ರನ್ನನ ಉಪಲಬ್ಧ ಕೃತಿಗಳು ಎರಡು[1] : ‘ಅಜಿತಪುರಾಣ’ ಮತ್ತು ‘ಗದಾಯುದ್ಧ’. ಇವುಗಳ ಸ್ಥೂಲ ನೋಟ ಇಲ್ಲಿ ವಿವಕ್ಷಿತ.

ಅಜಿತಪುರಾಣ

ಪ್ರಾಚೀನ ಕನ್ನಡ ಸಾಹಿತ್ಯದ ಬಹುಭಾಗ ಧರ್ಮಪ್ರಚೋದಿತವಾದುದೆಂಬುದು ಸರ್ವಶ್ರುತವಾದ ವಿಚಾರ. ಸಾಹಿತ್ಯಕ್ಕೆ ಧರ್ಮ ಬಾಧಕವಾಗಬೇಕಾಗಿಲ್ಲ; ಮಾತ್ರವಲ್ಲ, ಜೀವನಕ್ಕೆಂತೊ ಅಂತೆ ಸಾಹಿತ್ಯಕ್ಕೆ ಅದು ಹೊಸ ಆಯಾಮಗಳನ್ನು ದಾನ ಮಾಡಲೂಬಹುದು. ವಾಸ್ತವವಾಗಿ, ಸಾಹಿತ್ಯ ಸ್ವಾರಸ್ಯಕ್ಕೆ ಧಕ್ಕೆ ತರತಕ್ಕದ್ದು ಧರ್ಮವಲ್ಲ, ಮತ; ಅಥವಾ ಧರ್ಮದ ಮತೀಯ ಭಾಗ. ಕನ್ನಡ ಜೈನ ಪುರಾಣಗಳನ್ನು ನೋಡಿದರೆ ಈ ಸತ್ಯ ಮನವರಿಕೆಯಾಗುತ್ತದೆ. ಅವು, ಸಂಸ್ಕೃತ ಮೂಲಗಳಿಗೆ ಹೋಲಿಸಿದಾಗ, ಕಾವ್ಯಧರ್ಮವನ್ನು ಅಧಿಕತರವಾಗಿ ಪ್ರಕಟಿಸುತ್ತವೆ. ಜತೆಗೆ, ಮತ ಪ್ರಕ್ರಿಯೆಗಳನ್ನು ಅತ್ಯಂತ ವಿವರಪೂರ್ಣವಾಗಿ ವ್ಯಾವರ್ಣಿಸುವ ಪುರಾಣ ಪ್ರಜ್ಞೆಗೂ ನಿಷ್ಠವಾಗುತ್ತವೆ. ಕಾವ್ಯಧರ್ಮದಲ್ಲೂ ಒಂದು ಬಗೆಯ ಮತಾಚರಣೆ ಕೆಲಸ ಮಾಡುತ್ತದೆ, ಕವಿಸಮಯ ಚಮತ್ಕಾರಾದಿಗಳ ರೂಪದಲ್ಲಿ. ಈ ತೊಡಕುಗಳನ್ನೆಲ್ಲ ಮೀರಿ ಶ್ರೇಷ್ಠವಾದ ಆಗಮಿಕ ಕಾವ್ಯವೊಂದನ್ನು ಸೃಜಿಸಿದವನು ಪಂಪ. ಅವನ ಸಹಜ ಪ್ರತಿಭೆಯಾಗಲಿ ‘ಆದಿಪುರಾಣ’ದ ಕಥೆಯಲ್ಲಿ ಅವನಿಗಿದ್ದ ಅವಕಾಶಗಳಾಗಲಿ ಉಳಿದ ಜೈನ ಕವಿಗಳ ಪಾಲಿಗಿರಲಿಲ್ಲವಾದ್ದರಿಂದ, ಅವರ ‘ಪುರಾಣ’ಗಳೆಲ್ಲ ‘ಆದಿಪುರಾಣ’ಕ್ಕೆ ದ್ವಿತೀಯವಾಗಿಯೋ ತೃತೀಯವಾಗಿಯೋ ಪರಿಣಮಿಸಿದುವು. ಅವುಗಳ ಪಂಕ್ತಿಯಲ್ಲಿ ಗಣ್ಯವಾಗಿ ನಿಲ್ಲುವ ಎರಡು ಮೂರು ಕೃತಿಗಳಲ್ಲಿ ರನ್ನನ ‘ಅಜಿತಪುರಾಣ’ ವೊಂದು.

ಉಳಿದ ಕವಿಗಳು ತಮ್ಮ ಧಾರ್ಮಿಕ ವಿರಚನೆಗಳನ್ನು ‘ಪುರಾಣ’ವೆಂದಷ್ಟೆ ಕರೆದುಕೊಂಡಿದ್ದರೆ, ರನ್ನ ತನ್ನ ಕೃತಿಯನ್ನು ‘ಪುರಾಣತಿಲಕ’ವೆಂದು ಕರೆದುಕೊಂಡಿದ್ದಾನೆ; ತನ್ಮೂಲಕ ಅದರ ಪುರಾಣಮುಖದ ಮೇಲೆ ಹೆಚ್ಚು ಒತ್ತು ಹಾಕಿದ್ದಾನೆ. ಎಂತಲೇ ಅವನ ಕೃತಿ ರಸವತ್ಕಾವ್ಯವಾಗುವುದಕ್ಕಿಂತ ಮಿಗಿಲಾಗಿ ‘ಪುರಾಣಚೂಡಾಮಣಿ’ಯಾಗಿದೆ; ಅಲ್ಲಿ ಕಾಣಿಸಿಕೊಳ್ಳುವ ಕವಿತೆಯೂ ಬಹುಮಟ್ಟಿಗೆ ಸಂಪ್ರದಾಯಾನುವರ್ತಿಯೇ. ಅದರಲ್ಲಿ ಅಸಂಬದ್ಧವಾದ, ಅನುಚಿತವಾದ ಅಂಶಗಳಿಗೆ ಕೊರತೆಯಿಲ್ಲ. ಆದರೆ ‘ಅಜಿತ ಪುರಾಣ’ದ ಕೆಲವು ಭಾಗಗಳಾದರೂ ಒಳ್ಳೆಯ ಕವಿತೆಯಾಗಿ ಅರಳಿವೆಯೆಂಬುದನ್ನು ಕಡೆಗಣಿಸುವಂತಿಲ್ಲ. ಅಲ್ಲಿ ರನ್ನನ ರಸಾವೇಶ, ಭಾವಾವೇಗಗಳು ಚೆನ್ನಾಗಿ ವ್ಯಕ್ತವಾಗುತ್ತವೆ.

‘ಅಜಿತಪುರಾಣ’ ದ್ವಿತೀಯ ತೀರ್ಥಂಕರನಾದ ಅಜಿತನಾಥನ ಕಥೆಯನ್ನು ಬಿತ್ತರಿಸುತ್ತದೆ. ಜಿನಚರಿತೆಗೆ ಪೀಠಿಕೆಯಾಗಿ ಅತ್ತಿಮಬ್ಬೆಯ ವೃತ್ತಾಂತವೂ ಅನುಬಂಧವಾಗಿ ಸಗರನ ಕತೆಯೂ ಅಳವಟ್ಟಿವೆ. ಈ ಪೀಠಿಕೆ, ಅನುಬಂಧಗಳೇ ತುಂಬ ಸ್ವಾರಸ್ಯ ಪೂರ್ಣವಾಗಿದ್ದು, ನಡುವೆಯಿರುವ ತೀರ್ಥಂಕರಚರಿತವೇ ತುಸು ಸಪ್ಪೆಯಾಗಿರುವುದೊಂದು ವಿಶೇಷ. ಅದರಲ್ಲಿ ಬಂದಿರುವ ವಿಮಲವಾಹನನ ವೈರಾಗ್ಯದ ನಿರೂಪಣೆಯ ಭಾಗದಲ್ಲಿ ಮಾತ್ರ ಕಾವು ಕಾಣುತ್ತದೆ.

ಮೊದಲು ಅತ್ತಿಮಬ್ಬೆಯ ವಿಷಯವನ್ನು ನೋಡಬಹುದು. ಅನನ್ಯ ವ್ಯಕ್ತಿ ಚಿತ್ರವೊಂದನ್ನು ರನ್ನ ಇಲ್ಲಿ ಕೊಟ್ಟಿದ್ದಾನೆ. ಹಾಗೆ ನೋಡಿದರೆ, ಅತ್ತಿಮಬ್ಬೆಗೂ ತೀರ್ಥಂಕರಚರಿತಕ್ಕೂ ಯಾವುದೇ ಸಾವಯವ ಸಂಬಂಧವಿಲ್ಲ. ಆದರೆ ಅವಳ ವ್ಯಕ್ತಿತ್ವದ ಹಿರಿಮೆ ಮತ್ತು ರನ್ನ ಅದನ್ನು ನಿರೂಪಿಸುವ ರೀತಿ ಅವಳಿಗೆ ಕಥಾನಾಯಿಕೆಯ ಪಟ್ಟ ಕಟ್ಟುವಂತಿದೆ. ಜಿನಜನನಿಯೊಡನೆ ಅತ್ತಿಮಬ್ಬೆಯನ್ನು ಸಮೀಕರಿಸಿದ್ದಾನೆ ರನ್ನ. ಕಾವ್ಯದ ಆದ್ಯಂತವೆರಡರಲ್ಲೂ ಅವಳ ಗುಣಕಥನ ಸವಿಸ್ತಾರವಾಗಿ ನಡೆದಿದೆ; ಅಷ್ಟೇ ಅಲ್ಲ, ಪ್ರತಿಯೊಂದು ಆಶ್ವಾಸದ ಕಡೆಯಲ್ಲೂ ಅವಳನ್ನು ನೆನೆಯುತ್ತಾನೆ ರನ್ನ. ಹೀಗಾಗಿ, ತೀರ್ಥಂಕರನಿಗಿಂತ ಅತ್ತಿಮಬ್ಬೆಯೆ ‘ಅಜಿತಪುರಾಣ’ದಲ್ಲಿ ಎದ್ದು ಕಾಣುತ್ತಾಳೆ; ನಮ್ಮ ಚಿತ್ತವನ್ನು ಸೆಳೆದುಕೊಳ್ಳುತ್ತಾಳೆ, ಗೌರವಾರ್ಹಳಾಗುತ್ತಾಳೆ.

ಅತ್ತಿಮಬ್ಬೆ ರನ್ನನಿಗೆ ಆಶ್ರಯವಿತ್ತು ‘ಅಜಿತ ಪುರಾಣ’ವನ್ನು ಬರೆಯಿಸಿದವಳು. ಹೀಗೆ ಕಾವ್ಯ ರಚನೆಗೆ ಪ್ರೇರಣೆ ಕೊಟ್ಟದ್ದು ಮಾತ್ರವಲ್ಲ, ಕಾವ್ಯಸಂರಕ್ಷಣೆಯ ಕೆಲಸವನ್ನೂ ಆಕೆ ಮಾಡಿದಳು. (ಪೊನ್ನನ ‘ಶಾಂತಿ ಪುರಾಣ’ದ ಸಾವಿರ ಪ್ರತಿಗಳನ್ನು ಅವಳು ಮಾಡಿಸಿದ ಸಂಗತಿ ಬೇರೆಡೆ ತಿಳಿದುಬರುತ್ತದೆ.) ಇಷ್ಟು ಸಾಲದೆಂಬಂತೆ ಅವಳು ಕಾವ್ಯಕ್ಕೆ ವಸ್ತುವೂ ಆಗಿಬಿಟ್ಟಿದ್ದಾಳೆ. ಇದು ಸಾಮಾನ್ಯವಲ್ಲ; ಅತ್ತಿಮಬ್ಬೆಯಂಥ ಮಹಿಳೆ ಕನ್ನಡದಲ್ಲಿ ಒಬ್ಬಳೇ.

ಪ್ರಾಚೀನ ಕಾವ್ಯಗಳಲ್ಲಿ ಕಾಲ್ಪನಿಕ, ಪೌರಾಣಿಕ ವ್ಯಕ್ತಿಗಳೇ ಹೆಚ್ಚಾಗಿ ಕಂಡುಬರತಕ್ಕವರು; ಚಾರಿತ್ರಿಕ ವ್ಯಕ್ತಿಗಳು ನಾಮಮಾತ್ರರಾಗಿ ಗೋಚರಿಸಬಹುದಷ್ಟೆ. ಆದರೆ ಅತ್ತಿಮಬ್ಬೆ ಈ ನೆಲದ ಮೇಲೆ ದೇಹಧಾರಿಯಾಗಿ ನಡೆದಾಡಿದ ಐತಿಹಾಸಿಕ ಮಹಿಳೆ; ಅವರ ಬಾಳಿನ ಮತ್ತು ವ್ಯಕ್ತಿತ್ವದ ಪೂರ್ಣ ಚಿತ್ರವನ್ನು ರನ್ನ ಕೊಟ್ಟಿದ್ದಾನೆ. ಅದು ಅತ್ಯಂತ ವಿಶಿಷ್ಟವಾಗಿ ಉಜ್ಜಲವಾಗಿ ಪರಿಣಮಿಸಿದೆ. ಅದರಲ್ಲಿ ಅತ್ಯುಕ್ತಿಗಳಿವೆ, ಪುನರುಕ್ತಿಗಳಿವೆ; ಆದರೆ ಸತ್ಯವೂ ಸಾಕಷ್ಟಿದೆ. ರನ್ನ ಅತ್ತಿಮಬ್ಬೆಗೆ ಸಲ್ಲಿಸಿರುವ ಎಲ್ಲೆ ಮೀರಿದ ಪ್ರಶಂಸೆ ಕೇವಲ ಔಪಚಾರಿಕವಾಗಿ ತೋರದೆ, ಅವನ ಹೃದಯಾಂತರಾಳದಿಂದ ಹೊಮ್ಮಿದ್ದು ಎನಿಸುತ್ತದೆ. ಭಗವಂತನನ್ನು ಭಕ್ತ ಹೇಗೋ ಹಾಗೆ ಅವಳನ್ನು ಕೈವಾರಿಸಿದ್ದಾನೆ ರನ್ನ.

ಅತ್ತಿಮಬ್ಬೆಯನ್ನು ಚಕ್ರವರ್ತಿಪೂಜಿತೆ, ಕವಿವರ ಕಾಮಧೇನು, ದಾನ ಚಿಂತಾಮಣಿ, ಜಿನಶಾಸನದೀಪಿಕೆ ಇತ್ಯಾದಿಯಾಗಿ ವಿಶ್ಲೇಷಿಸಲಾಗಿದೆ. ಅವಳಲ್ಲಿ ಶೀಲ, ದಾನಗುಣ, ಧರ್ಮಪರತೆ ಮುಪ್ಪುರಿಗೊಂಡಿವೆ; ಅವಳು ಕಲಿಯೂ ಹೌದು. ಈ ವಿವಿಧ ಮುಖಗಳನ್ನು ಕವಿ ಪ್ರಭಾವಶಾಲಿಯಾದ ರೀತಿಯಲ್ಲಿ ಕಂಡರಿಸಿದ್ದಾನೆ.

ಸ್ತ್ರೀಯಾದ ಅತ್ತಿಮಬ್ಬೆಯ ಮುಂದೆ ಪುರುಷರು ಅಪ್ರಯೋಜಕರೆಂದು ರನ್ನ ಹೇಳುವ ಬಗೆ ರೋಚಕವಾದುದು:

ಕಲಿಯೆನೆ ನೆಗೞ್ದಳ್ ಕಸವರ
ಗಲಿಯೆನೆ ಗುಣದಂಕಕಾರ್ತಿ ಮೊನೆಯೊಳ್ ಮನೆಯೊಳ್
ಮೊಲೆವೆತ್ತ ತೈಲಜನನಿಯ
ಕೆಲದೊಳ್ ರಂಜಿಪರೆ ಮೀಸೆವೊತ್ತಣ್ಣಂಗಳ್ (.೬೫)

ಇದು ಮಾಮೂಲು ಸ್ತ್ರೀವರ್ಣನೆಯ ಧಾಟಿಯಲ್ಲ.

ಅತ್ತಿಮಬ್ಬೆಯ ಚರಿತೆ ಎಷ್ಟು ಪವಿತ್ರವೆಂಬುದನ್ನು ಹೇಳುವಲ್ಲಿ ರನ್ನ ಧವಳ ದೇದೀಪ್ಯಮಾನ ಚಿತ್ರವೊಂದನ್ನು ನೀಡುತ್ತಾನೆ:

ಬಿಳಿಯರಳೆಯಂತೆ ಗಂಗಾ
ಜಳದಂತೆಸೆವಜಿತಸೇನ ಮುನಿಪತಿಯ ಗುಣಾ
ವಳಿಯಂತೆ ನೆಗೞ್ದ ಕೊಪಣಾ
ಚಳದಂತೆ ಪವಿತ್ರಮತ್ತಿಮಬ್ಬೆಯ ಚರಿತಂ (೧೨. )

ಇಲ್ಲಿನ ಹೋಲಿಕೆಗಳು ಔಚಿತ್ಯಪೂರ್ಣವಾಗಿವೆ. ಬಿಳಿಯರಳೆಯ ಹೋಲಿಕೆಯಂತೂ ಹೊಚ್ಚಹೊಸತು; ಅರ್ಥಗರ್ಭಿತ.

ಅತ್ತಿಮಬ್ಬೆಯ ಮಹಿಮೆ ಎಂಥದು, ಅವಳ ಸ್ಮರಣ ಎಷ್ಟು ಮಂಗಳಕರ ಎಂಬುದನ್ನು ಕವಿ ಸಾರುವುದು ಹೀಗೆ:

ಅಳುರದು ಕಿರ್ಚು ಮುಟ್ಟದು ವಿಷಾಹಿ ಮಹಾಸತಿಯಿರ್ದ ಮಂಡಳಂ
ಬೆಳೆವುದು ಬೇಡಿದಂತೆ ಮೞಕೊಳ್ವುದೆನಿಪ್ಪ ಜಸಕ್ಕೆ ನೋಂತ ಭೂ
ತಿಲಕ ಪವಿತ್ರೆಯಂ ಗುಣಪವಿತ್ರೆಯನಾ ಸತಿಯಂ ಮಹಾಸತೀ
ತಿಲಕೆಯನತ್ತಿಮಬ್ಬರಸಿಯಂ ಪೆಸರ್ಗೊಳ್ವುದು ಪುಣ್ಯಕಾರಣಂ (.೭೫)

ಅವಳ ಜಿನಭಕ್ತಿ ಎಷ್ಟು ಉತ್ಕಟವಾದುದೆಂಬುದನ್ನು ಈ ಪದ್ಯ ಹೃದಯಂಗಮವಾಗಿ, ಚಿತ್ರವತ್ತಾಗಿ ಹೇಳುತ್ತದೆ:

ಉನ್ನತ ಕುಕ್ಕುಟೇಶ್ವರ ಜಿನೇಶ್ವರನಂ ಜಿನಭಕ್ತೆ ಪೋಗಿ ಕಾ
ಣ್ಬನ್ನೆಗಮನ್ನಮಂ ಬಿಸುಟು ಪರ್ವತಮಂ ಪರಿದೇಱ ತಜ್ಜಿನಾ
ಸನ್ನದೊಳತ್ತಿಮಬ್ಬೆಗೆ ಪಥಶ್ರಮಮಾದುದಕಾಲವೃಷ್ಟಿಯಾ
ಯ್ತೆನ್ನದೊ ದೇವಭಕ್ತಿಗದು ಚೋದ್ಯಮೆ ಕೊಳ್ಳವೆ ಪುಷ್ಪವೃಷ್ಟಿಗಳ್ (. ೬೦)

ಅತ್ತಿಮಬ್ಬೆ ಆ ಕಾಲದಲ್ಲಿ ದೂರದ ಉತ್ತರದಿಂದ ದಕ್ಷಿಣದ ಶ್ರವಣಬೆಳ್ಗೊಳಕ್ಕೆ ಬಂದುದೇ ಒಂದು ಸಾಹಸ; ಭಕ್ತಿಸಾಹಸ. ಇಳಿವಯಸ್ಸಿನಲ್ಲಿ, ಹಸಿದುಕೊಂಡು, ಗೊಮ್ಮಟದರ್ಶನ ಕಾತರದಿಂದ ಓಡೋಡಿ ಬೆಟ್ಟವನ್ನು ಹತ್ತುತ್ತಿರುವ ಆ ಮಹಾಮಹಿಳೆಯ ಚಿತ್ರ ನಮ್ಮ ಒಳಗಣ್ಣನ್ನು ತುಂಬಿ ನಿಲ್ಲುವಂಥದು. ಜಿನಸನ್ನಿಧಿಯನ್ನು ಅವಳು ಸೇರಿದಾಗ ಅಕಾಲವೃಷ್ಟಿಯಾಯಿತಂತೆ. ರನ್ನ ಅತ್ತಿಮಬ್ಬೆಯ ಘನತೆಯನ್ನು ಪ್ರಕಟಿಸಲು ಉದ್ದಕ್ಕೂ ಪ್ರತಿಮಾವಿಧಾನವನ್ನು ಆಶ್ರಯಿಸಿದ್ದಾನೆ; ಕನ್ನಡ ಸಾಹಿತ್ಯಯಾತ್ರಿಕರು ಮರೆಯಲಾಗದಂತೆ ಅವಳ ಮೂರ್ತಿಯನ್ನು ಮೂಡಿಸಿದ್ದಾನೆ.

ಮೌಲ್ಯಗಳು ಸಾರ್ಥಕವಾಗತಕ್ಕದ್ದು ಅವುಗಳನ್ನು ಆಚರಿಸುವವರಿಂದ; ಭಗವಂತನಿಗೆ ಬೆಲೆ ಬರುವುದು ಭಕ್ತರಿಂದ. ಎಂದೋ ಆಗಿಹೋದ ತೀರ್ಥಂಕರನ ಕಥೆ ಅತ್ತಿಮಬ್ಬೆಯ ಭಕ್ತಿ ಮತ್ತು ಭವ್ಯಗುಣದಿಂದ ಮತ್ತೆ ಗರಿಗಟ್ಟಿಕೊಂಡು ಜೀವಂತವಾಗುತ್ತದೆ; ವರ್ತಮಾನಕ್ಕೆ ಪ್ರಸ್ತುತವಾಗುತ್ತದೆ. ಈ ದೃಷ್ಟಿಯಿಂದಲೂ ಅತ್ತಿಮಬ್ಬೆಯ ಚಿತ್ರಣ ‘ಅಜಿತಪುರಾಣ’ದಲ್ಲಿ ಮಹತ್ವದ್ದಾಗಿದೆ. ಅದನ್ನು ಸೇರಿಸಿ, ಅನೇಕ ಪ್ರಯೋಜನಗಳನ್ನು ಸಾಧಿಸಿದ್ದಾನೆ, ರನ್ನ.

ವಿಮಲವಾಹನನ ವೈರಾಗ್ಯಕ್ಕೆ ಸಂಬಂಧಿಸಿದ ಭಾಗವೊಂದು ಉತ್ಕೃಷ್ಟ ಭಾವಗೀತ. ಅದರಲ್ಲಿ ನಿಜವಾದ ಕಳಕಳಿಯಿದೆ, ತನ್ಮಯತೆಯಿದೆ. ಧರ್ಮವನ್ನು ನಂಬದೆ, ಉಳಿದುವನ್ನು ನಂಬುವುದು ದುರಂತವೆಂಬುದನ್ನು ಈ ಪದ್ಯ ಆಕರ್ಷಕವಾದ ಶಬ್ದಾಲಂಕಾರದೊಡನೆ ಅಭಿವ್ಯಕ್ತಿಸುತ್ತದೆ:

ಸಾರದೆ ಸಾರಮಪ್ಪ ಜಿನಧರ್ಮಮನಾತ್ಮನಸಾರಮಪ್ಪುದಂ
ಸಾರಮಿದೆಂದು ನಂಬಿ ತನಗಲ್ಲದುವಂ ತನಗಪ್ಪುದೆಂದು ಕೇ
ದಾರವಿಹಾರ ಸೋದರ ಕೃಶೋದರ ಸುಂದರ ದಾರ ದಾರಕೋ
ದಾರ ವಿಮೋಹದೊಳ್ ತೊಡರ್ದು ದಾರುಣದುಃಖಮನೆಯ್ದದಿರ್ಕುಮೇ(.೫೬)

ಜೀವಸಂಬೋಧನೆಯ ಕೆಲವು ಪದ್ಯಗಳಂತೂ ತಮ್ಮ ನಾಟಕೀಯತೆಯಿಂದ, ಆರ್ತತೆಯಿಂದ ಚಿತ್ತಸ್ಪರ್ಶಿಯಾಗಿವೆ. ವ್ಯಕ್ತಿಗೆ ಹೊರಗಿನ ಉಪದೇಶದಿಂದ ಉಪಯೋಗವಿಲ್ಲ. ಅವನು ತನಗೆ ತಾನೆ ಉಪದೇಶಿಸಿಕೊಳ್ಳಬೇಕು, ತನ್ನ ಸುಪ್ತಪ್ರಜ್ಞೆಗೆ ಹಿತಕರವಾದ ಸಲಹೆಗಳನ್ನಿತ್ತು (Auto-Suggestion) ಅದನ್ನು ಪರಿವರ್ತಿಸಬೇಕು. ಪ್ರಾಯಃ ಈ ಮನಶ್ಶಾಸ್ತ್ರೀಯ ಸತ್ಯ ಪ್ರಕೃತ ಜೀವ ಸಂಬೋಧನೆಯ ಭಾಗದಲ್ಲಿದೆ.

ಮತಿಗೆಟ್ಟು ಜೀವೊಧರ್ಮಾ
ಮೃತಮಂ ಸೇವಿಸದಧರ್ಮಮಂ ಸೇವಿಸಿ ದು
ರ್ಗತಿಗಿೞಿದೀ ಜವನೆಂಬಱ
ಸಿ ತಿಂಬ ದೈವಕ್ಕೆ ಪಾಳಂ ಬಿಡುವೈ (.೫೮)
ಎನಿತೆನಿತು ಕೞದ ಭವಮಂ
ನೆನೆದಪೆಯೆನಿತೆನಿತು ಭವದ ಬಂಧುಗಳಂ ನೀಂ
ನೆನೆದಪೆಯೆನಿತೆನಿತೊಡಲಂ
ನೆನೆದಪೆಯೆಲೆ ಜೀವ ನೀನೆ ಪೇೞ್ ಪವಣೊಳವೇ(೬೦)

ಕಡೆಯಿಲ್ಲದ ಸಂಸಾರದ
ಕಡೆಗಾಣಲ್ಬಗೆವೆಯಪ್ಪೊಡೆನ್ನುಕ್ತಿಗೊಡಂ
ಬಡು ಜೀವ ನಿನ್ನ ಕಾಲಂ
ಪಿಡಿವೆಂ ಧರ್ಮಮನೆ ಮಗುೞೆ ಬಲ್ವಿಡಿವಿಡಿಯಾ (೬೩)

ಈ ಆತ್ಮಯಾಚನೆಯ ಪರಿ ಅಪೂರ್ವವಾದುದು. ಸಂಸಾರದ ಅನಿತ್ಯತೆಯನ್ನೂ ಧರ್ಮಶರಣಾಗತಿಯ ಅನಿವಾರ್ಯತೆಯನ್ನೂ ಮನಗಾಣಿಸುವಲ್ಲಿ ಈ ಪ್ರಕರಣ ಬಹುಮಟ್ಟಿಗೆ ಯಶಸ್ವಿಯಾಗಿದೆ.

ಸಗರಾಖ್ಯಾನ ‘ಉತ್ತರಪುರಾಣ’ದಲ್ಲಿ ಸರಳವಾಗಿ, ಸಂಕ್ಷಿಪ್ತವಾಗಿ ಬಂದಿದೆ. ಅದನ್ನು ರನ್ನ ವಿಸ್ತೃತವಾಗಿ, ಹೆಚ್ಚು ಕಲಾತ್ಮಕವಾಗಿ ನಿರ್ವಹಿಸಿದ್ದಾನೆ; ಸ್ವಲ್ಪ ಸ್ವಾತಂತ್ರ್ಯವನ್ನೂ ವಹಿಸಿದ್ದಾನೆ. ಸಗರನಿಗೆ ಹೇಗೆ ವೈರಾಗ್ಯೋದಯವಾಯಿತೆಂಬುದೇ ಈ ಭಾಗದ ಹುರುಳು. ಇಲ್ಲಿ ಕುತೂಹಲಕರವಾದ ಕತೆಯಿದೆ; ಜತೆಗೆ, ಮೆಚ್ಚುಗೆ ಮೂಡಿಸಬಲ್ಲ ಮನೋವಿಶ್ಲೇಷಣೆಯಿದೆ.

ಸಗರ ತನ್ನ ಹಿಂದಿನ ಮೂರನೆಯ ಭವದಲ್ಲಿ ಜಯಸೇನನೆಂಬ ಅರಸನಾಗಿರುವಾಗ, ಅವನಿಗೆ ಇಬ್ಬರು ಮಕ್ಕಳು. ಅವರಲ್ಲೊಬ್ಬ ಮೃತನಾದಾಗ ಸಗರ ದುಃಖಿತನಾಗುತ್ತಾನೆ. ಆಗ ಮಹಾರುತನೆಂಬ ಮೈದುನ ಅವನಿಗೆ ಸಂಸಾರಸ್ವರೂಪವನ್ನು ತಿಳಿಸಿ, ಧರ್ಮವನ್ನು ಉಪದೇಶಿಸುತ್ತಾನೆ:

ತನಯವ್ಯಾಮೋಹದಿಂದಂ ಮಱುಗಿದೊಡೆಮಗಿಂ ಬರ್ಕುಮೇ ಸದ್ವಿವೇಕಂ
ಮನದಿಂ ಗೆಂಟಾಯ್ತು ಕಾಲಾನಲಕಬಳಿತರಾರಾರ್ಗದಾರಾರ್ಗೆ ಶೋಕಾಂ
ಧನೆಯಪ್ಪೈ ಖೇದಮಂ ನಂಬದೆ ಜಿನಮತಮಂ ನಂಬು ನೀನೆಯ್ದೆ ಧರ್ಮಂ
ನಿನಗಾರ್ಮಂ ನೀನುಮಾನುಂ ತಳರ್ವಮೊಡನೆ ಸಂಸಾರ ಕಾಂತಾರದಿಂದಂ(.)

‘ಸಂಸಾರಕಾಂತಾರ’ ಎಂಬ ಮಾತು ಅರ್ಥವತ್ತಾಗಿದೆ : ಕಾಡು ಕಾಡಲ್ಲ, ಈ ಸಂಸಾರ ನಿಜವಾದ ಕಾಡು-ಹಿಂಸ್ರಜಂತುಗಳಿಂದ ತುಂಬಿ ಅಪಾಯಕರವಾದದ್ದು, ದಾರಿತಪ್ಪಿಸುವಂಥದು.

ಮುಂದೆ ಜಯಸೇನನೂ ಮಹಾರುತನೂ ಹದಿನೆಂಟನೆಯ ಕಲ್ಪದಲ್ಲಿ ಮಹಾಬಲ, ಮಣಿಕೇತು ಎಂಬ ದೇವತೆಗಳಾಗಿ ಹುಟ್ಟುತ್ತಾರೆ. ಅವರೊಮ್ಮೆ ಹೀಗೆ ಒಪ್ಪಂದ ಮಾಡಿಕೊಳ್ಳುತ್ತಾರೆ: ‘‘ನಮ್ಮಿಬ್ಬರಲ್ಲಿ ಯಾರು ಮೊದಲು ಮನುಷ್ಯಲೋಕಕ್ಕೆ ಹೋಗು ತ್ತಾರೋ ಅವರನ್ನು ದೇವಲೋಕದಲ್ಲಿರುವವರು ಹೋಗಿ ಪ್ರತಿಬೋಧಿಸಿ, ವಿಷಯ ಸುಖವಿಮುಖರನ್ನಾಗಿ ಮಾಡತಕ್ಕದ್ದು.’’

ಜಯಸೇನ ಮುಂದೆ ಅಯೋಧ್ಯಾಪುರದಲ್ಲಿ ಸಗರನೆಂಬ ದೊರೆಯಾಗಿ ಹುಟ್ಟುತ್ತಾನೆ. ತೊಂಬತ್ತಾರು ಸಾವಿರ ಪತ್ನಿಯರೊಡನೆ ಮತ್ತು ಅರವತ್ತು ಸಾವಿರ ಮಕ್ಕಳೊಡನೆ ಅವನು ಸುಖವೈಭವಗಳಿಂದಿರುವಾಗ, ಒಮ್ಮೆ ಮಣಿಕೇತು ಬಂದು ಅವನಿಗೆ ಪೂರ್ವಭವವನ್ನೂ ತಾವು ಹಿಂದೆ ಮಾಡಿಕೊಂಡಿದ್ದ ಕರಾರನ್ನೂ ಜ್ಞಾಪಿಸುತ್ತಾನೆ. ಸಗರನಿಗೆ ಅದು ನೆನಪಾದರೂ ಅವನು ಸಂಸಾರವನ್ನು ತೊರೆಯಲು ಇಷ್ಟಪಡುವುದಿಲ್ಲ. ‘‘ಆರ್ ಗೆಲಲಾರ್ಪರೊ ಮೋಹರಾಜನಂ?’’ ಎಷ್ಟೋ ವರ್ಷಗಳಾದ ಮೇಲೆ ಮಣಿಕೇತು ಪುನಃ ಬಂದು ಸಗರನನ್ನು ಎಚ್ಚರಿಸುತ್ತಾನೆ:

ಅಳವಿಯಿನಿಂತನಂತ ಸುಖನಂತಜರಾಮರನಂತೆ ಮುಕ್ತಿ ಹೇ
ತುವನಘಕೇತುವಂ ಪರಮದೀಕ್ಷೆಯನೊಲ್ಲದೆ ರಾಜ್ಯಮೋಹದಿಂ
ಭವಜಲರಾಶಿಯೊಳ್ ಮುೞುಗಲೞ್ತಯೆ ಚರ್ವಿತ ಚರ್ವಣಕ್ಕೆ ನೀ
ನವಚರಬೇಡ ಸಾಲದೆ ಭವಾನುಭವಂ ಸಗರಾವನೀಶ್ವರಾ (೧೦.)

ಆದರೆ ಈಗಲೂ ಸಗರನಿಗೆ ವೈರಾಗ್ಯ ಹುಟ್ಟುವುದಿಲ್ಲ.

ಮಣಿಕೇತು ಸಗರನಿಗೆ ಪುತ್ರವಿಯೋಗವಾಗುವಂತೆ ಮಾಡಬೇಕೆಂದು ಒಂದು ಉಪಾಯ ಹೂಡುತ್ತಾನೆ. ಅವನ ಇಡೀ ಯೋಜನೆ ನಾಟಕೀಯ ಸ್ವಾರಸ್ಯದಿಂದ ಕೂಡಿ, ಅರ್ಥಪೂರ್ಣವಾಗಿದೆ.

ಒಂದು ಸಂದರ್ಭದಲ್ಲಿ ಸಗರನ ಮಕ್ಕಳೆಲ್ಲ ಭಸ್ಮಾವಲೇಪನರಾಗುವಂತೆ ಮಾಡುತ್ತಾನೆ ಮಣಿಕೇತು. ಆಮೇಲೆ ಚಾರಣವೇಷದಲ್ಲಿ ಸಗರನ ಬಳಿಗೆ ಬರುತ್ತಾನೆ. ಅರವತ್ತುಸಾವಿರ ಮಕ್ಕಳು ಅಳಿದರೆಂದು ಸಗರನಿಗೆ ಅವನು ತಟಕ್ಕನೆ ಹೇಳುವುದಿಲ್ಲ. ಹಾಗೆ ಹೇಳಿದ್ದರೆ, ಸಗರನಿಗೆ ವಿರಕ್ತಿ ಹುಟ್ಟುವುದಿರಲಿ, ಅನೀರಿಕ್ಷಿತವಾದ ಆಘಾತದಿಂದ ಮರಣವೇ ಉಂಟಾಗಬಹುದಿತ್ತು. ಪುತ್ರನಾಶದ ಆಘಾತದ ಸೈರಣೆಗೆ ಅವನ ಹೃದಯವನ್ನು ಹದಗೊಳಿಸುವುದು, ಸಾವಿನ ಅನಿವಾರ್ಯತೆಯನ್ನೂ ಇಹಜೀವನದ ನಶ್ವರತೆಯನ್ನೂ ಅವನು ಪರಿಭಾವಿಸುವಂತೆ ಮಾಡಿ ವೈರಾಗ್ಯದತ್ತ ತಿರುಗಿಸುವುದು, ಜೊತೆಗೆ ಅವನ ಮಾತಿನಲ್ಲೆ ಅವನನ್ನು ಸಿಕ್ಕಿಸುವುದು -ಇಷ್ಟೂ ಉದ್ದೇಶಗಳು ಈಡೇರುವಂತೆ ತಂತ್ರ ಮಾಡುತ್ತಾನೆ ಮಣಿಕೇತು. ಇಲ್ಲಿ ಮನೋವೈಜ್ಞಾನಿಕ, ಆಧ್ಯಾತ್ಮಿಕ ಹಾಗೂ ವ್ಯಾವಹಾರಿಕ ಸತ್ಯಗಳ ಮುಪ್ಪುರಿಯನ್ನು ಕಾಣುತ್ತೇವೆ.

ಮಣಿಕೇತು ಅರಮನೆಯ ಬಾಗಿಲಲ್ಲಿ ನಿಂತು ತನ್ನ ಒಬ್ಬನೇ ಮಗನನ್ನು ಯಮ ಒಯ್ದನೆಂದೂ ದೊರೆ ಅವನನ್ನು ಬದುಕಿಸಿಕೊಡಬೇಕೆಂದೂ ಹುಯ್ಯಲಿಡುತ್ತಾನೆ. ಅವನ ಮೊರೆಯನ್ನು ಆಲಿಸಿದ ಸಗರ ವಿಸ್ಮಿತನಾಗಿ, ಚಿಂತಿಸುತ್ತಾನೆ:

ಸತ್ತರನೆತ್ತುವುದೆಂಬುದ
ದೆತ್ತಣ ಮಾತಘಟಮಾನಮೀ ಪಾರ್ವಂ ತಾ
ನೆತ್ತೆತ್ತ ಬಂದು ಮೂಡಿದ
ನೆತ್ತೆತ್ತೆನಗಿನಿತು ದುರ್ಯಶಂ ಮಾಡಿದನೋ (೧೦. ೧೯)

ಆಗ ಸಗರನ ಮನವನ್ನರಿತ ಬುದ್ದಿಸಾಗರದೆಂಬ ಪುರೋಹಿತ-ಇವನು ‘ಉತ್ತರ ಪುರಾಣ’ದಲ್ಲಿಲ್ಲ-ಆ ಬ್ರಾಹ್ಮಣನಿಗೆ ಸಾವಿನ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡಲೋಸುಗ ‘‘ಒಬ್ಬರೂ ಸಾಯದಿರುವ ಮನೆಯ ಬೆಂಕಿಯನ್ನೂ ಹುಲ್ಲನ್ನೂ ತೆಗೆದುಕೊಂಡು ಬಂದರೆ, ನಿನ್ನ ಮಗನನ್ನು ಮರಳಿ ಪಡೆಯುವೆ’’ ಎಂದು ಹೇಳುತ್ತಾನೆ. ಬ್ರಾಹ್ಮಣ ಏನೂ ಅರಿಯದವನಂತೆ ಸ್ವಲ್ಪ ದೂರ ಹೋಗಿ ಮತ್ತೆ ಬಂದು ‘‘ಎಲ್ಲಿಯೂ ಸಿಗಲಿಲ್ಲ’’ ಎನ್ನುತ್ತಾನೆ. ಆಮೇಲೆ ಬುದ್ದಿಸಾಗರ ಅವನಿಗೆ ಮೃತ್ಯುವಿನ ನಿತ್ಯತೆಯನ್ನೂ ಯಮನ ನಿಷ್ಪಕ್ಷಪಾತ ಮತ್ತು ಅಜೇಯತೆಯನ್ನೂ ವರ್ಣಿಸುತ್ತಾನೆ. ಇದು ಚಿತ್ತಕ್ಕೆ ನಾಟುವಂಥ ಭಾಗ. ಎರಡು ಪದ್ಯಗಳನ್ನು ಮಾತ್ರ ಇಲ್ಲಿ ನೋಡಬಹುದು:

ಆರಾರಂ ನುಂಗಿದನಿ
ಲ್ಲಾರಾರಂ ನೊಣೆದನಿಲ್ಲ ಸವಿ ನೋಡಿದನಿ
ಲ್ಲಾರಾರಂ ಸುರಮಾನವ
ನಾರಕತಿರ್ಯಕ್ಸಮೂಹಮಂ ಯಮರಾಜಂ (೧೦.೨೨)

ಜಗದೇಕಕಂಟಕನನಾ ಬಹುಭಕ್ಷಿಯನಾ ತ್ರಿಲೋಕಪಂ
ಕೇಜ ಸಮುತ್ಥ ಜೀವಮಕರಂದ ಮದಾಳಿಯನಾ ಪರಿಸ್ಫುರ
ತ್ತೇಜನನಂಗಜಾಂತಕನಮೋಹನಘಾಂತಕನಂತಕಾಂತಕಂ
ಶ್ರೀಜಿನರಾಜನಲ್ಲದುೞಿದೊಂ ಗೆಲಲಾರ್ಕುಮೆ ಮೃತ್ಯುರಾಜನಂ (೩೦)

‘ತ್ರಿಲೋಕ ಪಂಕೇಜ ಸಮುತ್ಥ ಜೀವಮಕರಂದ ಮದಾಳಿ’ ಎಂಬ ರೂಪಕದ ಸೊಗಸು ಮತ್ತು ಔಚಿತ್ಯ ಗಮನಾರ್ಹವಾಗಿವೆ.

ಬುದ್ದಿಸಾಗರ ಹೀಗೆ ಸಂಸಾರದ ಅಧ್ರುವತೆಯನ್ನು ಬಣ್ಣಿಸಿದಾಗ, ಬ್ರಾಹ್ಮಣ ‘‘ಇವರನಿವರ ನುಡಿಯೊಳ್ ತೊಡರ್ಚುವೆಂ’’ ಎಂದು ಬಗೆದು ಸಗರನನ್ನು ಪ್ರಶ್ನಿಸುತ್ತಾನೆ: ‘‘ಈ ನಿನ್ನ ಪೇೞ್ದ ಧರ್ಮ ಇದೇನ್ ಎನಗೆಯೋ, ನಿನಗಂ ಉಂಟೊ?’’ ಆಗ ಸಗರ ಮುಗುಳ್ನಕ್ಕು ‘‘ಎನಗದು ಮುನ್ನ ಉಂಟು’’ ಎಂದು ಉತ್ತರಿಸುತ್ತಾನೆ. ಆಮೇಲೆ ಬ್ರಾಹ್ಮಣ ತಿಳಿಸುತ್ತಾನೆ: ‘‘ನಿನ್ನ ಅರುವತ್ತು ಸಾಸಿರ್ವರ್ ಮಕ್ಕಳುಮಿಂದು ದೃಷ್ಟಿ ವಿಷಮ ವಿಷಧರನಿಂದಂ ಭಸ್ಮಾವಶೇಷರಾದರ್.’’ ಆಗ ಸಗರ ವಿಚಲಿತನಾಗದೆ ‘‘ಸಂಸಾರಿ ಜೀವಂಗಳ್ ಅಂದು ಪುಟ್ಟಿದರ್ ಅಂದೆ ಸತ್ತರ್, ನುಡಿ ಇದೇಂ ಚೋದ್ಯಂ?’’ ಎಂದಷ್ಟೆ ಉದ್ಗರಿಸುತ್ತಾನೆ.

ಮಣಿಕೇತುವಿನ ಅಸಾಧಾರಣ ತಂತ್ರ ಫಲಿಸಿದ್ದನ್ನು, ತತ್ಪರಿಣಾಮವಾಗಿ ಸಗರ ಮೋಹವನ್ನು ನೀಗಿಕೊಂಡು ವೈರಾಗ್ಯೋನ್ಮುಖನಾದುದನ್ನು ಇಲ್ಲಿ ಕಾಣುತ್ತೇವೆ. ಮೃತ್ಯು ಅಪರಿಹಾರ್ಯ, ಧರ್ಮವೆ ಶರಣು ಎಂಬುದನ್ನು ಸಗರ ನಂಬುವಂತೆ ಮಾಡಿ, ಅದಕ್ಕೆ ಪೂರಕವಾಗಿ ಸುತವಿಯೋಗವನ್ನುಂಟುಮಾಡಿದ್ದರಿಂದ ಸಗರನ ಚಿತ್ತ ಪರಿವರ್ತಿತವಾಗುತ್ತದೆ. ಮುಂದೆ ಅವನು ‘‘ಕಡೆಯೆಯ್ದಿತ್ತೆನಗಿಂದು ರಾಜ್ಯವಿಭವಂ ಪೊಣ್ಮಿರ್ದ ಮೋಹೋದಯಂ ತಡಿಸಾರ್ದಿರ್ದಪುದಕ್ಕೆ ಮಂಗಳ ಮಹಾಶ್ರೀ’’ ಎಂದು ಘೋಷಿಸಿ, ತಪಸ್ಸಿಗೆ ತೆರಳುತ್ತಾನೆ.

ಈ ಸಗರಕಥೆ ವೈದಿಕ ಹಾಗೂ ಬೌದ್ಧ ಕಥಾಂಶಗಳನ್ನು ಅಳವಡಿಸಿಕೊಂಡು, ಅಂತಿಮವಾಗಿ ಜೈನಧರ್ಮಪರವಾಗಿದೆ; ರನ್ನನ ಪ್ರತಿಭೆಗಿದು ಸಮೀಚೀನ ನಿದರ್ಶನ.

ಗದಾಯುದ್ಧ

‘ಗದಾಯುದ್ಧ’ ಕನ್ನಡಸಾಹಿತ್ಯದ ಅತ್ಯಂತ ವಿಶಿಷ್ಟ ಕೃತಿಗಳಲ್ಲಿ ಒಂದು. ಅದರಲ್ಲಿ ಶ್ರೇಷ್ಠತೆಗಿಂತ ವಿಶಿಷ್ಟತೆಯೇ ಮಿಗಿಲೆನ್ನಬಹುದು. ಈ ವೈಶಿಷ್ಟ್ಯಕ್ಕೆ ಅನೇಕ ಮುಖಗಳು.

ಮೊದಲ ನೋಟಕ್ಕೇ ‘ಗದಾಯುದ್ಧ’ದಲ್ಲಿ ಒಡೆದು ಕಾಣುವ ಗುಣವೆಂದರೆ ಅದರ ನಾಟಕೀಯತೆ. ಚಂಪೂ ವೇಷ ತೊಟ್ಟ ಒಂದು ನಾಟಕವೇ ಸರಿ ಈ ಕಾವ್ಯ. ಓದುಗಬ್ಬವಾಗಿ ಪರಿಗಣಿತವಾದಾಗ ಗಮನಕ್ಕೆ ಬರುವ ಎಷ್ಟೋ ದೌರ್ಬಲ್ಯಗಳನ್ನು ಇದು ದೃಶ್ಯಕಾವ್ಯದ ನೆಲೆಯಲ್ಲಿ ಮುಚ್ಚಿಕೊಳ್ಳುತ್ತದೆ. ರಂಗದ ಮೇಲೆ ಅದ್ಭುತವಾಗಿ ರಂಜಿಸಬಲ್ಲ ಅಗ್ಗಳಿಕೆ ‘ಗದಾಯುದ್ಧ’ದ್ದು.

ಸಾಮಾನ್ಯವಾಗಿ ಕನ್ನಡ ಚಂಪೂಕಾವ್ಯಗಳು ಹದಿನಾಲ್ಕು ಅಥವಾ ಹದಿನಾರು ಆಶ್ವಾಸಗಳ ವ್ಯಾಪ್ತಿಯುಳ್ಳವಾಗಿದ್ದರೆ, ‘ಗದಾಯುದ್ಧ’ ಕೇವಲ ಹತ್ತು ಚಿಕ್ಕ ಆಶ್ವಾಸಗಳ ಕಿರುಗಬ್ಬವಾಗಿರುವುದೂ ಗಮನಾರ್ಹವಾದ ಅಂಶ. ಚಂಪೂ ಸಹಜವಾದ ಅಷ್ಟಾದಶವರ್ಣನೆ ಗಳ ವಿಜೃಂಭಣೆಯೂ ಇಲ್ಲಿಲ್ಲ. (ಆದರೆ ಎಲ್ಲ ರಸಗಳನ್ನೂ ತರಬೇಕೆಂಬ ಚಪಲವಿದೆ). ಇದಕ್ಕೆ ಕಾರಣ ಬಹುಶಃ ರನ್ನನ ನಾಟ್ಯದೃಷ್ಟಿ.

‘ಗದಾಯುದ್ಧ’ದ ವಸ್ತು ಮಹಾಭಾರತ ಸಂಬಂಧಿಯಾದರೂ, ವ್ಯಾಸಭಾರತ ಅದಕ್ಕೆ ಆಕರವಲ್ಲವೆಂಬುದು ಮತ್ತು ಪಂಪಭಾರತವನ್ನೇ ರನ್ನ ಆಧಾರವಾಗಿಟ್ಟುಕೊಂಡಿದ್ದಾನೆಂಬುದು ಕುತೂಹಲಕರವಾದ ವಿಚಾರ. ಸಂಸ್ಕೃತದಿಂದ ವಸ್ತುವನ್ನು ಸ್ವೀಕರಿಸುವುದು, ಸಂಸ್ಕೃತ ಕಾವ್ಯಗಳನ್ನು ಪೂರ್ಣವಾಗಿಯೊ ಆಂಶಿಕವಾಗಿಯೊ ಅನುವಾದಿಸುವುದು ಸಾಮಾನ್ಯವಾಗಿ ಕನ್ನಡ ಕವಿಗಳ ಪದ್ಧತಿ. ರನ್ನನಾದರೊ ಕನ್ನಡದಿಂದಾಚೆಗೆ ಹೋಗದೆ ತನ್ನ ಹಿರಿಯ ಸಮಕಾಲೀನನಾದ ಪಂಪನ ಭಾರತವನ್ನೇ ಬಹುತೇಕ ಅನುವಾದಿಸಿಬಿಟ್ಟಿದ್ದಾನೆ. ಈ ಅನನ್ಯ ಧಾರ್ಷ್ಟ ಮೆಚ್ಚಬೇಕಾದದ್ದೇ. ಅಂತೂ ‘ಗದಾಯುದ್ಧ’ದ ಗುಣೋತ್ಕರ್ಷಕ್ಕೆ, ಕೆಲವೊಮ್ಮೆ ದೋಷಗಳಿಗೆ ಕೂಡ, ಪಂಪ ಭಾರತವೆ ಬಹುಮಟ್ಟಿಗೆ ಕಾರಣವೆನ್ನಬೇಕು.

‘ಗದಾಯುದ್ಧ’ಕ್ಕೆ ಸಂಸ್ಕೃತದಲ್ಲಿ ಆಕರಗಳೇ ಇಲ್ಲವೆಂದಲ್ಲ. ಭಾಸನ ‘ಊರುಭಂಗ’ ಹಾಗೂ ಭಟ್ಟನಾರಾಯಣನ ‘ವೇಣೀಸಂಹಾರ’ವನ್ನು- ಮುಖ್ಯವಾಗಿ ಎರಡನೆಯದನ್ನು -ರನ್ನ ಬಳಸಿಕೊಂಡಿದ್ದಾನೆ. ‘ಗದಾಯುದ್ಧ’ದ ನಾಟಕೀಯ ವಿನ್ಯಾಸಕ್ಕೆ, ಅಂತೆಯೆ ತಿರುಳಿನ ಕೆಲವಂಶಗಳಿಗೆ ‘ವೇಣೀಸಂಹಾರ’ದ ಪ್ರಭಾವವೆ ಕಾರಣವೆಂಬುದನ್ನು ಮರೆಯುವಂತಿಲ್ಲ.

ಕುವೆಂಪು ರನ್ನನನ್ನು ‘ಶಕ್ತಿಕವಿ’ ಎಂದು ಕರೆದು, ‘ಶಕ್ತಿ’ಯೆ ‘ಗದಾಯುದ್ಧ’ದ ಸರ್ವಸ್ವವೆಂದು ನಿರ್ಣಯಿಸಿ, ವ್ಯಕ್ತಿಯಾಗಿ ಮತ್ತು ಕವಿಯಾಗಿ ರನ್ನನ ನಾಡೀಸ್ಪಂದನದ ಮೇಲೆ ಬೆರಳಿಟ್ಟಿದ್ದಾರೆ. ರನ್ನನ ಕೃತಿ ಓಜೋಗುಣ ಸಮೃದ್ಧವಾದುದು ಎಂಬುದು ಕುವೆಂಪು ಅವರ ಹೇಳಿಕೆಯಿಂದ ಸೂಚಿತವಾಗುತ್ತದೆ. ಈ ಓಜಸ್ಸು, ಭಾವೋತ್ಕಟತೆ ರನ್ನನನ್ನು ಪಂಪನಿಂದ ಬೇರ್ಪಡಿಸುತ್ತವೆ ಮಾತ್ರವಲ್ಲ, ಅವನ ಪರಿಮಿತಿಯೂ ಆಗಿದೆ. ಇಲ್ಲಿಯೂ ‘ವೇಣೀ ಸಂಹಾರ’ದ ಪ್ರೇರಣೆಯಿರುವುದನ್ನು ಲಕ್ಷಿಸದಿರುವುದು ಸಾಧ್ಯವಿಲ್ಲ.

ಸಮಗ್ರ ಮಹಾಭಾರತವನ್ನು ‘ಗದಾಯುದ್ಧ’ ನಿರೂಪಿಸುವುದಿಲ್ಲ. ಹೆಸರೇ ಹೇಳುವಂತೆ, ಮಹಾಭಾರತದ ಅಂತಿಮ ಹಂತವನ್ನು ಚಿತ್ರಿಸುವುದಷ್ಟೆ ಅವರ ಉದ್ದೇಶ. ಭೀಮ-ದುರ್ಯೋಧನರ ‘ಗದಾಯುದ್ಧ’ವೆ ಅದರ ಶಿಖರ ಕ್ರಿಯೆ. ಉಳಿದುದೆಲ್ಲ ಅದಕ್ಕೆ ಉಪಷ್ಟಂಭಕ. ಭೀಮನ ಪ್ರತಿಜ್ಞೆಯಿಂದ ನಾಂದಿಗೊಳ್ಳುವ ಕಾವ್ಯ ಆ ಪ್ರತಿಜ್ಞೆಯ ಕಾರ್ಯಸಿದ್ದಿಯಲ್ಲಿ, ದ್ರೌಪದಿಯ ವೇಣೀಬಂಧನದಲ್ಲಿ-ಇದು ಬಹುಮುಖ್ಯ- ಪರ್ಯವಸಾನಗೊಳ್ಳುತ್ತದೆ. ಎಂತಲೇ ‘ಗದಾಯುದ್ಧ’ದ ವಸ್ತುಸಂವಿಧಾನದಲ್ಲಿ ಅನ್ಯಾದೃಶ ವಾದ ಬಿಗಿಯಿದೆ. ಐಕ್ಯವಿದೆ. ಗದಾಯುದ್ಧ ಘಟನೆಯೆ ಇಲ್ಲಿನ ಹೃದಯವಾದುದರಿಂದ, ವೀರ ರೌದ್ರಗಳು ಇಲ್ಲಿ ಪ್ರಧಾನ ರಸಗಳಾಗಿವೆ; ಅವುಗಳ ಪ್ರತಿಪಾದನೆಯಲ್ಲಿ ರನ್ನನ ಶಕ್ತಿ ಪರಾಕೋಟಿಗೇರಿದೆ.

ರನ್ನ ಮಹಾಭಾರತವನ್ನೆಲ್ಲ ಹೇಳದಿದ್ದರೂ, ಅದರ ಪ್ರಮುಖವಾದ ಆಗುಹೋಗು ಗಳನ್ನು ‘ಸಿಂಹಾವಲೋಕನ ಕ್ರಮ’ದಿಂದ ಅರುಹಿದ್ದಾನೆ. ಈ ಕ್ರಮ ಆಧುನಿಕ Flash-back ತಂತ್ರಕ್ಕೆ ಭಾಗಶಃ ಸಂವಾದಿಯಾದದ್ದು.

ಕವಿ ಮಹಾಭಾರತದ ಕಡೆಯ ಮಜಲಿಗೆ, ದುರ್ಯೋಧನನ ಕೊನೆಯ ದಿನಗಳಿಗೆ ತನ್ನ ದೃಷ್ಟಿಯನ್ನು ಸೀಮಿತ ಮಾಡಿಕೊಂಡು, ‘ಅಸ್ತಾದ್ರಿ’ಯಾದ ದುರ್ಯೋಧನನ ಮೇಲೆ ತನ್ನ ಲಕ್ಷ್ಯವನ್ನು ಕೇಂದ್ರೀಕರಿಸಿದ್ದರಿಂದ, ಅವನ ಕಾವ್ಯಕ್ಕೆ ಕೆಲವು ಆನುಕೂಲ್ಯಗಳುಂಟಾಗಿವೆ; ಹಾಗೆಯೆ ಇದು ಕೆಲವು ತೊಡಕುಗಳನ್ನೂ ಹುಟ್ಟಿಸಿದೆ.

ತನ್ನ ಪೋಷಕನಾದ ಇಱವ ಬೆಡಂಗ ಸತ್ಯಾಶ್ರಯನಿಗೂ ಭೀಮನಿಗೂ ಅಭೇದ ಕಲ್ಪಿಸಿ, ಭೀಮನ ಶೌರ್ಯಸಾಹಸಗಳನ್ನು ಬಣ್ಣಿಸಬೇಕೆಂಬುದು ರನ್ನನ ಆಶಯ; ಭೀಮನೇ ಕಥಾನಾಯಕ. ಆದರೆ ಪ್ರತಿನಾಯಕನಾದ ದುರ್ಯೋಧನನಿಗೂ ಸಮಾನ ಪ್ರಾಶಸ್ತ್ಯವನ್ನು ಕೊಟ್ಟು, ಅವನ ವ್ಯಕ್ತಿತ್ವವನ್ನು ಸವಿವರವಾಗಿ ಪೃಥಕ್ಕರಿಸುವ ಅವಕಾಶವೂ ರನ್ನನಿಗೆ ಸಿಕ್ಕಿದೆ; ಅದನ್ನವನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾನೆ. (ಅರ್ಜುನನನ್ನು ನಾಯಕನನ್ನಾಗಿ ಮಾಡಿಕೊಂಡೂ ಅವನ ಎದುರಾಳಿಯಾದ ಕರ್ಣನಿಗೆ ಎದೆಗರಗಿ ‘‘ಕರ್ಣ ರಸಾಯನಮಲ್ತೆ ಭಾರತಂ’’ ಎಂದು ಉದ್ಗರಿಸಿದ ಪಂಪನೆ ಈ ವಿಷಯದಲ್ಲೂ ರನ್ನನಿಗೆ ಸ್ಫೂರ್ತಿ). ಎಷ್ಟರಮಟ್ಟಿಗೆಂದರೆ, ದುರ್ಯೋಧನನೇ ‘ಗದಾಯುದ್ಧ’ದ ನಿಜವಾದ ನಾಯಕ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿರುವುದುಂಟು; ಅಷ್ಟೆ ಅಲ್ಲ, ದುರ್ಯೋಧನನೊಬ್ಬ ‘ಮಹಾನುಭಾವ’ -ಇದು ಕವಿಯದೇ ಮಾತು-, ಉದಾತ್ತ ವ್ಯಕ್ತಿ ಎಂದು ಬಗೆದವರೂ ಇಲ್ಲದಿಲ್ಲ.

ಆದರೆ ಇಂಥ ನಿಲುವು ಅಸಾಧುವಾದದ್ದು. ದುರ್ಯೋಧನ ಮೂಲಭೂತವಾಗಿ ದುಷ್ಟನೇ; ತನ್ನ ಜೀವಿತದ ಅಂತ್ಯಕಾಲದಲ್ಲಿ ಅವನು ಪ್ರಕಟಿಸುವ ಕೆಲವೊಂದು ಸದ್ಗುಣಗಳು, ಅವನ ಪೂರ್ವಚರಿತ್ರೆಯನ್ನು ಮರೆಯಿಸಲಾರವು. (ತಾನು ‘ಪಾಪಕರ್ಮಿ’ಯೆಂದ ‘ನಿರ್ಗುಣಿ’ಯೆಂದೂ ಅವನೇ ಒಂದು ಕಡೆ ಹೇಳಿಕೊಂಡಿರುವುದನ್ನು ನೆನೆಯಬಹುದು). ಅಂತೆಯೆ, ಭೀಮ ಕಡೆಯಲ್ಲಿ ತೋರುವ ಕೆಲವು ‘ದುರ್ಗುಣ’ಗಳು ಅವನನ್ನು ಕೆಟ್ಟವನನ್ನಾಗಿ ಮಾಡಲಾರವು. ಭೀಮ ಭೀಮನೇ, ಕೌರವ ಕೌರವನೇ. ಅವರನ್ನು ಹಟಾತ್ತಾಗಿ ಪರಿವರ್ತಿಸುವುದು ಸಾಧ್ಯವಿಲ್ಲ. ಅಂಥ ಪರಿವರ್ತನೆ ರನ್ನನಿಂದ ಸಾಧ್ಯವಾಗಿಯೂ ಇಲ್ಲ. ಅವನಲ್ಲಿ ಸಮತೋಲನವಿಲ್ಲದ್ದೇ ಎಲ್ಲ ತಪ್ಪು ತಿಳುವಳಿಕೆಗೆ ಕಾರಣ. ಇನ್ನು, ದುರ್ಯೋಧನ ದುರಂತನಾಯಕ ಎಂಬ ವಾದವೂ ಸಮಂಜಸವಲ್ಲ. ಅವನ ‘ಅಭಿಮಾನಧನತೆ’ಯನ್ನು ರನ್ನ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ; ಆದರೆ ಈ ಚಿತ್ರಕ್ಕೆ ಮೂಲದ್ರವ್ಯ ಪಂಪನಲ್ಲೆ ಇದೆ.

‘ಗದಾಯುದ್ಧ’ದಲ್ಲಿ ವೀರ, ರೌದ್ರ ರಸಗಳನ್ನು ಬೆರಗುಗೊಳಿಸುವಂತೆ ಬೆಳಗಿದ್ದಾನೆ ರನ್ನ. ಅವನ ಕವಿತೆಯ ‘ಶೀಲ’, ಶೈಲಿ ಎರಡಕ್ಕೂ ದೃಷ್ಟಾಂತವಾಗಬಲ್ಲುವು ಈ ಕೆಲವು ಪ್ರಸಿದ್ಧ ಪದ್ಯಗಳು:

ಕುರುಭೂಭೃದ್ಬಲ ತೂಲಕಾಲಪವನಂ ಕೌರವ್ಯಗಂದೇಭಕೇ
ಸರಿ ದುಶ್ಶಾಸನ ರಕ್ತ ರಕ್ತವದನಂ ದುರ್ಯೋಧನೋರುಕ್ಷಮಾ
ಧರವಜ್ರಂ ಕುರುರಾಜರತ್ನ ಮಕುಟೋತ್ಕೊಟಾಂಘ್ರಿ ಸಂಘಟ್ಟಸಂ
ಗರನೆಂದಭಿವರ್ಣಿಪೆಂ ರಣಯಶಃ ಶ್ರೀ ರಾಮನಂ ಭೀಮನಂ (. ೫೨)

ಖಳ ದುಶ್ಯಾಸನ ಕೃಷ್ಣಲೋಹಿತ ಜಲಾಶ್ಲಿಷ್ಟಂ ಕುರುಪ್ರೋದ್ಭವ
ಪ್ರಳಯಜ್ವಾಲಿ ಸುಯೋಧನೋರು ಮಕುಟೋದ್ಘಟ್ಟ ಪ್ರತಿಜ್ಞಾಕ್ಷರಾ
ವಳಿವಿನ್ಯಸ್ತ ವಿಶಾಲ ನಿಶ್ಚಳ ಶಿಲಾಸ್ತಂಭಂ ಕುರುಕ್ಷೇತ್ರದೊಳ್
ಪ್ರಳಯೋಗ್ರಾಂತಕನಂತಗುರ್ವನೊಳಕೊಂಡಿರ್ದಂ ಹಿಡಿಂಬಾಂತಕಂ (.೫೫)

ಆರವಮಂ ನಿರ್ಜಿತಕಂ
ಠೀರವರವಮಂ ನಿರಸ್ತಘನರವಮಂ ಕೋ
ಪಾರುಣನೇತ್ರಂ ಕೇಳ್ದಾ
ನೀರೊಳಗಿರ್ದು ಬೆಮರ್ತನುರಗಪತಾಕಂ (.೨೨)

ರಸೆಯಿಂ ಕಾಲಾಗ್ನಿ ರುದ್ರಂ ಪೊರಮಡುವುವೊಲಂತಾ ಸರೋಮಧ್ಯದಿಂ ಸಾ
ಹಸಗರ್ವಾಲಂಕೃತಂ ತೊಟ್ಟನೆ ಕೊಳೆ ಪೊರಮಟ್ಟೆಲ್ಲಿದಂ ಭೀಮನೆಂದೆ
ಣ್ದೆಸೆಯಂ ನೋಡುತ್ತೆ ಮತ್ತದ್ಭುತ ನಟನಿಟಿಲಾಲೋಲ ಕೀಲಾಕ್ಷಿವೊಲ್
ಳ್ಳಿಸೆ ಕೋಪಾರಕ್ತ ನೇತ್ರಂ ನಿರಭುಜಗದೆಯಂ ತೂಗಿದಂ ಧಾರ್ತರಾಷ್ಟ್ರಂ (.೩೦)

ಸ್ಥಿರಬದ್ಧಮತ್ಸರರ್ ಭೀ
ಕರ ಬದ್ಧಭ್ರುಕುಟಿ ಘಟಿತರದ್ಭುತರಟ್ಟಾ
ಸುರರಧಿಕ ಕೋಪ ಪಾಟಳ
ಪರುಷೇಕ್ಷಣರೆನಿಸಿ ದೃಷ್ಟಿಯುದ್ಧಂಗೆಯ್ದರ್ (.)

ಇಂಥ ಕಡೆ ಸಮಾಸದೀಪ್ತವಾಗಿ ಮೊರೆಯುವ, ಆಸ್ಫೋಟಿಸುವ ರನ್ನನ ಬರವಣಿಗೆ ಕರುಣ ಸಂದರ್ಭದಲ್ಲಿ ಹೇಗೆ ಸರಳ ನಮ್ರವಾಗಿ ಶೋಭಿಸುತ್ತದೆಂಬುದಕ್ಕೆ ಇದೊಂದು ಉದಾಹರಣೆ ಸಾಕು:

ನಯನದೊಳಮೆರ್ದೆಯೊಳಂ ನಿ
ನ್ನಯ ರೂಪಿರ್ದಪುದು ನಿನ್ನ ಮಾತಿರ್ದಪುದೆ
ನ್ನಯ ಕಿವಿಯೊಳಮಿನನಂದನ
ವಿಯೋಗಮೆಂತಾದುದಱಯೆನಂಗಾಧಿಪತೀ (.೨೪)

ರನ್ನನ ಶೈಲಿ ಅವನ ಕಾವ್ಯದ ಅತ್ಯುತ್ತಮ ಸಿದ್ದಿ. ಅದು ವಿಶೇಷವಾಗಿ ಅವನದೇ; ಎಲ್ಲಿಯೂ ಮುಕ್ಕಾಗದ ಮೋಹಕತೆ ಅದಕ್ಕೆ. ರನ್ನ ಏನನ್ನೇ ಹೇಳಲಿ, ಅದು ಒಂದು ವೇಳೆ ಅವನದಲ್ಲವಾದರೂ ಸರಿಯೆ, ಅದನ್ನು ತನ್ನದೇ ಆದ ರೀತಿಯಲ್ಲಿ ಹೇಳುತ್ತಾನೆ, ಮನಮುಟ್ಟುವಂತೆ ಹೇಳುತ್ತಾನೆ. ಅವನ ಶೈಲಿ ಕಣ್ಣು ಕೋರೈಸುತ್ತದೆ, ಕಿವಿ ತುಂಬುತ್ತದೆ. ಒಮ್ಮೆಮ್ಮೆ ಅಪ್ಪಳಿಸುತ್ತದೆ. ಕೆಲವೊಮ್ಮೆ ಅದು ಕಿವಿಗೆ ಲಗ್ಗೆ ಹಾಕಿ ಹೃದಯವನ್ನು ವಂಚಿಸುವಂತಿರುವುದೂ ದಿಟ. ಅಂಥ ಕಡೆ ಸಹೃದಯ ಎಚ್ಚರದಿಂದಿದ್ದು, ತನ್ನ ವಿಮರ್ಶನಶಕ್ತಿ ಪಟುವಾಗಿ ಉಳಿಯುವಂತೆ ನೋಡಿಕೊಳ್ಳಬೇಕಾಗುತ್ತದೆ. ‘‘ಭೀಮಸೇನ ನೊದೆದಂ ವಾಮಾಂಘ್ರಿಯಿಂ ರತ್ನಮಂಡಲ ರಶ್ಮಿ ಪ್ರಕಟಜ್ವಲನ್ಮಕುಟಮಂ ಕೌರವ್ಯ ರಾಜೇಂದ್ರನಾ’’, ‘‘ಸುರಾದ್ರಿನಿಶ್ಚಳನಿಬಿಡೋರು ಮಂಡಳಮನಾರುಡಿದರ್ ಫಣಿರಾಜಕೇತನಾ’’ ಮುಂತಾದ ಮಾತುಗಳು ದುರ್ಯೋಧನ ಪಾತ್ರ ವಿವೇಚನೆಯಲ್ಲಿ ವಾಚಕ ಎಡಹುವಂತೆ ಮಾಡುವ ಸಂಭವವುಂಟು.

‘ಗದಾಯುದ್ಧ’ ಮಹಾಕಾವ್ಯವಲ್ಲ- ಪ್ರಾಚೀನಾರ್ಥದಲ್ಲಾಗಲಿ, ಆಧುನಿಕಾರ್ಥದಲ್ಲಾಗಲಿ. ಆದರೆ ಅದೊಂದು ಉತ್ತಮ ಕಾವ್ಯ; ಕವಿಯೆ ಕರೆದು ಕೊಂಡಿರುವಂತೆ ‘ಕೃತಿ ರತ್ನ’ – ಭಿನ್ನಾಭಿಪ್ರಾಯ ದೂರವಾಗಿ. ‘‘ಗುಣದೋಷ ಪರೀಕ್ಷೆಗಾರನಾರ್ ಬಾರಿಪರೋ’’ ಎಂಬ ಸೂಕ್ತಿಯೊಂದುಂಟು ರನ್ನನಲ್ಲಿ.(‘‘ರನ್ನನ ಕೃತಿರತ್ನಮುಮಂ ಪೇೞ್ ಪರೀಕ್ಷಿ ಪಂಗೆಂಟೆರ್ದೆಯೇ’’ ಎಂದು ಸವಾಲು ಹಾಕಿದ ಕವಿಯೆ ಈ ಮಾತನ್ನೂ ಅಡಿರುವುದು ಆಶ್ಚರ್ಯಕರ). ಅದನ್ನೆ ಆಶ್ರಯಿಸಿ, ಒಳಹೊಕ್ಕು ನೋಡಿದಾಗ, ‘ಗದಾಯುದ್ಧ’ದಲ್ಲಿ ಗುಣಗಳೂ ಇವೆ, ದೋಷಗಳೂ ಇವೆ ಎಂಬುದು ಕಂಡುಬರುತ್ತದೆ. ಎಂತಲೇ ಆರಕ್ಕೇರದ, ಮೂರಕ್ಕಿಳಿಯದ ಕಾವ್ಯವಾಗಿದೆ ‘ಗದಾಯುದ್ಧ’. ಅದು ಸಾಕಷ್ಟು ವಿವಾದಕ್ಕೆ ತನ್ನನ್ನು ತೆರೆದುಕೊಂಡಿರುವ ಕೃತಿ. ಅದು ಮೊದಲ ದರ್ಜೆಯ ಕಾವ್ಯವಾಗಿದ್ದರೆ ಅಥವಾ ಕಳಪೆ ರಚನೆಯಾಗಿದ್ದರೆ, ವಿವಾದ ಹುಟ್ಟುತ್ತಲೇ ಇರಲಿಲ್ಲ; ಹುಟ್ಟಿದೆ ಎಂಬ ಸಂಗತಿಯೇ ಸ್ಥಾಪಿಸುತ್ತದೆ, ಅದೊಂದು ಮಧ್ಯಮ ವರ್ಗದ ಕೃತಿಯೆಂಬುದನ್ನು.

* * *

ಒಂದು ದೃಷ್ಟಿಯಿಂದ ರನ್ನನ ‘ಅಜಿತಪುರಾಣ’ ಅವನ ‘ಗದಾಯುದ್ಧ’ಕ್ಕಿಂತ ಮೇಲಾದ ಕಾವ್ಯವೆನ್ನಬಹುದು. ಕಲೆಯ ನಿಟ್ಟಿನಿಂದ ಲೌಕಿಕ ಕೃತಿ ಶೇಷ್ಠ, ಧಾರ್ಮಿಕ ಕೃತಿ ಅದಕ್ಕಿಂತ ಕೆಳಗೆ ಎಂಬುದು ಸಾಮಾನ್ಯವಾದ ತಿಳುವಳಿಕೆ. ಈ ನಿಲುವು ಪಂಪಭಾರತ, ‘ಗದಾಯುದ್ಧ’ಗಳಿಗೆ ಹೆಚ್ಚು ಗೌರವ ಸಲ್ಲಿಸುವಂಥದು. ಆದರೆ ‘ಆದಿಪುರಾಣ’ದ ಬಗ್ಗೆ ಕುವೆಂಪು ಒಂದೆಡೆ ಹೇಳುವುದನ್ನು ಗಮನಿಸಬಹುದು : ‘‘ಭಾರತ ಆದಿಪುರಾಣಗಳಲ್ಲಿ ಆದಿಪುರಾಣಕ್ಕೇ ಹೆಚ್ಚಿನ ಗೌರವದ ಸ್ಥಾನ ಸಲ್ಲುವುದು ನ್ಯಾಯವಾಗಿದೆ.’’ ಈ ಉಕ್ತಿ ‘ಅಜಿತಪುರಾಣ’ಕ್ಕೂ ಏಕೆ ಅನ್ವಯಿಸಲಾರದು? ಇನ್ನೊಂದು ಕಾರಣಕ್ಕಾಗಿಯೂ-ಇಲ್ಲಿ ಅದೇ ಮುಖ್ಯ- ‘ಅಜಿತ ಪುರಾಣ’ವು ‘ಗದಾಯುದ್ಧ’ಕ್ಕಿಂತ ಮಹತ್ವದ್ದಾಗುತ್ತದೆ. ‘ಗದಾಯುದ್ಧ’, ‘ಅಜಿತಪುರಾಣ’ ಗಳನ್ನು ಅವುಗಳ ಆಕರಗಳೊಡನೆ ಹೋಲಿಸಿ ನೋಡಬೇಕು. ‘ಗದಾಯುದ್ಧ’ಕ್ಕೆ ಪಂಪಭಾರತ ಮೂಲವಷ್ಟೆ. ಕಡೆಗೂ ರನ್ನ ತನ್ನ ಆ ಕೃತಿಯಲ್ಲಿ ಪಂಪನಿಗಿಂತ ಮಿಗಿಲಾದು ದೇನನ್ನು ಸಾಧಿಸಿದ್ದಾನೆ, ಅವನಿಗಿಂತ ಮುಂದಕ್ಕೆ ಹೋಗಿದ್ದಾನೆಯೆ ಎಂಬ ಪ್ರಶ್ನೆಗೆ ಎಡೆಯಿದೆ. ಪಂಪನಲ್ಲಿ ಏನಿದೆಯೋ ಅದಕ್ಕೆ ರನ್ನ ಮೆರುಗು ಕೊಡಬಲ್ಲ ಎಂಬುದನ್ನು ಬಿಟ್ಟರೆ, ಹೆಚ್ಚಿನ ಸ್ವೋಪಜ್ಞತೆ ‘ಗದಾಯುದ್ಧ’ದಲ್ಲಿ ವಿರಳ. ಪಂಪನ ಪರಿಷ್ಕರಣ, ವಿಸ್ತರಣಗಳು ಅದರಲ್ಲಿವೆಯೇ ವಿನಾ ಪರಿವರ್ತನೆ ಅಷ್ಟಾಗಿಲ್ಲ. ಈ ದಿಶೆಯಲ್ಲಿ ‘ಅಜಿತಪುರಾಣ’ ನಮಗೆ ಹೆಚ್ಚು ತೃಪ್ತಿಕರವಾಗಿ ತೋರುತ್ತದೆ. ತನ್ನ ಆಕರವಾದ ‘ಉತ್ತರಪುರಾಣ’ಕ್ಕಿಂತ ಅದು ಉತ್ಕೃಷ್ಟವಾದ ಕವಿತೆಯಾಗಿದೆ; ಎರಡೂ ಪುರಾಣಗಳೇ ಆದರೂ, ‘ಅಜಿತಪುರಾಣ’ದ ಸ್ವಂತಿಕೆ ಶ್ಲಾಘನೀಯವೆನ್ನಬೇಕು.

ಏನೇ ಇರಲಿ, ರನ್ನನ ಎರಡು ಕೃತಿಗಳೂ ಕನ್ನಡ ಸಾಹಿತ್ಯಕ್ಕೆ ಬೆಲೆಯುಳ್ಳ ಕೊಡುಗೆಗಳೇ. ‘‘ಗುಣದೋಷ ಪರೀಕ್ಷೆಗಾರನಾರ್ ಬಾರಿಪರೋ’’ ಎಂಬ ನುಡಿಯನ್ನು ಮರೆಯದಿದ್ದರೆ ಸಾಕು-ಕವಿ, ಸಹೃದಯ ಇಬ್ಬರೂ.

[1] ‘ಪರಶುರಾಮಚರಿತ’ ಮತ್ತು ‘ಚಕ್ರೇಶ್ವರ ಚರಿತ’ ಸಿಕ್ಕಿಲ್ಲ. ಅಪೂರ್ಣವಾಗಿ ದೊರೆತಿರುವ ‘ರನ್ನಕಂದ’ ರನ್ನನದೇ ಎಂಬುದಕ್ಕೆ ಖಚಿತವಾದ ಆಧಾರವಿಲ್ಲ.