ಕನ್ನಡ ನಾಡು-ನುಡಿ, ಸಾಹಿತ್ಯ ಸಂಸ್ಕೃತಿಗಳನ್ನು ಕುರಿತು ನಾನು ಆಗಾಗ ಬರೆದ ಹದಿಮೂರು ಸಂಪ್ರಬಂಧಗಳ ಸಂಕಲನ ಇದು. ಮುಖ್ಯವಾಗಿ ಸಾಹಿತ್ಯ ವಿಮರ್ಶೆ ಮತ್ತು ಸಂಶೋಧನೆಯ ವಿವಿಧ ನೆಲೆಗಳ ಶೋಧನೆಯ ದಾರಿಯಲ್ಲಿ ನಾನು ಕಂಡುಕೊಂಡ ವಿಶಿಷ್ಟಾಂಶಗಳ ಮತ್ತು ಚಿಂತನೆಗಳ ಫಲರೂಪವಾಗಿ ಈ ಕೃತಿ ಮೈದಾಳಿದೆ. ಕನ್ನಡ ನಾಡಿನ ಪ್ರಾಚೀನತೆಯ ಹುಡುಕಾಟದಲ್ಲಿ ನಾನು ನಡೆಸಿದ ಅಧ್ಯಯನಗಳ, ಕನ್ನಡ ಸಣ್ಣ ಕತೆಗಳ, ಕಾದಂಬರಿಗಳ ಮೂಲ ಸೆಲೆಗಳನ್ನು, ಸಾಧನೆಗಳನ್ನು ಅರಿತುಕೊಳ್ಳುವ ವಿಶ್ಲೇಷಿಸುವ ಗಂಭೀರ ಪ್ರಯತ್ನದ ಕನ್ನಡ ಕಾವ್ಯ ಮತ್ತು ಮಹಾಕಾವ್ಯಗಳ ಭಾಷಿಕ ಸ್ವರೂಪ ಹಾಗೂ ಅವುಗಳ ಅಂತರಂಗದ ವಿನ್ಯಾಸ ವೈವಿಧ್ಯ ಮತ್ತು ಎತ್ತರಗಳ ಸ್ವರೂಪದ ವಿವೇಚನೆಯನ್ನು ಕೇಂದ್ರವಾಗಿರಿಸಿಕೊಂಡ ಹದಿಮೂರು ಬರಹಗಳು ಇಲ್ಲಿವೆ.

ಸುವರ್ಣ ಕರ್ನಾಟಕದ ‘ಹೊನ್ನಾರು ಮಾಲೆ’ಯಲ್ಲಿ ಇವುಗಳನ್ನು ಒಟ್ಟುಗೂಡಿಸಿ ಪ್ರಕಟಿಸಲು ಸಂಕಲ್ಪಿಸಿದ ಕನ್ನಡ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಅವರಿಗೆ ಧನ್ಯವಾದಗಳು. ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿದ್ದು ಮಾತ್ರವಲ್ಲದೆ ಇದಕ್ಕೊಂದು ಅರ್ಥಪೂರ್ಣ ಹೆಸರನ್ನೂ ಸೂಚಿಸಿ, ಸುಂದರವಾಗಿ ಹೊರತಂದಿರುವ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು. ಪ್ರಸಾರಾಂಗದ ಕ್ರಿಯಾಶೀಲ ಸಿಬ್ಬಂದಿ ವರ್ಗದವರಿಗೆ ನನ್ನ ನೆನಕೆಗಳು ಸಲ್ಲುತ್ತವೆ.

ಎಚ್.ಜೆ. ಲಕ್ಕಪ್ಪಗೌಡ
ಮೈಸೂರು
೨೫.೦೨.೨೦೦೭