ಅವನು ಹೇಗೆ ಮೂಲವನ್ನು ನಿಷ್ಕೃಷ್ಟವಾಗಿ, ನಿರ್ದುಷ್ಟವಾಗಿ, ಸ್ವಾರಸ್ಯ ಕೆಡದಂತೆ ಕನ್ನಡಿಸಬಲ್ಲನೆಂಬುದಕ್ಕೆ ಎರಡು ಉದಾಹರಣೆಗಳನ್ನು ಗಮನಿಸಬಹುದು:

‘‘ದೇವ, ದ್ವಾರಸ್ಥಿತಾ ಸುರಲೋಕಮಾರೋಹತಸ್ತ್ರಿಶಂಕೋ ಕುಪಿತ ಶತಮಖ ಹುಂಕಾರನಿಪತಿತಾ ರಾಜಲಕ್ಷ್ಮೀರ್ದಕ್ಷಿಣಾಪಥಾದಾಗತಾ ಚಂಡಾಲಕನ್ಯಕಾ ಪಂಜರಸ್ಥಃ ಶುಕಮಾದಾಯ ದೇವಂ ವಿಜ್ಞಾಪಯತಿ… ಇಚ್ಛಾಮಿ ದೇವದರ್ಶನ ಸುಖಮನುಭವಿತುಂ ಇತಿ.’’

ಜನತಾಧೀಶ್ವರ ಬಿನ್ನಪಂ ತ್ರಿದಶಲೋಕಕ್ಕೇಱುತಿರ್ದಾ ತ್ರಿಶಂ
ಕು ನರಾಧೀಶನ ಲಕ್ಷ್ಮಿ ಶಕ್ರನ ಮಹಾಹುಂಕಾರದಿಂ ಬಿರ್ದಳೆಂ
ಬಿನೆಗಂ ವಿಶ್ರುತ ದಕ್ಷಿಣಾಪಥದಿನೊರ್ವಳ್ ಕನ್ನೆ ಚಂಡಾಲೆ
ರ್ಶನ ತಾತ್ಪರ್ಯದೆ ರಾಜಕೀರಸಹಿತಂ ಬಂದಿರ್ದಪಳ್ಬಾಗಿಲೊಳ್ (ಪೂ.ಭಾ. ೨೪)

‘‘ಕಿಮಿತಿ ನಿರರ್ಥಕಮಯಮಾತ್ಮಾ ಮಯಾ ಶಿಶುನೇವಾಯಾಸಿತಃ ಕಿಮನೇನ ಗೃಹಿತೇನಾ ಗೃಹೀತೇನ ವಾ ಕಿಂ ನರಯುಗಲೇನ ಪ್ರಯೋಜನಂ ಯದಿ ಗೃಹೀತಮಿದಂ ತತಃ ಕಿಂ ಅಥ ನ ಗೃಹೀತಂ ತತೋsಪಿ ಕಿಂ ಅಹೋ ಮೇ ಮೂರ್ಖತಾಯಾಃ ಪ್ರಕಾರಃ.’’

ಏಕೆ ನಿರರ್ಥಕಂ ಮಗುವಿನಂದದೆ ಕೋಟಲೆಗೊಂಡೆನಕ್ಕಟಿಂ
ತೇಕೆಯೊ ಕಿನ್ನರದ್ವಯದ ಬೆಂಬೞಯಂ ತಗುಳುತ್ತೆ ಬಂದೆನಿಂ
ತೇಕೆಯೊ ಮೂರ್ಖನಂತೆ ಮತಿಗೆಟ್ಟೆನಿದಂ ಪಿಡಿದಲ್ಲಿ ಬರ್ಪುದೇಂ
ವ್ಯಾಕುಲನಾಗುತಂ ಪಿಡಿಯದಿರ್ದೊಡೆ ಪೇೞ್ ಕಿಡುವೊಂದು ವಸ್ತುವೇಂ (ಪೂ. ಭಾ. ೬೨೩)

ನಾಗವರ್ಮ ಅನುವಾದದಲ್ಲಿ ಅವಶ್ಯವಾಗಿ ಹಿತಮಿತವಾಗಿ ಸಂಸ್ಕೃತ ಶಬ್ದಗಳನ್ನು ಬಳಸುತ್ತಾನಾದರೂ ಉಳಿದಂತೆಲ್ಲ ಕನ್ನಡಕ್ಕೇ ಪ್ರಾಶಸ್ತ್ಯ ಕೊಡುತ್ತಾನೆ. ಒಮ್ಮೊಮ್ಮೆ ಅವನ ಗದ್ಯ ಪದ್ಯಗಳಲ್ಲಿ ಮೂಲಕ್ಕೆ ಸಮಾನವಾದ ಅಥವಾ ಅದನ್ನು ಮೀರಿಸುವ ಸಂಸ್ಕೃತ ಪ್ರಾಚುರ್ಯ ಕಾಣುವುದುಂಟು. ಆದರೆ ಅಂಥ ಸಂದರ್ಭಗಳು ಕಡಿಮೆ. ಒಟ್ಟಿನಲ್ಲಿ ಅವನದು ಕನ್ನಡ ಸಂಸ್ಕೃತಗಳ ಹದನಾದ, ಹವಣಾದ ಮಿಶ್ರಣದಿಂದ ಕೂಡಿದ ಅನುವಾದ. ಅಚ್ಚಗನ್ನಡದ, ದೇಸಿಯ ಚೆಲುವು ಸವಿ ಸೊಗಡುಗಳು ಅದರಲ್ಲಿ ಉದ್ದಕ್ಕೂ ಸೂಸುತ್ತಿವೆ. ನಿಜವಾಗಿಯೂ ಅದು ‘ಕರ್ಣಾಟಕ ಕಾದಂಬರಿ’ಯಾಗಿದೆ.

ಸಂಸ್ಕೃತ ‘ಕಾದಂಬರಿ’ಯ ದೀರ್ಘ ವಾಕ್ಯಗಳನ್ನು ನಾಗವರ್ಮ ಹೇಗೆ ಪದ್ಯಗಳಲ್ಲಿ ಒಡೆಯುತ್ತಾನೆಂಬುದಕ್ಕೆ ಒಂದು ಒಳ್ಳೆಯ ಉದಾಹರಣೆ : ಮಹಾಶ್ವೇತೆಯ ವರ್ಣನೆ ಮೂಲದಲ್ಲಿ ಸುಮಾರು ೬೦ ಮುದ್ರಿತ ಪಂಕ್ತಿಗಳಷ್ಟು ದೀರ್ಘವಾದ ವಾಕ್ಯವಾಗಿದ್ದು, ನಾಗವರ್ಮನಲ್ಲಿ ೨೩ ಪದ್ಯಗಳಾಗಿ ಎಂದರೆ ಅಷ್ಟೇ ಸಂಖ್ಯೆಯ ವಾಕ್ಯಗಳಾಗಿ ಮಾರ್ಪಟ್ಟಿದೆ. ಮೂಲದಲ್ಲಿ ಸಣ್ಣ ವಾಕ್ಯಗಳು ಬಂದಿದ್ದರೆ, ನಾಗವರ್ಮ ಅವುಗಳನ್ನು ಒಂದೇ ಗದ್ಯವಾಕ್ಯದಲ್ಲಿ ನಿರ್ವಹಿಸುವುದೂ ಉಂಟು. ಕರ್ಮಣಿ ಪ್ರಯೋಗ ಸಂಸ್ಕೃತಕ್ಕೆ ಸಹಜವಾದರೂ ಕನ್ನಡಕ್ಕೆ ಒಗ್ಗುವುದಿಲ್ಲ. ಮೂಲದ ಕರ್ಮಣಿ ಸಹಿತವಾದ ಸಮಾಸಗಳಿಗೆ ಬಹಳ ಕಡೆ ನಾಗವರ್ಮ ಕನ್ನಡ ರೂಪ ಕೊಡುತ್ತಾನೆ. ಇನ್ನೂ ಒಂದು ಸಣ್ಣ ಉದಾಹರಣೆ ಕೊಡಬಹುದು. ಶೂದ್ರಕ ಪರಾಕ್ರಮ ವರ್ಣನೆಯಲ್ಲಿ ಬರುವ ಒಂದು ದೀರ್ಘ ವಾಕ್ಯವಿದು:

‘‘ಯಸ್ಯ ಚ ಮದಕಲಕರಿಕುಂಭ ಪೀಠಪಾಠನಮಾಚರತೋ ಲಗ್ನಸ್ಥೂಲ ಮುಕ್ತಾಫಲೇನ ದೃಢಮುಷ್ಟಿ ನಿಷ್ಪೀಡನಾನ್ನಿಶ್ಚ್ಯುತಧಾರಾಜಲಬಿಂದುದಂತುರೇಣೇವ ಕೃಪಾಣೇನಾಕೃಷ್ಯಮಾಣಾ ಸುಭಟೋರಃ ಕವಾಟ ವಿಘಟಿತ ಕವಚ ಸಹಸ್ರಾಂಧಕಾರ ಮಧ್ಯವರ್ತಿನೀ ಕರಿಕರಟ ತಟಗಳಿತ ಮದಜಲಾಸಾರ ದುರ್ದಿನಾಸ್ವಭಿಸಾರಿಕೇವ ಸಮರನಿಶಾಸು ಸಮೀಪಮ ಸಕೃದಾಜಗಾಮ ರಾಜಲಕ್ಷ್ಮೀ.’’

ಇದನ್ನು ನಾಗವರ್ಮ ಎರಡು ಪದ್ಯಗಳಾಗಿ ವಿಭಜಿಸಿ, ಎರಡು ವಾಕ್ಯಗಳನ್ನಾಗಿ ಮಾಡಿದ್ದಾನೆ:

ಪಿರಿದುಂ ದೃಢತರ ಮುಷ್ಟಿಯ
ಭರದಿಂ ಮುನ್ನುಂಡ ನೀರನುಗುೞ್ದಪುದೆಂಬಂ
ತರಿಕರಿಮಸ್ತಕಮುಕ್ತೋ
ತ್ಕರದಂತುರಮೆಸೆವುದಾ ನೃಪಾಲ ಕೃಪಾಣಂ (ಪೂ.ಭಾ. ೧೨)
ಕಲಿಗಳುರಃಕವಾಟಕವಚಂಗಳ ಕೞ್ತಲೆಯೊಳ್ಕರೀಂದ್ರ ಸಂ
ಕುಳ ಮದವಾರಿಧಾರೆಗಳ ಪೆರ್ಮೞೆಯೊಳ್ ರಣಮೆಂಬ ರಾತ್ರಿಯೊಳ್
ಸಲೆ ಬರುತಿರ್ಪಳೆಂದುಮಭಿಸಾರಿಕೆಯಂದದೆ ರಾಜ್ಯಲಕ್ಷ್ಮಿ
ನ್ನೊಲವಿನೊಳೆಂದೊಡಾ ನೃಪನ ಪೌರುಷಮೇಂ ಪೊಗೞಲ್ಕೆವೇಳ್ಕುಮೇ    (ಪೂ.ಭಾ.೧೩)

ಮೂಲದ ಸಮಾಸಗಳು ಪದ್ಯದಲ್ಲಿ ಕುಗ್ಗಿರುವುದನ್ನೂ ಗಮನಿಸಬಹುದು.

ಸಂಸ್ಕೃತ ಕಾದಂಬರಿಯಲ್ಲಿ ಎಲ್ಲವೂ ಅತಿ. ಆದ್ದರಿಂದಲೇ ನಾಗವರ್ಮನ ಭಾಷಾಂತರದ ಪ್ರಮುಖ ಲಕ್ಷಣವೆಂದರೆ ಅವನ ಸಂಗ್ರಹ ಪ್ರವೃತ್ತಿ. ಕಲಾದೃಷ್ಟಿಯಿಂದ ಉತ್ತಮ, ಅತ್ಯವಶ್ಯವೆನಿಸಿದ ವರ್ಣನಾಂಶಗಳನ್ನು ಉಳಿಸಿಕೊಂಡು ಮಿಕ್ಕುವನ್ನು ವಿಸರ್ಜಿಸುತ್ತಾನೆ. ಪೂರ್ವ ಕಾದಂಬರಿಯಲ್ಲಿ ಅವನ ಸಂಗ್ರಹಕಾರ್ಯ ವಿಶೇಷವಾಗಿ ವರ್ಣನೆಗಳಿಗೆ ಸೀಮಿತವಾಗುತ್ತದೆ; ಮಾನವೀಯ ಪ್ರಸಂಗಗಳಿಗೆ ಸಂಬಂಧಿಸಿದ, ಭಾವಪ್ರಸಕ್ತಿಯುಳ್ಳ ಭಾಗಗಳನ್ನು ಅವನು ಬಹುಮಟ್ಟಿಗೆ ಸಮಗ್ರವಾಗಿಯೆ ಅನುವಾದಿಸುತ್ತಾನೆ. ಅದರಲ್ಲೂ ಮಹಾಶ್ವೇತೆಯ ವೃತ್ತಾಂತ ಪ್ರಾರಂಭವಾದ ಬಳಿಕ ಅವನ ಸಂಗ್ರಹಶೀಲತೆಗೆ ಹೆಚ್ಚು ಅವಕಾಶ ಸಿಗುವುದಿಲ್ಲ; ಆದರೆ ಉತ್ತರ ಕಾದಂಬರಿಯಲ್ಲಿ ಮತ್ತೆ ಆ ಚಟುವಟಿಕೆ ಬಿರುಸಾಗುತ್ತದೆ.

ನಾಗವರ್ಮ ಮೂಲವನ್ನು ಏಕರೀತಿಯಾಗಿ ಸಂಗ್ರಹಿಸುವುದಿಲ್ಲ; ಅವನ ಕಾರ್ಯದಲ್ಲಿ ಸಂದರ್ಭಾನುಸಾರವಾಗಿ ವೈವಿಧ್ಯವಿದೆ. ಒಟ್ಟಿನ ಮೇಲೆ, ಮೂಲದ ತಿರುಳನ್ನೆಲ್ಲ ಅನುವಾದದಲ್ಲಿ ಹೇಗಾದರೂ ಮಾಡಿ ಸಂರಕ್ಷಿಸುವ ಆಸೆ ನಾಗವರ್ಮನದು. ಅದರಲ್ಲಿ ಅವನಿಗೆ ಬಹುಮಟ್ಟಿಗೆ ಜಯ ದೊರೆತಿದೆ.

ಕೆಲವು ವರ್ಣನೆಗಳನ್ನು ನಾಗವರ್ಮ ಹೆಚ್ಚು ಕತ್ತರಿಸದೆ ಉಳಿಸಿರುವುದುಂಟು. ಉದಾಹರಣೆಗೆ, ಚಂಡಾಲಕನ್ಯೆ, ದಂಡಕಾರಣ್ಯ, ಪಂಪಾಸರಸ್ಸು, ಶಾಲ್ಮಲೀವೃಕ್ಷ ಇತ್ಯಾದಿಗಳ ವರ್ಣನೆ. ತದ್ವಿರುದ್ಧವಾಗಿ, ವಿದ್ಯಾಭ್ಯಾಸ ಮುಗಿಸಿದ ಚಂದ್ರಾಪೀಡ ಪುರಪ್ರವೇಶ ಮಾಡಿದ ಸಂದರ್ಭದಲ್ಲಿ ಸುಮಾರು ೯೦ ಪಂಕ್ತಿಗಳಷ್ಟು ವಿಸ್ತಾರವಾಗಿ ಬರುವ ಉಜ್ಜಯನಿಯ ಅರಮನೆಯ ವರ್ಣನೆಯನ್ನು ಪೂರ್ತಿ ಬಿಟ್ಟಿದ್ದಾನೆ. ವಿಂಧ್ಯಾಟವಿ, ಹಾರೀತ, ಜಾಬಾಲ್ಯಾಶ್ರಮ, ಉಜ್ಜಯಿನಿ, ಅಚ್ಛೋದ ಸರೋವರ ಮುಂತಾದುವುಗಳ ವರ್ಣನೆಗಳೂ ಶುಕನಾಸೋಪದೇಶವೂ ಕನ್ನಡ ‘ಕಾದಂಬರಿ’ಯಲ್ಲಿ ಮೂಲದಲ್ಲಿರುವುದಕ್ಕಿಂತ ಹ್ರಸ್ವವಾಗಿವೆ.

ನಾಗವರ್ಮನ ವಿಸ್ತಾರಾನುವಾದವೆ ಅವನ ಸ್ವೋಪಜ್ಞತೆಯ ಅಂಶಗಳನ್ನು ಸಾಕಷ್ಟು ತೋರಿಸಿಕೊಡುತ್ತದೆ. ಅಷ್ಟೆ ಅಲ್ಲ; ಅವನು ಎಷ್ಟೋ ಕಡೆ ಸಂಪೂರ್ಣ ಸ್ವತಂತ್ರ ಪದ್ಯಗಳನ್ನು ಕಟ್ಟಿದ್ದಾನೆಂಬುದು ಗಮನಾರ್ಹ. ಅವುಗಳಲ್ಲಿ ಕೆಲವಾದರೂ ನಾಗವರ್ಮನ ಕಾರಯಿತ್ರೀ ಪ್ರತಿಭೆಯ ಉಜ್ವಲ ದಾಖಲೆಗಳಾಗಿವೆ. ಇಡೀ ಪದ್ಯಗಳಲ್ಲದೆ ಹಲವಾರು ಪದ್ಯಖಂಡಗಳು ಮತ್ತು ಉಕ್ತಿಗಳು ಕೂಡ ನಾಗವರ್ಮನ ಸ್ವತಂತ್ರ ಪ್ರತಿಭೆಯನ್ನು ಸಮರ್ಥಿಸುತ್ತವೆ. ಒಂದು ಪುಟ್ಟ ನಿದರ್ಶನ ಗೇಯಕ್ಕೆ ವಶವಾದ ಇಂದ್ರಾಯುಧದ ಕಿವಿಗಳ ಚಿತ್ರ- ‘‘ಕತ್ತರಿ ಮೊನೆಗೊಂಡೆೞಲ್ವ ಕಿವಿ’’ -ಬಾಣನದಲ್ಲ. ‘‘ಕಿಚ್ಚಿನ ಕೀಡಿಯಂದದೆ’’ (ಪೂ.ಭಾ. ೮೨೨), ‘‘ಭಕ್ತಿಯೆ ಭವಸನ್ನಿಧಿಯಲ್ಲಿ ರೂಪುಗೊಂಡಂತಿರ್ದಳ್’’(ಪೂ.ಭಾ. ೬೭೦)- ಇವೂ ಅಷ್ಟೆ. ನಾಗವರ್ಮನ ಅಚ್ಛೋದ ವರ್ಣನೆ ಭಾಷಾಂತರವಾಗಿಯೂ ಅವನ ಸ್ವತಂತ್ರ ಸತ್ವವನ್ನು ಧರಿಸಿಕೊಂಡಿದೆ; ಅನುಭವ ಮೂಲದ್ದೇ ಆದರೂ ಅದರ ವಿನ್ಯಾಸ ಇಲ್ಲಿ ಹೊಸದಾಗಿದೆ.[1]

ಪೂರ್ತಿ ನಾಗವರ್ಮನದೇ ಆದ ಕೆಲವು ಪದ್ಯಗಳನ್ನು ಇಲ್ಲಿ ಲಕ್ಷಿಸಬಹುದು. ಮುದಿ ಬೇಡನ ಚಿತ್ರ :

ಜರೆಯಿಂದಂ ಪುರ್ಬು ಜೋಲಲ್ತೆರೆ ತರತರದಿಂದುಣ್ಮಿ ಪೊಣ್ಮಲ್ಕೆ ಗಂಟ
ಲ್ಯುರಿದತ್ತೊಂದೊಂದಱಳ್ತಳ್ತೊಗೆಯೆ ಸೆರೆಗಳೊತ್ತಂಬದಿಂ ಬರ್ಪ ಕೆಮ್ಮಿಂ ಬಿರಿಯಲ್ ಬೆಟ್ಟಂಗಳ್ …(ಪೂ.ಭಾ. ೧೭೫)
ಬೇಡನ ಕೈಗೆ ಸಿಕ್ಕಿದ ಮುದಿಹಕ್ಕಿಗಳ ಅವಸ್ಥೆ
ಪಱಿದುವು ಗರಿ ಚಂಚುಗಳುಂ
ಮುಱಿದುವು ತಲೆ ನಡುಗುತಿರ್ದುವೆನ್ನದೆ ತರದಿಂ
ಬಱಿಗೆಯ್ತುತ್ತಿರ್ದಂ ಮಾ
ಯ್ದಱಗುಲಿ ಕರ್ವೇಡನಲ್ಲಿ ಮುದುಗಿಳಿಗಳುಮಂ (ಪೂ.ಭಾ. ೧೭೯)

ಮಹಾಶ್ವೇತೆಯ ಆತ್ಮನಿಂದೆ:

ಉರಗಮುಖೋಗ್ರದಂಷ್ಟ ಸಹಜಾತೆಯನೂರ್ಜಿತ ಕಾಲಪಾಶನಿ
ಷ್ಠುರತರರೂಪೆಯಂ ಸಹಜಶಾಕಿನಿಯಂ ವಿಷಕನ್ಯಕಾ ಸಹೋ
ದರಿಯನಪಾರ ಘೋರದುರಿತಾರ್ಣವಜಾತೆಯನಾತ್ಮವಲ್ಲಭಾಂ
ತರಿತೆಯನೆನ್ನನಣ್ಣ ಬೆಸಗೊಳ್ವುದೆ ಪೇೞ್ವೆನೆ ತತ್ಪ್ರಪಂಚಮಂ (ಪೂ.ಭಾ. ೭೦೪)

ನಾಗವರ್ಮನ ಭಾಷಾಂತರದ ಸ್ವರೂಪವನ್ನು ಮುಗಳಿಯವರು ಹೀಗೆ ಸಂಗ್ರಹಿಸಿದ್ದಾರೆ: ‘‘ಮೂಲದ ಕಥಾನಕಸಾರ, ಪಾತ್ರಗಳ ಜೀವಾಳ, ವರ್ಣನೆಗಳ ಸ್ವಾರಸ್ಯ, ಇವುಗಳಿಗೆ ಒಟ್ಟಿನಲ್ಲಿ ಕುಂದು ಬರದಂತೆ ಮೂಲವನ್ನು ಮನಸ್ಸಿನಲ್ಲಿಟ್ಟುಕೊಂಡು ತಾನೇ ರಚಿಸಿದಂತೆ ಸಲೀಲವಾಗಿ ಬರೆದಿದ್ದಾನೆ. ಇದರಿಂದ ಅನುಕೃತಿಯೂ ಸ್ವತಂತ್ರಕೃತಿಯಾಗಿದೆ. ತನಗೆ ತೋರಿದಂತೆ ಮೂಲದ ಕೆಲವು ಭಾಗಗಳನ್ನು ಬಿಟ್ಟಿದ್ದಾನೆ. ಕೆಲವನ್ನು ಸಂಗ್ರಹಿಸಿದ್ದಾನೆ. ಬೇರೆ ಕೆಲವನ್ನು ಮೂಲದ ಆಧಾರದಿಂದ ಬೆಳೆಸಿದ್ದಾನೆ. ಇಷ್ಟೇ ಯಾಕೆ, ಉತ್ತಮ ಪರಿವರ್ತನಕಾರನ ಹಾಗೆ ಮೂಲಕ್ಕಿಂತ ಸೊಗಸಾದ ಭಾವಗಳನ್ನೂ ಪದಲಾಲಿತ್ಯವನ್ನೂ ಕೆಲವು ಕಡೆ ತಂದಿದ್ದಾನೆ. ಅವನು ಬಿಟ್ಟ ವರ್ಣನೆಗಳಲ್ಲಿ ಸಾಮಾನ್ಯವಾಗಿ ಅವನ ಔಚಿತ್ಯದೃಷ್ಟಿ ಫಲಿಸಿದೆ. ಆದರೆ ಮೂಲದಲ್ಲಿಯ ಸುಂದರವಾದ ಹಲವು ಭಾಗಗಳ ನಿರಾಕರಣವು ಸರಿಯಾಗಿಲ್ಲ.’’[2]

ಹೀಗಾಗಿ ನಾಗವರ್ಮನ ಅನುವಾದದಲ್ಲಿ ಬಹಳ ವೈವಿಧ್ಯವಿದೆ. ಸಂಗ್ರಹಾನುವಾದ, ವಿಸ್ತಾರಾನುವಾದ, ಭಾವಾನುವಾದ, ನಿಕಟಾನುವಾದ ಮುಂತಾದ ಭಾಷಾಂತರ ಪ್ರಭೇದಗಳನ್ನೆಲ್ಲ ‘ಕರ್ನಾಟಕ ಕಾದಂಬರಿ’ಯಲ್ಲಿ ಕಾಣಬಹುದು. ಇದು ಆ ದೃಷ್ಟಿಯಿಂದ ಭಾಷಾಂತರ ಕಲೆಯ ವಿದ್ಯಾರ್ಥಿಗಳಿಗೆ ಅಭ್ಯಾಸ ಯೋಗ್ಯವಾದ ಆಚಾರ್ಯಕೃತಿಯಾಗಿದೆ. ಮೂಲವನ್ನು ನಾಗವರ್ಮ ಯಥಾವತ್ತಾಗಿ ನಕಲು ಮಾಡದೆ, ಲೋಪ ಆಗಮ ಆದೇಶಗಳನ್ನು ಬೇಕಾದಷ್ಟು ಉಂಟುಮಾಡಿದ್ದರೂ ಅವನ ಕನ್ನಡ ಕಾದಂಬರಿ ಮೂಲಭೂತವಾಗಿ ಅನುವಾದವೇ. ಕೆಲವಂಶಗಳಲ್ಲಿ ಅದಕ್ಕೆ ಸ್ವತಂತ್ರ ಕೃತಿಯ ಸತ್ತ್ವ ಮತ್ತು ತೇಜಸ್ಸು ಉಂಟು. ನಾಗವರ್ಮನ ಭಾಷಾಂತರ ನೈಪುಣ್ಯ ವರಿಷ್ಠವರ್ಗದ್ದು. ಎಂತಲೇ ‘‘ಕನ್ನಡ ಸಾಹಿತ್ಯದಲ್ಲಿ ಕಾದಂಬರಿಯಷ್ಟು ಮೇಲಾದ ಪರಿವರ್ತನವು ಇನ್ನೊಂದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.’’[3]

ಕಾವ್ಯವನ್ನು ಒಂದು ಭಾಷೆಯಿಂದ ಮತ್ತೊಂದಕ್ಕೆ ಅನುವಾದಿಸುವಾಗ ಪರಿಪೂರ್ಣತೆ ದುಸ್ಸಾಧ್ಯ. ಈ ದೃಷ್ಟಿಯಿಂದ ನಾಗವರ್ಮನಲ್ಲಿ ಸೋಲಿನ ಅಂಶಗಳೂ ಇವೆ; ಆದರೆ ಸೋಲಿಗಿಂತ ಗೆಲುವನ್ನು ಅವನು ಹೆಚ್ಚಾಗಿ ಸಾಧಿಸಿದ್ದಾನೆಂಬುದು ಮುಖ್ಯ. ಮೂಲವನ್ನು ನಾಗವರ್ಮ ಸಂಗ್ರಹಿಸಿದ್ದರಿಂದ, ಅದಕ್ಕೆ ಪದ್ಯರೂಪವಿತ್ತುದರಿಂದ ಅಲ್ಪಸ್ವಲ್ಪ ನಷ್ಟಕ್ಕೆ ಅವನು ಗುರಿಯಾಗಬೇಕಾದ್ದು ಅನಿವಾರ್ಯ. ಬಾಣನ ಗದ್ಯದಲ್ಲಿ ಏನೇ ದೋಷ, ದುಷ್ಕರತೆಯಿದ್ದರೂ ಅದರಲ್ಲೊಂದು ವೈಭವವಿದೆ, ಭವ್ಯತೆಯಿದೆ. ಈ ಗುಣ ಪದ್ಯರೂಪದಲ್ಲಿ ಉಳಿಯಲಾರದು. ಆದರೆ ರಸದೃಷ್ಟಿಯಿಂದ ನೋಡಿದಾಗ ನಾಗವರ್ಮನ ಪರಿವರ್ತನ ವಿಧಾನ ನಷ್ಟಕ್ಕಿಂತ ಹೆಚ್ಚಾಗಿ ಲಾಭವನ್ನುಂಟುಮಾಡಿದೆ. ವಿ.ಸೀ. ಅವರು ಹೇಳುವಂತೆ, ‘‘ಈ ಗ್ರಂಥ ಒಟ್ಟಿನಲ್ಲಿ ಮೂಲಕಾವ್ಯವನ್ನು ಹತ್ತಿರದಲ್ಲಿ ಅನುಸರಿಸುವುದು. ಮೂಲದ ವೈಭವಗಳೆಲ್ಲ ಇಲ್ಲ; ಹಾಗೆಯೇ ಅಲ್ಲಿನ ಬೇಸರ, ಕ್ಲಿಷ್ಟತೆ, ಜಟಿಲತೆ, ಅತಿರೇಕಗಳು ಎಲ್ಲವೂ ಇಲ್ಲಿಲ್ಲವೆನ್ನಬಹುದು. ಆದರೂ ಅದರಿಂದಲೇ ಇದಕ್ಕೆ ಜೀವ… ಮೂಲದ ಚೆಲುವು ಗಾಂಭೀರ್ಯ ವಿಜೃಂಭಣಗಳು ಅದಕ್ಕೆ ವಿಶಿಷ್ಟವಾದುವು. ಇದರ ಗರಿಮೆ ಇದಕ್ಕಿದೆ.’’[4]

ಬಿ.ಎಂ.ಶ್ರೀ. ಹೀಗೆ ಹೇಳಿದ್ದಾರೆ : ‘‘ಅತಿ ಲಂಬಿಸಿದ ವರ್ಣನಾಭಾಗಗಳನ್ನು ಬಿಟ್ಟು, ಎಲ್ಲ ಸಂಗ್ರಹಿಸಿ ಭಾವಸಾರಗಳನ್ನು ಪುಷ್ಟೀಕರಿಸಿ, ವಾಕ್ಯಗಳನ್ನು ಕನ್ನಡ ಪದ್ಯದ ಹದಕ್ಕಳವಡಿಸಿ, ಕಥೆಯನ್ನು ಸಾಧ್ಯವಾದ ಮಟ್ಟಿಗೆ ಎದ್ದು ಕಾಣುವಂತೆ ಮಾಡಿ, ಪಾತ್ರಗಳ ವಿಮರ್ಶನವನ್ನು ಮನಸ್ಸಿಗೊತ್ತಿ, ಸಂಸ್ಕೃತ ಸಮಾಸಗಳಲ್ಲಿ ಪ್ರೌಢಿಮೆಯನ್ನು ತೋರಿದರೂ ಕನ್ನಡದ ಅಂದವನ್ನು ಕೆಡಿಸದೆ ಎಲ್ಲಕ್ಕೂ ಹೆಚ್ಚಾಗಿ ಛಂದಸ್ಸಿನ ಕವಿತಾವರಣಕ್ಕೆ ತಿರುಗಿಸಿ ಅಪೂರ್ವಕಾಂತಿಯನ್ನು ಕೊಟ್ಟು, ನಾಗವರ್ಮನು ಕನ್ನಡದ ಪ್ರಣಯ ಕಾವ್ಯವನ್ನು ಕನ್ನಡಿಗರಿಗೆ ಕೊಟ್ಟು, ಬಾಣನನ್ನು ಕನ್ನಡಿಗರಿಗೆ ಪರಿಚಯ ಮಾಡಿಸಿ ಪ್ರೇಮಶೃಂಗಾರದ ರಸದೂಟವನ್ನು ಒದಗಿಸಿದ್ದಾನೆ.’’[5]

ಪಾತ್ರ ರಚನೆ : ‘ಕಾದಂಬರಿ’ ಕಾವ್ಯದ ಪ್ರಮುಖ ಮಹಿಳಾ ಪಾತ್ರಗಳು ಕಾದಂಬರಿ ಮತ್ತು ಮಹಾಶ್ವೇತೆ. ಕಾವ್ಯಕ್ಕೆ ಹೆಸರು ಕೊಟ್ಟಿರುವವಳು ಕಾದಂಬರಿ; ಕವಿಯ ದೃಷ್ಟಿಯಲ್ಲಿ ಕಥಾನಾಯಿಕೆ. ಆದರೆ ಮಹಾಶ್ವೇತೆ ಕಾವ್ಯದ ಹೆಸರಾಗಿಲ್ಲದಿದ್ದರೂ ಉಸಿರಾಗಿದ್ದಾಳೆ. ಕಾದಂಬರಿ ಮತ್ತು ಮಹಾಶ್ವೇತೆ-ಒಬ್ಬರನ್ನು ಬಿಟ್ಟು ಒಬ್ಬರನ್ನು ಪರಿಗಣಿಸುವುದೇ ಕಠಿಣ:  ಅವರ ಬದುಕುಗಳು ಮತ್ತು ಅದೃಷ್ಟಗಳು ಹಾಗೆ ಪರಸ್ಪರ ಹೆಣೆದುಕೊಂಡಿವೆ. ರೂಪ ಯೌವನ ಗಾಂಭೀರ್ಯಾದಿ ಗುಣಶೀಲಗಳಲ್ಲಿ ಕಾದಂಬರಿ, ಮಹಾಶ್ವೇತೆಯರು ಯಾರಿಗೆ ಯಾರೂ ಕಡಿಮೆಯಿಲ್ಲ. ಒಲಿದವರಿಗೆ ತಮ್ಮ ಹೃದಯವನ್ನು ಸಮರ್ಪಿಸಿಕೊಂಡು, ಆ ಪ್ರಿಯರು ಗತಪ್ರಾಣರಾದಾಗ ಅವರ ಬಗ್ಗೆ ತಮ್ಮ ನಿಷ್ಠೆಯನ್ನು ಎಳ್ಳಷ್ಟೂ ಸಡಲಿಸದೆ, ತಮ್ಮ ತಪಸ್ಸು ಶ್ರದ್ಧೆ ಪ್ರೇಮಬಲಗಳಿಂದ ಅವರನ್ನು ಬದುಕಿಸಿಕೊಂಡ ಸಾಧ್ವಿಯರು, ಸತೀರತ್ನಗಳು ಅವರು. ಅವರದು ಮೃತ್ಯುಂಜಯಸತ್ತ್ವ; ಪ್ರೇಮ, ತಪಸ್ಸು ಎರಡರಿಂದಲೂ ಬಂದದ್ದು. (ಆದರೆ ಇಬ್ಬರ ಸ್ಥಾನಮಾನ ಸ್ವಭಾವಗಳಲ್ಲಿ ಭೇದವೂ ಇದೆ). ರೂಪ ನಡೆ ನುಡಿ ಎಲ್ಲದರಲ್ಲೂ ಮಾಧುರ್ಯವನ್ನು ಸೂಸುವ ಹೆಣ್ಣು ಕಾದಂಬರಿ. ಅವಳ ಸೌಂದರ್ಯ ಮಾಧುರ್ಯ ಸೌಕುಮಾರ್ಯಗಳಿಗೆ ಸಂಸ್ಕೃತಿ ಗುಣಶೀಲಗಳ ಜೋಡು ದೊರಕಿ, ಅವಳನ್ನು ಮರೆಯಲಾಗದ ಪಾತ್ರವನ್ನಾಗಿಸಿವೆ. ಮುಗ್ಧತೆ, ಲಜ್ಜೆಗಳು ಅವಳ ಸ್ವಭಾವದ ಪ್ರಮುಖ ಲಕ್ಷಣಗಳು. ಅವಳು ನೂರಕ್ಕೆ ನೂರರಷ್ಟು ಕುಲೀನೆಯಾದ ಹೆಣ್ಣು, ಬಾಣಕವಿ ಕಾದಂಬರಿಯ ಮೇಲೆ ತನ್ನೆಲ್ಲ ಕಲ್ಪನೆ ಸಹಾನುಭೂತಿಗಳನ್ನು ವ್ಯಯಿಸಿದ್ದಾನೆಂದು ಹೇಳುತ್ತಾರೆ ಪೀಟರ್ಸನ್.[6] ಮಹಾಶ್ವೇತೆ ತಪಸ್ವಿನಿ; ಶೃಂಗಾರವನ್ನು ತಪಸ್ಸಿನ ಮಟ್ಟಕ್ಕೇರಿಸಿದ ಮಹಾ ಮಹಿಳೆ. ಚಂದ್ರಾಪೀಡನೊಡನೆ ನಾವು ಅವಳನ್ನು ಮೊದಲಬಾರಿಗೆ ಕಾಣುವಾಗ ಅವಳು ‘‘ಭಕ್ತಿಯೆ ಭವಸನ್ನಿಧಿಯಲ್ಲಿ ರೂಪುಗೊಂಡಂತೆ’’ ಇರುತ್ತಾಳೆ. ಅವಳು ‘‘ಅತಿಗಂಭೀರೆ, ಊರ್ಜಿತಮತಿ, ನಿರ್ಮಳೆ, ಅಮಳ ಧೈರ್ಯಾದಿ ಗುಣಾನ್ವಿತೆ, ದೃಢಪಾಶುಪತವ್ರತೆ’’. ಅವಳ ತಪವೆ ‘ಕಾದಂಬರಿ’ಯ ಕ್ರತುಶಕ್ತಿ; ಅದರ ಧವಳತೇಜಃಪರಿವೇಷ ಕಾವ್ಯವನ್ನೆಲ್ಲ ಆವರಿಸಿದೆ. ಯಾವುದೋ ಗಳಿಗೆಯಲ್ಲಿ ಒಮ್ಮೆ ತಾನು ಒಲಿದವನನ್ನೆ ಪತಿಯೆಂದು ಸ್ವೀಕರಿಸಿ, ತದೇಕನಿಷ್ಠೆಯನ್ನು ತನ್ನ ಉಸಿರಾಗಿ ಮಾಡಿಕೊಂಡು, ಗತಾಸುವಾದ ಇನಿಯನನ್ನು ತನ್ನ ತಪೋಮಹಿಮೆಯಿಂದ ಬದುಕಿಸಿಕೊಳ್ಳುತ್ತಾಳೆ ಮಹಾಶ್ವೇತೆ. ಅವಳ ತಪಸ್ಸಿನಿಂದ ಕ್ಷಣಿಕ ಕಾಮ ಶಾಶ್ವತ ಪ್ರೇಮವಾಗಿ, ದೈಹಿಕವಾದ ಸೆಳೆತ ಆತ್ಮಬಾಂಧವ್ಯವಾಗಿ ಪರಿಣಮಿಸುತ್ತದೆ. ತಪಸ್ಸಿನಿಂದ ತಾನು ಶುದ್ದಿಗೊಳ್ಳುವುದಲ್ಲದೆ ಶುದ್ದೀಕರಣ ಸಾಧನವೂ ಆಗುತ್ತಾಳೆ. ಅವಳ ಅಸಾಧಾರಣ ನಿಷ್ಠೆ ತಾಳ್ಮೆ ತಪಗಳು ಸಾಹಿತ್ಯ ಲೋಕಕ್ಕೆ ಮಹೋನ್ನತವೂ ಪರಮ ಗೌರವಾಸ್ಪದವೂ ಆದ ಪಾತ್ರವೊಂದನ್ನು ನೀಡಿವೆ.

‘ಕಾದಂಬರಿ’ ಕಾವ್ಯದಲ್ಲಿ ಒಂದು ವಿಲಕ್ಷಣವಾದ, ಕುತೂಹಲಕಾರಿಯಾದ ಪಾತ್ರ ಪತ್ರಲೇಖೆ. ಅವಳ ಭಕ್ತಿ ಕೈಂಕರ್ಯಗಳು ಅಸದೃಶ. ಚಂದ್ರಾಪೀಡ-ಪತ್ರಲೇಖೆಯರು ದೈಹಿಕವಾಗಿ ಸದಾ ಹತ್ತಿರದಲ್ಲಿದ್ದರೂ, ಅವರದು ಒಡಲ ಸೋಂಕಿನ ಗೊಡವೆಯಿಲ್ಲದ ನಿಷ್ಕಳಂಕ ಸಂಬಂಧ. ಇಬ್ಬರು ಪುರುಷರ ಅಥವಾ ಸ್ತ್ರೀಯರ ನಡುವೆ ಇರುವ ಸ್ನೇಹದಂತೆ ಅವರ ಸ್ನೇಹ. ಗಂಡು ಹೆಣ್ಣಿನ ಈ ಬಗೆಯ ಸಂಬಂಧದ ಚಿತ್ರಣ ‘ಕಾದಂಬರಿ’ಯಲ್ಲಿ ಮಾತ್ರ ನಾವು ನೋಡಬಹುದಾದ್ದು.

ಕಾವ್ಯದ ನಾಯಕನಾದ ಚಂದ್ರಾಪೀಡ ಚಂದ್ರನ ಅವತಾರ. ಪುಂಡರೀಕನ ಶಾಪದಿಂದ ಮರ್ತ್ಯಕ್ಕಿಳಿದುಬಂದು ತನ್ನ ದೇವತ್ವದ ಘನತೆಗೆ ಇನಿತೂ ಕುಂದುಬರದಂತೆ, ಮಾನುಷಕ್ಕೆ ಕೋಡು ಮೂಡುವಂತೆ ನಡೆದುಕೊಂಡ ಮಹಾಪುರುಷ ಅವನು. ಧೀರೋದಾತ್ತತೆ ಅವನ ವ್ಯಕ್ತಿತ್ವದ ಪ್ರತ್ಯಂಶದಲ್ಲೂ ಎದ್ದು ಕಾಣುತ್ತದೆ. ಅವನೊಬ್ಬ ಸಭ್ಯಮೂರ್ತಿ; ಅವನ ಗಾಂಭೀರ್ಯ ಸಂಯಮಗಳು ಅಭೂತಪೂರ್ವ. ಅತುಲವಾದ ರೂಪವಿದ್ಯೆಗಳ ಜೊತೆಗೆ ವಿನಯ, ಸ್ನೇಹ, ಗುರು ಹಿರಿಯರಲ್ಲಿ ಭಕ್ತಿ, ಧೈರ್ಯ, ಶೌರ್ಯ ಮುಂತಾದ ಗುಣಗಳು ಅವನ ವ್ಯಕ್ತಿತ್ವವನ್ನು ಅಲಂಕರಿಸಿವೆ. ಚಂದ್ರಾಪೀಡನ ಪಾತ್ರಕ್ಕೆ ಎರಡು ಕಣ್ಣುಗಳು : ಪ್ರೇಮ ಮತ್ತು ಸ್ನೇಹ. ಕಾದಂಬರಿಯನ್ನು ಕುರಿತು ಅವನ ಅನುರಾಗ ಎಷ್ಟು ಗಾಢವಾದದ್ದೊ, ಅಷ್ಟೆ ಉತ್ಕಟವಾದದ್ದು ವೈಶಂಪಾಯನನನ್ನು ಕುರಿತ ಅವನ ಸ್ನೇಹ. ಕಡೆಗೂ ಸ್ನೇಹಕ್ಕಾಗಿಯೆ ಅವನು ಆತ್ಮಾರ್ಪಣ ಮಾಡುತ್ತಾನೆ. ಪುಂಡರೀಕನ ಕತೆ ವೈಶಂಪಾಯನ ಹಾಗೂ ಶುಕಜನ್ಮಗಳನ್ನು ಒಳಗೊಳ್ಳುತ್ತದೆ. ಇಡೀ ‘ಕಾದಂಬರಿ’ ಕಾವ್ಯ ಪುಂಡರೀಕನ ಪತನ ಉದ್ಧಾರಗಳ ಚರಿತ್ರೆಯಾಗಿದೆ. ದೇವರ್ಷಿಯಾದ ಪುಂಡರೀಕ ಕಾಮೋಪಹತನೂ ವ್ರತಚ್ಯುತನೂ ಆಗಿ, ದೇವತ್ವದಿಂದ ಮನುಷ್ಯತ್ವಕ್ಕೂ ಅಲ್ಲಿಂದ ತಿರ್ಯಗ್ಜಾತಿಗೂ ಬಿದ್ದು, ದುಃಖಪರಂಪರೆಯನ್ನು ಅನುಭವಿಸಿ, ಪಶ್ಚಾತ್ತಾಪದಗ್ಧನಾಗಿ ಕರ್ಮಕ್ಷಯ ಮಾಡಿಕೊಂಡು ಅಂತ್ಯದಲ್ಲಿ ಉದ್ಧಾರಗೊಳ್ಳುತ್ತಾನೆ. ಅವನ ಉದ್ಧಾರದಲ್ಲಿ ಅರೆಪಾಲು ಪ್ರಯತ್ನ ಅವನದಾದರೆ, ಅರೆಪಾಲು ಅಥವಾ ಮುಕ್ಕಾಲು ಪಾಲು ಇತರರದು. ಕಪಿಂಜಲ ಪುಂಡರೀಕನ ಗೆಳೆಯ; ಗೆಳೆತನದ ಉಚ್ಚತಮ ಆದರ್ಶ ಅವನಲ್ಲಿ ನಿದರ್ಶಿತವಾಗಿದೆ. ಸ್ನೇಹಿತನ ಸುಖಕ್ಕಾಗಿ- ಅದು ಶ್ರೇಯವಾಗಿರಲಿ ಪ್ರೇಯವಾಗಿರಲಿ – ಏನೆಲ್ಲವನ್ನೂ ಮಾಡುವ, ಸ್ನೇಹಿತನಿಗಾಗಿ ಕುದುರೆತನವನ್ನೂ ತಾಳುವ ಮಹಾನುಭಾವ ಕಪಿಂಜಲ. ಸ್ನೇಹಸೂತ್ರಕ್ಕೆ ಅವನ ವ್ಯಕ್ತಿತ್ವ ವರ್ತನೆಗಳೆಲ್ಲ ಸುಂದರ ಭಾಷ್ಯ. ತಾರಾಪೀಡ, ಶುಕನಾಸ, ವಿಲಾಸವತಿ, ಮನೋರಮೆ -ಇವರು ಕಾವ್ಯದ ಅಮುಖ್ಯ ಪಾತ್ರಗಳು.

ಭಾಷೆಶೈಲಿ : ಕನ್ನಡ ಸಂಸ್ಕೃತಗಳ ಸಾಮರಸ್ಯ ‘ಕವಿರಾಜಮಾರ್ಗ’ ವಿಧಿಸಿರುವ ಆದರ್ಶ. ಅದರಿಂದ ಕೆಲವರಾದರೂ ಚಂಪೂ ಕವಿಗಳು ಚ್ಯುತರಾಗಲಿಲ್ಲ. ಅವರಲ್ಲಿ ಪಂಪ ನಾಗವರ್ಮರು ಅಗ್ರಗಣ್ಯರು. ‘‘ಪಂಪನ ಮಾರ್ಗದೇಸಿಗಳ ಸುಂದರ ಸಮನ್ವಯವನ್ನು ಸಾಧಿಸಿದವರಲ್ಲಿ ನಾಗವರ್ಮನು ಒಬ್ಬನು.’’[7] ನಾಗವರ್ಮನ ದೇಸಿನಿಷ್ಠೆಗೆ ಅಥವಾ ಮಾರ್ಗ, ದೇಸಿಗಳ ಸಮನ್ವಯಕ್ಕೆ ಹೊರಚ್ಚಾಗಿ ನಿಲ್ಲುವಂಥ ಭಾಗಗಳೂ ‘ಕರ್ಣಾಟಕ ಕಾದಂಬರಿ’ಯಲ್ಲಿವೆ. ಹೀಗಾಗುವುದು ವರ್ಣನೆಗಳನ್ನೊಳಗೊಂಡ ಗದ್ಯ ಮತ್ತು ವೃತ್ತಗಳಲ್ಲಿ ಮಾತ್ರ. ವರ್ಣನಾಪ್ರಸಕ್ತಿ ಇಲ್ಲದೆಡೆಗಳಲ್ಲಿ, ಭಾವನಿರೂಪಣೆಗೆ ಸಂಬಂಧಿಸಿದ ಭಾಗಗಳಲ್ಲಿ ನಾಗವರ್ಮನ ಶೈಲಿ ಅಚ್ಚಗನ್ನಡದ್ದಾಗುತ್ತದೆ; ಇಲ್ಲವೆ ಕನ್ನಡ-ಸಂಸ್ಕೃತಗಳ ಅನುರೂಪ ದಾಂಪತ್ಯವುಳ್ಳದ್ದಾಗುತ್ತದೆ. ಬಾಣನ ಸಮಾಸಗಳನ್ನು ಹಲವು ಕಡೆ ಹಾಗೆ ಹಾಗೆಯೆ ಅವನು ಇಟ್ಟಿದ್ದಾನೆ. ಆದರೂ ತಾನು ಬರೆಯುತ್ತಿರುವುದು ಕನ್ನಡ ಕಾವ್ಯ ಎಂಬ ಪ್ರಜ್ಞೆ ಅವನಲ್ಲಿ ಸ್ಥಾಯಿಯಾಗಿದೆ; ಸಂಚಾರಿಯೆಂಬಂತೆ ಸಂಸ್ಕೃತ ಪ್ರಚುರವಾದ ಕ್ಲಿಷ್ಟ ಶೈಲಿ ಅಲ್ಲಲ್ಲಿ ತಲೆ ಹಾಕುತ್ತದಷ್ಟೆ.

ನಾಗವರ್ಮನ ಶೈಲಿಯಲ್ಲಿ ನಾಟಕೀಯತೆ, ಚಿತ್ರಕಶಕ್ತಿ ಉಂಟು. ಅವನ ಹಲವಾರು ವೃತ್ತಗಳಲ್ಲಿ ಭಾವ ಅಥವಾ ಕ್ರಿಯೆಗೂ ಲಯಕ್ಕೂ ನಿಕಟವಾದ ಸಂಬಂಧವಿದೆ. ಅನೇಕ ವೃತ್ತಗಳಲ್ಲಿ ಆಡುಮಾತಿನ ಧಾಟಿ ಗೋಚರಿಸುತ್ತದೆ. ನಾದದ ಬಲದಿಂದಲೇ ಅನುಭವವನ್ನು ಉದ್ಪೋಧಿಸುವ ಕಲೆಯೂ ಆ ಶೈಲಿಗುಂಟು. ಶ್ರುತಿಸುಭಗವಾದ ಶಬ್ದಾಲಂಕಾರಗಳೂ ಅದರಲ್ಲಿ ವಿಪುಲವಾಗಿವೆ. ಬಂಧ ಎಲ್ಲೂ ಜಾಳಾಗುವುದಿಲ್ಲ, ದುರ್ಬಲವಾಗುವುದಿಲ್ಲ.

ನಾಗವರ್ಮನ ಶೈಲಿಯಲ್ಲಿ ವೈವಿಧ್ಯವಿದ್ದರೂ ಮೊತ್ತದಲ್ಲಿ ಅದರ ಸ್ವರೂಪವನ್ನು ನಿರ್ಣಯಿಸಬಹುದು : ‘‘ಕೆಲವು ಸಲ ಮೂಲ ಸಮಾಸಗಳ ವ್ಯಾಮೋಹಕ್ಕೆ ಒಳಗಾಗಿ ಇದ್ದಂತೆ ಇಟ್ಟಿರಬಹುದು, ಮೂಲಕ್ಕಿಂತ ಮಿಗಿಲಾದ ಸಂಸ್ಕೃತಾವೇಶವನ್ನು ತೋರಿರಬಹುದು. ಅವನ ಏಕರೂಪವಾದ ಶೈಲಿಗೆ ಇಂಥ ಗದ್ಯಪದ್ಯಗಳು ಒಮ್ಮೊಮ್ಮೆ ಬಾಧಕವಾಗಿವೆ. ಒಟ್ಟಿನಲ್ಲಿ ಮಾತ್ರ ಕಂದ ವೃತ್ತ, ಗದ್ಯ ವಚನ ಈ ಎಲ್ಲದರಲ್ಲಿ ಒಂದೇ ಹದ, ಹಗುರುಳ್ಳ ಪಳಗಿದ ಶೈಲಿಯಿದೆ.’’[8] ಮಾಧುರ್ಯ ಪ್ರಸಾದಗಳು ಅದರ ಮುಖ್ಯ ಗುಣಗಳು; ಕೃತಕತೆ ಆಡಂಬರಗಳು ಅದಕ್ಕೆ ಹೊರಗು. ಬಾಣ ಭೂಷಣರ ಶೈಲಿ ಕತೆಯನ್ನು ಮುಚ್ಚಿದರೆ, ನಾಗವರ್ಮನ ಶೈಲಿ ಕತೆಯನ್ನು ಸಹಜವಾಗಿ ಬಿಚ್ಚುತ್ತ ಹೋಗುತ್ತದೆ; ಅದು ಪಾರದರ್ಶಕ.

ನಾಗವರ್ಮನ ಶೈಲಿಯ ವೈಶಿಷ್ಟ್ಯವನ್ನು ಪ್ರತಿನಿಧಿಸುವ ಪದ್ಯಗಳಲ್ಲಿ ಎರಡನ್ನು ನೋಡಬಹುದು.

ಮುನಿದೊಡೆ ಭಸ್ಮಮಾದಪುದು ಲೋಕಮೆನಲ್ ನೊಸಲೊಳ್ ತೃತೀಯ ಲೋ
ಚನಮೆಮಗುಂಟು ತೋಲ ಮಱೆಯಿಂದದು ತೋರಇಪುದಿಲ್ಲೆನುತ್ತಮೀ
ಮನುಜರ ಗೆಯ್ತಮಂ ಬಿಸುಟು ದೇವರೆಮೆಂಬಭಿಮಾನಮೇಱ ಮು
ಯ್ಮೊನೆಗಳ ನೋೞ್ಪರಿನ್ನೆರಡು ತೋಳೊಳವೆಂಬವೊಲುರ್ವರೇಶ್ವರರ್ (ಪೂ.ಭಾ.೫೬೮)

ಇನಿಸೊಗೆತರ್ಪ ಕಣ್ಬನಿಗಳಿಂದಮೆ ನೇಹಮನುಂಟುಮಾಡುವಂ
ಗನೆಯರೊಳೇನಪಾರ ಭವಭೋಗಮನಿಂತಿರೆ ಪತ್ತುವಿಟ್ಟು ಕಾ
ನನದೊಳೆ ನಟ್ಟು ನಿಂದು ಸುಕುಮಾರಮೆನಿಪ್ಪ ಶರೀರಮಂ ಕಱು
ತ್ತಿನಿವಿರಿದೊಂದು ಘೋರತಪಕೊಡ್ಡಿದೆ ನಿನ್ನವೊಲಾರ್ ಕೃತಜ್ಞೆಯರ್ (ಪೂ.ಭಾ. ೯೬೦)

ರಸಪ್ರತಿಪಾದನೆ : ‘ಕಾದಂಬರಿ’ ಕಾವ್ಯ ‘‘ಇದು ಚೋದ್ಯಂ ಕವಿಹೃದ್ಗತಂ ನವರಸಂ ನಿರ್ದೋಷಂ’’[9] ಎನಿಸುವಂತೆ ನವರಸ ಸಮನ್ವಿತವಾಗಿದೆ. ಶೃಂಗಾರಾದ್ಭುತಗಳು ಇದರಲ್ಲಿ ಪ್ರಧಾನ; ಅವಕ್ಕೆ ಉಳಿದವು ಅಧೀನ. ಶೃಂಗಾರ ಅದ್ಭುತಗಳಲ್ಲಿ ‘ಕಾದಂಬರಿ’ಯಾವುದಕ್ಕೆ ಪ್ರಥಮ ಸ್ಥಾನವಿತ್ತಿದೆಯೆಂಬ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ಒಂದು ದೃಷ್ಟಿಯಿಂದ ನೋಡಿದರೆ ‘ಕಾದಂಬರಿ’ಯಲ್ಲಿ ಸರ್ವತ್ರ ಅದ್ಭುತ ರಸವಿದೆ. ಸಮಗ್ರಕಾವ್ಯವೆ ‘ಆಶ್ಚರ್ಯ ಪರಂಪರೆ’. ಆದರೆ ಅದ್ಭುತವನ್ನು ಘಟನೆಗಳಿಗೆ ವಿಸ್ತರಿಸದೆ, ವರ್ಣನೆಗಳಿಗೆ ಮಾತ್ರ ಸೀಮಿತಗೊಳಿಸುವುದಾದರೆ ಅದಕ್ಕೆ ದ್ವಿತೀಯ ಸ್ಥಾನ ಸಂದು, ಶೃಂಗಾರ ಮೊದಲ ಮಣೆ ಪಡೆಯುತ್ತದೆ. ಹಾಗಿದ್ದೂ ಶೃಂಗಾರ ಸಮಗ್ರ ಕಾವ್ಯವನ್ನು ವ್ಯಾಪಿಸುವುದಿಲ್ಲ ಎನ್ನಬಹುದು. ಮೂರನೆಯ ಸ್ಥಾನ ಕರುಣಕ್ಕೆ ಸಲ್ಲುತ್ತದೆ.

ಶೃಂಗಾರದ ಬಗ್ಗೆ ಇಲ್ಲಿ ಎರಡು ಮಾತು ಹೇಳಬಹುದು. ‘ಕಾದಂಬರಿ’ಯಲ್ಲಿ ಸಂಭೋಗ ವಿಪ್ರಲಂಭಗಳೆರಡೂ ಚಿತ್ರಿತವಾಗಿವೆ; ಆದರೆ ಸಂಭೋಗಕ್ಕಿಂತ ವಿಪ್ರಲಂಭಕ್ಕೇ ಹೆಚ್ಚು ಅವಕಾಶ ಮತ್ತು ಪ್ರಾಶಸ್ತ್ಯ. ಅದರ ಸಂಭೋಗಶೃಂಗಾರವೂ ದೈಹಿಕ ಸಮಾಗಮರಹಿತವಾದುದು ಎಂಬುದೊಂದು ವೈಶಿಷ್ಟ್ಯ. ‘ಕಾದಂಬರಿ’ಯ ಶೃಂಗಾರ ನಿರೂಪಣೆ ಉದಾತ್ತ ಗಂಭೀರವಾದುದು; ಸದಭಿರುಚಿಪೂರ್ವಕವಾದುದು. ಅದರಲ್ಲಿ ಉತ್ಕಟತೆಯಿದ್ದರೂ ಅಶ್ಲೀಲತೆಯಾಗಲಿ ಅಸಭ್ಯತೆಯಾಗಲಿ ಸ್ವಲ್ಪವೂ ಇಲ್ಲ. ಕವಿ ಎಚ್ಚರಿಕೆಯಿಂದ, ಔಚಿತ್ಯಪ್ರಜ್ಞೆಯಿಂದ, ಅನುದ್ವೇಗಕರವಾಗಿ ಶೃಂಗಾರವನ್ನು ಪ್ರತಿಪಾದಿಸಿದ್ದಾನೆ. ಇತರ ಕೃತಿಗಳಿಗೂ ಕಾದಂಬರಿಗೂ ಇರುವ ಒಂದು ಮುಖ್ಯ ಭೇದವೇ ಇದು. ‘ಕಾದಂಬರಿ’ ಕಾವ್ಯದ ದರ್ಶನಕ್ಕೆ ಈ ಹದವಾದ, ಹಸನಾದ ಶೃಂಗಾರಚಿತ್ರಣ ನಿಸ್ಸಂಶಯವಾಗಿ ಅನುಗುಣವಾಗಿದೆ. ವಿಪ್ರಲಂಭ ಶೃಂಗಾರದ ದಶಾವಸ್ಥೆಗಳನ್ನೂ ‘ಕಾದಂಬರಿ’ಯಲ್ಲಿ ನೋಡುತ್ತೇವೆ.

ಪ್ರಣಯಭಾವಗಳ ಕೋಲಾಹಲವನ್ನೂ ನವಾನುರಾಗದೀಪ್ತರಾದ ಯುವ ಪ್ರಣಯಿಗಳ ಅವಸ್ಥೆಯನ್ನೂ ಅದರ ಅನುಕ್ರಮ ಬೆಳವಣಿಗೆಯನ್ನೂ ಕವಿ ಸಹಜಮಾರ್ಮಿಕವಾಗಿ ವರ್ಣಿಸಿದ್ದಾನೆ. ಹೊಸದಾಗಿ ಮದನ ಪ್ರಭಾವಕ್ಕೆ ತುತ್ತಾದ ಪ್ರಿಯ ಪ್ರೇಯಸಿಯರ ಮಾನಸಿಕ ದೈಹಿಕ ವ್ಯಾಪಾರಗಳು ಕಾವ್ಯದಲ್ಲಿ ಸವಿವರವಾಗಿ ಎಲ್ಲ ಸೂಕ್ಷ್ಮತೆಯೊಡನೆ ಚಿತ್ರಿತವಾಗಿವೆ; ಕವಿಯ ಪ್ರಬುದ್ಧ ಮನೋವಿಜ್ಞಾನಕ್ಕೆ ಸಾಕ್ಷಿಯಾಗಿವೆ.

ಜೀವನ ದೃಷ್ಟಿ : ‘ಕಾದಂಬರಿ’ ಕಾವ್ಯದ ವರ್ಣನೆಗಳು, ಪಾತ್ರಚಿತ್ರಣ, ರಸಾವಿಷ್ಕಾರ ಮುಂತಾದುವಕ್ಕೆಲ್ಲ ಕಿರೀಟಪ್ರಾಯವಾದುದು ಅದರಲ್ಲಿ ಧ್ವನಿತವಾಗುವ ದರ್ಶನ. ಕಲೆಯ ವಿಲಾಸ ಕಾವ್ಯದ ಒಂದು ಮುಖವಾಗಿದ್ದರೆ, ದರ್ಶನ ಇನ್ನೊಂದು ಮುಖವಾಗಿ ಕಾವ್ಯಕ್ಕೆ ಮಹತ್ತ್ವವನ್ನುಂಟುಮಾಡಿದೆ.

ಯೋಗಭೋಗದ ಸಮನ್ವಯವೆ ಭಾರತೀಯ ಆರ್ಷ ಪರಂಪರೆಯ ನಿಲುವು. ಗಂಡು ಹೆಣ್ಣಿನ ದೈಹಿಕವಾದ ತಾತ್ಕಾಲಿಕ ಕಾಮ ವಿರಹ ಪಶ್ಚಾತ್ತಾಪ ತಪಸ್ಸುಗಳಿಂದ ತನ್ನ ಕಾಲುಷ್ಯವನ್ನು ನೀಗಿಕೊಂಡು ಪರಿಶುದ್ಧವೂ ಪವಿತ್ರವೂ ಆಗಿ ಪರಿಣಮಿಸಿ ಚಿರಂತನವಾದ ಆತ್ಮ ಬಾಂಧವ್ಯದ ಸ್ತರಕ್ಕೇರಬೇಕು. ಪ್ರಣಯಿಗಳು ಎಡರು ತೊಡರುಗಳನ್ನು ಅನುಭವಿಸಿ, ದುಃಖದಿಂದ ಸಂಯಮಚಿತ್ತರಾದಾಗ, ಯೌವನದ ಆವೇಗ ಇಳಿದು, ಮೋಹದ ಬಿರುಗಾಳಿ ಶಾಂತವಾದಾಗ ಪ್ರೇಮ ಉದಾತ್ತವಾಗುತ್ತದೆ; ಒಂದು ಚಣದ ಭೋಗ ಚಿರಕಾಲಿಕ ಆನಂದವಾಗಿ ಪರಿವರ್ತನೆಗೊಂಡು ಕ್ಷೇಮಂಕರ ಶಕ್ತಿಯಾಗುತ್ತದೆ. ‘ಕಾದಂಬರಿ’ ಕಾವ್ಯದಲ್ಲಿ ಮಹಾಶ್ವೇತೆ-ಪುಂಡರೀಕರ ಕತೆ ಕವಿಯ ಈ ದರ್ಶನಕ್ಕೆ ನಿದರ್ಶನವಾಗಿ ಬಂದಿದೆ. ಹೂವು ಹಣ್ಣಾಗುವ ಪರಿಯೆ ‘ಕಾದಂಬರಿ’ಯ ಜೀವಾಳ.

ಈ ದೃಷ್ಟಿಯಿಂದ ನೋಡಿದಾಗ ಈ ಕಾವ್ಯದ ದರ್ಶನಕ್ಕೆ ಎರಡು ಕಣ್ಣುಗಳಿರುವುದು ಕಂಡುಬರುತ್ತದೆ : ‘‘ಒಂದು ಸರಳ ಗಂಭೀರ ಅನಶ್ಲೀಲ ಸುಂದರ ಶೃಂಗಾರ. ಮತ್ತೊಂದು ಸದ್ಯಃ ಫಲಾಕಾಂಕ್ಷಿಯಲ್ಲದ, ಜನ್ಮ ಜನ್ಮಾಂತರದವರೆಗೂ ಕಾಯುವ ಸಾಮರ್ಥ್ಯವೂ ತಾಳ್ಮೆಯೂ ಶ್ರದ್ಧೆಯೂ ಇರುವ, ಪ್ರೇಮದ ನೀರವ ಧ್ಯಾನಮಯವಾದ ತಪಸ್ಸು’’[10] ಆರಂಭದಲ್ಲಿ ಧರ್ಮಭ್ರಷ್ಟರಾದ ಪುಂಡರೀಕ ಮಹಾಶ್ವೇತೆಯರ ಪ್ರೇಮ ತಪಸ್ಸತ್ತ್ವದಿಂದ ಧರ್ಮಬದ್ಧವಾಗುತ್ತದೆ.

‘ಕಾದಂಬರಿ’ ಶೃಂಗಾರಕಾವ್ಯವಾದರೂ ಆ ಶೃಂಗಾರ ತಪಸ್ಸಿಗೆ ನಿವೇದಿತವಾಗಿದೆ; ಸೌಂದರ್ಯ ಶಿವಕ್ಕೆ ಸಮರ್ಪಿತವಾಗಿದೆ. ಕುವೆಂಪು ಹೇಳುವಂತೆ ‘‘ಕಾದಂಬರಿ ಪ್ರೇಮದ ವಿಜಯದ ಕಥೆ, ವೈರಾಗ್ಯವು ಶೃಂಗಾರಕ್ಕೆ ಶರಣಾದ ಕಥೆ, ದೈಹಿಕ ಕಾಮ ಜನ್ಮಜನ್ಮಾಂತರಗಳ ಕ್ಲೇಶ ಕಷ್ಟ ವಿರಹಗಳ ಉಗ್ರ ತಪಸ್ಸಿನಿಂದ ಕಾಳಿಕೆಯನ್ನು ಕಳೆದುಕೊಂಡು, ಅಚ್ಚಹೊನ್ನಾಗಿ, ದೈವಿಕ ಪ್ರೇಮದಲ್ಲಿ ಸಾರ್ಥಕತೆಯನ್ನು ಸಂಪಾದಿಸಿದ ಪುಣ್ಯಕಥೆ. ಆ ಕಥೆ ಆಗ್ನಿಜ್ವಾಲೆಯಲ್ಲಿ ಬೇರ್ಗೊಂಡು ಚಂದ್ರಜ್ಯೋತ್ಸ್ನೆಯಾಗಿ ಹಣ್ಗೊಂಡಿದೆ. ಅಲ್ಲಿಯ ಶೃಂಗಾರವೂ ತಪೋಮಯವಾಗಿದೆ; ತಪಸ್ಸೂ ಶೃಂಗಾರಪೂರ್ಣವಾಗಿದೆ.’’[11]

ಸ್ಥಾನ ನಿರ್ದೇಶನ : ಒಟ್ಟಿನಲ್ಲಿ ೧೦ನೆಯ ಶತಮಾನವೊಂದು ವೀರಮನ್ವಂತರ; ಅದರ ಫಲವಾಗಿ ಹೊಮ್ಮಿದ ಸಾಹಿತ್ಯವೂ ಬಹುಮಟ್ಟಿಗೆ ವೀರರಸಪ್ರಚುರವಾದುದು. ಒಂದು ಕಡೆ ಶಾಂತಪ್ರಧಾನವಾದ ಜೈನಪುರಾಣಗಳು, ಇನ್ನೊಂದು ಕಡೆ ವೀರಪ್ರಧಾನವಾದ ‘ಲೌಕಿಕ’ ಕಾವ್ಯಗಳು-ಇದು ೧೦ನೆಯ ಶತಮಾನದ ಸಾಹಿತ್ಯ ಚಿತ್ರ; ರಸದೃಷ್ಟಿಯಿಂದ ನೋಡಿದರೆ ಸಂಸ್ಕೃತದ ‘ಮಹಾಕಾವ್ಯ’ ಪರಂಪರೆಯಿಂದ ಭಿನ್ನವಾದುದು. ಇದಕ್ಕೆ ಅಪವಾದವೆಂದರೆ ಶೃಂಗಾರ ಪರವಾದ ‘ಕಾದಂಬರಿ’ಯೊಂದೇ. ಒಂದನೆಯ ನಾಗವರ್ಮ ಕೆಲವಂಶಗಳಲ್ಲಿ ೧೦ನೆಯ ಶತಮಾನದ ಕಾಲಧರ್ಮಕ್ಕೆ ಹೊಂದಿಕೊಂಡಂತಿದ್ದರೂ ಕೆಲವು ಮೂಲಭೂತವಾದ ಅಂಶಗಳಲ್ಲಿ ಅದಕ್ಕೆ ಹೊರತಾಗಿದ್ದಾನೆ; ಕನ್ನಡ ಸಾಹಿತ್ಯಕ್ಕೆ ಅವನ ವಿಶಿಷ್ಟವಾದ ಕೊಡುಗೆಯಿರುವುದು ಈ ಹೊರತಿನಲ್ಲಿಯೆ.

ಪಂಪ ಮೊದಲಾದವರು ಭಾರತ ರಾಮಾಯಣ ಕಥೆಗಳನ್ನು ತಮ್ಮ ‘ಲೌಕಿಕ’ ಕಾವ್ಯಗಳಲ್ಲಿ ಸ್ವತಂತ್ರವಾಗಿ ಪ್ರತಿಪಾದಿಸಿದ್ದರಿಂದ, ಅವುಗಳಲ್ಲಿ ‘ರಾಜಕೀಯ’ ಧ್ವನಿಯನ್ನು ತರುವುದೂ ಸಮಕಾಲೀನ ವೀರ ಜೀವನವನ್ನು ಚಿತ್ರಿಸುವುದೂ ಅವರಿಗೆ ಸಾಧ್ಯವಾಯಿತು. ನಾಗವರ್ಮನ ‘ಕಾದಂಬರಿ’ಯಾದರೋ ಮೂಲಕ್ಕೆ ನಿಷ್ಠವಾದ ಅನುವಾದ; ಮೇಲಾಗಿ ಅದೊಂದು ಪ್ರಣಯಕಥೆ. ಅದರಲ್ಲಿ ಕವಿ ಸಮಕಾಲೀನ ಪ್ರಜ್ಞೆಯನ್ನು ಮೇಳವಿಸುವುದು, ಕ್ಷಾತ್ರಪರವಾದ ಯುಗಧರ್ಮವನ್ನು ಅಭಿವ್ಯಕ್ತಿಸುವುದು ಶಕ್ಯವಿಲ್ಲ; ಅವನಿಗೆ ಆ ಉದ್ದೇಶವೂ ಇಲ್ಲ. ಹೀಗಾಗಿ, ೧೦ನೆಯ ಶತಮಾನದ ಮೌಲ್ಯಗಳನ್ನರಿಯುವಲ್ಲಿ ‘ಪಂಪ ಭಾರತ’, ‘ಗದಾಯುದ್ಧ’ಗಳು ನೆರವಾಗುವಂತೆ ‘ಕಾದಂಬರಿ’ ನೆರವಾಗಲಾರದು. ನಾಗವರ್ಮ ಸ್ವತಃ ಯುದ್ಧ ವೀರನಾದುದರಿಂದ ಒಂದು ವೀರಕಾವ್ಯವನ್ನು ಬರೆಯುವುದು ಅವನಿಗೆ ಅಸಾಧ್ಯವಾಗಿರಲಿಲ್ಲ. ಅವನ ಮತವೆ ಅದಕ್ಕೆ ತಡೆಯಾಯಿತೆಂದು ತೋರುತ್ತದೆ. ಆದರೆ ತನಗಿಂತ ಹಿಂದಿನ ವೈದಿಕ ವಿದ್ವಾಂಸರು ಕನ್ನಡವನ್ನು ಮುಟ್ಟದಿದ್ದಾಗ, ಅವನು ಧರ್ಮಪ್ರಚಾರಕ್ಕಲ್ಲದಿದ್ದರೂ ಶಾಸ್ತ್ರನಿರ್ಮಾಣಕ್ಕೆ ಮತ್ತು ಅನುವಾದಕ್ಕೆ ಅದನ್ನು ಬಳಸಿಕೊಳ್ಳಲು ಮುಂದಾದುದು ಸಣ್ಣ ಸಂಗತಿಯಲ್ಲ. ಈ ವಿಚಾರ ನಮ್ಮನ್ನು ನಾಗವರ್ಮನ ವಿಶಿಷ್ಟತೆಯತ್ತ ಕರೆದೊಯ್ಯುತ್ತದೆ. ಅವನು ಕನ್ನಡ ಸಾಹಿತ್ಯದ ಪ್ರಪ್ರಥಮ ಗಣ್ಯ ಬ್ರಾಹ್ಮಣ ಕವಿ. ‘‘ಶಾಸನಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೆ, ಈಗ ತಿಳಿದಿರುವಂತೆ ಕನ್ನಡ ಸಾಹಿತ್ಯದಲ್ಲಿ ಜೈನ ಕವಿಗಳಿಗೆ ಪಂಪನು ಆದಿಕವಿಯಾದಂತೆ ಒಂದನೆಯ ನಾಗವರ್ಮನೇ ಬ್ರಾಹ್ಮಣ ಕವಿಗಳಿಗೆ ಆದಿಕವಿಯಾಗುತ್ತಾನೆ.’’[12] ಸದ್ಯಕ್ಕೆ ತಿಳಿದುಬಂದಿರುವ ಮಟ್ಟಿಗೆ ಅವನು ಕನ್ನಡ ಸಾಹಿತ್ಯದ ಮೊತ್ತಮೊದಲ ಭಾಷಂತರಕಾರ; ಕನ್ನಡಕ್ಕೆ ಪ್ರಪ್ರಥಮವಾಗಿ ಲೌಕಿಕ ಕಾವ್ಯವನ್ನು, ಅದರಲ್ಲೂ ಪ್ರಣಯ ಕಥೆಯೊಂದನ್ನು ಒದಗಿಸಿಕೊಟ್ಟ ಶೇಯಸ್ಸು ಅವನದು.

ಅಂತೂ ನಾಗವರ್ಮ ಪಂಪ ಪೊನ್ನ ರನ್ನರಂತೆ ಶಾಂತರಸಪ್ರಧಾನವಾದ ಧಾರ್ಮಿಕ ಕಾವ್ಯವನ್ನಾಗಲಿ ವೀರರಸ ಪ್ರಧಾನವಾದ ರಾಮಾಯಣ ಭಾರತವನ್ನಾಗಲಿ ಬರೆಯದೆ ಶೃಂಗಾರಾತ್ಮಕವಾದ ಕಾವ್ಯವೊಂದನ್ನು ರಚಿಸಿ, ಹೊಸ ಹಾದಿಯನ್ನು ಹಿಡಿದ ಕವಿ; ಅಷ್ಟೇ ಅಲ್ಲ, ಮುಂದಿನ ಕವಿಗಳಿಗೆ ಹೊಸ ದಿಕ್ಕು ತೋರಿದ ಕವಿಯೂ ಹೌದು. ಪಂಪನಂತೆ ಅವನೂ ಒಬ್ಬ ಮಾರ್ಗದರ್ಶಕ, ಶಕಪುರುಷ. ಬಿ.ಎಂ.ಶ್ರೀ ಅವರು ಹೇಳುವಂತೆ ‘‘ಅಂದಿನಿಂದ ಇಂದಿನವರೆಗೂ ಸುಮಾರು ಸಾವಿರ ವರ್ಷ ಕಾಲ, ಧರ್ಮಕಥೆ ವೀರಕಥೆ ಪ್ರೇಮಕಥೆಗಳನ್ನು ಬರೆಯತಕ್ಕವರಿಗೆಲ್ಲ ಪಂಪ ರನ್ನ ನಾಗವರ್ಮರು ‘ಗುರುತಾಪ್ರತೀತಿ’ಯನ್ನು ಕೈಕೊಂಡವರಾಗಿದ್ದಾರೆ.’’[13]

ಮುಂದಿನ ಕವಿಗಳು ಮೊದಲನೆಯ ನಾಗವರ್ಮನನ್ನು ಸ್ಮರಿಸಿರುವುದು ವಿರಳವಾದರೂ ಅವನ ಪ್ರಭಾವ ಕನ್ನಡ ಸಾಹಿತ್ಯದ ಮೇಲೆ ಅವಿರಳವಾಗಿಯೆ ಆಗಿದೆ. ಲೌಕಿಕ ಕೃತಿಗಳನ್ನು ಸಂಸ್ಕೃತದಿಂದ ಭಾಷಾಂತರಿಸುವವರಿಗೆ ನಾಗವರ್ಮ ಮೇಲ್ಪಂಕ್ತಿ ಹಾಕಿಕೊಟ್ಟ ಕವಿ. ದುರ್ಗಸಿಂಹನ ‘ಪಂಚತಂತ್ರ’ಕ್ಕೆ ಅವನದೇ ಸ್ಪೂರ್ತಿಯಿದ್ದೀತು. ಚೌಂಡರಸ ದಂಡಿಯ ‘ದಶಕುಮಾರ ಚರಿತ’ವನ್ನು ಅನುವಾದಿಸಿದ್ದು ಬಹುಶಃ ನಾಗವರ್ಮನ ಪ್ರೇರಣೆಯಿಂದ. ಪ್ರಣಯಕಥೆ ಅಥವಾ ರೋಮಾನ್ಸ್ ಗಳ ನಿರ್ಮಾಣಕ್ಕಂತೂ ನಿರ್ವಿವಾದವಾಗಿ ನಾಗವರ್ಮನೇ ಮಾದರಿ. ಅವನ ‘ಕಾದಂಬರಿ’ಯ ಪ್ರಭಾವ ನೇಮಿಚಂದ್ರನ ‘ಲೀಲಾವತಿ’, ದೇವಕವಿಯ ‘ಕುಸುಮಾವಳಿ’, ಅಂಡಯ್ಯನ ‘ಕಬ್ಬಿಗರ ಕಾವ’ಗಳಲ್ಲಿ ಕಾಣುತ್ತದೆ; ಇನ್ನೂ ಅನೇಕ ಕಾವ್ಯಗಳಲ್ಲಿ ಅದನ್ನು ಗುರುತಿಸಬಹುದು.

೧೦ನೆಯ ಶತಮಾನ ಕನ್ನಡ ಸಾಹಿತ್ಯದ ಚಿನ್ನದ ಕಾಲ ಎನಿಸಿಕೊಂಡಿದೆ. ಆ ಚಿನ್ನದ ಬೆಳೆಯಲ್ಲಿ ನಾಗವರ್ಮನ ಪಾಲು ಅಲ್ಪವೇನಲ್ಲ. ಆ ಶತಮಾನದ ಕೀರ್ತಿಗೆ ಪಂಪ ರನ್ನರಂತೆ ನಾಗವರ್ಮನೂ ಕಾರಣನಾಗಿದ್ದಾನೆ. ಅವನ ‘ಕರ್ಣಾಟಕ ಕಾದಂಬರಿ’ ೧೦ನೆಯ ಶತಮಾನದ ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನೂ ವೈವಿಧ್ಯವನ್ನೂ ತಂದುಕೊಡಲು ನೆರವಾಗಿದೆ. ಅದು ಅನುವಾದವಾಗಿರಬಹುದು; ಅದೇನೂ ಬಾಧಕವಾದ ಸಂಗತಿಯಲ್ಲ. ಸ್ವತಂತ್ರಕೃತಿ ಯೆಂಬ ಭಾವನೆಯನ್ನುಂಟುಮಾಡುವಷ್ಟು ಶ್ರೇಷ್ಠವಾಗಿರುವ ಅಂತಹ ಅನುವಾದ ಯಾವ ಸಾಹಿತ್ಯಕ್ಕಾದರೂ ಕೋಡುಮೂಡಿಸುವಂಥದು. ಅದು ಕೊಡುವ ಸಂತೋಷ ಅತಿಶಯವಾದುದು, ಶುದ್ಧವಾದುದು. ಅಕ್ಷರಶಃ ಅದೊಂದು ಸತ್ಕಾವ್ಯ.[14]

[1] ಕುವೆಂಪು ಅವರ ‘ತಪೋನಂದನ’ದ ‘ಸರೋವರದ ಸಿರಿಗನ್ನಡಿಯಲ್ಲಿ’ನ ವಿವೇಚನೆ ಮುಖ್ಯವಾಗಿ ನಾಗವರ್ಮನ ಅನುವಾದಕ್ಕೆ ಅನ್ವಯಿಸುತ್ತದೆ, ಮೂಲಕ್ಕಲ್ಲ.

[2] ರಂ.ಶ್ರೀ.ಮುಗಳಿ, ಪೂರ್ವೋಕ್ತ, ಪು.೧೧೬

[3] ಅದೇ, ಪು.೧೧೭

[4] ವಿ.ಸೀ.‘ಕರ್ಣಾಟಕ ಕಾದಂಬರಿ’, ಪು.೧೭

[5] ಬಿ.ಎಂ.ಶ್ರೀ.ಪೂರ್ವೋಕ್ತ, ಪು.೫೯೮

[6] ‘Kadambari’, II, ೧೮೬೭, Introd.

[7] ರಂ.ಶ್ರೀ. ಮುಗಳಿ, ಪೂರ್ವೋಕ್ತ, ಪು.೧೧೭

[8] ರಂ.ಶ್ರೀ. ಮುಗಳಿ, ಅಲ್ಲೇ

[9] ‘ಕರ್ಣಾಟಕ ಕಾದಂಬರಿ’, ಉತ್ತರಭಾಗ, ಪ.೮೩೭

[10] ಕುವೆಂಪು, ‘ತಪೋನಂದನ’, ಪು.೪

[11] ಕುವೆಂಪು, ಅಲ್ಲೇ

[12] ಎಚ್.ಎಂ.ಶಂಕರನಾರಾಯಣ ರಾವ್, ‘ಒಂದನೆಯ ನಾಗವರ್ಮ’ (ಸಂ.ವಿ.ಸೀ), ಪು.೨೩

[13] ಬಿ.ಎಂ.ಶ್ರೀ, ಪೂರ್ವೋಕ್ತ, ಪು.೪೯೪. ನಾಗವರ್ಮ ಒಂದು ವೇಳೆ ಜೈನನಾಗಿದ್ದರೂ ಅವನ ವೈಶಿಷ್ಟ್ಯಕ್ಕೆ ಅಪೋಹವಿಲ್ಲ.

[14] ‘ಕಾದಂಬರಿ’ಯಲ್ಲಿ ಗಂಡುಹೆಣ್ಣಿನ ಸಂಬಂಧದ ಮೂರು ಪರಿಗಳು ಚಿತ್ರಿತವಾಗಿವೆ : ಪುಂಡರೀಕ-ಮಹಾಶ್ವೇತೆಯರ ಕಾಮಕಲುಷಿತ ಪ್ರೇಮ, ಚಂದ್ರಾಪೀಡ-ಕಾದಂಬರಿಯರ ಪರಿಶುದ್ಧ ಪ್ರೇಮ ಮತ್ತು ಚಂದ್ರಾಪೀಡ-ಪತ್ರಲೇಖೆಯರ ಸ್ನೇಹ.