ಕವಿಯ ಆತ್ಮಶೋಧನ ಆತ್ಮವಿಶ್ಲೇಷಣೆಯ ರೇಸಿಮೆಯೆಳೆಗಳಾಗಿ ಮೂಡಿಬಂದ ಕವಿತೆ ಗಳು ಅವರ ಸ್ವಂತ ಜೀವನಾಲೋಚನೆಗಳ ಆಪ್ತತೆಯನ್ನು ಹತ್ತಿರದಿಂದ, ದೂರದಿಂದ, ಮಧ್ಯಂತರದಿಂದ ಒರೆಗಿಕ್ಕಿಕೊಂಡ ವಿಮರ್ಶೆಯ ಫಲಿತಗಳಾಗಿವೆ. ಕವಿ ತನ್ನ ಹೊರಗಿನ ಜಗತ್ತನ್ನು ತನ್ನ ಕವಿ ನೋಟದ ವಿಶಿಷ್ಟ ಚೌಕಟ್ಟಿನಲ್ಲಿ ಬಂಧಿಸಿಡುವುದು ಒಂದು ಬಗೆಯ ಅಭಿವ್ಯಕ್ತಿಯೊಡನೆ, ತನ್ನನ್ನೇ ನೋಡಿಕೊಂಡ, ಕಂಡುಕೊಂಡ ಒಳಹರಿವು ಮುರಿವುಗಳನ್ನು ಕತ್ತಲು ಬೆಳಕುಗಳನ್ನು ನಿವೇದಿಸಿಕೊಂಡ ಹಾಗೂ ಅವುಗಳ ಒಳಿತು ಕೆಡುಕುಗಳನ್ನು ನಿರ್ಮಮವಾಗಿ ಬೆತ್ತಲಿಸಿದ ಒಳನೋಟಗಳು ಇಲ್ಲಿ ದಾಖಲಾಗಿವೆ :

ನಾನು
ದಿಗ್ದಿಗಂತದ ಬೆಳ್ಳಿಗೆರೆಗೆ ಆಶಿಸಿದವನು.
ಕಲ್ಲಲ್ಲಿ ಸಿರಿ, ನೆಲದಲ್ಲಿ ಝುರಿ, ಕಾಡೊಳಗು ದಾರಿಯನು ಕನಸಿದವನು,
ನಗುವ ಭಡವರ ನಡುವೆ ಎಡವಿಬಿದ್ದರು, ಎದ್ದು
ಗೆದ್ದು ಬರುವೆನು ಎಂದು ಕಾರವಾನಿನ ಸೇನೆ ಜೊತೆಗೆ ಹೊರಟವನು’.

*          *          *

ಚೆಲುವು ಮೋಡದ ಮರೆಗೆ ಸಿಡಿಲ ಕಾರ್ಖಾನೆ
ಇರುವುದನು ನಂಬುವುದು ಹೇಗೆ ತಾನೆ?’

*          *          *

ತೆರೆದ ಬಾಗಿಲು ಬಾಯಿ: ಬೆರಳು ಮೂಗಿನ ಮೇಲೆ, ಮನಸು ಮೂಕ
ದೂರ ದಂಡೆಯ ಮೇಲೆ ಮೂಡುಬಣ್ಣದ ಹೆಜ್ಜೆ
ಮಣ್ಣು ಮರಗಿಡಕೆಲ್ಲ ಎಂಥದೋ ಲಜ್ಜೆ!’

*          *          *

ಪಡುವಣದ ಬೆಟ್ಟಗಳ ಮೇಲೆ ನೆಟ್ಟಿತು ಸಂಜೆ ತನ್ನ ವಿಜಯ ಪತಾಕೆ.
ಕಡಲ ಮಡಿಲನು ಹೊಕ್ಕೆ;
ಮನಸಿನಾಸೆಗೆ ಮೂಡಿ ಬಂತು ರೆಕ್ಕೆ;’

*          *          *

ಗಳಿಗೆ ಗಳಿಗೆಗೂ ನನ್ನ ಬಾಳ ತುಳಿಯುತಲಿರುವ
ನೆರಳ ಸಪ್ಪಳ ಜಗಕೆ ಕೇಳದೇಕೆ?
ನಾನಿಷ್ಟೆ ಲೋಕಕ್ಕೆ:
ತೇದಂತೆ ಕರಗುವ ಗಂಧದೊಂದು ಚಕ್ಕೆ!’
(ಇಪ್ಪತ್ತನೆಯ ಶತಮಾನದ ಕೊಲಂಬಸ್)

ಕವಿಯ ವ್ಯಕ್ತಿತ್ವ, ಅವರ ಕನಸು ಮನಸುಗಳು, ನಿರಾಶೆ ವಿಷಾದಗಳು, ಆದರ್ಶದ ಹಂಬಲದೊಡನೆ ಬೆರೆತ ತಣ್ಣನೆಯ ಆಕ್ರೋಶರಹಿತ ನೋವಿನ ಮಂಜು ಎಳೆಗಳು ಇಲ್ಲಿ ತಮ್ಮ ಅಂತರಂಗವನ್ನು ತೆರೆದಿಟ್ಟಿರುವ ರೀತಿ ಸಹೃದಯರ ಮನಸ್ಸಿನಾಳಕ್ಕೆ ನಾಟಿ ಸಮಾಜದ ಬಗೆಗಿನ ನೋಟವನ್ನು ವಿಸ್ತೃತಗೊಳಿಸುತ್ತವೆ, ಗಾಢಗೊಳಿಸುತ್ತವೆ. ದಿಗಂತದ ಬೆಳ್ಳಿಗೆರೆಗಾಗಿ ಆಶಿಸಿ, ಕಲ್ಲಿನಲ್ಲಿ ಸಿರಿಯನ್ನು ನೆಲದಲ್ಲಿ ಝರಿಯನ್ನು ಬಯಸಿ, ಸೌಂದರ್ಯ ಸಮೃದ್ಧ ಕಾಡು ದಾರಿಯನ್ನು ಬಯಸುವ ಮನಸ್ಸಿಗೆ, ಅದರ ಹಿಂದೆ ಅಡಗಿರುವ ಸಿಡಿಲಿನ ಕಾರ್ಖಾನೆಯ ಅರಿವು ಎಂಥ ಆಘಾತ ಮಾಡಿದೆ! ತಾವೇನೇ ಮಾಡಿದರೂ ಗಂಧದ ಚಕ್ಕೆಯಂತೆ ಬದುಕು ತೇಯುವುದೊಂದೇ ಎಂಬ ವಿಷಣ್ಣತೆಯ ಭಾವ ಕವಿಯನ್ನು ಮಾತ್ರವಲ್ಲ, ಓದುಗರನ್ನೂ ಮುತ್ತುವಂತೆ ಮಾಡಿ ವಿಚಾರದ ಸುಳಿಗೆ ನೂಕುವಲ್ಲಿ ಯಶಸ್ವಿಯಾಗಿದೆ. ಈ ಆಸೆ-ನಿರಾಸೆಗಳನ್ನು ಎಷ್ಟು ಮೋಹಕವಾಗಿ, ಪರಿಣಾಮಕಾರಿಯಾಗಿ ಸಹಜ ಸಮರ್ಥ ಧ್ವನಿಪೂರ್ಣ ರೂಪಕಗಳ ಮೂಲಕ ಈ ಕವಿ ಅಭಿವ್ಯಕ್ತಿಸಬಲ್ಲರು ಎಂಬುದಕ್ಕೆ ಇಂಥ ನೂರು ನೂರು ನಿದರ್ಶನಗಳು ಇವರ ಕಾವ್ಯದಲ್ಲಿ ಕಣ್ಣು ಹಾಯಿಸಿದ ಕಡೆಗಳಲ್ಲಿ ಸೂರೆಯಾಗಿವೆ. ಇಲ್ಲಿ ಭಾಷೆಯ ಆಕೃತಿ ಕರಗಿ ಭಾವಾಲೋಚನೆಗಳ ಆತ್ಮ ದಿಗ್ದರ್ಶನವಾಗುತ್ತದೆ.

ಸ್ವಾಮಿ, ನಾನೆನ್ನುವ ಅಸ್ತಿತ್ವದ ಚೂರಿನಸ್ಪಷ್ಟ
ಅರ್ಥೈಸುವುದು ದೇಶದ ಹವಾಮಾನದಂತೆಯೇ, ಕಷ್ಟ’. (ನಾನೆಂಬ ಪರಕೀಯ)

– ಎಂದು ಕೊನೆಯಾಗುವ ‘ನಾನೆಂಬ ಪರಕೀಯ’ ಕವಿತೆ ತನ್ನ ಸರಳವೆಂದು ಕಾಣುವ ಒಡಲಿನಲ್ಲಿ ಅಡಗಿಸಿಕೊಂಡಿರುವ ವ್ಯಂಗ್ಯ ವಿಷಾದ ನಾಸ್ತಿಕತೆಗಳು ಎಂಥ ಮೊನಚು ಮುಳ್ಳಾಗಿ, ರಕ್ತ ಹರಿಸದೆ ಗಾಯ ಮಾಡುವ ಗುಪ್ತ ಚೂರಿಯಾಗಿ, ಜಲೆಯಾಗದ ಒಳ ಉರಿಯಾಗಿ, ಚಿನ್ನದ ಬಟ್ಟಲಿನ ವಿಷವಾಗಿ ಪರಿಣಮಿಸಿ ನಮ್ಮ ಅಂತರಂಗವನ್ನು ಕಲಕಿ ಬಿಡುತ್ತದೆ! ಕವಿ ತಮ್ಮ ಭಾವಾಲೋಚನೆಗಳನ್ನು ಹೆರಲು ಹೊರಲು ಸರಳ ಭಾಷೆಯಿಂದಲೇ ಪ್ರತಿಭಾಪೂರ್ಣ ವಾಗಿ ಸೃಷ್ಟಿಸಿಕೊಂಡ ತಾಯ ಗರ್ಭವಾಗಿದೆ ಇದು.

– ಪ್ರೀತಿ ಪ್ರೇಮ ಸ್ನೇಹಗಳನ್ನು ಕುರಿತ ನಿಸಾರರ ಕವಿತೆಗಳು ಅವರ ಭಾವ ಜಗತ್ತಿನ ವಿಶಿಷ್ಟ ಮುಖಗಳನ್ನು ಅತ್ಯಂತ ಹೃದಯಂಗಮವಾದ ಕೋಮಲವಾದ ಚಿತ್ರಪೂರ್ಣ ಶೈಲಿಯಲ್ಲಿ ಕಡೆದು ಮೂಡಿಸಿವೆ :

ಗದ್ದೆ ನೆಲ್ಲ ಮೆದ್ದ ನವಿಲು ಉದುರಿಸುವ ಗರಿಯು ಪ್ರೀತಿ;
ಕೆರೆಯ ತೆರೆಯ ಪುಟ್ಟ ಬೆರಳ ಕೆಂಪು ಹರಳು ಕಮಲ ಪ್ರೀತಿ’.
ವಿಧಿಯ ಭಾಗ್ಯಲಿಖಿತದಲ್ಲಿ ಮಸಿಯ ಕಿರಿಯ ಚಿತ್ತು ಪ್ರೀತಿ;
ಕದಿಯ ಬಂದ ಬೆಕ್ಕು ಹಾಲ ಪಾತ್ರೆ ಕೆಡವಿದಂದ ಪ್ರೀತಿ’.
……………………………………………….
ನಿನ್ನ ಹಾಲುಗೆನ್ನೆ ತುಂಬ ಕೆನೆಗಟ್ಟಿದ ಮುನಿಸು ಪ್ರೀತಿ;
ನಿನ್ನ ಕಣ್ಣಿನಾಳದಂಚ ಮೀನ ಮಿಂಚ ಹೊರಳು ಪ್ರೀತಿ’.
……………………………………………….
ಯಾರೊ ಉಡುವ ವಸ್ತ್ರಕಾಗಿ ರೇಷ್ಮೆ ಹುಳದ ತ್ಯಾಗ ಪ್ರೀತಿ;
ಸ್ವಂತ ಅನ್ಯ ಎಣಿಸದೇಕನೀತಿ ಹಕ್ಕಿ ಕಾವ ಪ್ರೀತಿ’.

– ಪ್ರೀತಿಯ ನಾನಾ ರೂಪ ಸ್ವರೂಪಗಳನ್ನು ಅದರ ಗರಿ ಮುದುರಂತೆ, ಹೊಳಪು ಮಾಸದಂತೆ ಮಾರ್ದವತೆ ಮಂಕಾಗದಂತೆ, ಮುಟ್ಟಿದರೆ ಮಲಿನವಾಗಬಹುದಾದ ತಾಜತನದಲ್ಲಿ ಹಾಳೆ ಗಳಲ್ಲಿ ಪಲ್ಲವಿಸುವ ಈ ಶೈಲಿ ಅನನ್ಯವಲ್ಲದಿದ್ದರೆ ಮತ್ತಾವುದು? ನಮ್ಮ ಚಿತ್ತದಲ್ಲಿ ತನ್ನ ಪ್ರತಿ ಚಿತ್ರದ ಸುತ್ತ ಜೀವದುಂಬುವ ಕೋಮಲತೆ, ಅನುಭವಸಮೃದ್ಧ ಸೂಕ್ಷ್ಮ ಕುಸುರಿಗೆಲಸದ ನಿಪುಣತೆ, ಮೈದುಂಬಿಕೊಂಡ ಸಾವಿರ ಸಾವಿರ ಮಲ್ಲಿಗೆಗಳನ್ನು ತನ್ನ ದೇಹವನ್ನು ನಸುನಡುಗಿಸುವ ಮೂಲಕ ನೆಲದ ಮೇಲೆ ಸುರಿಯುವ ಬಳ್ಳಿಯತೆ ಪದ ಮಲ್ಲಿಗೆಗಳನ್ನು ಸಹಜವಾಗಿ ಚೆಲ್ಲುವ ಶ್ರೀಮಂತ ಔದಾರ್ಯ; ರಂಗದ ಪಾತ್ರಧಾರಿಗಳು ತಾವು ತಾವೇ ಬಂದು ತಮ್ಮ ವೇಷಭೂಷಣಗಳನ್ನು ಔಚಿತ್ಯಪೂರ್ಣವಾಗಿ ಧರಿಸಿ ವೇದಿಕೆಯ ಮೇಲೆ ಬಂದು ಅಭಿನಯಿಸುವಂತೆ ಭಾವಗಳು ಕಲ್ಪನೆಗಳು ತಮಗೆ ತಾವೇ ಭಾಷಾ ಶರೀರವನ್ನು ಧರಿಸಿ ಧ್ವನಿಪೂರ್ಣವಾಗಿ ಚಲಿಸುವ ಅಭಿನಯ ಕೌಶಲ ಇಂಥ ಕವಿತೆಗಳಲ್ಲಿ ತಾನೇ ತಾನಾಗಿ ಮೆರೆದಿದೆ.

ಹೊಮ್ಮಿತೇಕೆ ಕಂಬನಿ?
ಹೇಳು ಹೇಳೆ, ಕಮಲಿನಿ?’
……………………..
ಮೂಡಲಿಂದ ಸುರಿದ ಸುಧೆಯ
ಹೀರಿ ಬಿಡುವ ದಾಹವೆ?
ಚೊಕ್ಕ ಬೆಳಕ ಹೊಳೆಯನೆಲ್ಲ
ಸೆರೆ ಹಿಡಿಯುವ ಮೋಹವೆ?
ಹಳೆಯ ನೆನಪ ಮೈಲಿಗೆಯನು
ತೊಳೆದು ಬಿಡುವ ಆಸೆಯೇ?’
(ಹೊಮ್ಮಿತೇಕೆ ಕಂಬನಿ)

*          *          *

ಎಳ ನೀರಿನೊಳಗಿರುವ ಮಿದು ತಿರುಳ ಕೆನೆಗೆನ್ನೆ
ಬಲಿತು ಕೊಬ್ಬರಿಯಾಗಿ ಮುದವಾಗಿದೆ.
ಮೈಯುದ್ಧ ಚುಮುಚುಮು, ಚುಮುಚುಮು ಎಂದೇನೊ
ಕೊಂಬೆ ರೆಂಬೆಯ ಅಳಿಲಿನಂತಾಡಿದೆ.
ಯೌವನಕೆ ಕೊಂಬೆರಡು ಮೂಡಿದವೊ ಎಂಬಂತೆ
ಸಮ ಭಾಗ ಹಿರಿಹಿಗ್ಗಿ ಹೆದೆಯಾಗಿದೆ’. (ಪ್ರಾಯ)

*          *          *

ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭ್ರಾಂತ’.
……………………………………………
ಬಣ್ಣ ಕಳೆದೊಡವೆಯ ತೆರ ಮಾಸತಲಿದೆ ಸೂರ್ಯಾಸ್ತ;
ನೋಡಗೊ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ….’ (ಮತ್ತದೇ ಬೇಸರ)

ಈ ಮೇಲಿನ ತುಣುಕುಗಳು ಪ್ರಣಯ ಭಾವದ ಬೇರೆ ಬೇರೆ ಕ್ಷಣಗಳಿಗೆ ಚೌಕಟ್ಟು ಹಾಕಿದ ಭಾಷೆಯ ಸುಂದರ ದೀಪಗಳು. ನಯವಾಗಿ ನವುರಾಗಿ ಆತ್ಮದೊಳಗಿನ ಎಳೆಯಾಗಿ ಚೈತ್ರದ ಬೆಳೆಯಾಗಿ ಕನಸಿನ ಕಾಮನಬಿಲ್ಲಿನ ಬಣ್ಣವಾಗಿ ಬಗೆಬಗೆ ರೂಪದ ಪ್ರೇಮಭಾವದ ಮೋಹಕ ಪದರುಗಳಾಗಿ ಮಾತುಗಳನ್ನೇ ನಾದಿ ಬಣ್ಣವಾಗಿಸಿ ಬಿಡಿಸಿದ ಬಂಧುರ ಬಿಡಿ ಚಿತ್ರಗಳಾಗಿ ಸಹೃದಯರ ಕಣ್ಮನಸ್ಸುಗಳನ್ನು ಕೋರೈಸುತ್ತವೆ, ಚಿತ್ತದಲ್ಲಿ ನೆಟ್ಟು ಚಿಗುರುತ್ತವೆ ಇವು.

ವಾಸ್ತವ ಬದುಕಿನ ವಿಸಂಗತಿಗಳನ್ನು ವಿಡಂಬಿಸುವ, ಸಮಾಜದ ತಾರತಮ್ಯಗಳನ್ನು ಗಮನಿಸುವ ನೋಯುವ ಕಟಕಿಯಾಡುವ, ಆತ್ಮ ವಿಶ್ಲೇಷಣೆ ಮಾಡಿಕೊಳ್ಳುವ ಬಂಡಾಯ ಮನೋಧರ್ಮದ ಕವಿತೆಗಳನ್ನೂ ನಿಸಾರರು ಬರೆದಿದ್ದಾರೆ. (‘ನಾಡವರ ನಾಯಿಪಾಡು’, ‘ನೆರೆಹೊರೆಯವರು’, ‘ಮುಚ್ಚು ಅಂಗಡಿಯನ್ನು’, ‘ಉತ್ಸವಪ್ರಿಯರು….’ ಇತ್ಯಾದಿ) ಆದರೆ ಇವುಗಳಲ್ಲಿ ಬಂಡಾಯದ ಪ್ರತಿಭಟನೆಯ ತೀವ್ರ ಗುಣಭಾವಗಳಿಲ್ಲ, ಅದಕ್ಕನುಗುಣವಾದ ಕಚ್ಚುವ ಕೊಚ್ಚುವ ಸಿಡಿಯುವ, ಅಸಮತೆಯ ಬಗೆಗಿನ ರೋಷವನ್ನು ಸುಡುಗಾಡಿನ ಭಾಷೆಯಲ್ಲಿ ಸ್ಫೋಟಿಸುವ, ಅಂತರಂಗದ ವೇದನೆಗಳನ್ನು, ಸಮಾಜದ ಶೋಷಣೆಯನ್ನು ಅದರೆಲ್ಲ ತೀವ್ರತೆ ಮತ್ತು ಶಕ್ತಿಯೊಡನೆ ಅಭಿವ್ಯಕ್ತಿಸುವ ಹರಿತ ಮತ್ತು ಪರಿಣಾಮಕಾರಿತ್ವ ಇಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಆದರೆ ಇವನ್ನು ದೋಷವೆಂದು, ಕೊರತೆಯೆಂದು ಪರಿಗಣಿಸಬೇಕಾದ್ದಿಲ್ಲ. ಏಕೆಂದರೆ ಇದು ಮೂಲತಃ ಮನೋಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆ.

೧೦

ಭಾವಗಳು ಕಲ್ಪನೆಗಳು ಆಲೋಚನೆಗಳು ಅವಕ್ಕೆ ಉಚಿತವಾದ ಭಾಷೆಯಲ್ಲಿ ಮೈತಳೆಯದಿದ್ದರೆ, ಕವಚವಿಲ್ಲದ ಕರ್ಣನಂತೆ, ನಿರ್ವೀಯವಾಗುತ್ತವೆ, ನಿಷ್ಪ್ರಭವಾಗುತ್ತವೆ, ನೀರಸತೆಯನ್ನು ಹೊದ್ದು ಮಲಗಿಬಿಡುತ್ತವೆ. ಆದ್ದರಿಂದ ಕವಿಯ ಸೃಜನಶೀಲ ಪ್ರತಿಭೆಯ ಪ್ರಖರತೆ ಸ್ವೋಪಜ್ಞತೆ ವಿಶಿಷ್ಟತೆಗಳು ಆತನ ಭಾಷಾಸಿದ್ದಿಯನ್ನು, ಪ್ರಯೋಗ ಪರಿಣತಿಯನ್ನು ಮತ್ತು ಅನುಭವದ ಸೂಕ್ಷ್ಮತೆ ವ್ಯಾಪಕತೆಗಳನ್ನು ಅವಿಚ್ಛಿನ್ನವಾಗಿ ಆಶ್ರಯಿಸಲೇಬೇಕಾಗುತ್ತದೆ. ಇವೆರಡರ ಅನ್ಯೋನ್ಯ ದಾಂಪತ್ಯವಿದ್ದಾಗಲೇ ಕಾವ್ಯ ಅನನ್ಯವಾಗುತ್ತದೆ ಮತ್ತು ಅನೂಹ್ಯ ಧ್ವನಿ ಹಾಗೂ ಬೆಳಕುಗಳನ್ನು ಧಾರಣ ಮಾಡುವ, ಸ್ಫುರಿಸುವ ಅಸಾಧಾರಣ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಈ ದೃಷ್ಟಿಯಿಂದ ನಿಸಾರರು ಸಾಧಿಸಿದ ಯಶಸ್ಸು ಅಪರೂಪವಾದದ್ದು. ಅವರೆಂದೂ ತಮ್ಮ ಭಾವನೆಗಳಿಗೆ ತಕ್ಕ ಮತ್ತು ಕಲಾತ್ಮಕವಾದ ಬಣ್ಣ-ಬೆಳಕುಗಳನ್ನು ತುಂಬಲು ತಿಣುಕುವುದಿಲ್ಲ, ಪರದಾಡುವುದಿಲ್ಲ, ಅನುಕರಣ ಮಾಡುವುದಿಲ್ಲ. ತಮ್ಮ ವಿಶಿಷ್ಟ ಕಲ್ಪನೆಗಳ ಅರ್ಥ ಧ್ವನಿಗಳನ್ನು ವಿಸ್ತರಿಸಲೆಂದೇ, ಪರಾನುಕರಣ ಮಾಡದ ಕಠಿಣ ವ್ರತವನ್ನು ತೊಟ್ಟು, ತಮ್ಮ ಅಪಾರ ಪದ ಸಂಪತ್ತಿನ ಬಲದಿಂದ ಹೊಸ ಹೊಸ ಪದಗಳನ್ನು ಟಂಕಿಸಿ ಲೀಲಾಜಲವಾಗಿ ಚಲಾವಣೆಗೆ ಬಿಟ್ಟು ಓದುಗರನ್ನು ಹೊಸ ಹೊಸ ನಿರೀಕ್ಷೆಯ, ಸಂತಸದ, ತೃಪ್ತಿಯ ಪಾಲುಗಾರರನ್ನಾಗಿ ಮಾಡಿಬಿಡುತ್ತಾರೆ.

ನೆನಪ ಮೈಲಿಗೆ (ಹೊಮ್ಮಿತೇಕೆ ಕಂಬನಿ?); ಕನಸಿನ ಗೊನೆ, ಮಿಂಚಿನ ತೆನೆ, ಕಂಚಿನ ಬಿಳಿ ದನಿ, ಕುರುಡು ತಮವ ಕೊರೆಯುವಂಥ ಬಾಣ ಬಿಟ್ಟ ಚಾಪಗಳೆ (ದೀಪಗಳು) : ಬೇಸಿಗೆಯ ದಾಹಕ್ಕೆ ಬಲಿಯಾದ ಹೊಳೆ ನಾನು, ಹುಲಿಯ ನೋಟದ ಬೆಂಕಿ ಹೊದರಿನಲ್ಲಿ, ನಗುವ ನೀರನು ಬಿತ್ತಿ (ಪಂಜರದ ಗಿಣಿ), ಚೆಲುವು ಮೋಡದ ಮರೆಗೆ ಸಿಡಿಲ ಕಾರ್ಖಾನೆ, ಹದ್ದುಗಣ್ಣಿನ ಹಸಿವು ಕತ್ತಲೊಳಗೆ, ಕೋಳಿ ಕಹಳೆ, ಮೂಡಣದ ಬಾನೊಂದು ಚೆಲುವು ತುಂಬಿದ ಮಂಡಿ (ಇಪ್ಪತ್ತೆನೆಯ ಶತಮಾನದ ಕೊಲಂಬಸ್); ಬುದ್ದಿ ಕುಂಟುಗಾಲಿನ ಕುದುರೆ (ಕಂಡಷ್ಟೇ ಸತ್ಯವಲ್ಲ); ಮಿಂಚಾದವೆ ಕೆರೆಯಂಚಿಗೆ ಹಾಲಕ್ಕಿಯ ರೆಕ್ಕೆ, ಮಾತಿನ ಥಾನು ಥಾನು ಬಟ್ಟೆಯಾಗದು, ಕಾಗದದೀ ಕಾಮಧೇನು ಪ್ರೇಮರಸವನೊಸರದು, (ಮನೋರಮಾ); ಮಣ್ಣು ಮುಕ್ಕುತ ಬಿಕ್ಕುತಿರುವ ಹೊಸ ಬೀಜ (ಬೀಜ ಮರ), ಕಣ್ಣಿನಲಿ ಹೆಣ್ಣುತನ ಹದವಾಗಿದೆ (ಪ್ರಾಯ); ಗೇಣಿ ಗುತ್ತಿಗೆಯಲ್ಲ ಪ್ರೀತಿ (ನಕ್ಷತ್ರಿಕ); ಕಣ್ಣಲ್ಲೆ ಹಾಸಿಗೆ ಸರಿಪಡಿಸಿ ಚಿಲಕ ಹಾಕಿ ದೀಪ ಕೆಡಿಸುವ ಸ್ವಪ್ನ ವಲ್ಲಭರ ಸೊತ್ತು, ಆರತಕ್ಷತೆಯಿರುಳು (ಪವಾಡ), ಪೇಟೆ ಬದುಕಿನ ದ್ರೌಪದಿಯ ಘೇರಾಯಿಸಿದ ದುಶ್ಯಾಸನ (ಗಾಂಧಿ ಬಜರಿನ ಸಂಜೆ), ಹಳ್ಳಿಯೇ ಹನುಮಿಸಿದಂತೆ (ರಾಮನ್ ಸತ್ತ ಸುದ್ದಿ), ಅಸ್ವತ್ಥ ವೃಕ್ಷ (ಪರ್ಣಾಶ್ರಮ), ಬಯಲು ಗರತಿ (ಮಾರಕ ಪ್ರೀತಿ), ಪರಂಪರೆಯೆ ಹದಿನಾರಾದಂತಿದ್ದ ಈಕೆ, ಪತ್ರಕ್ಕೆ ಅಂಟಿಸಿದ ಸ್ಟಾಂಪು ಕಿತ್ತಂತೆ ಜೀವಿಗಳ ನಂಟು, ಕಲಗಚ್ಚಿಗೆ ಒಗ್ಗರಣೆ ಹಾಕಿದ ತರಹ (ವೈಜಯಂತಿ), ಬಸುರಿ ಮುಗಿಲಿಗೆ ಗಿರಿ ಸೂಲಗಿತ್ತಿ (ಈಗ ಮಳೆಗಾಲವಲ್ಲ), ಎದೆ ಸುಕ್ಕ ಸರಳಿಸಿದ ಮೈಸೊಕ್ಕ ಮರಳಿಸಿದ, ಸುಡು ಬಿಸಿಲ ನೆರಳಿಸಿದ ಹುಡುಗ (ಎಲ್ಲಿದ್ದೀಯೋ ಹುಡುಗ) – ಇಂಥ ಸಾವಿರಾರು ಪದಗಳನ್ನು, ಪದ ಸಮುಚ್ಚಯಗಳನ್ನು ಉಪಮೆ ರೂಪಕ ಪ್ರತಿಮೆಗಳನ್ನು ನೀರು ಕುಡಿದಷ್ಟು ನಿರಾಯಾಸವಾಗಿ ಸೃಷ್ಟಿಸಿ ಕಾವ್ಯದ ದಾರಿಯಲ್ಲಿ ಮೆರವಣಿಗೆ ಮಾಡುವ ಅಪೂರ್ವ ಕೌಶಲ ಈ ಕವಿಗಿದೆ. ಸಂಸ್ಕೃತದಿಂದ, ಕನ್ನಡದಿಂದ, ಇಂಗ್ಲಿಷಿನಿಂದ, ಉರ್ದುವಿನಿಂದ ಪದ, ಪದವೃಂದಗಳನ್ನು ಎಗ್ಗಿಲ್ಲದೆ ತಂದು ಒಂದಕ್ಕೊಂದು ಕಸಿ ಮಾಡಿ, ಬೆಸುಗೆ ಹಾಕಿ ಬಣ್ಣವೆರೆದು ನೂತನಾರ್ಥ ಪ್ರಾಣವನ್ನು ಅವುಗಳೊಳಗೆ ಪ್ರತಿಷ್ಠಾಪನೆ ಮಾಡಿ ಶಬ್ದಕೋಶವನ್ನು ಹಾಳತವರಿತು ತುಂಬುವ, ಆ ಮೂಲಕ ಉದ್ದೇಶಿತ ಅರ್ಥಭಾವ ಸೌಂದರ್ಯಗಳಿಗೆ ಜೀವ ಮತ್ತು ಆಕಾರ ಕೊಡುವ ಪದಬ್ರಹ್ಮಶಕ್ತಿ ಇಲ್ಲಿ ಮನೆ ಮಾಡಿದೆ. ಈ ಭಾಷೆ ಶಬ್ದತೀಟೆಗೆ ಬಸುರಿಳಿಸಿದ, ಅರೆ ಜೀವದ ಪದಶಿಶುಗಳ ಸಮೂಹವಲ್ಲ; ಕವಿಯ ಅಂತರಂಗದ ನೂತನ ಭಾವಗಳನ್ನು ಪ್ರೀತಿಯಿಂದ ಹೊತ್ತು ಧರೆಗೆ ತಂದ ಪ್ರತಿಭಾ ವಿಮಾನ.

ಈ ಕವಿತೆಗಳಲ್ಲಿ ಭಾವಕ್ಕೆ ವಸ್ತುವಿಗೆ ತಕ್ಕಂತೆ ಬೇರೆ ಬೇರೆ ಭಾಷೆಗಳಿಂದ, ವಿಜ್ಞಾನ ಚರಿತ್ರೆ ಭಾಷಾವಿಜ್ಞಾನ ತಂತ್ರಜ್ಞಾನ ತತ್ತ್ವಶಾಸ್ತ್ರ ಸಾಹಿತ್ಯ ಮುಂತಾದ ಅನ್ಯಶಿಸ್ತುಗಳ ಜ್ಞಾನದಿಂದ, ಅನುಭವ ಲೋಕದ ಬೇರೆ ಬೇರೆ ಮೂಲ ಮತ್ತು ಮೂಲೆಗಳಿಂದ ಪರಿಕಲ್ಪನೆಗಳನ್ನು ಆರಿಸಿಕೊಂಡು ಔಚಿತ್ಯಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಇದರಿಂದಾಗಿ ಅಭಿವ್ಯಕ್ತಿಗೆ ಹೊಸ ಆಯಾಮ, ಹೊಸ ನುಡಿಗಟ್ಟು, ಹೊಸ ಶಕ್ತಿ ಪ್ರಾಪ್ತವಾಗಿದೆ. ಮುಂಗಾರಿನ ಮಳೆಯುಂಡ ಮರ ಗಿಡಗಳ ಮೈ, ಚಿಗುರು ಹಸುರನ್ನು ಹಡೆಯುವಂತೆ ಇವರ ಕವಿತೆಗಳ ಭಾವಗಳು ಆಶಯಗಳು ಕಲ್ಪನೆಗಳು ಅನಾಯಾಸವಾಗಿ ಅವಿರಾಮವಾಗಿ ಮಾತಿನ ಮಿಂಚು ಗಳನ್ನು ಧುತ್ತೆಂದು ಹಡೆದು ಓದುಗರನ್ನು ಸಮ್ಮೋಹನಗೊಳಿಸುತ್ತವೆ. ಯಾವು ಯಾವುದೋ ಪದಗಳ ನಡುವೆ ಸಾಮಾನ್ಯನಿಗೆ ಕಾಣಲಾರದ ಅಂಟು ನಂಟು ಗಂಟುಗಳು, ಪದದ ಮೇಲೆ ಪ್ರಾಸದ ಮೋಜು, ಭಾವಗಳ ನಮಾಜು ಇಲ್ಲಿ ಕಣ್ತೆರೆದುಕೊಂಡಿವೆ. ತನ್ನಿಂದ ಕವಿತೆ ದೂರ ಸರಿಯುತ್ತಿದೆಯೆಂಬ ಆತಂಕದಿಂದ ಹುಟ್ಟಿಕೊಂಡ ‘ಎಲ್ಲಿದ್ದೀಯ ನನ್ನ ಕವಿತೆ’ ಕೂಡ ಕಾವ್ಯಶಕ್ತಿ ಈ ಕವಿಯೊಳಗೆ ಚೈತನ್ಯಶೀಲ ಹಸಿರಾಗಿಯೇ ಇದೆ, ಒಣಗಿಹೋಗಿಲ್ಲ ಎಂಬುದನ್ನು ಸಾದರಪಡಿಸುವ ರೀತಿ ಅನನ್ಯವಾಗಿದೆ. ಜೀವಿತ ಸೌದೆ, ಎದೆಯ ಹುಲ್ಲು ಮೆದೆ, ಹೊರಿ ಸುತ್ತಿದ್ದಾಳೆ ನೆನಹುಗಳ ಹೇರನ್ನು, ಬಿರುಕಿಸಿದ್ದಾಳೆ ಚಿತ್ತೈಕಾಗ್ರತೆಯ ಸೂರನ್ನು, ಮೇಲಕೇರದು ಮನಸಿನುಷ್ಣಮಾಪಕದ ಪಾದರಸ, ತಂಗಳು ಸೊಲ್ಲು ಇತ್ಯಾದಿ ಮಾತುಗಳು ನವ ನವೀನವಾಗಿ ಸಾಂಪ್ರದಾಯಿಕ ರೂಪಕಗಳ ಗಡಿಯನ್ನು ದಾಟಿ ಹೊಸ ಅನುಭವವನ್ನು, ಹೊಳಹನ್ನು ದಕ್ಕಿಸಿಕೊಡುತ್ತವೆ.

ವಸ್ತು ಭಿನ್ನವಾಗಿದ್ದರೂ ಅದು ಸೂಸುವ ಭಾವ ವಿಭಿನ್ನವಾಗಿದ್ದರೂ ಅದು ನಿರ್ಮಿಸುವ ಅರ್ಥ ಪರಿವೇಷದಲ್ಲಿ ವಿವಿಧ ಮಜಲುಗಳಿದ್ದರೂ ಅವರ ಬಹುಮಟ್ಟಿನ ಎಲ್ಲ ಕವಿತೆಗಳಲ್ಲಿ ಹೂವು ಕಣ್ಣು ಬಿಟ್ಟಂತೆ, ತುಂತುರು ಮಳೆ ತುಂಟ ನಗೆ ನಕ್ಕಂತೆ, ಕಿರುಗೆಜ್ಜೆಗಳು ಝಣಝಣ ಸುರಿದಂತೆ, ಹತ್ತು ಬಗೆಬಗೆಯ ಝರಿಗಳು ವಿವಿಧ ಸಂಗೀತದಲ್ಲಿ ಬೆರೆತು ಹರಿದು ಹಾಡಿದಂತೆ, ಮಣಿಗಲ್ಲುಗಳ ಧಾರೆ ಕುಣಿಕುಣಿದು ಪ್ರವಹಿಸಿದಂತೆ, ಕುಟುಕು ನೋವಿನ ಗುಟುಕು ಊಡಿದಂತೆ, ಮಗುವಿಗೆ ಕಚಗುಳಿಯಿಟ್ಟಂತೆ, ಜಣ ಗೆಳೆಯನ ಹಿತನುಡಿಯ ಹವೆಯಂತೆ, ಮಕ್ಕಳ ಮುದ್ದು ಕಚ್ಚಿನಂತೆ, ವಿವಿಧ ವರ್ಣದ ಆಕಾರದ ಪದಪಟಗಳು ಭಾವದ ಬಾನಿನಲ್ಲಿ ನಿರಾಯಾಸವಾಗಿ ಹಾರಾಡಿದಂತೆ, ಎಲೆ ಅಡಿಕೆಗೆ ಸುಣ್ಣವಾದಂತೆ, ಮೆದು ದೋಸೆಗೆ ಹದವಾಗಿ ಹೊಸಬೆಣ್ಣೆ ಸವರಿದಂತೆ ಇಲ್ಲಿನ ಭಾಷಾ ವೈವಿಧ್ಯದ ಪರಿ ಅಚ್ಚರಿಗೊಳಿಸುತ್ತದೆ. ಇಲ್ಲಿನ ಭಾಷೆಯ ಕಣ್ಣು ಕೋರೈಸುವ ವಿವಿಧತೆಯಲ್ಲಿ ಮಿಣುಕು ಹುಳು, ದೀವಳಿಗೆಯ ದೀಪ, ಎಳೆಮಿಂಚು ಸೆಳೆಮಿಂಚುಗಳು ಹಿತವಾಗಿ ಮಿತವಾಗಿ ಮೇಳೈಸಿವೆ. ಹಕ್ಕಿಗಳ ಹಿಂಡು ಒಂದರ ಹಿಂದೆ ಒಂದು ಮಂದ ಗಮನವಾದರೂ ಏಕಾಗ್ರ ಗಮನದಿಂದ ಮುಂದೆ ಮುಂದೆ ಶ್ರದ್ಧೋತ್ಸಾಹಗಳಿಂದ ಚಿಲಿಪಿಲಿಗುಟ್ಟುತ್ತಾ ಚಲಿಸುವಂತೆ ಪದಗಳು, ಅದರೊಳಗಿನ ಉಪಮೆ ರೂಪಕಗಳು ಸವಿಯಾಗಿ ಸೊಬಗಿನಿಂದ ಚಲಿಸುತ್ತವೆ. ಪದ್ಯಗಳ ಸಾಲುಗಳ ಪದ ಪದಗಳ ವಿವಿಧ ಬಗೆಯ ನಡೆ ಈ ಕವಿಗೆ ಕರತಲಾಮಲಕ. ಲವಲವಿಕೆಯ ನಡೆ, ನಿಧಾನವಾದರೂ ನಿರಾಯಾಸವಾದ ನಡೆ, ಹೆಜ್ಜೆ ಹೆಜ್ಜೆಯನ್ನೂ ಅನುಭವಿಸಿ ಆನಂದಿಸಿ ತೂಕ ಮಾಡಿ ಇಟ್ಟಂತಹ ನಡೆ. ಈ ನಡೆ ಒಮ್ಮೆ ಹೂವಿನ ಹೊಡೆ, ಇನ್ನೊಮ್ಮೆ ಲಾವಣ್ಯವತಿಯ ಹೊರವಾದ ಜಡೆ,  ಮತ್ತೊಮ್ಮೆ ತೂಗಾಡಿದಂತೆ ಮರಿ ನಾಗರ ಹೆಡೆ.

ನವೋದಯವಾಗಲಿ ನವ್ಯವಾಗಲಿ ನವ್ರೋತಮ್ಮ ಸಮಕಾಲೀನ ಸಂವೇದನೆ ಗಳಿಗೆ ಅಂದಂದಿನ ಭಾಷೆಯನ್ನು-ಮಗು ತಾಯಿಯನ್ನು ಅವುಚಿ ಹಿಡಿಯುವಂತೆ-ತೆಕ್ಕೆ ತಬ್ಬಿಕೊಂಡು, ಅದರೊಳಗೆ ಒಂದಾಗಿ ತನ್ನನ್ನು ವ್ಯಕ್ತಿ ವಿಶಿಷ್ಟವಾಗಿ ಅಭಿವ್ಯಕ್ತಿಸಿಕೊಳ್ಳುವ ರೀತಿ ಅನ್ಯಾದೃಶ. ತನ್ನ ಅಂದಂದಿನ ಅನಿಸಿಕೆಗಳಿಗೆ ಅದೇ ಸರಿ ಎನಿಸುವಂಥ ಅನುರೂಪೀ ಆಕಾರವನ್ನು ಕಾವ್ಯಶಕ್ತಿಯ ಜೀವದ್ರವ್ಯದೊಡನೆ ಶ್ರಮರಹಿತವೆಂಬಂತೆ ಕಟ್ಟಿಕೊಂಡು ಬಿಡುವ, ಭಾಷೆಯ ನಿಪುಣ ವಿಧೇಯತೆಯನ್ನು ಉಸಿರಾಟದಷ್ಟು ಸಹಜವಾಗಿ ಸಾಧಿಸುವ ಹಿರಿಮೆ ಈ ಕವಿಯದು. ಇವರ ಹಲವಾರು ರಚನೆಗಳಲ್ಲಿ ಭಾವ ಭಾಷೆಯಾಗಿ ಮೆರೆದಿದೆಯೋ, ಭಾಷೆ ಭಾವವಾಗಿ ಮೈದಳೆದಿವೆಯೋ ಎಂಬ ವಿಸ್ಮಯವುಂಟಾಗುವ ರೀತಿಯಲ್ಲಿ ಅವು ಮೂಡಿ ಬಂದಿವೆ. ಇನ್ನೂ ಹಲವು ಕವಿತೆಗಳಲ್ಲಿ ಭಾಷೆಯನ್ನು ಹಿಮ್ಮೆಟ್ಟಿಸಿ ಭಾವ, ಭಾವವನ್ನು ಹಿಂದೆ ಹಾಕಿ ಭಾಷೆ, ಇವೆರಡನ್ನೂ ಹಿಂದೆ ಹಾಕಿ ಚಿತ್ರಗಳು, ಪ್ರತೀಕ ಪ್ರತಿಮೆಗಳು ಮತ್ತು ಅವುಗಳನ್ನೂ ಹಿನ್ನೂಕಿದ ಅನುಭವಪ್ರಭುತ್ವ ಸ್ಪರ್ಧೆ ಹೂಡಿದಂತೆ ಒಟ್ಟು ಅಭಿವ್ಯಕ್ತಿ ಜೀವ ತಳೆದು ನಿಂತಿದೆ.

ಮತ್ತೆ ಹಲವಾರು ಕವಿತೆಗಳು ವಿವಿಧ ಲಯಗಳ, ಛಂದಸ್ಸುಗಳ, ಬಂಧಗಳ ಪದ ಮುರಿತಗಳ ಪದಯೆರಕಗಳ ಪದ ಕುಣಿತಗಳ ವೈವಿಧ್ಯಮಯ ಪ್ರಯೋಗರಂಗವಾಗಿವೆ. ಶಾಸ್ತ್ರನಿಬದ್ಧವಾದ ಛಂದೋಶಾಸ್ತ್ರ ಕಾವ್ಯಮೀಮಾಂಸೆ ವ್ಯಾಕರಣ ಭಾಷಾವಿಜ್ಞಾನಗಳ ಪಾರಂಪರಿಕ ಶಿಕ್ಷಣವಿಲ್ಲದೆಯೂ ‘ಆನು ಒಲಿದಂತೆ ಹಾಡುವೆನಯ್ಯಾ’ ಎಂಬ ಉಕ್ತಿಗೆ ಸಮರ್ಥ ನಿದರ್ಶನವಾಗಿ, ಭಾವ ಕುಡಿಯೊಡೆದಂತೆ ಪ್ರತಿಭೆ ಮಿಂಚಿದಂತೆ ಮೋಡ ಮಳೆಗರೆದಂತೆ ಗರುಕೆ ಮೊಳೆತಂತೆ ಗಾಳಿ ಬೀಸಿದಂತೆ ಎಲೆಯೊಲೆದಂತೆ ಸ್ವಚ್ಛಂದ ಬಂಧದಲ್ಲಿ-ಯಾವ ಮುಕ್ಕುರಿತ, ಪ್ರಸವ ವೇದನೆ, ಬಲವಂತದ ಛಡಿಯೇಟುಗಳಿಂದ ನುಲಿದುಕೊಳ್ಳದ ಸಹಜ ಸ್ವಾಭಾವಿಕ ನೆಲೆಯಲ್ಲಿ ಭಾವವಿಧೇಯವಾಗಿ ವಿಚಾರವಿಧೇಯವಾಗಿ ಕಲ್ಪನಾವಿಧೇಯ ವಾಗಿ ಅಂತರಂಗ ನಿರ್ದೇಶಿತ ಮಾದರಿಯಲ್ಲಿ ಈ ಕವಿತೆಗಳು ಅವತರಿಸಿವೆ. ಇವು ಸಿಸೇರಿಯನ್ ಕೂಸುಗಳಲ್ಲ, ದಿನ ತುಂಬಿದ ಸಹಜೋದ್ಭವ ಶಿಶುಗಳು.

ಈ ಪರಿಮಿತ ಸಮೀಕ್ಷೆಯಲ್ಲಿ ನಿಸಾರರ ಕವಿತೆಗಳ ಎಲ್ಲ ಬಗೆಯ ಭಾಷಿಕ ಪವಾಡಗಳನ್ನು ಚರ್ಚಿಸಲಾಗಿಲ್ಲ. ಈ ವಸ್ತು – ವಿಷಯದ ಸೂಕ್ಷ್ಮತೆ ಬಹುಮುಖತೆ ಮತ್ತು ಎತ್ತರಗಳು ಒಂದು ಸುದೀರ್ಘ ಸಂಶೋಧನಾ ಅಧ್ಯಯನವನ್ನು ಆಹ್ವಾನಿಸುತ್ತವೆ. ಆಗ ಮಾತ್ರ ಈ ವಿಶಿಷ್ಟ ಪ್ರತಿಭಾವಂತ ಕವಿಯ ಮಲ್ಯಮಾಪನ ಸಾಧ್ಯವಾಗುತ್ತದೆ.