ದರ್ಶನ ಮತ್ತು ಸಂದೇಶ

“ಕಲೆ ಜೀವನದಿಂದ ಹೊಮ್ಮುತ್ತದೆ; ಜೀವನದಿಂದ ಪೋಷಿತವಾಗುತ್ತದೆ; ಜೀವನದ ಬಗ್ಗೆ ಪ್ರತಿಕ್ರಿಯಿಸುತ್ತದೆ”

[1] ಕಾವ್ಯ ಕೂಡ ಒಂದು ಕಲೆಯಾದ್ದರಿಂದ ಅದು ಜೀವನ ದೊಳಗಿಂದಲೇ ಹುಟ್ಟಿ, ಅದರಿಂದಲೇ ಪರಿಪೋಷಿತವಾಗಿ, ಅದನ್ನೇ ವಿಮರ್ಶಿಸುವುದೂ ಮತ್ತು ನಿರ್ದೇಶಿಸುವುದೂ ಅತ್ಯಂತ ಸಹಜ ಹಾಗೂ ಅನಿವಾರ್ಯ. ಭೂಗರ್ಭದಲ್ಲಿ ಸಹಜವಾಗಿ ಬೇರುಬಿಡದ ಸಸ್ಯ ಮೇಲುನೋಟಕ್ಕೆ ಹಸಿರಾಗಿ ಕಾಂತಿಯುಕ್ತವಾಗಿ ಕಂಡರೂ ಅದು ಕೆಲ ಸಮಯ ಮಾತ್ರ; ಅದು ನಿರಂತರವಾಗಿ ಕೊಂಬೆರೆಂಬೆಗಳನ್ನು ಚಾಚಿ ವಿಸ್ತರಿಸಲಾರದು, ಆರೋಗ್ಯಕರ ಹಣ್ಣು ಹೂವುಗಳನ್ನು ನೆರಳು ಆಶ್ರಯಗಳನ್ನು ನೀಡಲಾರದು. ಹಾಗೆಯೇ ಆಕರ್ಷಕ ಭಾಷೆ ಸುಂದರ ಕಲ್ಪನೆಗಳನ್ನು ಮಾತ್ರವೇ ಹೊಂದಿ, ಜೀವನದ ದಟ್ಟವಾದ ವ್ಯಾಪಕವಾದ ಅನುಭವದ್ರವ್ಯದಿಂದ ಪುಷ್ಟವಾಗದ, ಕವಿಯ ಅನನ್ಯಸಾಧಾರಣವಾದ ಪ್ರತಿಭಾ ಸಾಮರ್ಥ್ಯದಿಂದ ಮತ್ತು ಚಿಂತನಶೀಲತೆಯಿಂದ ಸಂಪ್ರಾಪ್ತವಾದ ವಿಶಿಷ್ಟ ಜೀವನ ದರ್ಶನದಿಂದ ದೀಪ್ತವಾಗದ ಕಾವ್ಯ ಕ್ಷಣಿಕ ಸಂತೋಷದಿಂದ ನಮ್ಮನ್ನು ಮುಗ್ಧಗೊಳಿಸ ಬಹುದೇ ಹೊರತು ಉತ್ತಮ ಬದುಕಿಗೆ ಪ್ರೇರಣೆಯನ್ನುಂಟುಮಾಡುವ ಚಿರಂತನ ಮಲ್ಯಗಳಿಂದ ಸದಾ ನಮ್ಮ ವ್ಯಕ್ತಿತ್ವವನ್ನು ಕಡೆಯಲಾರದು.

ಕಾವ್ಯದಲ್ಲಿನ ಜೀವನದರ್ಶನದ ಬಗ್ಗೆ ಮ್ಯಾಥ್ಯೂ ಆರ್ನಾಲ್ಡ್ ವ್ಯಕ್ತಪಡಿಸಿರುವ ಈ ಅಭಿಪ್ರಾಯಗಳು ಅತ್ಯಂತ ಉಪಾದೇಯವಾಗಿವೆ: “ಜೀವನದ ಮಲ್ಯಗಳ ಸ್ಪಷ್ಟೀಕರಣಕ್ಕಾಗಿ, ತುಷ್ಟಿ ಪಡೆಯುವ ಸಲುವಾಗಿ, ಆತ್ಮಶಕ್ತಿಯ ರಕ್ಷಣೆಗಾಗಿ ಮಾನವಕೋಟಿ ಹೆಚ್ಚು ಹೆಚ್ಚಾಗಿ ಕಾವ್ಯವನ್ನಾಶ್ರಯಿಸಬೇಕಾಗುತ್ತದೆ. ಕಾವ್ಯದ ಸಹಕಾರವಿಲ್ಲದೆ ವಿಜ್ಞಾನ ಅಪೂರ್ಣವಾಗುತ್ತದೆ; ಧರ್ಮಮತ್ತು ದರ್ಶನದ ಹೆಸರಿನಲ್ಲಿ ಚಲಾವಣೆಯಲ್ಲಿರುವ ಸಂಗತಿಗಳ ಸ್ಥಾನದಲ್ಲಿ ಕಾವ್ಯ ಬರಬೇಕಾಗುತ್ತದೆ. ಅವುಗಳನ್ನೇಕೆ ನಂಬಿದೆವು, ಅವುಗಳನ್ನೇಕೆ ಅತಿಯಾಗಿ ಗೌರವಿಸಿದೆವು ಎಂದು ನಾವೇ ವಿಸ್ಮಯಗೊಳ್ಳಬೇಕಾದ ದಿನವೂ ಬರುತ್ತದೆ. ಅವುಗಳ ಟೊಳ್ಳು ಗಮನಕ್ಕೆ ಬಂದಂತೆಲ್ಲ ಕಾವ್ಯದ ಚೈತನ್ಯ ಹಾಗೂ ಜ್ಞಾನಶಕ್ತಿಗಳನ್ನು ಪ್ರಶಂಸಿಸುವಂತಾಗುತ್ತದೆ. ಕೇವಲ ಮನೋರಂಜನೆ, ಮಾನವ ಸಹಜವಾದ ದುಷ್ ಅಥವಾ ಸತ್‌ಭಾವನೆಯ ಅಭಿವ್ಯಕ್ತಿ, ಮಾನವ ಸ್ವಭಾವದ ಅಥವಾ ಮಾನವ ಜೀವನದ ಅರಿವಿನ ಹೆಚ್ಚಳ ಮಾತ್ರವೇ, ಕಾವ್ಯದ ಮುಖ್ಯ ಧ್ಯೇಯವಲ್ಲ; ಇವುಗಳ ಜೊತೆಗೆ ಆದರ್ಶ ಸತ್ಯದ ಪ್ರಕಾಶನ, ಈ ಲೋಕ ಯಾವುದರ ಕೀಳು ನಕಲೋ ಆ ಲೋಕದ ದರ್ಶನ, ಪರಿವರ್ತನಾತ್ಮಕವೂ ಅಶಾಶ್ವತವೂ ಆದ ಕಾಲ ದೇಶಗಳ ಭೂಸಾಮ್ರಾಜ್ಯದ ಗರ್ಭಾಂತರಾಳದಲ್ಲಿ ಹುದುಗಿರುವ ಚಿರಂತನ ತತ್ವದ ಕಾಣ್ಕೆ ಕಾವ್ಯದ ಗುರಿಯಾಗಬೇಕು.”[2]

ಕಾವ್ಯ ಮನರಂಜನೆಯನ್ನೋ ಆತ್ಮಸಂತೋಷವನ್ನೋ ನೀಡುತ್ತದೆಂಬುದಕ್ಕಿಂತ ಮಹತ್ವ ಪೂರ್ಣವಾದ ಬೇರೊಂದು ಉದ್ದೇಶ ಅದಕ್ಕಿದೆಯೆಂಬುದನ್ನು ಮೇಲಿನ ಮಾತುಗಳು ದೃಢಪಡಿಸುತ್ತವೆ.

ಭಾರತೀಯ ವೀಮಾಂಸಕಾರ ಮಮ್ಮಟ ಕಾವ್ಯ ಪ್ರಯೋಜನಗಳನ್ನು ಹೇಳುವಾಗ ಕೆಲವು ಲೌಕಿಕ ಪ್ರಯೋಜಗಳನ್ನು ಹೆಸರಿಸಿ, ಅವುಗಳ ಜೊತೆಯಲ್ಲಿ ಕಾವ್ಯ ‘ಶಿವೇತರ’ವನ್ನು ಕ್ಷಯಿಸುತ್ತದೆ ಮತ್ತು ‘ಕಾಂತಾಸಮ್ಮಿತ’ದಿಂದ ಉಪದೇಶ ಮಾಡುತ್ತದೆ ಎಂದಿದ್ದಾನೆ.[3] ಕಾವ್ಯದ ಪರಮಗುರಿ ಆನಂದವಾದರೂ ಬದುಕನ್ನು ಹಸನುಗೊಳಿಸುವ ಸಾರ್ಥಕಗೊಳಿಸುವ ಉನ್ನತಗೊಳಿಸುವ ಆದರ್ಶಗೊಳಿಸುವ ಈ ಎರಡೂ ಮಲ್ಯಗಳು ಅಗಣ್ಯವೆಂದು ನಮ್ಮವರು ಭಾವಿಸಲಿಲ್ಲ. ಕುಮಾರವ್ಯಾಸ ತನ್ನ ‘ಕರ್ನಾಟಕ ಭಾರತ ಕಥಾಮಂಜರಿ’ಯನ್ನು ಓದಿದವರಿಗೆ ಕೇಳಿದವರಿಗೆ ದೊರಕುವ ಫಲಗಳ ಒಂದು ಪಟ್ಟಿಯನ್ನೇ ಕೊಟ್ಟಿದ್ದಾನೆ.[4] ಆಂಗ್ಲ ಮಹಾಕವಿ ಮಿಲ್ಟನ್ ತಾನು ಪ್ಯಾರಡೈಸ್ ಲಾಸ್ಟ್ ಕಾವ್ಯವನ್ನು ಬರೆಯುತ್ತಿರುವುದು ‘To justify the ways of god to men’ ಎಂದೇ ಉದ್ಘೋಷಿಸುತ್ತಾನೆ.[5] ಕಲೆ ನಿಜವಾಗಿಯೂ ಮಹೋನ್ನತ ವಾಗಬೇಕಾದರೆ ಅದು ನೀತ್ಯಾತ್ಮಕವಾಗಿರಬೇಕು. ಮಾನವ ಸ್ವಭಾವವನ್ನು ಇಡಿಯಾಗಿ ಕವಿ ಎಷ್ಟು ಹೆಚ್ಚಾಗಿ ಗ್ರಹಿಸುತ್ತಾನೋ ಅಷ್ಟರಮಟ್ಟಿಗೆ ಅವನ ಕಾವ್ಯದ ಜೀವನ ನಿರೂಪಣೆ ಪರಿಪೂರ್ಣವಾಗುತ್ತದೆ, ಅಷ್ಟರಮಟ್ಟಿಗೆ ಆ ಕವಿ ಮಹೋನ್ನತನಾಗುತ್ತಾನೆ ಎಂದು ಜನ್ ಅಡ್ಡಿಂಗ್‌ಟನ್ ಸೈಮಂಡ್ಸ್ ಅಭಿಪ್ರಾಯಪಡುತ್ತಾನೆ.[6] “ಕಲೆಗಳು ತಮ್ಮ ಮೂಲ ಸ್ವರೂಪ ದಲ್ಲಿ ನೀತಿಸಮ್ಮತವಾಗಿವೆ, ದೈವೀಪ್ರಜ್ಞೆಯಿಂದ ಮನುಷ್ಯನ ಕಲ್ಪನಾಶಕ್ತಿಯ ಮುಖಾಂತರ ಅವು ಜನ್ಮ ತಾಳುತ್ತವೆ ಎಂಬುದು ರಸ್ಕಿನ್ನನ ಮತ. ಎಲ್ಲ ಕಲೆಗಳೂ ನೀತಿ ಬೋಧಕವಾಗಿರ ಬೇಕು, ಯಾಕೆಂದರೆ ಅದೇ ಅವುಗಳ ಮುಖ್ಯ ಗುರಿ ಎಂದವನು ಸಾರಿದನು.”[7] ಮಧ್ಯಯುಗದ ಮಹಾಕವಿ ಡಾಂಟೆಯ ‘ಡಿವೈನ್ ಕಾಮೆಡಿ’ ಕೃತಿ ಮಹೋನ್ನತ ಕಾವ್ಯವೆಂದು ಪರಿಗಣಿತ ವಾಗುವುದಕ್ಕೆ ಅದರ ಕಾವ್ಯಾಂಶ ಎಷ್ಟರಮಟ್ಟಿಗೆ ಕಾರಣವೋ ಅಷ್ಟೇ – ಅಥವಾ ಅದಕ್ಕಿಂತ ಹೆಚ್ಚುಮಟ್ಟಿಗೆ ಅದರ ದರ್ಶನಾಂಶ ಕಾರಣ. ಆ ಯುಗದ ಅತ್ಯುನ್ನತ ಧರ್ಮಾಚಾರ್ಯ ಅಕ್ವಿನಸ್‌ನ ಉಪದೇಶಗಳು ವಿದ್ವದ್‌ಗೋಷ್ಠಿಗಳನ್ನು ಬಿಟ್ಟು ಜನಸಾಮಾನ್ಯರಲ್ಲಿ ಶೀಘ್ರವಾಗಿ ಸುಲಭವಾಗಿ ಹರಡಲು ಡಾಂಟೆಯ ಕಾವ್ಯವೇ ಪ್ರಧಾನ ಸಾಧನವಾಯಿತು. ೧೯ನೆಯ ಶತಮಾನ ದಲ್ಲಿ ಶೆಲ್ಲಿ ಮತ್ತೊಂದು ಉತ್ತಮವಾದ ವಾದವನ್ನು ಮಂಡಿಸಿದನು. ಧರ್ಮಾಚರಣೆಗೆ ಉತ್ಪತ್ತಿಸ್ಥಾನ ಮಾನವನ ಹೃದಯ. ಅದು ಪರಿಪಕ್ವವಾದ ಹೊರತು ಉಪದೇಶ ಪರಂಪರೆಗಳು ಮಾನವನನ್ನು ಧರ್ಮ ಮಾರ್ಗದಲ್ಲಿ ಪ್ರಚೋದಿಸಲಾರವು. ಈ ಹೃದಯ ಪರಿವರ್ತನೆಯ ಕಾರ್ಯದಲ್ಲಿ ಧರ್ಮ ಗ್ರಂಥಗಳಿಗಿಂತ ಸಾಹಿತ್ಯವು ಹೆಚ್ಚು ಪರಿಣಾಮಕಾರಿ. ಏಕೆಂದರೆ ಧರ್ಮ ಗ್ರಂಥಗಳು ಮಾನವನ ಬುದ್ದಿಯನ್ನು ಮುಟ್ಟುತ್ತವೆ; ಸಾಹಿತ್ಯವಾದರೋ ಅವನ ಹೃದಯ ದಲ್ಲಿನ ಭಾವನೆಗಳನ್ನು ಗುರಿಮಾಡಿಕೊಂಡು ಹೊರಡುತ್ತದೆ – ಎಂದು ಅವನು ವಾದಿಸಿದ.[8] “ಜನಕ್ಕೆ ಒಂದು ನೆಮ್ಮದಿಯನ್ನು, ಒಂದು ಚಿತ್ತಸ್ವಾಸ್ಥ್ಯವನ್ನು, ಒಂದು ಸಹನೆಯನ್ನು, ಒಂದು ಭರವಸೆಯನ್ನು ತಂದೊದಗಿಸುವುದೇ ಒಂದು ಮಹೋಪಕಾರ. ಮಾನವನ ಹೃದಯಾಂತರಾಳದಲ್ಲಿ ಒಂದು ದಿವ್ಯಾಂಶವುಂಟು, ಒಂದು ಅಮೃತಕಣವುಂಟು, ಒಂದು ಧರ್ಮ ಬೀಜವುಂಟು; ಆ ಅಂತಸ್ಸಂಪತ್ತನ್ನು ಹೊರಕ್ಕೆ ತೆಗೆದಲ್ಲದೆ ಸಂತೋಷ ಶಾಂತಿಗಳಿಲ್ಲ- ಎಂದು ಜನವನ್ನು ಸಾಂತ್ವನಗೊಳಿಸಬಲ್ಲ ವಾಣಿ ಮಹಾಕವಿಯದು – ಎಂದು ಡಿ.ವಿ.ಜಿ. ಅಭಿಪ್ರಾಯಪಡುತ್ತಾರೆ.[9] ತತ್ವವಿದನಿಗೆ ಬ್ರಹ್ಮಜ್ಞಾನ ಪಡೆಯಬೇಕೆನ್ನುವವನಿಗೆ ಹೇಗೋ ಹಾಗೆ ಕವಿಗೂ ಶ್ರವಣ, ಮನನ, ನಿಧಿಧ್ಯಾಸನಗಳು ಅಗತ್ಯ. ಅವನು ಸದ್ಗ್ರಂಥಗಳನ್ನು ಓದಬೇಕು; ಅದರಿಂದ ತನ್ನ ಮನಸ್ಸಿನಲ್ಲಿ ಉಂಟಾದ ಭಾವನೆಗಳ ಜೊತೆಗೆ ಲೋಕಾನುಭವ ಗಳನ್ನು ಸಂಪಾದನೆ ಮಾಡಿಕೊಂಡು ಅವೆರಡರ ಮರ್ಮವೇನೆಂಬುದನ್ನು ವಿಚಾರಿಸಿ ಚಿಂತಿಸಬೇಕು; ಆ ಚಿಂತನೆಯಿಂದ ತೋರಿಬಂದ ಜೀವನತತ್ವಗಳನ್ನು ಲೋಕದ ಪ್ರಕೃತ ಸಂದರ್ಭಗಳಿಗೆ ಹೇಗೆ ಅನ್ವಯಿಸಬಹುದೆಂಬುದನ್ನು ಕುರಿತು ಸಂತತವಾಗಿ ಧ್ಯಾನ ಮಾಡುತ್ತಿರ ಬೇಕು. ಜನಜೀವನದ ಸಮಾಲೋಚನೆಯೇ ಕವಿತಾ ವನಿತೆಯ ಧರ್ಮವಿಸ್ತಾರ. ಆಕೆಯ ಒಂದು ಕಣ್ಣಿನ ಹೊಳಪು ತತ್ವದ್ಯೋತಕ; ಮತ್ತೊಂದು ಕಣ್ಣಿನ ಹೊಳಪು ರಸೋತ್ಪಾದಕ.[10]

“ಧ್ಯಾನಮಯವೂ ತತ್ವಶೀಲವೂ ಅಲ್ಲದ ಕವಿತೆ ಎಷ್ಟೇ ಭಾವರಾಗಪೂರ್ಣವಾಗಿದ್ದರೂ ಅದರಲ್ಲಿ ಎಷ್ಟೇ ಮಧುರ ಪದಶೈಲಿಯಿದ್ದರೂ ಅದು ಸಮುದ್ರದ ತೆರೆಗಳ ಮೇಲೆ ನಲಿದಾಡಿ ಮನಮೋಹಿಸುವ ಕ್ಷಣಿಕ ನಶ್ವರವಾದ ನೊರೆಯಂತೆಯೇ ಹೊರತು, ಕಡಲಿನ ಆಳದಲ್ಲಿ ಗಂಭೀರ ಗೌರವದಿಂದ ಮನವಾಗಿರುವ ಮುತ್ತುಗಳಂತೆ ಮಾನ್ಯವಾಗಲಾರದು; ಘನವಾಗ ಲಾರದು; ಶಾಶ್ವತವಾಗಲಾರದು.”[11] “ವಿಶ್ವವು ಹೇಗೆ ಋತಚಿತ್ ಸತ್ಯಾರ್ಥ ಪ್ರಕಾಶನದ ಒಂದು ವಿರಾಟ್ ಪ್ರತಿಮೆಯೋ ಹಾಗೆಯೇ ಮಹಾಕಾವ್ಯವೂ ಮಹಾಕವಿಯ ‘ದರ್ಶನ’ ಪ್ರಕಾಶನದ ಒಂದು ಮಹಾಪ್ರತಿಮೆ… ಆ ಪ್ರತಿಮೆಗೆ ಕಾರಣವಾಗಿ ಅದನ್ನು ನಿರ್ಣಯಿಸಿ ನಡೆಸುವ ಮೂಲ ಸತ್ಯವು ಕವಿಯ ‘ದರ್ಶನ’ದಲ್ಲಿದೆ. ಆ ಪ್ರತಿಮೆಗೆ ಪ್ರಾಣಸ್ಥಾನದಲ್ಲಿರುವ ಕವಿಯ ದರ್ಶನವು ಅದಕ್ಕೆ ಕಣ್ಣೂ ಉಸಿರೂ ಆಗಿದೆ. ಕವಿಯ ಸ್ವರೂಪದಲ್ಲಿ ಕಾವ್ಯಕ್ಕೆ ಅತೀತವಾಗಿ ಇರುವ ‘ದರ್ಶನ’ವೇ ಕಾವ್ಯ ಪ್ರತಿಮೆಯಲ್ಲಿ ರೂಪುವೆತ್ತು, ಅದರಲ್ಲಿ ಅಂತರ್ಯಾಮಿಯಾಗಿರುವ ದೇವತಾತ್ಮ. ಆ ಆತ್ಮವು ಅಂತರ್ಯಾಮಿಯಾಗದ ಪ್ರತಿಮೆ ಎಂತಹ ನಿಪುಣ ಕೃತಿಯಾಗಿದ್ದರೂ ಅದು ಬರಿಯ ವಿಗ್ರಹ ಮಾತ್ರ…ಶಾಶ್ವತ ದರ್ಶನದಿಂದ ದೀಪ್ತವಾಗದ ಕೃತಿ ಗೊಂಬೆಯಂತೆ ತಾತ್ಕಾಲಿಕ ಮನರಂಜನೆಗೆ ಕಾರಣವಾಗಬಹುದಾದರೂ ಅದರಿಂದ ಶಾಶ್ವತ ಫಲವಾಗಲಿ ಚಿರಸ್ಫೂರ್ತಿಯಾಗಲಿ ಲಭಿಸುವುದಿಲ್ಲ. ಅಂತಹ ಕೃತಿ ಅಮರ ಕಾವ್ಯವಾಗಲಾರದು… ಕವಿಯ ‘ದರ್ಶನ’ವು ‘ವಿರಾಟ್’ ಆದರೆ ಅವನ ಕೃತಿಯೂ ‘ವಿರಾಟ್’ ಆಗುತ್ತದೆ.”[12]

ಸಾಹಿತ್ಯ ಮಾನವ ಬದುಕಿನ ಉನ್ನತಿಗೆ ಸಾಧನವಾಗಬೇಕೆಂದು ಬಯಸಿದ ಅರಿಸ್ಟಾಟಲ್ ಕವಿಯ ಮುಖ್ಯ ಕರ್ತವ್ಯವೊಂದರ ಕಡೆಗೆ ನಮ್ಮ ಗಮನ ಸೆಳೆಯುತ್ತಾನೆ: “ಸುತ್ತಲಿನ ಸಂಕೀರ್ಣವಾದ ಬದುಕಿನೊಳಗಿನಿಂದಲೇ ತನ್ನ ವಸ್ತುವನ್ನು ಆಯ್ದುಕೊಂಡು ಮಾನವ ಜೀವನದ ನಿತ್ಯಸಾಧ್ಯತೆಗಳ ದರ್ಶನವನ್ನು ಒದಗಿಸಬಲ್ಲಂತೆ ಅರ್ಥವಾಗುವಂಥ ಒಂದು ಚಿತ್ರವನ್ನು ನಿರ್ಮಿಸುವುದು ಕವಿಯ ಮುಖ್ಯ ಕಾರ್ಯ. ಇಂಥ ಚಿತ್ರ ಒದಗಿಸುವ ಸತ್ಯ ಸಾರ್ವತ್ರಿಕವಾದದ್ದು…. ಚರಿತ್ರಕಾರನಂತೆ ಕವಿ ವಾಸ್ತವಾಂಶಗಳ ವಿವರಗಳಲ್ಲಿ ಸಿಕ್ಕಿಬಿದ್ದಿರು ವುದಿಲ್ಲ. ಆ ವಾಸ್ತವಾಂಶಗಳ ಹಿಂದಿನ ಸಾಮಾನ್ಯ ಸತ್ಯವನ್ನು ಗ್ರಹಿಸಿ ಸಮಗ್ರ ಚಿತ್ರವನ್ನು ಕೊಡುವುದರಿಂದ ವಿಶಿಷ್ಟವಾಗಿರುವದರ ಮುಖಾಂತರವೇ ಸಾರ್ವತ್ರಿಕವಾದುದನ್ನು ತೋರಿಸುತ್ತಾನೆ. ಆದ್ದರಿಂದ ಕವಿಯ ಕಾರ್ಯವಾದರೂ ದಾರ್ಶನಿಕನಂತೆ ತತ್ವಾನ್ವೇಷಣೆಯೇ. ಉತ್ತಮ ಕಾವ್ಯ ಇಂಥ ಸಾರ್ವತ್ರಿಕವಾದ ಸತ್ಯವನ್ನು ಒಳಗೊಂಡಿರುವುದರಿಂದಲೇ ದೇಶ ಕಾಲಾತೀತವಾಗಿ ತನ್ನ ಪರಿಣಾಮವನ್ನು ಬೀರಬಲ್ಲದ್ದಾಗಿರುತ್ತದೆ.”[13]

ಇಟಲಿಯ ಮಹಾಕವಿ ಡಾಂಟೆ ಬರಹಗಳನ್ನು ವಾಚ್ಯಾರ್ಥ, ರಹಸ್ಯಾರ್ಥ, ನೈತಿಕಾರ್ಥ ಮತ್ತು ಆಧ್ಯಾತ್ಮಿಕಾರ್ಥ ಎಂದು ನಾಲ್ಕು ಬಗೆಯಾಗಿ ಅರ್ಥವಿಸಬಹುದೆಂದು ಹೇಳುವಲ್ಲಿ, ಶ್ರೇಷ್ಠಕಾವ್ಯದ ಒಂದು ಮುಖ ಆಧ್ಯಾತ್ಮ ಎಂಬುದನ್ನು ಸೂಚಿಸುತ್ತಾನೆ.[14] ಕಾವ್ಯದರ್ಶನ ಮತ್ತು ಚರಿತ್ರೆಗಳ ಉತ್ತಮಾಂಶಗಳನ್ನು ಒಂದೆಡೆ ಸೇರಿಸಿಕೊಂಡು, ಸಾರ್ವತ್ರಿಕ ಸತ್ಯಗಳನ್ನು ವಿಶಿಷ್ಟ ದೃಷ್ಟಾಂತಗಳ ಮೂಲಕ ತಿಳಿಸುತ್ತದೆ. ಆದರ್ಶದ ಚಿತ್ರಗಳನ್ನು ತೋರಿಸಿ, ಅದರತ್ತ ಓದುಗರನ್ನು ಒಲಿಸಿ, ಅಂಥದನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅಭಿಲಾಷೆಯನ್ನು ಅದು ಮೂಡಿಸಿ ಪೋಷಿಸುತ್ತದೆ; ಸದ್ಗುಣಗಳ ಅರಿವನ್ನೂ ಬೆಳೆಸಿ ಸತ್ಕಾರ್ಯಕ್ಕೆ ಪ್ರೇರಣೆಯನ್ನು ಒದಗಿಸುತ್ತದೆ ಎಂಬುದು ಸರ್ ಫಿಲಿಪ್ ಸಿಡ್ನಿಯ ಅಭಿಮತ.[15] ಕ್ಯಾಂಟ್, ಹೆಗೆಲ್ ಮುಂತಾದ ತತ್ವಶಾಸ್ತ್ರಜ್ಞರಂತೂ ಕಾವ್ಯದಲ್ಲಿ ದರ್ಶನ ಭಾಗಕ್ಕೆ ಹೆಚ್ಚು ಒತ್ತನ್ನು ಕೊಟ್ಟರು. ರೊಮ್ಯಾಂಟಿಕ್ ಕವಿಗಳಾದ ಬ್ಲೇಕ್, ಕೊಲಿರಿಡ್ಜ್, ಶೆಲ್ಲಿ, ವರ್ಡ್ಸ್‌ವರ್ತ್ ಮೊದಲಾದವರು ಅಧ್ಯಾತ್ಮ ಶ್ರೇಷ್ಠ ಕಾವ್ಯದ ಒಂದು ಅನಿವಾರ್ಯ ಅಂಗ ಎಂಬುದನ್ನು ಸಾರಿದರು. ಮನುಷ್ಯನ ಮನಸ್ಸು ಮತ್ತು ಬಾಹ್ಯ ಪ್ರಪಂಚದ ನಡುವಿನ ಅಂತಸ್ಸಂಬಂಧ, ಅದರ ಮೂಲಕವಾಗಿಯೇ ಸಹಜವಾಗಿ ಮೂಡುವ ಅನುರಕ್ತಿ, ಈ ಅನುರಕ್ತಿ ಮತ್ತು ಅದರ ಮುಖಾಂತರವೇ ಸಿದ್ದಿಸುವ ಅನುಭವ ಜನ್ಯವಾದ ತತ್ವದರ್ಶನದ ಆನಂದವೇ ಕಾವ್ಯ ಒದಗಿಸುವ ಆನಂದ ಹಾಗೂ ಪ್ರಯೋಜನ ಎಂದು ವರ್ಡ್ಸ್‌ವರ್ತ್ ಅಭಿಪ್ರಾಯಪಡುತ್ತಾನೆ.[16] ಕಲೆ ಮತ್ತು ನೀತಿ, ಅಧ್ಯಾತ್ಮಗಳ ಸಂಬಂಧದ ಈ ಜಿಜ್ಞಾಸೆ ಕಲೆ ಇರುವುದೇ ಜನಗಳ ನೀತಿಬೋಧೆಗಾಗಿ ಎಂದು ರಸ್ಕಿನ್ ಉದ್ಗರಿಸುವಲ್ಲಿ ಅತಿರೇಕವನ್ನು ಮುಟ್ಟಿತು.

ಈ ಅತಿರೇಕದ ವಿರುದ್ಧ ‘ಕಲೆಗಾಗಿ ಕಲೆ’ ಎಂಬ ಉಗ್ರ ಸಿದ್ಧಾಂತವೊಂದು ಪಾಶ್ಚಾತ್ಯ ಜಗತ್ತಿನಲ್ಲಿ ರೂಪಗೊಂಡಿತಾದರೂ, ಕಾವ್ಯದಲ್ಲಿ ದರ್ಶನದ ಸ್ಥಾನವನ್ನು ಸಮತೋಲನ ಪ್ರಜ್ಞೆಯ ವಿಮರ್ಶಕರೆಲ್ಲ ಒಪ್ಪಿಕೊಂಡಿದ್ದಾರೆ. ಸಾಹಿತ್ಯದ ಜೊತೆ ಇತರ ಕ್ಷೇತ್ರಗಳ ಸಂಬಂಧವನ್ನು ನಿರಾಕರಿಸಿದ ಟಿ.ಎಸ್. ಎಲಿಯಟ್ ಕೂಡಾ ಒಂದು ಕೃತಿ ಸಾಹಿತ್ಯವೋ? ಅಲ್ಲವೋ ಎಂಬುದನ್ನು ಸಾಹಿತ್ಯಕ ಮಾನದಂಡದಿಂದ ಮಾತ್ರ ಅಳೆಯಬೇಕಾದ್ದು ನಿಜವಾದರೂ, ಸಾಹಿತ್ಯದ ಮಹೋನ್ನತಿಯನ್ನು ಕೇವಲ ಸಾಹಿತ್ಯಕ ಮಾನದಂಡಗಳಿಂದಲೇ ನಿರ್ಧರಿಸುವುದು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ.[17]

ಒಂದು ಲೌಕಿಕ ಕಾವ್ಯವನ್ನು, ಮತ್ತೊಂದು ಆಗಮಿಕ ಕಾವ್ಯವನ್ನು ಬರೆಯುವುದು ಮತ್ತು ಆಗಮಿಕ ಕಾವ್ಯದಲ್ಲಿ ಧರ್ಮ ಮತ್ತು ಕಾವ್ಯಧರ್ಮಗಳೆರಡನ್ನೂ ಮೇಳವಿಸುವುದು ನಮ್ಮ ಕವಿಗಳ ಒಂದು ಪದ್ಧತಿಯೇ ಆಗಿತ್ತು. ಭಾರತವನ್ನು ಪಂಚಮವೇದವೆಂದು ಕರೆದಿರುವುದರಲ್ಲಿ ಕೂಡ ಈ ಆಧ್ಯಾತ್ಮ ದೃಷ್ಟಿ ಎದ್ದು ಕಾಣುತ್ತದೆ. ಆದರೆ ಈ ತತ್ವ ಕಾವ್ಯದಲ್ಲಿ ಹೇಗೆ ಎಷ್ಟರಮಟ್ಟಿಗೆ ಅಂತರ್ಗತವಾಗಿದ್ದರೆ ಕಾವ್ಯತ್ವಕ್ಕೆ ಊರ ಬಾರದಂತೆ ಅದರ ಮಲ್ಯವನ್ನು ಪ್ರಭಾವ ಪರಿಣಾಮಗಳನ್ನು ಎತ್ತರಕ್ಕೇರಿಸಬಹುದೆಂಬ ಮೂಲಭೂತ ಪ್ರಜ್ಞೆ ಕವಿಗಿರಬೇಕೆಂಬುದನ್ನು ಮರೆಯುವಂತಿಲ್ಲ. ಏಕೆಂದರೆ ಕಾವ್ಯಕಲೆಗಳಲ್ಲಿ ಅದರ ಅಧಿದೈವವಾದ ಕಲಾಮಲ್ಯವೇ ದಾಸಿಯಾಗಿ ಅನ್ಯಮಲ್ಯಗಳು ಯಜಮಾನಿಕೆಯನ್ನು ವಹಿಸುವ ಅಪಾಯ ಅಧಿಕವಾಗಿರುವ ಸಂಭವವುಂಟು. ಇದನ್ನು ಪ್ರತಿಭಟಿಸಿ ಕೆಲವು ಪಾಶ್ಚಾತ್ಯ ವಿಮರ್ಶಕರು ಮತ್ತೊಂದು ಅತಿರೇಕಕ್ಕೆ ಹೋಗಿ ‘ಕಾವ್ಯಕ್ಕಾಗಿ ಕಾವ್ಯ’, ‘ಕಲೆಗಾಗಿ ಕಲೆ’ ಎಂಬ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದೂ ಉಂಟು. ಶ್ರೀರಾಮಾಯಣದರ್ಶನದ ಕವಿಗೆ ಈ ಎಚ್ಚರ ಪ್ರಗಾಢವಾಗಿದೆ. ಅವರು ಹೇಳುತ್ತಾರೆ: “ಕಾವ್ಯವೆಂದರೆ ಕೇವಲ ದರ್ಶನ ಮಾತ್ರ ಎಂದು ಅರಿಯಬಾರದು. ಕಾವ್ಯವೆನಿಸಿಕೊಳ್ಳಲು ಕೆಲವು ಮುಖ್ಯ ಲಕ್ಷಣಗಳಿವೆ. ಅವಿಲ್ಲದಿದ್ದರೆ ಎಂತಹ ಮಹದ್ದರ್ಶನವಾದರೂ ಸರಿಯೇ ಕಾವ್ಯದ ಪ್ರಾಕಾರದೊಳಗೆ ಪ್ರವೇಶಿಸಲಾರದು.” “ಬುದ್ದಿಪೂರ್ವಕವಾಗಿ ತತ್ವವನ್ನು ವಿವರಿಸಲು ಯತ್ನಿಸಿದರೆ ಅದು ಕಾವ್ಯವಾಗುವುದಿಲ್ಲ, ಶಾಸ್ತ್ರವಾಗುತ್ತದೆ. ಆ ತತ್ವ ಅನುಭವದ ಮೂಲಕ ವ್ಯಕ್ತಗೊಂಡರೆ ಮಾತ್ರ ಕಾವ್ಯವಾಗುತ್ತದೆ”[18] ಆದ್ದರಿಂದಲೇ ತತ್ವಶಾಸ್ತ್ರಜ್ಞರೆಲ್ಲ ದರ್ಶನಕಾವ್ಯ ಬರೆಯಲಾರರು; ತತ್ವಾನುಭವಿಯಾದ ಪ್ರತಿಭಾ ಶ್ರೀಮಂತ ಕವಿ ಮಾತ್ರ ಅಂತಹ ಕಾವ್ಯ ರಚಿಸಬಲ್ಲ. ಆದ್ದರಿಂದಲೇ ಡಿ.ವಿ.ಜಿ.ಯವರು “ಧ್ಯಾನಾವೇಶಗಳಿಲ್ಲದೆ ನಿಜವಾದ ಕಾವ್ಯವಾಗದು. ಕಾವ್ಯವು ಕವಿಗೂ ಜಗತ್ತಿಗೂ ನಡೆಯುವ ಸಂಭಾಷಣೆ. ನಮ್ಮ ಹೃದಯದ ಪ್ರಶ್ನೆಗಳಿಗೆ ಅವನ ಹೃದಯವು ಉತ್ತರ ಕೊಡಬೇಕು; ನಮ್ಮ ಗಾಯಗಳಿಗೆ ಅಲ್ಲಿ ತಕ್ಕ ಲೇಪನತೈಲ ದೊರೆಯ ಬೇಕು; ನಮ್ಮ ಮಟ್ಟಿಗೆ ಅಲ್ಲಿ ಪಂಜಿರಬೇಕು. ಇದಾಗಬೇಕಾದರೆ ಅವನು ತಪಸ್ವಿಯಂಥಾಗ ಬೇಕು”[19] ಎಂದು ಹೇಳಿರುವುದು ಅರ್ಥವತ್ತಾಗಿದೆ. “ವಾರ್ತೆಯನ್ನು ಸಾರುವ ಏಕೈಕ ವ್ಯಕ್ತಿಯೆಂದರೆ ಕವಿ. ಅವನು ಹಾಡಿದಾಗ, ದೇವರ ರಹಸ್ಯವೊಂದು ಈಗ ಪ್ರಕಟವಾಗುತ್ತದೆ ಎಂಬ ಭರವಸೆಯಿಂದ ಇಡೀ ಜಗತ್ತು ಅವನನ್ನು ಆಲಿಸುತ್ತದೆ”[20] ಎಂಬ ಎಮರ್ಸನ್ನನ ಮಾತೂ ಕವಿಯ ಮತ್ತು ದಾರ್ಶನಿಕ ಕಾವ್ಯದ ಮಹತ್ವವನ್ನು ಉಚ್ಚಕಂಠದಿಂದ ಸಾರುತ್ತದೆ.

ಕಾಲ ದೇಶಗಳ, ವಿವಿಧ ಸಂಸ್ಕೃತಿ ಚಿಂತನೆಗಳ, ಎಲ್ಲೆಗಳನ್ನು ದಾಟಿ ಅಖಂಡ ಮಾನವತೆಯ ಮೇಲೆ ತನ್ನ ಪ್ರಭಾವಪಕ್ಷಗಳನ್ನು ವಿಸ್ತರಿಸಲೆಳಸುವ ಮತ್ತು ಅವರನ್ನು ಪರಿಪೂರ್ಣತೆಯತ್ತ ನಡೆಸಲೆಳಸುವ ಯಾವುದೇ ಕಾವ್ಯ ತನ್ನ ಶುದ್ಧಕಾವ್ಯ ಮಲ್ಯಗಳ ಜೊತೆಯಲ್ಲೇ ದರ್ಶನ ಮಲ್ಯವನ್ನೂ ಒಳಗೊಳ್ಳಬೇಕಾದುದು ಅನಿವಾರ್ಯ ಮತ್ತು ಅತ್ಯಪೇಕ್ಷಣೀಯ ಎಂಬುದನ್ನು ಮೇಲಿನ ವಿವೇಚನೆ ಶ್ರುತಪಡಿಸುತ್ತದೆ. ‘ಶ್ರೀರಾಮಾಯಣ ದರ್ಶನಂ’ ಕಾವ್ಯ ಇಂಥ ಚಿರಂತನ ದರ್ಶನವನ್ನು ಗರ್ಭೀಕರಿಸಿಕೊಂಡಿರುವ ಕೃತಿಯೆಂಬ ಕಾರಣದಿಂದಲೇ ಮೇಲಿನ ವಿವೇಚನೆ ಪ್ರಸ್ತುತವಾಯಿತು.

‘ದರ್ಶನ’ ಎಂದರೆ ಏನು? ಅದು ಹೇಗೆ ಸಿದ್ಧವಾಗುತ್ತದೆ? ಅದು ಏಕೆ ಮತ್ತು ಹೇಗೆ ಕಾವ್ಯಪ್ರತಿಮೆಯಾಗಿ ಅವತರಿಸುತ್ತದೆ? ಎಂಬ ಪ್ರಶ್ನೆಗಳಿಗೆ ಕುವೆಂಪು ಅವರೇ ತಮ್ಮ ಸ್ವಾನುಭವದ ಆಧಾರದ ಮೇಲೆ ಉತ್ತರಿಸಿದ್ದಾರೆ: ‘ದರ್ಶನ’ ಎಂಬ ಪದಕ್ಕೆ ಅಪರೋಕ್ಷವಾಗಿ ಅನುಭವಿಸಿ ಕಾಣುವುದು ಎಂದರ್ಥ. ಬುದ್ದಿ, ಚಿಂತನ, ತರ್ಕ ಅಥವಾ ಅವರಿವರ ಹೇಳಿಕೆ ಇವು ಯಾವ ಉಪಾಧಿಗಳೂ ಇಲ್ಲದೆ ನೇರವಾಗಿ ಗ್ರಹಿಸುವ ಶಕ್ತಿ ‘ದರ್ಶನ!’[21] “ಸ್ವಾನುಭವ, ದೇಶದ ಸಂಸ್ಕೃತಿ, ಪಡೆದ ವಿದ್ಯೆ, ತಾನು ಹುಟ್ಟಿದ ಮತ್ತು ಬೆಳೆದ ಸುತ್ತಣ ಸನ್ನಿವೇಶ, ಮಹಾಪುರುಷರ ಸಂಶ್ರಯ ಮೊದಲಾದುವುಗಳ ಪ್ರಭಾವದಿಂದ ಮೂಡುವ ಬುದ್ದಿಸ್ಥಿತಿಯನ್ನು ಜೀವನದ ದೃಷ್ಟಿ ಎಂದು ಸಂಕೇತಿಸಬಹುದು. ಅಂತಹ ಜೀವನದೃಷ್ಟಿ ರಸಾನುಭೂತಿಗೇರಿದರೆ ‘ದರ್ಶನ’ವಾಗುತ್ತದೆ. ಕವಿಯ ದರ್ಶನ ತತ್ವಶಾಸ್ತ್ರಜ್ಞನ ತರ್ಕಬದ್ಧವಾದ ದರ್ಶನವಲ್ಲ. ಅದು ಋಷಿಯ ಅಪರೋಕ್ಷಾನುಭೂತಿಗೆ ಹೆಚ್ಚು ಸಮೀಪವಾದದ್ದು. ನಿಷ್ಕೃಷ್ಟವಾದ ಕೇಂದ್ರವಾಗಲಿ ಖಚಿತವಾದ ನೇಮಿಯಾಗಲಿ ಅದಕ್ಕಿದೆ ಎಂದು ಹೇಳಲಾಗುವುದಿಲ್ಲ. ಅನುಭವ ಬದಲಾಯಿಸಿದಂತೆ ಪ್ರಜ್ಞೆ ವಿಕಾಸವಾದಂತೆ ಅದು ಪರಿಣಾಮಗೊಳ್ಳುತ್ತದೆ. ಕೇವಲವಾದ ಭೂಮಾನುಭೂತಿ ಸಿದ್ದಿಸುವವರೆಗೂ ಅದರ ವೃದ್ದಿಗಾಗಲಿ ಪರಿವರ್ತನೆಗಾಗಲಿ ಪೂರ್ಣ ವಿರಾಮ ಲಭಿಸುವುದಿಲ್ಲ. ಅದು ಅನಂತಕಾಲವೂ ನಿರಂತರ ವಿಕಾಸಶೀಲವಾದುದು.”[22] “ಜನ್ಮವೆತ್ತಿದ ಮೊದಲುಗೊಂಡು ಸುತ್ತಣ ಜನರಿಂದ. ಸನ್ನಿವೇಶಗಳಿಂದ, ಘಟನಾಪರಂಪರೆ ಗಳಿಂದ, ಪ್ರಕೃತಿಯಿಂದ, ಪುಸ್ತಕಗಳಿಂದ, ತನ್ನಲ್ಲಿಯೇ ಅಂತರ್ಗತವಾಗಿದ್ದು ಹೊರಗಣ ಘರ್ಷಣ ನಿಮಿತ್ತ ಮಾತ್ರದಿಂದ ಬಿರಿದೊಡೆದು ಹೊಳೆಯುವ ಆತ್ಮಾನುಭವಗಳಿಂದ ಅವನು (ಕವಿ) ಅಸಂಖ್ಯ ಸಂಸ್ಕಾರಗಳನ್ನು ಪಡೆಯುತ್ತಾನೆ. ಆ ಸಂಸ್ಕಾರ ಸಮಷ್ಟಿಯ ಫಲರೂಪ ವಾಗಿಯೇ ಅವನ ‘ದರ್ಶನ’ ಸಿದ್ಧವಾಗುತ್ತದೆ.”[23]

“‘ದರ್ಶನದ’ ತರುವಾಯ ‘ಚಿಂತನ’. ‘ಚಿಂತನ’ದ ತರುವಾಯ ‘ವರ್ಣನ’…. ಕವಿಯ ಅವರೋಹಣಮುಖವಾದ ಚಿದ್‌ವಿಕಾಸಕ್ರಮವು ದರ್ಶನದಿಂದ ಚಿಂತನಕ್ಕೂ, ಚಿಂತನದಿಂದ ವರ್ಣನಕ್ಕೂ ಇಳಿಯುತ್ತದೆ: ಎಂದರೆ, ಅವತರಿಸುತ್ತದೆ.” ಕವಿ ತಾನು ಏರಿ ಮುಟ್ಟಿದ ‘ದರ್ಶನ’ವನ್ನು ಇಳಿದು ಕಟ್ಟುತ್ತಾನೆ. ಉಪನಿಷತ್ತಿನ ಮಾತುಗಳನ್ನು ಉಪಯೋಗಿ ಸುವುದಾದರೆ, ‘ಸ್ವಯಂಭು’ವಾದ ಕವಿ ‘ಮನೀಷಿ’ಯಾಗಿ ‘ಪರಿಭು’ವಾಗುತ್ತಾನೆ. ಕಾವ್ಯವನ್ನು ಕಟ್ಟುವ ಕಾರ್ಯದಲ್ಲಿ ಚಿಂತನ ಮತ್ತು ವರ್ಣನಾಂಶಗಳಾದ ತನ್ನ ವಿದ್ಯೆ ಬುದ್ದಿ ಅಧ್ಯಯನ ಅಭ್ಯಾಸ ಮತ ಕಾಲ ದೇಶ ಇತ್ಯಾದಿಗಳೆಲ್ಲವನ್ನೂ ವಿನಿಯೋಗಿಸುತ್ತಾನೆ. ಆದರೂ ಅವೆಲ್ಲವೂ ಅವನ ‘ದರ್ಶನ’ದ ಅಧೀನವಾಯೇ ಇದ್ದುಕೊಂಡು, ಅದರ ಅಭಿವ್ಯಕ್ತಿಗಾಗಿ ಅದಕ್ಕಾಗಿಯೇ ದುಡಿಯುತ್ತವೆ. ಆದರ ಚೇತನವೆ ಅವುಗಳಿಗೆ ಪ್ರಾಣ. ಅದರ ಶಾಂತಿಯೇ ಅವುಗಳಿಗೆ ಕಣ್ಣು. ಅವುಗಳ ನಾಡಿಸ್ಪಂದನವೂ ಕವಿಯ ‘ದರ್ಶನ’ದ ಶ್ವಾಸೋಚ್ಛ್ವಾಸದ ಲಯಗತಿಯನ್ನೇ ಅನುಸರಿಸುತ್ತದೆ.”[24]

ಕಾವ್ಯದಲ್ಲಿ ವ್ಯಕ್ತವಾಗುವ ‘ದರ್ಶನ’ ತತ್ವಶಾಸ್ತ್ರದಲ್ಲಿ ಗ್ರಂಥಗಳಲ್ಲಿ ಬರುವಂತೆ ಶುಷ್ಕವಾಗಿ ಬುದ್ದಿಪೂರ್ವಕವಾಗಿ ಬರದೆ ಅಥವಾ ಕಥಾಂತ್ಯಕ್ಕೆ ನೀತಿಯ ಕಿರೀಟವನ್ನು ಪ್ರಜ್ಞಾಪೂರ್ವಕವಾಗಿ ಇಡದೆ, ಕವಿಯ ವಿಶಿಷ್ಟಾನುಭವ ಮತ್ತು ವಿಶಿಷ್ಟ ಜೀವನ ದೃಷ್ಟಿಗಳಿಂದ ಹೊಮ್ಮಿದ ಪರಿಮಳವಾಗಿ ಪ್ರಭೆಯಾಗಿ ಕಾವ್ಯದ ಕಥೆ, ಸಂವಿಧಾನ, ಪಾತ್ರ, ನಿರೂಪಣೆ, ವರ್ಣನೆ ಮತ್ತು ಪರಿಣಾಮಗಳೆಲ್ಲವನ್ನೂ ಪ್ರಭಾವಿಸಿ ಅವಕ್ಕೆ ಅಪೂರ್ವ ಜೀವಕಾಂತಿಯನ್ನು ದಾನ ಮಾಡುವ ಮೂಲಕ ಕಾವ್ಯಮಲ್ಯದೊಂದಿಗೆಯೇ ಮೈತಳೆದು ಚಿರಂತನತೆಯ ಪಟ್ಟವನ್ನು ಪಡೆಯುತ್ತದೆಂಬುದನ್ನು ಮೇಲಿನ ಮಾತುಗಳು ಧ್ವನಿಸುತ್ತವೆ.

ಕುವೆಂಪು ತಮ್ಮ ಒಂದು ಉಪನ್ಯಾಸದಲ್ಲಿ “ನನ್ನ ನಿಜಸ್ಥಿತಿ, ನಿಮಗೆ ತಿಳಿಸುವುದಾದರೆ, ಸಾಹಿತ್ಯವಲ್ಲ, ತತ್ವವೆ”[25] – ಎಂದಿದ್ದಾರೆ. ಇನ್ನೊಮ್ಮೆ ಅವರೇ ಹೇಳಿರುವ ಮಾತಿದು: “ನನಗಂತು ನಾನು ಬರೆದಿರುವುದು ಸ್ವಾನುಭವ ಸತ್ಯ. ನನಗೆ ಗೊತ್ತು, ಇಲ್ಲಿ ಬಿದ್ದಿರುವ ಕಲ್ಲಿನಲ್ಲಿ (ಒಂಟಿಕೊಪ್ಪಲಿನ ಪಶ್ಚಿಮಕ್ಕಿರುವ ಬೋರೆಯ ಮೇಲೆ ನಿಂತು ಹೇಳಿದ ಮಾತು) ಆ ಗಿಡದಲ್ಲಿರುವ ಚೇತನದಷ್ಟೇ ಅದ್ಭುತವಾದ ಶಕ್ತಿ ಹುದುಗಿದೆಯೆಂದು. ಈ ಭಾವನೆಯಂತು ನನಗೆ ಚಿಕ್ಕಂದಿನಿಂದಲೂ ಅವರಿವರ ಉಪದೇಶವಿಲ್ಲದೆಯೇ, ವೇದೋಪನಿಷತ್ತು ಗ್ರಂಥ ಗಳನ್ನು ಓದುವುದಕ್ಕೆ ಮುಂಚಿನಿಂದಲೂ ಬೆಳೆದುಬಂದಿದೆ. ಆ ಭಾವನೆ ನನ್ನ ರಕ್ತದಲ್ಲಿ ರಕ್ತವಾಗಿದೆ.”[26] ಕುವೆಂಪು ಅವರ ಜೀವನವನ್ನು ಹತ್ತಿರದಿಂದ ಅವಲೋಕಿಸಿದವರಿಗೆ, ಅವರ ಆತ್ಮಚರಿತ್ರೆ ಕವಿತೆಗಳು ನಾಟಕಗಳು ಕತೆಕಾದಂಬರಿಗಳು – ಇವನ್ನೋದಿದವರಿಗೆ ಅಧ್ಯಾತ್ಮ ವೆಂಬುದು ಅಧ್ಯಯನಲಬ್ಧವಾದ ಬುದ್ದಿಯ ಫಲವಾಗಿ ಅವರಿಗೆ ಅಂಟಿಬರದೆ, ಜನ್ಮಜತ ವಾಗಿ ಮತ್ತು ಪ್ರಕೃತಿ ಸಾನ್ನಿಧ್ಯದಿಂದ, ಶ್ರೀರಾಮಕೃಷ್ಣಾಶ್ರಮದ ಸನ್ನಿವೇಶಗಳಿಂದ ಸಂಸ್ಕಾರ ರೂಪವಾಗಿ ಸಹಜವಾಗಿ ಸಂಸಿದ್ಧವಾಗಿದೆಯೆಂಬುದು ಸುಲಭ ವೇದ್ಯವಾಗುತ್ತದೆ. ದರ್ಶನ ವೆಂಬುದು ಅವರ ಪಾಲಿಗೆ ಬದುಕಿನ ಅತ್ಯನಿವಾರ್ಯವಾದ ಅಂತರ್ಗತಸತ್ವವಾಗಿದೆ, ಸತ್ಯವಾಗಿದೆ. ಇದು ಅವರ ಬರಹಗಳಲ್ಲೆಲ್ಲ ವಿವಿಧ ಪ್ರಮಾಣಗಳಲ್ಲಿ ಅಂತರ್ವಾಹಿನಿಯಾಗಿ ಹರಿದಿದೆ. ಶ್ರೀರಾಮಾಯಣದರ್ಶನದಲ್ಲಿ ಅದು ಕಾವ್ಯದ ಒಂದು ಪ್ರಧಾನ ಅಂಗವಾಗಿಯೇ ಆವಿರ್ಭವಿಸಿದೆ.

ತಮ್ಮ ಈ ಕಾವ್ಯದ ಹೆಸರಿನಲ್ಲೇ ‘ದರ್ಶನ’ ಎಂಬ ಶಬ್ದವನ್ನು ಕವಿ ಪ್ರಯೋಗಿಸಿರುವುದು, ಅವರು ಈ ಕಾವ್ಯದಲ್ಲಿ ಕಂಡರಿಸಿರುವ ದರ್ಶನಸತ್ಯಕ್ಕೆ ಎಂಥ ಮಹತ್ವದ ಸ್ಥಾನವನ್ನು ನೀಡಿರುವರೆಂಬುದು ವಿದಿತವಾಗುತ್ತದೆ. “ಈ ಹೆಸರು ನಿಲ್ಲುವುದಕ್ಕೆ ಮುಂಚೆ ಎಷ್ಟೆಷ್ಟೋ ಆಲೋಚನೆಗಳ ಹೊಯ್ದಾಟ ಆಗಿ ಮುಗಿದಿತ್ತು. ಯಾವ ಹೆಸರನ್ನು ನೆನೆದರೂ ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಪ್ರತಿಯೊಂದರಲ್ಲಿಯೂ ಏನೋ ಅರಕೆ ಕಾಣುತ್ತಿತ್ತು. ಈ ಪದಗುಚ್ಛ ಹೊಳೆದಾಗ ಮಾತ್ರ ಸಮಾಧಾನವಾಯಿತು”[27] ಎಂದಿದ್ದಾರೆ ಕುವೆಂಪು. ತಮ್ಮ ಕಾವ್ಯವನ್ನು ನೋಡಬೇಕಾದ ದೃಷ್ಟಿಕೋನಗಳಾವುವು ಎಂಬುದನ್ನು ವಿವರಿಸುತ್ತ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ : ಕಾವ್ಯ ಬೇಕಾದವರಿಗೆ ಇಲ್ಲಿ ಕಾವ್ಯ ಸಿಗುತ್ತದೆ; ಕತೆ ಬೇಕಾದವರಿಗೆ ಕತೆ ಸಿಗುತ್ತದೆ; ದರ್ಶನ ಬೇಕಾದವರಿಗೆ ದರ್ಶನ ಸಿಗುತ್ತದೆ. ಆದಿಕವಿಯೇ ಬ್ರಹ್ಮ, ಅವನೇ ವಿಶ್ವಶಕ್ತಿ. ಆ ವಿಶ್ವಶಕ್ತಿ ನಾನಾ ರೂಪದಲ್ಲಿ ವಿಕಾಸಗೊಳ್ಳುತ್ತ ಹೋಗುತ್ತದೆ. ಈ ರಾಮಾಯಣವೂ ಆ ವಿಕಾಸಕ್ರಮದಲ್ಲೊಂದು ಮೆಟ್ಟಲು, ಶಕ್ತಿಬಾಹು; ಆ ಶಕ್ತಿ ಹರಿಯುವ ಒಂದು ಪ್ರಣಾಳಿಕೆ. ರಾಮಾಯಣದಲ್ಲಿ ಆ ವಿಶ್ವಶಕ್ತಿಯ ದರ್ಶನ ಇಲ್ಲದಿದ್ದರೆ ಅದು ಇಂದಿಗೂ ಪೂಜ್ಯಸ್ಥಾನದಲ್ಲಿ ಇರುತ್ತಿರಲಿಲ್ಲ. ಅಂದು ಅದು (ವಾಲ್ಮೀಕಿ ರಾಮಾಯಣ) ಹುಟ್ಟಿ ಅಂದಿನ ಜನರ ಅಭೀಪ್ಸೆಯನ್ನು ಈಡೇರಿಸಿತು. ಇಂದು ಇದು (ಶ್ರೀರಾಮಾಯಣ ದರ್ಶನಂ) ಹುಟ್ಟಿ ಇಂದಿನ ಮತ್ತು ಮುಂದಿನ ಜನತೆಯ ಅಭೀಪ್ಸೆಯನ್ನು ಈಡೇರಿಸುತ್ತದೆ. ಇದು ದೈವೀ ಶಕ್ತಿಯನ್ನು ಮತ್ತೆ ಈ ಮರ್ತ್ಯಕ್ಕೆ ತಂದಿದೆ; ಮರ್ತ್ಯಕ್ಕೂ ಅಮರ್ತ್ಯಕ್ಕೂ ಸಂಪರ್ಕವನ್ನುಂಟುಮಾಡಿದೆ. ಪೂರ್ಣದೃಷ್ಟಿಯ ಪೂರ್ಣದರ್ಶನಕ್ಕೆ ಪೂರ್ಣಪ್ರತಿಮೆ, ಈ ಶ್ರೀರಾಮಾಯಮದರ್ಶನಂ.[28] ಈ ವಿಷಯವನ್ನೇ ಕುರಿತ ಅವರ ಮತ್ತೊಂದು ಅನಿಸಿಕೆ ಹೀಗಿದೆ: “ಈ ಕಾವ್ಯದ ರಚನೆಗೆ ಪ್ರಚೋದಕಶಕ್ತಿ ಅಧ್ಯಾತ್ಮ ಸಾಧನೆ ನಿಜ. ನನಗಂತು ಕಾವ್ಯರಚನೆ ಗೌಣ, ಆತ್ಮಸಾಧನೆ ಪ್ರಧಾನ. ಆದುದರಿಂದ ಇಲ್ಲಿಯ ಪ್ರತಿಯೊಂದು ಮಾತಿನಲ್ಲಿಯೂ ದರ್ಶನ ಧ್ವನಿಯನ್ನು ಕಾಣಬೇಕಾಗುತ್ತದೆ.”[29] ತಮ್ಮ ಕಾವ್ರೋಮತ್ತು ಕಾವ್ಯಮಹತ್ವವನ್ನು ಇಷ್ಟು ಸ್ಪಷ್ಟವಾದ ಮಾತುಗಳಲ್ಲಿ ವಿವರಿಸಿರುವ ಕವಿಗಳು ಈಚಿನ ಸಾಹಿತ್ಯೇತಿಹಾಸದಲ್ಲಿ ವಿರಳ. ಈ ಕಾವ್ಯದಲ್ಲಿರುವ ದರ್ಶನಾಂಶ ಯಾರೂ ಕಡೆಗಣಿಸಲಾಗದ್ದು ಮತ್ತು ಕಡೆಗಣಿಸಬಾರದ್ದು ಎನ್ನುವ ಒತ್ತು ಈ ಮಾತುಗಳಲ್ಲಿದೆ. ಕಾವ್ಯಗುಣವನ್ನು ಧಿಕ್ಕರಿಸದೆ ಅಥವಾ ಅದಕ್ಕೆ ಧಕ್ಕೆ ತಾರದೆ ಈ ಕೃತಿಯಲ್ಲಿ ಅರಳಿರುವ ‘ದರ್ಶನ’ದ ಸ್ವರೂಪ ಯಾವ ಬಗೆಯದೆಂಬುದನ್ನು ಈಗ ಪರಿಶೀಲಿಸಬಹುದು.

 


[1] Hudson, An Introduction to the Study of Literature.

[2] Mathew Arnold,  ದೇಜಗೌ ಅವರಿಂದ ಉದ್ಧೃತ, ಕುವೆಂಪು ದರ್ಶನ ಮತ್ತು ಸಂದೇಶ, ಪು. ೨-೩.

[3] ಮಮ್ಮಟ,  ಕಾವ್ಯ ಪ್ರಕಾಶ, ೧-೨.

[4] ಕುಮಾರವ್ಯಾಸ, ಕರ್ಣಾಟಕ ಭಾರತ ಕಥಾಮಂಜರಿ, ಆದಿಪರ್ವ, ೧-೨೦.

[5] John Miltion, Paradise Lost, Book 1.

[6] John Addington Symonds, Quoted by Hudson, Introduction the Study of Literature.

[7] ಡಾ. ರಂ.ಶ್ರೀ. ಮುಗಳಿ,  ಮಾತೆಂಬುದು ಜ್ಯೋತಿರ್ಲಿಂಗ, ಪು. ೫೩.

[8] ಎನ್. ಬಾಲಸುಬ್ರಹ್ಮಣ್ಯಂ, ಬಾಗಿನ (ಸಂ. ಎಸ್.ವಿ. ರಂಗಣ್ಣ), ಪು. ೬೮.

[9] ಡಾ. ಡಿ.ವಿ. ಗುಂಡಪ್ಪ, ಜೀವನ ಸೌಂದರ್ಯ ಮತ್ತು ಸಾಹಿತ್ಯ, ಪು. ೧೨೯-೩೧.

[10] ಡಾ. ಡಿ.ವಿ. ಗುಂಡಪ್ಪ, ಸಾಹಿತ್ಯ ಶಕ್ತಿ, ಪು. ೧೧೫.

[11] ಕುವೆಂಪು, ಕಲಾಸುಂದರಿ, ಮುನ್ನುಡಿ.

[12] ಕುವೆಂಪು, ತಪೋನಂದನ, ಪು. ೧೧೯-೨೪.

[13] ವಿ.ಎಂ. ಇನಾಂದಾರ್, ಪಾಶ್ಚಾತ್ಯ ಕಾವ್ಯಮೀಮಾಂಸೆ, ಪು. ೩೭.

[14] ಅದೇ, ಪು. ೧೭೫.

[15] ಅದೇ, ಪು. ೧೯೦.

[16] ಅದೇ, ಪು. ೩೭೬.

[17] T.S. Eliot, Selected Essays.

[18] ಕೋ. ಚೆನ್ನಬಸಪ್ಪ, ಶ್ರೀ ಕುವೆಂಪು ಸಂದರ್ಶನ (ಸಂ), ಪು. ೩೦.

[19] ಡಾ. ಡಿ.ವಿ. ಗುಂಡಪ್ಪ, ಜೀವನ ಸೌಂದರ್ಯ ಮತ್ತು ಸಾಹಿತ್ಯ, ಪು. ೧೩೫.

[20] Emerson, An Introduction of Poetry (R.M. Alden), p. 119.

[21] ಕುವೆಂಪು, ತಪೋನಂದನ, ಪು. ೧೨೨.

[22] ಕುವೆಂಪು, ತಪೋನಂದನ, ಪು. ೧೨೨.

[23] ಅದೇ, ಪು. ೧೨೨-೨೩.

[24] ಕುವೆಂಪು, ಷಷ್ಟಿನಮನ, ಪು. ೧೭೧.

[25] ಕೋ. ಚೆನ್ನಬಸಪ್ಪ, ಕುವೆಂಪು ಸಂದರ್ಶನ, ಪು. ೩೧.

[26] ಅದೇ, ಪು. ೩೧.

[27] ಅದೇ. ಪು. ೧೯-೨೦.

[28] ಅದೇ, ಪು. ೩೨.

[29] ಶ್ರೀರಾಮಾಯಣದರ್ಶನಂ, ಶ್ರೀವೆಂಕಣ್ಣಯ್ಯನವರಿಗೆ, ಪು. iii-iv ಸಾಲು ೨೩-೪೩.