ಕ್ರಿ.ಶ. ೧೦ನೇ ಶತಮಾನದಿಂದ ೧೯ನೇ ಶತಮಾನವನ್ನೊಳಗೊಂಡ ಸಾವಿರ ವರ್ಷಗಳ ಕನ್ನಡ ಸಾಹಿತ್ಯ ಗ್ರಂಥಗಳನ್ನು ಅವುಗಳ ಛಂದೋ ಪ್ರಕಾರಗಳಿಗನುಗುಣವಾಗಿ ವಿಭಾಗಿಸಿದರೆ, ಗಾತ್ರ ಮಹಿಮೆಯಿಂದಲೂ ಗುಣ ಮಹೋನ್ನತಿಯಿಂದಲೂ ಚಂಪೂಛಂದದ ಕೃತಿಗಳು ತಮ್ಮ ಅಸದೃಶ ಗಾಂಭೀರ್ಯ ಗೌರವದೊಡನೆ ಮೊದಲು ನಮ್ಮ ದೃಷ್ಟಿಯನ್ನು ಸೆಳೆಯುತ್ತವೆ. ಎತ್ತರ ಬಿತ್ತರಗಳೆರಡರಲ್ಲೂ ಮಹಾಕೃತಿಗಳನ್ನು ನೀಡಿದ ಈ ಚಂಪೂಛಂದದ ಮೂಲ ವಿದ್ವಾಂಸರ ವಿಮರ್ಶಕರ ಸಂಶೋಧನಬುದ್ದಿಗೆ ಒಂದು ಸವಾಲಿನಂತಿದೆ. ಅದು ತನ್ನ ಬಿತ್ತರದಲ್ಲಿ ಆಧುನಿಕ ಯುಗವನ್ನುಳಿದ ಕನ್ನಡ ಸಾಹಿತ್ಯದ ಸುಮಾರು ೧೨೫ ಕವಿಗಳಲ್ಲಿ ಸುಮಾರು ೪೦ ಕವಿಗಳ ವಿಪುಲ ವಿರಚನೆಗಳನ್ನೊಳಗೊಂಡಿದೆಯಲ್ಲದೆ, ತನ್ನ ಎತ್ತರದಲ್ಲಿ ನಮ್ಮ ಸಾಹಿತ್ಯದ ಮಹೋಜ್ವಲ ಮೇರುಕೃತಿಗಳನ್ನೂ ಒಳಗೊಂಡಿದೆ. ಹಳಗನ್ನಡ ಸಾಹಿತ್ಯದಲ್ಲಂತೂ ಅಸಾಮಾನ್ಯ ವಿರಾಟ್ ವೈಭವದಿಂದ ಮೆರೆದ ಈ ಚಂಪೂಛಂದದ ಮೂಲ ಸಂಸ್ಕೃತದಲ್ಲೇ? ಕನ್ನಡದಲ್ಲೇ? ಎಂಬುದು ಬಗೆಹರಿಯದ ಸಮಸ್ಯೆಯಾಗಿದೆ. ಕನ್ನಡ ಸಾಹಿತ್ಯದ ಸರ್ವಾಂಗ ವೈಭವಕ್ಕೂ ಸಂಸ್ಕೃತವೇ ಮಹಾಮೂಲವೆಂಬ ಸಂಸ್ಕೃತದ ವೀರ ವ್ಯಾಮೋಹಿಗಳು ಈ ಚಂಪೂವಿನ ಮೂಲವೂ ಸಂಸ್ಕೃತದಲ್ಲೇ ಎಂದು ಹೇಳುವುದು ಸಹಜವೇ ಆಗಿದೆ. ಆದರೆ ಉಪಲಬ್ಧ ಆಧಾರಗಳನ್ನು ನಿರುಕಿಸಿದರೆ ನಿಜಂಶವು ಬೇರೆಯಾಗಿರುವಂತೆ ಕಾಣುತ್ತದೆ.

ಮೂಲ

ಕನ್ನಡದಲ್ಲಿ ಚಂಪೂಕಾವ್ಯಗಳು ಉದಯವಾಗುವುದಕ್ಕೆ ಮೊದಲೇ ಸುಮಾರು ಸಾವಿರ ವರ್ಷಗಳ ಹಿಂದಿನಿಂದಲೂ ಸಂಸ್ಕೃತ ಸಾಹಿತ್ಯ ಸೃಷ್ಟಿ ಅವ್ಯಾಹತವಾಗಿ ಸಾಗಿ ಅನೇಕ ಅತ್ಯುತ್ತಮ ಕೃತಿ ರತ್ನಗಳು ಮೂಡಿದ್ದರೂ, ೧೦ನೇ ಶತಮಾನದವರೆಗೆ ಸ್ಪಷ್ಟವಾಗಿ ಎಲ್ಲಿಯೂ ಚಂಪೂವಿನ ಸುಳುಹು ಕಾಣಬರುವುದಿಲ್ಲ. “The Nausari grant of Indra III, the Rastrakuta, of A.D. 915 gives us the date of Trivikrama Bhatta, who wrote the Damayantikhata and a Mada asacampu : in the new form of combined prose and poetry…..”

[1] ಎಂದು ಕೀತ್ ಹೇಳಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕು. ಇದರಿಂದ ಹತ್ತನೇ ಶತಮಾನದಿಂದ ಗದ್ಯಪದ್ಯ ಮಿಶ್ರಣವುಳ್ಳ ಚಂಪೂಕಾವ್ಯ ರಚನಾಪದ್ಧತಿ ಸಂಸ್ಕೃತ ಸಾಹಿತ್ಯದಲ್ಲಿ ಕಂಡುಬರುತ್ತದೆ ಎಂಬುದು ನಿಶ್ಚಿತವಾದಂತಾಯಿತು. ಇದಕ್ಕಿಂತ ಹಿಂದಿನ ಚಂಪೂರೂಪದ ಕೃತಿಗಳು ಉಪಲಬ್ಧವಿಲ್ಲ. ಅಲ್ಲದೆ ಉಪಲಬ್ಧ ಚಂಪೂ ಕೃತಿಗಳು ಆ ಸಾಹಿತ್ಯದ ಇತರ ಛಂದೋ ಪ್ರಕಾರಗಳಲ್ಲಿ ರಚಿತವಾದ ಕೃತಿಗಳ ಕಲಾವೈಭವ ದೊಡನೆ ಸರಿದೂಗಲಾರವು. ಚಂಪೂವಿನ ವ್ಯುತ್ಪತ್ತಿಯನ್ನು ಕನ್ನಡದಲ್ಲಿ ಹೇಳಬಹುದಾದಷ್ಟು ಸರಳವಾಗಿ ಸಮಂಜಸವಾಗಿ ಸಂಸ್ಕೃತದಲ್ಲಿ ಹೇಳಲಾಗುವುದಿಲ್ಲ.

“ಚಂಪು (ಚೆಂಪು) ಮತ್ತು ಚಂಪೂ (ಚೆಂಪೂ) ಈ ಎರಡೂ ರೂಪಗಳಿಗೆ ಕನ್ನಡದಲ್ಲಿ ಸಮಂಜಸವಾದ ಅರ್ಥ ಹೊರಡುತ್ತದೆ. ‘ಚೆಂಪು’ವನ್ನು ‘ಚೆನ್+ಪು’ ಎಂದು ಅರ್ಥವತ್ತಾಗಿ ಬಿಡಿಸಬಹುದು. ಅದರಂತೆ ‘ಚೆಂಪೂ’ವಿಗೆ ‘ಚೆನ್+ಪೂ’ ಎಂದು ಎಷ್ಟೇ ಸಮಂಜಸವಾಗಿ ವ್ಯುತ್ಪತ್ತಿಯನ್ನು ಹೇಳಬಹುದು.”[2] ಕನ್ನಡದಲ್ಲಿ ದೊರೆತ ಮೊದಲನೆಯ ಮಹಾಕೃತಿ ‘ಚಂಪೂ’ನಲ್ಲಿ ರಚಿಸಲ್ಪಟ್ಟಿದೆ. ಪಂಪನ ಕೃತಿಗಳಲ್ಲಿ ಚಂಪೂ ಛಂದವು ನಿರ್ಭಯವಾಗಿ ನಿರರ್ಗಳವಾಗಿ ಕಮನೀಯ ಕಾಂತಿಯಿಂದ ಭಾವಭರಿತವಾಗಿ ಹರಿದಿರುವುದನ್ನು ನೋಡಿದರೆ ಈ ಛಂದಸ್ಸಿಗೆ ಈ ಸಾಹಿತ್ಯದಲ್ಲಿ ಬಹಳ ಹಳಮೆಯಿದ್ದಿರಬೇಕೆಂದು ಪ್ರಾಮಾಣಿಕ ವಿಮರ್ಶಕನಾದ ಯಾರಿಗಾದರೂ ಸುವಿದಿತವಾಗುತ್ತದೆ. ಅಲ್ಲದೆ ಇದಕ್ಕಿಂತ ಹಿಂದಿನಿಂದಲೂ ಚಂಪೂ ಸಂಪ್ರದಾಯ ರೂಢಿಯಲ್ಲಿತ್ತು ಎಂಬುದಕ್ಕೆ ಅತಿ ದೃಢವಾಗಿಯಲ್ಲದಿದ್ದರೂ, ಒಪ್ಪಬಹುದಾದ ಆಧಾರಗಳು ಸಾಕಷ್ಟು ನಮ್ಮ ಸಾಹಿತ್ಯದಲ್ಲಿ ದೊರಕುತ್ತವೆ. ಕವಿರಾಜಮಾರ್ಗದಲ್ಲಿ ಉಕ್ತವಾದ ಬೆದಂಡೆ ಚತ್ತಾಣ-ಕಾವ್ಯಪದ್ಧತಿಗಳು ಬಹುಶಃ ಈ ಚಂಪೂವಿನ ಮೂಲವಾಗಿದ್ದರೂ ಆಗಿರಬಹುದು. ಇಷ್ಟೇ ಅಲ್ಲದೆ ಕನ್ನಡ ಸಾಹಿತ್ಯದಲ್ಲಿ ಚಂಪೂ ಗ್ರಂಥಗಳಿಗಿರುವ ಸುದೀರ್ಘ ಪರಂಪರೆ ಸಂಸ್ಕೃತ ಸಾಹಿತ್ಯದಲ್ಲಿ ಕಂಡುಬರುವುದಿಲ್ಲ ಹಾಗೂ “ಚಂಪೂವಿನ ಸಂಪೂರ್ಣ ಸ್ವರೂಪವನ್ನು, ನಿಶ್ಚಿತ ನಿಲುವನ್ನು ನಾವು ಮೊಟ್ಟಮೊದಲು ಕಾಣುವುದು ಕನ್ನಡದಲ್ಲಿ. ಈ ದೃಷ್ಟಿಯಿಂದ ಚಂಪು ಕನ್ನಡದ ಕಾಣಿಕೆ.”[3]

ಈ ತೀರ್ಮಾನಕ್ಕೆ ಬಾಧಕಗಳಿಲ್ಲದಿಲ್ಲ. ಈ ಚಂಪೂ ಛಂದದಲ್ಲಿ ಸೇರಿರುವ ವೃತ್ತಗಳು ಛಂದದ ದೃಷ್ಟಿಯಿಂದ ಕನ್ನಡದವುಗಳಲ್ಲ. ತ್ರಿಪದಿ, ರಗಳೆ, ಪಿರಿಯಕ್ಕರ ಮುಂತಾದ ಅಚ್ಚಗನ್ನಡ ಛಂದಗಳು ಅಲ್ಲಲ್ಲಿ ವಿರಳವಾಗಿ ಉಪಯೋಗಿಸಲ್ಪಟ್ಟರೂ ಪ್ರಮುಖವಾಗಿ ಅಲ್ಲಿ ಬಳಕೆಯಾಗಿರುವುದು, “ಖ್ಯಾತ ಕರ್ಣಾಟಕಂಗಳ್” – ಎಂದು ಹೆಸರಾಂತ ಸಂಸ್ಕೃತದ ಆರು ರೀತಿಯ ವೃತ್ತಗಳೇ ಆಗಿವೆ. ಅಲ್ಲದೆ ೯ನೆಯ ಶತಮಾನಕ್ಕೆ ಹಿಂದೆಯೇ ರಚಿತವಾಗಿರುವ ನಾಟಕಗಳಲ್ಲಿ ಉಪಯೋಗಿಸಲ್ಪಟ್ಟಿರುವ ಗದ್ಯ ಪದ್ಯಗಳೇ ಈ ಚಂಪೂವಿಗೆ ಮೂಲವಾಗಿರಬೇಕೆಂದು ಊಹಿಸುವವರೂ ಇದ್ದಾರೆ. ಅಂತೇ ಹೆಚ್ಚಿನ ಸಂಶೋಧನೆಯಿಂದ ಚಂಪೂರೂಪ ಮೂಲತಃ ಸಂಸ್ಕೃತವೆಂದು ತಿಳಿದರೂ, ಅದು ಕನ್ನಡ ಸಾಹಿತ್ಯ ಮಹಾಕಾವ್ಯಗಳಲ್ಲಿ ತಾಳಿದ ರೂಪವು ಮಾತ್ರ ಸಂಸ್ಕೃತದ ಅನುಕರಣದ ಫಲವಲ್ಲವೆಂದೂ ವೈಶಿಷ್ಟ್ಯಪೂರ್ಣವೆಂದು ಧೈರ್ಯವಾಗಿ ಹೇಳಬಹುದು.”[4]

ಪಂಪ ಪೂರ್ವದಲ್ಲಿ

ಪಂಪ ಪೂರ್ವದಲ್ಲಿಯೇ ಚಂಪೂ ಪ್ರಕಾರದ ಸಾಹಿತ್ಯವು ಸಾಕಷ್ಟು ಬೆಳೆದಿರಬಹುದೆಂದು ಹಿಂದೆ ಹೇಳಿದೆ. ‘ಮಿಗೆ ಕನ್ನಡಗಬ್ಬಂಗಳೊಳಗಣಿತಗಣ ಗದ್ಯ ಪದ್ಯ ಸಂಮಿಶ್ರಿತಮಂ ನಿಗದಿಸುವರ್ ಗದ್ಯಕಥಾಪ್ರಗೀತಿಯಿಂ ತತ್‌ಚಿರಂತನಾಚಾರ್ಯರ್ಕಳ್’ – ಎಂಬ ಕವಿರಾಜ ಮಾರ್ಗದ ಹೇಳಿಕೆ ಬಹುಶಃ ಚಂಪೂವನ್ನೇ ಕುರಿತಂತಿದೆ. ಚಂದ್ರಪ್ರಭ ಚರಿತ ಚಂಪುವನ್ನು ಬರೆದ ಶ್ರೀ ವಿಜಯನೇ ಕವಿರಾಜಮಾರ್ಗದಲ್ಲಿ ಉಕ್ತನಾದ ಶ್ರೀ ವಿಜಯನಿರಬೇಕೆಂಬ ಕವಿಚರಿತೆಕಾರರ ಊಹೆ ಸಾಧಾರವಾದುದಾದರೆ ಕವಿರಾಜಮಾರ್ಗಕ್ಕಿಂತ ಹಿಂದೆ ಚಂಪೂಗ್ರಂಥ ರಚನೆಯಾಗಿತ್ತೆಂಬುದು ನಿಶ್ಚಿತವಾಗುತ್ತದೆ. ಕವಿರಾಜಮಾರ್ಗದಲ್ಲಿ ಉಕ್ತರಾಗಿರುವ ಹಲವಾರು ಕವಿಗಳಲ್ಲಿ ಕೆಲವರಾದರೂ ‘ಈ ಮಾರ್ಗದ ಗ್ರಂಥಕರ್ತರಾಗಿದ್ದಿರಬಹುದು. ಅನಂತರದವನಾದ ಅಸಗನು ತನ್ನ ಕರ್ಣಾಟಕಕುಮಾರ ಸಂಭವವನ್ನು ಚಂಪೂವಿನಲ್ಲೇ ರಚಿಸಿ ಅನಂತರದ ಅನುವಾದಕಾರರಾದ ನಾಗವರ್ಮ, ದುರ್ಗಸಿಂಹ ಮುಂತಾದವರಿಗೆ ಮಾರ್ಗದರ್ಶಕನಾಗಿದ್ದಿರಬಹುದು. ಹಾಗೆಯೇ ಪ್ರಮುಖ ಕವಿಮಾಲಿಕೆಯಲ್ಲಿ ಸ್ತುತ್ಯನಾದ ಗುಣನಂದಿಯೂ ಕೂಡ ಚಂಪೂಮಾರ್ಗದ ಗ್ರಂಥಕರ್ತನಾಗಿರಲೂಬಹುದು. ಈ ಊಹೆಗೆ ಕಾರಣವೆಂದರೆ ಪ್ರಮುಖ ಸಂಕಲನಕಾರನಾದ, ತನ್ನ ಗ್ರಂಥದಲ್ಲಿ ಬಹುಶಃ ಚಂಪೂ ಕವಿಗಳಿಂದ ಮಾತ್ರವೇ ಆಯ್ದ ಪದ್ಯಗಳನ್ನು ಅಳವಡಿಸಿರುವ, ಮಲ್ಲಿಕಾರ್ಜುನನು ಇವನನ್ನು ಹೆಸರಿಸಿ ರುವುದು. ಆದರೆ ಅವನ ಸಂಕಲನ ಗ್ರಂಥದಲ್ಲಿ ಗುಣನಂದಿ ನಿರ್ಮಿತವಾದ ಪದ್ಯ ಯಾವುದೆಂಬುದು ತಿಳಿಯದಾಗಿದೆ. ಇಷ್ಟೆಲ್ಲಾ ಊಹಾರಾಜ್ಯದ ವಿಷಯವಾದರೂ ಆ ಒಂಭತ್ತನೇ ಶತಕದವನೇ ಆದ ಗುಣವರ್ಮನು ಚಂಪೂಮಾರ್ಗದಲ್ಲಿ ‘ಹರಿವಂಶ ಮತ್ತು ‘ಶೂದ್ರಕ’ಗಳೆಂಬ ಎರಡು ಉಚ್ಚ ಕೃತಿಗಳನ್ನು ರಚಿಸಿದ್ದನೆಂಬುದಕ್ಕೆ ಪ್ರಬಲವಾದ ಆಧಾರ ಗಳಿವೆ. ಈ ಕೃತಿಗಳು ಉಪಲಬ್ಧವಾಗಿಲ್ಲವಾದರೂ ದೊರೆತ ಆಧಾರಗಳಿಂದ, ಅದರಲ್ಲೂ ಶೂದ್ರಕವು, ಪ್ರೌಢ ಮತ್ತು ಸಾಂಪ್ರದಾಯಿಕವಾದ ಚಂಪೂ ಗ್ರಂಥವೆಂದು ನಿರ್ಣಯಿಸಲಾಗಿದೆ.[5] ಇಷ್ಟೇ ಅಲ್ಲದೆ ‘ಶೂದ್ರಕ’ ಗ್ರಂಥವು ಪಂಪನ ‘ವಿಕ್ರಮಾರ್ಜುನ ವಿಜಯ’ದಂತೆ ರಾಜಕೀಯ ಧ್ವನಿಯನ್ನುಳ್ಳ, ಆಶ್ರಯದಾತನಾದ ಗಂಗರಾಜ (೮೮೬-೯೧೩)ನನ್ನು ಶೂದ್ರಕನೊಡನೆ ಹೋಲಿಸಿ ರಚಿಸಿದ ಲೌಕಿಕ ಕಾವ್ಯವಾಗಿರಬಹುದೆಂದೂ ಊಹಿಸಲಾಗಿದೆ. ಇದೇ ಪಂಪ-ರನ್ನರಿಗೆ ಮೇಲ್ಪಂಕ್ತಿಯಾಗಿರಬಹುದು.

ಪಂಪಯುಗ

ಹತ್ತನೇ ಶತಮಾನಕ್ಕೆ ಸುವರ್ಣ ಯುಗವೆಂಬ ಖ್ಯಾತಿಯನ್ನು ತಂದವನು ಬಹುಮಟ್ಟಿಗೆ ಪಂಪನೆಂದರೆ ಅತ್ಯುಕ್ತಿಯಾಗಲಾರದು. ‘ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾಗವಗಂ’ – ಎಂಬ ನುಡಿಗೆ ಸತ್ಯಸ್ಯಸತ್ಯ ಪ್ರತಿಮೆಯಾಗಿ ನಿಂತಿದ್ದಾನೆ ಪಂಪ. “ನಮ್ಮ ಸಾಹಿತ್ಯದ ಮೊಟ್ಟಮೊದಲನೆಯ ನವೋದಯಾವಸರದಲ್ಲಿ ಜೈನ ಧರ್ಮರೂಪದಿಂದ ಅವಿರ್ಭೂತವಾದ ಆ ದಿವ್ಯ ಚೇತನ ಶಕ್ತಿ ಗರ್ಭಸ್ಥ ರತ್ನದಂತೆ ಪಂಪನ ಕೃತಿಗಳಲ್ಲಿ ತೊಳಗುತ್ತಿದೆ.”[6] ಚಂಪೂ ಛಂದ ತನ್ನ ಮಹೋನ್ನತ ಸೌಂದರ್ಯದೊಡನೆ ಅಭಿವ್ಯಕ್ತವಾಗಿರುವುದು ಅವನ ಉಜ್ವಲ ಕೃತಿಗಳಾದ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ಗಳಲ್ಲಿ.

ಆದಿಪುರಾಣವು ಪಂಪನ ಆದಿಕೃತಿ, ಕಾವ್ಯಧರ್ಮವನ್ನೂ ಧರ್ಮವನ್ನೂ ಮೇಳವಿಸಿ ತಾನು ಕಾವ್ಯರಚಿಸಿರುವೆನೆಂದು ಅವನೇ ಹೇಳಿಕೊಂಡ ಮಾತು ಸಾರ್ಥಕವಾಗಿದೆ. ಇದರಲ್ಲಿ ಪ್ರಥಮ ತೀರ್ಥಂಕರನಾದ ಆದಿನಾಥನ ಕತೆಯಿದೆ. ಜಿನಸೇನನ ಪೂರ್ವ ಪುರಾಣವನ್ನನುಸರಿಸಿ ಬರೆದ ಕೃತಿ ಇದಾದರೂ ಬಹುಮಟ್ಟಿಗೆ ತನ್ನ ಸ್ವತಂತ್ರ ಪ್ರತಿಭೆಯನ್ನು ಪಂಪ ಇಲ್ಲಿ ಮೆರೆದಿದ್ದಾನೆ. ಬಾಣ, ಕಾಳಿದಾಸ, ಭಾರವಿ, ಭಟ್ಟನಾರಾಯಣ ಮುಂತಾದವರಿಂದ ಉಪಕೃತ ನಾಗಿದ್ದರೂ ಅವರೆಲ್ಲರ ಪ್ರಭಾವವನ್ನು ತನ್ನ ಪ್ರತಿಭಾ ಪ್ರಕಾಶದ ಉಜ್ವಲತೆಯಿಂದ ಪಂಪ ತನ್ನದನ್ನಾಗಿ ಮಾಡಿಕೊಂಡಿದ್ದಾನೆ. ಮತಧರ್ಮಗಳ ಜಲದ ಅನಿವಾರ್ಯ ಗೊಂದಲದಲ್ಲಿಯೂ ಹಲವಾರು ರಸ ಸರಸ್ಸುಗಳನ್ನು ನಿರ್ಮಿಸಿದ್ದಾನೆ – ಓದುಗರು ಮಿಂದೇಳಲು. ಭೋಗದನಶ್ವರತೆ ಮತ್ತು ತ್ಯಾಗದ ಪರಮಾದರ್ಶತೆಯನ್ನು ಜೀವಂತವಾಗಿ ಚಿತ್ರಿಸಿದ್ದಾನೆ. ಒಂದು ಜೀವ ಹೇಗೆ ಕರ್ಮದ ಕಾಳಿಕೆಯನ್ನು ಕ್ರಮಕ್ರೇಣ ಕಳೆದುಕೊಂಡು ಧರ್ಮ ಪಥದಲ್ಲಿ ಗಮಿಸಿ ಕಡೆಗೆ ಸರ್ವಾರ್ಥಸಿದ್ದಿಯನ್ನು ಪಡೆಯುತ್ತದೆಂಬುದರ ನಿರೂಪಣೆ ಹೃದ್ಯವಾಗಿದೆ. ಜಿನಶಿಶುವಿನ ಜನ್ಮಾಭಿಷೇಕ, ಇಂದ್ರನ ಆನಂದ ನೃತ್ಯ, ನೀಲಾಂಜನೆಯ ನೃತ್ಯ – ಮುಂತಾದ ಸನ್ನಿವೇಶಗಳಲ್ಲಿ ಭವ್ಯಕಲ್ಪನೆಯ ಚರಮ ಸೀಮೆಯನ್ನು ಮುಟ್ಟಿದ್ದಾನೆ. ಲಲಿತಾಂಗನನ್ನು ಕಳೆದುಕೊಂಡ ಸ್ವಯಂಪ್ರಭೆಯ ಆರ್ತನಾದದಲ್ಲಿ ಕಾಮಮೋಹಿತ ಮನಸ್ಸಿನ ಸಹಜ ಪರಿಯ ಚಿತ್ರಣ ವರ್ಣರಂಜಿತವಾಗಿದೆ. ಹಾಗೆಯೇ ವಜ್ರಜಂಘ-ಶ್ರೀಮತಿಯರ ಸಾವಿನ ಸಂದರ್ಭದಲ್ಲಿ ಕವಿ ಹಾಡುವ ಚರಮಗೀತೆ ಅವನ ಮನೋಧರ್ಮದ ಮಧುರ ಮನೋಹರ ಪ್ರತಿಮೆ ಯಾಗಿದೆ. ಮಾವು ಮಲ್ಲಿಗೆಗಳ ವರ್ಣನೆಯಂತೂ ಪಂಪನ ಪ್ರಕೃತಿಯೊಲವಿನ ಪ್ರತೀಕ. ೧೧ನೇ ಆಶ್ವಾಸದಲ್ಲಿ ಒಂದು ಪುಷ್ಪಪರಿಷತ್ತನ್ನೇ ನೆರೆಸಿಬಿಟ್ಟಿದ್ದಾನೆ. ಈ ಆಶ್ವಾಸ ಅವನ ಸೌಂದರ್ಯದೃಷ್ಟಿಯ, ಅವನ ಸೂಕ್ಷ್ಮವೀಕ್ಷಣೆಯ, ಕಲ್ಪನಾಕುಸುರಿಯ ಕಲಾಶಾಲೆಯಾಗಿದೆ. ಬಾಹುಬಲಿ-ಭರತರ ಸಮರದಲ್ಲಿ ಗೆಲುವಿನಿಂದ ನಲಿವನ್ನು ಪಡೆಯದೆ, ಈ ಗೆಲವು ನಲಿವುಗಳು ನಶ್ಚರವೆಂದು ಬಗೆದು, ಅವುಗಳೆಲ್ಲವನ್ನೂ ತ್ಯಜಿಸಿ ಉಚ್ಚತಮ ಸತ್ಯಸಾಕ್ಷಾತ್ಕಾರಕ್ಕಾಗಿ ನಡೆದ ತ್ಯಾಗಮೂರ್ತಿ ಬಾಹುಬಲಿಯ ಚಿತ್ರದ ಉದಾತ್ತತೆ, ಸಹಜತೆ, ಸೌಂದರ್ಯಗಳು ವರ್ಣನಾತೀತ. ಇಂತಹ ರಸಸ್ಥಾನಗಳಲ್ಲಿ ಪಂಪನ ಪ್ರತಿಭೆ ಚಿಲುಮೆಯಂತೆ ಚಿಮ್ಮಿದೆ – ಆದರೆ ಹೊಳೆಯಾಗಿ ಹರಿದಿಲ್ಲ. ಹಲವಾರು ದೇಶಿ ನುಡಿಗಳು ಇಲ್ಲಿ ಚೆಲ್ಲುವರಿದರೂ ಸಂಸ್ಕೃತವ್ಯಾಮೋಹ, ಅದರಲ್ಲೂ ಗದ್ಯದಲ್ಲಿ ಕವಿಯನ್ನು ಹಲವೆಡೆ ಮರುಭೂಮಿಯೆಡೆಗೊಯ್ದಿದೆ. ಆದರೆ ಚಂಪೂವಿನ ಬಳಕೆಯಲ್ಲಿನ ಅವನ ಕೈವಾಡ ಬೆರಗುಗೊಳಿಸುತ್ತದೆ. ಈ ಕೃತಿಯ ದೋಷಗಳೇನೇ ಇದ್ದರೂ ಇದು ಕನ್ನಡದ ಉಪಲಬ್ಧ ಜೈನಪರ ಧಾರ್ಮಿಕ ಕಾವ್ಯಗಳಲ್ಲೆಲ್ಲಾ ಮಹಾಕೃತಿಯೆಂಬುದು ನಿರ್ವಿವಾದ.

ಇವನ ಮತ್ತೊಂದು ಮಹೋಜ್ವಲ ಮೇರುಕೃತಿಯೇ ‘ವಿಕ್ರಮಾರ್ಜುನ ವಿಜಯ’. ಇದು ತನ್ನ ಆಶ್ರಯದಾತನಾದ ಅರಿಕೇಸರಿಯನ್ನು ಕಥಾನಾಯಕನಾದ ಅರ್ಜುನನೊಡನೆ ಅಭೇದ ಸಂಬಂಧದಿಂದ ಹೋಲಿಸಿ ರಚಿಸಿದ ಕೃತಿ. ‘ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ’ ಎಂದು ಕವಿ ತನ್ನ ಕಾವ್ರೋಹೇಳಿಕೊಂಡಿದ್ದಾನೆ. ಇದು ೧೪ ಆಶ್ವಾಸಗಳನ್ನೊಳಗೊಂಡಿದೆ. ಆದಿಪುರಾಣದಲ್ಲಿ ಅಲ್ಲಲ್ಲಿ ಚಿಮ್ಮಿದ ಸ್ಫೂರ್ತಿ ಕಾರಂಜಿ, ಹೊಮ್ಮಿದ ಪ್ರತಿಭೆ, ಇಲ್ಲಿ ಹೊಳೆಯಾಗಿ ಹರಿದಿದೆ, ಸೂರ್ಯನಂತೆ ಬೆಳಗಿದೆ. ‘ವ್ಯಾಸ ಮುನೀಂದ್ರ ರುಂದ್ರವಚನಾಮೃತ ವಾರ್ಧಿಯನೀಸುವೆಂ ಕವಿವ್ಯಾಸನೆಂಬ ಗರ್ವಮೆನಗಿಲ್ಲ’- ಎಂದು ಆರಂಭಿಸಿದ ಕವಿ ತನ್ನ ಸಹಜ ವಿನಯವನ್ನು ಮೆರೆದಿದ್ದಾನೆ, ‘ಕತೆ ಪಿರಿದಾದೊಡಂ ಕತೆಯ ಮೆಯ್ಗೆಡಲೀಯದೆ’ ಸಮಸ್ತ ಭಾರತವನ್ನೂ ಅಪೂರ್ವವಾಗಿ ಹಾಡಿದ್ದಾನೆ. ಕವಿ ಮೂಲ ಭಾರತದಲ್ಲಿ ಹಲವಾರು ವ್ಯತ್ಯಾಸಗಳನ್ನು ಮಾಡಿಕೊಂಡರೂ ಕೃತಿಯ ಘನತೆ ಗಾಂಭೀರ್ಯಗಳಿಗೆ ಭಂಗ ತಾರದಂತೆ ಕಲ್ಪನೆ ಕುಡಿವರಿದಿದೆ. ಕವಿತಾವಾಹಿನಿ ಭೋರ್ಗರೆದು ಹರಿದಿದೆ. ಅವನು ಚಿತ್ರಿಸಿದ ಭೀಮ, ದುರ್ಯೋಧನ, ಕರ್ಣ, ಅರ್ಜುನ, ಭೀಷ್ಮ, ದ್ರೌಪದಿ ಮುಂತಾದ ಪಾತ್ರಗಳು ಪಂಪನ ಕಲ್ಪನಾ ವೈಭವದ ಸ್ವರ್ಣಪತಾಕೆಗಳಾಗಿವೆ. ದುರ್ಯೋಧನನ ಚಲ, ಕರ್ಣನ ನನ್ನಿ, ಭೀಮನ ಗಂಡುತನ, ಅರ್ಜುನನ ವೀರ, ಭೀಷ್ಮರ ಮಹೋನ್ನತಿ, ದ್ರೌಪದಿಯ ಅಗ್ನಿತೇಜ – ಇವುಗಳು ಕನ್ನಡ ಸಾಹಿತ್ಯ ಮರೆಯಲಾರದ ಮಹೋಜ್ವಲ ಕೊಡುಗೆಗಳಾಗಿವೆ. ಕರ್ಣನ ಒಳತೋಟಿ, ದುರ್ಯೋಧನನ ಪ್ರಲಾಪ, ಅಭಿಮನ್ಯುವಿನ ವೀರವಿಕ್ರಮ, ಭೀಷ್ಮರ ಸಮರ ವೈಭವ, ಭೀಮನ ಪ್ರತಿಜ್ಞಾ ಪೂರೈಕೆ – ಮುಂತಾದ ಸನ್ನಿವೇಶಗಳ ಚಿತ್ರಣದಲ್ಲಿ ಪಂಪನ ಅಸಾಧಾರಣ ಪ್ರತಿಭೆಯ ಪರಮ ಪ್ರಕಾಶ ಅಭಿವ್ಯಕ್ತ ವಾಗಿದೆ. ಪಂಪನಿಗೆ ಭಾರತ ಭಗವಲ್ಲೀಲೆಯ ವಿಲಾಸವಾಗಿಲ್ಲ, ಮಾನವ ಮನೋಧರ್ಮದ ವಿಭಿನ್ನ ರೀತಿಯ ನಾಟ್ಯದ ರಮ್ಯರಂಗವಾಗಿದೆ. ಒಂದೊಂದು ಪಾತ್ರವೂ ತನ್ನದೇ ಆದ ಸ್ವಯಂಪೂರ್ಣ ವ್ಯಕ್ತಿತ್ವವನ್ನು ಹೊಂದಿದೆ – ಯಾವೊಂದು ಶಕ್ತಿಯ ಅಥವಾ ವ್ಯಕ್ತಿಯ ಸೂತ್ರದ ನಿರ್ಜೀವ ಬೊಂಬೆಯಾಗಿಲ್ಲ. ಅರ್ಜುನನಿಂದ ಮಾಡಿಸಿದ ಬನವಾಸಿ ವರ್ಣನೆ ಪಂಪನ ವೈಯಕ್ತಿಕ ಹಂಬಲದ ಹಿರಿಯ ಅಭಿವ್ಯಕ್ತಿಯಾಗಿದೆ. ಆದಿಪುರಾಣಕ್ಕಿಂತ ಇಲ್ಲಿ ಅವನ ಶೈಲಿ ಸಿದ್ದಿಯ ಪರಾಕಾಷ್ಠೆಯನ್ನು ಮುಟ್ಟಿದೆ. ಜನ ಜೀವನದಿಂದೆತ್ತಿಕೊಂಡ ಗಾದೆ ಗಳೂ, ಸಾಮತಿಗಳೂ, ಒಳ್ನುಡಿಗಳೂ ಇಲ್ಲಿ ಸೂರೆಯಾಗಿವೆ. ಚಂಪೂಛಂದ ಇಲ್ಲಿ ತನ್ನ ಸರ್ವ ಸಮಗ್ರ ಸೌಂದರ್ಯದೊಡನೆ ಮೈವೆತ್ತಿದೆ. ಮೂಲದಲ್ಲಿ ಮಾಡಿದ ಹಲವು ಮಾರ್ಪಾಟುಗಳಿಂದಲೂ ಕೃತಿಯಲ್ಲಿ ಬರುವ ಸಂಪ್ರದಾಯ ಶರಣತೆಯ ವಜ್ರಮುಷ್ಠಿಯಿಂದ ಬಿಡಿಸಿಕೊಳ್ಳಲಾಗದ ಅಥವಾ ಬಿಡಿಸಿಕೊಳ್ಳದ, ಕೆಲವು ವಿಸಂಗತಿಗಳಿಂದಲೂ ಅಲ್ಲಲ್ಲಿ ಕಾವ್ಯದ ಮೂಲರಸದ ಮಹಾನದಿ ತನ್ನ ಪಾತ್ರವನ್ನು ಕಿರಿದಾಗಿಸಿಕೊಂಡರೂ, ಎಲ್ಲಿಯೂ ಬತ್ತದೆ ತನ್ನ ಅಸದೃಶ ಸೌಂದರ್ಯ ತರಂಗದಿಂದ, ಕಲ್ಪಕತೆಯ ಬೆಡಗಿನಿಂದ, ಹಿತಾವಹವಾದ ಅನೂನವಾದ ಸೌರಭದಿಂದ, ಅಚ್ಚರಿಗೊಳಿಸುವ ಮಹಾದ್ಭುತ ಪ್ರತಿಭೆಯ ಮಾಯಾ ಜಲದಿಂದ ತುಂಬಿ ತುಂಬಿ ಹರಿದಿದೆ. ಇಂತಹ ಗುಣಾತಿಶಯಗಳಿರುವುದರಿಂದಲೇ “ಪಂಪನು ಕನ್ನಡದ ಕಾಳಿದಾಸ”[7] ಎಂದು ವಿಮರ್ಶಕರು ಮೆಚ್ಚಿ ನುಡಿದಿದ್ದಾರೆ.

ರತ್ನತ್ರಯರಲ್ಲಿ ಎರಡನೆಯವನು ಪೊನ್ನ. ಇವನ ಚಂಪೂ ಕೃತಿಗಳು ಎರಡು : ಭುವನೈಕ ರಾಮಾಭುದ್ಯಯ ಮತ್ತು ಶಾಂತಿ ಪುರಾಣ. ಇದರಲ್ಲಿ ಮೊದಲನೆಯದು ೧೬ನೇ ತೀರ್ಥಂಕರನಾದ ಶಾಂತಿನಾಥನನ್ನು ಕುರಿತದ್ದು. ಕವಿಚಕ್ರವರ್ತಿಯೆಂದು ಬಿರುದಾಂಕಿತನಾದ ಪೊನ್ನನು ತನ್ನ ರಾಮಕತೆಯ ೧೪ ಆಶ್ವಾಸಗಳೂ ಹದಿನಾಲ್ಕು ಲೋಕಕ್ಕೆ ಸಮನೆಂದು ಹೇಳಿಕೊಂಡಿದ್ದಾನೆ. ಇದರ ಸತ್ಯಾಸತ್ಯತೆಯ ವಿವೇಚನೆ ಪ್ರಸ್ತುತದಲ್ಲಿ ಸಾಧ್ಯವಿಲ್ಲ. ಆದರೆ ‘ಕಾಳದಾಸಂಗಂ ನೂರ್ಮಡಿ’ಯೆಂದು ಶಾಂತಿ ಪುರಾಣವನ್ನು ರಚಿಸಿದ ಕವಿ ಕಾಳಿದಾಸನ ರಘುವಂಶದ ಹಲವಾರು ಪದ್ಯಗಳನ್ನು ಅನಾಮತ್ತಾಗಿ ಅನುವಾದಿಸಿಕೊಂಡಿದ್ದಾನೆ. ಶಾಂತಿಪುರಾಣದ ಬಂಧ ಪ್ರೌಢವಾಗಿದೆ. ಸಂಸ್ಕೃತ ಸಮಾಸ ಪ್ರಚುರವಾದ ಶೈಲಿ. ಅತಿಯಾದ ವರ್ಣನಾ ವ್ಯಾಮೋಹ, ಪಾಂಡಿತ್ಯ ಪ್ರದರ್ಶನದ ಅಹಂಕೃತಿ, ಸಾಂಪ್ರದಾಯಿಕ ಮಹಾಕಾವ್ಯದ ಲಕ್ಷಣಗಳಲ್ಲಿ ನಿಷ್ಠುರ ನಿಷ್ಠೆ – ಇವು ಇವನ ಕಾವ್ಯದಲ್ಲಿ ಎದ್ದು ಕಾಣುವ ಲಕ್ಷಣಗಳು. ಆದಿಪುರಾಣದ ಭವ್ಯ ಕಲ್ಪನೆಯಾಗಲೀ ಸಹಜ ವರ್ಣನೆಯ ಸೊಬಗಾಗಲೀ ಅಷ್ಟಾಗಿ ಕಂಡುಬರುವುದಿಲ್ಲ ಎಂದೇ ಹೇಳಬೇಕು. ಅಲ್ಲಲ್ಲಿ ಮಧುರಭಾವದ ಉನ್ನತಕಲ್ಪನೆಯ ಮಿಂಚು ಮಿಂಚಿದರೂ, ವರ್ಣನೆಯಲ್ಲಿ ಆಗಾಗ ಸರಳತೆ ಹೃದ್ಯತೆ ರುಚಿರತೆ ತಲೆಯಿಕ್ಕಿದ್ದರೂ- ಅವೆಲ್ಲಾ ಶಾಸ್ತ್ರನಿಷ್ಠೆಯ ಪ್ರೌಢಕಾವ್ಯ ರಚನೋದ್ದೇಶದ, ಪ್ರಮುಖತಃ ಪಾಂಡಿತ್ಯ ಪ್ರದರ್ಶನದ ಅತೀವ ಹಂಬಲದ ಹೆಮ್ಮಾರಿಯ ಪಾದ ತುಳಿತಕ್ಕೆ ಸಿಕ್ಕಿ ನುಚ್ಚುನೂರಾಗಿವೆಯೆನ್ನದೆ ವಿಧಿಯಿಲ್ಲ. ಏನೇ ಆದರೂ “ಇದು ಉತ್ತಮ ಕಾವ್ಯವೆಂಬುದಕ್ಕಿಂತ ಉತ್ತಮ ಜೈನ ಪುರಾಣವೆಂದರೆ ಒಪ್ಪುವುದು”[8] ಇದನ್ನೋದುವಾಗ ಪಂಪನನ್ನು ಮರೆಯಬಾರದು.

ರತ್ನತ್ರಯರಲ್ಲಿ ಮೂರನೆಯವನು ರನ್ನ. ಅವನ ದೊರೆತಿರುವ ಚಂಪೂ ಕೃತಿಗಳು ಎರಡು: ಅಜಿತಪುರಾಣ ಮತ್ತು ಗದಾಯುದ್ಧವೆಂದು ಕರೆಯುವ ಸಾಹಸ ಭೀಮವಿಜಯ. ದೊರೆಯದಿರುವುವು ಎರಡು: ಪರಶುರಾಮ ಚರಿತ ಮತ್ತು ಚಕ್ರೇಶ್ವರ ಚರಿತ. ಇವನ ಅಜಿತಪುರಾಣ ೨ನೇ ತೀರ್ಥಂಕರನಾದ ಅಜಿತನಾಥನನ್ನು ಕುರಿತದ್ದು. ಇದರಲ್ಲಿ ೧೨ ಆಶ್ವಾಸ ಗಳಿವೆ. ಜೈನ ಪುರಾಣಗಳಲ್ಲಿ ಬರುವ ಭವಾವಳಿಗಳ ಗೊಂದಲವಿಲ್ಲ ಇಲ್ಲಿ. ಸಾಂಪ್ರದಾಯಿಕ ವಾದ ಅಜಿತಸ್ವಾಮಿಯ ಪಂಚಕಲ್ಯಾಣಗಳು ವರ್ಣಿತವಾಗಿವೆ. ಪಾತ್ರಗಳ ಉನ್ನತ ಕಲ್ಪನೆಯೇನೂ ಕಾಣಬರದು. ಜಿನಶಿಶುವಿನ ಜನ್ಮಾಭಿಷೇಕ, ವೈರಾಗ್ಯ ವರ್ಣನೆ, ನಾಟ್ಯಗೀತ ಮುಂತಾದ ಸಂದರ್ಭಗಳಲ್ಲಿ ರನ್ನನ ವಿಶಿಷ್ಟವಾದ ಉತ್ಸಾಹ, ಕಲ್ಪನೆಯ ಲಹರಿ, ಪ್ರತಿಭೆಯ ಸಹಜಭಿವ್ಯಕ್ತಿ – ಇವುಗಳು ಸಾಕಷ್ಟು ಉನ್ನತ ಪ್ರಮಾಣದಲ್ಲಿ ವ್ಯಕ್ತವಾಗಿವೆ. ವೈರಾಗ್ಯ ವರ್ಣನೆಯಂತೂ ಅತ್ಯಂತ ಹೃದಯಸ್ಪರ್ಶಿಯಾಗಿ ಎಂತಹ ಹೃದಯದಲ್ಲೂ ವೈರಾಗ್ಯದ ಕಲ್ಪನೆಯನ್ನು ಹುಟ್ಟಿಸುವಂತಿದೆ.

ಇವನ ಮತ್ತೊಂದು ಕೃತಿಯಾದ ಗದಾಯುದ್ಧ ರನ್ನನ ಕಲಾಸಿದ್ದಿಯ ಸುಂದರ ಸಂಕೇತ. ಇದರ ನಾಟಕ ಗುಣವನ್ನು ವಿಮರ್ಶಕರು ಹಲವಾರು ರೀತಿ ಕೊಂಡಾಡಿದ್ದಾರೆ. ಪಂಪ ಭಾರತದ ೧೪ನೇ ಆಶ್ವಾಸದ ಆಧಾರದ ಮೇಲೆ ಈ ಕಾವ್ಯ ರಚಿತವಾಗಿದ್ದರೂ, ಸಹಜವಾಗಿ ಇದರಲ್ಲಿ ಕಥಾಂಶ ಕಡಿಮೆಯಾದರೂ, ಸಮಸ್ತ ಭಾರತವನ್ನೂ ಸಿಂಹಾವಲೋಕನದಿಂದ ಕವಿ ಹೇಳಿದ್ದಾನೆ. ಆಧುನಿಕ ಹಿನ್ನೋಟ ತಂತ್ರ (Flash back Technique)ಕ್ಕೆ ಸಂವಾದಿ ಯಾದ ಈ ತಂತ್ರ ರನ್ನನ ಉಜ್ವಲ ಪ್ರತಿಭೆಗೆ ಸಾಕ್ಷಿಯಾಗಿದೆ. ರನ್ನನ ದುರ್ಯೋಧನ ಪಾತ್ರದ ಅಪೂರ್ವತೆ, ಭೀಮನ ಅಸಾಧಾರಣವಾದ ಶಕ್ತಿ ವಿಶಿಷ್ಟತೆ, ದ್ರೌಪದಿಯ ಅದ್ಭುತವಾದ ಪ್ರತೀಕಾರ ದಾಹ – ಇವು ಅತ್ಯುತ್ಕಟ ರಸನಿರ್ಭರ ಚಿತ್ರವಾಗಿ ಬಂದಿವೆ. ಭೀಮನಾಡುವ ನುಡಿಗಳು ಸಿಡಿಲಿನಂತೆ ಕಾವ್ಯದುದ್ದಕ್ಕೂ ಸಿಡಿಯುತ್ತವೆ. ಅವನ ಸಿಂಹನಾದ ಓದುಗರ ಕಿವಿಯಲ್ಲಿ ಅವ್ಯಾಹತವಾಗಿ ಮೊಳಗುತ್ತಿರುತ್ತದೆ. ಅಷ್ಟು ಶಕ್ತಿಪೂರ್ಣವಾಗಿವೆ, ತೇಜೋಮಯ ವಾಗಿವೆ ಅವನ ಮಾತು. ಊರುಭಂಗ, ಮಕುಟುಭಂಗಗಳಲ್ಲಿ ಭೀಮನ ಸಿಡಿಲ ನುಡಿಗಳು ಗುಡುಗಾಡಿದರೆ ನಂತರದ ಹಾಗೂ ಮೊದಲಿನ – ಅಂದರೆ ದುರ್ಯೋಧನ ವಿಲಾಪ-ಪ್ರಸಂಗಗಳು ಕರುಣರಸವನ್ನು ತೆರೆತೆರೆಯಾಗಿ ಹೊಮ್ಮಿಸುತ್ತವೆ. ರನ್ನನ ಕಾವ್ಯಪ್ರಪಂಚವನ್ನು ಹೊಕ್ಕು ಆ ಪ್ರತಿಭೆಯ ಮಿಂಚಿನ ಮಳೆಯಲ್ಲಿನೆಂದು, ಈ ಶಕ್ತಿಪೂರ್ಣವಾದ ಭಾವಪ್ರವಾಹದಲ್ಲಿ ಮಿಂದು ಮೇಲೆದ್ದು ಬಂದವರಿಗೆ ಈ ಕೃತಿ ಮಹಾಕೃತಿಯೆನ್ನದೆ ಬೇರಾಡಲು ಬರುವಂತಿಲ್ಲ. ಕನ್ನಡದಲ್ಲಿ ಶಕ್ತಿಸಂಪನ್ನತೆಯನ್ನೂ ಉಕ್ತಿ ಸೌಂದರ್ಯವನ್ನೂ ಏಕಕಾಲದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ನಿರ್ವಹಿಸಿರುವ ಕವಿಗಳಲ್ಲಿ ರನ್ನನು ಬಹುಮಟ್ಟಿಗೆ ಅಗ್ರಪಂಕ್ತಿಯಲ್ಲೇ ನಿಲ್ಲುತ್ತಾನೆ.

‘ಕರ್ನಾಟಕ ಕಾದಂಬರಿ’ಯು ಕನ್ನಡ ಶೃಂಗಾರ ಕಾವ್ಯಗಳಲ್ಲಿ ಅಗ್ರಪಂಕ್ತಿಯಲ್ಲೇ ಗಣಿಸತಕ್ಕ ಗ್ರಂಥವಾಗಿದೆ. ಇದರ ಕರ್ತೃವಾದ ಒಂದನೇ ನಾಗವರ್ಮನು ಸಂಸ್ಕೃತ ಸಾಹಿತ್ಯದಲ್ಲಿ ಅಭೂತಪೂರ್ವ ಮೆಚ್ಚುಗೆಯನ್ನು ಪಡೆದ ಬಾಣ ಕಾದಂಬರಿಯೆಂಬ ಗದ್ಯಗ್ರಂಥವನ್ನು ಚಂಪೂಕಾವ್ಯವಾಗಿ ಅನುವಾದಿಸಿದ್ದಾನೆ. ಮೂಲಗ್ರಂಥವು ಗದ್ಯವಾದರೂ ಅದು ಸಮಾಸ ಬಾಹುಳ್ಯವುಳ್ಳದ್ದು; ವರ್ಣನಾವಿಪುಲತೆಯುಳ್ಳದ್ದು; ಕ್ಲಿಷ್ಟವಾದ ಶಬ್ದಾರ್ಥ ಚಮತ್ಕೃತಿ ಯುಳ್ಳದ್ದು. ಇಂತಹ ಕೃತಿಯನ್ನು ನಾಗವರ್ಮನು ಬಹು ಸಮಪರ್ಕವಾಗಿ ಸುಂದರವಾಗಿ ಅನುವಾದಿಸಿದ್ದಾನೆ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಆದರ್ಶತಮ ಪಾವನಶೃಂಗಾರದ ರಸಚಿತ್ರ ಇಲ್ಲಿ ನೈಜವಾಗಿ ಮೂಡಿದೆ. ಇಲ್ಲಿ ಬರುವ ಪುಂಡರೀಕ, ಮಹಾಶ್ವೇತೆ, ಚಂದ್ರಾಪೀಡ, ಕಾದಂಬರಿ ಮುಂತಾದ ಒಂದೊಂದು ಪಾತ್ರವೂ ಉನ್ನತವಾದುದು. ಆದರ್ಶಪ್ರಣಯ ಜನ್ಮಜನ್ಮಾಂತರಗಳಲ್ಲೂ ಕುಂದದೆ, ನಂದದೆ ಹೇಗೆ ಹರಿಯುತ್ತದೆ ಎಂಬುದನ್ನು ರಮ್ಯವಾಗಿ ಪ್ರತಿಪಾದಿಸುತ್ತದೆ ಈ ಕತೆ. ಮೂಲವನ್ನು ಅನುವಾದಿಸುವಲ್ಲಿ ನಾಗವರ್ಮನು ತನ್ನ ಸ್ವಪ್ರತಿಭೆಯನ್ನು ಬಹಳಮಟ್ಟಿಗೆ ಮೆರಿದಿದ್ದಾನೆ. ಉನ್ನತ ಗ್ರಂಥವೊಂದರ ಆದರ್ಶ ಅನುವಾದಕ್ಕೆ ಮಾದರಿಯಾಗಿದೆ ಈ ಗ್ರಂಥ. ಇಲ್ಲಿಯ ಚಂಪೂಶೈಲಿ ನಿರರ್ಗಳವಾಗಿದೆ, ಸುಂದರ ಬಂಧ ಬಂಧುರವಾಗಿದೆ.

ಹನ್ನೊಂದನೇ ಶತಕದ ಪೂವಾರ್ಧದವನಾದ ದುರ್ಗಸಿಂಹನು ಪಂಚತಂತ್ರವೆಂಬ ನೀತಿಗ್ರಂಥವನ್ನು ಚಂಪೂ ರೂಪದಲ್ಲಿ ಬರೆದಿದ್ದಾನೆ. ಇದು ವಸುಭಾಗ ಭಟ್ಟನ ಸಂಸ್ಕೃತ ಪಂಚತಂತ್ರದ ಅನುವಾದವೆಂದು ಕವಿ ಹೇಳಿಕೊಂಡಿದ್ದಾನೆ. ಸಂಸ್ಕೃತದಲ್ಲಿ ವಸುಭಾಗಭಟ್ಟನ ಪಂಚತಂತ್ರವೊಂದಿತ್ತೆಂದು ಇದರಿಂದ ತಿಳಿದುದರಿಂದ ಇದಕ್ಕೆ ಭಾರತೀಯ ಮಹತ್ವವಿದೆ. ಪಶುಪಕ್ಷಿಗಳ ಸಾಂಕೇತಿಕ ಕತೆಗಳ ಮೂಲಕ ನೀತಿಯನ್ನು ಸಾರಿದ್ದಾನೆ ಕವಿ. ಇದರಲ್ಲಿ ೧. ಭೇದ ಪ್ರಕರಣವರ್ಣನಂ. ೨. ಪರೀಕ್ಷಾವ್ಯಾವರ್ಣನಂ. ೩. ವಿಶ್ವಾಸ ಪ್ರಕರಣ ವರ್ಣನಂ. ೪. ವಂಚನಾಪ್ರಕರಣ ವರ್ಣನಂ. ೫. ಮಿತ್ರಕಾರ್ಯ ಪ್ರಕರಣಂ ಎಂಬ ಪಂಚತಂತ್ರಗಳಿವೆ. ಇವನ ಗದ್ಯ ಶೈಲಿ ಸರಳ ಸುಂದರವಾಗಿದೆ. ವೃತ್ತಿಗಳು ಮಾತ್ರ ಸಂಸ್ಕೃತ ಭೂಯಿಷ್ಠವಾಗಿದ್ದು ಕೃತಕವಾಗಿವೆ. ಏನೇ ಆದರೂ ದುರ್ಗಸಿಂಹನ ಪಂಚತಂತ್ರವು ನೀತಿಬೋಧಕ ಸಂಸ್ಕೃತವೊಂದರ ಸಮರ್ಪಕ ಅನುವಾದವಾಗಿದೆಯೆಂಬಲ್ಲಿ ಸಂಶಯವಿಲ್ಲ, ಕನ್ನಡದಲ್ಲಿ ದೊರೆಯುವ ಕಥಾಸಾಹಿತ್ಯದ ಕೃತಿಗಳಲ್ಲಿ ಈ ಗ್ರಂಥಕ್ಕೆ ಒಂದು ವಿಶೇಷವಾದ ಬೆಲೆಯಿದೆ.

‘೧೧ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರೌಢಕಾವ್ಯ ಪರಂಪರೆಯನ್ನು ಮುಂದುವರಿಸಿ ದವರಲ್ಲಿ ಶಾಂತಿನಾಥನೂ ಒಬ್ಬ. ಈತನ ಸುಕುಮಾರ ಚರಿತವು ಕನ್ನಡ ಚಂಪೂ ಗ್ರಂಥಗಳಲ್ಲಿ ಕಥಾವಸ್ತುವಿನ ದೃಷ್ಟಿಯಿಂದಲೂ ಛಂದಸ್ಸಿನ ದೃಷ್ಟಿಯಿಂದಲೂ ಗಮನಾರ್ಹವಾದುದು. ಇಲ್ಲಿಯ ಸರಳಭಾಷೆ, ಸುಂದರವಾದ ಕಥಾನಿರೂಪಣೆ, ಪಾತ್ರರಚನೆಯ ಕೌಶಲ ಮನಸೆಳೆಯು ವಂತಿದೆ.

೧೨ನೆಯ ಶತಮಾನದ ಮಹತ್ವದ ಕವಿಗಳಲ್ಲಿ ನಾಗಚಂದ್ರನು ಒಬ್ಬನು. ‘ಅಭಿನವ ಪಂಪ’ನೆಂದು ಬಿರುದಾಂಕಿತನಾದ ಈತನ ಗ್ರಂಥಗಳು ಎರಡು: ಮಲ್ಲಿನಾಥ ಪುರಾಣ, ರಾಮಚಂದ್ರಚರಿತ ಪುರಾಣ. ಮೊದಲನೆಯ ಕೃತಿ ೧೬ನೇ ತೀರ್ಥಂಕರನಾದ ಮಲ್ಲಿನಾಥನನ್ನು ಕುರಿತದ್ದು, ಇದರಲ್ಲಿ ಜನ್ಮಾವಳಿಯಿಲ್ಲ. ಹಿಂದಿನ ಒಂದು ಜನ್ಮದ ವಿಷಯವನ್ನು ಹೇಳಿ ಕತೆಯು ಪ್ರಾರಂಭವಾಗುತ್ತದೆ. ಸಾಂಪ್ರದಾಯಿಕ ಮಹಾಕಾವ್ಯದ ಲಕ್ಷಣಗಳೆಲ್ಲವೂ ಇದರಲ್ಲಿವೆ. ತೆಳುವಾದ ಕಥಾಹಂದರದಮೇಲೆ ವರ್ಣನಾ ಬಳ್ಳಿಗಳ ಬಹುಭಾಗವನ್ನು ಹೇರಿದ್ದಾನೆ ಕವಿ. ಕವಿಸಮಯ ಕವಿಸಂಪ್ರದಾಯದ ಸುಳಿಯಲ್ಲಿ ಸಿಕ್ಕಿ ಕವಿ ಪ್ರತಿಭೆ ಮಂಕಾಗಿದೆ. ಕೆಲಕೆಲವೆಡೆ ಉಜ್ವಲ ಕಲ್ಪನೆಯ ಮಿಂಚು ಮಿಂಚಿದರೂ ಅದು ನೆಲೆಯಾಗಿ ನಿಲ್ಲುವುದಿಲ್ಲ. ಇದರಲ್ಲಿನ ಚಂಪೂಶೈಲಿ ಪ್ರೌಢವಾಗಿದೆ.

ಈತನ ಮತ್ತೊಂದು ಮಹತ್ವದ ಕೃತಿ ‘ಪಂಪರಾಮಾಯಣ’ವೆಂದು ಖ್ಯಾತಿವೆತ್ತ ‘ರಾಮಚಂದ್ರಚರಿತಪುರಾಣ’. ಕನ್ನಡದಲ್ಲಿ ಉಪಲಬ್ಧವಾದ ಪ್ರಥಮ ಜೈನರಾಮಾಯಣವಿದು. ವಿಮಲಸೂರಿಯ ಬೃಹತ್‌ಗಾತ್ರದ ಗ್ರಂಥವನ್ನನುಸರಿಸಿ ಕವಿ ತನ್ನ ಕೃತಿಯನ್ನು ರಚಿಸಿದ್ದಾನೆ. ಇಲ್ಲೂ ಅಷ್ಟಾದಶವರ್ಣನೆಗಳ ಗೊಂದಲವಿದ್ದರೂ ನಾಗಚಂದ್ರನ ಪ್ರತಿಭೆ ಇಲ್ಲಿ ಹೆಚ್ಚು ಪಕ್ವವಾಗಿದೆ. ಕವಿಯ ಧಾರ್ಮಿಕ ಶ್ರದ್ಧೆ ಇಲ್ಲಿ ಉನ್ನತಮಟ್ಟದಲ್ಲಿ ವ್ಯಕ್ತವಾಗಿದೆ. ವಾಲ್ಮೀಕಿ ರಾಮಾಯಣದ ಹಲವು ಭಾಗಗಳಲ್ಲಿ ವ್ಯತ್ಯಾಸವನ್ನು ಹೊಂದಿದ ಕತೆಯನ್ನುಳ್ಳ ಈ ಗ್ರಂಥ ಹಲವು ದೃಷ್ಟಿಯಿಂದ ಗಣನೀಯವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಬರುವ ರಾವಣನ ಪಾತ್ರ ಓದುಗರ ಚಿತ್ತವನ್ನು ಸೆರೆಹಿಡಿಯುತ್ತದೆ. ಇಲ್ಲಿ ರಾವಣನಪಾತ್ರದ ಉದಾತ್ತೀಕರಣ ವಾಗಿದೆ. ಹಾಗೆಯೇ ರಾಮ, ಸೀತೆ, ಲಕ್ಷ್ಮಣ ಇವರ ಪಾತ್ರಗಳೂ, ವಾಲ್ಮೀಕಿಯ ಷ್ಟಲ್ಲದಿದ್ದರೂ, ರಮ್ಯವಾಗಿ ಕಲ್ಪಿತವಾಗಿವೆ, ಅರ್ಥಾಂಲಕಾರ ಅರ್ಥಾಂತರನ್ಯಾಸಾಲಂಕಾರ ಗಳಿಗೆ ಇವನು ಎತ್ತಿದ ಕೈ. ಆದರೂ ಇವನ ಕೃತಿಯಲ್ಲಿ ಸತ್ವವಿದೆ,  ಚೆಂಪುವಿನ ಚಂದವಿದೆ, ಮಧುರ ನಾದಲೋಲತೆಯಿದೆ, ಕಲ್ಪನೆಯ ಔನ್ನತ್ಯವಿದೆ. ಕನ್ನಡ ರಾಮಾಯಣಗಳಲ್ಲಿ ಇದಕ್ಕೆ ಒಂದು ವಿಶಿಷ್ಟ ಸ್ಥಾನವಿದೆ.

ಸು. ೧೧೧೨ರಲ್ಲಿ ಬಾಳಿದ ನಯಸೇನನು ‘ಧರ್ಮಾಮೃತವೆಂಬ ೧೪ ಆಶ್ವಾಸಗಳುಳ್ಳ ಚಂಪೂ ಗ್ರಂಥವನ್ನು ರಚಿಸಿದ್ದಾನೆ. “ಕನ್ನಡ ಚಂಪು ವಿಷಯ ವಿನ್ಯಾಸ ಎರಡರಲ್ಲೂ ಜನಸಂಮುಖವೂ ದೇಸಿಸಂಪನ್ನವೂ ಆದದ್ದು ಈ ಗ್ರಂಥದಲ್ಲಿಯೇ”[9] ಸಮ್ಯಗ್ದರ್ಶನ ಮತ್ತು ಅದರ ೮ ಅಂಗಗಳು, ೫ ಅಣುವ್ರತಗಳು – ಹೀಗೆ ೧೪ ಮಹಾರತ್ನಗಳಲ್ಲಿ ಒಂದೊಂದನ್ನು ಅನುಸರಿಸಿ ಸದ್ಗತಿ ಹೊಂದಿದ್ದ ೧೪ ಮಹಾಪುರುಷರ ಕತೆಗಳನ್ನು ಚಂಪೂರೂಪವಾಗಿ ಹೇಳಲಾಗಿದೆ. ಇದಕ್ಕೆ ಒಂದು ಕಥಾಸಂಗ್ರಹದ ರೂಪವಿದೆ, ಇಲ್ಲಿ ಕತೆಗಳು ಸರಳವಾಗಿ ಸುಲಲಿತವಾಗಿ, ಸವಿಯಾಗಿ ಹೇಳಲ್ಪಟ್ಟಿವೆ, ಜನಪದ ಕತೆಗಾರನ ಕಥನ ಕಲೆ ಇಲ್ಲಿ ಗೋಚರವಾಗುತ್ತದೆ. ನಿರೂಪಣೆಯಲ್ಲಿ ಅವನದೇ ಆದ ವಿಡಂಬನೆ ಠೀವಿ, ರುಚಿ ಇದೆ. ಇವನ ಶೈಲಿಯಲ್ಲಿ ದೇಸಿ ಪ್ರಾಚುರ್ಯವಿದೆ. “ಜನತೆಯ ಕವಿಗಳೆಂದು ಹೆಸರಾದ ಕನ್ನಡ ಕಲೋಪಾಸಕರಲ್ಲಿ ನಯಸೇನನು ತೀರ ಎತ್ತರದಲ್ಲಿ ಅಲ್ಲದಿದ್ದರೂ ಎದ್ದುಕಾಣುವ ನೆಲೆ ಯಲ್ಲಿ ಕೂಡಬಲ್ಲ ನಿರುಪಮ ಸಹಜ ಕವಿಯಾಗಿದ್ದಾನೆ.”[10]

ಬಸವಯುಗ

ಸ್ವಮತ ಪ್ರಚಾರಕ್ಕಾಗಿಯೂ ಅನ್ಯಮತಾವಹೇಳನಕ್ಕಾಗಿಯೂ ‘ಸಮಯಪರೀಕ್ಷೆ’ಯೆಂಬ ೧೫ ಆಶ್ವಾಸಗಳುಳ್ಳ ಗ್ರಂಥವನ್ನು ರಚನೆ ಮಾಡಿದವನು ಸು. ೧೨೦೦ರಲ್ಲಿದ್ದ ಬ್ರಹ್ಮ ಶಿವ. ಇದು ಕಂದ ವೃತ್ತಗಳ ಕೇವಲ ಪದ್ಯರೂಪವಾದುದು. ಮಾತು ತೀರ ಹರಿತ. ರೀತಿಯಲ್ಲಿ ವಿಡಂಬನೆ ಕಟಕಿಯ ಕುಟಿಲ ಸಾಮ್ರಾಜ್ಯ. ಇದರಲ್ಲಿ “ಕಥಾನಕವಿಲ್ಲ, ಪಾತ್ರಸೃಷ್ಟಿಯಿಲ್ಲ, ನವರಸವಿಲ್ಲ, ಅಷ್ಟಾದಶವರ್ಣನೆಯಿಲ್ಲ”[11] ಆದರೂ ಸಾಹಿತ್ಯದ ದೃಷ್ಟಿಯಿಂದ ಪ್ರಥಮ ವಿಡಂಬನ ಕಾವ್ಯವಿದು.

ಸು. ೧೧೭೦ರಲ್ಲಿದ್ದ ಕರ್ಣಪಾರ್ಯನು ‘ನೇಮಿನಾಥ ಪುರಾಣವೆಂಬ ೨೨ನೇ ತೀರ್ಥಂಕರ ನಾದ ನೇಮಿನಾಥನ ಚರಿತ್ರೆಯನ್ನು, ಕೃಷ್ಣಬಲರಾಮರ ಹರಿವಂಶ ಚರಿತವನ್ನು ಒಳಗೊಂಡ ೧೪ ಆಶ್ವಾಸಗಳುಳ್ಳ ಚಂಪೂ ಗ್ರಂಥವನ್ನು ಬರೆದಿದ್ದಾನೆ. ಇದು ಜೈನ ಪ್ರೌಢಕಾವ್ಯದ ಸಾಂಪ್ರದಾಯಿಕ ಲಕ್ಷಣಗಳನ್ನೊಳಗೊಂಡಿದ್ದರೂ ಇದರಲ್ಲಿ ಕಲ್ಪನೆಯ ಔನ್ನತ್ಯವಿಲ್ಲ; ಪಾತ್ರಗಳ ಜೀವಂತ ಚಿತ್ರಣವಿಲ್ಲ; ವರ್ಣನೆಗಳ ಮೋಹಕತೆಯಿಲ್ಲ. ಸರಳ ಚಂಪೂಸರಣಿ ಮಾತ್ರ ಕಂಡುಬರುತ್ತದೆ. ಆದರೆ ಜೈನಧರ್ಮಕ್ಕೆ ವಿಶಿಷ್ಟವಾದ ರೀತಿಯಲ್ಲಿ ಭಾಗವತ, ಭಾರತ ಮತ್ತು ನೇಮಿಜಿನನ ಕತೆಗಳನ್ನು ಕನ್ನಡದಲ್ಲಿ ಪ್ರಥಮ ಬಾರಿಗೆ ನಿರೂಪಿಸಿದ ಕೀರ್ತಿಕರ್ಣಪಾರ್ಯನದು.

ಕರ್ಣಪಾರ್ಯನ ಸಮಕಾಲೀನನಾದ ನೇಮಿಚಂದ್ರನು ಲೀಲಾವತಿ ಮತ್ತು ನೇಮಿನಾಥ ಪುರಾಣ – ಎಂಬ ಎರಡು ಚಂಪೂ ಕೃತಿಗಳನ್ನು ರಚಿಸಿದ್ದಾನೆ. ಶೃಂಗಾರ ರಸವನ್ನು ಪ್ರತಿಪಾದಿಸುವ ಪ್ರಮುಖ ಕನ್ನಡ ಗ್ರಂಥಗಳಲ್ಲಿ ಲೀಲಾವತಿಯೂ ಒಂದು. ‘ಸ್ತ್ರೀರೂಪಮೆ ರೂಪಂ ಶೃಂಗಾರಮೆ ರಸಂ’ ಎಂಬ ಭಾವನೆಯುಳ್ಳ ನೇಮಿಚಂದ್ರನು ತನ್ನ ಕೃತಿಯಲ್ಲಿ ಔಚಿತ್ಯ ಮೀರಿ ಶೃಂಗಾರವನ್ನು ವರ್ಣಿಸಿದ್ದಾನೆ. ಈ ಗ್ರಂಥವನ್ನು ಸುಬಂಧುವಿನ ಸಂಸ್ಕೃತ ಗದ್ಯ ಕಾವ್ಯವಾದ ‘ವಾಸವದತ್ತೆ’ಯನ್ನು ಅನುಸರಿಸಿ ಬರೆದಂತೆ ತಿಳಿದು ಬರುತ್ತದೆ. ಇಲ್ಲಿ ಕಲ್ಪನೆಯ ಚಮತ್ಕೃತಿಯಿದೆ. ಆದರೂ ಪ್ರತಿಪಾದನೆಯಲ್ಲಿ ವ್ಯಂಗ್ಯಕ್ಕಿಂತಲೂ ವಾಚ್ಯವೇ ಪ್ರಧಾನವಾಗಿದೆ. ಇವನ ಎರಡನೆಯ ಹಾಗೂ ಹೆಚ್ಚು ಪಕ್ವವಾದ ಕೃತಿ ‘ನೇಮಿನಾಥ ಪುರಾಣ’, ಇದರ ಅರ್ಧ ಮಾತ್ರ ಉಪಲಬ್ಧವಾಗಿದೆ. ೨೩ನೇ ತೀರ್ಥಂಕರನ ಕಥೆಯಿದು. ಇದು ಜೈನಕತೆಯಾದರೂ ಕೃಷ್ಣ, ವಸುದೇವ, ಮನ್ಮಥರ ಪಾತ್ರಗಳು ಜೀವಂತಿಕೆಯಿಂದ ಕೂಡಿವೆ. ಭವಾವಳಿಯ ಕ್ಲಿಷ್ಟತೆಯಿಲ್ಲ. ಚಾಣೂರ ಮತ್ತು ಕೃಷ್ಣರ ಮಲ್ಲಕಾಳಗ. ವಾಮನಾವತಾರದ ಬೃಹದ್ರೂಪದ ವರ್ಣನೆ, ಕಂಸವಧೆ – ಮುಂತಾದ ಸಂದರ್ಭಗಳಲ್ಲಿ ಕವಿ ಪ್ರತಿಭೆ ಚಿಮ್ಮಿದೆ. ಪಾತ್ರ ಪರಿಪೋಷಣೆ, ಸನ್ನಿವೇಶ ನಿರ್ಮಾಣ, ಪದಪ್ರಯೋಗ ಕೌಶಲ – ಇವುಗಳಲ್ಲಿ ನೇಮಿಯು ‘ಲೀಲಾವತಿ’ಗಿಂತ ಸಿದ್ದಿಯನ್ನು ಪಡೆದಿದ್ದಾನೆ. ಶೈಲಿಯೂ ಸಹ, ಒಮ್ಮೊಮ್ಮೆ ಕೃತಕ ಪಾಡಿತ್ಯ ಪ್ರಚುರವಾದರೂ, ಒಟ್ಟಿನಲ್ಲಿ ಉತ್ತಮವಾಗಿದೆ. ಲೀಲಾವತಿಗಿಂತ ಹೆಚ್ಚು ಕಲಾಪೂರ್ಣವಾದ ಕಾವ್ಯವಿದು.

೧೮ ಆಶ್ವಾಸಗಳುಳ್ಳ ‘ಜಗನ್ನಾಥ ವಿಜಯ’ವೆಂಬ ಚಂಪೂ ಕಾವ್ಯವನ್ನು ಬರೆದ ರುದ್ರಭಟ್ಟನು ಸು. ೧೧೮೦ರಲ್ಲಿ ಬಾಳಿದವನು. ಶ್ರೀ ಕೃಷ್ಣನ ಜನನಾದಿಯಾಗಿ ಬಾಣಾಸುರ  ಯುದ್ಧದವರೆಗಿನ ಕಥೆ ಇಲ್ಲಿ ಅಡಕವಾಗಿದೆ. ಇದು ವಿಸ್ತಾರವಾದ ಪ್ರೌಢ ಚಂಪೂ ಕಾವ್ಯ, ‘ವಿಷ್ಣುಪುರಾಣ’ವನ್ನನುಸರಿಸಿ ಕೃತಿ ರಚನೆಯಾಗಿದೆ. ಇವನ ಬಂಧ ಪ್ರೌಢ. ಪಾಂಡಿತ್ಯ ಪ್ರದರ್ಶನದ ಅದಮ್ಯ ಬಯಕೆ ಈ ಕೃತಿಯಲ್ಲಿ ಕಂಡು ಬರುತ್ತದೆ. ಪ್ರಾಚೀನ ಕವಿಗಳ ದಾರಿಯಲ್ಲೇ ಕವಿ ನಡೆದಿದ್ದರೂ ಅಲ್ಲಲ್ಲಿ ಅವನ ಕಲ್ಪನೆ ಉಜ್ವಲವಾಗಿದೆ. ಕೃಷ್ಣನ ಬಾಲಲೀಲೆ, ಅವನ ಅವತಾರ ಮಹತ್ವ – ಮುಂತಾದುವುಗಳನ್ನು ರಸವತ್ತಾಗಿ ನಿರೂಪಿಸಿದ್ದಾನೆ. ಭಕ್ತಿರಸಾವೇಶದ ಸಂದರ್ಭಗಳಲ್ಲಿ ಶೈಲಿ ಸರಳವಾಗಿದೆ. ವರ್ಣನೆ ಸಮುಚಿತವಾಗಿದೆ. ಅದಿಲ್ಲದೆಡೆ ಸಂಸ್ಕೃತ ಸಮಾಸಗಳ ಸಾರ್ವಭೌಮತ್ವವಿದೆ, ಕವಿ ಸಮಯದ ಬಾಹುಳ್ಯವಿದೆ. ವರ್ಣನೆಯಲ್ಲಿ ರುದ್ರಭಟ್ಟನು ಅತಿನಿಪುಣ. ಹರಿಹರರಲ್ಲಿ ಭೇದವನ್ನೆಣಿಸದ ಭಾಗವತ ಸಂಪ್ರದಾಯಿ ಇವನು. ಇವನ ಗ್ರಂಥದಲ್ಲಿ ಭಕ್ತಿಯೇ ಪ್ರಧಾನ ರಸ. ಒಟ್ಟಿನಲ್ಲಿ ರುದ್ರಭಟ್ಟನು ಉತ್ತಮ ಕವಿ.

ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತ ಭೂಯಿಷ್ಠವಾದ ಶೈಲಿಯಲ್ಲಿ ಪ್ರೌಢ ಕಾವ್ಯವನ್ನು ಬರೆದ ಕವಿಗಳಲ್ಲಿ ಅಗ್ಗಳನು ಅಗ್ಗಳನಾದವನು. ೮ನೇ ತೀರ್ಥಂಕರನನ್ನು ಕುರಿತ ‘ಚಂದ್ರಪ್ರಭ ಪುರಾಣ’ದಲ್ಲಿ ೧೬ ಆಶ್ವಾಸಗಳಿವೆ. ಈ ಪುರಾಣದಲ್ಲಿ ಜನ್ಮಾಂತರದ ಗೊಂದಲವಿಲ್ಲದಿದ್ದರೂ ವಿದ್ವತ್ ಪ್ರೌಢಿಮೆಯ ಪರಾಕಾಷ್ಠೆಗೆ ಒಳಗಾದಾಗ ಯಾವ ಸ್ವರೂಪವನ್ನು ತಾಳಬಹು ದೆಂಬುದಕ್ಕೆ ಈ ಗ್ರಂಥ ಒಂದು ನಿದರ್ಶನವಾಗಿದೆ.

ಅಚಣ್ಣನ ವರ್ಧಮಾನ ಪುರಾಣ, ಬಂಧುವರ್ಮನ ಹರಿವಂಶಾಭ್ಯುದಯ ಮತ್ತು ಜೀವ ಸಂಬೋಧನೆಗಳೂ ಕೂಡ ಸ್ಮರಣಾರ್ಹ ಗ್ರಂಥಗಳು. ಅದರಲ್ಲೂ ಜೀವಸಂಬೋಧನೆ ಜೈನ ಧರ್ಮದ ತತ್ವಗಳನ್ನು ಧರ್ಮಾಮೃತ – ಮುಂತಾದವುಗಳಂತೆ ಸರಳವಾದ ಕತೆಗಳಲ್ಲಿ ಜನಸಾಮಾನ್ಯಕ್ಕೆ ಬೋಧಿಸಿದ ಗ್ರಂಥವಾಗಿದೆ. ಸು. ೧೨೦೦ರ ದೇವಕವಿಯ ಅಸಮಗ್ರವಾದ ಉಪಲಬ್ಧವಾಗಿರುವ ಕುಸುಮಾವಳಿಯೂ ಒಂದು ಕುತೂಹಲಕಾರಿಯಾದ ಚಂಪೂ ಗ್ರಂಥ. ಇದು ಶೃಂಗಾರ ರಸಭರಿತವಾದ ಹಾಗೂ ಸ್ವಾರಸ್ಯಕರವಾದ ಪ್ರಣಯ ಕತೆಯನ್ನೊಳಗೊಂಡಿದೆ. ಸು. ೧೨೦೫ರಲ್ಲಿದ್ದ ಪಾರ್ಶ್ವಪಂಡಿತನಿಂದ ರಚಿತವಾದ ೨೪ನೇ ತೀರ್ಥಂಕರನ ಕತೆಯನ್ನೊಳ ಗೊಂಡ ಪಾರ್ಶ್ವನಾಥ ಪುರಾಣವನ್ನು ಇಲ್ಲಿಯೇ ನೆನೆಯಬಹುದು.

ಕವಿ ಚರಿತೆಕಾರರ ದೃಷ್ಟಿಯಿಂದ ೧೨ನೇ ಶತಮಾನಕ್ಕೆ ಸೇರಿದವನಾದರೂ ಇತ್ತೀಚಿನ ಸಂಶೋಧನೆಗಳಿಂದ ೧೩ನೇ ಶತಮಾನದವನೆಂದು ನಿರ್ಣೀತನಾಗಿರುವ ಹರಿಹರನು ಈ ಶತಮಾನದ ಮಹಾಕವಿ. ಪ್ರೌಢಕಾವ್ಯ ಪರಂಪರೆಗೆ ಹರಿಹರನ ನಲ್ಗಾಣಿಕೆಯೆಂದರೆ ‘ಗಿರಿಜ ಕಲ್ಯಾಣ’. ಇದರ ರಚನೆಯ ವಿಷಯವಾಗಿ ದಂತಕತೆಗಳೇನೇ ಇದ್ದರೂ, ಇದು ಹರಿಹರನ ಮೊದಲ ಕೃತಿಯೆಂದು ವಿಮರ್ಶಕರು ಭಾವಿಸಿದ್ದಾರೆ. ಇದರಲ್ಲಿ ೧೦ ಆಶ್ವಾಸಗಳೂ ಸುಮಾರು ೧೧೦೨ ಪದ್ಯಗಳೂ ಇವೆ. ಪಾರ್ವತಿಯ ಜನನದಿಂದ ಆಕೆಯ ಕಲ್ಯಾಣದವರೆಗೆ ಕಥೆಯ ಹರಹಿದೆ. ಪಾರ್ವತಿಗೆ ಅತೀವ ಪ್ರಾಶಸ್ತ್ಯವಿಲ್ಲಿದೆ. ಸಾಂಪ್ರದಾಯಿಕವಾದ ಪ್ರೌಢ ಚಂಪೂಕಾವ್ಯ ಪರಂಪರೆಯಲ್ಲೇ ಕವಿ ನಡೆದಿದ್ದರೂ ಅವನ ಉಜ್ವಲ ಪ್ರತಿಭೆಯ, ಮಹೋನ್ನತ ಕಲ್ಪನಾ ಶಕ್ತಿಯ ದರ್ಶನವನ್ನು ಇಲ್ಲೂ ಕಾಣಬಹುದಾಗಿದೆ. “ಕತೆಯ ದೃಷ್ಟಿಯಿಂದ ವರ್ಣನೆಗಳಿಗೆ ಮಿತಿಮೀರಿದ ಸ್ಥಳ ಇಲ್ಲಿ ಮೀಸಲಾಗಿದೆ.”[12] “ರುದ್ರನ ಉರಿಗಣ್ಣಿನಿಂದ ಹೊಮ್ಮಿದ ಭೀಕರ ಜಲಾಮಾಲೆಯನ್ನು ವರ್ಣಿಸುವ ಪದ್ಯಗಳಲ್ಲಿ ಹರಿಹರನ ಕವಿತಾಶಕ್ತಿಯ ಉಗ್ರಕಾಂತಿ ಅನುಭವಕ್ಕೆ ಬರುತ್ತವೆ.”[13] ಹಾಗೆಯೇ ರತಿವಿಲಾಪದ ದೃಶ್ಯವೂ ಹರಿಹರನ ಕಲ್ಪನಾ ಕುಂಚದಿಂದ ಅನುಪಮವಾಗಿ ಚಿತ್ರಿತವಾಗಿದೆ. ಹಾಗೆಯೇ ಕಪಟ ವಟುವಿನ ಪ್ರಸಂಗವೂ ಕೂಡ. ವರ್ಣನಾವಿಪುಲತೆಯಿಂದ ಕೃತಿಯ ಕಥನಗತಿ ಮಂದವಾಗಿದೆ. ಆದರೂ ಕೆಲವೆಡೆಗಳಲ್ಲಿ ಹರಿಹರನ ಸಹಜ ಕಥನವೇಗ ಕಂಗೊಳಿಸುತ್ತದೆ. ಅತ್ಯುತ್ಸಾಹದ ಆವೇಶದಲ್ಲಿ ಅಲ್ಲಲ್ಲಿ ವಿರೋಧಾಭಾಸಗಳಾಗಿರುವುದೂ ಉಂಟು. ಒಟ್ಟಿನಲ್ಲಿ ಪಾತ್ರಗಳ ಜೀವಂತಿಕೆ, ಕಲ್ಪನೆಯ ಶ್ರೀಮಂತಿಕೆ, ನಿರೂಪಣೆಯ ಹೃದಯವಂತಿಕೆಗಳಿಂದ ‘ಗಿರಿಜ ಕಲ್ಯಾಣ’ವು ಒಂದು ಉತ್ತಮ ಚಂಪೂ ಕಾವ್ಯವಾಗಿದೆ.

೧೩ನೇ ಶತಮಾನದ ಶ್ರೇಷ್ಠ ಕವಿಗಳಲ್ಲಿ ಜನ್ನನು ಒಬ್ಬನಾಗಿದ್ದಾನೆ. ಕವಿಚಕ್ರವರ್ತಿಯೆಂದು ಹೆಸರುಗೊಂಡ ಇವನ ಕೃತಿಗಳು ಎರಡು: ಯಶೋಧರ ಚರಿತೆ ಮತ್ತು ಅನಂತನಾಥಪುರಾಣ. ಮೊದಲನೆಯದು ಚಂಪೂ ರೂಪವಲ್ಲ : ಕೇವಲ ಕಂದವೃತ್ತಗಳನ್ನೊಳಗೊಂಡದ್ದು. ಎರಡನೆಯದು ೧೪ ಆಶ್ವಾಸಗಳುಳ್ಳ ೧೪ನೇ ತೀರ್ಥಂಕರನನ್ನು ಕುರಿತ ಕಾವ್ಯ. “ಲೋಕದಲ್ಲಿ ರತಿಭಾವವು ಸರ್ವಸಾಧಾರಣವಾದರೂ, ಕಾವ್ಯದಲ್ಲಿ ಅದರ ಹೃದಯವನ್ನರಿತು ಸರಸವಾಗಿ ನುಡಿದು ವಾಚಕರನ್ನು ಮರುಳು ಮಾಡತಕ್ಕವರು ಎಲ್ಲೋ ಕೆಲವು ಮಂದಿ. ಅಂತಹ ಕವಿಗಳಲ್ಲಿ ಜನ್ನನೂ ಒಬ್ಬನು.”[14] ಯಶೋಧರ ಚರಿತೆಯು ಅವನ ಮಹತ್ವದ ಗ್ರಂಥ. ವಿಕೃತ ಕಾಮದ ಸಹಜ ಜೀವಂತ ಚಿತ್ರಣ ಇಲ್ಲಿ ರಮ್ಯವಾಗಿ ಬಂದಿದೆ. ಪಾತ್ರ ಕಲ್ಪನೆ, ಸನ್ನಿವೇಶ ರಚನೆ, ಸಂಭಾಷಣಾ ಕೌಶಲ, ಉಚಿತ ಪದಪ್ರಯೋಗ – ಮೇಲಾಗಿ ಅಮಿತವಾದ ಜೀವನಾನುಭವ ಇವು ಇಲ್ಲಿ ಅಧಿಕ ಪ್ರಮಾಣದಲ್ಲಿ ವ್ಯಕ್ತವಾಗಿವೆ. ಅವನ ಅನಂತನಾಥ ಪುರಾಣವು ಕಾವ್ಯ ದೃಷ್ಟಿಯಿಂದ ಅಷ್ಟೇನೂ ಮಹತ್ವಪೂರ್ಣವಲ್ಲದಿದ್ದರೂ ಅದರಲ್ಲಿ ಬರುವ ವಸುಷೇಣ-ಸುನಂದೆ-ಚಂಡಶಾಸನರ ಆಖ್ಯಾನವು ತನ್ನಷ್ಟಕ್ಕೆ ತಾನೇ ಒಂದು ಉತ್ಕೃಷ್ಟ ವಾದ ಪ್ರಣಯಕತೆಯಾಗಿದೆ. ಇದರ ಕಾವ್ಯ ಸೌಂದರ್ಯಕ್ಕೆ ಮನಸೋತ ಮಲ್ಲಿಕಾರ್ಜುನನು ತನ್ನ ಸೂಕ್ತಿಸುಧಾವರ್ಣದಲ್ಲಿ ಇಲ್ಲಿನ ೨೦ರಷ್ಟು ಪದ್ಯಗಳನ್ನು ಆರಿಸಿಕೊಂಡಿದ್ದಾನೆ. ಯಶೋಧರ ಚರಿತೆಯಲ್ಲಿ ಕಾವ್ಯಧರ್ಮ ಮತ್ತು ಧರ್ಮಗಳೆರಡನ್ನೂ ಸಮನ್ವಯ ಮಾಡಲು ಕವಿ ಪ್ರಯತ್ನಿಸಿ ಸಾಕಷ್ಟು ಸಫಲನಾಗಿದ್ದಾನೆ. ಒಟ್ಟಿನಲ್ಲಿ ಅವನ ಮನೋಧರ್ಮವು ಶೃಂಗಾರಪರವಾದುದೆಂದರೆ ತಪ್ಪಲ್ಲ. ಅದರಲ್ಲೂ “ರತಿರಹಸ್ಯವನ್ನು ಬಣ್ಣಿಸುವುದಕ್ಕಿಂತಲೂ ಪ್ರಣಯ ಸಮಸ್ಯೆಯನ್ನು ಬಿಡಿಸುವುದರ ಕಡೆಗೇ ಅವನ ಆಸಕ್ತಿ ಹೆಚ್ಚು. ಅದೇ ಅವನ ವೈಶಿಷ್ಟ್ಯ, ಅವನ ಕಾವ್ಯದ ಸತ್ವ.”[15]

೧೩ನೇ ಶತಮಾನದ ಸ್ಮರಣಾರ್ಹ ಕವಿಗಳಲ್ಲಿ ಸೋಮರಾಜನು ಒಬ್ಬನಾಗಿದ್ದಾನೆ. ಇವನ ‘ಶೃಂಗಾರಸಾರ’ ಇಲ್ಲವೇ ‘ಉದ್ಭಟಕಾವ್ಯ’ ೧೨ ಆಶ್ವಾಸಗಳುಳ್ಳ ಚಂಪೂ ಗ್ರಂಥ. ಹರಿಹರನಿಂದ ಪ್ರಭಾವಿತನಾದ ಈತ ಉದ್ಭಟನ ಮಹಾತ್ಮೆಯನ್ನು ಕುರಿತಾದ ಗ್ರಂಥವನ್ನು  ರಚಿಸಿದ್ದಾನೆ. ಕೊನೆಯ ಎರಡು ಆಶ್ವಾಸಗಳಲ್ಲಿ ಮಾತ್ರ ಮುಖ್ಯ ಕಥೆ ಬರುತ್ತದೆ. ಉಳಿದೆಡೆಗಳಲ್ಲೆಲ್ಲಾ ವರ್ಣನಾ ವ್ಯಾಮೋಹದ ಅತಿರೇಕವಿದೆ. ಕಾವ್ಯ ಹಾಗೂ ಶೈಲಿಯ ದೃಷ್ಟಿಯಿಂದ ಇದೊಂದು ಸಾಧಾರಣ ಚಂಪೂ ಗ್ರಂಥ.

ಇದೇ ಶತಮಾನಕ್ಕೆ ಸೇರಿದ ಎರಡನೆ ಗುಣವರ್ಮನ ಪುಷ್ಪದಂತ ಪುರಾಣ, ಕಮಲಭವನ ಶಾಂತೀಶ್ವರ ಪುರಾಣ, ಚೌಂಡರಸನ ನಳಚಂಪುಗಳು ಹೆಸರಿಸಬೇಕಾದ ಚಂಪೂ ಕಾವ್ಯಗಳು. ಇವೆಲ್ಲವುಗಳಲ್ಲಿ ಕಲ್ಪನೆಯ ಚೈತ್ರವೈಭವವಿಲ್ಲದಿದ್ದರೂ ಸಾಧಾರಣ ಪ್ರತಿಭೆಯ ಹೃದಯಂಗಮ ಅಭಿವ್ಯಕ್ತಿಯಿದೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಅಂಡಯ್ಯನ ಹೆಸರು ಮೇಲಿಂದ ಮೇಲೆ ನೆನೆಯು ವಂತಹುದಾಗಿದೆ. ಅವನ ಕೃತಿ ‘ಕಬ್ಬಿಗರ ಕಾವ್ಯ’. ಯಾವ ಮೂಲದಲ್ಲೂ ಇದುವರೆಗೆ ದೊರೆಯದ ಒಂದು ಹೊಸ ಕತೆಯನ್ನು ಕವಿ ಸ್ವಪ್ರತಿಭಾ ಚಾತುರ್ಯದಿಂದ ಅಂದವಾಗಿ ನಿರೂಪಿಸಿದ್ದಾನೆ. “ಚಂದ್ರನ ಅಪಹರಣವು ಕಲಹ ಬೀಜವಾಯಿತೆಂಬ ಕಥಾಂಶವು ಭಾರತೀಯ ಸಾಹಿತ್ಯಕ್ಕೇ ಸೊಗಸಾದ ಹೊಸ ಕಲ್ಪನೆಯಾಗಿದೆ.”[16] ಸಂಸ್ಕೃತದ ಸಹಾಯವಿಲ್ಲದೆ ಕಾವ್ಯವನ್ನು ಸುಂದರವಾಗಿ ಅಭಿವ್ಯತ್ತಿಸಬಲ್ಲ ಸತ್ವ ಕನ್ನಡಕ್ಕಿದೆಯೆಂಬುದನ್ನು ನಿದರ್ಶಿಸಲು ಕವಿ ತನ್ನ ಕಾವ್ಯರಚನೆ ಮಾಡಿದ್ದಾನೆ. ಕಥನ ರೀತಿ, ಸಂವಿಧಾನ ರಚನೆ, ವಿನೂತನ ವರ್ಣನೆ, ಭಾಷಾ ವೈಶಿಷ್ಟ್ಯಗಳಿಂದ, ‘ಕಬ್ಬಿಗರ ಕಾವ’ ಒಂದು ಕುತೂಹಲಕಾರಿಯಾದ ಕಾವ್ಯವಾಗಿದೆ. “ಕನ್ನಡ ಸಾಹಿತ್ಯದಲ್ಲಿ ಆಂಡಯ್ಯನ ಸ್ಥಾನವು ಅವನ ಕಲ್ಪಕತೆಯ ವೈಶಿಷ್ಟ್ಯದಿಂದ ತೀರ ನಿಶ್ಚಿತವಾಗಿದೆ. ‘ದೇಸೆಯಗೊತ್ತು ಜಣ್ಣುಡಿಯ ತಾಯ್ವನೆ ನುಣ್ಬುರುಳೇಳ್ಗೆ’ಯೆಂಬಲ್ಲಿ ಆತನೇ ಹೇಳಿದ ದೇಸೆ, ಜಣ್ಣುಡಿ, ನುಣ್ಪುರುಳು ಎಂಬ ಮೂರು ಗುಣಗಳು ಅವನ ವ್ಯಕ್ತಿತ್ವದ ಮೂರು ಕುರುಹುಗಳಾಗಿವೆ : ಶೈಲಿಯಲ್ಲಿ ಅಚ್ಚಗನ್ನಡ, ಕತೆಯಲ್ಲಿ ಚಮತ್ಕಾರ, ಅರ್ಥದಲ್ಲಿ ಸೂಕ್ಷ್ಮ ವ್ಯಂಗ್ಯ.”[17]

ಮಲ್ಲಿಕಾರ್ಜುನನ ಸ್ವತಂತ್ರ ಗ್ರಂಥಗಳಾವುವೆಂಬುದು ತಿಳಿಯದಿದ್ದರೂ ಅವನ ಸಂಕಲನ ಗ್ರಂಥವಾದ ‘ಸೂಕ್ತಿಸುಧಾರ್ಣವ’ ಕನ್ನಡ ಸಾಹಿತ್ಯದ ಸ್ಮರಣೀಯ ಕೃತಿಗಳಲ್ಲಿ ಒಂದು. ಸಾಂಪ್ರದಾಯಿಕ ಮಹಾಕಾವ್ಯದ ೧೮ ವರ್ಣನೆಗಳಿಗೂ ಹಲವಾರು ಕೃತಿಗಳಿಂದ ಪದ್ಯಗಳ ನ್ನಾಯ್ದುಕೊಂಡು ೧೮ ಆಶ್ವಾಸಗಳನ್ನಾಗಿ ರಚಿಸಿದ್ದಾನೆ. ಈ ಸಂಕಲನದಿಂದ ಮಾತ್ರವೇ ಹಲವಾರು ಕನ್ನಡ ಕವಿಗಳನ್ನು ನಾವು ಅರಿಯುವಂತಾಗಿದೆ.

೧೩ನೆಯ ಶತಮಾನದಿಂದೀಚೆಗೆ ನಾಗರಾಜ, ವೃತ್ತವಿಲಾಸ, ಮಧುರ, ಆಯತವರ್ಮ ಮುಂತಾದವರು ಚಂಪೂ ಕೃತಿಗಳನ್ನು ರಚಿಸಿದರೂ ಅವು ಗುಣ ದೃಷ್ಟಿಯಿಂದ ಅಂತಹ ಮೇಲ್ಮಟ್ಪದ ಕೃತಿಗಳಾಗಲಿಲ್ಲ.

ಕುಮಾರವ್ಯಾಸ ಯುಗದಲ್ಲಿ ಹಳಗನ್ನಡ ಹಿಂದೆಸರಿದು ನಡುಗನ್ನಡ ನಿಶ್ಚಿತವಾಗಿ ನಡುಕಟ್ಟಿ ನಿಂತ ಕಾರಣ, ಮಾರ್ಗಕಾವ್ಯದ ಸಂಪ್ರದಾಯ ಶರಣತೆ ಶಬಲಗೊಂಡು ದೇಸಿಯ ಒಲವು ಬಲಿತುದರಿಂದ, ಅಚ್ಚಗನ್ನಡ ಛಂದಸ್ಸುಗಳಾದ ಷಟ್ಪದಿ, ಸಾಂಗತ್ಯಗಳು ಕರ್ನಾಟಕ ಸಾಹಿತ್ಯ ಸಿಂಹಾಸನವನ್ನೇರಿದುದರಿಂದ ಚಂಪೂ ಕಾವ್ಯವನಿತೆಯ ಅಸದೃಶ ರಮಣೀಯ ವಸಂತವಿಲಾಸ ಮರೆಯಾಗುತ್ತಾ ಬಂತು. ಅದರಲ್ಲೂ ಅಭಿನವ ವಾದಿವಿದ್ಯಾನಂದ, ಷಡಕ್ಷರದೇವ (೧೯೫೦), ತಿರುಮಲಾರ್ಯ (೧೯೬೦), ಚಿಕ್ಕುಪಾಧ್ಯಾಯ, ಅಳಿಯಲಿಂಗರಾಜ (೧೮೫೦), ಮುಂತಾದವರು ಹಳಗನ್ನಡ ಸಂಪ್ರದಾಯವನ್ನನುಸರಿಸಿ ನಡುಗನ್ನಡ ಕಾಲದಲ್ಲೂ ಚಂಪೂ ಗ್ರಂಥಗಳನ್ನು ರಚಿಸಿದರು. ಮೈಸೂರರಸರಾಗಿದ್ದ ಚಿಕ್ಕದೇವರಾಜರ ಕಾಲದಲ್ಲಿ ಚಂಪುವಿಗೆ ಮತ್ತೆ ವಿಶೇಷ ಪ್ರಾಶಸ್ತ್ಯ ಬಂತು.

ಅಭಿನವವಾದಿ ವಿದ್ಯಾನಂದನ ‘ಕಾವ್ಯಸಾರ’ ಮತ್ತೊಂದು ಸೂಕ್ತಿ ಸುಧಾರ್ಣವ. ಅಳಿಯ ಲಿಂಗರಾಜನ ಕೃತಿಗಳು ಸಂಖ್ಯೆಯಲ್ಲಿ ವಿಫುಲವಾದರೂ ಗುಣದಲ್ಲಿ ಅತಿಸಾಧಾರಣ ದರ್ಜೆಯವು. ತಿರುಮಲಾರ್ಯನ ‘ಚಿಕದೇವರಾಜ ವಿಜಯ’ವು ಪ್ರೌಢವಾದ ಚಂಪೂಕಾವ್ಯ. ೩೦ಕ್ಕಿಂತ  ಅಧಿಕ ಸಂಖ್ಯೆಯ ಕೃತಿಗಳನ್ನು ರಚಿಸಿದ ಚಿಕ್ಕುಪಾಧ್ಯಾಯನು ಈ ಕಾಲದಲ್ಲಿ ಚಂಪೂಕಾವ್ಯವನ್ನು ರಚಿಸಿದ ಮತ್ತೊಬ್ಬ ಪ್ರೌಢ ಕವಿ. ಪ್ರತಿಭಾಪೂರ್ಣ ವಿನೂತನತೆ ಇಲ್ಲದಿದ್ದರೂ ಪಾಂಡಿತ್ಯದ ಪ್ರೌಢ ಪ್ರದರ್ಶನ ಅವನ ಗ್ರಂಥಗಳ ಮುಖ್ಯ ಗುಣ.

ಷಡಕ್ಷರದೇವನು ೧೫ನೆಯ ಶತಮಾನದವರೆಗಿನ ಚಂಪೂ ಕವಿಗಳಲ್ಲಿ ಶ್ರೇಷ್ಠ ಕವಿಯೆನಿಸಿ ಕೊಳ್ಳುವ ಯೋಗ್ಯತೆಯನ್ನು ಪಡೆದ ಏಕಮಾತ್ರ ಕವಿ. ಈತನ ಕೃತಿಗಳಲ್ಲಿ ರಾಜಶೇಖರ ವಿಲಾಸ, ಶಬರ ಶಂಕರ ವಿಲಾಸ ಮತ್ತು ವೃಷಭೇಂದ್ರ ವಿಜಯಗಳು ಈ ಕಾಲದ ಪ್ರಮುಖ ಚಂಪೂ ಗ್ರಂಥಗಳು. ಇವುಗಳ ಮೂಲಕ ಕವಿ ಕಾವ್ಯಧರ್ಮವನ್ನೂ ಧರ್ಮವನ್ನೂ ಬೆಳಗಿದ್ದಾನೆ. ಯತಿಯಾದ ಈತ ಅಸಾಮಾನ್ಯ ಪಾಂಡಿತ್ಯ ಪ್ರತಿಭೆಗಳುಳ್ಳವನು. ಇವನಿಂದ ಈ ಕಾಲದ ಚಂಪೂವಿಗೆ ತುಂಬು ಜೀವ, ನವಯೌವನ ಬಂದಿದೆ. ಇವನದು ಹರಿಹರ ಮಾರ್ಗ. ಇವನ ‘ರಾಜಶೇಖರ ವಿಲಾಸ’ವು ೧೪ ಆಶ್ವಾಸಗಳುಳ್ಳ ಗ್ರಂಥ. ಗುಬ್ಬಿ ಮಲ್ಲರ್ಣಾಯನು ‘ಭಾವಚಿಂತಾರತ್ನ’ದಲ್ಲಿ ಹೇಳಿದ ಕತೆಯೇ ಇದರ ವಸ್ತು. ಶಿವಭಕ್ತನ ಕಥೆಯಿದು. ಇದರಲ್ಲಿ ಕವಿಸಮಯ ಕವಿಸಂಪ್ರದಾಯದ ಮೋಹ ಹೆಚ್ಚಾಗಿದ್ದರೂ, ವರ್ಣನಾ ಬಾಹುಳ್ಯದಿಂದ ಕಥನಗತಿ ಮಂದವಾದರೂ ಕೆಲವು ಸನ್ನಿವೇಶಗಳಲ್ಲಿ ಕವಿಯ ಉಜ್ವಲ ಪ್ರತಿಭೆಯ ನವೋನವ ವೈಭವ ಧುತ್ತೆಂದು ಎದ್ದು ನಿಂತಿದೆ. ೧೨ನೆಯ ಆಶ್ವಾಸದ ತಿರುಕೊಳವಿ ನಾಚಿಯ ಪ್ರಸಂಗ ಒಂದು ಕರುಣ ರಮ್ಯ ರಸದ ಮಡು. ಈ ಸನ್ನಿವೇಶದಲ್ಲಿ ಕವಿಯ ಶೈಲಿ ಸರಳ ಸುಂದರವಾಗಿ ಭಾವ ಬಂಧುರವಾಗಿ ರಸ ನಿರ್ಭರವಾಗಿ ಹರಡಿದೆ. ಒಟ್ಟಿನಲ್ಲಿ ರಾಜಶೇಖರ ವಿಳಾಸವು ಷಡಕ್ಷರಿಯ ಕಲ್ಪನಾವಿಲಾಸದ ಸ್ವರ್ಣ ಕಳಸ. ಇವನ ಉಳಿದೆರಡು ಕೃತಿಗಳಾದ ‘ಶಬರ ಶಂಕರ ವಿಲಾಸ’ ಮತ್ತು ‘ವೃಷಭೇಂದ್ರ ವಿಜಯ’ಗಳೂ ಕೂಡ ಮೇಲ್ಮಟ್ಟದ ಕೃತಿಗಳಾಗಿವೆ.

ಇಲ್ಲಿಗೆ ಕನ್ನಡದ ಪ್ರಮುಖ ಚಂಪೂ ಗ್ರಂಥಗಳ ಸಮೀಕ್ಷೆ ಮುಗಿದಂತಾಯಿತು. ಇಲ್ಲಿಂದ ಮುಂದೆ ಕೆಲವು ಕಾಲ ಅಲ್ಲೊಂದು ಇಲ್ಲೊಂದು ಚಂಪೂ ಗ್ರಂಥವು ತಲೆಯೆತ್ತಿದರೂ ಅವು ಶುಷ್ಕ ಪಾಂಡಿತ್ಯದ ರಸವಿಹೀನ ನಿರ್ಜೀವ ಕೃತಿಗಳಾದವು. ದೇಸಿ ನುಡಿಯಲ್ಲಿ, ಅದೂ ನಡುಗನ್ನಡ ಹೊಸಗನ್ನಡದಲ್ಲಿ, ಚಂಪೂ ಗ್ರಂಥಗಳನ್ನು ರಚಿಸುವುದು ದುಸ್ಸಾಧ್ಯ. ಚಂಪೂ ಛಂದಕ್ಕೆ ಹಳೆಗನ್ನಡದ ಧೀರ ಗಂಭೀರ ಶೈಲಿ ಹೊಂದುವಂತೆ ನಡುಗನ್ನಡ ಹೊಸಗನ್ನಡದ ಸರಳ ಸುಭಗ ಶೈಲಿ ಹೊಂದುವುದಿಲ್ಲವೆಂದೇ ಹೇಳಬೇಕು. ಅದೂ ಅಲ್ಲದೆ ಕಾವ್ಯ ಪಂಡಿತರಂಜನೋದ್ದೇಶವನ್ನು ತ್ಯಜಿಸಿ ಜನಸಂಮುಖವಾದಂತೆಲ್ಲಾ ಕ್ಲಿಷ್ಟವೂ ಕಷ್ಟಸಾಧ್ಯವೂ ಪಾಮರಾಪ್ರಿಯವೂ ಆದ ಚಂಪೂ ಛಂದವನ್ನು ಕವಿಗಳು ಕೈ ಬಿಡುತ್ತಾ ಬಂದರು. ಸಾವಿರ ವರ್ಷಗಳ ಕನ್ನಡ ಸಾಹಿತ್ಯದಲ್ಲಿ ವೈವಿಧ್ಯ ವೈಶಿಷ್ಟ್ಯ ವೈಭವಗಳಿಂದ ಚಂಪೂ ಛಂದವು ಮೆರೆದರೂ ಅದು ಅತಿ ಹೆಚ್ಚು ವಿಜೃಂಭಣೆಯಿಂದ ಪ್ರಕಾಶಿಸಿದುದು ಹತ್ತು, ಹನ್ನೆರಡು ಮತ್ತು ಹದಿಮೂರನೆಯ ಶತಮಾನಗಳಲ್ಲಿ ಮಾತ್ರ. ಕ್ರಮ ಕ್ರಮೇಣ ಚಂಪೂ ಕಾವ್ಯಶ್ರೀ ಕಳೆಗುಂದುತ್ತಾ ಬಂದು ಆಧುನಿಕ ಕಾಲದಲ್ಲಿ ಪೂರ್ಣವಾಗಿ ತನ್ನ ಸಾಮ್ರಾಜ್ಯದಿಂದ ಅಸ್ತಂಗತಳಾದಳು. ಏನೇ ಆದರೂ ಕನ್ನಡ ಚಂಪೂ ಸಂಪ್ರದಾಯ ಸಂಸ್ಕೃತ ಚಂಪೂ ಸಂಪ್ರದಾಯಕ್ಕಿಂತ ಸುದೀರ್ಘ ಪರಂಪರೆಯನ್ನು ಹೊಂದಿದೆ; ಕಣ್ಣು ಕೋರೈಸುವ, ವೈಭವದಿಂದ ಕಂಗೊಳಿಸಿದೆ; ಕನ್ನಡ ಸಾಹಿತ್ಯ ಪ್ರಪಂಚ ಚಿರಕಾಲವೂ ನೆನೆಯಬೇಕಾದ ಮಹೋತ್ತುಂಗ ಕೃತಿರತ್ನಗಳನ್ನು ನೀಡಿದೆ.


[1] A.B. Keith, Classical Sanskrit literature, p. 71. Also See : The Firts works preserved to us are of 10th Century I Ibid, p. 71.

[2] ಡಾ. ಡಿ.ಎಸ್. ಕರ್ಕಿ, ಕನ್ನಡ ಛಂದೋವಿಕಾಸ, ಪು. ೯೭-೯೮.

[3] ಡಾ. ಡಿ.ಎಸ್. ಕರ್ಕಿ, ಕನ್ನಡ ಛಂದೋವಿಕಾಸ, ಪು. ೯೯.

[4] ಡಾ. ರಂ.ಶ್ರೀ. ಮುಗಳಿ, ‘ಚಂಪೂವಿನ ಮೂಲ’, ತವನಿಧಿ, ಪು. ೪೪.

[5] ಡಾ. ರಂ.ಶ್ರೀ. ಮುಗಳಿ, ‘೧ನೆಯ ಗುಣವರ್ಮನ ಶೂದ್ರಕ’ – ತವನಿಧಿ, ಪು. ೫೭.

[6] ಶ್ರೀ ಕುವೆಂಪು, ಆದಿಪುರಾಣ ಸಂಗ್ರಹ, ಮುನ್ನುಡಿ, ಪು. i.

[7] ಪ್ರೊ. ತೀ.ನಂ. ಶ್ರೀಕಂಠಯ್ಯ, ಪಂಪ, ಪು. ೬೪.

[8] ಪ್ರೊ. ಎಂ. ಮರಿಯಪ್ಪ ಭಟ್ಟ, ಸಂಕ್ಷಿಪ್ತ ಕನ್ನಡ ಸಾಹಿತ್ಯ-ಚರಿತ್ರೆ,  ಪು. ೪೩.

[9] ಡಾ. ರಂ.ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು. ೧೩೫-೧೩೬.

[10] ಡಾ. ರಂ. ಶ್ರೀ. ಮುಗಳಿ, ‘ನಯಸೇನನ ಧರ್ಮಾಮೃತ’ – ತವನಿಧಿ, ಪು. ೧೦೧.

[11] ಡಾ. ರಂ. ಶ್ರೀ ಮುಗಳಿ, ‘ನಯಸೇನನ ಧರ್ಮಾಮೃತ’ – ಕ.ಸಾ.ಚ., ಪು. ೧೩೯.

[12] ಪ್ರೊ. ಡಿ.ಎಲ್.ಎನ್., ಹಂಪೆಯ ಹರಿಹರ, ಪು. ೧೧.

[13] ಅದೇ ಪು. ೧೩.

[14] ಪ್ರೊ. ತಿ.ನಂ.ಶ್ರೀ, ‘ಜನ್ನನ ಕಾವ್ಯಗಳಲ್ಲಿ ಪ್ರಣಯ ನಿರೂಪಣೆ-ಕಾವ್ಯ ಸಮೀಕ್ಷೆ, ಪು. ೫೫-೫೬.

[15] ಪ್ರೊ. ತಿ.ನಂ.ಶ್ರೀ, ‘ಜನ್ನನ ಕಾವ್ಯಗಳಲ್ಲಿ ಪ್ರಣಯ ನಿರೂಪಣೆ’, ಕಾವ್ಯ ಸಮೀಕ್ಷೆ, ಪು. ೪೮.

[16] ಡಾ. ರಂ.ಶ್ರೀ ಮುಗಳಿ, ಕ.ಸಾ.ಚ., ಪು. ೨೧೫.

[17] ಡಾ. ರಂ.ಶ್ರೀ ಮುಗಳಿ, ‘ಕಬ್ಬಿಗರ ಕಾವ್ಯ’, ತವನಿಧಿ, ಪು. ೧೫೩