ ಚಿತ್ತವೂ ಅಂತೆಯೆ ವಿಷಾದ ವಿಸ್ಮಯಯೋಗಕ್ಕೆ ಸಂದು, ತಾತ್ಕಾಲಿಕವಾಗಿಯಾದರೂ ವಿರಕ್ತಿಭಾವದಲ್ಲಿ ತಂಗುತ್ತದೆ.

ಇದು ಪಂಪನ ‘ಆದಿಪುರಾಣ’ದಲ್ಲಿ ಬರುವ ಒಂದು ವೈರಾಗ್ಯೋದ್ದೀಪಕ ಸುರಮ್ಯ ನಾಟಕೀಯ ಪ್ರಸಂಗ. ಇದರ ಪೂರ್ವಾಪರಗಳನ್ನು ಮುಂದೆ ನೋಡಬಹುದು.

ಆದಿಕವಿ ಪಂಪ ಬರೆದುದು ಎರಡು ಕಾವ್ಯಗಳನ್ನು : ಒಂದು ‘ವಿಕ್ರಮಾರ್ಜುನವಿಜಯ’ ಎಂಬ ಲೌಕಿಕ ಕಾವ್ಯ ; ಮತ್ತೊಂದು, ‘ಆದಿಪುರಾಣ’ ಎಂಬ ಆಗಮಿಕ ಕಾವ್ಯ. ಹೀಗೆ ಒಂದು ಲೌಕಿಕ ಕೃತಿಯನ್ನೂ ಒಂದು ಧಾರ್ಮಿಕ ಕೃತಿಯನ್ನೂ ಅವನು ರಚಿಸಿದ್ದು ಕೇವಲ ಆಕಸ್ಮಿಕ ಸಂಗತಿಯೆಂದಾಗಲಿ ಯಾವುದೋ ಸಂಪ್ರದಾಯದ ಪಾಲನೆಗಾಗಿ ಮಾಡಿದ ಕೆಲಸವೆಂದಾಗಲಿ ತೋರುವುದಿಲ್ಲ. ಅವನ ಕವಿತಾ ಶಕ್ತಿ ಇಬ್ಬಗೆಯಾಗಿ ಕವಲೊಡೆದುದಕ್ಕೆ ಕಾರಣವನ್ನು ಅವನ ದ್ವಿಮುಖವ್ಯಕ್ತಿತ್ವದಲ್ಲಿ ಅರಸ ಬೇಕಾಗುತ್ತದೆ. ಲೌಕಿಕ, ಧಾರ್ಮಿಕಗಳೆರಡನ್ನೂ ಪುರಸ್ಕರಿಸುವ ಸಮನ್ವಯ ಮನೋಧರ್ಮ ಪಂಪನದು[1]; ಅದರ ಸುಮಧುರ ಫಲಗಳೇ ಪಂಪ ಭಾರತ ಮತ್ತು ‘ಆದಿಪುರಾಣ’. ಈ ಕೃತಿಗಳ ಪ್ರಧಾನಮೌಲ್ಯಗಳು ವ್ಯಾಸ ಭಾರತದಿಂದ ಮತ್ತು ಜಿನಸೇನಾಚಾರ್ಯರ ಪೂರ್ವಪುರಾಣದಿಂದ ಬಂದವಾದರೂ, ಅವು ಪಂಪನಿಂದ ಪುನರನುಭವಗೊಂಡು, ಅವನ ಸ್ವಂತ ಕಾಣ್ಕೆಯಲ್ಲಿ ಪುಟಗೊಂಡು ಕನ್ನಡಸಾಹಿತ್ಯಕ್ಕೆ ಪ್ರವಹಿಸಿವೆ; ಆ ಪುನರನುಭವದಿಂದಲೆ ಪಂಪನ ಕಾವ್ಯಗಳು ಮೂಲಕೃತಿಗಳ ಪುನರ್ಭವವಾಗಿವೆ, ಕೇವಲ ಪ್ರತಿಕೃತಿಯಾಗಿಲ್ಲ. ‘ವಿಕ್ರಮಾರ್ಜುನವಿಜಯ’ದಲ್ಲಿ ಪ್ರಧಾನವಾಗಿ ಚಿತ್ರಿತವಾಗಿರುವುದು ಲೌಕಿಕ; ಅಲ್ಲಿ ನಮಗೆ ಕೇಳಿಬರುವುದು ಕುರುಕ್ಷೇತ್ರದ ಸಮರತೂರ್ಯಗಳ ಪ್ರಚಂಡ ಕೋಲಾಹಲ. ಆದರೆ ‘ಆದಿಪುರಾಣ’ದಲ್ಲಿ ಪಂಪ ಬೆಳಗಿರುವುದು ಜಿನಾಗಮವನ್ನು; ಅಲ್ಲಿ ತೇಲಿ ಬರುತ್ತದೆ ನಿಸ್ತರಂಗ ತಪೋನಂದನದ ದಿವ್ಯ ಮಂಗಳಗೀತ.

ವಾಸ್ತವವಾಗಿ ಪಂಪನ ಈ ಸಮನ್ವಯದೃಷ್ಟಿ ಕೇವಲ ವೈಯಕ್ತಿಕವಾದುದಲ್ಲ; ನಿಜವಾದ ಭಾರತೀಯ ದೃಷ್ಟಿಯನ್ನು ಪಂಪ ಪ್ರತಿನಿಧಿಸಿದ್ದಾನಷ್ಟೆ. ಲೌಕಿಕ, ಪಾರಲೌಕಿಕಗಳ ಸಾಮರಸ್ಯವೆ ಭಾರತೀಯ ಜೀವನದ ತಿರುಳು : ಅರ್ಥ ಕಾಮ ಧರ್ಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಅವಕ್ಕೆ ಹೊಂದಿಕೊಂಡಂತೆಯೇ ಚತುರಾಶ್ರಮಗಳನ್ನೂ ಭರತಖಂಡ ಪ್ರತಿಪಾದಿಸಿದ್ದು ಈ ಸಾಮರಸ್ಯದ ದ್ಯೋತಕವೆ ಆಗಿದೆ. ಧರ್ಮ ಮೋಕ್ಷಗಳೇ ಬದುಕಿನ ಪರಮಗಂತವ್ಯ; ಅವಕ್ಕೆ ಸೋಪಾನಗಳಾಗಿ ಅರ್ಥ ಕಾಮಗಳನ್ನಾಚರಿಸಬೇಕು; ಇಹವನ್ನು ತೊರೆಯದಿದ್ದರೂ ಪರವನ್ನು ಮರೆಯಬಾರದು; ಅರ್ಥ, ಕಾಮಗಳಲ್ಲಿ ರಮಿಸಿದರೂ ಅಲ್ಲಿಯೆ ವಿರಮಿಸದೆ, ಮುಂದೆ ಹೋಗಿ ಧರ್ಮ, ಮೋಕ್ಷಗಳನ್ನು ಸಾಧಿಸಬೇಕು- ಇದು ಭಾರತದ ಆರ್ಷೇಯ ದೃಷ್ಟಿ. ಲೌಕಿಕಕ್ಕೆ ಬೆಲೆ ಕೊಟ್ಟರೂ ಅದನ್ನು ಬಲೆಯಾಗಿ ಮಾಡಿಕೊಳ್ಳದೆ ಪರಮಾರ್ಥವನ್ನು ಕಡೆಯ ನೆಲೆಯಾಗಿ ಮಾಡಿಕೊಳ್ಳಬೇಕು; ಏಕೆಂದರೆ, ಇಹಜೀವನದ ಸುಖ ಸೌಭಾಗ್ಯಗಳು ಎಷ್ಟೆ ಸವಿಯಾಗಿ ತೋರಿಬಂದರೂ, ಅವು ಕ್ಷಣಭಂಗುರ, ಪರಿಮಿತ- ಆದ್ದರಿಂದಲೆ ಅಸಾರವೂ ಹೌದು; ಇವುಗಳನ್ನು ಮೀರಿದ ಅತೀಂದ್ರಿಯ ಸುಖವೊಂದಿದೆ. ಅದು ಅಕ್ಷಯವಾದುದು, ಚಿರವಾದುದು, ಪರಮ ಸ್ವಾದುವಾದುದು; ಅದನ್ನು ಜೀವ ಪಡೆದುಕೊಳ್ಳಬೇಕು ಎಂಬುದು ಭಾರತೀಯರ ದೃಢವಾದ ನಿಲುವು.

ಕೇವಲ ಲೌಕಿಕ ಭೂಮಿಕೆಯಲ್ಲಿ ಯಶೋದುಂದುಭಿಯನ್ನು ಮೊಳಗಿಸಿದ ವ್ಯಕ್ತಿಗಳಿಗೆ ಭರತಖಂಡ ಎಂದೂ ಪ್ರಾಶಸ್ತ್ಯ ಕೊಟ್ಟಿಲ್ಲ; ಧರ್ಮ ವೀರರಿಗೆ, ಅಧ್ಯಾತ್ಮದಿಗ್ವಿಜಯಿಗಳಿಗೆ ಇಲ್ಲಿ ಅಗ್ರಸ್ಥಾನ. ಅದೆಷ್ಟು ಮಂದಿ ರಾಜಾಧಿರಾಜರು, ರಣಕಲಿಗಳು, ರಾಜನೀತಿವಿಶಾರದರು ನಾಮಾವಶೇಷರೊ ನಿರ್ನಾಮರೊ ಆಗಿ ಹೋಗಿಲ್ಲ! ಆದರೆ ರಾಮ, ಕೃಷ್ಣ, ಬುದ್ಧ, ಅಶೋಕ, ಶಂಕರ, ಪರಮಹಂಸ, ಅರವಿಂದ, ರಮಣ, ಗಾಂಧಿ ಮೊದಲಾದ ಮಹಾಪುರುಷರು ಭಾರತೀಯರ ಮನೋಮಂದಿರದಲ್ಲಿ ಆರಾಧ್ಯಮೂರ್ತಿಗಳಾಗಿ, ಚಿರಂತನ ದೇದೀಪ್ಯಮಾನ ಶಕ್ತಿಗಳಾಗಿ ಉಳಿದುಕೊಂಡಿದ್ದಾರೆ.

ಈ ಜೀವನದೃಷ್ಟಿಗೆ ಅನುಗುಣವಾಗಿಯೇ ಇದೆ ಭಾರತದ ಕಲಾದೃಷ್ಟಿ ಕೂಡ. ಕಲೆಗಾಗಿ ಕಲೆಯಲ್ಲ; ಧರ್ಮಮೋಕ್ಷಗಳಿಗಾಗಿ, ಶಿವೇತರಕ್ಷಯಕ್ಕಾಗಿ ಕಲೆ ಎಂಬುದು ಇಲ್ಲಿಯ ನಂಬಿಕೆ. ಭಾರತೀಯ ಕಲೆ ಸೌಂದರ್ಯವನ್ನು ಸತ್ಯ, ಶಿವಗಳಿಗೆ ಸಮರ್ಪಿಸಿ ಕೃತಕೃತ್ಯವಾಗುತ್ತದೆ.

ಇಂತಹ ಸಾರ್ಥಕವಾದ ಕಲೆಯನ್ನು ಪಂಪನ ‘ಆದಿಪುರಾಣ’ದಲ್ಲಿ ದರ್ಶಿಸುತ್ತೇವೆ. ಇದು ಜೈನಧರ್ಮೀಯ ಕೃತಿಯಾದರೂ ಒಟ್ಟಿನಲ್ಲಿ ಭಾರತೀಯ ಮನೋಭಾವವನ್ನೇ ಎತ್ತಿ ಹಿಡಿಯುತ್ತದೆ; ಬಾಳಿನ ವರಿಷ್ಠ ಪುರುಷಾರ್ಥಗಳಾದ ಧರ್ಮ, ಮೋಕ್ಷಗಳನ್ನು ಪ್ರತಿಪಾದಿಸು ತ್ತದೆ. ಇದು ‘ಸಂಸಾರಸಾರೋದಯ’ವೆಂದಿದ್ದಾನೆ ಪಂಪ. ಯಾವ ಅರ್ಥದಲ್ಲಿ? ‘‘ಸಂಸಾರ ದೊಳ್ ಸಾರಮಪ್ಪುದಱಂ ಧರ್ಮಮದಂ ನಿಮಿರ್ಚುವುದಱಂ ಸಂಸಾರಸಾರೋದಯಂ.’’ ಭವದ ಜಂಜಡದಲ್ಲಿ ಜೀವ ತೊಡಗಲೆಬಾರದು; ಒಂದು ವೇಳೆ ತೊಡಗಿದರೂ ಅದರಿಂದ ಬೇಗೆ ಬಿಡುಗಡೆಗೊಂಡು ವಿರಕ್ತಿ ಹೊಂದಿ ಉದ್ಧಾರದತ್ತ ಹೊರಳಬೇಕು. ಹಾಗೆ ಹೊರಳಿದ ಚೇತನವೊಂದರ ಕಥೆ ‘ಆದಿಪುರಾಣ’; ಸಾಮಾನ್ಯ ಕಥೆಯಲ್ಲ, ‘ಬೃಹತ್ಕಥೆ’. ಆತ್ಮನ ಊರ್ಧ್ವಯಾತ್ರೆಯ ಬೃಹದ್ ಗಾನವನ್ನು, ಸಂಸಾರನಿರಸನದ ಮಹಾ ಪ್ರಗಾಥವನ್ನು ಪಂಪ ಮಹಾಕವಿ ಭುವನಸಮಸ್ತವೂ ಕಿವಿದೆರೆದು ಆಲಿಸುವಂತೆ ಹಾಡಿದ್ದಾನೆ. ವಿಷಯಸುಖನಿಮಗ್ನವಾಗಿದ್ದ ಜೀವವೊಂದು ಕ್ರಮೇಣ ಎಚ್ಚತ್ತು. ಪರಿಪಾಕಗೊಂಡು, ಸಮ್ಯಕ್ತ್ವ ನಿಷ್ಠೆಯಿಂದ ತೀರ್ಥಂಕರತ್ವಕ್ಕೆ ಏರಿದ ಮಹದಾಶ್ಚರ್ಯವನ್ನು ಇಲ್ಲಿ ಕಾಣು ತ್ತೇವೆ. ಈ ವಿಕಾಸಕ್ರಿಯೆ ಒಂದು ಜನ್ಮದಲ್ಲಿ ಆದುದಲ್ಲ; ಹಲವಾರು ಜನ್ಮಗಳಲ್ಲಿ ಮೆಟ್ಟಲು ಮೆಟ್ಟಲಾಗಿ ಆದದ್ದು.[2] ‘‘ಅತೀವ ಕಠೋರ ನಿಷ್ಠೆಯಿಂದ ಕೂಡಿದ ಸಾಧನೆಯಿಂದ ಮಾನವನು ಅತ್ಯಂತ ಮಹೋದಾತ್ತವಾದ ಪರಮಸಿದ್ದಿಗೆ ಏರಿದ ವೃತ್ತವನ್ನು ಮುಖ್ಯ ಲಕ್ಷ್ಯವನ್ನಾಗಿ ಕವಿ ಇಟ್ಟುಕೊಂಡಿದ್ದಾನೆ. ನಾರಕ, ತಿರ್ಯಕ್, ಮಾನುಷ, ದೇವ ಯೋನಿಗಳಲ್ಲಿ ಚರಿಸಿದ ಜೀವನ ಭವಾವಳಿಯ ಬೃಹತ್ಕಥೆ ಇದು. ಬಹು ಲೋಕಗಳಲ್ಲಿ ತೊಳಲಿ ಬಹು ಜನ್ಮಗಳಲ್ಲಿ ಬಳಲಿ ನಾನಾ ಬಗೆಯ ಸಂಸಾರದ ಸುಖದುಃಖಗಳಲ್ಲಿ ಬಿಸಿಲು ಬೆಳದಿಂಗಳುಗಳಲ್ಲಿ, ಮುಳ್ಳು ಮಲ್ಲಿಗೆಗಳಲ್ಲಿ ಸಿಕ್ಕಿ ವಿಧವಿಧದ ಸಂಸ್ಕಾರದಿಂದ ತಿದ್ದಿ ಇಹದ ಕಷ್ಟಕಾರ್ಪಣ್ಯಗಳ ಕಸ ಮುಸುರೆಗಳ ಸಹಸ್ರ ಸಹಸ್ರ ಕೋಟಲೆಗಳಲ್ಲಿ ಕರಗಿ ಕುದ್ದು ಕಾಳಿಕೆ ಕಳೆದು ಅಪರಂಜಿಯಾಗಿ ಕೊನೆಗೆ ಜೀವವು ಮುಕ್ತಿಗೆ ಸಲ್ಲುತ್ತದೆ…. ಎಂತಹ ದಿವ್ಯವಾದ ಭವ್ಯವಾದ ಕಥೆ ಇದು!’’[3] ಇಂತಹ ಭವ್ಯಬಂಧುರವಾದ ಕತೆಯನ್ನು ಪಂಪನ ಅನನ್ಯ ಪ್ರತಿಭಾಶ್ರೀ ಲೋಕೋತ್ತರವಾದ ರೀತಿಯಲ್ಲಿ ಚಿತ್ರಿಸಿದೆ.

ಭವಾಸಕ್ತವಾದ ಚೇತನ ಉದ್ಧಾರೋನ್ಮುಖವಾಗಬೇಕಾದರೆ ಇಹದ ಸುಖ ಭೋಗಗಳ ಅಸಾರತೆ ಮತ್ತು ಅನಿತ್ಯತೆ ಅದಕ್ಕೆ ಅರಿವಾಗಿ, ವೈರಾಗ್ಯ ಕಾಲೂರಬೇಕು. ಮಹಾಬಲ ತನ್ನ ಹತ್ತನೆಯ ಜನ್ಮದಲ್ಲಿ ಅರ್ಹತ್ ಪದಾಸೀನನಾಗಬೇಕಾದರೆ, ಆ ನಡುವಣ ದೀರ್ಘಾವಧಿಯಲ್ಲಿ ಎಷ್ಟೊಂದು ಪ್ರಸಂಗಗಳು ಆ ಜೀವಕ್ಕೆ ವಿರಕ್ತಿಯನ್ನುಂಟುಮಾಡಿ ಸಂಸ್ಕಾರವೆಸಗುತ್ತವೆ! ಆದಿ ತೀರ್ಥಕರನ ಕಥೆಗೆ ಪೂರಕವಾಗಿ ಬರುತ್ತದೆ, ಭರತ-ಬಾಹುಬಲಿಗಳ ಕಥೆ. ಆದಿದೇವನ ಚರಿತೆಯಲ್ಲಿ ಕವಿ ವಿಷಯಸುಖೋಪಭೋಗಗಳ ಅಸ್ಥಿರತೆಯನ್ನೂ ಟೊಳ್ಳನ್ನೂ ಮನಗಾಣಿಸಿ ಅಕಾಮವನ್ನು ಪ್ರಚೋದಿಸಿದರೆ, ಭರತ-ಬಾಹುಬಲಿಗಳ ಕತೆಯಲ್ಲಿ ಕೀರ್ತಿ, ವೈಭವಗಳ ವೈಫಲ್ಯವನ್ನು ಸಮರ್ಥಿಸಿ ಅಹಂಕಾರವಿಮುಖತೆಯನ್ನು ಪ್ರಚೋದಿಸುತ್ತಾನೆ.

‘ಆದಿಪುರಾಣ’ದಲ್ಲಿ ಈ ವೈರಾಗ್ಯದ ಅಥವಾ ಧರ್ಮದ ಪ್ರಸಕ್ತಿ ಬರಿಯ ಶುಷ್ಕೋಪದೇಶವಾಗಿ ಬಂದಿಲ್ಲ; ರಸಾರ್ದ್ರವಾದ ಕಲೆಯಾಗಿ ಮೈದೋರಿದೆ. ವೈರಾಗ್ಯಬೋಧೆ ಬೇಕಾದರೆ ‘ಆದಿಪುರಾಣ’ವೆ ಏಕೆ? ಬೇರೆ ಶಾಸ್ತ್ರ ಪುರಾಣ ಗ್ರಂಥಗಳಲ್ಲಿ ಅದು ಟನ್ ಗಟ್ಟಲೆ ಸಿಕ್ಕಬಹುದು. ಆದರೆ ‘ಆದಿಪುರಾಣ’ದಲ್ಲಿರುವುದು ಮಹೋನ್ನತವಾದ, ಭೂಮವಾದ ಜೀವನದರ್ಶನ; ಕವಿ ಆತ್ಮಯಾತ್ರೆಯ ಅದ್ಭುತ ಚಿತ್ರಗಳನ್ನು ನಮ್ಮ ಮುಂದೆ ಸುರುಳಿ ಬಿಚ್ಚಿ ಉರುಳಿಸುತ್ತ ಹೋಗುತ್ತಾನೆ. ಅಲ್ಲಿ ನಮಗೆ ಧ್ವನಿತವಾಗುತ್ತದೆ ವಿರಕ್ತಿ, ಸಮ್ಯಕ್ತ್ವ. ‘‘ನೆಗೞ್ದ ಆದಿಪುರಾಣದೊಳಱವುದು ಕಾವ್ಯಧರ್ಮಮಂ ಧರ್ಮಮುಮಂ’’ ಎಂದು ಪಂಪನೆ ಹೇಳಿ ಕೊಂಡಿದ್ದಾನೆ; ಕಾವ್ಯಧರ್ಮ-ಧರ್ಮಗಳ ಮಧುರಸಮನ್ವಯ ಇಲ್ಲಿ ದಿಟವಾಗಿಯೂ ಸಾಧಿತವಾಗಿದೆ. ಸೌಂದರ್ಯ ಪಥದ ಮೂಲಕವೆ ಸಮವಸರಣಯಾತ್ರಿ ಕರಾಗುವ ವಿರಳಾವಕಾಶವನ್ನು ಕವಿ ಸಹೃದಯರಿಗೆ ಒದಗಿಸಿಕೊಟ್ಟಿದ್ದಾನೆ, ‘ಆದಿಪುರಾಣ’ ದಲ್ಲಿ. ಶೃಂಗಾರ ವೀರ ಕರುಣಾದಿ ರಸಗಳೆಲ್ಲ ಇದರಲ್ಲಿ ಶಾಂತಪರ್ಯವಸಾಯಿಯಾಗುತ್ತವೆ. ಆ ಅಪೂರ್ವ ಸಂಗಮದ ರಸತೀರ್ಥದಲ್ಲಿ ಮಿಂದು ತೀರ್ಥಂಕರಸಂದರ್ಶನ ಪಡೆದ ಮನಸ್ಸು ತನ್ನ ಪ್ರಕ್ಷುಬ್ಧತೆಯನ್ನೂ ರಜಸ್ಸನ್ನೂ ಪರಿಹರಿಸಿಕೊಂಡು, ಕ್ಷಣ ಕಾಲವಾದರೂ ನಿರುಪಾಧಿಕವಾಗುವುದು ಸಾಧ್ಯ.

ಆದಿನಾಥ ತನ್ನ ಹನ್ನೊಂದನೆಯ ಪೂರ್ವ ಭವದಲ್ಲಿ ಜಯವರ್ಮನೆಂಬ ರಾಜಪುತ್ರ ನಾಗಿರುತ್ತಾನೆ. ತಂದೆ ತನಗೆ ಪಟ್ಟ ಕಟ್ಟದುದರಿಂದ ಬೇಸರಗೊಂಡು, ಮರು ಹುಟ್ಟಿನಲ್ಲಾದರೂ ಅರಸನಾಗಬಯಸಿ ಅವನು ಸಂನ್ಯಾಸ ಸ್ವೀಕರಿಸುತ್ತಾನೆ. ಮನಃಪರಿಪಾಕವಿಲ್ಲದ ಈ ಆತುರಸಂನ್ಯಾಸದಿಂದ ಯಾವ ಸತ್ಫಲ ತಾನೇ ದೊರಕೀತು? ಒಮ್ಮೆ ಆತನನ್ನು ಹಾವು ಕಚ್ಚಿದಾಗ, ಒಬ್ಬ ವಿದ್ಯಾಧರನನ್ನು ಕಂಡು ಮುಂದಿನ ಜನ್ಮದಲ್ಲಿ ತಾನೂ ವಿದ್ಯಾಧರನಾಗ ಬೇಕೆಂದು ಸಂಕಲ್ಪಿಸಿ ಮಡಿಯುತ್ತಾನೆ. ಅನುಚಿತ ಫಲಾಕಾಂಕ್ಷೆಯಿಂದುಂಟಾದ ಈ ತಪೋಭ್ರಷ್ಟತೆ ಮುಂದಿನ ಭವಪರ್ಯಟನಕ್ಕೆ ಹೇತುವಾಗುತ್ತದೆ.

‘‘ತಪೋವಲ್ಲಿಯೊಳಪ್ಪ ಅನಲ್ಪಸುಖಮೆಲ್ಲಮನ್ ಅಲ್ಪ ಸುಖಕ್ಕೆ’’ ಮಾರಿದ ಜಯವರ್ಮ ಮುಂದಿನ ಜನ್ಮದಲ್ಲಿ ಮಹಾಬಲನೆಂಬ ವಿದ್ಯಾಧರನಾಗಿ ಹುಟ್ಟಿ ಸಕಲ ಭೋಗಗಳನ್ನೂ ಅನುಭವಿಸುತ್ತಾನೆ. ಒಮ್ಮೆ ಸ್ವಯಂ ಬುದ್ಧನೆಂಬ ಮಂತ್ರಿ ಧರ್ಮದ ಮಹಿಮೆಯನ್ನು ಅವನಿಗೆ ಬೋಧಿಸುತ್ತಾನೆ:

ಭವವಾರಾಶಿನಿಮಗ್ನರಂ ದಯೆ ದಮಂ ದಾನಂ ತಪಂ ಶೀಲಮೆಂ
ಬಿವೆ ಮೆಯ್ಯಾಗಿರೆ ಸಂದ ಧರ್ಮವೆ ವಲಂ ಪೊತ್ತೆತ್ತುಗುಂ ಮುಕ್ತಿಪ
ರ್ಯವಸಾನಂಬರಮಾನುಷಂಗಿಕ ಫಲಂ ಭೂಪೇಂಧ್ರ ದೇವೇಂದ್ರರಾ
ಜ್ಯ ವಿಳಾಸಂ ಪೆಱತಲ್ತು ನಂಬು ಖಚರಕ್ಷ್ಮಾಪಾಲ ಚೂಡಾಮಣೀ[4]

ಮಹಾಬಲನಿಗೆ ಈ ಬೋಧೆ ಹಿಡಿಸಿದರೂ, ಭೋಗದ ಬಯಕೆ ಆರುವುದಿಲ್ಲ. ಅವನಿಗಿನ್ನು ಒಂದು ತಿಂಗಳು ಮಾತ್ರ ಆಯುಷ್ಯ ಉಳಿದಿರುವಾಗ, ಸ್ವಯಂಬುದ್ಧ ಮತ್ತೆ ಧರ್ಮೋಪದೇಶಗೈಯುತ್ತಾನೆ. ಆದರೆ ಧರ್ಮದಿಂದಾಗುವ ಸದ್ಗತಿಯನ್ನು ಹಾರೈಸುವುದರ ಬದಲು ಮಹಾಬಲ ತನ್ನ ಮಂತ್ರಿಯಾಡಿದ ಈ ಉಕ್ತಿಯ ಪೂರ್ವಾರ್ಧವನ್ನಷ್ಟೆ ನಂಬಿದಂತೆ ತೋರುತ್ತದೆ : ‘‘ಮಿಡಿವನಿತು ಬೇಗದಿಂದ ಅೞವ ಒಡಲನಿದಂ ಪೋಗೆ ನೂಂಕಿ, ಚೆಲ್ವಪ್ಪ ಒಡಲಂ ಪಡೆದಪೆ -ಈಗಳೆ ಬಲ್ವಿಡಿವಿಡಿದು ಶರಣ್ಬುಗು ಜಿನೇಂದ್ರಪದ ಸರಸಿಜಮಂ.’’

ಅಂತೂ ಮಹಾಬಲ ಜಿನದೀಕ್ಷೆ ವಹಿಸಿ, ನಿರಶನವ್ರತದಿಂದ ಅರ್ಹದ್ಧ್ಯಾನ ಮಾಡುತ್ತಾ ಅಸು ತೊರೆಯುತ್ತಾನೆ. ಈ ಜಿನಶರಣಾಗತಿಯ ಹಿಂದೆ ಭೋಗಾಕಾಂಕ್ಷೆಯೆ ಇನ್ನೂ ಕಂಡುಬರುತ್ತದೆ. ಅಲ್ಲದೆ, ಅವನು ಮತ್ತೊಬ್ಬರ ಒತ್ತಾಯಕ್ಕೆ ಕಟ್ಟುಬಿದ್ದು ಧರ್ಮಪರನಾದನೆ ಹೊರತು, ಸ್ವಯಂ ಜಾಗೃತಿಯಿಂದಲ್ಲ. ಆದ್ದರಿಂದಲೇ ಸುಗತಿ ಅವನಿಗಿನ್ನೂ ಬಹಳ ದೂರ. ಬಾಹ್ಯಪ್ರೇರಣೆ ಬೇಕು, ನಿಜ; ಆದರೆ ಅರಿವು ಅಂತರಂಗದಲ್ಲಿ ಮೂಡಬೇಕು. ಆಗ ಮಾತ್ರ ಶಕ್ಯವಾಗುತ್ತದೆ ಆತ್ಮೋದ್ಧಾರ.

ಮುಂದೆ ಮಹಾಬಲ ‘‘ದಿವಿಜೇಂದ್ರ ರುಂದ್ರ ವಿಭವದ ಆಗರಂ ಈ ಲೋಕದೊಳಂ ಇದೊಂದೆ ಸಾರಂ’’ ಎನಿಸುವ ಶ್ರೀಪ್ರಭ ವಿಮಾನದಲ್ಲಿ ಲಲಿತಾಂಗ ದೇವನಾಗಿ ಪುನರ್ಭವ ಹೊಂದುತ್ತಾನೆ. ಅವನಿಗೆ ‘ಮನೋಜನ ಕೈಪಿಡಿ’ಯೆನಿಸುವ ಸ್ವಯಂ ಪ್ರಭೆಯೆಂಬ ಮನದನ್ನೆ ಸಿಕ್ಕುತ್ತಾಳೆ. ‘‘ಇಂದ್ರಲೋಕ ವಿಭವಂ….ತತ್ಸತಿಯಿಂ ಸಾರಮಾದುದು ಗಡ!’’ ಅವಳ ರೂಪಾತಿಶಯವೊ-

ನೆಗೞ್ದಮರಾಂಗನಾಜನದ ರೂಪುಗಳೆಲ್ಲಮದೀಕೆಯೊಂದು ದೇ
ಸೆಗೆ ನಿಮಿರ್ವೊದು ಪುರ್ವಿನ ನಯಕ್ಕೆ ಅಮರ್ವೊಂದದಗುಂತಿಗೊಂದು ಭಂ
ಗಿಗೆ ನೆಗ್ವೂಂದು ಮೆಲ್ಪಿನ ತೊದಳ್ನುಡಿಗಪ್ಪೊಡಮೆಯ್ದೆವಾರವೇ
ನೊಗಸುಗಮೆಂದು ತಳ್ತಗಲನಾಕೆಯನಾ ಲಲಿತಾಂಗ ವಲ್ಲಭಂ

ಲಲಿತಾಂಗ ಸ್ವಯಂ ಪ್ರಭೆಯರು ಕಟ್ಟೊಲವಿನಿಂದ ಸುಖದ ಪರಕಾಷ್ಠೆಯನ್ನು ಅನುಭವಿಸುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಒಮ್ಮೆ ಲಲಿತಾಂಗನ ಹೂಮಾಲೆ ಬಾಡು ತ್ತದೆ, ಭೂಷಣರಶ್ಮಿಗಳು ಮಸುಳುತ್ತವೆ, ಮುಖ ಕಂದುತ್ತದೆ. ಅವು ಅವಸಾನ ಸೂಚನೆಗಳು. ಲಲಿತಾಂಗ ಮೃತ್ಯುಭೀತನಾಗಿ ಕಂಗೆಟ್ಟು, ತನ್ನನ್ನು ರಕ್ಷಿಸುವಂತೆ ಕಂಡ ಕಂಡವರಿಗೆಲ್ಲ ಮೊರೆಯಿಡುತ್ತಾನೆ:

ಸುರತರು ನಂದನಂಗಳಿರ ರತ್ನಪಿನದ್ಧ ವಿಮಾನಕುಟ್ಟಿಮಾಂ
ತರ ಸುರತಾಲಯಂಗಳಿರ ಚಾರು ವಿಲೋಲ ಕಟಾಕ್ಷಪಾತ ಸೌಂ
ದರ ದೇವಿಯರಿರಾ ಕಡುಕಯ್ದು ಕೃತಾಂತನಿಂತು
ನಿರ್ನೆರಮೆಱೆದುಯ್ಯೆ ಬಾರಿಸದೆ ಕೆಮ್ಮನುಪೇಕ್ಷಿಸಿ ನೋಡುತಿರ್ಪಿರೇ

ತನ್ನ ಪ್ರಾಣಪ್ರಿಯೆಯಾದ ಸ್ವಯಂಪ್ರಭೆಯನ್ನೂ ಕಡೆಗೆ ಅಂಗಲಾಚುತ್ತಾನೆ:

ಸಂತಸದಂತನೆಯ್ದಿ ಸುರತಾಮೃತದೊಳ್ ತಣಿದೞ್ಕಱಿ ಜಿಗಿ
ಲ್ತಂತಿರೆ ಪತ್ತಿ ಮೆಯ್ಗಳೆರಡಾದೊಡಮೇನಸುವೊಂದೆ ನೋೞ್ಪೊಡೆಂ
ಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನು
ಯ್ವಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇೞ್ ಸ್ವಯಂ ಪ್ರಭೇ

ಲಲಿತಾಂಗ, ಸ್ವಯಂಪ್ರಭೆಯರ ಭೋಗದ ಉತ್ಕಟತೆ ಈ ಪ್ರಲಾಪದಲ್ಲಿ ಸುವ್ಯಕ್ತವಾಗಿದೆ. ಇಂತಹ ಸುರಸುಖವನ್ನು ತೊರೆಯುವುದಕ್ಕೆ ಯಾರಿಗೆ ತಾನೆ ಮನ ಬಂದೀತು? ಭೋಗದ ಆ ತೀವ್ರತೆಯೆ ಈಗ ದುಸ್ಸಹ ದುಃಖವನ್ನೆಸಗುತ್ತಿದೆ. ಲಲಿತಾಂಗನ ಈ ಹತಾಶ ಯಾಚನೆ ಕರುಣಾಸ್ಪದವೆಂತೊ ಅಂತೆಯೆ ಹಾಸ್ಯಾಸ್ಪದವೂ ಆಗಿದೆ; ಅಷ್ಟೆ ಸಹಜವೂ ಆಗಿದೆ. ಭೋಗಪಂಕದಲ್ಲಿ ಮುಳುಗಿ ಹೋಗಿ, ಅದೇ ಸವಸ್ವವೆಂದು ತಿಳಿದಿದ್ದ ಈ ವ್ಯಕ್ತಿ ಮತ್ತಾರನ್ನು ಅಂಗಲಾಚಬೇಕು, ಭೋಗ ಸಾಮಗ್ರಿಗಳನ್ನಲ್ಲದೆ? ಸುರತರು ನಂದನಗಳು, ಸುರತಾಲಯಗಳು, ಪರಿವಾರದೇವಿಯರು, ಹೃದಯೇಶ್ವರಿಯಾದ ಸ್ವಯಂಪ್ರಭೆ-ಇಷ್ಟಲ್ಲದೆ ಜೀವನದಲ್ಲಿ ಅನ್ಯ ತಾರಕಶಕ್ತಿಗಳುಂಟೆಂಬುದೇ ಲಲಿತಾಂಗನಿಗೆ ಗೊತ್ತಿರಲಿಕ್ಕಿಲ್ಲ. ಮಾರಕ ಶಕ್ತಿಗಳ ಕಲ್ಪನೆಯಿದ್ದರಲ್ಲವೆ ತಾರಕ ಶಕ್ತಿಗಳ ಯೋಚನೆ ಬರುವುದು? ಆದ್ದರಿಂದ ತನಗೆ ಗೊತ್ತಿರುವ ಭೋಗಾಸ್ಪದ ವಸ್ತುಗಳನ್ನೇ ಅವನು ಮರೆಹೊಗುತ್ತಾನೆ, ಮುಳುಗುವವನು ಹುಲ್ಲುಕಡ್ಡಿಯನ್ನು ಹಿಡಿಯುವಂತೆ. ‘ಕಾಮಾರ್ತಾ ಹಿ ಪ್ರಕೃತಿಕೃಪಣಾಶ್ಚೇತನಾಚೇತನೇಷು’ ಎಂಬಂತೆ ಜಡ-ಜೀವಗಳ ಭೇದವನ್ನೂ ಗಣಿಸದೆ ಹಲುಬುತ್ತಾನೆ. ಆದರೆ ಸುರತರು ನಂದನಗಳಾಗಲಿ ಸುರತಾಲಯಗಳಾಗಲಿ ಅವನನ್ನು ಉಳಿಸಬಲ್ಲುವೆ? ಪರಿವಾರ ದೇವಿಯರು ಅಥವಾ ಸ್ವಯಂಪ್ರಭೆ ಏನು ತಾನೆ ಮಾಡಬಹುದು? ಅಸಹಾಯಕ ಸಾಕ್ಷಿಗಳಾಗಿ ನೋಡಬಹುದು, ಅಷ್ಟೆ. ಪಾಪ, ಎಂತಹ ಭ್ರಮೆ ಈ ಲಲಿತಾಂಗನದು!

ಅವನ ಆರ್ತನಾದವನ್ನು ತಡೆದು ಸಾಮಾನಿಕ ದೇವರು ವಿವೇಕ ಹೇಳುತ್ತಾರೆ:

ನಿನಗೊರ್ವಂಗಲ್ಲವಸ್ಥಾಂತರಮಮರಜನಕ್ಕೆಲ್ಲಮೀ ಪಾಂಗೆ ಕಾರು
ಣ್ಯನಿನಾದಂ ನಿನ್ನನಾದಂ ನಗಿಸುಗುಮೆೞೆದುಯ್ವಂತಕಂಗಿಲ್ಲಿ ದೇವಾಂ
ಗನೆಯರ್ ಮಾಱಂಪರೇ ಪೇೞ್ ಮೃತಿ ಜರಾತಂಕ ಶೋಕಾಗ್ನಿಯಿಂದಾ
ವನುಮೀ ಸಂಸಾರದೊಳ್ ಬೇಯದನೊಳನೆ ಶರಣ್ ಧರ್ಮದಿಂದೊಂದುಮುಂಟೇ

ಸಾವು ಯಾರಿಗೂ ತಪ್ಪಿದ್ದಲ್ಲ; ದೇವತೆಗಳಿಗೂ ಅದು ಅನಿವಾರ್ಯ.[5] ಅದರ ಹಿಡಿತದಿಂದ ಬಿಡಿಸುವ ಅಧಿಕಾರ ಅಂತಕನಿಗೆ ತಾನೆ ಉಂಟೆ? ಅವನು ಬರಿಯ ಕಾರ್ಯಾಂಗ ಮಾತ್ರ; ಅದನ್ನು ನಿಯಂತ್ರಿಸುವ ಅಪ್ರತಿಹತವಾದ ಶಾಸಕಾಂಗ ಬೇರೊಂದುಂಟು; ಅದು ಋತ, ಧರ್ಮ. ಅದೊಂದೇ ಜೀವನನ್ನು ಕಾಯಬಲ್ಲುದು; ಜನನ ಮರಣಗಳ ಚಕ್ರದಿಂದ ಪಾರು ಮಾಡಬಲ್ಲುದು. ಇಷ್ಟಕ್ಕೂ ಮರಣವೆನ್ನುವುದೇನು? ಕೇವಲ ಅವಸ್ಥಾಂತರ.[6] ಜೀವ ಮನೆಯಿಂದ ಮನೆಗೆ ಹೋಗುವ ಸರಳ ಸುಲಭವಾದ ಕ್ರಿಯೆಗೆ ನಾವು ಮರಣವೆನ್ನುತ್ತೇವೆ. ಅದು ಋತುಪರಿವರ್ತನೆಯಂತೆ ಸಹಜವಾದ ವ್ಯಾಪಾರ; ಅದಕ್ಕೇಕೆ ಹೆದರಬೇಕು? ಈ ಅವಸ್ಥಾಂತರವೆ ಬೇಡ ಎನ್ನುವುದಾದರೆ ಧರ್ಮವೇ ಶರಣು. ಲಲಿತಾಂಗನಿಗೆ ಹೀಗೆ ಬೋಧಿಸುತ್ತಾರೆ ದೇವತೆಗಳು:

ಜಿನಚೈತ್ಯಬ್ರಾತಮಂ ಬಂದಿಸು ಜಿನಪದಪದ್ಮಂಗಳಂ ದಿವ್ಯಮಪ್ಪ
ರ್ಚನೆಯಿಂದಂ ಭಕ್ತಿಯಿಂದರ್ಚಿಸು ಜಿನನ ನಮಸ್ಕಾರಮಂತ್ರಂಗಳೊಳ್ ಭಾ
ವನೆಯಂ ತಾಳ್ದೞ್ತಿಯಿಂದಂ ಜಿನಮಹಿಮೆಗಳಂ ಮಾಡು ನೀಂ ಭವ್ಯನಯ್
ತ್ತಿನ ಮಿಥ್ಯಾಜ್ಞಾನಿವೋಲ್ ನೀಂ ತರಳತೆವೆರಸಿಂತೇಕೆ ವಿಭ್ರಾಂತನಪ್ಪಯ್

ಅದರಂತೆ ಲಲಿತಾಂಗ ಆರು ತಿಂಗಳು ಜಿನಾರ್ಚನೆಯಲ್ಲಿ ನಿರತನಾಗಿದ್ದು ಶರನ್ಮೇಘದಂತೆ ಕರಗಿಹೋಗುತ್ತಾನೆ.

ಇನಿಯನನ್ನಗಲಿದ ಸ್ವಯಪ್ರಭೆಯ ವಿಯೋಗವ್ಯಥೆ ಹೃದಯ ವಿದ್ರಾವಕವಾದ ಆಕ್ರಂದನವಾಗಿ ಹೊಮ್ಮುತ್ತದೆ:

ಮದನನ ಕೈದುವೆಲ್ಲಿದನನಂಗನ ಕೈಪೊಡೆಯೆಲ್ಲಿದಂ ವಿಳಾ
ಸದ ಕಣಿಯೆಲ್ಲಿದಂ ಚದುರ ಪುಟ್ಟಿದನೆಲ್ಲಿದಂ ವಿನೋ
ದದ ಮೊದಲೆಲ್ಲಿದಂ ಸೊಬಗಿನಾಗರಮೆಲ್ಲಿದನಿಚ್ಚೆಯಾಣ್ಮನೆ
ಲ್ಲಿದನೆರ್ದೆಯಾಣ್ಮನೆನ್ನರಸನೆಲ್ಲಿದನೋ ಲಲಿತಾಂಗವಲ್ಲಭಂ

ಭೋಗಾಧಿಕ್ಯದಿಂದ ಎಂತಹ ಶೋಚನೀಯಾವಸ್ಥೆಯೊದಗುತ್ತದೆ! ಸ್ವಯಂ ಪ್ರಭೆ ಪ್ರಲಾಪಿಸುವ ರೀತಿಯೆ ಅದನ್ನು ಸ್ಪಷ್ಟಪಡಿಸುತ್ತಿದೆ. ಅವಳ ಮಾತುಗಳು ಶೃಂಗಾರಾತ್ಮಕವಾಗಿ ಭಾಸವಾದರೂ ಅವು ಕರುಣರಸಕ್ಕೇ ಪುಷ್ಟಿ ಕೊಡುತ್ತವೆ.

ಸ್ವರ್ಗಚ್ಯುತನಾದ ಲಲಿತಾಂಗ ಉತ್ಪಲಖೇಟದಲ್ಲಿ ವಜ್ರಜಂಘನಾಗಿ ಹುಟ್ಟುತ್ತಾನೆ. ಸ್ವಯಂ ಪ್ರಭೆಯೂ ಮರುಭವದಲ್ಲಿ ಪ್ರಿಯತಮನನ್ನು ಪಡೆಯಲೋಸುಗ ಜಿನಪೂಜೆಯನ್ನೆಸಗಿ, ಶ್ರೀಮತಿಯಾಗಿ ಹುಟ್ಟುತ್ತಾಳೆ.

ಲಲಿತಾಂಗ ಭೋಗದ ಹಂಬಲದಲ್ಲೇ ದೇಹತ್ಯಾಗ ಮಾಡಿದುದರಿಂದ ವಜ್ರಜಂಘನಾ ದಾಗಲೂ ಅವನನ್ನು ವಿಷಯವಾಸನೆ ಹಿಂಬಾಲಿಸುತ್ತದೆ. ಅರ್ಹತ್ಪೂಜೆಯಿಂದ ಅಷ್ಟಿಷ್ಟು ಸಂಸ್ಕರಣ ಅವನ ಸುಪ್ತ ಚೇತನದಲ್ಲಿ ಆಗಿರಬಹುದಾದರೂ, ಭೋಗಪ್ರವೃತ್ತಿ ಇನ್ನೂ ಪ್ರಬಲವಾಗಿಯೆ ಇದೆ. ಪೂರ್ವಭವದ ಸ್ವಯಂಪ್ರಭಾವ್ಯಾಮೋಹ ಈ ಜನ್ಮದಲ್ಲೂ ಮರುಕಳಿಸಿ ಅವನನ್ನು ಕಾಡುತ್ತದೆ. ‘‘ಕುಡುಮಿಂಚಂ ಮಸೆದನ್ನರಪ್ಪ ಪಲರ್ ಒಳ್ವೆಂಡಿರ್ ಮನಂಗೊಂಡು ಬಂದೊಡಂ’’ ಅವನು ಅವರನ್ನು ಬಯಸದೆ ಸ್ವಯಂಪ್ರಭೆಗಾಗಿ ಕಾತರಿಸುತ್ತಾನೆ. ಹೀಗಿರುವಲ್ಲಿ, ವಜ್ರಜಂಘ ಶ್ರೀಮತಿಯರೊಮ್ಮೆ ಸಂಧಿಸಿ ಸತಿಪತಿಗಳಾಗುತ್ತಾರೆ. ಅಂತೂ ಪೂರ್ವಭವದ ಸಂಬಂಧ ಈ ಭವದಲ್ಲೂ ಅವರ ಬೆನ್ನು ಬಿಡಲಿಲ್ಲ. ವಜ್ರಜಂಘ ಹಿಗ್ಗಿನಿಂದ ಹೇಳುತ್ತಾನೆ, ‘‘ಈ ಭವದಿಂದಮಾದ ವಾಸನೆ      ಮಱುಮೆಯ್ಗಂ ಅಕ್ಕುಂ, ಅದರಇಂದ ಎನಗಂ ನಿನಗಂ ಮುನ್ನಿನ ಭವಂ ಈ ಭವಂ     ಮಱುಭವಂ ಸಫಲಂ’’ ಎಂದು. ಪ್ರೇಮ ಸಾಕ್ಷಾತ್ಕಾರದೃಷ್ಟಿಯಿಂದ ಅವರ ಹಿಂದು ಮುಂದಿನ ಭವಗಳೆಲ್ಲ ಸಫಲವಾದರೂ, ಆತ್ಮಕಲ್ಯಾಣದ ದೃಷ್ಟಿಯಿಂದ ಅವು ವಿಫಲವೇ ಸರಿ. ಅಲ್ಲದೆ, ಆ ಸಫಲತೆಯ ಗರ್ಭದಲ್ಲೇ ಅಡಗಿದೆ ಮುಂದಿನ ಘೋರ ದುರಂತವೊಂದು. ಅದೆಂತು ಗೊತ್ತಾಗಬೇಕು ವಜ್ರಜಂಘನಿಗೆ?

ವಜ್ರಜಂಘ ಶ್ರೀಮತಿಯರು ಕೆಲಕಾಲ ಅತಿಶಯವಾದ ಸುಖ ಭೋಗಗಳನ್ನು ಸವಿಯು ತ್ತಾರೆ. ಒಂದು ದಿವಸ ರಾತ್ರಿ ಶಯ್ಯಾತಳದಲ್ಲಿ ಆ ದಂಪತಿಗಳು ಒಬ್ಬರನ್ನೊಬ್ಬರು ಗಾಢವಾಗಿ ತಬ್ಬಿಕೊಂಡು ನಿದ್ರಾವಶರಾಗುತ್ತಾರೆ. ಧೂಪಗುಂಡಿಗೆಯಲ್ಲಿ ಕೇಶಸಂಸ್ಕಾರಕ್ಕಾಗಿ ಧೂಪಸಾಮಗ್ರಿಯನ್ನು ಅತಿಯಾಗಿ ಹಾಕಿದ್ದ ಸೆಜ್ಜೆವಳ ಗವಾಕ್ಷಕವಾಟಗಳನ್ನು ತೆರೆಯದೆ ಮರೆತು ಹೋಗಿರುತ್ತಾನೆ. ಆ ಧೂಪಧೂಮದಿಂದಾದ ಅನರ್ಥ ಬಹುದಾರುಣವಾದುದು:

ಮೊದಲೊಳ್ ನೀಳ್ದು ಪೊದೞ್ದು ಪರ್ಬಿ ಪರಪಂ ಕೈಕೊಂಡು ಮಂದೈಸಿ ಮಾ
ಣದೆ ತನ್ನಂದದೊಂದೇಳ್ಗೆಗುಂದದೆ ನಿರುದ್ಧೋಚ್ಛ್ವಾಸಮಪ್ಪನ್ನೆಗಂ
ಪುದಿದಾ ದಂಪತಿಯಂ ಪುದುಂಗೊಳಿಸಿ ಲೋಕಾಶ್ಚರ್ಯಮಂ ಮಾಡಿ ಕೊಂ
ದುದು ಕೃಷ್ಣಾಗರು ಧೂಪಧೂಮನಿವಹಂ ಕೃಷ್ಣೋರಗಂ ಕೊಲ್ವವೊಲ್[7]

ಭೋಗಾಂಗಮಾಗಿಯುಂ ಕೃ
ಷ್ಣಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ
ಭೋಗಿಗಳನಿಂತು ಸಂಸೃತಿ
ಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್

ಏನಚ್ಚರಿ? ಕೃಷ್ಣಾಗರುಧೂಪವೆ ಕೃಷ್ಣೋರಗವಾಯಿತಲ್ಲ ! ಹೂವೆ ಹಾವಾಯಿತು; ಸುಗಂಧವೆ ಶ್ವಾಸಬಂಧವಾಯಿತು! ಸುಖಾವಹವಾದ ಬೇಕಾದ ಭೋಗದ್ರವ್ಯವೆ ಹೀಗೆ ಪ್ರಾಣಾಪಹಾರಿಯಾಗಬೇಕೆ? ಹೌದು ಸಂಸಾರದ ಭೋಗಗಳು ನಿಜಕ್ಕೂ ಭೋಗಗಳು : ಹಾವಿನ ಹೆಡೆಗಳು! ಅದೆಷ್ಟು ಮೋಹಕವಾಗಿ ತೋರುತ್ತದೆ ಹಾವಿನ ಹೆಡೆ! ಆದರೆ ಅದರಲ್ಲೆ ಹುದುಗಿ ಕುಳಿತಿದೆ ಕರಾಳ ಕಾಲಕೂಟ. ಸರ್ಪಭೋಗದ ವಿಷ ದೇಹದ ಮೇಲಷ್ಟೆ ಪರಿಣಾಮ ಮಾಡುತ್ತದೆ; ಅದಕ್ಕೆ ಚಿಕಿತ್ಸೆಯುಂಟು. ಆದರೆ ಸಂಸೃತಿ ಭೋಗದ ನಂಜು ಆತ್ಮವನ್ನೆ ಘಾತಿಸುತ್ತದೆ; ಅದಕ್ಕೆ ಪರಿಹಾರ ದುರ್ಲಭ. ಆದ್ದರಿಂದಲೆ ಅದು ವಿಷಮತರ.

ಸುಖ ಭೋಗಗಳ ಆವಾಸವಾಗಿದ್ದ ಶ್ರೀಮತಿ, ವಜ್ರಜಂಘರ ಸುಂದರ ಶರೀರಗಳು ನಿರ್ಜೀವವಾದುದು ಮಾತ್ರವಲ್ಲದೆ, ಆ ಕ್ಷಣದಲ್ಲೆ ಕಪ್ಪಾಗಿ ಹೋಗುತ್ತವೆ, ಬೆಳಗುವ ಸೊಡರಿನ ಕುಡಿ ಆರಿದಾಗ ಮನೆಯೊಳಗೆ ಕತ್ತಲೆ ಹಬ್ಬುವಂತೆ.

ಆ ದಂಪತಿಗಳ ಮರಣದಲ್ಲೂ ಕವಿ ಒಂದು ಅಮೃತರೇಖೆಯನ್ನು ಗುರುತಿಸುತ್ತಾನೆ:

ಬಿಡದೆ ಪೊಗೆ ಸುತ್ತೆ ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ
ದೊಡಗಳೆದರೋಪರೋಪರೊ
ಳೊಡಸಾಯಲ್ ಪಡೆದರಿನ್ನವೇಂ ಸಯ್ಪೊಳವೇ

ಒಲಿದ ಎರಡು ಜೀವಗಳ ಈ ಸಹಮರಣಕ್ಕಿಂತ ಬೇರ ಪುಣ್ಯವಿಲ್ಲವೆನ್ನುತ್ತಾನೆ ಪಂಪ. ಮೃತ್ಯು ಅವರಿಬ್ಬರನ್ನೂ ಅಗಲಿಸಲಾರದೆ ಹೋಯಿತು; ಪ್ರೇಮ ಮೃತ್ಯುವನ್ನೂ ಧಿಕ್ಕರಿಸಿ ಗೆದ್ದಿತು. ಎಲ್ಲರಿಗೂ ಉಂಟೆ ಈ ಸೈಪು?

ಆ ಗಂಡ ಹೆಂಡಿರ ಒಲವಾದರೂ ಅದೆಷ್ಟು ಪ್ರಗಾಢವಾದುದು! ಹೊಗೆ ಸುತ್ತಿ ಕೊಂಡಾಗಲೂ ಅವರು ತೋಳನ್ನು ಸಡಿಲಿಸಲೇ ಇಲ್ಲವಂತೆ. ಬಾಹ್ಯ ಪ್ರಜ್ಞೆ ಎಲ್ಲಿತ್ತು ಆ ಭೋಗಿಗಳಿಗೆ? ಗವಾಕ್ಷವನ್ನು ತೆರೆದಿದೆಯೆ ಇಲ್ಲವೆ ಎಂಬುದರ ಕಡೆಗೆ ಅವರ ಗಮನ ಹರಿಯಲೇ ಇಲ್ಲ. ಅದಾವ ರಸಲೋಕದಲ್ಲಿ ವಿಹರಿಸುತ್ತಿದ್ದರೊ, ಪಾಪ, ನಲ್ಲನಲ್ಲೆಯರು! ಅದೆಂತಹ ವಿಸ್ಮೃತಿಯೊ ! ಅದೇ ಅವರಿಗೆ ಮಾರಕವಾಯಿತು.

ವಜ್ರಜಂಘ, ಶ್ರೀಮತಿಯರ ಅನುರಾಗಬಂಧನ ಮುಂದಿನ ಜನ್ಮದಲ್ಲೂ ಮುಂದುವರಿ ಯುತ್ತದೆ. ಅವರು ಭೋಗಭೂಮಿಯಲ್ಲಿ ಹುಟ್ಟಿ ಕಾಮೋಪಭೋಗದಲ್ಲಿ ತೊಡಗಿರುತ್ತಾರೆ. ಹಿಂದೆ ಸ್ವಯಂಬುದ್ಧನಾಗಿದ್ದ ಮುನಿಯೊಬ್ಬ ಬಂದು,

ನಿನಗೆ ಜಯವರ್ಮನಾದಂ
ದಿನ ಭವದಿಂದಿತ್ತ ಭೋಗಕಾಂಕ್ಷೆಯೆ ತಿಣ್ಣಂ
ಮನದೊಳ್ ಸಮ್ಯಕ್ತ್ವದ ದೆಸೆ
ಯಿನಿಸಿಲ್ಲ ದಲಮ್ಮ ಕೈಕೊಳಲ್ಕಿದು ಕಾಲಂ

ಎಂದು ಎಚ್ಚರಿಸಿ ಸಮ್ಯಕ್ತ್ವವನ್ನು ಬೋಧಿಸುತ್ತಾನೆ; ದಂಪತಿಗಳಿಬ್ಬರೂ ಅದನ್ನು ಸ್ವೀಕರಿಸುತ್ತಾರೆ. ವಜ್ರಜಂಘನ ವಿಷಯಲಾಲಸೆ ಈಗ ಹಿಂಜರಿಯ ತೊಡಗುತ್ತದೆ. ಅವನಿಗಿನ್ನು ಉದ್ಧಾರದ ಹಾದಿ ಸುಗಮ.

ಮುಂದಿನ ಜನ್ಮದಲ್ಲಿ ಶ್ರೀಮತಿ, ವಜ್ರಜಂಘರ ಸತಿ-ಪತಿ ಸಂಬಂಧ ಕಡಿದು ಹೋಗುತ್ತದೆ. ವಜ್ರಜಂಘ ಶ್ರೀಧರದೇವನಾಗಿ ಹುಟ್ಟುತ್ತಾನೆ; ಪ್ರೀತಿಂಕರ ಮುನಿಗೆ ಕೇವಲಜ್ಞಾನೋದಯವಾದಾಗ ಹೋಗಿ ಪೂಜಿಸುತ್ತಾನೆ. ಇಷ್ಟರಲ್ಲಿ ಅವನ ವಿಷಯತೃಷ್ಣೆ ಕುಗ್ಗಿಹೋಗಿ ಧರ್ಮಾನುರಕ್ತಿ ಬಲಿದಿರುತ್ತದೆ. ಅವನು ಸ್ವರ್ಗಚ್ಯುತನಾಗಿ ಸುವಿಧಿಯೆಂಬ ರಾಜನಾಗಿ ಜನಿಸಿ ಅಣುವ್ರತಗಳನ್ನಾಚರಿಸಿ, ಮರುಭವದಲ್ಲಿ ಅಚ್ಯುತೇಂಧ್ರನಾಗಿ ಹುಟ್ಟಿ, ಅದಾದ ಬಳಿಕ ವಜ್ರನಾಭಿಯೆಂಬ ಚಕ್ರವರ್ತಿಯಾಗುತ್ತಾನೆ. ಅವನಿಗೊಮ್ಮೆ ಭೋಗನಿಸಹತೆ ಯುಂಟಾಗುತ್ತದೆ:

ನೆಗೞ್ದೇ ಷಟ್ಖಂಡಮಂ ಸಾಧಿಸಿದೊಡೆ ಫಲಮೇಂ ಭೋಗದಿಂ ಸಾಧ್ಯಮೇಂ ಬಂ
ಧುಗಳಿಂ ಬರ್ಪುದೇಂ ಸುತ್ತಿದ ಪರಿಜನದಿಂದಪ್ಪುದೇನೊಂದುಮಿಲ್ಲ
ಚ್ಚಿಗಮೊಂದುಂಟಲ್ಲಿ ಗಾಂಪಿಂ ತೊಡರ್ವೆನೆ ಪಡೆವೆಂ ಶಾಶ್ವತ ಶ್ರೀಯನೆಂಬು
ಜ್ಜುಗದೊಳ್ ಚಿತ್ತಂ ಕರಂ ಕಣ್ಮಲೆಯೆ ನೆಱಯೆ ನಿಶ್ಚೈಸಿದಂ ಸಾರ್ವಭೌಮಂ

ಬಾಹ್ಯಾಭ್ಯಂತರ ತಪವನ್ನಾಚರಿಸಿ ಶುಕ್ಲಧ್ಯಾನದಿಂದ ದೇಹ ಬಿಟ್ಟ ವಜ್ರನಾಭಿ ಸರ್ವಾರ್ಥಸಿದ್ದಿಯಲ್ಲಿ ಅಹಮಿಂದ್ರನಾಗಿ ಹುಟ್ಟುತ್ತಾನೆ. ಆಯುಸ್ಸು ಮುಗಿದ ಬಳಿಕ ಭರತವರ್ಷದಲ್ಲಿ ನಾಭಿರಾಜನಿಗೆ ವೃಷಭಸ್ವಾಮಿ ಅಥವಾ ಪುರುದೇವನೆಂಬ ಮಗನಾಗಿ ಜನಿಸುತ್ತಾನೆ. ಇದೇ ಕಥಾನಾಯಕನ ಕಡೆಯ ಜನ್ಮ; ಈ ಭವದಲ್ಲೆ ಅವನು ತೀರ್ಥಂಕರನಾಗುವುದು.

[1] ನೋಡಿ : ಜಿ.ಎಸ್ .ಶಿವರುದ್ರಪ್ಪ, ‘ಪಂಪನ ಸಮರಸ ದೃಷ್ಟಿ ಪರಿಶೀಲನ’, ಪು.೧೧-೧೮

[2] ಪುನರ್ಜನ್ಮಗಳ ಕಲ್ಪನೆ ಭಾರತದ ಎಲ್ಲ ಧರ್ಮಗಳಲ್ಲೂ ಉಂಟಾದರೂ, ಜೈನಧರ್ಮದಲ್ಲಿ ಭವಾವಳಿಗೆ ವಿಶೇಷ ಪ್ರಾಧಾನ್ಯ. ಒಂದು ಜೀವದ ರಾಗದ್ವೇಷಗಳು ಆ ಭವದಲ್ಲೆ ಕೊನೆಗೊಳ್ಳದೆ ಮುಂದಿನ ಭವಗಳಿಗೂ ಬೆನ್ನಂಟಿ ಬರುತ್ತವೆ; ಈ ಭವಪರಿಭ್ರಮಣದ ಅವಧಿಯಲ್ಲಿ ಜೀವ ತನ್ನ ಕರ್ಮವನ್ನು ಕ್ರಮೇಣ ನೀಗಿಕೊಳ್ಳುತ್ತದೆ. ಒಂದು ಜನ್ಮದಲ್ಲೆ ಉದ್ಧಾರ ಸಾಧ್ಯವಾಗಲೂಬಹುದು. ಅದು ಆಯಾ ಜೀವದ ಸಂಸ್ಕಾರವನ್ನವಲಂಬಿಸಿರುತ್ತದೆ.

[3] ಕುವೆಂಪು – ‘ಆದಿಪುರಾಣ ಸಂಗ್ರಹ’ (ಸಂ : ಎಲ್ . ಗುಂಡಪ್ಪ)ದ ಮುನ್ನುಡಿಯಲ್ಲಿ.

[4] ಮಹಾಬಲನ ಉಳಿದ ಮೂವರು ಮಂತ್ರಿಗಳು ‘‘ಬಾೞನಂ ಇಂದ್ರಿಯ ವರ್ಗದಿಚ್ಛೆಯಂ ಸಲಿಸಿ ಬಸಂತದೊಳ್ ಕಳಿಕೆಗರ್ಚಿದ ಕೋಗಿಲೆಯಂತೆ ಬಿಚ್ಚತಂ ನಲಿವುದು, ಕಂಡರ್ ಆರ್ ಮಱು ಭವಂಗಳನ್ ’’ ಎಂದು ದುರುಪದೇಶ ಮಾಡುತ್ತಾರೆ. ಅವರು ನರಕದಲ್ಲಿ ನವೆಯುತ್ತಿರುವುದಾಗಿ ಮುಂದೆ ತಿಳಿಯುತ್ತದೆ.

[5] ಜೈನಧರ್ಮದಲ್ಲಿ ದೇವತೆಗಳು ಹೆಸರಿಗೆ ಮಾತ್ರ ಅಮರರು; ಅವರಿಗೂ ಸಾವುಂಟು. ದೇವ, ಮಾನುಷ, ತಿರ್ಯಕ್, ನಾರಕ ಎಂಬ ಚತುರ್ಗತಿಗಳಲ್ಲಿ ಜೀವವು ಕರ್ಮವಶದಿಂದ ತೊಳಲುತ್ತದೆ; ಇವುಗಳಿಗೆ ಅತೀತವಾದ ಸ್ಥಿತಿ ನಿರ್ವಾಣ.

[6] ಹೋಲಿಸಿ : ‘‘Because I love this life I Know I shall love death as well. The child cries out when from the right breast the mother takes it away, in the very next moment to find in the left one its consolation’’ -Tagore, ‘Gitanjali’.

[7] ಕಬ್ಬೊಗೆ ಹಬ್ಬಿದ ಪರಿಯನ್ನೂ ಅದರ ಕಾಳೋರಗ ಸ್ವರೂಪವನ್ನೂ ಛಂದಸ್ಸಿನ ಸರ್ಪದೀರ್ಘವಿನ್ಯಾಸವೆ ಧ್ವನಿಸುತ್ತಿದೆ.