ಕನ್ನಡ ಕಾವ್ಯಲೋಕ ಭಾರತೀಯ ಕಾವ್ಯ ಪರಂಪರೆಯ ಮಹತ್ವಪೂರ್ಣ ಸಾಧನೆಗಳ ಒಂದು ಅನನ್ಯ ಭಾಗವಾಗಿದೆ. ಹಳೆಗನ್ನಡ, ನಡುಗನ್ನಡ, ಆಧುನಿಕ ಕನ್ನಡಗಳ ಮೂಲಕ ತನ್ನ ಮಹೋನ್ನತ ಪ್ರತಿಭೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯದಲ್ಲಿ ವಿಶಿಷ್ಟೋಜ್ವಲವಾಗಿ ಅನಾವರಣ ಮಾಡಿಕೊಡಿರುವ ಕನ್ನಡ ಕಾವ್ಯ ಮಹತ್ತು ಬೃಹತ್ತು ಗಳೆರಡರಲ್ಲೂ ಶಿಖರವ್ಯಾಪಿಯಾಗಿದೆ. ಆಧುನಿಕ ಕನ್ನಡ ಕಾವ್ಯವಂತೂ ವಸ್ತು ವ್ಯಾಪಕತೆ ಯಲ್ಲಿ, ಪ್ರಯೋಗ ವೈವಿಧ್ಯದಲ್ಲಿ, ಕಲ್ಪನೆಯ ಎತ್ತರದಲ್ಲಿ, ಉನ್ನತ ದರ್ಶನದಲ್ಲಿ, ಸರಳತೆ ಮತ್ತು ಸಂಕೀರ್ಣತೆಯಲ್ಲಿ, ವೈಚಾರಿಕ ಸೂಕ್ಷ್ಮತೆ ಹಾಗೂ ಹರಹಿನಲ್ಲಿ, ಮನುಷ್ಯಲೋಕದ ಆಕಾಶ ಪಾತಾಳಗಳ ದಟ್ಟ ಮತ್ತು ವಿಶಿಷ್ಟ ಚಿತ್ರಣದಲ್ಲಿ ಅಪಾರ ಆಯಾಮಗಳ ತವರು ಮನೆಯಾಗಿದೆ. ಕಣ್ಣು ಕೋರೈಸುವ ಈ ಕಾವ್ಯ ಕೃಷಿಯಲ್ಲಿ ಅದರ ಅಭಿವ್ಯಕ್ತಿಯ ಸ್ವೋಪಜ್ಞಶೀಲತೆ ವೈಶಿಷ್ಟ್ಯ ವೈವಿಧ್ಯ ಮತ್ತು ಪ್ರತಿಭಾ ದೀಪ್ತಿಗಳು ಅವಿರಾಮವಾದ ಅನುಸಂಧಾನಕ್ಕೆ, ಅನುಶೀಲನಕ್ಕೆ, ಸಂಶೋಧನೆಗೆ ಮತ್ತು ಮಲಿಕ ವ್ಯಾಖ್ಯಾನಕ್ಕೆ ಪಾತ್ರ ವಾಗಿವೆ. ಆಧುನಿಕ ಕನ್ನಡ ಕಾವ್ಯವಂತೂ ನಿತ್ಯ ಪ್ರಯೋಗ ಭೂಮಿಕೆಯಾಗಿದ್ದು, ಸಮಾಜದ ಬಹು ಸ್ತರಗಳಿಂದ, ಬಹುಸಂಸ್ಕೃತಿಗಳಿಂದ, ಬಹುಭಾಷಿಕ  ವಲಯಗಳಿಂದ ಮೂಡಿಬಂದ ಕವಿಗಳ ಅನನುಕರಣೀಯ ಅಭಿವ್ಯಕ್ತಿ ಸಿದ್ದಿಯ ಬಹುತ್ವದ ಪರಮ ಪ್ರತೀಕವಾಗಿ ರೂಪು ಗೊಂಡಿದೆ. ಮಿಕ್ಕೆಲ್ಲ ಶಕ್ತಿಯ ಜೊತೆ ಜೊತೆಗೆ, ಕನ್ನಡವನ್ನು ತಾಯಿ ಭಾಷೆಯಾಗಿ ಹುಟ್ಟಿನಿಂದ ಆವಿಷ್ಕರಿಸಿಕೊಳ್ಳದಿದ್ದರೂ ತನ್ನ ಪರಿಸರ ಮತ್ತು ಶಿಕ್ಷಣ ಹಾಗೂ ಸ್ವತಂತ್ರ ಸಾಧನೆಯಿಂದ ಅದನ್ನು ವಾಚೋವಿಧೇಯವಾಗಿ ಅನನ್ಯ ವಿಶಿಷ್ಟವಾಗಿ ದಕ್ಕಿಸಿಕೊಂಡು, ಹತ್ತರೊಡನೆ ಹನ್ನೊಂದನೆಯವರಾಗದೆ, ಪ್ರತ್ಯೇಕತಾ ಪ್ರದೀಪ್ತಿಯನ್ನು ಮೆರೆಸುವ ಮೂಲಕ ಕನ್ನಡ ಕಾವ್ಯಕ್ಕೆ, ಕಾವ್ಯಭಾಷೆಗೆ ವಿಶೇಷವಾದ ಪರಿವೇಷವನ್ನು ಪ್ರಖರತೆಯನ್ನು ಪ್ರಬುದ್ಧತೆಯನ್ನು ತಂದುಕೊಟ್ಟವರು ಪ್ರೊ. ಕೆ.ಎಸ್. ನಿಸಾರ್ ಅಹಮದ್.

ಪರಂಪರೆಯಿಂದ ಸಾಹಿತ್ಯ ವಿದ್ಯಾರ್ಥಿಯಲ್ಲದ, ಭೂವಿಜ್ಞಾನವನ್ನು ಅಧ್ಯಯನ ಮಾಡಿ ಅದರ ವಿಸ್ಮಯಗಳನ್ನು ಮನನ ಮಾಡುವ ಮೂಲಕ ಜಗತ್ತಿನ ಬಗೆಗೆ ಜನದ ಬಗೆಗೆ ಜನ ಮನೋಭಾವದ ಬಗೆಗೆ ಮೊನಚಾದ ಕುತೂಹಲ ಚಿಂತನ ವಿಶ್ಲೇಷಣೆಗಳನ್ನು ರೂಢಿಸಿಕೊಂಡ, ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಯಾಗಿ ರೂಪುಗೊಂಡ ನಿಸಾರ್, ೧೯೬೦ರಲ್ಲಿ ‘ಮನುಸು ಗಾಂಧಿ ಬಜರು’ ಕವಿತಾ ಸಂಕಲನವನ್ನು ಪ್ರಕಟಿಸುವ ಮೂಲಕ ಕನ್ನಡ ಕಾವ್ಯಲೋಕದಲ್ಲಿ ಹೊಸ ದನಿ ಹೊಸ ಬನಿ ಹೊಸ ಲಯ ಹೊಸ ಆಶಯ ಮತ್ತು ಹೊಸ ಭಾಷೆಗಳ ಆಪ್ಯಾಯಮಾನಕರವಾದ ಸುಳಿಗಾಳಿಯಾಗಿ ಬೀಸಿ ಕಾವ್ಯಪ್ರಿಯರನ್ನು ಪುಳಕಗೊಳಿಸಿಬಿಟ್ಟರು. ನವೋದಯಕಾವ್ಯ ಸಂಪ್ರದಾಯದ ಪರಮ ಫಲಗಳು ಕಾವ್ಯ ರಸಿಕರ ಮನಸ್ಸು ಬುದ್ದಿಗಳನ್ನು ತಣಿಸಿ ಕುಣಿಸುತ್ತಿದ್ದ ಸುಗ್ಗಿ ಸಂಭ್ರಮದಲ್ಲಿ ತಮ್ಮ ಮೊದಲ ಸಂಕಲನದ ಪರಿಪುಷ್ಟ ಪಕ್ಷಿಯನ್ನು ಆತ್ಮವಿಶ್ವಾಸದಿಂದಲೇ ಹಾರಬಿಟ್ಟ ಕವಿ ಅನಂತರ ಹಿಂತಿರುಗಿ ನೋಡಲಿಲ್ಲ. ಪ್ರತಿಮಾ ಪ್ರಧಾನವಾದ, ವಿಚಾರ ಪ್ರಧಾನವಾದ ಸಂಕೀರ್ಣ ಸಂವೇದನೆಯ ನವ್ಯಕಾವ್ಯ; ಪ್ರತಿಷ್ಠಿತ ಲೋಕದ ಅನುಭವಗಳನ್ನು ಉದ್ದೇಶಪೂರ್ವಕವಾಗಿ ಅವಗಣಿಸಿ ಅಪ್ರತಿಷ್ಠಿತ ವರ್ಗದ ಸಶಕ್ತ ರೋಷಯುಕ್ತ ತಾಜ ಸಂವೇದನೆಗಳನ್ನು ಮಾಧ್ಯಮವಾಗಿ ಮಾಡಿಕೊಂಡ ಬಂಡಾಯ ಕಾವ್ಯಗಳ ಜೋರುಗಾಳಿಯಲ್ಲೂ ಎದೆಗುಂದದೆ, ಅವುಗಳ ಸಮಕಾಲೀನ ಸಲ್ಲಕ್ಷಣಗಳನ್ನೂ ತಮ್ಮ ಸಂವೇದನೆಯ ಭಾಗವಾಗಿ ಮಾಡಿಕೊಂಡು, ನೆನೆದವರ ಮನದಲ್ಲಿ (೧೯೬೪), ಸುಮುಹೂರ್ತ (೧೯೬೭), ಸಂಜೆ ಐದರ ಮಳೆ (೧೯೭೦), ನಾನೆಂಬ ಪರಕೀಯ (೧೯೭೨), ನಿತ್ಯೋತ್ಸವ (೧೯೭೬), ಸ್ವಯಂ ಸೇವೆಯ ಗಿಳಿಗಳು (೧೯೭೭), ಅನಾಮಿಕ ಆಂಗ್ಲರು (೧೯೮೨), ಬಹಿರಂತರ (೧೯೯೦), ನವೋಲ್ಲಾಸ (೧೯೯೪) ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮), ಅರವತ್ತೈದರ ಐಸಿರಿ (೨೦೦೦) ಸಂಕಲನಗಳನ್ನು ಒಂದೊಂದಾಗಿ ಪ್ರಕಟಿಸುತ್ತ ಕಾವ್ಯಪ್ರೇಮಿಗಳ ಮನದಲ್ಲಿ ಅಚಲವಾಗಿ ಉಳಿದದ್ದು, ಕವಿ ನಿಸಾರರ ನಿತ್ಯ ಸಮಕಾಲೀನ ಕಲ್ಪನೆ, ಚಿಂತನೆ ಮತ್ತು ಪ್ರಯೋಗ ಪ್ರಿಯತೆಗಳ ಅಂತಸ್ಸತ್ವವನ್ನು ರುಜುವಾತುಪಡಿಸುತ್ತದೆ. ಅವರ ಅಖಂಡ ಕಾವ್ಯ ಸಾಧನೆಗಳಲ್ಲಿ, ಕನ್ನಡ ಭಾಷೆಯನ್ನು ಅದರ ಎಲ್ಲ ಸ್ಥಿತ್ಯಂತರಗಳಲ್ಲಿ, ಪ್ರಭಾವಗಳಲ್ಲಿ, ಸಂಪತ್ತು ಸಂಸ್ಕೃತಿಗಳ ನೆಲೆಯಲ್ಲಿ ಕಾಲಕಾಲಕ್ಕೆ ರೂಢಿಸಿಕೊಂಡ, ಪರಿಣಾಮಕಾರಿಯಾಗಿ ದುಡಿಸಿಕೊಂಡ, ಹಳಸಲಾಗದಂತೆ ಎಚ್ಚರದಿಂದ ರೂಪಿಸಿಕೊಂಡ ನಿರಂತರ ಕ್ರಿಯಾತ್ಮಕ ಪ್ರಕ್ರಿಯೆ ಅತ್ಯಂತ ಮಹತ್ವ ಪೂರ್ಣವಾದದ್ದು, ಅನನ್ಯವಾದದ್ದು. ಅದರ ಸ್ವರೂಪಗಳನ್ನು ಕೆಲವುಮಟ್ಟಿಗೆ ಇಲ್ಲಿ ಪರಿಶೀಲಿಸಲಾಗಿದೆ.

ಭಾಷೆಯೆಂಬುದು ಮನುಷ್ಯ ತನ್ನ ಮನಸ್ಸಿನ ಅಭಿವ್ಯಕ್ತಿಗಾಗಿ ಸೃಷ್ಟಿಸಿಕೊಂಡ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮಗಳಲ್ಲಿ ಒಂದು. ಮನುಷ್ಯ ಎಷ್ಟೇ ಪ್ರತಿಭಾವಂತನಾದರೂ ವಿಚಾರವಂತನಾದರೂ ಅನುಭವಶ್ರೀಮಂತನಾದರೂ ಆ ಪ್ರತಿಭೆ ವಿಚಾರ ಅನುಭವಗಳನ್ನು ಅಷ್ಟೇ ಪ್ರಖರವಾಗಿ ಪರಿಣಾಮಕಾರಿಯಾಗಿ ಅನನ್ಯವಿಶಿಷ್ಟವಾಗಿ ಮತ್ತೊಬ್ಬರಿಗೆ ಮನದಟ್ಟು ಮಾಡಿಕೊಡಲು ಸಾಧ್ಯ ಮಾಡುವ ವಿಶೇಷ ಸಾಮರ್ಥ್ಯ ಮನುಷ್ಯನೇ ಸೃಷ್ಟಿಸಿಕೊಂಡ ಭಾಷೆಗಿದೆ. ಸಾಹಿತ್ಯ ಜಗತ್ತಿನಲ್ಲಂತೂ ಇದರ ಪಾತ್ರ ಮಹತ್ತರವಾದುದು. ಏಕೆಂದರೆ ಕವಿ ಬಳಸುವ ಭಾಷೆಯ ಮೂಲಕವೇ ಸಹೃದಯನಾದವನು ಕವಿಯ ಅಂತರಂಗವನ್ನು ಪ್ರವೇಶಿ ಅವನ ಕಾಣ್ಕೆಗಳನ್ನು, ವೈಶಿಷ್ಟ್ಯಗಳನ್ನು, ಪ್ರತಿಭೆಯ ವಿವಿಧ ಆಯಾಮಗಳನ್ನು ಅನುಸಂಧಾನ ಮಾಡಬೇಕಾಗುತ್ತದೆ. ಆದ್ದರಿಂದಲೇ ‘ರೀತಿರಾತ್ಮಾ ಕಾವ್ಯಸ್ಯ’ ಎಂದು ನಮ್ಮ ಮೀಮಾಂಸಕರು ಸಾರಿದರು. ಭಾಷೆಯೇ ಕಾವ್ಯವಲ್ಲ, ನಿಜ; ಆದರೆ ಭಾಷೆಯ ಮೂಲಕವೇ ಕಾವ್ಯವಾಗಬೇಕು ಎಂಬುದೂ ಅಷ್ಟೇ ನಿಜ. ಎಷ್ಟೋ ಜನ ಶ್ರೇಷ್ಠ ಕವಿಗಳು ತಮ್ಮ ಭಾವನೆ ಕಲ್ಪನೆ ಆಲೋಚನೆಗಳಿಗೆ ತಕ್ಕ ಭಾಷಿಕ ಆಕಾರವನ್ನು ಕೊಡುವಲ್ಲಿ ಸಮರ್ಥರಾಗದಿರುವುದರಿಂದ ಅವರ ಕಾವ್ಯ ಕೂಡ ಸಫಲವಾಗದೆ ಹೆಳವಾಗುತ್ತದೆ. ಕನ್ನಡದ ಕುವೆಂಪು ಬೇಂದ್ರೆ ಅಡಿಗರಂಥ ಕವಿಗಳು ತಮ್ಮ ಪ್ರಥಮ ಶ್ರೇಣಿಯ ಸೃಜನಶೀಲ ಮಹತಿಯನ್ನು ಮೆರೆಯುವುದಕ್ಕೆ ಅವರು ರೂಢಿಸಿಕೊಂಡ, ಸೃಷ್ಟಿಸಿಕೊಂಡ ಅನನ್ಯ ಸಾಧಾರಣವಾದ ಭಾಷೆಯೂ ಮುಖ್ಯ ಕಾರಣ ವೆಂಬುದನ್ನು ಮರೆಯುವಂತಿಲ್ಲ.

ಕುವೆಂಪು ಬೇಂದ್ರೆ ಪುತಿನ ನರಸಿಂಹಸ್ವಾಮಿ ಅಡಿಗ ಮುಂತಾದ ಕವಿಗಳು ತಮ್ಮ ವಿಶಿಷ್ಟೋಜ್ವಲ ಸೃಜನ ಪ್ರತಿಭೆಯ ಮೂಲಕ ಕನ್ನಡ ಲೋಕವನ್ನು ಮಿಂಚಿನಂತೆ ಆವರಿಸಿದ್ದ ಸಂದರ್ಭದಲ್ಲಿ, ಅವರಿಗಿಂತ ಭಿನ್ನವಾಗಿ ಭಾಷೆಯನ್ನು ಸೃಷ್ಟಿಸಿಕೊಳ್ಳುವ, ಪ್ರಕೃತಿಯ ಬಗ್ಗೆ ಪರಿಸರದ ಬಗ್ಗೆ ವಿಭಿನ್ನ ಜನ ಮಾನಸದ ಬಗ್ಗೆ ಕನ್ನಡ ನಾಡು ನುಡಿ ರಾಷ್ಟ್ರದ ಬಗ್ಗೆ ಹೊಸ ಕಲ್ಪನೆಗಳನ್ನು ಚಿಂತನೆಗಳನ್ನು ಮೂರ್ತಗೊಳಿಸುವ ಮತ್ತು ತನ್ನದೇ ವ್ಯಕ್ತಿತ್ವದ ಛಾಪನ್ನು ಬಿಂಬಿಸುವ ಸವಾಲೆನಿಸುವ ಜವಾಬ್ದಾರಿಯನ್ನು ಹೊತ್ತು ಕಾವ್ಯರಂಗಕ್ಕೆ ಧುಮುಕಿದ ಕವಿ ಕೆ.ಎಸ್. ನಿಸಾರ್ ಅಹಮದ್, ಆ ಸವಾಲನ್ನು ಎದುರಿಸಿದ, ಪರಿಶ್ರಮಿಸಿದ, ಗೆದ್ದ ರೋಚಕ ಇತಿಹಾಸ ನಮ್ಮ ಕಣ್ಣ ಮುಂದೆ ಢಾಳಾಗಿ ಬಿಚ್ಚಿಕೊಂಡಿದೆ. ತಾಯಿ ಭಾಷೆಯಲ್ಲದ ಕನ್ನಡ ಭಾಷೆಯ ಬಾಗು ಬಳುಕು ಬನಿ ದನಿ ಚಿತ್ರಕತೆಗಳನ್ನು ತಮ್ಮ ಮಾತೃಭಾಷೆಯಾದ ಉರ್ದು, ಶಿಕ್ಷಣ ಭಾಷೆಯಾದ ಇಂಗ್ಲಿಷ್, ರೂಢಿಸಿಕೊಂಡ ಸಂಸ್ಕೃತದ ಜೊತೆಯಲ್ಲಿ ಅತ್ಯಂತ ಸಮರ್ಥವಾಗಿ ನಾದಿ ಮಿದ್ದಿಸಿ ಗಟ್ಟಿಸಿ ಅನ್ಯರಿಗೆ ಸುಲಭ ಸಾಧ್ಯವಲ್ಲದ ಹೊಸ ಪರಿಣಾಮಕಾರಿ ಯಾದ, ರುಚಿಕಟ್ಟಾದ ‘ನಿಸಾರ್ ಶೈಲಿ’ಯೊಂದನ್ನು ರೂಪಿಸಿಕೊಂಡು ಕನ್ನಡ ಜನ ಮನದ ಹೆಮ್ಮೆಯ ಕವಿಯಾದವರು ನಿಸಾರ್ ಅಹಮದ್. ಈ ಮಾತನ್ನು ರುಜುವಾತು ಪಡಿಸುವ ಪುರಾವೆಗಳನ್ನು ಕಷ್ಟಪಟ್ಟು ಹುಡುಕಬೇಕಾಗಿಲ್ಲವೆಂಬುದೇ ಅವರ ಹೆಗ್ಗಳಿಕೆ.

ನಿಸಾರ್ ಅವರು ತಮ್ಮ ಕಾವ್ಯಾಭಿವ್ಯಕ್ತಿಗೆ ಹಲವು ವಸ್ತು ಮೂಲಗಳನ್ನು ಆಧರಿಸಿದ್ದಾರೆ. ನಿಸರ್ಗಾರಾಧನೆ, ಪ್ರೀತಿ-ಪ್ರೇಮ-ಸ್ನೇಹ, ನಾಡು-ನುಡಿ, ಸಮಾಜ ವಿಮರ್ಶೆ, ಅಂತರಂಗ ವಿಶ್ಲೇಷಣೆ, ವ್ಯಕ್ತಿಗೌರವ ಇತ್ಯಾದಿ. ಈ ವಸ್ತು ವೈವಿಧ್ಯದಿಂದಾಗಿ ಮತ್ತು ಕವಿ ಅವುಗಳೊಂದಿಗೆ ಹೊಂದುವ ಸಂಬಂಧ ವೈಶಿಷ್ಟ್ಯದಿಂದಾಗಿ ಹಾಗೂ ದೃಷ್ಟಿಕೋನ ವಿಶೇಷದಿಂದಾಗಿ ಮತ್ತು ಅವುಗಳನ್ನು ಭಾಷೆಯಲ್ಲಿ ಒಡಮೂಡಿಸುವಲ್ಲಿ ತಾನು ಇತರರಿಗಿಂತ ಭಿನ್ನವಾಗಿರಬೇಕೆಂಬ ಸೂಕ್ಷ್ಮ ಪ್ರಜ್ಞೆಯಿಂದಾಗಿ ಅವರ ಅಭಿವ್ಯಕ್ತಿಯಲ್ಲಿ ಹೊಸ ಕ್ರಮ, ಹೊಸ ಹೊಳಪು, ಹೊಸ ವಿನ್ಯಾಸಗಳು ತಾವೇ ತಾವಾಗಿ ಮೈದೋರುತ್ತವೆ. ನಿಸರ್ಗ ಚಿತ್ರಣಕ್ಕೆ ಸಂಬಂಧಿಸಿದ ಈ ನಿದರ್ಶನಗಳನ್ನು ಪರಿಶೀಲಿಸಿ :

ಕುರುಡು ತಮವ ಕೊರೆಯುವಂಥ
ಬಾಣ ಬಿಟ್ಟ ಚಾಪಗಳೆ,
ಜಿಂಕೆ ಕಣ್ಣ ತಂಪು
ಕಾಡನೆಲ್ಲ ಬೆಳಗುವಂತೆ,
ಸುಖದ ಸಂತೆ ನೆರೆಯುವಂತೆ
ಕರಗಿ ಎಲ್ಲ ಚಿಂತೆ
ಮಿನುಗಿ, ಮಿನುಗಿ ದೀಪಗಳೆ.
ಕನಸಿನ ಗೊನೆ, ಮಿಂಚಿನ ತೆನೆ, ಕಂಚಿನ ಬಿಳಿ ದನಿಗಳೆ,
ಪುಟ್ಟ ಹೆಜ್ಜೆಯಿಟ್ಟು ನಡೆವ, ಬೆಳೆವ ಎಳೆಯ ನಗೆಗಳೆ,
ಬೆಳಕ ಸಣ್ಣ ಗೊಂಚಲುಗಳು ತೂಗುತಿರುವ ಬಗೆಗಳೆ;’                   (ದೀಪಗಳು)

* * *

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಕದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ’                                (ನಿತ್ಯೋತ್ಸವ)

* * *

ಬರುತ್ತದೆ ಮಳೆ….
ನೇಸರ ತೊಳೆಗೆ ನಿಧಾನ ಕಟ್ಟಿ
ಮೋಡದ ಬೂಜಿ,
ಕತ್ತಲಲ್ಲಾಡಿಸಿ ಮಿಂಚಿನ ಸೂಜಿ
ಮುಟ್ಟಿದ ಹಾಗೆ ಮಣ್ಣಿನ ಹೂಜಿ               (ಈಗ ಮಳೆಗಾಲವಲ್ಲ)

* * *

ಕೊಳದೆದೆಯಲಿ ಅಲೆಗಾಗಿದೆ ಹೊಂಬೆಳಕಿನ ಜಳಕ
ಅರವಿಂದಗಳೆವೆ ಬಿಚ್ಚಿವೆ, ರವಿರಶ್ಮಿಗೆ ತುಟಿ ಹಚ್ಚಿವೆ
ನೆಲವೆಣ್ಣಿನ ಮೈ ಗರಿಕೆಗೆ ಇಬ್ಬನಿಗಳ ಪುಳಕ
…………………………………………….
ಮಲೆಬನಗಳ ಕಾನನದಲಿ ಸುಗ್ಗಿಯ ಸಂಚಲನ
ತರು ನಿಶ್ಚಲ ತೇರಂತಿವೆ
ನವಿಲಾಡುವ ಸುರರಂತಿವೆ
ಬಹು ದೂರದ ಕಾಸಾರದ ಬಳಿ ಬಾನ್ನೆಲ ಮಿಲನ’.             (ನಿಸರ್ಗ ವಿಲಾಸ)

– ಮೇಲಿನ ಈ ನಾಲ್ಕೂ ನಿದರ್ಶನಗಳು ಕವಿಯ ನಿಸರ್ಗದ ಬಗೆಗಿನ ವಿಶಿಷ್ಟಾಸ್ವಾದನ ಪರಿಯನ್ನು ಮಾತ್ರವಲ್ಲದೆ, ಆ ಪರಿಯಲ್ಲಿನ ಮೋಹಕ ಕಲ್ಪನೆಗಳನ್ನು, ಇಂದ್ರಿಯಗಮ್ಯವೂ ಮನೋಗಮ್ಯವೂ ಆದ ವಿನೂತನ ಅನುಭವಗಳ ಅಲೆಗಳ ವಿವಿಧ ಚಲನೆಗಳನ್ನು, ಕಣ್ಣಿಗೆ ಕಟ್ಟುವಂಥ ಚಿತ್ರಗಳನ್ನು ಸೃಷ್ಟಿಸುವ ಲಲಿತ ಸುಂದರ ಭಾಷೆಯ ಮಿಂಚಿನ ಸರಣಿಯನ್ನೇ ನಮ್ಮ ಅಂತರಂಗದ ಆಕಾಶದಲ್ಲಿ ಚಿಮ್ಮಿಸಿಬಿಡುತ್ತವೆ. ಮೊದಲಿನ ದೀಪಗಳ ವರ್ಣನೆಯ ಆಯ್ದ ಪದಗಳು ಮಾಮೂಲೀ ಪದಗಳಿಗಿಂತ ಭಿನ್ನವಾಗಿ ಹೊಸ ಭಾವ ಕಾಂತಿಯನ್ನು, ಜೀವ ಕಾಂತಿಯನ್ನು ಸ್ಫುರಿಸುತ್ತ ಅನುಭವದ ಹೊಸ ಆಯಾಮವನ್ನು ಅನಾವರಣ ಗೊಳಿಸುತ್ತವೆ. ಕನಸಿನ ಗೊನೆ, ಮಿಂಚಿನ ತೆನೆ, ಕಂಚಿನ ಬಿಳಿ ದನಿ ಎಂಬ ಕಲ್ಪನೋಜ್ವಲವಾದ ರೂಪಕ ರತ್ನಗಳು ತಮ್ಮ ಅನನ್ಯ ಧ್ವನಿಪೂರ್ಣತೆಯಿಂದ, ನಿರಾಯಾಸ ಹಾಗೂ ಸಹಜ ಅವತಾರದಿಂದ ಹೃದಯವನ್ನು ಜುಮ್ಮೆನಿಸುತ್ತವೆ.

‘ನಿತ್ಯೋತ್ಸವ’ದ ಭಾಷೆ ನಾಲ್ಕು+ಎರಡು, ಮೂರು+ಮೂರು ಮಾತ್ರೆಗಳ ಜೀವ ಲಯದ ಚೌಕಟ್ಟಿನಲ್ಲಿ, ನಾಡಿನ ಬಗೆಗಿನ ಕವಿಯ ಭಕ್ತಿ ಅಭಿಮಾನ ಅನುರಕ್ತಿಗಳ ಉಲ್ಲಾಸ ತರಂಗಗಳನ್ನು ಸಹಜೋದ್ಭೂತವಾದ ಸಂಗೀತ ಲಹರಿಯಲ್ಲಿ ಭೋರ್ಗರೆಸುತ್ತ ಎಂಥ ನಿರಭಿಮಾನಿಯಲ್ಲೂ ನಾಡ ಪ್ರೇಮವನ್ನು ಉಕ್ಕೇರಿಸುವ ಅನನ್ಯತೆಯನ್ನು ಪ್ರಕಟಿಸುತ್ತದೆ. ಭಾವ ಕಲ್ಪನೆ ಭಾಷೆ ನಾದ ಹಾಗೂ ಚಿತ್ರಕ ಶಕ್ತಿಗಳು ಒಂದರೊಡನೊಂದು ಬೆರೆತು ಮೈ ಪಡೆಯುವ ಮುಹೂರ್ತವಿದು.

ಕಾಲವಲ್ಲದ ಕಾಲದಲ್ಲಿ ಮಳೆ ಬಂದಾಗ ಪ್ರಕೃತಿಯ ಮೇಲೆ ಉಂಟಾಗುವ ಪರಿಣಾಮ ವನ್ನು ಯಾವ ಪೂರ್ವಕೃತ ಕವಿಸಮಯದ ಮೊರೆ ಹೋಗದೆ ಸ್ವಾನುಭವಕ್ಕೆ ನಿಷ್ಠವಾಗುವ ಹೊತ್ತಿನಲ್ಲೇ, ಯಾರೂ ಊಹಿಸಲಾಗದ ನೇಸರ ತೊಳೆ, ಮೋಡದ ಬೂಜಿ, ಮಿಂಚಿನ ಸೂಜಿ ಮತ್ತು ಮಣ್ಣಿನ ಹೂಜಿಗಳ ರೂಪಕಗಳ ಮೂಲಕ ಸಂವಹನಿಸುವ ಕವಿತೆಯ ನಡೆ ಚೇತೋಹಾರಿಯಾಗಿದೆ, ವಿನೂತನವಾಗಿದೆ.

ಹಾಗೆಯೇ ಕೊಳದಲ್ಲಿ ಮೂಡಿದ ಅಲೆಗಳು ಹೊಂಬೆಳಕಿನ ಸ್ನಾನ ಮಾಡುವ, ಕಮಲಗಳು ಎವೆ ಬಿಚ್ಚಿ ರವಿರಶ್ಮಿಯನ್ನು ಚುಂಬಿಸುವ, ಭೂಮಿ ಎಂಬ ಹೆಣ್ಣಿನ ಗರುಕೆಮೈ ಇಬ್ಬನಿಗಳ ಸ್ಪರ್ಶದಿಂದ ಪುಳಕಗೊಳ್ಳುವ ಬೆಳಗಿನ ಸಹಜ ಪ್ರೇಮೋನ್ಮಾದದ ದೃಶ್ಯಗಳು ಕವಿ ಹೇಗೆ ಭಾವ ಭಾಷೆಗಳನ್ನು ಅರ್ಧನಾರೀಶ್ವರನಂತೆ ಬೆಸೆದುಬಿಡುವ ಅಪೂರ್ವ ಸಾಮರ್ಥ್ಯವನ್ನು ವಶೀಕರಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿವೆ.

ವಸ್ತು ಯಾವುದೇ ಇರಲಿ, ತಮ್ಮದೇ ಆದ ಸ್ವೋಪಜ್ಞಶೀಲ ಸಂವೇದನೆಯಿಂದ ಸ್ವತಂತ್ರ ದೃಷ್ಟಿಕೋನದಿಂದ ಸಹಜ ಸ್ಫೂರ್ತವಾಗಿ ಚಿಮ್ಮುವ ಭಾವದ ಬಣ್ಣಗಳಿಂದ, ಚಿಂತನೆಯ ಕಣ್ಣುಗಳಿಂದ ಮತ್ತು ಅವೆಲ್ಲವನ್ನೂ ಹೊಸಯಿಸಿ ಸಾಕ್ಷಾತ್ಕರಿಸಿಕೊಡುವ ಭಾಷೆಯ ಬೆಡಗಿ ನಿಂದ ನಿಸಾರ್ ಅದಕ್ಕೆ ಆಕರ್ಷಕವಾದ ವಿನೂತನವೆನಿಸುವ ರೂಪಧಾರಣೆ ಮಾಡಿಸಿಬಿಡುತ್ತಾರೆ. ನಾಡುನುಡಿಗಳ ಬಗ್ಗೆ ಕವಿಯ ಆತ್ಮದ ಹಂಬಲ ಎಷ್ಟು ತೀವ್ರವಾಗಿ, ಭಾವನಾತ್ಮಕವಾಗಿ ಲಯ ಸಮನ್ವಿತವಾಗಿ ಸುಂದರವಾಗಿ ಸ್ಫೋಟಗೊಳ್ಳುತ್ತದೆ ಎಂಬುದಕ್ಕೆ ಕೆಲವು ನಿದರ್ಶನಗಳನ್ನು ಗಮನಿಸಬಹುದು :

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ’        (ನಿತ್ಯೋತ್ಸವ)

ನಾಡ ದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ,
ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ,
ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ,
ಒಂದೆ ನೆಲದ ರಸ ಹೀರಲೇನು? ಸಿಹಿ, ಕಹಿಯ ರುಚಿಯ ಕಾಯಿ’.     (ನಾಡದೇವಿಯೆ)

ಮಲೆನಾಡ ಸೀರೆಗಿದೆ ಪಡುಗಡಲ ಚೆಲು ಸೆರಗು,
ಕೆನ್ನೆಗೋ ಸಂಜೆ ಬಾನ್ಗೆಂಪು ಬಣ್ಣ.
ನಿತ್ಯ ದೀಪೋತ್ಸವದ ರತ್ನದೊಡವೆಯ ಮೆರುಗು
ನೀನು ಕೃಪೆ ತೋರಿದಡೆ ಮಣ್ಣು, ಚಿನ್ನ’.    (ಕನ್ನಡಾಂಬೆಯ ಹಿರಿಮೆ)

ಕನ್ನಡವೆಂದರೆ ಬರಿ ನುಡಿಯಲ್ಲ,
ಹಿರಿದಿದೆ ಅದರರ್ಥ;
ಜಲವೆಂದರೆ ಕೇವಲ ನೀರಲ್ಲ,
ಅದು ಪಾವನ ತೀರ್ಥ.
ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನ ಬಿಲ್ಲು;
ರವಿ ಶಶಿ ತಾರೆಯ ನಿತ್ಯೋತ್ಸವವದು
ಸರಸತಿ ವೀಣೆಯ ಸೊಲ್ಲು’.        (ಕನ್ನಡ)

ಕನ್ನಡ ನಾಡಿನ, ಕನ್ನಡ ಭಾಷೆಯ ಸೌಂದರ್ಯದ, ಇತಿಹಾಸದ ಹಿರಿಮೆಯ, ನೋವು ನಗೆಗಳ ಭೇದ ಭಾವಗಳ ಮನ ಕಲಕುವ, ಮನ ಕುಣಿಸುವ, ಅಭಿಮಾನವನ್ನು ಉಕ್ಕೇರಿಸುವ ಮತ್ತು ಅದೇ ಸಂದರ್ಭದಲ್ಲಿ ನಮ್ಮ ನ್ಯೂನತೆಗಳ ಸಣ್ಣತನಗಳ ಬಗೆಗೆ ವಿಷಾದದಿಂದ ಚುಚ್ಚುವ ಎಚ್ಚರಿಸುವ ಭಾಷೆಯ ಆರ್ದ್ರತೆ ಆಪ್ತತೆಗಳು ಅತ್ಯಂತ ನವಿರಾಗಿ ಇಲ್ಲಿ ಜೀವ ಪಡೆದಿವೆ. ಸರಳ ಸಾಮಾನ್ಯ ಬಹು ಪರಿಚಿತವೆನ್ನಿಸುವ ಪದಗಳ ಮೂಲಕವೇ ಮುಟ್ಟಿದರೆ ಹನಿಯುವ, ಹೃದಯದಲ್ಲಿ ಹರಡಿಕೊಳ್ಳುವ, ಒಳಕ್ಕೆಳೆದು ಮೈ ನೇವರಿಸುವ ಭಾವಗಳು ಹರಳು ಹರಳಾಗಿ ಇಲ್ಲಿ ಕಂಡರಣೆಗೊಂಡಿವೆ. ಭಾವಕ್ಕೆ ತಕ್ಕ ಆಕಾರವನ್ನು ನೀಡಿ ಮುದಗೊಳಿಸುವ, ಅರಳಿಸುವ, ವಿಚಾರಮಗ್ನಗೊಳಿಸುವ, ಕಲ್ಪನೆಯ ಕನಸುಗಳನ್ನು ಸಜೀವಗೊಳಿಸಬಲ್ಲ ಈ ಭಾಷಾ ಸಾಮರ್ಥ್ಯ ಕವಿಗೆ ಸಿದ್ದಿಸಿರುವ ಸಹಜ ವರ.

ಪ್ರಕೃತ ಸಮಾಜದ ವಿಕೃತಿ ಮತ್ತು ಸುಕೃತಿಯ ವಿಸ್ತಾರ ದರ್ಶನವನ್ನು ಮೂಡಿಸುವ, ಆ ಪ್ರಯತ್ನದಲ್ಲಿ ತಮ್ಮ ಭಾಷೆಯನ್ನು ತಮ್ಮ ಅನಿಸಿಕೆಗಳಿಗೆ ಅನುಸಾರವಾಗಿ ಒಗ್ಗಿಸಿಕೊಳ್ಳುವ ಹಿಗ್ಗಿಸಿಕೊಳ್ಳುವ ಸಿಂಗರಿಸುವ, ಧ್ವನಿ ತರಂಗಗಳ ತವರು ಮನೆಯನ್ನಾಗಿಸುವ ವೈವಿಧ್ಯಮಯ ಕೌಶಲವನ್ನು ಹಲವು ಕವಿತೆಗಳಲ್ಲಿ ಈ ಕವಿ ತುಂಬ ಯಶಸ್ವಿಯಾಗಿ ಎರಕ ಹೊಯ್ದಿದ್ದಾರೆ:

ಕುರಿಗಳು, ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ
ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ,
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು, ನೀವು
ಕುರಿಗಳು ಸಾರ್, ಕುರಿಗಳು;
ನಮಗೊ ನೂರು ಗುರಿಗಳು’.       (ಕುರಿಗಳು ಸಾರ್ ಕುರಿಗಳು)

– ಹೀಗೆ ಕುರಿಮಂದೆಯಂತೆಯೇ ಒಂದಕ್ಕೊಂದು ಹೊಂದಿಕೊಂಡು ಅಂಟಿಕೊಂಡು ಬಿಟ್ಟೂಬಿಡದೆ ಸಾಗುವ ಕುರಿಗಳ ಚಿತ್ರ ನಮ್ಮ ವ್ಯಕ್ತಿತ್ವರಹಿತ ಜನತೆಯ ಸಮಾಜದ ಮೂಕ ಅನುಕರಣೆಯ ಅನನುಕರಣೀಯ ಜ್ವಲಂತ ಪ್ರತಿಮೆಯಾಗಿದೆ. ಕವಿ ಪದಗಳನ್ನು ವಾಕ್ಯಗಳನ್ನು ಸಾಲುಗಳನ್ನು ಅರ್ಥವತ್ತಾಗಿ ಲೀಲಾಜಲವಾಗಿ ಮುರಿದು ಮುರಿದು ಕಟ್ಟುವ ಬಗೆ ಚೇತೋಹಾರಿಯಾಗಿರುವುದರ ಜೊತೆಗೆ ನಮ್ಮ ನಿರ್ದಿಷ್ಟ ಗುರಿರಹಿತವಾದ ಮಹತ್ವಾ ಕಾಂಕ್ಷೆಯ ಸುಳಿವೂ ಸುಳಿಯೂ ಇಲ್ಲದ ನೀರಿನ ಮೇಲಿನ ಕಡ್ಡಿಯಂತಹ ನಿತ್ರಾಣ  ಬದುಕಿನ ಸಪ್ರಾಣ ವರ್ಣನೆಯೂ ಆಗಿದೆ. ಇಂತಹ ಜನರನ್ನು ಕಾಯುವ ಮೇಯುವ ನಾಯಕ ಗಣ ಪ್ರಾಣಾಪತ್ತು ಬರುವ ವಿಷಮ ಸಂದರ್ಭದಲ್ಲೂ ಜಗೃತರಾಗದೆ ದಿವ್ಯಜಡರಾಗಿ ಯಃಕಶ್ಚಿತ್ ಸ್ವಾರ್ಥ ವಿನೋದಗಳ ಲಘು ಚಕ್ಕಬಾರ ಆಟದಲ್ಲಿ ಮಗ್ನನಾಗಿರುವ ವ್ಯಂಗ್ಯದ ಹೃದಯವಿದ್ರಾವಕ ಸನ್ನಿವೇಶ ಸೃಷ್ಟಿ ನಮ್ಮ ಮುಖಂಡತನವನ್ನು, ಅವರ ಬುದ್ದಿ ಮಾಂದ್ಯ ವನ್ನು, ಭವಿಷ್ಯದ ಬಗೆಗಿನ ಕಾಳಜಿಯೇ ಇಲ್ಲದ ಹೊಣೆಗೇಡಿತನವನ್ನು ರಪರಪನೆ ಮುಖಕ್ಕೆ ರಾಚುವಷ್ಟು ನೈಜವಾಗಿ ಸಮರ್ಥವಾಗಿ ರೂಪುಗೊಂಡಿವೆ. ರಾಷ್ಟ್ರದ ಜನತೆಯ ದಯನೀಯ ರುಗ್ಣ ಸ್ಥಿತಿಯನ್ನು ಇದಕ್ಕಿಂತ ಧ್ವನಿಪೂರ್ಣವಾಗಿ ಚಿತ್ರವತ್ತಾಗಿ ಶಕ್ತಿಪೂರ್ಣವಾಗಿ ಬಣ್ಣಿ ಸುವುದು ಯಾರಿಗೂ ಅಸಾಧ್ಯವೆಂಬಂತೆ ಇಲ್ಲಿ ಕವಿ ನಿಸಾರ್ ಅವರ ಶೈಲಿ ತನ್ನ ಎಲ್ಲ ವೈವಿಧ್ಯದೊಡನೆ ವಿಜೃಂಭಿಸಿದೆ :

ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣು ಕುಕ್ಕಿ, ಸೊಕ್ಕಿರುವ ಹೋಗಿ ಹೋಗಿ ನೆಕ್ಕಿರುವ
ಕತ್ತನದಕೆ ತಿಕ್ಕಿರುವ
ನಾವು, ನೀವು, ಅವರು ಇವರು
ಕುರಿಗಳು, ಸಾರ್ ಕುರಿಗಳು!’     (ಕುರಿಗಳು, ಸಾರ್, ಕುರಿಗಳು)

ಆತ್ಮವಿನಾಶದ ನೋವು ವಿಷಾದ ನಿಸ್ಸಹಾಯಕತೆಗಳು, ಬೆನ್ನೆಲುಬಿಲ್ಲದ ನಿರ್ವೀರ್ಯ ಮನಸ್ಸುಗಳು, ಮಹತ್ವಾಕಾಂಕ್ಷೆಯೇ ಸೊನ್ನೆಯಾಗಿರುವ, ಶೋಷಣೆಯ ದಬ್ಬಾಳಿಕೆಯ ಪ್ರವಾಹದಲ್ಲಿ ಎಂಜಲು ದೊನ್ನೆಗಳಂತೆ ಗುರಿಯಿರದೆ ತೇಲುವ, ವ್ಯಕ್ತಿತ್ವವೇ ಅದೃಶ್ಯವಾಗಿರುವ ಜನ ಸಮುದಾಯವನ್ನು ಒಳಗೊಂಡಿರುವ ದೇಶದ ದುಃಸ್ಥಿತಿಯ ದುರಂತ ಚಿತ್ರಣ ಕವಿಯ ಭಾವ ಶಕ್ತಿಯ, ಚಿಂತನ ಶಕ್ತಿಯ, ಅಪರಿಮಿತ ಭಾಷಾ ಪ್ರಭುತ್ವದ ಅದ್ಭುತ ದ್ಯೋತಕವಾಗಿದೆ ಈ ಕವಿತೆ. ಭಾರವಾಗದ ತೋರವಾಗದ ಸರಳ ಭಾಷೆಯ ಪರಿಚಿತ ಪದರು ಪದರುಗಳನ್ನು ಬಿಚ್ಚುತ್ತ ಪದಗಳನ್ನು ನಿಪುಣ ಪಗಡೆಯಾಟಗಾರನಂತೆ ಲೀಲಾಜಲವಾಗಿ ಆಡಿಸುತ್ತ, ನಿಷ್ಣಾತ ಗೊಂಬೆಯಾಟಗಾರನಂತೆ ವರ್ಣರಂಜಿತವಾಗಿ ಜೀವಝುರಿ ಹರಿಯುವಂತೆ ಕುಣಿಸುತ್ತ, ಅತ್ಯಂತ ನಿರಾಯಾಸವಾಗಿ ಚಿಮ್ಮುವ ಹೊಮ್ಮುವ ಪ್ರಾಸ ಅನುಪ್ರಾಸಗಳ ದನಿ ಬನಿಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುತ್ತ, ಆಳವಾದ ನೋವು ವ್ಯಂಗ್ಯಗಳೊಡನೆ ಒಂದು ಪರಿಣಾಮಕಾರಿಯಾದ ರೂಪಕ ಲೋಕವನ್ನೇ ನಮ್ಮೆದುರು ತೆರೆದು ಬಿಡುವ ಈ ಶೈಲಿ ಅನನ್ಯ. ಅಲ್ಲಲ್ಲಿ ಪದಗಳ ದುಂದು, ಪ್ರಾಸಗಳ ಹಾವಳಿ, ಅತಿಯಾಯಿತೆನ್ನಿಸಿದರೂ ವಸಂತ ಋತುವಿನ ಮರದ ಮೈಯನ್ನು ಸಿಂಗರಿಸಿರುವ ಹೇರಳ ಚಿಗುರುಗಳಂತೆ ನಮ್ಮನ್ನು ಮೋಹಿಸುತ್ತವೆ, ನಿಷ್ಪ್ರಶ್ನರನ್ನಾಗಿ ಮಾಡುತ್ತವೆ.

ಇದು ಸೃಷ್ಟಿ, ಕಪಿಮುಷ್ಟಿ;
ಮಂತ್ರ ಮರೆತಲಿಬಾಬನೆದುರಲ್ಲಿ ಮುಚ್ಚಿರುವ ಗವಿ ಬಾಗಿಲು.
ಉಸಿರಿನರವತ್ತೆಂಟು ಕೋಟಿ ಬಿಡಿ, ಬಿಡಿ ನೂಲು
ಗಂಟು ಗಂಟಾಗಲ್ಲಿ ಗೋಜು ಗೋಜಲ ಮಜಲು
ನಡುವೆ ನೇತಾಡುತಿದೆ ನವಿರು ನವಿರಾದೆಳೆಯ
ಒಂಟಗೂದಲ ಮೂಲ’.           (ಕಂಡಷ್ಟೇ ಸತ್ಯವಲ್ಲ)

– ಸೃಷ್ಟಿಯ ರಹಸ್ಯದ ಗಂಭೀರ ಶೋಧವನ್ನು ಕೇಂದ್ರವಾಗಿರಿಸಿಕೊಂಡ ಈ ಕವಿತೆಯ ತುಂಬ ಪ್ರತಿಮಾ ಪ್ರಪಂಚ ಕಿಕ್ಕಿರಿದಿದೆ. ಸರಳ ಸುಭಗ ಮಧುರ ಸಹಜ ಶೈಲಿಯ ಮೂಲಕ ಕನ್ನಡಿಗರ ಮನಸ್ಸನ್ನು ಸೂರೆಗೊಂಡ ಈ ಕವಿ, ನವ್ಯಕಾವ್ಯದ ಉಬ್ಬೇರಿಕೆಯ ಕಾಲದಲ್ಲಿ ಆ ಕಾವ್ಯಪಂಥದ ನೇತಾರರ ಹುಬ್ಬೇರುವಂತೆ ಮಾಡುವ ವಿಶಿಷ್ಟ ವಿಧಾನವನ್ನು ಇಲ್ಲಿ ಬಳಸಿ ಕೊಂಡಿದ್ದಾರೆ. ನವೋದಯದ ಸರಳ ಮನೋಹರ ಭಾವಬಂಧುರ ಪಥದಲ್ಲಿ ನಡೆದೋಡಿ ಅಭ್ಯಾಸವಾದವರಿಗೆ ಈ ದಾರಿ ಸುಗಮವಲ್ಲ. ಆದರೆ ಇಲ್ಲಿ ಕವಿ ಆ ನೂತನ ಕಾವ್ಯ ಮಾರ್ಗವೂ ತಮ್ಮ ಸೃಜನಶೀಲ ಪ್ರತಿಭೆಗೆ ಎಟುಕದೇ ಇರುವಂಥದ್ದಲ್ಲ ಎಂಬುದನ್ನು ಸಾಬೀತು ಪಡಿಸಲು ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ. ಮಾತುಗಳನ್ನು ಗಿಡಿಗಿಡಿದು ತುಂಬುವ, ಅವುಗಳ ಮೂಲಕ ಹೊಸ ಸಂಯೋಜನೆ ಸಂಕಲನ ವ್ಯವಕಲನ ಗುಣಾಕಾರಗಳ ದಾರಿಯಲ್ಲಿ ಭಾಷೆಯನ್ನು ಮಿದಿಯುವ, ಮಿಡಿಮಿಡಿದು ಹದಗೊಳಿಸಿ ಅರ್ಥಪೂರ್ಣ ಪ್ರತೀಕ ಪ್ರತಿಮೆಗಳನ್ನು ನಿರ್ಮಿಸಿ ನಾನಾರ್ಥಗಳನ್ನು ಹೊಮ್ಮಿಸುವ, ಬುದ್ದಿಪೂರ್ವಕವೆಂದು ಮೇಲುನೋಟಕ್ಕೆ ಅನ್ನಿಸದ ರೀತಿಯಲ್ಲಿ ಶೈಲಿಯನ್ನು ಮಾರ್ಪಡಿಸಿಕೊಳ್ಳುವ ಪ್ರಯತ್ನ ಇಲ್ಲಿ ನಿಚ್ಚಳವಾಗಿದೆ.

ಕಾವ್ಯರಚನೆಯ ಹಾದಿಯಲ್ಲಿ ಹಲವು ಬಗೆಯ ಮೈಲಿಗಲ್ಲುಗಳನ್ನು ನೆಡುವ ನಿರಂತರ ಕಾಯಕದಲ್ಲಿ ಪ್ರಯೋಗಶೀಲರಾದ ಈ ಕವಿ ತಮ್ಮ ಮನಸ್ಸು ಮೆಚ್ಚಿದ, ನಾಡಿನ ಬದುಕನ್ನು ಹಸನುಗೊಳಿಸಲು ಯತ್ನಿಸಿದ ವ್ಯಕ್ತಿತ್ವಗಳನ್ನು ಕುರಿತೂ ತಮ್ಮ ನುಡಿಯ ಗೌರವವನ್ನು ಅತ್ಯಂತ ಆರ್ದ್ರವಾಗಿ ಆಕರ್ಷಕವಾಗಿ ಮತ್ತು ವಿಶಿಷ್ಟ ಚಿತ್ತವತ್ತಾಗಿ ನಿವೇದಿಸಿದ್ದಾರೆ. ಪುರಂದರದಾಸರನ್ನು ಕುರಿತ ಈ ಕವಿತೆಯನ್ನು ನೋಡಿ :

ದಾಸರೆಂದರೆ ನಮ್ಮ ವರ ಪುರಂದರರಯ್ಯ;
ಇದ್ದು ಇಲ್ಲೇ, ಅಲ್ಲಿಗೇರಿದವರು.
ಸಹಜ ಮುಕ್ತಿಯ ನೌಕೆ ಬರುವವರೆಗೂ ಇಲ್ಲೆ
ಈಸಿದವರು, ಇದ್ದು ಜೈಸಿದವರು’.

*          *          *

ಕವಿಯಂತೆ ಆಡಿದರೆ? ಇಲ್ಲಿಲ್ಲ, ತಮ್ಮನ್ನೆ
ಮಿಡಿಸಿದರು, ನುಡಿಸಿದರು ಪ್ರಾಣ ದುಡುಕಿ;
ಹಾಡಿದರೆ? ಅಲ್ಲಲ್ಲ, ಭಕ್ತಿಯನೆ ಕಾಡಿದರು
ಮನವ ಜಲಾಡಿದರು ಹರಿಯ ಹುಡುಕಿ

*          *          *

ಬೇರೆ ಸ್ಮಾರಕ ಬೇಕೆ ಇವರಂಥ ಭಕ್ತರಿಗೆ?
ಎಲ್ಲರನ್ನೂ ಸೇರಿದಂಥವರಿಗೆ?
ಬೇರೆ ಬಣ್ಣನೆ ಯಾಕೆ ಇಂಥ ಮುಕ್ತರಿಗೆ?
ಎಲ್ಲವನ್ನೂ ಮೀರಿ ನಿಂತವರಿಗೆ?’ (ಪುರಂದರದಾಸರು)

ಸರಳತೆಗೆ ಸತ್ವಪೂರ್ಣತೆಗೆ ಊರ್ಧ್ವಮುಖ ಚೇತನಗಳಿಗೆ ಭಾಷೆಯ ಬಣ್ಣನೆಯ ಉಡುಪು ತೊಡಪುಗಳು ಅಗತ್ಯವಿಲ್ಲ. ಅವರ ಬದುಕೇ ಒಂದು ಅನನ್ಯ ಕವಿತೆ. ಅಂತೆಯೇ ಕವಿ ಇಲ್ಲಿ ಸರಳಾತಿಸರಳವಾದ ನಿರಾಡಂಬರವಾದ ಸಹಜ ಸಮರ್ಥ ಪದ ಸಂಯೋಜನೆಯ ಮೂಲಕ, ಜನಪದ ಶಿಲ್ಪಿಯೊಬ್ಬ ತನ್ನ ಮೆಚ್ಚಿನ ದೇವತೆಗೆ ಭಾವಭಕ್ತಿಪೂರ್ಣವಾದ ನಿರಲಂಕಾರವಾದ ಧ್ವನಿರಮ್ಯ ಆಕೃತಿಯನ್ನು ಮನದುಂಬಿ ಕೊಡುವಂತೆ, ಪುರಂದರರ ವ್ಯಕ್ತಿತ್ವವನ್ನು ಕಡೆದುಕೊಟ್ಟಿದ್ದಾರೆ. ಮೇಲಿನ ಸಾಲುಗಳು ಸರಳತೆಯಲ್ಲೂ ಎಂತಹ ಸಹಜ ಸೌಂದರ್ಯ, ಶಕ್ತಿ ಮತ್ತು ವಿರಳ ಆಲೋಚನೆಗಳು ತುಂಬಿಕೊಳ್ಳಬಹುದೆಂಬುದಕ್ಕೆ ನಿದರ್ಶನವಾಗಿದೆ.

ಮಾಸ್ತಿಯವರ ಸರಳ ಗಂಭೀರ ಆದರ್ಶಮೂರ್ತಿಯನ್ನು ಕವಿ ಕೆತ್ತಿಡುವ ರೀತಿಯಿದು:

ವಯಸು ಅನುಭವ ಹೂಡಿ ಸುಖ ದುಃಖ ಬೆಳೆದ ಮುಖ,
ಹಿಂದೊಮ್ಮೆ ನೆಲೆಸಿದ್ದ ಬೆಳಕ ಕನವರಿಸುತಿಹ ಮಂದಗಣ್ಣು;
ಸಾಂತ್ವನವ ನುಡಿದಿರುವ ಹಳೆ ನಮೂನೆಯ ಚಶ್ಮ;
ಅದೇ ಕೊಡೆಯ ಗದೆ’….
…………………………………………….
ಇವರು ನನ್ನೆದುರಲ್ಲಿ ಹಾದು ಹೋದಾಗೆಲ್ಲ
ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆಯೊಂದು ನಗರಕ್ಕೆ ಸಂದಂತೆ,
ಬೆಳಗಾಗ ಚಳಿಯಲ್ಲಿ ಬಿಸಿ ನೀರ ಮಿಂದಂತೆ
ಎದೆ ಸ್ವಚ್ಛಗೊಳ್ಳುತ್ತದೆ; ಹಗುರಕ್ಕೆ ಸಲ್ಲುತ್ತದೆ’…
………………………………………….
ಕೂಗು ಹುಸಿ ಮುನಿಸುಗಳ ನಡುವೆ ತುಟಿಗಳ ಮೊಗ್ಗೆ
ಬಿರಿಸಿ ನಕ್ಕಾಗಿವರು, ಥೇಟ್ ಜುಲೈ ತಿಂಗಳಿನ ಶಿವಮೊಗ್ಗೆ:
ಚಣಕ್ಕಷ್ಟು ಚಳಿ ನೂಲು, ಒಂದಿಷ್ಟು ಹೂ ಬಿಸಿಲು,
ಹೊರಗೆ ಕಚಪಿಚ ಕೆಸರು, ಒಳಗೆ ಬೆಚ್ಚನೆ ಸೂರು’.
…………………………………………………
ಮರೆಯಾಗುವರು ಮಾಸ್ತಿ
ಸಂದ ಜೀವನದೊಂದು ರೀತಿಯಂತೆ;
ಸರಳ ಸದಭಿರುಚಿಯ ಖ್ಯಾತಿಯಂತೆ’       (ಮಾಸ್ತಿ)

ಈ ಕವಿತೆಯ ಒಂದೊಂದು ಮಾತೂ ಎಚ್ಚರ ಚಚ್ಚರದಿಂದ ಆಯ್ದು ಜೋಡಿಸಿ ಕಟ್ಟಿದ ಅಣಿಮುತ್ತು. ಈ ಕವಿತೆಯಲ್ಲಿ ಎಲ್ಲೂ ಭಾಷೆಯ ಅಬ್ಬರವಿಲ್ಲ, ಉಪಮೆ ರೂಪಕ ಪ್ರತಿಮೆಗಳನ್ನು ತಿಣುಕಿ ಚಿಂತಿಸಿ ಕಸರತ್ತಿಸಿದ ಆಯಾಸಕಾಯಕವಿಲ್ಲ, ಒಣ ಪಾಂಡಿತ್ಯದ ಪ್ರದರ್ಶನವಿಲ್ಲ, ನಿಸಾರರ ಕೆಲವು ಕತೆಗಳಲ್ಲಿ ರೂಹುದೋರಿ ಮೆರೆಯುವ ಮೊರೆಯುವ ಪ್ರಾಸಚಾಪಲ್ಯ ಪದಮೋಹಗಳಿಲ್ಲ. ಭಾಷೆ ಹಿಂದೆ ಸರಿದು ಆ ವ್ಯಕ್ತಿತ್ವದ ಗೌರವಕ್ಕೆ, ಪ್ರೀತಿಗೆ, ಅಭಿಮಾನಕ್ಕೆ, ಪ್ರಭಾವಕ್ಕೆ, ಸಾಧನೆಗೆ ಅರ್ಹವಾದ ಅರ್ಥಪೂರ್ಣವಾದ, ಧ್ವನಿಗೆ ಧ್ವನಿ ಮರಿ ಹಾಕುವ, ಪದ ವರ್ಣಗಳು, ಆರೋಗ್ಯವಂತ ದೇಹದಲ್ಲಿ ಹರಿಯುವ ರಕ್ತದಂತೆ ಕಣಕಣದಲ್ಲೂ ಚಿಮ್ಮುವ ಜೀವ ಕಾರಂಜಿಯಂತೆ – ತಮಗೆ ತಾವೇ ನೆಯ್ದುಕೊಂಡು ಕನ್ನಡದಲ್ಲಿ ಅನನ್ಯವಾದ ಒಂದು ಭಾವಶಿಲ್ಪವನ್ನು ನಿರ್ಮಿಸಿವೆ. ಇಡೀ ಕವಿತೆ ಅವರ ವ್ಯಕ್ತಿತ್ವದ ಅನೂನ ಜೀವಂತ ಜೀವನ ಚರಿತ್ರೆಯಾಗಿದೆ. ಕನ್ನಡದಲ್ಲಿ ಚಿರ ಶಾಶ್ವತವಾಗಿ ನಿಲ್ಲುವ, ನಿಸಾರರ ಕಾವ್ಯಶಕ್ತಿಯ ಸರಳೋಜ್ವಲ ವ್ಯಾಖ್ಯಾನವೆನ್ನಿಸುವ ಅಪರೂಪದ ಕವಿತೆ ಯಿದು.

ಗಾಂಧೀಜಿಯವರನ್ನು ಮೂರ್ತಿಸಿದ ಈ ಕವಿತೆಯನ್ನು ಗಮನಿಸಿ :

ಲೋಕಕೇ ಕಣ್ಣಾದ ಬೆಳುದಿಂಗಳು
ಮನೆಯ ಬೆಳಗಿಲ್ಲೆಂದು ಕೂಗಾಡಲೆ,
ಹೊತ್ತಿಸದೆ ದೀಪ?
ಮೇರೆಯಿಲ್ಲದ ಕಡಲು ನನ್ನ ಬಾಯಾರಿಕೆಯ
ತಣಿಸಲಿಲ್ಲೆಂದು ರೇಗಾಡಲೆ,
ತೋಡದೆಯೆ ಕೂಪ?
………………..
ಕೊನೆತನಕ ದೇಶವೇ ನಿನ್ನ ಜೊತೆಯಲ್ಲಿ;
ಬೆಟ್ಟವೇರಿದ ಹಾಗೆ ನಟ್ಟಿರುಳಿನಲ್ಲಿ.

*          *          *

ಹೆಳವ ನಡಿಗೆಯ ಹೊಳೆಗೆ ಇದ್ದಕಿದ್ದಂತೆ ಮಳೆ ಹೊಯ್ದು
ಮನೆ ಮಠಗಳೆಲ್ಲ ತೆಪ್ಪ ತೇಲುತ್ತವೆ’.

*          *          *

ಲೋಕವನೆ ದಹಿಸಿರುವ ಸೂರ್ಯನಿಗೆ ತಡೆಯಾಗಿ
ನಿನ್ನ ಕೊಡೆ ನೆತ್ತಿಯನು ಕಾಯುತಿರಲಿ;
ಕಾದ ಹಾದಿಯ ನಡೆಯೆ ಸ್ವಾನುಭವ ಕೆರವಾಗಿ
ಸ್ವಂತ ಜೀವನದೊಡನೆ ತೇಯುತಿರಲಿ’.   (ಬಾಪು)

ಗಾಂಧೀಜಿಯವರ ವ್ಯಕ್ತಿತ್ವದ ಮಹಾಸತ್ವ ಸಾಮರ್ಥ್ಯ ಪ್ರಮಾಣಗಳನ್ನು ವರ್ಣಚಿತ್ರದಂತೆ, ಭವ್ಯ ಶಿಲ್ಪದಂತೆ, ಹರಿಯುವ ಹೊಳೆಯಂತೆ, ಮೊರೆಯುವ ಮಹಾ ಸಮುದ್ರದಂತೆ ತೆರೆದು ಕೊಂಡ ನೀಲಾಕಾಶದಂತೆ, ಜ್ವಲಿಸುವ ಸೂರ್ಯನಂತೆ, ಮಿನುಗುವ ದೀಪದಂತೆ, ಬಡವರ ಗುಡಿಸಲಿನಂತೆ, ತಣ್ಣನೆಯ ಬೆಳುದಿಂಗಳಿನಂತೆ ವಿವಿಧ ಆಯಾಮಗಳಲ್ಲಿ ಹೃದ್ರಮ್ಯವಾಗಿ ಕೆತ್ತಿ ನಿಲ್ಲಿಸಿದ ಒಂದು ಮಹಾರೂಪಕ ಇದು. ಗಾಂಧೀಜಿಯ ವ್ಯಕ್ತಿತ್ವ ನಿಧನಿಧಾನವಾಗಿ ತಡೆಯಿಲ್ಲದೆ ಜಗದಗಲ ವ್ಯಾಪಿಸಿ ಸತ್ಯ ಅಹಿಂಸೆ ವೈಯಕ್ತಿಕ ಚಾರಿತ್ರ್ಯ ಭೂವ್ರೋಯಾಗಿ, ವ್ಯಕ್ತಿಜೀವಗಳ ಜೊತೆಜೊತೆಗೇ ರಾಷ್ಟ್ರಜೀವನವನ್ನೂ ಉದಾತ್ತೋನ್ನತವಾಗಿ ಎತ್ತಿಹಿಡಿದ ಭೌಮಿಕ ಭವ್ಯಚಿತ್ರ ಇಲ್ಲಿದೆ. ಅವರ ಮಾನವ ಜೀವನದ ಸಿಹಿಕಹಿ ಹುಳಿ ದಾಟು ಮೀಟುಗಳ ಮಹಾಮಾಟದ ಮಜಲುಗಳನ್ನು ನಾಲ್ಕು ಪುಟಗಳ ಕವಿತೆಯಲ್ಲಿ, ಭಾಷೆ ಸಂಯಮದ ರಸಪರಿಧಿಯನ್ನು ಮೀರಿ ವಾಚಾಳಿಯಾಗದಂತೆ, ಅತಿ ಜಿಪುಣತನದಿಂದ ಅಸ್ಪಷ್ಟವಾಗದಂತೆ ಅಥವಾ ಕ್ಲಿಷ್ಟವಾಗದಂತೆ, ಅತಿ ಆರಾಧನೆಯ ಮೋಹಕ್ಕೆ ಬಿದ್ದು ಜಳಾಗದಂತೆ ಅಥವಾ ನೀರಾಗದಂತೆ, ಹಳೆಯ ಪದಗಳಿಗೆ ಹೊಸ ಅರ್ಥವನ್ನು ತುಂಬುತ್ತ, ಹೊಸ ಹೊಳಪು ಝಳಪುಗಳನ್ನು ಆಹ್ವಾನಿಸುತ್ತ, ನವ ಪದಗಳನ್ನು ಉತ್ಸಾಹದ ಉದ್ದೀಪನ ದಿಂದ ಉನ್ಮೀಲಿಸುತ್ತ, ಕಲ್ಪನೆಯ ಮಿಂಚಿನೊಳಗೆ ಮಹಾತ್ಮರ ಜೀವನಾನುಸಂಧಾನದ ತಾತ್ವಿಕ ವಿಶಿಷ್ಟತೆಯ ಅಸಾಧಾರಣತೆಯನ್ನು ಸಂಲಗ್ನಗೊಳಿಸುತ್ತ ಅದರ ಜೀವರೇಖೆಗಳನ್ನು ಉಜ್ವಲವಾಗಿ ಎತ್ತಿ ಹಿಡಿಯುವಲ್ಲಿ ಕವಿ ಅತ್ಯುತ್ತಮ ಕಲಾಕೌಶಲವನ್ನು, ಭಾಷಿಕ ಪರಿಣತಿಯನ್ನು ಯಶಸ್ವಿಯಾಗಿ ಮೆರೆಯುತ್ತ ಕನ್ನಡದ ಗಾಂಧೀ ಸ್ಮರಣೆಗೆ ಒಂದು ಅನುಪಮ ಸ್ಮಾರಕವನ್ನು ಕೆತ್ತಿಬಿಟ್ಟಿದ್ದಾರೆ.

‘ಬಸವೇಶ್ವರರು’, ‘ಶ್ರೀ ಶಾರದಾದೇವಿ’, ‘ಭೀಮಪ್ಪ ಮಾಸ್ತರರು’. ‘ರವೀಂದ್ರನಾಥ ಠಾಕೂರರು’, ‘ಮದರ್ ತೆರೆಸ’ ಈ ಕವಿತೆಗಳೂ ಕೂಡ ವ್ಯಕ್ತಾಂತರಂಗದ ವಿಶಿಷ್ಟ ಅನಾವರಣದ ಸಾರ್ಥಕ ಸೃಷ್ಟಿಗಳಾಗಿವೆ. ಈ ಎಲ್ಲ ವ್ಯಕ್ತಿಗೀತೆಗಳಲ್ಲಿ ಆಯಾ ವ್ಯಕ್ತಿಗಳ ಅನನ್ಯತೆಯನ್ನು ಬಿಂಬಿಸುವ ಬಹುಮುಖ ಭಾಷಾ ಸಾಮರಸ್ಯ-ಸಮನ್ವಯಗಳು ಕೈಯಿಂದ ಮುಟ್ಟುವಷ್ಟು, ಕಣ್ಣಿಂದ ಕಾಣುವಷ್ಟು ತಾಜತನವನ್ನು ಮೈದುಂಬಿಕೊಂಡಿವೆ.