ಹನ್ನೆರಡನೆಯ ಶತಮನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಅಪೂರ್ವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹಾಕ್ರಾಂತಿಯಲ್ಲಿ ಪಾಲ್ಗೊಂಡವರು ಬಹುಮಟ್ಟಿಗೆ ಸಮಾಜದ ಶೂದ್ರವರ್ಗದ ಜನ. ಅಂತೆಯೇ ಆ ಕ್ರಾಂತಿಯ ಒಂದು ಅಂಗವಾಗಿದ್ದ, ಮುಂದೆ ಹಲವು ಶತಮಾನಗಳವರೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯಗಳನ್ನು ಅರ್ಥಪೂರ್ಣವಾಗಿ ಪ್ರಭಾವಿಸಿದ, ಸಾಹಿತ್ಯಸೃಷ್ಟಿಯ ಪ್ರಧಾನ ಭಾಗ ಈ ಶೂದ್ರವರ್ಗದ ಅಂತರಂಗದ ಸಹಜ ಅಭಿವ್ಯಕ್ತಿ. ಈ ಕಾರಣದಿಂದಲೇ ವಚನ ಸಾಹಿತ್ಯದಲ್ಲಿ ಬೆರಗುಗೊಳಿಸುವ ವೈವಿಧ್ಯ, ವೈಶಿಷ್ಟ್ಯ, ಸ್ವೋಪಜ್ಞಶೀಲ ಮತ್ತು ಬನಿಯಾರದ ಮಣ್ಣಿನ ವಾಸನೆ ನಮ್ಮ ಮನಸ್ಸನ್ನು ಆಳವಾಗಿ ತಾಕುತ್ತವೆ. ಆದರೆ ಇದೇ ಮಾತನ್ನು ಹರಿದಾಸ ಸಾಹಿತ್ಯದ ಬಗ್ಗೆ ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಕ್ಷೇತ್ರದಲ್ಲಿ ಕೃಷಿ ಮಾಡಿದವರು ಬಹುಮಟ್ಟಿಗೆ ಸಂಪ್ರದಾಯಶೀಲರಾದ, ಪರಂಪರೆಯನ್ನು ಪ್ರಶ್ನಿಸದೆ ಒಪ್ಪಿಕೊಂಡ, ನೋವು ಕಾವುಗಳಿಂದ ಸ್ಪಂದಿಸದ, ಬಂಡಾಯ ದೃಷ್ಟಿಯಿಲ್ಲದ ಮೇಲುವರ್ಗದ ಜನ. ಇದಕ್ಕೆ ಒಂದೇ ಅಪವಾದ ಕನಕದಾಸರು.

ಸಮಾಜದ ಅತ್ಯಂತ ಹಿಂದುಳಿದ ವರ್ಗದಲ್ಲಿ ಹುಟ್ಟಿದ ಕನಕದಾಸರು ತಮ್ಮ ಸಹಜ ಪ್ರತಿಭೆ ಪರಿಶ್ರಮ ಶ್ರದ್ಧೆ ಸಾಹಸ ಪ್ರಾಮಾಣಿಕತೆಗಳಿಂದ ಮೇಲೆ ಬಂದು, ತಮಗೆ ಒದಗಿ ಬಂದ ಅಧಿಕಾರ ಕೀರ್ತಿ ಪ್ರತಿಷ್ಠೆ ಭೋಗ ವೈಭವಗಳ ಜೀವನವನ್ನು ತೊರೆದು, ಮೇಲುವರ್ಗ ದವರ ನಿಂದೆ ಅವಹೇಳನ ಕಟು ತಿರಸ್ಕಾರಗಳ ಬೆಂಕಿಯಲ್ಲಿ ಬೆಂದು, ಕೊನೆಗೆ ವ್ಯಾಸರಾಯರಿಂದ ಮನ್ನಣೆಯನ್ನು ಗಿಟ್ಟಿಸಿಕೊಂಡವರು; ಪುರಂದರದಾಸರ ಸ್ನೇಹವನ್ನು ದೊರಕಿಸಿಕೊಂಡವರು; ತಾವು ಪಟ್ಟ ಪಾಡನ್ನೆಲ್ಲ ಕಂಡ ಲೋಕವನ್ನೆಲ್ಲ ಉಂಡ ಅನುಭವವನ್ನೆಲ್ಲ ಹಾಡಿನ ಮೂಲಕ ಹರಿಯಬಿಟ್ಟವರು. ಈ ದೃಷ್ಟಿಯಿಂದ ಮಾತ್ರವಲ್ಲದೆ ದಾಸ ಪಂಕ್ತಿಯಲ್ಲಿ ವಸ್ತುನಿಷ್ಠ ಕಾವ್ಯ ರಚನೆಯಲ್ಲೂ ಅಗ್ರಗಣ್ಯರೆನಿಸಿದವರು. ಇವರು ಕೀರ್ತನೆಗಳನ್ನು ಮಾತ್ರವಲ್ಲದೆ ‘ಮೋಹನ ತರಂಗಿಣಿ’, ‘ರಾಮಧಾನ್ಯ ಚರಿತ್ರೆ’, ‘ನಳಚರಿತ್ರೆ’, ‘ಹರಿಭಕ್ತಸಾರ’ ಎಂಬ ಕಾವ್ಯಗಳನ್ನು ಕೃತಿಸಿದ “ಅಸಾಧಾರಣ ಕವಿ”ಯೂ ಆಗಿದ್ದಾರೆ.

ಕನಕ “ವಾಣಿಯಲ್ಲಿ ಸಹಜ ಸೊಮ್ಮು, ದೇಸಿಯ ಸವಿತಿರುಳು ಮೈಗೊಂಡಿವೆ. ಅವನು ಮಹಾಭಕ್ತನಾದಂತೆ ಮಹಾಕವಿಯ ಸತ್ವವುಳ್ಳವನು. ಅವನ ಜೀವನವೇ ಒಂದು ಮಹಾಕೃತಿ ಯಾಗಿತ್ತು; ಅವನ ಕೃತಿಗಳಲ್ಲಿ ಮಹೋನ್ನತಿ ಬೆಳಗಿದೆ. ಪುರಂದರದಾಸರಂತೆ ಆದರೂ ಅವರಿಗಿಂತ ಕೆಲಮಟ್ಟಿಗೆ ಬೇರೆಯಾಗಿ ಕನಕದಾಸರು ತನ್ನ ಜೀವನ ಸಾಹಿತ್ಯಗಳ ಸಿದ್ದಿಯಿಂದ ಕನ್ನಡಿಗರ ಚಿರಂತನವಾದ ಸಂಸ್ಕೃತಿ ದೀಪಗಳಲ್ಲಿ ಒಂದಾಗಿದ್ದಾನೆ”.

ಕನಕದಾಸರ ಕವಿ ಪ್ರತಿಭೆ ಹಲವು ಕಾವ್ಯಗಳಲ್ಲಿ ಹಂಚಿ ಹೋಗಿದ್ದರೂ ಅದು ತನ್ನೆಲ್ಲ ಶಕ್ತಿ ಸಮೃದ್ದಿ ಮತ್ತು ಸಹಜತೆಗಳೊಡನೆ ಮೈವೆತ್ತಿರುವುದು ಅವರ ಕೀರ್ತನೆಗಳಲ್ಲಿ. “ಅವುಗಳ ವೈವಿಧ್ಯದಲ್ಲಿ ಪುರಂದರದಾಸನು ಅಗ್ರಗಣ್ಯನಾಗಿರುವಂತೆ ಕಾವ್ಯ ಗುಣದಲ್ಲಿ ಕನಕದಾಸನು ಅಗ್ರಗಣ್ಯ. ಈತನ ಉಪಮಾನ ಉಪಮೇಯಗಳೂ ದೃಷ್ಟಾಂತಗಳೂ ರಮ್ಯವಾಗಿವೆ. ಸಂತಕವಿಯಾದ ಕನಕನು ಹಾಕಿರುವ ರಾಗಗಳೂ ಬಳಸಿರುವ ಪದಗಳೂ ರಾಗರಸರಂಜಿತವಾಗಿ ಹೃದಯಂಗಮವಾಗಿವೆ. ದೈವದತ್ತವಾದ ಪ್ರತಿಭೆಯೊಡನೆ ಆತನಿಗಿದ್ದ ಲೋಕಾನುಭವವೂ ಅಪಾರವಾದುದು. ಜನಸಾಮಾನ್ಯರ ಜೀವನದಂತೆಯೇ ಅವರ ನುಡಿಗಟ್ಟೂ, ಪಾಳೆಯ ಗಾರನಾಗಿದ್ದ ಕನಕನಿಗೆ ಚಿರಪರಿಚಿತವಾಗಿದೆ. ಆದ್ದರಿಂದಲೇ ಆತನ ಕಿರುನುಡಿಗಳು ಸತ್ವಯುಕ್ತ ವಾಗಿವೆ”. “ಕನಕದಾಸರ ಕೀರ್ತನೆಗಳ ಸತ್ವವನ್ನು ಗಮನಿಸಿದರೆ ಅವು ಪುರಂದರದಾಸರ ಕೀರ್ತನೆಗಳ ಸತ್ವದೊಂದಿಗೆ ಸಮಸ್ಪರ್ಧಿಯಾಗಬಲ್ಲವು. ಹಾಗೆ ನೋಡಿದರೆ ಪುರಂದರದಾಸರ ಕೀರ್ತನೆಗಳಿಂತ ಕನಕದಾಸರ ಕೀರ್ತನೆಗಳಲ್ಲಿ ಕಾವ್ಯಗುಣ ಒಂದು ಕೈಮಿಗಿಲಾಗಿಯೇ ಇರುವಂತೆ ತೋರುತ್ತದೆ” – ವಿಮರ್ಶಕರ ಈ ಮಾತುಗಳು ಕನಕ ಕೀರ್ತನೆಗಳ ಅಂತರಂಗ ಸಂಪತ್ತಿಗೆ ಕನ್ನಡಿ ಹಿಡಿದಿವೆ.

ಕೀರ್ತನೆಗಳ ಕಿರುಸರೋವರ ವಿಹಾರದ ಜೊತೆಗೆ ಖಂಡಕಾವ್ಯ ದೀರ್ಘಕಾವ್ಯಗಳ ಮಹಾನದಿ ವಿಹಾರವನ್ನೂ ಕೈಗೊಂಡುದರ ಕಾರಣದಿಂದಲೋ ಏನೋ ಕನಕದಾಸರ ಕೀರ್ತನೆಗಳು ಪುರಂದರದಾಸರ ಕೀರ್ತನೆಗಳಷ್ಟು ಬೃಹತ್ ಪ್ರಮಾಣದಲ್ಲಿ ದೊರೆಯುವುದಿಲ್ಲ. ಆದರೂ ಅವುಗಳಲ್ಲಿನ ಭಾಷೆಯ ಸೊಗಡು ಸೊಗಸು ಬೆಡಗುಗಳು, ಕಲ್ಪನೆಯ ಹರಹು ಔನ್ನತ್ಯ ವಿಸ್ತಾರಗಳು, ಅರ್ಥದ ವಿನ್ಯಾಸ ವಿಶೇಷಗಳು, ವಿಲಾಸ ಭಾವದ ಆರ್ದ್ರತೆ ಸಾಂದ್ರತೆ ಅಪೂರ್ವತೆಗಳು, ಆತ್ಮನಿವೇದನೆಯ ನೈಜತೆ ನಿರಾಡಂಬರತೆ ತೀವ್ರತೆಗಳು, ಪದಪದಗಳ ಗರ್ಭದಿಂದ ಹೊಮ್ಮಿಚಿಮ್ಮವ ಸಹಜ ಮೋಹಕ ನಾದ ತರಂಗಗಳು ಅನನ್ಯ ಪರಿಣಾಮಕಾರಿಯಾಗಿದ್ದು ಉತ್ತಮ ಕಾವ್ಯಮಲ್ಯದ ಮಾದರಿಗಳಾಗಿವೆ.

ದೈವಲೀಲೆಯ ವರ್ಣನೆ, ಆತ್ಮನಿವೇದನೆ ಮತ್ತು ಸಮಾಜ ವಿಮರ್ಶೆಗಳು ಕನಕ ಕೀರ್ತನೆಗಳ ಮೂರು ಮುಖ್ಯ ಮುಖಗಳು. ಅವುಗಳನ್ನೀಗ ಸ್ಥೂಲವಾಗಿ ಪರಿಶೀಲಿಸಬಹುದು.

ಕನಕದಾಸರು ಭಗವತ್ ಸಾಕ್ಷಾತ್ಕಾರ ಮಾಡಿಕೊಂಡ ಮಹಾನ್ ಭಕ್ತರು, ಮಾತ್ರವಲ್ಲ ಪ್ರಾಚೀನ ಕಾವ್ಯಪುರಾಣ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ ವಿದ್ವಾಂಸರು ಹೌದು. ಈ ಪುರಾಣಪ್ರಜ್ಞೆ ಅವರ ಕೀರ್ತನೆಗಳಲ್ಲಿ ದಟ್ಟವಾಗಿ ಹರಡಿಕೊಂಡಿದೆ. ಇದು ಶುಷ್ಕ ಸರಕಾಗಿ ಪ್ರದರ್ಶಿತವಾಗದೆ ಆತ್ಮೀಯತೆಯ ಆರ್ದ್ರತೆಯಲ್ಲಿ ರಸಪಾಕದಲ್ಲಿ ಅದ್ದಿದ ಹೃದಯ ಮಿಡಿವ ಕಾವ್ಯವಾಗಿದೆ.

ಪವಡಿಸಿರುವ ಪಶ್ಚಿಮ ರಂಗನಾಥನನ್ನು ಕಂಡು ಕನಕದಾಸರು ಸಂಬೋಧಿಸಿರುವ ರೀತಿ ಇದು :

ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೇ
ಜಗದೇಕ ವಿಖ್ಯಾತ ಪಶ್ಚಿಮ ರಂಗನಾಥಾ ||||
ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಹೊತ್ತು
ರಮಣ ಭೂಮಿಯನು ತಂದಾಲಸ್ಯವೊ
ಅಮರ ವೈರಿಯ ಕರುಳ ಕಿತ್ತ ಕಡುಧಾವತಿಯೋ
ಕ್ಷಮೆಯನಳೆದೀ ಪಾದಕಮಲ ನೊಂದವೋ ||

ಹೀಗೆ ತೀರಾ ಸರಳವಾದ ಮಾತುಗಳಲ್ಲಿ ವಿಷ್ಣುವಿನ ದಶಾವತಾರದ ಲೀಲೆಗಳನ್ನು ಬಣ್ಣಿಸುತ್ತ ಈ ಕೀರ್ತನೆ ಸಾಗುತ್ತದೆ. ಈ ವರ್ಣನೆಯಲ್ಲಿ ವರದಿಯಿದೆಯೇ ವಿನಾ ವಿಶೇಷತೆಯಿಲ್ಲ. ಆದರೆ ವಿಶೇಷತೆ ಪ್ರಾಪ್ತವಾಗುವುದು, ಈ ಹತ್ತು ಅವತಾರಗಳನ್ನೆತ್ತಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಉದ್ಧರಿಸಿದ ಕಾರಣದಿಂದ ಉಂಟಾದ ಆಯಾಸ ಅಲಸ್ಯ ನೋವು ದಣಿವುಗಳಿಂದಾಗಿ ರಂಗನಾಥ ಪವಡಿಸಿರುವನೇ ಎಂದು ಕೇಳುವ ಭಕ್ತನ ಹೃದಯದ ಅಕ್ಕರೆ ಆತಂಕ ಕಾಳಜಿ ಕಕ್ಕುಲಾತಿಗಳಿಂದ. ಪ್ರತಿಚರಣದ ಕೊನೆಯ ಸಂಬೋಧನೆಯಲ್ಲಿ ಸ್ಪಂದಿಸುವ ಸಜೀವ ಆಸಕ್ತಿ, ವಾತ್ಸಲ್ಯದಿಂದ ಒದ್ದೆಯಾದ ನವುರಾದ ನೋವು ಇಡೀ ಕೀರ್ತನೆಯನ್ನು ವ್ಯಾಪಿಸಿ ಭಗವಂತನಿಗೂ ನಮಗೂ ಒಂದು ಆತ್ಮೀಯ ಅನುಬಂಧವನ್ನು ಕಲ್ಪಿಸಿಬಿಡುತ್ತದೆ. ತಾಯೊಬ್ಬಳು ತನ್ನ ಮಗುವಿನ ಬವಣೆಯ ಬಗೆಗೆ ಅಂತಃಕರಣಪೂರ್ವಕ ವಾಗಿ ತಾಳುವ ಕರುಣೆ ಅನುಕಂಪಗಳು ಇಲ್ಲಿ ಪಡಿಮಿಡಿಯುತ್ತವೆ. ಕೀರ್ತನೆಯ ಕೊನೆಯಲ್ಲಿ ‘ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರು ನಿನ್ನನೆಬ್ಬಿಸುವರೊಬ್ಬರನು ಕಾಣೆ’ ಎಂದು ಹೇಳುವ ಮೂಲಕ ಕೊಡುವ ವಿಷಾದಪೂರ್ಣ ತಿರುವು, ಕೀರ್ತನೆಯ ಭಾವವನ್ನು ಮತ್ತಷ್ಟು ಆಳಗೊಳಿಸಿ ಪರಿಣಾಮ ರಮಣೀಯತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

‘ಭಜಿಸಿ ಬದುಕೆಲೊ ಮನುಜ’ ಎಂಬ ಮತ್ತೊಂದು ಕೀರ್ತನೆಯಲ್ಲೂ ದಶಾವತಾರ ವಿವರವೇ ಇದ್ದರೂ, ಭಗವಂತನ ಪಾದಮಹಿಮೆಯನ್ನು ಕೀರ್ತಿಸುವ ಮೂಲಕ ಆ ಅವತಾರಗಳ ಮಹತ್ವವನ್ನು ಮೆರೆಸಲಾಗಿದೆ :

ಶಿಲೆಯ ಸತಿಯಳಮಾಡಿ ಕುಲವ ಸಲಹಿದ ಪಾದ
ಒಲಿದು ಪಾರ್ಥನ ರಥವನೊತ್ತಿದ ಪಾದ
ಕಲಿ ಸುಯೋಧನನ ಓಲಗದಿ ಕೆಡಹಿದ ಪಾದ
ಖಳ ಕಾಳಿಂಗನ ತುಳಿದೆಸೆವ ಪಾದ
ಗರುಡ ಶೇಷಾದಿಗಳು ಬಿಡದೆ ಹೊತ್ತಿಹ ಪಾದ
ಧರೆಯ ಈರಡಿ ಮಾಡಿ ಅಳೆದ ಪಾದ
ಸಿರಿ ತನ್ನ ತೊಡೆಯ ಮೇಲಿಟ್ಟು ಒತ್ತುವ ಪಾದ
ವರ ಕಾಗಿನೆಲೆಯಾದೀಕೇಶವನ ಪಾದ

ಹಿಂದಿನ ಕೀರ್ತನೆಯಲ್ಲಿ ತನ್ನ ಅವತಾರಗಳ ಕಾರಣದಿಂದಾಗಿ ದೇವನಿಗೆ ಉಂಟಾದ ನೋವು ಆಯಾಸಗಳ ಆಧಿಕ್ಯದ ಕಡೆಗೆ ನಮ್ಮ ಗಮನ ಸೆಳೆಯಲು ದಶಾವತಾರದ ವಿವರವನ್ನು ಉಪಯೋಗಿಸಿಕೊಂಡರೆ, ಇಲ್ಲಿ ಪಾದಗಳ ಪಾವಿತ್ರ್ಯ ಹಿರಿಮೆಗಳ ಕಡೆ ಒತ್ತುಕೊಡಲು ಈ ವಿವರವನ್ನು ಮತ್ತೆ ಉಪಯೋಗಿಸಿಕೊಂಡಿರುವುದು ಕವಿಯ ಚಾತುರ್ಯಕ್ಕೆ ಸಮಯ ಪ್ರಜ್ಞೆಗೆ ಸಾಕ್ಷಿಯಾಗಿದೆ. ಅಲ್ಲಿ ವಾತ್ಸಲ್ಯಮೂಲವಾದ ಆರ್ತತೆಯ ಹಿನ್ನೆಲೆಯಲ್ಲಿ ಭಗವಂತನ ಪರೋಕ್ಷ ಸುತ್ತಿ ಇದ್ದರೆ, ಇಲ್ಲಿ ನೇರವಾದ ಉತ್ಸಾಹಶೀಲವಾದ ಸ್ತುತಿ ಇದೆ. ಅದಕ್ಕೆ ತಕ್ಕಂತೆ ಪದಗಳ ಪವಣಿಕೆ, ಸಂಭ್ರಮದ ನೃತ್ಯಲಯ, ಪಾದ ಎಂಬ ಪದದ ಪುನರುಕ್ತಿಗಳು ವರ್ಣನೆಗೆ ತೀವ್ರತೆಯನ್ನು ಕಾವನ್ನು ಉಂಟು ಮಾಡುತ್ತವೆ.

ನರಸಿಂಹಾವತಾರವನ್ನು ಬಣ್ಣಿಸುವ ಒಂದು ಕೀರ್ತನೆ ಪದಪ್ರಯೋಗ ಕೌಶಲದಿಂದಲೇ ಆ ಅದ್ಭುತವನ್ನು ಪರಿಣಾಮಕಾರಿಯಾಗಿ ಸೆರೆಹಿಡಿದು ನಿಲ್ಲಿಸುತ್ತದೆ :

ಕಂಡೆ ನಾ ತಂಡತಂಡದ ಹಿಂಡು ದೈವಪ್ರಚಂಡರಿಪು
ಗಂಡ ಉದ್ದಂಡ ನರಸಿಂಹನಾ ಕಂಡೆನಯ್ಯ
ಘಢುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಲೆಸೆಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿಹಿಡಿದು ಹಿರಣ್ಯಕನ ತೊಡೆಯೊಳಗೆ ಕೆಡಹಿದನಾ
ಉರದೊಳಪ್ಪಳಿಸಿ ಆಗಿ ಬಸುರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದ ಎಳೆ ಎಲುವ ನರ
ನರಕೆ ನೆಗೆದು ನಿರ್ಗಳಿತ ಶೋಣಿತ ಸುರಿಯೆ
ಹರಿಹರಿದು ಕರುಳ ಕೊರಳೊಳಿಟ್ಟನಾ

ಪರುಷಾಕ್ಷರಗಳ ಸಂಯೋಜನೆ, ಅನುಕರಣ ಶಬ್ದಗಳ ಯಥೋಚಿತ ಬಳಕೆ, ಚಂಡಮಾರುತದ ವೇಗದಲ್ಲಿ ಸಾಗುವ ಪ್ರಾಸಾನುಪ್ರಾಸಗಳ ಸಂಭ್ರದ ಅಟ್ಟಹಾಸಗಳ ರಿಂಗಣಗುಣಿತ, ಅದಕ್ಕನುಗುಣವಾಗಿ ಸನ್ನಿವೇಶದ ತೀವ್ರತೆಯನ್ನು ವರ್ಧಿಸುವ ಶೀಘ್ರ ಗಮನದ ಲಯವಿನ್ಯಾಸ – ಇವು ನರಸಿಂಹನ ಉಗ್ರ ಸ್ವರೂಪವನ್ನು ಹಿರಣ್ಯಕನ ವಧೆಯ ರುದ್ರಚಿತ್ರವನ್ನೂ ಮೈನವಿರೇಳಿಸುವಂತೆ ಮೂರ್ತೀಕರಿಸುತ್ತವೆ.

ರಂಗನಾಥಸ್ವಾಮಿಯ ಹಿರಿಮೆಯನ್ನು ನಿರೂಪಿಸುವ ಮತ್ತೊಂದು ಕೀರ್ತನೆ ಅಕ್ಕ ತಂಗಿಯರ ಸಂವಾದ ಮಾಧ್ಯಮದಲ್ಲಿ, ತಿಳಿಯಾದ ತಿರುಳಾದ ಸರಳ ಕನ್ನಡ ಪದಗಳ ಬಳಕೆಯಲ್ಲಿ, ನಾಲ್ಕು ನಾಲ್ಕು ಐದು ಮಾತ್ರೆಗಳ ಬಂಧದಲ್ಲಿ, ಜನಪದದ ಮಧುರ ಧಾಟಿಯಲ್ಲಿ ಮೂಡಿ ಬಂದಿರುವುದನ್ನು ಕಾಣಬಹುದು :

ರಂಗನೆಂಥವನೆಂಥವ ತಂಗಿ
ರಂಗನೆಂಥವ ಅವನಂಗ ತಿಳಿಯದು ಬ್ರಹ್ಮಾದಿಗಳಿಗೆ
ಧರೆಯ ಈರಡಿ ಮಾಡಿದನೆ ಭೂ
ಸುರರಿಗೆ ದಾನವ ನೀಡಿದನೆ
ನೆರೆದು ಕಪಿವಿಂಡು ಕೂಡಿದನೆ ಫಣಿ
ಶಿರದಲಿ ಕುಣಿಕುಣಿದಾಡಿದನಕ್ಕ

ಇಲ್ಲಿ ಅರ್ಥ ಭಾವ ನಾದಗಳು ಸಮರಸವಾಗಿ ಸಮ್ಮಿಲನಗೊಂಡು ಸಂದರ್ಭವನ್ನು ಜೀವಂತವಾಗಿ ಕಡೆದು ನಿಲ್ಲಿಸುವ ಮೂಲಕ ನಮ್ಮ ಮನಸ್ಸನ್ನು ಯಶಸ್ವಿಯಾಗಿ ಸೂರೆಗೊಂಡು ಕೀರ್ತನೆಯೊಡನೆ ಆಪ್ತತೆಯನ್ನು ನೆಲೆಗೊಳಿಸುತ್ತವೆ.

ನಿಂದಾಸ್ತುತಿಯ ಮೂಲಕ ಹರಿಯನ್ನು ಕೀರ್ತಿಸುವ ‘ಯಾರು ಬದುಕಿದರಯ್ಯ ಹರಿ ನಿನ್ನ ನಂಬಿ’ ಎಂಬ ಹಾಡು ಕನಕರ ಮತ್ತೊಂದು ಯಶಸ್ವೀ ರಚನೆ :

ಆರು ಬದುಕಿದರಯ್ಯ ಹರಿ ನಿನ್ನ ನಂಬಿ
ತೋರು ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ
ಕಲಹ ಅರದ ಮುನ್ನ ಕರ್ಣನೊಬ್ಬನ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲನ ಬೇಡಲು ಹೋಗಿ ಬಲಿಯ ಭೂಮಿಗೆ ತುಳಿದೆ
ಮೊಲೆಯನುಣ್ಣಲು ಹೋಗಿ ಪೂತನಿಯ ಕೊಂದೆ

ಭಗವಂತನ ಮಹಿಮೆಯನ್ನು ವೈಭವಿಸುವ ಮೂಲಕ ಆತನನ್ನು ಸ್ತುತಿಸುವ ನೇರ ಸಾಂಪ್ರದಾಯಿಕ ಮಾರ್ಗವನ್ನು ತೊರೆದು, ಆತನು ಮಾಡಿದ ಕೆಡಕುಗಳನ್ನು ಬಣ್ಣಿಸುವ ಮೂಲಕ ಆತನ ವ್ಯಕ್ತಿತ್ವದ ಮತ್ತೊಂದು ಮಗ್ಗುಲನ್ನು ಅನಾವರಣ ಮಾಡಿ, ಅದಕ್ಕೆ ಕಾರಣವಾದ ಸಂದರ್ಭ ಮತ್ತು ಕ್ರಿಯೆಯನ್ನು ನಮ್ಮ ಮನಸ್ಸಿನಲ್ಲಿ ಮೂಡಿಸಿ, ಅವನ ಸಾಧಾರಣ ಶಕ್ತಿ ಸಾಮರ್ಥ್ಯ ಹಾಗೂ ಲೋಕಕಲ್ಯಾಣ ದೃಷ್ಟಿಗಳಿಗೆ ಕನ್ನಡ ಹಿಡಿಯುವ ವಿನೂತನ ವಿಧಾನ ಇದು.

ಇಡೀ ಮಹಾಭಾರತವನ್ನು ಒಂದು ಬೊಂಬೆಯಾಟದ ಪ್ರತಿಮೆಯ ಮೂಲಕ ಚಿತ್ರಿಸಿರುವ ಕನಕದಾಸರ ಪ್ರತಿಭೆ ವಿಶಿಷ್ಟವಾದುದು :

ಬೊಂಬೆಯಾಟವನಾಡಿಸಿದೆ ಮಹಾಭಾರತದ
ಅಂಬುಜಭವಾದಿ ಅಮರರು ನೋಡುತಿರಲು
ಕುರುಭೂಮಿಯೆಂಬ ಪುರವೀಧಿಯನು ರಚಿಸಿ
ಮರೆಯಮಾಯದ ಐದು ತೆರೆಯ ಹಾಕಿ
ಧರಣೀಶರೆಂಬ ನರಪ್ರತಿಮೆಗಳನಳವಡಿಸಿ
ನರ ಕಥಾವಾಜಿಯ ಸೂತ್ರವನು ಹಿಡಿದು

ಇಡೀ ಭಾರತವೇ ಒಂದು ಬೊಂಬೆಯಾಟ. ಕುರುಭೂಮಿಯೇ ಬೀದಿ, ಅದೇ ಆಟದ ವೇದಿಕೆ ಕೂಡ. ಅಲ್ಲಿ ನಡೆಯುವ ಮರೆ ಮಾಯೆಗಳೇ ತೆರೆಗಳು. ರಾಜರೇ ಬೊಂಬೆಗಳು, ಅರ್ಜುನನ ಕಥೆಯ ಕುದುರೆಯ ಕಡಿವಾಣವೇ ಸೂತ್ರ. ಭಗವಂತನೇ ಆಟವಾಡಿಸುವ ಸೂತ್ರಧಾರಿ. ಅವನು ಹೇಳಿದಂತೆ ಆಡಿಸಿದಂತೆ ಆಟ. ಮಹಾಭಾರತದ ವೈವಿಧ್ಯಮಯ ಚಟುವಟಿಕೆಗಳ ಹಿನ್ನೆಲೆಯಲ್ಲೂ ಅದನ್ನು ನಿಯಂತ್ರಿಸುವ ಸೂತ್ರಧಾರಕ ಶಕ್ತಿ ಭಗವಂತ ನೆಂಬುದನ್ನು ಧ್ವನಿಸಲು ಈ ಜನಪದ ಆಟವನ್ನು ಬಳಸಿಕೊಂಡಿರುವ ರೀತಿ ತುಂಬ ಶಕ್ತಿಯುತವಾಗಿದೆ.

ಭಗವಂತನ ಸರ್ವವ್ಯಾಪಕತ್ವವನ್ನು ನಿರೂಪಿಸುವ ‘ನೀ  ಮಾಯೆಯೊಳ’ಗೂ ನಿನ್ನೊಳು ಮಾಯೆಯೋ’ ಎಂಬ ಕೀರ್ತನೆ ಕನಕದಾಸರ ಪ್ರಸಿದ್ಧ ಕೃತಿ.

ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡೂ ನಯನದೊಳಗೊ
ನಯನ ಬುದ್ದಿಯ ಒಳಗೊ ಬುದ್ದಿ ನಯನದ ಒಳಗೊ
ನಯನ ಬುದ್ದಿಗಳೆರಡು ನಿನ್ನೊಳಗೊ ಹರಿಯೆ

ಜಗತ್ತೆಂಬುದು ಒಂದು ಮಾಯೆ. ಇದು ಮರ್ತ್ಯ ನೇತ್ರಕ್ಕೆ ಒಂದಕ್ಕೆ ಎರಡಾಗಿ ಎರಡಕ್ಕೆ ನಾಲ್ಕಾಗಿ, ಕೊನೆಗೆ ಈ ಎರಡೂ ಅಥವಾ ನಾಲ್ಕೂ ಒಂದರೊಳಗೊಂದು ಇರುವಂತೆ ಭಾಸವಾಗುತ್ತವೆ. ಮೇಲುನೋಟಕ್ಕೆ ಒಂದರಿಂದ ಮತ್ತೊಂದು ಹುಟ್ಟಿದಂತೆ ಕಂಡರೂ ವಾಸ್ತವವಾಗಿ ಇವೆಲ್ಲಕ್ಕೂ ಮೂಲ ಸೆಲೆಯೊಂದಿದೆ. ಅದೇ ಭಗವಂತ. ಹೀಗೆ ಅದ್ವೈತ ದ್ವೈತವಾಗಿ ಕಾಣುವುದೇ ಮಾಯೆ. ಈ ಮಾಯೆ ಕೂಡ ನಮ್ಮ ಪಂಚೇಂದ್ರಿಯಗಳಿಂದಲೇ ಹುಟ್ಟಿ ನಮ್ಮನ್ನೇ ಆವರಿಸಿಕೊಳ್ಳುವಂಥದು. ಆದ್ದರಿಂದ ನಮ್ಮ ಸರ್ವೇಂದ್ರಿಯಗಳನ್ನೂ ಅದರಿಂದ ಲಬ್ಧವಾಗುವ ಸರ್ವಶಕ್ತಿಗಳನ್ನೂ ಹರಿಸಮರ್ಪಣೆ ಮಾಡುವ ಮೂಲಕ ಆ ಮಾಯೆಯನ್ನು ಗೆಲ್ಲಬಹುದು ಎಂಬ ಧ್ವನಿ ಇಲ್ಲಿದೆ. ಸರಳವಾದ ಹದವರಿತ ಪದಪ್ರಯೋಗ, ಲಲಿತವಾದ ಲಯ, ಆಳವಾದ ಚಿಂತನೆಗಳಿಂದ ಮತ್ತು ಸಾಮಾನ್ಯರ ಅನುಭವದ ಎಲ್ಲೆಯೊಳಗೂ ಬರುವ ಚಿರಪರಿಚಿತ ಮುಷ್ಟಿಗ್ರಾಹ್ಯ ನಿದರ್ಶನಗಳಿಂದ ಗಹನ ತತ್ವವೊಂದನ್ನು ಲೀಲಾಜಲವಾಗಿ ಹೊಮ್ಮಿಸುವ, ಆ ಮೂಲಕ ಮನಸ್ಸಿನಲ್ಲಿ ಬೇರು ಬಿಡುವ ವಿಶಿಷ್ಟ ಗುಣದಿಂದ ಈ ಗೀತೆ ಅನನ್ಯವಾಗಿದೆ. ಆದರೆ ಇದು ಪರಿಪೂರ್ಣ ಗೀತೆಯಲ್ಲ. ಏಕೆಂದರೆ ಇದಕ್ಕೆ ತನ್ನಷ್ಟಕ್ಕೆ ತಾನೇ ಸಮಗ್ರ ಶಿಲ್ಪವಾಗುವ ಗುಣವಿಲ್ಲ. ಎಷ್ಟೋ ಹಿಂಜಬಹುದಾದ ಬೆಳೆಸಬಹುದಾದ ಅಪೂರ್ಣತೆಯಿಂದ ಇದು ಸೊರಗಿದೆ.

ಹರಿಯನ್ನು ಮುತ್ತಿಗೆ ಹೋಲಿಸಿ, ಆ ಮುತ್ತನ್ನು ಭಕ್ತಿಯುಳ್ಳವರೆಲ್ಲ ಸೆರಗಿಗೆ ಕಟ್ಟಿಕೊಳ್ಳಬೇಕೆಂದು ಸಾರುವ ಮೂಲಕ ಹರಿಯ ಮಹತ್ವವನ್ನು ಕೊಂಡಾಡುವ ಸುಂದರ ಕೀರ್ತನೆ ‘ಮುತ್ತು ಬಂದಿದೆ ಕೇರಿಗೆ’.

ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತು
ಕಲುಷ ಪರ್ವತಕ್ಕಿದು ಕುಲಿಶವಾಗಿಪ್ಪ ಮುತ್ತು
ಹಲಧರಾನುಜನೆಂಬ ಪವಿತ್ರನಾಮದ ಮುತ್ತು
ಒಲಿದು ಭಜಿಪರ ಭವವ ಹರಿದು ಕಾಯುವ ಮುತ್ತು

ಮುತ್ತಿನ ಪರಿಶುದ್ಧತೆ ನಿರ್ಮಲತೆ ಮಲ್ಯ ಬಿಳುಪು ಹೊಳಪುಗಳು ಮತ್ತು ಅದನ್ನು ಧರಿಸುವುದರಿಂದ ಉಂಟಾಗುವ ಸೌಂದರ್ಯ ಸಂತೋಷಗಳು ಹರಿಯನ್ನು ಒಲಿಸಿಕೊಳ್ಳುವುದರಿಂದ ಆಗುವ ಅನನ್ಯ ಲಾಭವನ್ನು ಸಂಕೇತಿಸುತ್ತವೆ. ‘ಜ್ಞಾನವೆಂಬೋ ದಾರದಲ್ಲಿ ಪೋಣಿಸಿ ನೋಡುವ ಮುತ್ತು ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು’ ಈ ಸಾಲುಗಳು ಜ್ಞಾನಮಾರ್ಗದಿಂದ ದೈವ ಸಾಕ್ಷಾತ್ಕಾರವನ್ನು ಪಡೆಯುವ ಸಾಧ್ಯತೆಯನ್ನು ಸ್ಪಷ್ಟಪಡಿಸುತ್ತವೆ. ಈ ಕವಿತೆಯಲ್ಲಿನ ಕವಿಯ ಸಾದೃಶ್ಯ ಜ್ಞಾನ ಮತ್ತು ಚಾತುರ್ಯಗಳು ಮೆಚ್ಚುಗೆಗೆ ಅರ್ಹವಾಗುತ್ತವೆ.

ಶ್ರೀಕೃಷ್ಣನನ್ನು ಮಾತೃಭಾವದಿಂದ ಸ್ತುತಿಸುವ ಕೆಲವು ಕೀರ್ತನೆಗಳು ಪರಿಶೀಲನಾರ್ಹವಾಗಿವೆ. ಇವುಗಳಲ್ಲಿ ಪುರಂದರದಾಸರ ರಚನೆಗಳಲ್ಲಿರುವಷ್ಟು ವೈವಿಧ್ಯ ಕಂಡುಬರುವುದಿಲ್ಲವಾದರೂ, ಇರುವ ಕೆಲವು ಆತ್ಮೀಯಾಗಿ ಮನಸ್ಸನ್ನು ನಮ್ರವಾಗಿ ತಾಕಿ ಖುಷಿಗೊಳಿಸುವ ಎಲ್ಲಾ ಸಮಯ ಪರಿಸರವನ್ನು ಸಚಿತ್ರವಾಗಿ ಸೃಷ್ಟಿಸುತ್ತವೆ.

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
ಮುಂದಕೆ ನಿಮ್ಮ ಮನೆಗೆ ಬಾರನಮ್ಮ
ಮಗುವು ಬಲ್ಲುದೇ ಇಷ್ಟದ ಬೆಣ್ಣೆ ಕದ್ದರೆ
ಬಿಗಿಯಬಹುದೇ ಶ್ರೀಚರಣವನು
ಹಸುಮಗುವನ್ನು ಕಂಡು ಮುದ್ದಿಸಲೊಲ್ಲದೆ
ಹುಸಿಕಳ್ಳನೆಂದು ಕಟ್ಟುವಿರಿ
ವಸುಧೆಯೊಳಗೆ ನಾನೊಬ್ಬಳೇ ಪಡೆದೆನೆ ನಿಮ್ಮ
ಹಸುಮಗುವಿನಂತೆ ಭಾವಿಸಬಾರದೆ

ಬೆಣ್ಣೆ ಕದ್ದನೆಂದು ಕಾಲುಕಟ್ಟಿ ಹಾಕಿ ಗೋಪಿಯರು ಯಶೋಧೆಯ ಬಳಿಗೆ ದೂರು ಕೊಂಡೊಯ್ದಾಗ ಆ ವಾತ್ಸಲ್ಯಮಯಿ ತಾಯಿ ಹೇಳುವ ಮಾತಿದು. ಈ ತಾಯಿಯ ಮಾತಿನಲ್ಲಿ ಮಗನ ಬಗ್ಗೆ ಮೋಹ, ಅವನಿಗಾಗದ ಶಿಕ್ಷೆಯ ಬಗ್ಗೆ ಅನುತಾಪ, ಅವನನ್ನು ಶಿಕ್ಷಿಸುವ ಗೋಪಿಯರ ಬಗ್ಗೆ ನಸುಗೋಪ ಮತ್ತು ಮೃದು ಆಕ್ಷೇಪ ತುಂಬ ಚಿತ್ತಾಕರ್ಷಕವಾಗಿ ಮೂಡಿ ಬಂದಿವೆ. ಎಂಥ ಸರಳ ನುಡಿಗಳಲ್ಲಿ ಎಂಥ ಆಪ್ತ ಚಿತ್ರವನ್ನು ಕಟ್ಟಲಾಗಿದೆ!

ಕೃಷ್ಣನ ತುಂಟಾಟದ ಮತ್ತೊಂದು ಸಜೀವ ಚಿತ್ರಣ ಇದು :

ಹೊತ್ತರೆದ್ದು ಮನೆಗೆ ಬಂದನೆ
ಯಶೋಧೆ ಕೇಳೆ
ಎತ್ತಿಕೊಂಡು ಮುತ್ತು ಕೊಟ್ಟೆನೆ
ಎತ್ತಿಕೊಂಡು ಮುತ್ತು ಕೊಟ್ಟರೆ
ಮುತ್ತಿನಾರವ ಕೊರಳಿಗಾಕಿ
ಚಿತ್ತಜನ ಕೇಳಿಯೊಳು
ಬತ್ತಲೆ ನಿಂದೆತ್ತು ಎಂದನೆ

ಕೃಷ್ಣನ ಬಾಲಲೀಲೆಯ ಪರಿಸರವೇ ತನ್ನೆಲ್ಲ ಜೀವಂತಿಕೆ ರಸಿಕತೆ ಮೋಹಕತೆಗಳೊಡನೆ ನಮ್ಮ ಕಣ್ಣು ಮುಂದೆ ಪ್ರತ್ಯಕ್ಷವಾದಂಥ ಇಂದ್ರಿಯಗ್ರಾಹ್ಯ ವರ್ಣನೆಯಿದು. ನಾದಮಯವಾದ ಚಿಕ್ಕ ಚಿಕ್ಕ ಪದಗಳು, ಮೂರು ಮೂರು ಮಾತ್ರೆಯ ನೃತ್ಯಲಯ, ‘ತ’ಕಾರ ಪ್ರಾಸಗಳು, ಅವುಗಳಿಂದ ಹೊಮ್ಮುವ ವಿಶಿಷ್ಟ ಸಂಗೀತ, ಅವುಗಳ ಜನಪದ ಗತ್ತು – ಇವು ಪುಟ್ಟ ಕೃಷ್ಣ ತನ್ನ ಗೆಜ್ಜೆಯ ಕಾಲಿನ ಸದ್ದನ್ನು ಮಾಡುತ್ತ ನಮ್ಮ ಮುಂದೆ ನಡೆದಾಡಿದಂಥ ಅನುಭವವನ್ನು ತಂದು ಕೊಡುತ್ತವೆ.

ತನ್ನ ನಾಟಕೀಯತೆಯಿಂದ ಮುಗ್ಧ ಚತುರತೆಯಿಂದ ಮನಸೆಳೆಯುವ ಇನ್ನೊಂದು ಕೀರ್ತನೆ ‘ನೆರೆದು ಗೋಪಿಯರೆಲ್ಲರು’. ತಮ್ಮ ಮನೆಗೆ ಬಂದು ತುಂಟಾಟ ಮಾಡಿದ ಕೃಷ್ಣನನ್ನು ಕೈಹಿಡಿದು ಎಳೆದುಕೊಂಡು ಯಶೋಧೆಯ ಬಳಿಗೆ ಬಂದು ದೂರುತ್ತಾರೆ ಗೋಪಿಯರು. ತೊಲೆಗೆ ಏಣಿಯನ್ನೇ ಹಾಕದೆ ಏರಿ, ನೆಲುವಿನಲ್ಲಿಟ್ಟಿದ್ದ ಹಾಲು ಮೊಸರನ್ನು ಕುಡಿದವನೆಂದು ಒಬ್ಬಾಕೆ ದೂರಿದರೆ, ‘ಅಟ್ಟಕ್ಕೆ ನೆಗೆಯಲು ನಾನೇನು ಬೊಮ್ಮ ಜಟ್ಟಿಗನೆ? ಇವಳು ಸುಮ್ಮಸುಮ್ಮನೆ ದೂರುತ್ತಾಳೆ ಅಮ್ಮಯ್ಯ’ ಎಂದು ತನ್ನ ಅಮಾಯಕತೆಯನ್ನು ಪ್ರದರ್ಶಿಸುತ್ತಾ ಕೃಷ್ಣ. ಗವಾಕ್ಷದಿಂದ ಹತ್ತಿ ಬಚ್ಚಿಟ್ಟ ಬೆಣ್ಣೆಯನ್ನೆಲ್ಲ ಮಕ್ಕಳಿಗೂ ಇಲ್ಲದಂತೆ ತಿಂದುಹಾಕಿದ ಎಂದು ಮತ್ತೊಬ್ಬಾಕೆ ದೂರಿದರೆ, ಗಡಿಗೆ ಬೆಣ್ಣೆ ಮೆಲ್ಲಲಿಕ್ಕೆ ನನ್ನ ಹೊಟ್ಟೆ ಮಡುವೆಂದು ಭಾವಿಸಿದೆಯೇನೆ? ಎಂದು ಸವಾಲು ಹಾಕುತ್ತಾನೆ ಭಗವಂತ. ಇಂಥ ಸುಟಿಯಾದ ಸರಸ ಮುಗ್ಧ ಮಧುರ ಚಿತ್ರಗಳು ನಮ್ಮ ಮನಸ್ಸನ್ನು ನುಣ್ಣನೆ ಆವರಿಸಿ ಆನಂದ ಮಗ್ನವಾಗಿಸುತ್ತವೆ.

ಜನಪದ ಧಾಟಿಯಿಂದ ಮಣ್ಣಿನ ಭಾಷೆಯಿಂದ ಸೊಗಡುಕ್ಕಿಸಿ ರಂಜಿಸುವ ಕೆಲವು ಕೀರ್ತನೆಗಳನ್ನೂ ಕನಕದಾಸರು ರಚಿಸಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಅನಕ್ಷರಸ್ಥರ ಮಧ್ಯೆ ಬದುಕಿದ ಅವರ ಭಾಷೆ ಆ ನೆಲದ ಕಸುವನ್ನು ಹೀರಿ ಪುಷ್ಪವಾಗಿದೆ. ನಿದರ್ಶನಕ್ಕೆ ಈ ಗೀತೆ:

ದೇವಿ ನಮ್ಮ ದ್ಯಾವರು ಬಂದರು
ಬನ್ನೀರೇ ನೋಡ ಬನ್ನಿರೇ
ದೊಡ್ಡ ಮಡುವಿನೊಳಗೆ ನವರಂಗ
ಗುಡ್ಡವ ಹೊತ್ತುಕೊಂಡು ನಿಂತಾನ್ಯಾ
ಗುಡ್ಡವ ಹೊತ್ತುಕೊಂಡು ನಿಂತು ಸುರರನು
ದೊಡ್ಡವರನ್ನು ಮಾಡ್ಯಾನ್ಯಾ
ಹುಡುಗ ಹಾರುವನಾಗಿ ನಮರಂಗ
ಬೆಡಗೀಲಿ ಮುಗಿಲೀಗಿ ಬೆಳೆದಾನ್ಯಾ
ಬೆಡಗೀಲಿ ಮುಗಿಲೀಗಿ ಬೆಳೆದು ಬಲಿಯನ್ನೆ
ಅಡಿಯಿಂದ ಪಾತಾಳಕ್ಕೊತ್ಯಾನ್ಯಾ

ವಿಷ್ಣುವಿನ ಅವತಾರಗಳ ಮಹೋನ್ನತವಾದ ಹಾಗೂ ಭವ್ಯವಾದ ಸಾಧನೆಗಳ ಚಿತ್ರವನ್ನು ಆಡುನುಡಿಯಲ್ಲಿ, ನಿರಾಯಾಸವಾಗಿ ಪರಿಣಾಮಕಾರಿಯಾಗಿ ಮೂಡಿಸುವ ಈ ಕಲೆ ಅಪೂರ್ವವಾದದ್ದು. ಅತ್ಯಂತ ಪರಿಚಿತನೂ ಆತ್ಮೀಯನೂ ಆದ ‘ನಮರಂಗ’ ಇದ್ದಕ್ಕಿದ್ದಂತೆ ಆಟವೆಂಬಂತೆ ಮೆರೆಯುವ ಅದ್ಭುತ ಸಾಹಸ ನಮ್ಮೆದುರೇ ನಡೆದಷ್ಟು ತೀವ್ರವೂ ಪ್ರಭಾವ ಪೂರ್ಣವೂ ಆಗುವಂತೆ ಮಾಡಿರುವಲ್ಲಿ ಕನಕರ ವಿಶಿಷ್ಟತೆ ಅಡಗಿದೆ. ಅಚ್ಚಗನ್ನಡದ ಶಕ್ತಿ ಜನಪದ ಶೈಲಿಯ ರಮಣೀಯತೆಯೊಡಗೂಡಿ ಪುರಾಣದ ಪರಿಸರವನ್ನು ಜೀವಂತವಾಗಿ ಪುನರ್‌ನಿರ್ಮಿಸುವಲ್ಲಿ ಪೂರ್ಣ ಯಶಸ್ವಿಯಾಗಿದೆ.