ಸಹಜ ಪ್ರತಿಭೆಯ ಸ್ಫುರಣದಿಂದ ಅಂತರಂಗ ಪರಿಪಾಕದಿಂದ ದೈವಪ್ರೀತಿಯಿಂದ ಹೊಮ್ಮಿದ ಇಂಥ ರಚನೆಗಳ ಜೊತೆಗೆ ಪರಿಶ್ರಮಪೂರ್ವಕವಾಗಿ ರಚಿಸಿದ ಕೆಲವು ಚತುರ ನಿರ್ಮಿತಿಗಳೂ ಇವೆ. ಒಂದು ಪದಕ್ಕಿರುವ ವಿವಿಧಾರ್ಥಗಳ ಬೆನ್ನು ಹಿಡಿದು ಸಾಗುವ ಈ ಕೃತಿಗಳು ಕನಕದಾಸರ ಪಾಂಡಿತ್ಯ ಚಾತುರ್ಯದ ಪದ್ಯರಚನಾ ಕೌಶಲದ ಪ್ರತೀಕಗಳಾಗಿವೆ. ನಿದರ್ಶನಕ್ಕೆ ನೋಡಿ :

ಕಮಲವನು ಈರಡಿಯ ಮಾಡಿದೆ
ಕಮಲ ಮೊರೆಯಿಡಲಂದು
ಕಮಲದಲ್ಲಿ ಬ್ರಹ್ಮಾಂಡ ತೋರಿದೆ
ಕಮಲಧರ ನೀನೆಂದು
ಕಮಲವನು ಕದ್ದೊಯ್ದ ಕಳ್ಳನ
ಸದೆದು ಕಮಲವನು ತಂದೆ
ಕಮಲಮುಖಿಯುಳ್ಳ ಕಾಗಿನೆಲೆ
ಆದಿಕೇಶವನೆಂಬ

ಹೀಗೆಯೇ ಸಂಬಂಧವಾಚಕ ಶಬ್ದಗಳನ್ನು ಪ್ರಯೋಗಿಸುತ್ತ ಪವಣಿಸುತ್ತ ಸುತ್ತಿ ಬಳಸಿ ಹರಿಯ ಹೆಸರಿಗೆ ಸಂಬಂಧ ಕಲ್ಪಿಸುವ ಜಣತನದ ಪ್ರದರ್ಶನಕ್ಕೆ ನಿದರ್ಶನ :

ದನುಜೆಯಾಳ್ದನಣ್ಣನಣ್ಣನ
ಪಿತನ ಮುತ್ತಿ ಕೌರವೇಶನ
ಅನುಜೆಯಾಳಿದವನ ಶಿರವ ಛೇದಿಸಿತನ್ನ
ಅನುಜೆಯಾಳಿದವನು ಬೆಂಕಿ ತಿನ್ನದಂತೆ ಕಾಯ್ದ ರುಕ್ಮನನುಜೆಯಾಳಿದವನ ಮೂರ್ತಿಯನ್ನು ನೋಡಿರೊ

ಶಬ್ದ ಚಮತ್ಕಾರಗಳೆಂದರೆ ಕನಕರಿಗೆ ಅತಿ ಆಪ್ಯಾಯಮಾನ. ಅವುಗಳನ್ನು ತಿರುಗಿಸಿ ಮುರುಗಿಸಿ ಬಾಗಿಸಿ ಬಳುಕಿಸಿ ಕುಣಿಸಿ ಮಣಿಸಿ ಆನಂದಿಸುವುದು ಅವರಿಗೊಂದು ಹವ್ಯಾಸ. ಗೋಪಿಕಾಸ್ತ್ರೀಯೊಬ್ಬಳು ಯಶೋಧೆಯಲ್ಲಿಗೆ ಬಂದು ಕೃಷ್ಣನ ಮೇಲೆ ಆರೋಪ ಹೊರಿಸುತ್ತಿದ್ದಾಳೆ :

ಬಳೆಯನ್ನು ಕೊಟ್ಟೇನೆಂದು
ಬಲು ಮಾತಿನಲ್ಲಿ ತಂದ
ಬಳೆಯ ಕೇಳಿದರಲ್ಲಿ ಬಳೆಯೆ
ಊರ ಮುಂದಿನ ಗಾಳಿಯೆ
ಗದ್ದೆಯೊಳಗಿನ ಕಳೆಯೆ
ಕೈಕಾಲು ಹಿಡಿದು ಸೆಳೆಯೆ
ಹೋಗೆನುತಾನೆ

ಇಲ್ಲಿ ಕೃಷ್ಣನ ತುಂಟತನ ತಂಟೆಕೋರತನ ಚಬುಕು ಚಾಲೂಕುಗಳ ಜೊತೆಗೆ ದಾಸರು ಪದಗಳೊಡನೆ ಲೀಲಾಜಲವಾಗಿ ಆಟವಾಡುವ ರೀತಿ ರಂಜನೀಯ. ವಿವಿಧ ತರಕಾರಿಗಳ ಹೆಸರನ್ನುಪಯೋಗಿಕೊಂಡು ಆ ಮೂಲಕ ಹರಿನಾಮಸ್ಮರಣೆ ಮಾಡುವ ಮತ್ತೊಂದು ವಿಧಾನ ದಾಸರಿಗೆ ಬಲುಪ್ರಿಯ. ಉದಾಹರಣೆಗೆ ಈ ಸಾಲುಗಳನ್ನು ನೋಡಿ :

ಪರಮಪುರುಷ ನೀ ನೆಲ್ಲಿಕಾಯಿ
ಸರಸಿಯೊಳಗೆ ಕರಿ ಕೂಗಿರೆಕಾಯಿ
ಹಿರಿದು ಮಾಡಿದ ಪಾಪ ನುಗ್ಗೇಕಾಯಿ
ಹರಿ ನಿನ್ನ ಧ್ಯಾನ ಬಾಳೇಕಾಯಿ
ಕರಿರಾಜಗೊಲಿದಂಥ  ಬದನೇಕಾಯಿ
ಅರಿಷಡ್ವರ್ಗದಿಂದ ಬದಗಿಲಿ ಕಾಯಿ

ಇವೆಲ್ಲ ತಾನು ಕವಿ ವಿದ್ವಾಂಸ ಎಂಬ ಎಚ್ಚರ ಕನಕದಾಸರಿಗೆ ಜಗೃತವಾದಾಗ, ಪಂಡಿತರನ್ನು ಮೆಚ್ಚಿಸಬೇಕೆಂಬ ತವಕ ತೀವ್ರವಾದಾಗ, ಒಂದು ರೀತಿಯ ಲಘು ಮನಸ್ಕತೆ ಇಣುಕಿ ಹಾಕಿದಾಗ ಹೊಸೆದ ರಚನೆಗಳು; ಭಾವತೀವ್ರತೆಯಿಂದಾಗಲೀ, ಪ್ರತಿಭೆಯ ಉಕ್ಕಂದ ದಿಂದಾಗಲೀ, ರಚನೋತ್ಕಟತೆಯಿಂದಾಗಲಿ, ತನ್ಮಯಶೀಲತೆಯಿಂದಾಗಲಿ ಉದ್ಭವಿಸಿದ ಸಹಜ ಕೃತಿಗಳಲ್ಲ.

ಭಕ್ತಿಯ ಮಹಾಪೂರದಲ್ಲಿ ಕೊಚ್ಚಿ ಹೋಗುವಾಗ, ಆತ್ಮಶೋಧನೆ ಮತ್ತು ಆತ್ಮ ಸಮರ್ಪಣೆ ಮಾಡುವಾಗ ಕನಕದಾಸರ ಹೃದಯದಿಂದ ನೇರವಾಗಿ ಚಿಮ್ಮಿ ಬಂದ ಕೃತಿಗಳು ಕಾವ್ಯಮಲ್ಯದ ದೃಷ್ಟಿಯಿಂದ ಅತ್ಯಂತ ಗಮನಾರ್ಹವಾದವುಗಳು. ಇವುಗಳಲ್ಲಿ ಭಾವ ಭಾಷೆಗಳ ನಾದ ಅರ್ಥಗಳ ಕಂಪನಕಳಕಳಿಗಳ ಅಪೂರ್ವ ಬೆಸುಗೆಯನ್ನು ಸಾವಯವ ಶೋಭೆಯನ್ನು ಗುರುತಿಸಬಹುದು. ಈ ಕೀರ್ತನೆಯನ್ನು ನೋಡಿ :

ತಲ್ಲಣಿಸದಿರು ಕಂಡ್ಯ ತಾಳು ಮನವೆಸ್ವಾಮಿ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಂಗಳಿಗೆ
ಕಟ್ಟಿ ಕಟ್ಟುತ ನೀರ ಹೊಯ್ದವರು ಯಾರೊ?
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಕೊಟ್ಟು ರಕ್ಷಿಸುವನು ಇದಕೆ ಸಂಶಯವಿಲ್ಲ.
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನೀಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಸುವನು ಇದಕೆ ಸಂಶಯವಿಲ್ಲ

ಬದುಕು ಬವಣೆಯ ಬೆಟ್ಟವಾಗಿ ಮನಸ್ಸು ನಾನಾ ವಿಧದ ಸಂಶಯಗಳ ಸುಳಿಯಲ್ಲಿ ಸಿಕ್ಕಿ ತೊಳಲುತ್ತ ನಿರಾಸೆಯ ಆಳದಲ್ಲಿ ಮುಳುಗುತ್ತಿರುವಾಗ, ನಂಬಿಕೆ ಭರವಸೆಗಳ ದಡಗಳು ಕುಸಿಯುತ್ತಿರುವಾಗ, ಭೀತಿಗೆ ಕಾರಣವಿಲ್ಲವೆಂದು ದೈವದ ಕಾರುಣ್ಯಹಸ್ತ ನಮ್ಮನ್ನು ರಕ್ಷಿಸಲು ಸದಾ ಸಿದ್ಧವಾಗಿದೆಯೆಂದು ಅಭಯ ನೀಡುವ ಕೃತಿಯಿದು. ಇಂಥ ದೈವಕೃಪೆಯ ಭರವಸೆಯನ್ನುಂಟುಮಾಡಲು ದಾಸರು ಕೊಡುವ ನಿದರ್ಶನಗಳಲ್ಲಿ ಅವರ ವಿಶಿಷ್ಟತೆಯಿದೆ. ಬೆಟ್ಟದ ತುದಿಯಲ್ಲಿನ ವೃಕ್ಷ, ಅಡವಿಯೊಳಗಿನ ಮೃಗಪಕ್ಷಿಗಳು, ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳು – ಇಂತಹವುಗಳನ್ನು ಅವಿರುವಲ್ಲಿಯೇ ನೀರು ಆಹಾರಗಳನ್ನಿತ್ತು ಪೊರೆಯುವ ಭಗವಂತ ಮನುಷ್ಯನನ್ನು ಕಾಪಾಡಲಾರನೆ? ತನ್ನ ಮಗುವಿನ ಬೇಕು ಬೇಡಗಳು ತಾಯಿಗೆ ಗೊತ್ತಿರುವಂತೆ, ಸೃಷ್ಟಿಸಿದ ಸ್ವಾಮಿಗೆ ಹೊಣೆಗಾರಿಕೆಯಿಲ್ಲವೆ? ದಿನನಿತ್ಯ ಎಲ್ಲರ ಅರಿವಿಗೆ ಬರುವ, ಅವರ ಅನುಭವದ ಅವಿನಾಭಾಗವಾಗಿರುವ ಸರಳ ಸುಂದರ ಪ್ರಾಕೃತಿಕ ಉದಾಹರಣೆ ಗಳ ಮೂಲಕ ಅತೀವಶಕ್ತಿಯ ಇರುವಿಕೆಯನ್ನು ಮನದಟ್ಟು ಮಾಡಿಕೊಡುವ ಈ ವಿಧಾನ ತುಂಬ ಪರಿಣಾಮಕಾರಿಯಾಗಿದೆ.

‘ತನು ನಿನ್ನದು ಜೀವನ ನಿನ್ನದು ರಂಗಾ’ ಎಂಬ ಕೀರ್ತನೆಯಲ್ಲಿ ಸರ್ವಸಮರ್ಪಣ ಭಾವ ಅತ್ಯಂತ ಗಂಭೀರವಾಗಿ ತೀವ್ರವಾಗಿ ಅಭಿವ್ಯಕ್ತವಾಗಿದೆ. ಅನುದಿನದಲ್ಲಿ ಬರುವ ಸುಖ ದುಃಖ ನಿನ್ನದು, ಕೇಳುವ ಕಿವಿ ನೋಡುವ ನೋಟ ಆಘ್ರಾಣಿಸುವ ನಾಸಿಕ ರುಚಿಗ್ರಹಣ ಮಾಡುವ ಜಿಹ್ವೆ ಮಾಯದ ಬಲೆಯಲ್ಲಿ ಸಿಕ್ಕಿ ತೊಳಲುವ ಕಾಯ – ಎಲ್ಲವೂ ನಿನ್ನದು, ನೀನಿಲ್ಲದೆ ನರ ಸ್ವತಂತ್ರನಲ್ಲ, ಪಂಚೇಂದ್ರಿಯಗಳಿಗೆ ಶಕ್ತಿಪಟುತ್ವ ಪ್ರಾಪ್ತವಾಗುವುದು ನಿನ್ನಿಂದಲೇ – ಎಂಬ ತತ್ವ ತುಂಬು ಗತಿಯಲ್ಲಿ ಅಂತರಂಗದ ಪರಮ ಪ್ರಾಮಾಣಿಕ ತೋಡಿಕೆ ಯಾಗಿ ಸಾಂದ್ರ ಪ್ರವಾಹವಾಗಿ ಇಲ್ಲಿ ಹರಿದಿದೆ. ತೀರ ಸರಳವಾದ ನುಡಿಗಳು ಈ ಅನುಭವ ಪ್ರಾಮಾಣ್ಯದಿಂದಾಗಿ ಜೀವಕಳೆಯಿಂದ ಲಕಲಕಿಸುತ್ತವೆ, ಆರ್ದ್ರತೆಯಿಂದ ಜಿನುಗುತ್ತವೆ, ಮನಸ್ಸಿನಲ್ಲಿ ಹರಡಿಕೊಳ್ಳುತ್ತವೆ.

ಭಗವಂತನ ದರ್ಶನಕ್ಕಾಗಿ ಕಾದು ಕುದಿದು ಪರಿತಪಿಸುವ ಭಕ್ತನ ಭಾವೋತ್ಕಟವಾದ ಮೊರೆ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಎಂಬ ಕೀರ್ತನೆಯಲ್ಲಿ ಮಡುಗಟ್ಟಿದೆ. ಕರಿರಾಜನಿಗೆ, ಪ್ರಹ್ಲಾದನಿಗೆ, ದ್ರೌಪದಿಗೆ, ಅಜಮಿಳನಿಗೆ ಅವರು ಕರೆದ ಕೂಡಲೇ ಧಾವಿಸಿ ಬಂದು ದರ್ಶನವಿತ್ತು ಪೊರೆದ ಹರಿ ತನಗೇಕೆ ವಿಮುಖನಾಗಿದ್ದಾನೆ? ತಾನಿಷ್ಟು ಕೂಗಿದರೂ ತನ್ನ ಧ್ವನಿ ಕೇಳಿಸಲಿಲ್ಲವೇ ಕರುಣಾಳುವಿಗೆ? ಎಂದು ಹಂಬಲಿಸುವ ದಾಸರ ಕರೆಯಲ್ಲಿ ಮೊರೆಯಲ್ಲಿ ಅತ್ಯಂತ ತೀವ್ರವಾದ ನೋವು ನಿರಾಸೆ ಮತ್ತು ಹರಿಯನ್ನು ಪಡೆಯುವ ಉತ್ಕಟ ಅಭೀಪ್ಸೆ ತುಂಬ ಪ್ರಭಾವಕಾರಿಯಾಗಿ ವ್ಯಕ್ತವಾಗಿದೆ. ಹಾಗೆಯೇ ‘ಹೂವ ತರುವರ ಮನೆಗೆ ಹುಲ್ಲ ತರುವ’ ಎಂಬ ಕೃತಿಯಲ್ಲಿ ತನ್ನನ್ನು ಕಾಡುತ್ತಿರುವ ಘೋರ ದುರಿತಗಳ ವಾರಿಧಿಯನ್ನು ಬತ್ತಿಸಬೇಕೆಂದು, ತಾನು ನಿಜವಾಗಿಯೂ ರಂಗನಾಥನ ಡಿಂಗರಿಗನೆಂದು ಮತ್ತು ತಾನು ಹರಿಯದಾಸನೆಂಬುದನ್ನು ಡಂಗುರವ ಹೊಯಿಸಿ ಜಹೀರು ಪಡಿಸಬೇಕೆಂದು ಸ್ವಾಮಿಯನ್ನು ಪ್ರಾರ್ಥಿಸುವಲ್ಲಿ ದಾಸರ ಹೃದಯದಲ್ಲಿ ಭೋರ್ಗರೆ ಯುತ್ತಿರುವ ಭಗವಂತನ ಬಗೆಗಿನ ಅನನ್ಯ ಶರಣತೆ ಶಕ್ತಿಪೂರ್ಣವಾಗಿ ಮೈವೆತ್ತಿದೆ. ‘ಕೇಶವನೆ ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ’ ಎಂಬಲ್ಲಿ ಅವರ ನಿಸ್ಸಹಾಯಕತೆ ನಿಚ್ಚಳವಾಗಿ ಅನಾವರಣಗೊಂಡಿದೆ. ಈ ಎರಡು ಕೀರ್ತನೆಗಳಲ್ಲಿ ಅವರ ಜೀವನಚರಿತ್ರೆಯ ಕೆಲವು ಅಂಶಗಳೂ ಹೆಣೆದುಕೊಂಡಿರುವಂತೆ ಭಾಸವಾಗುತ್ತವೆ. ದೇವರ ಕೃಪೆಗಾಗಿ ಹಲವು ಪರಿಯಲ್ಲಿ ಯಾಚಿಸುತ್ತ ಅವನನ್ನು ಒಲಿಸುವ ಮೆಚ್ಚಿಸುವ ಬಗೆ ಯಾವುದೆಂಬುದನ್ನು ಕಾಣದೆ ತಳಮಳ ಗೊಳ್ಳುತ್ತಿರುವ ಭಕ್ತನ ಅಂತರಂಗದ ನೋವಿನ ಅಲೆಗಳ ತಾಕಲಾಟ ಆವ ಪರಿಯಲಿ ನಿಮ್ಮನೊಲಿಸಲಿ’ ಎಂಬ ಹಾಡಿನಲ್ಲಿ ಹರಳುಗಟ್ಟಿರುವುದನ್ನು ನೋಡಿ :

ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವು
ಅಣುಮಾತ್ರ ತೋರದಲ್ಲ
ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾ
ಸನವನೆಂತ್ಹಾಸಲಿ
ಘನವಾದ ಗಂಗೆಯನು ಪಡೆದವಗೆ ಕಲಶನೀ
ರನದೆಂತು ಮೈಗೆರೆಯಲಿ
ತನುವಿನ ಪರಿಮಳವು ಘಮಘಮಿಪನಿಗೆ ಚಂ
ದನವನದೆಂತು ನಾ ಪೂಸಲಿ
ಅನವರತ ನಾಭಿಯೊಳು ಶತಪತ್ರವಿಹಗೆ
ಕ್ಕಿನ ಪೂವ ಮುಡಿಸಲೆಂತೈ ದೇವ

ಭಗವಂತನ ಸರ್ವಸಮೃದ್ದಿಯೊಡನೆ ತನ್ನ ರಿಕ್ತ ಸ್ಥಿತಿಯನ್ನು ಹೋಲಿಸುತ್ತ, ಅವನನ್ನು ಮೆಚ್ಚಿಸಲು ತನ್ನ ನಂಬುಗೆಯೊಂದೇ ಹೊರತು ಮತ್ತೊಂದು ಮಾರ್ಗವಿಲ್ಲವೆಂದು ನಿವೇದಿಸಿ ಕೊಳ್ಳುವ ಈ ಹಾಡಿನಲ್ಲಿ ದೇವನ ಸರ್ವಶಕ್ತಿಯ ಆತ್ಮೀಯ ವರ್ಣನೆಯ ಜೊತೆಗೆ ಭಕ್ತನ ಅನನ್ಯ ಶರಣಾಗತಿಯ ಭಾವವೂ ಮೈದುಂಬಿಕೊಂಡಿದೆ.

ದೇವಸನ್ನಿಧಿಯನ್ನು ತೊರೆದು ಇಹಜೀವನದಲ್ಲಿ ಹೊಕ್ಕು ತೊಳಲುವ ಆತ್ಮದ ಯಾತ್ರೆ ಯನ್ನು ಕುರಿತ ಕೀರ್ತನೆ ‘ಹೇಗಿದ್ದು ಹೇಗಾದೆಯೊ ಆತ್ಮ’, ಜೀವನದ ನಾನಾ ಅವಸ್ಥೆಗಳನ್ನು ಬಸಿರುಹಳ್ಳಿ, ಮಾಸನೂರು, ನೆಲಬಟ್ಟೆ, ಯೌವನದೂರು, ಹಸ್ತಾದ್ರಿ ನೆಳಲು, ದಾರಿದ್ರ್ಯಪೇಟೆ ಮುಂತಾಗಿ ವರ್ಣಿಸುವ ಕನಕದಾಸರ ಪ್ರತಿಭೆ ಇಲ್ಲಿ ಸಾಂಪ್ರದಾಯಿಕವೆನಿಸಿದರೂ ತನ್ನ ಕಲ್ಪನೆಯಿಂದಾಗಿ ವಿಶಿಷ್ಟವೆನಿಸುತ್ತದೆ. ಕೀರ್ತನೆಯ ಉದ್ದಕ್ಕೂ ವಿಷಾದದ ದಟ್ಟ ನೆಳಲು ನೋವಿನ ಕಟುತನ ಕವಿದುಕೊಂಡು ಲೌಕಿಕ ಬದುಕಿನ ನಿರರ್ಥಕತೆಯನ್ನು ಮನಗಾಣಿಸುವಲ್ಲಿ ಯಶಸ್ವಿಯಾಗಿದೆ. ಕೇಶವನ ಭಕ್ತಿಯಿಲ್ಲದವರಿಗೆ ಮುಕ್ತಿ ಅಸಾಧ್ಯವೆಂಬುದನ್ನು ನಿರೂಪಿ ಸುವಲ್ಲಿ ಕನಕದಾಸರ ಸೂಕ್ಷ್ಮಾವಲೋಕನಶಕ್ತಿ ಮತ್ತು ಸಾದೃಶ್ಯಜ್ಞಾನಗಳು ಅಗಾಧ ಪ್ರಮಾಣದಲ್ಲಿ ಅಭಿವ್ಯಕ್ತವಾಗುತ್ತವೆ. ಈ ಸಾಲುಗಳನ್ನು ನೋಡಿ :

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ?

ಚಳಿಜ್ವರಕೆ ಚಂದನದ ಲೇಪ ಹಿತವೆ?

ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ?

ಬೆಲೆಬಿದ್ದ ಸರಕಿನೊಳು ಲಾಭವುಂಟೆ?

ಇಂದ್ರಿಯಗ್ರಾಹ್ಯವಾದ ಇಂಥ ಉಪಮೆ ಸಾದೃಶ್ಯಗಳು ಉಸಿರಾಡಿದಷ್ಟು ಸಲೀಲವಾಗಿ  ಕನಕದಾಸರ ಲೇಖನಿಯಲ್ಲಿ ಹೊಮ್ಮಿ ಸಂದರ್ಭದ ಅರ್ಥವಂತಿಕೆಯನ್ನು ಪರಿಣಾಮವನ್ನು ಅಧಿಕವಾಗಿಸುತ್ತವೆ. ‘ಹೊತ್ತರೆದ್ದು ಹೋರಿ ಪರರ ಚಿತ್ತವೃತ್ತಿಗಳನೆ ಹಿಡಿದು ಭೃತ್ಯನಂತೆ ಹಲವು ತೆರೆದ ಕೆಲಸ ಮಾಡಿ ದಣಿಯುವೆ’ ಎಂದು ಹೇಳಿ ಮನುಜ ಸೇವೆಯು ಸಾಕು, ಹರಿಯ ಸೇವೆಯು ಬೇಕು ಎಂದು ಆರ್ತರಾಗಿ ಮೊರೆಯಿಡುವಾಗ ಮಾನವನ ಹಂಗಿನ ದೀನಬಾಳುವೆಯ ಚಿತ್ರ ಜೀವಂತವಾಗಿ ಮೂಡಿ ನಿಲ್ಲುತ್ತದೆ. ಅಲ್ಲಿನ ಮೂರು ಮೂರು ಮಾತ್ರೆಯ ಲಯ ದೊಡ್ಡವರ ತಾಳಕ್ಕೆ ಮಣಿಯಬೇಕಾದ ಕುಣಿಯಬೇಕಾದ ಅನಿವಾರ್ಯತೆ ಯನ್ನು ಧ್ವನಿಪೂರ್ಣವಾಗಿ ಹಿಡಿದಿಡುತ್ತದೆ.

‘ನಾರಾಯಣನೆಂಬ ನಾಮದ ಬೀಜ’ ಎಂಬ ಕೃತಿ ಕನಕರ ಅದ್ಭುತ ಕಲ್ಪನಾ ಶಕ್ತಿಗೆ ಸಮರ್ಪಕ ನಿದರ್ಶನಾಗಿದೆ :

ಕಾಮಕ್ರೋಧಗಳೆಂಬ ಗಿಡಗಳನು ತರಿಯಿರಯ್ಯ
ಮದಮತ್ಸರವೆಂಬ ಪೊದೆಯ ಇರಿಯಿರಯ್ಯ
ಪಂಚೇಂದ್ರಿಯಗಳೆಂಬ ಮಂಚಿಗೆಯ ಹಾಕಿರಯ್ಯ
ಚಂಚಲವೆಂಬ ಹಕ್ಕಿಯ ಓಡಿಸಿರಯ್ಯ
ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ
ಆಯುಷ್ಯದ ರಾಶಿಯನ್ನು ಅಳೆಯಿರಯ್ಯ

ಬೇಸಾಯದ ರೂಪದಲ್ಲಿ ನಾರಾಯಣಭಕ್ತಿಯನ್ನು ಕ್ರಮಕ್ರಮೇಣ ಹೇಗೆ ವರ್ಧಿಸಿಕೊಂಡು ಆತ್ಮಕಲ್ಯಾಣವನ್ನು ಸಾಧಿಸಿಕೊಳ್ಳಬಹುದೆಂಬುದನ್ನು ತುಂಬಾ ಅರ್ಥವತ್ತಾಗಿ ಕಂಡರಿಸ ಲಾಗಿದೆ. ಸಾಲುಸಾಲಿಗೆ ಕವಿತೆ ಬೆಳೆಯುತ್ತ ತನ್ನ ಭಾವಾರ್ಥಗಳನ್ನು ಹಿಗ್ಗಿಸಿಕೊಳ್ಳುತ್ತ ಭವ್ಯ ರೂಪಕದೊಡನೆ ಪರಿಪೂರ್ಣವಾಗಿ ಅರಳಿ ನಿಲ್ಲುವ ಪರಿ ವಿಸ್ಮಯಕಾರಿಯಾಗಿದೆ. ಕನಕದಾಸರ ಸಾರ್ಥಕ ಕೀರ್ತನೆಗಳಲ್ಲಿ ಇದೂ ಒಂದು. ಸಂಸಾರದ ನಿಸ್ಸಾರತೆಯನ್ನು ಕ್ಷಣಿಕತೆಯನ್ನು ಸಾರುವ ಮೂಲಕ ಕೇಶವನ ಚರಣಕಮಲಗಳಲ್ಲಿ ನಿತ್ಯವಾಸಿಯಾಗಬೇಕೆಂಬುದನ್ನು ಒತ್ತಿ ಹೇಳುವ ಮತ್ತೊಂದು ಕೃತಿ ‘ಡಿಂಭದಲ್ಲಿರುವ ಜೀವಕಂಬ ಸೂತ್ರ ಬೊಂಬೆಯಂತೆ’ – ಈ ಕೆಲವು ಪಂಕ್ತಿಗಳನ್ನು ಗ್ರಹಿಸಿ :

ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು
ಚಳ್ಳೆ ಪಿಳ್ಳೆ ಗೊಂಬೆಯಂತೆ ಆಡಿ ಹೋಯಿತು
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು

ತಾವು ವ್ಯಕ್ತಪಡಿಸುವ ಭಾವಕ್ಕೆ ಅತ್ಯುಚಿತವಾದ ವಾಹಕಗಳಾಗಿ, ಚಿರಪರಿಚಿತವಾದರೂ ಅರ್ಥಸಂಪನ್ನವಾದ ಧ್ವನಿ ರಮ್ಯವಾದ ಮತ್ತು ಚಿತ್ರವತ್ತಾದ ಉಪಮೆಗಳನ್ನು ಬಳಸಿಕೊಂಡು ನಮ್ಮ ಮನಸ್ಸಿನಲ್ಲಿ ಭದ್ರವಾಗಿ ತಮ್ಮ ಉದ್ದೇಶವನ್ನು ನೆಲೆಯೂರಿಸುವ ಕಲೆ ಕನಕದಾಸರಿಗೆ ವಶವಾಗಿದೆಯೆಂಬುದಕ್ಕೆ ಈ ಕೃತಿ ಸಾಕ್ಷಿ. ‘ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆ ಬೆಟ್ಟವ ಬಳಸಲಿನ್ಯಾಕಯ್ಯ’, ‘ಬೆಲ್ಲ ಕರದೊಳಗಿರುತಿರೆ ಕಾಡು ಕಲ್ಲನು ಕಡಿಯಲಿನ್ಯಾಕಯ್ಯ’ ಮುಂತಾಗಿ ಪುಂಖಾನುಪುಂಖವಾಗಿ ಬರುವ ಜೀವಂತ ಸಾದೃಶ್ಯಗಳು ತಾನು ಧ್ವನಿಸಬೇಕಾದ ಭಾವವನ್ನು ಬಹು ಸುಲಭವಾಗಿ ನಮ್ಮ ಹೃದಯದಲ್ಲಿ ಹರಡಿಬಿಡುತ್ತವೆ. ಕನಕದಾಸರ ಲೋಕಾನುಭವದ ಸೂಕ್ಷ್ಮ ಚಿಂತನೆಯ ಭಾವಾಭಿವ್ಯಕ್ತಿ ಶಕ್ತಿಯ ಕವಿ ಹೃದಯದ ಶಕ್ತ ಸಂಕೇತಗಳಾಗಿ ಉಳಿಯುತ್ತವೆ.

ಕನಕದಾಸರ ಸಮಾಜ ವಿಮರ್ಶೆಯನ್ನು ಸಮಾಜ ಬೋಧೆಯನ್ನು ಪ್ರತಿನಿಧಿಸುವ ಕೃತಿಗಳೂ ಕೂಡಾ ಚಿಂತನೆಯ ಹೊಸತನದಿಂದ ನಿರೂಪಣೆಯ ಸರಳ ಸೊಗಸಿನಿಂದ ಭಾಷೆಯ ಹದವರಿತ ಬಳಕೆಯಿಂದ ಶೂದ್ರ ಸಹಜವಾದ ನಿರ್ಭೀತ ಎದೆಗಾರಿಕೆಯಿಂದ ಸತ್ಕಾವ್ಯದ ಪ್ರಭಾವ ಮುದ್ರೆಯನ್ನು ಒತ್ತುವಲ್ಲಿ ಸಾರ್ಥಕಗೊಳ್ಳುತ್ತವೆ.

ಜ್ಞಾನ ಸಾಧನೆಯನ್ನು ಪಾಕಕಾರ್ಯಕ್ಕೆ ಹೋಲಿಸುವ ಅವರ ಚತುರತೆ, ಉದ್ದಕ್ಕೂ ಅವೆರಡನ್ನೂ ಹಂತಹಂತವಾಗಿ ಬೆಳೆಸುವ ಕುತೂಹಲಕರ ಬಗೆ ಆಕರ್ಷಕವಾಗಿದೆ. ‘ತತ್ವಭಾಂಡವ ತೊಳೆಯಬೇಕಣ್ಣ ಸತ್ಯಾತ್ಮನಾಗಿ ಅರ್ತಿ ಅಕ್ಕಿಯ ಮಥಿಸಬೇಕಣ್ಣ ಕತ್ತರಿ ಮನವೆಂಬ ಹೊಟ್ಟನು ಎತ್ತಿ ಎಸರಿಂಗಿಸುತಲಿ’ – ಹೀಗೆ ಸಾಗುವ ಕೀರ್ತನೆ ‘ಸುಖದ ಪಾಕವನ್ನು ಚಂದದಿಂದ ಸವಿದುಣ್ಣಲಿಕ್ಕೆ ಅಡಿಗೆಯನ್ನು ಮಾಡಬೇಕಣ್ಣ’ ಎಂದು ಕೊನೆಯಾಗಿ, ಜ್ಞಾನಸಾಧನೆಯೆಂಬುದು ನಿರಂತರ ಪರಿಶ್ರಮದ ಎಚ್ಚರದ ತದೇಕ ಚಿತ್ತತೆಯ ಪ್ರಕ್ರಿಯೆ ಎಂಬುದನ್ನು ಸಮರ್ಥವಾಗಿ ಸಾರುತ್ತದೆ. ದೇಹದ ಅನಿತ್ಯತೆಯನ್ನು ಅಸಾರತೆಯನ್ನು ವರ್ಣಿಸಿ ಅದರ ಬಗ್ಗೆ ಮೋಹ ಸಲ್ಲದೆಂದು ಹೇಳುವಲ್ಲಿ ಬಳಸುವ ಭಾಷೆ ದೇಹದ ಬಗೆಗೆ ಅತ್ಯಂತ ಜಿಗುಪ್ಸೆಗಳನ್ನು ಉಂಟುಮಾಡುವಲ್ಲಿ ತುಂಬ ಯಶಸ್ವಿಯಾಗುತ್ತದೆ :

ಅಸ್ಥಿಪಂಜರ ಚರ್ಮದ ಹೊದಿಕೆ ನರವಿನೊಳು
ವಿಸ್ತರಿಸಿ ಬಿಗಿದಾ ಮಾಂಸದ ಬೊಂಬೆಯ
ರಕ್ತ ಮಲಮೂತ್ರ ಕೀವಿನ ಪುಳಿಯದೊಡಲೆಂದು
ಸ್ವಸ್ಥದಿಂ ತಿಳಿದವನೆ ಪರಮಯೋಗಿ

‘ಹಿತ್ತಲ ಕಸಕ್ಕಿಂತ ಅತ್ತತ್ತ ಈ ದೇಹ’ ಎಂದು ಹೇಳಿ, ಕಸವಾದರೂ ಉಪಯೋಗಕ್ಕೆ ಬರುತ್ತದೆ, ಆದರೆ ಸತ್ತ ದೇಹ ಯಾವುದಕ್ಕೂ ನಿರುಪಯುಕ್ತ, ಅದನ್ನು ಹೊತ್ತು ಬೆಂಕಿಯಲ್ಲಿ ಬಿಸಾಡುತ್ತಾರೆ ಎಂಬಲ್ಲಿ ಇಂಥ ದೇಹದ ಮೋಹ ಸರಿಯೆ? ಎಂಬ ಭಾವವನ್ನು ಅಚ್ಚೊತ್ತು ತ್ತಾರೆ. ತಂದೆ ತಾಯಿಗಳಿಗೆ ಗಂಡು ಸಂತಾನದಿಂದಲೇ ಸದ್ಗತಿ ಎಂಬ ಪರಂಪರಾಗತವಾದ ನಂಬಿಕೆಯನ್ನು ಪ್ರಶ್ನಿಸಿ, ಸತ್ಯನೊಬ್ಬ ಮಗ, ಶಾಂತನೊಬ್ಬ ಮಗ, ದುರ್ವೃತ್ತಿ ನಿಗ್ರಹನೊಬ್ಬ ಮಗ, ಸಮಚಿತ್ತನೊಬ್ಬ ಮಗ ಎಂದು ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ ಹೆತ್ತರೇನು ಇನ್ನು ಹೆರದಿದ್ದರೇನು? ಎಂದು ಧೀರವಾಗಿ ಸವಾಲು ಹಾಕುತ್ತಾರೆ. ಉತ್ತಮ ಸಂಸ್ಕೃತಿಯ ಮಲ್ಯಗಳೆಲ್ಲ ಕಲಿಯುಗದಲ್ಲಿ ಅಸ್ತವ್ಯಸ್ತವಾಗಿರುವುದನ್ನು ತೀವ್ರ ವಿಷಾದದಿಂದ ದಾಸರು ಬಣ್ಣಿಸುವಲ್ಲಿ ಅವರ ಅಭಿವ್ಯಕ್ತಿಗೆ ಅಪೂರ್ವವಾದ ಶಕ್ತಿ ಚಿತ್ರಕತೆಗಳು ಪ್ರಾಪ್ತವಾಗುತ್ತವೆ. ಕೋವಿದ ಮಾವನ ಮನೆಯಲ್ಲಿ ಇರಬಾರದೆಂದು ಬೋಧಿಸುವಾಗ ಅವರು, ‘ಹಾವ ಹಿಡಿಯಲುಬಹುದು, ಹರಣ ತೊಡಲೂಬಹುದು ಬೇವ ಕೆಚ್ಚನು ಹಿಡಿದು ನುಂಗಬಹುದು ಭಾವೆಯಳ ತಂದೆ ಮನೆಯಲಿ ಜೀವಿಸುವುದಕ್ಕಿಂತ ಸಾಯ್ವುದೇ ಲೇಸು ಅಭಿಮಾನಿಗಳಿಗೆ’ ಎಂದು ತೀರಾ ಸಹಜವಾಗಿ ಕೊಡುವ ಹೋಲಿಕೆಗಳು ಅವರ ಉದ್ದೇಶವನ್ನು ಪರಿಣಾಮಕಾರಿ ಯಾಗಿ ಸಾಧಿಸುತ್ತವೆ. ಕೇಶವ ದೈವವಿರುವಾಗ ಹಲವು ಹನ್ನೊಂದು ದೈವಗಳ ಪೂಜೆ ನಿರರ್ಥಕವೆಂದು ಸಾರುವಾಗ ‘ವರಕವಿಗಳ ಮುಂದೆ ನರ ಕವಿಗಳ ವಿದ್ಯೆ ತೋರಬಾರದು, ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು’ ಎಂದು ಮೊದಲಾಗಿ ವರ್ಣಿಸುವ ರೀತಿ ವಿಶಿಷ್ಟವಾದುದು. ‘ಡೊಂಕು ಬಾಲದ ನಾಯಕರೆ’ ಎನ್ನುವ ಕೃತಿ ಮನುಷ್ಯ ಚಪಲತೆ ಚಂಚಲತೆ ಆತ್ಮಾಭಿಮಾನರಹಿತತೆಗಳ ಚಿತ್ರಗಳನ್ನು ಬಹು ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ಮನಸ್ಸಿಗೆ ತಟಕ್ಕನೆ ತಟ್ಟುವಂತೆ ಬಿಡಿಸುತ್ತದೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ’ ಎಂಬ ಕೀರ್ತನೆ ಲೋಕದ ವಿವಿಧ ವೃತ್ತಿ ವೇಷಗಳ ಮೂಲವನ್ನು ಮುಖಕ್ಕೆ ರಾಚಿದಂತೆ ಚಿತ್ರಿಸುತ್ತದೆ. ತೋರಿಕೆಯ ಜಪತಪಗಳನ್ನು ಉಗ್ರವಾಗಿ ಖಂಡಿಸಿ ‘ಜಪವ ಮಾಡಿದರೇನು ತಪವ ಮಾಡಿದರೇನು ಕಪಟಗುಣ ವಿಪರೀತ ಕಲುಷವಿದ್ದವರು’ ಎಂದು ಅವರ ಜನ್ಮವನ್ನು ಜಲಾಡುತ್ತಾರೆ ನಿಸ್ಸಂಕೋಚವಾಗಿ. ‘ಕಣಿಯ ಹೇಳೆ ಬಂದೆ ನಾನು’ ಎಂಬ ಕೃತಿಯಲ್ಲಿ ದಾಸರು ಕ್ಷುದ್ರ ದೇವತೆಗಳ ಆರಾಧನೆಯನ್ನು, ಬಲಿ ಮುಂತಾದವುಗಳ ಮೂಲಕ ಅವನನ್ನು ಒಲಿಸಿಕೊಳ್ಳುವ ಸಂಪ್ರದಾಯ ಮಢ್ಯವನ್ನು ಅತ್ಯಂತ ಹರಿತವಾಗಿ ಟೀಕಿಸಿದ್ದಾರೆ :

ಎಕ್ಕನಾತಿಯರು ಕಾಟ ಜಕ್ಕಣಿಯರು ಜಲಜೆಯರು
ಸೊಕ್ಕಿನಿಂದ ಸೊಂಟ ಮುರುಕ ಮೈಲಾರ ದೇವರು
ಮಿಕ್ಕ ಮಾರಿ ಮಸಣಿ ಚೌಡಿ ಭೈರವ ದೇವ ಮೊದಲಾದ
ಠಕ್ಕು ದೇವರ ಗೊಡವೆ ಬೇಡ ನರಕ ತಪ್ಪದು.

ಹೀಗೆಯೇ ‘ಕ್ರೂರ ಶಾಸ್ತ್ರವನೋದಿ ಕುರಿ ಕೋಣವನೆ ಕಡಿದು ಘೋರ ನರಕದಿ ಬೀಳುವುದು ನಾನೊಲ್ಲೆ’ ಎಂದು ಹೇಳುವಲ್ಲಿ ಅವರ ದಿಟ್ಟತನ ಗೋಚರವಾಗುತ್ತದೆ. ‘ಕುಲ ಕುಲ ಕುಲವೆನ್ನುತಿಹರೋ’, ‘ಕುಲಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೃತಿಗಳು ನಮ್ಮ ದೇಶದ ದೇಹಕ್ಕೆ ಅರ್ಬುದ ರೋಗವಾಗಿ ಕಾಡುತ್ತಿರುವ ಜತಿ ಸಮಸ್ಯೆಯನ್ನು ವಿಶ್ಲೇಷಿಸುವಂಥವು. ಸ್ವತಃ ಸಮಾಜದ ಕೆಳವರ್ಗದಿಂದ ಬಂದು, ತನ್ನ ಸಾಧನೆ ಸಿದ್ದಿಗಳಿಂದಾಗಿ ಮಹೋನ್ನತಿಯನ್ನು ಸಾಧಿಸಿದರೂ ಕೊನೆಯವರೆಗೂ ಮೇಲುಜತಿಗಳವರ ಅವಹೇಳನ ತಿರಸ್ಕಾರ ಅಪಹಾಸ್ಯಗಳಿಗೆ ತುತ್ತಾಗಿ ನೋವು ಸಂಕಟಗಳನ್ನು ಅನುಭವಿಸಿದ ಕನಕದಾಸರ ಈ ಕೀರ್ತನೆಗಳಲ್ಲಿ ಮನವಿರಿಯುವ ಯಾತನೆ ಖಾರ ತೀಕ್ಷ್ಣತೆ ವ್ಯಂಗ್ಯ ವಿಮರ್ಶೆಗಳು ಸತ್ವಶಾಲಿಯಾಗಿ ಎದ್ದು ನಿಂತಿವೆ. ಒಂದು ಕೀರ್ತನೆಯಲ್ಲಿ ಸತ್ಯ ಸುಜನರಿಗೆ ಕುಲವೆಂಬುದಿಲ್ಲ ಎಂದು ವಾದಿಸಿ, ಗುಣದಿಂದಲ್ಲದೆ ಹುಟ್ಟಿನಿಂದ ಕುಲವನ್ನು ಗಣಿಸುವುದು ಮೂರ್ಖತನ ವೆಂಬುದನ್ನು ತಾವರೆ ಕ್ಷೀರ, ಪರಾಶರ ವಸಿಷ್ಠ ನಾರದ ಮೊದಲಾದ ನಿದರ್ಶನಗಳ ಮೂಲಕ ತರ್ಕಬದ್ಧವಾಗಿ ಸಾರಲು ಪ್ರಯತ್ನಿಸಿದರೆ, ಮತ್ತೊಂದರಲ್ಲಿ ‘ನಿಮ್ಮ ಕುಲದ ನೆಲೆಯನೇ ನಾದರೂ ಬಲ್ಲಿರಾ?’ ಎಂದು ನೇರವಾಗಿ ಸವಾಲು ಎಸೆದು,

ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯರಿತು ನೀ ನೆನೆಕಂಡ್ಯ ಮನುಜ

ಎಂದು ಬುದ್ದಿ ಹೇಳುತ್ತಾರೆ.

ಯಾವ ವಿಷಯವನ್ನೇ ಮಂಡಿಸಲಿ, ಕನಕದಾಸರ ಕವಿ ಹೃದಯ ಅದಕ್ಕೆ ವಿಶಿಷ್ಟವಾದ ಕಾವ್ಯಪರಿವೇಷವನ್ನು ಸಹಜವಾಗಿಯೇ ತೊಡಿಸಿಬಿಡುತ್ತದೆ. ಬೃಂದಾವನದ ಚಿಲುಮೆಗಳ ವರ್ಣವೈಭವದಂತೆ ಅವರ ಕೀರ್ತನಕ್ಷೇತ್ರದಲ್ಲಿ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಅರ್ಥಪೂರ್ಣವಾದ ಧ್ವನಿರಮ್ಯವಾದ ಮನಮೋಹಕವಾದ ಚಿತ್ತದಲ್ಲಿ ಒತ್ತಿನಿಲ್ಲುವ ಉಪಮೆ ರೂಪಕಗಳು ಅರಳರಳಿ ನಿಲ್ಲುತ್ತವೆ. ದಂತಿಯಿಲ್ಲದ ಅರಸು ಮುರಿದ ಕಾಲಿನ ಗೊರಸು, ತುಟಿ ಮೀರಿದ ಹಲ್ಲಿನಂತೆ, ದೇವರಿಲ್ಲದ ಗುಡಿಯು ಹಾಳು ಬಿದ್ದಂಗಡಿಯು, ಬಾಳೆಹಣ್ಣಿಗೆ ಕೊಡಲಿ ಬೇಕೆ? ಪಾವಕನ ಉರಿಯೊಳಗೆ ಹೊಕ್ಕು ಹೊರಡಲಿಬಹುದು, ಹಾವುಗಳ ಹೆಡೆ ಹಿಡಿದು ಎಳೆ ಎಳೆದು ತರಬಹುದು, ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ, ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳು ನಲಿದು ಉಯ್ಯಾಲೆಯಾಡಿದಂತೆ, ತಲೆ ಹುಳಿತನಾಯಂತೆ, ಹಲವು ಜನ್ಮದಿ ತಾಯಿ ಎನಗಿತ್ತ ಮೊಲೆ ಹಾಲು ನಲಿದುಂಬಾಗ ಹನಿ ನೆಲಕೆ ಬಿದ್ದದ ಕೂಡಿ ಅಳೆದರೆ ಕ್ಷೀರಾಂಬುಧಿಗೆ ಇಮ್ಮಿಗಿಲು – ಈ ಮುಂತಾದ ನೂರಾರು ನಿದರ್ಶನಗಳು ಈ ಮಾತಿಗೆ ಸಮರ್ಥ ಸಾಕ್ಷಿಯಾಗಿ ನಿಲ್ಲುತ್ತವೆ.

ಕನಕದಾಸರ ಬೆಡಗಿನ ವಚನಗಳಂತೂ ಅವರ ಬುದ್ದಿಮತ್ತೆಯ ಚಿಂತನ ತೀವ್ರತೆಯ ಸಾದೃಶ್ಯ ಶ್ರೀಮಂತಿಕೆಯ ಭಾಷಾ ಸಿದ್ದಿಯ ಹೆಗ್ಗುರುತುಗಳಾಗಿವೆ. ಅವರ ಬಹುಪಾಲು ಕೀರ್ತನೆಗಳು ಪ್ರಾಸ ಅನುಪ್ರಾಸಗಳ ಸೊಬಗಿನಿಂದ, ಭಾವಾನುಸಾರಿಯಾದ ಲಯ ವಿನ್ಯಾಸದ ಆಕರ್ಷಕ ಅಭಿನಯದಿಂದ, ಅವುಗಳ ಅಂತರಾಳದಿಂದ ಸಹಜವಾಗಿ ಹೊಮ್ಮುವ ಮಧುರನಾದದಿಂದ ಮನಸೆಳೆಯುತ್ತವೆ. ಒಟ್ಟಿನಲ್ಲಿ ಕನಕದಾಸರ ಕೀರ್ತನೆಗಳಲ್ಲಿ ಉತ್ತಮ ಕಾವ್ಯದಿಂದ ನಾವು ನಿರೀಕ್ಷಿಸುವ ಮಲ್ಯಗಳು ಅಧಿಕ ಪ್ರಮಾಣದಲ್ಲಿ ದೊರೆಯುತ್ತ ವೆಂಬುದರಲ್ಲಿ ಮತ್ತು ಈ ಕಾರಣದಿಂದ ಹರಿದಾಸ ಪರಂಪರೆಯಲ್ಲಿನ ಶ್ರೇಷ್ಠ ಕವಿಗಳಾಗಿ ಅವರು ನಿಲ್ಲುವರೆಂಬುದರಲ್ಲಿ ಸಂಶಯವಿಲ್ಲ.