ಯಾವುದೇ ಒಂದು ಶ್ರೇಷ್ಠ ಕಾವ್ಯದ ಮಹತ್ವದ, ಅದು ಎಷ್ಟರಮಟ್ಟಿಗೆ ತನ್ನ ಸಾರಭರಿತ ಪ್ರಾಚೀನ ಪರಪರೆಯ ಚಿರಾಂಶಗಳನ್ನು ಹೀರಿ ಹೃದ್ಗತ ಮಾಡಿಕೊಂಡಿದೆ; ಎಷ್ಟರಮಟ್ಟಿಗೆ ತನ್ನ ಸಮಕಾಲೀನ ಧ್ಯೇಯ ಧೋರಣೆ ವಿಚಾರಗಳನ್ನು ಪರಿಗ್ರಹಿಸಿ ಅದರೊಂದಿಗೆ ಅವಿರಸವಾಗಿ ಅವಿರತವಾಗಿ ರಾಸಾಯನಿಕ ಪ್ರಕ್ರಿಯೆಗೊಳಪಡಿಸಿಕೊಂಡಿದೆ, ಈ ಭೂತ-ವರ್ತಮಾನಗಳ ಪಾದಗಳ ಮೇಲೆ ನಿಂತು ಅದು ಎಷ್ಟರಮಟ್ಟಿಗೆ ಭವಿಷ್ಯವನ್ನು ಕಾಣಲು ಕಾಣಿಸಲು ಕತ್ತೆತ್ತಿ ಕಣ್‌ಚಾಚಿ ಪ್ರಾಮಾಣಿಕವಾಗಿ ಪ್ರಯತ್ನಿಸಿದೆ ಮತ್ತು ತನ್ನ ಅಂತರ್‌ಪ್ರಭೆಯನ್ನು ಯಾವ ಪ್ರಮಾಣದಲ್ಲಿ ಮುಂದೆ ಹರಿಸುವ ಮೂಲಕ ಮುಂದಿನ ಪೀಳಿಗೆಗೂ ಮಾರ್ಗದರ್ಶಿಯಾಗಿದೆ ಎಂಬುದರ ಮೇಲೆ ಬಹುಮಟ್ಟಿಗೆ ಅವಲಂಬಿತವಾಗಿದೆ. ಹಿಂದಿನ ಇಂದಿನ ಕೃತಿ ಶಿಖರಗಳೊಡನೆ ಅದನ್ನು ತುಲನೆಗೆ ನಿಕಷಕ್ಕೆ ಒಡ್ಡುವ, ವರ್ತಮಾನ ಪ್ರಜ್ಞೆಯೊಡ್ಡುವ ಅಗ್ನಿದಿವ್ಯವನ್ನು ಅದು ಹೇಗೆ ಎದುರಿಸಿ ತನ್ನ ಮೂಲ ದನಿ ಬಣ್ಣ ಎತ್ತರಗಳನ್ನು ಕಾದುಕೊಳ್ಳುತ್ತದೆ ಎಂಬುದನ್ನು ನಿರ್ಭಾವುಕವಾಗಿ ಪರಿಶೀಲಿಸುವ ಮೂಲಕ ಮಾತ್ರ ಆ ಕೃತಿಗೆ ಅರ್ಹಗೌರವವನ್ನು ಸಲ್ಲಿಸದಂತಾಗುತ್ತದೆ ವಿಮರ್ಶಕ. ಈ ದೃಷ್ಟಿಯಿಂದ ಶ್ರೀರಾಮಾಯಣದರ್ಶನಂ ಕಾವ್ಯ ತನ್ನ ಪ್ರಾಚೀನ ಕಥಾಭಿತ್ತಿಯಲ್ಲಿ ತನ್ನ ಸಮಕಾಲೀನ ಜಗತ್ತಿನ ಸ್ಪಂದನಗಳನ್ನು ಹೇಗೆ ಮತ್ತು ಎಷ್ಟರಮಟ್ಟಿಗೆ ಕಲಾಪೂರ್ಣವಾಗಿ ದಾಖಲು ಮಾಡಿಕೊಂಡಿದೆ? ಆಧುನಿಕ ಜಗತ್ತಿನಲ್ಲಿ ಮಹಾಕಾವ್ಯ ಹುಟ್ಟಲಾರದೆಂಬ ಅನಿಸಿಕೆಗೆ ಸವಾಲಾಗಿ ಉದ್ಭವಿಸಿದ ಈ ಕೃತಿ ಕನ್ನಡ ಮತ್ತು ಪಾಶ್ಚಾತ್ಯ ಮಹಾಕೃತಿಗಳ ಸಾಲಿನಲ್ಲಿ ಯಾವ ಎತ್ತರದಲ್ಲಿ ಅರ್ಹಗೌರವದಿಂದ ಶೋಭಿಸುತ್ತದೆ? ಎಂಬ ಪ್ರಶ್ನೆಗಳಿಗೆ ಸ್ಥೂಲವಾಗಿ ಯಾದರೂ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಈ ಕೃತಿಯ ಮಹತ್ವನಿರ್ಣಯದ ನಿಟ್ಟಿನಿಂದ ಅತ್ಯಗತ್ಯವೆನಿಸುತ್ತದೆ.

. ಆಧುನಿಕ ಯುಗದ ಸಮಗ್ರಾಭಿವ್ಯಕ್ತಿಯಾಗಿ ಶ್ರೀರಾಮಾಯಣದರ್ಶನಂ

ಯಾವುದೇ ಕೃತಿ ಒಂದು ಕಾಲಮಾನದ ದೇಶಮಾನದ ಜನಮನೋಜಗತ್ತಿಗೆ ಪ್ರಸ್ತುತ ಎನ್ನಿಸಬೇಕಾದರೆ ಆ ಕಾಲದೇಶಗಳ ಅಂತರಾಳದಲ್ಲಿ ಪ್ರವಹಿಸುವ ವಿಶಿಷ್ಟ ವಿಚಾರಗಳ ಜೀವರೇಖೆಗಳನ್ನು ತನ್ನಲ್ಲಿ ಅತ್ಯಂತ ಸಹಜವಾಗಿ ಧಾರಣ ಮಾಡಿಕೊಂಡಿರಬೇಕಾಗುತ್ತದೆ. “ಪ್ರತಿಯೊಬ್ಬ ಕವಿಯೂ ಅಂದಂದಿನ ಕಾಲದೇಶಗಳ ಯಾವುದೋ ಒಂದು ಬಿಂದುವಿನಲ್ಲಿ ಬದುಕಿರುವ ಕಾರಣ ಅವನು ಅಂದಿನ ಶತಮಾನದ ಸತ್ವದಿಂದ ಅನಿವಾರ್ಯವಾಗಿ ಬದ್ಧನಾಗಿ ರುತ್ತಾನೆ. ಆದಕಾರಣ ಅವನ ಕೃತಿ ಅವನಿಗಿಂತ ಹಿಂದಿನ ಶತಮಾನದ ಕವಿ ಕೃತಿಗಳಿಂದ ಮತ್ತು ಅವನ ನಂತರದ ಮುಂದಿನ ಶತಮಾನದ ಕವಿಕೃತಿಗಳಿಂದ ಸಹಜವಾಗಿಯೇ ಬೇರೆಯಾಗಿರುತ್ತದೆ. ಎಂದರೆ ಪ್ರತಿಯೊಂದು ಶತಮಾನವೂ ತನ್ನದೇ ಆದ ‘ಸಮಕಾಲೀನತೆ’ ಯನ್ನು ಅಂದಂದಿನ ಕೃತಿಗಳಲ್ಲಿ ಪ್ರಕಟಪಡಿಸಿಕೊಂಡಿದೆ…. ಕಾಲದಿಂದ ಕಾಲಕ್ಕೆ ಜಗಜೀವನ ದಲ್ಲಾದ ಧಾರ್ಮಿಕ, ರಾಜಕೀಯ, ಸಾಮಾಜಿಕ ಬದಲಾವಣೆಗಳಿಂದ ಆಯಾ ಕಾಲದಲ್ಲಿ ವೈಚಾರಿಕ ಕ್ರಾಂತಿಯಾಗುತ್ತದೆ. ಅದರ ಪರಿಣಾಮವಾಗಿ ಹೊಸ ಮಲ್ಯಗಳೂ, ಜೀವನ ದೃಷ್ಟಿಗಳೂ ಕಾಣಿಸಿಕೊಳ್ಳುತ್ತವೆ. ಅಂದಂದಿನ ಈ ಸಮಕಾಲೀನತೆಯನ್ನು ಕವಿಯ ಪ್ರಜ್ಞೆ ಗ್ರಹಿಸಿ ಅದಕ್ಕೆ ಅನುಗುಣವಾದ ಅಭಿವ್ಯಕ್ತಿಯನ್ನು ನೀಡುತ್ತದೆ.”

[1]

ಶ್ರೀರಾಮಾಯಣದರ್ಶನಂ ಕಾವ್ಯದ ರಚನೆಯ ಕಾಲ ಭಾರತದ ದೃಷ್ಟಿಯಿಂದ  ಮಾತ್ರ ವಲ್ಲ, ಇಡೀ ಜಗತ್ತಿನ ದೃಷ್ಟಿಯಿಂದ ಒಂದು ವಿಪ್ಲವದ ಸಂಕ್ರಾಂತಿ ಪರ್ವ. ಈ ಕಾವ್ಯಸೃಷ್ಟಿಯ ಆರಂಭ ೧೯೩೬, ಮುಕ್ತಾಯ ೧೯೪೫. ಆಗ ಇಡೀ ಪ್ರಪಂಚ ಎರಡನೇ ಮಹಾಯುದ್ಧದ ಮಹಾದಾವಾಗ್ನಿಯಲ್ಲಿ ಸಿಕ್ಕಿ ವಿಲಿವಿಲಿಗುಡುತ್ತಿತ್ತು. ಮತಾಂಧ ಮತ್ತು ಮದಾಂಧ ಹಿಟ್ಲರ್ ಅಖಂಡ ಜಗತ್ತನ್ನು ತನ್ನ ಪಾದಾಕ್ರಾಂತ ಮಾಡಿಕೊಳ್ಳುವ ಆಸುರೀ ಆಕಾಂಕ್ಷೆಯಿಂದ ದೈತ್ಯನಾಗಿ ವಿಜೃಂಭಿಸುತ್ತ ಲಕ್ಷಾಂತರ ಜನರನ್ನು ನಿರ್ದಯನಾಗಿ ಕೊಲ್ಲಿಸುತ್ತಿದ್ದ ಕಾಲವದು. ಪೈಶಾಚಿಕ ಮಾರಕಾಸ್ತ್ರಗಳು ಮಾರ್ಮೊಳಗುತ್ತಿದ್ದ ಕಾಲವದು. ಬ್ರಿಟನ್ ಮತ್ತು ಮಿತ್ರ ರಾಷ್ಟ್ರಗಳು ಅಂಥ ರಕ್ಕಸನನ್ನು ಸೋಲಿಸಿ ಮಾನವ ಕುಲ ನೆಮ್ಮದಿಯಿಂದ ಉಸಿರಾಡುವಂತೆ ಮಾಡಿದವು. ಅದೇ ಸಮಯದಲ್ಲಿ ಭಾರತದಲ್ಲಿ ಗಾಂಧೀಸೂರ್ಯನ ಉದಯವಾಗಿತ್ತು. ಬ್ರಿಟಿಷರ ನೊಗದ ನೇಣಿಗೆ ಕೊರಳೊಡ್ಡಿ ತನ್ನತನವನ್ನು ಕಳೆದುಕೊಂಡು ನಿರ್ವೀರ್ಯರಾಗಿದ್ದ ಭಾರತೀಯರ ನಾಡಿನಾಡಿಯಲ್ಲಿ ನಾಡಪ್ರೇಮ ಸ್ವಾತಂತ್ರ್ಯ ಪ್ರೇಮಗಳ ಮಿಂಚುಹೊಳೆಯನ್ನು ಹರಿಸುತ್ತ ಗಾಂಧೀಜಿ ಅಹಿಂಸೆ ಪ್ರಜತಂತ್ರ ಎಂಬ ಅಪೂರ್ವ ಮಹಾಸ್ತ್ರಗಳನ್ನು ಬ್ರಿಟಿಷರ ಸರ್ವಾಧಿಕಾರೀ ಶಕ್ತಿಯೆದುರು ಒಡ್ಡಿ ನಿಂತಿದ್ದರು. ತ್ಯಾಗ ಬಲಿದಾನ ಸತ್ಯಪ್ರೇಮ ಸಮಾನತಾ ಧೋರಣೆ ಜತ್ಯತೀತತೆ ಶ್ರದ್ಧೆ ಏಕತೆ ಸ್ನೇಹಶೀಲತೆ ರಾಷ್ಟ್ರಭಕ್ತಿ ಮಹೋದ್ದೇಶಗಳಂಥ ಚಿರಮಲ್ಯಗಳ ಮಹಾಪೂರ ಒಂದೆಡೆ ಉಕ್ಕುತ್ತಿದ್ದರೆ, ಹಿಂಸೆ ಕ್ರೌರ್ಯ ಸರ್ವಾಧಿಕಾರೀ ಪ್ರವೃತ್ತಿ ದಮನಶೀಲತೆಗಳು ಮತ್ತೊಂದೆಡೆ ತಾಂಡವವಾಡುತ್ತಿದ್ದುವು. ಇದಕ್ಕೆ ಹಿನ್ನೆಲೆಯಾಗಿ ರಾಮಕೃಷ್ಣರಂಥ ಸಂತರು ವಿವೇಕಾನಂದರಂಥ ವೀರಸನ್ಯಾಸಿಗಳು ಸರ್ವಧರ್ಮ ಸಮಾನತೆಯನ್ನು ಸಿಂಹಧೈರ್ಯ ವನ್ನು ಪ್ರಚಂಡ ಆತ್ಮಾಭಿಮಾನವನ್ನು ಬಿತ್ತಿ ಬೆಳೆಯತೊಡಗಿದ್ದರು. ಉಗ್ರಗಾಮಿಗಳಾಗಿದ್ದ ಅರವಿಂದರು ಜಡದಿಂದ ಚೇತನ ಆವಿರ್ಭವಿಸುವ, ಅಣುಮಹತ್ತಾಗಿ ವಿಜೃಂಭಿಸುವ ವೈಜ್ಞಾನಿಕ ವಿಕಾಸದ ಪೂರ್ಣದೃಷ್ಟಿಯ ಪಥವನ್ನು – ತಮ್ಮ ಪೂರ್ವ ವ್ಯಕ್ತಿತ್ವದ ಉಗ್ರತೆಯನ್ನು ತೊರೆದು – ಪ್ರತಿಪಾದಿಸತೊಡಗಿದ್ದರು. ಹೀಗೆ ಅಧ್ಯಾತ್ಮ, ವೈಜ್ಞಾನಿಕ ವಿಚಾರಶೀಲತೆ, ಸರ್ವಾಧಿಕಾರದ ವಿರುದ್ಧದ ಸೆಣಸು, ಅಹಿಂಸೆ, ಸರ್ವೋದಯ, ಶ್ರೀಸಾಮಾನ್ಯತೆ, ಮಾರಕಾಸ್ತ್ರ ನಿರ್ಮಾಣ, ಆತ್ಮಾರ್ಪಣಶೀಲತೆ, ಉದಾತ್ತ ಧ್ಯೇಯವಾದಿತ್ವ ಮುಂತಾಗಿ “ಆ ಯುಗ ಅತ್ಯಂತ ಸಂಕೀರ್ಣವಾದ ಬೃಹತ್ ಸತ್ತ್ವಗಳ ತತ್ತ್ವಗಳ ಹೋರಾಟದ ಕಾಲವಾಗಿತ್ತು.”[2] ಈ ಯುಗದ ಈ ಮುಖ್ಯ ದನಿಗಳನ್ನು ಈ ಕಾವ್ಯ ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ.

. ಅಹಿಂಸೆ

ಜೈನ, ಬೌದ್ಧ ಧರ್ಮಗಳ ಅಸ್ತಿತ್ವದೊಡನೆ ವ್ಯಾಪಕ ಪ್ರಚಾರಕ್ಕೆ ಮತ್ತು ಅನುಷ್ಠಾನಕ್ಕೆ ಬಂದ ಅಹಿಂಸಾತತ್ವ ಮತ್ತೆ ತಾಮಸಶಕ್ತಿಗಳ ವಿರುದ್ಧದ ಮಹಾಪ್ರಬಲಾಸ್ತ್ರವಾಗಿ ಪ್ರಯೋಗ ಗೊಂಡು ಜಗತ್ತಿನ ಆದ್ಯ ಗಮನವನ್ನು ಸೆಳೆದುಕೊಂಡದ್ದು ಇಪ್ಪತ್ತನೇ ಶತಮಾನದ ಭಾರತದಲ್ಲಿ-ಮಹಾತ್ಮಾಗಾಂಧೀಜಿಯವರ ಮೂಲಕ. ಹಿಂಸೆಯಿಂದ ಆರಂಭವಾಗಿ (ಕ್ರೌಂಚವಧೆ) ಹಿಂಸೆಯಿಂದಲೇ ನಿಜಂತ್ಯವನ್ನು (ಸೀತೆಯ ಅಗ್ನಿ ಪ್ರವೇಶ) ಪಡೆಯುವ ಆದಿಕವಿಯ ಕಥೆಯನ್ನು ಸ್ವೀಕರಿಸಿದ ಆಧುನಿಕ ಕವಿ ಕುವೆಂಪು ಆರಂಭದಲ್ಲೇ ಅಹಿಂಸೆಯ ಜೀವಧ್ವನಿಯನ್ನು ಅದಕ್ಕೆ ಆವಾಹಿಸಿದ್ದಾರೆ; ಕೊಲೆಯ ಕಳಂಕವನ್ನು ಕರುಣೆಯ ಬೆಳದಿಂಗಳಿನಲ್ಲಿ ತೊಳೆದಿದ್ದಾರೆ. ಪಾಪಕ್ಕೆ ಶಾಪ ಚಿಕಿತ್ಸೆಯಲ್ಲ. ಅಜ್ಞಾನಕ್ಕೆ ಆಕ್ರೋಶ ಪ್ರತಿಕ್ರಮವಲ್ಲ. ಆದ್ದರಿಂದಲೇ ಕೊಂಚೆಯನ್ನು ಕೊಂದ ವ್ಯಾಧನ ಬಗ್ಗೆ ಈ ಕಾವ್ಯದ ವಾಲ್ಮೀಕಿ ಆಕ್ರೋಶವನ್ನು ಕಾರಿ ಶಪಿಸುವುದಿಲ್ಲ. ಆ ಕೃತ್ಯ ಅವನ ಅಜ್ಞಾನದ ಫಲವೆಂದು ಅವನಿಗೆ ಗೊತ್ತು. ಆದ್ದರಿಂದಲೇ ಆತನ ಬಗ್ಗೆ ಕೋಪದ ಬದಲು ಕರುಣೆ ಮೂಡಿ, ತನ್ನಾತ್ಮ ಕಥೆಯನ್ನು ಅವನಿಗೊರೆದು ಅವನ ಬಗೆಗರಗಿಸುತ್ತಾನೆ. ಶಿಕ್ಷೆ ವಿಧಿಸಿದ ಮಾತ್ರಕ್ಕೆ, ಕಳ್ಳ ಬೆಳ್ಳನಾಗಿ ಮಾರ್ಪಡುವುದಿಲ್ಲ. ಬದಲು, ಅವನ ಕಳ್ಳತನಕ್ಕೆ ಕಾರಣವಾದ ಮೂಲಾಂಶಗಳನ್ನು ಕಂಡುಹಿಡಿದು ಅವುಗಳನ್ನು ತಿದ್ದಬೇಕು, ಆಗ ಮತ್ತೆಂದೂ ಅವನು ಕಳ್ಳತನಕ್ಕೆಳಸುವುದಿಲ್ಲ. ಹಾಗೆ ಈ ವಾಲ್ಮೀಕಿ ವ್ಯಾಧನ ಮನದಾಳದ ಹಿಂಸಾ ಪ್ರವೃತ್ತಿಗೆ ಮನಶ್ಯಾಸ್ತ್ರೀಯ ಚಿಕಿತ್ಸೆಯನ್ನು ನೀಡಿ, ಅವನಿಗೆ ಅಹಿಂಸಾಬೋಧೆಯನ್ನು ಮಾಡಿ, ಅವನ ವ್ಯಕ್ತಿತ್ವವನ್ನೇ ಪರಿವರ್ತಿಸುತ್ತಾನೆ. ಇದು ಅಹಿಂಸೆಯ ಮೂಲ ಮತ್ತು ಮುಖ್ಯ ಶಕ್ತಿ. ಮೂಲಕಥೆಯಲ್ಲಿ ಇಂಥದೊಂದು ಮಹತ್ವದ ಬದಲಾವಣೆ ಮಾಡಿದರೂ, ಅದು ಕಾವ್ಯ ಸಂದರ್ಭದ ಮತ್ತು ಕಾಲ ಸಂದರ್ಭದ ಅಂತರಂಗದಲ್ಲಿ ಸಹಜವಾಗಿಯೇ ಅವತರಿಸಿದಂತೆ ಚಿತ್ರಿಸಿರುವುದು ವೈಶಿಷ್ಟ್ಯಪೂರ್ಣ.

ಪುತ್ರಪ್ರಾಪ್ತಿಗಾಗಿ ಯಾಗ ಮಾಡಬೇಕಾಗಿ ಬಂದಾಗ ಜಬಾಲಿ ದಶರಥನಿಗೆ ಹೇಳುವ ಮಾತಿದು :

ಪೂರ್ವಪದ್ಧತಿವಿಡಿದು
ಮಾಳ್ಪ ದಿಗ್ವಿಜಯ ಹಯಮೇಧ ಮೊದಲಾದುವಂ
ತೊರೆದು, ಹಿಂಸಾಕ್ರೌರ್ಯವಿಲ್ಲದಿಹ ಪ್ರೇಮಕ್ಕೆ
ನೋಂತು, ದೇವರ್ಕಳಂ ಪೂಜಿಸಲ್ ಮೆಚ್ಚುವುದು
ಜಗವನಾಳುವ ಋತಂ…………………………
 …………………………………….ವಿಶ್ವಮಂ
ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ
ಪ್ರೇಮಾತ್ಮವಾಗಿರ್ಪುದದರಿಂದೆ ಹಿಂಸೆಯಿಂ
ಪ್ರೇಮಮೂರ್ತಿಗಳಾದ ಸಂತಾನಮುಂದಿಸದಯ್.[3]

ಇಲ್ಲಿ ಈ ಶತಮಾನದ ಅಹಿಂಸಾವಿಜಯದ ಶಂಖಧ್ವನಿ ನಿಸ್ಸಂದೇಹವಾಗಿ ಮೊಳಗಿದೆ. ಇಷ್ಟು ಮಾತ್ರವಲ್ಲದೆ ಸಂಪ್ರದಾಯಬದ್ಧವೂ ಮಢ್ಯಜನ್ಮವೂ ನಿರುಪಯುಕ್ತವೂ ಆದ ಯಾಗವಿರೋಧಿ ಮನೋಧರ್ಮ ಕೂಡ ಇಲ್ಲಿ ವ್ಯಕ್ತವಾಗಿ ಈ ಕಾಲದ ವೈಚಾರಿಕತೆಯನ್ನು ಪ್ರತಿನಿಧಿಸುತ್ತದೆ.

ಎರಡನೆ ಮಹಾಯುದ್ಧದ ಪ್ರಳಯಭಯಂಕರ ನೆರಳಿನಲ್ಲಿ ರಚಿತವಾದ ಈ ಕಾವ್ಯದ ಯುದ್ಧವರ್ಣನೆಗಳಲ್ಲಿ ಉಪಮೆಗಳಲ್ಲಿ ಅದರ ಸೂಕ್ಷ್ಮರೇಖೆಗಳು ನೆಯ್ದುಕೊಂಡಿವೆ. ಆ ಯುದ್ಧದ ದಟ್ಟ ಹೊಗೆಯ ನಡುವೆಯೇ ಅದನ್ನು ನಿಷೇಧಿಸುವ, ಪರೋಕ್ಷವಾಗಿ ಅಹಿಂಸೆಯ  ಮಹತ್ವವನ್ನು ಎತ್ತಿಹಿಡಿಯುವ ಮಾತುಗಳೂ ಇಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ. ದಶಾನನ ಸ್ವಪ್ನಸಿದ್ದಿಯಲ್ಲಿ ಲಂಕಾದೇವಿ ರಾವಣನಿಗೆ ಆಡುವ ಮಾತುಗಳಿವು :

    ಅಹಂಕಾರಕ್ಕೆ
ಬಲಿಗೊಡುವೆಯೇನ್ ಲಂಕಾಪ್ರಜಸಂಖ್ಯೆಯಂ?
ಸಾಲದೇನಾದ ಬಲಿ? ತಾಯ್ ಸಂಕಟವನೇಕೆ
ಪೆರ್ಚಿಪೀ ಪೇಡಿತನಮಯ್? ನಿನ್ನ ಬಿಂಕಕ್ಕೆ
ಬೆಳೆಯವೇಳ್ಕುಮೆ ವಿಧವೆಯರ ಸಂಖ್ಯೆ? ಮಕ್ಕಳಂ
ಕಳೆದುಕೊಳ್ವಬ್ಬೆಯರ ಸಂಖ್ಯೆ, ಕೂಳ್‌ಕೊಡುವರಂ
ಬಲಿಗೊಡುವನಾಥ ಶಿಶುಸಂಖ್ಯೆ?[4]

ಮಹಾಯುದ್ಧದ ಭೀಕರ ಸನ್ನಿವೇಶದಲ್ಲಿ ಜಗತ್ತಿನ ತಂದೆತಾಯಿಗಳೆಲ್ಲರ ಮನದಲ್ಲಿ ತೀವ್ರವಾಗಿ ತುಡಿಯುತ್ತಿದ್ದ ಭಾವನೆಗಳಿಗೆ ಕವಿ ಇಲ್ಲಿ ಅನ್ಯಾದೃಶವಾದ ಅಭಿವ್ಯಕ್ತಿ ನೀಡಿದ್ದಾರೆ. ಹಾಗೆಯೇ ತ್ರಿಜಟೆ, ಅನಲೆಯರು ಸೀತೆಗೆ ವಿವರಿಸುವ ಯುದ್ಧವರ್ಣನೆಯಲ್ಲಿ ಕೂಡ ಸಾಮಾನ್ಯರಿಗೆ ಅನಪೇಕ್ಷಿತವೂ ವಿನಾಶಕಾರಿಯೂ ಆದ ಅದರ ದುಷ್ಪರಿಣಾಮಗಳ ಹೃದ್ಭೇದಕ ಚಿತ್ರವಿದೆ.

ಆ. ಪ್ರಜಪ್ರಭುತ್ವ

ಇಪ್ಪತ್ತನೆಯ ಶತಮಾನ ಸರ್ವಾಧಿಕಾರ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಸಿಂಹಾಸನ ಚ್ಯುತವಾಗಿ ಪ್ರಜಸತ್ತೆ ವರ್ಧಿಸಿದ ಕಾಲ; ಜನ ಮನದ ದಾಸ್ಯಬುದ್ದಿ ಕ್ಷಯಿಸಿ ಸ್ವಾತಂತ್ರ್ಯ ಪ್ರೇಮ ಸ್ವಾಭಿಮಾನಗಳು ಹೆಡೆಯತ್ತಿ ನಿಂತ ಪರ್ವಕಾಲ. ಭಾರತದಲ್ಲಂತೂ ಸ್ವಾತಂತ್ರ್ಯ ಚಳುವಳಿ ಭುಗಿಲೆದ್ದು ಬಲಿಷ್ಠ ಬ್ರಿಟಿಷರನ್ನು ನಡುಗಿಸಿದ ಕಾಲ. ಈ ಪ್ರಜಸತ್ತಾತ್ಮಕ ಧೋರಣೆ ಶ್ರೀರಾಮಾಯಣದರ್ಶನದಲ್ಲಿ ಸ್ಪಷ್ಟವಾಗಿ ಮೊಗ ಪಡೆದಿದೆ.

ಜಬಾಲಿ ಸಾತ್ವಿಕ ಮಖವಿಧಾನವನ್ನು ದಶರಥನಿಗೆ ಬೋಧಿಸುವಾಗಲೆ ‘ಪ್ರಜೆಗಳಂ ಬಡವರಂ ಸತ್ಕರಿಸವರ್ಗೆ ಬಗೆ ತಣಿವವೋಲ್’[5] ಎಂದು ಹೇಳುತ್ತಾನೆ : ಅಷ್ಟೇ ಅಲ್ಲ, ಪ್ರಜೆಗಳೆಂದರೆ ದೇವರು. ಅವರ ಹರಕೆ ದೇವರ ಆಶೀರ್ವಾದಕ್ಕೆ ಸಮಾನ. ‘ಜನಮನದ ಶಕ್ತಿಮೇಣವರಭೀಪ್ಸೆಯೆ ಮಹಾತ್ಮರಂ ನಮ್ಮಿಳೆಗೆ ತಪ್ಪದೆಳೆತರ್ಪುದು ಕಣಾ!’[6] ಎಂದು ಕೂಡ ಆತ ಉದ್ಗರಿಸುತ್ತಾನೆ. ರಾಮೋದಯಕ್ಕೆ ದೇವತೆಗಳಾಶಿತಕ್ಕಿಂತ ರಾಜಪುಣ್ಯಕ್ಕಿಂತ ಪ್ರಜೆಗಳ ಅಂತರಂಗದ ತೀವ್ರ ಬಯಕೆಯೇ ಕಾರಣ ಎಂಬ ಧ್ವನಿಯಿಲ್ಲಿದೆ. ಪ್ರಜಪ್ರಭುತ್ವ ದಲ್ಲಿ ಪ್ರಜೆಗಳ ಇಚ್ಛೆಯಂತೆ ನಾಯಕ ಆಯ್ಕೆಯಾಗುವುದು ಇಲ್ಲಿ ಸೂಚಿತವಾಗಿದೆ. ಶ್ರೀರಾಮನಿಗೆ ಪಟ್ಟಗಟ್ಟಲು ಸಿದ್ಧತೆ ಮಾಡಿಕೊಳ್ಳುವ ಮುನ್ನ ದಶರಥ ರಾಜಸಭೆಯಲ್ಲಿ ಅದಕ್ಕೆ ತನ್ನ ಪ್ರಜೆಗಳ ಅನುಮತಿಯನ್ನು ಯಾಚಿಸುತ್ತಾನೆ. ರಾವಣನಂಥ ಸರ್ವಲೋಕ ಭಯಂಕರನಾದ ಸರ್ವಾಧಿಕಾರಿಯೂ ಕೂಡ ರಾಮಸೇನೆಯೊಡನೆ ಸಮರಕ್ಕಿಳಿಯುವ ಮುನ್ನ ತನ್ನ ಪ್ರಜೆಗಳೊಡನೆ ಸಮಾಲೋಚಿಸುತ್ತಾನೆ. ಆ ಸಭೆಯಲ್ಲಿ ಪ್ರಹಸ್ತ ಮಹಾಪಾರ್ಶ್ವ ವಿಭೀಷಣ ಇಂದ್ರಜಿತು ಮುಂತಾದ ಪ್ರಮುಖರಷ್ಟೇ ಧೈರ್ಯ ಆತ್ಮಸ್ಥೈರ್ಯ ನಿರ್ಭೀತಿಗಳಿಂದ ಹಿರಣ್ಯಕೇಶಿಯೆಂಬ ತರುಣಕವಿ ಕೂಡ ತನ್ನ ಅಭಿಪ್ರಾಯವನ್ನು ಖಚಿತವಾಗಿ ಸ್ಪಷ್ಟಪಡಿ ಸುತ್ತಾನೆ. ಸ್ವಾಮಿಭಕ್ತನಾದ ಮಹಾಪಾರ್ಶ್ವ ಕೂಡ ತನ್ನೆದೆಯ ಭಾವಗಳನ್ನು ಹುದುಗಿಸಿ ಕೊಳ್ಳದೆ, ಧರ‍್ಮದೇವತಾ ಕೋಪವನ್ನು ಪ್ರತಿಭಟಿಸಿ ಗೆಲ್ಲುವುದು ಸಾಧ್ಯವಿಲ್ಲವೆಂಬ ಅಪ್ರಿಯ ಸತ್ಯವನ್ನಾಡಿಬಿಡುತ್ತಾನೆ. ಹಿರಣ್ಯಕೇಶಿಯ ಮಾತುಗಳಂತೂ ಪ್ರಜತಂತ್ರದೃಷ್ಟಿಯ ಮತ್ತು ನೈಜ ದೇಶಪ್ರೇಮಿಯ ಹಾಗೂ ನಿರಂಕುಶಮತಿಯಾದ ವಿಚಾರಶೀಲನೊಬ್ಬನ ಸರ್ವಾಧಿಕಾರೀ ವಿರೋಧ ಪ್ರವೃತ್ತಿಯ ದಿಟ್ಟ ಧೀಮಂತ ಆಲೋಚನಾಲಹರಿಯಾಗಿವೆ :

                ಸುಖಮಮೂಲ್ಯಂ ಅದಾರ್ಗಾದೊಡಂ
ರಾಜಸುಖದಂತೆಯೆ ಪ್ರಜಸುಖಂ. ರಾಮಗೇಂ
ಸುಖವೊ? ಸೀತೆಗೆ ಸುಖವೊ? ಮೇಣೆಮ್ಮ ದೊರೆಗುಮೇಂ
ಸುಖಮಹುದೊ ಸುಖಮೊರ್ವನದೆ ಸರ್ವಸುಖಮಹುದೊ?
ಬಹುಜನರ ಸುಖಕೆ ಒರ್ವನ ಸುಖಂ ಬೆಲೆಯಹುದೊ?
……………………………………………….
ಸುಖಮದೊರ್ವನದು ಸಕಲರ ದುಃಖಕಾರಣಂ
ತಾನಪ್ಪೊಡದು ನಿಂದನೀಯಂ, ನೃಪನದಾದೊಡಂ.[7]

ತನಗೊಂದು ನ್ಯಾಯ ಪ್ರಜೆಗಳಿಗೊಂದು ನ್ಯಾಯವೆಂಬಂತೆ ವರ್ತಿಸುವುದು ಸರ್ವಾಧಿಕಾರೀ ಪ್ರವೃತ್ತಿ. ಜನನಿಂದೆಗಂಜಿಯಾದರೂ ರಾಮ ಸೀತೆಯ ಶೀಲವನ್ನು ಶಂಕಿಸುವುದು ಮತ್ತು ಮನವಾಗಿ ಅಗ್ನಿ ಪ್ರವೇಶಕ್ಕೆ ಸಮ್ಮತಿಸುವುದು ಸುಸಂಸ್ಕೃತಿಯ ಲಕ್ಷಣವಲ್ಲ. ಪ್ರಜಪ್ರಭುತ್ವ ದಲ್ಲಿ ಸಾಮಾನ್ಯನಿಗೆ ಮತ್ತು ಜನನಾಯಕನಿಗೆ ಇಬ್ಬರಿಗೂ ಒಂದೇ ಕಾನೂನು ಅಕ್ಷರಶಃ ಅನ್ವಯಿಸುತ್ತದೆ. ಹಾಗೆಯೇ ಸೀತೆಯ ನಡತೆಯ ಬಗ್ಗೆ ಅನಾಗರಿಕವಾಗಿ ನಿಂದಿಸಿ ಅವಳ ಅಗ್ನಿಪ್ರವೇಶ ಮಾಡಿಸಿದ ರಾಮನ ನಡತೆಗೆ ಯಾರು ಪ್ರಮಾಣ ಪತ್ರ ಕೊಡಬೇಕು? ಸೀತೆ ತನ್ನ ಶೀಲಸಮರ್ಥನೆಗಾಗಿ ಎದುರಿಸಿದ ಅಗ್ನಿದಿವ್ಯವನ್ನೇ ರಾಮನೂ ಎದುರಿಸಬೇಕಾದದ್ದು ಪ್ರಜಪ್ರಭುತ್ವದ ಸರ್ವಸಮಾನತಾ ಕಾನೂನಿನ ಪ್ರಕಾರ ಅಗತ್ಯ. ಅನಿವಾರ್ಯ. ಅಂತೆಯೇ ಈ ಕಾವ್ಯದ ರಾಮ ತಾನೂ ಅಗ್ನಿಪರೀಕ್ಷೆಗೆ ಒಳಗಾಗಿ ಪ್ರಜಸತ್ತಾತ್ಮಕ ವಿಧಾನವನ್ನು ಗೌರವಿಸುತ್ತಾನೆ, ಸರ್ವರ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಅಂತೆಯೇ ನಮ್ಮೆಲ್ಲರ ದನಿಯಾಗಿ ಅನಲೆ ಪ್ರತಿಕ್ರಿಯಿಸುತ್ತಾಳೆ :

                ಪೂಜ್ಯೆಯಂ
ಪಾಲಿಸುವ ನೆವದಿ ನೀನುಂ ಪರೀಕ್ಷಿತನಲಾ!
ಲೋಕತೃಪ್ತಿಗೆ ಲೋಕಮರ್ಯಾದೆಗೊಳಗಾದ[8]

ರಾಜಸತ್ತೆಯನ್ನು, ಪ್ರಜಭಿಪ್ರಾಯಕ್ಕೆ ಹೆಚ್ಚು ಬೆಲೆಗೊಡದ ನಿರಂಕುಶ ಧೋರಣೆಯನ್ನು, ಬಹಳಮಟ್ಟಿಗೆ ಪ್ರತಿನಿಧಿಸುವ ಪ್ರಾಚೀನ ಕಥಾಭಿತ್ತಿಯೊಂದರಲ್ಲಿ ಪ್ರಜಸತ್ತೆಯ ಆಧುನಿಕ ಪ್ರವೃತ್ತಿಯ ನಾಡಿಮಿಡಿತಗಳನ್ನು ದಾಖಲಿಸಿರುವುದು ವೈಶಿಷ್ಟ್ಯಪೂರ್ಣ ಸಂಗತಿ.

ಇ. ನಾಡಪ್ರೇಮ

ಸ್ವತಂತ್ರ ಅನಿಸಿಕೆಗಳ ನಿರ್ದಾಕ್ಷಿಣ್ಯ ಅಭಿವ್ಯಕ್ತಿಯಂತೆಯೇ ತಮ್ಮ ತಾಯ್ನಾಡಿನ ಪ್ರೇಮದ ತೀವ್ರವಾದ ತುಡಿತ ಕೂಡ ಇಲ್ಲಿ ಕ್ರಿಯಾಶೀಲವಾಗಿದೆ. ಪಂಪ ಆಂಡಯ್ಯ ಮುಂತಾದ ಪ್ರಾಚೀನ ಕವಿಗಳ ಕಾವ್ಯದಲ್ಲಿ ಈ ನಾಡಪ್ರೇಮ ಸಮುಚಿತವಾಗಿ, ಕೆಲವೊಮ್ಮೆ ಅನೌಚಿತ್ಯ ವೆನಿಸಿ, ಕಿಂಚಿತ್ ಪ್ರಕಟವಾಗಿದೆಯೆಂಬುದು ನಿಜವಾದರೂ ಇಪ್ಪತ್ತನೆಯ ಶತಮಾನದ ಜ್ವಲಂತ ಮಲ್ಯಗಳಲ್ಲಿ ಒಂದಾದ ತಾಯ್ನಾಡಿನ ಪ್ರೇಮ ಈ ಕಾವ್ಯದಲ್ಲಿ ವ್ಯಕ್ತವಾಗಿರುವ ಪ್ರಮಾಣದಲ್ಲಿ ಆಗಿಲ್ಲ. ನವೋದಯ ಕಾವ್ಯದ ಪ್ರಮುಖ ಕಾಳಜಿಗಳಲ್ಲಿ ಒಂದಾದ ಈ ನಾಡಪ್ರೇಮ ಕುವೆಂಪು ಅವರ ಭಾವಗೀತೆಗಳಲ್ಲಿ ಅತ್ಯಂತ ಸುಸ್ಪಷ್ಟವಾಗಿ ಮೈವೆತ್ತಿದೆ. ಶ್ರೀರಾಮಾಯಣದರ್ಶನದ ಪರಿಮಿತ ಅವಕಾಶದಲ್ಲೂ ಕವಿಯ ಈ ಜನ್ಮಭೂಮಿಯ ಬಗೆಗಿನ ಉಜ್ವಲ ಅಭಿಮಾನ ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಪಡೆದಿದೆ.

ದಶರಥನನ್ನು ನಿಗ್ರಹಿಸಿ, ದೈವವಾದವನ್ನು ಧಿಕ್ಕರಿಸಿ, ಪೌರುಷದಿಂದ ರಾಜ್ಯವನ್ನು ಆಕ್ರಮಿಸಿಕೊಳ್ಳಬೇಕೆಂದು ದುಡುಕಿ ನುಡಿದ ಲಕ್ಷ್ಮಣನನ್ನು ಸಂತೈಸುವ ಶ್ರೀರಾಮನ ನುಡಿ ಗಳಲ್ಲಿ ಈ ದೇಶಾಭಿಮಾನ ಸುವ್ಯಕ್ತ :

ನಮ್ಮ ನಮ್ಮಂತಃಕಲಹದಗ್ನಿ ತಾಂ
ಸುಟ್ಟುರುಹದಿಹುದೆ ನಾಡನಿತುಮಂ? ಕಾಡಿಂಗೆ
ನಾನೊರ್ವನಾಗುವುದು ಲೇಸೊ? ಯುಗಯುಗಗಳಿಂ
ರವಿಕುಲದರಸುಗಳ್ಗೆ ನಚ್ಚು ನೆಲೆವೀಡಾದ
ನಾಡಿದೆಲ್ಲಂ ತವಿದು ಕಾಡಾಗುವುದು ಲೇಸೊ?
ನಾಡ ಹಿರಿಯೊಳ್ಪಿಗೋಸುಗಮೆ ಬಲಿಗೊಡುವೆನಯ್
ನಾನೆನ್ನ ಕಿರಿಯೊಳ್ಪಿನಾನಂದದಿಂ.[9]

ರಾಮಬಾಣಕ್ಕೆ ತುತ್ತಾದ ವಾಲಿ ತನ್ನ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿ ತನ್ನ ತಾಯಿ ನಾಡನ್ನು ಕುರಿತು ಹಂಬಲಿಸಿ ಹರಿಸುವ ಭಾವಪ್ರವಾಹ ಅವನ ಉತ್ಕಟ ದೇಶಪ್ರೇಮದ ಉಜ್ವಲ ನಿದರ್ಶನವಾಗಿದ್ದು ನಿರಭಿಮಾನಗಳ ಹೃದಯದಲ್ಲೂ ಅಭಿಮಾನದ ಬುಗ್ಗೆಯೆಬ್ಬಿ ಸುವಲ್ಲಿ ಯಶಸ್ವಿಯಾಗಿದೆ :

        ತಾಯ್ತಂದೆಯರ ನಾಡೆ!
ತಾಯ್‌ನುಡಿಯ ಮಲೆಗುಡಿಯ ಬೆಟ್ಟದಡವಿಯ ಬೀಡೆ!
ನಲ್ದೊಟ್ಟಿಲಾದೆ, ಜೋಗುಳವಾದೆಯೆಳೆಯಂಗೆ.
ತಾರುಣ್ಯಕುಯ್ಯಾಲೆಯಾದೆ. ಜವ್ವನಕಾದೆ
ಪೆಣ್ಣೊಲ್ಮೆ, ಮುಪ್ಪಿಂಗೆ ಧರ್ಮದಾಶ್ರಯಮಾಗಿ,
ಘಿಣರುವೆಡೆ ಶಾಂತಿಯಾಗರಮಾಗುತಿರ್ದಳಂ
ನಿನ್ನ ನಾಂ ತೊರೆಯುತಿಹೆನೌ, ಮನ್ನಿಸಾ, ತಾಯಿ![10]

ಇಂತೆಯೇ ಇನ್ನು ಮುಂದೆಯೂ ಅವನ ಅಂತರಾತ್ಮದ ಅಭಿಮಾನ ಉಕ್ಕಿ ಉಕ್ಕಿ ಆತ್ಮೀಯತೆ ಅಕ್ಕರೆಗಳ ಸಕ್ಕರೆಯ ಪಾಕವಾಗಿ ಪರಿಣಾಮ ರಮಣೀಯವಾಗಿದೆ. ತಮ್ಮ ಲಂಕೆ, ಕನಕಲಂಕೆ, ದೈತ್ಯನಾಗರಿಕತೆಯ ನಂದನ. ತಮ್ಮ ಅಸುರವೀರರು ಅಮರರ ಐಶ್ವರ್ಯ ವನ್ನು ಸೂರೆಗೊಂಡವರು. ತಮ್ಮ ಲಲನೆಯರು ಸುರಾಂಗನಾ ಸೌಂದರ್ಯವನ್ನು ಸೂರೆ ಗೊಂಡವರು. ನಮ್ಮ ಪುರರಚನೆಯಲ್ಲಿ ವಿಶ್ವಕರ್ಮನ ಮರ್ಮವನ್ನು ಸೆಳೆದುಕೊಂಡಿದ್ದಾರೆ ನಮ್ಮ ಶಿಲ್ಪಿಗಳು. ನಮ್ಮ ಲಂಕೆ ದೈತ್ಯ ಸಂಸ್ಕೃತಿಯ ದೇವಾಲಯ. ಅದನ್ನು ಪಾಳ್ಗೈಯಲು ಯಾರಿಗೂ ಎದೆಯಿಲ್ಲ, ಅಂತೆಯೇ ಪಾಳ್ಗೈಯಲು ಯಾರಿಗೂ ಆಸ್ಪದ ಕೊಡೆವು. ಸರ್ವರ ಕರ‍್ಮ ಕಟ್ಟಿದ ಈ ದಿವ್ಯ ಕನಕಲಂಕಾ ಗರ್ವಗೋಪುರವನ್ನು ಒರ್ವನ ಅನಿಶ್ಚಿತ ಸುಖಕೆ ಮಾರಲೊಪ್ಪುದಿಲ್ಲ – ಎಂಬ ಹಿರಣ್ಯಕೇಶಿಯ ರಮ್ಯೋಜ್ವಲ ನುಡಿಗಳು ಅಭಿಮಾನದ ರೋಮಾಂಚನದ ಮಿಂಚಿನಲ್ಲಿ ಮೀಯಿಸುತ್ತವೆ. ವಿಭೀಷಣನನ್ನು ತಮ್ಮೊಳಗು ಮಾಡಿ ಕೊಳ್ಳಲು ಸಂಧಾನಕ್ಕೆ ಬಂದ ಕಪಿವೀರರೊಡನೆ ಆತನಾಡುವ

ಕಪಿಧ್ವಜರೊಡನೆ ಕೂಡಿ ನಾಂ
ಪೆತ್ತ ತಾಯ್ಗೆಣೆಯೆಮ್ಮೆ ಪುಟ್ಟಿದೂರಂ ಪಾಳ್ಗೆಯ್ಯೆ
ದುರ್ಯಶೋನರಕದೊಳ್ ಚಿರಂ ಬೀಳ್ವೆನೈಸಲೆ?
……………………….ಪಗೆಯೊಡವೆರೆದು
ಸ್ವಜನ ಸ್ವದೇಶಂಗಳಂ ವೈರಿವಶಮಾಳ್ಪವೊರ್
ಕ್ಷುದ್ರ ವಿದ್ರೋಹಿಯಲ್ತಾಂ[11]

ಈ ಮಾತುಗಳು, ವೈರಿಯೊಡನೆ ಸಂಚುಮಾಡಿ ಮಾತೃಭೂಮಿಗೆ ದ್ರೋಹ ಬಗೆಯ ಲೆಳಸುವ ಪಾತಕಿಗಳು ಸ್ವಾತಂತ್ರ್ಯ ಸಮರ ಸಂದರ್ಭದಲ್ಲೂ ಇದ್ದುದನ್ನು ನೆನೆದಾಗ, ಎಷ್ಟು ಅರ್ಥಪೂರ್ಣ ಎಷ್ಟು ಸಾಮಯಿಕ ಎನ್ನುವುದು ಸರ್ವವೇದ್ಯ.

ಈ. ಶ್ರೀಸಾಮಾನ್ಯ ಪ್ರಧಾನತೆ

ಮಹಾಕಾವ್ಯಗಳಲ್ಲಿ ಸಾಮಾನ್ಯ ಜನತೆಯ ವೈಯಕ್ತಿಕ ನೋವು ನಲಿವು ಧೈರ್ಯ ತ್ಯಾಗಗಳ ಚಿತ್ರಣ ತುಂಬ ಕಡಿಮೆ. ಆದರೆ ಈ ಶತಮಾನದಲ್ಲಿ ಶ್ರೀಸಾಮಾನ್ಯನೇ ನಿಜವಾದ ನಾಯಕ. ಅವನಿಲ್ಲದೆ ಲೋಕದ ಯಾವ ಸಾಮಾನ್ಯ-ಅಸಾಮಾನ್ಯ ಕಾರ್ಯಗಳೂ ಜರುಗುವುದು ಸಾಧ್ಯವಿಲ್ಲ. ಇಂಥ ಶ್ರೀಸಾಮಾನ್ಯತೆಯನ್ನು ಈ ಕಾವ್ಯ ಅದ್ಭುತವಾಗಿ ಚಿತ್ರಿಸಿ ಶ್ರೀಸಾಮಾನ್ಯನ ವಿಜಯವನ್ನು ಸಾರಿದೆ. ಕ್ರೌಂಚವನ್ನು ಕೊಂದ ವ್ಯಾಧ, ದಶರಥನಿಗೆ ಪುತ್ರಲಾಭವಾಗಲೆಂದು ಅಂತರಾಳದಿಂದ ಪ್ರಾರ್ಥಿಸಿದ ಅಯೋಧ್ಯೆಯ ಜನತೆ (ಜನಮನಮೆ ಯುಗಶಕ್ತಿಯಲ್ತೆ), ರಾಮನ ವನಗಮನದಂಥ ಉದ್ವಿಗ್ನ ಸಂಕ್ಲಿಷ್ಟ ಸಮಯದಲ್ಲೂ ತನ್ನ ಕೃಷಿಕಾಯಕದಿಂದ ಯಥಾರೀತಿಯ ಮುಗ್ಧವಿಸ್ಮಯಭಾವದಿಂದ ಮನೆಗೆ ಹಿಂದಿರುಗುವ ಕೃಷೀವಲ, ಸಾಮಾನ್ಯರಾದರೂ ತಮ್ಮ ಅಸಾಧಾರಣವಾದ ಶೌರ್ಯ ಅಸೀಮವಾದ ಸ್ವಾಮಿಭಕ್ತಿ ಹಾಗೂ ಆದರ್ಶ ಸ್ನೇಹ ಮತ್ತು ಉದಾತ್ತ ಹೃದಯವನ್ನು ಮೆರೆದು ನಮ್ಮ ಮನದಲ್ಲಿ ಕೊರೆದು ನಿಲ್ಲುವ ವಹ್ನಿರಂಹರು, ಸೀತಾಸಾನ್ನಿಧ್ಯದಿಂದ ಅಸಾಮಾನ್ಯ ಆತ್ಮಶಕ್ತಿ ಹೃದಯವಂತಿಕೆ ಮತ್ತು ಸೂಕ್ಷ್ಮಪ್ರಜ್ಞೆಗಳನ್ನು ಬೆಳೆಸಿಕೊಂಡ ತ್ರಿಜಟೆ – ಇವರೆಲ್ಲ ಈ ಮಹಾಕಾವ್ಯದ ಪ್ರಧಾನ ಪಾತ್ರಗಳಷ್ಟೇ ನಮ್ಮ ಗಮನ ಗೌರವನ್ನು ಸೆಳೆದುಕೊಳ್ಳುತ್ತಾರೆ. ಈ ಕಾಲದ ಶ್ರೀಸಾಮಾನ್ಯನ ಮಹತ್ವವನ್ನು ಕವಿ ಹೇಗೆ ಗುರುತಿಸಿ ಜೀವಂತವಾಗಿ ದಾಖಲಿಸಿದ್ದಾನೆ ಎಂಬುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ (ಈ ಹಿಂದಿನ ಅಧ್ಯಾಯಗಳೊಂದರಲ್ಲಿ ಇದನ್ನು ವಿವರಿಸ ಲಾಗಿದೆ).

ಉ. ದಲಿತ ಪ್ರಜ್ಞೆ

ಈ ಯುಗದ ಮತ್ತೊಂದು ಮುಖ್ಯ ಗಮನಾರ್ಹ ವೈಶಿಷ್ಟ್ಯವೆಂದರೆ ಜಗತ್ತಿನಾದ್ಯಂತ ಬೆಳೆಯುತ್ತಿರುವ ಅಸ್ಪೃಶ್ಯರ ದಲಿತರ ಬಗೆಗಿನ ಅನುಕಂಪ ಮತ್ತು ಅವರ ಉದ್ಧಾರಾಕಾಂಕ್ಷೆ. ಇಡೀ ರಾಮಾಯಣದಲ್ಲಿ ಶತಶತಮಾನಗಳಿಂದ ಜನರ ಅವಜ್ಞೆಗೆ ತಿರಸ್ಕಾರಕ್ಕೆ ಅಸಹ್ಯನಿಂದೆಗೆ ತೀವ್ರವಾಗಿ ತುತ್ತಾಗಿರುವ ವ್ಯಕ್ತಿಯೆಂದರೆ ಮಂಥರೆ. ಕಾರಣವಿಲ್ಲದೆ ಕಾರ್ಯವಿಲ್ಲ ಎಂಬ ಪ್ರಾಥಮಿಕ ಅರಿವೂ ಇಲ್ಲದೆ ಆಕೆಯ ನಡವಳಿಕೆಯನ್ನು ಸಾರ್ವತ್ರಿಕವಾಗಿ ಟೀಕಿಸಲಾಗಿದೆ. ಆದರೆ ಜನ್ಮತಳೆದಂದಿನಿಂದ ಅನ್ಯರ ಅವಹೇಳನಕ್ಕೆ ಜುಗುಪ್ಸೆಗೆ ತೀವ್ರ ತಿರಸ್ಕಾರಕ್ಕೆ ಬಲಿಯಾಗಿ ಆಘಾತಗಳ ಮೇಲೆ ಆಘಾತವನ್ನು ಅನುಭವಿಸುತ್ತ ಅವರ ಮಾನಸಿಕ ವಿಕಾರಗಳ ಶನಿದುಳಿತಕ್ಕೆ ಮನವೊಡ್ಡುತ್ತ ಬಂದ ಆಕೆಯ ದೀನ ಹೀನ ಮನಃಸ್ಥಿತಿಯನ್ನು ಊಹಿಸಿದವರಾರು? ಅರಿತು ಅನುಕಂಪವನ್ನು ತೋರಿ ಮಾರ್ಗದರ್ಶನ ಮಾಡಿದವರಾರು? ಕುವೆಂಪು ಅವರ ಮಹಾಕವಿ  ಸಹಜ ಕರುಣೆ ಈ ನಡತೆಗೆ ಕಾರಣಗಳನ್ನು ಕಂಡುಹಿಡಿದು, ಅವಳ ಪೂರ್ವಾಪರ ಜೀವನವನ್ನು ಅನುಪಮವಾಗಿ ಸೃಷ್ಟಿಸಿ, ಅವಳನ್ನು ಲೋಕನಿಂದೆಯ ಕೆಸರಿನಿಂದ ಉದ್ಧರಿಸಿ ದಿವ್ಯಸನ್ಮಾನ್ಯೆ ಯನ್ನಾಗಿ ಚಿತ್ರಿಸಿದೆ. ಲಿಂಕನ್, ಗಾಂಧಿ, ಅಂಬೇಡ್ಕರ್ ಮುಂತಾದವರ ದಲಿತರ ಬಗೆಗಿನ ನೈಜ ಕಾಳಜಿ ಉದ್ಧಾರಾಕಾಂಕ್ಷೆ ಈ ಪಾತ್ರದ ಮೂಲಕ ಜೀವ ತಳೆದು ನಿಂತಿದೆ.

ಹುಟ್ಟಿನಿಂದ ಬೇಡಿತಿಯಾದರೂ ತನ್ನ ಶ್ರದ್ಧೆ ಸಾಧನೆ ಭಕ್ತಿ ಪರಾನುಕಂಪೆ ಸರಳತೆ ಮತ್ತು ತ್ಯಾಗಗಳ ಮೂಲಕ ಶಬರಜ್ಜಿ ಕೂಡ ಈ ಕಾವ್ಯದಲ್ಲಿ ಅತ್ಯಂತ ಗಮನ ಸೆಳೆಯುವ ಪಾತ್ರವಾಗಿ ಕವಿಯ ದಲಿತಪ್ರಜ್ಞೆಯನ್ನು ಸಮರ್ಥವಾಗಿ ಪ್ರತಿನಿಧಿಸುತ್ತಾಳೆ.

ಊ. ಸ್ತ್ರೀಪ್ರಾಮುಖ್ಯ

ಜಗತ್ತಿನ ಇತಿಹಾಸದ ಪುಟಗಳನ್ನು ತೆರೆದರೆ ಅಲ್ಲೆಲ್ಲ ಕಾಣುವುದು ಪ್ರಧಾನವಾಗಿ ಪುರುಷಕಥೆಯೇ, ಅವನ ಸಾಹಸ ಸೋಲು ಗೆಲುವುಗಳ ರಮ್ಯ ವರ್ಣನೆಯೇ. ವಿಶ್ವಕವಿಗಳಾದ ಹೋಮರ್ ವರ್ಜಿಲ್ ಡಾಂಟೆ ಮಿಲ್ಟನ್ ಮುಂತಾದವರ ಮಹಾಕೃತಿಗಳಲ್ಲೂ ಅವಳಿಗೆ ಬಹುಮಟ್ಟಿಗೆ ಅವಜ್ಞೆಯ ಅವಗುಂಠನವನ್ನೇ ತೊಡಿಸಲಾಗಿದೆ. ಒಂದು ವೇಳೆ ಪ್ರಾಮುಖ್ಯ ದೊರೆತಿದ್ದರೂ ನಾಯಕಿಯರೆನಿಸಿಕೊಳ್ಳುವ ಪಾತ್ರಗಳಿಗೆ ಮಾತ್ರ. ನಮ್ಮ ರಾಮಾಯಣ ಮಹಾಭಾರತಗಳೂ ಈ ಮಾತಿಗೆ ಅಪವಾದವಲ್ಲ. ಆದರೆ ಈ ಯುಗ ಜೀವನದ ಹಲವು ರಂಗಗಳಲ್ಲಿ ಸ್ತ್ರೀ ಪುರುಷನಿಗೆ ಸರಿಸಮನಾಗಿ ಸಾಹಸಪ್ರತಿಭೆ ಬುದ್ದಿಮತ್ತೆಗಳನ್ನು ಪ್ರದರ್ಶಿಸಿದ ವಿಶಿಷ್ಟಯುಗ; ಪುರುಷನ ನೆರಳಲ್ಲೇ ತನ್ನ ಜೀವನದ ಮೋಕ್ಷವನ್ನು ಕಂಡುಕೊಳ್ಳುತ್ತಿದ್ದ ಕಾಲ ಕೊನೆಗೊಂಡು, ಅವಕಾಶ ಲಭ್ಯವಾದರೆ ತಾವು ಪುರುಷನನ್ನು ಎಲ್ಲ ರಂಗಗಳಲ್ಲೂ ಮೀರಿಸಬಲ್ಲೆ ಎಂಬುದನ್ನು ಸಾಬೀತು ಮಾಡಿದ ಯುಗ, ಮಹಿಳೆಯರ ಸ್ವಾಭಿಮಾನ ಅನನ್ಯವಾಗಿ ಎಚ್ಚರಗೊಂಡ ಯುಗ. ಅಂತೆಯೇ ಶ್ರೀರಾಮಾಯಣದರ್ಶನಂ ಈ ಸ್ತ್ರೀಯರ ಸ್ವಾಭಿಮಾನ ನಾಡಪ್ರೇಮ ಆತ್ಮಶಕ್ತಿ ಬುದ್ದಿಶಕ್ತಿ ಹೃದಯ ವೈಶಾಲ್ಯ ಮತ್ತು ಅಸಾಧಾರಣ ಸಾಧನೆಗಳನ್ನು ರಮ್ಯೋಜ್ವಲವಾಗಿ ಕೆತ್ತಿ ನಿಲ್ಲಿಸಿದೆ. ಆದಿಕಾವ್ಯದಲ್ಲಿ ತುಂಬ ಹಿನ್ನೆಲೆಗೆ ಸರಿದಿದ್ದ ಊರ್ಮಿಳೆಯ ಹೃದಯವಂತಿಕೆ, ತಪಃಶಕ್ತಿ, ಸ್ವಾರ್ಥ ತ್ಯಾಗಗಳು; ತಾರೆಯ ಸಮಯ ಪ್ರಜ್ಞೆ ದೈವಭಕ್ತಿ ಪತಿಪ್ರೇಮಗಳು; ಮಂಡೋದರಿಯ ವಿಶುದ್ಧ ಪ್ರತಿಭಕ್ತಿ; ಸರಳ ಗಾಂಭೀರ್ಯ, ದೈವಶ್ರದ್ಧೆ, ಸ್ನೇಹಶೀಲತೆ, ಮಾತೃವಾತ್ಸಲ್ಯ, ಪರಾನುಕಂಪೆ. ಬುದ್ದಿ ಕೌಶಲ, ವಿವೇಚನಾ ಶೀಲತೆ, ಮನೋದಾರ್ಢ್ಯ, ನಿರ್ಮಲಚಿತ್ತ, ಸರ್ವಶುಭಾಕಾಂಕ್ಷೆಗಳು; ಚಂದ್ರನಖಿ ಮತ್ತು ಧಾನ್ಯಮಾಲಿನಿಯರ ಪಾಪರತಿ, ಪಶ್ಚಾತ್ತಾಪ, ಹೃದಯಬೇಗುದಿ, ಅಪರಾಧಪ್ರಜ್ಞೆ ಮತ್ತು ನಿರ್ಮಲಾಕಾಂಕ್ಷೆಗಳು; ಅನಲೆಯಂಥ ಎಳೆವಯಸ್ಸಿನ ಸುಕುಮಾರಿಯ ಸರಳತೆ, ಸತ್ಯಪ್ರೇಮ, ಪಿತೃಪ್ರೇಮ, ಭಾವುಕತೆ, ಮುಗ್ಧತೆ, ಶ್ರದ್ಧೆ ಮತ್ತು ಸೇವಾಕಾಂಕ್ಷೆಗಳು: ಮಂಥರೆ-ಕೈಕೆಯರ ಕ್ಷಣಿಕ ಸ್ವಾರ್ಥ, ಪಶ್ಚಾತ್ತಾಪಮತಿ, ಸದುದ್ದೇಶ ಮತ್ತು ಮಂಗಳ ಮನೋಭಾವಗಳು-ಮುಂತಾಗಿ ಈ ಕಾವ್ಯದ ಪ್ರಧಾನ ಭೂಮಿಕೆಯಲ್ಲಿ ವಿರಾಜಿಸಿ ಪುರುಷರ ಯಶಸ್ಸಿನ ಹಿನ್ನೆಲೆಯಲ್ಲಿ ಸ್ತ್ರೀಯರ ಪಾಲು ಎಷ್ಟು ಪ್ರಮುಖವಾದದ್ದು, ಗಂಭೀರ ಗೌರವಕ್ಕೆ ಅರ್ಹ ವಾದದ್ದು ಎಂಬುದನ್ನು ಸಾರುತ್ತವೆ. ಅಷ್ಟೇ ಅಲ್ಲ, ಆದಿಕಾವ್ಯದ ಕವಿಗುರುವಿನ ವಿಶೇಷ ಮಮತೆಗೆ ಪಾತ್ರಳಾದ ಸೀತೆ ಕೂಡ ಅಲ್ಲಿ ಬಹುಮಟ್ಟಿಗೆ ತನ್ನ ಪಾತಿವ್ರತ್ಯ ರಕ್ಷಣೆಯ ಕಾರಣದಿಂದಲೇ ಆದರ್ಶಳಾಗಿದ್ದಾಳೆ. ಈ ಕಾವ್ಯದಲ್ಲಿ ಆಕೆಯ ಈ ಮುಖದ ಜೊತೆಗೆ ಮತ್ತೆ ಹಲವು ಆಯಾಮಗಳು ಆಕೆಗೆ ದೊರೆತು ಆಕೆ ಮತ್ತಷ್ಟು ಜಗದ್ವಂದ್ಯಳಾಗುತ್ತಾಳೆ. ತ್ರಿಜಟೆ, ಚಂದ್ರನಖಿ, ಧಾನ್ಯ ಮಾಲಿನಿ, ಮಂಡೋದರಿ, ಅನಲೆ, ಕೊನೆಗೆ ರಾವಣ – ಹೀಗೆ ಎಷ್ಟೊಂದು ಜನ ಆಕೆಯ ಮಹೋನ್ನತ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ತಮ್ಮ ಉದ್ಧಾರಪಥ ವನ್ನು ಕಂಡುಕೊಳ್ಳುತ್ತಾರೆ ಈ ಕಾವ್ಯದಲ್ಲಿ! ಸ್ತ್ರೀಯ ಈ ಸರ್ವೋದ್ಧಾರಕ ಶಕ್ತಿ ಕೂಡ ಈ ಕಾವ್ಯದ ಸಿದ್ದಿಗಳಲ್ಲಿ ಒಂದು.

 

[1] ಡಾ. ಜಿ.ಎಸ್. ಶಿವರುದ್ರಪ್ಪ, ಸಮಕಾಲೀನ ಪ್ರe, ಕನ್ನಡ ವಿಮರ್ಶೆ (ಸಂ. ಡಾ. ಶಂಕರ ಮೊಕಾಶಿ ಪುಣೇಕರ ಮತ್ತು ಡಾ. ಸಿ.ಪಿ.ಕೆ.) ಪು. ೯೮-೯೯.

[2] ಸುಜನಾ, ಪರಂಪರೆ ಮತ್ತು ಕುವೆಂಪು, ಪು. ೨೧೭.

[3] ಶ್ರೀರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪು. ೯-೧೦, ಸಾಲು ೨೪೨-೨೫೦.

[4] ಶ್ರೀರಾಮಾಯಣದರ್ಶನಂ, ಶ್ರೀ ಸಂಪುಟಂ, ಪು. ೭೬, ಸಾಲು ೧೧೯-೨೫.

[5] ಅದೇ, ಅಯೋಧ್ಯಾ ಸಂಪುಟಂ, ಪು. ೧೦, ಸಾಲು ೨೫೬-೫೭.

[6] ಅದೇ, ಪು. ೧೦, ಸಾಲು ೨೬೧-೬೩.

[7] ಶ್ರೀರಾಮಾಯಣದರ್ಶನಂ, ಲಂಕಾಸಂಪುಟಂ, ಪು. ೫೫೪, ಸಾಲು ೩೪೨-೫೨.

[8] ಅದೇ, ಶ್ರೀಸಂಪುಟಂ, ಪುಟ ೮೩೮, ಸಾಲು ೫೮೮-೯೦.

[9] ಅದೇ, ಅಯೋಧ್ಯಾ ಸಂಪುಟಂ, ಪು. ೯೫, ಸಾಲು ೧೩೬­೪೨.

[10] ಅದೇ, ಕಿಷ್ಕಿಂಧಾ ಸಂಪುಟಂ, ಪು. ೩೩೦, ಸಾಲು ೪೧೪-೨೧.

[11] ಶ್ರೀರಾಮಾಯಣದರ್ಶನಂ, ಲಂಕಾಸಂಪುಟಂ, ಪು. ೬೦೪, ಸಾಲು ೯೯-೧೦೪.