. ವೈಜ್ಞಾನಿಕತೆ

ಈ ಶತಮಾನ ಮುಖ್ಯವಾಗಿ ವೈಜ್ಞಾನಿಕ ಸಾಧನೆಗಳ ಒಂದು ಮಹಾಯುಗ. ಮನೋ ವಿಜ್ಞಾನ, ಜೀವವಿಜ್ಞಾನ, ಜ್ಯೋತಿರ್ವಿಜ್ಞಾನ, ಭೌತವಿಜ್ಞಾನ – ಮುಂತಾದ ಕ್ಷೇತ್ರಗಳಲ್ಲಿ ನಡೆದಿರುವ ಪ್ರಯೋಗ, ಆಗಿರುವ ಸಾಧನೆ ಅದ್ಭುತವಾದದ್ದು. ಈ ವಿಜ್ಞಾನಗಳ ಫಲಿತದ ಕೆಲವಂಶಗಳು ‘ಶ್ರೀರಾಮಾಯಣದರ್ಶನಂ’ನಲ್ಲಿ ಕತೆಯ ಮೆಯ್ಗಡಲೀಯದೆ ಹಾಸುಹೊಕ್ಕಾಗಿ ಸೇರಿಕೊಂಡಿವೆ.

ಮನೋವಿಜ್ಞಾನ ಕುವೆಂಪು ಅವರ ಮೆಚ್ಚಿನ ಕ್ಷೇತ್ರಗಳಲ್ಲಿ ಒಂದು. ಮನುಷ್ಯನ ಮನಸ್ಸಿನ ಪಾತಾಳಲೋಕದ ಬಾಗಿಲನ್ನು ತೆರೆದು, ಅವನ ಹೊರಪ್ರವೃತ್ತಿಗಳಿಗೆ ಅಲ್ಲಿ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ವಿಶೇಷವಾಗಿ ಫ್ರಾಯ್ಡ್, ಯೂಂಗ್, ಆಡ್ಲರ್ ಮುಂತಾದವರು ಮಾಡಿ. ಅದ್ಭುತ ಫಲಿತಗಳನ್ನು ಹೊರತೆಗೆದಿದ್ದರು. ಕುವೆಂಪು ತಮ್ಮ ಪಾತ್ರರಚನೆಯಲ್ಲಿ ಸಂದರ್ಭ ನಿರೂಪಣೆಯಲ್ಲಿ ಮತ್ತು ಕನಸುಗಳ ಚಿತ್ರಣದಲ್ಲಿ ಈ ಶಾಸ್ತ್ರದ ಹಲವು ಪಥಗಳನ್ನು ಅನುಸರಿಸುವುದುಂಟು. “ಈ ಮಹಾಕಾವ್ಯದಲ್ಲಿ ಬರುವ ವ್ಯಕ್ತಿಗಳು ಮತ್ತು ಘಟನೆಗಳು ಸಾಮಾನ್ಯದೃಷ್ಟಿಗೆ ಹೊರಗಿನ ಸತ್ಯಗಳಂತೆ ಕಂಡರೂ ಕೂಡ, ವ್ಯಕ್ತಿಯ ಜಟಿಲಕುಟಿಲ ಮನೋವಿಸ್ತಾರದಲ್ಲಿ ರಾವಣನೆಂಬ ದೌರ್ಜನ್ಯಕಾರಕ ಹಾಗೂ ರಾಮನೆಂಬ ರಚನಾತ್ಮಕ ಸೃಜನಶೀಲ ವ್ಯಾಪಾರಗಳ ನಡುವೆ ನಿರಂತರವಾಗಿ ನಡೆಯುವ ಸಂಘರ್ಷಣೆಯ ಮತ್ತು ಅದರಿಂದುಂಟಾಗುವ ಕೆಟ್ಟ ಮತ್ತು ಒಳ್ಳೆಯ ಪರಿಣಾಮಗಳ ಪ್ರತೀಕಗಳು… ಇಡೀ ಕಾವ್ಯವೇ ಒಂದು ಬೃಹತ್ ಮನೋವಿಶ್ಲೇಷಣೆಯಂತಿದೆ. ಒಂದು ದೃಷ್ಟಿಯಲ್ಲಿ ಈ ಕಾವ್ಯವು ಜೀವನಪ್ರಜ್ಞಾವಿಕಾಸದ ಮಹಾಗಾನ”

[1] ಎಂಬ ವಿಮರ್ಶಕರ ಮಾತು ಈ ದೃಷ್ಟಿಯಿಂದ ಸತ್ಯವಾದದ್ದು. ಜಗೃತ ಮತ್ತು ಸುಪ್ತ ಮನೋವ್ಯಾಪಾರಗಳು (conscious and unconscious) ಇಲ್ಲಿ ಪರಿಣಾಮಕಾರಿಯಾಗಿ ಪ್ರತಿಮಿತವಾಗಿವೆ.

ಮನುಷ್ಯನ ಕೀಳರಿಮೆ (inferiority feeling) ಹಂತ ಹಂತವಾಗಿ ಬೆಳೆದು ಅಂತಿಮವಾಗಿ ಹೇಗೆ ವಿಕೃತಫಲಗಳನ್ನು ನೀಡುವುದೆಂಬುದಕ್ಕೆ ಮಂಥರೆ ಜ್ವಲಂತಸಾಕ್ಷಿಯಾಗಿದ್ದಾಳೆ. ತನಗಿಲ್ಲದ ಸೌಂದರ್ಯದ ನಷ್ಟಪರಿಹಾರವನ್ನು (compensation) ಕೈಕೆಯಲ್ಲಿ ಕಾಣುವ ಮೂಲಕ ಅವಳಲ್ಲಿ ತಾನೇ ಒಂದಾಗುತ್ತಾಳೆ. ಇಂಥ ಕೀಳರಿಮೆ ಕ್ರಮೇಣ ಪ್ರಬಲವಾಗಿ ನಿರೋಧಿತವಾಗಿ ಸುಪ್ತಚೇತನಕ್ಕೆ ತಳ್ಳಲ್ಪಟ್ಟು ಅಲ್ಲಿ ಕೀಳರಿಮೆಯ ಭಾವ ಗ್ರಂಥಿಯಾಗಿ (complex) ಪರಿಣಾಮಗೊಳ್ಳುತ್ತದೆ. ಅನಂತರ ಅಯೋಧ್ಯೆಯಲ್ಲಿ ಕೌಸಲ್ಯೆ ಮುಂತಾದವ ರಿಂದ ತನಗೊಂದಗಿದ ತಿರಸ್ಕಾರ ಆಕೆಯಲ್ಲಿ ಅವರ ಬಗ್ಗೆ ಮತ್ಸರ ದ್ವೇಷಗಳನ್ನು ಬಲಿಸುತ್ತದೆ. ಕೈಕೆಯ ಮೇಲಿನ ಅನನ್ಯ ಪ್ರೀತಿ, ಎಳೆಯ ಭರತನ ಮೇಲಿನ ಅಗಾಧಮೋಹ ಅವಳ ಮನೋಜಗತ್ತನ್ನು ಕಿರಿದುಗೊಳಿಸಿ, ಅದರಿಂದ ಕೈಕೆ ಭರತರಿಲ್ಲದ ಜಗತ್ತನ್ನು ಹೊರ ದೂಡುತ್ತದೆ. ಈ ಸಂಘರ್ಷದಿಂದ ಅವಳಲ್ಲಿ ಸೇಡಿನ ಭಾವನೆ ಹೆಡೆಯಾಡಿಸತೊಡಗಿ ಮುಂದಿನ ಅನರ್ಥಗಳಿಗೆ ಕಾರಣವಾಗುತ್ತದೆ. ಲೋಕದಲ್ಲಿ ಸಮಾಜ ವಿದ್ರೋಹಿಗಳೆನಿಸಿ ಕೊಂಡವರು ಅವತರಿಸುವುದಕ್ಕೆ ಸಮಾಜ ಅವರ ಬಗ್ಗೆ ತೋರಿದ ಅತೀವ ತಿರಸ್ಕಾರದ ಮತ್ತು ಅವಜ್ಞೆಯ ಪ್ರತಿಕ್ರಿಯೆಯೇ ಕಾರಣ ಎಂಬುದನ್ನು ಈ ಪ್ರಕರಣ ಸೂಚಿಸುತ್ತದೆ. ಈ ಸ್ವಾರ್ಥಭಾವ ಆಘಾತಗೊಂಡು ತನ್ನ ದಿಕ್ಕನ್ನು ಬದಲಿಸಿದಾಗ ಹೇಗೆ ಅದು ಉನ್ನತೀ ಕರಣ(sublimation)ಗೊಂಡು ಸೃಜನಶೀಲವಾಗಿ ಲೋಕೋಪಕಾರಿ ಯಾಗುತ್ತದೆಂಬುದನ್ನು ಮಂಥರೆಯ ಪಾತ್ರವೇ ಸಂಕೇತಿಸುತ್ತದೆ.

ಸುಪ್ತಚೇತನದಲ್ಲಿ ಹುದುಗಿ ಮರೆಯಾಗಿ ಹೋದ ಘಟನೆಗಳು ಮತ್ತು ತೀವ್ರ ಬಯಕೆಗಳು, ಜೀವನದಲ್ಲಿ ಬಂದೊದಗಿದ ಪ್ರಬಲ ಪ್ರಚೋದನೆಗಳಿಂದ (Appropriate Stimulations) ಜಗೃತವಾಗಿ ಭಾವವಿರೇಚನಗೊಂಡು ಹೇಗೆ ತಮ್ಮ ಮಾನಸಿಕ ಸಮತೋಲನವನ್ನು (Mental equilibrium) ಕಾಯ್ದುಕೊಳ್ಳುತ್ತವೆಂಬುದನ್ನು ದಶರಥ ಮತ್ತು ರಾವಣನ ಪಾತ್ರಗಳಲ್ಲಿ ಗುರುತಿಸಬಹುದು. ತನ್ನ ಶಬ್ದವೇದಿ ವಿದ್ಯೆಯಿಂದ ಅಂಧತಾಪಸನ ಕಂದನನ್ನು ಕೊಂದು, ಆ ತಾಪಸನ ಶಾಪಕ್ಕೆ ಗುರಿಯಾದ ದಶರಥ ಆ ಅಪರಾಧೀ ಪ್ರಜ್ಞೆಯಿಂದ (guilty consciousness) ನರಳಿ, ಕೊನೆಗೆ ದಮನ (Suppress) ಮಾಡಲು ಶಕ್ತನಾಗುತ್ತಾನೆ. ಅಂತಿಮವಾಗಿ ಪುತ್ರವಿರಹ ದುಃಖದಿಂದಾಗಿ ಮನೋವಿಭ್ರಾಂತಿಗೆ (hallucinations) ಆತ ಒಳಗಾದಾಗ, ಹಿಂದಿನ ಈ ಘಟನೆ ಸ್ಮರಣೆಗೆ ಬಂದು ಅವನಿಗೆ ದಿವ್ಯದರ್ಶನವಾದಂತಾಗುತ್ತದೆ. ಆಗ ಅವನ ಮನಸ್ಸಿನಲ್ಲಿ ಶಾಂತಿ ಲಭಿಸುತ್ತದೆ. ಸುಪ್ತ ಅನುಭವಗಳು ಜಗೃತಸ್ಥಿತಿಗೆ ಬಂದಾಗ ಭಾವವಿರೇಚನ ಕ್ರಿಯೆಯಿಂದಾಗಿ ಭಾವಶುದ್ದಿ ಲಭ್ಯವಾಗುತ್ತದೆಂಬ ಮನೋವೈಜ್ಞಾನಿಕ ಸತ್ಯ ಇಲ್ಲಿ ಪ್ರತಿ ಫಲನಗೊಂಡಿದೆ.

ಸ್ತ್ರೀಯರನ್ನೆಲ್ಲ ತಾಯಿಯಂತೆ ಕಂಡ ಬಾಲ್ಯದ ಭಾವ, ತನ್ನ ಬದುಕಿನ ಪಥದಲ್ಲಿ ಹಾದು ಹೋದ ಅಸಂಖ್ಯಾತ ಹೆಂಗಳೆಯರಲ್ಲಿ ಆ ಪ್ರಬಲ ಮಾತೃತ್ವವನ್ನು ಕಾಣಲಾಗದ ಅಪೇಕ್ಷಾ ಸಿದ್ದಿಯ ಕೊರತೆ ರಾವಣನ ಸುಪ್ತಚಿತ್ತದಲ್ಲಿ ಮನೆ ಮಾಡುತ್ತದೆ. ಹಾಗೆಯೇ ಸೀತೆಯ ಮೇಲಿನ ಅಗಾಧ ವ್ಯಾಮೋಹ ನೆರವೇರದ ಕಾರಣ, ಅದಕ್ಕೆ ಸೀತೆಯಿಂದ ದೊರೆತ ಅಸಹ್ಯ ಅಸಡ್ಡೆಗಳ ಪ್ರಬಲಾಘಾತದ ಕಾರಣ, ಅದೂ ಕೂಡ ಅವನ ಚಿತ್ತದಾಳದಲ್ಲಿಳಿದು ಕ್ರಮೇಣ ರೂಪಾಂತರಗೊಳ್ಳುತ್ತ ಹೋಗುತ್ತದೆ. ಕೊನೆಗೆ ಕನಸಿನಲ್ಲಿ ಶಿಶುವಿನ ರೂಪದಲ್ಲಿ ಸೀತೆಯ ಬಗೆಗಿನ ಶುದ್ಧಭಾವದಿಂದ ಉಂಟಾದುದೆಂದು ಮಂಡೋದರಿ ವಿವರಣೆ ನೀಡಿದಾಗ, ಅವನ ಬಾಲ್ಯಕಾಲದ ಮಾತೃತ್ವ ಅನ್ವೇಷಣೆಯ ಅಪೇಕ್ಷೆಯೂ ಜಗೃತಗೊಂಡು, ಅವನಿಗೆ ಭಾವವಿರೇಚನೆಯಾಗುತ್ತದೆ. ಇದರಿಂದ ಸೀತೆಯ ಬಗ್ಗೆ ಅಪೂರ್ವ ಗೌರವಭಾವ ಅವನ ಮನದಲ್ಲಿ ಕೆನೆಗಟ್ಟುತ್ತದೆ.

ಹೀಗೆಯೇ ಕೈಕೆ ಕೌಸಲ್ಯೆಯರ ಪುತ್ರವಾತ್ಸಲ್ಯ ತೀವ್ರತೆ ಪ್ರೇಮರಾಹುವಾಗಿ (dragon of love) ಪರಿಣಮಿಸಿದ್ದು; ಸೀತಾವಿಯೋಗದಿಂದ ರಾಮನಲ್ಲಾದ ಚಿತ್ತ ವೈಕಲ್ಯ, ಹೊಮ್ಮಿಗ ವನ್ನು ಕಂಡಾಗ, ಅಣ್ಣನನ್ನರಸಲು ಲಕ್ಷ್ಮಣ ಕೂಡಲೇ ಹೊರಡದಿದ್ದಾಗ, ಅಶೋಕವನದಲ್ಲಿ ಸೀತೆಯ ಬದಲು ಕುಣಿವ ರಣಚಂಡಿಯನ್ನು ರಾವಣ ಕಂಡಾಗ – ಮುಂತಾದ ಹಲವು ಸಂದರ್ಭಗಳಲ್ಲಿ ಭಾವತುಮುಲ(mental tension)ದ ಸಾಂದ್ರ ಪರಿಣಾಮಕಾರೀ ಚಿತ್ರಣ ವನ್ನು ಕಾಣುತ್ತೇವೆ. ಇಂದ್ರಜಿತು ಯಾಗಶಾಲೆಯನ್ನು ಪ್ರವೇಶಿಸಿದ ವಿಭೀಷಣ ಆಂಜನೇಯ ಜಂಬವ ಮೊದಲಾದವರ ವರ್ತನೆ, ಧಾನ್ಯಮಾಲಿನಿಯ ಪಶ್ಚಾತ್ತಾಪ ಪ್ರಜ್ಞೆ, ಅಂತ್ಯದೃಶ್ಯದ ರಾವಣನ ಮನೋವಿಭ್ರಮಗಳ ಚಿತ್ರಣಗಳೂ; ಅತೀಂದ್ರಿಯಾನುಭವ ಜನ್ಯವಾದ ಕನಸುಗಳೂ, ಮನೋವಿಶ್ಲೇಷಣ ವಿಜ್ಞಾನಕ್ಕೆ ಸಮೃದ್ಧ ಸಾಮಗ್ರಿಯನ್ನೊದಗಿ ಸುತ್ತವೆ. ಪರಾಮನೋವಿಜ್ಞಾನಕ್ಕೆ ಸಂಬಂಧಿಸಿದ ಸನ್ನಿವೇಶಗಳು ಹತ್ತಾರು ಇಲ್ಲಿವೆ. ಹೀಗಾಗಿ ಮನೋವಿಜ್ಞಾನದ ದೃಷ್ಟಿಯಿಂದ ಒಂದು ಮಹಾಪ್ರಬಂಧಕ್ಕೆ ಆಕರವಾಗುವ ವಸ್ತುಸಾಮಗ್ರಿ ಈ ಕೃತಿಯಲ್ಲಿ ಅಂತರ್ಗತವಾಗಿದೆ.

ಹೀಗೆಯೇ ಜೀವವಿಜ್ಞಾನ ಮತ್ತು ಭೌತವಿಜ್ಞಾನಗಳ ಹಲವು ಪರಿಕಲ್ಪನೆಗಳು ಇಲ್ಲಿ ಮನೋಜ್ಞ ಕಾವ್ಯವಾಗಿ ಅರಳಿವೆ. ಕುಂಭಕರ್ಣನನ್ನು ಎಬ್ಬಿಸುವ ಸಂದರ್ಭದಲ್ಲಿ ಡಾರ್ವಿನ್ನನ ವಿಕಾಸವಾದದ ಅಂಶಗಳು ಸಹಜರಮ್ಯ ಅಭಿವ್ಯಕ್ತಿಯನ್ನು ಪಡೆದಿವೆ. ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರಕ್ಕೆ ಸಂಬಂಧಿಸಿದ ನೂರಾರು ಉಪಮೆಗಳು ವರ್ಣನೆಗಳು ಈ ಕಾವ್ಯದಲ್ಲಿ ಕಿಕ್ಕಿರಿದಿವೆ. ಈ ಬಗ್ಗೆ ಈಗಾಗಲೆ ಬಲ್ಲವರು ಸಾಕಷ್ಟು ವಿವರಿಸಿದ್ದಾರೆ.[2]

. ಯುದ್ಧ ನಿಷೇಧಭಾವ

ಮಹಾಯುದ್ಧದ ಅನಾಹುತಗಳಿಂದ ನೊಂದು ಬೆಂದು ಅದರ ಭೀಕರ ಪರಿಣಾಮಗಳನ್ನು ಎದುರಿಸುತ್ತಿರುವ ವರ್ತಮಾನ ಎಲ್ಲ ರೀತಿಗಳಿಂದ ಈ ಯುದ್ಧಮಾರಿಯನ್ನು ತಡೆಗಟ್ಟಲು ಬಯಸುತ್ತಿದೆ. ಈ ಕಾಲದ ಕವಿ ಈ ಮುಖ್ಯ ಸ್ಪಂದನವನ್ನು ಗುರುತಿಸದಿರುವುದು ಸಾಧ್ಯವಿಲ್ಲ. ಕೈಕೆಯ ವರಬೇಡಿಕೆಯ ಪರಿಣಾಮದಿಂದ ಕುಪಿತಗೊಂಡು ಬಲಪ್ರದರ್ಶನದಿಂದ ರಾಜ್ಯವನ್ನು ಕೈವಶಮಾಡಿಕೊಳ್ಳಬೇಕೆನ್ನುವ ಲಕ್ಷ್ಮಣನ ತೀವ್ರಭಾವಕ್ಕೆ ಉತ್ತರಕೊಡುವ ರಾಮನ ಮಾತುಗಳಲ್ಲಿ, ‘ತಗದೆನಗೆ ಭ್ರಾತೃಕಲಹಂ ತಾಂ ದೇಶನಾಶಕಂ’ ಎಂಬ ಸುಗ್ರೀವನ ನುಡಿಯಲ್ಲಿ, ಚಂದ್ರನಖಿ-ರಾವಣರ ನಡುವಣ ಮಾತುಕತೆಯಲ್ಲಿ, ದೈತ್ಯ ಸಭೆಯ ಹಿರಣ್ಯ ಕೇಶಿಯ ನಿರ್ಭೀತ ಅಭಿವ್ಯಕ್ತಿಯಲ್ಲಿ, ಕುಂಭಕರ್ಣನ ಮರಣದನಂತರದ ಸನ್ನಿವೇಶವನ್ನು ಅನಲೆ ಸೀತೆಗೆ ಬಣ್ಣಿಸುವಲ್ಲಿ ಯುದ್ಧದ ಭಯಂಕರ ದುಷ್ಪರಿಣಾಮಗಳ ಹೃದಯ ಕಲಕುವ ಚಿತ್ರಗಳಿದ್ದು ಅವು ಪರೋಕ್ಷವಾಗಿ ಯುದ್ಧನಿಷೇಧ ಧ್ವನಿಯನ್ನು ಶಕ್ತಿಪೂರ್ವಕವಾಗಿ ಹೊಮ್ಮಿಸುತ್ತವೆ; ಕವಿಯ ಸಾಮಯಿಕ ಪ್ರಜ್ಞೆಯ ಸಾಂದ್ರನಿದರ್ಶನವಾಗಿ ನಿಲ್ಲುತ್ತವೆ.

. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ

ಇಡೀ ಕಾವ್ಯದಲ್ಲಿ ಈ ಅಂಶಗಳು ಹಾಸುಹೊಕ್ಕಾಗಿವೆ.

ಹೀಗೆ ‘ಶ್ರೀರಾಮಾಯಣದರ್ಶನಂ’ ಕಾವ್ಯ ಈ ಯುಗದ ಪ್ರಧಾನ ಮತ್ತು ವೈಶಿಷ್ಟ್ಯ ಪೂರ್ಣ ವಿಚಾರಧಾರೆಗಳನ್ನು ತನ್ನಲ್ಲಿ ಗರ್ಭೀಕರಿಸಿಕೊಂಡು ಅತ್ಯಂತ ಪ್ರಸ್ತುತತೆಯನ್ನು ಪ್ರಕಟಪಡಿಸಿದೆ. ಹಾಗೆಯೇ ಸಾರ್ವಕಾಲಿಕ ಮಲ್ಯಗಳನ್ನೂ ಬೃಹತ್‌ಪ್ರಮಾಣದಲ್ಲಿ ದಾಖಲಿಸಿದೆ ಎಂಬುದನ್ನೂ ಈ ಹಿಂದಿನ ಅಧ್ಯಾಯಗಳು ಸ್ಪಷ್ಟಪಡಿಸಿವೆ. ಆದ್ದರಿಂದ “ನಿಜ ವಾದ ಅರ್ಥದಲ್ಲಿ ಒಬ್ಬ ಲೇಖಕ ಸಮಕಾಲೀನನೂ ಹೌದು, ಸಾರ್ವಕಾಲೀನನೂ ಹೌದು – ಅವನು ತನ್ನ ಸಮಕಾಲೀನ ಪರಿಸರಕ್ಕೆ ಪಡಿಮಿಡಿಯುವ ಸಾಮರ್ಥ್ಯವನ್ನು ಪಡೆದಿದ್ದಾ ನೆಂಬುದಕ್ಕೆ ಅವನ ಕೃತಿ ಸಾಕ್ಷಿಯಾಗಿದೆ ಎನ್ನುವ ಅರ್ಥದಲ್ಲಿ; ಅವನು ಸಾರ್ವಕಾಲೀನ, ಎಲ್ಲ ಕಾಲಕ್ಕೂ ನವನವೋನ್ಮೇಷಶಾಲಿಯಾಗುವ ಅರ್ಥಭಾವ ಮಲ್ಯಗಳಿಗೆ ಸಾಂಕೇತಿಕವಾದ ವಿಶಿಷ್ಟಾಭಿವ್ಯಕ್ತಿಯನ್ನು ನಿರ್ಮಿಸಿದ್ದಾನೆ ಎಂಬ ಅರ್ಥದಲ್ಲಿ”[3] ಮಹಾಕಾವ್ಯ ಇವೆರಡೂ ಅಂಶಗಳನ್ನು ತನ್ನ ಕಲಾಮಲ್ಯಕ್ಕೆ ಎರವಾಗದ ರೀತಿಯಲ್ಲಿ ಅತ್ಯಂತ ಉನ್ನತವಾಗಿ ಚಿತ್ರಿಸಿ ಎಲ್ಲ ಕಾಲದ ಜನಮನಕ್ಕೂ ನಿಕಟವಾಗುತ್ತದೆ, ಆಪ್ತವಾಗುತ್ತದೆ, ಆದರ್ಶವಾಗುತ್ತದೆ. ಶ್ರೀರಾಮಾಯಣದರ್ಶನಂ ಈ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಕೃತಕೃತ್ಯ ವಾಗಿದೆ; ಆದ್ದರಿಂದ ಕೂಡ ಮಹಾಕೃತಿಯಾಗಿದೆ.

. ಕನ್ನಡ ಮಹಾಕಾವ್ಯಗಳ ಸಾಲಿನಲ್ಲಿ ಶ್ರೀರಾಮಾಯಣದರ್ಶನಂ

ಕನ್ನಡ ಸಾಹಿತ್ಯದ ಸಾವಿರ ವರುಷಗಳ ಸುದೀರ್ಘ ಇತಿಹಾಸದಲ್ಲಿ ಮಹೋನ್ನತ ಕೃತಿಗಳೆಂದು, ಅಭಿಮಾನ ಮತ್ತು ಉಚ್ಚ ವಿಮರ್ಶೆಯ ಮಾನದಂಡಗಳ ಆಧಾರದಿಂದ ಹೆಸರಿಸಬಹುದಾದ ಕಾವ್ಯಗಳು ಎರಡೇ ಎರಡು : ಒಂದು, ಪಂಪಭಾರತವೆಂದು ಪ್ರಖ್ಯಾತಿ ಪಡೆದ ಪಂಪನ ‘ವಿಕ್ರಮಾರ್ಜುನ ವಿಜಯ; ಎರಡು, ಗದುಗಿನ ಭಾರತವೆಂದು ಪ್ರಕೀರ್ತಿತ ವಾದ ಕುಮಾರವ್ಯಾಸ ಬಿರುದಾಂಕಿತನಾದ ನಾರಣಪ್ಪನ ಕರ್ಣಾಟಕ ಭಾರತ ಕಥಾಮಂಜರಿ. ಇವೆರಡೂ ಕೃತಿಗಳು ವ್ಯಾಸರ ಸಂಸ್ಕೃತ ಮಹಾಭಾರತದ ಕಥೆಯನ್ನಾಧರಿಸಿಯೇ ರಚಿತವಾಗಿದೆ. ಇವೆರಡರ ನಡುವಣ ಅಂತರ ಐದು ನೂರು ವರ್ಷಗಳು. ಈ ಅವಧಿಯನ್ನು ಗಮನಿಸಿದಾಗ ಟಿ.ಎಸ್. ಎಲಿಯಟ್ ಹೇಳುವ ಒಂದು ನಾಗರಿಕತೆ ಪರಿಪಕ್ವವಾದಾಗ, ಒಂದು ಭಾಷೆ ಮತ್ತು ಸಾಹಿತ್ಯ ಪರಿಪಕ್ವವಾದಾಗ ಮಾತ್ರ ಒಂದು ‘ಕ್ಲಾಸಿಕ್’ ಘಟಿಸಬಲ್ಲುದು; ಅದು ಒಂದು ಪರಿಪಕ್ವ ಮನಸ್ಸಿನ ಕೃತಿಯಾಗಿರಬೇಕು”[4] ಎಂಬ ಮಲಿಕ ಮಾತುಗಳು ನೆನಪಿಗೆ ಬರುತ್ತವೆ. ಪಂಪನಿಗೆ ಈ ಹಿನ್ನೆಲೆ ಇತ್ತು. “ಪಂಪನು ಹುಟ್ಟುವುದಕ್ಕೆ ನೂರಾರು ವರ್ಷಗಳ ಹಿಂದೆಯೇ ಕನ್ನಡ ಕಾವ್ಯರಚನೆ ಮೊದಲಾಗಿತ್ತು. ಗದ್ಯದಲ್ಲಿ ಬರೆದಿದ್ದರು, ಪದ್ಯದಲ್ಲಿ ಬರೆದಿದ್ದರು, ಶಾಸನಗಳನ್ನು ಕೊರೆದಿದ್ದರು. ಕವಿಗಳಿಗೆ ಮಾರ್ಗ ತೋರಿಸಲು ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಹೆಸರಿನಲ್ಲಿ ಒಂದು ಅಲಂಕಾರ ಗ್ರಂಥ ಬಂದಿತ್ತು; ಗುಣಾಗಾಂಕನೆಂಬ ಬಿರುದು ಹೊಂದಿದ್ದ ಮೂಡಣ ಚಾಳುಕ್ಯ ರಾಜನೊಬ್ಬನಿಗೆ ಅಂಕಿತವಾಗಿ ಛಂದಶ್ಯಾಸ್ತ್ರದ ಮೇಲೂ ಒಂದು ಗ್ರಂಥ ಹುಟ್ಟಿತ್ತು. ಪುಲಿಗೆರೆಯ ಪ್ರಾಂತದಲ್ಲಿ ಬಳಕೆಯಲ್ಲಿದ್ದ ಮಾತಿಗೆ ಕನ್ನಡದ ತಿರುಳೆಂಬ ಹೆಸರಿನ ರಾಜಮುದ್ರೆ ಬಿದ್ದಿತ್ತು. ಹೀಗೆ, ಪಂಪನ ಬೆರಳು ಮೀಟಿದಾಗ ಇಂಪಾದ ನಾದವನ್ನು ಕೊಡುವುದಕ್ಕೆ ಕನ್ನಡದ ವೀಣೆ ಶ್ರುತಿಮಾಡಿ ಸಿದ್ಧವಾಗಿತ್ತು. ಮಹಾಕವಿಯಾಗುವುದಕ್ಕೆ ಪಂಪನೂ ಸಿದ್ಧತೆಯನ್ನು ಪಡೆದನು. ಸಂಸ್ಕೃತದ ವಿಸ್ತಾರವಾದ ಸಾಹಿತ್ಯವನ್ನು ಶ್ರದ್ಧೆಯಿಂದ ಓದಿ ಮನಸ್ಸಂಸ್ಕಾರವನ್ನೂ ಮೇಲ್ಪಂಕ್ತಿಯನ್ನೂ ಗಳಿಸಿಕೊಂಡನು. ಇದಕ್ಕಿಂತ ಹೆಚ್ಚಾಗಿ, ದೇಶದ ಮೇಲೆಲ್ಲ ಸಂಚರಿಸಿ, ರಾಜಸ್ಥಾನದಲ್ಲಿ ನೆಲೆಸಿ, ಅನೇಕ ಮುಖವಾದ ಬದುಕನ್ನು ಬಾಳಿ, ಅನುಭವವನ್ನು ವಿಶಾಲಪಡಿಸಿಕೊಂಡನು. ಅವನ ಜೀವನದ ಸಾರವಾಗಿ ಹೊಮ್ಮಿದ ಆದಿಪುರಾಣವೂ ವಿಕ್ರಮಾರ್ಜುನವಿಜಯವೂ ‘ಮುನ್ನಿನ ಕಬ್ಬಮನೆಲ್ಲ ಮನ್ ಇಕ್ಕಿಮೆಟ್ಟಿದವು’ ಎಂದರೆ ಏನಾಶ್ಚರ್ಯ?”[5] ಇದರ ಜೊತೆಗೆ ಪಂಪನಿಗೆ ಒಳ್ಳೆಯ ವಿದ್ವತ್‌ವಂಶದ ದಟ್ಟ ಹಿಂಬಲವಿತ್ತು; ಜೈನ-ಬ್ರಾಹ್ಮಣ ಧರ್ಮಗಳ ಉತ್ತಮಾಂಶ ಗಳ ಸಮನ್ವಯದ ಹಿರಿ ಆದರ್ಶವಿತ್ತು.

ಪಂಪನ ಅನಂತರ ಐದುನೂರು ವರ್ಷಗಳಾದ ಮೇಲೆ ಕಾವ್ಯರಚನೆ ಮಾಡಿದ ಕುಮಾರ ವ್ಯಾಸನಿಗೂ ಹೀಗೆಯೇ ಸಮೃದ್ಧ ಹಿನ್ನೆಲೆಯಿತ್ತು, ಅವನ ಮತ ಯಾವುದೆಂಬುದರ ಬಗ್ಗೆ ಚರ್ಚೆಯಿದ್ದರೂ ಆತ ಬ್ರಾಹ್ಮಣನೆಂಬ ಅಭಿಪ್ರಾಯದಲ್ಲಿ ಬಹುಮತವಿದೆ. ಆದ್ದರಿಂದ ಆ ಮತದವರಿಗೆ ಪರಂಪರೆಯಾಗಿ ಬರುವ ಸಂಪ್ರದಾಯಶ್ರದ್ಧೆ, ಪಾಂಡಿತ್ಯ, ಚತುರಮತಿಗಳೆಲ್ಲ ಅವನಿಗೆ ಸುಲಭವಾಗಿದ್ದವು. ಆತ ಶ್ಯಾನುಭೋಗರ ಮನೆತನಕ್ಕೆ ಸೇರಿದವನೆಂಬ ಪ್ರತೀತಿಯಿರು ವುದರಿಂದ ಹಳ್ಳಿಯ ಮಣ್ಣಿನ ಮಕ್ಕಳ ಪ್ರಾಕೃತಿಕ ಸಹಜತೆ, ಸೂಕ್ಷ್ಮತೆ, ದಿಟ್ಟತೆ, ವಾಚಾಳಿತನ, ನಿರ್ಬಂಧರಹಿತ ನಡವಳಿಕೆ, ಭಾಷಾಸೂಕ್ಷ್ಮತೆಗಳೆಲ್ಲ ಅವನಿಗೆ ಕರತಲಾಮಲಕವಾಗಿದ್ದ ವೆಂಬುದರಲ್ಲಿ ಸಂಶಯವಿಲ್ಲ. ಕನ್ನಡನಾಡಿನಲ್ಲಿ ಅದುವರೆಗೆ ಪ್ರಚಲಿತವಾಗಿದ್ದ ಜೈನ ಬೌದ್ಧ ಬ್ರಾಹ್ಮಣ ವೀರಶೈವ ಮತಧರ್ಮಗಳ ಸಂಸ್ಕೃತಿಯೆಲ್ಲ ಅವನಿಗೆ ಹೃದ್ಗತವಾಗಿತ್ತು. ಪಂಪ ತನ್ನ ಕೃತಿಗಳಲ್ಲಿ ಕಸಿಮಾಡಿ ಹದಮಾಡಿದ ಭಾಷೆಗೆ ಕಳೆದ ಐದುನೂರು ವರ್ಷಗಳ ಬೆಳವಣಿಗೆಯ ಸಾರಸತ್ವ ಬಾಗುಚೇಗುಗಳು ಹೆಚ್ಚು ಸಮೃದ್ದಿಯನ್ನು ಸೂಕ್ಷ್ಮತೆಯನ್ನು ವ್ಯಾಪಕತೆಯನ್ನು ಗಂಡು ತೊಂಡುತನವನ್ನು ಜೋಡಿಸಿದ್ದವು. ಪಂಪನಲ್ಲಿ ಎತ್ತರದ ಕಲಿನೆಲೆ ಗಳನ್ನು ಗುರುತಿಸಿಕೊಂಡ ಸಾಹಿತ್ಯ ರನ್ನ, ನಾಗಚಂದ್ರ, ನಾಗವರ್ಮ, ನೇಮಿಚಂದ್ರ, ಆಂಡಯ್ಯ, ಜನ್ನ ಮುಂತಾದವರ ಮೂಲಕ ಗಂಭೀರವಾಗಿ ಹರಿದು, ಅನಂತರ ವೀರಶೈವ ಕ್ರಾಂತಿಯ ಮೂಲಕ ದೇಶಿಸಮ್ಮುಖವಾಗಿ ಬಸವಣ್ಣ ಮಹಾದೇವಿಯಕ್ಕ ಪ್ರಭುದೇವರ ವಚನಗಳಲ್ಲಿ ಕನ್ನಡತನವನ್ನು ಹುರಿಗೊಳಿಸಿಕೊಂಡು, ಹರಿಹರ ರಾಘವಾಂಕ ಕೃತಿಗಳ ಮೂಲಕ ಭಾವೋತ್ಕಟತೆ ಭಕ್ತಿತನ್ಮಯತೆ ಸಂವಾದ ಸೌಂದರ್ಯಗಳನ್ನು ದೇಸಿಯ ಚೆಲುವನ್ನು ರೂಢಿಸಿಕೊಂಡು ಅತ್ಯಂತ ವೈವಿಧ್ಯಪೂರ್ಣವಾಗಿ ಬೆಳೆದುನಿಂತಿತ್ತು. ತನ್ನ ಮಹಾಪ್ರತಿಭೆಯ ಮೂಲಕ ಇದರ ಸತ್ವಾಂಶವನ್ನೆಲ್ಲ ಹೀರಿ, ತನ್ನ ವ್ಯಕ್ತಿತ್ವದ ವಿಶಾಲೋನ್ನತ ಭೂಮಿಕೆಯಲ್ಲಿ ಅದನ್ನು ಮಹೋನ್ನತವಾಗಿ ಮೂರ್ತೀಕರಿಸುವ ಸಾಧ್ಯತೆಗಳು ಅವನಿಗೆ ತೆರೆದು ನಿಂತಿದ್ದುವು. ಇದಲ್ಲದೆ ಕುಮಾರವ್ಯಾಸನಿಗೆ ಒಂದು ಅನಾನುಕೂಲ, ಒಂದು ಅನುಕೂಲ ಎರಡೂ ಇದ್ದವು. ಕುಮಾರವ್ಯಾಸ ಉನ್ನತವಾಗಿ ನಿರೂಪಿಸಬಹುದಾದ ಭಾಗಗಳನ್ನು ಪಂಪ ಈಗಾಗಲೇ ಅತ್ಯುನ್ನತವಾಗಿ ನಿರೂಪಿಸಿಬಟ್ಟಿದ್ದು, ಅವನಿಗೆ ತೊಡರುಗಾಲಾಗಿತ್ತು. ಆದರೆ ಪಂಪನ ಲೌಕಿಕದೃಷ್ಟಿ ಪ್ರಧಾನತೆಯ ಕಾರಣದಿಂದಾಗಿ ವ್ಯಾಸಮಹರ್ಷಿಯ ಕಾವ್ಯಾರಾಶಿಯ ಹಲವು ರೋಚಕ ಭಾಗಗಳು ನಿರ್ದಾಕ್ಷಿಣ್ಯವಾಗಿ ಕತ್ತರಿ ಪ್ರಯೋಗಕ್ಕೆ ಒಳಗಾಗಿದ್ದರಿಂದ, ಮೂಲದ ಸರ್ವಶಕ್ತಿ ಕೇಂದ್ರಗಳನ್ನೂ ಸೌಂದರ್ಯಕ್ಷೇತ್ರಗಳನ್ನೂ ಯಾವುದೇ ಪರಿಮಿತಿ ನಿರ್ಬಂಧಗಳಿಗೆ ಒಳಗಾಗದೆ ಕನ್ನಡಿಸುವ ಪುನರ್‌ನಿರ್ಮಿಸುವ ವ್ಯಾಪಕ ಅವಕಾಶ ಅವನಿಗೆ ದೊರೆಯಿತು. “ಪಂಪನಿಗೆ ಭಾರತ ಲೌಕಿಕ ಕಾವ್ಯವಾಯಿತು. ಕುಮಾರವ್ಯಾಸನಿಗೆ ಭಗವದ್‌ವಿಲಾಸ ಭೂಮಿಕೆ ಯಾಯಿತು…. ಪಂಪನ ಪ್ರತಿಭೆ ಇಕ್ಕಡಿಯಾಗಿ ಅವನ ಎರಡೂ ಕಾವ್ಯಗಳಲ್ಲಿ ವ್ಯಕ್ತವಾದರೆ, ಇವನ ಪ್ರತಿಭೆ ಒಂದೇ ಕೃತಿಯಲ್ಲಿ ಏಕೀಭವಿಸಿ ಜಜ್ವಲ್ಯ ಮಾನವಾಯಿತು. ಪಂಪ ತನ್ನ ಪ್ರಜ್ಞೆಯನ್ನು ಲೌಕಿಕ ಕಾವ್ಯ ಪ್ರಜ್ಞೆಯನ್ನಾಗಿ ಒಂದೆಡೆಯೂ, ಧರ್ಮಕಾವ್ಯ ಪ್ರಜ್ಞೆಯನ್ನಾಗಿ ಮತ್ತೊಂದೆಡೆಯೂ ದುಡಿಸಿಕೊಂಡದ್ದರಿಂದ ಅವನ ವ್ಯಕ್ತಿತೆಯಲ್ಲಿ ಇಮ್ಮೊಗವನ್ನು ಕಾಣು ತ್ತೇವೆ. ಕುಮಾರವ್ಯಾಸ ತನ್ನ ಕಾವ್ಯಯೋಗವನ್ನು ಆತ್ಮಯೋಗದಿಂದ ಬೇರೆಂದು ಎಂದೂ ಭಾವಿಸದೆ ಇದ್ದುದರಿಂದ ತನ್ನ ಸಮಗ್ರ ವ್ಯಕ್ತಿತೆಯ ಅಖಂಡ ಸ್ವರೂಪವನ್ನು ಅವನು ಪ್ರತಿಮಿಸುವುದು ಸಾಧ್ಯವಾಯಿತು. ಈ ದೃಷ್ಟಿಯಿಂದ ಕುಮಾರವ್ಯಾಸ ಅದ್ವಿತೀಯ.”[6] ಪಂಪ ಸಂಗ್ರಹನಿಪುಣ; ಕುಮಾರವ್ಯಾಸ ವಿಸ್ತಾರಪ್ರಿಯ. ಪಂಪನಲ್ಲಿ ಪಾತ್ರ ಪ್ರಾಮುಖ್ಯ; ಕುಮಾರವ್ಯಾಸನಲ್ಲಿ ರಸ ಪ್ರಾಮುಖ್ಯ. ಪಂಪನ ಕಾವ್ಯಾಶ್ವ ಚರಿತ್ರೆಯ ಗೂಟಕ್ಕೆ ಕಟ್ಟಲ್ಪಟ್ಟಿರು ವುದರಿಂದ ಅದರ ಉಡ್ಯಾಣ ವಿಹಾರಗಳಿಗೆ ಒಂದು ಎಳೆತವಿದೆ, ಮಿತಿಯಿದೆ; ಕುಮಾರವ್ಯಾಸನ ಕಾವ್ಯ ವಿಮಾನಕ್ಕೆ ಈ ಬಗೆಯ ನಿರ್ಬಂಧ ಎಳೆತವಿರದಿರುವುದರಿಂದ ಅದು ಸ್ವಚ್ಛಂದವಿಹಾರಿ. ಆದ್ದರಿಂದಲೇ ಬಹುಜನಪ್ರಿಯ. ಈ ಕಾರಣದಿಂದಲೇ ‘ಪಂಪ ಕಲಿತವರಿಗೆ ಮಾತ್ರ ಕಲ್ಪವೃಕ್ಷ ವಾದರೆ ಕುಮಾರವ್ಯಾಸ ಕಲಿಯದವರಿಗೂ ಕಾಮಧೇನು’ ಎನಿಸಿದ್ದಾನೆ. ಒಟ್ಟಿನಲ್ಲಿ ಒಂದೇ ವಸ್ತುವನ್ನು ಆಧರಿಸಿದರೂ ಪರಸ್ಪರ ಹೊಯ್‌ಕಯ್ಯಾಗಿ ಎರಡು ಮಹಾಕೃತಿಗಳನ್ನು ಸೃಷ್ಟಿಸಿದ ಪರಮಕವಿಗಳು ಪಂಪ ನಾರಣಪ್ಪ.

ಪಂಪ ಮತ್ತು ನಾರಣಪ್ಪರ ಕೃತಿಗಳು ಸಂಭವಿಸಿದ ಅನಂತರ ಮಹಾಕಾವ್ಯದ ಲಕ್ಷಣ ಗಳನ್ನುಳ್ಳ ಕೃತಿಗಳು ಹಲವಾರು ಕನ್ನಡ ಸಾಹಿತ್ಯದಲ್ಲಿ ಮೂಡಿಬಂದರೂ ಸಹಜ ಮಹೋನ್ನತ ಪ್ರತಿಭೆಯ ರಕ್ಷೆಯಿಲ್ಲದ ಅವು ಗಾತ್ರದಲ್ಲಿ ‘ಮಹಾ’ ಎನಿಸಿದವೇ ಹೊರತು ಕಲೆಯ ಎತ್ತರದಲ್ಲಿ ಅವುಗಳೊಡನೆ ಸ್ಪರ್ಧಿಸಲಾಗಲಿಲ್ಲ. ನಾರಣಪ್ಪ ಸೂರೆ ಹೊಡೆದ ಸತ್ವ ಮತ್ತೆ ಕನ್ನಡ ಭಾಷೆಗೆ ಲಭ್ಯವಾಗಬೇಕಾದರೆ ಮತ್ತೆ ಐದುನೂರು ವರ್ಷಗಳೇ ಕಳೆಯಬೇಕಾಗಿ ಬಂದುದು ವಿಸ್ಮಯಕಾರಿಯಾದರೂ ಅಸಹಜವಲ್ಲ. ಪಂಪನ ಅನಂತರ ಐನೂರು ವರ್ಷಗಳಿಗೆ ನಾರಣಪ್ಪ ಉದ್ಭವಿಸಿ ಮಹಾಕಾವ್ಯ ರಚಿಸಿದರೆ, ನಾರಣಪ್ಪನ ಅನಂತರ ಐನೂರು ವರ್ಷಗಳಿಗೆ ಕುವೆಂಪು ಉದ್ಭವಿಸಿ ಮಹಾಕಾವ್ಯ ರಚಿಸಿದ್ದಾರೆ.

ಕುವೆಂಪು ಅವರು ‘ಶ್ರೀರಾಮಾಯಣದರ್ಶನಂ’ ರಚಿಸುವ ವೇಳೆಗೆ ಸಾವಿರ ವರುಷಗಳ ಸಮೃದ್ಧವೂ ವೈವಿಧ್ಯಪೂರ್ಣವೂ ಆದ ಸಾಹಿತ್ಯ ಅವರ ಹಿಂದಿತ್ತು. ಚಂಪೂ ರಗಳೆ ತ್ರಿಪದಿ ಸಾಂಗತ್ಯ ಷಟ್ಪದಿ ಮುಂತಾದ ಹಲವು ಬಗೆಯ ಛಂದೋವಿಧಾನಗಳು ಕಾವ್ಯಾಭಿವ್ಯಕ್ತಿಯ ಸಶಕ್ತ ಮಾಧ್ಯಮಗಳಾಗಿ ಬಳಕೆಗೊಂಡು ಯಶಸ್ವಿಯಾಗಿದ್ದವು. ಮುಕ್ತ ಛಂದಮಾರ್ಗವೂ ಕವಿಗಳಿಗೆ ರಾಜರಸ್ತೆಯನ್ನು ನಿರ್ಮಿಸಿತ್ತು. ಹಳೆಯ ಮಾರ್ಗದಲ್ಲಿ ಸವಕಲಾಗಿದ್ದ ಭಾಷೆ ಭಾವಗೀತೆ ಕಥನಕವನ ಖಂಡಕಾವ್ಯ ಪದ್ಯ ನಾಟಕಗಳ ಮೂಲಕ ಒಂದೆಡೆ, ಕಥೆ ಪ್ರಬಂಧ ಕಾದಂಬರಿ ಜೀವನಚರಿತ್ರೆ ಗದ್ಯನಾಟಕ ವಿಮರ್ಶೆ ಅನುವಾದಗಳ ಮೂಲಕ ಮತ್ತೊಂದೆಡೆ ಹೊಸ ಕಸುವನ್ನು ಸ್ಥಿತಿಸ್ಥಾಪಕತ್ವವನ್ನು ಸೂಕ್ಷ್ಮತೆಯನ್ನು ಸರ‍್ವಂಭರತ್ವವನ್ನು ಗಳಿಸಿಕೊಳ್ಳ ತೊಡಗಿತು. ಸಂಸ್ಕೃತದ ಅಗಾಧ ಹಿನ್ನೆಲೆಯೊಂದಿಗೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಗಳು ಹಾಗೂ ಗ್ರಾಮೀಣ ನುಡಿಗಟ್ಟುಗಳು ಕನ್ನಡವನ್ನು ಕಡೆದು ಹೊಸ ಹೊಸ ಸಾಧ್ಯತೆಗಳನ್ನು ಅದು ತೆರೆಯುವ ಮೂಡಿಸುವ ಶಕ್ತಿಯನ್ನು ತುಂಬುತ್ತಿದ್ದುವು. ಸಾಂಪ್ರದಾಯಿಕ ವಸ್ತು-ವಿಷಯಗಳ ಜೊತೆಗೆ ಸಮಕಾಲೀನವೂ ವಿನೂತನವೂ ಆದ ಸಂಗತಿಗಳು ಕಾವ್ಯಸಿಂಹಾಸವನ್ನು ಯಾವ ಎಗ್ಗೂ ಇಲ್ಲದೆ ಅಲಂಕರಿಸಿ ನವಕಾಂತಿಯಿಂದ ರಾರಾಜಿಸತೊಡಗಿದ್ದವು. ಧಾರ್ಮಿಕ ರಂಗದಲ್ಲೂ ಸಂಕುಚಿತ ಮತೀಯ ಭಾವನೆಗಳು ತಲೆತಗ್ಗಿಸಿ ಸರ್ವಧರ್ಮ ಸರ್ವೋದಯ ಭಾವನೆಗಳು ಜನಚೇತನವನ್ನು ಜೀವಂತಿಸತೊಡಗಿದ್ದವು. ಶ್ರೀರಾಮಕೃಷ್ಣ ಪರಮಹಂಸ, ವಿವೇಕಾನಂದ, ರಮಣಮಹರ್ಷಿ, ಶ್ರೀ ಅರವಿಂದರು, ರಾಜರಾಮಮೋಹನರಾಯ್, ಗಾಂಧೀಜಿ ಮೊದಲಾದ ವಿಭೂತಿ ಪುರುಷರ ಸಂದೇಶಗಳು ದೇಶದುದ್ದಗಲಕ್ಕೂ ಸ್ಪಂದಿಸ ತೊಡಗಿ ದೇಶಪ್ರೇಮ, ಪ್ರಜಪ್ರೇಮ, ಸ್ವಾಭಿಮಾನ, ಸ್ವಾತಂತ್ರ್ಯ, ಅಧ್ಯಾತ್ಮ ಮುಂತಾದ ಮಲ್ಯಗಳು ಅದ್ಭುತ ಚಲಾವಣೆಯನ್ನು  ಪಡೆದುಕೊಂಡಿದ್ದವು. ಹೀಗೆ ಭಾಷೆ ಸಂಸ್ಕೃತಿಗಳು ಮತ್ತೊಮ್ಮೆ ಮಹೋನ್ನತ ಪ್ರಮಾಣದಲ್ಲಿ ಈ ನಾಡಿನಲ್ಲಿ ಪರಿಪಕ್ವಸ್ಥಿತಿಯನ್ನು ಮುಟ್ಟ ತೊಡಗಿದ್ದವು. ಈ ಆಧುನಿಕ ಸಂಸಿದ್ಧತೆಯನ್ನು ಸತ್ವಪೂರ್ಣವಾಗಿ ತನ್ನ ಮಹಾಪ್ರತಿಭೆಯ ಮೂಲಕ ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಮಹಾಕವಿ ವ್ಯಕ್ತಿತ್ವವೊಂದರ ತುರ್ತು ಅಗತ್ಯವಿತ್ತು. ಈ ಅಗತ್ಯವನ್ನು ಅದ್ಭುತ ಪ್ರಮಾಣದಲ್ಲಿ ಪೂರೈಸಿದವರು ಕುವೆಂಪು.

ಮಲೆನಾಡಿನ ವೈಭವಪೂರ್ಣ ನಿಸರ್ಗ ಸೌಂದರ್ಯದ ದಟ್ಟವಾದ ಪ್ರಜ್ಞೆ, ಜನಜೀವನದ ಗಾಢವಾದ ಅರಿವು, ಸಂಸ್ಕೃತ ಇಂಗ್ಲಿಷ್ ಬಂಗಾಳಿ ಕನ್ನಡ ಭಾಷೆಗಳ ಪ್ರಗಲ್ಭ ಪಾಂಡಿತ್ಯ, ವ್ಯಾಪಕವೂ ತಲಸ್ಪರ್ಶಿಯೂ ಆದ ಸಾಹಿತ್ಯಾಭ್ಯಾಸ, ಭಾವಗೀತೆ ನಾಟಕ ಕಥನಕವನ ಖಂಡಕಾವ್ಯ ಕಥೆ ಕಾದಂಬರಿ ಜೀವನಚರಿತ್ರೆ ವಿಮರ್ಶೆ ಪ್ರಬಂಧ ಮೀಮಾಂಸೆ ಮುಂತಾದ ಸಾಹಿತ್ಯದ ಬಹುಪ್ರಕಾರಗಳಲ್ಲಿ ಶ್ರೇಷ್ಠ ಕೃತಿಗಳನ್ನು ರಚಿಸಿ ಪಳಗಿದ ಲೇಖನಶಕ್ತಿ, ಸದಾ ಮಹತ್ತಾದುದನ್ನೇ ಸಾಧಿಸಬೇಕೆನ್ನುವ ನಿರಂತರ ತೀವ್ರ ಹಂಬಲ ಮತ್ತು ಪ್ರಯತ್ನ, ಸ್ವಾನುಭವ ಜನ್ಯವಾದ ದಾರ್ಶನಿಕತೆ – ಇವೆಲ್ಲ ಒಂದಾಗಿ ಮಹಾಕಾವ್ಯ ಸೃಷ್ಟಿಗೆ ಕುವೆಂಪು ಅವರನ್ನು ಪ್ರೇರಿಸಿದವು.

ಪಂಪ ಮತ್ತು ನಾರಣಪ್ಪರಿಬ್ಬರ ಶಕ್ತಿಪ್ರತಿಭೆಗಳೂ ಕುವೆಂಪು ಅವರಲ್ಲಿ ಒಗ್ಗೂಡಿರುವುದು ಸ್ಪಷ್ಟಗೋಚರ. ಪಂಪನ ತೀವ್ರ ನಿಸರ್ಗಾನುರಕ್ತಿ, ರಾಜಸ್ಥಾನದ ನಿಯಮ ಬಂಧನಗಳ ನಡುವೆಯೂ ಮೈಮುರಿದು ನಿಲ್ಲುವ ಸ್ವಾಭಿಮಾನ ಮತ್ತು ಬಂಡಾಯ ಪ್ರವೃತ್ತಿ, ಪ್ರಗಾಢ ವ್ಯಾಸಂಗದತ್ತವಾದ ಪ್ರಥಮ ದರ್ಜೆಯ ಪಾಂಡಿತ್ಯ, ಸಂಯಮ ಪೂರ್ಣವಾದ ಧೀರಗಂಭೀರ ಸಂಗ್ರಹ ಕೌಶಲ, ಅದಮ್ಯವಾದ ಆತ್ಮಾನುರಕ್ತಿ, ಅಪೂರ್ವ ಭಾಷಾಪ್ರಭುತ್ವ, ಗಗನದೆತ್ತರಕ್ಕೆ ಚಿಮ್ಮುವ ಕಲಾಸಾಮರ್ಥ್ಯ, ಕಿರಿದರಲ್ಲಿ ಪಿರಿದರ್ಥವನ್ನು ಹೊಮ್ಮಿಸುವ ವಿಶಿಷ್ಟ ಜಣ್ಮೆ- ಇವುಗಳ ಜೊತೆಗೆ; ನಾರಣಪ್ಪನ ಭಗವತ್‌ಪ್ರಜ್ಞೆ, ಪ್ರವಾಹಸ್ವರೂಪಿಯಾದ ಉತ್ಸಾಹ, ವಿಧಿವಾದ, ವಿಸ್ತರಣಪ್ರಿಯತೆ, ಭಾಷಾವೈಭವ, ಗ್ರಾಮಸಂಸ್ಕೃತಿಯ ಸಾಂದ್ರತೆ, ನಾಟಕೀಯ ಚಿತ್ರಣಚತುರತೆ, ಸ್ವತಂತ್ರ ಮನೋವೃತ್ತಿ, ರೂಪಕ ಕೌಶಲ, ಉಪದೇಶಪ್ರವೃತ್ತಿ, ನಿಯಮಾತೀತತೆ, ಅಂತಃಕರಣದರ್ಶಿಯಾದ ಕುಸುರಿಗಾರಿಕೆ, ಸಂಪ್ರದಾಯಕ್ಕೆ ಸೊಪ್ಪು ಹಾಕದ ಸ್ವಚ್ಛಂದಶೀಲತೆ ಮತ್ತು ಮಾನವತೆಯ ಅಖಂಡ ಅನಾವರಣದೊಡನೆಯೇ ಅದರ ಮಿತಿಗಳನ್ನು ಅರಿತ ದಾರ್ಶನಿಕ ನಿಲುವು – ಇವು ಕುವೆಂಪು ಕೃತಿಯಲ್ಲಿ ಅನ್ಯಾದೃಶ್ಯವಾಗಿ ಮೇಳೈಸಿವೆ.

ಪಂಪನಂತೆ ರಾಜಸ್ಥಾನದ ಹಂಗಿಗೆ, ಅದರ ಅನಿವಾರ್ಯಫಲವಾದ ವಾಗ್ಮಿತಿಗೆ ಮತ್ತು ಮುಕ್ತ ಅಭಿಪ್ರಾಯ ಮಂಡನೆಗೆ ತಾನಾಗಿಯೇ ಹೇರಿಕೊಳ್ಳಬೇಕಾದ ಕಹಿ ಶಿಸ್ತಿಗೆ ಪಕ್ಕಾಗದ ನಾರಣಪ್ಪನಂತೆ, ಕುವೆಂಪು ಕೂಡ ‘ಕವಿಗರಸುಗಿರಸುಗಳ ಋಣವಿಲ್ಲ’ ಎಂದು ಆ ಸ್ವರ್ಣ ಸಂಕಲೆಗಳನ್ನು ಧಿಕ್ಕರಿಸಿ ದೂರ ನಿಂತವರು. ಅಂತೆಯೇ ಕಾವ್ಯದ ರಸಸ್ತರದಲ್ಲೆ ಶುದ್ಧ ಚರಿತ್ರೆಯ ಕಸ ಸೇರಿಸಬೇಕಾದ ಇಕ್ಕಟ್ಟು ಬಿಕ್ಕಟ್ಟುಗಳು ಅವರಿಗೆ ಪ್ರಾಪ್ತವಾಗಲಿಲ್ಲ. ಆದ್ದರಿಂದಲೇ ತಾವು ಆರಿಸಿಕೊಂಡ ಕಾವ್ಯ ವಸ್ತುವಿನ ಉದ್ದಗಲಕ್ಕೂ ಯಾವುದೇ ಮೈಚಳಿ ಯಿಲ್ಲದೆ ಮನಸಾರೆ ಈಜಡುವುದು ಅವರಿಗೆ ಸಾಧ್ಯವಾಯಿತು. ರಾಮಾಯಣದಷ್ಟು ಆದರ್ಶ ಜಗತ್ತಿನದಲ್ಲದ, ವಾಸ್ತವಕ್ಕೆ ಹೆಚ್ಚು ಹತ್ತಿರವಾದ ಮಹಾಭಾರತ ಪಂಪನಿಗೆ ಲೌಕಿಕಕಾವ್ಯ ವಾದರೆ, ಇದೇ ಕೃತಿ ನಾರಣಪ್ಪನಿಗೆ ವಾಸ್ತವ-ಆದರ್ಶಗಳನ್ನು ಏಕತ್ರ ಬೆಸೆಯುವ ಮತ್ತು ಅದೇ ಕಾಲದಲ್ಲಿ ಭಗವತ್‌ಪಾರಮ್ಯವನ್ನು ಮೆರೆಯುವ ಸಾಧನವಾಯಿತು. ಭಾರತಕ್ಕಿಂತ ಹೆಚ್ಚು ಆದರ್ಶಸ್ತರದ, ಆದರೆ ಅಷ್ಟು ಸಂಕೀರ್ಣವಲ್ಲದ, ಬದುಕನ್ನು ಚಿತ್ರಿಸುವ ರಾಮಾಯಣದ ವಸ್ತು ಕುವೆಂಪು ಅವರ ಕಲ್ಪನೆಯ ಎತ್ತರವನ್ನು ದರ್ಶನದ ಬಿತ್ತರವನ್ನು ಚಿಂತನೆಯ ಸಂಕೀರ್ಣತೆಯನ್ನು ಪಾಂಡಿತ್ಯದ ಪ್ರಗಲ್ಭತೆಯನ್ನು ಅನನ್ಯವಾಗಿ ಧಾರಣಮಾಡುವ ಸಮರ್ಥ ಮಾಧ್ಯಮವಾಯಿತು. ತನಗಿಂತ ಹಿಂದೆ ತನ್ನದೇ ಭಾಷೆಯ ಮಹಾಕವಿಯೊಬ್ಬ ಮಹಾಭಾರತವನ್ನು ವಸ್ತುಗೈದು ಮಹಾಕೃತಿಯೊಂದನ್ನು ರಚಿಸದಿದ್ದುದರ ವಿಪುಲ ಅನುಕೂಲ ಪಂಪನಿಗೆ ಒದಗಿದಂತೆ, ರಾಮಾಯಣವನ್ನು ಆಧರಿಸಿ ಪಂಪ ಕುಮಾರವ್ಯಾಸರ ಕೃತಿಗಳ ಎತ್ತರಕ್ಕೇರುವ ಕನ್ನಡ ಕೃತಿಯೊಂದು ಈವರೆಗೆ ರಚಿತವಾಗದಿದ್ದುದು ಕುವೆಂಪು ಅವರಿಗೆ ವರವಾಗಿ ಪರಿಣಮಿಸಿತು. ಈ ಕಾರಣದಿಂದ ತಮ್ಮ ವಿಶಿಷ್ಟಾನುಭವ ಸಮಸ್ತವನ್ನೂ ಮೂಲ ವಸ್ತುವಿನ ಮೈಗೆಡದಂತೆ ತುಂಬಿ ಅದನ್ನು ಮಹೋನ್ನತವಾಗಿಸುವ ಅಪೂರ್ವ ಅವಕಾಶ ಕುವೆಂಪು ಅವರಿಗೆ ದೊರೆಯಿತು.

ಅರ್ಜುನನಿಗೆ ಸಂಬಂಧಿಸಿದ ಕೆಲವು ಕಥಾಸಂದರ್ಭಗಳನ್ನು, ಕೃಷ್ಣನಿಗೆ ದೊರೆತ ಅಪ್ರಾಮುಖ್ಯತೆಯನ್ನು, ಹೊರತುಪಡಿಸಿದರೆ ವ್ಯಾಸರ ಕಥಾಭಿತ್ತಿಯಲ್ಲಿ ಪಂಪ ಮೂಲಭೂತ ಮಾರ್ಪಾಟುಗಳನ್ನು ಮಾಡಿಕೊಳ್ಳಲಿಲ್ಲ. ಮಾಡಿಕೊಂಡ ಮಾರ್ಪಾಟುಗಳೂ ಕೃತಿಯ ಔನ್ನತ್ಯಕ್ಕೆ ಕಾಣಿಕೆ ನೀಡಲಿಲ್ಲ. ಅವನ ಹೆಗ್ಗಳಿಕೆಯಿರುವುದು ಅವನ ಸಂಗ್ರಹ ನೈಪುಣ್ಯದಲ್ಲಿ, ಪಾತ್ರಗಳನ್ನು ಶಿಸ್ತುಬದ್ಧವಾಗಿ ನಡೆಸಿಕೊಳ್ಳುವುದರಲ್ಲಿ, ಮಾತುಗಳನ್ನು ಉಚಿತಕ್ಕೆ ತಕ್ಕಂತೆ ಆಯ್ದು ಧ್ವನಿಪೂರ್ಣವಾಗಿ ಚಿತ್ರರಂಜಿತವಾಗಿ ದುಡಿಸಿಕೊಳ್ಳುವುದರಲ್ಲಿ ಮತ್ತು ಇರುವ ಸಂದರ್ಭ ಗಳನ್ನೇ ಜೀವಂತವಾಗಿ ಕಡೆದಿಡುವುದರಲ್ಲಿ. ನಾರಣಪ್ಪನಾದರೋ ವ್ಯಾಸರ ವಿಧೇಯ ಶಿಷ್ಯ; ಕುಮಾರವ್ಯಾಸ. ಆದ್ದರಿಂದ ಮೂಲ ಕಥೆಯಲ್ಲಿ ಅವನು ಎದ್ದುಕಾಣುವ ಮಾರ್ಪಾಟುಗಳನ್ನು ಮಾಡಿಕೊಳ್ಳಲಿಲ್ಲ; ಅದು ಅವನ ಉದ್ದೇಶವೂ ಆಗಿರಲಿಲ್ಲ. ಮಹತ್ವದ ಮಾರ್ಪಾಟೆಂದರೆ ಇಡೀ ಭಾರತದ ಸೂತ್ರಧಾರಕಶಕ್ತಿಯಾಗಿ ಕೃಷ್ಣನನ್ನು ರೂಪಿಸಿರುವುದು. ಪಾತ್ರಗಳ ಸ್ವತಂತ್ರ ಸಂಚಾರ, ಸನ್ನಿವೇಶಗಳ ಸುದೀರ್ಘವಾದ ಕಣ್ಣಿಗೆ ಕಟ್ಟುವಂಥ ವಿವರ, ಸ್ವಚ್ಛಂದಬಂಧುರವಾದ ಪ್ರಸನ್ನ ಮಾತುಗಾರಿಕೆ, ಭಕ್ತಿಯ ದಟ್ಟವಾದ ಹೃದ್ರಮ್ಯ ಪ್ರವಾಹ, ಮನಸಿನಾಳಕ್ಕೆ ಪಾತಾಳ ಗರಡಿಯಿಟ್ಟು ಅಲ್ಲಿನ ಎಳೆಎಳೆಯನ್ನೂ ತೊಳೆತೊಳೆಯಾಗಿ ಬಿಡಿಸಿ ಬಣ್ಣಿಸುವ ಕೌಶಲ, ಓದುಗರನ್ನು ತನ್ನೊಡನೆ ನಿರಾಯಾಸವಾಗಿ ಸೆಳೆದೊಯ್ಯುವ ಅಪ್ರತಿಮ ನಿರೂಪಣೆ ಅವನ ಹೆಗ್ಗಳಿಕೆ. ಜನಮನದ ಭಾವಕೋಶದಲ್ಲಿ ಸಹಸ್ರಾರು ವರ್ಷಗಳಿಂದ ಬಹುಬಗೆಯಾಗಿ ಬೆಳೆದು ಅತ್ಯಂತ ಎತ್ತರಕ್ಕೇರಿರುವ ಕಥೆ ರಾಮಾಯಣದ್ದು. ಆ ಆದರ್ಶಮಯ ಜಗತ್ತಿನಲ್ಲಿ ಸಹೃದಯರನ್ನು ಗೊಂದಲಗೊಳಿಸುವ ಬೆಚ್ಚಿ ಬೀಳಿಸುವ ಮತ್ತು ಅವರ ರಾಮಪರ ಭಕ್ತಿಗೆ ಸವಾಲೆಸೆಯುವ ಹಲವು ಕ್ಲಿಷ್ಟ ಸಂದರ್ಭಗಳಿವೆ. ಈ ಕಗ್ಗಂಟುಗಳನ್ನು ಬಿಡಿಸುವ, ವೈರುಧ್ಯಗಳ ನಡುವೆ ಸಮನ್ವಯತೆಯನ್ನು ಸಾಧಿಸಿ ಕಥೆಯ ಭಾವ ಆಶಯ ಆದರ್ಶಗಳನ್ನು ಸಹಜವಾಗಿ ಸಂತತಗೊಳಿಸಿ ತರ್ಕಬದ್ಧ ವಿಚಾರಸಮ್ಮತ ಮತ್ತು ವಿಕಾಸಶೀಲವಾಗುವಂತೆ ಚಿತ್ರಿಸುವ ಅಸಾಧಾರಣ ಹೊಣೆ ಕುವೆಂಪು ಅವರದಾಗಿತ್ತು. ಈ ದೃಷ್ಟಿಯಿಂದ ಪಂಪ ಕುಮಾರವ್ಯಾಸರಿ ಗಿಂತ ಕುವೆಂಪು ಎದುರಿಸಿದ ಸವಾಲು ಬಹು ದೊಡ್ಡದು. ವೈಜ್ಞಾನಿಕವೂ ಬುದ್ದಿಪ್ರಧಾನವೂ ಆದ ಈ ಯುಗಕ್ಕೂ ಪ್ರಾಚೀನ ರಾಮಾಯಣದ ವಸ್ತು ಪಾತ್ರ ಸಂಗತಿಗಳು ಪ್ರಸ್ತುತವೆನಿಸು ವಂತೆ ಸೃಷ್ಟಿಸುವುದು ಸಾಮಾನ್ಯ ಸಂಗತಿಯಲ್ಲ. ಆದ್ದರಿಂದ ಅನಿವಾರ್ಯವಾಗಿಯೇ ಕುವೆಂಪು ವಾಲ್ಮೀಕಿ ಕಥೆಯಲ್ಲಿ ಪಾತ್ರಗಳಲ್ಲಿ ಸಂವಿಧಾನದಲ್ಲಿ ಹಲವು ಮಹತ್ವದ ಮಾರ್ಪಾಟುಗಳನ್ನು ಮಾಡಿಕೊಂಡರು. ಈ ಮಾರ್ಪಾಟು ವಿಶ್ವಾಮಿತ್ರ ಸೃಷ್ಟಿಯಾಗದೆ, ಮೂಲ ಕಥಾವೃಕ್ಷದ ಸಹಜ ಬೆಳವಣಿಗೆಯಾಗಿ ಕಥಾಬಂಧದಲ್ಲಿ ಅನ್ಯೋನ್ಯವಾಗಿ ಅಡಕಗೊಂಡಿರುವುದು ಒಂದು ಅದ್ಭುತ ಸಾಧನೆ. ಮೂಲ ಕಥಾ ಸಂವಿಧಾನದಲ್ಲಿ ತಂದ ಕೆಲವು ಅಪೂರ್ವ ಬದಲಾವಣೆಗಳು, ಪಾತ್ರಚಿತ್ರಣದಲ್ಲಿ ಅನುಸರಿಸಿದ ವಿಕಾಸಶೀಲತೆ, ಹೊಸದಾಗಿ ಸೃಷ್ಟಿಸಿಕೊಂಡ ಕೆಲವು ವಿಶಿಷ್ಟ ಪಾತ್ರಗಳು, ಪ್ರತಿಯೊಂದು ಮುಖ್ಯ ಕಥಾಬಿಂದು ಪಾತ್ರ ಸನ್ನಿವೇಶ ಸಂಭಾಷಣೆ ವರ್ಣನೆಗಳ ಮೂಲಕ ಹೊಮ್ಮುತ್ತ ಅಖಂಡ ಕಾವ್ಟದ ಚಾಲಕಶಕ್ತಿಯಾಗಿ ಅದನ್ನು ರೂಪಿಸಿರುವ ವಿಶಿಷ್ಟದರ್ಶನ, ಮಾನವ ಹಾಗೂ ನಿಸರ್ಗ ಪ್ರಕೃತಿಗಳೆರಡರ ಹೃದ್ರಮ್ಯ ಚಿತ್ರಣ, ಸಮಕಾಲೀನ ಚಿಂತನೆಯ ಪ್ರಧಾನ ಎಳೆಗಳ ಮತ್ತು ಪರಂಪರೆಯ ಸತ್ವದ ಸಮನ್ವಯ, ಸ್ವಪ್ರಯತ್ನದಿಂದ ರೂಢಿಸಿಕೊಂಡು ಕಾವ್ಯದ ಎತ್ತರ ಬಿತ್ತರಗಳನ್ನು ಸಮರ್ಥವಾಗಿ ಎತ್ತಿಹಿಡಿಯುವ ವೈವಿಧ್ಯಮಯವಾದ ಗಂಭೀರ ಛಂದಸ್ಸು, ಗಗನಗಾಮಿಯಾಗುವ ಕಲ್ಪಕತೆ – ಇವು ಕುವೆಂಪು ಅವರ ಈ ಕೃತಿಯ ವಿಶೇಷಾಂಶಗಳಾಗಿವೆ. ಆದ್ದರಿಂದ ಕಾಲದ ದೃಷ್ಟಿಯಿಂದ ಮಾತ್ರವಲ್ಲ, ತನ್ನ ಭಾಷೆ ಸಂಸ್ಕೃತಿ ಚಿಂತನೆ ಕಲ್ಪನೆಗಳು ಸಮನ್ವಯಗೊಂಡು ನಿಖರಸ್ವರೂಪದಲ್ಲಿ ಮೈದಳೆದುದನ್ನು ಕನ್ನಡನಾಡು ಕಂಡದ್ದು ‘ವಿಕ್ರಮಾರ್ಜುನ ವಿಜಯ’, ‘ಕರ್ನಾಟಕ ಭಾರತ ಕಥಾಮಂಜರಿ’ಗಳ ನಂತರ ಶ್ರೀರಾಮಾಯಣದರ್ಶನದಲ್ಲಿ ಮಾತ್ರ.

ಕನ್ನಡ ಭಾಷೆಯಲ್ಲಿ ಅವತರಿಸಿದ ಎರಡು ವಿಶಿಷ್ಟ ರಾಮಾಯಣ ಕೃತಿಗಳಿಗೆ ಹೋಲಿ ಸಿದರೂ ಕೂಡ ‘ಶ್ರೀರಾಮಾಯಣದರ್ಶನಂ’ ಸ್ಥಾನ ಅತ್ಯಂತ ಎತ್ತರದಲ್ಲಿ ನಿಲ್ಲುತ್ತದೆ. ಕನ್ನಡದಲ್ಲಿ ಮೂಡಿದ ಮೊದಲ ರಾಮಾಯಣ ಪೊನ್ನನ ‘ಭುವನೈಕರಾಮಾಭ್ಯುದಯ’ ವಾಗಿದ್ದಿರಬಹುದಾದರೂ, ನಮಗೀಗ ಪ್ರಥಮ ರಾಮಾಯಣ ಕೃತಿಯಾಗಿ ದೊರೆಯುವುದು ಅಭಿನವ ಪಂಪನೆಂದು ಬಿರುದಾಂಕಿತನಾದ ನಾಗಚಂದ್ರನ ‘ರಾಮಚಂದ್ರಚರಿತ ಪುರಾಣ’ ಮಾತ್ರ. ಆದರೆ ಆತ ಅನುಸರಿಸಿದ ಮೂಲ ವಾಲ್ಮೀಕಿ ಮಹರ್ಷಿಯದಲ್ಲ, ವಿಮಲ ಸೂರಿಯ ‘ಪಉಮಚರಿಅ’. ಆದ್ದರಿಂದ ವ್ಯಾಪಕ ಜನಪ್ರಿಯತೆಯನ್ನು ಗಳಿಸಿಕೊಂಡ ಕೃತಿಯನ್ನು ಬಿಟ್ಟು ಜೈನ ಪರಂಪರೆಯ, ಬಹುಪರಿಚಿತವಲ್ಲದ, ಮೂಲವನ್ನು ಆಧರಿಸಿದ್ದು ಮೊತ್ತಮೊದ ಲಾಗಿ ನಾಗಚಂದ್ರನಿಗೆ ಹಲವು ಮಿತಿಗಳನ್ನು ಒಡ್ಡಿತು. ‘ಅಪೂರ್ವಮೆನೆ ರಾಮಕಥೆಯನಭಿ ವರ್ಣಿಸುವೆಂ’ ಎಂದು ಆತ ಹೇಳಿಕೊಂಡಿದ್ದರೂ ಆತನ ಕಥೆಯಲ್ಲಿ ಅಂಥ ಅಪೂರ್ವತೆ ಯೇನಿಲ್ಲ. ವಿಶೇಷತೆಯಿರುವುದು ರಸಪೋಷಣೆಯಲ್ಲಿ ಮತ್ತು ವರ್ಣನಾ ಕೌಶಲದಲ್ಲಿ ಹಾಗೂ ಮಹಾರಣ್ಯದಂತಿರುವ ‘ಪಮಚರಿಅ’ವನ್ನು ಅವನು ಸಂಗ್ರಹಿಸಿರುವ ಅಸಾಧಾರಣ ಜಣ್ಮೆಯಲ್ಲಿ. ಮೇಲಾಗಿ ಇದು ಮೂಲತಃ ಕಾವ್ಯವಲ್ಲ, ಹೆಸರೇ ಸೂಚಿಸುವಂತೆ ಪುರಾಣ. ಆದ್ದರಿಂದ ಅಖಂಡ ಮಾನವತೆಯ ಆದರ್ಶ ಮಲ್ಯಗಳನ್ನು ಪರಿಮಿತಿಗಳನ್ನು ಪ್ರತಿಮಿಸ ಬೇಕಾದ ಕಾವ್ಯ ಅದರ ಉದ್ದಗಲಕ್ಕೂ ವ್ಯಾಪಿಸಿರುವ ಜೈನ ವಾತಾವರಣದಿಂದಾಗಿ ಬಹಳ ಮಟ್ಟಿಗೆ ತನ್ನ ಎತ್ತರವನ್ನು ಸರ್ವಾನ್ವಯತ್ವವನ್ನು ಕುಗ್ಗಿಸಿಕೊಂಡಿದೆ. ವಾಲಿ ಸುಗ್ರೀವ ಮೊದಲಾದ ಕಪಿವರ್ಗದವರು ನಿಜವಾಗಿ ವಾನರರಲ್ಲ, ವಾನರಧ್ವಜರು; ರಾವಣ ವಾಸ್ತವವಾಗಿ ರಾಕ್ಷಸನಲ್ಲ, ಆದು ಅವನ ವಂಶದ ಒಬ್ಬ ಅರಸನ ಹೆಸರು ಮಾತ್ರ – ಮುಂತಾದ ಕಲ್ಪನೆಗಳು ಆಧುನಿಕ ಮನಸ್ಸಿಗೆ ಸ್ವಾಗತಾರ್ಹವೆನಿಸಿದರೂ, ಇದು ನಾಗಚಂದ್ರ ಅನುಸರಿಸಿದ ಮೂಲ ದಲ್ಲಿಯೇ ಇದೆ. ಇಲ್ಲಿನ ಭರತನ ಪಾತ್ರ ಗೌರವಾರ್ಹವಾದುದಲ್ಲ. ರಾಮ ಕೂಡ ಏಕಪತ್ನೀ ವ್ರತಸ್ಥನಲ್ಲ. ಇವೆಲ್ಲ ವಾಲ್ಮೀಕಿ ಕಾವ್ಯದ ಮನೋನ್ನತಿಯನ್ನು ಮುಟ್ಟುವುದಿಲ್ಲ. ಈ ಕಾವ್ಯದ ಅತ್ಯಂತ ಗಮನಾರ್ಹ ಕಾಣಿಕೆಯೆಂದರೆ ವಾಲ್ಮೀಕಿಯ ರಾವಣನಿಗಿಂತ ಮಹೋದಾತ್ತ ನಾದ ರಾವಣನನ್ನು ಕನ್ನಡಕ್ಕೆ ನೀಡಿರುವುದು. ಆದರೂ ಈ ಬಗ್ಗೆ “ಇವನ ಚಿತ್ರ ಮೂಲಕೃತಿಯನ್ನು ಬಹುಮಟ್ಟಿಗೆ ಹೋಲುತ್ತದೆ. ಆದರೆ ಮೂಲದಲ್ಲಿರುವಷ್ಟು ಸೌಂದರ್ಯ ವಿಲ್ಲ. ಗಾಂಭೀರ್ಯವಿಲ್ಲ, ದುರಂತತೆಯ ಬೃಹತ್ ಪ್ರಮಾಣವಿಲ್ಲ. ತುಪ್ಪದ ಹನಿ ಅಲ್ಲಲ್ಲಿ ಹತ್ತಿದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ಆ ಚಿತ್ರವಿದೆ” ಎಂಬ ಅಭಿಪ್ರಾಯವೂ ಇದೆ. ಕಾವ್ಯಮಧ್ಯದಲ್ಲಿ ಮನೋಹರವಾದ ಭಾವಗೀತಾತ್ಮಕ ಭಾಗಗಳು ಅಲ್ಲಲ್ಲಿ ಮಿನುಗುತ್ತವೆಯಾದರೂ ಇಡೀ ಕಾವ್ಯವನ್ನು ಒಂದೇ ತೆರನಾಗಿ ಸಮತೋಲನವಾಗಿ ನಿರ್ವಹಿಸಿಲ್ಲ ಆತ. “ಪಂಪ ರಾಮಾಯಣದಲ್ಲಿ ಮಹಾಕಾವ್ಯದ ಗುಣಗಳಿವೆ; ಆದರೆ ಅದರ ಯಶಸ್ಸು ಸಂಪೂರ್ಣವಾಗಿ ನಾಗಚಂದ್ರನಿಗೆ ಸಲ್ಲತಕ್ಕದ್ದಲ್ಲ; ಅವನಿಗೆ ಸಲ್ಲುವ ಪೂಜೆಯ ಬಹುಭಾಗ….ವಿಮಲ ಸೂರಿಗೆ ಹೋಗುತ್ತದೆ….ನಾಗಚಂದ್ರನದು ಪ್ರಧಾನವಾಗಿ ಭಾವಗೀತ ಪ್ರತಿಭೆಯೇ ಹೊರತು ಮಹಾಕಾವ್ಯ ಪ್ರತಿಭೆಯಲ್ಲ ಎಂದು ನಿರ್ಣಯಿಸಿದರೆ ತಪ್ಪಾಗಲಾರದು; ‘ಮಹಾಕಾವ್ಯದ ಮಟ್ಟದ ಹತ್ತಿರ ಸುಳಿಯುವ ಪ್ರೌಢಸರಣಿ’ ಅವನಲ್ಲಿ ಕೆಲವೆಡೆ ಗೋಚರಿ ಸಿದರೂ, ಒಟ್ಟಿನಲ್ಲಿ ಅವನು ಪ್ರಥಮ ಶ್ರೇಣಿಯ ಮಹಾಕವಿಯಲ್ಲ; ದ್ವಿತೀಯ ವರ್ಗದ ಅಗ್ರ ಪೂಜ್ಯ ಕವಿಗಳಲ್ಲಿ ನಿಸ್ಸಂದೇಹವಾಗಿ ಅವನೊಬ್ಬ”[7] – ಎಂಬ ವಿಮರ್ಶೋಕ್ತಿ ಈತನ ಬಗ್ಗೆ ಅತ್ಯಂತ ಸಮಂಜಸವಾದದ್ದು.

ವಾನರರು ಕೇವಲ ವಾನರಧ್ವಜರು; ರಾವಣ ಮುಂತಾದವರು ನಿಜವಾದ ರಾಕ್ಷಸರಲ್ಲ, ರಾಕ್ಷಸಕುಲಸಂಭೂತರು; ರಾವಣನ ಪರಾಂಗನಾವಿರತಿವ್ರತ; ರಾವಣ ಪರಿವರ್ತಿತ ಹೃದಯ ನಾಗಿ ರಾಮನನ್ನು ಗೆದ್ದು ತಂದು ಸೀತೆಯನ್ನು ಅವನಿಗೊಪ್ಪಿಸಬೇಕೆಂದು ಸಂಕಲ್ಪಿಸುವುದು – ಈ ಅಂಶಗಳನ್ನು ಕುವೆಂಪು ನಾಗಚಂದ್ರನಿಂದ ಸ್ವೀಕರಿಸಿದ್ದಾರೆ. ಮುಖ್ಯವಾಗಿ ಶ್ರೀರಾಮಾಯಣ ದರ್ಶನದ ರಾವಣ ಚಿತ್ರಣಕ್ಕೆ ಈ ಕೊನೆಯ ಅಂಶ ಗಮನಾರ್ಹ ಕಾಣಿಕೆ ಸಲ್ಲಿಸಿದೆಯಾದರೂ, ಈ ಹಂತಕ್ಕೆ ಬರುವವರೆಗಿನ ರಾವಣನ ಜೀವನದ ಏರುಪೇರುಗಳು, ಕ್ರಮಾಗತವಾದ ಆಘಾತಗಳು, ಅಂತಃಕರಣದ ಕ್ಷೋಭೆ, ಸೀತಾ – ಮಂಡೋದರಿಯರ ಮನೋದಾರ್ಢ್ಯ ಮತ್ತು ಸತತ ಪ್ರಾರ್ಥನೆ ತಪಸ್ಸುಗಳು ನಿರ್ಮಾಣ ಮಾಡಿದ ಪರಿವರ್ತನಶೀಲ ಪರಿಸರ, ರಾವಣನ ಸ್ವಚಿಂತನೆ – ಎಲ್ಲವೂ ಕುವೆಂಪು ಪ್ರತಿಭೆಯ ನಿರ್ಮಿತಿಗಳು ಎಂಬುದನ್ನು ಕ್ಷಣವೂ ಮರೆಯುವಂತಿಲ್ಲ. ಹೀಗಾಗಿ ಅನ್ಯರು ಕೈಯಾಡಿಸಲು ಸಾಧ್ಯವಿಲ್ಲದಂಥ ಪರಿಪೂರ್ಣಾವಸ್ಥೆ ಯಲ್ಲಿ ವಾಲ್ಮೀಕಿ ಚಿತ್ರಿಸಿದ ಪಾತ್ರಗಳ ಅಂತರಾಳದಲ್ಲೂ ಸೂಕ್ಷ್ಮವೂ ಸೂಕ್ತವೂ ಆದ ವಿಕಸನವನ್ನು ಕಂಡರಿಸಿದ್ದು, ಪ್ರತಿ ಸನ್ನಿವೇಶವನ್ನು ತಮ್ಮ ಕಲಾಕೌಶಲದಿಂದ ತಿದ್ದಿ ತೀಡಿದ್ದು, ಕಾವ್ಯ ಸಂವಿಧಾನದ ಮಹತ್ತು ಅಪೂರ್ವವಾಗಿ ವರ್ಧಿಸುವಂತಹ ಹಲವು ವಿನೂತನ ಸುಂದರ ಪಾತ್ರಗಳನ್ನು ನಿರ್ಮಿಸಿದ್ದು, ಕಥೆಯ ಎಲ್ಲ ಪಾತ್ರ ಸನ್ನಿವೇಶ ಉದ್ದೇಶಗಳನ್ನು ಏಕತ್ರ ಬೆಸೆಯುವ ಅಖಂಡದರ್ಶನದಿಂದ ಕೃತಿಯನ್ನು ದೀಪ್ತಗೊಳಿಸಿದ್ದು, ಯಾವ ಜತಿಮತಗಳ ಸಂಕೋಲೆಯಿಂದಲೂ ಕಾವ್ಯವನ್ನು ಬಂಧಿಸದೆ ಅದು ವಿಶ್ವಮಾನವತೆಯ ಅತ್ಯುಚ್ಚ ಆದರ್ಶ ಗಳ ಪ್ರತಿಪಾದಕವಾಗುವಂತೆ ಯೋಜಿಸಿದ್ದು, ಮಹಾಸನ್ನಿವೇಶಗಳಷ್ಟೇ ಪ್ರಾಮುಖ್ಯವನ್ನು ಅತಿ ಸಣ್ಣ ಸನ್ನಿವೇಶಗಳಿಗೂ ನೀಡಿ ಅವು ಪರಿಪೂರ್ಣತೆಯನ್ನು ಮುಕ್ಕಳಿಸುವಂತೆ ಮಾಡಿದ್ದು, ಕನ್ನಡ ಭಾಷೆಯ ಸಾರಸತ್ವಗಳನ್ನು ಬೃಹತ್‌ಪ್ರಮಾಣದಲ್ಲಿ ದುಡಿಸಿಕೊಂಡಿದ್ದು – ಈ ಮತ್ತು ಇವೇ ಮುಂತಾದ ಅಂಶಗಳಲ್ಲಿ ಕುವೆಂಪು ಅವರ ಶ್ರೀರಾಮಾಯಣದರ್ಶನ ಪಂಪ ರಾಮಾಯಣಕ್ಕಿಂತ ಅತ್ಯಂತ ಎತ್ತರದಲ್ಲಿ ನಿಲ್ಲುತ್ತದೆ ನಿಸ್ಸಂದೇಹವಾಗಿ.

ಇನ್ನು ಕನ್ನಡದಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡ ‘ತೊರವೆ ರಾಮಾಯಣ’ದ ಬಗ್ಗೆ ಕೆಲವು ಮಾತುಗಳನ್ನು ಹೇಳುವುದು ಅಗತ್ಯ. ವಾಲ್ಮೀಕಿ ರಾಮಾಯಣದ ಕಥೆಯನ್ನು ಅಂದಗೆಡದಂತೆ ಮೊತ್ತ ಮೊದಲಬಾರಿಗೆ ಕನ್ನಡಕ್ಕೆ ಕೊಟ್ಟ ಕೀರ್ತಿ ತೊರವೆಯ ನರಹರಿಗೆ ಅರ್ಥಾತ್ ಕುಮಾರವಾಲ್ಮೀಕಿಗೆ ಸೇರಿದ್ದು. ನಿರೂಪಣೆ ಮತ್ತು ದೃಷ್ಟಿಗಳಲ್ಲಿ ನಾರಣಪ್ಪನ ಸಂಪ್ರದಾಯಕ್ಕೆ ಸೇರಿದವನು ನರಹರಿ. ರಾಮಾವತಾರದ ಮಹತ್ವವನ್ನು ಸಾರಿ ರಾಮಭಕ್ತಿಯ ತರಂಗಿಣಿಯಲ್ಲಿ ಆಸ್ತಿಕರನ್ನು ಮೀಯಿಸುವುದೇ ಅವನ ಪರಮ ಗುರಿ. ನಾರಣಪ್ಪನ ಭಾಷಾ ಸಾಮರ್ಥ್ಯವಾಗಲೀ ರೂಪಕ ವೈಭವವಾಗಲೀ ಕಲ್ಪನೋಜ್ವಲತೆಯಾಗಲೀ ಅವನಿಗಿಲ್ಲ. ಜನಮನಸ್ಸಿಗೆ ತಾಕುವಂತೆ ಸರಳವಾಗಿ ನಿರರ್ಗಳವಾಗಿ ಕಥೆ ಹೇಳುವುದೇ ಅವನ ಉದ್ದೇಶ. ರಾಮವ್ಯಕ್ತಿತ್ವಕ್ಕೆ ತನ್ನನ್ನು ಅರ್ಪಿಸಿಕೊಂಡದ್ದರಿಂದ ಕಾವ್ಯದಲ್ಲಿ ತಲೆ ದೋರುವ ರಾಮಚಾರಿತ್ರ್ಯದ ಕೆಲವು ವಿರೋಧಾಭಾಸಗಳ ಬಗ್ಗೆ ಆತ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ದೇವರಾದುದರಿಂದ ಆತನ ಕಾರ್ಯಗಳೆಲ್ಲ ದೋಷರಹಿತವೆಂದೇ ಅವನ ಭಾವನೆ. ಆದ್ದರಿಂದ ಬುದ್ದಿಜನ್ಯವಾದ ಜಿಜ್ಞಾಸೆಗಳಿಗೆ ಇಲ್ಲಿ ಎಡೆಯೇ ಇಲ್ಲ. ಮೂಲಕಥೆಯನ್ನು ಅಗತ್ಯವಾದೆಡೆ ಹಿಗ್ಗಿಸಿ, ಅನಗತ್ಯವಾದೆಡೆ ಸಂಕ್ಷಿಪ್ತಗೊಳಿಸುವುದು ಶ್ರೇಷ್ಠ ಕವಿಯ ಸಲ್ಲಕ್ಷಣಗಳಲ್ಲಿ ಒಂದು. ಆದರೆ ಕುಮಾರವಾಲ್ಮೀಕಿ ವಾಲ್ಮೀಕಿಯ ಕಥಾಸಂವಿಧಾನವನ್ನು ಅತ್ಯಂತ ಅಗತ್ಯವೂ ರೋಚಕವೂ ಆದ ಎಡೆಗಳಲ್ಲೇ ಕುಗ್ಗಿಸಿ, ಅನಗತ್ಯವೂ ಅನಾಕರ್ಷಕವೂ ಆದೆಡೆಗಳಲ್ಲೆ ಹಿಗ್ಗಿಸಿ ಕಾವ್ಯಕ್ಕೆ ಬೊಜ್ಜು ಹೆಚ್ಚಿಸಿದ್ದಾನೆ. ವಾಲ್ಮೀಕಿಯಲ್ಲಿ ಬಾಲಕಾಂಡ ಅತ್ಯಂತ ಚಿಕ್ಕದು. ಆದರೆ ನರಹರಿ ಅದನ್ನು ಸುಮಾರು ಎರಡರಷ್ಟು ಗಾತ್ರಕ್ಕೆ ಉಬ್ಬಿಸಿ ನೀರಸಗೊಳಿಸಿದ್ದಾನೆ. ಹಾಗೆಯೇ ಅತ್ಯಂತ ಪ್ರಭಾವಕಾರಿಯೂ ಮಾನವೀಯತೆಯ ಅಂತ ರಾಳದ ಪ್ರಬಲ ಅನಿಕೆಗಳ ಕ್ರಿಯೆಗಳ ಜ್ವಲಂತ ಸಮರ್ಥ ಚಿತ್ರಣವಿರುವ ಅಯೋಧ್ಯಾ ಕಾಂಡವನ್ನು ಅನುಚಿತವಾಗಿ ಹ್ರಸ್ವಗೊಳಿಸಿಬಿಟ್ಟಿದ್ದಾನೆ. ಯುದ್ಧಕಾಂಡವಂತೂ ಸಹನಾತೀತ ವಾಗಿ ಅಕ್ಷಮ್ಯವಾಗಿ ಲಂಬಿತವಾಗಿದೆ, ನಿಸ್ಸಾರವಾಗಿದೆ. ಸಂವಾದಗಳ ಮೂಲಕ ವಾಲ್ಮೀಕಿಯ ಪಾತ್ರಗಳಲ್ಲಿ ವ್ಯಕ್ತಗೊಳ್ಳುವ ಜೀವನ ಸಂಘರ್ಷ ಇಲ್ಲಿ ತೀರಾ ಸಪ್ಪೆಯಾಗಿದೆ. ಇಡೀ ಕೃತಿ ರಾಮಮಹಿಮಾಮಯವಾಗಿದ್ದು, ಸರಳ ನಿರೂಪಣೆಯಿಂದಾಗಿ ಸಾಮಾನ್ಯ ಜನಪ್ರಿಯತೆಯನ್ನು ಪಡೆಯಿತೆಂಬುದನ್ನು ಬಿಟ್ಟರೆ, ಇದರ ಕೊರತೆಗಳ ಪಟ್ಟಿಯನ್ನು ಹೀಗೇ ಬೆಳೆಸುತ್ತ ಹೋಗ ಬಹುದು.[8] ಕಥಾ ಸಂವಿದಾನದಲ್ಲಿ, ಪಾತ್ರ ಪುನರ್ನಿರ್ಮಾಣದಲ್ಲಿ, ಸನ್ನಿವೇಶ ರಚನೆಯಲ್ಲಿ, ದರ್ಶನ ದೀಪ್ತಿಯಲ್ಲಿ, ಸಂವಾದ ಸೌಭಾಗ್ಯದಲ್ಲಿ, ಕಲ್ಪನೆಯ ಔನ್ನತ್ಯದಲ್ಲಿ, ಜೀವನ ಸಂಘರ್ಷದ ದಟ್ಟವಾದ ಚಿತ್ರಣದಲ್ಲಿ, ಶೈಲಿಛಂದಸ್ಸುಗಳ ನಿರ್ವಹಣೆಯ ಅನನ್ಯತೆಯಲ್ಲಿ ‘ಶ್ರೀರಾಮಾಯಣದರ್ಶನಂ’ ಕಾವ್ಯದ ಜೊತೆ ನರಹರಿಯ ಕಾವ್ಯವನ್ನು ಹೋಲಿಸುವಂತೆಯೇ ಇಲ್ಲ. ಶ್ರೀರಾಮಾಯಣದರ್ಶನದ ಎತ್ತರ ಅಷ್ಟು ಉನ್ನತೋನ್ನತವಾದುದು.

ವಾಲ್ಮೀಕಿಯನ್ನು ತನ್ನ ಆಧಾರವಾಗಿ ಪರಿಗ್ರಹಿಸದಿದ್ದರಿಂದ, ಧಾರ್ಮಿಕ ವಾತಾವರಣದ ಕಥೆಯಲ್ಲಿ ಮೂಲಭೂತ ಮಾರ್ಪಾಟುಗಳನ್ನು ಮಾಡುವ ಸ್ವಾತಂತ್ರ್ಯವಿಲ್ಲದ್ದರಿಂದ, ಸುಭಗಬಂಧುರವಾದ ಕವಿತಾಶಕ್ತಿಯಿದ್ದರೂ ಅದನ್ನು ಎತ್ತರಕ್ಕೆ ಕೊಂಡೊಯ್ಯಬಲ್ಲ ಮತ್ತು ಅಧಿಕ ಕಾಲ ಧಾರಣ ಮಾಡಬಲ್ಲ ಸಾಮರ್ಥ್ಯವಿಲ್ಲದ್ದರಿಂದ, ನಾಗಚಂದ್ರ; ವಾಲ್ಮೀಕಿಯನ್ನು ಆಧರಿಸಿಯೂ ಆ ಸತ್ವವನ್ನು ಜೀರ್ಣಿಸಿಕೊಳ್ಳುವ ಪುನಃಸೃಷ್ಟಿಸುವ ಸ್ವೋಪಜ್ಞತೆ ಪ್ರತಿಭೆ ಪಾಂಡಿತ್ಯಗಳ ಅಭಾವದಿಂದ ಕುಮಾರ ವಾಲ್ಮೀಕಿ, ಕನ್ನಡಕ್ಕೆ ರಾಮ ಕಥೆಯನ್ನು ಕುರಿತ ಮಹಾಕೃತಿಗಳನ್ನು ನೀಡುವಲ್ಲಿ ವಿಫಲರಾದರು. ತಾನು ಆಧರಿಸಿದ ಮಹತ್ವಪೂರ್ಣವಾದ ಮೂಲಕೃತಿಯ ಜೊತೆ ಜೊತೆಗೇ ಅದನ್ನು ಆಮೂಲಾಗ್ರವಾಗಿ ಅರಗಿಸಿಕೊಳ್ಳುವ, ತನ್ನೊಳಗೆ ಕರಗಿಸಿಕೊಳ್ಳುವ, ಆ ಎತ್ತರ ವ್ಯಾಪ್ತಿಗಳಿಗೆ ಊನವಾಗದಂತೆ ಪುನರೆರಕ ಹುಯ್ಯುವ ದೈತ್ಯ ಪ್ರತಿಭೆಯಿಂದಾಗಿ ಕುವೆಂಪು ತಮ್ಮ ಕೃತಿಯನ್ನು ಮಹಾಕೃತಿಯಾಗಿಸಿದರು. ನಾಗಚಂದ್ರ ನರಹರಿಯ ಸೋಲು ಕುವೆಂಪು ಅವರ ಗೆಲುವಾಯಿತು.


[1] ಎ.ಎಸ್. ಧರಣೇಂದ್ರಯ್ಯ, ಶ್ರೀರಾಮಾಯಣದರ್ಶನದಲ್ಲಿ ಮನೋವೈeನಿಕ ಹೊಳಹುಗಳು, ಸಹ್ಯಾದ್ರಿ (ಸಂ. ದೇಜಗೌ), ಪು. ೪೬೮.

[2] ಜಿ.ಟಿ. ನಾರಾಯಣರಾವ್, ಶ್ರೀರಾಮಾಯಣದರ್ಶನದಲ್ಲಿ ವೈeನಿಕ ಹೊಳಹುಗಳು, ಸಹ್ಯಾದ್ರಿ (ಸಂ. ದೇಜಗೌ), ಪು. ೫೩೮-೬೫.

[3] ಡಾ. ಜಿ.ಎಸ್. ಶಿವರುದ್ರಪ್ಪ, ಸಮಕಾಲೀನ ಪ್ರe, ಕನ್ನಡ ವಿಮರ್ಶೆ, (ಸಂ. ಡಾ. ಶಂಕರ ಮೊಕಾಶಿ ಪುಣೀಕರ ಮತ್ತು ಡಾ. ಸಿ.ಪಿ. ಕೃಷ್ಣಕುಮಾರ್, ಪು. ೧೦೪.

[4] ಟಿ.ಎಸ್. ಎಲಿಯಟ್, What is a Classic? ಎಲಿಯಟ್ಟಿನ ಮೂರು ಉಪನ್ಯಾಸಗಳು (ಅನು: ಸಿ.ಷಿ.ಕೆ) ಪು. ೬.

[5] ಘಿಣ.ನಂ. ಶ್ರೀಕಂಠಯ್ಯ, ಪಂಪ, ಪು. ೬೨-೬೩.

[6] ಶ್ರೀ ಕುವೆಂಪು ಮತ್ತು ಶ್ರೀ ಮಾಸ್ತಿ (ಸಂ), ಕರ್ನಾಟಕ ಭಾರತ ಕಥಾಮಂಜರಿ, ತೋರಣ ನಾಂದಿ, ಪು. ೪.

[7] ಡಾ. ಸಿ.ಪಿ. ಕೃಷ್ಣಕುಮಾರ್, ನಾಗಚಂದ್ರ, ಪು. ೭೦.

[8] ನೋಡಿ, ಕುಮಾರವಾಲ್ಮೀಕಿ, ಒಂದು ಅಧ್ಯಯನ, ಡಾ. ಎಚ್. ಸೀತಾರಾಮಾಚಾರ್.