ಯೂರೋಪಿನ ಸಾಹಿತ್ಯೇತಿಹಾಸ ಆರಂಭವಾಗುವುದೇ ಗ್ರೀಕ್ ಸಾಹಿತ್ಯದ ಸ್ಮರಣೆಯೊಡನೆ. ಆದರೆ ಸಾಹಿತ್ಯ ಒಂದು ಲಲಿತ ಕಲೆಯಾಗಿ ಸೃಷ್ಟಿಗೊಂಡದ್ದು ಗ್ರೀಕರಿಂದ ಅಲ್ಲ. ಅವರು ಉತ್ತರ ಭಾಗದಿಂದ ಬಂದು ಏಜಿಯನ್ ಪ್ರದೇಶದಲ್ಲಿ ನೆಲೆಯೂರುವುದಕ್ಕೆ ಮುಂಚೆಯೇ ಸುಮೇರ್, ಅಕ್ಕಡ್ ಮತ್ತು ಈಜಿಪ್ಟ್‌ಗಳಲ್ಲಿ ಒಂದು ಪ್ರಜ್ಞಾಪೂರ್ವಕ ವಿಶಿಷ್ಟತೆಯೊಡನೆ ಅದನ್ನು ಬಳಸಲಾಗುತ್ತಿತ್ತು. ಗ್ರೀಕರು ಅಲ್ಲಿ ಭದ್ರವಾಗಿ ಬೇರೂರಿದ ನಂತರ, ಸುಮಾರು ಕ್ರಿ.ಪೂ. ಎರಡನೇ ಸಹಸ್ರಮಾನದ ಮಧ್ಯಭಾಗದಲ್ಲಿ, ಮಿನೋಯನ್ ನಾಗರಿಕತೆಯನ್ನು ಅರಗಿಸಿಕೊಂಡರಲ್ಲದೆ ತಮ್ಮ ಸುತ್ತುಮುತ್ತಿನ ಅನತೋಲಿಯದ ಹಿಟ್ಟೈಟ್‌ಗಳು ಮತ್ತು ಉತ್ತರ ಸಿರಿಯಾದ ಸೆಮಿಟಿಕ್ ಜನರು ಮುಂತಾದ ಏಷ್ಯಾ ಜನತೆಯೊಡನೆ ಸಂಪರ್ಕ ಬೆಳೆಸಿದರು. ಆ ವೇಳೆಗಾಗಲೇ ಸುಪುಷ್ಟ ಸಾಹಿತ್ಯವನ್ನು ಪಡೆದಿದ್ದ ಅವರಿಂದ ಗ್ರೀಕರು ಮಾನವ ಮತ್ತು ದೇವ ಕಥೆಗಳು, ವಿಶ್ವದ ಹುಟ್ಟು ಸಾವಿನ ಕಥೆಗಳು, ಪ್ರಾರ್ಥನೆಗಳು ಮತ್ತು ಮಂತ್ರಗಳು, ಬದುಕಿರುವವರ ಸ್ತೋತ್ರಗಳು ಹಾಗೂ ಸತ್ತವರನ್ನು ಕುರಿತ ಶೋಕಗೀತೆಗಳು-ಮುಂತಾದವುಗಳ ಪ್ರಥಮ ಪಾಠಗಳನ್ನು ಪಡೆದಿರಬಹುದು. ಸಾಮಾನ್ಯವಾದ ಆಡುಮಾತು ಹಾಗೂ ವಿಶೇಷ ಪರಿಣತಿ ಪಡೆದ ಸಂವಾದ ಚಾತುರ್ಯ ಗಳಿಗಿಂತ ಭಿನ್ನವಾದ ಶಬ್ದ ಕಲೆಯೊಂದಿದೆಯೆಂಬುದನ್ನು ಪ್ರಾಯಃ ಅವರು ಕಲಿತುಕೊಂಡಿರ ಬೇಕು. ಗ್ರೀಕರು ಏಕಾಂತ ಜೀವನಪ್ರೇಮಿಗಳಲ್ಲವಾದ ಕಾರಣ ಯುದ್ಧದ ಕಾರಣಗಳಿಗಾಗಿಯೋ ಅಥವಾ ವಾಣಿಜ್ಯದ ಕಾರಣಗಳಿಗಾಗಿಯೋ ಬೇರೆ ದೇಶಗಳಿಗೆ ಹೋದಾಗ, ಅಲ್ಲಿನ ಕಥೆಗಳನ್ನೊ ಅಥವಾ ತಂತ್ರಗಳನ್ನೊ ಹೆಕ್ಕಿಕೊಂಡು ತಮ್ಮ ಸ್ವಂತ ಉದ್ದೇಶಗಳಿಗಾಗಿ ಅವುಗಳನ್ನು ಲಾಭದಾಯಕವಾಗಿ ಬಳಸಿಕೊಂಡರು. ಆದರೆ ಗ್ರೀಕ್ ಸಾಹಿತ್ಯ ಸಂಪೂರ್ಣವಾಗಿ ಸರ್ವಶಕ್ತವಾಗಿ ಗ್ರೀಕ್ ಪ್ರತಿಭೆಯಿಂದಲೇ ಅರಳಿಬಂದಿತೆಂದು ಹೇಳುವಂತಿಲ್ಲವಾದರೂ, ಅದು ಇತರರಿಂದ ಪಡೆದುಕೊಂಡದ್ದು ಕಡಿಮೆಯೆಂದೇ ಹೇಳಬೇಕು. ಹಾಗೆ ಪಡೆದಿದ್ದನ್ನು ಅವರು ಸ್ವಂತ ಅಭಿರುಚಿಗೆ ಜೀವನ ದೃಷ್ಟಿಗೆ ದರ್ಶನಕ್ಕೆ ಒಗ್ಗುವಂತೆ ಮಾರ್ಪಡಿಸಿಕೊಂಡರು.

ಹೀಗೆ ಆರಂಭವಾಗಿ ಜಜ್ಯಲ್ಯಮಾನವಾಗಿ ವರ್ಧಿಸುತ್ತಾ ಹತ್ತಾರು ಮುಖವಾಗಿ ಹರಿದು ನೂರಾರು ಮಹಾಕೃತಿಗಳನ್ನು ಜಗತ್ತಿಗೆ ಕಾಣಿಕೆ ನೀಡಿ ಇಂದಿಗೂ ಯೂರೋಪಿಯನ್ ಸಾಹಿತ್ಯಕ್ಕೆ ಮೂಲ ಸೆಲೆಯಾಗಿರುವ ಪ್ರಾಚೀನ ಗ್ರೀಕ್ ಸಾಹಿತ್ಯದ ಇತಿಹಾಸವನ್ನು ಮೂರು ಮುಖ್ಯ ಕಾಲಗಳನ್ನಾಗಿ ವಿಭಾಗಿಸಬಹುದು. ಈ ವಿಭಾಗದ ಕ್ರಮ ಸ್ಥೂಲವಾಗಿ ಗ್ರೀಕ್ ಜನತೆಯ ರಾಜಕೀಯ ಇತಿಹಾಸದೊಡನೆಯೂ ಹೊಂದಿಕೊಂಡಿದೆ. ೧. ಮಾರ್ಗಯುಗ. ಸುಮಾರು ಕ್ರಿ.ಪೂ. ೯೦೦ ರಿಂದ ಕ್ರಿ.ಪೂ. ೩೨೩ರವರೆಗೆ ಇದರ ಸುದೀರ್ಘ ಹರಹು. ಗ್ರೀಕ್ ನಗರ ರಾಷ್ಟ್ರಗಳು ಉದಯವಾದದ್ದು ಮತ್ತು ಅಭ್ಯುದಯ ಹೊಂದಿದ್ದು ಇದೇ ಕಾಲದಲ್ಲಿ. ಈ ಕಾಲದ ಸಾಹಿತ್ಯದಲ್ಲಿ ಆ ಜನಾಂಗದ ಆದರ್ಶಗಳ ಅನಿಸಿಕೆಗಳ ಮತ್ತು ಅವಶ್ಯಕತೆಗಳ ಅಭಿವ್ಯಕ್ತಿ ಇದೆ. ೨. ಹೆಲೆನಿಸ್ಟಿಕ್ ಯುಗ (Hellenistic period). ಈ ಕಾಲದಲ್ಲಿ ರಾಷ್ಟ್ರಕ್ಕೂ ಮತ್ತು ವ್ಯಕ್ತಿಗೂ ಇದ್ದ ಸಂಬಂಧ ಶಿಥಿಲಗೊಂಡಿತು. ಮಾರ್ಗಯುಗದ ಹೊಸತನವನ್ನು ಕಳೆದುಕೊಂಡ ಮತ್ತು ವೈಜ್ಞಾನಿಕ ಶಿಕ್ಷಣ ನೀಡುವ (ಅದೂ ಕೆಲ ಕೆಲವು ಶಿಕ್ಷಿತರಿಗೆ ಮಾತ್ರ) ಉದಾರ ಮನೋಭಾವದ ಸಾಹಿತ್ಯ ನಿರ್ಮಿತವಾಯಿತು. ಕ್ರಿ.ಪೂ. ಒಂದು ಮತ್ತು ಎರಡನೇ ಶತಮಾನಗಳಲ್ಲಿ ಈ ಗ್ರೀಕ್ ಚಕ್ರವರ್ತಿಗಳ ಪ್ರದೇಶಗಳು ಗೆಲ್ಲಲ್ಪಟ್ಟು ಅವುಗಳನ್ನು ರೋಮನ್ ಚಕ್ರಾಧಿಪತ್ಯದ ಪ್ರಾಂತ್ಯಗಳಾಗಿ ಪರಿವರ್ತಿಸಲಾಯಿತು. ೩. ಗ್ರೀಕ್-ರೋಮನ್ ಯುಗ (Greco-Roman Period). ಈ ಕಾಲದಲ್ಲಿ ಗ್ರೀಕ್ ಸಾಹಿತ್ಯ ತನ್ನ ಗತ ಮಾರ್ಗೀಯ ಸ್ಥಿತಿಗೆ ಹಿಂದಿರುಗಿತು. ಶೈಲಿಯ ಪುನರುತ್ಥಾನದ ಪ್ರಯತ್ನ ನಡೆಯಿತು. ಅನಂತರ ಹಂತ ಹಂತವಾಗಿ ಕ್ರಿಶ್ಚಿಯನ್ ಸಾಹಿತ್ಯ ನೆಲೆಗೊಂಡು ಪೇಗನಿಸಮ್ ಮೇಲೆ ವಿನಾಶಕರ ಪರಿಣಾಮ ಬೀರಿತು. ಕ್ರಿ.ಶ. ೫೯೨ರಲ್ಲಿ ಜಸ್ಟಿನಿಯನ್ ಎಂಬುವವನು ತತ್ತ್ವಶಾಸ್ತ್ರದ ಶಾಲೆಗಳನ್ನು ಮುಚ್ಚುವುದರ ಮೂಲಕ ಪೇಗನ್ ಸಾಹಿತ್ಯದ ಚರಮಗೀತೆ ಹಾಡಿದನೆನ್ನಬಹುದು.

ಪ್ರಾಚೀನ ಕಾಲದಲ್ಲಿ ಕ್ರಮಬದ್ಧವಾದ ಗ್ರೀಕ್ ಸಾಹಿತ್ಯ ಚರಿತ್ರೆ ರೂಪುಗೊಳ್ಳಲಿಲ್ಲ. ಈ ಬಗೆಗಿನ ವಿದ್ವತ್ಪೂರ್ಣ ಅಧ್ಯಯನದ ಫಲಗಳು ನಾಶವಾಗಿರುವುದರಿಂದ, ಈ ಸಾಹಿತ್ಯ ವಾಹಿನಿಯ ಮೂಲ ಮತ್ತು ಪ್ರಭಾವಗಳ ಬಗ್ಗೆ ಹಲವು ಸಮಸ್ಯೆಗಳು ಅಸ್ಪಷ್ಟವಾಗಿಯೇ ಉಳಿದುಕೊಂಡಿವೆ. ನಿದರ್ಶನ ಹೇಳಬೇಕೆಂದರೆ, ಭಾವಗೀತಾ ಸಾಹಿತ್ಯದಲ್ಲಿ ಹಲವು ತುಣುಕುಗಳು ಮತ್ತು ರಚಿತವಾದ ನೂರಾರು ನಾಟಕಗಳಲ್ಲಿ ಕೇವಲ ನಲವತ್ತಮೂರು ಮಾತ್ರ ಉಳಿದುಕೊಂಡಿವೆ. ಉಳಿದಿರುವ ಕೃತಿಗಳೂ ಕೂಡ ಅವುಗಳ ಆಂತರಿಕ ಮಲ್ಯದಿಂದಲೋ ಅಥವಾ ಶಾಲಾ ಪಠ್ಯಪುಸ್ತಕಗಳಾದುದರಿಂದಲೋ ಜೀವ ಹಿಡಿದು ನಿಂತಿವೆಯೆಂದು ಹೇಳಬಹುದು.

ಹಿಂದೆಯೇ ತಿಳಿದಿರುವಂತೆ ಈ ಗ್ರೀಕ್ ಜನರು ಕ್ರಿ.ಪೂ. ೨೦೦೦ ಮತ್ತು ೧೦೦೦ ವರ್ಷಗಳ ನಡುವಣ ಅವಧಿಯಲ್ಲಿ ಬಂದವರು. ಅವರು ಹೆಲೆನಿಕ್ ಭಾಷೆಯನ್ನು ಉಪಯೋಗಿಸಿದರು ಮತ್ತು ಗ್ರೀಕ್ ಅಲ್ಲದ ಹಲವು ಪದಗಳಿಂದ ಅದನ್ನು ಶ್ರೀಮಂತ ಗೊಳಿಸಿದರು. ಹೊರಗಿನಿಂದ ಬಂದ ಜನರ ರಾಜಕೀಯ ಹಾಗೂ ಸೈನಿಕಶಕ್ತಿ ಮತ್ತು ಅವರ ಸಾಂಸ್ಕೃತಿಕ ಸಾಧನೆ ಸುಮಾರು ಕ್ರಿ.ಪೂ. ೧೪೦೦ರಲ್ಲಿ ಮೈಸಿನಿಯನ್ ನಾಗರಿಕತೆಯನ್ನು ಸೃಜಿಸಿತು. ಮಿನೋಯನ್ ಲಿಪಿಯ ಕೆಲವು ಶಾಸನಗಳಲ್ಲದೆ ಬೇರೆ ಸಾಹಿತ್ಯದ ಶೋಧನೆಯಾಗಿರಲಿಲ್ಲ. ಆದರೂ ಕೂಡ ಗ್ರೀಕ್ ಸಾಹಿತ್ಯೋದಯಕ್ಕೆ ಕಾರಣವಾದ ದಂತಕಥೆಗಳ ಹಾಗೂ ಪುರಾಣಕಥೆಗಳ ಸೃಜನೆಗೆ ಈ ಕಾಲ ಸಹಾಯಕವಾಯಿತು. ಮೈಸಿನಿಯನ್ ಸಂಸ್ಕೃತಿಯ ವಿನಾಶದಿಂದ ವಿಭಜನೆಗೊಂಡ ನಂತರದ ಹಲವು ಶತಮಾನಗಳಲ್ಲಿ ಹೆಲೆನಿಕ್ ಭಾಷೆ ನಾಲ್ಕು ಉಪಭಾಷೆಗಳಾಗಿ ಬೆಳೆಯಿತು. ಏಯೋಲಿಕ್, ಇಯೋನಿಕ್, ಡೋರಿಕ್ ಮತ್ತು ಅಟ್ಟಿಕ್ ಎಂಬುವೇ ಆ ಉಪಭಾಷೆಗಳು. ಆದರೂ ಕ್ರಿ.ಪೂ. ಎಂಟನೇ ಶತಮಾನದವರೆಗೆ ಬರವಣಿಗೆ ಉಪಯೋಗಕ್ಕೆ ಬಂದಂತೆ ಕಾಣುವುದಿಲ್ಲ. ಆಗ ಗ್ರೀಕ್ ಭಾಷೆಯು ಪ್ಯೊನಿಷಿಯನ್ ಎಂದು ಕರೆಯಲ್ಪಟ್ಟ ಸೆಮಿಟಿಕ್ ಅಕ್ಷರಗಳ ಮೂಲಕ ಅಭಿವ್ಯಕ್ತಿಸಲ್ಪಡುತ್ತಿತ್ತು. ಆದ್ದರಿಂದ ಕ್ರಿ.ಪೂ. ಐದನೇ ಶತಮಾನದವರೆಗೆ ಗ್ರೀಕ್ ಪ್ರಾಚೀನ ಸಾಹಿತ್ಯ ಹಾಡಿಕೆಗೆ ಮತ್ತು ವಾಚನಕ್ಕೆ ಮಾತ್ರ ರಚಿತವಾಗುತ್ತಿತ್ತೇ ಹೊರತು ಲಿಖಿತ ಪ್ರತಿಗಳ ಮೂಲಕ ಪ್ರಸಾರವಾಗುತ್ತಿರಲಿಲ್ಲ.

ಲಿಖಿತ ಕೃತಿಗಳೆನ್ನುವ ಖಚಿತವಾದ ಅರ್ಥದಲ್ಲಿ ಗ್ರೀಕ್ ಸಾಹಿತ್ಯ ಆರಂಭವಾಗುವುದು. ಕ್ರಿ.ಪೂ. ಎಂಟನೇ ಶತಮಾನದ ಉತ್ತರಾರ್ಧದಲ್ಲಿ. ಇಲ್ಲಿಂದ ಅಥೆನ್ಸ್, ಇಥಾಕಾ, ಪೆರಚೋರ ಮತ್ತು ಇಸ್ಚಿಯಾಗಳಂತಹ ಬೇರೆ ಬೇರೆ ಭಾಗಗಳಲ್ಲಿ ಕಲ್ಲಿನಲ್ಲಿ ಕೊರೆದ, ಪಾತ್ರೆಗಳ ಮೇಲೆ ಚಿತ್ರಿಸಿದ ಅಥವಾ ಗೀಚಿದ ಚಿಕ್ಕ ಪುಟ್ಟ ಸಮಕಾಲೀನ ದಾಖಲೆಗಳು ಭಗ್ನಾವಸ್ಥೆಯಲ್ಲಿ ಯಾದರೂ ದೊರೆಯತೊಡಗುತ್ತವೆ. ಕೆಲವು ಎಂದೂ ಹಳಸದ ನರ್ತನ, ಮದ್ಯ, ಪ್ರೇಮ ಮತ್ತು ಸ್ನೇಹಗಳಂತಹ ವಸ್ತುಗಳನ್ನು ಕುರಿತವುಗಳಾಗಿದ್ದರೆ, ಮತ್ತೆ ಕೆಲವು ದೇವದೇವತೆಗಳಿಗೆ ಅರ್ಪಿಸಿದ ವಸ್ತುಗಳ ಸಂಸ್ಮರಣೆಯನ್ನು ಕುರಿತವುಗಳಾಗಿವೆ. ಈ ಎರಡೂ ಬಗೆಯ ಕೃತಿಗಳು ಬಹುಮಟ್ಟಿಗೆ ಹೆಕ್ಸಾಮಿಟರ್ ಛಂದಸ್ಸಿನಲ್ಲಿ ರಚಿತವಾಗಿವೆಯೆಂಬುದು ಗಮನಾರ್ಹ. ವೃತ್ತಿನಿರತ ಕವಿಗಳ ನಿರ್ಬಂಧಕ್ಕೆ ಸಿಲುಕದೆ ಸ್ವತಂತ್ರವಾಗಿ ಆಗ ತಾನೇ ಅಭಿವೃದ್ದಿ ಹೊಂದುತ್ತಿದ್ದ ಸಾಹಿತ್ಯ ಸ್ಥಿತಿಯನ್ನು ಅವು ಪ್ರತಿನಿಧಿಸುತ್ತವೆ. ಎಂಟನೇ ಶತಮಾನದ ಮಧ್ಯಭಾಗದವರೆಗೆ ಗ್ರೀಕರಿಗೆ ತಮ್ಮದೇ ಆದ ಲಿಪಿ ಇರಲಿಲ್ಲವೆಂಬುದೇ ಅದಕ್ಕಿಂತ ಹಿಂದಿನ ಸಾಹಿತ್ಯ ಉಪಲಬ್ಧವಾಗದಿರಲು ಕಾರಣವಾಗಿದೆ. ಇದೂ ಕೂಡ ಪೊನಿಷಿಯನ್ ಭಾಷೆಯ ಸುಧಾರಿತ ರೂಪ. ಇದಾದ ನಂತರ ಗ್ರೀಕ್ ಸಾಹಿತ್ಯದ ರಚನೆ ಮತ್ತು ಪ್ರಸಾರ ಬೆರಗು ಗೊಳಿಸುವ ವೇಗ ಮತ್ತು ಸತ್ವವನ್ನೊಳಗೊಂಡು ಬೆಳೆಯಿತು. ಕಾವ್ಯಕಲೆ ಮತ್ತು ತಂತ್ರ ತಲೆಮಾರಿನಿಂದ ಮಖಿಕವಾಗಿ ಪ್ರಸಾರವಾಗುತ್ತಾ ನಡೆಯಿತು. ಜನಪದ ಕವಿಗಳು ಗಾಯಕರು ಗ್ರೀಕ್ ವೀರರ, ದೇವಸಂಪರ್ಕದಿಂದ ಜನಿಸಿದ ಮಾನವರ ಮತ್ತು ದೇವತೆಗಳ ಉದಾತ್ತವೂ ಸಾಹಸಪೂರ್ಣವೂ ಆದರ್ಶವೂ ಅತಿಮಾನುಷವೂ ಆದ ಕಾರ್ಯಗಳನ್ನು ವಸ್ತುಗೈದು ಹಾಡುತ್ತಾ ಕಾಲದಿಂದ ಕಾಲಕ್ಕೆ ಪರಿಷ್ಕರಿಸುತ್ತಾ ಬೆಳೆಸುತ್ತಾ ಹೋದರು. ಹೋಮರನಿಗಿಂತ ಹಿಂದೆ ಇಂಥ ಒಂದು ಶ್ರೀಮಂತ ಪರಂಪರೆ ಬೆಳೆದು ಬಂದಿತ್ತು. ಈ ಜನಪದ ಕವಿಗಳ ಬಗ್ಗೆ ನಮಗೇನೂ ತಿಳಿದಿಲ್ಲವಾದರೂ ಗ್ರೀಕ್ ಸಾಹಿತ್ಯದ ಬುನಾದಿಯನ್ನು ನಿರ್ಮಿಸಿದವರು ಇವರು. ಇವರಲ್ಲೂ ಹಲವು ಪಂಗಡಗಳಿದ್ದುದು ತಿಳಿದುಬರುತ್ತದೆ. ಕ್ರಿ.ಪೂ. ಹದಿನಾಲ್ಕನೇ ಶತಮಾನದಿಂದ ಹಿಡಿದು ಎಂಟನೇ ಶತಮಾನದವರೆಗಿನ ಗ್ರೀಕ್ ಸಾಹಿತ್ಯದ ಸರಪಣಿಯನ್ನು ಎಳೆದವರು ಇವರು. ಹೋಮರ್ ಕೂಡ ಇಂಥ ಪಂಗಡಗಳಲ್ಲಿ ಒಂದಾದ ಇಯೋನಿಯಾ ಪಂಥಕ್ಕೆ ಸೇರಿದವನು.

ಮಹಾಕಾವ್ಯ

ಗ್ರೀಕರಿಗೆ ಖಚಿತವಾಗಿ ಗೊತ್ತಿದ್ದ ಅತ್ಯಂತ ಪ್ರಾಚೀನ ಸಾಹಿತ್ಯವೆಂದರೆ ಹೋಮರನ ಇಲಿಯಡ್ ಮತ್ತು ಒಡಿಸ್ಸಿ. ಅವುಗಳ ಬಗ್ಗೆ ಆಲೋಚನೆ ಆರಂಭವಾಗುವ ವೇಳೆಗೆ ಅವುಗಳ  ಸುತ್ತ ದಂತ ಕತೆಗಳು ಹೆಣೆದುಕೊಂಡಿದ್ದವು. ಈ ಸಂಕೀರ್ಣ ಕತೆಯಲ್ಲಿ ವೀರಯುಗದ ಜೀವನ ಮತ್ತು ಭಾವನೆಗಳು ಹೆಣೆಯಲ್ಪಟ್ಟಿವೆ. ಅಲ್ಲಿನ ದೇವತೆಗಳು ಅಮರರಾದ್ದರಿಂದ ಕವಿಯ ಗಂಭೀರ ಗಮನ ಮಾನವ ಪಾತ್ರಗಳತ್ತ ಹೆಚ್ಚು ಹರಿದಿದೆ. ಒಡಿಸ್ಸಿಯ ವಸ್ತು ಸರಳವಾದರೂ ಚಾತುರ್ಯದಿಂದ ನೆಯ್ದ ಹಲವಾರು ಕಥೆಗಳಿಂದ ಕೂಡಿ ದೀರ್ಘವೂ ವೈವಿಧ್ಯಮಯವೂ ಆಗಿದೆ. ಇದರ ರೀತಿ ಇಲಿಯಡ್‌ನಷ್ಟು ಗಂಭೀರವಲ್ಲವಾದರೂ, ಆಗಿನ ಕಾಲದ ಜೀವನದ-ಶ್ರೀಮಂತ ಪ್ರಭುತ್ವದ ಒಳಜಗಳ, ಸಾಗರಯಾನ ಹಾಗೂ ಭೂಯಾನಗಳ- ಮತ್ತೊಂದು ಮುಖವನ್ನು ಪರಿಚಯಿಸುತ್ತದೆ. ಇದರ ವಸ್ತು ಜನಪದ ಕಥೆಗಳಿಂದ ಪಡೆದುದಾಗಿದ್ದು ಅದ್ಭುತವೂ ಆಶ್ಚರ್ಯಕರವೂ ಆದ ರೀತಿಯಲ್ಲಿ ನಿರೂಪಿತವಾಗಿದೆ.

ವಸ್ತುವಿನ ದೃಷ್ಟಿಯಿಂದ ಪ್ರಾಚೀನ ಮಹಾಕಾವ್ಯಗಳಾಗಿದ್ದರೂ ಇವು ಮಹಾಕಾವ್ಯದ ಪ್ರಥಮ ಪ್ರಯೋಗಗಳಾಗಿರದೆ ಸುದೀರ್ಘ ಪರಂಪರೆಯೊಂದರ ಪರಿಣತ ಫಲಗಳಾಗಿವೆ. ಇವುಗಳ ಭಾಷೆ ಏಯೋಲಿಕ್ ಮತ್ತು ಇಯೋನಿಕ್ ಉಪಭಾಷೆಗಳ ಸಮ್ಮಿಶ್ರಣವಾಗಿ ರುವುದಲ್ಲದೆ ಹಲವು ಕಾಲಗಳಿಗೆ ಸಂಬಂಧಿಸಿದ ಪದಪ್ರಯೋಗಗಳನ್ನೂ ಒಳಗೊಂಡಿದೆ. ಇದರ ಹೆಕ್ಸಾಮೀಟರ್ ಗಡುಸಾಗಿರದೆ ಗಮನಾರ್ಹ ವೈವಿಧ್ಯದಿಂದ ಕೂಡಿದೆ. ಕಂಚು ಮತ್ತು ಕಬ್ಬಿಣದ ಯುಗಗಳ ಎರಡು ವಿಭಿನ್ನ ಸಂಸ್ಕೃತಿಗಳ ವೈಶಿಷ್ಟ್ಯಗಳೂ ಇವುಗಳಲ್ಲಿವೆ. ಇವುಗಳಲ್ಲಿ ಒಂದು ಈ ಕಾವ್ಯಗಳಿಗೆ ವಸ್ತುವನ್ನೊದಗಿಸಿದ ಜನಪದ ಕಥೆಗಳ ಉಗಮದ ಕಾಲಕ್ಕೆ ಸಂಬಂಧಿಸಿದ್ದಾದರೆ, ಮತ್ತೊಂದು ಈ ಕಾವ್ಯಗಳ ರಚನೆಯ ಕಾಲಕ್ಕೆ ಸಂಬಂಧಿಸಿದೆ. ಈ ಕಾವ್ಯಗಳಿಗಿಂತ ಹಿಂದೆ ಸಾಕಷ್ಟು ಕಾವ್ಯ ಕೃಷಿ ನಡೆದಿದೆಯೆನ್ನಲು ಇವುಗಳಲ್ಲೇ ಕೆಲವು ಆಧಾರಗಳು ದೊರೆಯುತ್ತವೆ. ಗ್ರೀಕ್ ಸಂಪ್ರದಾಯ ಈ ಹೋಮರ್ ಪೂರ್ವಯುಗಕ್ಕೆ ಅರ್ಪ್ಯುಯಸ್ ಮತ್ತು ಮುಸೇಯಸ್ ಮುಂತಾದವರನ್ನು ಹೆಸರಿಸುತ್ತದೆ.

ಈ ಕಾವ್ಯದ ಪಾತ್ರಗಳು ಮತ್ತು ಶ್ರೀಮಂತ ಪ್ರಭುತ್ವದ ರೀತಿಯ ಸಾಮಾಜಿಕ ವ್ಯವಸ್ಥೆ ಕ್ರಿ.ಪೂ. ೧೨೦೦ಕ್ಕೆ ಸೇರಿದ ಮೈಸಿನಿಯನ್ ಯುಗಕ್ಕೆ ಸಂಬಂಧಿಸಿರಬಹುದು. ಈ ಯುಗ ಅಶಾಂತವೂ ಭೂ ಮತ್ತು ಸಾಗರ ಸಮರಗಳಿಂದ ಡೋಲಾಯಮಾನವೂ ಆಗಿತ್ತು. ಟ್ರಾಯ್ ಮೇಲಿನ ಸಮರ ಇಂಥದೊಂದು. ಆ ಯುಗದ ಶ್ರೀಮಂತರ ಮತ್ತು ರಾಜರುಗಳ ಸಾಹಸ ಕಾರ್ಯಗಳನ್ನು ಆಸ್ಥಾನದ ಗಾಯಕರು ಅಥವಾ ಆಶುಕವಿಗಳು ಹಾಡುತ್ತಿದ್ದು, ಕಾಲಕ್ರಮೇಣ ಅವು ಒಂದು ಸಮೃದ್ಧ ಸಂಪ್ರದಾಯವನ್ನು ನಿರ್ಮಿಸಿದವು. ಇವು ಯುಗದಿಂದ ಯುಗಕ್ಕೆ ವಾಕ್ಪರಂಪರೆಯಿಂದ ಹಾದು ಬರುವಾಗ ಆಯಾ ಯುಗದ ವಿಶಿಷ್ಟ ಪ್ರಭಾವಗಳನ್ನು ಧಾರಣ ಮಾಡಿಕೊಂಡು ಮಾರ್ಪಡುತ್ತಾ ನೇರ್ಪಡುತ್ತಾ ಮತ್ತು ಆಯಾ ಗಾಯಕನ ಸ್ವಂತ ಪ್ರತಿಭೆಯ ಅಂಶಗಳನ್ನು ಪಡೆದುಕೊಂಡು ಪುಷ್ಪವಾದವು. ಟ್ರಾಯ್ ಕದನ ನಡೆಯಿತೆಂದು ಹೇಳಲಾಗುವ ಕ್ರಿ.ಪೂ. ೧೧೮೪ರ ನಂತರ ಮೈಸಿನಿಯನ್ ನಾಗರಿಕತೆ ಖಿಲವಾಗುತ್ತ ಬಂತು. ಈ ಮೈಸಿನಿಯನ್ ನಗರಗಳು ಹೆಲನಿಕ್ ನಗರಗಳಂತೆ ಗ್ರೀಕರ ಮುಖ್ಯ ಪ್ರದೇಶದಲ್ಲಿದ್ದವು.  ಡೋರಿಯನ್ನರ ಆಕ್ರಮಣವಾದಾಗ ಆ ಜನರಲ್ಲಿ ಹಲವರು ಓಡಿ ಹೋಗಿ ಏಷ್ಯಾ ಮೈನರಿನ ಪಶ್ಚಿಮ ತೀರದಲ್ಲಿ ಮತ್ತು ಅನಂತರ ಏಯೋಲಿಸ್ ಹಾಗೂ ಇಯೋನಿಯಾ ಎಂದು ಕರೆಯಲ್ಪಟ್ಟ ಜಿಲ್ಲೆಗಳಲ್ಲಿ ನೆಲೆಸಿದರು; ತಮ್ಮ ಹಿಂದಿನ ಕಥೆ ಮತ್ತು ಲಾವಣಿಗಳನ್ನು ತಮ್ಮ ಹೊಸ ವಾಸ ಸ್ಥಳಗಳಲ್ಲಿ ಹಾಡಿ ಬೆಳೆಸಿದರು. ಸುಮಾರು ಒಂಬತ್ತನೇ ಶತಮಾನದಲ್ಲಿ ಹೋಮರ್ ಎಂಬ ಕವಿ ತನಗೆ ದೊರೆತ ಸಾಮಗ್ರಿಯನ್ನುಪಯೋಗಿಸಿಕೊಂಡು ಈ ಮಹಾಕೃತಿಗಳನ್ನು ರಚಿಸಿದ.

ಈ ಕಾವ್ಯಗಳ ಉದ್ದೇಶ ಘನ ಗಂಭೀರವಾಗಿರುವುದರಿಂದ ಇವುಗಳ ಕ್ರಿಯೆ ದೃಶ್ಯದಿಂದ ದೃಶ್ಯಕ್ಕೆ ವೇಗವಾಗಿ ಹರಿಯುತ್ತದೆ. ತನ್ನ ಕೇಳುಗರ ಮನಸ್ಸಿನ ಮೇಲೆ ಪ್ರಭಾವ ಬೀರಲೋಸುಗ ಅಲ್ಲಲ್ಲಿ ಪುನರುಕ್ತಿಗಳನ್ನು ಹೇರಳವಾಗಿ ಬಳಸಿದ್ದಾನೆ. ಒಂದು ರೀತಿಯಲ್ಲಿ ವಿಸ್ತೃತವಾದ ಲಾವಣಿ ತಂತ್ರವನ್ನು ಇದು ಹೋಲುತ್ತದೆ. ಕ್ರಿ.ಪೂ. ಆರನೇ ಶತಮಾನದವರೆಗೆ ‘ಹೋಮರಿಡೆಯ್’ ಎಂಬ ಗಾಯಕರು ಇವುಗಳನ್ನು ಗ್ರೀಕ್ ಪ್ರಾಂತ್ಯದಲ್ಲೆಲ್ಲಾ ಹಾಡಿ ಪ್ರಚುರಗೊಳಿಸಿದರು. ಅನಂತರ ಇವು ಮುಂದಿನ ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ಕಾವ್ಯ ವಸ್ತುವಿನ ಗಣಿಯಾಗಿ ಪರಿಣಮಿಸಿದವು.

ಹೋಮರನ ನಂತರ ನೆನೆಯಲೇ ಬೇಕಾದ ಹೆಸರು, ಮಹಾಕಾವ್ಯ ಕಲೆಯಲ್ಲಿ ಹೋಮರನಿ ಗಿಂತ ಭಿನ್ನವಾದ ಪರಂಪರೆಯೊಂದನ್ನು ಸ್ಥಾಪಿಸಿದ, ಹಿಸಿಯಡ್. ದಂತ ಕಥೆಯೊಂದರ ಪ್ರಕಾರ ಇವರಿಬ್ಬರೂ ಸಮಕಾಲೀನರು ಮಾತ್ರವಲ್ಲ. ಕಾವ್ಯ ಸ್ಪರ್ಧೆಯೊಂದರಲ್ಲಿ ಹೋಮರನನ್ನು ಹಿಸಿಯಡ್ ಸೋಲಿಸಿದ ಕೂಡಾ. ಕ್ರಿ.ಪೂ. ಏಳನೇ ಶತಮಾನದ ಆರಂಭ ದಲ್ಲಿದ್ದ ಆರ್ಖಿಲೋಕಸನ ಕಾಲಕ್ಕಾಗಲೇ ಈತ ತುಂಬ ಪ್ರಸಿದ್ಧನಾಗಿದ್ದ ಕಾರಣ ಇವನ ಕಾಲ ಕ್ರಿ.ಪೂ. ಎಂಟನೇ ಶತಮಾನಕ್ಕಿಂತ ಈಚಿನದಲ್ಲ. ಈತ ಹೋಮರನಂತೆ ಚಾರಣ ಕವಿಯಲ್ಲ ರೈತ. ಇವನ ಹೆಸರಿನಲ್ಲಿ ಮೂರು ದಿವ್ಯ ಕಾವ್ಯಗಳೂ ಮತ್ತು ಕೆಲವು ತುಣುಕುಗಳೂ ದೊರೆತಿವೆ. ‘ಕೆಲಸಗಳು ಮತ್ತು ದಿನಗಳು’ (Works and days). ‘ದೇವ ವಂಶಾವಳಿ’ (Theorory) ಮತ್ತು ‘ಹೆರಾಕ್ಲಸನ ಗುರಾಣಿ’ (Shield of Heracles) ಇವೇ ಆ ಕೃತಿಗಳು, ಮೊದಲನೆಯದು, ಅವನ ಸೋದರನಿಗೆ ಬದುಕುವ ವಿವಿಧ ಮಾರ್ಗಗಳನ್ನು ಬೋಧಿಸಿದ ನೀತ್ಯಾತ್ಮಕವಾದ ವೈಯಕ್ತಿಕ ಕಾವ್ಯ. ಬೊಯೊಷನ್ ರೈತರ ಕಷ್ಟ ಜೀವನದ ನೈಜ ಚಿತ್ರಣವನ್ನು ಇದು ನೀಡುತ್ತದೆ. ಎರಡನೆಯದು, ಗ್ರೀಕ್ ಪುರಾಣಗಳ ವ್ಯವಸ್ಥಿತವಾದ ಪ್ರಥಮ ನಿರೂಪಣೆ. ಪ್ರತಿಭಾ ವಿಲಾಸವನ್ನು ಮೆರೆಯುವುದಕ್ಕಿಂತ ಹೆಚ್ಚಾಗಿ ಅವುಗಳಲ್ಲಿ ಅಡಕವಾಗಿರುವ ನೀತಿಯನ್ನು ಜನತೆಯು ಅರಿಯಬೇಕೆಂಬ ದೃಷ್ಟಿ ಅವನಿಗೆ ಪ್ರಧಾನ. ಮೂರನೆಯದು ಹಿಸಿಯಡ್ ಕೃತವಲ್ಲವೆಂದೂ ಇತ್ತೀಚಿನದೆಂದೂ ಬಹುಮಂದಿ ವಿಮರ್ಶಕರ ಅಭಿಪ್ರಾಯ. ಹೋಮರನ ಕೃತಿಗಳಲ್ಲಿ ಕಾಣುವ ಶ್ರೀಮಂತ ಕಲಾವೈಭವ ಇವುಗಳಲ್ಲಿ ಕಾಣದಿದ್ದರೂ ವಾಸ್ತವತೆಯ ಕಡೆಗೆ ಜನಮನವನ್ನು ತಿರುಗಿಸಿದ ಈ ಕೃತಿಗಳು ಪ್ರಚಂಡ ಜನಪ್ರಿಯತೆಯನ್ನು ಪಡೆದು ಮುಂದಿನ ಹಲವರಿಗೆ ಅನುಕರಣೀಯ ಆದರ್ಶಗಳಾದವು. ಉದ್ದೇಶ ಭಿನ್ನವಾದರೂ ಇವುಗಳೂ ಮಹಾಕಾವ್ಯದ ಮಾದರಿಯಲ್ಲೇ ಇವೆ.

ಅನಂತರ ಐಯೋನಿಯನ್ ತತ್ವಜ್ಞಾನಿಗಳು ತಮ್ಮ ಪ್ರಪಂಚಕ್ಕೆ ಸಹಜವಾದ ರೀತಿಯಲ್ಲಿ ಬೌದ್ದಿಕ ವಿವರಣೆ ನೀಡಲು ಬಯಸಿದರು, ಈ ಕಾರಣ ಮಹಾಕಾವ್ಯದ ಛಂದಸ್ಸು ಮತ್ತು  ಪದಶಯ್ಯೆ ಅವರಿಗೆ ಅನುಕೂಲ ಮಾಧ್ಯಮವಾಯಿತು. ಇದರ ಜೊತೆಗೆ ಆರ್ಫಿಕ್ ಪಂಥ ಉದಿಸಿ (ಕ್ರಿ.ಪೂ. ಆರನೇ ಶತಮಾನ) ಒಲಂಪಿಯನ್ ಧರ್ಮದ ಮಹಾಕಾವ್ಯಗಳಿಗೆ ಹೊರತಾದ ಆತ್ಮದ ರೂಪಾಂತರ ಮತ್ತು ಮೂಲಪಾಪದ ಸಿದ್ಧಾಂತಗಳನ್ನು ಮಹಾಕಾವ್ಯದ ಛಂದಸ್ಸಿನಲ್ಲಿ ರಚಿಸಿದರು. ಹೀಗೆ ಆರನೇ ಶತಮಾನದ ಅಂತ್ಯದವರೆಗೂ ಗ್ರೀಕ್ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ವಿವಿಧ ಲೇಖಕರು ವಿವಿಧ ರೀತಿಯ ಸಾಹಿತ್ಯ ರಚನೆಗೆ ಹೋಮರನ ಮಹಾಕಾವ್ಯಗಳ ಭಾಷೆ ಮತ್ತು ಛಂದಸ್ಸುಗಳನ್ನೇ ಉಪಯೋಗಿಸುತ್ತಿದ್ದರು.

ಭಾವಗೀತೆ

ಕ್ರಿ.ಪೂ. ಏಳನೇ ಶತಮಾನದ ಹೊತ್ತಿಗೆ ಶ್ರೀಮಂತ ಸಮಾಜ ಸಂಪೂರ್ಣವಾಗಿ ಗ್ರೀಸಿನಿಂದ ಅದೃಶ್ಯವಾಯಿತು. ಗೊಂದಲಮಯವಾದ ಯುಗವೊಂದು ಆರಂಭವಾಗಿ ಹಿಂದಿನ ಸಂಪ್ರದಾಯಗಳನ್ನು ಆಗಿನ ನಗರ ರಾಷ್ಟ್ರಗಳ ರೀತಿನೀತಿಗನುಗುಣವಾಗಿ ಸುಧಾರಿಸತೊಡಗಿತು. ಇದರ ಪರಿಣಾಮವಾಗಿ ಭೂಮಿ ಮತ್ತು ವ್ಯಾಪಾರವನ್ನೇ ಅವಲಂಬಿಸಿದ ಮಧ್ಯಮ ವರ್ಗವೊಂದು ಹುಟ್ಟಿಕೊಂಡಿತು. ಈ ಯುಗವನ್ನು ರಾಜಕೀಯವಾಗಿ ದುಷ್ಟ ಪ್ರಭುತ್ವದ (Tyrants) ಕಾಲವೆನ್ನುತ್ತಾರೆ. ಇದರ ನಂತರ ಪ್ರಜಪ್ರಭುತ್ತ್ವ ಬಂದುದರಿಂದ ವ್ಯಕ್ತಿಗೆ ಪ್ರಾಮುಖ್ಯ ದೊರೆತು ಅವನ ವೈಯಕ್ತಿಕ ಭಾವನೆಗಳ ಅಭಿವ್ಯಕ್ತಿಗೆ ಬೆಲೆ ಬಂದಿತು. ಏಯೊಲಿಕ್ ಮತ್ತು ಇಯೋನಿಯನ್ ನಗರಗಳಲ್ಲಿ ಈ ತುಡಿತ ಮೊದಲು ಆರಂಭವಾಯಿತು. ಡೊರಿಯನ್ ನಗರಗಳಲ್ಲಿ ವ್ಯಕ್ತಿ ರಾಷ್ಟ್ರದ ಒಂದು ಅಂಗವಾಗಿಯೇ ಮಾರ್ಪಟ್ಟು ಅದರ ಆಗುಹೋಗುಗಳಲ್ಲಿ ಪಾಲುದಾರನಾದ. ಈ ವೈಯಕ್ತಿಕತೆಯ ತುಡಿತ ಮಿಡಿತ ಭಾವಗೀತಾ ಕಾವ್ಯದಲ್ಲಿ ಅಭಿವ್ಯಕ್ತವಾಯಿತು. ಇಂದಿನ ಭಾವಗೀತೆ ಅಂದಿನದಕ್ಕಿಂತ ಸ್ವರೂಪದಲ್ಲಿ ತುಂಬ ವಿಶಾಲವಾಗಿದೆ. ಅದು ಲೈರ್ ವಾದ್ಯದೊಡನೆ ಹಾಡುವ ಗೀತೆ ಮಾತ್ರ. ಇದರಲ್ಲಿ ಎರಡು ಬಗೆ : ಏಕವ್ಯಕ್ತಿ ಗೀತ ಮತ್ತು ಮೇಳ ಗೀತ. ಆದರೆ ಈ ವೈಯಕ್ತಿಕ ಅಭಿವ್ಯಕ್ತಿಯ ತುರ್ತು ಮತ್ತೆರಡು ರೀತಿಯ ಪದ್ಯಗಳ ರಚನೆಗೆ ದಾರಿ ಮಾಡಿತು. ಅವೇ ಎಲಿಜಿಕ್ ಮತ್ತು ಇಯಾಂಬಿಕ್ ಗೀತೆಗಳು. ಇವುಗಳನ್ನು ಹಾಡುವ ಬದಲು ವಾಚಿಸಲು ರಚಿಸಲಾಯಿತು. ಭಾವಗೀತಾ ಕಾವ್ಯದಲ್ಲಿ ಸಂಗೀತದ ಅಂಶ ಪ್ರಧಾನ.

ಏಲಿಜಿಕ್ ಕಾವ್ಯ ತನ್ನ ಪದಶಯ್ಯೆಯಲ್ಲಿ ಹೋಮರನ ಕಾವ್ಯಗಳಿಗೆ ಋಣಿಯಾಗಿದೆ. ಇವುಗಳಲ್ಲಿ ಬಹುಭಾಗ ಈಗ ಉಪಲಬ್ಧವಿಲ್ಲವಾದರೂ ದೊರೆತಿರುವ ಕೆಲವೇ ಶ್ರೇಷ್ಠ ಎಲಿಜಿಗಳು ಗ್ರೀಸಿನ ಮುಖ್ಯ ಪ್ರದೇಶಗಳಾದ ಅಥೆನ್ಸ್, ಸ್ಪಾರ್ಟಾ ಮತ್ತು ಮೆಗಾರಗಳಲ್ಲಿ ಬರೆದವುಗಳಾಗಿವೆ. ಇವು ಉದ್ದೇಶದಲ್ಲಿ ರಾಜಕೀಯವಾಗಿಯೂ ನೀತ್ಯಾತ್ಮಕವಾಗಿಯೂ ಇವೆ. ಟೈರ್ಟೇಯಸ್, ಸೋಲಾನ್ ಮತ್ತು ಥಿಯೋಗ್ನಿಸ್ ಎಲಿಜಿಕ್ ಕಾವ್ಯ ಕರ್ತೃಗಳಲ್ಲಿ ಶ್ರೇಷ್ಠರು. ಮೊದಲನೆಯವನು ಮೆಸ್ಸೀನಿಯಾವನ್ನು ಗೆಲ್ಲಲು ತನ್ನ ಸ್ಪಾರ್ಟಾದ ಜನತೆಯನ್ನು ಪ್ರಚೋದಿಸುವ ಸಲುವಾಗಿ ಸಮರ ಗೀತಗಳನ್ನು ಬರೆದ. ಸೋಲಾನ್ ಅಥೆನ್ಸಿನ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ತನ್ನ ಕಾವ್ಯದ ಮೂಲಕ ಜನಪ್ರಿಯಗೊಳಿಸಲು ಯತ್ನಿಸಿದ. ಥಿಯೋಗ್ನಿಸ್ ತನ್ನ ಮೆಗಾರ ರಾಜ್ಯದ ಪ್ರಜಪ್ರಭುತ್ವದ ಅತಿರೇಕವನ್ನು ದೂರಿದ. ಎಲಿಜಿ ಇದಕ್ಕೆ ಮಾತ್ರ ಸೀಮಿತವಾಗದೆ ದುಃಖ, ಪ್ರೇಮ ಮತ್ತು ಸಮಾಧಿಕ್ರಿಯೆ ಸಂಗತಿಗಳಿಗೂ ಬಳಸಲ್ಪಟ್ಟಿತು. ಆದರೆ ಅಲೆಕ್ಸಾಂಡ್ರಿಯನ್ ಯುಗದವರೆಗೆ ಇವುಗಳಾವುವೂ ಪೂರ್ಣವಾಗಿ ಬೆಳವಣಿಗೆ ಹೊಂದಲಿಲ್ಲ. ಅತ್ಯಂತ ಶ್ರೇಷ್ಠ ಪ್ರಾಚೀನ ಎಲಿಜಿಗಳು ಅನುಭವದಲ್ಲಿ ವೈಯಕ್ತಿಕವಾದರೂ ವಸ್ತುವಿನಲ್ಲಿ ರಾಜಕೀಯವಾಗಿಯೇ ಉಳಿದವು. ಕ್ಯಾಲಿನಸ್, ಆರ್ಖಿಲೋಕಸ್, ಮಿಮ್ನೆರ್ಮಸ್, ಪೋಸಿಲೈಡ್ಸ್, ಕ್ಷೆನೋಫೆನ್ಸ್ ಮತ್ತು ಸಿಮೊನೈಡ್ಸ್ ಇತರ ಎಲಿಜಿಕ್ ಕವಿಗಳಲ್ಲಿ ಮುಖ್ಯರಾದವರು.

ಇಯಾಂಬಿಕ್ ಕಾವ್ಯ ಎಲಿಜಿಗಿಂತ ಹೆಚ್ಚು ಸಹಜ ಸ್ಫೂರ್ತವಾದ ಮೂಲ. ಏಕೆಂದರೆ ಇದು ಗ್ರೀಕ್ ಭಾಷೆಗೆ ತುಂಬ ಹತ್ತಿರವಾದ ಸಹಜ ಲಯ. ಮೊದಲು ಗ್ರಾಮೀಣ ಹಬ್ಬಗಳಲ್ಲಿ ಇವುಗಳ ಪ್ರಯೋಗವಿತ್ತು. ಇವನ್ನು ಸಾಹಿತ್ಯ ಪ್ರಕಾರವಾಗಿ ಮಾರ್ಪಡಿಸಿದ ಪ್ರಥಮ ವ್ಯಕ್ತಿ ಎಂದರೆ ಏಳನೇ ಶತಮಾನದ ಥಸೋಸ್‌ನ ಆರ್ಖಿಲೋಕಸ್. ರಾಜಕೀಯವಾಗಿರಲಿ ಪ್ರೇಮ ವಾಗಿರಲಿ ದಂತಕತೆಯಾಗಿರಲಿ ಆ ಗೀತೆಗಳು ಮಾತ್ರ ತೀವ್ರವಾದ ವೈಯಕ್ತಿಕ ಭಾವಗಳಿಂದ ತುಂಬಿದ್ದವು. ಕೊನೆಗೆ ಟ್ರಾಜಿಡಿಕಾರರು ಮತ್ತು ನಾಟಕಗಳ ಸಂವಾದ ಭಾಗಗಳಿಗೆ ಸಹಜ ಛಂದಸ್ಸಾಗಿ ಇದನ್ನು ಬಳಸಿಕೊಂಡರು.

ಸೋಲೋ ಲಿರಿಕ್ (Sololyric)

ಹೆಸರೇ ಸೂಚಿಸುವಂತೆ, ಒಬ್ಬನೇ ಹಾಡಲು ಬರೆದುದು. ಕವಿಯೇ ರಚಕನೂ ಸಂಗೀತ ಸಂಯೋಜಕನೂ ಆಗಿದ್ದ. ಇದರ ರಚನೆ ಮತ್ತು ಛಂದಸ್ಸಿನ ಸಾರಳ್ಯ ಹಾಗೂ ಶಬ್ದಕೋಶ ಆಡುಮಾತಿಗೆ ಹತ್ತಿರವಾಗಿತ್ತು. ಕವಿ ತನ್ನ ಮಿತ್ರರ ಬಗ್ಗೆ, ಪ್ರೇಮ ರಾಜಕೀಯಗಳ ಬಗ್ಗೆ ಮನೋಧರ್ಮದ ಬಗ್ಗೆ ತೋಡಿಕೊಂಡ ಭಾವಗಳೇ ಅದರ ಮುಖ್ಯ ಸ್ವರೂಪ. ಲೇಸ್‌ಬಾಸ್ ದ್ವೀಪ (Aeolian island of  Lesbvos) ಇವುಗಳ ಮುಖ್ಯ ಉಗಮಸ್ಥಾನ. ಟ್ಯೆರ‍್ಪಂಡೆರ್, ಆಲ್ಕೇಯಸ್ ಮತ್ತು ಸ್ಯಾಪ್ರೋಇದರ ಮುಖ್ಯ ಲೇಖಕರು. ಅನಂತರ ಇದು ಇಯೋನಿಯನ್ ಬರಹಗಾರರಿಂದ ಮುಂದುವರಿಸಲ್ಪಟ್ಟಿತು. ಈ ವರ್ಗದ ಶ್ರೇಷ್ಠ ಕವಿ ಅನೇಕ್ರಿಯಾನ್. ಬರಬರುತ್ತಾ ಕ್ರಿ.ಪೂ. ಐದನೇ ಶತಮಾನದಲ್ಲಿ ಗಂಭೀರ ಸಾಹಿತ್ಯ ಪ್ರಕಾರವಾಗಿ ಅದು ಉಳಿಯಲಿಲ್ಲ.

ಇಯೋನಿಯನ್ ಲೇಖಕರಿಂದ ಆರಂಭವಾದ ಮೇಳಗೀತೆ ಡೋರಿಯನ್ ರಾಷ್ಟ್ರದ ಲೇಖಕರಿಂದ ಸಂಪದ್ಯುಕ್ತವಾಯಿತು. ಆ ಭಾಷೆಯ ಪ್ರಧಾನ ಕಾಣಿಕೆಯಾಗಿ ರೂಪುಗೊಂಡ ಈ ಪ್ರಕಾರ ಲೇಖಕನ ವೈಯಕ್ತಿಕ ಭಾವನೆಗಳನ್ನು ಬಿಂಬಿಸುವುದಕ್ಕಿಂತ ಹೆಚ್ಚಾಗಿ ವಿವಾಹ, ಶೋಕ, ದೈವಸೇವೆ, ಅಣುಕು ನೃತ್ಯ ಇತ್ಯಾದಿಗಳಿಗೆ ಹೊಂದಿಕೊಳ್ಳುವಂತೆ ಹಲವು ರೂಪ ಗಳನ್ನು ಪಡೆಯಿತು. ಧಾರ್ಮಿಕ ಧ್ವನಿಯೇ ಪ್ರಧಾನವಾಗಿತ್ತು. ಅತ್ಯಂತ ಪ್ರಾಚೀನವಾದ ಮೇಳಗೀತೆ ಎಂದರೆ ಆಲ್ಕ್‌ಮನ್ನನಿಂದ ರಚಿತವಾದ ಒಂದು ತುಣುಕು. ಸ್ಪಾರ್ಟಾದ ಹುಡುಗಿಯರ ಒಂದು ಮೇಳಕ್ಕಾಗಿ ಇದನ್ನು ರಚಿಸಲಾಯಿತು. ಆರನೇ ಶತಮಾನದಲ್ಲಿ ಇವುಗಳ ರಚನೆ ಮತ್ತೂ ಸಂಕೀರ್ಣವಾಗಿ, ವಸ್ತುಧರ್ಮದಿಂದ ಹಿಡಿದು ಒಲಂಪಿಯನ್ ಆಟಗಳಲ್ಲಿ ವಿಜಯಿಗಳಾದವರ ಸಾಹಸದವರೆಗೂ ವಿಸ್ತೃತವಾಯಿತು. ಜನಪ್ರಿಯತೆ ಅಧಿಕ ಗೊಂಡಂತೆಲ್ಲ ಮುಕ್ಕೂಟ ರಚನೆ (trriodic-structure) ಬಳಕೆಗೆ ಬಂತು. ಸ್ವೆಸಿಕೋರಸ್, ಇಬಿಕಸ್, ಸಿಮೊನೈಡ್ಸ್, ಬ್ಯಾಬ್ಟಿಲೈಡ್ಸ್ ಮತ್ತು ಪಿಂಡಾರ್ ಈ ಗೀತಕರ್ತರಲ್ಲಿ ಪ್ರಮುಖರು. ಪಿಂಡಾರನ ಪ್ರಗಾಥಗಳು (odes) ತುಂಬ ಪ್ರಸಿದ್ಧವಾದವು. ಕಥಾನಿರೂಪಣೆ, ಸಂಗೀತ ಗುಣ, ನಿಸರ್ಗ ಸೌಂದರ್ಯ ಪ್ರಜ್ಞೆ ಮತ್ತು ಮಧುರ ಪದಶಯ್ಯೆ ಅವನ ಕವಿತೆಗಳ ವಿಶಿಷ್ಟ ಲಕ್ಷಣಗಳು. ಬರಬರುತ್ತಾ ಕ್ರಿ.ಪೂ. ಐದನೇ ಶತಮಾನದಲ್ಲಿ ಇದರ ಸ್ಥಾನವನ್ನು ಟ್ರ್ಯಾಜಿಡಿ ಆಕ್ರಮಿಸಿತು.

ನಾಟಕ

ಐದನೇ ಶತಮಾನದ ಪ್ರಮುಖ ಸಾಹಿತ್ಯ ಪ್ರಕಾರ ನಾಟಕ. ಉಳಿದವುಗಳಂತೆ ಇದರ ಮೂಲವೂ ಅಸ್ಪಷ್ಟ. ಬಹುಮಟ್ಟಿಗೆ ಒಪ್ಪಬಹುದಾದೊಂದು ವಾದವೆಂದರೆ ಅದರ ಮೂಲ ಗ್ರಾಮೀಣವಾದದ್ದು, ಡಯೋನಿಸಸ್ ದೇವತೆಯ ಆರಾಧನೆಯಲ್ಲಿ (ದೇವತೆಯನ್ನು ಕೊಂದು ಶೋಕ ವ್ಯಕ್ತಪಡಿಸುವ ಸಂಪ್ರದಾಯ) ಮೇಳಗೀತ ಬಳಕೆಯಾಗುತ್ತಿದ್ದದ್ದು. ಈ ಕಾರಣ ಮೇಳ, ಗಂಭೀರತೆ ಮತ್ತು ಮರಣಗಳು ಟ್ರಾಜಿಡಿಯ ಬೆಳವಣಿಗೆಯ ಅನಿವಾರ್ಯ ಅಂಗಗಳಾದವು. ಬಹುಕಾಲ ಇದೊಂದು ಅರೆಸಾಹಿತ್ಯ ಪ್ರಕಾರವಾಗಿಯೇ ಇತ್ತು. ಡೆಸ್ಪಿಸ್ ಎಂಬುವನು ಇದಕ್ಕೆ ಒಬ್ಬ ನಟನನ್ನು ಸಂಯೋಜಿಸಿ ಟ್ರ್ಯಾಜಿಡಿಯ ಜನಕನಾದ ಎಂಬ ಅಭಿಪ್ರಾಯವಿದೆ. ನಟನ ಪ್ರವೇಶ ಅವನಿಗೂ ಮೇಳದವರಿಗೂ ಸಂವಾದದ ಅಗತ್ಯವನ್ನುಂಟು ಮಾಡಿತು. ಆದ್ದರಿಂದ ನಟ ಮತ್ತು ಮೇಳದವರ ನಡುವಣ ಕರ್ಷಣ ನಾಟಕಕ್ರಿಯೆಗೆ ಅನುವುಮಾಡಿತು. ಕ್ರಿ.ಪೂ. ೫೨೭ರ ಸುಮಾರಿನಲ್ಲಿ ಪೇಯಿಸಿಸ್ಟ್ರಾಟಸ್ ದೊರೆ ಅಥೆನ್ಸಿನಲ್ಲಿ ಡಯೊನಿಸ್ ದೇವತೆಯ ರಾಷ್ಟ್ರೀಯ ಹಬ್ಬಗಳಲ್ಲಿ ಟ್ರ್ಯಾಜಿಡಿಯ ಸ್ಪರ್ಧೆಗಳನ್ನೇರ್ಪಡಿಸಿದ. ಈ ಸ್ಪರ್ಧೆ ಹಲವು ನಾಟಕಕಾರರ ಪ್ರಾದುರ್ಭಾವಕ್ಕೆ ಕಾರಣವಾಯಿತು. ಹೀಗೆಯೇ ಪ್ರಯೋಗ ಮತ್ತು ಪ್ರದರ್ಶನಗಳು ನಡೆದು ಒಂದನೆಯ ಶತಕದ ಆರಂಭದಲ್ಲಿ ಈಸ್ಕಿಲಸ್ ಬರವಣಿಗೆ ಆರಂಭಿಸಿದಾಗ ಟ್ರ್ಯಾಜಿಡಿ ತನ್ನ ಪೂರ್ಣ ಸ್ವರೂಪವನ್ನು ಪಡೆಯಿತು.

ಈಸ್ಕಿಲಸ್, ಸಾಫೂಕ್ಲಿಸ್ ಮತ್ತು ಯೂರಿಪಿಡಿಸ್ ಟ್ರ್ಯಾಜಿಡಿ ಲೋಕದ ಚಕ್ರವರ್ತಿಗಳು. ಈಸ್ಕಿಲಸನ ಏಳು ನಾಟಕಗಳು ಮಾತ್ರ ಉಳಿದಿವೆ. ಇವುಗಳ ವಸ್ತು ಡಯೋನಿಸಸ್ ದೇವತೆಯನ್ನು ಕುರಿತ ಐತಿಹ್ಯಗಳು, ಮಹಾಕಾವ್ಯಗಳು ಮತ್ತು ಪುರಾಣಗಳಿಂದ ಆರಿಸಿದ್ದು. ಅತಿ ಪ್ರಾಮುಖ್ಯ ಪಡೆದ ಸಮಕಾಲೀನ ವಸ್ತುವೂ ಅಪರೂಪವಾಗಿ ಬಳಕೆಯಾಗಿದೆ. ಮೇಳದ ಭಾಗ ಇವುಗಳಲ್ಲಿ ಪ್ರಧಾನವಾಗಿದ್ದು ನಾಟಕೀಯ ಭಾಗಗಳು ಪೂರ್ಣ ಬೆಳೆಯದೆ ನಿರೂಪಣೆ ವರ್ಣನೆಗಳಿಂದ ತುಂಬಿವೆ. ಈತ ತನ್ನ ಕೊನೆಯ ನಾಟಕಗಳಲ್ಲಿ ಮೂರು ಮುಖ್ಯ ಭಾಗಗಳನ್ನು (Triology) ಮಾಡುವುದರ ಮೂಲಕ ಒಂದು ಹೊಸ ಪ್ರಯೋಗವನ್ನೂ ಮಾಡಿದ. ಈತನ ನಾಟಕಗಳು ಮುಖ್ಯವಾಗಿ ಮಹಾಕಾವ್ಯದ ರೀತಿಯಲ್ಲೇ ಇವೆ. ಅವನ ‘ಒರೆಸ್ಟಿಯ’ (Oresteia) ರೂಪಕತ್ರಯ ಜಗತ್ತಿನ ಅತಿಶ್ರೇಷ್ಠ ಟ್ರ್ಯಾಜಿಡಿಗಳ ವರ್ಗಕ್ಕೆ ಸೇರುತ್ತದೆ. ‘ಪ್ರೋ’, ‘ಪರ್ಷಿಯನ್ನರು’, ‘ಥೀಬ್ಸಿಗೆದುರಾಗಿ ಏಳು ಮಂದಿ’ (Seven against Thebes) ಮತ್ತು ‘ಆಶ್ರಯ ಯಾಚಕಿಯರು’ (Supplains) – ಇವು ಅವನ ಇತರ ನಾಟಕಗಳು.

ಗ್ರೀಕ್ ಟ್ರ್ಯಾಜಿಡಿಯ ಶ್ರೇಷ್ಠ ಕಲಾರೂಪವನ್ನು ಸಾಫೋಕ್ಲೀಸ್‌ನ ಉಳಿದಿರುವ ಏಳು ನಾಟಕಗಳಲ್ಲಿ ಕಾಣಬಹುದು. ಮೇಳ ಮತ್ತು ನಾಟಕದ ಸುಂದರ ಸಮತೋಲನ ಇಲ್ಲಿದೆ. ಇಲ್ಲಿ ಮೇಳವು ವಸ್ತು ನಿರೂಪಣೆ ಮತ್ತು ನಾಟಕದ ಕ್ರಿಯೆಯ ಸಹಭಾಗಿಯಾಗಿರುವುದು ಮಾತ್ರವಲ್ಲದೆ ಕ್ರಿಯೆಯ ಪ್ರಗತಿಯ ಮಹತ್ವವನ್ನಳೆಯುವ, ಆ ಮೂಲಕ ಕ್ರಿಯೆ ಮತ್ತು ಭಾವನಾಂಶಗಳ ಬೆಳವಣಿಗೆಯನ್ನು ಒಟ್ಟಿಗೆ ನೇಯುವ ಬುದ್ದಿವಂತ ಪ್ರೇಕ್ಷಕನ ಪಾತ್ರವನ್ನೂ ವಹಿಸಿತು. ಈತನ ಪಾತ್ರಗಳು ಈಸ್ಕಿಲಸನ ಪಾತ್ರಗಳಿಗಿಂತ ಹೆಚ್ಚು ವೈವಿಧ್ಯಪೂರ್ಣವೂ ಸೂಕ್ಷ್ಮವೂ ಆಗಿವೆ. ವಿಶ್ವತತ್ವದ ಭವ್ಯ ಕಲ್ಪನೆಗಳಿಗಿಂತ ಮಾನವ ಸ್ವಭಾವದ ಕ್ರಿಯೆಗಳ ಮತ್ತು ಎದುರಾದ ಸನ್ನಿವೇಶಗಳಲ್ಲಿ ಆತನ ಪ್ರತಿಕ್ರಿಯೆಗಳ ಅಭಿವ್ಯಕ್ತಿಯ ಕಡೆಗೆ ಈತ ಹೆಚ್ಚು ಗಮನಹರಿಸಿದ. ಈತ ನಟರ ಸಂಖ್ಯೆಯನ್ನು ಎರಡರಿಂದ ಮೂರಕ್ಕೇರಿಸಿ ನಾಟಕಕ್ಕೆ ಹೆಚ್ಚು ಕ್ರಿಯಾಪೂರ್ಣತೆಯನ್ನು ತಂದುಕೊಟ್ಟ. ‘ಈಡಿಪಸ್ ಟಿರನಸ್’ (Oedipus Tyrannus) ಅವನ ಶೈಲಕೃತಿ. ‘ಈಡಿಪಸ್ ಕಲನಸ್’ (Oedipus at colones) ‘ಆಂಟಿಗನಿ’, ‘ಏಜಕ್ಸ್’, ‘ಟ್ರ್ಯಾಕಿನಿಯ’, ‘ಫಿಲೋಕ್ವಿಟೀಸ್’ ಮತ್ತು ‘ಎಲೆಕ್ಟ್ರ’ ಈತನ ಇತರ ನಾಟಕಗಳು.

ಈಸ್ಕಿಲಸ್ ಮತ್ತು ಸಾಫೋಕ್ಲೀಸರ ನಾಟಕಗಳು ಧಾರ್ಮಿಕ ಆಚರಣೆ ಮತ್ತು ಗಂಭೀರ ನೀತಿ ಬೋಧೆಯ ಗ್ರೀಕ್ ದೃಷ್ಟಿಯನ್ನು ಅವಲಂಬಿಸಿಯೇ ಬರೆದವುಗಳು. ಆದ್ದರಿಂದ ಈ ನಾಟಕ ರೂಪಗಳು ಸಂಪ್ರದಾಯದ ಮುದ್ರೆಯಿಂದ ಸ್ವಲ್ಪ ಗಡುಸಾದವೆಂದೇ ಹೇಳಬೇಕಾ ಗುತ್ತದೆ. ಈ ಕಾಲದಲ್ಲಿ ಯೂರಿಪಿಡೀಸ್ ಉದಿಸಿದ. ಈತ ನೂರು ನಾಟಕಗಳನ್ನು ಬರೆದಿರು ವನೆಂದು ಪ್ರತೀತಿಯಿದ್ದರೂ ದೊರಕಿರುವುವು ಹತ್ತೊಂಬತ್ತು ಮಾತ್ರ. ಇದರಲ್ಲೊಂದು ವಿಡಂಬನ ನಾಟಕ. ನವೀನ ರೀತಿಯ ನಾಟಕ ಪರಂಪರೆಯೊಂದನ್ನು ಆತ ಸೃಷ್ಟಿಸಲಿಲ್ಲ ವಾದರೂ ಅವನ ರೀತಿ ಹಳೆಯದರ ಸಮತೋಲನವನ್ನು ತಪ್ಪಿಸಿತು. ನಾಟಕವನ್ನು ಧರ್ಮಬೋಧನೆಯ ಮಾಧ್ಯಮವನ್ನಾಗಿ ಬಳಸುವ ಆಸಕ್ತಿ ಅವನಿಗಿರಲಿಲ್ಲ. ಆತ ಅನಿವಾರ್ಯ ವಾಗಿ ಸ್ವೀಕರಿಸಬೇಕಾಗಿ ಬಂದ ಪೌರಾಣಿಕ ವಸ್ತುಗಳ ಘಟನೆಗಳ ಮೂಲಕ ಸಾಂಪ್ರದಾಯಿಕ ಧರ್ಮದ ಅಪರಿಪೂರ್ಣತೆಯನ್ನು ತೋರಿಸಲು ಯತ್ನಿಸಿದ. ತನ್ನ ಪಾತ್ರಗಳ ಮಾನಸಿಕ ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿಸುವಾಗ ಚತುರ ಸಂವಾದ, ಕರುಣೆ (Pathas), ಸಹಜತೆಗಳನ್ನು ಒತ್ತಿ ಹೇಳಿದ. ಇಷ್ಟು ಮಾತ್ರವಲ್ಲದೆ ಸಮಕಾಲೀನ ಜೀವನದ ತನ್ನ ಸ್ವಂತ ಅವಲೋಕನ ಮತ್ತು ವಿಮರ್ಶೆಗಳ ಆಧಾರದ ಮೇಲೆ ನಾಟಕಗಳನ್ನು ಬರೆಯಲೆತ್ನಿಸಿದ. ಇದಕ್ಕೆ ಸಾಂಪ್ರದಾಯಿಕ ಟ್ರ್ಯಾಜಿಡಿಯ ಮಾದರಿ ಹೊಂದಲಿಲ್ಲ. ಈ ಸ್ವತಂತ್ರ ಪ್ರವೃತ್ತಿಯನ್ನು ಅರಿಸ್ಪೋಫೇನಸ್ ಮುಂತಾದ ಆತನ ಸಮಕಾಲೀನರೇ ಟೀಕಿಸಿದರು. ಆದರೆ ಅದು ಒಂದು ಜೀವಂತ ಕಲೆಯಾಗಿ ನಾಟಕದ ಬೆಳವಣಿಗೆಯನ್ನು ಸೂಚಿಸಿತು. ಈತನ ಮಹತ್ವದ ಕೃತಿಗಳೆಂದರೆ ‘ಮಿಡಿಯಾ’, ‘ಬ್ಯಾಕಿ’ ಮತ್ತು ‘ಹಿಪ್ಪಾಲಿಟಸ್’. ಇಯಾನ್, ಆಲ್ಕೆಸ್ಟಿಸ್, ಹೆಕುಬ, ಆಂಡ್ರೊಮೆಕೆ, ಮುಂತಾದುವು ಇತರ ಕೃತಿಗಳು. ‘ಸೈಕ್ಲೋಪ್ಸ್’ ಅವನ ವಿಶಿಷ್ಟ ವಿಡಂಬನ ನಾಟಕ.

ಟ್ರ್ಯಾಜಿಡಿಯ ರಚನೆ ತನ್ನ ಅಂತಸ್ಸತ್ವವನ್ನು ಕಳೆದುಕೊಂಡು ಕೇವಲ ಸಾಂಪ್ರದಾಯಿಕವಾಗಿ ಪರಿಣಾಮಹೀನವಾಗತೊಡಗುವ ವೇಳೆಗೆ ಪ್ರಹಸನ ಕಣ್ತೆರೆದು ಪ್ರತಿಭಾಪೂರ್ಣವಾಗಿ ಅರಳತೊಡಗಿತು. ನಾಲ್ಕು ಮತ್ತು ಐದನೇ ಶತಮಾನದ ಪ್ರಾಚೀನ ಪ್ರಹಸನ (Comedy) ಟ್ರ್ಯಾಜಿಡಿಯಂತೆಯೇ ವೈಶಿಷ್ಟ್ಯಪೂರ್ಣವಾದ ಸಾಹಿತ್ಯ ಪ್ರಕಾರ. ಅದರ ಬೆಳವಣಿಗೆ ಮತ್ತೂ ಅಸ್ಪಷ್ಟವಾಗಿದೆ. ಈ ಪ್ರಕಾರದ ಪರಮ ಶ್ರೇಷ್ಠ ನಾಟಕಕಾರ ಅರಿಸ್ಟೋಫೇನಸನ ಕೇವಲ ಹನ್ನೊಂದು ಪ್ರಹಸನಗಳು ಮಾತ್ರ ಉಪಲಬ್ಧವಾಗಿವೆ. ಟ್ರ್ಯಾಜಿಡಿಯಂತೆಯೇ ಪ್ರಹಸನ ಕೂಡಾ ಡೈಯೊನಿಸಸ್ ದೇವತೆಯನ್ನು ಕುರಿತ ಗ್ರಾಮೀಣ ಹಬ್ಬದಲ್ಲೇ ಮೂಡಿ ಬಂದಿg ಬಹುದು. ಈ ಹಬ್ಬಗಳನ್ನು ಸಂತೋಷಚಿತ್ತದ (Komos) ಒಂದು ವಿಶಿಷ್ಟಕೂಟ ನಡೆಸುತ್ತಿತ್ತು. ಅವರ ಹಬ್ಬದ ಆಚರಣೆಯು ಹಾಡು, ಅನುಕರಣ, ವಿದೂಷಕತನ ಮತ್ತು ತೀರ ಗ್ರಾಮೀಣ ರೀತಿಯ ಚತುರ ಪ್ರದರ್ಶನಗಳಿಂದ ಕೂಡಿರುತ್ತಿತ್ತು. ಗ್ರೀಸಿನ ಹಲವು ಭಾಗಗಳಲ್ಲಿ ಇದು ಆಚರಣೆಯಲ್ಲಿತ್ತು. ಸಿಸಿಲಿಯಲ್ಲಿ ಇದು ಅಣಕುನಾಟಕವಾಗಿ ಬೆಳೆಯಿತು. ಸಮಕಾಲೀನ ಜೀವನದ ಚಿಕ್ಕ ದೃಶ್ಯವೊಂದನ್ನು ಅದು ನಿರೂಪಿಸುತ್ತಿತ್ತು. ಹೇಗಿದ್ದರೂ ಪ್ರಾಚೀನ ಪ್ರಹಸನ ಅಥೆನ್ಸ್‌ನಲ್ಲಿಯೇ ತನ್ನ ವಿಶಿಷ್ಟರೂಪವನ್ನು ಪಡೆಯಿತೆನ್ನಬೇಕು. ಕ್ರಿ.ಪೂ. ೪೮೮-೮೭ರಲ್ಲಿ ಇದನ್ನು ಡಯೋನಿಸಸ್ ದೇವತೆಯ ರಾಷ್ಟ್ರೀಯ ಹಬ್ಬದ ಒಂದು ಅಂಗವಾಗಿ ಪರಿಗಣಿಸಲಾಯಿತು. ಆದರೆ ಟ್ರ್ಯಾಜಿಡಿಯಂತೆ ಇದು ಸಾಂದ್ರನೆಯ್ಗೆಯ, ದೃಶ್ಯದಿಂದ ದೃಶ್ಯಕ್ಕೆ ಕ್ರಮಬದ್ಧವಾಗಿ ಬೆಳೆಯುತ್ತಾ ಹೋಗುವ ನಾಟಕಶಕ್ತಿಯನ್ನೊಳಗೊಂಡು ವಿಜೃಂಭಿಸಲಿಲ್ಲ. ಇದು ಸಂತೋಷಚಿತ್ತದ ಸ್ವರೂಪವನ್ನು ಮತ್ತು ತೀರಾ ಶಿಥಿಲೈಕ್ಯವನ್ನು ಪಡೆಯಿತು. ಹೀಗೆ ಆರಿಸ್ಪೋಫೇನಸನ ಪ್ರಹಸನಗಳಲ್ಲಿ ಒಂದು ಅಸಂಬದ್ಧ ಸನ್ನಿವೇಶವನ್ನು ತಂದು ಮೇಳವು ನೇರವಾಗಿ ಪ್ರೇಕ್ಷಕರನ್ನು ಸಂಬೋಧಿಸಿ ದೇವತೆಯನ್ನು ಕುರಿತಾದ ಗಂಭೀರ ಗೀತೆಯೊಂದನ್ನು ಹಾಡುವಂತೆ ಮಾಡಲಾಗುತ್ತಿತ್ತು. ಅಸಂಬದ್ಧಗಳು, ದೇವತೆಗಳ ಗೇಲಿ ಮತ್ತು ಪೌರಾಣಿಕ ಕಥೆಗಳು ಈ ಪ್ರಹಸನಗಳ ಮುಖ್ಯ ವಸ್ತುಗಳಾಗಿರುತ್ತಿದ್ದವು. ದೇವತೆಗಳನ್ನು ಮತ್ತು ಪರಂಪರೆಯ ವೀರರನ್ನು ನಿರ್ಭಯವಾಗಿ ಅಪಹಾಸ್ಯ ಮಾಡುವುದರ ಮೂಲಕ ಒಂದು ಹೊಸ ಪ್ರವೃತ್ತಿಯನ್ನು ಹುಟ್ಟುಹಾಕಿದವನು ಪ್ರಹಸನ ಪಿತಾಮಹನೆಂದು ಕರೆಯಲ್ಪಟ್ಟ ಎಪಿಛಾರ್ಮಸ್ (ಕ್ರಿ.ಪೂ. ೫೩೦-೪೪೦). ‘ಪರಿತ್ಯಕ್ತ ಒಡಿಸ್ಯೂಸ್’ (Odysseus the Deserter) ‘ಹೀಬೆಯ ಮದುವೆ’(The Marriage of hebe)ಗಳನ್ನು ನಿದರ್ಶನಾರ್ಥವಾಗಿ ನೋಡಬಹುದು. ವಿವಾದಾತ್ಮಕ ವಸ್ತುಗಳನ್ನೂ ಆತ ತನ್ನ ನಾಟಕಗಳಲ್ಲಿ ಉಪಯೋಗಿಸಿ ಚರ್ಚಾವೇದಿಕೆಯನ್ನೂ ಸೃಷ್ಟಿಸಿದ. ಅವನ ‘ಭೂಮಿ ಮತ್ತು ಸಾಗರ’ (Earth and Sea), ‘ಭರವಸೆ ಮತ್ತು ಸಂಪತ್ತು’ (Hope and Wealth). ‘ಪುರುಷ ಮತ್ತು ಸ್ತ್ರೀ ಕಾರಣಗಳು’ (Male and Female Reasons) ಮುಂತಾದುವು ಈ ರೀತಿಯ ನಾಟಕಗಳು. ಇವನ ನಂತರದ ಕ್ರ್ಯಾಟಿನಸ್ ಮತ್ತು ಯೂಪೊಲಿಸ್ ಪ್ರಹಸನಕಾರರ ಕೆಲವು ತುಣುಕುಗಳು ಮಾತ್ರ ಉಳಿದಿವೆ. ಅಟಿಕ್ ಪ್ರಹಸನದ ಪರಿಪೂರ್ಣ ಸ್ವರೂಪವನ್ನು ನಾವು ಕಾಣುವುದು ಅರಿಸ್ಟೋಫೇನಸನ (ಕ್ರಿ.ಪೂ. ೪೫೦-೩೮೫) ಕೃತಿಗಳಲ್ಲಿ. ಅರ್ಥಪೂರ್ಣ ಸಂವಾದ, ಹೃದಯ ವನ್ನು ಕುಣಿಸುವ ನಗೆ, ಜೀವಂತ ವಿಡಂಬನೆ, ಕಾವ್ಯಾತ್ಮಕ ಹಾಡುಗಳು, ವ್ಯಾಪಕವಾದ  ಜೀವನಾನುಭವ ಮತ್ತು ವಸ್ತುವಿನ ಆಯ್ಕೆಯಲ್ಲಿ ಕಾಣುವ ಅಸಾಧಾರಣ ವಿವೇಚನಾ ಶಕ್ತಿಯಿಂದ ಆತನ ನಾಟಕಗಳು ಕಂಗೊಳಿಸುತ್ತವೆ. ಇವನ ಕಾಲದಲ್ಲಿ ನಾಟಕ ಜನಜೀವನಕ್ಕೆ ಅತ್ಯಂತ ಹತ್ತಿರವಾಯಿತು ಮತ್ತು ಸಂಪ್ರದಾಯದ ಅತಿ ಬಂಧನದಿಂದ ಬಿಡಿಸಿಕೊಂಡು ಹೆಚ್ಚು ಸ್ವತಂತ್ರವೂ ವಿಶಾಲವ್ಯಾಪ್ತವೂ ಆಯಿತು. ‘ಅಛರ್ನಿಯನ್ನರು’ (Acharnians) ‘ಶಾಂತಿ’ (Peace), ‘ಪಕ್ಷಿಗಳು’ (Birds), ‘ಲಿಸಿಸ್ಟ್ರಾಟಾ’ (Lysistrata), ‘ಸರದಾರರು’ (Knights), ‘ಮೋಡಗಳು’ (Clouds), ‘ಕಣಜಗಳು’ (Wasps), ‘ಕಪ್ಪೆಗಳು’ (Frogs) ಅವನ ಪ್ರಖ್ಯಾತ ನಾಟಕಗಳು. ಸಾರ್ವಜನಿಕ ವ್ಯಕ್ತಿಗಳು, ಸಂಸ್ಥೆಗಳು, ರಾಷ್ಟ್ರದ ರಾಜನೀತಿ ಗಳೆಲ್ಲ ಅವನ ನಾಟಕಗಳಲ್ಲಿ ಎಡೆಯನ್ನು ಪಡೆದು ನಗೆಗೀಡಾಗಿವೆ. ನಗೆಯೇ ಅವನ ಪರಮೋದ್ದೇಶವಾದರೂ ನಾಟಕದ ಹಾಡುಗಳಲ್ಲಿ ಅವನ ಶ್ರೇಷ್ಠ ಪ್ರತಿಭಾವಿಲಾಸ ಗೋಚರ ವಾಗುತ್ತದೆ. ಅವನ ‘ಮೋಡಗಳು’, ‘ಹಕ್ಕಿಗಳು’‘ ಮತ್ತು ‘ಕಪ್ಪೆಗಳು’ ಕೃತಿಗಳಲ್ಲಿ ಅತ್ಯುತ್ತಮ ವಾದ ಭಾವಗೀತೆಗಳಿವೆ.

ಕಾಲಕ್ರಮೇಣ ಈ ನಾಟಕಗಳಲ್ಲಿ ಮೇಳದ ಉಪಯೋಗ ಕಡಿಮೆಯಾಗುತ್ತಾ ವಿದೂಷಕತನ ಮರೆಯಾಗುತ್ತಾ ಸಿದ್ಧ ಪಾತ್ರಗಳ ಮೂಲಕ ಇಡೀ ಸಮಾಜದ ರೀತಿನೀತಿಗಳನ್ನು ವಿಮರ್ಶಿಸುವ ಪ್ರವೃತ್ತಿ ಕಾಣಬಂದಿತು. ಇದೇ ನವ ಪ್ರಹಸನ (New comedy)ದ ನಾಂದಿ. ವಾಸ್ತವತೆ, ಕರುಣೆ, ಭಾವನಾಮಯತೆ ಮುಂತಾದ ಯೂರಿಪಿಡೀಸ್ ಟ್ರ್ಯಾಜಿಡಿಯ ಕೆಲವಂಶ ಗಳನ್ನು ತೆಗೆದುಕೊಂಡು ಈ ನವಪ್ರಹಸನಗಳಿಗೆ ಸೇರಿಸಿದರು. ಇದು ಮಿನ್ಯಾಂಡರ್ (ಕ್ರಿ.ಪೂ. ೩೪೨-೨೩೧) ಮತ್ತು ಆತನ ಅನುಯಾಯಿಗಳಿಂದ ಆರಂಭವಾಯಿತು. ಈ ನವಪ್ರಹಸನ ನಮ್ಮ ಆಧುನಿಕ ನಾಟಕದ ಹಲವು ಅಗತ್ಯ ಲಕ್ಷಣಗಳನ್ನು ಒಳಗೊಂಡಿದೆ. ಗ್ರೀಕ್ ಜಗತ್ತಿನ ಪ್ರಚಲಿತ ನಗರದಲ್ಲೇ ದೃಶ್ಯಗಳು; ಸಮಕಾಲೀನ ಜೀವನದಿಂದ ಎಳೆತಂದ ಕಾಲ್ಪನಿಕ ವ್ಯಕ್ತಿಗಳೇ ಪಾತ್ರಗಳು. ಸಾಮಾನ್ಯ ಜನತೆಯ ಅದೃಷ್ಟ ದುರದೃಷ್ಟಗಳು, ಆಸೆನಿರಾಶೆಗಳು, ಪ್ರೇಮಕಾಮ ಗಳು, ಸಾಮಾಜಿಕ ಸ್ಥಾನಮಾನಗಳ ನಷ್ಟಲಾಭಗಳು ಅವುಗಳಲ್ಲಿ ಪ್ರತಿಬಿಂಬಿತವಾಗಿವೆ. ಈ ಕೃತಿಗಳು ಸರಳವೂ ಸ್ಪಷ್ಟವೂ ಕುತೂಹಲಕರವೂ ಆಗಿದ್ದುದರಿಂದ ಹೆಲನಿಸ್ಟಿಕ್ ಮತ್ತು ನಂತರದ ಯುಗದ ಪ್ರೇಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದವು. ಆದರೆ ಐದನೆಯ ಶತಕದ ನಾಟಕಗಳ ಕಲಾಮಹೋನ್ನತಿ ಅವುಗಳಲ್ಲಿ ಕಾಣಬರುವುದಿಲ್ಲ. ಈ ಪಂಥದ ಪ್ರಸಿದ್ಧ ನಾಟಕಕಾರ ಮಿನ್ಯಾಂಡರನ ಕೃತಿಗಳಲ್ಲಿ ಹಲವು ತುಣುಕುಗಳೂ ಮತ್ತು ಒಂದು ಪೂರ್ಣ ನಾಟಕವೂ ದೊರೆತಿವೆ. ‘ಮಹಾಲೋಭಿ’ (Curmudgeon) ಪ್ರಣಯ ಪ್ರಧಾನವಾದ ವಿಶಿಷ್ಟ ನಾಟಕ. ಇದರಲ್ಲಿ ಆತ ಅರಿಸ್ಪೋಫೇನನಿಗಿಂತ ಯೂರಿಪಿಡಿಸನಿಗೇ ಹೆಚ್ಚು ಋಣಿ ಯಾಗಿರುವಂತೆ ಕಾಣುತ್ತದೆ.

ಭಾವಗೀತೆ ಮಹಾಕಾವ್ಯ ಮತ್ತು ನಾಟಕಗಳ ಉಚ್ಛ್ರಾಯಸ್ಥಿತಿ ಮುಗಿದುಹೋದ ನಾಲ್ಕನೇ ಶತಮಾನ ಗದ್ಯದ ಮಹಾಯುಗ. ಕ್ರಿ.ಪೂ. ಆರನೇ ಶತಮಾನದಲ್ಲೇ ಐಯೋನಿಯ ನಗರದಲ್ಲಿ ಪ್ರಥಮ ಪ್ರಬಂಧಗಳು ಕಾಣಬರುತ್ತವೆ. ಆಗ ತಾತ್ವಿಕವಾದ ಚರ್ಚೆ ಮತ್ತು ಕಾಲ್ಪನಿಕವಾದ ಇತಿಹಾಸಗಳನ್ನೂ ಕೂಡ ಮಹಾಕಾವ್ಯದ ಹೆಕ್ಸಾಮೀಟರ್‌ನಲ್ಲೇ ಬರೆಯಲಾಗುತ್ತಿತ್ತು. ಅನಂತರ ಬೌದ್ದಿಕವಾದ ಚರ್ಚಾತ್ಮಕ ಬರವಣಿಗೆಗೆ ಈ ಮಾಧ್ಯಮ ಅಸಮರ್ಪಕ ಎಂಬುದು ಮನದಟ್ಟಾಯಿತು. ಆದ್ದರಿಂದ ಜನಪ್ರಿಯ ಕಥೆಗಳಿಗೆ ಮತ್ತು ಕೇವಲ ಕಚೇರಿಯ ಕಡತಗಳಿಗೆ ಮಾತ್ರ ಈ ರೀತಿಯನ್ನು ಉಪಯೋಗಿಸುತ್ತಿದ್ದರು. ಹೊಸ ಸಾಧ್ಯತೆಯನ್ನು ಕಂಡುಕೊಳ್ಳುವ ಸಲುವಾಗಿ ಆ ಕಾಲದ ಕಲಾತ್ಮಕವಲ್ಲದ ಭಾಷೆಯಲ್ಲಿ ಪ್ರಯೋಗಗಳು ನಡೆದವು. ಆದರೆ ಪರ್ಶಿಯನ್ನರು ಐಯೋನಿಯನ್ ನಗರಗಳನ್ನು ಆಕ್ರಮಿಸಿಕೊಂಡ ನಂತರ ಈ ಸಂಸ್ಕೃತಿ ಭಿನ್ನವಾದುದರಿಂದ ಐಯೋನಿಯನ್ ಗದ್ಯದ ಬೆಳವಣಿಗೆ ನಿಂತು ಹೋಯಿತು. ಆದ್ದರಿಂದ ಪ್ಲೇಟೋ, ಐಸೋಕ್ರೇಟ್ಸ್ ಮತ್ತು ಡಮಾಸ್ತನೀಸರ ಶ್ರೇಷ್ಠ ಗದ್ಯಕ್ಕೆ ತಳಹದಿಯನ್ನು ಹಾಕಿದವರು ಐದನೇ ಶತಮಾನದ ಕಡೆಯ ಭಾಗದಲ್ಲಿ ಅಥೆನ್ಸ್‌ನಲ್ಲಿದ್ದ ಅಲಂಕಾರಿಕರು ಮತ್ತು ಚಾರ್ವಾಕರು.

ಭಾಷಣ ಕಲೆ ಮತ್ತು ಅಲಂಕಾರಶಾಸ್ತ್ರ

ಹೋಮರನ ಕಾಲದಿಂದಲೂ ಭಾಷಣ ಕಲೆಗೆ ಗೌರವದ ಸ್ಥಾನವಿತ್ತಾದರೂ ಐದನೇ ಶತಮಾನದವರೆಗೆ ಅದನ್ನು ಒಂದು ಆಲಂಕಾರಿಕ ಹಾಗೂ ಸಾಹಿತ್ಯಕ ಪ್ರಕಾರವಾಗಿ ಅಧ್ಯಯನಿಸಿರಲಿಲ್ಲ. ಮೊದಲನೆ ಅಲಂಕಾರಿಕರು – ಅವರು ಕೃತಿಗಳು ದೊರಕಿಲ್ಲವಾದರೂ-ಸಿಸಿಲಿಯ ಕೋರ‍್ಯಾಕ್ಸ್ ಮತ್ತು ಟ್ಟೈಸಿಯಸ್ (Cora and Teisias) ಎಂಬುವರು. ನ್ಯಾಯಾಲಯಗಳಲ್ಲಿ ವಾದಿಸಲೂ ಪ್ರಜಪ್ರಭುತ್ವವನ್ನು ಪ್ರಸಾರಿಸಲೂ ಉತ್ತಮವಾದ ಆಕರ್ಷಕ ವಾಕ್ಯಕ್ತಿ ಅತ್ಯಗತ್ಯವಾಗಿತ್ತು. ಪೆರಿಕ್ಲಿಸನೇ ಸ್ವತಃ ಶ್ರೇಷ್ಠ ಭಾಷಣಕಾರನಾಗಿದ್ದ. ಅವನ ಮಾತಿನಲ್ಲಿ ಶಕ್ತಿಪೂರ್ಣವಾದ ಕಾವ್ಯದ ಹಾಗೂ ರೂಪಕದ ವಿಲಾಸವಿರುವುದನ್ನು ಕಾಣಬಹುದು. ಅಂತೂ ಭಾಷಣದ ಕ್ರಮಬದ್ಧ ಅಧ್ಯಯನಕ್ಕೆ ನಾಂದಿಯಾಯಿತು.

ಪದಗಳ ಲಕ್ಷ್ಯಪೂರ್ಣ ಪದ ಜೋಡಣೆಯಿಂದಾಗಿ ಉಂಟಾಗುವ ಪರಿಣಾಮವನ್ನು ಅನುಲಕ್ಷಿಸಿ ಚಾರ್ವಾಕರು ಅಟಿಕ್ ಗದ್ಯದ ಒಂದು ಶೈಲಿಯನ್ನು ರೂಪಿಸಿದರು. ಇವರಲ್ಲಿ ಪ್ರಮುಖನಾದವನು ಗಾರ್ಜಿಯಸ್(Gorgias). ಈತನೇ ಗಾರ್ಜಿಯನ್ ಅಲಂಕಾರಗಳ ಜನಕ. ಮತ್ತೊಬ್ಬ ಥ್ರ್ಯಾಸಿಮ್ಯಾಕಸ್ (Thrasymachus). ನಿಯತವಾಕ್ಯ (Periodic Sentence)ಗಳನ್ನು ರೂಪಿಸಿದವನಿವನು. ಇದು ಅಭಿವ್ಯಕ್ತಿಯಲ್ಲಿ ಅಧಿಕ ನಯವನ್ನು ಸೂಕ್ಷ್ಮ ಸಮತೂಕವನ್ನು ಸಾಧಿಸಿತು. ಅಥಿಯನ್ ಭಾಷಣ ಕಲೆ ನ್ಯಾಯಾಸ್ಥಾನಿಕ, ರಾಜಕೀಯ ಮತ್ತು ಶಬ್ದಾಡಂಬರಿಕವೆಂದು ಮೂರು ಭಾಗವಾಗಿದೆ. ಮೊದಲನೆಯದಕ್ಕೆ ಆಂಟಿಫನ್ (Antiphon) ಮತ್ತು ಎರಡನೆಯದಕ್ಕೆ ಡೆಮಾಸ್ತನೀಸ್ ಉಜ್ವಲ ಉದಾಹರಣೆಯಾಗಿದ್ದಾರೆ.

ಪ್ಲೇಟೋ, ಸಾಕ್ರೆಟೀಸ್, ಫೇಯಿಡ್ರಸ್, ಆಲ್ಸಿಬೆಯೇಡ್ಸ್, ಲಿಸಿಯಸ್ ಮುಂತಾದವರು ಈ ಗ್ರೀಕ್ ಗದ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದವರಾಗಿದ್ದಾರೆ.

ಇಳಿಮುಖ

ಕ್ರಿ.ಪೂ. ೩೨೩ರಲ್ಲಿ ಅಲೆಕ್ಸಾಂಡರ್ ಬೇಬಿಲಾನ್‌ನಲ್ಲಿ ಗತಿಸಿದ ಕೂಡಲೇ ಅವನ ಮಹಾಸಾಮ್ರಾಜ್ಯ ಹೋಳು ಹೋಳಾಯಿತು; ಗ್ರೀಕ್ ನಾಗರಿಕತೆಯ ಸಂಪೂರ್ಣ ಸ್ಥಿತಿಗತಿಯನ್ನೇ ಏರುಪೇರು ಮಾಡಿತು. ಅವನ ಉತ್ತರಾಧಿಕಾರಿಗಳು ಸೈನಿಕವಾಗಿ ರಾಜ್ಯವನ್ನು ಬಲಪಡಿಸಲು ಗಮನವಿತ್ತರು. ಅಥೆನ್ಸ್ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನುಳಿಸಿ ಕೊಳ್ಳಲು ಯತ್ನಿಸಿದರೂ ಸಾಹಿತ್ಯ ಕ್ಷೇತ್ರದಲ್ಲಿ ಅದರ ಸಾಧನೆ ಮಂಕಾಯಿತು. ಮುಂದೆ ಗ್ರೀಕ್ ರೋಮನ್‌ರಿಂದ ಗೆಲ್ಲಲ್ಪಟ್ಟಾಗ ಅದರ ಸ್ವರೂಪ ಸಂಪೂರ್ಣ ಮಾರ್ಪಾಟಾಯಿತು. ಮುಂದಿನ ಸಾಹಿತ್ಯ ಹೆಲೆನಿಕ್ ಸಾಹಿತ್ಯ ಎನಿಸಿಕೊಂಡಿತು.