೩. ‘ಪಾಪಿಗುದ್ಧಾರಮಿಹುದೌ’

ವ್ಯಕ್ತಿ ಒಂದು ಜನ್ಮದಲ್ಲಿ ಮಾಡುವ ಕರ್ಮಕ್ಕನುಸಾರವಾಗಿ ಅವನಿಗೆ ಮುಂದಿನ ಜನ್ಮದಲ್ಲಿ ಸುಖವೋ ದುಃಖವೋ ಪ್ರಾಪ್ತವಾಗುತ್ತದೆ ಎಂಬುದು ಭಾರತೀಯ ಪರಂಪರೆಯ ಕರ್ಮ ಸಿದ್ಧಾಂತದ ತಿರುಳು. ಒಂದು ನೆಲೆಯಲ್ಲಿ ಕರ್ಮ ಸಿದ್ಧಾಂತವನ್ನು ಒಪ್ಪುವ ಕುವೆಂಪು, ಆ ಸಿದ್ಧಾಂತಕ್ಕೆ ಹೊಸ ಆಯಾಮಗಳನ್ನು ಜೋಡಿಸಿ ಅದನ್ನೊಂದು ವಿಸ್ತೃತವೂ ಪ್ರಗತಿಪರವೂ ಜೀವನಕಲ್ಯಾಣಕರವೂ ಆದ ಅಂಗೀಕಾರಾರ್ಹ ಮನೋವಿಜ್ಞಾನ ಸತ್ಯವನ್ನಾಗಿ ಕಂಡರಿಸಿದ್ದಾರೆ.

“ಈ ಜಗತ್ತಿನಲ್ಲಿ ಒಳಿತಿದೆ, ತದ್ವಿರುದ್ಧವಾಗಿ ಕೆಡುಕಿದೆ. ಇದಕ್ಕೆ ಏನರ್ಥ? ಎರಡು ಬೇರೆ ಬೇರೆಯೆ? ಹಾಗಲ್ಲವೆನ್ನುತ್ತದೆ ‘ಶ್ರೀರಾಮಾಯಣದರ್ಶನಂ’. ಭಗವಂತನ ಲೀಲಾ ಭೂಮಿಕೆ ಈ ಜಗದ್ರಂಗ. ತನ್ನ ಲೀಲೆಗಾಗಿ ಅವನು ಸತ್ ಮತ್ತು ಅಸತ್ ರೂಪಗಳನ್ನು ತಳೆದಿದ್ದಾನೆ. ಮೂಲತಃ ಇವು ಅಭಿನ್ನ, ಲೀಲಾರ್ಥವಾಗಿ ಬೇರೆಯಾದುವಷ್ಟೆ. ಅಸತ್‌ಶಕ್ತಿ ಸತ್‌ಶಕ್ತಿಯಾಗಿ ಪರಿವರ್ತನೆಗೊಳ್ಳಬಹುದು, ಪರಿವರ್ತನೆಗೊಳ್ಳಲೇಬೇಕು. ಅಸತ್ತಿನಿಂದ ಸತ್ತಿನೆಡೆಗೆ, ತಮಸ್ಸಿನಿಂದ ಜ್ಯೋತಿಯೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಲೋಕ ಸಾಗಬೇಕು. ಆದರೆ ಈ ಯಾತ್ರೆಯೊಂದು ನಿರಂತರ ಸಾಧನೆ. ಕುವೆಂಪು ಅವರ ಅಗ್ಗಳಿಕೆ ಯಿರುವುದು ಈ ವಿಕಾಸವನ್ನು ಕಂಡು ಚಿತ್ರಿಸುವಲ್ಲಿ.”

[1]

ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ಕಂಡುಬರುವ ತತ್ವ ದುಷ್ಟನಿಗ್ರಹ ಮತ್ತು ಶಿಷ್ಟಪರಿಪಾಲನೆ; ಶ್ರೀರಾಮಾಯಣದರ್ಶನದಲ್ಲಿ ಅರಳಿರುವ ತತ್ವ ದುಷ್ಟ ಪರಿವರ್ತನೆ ಮತ್ತು ಶಿಷ್ಟ ಪರಿಪಾನೆ. ವ್ಯಕ್ತಿಯ ಪಾಪಕ್ಕಾಗಿ ಅವನನ್ನು ಕೇವಲ ಶಿಕ್ಷಿಸುವುದರಲ್ಲಿ ಕುವೆಂಪು ಅವರಿಗೆ ನಂಬಿಕೆಯಿಲ್ಲ. ಉದಯವಾಗಬೇಕಾದ ಅಂಥ ದೊಡ್ಡ ಕೆಲಸವೇನೂ ಅಲ್ಲ. ಅದಕ್ಕಾಗಿ ಮಹಾಪುರುಷನ ಉದಯವಾಗಬೇಕಾದ ಅಗತ್ಯವೇನೂ ಇಲ್ಲ. ಪಾಪಿ ತನ್ನ ಪಾಪದ ಮೂಲವನ್ನು ಅರಿತುಕೊಂಡು, ಅದಕ್ಕಾಗಿ ಪರಿತಪಿಸಿ ಪಶ್ಚಾತ್ತಾಪಪಟ್ಟು, ಆ ಪಾಪ ವಿಮುಕ್ತಿ ಗಾಗಿ ಹಾರೈಸಿ ಹಂಬಲಿಸಿ ಸತತವಾಗಿ ಪರಿಶ್ರಮಿಸಿ ಅದರಿಂದ ತನ್ನನ್ನು ತಾನು ಬಿಡಿಸಿಕೊಂಡು ಇದ್ದಲು ವಜ್ರವಾಗುವಂತೆ ಕೊನೆಗೆ ತಾನೂ ಪುಣ್ಯಜೀವಿಯಾಗಿ ವಿಕಾಸಗೊಂಡು ಮುಕ್ತಿಯ ಮಹಾಮನೆಯನ್ನು ಸೇರುವ ಅವಕಾಶ ಈ ಭೂಮಿಯಲ್ಲೇ ಈ ಜನ್ಮದಲ್ಲೇ ಇದೆ ಎಂಬುದನ್ನು ಜೀವಂತವಾಗಿ ಪ್ರತಿಪಾದಿಸುವ ಜೀವನಪರ ನಿಲುವೇ ಈ ಕೃತಿಯ ಮುಖ್ಯದರ್ಶನ. ಆದ್ದರಿಂದಲೇ “ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್”[2] ಎಂಬ ದರ್ಶನ ಧ್ವನಿ ಈ ಮಹಾಕೃತಿಯ ಉದ್ದಕ್ಕೂ ತರಂಗಿತವಾಗುತ್ತ ಹೋಗುತ್ತದೆ. ಇದು ಗಣಿತ ಕರ್ಮವಾಗಿ ಹೊರಗಿನಿಂದ ಪ್ರಜ್ಞಾಪೂರ್ವಕವಾಗಿ ಹೇರಿದ ತತ್ವವಾಗದೆ, ವ್ಯಕ್ತಿಧರ್ಮವಾಗಿ ಪಾತ್ರಗಳೊಳಗಿನಿಂದಲೇ ಸಹಜವಾಗಿ ಆವಿರ್ಭವಿಸಿದ ಜ್ವಲಂತ ಸತ್ಯವಾಗಿದೆ. ಈ ಕೃತಿಯ ಎಲ್ಲ ಪಾತ್ರಗಳೂ ಈ ಹೊಸಬೆಳಕಿನಲ್ಲಿ ಮಿಂದು ವಿನೂತನತೆಯನ್ನು ಪಡೆದುಕೊಂಡಿವೆ. “ವಾಲ್ಮೀಕಿಗಳು ಮಂಥರೆ, ರಾವಣ ಮುಂತಾದ ಪಾತ್ರಗಳ ಪೂರ್ವ ಜೀವನವನ್ನಷ್ಟೇ ಚಿತ್ರಿಸಿದರು; ಅವರ ಬದುಕಿನ ಉತ್ತರಕಾಂಡವನ್ನು ಚಿತ್ರಿಸುವ ಕಾರ್ಯ ಕುವೆಂಪು ಅವರಿಂದ ಅನ್ಯಾದೃಶ್ಯವಾಗಿ ನಡೆದಿದೆ. ಅದು ಉದ್ಧಾರಕಾಂಡವೂ ಹೌದು…”[3] ಕೃತಿಯ ಆರಂಭದಿಂದಲೇ ಈ ಪಾಪಿಗಳ ಉದ್ಧರಣಕಾರ್ಯವೂ ಬೇರುಬಿಡತೊಡಗಿರುವುದನ್ನು ಗಮನಿಸಬಹುದು.

ತಾನು ಮಾಡುತ್ತಿರುವುದು ಪಾಪವೆಂಬುದನ್ನೇ ಅರಿಯದೆ, ತನ್ನ ಸಹಜ ಧರ್ಮದಂತೆ ಕ್ರೌಂಚಮಿಥುನಗಳಲ್ಲಿ ಒಂದನ್ನು ಕೊಂದ ವ್ಯಾಧನಿಗೆ ವಾಲ್ಮೀಕಿ ರಾಮಾಯಣದ ಋಷಿ ವಾಲ್ಮೀಕಿ ಶಾಪ ನೀಡಿದರೆ, ಈ ಕಾವ್ಯದ ವಾಲ್ಮೀಕಿ ಆ ಕೃತ್ಯಕ್ಕಾಗಿ ಮರುಗಿ  ಅವನಿಗೆ ತನ್ನ ಆತ್ಮಕಥೆಯನ್ನು ಒರೆದು ‘ಕಬ್ಬಿಲಗೆ ಬಗೆಗರಗುವಂತೆ ಬೋಧಂಗೆಯ್ಧು’ ಅವನ ಬಗ್ಗೆ ಕೃಪೆದೋರಿ ಅವನಗೆ ‘ಅಹಿಂಸಾರುಚಿ’ಯನ್ನು ನೀಡುತ್ತಾನೆ. ಅಲ್ಲಿ ‘ದುಷ್ಟ’ನಾದ ಬೇಡನಿಗೆ ಶಾಪದ ಮೂಲಕ ‘ಶಿಕ್ಷೆ’ ನೀಡಿದರೆ, ಇಲ್ಲಿ ಅವನಿಗೆ ಅಹಿಂಸಾ ಬೋಧನೆ ಮಾಡುವ ಮೂಲಕ ಮತ್ತು ಅವನ ಬಗೆಗರಗಿಸುವ ಮೂಲಕ ಅವನಲ್ಲಿ  ಜ್ಞಾನೋದಯವನ್ನುಂಟುಮಾಡಿ ಅವನು ಪರಿವರ್ತಿತನಾಗುವ ಮತ್ತು ಉದ್ಧಾರವಾಗುವ ಅವಕಾಶವನ್ನು ನೀಡಲಾಗಿದೆ. ಕ್ಷಣಿಕ ದೌರ್ಬಲ್ಯಕ್ಕೊಳಗಾಗಿ ಇಂದ್ರನ ಆಮಿಷಕ್ಕೆ ಬಲಿಯಾದ ಅಹಲ್ಯೆ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪಪಟ್ಟು ಏಕಾಂತವಾಗಿ ಮನವಾಗಿ ಶಿಲಾರೂಪಿಯಾಗಿ ತಪಸ್ಸನ್ನಾಶ್ರಯಿಸಿ ರಾಮಪಾದಸ್ಪರ್ಶದಿಂದ ಪುಣ್ಯಾಂಗನೆಯಾಗಿ ಪುನರವತರಿಸುತ್ತಾಳೆ; ತನ್ನ ಪ್ರಖರ ತಪಸ್ಸಿನ ಮೂಲಕ ಹೃದಯಕಾಳಿಕೆಯನ್ನು ಕಳೆದುಕೊಂಡು ತನ್ನನ್ನು ತಾನು ಉದ್ಧರಿಸಿಕೊಳ್ಳುತ್ತಾಳೆ.

ವಾಲ್ಮೀಕಿಯ ಮಂಥರೆ ಎಲ್ಲರ ಹೃದಯದಲ್ಲೂ ತಿರಸ್ಕಾರ ಜುಗುಪ್ಸೆಗಳನ್ನು ಮೂಡಿಸುವ ವಿಘ್ನ ಸಂತೋಷಿಯಾದ ವಿಕೃತ ಸ್ತ್ರೀ. ಅಲ್ಲಿ ಅವಳು ನಿಸ್ಸಂದೇಹವಾಗಿ ಪಾಪಿ ಎನಿಸುತ್ತಾಳೆ. ಆದರೆ ಈ ಕಾವ್ಯದ ಮಂಥರೆ ಹೊರಗೆ ಕುರೂಪದ ಮುದ್ದೆಯಾದರೂ ಅವಳ ಒಳಗು ಅನುಪಮ ವಾತ್ಸಲ್ಯದಿಂದ ಒದ್ದೆಯಾಗಿದೆ. ಇವಳಿಲ್ಲಿ ಎಲ್ಲರ ನಿಂದೆ ಅವಹೇಳನಕ್ಕೆ ಹೇಸುಗುರಿಯಾಗುವ ಪಾಪಿಯಾಗಿಯೇ ಉಳಿಯದೆ, ನಿರೀಕ್ಷೆ ಸಾಧನೆಗಳ ತೀವ್ರತೆಯಿಂದ ಪಶ್ಚಾತ್ತಾಪದ ಅಗ್ನಿಯಲ್ಲಿ ಮಿಂದು ‘ಮಂಥರಾಲಕ್ಷ್ಮಿ’ಯಾಗಿ ಪರಿವರ್ತಿತಳಾಗುತ್ತಾಳೆ. ವಿಧಿಯ ಯೋಜನೆಯ ಕೈಕೆಯ ಕೈದುವಾಗಿ ರಾಮ ಮಹಿಮೆಯ ಪ್ರಕಾಶನಕ್ಕೆ ವಿಕಸನಕ್ಕೆ ನೆರವಾಗುತ್ತಾಳೆ. ಶಿಶುರಾಮನ ಗಗನಚಂದ್ರನ ಬಯಕೆಯನ್ನು ಕನ್ನಡಿಯ ಮೂಲಕವಾಗಿ ನೆರವೇರಿಸಿ ಆತನ ಭವ್ಯ ಭವಿತವ್ಯಕ್ಕೆ ಧ್ವನಿಪೂರ್ಣ ಮುನ್ನುಡಿ ಬರೆಯುತ್ತಾಳೆ. ಕೈಕೆ ಭರತರ ಮೇಲಿನ ಅನೂನವಾತ್ಸಲ್ಯದಿಂದ ತಾನು ಮಾಡಿದ ಹಂಚಿಕೆ ಅವರನ್ನು ಒಳಗೊಂಡು ಕೋಸಲದ ಎಲ್ಲರನ್ನೂ ಮಹಾವ್ಯಥೆಯಲ್ಲಿ ದೂಡಿದುದನ್ನು ಅರಿತಾಗ, ಅದರಿಂದ ಭರತನ ಪ್ರೇಮವನ್ನೂ ತಾನು ಕಳೆದುಕೊಳ್ಳಬೇಕಾಗಿ ಬಂತೆಂಬುದು ಅವಳಿಗೆ ಮನದಟ್ಟಾದಾಗ, ಶ್ರೀರಾಮನನ್ನು ಮರಳಿ ಕರೆತಂದು ಅವರೆಲ್ಲರಿಗೆ ಹರ್ಷವನ್ನುಂಟುಮಾಡುವ ನಿಸ್ವಾರ್ಥದ ಉದ್ದೇಶದಿಂದ ರಾಮನನ್ನರಸಿ ಆರ್ತತೆಯಿಂದ ಆಲ್ಪರಿಯುತ್ತ ಹೊರಟು ರಾಮ ಕೃಪಾರೂಪದ ಅಗ್ನಿಯಲ್ಲಿ ದಗ್ಧಳಾಗುತ್ತಾಳೆ. ದೇಹದಗ್ಧವಾದರೂ ಅಶರೀರಿಯಾಗಿ ಆಕೆ ರಾಮಪಾದಪಥವನ್ನರಸಿ, ಆತನ ಪುನರಾಗಮನದ ಪುಣ್ಯವಾರ್ತೆಯನ್ನು ಅಗ್ನಿಪ್ರವೇಶಕ್ಕೆ ಸಿದ್ಧನಾಗಿರುವ ಭರತನಿಗೆ ಆರುಹಿ, ತನ್ನ ಕಾರ್ಯದಲ್ಲಿ ಕೃತಕೃತ್ಯಳಾಗಿ ಆತ್ಮಸಂತೋಷದಿಂದ ಅದೃಶ್ಯಳಾಗುತ್ತಾಳೆ. ಹೀಗೆ ಪಾಪಿ ಮಂಥರೆ ಪುಣ್ಯಲಕ್ಷ್ಮಿ ಮಂಥರೆಯಾಗಿ ಸಹಜೋದ್ಧಾರವನ್ನು ಕಂಡುಕೊಂಡಿದ್ದಾಳೆ. ಮಂಥರೆಯ ಪೂರ್ವಜೀವನದ ಕಥೆ ಇದಕ್ಕೆ ನೆರವಾಗಿ ಬಂದು ಮನೋವೈಜ್ಞಾನಿಕವಾಗಿಯೇ ಈ ಪಾತ್ರ ವಾಸ್ತವ ವಿಕಾಸಕ್ರಿಯೆಗೆ ಒಳಗಾಗಿರುವುದನ್ನು ದೃಢೀಕರಿಸುತ್ತದೆ.

ಮಂಥರೆಯಂತೆಯೇ ಸಹಸ್ರಾರು ಸಂವತ್ಸರಗಳಿಂದ ಜನಮನದ ಅಭಿಶಾಪಕ್ಕೆ ಗುರಿಯಾಗುತ್ತ ಪಾಪಿಯೆನಿಸಿಕೊಂಡೇ ಉಳಿದು ಬಂದವಳು ಕೈಕೆ. ಭಾಸ ತನ್ನ ಪ್ರತಿಮಾ ನಾಟಕದಲ್ಲಿ ಮಾತ್ರ ಆಕೆಯನ್ನು ಈ ಶತಶತಮಾನಗಳ ನಿಂದೆಯ ಕೆಸರಿನಿಂದ ಮೇಲೆತ್ತಲು ಪ್ರಯತ್ನಿಸಿದ್ದಾನೆ. ಪ್ರತಿಯೊಂದು ಪಾಪಕ್ಕೂ ಪ್ರಾಯಶ್ಚಿತ್ತವಿದೆ; ಪಶ್ಚಾತ್ತಾಪದ ಫಲರೂಪವಾಗಿ ಇದು ಪ್ರಾಪ್ತವಾಗುತ್ತದೆ; ಇದರಿಂದ ಪಾಪ ಪರಿಮಾರ್ಜನೆಗೊಂಡು ಪಾಪಿ ಉದ್ಧಾರದ ಪಥದಲ್ಲಿ ನಡೆಯುತ್ತ ಅಂತಿಮವಾಗಿ ಪುಣ್ಯಮೂರ್ತಿಯಾಗಿ ಪರಿಣಮಿಸುತ್ತಾನೆ ಎಂಬುದೇ ಕುವೆಂಪು ಅವರ ನಿಶ್ಚಿತ ನಿಲುವು. ಈ ನಿಲುವು ಕೈಕೆಯ ವ್ಯಕ್ತಿತ್ವ ವಿಕಸನದಲ್ಲೂ ಅತ್ಯಂತ ಸಹಜವಾಗಿ ಮತ್ತು ಕಲಾತ್ಮಕವಾಗಿ ಮೈದಳೆದಿದೆ. ಸೌಂದರ್ಯದ ಖನಿಯಾಗಿ, ಯೌವನದ ಮೂರ್ತಿಯಾಗಿ ಮತ್ತು ಪ್ರೀತಿವಾತ್ಸಲ್ಯಗಳ ನಿಷ್ಕಲಂಕ ಪ್ರತಿಮೆಯಾಗಿ ಮನಸೆಳೆಯುವ ಕೈಕೆ ರಾಮನನ್ನೂ ಭರತನಷ್ಟೇ ತೀವ್ರವಾಗಿ ಪ್ರೀತಿಸುತ್ತಾಳೆ. ಆದರೆ ತನ್ನ ಆತ್ಮೀಯ ದಾಸಿ ಕಂಡ ಕನಸಿನ ಹಿನ್ನೆಲೆಯಲ್ಲಿ, ಭರತನಿಲ್ಲದ ವೇಳೆ ರಾಮಪಟ್ಟಾಭಿಷೇಕದಂಥ ಮಹತ್ವದ ಕಾರ್ಯವನ್ನು ತಮಗೆ ಯಾರಿಗೂ ತಿಳಿಸದೆ ನಿಯೋಜಿಸಿದ ನಿಗೂಢ ಸಂದರ್ಭದಲ್ಲಿ, ಅದರಿಂದುಂಟಾಗುವ ದುಷ್ಪರಿಣಾಮಗಳ ಘೋರತೆಯನ್ನು ಮಂಥರೆ ವಿವರಿಸಿದ ಬೆಳಕಿನಲ್ಲಿ, ಕೆಲಹೊತ್ತು ತಾರತಮ್ಯ ವಿವೇಚನಾಜ್ಞಾನವನ್ನು ಮರೆತು ಆಕೆ ಸ್ವಾರ್ಥದ ಕಡೆ ಗಮನಕೊಟ್ಟಾಗ, ಆಕೆ ಹಿಂದೆಂದೂ ಆಲೋಚಿಸಿರದಂಥ ವರಗಳನ್ನು ಕೇಳಿಬಿಡುತ್ತಾಳೆ. ಈ ಕೇಳಿಕೆ ಅನಿರೀಕ್ಷಿತವಾಗಿ ದಶರಥನ ಮೇಲೆ ಅತ್ಯಂತ ಅಹಿತಕರ ಪರಿಣಾಮವನ್ನು ಉಂಟುಮಾಡಿದಾಗ, ಕ್ಷಣಕಾಲ ಮಸುಳಿದ್ದ ಆಕೆಯ ಸಾತ್ವಿಕ ಪ್ರವೃತ್ತಿ ಎಚ್ಚರಗೊಂಡು ಅಮಂಗಳ ನಿವಾರಣಾಕಾಂಕ್ಷೆಯಿಂದ, ತಾನು ಬೇಡಿದ ವರಗಳನ್ನು ಹಿಂತೆಗೆದುಕೊಳ್ಳುವ ಮಾತನಾಡುತ್ತಾಳೆ. ಮುಂದೊದಗಬಹುದಾದ (ಲೋಕದೃಷ್ಟಿಯಿಂದ) ವಿಪತ್ತು ತಪ್ಪಿ, ಲೋಕಾಪವಾದದಿಂದ ಆಕೆ ಪಾರಾಗುವ ವಿಶಿಷ್ಟ ಕ್ಷಣ ಪ್ರಾಪ್ತವಾಯಿತೆನ್ನುವಷ್ಟರಲ್ಲಿ ವಿಧಿ ಸಂಚು ಮಾಡುತ್ತದೆ. ಆಕೆಯ ಸಹಜ ಮಾತು ಮೂದಲಿಕೆಯಂತೆ ದಶರಥನಿಗೆ ಭಾಸವಾಗುತ್ತದೆ. ಆತನ ನಿಷ್ಠುರ ಮಾತುಗಳು ಆಕೆಯ ಮೃದುನಿರ್ಮಲ ಹೃದಯವನ್ನು ಕಲ್ಲು ಮಾಡುತ್ತವೆ. ಮಾತಿಗೆ ಮಾತು ಮಸೆದು, ಕಿಡಿಗೆ ಕಿಡಿ ಜೊತೆಗೂಡಿ ಅವರಿಬ್ಬರೂ ಮನಃಪೂರ್ವಕವಾಗಿ ಉದ್ದೇಶಿಸಿರದ ಘಟನೆ ನಡೆದೇ ಹೋಗುತ್ತದೆ. ಕ್ಷಣಕಾಲ ಮಿಂಚಿದ ಸ್ವಾರ್ಥಭಾವ ಕೈಕೆಯ ವ್ಯಕ್ತಿತ್ವಕ್ಕೆ ಕೆಸರೆರಚುತ್ತದೆ. ಈ ಒಂದು ಕ್ಷಣದ ಸ್ವಾರ್ಥ ಚಿಂತನೆಯ ಫಲವಾಗಿ ಮಿಂಚಿನ ವೇಗದಲ್ಲಿ ನಡೆದ ಘಟನಾವಳಿಗಳು ಆಕೆಯನ್ನು ನಿರಂತರ ಪಾಪಿಯ ಪಟ್ಟಿಯಲ್ಲಿ ಸೇರಿಸುತ್ತವೆ. ಆದರೆ ಕವಿಕರುಣೆ ಆ ಪಾಪದ ಹಾವಿನ ಒಡಲಲ್ಲಿ ಪುಣ್ಯದ ಮೊಟ್ಟೆಯೊಂದನ್ನು ಹುಟ್ಟುಹಾಕಿದೆ. ರಾಮನ ವನಗಮನವಾಗಿ ದಶರಥ ಅಸುನೀಗಿದ ಕ್ಷಣದಿಂದಲೇ-ಅದಕ್ಕೂ ಮೊದಲೇ-ಕೈಕೆಯ ಮನದಲ್ಲಿ ಮುಗಿಯದ ಕೋಲಾಹಲ, ಅದರ ಫಲವಾದ ಮಹಾವ್ಯಥೆ ಮೂಡಿಬಿಟ್ಟಿದೆ. ಆದ್ದರಿಂದಲೇ ಆಕೆಯ ತುಟಿಯಿಂದ ಪದಗಳು ಜರಿಹೋದ ತರುವಾಯ ಪಾಪ ಪ್ರಜ್ಞಾರೂಪವಾದ ಮಹಾಮನ ಅವಳ ಹೃದಯವನ್ನು ಆಮೆಯ ಚಿಪ್ಪಿನಂತೆ ಆವರಿಸಿ ಬಿಡುತ್ತದೆ. ಆಕೆಯ ಅರಮನೆಗೆ ಬಂದ ರಾಮನೊಡನೆ ಆಕೆ ಯಾವ ಮಾತನ್ನೂ ಆಡಲೇ ಇಲ್ಲ, ಅವನಿಗಾಗಿ ಅವಳು ಕರೆ ಕಳುಹಿಸಲೂ ಇಲ್ಲ, ನಾರುಮಡಿಗಳನ್ನು ತಂದುಕೊಂಡಲೂ ಇಲ್ಲ (-ವಾಲ್ಮೀಕಿ ರಾಮಾಯಣದಲ್ಲಿರುವಂತೆ). ಇವೆಲ್ಲವನ್ನು ಮಾಡಿದವಳು ಮಂಥರೆಯೇ.  ಆಗ ಅವಳು ಹೊಲಿದ ತುಟಿಗಳನ್ನು ಬಿಚ್ಚಿದ್ದು ಭರತ ಬಂದಾಗಲೇ. ಆತ ಬಂದಾಗ ‘ಪಾಳ್ಮನೆಯ ತೆರದಿನೆಸೆದಳ್ ಮಾತೆ, ನಿರ್ಜನೆ, ನಿರಾಭರಣೆ, ನಿಶ್ಚಲೆ, ರವವಿಹೀನೆ.’[4] ಅವಳ ಈ ಸ್ಥಿತಿ ಅವಳಂತರಂಗದ ಕ್ಷುಭಿತ ವ್ಯಥಿತ ಪರಿತಪಿತ ಪರಿಸ್ಥಿತಿಯನ್ನು ಧ್ವನಿಸುತ್ತದೆ. ಅವನೊಡನೆ ಕೂಡ ಕರ್ತವ್ಯವೆಂಬಂತೆ ನಾಲ್ಕು ಮಾತಾಡುತ್ತಾಳೆ. ವಿಷಯವನ್ನು ತಿಳಿಸುವ ಮುನ್ನವೇ ತಾನು ಪಾಪಿಯೆಂಬುದನ್ನು ನಿವೇದಿಸಿ ಕೊಳ್ಳುತ್ತಾಳೆ. ಅವಳೆದೆಯ ದಗ್ಧ ದುಃಖವೇ ಮಾತಾಗಿ ಹರಿಯುತ್ತದೆ. ತನ್ನ ಕೋರಿಕೆಯನ್ನು ಪುತ್ರ ತಿರಸ್ಕರಿಸಿದಾಗ ಹೆಚ್ಚು ಒತ್ತಾಯಿಸದೆ, ತಾನೂ ಅವನೊಡನೆ ಮಂಗಳದ ಮನೆಯಾದ ರಾಮಸನ್ನಿಧಿಗೆ ಬರುವೆನೆಂದು ಬೇಡಿಕೊಳ್ಳುತ್ತಾಳೆ. ಅನಂತರ ಅವಳು ಎಂದೂ ಬಾಯಿ ಬಿಚ್ಚುವುದೇ ಇಲ್ಲ. ಇತರರ ಜೊತೆಯಲ್ಲಿ ಆಕೆಯ ಮಹಾಮನದಂತರಂಗದ ಅಗ್ನಿ ತಪಸ್ಸು ಕೂಡ ರಾಮನ ಸುಖಾಗಮನಕ್ಕೆ ಮತ್ತು ಅವನ ಮಹಾಸಾಧನೆಗೆ ಅದ್ವಿತೀಯ ಕಾಣಿಕೆ ಸಲ್ಲಿಸುತ್ತದೆ. ಆತ ಬಂದಾಗ ‘ಮುನ್ನಮಿರ್ದೆರ್ದೆಯ ಪಾಪ ಭಾವದ ಭಾರಮನಿತುಂ ಕಳಲ್ದವೋಲ್ ತನ್ನಾತ್ಮಕೊಯ್ಯನೆಯೆ ನವಪುಣ್ಯಚೇತನಂ ಕಾಂತಿಬುಗ್ಗೆಯ ತೆರದಿ ಚಿಮ್ಮಿ ಭರತನ ತಾಯಿ’[5] ಶಾಂತಳಾಗಿ ರಾಮನೆಡೆಗೆ ನಡೆಯುತ್ತಾಳೆ. ತನ್ನಡಿಗೆ ಮುಡಿಮಣಿದ ರಾಮನನ್ನು ಹಿಡಿದು ಎತ್ತುತ್ತಾಳೆ. ರಾಮನೂ ಕೂಡ ಮೊದಲು ಮಣಿಯುವುದೇ ಕೈಕೆಯ ಪಾದಗಳಿಗೆ. ತನ್ನ ಸರ್ವ ಯಶಸ್ಸನ್ನೂ ತೆತ್ತು ದಶರಥ ರಾಮನನ್ನು ಲೋಕಾಭಿರಾಮನನ್ನಾಗಿ ಮಾಡಿದ ಹಿರಿಮೆ ಅವಳದು. ತನ್ನ ನಿರಂತರ ಪಶ್ಚಾತ್ತಾಪದಿಂದ, ತನ್ನ ಯಶಸ್ಸಿನ ತ್ಯಾಗದಿಂದ ಕೈಕೆ ಪುಣ್ಯಮೂರ್ತಿಯಾಗಿ ಪರಿಣಮಿಸಿದ್ದಾಳೆ ಈ ಕೃತಿಯಲ್ಲಿ.

ಅರಿಯದೆ ಅಂಧತಾಪಸನ ಮಗನನ್ನು ಕೊಂದ ದಶರಥ ಅವನಿಂದ ಶಾಪಗ್ರಸ್ತನಾಗಿ ಮನದಲ್ಲೇ ಮರುಗಿ ಕೊರಗಿ, ತನ್ನ ಪುತ್ರನ ವನಗಮನದಿಂದಾಗಿ ಹಿಂದೆ ಆ ತಂದೆ ಅನುಭವಿಸಿರಬಹುದಾದ ಅಪಾರ ಸಂಕಟವನ್ನು ತಾನೂ ಪುನರನುಭವಿಸಿ, ಆ ಮೂಲಕ ಶಾಪ ವಿಮುಕ್ತನಾಗಿ ದಿವ್ಯಸತ್ಯದ ಒಳಬೆಳಕನ್ನು ಕಂಡುಕೊಂಡು ಉದ್ಧಾರವಾಗುತ್ತಾನೆ.

ರಂಭೆಯ ನಿಮಿತ್ತದಿಂದ ಶಾಪಕ್ಕೊಳಗಾಗಿ ಭೀಕರಾಕಾರ ರಾಕ್ಷಸ ರೂಪವನ್ನು ಪಡೆದಿದ್ದ ವಿರಾಧ ರಾಮಲಕ್ಷ್ಮಣರನ್ನು ತನ್ನ ಮುಷ್ಟಿಯಲ್ಲಿ ತುಡುಕಿ, ಅವರ ಖಡ್ಗಗಳಿಗೆ ತನ್ನ ನೀಳತೋಳುಗಳನ್ನು ಬಲಿಗೊಡುವ ಮೂಲಕ, ಪ್ರಾಯಶ್ಚಿತ್ತಗೊಂಡು ತನ್ನ ಸ್ವಸ್ವರೂಪವನ್ನು ಪಡೆದು ಗಂಧರ್ವನಾಗಿ ಪುನೀತನಾಗುತ್ತಾನೆ. ಸೀತೆಯನ್ನು ಕಳೆದುಕೊಂಡು ತೀವ್ರ ದುಃಖ ನಿರಾಶೆಗಳಲ್ಲಿ ನಲುಗಿಹೋಗಿದ್ದ ರಾಮನನ್ನು ಆವರಿಸಿದ ಕಬಂಧ ಲಕ್ಷ್ಮಣ ಖಡ್ಗಕ್ಕೆ ತುತ್ತಾಗಿ ರಕ್ಕಸ ರೂಪವನ್ನು ತೊರೆದು ಬೃಂದಾರಕನಾಗಿ ಹೊಮ್ಮಿ ಶಬರಿಯಾಶ್ರಮಕ್ಕೆ ದಾರಿದೋರಿ ಕೃತಕೃತ್ಯನಾಗುತ್ತಾನೆ.

ರಾಮಾಯಣದಲ್ಲಿ ಅತಿ ಬಳಿಶಾಲಿಯೆನಿಸಿದ ವಾಲಿ, ತಮ್ಮನನ್ನು ಓಡಿಸಿ ತಮ್ಮನ ಮಡದಿ ಯನ್ನು ತನ್ನ ವಶದಲ್ಲಿಟ್ಟುಕೊಂಡು ಉಪಭೋಗಿಸುತ್ತಿದ್ದ ವಾಲಿ, ಈ ಕೃತಿಯಲ್ಲಿ ಕ್ಷಣಿಕ ಉದ್ರೇಕಕ್ಕೆ ಸೇಡಿಗೆ ಬಲಿಬಿದ್ದು ಸೋದರನನ್ನು ದೇಶಭ್ರಷ್ಟನನ್ನಾಗಿ ಮಾಡಿ, ಅವನಿಗೆ ವಿರಹ ಸಂಕಟವನ್ನುಂಟುಮಾಡುವ ಕಾರಣಕ್ಕಾಗಿ ಮಾತ್ರ ರುಮೆಯನ್ನು ಸೆರೆಯಲ್ಲಿಡುತ್ತಾನೆಯೇ ಹೊರತು ಪಾಪ ಬುದ್ದಿಯಿಂದಲ್ಲ. ಆದರೂ ಈ ಕೊಂಚ ತಪ್ಪಿಗಾಗಿ ಕೂಡ ಅವನು ಶಿಕ್ಷೆಯನ್ನು ಅನುಭವಿಸಬೇಕಾಯಿತು. ತಾನು ಮಾಡಿದ ತಪ್ಪು ಅವನನ್ನು ಸದಾ ಕಾಡುತ್ತಿತ್ತು. ಆ ತಪ್ಪನ್ನು ತೊಡೆದುಹಾಕಿ ನಿರ್ಮಲ ಸೋದರ ಪ್ರೇಮವನ್ನು ಮೆರೆಯಬೇಕೆನ್ನುವ ಹಂಬಲ ಬಲವಾಗಿ ಬೆಳೆದು ಅವನನ್ನು ಒತ್ತಾಯಿಸಿದ ಸಂದರ್ಭಗಳಲ್ಲಿ, ತನ್ನ ಕೆಣಕುಬುದ್ದಿಯಿಂದ ಸುಗ್ರೀವ ಮತ್ತೆ ಅವನಲ್ಲಿ ವೈರವನ್ನು ಕೆರಳಿಸಿದ್ದ. ರಾಮನ ನೆರವಿನಿಂದ ಯುದ್ಧಕ್ಕೆ ಬಂದ ತಮ್ಮನನ್ನು ಗುದ್ದಿ ಗೆದ್ದು ಬಂದಾಗಲೂ ವಾಲಿ ಮನದಲ್ಲಿಯೇ ತನ್ನ ಕಾರ್ಯದ ಬಗ್ಗೆ ಪರಿತಪಿಸುತ್ತಾನೆ; ಮಡದಿ ತಾರೆಗೆ ಅದನ್ನು ನಿವೇದಿಸಿಕೊಂಡು ಸಂಕಟಪಡುತ್ತಾನೆ. ಮತ್ತೆ ಆತ ಯುದ್ಧಕ್ಕಾಗಿ ಆರ್ಭಟಿಸಿದಾಗ ವಾಲಿ ರೋಷತಪ್ತನಾದರೂ ಮಡದಿ ತಾರೆಯ ಹಿತನುಡಿಗೇಳಿ ಪ್ರಶಾಂತ ಚಿತ್ತನಾಗುತ್ತಾನೆ. ತಮ್ಮ ಬಾಲ್ಯದ ಮಧುರನಿರ್ಮಲ ಪ್ರೀತಿಯನ್ನು ಸ್ಮರಿಸಿಕೊಂಡಾಗ ತಮ್ಮನ ಬಗ್ಗೆ ಅವನಿಗೆ ಪ್ರೀತಿ ಉಕ್ಕಿ ಬರುತ್ತದೆ. ತಮ್ಮನನ್ನು ಹೊತ್ತು ತಂದು, ರುಮೆಯೊಡನೆ ಸೇರಿಸಿ ಮತ್ತೆ ತಮ್ಮಿಬ್ಬರ ಎಳೆತನದ ಅಕಳಂಕ ವಾತ್ಸಲ್ಯವನ್ನು ಪುನರ್‌ಸ್ಥಾಪಿಸಬೇಕೆನ್ನುವ ಉದಾತ್ತ ಕನಸನ್ನು ಹೊತ್ತು ರಣರಂಗಕ್ಕೆ ಧಾವಿಸುತ್ತಾನೆ. ತಮ್ಮನನ್ನು ಎತ್ತಿಕೊಂಡು ಹಿಂದಿರುಗುವ ಸಮಯದಲ್ಲಿ ರಾಮಬಾಣಕ್ಕೆ ತುತ್ತಾಗುತ್ತಾನೆ. ಆ ರಾಮಾಯಣದ ಕಠಿಣನೂ ಕಾಮಮೋಹಿತನೂ ದ್ವೇಷದ ಪ್ರತಿಮೂರ್ತಿಯೂ ಆದ ವಾಲಿ, ಇಲ್ಲಿ ಪಶ್ಚಾತ್ತಾಪದಿಂದ ಮತ್ತು ಅದರ ಫಲಿತವಾದ ನಿರ್ಮಲ ಉದ್ದೇಶದಿಂದ, ತನ್ನ ಅದಮ್ಯವಾದ ತಾಯ್ನಾಡ ಪ್ರೇಮದಿಂದ ಮತ್ತು ತನ್ನ ತಮ್ಮನ ಬಗೆಗಿನ ವೈರವನ್ನಳಿದ ಶುದ್ಧ ಪ್ರೇಮದಿಂದ ಪುನೀತನಾಗಿ ಎಲ್ಲರ ಆದರ ಗೌರವಗಳಿಗೆ ಪಾತ್ರನಾಗುವ ಔನ್ನತ್ಯಕ್ಕೇರಿದ್ದಾನೆ.

ಸೀತಾಪಹರಣಕ್ಕೆ ಮೂಲಕಾರಣಳಾಗಿ ರಾವಣನ ಕಾಮಾಗ್ನಿಯನ್ನು ಕೆರಳಿಸಿ, ಆ ಮೂಲಕ ಅನಾಹುತ ಪರಂಪರೆಗೇ ಆಹ್ವಾನವಿತ್ತು ದುಷ್ಟಳೂ ಕ್ರೂರಳೂ ಕಾಮಾಂಧೆಯೂ ಆದ ಶೂರ್ಪನಖಿ ಇಲ್ಲಿ ಚಂದ್ರನಖಿ. ಇಲ್ಲಿ ಹೆಸರು ಮಾತ್ರವಲ್ಲ[6], ಆಕೆಯ ಉಸಿರೂ ಪರಿವರ್ತನೆ ಗೊಂಡಿದೆ. ಸೀತೆಯನ್ನು ಕದ್ದುತರಲು-ಈಕೆಯೇ ಕಾರಣಳಾದರೂ, ಸೀತೆ ಅಶೋಕವನದಲ್ಲಿ ವಾಸಿಸತೊಡಗಿದ ನಂತರ ಆಕೆಯ ಅಚಂಚಲವಾದ ಪತಿನಿಷ್ಠೆ, ತಪಸ್ಸು, ಅದಮ್ಯವಾದ ಆತ್ಮವಿಶ್ವಾಸ, ಯಾವ ಪ್ರಲೋಭನೆಗೂ ಮಣಿಯದ ಹೃದಯದಾರ್ಢ್ಯ, ಪಾಪಕಂಪನಕಾರಿ ಯಾದ ಸುಸಂಸ್ಕೃತಿಯ ಪ್ರಖರ ಬೆಳಕಿನ ಪರಿಸರದಲ್ಲಿ ಕೊಂಚಕೊಂಚವಾಗಿ ಚಂದ್ರನಖಿಯ ರಾಕ್ಷಸ ಸಹಜವಾದ ಭೋಗ ಲಾಲಸೆ ಕ್ರೌರ್ಯ ಮತ್ತು ಪಾಪರತಿಗಳು ಕರಗುತ್ತ, ಆ ಸ್ಥಾನದಲ್ಲಿ ನಿಷ್ಠೆ ತ್ಯಾಗ ಪ್ರೇಮ ತಪಸ್ಸುಗಳ ಸುಸಂಸ್ಕೃತ ಜೀವಪರ ಮಲ್ಯಗಳು ತುಂಬುತ್ತ ಹೋಗುತ್ತವೆ. ತಾನು ಮಾಡಿದ ಪಾಪ ಅವಳನ್ನು ಆಂತರಂಗಿಕವಾಗಿ ಸುಡತೊಡಗುತ್ತದೆ. ತನ್ನಿಂದ ಸೀತೆಗೆ, ರಾಮನಿಗೆ, ರಾವಣನಿಗೆ, ಮಂಡೋದರಿಗೆ, ಲಂಕೆಗೆ ತಟ್ಟಿದ ಘೋರ ವಿಪತ್ತು ಅವಳನ್ನು ಹಣ್ಣು ಮಾಡುತ್ತದೆ, ಕಣ್ಣು ತೆರೆಸುತ್ತದೆ. ತನ್ನಿಂದ ಆರಂಭವಾದ ವಿನಾಶ ತನ್ನಿಂದಲೇ ಅಂತ್ಯಗೊಳ್ಳಲಿ ಎಂಬ ಮಹದ್ಬಯಕೆ ಅವಳಲ್ಲಿ ಬೆಳೆದು ಸೀತೆಯನ್ನು ರಾಮನಿಗೊಪ್ಪಿಸಲು ತನಗೆ ಅನುಮತಿ ನೀಡಬೇಕೆಂದು ಆಕೆ ಅಣ್ಣನನ್ನು ಬೇಡುತ್ತಾಳೆ. ಪುಣ್ಯದ ಸ್ಪರ್ಶವನ್ನೇ ಅರಿಯದ ಈಕೆ, ಪುಣ್ಯಸತಿಯ ಪ್ರಭಾವದಿಂದ ಮೂಡಿದ ಅರಿವಿನಿಂದ ತನ್ನ ಪಾಪವನ್ನು ಕಳೆದುಕೊಂಡು ತೊಳೆದುಕೊಂಡು ಉದ್ಧಾರವಾಗುತ್ತಾಳೆ.

ಲಂಕೇಶ್ವರನ ಭೋಗ ವೈಭವ ಸಾಹಸ ಪರಾಕ್ರಮ ಔದಾರ್ಯ ರಸಿಕತೆಗಳಿಗೆ ಸೋತು ಶರಣಾದವಳು ಧಾನ್ಯಮಾಲಿನಿ. ಆದರೆ ತಾನು ಮಾಡಿದ ಅಪರಾಧ ಪಾಪಪ್ರಜ್ಞೆ ಯಾವಾಗಲೂ ಆಕೆಯ ಮನಸ್ಸನ್ನು ದಹಿಸುತ್ತಲೇ ಇತ್ತು; ರಾವಣ ಸೀತೆಯನ್ನು ತಂದು ಅಶೋಕವನದಲ್ಲಿ ಇಟ್ಟನಂತರ, ಆವನ ಚತುರೋಪಾಯಗಳಿಗೂ ಆಕೆ ಮಣಿಯದೆ ಅವನ ನಯ ವಿನಯ ಸಂಸ್ಕೃತಿ ಔದಾರ್ಯ ಬೆದರಿಕೆ ಆಮಿಷಗಳೆಲ್ಲವನ್ನೂ ಕಾಲಕಸವಾಗಿ ತಿರಸ್ಕರಿಸಿ ತನ್ನ ಅದ್ಭುತ ಪತಿನಿಷ್ಠೆಯನ್ನು ಮೆರೆದಾಗ, ಧಾನ್ಯಮಾಲಿನಿಯ ಉದ್ಧಾರಪ್ರಜ್ಞೆ ಜಗೃತವಾಗುತ್ತದೆ. ತಾನಿಳಿದ ಪಾಪಕೂಪದ ಆಳದ ಅರಿವಾಗುತ್ತದೆ, ಪತಿವ್ರತೆಯ ಅಸಮಾನ ಸಾಮರ್ಥ್ಯದ ತಿಳಿವು ನಿಚ್ಚಳವಾಗುತ್ತದೆ. ‘ರಘುರಾಮನ ಮಡದಿಯಡಿಯ ಪಾಪನಾಶಕ ಧೂಳಿ’ಯನ್ನು ನಿತ್ಯವೂ ತ್ರಿಜಟೆಯಿಂದ ತರಿಸಿ ಧರಿಸುತ್ತ, ತನ್ನ ಹೃದಯದಲ್ಲಿ ಪತಿನಿಷ್ಠೆ ಪರಿಶುದ್ಧ ಪ್ರೇಮಗಳನ್ನು ರೂಢಿಸಿ ಬೆಳೆಸಿಕೊಳ್ಳುತ್ತ, ತಾನು ಗೈದ ಪಾಪಕ್ಕಾಗಿ ಪರಿತಪಿಸುತ್ತ, ಅದರ ವಿಮುಕ್ತಿಗಾಗಿ ತೀವ್ರವಾಗಿ ಹಾರೈಸುತ್ತ, ಆಂತರಂಗಿಕವಾಗಿ ಮನ ತಪಸ್ಸನ್ನು ಕೈಗೊಂಡು ಕೃತಕೃತ್ಯಳಾಗುತ್ತಾಳೆ. ಪಾಪ ಸಾವಧಾನವಾಗಿ, ಸತತ ಸಾಧನೆಯ ಫಲವಾಗಿ, ಪುಣ್ಯವಾಗಿ ಪರಿಮಳಿಸುತ್ತದೆ.

ಯೌವನ ಶಕ್ತಿ ಸಾಹಸಗಳ ಸೊಕ್ಕಿನಲ್ಲಿ ಮೈಮರೆತು ನಿಶಾಕರ ಮುನಿಯ ಆಶ್ರಮವನ್ನು ಧ್ವಂಸಗೈದು ಅವನಿಂದ ಶಪಿತನಾಗಿ, ಅವನ ಆದೇಶದ ಮೇರೆಗೆ ಶತಶತ ವರ್ಷಗಳ ಕಾಲ ಸುಟ್ಟ ರೆಕ್ಕೆಯ ಜರ್ಜರಿತ ದೇಹದ ಅನಂತಯಾತನೆಯ ಮುಗಿಯದ ನಿರೀಕ್ಷೆಯ ಅಗ್ನಿದಿವ್ಯ ದಲ್ಲಿ, ತಾನು ಗೈದ ಅಪರಾಧವನ್ನು ಚಿಂತಿಸಿ ಕುದಿಯುತ್ತ ತಪಿಸಿದ ಸಂಪಾತಿ ಸೀತಾನ್ವೇಷಣೆಗಾಗಿ ಬಂದ ವಾನರ ಸಮುದಾಯಕ್ಕೆ ಸೀತೆಯನ್ನು ಕದ್ದೊಯ್ದ ರಾವಣನ ವೃತ್ತಾಂತವನ್ನು ಹೇಳು ತ್ತಿದ್ದಂತೆಯೇ ತನ್ನ ಮಹಾರುಜೆಯಿಂದ ಮುಕ್ತನಾಗುತ್ತಾನೆ. ಅರಿತೋ ಅರಿಯದೆಯೋ ಮಾಡಿದ ಪಾಪ, ಪುಣ್ಯ ಕಾರ್ಯಪ್ರೇರಣೆಯಿಂದ, ಪ್ರಾಮಾಣಿಕ ಪಶ್ಚಾತ್ತಾಪದಿಂದ, ಹೃತ್ಪೂರ್ವಕ ಪ್ರಾರ್ಥನೆಯಿಂದ ಕರಗಿ ಹೋಗಿ ಪಾಪಿಯಾಗಿದ್ದವನು ಪುನೀತನಾಗಿ ಉದ್ಧಾರವಾಗುವುದು ಅಸಂಭವವಲ್ಲ ಅಸಹಜವಲ್ಲ ಎಂಬುದನ್ನು ಈ ಪ್ರಸಂಗ ಸಮರ್ಥವಾಗಿ ಸಂಕೇತಿಸುತ್ತದೆ.

‘ಪಾಪಿಗುದ್ದಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯಲಿ’ ಎಂಬ ದರ್ಶನದ ಪರಮೋನ್ನತ ಪ್ರತಿಮೆ ರಾವಣ. ಮಹಾಕಾಮಿಯಾಗಿ ಮಹಾಪರಾಕ್ರಮಿಯಾಗಿ ಮಹಾದುಷ್ಟ ನಾಗಿ ರಾವಣ ಚಿತ್ರಿತನಾಗಿದ್ದಾನೆ ವಾಲ್ಮೀಕಿ ರಾಮಾಯಣದಲ್ಲಿ. ಅವನನ್ನು ವಧಿಸಲೆಂದೇ ವಿಷ್ಣು ರಾಮಾವತಾರವೆತ್ತಿದ್ದಾನೆ. ಅವನ ವಧೆಯಾದಾಗ ಮಹಾಸಂಕಷ್ಟವೊಂದು ಪರಿಹಾರ ವಾದಂತೆ ಜಗತ್ತು ಹರ್ಷ ಸಂಭ್ರಮಗೊಳ್ಳುತ್ತದೆ. ಶ್ರೀರಾಮಾಯಣದರ್ಶನದ ರಾವಣನೂ ಅತಿಕಾಮಿಯೇ, ಅತಿಪರಾಕ್ರಮಿಯೇ. ಆದರೆ ಮೂಲ ರಾಮಾಯಣದ ಪಾಪಿ ರಾವಣ ಪಾಪಿ ರಾವಣನಾಗಿಯೇ ಈ ಲೋಕದಿಂದ ಅಸ್ತಂಗತನಾಗುತ್ತಾನೆ. ಅವನಲ್ಲಿ ತಾನು ಗೈದ ಪಾಪದ ಬಗ್ಗೆ ಆತ್ಮಸಂಘರ್ಷವಿಲ್ಲ, ಆದ್ದರಿಂದ ಪಶ್ಚಾತ್ತಾಪವೂ ಇಲ್ಲ, ಆದ್ದರಿಂದ ಪರಿವರ್ತಿತನಾಗ ಬೇಕೆಂಬ ಉದ್ಧಾರವಾಗಬೇಕೆಂಬ ಅಭೀಪ್ಸೆಯೂ ಅವನಿಗಿಲ್ಲ. ಆದರೆ ಈ ಕೃತಿಯಲ್ಲಿ “ಪತಿವ್ರತೆಯರ ಅಸ್ತಿತ್ವವನ್ನೇ ನಿರಾಕರಿಸಿ ಹೆಣ್ತನದ ಭೋಗ ಜೀವನದಿಂದ ರಸಾತಳಕ್ಕಿಳಿದಿದ್ದ ಆತನ ಕಾಮಜೀವನವನ್ನು ಆ ಕೂಪದಿಂದ ಮೇಲೆತ್ತಿ ರಾಮಜೀವನದತ್ತ ತಿರುಗಿಸುವ ಉದ್ಧಾರಕಶಕ್ತಿಯಾಗಿ ಸೀತೆ ಅವನ ಜೀವನವನ್ನು ಪ್ರವೇಶಿಸಿ ಕ್ರಮೇಣ ಬೆಳೆಯುತ್ತ ಬರುವ ಭವ್ಯಚಿತ್ರವಿದೆ.”[7] ಈತನಲ್ಲಿ ದೌಷ್ಟ್ಯವಿದ್ದರೂ ಅದು ಉದ್ಧಾರದ ಅಂತರಭೀಪ್ಸೆಯಿಂದ ಊರ್ಧ್ವಮುಖಿಯಾಗಿದೆ. ತನ್ನ ಭಯ, ಅಭಯ, ಶಕ್ತಿಸಾಮರ್ಥ್ಯ, ವೈಭವ, ವಿನಯ, ಸಮರ್ಪಣಾಭಾವದ ತೀವ್ರ ಪ್ರಲೋಭನೆಗಳೆಲ್ಲವನ್ನೂ ಕಃಪದಾರ್ಥವಾಗಿ ಕಡೆಗಣಿಸಿ ತನ್ನ ಅಹಂಕಾರಕ್ಕೆ ಮರೆಯಲಾರದ ಮಹಾಪೆಟ್ಟನ್ನು ಕೊಟ್ಟ ಸೀತೆಯ ಬಗ್ಗೆ ಆರಂಭದ ಉಪೇಕ್ಷಾಭಾವ ಮರೆಯಾಗುತ್ತ ಗೌರವಭಾವ ಮೊಳೆಯುತ್ತ ಬೆಳೆಯುತ್ತ ಪೂಜ್ಯಭಾವವಾಗಿ ಮಾರ್ಪಾಡುತ್ತ ಹೋದಂತೆಲ್ಲ, ತಾನು ಮಾಡಿದ ಪಾಪದ ತೀವ್ರತೆಯ ಅರಿವು ಅವನಲ್ಲಿ ಆಳವಾಗಿ ಇಳಿಯುತ್ತ ಕಾಡುತ್ತ ಹೋಗುತ್ತದೆ. ಸಮರದ ಕೊನೆಯ ಹಂತಗಳಲ್ಲಿ ಪ್ರೀತಿಯ ಸೋದರ, ಪ್ರೇಮದ ಪುತ್ರರು, ಮೋಹದ ಉಪಪತ್ನಿ, ನೆಚ್ಚಿನ ಸೇನಾನಿಗಳು, ಅಸಂಖ್ಯಾತ ನಿಷ್ಪಾಪಿ ಯೋಧರು ಮಡಿಯುತ್ತ ಬಂದಂತೆಲ್ಲ ಅವನ ಅಂತಃಪ್ರಜ್ಞೆ ಮತ್ತಷ್ಟು ಕುದಿಯುತ್ತ ಜಾಗೃತಗೊಳ್ಳುತ್ತ ಲೋಕದ ಶಾಶ್ವತ-ಅಶಾಶ್ವತ ಮೌಲ್ಯಗಳನ್ನು ತೂಗುತ್ತ ಹೋಗುತ್ತದೆ. ಕಾಮಮಯವಾಗಿದ್ದ ಅವನ ಮನಸ್ಸು ಪ್ರೇಮಮಯವಾಗುತ್ತದೆ. ಅಹಂಕಾರದ ತುತ್ತತುದಿ ಯಲ್ಲಿದ್ದ ಅವನು ವಿನೀತನೂ ಸಮಚಿತ್ತನೂ ಸಮದರ್ಶಿಯೂ ತ್ಯಾಗಶೀಲನೂ ಆಗಿ ಪರಿಣಮಿಸುತ್ತಾನೆ. ಈ ಭಾವಗಳು ಕ್ರಮಕ್ರಮವಾಗಿ ‘ನೀಂ ಮಹಚ್ಛಿಲ್ಪಿ ದಿಟಂ’ ‘ಶ್ರೀರಾಮ ರಾವಣ ಚಿತ್‌ತಪಸ್ ಶ್ರೀ’ ಸಂಚಿಕೆಗಳಲ್ಲಿ ಬಲಗೊಳ್ಳುತ್ತ ‘ದಶಾನನ ಸ್ವಪ್ನಸಿದ್ದಿ’ ಸಂಚಿಕೆ ಯಲ್ಲಿ ಬೃಹದಾಕಾರವಾಗಿ ಬೆಳೆದು ಅವನ ಹಿಂದಿನ ಪಾಪದ ಮಹಾಕಳಂಕವನ್ನು ಪೂರ್ಣವಾಗಿ ತೊಳೆದುಬಿಡುತ್ತವೆ. ತನ್ನ ಕಾಮಾಗ್ನಿಯ ಬಲಿಪಶುವೆಂದು ಅವನೇ ಭಾವಿಸಿದ್ದ ಸೀತೆ ತನ್ನಲ್ಲಿ ಶ್ರದ್ಧೆಯನ್ನು ಮೊಳೆಸಿ, ಆತ್ಮದುದ್ಧಾರವನ್ನು ತಂದ ದೇವತೆ ಪುಣ್ಯಮಾತೆಯಾಗಿ ಅವನ ಆಂತರ್ಯದಲ್ಲಿ ಬೆಳೆಯುತ್ತಾಳೆ ಬೆಳಗುತ್ತಾಳೆ. ಕೊನೆಗೆ ರಾಮಬಾಣದಿಂದ ತನ್ನ ರಾವಣತ್ವವನ್ನು ಪೂರ್ಣವಾಗಿ ಕಳೆದುಕೊಂಡು ರಾಮತ್ವವನ್ನು ಪಡೆದು ರಾಮನಲ್ಲಿ ವಿಲೀನವಾಗುತ್ತಾನೆ. ಹೀಗೆ ಪಾಪಿಯಾಗಿದ್ದ ರಾವಣ ಸಮಯ ಸಂದರ್ಭಗಳ ಪ್ರಚೋದನೆಯಿಂದ, ತನ್ನ ಸ್ವಂತ ಅಭೀಪ್ಸೆಯಿಂದ ಸಾಧನೆಯಿಂದ, ಉದ್ಧಾರದ ಪಥದಲ್ಲಿ ಗಮಿಸಿ ಅನ್ಯಾದೃಶವಾದ ಅಮೃತತ್ವ ವನ್ನು ಪಡೆಯುತ್ತಾನೆ. ಇಂಥ ಪಾಪಿಯುದ್ಧಾರದ ಪ್ರಗತಿಪರವೂ ವಿಚಾರಸಮ್ಮತವೂ ಸಹಜವೂ ಕಲಾತ್ಮಕವೂ ಆದ ಚಿತ್ರಣ ಸಾಹಿತ್ಯ ಜಗತ್ತಿನಲ್ಲೇ ಅಪೂರ್ವ. ಕುವೆಂಪು ಅವರ ದರ್ಶನದ ಪರಮ ಪ್ರತೀಕ ಇದು.

ಹೀಗೆ ಶ್ರೀರಾಮಾಯಣದರ್ಶನದಲ್ಲಿ ಪಾಪ ಪಾಪವಾಗಿಯೇ ಉಳಿಯದೆ, ತನ್ನ ಸಹಜ ವಿಕಾಸಕ್ರಮದಲ್ಲಿ ಪುಣ್ಯವಾಗಿ ಪರಿವರ್ತನೆಗೊಳ್ಳುತ್ತದೆ. ಪಾಪಿ ತನ್ನ ಪಾಪದ ಸ್ವರೂಪವನ್ನು ಅರಿತು ಅದನ್ನು ಸತತ ಸಾಧನೆಯಿಂದ ಕ್ರಮಕ್ರಮವಾಗಿ ಲಯವಾಗಿಸಿಕೊಳ್ಳುತ್ತ, ಅಂತಿಮವಾಗಿ ಉದ್ಧಾರಗೊಂಡು ಪುಣ್ಯಪ್ರದನೂ ಲೋಕಗೌರವಭಾಜನನೂ ಆಗುತ್ತಾನೆ.


[1] ಶ್ರೀರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪು. ೧೧೧, ಸಾಲು ೭೦೩-೪.

[2] ಡಾ. ಸಿ.ಪಿ. ಕೃಷ್ಣಕುಮಾರ್, ಶ್ರೀರಾಮಾಯಣದರ್ಶನಂ, ಪು. ೧೧.

[3] ಶ್ರೀರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪು. ೧೦೭, ಸಾಲು ೧೯೭-೮.

[4] ಅದೇ, ಶ್ರೀಸಂಪುಟಂ, ಪು. ೮೫೫, ಸಾಲು ೪೦೨-೫.

[5] ನಾಗಚಂದ್ರನ, ಶ್ರೀರಾಮಚಂದ್ರಚರಿತ ಪುರಾಣಂನಲ್ಲಿ ಈ ಹೆಸರಿದೆ.

[6] ಡಾ. ಎಚ್. ತಿಪ್ಪೇರುದ್ರಸ್ವಾಮಿ, ಶ್ರೀರಾಮಾಯಣದರ್ಶನಂ ಮಹಾಕಾವ್ಯ, ಪು. ೭೮.

[7] ಸುಜನಾ, ಪರಂಪರೆ ಮತ್ತು ಕುವೆಂಪು, ಪು. ೧೪೦-೪೧.