೨. ವಿಧಿಶಕ್ತಿ

ವಿಧಿಶಕ್ತಿಯ ಪ್ರಾಬಲ್ಯವನ್ನು, ಅದು ಮಾನವ ಬದುಕಿನ ಸ್ಥಿತ್ಯಂತರಗಳಲ್ಲಿ ವಹಿಸುವ ಮಹೋನ್ನತ ಪಾತ್ರವನ್ನು ಜಗತ್ತಿನ ಪ್ರಮುಖ ಮಹಾಕೃತಿಗಳೆಲ್ಲ ಅತ್ಯಂತ ರೋಮಾಂಚಕರ ವಾಗಿ ಚಿತ್ರಿಸಿವೆ. ಇಲಿಯಡ್, ಈನಿಯಡ್, ಡಿವೈನ್ ಕಾಮೆಡಿ, ಪ್ಯಾರಡೈಸ್ ಲಾಸ್ಟ್ ಮುಂತಾದ ಪಾಶ್ಚಾತ್ಯ ಮಹಾಕಾವ್ಯಗಳು; ಮಹಾಭಾರತ, ರಾಮಾಯಣ ಮುಂತಾದ ಭಾರತೀಯ ಮಹಾಕಾವ್ಯಗಳು ಮಾನವನ ಆಗುಹೋಗುಗಳನ್ನು ಅಂತಿಮವಾಗಿ ನಿರ್ಣ ಯಿಸುವ ಸಾರ್ವಭೌಮ ಸಾಮರ್ಥ್ಯವುಳ್ಳದ್ದು ವಿಧಿ ಎಂಬ ಅಂಶವನ್ನು ವಿವಾದಾತೀತವಾಗಿ ಸಾರಿವೆ. ಭಾರತೀಯ ಸಂಸ್ಕೃತಿಯಂತೂ ಅದಕ್ಕೆ ಬಹು ಮನ್ನಣೆಯ ಮಣೆಯನ್ನು ಹಾಕಿದೆ. ಇದರ ಒಂದು ಅಂಗವೇ ಆದ ಕರ್ನಾಟಕ ಸಂಸ್ಕೃತಿಯಲ್ಲಿ, ಅದರ ಕಲಾತ್ಮಕ ಅಭಿವ್ಯಕ್ತಿಯಾದ ಕನ್ನಡ ಸಾಹಿತ್ಯದಲ್ಲಿ ಕೂಡ ಈ ನಂಬಿಕೆಗೆ ಲೆಕ್ಕವಿಲ್ಲದಷ್ಟು ನಿದರ್ಶನಗಳು ದೊರೆಯುತ್ತವೆ. ‘ನಿಯತಿಃ ಕೇನ ಲಂಘ್ಯತೇ’, ‘ನಿಯತಿಯನಾರ್ ಮೀರಿ ದಪರ್’, ‘ತಾನೊಂದ ನೆನೆದರೆ ದೈವಗತಿ ಬೇರೊಂದ ನೆನೆದುದು’, ‘ಹರಕೊಲ್ಲಲ್ ಪರಕಾಯ್ವನೇ’, ‘ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ’, ‘ಹಣೇಲಿ ಬರದಂಗಾಯ್ತದೆ’ ಮುಂತಾದ ಮಾತುಗಳು ನಮ್ಮ ಜನಜೀವನದಲ್ಲಿ ಬೇರೂರಿರುವ ವಿಧಿಯ ಬಗೆಗಿನ ನಂಬಿಕೆಯನ್ನು ಕನ್ನಡಿಸುತ್ತವೆ.

ಕಾರ್ಯಕ್ಕೊಂದು ಕಾರಣವಿರಬೇಕಾದದ್ದು ಸಹಜ ಮತ್ತು ಅನಿವಾರ್ಯ. ಆದರೆ ಹಲವಾರು ಸಂದರ್ಭಗಳಲ್ಲಿ ಕಾರ್ಯದ ನಿಜವಾದ ಕಾರಣವನ್ನು ಕಂಡುಹಿಡಿಯುವುದು ಸುಲಭವಲ್ಲ, ಅಥವಾ ನಮ್ಮ ತರ್ಕದ ಆಲೋಚನೆಯ ನಿಶಿತ ಸವಾಲುಗಳನ್ನು ಮೀರಿ ಅದು ಸಂಭವಿಸುತ್ತದೆ. ಹೀಗೆ ಕಾರ್ಯವೊಂದರ ನೈಜ ಕಾರಣವನ್ನು ಕಂಡುಹಿಡಿಯುವ ಮಾನವ ಪ್ರಯತ್ನಗಳೆಲ್ಲ ವಿಫಲವಾದಾಗ, ಅತೀತವಾದ ಶಕ್ತಿಯೊಂದು ಅದಕ್ಕೆ ಕಾರಣವಾಗಿದೆ ಎಂದು ಮನುಷ್ಯ ಸಮಾಧಾನಪಟ್ಟುಕೊಳ್ಳುತ್ತಾನೆ. ಆ ಅತೀತ ಅದೃಶ್ಯ ಅಪರಿಮಿತ ಶಕ್ತಿಯೇ ವಿಧಿ, ಹಣೆಬರಹ. ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲಾಗದ ಮತ್ತು ಎದುರಿಸಲೊಲ್ಲದ ದುರ್ಬಲ ಜೀವಿಗಳ ಪಲಾಯನವಾದಕ್ಕೂ ಒಮ್ಮೊಮ್ಮೆ ‘ವಿಧಿ’ ಎಂಬ ಹಣೆಪಟ್ಟಿಯನ್ನು ಕಟ್ಟು ವುದುಂಟು. ಆದರೆ ಮಾನವ ಜೀವನವನ್ನು ಅದೃಶ್ಯವಾಗಿ ನಿಯಂತ್ರಿಸುವ ತರ್ಕಾತೀತವಾದ ಶಕ್ತಿಯೊಂದು ಸದಾ ಕಾರ್ಯಪ್ರವೃತ್ತವಾಗಿರುತ್ತದೆಂಬ ನಂಬಿಕೆ ಮಾನವ ಜಗತ್ತಿನಲ್ಲಿ ಬಲವತ್ತರವಾಗಿದೆ. ಈ ವಿಧಿಶಕ್ತಿಗೆ ಅಂತಿಮವಾಗಿ ತಲೆಬಾಗಿದರೂ, ಅಲ್ಲಿಯವರೆಗೆ ಮನುಷ್ಯ ಸ್ವತಂತ್ರಶೀಲನಾಗಿ ಸ್ವತಂತ್ರಮತಿಯಾಗಿ ತನ್ನ ವ್ಯಕ್ತಿತ್ವದ ಎಲ್ಲ ಸಾಧ್ಯತೆಗಳನ್ನೂ ಪೂರ್ಣ ಪ್ರಮಾಣದಲ್ಲಿ ದುಡಿಸಿಕೊಳ್ಳುತ್ತ ಕರ್ಮ ಪ್ರವೃತ್ತನಾಗಬೇಕು ಎಂಬ ತತ್ವ ಕೂಡ ಇಲ್ಲಿದೆ.

ಕುವೆಂಪು ವಿಧಿಶಕ್ತಿಯಲ್ಲಿ ನಂಬಿಕೆಯುಳ್ಳವರು. ಅದು ಎಂದೂ ಮಾನವನ ಉನ್ನತಗತಿಗೆ ಸಹಕಾರಿಯೇ ಹೊರತು, ಅಧೋಗತಿಗೆ ಸಹಚರಿಯಾಗಲೀ ಪ್ರೇರಕವಾಗಲಿ ಅಲ್ಲವೆಂಬುದು ಮತ್ತು ಅದು ನಾನಾ ರೂಪಗಳಲ್ಲಿ ಎದುರಾಗಿ ಅಜ್ಞಾತವಾಗಿ ಅವನ ಇಡೀ ಜೀವನ ಚಕ್ರವನ್ನು ರೂಪಿಸುತ್ತದೆಂಬುದು ಅವರ ಅಚಲ ವಿಶ್ವಾಸ. ಆದರೆ ಅದು ನಿರಂಕುಶ ಶಕ್ತಿಯಾಗಿ ಮಾನವನ ಸ್ವಂತ ಸ್ವತಂತ್ರ ಆಲೋಚನೆ ಪ್ರತಿಭೆ ಕ್ರಿಯಾಶೀಲತೆಗಳೆಲ್ಲವನ್ನೂ ಅರಳದಂತೆ ದಮನಮಾಡಿ ವಿಜೃಂಭಿಸುವುದಿಲ್ಲ; ಅವನ ಇಚ್ಛಾಸ್ವಾತಂತ್ರ್ಯವನ್ನು ಗೌರವಿಸಿ, ಅವನಿಗರಿ ವಾಗದಂತೆ ಅಂತಿಮವಾಗಿ ನಿಯಂತ್ರಿಸುತ್ತದೆ ಎಂಬ ದೃಷ್ಟಿ ಅವರದು. ಈ ದೃಷ್ಟಿ ಶ್ರೀರಾಮಾಯಣದರ್ಶನದಲ್ಲಿ-ಅವರ ಇತರ ಕೃತಿಗಳಲ್ಲಿಯೂ – ಸ್ಪಷ್ಟವಾಗಿ ಒಡಮೂಡಿದೆ. ಅದರ ಸಾರ ಇದು :

ನೆಯ್ದಾಳುತಿದೆ ಜಗವನೊಂದತಿ ವಿರಾಣ್‌ಮನಂ,
ಸೂಕ್ಷ್ಮಾತಿಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯಭಾವಮಂ
ನೀಡಿ. ಮಂಥರೆ ಸೀತೆ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ?

[1]

ಸರ್ವ ಭೋಗ ಭಾಗ್ಯಗಳಿದ್ದೂ ಮಕ್ಕಳಿಲ್ಲದ ಅರಕೆಯಿಂದ ಕೊರಗುತ್ತಿದ್ದ ಕೋಸಲದ ಅರಸ ದಶರಥ. ಅವನ ಅಂತರಂಗದ ಈ ಅರಕೆ ಮತ್ತು ಅದರ ಬಗೆಗಿನ ಅಭೀಪ್ಸೆ ಅತ್ಯಂತ ತೀವ್ರತರವಾಗಿ ಜ್ವಲಿಸಿದ್ದು ತನ್ನ ಉದ್ಯಾನವನದಲ್ಲಿ ಮರಿಹಕ್ಕಿಗೆ ಕುಟುಕು ಕೊಡುತ್ತಿದ್ದ ತಾಯಿ ಹಕ್ಕಿಯನ್ನು ಆತ ಕಂಡಾಗ. ಘಟನೆ ಅತ್ಯಂತ ಸಾಧಾರಣವಾದದ್ದು; ಅದರ ಪ್ರಚೋದನೆ ಅತ್ಯಂತ ಅಸಾಧಾರಣವಾದದ್ದು. ಕಾರಣ?

ದೇವತೆಗಳಾಶಿತಮೊ? ಋತಚಿದಿಚ್ಛಿಯೊ? ವಿಧಿಯೊ?
ಪಕ್ಕಿ ಗುಬ್ಬಚ್ಚಿಯಾದೊಡಮೇಂ? ವಿಭೂತಿಯಂ
ಘಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ
ಹೃದಯದಲಿ![2]

ಇದಕ್ಕಾಗಿ ಸಾಂಪ್ರದಾಯಿಕ ಯಾಗವನ್ನು ಕೈಬಿಟ್ಟು ಪ್ರಜಪ್ರೀತ್ಯರ್ಥವಾದ ಯಾಗವನ್ನು ಕೈಗೊಂಡರೆ ಆ ಜನಮನದ ಹರಕೆ ‘ಕೃಪಣವಿಧಿಯಂ ಪಿಂಡಿ ತಂದೀವುದೈ ನಿನಗೆ ನೆಲದರಿಕೆಯೊಳ್ಮಕ್ಕಳಂ’ ಎಂದು ಜಬಾಲಿ ದಶರಥನಿಗೆ ಸಲಹೆ ನೀಡುತ್ತಾನೆ. ಅಗ್ನಿಯಿಂದೆದ್ದ ಕ್ರತುಪುರುಷ ಪಾಯಸಪಾತ್ರೆಯನ್ನು ಅವನ ಕೈಗಿತ್ತು, ‘ಪಸುಗೆ ನೀಡಂಶಂಗಳಂ ಸತಿಯರ್ಗೆ’, ‘ಗೆಲ್ವುದಾ ವಿಧಿಲೀಲೆಯುಂ’ ಎಂದು ಹೇಳುವಲ್ಲಿ ರಾಮಜನನದ ಹಿಂದೆ ವಿಧಿಸಂಕಲ್ಪವೊಂದು ಕೆಲಸ ಮಾಡುತ್ತಿದೆಯೆಂಬುದು ಸೂಚಿತವಾಗಿದೆ. ಕಾಡಿನಲ್ಲಿ ರೋಧಿಸುತ್ತಿದ್ದ ವಿಕೃತ ದಸ್ಯುಶಿಸು ಮಂಥರೆಯನ್ನು ಕೇಕಯರಾಜ ಅರಮನೆಗೆ ತಂದದ್ದು ಮುಂದಿನ ಮಹಾ ದುಃಖದಾವಾನಲಕ್ಕೆ ಕಿಡಿಯ ಮುನ್ನುಡಿಯಿಡುವ ‘ವಿಧಿವಿಲಾಸ’. ದಶರಥ ಕೈಕೆಯನ್ನು ಮದುವೆಯಾದದ್ದು ‘ವಿಧಿನಿಯಮ’. ರಾಮ ಲಕ್ಷ್ಮಣರು ಸೀತಾಸ್ವಯಂವರಕ್ಕೆ ಹೋದದ್ದು ‘ವಿಧಿನಿಯಂತ್ರದಲಿ’. ಆಗಸದಲ್ಲಿ ಕಾಣಿಸಿಕೊಂಡ ಮಹದುಲ್ಕೆ ದಶರಥನಿಗೆ ‘ಬಿದಿಬರಹ’ದಂತೆ ಭಾಸವಾಗುತ್ತದೆ. ರಾಮಪಟ್ಟಾಭಿಷೇಕದ ಬಗ್ಗೆ ರಾಜಸಭೆಯಲ್ಲಿ ಸರ್ವಾನುಮತದ ನಿರ್ಣಯವಾದರೆ “ಮಥಿಸಿದುದು ದಶರಥನ ವಿಧಿ ಮಂಥರೆಯ ಮನದಿ ತನ್ನ ತಂತ್ರದ ಕೃತಿಯನಾ ಇರುಳ್ ಕನಸಿನಲಿ”. ಅಂದು ರಾತ್ರಿ ಮಂಥರೆ ಕಂಡ ಕನಸು ಮುಂದೆ ರಾಮನ ವನನಿರ್ಗಮನಕ್ಕೆ, ಆ ಮೂಲಕ ದಶಕಂಠನ ಉತ್ಥಾನಕ್ಕೆ ಕಾರಣವಾಗುವಂತೆ ವಿಧಿ ಸನ್ನಾಹ ಮಾಡುತ್ತದೆ. ತಾನು ಕೇಳಿದ ವರಗಳಿಂದ ಪತಿ ದಶರಥನಿಗಾದ ಚಿತ್ತಗ್ಲಾನಿಯನ್ನು ದುರ್ಭರ ದುಃಖವನ್ನು ಕಂಡು ನಿಜವಾಗಿಯೂ ಕಳವಳಕ್ಕೀಡಾದ ಕೈಕೆ, ತನ್ನ ಕೋರಿಕೆಯಿಂದ ಆತನ ಮನಸ್ಸಿಗೆ ನೋವಾಗು ವುದಾದರೆ ಅವುಗಳನ್ನು ವಾಪಸು ತೆಗೆದುಕೊಳ್ಳಬೇಕೆಂದು, ತಾನು ಮತ್ತೊಮ್ಮೆ  ಆ ವರಗಳನ್ನು ಕೇಳೆನೆಂದು ಕೈಮುಗಿದು ಬೇಡುತ್ತಾಳೆ ಪತಿಯನ್ನು. ಆದರೆ –

ಕಬಂಧನ ಮೊರೆಯೊ?
ಶಬರಿಯ ಕರೆಯೊ? ರಾಮನಾತ್ಮಾಭಿಲಾಷಿತಮೊ?
ಪಾತ್ರಂಗಳಂತರಾಳದಿ ತನ್ನ ಸೂತ್ರಂಗಳಂ
ನಡೆಯಿಪಂತರ್ಯಾಮಿ ಶಕ್ತಿಯ ವಿಲಾಸಿತಮೊ?
ಕೈಕೆಯಾಡಿದುದಾಯ್ತು ಮನಕೆ ಮೂದಲಿಕೆಯೋಲ್![3]

ಸಹಜವಾಗಿ ಸ್ವೀಕಾರಾರ್ಹವಾಗಿದ್ದ ಕೈಕೆಯ ಅಂತರಾಳದ ಪ್ರಾಮಾಣಿಕ ಮಾತು ಮನವನ್ನರಿಯುವ ಮೂದಲಿಕೆಯ ಕೂರಂಬಿನ ಮೊನೆಯಂತೆ ದಶರಥನಿಗೆ ಭಾಸವಾದದ್ದು ವಿಧಿಶಕ್ತಿಯ ಕೈವಾಡವೆಂಬುದೇ ಕವಿಯ ಸೂಚನೆ. ಕೈಕೆಯ ಸಹಜ ನುಡಿಗಳಿಗೆ ವಿಪರೀ ತಾರ್ಥದ ವಿಕೃತವರ್ಣವನ್ನು ಬಳಿದ ದಶರಥ ಅತ್ಯಂತ ಮರ್ಮಭೇದಕವೂ ಕ್ರೂರವೂ ಆದ ಮಾತುಗಳಿಂದ ಕೈಕೆಯನ್ನು ಘಾಸಿಗೊಳಿಸುತ್ತಾನೆ. ಆಕೆ ಮತ್ತಷ್ಟು ದೀನಳಾಗಿ ಆ ಸಂದರ್ಭದಲ್ಲಿ ವರ್ತಿಸಿದ್ದರೆ ಮುಂದಿನ ಮಹಾಘಟನೆಗಳ ಗತಿಯೇನು? ಆದ್ದರಿಂದ ಆ ಅತ್ಯಂತ ಸೂಕ್ಷ್ಮವೂ ಸಂದಿಗ್ಧವೂ ನಿರ್ಣಾಯಕವೂ ಆದ ಸನ್ನಿವೇಶದಲ್ಲಿ,

ಕರೆದವಿದ್ಯಾಮಾಯೆಯಂ ಬೆಸಸಿದನು ವಿಧಿ :
“ವಿಭೂತಿಯಾವಿಷ್ಕಾರ ಸಾಧನಾರ್ಥಂ ಬೇಗಮಾ
ಕೈಕೆಯಾತ್ಮಂಬೊಕ್ಕು ರಚಿಸು ವಿನ್ಯಾಸಮಂ!”[4]

ಆಗ ಕೈಕೆ ‘ತಕ್ಕನೆ ಬಿದಿಯ ಕೈ ಝಳಪಿಸುವ ಕೈದು’ವಾಗುತ್ತಾಳೆ; ಮತ್ತಷ್ಟು ಕಟುಮಾತಿನ ಕೊಕ್ಕಿನಿಂದ ದುಃಖತಪ್ತ ರಾಮಪಿತನ ಜರ್ಝರಿತ ಹೃದಯವನ್ನು ಕುಕ್ಕುತ್ತಾಳೆ. ಅವಳ ನಿರೀಕ್ಷೆಯನ್ನು ಮೀರಿ ಘಟನೆಗಳು ನಡೆದು ಬಿಡುತ್ತವೆ. ಈ ಅನಿರೀಕ್ಷಿತ ಆಘಾತಕ್ಕೆ ಸಿಕ್ಕಿ ಗೋಳಿಡುತ್ತಿದ್ದ ತಂದೆಗೆ, ಮುಂದೆ ಸಿಂಧುವಾಗಲಿರುವ ಇಂದಿನ ಬಿಂದು, ಶ್ರೀರಾಮ ಹೇಳುವ ಸಮಾಧಾನದ ಮಾತು ಕೂಡ ವಿಧಿಯ ಸರ್ವಂಭರತ್ವವನ್ನು ಸೂಚಿಸುತ್ತದೆ :

             ನಡೆವುದೆಲ್ಲಮುಂ
ನಡೆವುದೊಳ್ಪಿಗೆ : ಸರ್ವಶಕ್ತಿಯುಂ ಜ್ಞಾನಮುಂ
ಮತ್ತೆ ಕಲ್ಯಾಣಮುಂ ತಾನಪ್ಪ ಕೃಪೆ ತಾನೆ
ಪಿಡಿದಿದೆ ಜಗದ್‌ರಥವನೆಳೆವ ಶಕ್ತ್ಯಶ್ವಕುಲ
ವಾಘೆಯಂ![5]

ಶ್ರೀರಾಮನ ವನಗಮನ ವಾರ್ತೆಯನ್ನು ಅವನ ಬಾಯಿಂದಲೇ ಕೇಳಿದ ತಾಯಿ ಕೌಸಲ್ಯೆಯ ಉದ್ಗಾರ: “ಓ ವಿಧಿಯೆ, ನಿನ್ನ ಗರಗಸಕಿನಿತು ಕರುಳಿಲ್ಲ?’ ಈ ಹೃದ್ಬೇಧಕ ವಾರ್ತೆಯಿಂದ ಕನಲಿದ, ನೂರಕ್ಕೆ ನೂರರಷ್ಟು ನೆಲದ ಮಗನಾದ, ಲಕ್ಷ್ಮಣ ಅಧರ್ಮರತನಾದ ತಂದೆಯನ್ನು ನಿಗ್ರಹಿಸಿ ಸಿಂಹಾಸನವನ್ನು ವಶಪಡಿಸಿಕೊಳ್ಳಬೇಕೆಂದು ಆರ್ಭಟಿಸುತ್ತಾನೆ. ಆದರೆ ಅವತಾರಿ ಯಾದ ಸುದೂರದೃಷ್ಟಿಯ ಶ್ರೀರಾಮಚಂದ್ರ ಅವನನ್ನು ಸಂತೈಸುತ್ತ “ಲೇಸನೆಸಗುವ ವಿಧಿಗೆ ಬಹು ಪಥಗಳುಂಟು ನಡೆಯಲ್” ಎನ್ನುತ್ತ ಇಂದಿನ ಅನಿಷ್ಟವೆ ಮುಂದಿನ ಅಭ್ಯುದಯಕ್ಕೆ ತೊಟ್ಟಿಲಾಗುತ್ತದೆಯೆಂದು ಹೇಳಿ, ತಾನು ಪ್ರತಿನಿತ್ಯ ಕಾಣುವ ಕನಸೊಂದನ್ನು ಪ್ರಸ್ತಾಪಿಸಿ ‘ದೈವಮಂ ಮೀರ್ವರಾರ್?’ ಎಂದು ಉದ್ಗರಿಸುತ್ತಾನೆ. ರಾಮನ ಈ ಸಾತ್ವಿಕ ಪ್ರವೃತ್ತಿ ಮತ್ತು ವಿಧಿಯ ಬಗೆಗಿನ ನಂಬಿಕೆಯನ್ನು ಒಪ್ಪದ ಉಗ್ರಕೋಪಿ ಲಕ್ಷ್ಮಣ ಕನಸು ಮತ್ತು ದೈವದ ಭ್ರಾಂತಿಯನ್ನು ಸಾಕು ಮಾಡಬೇಕೆಂದೂ, ಅದು ಹೇಡಿಗಳಿಗುಚಿತವೆಂದೂ ‘ಪುರುಷಕಾರಮೆ ವಿಧಿಗೆ ಬಾಳುಸಿರ್, ಶೌರ್ಯವಿರೆ ಕೃಪಣವಿಧಿ ಮುಕ್ತಹಸ್ತಂ’ ಎಂದೂ, ಇಂದಿನ ವಿಚಾರವಾದಿಗಳು ಒಪ್ಪುವಂಥ ಸಾಮಯಿಕವೂ ವಾಸ್ತವವೂ ಆದಂಥ ಮಾತು ಗಳನ್ನಾಡುತ್ತಾನೆ. ಅಷ್ಟೇ ಅಲ್ಲ, ಆ ‘ದುರ್ವಿಧಿಯನಡ್ಡಗಟ್ಟುವೆನಿಂದು’ ‘ದೈವಮಂ ಜುಟ್ಟು ವಿಡಿದೆಳೆತರ್ಪೆನೊಳ್ವಟ್ಟೆಗಿಂದು’ ಎಂದೂ ಅಬ್ಬರಿಸುತ್ತಾನೆ. ನೆಲದ ನೆಲೆಯಲ್ಲೇ ಬದುಕನ್ನು ವಿಶ್ಲೇಷಿಸುವಂಥವರೆಲ್ಲ ಈ ಮಾತುಗಳನ್ನು ಒಪ್ಪತಕ್ಕದ್ದೆ. ಆದರೆ ಸೀಮಿತ ಬಯಕೆಯ ಸೀಮಿತ ಜಗತ್ತಿನ ಆಚೆಗೆ ದೃಷ್ಟಿ ಚಾಚಿರುವ ರಾಮ ಇದನ್ನು ಕಾಣುವ ವಿಶ್ಲೇಷಿಸುವ ಬಗೆಯೇ ಬೇರೆ :

ದೈವಮಂ ಮುಂದಲೆವಿಡಿದು ತರುಬುವದಟಿರ್ಕೆ
ಅವರಜನೆ. ಮೇರೆಯಿದೆ ಮರ್ತ್ಯದ ಪರಾಕ್ರಮಕೆ.
ಮರ್ತ್ಯದಾಳ್ ಬಿದಿಯೊಡನೆ ತಾಂ ನಡೆಯುವನ್ನೆಗಂ
ಕಲಿ ಬಿಂಕದಿಂ ಬಿದಿಗಿದಿರ್ ಮಲೆಯೆ ಬಲಿ…….
…………………………………………
ಪಿತನ ದೌರ್ಬಲ್ಯದೊಳೆ ಕಾಣ್ ವಿಧಿಯ ವಿನ್ಯಾಸಮಂ.[6]

ಈ ಸಂದರ್ಭದಲ್ಲಿ ವಾಸ್ತವವಾದ ಮತ್ತು ವಿಧಿವಾದಗಳೆರಡನ್ನೂ ಮುಂದಿಟ್ಟು, ವಾಸ್ತವ ವಾದದಿಂದ ದೊರಕಬಹುದಾದ ಶೀಘ್ರಫಲ ಪರಿಣಾಮದಲ್ಲಿ ಸಾಮೂಹಿಕ ದುರ್ಗತಿಗೆ ಕಾರಣವಾಗುವುದೆಂಬುದನ್ನು ಮತ್ತು ಸಂಯಮಪೂರ್ಣವೂ ದೂರದೃಷ್ಟಿಯುತವೂ ಸ್ವಶಕ್ತಿಯ ಪ್ರಜ್ಞೆಯುಳ್ಳದ್ದೂ ಆದ ಸಕಾರಣ ವಿಧಿವಾದ ಅಂತಿಮವಾಗಿ ಸರ್ವರ ಶುಭೋದಯಕ್ಕೆ ಕಾರಣವಾಗುವುದೆಂಬುದನ್ನು ಕವಿ ಧ್ವನಿಸುತ್ತಾರೆ.

ಕೈಕೆಯ ಮೂಲಕ ರಾಮನ ಅಯೋಧ್ಯಾ ನಿರ್ಗಮನಕ್ಕೆ ಸಂಚು ಹೂಡುವ ವಿಧಿಯ ಕೈವಾಡ ಏಕಮುಖವಾದುದಲ್ಲ. ಈ ನಿರ್ಗಮನ ಒಂದೆಡೆ ಬಹುಜನರ ಆತ್ಮೋದ್ಧಾರಕ್ಕೆ ಕಾರಣವಾದರೆ, ಮತ್ತೊಂದೆಡೆ ದಶರಥನ ಮರಣಕ್ಕೆ ಕಾರಣವಾಗಿ, ಆ ಮೂಲಕ ಅಂಧ ತಾಪಸ ದಶರಥನಿಗೆ ಕೊಟ್ಟ ಶಾಪ ಫಲಿತವಾಗಿ ಅವನಿಗೆ ದಿವ್ಯದರ್ಶನದ ಆನಂದ ಉಂಟಾಗು ವಂತೆ ಮಾಡುತ್ತದೆ. ಕೊನೆಯ ಗಳಿಗೆಯಲ್ಲಿ ದಶರಥನೇ ಉದ್ಗರಿಸುತ್ತಾನೆ, ‘ವಿಧಿ ನನಗೆ ವಿಧಿಸಿದೀ ಶಾಪಮಂ ಕಾಣ್’ ಎಂದು.

ಮಾವನೂರಿನಿಂದ ಧಾವಿಸಿ ಬಂದ ಮಗ ಭರತನಿಗೆ ‘ದುರ್ವಾರ ದುಜ್ಞೆಯ ದುರ್ವಿಧಿಯ ಲೀಲೆಯಂ’ ಇಂತಾದುದೆಂದು ಉಸುರುತ್ತಾಳೆ, – ಕೈಕೆ. ಸರ್ವರ ಉದ್ಧಾರಕ್ಕೆ ತನ್ನೊಂದು ಘಳಿಗೆಯ ಪುತ್ರಮೋಹದಿಂದ ಕಾರಣಳಾದ, ಜಗತ್ತಿನ ಸರ್ವಕಾಲದ ಜನರ ಆಕ್ರೋಶ ತಿರಸ್ಕಾರಗಳಿಗೆ ಭಾಜನಳಾದ ಕೈಕೆಯ ನಿಜವಾದ ಮಹತ್ವವನ್ನು ಕವಿಹೃದಯ ಹೀಗೆ ಗುರುತಿಸಿ ಹಾಡಿ ನಮಿಸುತ್ತದೆ :

                                                ನೀನುಗುರಾಗಲಾ
ವೈಣಿಕ ವಿಧಿಯ ಕೈಗೆ, ಪೊಣ್ಮಿದತ್ತಿಂಪಾಯ್ತು ಮೇಣ್
ಭಗವದ್ ರಸಧಿಯಾಯ್ತು ರಾಮಾಯಣ ಬೃಹದ್‌ಗೀತೆ[7]

ಇಲ್ಲಿಯೂ ವಿಧಿಯಾಟದ ಅಂತಿಮ ಗುರಿ ಕೆಡುಕಲ್ಲ, ಸರ್ವೋತ್ತರಣ ಸರ್ವೋದ್ಧರಣ; ಆದರೆ ಅದು ಆರಂಭದಲ್ಲಿ ಅಗೋಚರ ಅಜ್ಞಾತ ಎಂಬುದು ಸೂಚಿತವಾಗುತ್ತದೆ.

ರಾಮಾಯಣದ ಘಟನೆಗಳು ವಿಧಿಯಿಚ್ಛೆಯಂತೆ ನಡೆದಿವೆಯೆಂಬುದು ಅಂತಿಮವಾಗಿ ಎಲ್ಲರಿಗೂ ಅರಿವಾಗುತ್ತದೆ. ತನ್ನನ್ನು ಕಾಣಬಂದ ಭರತನಿಗೆ ಪುತ್ರಶೋಕತಪ್ತಳಾದ ಕೌಸಲ್ಯೆ “ತಪ್ಪು ತಾಯಿಯದಲ್ತು, ನಾಚದಿರ್. ಮೂದಲಿಸಲೆಳಸಿದರೆ ದುರುಳ ವಿಧಿ ಹಡೆದ ಕರುಳೇನ ಮಾಡುವುದಣ್ಣ?” – ಎಂದು ಹೇಳುತ್ತಾಳೆ. ಅವನಿಗೆ ಗುರು ವಸಿಷ್ಠ ಹೇಳುವ ಮಾತು ಕೂಡ ಅದೇ: “ದುರ್ದಮ ನಿಯಂತೃ ವಿಧಿತಾಂ ತಂದೊಡ್ಡಿದೀ ಮಹತ್ ಕ್ಲೇಶಂ”. ರಾಮನನ್ನು ಕರೆದೊಯ್ಯಲು ಬಂದ ಭರತನಿಗೆ ಏನು ಉತ್ತರ ಕೊಡಬೇಕೆಂದು ಕಾಣದೆ ಉಭಯ ಸಂಕಟದಲ್ಲಿ ಒದ್ದಾಡುತ್ತಿದ್ದ ರಾಮನಿಗೆ ಅವನ ಜನ್ಮದುದ್ದೇಶವನ್ನು ಸೂಚ್ಯವಾಗಿ ಗುರು ವಸಿಷ್ಠ ತಿಳಿಸಿದಾಗ “ಘಿರುಗಿದುದು ಬಿದಿಯ ಮೊನೆಯಂಕುಶದ ತಿವಿತಕ್ಕೆ ರಾವಣಾರಿಯ ಮನದ ಮದಕರಿ ಅಯೋಧ್ಯೆಯಂ ತೆಂಕಣಕ್ಕೆ”. ಹೆಜ್ಜೆ ಹೆಜ್ಜೆಗೂ ವಿಧಿ ತನ್ನ ಅಂತಿಮ ಗುರಿಯನ್ನು ಪೂರ್ಣಗೊಳಿಸುವ ಸಲುವಾಗಿ ಸರ್ವರನ್ನೂ ನಿರ್ದಿಷ್ಟ ದಿಕ್ಕಿನಲ್ಲಿ ಪ್ರಚೋದಿ ಸುವುದನ್ನು ಇಲ್ಲಿ ಕಾಣಬಹುದು. ಈ ಸತ್ಯವನ್ನು ಅಸ್ಪಷ್ಟವಾಗಿಯಾದರೂ ಅರಿತಿರುವ ರಾಮ ಯಾವುದಕ್ಕೂ ಯಾರನ್ನೂ ದೂರುವುದಿಲ್ಲ. ‘ಕಿರಿಯ ತಾಯ್ ನಿಯತಿ ಹಸ್ತ ದೊಳೊಂದು ಕೈದುತಾಂ’ ಎಂದು ಸ್ಪಷ್ಟವಾಗಿ ಆತ ಭರತನಿಗೆ ಹೇಳುತ್ತಾನೆ. ಇದೆಲ್ಲ ‘ದೇವದೇವತೆಗಳ ವ್ಯೂಹ ಸಂಯೋಜನೆ’ ಎಂಬುದು ಅವನಿಗರಿವಿದೆ.

ತಮ್ಮ ಆಶ್ರಮಕ್ಕೆ ಬಂದ ಸೀತಾರಾಮಲಕ್ಷ್ಮಣರಿಂದ ನಡೆದ ಘಟನಾವಳಿಯನ್ನು ಕೇಳಿದ ಮಹಾಮುನಿ ಅತ್ರಿ ತನ್ನ ಅನಸೂಯೆಯ ಮುಖ ನೋಡಿದರೆ, ಆಕೆ ಸೀತೆಯೆಡೆಗೆ ನೋಡಿ ಎದೆಗರಗಿ ನಿಟ್ಟುಸಿರಿಡುತ್ತಾಳೆ, ಅರ್ಥಪೂರ್ಣವಾಗಿ. ಅತ್ರಿ ‘ಹಾ ವಿಧಿಯ ಕೃತಿಕೌಶಲಕವಧಿ ಯಹುದೆ?’ ಎಂದು ತನಗೆ ತಾನೇ ಮಾತಾಡಿಕೊಳ್ಳುತ್ತಾನೆ. ಈ ಎಲ್ಲ ಪೂರ್ಣದೃಷ್ಟಿಯ ಯೋಗಿಗಳಿಗೆ ಜೀವಿಗಳ ವಿಕಸನ ಉದ್ಧಾರಗಳಿಗಾಗಿ ವಿಧಿ ನೆಯ್ದಿರುವ ಬೃಹಜಲದ ಅರಿವಿರುವುದರಿಂದಲೇ ಇಂತಹ ಪ್ರತಿಕ್ರಿಯೆ.

ವಾಲಿವಧೆಯ ಸಂದರ್ಭದಲ್ಲೂ ಈ ವಿಧಿವಿನ್ಯಾಸ ಅತ್ಯಂತ ತೀವ್ರವಾಗಿ ಗೋಚರ ವಾಗುತ್ತದೆ. ಪೂರ್ವವೈರವನ್ನು ಮರೆತು, ಮಾತ್ಸಲ್ಯ ವಿಜೃಂಭಿಸಿ, ತಮ್ಮನನ್ನು ಊರಿಗೆ ಕರೆದೊಯ್ದು ರುಮೆಗೆ ಒಪ್ಪಿಸಬೇಕೆಂದು ಧಾವಿಸಿದ ವಾಲಿ ರಾಮಬಾಣಕ್ಕೆ ತುತ್ತಾಗುತ್ತಾನೆ. ಅವನ ನಿಜವಾದ ಮನೋಗತ ತಿಳಿದ ಮೇಲೆ ರಾಮನೇ ಗದ್ಗದಿತನಾಗಿ ನುಡಿಯುತ್ತಾನೆ : “ವಿಧಿಯ ವಿನ್ಯಾಸಮಂ ನಿಂದಿಸಿದೊಡೇಂ ಫಳಂ, ಸುಗ್ರೀವನಗ್ರಜ?” ಅದಕ್ಕೆ ವಾಲಿಯ ವ್ಯಂಗ್ಯಭರಿತ ಉತ್ತರ : ‘ನಿನ್ನ ಮಡದಿಯನಸುರನುಯ್ದುದುಂ ವಿಧಿಲೀಲೆ!” ನಿಜ, ರಾಮಸತಿಯನ್ನು ರಾವಣ ಒಯ್ದದ್ದರಿಂದಲೆ ಅವನ ಉತ್ಥಾನ; ಅವನ ಕಾರಣದಿಂದಾಗಿ ಚಂದ್ರನಖಿ, ತ್ರಿಜಟೆ, ಧಾನ್ಯಮಾಲಿನಿ, ಕುಂಭಕರ್ಣ ಮುಂತಾದವರ ಉತ್ಥಾನ; ಹಾಗೂ ಸೀತಾರಾಮರ ಹೃತ್ಪ್ರಭೆಯ ಮಹಾವಿಕಾಸ. ಇದೇ ವಿಧಿಯ ಉದ್ದೇಶ. ಆದರೆ ವಾಲಿವಧೆಯಲ್ಲಿ ವಿಧಿಗೆ ಯಾವ ಉದ್ದೇಶವಿದ್ದೀತು? ಸುಗ್ರೀವನಿಗಿಂತ ಬಲಶಾಲಿಯಾದ ವಾಲಿ ಮತ್ತಷ್ಟು ಅಧಿಕತರವಾಗಿ ರಾಮನಿಗೆ ಸಹಾಯ ಮಾಡಬಹುದಿತ್ತಲ್ಲವೆ? ರಾಮವಚನ ಹುಸಿಯಾಗಬಾರದು ಮತ್ತು ಉದ್ದೇಶಪೂರ್ವಕವಾಗಿ ರುಮೆಯನ್ನು ಸೆರೆಯಲ್ಲಿಟ್ಟು, ಸುಗ್ರೀವನನ್ನು ದೇಶಭ್ರಷ್ಟನನ್ನಾಗಿ ಮಾಡಿದ ಅಪರಾಧಕ್ಕೆ ವಾಲಿಗೆ ಶಿಕ್ಷೆಯಾಗಬೇಕು ಎಂಬ ಆಶಯವೇ ಈ ವಿಧಿಯ ವಿನ್ಯಾಸಕ್ಕೆ ಕಾರಣವಿರಬೇಕು. ಅಂತೂ ‘ವಕ್ರವಿಧಿಗಾದಾನಾಹುತಿ ಶಕ್ರಸಂಭವಂ’ ಎಂಬ ಮಾರುತಿಯ ಮಾತು ಈ ಸಂದರ್ಭದಲ್ಲಿ ವಾಸ್ತವವಾದದ್ದೆ. ‘ತಪ್ಪು ನಿನತೊರ್ವನದೆ ಅಲ್ತು…ನೀನೆಂದವೊಲೆ ವಿಧಿಯ ವಿನ್ಯಾಸಕೇಂ ಬೇರೆ ಪಾಂಗಿಹುದೊ?” ಎಂದು ವಾಲಿಯೇ ವಿಧಿಯ ಅನಿವಾರ್ಯವೂ ಅಜೇಯವೂ ಊಹಾತೀತವೂ ಆದ ಶಕ್ತಿಯನ್ನು ಒಪ್ಪಿಕೊಂಡು ಬಿಡುತ್ತಾನೆ.

ವಿಧಿಯ ನಿಗೂಢ ಜಟಿಲ ಜಲಕ್ಕೆ ಸಿಕ್ಕಿದ ಲಂಕೇಶ್ವರ ರಾಮಸತಿಯನ್ನಪಹರಿಸಿ ತಂದ ಸುದ್ದಿ ಬೆಂತರನಾಗಿ ಲಂಕೆಯಲ್ಲೆಲ್ಲ ಸಂಚರಿಸುತ್ತದೆ. ಮಯನಂದನೆಯ ದೇವ ಮಂದಿರಕ್ಕೂ ಧಾವಿಸುತ್ತದೆ. ಅದನ್ನು ಕಂಡ ರಾವಣನ ಮನದರಸಿ ಬೆಚ್ಚಿದಾಗ ಅದು ಆಕೆಯನ್ನು ಸಂತೈಸುತ್ತದೆ :

ಈಶಕೃಪೆಗಿಹುದು ನಾನಾ ಮುಖಂ, ಸುಖದಂತೆ
ದುಃಖಮುಂ ಋತಚಿತ್ ಕೃಪಾನೃಕೇಸರಿ ನಖಂ.
ನಿನ್ನ ಪತಿಯಭ್ಯುದಯಕೇಣಿಯೊಡ್ಡಿದೆ ಬಿದಿಯ
ಕರುಣೆ. ಸೀತಾಪಹರಣಮದೆ ಮೊದಲ ಸೋಪಾನಂ.[8]

ಸೀತಾಪಹರಣದಿಂದ ರಾವಣ ಮರಣವಾಯಿತೆಂಬುದು ಇತರ ರಾಮಾಯಣ ಕರ್ತೃಗಳ ನಂಬಿಕೆಯಾದರೆ, ಸೀತಾಪಹರಣದ ಮೂಲಕವೇ ವಿಧಿ ರಾವಣೋದ್ಧಾರಕ್ಕಾಗಿ ಏಣಿ ಹಾಕಿದೆ ಎಂಬ ವಿಶಿಷ್ಟ ದರ್ಶನ ಶ್ರೀರಾಮಾಯಣದರ್ಶನದ ಕವಿಯದು. ಇವರು ವಿಧಿಯನ್ನು ಗುರುತಿಸುವ ಪರಿಯೇ ಅತ್ಯಂತ ಅಸಾಧಾರಣವಾದದ್ದು.

ತನ್ನ ಒಲವನ್ನು ಯಾಚಿಸಿದ ರಾವಣನನ್ನು ಕುರಿತು ಸೀತೆಯಾಡುವ ಮಾತಿನಲ್ಲೂ ಆತ ವಿಧಿವ್ಯೂಹಕ್ಕೆ ಬಲಿಯಾದವನು ಎಂಬ ಅಭಿಪ್ರಾಯವಿದೆ. ಆಕೆ ಹೇಳುತ್ತಾಳೆ :

ಬಿದಿಯ ಬೇಳ್ವೆಗೆ ಬಂದ ಪಶು ನೀಂ, ದಶಗ್ರೀವ,
ಮರುಗುವೆನು ನಿನಗೆ, ತಾಯ್ ಕೇಡಾಡಿಕಂದಂಗೆ
ಮರುಗುವೋಲ್[9]

ಆಂಜನೇಯನ ಮಹಾಯೋಗ ಬಲಕ್ಕೆ ಸೋತು ತನ್ನ ತ್ರಿಶೂಲವನ್ನು ಕೊಂಕಿಸಿಕೊಂಡು ರಾವಣನ ಮತ್ತು ಲಂಕೆಯ ಉದ್ಧಾರಕ್ಕಾಗಿ ಆತಂಕಿತಳಾದ ಲಂಕಾದೇವಿ ಸಹ ಕೊನೆಗೆ ‘ಬಿದಿಮಾಳ್ಕೆಯೊಳ್ಳಿತಕ್ಕುಂ’ ಎಂದುಸುರುತ್ತಾಳೆ ಆಂಜನೇಯನಿಗೆ. ಸೀತೆಯನ್ನರಸುತ್ತ ಧೂಪರೂಪದಿಂದ ಆಂಜನೇಯ ಇಂದ್ರಜಿತು ಗೃಹವನ್ನು ಹೊಕ್ಕಾಗ ದುಶ್ಯಕುನಗಳಾಗುತ್ತವೆ. ಶಿಶುವಜರಿ ಚೀರಿ ಎಚ್ಚೆತ್ತಾಗ ತಾಯಿ ತಾರಾಕ್ಷಿ ಆತನನ್ನೆತ್ತಿ ಎದೆಗೊತ್ತಿ ಸಾಂತ್ವನ ಗೊಳಿಸುತ್ತಿರುವಾಗ ಅಲ್ಲಿಗೆ ಬಂದ ಇಂದ್ರಜಿತು ಭಯಪಡಬೇಡವೆಂದು ಮಡದಿಯನ್ನು ಸಂತೈಸುತ್ತಾನೆ. ಆಗ ಆಕೆ ಕೂಡ ‘ಲಘುವಲ್ತು ದುಶ್ಯಕುನ ಚಿಹ್ನೆ. ಬಿದಿಯೆಳ್ಚರಿಕೆವೆರಳದಂ ಕಡೆಗಣಿಸದರಿತು ನಡೆವುದೆ ಬುದ್ದಿ’ ಎಂದು ಗಂಡನಿಗೆ ಎಚ್ಚರಿಕೆ ಹೇಳುತ್ತಾಳೆ. ರಾವಣನ ಅಂತಃಪುರದ ದೇವಮಂದಿರದಲ್ಲಿ ಮಂಡೋದರಿಯೊಡನೆ ತನ್ನಂತರಂಗವನ್ನು ತೋಡಿ ಕೊಳ್ಳುತ್ತಿದ್ದ ಲಂಕೇಶ್ವರನ್ನು ಮತ್ತು ಸೀತೆಯನ್ನು-ಹದಿಬದೆಯನ್ನು-ಅಳಲಿಸುವುದು ತಪ್ಪೆಂದು ವಾದಿಸುತ್ತ ಅವಳನ್ನು ಬಿಡುಗಡೆ ಮಾಡಬೇಕೆಂದು ಪತಿಯನ್ನು ಬೇಡುತ್ತಿರುವ ಮಹಾಸತಿ ಮಂಡೋದರಿಯನ್ನು ಕಂಡ ಹನುಮದೇವನ ಹೃದಯೋದ್ಗಾರವಿದು :

        ಈ ಸತಿಯ
ತನುಮನವ ಪಡೆದವಗೆ ಆ ಸತಿಯ ಊ ಸತಿಯ
ಮೋಹಮೆಂತುಟೊ? ಮದನನಲ್ತಿದಕೆ ವಿಧಿಯಲಾ
ಕಾರಣಂ![10]

ಮಾರೀಚ, ಮಂಡೋದರಿ, ವಿಭೀಷಣ, ಮಹಾಪಾರ್ಶ್ವ, ಚಂದ್ರನಖಿ ಮುಂತಾಗಿ ನೂರಾರು ಜನ ಆತ್ಮೀಯರು ಹಿತೈಷಿಗಳು ಬಂಧುಗಳು ಬಗೆಬಗೆಯಾಗಿ ಬೋಧಿಸಿದರೂ, ಸ್ವತಃ ಮಹಾಪ್ರಾಜ್ಞನೂ ಮಹಾಭಕ್ತನೂ ಮಹಾವೀರನೂ ಉದಾರಾಂತಕರಣಿಯೂ ಆದ ರಾವಣ ಕಿವಿಗೊಡಲಿಲ್ಲವೆಂದರೆ ಅವನನ್ನು ನಿರ್ದಿಷ್ಟ ಪಥದಲ್ಲಿ ಉದ್ದೇಶಪೂರ್ವಕವಾಗಿಯೇ ಮುಂತಳ್ಳುತ್ತಿದ್ದ ವಿಧಿಯ ಸಾರ್ವಭೌಮಶಕ್ತಿ ಎಷ್ಟು ಅಪ್ರತಿಹತವೆನ್ನುವುದು ಸ್ಪಷ್ಟವಾಗುತ್ತದೆ. ರಾವಣನ ಹೃದಯದ ಕಸುಗಾಯಿತನ ಮಾಗಬೇಕು, ಹಣ್ಣಾಗಬೇಕು; ಆಗ ಮಾತ್ರ ಅದು ದೇವನೈವೇದ್ಯಕ್ಕೆ ಅರ್ಹವಾಗುತ್ತದೆ. ಅಲ್ಲಿಯವರೆಗೆ ಕಾವು ಪಡೆಯಬೇಕಾದದ್ದು, ನೋವು ತಿನ್ನಬೇಕಾದದ್ದು ಅನಿವಾರ್ಯ. ರಾವಣ ಪೂರ್ಣತೆಯ ಪರಮಗುರಿಯನ್ನು ತಲುಪಬೇಕಾದರೆ, ಅವನ ಬದುಕಿನೊಡನೆ ತೆಕ್ಕೆ ಹಾಕಿಕೊಂಡಿರುವ ಕುಂಭಕರ್ಣ ಇಂದ್ರಜಿತು ಅತಿಕಾಯ ಧಾನ್ಯಮಾಲಿನಿ ಮುಂತಾದ ಹಲವು ಜೀವಗಳ ಕರ್ಮಕ್ಷಯವಾಗಿ ಅವರು ಮುಕ್ತಿ ನಿಲ್ದಾಣವನ್ನು ಸೇರಬೇಕಾದ ಅಗತ್ಯವಿದೆ. ಆದ್ದರಿಂದಲೇ ವಿಧಿ ಅವನ ಅಹಂಪೋಷಕಗಳಾಗಿದ್ದ ಆ ಎಲ್ಲ ಜೀವಗಳ ಕೊಂಡಿಗಳನ್ನು ಕಳಚಿದ ನಂತರ ಮಾತ್ರವೇ ಅವನನ್ನು ಅಂತಿಮ ನಿಲ್ದಾಣಕ್ಕೆ ಒಯ್ಯುತ್ತದೆ. ವಿಧಿದೃಷ್ಟಿ ಯಾವಾಗಲೂ ಭೌಮವೂ ಬಹುವ್ಯಾಪಕವೂ ಅನಂತದೂರ ಪರಿಣಾಮಿಯೂ ಆದದ್ದು. ರಾವಣನೊಬ್ಬನ ಉದ್ಧಾರಕ್ಕಾಗಿ ಅದು ಇಂಥ ಮಹಾಸಂಕೀರ್ಣ ವ್ಯೂಹವನ್ನು ರಚಿಸಿಬೇಕಾದ ಅವಶ್ಯಕತೆಯಿರಲಿಲ್ಲ. ಅವನೊಡನೆ ಒಂದು ಯುಗವೇ ಮಹಾಪರಿವರ್ತನೆಯನ್ನು ಹೊಂದಬೇಕಾಗಿದೆ. ಸೀತೆ ಆಂಜನೇಯನೊಡನೆ ಹೇಳುವ ಈ ಮಾತು ಈ ದರ್ಶನವನ್ನು ಧ್ವನಿಸುತ್ತದೆ :

ದಶಗ್ರೀವಗೆಂತಂತೆ ಬಹುಜನರ್ಗಿರ್ಪುದಯ್
ಬಹುವಿಧದಿ ಸಮೆಯಲಿಹ ಬಹುಜನ್ಮ ಕರ‍್ಮಗಳ
ಪೊಲೆಕಿಲ್ಪಿಷಂ, ಸರ್ವರಾ ಸರ್ವಕರ್ಮಗಳ
ಪಾಸುಪೊಕ್ಕಿನ ಜಟಿಲ ಜಲಮೆ ಕೃತಿಪುದಲ್ತೆ
ನಡೆವೀ ಜಗನ್ನಾಟ್ಯಮಂ![11]

ಈ ರಾಮ-ರಾವಣ ಸಮರವೆಂಬ ಮಹಾಸಂಕ್ರಾತಿಯಲ್ಲಿ ಪಾಲುಗೊಂಡ ಸಾಮಾನ್ಯರು ಅಸಾಮಾನ್ಯರಿಗೆಲ್ಲ ಈ ವಿಧಿವ್ಯೂಹದ ಕಲ್ಪನೆ ನಿಚ್ಚಳವಾಗಿಯೇ ಇದೆ. ವಿಭೀಷಣನನ್ನು ಭೇಟಿ ಮಾಡಲು ಬಂದ ಮೈಂದ ಅವನೊಂದಿಗೆ ಹೇಳುವ ಈ ಮಾತು ಸೂಚಿಸುವ ಸತ್ಯವೂ ಅದೇ :

ದೇವಸಮ ರಘುಕುಲ ಲಲಾಮನಾ ಭಾರ್ಯೆಯಂ
ಕಳ್ದುಯ್ದ ನೀಚಂಗದಾವುದಕ್ಕುಮೊ ಬಿದಿಯೆ
ಬರೆದಿರ್ಪುದೆನೆ, ನೀನು ಮಾನುಮದನೋದುವುದ
ಸಾಧ್ಯಕಾರ್ಯಂ, ತಿದ್ದಲಕ್ಕುಮೆ…[12]

ಸೀತಾಪಹರಣದಂಥ ಅಕೃತ್ಯವನ್ನು ನಿರ್ಭೀತಿಯಿಂದ ಖಂಡಿಸಿ ತುಂಬು ಸಭೆಯಲ್ಲಿ ಮಾತನಾಡಿದ ಮಹಾವೀರ ಮಹಾಸಾಧಕ ಮಹಾಪಾರ್ಶ್ವನಿಗೆ ಅವನ ಅಂತ್ಯ ಸಮಯದಲ್ಲಿ ಈ ಕೃತ್ಯಕ್ಕೆಲ್ಲ ಸರ್ವೋದ್ಧಾರಕ ಶಕ್ತಿಯಾದ ವಿಧಿಯೇ ಕಾರಣ ಹೊರತು ರಾವಣನಲ್ಲ ಎಂಬ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಸಾವಿನ ಹೊಸ್ತಿಲಲ್ಲಿ ನಿಂತು ಭವಿಷ್ಯವನ್ನು ದರ್ಶಿಸುವ ಆತನ ನುಡಿಗಳಿವು :

       ಬಹುಪಥಂಗಳ್ ವಿಧಿಗೆ
ತನ್ನಯ ಕಾರ್ಯಸಾಧನೆಗೆ, ನನ್ನಿಷ್ಟದೇವತೆಯೆ
ತೋರುತಿದೆ ಲಂಕಾಧಿನಾಥನಂ. ಅಲ್ಲದಿರೆ
ಲಭಿಸುತಿರ್ದುದೆ ನನ್ನ ಸಾಧನೆಗಿನಿತು ಶೀಘ್ರದಿ
ಮರಣತೋರಣದಾಚೆ ಗೋಚರಿಪಮರಸಿದ್ದಿ?[13]

ರಾವಣನನ್ನು ಮಾಧ್ಯಮ ಮಾಡಿಕೊಂಡು, ಅವನ ಸಹಿತವಾಗಿ ತಮ್ಮೆಲ್ಲರ ಉದ್ಧಾರಕ್ಕೆ ವ್ಯೂಹ ರಚಿಸಿರುವ ವಿಧಿಯ ಉದ್ದೇಶದ ದೂರಗಾಮಿತ್ವವನ್ನು ವ್ಯಾಪಕತೆಯನ್ನು ಮಹಾಪಾರ್ಶ್ವ ಇಲ್ಲಿ ಸ್ಪಷ್ಟವಾಗಿ ಸಾರುತ್ತಾನೆ. ಸೀತಾಪಹರಣದ ಘೋರ ದುಷ್ಕಾರ್ಯಕ್ಕಾಗಿ ರಾವಣನನ್ನು ದಂಡಿಸಲು ಬಂದ ಸ್ವಯಂ ಶ್ರೀರಾಮನಿಗೂ ರಾವಣನ ಹಿಂದೆ ನಿಂತು ಅವನನ್ನು ಈ ಕಾರ್ಯಕ್ಕೆ ಪ್ರಚೋದಿಸಿದ ವಿಧಿಯ ಬಹುಮುಖ ಉದ್ದೇಶದ ಅರಿವಿಲ್ಲದಿಲ್ಲ. ನಾಡಿನಿಂದ ಕಾಡಿಗಟ್ಟುವ ಮೂಲಕ ತನ್ನಾತ್ಮಸಾಧನೆಗೆ ಹೊಸ  ಆಯಾಮವನ್ನು ಸಾಮರ್ಥ್ಯವನ್ನೊದಗಿಸಿದ ವಿಧಿಯೇ ರಾವಣನಿಂದ ಸೀತಾಪಹರಣ ಮಾಡಿಸುವ ಮೂಲಕ ಬಹುಜೀವರ ಕರ್ಮಲಯಕ್ಕೆ ಕಾರಣವಾಗಿದೆಯೆಂಬುದನ್ನು ಕುಂಭಕರ್ಣನ ವಧೆಯ ಪ್ರಸಂಗದಲ್ಲಿ ಶ್ರೀರಾಮ ವಿಭೀಷಣನಿಗೆ ನಿರೂಪಿಸುತ್ತಾನೆ :

        ಕರ್ಮಂ ಸಮೆವ
ಪೊಳ್ತು ಬರೆ, – ಬಹುಜೀವರದು, ಅವನದೊರ್ವನದೆ
ಅಲ್ತು; – ನೋಡುತಿರು, ಅಪ್ಪುದಪ್ಪುದು ತಪ್ಪದೆಯೆ;[14]

ಯುದ್ಧರಂಗದಲ್ಲಿ ತಂದೆಯನ್ನು ಕಳೆದುಕೊಂಡು, ಅಣ್ಣ ತಮ್ಮ ಗಂಡಂದಿರಿಗೆ ಮುಂದೇನು ಗತಿಯೊ ಎಂದು ಶೋಕಾಕುಲಿತಳಾದ ಸಖಿ ತ್ರಿಜಟೆಗೆ ಸೀತೆ ಹೇಳುವ ಮಾತು ಕೂಡ ಜಗತ್ತಿನ ಜೀವರುಗಳ ಸರ್ವಕ್ರಿಯೆಗಳ ಹಿನ್ನೆಲೆಯಲ್ಲಿ ವಿಧಿಯ ನ್ಯಾಯಬದ್ಧವಾದ ದೂರದೃಷ್ಟಿ ಯುತವಾದ ಅಗೋಚರವೂ ಸರ್ವಶಕ್ತವೂ ಆದ ಹಸ್ತ ನಿಶ್ಯಬ್ಧವಾಗಿ ಕ್ರಿಯಾಶೀಲವಾಗಿದೆ ಯೆಂಬುದನ್ನು ಸ್ಪಷ್ಟವಾಗಿ ಧ್ವನಿಸುತ್ತ ವಿಧಿಯ ಮಹತ್ತಿಗೆ ಕನ್ನಡಿ ಹಿಡಿಯುತ್ತದೆ :

ನಿನ್ನ ಪಿತೃವಿಧಿಗೆ ನಾನೆನಿತು
ಕಾರಣಳೊ ನನ್ನ ವಿಧಿಗಾತನುಂ, ಕೇಳ್, ತಾನನಿತೆ
ಕಾರಣನ್? ವಿಧಿಯ ಸೂತ್ರದ ಜಗಜಲದೊಳ್
ವ್ಯಕ್ತಿಗಳ್ ಗ್ರಂಥಿಮಾತ್ರಗಳಲ್ತೆ, ವಿಧಿಹಸ್ತ
ಕೌಶಲ ಪ್ರತಿಮೆಗಳ್?[15]

ಕುಂಭಕರ್ಣನ ವಧಾನಂತರ, ಕೊನೆಯ ಬಾರಿಗೆ ಸೀತೆಯನ್ನು ಕಾಣಲು ಬಂದು ಆಕೆಯ ಆಶ್ರಮ ಹತ್ತಿ ಉರಿಯುತ್ತಿರುವಂತೆ ಮತ್ತು ಆ ಉರಿಯ ಮಧ್ಯದಲ್ಲಿ ಸೀತೆ ರಣಚಂಡಿಯಾಗಿ ನರ್ತಿಸುತ್ತಿರುವಂತೆ ಭಾಸವಾಗಿ, ರಾವಣ ನೊಂದು ಆಕೆಯನ್ನು ಮಾತನಾಡಿಸದೆಯೇ ಅರಮನೆಗೆ ಹಿಂದಿರುಗುತ್ತಾನೆ. ಗಂಭೀರ ಮುಖದ ಧ್ಯಾನಸ್ಥೆ ಸೀತೆ ಆಗ ತ್ರಿಜಟೆಗೆ ಈ ಮಾತುಗಳನ್ನು ನುಡಿಯುತ್ತಾಳೆ :

ಕಡಿದುದಾತನ ಸೂತ್ರಮಾಯೆ. ಪಟವಾಡಿಪಳ್
ಜೀವಗಳನಂಬೆ, ಆದ್ಯಾಶಕ್ತಿ. ಕಾಲವಶಿಯಿನ್
ರಾಕ್ಷಸನ ಬಾಳ್‌ಪಟಂ. ಮುಕ್ತಿ ಮಾಯೆಯೊಲ್
ಪೀಡಿಸಿ ಮುಮುಕ್ಷುಗಳನೆಳೆಯುವುದು ತನ್ನೆಡೆಗೆ,
ರಾಕ್ಷಸೋತ್ತಮ ಸಖೀ, ಸುಲಭಪಥದಿಂ ಮತ್ತೆ
ಶೀಘ್ರದಿಂ;[16]

ಮನುಷ್ಯ ಎಷ್ಟೇ ಸರ್ವತಂತ್ರ ಸ್ವತಂತ್ರನೆನಿಸಿದರೂ ಅವನ ಜೀವನಪಥವನ್ನು ಒಂದು ನಿರ್ದಿಷ್ಟ ಉದ್ದೇಶದಿಂದ ಒಂದು ನಿರ್ದಿಷ್ಟ ಗತಿಯಿಂದ ಅತ್ಯಂತ ಸೂಕ್ಷ್ಮವಾಗಿ ವಿಧಿ ಸಂಯೋಜಿಸುತ್ತ, ಅವನನ್ನು ಕಾಡಿಸುತ್ತಿರುವಂತೆ ಪೀಡಿಸುತ್ತಿರುವಂತೆ ತೋರ್ಪಡಿಸುತ್ತ, ಅಂತಿಮವಾಗಿ ಮುಕ್ತಿಯ ಮಹಾನಿಲ್ದಾಣದೆಡೆಗೆ ಸೆಳೆದೊಯ್ದು ಅವನನ್ನು ಕೃತಕೃತ್ಯನನ್ನಾಗಿ ಮಾಡುತ್ತದೆಂಬ ದೃಷ್ಟಿ ಈ ಮಾತುಗಳಲ್ಲಿ ಬಿಂಬಿತವಾಗಿದೆ.

ತನ್ನ ಬಂಧುಬಾಂಧವರನ್ನೆಲ್ಲ ಕಳೆದುಕೊಂಡು ದುಃಖತಪ್ತನಾಗಿ ರೋಷತಪ್ತನಾಗಿ ರಣಧರೆಗೆ ಬಂದು ತನ್ನೆಲ್ಲ ಸಾಮರ್ಥ್ಯವನ್ನು ತೊಡಗಿಸಿ ಯುದ್ಧ ಮಾಡುತ್ತ ಕಪಿಸೇನೆಯನ್ನು ಮಾರಣಹೋಮ ಮಾಡತೊಡಗಿದ ಲಂಕೇಶ್ವರನ ಮಹಾಪ್ರತಾಪ ಜಲೆಗೆ ಬೆದರಿದ ದೇವೇಂದ್ರ, ಪಿತಾಮಹ ಬ್ರಹ್ಮನ ಬಳಿಗೆ ಬಂದು ಆ ಸಂದರ್ಭದ ರುದ್ರಸ್ಥಿತಿಯನ್ನು ನಿವೇದಿಸಿ ಕೊಂಡಾಗ ಆತನಾಡುವ ಮಾತುಗಳು ಜಗತ್ತಿನ ಸರ್ವಕಾರ್ಯಗಳೂ ಹೇಗೆ ಪೂರ್ವನಿಶ್ಚಿತ ಯೋಜನೆಯಂತೆ ಪರಮಶಕ್ತಿಯ ಕೈವಾಡದಿಂದ ನಡೆಯುತ್ತವೆ ಎಂಬುದನ್ನು ಸಾದರ ಪಡಿಸುತ್ತವೆ :

 ನನ್ನಿಚ್ಛೆಯೊಪ್ಪದೆ
ತೃಣಂ ಚಲಿಸದಾಂ ತಂತ್ರಮಖಿಲ ಲೋಕಕೆ, ತಂತ್ರಿ,
ಮೇಣ್ ಸರ್ವತಂತ್ರ ಸ್ವತಂತ್ರಿ, ಪರಮೇಚ್ಛೆನಾಂ
ಮೇಣಖಿಳ ಜೀವರಾಶಿಗಳಿಚ್ಛೆಗಾನಿಚ್ಛೆ
ರಾವಣೇಚ್ಛೆಗಮಂತೆ ರಾಮೇಚ್ಛೆಗುಂ![17]

ವ್ಯಕ್ತಿಗಳ ಅಂತರಾಳದಲ್ಲಿ ನಿಂತು ಅವರನ್ನು ನಿರ್ದೇಶಿಸುವ, ಕೆಲಹೊತ್ತು ಅವರಾಡಿದಂತೆ ಆಡಲು ಬಿಟ್ಟು, ಅಂತಿಮವಾಗಿ ಅವರನ್ನು ತನ್ನಿಚ್ಛೆಯ ಪರಿಣಾಮಕ್ಕೆ ಮಣಿಸುವ ಈ ಅದೃಶ್ಯ ಅಪ್ರತಿಮ ಶಕ್ತಿಯ ಬಗೆಗೆ ಈ ಕೃತಿಯ ಎಲ್ಲ ಮುಖ್ಯ ಪಾತ್ರಗಳಿಗೂ ತೀವ್ರವಾದ ವಿಶ್ವಾಸವಿದೆ. ಆದರೂ ತಾವು ವಿಧಿಹಸ್ತದ ನಿರ್ಜೀವ ಗೊಂಬೆಗಳಾಗದೆ ಸಾಧ್ಯವಾದಷ್ಟೂ ತಮ್ಮತನದಿಂದ ಸಹಜವಾಗಿ ಸತ್ವಪೂರ್ಣವಾಗಿ ಮತ್ತು ತೀವ್ರವಾಗಿ ತಮ್ಮ ತಮ್ಮ ನೆಲೆಯಲ್ಲಿ ಅವರು ಬದುಕಲು ವರ್ತಿಸಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ತನ್ನೆದುರು ಪ್ರತ್ಯಕ್ಷಳಾದ ಮಹಾದುರ್ಗೆಯನ್ನು ಕುರಿತು ರಾವಣನಾಡುವ ಮಾತುಗಳು ಈ ಸತ್ಯವನ್ನು ಪರಿಣಾಮಕಾರಿಯಾಗಿ ಎತ್ತಿ ಹಿಡಿಯುತ್ತವೆ :

        ನಿನ್ನ ಲೀಲೆಯನರಿಯೆನೆಂದಲ್ತು.
ನೀನಾಡಿಸಿದವೊಲೆ ಜಗನ್ನಾಟಕಂ. ನಿನ್ನೇ
ನತ್ತಲೆಳೆದರೆ ವೈರಿಯುತ್ಕರ್ಷ! ಪಾತ್ರಮನೆ
ಸೋಲುಗೆಲು ಸುಖದುಃಖ ಸೂತ್ರಂಗಳಿಂ ಪಿಡಿದು
ಆಡಿಪುದೆ ನಿನಗೆ ಹರ್ಷಂ! ಗಾಳಿಪಟಗಳಂ
ಆಡಿಸುವವೋಲ್![18]

ಹೀಗೆ ಈ ಕೃತಿಯ ಕಥಾವಿನ್ಯಾಸದಲ್ಲಿ ಪಾತ್ರನಿರ್ಮಿತಿಯಲ್ಲಿ ಸದಾ ಅನುರಣನಗೊಳ್ಳುವ ತತ್ವ ‘ನೆಯ್ದಾಳುತಿದೆ ಜಗವನೊಂದತಿ ವಿರಾಣ್ಮನಂ’ ಎಂಬುದು. ವಿಧಿ ಅಥವಾ ಋತಶಕ್ತಿ ಈ ಸಚರಾಚರ ಜಗತ್ತನ್ನೆಲ್ಲ ಸುಸೂಕ್ಷ್ಮವಾಗಿ ವ್ಯಾಪಿಸಿಕೊಂಡು ಅದರ ಕಾರ್ಯಗತಿಯನ್ನು ಅತ್ಯಂತ ಉನ್ನತ ಅಗೋಚರ ಸ್ತರದಲ್ಲಿ ನಿಯಂತ್ರಿಸುತ್ತದೆ. “ಅಂದರೆ ಇಲ್ಲಿ ಎಲ್ಲವೂ ವಿಧಿಯ ಕೈಗೊಂಬೆಯಾಗಿ ನಿರ‍್ಜೀವವಾಗಿಬಿಟ್ಟಿದೆಯೆಂದಾಗಲೀ ಯಾಂತ್ರಿಕವಾಗಿದೆಯೆಂದಾಗಲೀ ಅಲ್ಲ. ‘ಜೀವಿಗಳ್ಗಿಚ್ಭೆಯಾ ಸ್ವಾತಂತ್ರ್ಯಮಂ ನೀಡಿ’ ಮೇಲೆ ವಿಧಿ ನಿಯಂತ್ರಿಸುತ್ತದೆಂಬುದನ್ನು ಗಮನಿಸಬೇಕು. ಇಲ್ಲವಾದರೆ ಪುರುಷ ಪ್ರಯತ್ನಕ್ಕೆ ಬೆಲೆಯಿಲ್ಲದೆ ಹೋಗುತ್ತಿತ್ತು. ‘ಪುರುಷ ಪ್ರಯತ್ನ’ ‘ವಿಧಿನಿಯಮ’, ಇವೆರಡೂ ಬೇರೆ ಬೇರೆ ನಿಲುವಿನಲ್ಲಿ ನಿಂತು ನೋಡಬೇಕಾದ ಪರಸ್ಪರ ಪೂರಕ ತತ್ವಗಳು. ಒಂದು ‘ಲೋಕಸತ್ತೆ’. ಇನ್ನೊಂದು ‘ಆತ್ಮಸತ್ತೆ’. ಇವೆರಡನ್ನೂ ‘ಕಾವ್ಯಸತ್ತೆ’ಯಲ್ಲಿ ಅಳವಡಿಸಿದ್ದಾರೆ ಕುವೆಂಪು ಅವರು?[19]


[1] ಅದೇ, ಪು. ೮, ಸಾಲು ೨೦೧-೦೪.

[2] ಅದೇ, ಪು. ೭೨, ಸಾಲು ೪೮೧-೮೫.

[3] ಅದೇ, ಪು. ೭೩, ಸಾಲು ೫೦೬-೦೮.

[4] ಅದೇ, ಪು. ೭೬, ಸಾಲು ೬೦೧-೦೫.

[5] ಅದೇ, ಪು. ೮೨-೩, ಸಾಲು ೧೨೭-೩೩.

[6] ಅದೇ. ಪು. ೧೧೧, ಸಾಲು ೩೦೬-೮.

[7] ಅದೇ, ಕಿಷ್ಕಿಂಧಾ ಸಂಪುಟಂ, ಪು. ೩೨೬, ಸಾಲು ೨೦೬-೯.

[8] ಅದೇ, ಪು. ೩೩೩, ಸಾಲು ೭೩-೫.

[9] ಅದೇ, ಲಂಕಾ ಸಂಪುಟಂ, ಪು. ೪೬೧, ಸಾಲು ೬೯೭-೭೦೦.

[10] ಅದೇ, ಪು. ೫೧೧, ಸಾಲು ೫೫೮-೬೨.

[11] ಅದೇ. ಪು. ೬೦೨-೩, ಸಾಲು ೭೦-೭೩.

[12] ಅದೇ, ಶ್ರೀಸಂಪುಟಂ, ಪು. ೬೫೪, ಸಾಲು ೭೯-೮೪.

[13] ಅದೇ, ಪು. ೬೮೦, ಸಾಲು ೩೪೪-೪೬.

[14] ಅದೇ, ಪು. ೬೯೧, ಸಾಲು ೭೬-೮೦.

[15] ಅದೇ, ಪು. ೭೪೫, ಸಾಲು ೧೭೯-೮೪.

[16] ಅದೇ, ಪು. ೭೪೯, ಸಾಲು ೨೬೮-೭೨.

[17] ಅದೇ, ಪು. ೭೬೩, ಸಾಲು ೧೪೬-೫೨.

[18] ಡಾ. ಎಚ್. ತಿಪ್ಪೇರುದ್ರಸ್ವಾಮಿ, ಶ್ರೀರಾಮಾಯಣದರ್ಶನಂ ಮಹಾಕಾವ್ಯ, ಪು. ೧೨೬.

[19] ಡಾ. ಸಿ.ಪಿ. ಕೃಷ್ಣಕುಮಾರ್, ಶ್ರೀರಾಮಾಯಣದರ್ಶನಂ, ಪು. ೧೦.