ಅರ್ಪಣೆಯ ಭಾಗದಲ್ಲಿಯೇ ಕವಿ ತಮ್ಮ ಕಾವ್ಯದ ದಾರ್ಶನಿಕ ಸ್ವರೂಪವನ್ನು ಹೀಗೆ ಸೂಚಿಸಿದ್ದಾರೆ:

ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ
…………………………………..
ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು
ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ,
ಪ್ರಾಣಮಯದೊಳ್ ಚರಿಸುತನ್ನಮಯಕವತರಿಸೆ;
ಶ್ರೀರಾಮನಾಲೋಕದಿಂದವತರಿಸಿ ಬಂದು
ಈ ಲೋಕಸಂಭವೆಯನೆಮ್ಮ ಭೂಜತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;  
ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು, ದಿಟಂ…

[1]

ಕೃತಿಯಲ್ಲಿ ಅಂತರ್ಗತವಾಗಿರುವ ಹಲವು ದೃಷ್ಟಿಗಳನ್ನು ಈ ಭಾಗ ಸ್ಪಷ್ಟಪಡಿಸುತ್ತದೆ. ಮೊದಲನೆಯದಾಗಿ ಇದು ವಾಸ್ತವವಾಗಿ ನಡೆದ ಘಟನೆಯೊಂದನ್ನು ಇದ್ದಂತೆಯೇ ನಿರೂಪಿ ಸುವ ಚರಿತ್ರೆಯಲ್ಲ, ಲೋಕಸತ್ಯಕ್ಕಿಂತ ಅಲೌಕಿಕ ನಿತ್ಯಸತ್ಯಗಳನ್ನು ಪ್ರತಿಮಿಸುವ ಸತ್ಯಕಥನ; ಎರಡನೆಯದಾಗಿ ವಿಶ್ವದ ನಿತ್ಯಶಕ್ತಿಗಳು ನಮ್ಮ ಮನೋಮಯಕ್ಕೆ, ಪ್ರಾಣಮಯಕ್ಕೆ, ಅನ್ನಮಯಕ್ಕೆ ಕ್ರಮವಾಗಿ ಇಳಿದು ಲೀಲಾಕ್ರಿಯೆಯ ಸಲುವಾಗಿ ಪಾತ್ರಗಳಾಗುತ್ತಾರೆ; ಮೂರನೆಯದಾಗಿ ಹೀಗೆ ಲೀಲಾಜಗತ್ತಿಗೆ ಇಳಿದು ಬಂದ ಶ್ರೀರಾಮ ಸೀತೆಯನ್ನು ವರಿಸುವ ನೆಪದಲ್ಲಿ (ಈ ಭೂಮಿಯನ್ನು ತನ್ನದಾಗಿಸಿಕೊಳ್ಳುವ ವ್ಯಾಜದಲ್ಲಿ) ಇಲ್ಲಿಯ ಮೃಚ್ಛಕ್ತಿಯನ್ನು ಮರ್ದಿಸುತ್ತಾನೆ ಮತ್ತು ಆ ಮೂಲಕ ಚಿಚ್ಛಕ್ತಿಯನ್ನು ವರ್ಧಿಸುತ್ತಾನೆ. ಆದ್ದರಿಂದ ಈಗ ರಾವಣಾವಿದ್ಯೆಯಿಂದ ಮುಸುಗಿರುವ ನಮ್ಮ ಮರ್ತ್ಯ ಪ್ರಜ್ಞೆ ಆ ಕತ್ತಲೆಯಿಂದ ಮುಕ್ತ ಗೊಳ್ಳುತ್ತದೆ. ಇಲ್ಲಿ ರಾಮಾಯಣದ ಕತೆಯನ್ನು ಪಾತ್ರಗಳನ್ನು ಉದ್ದೇಶವನ್ನು ನೋಡುವ ದೃಷ್ಟಿಯೇ ಸಂಪೂರ್ಣ ದರ್ಶನಾತ್ಮಕವೂ, ಆ ಕಾರಣದಿಂದ ಪ್ರತಿಮಾತ್ಮಕವೂ ಆಗಿರುವುದು ಗಮನಾರ್ಹ.

ಕಾವ್ಯದ ವಿಭಾಗ ಕ್ರಮದಲ್ಲೂ ಈ ದರ್ಶನದೃಷ್ಟಿ ಗೂಢವಾಗಿ ಕ್ರಿಯಾಶೀಲವಾಗಿದೆ. ಇಲ್ಲಿ ಅಯೋಧ್ಯಾ ಸಂಪುಟಂ, ಕಿಷ್ಕಿಂಧಾಸಂಪುಟಂ, ಲಂಕಾಸಂಪುಟಂ ಮತ್ತು ಶ್ರೀಸಂಪುಟಂ ಎಂಬ ನಾಲ್ಕು ಭಾಗಗಳಿವೆ. “ಅಯೋಧ್ಯಾಸಂಪುಟಂ” ಮನೋಮಯ ಭೂಮಿಕೆಯನ್ನೂ, ‘ಕಿಷ್ಕಿಂಧಾ ಸಂಪುಟಂ’ ಪ್ರಾಣಮಯ ಭೂಮಿಕೆಯನ್ನೂ, ‘ಲಂಕಾ ಸಂಪುಟಂ’ ಅನ್ನಮಯ ಭೂಮಿಕೆಯನ್ನೂ, ‘ಶ್ರೀ ಸಂಪುಟಂ’ ವಿಜ್ಞಾನಮಯ ಮತ್ತು ಆನಂದಮಯ ಭೂಮಿಕೆಯನ್ನೂ ಪ್ರತಿಮಿಸುತ್ತವೆ.[2] ಈ ಕಾವ್ಯ ‘ಕವಿಕ್ರತುದರ್ಶನಂ’ ಎಂದು ಆರಂಭವಾಗಿ ಓಂಕಾರದಲ್ಲಿ ಮುಕ್ತಾಯವಾಗುವುದೂ ಕೂಡ ಧ್ವನಿಪೂರ್ಣವಾಗಿದೆ. ಕವಿ ಪ್ರಜ್ಞಾಪೂರ್ವಕವಾಗಿ ಹೀಗೆ ಮಾಡದಿದ್ದರೂ, ಪ್ರತಿಯೊಂದು ಸೂಕ್ಷ್ಮ ವಿವರದಲ್ಲಿ ಕೂಡ ಆಧ್ಯಾತ್ಮಿಕ ದೃಷ್ಟಿ ಪ್ರಚ್ಛನ್ನವಾಗಿ ಪ್ರವಹಿಸಿರುವುದು ಇದರಿಂದ ವ್ಯಕ್ತವಾಗುತ್ತದೆ. ಆದ್ದರಿಂದ ಈ “ರಾಮಾಯಣ ಕೇವಲ ಒಂದು ವ್ಯಕ್ತಿಯ ಕಥೆಯಲ್ಲ. ಒಂದು ಮಹಾಶಕ್ತಿಯು ಅನ್ನಮಯ ಪ್ರಪಂಚದಿಂದ ಆನಂದಮಯ ಪ್ರಪಂಚಕ್ಕೇರಿದ ಆತ್ಮದ ಪ್ರಯಾಣ ಕಥೆ.”[3] ಆದ್ದರಿಂದಲೇ ಕವಿ ಕಾವ್ಯದ ಅಂತ್ಯದಲ್ಲಿ ಮತ್ತೊಮ್ಮೆ ಈ ಅಂಶವನ್ನು ಒತ್ತಿ ಹೇಳುತ್ತಾರೆ :

ಇತಿಹಾಸಮಲ್ತು; ಬರಿ ಕಥೆಯಲ್ತು; ಕಥೆ ತಾಂ
ನಿಮಿತ್ತಮಾತ್ರಂ, ಆತ್ಮಕೆ ಶರೀರದೋಲಂತೆ
ಮೆಯ್ವೆತ್ತುದಿಲ್ಲಿ ರಾಮನ ಕಥೆಯ ಪಂಜರದಿ
ರಾಮರೂಪದ ಪರಾತ್ಪರನ ಪುರುಷೋತ್ತಮನ
ಲೋಕಲೀಲಾದರ್ಶನಂ[4]

೧. ಪ್ರಾರ್ಥನೆ ಮತ್ತು ತಪಸ್ಸು

‘ಶ್ರೀರಾಮಾಯಣದರ್ಶನಂ’ನ ದರ್ಶನದ ಮುಖ್ಯಾಂಗಗಳಲ್ಲಿ ಪ್ರಾರ್ಥನೆ ಮತ್ತು ತಪಸ್ಸುಗಳು ಅತ್ಯಂತ ಮುಖ್ಯವಾಗಿದ್ದು ಈ ಕೃತಿ ರಥವನ್ನು ನಡೆಸುವ ಪ್ರಬಲ ಪ್ರೇರಣೆ ಗಳಾಗಿವೆ. ಪ್ರಾರ್ಥನೆಯನ್ನು ತಮ್ಮ ಜೀವನದ ಮುಖ್ಯ ಶಕ್ತಿಯಾಗಿ ಪರಿಗಣಿಸಿದ್ದ ಗಾಂಧೀಜಿಯವರು, “ಪ್ರಾರ್ಥನೆಯೆಂಬುದು ಧರ್ಮದ ಆತ್ಮ ಮತ್ತು ಸಾರವೇ ಆಗಿದೆ. ಆದ್ದರಿಂದ ಪ್ರಾರ್ಥನೆ ಮಾನವ ಜೀವನದ ಒಳತಿರುಳಾಗಬೇಕು” – ಎಂದಿದ್ದಾರೆ. “ಪ್ರಾರ್ಥನೆ ಎಂಬುದು ಒಂದು ಶಕ್ತಿ. ತನ್ನ ಅಂತರಂಗವನ್ನು ಅರಳಿಸಿ ದೈವೀಕೃಪೆಯನ್ನು ತನ್ನ ಕಡೆ ಎಳೆಯುವ ಶಕ್ತಿ”[5] “ಒಂದು ಜೀವಿ ತನ್ನ ಉನ್ನತಾದರ್ಶ ಅಥವಾ ಧ್ಯೇಯ ಸಾಧನೆಗೋಸುಗ ತ್ರಿಕರಣಶುದ್ದಿಯಾಗಿ ಚಿತ್ತೈಕಾಗ್ರತೆಯಿಂದ ತನ್ನನ್ನು ತಾನು ಇಲ್ಲಗೈದುಕೊಂಡು ನಡೆಸುವ ಪ್ರಯತ್ನವೇ ತಪಸ್ಸು. ಸರ್ವಜೀವಿಗಳಿಗೂ ಶುಭವಾಗಲಿ, ಆಸುರೀ ಶಕ್ತಿ ದೇವೀಶಕ್ತಿಯಾಗಿ ಪರಿವರ್ತನೆ ಹೊಂದಲಿ, ಲೋಕಕ್ಕೆ ಮಂಗಳವಾಗಲಿ ಎಂದು, ವಿಶ್ವವನ್ನು ನಡೆಸುವ ಶಕ್ತಿ ಏನಿದೆ, ಅದರೊಡನೆ ಒಂದು ಜೀವ ನಿರ್ಮಲ ಮನಸ್ಸಿನಿಂದ ನಡೆಸುವ ಸಂಭಾಷಣೆ ಅಥವಾ ಅದಕ್ಕೆ ಸಲ್ಲಿಸುವ ಮೊರೆಯೇ ಪ್ರಾರ್ಥನೆ.”[6]

ಈ ಪ್ರಾರ್ಥನೆ ಎರಡು ಬಗೆಯಲ್ಲಿ ಈ ಕಾವ್ಯದಲ್ಲಿ ಅಭಿವ್ಯಕ್ತವಾಗಿದೆ. ಒಂದು: ಕವಿ ತನ್ನ ರಚನಾಸ್ಫೂರ್ತಿಗಾಗಿ ಶಕ್ತಿಗಾಗಿ ಕಾವ್ಯದ ಮಧ್ಯೆ ಮಧ್ಯೆ ಶಾರದೆಯನ್ನು ಪ್ರಾರ್ಥಿಸುವುದು; ಎರಡು: ಪಾತ್ರಗಳು ತಮ್ಮ ಮತ್ತು ಅನ್ಯರ ಉದ್ಧಾರಕ್ಕಾಗಿ ಭಗವಂತನನ್ನು ಧ್ಯಾನಿಸುವುದು. ಈ ಪ್ರಾರ್ಥನೆ, ಧ್ಯಾನ, ತಪಸ್ಸುಗಳು ಬಾಳಿನ ಬವಣೆಯನ್ನು ನೀಗುವ, ಆತ್ಮವನ್ನು ಉದ್ಧರಿಸುವ, ಜಗತ್ತನ್ನು ಊರ್ಧ್ವಮುಖವಾಗಿ ವಿಸ್ತರಿಸುವ ಪರಿವರ್ತಿಸುವ ಅಸಾಧಾರಣ ಶಕ್ತಿಗಳು ಎಂಬುದು ಕುವೆಂಪು ಅವರ ಅಚಂಚಲ ನಂಬಿಕೆ.

ಸತ್ತ ಕ್ರೌಂಚವನ್ನು ಬದುಕಿಸಿ, ಬೇಡನಿಗೆ ಅಹಿಂಸಾ ದೀಕ್ಷೆಯನ್ನಿತ್ತು, ತನ್ನ ಎಲೆಮನೆಗೆ ಮರಳಿ ಧ್ಯಾನನಿರತನಾದ  ವಾಲ್ಮೀಕಿಯಲ್ಲಿ ಕಾವ್ಯದಿವ್ಯಪ್ರಜ್ಞೆ ಮಿಂಚುತ್ತದೆ, ರಾಮಾಯಣ ಅವತರಿಸುತ್ತದೆ.

ಶ್ರೀರಾಮನಂಥ ಮಹಾಪುರುಷ ಕೇವಲ ಸಾಂಪ್ರದಾಯಿಕ ಪೂಜೆ ಯಜ್ಞಗಳಿಂದ ಮತ್ತು  ದಶರಥನೊಬ್ಬನ ಹೃದ್ಬಯಕೆಯಿಂದ ಅವತರಿಸಲು ಸಾಧ್ಯವಿಲ್ಲ. ಇಡೀ ಜನ ಸಮುದಾಯದ ಸಂತೃಪ್ತ ನಿರ್ಮಲ ಶ್ರದ್ಧಾಪೂರ್ವಕ ಅಭೀಪ್ಸೆ ಪ್ರಾರ್ಥನೆಗಳಿಂದ ಮತ್ತು ಅವರೆಲ್ಲರ ಸಮಷ್ಟಿ ಕಲ್ಯಾಣಕ್ಕಾಗಿ ಮಾತ್ರ ಆತನ ಅವತರಣ. ಆದ್ದರಿಂದಲೇ ಜಬಾಲಿ ಹೇಳುತ್ತಾರೆ ದಶರಥನಿಗೆ:

ಪ್ರಜೆಗಳಂ ಬಡವರಂ
ಸತ್ಕರಿಸವರ್ಗೆ ಬಗೆ ತಣಿವವೋಲ್. ತೃಪ್ತಿಯಿಂ
‘ದೊರೆಗೊಳ್ಳಿತಕ್ಕೆ!’ ಎಂದಾ ಮಂದಿ ಪರಸಲ್ಕೆ,
ಪರಕೆಯದೆ ದೇವರಾಶೀರ್ವಾದಕೆಣೆಯಾಗಿ
ಕೃಪಣವಿಧಿಯಂ ಪಿಂಡಿ ತಂದೀವುದೈ ನಿನಗೆ
ನೆಲದರಿಕೆಯೊಳ್ಮಕ್ಕಳು. ಜನಮನದ ಶಕ್ತಿ
ಮೇಣವರಭೀಪ್ಸೆಯೆ ಮಹಾತ್ಮರಂ ನಮ್ಮಿಳೆಗೆ
ತಪ್ಪದೆಳೆತರ್ಪುದು ಕಣಾ![7]

ಜನಮನದ ಸಮಷ್ಟಿ ಪ್ರಾರ್ಥನೆ ಹಾರೈಕೆಗಳಿಂದ ಮಹಾತ್ಮರು ಉದಿಸುತ್ತಾರೆಂಬ ತತ್ವವನ್ನು ಕವಿ ಈ ಮೂಲಕ ಧ್ವನಿಸುತ್ತಾರೆ. ಈ ಸಮಷ್ಟಿಯಲ್ಲಿ ದಶರಥ ಕೌಸಲ್ಯಾದಿಗಳ ತೀವ್ರತಮ ಪ್ರಾರ್ಥನೆಯೂ ಮೇಳೈಸಿದೆಯೆಂಬುದು ಸ್ವಯಂವೇದ್ಯ.

ಯೌವನದ ಸಹಜ ಆಕಾಂಕ್ಷೆಗಳಿಗೆ ಸಂಯಮ ಜರಿ ಬಲಿಯಾದ ಅಹಲ್ಯೆ ಪತಿ ಗೌತಮನ ಶಾಪಕ್ಕೆ ತುತ್ತಾಗಿ ಶತಮಾನಗಳಿಂದ ಜಡರೂಪಿಯಾಗಿ, ನಿಷ್ಠುರ ಶಿಲಾ ತಪಸ್ವಿನಿಯಾಗಿ, ಕನಿಕರದ ಕಣ್ಣಿಗೆ ಬಾಹಿರೆಯಾಗಿ, ಜಗದ ನಿರ್ದಾಕ್ಷಿಣ್ಯ ವಿಸ್ಮೃತಿಗೆ ಪಕ್ಕಾಗಿ, ತನ್ನ ಉದ್ಧಾರದ ಶುಭಮುಹೂರ್ತವನ್ನು ನಿರೀಕ್ಷಿಸುತ್ತಿದ್ದಾಳೆ. ಜನಕನ ಯಾಗ ವಾರ್ತೆಯನ್ನು ಕೇಳಿ ಆ ಕಡೆಗೆ ವಿಶ್ವಾಮಿತ್ರರೊಡನೆ ತೆರಳುತ್ತಿದ್ದ ಶ್ರೀರಾಮಚಂದ್ರನನ್ನು ದಾರಿ ತಪ್ಪಿಸಿ ತನ್ನೆಡೆಗೆ ಸೆಳೆಯುತ್ತದೆ, ಆಕೆಯ ಸುದೀರ್ಘ ತೀವ್ರ ತಪಸ್ಸು. ತಾಯಿ ಕೌಸಲ್ಯೆ ಗೋಳಿಡುವ ತನ್ನನ್ನು ಹೆಸರು ಹಿಡಿದು ಕರೆದಂತೆ ಭಾಸವಾಗುತ್ತದೆ ಅವನಿಗೆ :

        ಕಲ್ಲಾದರೇನ್?
ಘಿಣಅತಪದಿಂದ ಚೇತನ ಸಿದ್ದಿಯಾಗದೇಂ
ಜಡಕೆ? ಕಲ್ಲಾದ ಪೆಣ್ಣರಕೆ ತಾಂ ಕೌಶಿಕಗೆ
ಬಟ್ಟೆದಪ್ಪಿಸಿ ಸೆಳೆಯದೇನಿಹುದೆ, ಪೇಳ್, ಚರಣಮಂ
ಶ್ರೀರಾಮನಾ?[8]

ಶ್ರೀರಾಮ ಪಾದಸಂಸ್ಪರ್ಶದಿಂದ ಆ ‘ಗಿರಿವನಧರಣಿ ಚೈತ್ರಲಕ್ಷ್ಮೀ ಸ್ಪರ್ಶವಾದಂತೆ ಸಪ್ರಾಣಿಸಿತು’; ‘ಬೆಂಗದಿರನುರಿಗೆ ಕರ್ಪೂರಶಿಲೆಯಂತೆ ವೋಲ್ ದ್ರವಿಸಿತಾ ಕರ್ಬಂಡೆ’. ಆ ಬಂಡೆಯಿಂದ ಅಹಲ್ಯೆಯ ತಪಸ್ವಿನೀ ವಿಗ್ರಹ ಮೈವೆತ್ತು ರಘುಜನಡಿದಾವರೆಗೆ ನಮಿಸಿತು.

ತನ್ನ ಶಿಲಾ ತಪಸ್ಸಿನ ಮಹಾಶಕ್ತಿಯಿಂದ ಭಗವಂತನಾದ ಶ್ರೀರಾಮಚಂದ್ರನ ಪಾದಗಳನ್ನು ಸಾಕ್ಷಾತ್ಕರಿಸಿಕೊಂಡಳು ಅಹಲ್ಯೆ; ಮಾತ್ರವಲ್ಲ, ಆಕೆಯ ತಪೋಗೌರವ ರಾಮಪದ ಮಹಿಮೆ ಯನ್ನು ಮೊತ್ತಮೊದಲ ಬಾರಿಗೆ ಪ್ರಕಾಶಿಸುವ ಮೂಲಕ ಆತ ಭಕ್ತಬಂಧು ವೆಂಬುದನ್ನು ಆರ್ತರಕ್ಷಕನೆಂಬುದನ್ನು ಅತಿಮಾನುಷ ಮಹಿಮನೆಂಬುದನ್ನು ಜಗತ್ತಿಗೂ ಮತ್ತು ಸ್ವತಃ ಶ್ರೀರಾಮನಿಗೂ ದರ್ಶನ ಮಾಡಿಸಿತು.

ರಾವಣ ಶಿವಧನುವಿಗೆ ಕೈಯಿಕ್ಕಿದಾಗ ‘ಮುರಿಯದಿರ್, ಬಾಗದಿರ್, ಸುರಮೇರು ಭಾರದಿಂ ದೈತ್ಯನೆತ್ತದ ತೆರದಿ ಭಾರಗೊಂಡಬಲೆಯಂ ಪೊರೆ’ ಎಂದು; ಶ್ರೀರಾಮ ಅದನ್ನೆತ್ತಲು ಬಂದಾಗ “ಹಗುರಾಗು ಗರಿಯಂತೆ; ಬಾಗು ಬಳ್ಳಿಯ ತೆರದಿ; ರಾಮಂಗೆ ಮುರಿದು ಬೀಳ್, ಓ ಧನುವೆ!” ಎಂದು ಬಿನ್ನೈಸುವ ಸೀತೆಯ ಸರಳ ಪ್ರಾರ್ಥನೆಯಿಂದ ಹಿಡಿದು, ರಾವಣನಿಂದ ಅಪಹೃತಳಾಗಿ ತನ್ನಿನಿಯನ ಸಾಕ್ಷಾತ್ಕಾರಕ್ಕೆ ಮತ್ತು ಆತನ ವಿಜಯಕ್ಕೆ, ಕೊನೆಗೆ ರಾವಣನುದ್ಧಾರಕ್ಕೆ ಕೂಡ ಆಕೆ ಅತ್ಯಂತ ತೀಕ್ಷ್ಣ ತಪವನ್ನು ಕೈಗೊಂಡು ಕೃತಾರ್ಥಳಾಗುವವರೆಗೆ ಆಕೆಯ ಜೀವನದ ವಿವಿಧ ಸಂದರ್ಭಗಳಲ್ಲಿ ಆಕೆಯನ್ನು ರಕ್ಷಿಸುವ ಪರಮೋನ್ನತ ಪತಿವ್ರತೆಯ ಸ್ಥಾನಕ್ಕೇರಿಸುವ ಅನುಪಮ ಅಂತಃಶಕ್ತಿಯಾಗಿ ಪ್ರಾರ್ಥನೆ ತಪಸ್ಸುಗಳು ಕೆಲಸ ಮಾಡಿವೆ. ಆಕೆಯ,

ಪ್ರಾರ್ಥನಾ ತೀವ್ರತೆಯ ಸಾತ್ವಿಕ ತಪಶ್ಯಕ್ತಿ, ಪೇಳ್,
ತಾಂ ಸ್ವಯಂ ಕ್ರಿಯೆಯಾಗಿ ಚೋದಿಸದೆ ಸೃಷ್ಟಿಯಂ?
ಸೇತುಗಟ್ಟದೆ ಕಷ್ಟದಂಬುಧಿಗೆ?[9]

ಸೀತೆಯ ಪ್ರಾರ್ಥನೆ ತಪಸ್ಸುಗಳಿಗೆ ಸತ್ವ ಮಹಿಮೆ ಪರಿವರ್ತನ ಶಕ್ತಿಗಳು ತುಂಬಿ ಕೊಳ್ಳುವುದು ಆಕೆ ರಾವಣನಿಂದ ಅಪಹೃತಳಾದ ಮೇಲೆಯೇ. ತನಗೇ ಅರಿವಿರದಿದ್ದ ತನ್ನ ಶಕ್ತಿಗಳು ಆಕೆಯ ಅರಿವಿಗೆ ಬರುವುದು ಅನಂತರದಲ್ಲೇ. ಆಕೆಯು ತ್ರಿಜಟೆಗೆ ಹೇಳುತ್ತಾಳೆ: “ಆವುದಾಗಲಿ ನೆಪಂ ಫಲದಾಯಕಂ ತಪಂ,”[10]; ಅಷ್ಟೇ ಅಲ್ಲ,

        ನಾನಿಂದು
ಅಂದಿನವಳಲ್ಲ. ರಾಮಧ್ಯಾನ ಮಹಿಮೆಯ
ನಿರಂತರ ತಪಸ್ಯೆಯಿಂ ನನಗಲೌಕಿಕ ಸಿದ್ದಿ
ತನಗೆ ತಾನಾಯ್ತು, ರಾಮನನರಿತೆನಾತ್ಮದಿಂ.
ತನ್ನ ನಿತ್ಯವಿಭೂತಿಯಿಂ ಪರಬ್ರಹ್ಮನೆಯೆ
ತಾನ್ …………………[11]

ಎಂದೂ ಉದ್ಗರಿಸುತ್ತಾಳೆ. ರಾವಣನ ಪ್ರಲಯಭಯಂಕರ ವಿಕ್ರಮಾಗ್ನಿಗೆ ಪ್ಲವಗ ವೀರರು ಪತಂಗಗಳಂತೆ ಸುಟ್ಟು ಸೀಕರಿಯಾಗುತ್ತಿದ್ದಾಗ, ಶ್ರೀರಾಮ ಅದನ್ನು ಅಣಗಿಸಲು ಸನ್ನದ್ಧ ನಾಗುತ್ತಿದ್ದಾಗ, ಅದನ್ನು ಧ್ಯಾನದೃಷ್ಟಿಯಿಂದ ಅರಿತ ಸೀತೆ ಹೇಳುವ ಮಾತಿದು :

ಪೂಜೆ ತಾಂ ಶಕ್ತಿ
ನಾಥಂಗೆ ನೆರಮಪ್ಪೆನಾತನಂ ಪೂಜಿಸಿ
ನಿವೇದಿಸುವೆನಾತ್ಮ ಬಲಮಂ[12]

ರಾಮನನ್ನು ಧ್ಯಾನಿಸುವ, ಆತನನ್ನು ಕುರಿತು ತಪಸ್ಸು ಮಾಡುವ ಮೂಲಕ-ಅಂದಿನವರೆಗೆ ಜನಕನಂದಿನಿಯೂ ರಾಮಭಾರ‍್ಯೆಯೂ ಮಾತ್ರವಾಗಿದ್ದ-ಸೀತೆ ಮಹಾತಪಸ್ವಿನಿಯಾಗಿ ಮಹಾಪತಿವ್ರತೆಯಾಗಿ ರೂಪುಗೊಂಡು ಅಲೌಕಿಕ ಸಿದ್ದಿಯನ್ನು ಪಡೆಯುವುದು ಮಾತ್ರವಲ್ಲದೆ, ರಾವಣನ ಎದುರಿನ ರಾಮನ ತೋಳ್ಬಲಕ್ಕೆ ತನ್ನ ರಾಮಪೂಜೆಯ ಬಲದಿಂದಲೇ ಅನಂತಶಕ್ತಿ ಯನ್ನು ತುಂಬುವ, ಆ ಮೂಲಕ ಅವನ ಗೆಲುವಿಗೆ ನೆರವಾಗುವ ಮಹಾಶಕ್ತಿಯೂ ಆಗುತ್ತಾಳೆ. ಆಕೆಯ ಈ ಪ್ರಾರ್ಥನಾಬಲವೇ ತಪಃಶಕ್ತಿಯೇ ಆಕೆ ತ್ರಿಜಟೆಗೆ,

ನಾಳೆ ರಣಮೆನಿತೆ ಭೀಕರಮಕ್ಕೆ, ವಾನರರ
ಬಲಮೆನಿತು ಘೋರತರಮಕ್ಕೆ, ಮೇಣ್ ಎನ್ನ ಪತಿ
ಬ್ರಹ್ಮಾಸ್ತ್ರಮನೆ ತುಡುಗೆ, ನಿನ್ನೆಯ್ದೆದಾಳಿ ತಾನ್
ಒಂದಿನಿತಲುಗದಿರ್ಕೆ![13]

– ಎಂಬ ಆಶ್ವಾಸನೆಯನ್ನು ನೀಡುವಂಥ ಅನುಪಮ ಆತ್ಮಸತ್ವವನ್ನು ದಯಪಾಲಿಸುತ್ತದೆ.

ಪ್ರಾರ್ಥನೆ ಎಂದೂ ಏಕಮುಖಿಯಲ್ಲ, ಸ್ವಾರ್ಥಿಯಲ್ಲ. ಸೀತೆಯ ಪ್ರಾರ್ಥನೆಯೂ ಹಾಗೆಯೇ ಅನುಚಿತಸ್ವಾರ್ಥದಿಂದ ಕೂಡಿದ್ದಲ್ಲ. ಆಕೆ ಹಾಗೆ ರಾಮನ ಅಂತರಾತ್ಮದರ್ಶನಕ್ಕಾಗಿ ಆತ್ಮೋದ್ಧಾರಕ್ಕಾಗಿ ಪ್ರಾರ್ಥನಾನಿರತಳಾಗುತ್ತಾಳೆ. ಮಂಡೋದರಿ ಬಂದು, ‘ದೇವಿ, ನೀನುಂಪ್ರಾರ್ಥಿಸಾ, ನನ್ನ ಪತಿಯೆರ್ದೆಗೆ ಶುದ್ದಿ ದೊರೆ ಕೊಳ್ವಂತೆ’[14]… “ನಿನ್ನ ನೋಂಪಿಯಿಂ ಕಿಡುಗೆನ್ನ ಪತಿಯ ಹೃದಯದ ಪಾಪ ಕಿಲ್ಪಿಷಂ. ಸನ್ಮತಿಯುದಿಸಿ ಶಾಂತಿ ಸುಖಮಕ್ಕೆ ಸರ್ವರಿಗೆ!…”[15] ಎಂದು ಸೀತೆಯನ್ನು ಪ್ರಾರ್ಥಿಸಿದ ನಂತರ ಸೆರೆಮನೆಯೆ ಆಕೆಯ ಆತ್ಮ ಸಾಧನೆಗೊಂದು ಎಲೆಮನೆಯಾಯಿತ್ತು. ರಾವಣನ ಮೇಲಿನ ವೈರಭಾವ ಕರಗಿ ಮಂಡೋ ದರಿಯ ಪತಿಯ ಮೇಲಿನ ಕರುಣೆಯಾಗಿ ಅದು ಪರಿವರ್ತಿತವಾಗುತ್ತದೆ. ರಾವಣನ ಆತ್ಮೋನ್ನತಿಗಾಗಿ ಸೀತೆಯ ಮಂಗಳಕ್ಕಾಗಿ ಮಂಡೋದರಿ ಮಾಡಿದ ಪ್ರಾರ್ಥನೆಯೂ ಕಡಿಮೆ ಯದಲ್ಲ. ಪ್ರಮುಖವಾಗಿ ಇವರಿಬ್ಬರ ತೀವ್ರವೂ ನಿರ್ಮಲವೂ ಆದ ತಪಸ್ಸಿನ ಪರಿಣಾಮವೇ ರಾವಣನ ಹೃದಯ ಪರಿವರ್ತನೆಗೆ ಕಾರಣ. ಈ ಬಗ್ಗೆ ಕವಿಯ ಉದ್ಗಾರವಿದು:

ಸೂರ್ಯನಾತಪಕೆ ಕಾಲದ ತಪಂ ನೆರವಾಗಲಾ
ಬಜ್ಜರತನಂ ಬರ್ಪುದೊಯ್ಯನಿದ್ದಲಿಗೆನಲ್,
ಸೀತೆ ಮಂಡೋದರಿಯರಿರ್ವರ್ ತಪಂಬಡಲ್
ರಾವಣನ ಮನದ ಪೊನ್ ಹೃತ್ತಾಪಮೂಷೆಯೊಳ್
ಕುದಿಕುದಿದು ಕರಕರಗಿ ಕಾಳಿಕೆಯನುಳಿಯದೇನ್?
ತಿಳಿಯದೇನ್ ಪೊಳೆಯದೇನ್?[16]

ಇದರ ಜೊತೆಗೆ ರಾವಣನೂ ಮಹಾತಪಸ್ವಿಯೆಂಬುದನ್ನು ನೆನಪಿನಲ್ಲಿಡಬೇಕು. ತನ್ನ ತಪೋಬಲದಿಂದ ಶಿವಶಿವಾಣಿಯರ ಸಹಿತ ಕೈಲಾಸಗಿರಿಯನ್ನೇ ಅಲುಗಾಡಿಸಿದ ಅಸಾಧಾರಣ ಪುರುಷನೀತ. ಅವನೆಲ್ಲ ಭಾವನೆಗಳೂ ತೀವ್ರವೇ-ಅದು ಪ್ರೀತಿ, ವಾತ್ಸಲ್ಯ, ಸ್ನೇಹ, ಪ್ರೇಮ, ದ್ವೇಷ ಯಾವುದೇ ಆಗಿರಲಿ. ತನ್ನನ್ನು ಧಿಕ್ಕರಿಸುವ ಸೀತೆಯ ಬಳಿಗೆ ಹೋಗಿ ಆತ ಹೇಳುವ ಮಾತಿದು :

ನಿನ್ನವೊಲ್ಮೆಯ ವರಂಬಡೆಯಲೋಸುಗಮಾಂ
ತಪಸ್ವಿಯೆಂ……………………………..
ಸಾಧನೆಗಸಾಧ್ಯಮಿಲ್ಲೆಂಬರೌ. ಉಪಾಸಿಸಲ್
ಕಾಲಾಂತರಕೆ ಕಲ್ಲುಮೀಶ್ವರನ ಕೃಪೆಯಾಗಿ
ಪರಿಣಿಸಿದಪ್ಪುದೆನೆ, ನಿನ್ನ ಕಲ್ಲೆರ್ದೆ ಕರಗಿ
ಮೆಲ್ಲಿತಪ್ಪುದು ದಿಟಂ![17]

‘‘ಧ್ಯೇಯ ಯಾವುದೇ ಇರಲಿ, ನಿಷ್ಠೆಯ ತಪಸ್ಸು ತಪಸ್ವಿಗೆ ಒಳ್ಳೆಯದನ್ನೇ ಕೋರುತ್ತದೆ. ಈಶ್ವರನ ಕೃಪೆ ಸದಾ ಮಂಗಳಾಕಾಂಕ್ಷಿ. ಆದ್ದರಿಂದಲೇ ಅವನ ಹೃದಯ ಮೆಲ್ಲಮೆಲ್ಲಗೆ ಪರಿವರ್ತನೆ ಹೊಂದುತ್ತದೆ.”[18] ಕೊನೆಯ ರಣದ ಹಿಂದಿನ ಶಕ್ತಿ ಪೂಜೆಯಲ್ಲಿ ಇದರ ಫಲ ಅವನ ಮನೋಗೋಚರವಾಗುತ್ತದೆ.

‘ನೀರವ ಧ್ಯಾನವಧೂ’ ಎಂದು ಕವಿಯಿಂದ ಕೀರ್ತಿಸಿಕೊಂಡ ಊರ್ಮಿಳೆಯ ತಪಸ್ಸು ಈ ಕಾವ್ಯದಲ್ಲೇ ಅನನ್ಯವಾದದ್ದು. ತನ್ನ ಪತಿ ರಾಮಸೀತೆಯರೊಡನೆ ಅಯೋಧ್ಯೆಯಿಂದ ನಿರ್ಗಮಿಸಿದ ಮೊದಲುಗೊಂಡು, ಅವರು ನಂದಿಗ್ರಾಮಕ್ಕೆ ಹಿಂದಿರುಗುವವರಗೆ ಆಕೆ ಸರಯೂ ತೀರದಲ್ಲಿ ಪರ್ಣಕುಟಿಯ್ನು ರಚಿಸಿ “ಚಿರತಪಸ್ವಿನಿಯಾಗಿ ಕಟ್ಟಿದಳ್ ಚಿತ್ತಪೋಮಂಗಳದ  ರಕ್ಷೆಯಂ ಮೈಥಿಲಿಗೆ ರಾಮಂಗೆ ಮೇಣ್ ತನ್ನಿನಿಯದೇವನಿಗೆ.”[19] ಇಂದ್ರಜಿತುವಿನ ಇಂದ್ರ ಜಲ ನಿರ್ಮಿತ ಯಾಗಮಂಟಪದ ಅಗ್ನಿಚಕ್ರಕ್ಕೆ ಕಾಲಿಟ್ಟು ಲಕ್ಷ್ಮಣನ ಶರೀರ ಸೀದ ಶವದಂತೆ ಸಿಡಿದು ಕೆಡೆಯುತ್ತದೆ. ಸುಷೇಣನ ಸಲಹೆಯಂತೆ ಆಂಜನೇಯ ತಂದ ಸಂಜೀವನ ಚಿಕಿತ್ಸೆಯಿಂದ ಎದ್ದ ಲಕ್ಷಣ ‘ಊರ್ಮಿಳಾ’ ಎಂದು ಸತಿಯ ಹೆಸರನ್ನು ಕರೆಯುತ್ತಾನೆ. ವಲ್ಕಲವನ್ನುಟ್ಟಿದ್ದ ತಪೋನಿರತಳಾಗಿದ್ದ ತನ್ನ ಸತಿ “ತನ್ನ ದಿವ್ಯ ಶಕ್ತಿಯೊಳೆನ್ನ ಹೃದಯಕ ಮೃತವನೆರೆದು ಮೇಘನಾದಾಭಿಚಾರಕ ಯಾಗಕೆನ್ನಾಯು ತವಿಯದಂದದಿ ತೊಡಿಸಿದಳ್ ತಪಃಕವಚಮಂ”[20] ಎಂದು ಜಂಬವ ಮೊದಲಾದವರಿಗೆ ಹೇಳುತ್ತಾನೆ. ಊರ‍್ಮಿಳೆಯ ತಪಃಶಕ್ತಿಗೆ ಬರೆದ ಭಾಷ್ಯ ಇದು.

ನಿರ್ದಿಷ್ಟ ಉದ್ದೇಶಕ್ಕಾಗಿ, ತನ್ನ ಮತ್ತು ತನ್ನವರ ಶ್ರೇಯೋಭಿವೃದ್ದಿಗಾಗಿ, ಪ್ರಾರ್ಥನೆ ತಪಸ್ಸುಗಳನ್ನು ಕೈಗೊಂಡವರದು ಒಂದು ವರ್ಗವಾದರೆ, ಗುರುವಾಕ್ಯದಲ್ಲಿ ಶ್ರದ್ಧೆಯಿರಿಸಿ ಕಾಯುವಿಕೆಗಾಗಿಯೇ ಕಾಯುತ್ತ ರಾಮದರ್ಶನಕಾತರಳಾಗಿ ರಾಮಧ್ಯಾನನಿರತಳಾಗಿದ್ದ ಅಪೂರ್ವ ಯೋಗಿನಿ ಶಬರಿ. “ಶಬರಿಯ ಹಾರೈಕೆ ‘ಜಿಜ್ಞಾಸು’ಗಳ ರೀತಿಯದು. ಆಕೆ ಕುಲದಲ್ಲಿ ಬೇಡಿತಿಯಾದರೂ ಸಂಸ್ಕಾರದಿಂದ ಮತಂಗಮುನಿ ಶಿಷ್ಯೆ. ಮುಂದೆ ಒಮ್ಮೆ ಶ್ರೀರಾಮನು ತನ್ನ ಬಳಿ ಬರುವನೆಂದು ಗುರು ಹೇಳಿದ ವಚನವೇ ಅವಳ ಇಷ್ಟದೈವದ ಕಲ್ಪನೆಗೆ ಮತ್ತು ಅದರ ಸಾಧನೆಗೆ ದೀಕ್ಷೆಯಾಯಿತು.”[21] ಆಕೆ ಸುಮಾರು ಹತ್ತು ವರ್ಷಗಳ ಕಾಲ ಶ್ರೀರಾಮನ ದಿವ್ಯಸುಂದರ ಮೂರ್ತಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಕಾಯುತ್ತಾಳೆ. ದಿನದಿನವೂ ಆತನಿಗಾಗಿ ಅಡುಗೆ ಹಣ್ಣು ಹಂಪಲುಗಳನ್ನಣಿಮಾಡಿ ಕಾದು ಕಾತರಿಸುತ್ತಾಳೆ.

“ನೀನೆಂದಿಗೆ ಬರುವೆಯಯ್ಯ, ಓ ನನ್ನಯ್ಯ,
ಕಂದಯ್ಯ, ರಾಚಂದ್ರಯ್ಯ? ಗುರುದೇವನಾ
ಮುನಿ ಮತಂಗನ ಮಾತು ಬೀತಪುದೆ? ನಿನಗಾಗಿ
ಕಾದಿರುವೆನೀರೈದು ವತ್ಸರಗಳಿಂ, ವತ್ಸ,
……………………………………
……………………..ಬಾರ ಕಂದಯ್ಯ,
ಕಣ್ಕಿಡುವ ಮೊದಲೆ ಬಾರಯ್ಯ, ಈ ಬಾಳ್ಕೆಡುವ
ಮುನ್ನಮೆರ್ದೆಗೆ ತಾರಯ್ಯ ನಿನ್ನ ಶಾಂತಿಯಂ![22]

– ಎಂದು ಹೃದಯದಾಳದ ಉಜ್ವಲ ತೀವ್ರತೆಯಿಂದ ಮೊರೆಯಿಡುತ್ತಾಳೆ. ಅವಳ ಈ ಮಾತು ಮತ್ತು ವಾತ್ಸಲ್ಯದ ಶಕ್ತಿಯುತ ಮೊರೆಗೆ ಕರೆಗೆ ಶ್ರೀರಾಮಚಂದ್ರ ಬರುತ್ತಾನೆ; ಆದರೆ ಅವಳು ನಿರೀಕ್ಷಿಸಿದಂತಲ್ಲ-ದೀನಾತಿದೀನನಾಗಿ, ದುಃಖಿಯಾಗಿ, ಸೀತಾವಿರಹಾಗ್ನಿದಗ್ಧ ಸಾಮಾನ್ಯಮೂರ್ತಿಯಾಗಿ. ಕೊನೆಗೂ ತಾನು ಅದುವರೆಗೂ ನಿರೀಕ್ಷಿಸಿದ ಪ್ರಾರ್ಥಿಸಿದ ಮೂರ್ತಿ ಅವನೇ ಎಂಬುದನ್ನಾಕೆ ಕಂಡುಕೊಳ್ಳುತ್ತಾಳೆ; ತಾಯಿಯಂತೆ ಅವನನ್ನು ಉಪಚರಿ ಸುತ್ತಾಳೆ. ಅವನಿಗೊದಗಿದ ‘ವಿಚಿತ್ರರುಜೆ’ಯನ್ನು ಹೀರಿ, ತನ್ನನ್ನು ಸಂಪೂರ್ಣವಾಗಿ ಅವನಿಗೆ ಸಮರ್ಪಿಸಿಕೊಳ್ಳುತ್ತಾಳೆ; ಅವನಿಗೆ ಮಾರ್ಗದರ್ಶನ ಮಾಡಿ ತನ್ನ ತಪಸ್ಸಿದ್ದಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾಳೆ. ತನ್ನ ನಿಷ್ಕಾಮ ತಪೋಜ್ವಲತೆಯಿಂದ ಭಗವಂತನನ್ನು ತನ್ನೆಡೆಗೆ ಬರಮಾಡಿಕೊಂಡ ಈ ಮಹಾಭಕ್ತೆ ಅದೇ ತಪಃಶಕ್ತಿಯಿಂದ ಭಗವಂತನ ಲೀಲಾವತಾರದ ಕ್ಲೈಬ್ಯವನ್ನು ಪರಿಹರಿಸುವಂಥ ದಿವ್ಯಮಹಿಮಾವಂತ ಪದವಿಗೇರಿ ಅಮರಸನ್ಮಾನ್ಯಳಾಗುತ್ತಾಳೆ; ಆ ಮೂಲಕ ಶ್ರದ್ಧಾವಂತ ಪ್ರಾರ್ಥನೆ ಮತ್ತು ತಪಸ್ಸುಗಳ ಅಸಾಧಾರಣ ಶಕ್ತಿಯ ಸಂಕೇತ ವಾಗುತ್ತಾಳೆ.

ಖಗರಾಜ ಸಂಪಾತಿಯ ನಿರೀಕ್ಷೆ. ಹಾರೈಕೆ ಪ್ರಾರ್ಥನೆಗಳು ಬೇರೊಂದು ಬಗೆಯವು. ತನ್ನ ದೇಹಮದ ಮತ್ತು ಸಾಮರ್ಥ್ಯಮದಗಳಿಂದ ವಿಜೃಂಭಿಸಿದ ಸಂಪಾತಿ, ಅವು ನಿರ್ಮಿಸಿದ ಕತ್ತಲಲ್ಲಿ ಕುರುಡಾಗಿ ವರ್ತಿಸಿ ನಿಶಾಕರಮುನಿಯ ಆಶ್ರಮದ ನಾಶಕ್ಕೆ ಕಾರಣನಾಗುತ್ತಾನೆ. ತನ್ನಿಂದಾದ ತಪ್ಪಿಗೆ ಆ ಮುನಿಯ ಕ್ಷಮೆಯನ್ನು ಯಾಚಿಸುತ್ತಾನೆ. ತ್ರಿಕಾಲ ಜ್ಞಾನಿಯಾದ ಋಷಿ ಶಪಿಸಲಿಲ್ಲ. ಆದರೆ,

ಶಪಿಸೆನಾಂ….ನಿನ್ನಿಂ ಜಗತೆ
ಗುರುಮಹತ್ಕಾರ್ಯಮಕ್ಕುಂ… ಅದಪ್ಪುದಾದೊಡಂ
ತಪ್ಪದಯ್ ನಿನ್ನ ಕರ್ಮಕೆ ತಕ್ಕ ಶಿಕ್ಷಾಫಲಂ
ನಿನಗೊದಗಿದಪುದೊಂದು ಪೆರ್‌ಬೇನೆ; ಆ ಸಂಕಟಮೆ
ಪಾಪ ಪರಿಹಾರಕ್ಕೆ ನಿನಗೆ ಸಾಧನಮಾಗೆ,
ಕೊನೆಗೆ ನಿನ್ನಿಂದಾಗುವಾ ಮಹತ್ಕಾರ್ಯದಿಂ
ಸಿದ್ದಿಪುದು ನಿನಗುಮಂತೆಯೆ ನಿಖಿಲ ಲೋಕಕ್ಕೆ ಕೇಳ್
ಶೋಕಮೋಕ್ಷಂ.[23]

ಎಂದು ಹೇಳಿ ಏಕಕಾಲದಲ್ಲಿ ಶಿಕ್ಷೆ ಮತ್ತು ಪರಿಹಾರೋಪಾಯಗಳೆರಡನ್ನೂ ಸೂಚಿಸಿದ. ಕೆಲ ದಿನಗಳ ನಂತರ, ಸಂಪಾತಿಯೂ ಜಟಾಯುವೂ ಸೂರ್ಯಮಂಡಲದತ್ತ ಹಾರುತ್ತಿರುವಾಗ ತಮ್ಮನನ್ನು ರಕ್ಷಿಸಲೆಳಸಿದ ಸಂಪಾತಿಯ ರೆಕ್ಕೆಗಳು ಸುಟ್ಟು ಆತ ಮಹೇಂದ್ರಾಚಲದ ನೆತ್ತಿಯ ಮೇಲೆ ಬೀಳುತ್ತಾನೆ. ಶಿಕ್ಷೆ ಲಭಿಸಿತು. ಆದರೆ ಅದರಿಂದ ಮುಕ್ತಿ? ರೆಕ್ಕೆ ದಹಿಸಿ ಮೈ ಹುಣ್ಣಾಗಿ ನಡೆಯಲಾರದೆ ಹಾರಲಾರದೆ ಬಂಡೆಗಳೊಡನೆ ಬಂಡೆಯಾದ ಸಂಪಾತಿ ಮುನಿವಾಕ್ಯ ವನ್ನು ನೆಮ್ಮಿ ತನ್ನ ಮೋಕ್ಷಕ್ಕಾಗಿ ಕಾಯುತ್ತ ಶತಶತ ವರ್ಷಗಳ ಕಾಲ ‘ಕೃಪೆಯ ಹಾರೈಕೆ’ ಯಿಂದ ತಪಗೈಯುತ್ತಾನೆ. ಅಹಲ್ಯೆ, ಶಬರಿಯರಿಗೆ ರಾಮಾಗಮನದಿಂದ ತಮಗೆ ಮುಕ್ತಿ ದೊರೆಯುವುದೆಂಬ ಖಚಿತ ನಂಬಿಕೆಯಿತ್ತು. ಆದರೆ ಸಂಪಾತಿಗೆ ಯಾರು ಬರುತ್ತಾರೆ, ಯಾವಾಗ ಬರುತ್ತಾರೆ, ಹೇಗೆ ತನ್ನ ಪಾಪಾರ್ಜಿತ ಶಿಕ್ಷೆಯಿಂದ ಬಿಡುಗಡೆ ಮಾಡುತ್ತಾರೆ ಎಂಬುದೊಂದೂ ಸ್ಪಷ್ಟವಿಲ್ಲದೆ “ಬೇಡುತಿರ್ದನ್ ವಿಧಾತ್ರನಂ ಆ ಶುಭ ಮುಹೂರ್ತದಾಗಮನಕಾಗಿ”. ರಾಮಸತಿಯ ನೆಲೆಯನ್ನರಿಯಲು ಅಂಗದ ನೇತೃತ್ವದಲ್ಲಿ ಹೊರಟ ವಾನರವೀರರು ಆಕೆಯ ಇರ್ಕೆದಾಣವನ್ನರಿಯದೆ ನಿರಾಶರಾಗಿ ಕೊನೆಗೆ ಸಂಪಾತಿಯ ತಪೋಭೂಮಿಯಾಗಿದ್ದ ಮಹೇಂದ್ರಾಚಲದ ತಪ್ಪಲಿನಲ್ಲಿ ಸಮಾಲೋಚನೆಯಲ್ಲಿ ತೊಡಗುತ್ತಾರೆ. ಆಗ ಸಂಪಾತಿಯ ನೋವಿನ ಚೀರು ದನಿ ಕೇಳಿಬಂದು, ಅವನೆಡೆಗೆ ಸಾರಿ, ಅವನಿಂದ ಅವನ ಪೂರ್ವ ಕಥೆಯನ್ನರಿಯುತ್ತಾರೆ. ತನ್ನ ಶಾಪವಿಮೋಚನೆಗಾಗಿ ಕಾದು ಕಾದು ತಪಿಸಿದ್ಧ ಸಂಪಾತಿ ತನ್ನ ಜರ್ಝರಿತವಾದ ವೃದ್ಧಕಾಯದಿಂದ ಮಹತ್ಕಾರ್ಯವೆಂಥದು ಸಾಧ್ಯ ಎಂದು ನಿರಾಶೆಯ ನಿಟ್ಟುಸಿರು ಬಿಡುತ್ತಾನೆ. ಆಗ ಕಪಿವೀರ ಶರಗುಲ್ಮ ಹೇಳುವ ಮಾತುಗಳು ಸಾಧನೆ, ತಪಸ್ಸು, ಸಾತ್ವಿಕ ನಿರೀಕ್ಷೆಗಳ, ಭಗವತ್‌ಕೃಪೆಯ ಮಹತ್ವನ್ನು ಅತ್ಯಂತ ಉಜ್ವಲವಾಗಿ ದ್ಯೋತಿಸುತ್ತ ಕವಿದರ್ಶನದ ಸಶಕ್ತ ಪ್ರತೀಕಗಳಾಗಿ ಮಿರುಗುತ್ತವೆ :

            “ಮಾಣ್ಬುದು ನಿರಾಶೆಯಂ, ಹೇ
ವಿಹಂಗಮ ತಪಸ್ವಿ, ದೈವ ಕೃಪೆಗೀ ಕ್ಲೇಶಮುಂ
ರೆಂಕೆಯಪ್ಪುದು………………………..
………………………….ಶಿವಕೃಪೆಗೆ
ತೃಣಮೆ ಖಡ್ಗಂ; ಪನಿ ಕಡಲ್; ಕಿಡಿ ಸಿಡಿಲ್. ಶ್ರದ್ಧೆ ತಾಂ
ಸಾಣೆಯಿರೆ, ತಾಳ್ಮೆಯೆ ತಪಂ. ಧರ್ಮಶಕ್ತಿಯಂ
ಯೋಗಗೊಂಡಿರೆ, ಕರ್ಮಿಯಯ್ ಕಾಯ್ವಾತನುಂ…
…………………….ನಿಶ್ಯಬ್ದಿಯೈ ಈಶ್ವರ ಕೃಪಾಬ್ದಿ
ಬರ್ಪುದನರಿಯಲಾರೆವಂತೆಯೆ ಮಹತ್ಕೃತಿ ತಾಂ
ಮಹನ್‌ಮನಿ.[24]

ಮಂತ್ರ ಸದೃಶವಾದ ಈ ನುಡಿಗಳನ್ನಾಡಿದ ಶರಗುಲ್ಮ, ತಾವು ಕೈಗೊಂಡಿರುವ ಸೀತಾನ್ವೇಷಣೆಯ ವೃತ್ತಾಂತವನ್ನು ಸಂಪಾತಿಗೆ ವಿವರಿಸುತ್ತಾನೆ. ತನ್ನ ಪ್ರೀತಿಯ ತಮ್ಮನ ಮರಣವಾರ್ತೆಯನ್ನು, ಸೀತಾಪಹರಣದ ಜಗದ್‌ವ್ಯಥೆಯ ಕಥೆಯನ್ನು ಕೇಳಿದ ಸಂಪಾತಿ ದುಃಖಕ್ರೋಧ ಭಾವೋದ್ವಿಗ್ನನಾಗಿ, ರಾವಣ ಸೀತೆಯನ್ನು ಕೊಂಡೊಯ್ದ ಸಂಗತಿಯನ್ನು ಮತ್ತು ಅವನಿರುವ ಲಂಕೆ ನೆಲೆಯನ್ನು ತಿಳಿಸತೊಡಗುತ್ತಾನೆ. ಆ ಕೂಡಲೇ ಜಗದಾಶ್ಚರ್ಯ ಕರವಾಗಿ ಗೂಬೆ ನವಿಲಾದಂತೆ ಸಂಪಾತಿಯ ರೆಕ್ಕೆಯ ತಿಪ್ಪುಳು ಬಣ್ಣ ಬಣ್ಣವಾಗಿ ಮೊಳೆಯಿತು; ಕಳೆದುಹೋದ ಶರೀರವೀರ್ಯ ಸರ್ವಾಂಗ ಸೌಂದರ್ಯವೆಲ್ಲ ಒಮ್ಮೆಲೆ ತುಂಬಿಕೊಂಡಿತು. ತಪೋತೇಜದಿಂದ ಜ್ವಲಿಸಿದ ಆ ಖಗಕುಲಾಗ್ರಣಿ. ರೋಗಪೀಡಿತನೂ ಬಲಹೀನನೂ ಆದ ತನ್ನಿಂದ ಏನು ಲೋಕಕಲ್ಯಾಣವಾದೀತು ಎಂದು ಕುತೂಹಲ ಕಾತರಗಳಿಂದ ಪರಿತಪಿಸುತ್ತಿದ್ದ ಖಂಗೇಂದ್ರನಿಗೆ “ದಿಟಮಲಾ ಶಿವಕೃಪೆಗೆ ಪರಮಾಣುವುಂ ಪರ್ವತಂ” ಎಂಬ ಅರಿವು, ಶ್ರೀರಾಮ ಭಾರ್ಮೆಯನ್ನರಸುತ್ತಿದ್ದ ವಾನರರಿಗೆ ದೈತ್ಯನ ನೆಲೆಯನ್ನು ತೋರುವುದೇ ಗುರು ಹೇಳಿದ “ಲೋಕಕಲ್ಯಾಣಕರ ಶೋಕಮೋಕ್ಷದ ಪುಣ್ಯಕೃತಿ” ಎಂಬ ತಿಳಿವು ಉಂಟಾಗುತ್ತದೆ. “ತನ್ನ ಸಿದ್ದಿಯ ಕಲ್ಪನೆ ಸಾಧನೆಯ ತುದಿಯಲ್ಲಿ ಸ್ಪಷ್ಟವಾಗುತ್ತದೆ ಸಂಪಾತಿಗೆ. ಮಾನಸಿಕ ತೊಳಲಾಟದ ಅತೀವ ವೇದನೆಯ ತುತ್ತತುದಿಯಲ್ಲೇ ಶಿವಕೃಪೆ ಒಂದು ಮಹಾ ಪವಾಡವನ್ನು ಸಂಪಾತಿಯ ಬಾಳಿನಲ್ಲಿ ತಂದು ಲೋಕದ ಎಲ್ಲ ಸಾಧಕರಿಗೂ ಒಂದು ಭರವಸೆಯನ್ನು ಬಿತ್ತುವಂತೆ ಇಲ್ಲಿ ಚಿತ್ರಿತವಾಗಿದೆ.”[25] ಸಂಪಾತಿಯ ಪಶ್ಚಾತ್ತಾಪ, ಗುರುವಾಕ್ಯ ಶ್ರದ್ಧೆ, ಆತ್ಮಕಲ್ಯಾಣಾಕಾಂಕ್ಷೆಗಳಿಂದ ಕೂಡಿದ ತೀವ್ರ ನಿರೀಕ್ಷೆಯ ತಪಸ್ಸು ರಾಮಾನುಚರರ ಆಗಮನದಿಂದ ಫಲಿತವಾದರೆ, ರಾಮಾನುಚರರ ಸೀತಾನ್ವೇಷಣಾಶ್ರದ್ಧೆ ರಾಮಭಕ್ತಿ ಸ್ವಾಮಿನಿಷ್ಠೆ ಶುಭಕಾರ್ಯ ದೀಕ್ಷೆಗಳ ಉಜ್ವಲ ಹಾರೈಕೆ ಸಂಪಾತಿ ದರ್ಶನದಿಂದ ಸಫಲವಾಗುತ್ತದೆ. ಹೀಗೆ ಪ್ರಾರ್ಥನೆ ಹಾರೈಕೆ ಸಾಧನೆ ತಪಸ್ಸುಗಳು ಸ್ವೋದ್ಧರಣ ಮತ್ತು ಅನ್ಯೋದ್ಧರಣಗಳೆಂಬ ಎರಡು ಆಯಾಮಗಳಲ್ಲೂ ದಿವ್ಯಫಲವನ್ನು ನೀಡುತ್ತವೆ.

“ಪ್ರಾರ್ಥನಾಶಕ್ತಿಯ ಬೀಜರೂಪವನ್ನು ದಶರಥನ ಹಂಬಲದಲ್ಲಿಯೇ ನಾವು ಕಾಣಬಹುದು. ಅವನ ಹಂಬಲ ಬರಿಯ ಬಯಕೆಯಾಗದೆ ಮಹಾಪುರುಷನೋರ್ವನ ಅವತರಣಕ್ಕೆ ಕಾರಣವಾಗುತ್ತದೆ. ಹಂಬಲ ಆರಾಧನೆಯಾಗಿ, ಆರಾಧನೆ ತಪಸ್ಸಾದಾಗ ಅಣು ವಿಭುವಾಗಬಲ್ಲುದು ಎಂಬುದನ್ನು ಈ ಪ್ರಸಂಗದಲ್ಲಿ ಮಾತ್ರವಲ್ಲದೆ ಈ ಮಹಾಕಾವ್ಯದ ಎಲ್ಲೆಡೆಯಲ್ಲೂ ಕಾಣಬಹುದು”[26] ಎಂಬ ಪ್ರೊ. ಪರಮೇಶ್ವರಭಟ್ಟರ ಅಭಿಪ್ರಾಯ ತುಂಬ ಗಮನಾರ್ಹವಾದದ್ದು. ರಾಮಾಯಣಾವತಾರಕ್ಕೆ ಮಹರ್ಷಿ ವಾಲ್ಮೀಕಿಯ ದಿವ್ಯಾನುಭವ ಪೂರ್ಣವಾದ ಪ್ರಖರಧಾನ್ಯದಿಂದ ಆವಿರ್ಭವಿಸಿದ ಪ್ರತಿಭಾದೀಪ್ತಿ ಕಾರಣವಾದರೆ, ರಾಮಾವತಾರಕ್ಕೆ ದಶರಥ ಕೌಸಲ್ಯೆ ಕೈಕೆ ಸುಮಿತ್ರೆ ವಸಿಷ್ಠ ಜಬಾಲಿ ಮತ್ತು ಇಡೀ ಕೋಸಲ ಜನವರ್ಗದ ಹೃದಯದಾಳದ ತೀವ್ರ ಅಭೀಪ್ಸೆ ಹಾರೈಕೆ ಪ್ರಾರ್ಥನೆಗಳು-ಮತ್ತೊಂದರ್ಥದಲ್ಲಿ ಇಡೀ ಮನುಕುಲದ ಅಸ್ಪಷ್ಟ ನಿರೀಕ್ಷೆ ಹಾರೈಕೆಗಳು-ಕಾರಣವಾಗುತ್ತವೆ. ಅಹಲ್ಯೆಯ ಶಿಲಾಗರ್ಭದ ಅನಂತ ದಿವ್ಯಯಾತನೆ ಯಾಚನೆಗಳು ಅವಳ ಕಲ್ಯಾಣಕ್ಕೆ ಕಾರಣವಾಗುವುದಲ್ಲದೆ ರಾಮನ ಅಂತಃಶಕ್ತಿಯ ಪರಿವರ್ತನಕಾರಕ ಮಹಾಸಾಮರ್ಥ್ಯವನ್ನು ಮತ್ತು ಸಂಕಲ್ಪವನ್ನು ಪ್ರತಿಮಾರೂಪದಲ್ಲಿ ಬಯಲು ಮಾಡುವುದಲ್ಲದೆ ಅವನಿಗೇ ತನ್ನ ಸ್ವಸ್ವರೂಪದರ್ಶನ ವಾಗುವಂತೆ ಎಸಗುತ್ತವೆ. ಭರತನಿಗಾಗಿ ರಾಮನನ್ನು ಅರಸುತ್ತ ಹೊರಟ ಮಂಥರೆ ತನಗರಿವಿಲ್ಲದೆಯೇ ರಾಮಧ್ಯಾನ ಮಾಡುತ್ತ ರಾಮನನ್ನರಿಯುತ್ತ ಅವನ ಕೃಪಾಗ್ನಿಯಲ್ಲಿ ತನ್ನ ಪಾರ್ಥಿವಶರೀರವನ್ನು  ಸಮರ್ಪಿಸಿಕೊಂಡು ಅದೃಶ್ಯಮಂಗಳ ಶಕ್ತಿಯಾಗಿ ರಾಮನನ್ನು ಹಿಂಬಾಲಿಸಿ ಅವನನ್ನು ಮತ್ತೆ ಭರತನೆಡೆಗೆ ಕರೆತರುವ ದಿವ್ಯಕೈಂಕರ್ಯದಲ್ಲಿ ಕೃತಕೃತ್ಯಳಾಗುತ್ತಾಳೆ. ರಾಮವಿಜಯಕ್ಕೆ ಸೀತಾಸಾಧನೆಗೆ ಅವಳ ದೃಶ್ಯಾದೃಶ್ಯ ಪ್ರಾರ್ಥನೆಯೂ ಕಾಣಿಕೆ ಸಲ್ಲಿಸಿದೆ ಯೆಂಬುದನ್ನು ಮರೆಯುವಂತಿಲ್ಲ. ರಾಮ ಶ್ರೀರಾಮನಾಗಿ ಲೋಕಾಭಿರಾಮನಾಗಿ ಅಯೋಧ್ಯೆಗೆ ಮರಳುವುದಕ್ಕೆ, ಹದಿನಾಲ್ಕು ವರ್ಷಗಳು ನಂದಿಗ್ರಾಮದಲ್ಲಿ ಜಟಾವಲ್ಕಲಧಾರಿ ಯಾಗಿ ತಪೋನಿರತನಾಗಿದ್ದ ಭರತನ, ಮಾತೆಯರಾದ ಕೌಸಲ್ಯೆ ಸುಮಿತ್ರೆ ಕೈಕೆಯರ, ಕೋಸಲ ಪ್ರಜೆಗಳ ಅಂತರಂಗದ ಪ್ರಚಂಡ ತೀವ್ರತೆಯ ಪ್ರಾರ್ಥನೆ ಹಾರೈಕೆಗಳು ಸಲ್ಲಿಸಿರುವ ಕಾಣಿಕೆ ಕಡಿಮೆಯದಲ್ಲ. ಕಾಡ ಬೇಡನಾದ ತನ್ನನ್ನು ಸಮಾನತೆಯ ಆತ್ಮೀಯತೆಯ ಭಾವದಿಂದ ಆಧರಿಸಿದ ರಾಮನ ಕಲ್ಯಾಣಗಮನಕ್ಕಾಗಿ ನಿರಂತರವೂ ನೋಂತ ಗುಹ; ರಾಮ ತಮ್ಮೆಡೆಗೆ ಬಂದಾಗ ತಮ್ಮ ಜೀವನ ಬಯಕೆಯೇ ಮೂರ್ತವಾಗಿ ಬಂದಂತೆ ಆಧರಿಸಿ ತಮ್ಮ ತಪಸ್‌ಶಕ್ತಿಯನ್ನು ಅವನಿಗೆ ಧಾರೆಯೆರೆಯುವುದಲ್ಲದೆ ಅವನ ಶ್ರೇಯಸ್ಸಿಗಾಗಿ – ಆ ಮೂಲಕ ಸರ್ವಲೋಕ ಶ್ರೇಯಸ್ಸಿಗಾಗಿ- ತಪಂಗೈಯ್ಯುವ ಮಹರ್ಷಿವೃಂದ; ರಾಮದರ್ಶನದಿಂದ ತಮ್ಮ ಪಾಪ ಮುಕ್ತಿಯನ್ನು ಗಳಿಸಿಕೊಂಡದ್ದಲ್ಲದೆ ಅವನಿಗೆ ಮಾರ್ಗದರ್ಶನ ಮಾಡುವ ಕಬಂಧ ವಿರಾಧರು; ತನ್ನ ಪತಿಯ ಸಾವಿಗೆ ಕಾರಣನಾದರೂ ರಾಮನ ಕಾರ್ಯಕ್ಕೆ ನೆರವಾಗಿರೆಂದು ಮೈದುನ ಮತ್ತು ಮಗನಿಗೆ ಬೆಸಸಿ ಎಲ್ಲರಿಗೂ ಒಳಿತಾಗಲೆಂದು ಹರಸುವ ಹದಿಬದೆ ತಾರೆ; ತಮ್ಮ ಆತ್ಮೋದ್ಧಾರಕ್ಕಾಗಿ ಪ್ರಾರ್ಥಿಸುತ್ತಲೇ ರಾಮರಾವಣರ ಒಳಿತಿಗಾಗಿಯೂ ಪ್ರಾರ್ಥಿಸುವ ವಿಭೀಷಣ ಮಹಾ ಪಾರ್ಶ್ವ, ಸುಗ್ರೀವ ಹನುಮಂತ ಅನಲೆ ತ್ರಿಜಟೆ ಚಂದ್ರನಖಿ-ಇವೆರಲ್ಲರ ಜ್ಞಾತ ಅಜ್ಞಾತ ಪ್ರಾರ್ಥನೆಗಳು ಅವರ ಹಾಗೂ ಅನ್ಯರ ವಿಕಾಸಕ್ಕೆ ಉದ್ಧಾರಕ್ಕೆ ಯಥಾಶಕ್ತಿ ಕಾಣಿಕೆ ಅರ್ಪಿಸುವುದು ಈ ಕೃತಿಯುದ್ಧಕ್ಕೂ ಗೋಚರವಾಗುತ್ತದೆ. “ಒಂದು ದೃಷ್ಟಿಯಿಂದ ಇಡೀ ಶ್ರೀರಾಮಾಯಣದರ್ಶನಂ ಕಾವ್ಯವೇ ಪ್ರಾರ್ಥನಾಶಕ್ತಿಗೆ ಒಡ್ಡಿದ ಭವ್ಯ ಪ್ರತಿಮೆ. ಇಲ್ಲಿ ಹಾರೈಸಿ ಅನ್ನ ತಾ ಪ್ರಾಣವಾಗಿದೆ, ಜೀವ ತಾ ದೇವನಾಗಿದೆ, ಒಲಿದು ಕೊಂಡಾಡಿದರೆ ಅಣು ರುದ್ರವಾಗದೆ ಎಂಬ ಮಹಾದೇವಿ ಅಕ್ಕನ ಅಮೃತೋಕ್ತಿ ಸತ್ಯವೆಂಬುದು ಇಲ್ಲಿ ಪ್ರತಿಮಿತವಾಗದೆ.”[27]

 


[1] ಕುವೆಂಪು ಸಂದರ್ಶನ, (ಸಂ) ಕೋ. ಚೆನ್ನಬಸಪ್ಪ, ಪು. ೬೮.

[2] ಅದೇ, ಪು. ೭೨.

[3] ಶ್ರೀರಾಮಾಯಣದರ್ಶನಂ, ಶ್ರೀಸಂಪುಟಂ, ಪು. ೮೫೫-೫೯, ಸಾಲು ೧೯-೨೩.

[4] ಡಾ. ಜಿ.ಎಸ್. ಶಿವರುದ್ರಪ್ಪ, ಶ್ರೀರಾಮಾಯಣದರ್ಶನಂ ಉಪನ್ಯಾಸಮಾಲೆ, (ಸಂ) ದೇಜಗೌ, ಪು. ೩೩.

[5] ಡಾ. ದೇ. ಜವರೇಗೌಡ, ಕುವೆಂಪು ದರ್ಶನ ಮತ್ತು ಸಂದೇಶ, ಪು. ೫೫.

[6] ಶ್ರೀರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪು. ೧೦,ಸಾಲು ೨೫೬-೬೩.

[7] ಅದೇ, ಪು. ೩೯, ಸಾಲು ೨೯೮-೩೦೨.

[8] ಅದೇ, ಕಿಷ್ಕಿಂಧಾ ಸಂಪುಟಂ, ಪು. ೩೨೬, ಸಾಲು ೧೯೧-೩.

[9] ಅದೇ, ಶ್ರೀಸಂಪುಟಂ, ಪು. ೭೪೬, ಸಾಲು ೧೯೭-೮.

[10] ಅದೇ, ಶ್ರೀಸಂಪುಟಂ, ಪು. ೭೪೭, ಸಾಲು ೨೧೧-೧೬.

[11] ಅದೇ, ಪು. ೭೪೭, ಸಾಲು ೨೩೦-೩೨.

[12] ಅದೇ, ಪು. ೬೯೧, ಸಾಲು ೮೫-೮೮.

[13] ಅದೇ, ಕಿಷ್ಕಿಂಧಾ ಸಂಪುಟಂ, ಪು. ೩೩೭, ಸಾಲು ೧೫೪-೫.

[14] ಅದೇ, ಪು. ೩೩೭, ಸಾಲು ೧೬೫-೭.

[15] ಅದೇ, ಪು. ೩೩೮, ಸಾಲು ೧೮೫-೯೦.

[16] ಅದೇ, ಪು. ೩೩೩, ಸಾಲು ೬೧-೬೭.

[17] ಡಾ. ದೇ. ಜವರೇಗೌಡ, ಕುವೆಂಪು ದರ್ಶನ ಮತ್ತು ಸಂದೇಶ, ಪು. ೫೮.

[18] ಶ್ರೀರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪು. ೫೯೧-೯೩.

[19] ಅದೇ, ಶ್ರೀಸಂಪುಟಂ, ಪು. ೭೧೭, ಸಾಲು ೫೦೪-೬.

[20] ಡಾ. ಜಿ.ಎಸ್. ಶಿವರುದ್ರಪ್ಪ, ಶ್ರೀರಾಮಾಯಣ ದರ್ಶನಂ ಉಪನ್ಯಾಸಮಾಲೆ (ಸಂ. ದೇಜಗೌ), ಪು. ೪೧.

[21] ಶ್ರೀರಾಮಾಯಣದರ್ಶನಂ, ಕಿಷ್ಕಿಂಧಾ ಸಂಪುಟಂ, ಪು. ೨೬೭-೮, ಸಾಲು ೧೧೬-೩೨.

[22] ಅದೇ, ಪು. ೩೩೮-೮೯, ಸಾಲು ೭೨೨-೨೯.

[23] ಅದೇ, ಪು. ೩೯೦, ಸಾಲು ೭೫೪-೬೫.

[24] ಡಾ. ಜಿ.ಎಸ್. ಶಿವರುದ್ರಪ್ಪ, ಶ್ರೀರಾಮಾಯಣದರ್ಶನಂ ಉಪನ್ಯಾಸಮಾಲೆ (ಸಂ. ದೇಜಗೌ), ಪು. ೪೭.

[25] ಪ್ರೊ. ಎಸ್. ವಿ. ಪರಮೇಶ್ವರಭಟ್ಟ, ಅದೇ, ಪು. ೬೫.

[26] ಅದೇ, ಪು. ೬೫.

[27] ಶ್ರೀರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪು. ೫೮-೯, ಸಾಲು ೧೩೧-೩೫.