೪. ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ

ಒಂದೊಂದು ಕಾಲದಲ್ಲಿ ಒಬ್ಬೊಬ್ಬ ಮಹಾವ್ಯಕ್ತಿ ಅವತರಿಸಿ, ತನ್ನ ಸ್ವಂತ ಪರಿಶ್ರಮ ಸತತ ಸಾಧನೆ ಮತ್ತು ಅಖಂಡ ಮಾನವತೆಯ ಕ್ಷೇಮಂಕರ ದೃಷ್ಟಿಗಳಿಂದ ತನ್ನ ವಾಸ್ತವ ಬದುಕಿನಲ್ಲಿಯೇ ಒಂದು ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಈ ಸತ್ಯದರ್ಶನ ವೈಯಕ್ತಿಕವಾದುದಾದರೂ, ಅದು ಆತ್ಮಕಲ್ಯಾಣವನ್ನಷ್ಟನ್ನೇ ಗುರಿಯಾಗಿಸಿಕೊಳ್ಳದೆ ಸರ್ವಜೀವಿಗಳ ಸಮಸ್ತ ಸ್ತರದ ಉದ್ಧಾರವನ್ನೂ ತನ್ನ ಕಕ್ಷ್ಯೆಯಲ್ಲಿರಿಸಿ ಕೊಂಡಿರುತ್ತದೆ ಯಾದ್ದರಿಂದ ಈ ತತ್ವ ಲೋಕವ್ಯಾಪಕವಾದ ಪರಿಣಾಮವನ್ನು ಬೀರುತ್ತದೆ. ಹೀಗೆ ತಾವು ಸಾಕ್ಷಾತ್ಕರಿಸಿಕೊಂಡ ಸತ್ಯವನ್ನು ಲೋಕಲ್ಯಾಣಕ್ಕಾಗಿ ವಾಸ್ತವ ಜೀವನದಲ್ಲಿ ಅನುಷ್ಠಾನ ಗೊಳಿಸಿದ ಮೂವರು ವಿಭೂತಿಪುರುಷರನ್ನು ಒಂದೇ ಶತಮಾನದಲ್ಲಿ ಭಾರತ ಪಡೆದು ಧನ್ಯವಾಗಿದೆ. ಭಾರತದ ರಾಜಕೀಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜೀವನ ಈ ಮೂವರ ದರ್ಶನಗಳಿಂದ ಗಾಢವಾಗಿ ಪ್ರಭಾವಿತವಾಗಿದೆ. ಇವರೇ ಶ್ರೀರಾಮಕೃಷ್ಣಪರಮಹಂಸ, ಮಹಾತ್ಮಗಾಂಧೀಜಿ ಮತ್ತು ಶ್ರೀ ಅರವಿಂದರು. ಇವರು ಸಾಕ್ಷಾತ್ಕರಿಸಿಕೊಂಡ ಮತ್ತು ಈ ಲೋಕಜೀವನದಲ್ಲಿ ಮೈದಳೆಯಬೇಕೆಂದು ಆಶಿಸಿದ ತತ್ವಗಳೇ ಕ್ರಮವಾಗಿ ಸರ್ವಸಮನ್ವಯ ದರ್ಶನ, ಅಹಿಂಸಾತ್ಮಕ ಸರ್ವೋದಯ ದರ್ಶನ ಮತ್ತು ಪೂರ್ಣದೃಷ್ಟಿ. ಈ ಮೂರೂ ವಿಶಿಷ್ಟ ದರ್ಶನಗಳನ್ನು ‘ಶ್ರೀರಾಮಾಯಣದರ್ಶನಂ’ ಕೃತಿ ಅತ್ಯಂತ ಸಹಜವಾಗಿ ಸಮರ್ಥವಾಗಿ ಉನ್ನತೋನ್ನತವಾಗಿ ತನ್ನಲ್ಲಿ ಧಾರಣ ಮಾಡಿಕೊಂಡಿದೆ. “ಇಲ್ಲಿ ಕಥೆಯೇನೋ ಹಳೆಯದೇ. ಆದರೂ ಅದು, ಅಂದಿನ ದೇವದೇವತೆಗಳು ಇಂದಿನ ನಮ್ಮ ಭಾವನೆಗಳಿಗೆ ಮೈಯಾಗಿ ಬೆಳೆದು ಬಂದಿರುವಂತೆ ನಮ್ಮ ಕಾಲದ ಮಹಾಪುರುಷರ ದರ್ಶನಕ್ಕೆ ಮೆಯ್ಯಾಗಿ ಬಂದಿವೆ. ಇಲ್ಲಿ ಕಥೆಯ ಹಂದರ ವ್ಯತ್ಯಾಸವಾಗಿಯೇ ಇಲ್ಲ. ಮಾಡಿಕೊಂಡಿರಬಹುದಾದ ವ್ಯತ್ಯಾಸಗಳೂ ಮಾಡಿಕೊಂಡ ವ್ಯತ್ಯಾಸಗಳೇನೂ ಅಲ್ಲ; ಮೂಡಿಬಂದ ಬೆಳವಣಿಗೆ. ಪರಿಣಾಮವಶಿಯಾದ ಕಾವ್ಯಕಥೆ ಹೇಗೆ ಬೆಳೆಯಬಹುದೊ ಹಾಗೆ ಬೆಳೆದಿದೆ.”

[1]

ಶ್ರೀರಾಮಕೃಷ್ಣಪರಮಹಂಸರನ್ನು “ಮೂವತ್ತು ಕೋಟಿ ಜನರ ಆಧ್ಯಾತ್ಮಿಕ ಜೀವನದ ಎರಡು ಸಹಸ್ರ ವರ್ಷಗಳ ಸಿದ್ದಿ” ಎಂದು, ಅವರ ಜೀವನಚರಿತ್ರಕಾರರಾದ ಶ್ರೀ ರೊಮೆನ್ ರೋಲಾ ಕರೆದಿದ್ದಾರೆ. “ಇತರ ಆಚಾರ್ಯರು ತಮ್ಮ ತಮ್ಮ ಹೆಸರು ಹೊತ್ತಿರುವ ವಿಶಿಷ್ಟ ಧರ್ಮಗಳನ್ನು ಬೋಧಿಸಿದರು; ಆದರೆ ಈ ಮಹಾಚಾರ್ಯ ಯಾವುದೇ ಸ್ವಂತ ಹಕ್ಕನ್ನು ಮಂಡಿಸಲಿಲ್ಲ. ಪ್ರತಿಯೊಂದು ಧರ್ಮವನ್ನೂ ಅವರು ಅಬಾಧಿತವಾಗಿ ಉಳಿಸಿದರು. ಏಕೆಂದರೆ, ವಾಸ್ತವವಾಗಿ ಅವೆಲ್ಲ ಒಂದು ಚಿರಂತನ ಧರ್ಮದ ಅವಿಭಾಜಂಗಗಳೆಂಬುದನ್ನು ಅವರು ಸಾಕ್ಷಾತ್ಕರಿಸಿಕೊಂಡಿದ್ದರು”[2] ಎಂದು ಸ್ವಾಮಿ ವಿವೇಕಾನಂದರು ನುಡಿಯುತ್ತಾರೆ. ಹಿಂದೂ ಮಹಮ್ಮದೀಯ ಜೈನ ಬೌದ್ಧ ಮುಂತಾದ ಎಲ್ಲ ಧಾರ್ಮಿಕ ತತ್ವಗಳನ್ನೂ ಪರಮಹಂಸರು ಒಂದಾದ ಮೇಲೊಂದರಂತೆ ತಮ್ಮಲ್ಲಿ ಆಹ್ವಾನಿಸಿಕೊಂಡು ವಿಲೀನಗೊಳಿಸಿಕೊಂಡರು, ಕರಗಿಸಿಕೊಂಡರು. ಅವುಗಳೊಂದೊಂದೂ ಭಗವಂತನನ್ನು ಕಾಣುವ ಬೇರೆ ಬೇರೆ ಮಾರ್ಗ ಗಳೆಂದು, ವಸ್ತುತಃ ಅವುಗಳ ಆಂತರ್ಯದಲ್ಲಿ ವೈರುಧ್ಯವಿಲ್ಲವೆಂದು, ಕಂಡುಕೊಂಡ ಅವರು ಅವುಗಳ ವಿಶಿಷ್ಟತೆಯನ್ನು ಅಳಿಸಿಹಾಕಿ ಅವುಗಳನ್ನು ಒಂದು ಮಾಡುವ ಪ್ರಯತ್ನ ಮಾಡಲಿಲ್ಲ. ಬದಲಾಗಿ ಅವುಗಳ ತೋರಿಕೆಯ ತಾರತಮ್ಯದ ದಾರಿಯಲ್ಲಿ ತಮ್ಮ ಶಿಷ್ಯರನ್ನು ಅವರವರ ಸ್ವಭಾವ ಅಭಿರುಚಿಗಳಿಗೆ ತಕ್ಕಂತೆ ಬೆಳೆಯಲು ಬಿಟ್ಟರು ಮತ್ತು ಅವುಗಳ ಒಳತಿರುಳು ಪರಸ್ಪರ ಪೂರಕವೆಂದು ಮನಗಂಡು ಅವುಗಳ ಸದಂಶಗಳನ್ನು ಸಮನ್ವಯಗೊಳಿಸುವ ಮೂಲಕ ಭಗವತ್ ಸಾಕ್ಷಾತ್ಕಾರದ ಹಾಗೂ ಲೋಕಶಾಂತಿ ಸಾಮರಸ್ಯದ ನೂತನ ಪಥವೊಂದನ್ನು ನಿರ್ಮಾಣ ಮಾಡಿದರು. ಸರ್ವಧರ್ಮ ಮತ್ತು ಸಿದ್ಧಾಂತಗಳ ಸಮನ್ವಯವನ್ನು ಮಾತ್ರವಲ್ಲದೆ, ಇಹ-ಪರಗಳ ಸಾಮರಸ್ಯ ಮತ್ತು ಸಮನ್ವಯವನ್ನು ಪರಮಹಂಸರ ಸಮನ್ವಯತತ್ತ್ವ ನಿಚ್ಚಳವಾಗಿ ಪ್ರತಿಪಾದಿಸುತ್ತದೆ. ಪ್ರತ್ಯೇಕ ಘಟಕಗಳೆಂದು ಭಾವಿಸಲಾಗಿದ್ದ ಸಂಸಾರ ಮತ್ತು ಸಂನ್ಯಾಸಗಳನ್ನು ಏಕತ್ರ ಬೆಸೆದು, ಒಂದು ಮತ್ತೊಂದಕ್ಕೆ ಕೀಳಲ್ಲವೆಂದು ಬೋಧಿಸಿ ಆಚರಿಸಿ, ಅವೆರಡರ ಸಮನ್ವಯದಿಂದ ಭಗವತ್‌ಚಿಂತನೆ ಮತ್ತು ಸಾಕ್ಷಾತ್ಕಾರ ಸಾಧ್ಯ ಎಂಬುದನ್ನು ಜೀವಂತವಾಗಿ ನಿದರ್ಶಿಸಿದವರು ಅವರು. ಸರ್ವವಿಧದ ಜತಿ ಮತ ಭ್ರಾಂತಿಗಳಿಂದ ತತ್ತ್ವಸಿದ್ಧಾಂತಗಳಿಂದ ವಿಮುಕ್ತಿಗೊಂಡ ಶುದ್ಧ ಅಧ್ಯಾತ್ಮದ ಶ್ರೀಸಂಕೇತ ಶ್ರೀರಾಮಕೃಷ್ಣರು. ಅವರದು ವಿಶ್ವಮಾನವ ಸಂದೇಶ.[3] ಈ ವಿಶ್ವಮಾನವತಾ ಸಿದ್ದಿಯೇ ಸರ್ವಧರ್ಮ ಸಮನ್ವಯದ ಮುಖ್ಯ ಮತ್ತು ಮೂಲ ಗುರಿ.

ಕೇವಲ ಧಾರ್ಮಿಕರಂಗಕ್ಕೆ ಮಾತ್ರ ಈ ಸಮನ್ವಯ ಸಿದ್ಧಾಂತ ಸೀಮಿತವಾದುದಲ್ಲ. “ಲೋಕದಲ್ಲಿ ಎಲ್ಲಿ ನೋಡಿದರೂ ದ್ವಂದ್ವ, ಪರಸ್ಪರ ವಿರೋಧ ಮತ್ತು ವ್ಯತಿರಿಕ್ತತೆಗಳೇ ಎದ್ದು ಕಾಣುತ್ತವೆ. ವಿವಿಧ ಮತಧರ್ಮ ಜತಿಗಳಲ್ಲಿ, ನಾನಾ ಜನಾಂಗಗಳ ನಡುವೆ, ಮತ ವಿಜ್ಞಾನಗಳ ನಡುವೆ, ವಿಜ್ಞಾನ ಸಾಹಿತ್ಯಗಳ ನಡುವೆ – ಹೀಗೆ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಪರಸ್ಪರ ವಿರೋಧಗಳನ್ನು ಎದುರುಗೊಳ್ಳುತ್ತೇವೆ. ಒಂದು ಕಡೆ ವಾಸ್ತವವಾದ ಮತ್ತೊಂದು ಕಡೆ ಆದರ್ಶವಾದ, ಒಂದು ಕಡೆ ಪರಂಪರೆ ಮತ್ತು ಅದಕ್ಕೆ ಸವಾಲಾಗಿ ಸಮಕಾಲೀನಪ್ರಜ್ಞೆ, ಒಂದು ಕಡೆ ಸಂಸಾರ ಮತ್ತೊಂದು ಕಡೆ ಸಂನ್ಯಾಸ, ಒಂದು ಕಡೆ ಪೌರುಷವಾದ ಮತ್ತೊಂದು ಕಡೆ ದೈವವಾದ – ಇವು ಪ್ರಾಜ್ಞರನ್ನು ಸಹ ಕಕ್ಕಾಬಿಕ್ಕಿಗೊಳಿಸುತ್ತವೆ…. ಇವನ್ನೆಲ್ಲ ಕೂಲಂಕಷವಾಗಿ ಆಳವಾಗಿ ನಿರ್ವಿಕಾರ ಮನೋಭಾವದಿಂದ ಪರೀಕ್ಷಿಸಿದಾಗ ಅವು ಬೇರೆ ಬೇರೆಯಲ್ಲ, ಪರಸ್ಪರ ಪೂರಕ ಎಂದು ತಿಳಿಯುತ್ತದೆ. ಅಂತೆಯೇ ವಾಸ್ತವವಾದ ಮತ್ತು ಆದರ್ಶ ವಾದಗಳು ಪರಸ್ಪರ ವಿರೋಧಾತ್ಮಕವಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಎರಡೂ ತತ್ವಗಳು ಸಮಾವೇಶಗೊಂಡಿರುತ್ತವೆ…. ಪೌರುಷ ದೈವವಾದಗಳು ಸಹ ಪರಸ್ಪರ ವಿರುದ್ಧವೂ ಅಲ್ಲ, ಭಿನ್ನವೂ ಅಲ್ಲ. ಇಂದ್ರಿಯಗಳಿಗೆ ಗೋಚರವಾದ ಘಟನೆಗಳನ್ನು ದೈವೀಘಟನೆಗಳೆಂದು ಕರೆಯಬಹುದು. ಇವು ಮನುಷ್ಯನ ಆಗುಹೋಗುಗಳ ಮೇಲೆ ಪ್ರಭಾವ ಬೀರುತ್ತವೆ.”[4] ಈ ಎಲ್ಲ ವೈರುಧ್ಯಗಳ ಸಮನ್ವಯವೇ ಶ್ರೀರಾಮಕೃಷ್ಣಪರಮಂಸರ ಬೋಧನೆಯ ಸಾರ.

ಇದೇ ಯುಗದ ಮತ್ತೊಬ್ಬ ಮಹಾಮಾನವ ಮಹಾತ್ಮಾಗಾಂಧೀಜಿ ಸರ್ವೋದಯ ತತ್ವದ ಮಹಾನ್ ಪ್ರತಿಪಾದಕರು. ರಸ್ಕಿನ್ನನ ‘ಅನ್‌ಟುದಿಸ್ ಲಾಸ್ಟ್’ ಕೃತಿಯಿಂದ ಪ್ರಭಾವಿತರಾದ ಗಾಂಧೀಜಿ, ಅದನ್ನು ಗುಜರಾತಿ ಭಾಷೆಗೆ ಸ್ವತಃ ಅನುವಾದ ಮಾಡಿದರು. ಅದು ತಮ್ಮ ಬದುಕಿನಲ್ಲಿ ಕೂಡಲೇ ಕಾರ್ಯವ್ಯಾಪಿಯಾದ ಪರಿವರ್ತನೆಯನ್ನು ತಂದಿತೆಂದು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ವಿವರಿಸಿದ್ದಾರೆ. ಈ ಕೃತಿಯಿಂದ ತಾವು ಮೂರು ಮುಖ್ಯ ಬೋಧೆಗಳನ್ನು ಅರಿತೆನೆಂದು ಅವರು ಹೇಳುತ್ತಾರೆ. ಆ ಬೋಧೆಗಳಿವು : ೧. ಎಲ್ಲರ ಒಳಿತಿನಲ್ಲಿಯೇ ತನ್ನ ಒಳಿತು ಅಡಗಿದೆ; ೨. ವಕೀಲನ ವೃತ್ತಿಯೂ, ಕ್ಷೌರಿಕನ ಕಸುಬೂ ಸಮಾನ ಗೌರವವುಳ್ಳವು; ಏಕೆಂದರೆ ಎಲ್ಲರ ಜೀವಿಕೆಯ ಗಳಿಕೆಯೂ ಕಾಯಕದಿಂದಲೇ; ೩. ದುಡಿಮೆಯ-ನೇಗಿಲ ಯೋಗಿಯ ಇಲ್ಲವೇ ಶ್ರಮಜೀವಿಯ ಬಾಳೇ ಭವ್ಯವಾದ ಬಾಳು. ಮೊದಲನೆಯ ತತ್ತ್ವ ಉಳಿದ ಎರಡನ್ನೂ ಒಳಗೊಂಡಿದೆ.[5] ಆ ಕೃತಿಯ ಪ್ರಸ್ತಾವನೆಯಲ್ಲಿ ಗಾಂಧೀಜಿ ಬರೆದಿರುವ ಮಾತುಗಳು ಗಮನಾರ್ಹ : ಇದನ್ನು ಬರೆದಿರುವ ಉದ್ದೇಶ ಎಲ್ಲರ ಕಲ್ಯಾಣ. (ಹೆಚ್ಚು ಜನರದು ಮಾತ್ರವಲ್ಲ?) ಎಲ್ಲರ ಉದಯ, ಉತ್ಕರ್ಷ; ಆದಕಾರಣ ಇದಕ್ಕೆ ‘ಸರ್ವೋದಯ’ ಎಂದು ಹೆಸರಿಟ್ಟಿದ್ದೇನೆ.”[6] “ಈ ಸರ್ವೋದಯ ಚಿಂತನಾ ವಿಧಾನವೂ ಹೌದು, ಜೀವನ ಮಾರ್ಗವೂ ಹೌದು. ಚಿಂತನೆ ರೀತ್ಯಾ ಮನುಷ್ಯ ತಾನು ಏಕಾಂಗಿ, ಪರಿಸರದಿಂದ ದೂರ, ಸೃಷ್ಟಿಯಿಂದ ಬೇರ್ಪಟ್ಟವನು, ಅಸಾಹಯಕ – ಹೀಗೆ ಭಾವಿಸದೆ ಎಲ್ಲರೊಂದಿಗೆ ಜೊತೆಗೂಡಿ ಎಲ್ಲರ ಹಿತದಲ್ಲಿ ತನ್ನ ಹಿತವು ಕಾದಿದೆಯೆಂಬುದನ್ನು ನಂಬಿ ಭವಿಷ್ಯದ ಬಗ್ಗೆ ಆಶಾಪೂರ್ಣ ನಾಗಲು ಉತ್ತೇಜನ ಇದೆ. ಅವನು ಸಮಾಜ ಜೀವಿಯೆಂಬುದನ್ನು ಎತ್ತಿ ತೋರುತ್ತದೆ. ಒಂದೇ ಸತ್ಯ ಸೃಷ್ಟಿಯೆಲ್ಲವನ್ನೂ ಕಾಯುತ್ತದೆ ಎಂಬ ಚಿಂತನೆ ಅಗತ್ಯ. ಜೀವನವಿಧಾನವಾಗಿ ಸರ್ವೋದಯ, ಸಹಕಾರ, ಸಹಬಾಳ್ವೆ ಸಮಭಾಗಿತ್ವ ಸಮತ್ವ ಸಮಾನತೆ – ಇವುಗಳನ್ನು ಒತ್ತಾಯಪಡಿಸುತ್ತದೆ.”[7] ಹೀಗೆ ಸರ್ವರಿಂದ ಸರ್ವರ ಸರ್ವ ಸ್ತರಗಳ ಉದಯ ಉದ್ಧಾರ ಗಳನ್ನು ಗಾಂಧೀ ಪ್ರಣೀತವಾದ ಈ ಸರ್ವೋದಯ ತತ್ವ ಪ್ರತಿಪಾದಿಸುತ್ತದೆ.

ಈ ಯುಗದ ಚಿಂತನೆಯ ಮೇಲೆ ಅಗಾಧ ಪ್ರಭಾವ ಮುದ್ರೆಯನ್ನೊತ್ತಿದ್ದ ಮತ್ತೊಬ್ಬ ಮಹಾಪುರುಷ ಮಹರ್ಷಿ ಅರವಿಂದರು. ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಹಾಕ್ರಾಂತಿಕಾರಿಯಾಗಿದ್ದ ಮೇಧಾವಿ ಅರವಿಂದರು ತಮ್ಮ ಸೆರೆಮನೆವಾಸದ ಅವಧಿಯಲ್ಲಿ  ದಿವ್ಯದರ್ಶನವೊಂದನ್ನು ಅನುಭವಿಸಿದರು: ಅದ್ಭುತ ಪರಿವರ್ತನೆಗೆ ಒಳಗಾಗಿ ಮಹಾಸಂತ ರಾದರು, ದಾರ್ಶನಿಕರಾದರು, ಮಹಾಕವಿಯಾದರು. ಅವರ ದರ್ಶನ ಅವರ ಮಹಾನ್ ಗ್ರಂಥವಾದ ‘Life Divine’ನಲ್ಲೂ ಮತ್ತು ಅವರ ಮಹಾಕಾವ್ಯವಾದ ‘ಸಾವಿತ್ರಿ’ಯಲ್ಲೂ ಅಭಿವ್ಯಕ್ತಗೊಂಡಿದೆ. “ಯುಗದ ಏಕೈಕ ಸರ್ವಪರಿಪೂರ್ಣ ಮಹಾಮತಿ”[8] ಎಂದು ವರ್ಣಿತ ರಾದ ಅರವಿಂದರ ಮುಖ್ಯ ದರ್ಶನ ‘ಪೂರ್ಣದೃಷ್ಟಿ’. ಪೂರ್ಣದೃಷ್ಟಿ ಎಂದರೇನು? ವಿಶ್ವಚೇತನದಲ್ಲಿ ಜಡ-ಚೇತನಗಳ ಸಂಧಿಸ್ಥಾನವಿದೆ….ಅಲ್ಲಿ ಚೇತನಕ್ಕೆ ಜಡ ವಾಸ್ತವ; ಜಡಕ್ಕೆ ಚೇತನ ಸತ್ಯ. ಕಾರಣ ವಿಶ್ವಚೇತನದಲ್ಲಿ ಮನ ಮತ್ತು ಪ್ರಾಣಗಳು ಮಾನ್ಯಂತರ ಸೇತುಗಳು. ನಮ್ಮ ಸಾಧಾರಣ ಅಹಂಕಾರಪೂರಿತ ಮನಸ್ಸಿನ ಮಟ್ಟದಲ್ಲಿ ಅವು-ಮನಸ್ಸು ಮತ್ತು ಪ್ರಾಣ-ಪ್ರತ್ಯೇಕತೆಯ ಸಾಧನಗಳು ಎಂಬಂತೆ ತೋರುತ್ತವೆ….ಆದರೆ ಅದೇ ಮನಸ್ಸು ವಿಶ್ವಚೇತನದ ಎತ್ತರಕ್ಕೆ ಏರಿದಾಗ ಏಕತೆಯ ಸತ್ವವನ್ನೂ ಬಹುತ್ವದ ಸತ್ಯವನ್ನೂ ಏಕಕಾಲಕ್ಕೇ ಗ್ರಹಿಸಬಲ್ಲ ಜ್ಞಾನದಿಂದ ಪ್ರದೀಪ್ತವಾಗಿ, ಏಕ ಮತ್ತು ಅನೇಕದ ಕ್ರಿಯೆ ಪ್ರಕ್ರಿಯೆಗಳ ತತ್ವವನ್ನು ಗ್ರಹಿಸಿ ತನ್ನ ವಿಷಮತೆಗಳನ್ನು ಕೂಡಲೇ ಪರಿಹರಿಸಿ ಒಂದು ದೈವೀ ಸಾಮರಸ್ಯದಿಂದ ಸಮನ್ವಯವನ್ನು ತಾನೇ ಕಂಡುಕೊಳ್ಳುತ್ತದೆ, ಜ್ಯೋತಿರ್ಮಯ ಮನಸ್ಸು….ಜಡ ಮತ್ತು ಚೇತನ ಎರಡೂ ನಿಜವೇ. ಮೂಲತಃ ಒಂದೇ ದಿವ್ಯ ಸ್ವರೂಪ ಎಂಬುದನ್ನು ಎರಡೂ ಒಪ್ಪಿಕೊಳ್ಳುತ್ತವೆ.”[9] ಇನ್ನೂ ಸರಳವಾಗಿ ಹೇಳಬೇಕೆಂದರೆ, ಯಾವ ಪ್ರಜ್ಞೆ ಹಿಂದು ಮುಂದು ಇಂದುಗಳನ್ನು ಏಕಕಾಲದಲ್ಲಿ ಅಥವಾ ಕಾಲಾತೀತವಾದ ಸತ್ಯದಲ್ಲಿ ಅಖಂಡವಾಗಿ ಗ್ರಹಿಸಬಲ್ಲುದೋ ಅದು ಪೂರ್ಣದೃಷ್ಟಿ. “ಸಿದ್ಧನೂ ಸ್ಥಿತಪ್ರಜ್ಞನೂ ಆಗಿ ವಿಜ್ಞಾನಮಯಕ್ಕೇರಿದ ಪೂರ್ಣಯೋಗಿಗೆ ಮಾತ್ರ ಪೂರ್ಣದೃಷ್ಟಿ ಸಾಧ್ಯ. ಅವನಿಗೆ ಅಂಶದೃಷ್ಟಿಯ ಮತ್ತು ಅವಿದ್ಯೆಯ ಕುಂದುಕೊರತೆ ಗಳಿರುವುದಿಲ್ಲ. ಒಂದೊಂದನ್ನೂ ಪೂರ್ಣದೃಷ್ಟಿಯಿಂದ ಗ್ರಹಿಸುವ ಸಂಜ್ಞಾನವೂ, ಸರ್ವವನ್ನೂ ಸಮಷ್ಟಿಯಾಗಿ ಸರ್ವ ಸಂಬಂಧಗಳಲ್ಲಿಯೂ ಗ್ರಹಿಸುವ ಪ್ರಜ್ಞಾನವೂ, ಸಂಜ್ಞಾನ ಪ್ರಜ್ಞಾನಗಳನ್ನು ಒಳಕೊಂಡೂ ಅವುಗಳನ್ನು ಮೀರುವ ವಿಜ್ಞಾನವೂ ಅವನದಾಗುತ್ತವೆ. ನಮಗೆ ಯಾವುದು ವಿಕಾರವೋ ಅದು ಅವನ ‘ದರ್ಶನ’ದಲ್ಲಿ ವಿಕಾಸಲೀಲಾಶೀಲವಾದ ಕೇವಲ ಸೌಂದರ್ಯದ ಒಂದು ಅನಿವಾರ್ಯಾಂಗವಾಗಿ ಅರ್ಥಪೂರ್ಣವಾಗುತ್ತದೆ. ಇಲ್ಲಿಯ ಸಾವು ಸಾವಲ್ಲ; ಇಲ್ಲಿಯ ಅಮಂಗಳ ಎಂಬುದು ಅನ್ನಮಯದಲ್ಲಿ ಮೈದೋರಲೆಳಸುತ್ತಿರುವ ಪರಮ ಮಂಗಳದ ಒಂದು ಲೀಲಾಭಂಗಿ. ಏಕೆಂದರೆ ಕೇವಲವಾದ ಸಚ್ಚಿದಾನಂದದ ಶಿವಶಕ್ತಿ ಸಾವು, ದುಃಖ, ಪಾಪ, ಇತ್ಯಾದಿಗಳ ಹಿಂದೆಯೂ ಮುಂದೆಯೂ ನಿಂತು ಪ್ರಚೋದಿಸುತ್ತಲೂ ಆಕರ್ಷಿಸುತ್ತಲೂ ಇರುವುದು ಅವನಿಗೆ ಸ್ವಯಂವೇದ್ಯ. ಅಂಶದೃಷ್ಟಿಗೆ ದುರಂತವಾದುದು ಪೂರ್ಣದೃಷ್ಟಿಗೆ ದುರಂತವಲ್ಲ. ಖಂಡದೃಷ್ಟಿಗೆ ಅನ್ಯಾಯವೆಂದೂ ಅಧರ್ಮವೆಂದೂ ವ್ಯರ್ಥವೆಂದೂ ನಷ್ಟವೆಂದೂ ತೋರುವ ವ್ಯಾಪಾರಗಳು ಪೂರ್ಣದೃಷ್ಟಿಗೆ ಅಲ್ಲಿಯೇ ಅಷ್ಟರಲ್ಲಿಯೇ ಕೊನೆಗಾಣದೆ, ಅನ್ಯಾಯವು ಪರಮನ್ಯಾಯದ ಕಡೆಗೂ ಅಧರ್ಮವು ಪರಮ ಧರ್ಮದ ಕಡೆಗೂ ವ್ಯರ್ಥವು ಪರಮ ಪ್ರಯೋಜನದ ಕಡೆಗೂ ನಷ್ಟವು ಪರಮ ಲಾಭದ ಕಡೆಗೂ ಚಲಿಸುತ್ತಿರುವುದು ಗೋಚರಿಸುತ್ತದೆ.”[10] ಈ ವಿಚಾರಗಳು ಭಾರತೀಯ ಪ್ರಾಚೀನ ಗ್ರಂಥಗಳಲ್ಲಿ ಮೈದೋರಿವೆಯಾದರೂ ಅವುಗಳಿಗೆ ಒಂದು ನಿರ್ದಿಷ್ಟ ಸ್ಪಷ್ಟ ರೂಪಕೊಟ್ಟು ಸಿದ್ಧಾಂತದೋಪಾದಿಯಲ್ಲಿ ಸುದೀರ್ಘವಾಗಿ ವಿಶ್ಲೇಷಿಸಿ ಪ್ರತಿಪಾದಿಸಿದವರು ಶ್ರೀ ಅರವಿಂದರು.

ಈ ಮೂವರು ಮಹಾವ್ಯಕ್ತಿಗಳ ಜೀವನ ಮತ್ತು ತತ್ವಗಳು ಶ್ರೀ ಕುವೆಂಪು ಅವರ ವ್ಯಕ್ತಿತ್ವ ಮತ್ತು ಕಾವ್ಯದ ಮೇಲೆ ಪ್ರಬಲವಾದ ಪರಿಣಾಮವನ್ನು ಬೀರಿವೆ. ಮೊದಲಿನ ಇಬ್ಬರ ಪ್ರಭಾವ ಕುವೆಂಪು ಅವರ ಮೇಲೆ ನೇರವಾಗಿಯೇ ಆಗಿದ್ದರೆ, ಅರವಿಂದರ ಪ್ರಭಾವ ಅಪ್ರತ್ಯಕ್ಷವಾಗಿ ಉಂಟಾಗಿದೆ. ಏಕೆಂದರೆ ಕುವೆಂಪು ಅರವಿಂದರ ಗ್ರಂಥಗಳನ್ನು ಓದಲು ತೊಡಗುವ ಹೊತ್ತಿಗೆ ಶ್ರೀರಾಮಾಯಣದರ್ಶನಂ ಕಾವ್ಯರಚನೆ ಅರ್ಧಕ್ಕಿಂತ ಹೆಚ್ಚಾಗಿ ಸಾಗಿತ್ತು.[11] ಅರವಿಂದರ ‘ಸಾವಿತ್ರಿ’ ಪ್ರಕಟವಾದುದು ೧೯೫೦ರಲ್ಲಿ. ಆದ್ದರಿಂದ ಶ್ರೀರಾಮಾಯಣದರ್ಶನದ ರಚನೆಯ ಕಾಲದಲ್ಲಿ ಅದನ್ನು ಓದುವಂತೆಯೇ ಇರಲಿಲ್ಲ. ಆದರೂ ಭಾರತೀಯ ಸಾಂಸ್ಕೃತಿಕ ಪರಂಪರೆಯ ಸತ್ವವನ್ನೆಲ್ಲ ಹೀರಿ ಬೆಳೆದಿರುವ ಕವಿ ಚೇತನ ಈ ಪೂರ್ಣದೃಷ್ಟಿಯ ಕಲ್ಪನೆಯನ್ನು ತನ್ನ ಕೃತಿಯಲ್ಲಿ ಅತ್ಯಂತ ಸಹಜವಾಗಿ ಮತ್ತು ಕಲಾತ್ಮಕವಾಗಿ ಧ್ವನಿಸಿದೆ. ಹೀಗೆ ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಗಳು “ಶ್ರೀರಾಮಾಯಣದರ್ಶನವನ್ನು ನಡೆಸುವ, ರೂಪಿಸುವ, ಪೋಷಿಸುವ ಮೂಲಶಕ್ತಿಗಳಾಗಿವೆ.”[12]

ಮಹಾತ್ಮಾ ಗಾಂಧೀಜಿಯವರಿಂದ ಅಸಾಧಾರಣ ಜೀವನದರ್ಶನದ ಸ್ತರಕ್ಕೆ ಏರಿದ ಅಹಿಂಸೆ ಮತ್ತು ಸರ್ವೋದಯ ತತ್ವಗಳು ಶ್ರೀರಾಮಾಯಣದರ್ಶನದ ಆರಂಭದಿಂದಲೇ ಪಾತ್ರ, ಸಂವಾದ ಮತ್ತು ಸನ್ನಿವೇಶಗಳಲ್ಲಿ ಅತ್ಯಂತ ಸಹಜವಾಗಿ ಮತ್ತು ಜೀವಂತವಾಗಿ ಹೊಮ್ಮ ತೊಡಗಿ ಇಡೀ ಕಾವ್ಯವನ್ನೇ ಅಖಂಡವಾಗಿ ಆವರಿಸಿಕೊಂಡಿವೆ. ಆದಿಕಾವ್ಯದಲ್ಲಿ ವಾಲ್ಮೀಕಿ ಮಹರ್ಷಿ, ಕ್ರೌಂಚವನ್ನು ಕೊಂದು ತನ್ನ ವೃತ್ತಿಯನ್ನು ಸಹಜವಾಗಿ ಪಾಲಿಸಿದ ವ್ಯಾಧನಿಗೆ ಶಾಪವೀಯುತ್ತಾನೆ. ಆದರೆ ಸರ್ವೋದಯನಿಷ್ಠ ಮತ್ತು ಅಹಿಂಸಾನಿಷ್ಠ ಮನೋಧರ್ಮದ ಕುವೆಂಪು ಆ ವ್ಯಾಧನಿಗೆ ತನ್ನ ತಪ್ಪು ತಿಳಿಯುವಂತೆ ಮಾಡಿ, ಅವನ ಉದ್ಧಾರ ಪ್ರಜ್ಞೆಯನ್ನು ಜಗೃತಗೊಳಿಸಿ, ಅವನಿಗೆ ಅಹಿಂಸಾದೀಕ್ಷೆ ನೀಡಿಸುತ್ತಾರೆ. ಅಷ್ಟೇ ಅಲ್ಲ, ಅಸುವಳಿದ ಗಂಡು ಕ್ರೌಂಚಕ್ಕೆ ಸಂಜೀವನದಿಂದ ಪ್ರಾಣ ಬರಿಸಿ ಆ ಕ್ರೌಂಚಮಿಥುನಗಳನ್ನು ಒಂದುಗೂಡಿಸಿ ಅವುಗಳ ಆನಂದಗಾನ ಅನೂನವಾಗುವಂತೆ ಮಾಡುತ್ತಾರೆ. ಇಲ್ಲಿ ಪಕ್ಷಿಗಳ ಮತ್ತು ವ್ಯಾಧನ ಸರ್ವೋದಯ ಮಾತ್ರವಲ್ಲದೆ, ಮಹರ್ಷಿಯ ಸರ್ವೋದಯ ದೃಷ್ಟಿ ಕೂಡ ಸೂಚಿತವಾಗಿದೆ. ವ್ಯಕ್ತಿ ತನ್ನ ಅಂತಃಪ್ರಜ್ಞೆಯ ಜಗೃತಿಯಿಂದ ತನ್ನ ಲೋಕಸಹಜ ತಪ್ಪುಗಳ ಸಿಪ್ಪೆಗಳನ್ನು ಸುಲಿದುಕೊಳ್ಳುತ್ತ ತನ್ನ ಉದಯವನ್ನು ಕಂಡುಕೊಳ್ಳುವುದು, ಅನ್ಯರ ಮಾರ್ಗದರ್ಶನ ಪ್ರೇರಣೆ ಪ್ರಭಾವ ಪರಿಶ್ರಮಗಳಿಂದ ಉದ್ಧಾರ ಪಥದಲ್ಲಿ ಗಮಿಸುವುದು ಮತ್ತು ತನ್ನುದ್ಧಾರಕ್ಕಾಗಿ ಶ್ರಮಿಸುತ್ತಲೇ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇತರರ ಸರ್ವರ ಉದ್ಧಾರಕ್ಕಾಗಿ ಕಾರ್ಯ ಪ್ರವೃತ್ತವಾಗುವುದು – ಈ ಮೂರೂ ಬಗೆಗಳಲ್ಲಿ ಸವೋರ್ದಯ ದೃಷ್ಟಿ ಕ್ರಿಯಾಶೀಲ ವಾಗಿರುವುದು ಸ್ಪಷ್ಟವಾಗುತ್ತದೆ. ವ್ಯಷ್ಟಿ ಸಮಷ್ಟಿಗಾಗಿ, ಸಮಷ್ಟಿ ವ್ಯಷ್ಟಿಗಾಗಿ ಸದಾಕಾಲ ತುಡಿಯುತ್ತ ದುಡಿಯುತ್ತ ಸರ್ವಮಂಗಳಾಕಾಂಕ್ಷೆಯನ್ನು ಗರ್ಭೀಕರಿಸಿಕೊಂಡು ಇರುವುದು ಇಲ್ಲಿ ಸುವ್ಯಕ್ತ.

ಸಾಂಪ್ರದಾಯಿಕವಾದ ಹಿಂಸಾಯುತವಾದ ಯಾಗವಿಧಾನವನ್ನು ತೊರೆದು, ಕೇವಲ ಒಂದು ವರ್ಗವೇ ಯಾಗದಿಂದ ಸಂತೃಪ್ತಿ ಹೊಂದುವ ಪಕ್ಷಪಾತತನವನ್ನು ದೂರೀಕರಿಸಿ, ಸಮಾಜದ ಸಕಲವರ್ಗವನ್ನು ಒಳಗೊಳ್ಳುವಂಥ ಮತ್ತು ಅವರೆಲ್ಲರಿಗೂ ತೃಪ್ತಿ ನೀಡುವಂಥ ಅಹಿಂಸಾಯುತ ಯಾಗವಿಧಾನವನ್ನು ಸೂಚಿಸುವ ಜಬಾಲಿಯ ಮಾತುಗಳಲ್ಲಿ ಈ ಸರ್ವೋದಯನಿಷ್ಠೆ ಕೆನೆಗಟ್ಟಿದೆ. ರಾಮಲಕ್ಷ್ಮಣರನ್ನು ಯಾಗವಿಘ್ನಕರಾದ ರಾಕ್ಷಸ ಸಂಹಾರಕ್ಕಾಗಿ ವಿಶ್ವಾಮಿತ್ರ ಮಹರ್ಷಿ ಆಹ್ವಾನಿಸುವಲ್ಲಿ, ಪರಿಚಿತ ಪಥ ತಪ್ಪಿ ಅಹಲ್ಯೆಯ ಅದೃಶ್ಯ ತಪೋರಂಗಕ್ಕೆ ಅವರನ್ನು ಕರೆದೊಯ್ಯುವಲ್ಲಿ, ಸೀತಾ ವಿವಾಹ ಸಂದರ್ಭದಲ್ಲಿ ಅವರನ್ನೊಡಗೊಂಡು ಹೋಗುವಲ್ಲಿ ರಾಮ ಸೀತೆ ಅಹಲ್ಯೆಯರ ಉದ್ಧಾರದ ಪಥ ಅನುಕ್ತವಾಗಿ ಸಮೆಯಲ್ಪಟ್ಟಿದೆ. ಗಗನದ ಚಂದ್ರನಿಗಾಗಿ ಕಾತರಿಸಿ ದುಃಖಿಸುವ ಶಿಶುರಾಮ ಚಂದ್ರನಿಗೆ ಕನ್ನಡಿ ಮೂಲಕ ಚಂದ್ರದರ್ಶನ ಮಾಡಿಸುವ ಮಂಥರೆಯ ಕಾರ್ಯ ಆತನ ಊರ್ಧ್ವಮುಖಿ ಅಭ್ಯುದಯಕ್ಕೆ ಆಕೆ ಮೂಲಕಾರಣಳೆಂಬುದನ್ನು ಅನನ್ಯವಾಗಿ ಧ್ವನಿಸುತ್ತದೆ. ಮಂಥರೆಯ ಬದುಕಿನ ಪೂರ್ವಾಪರಗಳ ಅದ್ವಿತೀಯ ಸನ್ನಿವೇಶ ಚಿತ್ರಣ ಲೋಕತಿರಸ್ಕೃತ ದಲಿತ ಜನತೆಯ ಬಹುಮುಖ ವಿಕಾಸದ ಕಲಾತ್ಮಕ ಪ್ರತಿಮೆಯಾಗಿದೆ. ವಿಕೃತಿಯ ಸಾಕಾರವಾಗಿ ಕಾವ್ಯದಲ್ಲಿ ಅಡಿಯಿಡುವ ಅನಾಥ ಶಿಶು ಮಂಥರೆ ಮಂಥರಾಲಕ್ಷ್ಮಿಯಾಗಿ ಕಾವ್ಯಾಂತ್ಯದಲ್ಲಿ ಅಗ್ನಿಗರ್ಭದಲ್ಲಿ ಸಂಭವಿಸಿ ಭರತನಿಗೆ ರಾಮಾಗಮನದ ಪುಣ್ಯವಾತೆರ್ಯನ್ನರುಹಿ ಕೃತಕೃತ್ಯ ಳಾಗುತ್ತಾಳೆ. ರಾಮಾಭ್ಯುದಯಕ್ಕಾಗಿ ಪರೋಕ್ಷವಾಗಿ ದುಡಿಯುವುದು ಮಾತ್ರವಲ್ಲದೆ ತನ್ನ ಸ್ವಾಭ್ಯುದಯವನ್ನೂ ಸಾಧಿಸುತ್ತಾಳೆ. ಮಂಥರೆಯಿಂದ ರಾಮ, ರಾಮನಿಂದ ಮಂಥರೆ ಬೆಳಕು ಕಾಣುತ್ತಾರೆ.

ಆದಿಕಾವ್ಯದಲ್ಲಿ ಅಸಹನೀಯ ಅವ್ಯಾಹತ ಲೋಕನಿಂದೆಗೆ ಗುರಿಯಾಗುವ ಕೈಕೆ ಈ ಕಾವ್ಯದಲ್ಲಿ ದಶರಥರಾಮ ಲೋಕಾಭಿರಾಮನಾಗುವ ದಿವ್ಯ ವಿಕಸನ ಪಥವನ್ನು ತನ್ನ ಗೌರವ ತ್ಯಾಗದ ಮೂಲಕ ನಿರ್ಮಿಸುತ್ತಾಳೆ. ಅಂತೆಯೇ ಭರತ ರಾಮ ಸುಮಿತ್ರೆ ಕೌಸಲ್ಯೆ ಊರ್ಮಿಳೆ ಯರ ಅಪಾರ ಪ್ರೀತಿ ಅಭಿಮಾನಗಳಿಗೆ ಪಾತ್ರಳಾಗಿ ತ್ಯಾಗಪರಾಯಣಳಾಗಿ ಸಹೃದಯರ ಅಕ್ಕರೆ ಸಹಾನುಭೂತಿಗಳ ಹೃದಯ ಸಿಂಹಾಸನದಲ್ಲಿ ವಿರಾಜಮಾನಳಾಗುವ ಅಪೂರ್ವ ಅವಕಾಶವನ್ನು ಪಡೆದು ಬೆಳಗುತ್ತಾಳೆ.

ಹೀಗೆಯೇ ಕಬಂಧ ವಿರಾಧ ಮಾರೀಚ ಸಂಪಾತಿ ಚಂದ್ರನಖಿ ಧಾನ್ಯಮಾಲಿನಿ ಮುಂತಾದ ನೂರಾರು ವ್ಯಕ್ತಿಗಳು ರಾಮಸೀತಾ ಸಾನ್ನಿಧ್ಯದ ಮಹಿಮೆಯಿಂದ ಕಡೆಯಲ್ಪಟ್ಟು ತಮ್ಮ ಜೀವನೋದಯವನ್ನು ಕಂಡುಕೊಂಡು ಕೃತಾರ್ಥರಾಗಿದ್ದಾರೆ; ಅಷ್ಟೇ ಮಟ್ಟಿಗೆ ಸೀತಾರಾಮರ ಜೀವನ ಪ್ರವಾಹ ಸಿಂಧುಸದೃಶವಾಗಿ ಲೋಕಗೌರವಭಾಜನವಾಗುವುದಕ್ಕೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದಾರೆ. ಅಂಗದ ಆಂಜನೇಯ ಸುಗ್ರೀವವಹ್ನಿರಂಹ ಜಂಬವ ತಾರೆ ಮಂಡೋದರಿ ಮಹಾಪಾರ್ಶ್ವ ಕುಂಭಕರ್ಣ ಮುಂತಾದವರ ಸುಪ್ತ ಆತ್ಮಧೀಧಿತಿಯನ್ನು ಪ್ರಜ್ವಲವಾಗಿ ಬೆಳಗಿಸಿ ಅವರನ್ನು ಭುವನಾದರ್ಶಮೂರ್ತಿಗಳಾಗಿ ಬೆಳೆಯುವುದಕ್ಕೆ ರಾಮ ಸೀತೆಯರು ಹೇಗೆ ಕಾರಣರಾಗಿದ್ದಾರೋ ಹಾಗೆಯೇ ರಾಮಸೀತೆಯರ ವ್ಯಕ್ತಿತ್ವಗಳು ತ್ರಿಕಾಲಾಬಾಧಿತವಾದ ಮಹೋನ್ನತಿಗೇರುವಂತೆ ಮಾಡುವಲ್ಲಿ ಅವರ ಪಾತ್ರವೂ ಅವಿಸ್ಮರಣೀ ಯವಾಗಿ ದುಡಿದಿದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಈ ಸರ್ವೋದಯ ದರ್ಶನದ ಜೀವಂತ ಪ್ರತಿಮೆ ರಾವಣ. ಅವನ ಆರಂಭದ ಕಾಮ ಕ್ರೋಧಾದಿ ದುರ್ಗುಣ ಪರ್ವತಗಳು ಕರಗಿ ಅವನು ರಾವಣತ್ವವನ್ನು ಅಳಿಸಿಕೊಂಡು ರಾಮತ್ವವನ್ನು ಪಡೆದು ಶ್ರೀರಾವಣನಾಗುವಲ್ಲಿ ಅವನ ಸ್ವಂತ ಅಭೀಪ್ಸೆಯ ಜೊತೆಜೊತೆಗೇ ಚಂದ್ರನಖಿ, ಮಾರೀಚ, ಅನಲೆ, ವಿಭೀಷಣ, ಧಾನ್ಯಮಾಲಿನಿ, ಮಹಾಪಾರ್ಶ್ವ, ಸೀತೆ, ಮಂಡೋದರಿಯರ ಅಂತರಂಗ ಬಹಿರಂಗಗಳ ಸತತ ಸತ್ಪ್ರಯತ್ನವೂ ಪರಮಪರಿಣಾಮಕಾರಿಯಾಗಿ ದುಡಿದಿದೆಯೆಂಬುದನ್ನು ಮರೆಯುವಂತಿಲ್ಲ. ಅವರೆಲ್ಲರ ಸದಭೀಪ್ಸೆಯ ತೀವ್ರ ವಿದ್ಯುತ್ ಕಡೆಹಕ್ಕೆ ಸಿಕ್ಕಿದ ರಾವಣಾತ್ಮ ತನ್ನ ಬಹುಮುಖ ಕಾಳಿಕೆಯನ್ನು ಕಳೆದುಕೊಂಡು ಧರ್ಮವಿಗ್ರಹವಾಗಿ ಮಾರ್ಪಡುವುದು ಅನಿವಾರ್ಯವಾಗಿತ್ತು.

ಈ ಇಡೀ ಕಾವ್ಯದಲ್ಲಿ ಸ್ವಾರ್ಥದ ಸುಳಿಯೊಳಗೇ ಸುತ್ತುವ ವ್ಯಕ್ತಿಗಳು ಯಾರೂ ಇಲ್ಲ. ಕ್ಷಣಿಕವಾಗಿ ಅಂಥ ಭಾವ ಕಾಡಿದರೂ ಉತ್ತರೋತ್ತರ ಅವು ಆ ಸುಳಿಯಿಂದ ಪಾರಾಗಿ ಸರ್ವೋದಯದ ವಿಶಾಲ ಭೂಮಿಕೆಯಲ್ಲಿ ಚರಿಸಿ ಕೃತಾರ್ಥವಾಗುತ್ತವೆ. ತನ್ನ ಪತಿಯುದ್ಧಾರ ಕ್ಕಾಗಿ ಪ್ರಾರ್ಥಿಸಲು ಸೀತೆಯನ್ನು ಕೋರುವುದಕ್ಕಾಗಿ ಬಂದ ಮಂಡೋದರಿ ಮೊದಲು ‘ನಿನ್ನ ನೋಂಪಿಯಿಂ ಕಿಡುಗೆನ್ನ ಪತಿಯ ಹೃದಯದ ಪಾಪ ಕಿಲ್ಬಿಷಂ’[13] ಎಂದು ವಿನಂತಿಸಿದರೂ, ಅಂತಿಮವಾಗಿ ಅವಳ ಅಂತರಾಳದಿಂದ ಹೊಮ್ಮಿದ ವಾಣಿಯಿದು: “ಸನ್ಮತಿಯುದಿಸಿ ಶಾಂತಿ ಸುಖಮಕ್ಕೆ ಸರ್ವರಿಗೆ!”[14] ಸೀತಾನ್ವೇಷಣೆಗಾಗಿ ಹನುಮಂತ ಲಂಕೆಗೆ ಬಂದಾಗ ಮಂಡೋದರಿ ರಾವಣರಲ್ಲಿ ಆ ಬಗ್ಗೆ ನಡೆಯುವ ಸಂವಾದದಲ್ಲಿ ‘ನಿನ್ನ ಉಸಿರ ಹರಕೆಯನ್ನೇ ನಿನ್ನ ಕಿವಿ ಧ್ಯಾನ ಸಮಯದಲ್ಲಿ ಆಲಿಸಿತು’ ಎಂದು ರಾವಣ ನುಡಿದ ಮಾತಿಗೆ ಸತಿ ಮಂಡೋದರಿ ‘ನಿನಗೆ ಅಶುಭವನೆಂತು ನೆನೆಯಲಿ?’ ಎಂದುತ್ತರಿಸುತ್ತಾಳೆ. ನನಗೆ ಅಶುಭವನ್ನಲ್ಲದಿದ್ದರೂ ಅವರಿಗೆ ಶುಭವನ್ನು ನೆನೆದಿರುವೆಯೆಂದು ಆತ ಹೇಳಿದಾಗ ಮಂಡೋದರಿಯ ಹೃದಯದಾಳ ದಿಂದ ಹೊಮ್ಮಿದ ಉತ್ತರವಿದು :

ಸರ್ವರ್ಗೆ ಶುಭಮಿರ್ಕೆ, ಪ್ರಭೂ.
ಕಲ್ಯಾಣ ಕಲ್ಪತರು, ಲೋಕಗುರು, ಶಿವನಿದಿರ್
ಪ್ರಾರ್ಥನೆಗೆ ಕಾರ್ಪಣ್ಯಮೇಕೆ?[15]

– ಇದು ಅಖಂಡ ಕಾವ್ಯ ಸ್ಫುರಿಸುವ ಸರ್ವೋದಯ ದರ್ಶನದ ಧ್ವನಿ. “ಹೀಗೆ ಎಲ್ಲ ಪಾತ್ರಗಳೂ ಈ ಕಾವ್ಯದಲ್ಲಿ ತಮ್ಮ ವಿಕಾಸವನ್ನು ಕಂಡುಕೊಳ್ಳುತ್ತವೆ. ….ಈ ವಿಕಾಸಕ್ಕೆ ಯಾರೊಬ್ಬರೇ ಕಾರಣರಲ್ಲ. ತೀರ ಭಿನ್ನ ಸ್ವಭಾವದ ಪಾತ್ರಗಳೂ ತಮಗೆ ಆಗದ ಚೇತನಗಳ ಉದ್ಧಾರಕ್ಕಾಗಿ ಇಷ್ಟವಿದ್ದೊ ಇಲ್ಲದೆಯೊ, ತಿಳಿದೊ ತಿಳಿಯದೆಯೊ ತಪಿಸುತ್ತಾರೆ…. ಸರ್ವೋದಯವೆಂದರೆ ಎಲ್ಲರ ಉದಯ ಎಂದಷ್ಟೇ ಅಲ್ಲ-ಎಲ್ಲ ಮಟ್ಟಗಳ ಉದ್ಧಾರ ಎಂದೂ ಅರ್ಥ; ಎಲ್ಲರಿಂದ ಎಲ್ಲರ ಉದಯ ಎಂದೂ ಅರ್ಥ…..ಹೀಗಾಗಿ ಈ ಕಾವ್ಯದ ಎಲ್ಲ ಪಾತ್ರಗಳೂ ಎಲ್ಲರ ಏಳಿಗೆಗೆ ಒಂದಲ್ಲ ಒಂದು ರೀತಿ ನೆರವಾಗುತ್ತವೆ.”[16]

ಪರಮಹಂಸರು ಪ್ರತಿಪಾದಿಸಿದ ಸರ್ವಧರ್ಮ ಸಮನ್ವಯ ದೃಷ್ಟಿ ಈ ಕಾವ್ಯದಲ್ಲಿ ಅಂತರ್ವಾಹಿನಿಯಾಗಿ ಹರಿದು ಪಾತ್ರ ಸನ್ನಿವೇಶ ಸ್ವಭಾವ ದೃಷ್ಟಿಗಳಲ್ಲಿ ಕಾಣುವ ತೋರಿಕೆಯ ವೈರುಧ್ಯಗಳ ಅಂತರಾಳದಲ್ಲಿರುವ ಸಮನ್ವಯ ಶೀಲತೆಯನ್ನು ಸಾಕ್ಷಾತ್ಕರಿಸಿ ತೋರಿಸಿದೆ. ಇಲ್ಲಿ ಸರ್ವಧರ್ಮ ಸಮನ್ವಯ ಎಂದರೆ ಜೈನ, ಬೌದ್ಧ, ವೀರಶೈವ, ವೈದಿಕ, ಇತ್ಯಾದಿ ಧರ್ಮಗಳನ್ನು ಪ್ರಸ್ತಾಪಿಸಿ, ಅವುಗಳನ್ನು ಒಂದು ವೇದಿಕೆಯಲ್ಲಿ ನೆಲೆಯಲ್ಲಿ ಸಾರೂಪ್ಯ ಗೊಳಿಸಲಾಗಿದೆ ಎಂದರ್ಥವಲ್ಲ. ಇಲ್ಲಿ ಧರ್ಮವೆಂದರೆ ಮತಾಚಾರ್ಯರಿಂದ ಹಣೆಪಟ್ಟಿ ತಗುಲಿಸಿಕೊಂಡ ಧರ್ಮವಲ್ಲ; ಪ್ರತಿಯೊಬ್ಬ ವ್ಯಕ್ತಿಯ ಆತ್ಮವನ್ನು ನಿರ್ದೇಶಿಸುವ, ಅವನ ವ್ಯಕ್ತಿತ್ವ ಕೃತಿ ಉದ್ದೇಶಗಳನ್ನು ರೂಪಿಸುವ ಅವನ ವ್ಯಕ್ತಿ ವಿಶಿಷ್ಟ ಸ್ವಧರ್ಮ. ಇಲ್ಲಿನ ದಶರಥ, ಕೌಸಲ್ಯೆ, ಕೈಕೆ, ಮಂಥರೆ, ರಾಮ, ಲಕ್ಷ್ಮಣ, ಭರತ, ಸೀತೆ, ಊರ್ಮಿಳೆ, ಸುಗ್ರೀವ, ವಾಲಿ, ತಾರೆ, ಆಂಜನೇಯ, ಸಂಪಾತಿ, ರಾವಣ, ವಿಭೀಷಣ, ಕುಂಭಕರ್ಣ, ಚಂದ್ರನಖಿ, ಮಂಡೋದರಿ, ಧಾನ್ಯಮಾಲಿನಿ, ಅನಲೆ, ಮಹಾಪಾರ್ಶ್ವ ಮುಂತಾದ ಎಲ್ಲ ಪಾತ್ರಗಳೂ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಧರ್ಮದಲ್ಲಿ ಕ್ರಿಯಾನಿರತವಾಗಿವೆ. ಅತ್ಯಂತ ಧ್ರುವದೂರದ ಧರ್ಮಪ್ರಜ್ಞೆಯನ್ನು ಪ್ರಕಟಿಸುವ ವಿಭಿನ್ನ ವ್ಯಕ್ತಿಗಳೂ ಇಲ್ಲಿದ್ದಾರೆ. ಆದರೆ ಇವರೆಲ್ಲ ಕಥೆಯ ಹರಿವಿನಲ್ಲಿ, ಅಖಂಡ ಕಾವ್ಯ ಹೊಮ್ಮಿಸುವ ಮಹೋದ್ದೇಶದಲ್ಲಿ ಪಾಲುಗಾರರಾಗುತ್ತ ತಮ್ಮ ತಮ್ಮ ಧ್ರುವಾಂತರದ ವೈರುಧ್ಯಗಳನ್ನು  ಸಮನ್ವಯಗೊಳಿಸಿಕೊಳ್ಳುತ್ತ ಪರಸ್ಪರರ ಕಲ್ಯಾಣಕ್ಕಾಗಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ದುಡಿಯುತ್ತ ಬಾಗುತ್ತ, ಅಂತಿಮವಾಗಿ ಪರಸ್ಪರ ಸುಮುಖರಾಗಿ ಸುಮನಸ್ಕರಾಗಿ ಸಮಾನ ಹೃದಯರಾಗಿ ಸ್ಪಂದಿಸುತ್ತ ಪರಮಾಶಯದಲ್ಲಿ ಸತ್ಸಂಬಂಧಿಗಳಾಗಿ ಮಾರ್ಪಡುವ ಅಸಾಧಾರಣವಾದ, ಆದರೂ ಸುಸಂಬದ್ಧವೂ ಸಹಜವೂ ಎನ್ನಿಸುವ, ಬೆಳವಣಿಗೆ ಯನ್ನು ಪಡೆದು ಈ ಕೃತಿಗೆ ಒಂದು ಅದ್ವಿತೀಯವಾದ ಅನನ್ಯತೆಯನ್ನು ಎತ್ತರವನ್ನು ಕೇಂದ್ರ ಧ್ವನಿಗೋಪುರವನ್ನು ನಿರ್ಮಿಸಿಕೊಟ್ಟಿದ್ದಾರೆ.

ದಶರಥ ಕೌಸಲ್ಯೆ ಇಬ್ಬರೂ ಶ್ರೀರಾಮನ ಯೌವರಾಜಭಿಷೇಕದಲ್ಲಿ ಆಸಕ್ತರು. ಕೈಕೆ ಮಂಥರೆ ಭರತನ ಹಿತಾಸಕ್ತಿಗಳ ರಕ್ಷಣೆಯಲ್ಲಿ ಅನುರಕ್ತರು. ಜೀವನ ಪ್ರವಾಹ ತಮ್ಮ ಉದ್ದೇಶಕ್ಕೆ ವಿರುದ್ಧ ದಿಕ್ಕಿನಲ್ಲಿ ಪ್ರವಹಿಸತೊಡಗಿದಾಗ ದಶರಥ ಕೌಸಲ್ಯೆಯರು ಕೈಕೆಯ ಇಚ್ಛೆಗೆ ಮಣಿಯುವ ಮೂಲಕ ಕುಟುಂಬ ಸಂಘರ್ಷ ವಿಘಟನೆಯ ತೀವ್ರಸ್ತರವನ್ನು ಮುಟ್ಟದಂತೆ ಸಂಭಾಳಿಸಿಕೊಳ್ಳುತ್ತಾರೆ. ಭರತನ ಪರಮಸಾತ್ವಿಕ ಪ್ರವೃತ್ತಿ ಎದುರು ತಮ್ಮ ಬಯಕೆ ಬಯಲಾಗತೊಡಗಿದಾಗ ಕೈಕೆ ಮಂಥರೆಯರು ತಮ್ಮ ಮನಸ್ಸನ್ನು ತಿದ್ದಿಕೊಂಡು ಋತದಿಚ್ಚೆಗೆ ಬಾಗುತ್ತಾರೆ, ತಮ್ಮ ಕ್ಷಣಿಕ ತಾಮಸತ್ವವನ್ನು ಕಳೆದುಕೊಂಡು ತ್ಯಾಗವನ್ನು ಮೆರೆಯುತ್ತಾರೆ, ಭೋಗಾಪೇಕ್ಷೆಯನ್ನು ತೊರೆಯುತ್ತಾರೆ. ಅನಿರೀಕ್ಷಿತ ಘಟನಾವಳಿಗಳ ಅನಪೇಕ್ಷಿತ ತಿರುವಿನಿಂದ ಪರಸ್ಪರ ವಿರುದ್ಧ ನೆಲೆಗಳಲ್ಲಿ ನಿಲ್ಲಬೇಕಾಗಿದ್ದ ಕೈಕೆ ಕೌಸಲ್ಯೆಯರು ಪರಸ್ಪರರನ್ನು ಅರಿಯುತ್ತಾರೆ. ಅರಿತು ಆಕ್ಕರೆಯ ಆಲಂಬನದಿಂದ ಬಂಧಿತರಾಗುತ್ತಾರೆ. ಅಂತೆಯೇ ರಾಮಾಗಮನದ ಸಂದರ್ಭದಲ್ಲಿ ಕೈಕೆ ರಾಮಜನನಿಯ ತೋಳ್ತೆಕ್ಕೆಯಲ್ಲಿ ಶಿಶುವಾಗಿ ದುಃಖಿಸುತ್ತಾಳೆ; ಕೌಸಲ್ಯೆ ಅವಳನ್ನು ತಾಯಿಯಂತೆ ಸಂತವಿಸಿ ರಾಮದರ್ಶನಕ್ಕೆ ಕರೆದೊ ಯ್ಯುತ್ತಾಳೆ. ರಾಮನ ವನವಾಸಗಮನಕ್ಕೆ ಆಗ್ರಹಿಸಿದ ಇದೇ ಕೈಕೆ ರಾಮನನ್ನು ಎದುರು ಗೊಂಡು,

….ನಿನ್ನ ಮೆಯ್ಯಂ ಪೆತ್ತ ತಾಯಲ್ತು,
ನಿನ್ನಾತ್ಮಮಂ ಪೆತ್ತಳಾನೆಂಬ ಪೆರ್ಮೆಯಂ
ನುಡಿಯಿಲ್ಲದೆಯೆ ನುಡಿದಳೆಂಬಂತೆ ಪರಸಿದಳ್
ಚಿನ್ಮಯ ಮಹಾಮನದಿಂ[17]

ದುಡುಕು, ಶೀಘ್ರಕೋಪ, ತೀವ್ರಭಾವುಕತೆ ಮತ್ತು ಉಗ್ರಭ್ರಾತೃನಿಷ್ಠೆಯ ಲಕ್ಷ್ಮಣ ಅಣ್ಣ ರಾಮನ ಸಮಯಪ್ರಜ್ಞೆ, ಸಂಯಮ, ದೂರದೃಷ್ಟಿ, ತಾರತಮ್ಯ ವಿವೇಕಜ್ಞಾನ, ಸ್ವಾರ್ಥತ್ಯಾಗ ಮತ್ತು ಲೋಕಕಾರುಣ್ಯಗಳ ಬೆಳುದಿಂಗಳಲ್ಲಿ ಮಿಂದು ತನ್ನ ಕೆಂಡತನವನ್ನು ಮಾಗಿಸಿ ಕೊಳ್ಳುತ್ತಾನೆ. ತನ್ನ ಸತಿಯನ್ನಪಹರಿಸಿ ತನ್ನನ್ನು ಅನಂತವೇದನೆಯ ಅಗ್ನಿಕುಂಡದಲ್ಲಿ ದೂಡಿದ ಮತ್ತು ಅಸಂಖ್ಯಾತ ನಿರಪರಾಧಿಗಳ ಹತ್ಯೆಗೆ ಕಾರಣನಾದ ರಾವಣನ ಬಗ್ಗೆ ಅದಮ್ಯ ಕ್ರೋಧದ್ವೇಷಗಳನ್ನಲ್ಲದೆ ಮತ್ತೇನನ್ನೂ ವ್ಯಕ್ತಪಡಿಸುವುದು ಅಸಹಜವೆನಿಸುವ ಸಂದರ್ಭದಲ್ಲಿ ಶ್ರೀರಾಮ ಆಡುವ ಮಾತುಗಳಿವು :

ನಾನೆ ಅವನಲ್ಲದಿರೆ ಆ ದಶಗ್ರೀವಂಗದೇನ್
ಸೀತೆಯನ್ನೊಲಿವುದುಂ ಮೇಣವಳನುಯ್ವುದುಂ,
ಕೇಳ್, ಮೊರ್ಗ್ಗೆ?[18]

ಅಷ್ಟೇ ಅಲ್ಲ, ರಾವಣನಿಗೆ ಸಂಸ್ಕಾರವೆಸಗುವ ಬಗ್ಗೆ ವಿಭೀಷಣ ಅನುಮಾನ ವ್ಯಕ್ತಪಡಿಸಿದಾಗ ರಾಮನ ಬಾಯಿಂದ ಹೊಮ್ಮುವ ಈ ನುಡಿಗಳು ಈ ಸಮನ್ವಯ ದರ್ಶನದ ಉಜ್ವಲ ನಿದರ್ಶನಗಳಾಗಿವೆ :

ಮುಂದೆ, ಮುಂಭವದಿ, ಮಗನಾಗಿ ಸಂಭವಿಪಂಗೆ
ತಂದೆಯಾಗುವನಿಂದೆ ಸಂಸ್ಕಾರವೆಸಗುವೊಲ್,
ನೀನಿಂದು ರಾವಣಂಗೆಸಪ ಸತ್ಕ್ರಿಯೆಯೊಳಾಂ
ಸುಪ್ರೀತನೆಂ! ವೈರಿಯಾದೊಡಮೆನಗೆ ಸಮಂ
ಆ ದಿವಂಗತ ದೈತ್ಯನತುಳ ವೀರ್ಯದೊಳಾತ್ಮ
ಸತ್ವದೊಳ್ ನಿರ್ಭೀತಿಯೊಳ್ ತೇಜದೊಳ್, ಮತ್ತೆ
ಚಿತ್ತಶುದ್ದಿಯೊಳಂತೆ ಚಿತ್‌ತಪಸ್ ಶಕ್ತಿಯಲಿ![19]

ಪತಿಯನ್ನಗಲಲಾರದೆ ಅವನೊಡನೆ ಉಗ್ರಭೀಕರ ಅರಣ್ಯದ ಸಂಕಷ್ಟಗಳ ಸರಣಿಗೆ ಎದೆಯೊಡ್ಡಲು ಹಿಂದೆಗೆಯದೆ ವನಕ್ಕೆ ನಡೆದವಳು ಸೀತೆ; ಪತಿಪರಾಯಣೆಯಾದರೂ ಅಕ್ಕ ಭಾವಂದಿರ ನಿರಂತರ ನಿರುಪಾಧಿಕ ಸೇವೆಗೆ ತನ್ನಿಂದ ಅಡ್ಡಿಯಾಗಬಾರದೆಂದು ಮತ್ತು ಮಗ ಸೊಸೆಯನ್ನು ಅಗಲಿ ಜರ್ಝರಿತಮನಸ್ಕರಾದ ಅತ್ತೆಮಾವಂದಿರಿಗೆ ತನ್ನಿಂದ ಮತ್ತಷ್ಟು ದುಃಖಪ್ರಾಪ್ತವಾಗಬಾರದೆಂದು ಹಿಂದೆಯೇ ಉಳಿದು ಅವರೆಲ್ಲರ ಕ್ಷೇಮಕ್ಕಾಗಿ ತಪೋನಿರತಳಾ ದವಳು ಊರ್ಮಿಳೆ. ಆದರೂ ಒಬ್ಬೊಬ್ಬರೂ ಒಬ್ಬರ ಸುಖ ಸಂತೋಷ ನೆಮ್ಮದಿಗಳಿಗಾಗಿ ಮತ್ತೊಬ್ಬರು ಸದಾ ಕಾತರರು.

ಸೀತೆಯ ಪರಮೋದ್ದೇಶ ರಾಮಮಂಗಲ, ರಾಮಮಿಲನ; ಮಂಡೋದರಿಯ ಪರಮೋದ್ದೇಶ ರಾವಣಕ್ಷೇಮ, ರಾವಣ ಮನಃಪರಿವರ್ತನ. ರಾವಣನೆಂದರೆ ಸೀತೆಗೆ ತೀವ್ರ ದ್ವೇಷ, ತಿರಸ್ಕಾರ, ಅಸಹ್ಯ; ಮಂಡೋದರಿಗೆ ರಾಮನ ಬಗ್ಗೆ ದ್ವೇಷವಿಲ್ಲವಾದರೂ ರಾವಣನ ಬಗ್ಗೆ ಸಹಜವಾದ ತೀವ್ರ ಪ್ರೇಮ. ಇವರಿಬ್ಬರ ಪರಸ್ಪರ ಭೇಟಿ, ಗೌರವಯುತ ಸಂವಾದ,   ನಡವಳಿಕೆಗಳು ಸಮಾನ ಕ್ಷೇಮ ಕಾತರತೆಯಿಂದ ಅರ್ಥಪೂರ್ಣವಾಗುತ್ತವೆ; ಹೃದಯೋದ್ದೇಶ ಗಳು ಸಮನ್ವಯಗೊಳ್ಳುತ್ತವೆ. ಇದರಿಂದಾಗಿ, ರಾವಣನನ್ನು ಕಃಪದಾರ್ಥದಂತೆ ಭಾವಿಸಿದ್ದ ಸೀತೆ, ತನ್ನ ಪತಿಹಿತಕ್ಕಾಗಿ ಪ್ರಾರ್ಥಿಸಿದಂತೆ ರಾವಣನ ಆತ್ಮೋದ್ಧಾರಕ್ಕಾಗಿಯೂ ಪ್ರಾರ್ಥನಾ ನಿರತಳಾಗುತ್ತಾಳೆ. ಅಂತೆಯೇ ಮಂಡೋದರಿ ಕೂಡ ಸರ್ವರ ಶುಭೋದಯಕ್ಕಾಗಿ ವ್ರತ ಬದ್ಧಳಾಗುತ್ತಾಳೆ.

ಅನಲೆಗೆ ರಾವಣನೆಂದರೆ ಅತೀವ ವಾತ್ಸಲ್ಯ; ಅಪ್ಪ ವಿಭೀಷಣನೆಂದರೆ ಮುಗಿಯದ ಮಮತೆ; ಕುಂಭಕರ್ಣನೆಂದರೂ ಅಳೆಯಲಾಗದ ಅಕ್ಕರೆ. ವಿಭೀಷಣ-ರಾವಣರ ನಡುವೆ ಸಂಘರ್ಷಗಳೇರ್ಪಟ್ಟಾಗ ಆಕೆ ಅಪ್ಪನ ಕಡೆ ವಾಲಿದರೂ ರಾವಣನ ಮನದಾಳದ ಪ್ರೇಮಕ್ಕೆ ಮತ್ತು ಅಪ್ಪನ ಅನುಮತಿಗೆ ಓಗೊಟ್ಟು ರಾವಣಾಂತಃಪುರದಲ್ಲೇ ಉಳಿಯುತ್ತಾಳೆ ಅವಳು. ದೊಡ್ಡಪ್ಪನ ಬಗ್ಗೆ ಮಹದಭಿಮಾನ ವಾತ್ಸಲ್ಯಗಳು ವಿಜೃಂಭಿಸಿದರೂ ಸೀತೆಯ ಬಗೆಗೂ ಅವಳಿಗೆ ಅಂಥದೇ ಕರುಣೆ, ಅಭಿಮಾನ, ಗೌರವ, ಭಕ್ತಿ. ದೊಡ್ಡಪ್ಪನ ಮಂಗಳಾಕಾಂಕ್ಷೆಯ ಜೊತೆಜೊತೆಗೇ ಸೀತಾ ಕಲ್ಯಾಣಕಾಂಕ್ಷೆಯೂ ಮಿಳಿತ ಅವಳಲ್ಲಿ. ಈ ಎರಡೂ ಹಿತಗಳೂ ಆಶ್ಚರ್ಯಕರ ಅವಿರೋಧದ ಸಮನ್ವಯವನ್ನು ಕಂಡುಕೊಂಡಿವೆ ಅವಳಲ್ಲಿ. ರಾವಣನಿಗೂ ಹಾಗೆಯೇ. ಅವನಿಗೆ ಅವಳ ಬಗ್ಗೆ ಅನುಪಮ ಪ್ರೀತಿ; ಆದರೆ ತಮ್ಮ ವಿಭೀಷಣನ ಬಗ್ಗೆ ಅಸಹನೆಯ ಅಗ್ನಿವರ್ಷ. ವಿಭೀಷಣನ ಸ್ವಭಾವ ಕೂಡ ಅಂಥದೇ. ಅಣ್ಣನ ಬಗ್ಗೆ ತೀವ್ರ ಅಭಿಮಾನ ಗೌರವ ಅಕ್ಕರೆ; ಅವನ ಕೃತ್ಯದ ಬಗ್ಗೆ ತೀವ್ರ ಅಸಂತೋಷ; ರಾಮನ ಬಗ್ಗೆ ಕೂಡ ಗೌರವ. ತಾಯ್ನಾಡಿನ ಮೇಲೆ ಅಗಾಧ ಪ್ರೇಮ, ರಾಮನ ಧರ್ಮಪ್ರಜ್ಞೆಯ ಬಗ್ಗೆ ಒಲವು. ದೇಶದ್ರೋಹ ಧರ್ಮದ್ರೋಹ ಎರಡೂ ಘಟಿಸದಂತೆ ಅವನ ಸಮನ್ವಯಪ್ರಜ್ಞೆ ಕ್ರಿಯಾಶೀಲವಾಗುತ್ತದೆ.

ಸೀತೆಯ ಬಗ್ಗೆ ಪ್ರಬಲವಾದ ಅದಮ್ಯವಾದ ಕಾಮವ್ಯಾಮೋಹ, ರಾಮನ ಬಗ್ಗೆ ಅಷ್ಟೇ ಪ್ರಗಾಢವಾದ ದ್ವೇಷ ಅಸೂಯೆ ಅಸಹನೆ ರಾವಣನಿಗೆ. ಕೊನೆಯವರೆಗೂ ಅವನಿಗೆ ಸೀತೆಯ ಬಗ್ಗೆ ಆಕರ್ಷಣೆ ಅತ್ಯಂತ ತೀವ್ರವಾಗಿಯೇ ಉಳಿಯುತ್ತದೆ, ಆದರೆ ಅದು ಪ್ರೇಮಾಕರ್ಷಣೆ ಯಾಗಿ ವಾತ್ಸಲ್ಯಾಕರ್ಷಣೆಯಾಗಿ ಗೌರವಾಕರ್ಷಣೆಯಾಗಿ ರೂಪುದಾಳುತ್ತದೆ. ಸೀತೆಯನ್ನು ವಿಟನಾಗಿ ಕಾಮಿಸಿದವನು ಶಿಶುವಾಗಿ ಅವಳ ಮಡಿಲಲ್ಲಿ ಅಳುತ್ತಾನೆ. ಅವನಿಗೊದಗಿದ ಅತೀಂದ್ರಿಯಾನುಭವದಲ್ಲಿ ಅವನು ಮತ್ತು ಕುಂಭಕರ್ಣರಿಬ್ಬರೂ ಸೀತೆಯ ಮಕ್ಕಳಾಗಿ  ಪರಿವರ್ತಿತರಾಗುತ್ತಾರೆ. ಹೀಗೆ ಅವನ ಪಶುಕಾಮ ಮಾಗಿ ಶಿಶುಪ್ರೇಮವಾಗಿ ಹಣ್ಣಾಗುತ್ತದೆ. ಅವನ ರಾವಣತ್ವ ಅವನೊಳಗೇ ಇದ್ದ ರಾಮತ್ವಕ್ಕೆ ಶರಣಾಗುತ್ತದೆ. ಆ ರಾಮತ್ವ ವಿಜೃಂಭಿಸಿ ಆ ರಾವಣತ್ವವನ್ನು ಆಪೋಶನ ತೆಗೆದುಕೊಂಡು ತನ್ನಲ್ಲಿ ಲೀನವಾಗಿಸಿಕೊಳ್ಳುತ್ತದೆ.

ಪಾತ್ರಗಳ ವಿಕಾಸದ ಸ್ತರದಲ್ಲಿ ಮಾತ್ರವಲ್ಲದೆ ಆಲೋಚನಾಸ್ತರದಲ್ಲೂ ಈ ಕಾವ್ಯ ಅದ್ಭುತವಾದ ಸರ್ವಧರ್ಮಸಮನ್ವಯತೆಯನ್ನು ಕಂಡರಿಸಿದೆ. ಒಂದು ಕಡೆ ವಸಿಷ್ಠ ಪರಂಪರಾಗತ ಯಜ್ಞಾಚರಣೆಯ ಸೂಚನೆಯ ಮೂಲಕ ಸ್ಥಗಿತ ಸಂಪ್ರದಾಯಕ್ಕೆ ಚಾಲನೆ ಕೊಡಬಯಸಿದರೆ, ಸಮಕಾಲೀನ ಮನೋಧರ್ಮಕ್ಕೆ ಒಗ್ಗದ ಆ ಗೊಡ್ಡು ಆಚರಣೆಯನ್ನು ವಿರೋಧಿಸಿ ಸರ್ವಪ್ರಜಸಮ್ಮತವಾದ ಅಹಿಂಸಾ ಪ್ರಧಾನವಾದ ಸಮಷ್ಟಿ ಹಿತಾಕಾಂಕ್ಷೆಯಾದ ವಿಚಾರಧಾರೆಯನ್ನು ಮುಂದಿಡುತ್ತಾನೆ, ಜಬಾಲಿ. ವಿಭೀಷಣನ ಪಾತ್ರ ಚಿತ್ರಣದಲ್ಲಿ ರಾಜನಿಷ್ಠೆ ಮತ್ತು ರಾಷ್ಟ್ರನಿಷ್ಠೆಗಳ ನಡುವಣ ಸೂಕ್ಷ್ಮ ಸಂಘರ್ಷವನ್ನು ಸೃಷ್ಟಿಸಿ, ವಿಭೀಷಣ ರಾವಣನ ತಮ್ಮನಾಗಿ ಭ್ರಾತೃನಿಷ್ಠೆ ಮತ್ತು ರಾಜನಿಷ್ಠೆಗಳನ್ನು ಮೆರೆಯುವುದು ಅವಶ್ಯಕ ಎನಿಸಿದರೂ ಅದಕ್ಕಿಂತ ಮಿಗಿಲಾದುದು ಮತ್ತು ಚಿರಕಾಲಿಕವಾದುದು ರಾಷ್ಟ್ರನಿಷ್ಠೆಯೆಂಬುದನ್ನು ಅತ್ಯಂತ ತರ್ಕಸಮ್ಮತವಾಗಿ ಹೃದಯಂಗಮವಾಗಿ ಪ್ರತಿಪಾದಿಸಲಾಗಿದೆ. ರಾಮಾಯಣ ಕಥೆಯ ಉತ್ತರಾರ್ಧವೆಲ್ಲ ಬಗೆಬಗೆಯ ಯುದ್ಧದ ಮಾರ್ಮೊಳಗಿನಿಂದ ತುಂಬಿ ಹೋಗಿದ್ದರೂ ‘ದಶಾನನ ಸ್ವಪ್ನಸಿದ್ದಿ’ಯ ಪ್ರಸಂಗದಲ್ಲಿ ಸಮರದ ಸರ್ವವಿನಾಶ ದೃಷ್ಟಿಯನ್ನು ಸಾರುತ್ತ ಯುದ್ಧನಿಷೇಧದ ಅಗತ್ಯವನ್ನು ಮಾರ್ಮಿಕವಾಗಿ ಧ್ವನಿಸಲಾಗಿದೆ. ಇವು ಒಂದೆರಡು ನಿದರ್ಶನಗಳು ಮಾತ್ರ.

ಹಾಗೆಯೇ ಕಟುವಾಸ್ತವತೆ, ಆದರ್ಶಪರಪತೆ, ಉದ್ಧಟತನ, ಹಿಂಸೆ, ಅಹಿಂಸೆ; ದೈವವಾದ, ಪೌರುಷವಾದ, ಪ್ರೀತಿ, ದ್ವೇಷ, ಸಂಪ್ರದಾಯಶೀಲತೆ, ಪ್ರಗತಿಶೀಲತೆ, ಭೂತಪ್ರಜ್ಞೆ, ವರ್ತಮಾನ ಪ್ರಜ್ಞೆ,  ಭವಿಷ್ಯತ್‌ಕಾಲೀನ ಪ್ರಜ್ಞೆ, ಸರ್ವಾಧಿಕಾರ ನಿಲುವು, ಪ್ರಜತಂತ್ರ ಧೋರಣೆ, ಅಧ್ಯಾತ್ಮ, ವಿಜ್ಞಾನ, ಮುಂತಾದ ತೋರಿಕೆಯ ವೈರುಧ್ಯಗಳು ಕಾರ್ಯಕಾರಣ ಸುಸಂಬದ್ಧವಾಗಿ ಮತ್ತು ಕಲಾತ್ಮಕವಾಗಿ ಸಮನ್ವಯಗೊಂಡಿರುವುದನ್ನು ಶ್ರೀರಾಮಾಯಣ ದರ್ಶನಂ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದೆ.

ಶ್ರೀ ಅರವಿಂದರು ಪ್ರತಿಪಾದಿಸಿದ ‘ಪೂರ್ಣದೃಷ್ಟಿ’ ಕೇವಲ ಕಲಾಜಗತ್ತಿಗೆ ಮಾತ್ರ ಸಂಬಂಧಿಸಿದುದಲ್ಲ. ಆದರೆ ಈ ‘ಪೂರ್ಣದೃಷ್ಟಿ’ಯ ದರ್ಶನ ಇಡೀ ಶ್ರೀರಾಮಾಯಣ ದರ್ಶನವನ್ನೇ ತನ್ನ ಸುವಿಶಾಲ ತೆಕ್ಕೆಯಲ್ಲಿ ಹಿಡಿದಿಟ್ಟಿದೆಯೆನ್ನಬಹುದು. ಈ ಅಖಂಡ ಕಾವ್ಯವೇ ‘ಪೂರ್ಣದೃಷ್ಟಿ’ಯ ಒಂದು ಪ್ರತಿಮೆ. “ಖಂಡದೃಷ್ಟಿಗೆ ಅಪೂರ್ಣವಾಗಿ ವಿಕಾರವಾಗಿ ಅಮಂಗಳಕರವಾಗಿ ವಿರೋಧಾಭಾಸವಾಗಿ ಸಮಸ್ಯಾತ್ಮಕವಾಗಿ ಅಸಂಬಂದ್ಧವಾಗಿ ತೋರುವ ಸಂಗತಿಗಳು ಅಖಂಡದೃಷ್ಟಿಗೆ ಸಕಾರಣವಾಗಿ ಸಮರ್ಪಕವಾಗಿ ಮಂಗಳಕರವಾಗಿ ಅವಿರೋಧ ವಾಗಿ ಅಕ್ಲಿಷ್ಟವಾಗಿ ಸುಸಂಬದ್ಧವಾಗಿ ಕಾಣುತ್ತವೆ.”[20] ಈ ದೃಷ್ಟಿಯಿಂದ ಶ್ರೀರಾಮಾಯಣ ದರ್ಶನದ ಪ್ರತಿಯೊಂದು ಪಾತ್ರ ಮತ್ತು ಸನ್ನಿವೇಶಗಳೂ ಅತ್ಯಂತ ಅರ್ಥಪೂರ್ಣವಾಗಿ ವಿಕಾಸಗೊಂಡಿರುವುದನ್ನು ಗುರುತಿಸಬಹುದು.

ಕಾವ್ಯಾರಂಭದಲ್ಲಿ ವಾಲ್ಮೀಕಿ ಮಹರ್ಷಿ ಬೇಡನಿಗೆ ಶಾಪವೀಯದೆ ಅವನಲ್ಲಿ ಅಹಿಂಸೆ ಯನ್ನು ಜಗೃತಗೊಳಿಸಿ, ಆತ್ಮಾವಲೋಕನ ಶಕ್ತಿಯನ್ನು ನೀಡಿ, ಸತ್ತ ಕ್ರೌಂಚವನ್ನು ಬದುಕಿಸುವ ಘಟನೆ ಖಂಡದೃಷ್ಟಿಗೆ ಸಾಮಾನ್ಯ ಸನ್ನಿವೇಶ. ಆದರೆ ಈ ಪತಿತೋದ್ಧರಣ ಕಾರ್ಯ ಮತ್ತು ಪರಿವರ್ತನ ಕಾರ್ಯ ಕಾವ್ಯದುದ್ದಕ್ಕೂ ಅವಿರತವಾಗಿ ಸಾಗುತ್ತ ರಾವಣನ ಮಹಾಪರಿವರ್ತನೆಯಲ್ಲಿ ಮಾತ್ರವಲ್ಲದೆ, ಶ್ರೀರಾಮ-ಸೀತೆಯರು ಸಹ ಅಗ್ನಿ ಗರ್ಭದಿಂದ- ವತರಿಸುವ ಮೂಲಕ ಅಪೂರ್ವ ಪರಿವರ್ತನೆಯಲ್ಲಿ-ಲೋಕದಲ್ಲಿ ಅತಿಮನಸ್ಸು ಅವತರಿ ಸುವುದು-ಪರ್ಯವಸಾನಗೊಳ್ಳುವುದನ್ನು ಗಮನಿಸಿದಾಗ ಈ ಘಟನೆಯ ವಿಕಾಸದ ಹರವು ಎಷ್ಟು ವ್ಯಾಪಕವೆಂಬುದು ವಿದಿತವಾಗುತ್ತದೆ. ರಾಜ ದಶರಥ ಅರಮನೆಯ ಸಿರಿದೋಟದಲ್ಲಿ ತಿರುಗುತ್ತ, ತನ್ನ ಮರಿಗಳ ತೆರೆವಾಯ್ಗೆ ತನ್ನ ಕೊಕ್ಕನ್ನಿಟ್ಟು ಗುಟುಕು ಕೊಡುವ ತಾಯ್ವಕ್ಕಿಯನ್ನು ಕಂಡು, ಅದು ಮಕ್ಕಳಿಲ್ಲದ ತನ್ನ ಬಡತನವನ್ನಾಡಿ ಮೂದಲಿಸಿದಂತೆ ಭಾಸವಾಗಿ ಆ ವಿಹಂಗಮ ಸುಖಕೆ ಕಾತರಿಸಿ ಕರುಬಿ ಕುದಿಯುತ್ತಾನೆ. ಈ ಒಂದು ಸಣ್ಣ ಸಾಮಾನ್ಯ ಘಟನೆ “ವಿಭೂತಿಯಂ ತಿಕೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ ಹೃದಯದಲಿ!” ಮಂಥರೆ ಶಿಶುರಾಮನಿಗೆ ಕನ್ನಡಿಯನ್ನು ತೋರುವ ಕ್ಷುದ್ರವೆನಿಸುವ ಘಟನೆ, ಶ್ರೀರಾಮನ ದೈವಿಕ ಬಯಕೆಯನ್ನು ಅರ್ಥಮಾಡಿಕೊಂಡವಳು ಮಂಥರೆಯೊಭ್ಬಳೇ ಎಂಬುದನ್ನು ಮತ್ತು ಅವನ ಅವತಾರದ ಪೂರ್ಣವಿಕಾಸಕ್ಕೆ ಕಾರಣಳಾಗುವವಳು ಅವಳೇ ಎಂಬುದನ್ನು ಅನ್ಯಾದೃಶವಾಗಿ ಸೂಚಿಸಿಬಿಡುತ್ತದೆ.

ಮಂಥರೆಯ ಪಾತ್ರಕಲ್ಪನೆಯೇ ಪೂರ್ಣದೃಷ್ಟಿಯ ಒಂದು ಸಾರ್ಥಕ ಪ್ರತೀಕ. ಆದಿಕವಿ ಹಾಲಿನಂಥ ಸಂಸಾರದಲ್ಲಿ ಹಾಲಾಹಲವನ್ನು ಸಿಂಪಡಿಸಿದ ವಿಘ್ನಸಂತೋಷಿಯೆಂಬಂತೆ ಮಂಥರೆಯನ್ನು ಚಿತ್ರಿಸಿದರೆ, ರಾಮಾಯಣದರ್ಶನದ ಕವಿ ಅವಳ ಆ ಗಳಿಗೆಯ ಮನೋ ಧರ್ಮ ಮೂಡಲು ಕಾರಣವಾದ ಸಮರ್ಥ ಹಿನ್ನೆಲೆಯನ್ನು ಸೃಷ್ಟಿಸುವ ಮೂಲಕ ಹಾಗೂ ಆಕೆಯ ಉತ್ತರ ಜೀವನದ ಭವ್ಯ ಪರಿಣಾಮವನ್ನು ಚಿತ್ರಿಸುವ ಮೂಲಕ ಆಕೆಗೆ ಪೂರ್ಣತೆ ಯನ್ನು ತಂದುಕೊಟ್ಟಿದ್ದಾರೆ. ಕ್ಷುದ್ರ ಜೀವಿ ಕೂಡ ಸತ್ಪಥಗಾಮಿಯಾಗುವ ಮೂಲಕ ಎಂಥ ಮಹದ್ವಿಕಾಸವನ್ನು ಪಡೆಯಬಹುದೆಂಬುದಕ್ಕೆ ಈಕೆ ಜ್ವಲಂತ ನಿದರ್ಶನವಾಗಿದ್ದಾಳೆ. ಮಂಥರೆಯ ಕೃತ್ಯಕ್ಕಾಗಿ ಆಕೆಯನ್ನು ತೆಗಳುವಾಗ, ಆಕೆಯಿಲ್ಲದಿದ್ದರೆ ರಾಮಾಯಣದ ಘಟನೆಗಳು ಯಾವ ತಿರುವನ್ನು ಪಡೆಯುತ್ತಿದ್ದುವೆಂಬುದನ್ನು ನಾವು ಆಲೋಚಿಸಿದರೆ, ಆಕೆಯ ಮಹತ್ವದರಿವಾಗುತ್ತದೆ. ಕೈಕೆ-ಭರತರ ವಾತ್ಸಲ್ಯದ ಸೀಮಿತ ವರ್ತುಲದಲ್ಲಿ ಸುತ್ತುತ್ತಿದ್ದ ಮಂಥರೆ, ತನ್ನ ಭೌತದೇಹವನ್ನು ಜಲಾರ್ಪಣಮಾಡಿಕೊಂಡು ಅಶರೀರ ಳಾಗಿಯೇ ರಾಮನ ಪುನರಾಗಮನಕ್ಕಾಗಿ ಚರಿಸುತ್ತ ಪರಿತಪಿಸುತ್ತ ಆ ಅದೃಶ್ಯ ತಪಸ್ಸಿನ ಫಲವಾಗಿ ಪುಣ್ಯಲಕ್ಷ್ಮಿಯಾಗಿ ಪರಿವರ್ತಿತಳಾಗಿ ರಾಮಾಗಮನದ ವಾರ್ತೆಯನ್ನರುಹಿ ಕೃತಕೃತ್ಯಳಾಗುತ್ತಾಳೆ. ಮೂಲದಲ್ಲಿ ಸರ್ವರ ನಿಂದೆಗೆ ತುತ್ತಾಗುವ ಕೈಕೆ ಕವಿಯ ಪೂರ್ಣ ದೃಷ್ಟಿಯ ಫಲವಾಗಿ ರಾಮಾಮಹಿಮಾ ಪ್ರಕಾಶನ ಸೂತ್ರಧಾರಿಯಾಗಿ. ತನ್ನ ಲೋಕಗೌರವ ತ್ಯಾಗದಿಂದ, ಸರ್ವಗೌರವಭಾಜನಳಾಗುತ್ತಾಳೆ. ಕೈಕೆಯ ಬೇಡಿಕೆಗಾಗಿ ಅವಳನ್ನು ಅವಾಚ್ಯವಾಗಿ ನಿಂದಿಸಿದ ದಶರಥ ಕೊನೆಗೆ ಶ್ರವಣಕುಮಾರನ ಬಗ್ಗೆ ತಾನು ಗೈದ ಅಪರಾಧವನ್ನು ಸ್ಮರಿಸಿಕೊಂಡು, ದಿವ್ಯದರ್ಶನವನ್ನು ಪಡೆದು ಪ್ರಶಾಂತ ಮನಸ್ಸಿನಿಂದ ಮರಣವನ್ನಪ್ಪುತ್ತಾನೆ.

ಅಹಲ್ಯೆಯ ಶಿಲಾತಪಸ್ಸು ರಾಮಚಂದ್ರನನ್ನು ದಾರಿತಪ್ಪಿಸಿ ತನ್ನೆಡೆಗೆ ಸೆಳೆದುಕೊಳ್ಳುತ್ತದೆ, ಅವನ ಪಾದಸ್ಪರ್ಶದಿಂದ ತನ್ನ ಕರ್ಮದ ಕಾಳಿಕೆಯನ್ನು ಕಳೆದುಕೊಳ್ಳುತ್ತದೆ. ಅದೇ ಸಂದರ್ಭದಲ್ಲಿ ಶ್ರೀರಾಮನ ದಿವ್ಯಶಕ್ತಿಯನ್ನು ಮೊತ್ತಮೊದಲಿಗೆ ಅನಾವರಣ ಮಾಡುತ್ತದೆ; ಅವನ ಪತಿತೋದ್ಧರಣಕಾರ್ಯಕ್ಕೆ ಮುನ್ನುಡಿ  ಬರೆಯುತ್ತದೆ. ಹೀಗೆ ಒಂದೊಂದು ಘಟನೆಯೂ ತನ್ನಷ್ಟಕ್ಕೆ ಮಾತ್ರವಲ್ಲದೆ ತನ್ನ ಸುತ್ತಮುತ್ತ ಬೆಳಕನ್ನು ಚೆಲ್ಲುತ್ತ ಪೂರ್ಣಪ್ರಮಾಣಕ್ಕೆ ಬೆಳೆದುನಿಲ್ಲುತ್ತದೆ.

ಖಂಡದೃಷ್ಟಿಗೆ ಮಂಥರೆಯ ಚಾಡಿ, ಕೈಕೆಯ ಹಟ, ಸೀತೆಯ ಸುವರ್ಣ ಜಿಂಕೆಯ ವ್ಯಾಮೋಹ, ರಾವಣನ ಸೀತಾ ವ್ಯಾಮೋಹ, ವಿಭೀಷಣ ಪಕ್ಷಾಂತರ, ಸೀತೆಯ ಅಗ್ನಿಪ್ರವೇಶ ಮುಂತಾದುವೆಲ್ಲ ಅಪರಾಧಗಳೆ. ಸೀತೆ ಚಿನ್ನದ ಜಿಂಕೆಯನ್ನು ಬಯಸದಿದ್ದರೆ, ರಾವಣ ಸೀತೆಯನ್ನಪಹರಿಸದಿದ್ದರೆ ಏನಾಗುತ್ತಿತ್ತು? ಸೀತೆಯ ಪಾತಿವ್ರತ್ಯ ಪ್ರಶ್ನಾತೀತವಾಗುತ್ತಿತ್ತೆ? ಸೀತೆಯ ದರ್ಶನ, ಸೀತೆಯ ಧವಳಚಾರಿತ್ರ್ಯದ ಪ್ರಭಾವಗಳಿಂದ ತ್ರಿಜಟೆ ಚಂದ್ರನಖಿ, ಧಾನ್ಯಮಾಲಿನಿ ಮುಂತಾದ ಎಷ್ಟೊಂದು ಜನ ತಮ್ಮ ಬದುಕಿನ ಬೆಳಕಿನ ಪಥವನ್ನು ಕಂಡುಕೊಂಡು ಉದ್ಧಾರವಾಗಲಿಲ್ಲ! ಸೀತಾಪಹರಣದಿಂದ ರಾವಣನ ಪತನವಾಯಿತು ಎಂಬುದು ಮತ್ತು ರಾವಣವಧೆಗಾಗಿಯೇ ರಾಮಾವತಾರವಾಯಿತು ಎಂಬುದು ಆದಿಕವಿ ದೃಷ್ಟಿಯಾದರೆ, ಕೇವಲ ವ್ಯಕ್ತಿಯೊಬ್ಬನನ್ನು ಕೊಲ್ಲುವ ಸಲುವಾಗಿ ಭಗವಂತನಾವಿರ್ಭಾವದ ಅಗತ್ಯವಿಲ್ಲವೆಂಬುದು ಮತ್ತು ಮಹಾವ್ಯಕ್ತಿಗಳೊಡನೆ ಉಂಟಾಗುವ ಸಂಘರ್ಷದಿಂದ ವ್ಯಕ್ತಿ ತಾನೂ ಮಹತ್ತಿಗೇರುವನೇ ಹೊರತು ಅಧಃಪತನಕ್ಕಿಳಿಯುವುದು ಸಾಧ್ಯವಿಲ್ಲ ಹಾಗೂ ಸಾಧುವಲ್ಲ ಎಂಬುದು ಆಧುನಿಕ ಕವಿಯ ಪೂರ್ಣದೃಷ್ಟಿಯ ಫಲವಾಗಿದೆ. ಜಡ ಚೇತನವಾಗುವತ್ತ ಕ್ರಮಿಸುವುದು, ದುಷ್ಟಶಿಷ್ಟನಾಗುವತ್ತ ಸಾಗುವುದು, ವ್ಯಕ್ತಿ ತನ್ನ ದೌರ್ಬಲ್ಯವರಿತು ಅದರೊಢನೆ ಸೆಣಸಿ ಗೆದ್ದು ಪೂರ್ಣ ಮಾನವನಾಗುವುದು ವಿಜ್ಞಾನ ಹಾಗೂ ಯೋಗ ವಿಜ್ಞಾನಗಳ ಶೋಧನೆಯ ಫಲಶ್ರುತಿ. ಅಂತೆಯೇ ರಾವಣನ ಮಹಾಕಾಮ, ಅಹಂಕಾರ, ಶೌರ್ಯಗಳೆಲ್ಲ ಸೀತಾ-ರಾಮರ ವ್ಯಕ್ತಿತ್ವದ ವಿದ್ಯುದಾಘಾತಕ್ಕೆ ಬಲಿಯಾಗಿ ಅಣಗಿ, ಕಾಮ ಮಾತೃಪ್ರೇಮವಾಗಿ ದ್ವೇಷ ಅಭಿಮಾನವಾಗಿ ಮಾರ್ಪಟ್ಟು ಅವನ ವ್ಯಕ್ತಿತ್ವ ಪೂರ್ಣ ಪರಿವರ್ತಿತವಾಯಿತು, ರಾವಣ ರಾಮನೇ ಆಗಿ ವಿಕಾಸಗೊಡ. ಆದ್ದರಿಂದ ರಾವಣ ವಧೆಯಾಗಲಿಲ್ಲ, ಇದ್ದಿಲು ವಜ್ರವಾಗುವಂತೆ, ರೂಪಾಂತರ ಭಾವಾಂತರ ಹೊಂದಿದ. ಈ ಕಾರಣ ರಾವಣನದು ದುಃಖಾಂತವಲ್ಲ, ಸುಖಾಂತ. ಇದು ಶ್ರೀರಾಮಾಯಣದರ್ಶನಂ ಸಾರುವ, ಕಂಡರಿಸಿರುವ ಪೂರ್ಣದೃಷ್ಟಿ. ಇಲ್ಲಿನ ಎಲ್ಲ ಪಾತ್ರಗಳೂ ಪೂರ್ಣತೆಯ ಕಡೆಗೆ ತುಡಿಯುತ್ತ ಹೋಗುತ್ತವೆ. ಹಾಗಿದ್ದರೂ ಈ ‘ಪೂರ್ಣದೃಷ್ಟಿ’ ಹೊರಗಿನಿಂದ ಬಂಧಿಸಿದ ಕಬ್ಬಿಣದ ಬಳೆಯಾಗಿಲ್ಲ; ಒಳಗಿನಿಂದ ಹೊಮ್ಮಿ ಅಖಂಡ ಕಾವ್ಯವನ್ನು ಆವರಿಸಿರುವ ಬೆಳಕಿನ ಹೊಳೆಯಾಗಿದೆ.

ಮೇಲೆ ಉಲ್ಲೇಖಿಸಲಾದ ಪ್ರಾರ್ಥನೆ, ತಪಸ್ಸು, ವಿಧಿಶಕ್ತಿ, ಪಾಪಿಯುದ್ಧಾರ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಗಳು ಮಾತ್ರವಲ್ಲದೆ ಸಹಕಾರ, ಅಹಿಂಸೆ, ಗುರು ಮಹತ್ವ, ಅದಮ್ಯ ಆಶಾವಾದ, ವಿಕಾಸವಾದ, ಅವತಾರ, ಅಸಾಧಾರಣ ಮಾನವಾನುಕಂಪೆ ಮತ್ತು ಅದ್ವಿತೀಯ ನಿಸರ್ಗಪ್ರೇಮಗಳೂ ಈ ಕಾವ್ಯದ ಮತ್ತು ಕವಿಯ ದರ್ಶನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಈ ದರ್ಶನ ಮಜ್ಜಿಗೆಯ ಮೇಲಿನ ಬೆಣ್ಣೆಯಂತೆ ಮೇಲೆ ಮೇಲೆ ತೇಲದೆ, “ಈ ಲೋಕಜೀವನದ ಲೌಕಿಕ ತಳಮಳದಲ್ಲಿ, ಆತ್ಮಜೀವನದ ಅಧ್ಯಾತ್ಮಿಕ ಸಾಧನೆಯಲ್ಲಿ, ತತ್ವವಿವೇಚನೆಯ ಸಾಂಕೇತಿಕ ನಿಲುವಿನಲ್ಲಿ-ಈ ಎಲ್ಲ ಹಂತಗಳಲ್ಲೂ ದರ್ಶನ ಬೆಳೆಯುತ್ತಾ ಹೋಗುವುದು”[21] ಮತ್ತು ಇವೆಲ್ಲ ಅಪೂರ್ವ ರೀತಿಯಲ್ಲಿ ಏಕತ್ರ ಸಂಗಮಿಸಿ ಅತ್ಯುನ್ನತ ಕಲಾಸೌಂದರ್ಯವಾಗಿ ಕೆನೆಗಟ್ಟುವುದೂ ಈ ಮಹಾಕೃತಿಯ ಅನನ್ಯ ವಿಶಿಷ್ಟ ಸಾಧನೆಯಾಗಿದೆ. ಡಾ. ದೇಜಗೌ ಅಭಿಪ್ರಾಯಪಡುವಂತೆ, ಮೇಲ್ಕಂಡ ಎಲ್ಲ ಕಾರಣಗಳಿಂದ, “ಶ್ರೀರಾಮಾಯಣದರ್ಶನಂ” ದೈವೀಪ್ರಜ್ಞೆಯ ವಿಕಾಸದ ಮಹಾಗೀತೆ. ಭಾರತೀಯ ಸಂಸ್ಕೃತಿಯ ಮಹಾಗಾನ. ಕುವೆಂಪು ಅವರ ಭಾವಗೀತೆ ನಾಟಕ ಪ್ರಬಂಧಗಳಲ್ಲಿ ಕಿರಿದಾಗಿ ರೂಹುದೋರಿದ ಈ ಪ್ರಜ್ಞೆ ಇಲ್ಲಿ ಮಹಾಪೂರವಾಗಿ ಭೂಮಸ್ವರೂಪದಲ್ಲಿ ಮೈದೋರಿದೆ. ಅದೊಂದು ವಿಶ್ವಧರ್ಮದ ದರ್ಶನದಂತಿದೆ. ಅದು ಕಾವ್ಯವೂ ಅಹುದು, ದಾರ್ಶನಿಕ ಕಾವ್ಯವೂ ಅಹುದು. ಇಲ್ಲಿ ಶ್ರೀಸಾಮಾನ್ಯತೆ ವಿಭೂತಿತ್ವಗಳ ಸಮ್ಮಿಲನವಿದೆ, ಅಸುರತ್ವಸುರತ್ವಗಳ ಮರ್ತ್ಯಾ-ಮರ್ತ್ಕಗಳ ಸಂಗಮವಿದೆ, ರೂಪಾರೂಪಗಳ ಸಮಾವೇಶವಿದೆ, ಕಾವ್ಯವಿಜ್ಞಾನಗಳ ಪ್ರಯಾಗವಿದೆ; ಪಾಶ್ಚಾತ್ಯ ಪೌರ್ವಾತ್ಯಗಳ ಕೂಟವಿದೆ, ಪ್ರೇಮತ್ಯಾಗಗಳ ಸಾಮ್ರಾಜ್ಯವಿದೆ.

“ದರ್ಶನದೀಪ್ತವಲ್ಲದ, ಶ್ರೇಷ್ಠ ಸಂದೇಶವಿರದ ಕಾವ್ಯ ಶ್ರೇಷ್ಠವಾದುದಲ್ಲ. ಸತ್ಯದ ಕಾಣ್ಕೆಯೇ ದರ್ಶನ. ಪೂರ್ಣದೃಷ್ಟಿಯಿಂದ ಮಾತ್ರ ದರ್ಶನ ಸಾಧ್ಯ. ಸಮನ್ವಯ ಸಾಧನೆ ಅದರ ಫಲ. ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಗಳನ್ನೊಳಗೊಂಡ ಮನುಜ ಮತವೇ ವಿಶ್ವಪಥ. ಈ ಎಲ್ಲದರ ಗುರಿ ಸರ್ವೋದಯ. ಕುವೆಂಪು ಅವರು ಜಗತ್ತಿಗೆ ನೀಡಿರುವ ಸಂದೇಶವಿದು…. 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1] ಡಾ. ಸಿ.ಪಿ. ಕೃಷ್ಣಕುಮಾರ್, ಶ್ರೀರಾಮಕೃಷ್ಣರು ಮತ್ತು ಯುಗಧರ್ಮ, ಮುನ್ನುಡಿ, ಪು. ೩.

[2] ಕುವೆಂಪು, ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ.

[3] ಡಾ. ದೇ. ಜವರೇಗೌಡ, ಕುವೆಂಪು ದರ್ಶನ ಮತ್ತು ಸಂದೇಶ, ಪು. ೧೨೨-೨೩.

[4] ಎಂ.ಕೆ. ಗಾಂಧಿ, ಸರ್ವೋದಯ (ಅನು: ಎಸ್.ವಿ. ಸಂಪತ್), ಪು. ೮.

[5] ಅದೇ, ಪು. ೯.

[6] ಕೆ. ಪಟ್ಟಾಭಿರಾಮಯ್ಯ, ಸರ್ವೋದಯ ಸಾಹಿತ್ಯ ದರ್ಶನ, ಕೈವಾರ ಕೈವಲ್ಯ, ಪು. ೭೮.

[7] ಡಾ. ಸಿ.ಆರ್. ರೆಡ್ಡಿ, ಕೋ. ಚೆನ್ನಬಸಪ್ಪನವರ ದಿವ್ಯಜೀವನಕ್ಕೆ ಕುವೆಂಪು ಅವರು ಬರೆದ ಮುನ್ನುಡಿಯಿಂದ ಉದ್ಧೃತ.

[8] ಅರವಿಂದರು, ದಿವ್ಯಜೀವನ (ಭಾಗ ೧), ಅನು: ಕೋ. ಚೆನ್ನಬಸಪ್ಪ, ಪು. ೩೩.

[9] ಕುವೆಂಪು, ತಪೋನಂದನ, ಪು. ೧೨೦-೧.

[10] ಕೋ. ಚೆನ್ನಬಸಪ್ಪ, ಶ್ರೀ ಕುವೆಂಪು ಸಂದರ್ಶನ, ಪು. ೩೪.

[11] ಡಾ. ದೇ. ಜವರೇಗೌಡ, ಕುವೆಂಪು ದರ್ಶನ ಮತ್ತು ಸಂದೇಶ, ಪು. ೧೨೪.

[12] ಶ್ರೀರಾಮಾಯಣದರ್ಶನಂ, ಕಿಷ್ಕಿಂಧಾ ಸಂಪುಟಂ, ಪು. ೩೩೭, ಸಾಲು ೧೬೫-೬೬.

[13] ಅದೇ, ಪು. ೩೩೭, ಸಾಲು ೧೬೭.

[14] ಅದೇ, ಲಂಕಾಸಂಪುಟಂ, ಪು. ೪೫೮, ಸಾಲು ೬೧೬-೧೮.

[15] ಸುಜನಾ, ಪರಂಪರೆ ಮತ್ತು ಕುವೆಂಪು, ಪು. ೨೫೪.

[16] ಶ್ರೀರಾಮಾಯಣದರ್ಶನಂ, ಶ್ರೀಸಂಪುಟಂ, ಪು. ೮೫೬, ಸಾಲು ೪೧೦-೧೩.

[17] ಅದೇ, ಪು. ೭೫೨, ಸಾಲು ೩೬೧-೬೩.

[18] ಅದೇ, ಪು. ೮೦೭, ಸಾಲು ೧೬೩-೬೯.

[19] ದೇಜಗೌ, ಕುವೆಂಪು ದರ್ಶನ ಮತ್ತು ಸಂದೇಶ, ಪು. ೧೨೨.

[20] ಡಾ. ಎಚ್. ತಿಪ್ಪೇರುದ್ರಸ್ವಾಮಿ, ಶ್ರೀರಾಮಾಯಣದರ್ಶನಂ ಮಹಾಕಾವ್ಯ, ಪು. ೧೨೭.

[21] ಡಾ. ದೇ. ಜವರೇಗೌಡ, ಕುವೆಂಪು ದರ್ಶನ ಮತ್ತು ಸಂದೇಶ, ಪು. ೧೩೭-೮.