‘ಶ್ರೀರಾಮಾಯಣದರ್ಶನಂ’ ಮತ್ತು ಈಚಿನ ಎರಡು ಮಹತ್ವಾಕಾಂಕ್ಷೆಯ ಕೃತಿಗಳು

‘ಶ್ರೀರಾಮಾಯಣದರ್ಶನ’ದಂಥ ಆಧುನಿಕ ಕನ್ನಡ ಮಹಾಕಾವ್ಯವನ್ನು ಕುರಿತು ವಿವೇಚಿಸುವಾಗ ಇದೇ ಕಾಲದಲ್ಲಿ ರಚಿತಗೊಂಡ ಪ್ರೊ. ಗೋಕಾಕರ ‘ಭಾರತಸಿಂಧುರಶ್ಮಿ’ ಮತ್ತು ಪ್ರೊ. ಸಂ.ಶಿ. ಭೂಸನೂರಮಠರ ‘ಭವ್ಯಮಾನವ’ ಕೃತಿಗಳ ಬಗೆಗೂ ದೃಷ್ಟಿ ಹರಿಸುವುದು ಅಗತ್ಯವಾಗುತ್ತದೆ. ಈ ಅತ್ಯಂತ ಪರಿಮಿತ ಚೌಕಟ್ಟಿನಲ್ಲಿ ಇವುಗಳ ಬಗ್ಗೆ ಕೆಲವು ಮಾತು ಹೇಳುವುದರಿಂದ ಇವುಗಳಿಗೆ ತಕ್ಕ ನ್ಯಾಯ ಸಲ್ಲಿಸಿದಂತೆ ಆಗುವುದಿಲ್ಲ ವೆಂಬುದನ್ನು ವಿನಮ್ರವಾಗಿ ಸೂಚಿಸುತ್ತಲೇ ಇವುಗಳ ಪ್ರಧಾನ ವೈಶಿಷ್ಟ್ಯಗಳನ್ನು ಉಲ್ಲೇಖಿಸ ಬಯಸುತ್ತೇನೆ.

ನಮ್ಮ ಸಾಹಿತ್ಯದ ಮಹತ್ವದ ಲೇಖಕರಲ್ಲಿ ಒಬ್ಬರಾದ ಡಾ. ಗೋಕಾಕರ ಕೃತಿ ‘ಭಾರತ ಸಿಂಧುರಶ್ಮಿ’. ಹನ್ನೆರಡು ಕಾಂಡಗಳಲ್ಲಿ, ನೂರಾಮೂವತ್ತೆರಡು ಆಶ್ವಾಸಗಳಲ್ಲಿ, ಎರಡು ಸಂಪುಟಗಳಲ್ಲಿ, ಸುಮಾರು ೩೮೦೦೦ ಸಾಲುಗಳಲ್ಲಿ ಹರಡಿಕೊಂಡಿರುವ ಬೃಹತ್ ಕೃತಿ ಇದು. ಇಷ್ಟು ಗಾತ್ರದ ಹೆಬ್ಬೊತ್ತಿಗೆ ಕನ್ನಡದಲ್ಲಿರಲಿ, ಭಾರತೀಯ ಭಾಷೆಗಳಲ್ಲೇ ಅಪರೂಪ ವೆನ್ನಬಹುದು. ಭಾರತೀಯ ಭಾಷೆಗಳ ಮಹಾಕಾವ್ಯಗಳು ಮುಖ್ಯವಾಗಿ ಆಧರಿಸುವುದು ಭಾರತೀಯ ಜನಮನದಲ್ಲಿ ಆಳವಾಗಿ ಬೇರುಬಿಟ್ಟು ಭಾರತೀಯ ಸಂಸ್ಕೃತಿಯ ಪರಮಪ್ರತಿನಿಧಿ ಗಳೆನ್ನಿಸಿಕೊಂಡ ವ್ಯಾಸಭಾರತ ಮತ್ತು ವಾಲ್ಮೀಕಿ ರಾಮಾಯಣಗಳನ್ನು. ಇವೆರಡೂ ಆಕರಗಳಿಗೆ ಕೈಹಾಕದೆ, ಬಹುಜನ ಪರಿಚಿತವಲ್ಲದ ಋಗ್ವೇದದಿಂದ ವಸ್ತುವನ್ನು ಆರಿಸಿರುವುದು ಈ ಕೃತಿಯ ಮತ್ತೊಂದು ವೈಶಿಷ್ಟ್ಯವಾಗಿದೆ. ಭಾರತವನ್ನಾಧರಿಸಿದ ಪಂಪ ನಾರಣಪ್ಪ ವಿರಚಿತ ಕೃತಿಗಳು, ರಾಮಾಯಣವನ್ನಾಧರಿಸಿದ ಶ್ರೀರಾಮಾಯಣದರ್ಶನ ಈಗಾಗಲೇ ಮಹೋನ್ನತ ಕಾವ್ಯಗಳೆಂದು ಪ್ರಸಿದ್ಧವಾಗಿರುವುದೂ ಬಹುಶಃ ಈ ರೀತಿಯ ವಿಭಿನ್ನ ಆಯ್ಕೆಗೆ ಕಾರಣ ವಾಗಿರುವು ಸಾಧ್ಯತೆಯಿದೆ. ಸ್ಥೂಲವಾಗಿ ಹೇಳುವುದಾದರೆ ‘ವಿಶ್ವರಥ’ನು ‘ವಿಶ್ವಾಮಿತ್ರ’ನಾದ ಕಥೆ ಇದರ ವಸ್ತು. ಈ ಬೆಳವಣಿಗೆ ಮತ್ತು ಪರಿವರ್ತನೆ ಅಖಂಡ ಮನುಕುಲದ ಬೆಳವಣಿಗೆ ಮತ್ತು ಪರಿವರ್ತನೆಗಳನ್ನು ಪ್ರತಿಮಿಸುತ್ತದೆ. ಕವಿಯೇ ಹೇಳುವಂತೆ “ಆರ್ಯ ದ್ರಾವಿಡ ಜನಾಂಗಗಳ ಪರಸ್ಪರ ಸಮಾಗಮ, ಸಂಘರ್ಷ ಹಾಗೂ ಸಮ್ಮಿಳನ, ಭರತಕುಲ ಚಕ್ರವರ್ತಿ ಯಾದ ಸುದಾಸನಿಂದ ದೇಶಕ್ಕೆ ‘ಭಾರತ’ ಎಂಬ ಹೆಸರು ಬಂದಿರಬಹುದಾದ ರೀತಿ, ಮಿಶ್ರರಕ್ತದ ಸುದಾಸ ‘ಸಮ್ಮಿಲನ’ ಸಿದ್ಧಾಂತದ ಪುರೋಹಿತರಾದ ವಿಶ್ವಾಮಿತ್ರರಿಂದ ಉತ್ತೇಜನಗೊಂಡಿರಬಹುದಾದ ಪ್ರಸಂಗ, ಸುದಾಸನನ್ನು ವಿಜಯಿಯಾಗಿಸಿದ ದಾಶರಾಜ ಯಜ್ಞ, ಯುದ್ಧ, ಅರಸಾದ ಮಿಶ್ವಾಮಿತ್ರರು ಋಷಿಯಾದ ಬಗೆ; ಹೀಗೆ ಒಂದಲ್ಲ ಎರಡಲ್ಲ ಪ್ರಾಚೀನ ಭಾರತೀಯ ಸಂಸ್ಕೃತಿಗೇ ಈ ಮಹಾಕಾವ್ಯ ಕನ್ನಡಿ ಹಿಡಿದಿದೆ. ಸುಮಾರು ಕ್ರಿ.ಪೂ. ೨೦೦೦ದಲ್ಲಿಯ ಭಾರತದ ಭೂಗೋಲ, ಆಗ ಇದ್ದ ಇತಿಹಾಸ ಹಾಗೂ ಇದ್ದಿರಬಹುದಾದ ಇತಿಹಾಸದ ಪುರಾಣ, ಸಪ್ತಸಿಂಧೂದೇಶ, ದಸ್ಯುಖಂಡ, ದಕ್ಷಿಣಾಪಥ, ಇದೆಲ್ಲ ಜೀವನ ಯಾತ್ರೆಯೇ ಕಣ್ಣುಮಂದೆ ಹಾದುಹೋಗುತ್ತದೆ.”

[1] ಈ ಕಾವ್ಯದ ಸಮುದ್ರ ವಿಸ್ತಾರವನ್ನು ಈ ಮಾತುಗಳು ಬಿಂಬಿಸುತ್ತವೆ. ಇನ್ನೂರಕ್ಕಿಂತ ಹೆಚ್ಚು ಪಾತ್ರಗಳು ಈ ಸುವಿಶಾಲ ಪ್ರಾಂಗಣದಲ್ಲಿ ಸುಳಿದಾಡುತ್ತವೆ. ಅವುಗಳ ಕಾಮ-ಪ್ರೇಮ, ಆಸೆ-ಆಕಾಂಕ್ಷೆ, ಶಕ್ತಿ-ದೌರ್ಬಲ್ಯ, ಪ್ರಯತ್ನ-ಸಾಹಸಶೀಲತೆ-ಪರಿಶ್ರಮ, ಎಡರುತೊಡರುಗಳನ್ನು ನಿವಾರಿಸಿಕೊಳ್ಳುವ ಅಜೇಯ ಛಲ, ಬದುಕಿನ ರೀತಿ ನೀತಿಗಳು ವಿಶದವಾಗಿ ಅದ್ಭುತವಾಗಿ ಇಲ್ಲಿ ಚಿತ್ರಣಗೊಂಡಿವೆ. ಗೋಕಾಕರ ಅಗಾಧ ಪಾಂಡಿತ್ಯ ಲೋಕಾನುಭವ ಪ್ರಯೋಗಶೀಲತೆ ಮತ್ತು ಪ್ರಗಾಢ ಬುದ್ದಿಕೌಶಲಗಳು ಇಲ್ಲಿ ಮಹತ್‌ಪ್ರಮಾಣದಲ್ಲಿ ಸುವ್ಯಕ್ತವಾಗಿವೆ. ಆ ಯುಗದ ಸಂಸ್ಕೃತಿಯ ನಿರೂಪಣೆಯಲ್ಲಿ, ಅಲ್ಲಿ ತೆರೆದುಕೊಂಡಿರುವ ವೈವಿಧ್ಯಮಯವಾದ ಜೀವನವಿಕಾಸದ ವಿವಿಧ ಸ್ತರಗಳನ್ನು ವ್ಯಾಖ್ಯಾನಿಸುವಲ್ಲಿ ಗೋಕಾಕರು ತೋರುವ ಪ್ರಜ್ಞಾಕೌಶಲ ಬೆರಗುಗೊಳಿಸುತ್ತದೆ.

ವಿಷಯದ ಹರಹಿನಲ್ಲಿ, ವಿವೇಚನೆಯ ಪ್ರೌಢತೆಯಲ್ಲಿ ಇದನ್ನು ಮೀರಿಸುವ ಮತ್ತೊಂದು ಕೃತಿ ಕನ್ನಡದಲ್ಲಿ ಇಲ್ಲ. ಆದರೆ ವಿಷಯದ ಬೃಹತ್ತು ಮತ್ತು ವಿವೇಚನೆಯ ಪ್ರಬುದ್ಧತೆ ಮಹಾಕಾವ್ಯದ ಕೆಲವು ಲಕ್ಷಣಗಳು ಮಾತ್ರ. ಈ ಅಪಾರ ವಿಸ್ತಾರದ ಸಾಮಗ್ರಿಯಲ್ಲಿ ಕವಿ ಸಾವಯವ ಸಂಬಂಧವನ್ನು ಹೊಮ್ಮಿಸುವ ಬಗೆ, ಈ ಚಾರಿತ್ರಿಕ ಸಾಮಗ್ರಿಯನ್ನು ಅಖಂಡ ಗೊಳಿಸಿ ಅದನ್ನು ರಸಸಾಮಗ್ರಿಯನ್ನಾಗಿ ಪರಿವರ್ತಿಸುವ ಮಹಾಪ್ರತಿಭಾ ಪವಾಡ- ಒಂದು ಕೃತಿಗೆ ಮಹಾಕಾವ್ಯ ಪಟ್ಟವನ್ನು ನೀಡುತ್ತವೆ. ಈ ದೃಷ್ಟಿಯಿಂದ ಪರಿಶೀಲಿಸಿದಾಗ ‘ರಶ್ಮಿ’ ನಿರಾಶೆಗೊಳಿಸುತ್ತದೆ. ಈ ಕೃತಿಯಲ್ಲಿರುವ ವಿಶ್ವಕೋಶದಂಥ ವಸ್ತುವೈಪುಲ್ಯ ನಮ್ಮನ್ನು ವಿಸ್ಮಯದಲ್ಲಿ ಅದ್ದುತ್ತದೆಯೆಂಬುದು ನಿಜವಾದರೂ, ಅದು ರಸಾತ್ಮಕವಾದ ಕಾವ್ಯವಾಗದೆ ಬಹುಭಾಗದಲ್ಲಿ ಅಜೀರ್ಣ ಆಹಾರವಾಗಿ ಗಡ್ಡೆಗಡ್ಡೆಯಾಗಿ ಉಳಿದುಬಿಡುತ್ತದೆ. ನಿರೂಪಣೆ ಅಧಿಕವಾಗಿ ವೈಚಾರಿಕ ಹಂತದಲ್ಲೇ ಸಾಗುತ್ತದೆಯಾದ್ದರಿಂದ ಓದುಗರ ಸಹನೆಯನ್ನು ಪರೀಕ್ಷಿಸುವಂತಾಗುತ್ತದೆ. “ಪ್ರಾಚೀನ ಆರ್ಷೇಯ ಪ್ರತೀಕಗಳನ್ನು ಸೃಜನಶೀಲವಾಗಿ ಬಳಸಿಕೊಂಡಿಲ್ಲ, ಎಲ್ಲ ಹಸಿಹಸಿಯಾಗಿ ರಾಶಿರಾಶಿಯಾಗಿ ವರದಿಯಾಗಿದೆ, ಸಮನ್ವಯ ಗೊಂಡಿಲ್ಲ. ಪ್ರತಿಮೆಗಳನ್ನು ಬುದ್ದಿಪೂರ್ವಕವಾಗಿ ಪೋಣಿಸುತ್ತಾರೆ. ಅವು ಕಾವ್ಯಬಂಧದಲ್ಲಿ ಹೊಂದಿಕೊಳ್ಳದೆ, ಬೆಸೆಯದೆ ಬಿರುಕು ತೋರಿ ಹೊರಗೇ ಉಳಿದುಬಿಡುತ್ತವೆ. ಪ್ರಾಸಪ್ರಿಯತೆ, ಶಾಬ್ದಿಕ ಬಡಬಡಿಕೆ ಭಾವಪ್ರಚೋದಕವಾಗದೆ, ಯಾವ  ಔಚಿತ್ಯದ ಅರ್ಥನಿಯೋಗವನ್ನೂ ನಿರ್ವಹಿಸದೆ ಸೋಲುತ್ತದೆ….ನಾವು ಕಾವ್ಯ ಓದುತ್ತಿದ್ದೇವೆಯೋ ಅಥವಾ ಪುರಾಣನಾಮ ಚೂಡಾಮಣಿ ವಾಚನ ಮಾಡುತ್ತಿದ್ದೇವೆಯೋ ಎಂಬ ಭ್ರಮೆ ಆವರಿಸುತ್ತದೆ.”[2] ಪ್ರೊ. ಗೋಕಾಕರ ಪಾಂಡಿತ್ಯದ ಶಿಖರದೆತ್ತರದೊಡನೆ ಕವಿ ಗೋಕಾಕರ ಸೃಜನ ಪ್ರತಿಭೆ ಸ್ಪರ್ಧಿಸಲಾರದೆ ಸಂಯೋಗಗೊಳ್ಳದೆ ಸೋತು ಬಿಡುವುದರಿಂದ ‘ಭಾರತಸಿಂಧುರಶ್ಮಿ’, ಉಳಿದೆಲ್ಲ ಹಿರಿಯಂಶಗಳಿದ್ದರೂ, ಮಹಾಕಾವ್ಯ ಸಿಂಹಾಸನದಿಂದ ಚ್ಯುತವಾಗಿಬಿಡುವುದು ನಮ್ಮ ಕಾವ್ಯಕ್ಷೇತ್ರದ ಒಂದು ಮಹದ್ದುರಂತವಾಗಿದೆ. ಈ ಕಾರಣದಿಂದ ವಸ್ತುಭಿನ್ನತೆ ವಸ್ತು-ವ್ಯಾಪಕತೆಗಳನ್ನು ಹೊರತುಪಡಿಸಿದರೆ, ಈ ಕಾವ್ಯ ಶ್ರೀರಾಮಾಯಣದರ್ಶನದ ಎತ್ತರದಲ್ಲಿ, ಅದು ನೀಡುವ ಸಾಂದ್ರವಾದ ಒಟ್ಟಾನುಭವದ ಪರಿಣಾಮದ ಮಟ್ಟದಲ್ಲಿ ನಿಲ್ಲುವುದಿಲ್ಲ. ಏಕೆಂದರೆ, “ಶ್ರೀರಾಮಾಯಣದರ್ಶನಂ’ ಕಾವ್ಯಶಿಲ್ಪದ ದೃಷ್ಟಿಯಿಂದ ಪ್ರತಿಮಾ ಸೌಧವಾಗಿ ರೂಪುಗೊಂಡು ಸುಸಂಬದ್ಧ ಕೃತಿಯಾಗಿ ನಿಲ್ಲುತ್ತದೆ. ಈ ಅರ್ಥದಲ್ಲಿ ಇದನ್ನು ಮೀರಿಸುವ ಆಧುನಿಕ ಕನ್ನಡ ಕಾವ್ಯ ಮತ್ತೊಂದಿಲ್ಲ.”[3]

‘ಭಾರತಸಿಂಧುರಶ್ಮಿ’ಯ ನಂತರ ಪ್ರಕಟವಾದ ಮತ್ತೊಂದು ಗಮನಾರ್ಹವಾದ ಮತ್ತು ಬೃಹತ್ತಾದ ಕಾವ್ಯ ಪ್ರೊ. ಸಂ.ಶಿ. ಭೂಸನೂರಮಠರ ಭವ್ಯಮಾನವ. ಸುಮಾರು ೯೦೦ ಪುಟಗಳಲ್ಲಿ ರಚನೆಗೊಂಡಿರುವ ವಿಶಿಷ್ಟ ಕಾವ್ಯವಿದು. ರಾಮಾಯಣ ಭಾರತಗಳಿಂದ ಕಥಾವಸ್ತುವನ್ನಾಯ್ದುಕೊಳ್ಳುವ ಸಂಪ್ರದಾಯವನ್ನು ‘ರಶ್ಮಿ’ ಭಂಗಿಸಿದಂತೆ, ಇದೂ ಭಂಗಿಸಿ ಅನ್ಯಮೂಲಕ್ಕೆ ಕೈಚಾಚಿದೆ. ಅದು ಪರಮ ಪ್ರಾಚೀನ ಸಂಸ್ಕೃತಿಯ ಸಮುದ್ರಕ್ಕೆ ನಾಲಿಗೆ ಚಾಚಿದರೆ, ಇದು ಅರ್ವಾಚೀನ ಇತಿಹಾಸವನ್ನು ತನ್ನ ಗರ್ಭದಲ್ಲಿ ಕಾವ್ಯವಾಗಿ ಮೂರ್ತ ಗೊಳಿಸಲು ಯತ್ನಿಸಿದೆ. ವೀರವಿರಾಗಿಣಿ ಅಕ್ಕಮಹಾದೇವಿಯ ತೇಜೋನ್ವಿತವಾದ ಆದರ್ಶ ಯುತವಾದ ಬದುಕು ಈ ಕೃತಿಯ ಮೂಲದ್ರವ್ಯವಾಗಿದೆ. ಈ ಮೂಲಕ ಸಾಮಾನ್ಯವಾಗಿ ಹುಟ್ಟುವ ಮಾನವ ತನ್ನ ಅವಿರತ ಸಾಧನೆಯಿಂದ ಪ್ರಯತ್ನಗಳಿಂದ, ಪರಿಸರದ ಪ್ರಭಾವದಿಂದ ಹೇಗೆ ಭವ್ಯಮಾನವನಾಗಬಲ್ಲ ಎಂಬುದನ್ನು ಪ್ರತಿಮಿಸಿದೆ. ಕಲ್ಯಾಣಕಾಂಡ, ಶ್ರೀಶೈಲಕಾಂಡ, ಕತ್ತಲೆಯಕಾಂಡ, ಉದಯಕಾಂಡ, ಉಜ್ವಲಕಾಂಡ ಮತ್ತು ಭವ್ಯಕಾಂಡ- ಎಂದು ಆರು ವಿಭಾಗವಾಗಿ ಕಂಡರಣೆಗೊಂಡಿರುವ ಈ ಕಾವ್ಯ ತನ್ನ ಹಾಸಿನಲ್ಲಿ ಇತಿಹಾಸ ಪುರಾಣ ಅಧ್ಯಾತ್ಮಗಳನ್ನು ಒಟ್ಟಿಗೆ ಬೆಸೆಯಲು ಪ್ರಯತ್ನಿಸಿದೆ. ಆದ್ದರಿಂದ “ಮಲಗಿದ ಮಾನವನ ವಿಷಯಸಂಸಾರ, ಹಗಲುಗತ್ತಲೆಯ ದ್ವೈತಪ್ರಪಂಚ ಮತ್ತು ಎಚ್ಚೆತ್ತ ಮಾನವನ ಲಿಂಗಗಭೀರದ ಬ್ರಹ್ಮವಿಸ್ತಾರಗಳೇ ಕಾವ್ಯದ ಕಥಾವಸ್ತು. ದ್ವೈತಾದ್ವೈತಗಳ ಸೀಮೆಯನ್ನು ದಾಟಿದ ನಿರಾಲಂಬನಿ ಸ್ಥೂಲವೆ ಈ ಕಾವ್ಯದ ಪರವಸ್ತು.”[4] ಈ ವಸ್ತುವನ್ನು ಕವಿ ನಿರ್ವಹಿಸಿರುವ ರೀತಿ ಮನನೀಯವಾಗಿದೆ. ಇತಿಹಾಸದ ಪಾತ್ರಗಳು ಇಲ್ಲಿ ಜೀವದಳೆದು ಮೈದುಂಬಿ ನಿಲ್ಲುತ್ತವೆ. ಮಹಾದೇವಿಯಕ್ಕ, ಬಸವಣ್ಣ, ಪ್ರಭುದೇವ ಮುಂತಾದ ಪಾತ್ರಗಳು ಅತ್ಯಂತ ಎತ್ತರವಾಗಿ ಸಮರ್ಥವಾಗಿ ಮೂಡಿನಿಂತಿವೆ. ಹೊಸದಾಗಿ ಕಲ್ಪಿಸಿಕೊಂಡಿರುವ ಗುರುಚೆನ್ನಮಲ್ಲಯ್ಯ, ಲೌಕಿಕವನ್ನು ಪ್ರತಿನಿಧಿಸುವ ಗಿರಿಯಮಲ್ಲಯ್ಯ ಮುಂತಾದ ಪಾತ್ರಗಳೂ ವಿಶಿಷ್ಟವಾದ ಮಾನವಕಾಂತಿಯಿಂದ ಮಿನುಗುತ್ತವೆ. ಕೌಶಿಕನ ಪಾತ್ರಕ್ಕೆ ತಂದಿರುವ ತಿರುವು ಕವಿ ಪ್ರತಿಭೆಯ ದ್ಯೋತಕವಾಗಿದೆ. ಸರಳವಾದ ಸುಂದರವಾದ ಭಾಷೆಯ ಮೂಲಕ ನಿರೂಪಣೆ ತುಂಬ ತಿಳಿಯಾಗಿ ನಿರರ್ಗಳವಾಗಿ ಸಾಗುತ್ತ ಓದುಗರನ್ನು ಎಳೆದೊಯ್ಯುತ್ತದೆ; ಕೆಲವು ಸಂದರ್ಭಗಳಂತೂ ಹೃದಯಸ್ಪರ್ಶಿಯಾಗಿವೆ. ಆದರೆ ಕಾವ್ಯ ತನ್ನುದ್ದಕ್ಕೂ ವಚನಗಳ ನೆಳಲನ್ನು ಅತ್ಯಂತ ದಟ್ಟವಾಗಿ ಹೊದ್ದುಕೊಂಡಿದೆ. ಹಲವು ವಚನಗಳೇ ಉಂಡುಂಡೆಯಾಗಿ ಇಲ್ಲಿ ಸೇರ್ಪಡೆಗೊಂಡಿವೆ. ಉಪನಿಷತ್ತು ಮತ್ತು ಭಗವದ್‌ಗೀತೆಗಳ ಭಾವಾಲೋಚನೆಗಳು ಸಹ ಅಧಿಕ ಪ್ರಮಾಣದಲ್ಲಿ ಇಲ್ಲಿ ಮೇಳೈಸಿವೆ. ಆಧ್ಯಾತ್ಮಿಕ ವಸ್ತುವೊಂದನ್ನು ಕಾವ್ಯ ಮಾಡಲು ಹೊರಟ ಪರಿಣಾಮವಾಗಿ ಅತ್ಯಂತ ದೀರ್ಘವಾದ, ಆ ಕಾರಣದಿಂದ ಬೇಸರ ಬರಿಸುವ, ತಾತ್ವಿಕ ಚಿಂತನೆಗಳೇ ಪುಟಗಟ್ಟಲೆ ಹರಿಯುವುದರಿಂದ ಕಾವ್ಯತ್ವಕ್ಕೆ ಅಪಾರ ಹಾನಿಯುಂಟಾಗಿದೆ. ಇತಿಹಾಸ ಇತಿಹಾಸವಾಗಿಯೇ ಉಳಿಯದೆ ಪುರಾಣಲೋಕಕ್ಕೂ ಮೈಚಾಚುವುದರಿಂದ ಕೃತಕತೆ ಅಸ್ವಾಭಾವಿಕತೆಗಳು ಮೈಮುರಿದು ನಿಲ್ಲುತ್ತವೆ. ಇತಿಹಾಸ ಬಯಸುವ ವಾಸ್ತವಿಕತೆಯನ್ನು ಪುರಾಣಕಲ್ಪನೆ ಧಿಕ್ಕರಿಸುವುದರಿಂದ ವಸ್ತು ಮತ್ತು ಚಿಂತನೆಗಳ ವಿಘಟನೆ ಒಡಕು ದಾಂಪತ್ಯದಂತೆ ನಮಗೆ ಎದುರಾಗುತ್ತದೆ.[5] ಇವೆಲ್ಲದರಿಂದ ಕಾವ್ಯದಲ್ಲಿ ಏಕತಾನತೆ ಅಪಶ್ರುತಿ ತಾನೇತಾನಾಗಿ ಕಾವ್ಯಕಟ್ಟಡ ಶಿಥಿಲವಾಗುತ್ತದೆ. ಈ ದೋಷಗಳನ್ನು ಮರೆಸುವ, ಅವೆಲ್ಲವನ್ನೂ ತನ್ನ ಪ್ರಚಂಡ ಶಕ್ತಿಯ ಅಗ್ನಿದ್ರವ್ಯದಲ್ಲಿ ಕರಗಿಸಿ ಎರಕ ಹುಯ್ಯುವ ಸರ್ವಂಭರತ್ವವನ್ನುಳ್ಳ ಪ್ರಖರ ಪ್ರತಿಭೆಯೂ ಇಲ್ಲಿ ಅಪಾರ ಪ್ರಮಾಣದಲ್ಲಿ ಕ್ರಿಯಾಶೀಲ ವಾಗುವುದಿಲ್ಲವಾದ್ದರಿಂದ ಸಹೃದಯನನ್ನು ತನ್ಮಯಗೊಳಿಸಿ ತನ್ನೊಳಕ್ಕೆ ಸೆಳೆಯುವ ಅವಕಾಶವೂ ಇಲ್ಲವಾಗಿದೆ. ಹೀಗಾಗಿ ಈ ಕಾವ್ಯ ಇತ್ತ ಪುರಾಣವೂ ಆಗದೆ, ಅತ್ತ ಇತಿಹಾಸವೂ ಆಗದೆ ಎಡಬಿಡಂಗಿಯಾಗಿ ಬಿಡುತ್ತದೆ. ಅತ್ಯುನ್ನತವಾದ ಪ್ರತಿಭೆಯಿದ್ದರೂ ಚಾಮರಸ ಮತ್ತು ರಾಘವಾಂಕರು ಇತಿಹಾಸವನ್ನು ಉತ್ಕೃಷ್ಟವಾದ ಕಾವ್ಯವನ್ನಾಗಿಸಲಾರದೆ ಹೋದ ವಿಫಲತೆ ಇಲ್ಲಿ ಮರುಕಳಿಸುತ್ತದೆ. ಸನ್ನಿವೇಶದಿಂದ ಸನ್ನಿವೇಶಕ್ಕೆ, ಸಂಪುಟದಿಂದ  ಸಂಪುಟಕ್ಕೆ ದಾಪುಗಾಲು ಹಾಕಿ ವಿಜೃಂಭಿಸುತ್ತ, ತನ್ನ ಕೆಲವು ದೋಷಗಳನ್ನು ಗುಣಗಳೆಂದೇ ಭಾವಿಸುವಂಥ ಅನುಭವ ಸಾಂದ್ರತೆಯನ್ನೊಡ್ಡುತ್ತ, ಪಾತ್ರ ಸಂದರ್ಭ ದರ್ಶನಗಳೆಲ್ಲವನ್ನೂ ತನ್ನ ಮಿಂಚು ರೆಕ್ಕೆಯ ಮೆಲೆ ನಕ್ಷತ್ರ ಪಥದಲ್ಲಿ ತೀವ್ರ ವೇಗದಿಂದ ಹೊತ್ತೊಯ್ಯುವ ಶ್ರೀರಾಮಾಯಣ ದರ್ಶನದ ಅದ್ಭುತ ಪ್ರತಿಭೆಯ ಎದುರು ಈ ಕಾವ್ಯ ತರಳವಾಗಿ ನಿಲ್ಲುತ್ತದೆ.

‘ಭಾರತಸಿಂಧುರಶ್ಮಿ’ ಮತ್ತು ‘ಭವ್ಯಮಾನವ’ ಕೃತಿಗಳು ಉದ್ದೇಶದ ದೃಷ್ಟಿಯಿಂದ ತುಂಬ ಘನವಾದವುಗಳು; ಕವಿಗಳ ಪರ್ವತ ಪ್ರಯತ್ನದ ದೃಷ್ಟಿಯಿಂದ ಪ್ರಬುದ್ಧವಾದವುಗಳು; ವಸ್ತುವಿನ ದೃಷ್ಟಿಯಿಂದ ಅಪೂರ್ವವಾದವುಗಳು; ಆದರೆ ಕಾವ್ಯದ ಜೀವಾಳವೆನಿಸುವ ಕಲಾಮಹೋನ್ನತಿಯ ದೃಷ್ಟಿಯಿಂದ ಮಹಾಕಾವ್ಯದ ಗರಿಷ್ಠ ಎತ್ತರಕ್ಕೆ ಏರಲಾರದೆ ಹೋದವು. ಆದ್ದರಿಂದ ಸಾವಿರ ವರುಷಗಳ ಸುದೀರ್ಘ ಇತಿಹಾಸವನ್ನುಳ್ಳ ಕನ್ನಡ ಸಾಹಿತ್ಯದಲ್ಲಿ ಪಂಪನ ‘ವಿಕ್ರಮಾರ್ಜುನ ವಿಜಯಂ’, ನಾರಣಪ್ಪನ ‘ಕರ್ಣಾಟಕ ಭಾರತ ಕಥಾಮಂಜರಿ’ಗಳ ನಂತರ ಮತ್ತು ಅದೇ ಸಾಲಿನಲ್ಲಿ ನಿಲ್ಲುವ ಏಕೈಕ ಮಹಾಕೃತಿ ‘ಶ್ರೀರಾಮಾಯಣದರ್ಶನಂ’ ಎಂಬುದು ಈ ಸಮೀಕ್ಷೆಯಿಂದ ಸುವಿದಿತವಾಗುತ್ತದೆ. ಇಷ್ಟೇ ಅಲ್ಲ, ವಿಮರ್ಶಕರೊಬ್ಬರು ಅಭಿಪ್ರಾಯ ಪಡುವಂತೆ, “ಶ್ರೀರಾಮಾಯಣದರ್ಶನಂ ಕನ್ನಡದಲ್ಲಿ ಸದ್ಯಕ್ಕೆ ಇನ್ನೊಂದು ಅಂಥ ಮಹಾಕಾವ್ಯ ಬರದಂತಹ ಸ್ಥಿತಿಯನ್ನು ಉಂಟುಮಾಡಿದೆ. ಅದರ ಮಹಾಛಂದಸ್ಸು, ಅಲ್ಲಿ ಬಳಕೆಯಾಗಿರುವ ಸಂಸ್ಕೃತಗಂಧಿ ಕನ್ನಡ ಗಂಭೀರ… ಈ ಭಾಷೆ ಅನುಭವದ ಎಲ್ಲ ತರಂಗಗಳನ್ನೂ ಹಿಡಿದಿಡ ಬಲ್ಲ ಸಾಮರ್ಥ್ಯದಿಂದ ಕೂಡಿದೆ. ಇದನ್ನು ಮತ್ತೊಬ್ಬ ಕವಿ ಮಾಡಲಾರ ಎನ್ನುವ ಪರಿಣತಿ ಯನ್ನು ಅದು ಸಾಧಿಸಿದೆ.”![6]

೩. ಪಾಶ್ಚಾತ್ಯ ಮಹಾಕಾವ್ಯಗಳ ಸಾಲಿನಲ್ಲಿ ಶ್ರೀರಾಮಾಯಣದರ್ಶನಂ

ಅಭಿವ್ಯಕ್ತವಾದ ಕಲಾಮಹೋನ್ನತಿ ಮತ್ತು ಅಭಿವರ್ಣಿತವಾದ ಜೀವನಮಹೋನ್ನತಿಗಳ ಮಹಾಸಂಗಮವೆನಿಸಿದ ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ಅತ್ಯಂತ ಪ್ರಸಿದ್ಧವೂ ಪ್ರಮುಖವೂ ಆದವು ಐದು ಮಾತ್ರ; ಹೋಮರನ ಇಲಿಯಡ್ ಮತ್ತು ಒಡಿಸ್ಸಿ; ವರ್ಜಿಲನ ಇನಿಯಡ್; ಡಾಂಟೆಯ ಡಿವೈನ್ ಕಾಮಿಡಿ ಮತ್ತು ಮಿಲ್ಟನ್ನನ ಪ್ಯಾರಡೈಸ್ ಲಾಸ್ಟ್. ಮಹಾಕಾವ್ಯಗಳನ್ನು ಕುರಿತು ಅಭ್ಯಾಸ ಮಾಡುವ ಯಾವನೇ ವಿದ್ಯಾರ್ಥಿ ಇವುಗಳನ್ನು ಮರೆಯುವುದು ಸಾಧ್ಯವೇ ಇಲ್ಲ. ‘ಶ್ರೀರಾಮಾಯಣದರ್ಶನಂ’ ಕೃತಿಯ ನೆಲೆ ಬೆಲೆಗಳನ್ನು ಗುರುತಿಸುವಾಗ ಇವುಗಳನ್ನು ಪಕ್ಕದಲ್ಲಿಟ್ಟು ತರತಮಗಳನ್ನು ಗುರುತಿಸುವುದು ವಿಮರ್ಶೆಯ ಕರ್ತವ್ಯ ಕೂಡ. ಇವುಗಳ ವಿಸ್ತಾರವಾದ ತುಲನೆ ಪ್ರಸ್ತುತದಲ್ಲಿ ಸಾಧ್ಯವಿಲ್ಲ, ಅದು ನನ್ನ ಉದ್ದೇಶವೂ ಅಲ್ಲ. ಅವುಗಳ ಕೆಲವು ಎಳೆಗಳನ್ನು ಮಾತ್ರ ಇಲ್ಲಿ ಉಚಿತಕ್ಕೆ ತಕ್ಕಂತೆ ಹಿಡಿದಿಡಲಾಗಿದೆ.

ಹೋಮರ್ ಮತ್ತು ಶ್ರೀರಾಮಾಯಣದರ್ಶನಂ

ಪ್ರಾಚೀನ ಗ್ರೀಸಿನ ವೀರಯುಗದ ಮಹಾಕಾವ್ಯಗಳಾದ ‘ಇಲಿಯಡ್’ ಮತ್ತು ‘ಒಡಿಸ್ಸಿ’ಗಳ ಕರ್ತೃವಿನ ಬಗ್ಗೆ ಜಿಜ್ಞಾಸೆ ಇರುವುದರಿಂದ ಮತ್ತು ಕಂಡರಿಸಿರುವ ಜೀವನ ಪರ್ವತ ರೂಕ್ಷವೂ, ಪ್ರಜ್ಞೆಪೂರ್ವಕ ಕೌಶಲನಿರ್ಮಿತವಲ್ಲದ್ದೂ ಆಗಿರುವುದರಿಂದ ಇವುಗಳನ್ನು ಮೂಲ ಮಹಾಕಾವ್ಯಗಳ (Primary epics) ವರ್ಗಕ್ಕೆ ಸೇರಿಸಲಾಗಿದೆ. ಶ್ರೀರಾಮಾಯಣದರ್ಶನಂ ವಾಲ್ಮೀಕಿಯನ್ನು ಆಧರಿಸಿದ ಏಕಕವಿಕೃತವಾದ ಇತ್ತೀಚಿನ ಕೃತಿಯಾಗಿರುವುದರಿಂದ ಇದು ಕಲಾತ್ಮಕ ಮಹಾಕಾವ್ಯ ಅಥವಾ ಸಾಹಿತ್ಯದ ಮಹಾಕಾವ್ಯದ ವರ್ಗಕ್ಕೆ ಸೇರುತ್ತದೆ.[7] ‘ಇಲಿಯಡ್’ ಮೇಲುನೋಟಕ್ಕೆ ಇಲಿಯಾಸ್ ಅಥವಾ ಟ್ರಾಯ್ ನಗರದ ಕಥೆ ಅಥವಾ ಕವಿಯೇ ಹೇಳುವಂತೆ ಅಖಿಲೀಸನ ರೋಷದ ಕಥೆ, ಅದರ ಪರಿಣಾಮದ ಕಥೆ. ಆದರೆ ವಾಸ್ತವವಾಗಿ ಇದು ಪ್ರಾಚೀನ ಗ್ರೀಕ್ ಜನಾಂಗದ ನಂಬಿಕೆ ಆದರ್ಶ ಸಾಹಸ ಜೀವನ ವಿಧಾನಗಳ ಜೀವಂತಗಾಥೆ. ‘ಶ್ರೀರಾಮಾಯಣದರ್ಶನಂ’ ಮೇಲುನೋಟಕ್ಕೆ ರಾಮನ ಕಥೆ, ರಾಮನ ಆದರ್ಶ ಜೀವನ ವಿಕಾಸಗಳ ಕಥೆ; ಆದರೆ ವಸ್ತುತಃ ಭಾರತೀಯರ ಜೀವನ ಮಲ್ಯಗಳ ಸಂಸ್ಕೃತಿವಿವೇಕಗಳ ಶ್ರದ್ಧಾಪ್ರಯತ್ನ ಫಲಿತವಾದ ಊರ್ಧ್ವಗಾಮಿಯಾದ ಅಖಿಲಜೀವಸರ್ವೋದಯದ ಅಪೂರ್ವ ಪ್ರತಿಮೆ. ಅಲ್ಲಿ ಅಖಿಲೀಸ್ ರಂಗದ ಮೇಲಿರುವಾಗ ಅವನ ತೇಜಸ್ಸು ವರ್ಚಸ್ಸುಗಳ ಅದ್ಭುತ ಪ್ರಭಾವ; ಇಲ್ಲದಾಗಲೂ ಅದರ ಅಭಾವದ ಪೂರಕ ಪರಿಣಾಮ. ಇಲ್ಲೂ ಕಾವ್ಯ ಕ್ಷೇತ್ರದ ತುಂಬ ರಾಮನ ಸೂರ್ಯ ವ್ಯಕ್ತಿತ್ವದ ವ್ಯಕ್ತ ಮತ್ತು ಅವ್ಯಕ್ತ ಮುದ್ರೆ. ಆದರೆ ಇಲ್ಲಿ ರಾಮ ತನ್ನ ವ್ಯಕ್ತಿತ್ವವನ್ನು ತಾನೂ ಕಡೆದುಕೊಳ್ಳುತ್ತ, ಇತರರ ಕಡೆಹಕ್ಕೂ ಒಡ್ಡಿಕೊಳ್ಳುತ್ತ, ಮಹಿಮೋನ್ನತವಾಗಿ ಹಂತಹಂತವಾಗಿ ವಿಕಾಸಗೊಂಡು ಸಿದ್ದಿಯ ಶಿಖರಕ್ಕೇರುತ್ತಾನೆ; ಮಾನವ ಮುಟ್ಟಬಹುದಾದ ಮಹೋನ್ನತ ಸ್ತರವನ್ನು ಪ್ರತಿಮಿ ಸುತ್ತಾನೆ; ಅಂತೆಯೇ ಅದೇ ಕಾಲದಲ್ಲಿ ಇತರರನ್ನೂ ತನ್ನ ಉಜ್ವಲ ಪ್ರಭೆಯಿಂದ ಕ್ರಮಕ್ರಮ ವಾಗಿ ಬೆಳಗಿ ಬೆಳಗಿ ಅವರ ಊರ್ಧ್ವಮುಖ ವಿಕಾಸಕ್ಕೆ ಕಾರಣನಾಗುತ್ತಾನೆ. ಅಲ್ಲಿ ಅಖಿಲೀಸ್ ತನ್ನ ಪ್ರಕಟತೆ ಅಥವಾ ಅಪ್ರಕಟತೆಗಳ ಕಾರಣದಿಂದ ಕಾವ್ಯಕ್ರಿಯೆಯ ಮೇಲೆ ಪರಿಣಾಮ ಬೀರುತ್ತಾನೆಯೇ ಹೊರತು, ಅಲ್ಲಿನ ವ್ಯಕ್ತಿಗಳ ಆಂತರಿಕ ವಿಕಾಸಕ್ಕೆ ಯಾವ ಬಗೆಯಲ್ಲೂ ನೆರವಾಗುವುದಿಲ್ಲ. ಹೋಮರನ ಜಗತ್ತು ಬಹುಮಟ್ಟಿಗೆ ಭೌತಿಕ ಜಗತ್ತು; ಶ್ರೀರಾಮಾಯಣ ದರ್ಶನದ ಜಗತ್ತು ಭೌತಿಕ ಜಗತ್ತನ್ನು ಅಲಕ್ಷಿಸದ ಅಂತರಂಗ ಜಗತ್ತು.

ಎರಡು ಕೃತಿಗಳಲ್ಲೂ ಆಪಾತತಃ ಹೆಣ್ಣಿನಿಂದಾಗಿ ಹೆಣ್ಣಿಗಾಗಿ ಯುದ್ಧ; ಆದರೆ ವಾಸ್ತವವಾಗಿ ಎರಡರಲ್ಲೂ ರಾಷ್ಟ್ರಪ್ರೇಮ ಮತ್ತು ಆತ್ಮಾಭಿಮಾನ ಸಂರಕ್ಷಣೆಯೇ ಪ್ರಧಾನ ಉದ್ದೇಶ. ‘ಶ್ರೀರಾಮಾಯಣದರ್ಶನಂ’ ಈ ಆಯಾಮವನ್ನು ಮೀರಿ ಸತ್ ಮತ್ತು ಅಸತ್‌ಶಕ್ತಿಗಳ ಸಂಘರ್ಷವನ್ನೂ, ಸತ್ ಅಸತ್ತನ್ನು ಅವಿಚ್ಛಿನ್ನವಾಗಿ ಹಿಂಬಾಲಿಸಿ ಅದನ್ನು ಸತ್ ಆಗಿ ಪರಿವರ್ತಿಸುವ ಮಹಾಕಾರ್ಯವನ್ನೂ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತದೆ. ಹೋಮರನ ದೇವತೆಗಳು, ಅವರಿಗಿರುವ ಅತಿಮಾನುಷವಾದ ಶಕ್ತಿಯೊಂದನ್ನು ಹೊರತುಪಡಿಸಿದರೆ, ಅವನು ಚಿತ್ರಿಸಿರುವ ಮಾನವರಿಗಿಂತ ಯಾವುದೇ ವಿಧದಲ್ಲಿ ಆದರ್ಶರಲ್ಲ. ಸ್ವಾರ್ಥ ಮೂಲ ವಾದ ದ್ವೇಷ ಅಸೂಯೆ ಕ್ರೌರ್ಯಗಳು ಅವರ ನಿಗ್ರಹಾನುಗ್ರಹ ಶಕ್ತಿಯನ್ನು ಆಳುತ್ತವೆ. ಲೋಕಸುಧಾರಣೆ, ಲೋಕೋದ್ಧಾರ ಕಲ್ಪನೆಗಳು ಅವರಿಗೆ ತೀರಾ ವಿದೇಶೀಯ. ‘ದರ್ಶನದ ದೇವತೆಗಳು ನಿಸ್ವಾರ್ಥಪರರು; ಕೆಲವೇಳೆ ಪಕ್ಷ ಪಾತಿಗಳಂತೆ ಗೋಚರಿಸಿದರೂ ಅದು ಸತ್ಯ ಧರ್ಮಗಳ ರಕ್ಷಣೆಗಾಗಿ ಮಾತ್ರ. ಅಲ್ಲಿನ ಮಾನವ ಪಾತ್ರಗಳ ಸಂಗ್ರಾಮ ಇಹದ ಬದುಕಿಗಾಗಿ ಮಾತ್ರ; ಇಲ್ಲಿನ ಪಾತ್ರಗಳ ಹೋರಾಟ ಇಹದ ಬದುಕಿಗಾಗಿ ಎಂತೋ, ಅದರ ಉನ್ನತೀಕರಣ ಕ್ಕಾಗಿ ಕೂಡ ಮತ್ತು ಅಂತಿಮ ಸತ್ಯದ ಸಾಕ್ಷಾತ್ಕಾರಕ್ಕಾಗಿ ಕೂಡ. ಮಾನವ ಮತ್ತು ದೆವತೆಗಳೆಲ್ಲ ಹೋಮರನ ಚಿತ್ರದಲ್ಲಿ, ಅವರಿಗೆ ಮೀರಿದ ವಿಧಿಯ ನಿರ್ಣಯಕ್ಕೆ ಬದ್ದರು. ಆದರೆ ಆ ವಿಧಿಯ ನಿರ್ಣಯವಾದರೂ ಯಾವುದೇ ತರ್ಕಕ್ಕೆ ಬದ್ಧವಲ್ಲ; ಆ ನಿರ್ಣಯ ಏಕೆ ಹೇಗೆ ಎಂಬ ಪ್ರಶ್ನೆಗೆ ನ್ಯಾಯಯುತವಾದ ಉತ್ತರವಿಲ್ಲ; ‘ದರ್ಶನ’ದಲ್ಲೂ ಅಂತಿಮ ತೀರ್ಪು ವಿಧಿಯದೇ. “ನೆಯ್ದಾಳುತಿದೆ ಜಗವನೊಂದತಿ ವಿರಾಣ್ಮನಂ, ಸೂಕ್ಷ್ಮಾತಿ ಸೂಕ್ಷ್ಮತಂತ್ರದಿ ಬಿಗಿದು ಕಟ್ಟಿಯುಂ ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯಭಾವಮಂ ನೀಡಿ”[8]- ಎಂಬುದೇ ಇದರ ಘೋಷ. ಆದರೆ ಇಲ್ಲಿನ ವಿಧಿಯ ತೀರ್ಪುಗಳಿಗೆ ಸಶಕ್ತ ಹಿನ್ನೆಲೆಯಿದೆ; ಕಾರ್ಯಕಾರಣ ಸುಸಂಬದ್ಧತೆಯಿದೆ; ವ್ಯಷ್ಟಿಯನ್ನು ಮೀರಿದ ಸಮಷ್ಟಿ ಕಲ್ಯಾಣದ ಉತ್ತುಂಗ ಉದ್ದೇಶವಿದೆ. ಹೋಮರನ ಕೃತಿಗಳು ತೆರೆದು ತೋರುವ ಪೌರುಷಮಯ ಜಗತ್ತಿನ ಅಂತರಂಗದಲ್ಲಿ ಮಾನವನ ವಿಫಲತೆಯ ವಿಷಾದದ ಶ್ರುತಿ ಉದ್ದಕ್ಕೂ ಮಿಡಿಯುತ್ತದೆ.[9] ‘ದರ್ಶನ’ದಲ್ಲಿ ಈ ವಿಫಲತೆ ಬಹಿರಂಗದಲ್ಲಿ ವ್ಯಕ್ತವಾದರೂ, ಅಂತರಾಳದಲ್ಲಿ ಮಾನವನ ಉದ್ಧಾರದ ಭರವಸೆಯ ಅಮೃತಸೆಲೆ ಗುಪ್ತಗಾಮಿನಿಯಾಗಿದೆ. ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯಲಿ’ ಎಂಬುದೇ ಅದರ ವಿಶ್ವಸಂದೇಶ; ಭರವಸೆಯ ಭದ್ರತೆಯ ಭರತವಾಕ್ಯ. ಆದ್ದರಿಂದ ನಿರಾಸೆಗೆ ಇಲ್ಲಿ ಎಡೆಯೇ ಇಲ್ಲ. ಜಗತ್ತಿನ ಯಾವುದೇ ಕಾವ್ಯದಲ್ಲಿ ಮೊಳಗದ ಪರಮ ವಿಶೇಷ ಧ್ವನಿ ಈ ಕೃತಿಯದು.

ಹೆಲನ್, ಅಂಡ್ರೊಮಿಕೆ ಮುಂತಾದವರು ಅಲ್ಲಲ್ಲಿ ಮಿನುಗಿದರೂ ಹೋಮರನಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿಲ್ಲ. ‘ದರ್ಶನ’ ಪುರುಷಸ್ಪರ್ಧಿಯಾಗಿ, ಅಷ್ಟೇಕೆ ಅವನಿಗಿಂತ ಒಂದು ಕೈ ಮಿಗಿಲಾಗಿ, ಸ್ತ್ರೀಯ ಸಾಧನೆ ಸಿದ್ದಿ ಪ್ರಭಾವ ಪರಿಣಾಮಗಳನ್ನು ಅನ್ಯಾದೃಶವಾಗಿ ಚಿತ್ರಿಸಿದೆ. ಪಾತ್ರಕಲ್ಪನೆ ಸನ್ನಿವೇಶನಿರ್ಮಾಣ ಭಾವರಾಗಗಳ ಚಿತ್ರಣದಲ್ಲಿ ಹೋಮರನ ಅಸಾಧಾರಣ ಕಲಾಸಾಮರ್ಥ್ಯ ಅವನ ಕೃತಿಗಳುದ್ದಕ್ಕೂ ಅದ್ಭುತ ಪ್ರಮಾಣದಲ್ಲಿ ಪ್ರಕಟಗೊಂಡಿದೆ. ವಾಲ್ಮೀಕಿ ನಿರ್ಮಿತ ಪಾತ್ರ ಸನ್ನಿವೇಶಗಳಲ್ಲಿ ಮಾತ್ರವಲ್ಲದೆ ಕವಿಕಲ್ಪಿತವಾದ ನವಪಾತ್ರ ಸನ್ನಿವೇಶಗಳ ಸಂದರ್ಭದಲ್ಲೂ ಕೂಡ ಕುವೆಂಪು ಅವರ ಕಾವ್ಯಕಲೆ ಹೇಗೆ ಅತ್ಯುನ್ನತ ಮಟ್ಟದಲ್ಲಿ ಅಭಿವ್ಯಕ್ತವಾಗಿದೆಯೆಂಬುದನ್ನು ಈ ಹಿಂದಿನ ಪುಟಗಳು ಶ್ರುತ ಪಡಿಸಿವೆ. ಕುವೆಂಪು ಅವರ ಮಹೋಪಮಾಸೃಷ್ಟಿಗೆ ಮೂಲಪ್ರೇರಣೆ ಹೋಮರನ ಕೃತಿಗಳು. ಕಾವ್ಯಮಧ್ಯದಲ್ಲಿ ದೇವತಾಪ್ರಾರ್ಥನೆ ಮಾಡುವ ಕ್ರಮ ಕೂಡ ಹೋಮರ್ (ಇನ್ನೂ ಇತರರ)ನಿಂದಲೇ ಪ್ರಭಾವಿತವಾದದ್ದಿರಬಹುದು.[10] ಹೋಮರನ ಕೃತಿಗಳಲ್ಲಿ ಕನಸುಗಳ ಚಿತ್ರಣವಿದೆ; ರಾಮಾಯಣದರ್ಶನದಲ್ಲಂತೂ ಅವಕ್ಕೆ ವಿಶೇಷ ಪ್ರಾಧಾನ್ಯವಿದೆ. ಆದರೆ ಹೋಮರ್ ಚಿತ್ರಿಸಿದ ಕನಸುಗಳು ಪಾತ್ರಗಳ ಭೌತಿಕ ಪ್ರತಿಕ್ರಿಯೆಗೆ ಮಾತ್ರ ಕಾರಣವಾಗಿ ವಾಚ್ಯವಾಗಿಬಿಡುತ್ತವೆ; ದರ್ಶನದ ಕನಸುಗಳು ಪಾತ್ರಗಳ ಅಂತರಂಗದ ಪ್ರತಿಕ್ರಿಯೆಗೆ ಪರಿವರ್ತನೆಗೆ ಅನುವುಮಾಡಿಕೊಡುತ್ತ ಬಹಿರಂಗದ ಕಥೆಗೆ ವಿಶೇಷ ತಿರುವನ್ನು ಕೊಡುತ್ತ ಪ್ರತಿಮೆಗಳಾಗಿ ಕಾರ್ಯನಿರ್ವಹಿಸುತ್ತವೆ. ಹೀಗೆ ‘ರಾಮಾಯಣದರ್ಶನಂ’ ಹೋಮರಿನಿಂದ ಕೆಲವಂಶಗಳಲ್ಲಿ ಪ್ರಭಾವಿತವಾಗಿ ಕೂಡ ಪಾತ್ರ ನಿರ್ಮಾಣ ಸನ್ನಿವೇಶರಚನೆ ಅಂತಃಕರಣ ಚಿತ್ರಣಗಳಲ್ಲಿ ಸ್ವತಂತ್ರವಾದ ಉತ್ತುಂಗ ಕಲಾಪ್ರಜ್ಞೆಯನ್ನು ಮೆರೆದಿದೆ.

ವರ್ಜಿಲ್ ಮತ್ತು ಶ್ರೀರಾಮಾಯಣದರ್ಶನಂ

ನಿಜವಾದ ಕ್ಲಾಸಿಕ್ ಎಂದರೆ ಇದೊಂದೇ ಎಂದು ಟಿ.ಎಸ್. ಎಲಿಯಟ್‌ನಿಂದ ಪ್ರಶಂಸೆ ಪಡೆದ ಲ್ಯಾಟಿನ್ ಮಹಾಕಾವ್ಯ ವರ್ಜಿಲನ ಈನಿಯಡ್.[11] ಟ್ರಾಯ್‌ನಗರ ನಿರ್ನಾಮವಾದ ನಂತರ, ದೈವಪ್ರೇರಣೆಯಿಂದ ಅಲ್ಲಿಂದ ತಪ್ಪಿಸಿಕೊಂಡು, ದಾರಿಯುದ್ಧಕ್ಕೂ ನೂರಾರು ಮಹಾಸಂಕಷ್ಟಗಳನ್ನು ಎದುರಿಸಿ, ತನ್ನ ಛಲ ಸಾಹಸ ಸ್ನೇಹಶೀಲತೆ ದೈವಭಕ್ತಿ ಸಂಘಟನಾ ಸಾಮರ್ಥ್ಯ ಸಮಯಪ್ರಜ್ಞೆ ಮತ್ತು ಪರಾಕ್ರಮಗಳಿಂದ ರೋಮ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಮಹಾವೀರ ಈನಿಯಸನ ಸಾಧನಾಗಾಥೆ ಇದರ ವಸ್ತು. ಒಂದು ರೀತಿಯಲ್ಲಿ ಹೋಮರನ ‘ಇಲಿಯಡ್’ನ ಮುಂದುವರಿಕೆ ಇದು. ಇಲಿಯಡ್ ಕಾವ್ಯದ ಕಥಾನಾಯಕ ಅಖಿಲೀಸ್ ಆದರೂ, ಕಾವ್ಯದುದ್ದಕ್ಕೂ ಅವನ ಹಾಜರಾತಿಯೇನೂ ಇಲ್ಲ. ಆದರೆ ಒಡಿಸ್ಸಿಯ ನಾಯಕ ನಾದ ಒಡಿಸ್ಯೂಸ್‌ನಂತೆ, ರಾಮಾಯಣದ ನಾಯಕನಾದ ಶ್ರೀರಾಮನಂತೆ, ಈನಿಯಡ್ ಕಾವ್ಯದುದ್ದಕ್ಕೂ ಈನಿಯಸ್ ವಿಜೃಂಭಿಸುತ್ತಾನೆ. ಶ್ರೀರಾಮಾಯಣದರ್ಶನದ ವಸ್ತುವನ್ನು ವಾಲ್ಮೀಕಿಯಿಂದ ಎತ್ತಿಕೊಂಡಂತೆ, ಈನಿಯಡ್‌ನ ವಸ್ತುವನ್ನು ಕೆಲಮಟ್ಟಿಗೆ ಹೋಮರನಿಂದ, ಬಹುಮಟ್ಟಿಗೆ ತನ್ನ ಸಮಕಾಲೀನವಾದ ಜನಪ್ರಿಯ ಕಥೆಗಳಿಂದ ಮತ್ತು ಡಯನೀಜಿಯಸ್, ಲಿವಿ, ಸ್ಟ್ರಾಬೊ ಮುಂತಾದ ಲೇಖಕರ ಕೃತಿಗಳಿಂದ ವರ್ಜಿಲ್ ಎತ್ತಿಕೊಂಡಿದ್ದಾನೆ. ಇಷ್ಟೇ ಅಲ್ಲ, ಹೋಮರನ ಒಡಿಸ್ಸಿಯ ನಾಯಕನ ಗೊತ್ತು ಗುರಿಯಿಲ್ಲದ ಅಲೆದಾಟದ ಎಷ್ಟೋ ಭಾಗಗಳು ಈನಿಯಸ್ಸನ ಸಂಚಾರದ ಸನ್ನಿವೇಶಗಳಲ್ಲಿ ಪ್ರತಿಫಲಿತವಾಗಿವೆ.[12] ಶ್ರೀರಾಮಾಯಣ ದರ್ಶನ ಆ ಈ ಕೃತಿಗಳಿಗೆ ಋಣಿಯಾಗಿದೆ ಎಂದು ಆಕ್ಷೇಪದ ಆರೋಪದ ದನಿಯೆತ್ತುವವರು ಈ ಅಂಶಗಳನ್ನು ಗಮನಿಸಬೇಕು. ಅನ್ಯರಿಂದ ವಸ್ತುಸಂಗತಿಗಳನ್ನೆತ್ತಿಕೊಂಡ ಮಾತ್ರದಿಂದಲೇ ಒಬ್ಬ ಕವಿ ದೊಡ್ಡವನಾಗಲಿ ಚಿಕ್ಕವನಾಗಲಿ ಆಗುವುದಿಲ್ಲವೆಂಬುದನ್ನು, ಅವುಗಳನ್ನು ಅಸ್ಥಿಗತಮಾಡಿಕೊಂಡು ಆದ್ಭುತ ಕಲಾಸೌಧವನ್ನು ನಿರ್ಮಿಸಿದ ವರ್ಜಿಲ್ ಸಾಬೀತು ಪಡಿಸಿದ್ದಾನೆ. ಅಂತೆಯೇ ವಾಲ್ಮೀಕಿಯಿಂದ, ಜನಪದ ಸಾಹಿತ್ಯದಿಂದ, ಇತರ ಕೃತಿಗಲಿಂದ ಕೆಲವಂಶಗಳನ್ನು ಸ್ವೀಕರಿಸಿದ ಕುವೆಂಪು ಅವುಗಳನ್ನು ಅಪೂರ್ವವಾಗಿ ‘ದರ್ಶನ’ದಲ್ಲಿ ಮರುಸೃಷ್ಟಿಸಿದ್ದಾರೆ. ಇತಿಹಾಸ ಮತ್ತು ಪುರಾಣಗಳ ಬೆಸುಗೆಯನ್ನು ವರ್ಜಿಲ್ ಅತ್ಯಂತ ಸುಭದ್ರವಾಗಿ ನಿರ್ಮಿಸಿದ್ದಾನೆ. ಅವುಗಳುದ್ದಕ್ಕೂ ಮಾನವನ ಆಸೆ ಆಕಾಂಕ್ಷೆಗಳ ವಿಫಲತೆ ಸಫಲತೆಗಳ ಹೃದ್ರಮ್ಯ ಭಾವರಾಗಗಳ ಜೀವಂತ ಜ್ವಲಂತ ಚಿತ್ರಣವನ್ನು ಮೈ ಜುಮ್ಮೆನಿ ಸುವಂತೆ ಚಿತ್ರಿಸುತ್ತಾನೆ ವರ್ಜಿಲ್. ಸಾಗರಯಾನದ ಅನಂತಯಾತನೆಯ ರುದ್ರಚಿತ್ರಣ, ಅಧೋಲೋಕದ ವೈವಿಧ್ಯಪೂರ್ಣವಾದ ರೋಮಾಂಚಕಾರೀ ವರ್ಣನೆ ಅವನ ಕಲಾಕೌಶಲಕ್ಕೆ ಸಾಕ್ಷಿಯಾಗಿವೆ. ವೀರ ಸನ್ನಿವೇಶಗಳನ್ನೆಂತೋ ಅಂತೆಯೇ ಅತ್ಯಂತ ಖಾಸಗಿಯಾದ ಮಾರ್ದವ ವಾದ ವಿಷಾದಮಯವಾದ ಪ್ರಣಯ ಸನ್ನಿವೇಶವನ್ನೂ ಅನನ್ಯವಾಗಿ ಆತ ಚಿತ್ರಿಸಬಲ್ಲ ನೆಂಬುದಕ್ಕೆ ಡಿಡೋ ರಾಣಿಯ ಪ್ರಸಂಗ ಪ್ರಾತಿನಿಧಿಕವಾಗಿದೆ. ಹಿರಿಯರಲ್ಲಿ ಕಿರಿಯರಲ್ಲಿ ಸ್ನೇಹಿತರಲ್ಲಿ ಈನಿಯಸ್ ತೋರುವ ಪ್ರೀತಿ ಸ್ನೇಹ ಗೌರವಗಳು ‘ದರ್ಶನ’ದ ಶ್ರೀರಾಮನನ್ನು ನೆನಪಿಸುತ್ತವೆ. ಈನಿಯಸನ ಪಾತ್ರ ಕ್ರಮಕ್ರಮವಾಗಿ ಮೈದುಂಬಿ ಅಂತ್ಯದ ವೇಳೆಗೆ ಅತ್ಯಂತ ಸಹಜವಾಗಿ, ಆದರೆ ಆದರ್ಶಪ್ರಾಯವಾಗಿ, ಉನ್ನತೋನ್ನತವಾಗುವಂತೆ ವರ್ಜಿಲ್ ಚಿತ್ರಿ ಸಿದ್ದಾನೆ. ‘ದರ್ಶನ’ದ ರಾಮಕೂಡ ಹೀಗೆಯೇ ಹಂತಹಂತವಾಗಿ ಮಹಾಮಾನವನಾಗಿ ದೇವಮಾನವನಾಗಿ ಬೆಳೆಯುತ್ತಾನೆ. ಆದರೆ ವರ್ಜಿಲನ ನಾಯಕ, ರಾಮನಂತೆ ಇತರರನ್ನೂ ಬೆಳೆಸುತ್ತ ಪರಮಗುರಿಯತ್ತ ನಡೆಸುವವನಲ್ಲ, ಅದು ವರ್ಜಿಲನ ಉದ್ದೇಶವೂ ಅಲ್ಲ. ಅವನ ನಾಯಕ ಕೇವಲ ಮಾನವ. ಇಡೀ ಕಾವ್ಯದ ಪಾತ್ರಗಳ ಮೇಲೆ ಪ್ರತ್ಯಕ್ಷ ಪರೋಕ್ಷ ಪ್ರಭಾವವನ್ನು ಬೀರುತ್ತ, ಅವರೆಲ್ಲ ತಮ್ಮ ಶಕ್ತಿ ದೌರ್ಬಲ್ಯಗಳನ್ನರಿಯುವಂತೆ ಮಾಡುತ್ತ, ಸಮಷ್ಟಿಹಿತದ ಕಡೆಗೆ ಅವರನ್ನು ಹೂಡುವ ‘ದರ್ಶನ’ದ ರಾಮ ಈನಿಯಸ್‌ನಿಗಿಂತ ಬಹು ಎತ್ತರದಲ್ಲಿ ನಿಲ್ಲುತ್ತಾನೆ. ವರ್ಜಿಲ್ ಪ್ರತಿನಾಯಕನನ್ನು ಚಿತ್ರಿಸಿರುವ ವಿಧಾನ ಅತ್ಯಂತ ಮಹತ್ತರವಾದುದು. ಇಲ್ಲೂ ಹೋಮರನ ದಾರಿಯನ್ನೇ ವರ್ಜಿಲ್ ಅನುಸರಿಸಿದ್ದಾನೆ. ಅವನು ಖಳನೆಂದು ಬಣ್ಣಿಸದೆ ಮಹತ್ವಾಕಾಂಕ್ಷಿಯಾದ ತೀವ್ರ ರಾಗದ್ವೇಷಗಳಿಂದ ತುಂಬಿದ ತೀಕ್ಷ್ಣವಾದ ತುಂಬು ಪಾತ್ರವನ್ನಾಗಿ ಟರ್ನಸನನ್ನು ಕವಿ ಕಡೆದಿದ್ದಾನೆ. ‘ದರ್ಶನ’ದ ರಾವಣ ಪಾತ್ರವನ್ನು ಈ ಪಾತ್ರ ಕಿಂಚಿತ್ ಹೋಲಿದರೂ ಕುವೆಂಪು ಲೇಖನಿಯಲ್ಲಿ ಅದು ಪಡೆದಿರುವ ವಿನ್ಯಾಸ ಅಭೂತಪೂರ್ವವಾದದ್ದು. ಹಿರಿಯರ ಸೂಚನೆಯಂತೆ ಟರ್ನಸ್ ತಾನೊಬ್ಬನೇ ಈ ನಿಯಸನೊಡನೆ ಯುದ್ಧ ಮಾಡಲು ನಿಶ್ಚಯಿಸುವುದು, ದೇವತೆಯ ಪ್ರಚೋದನೆಯಿಂದಾಗಿ ಅದು ಸಾಧ್ಯವಾಗದೆ ಉಭಯ ಸೇನೆಗಳೂ ಕೆರಳಿ ಯುದ್ಧಕ್ಕೆ ಧುಮುಕುವುದೂ ‘ದರ್ಶನ’ದಲ್ಲಿ  ಚಿತ್ರಿತವಾಗಿರುವ ರಾವಣನ ಯುದ್ಧ ಸಂದರ್ಭದ ಇಂಥದೇ ಘಟನೆಗೆ ಪ್ರೇರಣೆಯಾಗಿರ ಬಹುದೆನ್ನಿಸುತ್ತದೆ.

ಘಟನೆಗಳಿಗೆ ತೀವ್ರತೆಯನ್ನು ಕೊಡುವುದರಲ್ಲಿ, ಸನ್ನಿವೇಶವನ್ನು ಧುತ್ತೆಂದು ನಮ್ಮ ಕಣ್ಣೆದುರು ಕಟ್ಟುವುದರಲ್ಲಿ, ದುಃಖ ಸ್ನೇಹ ಪ್ರೀತಿಗಳ ಆಳವನ್ನು ಮನಸ್ಸಿನಲ್ಲಿ ಕೊರೆದು ನಿಲ್ಲುವಂತೆ ಚಿತ್ರಿಸುವುದರಲ್ಲಿ ವರ್ಜಿಲ್ ಬಹು ಎತ್ತರದಲ್ಲಿ ನಿಲ್ಲುತ್ತಾನೆ. ಇಂಥದೇ ಪರಿಣತಿಯನ್ನು ‘ದರ್ಶನ’ ನಮಗೆ ಪರಿಚಯ ಮಾಡಿಸುತ್ತದೆ. ವರ್ಜಿಲನ ಹಿರಿಮೆಗೆ ಮತ್ತೊಂದು ಕಾರಣ ಅವನು ಹೆಕ್ಸಾಮೀಟರನ್ನು ಮತ್ತು ಲ್ಯಾಟಿನ್ ಭಾಷೆಯನ್ನು ತನ್ನ ಮಹಾಕಾವ್ಯದ ಸರ್ವಸಮರ್ಥ ಮಾಧ್ಯಮವನ್ನಾಗಿ ಮಾಡಿಕೊಂಡ ಬಗೆ. ಮಹಾಛಂದಸ್ಸನ್ನು  ನಿರ್ಮಿಸಿಕೊಂಡ ಮತ್ತು ಕನ್ನಡ ಭಾಷೆಯ ಸಮಸ್ತ ಸ್ತರದ ಶಕ್ತಿಯನ್ನೂ ಸಾಂಪ್ರದಾಯಿಕ ನಿಯಮಗಳನ್ನು ಮೀರಿ ಪ್ರಯೋಗಕ್ಕೊಡ್ಡಿ ತಮ್ಮ ಉದ್ದೇಶಕ್ಕಾಗಿ ಅದ್ಭುತವಾಗಿ ದುಡಿಸಿ ಕೊಂಡ ‘ದರ್ಶನ’ದ ಕವಿಯ ಹಿರಿಮೆಯೂ ಇಲ್ಲಿ ಉಲ್ಲೇಖನೀಯ. ಹೀಗೆ ಭಾಷಾ ಸಾಮರ್ಥ್ಯ ದಲ್ಲಿ, ಛಂದೋ ನಿರ್ಮಾಣದಲ್ಲಿ, ಪಾತ್ರ ಮತ್ತು ಸನ್ನಿವೇಶಗಳ ಸಜೀವವೂ ಸದೃಢವೂ ಅತ್ಯುನ್ನತವೂ ಆದ ಸೃಷ್ಟಿಯಲ್ಲಿ, ಪ್ರಬುದ್ಧ ಪಾಂಡಿತ್ಯದಲ್ಲಿ, ಪ್ರಾಚೀನ ವಸ್ತುವನ್ನಾ ಧರಿಸಿಯೂ ಮೆರೆದ ಅದ್ಭುತ ಸ್ವೋಪಜ್ಞತೆಯಲ್ಲಿ ‘ದರ್ಶನ’ ಮತ್ತು ಈನಿಯಡ್ ಸಾಮ್ಯ ವನ್ನು ಪ್ರಕಟಿಸುತ್ತವೆ. ಆದರೆ ‘ದರ್ಶನ’ದಲ್ಲಿ ವ್ಯಕ್ತವಾಗುವ ಸರ್ವಗ್ರಾಸಿಯೂ ಸರ್ವ ಪ್ರಬೋಧಕವೂ ಆದ ಅಖಂಡ ದರ್ಶನಸಿದ್ದಿ ವರ್ಜಿಲ್‌ನಲ್ಲಿ ಕಾಣಬರುವುದಿಲ್ಲ.

ಡಾಂಟೆ ಮತ್ತು ಶ್ರೀರಾಮಾಯಣದರ್ಶನಂ

ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ದೇಶ ಭಾಷೆಯೊಂದನ್ನು ಮಹಾಕಾವ್ಯದ ಮಹಾಧನುಸ್ಸಿಗೆ ಹೂಡಿ ಅದ್ಭುತ ಯಶಸ್ಸು ಸಾಧಿಸಿದ ಮತ್ತು ಪೂರ್ವಕೃತಿಗಳಿಂದ ಪ್ರಾಚೀನ ವಸ್ತುವೊಂದನ್ನು ಆರಿಸಿಕೊಂಡು ಮಹಾಕಾವ್ಯವನ್ನು ರಚಿಸುವ ಸಂಪ್ರದಾಯವನ್ನು ಮುರಿದು ಸ್ವಕಲ್ಪಿತವಾದ ವಸ್ತುವೊಂದನ್ನು ಮಹಾಕೃತಿಯ ಜೀವಸೂತ್ರವನ್ನಾಗಿ ಮಾಡಿ ತನ್ನ ಪ್ರತಿಭೆ ಅಸಮಾನವಾದುದೆಂದು ಸಾಧಿಸಿ ತೋರಿಸಿದ ಅಸೀಮ ಸಾಹಸಿಯಾದ ಮಹಾಕವಿ ಇಟಲಿಯ ಡಾಂಟೆ. ಗಟ್ಟಿಯಾದ ದಟ್ಟವಾದ ವಸ್ತುಪುಷ್ಟಿಯಿಲ್ಲದೆಯೇ ಶ್ರೇಷ್ಠ ಮಹಾಕಾವ್ಯದ ಲಕ್ಷಣಗಳೆಲ್ಲವನ್ನು ಅತ್ಯಂತ ಶೃಂಗಸ್ತರದಲ್ಲಿ ಸಂಗಮಗೊಳಿಸಿದ ಅದ್ವಿತೀಯ ಹಿರಿಮೆ ಅವನದು. ನರಕ, ಶುದ್ದೀಕರಣಲೋಕ ಮತ್ತು ಸ್ವರ್ಗ ಎಂದು ವಿಭಾಗಿಸಿದ ಮೂರು ಸಂಪುಟಗಳ ಬೃಹತ್‌ಕಾವ್ಯ ಇದು. ಡಾಂಟೆಯೇ ವರ್ಣಿಸಿರುವಂತೆ, ಆತ್ಮದ ಮರಣೋತ್ತರ ಕಾಲದ ಸ್ಥಿತಿ ಈ ಕೃತಿಯ ವಸ್ತು. ಕಾವ್ಯದ ನಾಯಕ ಸ್ವತಃ ಡಾಂಟೆ. ಮರ್ತ್ಯದಿಂದ ಸ್ವರ್ಗಕ್ಕೆ ಆತ ಕೈಗೊಂಡ ಮಹಾಯಾತ್ರೆಯ ರೋಮಾಂಚಕಾರಿಯೂ ಅದ್ಭುತವೂ ಅದ ಚಿತ್ರ ಇಲ್ಲಿದೆ. ಮಾನವ ಉದ್ದೇಶಪೂರ್ವಕವಾಗಿ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೃತ್ಯಗಳಿಗೆ ಅನುಸಾರವಾಗಿ ಆತ ದೈವದ ಅನುಗ್ರಹಕ್ಕೆ ಅಥವಾ ಶಿಕ್ಷೆಗೆ ಅರ್ಹನಾಗುತ್ತಾನೆ ಎನ್ನುವುದೇ ಈ ಕೃತಿಯ ಧ್ವನಿ. ಶುಷ್ಕವೆನಿಸುವ ಆಧ್ಯಾತ್ಮಿಕ ತತ್ವಕ್ಕೆ ಮನಮೋಹಕವಾದ ಕಾವ್ಯಸೌಂದರ್ಯದ ಶರೀರವನ್ನು ಪ್ರಧಾನ ಮಾಡಿದ ಹಿರಿಮೆ ಇವನದು.

ಶ್ರೀರಾಮಾಯಣದರ್ಶನಕ್ಕೂ ಡಾಂಟೆಯ ಡಿವೈನ್‌ಕಾಮೆಡಿಗೂ ವಿಸ್ಮಯಕಾರಿಯಾದ ಕೆಲವು ಸಾಮ್ಯಗಳಿವೆ. ಆತ್ಮ ನರಕಲೋಕ, ಶುದ್ದೀಕರಣಲೋಕಗಳ ಮೂಲಕ ಅನಂತ ಸಾಹಸದಿಂದ ಪ್ರಯತ್ನದಿಂದ ಹಾದು ಬಂದಾಗ, ಅದು ಸ್ವರ್ಗಲೋಕವನ್ನು ತಲಪುವ ಅರ್ಹತೆಯನ್ನು ಪಡೆಯುತ್ತದೆ. ಆಗ ಭಗವತ್‌ಶಕ್ತಿ ಕೈಚಾಚಿ ಆತ್ಮವನ್ನು ಸೆಳೆದುಕೊಳ್ಳುತ್ತದೆ ಎಂಬುದು ಡಾಂಟೆಯ ನಿಲುವು. ಈ ಮಹಾಸಾಧನೆಯ ಮೂರು ಮಜಲುಗಳನ್ನು ತೋರಿಸಲೆಂದೇ ಕವಿ ತನ್ನ ಕಾವ್ಯವನ್ನು ಮೂರು ಸಂಪುಟಗಳಾಗಿ ವಿಂಗಡಿಸಿ ಹೆಸರಿಸಿದ್ದಾನೆ. ಕುವೆಂಪು ಅವರು ಭಾರತೀಯ ದೃಷ್ಟಿಗನುಸಾರವಾಗಿ, ಆತ್ಮ ಅನ್ನಮಯ ಕೋಶದಿಂದ ಹಾದು ಪ್ರಾಣಮಯ ಮನೋಮಯವಿಜ್ಞಾನಮಯ ಕೋಶಗಳಲ್ಲಿ ಚರಿಸಿ ಅಂತಿಮವಾಗಿ ಆನಂದಮಯ ಕೋಶದಲ್ಲಿ ತನ್ನ ಸಿದ್ದಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತದೆ ಎಂಬ ನಿಲುವನ್ನು ತಾಳುತ್ತಾರೆ. ಅಂತೆಯೇ ಪ್ರಸಿದ್ಧವಾದ ವಾಲ್ಮೀಕಿಯ ವಿಭಾಗ ಕ್ರಮವನ್ನು ಕೈಬಿಟ್ಟು, ಮಾನವತೆ ವಾನರತೆ ದಾನವತೆಗಳನ್ನು ಪ್ರತಿಮಿಸುವಂತೆ ಅಯೋಧ್ಯಾಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾಸಂಪುಟಂ ಎಂದೂ, ದೈವತ್ವಕ್ಕೇರಿದ ನಿಲುವನ್ನು ಸಂಕೇತಿಸಲು ಕೊನೆಯ ಸಂಪುಟವನ್ನು ಶ್ರೀಸಂಪುಟಂ ಎಂದೂ ಅರ್ಥಪೂರ್ಣವಾಗಿ ನಾಲ್ಕು ಭಾಗವಾಗಿ ವಿಂಗಡಿಸುತ್ತಾರೆ. ಶ್ರೀಸಂಪುಟ ವಿಜ್ಞಾನಮಯ ಮತ್ತು ಆನಂದಮಯಕೋಶಗಳ ಪ್ರತಿನಿಧಿಯಾಗಿದೆ. ಊರ್ಧ್ವಗಾಮೀ ಚೇತನವುಳ್ಳ ಮಾನವ ತಾನೊಬ್ಬನೇ ಆನಂದಸಿದ್ದಿಯನ್ನು ಪಡೆಯುವುದು ಅನುಚಿತ ಸ್ವಾರ್ಥವಾಗುತ್ತದೆ. ಆತನ ಹಿರಿಮೆ ಇರುವುದು ಸಾಧನೆಯ ಕೆಳಸ್ತರದಲ್ಲಿ ಹಲವಾರು ಪ್ರಲೋಭನೆಗಳ ಬಲೆಯಲ್ಲಿ ಸಿಕ್ಕಿ ತೊಳಲುತ್ತಿರುವವರಿಗೆ ದಾರಿ ತೋರಿ ಅವರನ್ನು ತನ್ನೊಡನೆ ಕರೆದೊಯ್ದು ತಾನು ಪಡೆಯುವ ಸಿದ್ದಿಯಲ್ಲಿ ಅವರೂ ಪಾಲುದಾರರಾಗುವಂತೆ ಮಾಡುವ ಸರ್ವೋದಯ ಕ್ರಿಯೆಯಲ್ಲಿ. ಅಂತೆಯೇ ಶ್ರೀರಾಮ ತನಗಿಂತ ಕೆಳಸ್ತರದ ಮಟ್ಟದಲ್ಲಿರುವ ವಾನರರನ್ನು ಕೂಡಿಕೊಂಡು ದಾನವರೆಡೆಗೆ ತೆರಳಿ, ಅನಂತರ ಅವರೊಡನೆ ಸಾಮೂಹಿಕವಾಗಿ ವಿರಾಡ್‌ದರ್ಶನದಲ್ಲಿ, ಎಲ್ಲ ಲೌಕಿಕ ಆಶೋತ್ತರಗಳನ್ನೂ ಉನ್ನತೀಕರಿಸಿದ ಆನಂದ ಸ್ಥಿತಿಯಲ್ಲಿ ಭಾಗಿಯಾಗುತ್ತಾನೆ. ಹಾಗೆಯೇ ಡಾಂಟೆ ಕೂಡ ತಾನೊಬ್ಬನೇ ಸಾಧನಾ ಪರ್ವತವನ್ನು ಏರಲಾರದೆ ಸೋತು, ನಂತರ ವರ್ಜಿಲನ ಮಾರ್ಗದರ್ಶನದಲ್ಲಿ ಮುಂದೆ ಸಾಗಿ, ಅಂತಿಮವಾಗಿ ಪ್ರೇಮಸ್ವರೂಪಿಯಾದ ಬಿಯಾಟ್ರಿಸಳೊಡನೆ ದೈವದರ್ಶನ ಭಾಗ್ಯವನ್ನು ಪಡೆಯುತ್ತಾನೆ. ಹೀಗೆ ಒಂದು ಅರ್ಥದಲ್ಲಿ ಡಿವೈನ್ ಕಾಮೆಡಿ ಮತ್ತು ಶ್ರೀರಾಮಾಯಣ ದರ್ಶನಗಳೆರಡೂ ಬೃಹದ್ ರೂಪಕ ಕಾವ್ಯಗಳು.

ಡಾಂಟೆಯ ಕೃತಿಯಲ್ಲಿ ಇತಿಹಾಸ, ಪುರಾಣ ಮತ್ತು ಸಾಹಿತ್ಯಲೋಕದ ವ್ಯಕ್ತಿಗಳೆಲ್ಲರ ಅಪೂರ್ವ ಸಮಾಗಮವಾಗುತ್ತದೆ. ಶ್ರೀರಾಮಾಯಣದರ್ಶನದ ಕವಿ ಉಪಮೆ, ಮಹೋಪಮೆ, ರೂಪಕಗಳ ಮೂಲಕ ಈ ಇತಿಹಾಸ ಪುರಾಣ ಸಾಹಿತ್ಯ ಸಮಕಾಲೀನ ಸಮಾಜಗಳನ್ನು ಮೂಲವಸ್ತುವಿನ ಬಂಧದಲ್ಲಿ ಬೆಸೆಯುತ್ತಾರೆ.

ಡಾಂಟೆಯ ದೃಷ್ಟಿಯಲ್ಲಿ “ಪ್ರತಿಯೊಂದು ಜೀವಿಯ ಆತ್ಮವೂ ಆ ಪರಮಾತ್ಮನಿಂದ, ಆ ಭಗವದ್‌ಜ್ಯೋತಿಯಿಂದ ದೀಪ್ತವಾದ ಸೊಡರು. ಆತ್ಮ ಹಾಗೂ ಪರಮಾತ್ಮಗಳ ಮೂಲಸತ್ವ ಒಂದೇ. ಲೋಕದಲ್ಲಿ ನೆಲೆಗೊಂಡ ಈ ಅನಂತ ಆತ್ಮಗಳ ರೂಪದಲ್ಲಿ ಭಗವಂತ ವಿಶ್ವವ್ಯಾಪಿಯಾಗುತ್ತಾನೆ. ಆದರೆ ಪ್ರತಿಯೊಂದು ಆತ್ಮವೂ ಆ ಪರಮಾತ್ಮನಿಂದ ಬೇರೆಯಾಗಿ ನೆಲೆಸಿದಾಗ ಅದಕ್ಕೆ ಮಾಯೆಯ ಮುಸುಕು ಆವರಿಸಿರುವುದುಂಟು. ಇದರಿಂದಾಗಿ ಆತ್ಮ ತನ್ನತನವನ್ನೇ, ತನ್ನ ಮೂಲಸ್ವರೂಪವನ್ನೇ ವಿಸ್ಮೃತಿಯಲ್ಲಿ ಮುಳುಗಿಸುತ್ತದೆ. ಅಂತಹ ಆತ್ಮಗಳ ಪುನರುತ್ಥಾನ ಅವಶ್ಯಕ.”[13] ಇದರ ವಿಸ್ತೃತ ವ್ಯಾಖ್ಯೆಯೇ ಡಾಂಟೆಯ ಕೃತಿ. ಶ್ರೀರಾಮಾಯಣದರ್ಶನಂ ಈ ದಾರ್ಶನಿಕ ನಿಲುವನ್ನೂ ಒಳಗೊಂಡು, ಇನ್ನೂ ಮುಂದೆ ಸಾಗುತ್ತದೆ. ಈ ಕೃತಿಯಲ್ಲಿ ಶಿಕ್ಷೆ ನಿಗ್ರಹ ಎಂಬ ಪದಗಳಿಗೆ ಅರ್ಥವೇ ಇಲ್ಲ. ಇಲ್ಲಿ ಸತ್ ಅಸತ್ ಎರಡೂ ಒಂದೇ ಪರತತ್ವದ ಎರಡು ಮುಖ. ಹಾಗೆಯೇ ರಾಮ ರಾವಣ ಇಬ್ಬರೂ ಒಂದೇ ವ್ಯಕ್ತಿತ್ವದ ಎರಡು ಮುಖಗಳು ಅಥವಾ ಪದರುಗಳು. ಇದ್ದಿಲು ಕಾಲಕ್ರಮದಲ್ಲಿ ವಜ್ರವಾಗುವಂತೆ, ರಾಮಶಕ್ತಿಯ ಪ್ರೇರಣೆ ಪ್ರಭಾವ ಒತ್ತಡಗಳಿಂದ ರಾವಣತ್ವ ರಾಮತ್ವದೆಡೆಗೆ ಮುಖ ಮಾಡುತ್ತದೆ. ಕೊನೆಗೆ ರಾಮತ್ವವೇ ಆಗಿ ಪರಿವರ್ತಿತವಾಗುತ್ತದೆ. ಕಥೆಯ ಬೆಂಬಲ ಇದ್ದರೂ ಮುಖ್ಯವಾಗಿ ಶ್ರೀರಾಮಾಯಣದರ್ಶನ, ಡಾಂಟೆಯ ಕೃತಿಯಂತೆಯೇ ಒಂದು ಅಪೂರ್ವ ದಾರ್ಶನಿಕ ಕಾವ್ಯ.

ಡಾಂಟೆ ಒಬ್ಬ ಅಸಾಮಾನ್ಯ ಕಥನಕುಶಲಿ. ಕಾವ್ಯದಲ್ಲಿಯ ಆತನ ಪ್ರಯಾಣದ ನಿರೂಪಣೆ ಅತ್ಯಂತ ಸಹಜವಾಗಿ ಸಲೀಲವಾಗಿ ಆಕರ್ಷಕವಾಗಿ ಚಿತ್ರಗಳ ಮೇಲೆ ಚಿತ್ರಗಳನ್ನು ಕುಸುರಿಸುತ್ತ ಕುಸುಮಿಸುತ್ತ ಆಪ್ತವಾಗಿ ಸಾಗುತ್ತದೆ. ಶ್ರೀರಾಮಾಯಣದರ್ಶನದ ಕಥನ ಗತಿಯಲ್ಲೂ ಈ ಚಿತ್ರಕತೆಯನ್ನು ಸಮ್ಮೋಹಕತೆಯನ್ನು ಗುರುತಿಸಬಹುದು. ಡಾಂಟೆಯ ಶೈಲಿಯಷ್ಟು ‘ದರ್ಶನ’ದ ಶೈಲಿ ಸರಳವಲ್ಲ, ನಿಜ. ಆದರೆ ಅದರ ಗಾಂಭೀರ್ಯ ಅದರ ಪ್ರವಾಹಗತಿಗೆ ಆತಂಕ ತಂದಿರುವುದು ಅಪರೂಪ. ಇನ್ನು ಡಾಂಟೆಯಂತೆಯೇ ಕುವೆಂಪು ಕೂಡ ಮಾಲೆ ಮಾಲೆಯಾಗಿ ಉಪಮೆ ರೂಪಕಗಳನ್ನು ಲೀಲಾಜಲವಾಗಿ ಸಚಿತ್ರವಾಗಿ ಮತ್ತು ಅರ್ಥಪೂರ್ಣ ವಾಗಿ ಸೃಷ್ಟಿಸಿ ಕಾವ್ಯದ ಕಲಾಮಲ್ಯವನ್ನು ಅತಿಶಯವಾಗಿ ವೃದ್ದಿಸಿದ್ದಾರೆ. ಡಾಂಟೆಯಂತಹ ಪರಿಪೂರ್ಣ ದಾರ್ಶನಿಕ ಕಾವ್ಯ ಪಾಶ್ಚಾತ್ಯ ಸಾಹಿತ್ಯ ಜಗತ್ತಿನಲ್ಲಿ ಇನ್ನೊಂದಿಲ್ಲ; ಅಂತೆಯೇ ‘ದರ್ಶನ’ದಂತಹ ದರ್ಶನಾಂತರ್ಗತ ಮಹಾಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ.

ಮಿಲ್ಟನ್ ಮತ್ತು ಶ್ರೀರಾಮಾಯಣದರ್ಶನಂ

ಪಾಶ್ಚಾತ್ಯ ಮಹಾಕವಿಗಳಲ್ಲೆಲ್ಲ ಕುವೆಂಪು ಅವರ ಅತ್ಯಂತ ಮೆಚ್ಚಿಗೆಗೆ ಪಾತ್ರನಾದವನೆಂದರೆ ಮಿಲ್ಟನ್. ಇದಕ್ಕೆ ಕಾರಣಗಳು ಒಂದಲ್ಲ ಹಲವು. ಮೂಲತಃ ಇಬ್ಬರೂ ಧಾರ್ಮಿಕ ಮನೋ ಭಾವದವರು, ಅದರ ಸದರ್ಥದಲ್ಲಿ. ಎಳವೆಯಿಂದಲೂ ಮಿಲ್ಟನ್ ತುಂಬ ಗಂಭೀರ ಸ್ವಭಾವದವನು. ಸ್ವಾತಂತ್ರ್ಯಪ್ರಿಯ, ಸ್ವಾಭಿಮಾನಶೀಲ, ಗೊಡ್ಡು ಕಂದಾಚಾರಗಳಿಗೆ ಸೊಪ್ಪು ಹಾಕದವನು. ಕೊಳೆತ ಸಂಪ್ರದಾಯಗಳಿಗೆ ಜೋತುಬಿದ್ದು ದೈವ ಧರ್ಮದ ಹೆಸರಿನಲ್ಲಿ ಜನತೆಯನ್ನು ಶೋಷಿಸುತ್ತಿದ್ದ ಚರ್ಚುಗಳ ವಿರುದ್ಧ, ಅವರ ಬೆಂಬಲ ಪಡೆದು ಸರ್ವಾಧಿಕಾರ ಪ್ರಮತ್ತರಾಗಿ ಭೋಗಲೋಲುಪರವಾಗಿ ವಿಜೃಂಭಿಸುತ್ತಿದ್ದ ರಾಜರ ವಿರುದ್ಧ ಬಂಡೆದ್ದು ಅವರ ಆಕ್ರೋಶಕ್ಕೆ ತುತ್ತಾದ ಬಂಡುಕೋರ ಪ್ರವೃತ್ತಿಯ ದಿಟ್ಟ ವ್ಯಕ್ತಿ. ಬಾಲ್ಯದಿಂದಲೇ ಮಹತ್ತಾದುದನ್ನು ಸಾಧಿಸಬೇಕೆಂಬ, ಮಹಾಕೃತಿಯನ್ನು ಬರೆಯಬೇಕೆಂಬ ಸಂಕಲ್ಪದಿಂದ ಪ್ರೇರಿತನಾಗಿ ಗ್ರೀಕ್ ಲ್ಯಾಟಿನ್ ಇಂಗ್ಲಿಷ್ ಭಾಷಾ ಸಾಹಿತ್ಯವನ್ನೆಲ್ಲ ಕರತಲಾಮಲಕ ಮಾಡಿ ಕೊಂಡು, ಭಾವಗೀತೆ, ಗದ್ಯ, ನಾಟಕ ಮುಂತಾದುವುಗಳ ಮೂಲಕ ತನ್ನ ಕಾವ್ಯಶಕ್ತಿಯನ್ನು ಒರೆಗಿಕ್ಕಿ ಪ್ರಯೋಗಿಸಿ ಪ್ರಜ್ವಲಗೊಳಿಸಿಕೊಂಡು ಮಹಾಕಾವ್ಯ ಕೃಷಿಗೆ ಸಿದ್ಧನಾದ ಸಾಧಕ. ಸ್ವಪ್ರಯತ್ನದಿಂದ ತನ್ನದೇ ಆದ ಛಂದಸ್ಸನ್ನು ಭಾಷಾಶೈಲಿಯನ್ನೂ ರೂಢಿಸಿಕೊಂಡು ತಾನು ನಂಬಿದ ನಡೆದ ಸಿದ್ಧಾಂತವನ್ನು ಮಹಾಕಾವ್ಯದ ಮಾಧ್ಯಮದಲ್ಲಿ ಪ್ರತಿಮಿಸಿದ ಮಹಾ ಪ್ರತಿಭಾವಂತ. ಇದೇ ರೀತಿ ಬಾಲ್ಯದಿಂದಲೂ ಗಂಭೀರ ಪ್ರವೃತ್ತಿಯನ್ನು ಬೆಳೆಸಿಕೊಂಡು, ಹಳಸಲು ಸಂಪ್ರದಾಯಗಳನ್ನು ಖಂಡಿಸುತ್ತ, ಪುರೋಹಿತಶಾಹಿಯನ್ನು ರಾಜಶಾಹಿಯನ್ನು ಧಿಕ್ಕರಿಸುತ್ತ, ಅವುಗಳ ಮತ್ತು ಅವರ ವಿರುದ್ಧ ವೈಚಾರಿಕ ಸಮರವನ್ನು ಸಾರಿ ಯುವ ಪೀಳಿಗೆಯನ್ನು ಎಚ್ಚರಿಸುತ್ತ, ದೇವರು ಧರ್ಮಗಳನ್ನು ಅವುಗಳ ಮೂಲಾರ್ಥದಲ್ಲಿ ವ್ಯಾಖ್ಯಾನಿಸುತ್ತ, ಕನ್ನಡ, ಇಂಗ್ಲಿಷ್, ಸಂಸ್ಕೃತ, ಬಂಗಾಳಿ ಭಾಷೆಗಳ ಶ್ರೇಷ್ಠ ಸಾಹಿತ್ಯಕ ಮತ್ತು ವೈಚಾರಿಕ ಕೃತಿಗಳನ್ನು ಸತತವಾಗಿ ಅಭ್ಯಸಿಸಿ ಮನನ ಮಾಡಿ ಅಪಾರ ಪಾಂಡಿತ್ಯ ಮತ್ತು ಜ್ಞಾನಾನುಭವಗಳನ್ನು ಗಳಿಸುತ್ತ, ತಮ್ಮ ಭಾವಗೀತೆ ಖಂಡಕಾವ್ಯ ನಾಟಕ ಗದ್ಯಗಳ ಮೂಲಕ ತಮ್ಮ ಪ್ರಯೋಗಪ್ರಿಯತೆ ಸೃಜನಶೀಲತೆಗಳನ್ನು ಅದ್ಭುತ ಪ್ರಮಾಣದಲ್ಲಿ ಅಭಿವರ್ಧಿಸಿಕೊಳ್ಳುತ್ತ, ತಮ್ಮ ಪಾಂಡಿತ್ಯ ಪ್ರತಿಭೆ ದರ್ಶನಗಳೆಲ್ಲವನ್ನೂ ಒಮ್ಮುಖವಾಗಿ ದುಡಿಸಿಕೊಂಡು ಮಹಾಕಾವ್ಯವನ್ನು ಸೃಷ್ಟಿಸಿದವರು ಕುವೆಂಪು. ತನ್ನ ದರ್ಶನವನ್ನು ಕೆತ್ತಲು ಬೈಬಲ್ಲಿನ ವಸ್ತುವನ್ನು ಮಿಲ್ಟನ್ ಆರಿಸಿಕೊಂಡ; ತಮ್ಮ ದರ್ಶನವನ್ನು ಧ್ವನಿಸಲು ಭಾರತೀಯರ ಸಾಂಸ್ಕೃತಿಕ ಮಲ್ಯಗಳ ಪ್ರತೀಕ ಎನ್ನಿಸಿಕೊಂಡ ರಾಮಾಯಣದ ವಸ್ತುವನ್ನು ಆರಿಸಿಕೊಂಡವರು ಕುವೆಂಪು. ದೇವರ ವರ್ತನೆಯನ್ನು ಮಾನವರಿಗೆ ಸಮರ್ಥಿಸಿ ತೋರಿಸಲು ಮಿಲ್ಟನ್ ತನ್ನ ಕಾವ್ಯವನ್ನು ಬರೆದ; ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯಲಿ ಎಂಬ ಜೀವನ ಭರವಸೆಯ ಜೀವಪರವಾದ ಪುರೋಗಾಮಿ ಸತ್ಯವನ್ನು ಎತ್ತಿ ಹಿಡಿಯಲು ಕುವೆಂಪು ತಮ್ಮ ಕಾವ್ಯರಚನೆ ಮಾಡಿದರು. ಅಂತೆಯೇ ಮಿಲ್ಟನನದೂ ದಾರ್ಶನಿಕ ಕೃತಿ; ಕುವೆಂಪು ಅವರದೂ ದಾರ್ಶನಿಕ ಕೃತಿ. ಇಬ್ಬರೂ ಆಧ್ಯಾತ್ಮಕ್ಕೆ ಪರಮಕಾವ್ಯಸೌಂದರ್ಯದ ಸಿಂಹಾಸನದಲ್ಲಿ ಪಟ್ಟಗಟ್ಟಿದರು.

ನರಕ ಸ್ವರ್ಗ ಭೂಲೋಕಗಳ ಮೂರು ನೆಲೆಯಲ್ಲಿ ನಡೆಯುವ ಕಥನಕ್ರಿಯೆಯನ್ನು ಅತ್ಯಂತ ಶಕ್ತಿವತ್ತಾಗಿ ರೋಮಾಂಚಕಾರಿಯಾಗಿ ನಿರೂಪಿಸುತ್ತಾನೆ ಮಿಲ್ಟನ್. ಅಧಿದೈವ ಸೈತಾನರ ಸಂಘರ್ಷ, ಸೈತಾನನ ನರಕವಾಸ, ಅವನ ಸ್ವರ್ಗಾರೋಹಣ ಸಾಹಸಗಳು ಅದ್ಭುತ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ. ಸೈತಾನನ ಪಾತ್ರ ದೇವರ ಪಾತ್ರಕ್ಕಿಂತ ಉಜ್ವಲವಾಗಿದ್ದು ಅವನು ಮಾನವನ ನಿರ್ಬಂಧರಹಿತ ಸ್ವಾತಂತ್ರ್ಯಾಕಾಂಕ್ಷೆಯ ಪ್ರತೀಕವಾಗಿದ್ದಾನೆ. ಮಾನವ ಪತನವನ್ನು ತಡೆಯಲು ದೇವತೆಗಳು ಪಡುವ ಪ್ರಯತ್ನ, ಆದಿ ಮಾತಾಪಿತರ ಆರಂಭದ ಅನ್ಯೋನ್ಯತೆಯ ಗಾಢತೆ, ಪ್ರಲೋಭಿತರಾದ ನಂತರದ ಅವರ ನಿಸ್ಸಹಾಯಕತೆ, ದೇವಪುತ್ರ ನಿಂದ ದೊರಕುವ ಪರಿಹಾರದ ಕಥನ ಮುಂತಾದುವು ತುಂಬ ಪ್ರಭಾವಕಾರಿಯಾಗಿವೆ.  ದೇವಲೋಕ, ನರಕಲೋಕ ಮತ್ತು ಈಡನ್ ವನದ ವರ್ಣನೆಗಳು ಕವಿಯ ವರ್ಣನಾ ನೈಪುಣ್ಯದ ಕಲ್ಪನಾ ಶ್ರೀಮಂತಿಕೆಯ ಶಿಖರ ಭಾಗಗಳಾಗಿವೆ. ಇಲ್ಲಿ ಬರುವ ಮಹೋಪಮೆಗಳು, ಭವ್ಯ ಸನ್ನಿವೇಶಗಳು ಕಾವ್ಯವನ್ನು ಮಹೋನ್ನತ ಸ್ತರಕ್ಕೆ ಏರಿಸುತ್ತವೆ. ಇದಕ್ಕನುಗುಣವಾದ ಸುಗುಣ ಗಂಭೀರವಾದ ಪ್ರೌಢಭಾಷೆ ಕಾವ್ಯದ ಎತ್ತರಕ್ಕೆ ಪದಪುಂಜಗಳ ವಿಶಿಷ್ಟ ಸಮನ್ವಯದಿಂದ ಸಿದ್ಧವಾದ ಭಾಷೆಯ – ಎಲ್ಲ ಕಲಾತ್ಮಕ ಸಾಧ್ಯತೆಗಳನ್ನೂ ಮಿಲ್ಟನ್ ಅಭೂತಪೂರ್ವವಾಗಿ ಸಾಕ್ಷಾತ್ಕರಿಸಿ ಇಲ್ಲಿ ತೋರಿಸುತ್ತಾನೆ; ಹಿಂದೆಂದೂ ಇಂಗ್ಲಿಷ್ ಭಾಷೆ ಮುಟ್ಟದ ಮಹೋನ್ನತ ಎತ್ತರಕ್ಕೆ ಅದನ್ನು ಕೊಂಡೊಯ್ಯುತ್ತಾನೆ. ಈ ಭಾಷೆಯ ಮಹಾ ಪ್ರವಾಹಕ್ಕೆ ತಕ್ಕಂತೆ ಮಿಲ್ಟನ್ ಬ್ಲಾಂಕ್‌ವರ್ಸ್‌ನ್ನು ವೈವಿಧ್ಯಪೂರ್ಣವಾಗಿ ಸಿದ್ಧಗೊಳಿಸಿಕೊಂಡು ತನ್ನದೇ ಆದ ಓಜೋನ್ವಿತವೂ ತೇಜೋನ್ವಿತವೂ ಆದ ಪ್ರಚಂಡ ಶಕ್ತಿಶಾಲಿಯಾದ ಛಂದಸ್ಸನ್ನು ನಿರ್ಮಿಸಿಕೊಂಡು ಮಹಾಶೈಲಿ, ಮಹಾಛಂದಸ್ಸು, ಮಹಾಕಲ್ಪನೆಗಳ ಅಸದೃಶ ಸಂಗಮವನ್ನಾಗಿ ತನ್ನ ಮಹಾಕಾವ್ಯವನ್ನು ಕೆತ್ತಿ ನಿಲ್ಲಿಸುತ್ತಾನೆ; ಪ್ರಪಂಚದ ಮಹಾಕವಿಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಳ್ಳುತ್ತಾನೆ.

ವಾಲ್ಮೀಕಿಯ ವಸ್ತುವನ್ನು ಆಧರಿಸಿದ ಕುವೆಂಪು, ತಮ್ಮ ಕೃತಿಯ ಧಾಟಿ ದಾರಿ ಧ್ಯೇಯ ಗಳನ್ನೇ ವಿಸ್ಮಯಕಾರಕವಾಗಿ ಮಾರ್ಪಡಿಸಿಕೊಂಡಿದ್ದಾರೆ. ಈ ಕೃತಿಯ ವ್ಯಕ್ತಿಗಳೆಲ್ಲರೂ ಪೂರ್ವಪರಿಚಿತವಲ್ಲದ ನವೀನವೂ ಉತ್ತುಂಗವೂ ಆದ ಅನ್ಯಾದೃಶ ಆಯಾಮಗಳನ್ನು ಪಡೆಯುತ್ತ ಹೋಗುತ್ತಾರೆ. ರಾಮ, ಸೀತೆ, ಮಂಥರೆ, ಮಂಡೋದರಿ, ಆಂಜನೇಯ, ಊರ್ಮಿಳೆ, ರಾವಣ ಮುಂತಾದ ಹತ್ತಾರು ಪಾತ್ರಗಳ ಮೂರ್ತೀಕರಣದಲ್ಲಿ; ರಾವಣನ ಆತ್ಮಸಂಘರ್ಷದಲ್ಲಿ, ಅನಲೆಯ ದುಃಖದಲ್ಲಿ, ಚಂದ್ರನಖಿ-ರಾವಣರ ಸಂವಾದದಲ್ಲಿ, ರಾಮನ ಆತ್ಮಗ್ಲಾನಿಯಲ್ಲಿ, ಅಯೋಧ್ಯಾಂತಃಪುರದ ದುಃಖಾನಲತಪ್ತವಾತಾವರಣದಲ್ಲಿ, ವಾಲಿಯ ಅವಸಾನದಲ್ಲಿ-ಮೊದಲಾದ ನೂರಾರು ಸಂದರ್ಭಗಳಲ್ಲಿ ಮಿಲ್ಟನನ ದಿವ್ರೋಕಲಾಪರಿಣತಿಯನ್ನು ಕುವೆಂಪು ಮೆರೆಯುತ್ತಾರೆ. ಆಂಜನೇಯನ ಸಾಗರೋಲ್ಲಂಘನ, ದಶಾನನ ಸ್ವಪ್ನಸಿದ್ದಿ, ಶ್ರೀರಾಮರಾವಣ ಚಿತ್‌ತಪಶ್ರೀ, ರಸಮಲ್ತೆ ರುದ್ರ ದೃಷ್ಟಿಗೆ ರೌದ್ರಮುಂ, ಅಭಿಷೇಕ ವಿರಾಡ್ ದರ್ಶನಂ-ಮುಂತಾದ ಭಾಗಗಳು ಭವ್ಯತಾನುಭವದ ಚರಮಸೀಮೆಯನ್ನು ತಲಪುತ್ತವೆ; ಮಿಲ್ಟನನ ಭವ್ಯಕಲ್ಪನೆಗಳೊಂದಿಗೆ ತುಲನೆಗೆ ನಿಸ್ಸಂದೇಹವಾಗಿ ನಿಲ್ಲುತ್ತವೆ. ಅವುಗಳು ಮೆರೆಯುವ ವೈಭವ ಏರು ಔನ್ನತ್ಯ ಮಹಾಕಲೆಗೆ ಮಾತ್ರ ಸಾಧ್ಯವಾಗಬಹು ದಾದಂಥವು. ಇನ್ನು ನಿಸರ್ಗದ ವೈವಿಧ್ಯಪೂರ್ಣವೂ ವರ್ಣರಂಜಿತವೂ ಆದ ವರ್ಣನೆಗಳಂತೂ ಕವಿಯ ಸೌಂದರ್ಯ ಪರಿಕಲ್ಪನೆಯ ದೃಷ್ಟಿಸೂಕ್ಷ್ಮತೆಯ ಅನನ್ಯಾನುಭವದ ಜ್ವಲಂತ ದಾಖಲೆ ಗಳಾಗಿವೆ. ಪಾಶ್ಚಾತ್ಯ ಕವಿಗಳಿಂದ-ವಿಶೇಷವಾಗಿ ಹೋಮರ್ ಮತ್ತು ಮಿಲ್ಟನ್-ಪ್ರೇರಿತವಾಗಿ, ಕವಿಯ ಸ್ವಾನುಭವದ ಬೃಹನ್‌ಮೂಸೆಯಲ್ಲಿ  ಕುದಿಗೊಂಡು ಹೊಮ್ಮಿರುವ ಮಹೋಪಮೆ ಗಳಲ್ಲಿ ಕೆಲವಾದರೂ ವ್ಯಾಪಕವೂ ಮೂರ್ತವೂ ಧ್ವನಿಪೂರ್ಣವೂ ಆದ ಮಹಾಚಿತ್ರಗಳನ್ನು ಮೂಡಿಸುತ್ತ ಕೃತಿಗೆ ಅಸದೃಶ ಶೋಭೆಯನ್ನು ತಂದುಕೊಟ್ಟಿವೆ. ಇವೆಲ್ಲವನ್ನೂ ಹಾಳತವಾಗಿ ಶಕ್ತಿಪೂರ್ಣವಾಗಿ ಅಧಿಕೌನ್ನತ್ಯದಲ್ಲಿ ಹಿಡಿದಿಟ್ಟಿರುವ ಈ ಕೃತಿಯ ಸರ್ವಂಕಷವಾದ ಭವ್ಯಶೈಲಿ ಮಿಲ್ಟನ್ನನ ಮಹಾಶೈಲಿಯನ್ನು ಹೋಲುತ್ತದೆ. ಮಿಲ್ಟನ್ನನಂತೆ ಕುವೆಂಪು ಕೂಡ ಸ್ವಪ್ರಯತ್ನ ದಿಂದ ಈ ಅದ್ವಿತೀಯ ಶೈಲಿಯನ್ನು ಸಾಧಿಸಿಕೊಂಡಿದ್ದಾರೆ. ಕನ್ನಡ-ಸಂಸ್ಕೃತಗಳ ವಿಶಿಷ್ಟ ಹದದ ವಿವಿಧಾಲಂಕಾರ ಸಮನ್ವಿತವಾದ ಅವರೋಹಣಾರೋಹಣ ಗುಣದ ಸುಸೂಕ್ಷ್ಮ ಅಂತರ್‌ವಿನ್ಯಾಸದ ಈ ಪರ್ವತಶೈಲಿ ಮಹಾಕಾವ್ಯದ ಎಲ್ಲ ಎತ್ತರ ಬಿತ್ತರಗಳನ್ನೂ ಅತ್ಯಂತ ಸಮರ್ಥವಾಗಿ ಸಂವಹನಿಸುತ್ತದೆ. ಮಿಲ್ಟನ್ನನಂತೆ ಕುವೆಂಪು ಸಹ ತಮ್ಮ ಸುದೀರ್ಘಕಾಲದ ವಿವಿಧ ಬಗೆಯ ಕಾವ್ಯ ಕೃಷಿಯ ಪ್ರಗಾಢ ಮತ್ತು ವ್ಯಾಪಕ ಅನುಭವಗಳ ಹಾಗೂ ಕನ್ನಡ ಕಾವ್ಯದ ಛಂದೋಪರಂಪರೆಯ ಸಶಕ್ತ ಹಿನ್ನೆಲೆಯಲ್ಲಿ ತಮ್ಮ ಭಾವ ಭಾಷೆ ಆಲೋಚನೆ ಕಲ್ಪನೆಗಳ ಹಾಸು ಬೀಸು ಔನ್ನತ್ಯಗಳಿಗೆ ಸಮರಸವಾಗಿ ಮಿಡಿಯುವಂತಹ ಸಂಕೀರ್ಣವಾದ ಮಹಾಛಂದಸ್ಸನ್ನು ರೂಪಿಸಿಕೊಂಡರು. ಹೀಗೆ ಹಲವು ವಿಧಗಳಲ್ಲಿ ಕುವೆಂಪು ಮಿಲ್ಟನ್ನನ್ನು ಹೋಲುತ್ತಾರೆ. ಹಾಗೆಯೇ ಶ್ರೀರಾಮಾಯಣದರ್ಶನಂ ಕೂಡ ಹಲವು ಅಂಶಗಳಲ್ಲಿ ಪ್ಯಾರಡೈಸ್ ಲಾಸ್ಟ್ ಕಾವ್ಯದ ಕಲಾಪರಿಣತಿಯನ್ನು ಪ್ರಕಟಿಸುತ್ತದೆ.

ಮೇಲಿನ ಈ ಸ್ಥೂಲ ಸಮೀಕ್ಷೆ ಕುವೆಂಪು ಅವರ ‘ಶ್ರೀರಾಮಾಯಣದರ್ಶನಂ’ “ಮಹಾ ಕಾವ್ಯದ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಂಡು ಬೆಳೆದುನಿಂತ ಆಧುನಿಕ ಮಹಾಕಾವ್ಯ”[14] ಮಾತ್ರವಲ್ಲ; ಪಂಪನ ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿಗಳ ಸಾಲಿನಲ್ಲಿ ನಿಲ್ಲುವ ಕನ್ನಡದ ಮೂರನೆಯ ಮಹಾಕಾವ್ಯ ಮಾತ್ರವಲ್ಲ; ಕಾಲಮಾನದ ದೃಷ್ಟಿಯಿಂದ ಕಿರಿದಾದರೂ ಗುಣಮಹಿಮೆಯ ದೃಷ್ಟಿಯಿಂದ”[15] ಪ್ರಪಂಚದ ಕೆಲವೇ ಶ್ರೇಷ್ಠ ಮಹಾಕಾವ್ಯ(classics)ಗಳ ವಿರಳ ಪಂಕ್ತಿಯಲ್ಲಿ ಹೆಮ್ಮೆಯಿಂದ ತನ್ನನ್ನು ಸಮರ್ಥಿಸಿಕೊಳ್ಳುವ ಮತ್ತು ಕನ್ನಡವನ್ನು ಪ್ರತಿನಿಧಿಸುವ ಮಹೋನ್ನತ ಕೃತಿ ಎಂಬುದನ್ನು ಧ್ವನಿಸುತ್ತದೆ.


[1] ಡಾ. ವಿ. ಕೃ. ಗೋಕಾಕ್, ಭಾರತಸಿಂಧುರಶ್ಮಿ, ಸಂಪುಟ-೧, ಪ್ರಸ್ತಾವನೆ.

[2] ಡಾ. ಹಂ.ಪ. ನಾಗರಾಜಯ್ಯ, ವಿ.ಕೃ.ಗೋಕಾಕ್, ಪು. ೪೩-೪೪.

[3] ಎಚ್.ಎಂ. ಚನ್ನಯ್ಯ, ಪ್ರಬುದ್ಧ ಕರ್ನಾಟಕ, ೨೬೯, ಪು. ೨೨೧.

[4] ಪ್ರಾ.ಸಂ. ಶಿ. ಭೂಸನೂರಮಠ, ಭವ್ಯಮಾನವ, ಪ್ರಸ್ತಾವನೆ.

[5] ನೋಡಿ : ಎಚ್.ಆರ್. ಅಮರನಾಥ, ಮೂರು ಮಹಾಕಾವ್ಯಗಳು, ಪು. ೬೦-೬೫.

[6] ಎಚ್.ಎಂ. ಚನ್ನಯ್ಯ, ಪ್ರಬುದ್ಧ ಕರ್ನಾಟಕ, ೨೬೯, ಪು. ೨೧೧.

[7] ಎಚ್.ಜೆ. ಲಕ್ಕಪ್ಪಗೌಡ, ಪಾಶ್ಚಾತ್ಯರ ದೃಷ್ಟಿಯಲ್ಲಿ ಮಹಾಕಾವ್ಯ, ಪಾಶ್ಚಾತ್ಯ ಮಹಾಕಾವ್ಯಗಳು (ಸಂ. ಡಾ. ಶ್ರೀಕಂಠ ಕೂಡಿಗಿ), ಪು. ೯-೧೨.

[8] ಶ್ರೀರಾಮಾಯಣದರ್ಶನಂ, ಅಯೋಧ್ಯಾ ಸಂಪುಟಂ, ಪು. ೫೮-೫೯, ಸಾಲು ೧೩೧-೩೪.

[9] ಎಲ್.ಎಸ್. ಶೇಷಗಿರಿರಾವ್, ಕುವೆಂಪು ಮತ್ತು ಹೋಮರ್, ಸಹ್ಯಾದ್ರಿ, ಪು. ೩೫೦.

[10] ಕೆ. ನರಸಿಂಹಮೂರ್ತಿ, ಶ್ರೀರಾಮಾಯಣದರ್ಶನವೂ ಪಾಶ್ಚಾತ್ಯ ಸಾಹಿತ್ಯವೂ, ಶ್ರೀರಾಮಾಯಣದರ್ಶನಂ ಉಪನ್ಯಾಸ ಮಾಲೆ (ಸಂ. ಡಾ. ದೇ. ಜವರೇಗೌಡ), ಪು. ೯೪-೧೦೮.

[11] T.S. Eliot, What is a classic? p. 29.

[12] ಹೋಮರ್ ಮತ್ತು ವಾಲ್ಮೀಕಿ ಯಾವ ಯಾವ ಮೂಲಗಳಿಂದ ವಸ್ತುಸಂಗ್ರಹಣೆ ಮಾಡಿರುವರೆಂಬುದರ ಅಧ್ಯಯನ ತುಂಬ ಕುತೂಹಲಕಾರಿ ಮತ್ತು ಪ್ರಯೋಜನಕಾರಿ.

[13] ಎಂ. ಜೈಕುಮಾರ್, ಡಾಂಟೆ, ಪು. ೧೯.

[14] ಡಾ. ಎಚ್. ತಿಪ್ಪೇರುದ್ರಸ್ವಾಮಿ, ಶ್ರೀರಾಮಾಯಣದರ್ಶನಂ, ಮಹಾಕಾವ್ಯ, ಪು. ೧.

[15] ಡಾ. ದೇ. ಜವರೇಗೌಡ, ಕುವೆಂಪು ಸಾಹಿತ್ಯ, ಕೆಲವು ಅಧ್ಯಯನಗಳು, ಭಾಗ-೧, ಪು. ೧೮೯.