ಹತ್ತನೆಯ ಶತಮಾನ ಪ್ರಾಚೀನ ಕನ್ನಡ ಸಾಹಿತ್ಯ ಸುವರ್ಣಯುಗವೆನಿಸಿದೆ. ಆದರೆ ಅದರ ನೆರೆಯಲ್ಲೇ ಇರುವ ಹನ್ನೊಂದನೆಯ ಶತಮಾನ ಅಷ್ಟೊಂದು ಉಜ್ವಲವಾಗಿ ತೋರುವುದಿಲ್ಲ; ಅದು ಬಹುತೇಕ ಶಾಸ್ತ್ರಕೃತಿಗಳ ಪ್ರಾಂತ. ಆದರೆ ಈ ಮಾತಿಗೆ ದುರ್ಗಸಿಂಹನ ‘ಕರ್ಣಾಟಕ ಪಂಚತಂತ್ರ’ವೊಂದು ಒಳ್ಳೆಯ ಅಪವಾದ.[1]

ಕನ್ನಡ ವಾಙ್ಮಯದ ಉದ್ಘಾಟನೆ ಪ್ರಾಯಶಃ ಜೈನಕವಿಗಳಿಂದಾಯಿತು. ಬ್ರಾಹ್ಮಣ ಕವಿಗಳು ಅದನ್ನು ಪ್ರವೇಶಿಸಿದ್ದೇ ತಡವಾಗಿ. ಆಮೇಲೂ ಅವರು ಮೊದಮೊದಲು ಧಾರ್ಮಿಕ ಕೃತಿರಚನೆಗೆ ಮನಸ್ಸು ಕೊಡಲಿಲ್ಲ; ಶಾಸ್ತ್ರಕೃತಿಗಳನ್ನು ಬರೆದರು, ಇಲ್ಲವೆ ಲೌಕಿಕ ಕಾವ್ಯ, ನಾಟಕಗಳನ್ನು ಸಂಸ್ಕೃತದಿಂದ ಕನ್ನಡಿಸಿದರು. ಅವರಲ್ಲಿ ಅಗ್ರಗಣ್ಯನೂ ಆಚಾರ್ಯನೂ ಆಗಿ ಕಾಣಿಸುತ್ತಾನೆ, ‘ಕರ್ಣಾಟಕ ಕಾದಂಬರಿ’ಯ ಕರ್ತೃವಾದ ಒಂದನೆಯ ನಾಗವರ್ಮ. ಅವನ ಪರಂಪರೆಯನ್ನು ಮುಂದುವರಿಸಿದ ಗಣ್ಯ ಕವಿಗಳಲ್ಲಿ ದುರ್ಗಸಿಂಹನೊಬ್ಬ.[2]

ತನ್ನ ಕೃತಿಯ ಪೀಠಿಕಾ ಭಾಗದಲ್ಲಿ ದುರ್ಗಸಿಂಹ ಸ್ವವಿವರಗಳನ್ನು ಸಾಕಷ್ಟು ಕೊಟ್ಟಿದ್ದಾನೆ. ಅವನು ಕರ್ಣಾಟಕದ ಕಿಸುಕಾಡುನಾಡಿನ ಸಯ್ಯಡಿ ಎಂಬ ಅಗ್ರಹಾರದವನು.[3] ಅಲ್ಲಿ ‘ಧರಾಮರಾಗ್ರಗಣ್ಯ’ನಾದ ದುರ್ಗಮಯ್ಯ ಎಂಬವನಿದ್ದ. ಅವನ ಮಗ ಈಶ್ವರಾರ್ಯ; ಈಶ್ವರಾರ್ಯನ ಪತ್ನಿ ರೇವಕಬ್ಬೆ. ಆ ದಂಪತಿಯ ಮಗನೇ ನಮ್ಮ ದುರ್ಗಸಿಂಹ. ಅವನದು ಕಮ್ಮೆಕುಲ; ಗೌತಮಗೋತ್ರ; ಸ್ಮಾರ್ತ ಭಾಗವತ ಸಂಪ್ರದಾಯ. ದುರ್ಗಸಿಂಹನ ಗುರು ‘ಮಹಾಯೋಗಿ’ ಶಂಕರಭಟ್ಟ. ‘‘ಕವಿ ಗಮಕಿ ವಾದಿ ವಾಗ್ಮಿಪ್ರವರ’’ನಾದ ಮಾದಿರಾಜನೆಂಬ ಮುನಿವರ ‘ಪಂಚತಂತ್ರ’ವನ್ನು ತಿದ್ದಿದನಂತೆ; ಗೋವಿಂದನೆಂಬವನು ಅದನ್ನು ‘‘ಶೋಧಿಸಿ ಬರೆ’’ದನಂತೆ. ದುರ್ಗಸಿಂಹನ ಪಾಲಿಗೆ ‘‘ಪರಮಾತ್ಮಂ ಪರಮೇಶ್ವರಂ, ಮುರಹರಂ ದೈವಂ’’.

ಚಾಲುಕ್ಯ ದೊರೆಗಳಲ್ಲಿ ‘ಕಲಿಕಾಲಕರ್ಣ’ ಮುಂತಾದ ಬಿರುದುಗಳನ್ನುಳ್ಳ ಜಗದೇಕಮಲ್ಲ ಅಥವಾ ಜಯಸಿಂಹನಲ್ಲಿ ‘ಶ್ರೀಗಂಡಭೂರಿಶ್ರಯ’ನೆಂಬ ಬಿರುದಿನ ಸಿಂಹಸನ್ನಾಹನೆಂಬ ದಂಡನಾಯಕನಿದ್ದ. ‘‘ತಚ್ಚರಣಕಮಲಭೃಂಗ’’ನಾದ, ಚಕ್ರವರ್ತಿ ದಂಡಾಧೀಶ, ಕೋದಂಡರಾಮಾಧಿಪ ಇತ್ಯಾದಿ ಬಿರುದುಗಳನ್ನುಳ್ಳ ಕುಮಾರಸ್ವಾಮಿ ದುರ್ಗಸಿಂಹನಿಗೆ ಜಗದೇಕಮಲ್ಲನಲ್ಲಿ ಸಂಧಿವಿಗ್ರಹಿ ಪದವಿಯನ್ನು ಕೊಡಿಸಿದ. ತನ್ನ ಪ್ರಭುವಾದ ಜಗದೇಕಮಲ್ಲನ ಆಣತಿಯಂತೆ ಕವಿ ಸಯ್ಯಡಿಯಲ್ಲಿ ಹರಿಹರಭವನಗಳನ್ನು ಕಟ್ಟಿಸಿದ. ದಂಡನಾಯಕ ಮತ್ತು ಸಂಧಿ ವಿಗ್ರಹಿಯಾಗಿದ್ದ ದುರ್ಗಸಿಂಹ ‘‘ಪಂಪಾದಿಗಳಂತೆ ಸವ್ಯಸಾಚಿಯಾದ ಕವಿ.’’[4]

ಮಲ್ಲಿಕಾರ್ಜುನ (ಸು. ೧೨೪೫) ‘ಸೂಕ್ತಿಸುಧಾರ್ಣವ’ದಲ್ಲಿ ‘ಕರ್ಣಾಟಕ ಪಂಚತಂತ್ರ’ದಿಂದ ಪದ್ಯಗಳನ್ನು ಉದ್ಧರಿಸಿರುವುದರಿಂದ, ದುರ್ಗಸಿಂಹ ಅದಕ್ಕಿಂತ ಹಿಂದಿನವನೆಂಬುದು ಖಚಿತ. ಅವನ ಆಶ್ರಯದಾತನಾದ ಒಂದನೆಯ ಜಯಸಿಂಹ ಜಗದೇಕಮಲ್ಲ ೧೦೧೫ ರಿಂದ ೧೦೪೦ರ ವರೆಗೆ ಆಳಿದವನಾದ್ದರಿಂದ, ದುರ್ಗಸಿಂಹನ ಕಾಲ ಸು. ೧೦೨೫ ಇದ್ದಿರಬೇಕೆಂದು ‘ಕವಿಚರಿತೆ’ಕಾರರ ತೀರ್ಮಾನ.[5] ಅದೀಗ ತುಸು ಬದಲಾಗಿದೆ. ಎಂ. ಗೋವಿಂದ ಪೈಯವರು ‘ಪಂಚತಂತ್ರ’ದ ಆರಾಪ್ರತಿಯ ಅಂತ್ಯದಲ್ಲಿರುವ ಪದ್ಯವೊಂದನ್ನು ಆದರಿಸಿ, ೧೦೩೧ ದುರ್ಗಸಿಂಹನ ಕಾಲವೆಂದು ಈಚೆಗೆ ನಿರ್ಣಯಿಸಿದ್ದಾರೆ. (ವಾಸ್ತವವಾಗಿ, ಅದು ಕೃತಿರಚನೆಯ ವರ್ಷವೇ).

‘ಪಂಚತಂತ್ರ’ವೊಂದು ಪ್ರಾಣಿಕಥೆಗಳ ಸಂಕಲನ; ಅವು ನೀತಿಕಥೆಗಳೂ ಹೌದು.[6] ಇಲ್ಲಿ ಬರುವ ಪ್ರಾಣಿಗಳು ಮಾನವಲೋಕದ ಪ್ರತಿನಿಧಿಗಳು; ಆದರೆ ಅವು ತಮ್ಮ ಪ್ರಾಣಿಗುಣಗಳನ್ನು ಕಳೆದುಕೊಳ್ಳುವುದಿಲ್ಲ. ಮನುಷ್ಯ ಸ್ವಭಾವದ ಒಳ್ಳೆಯ ಹಾಗೂ ಕೆಟ್ಟ ಮುಖಗಳನ್ನು ಅವು ಸಂಕೇತಿಸುತ್ತವೆ. ಹೀಗಾಗಿ ‘ಪಂಚತಂತ್ರ’ದ ಕತೆಗಳು ‘ಅನ್ಯೋಕ್ತಿ’ ಮಾಲೆಯಾಗಿವೆ ಎನ್ನಬಹುದು. ಆದರೆ ಅವು ಮಕ್ಕಳ ಪಾಲಿಗೆ ಕೇವಲ ಪ್ರಾಣಿಕಥೆಗಳಾಗಿಯೂ ತಮ್ಮ ಮೌಲ್ಯವನ್ನುಳಿಸಿಕೊಳ್ಳಬಲ್ಲುವು. ಇದರಿಂದ ಕತೆಗಳ ಆಕರ್ಷಣೆ ಇಮ್ಮಡಿಸಿದೆ.

‘ಪಂಚತಂತ್ರ’ ಎನ್ನುವಲ್ಲಿರುವ ‘ತಂತ್ರ’ ಶಬ್ದ, ಪರಿಚ್ಛೇದ ಎಂಬ ಅರ್ಥವನ್ನು ಕೊಡುವಂಥದು. ತಂತ್ರಶಬ್ದದ ಪ್ರಸಿದ್ಧ ಪರಿಚಿತಾರ್ಥವೂ ಇಲ್ಲಿ ಸಂಗತವಾಗಬಹುದು. (‘‘ಇದು ಐದುಂ ತಂತ್ರಂಗಳ ಪ್ರಕಾರಂ’’ ಎನ್ನುವಲ್ಲಿ ಎರಡನೆಯ ಅರ್ಥವೇ ಇರುವಂತಿದೆ). ತಂತ್ರವೆಂದರೆ ಕಥೆ ಎಂದರ್ಥವೂ ಇರಬಹುದೆಂದು ಊಹಿಸಲಾಗಿದೆ; ಆ ಊಹೆಗೆ ಆಧಾರವಿಲ್ಲ.

ದುರ್ಗಸಿಂಹನ ‘ಪಂಚತಂತ್ರ’ದಲ್ಲಿ ಐದು ಪ್ರಕರಣಗಳಿವೆ : ಭೇದಪ್ರಕರಣ, ಪರೀಕ್ಷಾ ವ್ಯಾವರ್ಣನ, ವಿಶ್ವಾಸಪ್ರಕರಣ, ವಂಚನಾಪ್ರಕರಣ ಮತ್ತು ಮಿತ್ರಕಾರ್ಯಪ್ರಕರಣ.[7] ಕಪಟೋಪಾಯದಿಂದ ಸ್ನೇಹಿತರಲ್ಲಿ ಒಡಕನ್ನುಂಟುಮಾಡುವುದು ‘ಭೇದ’; ಯಾವುದೇ ಕಾರ್ಯವನ್ನು ವಿಚಾರಪೂರ್ವಕವಾಗಿಯಲ್ಲದೆ ಮಾಡಲಾಗದೆಂದು ತಿಳಿಸುವುದು ‘ಪರೀಕ್ಷೆ’; ನಂಬದವರನ್ನು ನಂಬುವಂತೆ ಮಾಡಿ ಒಳಹೊಗುವುದು ‘ವಿಶ್ವಾಸ’ ; ಅನ್ಯರ ಬಗೆಯನ್ನರಿತು ಸಂಧಾನಮಾಡಿ ವಂಚಿಸುವುದು ‘ವಂಚನೆ’; ಪರರನ್ನು ಸ್ನೇಹದಿಂದ ತನ್ನವರನ್ನಾಗಿ ಮಾಡಿಕೊಳ್ಳುವುದು ‘ಮಿತ್ರಕಾರ್ಯ’.

ಇದು ‘ಪಂಚತಂತ್ರ’ದ ಹುಟ್ಟಿನ ಹಿನ್ನೆಲೆ : ಒಂದು ದಿವಸ ಪರಮೇಶ್ವರ ಒಡ್ಡೋಲಗಗೊಟ್ಟಿರುವಾಗ, ಪಾರ್ವತಿ ಕೈಮುಗಿದು, ಅಪೂರ್ವವಾದ ಕತೆಯೊಂದನ್ನು ಹೇಳಬೇಕೆಂದು ಬಿನ್ನವಿಸಿದಳು. ಆಗ ಹರ ಗಿರಿಜೆಗೆ ಅಂತಹ ಕತೆಗಳನ್ನು ಹೇಳುತ್ತಿರಲು, ಆ ಕಥಾಗೋಷ್ಠಿಯಲ್ಲಿದ್ದ ಪುಷ್ಪದಂತನೆಂಬ ಗಣಪ್ರಧಾನ ಅವನ್ನೆಲ್ಲ ಕೇಳಿಸಿಕೊಂಡ; ಅವನು ಯಾವುದೋ ಕಾರಣದಿಂದ ಮರ್ತ್ಯಲೋಕದಲ್ಲಿ ಹುಟ್ಟಿ, ಗುಣಾಢ್ಯನೆಂಬ ಸತ್ಕವಿಯಾಗಿ, ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಾಗಿದ್ದು, ಹರ ಪಾರ್ವತಿಗೆ ಹೇಳಿದ ಕತೆಗಳನ್ನು ಪೈಶಾಚಿ ಭಾಷೆಯಲ್ಲಿ ‘ಬೃಹತ್ಕಥೆ’ಗಳನ್ನಾಗಿಸಿ ಹೇಳಿದ; ಅದನ್ನು ವಸುಭಾಗಭಟ್ಟ ಕೇಳಿ, ಆ ಕಥಾಸಮೂಹದಲ್ಲಿ ಪಂಚರತ್ನ ಪ್ರಾಯವಾದ ಐದು ಕತೆಗಳನ್ನು ಆಯ್ದುಕೊಂಡು, ‘ಪಂಚತಂತ್ರ’ವೆಂದು ಹೆಸರಿಸಿ, ಲೋಕೋಪಕಾರಾರ್ಥವಾಗಿ ಹೇಳಿದ. (ವಸುಭಾಗಭಟ್ಟನ ಕೃತಿಯನ್ನು ದುರ್ಗಸಿಂಹ ಕನ್ನಡಕ್ಕೆ ಪರಿವರ್ತಿಸಿದ).

ರಾಜಕುಮಾರರಿಗೆ ಉಕ್ತವಾದವು ‘ಪಂಚತಂತ್ರ’ದ ಕತೆಗಳು. ಅದಕ್ಕೆ ಕಾರಣ ಇಂತಿದೆ: ಸೌರೂಪ್ಯಪುರದ ಅಮರಶಕ್ತಿ ಎಂಬ ದೊರೆಗೆ ಅನೇಕಶಕ್ತಿ, ವಸುಶಕ್ತಿ, ರುದ್ರಶಕ್ತಿಗಳೆಂಬ ಮಕ್ಕಳಿದ್ದರು. ಅವರು ವಿದ್ಯಾಭ್ಯಾಸವಿಲ್ಲದ ಮೂರ್ಖರು; ಧೂರ್ತರು. ಅವರೊಮ್ಮೆ ಓಲಗಕ್ಕೆ ಬರುವುದನ್ನು ಕಂಡು, ಇವರು ನೀತಿನಿಪುಣರಾಗುವಂತೆ ಮಾಡಬೇಕೆಂದು ಆಲೋಚಿಸಿದ ಅಮರಶಕ್ತಿ, ಇವರನ್ನು ವಿದ್ಯಾವಂತರನ್ನಾಗಿ ಮಾಡಿದವರಿಗೆ ಬೇಡಿದ್ದನ್ನು ಕೊಡುವೆನೆಂದು ಹೇಳಿ, ಆಸ್ಥಾನ ಪಂಡಿತರ ಮುಖವನ್ನು ನೋಡಿದ. ಆಗ ಒಬ್ಬ ಭಟ್ಟ ‘‘ಇವರನ್ನು ನೀತಿವಿದರನ್ನಾಗಿಸುವುದು ಅಸಾಧ್ಯವೇ ಸರಿ!’’ ಎಂದ. ಅದನ್ನು ವಸುಭಾಗ ಭಟ್ಟನೆಂಬ ವಿದ್ವಾಂಸ ಪ್ರತಿಭಟಿಸಿ, ಅವರನ್ನು ಆರು ತಿಂಗಳಲ್ಲಿ ರಾಜನೀತಿಜ್ಞರನ್ನಾಗಿ ಮಾಡುವುದಾಗಿ ರಾಜನಿಗೆ ಭರವಸೆ ಕೊಟ್ಟ. ಅನಂತರ ಅವರಿಗೆ ವಿದ್ಯೆ ಕಲಿಸಲು ಪ್ರಯತ್ನಿಸಿ ವಿಫಲನಾದ ವಸುಭಾಗಭಟ್ಟ, ಕತೆಗಳು ಅವರ ಮನಸ್ಸನ್ನು ಸೆಳೆಯುವುದನ್ನು ಕಂಡುಕೊಂಡು, ಕಥಾಮಾಧ್ಯಮದಲ್ಲೆ ಅವರಿಗೆ ನೀತಿಬೋಧೆ ಮಾಡಿ, ತನ್ನ ಮಾತನ್ನುಳಿಸಿಕೊಂಡ.[8] ಅವನು ಹೇಳಿದವು ‘‘ಅರ್ಥಶಾಸ್ತ್ರಾಭಿಪ್ರಾಯೋಪಾಯಂಗಳಪ್ಪ’’ ಐದು ಕತೆಗಳು.(ಇಲ್ಲಿ ಅರ್ಥಶಾಸ್ತ್ರ ಎಂಬ ಮಾತು ರಾಜನೀತಿಶಾಸ್ತ್ರವನ್ನು ಕುರಿತದ್ದು).

‘ಪಂಚತಂತ್ರ’ದ ಕತೆಗಳ ವೈಶಿಷ್ಟ್ಯವೆಂದರೆ, ಮುಖ್ಯ ಕಥೆಯೊಳಗೆ ಕಥೆ, ಉಪಕಥೆಗಳು ಅಳವಟ್ಟಿರುವುದು; ಉಪಕಥೆಯೊಳಗೆ ಒಳಕತೆ ಬರುವುದೂ ಉಂಟು. ಆದರೆ ಇವು ಪರಸ್ಪರ ಸಂಬಂಧವಿಲ್ಲದೆ, ಬಿಡಿಬಿಡಿಯಾಗಿ ನಿಲ್ಲುವ ಕತೆಗಳು.[9] ಈ ಪೇಟಿಕಾ ಕಥಾಪದ್ಧತಿ (Box type of story) ಯಿಂದ ಓದುಗನ ಬುದ್ದಿಗೆ ಕಸರತ್ತಾಗುತ್ತದೆ; ಅವನ ಜ್ಞಾಪಕಶಕ್ತಿ ಚುರುಕಾಗಿರಬೇಕಾಗುತ್ತದೆ. ಕಥೆಗಳ ಆದಿಯಲ್ಲಿ ಸೂಚನಾ ಪದ್ಯವೊಂದು ಬರುತ್ತದೆ; ನಡುನಡುವೆ ಸೂಕ್ತಿಗಳ, ಸುಭಾಷಿತಗಳ ಬಳಕೆಯಿರುತ್ತದೆ.

‘ಕರ್ನಾಟಕ ಪಂಚತಂತ್ರ’ದ ಐದು ಕತೆಗಳಲ್ಲಿ ಅತ್ಯಂತ ದೀರ್ಘವೂ ಸ್ವಾರಸ್ಯಪೂರ್ಣವೂ ಸಂಕೀರ್ಣವೂ ಆದ ಕತೆಯೆಂದರೆ, ಮೊದಲನೆಯದು : ‘ಮಿತ್ರಭೇದ ಪ್ರಕರಣಂ’. ಇದರಲ್ಲಿ ಕಾಣಿಸಿಕೊಳ್ಳುವ ಪಾತ್ರಗಳಲ್ಲಿ ಸತ್ತ್ವ ರಜಸ್ತಮೋಗುಣಗಳೆಲ್ಲ ಪ್ರಕಟವಾಗಿವೆ. ಗಾಢ ವಾಸ್ತವಿಕತೆಯ ನೆಲೆಯಲ್ಲಿರುವ ಈ ದುರಂತಕಥೆ ಇಂದಿಗೂ ಪ್ರಸ್ತುತವಾಗುವಂತಿದೆ. ಕರಟಕ, ದಮನಕ, ಪಿಂಗಳಕ, ಸಂಜೀವಕರು ಇಂದಿಗೂ ಸಮಾಜದಲ್ಲಿಲ್ಲವೆ? ಈ ಕಥೆಯಲ್ಲಿ ತತ್ತ್ವವಿಚಾರ ವ್ಯಾಖ್ಯಾನಗಳೂ ದಟ್ಟವಾಗಿ ಮೇಳವಿಸಿವೆ. ‘‘ಅದರ ಮುಕ್ತಾಯದ ದುರಂತವು, ಜೀವನ ಮೌಲ್ಯಗಳನ್ನು ಶೋಧನೆಗೆ ಒಳಪಡಿಸುತ್ತದೆ.’’[10]

‘ಮಿತ್ರಭೇದ’ವನ್ನು ಬಿಟ್ಟರೆ, ಉಳಿದ ಕತೆಗಳು ಅಷ್ಟು ಸಂಕೀರ್ಣವಲ್ಲ; ಅವು ಸತ್ತ್ವಗುಣಪ್ರಧಾನವಾದ ಸರಳ ಕಥೆಗಳು.

‘‘ಒಟ್ಟಾರೆ ನೋಡಿದರೆ (‘ಪಂಚತಂತ್ರ’ದಿಂದ) ಸತ್ತ್ವಪೂರ್ಣ ಮತ್ತು ಆರೋಗ್ಯಕರ ದೃಷ್ಟಿಯ ಜೀವನ ದೊರೆಯುತ್ತದೆಂದು ಹೇಳಬಹುದಾಗಿದೆ’’[11] ಎಂಬ ಹೇಳಿಕೆ ಸ್ವಲ್ಪ ಪ್ರಶ್ನಾಸ್ಪದವಾಗಬಹುದು. ಏಕೆಂದರೆ, ರಾಜನೀತಿಯೆಂಬುದು ಎಷ್ಟೋ ಸಲ ಸಾಮಾನ್ಯರಿಗೆ ಅನುಸರಣೀಯವಲ್ಲದ ಅನೀತಿಯೆ ಆಗಿರುತ್ತದೆ![12] ಒಮ್ಮೊಮ್ಮೆ ಕತೆಯ ರೋಚಕತೆಯಷ್ಟೇ ಮುಖ್ಯವಾಗುತ್ತದೆ; ಅದರ ‘ನೀತಿ’ಯಲ್ಲ.

ಈಗ, ದುರ್ಗಸಿಂಹನ ಕೃತಿಯ ಆಕರದ ಬಗ್ಗೆ ತುಸು ವಿವೇಚಿಸಬಹುದು. ಇದು ತಕ್ಕಮಟ್ಟಿಗೆ ತೊಡಕಿನ ವಿಷಯ. ಕವಿಯ ಈ ಹೇಳಿಕೆ ತುಂಬ ಮಹತ್ತ್ವದ್ದು:

ವಸುಭಾಗಭಟ್ಟ ಕೃತಿಯಂ
ವಸುಧಾಧಿಪ ಹಿತಮನಖಿಲ ವಿಬುಧ ಸ್ತುತಮಂ
ಪೊಸತಾಗಿರೆ ವಿರಚಿಸುವೆಂ
ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ (. ೬೩)

ಸಂಸ್ಕೃತ ‘ಪಂಚತಂತ್ರ’ ಎರಡು ಪರಂಪರೆಗಳಲ್ಲಿ ಪ್ರಚುರವಾಗಿದೆ: ಒಂದು ವಿಷ್ಣುಶರ್ಮನದು, ಹೆಚ್ಚು ಪ್ರಸಿದ್ಧವಾದುದು: ಔತ್ತರೇಯ ಸಂಪ್ರದಾಯ ; ಇನ್ನೊಂದು ವಸುಭಾಗನದು, ಅಷ್ಟು ಪ್ರಸಿದ್ಧವಲ್ಲದ್ದು: ದಾಕ್ಷಿಣಾತ್ಯ ಸಂಪ್ರದಾಯ. ಇಂದು ವಸುಭಾಗನ ಮೂಲಕೃತಿ ಸಂಸ್ಕೃತದಲ್ಲಿ ಉಪಲಬ್ಧವಿಲ್ಲ. ಅದರ ಸ್ವರೂಪವನ್ನು ದುರ್ಗಸಿಂಹನ ‘ಕರ್ಣಾಟಕ ಪಂಚತಂತ್ರ’ ನಮಗೆ ಸ್ಥೂಲವಾಗಿಯೊ ಸೂಕ್ಷ್ಮವಾಗಿಯೊ ತಿಳಿಸಿಕೊಡು ವುದರಿಂದ,ಅತ್ಯಂತ ಉಪಾದೇಯವಾಗಿದೆ. ಈ ದೃಷ್ಟಿಯಿಂದ ಅದಕ್ಕೆ ‘’ಭಾರತೀಯ ಮಹತ್ತ್ವ’’ವಿದೆ.[13]; ಒಂದರ್ಥದಲ್ಲಿ ‘ಜಾಗತಿಕ ಮೌಲ್ಯ’ವೂ ಉಂಟು. ಈ ಅಭಿಪ್ರಾಯವನ್ನು ಸರಿಯಾಗಿ ಗ್ರಹಿಸದುದರಿಂದ, ‘‘ಇಂಥ ಜಾಗತಿಕ ಮೌಲ್ಯದುರ್ಗಸಿಂಹನ ‘ಪಂಚತಂತ್ರ’ಕ್ಕೆ ಸಲ್ಲುತ್ತದೆ ಎಂದರೂ, ಅದು ಅವನ ಹಿಂದಿನ ಕೃತಿಗಳಿಗೆ ಸಲ್ಲುತ್ತದೆ’’[14] ಎಂಬ ಉಕ್ತಿಗೆ ಅವಕಾಶವಾಗಿದೆ.

ಕ್ರಿ.ಶ.ದ ಆದಿಯಲ್ಲಿ ರೂಪುಗೊಂಡ ಗುಣಾಢ್ಯನ ಪೈಶಾಚಿ ‘ಬೃಹತ್ಕಥೆ’, ವಿಷ್ಣುಶರ್ಮ ವಸುಭಾಗ ಇಬ್ಬರ ‘ಪಂಚತಂತ್ರ’ಗಳಿಗೂ ಆಕರವಾಗಿದ್ದಿರಬೇಕು.[15] (ಅದೂ ಈಗ ಅನುಪಲಬ್ಧ). ಅದೊಂದು ಜನಪದ ಕತೆಗಳ ಸಂಗ್ರಹ. ಗುಣಾಢ್ಯ, ವಸುಭಾಗ ಇಬ್ಬರೂ ದಾಕ್ಷಿಣಾತ್ಯರೆಂಬುದನ್ನು ನೆನಪಿಡಬೇಕು. (ಪ್ರಾಯಃ ಸಮಕಾಲೀನರು ಕೂಡ). ಆದ್ದರಿಂದಲೇ ದುರ್ಗಸಿಂಹ ವಸುಭಾಗನ ಪರಂಪರೆಯನ್ನು ಅನುಸರಿಸಿದ್ದು.[16] ಗುಣಾಢ್ಯನ ಕೃತಿ ವಿಷ್ಣುಶರ್ಮ, ವಸುಭಾಗರಿಗೆ ನೇರವಾದ ಆಕರವಾಗಿರಲಿಕ್ಕಿಲ್ಲ ಎಂಬ ಊಹೆಯೂ ಉಂಟು. ‘‘ಪ್ರಾಯಶಃ ವಸುಭಾಗಭಟ್ಟ ಮತ್ತು ವಿಷ್ಣುಶರ್ಮ ಇಬ್ಬರಿಗೂ ಮೂಲ ಕೃತಿಯೊಂದು ಇದ್ದಿರಬಹುದು. ಅದು ಗುಣಾಢ್ಯನಿಂದ ನೇರವಾಗಿ ನಿಷ್ಪನ್ನವಾಗಿರಬೇಕು.’’[17]

ದುರ್ಗಸಿಂಹನ ‘ಪಂಚತಂತ್ರ’ ವಸುಭಾಗನ ‘ಪಂಚತಂತ್ರ’ದ ನೇರವಾದ ಭಾಷಾಂತರವೊ ಅಥವಾ ಅವನ ಸಂಪ್ರದಾಯವನ್ನಷ್ಟೆ ಹಿಂಬಾಲಿಸಿದ್ದೊ? ನಿಷ್ಕೃಷ್ಟ ನಿರ್ಣಯ ಸಾಧ್ಯವಿಲ್ಲ. ಆದರೂ, ‘‘ವಸುಭಾಗಭಟ್ಟ ಕೃತಿಯಂ…’’ ಎಂದು ಕವಿ ಹೇಳಿಕೊಂಡಿರುವುದರಿಂದ, ಅವನ ಕೃತಿ ವಸುಭಾಗನ ‘ಪಂಚತಂತ್ರ’ದ ಅನುವಾದವೆ ಇರಬಹುದೆನಿಸುತ್ತದೆ.[18] ಆದರೆ ನಾಗವರ್ಮನ ‘ಕರ್ಣಾಟಕ ಕಾದಂಬರಿ’ಯಂತೆ ಅದು ಮೂಲನಿಷ್ಠವಾದ ಅನುವಾದವಲ್ಲ, ದುರ್ಗಸಿಂಹ ಸಾಕಷ್ಟು ಸ್ವಾತಂತ್ರ್ಯ ವಹಿಸಿದ್ದಾನೆ ಎಂಬುದು ಸ್ಪಷ್ಟ. ‘ಪೊಸತಾಗಿರೆ’ ಎಂಬ ಹೇಳಿಕೆಯ ಅರ್ಥವೇನು?[19] ದುರ್ಗಸಿಂಹನ ಸ್ವೋಪಜ್ಞತೆ ಎಲ್ಲಿದೆ? ಮೂಲಕೃತಿ ಅಲಭ್ಯವಾಗಿರುವುದರಿಂದ, ಈ ಪ್ರಶ್ನೆಗೆ ಸಮಂಜಸವಾಗಿ ಉತ್ತರಿಸುವುದು ಕಷ್ಟ. ಊಹೆಗಳಿಗೆ ಅಡ್ಡಿಯಿಲ್ಲವಷ್ಟೆ.

ವಿಷ್ಣುಶರ್ಮನ ‘ಪಂಚತಂತ್ರ’ಕ್ಕೂ ದುರ್ಗಸಿಂಹನ ‘ಪಂಚತಂತ್ರ’ಕ್ಕೂ ಸಾಮ್ಯ ವೈಷಮ್ಯಗಳೆರಡೂ ಇವೆ. ವಿಷ್ಣುಶರ್ಮನಲ್ಲಿ ಪಂಚಪ್ರಕರಣಗಳ ಶೀರ್ಷಿಕೆಗಳು ಹೀಗಿವೆ:  ‘ಮಿತ್ರ ಪ್ರಭೇದ’, ‘ಮಿತ್ರ ಸಂಪ್ರಾಪ್ತಿ’, ‘ಕಾಕೋಲೂಕೀಯ’, ‘ಲಬ್ಧಪ್ರಣಾಶ’ ಮತ್ತು ‘ಅಪರೀಕ್ಷಿತಕಾರಕತ್ವ’. (ಇವುಗಳಲ್ಲಿ ಮೊದಲನೆಯದವರ ವಿನಾ ಉಳಿದವು ‘ಕರ್ಣಾಟಕ ಪಂಚತಂತ್ರ’ದ ಪ್ರಕರಣಗಳಿಗೆ ಸಂವಾದಿಯಾಗಿಲ್ಲ). ‘‘ಸಾಮಾನ್ಯವಾಗಿ ವಿಷ್ಣುಶರ್ಮನಿಂದ ಭಿನ್ನವಾದ ಅಂಶಗಳಲ್ಲಿ ದುರ್ಗಸಿಂಹನ ಪಂಚತಂತ್ರವು ವಸುಭಾಗಭಟ್ಟನ ಕೃತಿಯ ಸ್ವರೂಪವನ್ನು ತಿಳಿಸುತ್ತದೆ.’’[20] ವಿಷ್ಣುಶರ್ಮನಲ್ಲಿಲ್ಲದ ಕೆಲವು ಕತೆಗಳು ದುರ್ಗಸಿಂಹನಲ್ಲಿವೆ. ವಿಷ್ಣುಶರ್ಮನ ‘ಪಂಚತಂತ್ರ’ವನ್ನಲ್ಲದೆ ಇನ್ನೂ ಅನೇಕ ಮೂಲಗಳನ್ನು ದುರ್ಗಸಿಂಹ ಉಪಯೋಗಿಸಿಕೊಂಡಿರಬಹುದು, ತನ್ನದೇ ಆದ ವರ್ಣನೆಗಳನ್ನು ಸೇರಿಸಿರಬಹುದು ಎಂದೂ ಅನುಮಾನಿಸಲಾಗಿದೆ. ವಸುಭಾಗ, ದುರ್ಗಸಿಂಹನ ಕೃತಿಗಳ ತೌಲನಿಕ ಅಧ್ಯಯನಕ್ಕೆ ಸದ್ಯಕ್ಕಂತೂ ಆಸ್ಪದವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದುರ್ಗಸಿಂಹನ ‘ಪಂಚತಂತ್ರ’ವನ್ನು ಸ್ವತಂತ್ರ ಕೃತಿಯೆಂಬಂತೆ ಪರಿಗಣಿಸಿ ವಿಮರ್ಶಿಸುವುದು ಅನಿವಾರ್ಯವಾಗಿದೆ.

‘ಪಂಚತಂತ್ರ’ ಲೋಕಪ್ರಿಯವೂ ಲೋಕವ್ಯಾಪಕವೂ ಆದ ಕೃತಿ; ಜಗತ್ತಿನ ಸಾಹಿತ್ಯ ಭಂಡಾರಕ್ಕೆ ಭಾರತದ ಭಾರಿ ಕೊಡುಗೆ. ಬೈಬಲ್ ವಿನಾ ಅದಕ್ಕಿರುವಷ್ಟು ಭಾಷಾಂತರ, ರೂಪಾಂತರಗಳು ಮತ್ತಾವ ಕೃತಿಗೂ ಇಲ್ಲವೆನ್ನಲಾಗಿದೆ. ಎ.ಎ.ಮ್ಯಾಕ್ಡೊನೆಲ್ ಹೀಗೆಂದಿದ್ದಾರೆ : ‘‘ವಾಸ್ತವವಾಗಿ ಇದು ಭಾರತೀಯ ಸಾಹಿತ್ಯದ ಅತ್ಯಂತ ಸ್ವೋಪಜ್ಞವಾದ ವಿಭಾಗ. ಅದು ಭಾರತೀಯ ಬರವಣಿಗೆಯ ಮತ್ತಾವುದೇ ಶಾಖೆಗಿಂತ ವಿದೇಶೀಯ ಸಾಹಿತ್ಯದ ಮೇಲೆ ಮಹತ್ತರ ಪ್ರಭಾವ ಬೀರಿದ ವಿಭಾಗವೂ ಹೌದು.’’[21] ವಿಲಿಯಂ ಜೋನ್ಸ್ ಪ್ರಕಾರ, ‘‘ಚದುರಂಗದಾಟ, ದಶಾಂಶ ಪದ್ಧತಿ ಮತ್ತು ನೀತಿ ಕಥೆಗಳ ಮೂಲಕ ಕಲಿಸುವುದು ಇವು ಮೂರು ಭಾರತೀಯರ ಸಂಶೋಧನೆ.’’[22]

‘ಪಂಚತಂತ್ರ’ದ ಪ್ರಪಂಚ ಪರ್ಯಟನದ ಕಥೆ ‘‘ಅದರ ಕತೆಗಳಿಗಿಂತ ಆಶ್ಚರ್ಯಕರ’’ ವೆನ್ನಲಾಗಿದೆ. ‘ಪಂಚತಂತ್ರ’ ಪ್ರಪಂಚವನ್ನು ಪರಿಶೀಲಿಸಿದವರಲ್ಲಿ ಫ್ರಾಂಕ್ಲಿನ್ ಎಡ್ಗರ್ ಟನ್, ಥಿಯೋಡರ್ ಬೆನ್ಫಿ, ಹಾಗೂ ಯೋಹಾನೆಸ್ ಹರ್ಟಲ್ – ಇವರ ಹೆಸರುಗಳು ಮುಂಚೂಣಿಯಲ್ಲಿವೆ. ವಿಶೇಷವೆಂದರೆ, ಇವರಾರೂ ವಸುಭಾಗಭಟ್ಟನ ‘ಪಂಚತಂತ್ರ’ ಸಂಪ್ರದಾಯವನ್ನು ಉಲ್ಲೇಖಿಸಿಲ್ಲ; ಭಾರತೀಯ ವಿದ್ವಾಂಸರೂ ಅವನನ್ನು ಹೆಸರಿಸುವುದಿಲ್ಲ! ಈ ದಿಶೆಯಲ್ಲಿ ಕನ್ನಡ ವಿದ್ವಾಂಸರಾದ ಅ. ವೆಂಕಟಸುಬ್ಬಯ್ಯನವರು ಮಾಡಿದ ಸಂಶೋಧನೆ ಅಮೋಘವಾದುದು.[23]

ಮೂಲತಃ ವಿಷ್ಣುಶರ್ಮನ ‘ಪಂಚತಂತ್ರ’ಕ್ಕೆ ‘ತಂತ್ರಾಖ್ಯಾಯಿಕಾ’ ಎಂಬ, ವಸುಭಾಗನ ‘ಪಂಚತಂತ್ರ’ಕ್ಕೆ ‘ತಂತ್ರೋಪಾಖ್ಯಾನ’ ಎಂಬ ಅಭಿಧಾನಗಳಿದ್ದುವೆಂದು ಹೇಳಲಾಗಿದೆ. ಈಗ ಎರಡೂ ‘ಪಂಚತಂತ್ರ’ವೆಂದೇ ಕರೆಯಲ್ಪಡುತ್ತಿವೆ. ಸಂಸ್ಕೃತದಲ್ಲಿ ಅಸಮಗ್ರವಾದ ‘ತಂತ್ರೋಪಾಖ್ಯಾನ’ವೊಂದಿದ್ದು, ಅದು ತಮಿಳಿಗೂ ಭಾಷಾಂತರಗೊಂಡಿದೆ.

‘ಪಂಚತಂತ್ರ’ ಭಾರತದ ವಾಯವ್ಯಕ್ಕೆ ಮತ್ತು ಆಗ್ನೇಯಕ್ಕೆ ಏಳನೆಯ ಶ.ಕ್ಕೆ ಹಿಂದೆಯೇ ಹೋಯಿತೆಂದೂ ವಾಯವ್ಯಕ್ಕೆ ಹೋದದ್ದು ವಿಷ್ಣುಶರ್ಮನ ‘ಪಂಚತಂತ್ರ’ವೆಂದೂ ಆಗ್ನೇಯಕ್ಕೆ ಹೋದುದು ವಸುಭಾಗನ ‘ತಂತ್ರೋಪಾಖ್ಯಾನ’ವೆಂದೂ ಜಾರ್ಜ್ ಟಿ. ಅರ್ಟೋಲಾ ಅವರ ಅಭಿಮತ.[24] ಪರ್ಷಿಯ, ಅರೇಬಿಯ ದೇಶಗಳ ಮೂಲಕ ಪಾಶ್ಚಿಮಾತ್ಯ ದೇಶಗಳಿಗೆ ವಲಸೆಹೋದುದು ವಿಷ್ಣುಶರ್ಮನ ಕೃತಿ; ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿದ್ದು ಜಾವಾ, ಸಯಾಂ, ಥೈಲೆಂಡ್, ಲಾವೋಸ್ ಮುಂತಾದ ಪೂರ್ವದೇಶಗಳಿಗೆ ಪಸರಿಸಿದ್ದು ವಸುಭಾಗಭಟ್ಟನದು.

ಜಾವಾ ದ್ವೀಪದಲ್ಲಿ ‘ತಂತ್ರಿ’ ಎಂದೂ ಲೇಯಾಸ್ ದೇಶದಲ್ಲಿ ‘ತಂತ್ಯೆ’ ಎಂದೂ ಥೈಲೆಂಡಿನಲ್ಲಿ ‘ತಂತ್ರೈ’ ಎಂದೂ ‘ಪಂಚತಂತ್ರ’ ಆಯಾ ಭಾಷೆಗಳಲ್ಲಿ ಕರೆಯಲ್ಪಡುತ್ತದೆ.ಈ ಕೃತಿಗಳಲ್ಲಿ ‘ವಸುಫಖ’(ವಸುಭಾಗ)ನ ಹೆಸರಿದೆ. ಭಾರತದಲ್ಲಿ ವಸುಭಾಗನ ಹೆಸರನ್ನು ನಿಶ್ಚಿತವಾಗಿ ಎತ್ತಿ ಹೇಳುವ ಕೃತಿ, ದುರ್ಗಸಿಂಹನ ‘ಕರ್ಣಾಟಕ ಪಂಚತಂತ್ರ’. ರಾಜಕುಮಾರರಿಗೆ ಕತೆ ಹೇಳಿದವನೂ ಹೌದು, ದುರ್ಗಸಿಂಹನ ಆಕರದ ಕರ್ತೃವೂ ಹೌದು, ವಸುಭಾಗಭಟ್ಟ.

‘ಕರ್ಣಾಟಕ ಪಂಚತಂತ್ರ’ದಲ್ಲಿ ಒಂದು ಸೋಜಿಗದ ಸಂಗತಿಯೇನೆಂದರೆ- ಸಮಸ್ಯೆ ಯೆಂದರೂ ಸರಿಯೆ-ಅದರಲ್ಲಿ ಕೆಲವು ಜೈನಧರ್ಮ ಪರವಾದ ಅಂಶಗಳಿರುವುದು. ಕೇವಲ ಜ್ಞಾನ, ಆರ್ತಧ್ಯಾನ, ಅಜಿತ, ಪಂಚಾಶ್ಚರ್ಯ, ಚರಿಗೆಯಂತಹ ಜೈನ ಪಾರಿಭಾಷಿಕ ಶಬ್ದಗಳೂ ಅದರಲ್ಲಿ ಕಾಣಬರುತ್ತವೆ. ಆರಂಭದಲ್ಲಿ ಸಂಜೀವಕ ಪಿಂಗಳಕನಿಗೆ ಮಾಡುವ ಅಹಿಂಸೆಯ ಉಪದೇಶದಲ್ಲಿ ಜೈನಧರ್ಮದ ಪ್ರಭಾವವನ್ನು ಸ್ಫುಟವಾಗಿ ಗುರುತಿಸಬಹುದು. ‘‘ನ ಹಿಂಸ್ಯಾತ್ ಸರ್ವಭೂತಾನಿ’’ ಎಂಬ ಉಕ್ತಿ ‘‘ಅಹಿಂಸಾ ಪರಮೋ ಧರ್ಮಃ’’ ಎಂಬುದರ ಮಾರ್ನುಡಿಯಾಗಿದೆ. ದುರ್ಗಸಿಂಹನ ಈ ಪದ್ಯ ಜೈನ ಪುರಾಣಗಳ ವೈರಾಗ್ಯ ಬೋಧಕ ಪದ್ಯಗಳನ್ನು ನೆನಪಿಗೆ ತರುತ್ತದೆ:

ಅನಿಮಿಷ ಚಾಪದಂತೆ ಸಿರಿ ಶಾರದ ನೀರದ ಕಾಂತಿಯಂತೆ ಯೌ
ವನದೆಸಕಂ ತೃಣಾಗ್ರಗತವಾಃಕಣಿಕಾಗಣದಂತೆ ಸಂದ ಜೀ
ವನಮದಱಿ ಭವಪ್ರಭವ ಜೀವಿಗೆ ನಿರ್ಮಲ ಧರ್ಮಮಾರ್ಗದೊಳ್
ಮನಮೊಸೆದಾಗಳುಂ ನಡೆಯವೇೞ್ಪುದು ವಿಶ್ವಮೃಗೇಂಧ್ರವಲ್ಲಭಾ[25] (. ೧೧೯)

ವೈದಿಕನಾದ ದುರ್ಗಸಿಂಹನ ಕೃತಿಯಲ್ಲಿ ಈ ಜೈನಧರ್ಮದ ಆವರಣ-ಅದೆಷ್ಟೆ ತೆಳುವಾಗಿದ್ದರೂ-ಅಳವಟ್ಟಿರುವುದೇಕೆ? ಅವನ ಕಾಲದಲ್ಲಿ ಜೈನಮತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದ್ದರಿಂದ ಅದು ಅವನ ಮೇಲೆ ಪ್ರಭಾವ ಬೀರಿದೆ ಎಂಬ ವಾದ ವೊಂದಿದೆ; ಆದರೆ ಅದು ದುರ್ಬಲವೆನ್ನಬೇಕು. ದುರ್ಗಸಿಂಹನ ಆಶ್ರಯದಾತನೂ ಜೈನಧರ್ಮೀಯನಾಗಿರಲಿಲ್ಲ. ಮುಗಳಿಯವರ ಈ ಊಹೆ ಹೆಚ್ಚು ಸಮಂಜಸವಾಗಿದೆ : ‘‘ವಸುಭಾಗಭಟ್ಟನ ಪಂಚತಂತ್ರ ಕೆಲವಂಶಗಳಲ್ಲಿ ಜೈನ ವೈದಿಕ ಅಂಶಗಳ ಸಮನ್ವಯವನ್ನು ಸಾಧಿಸಿದೆ. ಇಲ್ಲಿ ವಸುಭಾಗಭಟ್ಟನ ತರುವಾಯದ ಕಾಲದಲ್ಲಿಯ ಸಮನ್ವಯವನ್ನು ಒಳಗೊಂಡ ಪಾಠಭೇದವು ದುರ್ಗಸಿಂಹನಿಗೆ ಆಕರವಾಗಿರಬಹುದೇ ಎಂಬ ಪ್ರಶ್ನೆಗೆ ಎಡೆಯಿದೆ. ನಾವು ಸದ್ಯಕ್ಕೆ ವಸುಭಾಗಭಟ್ಟನೇ ಅದನ್ನು ಮಾಡಿರಬೇಕೆಂದು ಗ್ರಹಿಸಿದ್ದೇವೆ.’’[26] ವಸುಭಾಗಭಟ್ಟ ಜೈನಮತೀಯನಿದ್ದಿರಬಹುದೆ? ಸಂದೇಹಾಸ್ಪದ. ವಸುಭಾಗ, ದುರ್ಗಸಿಂಹರ ಉದಾರಮನೋಧರ್ಮ ಮಾತ್ರ ಸಂದೇಹಾತೀತವಾದದ್ದು. ಅದರಲ್ಲೂ ನಿಸ್ಸಂದಿಗ್ಧವಾಗಿ ಬ್ರಾಹ್ಮಣಕವಿಯಾದ ದುರ್ಗಸಿಂಹನ ದೃಷ್ಟಿವೈಶಾಲ್ಯ ಸ್ತುತ್ಯರ್ಹ.[27]

ಇಲ್ಲಿ ಇನ್ನೊಂದು ವಿಷಯ ಗಮನಯೋಗ್ಯವಾಗಿದೆ. ‘ಪಂಚತಂತ್ರ’ ಮೂಲತಃ ಬೌದ್ಧ ಗ್ರಂಥವಾಗಿದ್ದಿರಬೇಕು ಎಂದು ಬೆನ್ಫಿಯ ಅಭಿಮತ. ಅದರ ಮೇಲೆ ಜಾತಕಕತೆಗಳ ಪ್ರಭಾವವುಂಟೆಂದು ಹೇಳಲಾಗಿದೆ. ತನ್ನ ‘ಯಶಸ್ತಿಲಕ ಚಂಪು’ವಿನಲ್ಲಿ ‘‘ಸೋಮದೇವ ಉಲ್ಲೇಖಿಸಿರುವ ಪಂಚತಂತ್ರವೂ ಜೈನಸಂಪ್ರದಾಯದ ಪಂಚತಂತ್ರವೇ ಇರಬೇಕು; ಅದು ಬಹುಶಃ ವಸುಭಾಗಭಟ್ಟನದೇ ಆಗಿರಬಹುದು.’’[28]

ಇಷ್ಟಾಗಿಯೂ ‘‘ದುರ್ಗಸಿಂಹನ ಪಂಚತಂತ್ರ ಜೈನಮತಾನುಸಾರಿಯಾಗಿದೆ’’[29] ಎಂಬ ಹೇಳಿಕೆ ಅಸ್ವೀಕಾರ್ಯ. ಅದು ನಿಜವಾಗಿ ಯಾವ ಮತವನ್ನೂ ಅನುಸರಿಸಿಲ್ಲ. ಅದೊಂದು ನೀತಿಗ್ರಂಥವೆ ಹೊರತು ಧರ್ಮಗ್ರಂಥವಲ್ಲ.

‘ಕರ್ನಾಟಕ ಪಂಚತಂತ್ರ’ದ ರೂಪ ಸ್ವಲ್ಪ ಮಟ್ಟಿಗೆ ವಿಶಿಷ್ಟವಾದುದು. ಅದರಲ್ಲಿ ಗದ್ಯಭಾಗದ ಪ್ರಾಚುರ್ಯ ಹೆಚ್ಚು; ಪೆಡಸು ಕಡಿಮೆ; ಅದರ ವಸ್ತುವೂ ಇತರ ಚಂಪೂಕಾವ್ಯಗಳ ವಸ್ತುವಿಗಿಂತ ಭಿನ್ನ : ಸಾಂಕೇತಿಕ ಕಥೆಗಳನ್ನೊಳಗೊಂಡದ್ದು. ದುರ್ಗಸಿಂಹ ಹೇಳಿದ ‘ಪೊಸತು’ ಇದೇ ಇರಬೇಕು ಎಂದು ಅನುಮಾನಿಸುತ್ತಾರೆ. ಮುಗಳಿ.[30] ಇದು ಸರ್ವಸಮ್ಮತವಾಗದ ಊಹೆ. ‘‘ಕರ್ನಾಟಕ ಪಂಚತಂತ್ರ’ದ ರೂಪ ಚಂಪುವಿಗಿಂತ ಬೇರೆ’’[31] ಎಂಬ ಅವರ ಹೇಳಿಕೆಯೂ ಅಷ್ಟೇ. ‘‘ಕನ್ನಡದ ಸುಪರಿಚಿತ ಚಂಪೂ ರೀತಿ ಇದಕ್ಕಿಲ್ಲ’’[32] ಎಂಬ ಉಕ್ತಿ ಗ್ರಾಹ್ಯ. ಒಟ್ಟಿನಲ್ಲಿ ದುರ್ಗಸಿಂಹನದು ಚಂಪೂ ಕಾವ್ಯವೇ; ವಸ್ತುವಿನಗನುಗುಣವಾಗಿ ಅದರಲ್ಲಿ ತುಸು ನಾವೀನ್ಯವಿದೆ.

ದುರ್ಗಸಿಂಹ ಹುಟ್ಟು ಕತೆಗಾರ; ಕಥನಕಲಾಭಿಜ್ಞ. ಅವನು ‘‘ಒಳ್ಳೆಯ ಕತೆಗಾರ; ಅಷ್ಟೆ ಅಲ್ಲ. ಬಹು ದೊಡ್ಡ ವಿಡಂಬನಕಾರ.’’[33] ದುರ್ಗಸಿಂಹ ‘‘ಗದ್ಯಪದ್ಯ ಮಿಶ್ರಿತವಾದ ಭಾಷೆಯಲ್ಲಿ ಪಂಚತಂತ್ರದ ಕತೆಗಳನ್ನು ಬಹುಸುಂದರವಾಗಿ ಹೇಳಿರುವನು… ದುರ್ಗಸಿಂಹನು ಹೇಳಿದ ನೀತಿ ಕಥೆಗಳು ಜೀವಕಳೆಯಿಂದ ತುಂಬಿವೆ.’’[34] ಜೀವಂತಿಕೆ ಮಾತ್ರವಲ್ಲ, ನಾಟಕೀಯತೆಯೂ ದುರ್ಗಸಿಂಹನ ನಿರೂಪಣೆಯ ಅಗ್ಗಳಿಕೆ. ಹಾಸ್ಯ, ವಿಡಂಬನಗಳಲ್ಲಿ ಅವನದು ಎತ್ತಿದ ಕೈ; ಎತ್ತರದ ಕೌಶಲ. ಅವನ ಕೃತಿಯಲ್ಲಿ ಮೇಲಿಂದ ಮೇಲೆ ನಗೆಬುಗ್ಗೆಗಳನ್ನು ಎದುರುಗೊಳ್ಳುತ್ತೇವೆ; ಅವುಗಳಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಉದಾಹರಣೆಗೆ, ‘‘ನಾಲ್ವರ್ ಧೂರ್ತರ್ ಒರ್ವ ಬ್ರಾಹ್ಮಣನಂ ವಂಚಿಸಿದ ಕಥೆ’’ ಎಷ್ಟು ಮನೋರಂಜಕವಾಗಿದೆ ಮತ್ತು ಮನೋವೈಜ್ಞಾನಿಕ ತಥ್ಯವನ್ನೊಳಗೊಂಡಿದೆ! ಅದರಲ್ಲಿ ಬರುವ ಈ ಪದ್ಯದ ಚಿತ್ರವಂತಿಕೆ ಮತ್ತು ಹಾಸ್ಯಪರತೆ ಪರಿಭಾವನೀಯ:

ಶ್ರವಣಶಿರಃಪುಚ್ಛಾಸ್ಯಾ
ದ್ಯವಯವಮಂ ಮುಟ್ಟಿ ನೋಡಿ ನಾಯಲ್ಲಿದು ಭೂ
ಭುವನ ಪ್ರಸಿದ್ಧಮಜಮೆಂ
ದವಧಾರಿಸಿ ಪೊತ್ತುಕೊಂಡು ಪೋದಂ ಪಾರ್ವ (. ೨೧೫)

ಬದುಕಿನ ವಿಚಿತ್ರ ಸಂಕೀರ್ಣ ಸತ್ಯಗಳನ್ನು ದುರ್ಗಸಿಂಹ ಹೇಗೆ ಅಭಿವ್ಯಕ್ತಿಸಬಲ್ಲ ನೆಂಬುದಕ್ಕೆ ಸಾಕ್ಷಿ, ಈ ಪದ್ಯ:

ನಂಬಿಪರೆನ್ನರಪ್ಪರುಮನೇ ತೆಱದಿಂ ಸಲೆ ನಂಬೆ ಪಾಣ್ಬೆಯರ್
ಡಂಬಿಪರಿಂತನೇಕ ವಿಧದಿಂದೆ ವಿಚಾರಿಸಿ ನೋಡೆ ಪೆಂಡಿರಂ
ನಂಬಲೆಯಾಗ ನಂಬದಿರಲಾಗವರಿಲ್ಲದೆ ಬಾೞಲಾಗದೇ
ನೆಂಬುದಿದರ್ಕೆ ತಕ್ಕುದನೆ ಬಲ್ಲವನುಳ್ಳೊಡೆ ದೇವನಲ್ಲನೇ(. ೧೩೯)

‘ಪಂಚತಂತ್ರ’ವೊಂದು ಅಣಕು ಮಹಾಕಾವ್ಯ (Mock Epic)ದ ಮಾದರಿ; ಅದರ ಶೈಲಿ ಅಣಕು ಮಹಾಕಾವ್ಯ ಶೈಲಿ. ಮಾನುಷ ಪ್ರಪಂಚದ ಪೊಳ್ಳು ಪ್ರತಿಷ್ಠೆ, ಸ್ವಾರ್ಥ, ಆಷಾಢಭೂತಿತನ[35] ಇತ್ಯಾದಿಗಳನ್ನು ಪ್ರಾಣಿಪಾತ್ರಗಳ ಮೂಲಕ ಗೇಲಿಮಾಡುವುದು ಕವಿಯ ಒಂದು ಮುಖ್ಯೋದ್ದೇಶ.[36]

ದುರ್ಗಸಿಂಹ ಮಹಾಪಂಡಿತ; ‘ಸಕಲ ವಿಪಶ್ಚಿನ್ನಿಧಿ’ ; ಆದರೆ ಅವನಲ್ಲಿ ಸರಸ ಹೃದಯವಿಲ್ಲದಿಲ್ಲ. ‘ಮಾರ್ಗದ್ವಯಪರಿಣತ’ನಾದ ಪಂಪನನ್ನು ಅವನು ಆದರ್ಶವಾಗಿಟ್ಟುಕೊಂಡಿದ್ದಾನೆ, ಇತರ ಅನೇಕ ಪ್ರಾಚೀನ ಕವಿಗಳಂತೆ. ಆದರೆ ಪಂಪನಲ್ಲಿ ಕಂಡುಬರುವ ದೇಸಿ, ಮಾರ್ಗಗಳ ಸಮನ್ವಯ ಅವನಲ್ಲಿ ಸಿದ್ದಿಸಿಲ್ಲ.[37] ಅವನದು ಸಾಮಾನ್ಯವಾಗಿ ಪ್ರೌಢವಾದ, ಸಂಸ್ಕೃತ ಭೂಯಿಷ್ಠವಾದ ಶೈಲಿ. ಪದ್ಯಗಳಲ್ಲಿ, ಅದರಲ್ಲೂ ವರ್ಣನಾತ್ಮಕ ವೃತ್ತಗಳಲ್ಲಿ ಅದರ ಮೆರೆತವಿದೆ. ಆದರೆ ಕಂದಗಳಲ್ಲಿ ಮತ್ತು ಕಥಾನಿರೂಪಕ ಗದ್ಯಭಾಗಗಳಲ್ಲಿ ಸರಳತೆಯನ್ನು ಕಾಣುತ್ತೇವೆ. ದುರ್ಗಸಿಂಹನ ‘‘ಪದ್ಯಶೈಲಿ ಶುದ್ಧ ಮಾಗೀಶೈಲಿ… ಆತನಿಗೆ ಸರಳತೆಯೂ ವಾಚೋವಿಧೇಯವೇ.’’[38] ‘‘ಮಾರ್ಗ-ದೇಸಿಗಳ ಈ ಮಿಶ್ರಣದಲ್ಲಿ ಒಂದು ವಿಶೇಷ ಪ್ರಯೋಗವಿದೆಯೆಂದು ಮೆಚ್ಚಬಹುದು. ಆದರೆ ಅದರಲ್ಲಿಯ ವಿಷಮತೆಯನ್ನು ಅಲ್ಲಗಳೆಯುವಂತಿಲ್ಲ.’’[39] ವಿದಗ್ಧತೆ ದುರ್ಗಸಿಂಹನ ಕಾವ್ಯದಲ್ಲಿ ಸ್ಥಾಯಿ; ವಿವಿಧತೆ ಸಂಚಾರಿ.

ಮಾರ್ಗಶೈಲಿ ಕೆಲವೆಡೆ ಅನಗತ್ಯವಾಗಿ, ಸಾಂಪ್ರದಾಯಿಕವಾಗಿ ಬರುತ್ತದೆ, ನಿಜ. ಆದರೆ ಅದು ಬಹಳ ಕಡೆ ಅಣಕು ವೀರಕಾವ್ಯ ಶೈಲಿಯಾಗಿ, ಅರ್ಥಪೂರ್ಣವಾಗಿ ಕೆಲಸ ಮಾಡುತ್ತದೆ ಎಂಬುದು ಗಮನಾರ್ಹ.

ಇಂತಹ ಪದ್ಯಗಳ ಶೈಲಿ ಕವಿಯ ವಿಡಂಬನೋದ್ಧೇಶಕ್ಕೆ ತಕ್ಕುದಾಗಿಯೆ ಇದೆ:

ಪ್ರಕಟೀಭೂತ ಪರಾಕ್ರಮಕ್ರಮನನುಗ್ರಾಟೋಪನಂ ಶ್ವಾಪದ
ಪ್ರಕರಾಧೀಶ್ವರ ಚಕ್ರವರ್ತಿಯನರಣ್ಯಾನೀಮಹೀಚಕ್ರರ
ಕ್ಷಕನಂ ನೀನಱಿವೈ ಮದಾವಿಳಗಳಪ್ರೋತ್ತುಂಗಮಾತುಂಗಮ
ಸ್ತಕ ಮಸ್ಕಿಷ್ಕರಸಾರ್ದ್ರ ರೌದ್ರನಖರಶ್ರೇಣೀ ಪ್ರಭಾಭಾಸಿಯಂ (. ೧೦೫)

ಇಂತಹ ಪದ್ಯಗಳ ಸೌಲಭ್ಯವನ್ನೂ ಕಡೆಗಾಣಿಸಲಾಗದು

ಬಿಸರುಹನೇತ್ರೆಯೊಳ್ನಡು ಪೊದಳ್ದುದು ದಾಂಗುಡಿಯಿಟ್ಟು ಬಾಸೆ ನೀ
ಳ್ದೆಸೆದುದು ಪಿಂಗಿ ಪೋದುದು ವಳಿತ್ರಿತಯಂ ಕುಚಚೂಚುಕಂಗಳೊಳ್
ಪಸರಿಸಿ ಕರ್ಪು ಪರ್ಬಿದುದು ಮಂದರಯಾನಮೊಡರ್ಚಿತಾನನಂ
ಮಿಸುಗೆ ಬೆಳರ್ತು ಪೂರ್ಣಶಶಿಕಾಂತಿಯನಾಂತುದು ಗರ್ಭದೇೞ್ಗೆಯೊಳ್ (. ೨೫೬)

ದುರ್ಗಸಿಂಹ ನಾನಾಲಂಕಾರ ಪ್ರಯೋಗ ನಿಪುಣ; ಆದರೆ ಅವನಲ್ಲಿ ಉಪಮೆಗಳೆ ಅಧಿಕ. ಅವು ವೈವಿಧ್ಯಪೂರ್ಣ; ಅವುಗಳಲ್ಲಿ ಕೆಲವು ಪುರಾಣ ಜಗತ್ತಿನಿಂದೆತ್ತಿಕೊಂಡವು.

ಶಬ್ದಾಲಂಕಾರಕ್ಕೆ ಇದು ಒಳ್ಳೆಯ ಉದಾಹರಣೆ:

ಚಳದಳಕಂ ಹರ್ಷೋದ್ಗತ
ಪುಳಕಂ ನಖಮುಖವಿದಾರಿತೋಗ್ರೇಭಶಿರಃ
ಫಳಕಂ ಮೃಗತಿಳಕಂ ಪಿಂ
ಗಳಕಂ ಪೋಗೆಂದು ಕೞುಪಿದಂ ದವನಕನಂ (. ೧೦೪)

ದೇಸಿಯ ಬಳಕೆಯಲ್ಲಿ ದುರ್ಗಸಿಂಹ ಪಂಪನಷ್ಟು ಗಟ್ಟಿಗನಲ್ಲದಿದ್ದರೂ, ಅದಕ್ಷನೇನಲ್ಲ. ಗಾದೆ, ನುಡಿಗಟ್ಟುಗಳನ್ನು ಅವನು ಜನಜೀವನದಿಂದ ಸಾಕಷ್ಟು ಅಮದುಮಾಡಿಕೊಂಡು, ತನ್ನ ಶೈಲಿ ಉಪ್ಪು ಹುಳಿ ಖಾರಗಳಿಂದ ಕೂಡಿ ರುಚಿಕಟ್ಟಾಗುವಂತೆ ನೋಡಿಕೊಂಡಿದ್ದಾನೆ. ಒಂದೇ ಒಂದು ನಿದರ್ಶನ ಕೊಡಬಹುದು : ‘‘ಕಲಹಕ್ಕೆ ಕಚ್ಚೆಯಂ ಕಟ್ಟುವ ಕಚ್ಛಪಕಥೆ ಯಂತಾದುದು.’’ ಇಲ್ಲಿ ಪ್ರಾಸವಿದೆ; ಪಡೆನುಡಿಯಿದೆ. ಶೈಲಿ ಇದರಿಂದ ಉಸಿರಾಡುತ್ತದೆ. ದುರ್ಗಸಿಂಹ ‘‘ಬಳಸಿರುವ ಭಾಷೆ ಬಹುತೇಕವಾಗಿ ಅವನ ಕಾಲದ್ದಲ್ಲ’’[40] ಎಂಬ ಹೇಳಿಕೆ ಭಾಗಶಃ ಸತ್ಯ. ಆದರೆ ಕಾವ್ಯದ ದೇಸಿ ಸಮಕಾಲೀನವಾದುದು ಎಂಬುದ್ನು ಮರೆಯಬಾರದು. ಈ ಕಾರಣದಿಂದ, ಅವನ ಕೃತಿಯಲ್ಲಿ ಬಹಳ ಕಡೆ ಸ್ವತಂತ್ರಕಾವ್ರೋ‘‘ಪ್ರಾದೇಶಿಕ ವಾತಾವರಣ’’ ಗೋಚರಿಸುತ್ತದೆ.

ದುರ್ಗಸಿಂಹನ ಗದ್ಯಕ್ಕೊಂದು ಗಣ್ಯತೆಯಿದೆ. ‘‘ದುರ್ಗಸಿಂಹನ ಪಂಚತಂತ್ರ ಚಂಪೂ ಕಾವ್ಯವಾದರೂ ಸರಳಶೈಲಿಯಲ್ಲಿ ರಚಿತವಾದ ಜನಪ್ರಿಯ ಕಥಾಸಂಕಲನ. ಈ ಕಾವ್ಯದ ಗದ್ಯವೂ ಇತರ ಚಂಪೂಕಾವ್ಯಗಳ ಗದ್ಯದಂತೆ ಕ್ಲಿಷ್ಟವಾಗಿಲ್ಲ. ಕನ್ನಡ ಗದ್ಯಸಾಹಿತ್ಯದ ಬೆಳವಣಿಗೆಯಲ್ಲಿ ದುರ್ಗಸಿಂಹನಿಗೆ ಮಾನ್ಯಸ್ಥಾನವಿದೆ. ಅರ್ಥದ ಅಭಿವ್ಯಕ್ತಿಯೇ ಗದ್ಯದ ಸಫಲತೆಯೆಂಬ ತತ್ತ್ವವನ್ನು ದುರ್ಗಸಿಂಹ ಮನಗಂಡು ತೋರಿದ್ದಾನೆ.’’[41] ‘‘ಗದ್ಯದ ಶೈಲಿಯು ಸುಂದರವಾಗಿಯೂ ಸುಲಭವಾಗಿಯೂ ಬಂದಿದೆ.’’[42] ಗದ್ಯಸೌಕರ್ಯ, ದೇಸಿಗುಣ ಎರಡರಲ್ಲೂ ನಯಸೇನನನ್ನು ಮುನ್ನಿರೀಕ್ಷಿಸುತ್ತಾನೆ, ದುರ್ಗಸಿಂಹ.

‘ಕರ್ಣಾಟಕ ಪಂಚತಂತ್ರ’ದಲ್ಲಿ ಸಮಕಾಲೀನ ಜನಜೀವನದ ಚಿತ್ರಣ ಕ್ಚಚಿತ್ತಾಗಿ ಬಂದಿರಬಹುದಾದರೂ, ಅದನ್ನು ಹೆಚ್ಚು ನಿರೀಕ್ಷಿಸುವುದು ಸರಿಯಲ್ಲ. ಅದರ ವಸ್ತು ಸ್ವರೂಪ ಯಾವ ಕಾಲಕ್ಕಾಗಲಿ ದೇಶಕ್ಕಾಗಲಿ ಹೊಂದಿಕೊಳ್ಳುವಂಥದು. ಹೀಗಾಗಿ, ಸಾಂಸ್ಕೃತಿಕ ಅಧ್ಯಯನಕ್ಕೆ ತನ್ನನ್ನು ಒಪ್ಪಿಸಿಕೊಳ್ಳುವುದಿಲ್ಲ, ದುರ್ಗಸಿಂಹನ ಕೃತಿ.

‘ಕರ್ಣಾಟಕ ಪಂಚತಂಥ್ರ’ದ ಭಾಷೆಯಲ್ಲಿ ಎಷ್ಟೋ ನಡುಗನ್ನಡ, ಅರ್ಥಾತ್ ಹೊಸಗನ್ನಡ ರೂಪಗಳಿವೆ. ಅವು ಸಂಧಿಕಾಲದ ಲಕ್ಷಣ ಎನ್ನಬೇಕೆ ಅಥವಾ ಲಿಪಿಕಾರರ ಕೈವಾಡ ಎನ್ನಬೇಕೆ?[43]

‘ಪಂಚತಂತ್ರ’ವೊಂದು ನೀತಿಬೋಧಕ ಕಾವ್ಯ (Didactic Poem) ; ಕಾವ್ಯವಂತೂ ಹೌದು. ನೀತಿಯೊಡನೆ ಕವಿತಾನೀತಿಯೂ ಬೆರೆತಿದೆ. ಅದು ಮೂಲತಃ ‘‘ಕ್ಷತ್ರಿಯಕುಮಾರರ ಪಠ್ಯಪುಸ್ತಕ’’; ‘‘ಕಾವ್ಯಮಾಧ್ಯಮದಲ್ಲಿ ಹೇಳಿದ ಶಾಸ್ತ್ರೀಯ ಕೃತಿ.’’[44] ತಕ್ಕಮಟ್ಟಿಗೆ ಒಪ್ಪಬೇಕಾದ ಮಾತು; ಆದರೂ ‘ಪಂಚತಂತ್ರ’ ಆ ವರ್ಗದ ಇತರ ಕೃತಿಗಳಿಗಿಂತ ಭಿನ್ನವಾದ ಕೃತಿ ಎಂಬುದನ್ನೂ ಒತ್ತಿ ಹೇಳಬೇಕು. ಅದು ‘‘ಶುದ್ಧಕಾವ್ಯವಾಗಿ ನಿಲ್ಲುವುದಿಲ್ಲ’’[45] ಎಂಬ ಹೇಳಿಕೆಯೂ ಗಮನಾರ್ಹ. ಆದರೆ ಶುದ್ಧಕಾವ್ಯ ಎನ್ನುವಂಥದು ಕನ್ನಡ ಸಾಹಿತ್ಯದಲ್ಲಿ ಎಷ್ಟಿದೆ? ಏನೇ ಆಗಿರಲಿ, ದುರ್ಗಸಿಂಹನ ಕೃತಿ ‘ನಿಲ್ಲುತ್ತದೆ’ ಎನ್ನುವುದು ಮುಖ್ಯ!

‘‘ಕನ್ನಡ ಅನುವಾದಕಾರರಲ್ಲಿ ದುರ್ಗಸಿಂಹನು ಉಚ್ಚಶ್ರೇಣಿಯ ಅಲ್ಲದಿದ್ದರೂ ಮಧ್ಯಮ ತರಗತಿಯ ಮನ್ನಣೆಯ ಸ್ಥಾನಕ್ಕೆ ತಕ್ಕವನು’’[46] ಎಂಬ ಉಕ್ತಿ, ಮೂಲಗ್ರಂಥವೆ ಸಿಕ್ಕದಿರುವಾಗ ಮೌಲಿಕವಾಗಲಾರದು. ಒಬ್ಬ ಕವಿಯಾಗಿ ಅವನದು ಮಧ್ಯಮ ತರಗತಿ. ಅವನ ಪ್ರತಿಭೆ ದ್ವಿತೀಯ ದರ್ಜೆಯದು ಎಂಬುದು ದಿಟ.

ದುರ್ಗಸಿಂಹನ ಕೃತಿಯ ಸ್ಥಾನ ನಿರ್ಣಯವನ್ನು ಹೀಗೆ ಮಾಡಲಾಗಿದೆ : ‘‘ಅನೇಕ ದೃಷ್ಟಿಗಳಿಂದ ದುರ್ಗಸಿಂಹನ ಪಂಚತಂತ್ರ ಕನ್ನಡ ಸಾಹಿತ್ಯದಲ್ಲಿ ಅಲ್ಲದೆ, ಭಾರತೀಯ ಮತ್ತು ಜಾಗತಿಕ ಸಾಹಿತ್ಯದಲ್ಲಿಯೂ ಸಹ ಗಣನೀಯ ಕೃತಿಯಾಗಿದೆ. ಪ್ರಪಂಚದ ಸಾಹಿತ್ಯಕ್ಕೆ ವಿಶೇಷ ಕೊಡುಗೆಯಾದ ಪಂಚತಂತ್ರದ ಇತಿಹಾಸವನ್ನು ಕೊಡುವಾಗ ದುರ್ಗಸಿಂಹನ ಪಂಚತಂತ್ರದ ಪಾತ್ರ ಅಮೂಲ್ಯವಾಗಿದೆಯೆಂಬುದನ್ನು ಗಮನಿಸಬೇಕು.’’[47]

ದುರ್ಗಸಿಂಹನ ಮಹತ್ತ್ವವನ್ನು ಹೀಗೆ ಸಂಗ್ರಹವಾಗಿ ತಿಳಿಸಲಾಗಿದೆ.[48]

೧. ಅವನು ಪಂಚತಂತ್ರವನ್ನು ಕನ್ನಡದಲ್ಲಿ ಹೇಳಿದ ಏಕಮೇವಾದ್ವಿತೀಯ ಕವಿ.

೨. ಅವನು ಅದನ್ನು ಹೊಸತಾಗಿ ಹೇಳಿದ್ದಾನೆ.

೩. ಕನ್ನಡದಲ್ಲಿ ನಾಗವರ್ಮನ ಕನ್ನಡ ಕಾದಂಬರಿಗೆ ಯಾವ ಸ್ಥಾನವಿದೆಯೋ ದುರ್ಗಸಿಂಹನ ಕನ್ನಡ ಪಂಚತಂತ್ರಕ್ಕೆ ಅದೇ ಸ್ಥಾನವಿದೆ.

೪. ಅವನಿಗೆ ತನ್ನದೇ ಆದ ಶೈಲಿಯಿದೆ.

೫. ಅವನ ಕಥಾಮಾರ್ಗವನ್ನು ನಯಸೇನನು ಮುಂದೆ ಅನುಸರಿಸುವಂತಾಯಿತು.

ದುರ್ಗಸಿಂಹನ ‘ಕರ್ಣಾಟಕ ಪಂಚತಂತ್ರ’ದ ವಸ್ತು, ಶೈಲಿ ಎರಡೂ ವಿಶಿಷ್ಟವೆನ್ನಬೇಕು.  ಲೌಕಿಕ ಮತ್ತು ಜನಪ್ರಿಯವಾದ ‘ಪಂಚತಂತ್ರ’ ಕಥೆಗಳನ್ನು ಕನ್ನಡದಲ್ಲಿ ಬಹುತೇಕ ಜನಪ್ರಿಯ ರೀತಿಯಲ್ಲಿ ನಿರವಿಸಿದ ಕೀರ್ತಿ ಅವನದು. ಪ್ರಾಣಿ ಪ್ರಪಂಚ, ಮನುಷ್ಯ ಪ್ರಪಂಚಗಳನ್ನು ಪರಿಣಾಮಕಾರಿಯಾಗಿ ಕೂಡಿಸಿರುವ’’[49] ‘ಕರ್ನಾಟಕ ಪಂಚತಂತ್ರ’ಕ್ಕೆ ಕನ್ನಡ ವಾಙ್ಮಯದಲ್ಲಿ ಪ್ರಶಸ್ತ ಸ್ಥಾನವಿದೆ; ಅದು ಪ್ರಸಕ್ತ ಕೂಡ.

[1] ಒಂದರ್ಥದಲ್ಲಿ ‘ಪಂಚತಂತ್ರ’ವೂ ‘ಶಾಸ್ತ್ರಕಾವ್ಯ’ವೇ, ಆದರೆ ವಿಶಾಲಾರ್ಥದಲ್ಲಿ. ಎರಡನೆಯ ನಾಗವರ್ಮ ಹಾಗೂ ನಾಗಚಂದ್ರ ಹನ್ನೊಂದನೆಯ ಶತಮಾನದವರೆಂದು ಈಚೆಗೆ ನಿರ್ಣಯಗೊಂಡಿರುವುದನ್ನು ನೆನೆಯಬೇಕು. ಅವರ ಜೊತೆಗಿದ್ದೂ ದುರ್ಗಸಿಂಹ ತನ್ನ ವೈಶಿಷ್ಟ್ಯವನ್ನುಳಿಸಿಕೊಳ್ಳುತ್ತಾನೆ.

[2] ‘ಪಂಚತಂತ್ರ’ದ ಪ್ರಥಮ ಪ್ರಕರಣದ-ಅದೇ ಬಹು ಮುಖ್ಯ-ನಾಯಕ, ಪಿಂಗಳಕನೆಂಬ ಸಿಂಹ. ಕವಿಯ ಹೆಸರಿನಲ್ಲೂ ‘ಸಿಂಹ’ ಸೇರಿರುವುದು ಎಂಥ ಆಕಸ್ಮಿಕ !

[3] ಇದು ಈಗಿನ ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಸವಡಿ ಎಂಬ ಗ್ರಾಮವೆಂದು ಹೇಳಲಾಗಿದೆ. ದುರ್ಗಸಿಂಹನಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿರಬಹುದಾದ ಒಂದನೆಯ ನಾಗವರ್ಮನೂ ಅದೇ ಊರಿನವನೆಂಬುದು ಗಮನಾರ್ಹ. ಆದರೆ ನಾಗವರ್ಮನ ಹೆಸರನ್ನು ದುರ್ಗಸಿಂಹ ಉಲ್ಲೇಖಿಸದಿರುವುದು ಸ್ವಲ್ಪ ಆಶ್ಚರ್ಯಕರ.

[4] ರಂ.ಶ್ರೀ.ಮುಗಳಿ, ‘ಕನ್ನಡ ಸಾಹಿತ್ಯ ಚರಿತ್ರೆ’, ೧೯೫೩, ಪು. ೧೧೮. ವ್ಯಕ್ತಿತ್ವದ ದೃಷ್ಟಿಯಿಂದಷ್ಟೇ ಅಲ್ಲ, ಕವಿತ್ವದ ದೃಷ್ಟಿಯಿಂದಲೂ ಅನೇಕ ಕಡೆ ಪಂಪನನ್ನು ನೆನಪಿಗೆ ತರುತ್ತಾನೆ. ದುರ್ಗಸಿಂಹ.

[5] ಅದು ೧೧೪೫ ಎಂದು ಅ. ವೆಂಕಟಸುಬ್ಬಯ್ಯನವರ ಅಭಿಪ್ರಾಯ.

[6] ನೀತಿಕಥೆ ಎಂದರೆ ಪ್ರಾಣಿಕಥೆ ಎಂದು ಹೇಳಲಾಗಿದೆ. ನೋಡಿ : ವರದರಾಜ ಹುಯಿಲಗೋಳ. ‘ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ’, ಪು.೧೧

[7] ‘ಪೀಠಿಕಾ ಪ್ರಕರಣ’ ಎಂಬುದು ಪ್ರತ್ಯೇಕವಾಗಿಲ್ಲ. ಪ್ರಥಮಪ್ರಕರಣದ ಪೀಠಿಕಾಭಾಗವನ್ನೇ ಬೇರ್ಪಡಿಸಿ, ಹಾಗೆ ಹೆಸರಿಸಲಾಗಿದೆ. ಇದು ಗ್ರಂಥಸಂಪಾದಕರ ಕೆಲಸ.

[8] ಇದು ಕಾಂತಾಸಂಮಿತವಲ್ಲ, ‘ಕತಾ’ ಸಂಮಿತ!

[9] ಈ ವಿಧಾನದ ಪರಿಣತ, ಜಟಿಲ ರೂಪ ಬಾಣನ ‘ಕಾದಂಬರಿ’ಯಲ್ಲಿದೆ; ಅಲ್ಲಿ ಎಲ್ಲ ಕತೆಗಳೂ ಒಂದೇ ಕತೆಯ ಅಂಗಗಳಾಗಿ ಕಂಡುಬರುತ್ತವೆ.

[10] ರಾಮೇಗೌಡ, ‘‘ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡಸಾಹಿತ್ಯ ಚರಿತ್ರೆ’, ಸಂ.೩, ಪು.೬೯೭.

[11] ಅದೇ, ಪು. ೭೦೧.

[12] ‘‘ನ ದೇವಚರಿತಂ ಚರೇತ್ ’’ ಎಂದಂತೆ, ‘‘ನ ರಾಜಚರಿತಂ ಚರೇತ್ ’’ ಎಂದೂ ಹೇಳಬಹುದು!

[13] ರಂ. ಶ್ರೀ. ಮುಗಳಿ, ಪೂರ್ವೋಕ್ತ, ಪು. ೧೧೮

[14] ರಾಮೇಗೌಡ, ಪೂರ್ವೋಕ್ತ, ಪು.೭೦೭

[15] ವಸುಭಾಗನ ಕೃತಿಗೆ ಬೃಹತ್ಕಥೆ ಆಕರವೆಂಬುದು ನಿಸ್ಸಂದಿಗ್ಧ. ಆದರೆ ವಿಷ್ಣುಶರ್ಮನ ಪಂಚತಂತ್ರ ಗುಣಾಢ್ಯನಿಗೆ ಎಷ್ಟರಮಟ್ಟಿಗೆ ಋಣಿ ಎಂಬುದು ವಿಚಾರಯೋಗ್ಯ.

[16] ದುರ್ಗಸಿಂಹನಿಗಿಂತ ಮೊದಲು ಕನ್ನಡದಲ್ಲಿ ಯಾರಾದರೂ ವಿಷ್ಣುಶರ್ಮನ ಪರಂಪರೆಯ ‘ಪಂಚತಂತ್ರ’ವನ್ನು ರಚಿಸಿದ್ದು, ತತ್ಕಾರಣದಿಂದ ದುರ್ಗಸಿಂಹ ವಸುಭಾಗನ ಪರಂಪರೆಗೆ ಶರಣುಹೋದನೆ?

[17] ರಾಮೇಗೌಡ, ಪೂರ್ವೋಕ್ತ, ಪು.೬೯೩

[18] ಸಾಮಾನ್ಯವಾಗಿ ಕರ್ಣಾಟ(ಕ), ‘ಅಭಿನವ’ದಂತಹ ವಿಶೇಷಣಗಳು ಯಾವುದೇ ಕನ್ನಡ ಕೃತಿಗಿದ್ದರೆ, ಅದು ಭಾಷಾಂತರ ಸೂಚಕವೆಂಬುದನ್ನು ನೆನಪಿಡಬೇಕು : ‘ಕರ್ಣಾಟಕ ಕಾದಂಬರಿ’, ‘ಅಭಿನವ ದಶಕುಮಾರಚರಿತ’ಗಳನ್ನು ಸ್ಮರಿಸಬಹುದು.

[19] ‘ಅಭಿನವ’ ಎಂಬರ್ಥದಲ್ಲೇ ‘ಪೊಸತು’ ಶಬ್ದ ಪ್ರಯುಕ್ತವಾಗಿದ್ದೀತು.

[20] ರಂ. ಶ್ರೀ. ಮುಗಳಿ, ಪೂರ್ವೋಕ್ತ, ಪು.೧೧೮

[21] ಉದ್ಧೃತ, ವರದರಾಜ ಹುಯಿಲಗೋಳ, ಪೂರ್ವೋಕ್ತ, ಪು.೨೦

[22] ಅದೇ, ಪು.೧೮

[23] ಅವರ ‘ಲೇಯಾಸ್ ದೇಶದ ಪಂಚತಂತ್ರ’, ‘ವಸುಭಾಗನ ಪಂಚತಂತ್ರ’ ಎಂಬ ಲೇಖನಗಳು ಅಮೂಲ್ಯವಾದವು.

[24] ಉದ್ಧೃತ, ವರದರಾಜ ಹುಯಿಲಗೋಳ, ಪೂರ್ವೋಕ್ತ, ಪು.೩೭

[25] ‘ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಱವೋಲ್ …’’ ಎಂಬ ಶ್ರವಣಬೆಳ್ಗೊಳದ ಶಾಸನಪದ್ಯವನ್ನು ಇದರೊಡನೆ ಹೋಲಿಸಬಹುದು.

[26] ರಂ.ಶ್ರೀ. ಮುಗಳಿ, ಪೂರ್ವೋಕ್ತ, ಪು. ೧೧೯, ‘‘ದುರ್ಗಸಿಂಹನಿಗೆ ದೊರೆತುದು ವಸುಭಾಗಭಟ್ಟನ ಪಂಚತಂತ್ರವೊಂದೇ ಇರಬಹುದು’’ ಎಂಬ ಮುಗಳಿಯವರ ಊಹೆ(ಅಲ್ಲೇ) ಅಷ್ಟೇನೂ ಹುರುಳಿಲ್ಲದ್ದು

[27] ಅವನು ಕೆಲವೆಡೆ ಯಜ್ಞಯಾಗಾದಿಗಳನ್ನು ವಿಡಂಬಿಸುವಂತೆಯೂ ತೋರುತ್ತದೆ.

[28] ವರದರಾಜ ಹುಯಿಲಗೋಳ, ಪೂರ್ವೋಕ್ತ, ಪು.೨೫೯. ಅದು ಮೂಲತಃ ಬೌದ್ಧ ಧರ್ಮೀಯವೆಂಬ ಊಹೆಯಲ್ಲಿ ಹೆಚ್ಚು ಹುರುಳಿದೆ. ಅಶ್ವಘೋಷನ ‘ಬುದ್ಧ ಚರಿತ’ ಕೂಡ ಸಂಸ್ಕೃತದಲ್ಲಿ ಸಮಗ್ರವಾಗಿ ಲಭ್ಯವಿಲ್ಲವೆಂಬುದನ್ನು ನೆನೆಯಬಹುದು.

[29] ಅದೇ, ಪು.೬೦

[30] ರಂ.ಶ್ರೀ. ಮುಗಳಿ, ಪೂರ್ವೋಕ್ತ, ಪು.೧೨೦

[31] ಅಲ್ಲೇ

[32] ರಾಮೇಗೌಡ, ಪೂರ್ವೋಕ್ತ, ಪು.೭೦೬

[33] ತ.ಸು.ಶಾಮರಾಯ, ಮೇ.ರಾಜೇಶ್ವರಯ್ಯ, ‘ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ’, ಪು.೯೧.

[34] ಡಿ.ಎಲ್. ನರಸಿಂಹಾಚಾರ್, ಉದ್ಧೃತ, ವರದರಾಜ ಹುಯಿಲಗೋಳ, ಪೂರ್ವೋಕ್ತ, ಪು.೩೦೮

[35] ಆಷಾಢಭೂತಿ ‘ಪಂಚತಂತ್ರ’ದಲ್ಲಿ ಬರುವ ಒಬ್ಬ ನಯವಂಚಕ ವ್ಯಕ್ತಿ. ಅವನ ಅಂಕಿತನಾಮ ಇಂದು ಕಾಪಟ್ಯಕ್ಕೆ ಸಮಾನಾರ್ಥಕವಾಗಿ ಪರಿಣಮಿಸಿರುವುದೊಂದು ಕೌತುಕ. (ಹಾಗೆಯೆ ಕರಟಕ, ದಮನಕ ಎಂಬ ಹೆಸರುಗಳೂ ಧೂರ್ತತೆಗೆ, ಚಾಡಿಕೋರತನಕ್ಕೆ ಪರ್ಯಾಯನಾಮಗಳಾಗಿವೆ). ‘ಪಂಚತಂತ್ರ’ ಹೇಗೆ ಜನಜೀವನವನ್ನು ಪ್ರವೇಶಿಸಿದೆಯೆಂಬುದಕ್ಕೆ ಇದೊಂದು ನಿದರ್ಶನ.

[36] ‘ಪಂಚತಂತ್ರ’ ಪ್ರಾಣಿಪ್ರಪಂಚವಷ್ಟೆ ಅಲ್ಲ. ಅಲ್ಲಿ ಮಾನವಪಾತ್ರಗಳೂ ಉಂಟೆಂಬುದು ಲಕ್ಷ್ಯಾರ್ಹ.

[37] ಮಾರ್ಗ-ದೇಸಿಗಳ, ಅಂತೆಯೇ ಧರ್ಮ-ಕಾವ್ಯಧರ್ಮಗಳ, ನೀತಿ-ಕವಿತಾ ನೀತಿಗಳ ಸಾಮರಸ್ಯದಲ್ಲಿ ಪಂಪ ಅನುಪಮ ಕವಿ.

[38] ತ.ಸು.ಶಾಮರಾಯ, ಪೂರ್ವೋಕ್ತ, ಪು.೯೨

[39] ರಂ.ಶ್ರೀ, ಮುಗಳಿ, ಪೂರ್ವೋಕ್ತ, ಪು.೧೨೦.

[40] ರಾಮೇಗೌಡ, ಪೂರ್ವೋಕ್ತ, ಪು.೭೦೪

[41] ಕೆ. ವೆಂಕಟರಾಮಪ್ಪ, ಉದ್ಧೃತ, ವರದರಾಜ ಹುಯಿಲಗೋಳ, ಪು.೩೧೯.

[42] ಎಂ. ಮರಿಯಪ್ಪ ಭಟ್ಟ, ಅಲ್ಲೇ

[43] ನಮಗೆ ಸಿಗುವ ಹಳಗನ್ನಡ ಕಾವ್ಯಗಳ ಹಸ್ತಪ್ರತಿಗಳು ನಡುಗನ್ನಡ ಕಾಲದಲ್ಲಿ ಲಿಖಿತವಾದುವೆಂಬುದನ್ನು ನೆನಪಿಡಬೇಕು. ಅವುಗಳಲ್ಲಿ ಪ್ರತಿಕಾರರು ತಮ್ಮ ಕಾಲದ ಭಾಷಾರೂಪಗಳನ್ನು ಹಾಕಿರಬಾರದೇಕೆ? ಇನ್ನೊಂದು ಮುಖ್ಯಾಂಶ : ‘ಪಂಚತಂತ್ರ’ದ ಸಂಸ್ಕೃತ ಶ್ಲೋಕಗಳ ಕನ್ನಡ ಟೀಕಿನಲ್ಲಿ ನಡುಗನ್ನಡ ರೂಪಗಳು ವಿಪುಲ. ಟೀಕು ಬಹುಶಃ ಅನ್ಯಕರ್ತೃಕ : ಕವಿಕೃತವಲ್ಲ.

[44] ರಾಮೇಗೌಡ, ಪೂರ್ವೋಕ್ತ, ಪು.೭೦೧

[45] ಅದೇ, ಪು.೭೦೬

[46] ರಂ. ಶ್ರೀ. ಮುಗಳಿ, ಪೂರ್ವೋಕ್ತ, ಪು.೧೨೦

[47] ವರದರಾಜ ಹುಯಿಲಗೋಳ, ಪೂರ್ವೋಕ್ತ, ಪು.೩೪೭

[48] ಗುಂಡ್ಮಿ, ಚಂದ್ರಶೇಖರ ಐತಾಳ, (ಸಂ) ‘ಕರ್ಣಾಟಕ ಪಂಚತಂತ್ರಂ’, ಉಪೋದ್ಘಾತ, ಪು.೨೦

[49] ಅದರಲ್ಲಿ ಪಶು, ಪಕ್ಷಿ, ಮಾನವ ಪಾತ್ರಗಳಂತೆ ಪ್ರಕೃತಿಯ ಪಾತ್ರವೂ ತುಸು ಮಟ್ಟಿಗಿದೆ; ಒಂದೆರಡು ಕಡೆ ದೇವತೆಗಳಿಗೂ ಸ್ಥಾನವಿದೆ. ಹಾಗೆ ನೋಡಿದರೆ. ಪರಮೇಶ್ವರನೆ ‘ಪಂಚತಂತ್ರ’ ಕಥೆಗಳ ಉಗಮಸ್ಥಾನ : ಪಶುಪತಿ ಹೇಳಿದ ಪಶುಕಥಾವಳಿ, ‘ಪಂಚತಂತ್ರ’!